ದೈವಾರಾಧನೆ ಒಂದು ಜನಪದ ಧಾರ್ಮಿಕ ರಂಗಭೂಮಿ ಎಂಬುದು ಸುವಿದಿತ. ಸಾಂಪ್ರದಾಯಿಕ ರಂಗಭೂಮಿಯ ಅನೇಕ ಲಕ್ಷಣಗಳು ಇದರಲ್ಲಿವೆ. ಮಾತ್ರವಲ್ಲದೆ ಅದರಂತೆಯೇ ಇಲ್ಲೂ ಸಾಕಷ್ಟು ರಸೋತ್ಕರ್ಷ ಸನ್ನಿವೇಶಗಳು ಜರಗು ವುದುಂಟು. ಆದರೆ ಮುಖ್ಯವಾಗಿ ಭಯಭಕ್ತಿ ಪ್ರೇರಕವಾದ ಕ್ರಿಯಾವಿಧಿಸಂಹಿತೆಯಾದ ದೈವಾರಾಧನಾ ರಂಗವು ರಸಾವಿಷ್ಕಾರದ ಮೂಲೋದ್ದೇಶವುಳ್ಳ ರಂಗಭೂಮಿಯೆನ್ನುವಂತಿಲ್ಲ. ಹಾಗಿದ್ದರೂ ಅದರಲ್ಲಿನ ವಿವಿಧ ಕಲಾದ್ರವ್ಯಗಳಿಂದ ಹಾಗೂ ರಸೋದ್ದೀಪನ ಪ್ರಕ್ರಿಯೆಗಳಿಂದ ಈ ರಂಗವು ಶಾಸ್ತ್ರೋಕ್ತ ರಂಗಭೂಮಿಯು ಉಂಟುಮಾಡತಕ್ಕ ರಸಪ್ರತೀತಿಯಂಥದೇ ಅನುಭವವನ್ನು ಒಂದು ಮಿತಿಯಲ್ಲಿ ಇದರ ಪ್ರೇಕ್ಷಕವೃಂದದಲ್ಲೂ ಉಂಟುಮಾಡಬಲ್ಲುದು.

ರಂಗಭೂಮಿಯಲ್ಲಿ ವ್ಯಕ್ತವಾಗಬಹುದಾದ ನವರಸಗಳಲ್ಲಿ ಸಂದರ್ಭೋಚಿತವಾಗಿ ವೀರ, ರೌದ್ರ, ಭಯಾನಕ, ಅದ್ಭುತ, ಬೀಭತ್ಸ -ಈ ರಸಗಳು ಈ ಭೂತರಂಗಭೂಮಿಯಲ್ಲಿ ಹೆಚ್ಚಾಗಿ ಪ್ರದರ್ಶಿತವಾಗುತ್ತವೆ. ಕರುಣ ರಸವೂ ಕೆಲವೊಮ್ಮೆ ಕಾಣಿಸಿಕೊಳ್ಳುವುದುಂಟು. ಆದರೆ ಶೃಂಗಾರ, ಹಾಸ್ಯ, ಶಾಂತ ರಸಗಳು ವ್ಯಕ್ತವಾಗುವುದು ದುರ್ಲಭವೆಂಬುದು ಸಾಮಾನ್ಯ ಅನುಭವ. ಹೀಗೆ ಪ್ರತೀತಿಯಿದ್ದರೂ, ಕೆಲವೊಂದು ಸಂದರ್ಭಗಳಲ್ಲಿ ಹಾಸ್ಯವೂ, ಕ್ವಚಿತ್ತಾಗಿ ಶೃಂಗಾರ ಅಥವಾ ಶೃಂಗಾರಾಭಾಸವೂ ಗೋಚರಿಸುವುದುಂಟು ಎಂಬುದು ಕುತೂಹಲಕಾರಿ ವಿಚಾರ.

ಯಾವುದೇ ಪರಂಪರಾಗತ ಮತಾಚರಣೆ ಒಂದು ಗಂಭೀರವಾದ ಪ್ರಕ್ರಿಯೆ; ಅಲ್ಲಿ ಸರಸ, ಹಾಸ್ಯ, ನಗುಗಳಿಗೆ ಸಾಮಾನ್ಯವಾಗಿ ಅವಕಾಶವಿಲ್ಲ ಎಂದು ತೋರಬಹುದು. ಆದರೆ ಒಳಹೊಕ್ಕು ನೋಡಿದಾಗ, ಅಲ್ಲೂ ಮನುಷ್ಯ ಸಹಜವಾದ ರಸಿಕತೆಯ ಅಭಿವ್ಯಕ್ತಿ, ಹಾಸ್ಯ, ವ್ಯಂಗ್ಯಗಳನ್ನು ಗುರುತಿಸಬಹುದು. ಪ್ರಕೃತ, ಭೂತಾರಾಧನೆಯ ಸಂದರ್ಭದಲ್ಲಿ ಕಂಡುಬರುವ ಹಾಸ್ಯವಿಚಾರಗಳ ಕುರಿತು ಒಂದಿಷ್ಟು ಸಮೀಕ್ಷೆ ನಡೆಸಬಹುದು.

ಸ್ಥೂಲವಾಗಿ ಎರಡು ಬಗೆಯ ಹಾಸ್ಯದ ಅಭಿವ್ಯಕ್ತಿಯನ್ನು ದೈವಾರಾಧನೆಯ ರಂಗ ದಲ್ಲಿ ಕಾಣಬಹುದು. ದೈವಾರಾಧನೆಯ ಕಲಾಪದ ಒಂದು ಭಾಗವಾಗಿಯೆ ಹಾಸ್ಯಾಂಶಗಳು ಕಾಣಿಸುವುದು ಒಂದು ರೀತಿ. ಆಚರಣೆಯ ಕಾಲದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಏರ್ಪಡುವ ಅನಿರೀಕ್ಷಿತ ಹಾಸ್ಯಾಸ್ಪದ ಸನ್ನಿವೇಶಗಳಿಂದ ಮೂಡಿಬರುವ ಹಾಸ್ಯ ಇನ್ನೊಂದು ರೀತಿಯದು. ಭೂತಕಲಾಪಗಳೊಳಗೇ ಹುದುಗಿದ ಕೆಲವು ಸ್ವಾರಸ್ಯಗಳನ್ನು ನೋಡೋಣ.

ಲೆಕ್ಕೇಸಿರಿ (ರಕ್ತೇಶ್ವರಿ) ದೈವದ ಕೋಲ ಸಂದರ್ಭದಲ್ಲಿ ಕೆಲವು ಹಾಸ್ಯಪ್ರಸಂಗಗಳು ಜರಗುವುದುಂಟು. ಲೆಕ್ಕೇಸಿರಿಗೆ ‘ಬೊವನೊ’ ಎಂಬ ಕಿಂಕರದೈವ ಕೆಲವೆಡೆ ಇದ್ದು ಈತ ಕೆಲವೊಂದು ಚೇಷ್ಟೆಗಳನ್ನು ಮಾಡಿ ನಗಿಸುತ್ತಾನೆ. ಕೋಲಕೊಟ್ಟ ಮನೆಯವರನ್ನೂ ನೆರೆದ ಪ್ರೇಕ್ಷಕರನ್ನೂ ಪರಿಹಾಸ್ಯ ಮಾಡುವ ಸ್ವಾತಂತ್ರ್ಯವನ್ನು ವಹಿಸುವುದುಂಟು. ಮುಖ್ಯದೈವ ನುಡಿಕೊಡುವಾಗ ಚೇಷ್ಟೆ ಮಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಿದೆ. ಈ ವಿದೂಷಕ ಪ್ರವೃತ್ತಿಯ ಹೋಲಿಕೆಯನ್ನು ಕೇರಳದ ಚಾಕ್ಯಾರ್ ಕೂತ್ತು ಎಂಬ ಜನಪದ ರಂಗಪ್ರಕಾರದಲ್ಲಿ ಕಾಣಬಹುದಾಗಿತ್ತು. ಇಲ್ಲಿ ರಂಗಕ್ಕೆ ಬರುವ ‘ಚಾಕ್ಯಾರ್ ’ ವರ್ಗದ ಕಲಾವಿದನ ಹರಿತವಾದ ನಾಲಗೆ ನಾಡೊಡೆಯನಿಂದ ತೊಡಗಿ ತನ್ನೆದುರಿಗಿರುವ ಸಾಮಾನ್ಯ ಪ್ರೇಕ್ಷಕನನ್ನೂ ವ್ಯಂಗ್ಯವಾಡದೆ ಬಿಡುತ್ತಿರಲಿಲ್ಲ.

ಕೆಲವೆಡೆ ರಕ್ತೇಶ್ವರಿ ಕೋಲದ ಕೊನೆಗೆ ಪೊಟ್ಟ(ಮೂಕ) ಭೂತ ಮತ್ತು ಉಮ್ಮಟ ಗುಳಿಗ ಎಂಬ ದೈವಗಳ ಅಪ್ರಧಾನ ವೇಷಗಳು ನಗೆ ತರಿಸುವ ವಿವಿಧ ಚೇಷ್ಟೆಗಳನ್ನು ಮಾಡುವುದಿದೆ. ಪೊಟ್ಟಭೂತವು ಮಾತಿಲ್ಲದೆ ಆಂಗಿಕ ಚೇಷ್ಟೆಗಳಿಂದ ರಂಜಿಸಿದರೆ, ಉಮ್ಮಟಗುಳಿಗ ಬೇರೆಯೆ ಹಾಸ್ಯದ ದೃಶ್ಯಗಳನ್ನು ಸೃಷ್ಟಿಸುತ್ತಾನೆ. ಬೈಹುಲ್ಲಿನ ಮಗುವಿನ ಒಂದು ಬೊಂಬೆಯನ್ನು ಮಾಡಿ ಅದಕ್ಕೆ ಏನನ್ನೋ ತಿನ್ನಿಸುವಂತೆ ಅಭಿನಯಿಸುತ್ತಾನೆ. ಆ ಮೇಲೆ ಎದೆ ಹಾಲು ಕೊಡುವಂತೆ ಬೊಂಬೆಯನ್ನು ಎದೆಗಾನಿಸಿಕೊಳ್ಳುತ್ತಾನೆ. ‘‘ಒಂದು ಮೊಲೆ ‘ಪೊಟ್ಟು’ (ಹೊಟ್ಟು, ನೀರಸ), ಇನ್ನೊಂದು ಮೊಲೆಯಿಂದ ನೆತ್ತರು ತೊಟ್ಟಿಕ್ಕುತ್ತದೆ’’ ಎನ್ನುತ್ತಾನೆ. ಅದೇ ಮಗುವಿನಾಕೃತಿಯ ಮೇಲೆ ಕುಳಿತು ಬಿಡುವುದೂ ಉಂಟು. ಬಿಳಿಬಟ್ಟೆ ಹೊದಿಸಿದ ಬೊಂಬೆಯನ್ನು ‘ಇದೇನು, ‘ಅಡೂರಿನ ‘ಕೊಡಿ’ (ದೇವರ ಪತಾಕೆ)ಯೋ ಎಂದು ಲೇವಡಿ ಮಾಡದೆ ಬಿಡುವುದಿಲ್ಲ. ಬಳಿಕ ಬೊಂಬೆಯನ್ನು ಬಟ್ಟೆಯಲ್ಲಿ ಸುತ್ತಿಟ್ಟು ‘‘ಇನ್ನು ಮುಂದಿನ ವರ್ಷ ನೋಡೋಣ!’’ ಎನ್ನುತ್ತಾನೆ.

ಕೆಲವು ಕಡೆ ಗುಳಿಗ ಕೈಯಲ್ಲಿ ಕಸಬರಿಕೆ, ಗೆರಸೆ ಮತ್ತು ಕತ್ತಿ ಹಿಡಿದುಕೊಂಡು ಮನೆವಾರ್ತೆಯ ಕೆಲಸಗಳ ಅನುಕರಣೆ ಮಾಡುತ್ತಾನೆ. ಇದಕ್ಕಿದ್ದಂತೆ ಕೆಲವರಿಗೆ ಸಲುಗೆಯಿಂದ ಗುದ್ದಿನ ರುಚಿ ತೋರಿಸುವುದೂ ಇದೆ!

ಗುಳಿಗನ ಕೋಲದಲ್ಲಿ ಕೆಲವೆಡೆ ಗುಳಿಗ ಜನರ ವ್ಯೂಹವನ್ನೂ ಭೇದಿಸಿ ಓಡುವುದೂ ಮರವೇರುವುದೂ ಜನರಿಗೆ ಮನರಂಜನೆ ಒದಗಿಸುತ್ತವೆ. ಪೆರಂಪಳ್ಳಿ ಎಂಬಲ್ಲಿನ ಕೋಲದ ವಿಚಾರ ಪ್ರೊ.ಲೀಲಾ ಭಟ್ ಹೇಳುತ್ತಾರೆ ‘‘ಹದಿನಾರು ಬಣ್ಣಗಳ ಕೌಶಲದಿಂದ ಮುಖಚಿತ್ರ ಬರೆದ ಎರಡು ಗುಳಿಗಗಳು ಬಾಯಿಯಲ್ಲಿ ಕನಕಾಂಬರ ಮಾಲೆ ಹಿಡಿದು ಕಳಕ್ಕೆ ಹಾರಿದವು. ಗುಳಿಗನ ಒಡ್ಡೋಲಗ ಪ್ರಭಾವಿಯಾಗಿತ್ತು. ನೂರಾರು ಮಂದಿ ವೃತ್ತಾಕಾರವಾಗಿ ನಿಂತು ಅವುಗಳನ್ನು ಕಾಯುತ್ತಿತ್ತು. ಅವರನ್ನೆಲ್ಲ ದೂಡಿ ವ್ಯೂಹವೊಡೆದು ಓಡುವ ಪ್ರಯತ್ನದಲ್ಲಿದ್ದವು ಗುಳಿಗಗಳು ಈ ಸೆಣಸಾಟದಿಂದ ಎಷ್ಟೋ ಜನ ಬಿದ್ದರು, ಎದ್ದರು. ಹೊರಳಾಡಿ ಬಿದ್ದ ಗುಳಿಗಗಳನ್ನು ಹೊತ್ತು ಪುನಃ ವ್ಯೂಹದೊಳಕ್ಕೆ ಸೇರಿಸಿದರು.’’ (ಭೂತನಾಗರ ನಡುವೆ, ೧೯೮೧, ಪು.೬೩) ಇಲ್ಲಿ ಎರಡೆರಡು ಗುಳಿಗಗಳಿರುವುದು ವಿಶೇಷ.

