ದೈವಪ್ರಪಂಚದಲ್ಲಿ ಗುಳಿಗನದು ಒಂದು ಅದ್ಭುತ ಸೃಷ್ಟಿ ಎನ್ನಬಹುದು. ಈ ದೈವತದ ಬಗೆಗೆ ಜನಪದರು ಬೆಳೆಸಿಕೊಂಡ ಕುತೂಹಲ, ಭಯ ಭಕ್ತಿ, ಇರಿಸಿಕೊಂಡ ಕಲ್ಪನೆಗಳು, ಕಟ್ಟಿದ ಐತಿಹ್ಯ ಪುರಾಣಗಳು ವಿಶಿಷ್ಟವಾಗಿವೆ. ಕೇರಳ ಮತ್ತು ಕರಾವಳಿ ಕರ್ಣಾಟಕದಲ್ಲಿ ಗುಳಿಗ ಬೇರೆ ಬೇರೆ ರೂಪಗಳಿಂದ ಆರಾಧ್ಯಶಕ್ತಿಯಾಗಿದ್ದಾನೆ. ಕೇರಳದಲ್ಲಿ ಇವನನ್ನು ‘ಕುಳಿಯನ್’ ಎಂದು ಕರೆಯುತ್ತಾರೆ.

ಗುಳಿಗ (ಅಥವಾ ಗುಳಿಕ) ‘‘ನವಗ್ರಹಗಳಿಂದ ಹೊರತಾಗಿ ಜಾತಕನಿಗೆ ಅಶುಭವನ್ನು ತರುವ ಒಂದು ಕ್ರೂರವಾದ ಉಪಗ್ರಹ’’ (ಕನ್ನಡ ನಿಘಂಟು, ಪು. ೧೯೬೭) ಅವನು ಶನಿಯ ಮಗನೆಂದು ಪ್ರತೀತಿ. ಜ್ಯೋತಿಷ್ಯಶಾಸ್ತ್ರದಲ್ಲಿ ಗುಳಿಗನನ್ನು ಮಾಂದಿ(ಮಂದನ ಮಗ) ಎಂದು ನಿರ್ದೇಶಿಸುತ್ತಾರೆ. ತಾಮಸ ಪ್ರಕೃತಿಯ ಈತ ಅಶುಭದಾಯಕನೂ ಮೃತ್ಯುಕಾರಕನೂ ಎನಿಸಿದ್ದಾನೆ. ದಿನವೂ ಒದಗುವ ನಿರ್ದಿಷ್ಟ ಅವಧಿಯ ಗುಳಿಕ ಕಾಲವು. ಗುಳಿಕನು ಅಭಿಮಾನೀದೇವತೆಯಾಗಿರುವ ಕಾಲವಾಗಿದೆ. ಈ ಕಾಲಾವಧಿಯು ರಾಹು ಕಾಲದಂತೆಯೇ ಅಶುಭಪ್ರದವೆಂದು ಹೇಳಲಾಗಿದೆ.

ಕುಳಿಕ ಎಂಬುದು ಅಷ್ಟನಾಗರಾಜರಲ್ಲಿ ಒಬ್ಬನ ಹೆಸರಾಗಿದೆ. ಹಾಗಾಗಿ ಗುಳಿಕನು ನಾಗಸ್ವರೂಪಿಯೂ ಅಹುದು. ಜ್ಯೋತಿಷ್ಯಶಾಸ್ತ್ರದಲ್ಲಿ ರಾಹುವನ್ನು ಸರ್ಪರೂಪಿ ಎಂದು ತಿಳಿಯುವುದುಂಟು. ರಾಹುವಿನಿಂದ ಒಡಗೂಡಿದ ಸಂಯುಕ್ತ ಶಕ್ತಿಗೆ ರಾಹುಗುಳಿಗ ಎನ್ನುತ್ತಾರೆ. ನಾಗನಿಗೆ ಬನಗಳಿರುವಂತೆಯೇ ಗುಳಿಗನಿಗೂ ಬನಗಳಿರುವುದುಂಟು. ಅಲ್ಲಿ ಗುಳಿಗನ ಕಲ್ಲುಗಳಿರುವುದುಂಟು. ಕಾಡುಬೆಟ್ಟಗಳ ಗುಳಿಗಳಲ್ಲಿ ನೆಲಸಿರುವವನಾದುದರಿಂದ ಗುಳಿಗ ಎಂದು ಹೆಸರಾಯಿತೆಂದು ವೆಂಕಟರಾಜ ಪುಣಿಂಚತ್ತಾಯರು ಅಭಿಪ್ರಾಯಪಡುತ್ತಾರೆ.

ಗುಳಿಗನ ಉದ್ಭವದ ಕುರಿತು ವಿಚಿತ್ರವಾದ ಕಥನಗಳುಂಟು. ಗುಳಿಗನ್ ದೈವದ ಒಂದು ‘ತೋಟ್ರಂ’ನಲ್ಲಿ ಅವನ ತಂದೆ ಆದಿತ್ಯನೆಂದೂ ತಾಯಿ ಕಾಲಾಗ್ನಿಯೆಂದೂ ಹೇಳಲಾಗಿದೆ. ಅವನ ಕಾಲು ಭೂಮಿಯಲ್ಲೂ ತಲೆ ಆಕಾಶದಲ್ಲೂ ವ್ಯಾಪಿಸಿರುವಂತೆ ವರ್ಣನೆ ಇದೆ. ವೃತ್ತಾಕಾರವಾದ ದೊಡ್ಡ ಕಣ್ಣುಗಳು, ಮಾಡಿನ ತೋಳಿನಂಥ ನಾಲಗೆ, ಕೊಡಲಿಯಂತೆ ಹರಿತವಾದ ಹಲ್ಲುಗಳು, ತೆಂಗಿನ ಮರದಂತಿರುವ ಕಾಲುಗಳು, ಕವುಂಗಿನ ಮರಗಳಂತಿರುವ ಕೈಗಳು -ಇವುಗಳಿಂದ ಕೂಡಿದ ಭಯಂಕರಾಕೃತಿ, ದಂಡ, ಶೂಲಗಳು ಆಯುಧಗಳು. ಇವನು ರುದ್ರಾಂಶದವನೆಂದು ನಂಬಿಕೆ.

