ದೈವಕಥನಗಳಾದ ಪಾಡ್ದನಗಳನ್ನೋ ಸ್ಥಳಪುರಾಣ ಐತಿಹ್ಯಗಳನ್ನೋ ಪರಾಂಬರಿ ಸಿದರೆ, ನಮ್ಮ ಗಮನಕ್ಕೆ ಬರುವ ಕೆಲವು ವೈಶಿಷ್ಟ್ಯಗಳಲ್ಲಿ ರಹಸ್ಯಾತ್ಮಕತೆಯೂ ಒಂದು. ಐತಿಹ್ಯಾತ್ಮಕ ವ್ಯಕ್ತಿಗಳ ಕುರಿತಾದ ಕಥೆಯಾಗಲೀ, ಕಥನ ಕಾವ್ಯಗಳಾಗಲೀ, ಪುರಾಣವ್ಯಕ್ತಿಗಳ ಕುರಿತಾದ ಕಥನಗಳಾಗಲೀ -ಅವು ಕಥೆ, ಕಾವ್ಯ, ಪುರಾಣ ಹೀಗೆ ಯಾವುದೇ ರೂಪದಲ್ಲಿ ದ್ದರೂ ಅವುಗಳ ಮುಖ್ಯ ಹೂರಣ ಒಂದೇ. ಅವು ವಸ್ತುಸತ್ಯ ಘಟನಾವಳಿಗಳನ್ನು ಸಹಜನೈಜವಾಗಿ ನಿರೂಪಿಸಲು ಉದ್ದೇಶಪಟ್ಟ ಪ್ರಯತ್ನಗಳಲ್ಲ. ಈ ರಚನೆಗಳ ಉದ್ದೇಶ ಕಥನದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ಅಥವಾ ಶಕ್ತಿಗಳ ಮಹಿಮೆಯನ್ನು ಉತ್ಕಟಗೊಳಿಸಿ ಕೊಂಡಾಡುವುದು. ಜನಮನದಲ್ಲಿ ಬಿತ್ತುವುದು.

ಅಸಾಮಾನ್ಯ ವಿದ್ಯಮಾನಗಳನ್ನೂ ಮಹಿಮೆಗಳನ್ನೂ ಬಿತ್ತರಿಸುವ ರಚನೆಗೆ ಪ್ರತ್ಯೇಕವಾದ ನಿರೂಪಣ ಶೈಲಿಯೇ ಬೇಕಾಗುತ್ತದೆ. ಅಂಥ ಶೈಲಿಯ ಅಂಶವಾಗಿ ನಿರ್ದಿಷ್ಟ ‘ಕವಿಸಮಯ’ ತಂತ್ರ, ಸಿದ್ಧ ಸೂತ್ರಗಳು, ವಿಶಿಷ್ಟವಾದ ನಿಗೂಢತೆ, ವಿಲಕ್ಷಣ ಮೌನ, ಪ್ರತೀಕಾತ್ಮಕತೆ, ಶಾಪವರ ಪ್ರಭಾವ, ವಿಸ್ಮಯಕರ ಸಂಭವಗಳು, ಅತಿಶಯೋಕ್ತಿ, ಅತಿಮಾನವತೆಗಳೂ ಕಾವ್ಯಾತ್ಮಕವಾದ ಇಂಥ ಪುರಾಣಕಥನಗಳ ಉದ್ದಕ್ಕೂ ಕ್ರಿಯಾತ್ಮಕವಾಗುತ್ತವೆ. ಮಹಿಮಾವಂತರ ಆವಿರ್ಭಾವ, ವಿಕಾಸ, ಪ್ರಭಾವ, ಪ್ರಸರಣ ಇತ್ಯಾದಿಗಳ ನಿರೂಪಣೆಗೆ ವೈಭವೀಕೃತ ಶೈಲಿಯೇ ಸಹಜವೆನಿಸುತ್ತದೆ.

ದೈವಪ್ರಪಂಚಕ್ಕೆ ಬಂದರೆ, ಪುರಾಣಮೂಲ, (ವೈದಿಕ ಮತ್ತು ವೈದಿಕೇತರ ಪುರಾಣ) ಪ್ರಾಣಿಮೂಲ ಹಾಗೂ ಮಾನವ ಮೂಲ. ಈ ಮೂರು ವರ್ಗಗಳಿಗೆ ಸೇರಿದ ದೈವಗಳ ವೃತ್ತಾಂತಗಳಲ್ಲಿಯೂ ನಿಗೂಢತೆಯ ನೆಲೆ ಸಾಕಷ್ಟು ಕಂಡುಬರುತ್ತದೆ. ಜನಪದ ಮಹಾಕಾವ್ಯಗಳ ಕೆಲವೊಂದು ಗುಣಗಳು ಪಾಡ್ದನ ಮೊದಲಾದ ದೈವಕಥನಗಳಲ್ಲಿ ಇವೆ.

೧. ಮಹಿಮಾವಂತರ ಹಾಗೂ ಅವರ ಹೆತ್ತವರ, ಜನನ ಅಸಾಧಾರಣ ರೀತಿಯಲ್ಲಾಗುತ್ತದೆ. ಅಂಥವರ ತಾಯಿ ‘ಕನ್ಯೆ’ಯಾಗಿದ್ದು ಪುರುಷ ಸಂಪರ್ಕವಿಲ್ಲದೆ ಮಕ್ಕಳನ್ನು ಪಡೆಯುತ್ತಾಳೆ. ಗಂಡನೆಂಬವ ಇದ್ದರೂ ಆತ ನಿಮಿತ್ತ ಮಾತ್ರ.

ಕೆಲವು ಮಹಿಮಾನ್ವಿತ ಶಿಶುಗಳು ಮಾನವ ಸಹಜವಾಗಿ ತಾಯಿ ಬಸುರಿನಿಂದ ಹೊರಬರಲು ಒಂಡಬಡುವುದಿಲ್ಲ. ಗರ್ಭದೊಳಗಿಂದಲೇ ತಾಯಿಗೆ ಸಂದೇಶ ನೀಡಿ ಬಲದ ಸ್ತನದ ರಂಧ್ರದ ಮೂಲಕ ಸಾಸಿವೆಕಾಳಿನ ಗಾತ್ರವಾಗಿ ಹೊರಗೆ ಬಂದುದುಂಟು!

೨. ಸಾಮಾನ್ಯವಾಗಿ ಮಹಿಮಾವಂತರ ಬಾಲ್ಯ ಕೆಲವು ಪವಾಡಗಳಂಥ ವಿದ್ಯಮಾನಗಳಿಂದ ಕೂಡಿರುತ್ತದೆ. ಎಳೆಯ ವಯಸ್ಸಿನಲ್ಲೆ ಹರೆಯಕ್ಕೆ ಮೀರಿದ ಸಾಹಸ ಸಾಧನೆಗಳನ್ನು ಮಾಡಿ ಅತಿಮಾನವತೆಯನ್ನು ಪ್ರಕಟಿಸುವುದುಂಟು.

೩. ಕಥಾನಾಯಕ ತಾರುಣ್ಯದಲ್ಲಿ ಕಾಳಗಗಳಲ್ಲಿ ಅತೀವ ಶೌರ್ಯ ತೋರಿಸುವುದು, ಅನಿರೀಕ್ಷಿತ ಅಪಾಯ, ಆಘಾತಗಳಿಂದ ಪ್ರಯಾಸವಿಲ್ಲದೆ ಪಾರಾಗುವುದು, ವಿರೋಧಿಗಳಿಗೆ ಚಳ್ಳೆಹಣ್ಣು ತಿನ್ನಿಸುವುದು, ಸಾಂದರ್ಭಿಕವಾಗಿ ಸೃಷ್ಟಿ ಅಥವಾ ನಾಶದ ಕೆಲಸಗಳನ್ನು ಪವಾಡ ಸದೃಶವಾಗಿ ಮಾಡುವುದು, ಕೆಲವೊಮ್ಮೆ ಪರಿಕರಗಳಿಲ್ಲದೆ ಸಾಹಸಕಾರ್ಯಗೈಯುವುದು, ಇಷ್ಟದೇವತೆಗಳನ್ನು ಪ್ರತ್ಯಕ್ಷೀಕರಿಸುವುದು. ಏಕಾಂಗ ಸಾಹಸ, ಇತ್ಯಾದಿ ವಿವರಗಳು ದೈವೀಕರಣಗೊಂಡ ವ್ಯಕ್ತಿಗಳ ಕಥನಗಳಲ್ಲಿ ಉಕ್ತವಾಗಿರುತ್ತವೆ.

೪. ಕಥಾಪುರುಷರ ಅತಿಮಾನುಷ ಶಕ್ತಿಗಳ ಪ್ರದರ್ಶನ, ಮಂತ್ರ, ಮಾಟ, ಪವಾಡ ಇತ್ಯಾದಿಗಳ ವಿವರಣೆ, ವೈರಿಗಳ ದ್ವೇಷಾಸೂಯೆ, ಕುಹಕ ಕುತಂತ್ರಗಳ ವಿವರಗಳನ್ನು ನೀಡುತ್ತಾ ಕಥನವು, ಕಥಾನಾಯಕನ ಪಾತ್ರದ ಉಜ್ವಲೀಕರಣ, ವಿವಿಧ ಘಟನೆಗಳ ಪ್ರಭಾವಳಿಯ ನಿರ್ಮಾಣ, ಕೊನೆಯಲ್ಲಿ ಸಾಮಾನ್ಯವಾಗಿ ಕಥಾನಾಯಕನ ದೈವೀಕರಣವನ್ನು ವರ್ಣಿಸುತ್ತದೆ.

೫. ಶಿಷ್ಟಮಹಾಕಾವ್ಯಗಳಲ್ಲಿ ಕಥಾನಾಯಕ ಕೊನೆಗೆ ಗೆಲ್ಲುತ್ತಾನೆ. ಅಥವಾ ಗೆಲ್ಲುವವನೇ ಕಥಾನಾಯಕನಾಗಿರುತ್ತಾನೆ. ಆದರೆ ಜನಪದ ಪುರಾಣ ಕಾವ್ಯಗಳಲ್ಲಿ ಸಾಮಾನ್ಯವಾಗಿ ನಾಯಕ ಯಾವುದೋ ಕಾರಣದಿಂದ ಅಕಸ್ಮಾತ್ ದುರಂತ ಮರಣವನ್ನಪ್ಪುತ್ತಾನೆ; ಅಥವಾ ‘ಮಾಯಕ’ ಹೊಂದುತ್ತಾನೆ.

೬. ಕಥೆಯ ಒಡಲಲ್ಲಿ ದೈವದೇವರುಗಳು ಪಾತ್ರವಾಗಿ ಬರಬಹುದು. ಅಥವಾ ದೈವದ ವರ ಅಥವಾ ಶಾಪ-ಕೋಪಗಳು ಕಥೆಗೆ ತಿರುವನ್ನುಕೊಡಬಹುದು.

೭. ಮಾನವನ ಶಕ್ತಿ ದೌರ್ಬಲ್ಯಗಳ ಅಭಿವ್ಯಕ್ತಿ, ಪುರುಷ ಪ್ರಯತ್ನದೊಂದಿಗೆ ಅದೃಷ್ಟದ ಕಣ್ಣುಮುಚ್ಚಾಲೆಯಾಟಗಳನ್ನು ಇಂಥ ಕಥನಗಳು ಒಳಗೊಂಡಿರುತ್ತವೆ.

೮. ಶಕುನಪೂರ್ಣ ಸ್ವಪ್ನಗಳಿಗೆ ಕಥನದಲ್ಲಿ ಪ್ರಾಶಸ್ತ್ಯವಿರುತ್ತದೆ.

