ಈ ಸಂಕಲನದ ಲೇಖನಗಳಲ್ಲಿ ಹೆಚ್ಚಿನವು ತುಳುನಾಡಿನ ಜಾನಪದ ಜಗತ್ತಿನ ಕೆಲವು ವಿಶಿಷ್ಟ ವಿಚಾರಗಳ ಕುರಿತಾದ ಸಮೀಕ್ಷಾ ರೂಪದವು. ಅದರಲ್ಲೂ ತುಳುನಾಡಿನ ಆರಾಧನಾ ಪ್ರಸ್ಥಾನ ಹಾಗೂ ಪಾಡ್ದನ ಸಂಹಿತೆಗಳ ಕಡೆಗೆ ತುಸು ಹೆಚ್ಚಿನ ಗಮನ ಇಲ್ಲಿ ಸಂದಿದೆ. ಹಾಗೆಯೇ ತುಳುನಾಡಿನ ಸಾಂಸ್ಕೃತಿಕ ವಲಯದ ಸಂಪರ್ಕಕ್ಕೆ ಬಂದ ಕೇರಳದ ದೈವಾರಾಧನೆಯ ಕೆಲವು ನೋಟಗಳೂ ಇಲ್ಲಿವೆ.

ಜಾನಪದ ಅಧ್ಯಯನ ಕ್ಷೇತ್ರವೂ, ಅಧ್ಯಯನ ಶಿಸ್ತುಗಳೂ ಸಾಕಷ್ಟು ವಿಸ್ತಾರವಾದ ವ್ಯಾಪ್ತಿಯನ್ನು ಪಡೆಯುತ್ತಿವೆ. ತುಳು ಜಾನಪದ ಅಧ್ಯಯನ ವಲಯದಲ್ಲೂ ಸಾಕಷ್ಟು ವೈವಿಧ್ಯಪೂರ್ಣ ವಿದ್ವತ್ ಕಾರ್ಯಗಳು ನಡೆದಿವೆ; ನಡೆಯುತ್ತಿವೆ. ಈ ಲೇಖನಗಳನ್ನು ನಾನು ಮುಖ್ಯವಾಗಿ ಜಾನಪದದ ಸಾಮಾನ್ಯ ಆಸಕ್ತರನ್ನೂ, ಜಾನಪದದ ವಿದ್ಯಾರ್ಥಿಗಳನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಬರೆದುದಾಗಿದೆ. ಸೈದ್ಧಾಂತಿಕ ಸ್ತರದ ಸೂಕ್ಷ್ಮಾತಿಸೂಕ್ಷ್ಮ ವಿಶ್ಲೇಷಣೆಯನ್ನು ಇಲ್ಲಿ ಹೆಚ್ಚಾಗಿ ನಿರೀಕ್ಷಿಸುವಂತಿಲ್ಲ.

ಇಲ್ಲಿಯ ಕೆಲವು ಲೇಖನಗಳಲ್ಲಿ ವಿಷಯಗಳಲ್ಲಿ ಪರಸ್ಪರ ಸಂಬಂಧವಿರುವುದರಿಂದ ಕೆಲವೆಡೆ ಸ್ವಲ್ಪ ಪುನರಾವರ್ತನೆಗಳು ತಲೆದೋರಿರಬಹುದು; ದಯವಿಟ್ಟು ಮನ್ನಿಸಬೇಕು. ಈ ಲೇಖನಗಳಿಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನೂ ಚಿತ್ರಗಳನ್ನೂ ಒದಗಿಸಿದ ಮಿತ್ರರಿಗೆ ಕೃತಜ್ಞತೆಗಳು. ಹೆಸರರಿಯದ ಪಾಡ್ದನ ಕರ್ತೃಗಳಿಗೂ ನನ್ನ ನಮನಗಳು ಸಲ್ಲುತ್ತವೆ.

ಈ ಸಂಕಲನ ರೂಪುಗೊಳ್ಳಲು ಕನ್ನಡ ವಿಶ್ವವಿದ್ಯಾಲಯ, ಹಂಪಿ ಇದರ ಕುಲಪತಿಗಳಾದ ಪ್ರೊ.ಬಿ.ಎ.ವಿವೇಕ ರೈ ಅವರ ಸ್ನೇಹಪೂರ್ಣ ಸೂಚನೆಯೇ ಕಾರಣ. ಅದಕ್ಕಾಗಿ ಅವರಿಗೆ ಅತ್ಯಂತ ಋಣಿಯಾಗಿದ್ದೇನೆ. ಪುಸ್ತಕವನ್ನು ಪ್ರಕಟಿಸಿದ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ವಿಶೇಷತಃ ಅದರ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ನಾನು ಅತ್ಯಂತ ಆಭಾರಿಯಾಗಿದ್ದೇನೆ.

ಈ ಪುಸ್ತಕದ ಅಕ್ಷರ ಸಂಯೋಜನೆ ಮಾಡಿರುವ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್ ಅವರಿಗೂ ಮುದ್ರಿಸಿರುವ ಆದಿತ್ಯ ಪ್ರಿಂಟರ್ಸ್, ಬೆಂಗಳೂರು ಅವರಿಗೂ ನಾನು ಆಭಾರಿ.

ಅಮೃತ ಸೋಮೇಶ್ವರ
‘ಒಲುಮೆ’, ಕೋಟೆಕಾರು, ದ.ಕ.      
೧೫.೦೮.೨೦೦೬