ಕೋಮುಸೌಹಾರ್ದವನ್ನು ಕೆಡಿಸತಕ್ಕ ಅನಪೇಕ್ಷಿತ ವಿದ್ಯಮಾನಗಳು ಸಾಕಷ್ಟು ವಿಜೃಂಭಿಸುತ್ತಿರುವ ಇಂದಿನ ದಿನಮಾನದಲ್ಲಿ ನಮ್ಮ ಆರಾಧನಾ ಪರಂಪರೆಯೊಳಗೆ ಕಂಡುಬರುವ ಕೋಮುಸೌಹಾರ್ದದ ಕೆಲವೊಂದು ನೆಲೆಗಳನ್ನು ನೆನೆಯುವುದು ಇಷ್ಟಕರವಾಗಿದೆ. ತುಳುನಾಡಿನ ದೈವಾರಾಧನೆಯಲ್ಲಿ ಕೋಮುಸೌಹಾರ್ದ ಹೇಗೆ ಕ್ರಿಯಾಶಾಲಿಯಾಗಿದೆ ಎಂಬುದಕ್ಕೆ ಬಬ್ಬರ್ಯ, ಆಲಿ ಮುಂತಾದ ಇಸ್ಲಾಂ ಮೂಲದ ವ್ಯಕ್ತಿಗಳನ್ನು ಭೂತವೇದಿಕೆಗೇರಿಸಿ ಆರಾಧಿಸುವುದೇ ಸಾಕ್ಷಿ. ವಾವರನ ಕಥೆ ಶಬರಿಮಲೆ ಅಯ್ಯಪ್ಪನ ಕಥೆಯೊಂದಿಗೆ ಹೆಣೆದಿರುವುದು ಪ್ರಸಿದ್ಧವಾಗಿದೆ. ಕೋಟಿ ಚೆನ್ನಯರ ಕೆಲವು ಗರಡಿಗಳಲ್ಲಿ ‘ಮುಸ್ಲಿಂ ಮಕ್ಕಳ’ ಮರದ ವಿಗ್ರಹಗಳಿರುವುದನ್ನು ಕಾಣಬಹುದು.

ಕೇರಳದಲ್ಲಿ ಬಬ್ಬರ್ಯನು ‘ಬಪ್ಪೂರಿಯನ್’ ಎಂಬ ಹೆಸರಲ್ಲಿ ಪೂಜಿಸಲ್ಪಡುತ್ತಾನೆ. ತುಳುನಾಡಿನಿಂದ ಕೇರಳಕ್ಕೆ ವಲಸೆ ಹೋದ ದೈವಗಳಲ್ಲಿ ಬಬ್ಬರ್ಯನೂ ಒಬ್ಬ. ಕಾಸರಗೋಡು ಜಿಲ್ಲೆ ಹಾಗೂ ಕರಾವಳಿ ಕರ್ನಾಟಕದ ಹಲವೆಡೆ ಮುಖ್ಯತಃ ಕಡಲ ಕರೆಯಲ್ಲಿ ಪಶ್ಚಿಮಾಭಿಮುಖವಾಗಿ ನಿಂತಿರುವ ಬಬ್ಬರ್ಯ ಗುಡಿಗಳನ್ನು ಕಾಣಬಹುದು. ಈತ ಮೀನುಗಾರಿಕೆಗೆ ಸಹಕಾರಿದೈವ ಎನ್ನಲಾಗಿದೆ. ಕರಾವಳಿಯ ಮೀನುಗಾರ ಸಮುದಾಯದವರು ಬಬ್ಬರ್ಯನನ್ನು ವಿಶೇಷವಾಗಿ ಆರಾಧಿಸುತ್ತಾರೆ. ಸಮೃದ್ಧವಾಗಿ ಮೀನು ಒದಗಲೆಂದು ಬಬ್ಬರ್ಯನಿಗೆ ಸೀಯಾಳ ಅಭಿಷೇಕ, ‘ಅಡೆ ಸುಟ್ಟು ಔತಣ’ ಮಾಡುವುದಿದೆ. ಕಡಲ ಹಂದಿ ಬಲೆಗೆ ಬಿದ್ದರೆ ಎಲ್ಲರಿಗೂ ‘ದಾಯ’ ಹಾಕಿ ಹಂಚಿ, ಬಬ್ಬರ್ಯನಿಗೆ ಎಡೆಯಿಕ್ಕಿ ವಿಶೇಷ ಪೂಜೆ ಮಾಡುವ ಸಂಪ್ರದಾಯವಿತ್ತು.

ಬಬ್ಬರ್ಯ ಸಮುದ್ರ ಕಾಳಗದಲ್ಲಿ ದುರಂತ ಹೊಂದಿದ ಮುಸ್ಲಿಂ ವ್ಯಾಪಾರಿ (ಬ್ಯಾರಿ) ಎಂದು ತಿಳಿದುಬರುತ್ತದೆ. ತುಳುವ ಮತ್ತು ಕೇರಳ ಕರಾವಳಿಗೆ ಶತಮಾನಗಳ ಹಿಂದೆಯೇ ವ್ಯಾಪಾರಕ್ಕಾಗಿ ಅರಬರು ಬರುತ್ತಿದ್ದು, ಅವರಲ್ಲಿ ಕೆಲವರು ಇಲ್ಲಿನ ಸ್ಥಳೀಯ ಹೆಂಗಸರೊಂದಿಗೆ ಸಂಸಾರ ಹೂಡುತ್ತಿದ್ದುದುಂಟು. ಹೀಗೆ ಮಾಪಿಳ್ಳೆ, ಬ್ಯಾರಿಗಳ ವರ್ಗ ಸೃಷ್ಟಿಯಾದುದಾಗಿದೆ. ವ್ಯಾಪಾರ ಇವರ ಮುಖ್ಯ ಕಸುಬಾಯಿತು. (ತುಳುವಿನಲ್ಲಿ ‘ಬ್ಯಾರ’ ಎಂದರೆ ವ್ಯಾಪಾರ, ಹಾಗಾಗಿ ಬ್ಯಾರಿ ಎಂದರೆ ವ್ಯಾಪಾರಿ)