ತುಳುನಾಡಿನ ದೈವಕಥನಗಳನ್ನು ಕರ್ನಾಟಕದ ಹಾಗೂ ಕೇರಳದ ಜನಪದ ಕಥನಕಾವ್ಯಗಳೊಂದಿಗೆ ಹೋಲಿಸಬಹುದು. ಜುಂಜಪ್ಪ, ಮಲೆಮಾದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ ಮೊದಲಾದ ವಿಶಿಷ್ಟ ಕನ್ನಡ ಜನಪದ ಮಹಾಕಾವ್ಯಗಳಲ್ಲೂ, ತಚ್ಚೊಳ್ಳಿ ಒದೇನನ್, ಕದಿವನೂರು ವೀರನ್, ಪಡವೀರನ್ ಮುಂತಾದ ಮಲೆಯಾಳ ಜನಪದ ‘ಪಾಟು’ಗಳಲ್ಲೂ ಕಾಣಿಸುವಂಥ ಅದೆಷ್ಟೋ ವಿಶಿಷ್ಟಾಂಶಗಳು ತುಳು ಜನಪದ ಕಾವ್ಯಗಳಲ್ಲೂ ಕಂಡುಬರುತ್ತವೆ. (ನೋ.ಡಾ.ಸುಶೀಲಾ ಉಪಾಧ್ಯಾಯ – ‘ಜನಪದ ಆರಾಧನೆ ಮತ್ತು ರಂಗಕಲೆ’ ೧೯೮೯, ಪು.೩೯)

ದೈವಕಥನದುದ್ದಕ್ಕೂ ಸಾಮಾನ್ಯವಾಗಿ ರಹಸ್ಯಾತ್ಮಕತೆ ಬೇರೆ ಬೇರೆ ಬಗೆಗಳಲ್ಲಿ ಹಾಸುಹೊಕ್ಕಾಗಿದ್ದರೂ, ಪ್ರಕೃತ ಮಹಿಮಾವಂತರೆನಿಸಿದ ಮನುಷ್ಯವ್ಯಕ್ತಿಗಳ ಜನನ ಹಾಗೂ ಮರಣದ ಬಗೆಗಿನ ನಿಗೂಢತೆಯ ಕುರಿತು ಒಂದಿಷ್ಟು ವಿಚಾರಿಸಬಹುದು:

ಸಾಮಾಜಿಕವಾಗಿ ಅತ್ಯಂತ ಕೆಳಸ್ತರದ್ದೆನಿಸಿದ ಕೊರಗ ಸಮಾಜದಲ್ಲಿ ಹುಟ್ಟಿ, ಮೈರಕ್ಕೆ ಬೈದೆತಿ ಎಂಬ ಬಿಲ್ಲವ ಹೆಂಗಸಿನ ಆಸರೆಯಲ್ಲಿ ಬೆಳೆದವನು ಕೊರಗತನಿಯ. ಅವನು ಕೊರಗದಂಪತಿಗಳಲ್ಲಿ ಮಾನವಸಹಜವಾಗಿ ಜನಿಸಿದನೆಂಬ ವಿಚಾರ ಕೆಲವು ಪಾಡ್ದನಗಳಲ್ಲಿ ಇದ್ದರೂ, ಒಂದು ಪಾಡ್ದನವು ಕೊರಗತನಿಯನ ತಾಯಿ ಒಂದು ಅಪೂರ್ವ ಚೆಲುವಿನ ಪಾರಿವಾಳವಾಗಿದ್ದುದಾಗಿಯೂ ಆಮೇಲೆ ಅದು ಹೆಣ್ಣಾಯಿತೆಂದೂ ಬಣ್ಣಿಸುತ್ತದೆ. ಇಲ್ಲಿ ತಾಯಿಯ ಪೂರ್ವಸ್ಥಿತಿ ನಿಗೂಢವೆನಿಸಿದೆ. ಇನ್ನೊಂದು ಪಾಡ್ದನವು ಶಿವನು ಮೆಚ್ಚಿದ ಹೆಣ್ಣು ಕೊರಪೊಳು ಮೈರೆಯಲ್ಲಿ ಶಿವನ ಸಂಕೇತದಿಂದ ಜನಿಸಿದುದಾಗಿ ಸೂಚಿಸುತ್ತದೆ. (ನವೀನ ಕುಮಾರ ಮರಿಕೆ ‘ಕತ್ತಲಿನಿಂದ’ ಪು.೨೫, ೨೦೦೬)

ತುಳುನಾಡಿನ ಪ್ರಸಿದ್ಧ ದೈವಗಳಲ್ಲಿ ಒಬ್ಬನೆನಿಸಿದ ಕೋಡದಬ್ಬು(ಕೋಟೆದ ಬಬ್ಬು)ವಿನ ಜನನ ವಿಸ್ಮಯಕರವಾಗಿದೆ. ಮುಂಡಾಲ ದಲಿತ ವರ್ಗಕ್ಕೆ ಸೇರಿದ ಕಚ್ಚೂರ ಮಾಲ್ದಿ ಎಂಬ ಅನಾಥ ಹೆಣ್ಣನ್ನು ‘ಕಚ್ಚಿರಂದ ಅರಮನೆಯ’ ಕೊಡಂಗೆ ಬನ್ನಾರ ಹಾಗೂ ಅವನ ಹೆಂಡತಿ ಸಿರಿಕೊಂಡೆ ಇವರು ಸಾಕಿಕೊಂಡಿರುತ್ತಾರೆ. ಒಮ್ಮೆ ಸಿರಿಕೊಂಡೆ ಮುಟ್ಟಾಗಿ ಮೀಯಲು ಹೊಳೆಗೆ ಹೋದಾಗ, ಜೊತೆಗೆ ಕಚ್ಚೂರ ಮಾಲ್ದಿಯೂ ಇರುತ್ತಾಳೆ. ಸಿರಿಕೊಂಡೆ ಮಿಂದು ತಲೆಗೂದಲನ್ನು ಕೊಡಹಿದಾಗ ನೀರಿನ ಹನಿ ಕಚ್ಚೂರಮಾಲ್ದಿಯ ಬಲದ ಅಳ್ಳೆಗೆ ಸಿಡಿಯುತ್ತದೆ. ಮನೆಗೆ ಬಂದ ಸಿರಿಗೊಂಡೆ ತಾನು ಉಂಡ ಎಲೆಗೆ ಅನ್ನ ಇಕ್ಕಿಸಿ ಅದನ್ನು ಕಚ್ಚೂರ ಮಾಲ್ದಿ ಉಣ್ಣುವಂತೆ ಮಾಡುತ್ತಾಳೆ. (ಸಿರಿಕೊಂಡೆ ನೀಡಿದ್ದು ದೇವರ ಪ್ರಸಾದವೆಂಬ ಮಾತೂ ಇದೆ.) ಅದನ್ನುಂಡ ಕಚ್ಚೂರ ಮಾಲ್ದಿಗೆ ‘ಸತ್ಯದ ಬಸಿರು’ ಬಂದಿತೆಂದು ಹೇಳುತ್ತಾ ಕೋಡದಬ್ಬುವಿನ ಜನ್ಮ ಅಲೌಕಿವೆಂದು ಪಾಡ್ದನ ಸ್ಥಾಪಿಸಲೆಳಸುತ್ತದೆ. ಆದರೆ, ಮುಟ್ಟಿನ ವಿಚಾರ, ನೀರಿನ ಹನಿ ಹಾರುವುದು, ಎಂಜಲೆಲೆಯಲ್ಲಿ ಉಣ್ಣುವುದು ಸೂಚ್ಯವಾಗಿವೆ! ನೇರವಾಗಿ ಹೇಳದುದನ್ನು ಸಂಕೇತಗಳು ಸೂಚಿಸುತ್ತವೆ!

ಮುಂದಿನ ಕಥೆಯಲ್ಲಿ ಆಕೆಯ ಬಸುರಿಗೆ ಕಾರಣಕರ್ತರು ಯಾರಿರಬಹುದೆಂಬ ಕಡೆಗೆ ಕಥನವು ತೋರಬೆರಳು ನೀಡಿದಂತಿದ್ದರೂ ಆ ಗರ್ಭಸಂಬಂಧವಾದ ‘ಸತ್ಯಪ್ರಮಾಣ’ವು ಆ ಸಂಭಾವ್ಯತೆಯನ್ನು ಅಲ್ಲಗಳೆದಿದೆ. (ಕನ್ಯಾಗರ್ಭದ ಅನೇಕ ಸಂದರ್ಭಗಳಲ್ಲಿ ಸತ್ಯಪ್ರಮಾಣ, ದೈವೀ ಸಂದೇಶ, ಅಘಟಿತ ಘಟನೆ ಇತ್ಯಾದಿಗಳ ಮೂಲಕ ಅಂಥ ಹೆಣ್ಣುಗಳ ಪಾವಿತ್ರ್ಯವನ್ನೂ, ಕನ್ಯಾತ್ವವನ್ನೂ ರಕ್ಷಿಸಲಾಗಿದೆ.)

ರಾಮದೇವರು ಆಕಾಶದಲ್ಲಿ ರಥವೇರಿ ಹೋಗುವಾಗ ಅವರ ಬೆವರಿನ ಬಿಂದು ಬಾಲೆ ಕಚ್ಚೂರ ಮಾಲ್ದಿಯ ಮೈಮೇಲೆ ಬಿದ್ದು ಆಕೆ ಗರ್ಭವತಿಯಾದಳೆನ್ನುವ ಪುರಾಣ ಸಹಜ ಹೇಳಿಕೆಯೂ ಬೇರೊಂದೆಡೆ ಇದೆ. ಆಕೆಯದು ಅಲೌಕಿಕ ಗರ್ಭ ಎಂಬುದನ್ನು ಗಟ್ಟಿಗೊಳಿಸಲು ಇಂಥ ಕಥೆಗಳು ಹುಟ್ಟಿವೆ.

ಕಚ್ಚೂರ ಮಾಲ್ದಿಯ ಬಸಿರ ಶಿಶು ಹೊರಬರುವ ವಿಧಾನವೂ ಅಸಾಮಾನ್ಯವಾಗಿದೆ. ‘‘ಓಯೋಯೆ ತಾಯೇ ಎಂದು ಕರೆಯುತ್ತಾನೆ. ಬಸಿರಲ್ಲಿದ್ದ ಬಾಲಕ. ನಾನು ಯಾವ ಹಾದಿಯಲ್ಲಿ ಬರಬೇಕೆಂದು ಕೇಳುತ್ತಾನೆ. ಹಾಗಿದ್ದರೆ, ದೇವರು ಕೊಟ್ಟ ಹಾದಿಯಲ್ಲಿ ಬಾರೆಂದಳು. ದೇವರು ಕೊಟ್ಟ ಹಾದಿಯ ನರಕದಲ್ಲಿ ಬರಲಾರೆ ಎಂದ. ಬೆನ್ನೊಡೆದು ಬಂದರೆ ಕನ್ನಡಿ ಹಾವಿನ ಮರಿ ಎಂದಾರು, ನೆತ್ತಿ ಒಡೆದು ಬಂದರೆ ತಾಯಿಯನ್ನು ಕೊಂದ ‘ಕೆಂಗುಡೆ’(ಕೇಡಿಗ)ಯೆಂದಾರು, ಬಲದ ತೊಡೆಯೊಡೆದುಕೊಂಡು ಬಾ! ಎಂದಳು’’(ಪಾಡ್ದನ ಸಂಪುಟ, ೧೯೯೯, ಪು.೩೧೯) ‘ಬಲದ ಸಿರಿಮೊಲೆ’ಯ ಮೂಲಕ ಶಿಶು ಹೊರಗೆ ಬಂತೆಂಬ ಪಾಠಾಂತರವೂ ಇದೆ. ನೈಸರ್ಗಿಕ ಮಾರ್ಗದಲ್ಲಿ ಜನನವಾಗಲೊಪ್ಪದ ಇತರ ಮಹಿಮಾವಂತರೂ ಇದ್ದಾರೆ. (ಉದಾ : ಬಬ್ಬರ್ಯ)

ತುಳುನಾಡಿನ ದೈವಪ್ರಸ್ಥಾನದಲ್ಲಿ ಮುಸ್ಲಿಂ ಮೂಲದ ಭೂತಗಳಿಗೂ ಇಂಬಿದೆಯೆಂಬ ವಿಲಕ್ಷಣ ವಿದ್ಯಮಾನಕ್ಕೆ ದೃಷ್ಟಾಂತವಾಗಿರುವ ಬಬ್ಬರ್ಯ ದೈವದ ಕಥೆಯಲ್ಲೂ ರಹಸ್ಯಾತ್ಮಕ ಸನ್ನಿವೇಶಗಳು ಕಾಣಿಸುತ್ತವೆ. ಈತನ ತಾಯಿ ಜೈನ ಹೆಂಗುಸೆಂದೂ ಕಾರಣಾಂತರದಿಂದ ಮುಸ್ಲಿಂ ವ್ಯಕ್ತಿಯ ಮಡದಿಯಾದಳೆಂದೂ ತಿಳಿಯುತ್ತದೆ. ಇವಳ ಕುರಿತಾದ ಒಂದು ವಿಚಿತ್ರ ಸಂಗತಿಯೆಂದರೆ, ಇವಳ ಮೂಗಿನ ರಂಧ್ರದಲ್ಲಿ ಗುಪ್ತವಾಗಿದ್ದ ವಿಷ ಸರ್ಪವೊಂದು ಇವಳನ್ನು ಮದುವೆಯಾದವರನ್ನೆಲ್ಲ ಮೊದಲ ರಾತ್ರಿಯೆ ಕಚ್ಚಿ ಕೊಲ್ಲುತ್ತಿದ್ದಿತೆಂದೂ ಸುಲಿಕಲ್ಲ ಮುರವ ಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಆಕೆಯನ್ನು ಮದುವೆಯಾಗಿ ಉಪಾಯವಾಗಿ ಅವಳ ಮೂಗಿನಲ್ಲಿದ್ದ ಆ ವಿಷೋರಗವನ್ನು ಕೊಂದು ಅವಳ ‘ವಿಷಕನ್ಯಾತ್ವ’ವನ್ನು ಕಳೆದನೆಂದೂ ಕೆಲವು ಪಾಡ್ದನಗಳಲ್ಲಿ ನಿರೂಪಿತವಾಗಿದೆ. ಇಂಥದೊಂದು ವಿಶೇಷ ಹಿನ್ನೆಲೆಯೊಂದಿಗೆ ಕಥನವನ್ನು ಪ್ರಾರಂಭಿಸಿದ ಪಾಡ್ದನಕಾರ ಮುಂದೆ ಬಬ್ಬರ್ಯ ಜನನಕ್ಕೆ ವಿಶೇಷ ಪರಿವೇಷವನ್ನು ಕಲ್ಪಿಸುತ್ತಾನೆ.

