ಲೋಕೋತ್ತರವಾದ ವಿಶೇಷ ವಸ್ತುವಿನ ಅಥವಾ ವ್ಯಕ್ತಿಯ ಬಗೆಗೆ ಬಗೆಬಗೆಯ ಐತಿಹ್ಯಗಳೂ ಜನಪದ ಆಖ್ಯಾಯಿಕೆಗಳೂ ಹುಟ್ಟಿಕೊಳ್ಳುವುದು ಸಹಜ. ಈ ಐತಿಹ್ಯಗಳಲ್ಲಿ ಯಥಾರ್ಥತೆಯ ಎಳೆ ಒಂದಿಷ್ಟು ಇರಬಹುದು. ಅಥವಾ ಇಲ್ಲದೆಯೂ ಇರಬಹುದು. ಆದರೆ ಇಂಥ ಎಲ್ಲ ಕಥಾನಕಗಳು, ಸಂಬಂಧಪಟ್ಟ ಕೃತಿ ಅಥವಾ ವಸ್ತುವಿನ ಸುತ್ತಲೂ ಕೌತುಕಪೂರ್ಣವಾದ ಬಣ್ಣಬಣ್ಣದ ಒಂದು ಭಾವವಲಯವನ್ನು ನಿರ್ಮಿಸಿ, ಭಾವುಕರ ಮನಸ್ಸಿಗೆ ಒಂದು ಬಗೆಯ ಭವ್ಯತಾನುಭೂತಿಯನ್ನೂ ಸಂತೋಷ ಪ್ರತೀತಿಯನ್ನೂ ಒದಗಿಸುವುದು ವಿರಳವೇನಲ್ಲ. ವಿಲಕ್ಷಣವಾದ ವಿಧವಿಧದ ಕಥಾನಕ ಪರಿವೇಷಗಳಿಲ್ಲದ ಪ್ರಸಿದ್ಧ ವ್ಯಕ್ತಿಗಳಾಗಲೀ ವಸ್ತುಗಳಾಗಲೀ ನಮ್ಮಲ್ಲಿ ಇಲ್ಲವೆ ಇಲ್ಲವೆನ್ನಬಹುದು. ಸಾವಿರ ವರ್ಷಗಳ ಹಿಂದೆ ಶ್ರವಣ ಬೆಳುಗೊಳದ ಇಂದ್ರಗಿರಿಯಲ್ಲಿ ಚಾವುಂಡರಾಯನಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಬಾಹುಬಲಿ ಸ್ವಾಮಿಯ ಅಖಂಡ ಶಿಲಾಭೂತ ಅತ್ಯುದ್ಘಮಾನೋನ್ನತ ಮೂರ್ತಿಯ ಬಗೆಗೂ ಅದೆಷ್ಟೋ ರಮ್ಯಾದ್ಭುತ ಐತಿಹ್ಯಗಳು ರೂಪುಗೊಂಡಿರುವುದು ಆಶ್ಚರ್ಯವೇನಲ್ಲ. ಅದೇ ರೀತಿ, ತುಳುನಾಡಿನ ಕಾರ್ಕಳ ಹಾಗೂ ವೇಣೂರುಗಳಲ್ಲಿ ನಿರ್ಮಿಸಲ್ಪಟ್ಟ ಗೋಮಟೇಶ್ವರ ವಿಗ್ರಹಗಳ ಕುರಿತೂ ಸಾಕಷ್ಟು ಬೆರಗಿನ ಬಣ್ಣನೆಯ ಕಥೆಗಳು ಕೇಳಿಬರುತ್ತವೆ.

ಶ್ರವಣಬೆಳುಗೊಳದ ಭುವನೈಕಭವ್ಯವಾದ ಅದ್ಭುತ ಮೂರ್ತಿಯನ್ನು ಕಂಡರಿಸಿದ ಮುಖ್ಯ ಶಿಲ್ಪಿ ಅರಿಷ್ಠನೇಮಿ ಎಂಬ ಶಿಲ್ಪಿವರನೆಂದು ಕರ್ಣಾಕರ್ಣಿಕೆಯಾಗಿ ಬಂದ ಐತಿಹ್ಯವೊಂದಿದೆ. ಹಾಗೆಯೇ ಜಕ್ಕಣಾಚಾರಿಯ ಹೆಸರನ್ನೂ ಬೇಲೂರು, ಬೆಳುಗೊಳ ಶಿಲ್ಪಗಳ ಜೊತೆಗೆ ಜೋಡಿಸಿದ್ದುಂಟು. ತುಳುನಾಡಿನ ಭೂತಗಳ ಆಖ್ಯಾಯಿಕೆಗಳಾದ ಪಾಡ್ದನಗಳಲ್ಲಿ ಈ ಗೊಮ್ಮಟ ಮೂರ್ತಿಯನ್ನು ಕೆತ್ತಿದ ಶಿಲ್ಪಿ ತುಳುನಾಡಿನ ಕೆಲ್ಲತ್ತ ಮಾರ್ನಾಡಿನ ಶಂಭುಕಲ್ಕುಡ ಎಂಬವನು ಎಂಬ ಉಲ್ಲೇಖವಿದೆ. ತುಳುನಾಡಿನ ಬೇರೆ ಬೇರೆ ಕಡೆಗಳಲ್ಲಿ ಪ್ರಚಲಿತವಿರುವ ಅನೇಕ ಪಾಡ್ದನಗಳಲ್ಲಿ ಇದೇ ಮಾತು ವ್ಯಕ್ತವಾಗಿರುವುದರಿಂದ ಇದು ಯಾರೋ ಒಬ್ಬ ಪಾಡ್ದನಕಾರನ ಪ್ರಕ್ಷೇಪಪ್ರಯತ್ನ ಎನ್ನುವಂತೆಯೂ ಇಲ್ಲ. ಈ ಪಾಡ್ದನಗಳಿಗೆ ನೂರಾರು ವರ್ಷಗಳ ಹಿನ್ನೆಲೆಯಿರುವುದ ರಿಂದಲೂ, ಈಚೆಗೆ ಕಂಡುಬರುವ ಪ್ರಾದೇಶಿಕ ದುರಭಿಮಾನ ಹಿಂದೆ ಇದ್ದಿತೆಂಬುದಕ್ಕೆ ಆಧಾರವಿಲ್ಲದ್ದರಿಂದಲೂ, ಇಂಥ ಜನಪದ ಕೃತಿಗಳಲ್ಲಿ ತಲೆದೋರಿರುವ ವಿಷಯಗಳನ್ನು ಕೇವಲ ಕಪೋಲ ಕಲ್ಪಿತವೆಂದು ಪಕ್ಕಕ್ಕೆ ತಳ್ಳಿಹಾಕುವಂತಿಲ್ಲ. ಹಾಗೆಂದು ಎಲ್ಲವನ್ನೂ ಅಕ್ಷರಶಃ ಪೂರ್ತಿ ಸ್ವೀಕರಿಸುವಂತೆಯೂ ಇಲ್ಲ. ಅನೇಕ ಪಾಡ್ದನಗಳಲ್ಲಿ ಆನುಷಂಗಿಕವಾಗಿ ಕೆಲವೊಂದು ಐತಿಹಾಸಿಕ ಅಂಶಗಳು ಹುದುಗಿರುವುದನ್ನು ಗುರುತಿಸಬಹುದು.