ಪಂಜುರ್ಳಿ, ಮರ್ಲುಜುಮಾದಿ ದೈವಗಳ ಕೊಲದಲ್ಲಿ ದೈವಾವೇಶಗೊಂಡ ಭೂತ ನರ್ತಕರು ಕಳವನ್ನು ಭೇದಿಸಿ ಓಡಲು ಯತ್ನಿಸುವುದಿದೆ. ಆವೇಶಗೊಂಡಾತನನ್ನು ನಿಯಂತ್ರಿಸದೆ ಹಾಗೇ ಓಡಗೊಟ್ಟರೆ ಆತ ಯಾವುದಾದರೂ ಜಲಾಶಯಕ್ಕೆ ಧುಮ್ಮಿಕ್ಕಬಹುದೆಂದು ತಿಳಿಯಲಾಗುತ್ತದೆ. ಸೋಮೇಶ್ವರ ಅಡ್ಕದ ಪಂಜುರ್ಳಿ ದೈವದ ನೇಮದಲ್ಲಿ, ‘ಕಟ್ಟು’ವ ಪಂದವನಿಗೆ ‘ಎಣ್ಣೆಬೂಳ್ಯ’ ಕೊಡುವ ಸಂದರ್ಭದಲ್ಲಿ ಆವೇಶಗೊಂಡ ಆತ ಜನರ ದಟ್ಟವಾದ ವ್ಯೂಹವನ್ನು ಭೇದಿಸಿ ಹೊರಕ್ಕೆ ಧಾವಿಸಲು ಯತ್ನಿಸುತ್ತಾನೆ. ಹಾಗೆ ಯತ್ನಿಸುವಾಗ ನಾಲ್ಕಾರು ಮಂದಿ ಬಲಶಾಲಿಗಳು ಅವನ ಮೇಲೆ ಮುಗಿಬಿದ್ದು ಹಿಡಿದು, ಅಲ್ಲೇ ಸಿದ್ದವಾಗಿಟ್ಟಿರುವ ಎರಡು ಮೂರು ಕೊಡ ನೀರನ್ನು ಬಲವಂತವಾಗಿ ಅವನ ತಲೆಗೆ ಹೊಯ್ಯುತ್ತಾರೆ. ತೆಂಬರೆಯನ್ನು ಅವನ ಹೆಗಲಿಗೇರಿಸಲಾಗುತ್ತದೆ. ದೈವ ಕಲಾವಿದ ಪಾಡ್ದನ ಹಾಡಲು ಮೊದಲಿಡುತ್ತಾನೆ. ಈ ದೃಶ್ಯ ಪ್ರೇಕ್ಷಕರಿಗೆ ವಿನೋದಕರವಾಗಿರುತ್ತದೆ.

ಮರ್ಲು ಜುಮಾದಿಯ ಒಬ್ಬ ಕಲಾವಿದ ಹೀಗೆ ಜನರಿಂದ ತಪ್ಪಿಸಿ ಓಡಿ ಬಾವಿಗೋ, ಕೆರೆಗೋ ಹಾರಿದ್ದೂ, ಅವನ ಹಿಂದೆಯೇ ಅಟ್ಟಿಕೊಂಡು ಬಂದ ಮೂರು ನಾಲ್ಕು ಮಂದಿಯೂ ಹಾರಿದ್ದೂ(ಅಥವಾ ಬಿದ್ದದ್ದೂ) ಉಂಟೆಂದು ಹೇಳುತ್ತಾರೆ.

ಮುಖಕ್ಕೆ ಅರದಾಳದ ಬದಲಿಗೆ ಕಪ್ಪುಬಣ್ಣ ಬಳೆಯುವ, ಮರ್ಲು ಜುಮಾದಿ ಮಾತಿನಲ್ಲೂ ಚರ್ಯೆಯಲ್ಲೂ ಹಲವು ರೀತಿಯ ಮರುಳಾಟಗಳನ್ನು ಪ್ರದರ್ಶಿಸಿ ನಗೆಯುಕ್ಕಿಸುವುದುಂಟು. ಒಂದು ಚಿತ್ರಣ ಇಂತಿದೆ. ‘‘ಮರ್ಲು ಜುಮಾದಿ ಮರ್ಲಿನಂತೆ ವರ್ತಿಸಿತು. ಬಡಪಾಯಿ ವಿದೂಷಕನಂಥ ವ್ಯಕ್ತಿಯ ಪ್ರವೇಶ. ಅವನು ಜುಮಾದಿ ಬಂಟರ ಕೈಯಲ್ಲಿ ಸಿಕ್ಕಿಬೀಳುವ ನಾಟಕ. ತಲೆಯಲ್ಲಿ ಹೆಂಡದ ಮಡಕೆ ಕೊಟ್ಟು ಅವನನ್ನು ಕುಣಿಸುವುದು. ಅವನ ತಲೆಯ ಮೇಲೆ ಕಳ್ಳು ಸುರಿದು ಅಭಿಷೇಕ ಮಾಡುವುದು. ಬಾಳೆದಿಂಡು, ಎಲೆ ಚೂರುಗಳನ್ನೆಲ್ಲ ಅವನಿಗೆ ಬಾರ್ನೆ ಮಾಡಿಸುವುದು. ಹೀಗೆ ಮರ್ಲಿನ ಪರಮಾವಧಿ ಕಾಣುವುದು.’’(ಭೂತನಾಗರ ನಡುವೆ, ಪು.೬೦)

ಮರ್ಲು ಜುಮಾದಿಯ ಕೋಳಿಯ ಬಲಿ ಮತ್ತು ಬಾರಣೆ ಹಾಸ್ಯದ ಬದಲಿಗೆ ತುಸು ಬೀಭತ್ಸಕರವಾಗಿಯೆ ಕಾಣಿಸುತ್ತದೆ.

ಕೇಪು ಪಿಲಿಚಾಮುಂಡಿ ದೈವದ ಬಾರಣೆಯ ವೇಳೆ ಗೆರಸೆಯಲ್ಲಿ ಅವಲಕ್ಕಿ, ಅರಳು, ತೆಂಗಿನ ಕಾಯಿ ತುಂಡು, ಸುಲಿದ ಬಾಳೆಹಣ್ಣು, ತುಪ್ಪ, ಜೇನುತುಪ್ಪ ಇತ್ಯಾದಿಗಳನ್ನು ಸೇರಿಸಿ ಬೆರಸಿ ಇರಿಸಲಾಗುತ್ತದೆ. ಆಗ ಕೆಲವರು ಅಲ್ಲಿರುವ ಎಳೆಯರನ್ನು ಕರೆದು, ಮಕ್ಕಳೆಲ್ಲ ಮುಂದೆ ಬನ್ನಿ ಈಗ ದೈವ ನಿಮಗೆ ಬಾಳೆಹಣ್ಣು ಕೊಡುತ್ತದೆ ಎಂದು ಹುರಿದುಂಬಿಸಿ ಮುಂದೆ ನಿಲ್ಲಿಸುತ್ತಾರೆ. ಆ ಬಳಿಕ ದೈವವು ಗೆರಸೆಯನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಬಾಳೆಹಣ್ಣನ್ನು ಹಿಡಿದುಕೊಂಡು, ವಾಲಗದ ಲಯಕ್ಕನುಗುಣವಾಗಿ ನರ್ತಿಸುತ್ತಾ ಮಕ್ಕಳ ಸಮೀಪಕ್ಕೆ ಬಂದು ಬಾಳೆಹಣ್ಣನ್ನು ಕೊಡುವ ಹಾಗೆ ನಟಿಸುತ್ತದೆ. ಮಕ್ಕಳು ಕೈನೀಡಿದಾಗ ಆಕಾಶಕ್ಕೆ ತೋರಿಸಿ ತಾನೇ ಕಬಳಿಸುವ ತಮಾಷೆ ಪ್ರದರ್ಶಿಸುತ್ತದೆ. ಕೆಲವೊಮ್ಮೆ ಮಕ್ಕಳ ಕಡೆಗೆ ಎಸೆದಂತೆ ಮಾಡಿ ತಾನೇ ಮುಕ್ಕುತ್ತದೆ. ಮಕ್ಕಳು ನಿರಾಶೆಯಿಂದ ಪೆಚ್ಚುನಗೆ ನಗುತ್ತಾರೆ.

ಇದೇ ದೈವದ ಉತ್ಸವದ ‘ಇಂಡಿಪಾರಾವುನಿ’ ಎಂಬ ವಿಧಿಯ ಸಂದರ್ಭದಲ್ಲಿ ಒಂದು ಬುಟ್ಟಿಯಲ್ಲಿ ಬಾಳೆಗಿಡದ ಹೊದಿಕೆಯ ತುಂಡುಗಳು ಹಾಗೂ ಕೆಲವು ಮರಗಳ ಎಲೆಗಳ ಮಿಶ್ರಣವನ್ನು ತಂದಿಡುತ್ತಾರೆ. ಆ ವೇಳೆ ಪಿಲಿಚಾಮುಂಡಿಯ ಪಾತ್ರಿಗೂ ಆವೇಶಬರುತ್ತದೆ. ಪಿಲಿಚಾಮುಂಡಿ ಭೂತವು ಬಾಳೆಹೊದಿಕೆ ತುಂಡುಗಳನ್ನು ಗುರಿಕಾರರ ಹಾಗೂ ಇತರರ ಮೇಲೆ ಗುರಿಯಿಟ್ಟು ಬಿಸಾಡುವುದುಂಟು. ಪ್ರತಿಷ್ಠಿತರ ಮೇಲೆ ಯಾವ ರೀತಿಯಲ್ಲಿಯೂ ಕೈ ಮಾಡಲಾಗದ ದೈವಸೇವಕ ವರ್ಗದಂಥ ಸಾಮಾನ್ಯವರ್ಗ ತಮ್ಮ ಮನಸ್ಸಿನಲ್ಲಿ ಅದುಮಿಟ್ಟ ರೊಚ್ಚನ್ನು ಅಪಾಯಕಾರಿಯಲ್ಲದ ಬಗೆಯಲ್ಲಿ ತೋರಿಸಿಕೊಳ್ಳುವ ರೀತಿ ಇದಾಗಿರಲೂಬಹುದು. ಈ ವೇಳೆ ಎಲ್ಲರೊಂದಿಗೆ ಪೆಟ್ಟು ತಿಂದವರೂ ನಕ್ಕುಬಿಡುತ್ತಾರೆ.

‘ಅಂಗಾರ ಬಾಕುಡ’ ಎಂಬ ಉಪದೈವದ ಕೋಲದಲ್ಲಿ, ಜೋಯಿಸರ ಬಳಿಗೆ ಹೋಗುತ್ತೇನೆನ್ನುವ ಅಂಗಾರ ಬಾಕುಡ ಅವರಿಗೆ ಕಾಣಿಕೆಯಾಗಿ ಒಯ್ಯುವ ಬಾಳೆಹಣ್ಣನ್ನು ತಾನೇ ತಿಂದು ಅದರ ಸಿಪ್ಪೆಯನ್ನು ಒಂದು ಕಡೆ ಇರಿಸಿ, ‘‘ಬಾಣಾರೇ ಕಾಣಿಕೆ ದೀತೆ’’ (ಸ್ವಾಮಿ ಕಾಣಿಕೆ ಇಟ್ಟಿದ್ದೇನೆ) ಎನ್ನುತ್ತಾನೆ. ಅನಂತರ ಗದ್ದೆ ಉತ್ತು ಬತ್ತ ಬಿತ್ತಿದಂತೆ ಅಭಿನಯಿಸುತ್ತಾನೆ.

ದೈವಾರಾಧನೆ ನಡೆಯುವ ಕಾಲಾವಧಿ ದೀರ್ಘವಾದಂತೆ, ಹಾಸ್ಯಸನ್ನಿವೇಶಗಳ ಪ್ರಮಾಣ ಮತ್ತು ವೈವಿಧ್ಯ ಹೆಚ್ಚುವುದು ಕಂಡುಬರುತ್ತದೆ. ಇದಕ್ಕೆ ಕೆಲವು ಕಾರಣಗಳನ್ನು ಊಹಿಸಬಹುದು. ರಾತ್ರಿ ಹಗಲು ಒಂದೇ ಸಮನೆ ಗಂಭೀರವಾದ ಭೂತಕಲಾಪಗಳೇ ಜರಗಿದರೆ ಸಹಜವಾಗಿ ಈ ಏಕತಾನತೆಯಿಂದ ಪ್ರೇಕ್ಷಕರ ಹಾಗೂ ಸ್ವತಃ ಕಾರ್ಯಕರ್ತರ ಮನಸ್ಸಿನಲ್ಲಿ ಆಯಾಸ, ಬೇಸರಗಳ ಭಾವ ಮೂಡಬಹುದು. ಏಕತಾನತೆಯ ಪರಿಹಾರಕ್ಕೆ ದೈವಕಲಾವಿದರು ಹಾಸ್ಯದ ಅಭಿವ್ಯಕ್ತಿಯನ್ನು ಅವಲಂಬಿಸಿರಬಹುದು. ಎರಡು ಕೋಲಗಳ ನಡುವಿನ ಒಂದಿಷ್ಟು ವೇಳೆಯನ್ನು ತುಂಬಿಕೊಡಲು ಇಂಥ ವಿನೋದ ಪ್ರಯೋಗಗಳನ್ನು ಅಳವಡಿಸಿರಬಹುದು. ತಮ್ಮ ಲೋಕಜ್ಞಾನ, ವಿನೋದ ಪ್ರವೃತ್ತಿಗಳ ಪ್ರದರ್ಶನದ ಆಶಯವೂ ದೈವಕಲಾವಿದರಿಗಿರಬಹುದು.

ತುಳು ಮತ್ತು ಮಲೆಯಾಳ ಸಂಪ್ರದಾಯದ ದೈವಾರಾಧನೆಯಲ್ಲಿ ದೀರ್ಘವಧಿಯ ಕೆಲವು ವಿಶಿಷ್ಟ ದೈವೋತ್ಸವಗಳಿವೆ. ಉದಾ : ತುಳುನಾಡಿನ ‘ಜಾಲಾಟ’ ಹಾಗೂ ಕೇರಳದ ‘ಕಳಿಯಾಟ’, ‘ಜಾಲಾಟ’ ಎಂಬ ದೈವಸಮೂಹೋತ್ಸವವು ಬೆಳ್ತಂಗಡಿ, ಸುಳ್ಯ ತಾಲೂಕುಗಳ ಕೆಲವು ದೈವಸ್ಥಾನಗಳಲ್ಲಿ ಕೆಲವು ವರ್ಷಗಳಿಗೊಮ್ಮೆ ನಡೆಯುತ್ತದೆ. ಜಾಲಾಟವು ಮೂರು ಅಥವಾ ಐದು ದಿನ ನಡೆಯುತ್ತದೆ. ಈ ಉತ್ಸವವು ಆರಂಭವಾಗಿ ಮುಕ್ತಾಯಗೊಳ್ಳುವವರೆಗೆ ದೈವದ ಕಳವು ಬರಿದಾಗಿರಬಾರದೆಂದು ನಿಯಮವಿದೆ. ವಿಧಿಬದ್ಧವಾದ ಭೂತಗಳ ಕೋಲಗಳು ಮತ್ತು ಮನೋರಂಜನಾತ್ಮಕವಾದ ಪ್ರಹಸನ, ಸಾಮೂಹಿಕ ಕುಣಿತಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಭಯಭಕ್ತಿಯ ಜೊತೆಗೆ ಹಾಸ್ಯ, ಅಣಕು, ರಸಿಕತೆ, ಪ್ರತಿಭಟನೆ, ಕರುಣೆ, ಪ್ರಣಯದುರಂತದಂಥ ಮಾನವ ಸಹಜವಾದ ಭಾವಗಳು ಜಾಲಾಟದ ಪ್ರದರ್ಶನದಲ್ಲಿ ಪ್ರಕಟವಾಗುತ್ತವೆ. ಪ್ರಹಸನ ಸ್ವರೂಪದಲ್ಲೂ ಪಾತ್ರಕಲ್ಪನೆಯಲ್ಲೂ ಪ್ರಾದೇಶಿಕ ವ್ಯತ್ಯಾಸಗಳಿರುತ್ತವೆ. ಜಾಲಾಟದ ಪಾತ್ರಧಾರಿಗಳು ನಲಿಕೆ ಜನಾಂಗದವರಾಗಿದ್ದಾರೆ.