‘‘ಬ್ಯಾರಿ ಹುಡುಗಿಯನ್ನು ಕರೆದುಕೊಂಡು ಮಕ್ಕಮಕಯದ ಮಸೀದಿಗೆ ಬಂದ. ಅಲ್ಲಿ ಮಸೀದಿಯ ಬಾಗಿಲು ತೆಗೆಸಿ ಅವಳನ್ನು ಬೆಲ್ಯ ಬೀಬಿ ಪಾತುಮ್ಮ ಎಂದು ಕರೆದ. ಸಾವಿರ ಜನರಿಗೆ ತುಪ್ಪದನ್ನ ಕೊಟ್ಟು ಹರಕೆ ಪೂರೈಸಿದ. ಮನೆಗೆ ಹಿಂದಿರುಗಿ ಬರುವಾಗಲೇ ಇವಳು ಏಳುತಿಂಗಳ ಗರ್ಭಿಣಿಯಾಗಿರುವುದು ಕಂಡುಬಂತು. ತಿಂಗಳು ಒಂಭತ್ತು ತುಂಬಿತು. ಒಂಭತ್ತು ತಿಂಗಳು, ಒಂಬತ್ತು ದಿನ, ಒಂಭತ್ತು ಗಳಿಗೆ ಆದಾಗ ಹೆರಿಗೆ ನೋವು ಕಾಣಿಸಿತು’’ ಎಂದು ನಿರೂಪಿಸುತ್ತಾ ಹೋಗುವ ಪಾಡ್ದನ ಬಸುರೊಳಗಿನ ಮಗು ತಾಯಿಯೊಂದಿಗೆ ಮಾತನಾಡುವ ಹಾಗೂ ಅದಕ್ಕೆ ತಾಯಿ ಉತ್ತರಿಸುವ ವಿಚಾರವನ್ನು ಕೋಡದಬ್ಬುವಿನ ಜನನ ಸಂದರ್ಭದಲ್ಲಿರುವಂತೆಯೇ ಬಣ್ಣಿಸುತ್ತದೆ. ಕೊನೆಗೆ, ‘‘ಆ ಮಾಯದ ಮಗು ನಾನು ನರಕಕ್ಕೆ ಕಾಲು ಚಾಚಲಾರೆ ಎಂದು ಹೇಳಿ ಬಂಗಾರದ ತುಂಬಿಯಾಗಿ ತಾಯಿಯ ಬಲ ಎದೆಯನ್ನು ಸೀಳಿಕೊಂಡು ಹೊರಗೆ ಬಂತು. ಆ ಜೋಗದ ಮಗುವಿಗೆ ನೆತ್ತಿಯಲ್ಲಿ ಸುರಿಯ, ಬೆನ್ನಿನಲ್ಲಿ ಬ್ರಹ್ಮದೇವರ ಚಿಹ್ನೆ, ಹೊಟ್ಟೆಯಲ್ಲಿ ಬಾಸಿಲಿಂಗದೇವರ ಚಿಹ್ನೆ, ಮುಡಿಯಲ್ಲಿ ಕೂಜಿ ಲಿಂಗದೇವರ, ಮೊಣಕಾಲಿನಲ್ಲಿ ಮೊರಂಪುಲಿಂಗ ದೇವರ, ಪಾದದಲ್ಲಿ ಪಾದಲಿಂಗದೇವರ ಚಿಹ್ನೆಗಳು ಕಾಣಿಸಿದವು. ಒಂದು ದಿನದ ಮಗು ಒಂದು ವರ್ಷದ ಮಗುವಿನಷ್ಟು ಬೆಳೆದಿತ್ತು.’’ ಎಂಬ ಅದ್ಭುತವರ್ಣನೆ ಬರುತ್ತದೆ. (ಡಾ.ಸುಶೀಲಾ ಉಪಾಧ್ಯಾಯ, ‘ತುಳುವ’೯-೧೦(ಪು.೧೫). ಇದನ್ನೇ ಹೋಲುವ ವರ್ಣನೆ ನಾಗಬ್ರಹ್ಮನ ಜನನ ಪಾಡ್ದನದಲ್ಲಿದೆ.)

ಮದುವೆಯಾಗುವ ಮೊದಲೇ ಬಬ್ಬರ್ಯನ ತಾಯಿ ಧರಿಸಿದ ಗರ್ಭ ದಿವ್ಯವೆಂದು ಸಾಧಿಸುವುದಕ್ಕೆ ಈ ಅಸಾಧಾರಣ ವಿದ್ಯಮಾನದ ವರ್ಣನೆ ದುಡಿಯುತ್ತದೆ. ಆದರೆ ಬಬ್ಬರ್ಯ ಹುಡುಗನಾಗಿ ಆಡಲು ಹೋದಾಗ ಅವನ ಹುಟ್ಟನ್ನು ಅಣಕಿಸುವ ಮಾತುಗಳು ಹುಡುಗರಿಂದ ಬಂದುವೆಂಬುದನ್ನು ಹೇಳಲು ಪಾಡ್ದನಕಾರ ಮರೆಯುವುದಿಲ್ಲ. ಹಾಗಿದ್ದರೂ ಹುಟ್ಟಿದ ಹುಡುಗ ಕಾರಣಿಕವ್ಯಕ್ತಿ ಎಂದು ಬಿಂಬಿತನಾದ ಮೇಲೆ ಇತರ ಅಪವಾದಗಳೆಲ್ಲ ತಾವಾಗಿಯೇ ಬಿದ್ದು ಹೋಗುತ್ತವೆ!

ಕೋಟಿ ಚೆನ್ನಯರ ಸಂಧಿಯಲ್ಲೂ ಸಾಕಷ್ಟು ನಿಗೂಢ, ಸಂಧಿಗ್ಧ ಸನ್ನಿವೇಶಗಳಿವೆ. ಕೋಟಿ ಚೆನ್ನಯರ ಜನನ ವೃತ್ತಾಂತಕ್ಕೆ ಪೂರ್ವಭಾವಿಯಾಗಿಯೇ ಪುರಾಣ ಸಹಜವಾದ ವಿಶೇಷ ಹಿನ್ನೆಲೆಯನ್ನು ಕಲ್ಪಿಸಲಾಗಿದೆ. ಕೋಟಿ ಚೆನ್ನಯರ ತಾಯಿ ದೇಯಿಬೈದ್ಯತಿಗೆ ಬ್ರಾಹ್ಮಣ ಮೂಲವನ್ನು ಸೂಚಿಸಲಾಗಿದೆ. ಅಷ್ಟು ಮಾತ್ರವಲ್ಲ ಆಕೆ ಮಾನವ ದಂಪತಿಗಳು ಪಡೆದ ಮಗಳಲ್ಲವೆಂದೂ ಪಿಜನಾರ್ ಎಂಬ (ರಂಗಯ್ಯ ಎಂದೂ ಪಾಠಾಂತರವಿದೆ) ಬ್ರಾಹ್ಮಣನಿಗೆ ಸಮುದ್ರಸ್ನಾನಕ್ಕೆ ಹೋದಾಗ ಕೈಗೆ ಸಿಕ್ಕಿದ ವಿಚಿತ್ರ ಮೊಟ್ಟೆಯಿಂದ (ಇದು ಸೋರೆಕಾಯಿಯಷ್ಟು ದೊಡ್ಡದಿತ್ತೆಂದೂ, ನಿಂಬೆಹಣ್ಣಿನ ಆಕಾರದಲ್ಲಿತ್ತೆಂದೂ ಬೇರೆ ಬೇರೆ ಅಭಿಪ್ರಾಯಗಳಿವೆ.) ಜನಿಸಿಬಂದವಳೆಂದೂ ಹೇಳಲಾಗಿದೆ. ಈ ಮೊಟ್ಟೆಯಾದರೋ ‘ಸೂರಿಯಬಾರಿ ದೇವರ’ ಎಡಬಲಭಾಗದ ಹುತ್ತಗಳಲ್ಲಿ ಅಣ್ಣತಂಗಿಯರಾಗಿ ಹುಟ್ಟಿ ಬಳಿಕ ನಾರಾಯಣದೇವರ ಅನುಮತಿಯಿಂದ ದಂಪತಿಗಳಾದ ‘ಕೇಂಜವ’ ಹಕ್ಕಿಗಳು ಹರಕೆಯೊಪ್ಪಿಸಲು ಒಯ್ಯುತ್ತಿದ್ದಾಗ, ಜೋಡಿಸಿದ್ದ ರೆಕ್ಕಿಯಿಂದ ಜಾರಿ ಸಮುದ್ರಕ್ಕೆ ಬಿದ್ದುದೆಂಬ ವಿವರವಿದೆ. (ಇದೇ ಕೇಂಜವ ಹಕ್ಕಿಯ ಮೊಟ್ಟೆಯ ಪರಂಪರೆಯಲ್ಲೆ ಬೆರ್ಮೆರ್ ಹಾಗು ಪರ್ಮಾಲೆ ಬಲ್ಲಾಳ ಹುಟ್ಟಿದ ವಿಚಾರವೂ ಪಾಡ್ದನದಲ್ಲಿ ಉಕ್ತವಾಗಿದೆ) ನಿಗೂಢತೆಯ ನಿದರ್ಶನಕ್ಕೆ ಹಕ್ಕಿಗಳನ್ನು ಸಂಕೇತವಾಗಿಸುವುದು ಜನಪದ ಕಥನಗಳಲ್ಲಿ ಸಾಮಾನ್ಯ.)

ಪೆಜನಾರ್ ದಂಪತಿ ಸಾಕಿದ ‘ಜೇವು ಕೇದಗೆ’ ಮುಂದೆ ‘ದೇಯಿ ಬೈದ್ನತಿಯಾದ ಕತೆ ಈಗಾಗಲೇ ಜನಜನಿತವಾಗಿದೆ.

ಕೋಟಿಚೆನ್ನಯರ ಜನನ ಸಂದರ್ಭದಲ್ಲಿ ಹೆಚ್ಚಿನ ಪಾಡ್ದನಗಳಲ್ಲಿ ಅಮಾನುಷ ಪ್ರಕೃತಿಯ ಸೂಚನೆಯಿಲ್ಲವಾದರೂ ಕೆಲವೊಮ್ಮೆ ಅಂಥ ಅಭಿಪ್ರಾಯ ವ್ಯಕ್ತವಾದುದೂ ಉಂಟು.

‘‘ಬಿಲ್ಲವ ಜನಾಂಗದ ವ್ಯಕ್ತಿಯೋರ್ವನಿಗೆ ಈಕೆಯನ್ನು ಮದುವೆ ಮಾಡಿಕೊಡುತ್ತಾರೆ. ತಲೆಯಲ್ಲಿ ಕಳ್ಳುಹೊತ್ತು ಹೊಳೆ ದಾಟುತ್ತಿದ್ದಾಗ ಆಕೆ ಹೊಳೆಯ ನೀರು ಕುಡಿದದ್ದರಿಂದ ಗರ್ಭ ಧರಿಸುತ್ತಾಳೆ. ಪರಿಣಾಮವಾಗಿ ಆಕೆ ಮುಂದೆ ಅವಳಿ ಮಕ್ಕಳನ್ನು ಹೆರುತ್ತಾಳೆ. (ಡಾ ವಾಮನ ನಂದಾವರ – ಅವಳಿ ಆರಾಧನೆ, ಅವಳಿತನ ೧೯೯೫, ಪು.೧೭೯)

ಕೋಟಿ ಚೆನ್ನಯರ ಅಕ್ಕನೆನಿಸಿದ ‘ಕಿನ್ನಿದಾರುವಿನ ಜನನ’, ಬಾಲ್ಯ ಇತ್ಯಾದಿಗಳ ವಿಚಾರದಲ್ಲಿ ಹೆಚ್ಚಿನ ಪಾಡ್ದನಗಳು ಮೌನ ವಹಿಸಿವೆ. ಅವಳ ಮದುವೆಯ ವಿವರಗಳೂ ಕಂಡುಬರುವುದಿಲ್ಲ. ಕಥನದ ಮಧ್ಯದಲ್ಲಿ ಮಾತ್ರವೇ ಅವಳ ಭೇಟಿಯಾಗುತ್ತದೆ. ಆ ಮೊದಲು ಯಾವುದೇ ಸಂಬಂಧ, ಸಂಪರ್ಕ ಇರುವುದಿಲ್ಲ. ಹೀಗೆ ‘ದೂರಕ್ಕೆ ದೂರ’ವೇ ಇರಲು ಏನಾದರೂ ನಿರ್ದಿಷ್ಟ ಕಾರಣವಿರಬೇಕಷ್ಟೆ? ಕೋಟಿ-ಚೆನ್ನಯರ ಜನನಕ್ಕೆ ಸಾಕಷ್ಟು ಮೊದಲೇ ನಿಗೂಢ ರೀತಿಯಲ್ಲಿ ಅವಳ ಜನನವಾದಂತಿದೆ. ಜೇವು ಕೇದಗೆಯನ್ನು ಎಳವೆಯಲ್ಲಿ ಕಣ್ಣುಕಟ್ಟಿ ಕಾಡಿನಲ್ಲಿ ಬಿಟ್ಟ ಕಥೆ ಬೇರೇನೋ ನಿಗೂಢತೆಯನ್ನು ಧ್ವನಿಸುವಂತಿದೆ. ಕನ್ಯಾವಸ್ಥೆಯ ‘ಪ್ರಮಾದ’ವನ್ನು ಅದು ಸೂಚಿಸುತ್ತಿರಬಹುದೇ?

