ಲೋಕ ಪರಿವರ್ತನಶೀಲವಾದುದು ಎಂಬುದು ಎಲ್ಲರೂ ಕಾಣುವ ವಿಚಾರ; ಜನಜೀವನ, ನಂಬಿಕೆ, ಅಭಿರುಚಿ, ಕಲೆ, ಸಾಹಿತ್ಯ ಮುಂತಾದವು ಕಾಲಕ್ಕನುಗುಣವಾಗಿ ಬದಲಾಗುವುದು ಮಾತ್ರವೇ ಅಲ್ಲ, ಜನರ ಧಾರ್ಮಿಕ ವಿಶ್ವಾಸದ, ಆರಾಧನೆಯ ಕೇಂದ್ರ ಸಂಕೇತಗಳಾದ ದೈವತಗಳೂ ಕಾಲಕ್ರಮೇಣ ಪರಿವರ್ತಿತವಾದುದು ಕಂಡುಬರುತ್ತದೆ. ವೇದಕಾಲದಿಂದಲೇ ದೇವತೆಗಳ ಇಂಥ ಪರಸ್ಪರ ಸಮೀಕರಣ, ಪರಿಷ್ಕರಣ, ಪರಿವರ್ತನ ಕಂಡುಬರುತ್ತದೆ. ವೇದಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದ ವರುಣ, ಇಂದ್ರ, ಮಿತ್ರ, ಉಷಾ ಮುಂತಾದ ದೇವತೆಗಳನ್ನು ಹಿಂದೂಡಿ, ಪುರಾಣ ಯುಗದಲ್ಲಿ ವಿಷ್ಣು, ಶಿವ, ದುರ್ಗೆ ಮುಂತಾದ ದೇವತೆಗಳು ಹಿರಿಮೆಯನ್ನು ಹೊಂದಿ ಮೆರೆದರು. ಇವರ ಅವತಾರಗಳ ಪರಂಪರೆಯೂ ಬೆಳೆಯಿತು.

ದೇವರುಗಳು ಬದಲಾದಂತೆಯೇ ಆರಾಧನಾ ಕ್ಷೇತ್ರಗಳ ಸ್ವರೂಪವೂ ಬದಲಾಗಿವೆ. ಬೌದ್ಧ ಕ್ಷೇತ್ರವಾಗಿದ್ದುದು ಶೈವಕ್ಷೇತ್ರವಾದುದಿದೆ. ಜೈನಮಂದಿರ ಸನಾತನ ಧರ್ಮದ ದೇಗುಲವಾದುದಿದೆ. ಶಿವಕ್ಷೇತ್ರ, ವೈಷ್ಣವ ಕ್ಷೇತ್ರವಾಗಿ, ವೈಷ್ಣವ ದೇವಸ್ಥಾನ ಶಿವದೇವಸ್ಥಾನವಾದುದೂ ಇದೆ. ಒಂದು ದೇವತೆಯ ವಿಗ್ರಹಕ್ಕೆ ಇನ್ನೊಂದು ದೇವತೆಯ ಬಣ್ಣ ಬಳೆದು ಆರಾಧಿಸಿದ್ದೂ ಇದೆ. ಸಮರ್ಥನೆಗಾಗಿ ಚಿತ್ರವಿಚಿತ್ರವಾಗಿ ಕಥೆಗಳನ್ನು ಕಟ್ಟಿದ್ದಿದೆ.

ತುಳುನಾಡಿನ ದೈವಾರಾಧನೆಯ ಕ್ಷೇತ್ರಕ್ಕೆ ಕಣ್ಣಾಡಿಸಿದರೆ ದೈವಗಳ ರೂಪಾಂತರ, ಸಂಕರ, ಎಷ್ಟೋ ಆದುದು ಕಂಡುಬರುತ್ತದೆ. ಬಹುಪ್ರಾಚೀನ ಕಾಲದಲ್ಲಿದ್ದ ಅನೇಕ ಭೂತಗಳು ಇಂದು ಅದೇ ಸ್ವರೂಪದಲ್ಲಿ ಆರಾಧಿಸಲ್ಪಡುತ್ತಿಲ್ಲ. ಕೆಲವು ಭೂತಗಳಿಗೆ ಹೊಸ ನಾಮಕರಣವಾಗಿದೆ. ತುಳುನಾಡಿಗೆ ವೈದಿಕಮತದ ಆಗಮನವಾದ ಬಳಿಕ ಹಲವು ಭೂತಗಳು ವೈದಿಕ ದೇವತೆಗಳ ಅಡಿಯಾಳುಗಳೆನಿಸುವ ಮಟ್ಟಕ್ಕೆ ಬಂದವು. ಅವುಗಳ ಆವಿರ್ಭಾವಕ್ಕೆ ಪುರಾಣ ಮೂಲವನ್ನು ಹೊಸೆಯಲಾಯಿತು. ಬೇರೆ ಕಡೆಯಿಂದ ಇಲ್ಲಿಗೆ ಬಂದ ಕೆಲವು ಆಗಂತುಕ ದೇವತೆಗಳು ಸ್ಥಳೀಯ ಭೂತಗಳ ಸ್ಥಾನವನ್ನು ಆಕ್ರಮಿಸಿಕೊಂಡವು. ಒಂದೇ ಭೂತಕ್ಕೆ ಸಂಬಂಧಪಟ್ಟ ವಿವಿಧ ಪಾಡ್ದನಗಳನ್ನೂ ಇತರ ಐತಿಹ್ಯಗಳನ್ನೂ ಪರಿಶೀಲಿಸುವಾಗ, ಆಯಾ ಭೂತದ ‘ವಿಕಾಸ’ ಅಥವಾ ಪರಿವರ್ತನೆ ಹೇಗೆ ನಡೆಯುತ್ತ ಬಂದಿದೆ ಎಂಬುದನ್ನು ಗುರುತಿಸಬಹುದು.