ಜಾಲಾಟದಲ್ಲಿ ‘ಪೌರಾಣಿಕ’ ಸ್ವರೂಪದ, ಚಾರಿತ್ರಕ ಹಿನ್ನೆಲೆಯ ಹಾಗೂ ವರ್ತಮಾನ ಸಮಾಜದ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಜಾಲಾಟಕ್ಕೂ ‘ದೇಸಿ’ ರಂಗಭೂಮಿಯಾದ ಯಕ್ಷಗಾನ ಬಯಲಾಟಕ್ಕೂ ಸಾಕಷ್ಟು ಹೋಲಿಕೆಗಳಿವೆ. ಜಾಲಾಟದ ಬಗೆಗೆ ಮೊದಲಾಗಿ ವಿವರವಾದ ಅಧ್ಯಯನವನ್ನು ಕೈಕೊಂಡ ಡಾ.ಕೆ.ಚಿನ್ನಪ್ಪಗೌಡರು ಹೀಗೆನ್ನುತ್ತಾರೆ:

‘‘ಜಾಲಾಟದ ಪ್ರಾರಂಭದಲ್ಲಿ ‘ಕಟ್ಟುಹಾಸ್ಯ’ದ ರೂಪದಲ್ಲಿ ಕೆಲವು ಪಾತ್ರಗಳು ಅಂಗಣಕ್ಕೆ ಬಂದು ಕುಣಿಯುತ್ತವೆ. ಹಾಸ್ಯರೂಪದ ಈ ಆಶುನಾಟಕದಲ್ಲಿ ಕನಡ, ಕಮ್ಮಾರ, ಮಂತ್ರವಾದಿ, ಬ್ರಾಹ್ಮಣ, ಮಡಿವಾಳ, ಪರವ, ಪರತಿ, ಕ್ಷೌರಿಕ, ಮೇರ, ಮನ್ಸ ಮೊದಲಾದ ಪಾತ್ರಗಳು ಸಕ್ರಿಯವಾಗಿ ಭಾಗವಹಿಸುತ್ತವೆ. ಈ ಪಾತ್ರಗಳು ಕುಣಿದು ನಾಟಕೀಯವಾದ ಸಂಭಾಷಣೆಯನ್ನು ನಡೆಸುತ್ತವೆ. ಈ ಪಾತ್ರಗಳ ಕುಣಿತ, ಮಾತು, ವೇಷಭೂಷಣಗಳಲ್ಲಿ ಅತಿಮಾನವತೆಯ ಲಕ್ಷಣಗಳಿಲ್ಲ. ಮಾತು ಕುಣಿತಗಳಲ್ಲಿ ಕಲಾವಿದರ ಸ್ವಚ್ಛಂದ ಪ್ರವೃತ್ತಿಯನ್ನು ಕಾಣಬಹುದು. ಆಶುನಾಟಕದ ಪಾತ್ರಗಳನ್ನು ನಿರ್ವಹಿಸುವಾಗ ಅವರಿಗೆ ಮುಕ್ತವಾದ ಸ್ವಾತಂತ್ರ್ಯವಿರುತ್ತದೆ. ಕಲಾವಿದರು ತಮ್ಮ ಲೋಕಜ್ಞಾನ, ವ್ಯವಹಾರ ಕುಶಲತೆ, ಹಾಸ್ಯಪ್ರಜ್ಞೆಗಳನ್ನು ತೀಕ್ಷ್ಣವಾಗಿ ಪ್ರಕಟಿಸುತ್ತಾರೆ. ಪ್ರೇಕ್ಷಕರನ್ನು ನಕ್ಕು ನಗಿಸುವುದರ ಮೂಲಕ ಮನೋರಂಜನೆಯನ್ನು ಒದಗಿಸುವುದು ಇವರ ಉದ್ದೇಶವಾಗಿರುತ್ತದೆ. ಬೇರೆ ಬೇರೆ ಜನಾಂಗಗಳು ಮಾಡುವ ವೃತ್ತಿಗಳ ಗುಣದೋಷಗಳನ್ನು ಮಾರ್ಮಿಕವಾಗಿ ಇಲ್ಲಿ ತಿಳಿಸುತ್ತಾರೆ. ಸಮಾಜದ ಕುಂದುಕೊರತೆಗಳನ್ನು ತೋರಿಸುತ್ತಾರೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಶೋಷಣೆ ಮಾಡುವ ವಿಧಾನಗಳನ್ನು ಸೂಚಿಸುತ್ತಾರೆ. ಸಮಾಜದಲ್ಲಿನ ಜಾತಿ, ವೃತ್ತಿ, ನೀತಿ ನಿಯಮಗಳ ಆಳವಾದ ಚರ್ಚೆಯನ್ನು ರಂಜನೆಯ ಮಾತುಗಳ ಮೂಲಕ ಮಾಡುತ್ತಾರೆ…. ಜಾಲಾಟದ ಉಳಿದ ಭಾಗದಲ್ಲಿ ವೀರ ರೌದ್ರರಸದ ಅಭಿವ್ಯಕ್ತಿ ಇರುತ್ತದೆ. ಹಾಸ್ಯರಸದ ಈ ಪ್ರಹಸನದಿಂದಾಗಿ ಜಾಲಾಟಕ್ಕೆ ವೈವಿಧ್ಯದ ಮೂಲಕ ಸಮಗ್ರತೆ ಬರುತ್ತದೆ.’’ (ಭೂತಾರಾಧನೆ, ೧೯೯೦, ಜಾನಪದೀಯ ಅಧ್ಯಯನ, ಪು.೨೩೪)

ಜಾಲಾಟದಲ್ಲಿನ ಗಂಡಗಣ ಸವಾರಿ, ಮಲೆಭೂತಗಳ ಕುಣಿತ, ಮಾದಿರಕುಣಿತ, ಮೇರರ ಕೋಲ, ಮನ್ಸರ ಕೋಲ, ಬೇಟೆಯ ಕುಣಿತ, ಸೂಟೆದಾರೆ ಕುಣಿತ, ‘ಸೂರೆ’ಗಳು ಬಗೆಬಗೆಯ ಮನರಂಜನೆಯನ್ನು ಒದಗಿಸುತ್ತವೆ. ಮನ್ಸರ ಕೋಲದ ಆಶು ಪ್ರಹಸನವೊಂದು ಬಲಿಮೆ (ಜ್ಯೋತಿಷ್ಯ ಪ್ರಶ್ನೆ) ಭೂತದ ಉಪದ್ರವ, ಭೂತಕ್ಕೆ ‘ಪಾರಿ’ ಹೇಳುವುದು, ಭೂತಾವೇಶ, ನುಡಿಗಟ್ಟು -ಹೀಗೆ ಎಲ್ಲವನ್ನೂ ವಿಡಂಬಿಸಿ ನಗುವುಕ್ಕಿಸುತ್ತದೆ.

‘ಸೂರೆ’ ಎಂಬ ಕಲಾಪ ಜಾಲಾಟದ ಭಾಗವಾಗಿ ನಡುವಿರುಳು ನಡೆಯುತ್ತದೆ. ಊರವರ ತೋಟಕ್ಕೆ ನುಗ್ಗಿ ತರಕಾರಿ ಫಲವಸ್ತುಗಳನ್ನು ಸೂರೆಮಾಡಿ ತರುವ ಕೆಲಸವಿದು. ಇದಕ್ಕೆ ಯಾರದೂ ಆಕ್ಷೇಪವಿಲ್ಲ. ಕೆಲವು ಮನೆಗಳಿಗೂ ಈ ತಂಡವು ಕಿರಿಚುತ್ತಾ ಬರುತ್ತದೆ. ಮನೆಯ ಹೆಂಗಸರು ಗೆರಸೆಯಲ್ಲಿ ಅಕ್ಕಿ, ಬತ್ತ, ತೆಂಗಿನಕಾಯಿ ಇತ್ಯಾದಿಗಳನ್ನು ಮನೆಯ ಮೆಟ್ಟಲಲ್ಲಿಟ್ಟು ಬಾಗಿಲು ಮುಚ್ಚುತ್ತಾರೆ. ಅಂಗಳದಲ್ಲಿ ಅಶ್ಲೀಲ ಹಾಡುಗಳನ್ನು ಹೇಳುತ್ತಾ ಸೂರೆಯ ತಂಡವು ಕುಣಿಯುತ್ತದೆ. ಆದರೆ ಹೆಂಗಸರು ಅದನ್ನು ನೋಡಬಾರದೆಂಬ ನಿಷೇಧವಿದೆ. ಅದು ಅಶ್ಲೀಲ ಹಾಡುಗಳ ಕಾರಣಕ್ಕಿರಬಹುದು.

ಸೂರೆಯ ಸಂದರ್ಭದ ಈ ಅಶ್ಲೀಲ ಹಾಡುಗಳೂ ಇಬ್ಬಿಬ್ಬರು ಜೊತೆಯಾಗಿ ಅಪ್ಪಿಕೊಂಡು ಕಾಲು ಹೆಣೆದುಕೊಂಡು ಮಲಗುವ ಕ್ರಿಯೆಯೂ ಫಲಸಮೃದ್ದಿಯ ಆಚರಣೆಯ(Fertility cult) ಆಶಯವುಳ್ಳದ್ದಾಗಿರಬಹುದು. ಕೊಡಂಗಲ್ಲೂರು ಭಗವತಿಯ ‘ಭರಣಿ ಉತ್ಸವ’ದ ವೇಳೆ ‘ಕಾವುತೀಂಡಲ್ ’ ಎಂಬ ವಿಧಿಯಲ್ಲಿ ಅಶ್ಲೀಲ ಗರ್ಭಿತ ವಿನೋದದ ಹಾಡುಗಳನ್ನು ಹಾಡುವ ಸಂಪ್ರದಾಯವಿತ್ತು. ಉಡುಪಿ ಕಡೆಯ ‘ನೀಚ’ ದೈವದ ಕೋಲದಲ್ಲಿ ನೀಚನು ಡೋಲು ಬಡಿಯುವವರೊಡನೆಯೂ ಇತರರೊಡನೆಯೂ ಅವಾಚ್ಯ ಅಶ್ಲೀಲ ಸಂಭಾಷಣೆಗೆ ತೊಡಗುವುದಿದೆ. ಇವೆಲ್ಲ ಸಂಪ್ರದಾಯ ಸಮ್ಮತವಾದ ಕಲಾಪಗಳು.

‘ಕೊಡಗಿನ ಬಲ್ಮಾವತಿಯ ಪೊನಿಕಾಡಿನಲ್ಲಿರುವ ಅಯ್ಯಪ್ಪನ ಪೂಜೆಯಂದು ಮುಂಜಾನೆ ಹೆಂಗಸರು ಕೊಳದಲ್ಲಿ ಮಿಂದು ಬರಿಮೈಯಲ್ಲಿ ಒಲೆ ಹೊತ್ತಿಸಿ, ಅಕ್ಕಿಹಿಟ್ಟಿನ ರೊಟ್ಟಿಸುಟ್ಟು ಅಯ್ಯಪ್ಪನಿಗೆ ಎಡೆಯಿಟ್ಟು ಅಶ್ಲೀಲ ಮಾತುಕತೆಯಾಡಿ, ಹಾಡಿ, ಕುಣಿಯುತ್ತಾರೆ.(ಎಸ್.ಕೆ.ರಾಮಚಂದ್ರರಾವ್, ಮೂರ್ತಿಶಿಲ್ಪ ೧೯೭೫, ಪು.೨೫೨) ಕೊಡಗಿನ ಕೆಲವೆಡೆ ನಡೆಯುವ ‘ಕುಂಡೆಹಬ್ಬ’ದಲ್ಲೂ ಹೀಗೆ ಅಶ್ಲೀಲ ಭಾಷೆ ಬಳಸುತ್ತಾರೆ. ಶಿಶಿಲ ದೇವಸ್ಥಾನದ ಉತ್ಸವಕ್ಕೆ ಮುಂಚಿತವಾಗಿ ‘ಮುಗ್ಗೆರ’ ವರ್ಗದವರು ದೇವರನ್ನು ಅವಾಚ್ಯವಾಗಿ ಬಯ್ಯುವ ವಿಧಿ ಇದೆ. ಇದನ್ನು ‘ಬೋಲ್ ಲೆಪ್ಪುನೆ’ ಎನ್ನುತ್ತಾರೆ.

ಜಾಲಾಟದಲ್ಲಿ ಪ್ರಾರಂಭಕ್ಕೆ ಚಿಕ್ಕಮಕ್ಕಳ ತಂಡವು ‘ಪೊಡಿ ನಲಿಕೆ’ (ಕಿರುಹೆಜ್ಜೆಯ ಕುಣಿತ) ಪ್ರದರ್ಶಿಸುತ್ತದೆ. ಬಯಲಾಟದ ಸಾಂಪ್ರದಾಯಿಕ ಪೂರ್ವರಂಗದಲ್ಲಿ ‘ಕೋಡಂಗಿ’ ವೇಷದ ಹುಡುಗರು ವಿಧವಿಧದ ತಾಳಗಳಿಗೆ ಕುಣಿಯುವುದಲ್ಲದೆ ಭಾಗವತರೊಡನೆ ತೀರ ಕೆಳಮಟ್ಟದ ಹಾಸ್ಯದ ಸಂಭಾಷಣೆ ನಡೆಸುವುದಿತ್ತು. ಇದಲ್ಲದೆ ಪೂರ್ವರಂಗದ ಭಾಗದಲ್ಲೆ ‘ಕಟ್ಟುಹಾಸ್ಯ’ದ ಹೆಸರಲ್ಲಿ ಹಾಸ್ಯಗಾರನು ಕಳ್ಳ, ಬೈರಾಗಿ, ಕ್ರೈಸ್ತ, ಮುಸಲ್ಮಾನ, ಮಡಿವಾಳ, ನರ್ಸಣ್ಣ, ಕೊರವಂಜಿ, ಸಿಂಗ-ಸಿಂಗಾರಿ, ಮಲೆಯಾಳಿ ಪಂಡಿತ, ಹರಿವೆಸೊಪ್ಪು ಮಲ್ಲಮ್ಮ ಮೊದಲಾದ ವೇಷಧರಿಸಿ ಸಭಾರಂಜನೆ ಮಾಡುತ್ತಿದ್ದ.