ಕೋಟಿ-ಚೆನ್ನಯರಂತೆಯೇ ಯಮಳವೀರರಾದ ಕಾಂತಾಬಾರೆ ಬೂದಾಬಾರೆಯರ ಜನ್ಮವೃತ್ತಾಂತವೂ ರಹಸ್ಯಾತ್ಮಕತೆಯಿಂದ ಕೂಡಿದೆ. ಉಳೆಪಾಡಿ ಬೀಡಿನ (ಮೂಲ್ಕಿಯ ಬಳಿ) ಪುಲ್ಲು ಪೆರ್ಗಡ್ತಿ ಸಾಕಿದ ಬಿಲ್ಲವರ ಹುಡುಗಿ ಆಚು ‘ರಸಮಯಬಾವಿ’ಯ (ರಸಮಾಯಂದ ಗುವೆಲ್) ನೀರು ಕುಡಿದು ಗರ್ಭವತಿಯಾಗುತ್ತಾಳೆ. ಆಚು ಬವಳಿ ಬಂದು ಬಿದ್ದಾಗ ಅವಳ ಕೈಯಲ್ಲಿದ್ದ ಗೆಜ್ಜೆಕತ್ತಿ ಹಾರಿ ಹೋಗಿ ಬಿದ್ದು, ನೆಲವನ್ನು ಗೀರಿದಾಗ ಈ ರಸಮಯ ಬಾವಿಯ ನೀರಸೆಲೆ ಒಸರಿತಂತೆ! (ಮುದ್ದು ಮೂಡುಬೆಳ್ಳೆ, ಕಾಂತಾಬಾರೆ ಬೂದಾಬಾರೆ, ಪು.೩೮)

ಆಚುವನ್ನು ಕುಂದಯಬಾರೆ ಎಂಬಾತನಿಗೆ ಎಳವೆಯಲ್ಲೆ ಮದುವೆ ಮಾಡಿಕೊಟ್ಟಿದ್ದರೂ ಆಚುವಿನ ಗರ್ಭಕ್ಕೆ ಆತ ಕಾರಣನಲ್ಲವೆಂದೇ ಕಥನ ಸಾರುತ್ತದೆ. ಅಷ್ಟಲ್ಲದೆ, ಪೆರ್ಗಡ್ತಿಗೆ ಕದಿರೆ ಮಂಜುನಾಥ ಸ್ವಾಮಿ ಸ್ವಪ್ನಗಾಣಿಸಿ ಆಚುವಿನದು ದಿವ್ಯಗರ್ಭವೆಂದು ಸೂಚಿಸುವ ವಿಚಾರವೂ ಇದೆ. (ಮೇಲಿನ ಕೃತಿ, ಪು.೩೮)

ಯೇಸುಕಿಸ್ತನ ತಾಯಿ ಮೇರಿಯದು ದಿವ್ಯಗರ್ಭವೆಂದು ದೇವದೂತರು ಸಾರಿದ್ದೂ, ಮೇರಿಯ ಪತಿ ಜೋಸಫನಿಗೆ ಸ್ವಪ್ನದಲ್ಲಿ ಸೂಚಿಸಿದ್ದೂ ಪ್ರಸಿದ್ಧವಷ್ಟೆ?

ಕಾನದೆ-ಕಾಟದೆ ಎಂಬ ದಲಿತ ಯಮಳವೀರರ ತಾಯಿ ಬೊಳ್ಳೆ, ಹೆತ್ತವರ ಹೆಸರರಿಯದ ಅನಾಥೆ. ಇವಳನ್ನು ಕೋಟಿ ಚೆನ್ನಯರ ತಾಯಿ ದೇಯಿಬೈದ್ಯತಿ ಸಾಕಿದ್ದಳೆಂದೂ, ಅವಳು ಕಿನ್ನಿದಾರುವನ್ನು ಹಡೆಯುವ ಸಂದರ್ಭದಲ್ಲೆ ಇವಳೂ ಅವಳಿ ಮಕ್ಕಳನ್ನು ಪಡೆದಳೆಂದೂ ಹೇಳಲಾಗಿದೆ. ಇವಳ ಬಸುರಿನ ವಿಚಾರ ನಿಗೂಢ.

ಸಾಮೂಹಿಕ ದೈವಾವೇಶದ ವಿಶಿಷ್ಟ ಪದ್ಧತಿಯಲ್ಲಿ ಆರಾಧನೆಗೊಳ್ಳುವ ಸಿರಿದೈವಬಳಗದ ಹಿರಿಯಳಾದ ಸತ್ಯನಾಪುರದ ಸಿರಿಯ ಜನನ ಕಥೆಯೂ ಕೌತುಕಮಯವಾಗಿದೆ. ಸತ್ಯನಾಪುರದ ಬೀಡಿನ ಯಜಮಾನ ಬಿರ್ಮಾಳ್ವ ತನ್ನ ಕುಲದೇವರಾದ ಲಂಕೆಲೋಕನಾಡ ಆಲಡೆಯನ್ನು ಜೀರ್ಣೋದ್ಧಾರ ಮಾಡಿಸಿದುದರಿಂದ ಪ್ರಸನ್ನನಾದ ಬೆರ್ಮೆರ್ ದೈವದ ಅನುಗ್ರಹಪ್ರಸಾದ ರೂಪದ ಹಿಂಗಾರದ (ಅಡಿಕೆ ಹೂವಿನ) ಹಾಳೆಯಲ್ಲಿ ‘ಬಾಲಕ್ಕೆ ಸಿರಿ’ ಜನಿಸಿಬಂದಳೆಂಬ ವೃತ್ತಾಂತವು ಉಪಲಬ್ಧವಾದ ಎಲ್ಲ ಸಂಧಿಗಳಲ್ಲೂ ದೊರಕುತ್ತದೆ. ಗೊತ್ತಾದ ದಾಂಪತ್ಯದ ಫಲವಾಗಿ ಅವಳು ಜನಿಸಿದಳಲ್ಲವೆಂದೂ, ಸಿಕ್ಕಿದ ಶಿಶುವೆಂದೂ ಸ್ಪಷ್ಟ. ಶಿಶುವಿನ ನಿಜವಾದ ತಂದೆ ತಾಯಿ ಯಾರೆಂಬುದು ನಿಗೂಢವಾಗಿದೆ.

ಸಿರಿಯ ಮಗ ಕುಮಾರ (ಕೋಟಿಪೂಂಜ) ಹಾಗೂ ಮಗಳು ಸೊನ್ನೆಯ ಜನನಕ್ಕೆ ಸಂಬಂಧಿಸಿ ದೈವೀ ಸಂಬಂಧವನ್ನು ಹೇಳಿದಂತಿಲ್ಲ. ಆದರೆ ಸೊನ್ನೆಯ ಅವಳಿ ಮಕ್ಕಳಾದ ಅಬ್ಬಗೆ-ದಾರಗೆಯರ ಹುಟ್ಟಿಗೆ, ಬೆರ್ಮೆರ್ ದೈವಕ್ಕೆ ಹೇಳಿಕೊಂಡ ಹರಕೆಯೇ ಕಾರಣವೆನ್ನಲಾಗಿದೆ. ಸೊನ್ನೆಯ ಓರಗೆಯಲ್ಲಿ ಬೆಳೆದ ಗಿಂಡೆಯ ಕಥೆಯೂ ನಿಗೂಢವಾಗಿದೆ. ಒಂದು ಕಥೆಯಂತೆ ಸೊನ್ನೆ ಶಿಶುವಾಗಿರುವಾಗ ಅವಳನ್ನು ಸಾಕಿದ ಸಾನಬೊಟ್ಟು ಅಜ್ಜನಿಗೆ ನೆರೆಯೇರಿದ ತೋಡಿನಲ್ಲಿ ತೇಲಿ ಬಂದ ಬೆಳ್ಳಿಯ ಗಿಂಡೆ ಸಿಗುತ್ತದೆ. ಸೊನ್ನೆಯ ಮಗ್ಗುಲಲ್ಲಿ ಇರಿಸಿದ್ದ ಆ ಗಿಂಡೆಯಲ್ಲಿ ಹೆಣ್ಣು ಮಗುವೊಂದು ಹುಟ್ಟುತ್ತದೆ. ಅದಕ್ಕೆ ಗಿಂಡೆಯೆಂದು ಹೆಸರಿಡುತ್ತಾರೆ.

ಇನ್ನೊಂದು ಕಥನದಂತೆ, ಹೇಳಿಕೊಂಡ ಹರಕೆಯನ್ನು ಸಲ್ಲಿಸದ ಮಡಿಕಲ್ಲಿನ ಬ್ರಾಹ್ಮಣದಂಪತಿಗಳ ಮಗುವನ್ನು ಹುಲಿ ಕಾಡಿಗೆ ಒಯ್ದಿತ್ತೆಂದೂ ಅದು ಇತರರ ಮೂಲಕ ಕಾನಬೆಟ್ಟಿನ ಅಜ್ಜರಿಗೆ ಸಿಕ್ಕಿತೆಂದೂ ಹೇಳಿಕೆಯುಂಟು. ದೈವಕಥನಗಳಲ್ಲಿ ‘ಅಜ್ಜಿಕತೆ’ಯ ಅಂಶಗಳು ಸಾಕಷ್ಟು ಇರುವುದಕ್ಕೆ ಇಂಥ ಕಥೆಗಳು ದೃಷ್ಟಾಂತವೆನ್ನಬಹುದು. ಗಿಂಡೆಗೆ ಸಿರಿಸಂಧಿಯಲ್ಲಿ ಹೇಳಿಕೊಳ್ಳುವಂಥ ಪ್ರಾಧಾನ್ಯವೇನೂ ಕಾಣಿಸುವುದಿಲ್ಲ.

ಸಿರಿಗೆ ಆಶ್ರಯ ನೀಡಿದ ಕರಿಯಕಾಸಿಂಗ ಮತ್ತು ಬೊಳಿಯ ದೇಸಿಂಗ ಎಂಬ ಬೋಳಮಲ್ಲಿಗೆ ಕ್ಷತ್ರಿಯ ಅರಸರ ಹುಟ್ಟು ನಿಗೂಢವಾಗಿದೆ. ‘ಬೋಳದ ಕಾಡಿನ ಮುತ್ತು ತಾವರೆಕೆರೆಯ ಬಿಳಿ ತಾವರೆಯಲ್ಲಿ, ಬೊಳ್ಯದೇಸಿಂಗನೂ, ಕೆಂದಾವರೆಯಲ್ಲಿ ಕರಿಯ ಕಾಸಿಂಗನೂ ‘ಆರು ಎಸಳಿನ ಮೂರು ಕುಸುಮ’ದಲ್ಲಿ ಹುಟ್ಟಿ ನವಿಲಿನ ಮೇಲೆ ಕುಳಿತು ತಿರುಗಾಡಿದರು. ಕಡವೆಯ ಹಾಲು ಕುಡಿದರು, ನಾಗಬ್ರಹ್ಮನ ವರದಿಂದ ಕಂಚಿಕಡಂಗದ ಅರಮನೆಯನ್ನು ನಿರ್ಮಿಸಿದರು’ -ಎಂಬ ವರ್ಣನೆ ತೋಡಕುಕ್ಕಿನಾರ್ ಮೊದಲಾದ ಕೆಲವು ಅರಸುದೈವಗಳ ಆವಿರ್ಭಾವದ ವಿವರನ್ನು ಹೋಲುತ್ತದೆ.

