ನಿಸರ್ಗದ ಕೈಗೂಸಾದ ಮಾನವ ಅದರ ಮಡಿಲಲ್ಲಿ ಕಣ್ಣು ಬಿಟ್ಟಂದಿನಿಂದ ಪ್ರಕೃತಿ ವೈಚಿತ್ರ್ಯಗಳಿಗೆ ಬೆರಗಾಗಿ ಮಣಿದೋ, ಕೆಲವೊಮ್ಮೆ ಸೆಣಸಾಡಿಯೋ, ಕೆಲವೊಮ್ಮೆ ತನ್ಮಯನಾಗಿ ಹಾಡಿ ಕುಣಿದೋ ಬದುಕನ್ನು ನಡೆಯಿಸಿದ್ದಾನೆ. ಆಕಾಶ ಮತ್ತು ಅದರ ಅದ್ಭುತಗಳು, ಬೆಟ್ಟ, ಕೊಳ್ಳ, ಕಾಡು, ನದಿಗಳು ಹಾಗೂ ಅವುಗಳ ಸ್ಥಿತ್ಯಂತರಗಳು ಅವನ ಮನೋ ಪ್ರಪಂಚದಲ್ಲಿ ನಾನಾ ಕಲ್ಪನೆಗಳನ್ನು ಕೆರಳಿಸಿರುವಂತೆಯೇ ಸಮುದ್ರವೂ ಪ್ರಾಕ್ ಮಾನವ ಕಲ್ಪನೆಯನ್ನು ಬಹುವಾಗಿ ಕಾಡಿರುವ ಅನನ್ಯ ವಿಷಯವಾಗಿದೆ. ತೆರೆ ನೊರೆಗಳಿಂದಾವೃತವಾಗಿ, ಭರತ ಇಳಿತಗಳಿಂದ ಕೂಡಿ ಸಶಬ್ದವಾಗಿ ಸದಾ ಜೀವಂತಿಕೆಯನ್ನು ಹೊಮ್ಮಿಸುವ, ಕೆಲಮೊಮ್ಮೆ ಆಕ್ರಮಣಶೀಲ ರೌದ್ರಾವೇಶದ ಪರಮಾವಧಿಯನ್ನು ಪ್ರದರ್ಶಿಸುವ ಅಪರಂಪಾರವಾದ ಸಮುದ್ರದ ಕುರಿತು ಮಾನವ ದಿಗಿಲನ್ನೂ ಕುತೂಹಲವನ್ನೂ ಬೆಳೆಯಿಸಿಕೊಂಡಿದ್ದರೆ ಆಶ್ಚರ್ಯವಿಲ್ಲ. ಆದರೆ ಜೀವನೋಪಯೋಗಕ್ಕೆ (ಸ್ನಾನ, ಪಾನಾದಿಗಳಿಗೆ) ಅಷ್ಟೊಂದು ಉಪಯುಕ್ತವಲ್ಲದೆ, ಸಾಕಷ್ಟು ವಿಶಾಲವಾದ ಶುಷ್ಕ ಮಳಲ ದಂಡೆಯನ್ನುಳ್ಳ ಉಪ್ಪು ನೀರಿನ ಅನಂತ ಹರಹು ಪ್ರಾಚೀನ ಮಾನವನಲ್ಲಿ ಕೌತುಕವನ್ನು ನಿರ್ಮಿಸಿದ್ದರೂ, ಅದರ ಮಡಿಲಲ್ಲಿ ನದಿಯ ಬದಿಯಂತೆ ಆಸರೆಗೊಂಡು ಬಾಳುವ ಬಯಕೆಯನ್ನು ಬಹುಕಾಲ ಆತ ಬೆಳೆಯಿಸಿಕೊಳ್ಳಲಿಲ್ಲವೆನ್ನಬಹುದು. ಸಮುದ್ರದ ಅತಿ ಸಮೀಪಕ್ಕೆ ಬಂದು ವಸತಿ ಹೂಡಿ ವಾಸಿಸಲು ಮನಷ್ಯ ತೊಡಗಿದ್ದು ಕ್ರಮೇಣವೇ ಆಗಿದೆ. ಹೆಚ್ಚಾಗಿ ನದಿಗಳ ತೀರ ಪ್ರದೇಶದಲ್ಲೆ ಮಾನವನ ಪ್ರಾಕ್ ವಸತಿಗಳು ವಿಶೇಷವಾಗಿ ಕಾಣಿಸಿಕೊಂಡುದಾಗಿದೆ.

ಸಮುದ್ರ ತೀರದ ಮಳಲ ರಾಶಿಯ ಮೇಲೆ ಮನೆಗಳನ್ನು ಹೂಡಿ, ಸಮುದ್ರವನ್ನು ಅವಲಂಬಿಸಿ ಬದುಕನ್ನು ಮಾಡಲೆಳಸಿದವರು ಮುಖ್ಯವಾಗಿ ಮೀನುಗಾರಿಕೆಯಿಂದ ಹೊಟ್ಟೆ ಹೊರೆಯಲು ಮುಂದಾದ ಜನವರ್ಗದವರೆನ್ನಬೇಕು. ನಾವಿಕವೃತ್ತಿಯವರನ್ನೂ ಇವರೊಂದಿಗೇ ಸಮೀಕರಿಸಬಹುದು.

ನಿಸರ್ಗದ ವಿಶಿಷ್ಟ ವಿದ್ಯಮಾನಗಳಲ್ಲಿ ಅತಿ ಮಾನುಷ ದೇವತಾ ಶಕ್ತಿಗಳ ಆವಿರ್ಭಾವವನ್ನು ಊಹಿಸಿದ್ದ ನಮ್ಮ ಪ್ರಾಚೀನರು ವರುಣನನ್ನು ಸಮುದ್ರದ ಅಧಿದೇವನನ್ನಾಗಿ ಕಲ್ಪಿಸಿದ್ದರು. ನಮ್ಮ ಪುರಾಣಗಳಲ್ಲಿ ಸಮುದ್ರ ಹಾಗೂ ಅದಕ್ಕೆ ಸಂಬಂಧ ಕಲ್ಪಿಸಿದ ಅತಿ ಮಾನುಷ ವ್ಯಕ್ತಿಗಳ ಬಗೆಗೆ ಅತ್ಯಂತ ರೋಚಕವಾದ ಅದ್ಭುತ ರಮ್ಯ ಕಥಾನಕಗಳೀವೆ. ಸಗರ ಪುತ್ರರಿಂದ ಸಾಗರವು ರೂಪುಗೊಂಡದ್ದು, ಸಪ್ತ ಸಾಗರಗಳು, ಸಮುದ್ರ ಮಥನ, ಕಾಲೇಯ ದೈತ್ಯರ ನಾಶಕ್ಕಾಗಿ ಅಗಸ್ತ್ಯ ಋಷಿಯಿಂದ ಸಮುದ್ರಪಾನ, ಮತ್ಸ್ಯಾವತಾರ ಕಾಲದಲ್ಲಿ ಜಗತ್ತು ಸಾಗರಾವೃತವಾಗಿ ಜಲಪ್ರಳಯವಾದದ್ದು. ಶಿವನ ನಿಟಿಲಾಗ್ನಿಯಿಂದಾಗಿ ಸಮುದ್ರದಲ್ಲಿ ಜಲಂಧರ ದಾನವನ ಜನ್ಮ, ಹನುಮಂತನ ಬೆವರಿನಿಂದ ಸಮುದ್ರದಲ್ಲಿ ಮತ್ಸ್ಯಮಾನವನ ಜನ್ಮ ಸಮುದ್ರ ವಾಸಿಯಾದ ಪಂಚಜನ ರಾಕ್ಷಸನ ಎಲುಬಿನಿಂದ ಶ್ರೀಕೃಷ್ಣನು ಪಾಂಚಜನ್ಯವೆಂಬ ಶಂಖವನ್ನು ಪಡೆದದ್ದು, ಸಮುದ್ರದಲ್ಲಿ ನೆಲೆಯಾಗಿದೆ ಎಂದು ಹೇಳಲಾದ ವಡಬಾನಲ ಎಂಬ ಅಗ್ನಿ ಇತ್ಯಾದಿ ಕಾವ್ಯಮಯವಾದ ಕಲ್ಪನೋಕ್ತಿಗಳ ಉಗಮಕ್ಕೆ ಸಮುದ್ರದ ನಿರಂತರ ಶಕ್ತಿ ಚಲನೆ, ನಿಗೂಢತೆ, ಅದರೊಳಗಿನ ಜೀವ ವಿಲಾಸ ವಿಸ್ತಾರಗಳೇ ಕಾರಣ.