‘‘ಬಬ್ಬರ್ಯ ಶಬ್ದವು ಬರ್ಬರ ಶಬ್ದ ವಿಕಲ್ಪ, ಬರ್ಬರ ಕರಾವಳಿ ಎಂದರೆ ಆಫ್ರಿಕಾ ಖಂಡದ ಸೋಮಾಲಿಯಾದ ಕಡಲ ತೀರದ ಪ್ರದೇಶ. ಇದು ತುಳುನಾಡಿಗೆ ನೇರ ಪಶ್ಚಿಮದಲ್ಲಿದೆ.’’ ಎಂಬ ಶ್ರೀ.ಎಂ. ಮುಕುಂದ ಪ್ರಭುಗಳ ಅಭಿಪ್ರಾಯ ವಿಚಾರಣೀಯವಾದರೂ ತುಸು ದೂರಾನ್ವಯವೆನಿಸುತ್ತದೆ. (ಮಂಗಳ ತಿಮರು ೧೯೮೭, ಪು.೫೩) ಡಾ.ಬಿ.ಎ.ಸಾಲೆತ್ತೂರ್ ಅವರು ‘ಬಾಬುಬ್ಯಾರಿ’ ಬೊಬ್ಬರ್ಯ ಆಗಿರಬೇಕು ಎನ್ನುತ್ತಾರೆ. (Ancient Karnataka History of Tuluva, Pp.463) ಎ.ಮೇನರ್ ಅವರ ಪಾಠದಲ್ಲಿ ‘ಬೊಬ್ಬರಿ ಕುಞ್ಞಲಿಯ ಹೆಸರು ಬರುತ್ತದೆ. ಡಾ.ಸುಶೀಲಾ ಉಪಾಧ್ಯಾಯರು ಸಂಗ್ರಹಿಸಿದ ಪಾಠದಲ್ಲಿ (ತುಳುವ ೯-೧೦) ಮಗುವಿಗೆ ಬಪ್ಪ ಎಂದು ಹೆಸರಿಡಲಾಗುತ್ತದೆ. ಬಪ್ಪಬ್ಯಾರಿಯೆ ಬಬ್ಯರ್ಯ ಎಂದಾಗಿರಬಹುದು. ಆದರೆ ಬಪ್ಪನಾಡಿನ ಬಪ್ಪಬ್ಯಾರಿ ಬೇರೆಯೇ ವ್ಯಕ್ತಿ ಎನ್ನಬೇಕಾಗುತ್ತದೆ. ಕ್ರಿ.ಶ.೧೫೪೬ರ ಬಸರೂರಿನ ಶಾಸನ (S.I.I. IX, Part II, ಸಂಖ್ಯೆ ೬೨೦) ಬೊಬ್ಬರಿಯನ ತೋಟವನ್ನು ಉಲ್ಲೇಖಿಸಿದರೆ, ಕ್ರಿ.ಶ.೧೫೬೩ರ, ಬಾರಕೂರು ಶಾಸನ (ಸಂಖ್ಯೆ ೩೬೬) ‘ಬೊಬ್ಬರಿಗನ ಕೊಟ್ಯ’ವನ್ನು ಉಲ್ಲೇಖಿಸುತ್ತದೆ. (ಮಂಗಳ ತಿಮರು, ಪು.೫೩) ಹೀಗಾಗಿ ೧೬ನೇ ಶತಮಾನಕ್ಕೆ ಹಿಂದೆಯೇ ಬಬ್ಬರ್ಯನ ಆರಾಧನೆ ಇತ್ತೆಂಬುದು ಸ್ಪಷ್ಟ.

ಬಬ್ಬರ್ಯನಿಗೆ ಸಂಬಂಧಪಟ್ಟ ಕೆಲವು ಪಾಡ್ದನಗಳೂ ಐತಿಹ್ಯಗಳೂ ಲಭ್ಯವಿದೆ. ಅವುಗಳ್ಲಲಿ ಅಷ್ಟಿಷ್ಟು ವ್ಯತ್ಯಾಸಗಳೂ ಇವೆ. ೧೮೮೬ರಲ್ಲಿ ಜರ್ಮನ್ ವಿದ್ವಾಂಸ ರೆ.ಎ.ಮೇನರ್ ಅವರು ಸಂಕಲಿಸಿ ಪ್ರಕಟಿಸಿದ್ದ ‘ಪಾಡ್ದನೊಳು’ ಎಂಬ ಗ್ರಂಥದ ಮೊದಲ ಪಾಡ್ದನವೇ ಬಬ್ಬರ್ಯನದಾಗಿದೆ. ಇದು ಹಾಗೂ ಇತರ ಲಭ್ಯ ಪಾಡ್ದನಗಳು ಕರಾವಳಿಯ ವ್ಯಾಪಾರರಂಗದ ಕೆಲವೊಂದು ವಿವರಗಳನ್ನೂ ಭಿನ್ನ ಸಂಸ್ಕೃತಿಯೊಂದು ತುಳುವ ಸಂಸ್ಕೃತಿಯ ವಲಯಕ್ಕೆ ಪ್ರವೇಶಿಸಿದ ಪರಿಯನ್ನೂ ವಿವರಿಸುವ ಮೂಲಕ ನಮ್ಮ ಕುತೂಹಲವನ್ನು ಕೆರಳಿಸುತ್ತವೆ. ಸಮುದ್ರ ಕಾಳಗಗಳೂ, ಹಡಗುಗಳನ್ನು ಕೊಳ್ಳೆ ಹೊಡೆಯುವಿಕೆಯೂ ಹಿಂದೆ ಸಾಕಷ್ಟು ನಡೆಯುತ್ತಿದ್ದವು ಎಂಬ ವಿಚಾರ ಚಾರಿತ್ರಿಕವಾಗಿಯೂ ಐತಿಹಾದಿಗಳಿಂದಲೂ ತಿಳಿದುಬರುತ್ತದೆ.

‘ವಪ್ಪೂರವರ್’ ಎಂಬ ಶಬ್ದಕ್ಕೆ ಮಲೆಯಾಳದಲ್ಲಿ ನೌಕೆಯ ವೃತ್ತಿಯ ಒಂದು ವರ್ಗವೆಂಬ ಅರ್ಥವಿದೆ. ಉತ್ತರ ಕೇರಳದ ಕೂತ್ತುಪರಂಬು ತಾಲೂಕಿನಲ್ಲಿರುವ ‘ಮೊಗೆಯರ್ ಕಾವು’ ಎಂಬ ಭಗವತಿ ಕ್ಷೇತ್ರದ ದೇವಿ ‘ಆರೇಕಲ ಪೂಂಗನ್ನಿ’ ವಪ್ಪೂರವನ್‌ನೊಂದಿಗೆ ಬಡಗು ದಿಕ್ಕಿನಿಂದ ನೌಕೆಯಲ್ಲಿ ಬಂದುದಾಗಿ ಅಲ್ಲಿನ ಐತಿಹ್ಯ ತಿಳಿಸುತ್ತದೆ.