ಇಂದ್ರಜಿತುವಿನ ಜನನ ಕಾಲದಲ್ಲಿ ಗ್ರಹಗತಿಯನ್ನು ನೇರ್ಪುಗೊಳಿಸುವ ಉದ್ದೇಶದಿಂದ ಶನಿಯ ಗತಿಯನ್ನು ನಿಯಂತ್ರಿಸಲು ರಾವಣ ತನ್ನ ಚಂದ್ರಹಾಸಖಡ್ಗದಿಂದ ಶನಿಯ ಕಾಲನ್ನೇ ಕಡಿದನಂತೆ. ಕಡಿದುಬಿದ್ದ ಶನಿಯ ಕಾಲಿನ ತುಂಡಿಗೆ ತ್ರಿಮೂರ್ತಿಗಳು ಸೇರಿ ಒಂದು ‘ಸಂಕಲ್ಪ’ ಮಾಡಿ ಒಂದು ಗ್ರಹದ ಸ್ಥಾನವನ್ನು ನೀಡಿದರಂತೆ. ಅದುವೇ ಗುಳಿಗ ಎನ್ನಿಸಿತಂತೆ. ಗುಳಿಗನಿಗೆ ಸಂಬಂಧಪಟ್ಟ ಒಂದು ತುಳುಪಾಡ್ದನ ಹೀಗೆನ್ನುತ್ತದೆ:

ತಂದೆಯೆಂದರೆ ಗಾಳಿದೇವರು, ತಾಯಿಯೆಂದರೆ ಬಾಗ ಭದ್ರಕಾಳಿ, ತಾಯಿಯ ಎಡಭಾಗದಲ್ಲಿ ತಂದೆಯ ಬಲಭಾಗದಲ್ಲಿ ಹುಟ್ಟಿದ ಮಗ. ತಿಂಗಳು ಪೂರ್ಣ ತುಂಬಿದಾಗ ಎಲ್ಲಿಂದ ಬರಬೇಕು ಅಮ್ಮ ಎಂದು ಕೇಳಿದ. ಹಾಗಾದರೆ ದೇವರು ಕೊಟ್ಟ ಬಾಗಿಲು ಇದೆ ಅಲ್ಲಿಂದ ಬಾ ಎಂದಳು. ಅಲ್ಲಿಂದ ಬರಲಾರೆ ಎಂದ. ತಲೆಯೊಡೆದು, ಬೆನ್ನೊಡೆದು ಬಾ ಎಂದರೂ ಬರಲಿಲ್ಲ. ಸಿರಿಮೊಲೆ ಒಡೆದು ಬರುತ್ತೇನೆಂದ. ಹಾಗೆ ಬಂದು ತಾಯಿಯ ಬಲಮೊಲೆ ತಿಂದು ಕೈತಟ್ಟಿ ನಕ್ಕ, ಅಷ್ಟಾಗುವಾಗ ಹದಿನಾರು ಕಾಳರು, ಹದಿನಾರು ದೂತರು, ಶನಿ ಗುಳಿಗ, ಮಂತ್ರಗುಳಿಗ, ಗುಳಿಗಬಂಟ, ಮಾರ್ನಗುಳಿಗ ಬಂದರು.

ಹುಟ್ಟಿ ಹದಿನಾರು ದಿವಸವಾದಾಗ ಭೂಮಿ ಬಿಡುತ್ತೇನೆ, ಆಕಾಶದಲ್ಲಿರುತ್ತೇನೆ ಎಂದು ಹೇಳಿದ. ಆಕಾಶಕ್ಕೆ ಹೋಗಿ ನಾರಾಯಣ ದೇವರನ್ನು ಹಣ್ಣೆಂದು ತಿನ್ನಲು ಹೋದ. ಹೀಗೆ ಮಾಡುವುದು ಬೇಡ, ನಿನಗೆ ಬೇಕಾದ ಆಹಾರ ಕೊಡುತ್ತೇನೆ ಎಂದರು ನಾರಾಯಣ ದೇವರು (ಹೀಗೆ ಹೇಳುವುದು ಶಿವನೆಂದು ಬೇರೊಂದು ಪಾಡ್ದನದಲ್ಲಿದೆ) ಕುರಿ ಕಡಿದು ಕುರಿಯ ಬಿಂದು (ರಕ್ತ) ಕೊಟ್ಟರು. ಬಾಯಿ ತಣಿಯಿತೋ ಹೊಟ್ಟೆ ತಣಿಯಿತೋ ಎಂದು ಕೇಳಿದರು. ಇಲ್ಲವೆಂದ ಗುಳಿಗ. ಕುದುರೆ ಕಡಿದು ಕುದುರೆಯ ‘ಬಿಂದು ಕೊಟ್ಟರು. ಒಂಟೆ ಕಡಿದು ಒಂಟೆಯ ಬಿಂದು ಕೊಟ್ಟರು. ತೃಪ್ತಿಯಾಗಲಿಲ್ಲ. ‘ನಿನಗೆ ಕೆಳಗೆ ಸಿರಿಲೋಕದಲ್ಲಿ ನರಹುಳಗಳನ್ನು ಸೃಷ್ಟಿ ಮಾಡಿದ್ದೇನೆ ಅವರಿಂದ ಬೇಕಾದುದನ್ನು ಪಡೆದುಕೋ. ನಿನ್ನನ್ನು ಹಗ್ಗದ ಸೇತುವೆಯ ಮೂಲಕ ನೂಲಿನ ಕೈಸಾಂಗಿನಲ್ಲಿ (ಆಧಾರದ ಹಗ್ಗ) ನಾಡಿಗೆ ಕಳುಹಿಸುತ್ತೇನೆ ಎಂದರು ನಾರಾಯಣ ದೇವರು.