ಸಮುದ್ರದ ಅಧಿದೈವವಾದ ವರುಣನನ್ನು ಒಲಿಸಿಕೊಳ್ಳಲು ಬಲಿಯುಕ್ತವಾದ ಪೂಜಾದಿಗಳನ್ನು ಮಾಡುತ್ತಿದ್ದುದಕ್ಕೆ ಸಾಕಷ್ಟು ಉಲ್ಲೇಖಗಳಿವೆ. (ಹರಿಶ್ಚಂದ್ರನು ವರುಣನಿಗೆ ಪುತ್ರ ಬಲಿ ನೀಡಲು ಮಾಡಿದ್ದ ವಾಗ್ದಾನ ಸುಪ್ರಸಿದ್ಧವಾಗಿದೆ.) ಸಮುದ್ರದ ಕುರಿತು ಹಲವು ನಂಬಿಕೆಗಳನ್ನು ಇರಿಸಿಕೊಂಡಿರುವ ಪ್ರಪಂಚದ ನಾನಾ ಜನವರ್ಗ ಅದರ ಅಧಿದೈವವನ್ನು ಪ್ರಸನ್ನೀಕರಿಸಲು, ಹಾಗೂ ಆ ಮೂಲಕ ಸಮುದ್ರದ ಬೇಟೆಯಲ್ಲಿ, ಪ್ರಯಾಣದಲ್ಲಿ, ಸಮುದ್ರ ವ್ಯಾಪಾರದಲ್ಲಿ ಆತ್ಮವಿಶ್ವಾಸ ಮತ್ತು ಯಶಸ್ಸು ದೊರೆಯುವಂತಾಗಲು, ಕಡಲ ತಡಿಯ ಬದುಕು ಹಸನಾಗಲು ಹಲವು ಬಗೆಯ ಕ್ರಿಯಾಚರಣೆಗಳನ್ನೂ, ವಿಧಿ ನಿಷೇಧಗಳನ್ನೂ ರೂಢಿಸಿಕೊಂಡಿದ್ದಾರೆ. ಇವುಗಳಲ್ಲಿ ನರಬಲಿಯೂ ಸೇರಿತ್ತು. ಭೂತಾಳ ಪಾಂಡ್ಯನ ಐತಿಹ್ಯದಲ್ಲಿ ಹಡಗದಲ್ಲಿ ನೆಲಸಿದ ಕುಂಡೋದರ ಭೂತಕ್ಕೆ ನೀಡಬೇಕಾಗಿದ್ದ ನರಬಲಿಯ ಪ್ರಸ್ತಾಪವಿದೆಯಷ್ಟೆ.

ಮಾಲ್ದೀವ ದ್ವೀಪದ ಜನಾಂಗದವರಲ್ಲಿ ಸಮುದ್ರಕ್ಕೆ ಹೆಣ್ಣನ್ನು ಅರ್ಪಿಸುವ ಪದ್ಧತಿಯಿತ್ತೆಂದು ಅರಬ ಪ್ರವಾಸಿ ಇಬನ್ ಬಟೂಟಾ ಹೇಳುತ್ತಾನೆ. (The Magic Art- J.M.Frazer Pp.153) \ಂಗಳಿಗೊಮ್ಮೆ ವಿಚಿತ್ರ ಜ್ವಾಲೆಗಳೊಂದಿಗೆ ‘ಜಿನ್’ ದೆವ್ವಗಳ ಹಡಗು ಪ್ರತ್ಯಕ್ಷವಾಗುತ್ತಿದ್ದಿತೆಂದೂ ಆ ಉಗ್ರದೇವತೆಗಳ ಪ್ರೀತ್ಯರ್ಥವಾಗಿ ಸಿಂಗರಿಸಿದ ಕನ್ಯೆಯೊಬ್ಬಳನ್ನು ಸಮುದ್ರಕ್ಕೆ ಮುಖ ಮಾಡಿರುವ ಕಿಟಕಿಯಿರುವ ಗುಡಿಸಲಲ್ಲಿ ಏಕಾಂಗಿನಿಯಾಗಿ ಇರಿಸಲಾಗುತ್ತಿತ್ತೆಂದೂ, ಮಾರನೆಯ ಬೆಳಿಗ್ಗೆ ಆಕೆ ಗತಪ್ರಾಣಳಾಗುತ್ತಿ ದ್ದಳೆಂದೂ ಹೇಳಲಾಗಿದೆ. ಅಬೂ ಎಂಬ ವ್ಯಕ್ತಿ ಬಲಿಕನ್ಯೆಯ ಬದಲಾಗಿ ತಾನು ಉಪಾಯವಾಗಿ ಹೋಗಿ ಕುಳಿತು ಕುರಾನ್ ಪಠನ ಮಾಡಿದುದರಿಂದ ‘ಜಿನ್ನಿ’ ಓಡಿ ಹೋಯಿತಂತೆ. (ನಿರ್ದಿಷ್ಟ ಋತುಗಳಲ್ಲಿ ದಡದ ಕಡೆಗೆ ಗುಂಪಾಗಿ ಬರುವ ಒಂದು ವಿಧದ ಹೊಳಪುಳ್ಳ ಮೀನುಗಳಿಂದ ಈ ‘ಜ್ವಲಿಸುವ ಹಡಗಿನ’ ಭ್ರಮೆ ಹುಟ್ಟಿರಬಹುದು. ಕೆಲವೊಮ್ಮೆ ರಂಜಕ ಧಾತುವಿನಿಂದಾಗಿ ಸಮುದ್ರದ ತೆರೆಗಳು ಉಜ್ವಲವಾಗಿ ಹೊಳೆ ಯುವುದಿದೆ) ನಮ್ಮಲ್ಲೂ ವಾದ್ಯ ಘೋಷಯುಕ್ತವಾಗಿ ಮಾರಿ ಹಡಗು ಸಮದ್ರದಲ್ಲಿ ಒಮ್ಮೊಮ್ಮೆ ಸಂಚರಿಸುತ್ತದೆಂಬ ಹೇಳಿಕೆ ಇದೆ.

ನ್ಯೂ ಬ್ರಿಟನಿನ ಸುಲ್ಕಾಸ್ (Solk 25) ಜನರು ಕಡಲ ನೀರನ ಈ ನಿಗೂಢ ಹೊಳಪು ಸಮುದ್ರ ಸ್ನಾನ ಮಾಡುವ ಪ್ರೇತಾತ್ಮಗಳದ್ದೆಂದು ಭಾವಿಸುತ್ತಾರೆ. ಕೇರಳ ಕರಾವಳಿಯ ‘ತಾಂಡಪುಲಯರು’ ಈ ರಂಜಕ ಪ್ರಭೆಯನ್ನು ನೀರಲ್ಲಿ ಬೇಟೆಯಾಡುವ ತಮ್ಮ ಹಿರಿಯರ ಪ್ರೇತಾತ್ಮದ ಪ್ರಭೆಯೆಂದು ನಂಬುತ್ತಾರೆ.

ಎಫಿಯತ್ (Efiat) ಎಂಬಲ್ಲಿನ ಮೀನುಗಾರರು ಹೆಚ್ಚಿನ ಮೀನಿನ ‘ಬೆಳೆ’ಗಾಗಿ ಕನ್ಯಾಬಲಿಯನ್ನು ಆಚರಿಸುತ್ತಿದ್ದುದಾಗಿ ತಿಳಿದುಬರುತ್ತದೆ. ಅನ್ನಾಂ(Annam) ಎಂಬಲ್ಲಿನ ಚಾಮ್ (cham) ಎಂಬ ಜನ ವಾರ್ಷಿಕ ಬಲಿಯಾಗಿ ಗಂಡಸರನ್ನು ಸಮುದ್ರಕ್ಕೆ ಅರ್ಪಿಸುತ್ತಿದ್ದರಂತೆ. ಕೆಲವು ಕಡೆ ಅಳಿವೆ ಬಾಗಿಲಲ್ಲಿಯೂ ಇಂಥ ಅರ್ಪಣೆ ಜರಗುತ್ತಿತ್ತು. ‘ಗಿನಿ’ಯಲ್ಲಿ ಸುಂದರಿಯಾದ ಕನ್ಯೆಯನ್ನು ವಾರ್ಷಿಕ ಬಲಿಯಾಗಿ ಅಳಿವೆ ಬಾಗಿಲಿಗೆ ಅರ್ಪಿಸುತ್ತಿದ್ದರು. ನ್ಯೂಕ್ಯಾಲಿಡೋನಿಯಾದಲ್ಲಿ ಮೀನು ಹಿಡಿಯುವ ಅವಧಿಯನ್ನು ಪೂರ್ವಜರಿಗೆ ಬಲಿ ನೀಡುವ ಮೂಲಕ ಪ್ರಾರಂಭಿಸುತ್ತಾರೆ.