ಒಂದು ಪಾಡ್ದನ ಪ್ರಕಾರ, ಮುತ್ತುಸೆಟ್ಟಿ, ಮುತ್ತಣ್ಣ ಸೆಟ್ಟಿ, ನಂದುಸೆಟ್ಟಿ, ನಂದಣಸೆಟ್ಟಿ ಮೊದಲಾದ ಏಳುಮಂದಿ ಸೆಟ್ಟಿ (ಶ್ರೇಷ್ಠ-ಜೈನವ್ಯಾಪಾರಿ)ಗಳ ಮುದ್ದಿನ ತಂಗಿ ದುಗ್ಗುಸೆಟ್ಟಿದಿ ಅಮಾವಾಸ್ಯೆಯ ಅನಿಷ್ಟಗಳಿಗೆಯಲ್ಲಿ ಮೈನೆರೆದುದರಿಂದ ಆಕೆಗೆ ವೈಧವ್ಯಯೋಗ ಇದೆಯೆಂದು ನಿಮಿತ್ತದಲ್ಲಿ ಕಂಡಿರುತ್ತದೆ. ಯೋಗ್ಯ ನೆಂಟಸ್ತಿಕೆ, ಬಂದಾಗ ಅವಳನ್ನು ಅಣ್ಣಂದಿರು ಮದುವೆ ಮಾಡಿಕೊಡುತ್ತಾರೆ.’’ ಮದುವೆಯಾದ ಮಾರನೆಯ ದಿನ ವರನು ಶವವಾಗಿ ಮಲಗಿರುತ್ತಾನೆ. ಎಲ್ಲರೂ ವ್ಯಥಿಸುತ್ತಾರೆ. ಕೆಲಕಾಲ ಕಳೆದು ಮತ್ತೆ ನೆಂಟಸ್ತಿಕೆ ಬಂದಾಗ ಪುನಃ ಅವಳಿಗೆ ಮದುವೆ ಮಾಡಿಸುತ್ತಾರೆ. ಆ ಮದುವಣಿಗನ ಸ್ಥಿತಿಯೂ ಅದೇ ಆಗುತ್ತದೆ. ಮೂವತ್ತೊಂಬತ್ತು (‘ಒಂದು ಕಡಿಮೆ ನಲವತ್ತು’ ಎಂದು ನುಡಿಗಟ್ಟನ್ನು ಜನಪದರು ಹೆಚ್ಚಾಗಿ ಬಳಸುತ್ತಾರೆ) ಮದುವೆಗಳ ಪರಿಣಾಮವೂ ಇದೇ ಆಗುತ್ತದೆ. ಅಣ್ಣಂದಿರು ಚಿಂತಾಮಗ್ನರಾಗುತ್ತಾರೆ. ಕೊನೆಗೆ ಸುಳಿಕಲ್ಲ ಮದವಬ್ಯಾರಿ (‘ಮುರವೆ ಬ್ಯಾರಿ’ ಎಂದು ಪಾಠಾಂತರವಿದೆ.) ಅಕೆಯನ್ನು ತನಗೆ ವಧುವಾಗಿ ಒಪ್ಪಿಸಿದರೆ ಅವಳ ಗಂಡಾಂತರವನ್ನು ತಾನು ತಪ್ಪಿಸುವೆನೆಂದಾಗ ಅವಳ ಅಣ್ಣಂದಿರು ಅದೃಷ್ದದಲ್ಲಿ ಇದ್ದಂತಾಗಲೆಂದು ಮದವಬ್ಯಾರಿಯೊಂದಿಗೆ ತಂಗಿಯನ್ನು ಕಳುಹಿಸಿಕೊಡುತ್ತಾರೆ. (ತಂಗಿಯ ಗಂಡಾಂತರವನ್ನು ಕಳೆದವರಿಗೆ ಆಕೆಯನ್ನು ಧಾರೆಯೆರೆದು ಕೊಡುವುದಾಗಿ ಆಕೆಯ ಅಣ್ಣಂದಿರು ತಾವಾಗಿಯೇ ಹೇಳುತ್ತಾರೆಂಬ ವಿಚಾರ ಬೇರೊಂದು ಪಾಡ್ದನದಲ್ಲಿದೆ – ಸಿಂದು ಪಡುಬಿದ್ರಿ ಇವರಿಂದ ದೊರಕಿದ ಪಾಡ್ದನ) ರಾತ್ರಿ ದುಗ್ಗು ಸೆಟ್ಟಿದಿಯ ಮಗ್ಗುಲಲ್ಲಿ ಬಾಳೆಕಾಂಡವನ್ನು ಮಡಗಿ (ಹಿಟ್ಟಿನಿಂದ ಮನುಷ್ಯಾಕೃತಿ ಮಾಡಿ ಇರಿಸಲಾಗಿತ್ತೆಂಬ ಹೇಳಿಕೆಯೂ ಇದೆ) ಬಟ್ಟೆ ಹೊದಿಸಿ ಮಂಚದಡಿಯಲ್ಲಿ ಮದವಬ್ಯಾರಿ ಹೊಂಚಿರುತ್ತಾನೆ.

ನಡುವಿರುಳು ಅವಳ ಮೂಗಿನ ಹೊಳ್ಳೆಯಿಂದ ವಿಷಸರ್ಪವೊಂದು ಕೆಳಗಿಳಿದು ಬಂದು ಮದುವಣಿಗನ ಸ್ಥಾನದಲ್ಲಿದ್ದ ಬಾಳೆದಿಂಡಿಗೆ ಕಡಿಯುತ್ತದೆ. ಒಡನೆ ಹೊಂಚಿಕೊಂಡಿದ್ದ ಮದವಬ್ಯಾರಿ ಕತ್ತಿ ಬೀಸಿ ಅದನ್ನು ಕೊಲ್ಲುತ್ತಾನೆ. ಅವಳ ವಿಷಕನ್ಯಾತ್ವ ಹೀಗೆ ಪರಿಹಾರವಾಗುತ್ತದೆ. ಮೂಗಿನ ಬಿಲದಲ್ಲಿ ಶಂಖಪಾಲ ಸರ್ಪ ವಾಸವಾಗಿತ್ತೆಂಬ ವಿಚಾರ ಪುರಾಣ ಸಹಜವಾದ ಕಾವ್ಯಾತ್ಮಕ ನಿರೂಪಣೆಯೆನ್ನಬೇಕಷ್ಟೆ. ವಾಸ್ತವವಾಗಿ ‘ಅವಳ ದೇಹದಲ್ಲಿ ಒಂದು ಬಗೆಯ ‘ವಿಷಕನ್ಯಾತ್ವ’ ದೋಷ ಇದ್ದಿರಲೂಬಹುದು. ಮದವಬ್ಯಾರಿ ವೈದ್ಯವನ್ನು ಬಲ್ಲವನಾಗಿದ್ದು ಚಿಕಿತ್ಸೆಯ ಮೂಲಕ ಈ ದೋಷವನ್ನು ನಿವಾರಿಸಿರಬಹುದು. (ಡಾ. ಸುಶೀಲಾ ಉಪಾಧ್ಯಾಯರ ಪಾಠದಲ್ಲಿ, ಒಂದು ವರ್ಷ ಆರು ತಿಂಗಳು ತಮ್ಮ ತಂಗಿಯ ಸಂಗ ಮಾಡಬಾರದು ಎಂದು ಮದವಬ್ಯಾರಿಯೊಡನೆ ಸೆಟ್ಟಿಗಳು ಸೂಚಿಸಿದ ಮಾತು ಈ ದೃಷ್ಟಿಯಿಂದ ವಿಚಾರಣೀಯವಾಗಿದೆ.)

