ತುಳುನಾಡಿನ ಮುಖ್ಯದೈವಗಳಲ್ಲಿ ಒಂದಾದ ಜುಮಾದಿ ಗಂಡೋ ಹೆಣ್ಣೋ? ಹಾಗೆಯೆ ಮಲರಾಯ. ಕೊಡಮಣಿತಾಯ, ಪಂಜಂತಾಯ ಎಂದು ಪುರುಷವಾಚಕವಾಗಿ ಕರೆಯಿಸಿಕೊಳ್ಳುವ ದೈವಗಳು ನಿಜದಲ್ಲಿ ಪುರುಷದೈವಗಳೋ ಅಥವಾ ಸ್ತ್ರೀದೈವಗಳೋ ಎಂಬ ಪ್ರಶ್ನೆ ಒಮ್ಮೊಮ್ಮೆ ಇದಿರಾಗುವುದುಂಟು. ಕೆಲವು ಕಡೆ ಕೊಡಮಣಿತಾಯಿ ಉಳ್ಳಾಲ್ತಿ, ರುದ್ರಚಾಮುಂಡಿ ಮೊದಲಾದ ಸ್ತ್ರೀದೈವಗಳ ‘ಮೊಗ’ (ಮುಖವಾಡ)ಗಳಲ್ಲಿ ಮೀಸೆಯ ಅಂಕಿತ ಇರುವುದುಂಟು. ಪುರುಷತ್ವ ಸೂಚಕವಾದ ಮೀಸೆಯ ಚಿಹ್ನೆ ಸ್ತ್ರೀದೈವಗಳ ಪ್ರತೀಕಗಳಲ್ಲೇಕಿದೆ ಎಂದು ಕೆಲವರಿಗೆ ಸಹಜವಾಗಿಯೆ ಗೊಂದಲವುಂಟಾಗ ಬಹುದು. ಇದರ ಔಚಿತ್ಯವನ್ನು ಪ್ರಶ್ನಿಸಿದವರೂ ಇದ್ದಾರೆ. ಈ ವಿಚಾರದಲ್ಲಿ ಒಂದಿಷ್ಟು ಪರಿಶೀಲನೆಯ ಅಗತ್ಯವಿದೆ.

ದೈವಾರಾಧನೆಯ ಪ್ರಸ್ಥಾನದಲ್ಲಿ ಹಲವು ಮೂಲಗಳಿಂದ ಬಂದ ವಿವಿಧ ದೈವಗಳ ವರ್ಗವಿದೆ. ಪುರಾಣ ಮೂಲ, ಮನುಷ್ಯ ಮೂಲ, ಪ್ರಾಣಿಮೂಲ ಇತ್ಯಾದಿ. ಮನುಷ್ಯ ಮೂಲದಿಂದ ಬಂದು ಭೂತತ್ವಕ್ಕೇರಿದವರ ಲಿಂಗವಿಚಾರದಲ್ಲಿ ಸಂಧಿಗ್ಧಗಳಿಲ್ಲ. ಉದಾ: ತನ್ನಿಮಾನಿಗ, ಕಲ್ಲುರ್ಟಿ, ಮಾಯಂದಾಳ್ ದೈವಗಳನ್ನು ಸ್ತ್ರೀದೈವಗಳೆಂದೂ, ಕೊರಗತನಿಯ, ಕೋಡದಬ್ಬು, ಕೋಟಿ ಚೆನ್ನಯ -ಇವರನ್ನು ಪುರುಷದೈವಗಳೆಂದೂ ಸರಿಯಾಗಿಯೇ ಗುರುತಿಸುತ್ತಾರೆ. ಪ್ರಾಣಿಮೂಲದ ಪಂಜುರ್ಳಿ, ಮೈಸಂದಾಯ ಪಿಲಿಭೂತ ಇತ್ಯಾದಿಗಳನ್ನು ಸಾಮಾನ್ಯವಾಗಿ ಪುರುಷರೂಪದಲ್ಲೆ ಕಲ್ಪಿಸುತ್ತಾರೆ. ಮನುಷ್ಯಮೂಲವಲ್ಲದ, ವೈದಿಕ ಅಥವಾ ಜನಪದ ಪುರಾಣಮೂಲದ್ದೆನ್ನಲಾದ ಕೆಲವು ದೈವಗಳ ವಿಚಾರವಾಗಿ ಮಾತ್ರ ಕೆಲವೊಮ್ಮೆ ಇಂಥ ಸಂಧಿಗ್ಧತೆ ಒದಗುತ್ತದೆ.