ಪಡು ಕರಾವಳಿಯ ಮೊಗವೀರ, ಖಾರ್ವಿ, ಬೋವಿ, ಗಂಗಾಮತಸ್ಥ, ಮುಕ್ಕುವ, ಪುಸಲ ಮೊದಲಾದ ಮತ್ಸ್ಯ ವ್ಯವಸಾಯ ವರ್ಗಗಳಲ್ಲಿ ಸಮುದ್ರಕ್ಕೆ ಸಂಬಂಧಪಟ್ಟ ವಿವಿಧ ನಂಬಿಕೆಗಳೂ ಆಚರಣೆಗಳೂ ಇವೆ. ಮೊಗವೀರರು ವರ್ಷಕ್ಕೊಮ್ಮೆ ಶ್ರಾವಣ ಹುಣ್ಣಿಮೆಯಂದು ಸಮುದ್ರ ಪೂಜೆಯನ್ನು ಮಾಡುತ್ತಾರೆ. ಅಂದು ಮೀನಿನ ಕಸುಬಿಗೆ ವಿರಾಮ, ಹಣ್ಣು, ಕಾಯಿ, ಹೂವು, ನಾಣ್ಯ ಇತ್ಯಾದಿಗಳನ್ನು ಸಮುದ್ರಕ್ಕೆ ಸಾಮೂಹಿಕವಾಗಿ ಅರ್ಪಿಸಿ, ಕೈ ಮುಗಿದು ಪ್ರಾರ್ಥಿಸುತ್ತಾರೆ. ಮಂಗಳೂರಿನಲ್ಲಿ ಸಮುದ್ರಪೂಜೆಯಲ್ಲಿ ಕದ್ರಿ ಯೋಗಿ ಮಠದ ‘ಜೋಗಿ ಅರಸು’ ಭಾಗವಹಿಸುತ್ತಾರೆ.

ಇದೇ ರೀತಿಯ ಪೂಜೆಯನ್ನು ಮುಂಬಯಿಯ ಆಸುಪಾಸಿನ ‘ಕೋಳಿ’ ಜನಾಂಗದವರು ಹೋಳಿ ಹುಣ್ಣಿಮೆಯಂದು ಆಚರಿಸುತ್ತಾರೆ. ಚಿನ್ನದ ಚಿಕ್ಕ ತೆಂಗಿನ ಕಾಯಿಯೊಂದನ್ನು ಸಮುದ್ರಕ್ಕೆ ಅರ್ಪಿಸುವ ರೂಢಿ ಅವರಲ್ಲಿದೆ. ಮೊಗವೀರರು ಚೌತಿ ಹಬ್ಬದಂದು ಚಿನ್ನದ ಪುಟ್ಟ ತೆಂಗಿನ ಕಾಯಿಯನ್ನು ಇದೇ ರೀತಿ ಸಮುದ್ರಕ್ಕೆ ಅರ್ಪಿಸುವುದಿತ್ತು ಎನ್ನುತ್ತಾರೆ.

ಮಂಗಳೂರಿನ ದಕ್ಷಿಣಕ್ಕಿರುವ ಬೋವಿ ಜನಾಂಗದವರು ಮೀನುಗಾರಿಕೆಯ ಋತು ಪ್ರಾರಂಭವಾಗುವ ಪ್ರತಿ ಸೋಣ ತಿಂಗಳ ಪ್ರಾರಂಭದ ಶನಿವಾರ ಉಚ್ಚಿಲ ಕೋಟೆಯ ವಿಷ್ಣುಮೂರ್ತಿ ದೇವರಿಗೆ ಸೀಯಾಳದ ಅಭಿಷೇಕ ಮಾಡಿಸಿ ಒಂದು ಸೀಯಾಳವನ್ನು ಸಮುದ್ರಕ್ಕೆ ಅರ್ಪಿಸುತ್ತಾರೆ. ಅದೇ ರೀತಿ ಸೋಮೇಶ್ವರದ ಸೋಮನಾಥ ದೇವರಿಗೂ, ಬಬ್ಬರ್ಯನಿಗೂ ವಷಂಪ್ರತಿ ಸೀಯಾಳದ ಅಭಿಷೇಕ ನಡೆಸಿ ಮತ್ಸ್ಯ ವ್ಯವಸಾಯವು ಫಲಪ್ರದವಾಗುವಂತೆ ಪ್ರಾರ್ಥಿಸುತ್ತಾರೆ.

ಬಬ್ಬರ್ಯ ಪಡುಕರಾವಳಿಯ ಪ್ರಮುಖ ದೈವವಾಗಿದ್ದು ಮೀನುಗಾರಿಕೆಯವರ ಆರಾಧ್ಯ ದೇವತೆಯಾಗಿದ್ದಾನೆ. ಐತಿಹ್ಯ ಹಾಗೂ ತುಳು ಪಾಡ್ದನಗಳಿಂದ ತಿಳಿದು ಬರುವ ಈತನ ಕಥನ ವಿವರ ಕುತೂಹಲಕರವಾಗಿದೆ. ಮುಸಲ್ಮಾನ ಮತಕ್ಕೆ ಮತಾಂತರಗೊಂಡ ಹೆಂಗುಸಿನಲ್ಲಿ ಜನಿಸಿದನೆಂದು ಹೇಳಲಾದ ಈ ಮುಸ್ಲಿಮ ನಾವಿಕ ಸಮುದ್ರ ಕಾಳಗದಲ್ಲಿ ಮಡಿದು ದೈವತ್ವಕ್ಕೇರಿದವನಾಗಿದ್ದಾನೆ. ಈತನನ್ನು ಆರಾಧಿಸುವ ಗುಡಿಗಳು ಕಡಲಕೆರೆಯಲ್ಲಿ ಹೆಚ್ಚಾಗಿ ಸಮುದ್ರಾಭಿಮುಖವಾಗಿ ಕಟ್ಟಲ್ಪಟ್ಟಿರುತ್ತವೆ. ಈತನ ‘ದೆಂಡ್ ’ ಎಂಬ ಗದಾಕೃತಿಯ ಆಯುಧದಲ್ಲಿ ಮೀನಿನ ಚಿತ್ರವನ್ನು ಕೊರೆದಿರುತ್ತದೆ. ಬಬ್ಬರ್ಯನಿಗೆ ಅಭಿಷೇಕ ಮಾತ್ರವಲ್ಲ ‘ಅಡೆ’ ಎಂಬ ಉಪ್ಪು ಹಾಕದ ಕಡುಬನ್ನು ಕೆಂಡದಲ್ಲಿ ಸುಟ್ಟು ಅರ್ಪಿಸುವುದಿದೆ. ಕೋಲ ಸೇವೆಯನ್ನು ಕೆಲವೆಡೆ ಜರಗಿಸುತ್ತಾರೆ.

ಹಂದಿಮೀನು(ಡಾಲ್ಫಿನ್) ಬಲೆಗೆ ಬಿದ್ದರೆ ವಿಶೇಷ ಪೂಜೆ ಮಾಡಿ ಹಂದಿ ಮೀನಿನ ಮಾಂಸದಡುಗೆಯನ್ನು ಬಬ್ಬರ್ಯನಿಗೆ ಎಡೆ ಬಳಸುವ ವಾಡಿಕೆಯು ಮೊಗವೀರ ಮತ್ತು ಬೋವಿ ವರ್ಗದವರಲ್ಲಿ ಇತ್ತು. (ಹಂದಿ ಮೀನಿನ ಮುಖದ ವಿಚಿತ್ರ ಆಕೃತಿ ಹಾಗೂ ಅದು ನೀರಲ್ಲಿ ವಿಲಕ್ಷಣ ರೀತಿಯಲ್ಲಿ ಹೊರಳಾಡಿಕೊಂಡು ಚಲಿಸುವ ಅಪೂರ್ವತೆ, ವಿರಳವಾಗಿಯೇ ಸಿಕ್ಕಿ ಬೀಳುವಿಕೆ -ಇವುಗಳಿಂದಾಗಿ ಆ ಮೀನಿನ ಬಗೆಗೆ ವಿಚಿತ್ರ ಕಲ್ಪನೆ ಬೆಳೆದು, ದೈವಕ್ಕೆ ಅರ್ಪಿಸದೆ ಅದನ್ನು ತಿನ್ನಬಾರದೆಂಬ ರೂಢಿ ಹುಟ್ಟಿತ್ತು.)