ಸಿಂಹಳದ ಯಕ್ಷಪೂಜಾ ಸಂದರ್ಭದಲ್ಲೂ (ಅಲ್ಲಿ ಭೂತಗಳನ್ನು ‘ಯಕ್ಷ’(ಯಕ್ಕ) ಎನ್ನುತ್ತಾರೆ) ಈ ಬಗೆಯ ಹಲವು ಲೌಕಿಕ ವೇಷಗಳು ಬರುವ ಪದ್ಧತಿ ಇದೆ. ಅಲ್ಲಿನ ಯಕ್ಷಾರಾಧನೆಯ ಒಂದು ಪ್ರಕಾರಕ್ಕೆ ‘ಕೋಲಂ’ ಎಂದೇ ಹೆಸರು. ಮನುಷ್ಯ, ದೇವತೆ, ರಾಕ್ಷಸ, ಯಕ್ಷ, ಕಿನ್ನರ, ನಾಗ, ಪಕ್ಷಿ, ಪ್ರಾಣಿ ವರ್ಗಗಳಿಗೆ ಸೇರಿದ ಐವತ್ತಕ್ಕೂ ಮಿಕ್ಕಿದ ನಾನಾ ಪಾತ್ರಗಳಿಂದ ಕಿಕ್ಕಿರಿದ ನೃತ್ಯನಾಟಕದಂಥ ಈ ಆರಾಧನೆ ಏಳು ದಿವಸಗಳಷ್ಟು ದೀರ್ಘವಧಿಯಲ್ಲಿ ನಡೆಯುತ್ತದೆ. ಯಕ್ಷಗಾನ ಬಯಲಾಟದ ಪೂರ್ವರಂಗದಂಥ ವಿಧಿ ಇಲ್ಲೂ ಇದೆ. ಬಯಲಾಟದ ಪೂರ್ವರಂಗದ ಕಟ್ಟುಹಾಸ್ಯಗಳಂಥ ಬಿಡಿಪಾತ್ರಗಳು ಕೋಲದ ಪ್ರಾರಂಭದಲ್ಲಿ ಬಂದು ನಗಿಸಿ ಹೋಗುತ್ತವೆ. ಉದಾ : ಅಗಸ, ಅವನ ಮಡದಿ, ವಾದ್ಯಗಾರ, ಪೋಲೀಸ್, ವ್ಯಾಪಾರಿ, ತಮಿಳ ಇತ್ಯಾದಿ. ಹಾಸ್ಯ ಪಾತ್ರಗಳು ಹಿಮ್ಮೆಳದವ ರೊಂದಿಗೆ (ಇವರನ್ನು ‘ಸಭಾಪತಿ’ ಎನ್ನುತ್ತಾರೆ) ವಿನೋಧ ಸಂಭಾಷಣೆ ಬೆಳೆಸುವುದುಂಟು. ಕೆಲವು ವೇಳ ಮುಖ್ಯ ಕಥೆಗೆ ಸಂಬಂಧಪಡದ ಕಿರುಪ್ರಸಹನಗಳು ಕಥಾಭಿನಯದ ಮಧ್ಯದಲ್ಲಿ ನಡೆಯುವುದುಂಟು. (Dr.Sharathchandra- The Folk Drama of Ceylon, P.33).

ಕೋಲ ಸಂಪ್ರದಾಯವೇ ವಿಕಸಿತವಾಗಿ ಬೆಳೆದು ರೂಪುಗೊಂಡ ‘ನಾಡಗಂ’ ಎಂಬ ಗೀತರೂಪಕದಲ್ಲಿನ ಹಾಸ್ಯಗಾರನನ್ನು ‘ಬಹುಭೂತ ಕೋಲಮ’, ‘ಕೋಮಾಲಿ’ ಹಾಗೂ ‘ಕೋಣಂಗಿ’ ಎಂದು ಕರೆಯುತ್ತಾರೆ.

ಕಾಪು ಹಳೆಯ ಮಾರಿಗುಡಿಯ ಸಮೀಪ ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ವಿಶಿಷ್ಟವಾದ ‘ಪಿಲಿಕೋಲ’ ಹಾಗೂ ಇತರ ದೈವಕೋಲಗಳು ‘ಒಂಬತ್ತು ದಿನಗಳವರೆಗೆ ನಡೆಯುತ್ತವೆ. ಬಿರ್ಮೆರ್, ಬೈದೆರ್ಲು, ಮುಗ್ಗೆರ್ಲು, ಮೈಸಂದಾಯ, ಗುಳಿಗ, ಬೊಬ್ಬರ್ಯ ಹಾಗೂ ಪಿಲಿಭೂತಗಳ ಆರಾಧನೆ ಮಾತ್ರವಲ್ಲದೆ ಇಲ್ಲಿ ಪೋಲೀಸು, ‘ಸೇನೆರ್ ’(ಶ್ಯಾನುಭಾಗರು), ‘ಪಟ್ಲೆರ್ ’(ಪಟೇಲರು), ‘ಮದಿಮ್ಮಯ-ಮದಿಮ್ಮಾಳ್’ (ಮದುಮಗ-ಮದುಮಗಳು) ಕೋಲಗಳೂ ಜರಗುತ್ತವೆ. (ಇವರು ಭೂತಗಳಿಂದಾಗಿ ಮಾಯಕಗೊಂಡು ಅವುಗಳ ‘ಸೇರಿಗೆ’ಯಲ್ಲಿರುವುದಾಗಿ ಹೇಳಿಕೆ) ಈ ಕೋಲಗಳು ನಡೆಯುವಾಗ ಸಾಕಷ್ಟು ಆಶು ಹಾಸ್ಯದ ಸಂಭಾಷಣೆ ನಡೆಯುತ್ತದೆ.

‘ದೇವಿ (ದೇಯಿ) ನಲಿಕೆ’ ಎಂಬುದು ಕಾರ್ಕಳದ ಕಡೆ ಎಂದಾದರೊಮ್ಮೆ ಜರಗುವ, ಜಾಲಾಟವನ್ನು ಹೋಲುವ ದೈವಗಡಣ ಆರಾಧನೆ. ಮೂರು ಅಥವಾ ಐದು ದಿನಗಳಲ್ಲಿ ಒಂದಾದ ಮೇಲೊಂದರಂತೆ ನಿರಂತರವಾಗಿ ಕೋಲರೂಪದ ಆರಾಧನೆ ನಡೆಯುತ್ತದೆ. ಕಳವನ್ನು ಬರಿದಾಗಿ ಇರಿಸುವಂತಿಲ್ಲ. ರಾತ್ರಿ ದೈವಗಳ ಕೋಲ ನಡೆದರೆ, ಹಗಲು ಆ ದೈವ ಕೋಲಗಳ ಅಣಕು ಕೋಲಗಳು ನಡೆಯುತ್ತವೆ. ‘ಅಣಿ’ಯನ್ನು ಹಿಂಬದಿಗೆ ಕಟ್ಟಿಕೊಳ್ಳುವ ಬದಲಾಗಿ ಎದೆಗೆ ಕಟ್ಟಿಕೊಳ್ಳುತ್ತಾರೆ. ತಮಾಷೆಯ ಮಾತಿನ ಸಂಭಾಷಣೆ ನಡೆಯುತ್ತದೆ. ‘ಸಿರಿ ದರ್ಶನ’ ಇತ್ಯಾದಿಗಳನ್ನು ಅಣಕಿಸುವುದೂ ಇದೆ.

ನಾಗಮಂಡಲವನ್ನು ಹೋಲುವ, ಬಹುಶಃ ಅದಕ್ಕಿಂತ ಪ್ರಾಚೀನವಾದ ಹಾಗೂ ವೈವಿಧ್ಯಪೂರ್ಣವಾದ ನಾಲ್ಕು ದಿನಗಳಷ್ಟು ದೀರ್ಘಾವಧಿಯ ನಾಗಾರಾಧನೆಯ ಪ್ರಕಾರವೊಂದು ಕುಂದಾಪುರ ಕಡೆಯ ದಲಿತವರ್ಗವಾದ ಮೇರಜನಾಂಗದಲ್ಲಿ ಪ್ರಚಲಿತವಿದೆ. ‘ಕಾಡ್ಯ’ನೆಂದು ಕರೆಯಲ್ಪಡುವ ಕಾಳಿಂಗಸರ್ಪವನ್ನು ದೈವೀಕರಿಸಿ ಆರಾಧಿಸುವ ಅಪೂರ್ವ ಆಚಾರವಿಧಿಸಂಕೀರ್ಣವಿದು. ಇದರಲ್ಲಿ ಗಂಭೀರ ಸ್ವರೂಪದ ಕಾಡ್ಯನಪೂಜೆ, ‘ದರ್ಶನ’, ಕಲಶಪೂಜೆ, ‘ಬೈದ್ಯ’ರ ಹಾಡು, ಗಂಗೆಮೀಯಲು ಹೋಗುವುದು ಇತ್ಯಾದಿ ಆಚರಣಾತ್ಮಕ ವಿಧಿಗಳ ಜೊತೆಗೆ ಮನರಂಜನೆಯ ಸ್ವಭಾವವುಳ್ಳ ಹಿಡ್ಗಾಯಿ ಆಡುವುದು, ಅಂಬೊಡಿ (ಅಣಕು ಕಾಳಗ) ಆಡುವುದು, ಬ್ರಾಹ್ಮಣ ಕೋಲ, ದಾಸರಕೋಲ, ಕೊರಗರ ಕೋಲ, ಹುಲಿಹಂದಿ (ಬೇಟೆಯ) ಕೋಲ, ಕುದುರೆ ಕೋಲ, ಜ್ವರನ ಕೋಲ, ಕೆಮ್ಮನ ಕೋಲ, ತಗಣೆ ಕೋಲ, ಇಲಿ ಕೋಲ ಇತ್ಯಾದಿ ಹಾಸ್ಯ ಸನ್ನಿವೇಶಗಳನ್ನೂ ಪ್ರದರ್ಶಿಸುತ್ತಾರೆ. ಇವುಗಳಲ್ಲಿ ಕೆಲವು ಕರ್ನಾಟಕದ ಜನಪದರಲ್ಲಿ ಬಲುಹಿಂದೆಯೇ ಪ್ರಚಲಿತವಿದ್ದ ‘ಸೋಗು’ ಅಥವಾ ‘ಹಗಣ’(ಹಗರಣ)ಗಳನ್ನು ಹೋಲುತ್ತವೆ. ಕಾಡ್ಯನಾಟದ ಸ್ವರೂಪ ವೈಶಿಷ್ಟ್ಯದ ಕುರಿತು ಡಾ.ಬಿ.ಎ.ವಿವೇಕ ರೈ ಹೀಗೆನ್ನುತ್ತಾರೆ: ‘‘ಆಚರಣೆಯ ಗಾಂಭೀರ್ಯ ಮತ್ತು ಹಗಣದ ಪ್ರಹಸನ ಗುಣ ಇವು ಒಟ್ಟಿಗೆ ಕೆಲಸ ಮಾಡಿ ನಿಜವಾದ ನಾಟಕೀಯ ಪರಿಣಾಮವನ್ನು ಉಂಟು ಮಾಡುತ್ತವೆ. ನಮ್ಮ ಜನಪದ ರಂಗಭೂಮಿಯ ಸ್ವರೂಪವೇ ಇಂತಹ ಗಾಂಭೀರ್ಯ ಮತ್ತು ಹುಡುಗಾಟಿಕೆಗಳ ಸೇರ್ಪಡೆಯಿಂದ ಆದುದು… ಕಾಡ್ಯನಾಟದಂಥ ಆಚರಣೆಯ ಒಳಗಯೇ ಧಾರ್ಮಿಕ ವ್ಯಕ್ತಿಗಳನ್ನು ಮತ್ತು ಆಚರಣೆಯನ್ನು ಗೇಲಿ ಮಾಡುವ ಇಂತಹ ಪ್ರವೃತ್ತಿ ಜನಪದ ರಂಗಭೂಮಿಯ ರಚನೆಯ ದೃಷ್ಟಿಯಿಂದ ಬಹಳ ಮುಖ್ಯವಾದುದು.’’ (ಪ್ರೊ.ಎ.ವಿ.ನಾವಡ, ಡಾ.ಗಾಯತ್ರಿ ನಾವಡ ಇವರ ‘ಕಾಡ್ಯನಾಟ’ದ ೧೯೯೨ ಮುನ್ನುಡಿಯಲ್ಲಿ)

‘‘ಕೊರಗರ ಕೋಲ, ಬ್ರಾಹ್ಮಣ ಕೋಲ, ದಾಸರ ಕೋಲ, ಹುಲಿಹಂದಿ ಕೋಲ -ಇವುಗಳ ಪ್ರಧಾನ ಉದ್ದೇಶ ಮನರಂಜನೆ. ಈ ವೇಷ ತೊಟ್ಟವರು, ಆಡುವ ಮಾತಿಗೆ ವಿಧಿಕ್ರಿಯೆಯ ಚೌಕಟ್ಟಿನೊಳಗೆ ಖಚಿತ ಪಠ್ಯ ಇಲ್ಲದಿರುವುದರಿಂದ ಆಯಾ ಸಂದರ್ಭ ಸನ್ನಿವೇಶ, ಪ್ರೇಕ್ಷಕ ವರ್ಗದ ಪ್ರತಿಕ್ರಿಯೆಗೆ ತಕ್ಕಂತೆ ಅದು ರೂಪುಗೊಳ್ಳುತ್ತದೆ. ಆಯಾ ಜಾತಿ, ವೃತ್ತಿಯವರ ಬಗೆಗೆ ಇದ್ದ ಅಸಹನೆ, ಅತೃಪ್ತಿ, ಅಥವಾ ಹತ್ತಿಕ್ಕಿದ ಭಾವಗಳಿಗೆ ಇಲ್ಲಿ ಬಾಯಿಸಿಗುತ್ತದೆ. ಈ ಆಚರಣೆಯ ಸಂದರ್ಭದಲ್ಲಿ ಆಡುವ ಮಾತುಗಳಿಗೆ ಯಾರಿಂದಲೂ ಆಕ್ಷೇಪಣೆ ಬರುವುದಿಲ್ಲ. ಹೀಗಾಗಿ ಇಲ್ಲಿನ ಮಾತುಗಳಲ್ಲಿ ಸಾಕಷ್ಟು ಸಾಮಾಜಿಕ ಅರೆಕೊರೆಗಳ ವಿಡಂಬನೆಯನ್ನು ಗುರುತಿಸಬಹುದು’’ -ಎಂಬುದು ಪ್ರೊ.ಎ.ವಿ. ನಾವಡ, ಡಾ.ಗಾಯತ್ರಿ ನಾವಡ ಇವರ ಅಭಿಪ್ರಾಯ.(ಕಾಡ್ಯನಾಟ, ೧೯೯೨ಕ ಪು.೨೮)