ಎಲ್ಲೋ ಕೆಲವೊಮ್ಮೆ ಅಜ್ಞಾನವಶದಿಂದ ಅಥವಾ ಪ್ರಮಾದವಶಾತ್ ಕೆಲವು ದೈವದೇವತೆಗಳ ವಿಚಾರವಾಗಿ ಕೆಲವು ಅಪಕಲ್ಪನೆಗಳು ಬರುವ ಸಾಧ್ಯವಿದ್ದರೂ ಎಲ್ಲ ಸಂದರ್ಭಗಳಲ್ಲೂ ಅಜ್ಞಾನ ಕಾರಣವಾಗಬೇಕಿಲ್ಲ. ಲೋಹಶಿಲ್ಪಿಗಳು ಕೇವಲ ತಪ್ಪು ತಿಳುವಳಿಕೆಯಿಂದ ಅಥವಾ ಚೇಷ್ಟೆಗಾಗಿ ಜುಮಾದಿ, ಕೊಡಮಣಿತ್ತಾಯಿ, ಉಳ್ಳಾಲ್ತಿ ಮೊದಲಾದ ದೈವಗಳ ಮುಖವಾಡಗಳಲ್ಲಿ ಮೀಸೆ ಮೂಡಿಸಿದರೆನ್ನುವಂತಿಲ್ಲ. ಮೇಲಿನ ದೈವಗಳಲ್ಲಿ ಉಳ್ಳಾಲ್ತಿ ಎಂಬುದಾದರೂ ಸ್ತ್ರೀದೈವ ಎಂದು ತಿಳಿಯದ ಜನಪದರು ಯಾರು? ಜುಮಾದಿಯಂಥ ಕೆಲವು ದೈವಗಳ ಪೀಠದಲ್ಲಿ ಲೋಹದ ಮೊಲೆಗಟ್ಟು ಇರುವುದುಂಟು. ಒಂದೇ ದೈವಕ್ಕೆ ಮೀಸೆ ಮೂಗುತಿ ಮತ್ತು ಮೊಲೆಗಟ್ಟುಗಳನ್ನು ಕಲ್ಪಿಸಿದ ಉಪಾಸಕರ ಅಥವಾ ಕಲಾವಿದರ ಆಶಯವನ್ನು ಬೇರೆಯೇ ರೀತಿಯಲ್ಲಿ ಅರ್ಥವಿಸುವ ಪ್ರಯತ್ನ ಮಾಡಬೇಕಾಗುತ್ತದೆ.

ಅರ್ಧನಾರೀಶ್ವರ ಕಲ್ಪನೆ ವೈದಿಕ ಆರಾಧನಾರಂಗದಲ್ಲಿ ಇದೆಯಷ್ಟೆ? ಭಾರತದ ಶಿಲ್ಪಕೃತಿಗಳಲ್ಲಿ ಅರ್ಧನಾರೀಶ್ವರ ಕಲ್ಪನೆಯ ವಿಗ್ರಹಗಳು ಸಾಕಷ್ಟು ಕಾಣಸಿಗುತ್ತವೆ. ಪಾಣಿಪೀಠ ಸಹಿತ ಶಿವಲಿಂಗವನ್ನು ಶಿವಶಕ್ತಿಯರ ಸಂಗಮ ಪ್ರತೀಕವೆಂದು ತಿಳಿಯಲಾಗಿದೆ. ಅವೈದಿಕ ಎಂದು ತಿಳಿಯಲಾದ ನಾಗಾರಾಧನೆಯಲ್ಲೂ ಈ ಅರ್ಧನಾರೀ ಕಲ್ಪನೆ ಇರುವಂತಿದೆ. ನಾಗಮಂಡಲ ಕ್ರಿಯಾಚರಣೆಯಲ್ಲಿ ‘ವೈದ್ಯ ನರ್ತಕರು ಅರ್ಧನಾರೀ ಸ್ವರೂಪಕ್ಕೆ ಒಪ್ಪುವ ತೊಡುಗೆ ತೊಡುತ್ತಾರೆ. ನಾಗದೇವತೆಯಲ್ಲೂ ನಾಗಯಕ್ಷ-ನಾಗಯಕ್ಷಿ ಎಂಬ ಭೇದಗಳಿವೆ. ಆದರೆ ಸಾಮಾನ್ಯವಾಗಿ ಪುರುಷದೈವತ ಎಂಬಂತೆ ನಾಗನನ್ನು ಕಾಣಲಾಗುತ್ತದೆ.

