ಕರ್ಣಾಟಕದ ರಾಜಕಲೆ, ಸಮ್ಮೋಹಿನೀ ಕಲೆ, ಜಾಗೃತ ಕಲೆ, ಸಂಕೀರ್ಣ ಕಲೆ, ಸಮಗ್ರ ರಂಗಭೂಮಿ ಇತ್ಯಾದಿ ರೀತಿಗಳಲ್ಲಿ ಕೊಂಡಾಡಲ್ಪಡುವ ಯಕ್ಷಗಾನ ಬಯಲಾಟದ ಸ್ವರೂಪದ ಬಗೆಗೆ ಅನೇಕ ರೀತಿಯ ಜಿಜ್ಞಾಸೆಗಳು ನಡೆದಿವೆ. ಜೀವಂತವಾದ ಒಂದು ಕಲಾ ಸಂಪ್ರದಾಯದ ವಿಚಾರದಲ್ಲಿ ಇದು ಸ್ವಾಭಾವಿಕವೂ ಅಹುದು. ಯಕ್ಷಗಾನವು ಶಾಸ್ತ್ರೀಯ ಕಲೆಯೆ, ಜನಪದ ಕಲೆಯೆ ಅಥವಾ ದೇಸಿ ಕಲೆಯೆ ಎಂಬ ಪ್ರಶ್ನೆಗಳ ಸುತ್ತು ಚರ್ಚೆ ನಡೆದಿದೆ. ಈ ವಿಶಿಷ್ಟ ಕಲೆಯ ಚರಿತ್ರೆ ಹಾಗೂ ಸ್ವರೂಪಗಳನ್ನು ಗಮನಿಸಿದಾಗ ಇದನ್ನು ನೂರಕ್ಕೆ ನೂರು ಶಾಸ್ತ್ರೀಯವೆಂದಾಗಲೀ ಅಥವಾ ಪೂರ್ತಿ ಜನಪದವೆಂದಾಗಲೀ ಹೇಳಲು ಕಷ್ಟವಾಗುತ್ತದೆ. ‘ದೇಸಿ’ ಎಂಬ ಶಬ್ದ ನಿರ್ದೇಶನದಿಂದ ಇದರ ಜಾಯಮಾನವನ್ನೇನೋ ಸೂಚಿಸಬಹುದು.

ಯಕ್ಷಗಾನವನ್ನು ಪ್ರಾದೇಶಿಕ ವೈಶಿಷ್ಟ್ಯವುಳ್ಳ ದೇಸಿ ಕಲೆ ಎಂದು ಸ್ವೀಕರಿಸಿದರೂ ಅದರಲ್ಲಿ ಅಂತರ್ಗತವಾಗಿರುವ ಜನಪದ ಅಂಶಗಳನ್ನಾಗಲೀ, ಶಾಸ್ತ್ರೀಯತೆಯನ್ನಾಗಲೀ ಕಡೆಗಣಿಸಲಾಗುವುದಿಲ್ಲ. ಹಾಗಾಗಿ ಇದನ್ನೊಂದು ಸಮ್ರಿಶ್ರ ಕಲೆಯೆಂದೋ ಸಮನ್ವಯಶೀಲ ಸಮಷ್ಟಿಕಲೆಯೆಂದೋ ಪರಿಭಾವಿಸಬೇಕಾಗುತ್ತದೆ. ಇದು ಶಾಸ್ತ್ರೀಯತೆಯನ್ನೂ ಜನಪದ ಕಲಾಂಶಗಳನ್ನೂ ಹದವಾಗಿ ಗರ್ಭೀಕರಿಸಿಕೊಂಡ ದೇಸಿ ಕಲೆ. ರಾಷ್ಟ್ರಕವಿ ಗೋವಿಂದ ಪೈಯವರ ಮಾತಿನಲ್ಲಿ ‘‘ಯಕ್ಷಗಾನವೆಂದರೆ ದೇಸಿಯ ಕಣ್ಣು’’.

ಜನಪದ ಕಲೆಗಳೇ ಕ್ರಮೇಣ ವಿಕಾಸಗೊಂಡೋ ಪರಿಷ್ಕಾರ ಹೊಂದಿಯೋ ದೇಸಿ ಕಲೆಗಳಾಗಿ ಅಥವಾ ಶಾಸ್ತ್ರೀಯ ಕಲೆಗಳಾಗಿ ಮಾರ್ಪಾಡುಗೊಳ್ಳುವುದು ಸಹಜವಾದ ಪ್ರಕ್ರಿಯೆಯಾಗಿದೆ. ಹೀಗೆ ಮಾರ್ಪಟ್ಟ ಬಳಿಕವೂ ಶಾಸ್ತ್ರೀಯವೆನಿಸುವ ಕಲೆ ಜನಪದ ಕಲೆಗಳಿಂದ ಪ್ರಭಾವಿತವಾಗುವುದೂ ಅಸಂಭವವೇನಲ್ಲ. ಕಲಾ ಪ್ರಪಂಚದಲ್ಲಿ ಈ ಕೊಡುಕೊಳೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಕಲೆಯನ್ನು ಬೆಳೆಸಿದವರು ಯಾವುದೇ ಒಂದು ವಿಶಿಷ್ಟ ವರ್ಗದವರೂ ಅಲ್ಲ. ಭಿನ್ನ ಭಿನ್ನ ಸಮಾಜಗಳಿಗೆ ಸೇರಿದ ಕಲಾವಿದರ ಸೃಜನಶೀಲ ದುಡಿಮೆ ಯಕ್ಷಗಾನ ಬಯಲಾಟವನ್ನು ರೂಪಿಸಿದೆ. ಅಂತೆಯೇ ಈ ಕಲೆ ವೈದಿಕ ಹಾಗೂ ವೈದಿಕೇತರ ಸಂಸ್ಕೃತಿಗಳ ಸಂಗಮವೂ ಆಗಿದೆ. ಗ್ರಾಮೀಣ ಜನಪದರು ಇದನ್ನು ವಿಶೇಷವಾಗಿ ಪ್ರೋತ್ಸಾಹಿಸಿ ಬೆಳೆಸಿದರು. ಶಿಷ್ಟರೂ ಸಾಕಷ್ಟು ಬೆಂಬಲಿಸಿದರು.