‘ಬ್ರಾಹ್ಮಣಕೋಲ’ವೆಂಬ ಆಶುಪ್ರಹಸನವಂತೂ ನಾಗಮಂಡಲದ ಅಣಕವೆಂದೇ ಹೇಳಬಹುದು. ಪಾಣಾರರು ನಡೆಸುವ ಪಾಣಾರಾಟದಲ್ಲೂ ಅಣಕ ಕೋಲಗಳನ್ನು ಸಾಕಷ್ಟು ಕಾಣಬಹುದು. ಕಾಸರಗೋಡು ಸೀಮೆಯ ಬಾಕುಡರೆಂಬ ದಲಿತವರ್ಗದವರು ನಡೆಸುವ ‘ಸಂಕಪಾಳಕೋಲ’ ಎಂಬ ನಾಗಾರಾಧನೆಯು ರಾತ್ರಿಯಿಡೀ ನಡೆಯುತ್ತದೆ. ನಡುವೆ ‘ಕುಂಡಂಗೆರ್’ ಎಂಬ ಎರಡು ಹಾಸ್ಯ ಕಥಾ ಪಾತ್ರಗಳು ಯಕ್ಷಗಾನದ ಕೋಡಂಗಿಗಳಂತೆ ತಮ್ಮೊಳಗೆ ತಮಾಷೆ ಮಾಡುತ್ತಾ ಸಂವಾದ ನಡೆಸುತ್ತಾರೆ. ಒಬ್ಬಳು ಹೆಂಗಸು ಇವರಿಗೆ ಬೇಕಾದ ಸೂಚನೆ ನೀಡುತ್ತಾ ತಮಾಷೆ ಹದಮೀರಿದರೆ ಅವರನ್ನು ಎಚ್ಚರಿಸಿ ಸರಿಪಡಿಸುತ್ತಾಳೆ. (ಕಾಸರಗೋಡು, ೨೦೦೪, ಪು.೭೦)

ಮಲೆಯಾಳ ಸಂಪ್ರದಾಯದ ವರ್ಣರಂಜಿತ ದೈವಸಮೂಹೋತ್ಸವವಾದ ‘ಕಳಿಯಾಟ್ಟಂ’ ಅಥವಾ ‘ಪೆರಿಂಕಳಿಯಾಟ್ಟಂ’ ಎಂಬುದು ಐದು ಅಥವಾ ಏಳುದಿನ ನಡೆಯುತ್ತದೆ. ಇಲ್ಲಿ ಗಂಭೀರ ಪ್ರಕೃತಿಯ ‘ತೆಯ್ಯ’ಗಳಿಗೆ ಆದ್ಯತೆಯಾದರೂ ನಡುನಡುವೆ ಹಾಸ್ಯಪ್ರಕೃತಿಯ ಕೆಲವು ಅಪ್ರಧಾನ ಭೂತವೇಷಗಳು ರಂಗಕ್ಕೆ ಬರುವುದುಂಟು. ‘ಪೀಯಾಯಿ’ ಎಂಬುದು ಅಂಥದೊಂದು ಲಘುಪ್ರಕೃತಿಯ ದೈವ ಮೈಗೆ ಒಂದಿಷ್ಟು ತೆಂಗಿನ ‘\ಙ’ (ಎಳೆಯ ಗರಿ) ಕಟ್ಟಿಕೊಂಡ ಪೀಯಾಯಿಯ ಮುಖದ ಮೇಲೆ ಕವುಂಗಿನ ಹಾಳೆಯಿಂದ ರಚಿಸಿದ ಮುಖವಾಡವಿರುತ್ತದೆ. ಇವನಿಗೆ ವಿಶೇಷ ದರ್ಶನವಾಗಲೀ, ನರ್ತನವಾಗಲೀ ಇರುವುದಿಲ್ಲ. ಇವನು ಯಾವುದೇ ಕಟ್ಟುಪಾಡಿಲ್ಲದೆ ಜನಸಂದಣಿಯ ನಡುವಿನಿಂದ ಹಾದು ಹೋಗುತ್ತ, ಹಾಸ್ಯೋಕ್ತಿ ಆಡುತ್ತ ಹರಸುತ್ತಾನೆ. ಅಂಗಣದ ಹೊರಗೆ ಹೋಗಿ ಬರುವ ಸ್ವಾತಂತ್ರ್ಯವೂ ಇವನಿಗಿದೆ. ಮಕ್ಕಳಿಗೆ ಈ ಸರಸದೈವ ಎಂದರೆ ಇಷ್ಟ. ಪೀಯಾಯಿ ದೈವೋತ್ಸವದ ನಡುವೆಯೇ ಕೆಲವು ಚೇಷ್ಟೆಗಳನ್ನು ಮಾಡುತ್ತಿರುತ್ತಾನೆ. ಅವರಿವರಲ್ಲಿ ‘ಕಾಣಿಕೆ’ಗೆ ಕೈಚಾಚುವ ಹವ್ಯಾಸವೂ ಈತನಿಗಿದೆ.

ಬಬ್ಬರ್ಯನ ‘ದೈವಕಟ್ಟಿ’ನಲ್ಲಿ ಬಬ್ಬರ್ಯನ ಸಹಾಯಕನಾಗಿ ಲೆಕ್ಕ ಬರೆಯುವ’ ವ್ಯಕ್ತಿಯೊಬ್ಬನಿರುತ್ತಾನೆ. ಸರಳ ವೇಷದ ಈತ ಲೆಕ್ಕಣಿಕೆಯಿಂದ ಬರೆಯುತ್ತಿರುವಂತೆ ಹಾಸ್ಯಪೂರಿತ ಅಭಿನಯ ಮಾಡುತ್ತಾನೆ.

ಗುಳಿಗನ ವೇಷವೂ ತನ್ನ ಕೆಲವು ಚೇಷ್ಟೆಗಳಿಂದಲೂ, ಓಡಾಟಗಳಿಂದಲೂ ವಿನೋದ ವನ್ನುಂಟು ಮಾಡುವುದಿದೆ.

ವಯನಾಡ ಕುಲವನ್ ಕೋಲದ ಬೇಟೆಯ ಪ್ರಸಂಗದಲ್ಲಿ ಹಾಸ್ಯ ಸನ್ನಿವೇಶಗಳಿರು ವುದುಂಟು.

ಆಲಿ ಎಂಬ ಮುಸ್ಲಿಂ ಮಂತ್ರವಾದಿ ಚಾಮುಂಡಿಯಲ್ಲಿ ‘ಸೇರಿಗೆ’ಗೊಂಡು ‘ಆಲಿಚಾಮುಂಡಿದೈವ’ ಎನಿಸಿದ್ದಾನೆ. ಕುಂಬಳೆ ಆರಿಕ್ಕಾಡಿಯಲ್ಲಿ ಈ ದೈವವಿದೆ. ಹಾಸ್ಯ ಪ್ರಕೃತಿಯ ಈ ದೈವ ಮುಸ್ಲಿಂ ಶೈಲಿಯ ಲುಂಗಿ, ಟೊಪ್ಪಿಗಳನ್ನು ಧರಿಸುತ್ತಾನೆ. ಆಗಾಗ ನಿಮಾಜು ಮಾಡುವಂತೆ ಅಭಿನಯಿಸುತ್ತಾನೆ. ಆಲಿ ನಿಜ ಜೀವನದಲ್ಲಿ ತುಂಬುರಸಿಕನಾಗಿದ್ದ ನೆಂಬುದು ಪ್ರತೀತಿ. ಈತನಿಗೆ ನಡೆದುಕೊಳ್ಳುವವರಲ್ಲಿ ವೇಶ್ಯೆಯರ ಬಳಗವೂ ಇದೆಯೆನ್ನಲಾಗಿದೆ. ಉತ್ಸವದ ವೇಳೆ ಅವರಲ್ಲಿ ಆಲಿ ಸರಸವಾಗಿ ಮಾತನಾಡುತ್ತ ‘ಈ ವರ್ಷದ ಬೆಳೆ ಹೇಗಿದೆ?’ ಎಂದು ಕೇಳುವುದುಂಟು!

‘ಪೋರಾಟ್ಟು ಕೋಲ’ಗಳ ಬಗೆಗೆ ಒಂದು ವಿವರಣೆ ಇಂತಿದೆ

‘‘ತೆಯ್ಯ ಕೋಲಗಳಿಗೆ ನಡೆಯುವ ಧಾರ್ಮಿಕ ವಿಧಿಗಳಲ್ಲಿ ಸ್ವಾರಸ್ಯವಾದುದೆಂದರೆ ವಿಕಟವಿನೋದದ ಕೆಲವು ಕೋಡಂಗಿ ಕೋಲಗಳ ಪಾತ್ರ. ಇವಕ್ಕೆ ಪೋರಾಟ್ಟುಕೋಲಗಳೆಂದು ಹೆಸರು. ಗಂಭೀರವಾದ, ಭೀಕರವಾದ ತೆಯ್ಯಗಳೊಂದಿಗೇ ಬರುವ ಈ ಕೋಲಗಳು ಸರ್ಕಸ್ಸಿನಲ್ಲಿ ‘ಕ್ಲೌನ್’ಗಳು ವರ್ತಿಸುವಂತೆಯೇ ನಡೆದುಕೊಳ್ಳುತ್ತವೆ. ನಿದರ್ಶನಕ್ಕೆ ‘ಪನಿಯನ್’ ಎನ್ನುವ ಈ ಬಗೆಯ ಕೋಲ. ಅವನು ಬರುವುದು ‘\|ಚಿಮುಂಡಿ’ ಎಂಬ ಘೋರ ತೆಯ್ಯದೊಂದಿಗೆ -\|ಚಿಮುಂಡಿಯ ಪಾತ್ರಿಯು ಧಗಧಗನೆ ಉರಿಯುವ ಕೆಂಡದ ರಾಶಿಯಲ್ಲಿ ಬೀಳುವನು. ಅವನೊಂದಿಗೆ ಅಣಕವಾಡುತ್ತ ಬರುವ ಪನಿಯನ್ ತಾನೂ ಕೆಂಡದ ರಾಶಿಯಲ್ಲಿ ಬೀಳುವೆನೆಂದು ಗತ್ತಿನಲ್ಲಿ ಮುನ್ನುಗ್ಗುವನು; ಆದರೆ ಕೆಂಡದ ಬಿಸಿ ತಾಗಿದೊಡನೆ ಬೆದರಿ ಹಿಂದಕ್ಕೆ ಓಡುವನು.

ಜನರನ್ನು ನಗಿಸುವುದೇ ಮುಖ್ಯ ಪ್ರಯೋಜನವಿದ್ದಂತೆ ತೋರಿದರೂ ಈ ವಿನೋದ ತೀಚಾಮುಂಡಿಯ ದೃಷ್ಟಿ ಪರಿಹಾರಕ್ಕೆಂದು. ಜನರ ಗಮನವೆಲ್ಲ ಗಂಭೀರತೆಯ್ಯದ ಪಾತ್ರಿಯ ಮೇಲೆ ಇದ್ದರೆ ಅವನು ತನ್ನ ಅದ್ಭುತ ಕ್ರಿಯೆಗಳನ್ನು ಗಾಸಿಯಾಗದಂತೆ ನಡೆಸುವುದು ಕಷ್ಟವಾಗುತ್ತದೆ. ಪಾತ್ರಿಯಿಂದ ನಮ್ಮ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವವನು ಈ ಕೋಡಂಗಿ ಕೋಲ. ಹಾಗೆಯೇ ಎಂಬೇಟ್ಟನ್ ಎಂಬ ಇನ್ನೊಂದು ಗಂಭೀರ ತೆಯ್ಯದ ಜೊತೆಯಲ್ಲಿ ಬರುವ ಕೈಕೋಳನ್ ಎಂಬ ಪೋರಾಟ್ಟು ಕೋಲ. ಇದು ಉಪಹಾಸ್ಯದ ಸಂಭಾಷಣೆಯನ್ನು ನುಡಿಗಟ್ಟಾಗಿ ಹೇಳುತ್ತದೆ. ಮೀನುಗಾರ ತೀಯ್ಯ ಮತ್ತು ಬ್ರಾಹ್ಮಣ ಇವರ ನಡುವೆ ನಡೆಯುವ ಮಾತುಕತೆ ನಗೆಯಾಟದ ಸಂದರ್ಭವಾಗುತ್ತದೆ. ಇದನ್ನು ಪೋರಾಟ್ಟುಕೋಲ ನಿರ್ವಹಿಸುತ್ತದೆ. ಈ ಭಾಗ ಕಳಿಯಾಟ್ಟದ ವಿಶೇಷ ಆಕರ್ಷಣೆಯಾಗುತ್ತದೆ. ಅಂತೂ ಧರ್ಮದ ಅತಿಗಂಭೀರ ಸಂದರ್ಭದಲ್ಲಿಯೂ ಪರಿಹಾಸ್ಯದ ಮನೋವೃತ್ತಿಯನ್ನು ಅಳವಡಿಸಿಕೊಳ್ಳುವುದು ಇದರಲ್ಲಿ ಎದ್ದ ಕಾಣುವ ವಿವರ ‘‘(ಎಸ್.ಕೆ.ರಾಮಚಂದ್ರ ರಾವ್, ಮೂರ್ತಿ ಶಿಲ್ಪ-ನೆಲೆ, ಹಿನ್ನೆಲೆ, ೧೯೭೫, ಪು.೩೩೦)

ದೈವೋತ್ಸವ ಸಂದರ್ಭಗಳಲ್ಲಿನ ಹಾಸ್ಯಸನ್ನಿವೇಶಗಳನ್ನು ವಿಶ್ಲೇಷಿಸಿದರೆ ಕೆಲವು ವಿಚಾರಗಳು ವಿಶದವಾಗಬಹುದು. ಮನುಷ್ಯ ಸಮಾಜದ ಆದಿಮ ಕಾಲಘಟ್ಟದ ಬದುಕಿನ ಕೆಲವು ಪ್ರಾಕೃತಿಕ ಬಿಂಬಗಳನ್ನೂ ಮಾನವನ ಮೂಲ ಪ್ರವೃತ್ತಿಗಳ ಉನ್ಮತ್ತ ವಿಜೃಂಭಣೆಯ ಸಾಂಕೇತಿಕ ರೂಪಗಳನ್ನು ಬೇಟೆಗಾರಿಕೆಯ ಯುಗದ ಆ ಮಬ್ಬುಕಾಲದ ಬದುಕಿನ ಅವಿಭಾಜ್ಯ ಅಂಗವಾದ ಬೇಟೆಗಾರಿಕೆಯ ದಿನಚರಿಯ ಪುನರಭಿನಯವನ್ನೂ ಮುಂದೆ ಕಾಲಾನುಗತವಾಗಿ ಸಾಮಾಜಿಕ ಸಂಪರ್ಕ, ಶ್ರೇಣೀಕೃತ ವ್ಯವಸ್ಥೆಗಳು ಏರ್ಪಟ್ಟಾಗ ಉಂಟಾದ ಏರುಪೇರುಗಳ ಬಗೆಗಿನ ಪ್ರತಿಕ್ರಿಯೆಗಳನ್ನೂ ಕುತೂಹಲಿಗಳು ಮನವರಿಕೆ ಮಾಡಬಹುದು.

ದೈವಕಲಾವಿದರೆಲ್ಲ ಹೆಚ್ಚಾಗಿ ಕೆಳವರ್ಗ ಎನಿಸಿದ ಸಾಮಾಜಿಕ ವ್ಯವಸ್ಥೆಗೆ ಸೇರಿದವರು. ಅವರ ಅದುಮಿಟ್ಟ ನೋವು, ತಲ್ಲಣಗಳನ್ನು ತಮಗೆ ಅಪಾಯವಾಗದಂತೆ ಧಾರ್ಮಿಕ ಕಲಾಪಗಳ ವ್ಯೂಹರಚನೆ ಮಾಡಿ ಪ್ರದರ್ಶಿಸುವ ಚಮತ್ಕಾರವನ್ನು ಈ ಕಲಾವಿದರು ಆವಿಷ್ಕರಿಸಿರಬಹುದು. ಗಂಭೀರ ಪ್ರಕೃತಿಯ ಕಲಾಪಗಳ ಏಕತಾನತೆಯನ್ನು ನಿವಾರಿಸುವ ‘ವ್ಯತ್ಯಾಸ ಸುಖ’ದ ಹೊಸತನಕ್ಕೆ ಆಕರ್ಷಿತರಾಗಿ, ವಿಡಂಬನೆಗೆ ಗುರಿಯಾದವರೂ ಇವುಗಳನ್ನು ಆಸ್ವಾದಿಸುವಂತಾಯಿತು; ಅಥವಾ ಸಹಿಸುವಂತಾಯಿತು.

ಹೆಚ್ಚಿನ ದೈವಕಲಾವಿದರು. ಸೂಕ್ಷ್ಮಮತಿಗಳು, ಸುತ್ತಲಿನ ಸಮಾಜಗಳ ಸ್ಥಿತಿಗತಿಗಳನ್ನು ಚೆನ್ನಾಗಿ ಗಮನಿಸುವವರು ಲೋಕ ಪರಿಜ್ಞಾನ ಹಾಗೂ ಅಪೂರ್ವ ಲೋಕದೃಷ್ಟಿ ಇದ್ದವರು ಹರಿತ ನಾಲಗೆಯವರು, ಪ್ರತ್ಯುತ್ಪನ್ನಮತಿಯುಳ್ಳ ಪ್ರತಿಭಾವಂತರು. ಪ್ರತಿಭಾವಂತರ ಸೃಜನಶೀಲಪ್ರವೃತ್ತಿ ಎಂದೂ ಸುಮ್ಮನಿರದು. ಗಂಭೀರವಾದುದರ ನಡುವೆಯೂ ಅದು ವಿನೋದವನ್ನು ಮೂಡಿಸಬಲ್ಲುದು.

ಇನ್ನೂ ಒಂದು ವಿಚಾರವೆಂದರೆ, ದೈವಾರಾಧನೆಯ ಬಹಿರ್‌ಪ್ರದರ್ಶನ ಎಷ್ಟೇ ಗಂಭೀರವಾಗಿರಲಿ, ಭಯಭಕ್ತಿಯ ಸ್ವರೂಪದ್ದಾಗಿರಲಿ, ಈ ಕಲಾಪಗಳ ಒಳತಿರುಳು, ಒಳಗುಟ್ಟು ಏನು ಎಷ್ಟು ಎಂಬುದನ್ನು ಅ ವಲಯದೊಳಗೇ ಇರತಕ್ಕ ದೈವಕಲಾವಿದರು ಚೆನ್ನಾಗಿ ಬಲ್ಲರು. ಹಾಗಾಗಿ ಉಳಿದವರಿಗೆ ಇರತಕ್ಕ ಭಯಭಕ್ತಿ ಇವರಿಗೆ ಅಷ್ಟಾಗಿ ಇರುವುದಿಲ್ಲ ಎಂಬ ವಾಸ್ತವಾಂಶ ಕೆಲವೊಮ್ಮೆ ವ್ಯಕ್ತವಾಗಿಬಿಡುವುದುಂಟು.

ಪವಿತ್ರವೆನಿಸುವ ಮತಾಚರಣೆಯ ವೇದಿಕೆಯಲ್ಲಿ ಅಸಂಬದ್ಧ ಅಶ್ಲೀಲ ವಿಚಾರಗಳ ಅಭಿವ್ಯಕ್ತಿ ಆಗುವುದು ಆಭಾಸವಲ್ಲವೇ ಎಂಬ ಪ್ರಶ್ನೆಗೆ ಮತ್ತೂ ಕೆಲವು ಸಮಾಧಾನಗಳಿವೆ. ಅರೆಧಾರ್ಮಿಕ ರಂಗಭೂಮಿಯಾದ ಯಕ್ಷಗಾನ, ರಂಗಸ್ಥಳವೂ ಪವಿತ್ರವೆಂದು ಪ್ರತ್ಯೇಕಿ ಸಲ್ಪಡುವ ಜಾಗ. ಅಲ್ಲಿ ರಂಗಾಭಿಮಾನೀ ದೇವತೆಗಳ ಪೂಜೆ ನಡೆಯುತ್ತದೆ. ಮೇಳದ ದೇವರ ಪ್ರತೀಕವನ್ನು ಅಲ್ಲಿಗೆ ತಂದು ಪೂಜಿಸುತ್ತಾರೆ. ಆದರೆ ಅಂಥ ವೇದಿಕೆಯಲ್ಲಿ ಕೋಡಂಗಿಗಳೂ, ಹಾಸ್ಯಗಾರನೂ ಹಿಂದೆ ಮಾಡುತ್ತಿದ್ದ ಅಸಂಬದ್ಧವೆನಿಸುವ ಅಭಿನಯಗಳಿಗೂ, ಅಶ್ಲೀಲ ಗ್ರಾಮ್ಯ ಮಾತುಗಳಿಗೂ ಶಾಸ್ತ್ರದ ಸಮರ್ಥನೆ ಇದೆಯೆಂಬುದು ಕುತೂಹಲಕರ. ಭರತನ ನಾಟ್ಯಶಾಸ್ತ್ರದಲ್ಲಿ ಪೂರ್ವರಂಗದ ವಿಧಿಗಳನ್ನೂ, ವಿದೂಷಕನ ಲಕ್ಷಣಗಳನ್ನು ವಿಸ್ತಾರವಾಗಿ ವರ್ಣಿಸಲಾಗಿದೆ. ‘‘ಭರತನು ಹೇಳುವ ವಿದೂಷಕನು ಸಂಸ್ಕೃತ ನಾಟಕಗಳಲ್ಲಿರುವ ವಿದೂಷಕನಲ್ಲ. ಆತನು ನಮ್ಮ ಆಟದ ಶುದ್ಧ ಹಾಸ್ಯಗಾರನೇ ಆಗಿದ್ದಾನೆ. ಅಸಂಬದ್ಧವಾಗಿ ಮಾತಾಡಿ, ನಾನಾ ವಿಕಾರಗಳನ್ನು ಮಾಡಿ ನಗಿಸುವುದೇ ಅವನ ಕರ್ಮ, ಅಧಿಕಪ್ರಸಂಗವೇ ಅವನ ಧರ್ಮ. ಅವನು ಸರ್ವತಂತ್ರ ಸ್ವತಂತ್ರ. ಅವನ ವೇಷವೂ ವಿಕಾರ. ಅವನ ಪ್ರವೇಶಕ್ಕೆ ರೀತಿ, ನೀತಿ, ಸಮಯ ಸಾರಿಗೆ ಒಂದೂ ಇಲ್ಲ. ಯಾರನ್ನೂ ಬೇಕಾದರೂ ಮನಬಂದಂತೆ ದೂಷಿಸುವ ಅಧಿಕಾರವಿದೆ ಅವನಿಗೆ. ಆದುದರಿಂದಲೇ ಅವನ ಹೆಸರು ವಿದೂಷಕನೆಂದು. ಅವನ ನಡೆಯೂ ವಿಚಿತ್ರ. ಕುಣಿತವೂ ವಿಚಿತ್ರ. ಅತಿಹಾಸ್ಯ, ಗ್ರಾಮ್ಯ, ಅಶ್ಲೀಲ ಎಲ್ಲವೂ ಇರಬೇಕು’’ ಕುಕ್ಕಿಲ ಕೃಷ್ಟಭಟ್ಟ. ಕುಕ್ಕಿಲ ಸಂಪುಟ ೧೯೯೮, ಪು.೨೬-೨೮.

ಭರತನ ನಾಟ್ಯಶಾಸ್ತ್ರದ ಅನೇಕ ಅಂಶಗಳು ಯಕ್ಷಗಾನ ಬಯಲಾಟದ ಲಕ್ಷಣಗಳಿಗೆ ಸಂಬಂಧಿಸಿದಂತಿದೆ ಎಂಬುದು ಗಮನೀಯ. ತನ್ನ ಕಾಲದ ಜನಪದ ರಂಗಭೂಮಿಗಳ ಸಾರ, ಸ್ವಭಾವಗಳನ್ನೆಲ್ಲ ಭರತಾಚಾರ್ಯ ತನ್ನ ನಾಟ್ಯ ಶಾಸ್ತ್ರದಲ್ಲಿ ಅಳವಡಿಸಿರಬೇಕೆಂದು ಹೇಳಬಹುದು.

ಹಿಂದೆ ರಾಜನೊಟ್ಟಿಗೆ ಸದಾ ವಿನೋದವಿಕಾರ ಚೇಷ್ಟೆ ಮಾಡುವ ವಿದೂಷಕನಿರುತ್ತಿದ್ದ. ಮೈಸೂರು ಅರಮನೆಯಲ್ಲಿ ರಾಜ ದರ್ಬಾರನ್ನು ಬರ್ಖಾಸ್ತು ಮಾಡಿ ಅತ್ತ ಸರಿಯುತ್ತಿದ್ದಂತೆ, ಒಂದು ಬದಿಯಲ್ಲಿ ಮರೆಯಾಗಿ ನಿಂತ ವಿದೂಷಕ ಬಳಗ ರಾಜನನ್ನು ಅಶ್ಲೀಲವಾಗಿ ಬಯ್ಯುವ ವಾಡಿಕೆ ಇತ್ತೆಂದು ಹೇಳುತ್ತಾರೆ. ಇದು, ದರ್ಬಾರಿನಲ್ಲಿ ವಿರಾಜಮಾನನಾಗಿದ್ದ ರಾಜನಿಗೆ ದೃಷ್ಟಿದೋಷ ಆಗದಿರಲಿ ಎಂಬುದಕ್ಕಾಗಿ ಎಂದು ಹೇಳಲಾಗಿದೆ.

ರಂಗದ ಅಮಂಗಳ ನಿವಾರಣೆ, ದೃಷ್ಟಿದೋಷ ನಿವಾರಣೆ, ಫಲಸಮೃದ್ದಿಯ ಆಶಯ ಇತ್ಯಾದಿಗಳೂ ಇಂಥ ವಿಲಕ್ಷಣ ವಿನೋದ ಪ್ರಸಂಗಗಳಿಂದ ಸಾಧಿತವಾಗುತ್ತದೆಂಬ ನಂಬಿಕೆ ಜನಪದರಿಗಿದೆ.

ಪ್ರಾಚೀನವಾದ ಎಲ್ಲ ಜನಾಂಗಗಳಲ್ಲೂ ದೇವರು, ದೈವಗಳ ಆರಾಧನೆಯ ಕಲಾಪಗಳಲ್ಲಿ ಹಾಡು, ಕುಣಿತ ಹಾಗೂ ವಿನೋದಗಳನ್ನು ಪ್ರದರ್ಶಿಸುತ್ತಿದ್ದುದುಂಟೆಂಬುದು ವಿವಿಧ ಸ್ಮರಣ ಚರ್ಯೆಗಳ ಪುನರಭಿನಯಗಳಲ್ಲಿ ಪಳೆಯುಳಿಕೆಯಾಗಿ ಉಳಿದುಬಂದಿದೆಯೆಂಬುದನ್ನು ಒಪ್ಪಿಕೊಳ್ಳಬಹುದು.

ಅನುಬಂಧ

ವಿವಿಧ ದೈವಾರಾಧನಾ ವಿಧಿಗಳ ಚೌಕಟ್ಟಿನೊಳಗೆ ಜರಗುವ ವಿನೋದ ಕಲಾಪಗಳೆಲ್ಲ ದೈವಕಲಾವಿದರಿಂದ ನಿರ್ವಹಿಸಲ್ಪಡುವವುಗಳಾದರೆ, ಈ ವೇಳೆಯಲ್ಲಿ ಇತರರಿಂದ ಸಾಂದರ್ಭಿಕವಾಗಿ ಒದಗಬಹುದಾದ ಸಮಸ್ಯೆಗಳು, ಆಕಸ್ಮಿಕ ಆತಂಕಗಳು, ಅನಿರೀಕ್ಷಿತ ಪ್ರಮಾದಗಳು ಬೇರೆಯೇ ಬಗೆಯ ಹಾಸ್ಯಜನಕ ಸನ್ನಿವೇಶಗಳನ್ನು ಸೃಷ್ಟಿಸಿ ಬಿಡುವುದಿದೆ. ಅಂಥ ಕೆಲವು ಸ್ವಾರಸ್ಯಕರ ಘಟನೆಗಳನ್ನು ಇಲ್ಲಿ ನೀಡಲಾಗಿದೆ:

. ಬಿಳಿ ಮೋರೆಯವನ ಪೆಟ್ಟು!

ಬ್ರಿಟಿಷರ ಆಳ್ವಿಕೆಯ ಕಾಲ. ಬ್ರಿಟಿಷ್ ಅಧಿಕಾರಿಗಳ ದರ್ಪ, ದಬ್ಬಾಳಿಕೆಗಳು ಕೆಲಮೊಮ್ಮೆ ವಿಪರೀತವಾಗಿ ಪ್ರಕಟವಾಗುತ್ತಿದ್ದವು. ಕುದುರೆಯೇರಿದ ಅಧಿಕಾರಿಗಳು ಕೆಲವು ಸಲ ಗ್ರಾಮಾಂತರ ಪ್ರದೇಶದಲ್ಲೂ ಠಳಾಯಿಸುತ್ತಿದ್ದುದುಂಟು. ಒಮ್ಮೆ ಪಾಣೆ ಮಂಗಳೂರು ಬಳಿಯ ಒಂದು ದೈವಸ್ಥಾನದಲ್ಲಿ ರಾತ್ರಿ ಹೊತ್ತು ದೈವನೇಮ ನಡೆಯುತ್ತಿತ್ತು. ದೈವ ನೇಮವೆಂದ ಮೇಲೆ ವಾದ್ಯ, ಗರ್ನಾಲು ಕದಿನೆಗಳ ಅಬ್ಬರ ಇದ್ದದ್ದೇ ತಾನೆ? ಸಮೀಪದ ತಂಗುಬಂಗಲೆಯಲ್ಲಿ ತಂಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಆಂಗ್ಲ ಅಧಿಕಾರಿಯೊಬ್ಬನಿಗೆ ಈ ಎಡೆಬಿಡದ ಶಬ್ದಪರಂಪರೆ ಕಿರಿಕಿರಿಯೆನಿಸಿತು. ಪರಿಚಾರಕನಲ್ಲಿ ಅದೇನೆಂದು ವಿಚಾರಿಸಿದ. ಅದು ಭೂತದ ನೇಮ ಎಂಬ ಉತ್ತರ ಸಿಕ್ಕಿತು. ‘‘ಅದನ್ನು ನಿಲ್ಲಿಸಹೇಳು, ನನಗೆ ತೊಂದರೆಯಾಗುತ್ತದೆ’’ ಎಂದು ಹೇಳಿ ಕಳುಹಿಸಿದ. ಚಾರಕ ಅಂತೆಯೆ ನೇಮದ ವ್ಯವಸ್ಥಾಪಕರಲ್ಲಿ ಅರಿಕೆ ಮಾಡಿದ. ‘‘ಭೂತದ ನೇಮದ ಕಟ್ಟಳೆಗಳೆಲ್ಲ ಕ್ರಮಪ್ರಕಾರ ಆಗಲೇಬೇಕು. ನಿಲ್ಲಿಸುವಂತಿಲ್ಲವಲ್ಲಾ’’ ಎಂದು ಉತ್ತರ ಬಂತು. ನಿರುಪಾಯನಾಗಿ ಪರಿಚಾರಕ ಹಿಂದೆ ಬಂದು ವರದಿಯೊಪ್ಪಿಸಿದ. ಕೆರಳಿ ಕೆಂಡಾಮಂಡಲವಾದ ಐರೋಪ್ಯ ದೊರೆ ಒಡನೆ ಶಿಸ್ತಿನ ಉಡುಪು ಧರಿಸಿ ಚಾವಟಿ ಕೈಗೆತ್ತಿಕೊಂಡು ಕುದುರೆಯೇರಿ ನೇಮ ಜರಗುವಲ್ಲಿಗೆ ದೌಡಾಯಿಸಿದ. ವಾದ್ಯಗಳು ಒಂದೇ ಸವನೆ ಮೊರೆಯುತ್ತಿದ್ದವು. ದೈವನರ್ತಕ ಭೂತಾವೇಶದಿಂದ ತನ್ಮಯತೆಯಿಂದ ಕುಣಿಯುತ್ತಿದ್ದ.

‘‘stop it !’’ ಎಂದು ಅರಚಿದ ದೊರೆಯ ಆರ್ಭಟ ವಾದ್ಯಘೋಷದಲ್ಲಿ ಕರಗಿಹೋಯ್ತು. ದೊರೆಗೆ ಸಿಟ್ಟಿನಲ್ಲಿ ಮೈಯೆಲ್ಲ ಉರಿಯಿತು. ನೇರವಾಗಿ ಕುದುರೆಯನ್ನು ನೇಮದ ಚಪ್ಪರದ ಕೆಳಕ್ಕೇ ನುಗ್ಗಿಸಿದ. ನೇರವಾಗಿ ಭೂತದ ಇದಿರಿಗೇ ಕುದುರೆ ನಿಲ್ಲಿಸಿ ‘‘Stop this Nonsense!’’ ಎಂದು ಅಬ್ಬರಿಸಿದವನೇ ಚರ್ಮದ ಚಾಟಿಯನ್ನೆತ್ತಿ ಭೂತದ ಮುಖಮೋರೆ ನೋಡದೆ ಬಾರಿಸಿದ. ಚಾಟಿಗೆ ಎಟಕಿದ ವಾದ್ಯದವರಿಗೂ ಗುರಿಕಾರರೇ, ಮೊದಲಾದವರಿಗೂ ಚಾಟಿಯೇಟಿನ ವಿತರಣೆಯಾಯಿತು. ‘ಅಯ್ಯೋ’ ಎಂದು ಚೀರಿ ಅವರೆಲ್ಲ ದಿಕ್ಕುಪಾಲಾಗಿ ಓಟಕಿತ್ತರು. ಅನಿರೀಕ್ಷಿತವಾಗಿ ಮುಗಿಲಿಂದ ಸಿಡಿದ ಸಿಡಿಲಿನಂತಿದ್ದ ಈ ಕಶಾ ಪ್ರಹಾರದಿಂದ ದಿಗ್ಭ್ರಮೆಗೊಂಡ ಭೂತ ಅರೆಕ್ಷಣ ಸ್ತಬ್ಧವಾಯ್ತು ಭೂತವಾಗಿ ಮಧ್ಯಂತರ ಲೋಕದಲ್ಲಿದ್ದ ದೈವನರ್ತಕ ಇದ್ದಕ್ಕಿದ್ದಂತೆ ಅಲ್ಲಿಂದ ಕುಸಿದು, ಬಡಪಾಯಿ ನರಮನುಷ್ಯನಾಗಿ ಮಾರ್ಪಟ್ಟು ಪ್ರಾಣಭೀತಿಯಿಂದ ತಲ್ಲಣಿಸಿ, ‘‘ವಾಪ್ಪಾ!’’ ಎಂದು ಚೀತ್ಕರಿಸಿ ದಾರಿ ಸಿಕ್ಕಿದಲ್ಲಿಂದ ಓಟಕೀಳಲು ತೊಡಗಿದ. ಕಟ್ಟಿದ ಅಗಲವಾದ ಅಣಿ ಓಟಕ್ಕೆ ಅಡ್ಡಿಯಾಯಿತು. ಮುಗ್ಗರಿಸಿ ಬಿದ್ದ. ಕಾಲಿಗೆ ಬಲವಾದ ಏಟು ತಗಲಿತು ‘ಅಯ್ಯಯ್ಯೋ’ ಎಂಬ ಆರ್ತನಾದ ಅವನ ಬಾಯಿಯಿಂದ ಹೊರಟಿತು.

ಕೆಲವೇ ನಿಮಿಷಗಳಲ್ಲಿ ನೇಮದ ಕಳ ಬರಿದಾಗಿ ಹೋಗಿತ್ತು. ದೊರೆ ಒಮ್ಮೆ ಗಟ್ಟಿಯಾಗಿ ಗಹಗಹಿಸಿ, ‘‘fools!’’ ಎಂದು ಉದ್ಗರಿಸಿ, ತನ್ನ ತಂಗು ಬಂಗಲೆಗೆ ಸಾಗಿದ, ಬಳಿಕ ಆತನಿಗೆ ಸುಖನಿದ್ರೆ ಬಂದಿರಬಹುದು.ಒಂದು ವರ್ಷ ಸರಿದು ಹೋಯಿತು. ಮುಂದಿನ ವರ್ಷದ ನೇಮದ ದಿನ ಬಂತು. ನೇಮದ ಸನ್ನಾಹ ಎಂದಿನಂತೆ ನಡೆದು, ಭೂತಕ್ಕೆ ನಿಲ್ಲುವ ಭೂತನರ್ತಕ ‘ಎಣ್ಣೆ ಬೂಳ್ಯ’ ಹಿಡಿದ. ‘ಗಗ್ಗರದೆಚ್ಚಿ’ ತೊಡಗಿದ. ಭೂತ ಹೆಜ್ಜೆ ಮುಂದಿಡಲು ಅನುವಾದಾಗ ಮುಗ್ಗರಿಸಿದಂತಾಗಿ ಸಾವರಿಸಿಕೊಂಡಿತು. ‘ದರ್ಶನ’ದಲ್ಲೆ ಅತ್ತಿತ್ತ ನಡೆಯುವಾಗ ಕಾಲನ್ನು ಮೋಟಿಸಿಕೊಂಡು ಚಲಿಸುವುದನ್ನು ಎಲ್ಲರೂ ಗಮನಿಸಿದರು. ಈ ಕುಂಟುಗಾಲಿನ ನಡೆ ನಗೆಯುಕ್ಕಿಸುವಂತಿತ್ತು! ಇದರ ಕಾರಣ ಯಾರಿಗೂ ಹೊಳೆಯದಾಯಿತು. ಭೂತಾವೇಶಕ್ಕೆ ಒಳಗಾಗುವ ಮೊದಲು ಭೂತನರ್ತಕನ ನಡಿಗೆ ಸರಿಯಾಗಿಯೇ ಇತ್ತು. ಗುರಿಕಾರರಿಗೆ ತಲೆಬಿಸಿಯಾಯಿತು! ‘‘ಇದ್ದಕ್ಕಿದ್ದಂತೆ ಇದೇಕೆ ಹೀಗಾಯಿತೆಂದು ತಿಳಿಸಬೇಕು’’ ಎಂದು ಅವರು ಭೂತದೊಡನೆ ಅರಿಕೆ ಮಾಡಿಕೊಂಡರು. ಭೂತ, ‘‘ಇಂದು ಆನಿದ ಆ ಬೊಳ್ದು ಮೋಣೆದಾಯನ ಪೆಟ್ಟ್ !’’ (ಇದು ಅಂದಿನ ಆ ಬಿಳಿ ಮೋರೆಯವವ ಪೆಟ್ಟು!) ಎಂದು ಗತವರ್ಷದ ಕಟುಪ್ರಹಾರದ ನೆನಪನ್ನು ಬಿಚ್ಚಿತಂತೆ. ನೆರೆದವರು, ನಗಲೂ ಧೈರ್ಯ ಸಾಲದೆ, ‘ಭೂತಕ್ಕೂ ಪೆಟ್ಟು ನಾಟುವುದೆ?’ ಎಂದು ತಮ್ಮ ಮನಸ್ಸಿನಲ್ಲೆ ಎಣಿಸುತ್ತ ಅವಾಕ್ಕಾಗಿ ನಿಂತರಂತೆ.

ಈಗಲೂ ಆ ನಿರ್ದಿಷ್ಟ ಜಾಗದಲ್ಲಿ ಭೂತಾವೇಶವಾದರೆ ಭೂತವು ಕುಂಟುಕಾಲಿನಿಂದಲೇ ನಡೆದಾಡುವ ಪದ್ಧತಿಯಂತೆ!

. ಬಿದಿರಮೆಳೆಯಲ್ಲಿ ಭೂತ!

ಇದೇ ಮಾದರಿಯ ಇನ್ನೊಂದು ಕತೆಯಿದೆ. ತುಳುವಿನಲ್ಲಿ ಗಾದೆಯಂಥ ಒಂದು ಸೊಲ್ಲಿದೆ. ‘‘ಪಟ್ಟೋರಿ ಪತ್ತ್ ಒಕ್ಕೆಲ್, ಯಾನ್ಲಾ ಸೇರ್ದ್ ಪತ್ತೊಂಜಿ ಎನನ್ ಗಿರ್ತ್ ರ್ಲೆ, ನಿಕ್ಲು ಬಲ್ತ್ ರ್ಲೆ!’’ (ಪಟ್ಟೋರಿ ಹತ್ತು ಒಕ್ಕಲು; ನಾನೂ ಸೇರಿ ಹನ್ನೊಂದು. ನನ್ನನ್ನು ಬಿಚ್ಚಿಬಿಡಿ! ನೀವು ಓಡಿಬಿಡಿ! ಕಲ್ಯಾಣಪ್ಪನ ಕಾಟಕಾಯಿಗೆ ಮೊದಲೂ, ಆಮೇಲೂ ‘ಕೊಡಗರ ದಂಡು ಆಗಾಗ ತುಳುನಾಡಿಗಿಳಿದು ಅಲ್ಲಲ್ಲಿ ಲೂಟಿ, ದಾಂಧಲೇ, ಸೂರೆ ಮಾಡುವುದು ಇತ್ತಂತೆ. ಕೆಲವೆಡೆ ಭೂತದ ಪಾರ್ದನದಲ್ಲಿ ಕೊಡಗರ ದಂಡನ್ನು ಸ್ಥಳೀಯ ಭೂತದ ಬಲದಿಂದ ಗೆದ್ದ ವೃತ್ತಾಂತಗಳೂ ಇರುವುದುಂಟು.

‘ಪಟ್ಟೋರಿ’ ಎಂಬಲ್ಲಿ ಒಂದು ದೈವ ನೇಮವಾಗುತ್ತಿತ್ತು. ಇದ್ದಕ್ಕಿದ್ದಂತೆ ‘ಕೊಡಗಿನ ದಂಡು ಬಂತೋ!’’ ಎಂಬ ಗುಲ್ಲೆದ್ದಿತು. ಒಡನೆ ನಾನಾ ವಿಧವಾಗಿ ಊಳಿಡುತ್ತ ಜನ ಕಂಡ ಕಡೆಗೆ ಬಿದ್ದೆದ್ದು ಓಡತೊಡಗಿದರು. ಓಡಲಾಗದ ವೃದ್ಧರ ಫಜೀತಿ ದೇವರಿಗೇ ಪ್ರೀತಿ! ವಾದ್ಯದವರು ವಾದ್ಯಗಳನ್ನು ಕಷ್ಟದಿಂದ ಹೊತ್ತುಕೊಂಡು ಪಲಾಯನ ಮಾಡುವಾಗ ಚೂಪುಮುಳ್ಳಿನ ಪೊದರಿಗೆ ಮುಗ್ಗರಿಸಿ ಬಿದ್ದು ‘ತಾಸೆ’ಯ ಚರ್ಮಕ್ಕೆ ತೂತು ಬಿತ್ತು. ಇದ್ದವರಲ್ಲಿ ಅತ್ಯಂತ ಸಮಸ್ಯೆಗೆ ಸಿಲುಕಿದವನೆಂದರೆ ಬೃಹತ್ತಾದ ಅಣಿಯನ್ನು ಕಟ್ಟಿಕೊಂಡಿದ್ದ ಭೂತನರ್ತಕ. ಅಣಿಯನ್ನು ಒಡನೆಯೇ ಬಿಚ್ಚಿಡುವ ಅವಕಾಶ ಅವನಿಗಾಗಲಿಲ್ಲ. ಜನಜಂಗುಳಿಯಲ್ಲಿ ಗುಲ್ಲೆದ್ದಾಗಲೇ ಅವನ ಮೈಮೇಲೆ ಸವಾರಿಯಲ್ಲಿದ್ದ ಭೂತ ಅವನನ್ನು ನಡುದಾರಿಯಲ್ಲಿ ಬಿಟ್ಟು ಹೇಳದೆ ಕೇಳದೆ ಪರಾರಿಯಾಗಿತ್ತು! ಪಾಪ! ಬಡಪಾಯಿ ಭೂತನರ್ತಕ ‘ಬದುಕಿದರೆ ಬೇಡಿ ತಿಂದೇನೆಂದು ಓಟಕಿತ್ತು, ಒಂದು ಇಕ್ಕಟ್ಟಾದ ದಾರಿಯಲ್ಲಿ ನುಗ್ಗುವಾಗ ಆಚೀಚೆಯ ಬಿದಿರಮೆಳೆಗಳು ಅಡ್ಡ ಬಂದು ಅಣಿ ಅವಕ್ಕೆ ಸಿಲುಕಿಕೊಂಡಿತು. ಅಣಿ ಕಟ್ಟಿಕೊಂಡಾತ ಹಿಂದಕ್ಕೂ ಮುಂದಕ್ಕೂ ತೂಗಿದಂತಾದ! ಯಾವ ಕಡೆಗೆ ಮೀಸುಕಾಡುವುದಕ್ಕೂ ಅವನಿಗೆ ಸಾಧ್ಯವಾಗದಾಯಿತು. ಅಸಹಾಯಕನಾದ ಆತ ಒಂದೇ ಸಮನೆ ಬೊಬ್ಬಿರಿದ. ‘‘ಪಟ್ಟೋರಿಡ್ ಪತ್ತೊಕ್ಕೆಲ್ …’’

ಕೊನೆಗೂ ಕೊಡಗರ ದಂಡು ಆ ಕಡೆಗೆ ಬರಲೇ ಇಲ್ಲ. ಹಬ್ಬಿದ ಸುದ್ದಿ ಸುಳ್ಳಾಗಿತ್ತು! ಭೂತನರ್ತಕ ರಾತ್ರಿಯೆಲ್ಲ ಅಣಿಗೆ ಅಂಟಿಕೊಂಡೇ ಕಾಲವನ್ನು ತಳ್ಳಬೇಕಾಯಿತು. ಮಾರನೆಯ ಬೆಳಗ್ಗೆ ಆ ಕಡೆಯಿಂದ ಹಾದು ಹೋಗುವವರು ದುರವಸ್ಥೆಯನ್ನು ಕಂಡು ಆತನನ್ನು ಆ ಅಣಿಬಂಧನದಿಂದ ವಿಮೋಚನೆಗೊಳಿಸಿದರಂತೆ.

. ದಂಡದ ಹಣ ದೋಟಿಯ ತುದಿಯಲ್ಲಿ!

ಒಮ್ಮೆ ಬಂಟವಾಳ ಪೇಟೆಯ ಬಳಿಯ ದೈವಸ್ಥಾನವೊಂದರಲ್ಲಿ ದೈವನೇಮ ನಡೆಯುತ್ತಿತ್ತು. ದೈವಾವೇಶದ ಅಬ್ಬರ ಶಾಂತವಾಗಿ, ದೈವ ನುಡಿ ಕೊಡುವ ಹಂತದಲ್ಲಿತ್ತು. ನೇಮಕ್ಕೆ ಆಹ್ವಾನಿತರಾಗಿ ಇದಿರಿನ ಸಾಲಿನಲ್ಲೆ ಆಸೀನರಾಗಿದ್ದ ಆಢ್ಯರಲ್ಲಿ ಒಬ್ಬಾತ ಊರಿನ ಪ್ರತಿಷ್ಠಿತ ವ್ಯಾಪಾರಿಯಾಗಿದ್ದ. ದಢೂತಿ ದೇಹದ ಆತನಿಗೆ ವಾಯು ಪ್ರಕೋಪದಿಂದ ಉಲ್ಬಣಿಸುವ ಹೊಟ್ಟೆಯುಬ್ಬರದ ಸಮಸ್ಯೆಯಿತ್ತು. ಕೆಲಮೊಮ್ಮೆ ಅದು ಮುಜುಗರಕ್ಕೂ ಕಾರಣವಾಗುತ್ತಿತ್ತು. ಭೂತದ ಅಭಯಪ್ರದಾನವಾಗುತ್ತಿದ್ದಂತೆ, ಸ್ಥೂಲ ವ್ಯಕ್ತಿಯ ನಿಯಂತ್ರಣವನ್ನು ಮೀರಿ, ಭಾರೀ ಅಧೋವಾಯುವೊಂದು ಸಶಬ್ದವಾಗಿ ಸಿಡಿದೇ ಬಿಟ್ಟಿತು! ವಾದ್ಯ ಘೋಷವಿರುತ್ತಿದ್ದರೆ ಅದು ಅಷ್ಟಾಗಿ ಪ್ರಕಟವಾಗದೆ ಆ ವಾದ್ಯನಾದದಲ್ಲಿ ಲೀನವಾಗಿ ಹೋಗುತ್ತಿತ್ತು. ಆದರೆ, ಭೂತ ಗಂಭೀರವಾಗಿ ನುಡಿಕೊಡುತ್ತಿದ್ದುದರಿಂದ ಅಲ್ಲೆಲ್ಲ ನಿಶ್ಯಬ್ದತೆ ವ್ಯಾಪಿಸಿತ್ತು. ಹಾಗಾಗಿ ಆ ಅಪಾನ ವಾಯುವಿನ ಆರ್ಭಟ ಎಲ್ಲರ ಕಿವಿಗೂ ಅಪ್ಪಳಿಸಿತು!

ನುಡಿಕೊಡುತ್ತಿದ್ದ ಭೂತ ಒಂದು ಕ್ಷಣ ತಬ್ಬಿಬ್ಬಾಗಿ ಚಡಪಡಿಸಿತು. ಮರುಕ್ಷಣದಲ್ಲೆ ಉಗ್ರವಾದ ಕ್ರೋಧದಿಂದ ಕಂಪಿಸಿ ಆರ್ಭಟಿಸಿತು. ತನ್ನ ಸಮಕ್ಷಮದಲ್ಲೆ ಇಂಥ ಅಪಚಾರವೆಸಗಿದ್ದು ಅಕ್ಷಮ್ಯ ದಂಡನೀಯ ಮಹಾಪರಾಧವೆಂದೂ, ಅದಕ್ಕಾಗಿ ಸದ್ರಿ ವ್ಯಕ್ತಿ ನಿರ್ದಿಷ್ಟ ಮೊತ್ತದ ದಂಡ ತೆರಬೇಕೆಂದೂ ಘೋಷಿಸಿತು. ಸ್ಥೂಲಕಾಯ ನಾಚಿಕೆ, ಪಶ್ಚಾತ್ತಾಪಗಳಿಂದ ಕುಗ್ಗಿಹೋಗಿದ್ದ, ತಾನು ಉದ್ದೇಶಪೂರ್ವಕವಾಗಿಯೋ, ಉದ್ಧಟತನದಿಂದಲೊ, ಮಾಡಿದ ಕೆಲಸವಲ್ಲ, ಪ್ರಮಾದವಶಾತ್ ಆಗಿಹೋದ ತಪ್ಪು ಎಂದು ಎಷ್ಟೇ ಹೇಳಿಕೊಂಡರೂ ಭೂತಕ್ಕೆ ಕರುಣೆ ಉಂಟಾಗದಾಯಿತು. ದಂಡ ಕಟ್ಟಿಯೇ ತೀರಬೇಕೆಂದು ಅದು ತೀರ್ಮಾನ ಕೊಟ್ಟಿತು. ನಿರುಪಾಯನಾದ ‘ಅಪರಾಧಿ’ ಅತ್ಯಂತ ಬೇಸರದಿಂದ ತನ್ನ ಗ್ರಹಚಾರವನ್ನು ದೂರುತ್ತಾ ನೇಮದ ಕಳದಿಂದ ಇಳಿದು ಹೋದ.

ಮುಂದಿನ ವರ್ಷದ ನೇಮದಂದು ಅದೇ ವ್ಯಕ್ತಿ ಮತ್ತೆ ಬಂದಿದ್ದ. ಇದಿರಿನ ಆಸನವನ್ನೆ ಅಲಂಕರಿಸಿದ್ದ. ನೇಮದಲ್ಲಿದ್ದ ಭೂತ ಆತನ ಉಪಸ್ಥಿತಿಯನ್ನು ಒಡನೆ ಗಮನಿಸಿ, ‘‘ದಂಡ ಕಾಣಿಕೆ ತಂದಿದ್ದೀಯಾ?’’ ಎಂದು ಪ್ರಶ್ನಿಸಿತು. ವ್ಯಕ್ತಿ, ‘‘ತಂದಿದ್ದೇನೆ, ಅದನ್ನೆ ಅರಿಕೆ ಮಾಡಬೇಕೆಂದಿದ್ದೆ. ಸ್ವೀಕರಿಸಿ ಕಾಪಾಡಬೇಕು!’’ ಎಂದು ತನ್ನೊಡನೆ ತಂದಿದ್ದ ಒಂದು ತಕ್ಕಷ್ಟು ಉದ್ದವಾದ ಬಿದಿರಗಳವನ್ನು ಎತ್ತಿ ಹಿಡಿದ. ಭೂತವೂ ಸೇರಿದಂತೆ ಎಲ್ಲರೂ ಅದರತ್ತ ದೃಷ್ಟಿ ಹಾಯಿಸಿದರು. ಗಳದ ತುದಿಯಲ್ಲಿ ಒಂದು ಚಿಕ್ಕ ಬಟ್ಟೆಯ ಗಂಟು ನೇತಾಡುತ್ತಿತ್ತು.

‘‘ಇದೇನಿದು? ಎಲ್ಲಿದೆ ದಂಡದ ಹಣ?’’ ಎಂದು ವಿಚಾರಿಸಿತು, ತುಸು ಗಲಿಬಿಲಿಗೊಂಡ ಭೂತ. ವ್ಯಕ್ತಿ ಕಿರುನಗುತ್ತಾ ಸಾವಧಾನವಾಗಿ ‘‘ಪೂಕಿದ ಪಣವು ದೋಂಟಿದ ತರೆಟ್!’’ (ಅಧೋವಾಯುವಿನ ಹಣ ಗಳದ ತುದಿಯಲ್ಲಿ!) ಎಂದು ಹಣದ ಪೊಟ್ಟಣವನ್ನು ತೋರಿಸಿದ. ‘‘ಸರ್ವಶಕ್ತವಾದ ಭೂತ ಅದನ್ನು ಒಪ್ಪಿಸಿಕೊಳ್ಳಬೇಕು!’’ ಎಂದೂ ಹೇಳಿದ. ಭೂತ ಒಂದೆರಡು ಬಾರಿ ತುದಿಗಾಲಲ್ಲಿ ನಿಂತು ಗಳದ ತುದಿಯಲ್ಲಿ ತೂಗುತ್ತ ಅಣಕಿಸುವಂತಿದ್ದ ಹಣದ ಗಂಟನ್ನು ಎಟಕಿಸಿಕೊಳ್ಳಲು ಯತ್ನಿಸಿ ವಿಫಲವಾಯಿತು.

ಈ ಗಂಭೀರ ಸನ್ನಿವೇಶದಲ್ಲೂ ಕೆಲವರಿಗೆ ನಗು ಬಾರದಿರಲಿಲ್ಲ. ಭೂತಕ್ಕೂ ಬೆವರೊಡೆದಿರಬೇಕು! ಕಳದಲ್ಲಿ ಕಲರವ ತೊಡಗಿತು. ದಂಡವನ್ನು ಕೈಯಾರೆ ಎಲ್ಲರ ರೀತಿಯಲ್ಲಿ ಒಪ್ಪಿಸಲು ಸ್ಥೂಲಕಾಯ ಸಿದ್ಧನಿರಲಿಲ್ಲ. ತನಗಾದ ಅಪಮಾನಕ್ಕೆ ಆತ ಪ್ರತೀಕಾರವನ್ನು ಬಗೆದಂತಿತ್ತು. ಕೊನೆಗೂ ಭೂತ ರಾಜಿಸೂತ್ರಕ್ಕೆ ಒಡಂಬಡಲೇ ಬೇಕಾಯಿತು. ಕಳೆದ ವರ್ಷ ಆ ವ್ಯಕ್ತಿಗೆ ವಿಧಿಸಲಾದ ದಂಡವನ್ನು ಮನ್ನಾ ಮಾಡಲಾಯಿತು. ಆತ ದೋಟಿಯ ತುದಿಯ ಗಂಟನ್ನು ಬಿಚ್ಚಿ, ದುಡ್ಡನ್ನು ಕಿಸೆಗಿಳಿಸಿಕೊಂಡು ‘ಬಿಟ್ಟಿ’ಯಾಗಿ ‘ಬೂಳ್ಯ’ವನ್ನು ತೆಗೆದುಕೊಂಡು ತನ್ನ ಮನೆಯ ಕಡೆ ನಡೆದ.

ಪರಾಮರ್ಶನ ಸಾಹಿತ್ಯ

೧. ಪ್ರೊ. ಬಿ.ಲೀಲಾಭಟ್, ಭೂತನಾಗರ ನಡುವೆ,  ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ., ೧೯೮೧

೨. ಡಾ. ಕೆ.ಚಿನ್ನಪ್ಪಗೌಡ, ಜಾಲಾಟ, ಚಿಂತನ ಪ್ರಕಾಶನ, ಶ್ರೀಧಮ ಕಾಲೇಜು ಉಜಿರೆ, ದ.ಕ., ೧೯೮೫

೩. ಡಾ. ಕೆ.ಚಿನ್ನಪ್ಪಗೌಡ, ಭೂತಾರಾಧನೆಜಾನಪದೀಯ ಅಧ್ಯಯನ, ೧೯೯೦

೪. Dr. Sharaschandra, The folk Drama of Caylon.

೫. ಪ್ರೊ. ಎ.ವಿ.ನಾವಡ, ಕಾಡ್ಯನಾಟ, ಪಠ್ಯ ಮತ್ತು ಪ್ರದರ್ಶನ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ

೬. ಕುಕ್ಕಿಲ ಕೃಷ್ಣ ಭಟ್ಟ, ಯಕ್ಷಗಾನ ದೃಶ್ಯಪ್ರಯೋಗದ ಶಾಸ್ತ್ರೀಯತೆ, ಕುಕ್ಕಿಲ ಸಂಪುಟ  ಕರ್ನಾಟಕ ಸಂಘ, ಪುತ್ತೂರು ದ.ಕ., ೧೯೯೮

೭. ಪ್ರೊ.ಎಸ್.ಕೆ.ರಾಮಚಂದ್ರ ರಾವ್, ಮೂರ್ತಿಶಿಲ್ಪ, ನೆಲೆಹಿನ್ನೆಲೆ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ೧೯೭೫

೮. ಡಾ.ರಾಮಚಂದ್ರದೇವ, ಮುಚ್ಚು ಮತ್ತು ಇತರ ಲೇಖನಗಳು, ಗ್ರಂಥಾವಳಿ, ಶ್ರೀನಗರ, ಬೆಂಗಳೂರು, ೧೯೯೪

ಮಾಹಿತಿ ಒದಗಿಸಿದವರು : ಡಾ.ಅಶೋಕ ಆಳ್ವ, ಉಡುಪಿ, ಎಸ್.ಕೃಷ್ಣರೈ ಸೇರ್ತಾಜೆ, ನವೀನಕುಮಾರ ಮರಿಕೆ, ಪುತ್ತೂರು