ಪ್ರಕೃತ ತುಳುನಾಡಿನ ಮುಖ್ಯದೈವಗಳಲ್ಲಿ ಒಬ್ಬನಾದ ಮೂಡದಾಯನ ಕುರಿತು ಒಂದಿಷ್ಟು ವಿಚಾರಮಾಡಬಹುದು.

ಮೂಡದಾಯನಿಗೆ ಮುಂಡತ್ತಾಯ, ಮೂಡಂದಾಯ, ಮುಂಡಿಪಾಡಿತ್ತಾಯ, ಮುಡದೇಯ, ಮುಡದೇರ ಕಾಳಭೈರವ, ವೈದ್ಯನಾಥ ಮುಂತಾದ ನಾಮಾಂತರಗಳೂ ಇವೆ. ಒಂದು ಪಾಡ್ದನದ ಪ್ರಕಾರ, ಈತ ಈಶ್ವರನ ಹಣೆಯ (ಮುಂಡ = ಹಣೆ-ತುಳು) ಬೆವರಿನಿಂದ ಜನಿಸಿದವನಾದುದರಿಂದ ಈತನಿಗೆ ಮುಂಡತ್ತಾಯ ಎಂದು ಹೆಸರಾಯಿತಂತೆ! ಇದು ‘ಮುಂಡ’ ಎಂಬ ಶಬ್ದವನ್ನು ಊರುಗೋಲಾಗಿ ಮಾಡಿಕೊಂಡು ಹೊರಟ ವ್ಯುತ್ಪತ್ತಿಯ ಕಥೆ.

ಇನ್ನೊಂದು ಪಾಡ್ದನದಲ್ಲಿ, ಘಟ್ಟದ ಮೇಲಿಂದ ವೈದ್ಯನಾಥನೆಂಬ ವ್ಯಕ್ತಿ ತುಳುನಾಡಿಗೆ ಇಳಿದುಬಂದನೆಂದೂ, ಕಾಳಭೈರವನೆಂಬ ಭೂತವು ಅವನನ್ನು ಹಿಂಬಾಲಿಸಿಕೊಂಡು ಬಂದಿತೆಂದೂ, ವೈದ್ಯನಾಥನ ಕೈಯಲ್ಲಿ ವಿಭುತಿಯ ಉಂಡೆ ಮತ್ತು ‘ಸಂಜೀವನ’ದ ಬೇರು ಇತ್ತು ಎಂದೂ ಉಕ್ತವಾಗಿದೆ. ಇಲ್ಲಿ ವೈದ್ಯನಾಥನು ಮನುಷ್ಯ ವ್ಯಕ್ತಿಯೆಂದೂ, ಕಾಳಭೈರ ವನು ಅವನೊಡನೆ ಬಂದ ದೈವನೆಂದೂ ಸ್ಪಷ್ಟವಾಗಿದೆ. ಮುಂದೆ ಇವೆರಡೂ ಹೆಸರುಗಳ ಸಮೀಕರಣವಾಗಿರಬೇಕು. (ಧರ್ಮಸ್ಥಳದ ಅಣ್ಣಪ್ಪ ಪಂಜುರ್ಳಿಯ ಹಾಗೆ)