\ರುಪತಿಯ ದೇವರ ಮೂಲಸ್ವರೂಪದ ಬಗೆಗೆ ಹಲವಾರು ಕಲ್ಪನೆಗಳಿವೆ. ಅವುಗಳಲ್ಲಿ ಒಂದು ಕಲ್ಪನೆಯಂತೆ ಆ ವಿಗ್ರಹ ಸ್ತ್ರೀ ರೂಪದ್ದಾಗಿದೆ. ಆ ದೇವರಿಗೆ ಬಾಲಾ (ಬಾಲಾಜಿ) ಎಂಬ ಹೆಸರು ಇರುವುದರಿಂದ ಈ ಊಹೆ ಮಾಡಲಾಗಿದೆ. ಯಕ್ಷಗಾನದ ಶ್ರೀಕೃಷ್ಣನಿಗೆ ಸ್ತ್ರೀಲೋಲುಪತೆಯನ್ನು ಕಲ್ಪಿಸಿ ಮೂಗಿಗೆ ಬುಲಾಕನ್ನು ತೊಡುವುದಿತ್ತೆಂದು ತಿಳಿದುಬರುತ್ತದೆ. ಶ್ರೀಕೃಷ್ಣನ ವಿಗ್ರಹವನ್ನು ಕೆಲವೊಮ್ಮೆ ‘ಸ್ತ್ರೀ ದೇವತೆಗಳಿಗೆ ತೊಡಿಸುವ ತೊಡುಗೆಗಳಿಂದ ಅಲಂಕರಿಸುವುದಿದೆ.

ಕೇರಳದ ತೆಯ್ಯಂ ಸಂಪ್ರದಾಯದಲ್ಲಿ ತೀರಾ ವಿರಳವಾಗಿ ಕೆಲವು ಸ್ತ್ರೀ ದೈವಗಳಿಗೆ ಮೀಸೆಯ ಸಂಕೇತ ಇರುವುದಿದೆ. ವಿಷ್ಣುಮೂರ್ತಿ ಚಾಮುಂಡಿ ಎಂಬ ಮಲೆಯಾಳ ಸಂಪ್ರದಾಯದ ದೈವದ ಪಾತ್ರಿಯು ಉತ್ಸವದ ವೇಳೆ ಸ್ತ್ರೀದೈವಕ್ಕೆ ಕಟ್ಟುವಂಥ ಶಿರೋವಸ್ತ್ರವನ್ನು, ಭಗವತಿಯಂಥ ಸ್ತ್ರೀದೈವ ಧರಿಸುವ ವಕ್ರವಿನ್ಯಾಸದ ಆಯುಧವನ್ನು ಧರಿಸುವುದುಂಟು. ‘ಚಾಮುಂಡಿ’ ಎಂಬ ಸ್ತ್ರೀ ಅಂಶ ಇರುವುದರಿಂದ ಈ ಪದ್ಧತಿ ರೂಢಿಗೆ ಬಂದಿರಬೇಕು.