ದುಗ್ಗು ಸೆಟ್ಟಿದಿಯನ್ನು ಮಸೀದಿಗೆ ಕರೆದೊಯ್ದು ‘ಜಮಾತಿನ’ವರೊಡನೆ ವಿಚಾರವನ್ನು ತಿಳಿಸುತ್ತಾನೆ. ಮದವಬ್ಯಾರಿ. ಅವಳನ್ನು ಮತಾಂತರಗೊಳಿಸಿ ‘ಬೆಲಿಯೆ ಬೀಬಿ ಪಾತುಮ್ಮ’ ಎಂಬ ಹೊಸ ಹೆಸರನ್ನು ನೀಡಲಾಗುತ್ತದೆ. (ಬೆಲಿಯೆ ಎಂದರೆ ಮಲೆಯಾಳದಲ್ಲಿ ‘ಹಿರಿಯ’ ಎಂದರ್ಥ) ಆಕೆಯನ್ನು ಮದವಬ್ಯಾರಿ ಮದುವೆಯಾಗಿ ಸಂಸಾರವನ್ನು ತೊಡಗುತ್ತಾನೆ. ಇವರಲ್ಲಿ ಹುಟ್ಟಿದ ಬಾಲಕನೇ ಬಬ್ಬರ್ಯ.

ಈ ಶಿಶು ಅಸಾಮಾನ್ಯವಾದುದೆಂಬುದನ್ನು ಕೆಲವು ಪಾಡ್ದನಗಳು ಬಣ್ಣಿಸುತ್ತವೆ. ಬೀಬಿ ಪಾತುಮ್ಮನಿಗೆ ಪ್ರಸವವೇದನೆ ಪ್ರಾರಂಭವಾದಾಗ ಬಸಿರೊಳಗಿನ ಶಿಶು ತಾಯಿಯೊಡನೆ ತಾನು ಎಲ್ಲರಂತೆ ಹುಟ್ಟಲಾರೆನೆಂದೂ ಬಲಭಾಗದ ಸ್ತನದ ರಂಧ್ರದ ಮೂಲಕ ಹೊರಬರುವೆನೆಂದೂ ಹೇಳುತ್ತದೆ! ಹೊರಬಂದಾಗ ಮಗುವಿನ ರೂಪ ಅದ್ಭುತವಾಗಿರುತ್ತದೆ. (ಡಾ.ಸುಶೀಲಾ ಉಪಾಧ್ಯಾಯರ ಪಾಠ, ತುಳುವ ೯-೧೦) ತುಂಬ ಬೆಳವಣಿಗೆಯೂ ಆದ ಮಗುವಿನ ಜನನದ ವರ್ಣನೆ ನಾಗಬ್ರಹ್ಮನ ಹುಟ್ಟಿನ ವರ್ಣನೆಯಂತಿದೆ. ಮಹಿಮಾವಂತರ ಜನನ ವಿಚಾರವನ್ನು ಈ ಬಗೆಯ ಅತಿಶಯೋಕ್ತಿಗಳಿಂದ ಬಣ್ಣಿಸುವುದು ಪುರಾಣಕಾವ್ಯದ ವಾಡಿಕೆ.

ಹುಡುಗ ಬಬ್ಬರ್ಯ ಬೇಗ ಬೇಗನೆ ಬೆಳೆಯುತ್ತಾ ಬರುತ್ತಾನೆ. ಒಂದೂವರೆ ವರ್ಷದ ಮಗು ನಾಲ್ಕುವರೆ ವರ್ಷದ ಒಡ್ಡಾರವಾಗುತ್ತದೆ. ಅವನಿಗೆ ಓದು ಬರಹ ಕಲಿಸುತ್ತಾರೆ. ಒಂದು, ಎರಡು, ಮೂರು ಕಿತಾಬು(ಧರ್ಮಗ್ರಂಥ)ಗಳನ್ನು ಕಲಿತು ಕಲಿಕೆಯಲ್ಲಿ ಮಿಗಿಲಾಗುತ್ತಾನೆ. ಮಕ್ಕಳೊಡನೆ ಆಟವಾಡಲು ಹೋಗಿ ಪಲ್ಲೆಯಾಟದಲ್ಲಿ, ಎಲ್ಲರನ್ನೂ ಸೋಲಿಸುತ್ತಾನೆ. ಸೋತ ಹುಡುಗರು ಅವನ ‘ಕಲೆ(ಕಳಂಕ) ಹೇಳಿ ಕುಲದೂಷಣೆ’ ಮಾಡುತ್ತಾರೆ. ತಾಯಿ ಸಮಾಧಾನಿಸುತ್ತಾಳೆ.

ಇನ್ನು ಹೀಗೆ ಕುಳಿತರೆ ಗೆಲವಿಲ್ಲ ಎಂದುಕೊಂಡು, ವ್ಯಾಪಾರಕ್ಕೆ ಮನಸ್ಸು ಮಾಡಿ, ಕಡಲಬದಿಯಲ್ಲಿ ಮಡಲುತಟ್ಟೆಯ ಅಂಗಡಿ ಹೂಡುತ್ತಾನೆ. ವ್ಯಾಪಾರದಲ್ಲಿ ಹಣ ಹೆಚ್ಚುತ್ತಾ ಬರುತ್ತದೆ. ‘ಇನ್ನು ಪಡಾವಿನ(ಸರಕಿನ ನೌಕೆ) ವ್ಯಾಪಾರ ತೊಡಗಬೇಕು’ ಎಂದು ನಿಶ್ಚಯಿಸುತ್ತಾನೆ. ಪಡಾವಿಗಾಗಿ ಮರ ಹುಡುಕುವಾಗ, ಕಟ್ಟೆ ಕಡಂಜಾರು ಕಾಡಿನಲ್ಲಿದ್ದ ತುಂಬಾ ಹಳೆಯ ‘ಬಿಳಿ ತೇಕೊಟೆ ಮರ’ ಕಾಣಸಿಗುತ್ತದೆ. ದೇವರು ದೈವಗಳಿಗೆ ಈಡುಕಾಣಿಕೆಯಿಟ್ಟು ಮರವನ್ನು ಕಡಿಸುತ್ತಾನೆ. ಆ ಮರ ಎಷ್ಟೊಂದು ಗಾತ್ರದ್ದು ಹಾಗೂ ಮಹಿಮೆಯದು ಎಂದರೆ, ಮರಬೀಳುವ ಸದ್ದು ‘ಬಡಗು ಬಾರ್ಕೂರು ತೆಂಕು ನೀಲೇಶ್ವರ’ಕ್ಕೆ ಕೇಳುಸುತ್ತದೆ! ಮರದ ಬುಡತುಂಡನ್ನು ಕಾಲ್‌ಸೂರ ದೇವರಿಗೂ ತುಂದಿತುಂಡನ್ನು ಕೋಳ್ಯೂರ ದೇವರಿಗೂ ಹರಿಕೆಯೊಪ್ಪಿಸುತ್ತಾನೆ. ನಡುತುಂಡಿನಲ್ಲಿ ಪಡಾವಿನ ಕೆಲಸ ಸಾಗುತ್ತದೆ. ಏಳು ಅಂಕಣದ ಪಡಾವು ಸಿದ್ಧವಾಗುತ್ತದೆ. ‘ಕುತ್ತಿಪೂಜೆ’ಯಾಗಿ ನೀರಿಗಿಳಿಸಲು ಸಾಧ್ಯವಾಗುವುದಿಲ್ಲ. ಪಡಾವು ನರಾಹುತಿ ಕೇಳುತ್ತದೆ. ಬಬ್ಬರ್ಯ ನರಾಹುತಿಯ ಬದಲಾಗಿ ತನ್ನ ಕಿರುಬೆರಳನ್ನೆ ಕಡಿದು ನೆತ್ತರಿನ ಬಿಂದು ಅರ್ಪಿಸುತ್ತಾನೆ. (ಹೊಸ ಮನೆ, ವಸ್ತು ವಾಹನಾದಿಗಳನ್ನು ಬಳಸುವ ಮೊದಲು ರಕ್ತಬಲಿ ಅರ್ಪಿಸುವುದು ಹಳೆಗಾಲದ ಪದ್ಧತಿ) ಕಿರುಬೆರಳು ಕೊಯ್ದು ರಕ್ತಾಹುತಿ ನೀಡುವ ವೃತ್ತಾಂತಗಳು ಗುಳಿಗ, ಧೂಮಾವತಿ, ಪಂಜುರ್ಳಿ ಮೊದಲಾದ ಇತರ ದೈವಗಳ ಪಾಡ್ದನಗಳಲ್ಲೂ ಇವೆ.