ಬೇರೊಂದು ಪಾಡ್ದನದಲ್ಲಿ, ನಾಲ್ಕು ಮಂದಿ ಜೋಗಿ ಪುರುಷರು (ನಾಥ ಸಂಪ್ರದಾಯದ ಭೈರಾಗಿಗಳು) ಮೂಡು ಸಮುದ್ರವನ್ನು ನೋಡಿ, ಪಡುವಣ ಸಮುದ್ರವನ್ನು ಸಂದರ್ಶಿಸುವುದಕ್ಕಾಗಿ ಘಟ್ಟವಿಳಿದು. ತುಳುರಾಜ್ಯಕ್ಕೆ ಇಳಿದಾಗ ಅವರ ಕುಲದೈವ ಕಾಳಭೈರವ ಅವರೊಂದಿಗೆ ಕಪಿಲೆದನವಾಗಿ ಬಂದನೆಂದಿದೆ. ಜೋಗಿ ಪುರುಷನೊಬ್ಬನ ಮುಂಡಾಸಿನಲ್ಲಿ ಸೇರಿಕೊಂಡು ಕಾಳಭೈರವ ತುಳುನಾಡಿಗೆ ಬಂದುದರಿಂದ ಅವನಿಗೆ ಮುಂಡತ್ತಾಯ ಎಂದು ಹೆಸರಾಯಿತೆಂದು ಮಗದೊಂದು ಪಾಡ್ದನ ಹೇಳುತ್ತದೆ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಈ ದೈವ ಮೂಡುದಿಕ್ಕಿನಿಂದ ನಾಥ ಸಂಪ್ರದಾಯದ ವ್ಯಕ್ತಿಗಳೊಂದಿಗೆ ಈ ತುಳುನಾಡಿಗೆ ಬಂದುದೆಂಬುದು. ವೈದ್ಯನಾಥ ಎಂಬ ಹೆಸರನ್ನೂ ಲಕ್ಷಿಸಬೇಕು. ಜೋಗಿಪುರುಷರಿಗೆ ಅಥವಾ ಹಾಲಕ್ಕಿನರ್ಸಣ್ಣರಿಗೆ ಮಂತ್ರತಂತ್ರ ವೈದ್ಯಗಳೂ ಅಷ್ಟಿಷ್ಟು ಗೊತ್ತಿರುತ್ತವೆ. ಅಲ್ಲದೆ ಮೂಡದಾಯನ ಗುಡಿಯಲ್ಲಿನ ಹೂಜೆಯ ನೀರನ್ನು ಗಂಧದೊಂದಿಗೆ ಸೇರಿಸಿದರೆ ವಿಷಬಾಧೆ ಶಮನವಾಗುತ್ತದೆಂಬ ನಂಬಿಕೆಯಿದೆ. ‘‘ಸಂಜೀವನದ ಕಡ್ಡಿಗಾ ಬೂತಿದ ಉಂಡೆಗಾ ಜಯಸಾರತಿ ಬೆಂದೆ, ವೈದ್ಯ ಬೈದ್ಯೊಡು ವೈದ್ಯನಾಥೆಂದು ಪಣ್ಪಾವೊಂಡೆ’’ (ಸಂಜೀವನ ಕಡ್ಡಿಗೂ ವಿಭೂತಿಯ ಗುಳಿಗೆಗೂ ಜಯ ಸಾಧಿಸಿಕೊಟ್ಟೆ, ವೈದ್ಯವಿದ್ಯೆಯಲ್ಲಿ ವೈದ್ಯನಾಥ ಎಂದು ಹೇಳಿಸಿಕೊಂಡೆ) ಎಂದು ಒಂದು ನುಡಿಗಟ್ಟಿನಲ್ಲಿ ಮೂಡದಾಯ ಹೇಳುತ್ತಾನೆ.

ದೇಶದ ಹಲವೆಡೆ ಪ್ರಚಲಿತವಿದ್ದ ನಾಥಪಂಥವು ತುಳುನಾಡಿನಲ್ಲೂ ಸಾಕಷ್ಟು ಕ್ರಿಯಾಶಾಲಿಯಾಗಿತ್ತೆಂಬುದು ಐತಿಹಾಸಿಕ ಸತ್ಯ. ಮಂಗಳೂರಿನ ಕದ್ರಿಕ್ಷೇತ್ರ ನಾಥಪಂಥದ ದೊಡ್ಡ ಕೇಂದ್ರವೇ ಆಗಿತ್ತು. ಈಗಲೂ ಕದ್ರಿ ಗುಡ್ಡದ ಮೇಲೆ ನಾಥ ಸಂಪ್ರದಾಯದ ಮಠವಿದೆ, ಗುರುಗಳಿದ್ದಾರೆ. ಹನ್ನೆರಡು ವರ್ಷಗಳಿಗೊಮ್ಮೆ ಉತ್ತರಭಾರತದಿಂದ ಕಾಲ್ನಡಿಗೆಯಲ್ಲಿ ಯಾತ್ರೆ ಬಂದು ಕದ್ರಿಮಠದಲ್ಲಿ ಗುರುಪಟ್ಟವನ್ನು ಪಡೆಯುವ ಯೋಗಿಯನ್ನು ‘ಜೋಗಿ ಅರಸು’ ಎಂದು ಕರೆಯುತ್ತಾರೆ. ಕದ್ರಿ ಗುಡ್ಡದಲ್ಲಿ ನಾಥ ಪಂಥದವರ ಆರಾಧ್ಯದೈವವಾದ ಕಾಲಭೈರವನ ಸಾನ್ನಿಧ್ಯವಿದೆ.

‘ಕಾಳಭೈರವ’ ಎಂಬ ದೇವತೆಯ ಭೂತಸ್ವರೂಪವೇ ಮೂಡದಾಯ ಎಂದು ತಿಳಿದುಕೊಂಡ ಬಳಿಕ ಕಾಳಭೈರವನ ಬಗೆಗೆ ಇನ್ನೂ ಒಂದಿಷ್ಟು ವಿಚಾರಿಸಬಹುದು. ಮೂಡದಾಯ ಎಂಬುದಕ್ಕೆ ಮೂಡುಕಡೆಯವನು, ಮೂಡುದಿಕ್ಕಿನಿಂದ ಬಂದವನು ಎಂದರ್ಥವಾಗುತ್ತದೆ. ಮೂಡದಾಯ ಎಂಬುದೇ ಮುಂದೆ ಮುಂಡತ್ತಾಯ, ಮುಂಡಿ ಪಾಡಿತ್ತಾಯ, ಮುಡದೇರ ಕಾಲಭೈರವ ಇತ್ಯಾದಿ ರೂಪವನ್ನು ತಳೆದುದೆಂದು ನಿಶ್ಚಯಿಸಬಹುದು. ಕಾಳಭೈರವನೆಂಬವನು ಒಬ್ಬ ಉಗ್ರದೇವತೆ. ಶಿವನ ಒಂದು ಭೀಕರ ಅಂಶ. ನಿಗೂಢವೂ ಭಯಾವಹವೂ ಆದ ವಿಧಿಗಳನ್ನೊಳಗೊಂಡ ತಾಂತ್ರಿಕ ಉಪಾಸನೆಗೆ ಸಂಬಂಧವುಳ್ಳ ನಾಥ ಸಂಪ್ರದಾಯದಲ್ಲಿ ಭೈರವನ ಆರಾಧನೆ ಮುಖ್ಯವಾಗಿದೆ. ಹೀಗಾಗಿ ಮೂಡದಾಯನೆಂದು ಕರೆಯಲ್ಪಡುವ ಕಾಳಭೈರವನು ನಾಥಸಂಪ್ರದಾಯದವರ ಜೊತೆಗೆ ಬಂದವನೆಂದು ಹೇಳುವುದು ಸಹಜವಾಗಿದೆ. ಇನ್ನೊಂದು ಬಗೆಯಾಗಿ ಹೇಳುವುದಿದ್ದರೆ, ತುಳುನಾಡಿನಲ್ಲಿ ನಾಥಪಂಥದ ಪ್ರಭಾವ ಬೆಳೆಯುತ್ತಿದ್ದಂತೆ, ಅವರ ಆರಾಧ್ಯದೇವತೆಗೆ ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ದೈವಸ್ವರೂಪವನ್ನು ಕಲ್ಪಿಸಲಾಯಿತೆನ್ನಬಹುದು.

ತುಳುನಾಡಿನ ದೈವಪ್ರಪಂಚದಲ್ಲಿ ಮೂಡದಾಯನನ್ನು ಉಗ್ರದೈವವಾಗಿ ಪರಿಗಣಿಸಿಲ್ಲ. ಸೌಮ್ಯಗಂಭೀರ ಪ್ರಕೃತಿಯ ದೈವವೆಂದೇ ತಿಳಿಯಲಾಗಿದೆ. ಕೋಮು ಸಾಮರಸ್ಯಕ್ಕೆ ಹೆಸರಾದ ಉದ್ಯಾವರ ಮಾಡ(ಮಂಜೇಶ್ವರದ ಬಳಿ)ದ ಇಬ್ಬರು ಅರಸುದೈವಗಳ ಮನಸ್ತಾಪವನ್ನು ಪರಿಹರಿಸುವ ಮಧ್ಯಸ್ಥಿಕೆ ವಹಿಸಿದನೆಂದೂ, ಅದರಿಂದಾಗಿ ‘‘ಇರ್ವೆರ್ ಅರಸುಳೆಗ್ ಬರಿ ಪ್ರಧಾನಿ’’ (ಇಬ್ಬರು ಅರಸರಿಗೆ ಒಬ್ಬ ಪ್ರಧಾನಿ) ಎಂದು ಕರೆಯಿಸಿ ಕೊಂಡನೆಂದೂ ಪ್ರತೀತಿ ಇದೆ.