ಅಧಿಕ ಮತ್ಸ್ಯ ಲಾಭವಾಗಲೆಂಬ ಆಶಯದಿಂದ ಕುಂದಾಪುರದ ಕಡೆಯ ಮೊಗವೀರರು ಜರಗಿಸುವ ವಿಶಿಷ್ಟ ಪೂಜೆಗೆ ಸಿರಣಿ ಪೂಜೆ ಎನ್ನುತ್ತಾರೆ. (ಶಾರದಾ – ‘ಕನ್ನಡ ಕರಾವಳಿಯ ಮೊಗವೀರರ ಸಮಾಜೋ-ಸಾಂಸ್ಕೃತಿಕ ಅಧ್ಯಯನ’- ‘ದರ್ಶನ’ ಭಂಡಾರ್‌ಕಾರ್ಸ್ ಕಾಲೇಜು) ತೆಂಗಿನ ಮರದ ಕೊನಳ್ಗಿ (ದೋಣಿಯಾಕಾರದ್ದು)ಯಲ್ಲಿ ಮಂಡಕ್ಕಿ, ಅವಲಕ್ಕಿ, ಹೆಸರುಬೇಳೆ, ಕಡಲೆಬೇಳೆ, ಪಂಚಕಜ್ಜಾಯ ಇತ್ಯಾದಿ. ನೈವೇದ್ಯ ವಸ್ತುಗಳನ್ನು ಇರಿಸಿ ನೀರಲ್ಲಿ ತೇಲ ಬಿಡುತ್ತಾರೆ. ಈ ಪೂಜೆಯನ್ನು ಮೊಗವೀರರ ಪರವಾಗಿ ಮುಸಲ್ಮಾನ ವ್ಯಕ್ತಿಯೊಬ್ಬ ನಿರ್ವಹಿಸುತ್ತಾನೆನ್ನುವುದು ಜನಪದ ಜೀವನದಲ್ಲಿನ ಕೋಮು ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ.

ಕುಂದಾಪುರ ಕಡೆಯಲ್ಲಿ ‘ಕೋಳ್‌ಯಾರ ಮಾವ’ ಎಂಬ ದೈವಕ್ಕೆ ಕೋಳಿಯ ಬಲಿ ನೀಡುವ ಸಂಪ್ರದಾಯವಿದೆ. ಕಡಲಿನ ಕಸುಬಿನವರು ಕೋಳ್ಯಾರ ಮಾವನ ಹೆಸರಲ್ಲಿ ಒಂದೊಂದು ಕೋಳಿಯನ್ನು ಹರಕೆ ಬಿಟ್ಟಿರುತ್ತಾರೆ. ಕಡಲ ಕರೆಯಲ್ಲಿ ಅದನ್ನು ಕೊಯ್ದು ಕೋಳ್ಯಾರ ಮಾವನಿಗೆ ರಕ್ತತರ್ಪಣ ಬಿಟ್ಟಿರುತ್ತಾರೆ. ಮಚುವೆ (ಸರಕಿನ ಹಡಗು)ಯಲ್ಲಿ ಸಾಮಗ್ರಿಗಳನ್ನು ಇಳಿಸುವಾಗ ಅಪಘಾತಕ್ಕೆ ಗುರಿಯಾಗಿ ಸತ್ತ ಕೋಳ್ಯಾರ ಮಾವ ದೈವವೆನಿಸಿದ್ದಾನೆ. ಆಕಸ್ಮಿಕವಾಗಿ ಸತ್ತಾತನ ಅತೃಪ್ತಾತ್ಮವು ಈ ತೆರನಾದ ರಕ್ತಾಹುತಿಯಿಂದ ಸಾಂತ್ವನಗೊಳ್ಳುತ್ತದೆಂದೂ ಇಲ್ಲವಾದರೆ ಆತ ಮಿಕ್ಕುಳಿದವರಿಗೂ ಕಸುಬಿನಲ್ಲಿ ಅಪಾಯ ವೊಡ್ಡುವನೆಂದೂ ನಂಬಲಾಗುತ್ತದೆ. ಕೋಳಿಯ ಆರ(ಆಹಾರ) ಕೊಳ್ಳುವವನಾದುದರಿಂದ ಈತನಿಗೆ ಕೋಳ್ಯಾರ ಮಾವನೆಂದು ಹೆಸರಾಗಿದೆ. (ಮೇಲೆ ಹೇಳಿದ ಶಾರದಾ ಅವರ ಲೇಖನ)

ಗೋಕರ್ಣದ ಸಮುದ್ರ ತೀರದ ಗಂಗಾಮತಸ್ಥರಲ್ಲಿ ಒಂದು ಆಚರಣೆ ಇದೆ. ಅವರು ವರ್ಷಕ್ಕೊಮ್ಮೆ ಗಂಗಮ್ಮನ ಹಬ್ಬವನ್ನು ಆಚರಿಸುತ್ತಾರೆ. ಹಬ್ಬಕ್ಕೆ ಒಂದು ದಿನ ಮುಂಚೆ ಆ ಜನಾಂಗದ ಎಲ್ಲರೂ ಪೂರ್ತಿ ಭೇದಿಗೆ ಔಷಧಿ ತಕ್ಕೊಳ್ಳುತ್ತಾರೆ. ಸ್ನಾನ ಮಾಡುವಷ್ಟೇ ಮಹತ್ವವನ್ನು ಇವರು ಹೊಟ್ಟೆಯ ಶುದ್ದಿಗೂ ಕೊಟ್ಟಂತೆ ಕಾಣುತ್ತದೆ. (ಸಿದ್ಧಲಿಂಗಯ್ಯ – ಕೆಲವು ಆರಾಧನೆಗಳು ಮತ್ತು ಆಚರಣೆಗಳು ‘ಕರ್ನಾಟಕ ಜಾನಪದ)

ಮುಕ್ಕುವರಲ್ಲಿ ಬಬ್ಬರ್ಯನಿಗೆ ಪ್ರತ್ಯೇಕ ‘ಸ್ಥಾನ’ವಿಲ್ಲ. ಅವರು ಮೀನುಗಾರಿಕೆಯ ಅಭಿಮಾನೀ ದೈವಗಳನ್ನು ಸಂತೃಪ್ತಿ ಪಡಿಸುವ ಸಲುವಾಗಿ ‘ಕಡಪುರಂ ಬಳಂಬುನ್ನ’ (ಕಡಲ ಕರೆಯಲ್ಲಿ ಬಡಿಸುವುದ) ಎಂಬ ನೈವೇದ್ಯ ವಿಧಿಯನ್ನು ನೆರವೇರಿಸುತ್ತಾರೆ.

ಹೊಸ ದೋಣಿಯನ್ನು ನೀರಿಗಿಳಿಸುವ ವಿಧಿಯಲ್ಲಿ ‘ಕುತ್ತಿಪೂಜೆ’ ಎಂಬ ಕಲಾಪವನ್ನು ಮೊಗವೀರ, ಬೋವಿ, ಮುಕ್ಕುವ ಮೊದಲಾದವರು ಜರಗಿಸುವುದು ವಾಡಿಕೆ. ಅಕ್ಕಿ, ಅವಲಕ್ಕಿ, ಹೊದಲು, ತೆಂಗಿನಕಾಯಿ, ಬಾಳೆಹಣ್ಣು ಇತ್ಯಾದಿಗಳ ಎಡೆ ಇಕ್ಕುತ್ತಾರೆ. ಇದನ್ನು ಗಣಪತಿಗೆ ಮೀಸಲು ಎಂದೂ ತಿಳಿಯುತ್ತಾರೆ. ಆದರೆ ಗಣಪತಿಯ ಸ್ಮರಣೆ ಕ್ರಮೇಣ ಬೆಳೆದು ಬಂದ ನಂಬಿಕೆಯಿರಬೇಕು. ಯಾವುದೇ ಹೊಸ ವಸ್ತುವನ್ನು ಉಪಯೋಗಿಸುವ ಪ್ರಾರಂಭದಲ್ಲಿ ಆ ವಸ್ತುವಿನಲ್ಲಿ ಹಾಗೂ ಆ ಸ್ಥಳದಲ್ಲಿ ಇರಬಹುದಾದ ಶಕ್ತಿ ವಿಶೇಷಗಳನ್ನು ತುಷ್ಟಿಪಡಿಸುವ ಕಲ್ಪನೆ ಪ್ರಾಚೀನವಾದದ್ದು. ಹೊಸ ದೋಣಿಗೆ ನಾಲ್ಕೈದು ತೆಂಗಿನ ಕಾಯಿಗಳನ್ನು ಈಡುಗಾಯಿಗಳಾಗಿ ಒಡೆಯುತ್ತಾರೆ. ಈಡುಗಾಯಿ ಬಲಿಯ ಸಂಕೇತವೇ ಆಗಿದೆ. ಕೋಳಿಯ ತಲೆಕೊಯ್ದು ರಕ್ತ ಬಲಿ ನೀಡುವುದೂ ಇದೆ. ಮುಂದೆ ಕಸುಬಿನಲ್ಲಿ ಅಪಾಯ ಬಾರದೇ ಇರಲಿ, ದೋಣಿಯನ್ನು ನಿರ್ಮಿಸಿದ ಮರದಲ್ಲಿ ವಾಸವಾಗಿರಬಹುದಾದ ಶಕ್ತಿಗಳಿಗೆ ತೃಪ್ತಿಯಾಗಲಿ ಎಂಬುದು ಈ ಪೂಜೆಯ ಉದ್ದೇಶ.