ಯಕ್ಷಗಾನ ಬಯಲಾಟದಲ್ಲಿ ಕಂಡುಬರುವ, ಕೆಲವು ಜನಪದ ಅಂಶಗಳ ಕುರಿತು ಒಂದಿಷ್ಟು ವಿವೇಚಿಸಬಹುದಾಗಿದೆ. ರಾತ್ರಿ ಪೂರ್ತಿ ಸರಳವಾದ ಬಯಲು ರಂಗಮಂಟಪದಲ್ಲಿ ನಡೆಯುವುದು ಜನಪದ ರಂಗಭೂಮಿಯ ಲಕ್ಷಣವಾಗಿದೆ. ಶಿಷ್ಟ ನಾಟ್ಯ, ನಾಟಕಾದಿಗಳು ನಿರ್ದಿಷ್ಟ ನಾಟ್ಯಶಾಲೆಗಳಲ್ಲಿ ನಡೆಯುತ್ತಿದ್ದುದಾಗಿ ಕಾವ್ಯ, ಶಾಸನಾದಿಗಳಿಂದ ತಿಳಿದು ಬರುತ್ತದೆ. ಶಿಷ್ಟ ನಾಟಕಗಳು (ಸಂಸ್ಕೃತದ ಶಾಕುಂತಲದಂಥವುಗಳು ಕೂಡಾ) ಇಡೀ ರಾತ್ರಿ ನಡೆಯುತ್ತಿದ್ದುವೆಂಬುದಕ್ಕೆ ಆಧಾರವಿಲ್ಲ.

ಜನಪದ ರಂಗಭೂಮಿಯ ಇನ್ನೊಂದು ಲಕ್ಷಣವೆಂದರೆ, ವಿಸ್ತೃತವಾದ ಪೂರ್ವರಂಗ. ಶಿಷ್ಟರಂಗಭೂಮಿಯಲ್ಲಿ ಪೂರ್ವರಂಗ ಇದ್ದರೂ ಅದು ಹ್ರಸ್ವವಾಗಿರುತ್ತದೆ. ತುಳುನಾಡಿನ ಧಾರ್ಮಿಕ ರಂಗಭೂಮಿಯಾದ ದೈವಾರಾಧನೆಯಲ್ಲಿ -ನೇಮದಂಥ ಸಂದರ್ಭದಲ್ಲಿ ‘ಗಗ್ಗರದ ಎಚ್ಚಿ’ ಎಂಬ ಪೂರ್ವರಂಗ ನಡೆಯುತ್ತದೆ. ಶ್ರೀಲಂಕಾದ ಯಕ್ಷಪೂಜೆಯ ಅಂಗವಾಗಿ ವಿಕಾಸಗೊಂಡ ‘ಕೋಲಂ’ ಎಂಬ ಧಾರ್ಮಿಕ ರಂಗಭೂಮಿಯಲ್ಲಿ ಪೂರ್ವರಂಗ ಪದ್ಧತಿ ಇದೆ. ಯಕ್ಷಗಾನ ಬಯಲಾಟದ ಪೂರ್ವರಂಗದಲ್ಲಿ ಬರುವ ರೂಢಿಯಿದ್ದ ಕೆಲವು ‘ಕಟ್ಟುಹಾಸ್ಯ’ಗಳಂಥ ಬಿಡಿ ಪಾತ್ರಗಳು ಅಲ್ಲಿನ ಕೋಲದ ಪ್ರಾರಂಭದಲ್ಲಿ ಬಂದು ನಗಿಸಿ ಹೋಗುತ್ತವೆ. (ಉದಾ : ವ್ಯಾಪಾರಿ, ಅಗಸ, ಅವನ ಮಡದಿ, ವಾದ್ಯಗಾರ, ಪೋಲೀಸ್ ಮೊದಲಾದವು.) ಭೂತಾರಾಧನೆಯ ಒಂದು ಪ್ರಕಾರವಾದ ಜಾಲಾಟದಲ್ಲಿ ನಾಗಾರಾಧನೆಯ ಒಂದು ವಿಧಾನವಾದ ‘ಕಾಡ್ಯನಾಟ’ದಲ್ಲೂ ವಿವಿಧ ಸಾಮಾಜಿಕ ವ್ಯಕ್ತಿಗಳ ವೇಷಗಳುಳ್ಳ ಪ್ರಹಸನದಂಥ ಕಲಾಪ ನಡೆಯುತ್ತದೆ. ಜಾಲಾಟದಲ್ಲಿ ‘ತೆರೆ ಪರ್ಪಾಟ’ದಂಥ ವಿಧಿಯೂ ನಡೆಯುತ್ತದೆ.

ಮೂಜುಲ್ನಾಯದಂಥ ದೈವದ ಆರಾಧನೆಯಲ್ಲಿ ‘ಒಸಯ’ ಕುಣಿತ ಜರಗುತ್ತದೆ. ಇದು ಯಕ್ಷಗಾನದ ತೆರೆಪರ್ಪಾಟದಂತಿರುತ್ತದೆ. ಜಟಾಧಾರಿ ದೈವದ ನೇಮದಲ್ಲಿಯೂ ಸ್ನಾನ, ಅರ್ಚನೆ, ತೀರ್ಥ ಸ್ವೀಕಾರ ಇತ್ಯಾದಿ ಅಭಿನಯ ಇದೆ. (ಬಣ್ಣದ ವೇಷದ ತೆರೆ ಕಲಾಶದ ಹಾಗೆ)

ಜನಪದ ರಂಗಭೂಮಿಯ ರಂಗಸ್ಥಳದಲ್ಲಿ ಹಿಮ್ಮೇಳದಲ್ಲಿ ಕಲಾವಿದರು ಪ್ರದರ್ಶನದ ಉದ್ದಕ್ಕೂ ಉಪಸ್ಥಿತರಿರುವುದೂ, ಮುಮ್ಮೇಳದ ಕಲಾವಿದರೊಂದಿಗೆ ಹಿಂದೆ ಮುಂದೆ ಚಲಿಸುವುದೂ ರೂಢಿ. ಯಕ್ಷಗಾನ ಆಟದಲ್ಲಿ ಕೆಲವು ದಶಕಗಳ ಹಿಂದೆ ಈ ಪದ್ಧತಿ ರೂಢವಾಗಿತ್ತೆಂದು ತಿಳಿಯುತ್ತದೆ. ಹಾಗೆಯೇ ಹಾಸ್ಯಗಾರ (ಇವನನ್ನು ಕೋಡಂಗಿ, ಸಾರಥಿ, ಹನುಮನಾಯಕ ಇತ್ಯಾದಿ ಹೆಸರುಗಳಿಂದ ಬೇರೆ ಬೇರೆ ಕಡೆ ಕರೆಯುತ್ತಾರೆ) ಪ್ರದರ್ಶನದುದ್ದಕ್ಕೂ ಹಾಜರಿದ್ದು, ಕಥಾಪಾತ್ರಗಳನ್ನು ಪರಿಚಯಿಸುವುದೂ, ಒಂದು ರೀತಿಯಲ್ಲಿ ಕಥೆಯ ಸೂತ್ರಧಾರಿಕೆಯನ್ನು ನಿರ್ವಹಿಸುವುದೂ ಶಿಷ್ಟ ನಾಟಕಗಳಲ್ಲಿ ಕಂಡುಬರುವುದಿಲ್ಲ. ಪುರಾತನ ಸಂಸ್ಕೃತ ನಾಟಕಗಳಲ್ಲಿ ವಿದೂಷಕನಿದ್ದರೂ ಅವನ ಕಾರ್ಯವ್ಯಾಪ್ತಿ ಸೀಮಿತವಾಗಿದೆ.

ಯಕ್ಷಗಾನದ ಪೂರ್ವರಂಗದಲ್ಲಿ ಬರುತ್ತಿದ್ದ ಕೊಕ್ಕೆಚಿಕ್ಕ, ಬೈರಾಗಿ ರಂಗ-ರಂಗಿ, ಕಳ್ಳ, ಪಂಡಿತ, ಕ್ರೈಸ್ತ, ಬ್ಯಾರಿ, ಮೊದಲಾದ ವೇಷಗಳೂ, ಅಪಶಕುನದ ವೇಷಗಳೆಂದು ಹೇಳಲ್ಪಡುವ ಒಂಟಿ ಬ್ರಾಹ್ಮಣ, ವಿಧವೆ, ಗಡಿಗೆ ಮಾರುವವನು, ಮಂತ್ರವಾದಿ ಮೊದಲಾದ ವೇಷಗಳೂ ಸಾಮಾನ್ಯ ಜನಪದರ ವ್ಯಕ್ತಿ ಚಿತ್ರಗಳೇ ಆಗಿವೆ.

ಯಕ್ಷಗಾನ ಬಯಲಾಟದ ವೇಷಗಾರಿಕೆಯನ್ನು ಗಮನಿಸಿದರೆ ಇಲ್ಲಿ ವಾಸ್ತವಿಕತೆಗೆ ಪ್ರಾಶಸ್ತ್ಯವಿಲ್ಲವೆಂದೂ ಕಥೆಯು ಕಲ್ಪಿಸಿ ಕಟ್ಟಿಕೊಡುವ ರಮ್ಯಾದ್ಭುತ ಪ್ರಪಂಚದ ಲಕ್ಷಣಕ್ಕೆ ಅನುಗುಣವಾಗಿ ಈ ವೇಷವ್ಯವಸ್ಥೆ ಇರುವುದಾಗಿಯೂ ತಿಳಿಯುತ್ತದೆ. ಇದು ಶಿಷ್ಟ ರಂಗಭೂಮಿಗಿಂತ ಅಧಿಕ ಆಡಂಬರ ಪೂರಿತ ಹಾಗೂ ವರ್ಣರಂಜಿತ ಎನ್ನಬೇಕು. ಈ ದಿಶೆಯಲ್ಲಿ ಮಾತ್ರವಲ್ಲ, ಇತರ ಅನೇಕ ವಿಚಾರಗಳಲ್ಲಿ ಭೂತಾರಾಧನೆಗೂ ಯಕ್ಷಗಾನ ಬಯಲಾಟಕ್ಕೂ ಸಾದೃಶ್ಯವಿದೆ. ನರ್ತನದ ಉತ್ಕಟತೆ, ವಾದ್ಯವಾದನಗಳ ನಾದವೈಭವ, ಅಭಿನಯ ಗಾಂಭೀರ್ಯ, ವಿಶಿಷ್ಟ ರೀತಿಯ ಮಾತಿನ ಗತ್ತುಗಾರಿಕೆ ಇತ್ಯಾದಿಗಳು ಗಮನೀಯವಾಗಿವೆ.

ಭೂತವೇಷದ ಕೆಲವು ಶಿರೋಭೂಷಣಗಳು ಹಾಗೂ ಬೆನ್ನಿಗೆ ಬಿಗಿದುಕೊಳ್ಳುವ ‘ಅಣಿ’ ಎಂಬ ಪ್ರಭಾವಳಿಗಳು ಯಕ್ಷಗಾನದ ಕೆಲವು ಶಿರೋಭೂಷಣಗಳಿಗೆ ಮೂಲವಾಗಿರಬೇಕೆಂದು ಹೇಳಬಹುದು. ಭೂತ ವೇಷಕ್ಕೆ ಬಳಸುವ ತೆಂಗಿನ ಎಳೆಗರಿಯ ಕಿರುಗಣೆಯಂಥ ಉಡುಗೆಯ ಸ್ಥಾನದಲ್ಲಿ ಯಕ್ಷಗಾನದ ‘ಬಾಲ್ ಮುಂಡು’ ಇದೆ. ಕಲ್ಲುರ್ಟಿ ದೈವದ, ತೆಂಗಿನ ಗರಿಯ ಕದಿರ್ ಮುಡಿ ಎಂಬ ಕಿರೀಟವು ಯಕ್ಷಗಾನದ ಹೆಣ್ಣುಬಣ್ಣದ ಕಿರೀಟದ ಆಕೃತಿಯನ್ನು ಹೋಲುತ್ತದೆ. ಭೀಮನ ಕಿರೀಟಕ್ಕೆ ಭೂತಾರಾಧನೆಯಲ್ಲಿ ಬಳಕೆ ಇರುವ ‘ಮುಡಿ’ ಎಂಬುದೇ ಹೆಸರು.

ಯಕ್ಷಗಾನದಲ್ಲಿ ಬಳಸುವ ಅಶ್ವತ್ಥದ ಎಲೆಯ ಆಕೃತಿಯ ಸಿರಿಮುಡಿ ಪಗಡಿ(ಪೊಗಡೆ) ಅಥವಾ ಮುಂಡಾಸು ಎಂದು ಕರೆಯಲ್ಪಡುವ ಮುಂಡಾಸಿನಂಥ ರಚನೆಯು ತುಳುನಾಡು ಹಾಗೂ ಕೇರಳದಲ್ಲಿ ಈಗಲೂ ಪ್ರಚಲಿತವಿರುವ ಭೂತದ ಅಣಿ ಅಥವಾ ಮುಡಿ ಎಂದು ಕರೆಯಲಾಗುವ ಭೂಷಣದ ಕಿರಿಯ ರೂಪವೇ ಆಗಿದೆ. ಭೂತ, ದೇವತೆಗಳ ಕಂಚಿನ ವಿಗ್ರಹಗಳಲ್ಲಿ ಕೆಲವೆಡೆ ಈ ಆಕೃತಿಯ ಕಿರೀಟಗಳನ್ನು ಕಾಣಬಹುದು. ಕೇದಗೆ ಮುಂದಲೆಯಂಥ ಭೂಷಣವನ್ನು ಭೂತ ವೇಷಧಾರಿ ಧರಿಸುವ ಸಂಪ್ರದಾಯವಿದೆ. ಬಟ್ಟಲು ಕಿರೀಟ, ರಾಜ ಕಿರೀಟದಂಥ ರಚನೆಗಳನ್ನೂ, ಮರದ, ಬೇಗಡೆ ಕೆಲಸದ ಇತರ ಭೂಷಣಗಳನ್ನೂ ಉತ್ತರ ಕೇರಳದ ಕಡೆಯ ಭೂತ ವೇಷಗಳಲ್ಲಿ ಕಾಣಬಹುದು. ಕೇರಳದ ಕಥಕ್ಕಳಿಯೂ, ಕೂಡಿಯಾಟ್ಟಂ ಒಟ್ಟಂತುಳ್ಳಲ್ ಮುಂಥಾದ ದೃಶ್ಯರೂಪಕಗಳೂ ತಮ್ಮ ವೇಷಭೂಷಣಗಳಿಗೆ ಅಲ್ಲಿನ ಭೂತವೇಷಗಳಿಗೆ ಋಣಿಯಾಗಿದೆ ಎಂಬುದು ಸ್ಪಷ್ಟ. ಬಯಲು ಸೀಮೆಯಲ್ಲಿ ಸೋಮನ ಕುಣಿತ, ವೀರಭದ್ರನ ಕುಣಿತ, ಮಾರಿ ಕುಣಿತ, ಮುಂತಾದವುಗಳ ವೇಷಭೂಷಣಗಳ ಹಾಗೂ ಮುಖವರ್ಣಿಕೆಗಳ ಪ್ರಭಾವ ಮೂಡಲಪಾಯ ಬಯಲಾಟ ಮೇಲೆ ಉಂಟಾಗಿರುವುದು ಸಹಜ.

ಕರಾವಳಿ ಯಕ್ಷಗಾನದಲ್ಲಿ (ತೆಂಕುತಿಟ್ಟು) ಹಾಗೂ ಭೂತಾರಾಧನೆಯಲ್ಲಿ ಬಳಸುವ ಕೆಲವು ಪ್ರಸಾಧನ ಪರಿಕರಗಳು ಆಕಾರದಲ್ಲಿ ಮಾತ್ರವಲ್ಲ ಹೆಸರಲ್ಲೂ ಸಾದೃಶ್ಯವುಳ್ಳವುಗಳೆಂದು ಪರಿಶೀಲನೆಯಿಂದ ತಿಳಿಯಬಹುದು.

ಭೂತ ಮುಖವರ್ಣಿಕೆಯ ವಿಚಾರದಲ್ಲಿ, ಚುಟ್ಟಿ, ಮುದ್ರೆ, ನಾಮ, ಸರಳರೇಖೆ, ವಕ್ರರೇಖೆ, ಗಡ್ಡಮೀಸೆಗಳ ರಚನೆ ಇತ್ಯಾದಿಗಳಲ್ಲಿ ಪರಸ್ಪರ ಹೋಲಿಕೆ ಇದೆ. ಭೂತ ವೇಷದ ಮುಖವರ್ಣಿಕೆಗೆ ಬಳಸುತ್ತಿದ್ದ ಇಂಗಳೀಕ, ಅರದಾಳ, ಎಣ್ಣೆಮಸಿ, ಸುಣ್ಣ, ಜೇಡಿಮಣ್ಣು-ಅಕ್ಕಿಹಿಟ್ಟು, ಕುಂಕುಮ, ಹಲಸಿನ ಮೇಣಗಳನ್ನು ಯಕ್ಷಗಾನ ಪ್ರಸಾಧನಕ್ಕೆ ಬಳಸುತ್ತಿದ್ದರು.

ಹಿಂದೆ ಬಡಗುತಿಟ್ಟು ಯಕ್ಷಗಾನದಲ್ಲಿ ಕೇದಿಗೆಗಳನ್ನೂ, ಗೊಂಡೆ ಹೂವುಗಳನ್ನು ಬಳಸುತ್ತಿದ್ದರೆಂದು ತಿಳಿಯುತ್ತದೆ. ಮುಂಡಾಸಿನ ಈಗಿನ ಜರಿಲಾಡಿಗಳ ಸ್ಥಾನದಲ್ಲಿ ಬಾಳೆನಾರನ್ನು ಬಳಸುತ್ತಿದ್ದುದುಂಟು.

ಭೂತೋತ್ಸವದಲ್ಲಿ ಕೆಲವು ಮುಖವಾಡಗಳನ್ನು ಬಳಸುತ್ತಾರೆ. ಆದರೆ ಯಕ್ಷಗಾನದಲ್ಲಿ ರಾಕ್ಷಸನಂಥ ಪಾತ್ರದ ಮುಖವನ್ನೆ ಬಣ್ಣಗಾರಿಕೆಯ ಮೂಲಕ ಮುಖವಾಡವಾಗಿ ಪರಿವರ್ತಿಸುತ್ತಾರೆನ್ನಬೇಕು.

ಜನಪದ ಹಾಗೂ ಶಾಸ್ತ್ರೀಯವೆನಿಸುವ ಹಲವು ಕುಣಿತಗಳ ಒಂದು ಸಂಕೀರ್ಣ ವ್ಯವಸ್ಥೆಯನ್ನು ಯಕ್ಷಗಾನದಲ್ಲಿ ಕಾಣಬಹುದು. ಆಯಾ ಕಡೆಯ ಬಯಲಾಟದ ಪ್ರಕಾರವು ಅಲ್ಲಲ್ಲಿನ ಆರಾಧನಾ ನೃತ್ಯ ಹಾಗೂ ಇತರ ಜನಪದ ನೃತ್ಯಗಳಿಂದ ಪ್ರಭಾವಿತವಾಗದೆ, ಉಳಿದಿಲ್ಲವೆನ್ನಬಹುದು. ಬಡಗುತಿಟ್ಟಿನ ಯಕ್ಷಗಾನದ ಕುಣಿತದಲ್ಲಿ, ಉಡುಪಿ, ಕುಂದಾಪುರ ಕಡೆಗಳಲ್ಲಿ ವಿಶೇಷವಾಗಿ ಪ್ರಚಲಿತವಿರುವ ‘ದಕ್ಕೆಬಲಿ’ಯ ನೃತ್ಯ ಪದ್ಧತಿಯ ವಿವಿಧ ರೀತಿಯ ತರಂಗಿತ ವಿನ್ಯಾಸವನ್ನು ಡಾ. ಕಾರಂತರು ಗುರುತಿಸಿದ್ದಾರೆ. (ಯಕ್ಷಗಾನ ಬಯಲಾಟ) ತುಳುನಾಡಿನ ನೃತ್ಯ ಪ್ರಧಾನವಾದ ಭೂತ ಪೂಜೆಯೆಂಬುದು ತುಂಬ ಪುರಾತನವಾದದ್ದು. ಕೋಲ, ನೇಮ ಇತ್ಯಾದಿ ದೈವ ಸೇವೆಯ ಸಂದರ್ಭಗಳಲ್ಲಿ ಭೂತ ವೇಷಧಾರಿ ವಿವಿಧ ತಾಳಗಳಿಗೆ ವಿವಿಧ ರೂಪದ ಭಾವಭಂಗಿಗಳಿಂದ ಕುಣಿಯುವುದನ್ನು ನೋಡಬಹುದು. ತೆಂಕುತಿಟ್ಟಿನ ಯಕ್ಷಗಾನದ ಕೆಲವು ಕುಣಿತಗಳಲ್ಲಿ ತುಳುನಾಡಿನ ದೈವಗಳ ಕುಣಿತದ ಪ್ರಚಂಡತೆಯನ್ನೂ ತೀವ್ರತೆಯನ್ನೂ ಕಾಣಬಹುದು. ಮಂಡಲ, ಅರ್ಧಮಂಡಲಾಕಾರವಾದ ಸಂಚಾರ, ಬುಗರಿಯಂತೆ ತಿತ್ತಿರಿ ತಿರುಗುವಿಕೆ, ಮೇಲಕ್ಕೆ ಚಿಮ್ಮಿ ದಿಗಿಣ ಹಾಕುವುದು. ಕೆಲವು ಸಂದರ್ಭಗಳ ಯುದ್ಧಾಭಿನಯ, ಅಂಗಾಂಗ ಚಲನಗಳ ವೈಖರಿ, ಬಾಗು, ಬಳುಕು, ನಿಲುಮೆ, ಹಿಂದುಮುಂದಕ್ಕೆ ಸರಿಯುವ ಠೀವಿ ಇತ್ಯಾದಿಗಳಲ್ಲಿ ಪರಸ್ಪರ ಸಾದೃಶ್ಯ ಗೋಚರಿಸುತ್ತದೆ. ವಿಷ್ಣುಮೂರ್ತಿ ದೈವದ ‘ಒತ್ತೆಕೋಲ’ ಎಂಬ ಆರಾಧನಾವಿಧಿಯ ಪೂರ್ವರಂಗವಾದ ‘ಕುಳಿಚ್ಚಾಟ್ ’ ಎಂಬುದರಲ್ಲಿ ದೈವವೇಷಧಾರಿ ಅಭಿನಯಿಸಿ ತೋರಿಸುವ ನರಸಿಂಹಾವತಾರದ ಘಟನೆಯು ಯಕ್ಷಗಾನ ಅಥವಾ ಕಥಕ್ಕಳಿಯ ಅಭಿನಯವನ್ನು ಹೋಲುತ್ತದೆ.