ತುಳುನಾಡಿನಲ್ಲಿ ವೆಂಕಟರಮಣ ದೇವರ ದೇವಸ್ಥಾನ ನಿರ್ಮಾಣವಾದುದು ಚಾರಿತ್ರಿಕವಾಗಿ ತುಂಬ ಈಚೆಗೆ. ವೆಂಕಟರಮಣ ಎಂಬುದು ತಿರುಪತಿಯ ದೇವರ ಹೆಸರೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಹೆಚ್ಚಿನ ವೆಂಕಟರಮಣ ದೇವಸ್ಥಾನಗಳಲ್ಲಿ ಕಾಳಭೈರವನ ಉಪಾಸನೆಯೂ ನಡೆಯುತ್ತಿರುವುದು ಗಮನೀಯ. ಕೆಲವೊಂದು ದೇವಸ್ಥಾನಗಳಲ್ಲಿ ದೇವರು ಮೈಮೇಲೆ ಬರುವ ವ್ಯವಸ್ಥೆಯೂ ಇದೆ. ಆವೇಶವಾಗುವ ದೇವರು ವೆಂಕಟರಮಣನಾಗಿರದೆ ಆತನ ಆಪ್ತ ಕಿಂಕರನೆನಿಸುವ ಕಾಳಭೈರವನೆಂದು ಹೇಳಲಾಗಿದೆ. ತಿರುಪತಿ ಕ್ಷೇತ್ರಕ್ಕೆ ಮುಡಿಪು ಒಪ್ಪಿಸಿ ಬಂದ ಬಳಿಕ ‘ಪಾನಕ ಪೂಜೆ’ ಎಂಬ ಒಂದು ವಿಶೇಷ ಸಮಾರಂಭ ನಡೆಸುವ ಸಂದರ್ಭದಲ್ಲಿ ಊರ ದಾಸಯ್ಯನ ಮೂಲಕ ‘ಸ್ವಾಮಿ’ಯನ್ನು ಆವೇಶ ಬರಿಸುವ ವಾಡಿಕೆ ಇದೆ. ಆ ಸಂದರ್ಭದಲ್ಲೂ ಮೈದುಂಬಿ ಬರುವ ಸ್ವಾಮಿಯು ಕಾಳಭೈರವನೇ ಎನ್ನುತ್ತಾರೆ. ಆದರೆ, ಸಾಮಾನ್ಯವಾಗಿ ಭಕ್ತ ಸಮುದಾಯವು ಈ ಎರಡು ಶಕ್ತಿಗಳನ್ನೂ ಬೇರೆ ಬೇರೆಯಾಗಿ ಕಲ್ಪಿಸಿದಂತಿಲ್ಲ. ಪಾತ್ರಿಯ ಅಥವಾ ದಾಸಯ್ಯನ ಮೈಮೇಲೆ ಆವೇಶಗೊಂಡು ಕನ್ನಡ ಅಥವಾ ಕೊಂಕಣಿ ಭಾಷೆಗಳಲ್ಲಿ ನುಡಿಕೊಡುವ ಸ್ವಾಮಿಯು ತಿರುಪತಿ ವೆಂಕಟರಮಣ ಸ್ವಾಮಿಯೇ ಎಂದು ಸಾಮಾನ್ಯ ಜನಪದರ ನಂಬಿಕೆ. ಅವರ ಈ ಭಾವನೆಗೆ ಪೂರಕವಾಗಿ ಪಾಡ್ದನದಲ್ಲಿ ಇನ್ನೂ ಒಂದು ಸಾಕ್ಷಿ ಸಿಗುತ್ತದೆ. ‘‘ಮೂಡಾಯಿ ತ್ಯಾಂಪದೇವೆರ್ಂದ್ ಪಣ್ಪಾವೊಂಡೆ. ಮುಡಿಪು ಮುದ್ರೆ, ದುಡ್ಡು ದುಗ್ಗಾಣಿ ಸಂದಾವೊಂಡೆ, ಕಾಸಿಡ್ ಕಾಳಭೈರವೆಂದ್ ಪಣ್ಪಾವೊಂಡೆ’’ (ಮೂಡಲಲ್ಲಿ ತ್ಯಾಂಪ (\ಂರಿ”ಪ್ಪ) ದೇವರೆಂದು ಹೇಳಿಸಿಕೊಂಡೆ. ಮುಡಿಪು ಕಾಣಿಕೆಗಳನ್ನು ಸ್ವೀಕರಿಸಿದೆ. ಕಾಶಿಯಲ್ಲಿ ಕಾಳಭೈರವನೆಂದು ಕರೆಯಿಸಿಕೊಳ್ಳುತ್ತೇನೆ) -ಹೀಗೆನ್ನುವಲ್ಲಿ ವೆಂಕಟರಮಣನೂ ಕಾಳಭೈರವನೂ ಅಭಿನ್ನರೆಂದು ಹೇಳಿದ ಹಾಗಾಯಿತು. ಈಶ್ವರಾಂಶವೆನಿಸುವ ಕಾಳಭೈರವನೂ ವಿಷ್ಣುವಿನ ಸ್ವರೂಪವೆನಿಸುವ ವೆಂಕಟರಮಣನೂ ಹೇಗೆ ಅಭಿನ್ನರೆಂದು ಆಶ್ಚರ್ಯವಾಗಬಹುದು. ಇದನ್ನು ಖಚಿತಪಡಿಸಿ ಕೊಳ್ಳುವುದಕ್ಕೆ ತಿರುಪತಿಯ ವೆಂಕಟರಮಣನ ವಿಗ್ರಹವನ್ನು ಪರಶೀಲಿಸಬೇಕಾಗುತ್ತದೆ.

ಈ ವಿಗ್ರಹವನ್ನು ಅಥವಾ ಅದರ ಭಾವಚಿತ್ರವನ್ನು ಸ್ಥೂಲವಾಗಿ ಗಮನಿಸಿದಾಗ, ಇದು ಮೂಲತಃ ವಿಷ್ಣುವಿನ ವಿಗ್ರಹವಾಗಿರಲಾರದು ಎಂದು ಹೊಳೆಯುತ್ತದೆ. ಈ ವಿಗ್ರಹದ ಕೈಗೆ ಸರ್ಪಗಳು ಸುತ್ತು ಹಾಕಿಕೊಂಡಿರುವುದನ್ನು ನೋಡಬಹುದು. ವಿಷ್ಣು ಸಂಬಂಧವಾದ ವಿಗ್ರಹದ ಕೈಯಲ್ಲಿ ಹಾಗೆ ಸರ್ಪಕಂಕಣವಿರುವ ಕಾರಣವಿಲ್ಲ. ಅಲ್ಲದೆ ವಿಗ್ರಹದ ಮುಖದ ಮೇಲಿನ ವೈಷ್ಣವ ದ್ಯೋತಕವಾದ ನಿಡಿದಾದ ನಾಮವಂತೂ ಉದ್ದೇಶಪೂರ್ವಕವಾಗಿ ಕೆತ್ತಿದಂತೆಯೋ ಮೆತ್ತಿದಂತೆಯೋ ಇದ್ದು ಅರ್ಧ ಮೂಗನ್ನೇ ನುಂಗಿಬಿಟ್ಟಿದೆ ! ಚಿನ್ನದ ಕವಚಗಳಿಂದ ಮುಚ್ಚಲ್ಪಟ್ಟ ಶಂಖ ಚಕ್ರಾಂಕಿತವಾದ ಮೇಲುಭಾಗದ ಎರಡು ಕೈಗಳು ಸಹಜ ಶಿಲ್ಪಾಂಶವಾಗಿ ಕಾಣಿಸದೆ ಕ್ರಮೇಣ ಜೋಡಿಸಲ್ಪಟ್ಟಿರಬೇಕೆಂಬ ಶಂಕೆಯನ್ನು ಹುಟ್ಸುವಂತಿದೆ. ವಿಗ್ರಹದ ಪಾದಗಳು ಪಾದಪೀಠದೊಳಗೆ ಹೂತುಹೋಗಿವೆ. (ಇದಕ್ಕೆ ಸ್ಥಳಪುರಾಣದಲ್ಲಿ ಕಾರಣವನ್ನು ಹೇಳಲಾಗಿದೆ.) ಸದಾ ಅಲಂಕಾರಪೂರ್ಣವಾಗಿಯೇ ಇರುವುದರಿಂದ ಸಾಮಾನ್ಯ ಜಿಜ್ಞಾಸುಗಳಿಗೆ ವಿಗ್ರಹದ ಸಹಜ ಸ್ವರೂಪ ಗೋಚರವಾಗು ವಂತಿಲ್ಲ. (ಪ್ರತಿ ಶುಕ್ರವಾರ ಬೆಳಗಿನ ಜಾವದಲ್ಲಿ ನಡೆಯುವ ‘\ರುಮಂಜನ’ ಎಂಬ ಸ್ನಾನವಿಧಿಯ ಸಂದರ್ಭದಲ್ಲಿ ಆಭರಣಗಳನ್ನೆಲ್ಲ ಕಳಚುತ್ತಾರೆ. ನಾಮದ ಪಚ್ಚೆಕರ್ಪೂವನ್ನೂ ತೆಗೆಯುತ್ತಾರೆ. ಆದರೆ ವಿಗ್ರಹದ ಮೂಲಸ್ವರೂಪದ ವಿಚಾರವನ್ನು ಅರ್ಚಕರು ಯಾರಿಗೂ ತಿಳಿಸುವುದಿಲ್ಲ.) ಅನೇಕ ದೇವಸ್ಥಾನಗಳ ಗರ್ಭಗುಡಿಯೊಳಗಿನ ರಹಸ್ಯಗಳೂ ನಂಬಿಕೆಯ ಹೆಸರಲ್ಲಿ ಹಾಗೇ ಉಳಿದುಕೊಂಡು ಬಂದಿವೆ. ಇತರ ರೀತಿಗಳಲ್ಲಿ ವ್ಯಕ್ತವಾಗುವ ಕೆಲವು ವಿಚಾರಗಳಿಂದ ಕೆಲವೊಂದು ಊಹೆಗಳನ್ನಷ್ಟೆ ಮಾಡಲು ಸಾಧ್ಯವಾಗುತ್ತದೆ.