ಪಡಾವು ಕಡಲಲ್ಲಿ ಮುಂಬರಿಯುತ್ತದೆ. ‘ಸಪ್ಪೆ ನೀರು, ಉಪ್ಪುನೀರು, ಬೇವೂರಿ, ಬೆರಮಾರಿ ಕಡಲು, ಅಲ್ಲೀ ಕಡಲು, ಸುಲ್ಲೀ ಕಡಲು ಕಳೆಯುವಾಗ ಬಿರುಸಾದ ಗಾಳಿ ಬೀಸುತ್ತದೆ. ಕುಂಕುಮ ವರ್ಣದ ಮಳೆ ಸುರಿಯುತ್ತದೆ. ಕಡಲು ನೆತ್ತರಬಣ್ಣವಾಗುತ್ತದೆ. ಮುತ್ತಿನ ಲಂಗರು ಕಡಿಯುತ್ತದೆ. ಪಟ್ಟೆಯ ಹಾಯಿ ಹರಿಯುತ್ತದೆ. ಹವಳದ ಕೊಂಬು ಮುರಿಯುತ್ತದೆ. ಹುಟ್ಟುಗಾರರ ಹುಟ್ಟು ತುಂಡಾಗುತ್ತದೆ. ಚುಕ್ಕಾಣಿಗಾರರ ಚುಕ್ಕಾಣಿ ತುಂಡಾಗುತ್ತದೆ. ನೀರು ನೆತ್ತರ ಕಡಲಲ್ಲಿದ್ದ ಪಡಾವನ್ನು ತೂಗಿಸಿಕೊಂಡು ತೇಲಿಸಿಕೊಂಡು ತರುತ್ತಾನೆ ಬಬ್ಬರ್ಯ. ಕಾಪು ಸಾವಿರಾಳು, ಮೂಳೂರು, ಮುನ್ನೂರಾಳು ಕೂಡಿದರು, ಕಣ್ಣಿಗೆ ಹತ್ತಿರ, ಕೈಗೆ ದೂರವಾದ ಪಡಾವೆಂದು ಗ್ರಹಿಸಿ ಅಲ್ಲಿಂದ ತೆರಳುತ್ತಾರೆ.

ಪೊಂಗದೇರೆ ಬೈದ್ಯ ಎಂಬಾತ ಬೈಗಿನ ‘ಮೂರ್ತೆ’ (ಕಳ್ಳು ಇಳಿಸುವ ಕೆಲಸ) ಮುಗಿಸಿ ‘ಪಾವಲ್ಲ ಕೊಳ’ ದೆಡೆಗೆ ಬಂದಾಗ ವಿಚಿತ್ರ ವ್ಯಕ್ತಿಯೊಬ್ಬ ‘ಅಯ್ಯಂಗುಳ್ಳಾಯ ಕಟ್ಟೆ’ಯಲ್ಲಿ ಕುಳಿತುದನ್ನು ಕಂಡುಬೆರಗಾಗಿ ಕೈಮುಗಿಯುತ್ತಾನೆ. ಬಬ್ಬರ್ಯನು ತಾನು ಯಾರೆಂಬುದನ್ನು ತಿಳಿಸಿ, ಈ ವಿಚಾರವನ್ನು ಯಾರಿಗೂ ಹೇಳದಂತೆ ನಿರ್ಬಂಧಿಸಿ ಪೊಂಗದೇರೆಬೈದ್ಯ ಸಿರಿವಂತನಾಗುವ ವರವನ್ನು ಕೊಡುತ್ತಾನೆ.

ಮುಂದೆ ಮೂಳೂರು ಮುನ್ನೂರಾಳು ಬಬ್ಬರ್ಯನ ಮಹಿಮೆಗೆ ಮಾರು ಹೋಗಿ ಬಬ್ಬರ್ಯನಿಗೆ ಸ್ಥಾನಮೂಲ ಕಟ್ಟಿಸುತ್ತಾನೆ. ಬಲಿಭೋಗ ಕೊಡುತ್ತಾರೆ. ಕಾಪುವಿನಲ್ಲೂ ನೆಲೆಯೂರುತ್ತಾನೆ. ಮುಂದೆ ಊರಿಗಿಳಿದು ಅಲ್ಲಲ್ಲಿ ನೆಲೆಯಾಗುತ್ತಾನೆ. (ಅಣ್ಣು ನಲಿಕೆಯವರ ಪಾಡ್ಡನ, ೧೯೭೩)

ಮೇಲಿನ ವಿವರದಲ್ಲಿ ಸಮುದ್ರ ಕಾಳಗದ ಉಲ್ಲೇಖ ಇಲ್ಲ. ಬದಲಿಗೆ ಕಡಲಲ್ಲೆದ್ದ ಭಯಂಕರ ಸುಂಟರಗಾಳಿಯ ಬಣ್ಣನೆ ಇದೆ. ಡಾ.ಸುಶೀಲಾ ಉಪಾಧ್ಯಾಯರ ಪಾಠದಲ್ಲಿ ‘ಸಿರಿ ಗಂಗಮ್ಮ’ ದೇವಿಯ ಕೋಪದಿಂದ ಸಮುದ್ರದಲ್ಲಿ ಪ್ರಕೃತಿಯ ಪ್ರಕೋಪ ಉಂಟಾಯಿತೆಂಬ ನಿರೂಪಣೆ ಇದೆ. (ತುಳುವ ೯-೧೦, ೧೯೮೨, ಪು.೧೬) ಆದರೆ ರೆ.ಮೇನರ್ ಅವರ ಪಾಠದಲ್ಲಿ ಸಮುದ್ರ ಕಾಳಗದ ವಿವರಣೆ ಇದೆ. ಹಡಗೊಡೆದು ಬ್ಯಾರಿಗಳು ನೀರುಪಾಲಾದುದು, ಅವರಲ್ಲೊಬ್ಬ ಕಾಪು ಕಡಲತೀರಕ್ಕೆ ಬಂದು ಬಿದ್ದು ಮತ್ತೆ ‘ಮಾಯಕ’ ಆದುದು ಮೊದಲಾದ ವಿವರಗಳಿವೆ.