ದೈವವೇದಿಕೆಯೇರಿದ ವ್ಯಕ್ತಿಗಳ ಅಥವಾ ಅವರ ಹೆತ್ತವರ ಜನನ ಸಂಬಂಧವಾಗಿ ರಹಸ್ಯಾತ್ಮಕತೆ ಇರುವಂತೆಯೇ ಇವರ ಜೀವನಾವಸಾವ ಸಂಬಂಧವಾಗಿಯೂ ನಿಗೂಢತೆ ಗೂಡುಕಟ್ಟಿರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ದೈವಕಥನಗಳಲ್ಲಿ ಕೆಲವೊಂದು ಅಕಾಲಿಕ ಅಥವಾ ಅಸಹಜ ಮರಣವನ್ನು ಸಾವೆಂದು ಹೇಳದೆ, ‘ಮಾಯ’ ಅಥವಾ ‘ಮಾಯಕ’ ಎಂಬ ನಿಗೂಢತೆಗೊಪ್ಪುವ ಪರಿಭಾಷೆಯಿಂದ ಭೂತಚರಿತ್ರಕಾರರು ಸೂಚಿಸುತ್ತಾರೆ. ಅಂಥ ಅಕಾಲಿಕಮರಣವು ಕೊಲೆಯ ಮೂಲಕವೋ, ಆತ್ಮಹತ್ಯದ ಮೂಲಕವೋ, ಅಥವಾ ಅನಿರೀಕ್ಷಿತ ಆಕಸ್ಮಿಕದ ಮೂಲಕವೋ, ನಡೆದಿರಬಹುದು. ಆದರೆ ಸಾವಿನ ಮೂಲಕಾರಣವನ್ನು ‘ಮಾಯಕ’ ಎಂದು ದೈವಭಾಷೆಯ ಶಬ್ದದ ತಡಿಕೆಯಿಂದ ಮರೆಗೊಳಿಸಿ, ಪುರಾಣೀಕರಿಸಿ, ದೈವಚರಿತ್ರೆಯ ಉಜ್ವಲೀಕೃತ ನಿರೂಪಣೆಗೆ ಹೊಂದಿಕೆಯಾಗುವಂತೆ ಮಾಡಿದ್ದನ್ನು ಗುರುತಿಸಬಹುದು. ‘ಸತ್ತು ಹೋದ’, ತೀರಿಕೊಂಡ’ ಎನ್ನುವ ಮಾತಿನಲ್ಲಿ ಯಾವ ವಿಶೇಷತೆಯಾಗಲೀ, ಕಾವ್ಯಾತ್ಮಕತೆಯಾಗಲೀ, ನಿಗೂಢತೆಯಾಗಲೀ ಇರುವುದಿಲ್ಲ. ಆದರೆ ‘ಮಾಯಕವಾದ’ ಜೋಗದಿಂದ ಮಾಯಕ್ಕೆ ಸಂದ’ ಎಂಬುದರಲ್ಲಿ ಒಂದು ದೈವಚರ್ಯೆಯ ನೆರಳು ಕಾಣಿಸುತ್ತದೆ. ‘ಮಾಯಕಗೊಂಡವನ’ ಆತ್ಮಕ್ಕೆ ಮುಂದೆ ಅನೂಹ್ಯವಾದೊಂದು ನೆಲೆಯಿದೆ, ಅದು ಮಧ್ಯಂತರ ಜಗತ್ತಿಗೆ ಸೇರಿ ಅಲ್ಲಿ ಕ್ರಿಯಾಶಾಲಿಯಾಗುತ್ತದೆ ಎಂಬ ಸೂಚನೆ ಕಾಣುತ್ತದೆ. (ವಾಡಿಕೆಯ ಮಾತಿನಲ್ಲಿ ಬರುವ ‘ದಿವಂಗತ’, ‘ಕೈಲಾಸವಾಸಿ’, ‘ಸ್ವರ್ಗಸ್ಥ’, ‘ವೈಕುಂಠವಾಸಿ’ ಇತ್ಯಾದಿ ಶಬ್ದಗಳ ಮಥಿತಾರ್ಥ, ವಸ್ತುಸತ್ಯ ಅಷ್ಟೇ ತಾನೆ?) ಈ ಮಾಯಕಗೊಂಡವನ ದೇಹ ಏನಾಯಿತು ಎಂಬ ವಿವರ ಸಾಮಾನ್ಯವಾಗಿ ಕಥನಗಳಲ್ಲಿ ದೊರಕುವುದಿಲ್ಲ. ಏಕೆಂದರೆ, ‘ದೇಹವನ್ನು ಬಿಟ್ಟು ಹೋದ ಎಂದರೆ ಮಾಯಕಕ್ಕೆ ಔಚಿತ್ಯ ಬರುವುದಿಲ್ಲ. ‘ದೇಹಸಹಿತ ಮಾಯವಾದ’ ಎಂದರೆ ಮಾತ್ರ ನಿಗೂಢ ನಿರೂಪಣೆಗೆ ಸಂಗತತೆ ಬರುತ್ತದೆ.

ದೈವೀಕರಣಗೊಂಡ ಹಲವು ಮನುಷ್ಯ ವ್ಯಕ್ತಿಗಳ ಜೀವನಾಂತ್ಯದ ಕುರಿತಾಗಿ ‘ಮಾಯಕ’ ಎಂಬ ಮಾತು ಬಳಸಲ್ಪಟ್ಟಿದೆ. ಕೆಲವು ಉದಾಹರಣೆಗಳನ್ನು ಗಮನಿಸಬಹುದು.

ಅಸ್ಪೃಶ್ಯವರ್ಗಕ್ಕೆ ಸೇರಿದ ಕೊರಗತನಿಯ ದೇವಸ್ಥಾನದ/ದೈವಸ್ಥಾನದ ಬಳಿಯ ಮಾದಳದ ಮರಕ್ಕೆ ಹತ್ತಿ ಹಣ್ಣನ್ನು ಕೊಯ್ದುದರಿಂದ ದೈವಗಳ ಕೆಂಗಣ್ಣಿಗೆ ಗುರಿಯಾಗಿ ಮಾಯವಾದ ಎಂಬುದಾಗಿ ಕೊರಗ ತನಿಯನಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಹೇಳುತ್ತವೆ. (ಮಾಯವಾದ ಸ್ಥಳ ಮತ್ತು ಮಾಯಕ ಮಾಡಿದ ದೈವಗಳ ಹೆಸರುಗಳಲ್ಲಿ ವ್ಯತ್ಯಾಸ ಇದೆ) ಕೊರಗ ತನಿಯನ ಜಾತಿಯನ್ನೆತ್ತಿ ಹಂಗಿಸಿದಾಗ ಆತ ಪ್ರತಿಭಟಿಸಿದ ಸೂಚನೆ ಪಾಡ್ದನದಲ್ಲಿ ಕಂಡುಬರುತ್ತದೆ. ಹಾಗಾಗಿ ಆತ ಸಂಪ್ರದಾಯವಾದೀ ಸಮಾಜದ ಕ್ರೋಧಕ್ಕೆ ಬಲಿಯಾಗಿರಬಹುದು. ಅರ್ಥಾತ್ ಕೊಲೆಯಾಗಿರಬಹುದು. ಕಾಲಾಂತರದಲ್ಲಿ ಕೊರಗತನಿಯ ದೈವೀಕರಣಗೊಂಡಾಗ (ಒಬ್ಬ ವ್ಯಕ್ತಿಯ ಮರಣಕ್ಕೂ ಆತನ ದೈವೀಕರಣಕ್ಕೂ ನಡುವೆ ತಕ್ಕಷ್ಟು ಕಾಲಾವಧಿ ಸಂದಿರಬೇಕಾದುದು ಸಹಜ.) ಹಾಗೂ ಪಾಡ್ದನ ಸೃಷ್ಟಿಯಾದಾಗ ‘ಮಾಯಕ ಪ್ರಕ್ರಿಯೆ’ ಮೈದೋರಿರಬೇಕು.

‘ಅಂಗಾರ ಬಾಕುಡ’ ಎಂಬ ದಲಿತ ಮೂಲದ ದೈವ ಮೂಲತಃ ಬಂಗರಸನ ಒಬ್ಬ ಮೂಲದಾಳು. ಕಂಬಳದ ಕೋಣಗಳನ್ನು ಸಾಕುವುದೇ ಮೊದಲಾದ ಕೆಲಸಗಳನ್ನು ಮಾಡುತ್ತಿದ್ದವನು. ಸರಿಯಾದ ಕಾರಣಗಳಿಲ್ಲದೆ ಬಂಗರಸು ಬಾಕುಡನ ಕೈಕಾಲುಗಳನ್ನು ಕಡಿಸಿದನೆಂದೂ, ಮುಂದೆ ಬಾಕುಡ ಮಾಯಕಗೊಂಡು ದೈವವಾದನೆಂದೂ ಹೇಳಲಾಗಿದೆ. ಜುಮಾದಿಯಂಥ ದೈವಗಳ ಕೋಲದ ಕೊನೆಗೆ ಅಂಗಾರ ಬಾಕುಡನ ಸರಳ ಕೋಲವೂ ನಡೆಯುವುದುಂಟು. ಹಟ್ಟಿಯ ದನಕರುಗಳನ್ನು ಅಂಗಾರಬಾಕುಡ ಕಾಪಾಡುತ್ತಾನೆಂದು ನಂಬಲಾಗಿದೆ.

ಕೋಡದಬ್ಬು ಮತ್ತು ಆತ ತಂಗಿಯೆಂದು ಅಂಗೀಕರಿಸಿದ್ದ ತನ್ನಿಮಾನಿಗ ಇವರ ಕೊನೆಯೂ ನಿಗೂಢವಾಗಿದೆ. ಪಾಡ್ದನದಲ್ಲಿ ‘ತಗೆ ತಂಗಡಿ ತಾರಿನ ಗಂಡಿಡ್ ಮಾಯಾಸೊರೂಪ ಬೆಂದೆರ್’ ಜೋಗ ಬುಡುದು ಮಾಯಕಾದ್ ಗಟ್ಟೊಗು ಪೋಯೆರ್’’ (ಅಣ್ಣತಂಗಿ ‘ತಾರಿನ ಗುಂಡಿ’ಯಲ್ಲಿ ಮಾಯಾ ಸ್ವರೂಪ ಹೊಂದಿದರು. ಕಾಣುವ ರೂಪ ಬಿಟ್ಟು ಮಾಯಕ ಹೊಂದಿ ಗಟ್ಟಕ್ಕೆ ಹೋದರು, -ಪಾಡ್ದನ ಸಂಪುಟ ೧೯೯೭, ಪು.೩೨೮)

ಅವರಿಬ್ಬರೂ ತಾರಿಗುಂಡಿ ಎಂಬ ಮಡುವಿನಲ್ಲಿ ಆತ್ಮಹತ್ಯ ಮಾಡಿಕೊಂಡನೆಂಬುದು ಸ್ಪಷ್ಟ. ಕೋಡದಬ್ಬು ಮುಂಡಾಲವರ್ಗದವನಾದರೆ, ತನ್ನಿಮಾಣಿಗ ಮುಗೇರ(ಮೇರ) ಸಮಾಜಕ್ಕೆ ಸೇರಿದವಳು. ಸಾಂದರ್ಭಿಕ ಯೋಗಾಯೋಗದಿಂದ ಇವರು ಅಣ್ಣ ತಂಗಿ ಎಂದು ಕರೆದುಕೊಂಡರೂ, ಭಿನ್ನ ಜಾತಿಯ ತರುಣ ತರುಣಿಯರ ಆತ್ಮೀಯ ಸಾಹಚರ್ಯವನ್ನು ಸಹಿಸದ ಮಂದಿ ಅವರನ್ನು ಘಾಸಿಗೊಳಿಸಿರಬಹುದು. ಇದರಿಂದ ನೊಂದು ಇವರು ಆತ್ಮಹತ್ಯ ಮಾಡಿಕೊಂಡಿರಬಹುದು. ಅಥವಾ ಇವರ ಒಡನಾಟವನ್ನು ಸೈರಿಸದ ಮಂದಿ ಇವರನ್ನು ಕೊಲೆ ಮಾಡಿ ಮಡುವಿಗೆ ಬಿಸಾಡಿರಬಹುದು ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ, ರಹಸ್ಯಾತ್ಮಕತೆಯ ಒಡಲಲ್ಲಿ ಕ್ರೌರ್ಯವೂ ಮಸಗಬಹುದು!

ಬೀರುಕಲ್ಕುಡ ಮತ್ತು ಅವನ ಅವಳಿ ಸೋದರಿ ಕಾಳಮ್ಮ(ಅಥವಾ ಸತ್ಯಮ್ಮ) ವೇಣೂರಿನ ಮಾದೇವನ ಅಂಗಣದಲ್ಲಿ ಮಾಯವಾದರೆಂಬ ಮಾತು ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿ ಬರುತ್ತದೆ. ತನ್ನ ರಾಜ್ಯದಲ್ಲಿ ಕಲ್ಕುಡನ ಮೂಲಕ ಮಾಡಿಸಿದ ಗೋಮಟೇಶ್ವರ ವಿಗ್ರಹದಂಥ ಬೇರೆ ವಿಗ್ರಹವನ್ನು ಅನ್ಯ ರಾಜ್ಯದಲ್ಲಿ ಕಲ್ಕುಡನು ನಿರ್ಮಿಸದಿರಲಿ ಎಂಬು ದುರ್ಭಾವನೆಯಿಂದ ಕಾರ್ಕಳದ ಭೈರವರಸ ಕಲ್ಕುಡನ ಒಂದು ಕೈಯನ್ನೂ ಒಂದು ಕಾಲನ್ನೂ ಕಡಿಸುತ್ತಾನೆ. ಇದರ ಪ್ರತೀಕಾರವನ್ನು ಮಾಯಾರೂಪದಲ್ಲಾದರೂ ತೀರಿಸಬೇಕೆಂದು ಕಾಳಮ್ಮನ ಪ್ರೇರಣೆಯಂತೆ ಅವರಿಬ್ಬರೂ ಮಾಯಕವಾಗಿ ಮಾಯಾಸ್ವರೂಪದಿಂದ ಭೈರವರಸನನ್ನು ಪೀಡಿಸುತ್ತಾರೆ.

ಇನ್ನೊಂದು ಪಾಡ್ದನದಲ್ಲಿ ‘ತಗೆ ತಂಗಡಿ ಮಾದೇವೆರೆ ಅಂಗಣ ಜತ್ತೆರ್, ಮೂಜಿ ಸುತ್ತು ಬಲಿಬತ್ತೆರ್. ದಂಬೆ ಕಲ್ಲ್‌ಗ್ ಉಳಿ ಊರ್ಯೆರ್.’ ಅಳ್ಳ್ ಮಾಯ ಆಯೆರ್’’ ಎಂದಿದೆ. (ಅಣ್ಣ ತಂಗಿ ಮಾದೇವರ ಅಂಗಳಕ್ಕೆ ಇಳಿದರು. ಮೂರು ಸುತ್ತು ಪ್ರದಕ್ಷಿಣೆ ಬಂದರು… ದಂಬೆಕಲ್ಲಿಗೆ ಉಳಿ ಊರಿದರು. ಅಲ್ಲಿ ಮಾಯವಾದರು’’ ಎಂದಿದೆ. (ಎ.ಮೇನರ್- ಪಾಡ್ದನೊಳು, ೧೮೮೬, ಪು.೨೧)

ದಂಬೆಕಲ್ಲಿಗೆ ಉಳಿ ಊರಿದರು ಎಂದರೂ, ಅವರು ಅದೇ ಉಳಿಯಿಂದಲೇ ತಿವಿದುಕೊಂಡು ಮಡಿದರೆಂದು ಊಹಿಸಬೇಕಾಗುತ್ತದೆ.