ತುಳುನಾಡಿನುದ್ದಕ್ಕೂ ಆರಾಧಿಸಲ್ಪಡುವ ಭೂತಗಳಲ್ಲಿ ಕಲ್ಲುರ್ಟಿ ಕಲ್ಕುಡರ ಹೆಸರು, ಅವರ ಕಾರಣಿಕಗಳು ಸುಪ್ರಸಿದ್ಧ, ಈ ಕಲ್ಕುಡನೆಂದರೆ ಕಾರ್ಕಳದ ಗೋಮಟೇಶನನ್ನು ಕೆತ್ತಿದ ಬೀರು ಕಲ್ಕುಡ (ಕಲ್ಕುಡ ಎಂದರೆ ತುಳುವಿನಲ್ಲಿ ಕಲ್ಲು ಕೆತ್ತುವ ಶಿಲ್ಪಿ ಎಂದರ್ಥ) ಎಂದೂ ಕಲ್ಲುರ್ಟಿಯೆಂದರೆ ಅವನ ತಂಗಿ ಕಾಳಮ್ಮನೆಂದೂ ಇವರ ತಂದೆ ಶಂಭು ಕಲ್ಕುಡನೆಂದೂ ಪಾಡ್ದನಗಳು ಬಣ್ಣಿಸುತ್ತವೆ. ಪಾಡ್ದನದ ಕಥೆಯನ್ನು (ಅವುಗಳಲ್ಲಿ ಹಲವು ಪಾಠಾಂತರಗಳಿದ್ದರೂ ಸಾಮಾನ್ಯವಾಗಿ ಕಥೆಯನ್ನು) ಸ್ಥೂಲವಾಗಿ ಹೀಗೆ ಸಂಗ್ರಹಿಸಬಹುದು:

ತುಳುನಾಡಿನ ಕೆಲ್ಲತ್ತಮಾರ್ನಾಡಿದ ಪ್ರಸಿದ್ಧ ಶಿಲ್ಪಿ ಶಂಭುಕಲ್ಕುಡ ಬೇಲೂರು ಬೆಳುಗೊಳಗಳಿಗೆ ಶಿಲ್ಪಕಾರ್ಯಗಳಿಗಾಗಿ ತೆರಳುವಾಗ ಆತನ ಪತ್ನಿ ಇರುವದಿ ಗರ್ಭವತಿಯಾಗಿರುತ್ತಾಳೆ. ಅವಳಲ್ಲಿ ಅವಳಿ ಮಕ್ಕಳಾಗಿ ಬೀರು ಮತ್ತು ಕಾಳಮ್ಮ ಜನಿಸುತ್ತಾರೆ. ಹತ್ತಾರು ವರ್ಷಗಳವರೆಗೂ ಶಂಭು ಕಲ್ಕುಡ ಊರಿಗೆ ಹಿಂದಿರುಗುವುದಿಲ್ಲ. ಆಟಕ್ಕೆ ಹೋದಲ್ಲಿ ಅಪವಾದದ ಮಾತುಗಳನ್ನು ಕೇಳಿ ತಾಳಲಾರದೆ ತಾಯಿಯಲ್ಲಿ ಕೇಳಿ, ತಂದೆಯನ್ನು ಕರೆದೇ ತರಲು ಹೊರಡುತ್ತಾನೆ ಬೀರು. ಮಧ್ಯಮಾರ್ಗದಲ್ಲಿ ಸಿಕ್ಕಿದ ಶಂಭು ಕಲ್ಕುಡ ಮಗನನ್ನು ಕಂಡು ಹರ್ಷಿಸಿ, ಅವನ ಇಚ್ಛೆಯಂತೆ ತನ್ನ ಶಿಲ್ಪಕೃತಿಗಳನ್ನು ತೋರಿಸಲೆಂದು ಕರೆದೊಯ್ಯುತ್ತಾನೆ. ಶ್ರವಣಬೆಳುಗೊಳದ ಬಾಹುಬಲಿಯ ವಿಗ್ರಹದಲ್ಲಿ ಅತಿ ಸೂಕ್ಷ್ಮವಾದೊಂದು ದೋಷವನ್ನು ಬೀರು ತೋರಿಸಿಕೊಟ್ಟಾಗ ಅಪಮಾನ ವ್ಯಥೆಗಳಿಂದ ಎದೆಗುಂದಿದ ಶಂಭು ಕಲ್ಕುಡ ಅಲ್ಲೇ ಅತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ತಂದೆಯ ಶಿಲ್ಪ ಸಲಕರಣೆಗಳನ್ನು ತೆಗೆದುಕೊಂಡು ಊರಿಗೆ ಹಿಂದಿರುಗಿದ ಬೀರು ಕಲ್ಕುಡ ತನ್ನ ಸಾಧನೆಯನ್ನು ಮುಂದುವರಿಸಿ ದೊಡ್ಡ ಶಿಲ್ಪಿಯಾಗುತ್ತಾನೆ. ಅಪ್ಪನನ್ನು ‘ಕೊಂದ’ ಬೀರು ಕಲ್ಕುಡನ ಕೀರ್ತಿ ದಿನದಿನಕ್ಕೂ ವೃದ್ದಿಸುತ್ತದೆ. ಕಾರ್ಕಳದ ರಾಜಭೈರವಸೂಡನಿಂದ ಆತನಿಗೆ ಕರೆ ಬರುತ್ತದೆ ಗೋಮಟೇಶ್ವರನ ಕೆಲಸವನ್ನು ಪೂರೈಸಿ ಐದು ಸಾವಿರಾಳುಗಳಿಂದ ಅದನ್ನು ಎತ್ತಿ ನಿಲ್ಲಿಸಲು ಸಾಧ್ಯವಾಗದೆ ಇದ್ದಾಗ ತಾನೊಬ್ಬನೇ ಅತ್ಯಂತ ಕುಶಲತೆಯಿಂದ ಹಾಸುಗಲ್ಲಿನ ಕೀಲು ಕೊಟ್ಟು ಮೂರ್ತಿಯನ್ನು ನಿಲ್ಲಿಸುತ್ತಾನೆ. ಸಂಭ್ರಮದ ಮಸ್ತಕಾಭೀಷೇಕವಾಗುತ್ತದೆ.