‘‘ನಾನು ಇಲ್ಲಿಗೆ ಯಾವಾಗ ಬರಲಿ?’’ ಎಂದು ಕೇಳಿದ್ದಕ್ಕೆ, ‘‘ಆಕಾಶದವರೆಗೆ ಎಟಕುವ ಏಣಿ, ಪಾತಾಳ ಹೊಲಿಯುವ ಸೂಜಿ, ಹೊಯ್ಗೆಯ ಹುರಿ ಹಗ್ಗ, ಗೆರಸೆಯ ಬಂದಣಿಕೆ, ಒನಕೆಯ ನಾರು, ಸಮುದ್ರ ಅಳೆಯುವ ಸೇರು ತಂದು ಕೊಟ್ಟರೆ ಇಲ್ಲಿಗೆ ಬಂದು ಬಲಿಭೋಗ ಪಡೆಯಬಹುದು’’ ಎಂದರು ದೇವರು. ಆಗಬಹುದೆಂದು ಒಪ್ಪಿ ಗುಳಿಗ ಭೂಮಿಗೆ ಇಳಿದ.

ಇನ್ನೊಂದು ಪಾಡ್ದನದಲ್ಲಿ ಪೂರ್ವಾರ್ಧಭಾಗ ಹೀಗೆಯೇ ಇದೆ. ಬೇರೆ ಕೆಲವು ವಿವರ ಹೀಗಿದೆ: ಹದಿನಾರನೆಯ ದಿನ ತೊಟ್ಟಿಲ ಮಗು ತೊಟ್ಟಿಲು ಸಹಿತ ಆಕಾಶಕ್ಕೆ ನೆಗೆಯಿತು. ನಾಲ್ಕು ಕೈಯ ನಾರಾಯಣ ದೇವರು ಗರುಡನನ್ನೇರಿ ನರಲೋಕ ನೋಡಲು ಹೊರಟಾಗ ತೊಟ್ಟಿಲ ಮಗು ದೇವರನ್ನು ನುಂಗಲು ಹವಣಿಸಿತು. ನಾರಾಯಣ ದೇವರು ಚಕ್ರವನ್ನು ಅಡ್ಡ ಹಿಡಿದ.

ವಿವಿಧ ಪ್ರಾಣಿಗಳನ್ನು ಕೊಂದು ಬಿಂದುಕೊಟ್ಟ ವಿವರ ಈ ಪಾಡ್ದನದಲ್ಲೂ ಇದೆ. ಬಾಲಕನ ಹಸಿವು ಇಂಗದಿರಲು ನಾರಾಯಣ ದೇವರು ನೆತ್ತರಿನ ಗುಳಿಗೆ(ಉಂಡೆ)ಯನ್ನು ಅವನ ಬಾಯಿಗೆ ಇಕ್ಕಿದಾಗ ಅವನ ಹಸಿವು ತತ್ಕಾಲಕ್ಕೆ ಅಡಗಿತಂತೆ. ನೆತ್ತರಿನ ಗುಳಿಗೆ ನುಂಗಿದ ಅವನಿಗೆ ‘ನೆತ್ತೆರ್ ಗುಳಿಗೆ’ ಎಂಬ ಹೆಸರು ಬಂತಂತೆ.(ಎಷ್ಟು ಆಹಾರವಿತ್ತರೂ ಹಸಿವು, ತೃಷೆ ಇಂಗದಿರುವ ಸ್ಥಿತಿಯು ಇತರ ಕೆಲವು ದೈವಗಳ ಕಥನಗಳಲ್ಲಿಯೂ ವರ್ಣಿತವಾಗಿದೆ. ಉದಾ : ಪಂಜುರ್ಳಿ, ಕುಮಾರದೈವ, ಚೀರುಂಬ(ಶ್ರೀ ಕುರುಂಬಾ) ಭಗವತಿ, ಪಂಚ ಜುಮಾದಿ -ಇತ್ಯಾದಿ. ಇದು ಆಯಾ ದೈವದ ಶಕ್ತಿ, ಉಗ್ರತೆ ಮಹಿಮೆಗಳನ್ನು ಪ್ರಕಟಿಸುತ್ತದೆ. ಮಲೆ ಜುಮಾದಿಯ ಪಾಡ್ದನದಲ್ಲೂ ನಾರಾಯಣ ದೇವರ ಕಿರುಬೆರಳ ನೆತ್ತರು ಹೀರಿದ್ದರಿಂದ ದೇವರಿಗೆ ಮೂರ್ಚ್ಛೆಯಾಯಿತೆಂಬ ವರ್ಣನೆ ಇದೆ.)

‘‘ಮಗು ಗುಳಿಗಾ, ನಿನ್ನ ಉದ್ಭವ ಚೋದ್ಯದ ಕಥೆಯಾಯಿತು. ಭೂಮಿಗೆ ಹೋಗು, ಅನ್ಯಾಯದವರಿಗೆ ‘ಗುಳಿಗಪೆಟ್ಟು’ ಹೊಡೆ, ‘ಗುಳಿಗ ದೃಷ್ಟಿ’ ಹಾಕು. ಮೂರು ಕಲ್ಲು ಹಾಕಿ, ಕೋಳಿ ಕೊಯ್ದು ಬಿಂದು ಕೊಟ್ಟವನಿಗೆ ರಾವುಗುಳಿಗನೆಂದು ಇಂಬುಕೊಡು’’ ಎಂದು ನಾರಾಯಣ ದೇವರು ಅನುಗ್ರಹಿಸಿದರು. ಮೂರು ಮೊನೆಯ ಶೂಲವನ್ನು ಧರಿಸಿ ಭೂಮಿಲೋಕಕ್ಕೆ ಬಂದ ಗುಳಿಗ.