ಪ್ರಾಣಾಂತಿಕ ಗಾಯಗೊಂಡು ಕಡಲ ಕರೆಗೆ ಬಂದು ಬಿದ್ದ ಬಬ್ಬರ್ಯ ಪ್ರಾಣ ಹೋಗುವುದಕ್ಕೆ ಮೊದಲು ಒಂದೆಡೆ ಕುಳಿತಿರಬಹುದು ಅಥವಾ ಬಿದ್ದಿರಬಹುದು. ಅವನಲ್ಲಿ ಗೋಪ್ಯವಾಗಿರಬಹುದಾದ ಅಮೂಲ್ಯ ಒಡವೆ ವಸ್ತುಗಳನ್ನು ಆತ ಪೊಂಗದೇರೆ ಬೈದ್ಯನಿಗೆ ನೀಡರಬಹುದು. ಈ ಅನುಗ್ರಹದಿಂದ ಬೈದ್ಯ ಶ್ರೀಮಂತನಾಗಿರಬಹುದು. ಅಂತೂ ಅನೇಕ ಮಹಿಮಾನ್ವಿತರೆನಿಸಿದವರ ಅಂತ್ಯದಂತೆಯೇ ಬಬ್ಬರ್ಯನ ಕೊನೆಯೂ ನಿಗೂಢವಾಗಿದೆ.

ಪಾಡ್ದನದಲ್ಲಿ ಬರುವ ವ್ಯಾಪಾರದ ಪಡವಿಗೆ ಬೇಕಾದ ಹೆಮ್ಮರವನ್ನು ಕಡಿಯುವ ಹಾಗೂ ಹಡಗುಕಟ್ಟುವ ವಿವರವು ಭಗವತಿಯ ‘ಮರಕಲಂಪಾಟು’ ಕಥನದಲ್ಲಿರುವುದನ್ನು ಹೋಲುತ್ತದೆ. ಪಡಾವನ್ನು ಕಡಲಿಗಿಳಿಸುವಾಗ ದೈವಗಳು ನರಾಹುತಿ ಬೇಡುವ ಪ್ರಸಂಗವು ಕುಂಡೋದರ ಭೂತದ (ಭೂತಾಳಪಾಂಡ್ಯನ) ಕಥೆಯನ್ನು ನೆನಪಿಸುತ್ತದೆ.

ದೈವೀಕರಣಗೊಂಡ ಬಬ್ಬರ್ಯ ಅನತಿಕಾಲದಲ್ಲೆ ಜನಪ್ರಿಯನಾದನೆಂದು ಹೇಳಬಹುದು. ಪಡುಕರಾವಳಿಯಲ್ಲಿ ಅಲ್ಲಲ್ಲಿ ನೆಲೆಯನ್ನು ಕಲ್ಪಿಸಿಕೊಂಡ ಜನಪದ ದೈವ ಈತ. ತುಳುನಾಡಿನ ಕೆಲವು ಗರಡಿಗಳಲ್ಲೂ ಇತರ ದೈವಸಂಕೀರ್ಣಗಳಲ್ಲೂ ಮಲೆಯಾಳ ಸಂಪ್ರದಾಯದ ಕೆಲವು ದೈವಸ್ಥಾನಗಳಲ್ಲೂ ಬಬ್ಬರ್ಯನಿದ್ದಾನೆ. ಜೈನಬಬ್ಬರ್ಯ, ಆರ್ಯಬಬ್ಬರ್ಯ, ಸಾರಮಲ್ಲು ಬಬ್ಬರ್ಯ, ಮರಕಾಲ ಬಬ್ಬರ್ಯ, ಬಾಗಿಲ ಬಬ್ಬರ್ಯ ಮೊದಲಾದ ಹೆಸರುಗಳಲ್ಲಿ ಬಬ್ಬರ್ಯ ಆರಾಧನೆಯನ್ನು ಕೈಕೊಳ್ಳುತ್ತಾನೆ. ಮೆಕ್ಕಿಕಟ್ಟೆಯ ಪ್ರಸಿದ್ಧ ದಾರುಶಿಲ್ಪಮಯ ದೈವಸಂಕೀರ್ಣದ ಹಿಂಬಾಗಿಲ ಬಳಿ ಕಾವಲಿಗೆ ಎಂಬಂತೆ ಬಾಗಿಲಬೊಬ್ಬರ್ಯನಿದ್ದಾನೆ. ಹೆಬ್ರಿಯ ದೈವಸಂಕೀರ್ಣದಲ್ಲಿ ‘ಮಲೆಯಾಳ ಬೊಬ್ಬರ್ಯ’ನ ಹಾಗೂ ಅವನ ‘ಬಂಟ’ನ ಮರದ ‘ಉರು’ಗಳು ಇವೆ. ಮಲೆಯಾಳ ಸಂಪ್ರದಾಯದ ಭಗವತೀ ಆರಾಧನೆಯಲ್ಲಿ, ಕೆಲವು ಕಡೆ ಭಗವತೀ ಸ್ಥಾನ, ಸಂಕೀರ್ಣದಲ್ಲಿ ಬಬ್ಬರ್ಯನಿಗೆ ಕಿರುಗುಡಿಗಳಿರುವುದುಂಟು. ಮೀನುಗಾರ ಸಮುದಾಯಗಳ ಪ್ರತ್ಯೇಕ ಗುಡಿಗಳೂ ಇರುವುದಿದೆ.