ಮುಂದೆ ಬೀರು ಕಲ್ಕುಡನ ದುರಂತ ಪ್ರಾರಂಭವಾಗುತ್ತದೆ. ಈ ಬಗೆಯ ಶಿಲ್ಪ ಕಾರ್ಯವನ್ನು ಈ ಮಹಾಶಿಲ್ಪಿ ಬೇರೆ ಯಾವ ಕಡೆಯೂ ಮಾಡಬಾರದೆಂದು ಬಗೆದು ಕಾರ್ಕಳದ ಅರಸ ಆತನ ಬಲಗೈಯನ್ನೂ ಎಡಗಾಲನ್ನೂ ತುಂಡು ಮಾಡಿಸುತ್ತಾನೆ. ಆದರೆ ವೇಣೂರಿನ ಅರಸ ತಿಮ್ಮಣ್ಣಾಜಿಲ ಬೀರು ಕಲ್ಕುಡನನ್ನು ಕರೆಸಿ ಅವನಿಂದ ವೇಣೂರಿನಲ್ಲಿ ಬಾಹುಬಲಿಯ ವಿಗ್ರಹವನ್ನು ಮಾಡಿಸುತ್ತಾನೆ.

ಬೀರು ಕಲ್ಕುಡನ ಒಡಹುಟ್ಟಾದ ಕಾಳಮ್ಮ ತನ್ನ ಸೋದರನನ್ನು ಅರಸಿಕೊಂಡು ಹೋಗುತ್ತಾಳೆ. ವೇಣೂರಿನಲ್ಲಿ ಅಣ್ಣನನ್ನು ಸಂಧಿಸುತ್ತಾಳೆ. ಕಾರ್ಕಳದ ಅರಸ ಆತನಿಗಿತ್ತ ‘ಬಹುಮಾನ’ದ ವಿಚಾರ ತಿಳಿದು ಕ್ರುದ್ಧಳಾಗುತ್ತಾಳೆ. ಪ್ರತೀಕಾರಾಕಾಂಕ್ಷೆಯನ್ನು ಪ್ರಕಟಿಸು ತ್ತಾಳೆ. ಭೂತಗಳಾಗಿಯಾದರೂ ಕಾಡಬೇಕೆಂದು ಆಶಿಸುತ್ತಾಳೆ. ಇಬ್ಬರೂ ಮಾಯಕವಾಗಿ ಭೂತರೂಪಿಗಳಾಗಿ ಕಾರ್ಕಳಕ್ಕೆ ಧಾವಿಸುತ್ತಾರೆ. ಅಲ್ಲಿ ಉತ್ಪಾತಗಳು ಪ್ರಾರಂಭವಾಗುತ್ತದೆ. ಭೂತಬಾಧೆಯನ್ನು ನಿವಾರಿಸಲು ಅರಸನ ಆದೇಶದಂತೆ ಅನೇಕ ಮಂತ್ರವಾದಿಗಳು ಬಂದು ವಿಫಲರಾಗುತ್ತಾರೆ. ಕೊನೆಗೆ ಉಪ್ಪಿನಂಗಡಿಯ ವೈಲಾಯನೆಂಬ ಮಂತ್ರವಾದಿಯಿಂದ ಭೂತಬಾಧೆ ಶಮನವಾಗುತ್ತದೆ. ಭೂತಗಳಿಗೆ ಮೊದಲೇ ವಾಗ್ದಾನವಿತ್ತಂತೆ ವೈಲಾಯನು ಅವುಗಳಿಗೆ ಗುಡಿ ಕಟ್ಟಿಸಿ ಕೋಲ ಕೊಡುತ್ತಾನೆ. ಮುಂದೆ ಈ ದೈವಗಳ ಪ್ರತಾಪ ಹೆಚ್ಚಿ, ಊರೂರುಗಳಲ್ಲಿಯೂ ಹೋಗಿ ಅವು ನೆಲಸಿ ತಮ್ಮ ಕಾರಣಿಕವನ್ನು ಮೆರೆಯುತ್ತವೆ.