ಚಾಮುಂಡಿ ಗುಳಿಗನಿಗೆ ಎದುರಾದಾಗ ಮೂರು ಮೊನೆಯ ಶೂಲ ಹಿಡಿದು ನಿಂತ. ಚಾಮುಂಡಿ, ‘‘ನಾನೇ ಭದ್ರಕಾಳಿ, ನಿನ್ನ ತಾಯಿ’’ ಎಂದಳು. ಗಾಳಿ ದೇವರ ಮಗನಾದ ನೀನು ಗಾಳಿ ಸೋಂಕು, ದೃಷ್ಟಿಗೆ ನನ್ನ ಜೊತೆಯ ಬಂಟನಾಗಿರು ಎಂದಳು. ಹೀಗೆ ಗುಳಿಗ, ಚಾಮುಂಡಿ ಗುಳಿಗ ಆದ. (ಕೆ.ಅನಂತರಾಮ ಬಂಗಾಡಿ – ‘ತುಳುಬೊಳ್ಳಿ’, ಸೆಪ್ಟೆಂಬರ್ ೧೯೯೭)

ಗುಳಿಗ ದೈವದ ಇನ್ನೊಂದು ಪಾಡ್ದನದಲ್ಲಿ ಶಿವನಿಂದ ಜನ್ಮ ತಳೆದ ಗುಳಿಗನಿಂದ ಆ ದೇವರಿಗೇ ಹೇಗೆ ಪೇಚುಂಟಾಯಿತು ಎಂಬುದರ ವರ್ಣನೆ ಇದೆ. ಯಾವುದೋ ಒಂದು ಕೊಳುಗುಳದಲ್ಲಿ ತನ್ನ ಪಾಳ್ಯ ನಾಶವಾಯಿತೆಂದು ಅಳಲತೊಡಗಿದ ಈಶ್ವರನ ಕಣ್ಣೀರ ಬಿಂದು ಆತನ ಪಾದದ ಸಂದಿಗೆ ಬಿದ್ದು, ಅಲ್ಲಿಂದ ಗುಳಿಗನ ಉದ್ಭವವಾಯಿತಂತೆ. ‘‘ಆಣ ಉದ್ಯ ಬೆಂದನಾ? ಪೊಣ್ಯ ಉದ್ಯ ಬೆಂದನಾ?’’(ಗಂಡಾಗಿ ಹುಟ್ಟಿದೆಯಾ? ಹೆಣ್ಣಾಗಿ ಹುಟ್ಟಿದೆಯಾ?) ಎಂದು ಈಶ್ವರ ಕೇಳಿದಾಗ, ‘‘ಆಣಾಂಡದಾನೆ? ಪೊಣ್ಣಾಂಡದಾನೆ? ಯಾನೊಂಜಿ ಅಬತಾರ ತೋಜಿಪಾವೆ’’(ಗಂಡಾದರೇನು, ಹೆಣ್ಣಾದರೇನು? ನಾನೊಂದು ಅವತಾರ ತೋರಿಸುತ್ತೇನೆ) ಎಂದವನೆ ಗುಳಿಗ ಮೂಗಿನ ಸುಯ್ಲಿನಿಂದ ಮುನ್ನೂರು ಮಂದಿಯನ್ನೂ, ಬಾಯಿಯ ಉಸುರಿನಿಂದ ಸಾವಿರ ಮಂದಿಯನ್ನೂ ನಾಶಮಾಡಿದ.

ಉಗ್ರರೂಪದಿಂದ ಕೆರಳಿ ನಿಂತ ಗುಳಿಗನಿಗೆ ತೃಪ್ತಿಯಾಗಲೆಂದು, ‘ನಂದಗೋಪತಿ ಬಾಲಮಂಟಪ’ದಲ್ಲಿ ಸಾವಿರ ಆನೆ ಕಡಿಸಿದ ಈಶ್ವರ. ‘‘ಬಂಜಾರ್ಂಡ ಕುಮಾರ, ಬಾಯಾರ್ಂಡ ಕುಮಾರ, ಬತ್ತಿ ಕಪ್ಪಲ್ ದಿಂಜಿಂಡ?’’(ಹೊಟ್ಟೆ ತುಂಬಿತೆ ಕುಮಾರ, ಬಾಯಾರಿಕೆ ಇಂಗಿತೇ ಕುಮಾರ, ಬಂದ ಹಡಗು ತುಂಬಿತೆ?) ಎಂದು ಕೇಳಿದ ‘ಇಲ್ಲ’ ಎಂಬ ಉತ್ತರ ಬಂತು. ಸಾವಿರ ಕುದುರೆ, ಸಾವಿರ ಕೋಳಿಗಳ ಸರದಿಯಾಯಿತು; ತೃಪ್ತಿ ಯಾಗಲಿಲ್ಲ…..

ಮುಂದಿನ ವಿವರಗಳು ಮತ್ತು ಶರ್ತಗಳು ಈ ಮೊದಲು ಉಲ್ಲೇಖಿಸಿದ ಪಾಡ್ದನ ಭಾಗಗಳಂತೆಯೇ ಇದೆ. ನಾರಾಯಣನ ಬದಲಿಗೆ ಇಲ್ಲಿ ಶಿವನು ಕಾಣಿಸಿಕೊಂಡಿದ್ದಾನೆ. ಭೂತಸಂಬಂಧ ದೃಷ್ಟಿಯಿಂದ ಶಿವನ ಪಾತ್ರವೇ ಉಚಿತವೆನ್ನಬಹುದು.

ದಾರುಕ ವಧಾ ಪ್ರಸಂಗದಲ್ಲಿ ಬರುವ ‘ಆದಿವೇತಾಳ’ನೇ ಗುಳಿಗನೆಂದು ಒಂದು ಅಭಿಪ್ರಾಯವಿದೆ. ವೇತಾಳನ ಭಯಂಕರ ಸ್ವರೂಪದ ವರ್ಣನೆ ಅದ್ಭುತವಾಗಿದೆ. ಎರಡು ಆನೆಗಳನ್ನೇ ಕರ್ಣಕುಂಡಲವಾಗಿ ಆತ ತೂಗಿಸಿಕೊಂಡಿದ್ದನಂತೆ!