ಪಟ್ಟಿಬಲೆ, ರಂಪಣೆ ಬಲೆ ಇತ್ಯಾದಿಗಳನ್ನು ವೃತ್ತಿಗೆ ಹಚ್ಚುವಾಗಲೂ ಕುತ್ತಿಪೂಜೆ ನಡೆಸುವ ಪದ್ಧತಿಯಿದೆ. ಅಂತೆಯೇ ವಿಪುಲ ಮತ್ಸ್ಯಪ್ರಾಪ್ತಿಯಾಗಲೆಂಬ ಪ್ರಾರ್ಥನೆಯೊಂದಿಗೆ ಮುತ್ತಪ್ಪ ದೈವಕ್ಕೆ ‘ಪಯಂಗುತ್ತಿ’ ಎಂಬ ಸೇವೆಯನ್ನು ಸಲ್ಲಿಸುವ ಹರಕೆ ಸಲ್ಲಿಸುತ್ತಾರೆ. ‘ಪಯಂಗುತ್ತಿ’ ಸೇವೆಗೆ ಅವಲಕ್ಕಿ, ತೆಂಗಿನ ಕಾಯಿ, ಸುಟ್ಟ ಮೀನು, ಕಳ್ಳು ಇತ್ಯಾದಿಗಳನ್ನು ದೀಪದ ಮುಂದಿಟ್ಟು ಪ್ರಾರ್ಥಿಸುತ್ತಾರೆ. ಮುತ್ತಪ್ಪ ದೈವಕ್ಕೆ ನಾಯಿ ಪ್ರೀತಿಯ ಪ್ರಾಣಿಯಾದುದರಿಂದ ಪ್ರಸಾದವನ್ನು ನಾಯಿಗೂ ಇಕ್ಕುತ್ತಾರೆ. ಬೋವಿ, ಮುಕ್ಕುವ ಮೊದಲಾದವರು ಈ ಸೇವೆಯನ್ನು ಮಾಡುತ್ತಾರೆ.

ಮೀನುಗಾರಿಕೆಯ ವೃತ್ತಿಯ ಕೊಚ್ಚಿ ಕ್ರಿಶ್ಚನ್ನರು ವಿಶಿಷ್ಟ ಸಂದರ್ಭಗಳಲ್ಲಿ ತಮ್ಮ ಪಾದ್ರಿಯನ್ನು ಆಮಂತ್ರಿಸಿ ಆತನ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮತ್ಸ್ಯ ವೃತ್ತಿಯ ಪುಸಲರೆಂಬ ಮುಸ್ಲಿಮ ಮಂದಿಯೂ ಶುಕ್ರವಾರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಾರಲ್ಲದೆ ದೋಣಿಗೆ ತೆಂಗಿನ ಕಾಯಿ ಒಡೆಯುತ್ತಾರೆ.

ಇತರ ದೇಶಗಳಲ್ಲೂ ಬಲೆಗಾರಿಕೆಯ ಪ್ರಾರಂಭದಲ್ಲಿ ವಿಶಿಷ್ಟ ವಿಧಿಗಳನ್ನು ನಡೆಯಿಸುವುದುಂಟು. ‘ಎಲ್ ಗೋನ್ ಕ್ಷಿನ್ ’(Algonqin) ಹಾಗೂ ‘ಹ್ಯೂರೋನ್ ’(Huron) ಜನಾಂಗಗಳಲ್ಲಿರುವ, ಬಲೆಯೊಂದಿಗೆ ಹುಡುಗಿಯರ ಮದುವೆಯ ಕಲಾಪ ಕುತೂಹಲಕರವಾಗಿದೆ. ಆರೇಳು ವರ್ಷ ಪ್ರಾಯದ ಪುಟ್ಟ ಬಾಲಿಕೆಯರ ನಡುವೆ ಬಲೆಯನ್ನು ಇರಿಸಿ ಮಂತ್ರವಾದ, ಪ್ರಾರ್ಥನೆಗಳಂಥ ವಿಧಿಗಳು ಜರಗುತ್ತವೆ. ಬಲೆಯೊಳಗೊಂದು ಗಂಡು ಆತ್ಮವಿದೆಯೆಂದೂ ಅದರ ಸಂತೃಪ್ತಿಯೇ ಸಮೃದ್ಧ ಮತ್ಸ್ಯಲಾಭಕ್ಕೆ ಸಾಧನವೆಂದೂ ಅವರ ನಂಬಿಕೆ. ಈ ಬಾಲ ವಧುಗಳ ಮನೆಗಳಿಗೆ ಮೀನಿನ ಪಾಲೊಂದನ್ನು ನೀಡುವ ಪರಿಪಾಠ ಅಲ್ಲಿದೆ. (J.C. Frazer, The Magic Art, Pp.147)

ವಷಂಪ್ರತಿ ಮೀನುಗಾರಿಕೆಯ ಋತುವಿನಲ್ಲಿ ದಟ್ಟವಾದ ಕಸದ ರಾಶಿ ಬಂದು ತಮ್ಮ ಊರಿನ ಸನಿಯದ ಕಡಲಿನಲ್ಲಿ ತಂಗುವಂತಾಗಲೆಂದು ವಿಧವಿಧವಾದ ಪ್ರಾರ್ಥನೆ, ಸೇವೆಗಳನ್ನು ನಮ್ಮ ಪಡುಕರಾವಳಿಯ ಮೀನುಗಾರ ಮಂದಿ ನಡೆಸುತ್ತಾರೆ. ಬಬ್ಬರ್ಯ, ಮುತ್ತಪ್ಪ, ಮಾರಮ್ಮ, ಭಗವತಿ ಮೊದಲಾದ ಜನಪದ ದೈವಗಳನ್ನು ಅಲ್ಲದೆ ವಿಷ್ಣು, ಸೋಮನಾಥ, ದುರ್ಗಾ, ಗಣಪತಿ ಮೊದಲಾದ ವೈದಿಕ ದೇವತೆಗಳನ್ನು ಸಹ ಸಮುದ್ರದ ಕೆಸರನ್ನು ಕಟ್ಟಿ ನಿಲ್ಲಿಸುವಂತೆ ಪ್ರಾರ್ಥಿಸಲಾಗುತ್ತದೆ. ಬಂಗಾರದ ಬಂಗುಡೆ, ಬೈಗೆ ಮೀನುಗಳ ಮಾಲೆಗಳನ್ನು ಹರಕೆಯಾಗಿ ಅಂಥ ಸಸ್ಯಾಹಾರಿ ದೇವತೆಗಳಿಗೆ ಅರ್ಪಿಸಿದ ಉದಾಹರಣೆ ಇದೆ.

ಹವಾಮಾನಕ್ಕನುಗುಣವಾಗಿ ಚಲಿಸುವ ಕೆಸರಿನ ಈ ಬೃಹತ್ ಪದರು ಮೀನುಗಾರರ ಬದುಕಿಗೆ ತುಂಬ ಆಧಾರವಾದದ್ದು, ಇಂಥ ಕೆಸರು ನೆಲಸಿದ ಕಡೆ ಕಡಲು ಅತ್ಯಂತ ಶಾಂತವಾಗಿರುತ್ತದೆ. ಮಳೆಗಾಲದ ರೌದ್ರಾವೇಶದ ಸಂದರ್ಭದಲ್ಲೂ ತೆರೆಗಳ ಅಬ್ಬರವಿಲ್ಲದೆ, ಮೀನುಗಾರಿಕೆಗೆ ಅನುಕೂಲವಾದ ಸನ್ನಿವೇಶ ಏರ್ಪಟ್ಟಿರುತ್ತದೆ. ಕೆಸರಿನಲ್ಲಿ ಬೇಕಾದಷ್ಟು ಆಹಾರಾಂಶಗಳಿರುವುದರಿಂದ ವಿಧವಿಧದ ಮೀನುಗಳೂ ಹಿಂಡು ಹಿಂಡಾಗಿ ಕೆಸರನ್ನು ಆವರಿಸಿಕೊಂಡಿರುತ್ತದೆ.