ಒಬ್ಬರ್ಯ ಸಮುದ್ರಕಾಳಗಕ್ಕೆ ಬಲಿಯಾದನೆಂಬುದೇ ಸಂಭಾವ್ಯ ವಿಚಾರ. ಎ.ಮೇನರ್ ಅವರ ಪಾಠದಲ್ಲಿ ಸಮುದ್ರ ಕಾಳಗದ ವಿವರಣೆ ಇದೆ. ಬೇರೆಯ ಪಾಡ್ದನಗಳಲ್ಲಿ ಸುಂಟರಗಾಳಿಯ ಸೂಚನೆ ಇದೆ. ‘‘ಆಗ ಬಿರುಸಾದ ಗಾಳಿ ಬೀಸಿತು. ಕುಂಕುಮ ವರ್ಣದ ಮಳೆ ಸುರಿಯಿತು. ನೀರು ನೆತ್ತರಿನ ಕಡಲಾಯಿತು. ಮುತ್ತಿನ ಲಂಗರು ಕಡಿಯಿತು. ಪಟ್ಟೆಯ ಹಾಯಿ ಹರಿಯಿತು. ಹವಳದ ಕೊಂಬುಮರ ಮುರಿಯಿತು. ಹುಟ್ಟುಗಾರರ ಹುಟ್ಟು ತುಂಡಾಯಿತು. ಚುಕ್ಕಾಣಿಗಾರರ ಚುಕ್ಕಾಣಿ ತುಂಡಾಯಿತು. ಪಡಾವನ್ನು ತೂಗಿಸಿಕೊಂಡು ತೇಲಿಸಿಕೊಂಡು ತಂದ ಬಬ್ಬರ್ಯ’’ (ಪಾಡ್ದನ ಸಂಪುಟ ೧೯೯೭, ಪು.೪೪೪)

ಡಾ. ಸುಶೀಲಾ ಉಪಾಧ್ಯಾಯರ ಪಾಠದಲ್ಲಿ ಸಿರಿ ಗಂಗಮ್ಮದೇವಿಯ ಕೋಪದಿಂದ ಸಮುದ್ರದಲ್ಲಿ ಪ್ರಕೃತಿಯ ಪ್ರಕೋಪ ಉಂಟಾಯಿತೆಂಬ ನಿರೂಪಣೆ ಇದೆ. (ತುಳುವ (೯-೧೦) ೧೯೮೨, ಪು.೧೬) ಇದನ್ನು ಒಬ್ಬರ್ಯನ ದುರಂತಸಂಕೇತವೆಂದು ತಿಳಿಯಬಹುದು.

ಕೋಟಿ-ಚೆನ್ನಯ ಹಾಗೂ ಕಾಂತಾಬಾರೆ-ಬೂದಾಬಾರೆ ಎಂಬ ಉಭಯ ಯಮಳವೀರರಲ್ಲಿ ಕೋಟಿ-ಚೆನ್ನಯರ ಮರಣದಲ್ಲಿ ರಹಸ್ಯಾತ್ಮಕತೆ ಇಲ್ಲ. ಆದರೆ ಕಾಂತಾಬಾರೆ-ಬೂದಾಬಾರೆಯರ ಕೊನೆ ಮಾತ್ರ ನಿಗೂಢವಾಗಿದೆ. ಅವರು ತಮ್ಮ ಪರಾಕ್ರಮದಿಂದಾಗಿ ಮೂಲ್ಕಿ-ಪಡು ಪಣಂಬೂರು ಸಾವಂತರಸರ ನಿಷ್ಠಾವಂತ ದಳವಾಯಿಗಳಾಗಿ ಚೌಟರ ಸೇನೆಯೊಂದಿಗೆ ಕಾದಿ ಮಡಿದರೆಂಬ ಹೇಳಿಕೆಯೂ ಇದೆ. ಇದು ಸಂಭವನೀಯ. ಆದರೆ ಬೇರೆ ಐತಿಹ್ಯಗಳಲ್ಲಿ, ಯುದ್ಧ ಗೆದ್ದಿದ್ದರೂ ಕಾಂತಾಬಾರೆಗೆ ಬಲವಾದ ಗಾಯವಾಗಿರುತ್ತದೆ. ಅವನು ತಮ್ಮನೊಡನೆ ‘‘ತಮ್ಮಾ ಈ ಮಣ್ಣಿನ ಕಾಯದಲ್ಲಿದ್ದು, ನಾವು ಮಾಡುವ ಕೆಲಸಗಳನ್ನು ಪೂರೈಸಿದ್ದೇವೆ. ಈ ಸ್ಥಿತಿಯಲ್ಲಿ ನಾವು ಭೂಮಿಯ ಮೇಲಿದ್ದರೆ, ನಮ್ಮ ಕಾರಣಿಕಕ್ಕೆ ಅಪಕೀರ್ತಿ ಬಂದೀತು. ನಾವು ಕಾಯಬಿಟ್ಟು ಕೈಲಾಸಕ್ಕೆ ತೆರಳೋಣ.’’ ಮುಂದಕ್ಕೆ ಮಾಯದಲ್ಲಿದ್ದುಕೊಂಡು ಸೀಮೆಯಲ್ಲಿ ಸಂಚರಿಸೋಣ ನಡೆ ಎನ್ನುತ್ತಾನೆ. ಬಳಿಕ ಕೈ ಕೈ ಹಿಡಿದುಕೊಂಡು ಸಿಮಂತೂರು ಬಾವದತ್ತ ನಡೆದರು. ಸಿಮಂತೂರು ರಸಮಾಯ ಬಾವಿಯ ದಂಡೆಯಲ್ಲಿ ನಿಂತರು. ಮರುಕ್ಷಣ ಅದರೊಳಗೆ ಮಾಯವಾದರು’’ (ಮದ್ದು ಮೂಡುಬೆಳ್ಳೆ, ಕಾಂತಾಬಾರೆ-ಬೂದಾಬಾರೆ ೧೯೯೮, ಪು.೫೯) ಈ ವಿವರಗಳು ಅವರು ಆತ್ಮಹತ್ಯ ಮಾಡಿಕೊಂಡರೆಂಬುದನ್ನು ನಿರ್ದೇಶಿಸುತ್ತವೆ.

ಮುಗೇರ (ಮೇರ) ಎಂಬ ದಲಿತವರ್ಗದ ಸಾಂಸ್ಕೃತಿಕ ವೀರರಾದ ಮುದ್ದು-ಕಳಲ ಎಂಬ ಅವಳಿ ವೀರರು ಬಂಗರಸನ ಪರವಾಗಿ ಹೋರಾಡಿ ಅವರಲ್ಲಿ ಕಳಲನು ಯುದ್ಧದ ಕಳದಲ್ಲಿ ಮೋಸದಿಂದ ಕೋಲ್ಪಟ್ಟನೆಂದೂ, ಮುದ್ದನು ಬಳಿಕ ಹಾವು ಕಚ್ಚಿ ಸತ್ತನೆಂದೂ ಹೇಳಲಾಗಿದೆಯಾದರೂ (ಡಾ. ಅಭಯಕುಮಾರ್ , ಮುಗೇರರು – ಜನಾಂಗ ಜಾನಪದ ಅಧ್ಯಯನ ೧೯೯೭, ಪು.೬೬) ಬೇರೆ ಪಾಡ್ದನದಲ್ಲಿ ಮುಗೇರರು ‘ಬಿರ್ಮೆರೆ ಗುಂಡಿಯಲ್ಲಿ ಮೀನು ಹಿಡಿಯಲು ಹೋಗಿ ಮಾಯವಾಗುತ್ತಾರೆ ಎಂಬ ವಿಚಾರವಿದೆ. (ಡಾ.ವಾಮನ ನಂದಾವರ, ಅವಳಿ ಆರಾಧನೆ – ಪುರಾಣ ಮತ್ತು ವಾಸ್ತವ-ಸಿರಿ ೧೯೯೫, ಪು.೧೭೯) ತಂಗಿ ತನ್ನಿಮಾನಿಗ ಮುನ್ನೆಚ್ಚರಿಕೆ ನೀಡಿದರೂ (ಬಿರ್ಮೆರೆ ಗುಂಡಿ ಅಪಾಯಕಾರಿ ಮಡುವೆಂದು) ಈ ಮಾತನ್ನು ಮೀರಿ ಅವರು ಮೀನು ಬೇಟೆಗೆ ಹೋಗಿ ದುರಂತಕ್ಕೊಳಗಾಗುತ್ತಾರೆ.

ಇಲ್ಲಿ ಆತ್ಮಹತ್ಯದ ಸೂಚನೆಯೇನೂ ಸಿಕ್ಕುವುದಿಲ್ಲ. ಒಂದು ವೇಳೆ ‘ಬಿರ್ಮೆರೆ ಗುಂಡಿ’ಯಲ್ಲಿ ಆಕಸ್ಮಿಕವಾಗಿ ಮುಳುಗಿ ಸತ್ತಿರಬಹುದು. ಮಡುವಿನಲ್ಲಿ ಮುಳುಗಿ ಮಾಯಕವಾಗಿರುವ ರಹಸ್ಯಾತ್ಮಕತೆ ಬೇರೆಯ ಕಥನಗಳಲ್ಲೂ ಇವೆ. ‘ಕಾನದೆ-ಕಾಟದೆ’ ಎಂಬ ದಲಿತ ವೀರರು (ಇವರು ಮುದ್ದು-ಕಳಲ ಹಾಗೂ ಕೋಟಿ-ಚೆನ್ನಯರ ಸಂಪರ್ಕಕ್ಕೂ ಬಂದವರೆಂದು ಹೇಳಲಾಗಿದೆ) ಒಮ್ಮೆ ಹೊಳೆಯಲ್ಲಿ ಮೀನು ಹಿಡಿಯಲು ಹೋಗುತ್ತಾರೆ. ಅಣ್ಣ ನೀರಲ್ಲಿ ಮುಳುಗುವುದನ್ನು ಕಂಡ ತಮ್ಮನೂ ನೀರಿಗೆ ಹಾರುತ್ತಾರೆ. ಇಬ್ಬರೂ ಮಾಯವಾಗುತ್ತಾರೆ. ಪಂಜುರ್ಳಿ ದೈವದ ಸೇರಿಗೆಗೆ ಸೇರುತ್ತಾರೆ. (ಡಾ. ವಾಮನ ನಂದಾವರರ ಮೇಲೆ ಸೂಚಿಸಿದ ಲೇಖನ, ಪು.೧೮೦)

‘ಪೆರಿಯಾಕುಳು’ ಎಂದು ಪ್ರಖ್ಯಾತರಾದ ವೀರ-ವಿಕ್ರಮ ಎಂಬ ಅವಳಿ ವೀರರು ಬಜ್ಪೆ ಕೊಳಂಬೆ ಪ್ರದೇಶದ ಬೈಲಬೀಡು ಎಂಬ ಬೀಡಿಗೆ ಸಂಬಂಧಪಟ್ಟವರು. ಅನೇಕ ಸಾಹಸಕಾರ್ಯಗಳನ್ನು ಮಾಡಿದ ಈ ವೀರರು ಕಾರಣಾಂತರದಿಂದ ದೂರದಲ್ಲಿದ್ದಾಗ ಅವರ ತಾಯಿ ಅವರಿಬ್ಬರ ಆಳೆತ್ತರದ ಪ್ರತಿಮೆಗಳನ್ನು ಮಾಡಿಸಿಡುತ್ತಾಲೆ. ಹೀಗೆ ವ್ಯಕ್ತಿಗಳು ಜೀವಂತ ಇರುವಾಗಲೇ ಪ್ರತಿಮೆ ಮಾಡಿಡುವುದು ವಿಲಕ್ಷಣವಾದ ವಿದ್ಯಮಾನ. ತಮ್ಮ ಸಾಧನೆ ಮುಗಿಯಿತೆನ್ನುವಾಗ ವೀರ-ವಿಕ್ರಮರು ಸಮೀಪದ ಹಾಲುಳ್ಳ ಮರವೊಂದರ ಬಳಿ ಮಾಯಕ ಹೊಂದುತ್ತಾರೆ. ತಾಯಿಯು ತಮ್ಮ ವಿಗ್ರಹಗಳನ್ನು ಮಾಡಿಸಿದುದು ಅವರಿಗೆ ಇಷ್ಟವಾಗಲಿಲ್ಲ ಎಂಬ ಅಭಿಪ್ರಾಯವೂ ಇದೆ. ಆ ವಿಗ್ರಹಗಳನ್ನು ಬೈಲುಬೀಡಿನಲ್ಲಿ ಈಗಲೂ ನೋಡಬಹುದು. ಇಲ್ಲಿ ಅವರು ಹೇಗೆ ಕಾಯತ್ಯಾಗ ಮಾಡಿದರೆಂದು ಊಹಿಸುವುದು ದುಸ್ತರವಾಗಿದೆ.

ಮರಣಾನಂತರ ಮಿತ್ತೂರು ಜೋಡುಭೂತಗಳೆಂದು ಕರೆಯಲ್ಪಡುವ ಅವಳಿವೀರರಾದ ಚಂದು-ಚಾತ್ತು ಇವರು ಮೂಲತಃ ಕೇರಳದಿಂದ ತುಳುನಾಡಿಗೆ ಬಂದವರು. ಇವರಲ್ಲಿ ಚಾತ್ತು ಮಂಞನಡ್ಕ ಭಗವತೀ ಕ್ಷೇತ್ರದ ವಠಾರದಲ್ಲಿ ಮಲಗಿದ್ದಾಗ ಅಲ್ಲೇ ಮಾಯವಾಗಿ, ದೈವವಾಗಿ ಮಂಞನಡ್ಕದಲ್ಲಿ ಸ್ಥಾನ ಪಡೆಯುತ್ತಾನೆ. ಮಲಗಿದಲ್ಲೇ ಅವನನ್ನು ಶತ್ರುಗಳು ಯಾರೋ ಕೊಂದಿರುವ ಸಾಧ್ಯತೆ ಇದೆ. ಚಂದು ಉಬರಡ್ಕ ಮಿತ್ತೂರು ಗ್ರಾಮದ ‘ಗುಂಡಿ’ ಪ್ರದೇಶದಲ್ಲಿ ಮಾಯವಾಗಿ ಉಳ್ಳಾಕುಲು ದೈವದೊಂದಿಗೆ ಸೇರಿಹೋಗುತ್ತಾನೆ. ವಿವರಗಳು ಅಸ್ಪಷ್ಟ.

ಆಲಿಬ್ಯಾರಿ ಎಂಬ ಮುಸ್ಲಿಂ ಮಂತ್ರವಾದಿಯ ಆತ್ಮವು ಚಾಮುಂಡಿ (ಅಥವಾ ಮಂತ್ರಮೂರ್ತಿ) ದೈವದೊಂದಿಗೆ ‘ಸೇರಿಗೆ’ಗೊಂಡು ಆಲಿ ಚಾಮುಂಡಿ ಅಥವಾ ಆಲಿಭೂತವೆನಿಸಿದೆ. ಹೆಮ್ಮೆಗಾರನೂ ಲಂಪಟನೂ ಆಗಿದ್ದ ಆತನನ್ನು ಚಾಮುಂಡಿದೈವ ಚೆಲುವೆ ಹೆಣ್ಣಿನ ರೂಪದಲ್ಲಿ ಮರುಳು ಮಾಡಿ ಕೆರೆಯೊಂದರಲ್ಲಿ ಮಾಯಮಾಡಿತೆಂಬ ಐತಿಹ್ಯವಿದೆ. ಆತ ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸತ್ತಿರಬಹುದು. ಅಥವಾ ಅತಿರೇಕ ವರ್ತನೆಯ ಮಂತ್ರವಾದಿಯೊಬ್ಬನನ್ನು ಜನ ಗುಪ್ತವಾಗಿ ಮುಗಿಸಿದ ಕಥೆಗೆ ಹೀಗೆ ಬೇರೊಂದು ಬಣ್ಣ ಬಂದಿರಲೂಬಹುದು. ಮಂತ್ರವಾದಿಯೊಬ್ಬನ ಆಕಸ್ಮಿಕಮರಣಕ್ಕೆ ಇಂಥ ಕಲ್ಪನೆಗಳು ಸೇರಿರಬಹುದು.

ಕೋಟಿ-ಚೆನ್ನಯರ ಕೆಲವು ಗರಡಿಗಳಲ್ಲಿ ಜೋಗಿಪುರುಷ ಕುಜುಂಬಕಾಂಜ ಒಕ್ಕುಬಲ್ಲಾಳ, ಮುಸ್ಲಿಂ ಮಕ್ಕಳು ಹಾಗೂ ಮಾಯಂದಾಳ್ ಎಂಬ ಸೇರಿಗೆಯ ದೈವಗಳ ಮರದ ಪಾಪೆಗಳಿರುತ್ತವೆ. ಜೋಗಿಪುರುಷ ಮೂಲದಲ್ಲಿ ಬಳೆಗಾರ ಜೋಗಿಯಾಗಿದ್ದು ಗರಡಿಯ ಪಂಚಕಜ್ಜಾಯ ಸೇವೆಯನ್ನು ನೋಡಲು ಬಂದಿದ್ದನೆಂದೂ ಕೋಟಿ-ಚೆನ್ನಯರಿಗೆ ಅರ್ಪಿಸಿದ್ದ ಪಂಚಕಜ್ಜಾಯಕ್ಕೆ ಕೈಹಾಕಿ ತಿಂದ ಕಾರಣ ಕಲ್ಲಾಗಿ ಬಿದ್ದನೆಂದೂ ಹೇಳುತ್ತಾರೆ. ಅವನ ವಿಗ್ರಹವನ್ನು ಮಾಡಿಟ್ಟು ಸೇರಿಗೆಯ ದೈವವಾಗಿ ಆರಾಧಿಸಲಾಯಿತು.

ಕೋಟಿ ಚೆನ್ನಯರ ಜೊತೆಯಲ್ಲಿ ಉತ್ಸವದಲ್ಲಿ ಕಂಡುಬರುವ ಕುಜುಂಬ ಕಾಂಜವನ ವಿಚಾರ ನಿಗೂಢವಾಗಿಯೇ ಇದೆ. ಈತನ ಜಾತಿಯ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಹೆಚ್ಚಿನ ಐತಿಹ್ಯಗಳಲ್ಲಿ, ಕೋಟಿ-ಚೆನ್ನಯರ ಕೋಲ ನಡೆಯುವಾಗ ತನ್ನದೊಂದು ಬೀರವನ್ನೂ (ಪ್ರತಾಪಕಥನ) ಹೇಳಬೇಕೆಂದು ಕೋಲ ಕಟ್ಟುವ ಪರವನನ್ನು ಕುಜುಂಬಕಾಂಜವನು ನಿರ್ಬಂಧಿಸಲಾಗಿ, ಕೋಟಿ-ಚೆನ್ನಯರ ಆಗ್ರಹಕ್ಕೆ ಸಿಕ್ಕಿ ಇವನು ಮಾಯವಾಗಿ ಬೈದೆರ್ಲು ದೈವಗಳ ಸೇರಿಗೆಗೆ ಸೇರಿದನೆಂದು ಪ್ರತೀತಿ. ಜೀವಂತ ಇದ್ದವರ ‘ಬೀರ’ವನ್ನು ಕೋಲದಲ್ಲಿ ಹೇಳುವ ವಾಡಿಕೆ ಇಲ್ಲ.

ಒಕ್ಕುಬಲ್ಲಾಳ ಪಡುಮಲೆಯ ಪೆರುಮಾಳ ಬಲ್ಲಾಳನ ಭಾವನೆಂಟನೆನ್ನುತ್ತಾರೆ. ಕೋಟಿಚೆನ್ನಯರ ನಿಧನಾನಂತರ ಪಡುಮಲೆ ಬಲ್ಲಾಳ ಅಗಲಿದ ವೀರರಿಗೆ ಪುಷ್ಪಾರ್ಚನೆ ಸಲ್ಲಿಸುವುದನ್ನು ಕಂಡ ಒಕ್ಕು ಬಲ್ಲಾಳ ಅದನ್ನು ಆಕ್ಷೇಪಿಸಿ, ‘‘ಬಲ್ಲಾಳ ವಂಶದಲ್ಲಿ ಹುಟ್ಟಿ ವೈದ್ಯರಿಗೆ ಪೂಜೆ ಸಲ್ಲಿಸುವ ಬೀಡಿನಲ್ಲಿ ನಿಲ್ಲಲಾರೆ’’ ಎಂದು ಹೊರಟುಬಿಟ್ಟನಂತೆ. ಊರಿಗೆ ತಲುಪುವ ಮೊದಲೇ ಕಲ್ಲಾಗಿ ಹೋದನಂತೆ. ಬಳಿಕ ಸೇರಿಗೆಯ ದೈವವಾಗಿ ಬೈದೆರ್ಲು ದೈವಗಳ ಜೊತೆ ಸೇರಿದನಂತೆ.

ಕೆಲವು ಕಡೆ ಗರಡಿಯಲ್ಲಿರುವ ‘ಮುಸ್ಲಿಮರ ಮಕ್ಕಳು’ ಎಂಬ ಎರಡು ಮರದ ಪಾಪೆಗಳ ವಿಚಾರದಲ್ಲಿ ಕೆಲವು ಐತಿಹ್ಯಗಳು ಪ್ರಚಲಿತವಿವೆ. ಒಂದು ಐತಿಹ್ಯದಂತೆ ಕೋಟಿಚೆನ್ನಯರು ಕಿನ್ನಿದಾರುವಿನ ಮನೆಯ ದಾರಿ ಕೇಳಿದಾಗ ಈ ಮುಸ್ಲಿಮರ ಮಕ್ಕಳು ಬೇಕೆಂದೇ ತಪ್ಪುದಾರಿ ತೋರಿಸಿದರಂತೆ. ಇನ್ನೊಂದರ ಪ್ರಕಾರ, ಬೈದೆರ್ಲುನೇಮದಲ್ಲಿ ದರ್ಶನಪಾತ್ರಿಗಳು ಸುರಿಗೆಯನ್ನು ಹೊಟ್ಟೆಗೆ ಚುಚ್ಚಿಕೊಳ್ಳುವ ದೃಶ್ಯವನ್ನು ನೋಡಿದ ಮುಸ್ಲಿಮರ ಮಕ್ಕಳು ಮನೆಗೆ ಹೋಗಿ ಅದೇ ರೀತಿಯ ಅನುಕರಣೆಯ ಹುಡುಗಾಟಿಕೆ ಮಾಡಿ ಪ್ರಾಣ ಕಳೆದುಕೊಂಡರಂತೆ. (ಬನ್ನಂಜೆ ಬಾಬು ಅಮೀನ್ ಮತ್ತು ಮೋಹನ ಕೋಟ್ಕಾನ್ – ತುಳುನಾಡ ಗರೊಡಿಗಳ ಸಾಂಸ್ಕೃತಿಕ ಅಧ್ಯಯನ, ಪು.೧೦೦, ೨೦೪)

ಮಲೆ ಜುಮಾದಿ ದೈವ ಮಾಯಕ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡ ಮಾನಿಮಾಲೆ ಎಂಬ ಬಾಣಂತಿಹೆಣ್ಣು ಮಾಯಂದಾಳ್ (ಮೈಂದಳೆ) ಎನಿಸಿದ್ದಾಳೆ. ಗರಡಿ ಸಂಕೀರ್ಣಕ್ಕೆ ಇವಳು ಕ್ರಮೇಣ ಸೇರ್ಪಡೆಗೊಂಡ ದೈವವಾಗಿದ್ದಾಳೆ. ಕೋಟಿಚೆನ್ನಯರಿಗೂ ಇವಳಿಗೂ ನೇರವಾದ ಸಂಬಂಧವಿಲ್ಲ.

ಪಾಂಗುಲ್ಲ(ಪಾಂಗಾಳ?) ಬಣ್ಣಾರ ಎಂಬ ಜಮೀನುದಾರ ತಾನು ಹೊಸದಾಗಿ ಪೂಜಿಸಲೆಳಸಿದ ಮಲೆಜುಮಾದಿ ದೈವದ ನೇಮಕ್ಕೆ ಊರಿನ ಪ್ರತಿಯೊಬ್ಬರೂ ಒಂದು ತೆಂಗಿನ ತಿರಿ (ಎಳೆಯ ಗರಿ) ಮತ್ತು ಒಂದು ಸೀಯಾಳ ನೀಡತಕ್ಕದ್ದೆಂದು ಕಡ್ಡಾಯ ಗೊಳಿಸಿದ್ದನ್ನು ಅಲಿವೊಲಿನಾಯಗ ಎಂಬವನು ನಿರ್ಲಕ್ಷಿಸಿ, ‘ಕಾಡಿನ ಭೂತದ ನೇಮಕ್ಕೆ ನಾನೇನೂ ಕೊಡಲಾರೆ’ ಎಂದು ಹಟ ತೊಟ್ಟುದರಿಂದ ಜಮೀನುದಾರನ ಪರವಾಗಿ ನಿಂತ ಭೂತವು ಅವನ ವೇಷದಲ್ಲೆ ಬಂದು ಬಾಣಂತಿಯಾಗಿದ್ದ ಅಲಿವೊಲಿನಾಯಗನ ಸೊಸೆ ಮಾನಿಬಾಲೆಯನ್ನೂ ಅವಳ ಹಸುಗೂಸನ್ನೂ ಮಾಯಕಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡಿತಂತೆ. ಮಾನಿಬಾಲೆ ಮಾಯಂದಾಳ್ ಆಗಿ ಬಾಣಂತಿ ಮತ್ತು ಎಳೆಮಕ್ಕಳನ್ನು ಪೊರೆಯುವ ದೈವವೆನಿಸಿದ್ದಾಳೆ. ಮಾನಿಬಾಲೆ ದೈವದ ಆಕ್ರೋಶಕ್ಕೆ ಬಲಿಯಾದಳೆನ್ನುವುದಕ್ಕಿಂತ ಜಮೀನುದಾರನ ಪ್ರತೀಕಾರಕ್ಕೆ ಬಲಿಯಾದಳೆಂದೇ ಹೇಳಬೇಕಾಗುತ್ತದೆ.

ಅಸಹಾಯಕ ಸ್ತ್ರೀಯರ ಶೋಷಣೆಯ ನಿದರ್ಶನಗಳು ಜನಪದ ಕಥನಗಳಲ್ಲಿ ಸಾಕಷ್ಟಿವೆ. ಗುಳಿಗದೈವದ ಸೇರಿಗೆಯಲ್ಲಿರುವ ಸುಬ್ಬಿಯಮ್ಮ ಮೂಲದಲ್ಲಿ ಬಳೆಗಾರ ರಾಮು ಗುಳಿಗಂಬಾರ್ ಎಂಬಾತನ ಮಗಳು; ತುಂಬಾ ಚೆಲುವೆ. ಬಳೆ ಮಾರುತ್ತ ಬಂದ ತಂದೆ ಮಗಳು ಮಂಜೇಶ್ವರದ ಸಮೀಪದ ಗುತ್ತುಮನೆಯೊಂದರಲ್ಲಿ ರಾತ್ರಿ ತಂಗುತ್ತಾರೆ. ಬೆಳಿಗ್ಗೆ ಅಲಂಕರಿಸಿಕೊಂಡ ಸುಬ್ಬಿಯಮ್ಮ ನೀರಿಗೆಂದು ಬಾವಿಕಟ್ಟೆಗೆ ಹೋದಾಗ ಅವಳ ಚೆಲುವಿನ ಮೇಲೆ ಗುಳಿಗನ ದೃಷ್ಟಿಬಿದ್ದು ಅವಳನ್ನು ಗುಳಿಗ ಬಾವಿಗೆ ಎಳೆದುಹಾಕಿ ತನ್ನೊಂದಿಗೆ ಸೇರಿಸಿಕೊಳ್ಳುತ್ತಾನೆ.

ಬಾವಿಗೆ ಅಕಸ್ಮಾತ್ತಾಗಿ ಸುಬ್ಬಿಯಮ್ಮ ಬಿದ್ದಿರಬಹುದು. ಅಥವಾ ಆಕೆಯ ಮೇಲೆ ಗುಳಿಗನ ಕಣ್ಣುಬಿತ್ತು ಎಂಬುದು ಬೇರೊಂದು ಸಂಭಾವ್ಯತೆಯನ್ನು ಧ್ವನಿಸಲೂಬಹುದು. ಗುತ್ತಿಗೆ ಸಂಬಂಧಪಟ್ಟವನೊಬ್ಬನ ಕಾಮುಕದೃಷ್ಟಿ ಬಿದ್ದು ಆಕೆಗೆ ದುರಂತ ಒದಗಿರಬಹುದು.

ಗುಳಿಗನ ಸೇರಿಗೆಗೆ ಸೇರಿದ ಇನ್ನೊಬ್ಬಳು ಕೊಲ್ಲೂರ ಮೂಕಾಂಬಿ ಜೇವು (ಇಲ್ಲಿಯ ಕೊಲ್ಲೂರು ಮೂಲ್ಕಿಯ ಸಮೀಪದ ಸ್ಥಳ) ಎಂಬ ವಿವಾಹಿತ ಬ್ರಾಹ್ಮಣ ಹೆಣ್ಣು. ಆಶ್ರಯ ನೀಡಿದ ವ್ಯಕ್ತಿ ಕಡಂಬಾರ ಮಯ್ಯ ಎಂಬಾತ ಆ ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿದ್ದರಿಂದ ನೊಂದು ಗುಳಿಗನ ಹೆಸರೆತ್ತಿ ಕೊಳಕ್ಕೆ ಹಾರಿ ಸತ್ತುದರಿಂದ ಅವಳ ಜೀವಾತ್ಮ ಗುಳಿಗನ ಸೇರಿಗೆಯಲ್ಲಾಗುತ್ತದೆ. ಆ ಬಡಪಾಯಿ ಹೆಣ್ಣು ಆತ್ಮಹತ್ಯ ಮಾಡಿಕೊಂಡಳೆಂಬುದು ನಿರೂಪಣೆಯಿಂದ ವಿದಿತವಾಗುತ್ತದೆ.

ಸತ್ಯನಾಪುರದ ಸಿರಿಯ ಕೊನೆಯೂ ನಿಗೂಢವಾಗಿದೆ. ಉಜಮಾರು ಗುತ್ತಿನಲ್ಲಿ ಸಮ್ಮಾನದ ಊಟ ಉಂಡು, ಸವತಿ ಸಾಮುವಿನೊಂದಿಗೆ ಕೊಟ್ರಾಡಿ ಗುತ್ತಿಗೆ ಹಿಂದಿರುಗುತ್ತಿದ್ದ ಬಸುರಿ ಸಿರಿ, ದಾರಿಯಲ್ಲಿನ, ಹೊಳೆ ಬದಿಯ ಒಂದು ಕಾಡುದಾರಿಯ ಸಮೀಪ ಹೆಣ್ಣು ಶಿಶುವನ್ನು ಹೆತ್ತು ‘ಮಾಯ’ವಾಗುತ್ತಾಳೆ. ಅವಳ ಮಗ ಕುಮಾರನೇ ಅವಳನ್ನು ‘ಮಾಯಕ’ ಮಾಡಿದನೆಂದು ಹೇಳಲಾಗಿದೆ. ಒಟ್ಟಿನಲ್ಲಿ ಸಂಶಯಾಸ್ಪದವೂ ಅಸಹಜವೂ ಆದ ರೀತಿಯಲ್ಲಿ ಆಕೆ ಅಂತ್ಯವನ್ನು ಕಾಣುತ್ತಾಳೆ.

ಮೇಲಿನ ದುರಂತ ಘಟನೆಗಳು ಕಾಕತಾಳೀಯ ಸಂಭವಗಳೂ ಆಗಿರಬಹುದು. ಕ್ರಮೇಣ ಅವುಗಳ ಸುತ್ತಲೂ ಕಲ್ಪನೆಯ ಹಂದರಗಳು ರೂಪುಗೊಂಡಿರಬಹುದು. ಇವುಗಳ ಮೂಲದಲ್ಲಿ ಶಿಕ್ಷಾಕಾಂಕ್ಷೆ, ಪ್ರತೀಕಾರ ಸಾಧನೆ, ಪಶ್ಚಾತ್ತಾಪ, ಹತಾಶೆ, ಪ್ರತಿಭಟನೆಯ ಮನೋಭಾವ ಇತ್ಯಾದಿ ಕಾರಣಗಳಿರಬಹುದು. ಅದೇನಿದ್ದರೂ, ಆಕಸ್ಮಿಕ ಮರಣಗಳನ್ನು ರಹಸ್ಯಾತ್ಮಕತೆಯಿಂದ ಆಚ್ಛಾದಿಸಿ ಆರಾಧನಾವೇದಿಕೆಗೆ ಅಡಿಪಾಯವನ್ನು ಕಲ್ಪಿಸಿದ ಚೋದ್ಯವನ್ನು ಸಾಕಷ್ಟು ನೋಡುತ್ತೇವೆ.

ದೈವಕಥನಗಳಲ್ಲಿ ಕಾಣಿಸಿಕೊಂಡಿರುವ ಮನುಷ್ಯ ವ್ಯಕ್ತಿಗಳೆಲ್ಲರೂ ಕಾಲ್ಪನಿಕರೆನ್ನಲು ಸಾಧ್ಯವಿಲ್ಲ. ಅವುಗಳಲ್ಲಿ ಗತಕಾಲದಲ್ಲಿ ಬಾಳಿ ಸಂದುಹೋದ ನಿಜವ್ಯಕ್ತಿಗಳು ಅನೇಕರಿರಲೇಬೇಕು. ಏಕೆಂದರೆ ಈ ಕಥನಗಳು ಗತಕಾಲದ ಸ್ಮೃತಿಸಂಚಯಗಳೂ ಅಹುದು. ಆದರೆ ಅವುಗಳಲ್ಲಿನ ಐತಿಹಾಸಿಕ ಸತ್ಯಗಳನ್ನು ಗ್ರಹಿಸಬೇಕಿದ್ದರೆ ವ್ಯಕ್ತಿಗಳಿಗೆ ತೊಡಿಸಿದ ಅತಿಮಾನವತೆಯ, ಅಲೌಕಿಕತೆಯ ಪ್ರಭಾವಳಿಯನ್ನು ಕಳಚಿಟ್ಟು ವಿಚಾರ ಮಾಡಬೇಕಾಗುತ್ತದೆ. ಪವಾಡ, ಕಾರಣಿಕತೆ, ಅವತಾರಲೀಲೆ ಇತ್ಯಾದಿ ಅಂಶಗಳನ್ನು ಕಥಾಸ್ವಾದನೆಯ ಮಟ್ಟಿಗಷ್ಟೇ ಇಟ್ಟುಕೊಳ್ಳಬೇಕಾಗುತ್ತದೆ. ಆಗ ಮಹಿಮಾನ್ವಿತರೆಲ್ಲರೂ ಮಾನವ ತಂದೆ ತಾಯಿಗಳ ಸಹಜ ಜೈವಿಕ ಕ್ರಿಯೆಯ ಮೂಲಕವೇ ಜನಿಸಿರುವುದಲ್ಲದೆ ಅಯೋನಿಜರಾಗಿ ಜನಿಸಿದವರು ಯಾರೂ ಇಲ್ಲವೆಂಬ ತಥ್ಯ ಮನವರಿಕೆಯಾಗದಿರದು ಹಾಗೆಯೇ ದೇಹಸಹಿತ ‘ಮಾಯಕ’ಗೊಳ್ಳುವುದೂ ಅಸಂಭವ ಎಂಬುದೂ ಸುಸ್ಪಷ್ಟ.

ದೈವಾರಾಧನೆಯ ಅಂಗವಾಗಿ ಪಾಡ್ದನ, ಐತಿಹ್ಯಾದಿ ದೈವ ಪುರಾಣಗಳು ಮೂಡಿಬಂದಿವೆಯಾದುದರಿಂದ ಆ ಆರಾಧನಾವಲಯದಲ್ಲಿ ನಂಬಿಕೆಯ ಹಾಗೂ ಭಾವುಕತೆಯ ಸಂಬಂಧವಿರುತ್ತದೆಂಬುದು ಸಹಜ. ಆದರೆ ವಸ್ತುಸತ್ಯದ ಅನ್ವೇಷಕನಾದ ಅಧ್ಯಯನಶೀಲನಿಗೆ ಸತ್ಯನಿಷ್ಠೆಯೇ, ಮುಖ್ಯವಾಗಬೇಕಾಗುತ್ತದೆ. ಆರಾಧನೆ ಬೇರೆ, ಅನ್ವೇಷಣೆ ಬೇರೆ.

ಪರಾಮರ್ಶನ ಸಾಹಿತ್ಯ

೧. ಡಾ. ಸುಶೀಲಾ ಉಪಾಧ್ಯಾಯ, ಜನಪದ ಆರಾಧನೆ ಮತ್ತು ರಂಗಕಲೆ,  ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ, ೧೯೮೯

೨. ನವೀನಕುಮಾರ್ ಮರಿಕೆ, ಕತ್ತಲಿನಿಂದಜಾನಪದೀಯ ಲೇಖನಗಳು,  ‘ಸಿರಿಮುಡಿ’, ಆರ್ಯಪು, ಪುತ್ತೂರು, ೨೦೦೬

೩. ಅಮೃತ ಸೋಮೇಶ್ವರ, ಪಾಡ್ದನ ಸಂಪುಟ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

೪. ಡಾ.ಸುಶೀಲಾ ಉಪಾಧ್ಯಾಯ, ಬೊಬ್ಬರ್ಯ ಜನನ ಪಾಡ್ದನ, ‘ತುಳುವ೧೦  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು, ಉಡುಪಿ, ೧೯೮೨

೫. ಡಾ.ವಾಮನ ನಂದಾವರ, ಅವಳಿ ಆರಾಧನೆ, ಅವಳಿತನ, ‘ಸಿರಿ’ – ಅಮೃತ ಸೋಮೇಶ್ವರ, ಅಭಿನಂದನ ಸಮಿತಿ. ಸೋಮೇಶ್ವರ ಉಚ್ಚಲ, ದ.ಕ.

೬. ಮುದ್ದು ಮೂಡುಬೆಳ್ಳೆ, ಕಾಂತಾಬಾದೆ ಬೂದಾಬಾರೆ,  ಗೆಳೆಯರ ಬಳಗ ಪ್ರಕಾಶನ, ಉರ್ವಾಸ್ಟೊರ್ಸ್ ಮಂಗಳೂರು, ೧೯೯೮

೭. ರೆ.ಎ.ಮೇನರ್, ಪಾಡ್ದನೊಳು,  ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, ೧೮೮೬

೮. ಡಾ.ಅಭಯ ಕುಮಾರ್, ಮುಗೇರರುಜನಾಂಗ ಜಾನಪದ ಅಧ್ಯಯನ, ತುಳು ಸಾಹಿತ್ಯ ಅಕಾಡೆಮಿ, ಲಾಲ್ ಬಾಗ್, ಮಂಗಳೂರು, ೧೯೯೭

೯. ಬನ್ನಂಜೆ ಬಾಬು ಅಮೀನ್, ಮೋಹನ್ ಕೋಟ್ಯಾನ್, ತುಳುನಾಡ ಗರೊಡಿಗಳ ಸಾಂಸ್ಕೃತಿಕ ಅಧ್ಯಯನ, ಶ್ರೀ ಬ್ರಹ್ಮಬೈದಕಗಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ, ಉಡುಪಿ