ಭಗವತಿಗಳ ಕಥನಗಳಲ್ಲಿ ಗುಳಿಗ ಆರ್ಯರಾಜನಲ್ಲಿ ೧೮ ಚಾವಡಿಗಳಿಗೆ ಕಾರ್ಯಸ್ಥನಾಗಿ ಇದ್ದವನೆಂದೂ, ಸಾವಿರ ‘ಪಾರ’ ಭಾರದ ದಂಡಾಯುಧ ಧರಿಸಿದವನೆಂದೂ, ಮುಂದೆ ಭಗವತಿಯ ನೌಕೆಗೆ ‘ಚುಕ್ಕಕಾರನ್ ’ (ಕರ್ಣಧಾರ) ಆಗಿ ಒದಗಿದನೆಂದೂ ಹೇಳಲಾಗಿದೆ. ಒಂದು ಕಥನದಂತೆ ಆರ್ಯನಾಡಿನ ರಾಜ ಮರಕ್ಕಲ(ನೌಕೆ)ವನ್ನು ಸಿದ್ಧಪಡಿಸಿ ದೇವಕನ್ಯೆಯರ ಜೊತೆಗೆ ಧೈರ್ಯಕ್ಕೆ ಆರ್ಯನಾಡಿನ ಪಡೆಯಪ್ರಮುಖನಾದ ಗುಳಿಗನನ್ನೆ ಚುಕ್ಕಾಣಿಗಾರನಾಗಿ ಕಳುಹಿಸಿದ. ಚುಕ್ಕಾಣಿಗಾರನ ಸಾಮರ್ಥ್ಯ ಎಷ್ಟೆಂದು ತಿಳಿಯಲು ದೇವಿ ಪಾದೆಕಲ್ಲಿನಲ್ಲಿ ಒಂದು ಶೂಲವನ್ನು ಬರೆದು ಅದನ್ನು ತೆಗೆದುಕೊಂಡು ತನ್ನೊಂದಿಗೆ ಬರಬೇಕೆಂದಳು. ಕಣ್ಣು ರೆಪ್ಪೆ ತೆರೆಯುವುದರೊಳಗೆ ಪಾದೆಕಲ್ಲಿನಿಂದ ಶೂಲವನ್ನು ತೆಗೆದುಕೊಂಡು ಯಾತ್ರೆಗೆ ಸಿದ್ದನಾದ. ಸಂತುಷ್ಟಳಾದ ದೇವಿ ತನ್ನ ಸೊಂಟದಿಂದ ಒಂದು ಮಣಿ(ಘಂಟಾಮಣಿ) ತೆಗೆದು ಗುಳಿಗನಿಗೆ ಬಹುಮಾನವಿತ್ತಳು. ಒಂದು ಕೈಯಲ್ಲಿ ಶೂಲ, ಮತ್ತೊಂದರಲ್ಲಿ ಘಂಟಾಮಣಿ ಹಿಡಿದುಕೊಂಡು ಗುಳಿಗನು ಮುಂದೆಯೂ ದೇವಿ ಅವನ ಹಿಂದೆಯೂ ಪಯಣಿಸಿದರು.

ಹಡಗಿನ ಪಯಣದಲ್ಲಿ ಆಮುಟ್ಟಿ ಭಗವತಿಯು ಗುಳಿಗನನ್ನು ಕಡಲಿಗೆ ಬೀಳಿಸಿದುದಾಗಿಯೂ, ಉಚ್ಚೂಳಿ ಕಡವು ಭಗವತಿ ಆತನಿಗೆ ಒಂದು ಹಲಗೆಯನ್ನು ಬಿಸಾಡಿದಳೆಂದೂ, ಅದರ ಸಹಾಯದಿಂದ ಈಸಿ ಮೋರೆಯಿ ಕಡಲಕರೆಗೆ ಹತ್ತಿದನೆಂದೂ ಕಥೆಯಿದೆ. ಸಾಮಾನ್ಯವಾಗಿ ಎಲ್ಲ ಭಗವತೀ ಕ್ಷೇತ್ರಗಳಲ್ಲೂ ಗುಳಿಗನಿಗೆ ಸ್ಥಾನವಿದೆಯೆನ್ನ ಬಹುದು. ಇವನನ್ನು ‘ಕಾರ್ಯಕಾರನ್’ ಎಂದೂ ಕರೆಯುತ್ತಾರೆ.

ಗುಳಿಗ ಹಲವಾರು ಹೆಸರುಗಳಿಂದ ಪ್ರಸಿದ್ಧನಾಗಿದ್ದಾನೆ. ಉದಾ : ಮಂತ್ರಗುಳಿಗ, ತಂತ್ರಗುಳಿಗ, ಅಂತರಗುಳಿಗ, ಆಕಾಶಗುಳಿಗ, ಉಮ್ಮಟಗುಳಿಗ, ಅಂಬರಗುಳಿಗ, ಭೂಮಿಗುಳಿಗ, ನೆತ್ತರುಗುಳಿಗ, ನೀರುಗುಳಿಗ, ಸನ್ನಿಗುಳಿಗ, ಚವುಕಾರ ಗುಳಿಗ, ಮೂಕಾಂಬಿಗುಳಿಗ, ನೀರುಗುಳಿಗ, ಪಾಮಾಜಿ ಗುಳಿಗ, ಕಾಲೆಗುಳಿಗ, ಮಾರ್ನಗುಳಿಗ, ಬಾರ್ಣೆ ಗುಳಿಗ, ರಾಹುಗುಳಿಗ, ಸಾದಿಗುಳಿಗ, ಬೀದಿಗುಳಿಗ, ಒಚ್ಚಾರಗುಳಿಗ, ಎಂಬ್ರಾನ್ ಗುಳಿಗ, ಪುಲಗುಳಿಗ ಇತ್ಯಾದಿ. ನೂರೆಂಟು ಗುಳಿಗರಿದ್ದಾರೆಂದು ಪ್ರತೀತಿ.

ಗುಳಿಗನನ್ನು ಕೆಲವೆಡೆ ‘ಕ್ಷೇತ್ರಪಾಲ’ನೆಂದೂ ತಿಳಿಯುತ್ತಾರೆ. ತುಳುನಾಡಿನ ಆಲಡೆಯ ದೈವಗಳಲ್ಲಿ (ನಾಗ, ನಂದಿ, ಬೆರ್ಮೆರ್, ಲೆಕ್ಕೇಸಿರಿ, ಕ್ಷೇತ್ರಪಾಲ) ಕ್ಷೇತ್ರಪಾಲನೂ ಇದ್ದಾರೆ. ಇದು ಗುಳಿಗನ ಇನ್ನೊಂದು ಸ್ವರೂಪವಿರಬಹುದು. ಕುಂದಾಪುರದ ಕಡೆ ಹಾಯ್ಗುಳಿ ಎಂದು ಕರೆಯಲ್ಪಡುವ ದೈವ ಗುಳಿಗನೇ ಎಂದು ತಿಳಿಯಬಹುದಾಗಿದೆ. ಅವನಿಗೆ ನಾಗಸ್ವರೂಪವೂ ಇರುವುದರಿಂದ ಕಾಳಿಂಗನ (ಕಾಡ್ಯ) ಗುಡಿಯೊಳಗೆ ಹಾಯ್ಗುಳಿಯ ನೆಲೆ ಇರುವುದು ಸಹಜವಾಗಿದೆ. (ಎ.ವಿ.ನಾವಡ ೧೯೯೨)

ಗುಳಿಗ ಮಂತ್ರದೇವತೆಯೆಂದು ಖ್ಯಾತನಾಗಿದ್ದಾನೆ. ಹದಿನೆಂಟು ಪ್ರಸಿದ್ಧ ಮಂತ್ರವಾದಿಗಳ ಊರುಗಳಲ್ಲಿ ಇವನು ನೆನಸಿದನೆಂದು ಹೇಳಲಾಗಿದೆ. ಆಲ, ಸಂಪಿಗೆ, ತಾಳೆಮರ ಇತ್ಯಾದಿ ವೃಕ್ಷಗಳ ಬಳಿ ಹಾಗೂ ಅಳಿವೆ ಬಾಗಿಲು ಮೊದಲಾದೆಡೆ ಇವನ ಸಂಚಾರ, ಸಾನ್ನಿಧ್ಯ ಇರುವುದಾಗಿ ಹೇಳಿಕೆ. ಸಂಧ್ಯಾಕಾಲಗಳಲ್ಲಿ ಇವನ ಸಂಚಾರ ಹೆಚ್ಚೆನ್ನುತ್ತಾರೆ. ಗುಳಿಗನ ‘ಸೂಟೆ’ (ಉರಿಯುವ ಸೂಡಿ)ಯನ್ನು ಕಂಡೆವೆಂದು ಹೇಳುವವರುಂಟು. ಕೋಲದಲ್ಲಿ ಉರಿಯುವ ಸೂಟೆಯನ್ನು ಗುಳಿಗ ಧರಿಸುತ್ತಾನೆ.

ಗುಳಿಗನ ಸವಾರಿಯ ವೇಳೆ ಇದಿರಿಗೆ ಸಿಕ್ಕಬಾರದೆನ್ನುತ್ತಾರೆ. ಕೆಲವೊಮ್ಮೆ ಹೃದಯಾಘಾತಕ್ಕೆ ಗುಳಿಗನ ಪೆಟ್ಟು ಕಾರಣವೆಂದು ತಿಳಿಯುತ್ತಿದ್ದುದುಂಟು. ಗುಳಿಗನಿಗೆ ಊರ್ಧ್ವದೃಷ್ಟಿ ಎಂಬುದು ನಂಬಿಕೆ. ರಾವುಗುಳಿಗನ ಉಗ್ರವಾದ ಹಸಿವು ಪ್ರಸಿದ್ಧವಾದದ್ದು.

ತುಳು ಸಂಪ್ರದಾಯದಲ್ಲೂ ಮಲೆಯಾಳ ಸಂಪ್ರದಾಯದಲ್ಲೂ ಗುಳಿಗನಿಗೆ ಕೋಲಸೇವೆ ನೀಡುವುದಿದೆ. ಅಂಥ ವೇಳೆ ಕೆಂಡಸೇವೆ ಜರಗಿಸುತ್ತಾರೆ. ತುಳುನಾಡಿನ ಕೋಲಗಳಲ್ಲಿ ಕೆಲವೆಡೆ ಗುಳಿಗ ಮಲೆಯಾಳದಲ್ಲಿ ನುಡಿಗಟ್ಟು ತೊಡಗಿ ಮತ್ತೆ ತುಳುವಿನಲ್ಲಿ ಮುಂದುವರಿಸುತ್ತಾನೆ. ಕೋಲಕಟ್ಟುವವನು ಮುಖಕ್ಕೆ ಕಪ್ಪು ಹಚ್ಚಿ ಹಣೆಯಲ್ಲಿ ತ್ರಿಶೂಲ ಬರೆಯುತ್ತಾನೆ ಮಲೆಯಾಳ ಸಂಪ್ರದಾಯದಲ್ಲಿ ಮುಖಕ್ಕೆ ಮುಖವಾಡ ಕಟ್ಟಿಕೊಳ್ಳುತ್ತಾರೆ. ‘ಪೊಟ್ಟಂತೆಯ್ಯಂ’ ಎಂಬ ದೈವಕ್ಕೂ ಇದೇ ಬಗೆಯ ಮುಖವಾಡ ಇರಿಸುತ್ತಾರೆ. ‘ಕಳಿಯಾಟಂ’ ಸಂದರ್ಭದಲ್ಲಿ ಕೆಲವೆಡೆ ಗುಳಿಗನಿಗೆ ಮುಖವಾಡ ಸಹಿತವಾದ ನೀಳಮುಡಿಯನ್ನು ತೊಡಿಸುತ್ತಾರೆ. ಕೈಯಲ್ಲಿ ತ್ರಿಶೂಲ ಮತ್ತು ಘಂಟಾಮಣಿ ಇರುತ್ತದೆ.