ಸಮುದ್ರದ ಆಟೋಪವನ್ನು ಶಮನಗೊಳಿಸುವ ಹಾಗೂ ಮತ್ಸ್ಯಕೋಟಿಯನ್ನು ಮುಗ್ಧಗೊಳಿಸುವ ಕೆಸರು ತುಂಬ ಕಾರಣಿಕವುಳ್ಳ ಸಾನ್ನಿಧ್ಯವಸ್ತುವೆಂದೂ, ಅದೆಷ್ಟೋ ನಿಧಿಯ ಕೊಪ್ಪರಿಗೆಗಳೂ, ಸಂಜೀವನ ಕಡ್ಡಿ ಮೊದಲಾದ ಮಹಿಮಾ ವಸ್ತುಗಳೂ ಅದರಲ್ಲಿ ಹುದುಗಿರುವವೆಂದೂ, ಅದಕ್ಕೆ ಸರ್ಪಗಾವಲು ಇರುವುದೆಂದೂ ನಂಬಿಕೆ ಇದೆ. ಇಂಥ ಕೆಸರು ಚಲಿಸುವಾಗ ವಾದ್ಯಘೋಷ ಕೇಳಿ ಬರುವುದೆಂದೂ ಹೇಳಿಕೆ ಇದೆ. ಈ ಕೆಸರಿನೊಂದಿಗೆ ಕಸ ಕಡ್ಡಿ ಕಟ್ಟಿಗೆಗಳು ಧಾರಾಳವಾಗಿ ತೇಲಿ ಬರುವುದುಂಟು. ಇದಕ್ಕೆ ಮಡಿ ಬೀಳುವುದೆನ್ನುತ್ತಾರೆ. ತುಳುವಿನಲ್ಲಿ ಇದಕ್ಕೆ ‘ಜಾಗರದ ಪೊಡಿ’ ಎನ್ನುತ್ತಾರೆ. ಮಲೆಯಾಳದಲ್ಲಿ ಇಂಥ ಕೆಸರಿನ ನೆಲಸುವಿಕೆಗೆ ‘ಚಾಗರ’ ಎನ್ನುತ್ತಾರೆ. ದೊಡ್ಡ ಕೆಸರು ದಡಕ್ಕೆ ಸಮೀಪವಾಗಿ ನೆಲಸಿದರೆ ಕೆರೆಯ ಮೀನುಗಾರರಿಗೆ ಮೀನಿನ ಹಬ್ಬವೇ ಸೈ.

ಇಂಥ ವಿಶಿಷ್ಟ ಕೆಸರಿನ ಬಗೆಗೆ ಮಡಿ ಮೈಲಿಗೆಯ ಭಾವನೆಗಳು ಸಹಜವಾಗಿಯೆ ಬೆಳೆದುಬಂದಿವೆ. ‘ಜಾಗರದ’ ಕಸಕಡ್ಡಿಗಳನ್ನು ಆರಿಸಲು ಮುಟ್ಟಾದ ಹೆಣ್ಣು ಸಮುದ್ರದ ಬಳಿಗೆ ಹೋಗಬಾರದೆಂಬ ನಿಷೇಧವಿದೆ. ಹಾಗೆ ಹೋದರೆ ಕೆಸರು ಅಲ್ಲಿಂದ ಕಾಲು ಕೀಳುವುದೆಂಬ ನಂಬಿಕೆ ಇದೆ.

ಮೀನುಗಳಿಗೆ ಸಂಬಂಧಪಟ್ಟ ಕೆಲವೊಂದು ನಂಬಿಕೆಗಳನ್ನು ಸಮೀಕ್ಷಿಸಬಹುದು : ಸಿರಿಯನ್ನರಲ್ಲಿ ಹಲವು ಮೀನನ್ನು ಪವಿತ್ರವೆಂದು ತಿಳಿಯುವುದರಿಂದ ಅದನ್ನು ತಿನ್ನುವುದಿಲ್ಲ. ಆಫ್ರಿಕಾದ ಕೆಲವು ಬುಡಕಟ್ಟುಗಳಲ್ಲಿ ಮೀನಿನ ಅಹಾರಕ್ಕೆ ನಿಷೇಧವಿದೆ. ಸರ್ಬಿಯಾದಲ್ಲಿ ಗರ್ಭಿಣಿ ಹೆಂಗಸು ಮೀನು ತಿನ್ನುವಂತಿಲ್ಲ. ಆದರೆ ತಾಲ್ಮುಂಡದಲ್ಲಿ ಗರ್ಭಿಣಿಯರು ಮೀನನ್ನು ತಿನ್ನಲೇಬೇಕು. ಗ್ರೀನ್ ಲೇಂಡಿನಲ್ಲಿ ಒಂದು ವಿಶಿಷ್ಟ ಬಗೆಯ ಮೀನು ತಿಂದರೆ ಗಂಡಸರು ಗರ್ಭಧರಿಸುವರೆಂಬ ನಂಬಿಕೆಯಿದ್ದರೆ, ಜಾವಾದ ದಕ್ಷಿಣ ಕರಾವಳಿಯಲ್ಲಿನ ಒಂದು ಜಾತಿಯ ಮೀನನ್ನು ತಿಂದಾತನ ಹೆಂಡತಿ ಗರ್ಭಿಣಿಯಾಗುವಳೆಂದು ನಂಬುತ್ತಾರೆ. ತಾಸ್ಮೇನ್ನಿಯರು ಪೊರೆ ಇರುವ ಮೀನನ್ನು ತಿನ್ನುವುದಿಲ್ಲ. ಸೆಮಟಿಕ ದೇವತೆಯಾದ ಡೆರ್ಸಿಡೋ ಮೀನಿನ ರೂಪದಲ್ಲಿದ್ದಾಳೆಂದು ಪ್ರತೀತಿ. ನಮ್ಮ ಪುರಾಣಗಳಲ್ಲೂ ವಿಷ್ಣುವಿನ ಪ್ರಥಮ ಅವತಾರ ಮತ್ಸ್ಯವೆಂದಿದೆಯಷ್ಟೆ? ನದಿ ಮತ್ತು ಸಮುದ್ರಗಳಲ್ಲಿ ಸಂಚರಿಸುವ ಹಡಗು, ದೋಣಿಗಳನ್ನು ಯಾರು ನಾಶ ಮಾಡುತ್ತಾರೋ ಅವರು ಮತ್ಸ್ಯಜನ್ಮ ಹೊಂದುತ್ತಾರೆಂಬ ನಂಬಿಕೆ ಪರಾಶರ ಸ್ಮೃತಿಯಲ್ಲಿದೆ.

ಮೀನುಗಳು ಸದಾ ಯೌವನದಲ್ಲಿರುತ್ತಾವೆಂದೂ ಅವುಗಳನ್ನು ತಿನ್ನುವವರು ವೃದ್ಧರಾಗುವುದಿಲ್ಲವೆಂದೂ ಕಾರಿಬ್ ಜನಾಂಗ ನಂಬುತ್ತದೆ. ದಕ್ಷಿಣ ಆಫ್ರಿಕಾ, ಅಲಸ್ಕಾ, ಉತ್ತರ ಅಮೇರಿಕಾಗಳ ಅನೇಕ ಜನವರ್ಗಗಳಲ್ಲಿ ಮೀನು ಕುಲದೇವತಾ ಚಿಹ್ನೆ (Toten) ಆಗಿದೆ. ತುಳು ನಾಡನ್ನು ದೀರ್ಘಕಾಲ ಆಳಿದ ಆಳುಪ ಅರಸರ ನಾಣ್ಯಗಳಲ್ಲೂ, ರಾಜ ಲಾಂಛನದಲ್ಲೂ ಮೀನಮಿಥುನದ ಚಿಹ್ನೆ ಇತ್ತು.