\ರುಪತಿ ಕ್ಷೇತ್ರದ ಬಗೆಗೂ ತಿರುಮಲೆ ದೇವನ ವಿಗ್ರಹದ ಬಗೆಗೂ ಅನೇಕ ಬಗೆಯ ಜಿಜ್ಞಾಸೆಗಳು ನಡೆದಿವೆ. ಪುರಾಣಗಳೂ, ಐತಿಹ್ಯಗಳೂ ಸೃಷ್ಟಿಯಾಗಿವೆ. ತಿರುಮಲೆ ಬೆಟ್ಟದ ಈ ದೇವನ ವಿಗ್ರಹವನ್ನು ಶೈವ ವಿಗ್ರಹವೆಂದೂ, ವೈಷ್ಣವ ವಿಗ್ರಹವೆಂದೂ ಹರಿಹರ ವಿಗ್ರಹವೆಂದೂ, ವೀರಭದ್ರನ ವಿಗ್ರಹವೆಂದೂ, ಸುಬ್ರಹ್ಮಣ್ಯ ವಿಗ್ರಹವೆಂದೂ, ದೇವೀವಿಗ್ರಹವೆಂದೂ ಕಾಲಕಾಲದಲ್ಲಿ ಬಗೆಬಗೆಯಾಗಿ ಕಲ್ಪಿಸಿದ್ದುಂಟು. ವೆಂಕಟೇಶ್ವರನಿಗೆ ವೈಷ್ಣವ ಭಾವದ ಸ್ಥಿರೀಕರಣವಾದುದು ರಾಮಾನುಜಾಚಾರ್ಯರ ಪ್ರಯನ್ನ, ಪ್ರಭಾವಗಳಿಂದ ಎನ್ನಲಾಗಿದೆ. ಬೆಟ್ಟದೊಡೆಯನ ಸ್ವರೂಪದ ಕುರಿತಾಗಿ ಸಂಶಯ ಬಂದಾಗ ಅವರು ಜನರನ್ನು ಒಲಿಸಿ, ಪವಾಡ ಸದೃಶವಾದೊಂದು ಸನ್ನಿವೇಶವನ್ನು ಏರ್ಪಡಿಸಿ ವಿಗ್ರಹವು ಶಂಖಚಕ್ರಧಾರಣೆ ಮಾಡಿದ್ದನ್ನು ಚಾತುರ್ಯದಿಂದ ತೋರಿಸಿಕೊಟ್ಟರೆಂಬ ಐತಿಹ್ಯವಿದೆ. ಆದರೆ ಪೂಜಾಗಮ ಇತ್ಯಾದಿಗಳಲ್ಲಿ ಶೈವವಿಚಾರಗಳನ್ನು ಪೂರ್ತಿ ಅಳಿಸಿ ಹಾಕಲಾಗಲಿಲ್ಲ ಧನುರ್ಮಾಸದ ಪೂಜೆಯಲ್ಲಿ ಶಿವನಿಗೆ ಪ್ರಿಯವಾದ ಬಿಲ್ವದಳಗಳಿಂದ ವೆಂಕಟೇಶ್ವರನಿಗೆ ಅರ್ಚನೆಯಿದೆಯೆಂದೂ, ಸಹಸ್ರನಾಮಾರ್ಚನೆಯಲ್ಲಿ ವೆಂಕಟೇಶ್ವರನ ಹೆಸರುಗಳೆಂದು ವಿರೂಪಾಕ್ಷ, ಕಪರ್ದಿ ಊರ್ಧ್ವಲಿಂಗ, ಶಂಭು ಮೊದಲಾದ ಶಿವನ ಹೆಸರುಗಳನ್ನು ಬಳಸುತ್ತಾರೆಂದೂ ತಿಳಿಯುತ್ತದೆ. (ಎಸ್.ಕೆ.ರಾಮಚಂದ್ರ ರಾವ್, ತಿರುಪತಿ ತಿರುಮಲೆ ದೇವರು ೧೯೬೪, ಪು.೨೮) ಇಲ್ಲಿ ಬಳಸಿದ ಹೆಸರುಗಳಲ್ಲಿ ‘ವಿರೂಪಾಕ್ಷ’ ಎಂಬುದು ಅರ್ಥಪೂರ್ಣವಾಗಿದೆ. ತಿರುಮಲೆಯ ವಿಗ್ರಹಕ್ಕೆ ಹಣೆಯಲ್ಲಿ ಮೂರನೆಯ ಕಣ್ಣು ಇತ್ತೆಂದೂ ಅದನ್ನು ಉದ್ದೇಶಪೂರ್ವಕ ಅಳಿಸಿ ಅಲ್ಲಿ ನಾಮವನ್ನು ಸೃಷ್ಟಿಸಲಾಯಿತೆಂದೂ ನಂಬಲಾಗಿದೆ. ಹಣೆಗಣ್ಣು ಇರತಕ್ಕ ವಿಗ್ರಹ ಕಾಳಭೈರವ, ವೀರಭದ್ರ ಮೊದಲಾದ ರುದ್ರಾಂಶದ ದೈವತಗಳಲ್ಲಿ ಒಂದಾಗಿರಬೇಕೆಂಬುದು ಸ್ವತಃ ಸಿದ್ಧ.

ಹಾಗಿದ್ದರೂ, ಇತಿಹಾಸದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ಜನವರ್ಗಗಳಿಂದ ಪೂಜಿಸಲ್ಪಟ್ಟ ಈ ದೇವರ ಮೂಲ ನೆಲೆಯನ್ನು ಸ್ಪಷ್ಟವಾಗಿ ಗುರುತಿಸುವುದು ದುಸ್ತರವಾಗಿದೆ. ಬಹಳ ಹಿಂದೆ ಈ ಮಲೆಯೊಡೆಯನನ್ನು ಗಿರಿಜನರು ಪೂಜಿಸುತ್ತಿರಬೇಕೆಂದು ಊಹಿಸಲಾಗಿದೆ. ಮುಂದೆ ಕೌಳರು, ಕಾಳಮುಖರು, ಕಾಪಾಲಿಕರು ಮೊದಲಾದ ಉಗ್ರ ಶೈವಪಂಥದ ಹಾಗೂ ನಾಥಪಂಥದ ಅನುಯಾಯಿಗಳು ತಮ್ಮ ನಿಗೂಢ ಉಪಾಸನೆಗಾಗಿ ಈ ದೇವರನ್ನು ಆಶ್ರಯಿಸಿರಬೇಕು. ‘‘ಕಾಡಿನ ನಡುವೆ ಬೆಟ್ಟದ ಮೇಲೆ ನಿರ್ಜನ ಪ್ರದೇಶದಲ್ಲಿ ತಾಂತ್ರಿಕ ಸಿದ್ದಿಗಳಿಗಾಗಿ ನಿಲ್ಲಿಸಿದ ಮೂರ್ತಿ ಅಭಿಚಾರಿಕವೆನಿಸಿಕೊಳ್ಳುತ್ತದೆ. ಅಭಿಚಾರಿಕ ಮೂರ್ತಿ ಎಂದೂ ಒಂಟಿಯಾಗಿಯೆ ಇರಬೇಕು. ಅದರ ದೃಷ್ಟಿಯಲ್ಲೂ ಸೌಮ್ಯಕಳೆಯಿರುವುದಿಲ್ಲ. ಈ ಎಲ್ಲ ವಿವರಗಳನ್ನು ಪರಿಶೀಲಿಸಿದರೆ ತಿರುಮಲೆ ದೇವರನ್ನು ಅಭಿಚಾರಿಕ ಮೂರ್ತಿಯೆನ್ನಬಹುದು’’ (\ರುಪತಿ ತಿರುಮಲೆ ದೇವರು, ಪು.೩೩)

ಆದರೆ ಈ ಮೂರ್ತಿಯನ್ನು ವೀರಭದ್ರನ ಮೂರ್ತಿಯೆಂದು ಹೇಳುವವರೂ ಇದ್ದಾರೆ. ‘‘ವೆಂಕಟರಮಣನ ಮೂರ್ತಿಯು ವಿಷ್ಣು ಮೂರ್ತಿಯಾಗಿರದೆ, ಅದು ವೀರಭದ್ರನದಾಗಿದೆ. ಮತ್ತು ರಾಮಾನುಜಾಚಾರ್ಯರು ವೀರಭದ್ರಮೂರ್ತಿಯನ್ನು ರೂಪಾಂತರಿಸಿ ವಿಷ್ಣುಮೂರ್ತಿಯಾಗಿಸಿದರು ಎಂದು ಶ್ರೀಪತಿ ಪಂಡಿತರು ಶ್ರೀಕರಭಾಷ್ಯದಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ.’’(ರಾಮಚಂದ್ರ ಚಿಂತಾಮಣಿ ಢೇರೆ, ‘ಶ್ರೀವಿಟಲ ಒಂದು ಮಹಾಸಮನ್ವಯ, ಪು.೬೧) ಮೂಲ ದೇವರಾದ ವೀರಭದ್ರನನ್ನು ತೀರಾ ಅಲ್ಲಗಳೆಯಲಾರದೆ, ಆತನನ್ನು ಕಾಲಭೈರವನೆಂದು ಕರೆದು ವೆಂಕಟರಮಣನ ಕಿಂಕರನೆಂದು ಮಾರ್ಪಡಿಸಲಾಯಿತೆಂದೂ ಒಂದು ಅಭಿಪ್ರಾಯವಿದೆ. ಅಂತೂ ತನ್ನ ರಹಸ್ಯಾತ್ಮಕತೆಯನ್ನು ಬಿಟ್ಟುಕೊಡದೆ ಕಲ್ಪನಾತೀತವಾದ ಜನಪ್ರಿಯತೆಯನ್ನು ತಿರುಮಲೆ ದೇವರು ಗಳಿಸಿದ್ದಾನೆ.

ವೆಂಕಟರಮಣ ಎಂಬ ಹೆಸರೂ ವಿಲಕ್ಷಣವಾದದ್ದು. ಈ ಹೆಸರು ಪುರಾತನವೇನಲ್ಲ. ಪ್ರಾಚೀನ ಗ್ರಂಥಗಳಲ್ಲಿ ಈ ಹೆಸರು ವಿಷ್ಣುವಿಗೆ ಇದ್ದಂತೆ ಕಂಡುಬರುವುದಿಲ್ಲ. ವೆಂಕಟ(ವೇಂಕಟ) ಎಂಬ ಶಬ್ದ ವುತ್ಪತ್ತಿಯನ್ನು ಕೃತಕವಾಗಿ ಸಿದ್ಧಗೊಳಿಸಿದಂತಿದೆ. ವೆಂಕಟ(ವೆಂಗಡ) ಎಂಬುದು ದ್ರಾವಿಡಮೂಲದ ಹೆಸರಾಗಿರಬೇಕು. ತಿರುಪತಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣದ ಪುರಾಣ ಕಥನಗಳೆಲ್ಲವೂ ಎಷ್ಟೋ ಈಚೆಗಿನ ರಚನೆಗಳಾಗಿವೆ.

\ರುಪತಿಗೆ ಮೂಡಲಗಿರಿ ಎಂದೂ ಹೆಸರಿದೆಯಷ್ಟೆ? ವೆಂಕಟರಮಣನನ್ನು ಮೂಡಲಗಿರಿ ಸ್ವಾಮಿ ಎಂದೂ ಕರೆಯುತ್ತಾರೆ. ಮೂಡಲಗಿರಿಯಿಂದ ಬಂದ ಕಾಳಭೈರವನನ್ನು ಭೂತವಾಗಿಸಿ ಮೂಡದಾಯ ಎಂದು ತುಳುನಾಡಿನಲ್ಲಿ ಕರೆದುದು ಸಹಜವೇ ಆಗಿದೆ. ಅದರೆ ತುಳುನಾಡಿನಲ್ಲಿ ಭೂತರೂಪಿಯೆನಿಸಿದ ಕಾಳಭೈರವ ಅಥವಾ ವೆಂಕಟರಮಣ ಗುರುತು ಸಿಗಲಾರದಷ್ಟು ಪರಿವರ್ತನೆಗೊಂಡಿದ್ದಾನೆ. ಮೂಡದಾಯನೆಂದು ಕರೆಯಿಸಿಕೊಳ್ಳುವ ಈ ದೈವ ತಿರುಮಲೆಯ ದೇವರಂತೆಯೇ ತನ್ನ ರಹಸ್ಯಾತ್ಮಕತೆಯನ್ನು ಕಾಯ್ದುಕೊಂಡಿದ್ದಾನೆ. ದೈವದ ಉದ್ಭವದ ಬಗೆಗೆ ಪಾಡ್ದನಗಳು ಮೌನ ವಹಿಸಿದೆ.

ಪರಾಮರ್ಶನ ಸಾಹಿತ್ಯ

೧. ಎ.ಮೇನರ್, ಪಾಡ್ದನೊಳು, ಬಾಸೆಲ್ ಮಿಶನ್, ಮಂಗಳೂರು, ೧೮೮೬

೨. ಎಸ್.ಕೆ.ರಾಮಚಂದ್ರರಾವ್, ತಿರುಪತಿ ತಿರುಮಲೆ ದೇವರು, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕೃಷ್ಣಮೂರ್ತಿಪುರಂ, ಮೈಸೂರು, ೧೯೬೪

೩. ರಾಮಚಂದ್ರ ಚಿಂತಾಮಣಿ ಢೇರೆ, ಶ್ರೀವಿಠಲ’ ಒಂದು ಮಹಾಸಮನ್ವಯ  ಚಂದ್ರಕಾಂತ ಪೋಕಳೆ(ಅನು:), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೨