ಶ್ರವಣಬೆಳ್ಗೊಳದ ವಿಶ್ವವಿಖ್ಯಾತ ಬಾಹುಬಲಿ ವಿಗ್ರಹವನ್ನು ಕೆತ್ತಿದಾತ ತುಳು ನಾಡಿನ ಕೆಲ್ಲತ್ತಮಾರ್ನಾಡಿನ ಶಂಭು ಕಲ್ಕುಡನೆಂಬ ಹೇಳಿಕೆ ಈ ಪಾಡ್ದನ ಸಾಹಿತ್ಯದ ಒಂದು ವಿಶಿಷ್ಟ ಕುತೂಹಲಕಾರಕ ವಿಚಾರವಾಗಿದೆ. ಶಿಲ್ಪಿಗಳಂಥ ಕಲಾಕುಶಲಿಗಳಿಗೆ ದೂರದೂರುಗಳಿಂದ ಆಹ್ವಾನವಿರುವುದು ಸಹಜವೇ. ತುಳುನಾಡಿನ ಕೆಲ್ಲತ್ತ (ಕೆಲ್ಲಪುತ್ತಿಗೆ) ಮಾರ್ನಾಡಿನಲ್ಲಿ ಪ್ರಸಿದ್ಧವಾದ ಶಿಲ್ಪಿಗಳ ವಂಶವೊಂದು ಇತ್ತೆಂದು ತಿಳಿದುಬರುತ್ತದೆ. ಕೆಲ್ಲಪುತ್ತಿಗೆಯೂ ಕೂಡಾ ಇತಿಹಾಸ ಪ್ರಸಿದ್ಧವಾದೊಂದು ಸ್ಥಳವೆಂದು ಈಚೆಗೆ ಅಲ್ಲಿ ದೊರಕಿದ ಕೆಲವು ಶಾಸನಗಳು ಸಾರಿ ಹೇಳುತ್ತವೆ. (‘ರತ್ನ ಮಂಜೂಷ’ದಲ್ಲಿ ಶ್ರೀ ಪಿ.ಎನ್. ನರಸಿಂಹಮೂರ್ತಿಯವರ ಲೇಖನ, ಪು.೭೮)

ಚಾರಿತ್ರಿಕವಾಗಿ, ಕನ್ನಡ ನಾಡಿನ ಮೂರು ಪ್ರಸಿದ್ಧ ಗೋಮಟೇಶ್ವರ ವಿಗ್ರಹಗಳು ನಿರ್ಮಾಣವಾದ ಕಾಲವಾದರೋ ಸಾಕಷ್ಟು ನಿಡಿದಾದ ಅಂತರವುಳ್ಳದ್ದು. ಆದರೆ ತುಳು ಪಾಡ್ದನದಲ್ಲಿ ಕಥಾ ಸಂಯೋಜನಾ ದೃಷ್ಟಿಯಿಂದ ಈ ಅವಧಿಯನ್ನು ಎರಡೇ ತಲೆಮಾರಿಗೆ ಸೀಮಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ ತಂದೆ ಶಂಭು ಕಲ್ಕುಡ ಶ್ರವಣಬೆಳುಗೊಳದ ಬಾಹುಬಲಿ ವಿಗ್ರಹವನ್ನು ಕೆತ್ತಿದನಾದರೆ ಮಗ ವೀರಕಲ್ಕುಡ ಕಾರ್ಕಳ ಹಾಗೂ ವೇಣೂರಿನ ವಿಗ್ರಹಗಳನ್ನು ಕೆತ್ತುತ್ತಾನೆ. ಕೆಲ್ಲತ್ತಮಾರ್ನಾಡಿನ ಪ್ರಸಿದ್ಧ ಶಿಲ್ಪಿ ಮನೆತನದ ಬೇರೆ ಬೇರೆ ಶಿಲ್ಪಿಗಳು ಬೇರೆ ಬೇರೆ ಕಾಲಗಳಲ್ಲಿ ಈ ವಿಗ್ರಹಗಳನ್ನು ಕೆತ್ತಿರುವುದು ಅಥವಾ ಕೆತ್ತುವಲ್ಲಿ ಸಹಶಿಲ್ಪಿಗಳಾಗಿ ದುಡಿದಿರಬಹುದಾದುದು ಸಾಧ್ಯ. ಪಾಡ್ದನದಂಥ ಭೂತ ಮಹಿಮಾನುವರ್ಣನವಾದ ಸಾಹಿತ್ಯದಲ್ಲಿ ಘಟನೆಗಳನ್ನು ಶುದ್ಧ ಐತಿಹಾಸಿಕ ನಿಷ್ಠುರ ದೃಷ್ಟಿಯಿಂದ ನೋಡುವುದು ಸಾಧುವಲ್ಲ.

ಕಲ್ಕುಡನ ಪಾಡ್ದನದಲ್ಲಿರುವ ಬಾಹುಬಲಿ ನಿರ್ಮಾಣ ಸಂಬಂಧವಾದ ಕಥಾನಕದಲ್ಲಿ ಹುದುಗಿದ ದುರಂತವಸ್ತು ಅತ್ಯಂತ ಮಾರ್ಮಿಕವಾದದ್ದು. ಶಂಭು ಕಲ್ಕುಡನ ಶಿಲ್ಪ ಕೃತಿಯಲ್ಲಿ ಆತನ ಮಗ ಬೀರು ಕಲ್ಕುಡ ದೋಷ ಲೇಶವನ್ನು ಕಾಣಿಸಿದುದರಿಂದ ಅಭಿಮಾನಿಯಾದ ತಂದೆ ನೊಂದು ಒಡನೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ತಂದೆಯನ್ನು ಹೀಗೆ ‘ಕೊಂದ’ ಬೀರು ಕಲ್ಕುಡನೂ ಮುಂದೆ ಅಂಗವಿಕಲನಾಗುವ ದೌರ್ಭಾಗ್ಯಕ್ಕೆ ಈಡಾಗುತ್ತಾನೆ. ಗೋಮಟೇಶನ ಮಹಾಮೂರ್ತಿಯನ್ನು ನಿರ್ಮಿಸಿಕೊಟ್ಟ ಸಲುವಾಗಿ ಬಹುಮಾನಗಳನ್ನಿತ್ತು ಸತ್ಕರಿಸಿ ಮೆರೆಸಿದ ಕಾರ್ಕಳದ ಭೈರವರಸನೇ ಶಿಲ್ಪಿಯ ಕೈಕಾಲುಗಳನ್ನು ತುಂಡು ಮಾಡಿಸುತ್ತಾನೆ. ಅಣ್ಣನನ್ನು ಅರಸುತ್ತ ಬಂದ ಕಾಳಮ್ಮ ಅಂಗವಿಕಲ ಸೋದರನನ್ನು ಕಂಡು ಆಘಾತಗೊಳ್ಳುತ್ತಾಳೆ. ಅವರಿಬ್ಬರೂ ಕಾರ್ಕಳದ ಅರಸನ ಮೇಲಿನ ಪ್ರತೀಕಾರಕ್ಕಾಗಿ ‘ಮಾಯಕ’ ಹೊಂದಿದರೆಂದು ಪಾಡ್ದನವು ಸೂಚಿಸಿದರೂ ವಾಸ್ತವವಾಗಿ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬೇಕು.