ಅಡ್ಕ ಭಗವತೀ ದೈವಸ್ಥಾನದಲ್ಲಿ ಎರಡು ಗುಳಿಗ ಸ್ಥಾನಗಳು ಮುಖ್ಯ ಗುಡಿಗಳ ಉತ್ತರ ಭಾಗದಲ್ಲಿವೆ. ಒಬ್ಬ ಗುಳಿಗನನ್ನು ‘ಪೊಟ್ಟಂ ಕುಳಿಯಂ’(ಮೂಕಗುಳಿಗ) ಎಂದೂ ಮತ್ತೊಬ್ಬ ಮಾತುಬರುವ ಗುಳಿಗನೆಂದೂ ಹೇಳುತ್ತಾರೆ. ಒಂದು ಶಕ್ತಿ ಸ್ಥಳದ ಕ್ಷೇತ್ರಪಾಲ ಶಕ್ತಿ ಎಂದು ತಿಳಿಯಬಹುದಾಗಿದೆ.

ತೆಯ್ಯಾಟದಲ್ಲಿ ಗುಳಿಗನಿಗೆ ಇಡುವಂಥ ಹಾಳೆಯ ಮುಖವಾಡವನ್ನೆ ಪೊಟ್ಟಂತೆಯ್ಯ ಮಿಗೂ ಬಳಸುತ್ತಾರೆ. ತೆಂಗಿನ ಗರಿಯ ಇತರ ಅಲಂಕಾರಗಳೂ ಅಷ್ಟೆ. ವೇಷಭೂಷಣದ ಕಾರಣದಿಂದಲೂ ‘ಪೊಟ್ಟನ್’ ಎಂಬ ಹೆಸರಿಂದಾಗಿಯೂ ಈ ದೈವ ಪೊಟ್ಟಂತೆಯ್ಯಂ ಇರಬೇಕೆಂದು ಊಹಿಸಬಹುದು.

ಪೊಟ್ಟನ್ ತೆಯ್ಯಂ ಎಂಬುದು ಪ್ರಾಚೀನವಾದ ಒಂದು ದೈವ. ಈ ದೈವದ ಸಂಬಂಧವಾಗಿ ಆದಿ ಶಂಕರಾಚಾರ್ಯರ ಜೀವನದ ಒಂದು ಘಟನೆಯನ್ನು ಹೇಳುತ್ತಾರೆ. ಶಂಕರಚಾರ್ಯರು ಸ್ನಾನಕ್ಕೆಂದು ನಡೆದು ಬರುವಾಗ ಇಕ್ಕಟ್ಟಾದ ದಾರಿಯಲ್ಲಿ ಚಂಡಾಲವರ್ಗದ ವ್ಯಕ್ತಿಯೊಬ್ಬ ಕಾಣಸಿಕ್ಕಿ, ಅವರೊಳಗೆ ಅಸ್ಪೃಶ್ಯತೆಯ ವಿಚಾರವಾಗಿ ನಡೆದ ಸಂವಾದದ ಫಲವಾಗಿ ಶಂಕರಾಚಾರ್ಯರಿಗೆ ಜ್ಞಾನೋದಯವಾಯಿತೆಂದೂ, ಕುಲಪ್ರಜ್ಞೆಯು ನಿರಸನವಾಯಿತೆಂದೂ ಒಂದು ಐತಿಹ್ಯವಿದೆ. ಶಿವನೇ (ಕೆಲವರ ಅಭಿಪ್ರಾಯದಂತೆ ಯಮದೇವ) ಶಂಕರಾಚಾರ್ಯರ ಆತ್ಮಜ್ಞಾನ ಪರೀಕ್ಷೆಗೆ ಚಂಡಾಲವೇಷ ಧರಿಸಿದನೆಂದೂ ಆ ವೇಷ ಧಾರಣೆಯ ಸ್ಮಾರಕವಾಗಿ ಪೊಟ್ಟನ್ ತೆಯ್ಯಂ ರೂಪುಗೊಂಡಿತೆಂದೂ ಹೇಳಿಕೆ ಇದೆ. ಆ ಚಂಡಾಲನು ಆಕಸ್ಮಿಕವಾಗಿ ನಿಧನಗೊಂಡು (ಶಂಕರಾಚಾರ್ಯರನ್ನು ವಾದದಲ್ಲಿ ಸೋಲಿಸಿದ ಪರಿಣಾಮ?) ದೈವಸ್ವರೂಪವನ್ನು ಹೊಂದಿದನೆಂದೂ ಅಭಿಪ್ರಾಯವಿದೆ.

ಗುಳಿಗ ಒಂದು ಪ್ರಾಚೀನ ಆರಾಧ್ಯಶಕ್ತಿಯಾದುದರಿಂದ ಅವನ ತೆಯ್ಯಾಟದ ಸ್ವರೂಪವನ್ನು ಪೊಟ್ಟಂ ತೆಯ್ಯಮಿಗೂ ಕೊಟ್ಟಿರಬಹುದು. ‘ಪೊಟ್ಟನ್’ ಎಂಬ ಹೆಸರು ತುಂಬ ಅರ್ಥಪೂರ್ಣವಾಗಿದೆ. ಸಮಾಜದಲ್ಲಿ ದನಿ ಎತ್ತಲಾರದವರ ಅಥವಾ ದನಿ ಸತ್ತವರ ಪ್ರತೀಕವಾಗಿ, ಈ ಹೆಸರಾಗಿದೆಯೆನಿಸುತ್ತದೆ. ಪೊಟ್ಟಂ ತೆಯ್ಯವನ್ನು ‘ಪುಲಪೊಟ್ಟನ್ ’ ಎಂದೂ ಕರೆಯುವುದಿದೆ. ತುಳುನಾಡಿನಲ್ಲೂ ‘ಬಂಟ’ ಎಂಬ ಮೂಕ ದೈವವಿದೆ ಇದು ಪ್ರಾಚೀನ ದೈವವಾಗಿದ್ದು, ಮತ್ತೆ ಇತರ ದೈವಗಳ ಕೈಕೆಳಗಿನ ಊಳಿಗದ ದೈವವಾಗಿದೆ.