ಹಣೆಯ ಮೇಲೆ ಬಿಳಿಯ ನಾಮವಿರುವ, ಮೈ ಮೇಲೆ ಚುಕ್ಕೆಗಳಿಲ್ಲದಿರುವ, ಪಕ್ಕೆಗಳಲ್ಲಿ ‘ರೆಕ್ಕ’ಗಳಿಲ್ಲದಿರುವ ಹಾಗೂ ಮುಖ ಬಹು ಅಗಲವಾಗಿರುವ ಮೀನು ಸಿಕ್ಕಿದರೆ ಅದನ್ನು ನೀರಿಗೆ ಬಿಟ್ಟು ಬಿಡುವ ರೂಢಿ ಹಲವೆಡೆ ಇದೆ. ಇಂಥ ವಿಚಿತ್ರ ಮೀನುಗಳನ್ನು ಹಿಡಿದು ತಿಂದರೆ ಅಥವಾ ವಿಕ್ರಯಿಸಿದರೆ ಆಪತ್ತು ಹಿಂಬಾಲಿಸುವುದೆಂಬ, ನಂಬಿಕೆ ಇದೆ. ಇಂಥ ಲಕ್ಷಣವಿರುವ ಬೃಹತ್ ಗಾತ್ರದ ‘ಕೋರಿ ಬಲ್ಯಾರು’ ಅಥವಾ ‘‘ಗರಗಸ ಮೀನು’’ ಅನಿಷ್ಟದಾಯಕವೆಂದು ಹೇಳಲಾಗಿದೆ. ಬಹುಶಃ ಇದರ ಅಪೂರ್ವ ವಿಕಟಾಕೃತಿಯು ಈ ಶಕುನ ಶಂಕೆಗೆ ಕಾರಣವಾಗಿರಬಹುದು. ಸುಮಾರು ಅರವತ್ತು ವರ್ಷಗಳ ಹಿಂದೆ ಸೇಮೇಶ್ವರ ಉಚ್ಚಿಲದ ಇಬ್ಬರು ಮೀನುಗಾರ ತರುಣರಿಗೆ ಇಂಥ ಲಕ್ಷಣದ ದೊಡ್ಡ ಕೋರಿ ಬಲ್ಯಾರು ಮೀನು ಸಿಕ್ಕಿತು. ಅದನ್ನವರು ನೀರಿಗೆ ಬಿಟ್ಟು ಬಿಡದೆ, ಬಹು ಪ್ರಯಾಸದಿಂದ ದಡಕ್ಕೆ ಸಾಗಿಸಿ ಒಳ್ಳೆ ಕ್ರಯಕ್ಕೆ ಮಾರಿದರು. ಸ್ವಲ್ಪ ಸಮಯದಲ್ಲೆ ಒಂದು ಸಮುದ್ರದ ಅಪಘಾತದಲ್ಲಿ ದೋಣಿ ಮುಳುಗಿ ಇವರಿಬ್ಬರೂ ಒಟ್ಟಿಗೆ ನೀರಿಗಾಹುತಿಯಾದರು. ಈ ಘಟನೆ ಕಾಕತಾಳೀಯವಾಗಿರಬಹುದಾದರೂಜನರ ಮನಸ್ಸಿನಲ್ಲಿ ಆ ಮೀನಿನ ದುಶ್ಯಕುನ ಬಹುಕಾಲದವರೆಗೆ ಕರಿನೆರಳನ್ನು ಹಾಯಿಸಿತ್ತು. ‘ಕೋಟಿ ಬಾಲಾಡ’ ಎಂಬ ದೊಡ್ಡ ತೊರಕೆ ಮೀನಿನ ಕುರಿತೂ ಇಂಥ ಶಕುನವಿದೆಯೆನ್ನಲಾಗಿದೆ.

‘ಕಡಲಾವೆ ಬಲೆಗೆ ಬಿದ್ದರೆ ಹಿಂದೂ ಬಲೆಗಾರರು ಹೆಚ್ಚಾಗಿ ಅದನ್ನು ನೀರಿಗೆ ಬಿಟ್ಟು ಬಿಡುತ್ತಾರೆ. ಮಾಲ ಎಂಬ ಮೀನಿನ ಹಿಂಡು ಬಹುವಾಗಿ ಬಂದರೆ ಅದರ ಜೊತೆಗೆ ಗುಳಿಗನಂಥ ದೈವಗಳ ಸವಾರಿ ಇರುತ್ತದೆಂಬ ನಂಬಿಕೆ ಇದೆ. ಮೊದಲ ಬಲೆಗೆ ಮಾಲ ಮೀನು ಸಿಕ್ಕಿದರೆ ಅದನ್ನು ತುಂಡು ಮಾಡಿ ಬಿಸಾಡುತ್ತಾರೆ. ಕೊಂತಿ ಎಂಬ ಮೀನಿನ ಹಿಂಡಿನೊಂದಿಗೂ ಸಿಗಡಿಗಳ ಹಿಂಡಿನೊಂದಿಗೂ ಭೂತಗಳ ಸಾನ್ನಿಧ್ಯವನ್ನು ಗುರುತಿಸುವುದಿದೆ. ಕೊಂತಿಗೆ ಉದ್ದವಾದ ಕೊಕ್ಕಿನಂಥ ರಚನೆಯ ವೈಚಿತ್ರ್ಯವಿರುವುದು ಇಂಥ ನಂಬಿಕೆಯನ್ನು ಹುಟ್ಟಿಸಿರಬಹುದು. ಕೊಂತಿ, ಸಿಗಡಿ, ಮಾಲಗಳು ಸಾಕಷ್ಟು ಎತ್ತರಕ್ಕೆ ಸಿಡಿದು ಬೀಳುವ ಅಭ್ಯಾಸದವುಗಳಾದುದರಿಂದ ಅವುಗಳಲ್ಲಿ ಅಸಾಮಾನ್ಯತೆಯನ್ನು ಗುರುತಿಸಿರಬೇಕು. ಕೊಂತಿ ಮೀನು ಅಕಸ್ಮಾತ್ ಮೇಲಕ್ಕೆ ನೆಗೆದು ದೋಣಿಯ ಒಳಗೆ ಬಿದ್ದರೆ ಅದನ್ನು ಎರಡು ತುಂಡು ಮಾಡಿ, ಉತ್ತರ ದಕ್ಷಿಣ ದಿಕ್ಕುಗಳಿಗೆ ಬಿಸಾಡುತ್ತಾರೆ. ಪಾರೆ ಮೀನು ಹಾಗೆ ಹಾರಿ ಬಿದ್ದರೂ ಸೋಲು ಎನ್ನಲಾಗಿದೆ.

ಸಿಗಡಿ ಮೀನು ಲೆಕ್ಕಕ್ಕಿಂತ ಮಿತಿಮೀರಿ ಬಂದರೆ ರೋಗ ಹೆಚ್ಚುವುದೆಂಬ ನಂಬಿಕೆ ಇದ್ದುದುಂಟು. ತಿಮಿಂಗಿಲ ಸತ್ತು ದಂಡೆಯ ಮೇಲೆ ಬಿದ್ದರೆ ಊರಿಗೆ ಮಾರಿರೋಗ ಬರುವ ಸಂಭವವಿದೆಯೆಂದು ನಂಬಲಾಗುತ್ತಿತ್ತು.

ಬಾಳೆಮೀನು ಮತ್ತು ಬಂಗುಡೆ ಮೀನುಗಳನ್ನು ಒಟ್ಟಿಗೆ ಬೇಯಿಸಬಾರದೆಂಬ ಕಟ್ಟಳೆ ಕೆಲವು ಕಡೆ ಇದೆ. (ಬಾಳೆ ಮೀನು ಮತ್ತು ಮುಗುಡು ಮೀನುಗಳನ್ನು ಒಟ್ಟಿಗೆ ಬೇಯಿಸಬಾರದೆಂಬ ನಂಬಿಕೆಯೂ ಅದಕ್ಕೆ ಹಿನ್ನೆಲೆಯಾದ ಜನಪದ ಕಥೆಯೂ ಇದೆ.)

ಕೆಲವು ಸಲ ಬಲೆಗೆ ಮಾರಕಗಳಾದ ತೊಂದೆ ಮೀನು, ತೊಜ್ಜಿ ಮುಂತಾದುವುಗಳ ನಿವಾರಣೆಗೆ ದೈವಗಳನ್ನು ಶರಣು ಹೋಗುವ ಸಂದರ್ಭವಿದೆ. ಒಮ್ಮೆ ತೊಂದೆ ಮೀನಿನ ಕಾಟವನ್ನು ತಡೆಯಲಾರದೆ, ಉರ್ವ ಮಾರಿಗುಡಿಗೆ ಹರಕೆ ಹೊರಬೇಕಾಗಿ ಬಂದಿತ್ತು. ಸಮುದ್ರದಲ್ಲಿ ಅರಸು ಮೀನು(\ಚಿ”ಂಗಿಲ) ಸಮೀಪದಲ್ಲಿ ಕಾಣಸಿಕ್ಕಿದರೆ, ಹೆದರಿದ ದೋಣಿಗಾರರು ಮುತ್ತಪ್ಪ ದೈವಕ್ಕೆ ‘ಪಯಂಗುತ್ತಿ’ಯ ಹರಕೆಯನ್ನು ಹೇಳುವುದು ವಾಡಿಕೆ.

ಮುಸಲ್ಮಾನರ ನಂಬಿಕೆಯಂತೆ ಮೀನಿನ ತಲೆಯ ಇಬ್ಬದಿಯ ಸಂಧಿ ದೈವಿಕವಾದ ಗಾಯ ಅಥವಾ ‘ಬಿಸ್ಮಿ’. ಮುಸಲ್ಮಾನರು ಚೂರಿ ಹಾಕದ ಅಥವಾ ವಿಧಿವತ್ತಾಗಿ ಬಿಸ್ಮಿ ಮಾಡದ ಪ್ರಾಣಿಗಳನ್ನು ತಿನ್ನುವುದಿಲ್ಲ. ಮೀನು ಚೂರಿಗೆ ಸಿಗುವ ಮೊದಲೇ ಸಾಯುವುದರಿಂದ ಅದಕ್ಕೆ ಮೊದಲೇ ಬಿಸ್ಮಿ ಸಂಸ್ಕಾರ ಆಗಿದೆಯೆಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.