ಇಲ್ಲಿ ಶಂಭು ಕಲ್ಕುಡನ ಅತಿ ಅಭಿಮಾನ, ಬಾಲಕ ಬೀರು ಕಲ್ಕುಡನ ದೋಷಾನ್ವೇಷಣ ಪ್ರವೃತ್ತಿ ಶಂಭುಕಲ್ಕುಡನ ದಾರುಣ ಮರಣಕ್ಕೆ ದಾರಿ ತೋರಿಸುತ್ತದೆ. ಭೈರವರಸನ ಸಂಕುಚಿತ ಬುದ್ದಿ ಬೀರು ಕಲ್ಕುಡನನ್ನು ಅಂಗಹೀನನ್ನಾಗಿಸುತ್ತದೆ. ಕಾರ್ಕಳದವರಿಗೂ ವೇಣೂರಿನವರಿಗೂ ಜಿದ್ದು ಬೆಳೆಯುತ್ತದೆ. ದ್ವೇಷದ ದಾವಾನಲದ ನಡುವೆ ಬೀರು ಕಲ್ಕುಡ-ಕಾಳಮ್ಮರ ಭೂತಾವತಾರದ ವಿಕಟಾಟ್ಟಹಾಸ ಕೇಳಿಬರುತ್ತದೆ. ಹೀಗೆ ಅಂದು ಭೂತತ್ವವನ್ನು ಹೊಂದಿದ ಆ ಅಣ್ಣತಂಗಿ ಈಗಲೂ ತುಳುನಾಡಿನಲ್ಲೂ ಅದರ ಆಸುಪಾಸಿನಲ್ಲೂ ಅತ್ಯಂತ ಪ್ರಭಾವಶಾಲೀ ಶಕ್ತಿಮೂರ್ತಿಗಳಾಗಿ ಉಳಿದಿದ್ದಾರೆ.

ಪ್ರಕೃತ ಪಾಡ್ದನಗಳಲ್ಲಿ ವರ್ಣಿತವಾದ ಬಾಹುಬಲಿ ನಿರ್ಮಾಣ ಹಾಗೂ ಪ್ರತಿಷ್ಠೆಯ ನಿರೂಪಣೆಯನ್ನು ಒಂದಿಷ್ಟು ಅವಲೋಕಿಸಬಹುದು. ಬಾಹುಬಲಿ ಸ್ವಾಮಿಯ ಬಿಂಬ ಮಾತ್ರವಲ್ಲ, ಶಿಲ್ಪಿ ನಿರ್ಮಿಸಿದ ಇತರ ಶಿಲ್ಪಗಳ ವರ್ಣನೆಯೂ ಇಲ್ಲಿದೆ. ಶಿಲ್ಪದ ವರ್ಣನೆ ಪಾಡ್ದನ ಕವಿಯ ಪ್ರಧಾನ ಆಶಯವಲ್ಲವಾದುದರಿಂದ ಸಂಕ್ಷಿಪ್ತವಾಗಿ ಬಣ್ಣಿಸಿ ಮುಂದೆ ಸಾಗುತ್ತಾನೆ.