ಆಟಿ ತಿಂಗಳಲ್ಲಿ ‘ಕರಿಯಾನೆ, ಬಿಳಿಯಾನೆ’ಗಳನ್ನು ಸ್ಥಳಕ್ಕೆ ಕಾವಲಿಟ್ಟು (ಎಂದರೆ ಉಭಯ ಗುಳಿಗ ಶಕ್ತಿಗಳನ್ನು ಕಾವಲಿಟ್ಟು) ಭಗವತಿಗಳು ಮೇಲ್ ಲೋಕಕ್ಕೆ ಪಯಣಿಸುವರೆಂದು ಪ್ರತೀತಿ. ಆ ತಿಂಗಳ ನಡುವೆ (ಭಂಡಾರಮನೆಯಲ್ಲಿ)ಗುಳಿಗನಿಗೆ ಬಲಿಕಟ್ಟಿ, ಕೋಳಿಕೊಯ್ದು ‘ಬಿರ್ದು’ ಕೊಡುವ ವಾಡಿಕೆ ಇದೆ.

ಉತ್ಸವದ ವೇಳೆ ಮೊದಲು ಆವೇಶಗೊಳ್ಳುವವನು ಗುಳಿಗ. ಜನಜಂಗುಳಿಯನ್ನು ನಿಯಂತ್ರಣ ಮಾಡುವ ಕರ್ತವ್ಯವನ್ನು ಗುಳಿಗ ನಿರ್ವಹಿಸುತ್ತಾನೆ. ಇವನು ಮುಖ್ಯ ದೈವಗಳ ಗುಡಿಗಳ ಒಳಗೆ ಕಾಲಿಡುವುದಿಲ್ಲ. ಮುಂಚಾವಡಿಗೆ ಏರಬಹುದು. ಗುಳಿಗನ ಪಾತ್ರಿ ಉತ್ಸವದ ವೇಳೆ ಕೆಲವೆಡೆ ಕೋಳಿಯನ್ನು ಬಾಯಲ್ಲೆ ಸೀಳಿ ನೆತ್ತರೀಂಟುವ ದೃಶ್ಯ ಬೀಭತ್ಸಕರವೆನಿಸುತ್ತದೆ. ದುಷ್ಟರನ್ನು ಸೀಳುವ ದೃಶ್ಯವನ್ನು ಆತ ಅಭಿನಯಿಸಿ ತೋರಿಸುತ್ತಾನೆ.

ಹಲವು ತರವಾಡುಗಳಲ್ಲಿನ ಆರಾಧ್ಯದೈವಗಳಲ್ಲಿ ಗುಳಿಗನೂ ಒಬ್ಬ. ತರವಾಡಿನ ದೈವಕಾರ್ಯ ಸಂದರ್ಭದಲ್ಲಿ, ಮರದ ಬುಡದಲ್ಲಿ ಸ್ಥಾಪಿಸಿರುವ ಗುಳಿಗನ ಕಲ್ಲಿನ ಬಳಿ ಅವನಿಗಾಗಿ ಕೋಳಿಕೊಯ್ಯುತ್ತಾರೆ. ರಾಹು ಗುಳಿಗನಿಗೆ ಮನುಷ್ಯರ ಪ್ರಾಣಹರಣಮಾಡಿ ಅವರ ಪ್ರೇತಾತ್ಮಗಳನ್ನು ತನ್ನ ವಶದಲ್ಲಿ ಬಂಧನ ರೂಪದಲ್ಲಿ ಇರಿಸಿಕೊಳ್ಳುವ ಶಕ್ತಿ ಇದೆಯಾಗಿ ಹೇಳಿಕೆ. ತರವಾಡಿನಲ್ಲಿ ಹಿರಿಯರಿಗೆ ‘ಪಸಾರ್ನೆ’ ಬಡಿಸುವ ವೇಳೆ ಹಾಗೆ ಬಂಧನದಲ್ಲಿರುವವರನ್ನು ತತ್ಕಾಲಕ್ಕೆ ಬಿಡುಗಡೆ ಮಾಡಿ ಅರ್ಪಿಸಿದ ಎಡೆಯನ್ನು ಸ್ವೀಕರಿಸಲು ಆಸ್ಪದ ಮಾಡಬೇಕೆಂದು ರಾಹುಗುಳಿಗನಲ್ಲಿ ಕೇಳಿಕೊಳ್ಳುವುದುಂಟು. ಮಂತ್ರವಾದ ಕ್ರಿಯೆಗಳಿಂದ ರಾಹುಗುಳಿಗನ ವಶವಿರುವ ಪ್ರೇತಗಳನ್ನು ಬಿಡಿಸುವುದು ಸಾಧ್ಯವಿಲ್ಲ ಎಂದು ನಂಬಿಕೆ.

ಒಟ್ಟಿನಲ್ಲಿ ರಕ್ಷಕ ಹಾಗೂ ಭಕ್ಷಕ ಗುಣಗಳಿರುವ, ಪ್ರಕೃತಿಯಿಂದ ಮೂಡಿಬಂದು ಬೆಳೆದು ನಿಂತ ಪ್ರಾಚೀನ ದೈವ ಗುಳಿಗ.

(ಕೋಟೆಕಾರು ‘ನರಹರಿಗುಡ್ಡೆ’ ಕ್ಷೇತ್ರ ಪುನರ್ನಿರ್ಮಾಣ ಸಂಚಿಕೆಯಲ್ಲಿ ಪ್ರಕಟ, ೨೦೦೧)

ಪರಾಮರ್ಶನ ಸಾಹಿತ್ಯ

೧. ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪ್ರಕೃತಿ ಪ್ರಕಾಶನ, ಕೋಟೆಕಾರ್, ದ.ಕ., ೧೯೯೮

೨.ವೆಂಕಟರಾಜ ಪುಣಿಂಚತ್ತಾಯ, ತುಳು ನಡೆನುಡಿ, ಡಾ.ಗೋ.ಪೈ. ಸಂಶೋಧನಕೇಂದ್ರ, ಎಂ.ಜಿ.ಎಂ.ಕಾಲೇಜು, ಉಡುಪಿ, ೧೯೯೮