‘ಜುಮಾದಿ’ಗೆ ‘ಧೂಮ(ಮಾ)ವತಿ’ ಎಂಬ ಪುರಾಣ ದೇವಿಯೇ ಮೂಲವೆಂದು ಹೇಳಲಾಗಿದೆ. ‘ಧೂಮವತಿ’ ಸ್ತ್ರೀ ದೇವತೆ ಎಂಬುದು ಸುವ್ಯಕ್ತವಾಗಿದ್ದರೂ ಜುಮಾದಿ ದೈವದ ಕೆಲವು ಪಾಡ್ದನಗಳಲ್ಲಿ ಆ ದೈವದ ಸ್ವರೂಪವನ್ನು ವರ್ಣಿಸುವಾಗ ‘ವಕ್ಕೊಡ್ಡು ಮಿತ್ತ್ ಪೊಣ್ಣ ಒರು, ವಕ್ಕೊಡ್ಡು ತಿರ್ತ್ ಆಣ ಒರು’’ (ಸೊಂಟದಿಂದ ಮೇಲಕ್ಕೆ ಹೆಣ್ಣು ರೂಪ, ಸೊಂಟದಿಂದ ಕೆಳಕ್ಕೆ ಗಂಡು ರೂಪ) ಎಂಬ ಉಲ್ಲೇಖ ಬರುತ್ತದೆ. ಜುಮಾದಿ ದೈವವನ್ನು ಯಾವ ಆಕೃತಿಯಲ್ಲಿ ಕಲ್ಪಿಸಿದರೆಂದು ಇದರಿಂದ ನಿಚ್ಚಳವಾಗಿ ವಿದಿತವಾಗುತ್ತದೆ. ಅರ್ಧನಾರೀತ್ವ ಅಥವಾ ಉಭಯಲಿಂಗಿತ್ವದ ಆಶಯವನ್ನು ಇಂಥಲ್ಲಿ ಕಾಣಬಹುದು.

ಅತಿಮಾನುಷ ಪ್ರಕೃತಿಯ ದೈವಗಳ ಹುಟ್ಟು, ತಂದೆ ತಾಯಿಗಳ ವಿಚಾರ ಕೆಲವೊಮ್ಮೆ ವಿಚಿತ್ರ ರೀತಿಯಲ್ಲಿ ಪ್ರಸ್ತಾಪಿತವಾಗುವುದುಂಟು. ಜುಮಾದಿ ದೈವದ ಹಲವು ಸ್ವರೂಪಗಳಲ್ಲಿ ಒಂದಾದ ‘ಪಂಚಜುಮಾದಿ’ಯ ಪಾಡ್ದನಗದಲ್ಲಿ ಆ ದೈವವು ಸೂರ್ಯ ನಾರಾಯಣ ದೇವರ ಮಗಳೆಂದು ಸೂಚಿತವಾಗಿದೆ. ವಿಶೇಷವೆಂದರೆ ಸೂರ್ಯದೇವರನ್ನು ತಂದೆ ಎಂದು ಹೇಳದೆ, ತಾಯಿ (ಅಪ್ಪೆರ್) ಎಂದೇ ಹೇಳಿದೆ. ಎಂದರೆ ತಂದೆಯೂ ತಾಯಿಯೂ ಸೂರ್ಯದೇವರು ತಾನೆ ಆಗಿರುವ ಚೋದ್ಯವನ್ನಿಲ್ಲಿ ನೋಡಬಹುದು.

ಫಲಜ್ಯೋತಿಷ್ಯದಲ್ಲಿ ನವಗ್ರಹಗಳಿಗೆ ಭಿನ್ನ ಭಿನ್ನ ಸ್ವರೂಪ, ಸ್ವಭಾವ, ಕಾರಕತ್ವಗಳನ್ನು ಆರೋಪಿಸಿದ್ದಾರೆ. ಅದರಂತೆ ರವಿ, ಬುಧ ಗುರು ಗ್ರಹಗಳನ್ನು ಪುರುಷಗ್ರಹಗಳೆಂದೇ ಪರಿಗಣಿಸುತ್ತಾರೆ. ಉಳಿದ ಗ್ರಹರಿಗೆ ಸಂದರ್ಭಾನುಸಾರ ಬೇರೆ ಬೇರೆ ಕಾರಕತ್ವ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯ ಪ್ರಶ್ನಾಸಂದರ್ಭದಲ್ಲಿ ದೈವ ದೇವರುಗಳನ್ನು ನವಗ್ರಹಗಳಲ್ಲಿ ಬೇರೆ ಬೇರೆ ಗ್ರಹಗಳು ಪ್ರತಿನಿಧಿಸುತ್ತವೆ. ಚಂದ್ರ, ಮಂಗಳ, ಶುಕ್ರರು ಕೆಲವು ವೈದಿಕ ಹಾಗೂ ಜನಪದ ದೇವಿಯರನ್ನು ಸಂಕೇತಿಸುತ್ತಾರೆ. ಶನಿಯನ್ನು ಸಾಮಾನ್ಯವಾಗಿ ಪುರುಷಗ್ರಹವೆಂದೇ ತಿಳಿಯಲಾಗಿದ್ದರೂ ಚಾಮುಂಡಿ, ಕಲ್ಲುರ್ಟಿ ಮುಂತಾದ ಉಗ್ರಸ್ವರೂಪದ ಸ್ತ್ರೀದೈವಗಳನ್ನು ಶನಿಗ್ರಹವೇ ಪ್ರತಿನಿಧಿಸುತ್ತದೆ.