ಹೊಳೆ ಸಮುದ್ರವನ್ನು ಸೇರುವ ಅಳಿವೆ ಬಾಗಿಲ ಆಸುಪಾಸು ತುಂಬ ಭಯಜನಕ ಪ್ರದೇಶವೆಂದು ಪ್ರತೀತಿ. ಅಲ್ಲಿ ನಿರ್ದಿಷ್ಟ ರಾತ್ರಿಗಳಲ್ಲಿ ಗುಳಿಗ ಬಬ್ಬರ್ಯಾದಿ ದೈವಗಳ ಸವಾರಿ ಇದೆಯೆನ್ನುತ್ತಾರೆ. ಮಾಲ ಮೀನಿನ ಹಿಂಡು ಬಲೆಗೆ ಬಿದ್ದಾಗ ಅಳಿವೆ ಬಾಗಿಲಿನಂಥ ಸ್ಥಳಗಳಲ್ಲಿ ಗುಳಿಗ ದೈವದ ಪಂಜಿನ ಜ್ವಾಲೆಯನ್ನು ಕಂಡುದಾಗಿ ಹೇಳುವವರಿದ್ದಾರೆ. ಹಿಂದೆ ಮೈಲಿಗೆ ರೋಗದಿಂದ ತೀರಿಕೊಂಡವರನ್ನು ಚಾಪೆಯಲ್ಲಿ ಸುರುಳಿ ಸುತ್ತಿ ಅಳಿವೆಯ ಸಮೀಪ ದಫನ ಮಾಡುತ್ತಿದ್ದುದು ರೂಢಿ.

ತುಳು ನಾಡಿನಲ್ಲಿ ಮಾರಿ ಓಡಿಸುವುದೆಂಬ ವಿಧಿಯಿದೆ. ಮಾರಿಯ ಬಂಡಿ ಅಥವಾ ಪಾಪೆಯನ್ನು ಊರಿಂದೂರಿಗೆ ಕ್ರಮವತ್ತಾಗಿ ಬಲಿ ಪೂರ್ವಕ ಸಾಗಿಸುತ್ತಾ ಬಂದು ಕೊನೆಗೆ ಸಮುದ್ರಕ್ಕೆ ನೀಗಿಸಿ ಬಿಡುವುದು ವಾಡಿಕೆ. ಆಷಾಢ ಮಾಸದಲ್ಲಿ ಮಾರಿ ಕಳೆಯುವ ಆಶಯವನ್ನು ಹೊತ್ತು ಬರುವ ಆಟಿ ಕಳೆಂಜನೂ ‘ಮಾರಿ ಬೀರಿ ರೋಗ ರುಜಿನ’ ಎಲ್ಲಾ ಪಡು ಕಡಲನ್ನೇ ಸೇರಲೆಂದು ಸಾರುತ್ತಾನೆ. ಮೈಲಿಗೆ ರೋಗವಾದರೆ ಕೆಲವು ಕಡೆ ವಿಧಿವತ್ತಾಗಿ ಸಮುದ್ರಸ್ನಾನ ಮಾಡುವ ಕ್ರಮವಿದೆ.

ಬಡಗರೆಯ ಸಮೀಪ ಉತ್ಸವದ ಕೊನೆಗೆ ಭಗವತೀ ಪಾತ್ರಿಗಳು ಉಡುಪು ಆಯುಧಾದಿ ಸಮೇತ ಸಮುದ್ರ ಸ್ನಾನದ ಮೂಲಕ ಅವಭೃತವನ್ನು ಪೂರೈಸುವ ಪದ್ಧತಿಯಿದೆ. ಭಗವತಿ ದೈವಗಳು ಸಮುದ್ರ ಮಾರ್ಗವಾಗಿ ಹಡಗಿನಲ್ಲಿ ಬಂದುದೆಂಬ ಕಥೆ ಇದೆ. ಕಾನತ್ತೂರು ದೈವ ಮಂದಿರದಿಂದ ಪ್ರೇತಗಳನ್ನು ಬಿಡಿಸಿಕೊಂಡು ಬರುವವರು ಪ್ರೇತ ಆವಾಹಿತ ಪ್ರಸಾದವನ್ನು ಜತನದಿಂದ ಒಯ್ದು ಕಾಸರಗೋಡಿನ ಕಡಲಲ್ಲಿ ಅದನ್ನು ಸಮುದ್ರಕ್ಕೆ ಅರ್ಪಿಸುವುದು ರೂಢಿ.

ಅಪರ ವಿಧಿಗಳನ್ನು ಸಮುದ್ರ ತೀರದಲ್ಲಿ ಜರಗಿಸುವುದು ಸಾಮಾನ್ಯ. ಸಾಮಾನ್ಯವಾಗಿ ಅಮವಾಸ್ಯೆಗೆ ಇಂಥ ಕ್ರಿಯೆಗಳು ಹೆಚ್ಚಾಗಿ ಜರಗುತ್ತವೆ. ಅಮಾವಾಸ್ಯೆಯ, ಅದರಲ್ಲೂ ಆಟಿ, ಸೋಣ ತಿಂಗಳುಗಳ ಅಮಾವಾಸ್ಯೆಯ ಸಮುದ್ರಸ್ನಾನ ತುಂಬ ಪುಣ್ಯಪ್ರದವೆಂದು ಪ್ರತೀತಿ. ಸೋಮೇಶ್ವರದ ತೀರ್ಥಸ್ನಾನ ಬಹುಪ್ರಸಿದ್ಧವಾದುದಾಗಿದೆ. ಆದಿನ ಸಾವಿರಾರು ಮಂದಿ ಸಮುದ್ರಕ್ಕೆ ತಾಂಬೂಲ, ಹೂ, ಹಾಲು, ನಾಣ್ಯ ಇತ್ಯಾದಿಗಳನ್ನು ಅರ್ಪಿಸಿ ಸ್ನಾನ ಮಾಡುತ್ತಾರೆ.

ಕುಂದಾಪುರ ಕಡೆಯ ಕೆಲವು ದೇವಾಲಯಗಳ ಜಾತ್ರೆಯ ಓಕುಳಿಯ ಸಂದರ್ಭದಲ್ಲಿ ಹಾಡುವ ಹೌಂದ್ರಾಯನ ‘ಓಲಗ’ದ ಪದಗಳು ಸಮುದ್ರರಾಯನ ಸ್ತುತಿಗಳೆಂದೂ, ಕಡಲ ಕರಾವಳಿಯ ಪುರಾತನ ನಿವಾಸಿಗಳು ನಡೆಯಿಸುತ್ತಿದ್ದ ವರುಣನ ಪೂಜೆಯ ‘ರೂಪಾಂತರವಿದು ಎಂದೂ ಡಾ.ಕಾರಂತರು ಊಹಿಸುತ್ತಾರೆ. (ಜಾನಪದ ಗೀತಗಳು, ಪು.೧೩)

ಒಟ್ಟಿನಲ್ಲಿ ಕಡಲನ್ನು ಕಾಣದವರಿಗೆ ಅಥವಾ ಅದರಿಂದ ಬಲುದೂರ ವಾಸಿಸುವವರಿಗೆ ಕಡಲು ಒಂದು ಕೌತುಕದ ಕನಸಾದರೆ, ಕಡಲ ಕರಾವಳಿಯವರಿಗೆ ಅದು ತಮ್ಮ ಅನುದಿನದ ಸಾಂಸ್ಕೃತಿಕ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ.

ಪರಾಮರ್ಶನ ಸಾಹಿತ್ಯ

೧. J.M.Frazer The Magic Art

೨. ಶಾರದಾ, ಕನ್ನಡ ಕರಾವಳಿಯ ಮೊಗವೀರರ ಸಮಾಜೋಸಾಂಸ್ಕೃತಿಕ ಅಧ್ಯಯನ ಎಂಬ ಲೇಖನ. ದರ್ಶನ  ಭಂಡಾರಕಾರ್ಸ್ ಕಾಲೇಜು, ಕುಂದಾಪುರ, ಇದರ ವಿಶೇಷ ಸಂಚಿಕೆ

೩. ಡಾ.ಸಿದ್ಧಲಿಂಗಯ್ಯ, ಕೆಲವು ಆರಾಧನೆಗಳು ಮತ್ತು ಆಚರಣೆಗಳು ಎಂಬ ಲೇಖನ. ‘ಕರ್ನಾಟಕ ಜಾನಪದ’ದಲ್ಲಿ.

೪. ಡಾ.ಶಿವರಾಮ ಕಾರಂತ, ಜಾನಪದ ಗೀತಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು