ವಿವಿಧ ಭಾಷೆ, ಉಪಭಾಷೆಗಳ, ವಿವಿಧ ಮತಧರ್ಮ ಸಂಸ್ಕೃತಿಗಳ ಆಚಾರ ವಿಚಾರಗಳ ವಿವಿಧ ಜನಪದ ಕಲಾಪ್ರಕಾರಗಳ ಆಗರವಾದ ಅವಿಭಜಿತ ದಕ್ಷಿಣ ಕನ್ನಡ ಹಲವು ನಿಟ್ಟಿನ ಅಧ್ಯಯನಕ್ಕೆ ಅನುಕೂಲ ಕ್ಷೇತ್ರವಾಗಿದೆ. ಈ ಪ್ರದೇಶದಲ್ಲಿ ಇಂದಿಗೂ ಜೀವಂತವಿರತಕ್ಕ ಜನಪದ ಕಲೆಗಳ ಸಂಖ್ಯೆಯೂ ವೈವಿಧ್ಯವೂ ಬೆರಗು ಹುಟ್ಟಿಸುವಂಥದ್ದು. ಧಾರ್ಮಿಕ ಕಲಾಪ(ಅಥವಾ ಮತಕ್ರಿಯಾಚರಣೆ)ಗಳೊಂದಿಗೆ ಅವಿನಾಭಾವ ಸಂಬಂಧವಿರಿಸಿ ಕೊಂಡು ಬೆಳೆದುಕೊಂಡು ಬಂದಿರುವ ಜನಪದ ಕಲಾಪ್ರಕಾರಗಳನ್ನು (ಹಾಡು, ಕುಣಿತ, ವಾದನ, ವೇಷಭೂಷಣ, ಶಿಲ್ಪ ಇತ್ಯಾದಿ) ಒಂದೊಂದೂ ಪರ್ಯಾಪ್ತವಾದ ಅಧ್ಯಯನಕ್ಕೆ ತಕ್ಕುದಾಗಿದೆ. ಪ್ರಕೃತ, ದ.ಕನ್ನಡದ ಕೆಲವು ಜನಪದ ಕಲಾಪ್ರಕಾರಗಳಲ್ಲಿ ಕಂಡುಬರುವ ಅಲಂಕರಣ ಪದ್ಧತಿಯ ಕುರಿತಾಗಿ ಕೆಲವು ವಿಚಾರಗಳನ್ನು ಇಲ್ಲಿ ಹೇಳಲು ಉದ್ದೇಶಿಸಿದೆ.

ಯಾವುದೇ ಧಾರ್ಮಿಕ ಅಥವಾ ಅರೆಧಾರ್ಮಿಕ ಆಚರಣೆ ಪದ್ಧತಿಗಳು ತಮ್ಮ ಜನಾಕರ್ಷಣೆಯನ್ನು ಮುಖ್ಯವಾಗಿ ಉಳಿಸಿಕೊಂಡಿರುವುದು, ಅವುಗಳಲ್ಲಿ ಎರಕಗೊಂಡಿರುವ ಕಲಾಂಶಗಳಿಂದಲೇ ಎಂದರೆ ತಪ್ಪಿಲ್ಲ. ಯಾವುದೇ ಆಚರಣೆಯ ವಿವರ ಮನಸ್ಸಿನಲ್ಲಿ ಸ್ಫುಟವಾಗಿ, ಚಿತ್ರವತ್ತಾಗಿ ದೀರ್ಘಕಾಲ ನಿಲ್ಲಬೇಕಿದ್ದರೆ, ವರ್ಣವೈಖರಿ, ಅಲಂಕಾರ ರಮಣೀಯತೆಗಳೂ ಅತ್ಯಗತ್ಯ. ಯಾವುದೇ ಬಣ್ಣ ಬೆಡಗು ಹಾಡು ಕುಣಿತಗಳಿಂದ ಕೇವಲ ಗಂಭೀರ ಶುಷ್ಕವಾದ ಯಾವ ಧಾರ್ಮಿಕಾಚರಣೆಯೂ ಜನತೆಯ ಸಮಷ್ಟಿ ಮನಸ್ಸನ್ನು ಸಂತುಷ್ಟಿಪಡಿಸದು. ಈ ನಾಡಿನ ಬದುಕನ್ನು ಬಹು ದೀರ್ಘಕಾಲದಿಂದ ನಿರ್ದೇಶಿಸುತ್ತ ಬಂದಿರುವ, ಭಯ ಭಕ್ತಿ ಪ್ರಚೋದಕವಾದ ಭೂತಾರಾಧನಾರಂಗದಂತೂ ಹಲವಾರು ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿರುವ ವಿಶಿಷ್ಟ ಧಾರ್ಮಿಕ ರಂಗಭೂಮಿಯಾಗಿದ್ದು, ತನ್ನ ಅದ್ಭುತರಮ್ಯ ದೃಶ್ಯಾತ್ಮಕತೆಯಿಂದ ಗಮನಾರ್ಹವಾಗಿದೆ. ನಾಗಮಂಡಲದಂಥ ಇತರ ಆರಾಧನಾ ಕ್ರಮಗಳೂ ಎರುಕೋಲ, ಕುದುರೆಕೋಲ, ಪಿಲಿಪಂಜಿ, ಆಟಿಕಳೆಂಜದಂಥ ಕುಣಿತರ ವೇಷಗಳೂ ಕೆಲವೊಂದು ಬಗೆಯ ವಿಶಿಷ್ಟ ಪ್ರಾದೇಶಿಕ ಅಲಂಕಾರ ವಿಧಾನಗಳನ್ನು ಒಳಗೊಂಡಿವೆ.

ಭೂತದ ಒಂದು ಆರಾಧನಾ ವಿಧಿಯನ್ನು ‘ಕೋಲ’ ಎಂದೇ ಕರೆಯುತ್ತಾರೆ. ‘ಕೋಲ’ ಎಂದರೆ ಅಲಂಕಾರವೆಂದೂ ಅರ್ಥ. ತುಳುನಾಡಿನ ಭೂತಗಳ ಅಲಂಕಾರ ವೈಭವವನ್ನು ಕಂಡು ಯಾರಾದರೂ ತಲೆದೂಗಲೇಬೇಕು. ಆಯಾ ಭೂತದ ಸ್ಥಾನಮಾನ ಗುಣ ಸ್ವರೂಪಾದಿಗಳ ದ್ಯೋತಕವಾದ ಮುಖವರ್ಣಿಕೆಯೊಂದಿಗೆ ಭೂತವೇಷಧಾರಿಯನ್ನು ಅತಿ ಮಾನವ ಸ್ತರಕ್ಕೆ ಏರಿಸಲೆಳಸುವ ಅದ್ಭುತರಮ್ಯ ವರ್ಣರಂಜಿತ ವೇಷಭೂಷಣಗಳು ಗರ್ಭೀಕರಿಸಿಕೊಂಡ ಕಲಾತ್ಮಕತೆ ಅನ್ಯಾದೃಶವಾದದ್ದು. ಆ ವಿಲಕ್ಷಣ ಭೂಷಣವರ್ಣಗಳೂ ವೇಷರೇಖೆಗಳೂ ಬಿಂಬಿಸತಕ್ಕ ಭ್ರಮೆ, ಸಾಂಕೇತಿಕತೆಗಳು ಅಪೂರ್ವವಾದವುಗಳು. ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲೆ ಜರುಗುವ ಈ ಭೂತಾರಾಧನಾ ವಿಧಿಗಳಲ್ಲಿ ನಿಸರ್ಗ ಸಹಜವಾಗಿಯೆ ಸುಲಭದಲ್ಲಿಯೆ ಸುತ್ತಲಿನ ಪರಿಸರದಲ್ಲೆ ಸದಾ ದೊರಕುವ ತೆಂಗಿನ ಎಳೆಯಗರಿ. ಕವುಂಗಿನ ಹಾಳೆ, ಬಾಳೆಯ ಪಟ್ಟೆ, ವಿವಿಧ ಹೂಗಳು ಇತ್ಯಾದಿಗಳಿಂದಲೇ ಭೂತ ಕಲಾವಿದರು ನಿರ್ಮಿಸುವ ವೇಷಬಿಂಬಗಳೂ ಇತರ ಸಹಾಯಕ ಸಾಮಗ್ರಿಗಳೂ ಕುತೂಹಲ ಕೆರಳಿಸುತ್ತವೆ.

ಭೂತಗಳು ಪ್ರಾಚೀನವಾದಷ್ಟೂ, ಹಾಗೆಯೇ ಆರಾಧಿಸುವ ಜನವರ್ಗ ಸಂಪ್ರದಾಯಶೀಲ ವಾದಷ್ಟೂ ಪ್ರಕೃತಿಸಹಜವಾದ ಸರಳ ವೇಷಪರಿಕರಗಳು ಹೆಚ್ಚಾಗಿ ಕಂಡುಬರುತ್ತದೆ. ಇದು ದೇಶವಿದೇಶಗಳ ಎಲ್ಲ ಜನಪದ ಕಲಾಸಂದರ್ಭದಲ್ಲಿ ಕಂಡುಬರುವ ಅಂಶ. ಭೂತಗಳು ಆರ್ವಾಚೀನವಾದ ಹಾಗೆ, ಅಂತೆಯೇ ಆರಾಧಿಸುವ ಜನವರ್ಗ ಪ್ರತಿಷ್ಠಿತರಾದ ಹಾಗೆ ಭೂತವೇಷಗಳಲ್ಲೂ ಚಿನ್ನ, ಬೆಳ್ಳಿ, ಕಂಚು ಇತ್ಯಾದಿ ಲೋಹಾಭರಣಗಳೂ ಬಣ್ಣದ ಬಟ್ಟೆಗಳ ತೊಡವುಗಳೂ ಸೇರ್ಪಡೆಯಾಗಿ, ಭೂತವೇಷಗಳು ಹೆಚ್ಚು ವೈಭವೀಕರಿಸಲ್ಪಟ್ಟು ದನ್ನು ಕಾಣಬಹುದು.

ಮೃದುವಾದ ನಸುಹಸುರು ಬಣ್ಣದ ತೆಂಗಿನ ಎಳೆಯ ಗರಿಗಳಿಂದ ಭೂತ ಕಲಾವಿದರು ನಿರ್ಮಿಸಿಕೊಳ್ಳುವ ವೈವಿಧ್ಯಪೂರ್ಣ ಅಲಂಕಾರಗಳು ಕುತೂಹಲಕರವಾಗಿವೆ. ಭೂತವೇಷ ಧಾರಿಯ ಬೆನ್ನಿಗೆ ಕಟ್ಟಿಕೊಳ್ಳುವ ‘ಅಣಿ’ ಎಂಬ ಪ್ರಭಾವಳಿಯಂಥ ರಚನೆ, ತಲೆಯಲ್ಲಿ ಧರಿಸುವ ಮುಡಿ, ತಿರುಗುಬೈ, ಕದ್ರ್‌ಮುಡಿ, ಒಲಿಕಿರೀಟೊ ಮೊದಲಾದ ಶಿರೋಭೂಷಣಗಳು, ಅಣಿಗೆ ಸಂವಾದಿಯಾಗಿ ಸೊಂಟದ ಎದುರಿಗೆ ಕಟ್ಟಿಕೊಳ್ಳುವ ಅರ್ಧವೃತ್ತಾಕಾರದ ಜಕ್ಕೆಲಣಿ ಎಂಬ ಸಾಧನ. ಸೊಂಟದ ಸುತ್ತಲೂ ಸುತ್ತಿಕೊಳ್ಳುವ ಕಿರುಗಣೆಯಂಥ ರಚನೆ, ಎದೆಗೆ ಧರಿಸುವ ತಿಗಲೆಸವೆರಿ, ಬೆನ್ನಲ್ಲಿ ಹರಡುವ ಬೆರಿಸವೆರಿ ಮೊದಲಾದುವನ್ನು ಉದಾಹರಿಸಬಹುದು.

ಭೂತದ ಸ್ವರೂಪ, ಸ್ವಭಾವಗಳನ್ನು ಕಲ್ಪಿಸಿಕೊಂಡು ಅರ್ಧವೃತ್ತಾಕಾರ, ಅಶ್ವತ್ಥ ಎಲೆಯಾಕಾರ, ಸ್ತಂಭಾಕಾರ, ಕಲಶಾಕಾರ, ಕವಲುರೆಂಬೆಯಾಕಾರ ಇತ್ಯಾದಿ ಅಕೃತಿಯ ವಿವಿಧ ತಲೆತೊಡವುಗಳನ್ನು ಅತ್ಯಂತ ಕುಶಲತೆಯಿಂದ ತೆಂಗಿನ ಎಳೆಯಗರಿ(ತಿರಿ)ಗಳಿಂದ ಸಿದ್ಧಗೊಳಿಸುತ್ತಾರೆ. ಇವುಗಳಿಗೆ ನಿಶ್ಚಿತ ಆಕಾರ ಹಾಗೂ ಸಬಲತೆಯನ್ನು ಒದಗಿಸಲು ತೆಂಗಿನ ಸೋಗೆಯ ನಾರು(ಪಾಂದಾವು) ಬಾಳೆಪಟ್ಟೆ, ತೆಂಗಿನಗರಿಯ ಕಡ್ಡಿ ಇತ್ಯಾದಿಗಳನ್ನು ಈ ರಚನೆಗಳ ಹೆಣಿಗೆ ಹಾಗೂ ಕಟ್ಟುಗಳಿಗೆ ಬಳಸುತ್ತಾರೆ. ತೆಂಗಿನ ‘ತಿರಿ’ಗಳನ್ನು ವಿವಿಧ ಆಕೃತಿಗಳಲ್ಲಿ ಕತ್ತರಿಸಿ, ಒಟ್ಟು ಸೇರಿಸಿ ಹೆಣೆದು ಶಿರೋಭೂಷಣಗಳ ವಿನ್ಯಾಸವನ್ನು ಸಿದ್ಧಗೊಳಿಸುತ್ತಾರೆ. ವಿವಿಧ ಹೂಗಳ, ಹಾಳೆಯ ಹಾಗೂ ಲೋಹದ ತೊಡವುಗಳು, ಈ ಶಿರೋಭೂಷಣಗಳಿಗೂ ಉಳಿದ ಅಲಂಕಾರಗಳಿಗೂ ಒಂದು ಸಮತೋಲನ ಒದಗಿಸಿ ಸಾವಯವ ಶಿಲ್ಪದ ಕಲ್ಪನೆಯುಂಟು ಮಾಡುತ್ತವೆ.

ಬೆನ್ನಿಗೆ ಬಿಗಿಯುವ ಅಣಿಯು ಭೂತದ ವ್ಯಕ್ತಿತ್ವವನ್ನು ವಿಸ್ತಾರಗೊಳಿಸಿ, ಅತಿಮಾನವ ಕಲ್ಪನೆಯನ್ನುಂಟು ಮಾಡುವಂಥದ್ದಾಗಿದೆ. ತೆಂಗಿನ ತಿರಿ, ಕವುಂಗಿನ ಹಾಳೆ, ಮರದ ಹಲಗೆ, ಲೋಹದ ತಗಡು ಇತ್ಯಾದಿಗಳಿಂದ ನಿರ್ಮಿತವಾಗುವ ಅಣಿಗಳಿವೆ. ತಿರಿಯಿಂದ ಸಿದ್ಧಗೊಳಿಸುವ ಅಣಿಗಳಲ್ಲೂ ಹಲವು ಆಕಾರದವು ಇವೆ. ಕೆಸುವಿನ ಎಲೆಯಾಕೃತಿ, ಆಯತಾಕಾರ, ಅರ್ಧ ವೃತ್ತಾಕಾರ, ನೀಳಾಕಾರ, ಹೆಡೆಯಾಕಾರ, ತ್ರಿಕೋಣಾಕಾರ ಮೊದಲಾದ ರೀತಿಯವುಗಳಿವೆ. ಅಣಿಯ ವಿಶಾಲವಾದ ಭಿತ್ತಿಯು ತೆಂಗಿನ ತಿರಿಗಳಿಂದ ರಚಿತವಾಗಿದ್ದು, ಅದರ ಪರಿಧಿಯು ವಸ್ತ್ರದ ‘ದಂಡಮಾಲೆ’ ‘ಹೂಮಾಲೆ’ ‘ಪಾಂಬೊಡಿಕಾಯಿ’ ಮೊದಲಾದುವುಗಳಿಂದಲೂ ಅಣಿಯ ಒಡಲು ವಿವಿಧ ಆಭರಣಗಳಿಂದಲೂ ಹೂಮಾಲೆಗ ಳಿಂದಲೂ ಅಲಂಕರಿಸಲ್ಪಡುತ್ತದೆ. ಅಣಿಯ ಅಂಚಿನ ಗರಿಗಳು (‘ಪರ್ತೆ’) ಸೊಗಸಾದ ರೀತಿಯಲ್ಲಿ ಕತ್ತರಿಸಲ್ಪಟ್ಟು ಭೂತಚಿತ್ರದ ಚೌಕಟ್ಟಿಗೆ ಅಪೂರ್ವ ವಿನ್ಯಾಸವನ್ನು ನೀಡುತ್ತವೆ. ಕೆಲವು ಬಾರಿ ಹೀಲಿಯಂತೆ ಚಾಚಿಕೊಳ್ಳುವ ಇವು, ಗರಿ ಬಿಚ್ಚಿ ನಲಿಯುವ ನವಿಲಿನ ಬೆಡಗನ್ನು ತೋರುವುದುಂಟು. ಅಣಿಯ ಹಿಂಬದಿಗೆ ಕೆಲವೊಮ್ಮೆ ವರ್ಣರಂಜಿತವಾದ ತ್ರಿಕೋಣಾಕಾರದ ಬಟ್ಟೆಯನ್ನು ಜೋಡಿಸುವುದುಂಟು.

ಕೆಲವು ವೇಳೆ ಭೂತನರ್ತಕನು ತಲೆ ಮೇಗಡೆ ಲೋಹದ ಭೂತಮುಖವಾಡವನ್ನು ಹೊರಬೇಕಾಗಿದ್ದು, ಅದನ್ನು ಬಿಗಿಯುವ ಬೆತ್ತದ ಅಟ್ಟೆಯನ್ನು ತೆಂಗಿನ ಗರಿಯ ಪ್ರಭಾವಳಿ ಯಿಂದ ಅಲಂಕರಿಸುತ್ತಾರೆ. ಇದು ‘ಮೊಗ’ಕ್ಕೆ ವಿಸ್ತಾರ ಪರಿವೇಷ ಕೊಟ್ಟು ಅಣಿಯ ಶೋಭೆಯನ್ನು ಹೆಚ್ಚಿಸುತ್ತದೆ.

ದೈವಕ್ಕೆ ಕಟ್ಟುವವನು ತನ್ನ ಸೊಂಟದ ಎದುರಿಗೆ ಕಟ್ಟುವ ವಿಸ್ತಾರವಾದ ‘ಜಕ್ಕೆಲಣಿ’ಯು ಭೂತವೇಷಕ್ಕೆ ಸಮಗ್ರತೆಯನ್ನು ಕೊಡುತ್ತದಲ್ಲದೆ ಸುತ್ತಲೂ ಜಾಲರಿಯಂತೆ ಕೆಳಕ್ಕೆ ಚಾಚಿಕೊಳ್ಳುವ ಸಾವಿರಾರು ತಿರಿಯ ಸೀಳುಗಳು ಭೂತನರ್ತನಕ್ಕೆ ಸೊಗಾಸಾದ ತರಂಗಿತತೆ ಯನ್ನು ಕೊಡುತ್ತವೆ. ಗುಳಿಗನಂಥ ದೈವಕ್ಕೆ ಹೆಚ್ಚಾಗಿ ಅಣಿ ಇಲ್ಲದೆ ಇದ್ದರೂ, ಮೈತುಂಬಾ ತಿರಿಯ ತೊಡವುಗಳು ಆವರಿಸಿರುತ್ತವೆ. ತಿರಿಯ ಎದೆಗವಚ (ತಿಗಲೆಸವೆರಿ) ಬೆನ್ನಿನ ತಿರಿಯ ಗುಚ್ಛ(ಬೆರಿಸವೆರಿ) ಸೊಂಟಕ್ಕೆ ತಿರಿಯ ಉಡೆ, ನೆತ್ತಿ, ಕೈಕಾಲುಗಳಿಗೆ ತಿರಿಯ ಪುಂಡಾಯಿ, ಕಿವಿಗ ತಿರಿಯ ದೊಡ್ಡ ಕುಂಡಲ ಇತ್ಯಾದಿಗಳೂ ಅಚ್ಚ ದೇಸೀ ಸೊಬಗಿನ ತೊಡವುಗಳಾಗಿವೆ. ಜಟಾಧಾರಿ, ಭೈರವ, ಅಣ್ಣಪ್ಪ ಮೊದಲಾದ ದೈವವೇಷದ ತಲೆತೊಡಿಗೆಗಳ ಸುತ್ತಲೂ ತಿರಿಯ ಗರಿಗಳನ್ನು ಸಿಕ್ಕಿಸುವುದಿದೆ. ಕಲ್ಕುಡ, ಪಾಷಾಣ ಮೂರ್ತಿಗಳ ಶಿರೋಭಾಗದ ಶಿಖೆಯಂಥ ತಿರಿಯ ರಚನೆಯೂ ಸೊಗಸಾಗಿದೆ. ಕೆಲವೊಮ್ಮೆ ಕೈಯಲ್ಲಿ ಹಿಡಿಯುವ ‘ಕುಂಚಲ’(ಚಾಮರ)ವನ್ನೂ ತಿರಿಯಿಂದ ಸಿದ್ಧಗೊಳಿಸುತ್ತಾರೆ. ಕೇರಳ ಮೂಲವಾದರೂ ದ.ಕನ್ನಡದಲ್ಲಿ ಸಾಕಷ್ಟು ಪ್ರಚಾರದಲ್ಲಿರುವ ವಿಷ್ಣುಮೂರ್ತಿ ದೈವದ ನರ್ತಕನು ‘ಒತ್ತೆಕೋಲ’ ಎಂಬ ಅಗ್ನಿಸೇವೆಯ ಸಂದರ್ಭದಲ್ಲಿ ತೊಡುವ ಸ್ತಂಭಾಕೃತಿಯ ತಿರಿಯ ವಿಶಿಷ್ಟ ತೊಡುಗೆ ನರ್ತಕನ ಭುಜದವರೆಗೆ ವ್ಯಾಪಿಸಿದ್ದು, ನರಸಿಂಹನು ಉದ್ಭವಿಸಿದನೆಂದು ಹೇಳಲಾದ ಸ್ತಂಭವನ್ನು ಪ್ರತಿನಿಧಿಸುತ್ತದೆ.

ತಾಂತ್ರಿಕ ವಿಧಿಗಳೂ ಸೇರ್ಪಡೆಯಾದಂತಿರುವ ಭೂತಾರಾಧನೆಯಲ್ಲಿ ಬಲಿಕರ್ಮವೂ ಒಂದು ಅಂಗವಾಗಿದೆ. ಕೆಲವೆಡೆ ಭೂತಗಳಿಗೆ ರಕ್ತಾಹಾರ ಸಲ್ಲುವುದಿದ್ದರೆ ಕೆಲವೆಡೆ ಓಕುಳಿ ಮಿಶ್ರಿತ ಕೆಂಗೂಳು ಅರ್ಪಿತವಾಗುತ್ತದೆ. ಈ ‘ಮುದ್ರೆ’ಯನ್ನು ಇರಿಸುವ, ಬಾಳೆದಿಂಡು ಹಾಗೂ ತೆಂಗಿನ ತಿರಿಯ ರಚನೆಗೆ ‘ಬಲಿ’ ಎನ್ನುತ್ತಾರೆ. ಬಾಳೆಯ ಹಂಬೆಯ ತುಂಡುಗಳನ್ನು ಆಯಾ ಭೂತಕ್ಕೆ ಸಂಬಂಧಪಟ್ಟ ವಾಡಿಕೆಯಂತೆ ತ್ರಿಕೋಣ, ಚತುಷ್ಕೋಣ, ಪಂಚಕೋಣ, ಅಷ್ಟಕೋಣಗಳಲ್ಲಿ (ಕೆಲವೊಮ್ಮೆ ೧೬ ಕೋನಗಳ ಬಲಿಯನ್ನು ಕಟ್ಟುವುದಿದೆ) ಜೋಡಿಸಿ, ಅದಕ್ಕೆ ಕಲಾತ್ಮಕವಾಗಿ ವಿವಿಧ ಅಳತೆಗಳಲ್ಲಿ ಕತ್ತರಿಸಿದ ತೆಂಗಿನ ತಿರಿಗಳನ್ನು ಲಂಬವಾಗಿ (ಹೊರಮುಖವಾಗಿ ಸ್ವಲ್ಪ ಓರೆಯಾಗಿ) ನಿಬಿಡವಾಗಿ ಚುಚ್ಚಿ, ಒಂದು ಅಗಲ ಬಾಯಿಯ ಪಾತ್ರೆಯ ಅಥವಾ ಅರಳಿದ ತಾವರೆಯ ಆಕೃತಿಯನ್ನು ಹೋಲುವ ರಚನೆಯನ್ನು ಮಾಡಿ, ಅದರೊಳಗೆ ಬಾಳೆಯೆಲೆ ಹಾಸಿ ಮುದ್ರೆ(ಚರು)ಯನ್ನು ಬಡಿಸಿ, ‘ಕೋಲು’ ಸೊಡರನ್ನು ಹೊತ್ತಿಸುತ್ತಾರೆ. ಬಲಿಯ ಕೋನಕ್ಕೆ ‘ಕೋಂಟು’ ಎನ್ನುತ್ತಾರೆ. ಇಂಥಿಂಥಾ ದೈವಗಳಿಗೆ ಇಂತಿಷ್ಟೇ ಕೋಂಟಿನ ಬಲಿ ಎಂಬ ನಿರ್ಣಯವಿದೆ.

ಕವುಂಗಿನ ಹಾಳೆ ಭೂತವೇಷಕ್ಕೆ ಒದಗುವ ಇನ್ನೊಂದು ಮುಖ್ಯ ಪ್ರಕೃತಿದತ್ತ ವಸ್ತು. ಹೆಚ್ಚಾಗಿ ‘ರಾಜ್ಯಂದೈವ’ಗಳಂಥ ಅಂತಸ್ತಿನ ದೈವಗಳ ಅಣಿ, ಜಕ್ಕೆಲಣಿಗಳನ್ನು ಇದರಿಂದ ಮಾಡುತ್ತಾರೆ. ಕವುಂಗಿನ ಹಾಳೆಗಳನ್ನು ಆರಿಸಿ, ಯುಕ್ತ ಆಕಾರದಲ್ಲಿ ಕತ್ತರಿಸಿ ಜೋಡಿಸಿ ವೇಷಸಾಮಗ್ರಿಗಳನ್ನು ಸಿದ್ಧಗೊಳಿಸಿ, ಕೆಂಪು, ಹಳದಿ, ಬಿಳಿ, ಕಪ್ಪು ಬಣ್ಣಗಳಿಂದ ಚಿತ್ರರೇಖೆಗಳನ್ನು ಬಿಡಿಸುತ್ತಾರೆ.

ಕೆಲವು ದೈವಗಳಿಗೆ ಸಾವಿರ ಹಾಳೆಗಳ ತುಂಡುಗಳನ್ನು ಜೋಡಿಸಿದ ಬೃಹತ್ ಗಾತ್ರದ ಅಣಿಯಾಗಬೇಕೆಂಬ ನಿಯಮವಿದೆ. (ಉದಾ : ಸಜೀಪ ಎಂಬಲ್ಲಿಯ ನಾಲ್ಕೈತ್ತಾಯ ದೈವ) ಉಪ್ಪಿನಂಗಡಿಯ ಮಾಕಾಳ್ದಿ ಅಬ್ಬೆಯ ಅಣಿ ಸುಮಾರು ೩೦-೪೦ ಅಡಿ ಎತ್ತರವಾಗಿದ್ದು ಹಾಳೆಯಿಂದ ರಚಿತವಾದ ನೂರಾರು ನಾಗರಹೆಡೆಯಂಥ ವರ್ಣರಂಜಿತ ರಚನೆಗಳು ಅದರ ಭವ್ಯತೆಯನ್ನು ಹೆಚ್ಚಿಸುತ್ತವೆ. ಇದಲ್ಲದೆ, ಅದೇ ದೈವದ ಸುಮಾರು ೫೦ ಅಡಿಯಷ್ಟು ನೀಳವಾದ ಭೀಕರವಾದ ಕೆನ್ನಾಲಗೆಯೂ ಹಾಳೆಯಿಂದಲೇ ನಿರ್ಮಿತವಾಗಿದ್ದು. ಅದನ್ನು ಚಾಪೆಯಂತೆ ಸುರುಳಿ ಸುತ್ತಿ ಬಿಡಿಸುತ್ತಾರೆ.

ಅಣಿ, ಜಕ್ಕೆಲಣಿ ಇತ್ಯಾದಿಗಳಲ್ಲಿ ವಿವಿಧ ಬಣ್ಣಗಳಿಂದ ಹಾಳೆಯ ಮೇಲೆ ಬರೆಯುವ ಚೌಕುಳಿ, ವೃತ್ತ, ತ್ರಿಕೋಣ, ಪತಾಕೆ, ಅಶ್ವತ್ಥ ಎಲೆ, ತಾವರೆ, ಆನೆ, ನೆಗಳೆ, ಭೂತಾಕೃತಿ, ಚುಕ್ಕಿ, ಗೆರೆಗಳು ಜನಪದ ಚಿತ್ರ ಪದ್ಧತಿಯ ಮಾದರಿಯನ್ನು ಒದಗಿಸುತ್ತವೆ.

ಉಳ್ಳಾಲ್ತಿ ದೈವಕ್ಕೆ ಕೆಲವು ಕಡೆ ಹಾಳೆಯ ಮುಖವಾಡ ಇಟ್ಟು ಹಾಳೆಯದೇ ದೀರ್ಘವಾದ ಕೆನ್ನಾಲಗೆಯನ್ನು ಹೊಂದಿಸುತ್ತಾರೆ.

‘ಚಪ್ಪರ್ ಕೊಂಬು’ ಎಂಬ ತಲೆಯ ಕವಲು ತೊಡವನ್ನು ಹಾಳೆಯಿಂದ ಮಾಡುವುದಿದೆ. (ಕೋಟಿ-ಚೆನ್ನಯ, ಮುಗ್ಗೆರ್ಲು ಇತ್ಯಾದಿ) ಮೈಸಂದಾಯ ದೈವದ ಮಹಿಷ ಸೂಚಕವಾದ ಕೊಂಬಿನ ಸಂಕೇತವನ್ನೂ ಹಾಳೆಯಿಂದ ಮಾಡುತ್ತಾರೆ. ಕೊರಗತನಿಯ ದೈವವು ಹಾಳೆಯ ನೀಳವಾದ ಮುಟ್ಟಾಳೆ ಎಂಬ ತಲೆತೊಡವನ್ನು ಧರಿಸುತ್ತದೆ.

ಪಂಜುರ್ಳಿ ಭೂತಕ್ಕೆ ಹಂದಿಯ ಮುಖದ ಆಕಾರದ ಮುಖವಾಡ, ಗುಳಿಗನಿಗೆ ಕರಾಳವಾಗಿ ಹಲ್ಲು ಕಿರಿಯುವ ಮುಖವಾಡಗಳನ್ನು ಹಾಳೆಯಿಂದ ಸಿದ್ಧಗೊಳಿಸಿ ಮುಖದ ಮೇಲೆ ಇರಿಸುವ ಪದ್ಧತಿ ಇದೆ. ಕಾಲಿಗೆ ಗಗ್ಗರ ಕಟ್ಟುವುದಕ್ಕೆ ಮೊದಲು ಕಾರಪಾಳೆ, ಪಾದಪಾಳೆ ಎಂಬ ಹಾಳೆಯ ರಚನೆಗಳನ್ನು ಕಟ್ಟಿಕೊಳ್ಳುತ್ತಾರೆ. ಭುಜಪಾಳೆ, ಎದೆಪಾಳೆಗಳು ಹಾಳೆಯವೇ ಎಂಬುದು ಆ ವಸ್ತುಗಳ ಹೆಸರುಗಳಿಂದಲೇ ತಿಳಿಯುತ್ತದೆ. ಈಗ ಕಾಣುವ ಅನೇಕ ಲೋಹದ ಆಭರಣಗಳಿಗೆ ಬದಲಾಗಿ ಹಿಂದೆ ಹಾಳೆಯ ತೊಡವುಗಳನ್ನು ಧರಿಸುತ್ತಿದ್ದರೆಂದು ತಿಳಿಯಬಹುದು.

ತೆಂಗಿನಸೋಗೆ ದಿಂಡಿನ ಸಲಾಕೆಗಳನ್ನು ಅಣಿ ಮುಂತಾದ ಅಲಂಕಾರಗಳಲ್ಲಿ ಬಳಸುವುದಲ್ಲದೆ ಬಿಲ್ಲು, ಬಾಣ, ಶೂಲ, ಖಡ್ಗ ಇತ್ಯಾದಿಗಳ ಪ್ರತೀಕಗಳನ್ನು ನಿರ್ಮಿಸು ವುದರಲ್ಲೂ ಬಳಸುತ್ತಾರೆ. ಅಣಿ, ಜಕ್ಕೆಲಣಿ, ಮೊಗ ಇರಿಸುವ ಅಟ್ಟೆ ಇತ್ಯಾದಿಗಳ ಒಳ ಚೌಕಟ್ಟುಗಳನ್ನು ತಯಾರಿಸಲು ಬಿದಿರಿನ ಸಲಾಕೆ, ನಾಗರಬೆತ್ತ ಹಾಗೂ ಹುರಿಹಗ್ಗಗಳನ್ನು ಬಳಸುತ್ತಾರೆ. ಮೀಸೆ, ಚವಲ, (ಜೊಂಕುದುರಿ) ಇತ್ಯಾದಿಗಳಿಗೆ ಕತ್ತಾಳೆ ನಾರನ್ನು ಬಳಸುತ್ತಾರೆ.

ಭೂತ ವೇಷಾಲಂಕಾರಕ್ಕೆ ಕವುಂಗಿನ ಹೂ (ಹಿಂಗಾರ) ಕೇಪುಳ, ಮಲ್ಲಿಗೆ, ಕನಕಾಂಬರ ಇತ್ಯಾದಿ ಹೂಗಳನ್ನು ಯಥೇಷ್ಟವಾಗಿ ಬಳಸುತ್ತಾರೆ. ಎಂಥ ಉಗ್ರ ಸ್ವಭಾವದ ಭೂತಗಳಾದರೂ ಪುಷ್ಪಾಲಂಕಾರದ ಸುಕುಮಾರತೆಯನ್ನು ಅಪೇಕ್ಷಿಸುತ್ತವೆ. ತೋಳು, ಎದೆ, ನೆತ್ತಿಗಳನ್ನು ಹೂವಿನ ದಂಡೆಗಳಿಂದ ಸಿಂಗರಿಸುತ್ತಾರೆ. ತಲೆತೊಡವು, ಅಣಿ, ಆಯುಧಗಳಿಗೂ ಹೂವಿನ ಅಲಂಕಾರ ಮಾಡುತ್ತಾರೆ. ಉಳ್ಳಾಲ್ತಿಯಂಥ ದೈವ ಮಲ್ಲಿಗೆ ಹಾರಗಳ ಹೊರೆಯಿಂದ ಬಳುಕುತ್ತಾ ವಿಪುಲವಾದ ಹೂಜಲ್ಲಿಯ ಜಡೆಯ ಐಸಿರಿಯೊಂದಿಗೆ ಮದುಮಗಳ ಪುಷ್ಪವೈಭವದ ಬೆಡಗನ್ನು ಬೀರುತ್ತದೆ.

ಭೂತಾರಾಧನೆಯ ರಂಗಸ್ಥಳವಾದ ಚಪ್ಪರವನ್ನೂ, ಭೂತದ ಮುಖವಾಡ, ಆಯುಧ, ಚವಲಾದಿ ಸಾನ್ನಿಧ್ಯವಸ್ತುಗಳನ್ನು ಇರಿಸುವ ‘ಕೊಡಿವಾಡ್’ ಸ್ಥಳದ ಮೇಲ್ಕಟ್ಟನ್ನೂ ಭೂತಸಿಂಹಾಸನದ ಪ್ರತೀಕವಾದ ಸಿಂಗದನವನ್ನೂ ಸಿಂಗರಿಸಿ ಭೂತರಾಧನೆಗೆ ತಕ್ಕ ಆವರಣ ಸೃಷ್ಟಿ ಮಾಡುತ್ತಾರೆ. ಚಪ್ಪರಕ್ಕೆ ತೆಂಗಿನ ಅಥವಾ ಬೈನೆಮರದ ಗರಿಗಳನ್ನು ಹೊದಿಸುತ್ತಾರೆ. ಮಾವಿನ ಚಿಗುರಿನ ತೋರಣವಲ್ಲದೆ ಅಲ್ಲಲ್ಲಿ ತೆಂಗಿನ ತಿರಿಯ ಜಾಲರಿ ಗಳನ್ನೂ ಇಳಿಬಿಡುವುದುಂಟು. ಹಣ್ಣಡಕೆಗೊನೆ, ಬಾಳೆಗೊನೆ, ಸೀಯಾಳಗೊನೆ ಇತ್ಯಾದಿಗಳನ್ನು ಕಟ್ಟುವುದಿದೆ. ಕೊಡಿಯಡಿಯ ವಸ್ತ್ರಕ್ಕೆ ವೀಳ್ಯದೆಲೆ ಹಿಂಗಾರಗಳ ಅಲಂಕಾರ ಮಾಡುತ್ತಾರೆ.

ನಾಗಮಂಡಲವು ನಾಗದೇವತೆಯನ್ನು ಒಲಿಸುವ ಸಲುವಾಗಿ ಆಚರಿಸುವ ಕಲಾತ್ಮಕ ಆರಾಧನೆ. ವಿವಿಧ ಬಣ್ಣದ ಹುಡಿಗಳಿಂದ ಶಾಸ್ತ್ರೋಕ್ತವಾಗಿ ಬರೆಯುವ ಮಂಡಲ ಎಂಬ ರಂಗವಲ್ಲಿ ಇಲ್ಲಿ ಗಮನಾರ್ಹವಾದದ್ದು. ಮಂಡಲ ಬರೆಯಲು ಬತ್ತದ ಹೊಟ್ಟಿನ ಹುಡಿ, ಜಂಗಮ ಸೊಪ್ಪಿನ ಹುಡಿ, ಅರಸಿನ, ಅಕ್ಕಿಪುಡಿಗಳನ್ನು ಉಪಯೋಗಿಸುತ್ತಾರೆ. ಮಂಡಲವು ಸುಮಾರು ನಲವತ್ತು ಚದರಡಿ ವಿಸ್ತೀರ್ಣವಿರುತ್ತದೆ. ಹಿಂಗಾರದ ಗುಚ್ಛಗಳನ್ನು ಇತರ ಫಲಪುಷ್ಪಾದಿಗಳನ್ನು ಮಂಡಲದ ಸುತ್ತಲೂ ಅಲಂಕಾರಪ್ರಾಯವಾಗಿ ಇರಿಸುತ್ತಾರೆ. ಮಂಡಲದ ಚಪ್ಪರದ ಮೇಲ್ಗಾಪಿಗೆ ತೆಂಗಿನಕಾಯಿ, ಅಡಕೆ, ಸೌತೆಕಾಯಿ, ಬಾಳೆಗೊನೆಗಳನ್ನೂ, ತೆಂಗಿನ ಗರಿ, ಹಿಂಗಾರಗಳ ಜಾಲರಿಗಳನ್ನೂ ಕಟ್ಟುತ್ತಾರೆ. ಮಂಟಪದ ಮೇಲುಭಾಗದಲ್ಲಿ ತಾವರೆ, ಗಿಳಿ ಮೊದಲಾದ ಆಕೃತಿಗಳನ್ನು ರೂಪಿಸುತ್ತಾರೆ.

ಪಡುಬಿದ್ರೆಯ ವಿಸ್ತಾರವಾದ ‘ಬನ’ದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮ ಮಂಡಲವೆಂಬ ನಾಗಾರಾಧನೆಯ ಸಂದರ್ಭದಲ್ಲಿ ಇಡೀ ಬನದ ಮರ ಗಿಡ ಪೊದೆ ಬಳ್ಳಿಗಳಲ್ಲಿ ಪುಷ್ಪಾಂಲಕಾರದ ಐಸಿರಿ ಹೊಮ್ಮುತ್ತ ‘‘ಹೂವ ಬಿಟ್ಟಿವೆ, ಹೂವ ತೊಟ್ಟಿವೆ, ಹೂವನುಟ್ಟಿವೆ ಮರಗಳು’’ ಎಂಬ ಕವಿವಾಣಿಯನ್ನು ನೆನಪಿಗೆ ತಂದುಬಿಡುತ್ತವೆ. ಎಲ್ಲಿ ನೋಡಿದರೂ ಹಿಂಗಾರ ಮತ್ತು ಇತರ ಪುಷ್ಪಗಳ ಜಾಲರಿಗಳು, ವಿವಿಧ ಹಣ್ಣುಹಂಪಲು, ಹಣ್ಣಡಿಕೆ, ಹೂಗಳ ಮೇಲ್ಕಟ್ಟು ತೋರಣಗಳು, ಅಂತೂ ಇಡಿಯ ಪರಿಸರವೇ ಒಂದು ಅದ್ಭುತ ಕಲಾಸೃಷ್ಟಿಯಾಗಿ, ಈ ಫಲವಂತಿಕೆಯ ಆರಾಧನೆಗೊಂದು ಸೂಕ್ತವಾದ ಆವರಣವನ್ನು ನಿರ್ಮಿಸುತ್ತದೆ.

ತುಳುನಾಡಿನಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ನಲಿಕೆ, ಮುಂಡಾಲ, ಕೂಸಾಳ, ಕೊರಗ ಮುಂತಾದ ವರ್ಗದವರು ಪ್ರದರ್ಶಿಸುವ ಆಟಿಕಳೆಂಜ, ಎರ್ಕೋಲ, ಕುದ್ರೆಕೋಲ, ಕಂಗಿಲು, ಕರುಂಗೋಲು, ಚೆನ್ನು, ಪಿಲಿಪಂಜಿ ಬಾಲೆಸಾಂತು, ಮೊದಲಾದ ಕುಣಿತಗಳಿಗಾಗಿ ಕಟ್ಟುವ ವೇಷಗಳಲ್ಲೂ ತೆಂಗಿನ ತಿರಿ, ಕವುಂಗಿನ ಹಾಳೆ, ಹಿಂಗಾರ, ಬಗೆಬಗೆಯ ಹೂಗಳು, ಎಲೆಗಳು ಮೊದಲಾದುವುಗಳಿಂದ ಸಿದ್ಧಪಡಿಸಿದ ಸರಳವಾದ ವೇಷಸಾಮಗ್ರಿಗಳನ್ನು ಕಲಾತ್ಮಕವಾಗಿ ಬಳಸುತ್ತಾರೆ. ನಿತ್ಯ ದೊರಕುವ ನಿಸರ್ಗಸಹಜ ವಸ್ತುಗಳಿಂದ ಈ ಎಲ್ಲ ಜನಪದ ಕಲಾವಿದರು ನಿರಾಯಾಸವಾಗಿ ಸೃಷ್ಟಿಸುವ ಅಲಂಕರಣ ವೈಖರಿಯ ಸೃಜನಾತ್ಮಕ ಪ್ರತಿಭೆಯೂ ಅದು ಉಂಟುಮಾಡುವ ಚಿತ್ರಲೋಕ ಸೃಷ್ಟಿಯೂ ವಿಸ್ಮಯಕರವಾದದ್ದು.

(೧೯೮೯ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಪ್ರಕಟಿಸಿದ ತುಳುವರ ಆಚರಣೆಗಳಲ್ಲಿ ಕಲಾವಂತಿಕೆ’’ ಎಂಬ ಗ್ರಂಥದಲ್ಲಿ ಪ್ರಕಟಿತ. ಸಂಪಾದಕರು: ಪ್ರೊ.ಕ.ವೆಂ.ರಾಜಗೋಪಾಲ.)