‘‘ಮಗರ್ ದಿನೊಕು ಸೂರ್ಯ ಉದಯೊಗು ಬತ್ತೆ. ಬೆಲುಗುಲ ಅರಸು ಪಣ್ಪಿ ಬೇಲೆ ಪಂಡೆರ್. ಎಂಕಾಪಿ ಕಲ್ಲ್ ತೂಪಾವೊಡುಂದೆ ಕಲ್ಕುಡೆ. ಪೆರಿಯ ಕಲ್ಲೂಣಿಗ್ ಪೋಲ, ನಿನ ಮನಸ್ಸ್ ಗಾಪಿ ಕಲ್ಲ್ ತೂಲಂದೆರ್. ಪೆರಿಯ ಕಲ್ಲೂಣಿಗ್ ಪೋಯೆ, ನಾಲ್ ಕೋಡಿ ದೇವೆರ್ಕುಳೆನ್ ನೆನೆತೆ, ದಾರೆತೂದು ಉಳಿ ಪಾಡ್ಯೆ. ಅಯಿಕೆ ಮಡುಪಾಡ್ಯೆ. ನೆತ್ತೆರ್ ಪಾಂಬಳೆ ಲಕ್ಕ್ಂಡ್, ನೆತ್ತೆರ್ ಪಾಂಬಳೆ ಕಟ್ಟಾಯೆ. ಕಲ್ಲ್ ಜಾಗರಂದ ಬೇಲೆ ಬೆಂದೆ, ಸಾರ ಕಮ್ಮೊದ ಬತ್ತಡೆದ ಬೇಲೆ, ನೂತ್ತಿರುವ ಬೊಂಬೆದ ಬೇಲೆ, ಉಳಗುಂಡ, ಪಿರಮಗೋಪುರದ ಬೇಲೆ, ರಂಬೆನಾಟಕ ಸೂಳೆಗುಡಿ ಬುಡರಂದ ಬೇಲೆ ಬೆಂದೆ, ಏಳ್ ಗುಂಡ ಕಟ್ಯೆ ಏಳ್ವೆರ್ ದೇವೆರ್ಕುಳೆನ್ ನಿಲೆ ಮಲ್ತೆ; ಸಾರಬಾಕಿಲ್ ಪಾಡ್ನಗ ಒಂಜಿ ಬಾಕಿಲ್ ಜತ್ತ್ ಬತ್ತ್ಂಡ್, ಒಂಜಿ ಬಾಕಿಲ್ ಪಾಡ್ನಗ ಸಾರ ಬಾಕಿಲ್ ಜತ್ತ್ ಬತ್ತ್ಂಡ್, ಲೊಟಂದ ಆನೆ, ಲೊಟಂದ ಕುದ್ರೆ ಸಿಂಗ ಮುರ್ಗೊದ ಬೇಲೆ ಬೆಂದೆ. ಅಂಗಣೊಡು ಆನೆಕಲ್ಲ್ ಪಾಡ್ಯೆ. ಗುಮ್ಮಡ ಸ್ವಾಮಿ ಬೇಲೆ ಬೆಂದೆ.’’ (ಮರುದಿನ ಸೂರ್ಯೋದಯಕ್ಕೆ ಬಂದ(ಶಿಲ್ಪಿ). ಬೆಳುಗೊಳದ ಅರಸರು ಹೇಳಬೇಕಾದ ಕೆಲಸ ಹೇಳಿದರು. ನನಗಾಗುವ ಕಲ್ಲನ್ನು ತೋರಿಸಿ ಕೊಡಬೇಕೆಂದ ಕಲ್ಕುಡ. ಹಿರಿಯ ಕಲ್ಲದಿಣ್ಣೆಗೆ ಹೋಗು, ನಿನ್ನ ಮನಸ್ಸಿಗಾಗುವ ಕಲ್ಲನ್ನು ನೋಡು ಎಂದರು. ಹಿರಿಯ ಕಲ್ಲೂಣಿಗೆ ಹೋದ. ನಾಲ್ಕು ದಿಶೆಯ ದೇವರುಗಳನ್ನು ನೆನೆದ. ಧಾರೆ ನೋಡಿ ಉಳಿ ಹಾಕಿದ. ಅಲ್ಲಿಗೇ ಚಾಣಗೊಡಲಿಯನ್ನು ಹಾಕಿದ. ರಕ್ತದ ಕೋಡಿ ಚಿಮ್ಮಿತು. ಅದನ್ನು ನಿಲ್ಲಿಸಿದ. ಕಲ್ಲವೇದಿಕೆಯ ಕೆಲಸ ಮಾಡಿದ. ಸಾವಿರ ಕಂಬಗಳ ಬಸದಿಯ ಕೆಲಸ, ನೂರಿಪ್ಪತ್ತು ಬೊಂಬೆಗಳ ಕೆಲಸ, ಒಳಗಿನ ಗರ್ಭಗೃಹ, ಹಿಂದಿನ ಗೋಪುರದ ಕೆಲಸ, ರಂಭೆ ನಾಟಕ ದೇವದಾಸಿಯರ ಬಿಡಾರದ ಕೆಲಸ ಮಾಡಿದ. ಏಳು ಗುಡಿ ಕಟ್ಟಿ ಏಳು ದೇವರುಗಳನ್ನು ನೆಲೆಮಾಡಿದ. ಸಾವಿರ ಬಾಗಿಲು ಹಾಕುವಾಗ ಒಂದು ಬಾಗಲು ತೆರೆದು ಬಂತು. ಒಂದು ಬಾಗಿಲು ಹಾಕುವಾಗ ಸಾವಿರ ಬಾಗಿಲು ತೆರೆದು ಬಂತು. ಅಲಂಕಾರದ ಆನೆ, ಅಲಂಕಾರದ ಕುದುರೆ, ಸಿಂಹಮೃಗದ ಕೆಲಸ ಮಾಡಿದ. ಅಂಗಣದಲ್ಲಿ ಆನೆಕಲ್ಲು ಹಾಕಿದ. ಗುಮ್ಮಟ ಸ್ವಾಮಿಯ ಕೆಲಸ ಮಾಡಿದ)