ಪುರುಷ ದೈವತಗಳಿಗೆ ಸಂಬಂಧಿಸಿ ಅಥವಾ ಸಂವಾದಿಯಾಗಿ ಸ್ತ್ರೀ ಶಕ್ತಿಗಳನ್ನು ಕಲ್ಪಿಸಿರುವುದು ಪ್ರಸಿದ್ಧವಾಗಿದೆ. ಉದಾ : ಶಿವ-ಶಕ್ತಿ ಕುಮಾರ-ಕೌಮಾರೀ, ವರಾಹ-ವಾರಾಹಿ, ನರಸಿಂಹ-ನಾರಸಿಂಹಿ, ಇಂದ್ರ-ಇಂದ್ರಾಣಿ, ವಿಷ್ಣು-ವೈಷ್ಣವೀ, ಗಣೇಶ-ಗಣೇಶಾನಿ ಇತ್ಯಾದಿ. ಅದರಂತೆ ಸ್ತ್ರೀದೈವತಗಳಿಗೆ ಕೆಲವೊಮ್ಮೆ ಪುರುಷ ಅಂಶವನ್ನೋ, ಶಕ್ತಿಯನ್ನೋ, ಸಂಕೇತವನ್ನೋ ಕಲ್ಪಿಸುವುದು ಆಶ್ಚರ್ಯದ ಮಾತಲ್ಲ. ಈ ದೈವಗಳು ಸಾಮಾನ್ಯವಾಗಿ ಆಯುಧಪಾಣಿಗಳಾದ ಸಮರದೇವತೆಗಳಾಗಿ, ಶೌರ್ಯ ಪ್ರಧಾನವಾದ ಜಾಯಮಾನವನ್ನು ಪ್ರಕಟಿಸುವುದರಿಂದ ಪೌರುಷದ ಪ್ರತೀಕವಾದ ಮೀಸೆಯನ್ನು ಮುಖವಾಡದಲ್ಲಿ ಕಾಣಿಸಲು ಕಾರಣವೆನ್ನಬೇಕಾಗಿದೆ. ಹಾಗಿದ್ದರೂ ‘ದೈವಕ್ಕೆ ಕಟ್ಟು’ವಾಗ ಮೀಸೆ ಕಟ್ಟಬೇಕೆಂದೇನೂ ಇಲ್ಲ. ಹಾಗೆಯೆ, ಸ್ತ್ರೀದೈವಗಳೆಂದು ಖಚಿತಗೊಂಡಿರುವ ದೈವಗಳ ವೇಷಕ್ಕೂ, ಕೇರಳದ ಸ್ತ್ರೀದೈವಗಳಂತೆ ಮೊಲೆಗಟ್ಟು ಕಟ್ಟುವುದೇನೂ ಕಡ್ಡಾಯವಲ್ಲ.

ದೈವಬಿಂಬಗಳು, ಮುಖವಾಡ, ವೇಷವಿನ್ಯಾಸ ಇತ್ಯಾದಿಗಳು ಆಯಾ ದೈವಗಳ ವಾಸ್ತವಿಕ ಪ್ರತಿಕೃತಿಗಳಿಲ್ಲ. ಪ್ರತಿಕೃತಿಗೂ ಪ್ರತಿಮೆಗೂ ತುಂಬಾ ವ್ಯತ್ಯಾಸವಿದೆ. ಪ್ರತಿಮೆ ಅಥವಾ ಪ್ರತೀಕ ಭಾವ ಪ್ರಪಂಚಕ್ಕೆ ಸಂಬಂಧಪಟ್ಟದ್ದು. ಅಲ್ಲಿನ ಕಲ್ಪನೆಗಳಿಗೆ ಮೂರ್ತ ಸ್ವರೂಪ ನೀಡುವ ಆಲೋಚನಾವಿಧಾನ, ಆಶಯಗಳೇ ಪ್ರತ್ಯೇಕ. ಸಾಂಕೇತಿಕತೆ ತುಂಬಿರುವ, ವೈಭವೀಕರಣದ ಜಾಯಮಾನವಿರುವ ಹಾಗೂ ಭ್ರಮಾತ್ಮಕ ಆವರಣವನ್ನು ಕಲ್ಪಿಸುವ ದೈವಾರಾಧನೆಯಿಂದ ಆರಾಧನಾ ರಂಗದಲ್ಲಿ ವಾಸ್ತವಿಕತೆಯನ್ನು ನಿರೀಕ್ಷಿಸುವುದು ಸಂಗತವಾಗುವುದಿಲ್ಲ. ಪ್ರಾಚೀನ ವೈದಿಕ ದೇವತೆಗಳ ಸಮೂಹದಲ್ಲೂ ಅವೈದಿಕ ದೈವಗಳ ಬಳಗದಲ್ಲೂ ಅವಾಸ್ತವ ಪ್ರಕೃತಿಯ, ವಿಚಿತ್ರ ಸ್ವರೂಪಗಳ ಕಲ್ಪನೆಯನ್ನು ಕಾಣಬಹುದು. ದೈವದೇವತೆಗಳ ಧ್ಯಾನಶ್ಲೋಕಗಳು ಅದ್ಭುತ ವೈಚಿತ್ರ್ಯವುಳ್ಳವುಗಳಾಗಿವೆ. ಇಂಥಲ್ಲಿ ಭಾವಪ್ರತೀಕಕ್ಕೆ ಮಹತ್ವ ಹೊರತು ಬರಿಯ ನೈಜತೆಗಲ್ಲ. ಈ ದೃಷ್ಟಿಯಿಂದ ದೈವಗಳ ಪ್ರತಿಮಾ ಕಲ್ಪನೆ ಹಾಗೂ ವೇಷವಿಧಾನವನ್ನು ಅವಲೋಕಿಸಬೇಕಾಗಿದೆ. ಕೊಡಮಣಿತಾಯಿ, ಜುಮಾದಿ ಇತ್ಯಾದಿ ದೈವಗಳ ಉಭಯಲಿಂಗಿ ಜಾಯಮಾನವನ್ನು ಇದೇ ಬಗೆಯಾಗಿ ಪರಿಭಾವಿಸಬೇಕಾಗಿದೆ.

ಅನೇಕ ದೈವಾರಾಧಕರಲ್ಲೂ, ಕೆಲವರು ವೃತ್ತಿನಿರತ ದೈವನರ್ತಕರಲ್ಲೂ ಕೆಲವು ದೈವಗಳ ಲಿಂಗವಿಚಾರದಲ್ಲಿ ನಿಖರವಾದ ಅಭಿಪ್ರಾಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. (ಮಂಗಳೂರು ವಿಶ್ವವಿದ್ಯಾನಿಲಯದ ತುಳುಪೀಠದ ವತಿಯಿಂದ ೧೯೯೩ರಲ್ಲಿ ಏರ್ಪಡಿಸಿದ್ದ ‘ಭೂತಾರಾಧನೆಯ ಬಣ್ಣಗಾರಿಕೆಯ ಕಮ್ಮಟ’ದಲ್ಲಿ, ಜುಮಾದಿ, ಮಲರಾಯ,(ಯಿ), ಕೊಡಮಣಿತ್ತಾಯ(ಯಿ), ಪಂಜುರ್ಳಿ, ಶಿರಾಡಿ ಭೂತ ಮೊದಲಾದ ದೈವಗಳ ಲಿಂಗವಿಚಾರ ದಲ್ಲಿ ಭೂತಕ್ಕೆ ಕಟ್ಟುವ ಕಲಾವಿದರಲ್ಲಿ ಪ್ರಶ್ನಿಸಿದಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿದ್ದುಂಟು. ಕೆಲವರಿಗೆ ಈ ವಿಚಾರದಲ್ಲಿ ಒಂದಿಷ್ಟು ಗೊಂದಲವಿದ್ದಂತಿತ್ತು. ಸ್ತ್ರೀದೈವಗಳನ್ನು ಕೆಲವರು ಪುರುಷದೈವಗಳೆಂದೇ ತಿಳಿದಂತಿತ್ತು.)

ಈ ತೆರನಾದ ಕೆಲವು ದೈವಗಳ ಸ್ತ್ರೀ-ಪುರುಷ ಸಂಕೇತಗಳ ಬಗೆಗೆ ಡಾ.ಚಿನ್ನಪ್ಪ ಗೌರವ ಅಭಿಪ್ರಾಯ ಇಂತಿದೆ.

‘‘ಮಲರಾಯಿಯಂತಹ ಒಂದು ಭೂತವು ಮೊಲೆಕಟ್ಟು ಧರಿಸುವುದನ್ನು ಗಮನಿಸಿದರೆ ಅದು ಹೆಣ್ಣು ಭೂತ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಜನರು ‘ಮಲರಾಯೆ’ ಎಂದು ಕರೆಯುತ್ತಾರೆ. ಈ ಪದದಲ್ಲಿ ತುಳುವಿನ ಪುಲ್ಲಿಂಗಸೂಚಕ ಪ್ರತ್ಯಯದ ‘ಎ’ ಸ್ವರ ಬಂದಿದೆ. ಇದೇ ಭೂತವು ಪುರುಷರ ಸಂಕೇತವಾಗಿರುವ ಮೀಸೆಯ ವಿನ್ಯಾಸವಿರುವ ಮುಖವಾಡವನ್ನು ಕಟ್ಟಿಕೊಳ್ಳುತ್ತದೆ. ಇದೇ ರೀತಿಯಲ್ಲಿ ಅಂಗಣತ್ತಾಯ, ಅಡ್ಕತ್ತಾಯ, ಅಡಿಮಣಿತ್ತಾಯ, ಉರಿಯಡಿತ್ತಾಯ, ಬರ್ಮುಗೊತ್ತಾಯ, ಬಿರ್ಮುಲ್ತಾಯ, ಒಡಿಲ್ತಾಯ, ಕನಪಡಿತ್ತಾಯ, ಕನಲ್ಲಾಯ, ಕಲ್ಲೇರಿತ್ತಾಯ, ಕುಕ್ಕಿನಂತಾಯ, ಕುದುರುಮುಲ್ದಾಯ, ಕೇತುರ್ಲಾಯ, ಕೊಡಂಗೆತ್ತಾಯ, ಕೊಡಮಣಿತ್ತಾಯ, ಜಾರಂದಾಯ, ದುರ್ಗಲ್ಲಾಯ, ನಾಲ್ಕೆತಾಯ, ಪೆಲಡ್ಕತ್ತಾಯ, ಮಗ್ರಂದಾಯ, ಮಿತ್ತಂತಾಯ, ಮುಂಡತ್ತಾಯ, ಮೂರ್ತಿಲ್ಲಾಯ ಈ ಭೂತಗಳನ್ನು ಕೆಲವು ಕಡೆಗಳಲ್ಲಿ ಗಂಡುಭೂತಗಳೆಂದು, ಮತ್ತೆ ಕೆಲವು ಕಡೆಗಳಲ್ಲಿ ಹೆಣ್ಣುಭೂತಗಳೆಂದೂ ಕರೆಯುತ್ತಾರೆ. ಅದಕ್ಕೆ ಅನುಸಾರವಾಗಿ ಗಂಡುಭೂತದ ಹೆಸರಿನ ಕೊನೆಗೆ ‘ದಾಯೆ’ (ಅಲ್ಪದಾಯೆ-ಅಲ್ಲಿಯವನು; ಕೊಡಮಣಿತ್ತಾಯೆ – ಕೊಡಮಣ್ ಎಂಬಲ್ಲಿಯವನು) ಎಂಬುದಾಗಿಯೂ ಹೆಣ್ಣು ಭೂತದ ಹೆಸರಿನ ಕೊನೆಗೆ, ದಾಯಿ ಎಂಬುದಾಗಿಯೂ ಹೆಣ್ಣು ಭೂತದ ಹೆಸರಿನ ಕೊನೆಗೆ, ದಾಯಿ ತಾಯಿ (ಮಗಣತ್ತಾಯಿ, ಅಡಿಮಣಿತ್ತಾಯಿ, ಕಲ್ಲೇರಿತ್ತಾಯಿ) ಎಂಬುದಾಗಿಯೂ ಸೇರಿಸಿ ಕರೆಯುತ್ತಾರೆ. ಕೆಲವು ಭೂತಗಳು ಗಂಡುಭುತಗಳೋ ಹೆಣ್ಣುಭೂತಗಳೋ ಎಂಬ ಬಗ್ಗೆ ಜನರಿಗೆ ಸ್ಪಷ್ಟ ತಿಳುವಳಿಕೆಯಿಲ್ಲ. ಆರಾಧನೆಯಲ್ಲಿ ಈ ಬಗೆಯ ವಿಭಜನೆಯನ್ನು ಜನರು ಮಾಡಿಕೊಂಡಿರುವುದು ಕಂಡುಬರುವುದಿಲ್ಲ. ಗಂಡು ಮತ್ತು ಹೆಣ್ಣಿನ ಸಂಯುಕ್ತ ರೂಪದ ಆರಾಧನೆಯನ್ನು ಇಂತಹ ಸಂದರ್ಭದಲ್ಲಿ ಜನರು ಅನುಸರಿಸಿರುವಂತೆ ಕಂಡುಬರುತ್ತದೆ. ‘‘(ಭೂತಾರಾಧನೆ-ಜನಪದೀಯ ಅಧ್ಯಯನ, ಪು.೩೯)

ಮಲರಾಯಿ, ಕೊಡಮಣಿತ್ತಾಯಿ ಇತ್ಯಾದಿ ಹೆಸರುಗಳಲ್ಲಿನ ‘ಆಯಿ’ ಎಂಬುದನ್ನು ‘ತಾಯಿ’ ಎಂದು ತಿಳಿಯುವುದಕ್ಕಿಂತ, ‘ಆಯೆ’ ಎಂಬುದರ ಸ್ತ್ರೀಲಿಂಗರೂಪ ಎನ್ನಬಹುದು. ಆದರೆ ಹೀಗೊಂದು ರೂಪ ಸಾಮಾನ್ಯವಾಗಿ ಕಾಣಿಸುವುದಿಲ್ಲ ಎಂಬುದು ನಿಜ. ಅಂತೆಯೆ ರೂಢಿಯಲ್ಲಿ ‘ಆಯಿ’ ಯುಕ್ತವಾದ ಹೆಸರುಗಳನ್ನು ಉಪಯೋಗಿಸುವುದೂ ಇಲ್ಲವೆಂಬಷ್ಟು ಕಡಿಮೆ ಉಭಯಲಿಂಗಿ ರೀತಿಯ ದೈವಗಳನ್ನು ‘ಆಯೆ’ (ಮಲರಾಯೆ) ಎಂದೇ ಕರೆಯುತ್ತಾರಲ್ಲದೆ ‘ಆಯಿ’ ಅಥವಾ ‘ಆಳ್’(ಅವಳು) ಎಂದು ಕರೆಯುವ ವಾಡಿಕೆ ದೈವಾರಾಧನೆಯ ರಂಗದಲ್ಲಿಲ್ಲ.

ಪರಾಮರ್ಶನ ಸಾಹಿತ್ಯ

೧. ಇಂದಿರಾ ಹೆಗ್ಗಡೆ, ಬಂಟರುಒಂದು ಸಮಾಜೋಸಾಂಸ್ಕೃತಿಕ ಅಧ್ಯಯನ,  ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೪

೨. ಡಾ.ಬಿ.ಎ.ವಿವೇಕರೈ, ಯದುಪತಿ ಗೌಡ, ರಾಜಶ್ರೀಭೂತಾರಾಧನೆಯ ಬಣ್ಣಗಾರಿಕ, ತುಳುಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ೨೦೦೧

೩.ಡಾ.ಕೆ.ಚಿನ್ನಪ್ಪಗೌಡ, ಭೂತಾರಾಧನೆ – ಜಾನಪದೀಯ ಅಧ್ಯಯನ, ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ, ೧೯೯೦