ಬಬ್ಬರ್ಯನಿಗೆ ತುಳುನಾಡಿನಲ್ಲಿ ತುಳುವ ಶೈಲಿಯಲ್ಲೂ, ಕೇರಳದಲ್ಲಿ(ಅಥವಾ ಮಲೆಯಾಳ ಸಂಪ್ರದಾಯದ ಆರಾಧನಾಸ್ಥಾನದಲ್ಲಿ) ಮಲೆಯಾಳ ಶೈಲಿಯಲ್ಲೂ ಕೋಲ ನಡೆಯುತ್ತದೆ. ಇಸ್ಲಾಂ ಮೂಲದ ದೈವವಾದರೂ ಆಲಿದೈವದಂತೆ ಲುಂಗಿ, ಟೊಪ್ಪಿಯಂಥ ವೇಷಪರಿಕರಗಳಿಲ್ಲ. ಆಲಿಯಂತೆ ನಮಾಜು ಮಾಡುವ ಅಭಿನಯವೂ ಇಲ್ಲ. ಬಬ್ಬರ್ಯನ ಆಯುಧ ದಾಣೆಯಂಥ ದಂಡಾಯುಧ. ಮಲೆಯಾಳದಲ್ಲಿ ಇದನ್ನು ‘ದೆಂಡ್ ‘ ಎನ್ನುತ್ತಾರೆ. ಇದರ ಜೊತೆಗೆ ಬಬ್ಬರ್ಯನಿಗೆ ಅರ್ಪಿಸುವ ವಿಶಿಷ್ಟವಾದ ಅಕ್ಕಿಯ ಕಡುಬಿಗೆ ‘ಅಡೆ’ ಎನ್ನುತ್ತಾರೆ. ಅದನ್ನು ಕೆಂಡದಲ್ಲಿ ಸುಟ್ಟು ಕಾಯಿಸುತ್ತಾರೆ. ಇದಕ್ಕೆ ಉಪ್ಪು ಹಾಕುವ ಕ್ರಮವಿಲ್ಲ. ಉಪ್ಪು ಹಾಕದೆ ಬೇಯಿಸಿದ ಮೀನನ್ನು ಕೆಲವೆಡೆ ಅರ್ಪಿಸುವುದುಂಟು. ಸೀಯಾಳದ ಸೇವೆಯೂ ಬಬ್ಬರ್ಯನಿಗೆ ಸಲ್ಲುತ್ತದೆ. ಚವಲ ಹಾಗೂ ಎಡಗೈಯಲ್ಲಿ ಘಂಟಾಮಣಿಯನ್ನು ಧರಿಸುವುದೂ ಇದೆ.

ಬಬ್ಬರ್ಯನಿಗೆ ಹಾಗೂ ಇತರ ದೈವಗಳಿಗೆ ಸಂಬಂಧಪಟ್ಟ ಪಾಡ್ದನಗಳಲ್ಲಿ ಹಾಗೂ ಇತರ ಐತಿಹ್ಯಗಳಲ್ಲಿ ಬಬ್ಬರ್ಯನ ಉದ್ಭವ, ದೈವೀಕರಣ, ಪ್ರಭಾವ, ಪ್ರಸರಣಗಳ ವಿವರಗಳಿವೆ. ಮಂಜೇಶ್ವರದ ಸಮೀಪದ ಉದ್ಯಾವರ ಅರಸುದೈವಗಳ, ಉದ್ಯಾವರ ಭಗವತಿಗಳ ಹಾಗೂ ಬಂಗ್ರ ಮಂಜೇಶ್ವರದ ಬಬ್ಬರ್ಯನ ಐತಿಹ್ಯಗಳು ಒಂದಕ್ಕೊಂದು ಹೆಣೆದುಕೊಂಡಿದೆ. ಉದ್ಯಾವರಕ್ಕೆ ಅರಸುದೈವಗಳು ಬರುವುದಕ್ಕೆ ಮೊದಲೇ ಬಬ್ಬರ್ಯ ಬಂಗ್ರಮಂಜೇಶ್ವರದ ಅಳಿವೆಬಾಗಿಲಲ್ಲಿ ನೆಲಸಿದ್ದನೆಂದು ತಿಳಿಯುತ್ತದೆ. ಆತನ ಅಬ್ಬರವನ್ನು ಪಾಡ್ದನವೊಂದು ಹೀಗೆ ಬಣ್ಣಿಸುತ್ತದೆ. ‘‘ಮಂಜೇಸರದ ಬಬ್ಬರ್ಯೆ ಉಳ್ಳೆ, ಆಯೆ ಒಂಜಿ ತಾರೆ ಪೊರ್ತುದು ಪುಗೆಲ್ಗ್ ದೀವೊಂದು ಒಂಜಿ ತಾರೆ ಪೊರ್ತುದು ಕೈಟ್ ಬೀಜಾವೆ… ಉಂದು ಏರ್ ಮಂದೆ ಬರ್ಪಿನಿ ಅಂದ್ ದ್ ಪಂಡೆ, ಅರುವೆಡ್ ಬೊಳ್ಳ ಯೇರಾಯೆ…’’ (ಮಂಜೇಶ್ವರದ ಬಬ್ಬರ್ಯ ಇದ್ದಾನೆ. ಆತ ಒಂದು ತೆಂಗಿನಮರವನ್ನು ಕಿತ್ತು ಹೆಗಲಲ್ಲಿ ಇರಿಸಿ, ಇನ್ನೊಂದು ತೆಂಗಿನಮರವನ್ನು ಕಿತ್ತು ಕೈಯಲ್ಲಿ ಬೀಸುತ್ತಾನೆ…. ಇದು ಯಾವ ಮಂದಿ ಬರುವುದು ಎಂದು ನೆರೆಯನ್ನು ಏರಿಸಿದ)

ಬಬ್ಬರ್ಯನು ಬೃಹದಾಕಾರವನ್ನು ತಾಳಬಲ್ಲ ಮಹಿಮೆಗಾರ ಎಂಬುದನ್ನು ನಿರೂಪಿಸುವ ಹೇಳಿಕೆಯಲ್ಲಿ ಆತ ಅಳಿವೆಯ ಬಾಗಿಲಲ್ಲಿ ನದಿಯ ಎರಡು ಕರೆಗಳಿಗೆ ಕಾಲೂರಿ ನಿಂತಿದ್ದ ಎಂಬ ಮಾತು ಬರುತ್ತದೆ. ಇಷ್ಟು ಮಾತ್ರವಲ್ಲ ಬಬ್ಬರ್ಯ ಗಟ್ಟದ ಮೇಲೊಂದು ಕಾಲು, ಸಮುದ್ರದಲ್ಲೊಂದು ಕಾಲು ಇರಿಸಿ ನಿಂತಿದ್ದ ಎಂಬ ವಿಚಾರವು ಕೋಡದಬ್ಬು ದೈವದ ಪಾಡ್ದನದಲ್ಲಿದೆ. (ಪಾಡ್ದನ ಸಂಪುಟ, ಪು.೧೩೬) ಆದರೆ ಅಲ್ಲಿ ಕೋಡದಬ್ಬುವಿನ ಪ್ರತಾಪವನ್ನು ವರ್ಣಿಸುವುದೇ ಉದ್ದೇಶವಾದುದರಿಂದ, ಇತರ ದೈವಗಳು ಬಬ್ಬರ್ಯನ ಅಗಲಿಸಿದ ಕಾಲುಗಳ ನಡುವಿನಿಂದ ಹಾದು ಹೋಗಬೇಕಾದ ದುಸ್ಥಿತಿಯನ್ನು ಹೋಗಲಾಡಿಸಲು ಕೋಡದಬ್ಬು ಬಬ್ಬರ್ಯನ ಕಾಲನ್ನು ಕಡಿದನೆಂದು ಹೇಳಲಾಗಿದೆ. ಇದನ್ನು ಸೂಚಿಸುವಂತೆ, ಕೆಲವು ಕಡೆ ಬಬ್ಬರ್ಯನ ಕೋಲದ ಪ್ರಾರಂಭಘಟ್ಟದಲ್ಲಿ ಬಬ್ಬರ್ಯನ ನರ್ತಕ ಮೋಟುಗಾಲಿನಿಂದ ನಡೆಯುವಂತೆ ಅಭಿನಯಿಸುವುದಿದೆ. ದೈವಗಳೊಳಗಿನ ಇಂಥ ಮೇಲಾಟಗಳು ವಿಲಕ್ಷಣವೆನಿಸಿದರೂ, ಇಂಥ ಘಟನೆಗಳು ಯಾವುದೋ ಐತಿಹಾಸಿಕ ಸಂದರ್ಭಗಳನ್ನು ನೆನಪಿಸುತ್ತಿರಬೇಕು ಎನಿಸುತ್ತದೆ.

ರೆ.ಎ.ಮೇನರ್ ಅವರು ಸಂಕಲಿಸಿದ ‘ಪಾಡ್ದನೊಳು’ ಎಂದ ಸಂಗ್ರಹದಲ್ಲಿನ ‘ಬೊಬ್ಬರ್ಯ’ ಪಾಡ್ದನ ಅಪೂರ್ವವಾದ ಹಲವು ಮಾಹಿತಿಗಳಿಂದ ಕೂಡಿದೆ. ಕರೆನಾಡಿನ ನೌಕಾವ್ಯಾಪಾರದ ಹಲವು ಸ್ವಾರಸ್ಯವಾದ ವಿವರಗಳು ಇಲ್ಲಿವೆ. ಕಡಲ ಕರೆಯ ಸಣ್ಣ ಪ್ರಮಾಣದ ವ್ಯಾಪಾರದಿಂದ ತೊಡಗಿ ಸರಕಿನ ನೌಕೆಯ ಮೂಲಕ ನಡೆಸುವ, ದೂರದ ಊರುಗಳೊಂದಿಗಿನ ದೊಡ್ಡ ವ್ಯಾಪಾರದವರೆಗಿನ ವ್ಯಾಪಾರ ಸಾಪಾರದ ವಿವರಗಳನ್ನು ಕಾಣಬಹುದು. ಗೋವೆ, ಕೊಚ್ಚಿ, ದೀವು, ಮಕ್ಕಾ ಮೊದಲಾದ ಸ್ಥಳಗಳ ಉಲ್ಲೇಖ ಸಾಂದರ್ಭಿಕವಾಗಿ ಬಂದಿದೆ. ಸರಕಿನ ಪಡಾವು(ಹಡಗು) ಒಂದನ್ನು ನಿರ್ಮಿಸುವ ವಿವರವನ್ನು ಪಾಡ್ದನವು ಒಳಗೊಂಡಿರುವುದು ಕುತೂಹಲಕರವಾಗಿದೆ.

ಅರೇಬಿಯಾ ಮೊದಲಾದ ಸಾಗರೋತ್ತರ ದೇಶಗಳೊಂದಿಗೆ ಕರೆನಾಡಿನವರಿಗೆ ವ್ಯಾಪಾರಸಂಬಂಧ ಇತ್ತೆಂಬ ಐತಿಹಾಸಿಕ ವಿಚಾರವನ್ನು ಪಾಡ್ದನವು ಸಮರ್ಥಿಸುತ್ತದೆ. ಅರಬಿಗಳ ಸಂಪರ್ಕದಿಂದ ಉಂಟಾದ ಬ್ಯಾರಿ(ವ್ಯಾಪಾರಿ) ಮಾಪಿಳ್ಳೆಗಳ ಅಸ್ತಿತ್ವ ಸಾಕಷ್ಟು ಹಿಂದಿನಿಂದಲೇ ತುಳುನಾಡಿನಲ್ಲಿ ಇತ್ತೆಂಬುದು ಬಬ್ಬರ್ಯ ಪಾಡ್ದನದಿಂದ ವಿದಿತವಾಗುತ್ತದೆ. ‘ಕಳ್ಳಹಡಗಿನ’ವರೊಡನೆ ಆದ ಸಮುದ್ರಕಾಳಗದ ಉಲ್ಲೇಖ ಗಮನಾರ್ಹವಾಗಿದೆ. ಬಬ್ಬರ್ಯನ ದುರಂತಕ್ಕೆ ಅದೇ ಕಾರಣವೆಂಬುದರಿಂದಲೇ ಅಂಥದೊಂದು ಘಟನೆಯನ್ನು ಪಾಡ್ದನಕಾರ ಬಣ್ಣಿಸಿರಬೇಕು.

ಬೇರೆ ಬೆರೆ ಕಾರಣಗಳಿಂದ ಮತಾಂತರಕಾರ್ಯ ನಡೆಯುತ್ತಿತ್ತೆಂಬ ವಿಚಾರವೂ ಪಾಡ್ದನದಿಂದ ತಿಳಿಯುತ್ತದೆ. ಮತೀಯ ಘರ್ಷಣೆಯ ಬಗೆಗೇನೂ ಸೂಚನೆಗಳು ಕಂಡುಬರುವುದಿಲ್ಲ.

ಒಟ್ಟಿನಲ್ಲಿ ಬಬ್ಬರ್ಯ ಒಬ್ಬ ಕುತೂಹಲಕಾರಕದೈವ. ಈತನ ಆರಾಧನೆಯ ವೇಳೆ, ಇವನು ಇಸ್ಲಾಂ ಮೂಲದವನೆಂಬ ಭಾವನೆ ಬರುವುದಿಲ್ಲ.

ಪರಾಮರ್ಶನ ಸಾಹಿತ್ಯ

೧. ರೆ.ಎ.ಮೇನರ್, ಪಾಡ್ದನೊಳು, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, ೧೮೮೬

೨. ಎಂ.ಮುಕುಂದಪ್ರಭು, ಭೂತಾರಾಧನೆಇತಿಹಾಸದ ಬೆಳಕಿನಲ್ಲಿ (ಲೇಖನ), ಮಂಗಳ ತಿಮರು, ಸಂ. ಏರ್ಯ ಲಕ್ಷ್ಮೀನಾರಾಯಾಣ ಆಳ್ವ, ಬಂಟವಾಳ, ೧೯೮೭

೩. ಅಣ್ಣು ನಲಿಕೆ, ಪಜೀರು ಬಬ್ಬರ್ಯ ಪಾಡ್ದನ, ಪಜೀರು, ಮಂಗಳೂರು, ೧೯೭೩

೪. ಡಾ. ಸುಶೀಲಾ ಉಪಾಧ್ಯಾಯ, ಬಬ್ಬರ್ಯ ಪಾಡ್ದನ, ‘ತುಳುವ೧೦, ೧೯೮೨

೫. ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ., ೧೯೯೮

೬. ಅಮೃತ ಸೋಮೇಶ್ವರ, ಪಾಡ್ದನ ಸಂಪುಟ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

೭. B.A.Saletore, Ancient Karnataka. Vol.I (History of Tuluva) oriental Book Agency Poona.

೮. K.Sanjiva prabhu, Bhuta Cult (Census of India 1971) Census Operations, Mysore