ಕಾರ್ಕಳದ ಗೋಮಟೇಶ್ವರ ವಿಗ್ರಹವನ್ನು ಕೆತ್ತಿ ಎತ್ತಿ ನಿಲ್ಲಿಸಿದ ವಿವರವೂ ಪಾಡ್ದನದಲ್ಲಿ ಚಿತ್ರಿತವಾಗಿದೆ. ‘‘ಕಾರ್ಲದ ಅರಸು ಬೈರವ ಸೂಡೆರ್ ಈ ವರ್ತಮಾನೊ ಕೇಂಡರ್. ಬೀರು ಕಲ್ಕುಡನ್ ಲೆಪುಡ್ಯೆರ್. ಎನ ರಾಜ್ಯೊಡು ಬೇಲೆ ಬೆನೊಡುಂದೆರ್, ಆಯೆ ಸಾರ ಕಂಬೊ ಬತ್ತಡದ ಬೇಲೆ, ನೂತ್ತಿರುವೊ ಬೊಂಬೆದ ಬೇಲೆ, ರಂಬೆನಾಟಕೊದ ಬೇಲೆ, ಸೂಳೆಗುಡಿ ಬುಡರಂದ ಬೇಲೆ ಬೆಂದೆ. ಬೊಟ್ಟುದ ಪಾದೆಗ್ ಪೋಲ ಗುಮ್ಮಟಸಾಮಿ ಬೇಲೆ ಬೆನ್ನಾಂದೆರ್ ಅರಸು. ಗುಮ್ಮಡ ಸಾಮಿ ಬೇಲೆ ಬೆಂದೆ. ಬಂಟ ಕಮ್ಮೊಮಾರ್ನೆಮಿ ಕಮ್ಮೊ ಮಳ್ತೆ. ಅಂಗಣೊದ ಬೇಲೆ ಬೆಂದೆ. ಅಜ್ಜೆಗೊಂಜಿ ಅಯ್ಯಕಾಯಿ ಪತ್ತ್‌ಲೆ, ಕಾಂಟ್ಯರ ಪುರ್ಪೊ ಕೊಂಡಲೆ, ಕಾರ್ಲ ಐಸಾರಾಳ್ ಕೂಡುಲೆ, ಗುಮ್ಮಡ ಸಾಮಿನ್ ನಿಲೆಮಲ್ಪುಲೆಂದೆ. ಕಾರ್ಲ ಐಸಾರಾಳ್ ಕೂಡುಂಡಲಾ ಗುಮ್ಮಡನ್ ಸರ್ತ ಮಲ್ಪೆರೆ ಕೂಡಿಜಿ. ಸರ್ತ ಮಳ್ಪೆರೆ ತೀರುಜಿ ಕಲ್ಕುಡಾ, ಬೇಲೆ ಬೆಂದಿ ಸೇಜಿ ಸಂಬಳ ನಿಕ್ಕ್ ಕೊರ್ಪುಂಡು. ಸರ್ತ ಮಳ್ತ್ ನಿರ್ಮಿತಡ ಅಯಿಕ್ ಬೇತೆ ಸೇಜಿ ಕೊರ್ಪೆಂದೆರ್. ಆಪುಜ್ಯ ಕರ್ತುಳೆಂದ್ ದತ್ತ ಕೈ ಪಾಡ್ಯೆ. ಪಿರವು ಹಾಸ್ ಕಲ್ಲ್ ಕೊರಿಯೆ ಗುಮ್ಮಡ ಸಾಮಿನ್ ನಿರ್ಮಿಯೆ,’’ (ಕಾರ್ಕಳದ ಅರಸು ಬೈರವ ಸೂಡರು ಈ ವರ್ತಮಾನ ಕೇಳಿದರು. ಬೀರು ಕಲ್ಕುಡನನ್ನು ಕರೆಸಿದರು. ತನ್ನ ರಾಜ್ಯದಲ್ಲಿ ಕೆಲಸ ಮಾಡಬೇಕೆಂದರು. ಆತ ಸಾವಿರ ಕಂಬದ ಬಸದಿಯ ಕೆಲಸ, ನೂರಿಪ್ಪತ್ತು ಬೊಂಬೆಗಳ ಕೆಲಸ, ರಂಭೆನಾಟಕದ ಕೆಲಸ, ಸೂಳೆಗುಡಿ, ಬಿಡಾರದ ಕೆಲಸ ಮಾಡಿದ, ಬೆಟ್ಟದ ಕಲ್ಲಿಗೆ ಹೋಗು, ಗುಮ್ಮಟ ಸ್ವಾಮಿಯ ಕೆಲಸ ಮಾಡು ಎಂದರು ಅರಸರು. ಗುಮ್ಮಟ ಸ್ವಾಮಿಯ ಕೆಲಸ ಮಾಡಿದ. ಬಂಟ ಕಂಬ, ಮಹಾನವಮಿ ಕಂಬಗಳನ್ನು ಮಾಡಿದ. ಅಂಗಣದ ಕೆಲಸ ಮಾಡಿದ. ಹೆಜ್ಜೆಗೊಂದು, ಈಡುಗಾಯಿ ಹಿಡಿದುಕೊಳ್ಳಿ, ಬುಟ್ಟಿಯಲ್ಲಿ ಹೂವು ತನ್ನಿ, ಕಾರ್ಕಳ ಐದು ಸಾವಿರಾಳು ಸೇರಿ, ಗುಮ್ಮಟ ಸ್ವಾಮಿಯನ್ನು ನಿಲ್ಲಿಸಿರಿ ಎಂದ. ಕಾರ್ಕಳ ಐದು ಸಾವಿರಾಳು ಸೇರಿದರೂ ಗುಮ್ಮಟನನ್ನು ನೆಟ್ಟಗಾಗಿಸಲು ಸಾಧ್ಯವಾಗಲಿಲ್ಲ. ನೆಟ್ಟಗೆ ನಿಲ್ಲಿಸಲು ಶಕ್ಯವಿಲ್ಲ ಕಲ್ಕುಡಾ, ಕೆಲಸಗೈದ ಬಹುಮಾನ ಸಂಬಳ ನಿನಗೆ ಕೊಡಲಾಗುತ್ತದೆ. ನೇರ ನಿಲ್ಲಿಸಿದೆಯಾದರೆ ಅದಕ್ಕೆ ಬೇರೆಯೇ ಬಹುಮಾನ ಕೊಡುತ್ತೆನೆ ಎಂದರು. ಆಗುವುದಿಲ್ಲವೆ ಕರ್ತುಗಳೇ, ಎಂದು ಎಡಗೈ ಹಾಕಿದ. ಹಿಂದೆ ಹಾಸುಕಲ್ಲು ಕೊಟ್ಟ, ಗುಮ್ಮಟ ಸ್ವಾಮಿಯನ್ನು ನೇರ ನಿಲ್ಲಿಸಿದ.)

ವೇಣೂರಿನಲ್ಲಿ ಗೋಮಟೇಶನನ್ನು ಪ್ರತಿಷ್ಠಾಪಿಸಿದ ವಿವರವೂ ಹೆಚ್ಚು ಕಡಿಮೆ ಇದರಂತೆಯೇ ಇದೆ.

ತಂದೆಯ ಕೆಲಸಕ್ಕೆ ಮಗ ಕೊರತೆ ಹೇಳುವ ಪ್ರಸಂಗ ಇಂತಿದೆ : ‘‘ಅಂಚನೆ ಅಮ್ಮೆ ಪತ್ತ್‌ದಿ ಪಂಚಜೀಟಿಗೆ ಪತ್ತೊಂದು ಅಮ್ಮ ಬೇಲೆ ಹೂವೆರೆ ಪೋಯೆರ್ …. ಬೊಟ್ಟು ಕಡ್ತ್ ಬೊಳಿರ್ ಮಲ್ತ್ ದ್ ಗುಮ್ಮಡ ಸಾಮಿ ದೇವೆರೆ ಬೇಲೆ ಬೆಂದಿನೆನ್ ಮಗೆ ತೂಯೆ. ವೊನೆ ಕೋರೆ ಉಂಡುಂದೆ. ವೊನೆ ಕೋರೆ ದಾನೆನ್ನಗ, ಮಾತಲಾ, ಸಮೊ ಉಂಡು ಗುಮ್ಮಡ ಸಾಮಿ ಬೇಲೆ ಬೆಂದಿನೆಟ್ ಮಾತ್ರ ವೊನೆ ಉಂಡು, ಎಡತರೆ ಕೂಡುಜಿ, ಬಲತರೆ ಕೂಡುಜಿ, ಜೀವಕಲೆ ಕೂಡುಜಿ ಅಂದೆ ಮಗೆ. ಅರಸು ಕೇಂಡೆರ್ಡ ಮಗಾ, ಜೀವಕಲೆ ಕೂಡಿಜಿಂಡ. ಸಿಂಕ ದಂಡನೆ ಮಲ್ಪೆರ್ ಎಂದೆ. ಅರಸು ಮಳ್ಪಿ ಸಿಂಕ ದಂಡನೆ ಯಾನೇ ಮಲ್ತೊನುವೆಂದೆ. ಸೊಂಟೊಡಿತ್ತಿ ಬೊಳ್ಳಿ ಕಟ್ಟ ಬೀಸತ್ತಿ ದೆತ್ತೊಂಡೆ ತಾನ್ ಪಾಡೊಂದೆ ಅಮ್ಮೆಸೈತೆ’’ (ಹಾಗೆಯೆ ತಂದೆ ಹಿಡಿದ ಪಂಚ ದೀವಟಿಗೆ ಹಿಡಿದುಕೊಂಡು ತಂದೆಯ ಕೆಲಸವನ್ನು ನೋಡಲು ಹೋದರು. ಬೆಟ್ಟ ಕಡಿದು ಬೆಳಗಿಸಿ ಗುಮ್ಮಟ ಸ್ವಾಮಿಯ ಕೃತಿಗೈದುದನ್ನು ಮಗ ನೋಡಿದ. ಊನ ಉಂಟು ಎಂದು ಹೇಳಿದ. ಏನು ಕೊರತೆ ಎನ್ನಲು, ಎಲ್ಲವೂ ಸರಿ ಇದೆ, ಗುಮ್ಮಟ ಸ್ವಾಮಿಯ ಕೆಲಸ ಪೂರೈಸಿದುದರಲ್ಲಿ ಮಾತ್ರ ಊನವಿದೆ; ಎಡ ತಲೆ ಕೂಡುವುದಿಲ್ಲ, ಬಲ ತಲೆ ಕೂಡುವುದಿಲ್ಲ. ಜೀವಕಲೆ ಕೂಡುವುದಿಲ್ಲ ಎಂದ ಮಗ. ಅರಸು ಕೇಳಿದರೆ ಮಗಾ, ಜೀವಕಲೆ ಕೂಡುವುದಿಲ್ಲವೆಂದಾದರೆ ಪ್ರಬಲ ಶಿಕ್ಷೆ ಮಾಡುತ್ತಾರೆ ಎಂದ. ಅರಸು ಮಾಡುವ ದಂಡನೆಯನ್ನು ನಾನೇ ಮಾಡಿಕೊಳ್ಳುತ್ತೇನೆ ಎಂದ. ಸೊಂಟದಲ್ಲಿದ್ದ ಬೆಳ್ಳಿ ಕಟ್ಟಿದ್ದ ಚೂರಿ ತೆಕ್ಕೊಂಡ, ತಾನೇ ಇರಿದುಕೊಂಡ, ತಂದೆ ತೀರಿಕೊಂಡ.)

ದುರಂತಗರ್ಭಿತವಾದ ಈ ಕಥಾನಕ ಕೇಳುವವರಿಂದ ಕಣ್ಣೀರಿನ ಕಾಣಿಕೆಯನ್ನು ಬೇಡುವಂಥಾದ್ದು. ಮಾರ್ಮಿಕವಾದ ಸಾಹಿತ್ಯ ಕೃತಿಗಳಿಗೆ ಬೀಜರೂಪವಾದ ಉತ್ತಮ ಕಥಾವಸ್ತು ಈ ಪಾಡ್ದನದಲ್ಲಿದೆ ಎಂಬುದನ್ನು ಮರೆಯುವಂತಿಲ್ಲ.

* ಈ ಬರೆಹದಲ್ಲಿ ಬಳಸಿಕೊಂಡ ಪಾಡ್ದನದ ಭಾಗಗಳು ೧೮೮೬ರಲ್ಲಿ ಎ.ಮೇನರ್ ಅವರು ಸಂಪಾದಿಸಿ ಬಾಸೆಲ್ ಮೀಶನ್‌ನವರು ಪ್ರಕಟಿಸಿದ ಪಾಡ್ದನೊಳು’ ಎಂಬ ಸಂಕಲನದಿಂದ ಆಯ್ದವುಗಳಾಗಿವೆ.

ತ್ಯಾಗ ಸಂದೇಶ(ಶ್ರೀ ಧರ್ಮಸ್ಥಳ ಬಾಹಬಲಿ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಸಂಸ್ಮರಣ ಗ್ರಂಥ ೧೯೮೨)ದಲ್ಲಿ ಪ್ರಕಟಿತ.