ಉತ್ತರ ಕರ್ನಾಟಕದಲ್ಲಿ ಪರ್ವತರ (ಅಥವಾ ಪುರವಂತರ) ಕುಣಿತವೆಂಬುದು ಪ್ರಚಾರದಲ್ಲಿದೆ. ವೀರಭದ್ರನ ಭಕ್ತರು ವೇಷ ಹಾಕಿ ಕುಣಿದು ಆತನ ಸಾಹಸವನ್ನು ಹಾಡುತ್ತಾರೆ. ಇಂಥ ವೇಳೆ ‘ಬೆಡಗಿನ’ ಪ್ರಶ್ನೋತ್ತರಗಳು ಜರಗುತ್ತವೆ. ಇಲ್ಲಿ ಹಾಸ್ಯ ಗಾರನೂ ಇದ್ದು ಆಗಾಗ ಸಂಭಾಷಣೆಯನ್ನು ಹಾಸ್ಯಕ್ಕೆ ತಿರುಗಿಸುತ್ತಾನೆ.

ಬಯಲಾಟಗಳು ರೂಪುಗೊಂಡ ಹಳೆಗಾಲದಲ್ಲಿ ಯಾವ ರೀತಿಯ ಹಾಡುಗಾರಿಕೆಯನ್ನು ಬಳಸುತ್ತಿದ್ದರೋ ನಿಶ್ಚಯವಾಗಿ ಹೇಳುವಂತಿಲ್ಲ. ಉಪಲಬ್ಧವಾದ ಯಕ್ಷಗಾನ ಪ್ರಸಂಗಗಳಲ್ಲಿ ಸೂಚಿತವಾದ ರೂಢಿಯ ಸಾಂಪ್ರದಾಯಿಕ ರಾಗ ತಾಳಗಳ ಜೊತೆಗೆ ಸುವ್ವಾಲೆ, ಯಾಲಪದ, ದವಳಾರ ಮೊದಲಾದ ಜನಪದ ಮಟ್ಟುಗಳನ್ನೂ ಸಾಂದರ್ಭಿಕವಾಗಿ ಬಳಸಿದ್ದು ಕಾಣುತ್ತದೆ. ತಮಿಳು ಮತ್ತು ತೆಲುಗು ಯಕ್ಷಗಾನ ಕೃತಿಗಳಲ್ಲೂ ಸೋಬಾನೆ ಪದಗಳು, ಏಲಾ, ಲಾಲಿ, ಉಯ್ಯಾಲೆ ಹಾಡುಗಳು ಹಾಗೂ ರಾಗದ ಹೆಸರು ಸೂಚಿಸದ ‘ದರುವು’(ಧ್ರುವಾ ಎಂಬುದರ ತದ್ಭವ) ಎಂಬ ರಚನೆಗಳು ವಿಶೇಷವಾಗಿ ಕಂಡುಬರುತ್ತವೆಂದು ಡಾ.ವಿ.ರಾಘವನ್ ತಿಳಿಸುತ್ತಾರೆ. ಯಕ್ಷಗಾನದ ಹಾಡುವಿಕೆಯ ಹಳೆಯ ಕ್ರಮದಲ್ಲಿ ಹಲವು ಜನಪದ ಮಟ್ಟುಗಳು ಇರುವುದನ್ನು ಈಗಲೂ ಗುರುತಿಸಬಹುದಾಗುತ್ತದೆ. ಯಕ್ಷಗಾನದಲ್ಲಿ ರೂಢಿಯಿರುವ ವೀರರಸದ ಏರುಸ್ವರದ ವೇಗವಾದ ಹಾಡುಗಾರಿಕೆ ಶಿಷ್ಟ ಸಂಗೀತ ಸಂಪ್ರದಾಯಕ್ಕೆ ಸೇರಿದ್ದಲ್ಲ.

ಯಕ್ಷಗಾನ ಆಟಕ್ಕೆ ಬಳಸುವ ಪ್ರಸಂಗ ಎನಿಸುವ ಸಾಹಿತ್ಯ ವಸ್ತುವಿನ ಪುರಾತನ ರೂಪ ಹೇಗಿತ್ತು ಎಂಬುದನ್ನು ತಿಳಿಯುವ ಸಾಧ್ಯತೆ ಈಗ ಇಲ್ಲವಾಗಿದೆ. ಈಗ ಉಪಲಬ್ಧವಾಗುವ ಯಕ್ಷಗಾನ ಕೃತಿಗಳು ವಿವಿಧ ರಾಗ ತಾಳ ಛಂದಸ್ಸುಗಳಿಂದ ಕೂಡಿದ ನಡುಗನ್ನಡ ಭಾಷಾ ಸ್ವರೂಪದವುಗಳಾಗಿವೆ. ಬಹುಮಟ್ಟಿಗೆ ಇವು ಶಿಷ್ಟ ಸಾಹಿತ್ಯಕ್ಕೇ ಸೇರುತ್ತವೆ. ಆದರೂ ಕ್ವಚಿತ್ತಾಗಿ ಕೆಲವೆಡೆ ಮುಖ್ಯವಾಗಿ ಹಾಸ್ಯಪಾತ್ರಗಳ ಸಂದರ್ಭದಲ್ಲಿ – ಗ್ರಾಮ್ಯ ಶಬ್ದ, ವಾಕ್ಯ ಪ್ರಯೋಗಗಳಿರುವುದುಂಟು. ಪಾರ್ತಿಸುಬ್ಬನು ಅಂಗದನ ಬಾಯಲ್ಲಿ ‘ಏನ್ಮ್ಯಾ, ರಾವಣ, ನೀನ್ಮ್ಯಾ, ಸೀತೆಯ… ಕದ್ದು ತರಬಹುದೇನ್ಮ್ಯಾ’ ಎಂಬಂಥ ಮಾತನ್ನು ಆಡಿಸಿದ್ದಾನೆ. ಅವನ ‘ಕೃಷ್ಣಲೀಲೆ’ಯಲ್ಲಿ ಬರುವ ಕೊರವಂಜಿ ಕೆಲವು ಮಲೆಯಾಳ ಮಾತುಗಳನ್ನು ಆಡುತ್ತಾಳೆ. ಕೃಷ್ಣಲೀಲೆ ಆಟದಲ್ಲಿ ಬರುವ ಪಂಡಿತ ಹೆಚ್ಚಾಗಿ ಮಲೆಯಾಳ ಭಾಷೆಯನ್ನೆ ಆಡುತ್ತಾನೆ. ಇದೇ ಕವಿಯ ಐರಾವತ ಪ್ರಸಂಗದಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ಬ್ರಾಹ್ಮಣರು ಒಂದಾಗಿ ಭೋಜನಕ್ಕೆ ಹೊರಡುವ ಸಂಭ್ರಮವಿದೆ.

ಜಲಂಧರ ಕಾಳಗದಲ್ಲಿ ಬರುವ ಮೂರ್ತೆಯವನು ತುಳು ಮಾತಾಡುವುದಿದೆ. ಬೇರೆ ಬೇರೆ ಪ್ರಸಂಗಗಳಲ್ಲಿ ಬರುವ ಕಿರಾತರು ಹೆಚ್ಚಾಗಿ ಗ್ರಾಮ್ಯ ಕನ್ನಡವನ್ನು ಆಡುತ್ತಾರೆ.

ಪೂರ್ವರಂಗದಲ್ಲಿನ ಕೆಲವು ಹಾಸ್ಯಪಾತ್ರಗಳು ಬೇರೆ ಬೇರೆ ಭಾಷೆಗಳನ್ನು ಮಾತನಾಡುತ್ತವೆ. ಕಥೆಯಲ್ಲಿ ಬರುವ ಹಾಸ್ಯಪಾತ್ರಗಳಿಗೂ ಸಾಂದರ್ಭಿಕವಾಗಿ ಗ್ರಾಮ್ಯಭಾಷೆ ಆಡುವ ಸ್ವಾತಂತ್ರ್ಯ ಇದೆ.

ಚಂದ್ರಾವಳೀ ವಿಲಾಸದಂಥ ಕಥೆಗಳನ್ನು ಯಕ್ಷಗಾನವು ಜನಪದ ಸಾಹಿತ್ಯದಿಂದಲೇ ಸ್ವೀಕರಿಸಿತೆಂದು ಹೇಳಬಹುದು. ತುಳುವಿನಲ್ಲಿ ಇದೇ ಕಥೆಯನ್ನು ಹೋಲುವ ಜನಪದ ಕಥೆ ಇದೆ.

ಪಗರಣ, ನಾಳ್ಪಗರಣ, ಚೋಹ, ನಾಡಾಡಿಗಳ ನಾಟಕ, ಮೊದಲಾದವುಗಳ ಪ್ರಸ್ತಾವ ಪ್ರಾಚೀನ ಕಾವ್ಯಗಳಲ್ಲಿ ದೊರಕುತ್ತದೆ. ಉತ್ತರ ಕರ್ಣಾಟಕದಲ್ಲಿ ಹಗಣ ಅಥವಾ ಸೋಗು ಹಿಂದಿನಿಂದಲೂ ಪ್ರಚಾರದಲ್ಲಿದೆ. ನಾಟ್ಯ, ನಟನೆಗಳನ್ನು ವೃತ್ತಿಯಾಗಿರಿಸಿಕೊಂಡು ಊರೂರು ಸುತ್ತಾಡುತ್ತಿದ್ದ ಚಾರಣ ವೃತ್ತಿಯವರು, ‘ಬಹುರೂಪಿ’ಗಳೇ ಮೊದಲಾದವರು ತಮ್ಮ ಪ್ರದರ್ಶನಗಳಲ್ಲಿ ಬಳಸುತ್ತಿದ್ದ ನಾಟಕೀಯತೆಯ ಕೆಲವು ಅಂಶಗಳನ್ನು ಬಯಲು ನಾಟಕವಾದ ಯಕ್ಷಗಾನವೂ ತಕ್ಕಮಟ್ಟಿಗೆ ಸ್ವೀಕರಿಸಿರಬಹುದು.

ಯಕ್ಷಗಾನ ಪಾತ್ರಗಳ(ಮುಖ್ಯವಾಗಿ ರಾಕ್ಷಸರ) ಅಟ್ಟಹಾಸ, ಅಬ್ಬರ, ಹೂಂಕಾರ, ದೊಂದಿಯನ್ನು ತುಡುಕಿ ಪ್ರದರ್ಶಿಸುವ ಪಟಾಟೋಪ ಇತ್ಯಾದಿಗಳನ್ನು ಭೂತಾರಾಧನೆಯಂಥ ಆರಾಧನಾ ರಂಗಗಳಿಂದ ಸ್ವೀಕರಿಸಿದ್ದಾಗಿದೆ. ವೀರಭದ್ರ, ಕುಂಭಕರ್ಣ ಮೊದಲಾದವರಿಗೆ ಭರ್ಜರಿ ‘ಪಾರಣೆ’ ಮಾಡಿಸುವ ಕ್ರಮವೂ ಭೂತಾರಾಧನೆಯ ಕ್ರಮವೇ ಆಗಿದೆ. ಭೂತರಾಧನೆ ಹಾಗೂ ಯಕ್ಷಗಾನ ಹಿಂದೆ ದೇವಟಿಗೆಯ ಬೆಳಕಿನಲ್ಲೆ ನಡೆಯುತ್ತಿದ್ದವು. ಯಕ್ಷಗಾನದಲ್ಲಿ ಬಳಸುವ ಹಿಮ್ಮೇಳ ವಾದ್ಯಗಳಾದ ಚೆಂಡೆ, ತಾಸುಮಾರು (ಬಡಗುತಿಟ್ಟು) ಮುಖವೀಣೆ, (ಮೂಡಲಪಾಯ) ಹಿಂದೆ ಶ್ರುತಿಗಾಗಿ ಉಪಯೋಗಿಸುತ್ತಿದ್ದ ಸೋರೆ ಬುರುಡೆಯ ಪುಂಗಿ ಮೊದಲಾದವುಗಳು. ಜನಪದ ವಾದ್ಯಗಳೇ ಆಗಿವೆ.

ಯಕ್ಷಗಾನ ಬಯಲಾಟಕ್ಕೆ ಸಂಬಂಧಿಸಿದ ಹಲವು ಪಾರಿಭಾಷಿಕ ಪದಗಳು ಜನಪದದ ಆಡುಮಾತಿನಿಂದಲೆ ಎತ್ತಿಕೊಂಡವುಗಳಾಗಿವೆ. ಉದಾ : ಅಟ್ಟೆ, ಅಂಡು, ತಿರುಗಾಟ, ಆಟದ ಸೂಳೆ, ದಗಲೆ, ಚಿಟ್ಟೆಪಟ್ಟಿ, ಚೆಂಡು, ಬಾಲ್ಮುಂಡು, ಕೋಡಂಗಿ, ಹನುಮನಾಯಕ, ತಿರ್ಗಾಸ್ ನಡೆ, ದೊಂದಿ, ಜಮಖಾನೆ ಬಣ್ಣ, ಬೋಳುಕೊದ್ದೆಲ್ ಬಣ್ಣ, ತಡ್ಪೆ ಕಿರೀಟ, ಓಲೆಕುಚ್ಚು, ಗಂಜಿ ಮೇಳ ಇತ್ಯಾದಿ.

ಒಟ್ಟಿನಲ್ಲಿ ಯಕ್ಷಗಾನದಲ್ಲಿ ಶಾಸ್ತ್ರೀಯಾಂಶಗಳ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಜನಪದ ಕಲಾಂಶಗಳು ಓತ ಪ್ರೋಬೆರೆತುಕೊಂಡು ಈ ಕಲೆಯ ಸತ್ವವನ್ನು ಹೆಚ್ಚಿಸಿರುವುದನ್ನು ನೋಡಬಹುದು. ಸ್ವೀಕರಣ ಹಾಗೂ ಸಮನ್ವಯವೇ ಯಕ್ಷಗಾನದ ಜೀವಾಳಶಕ್ತಿಯೆಂದರೂ ತಪ್ಪಿಲ್ಲ.

ಪರಾಮರ್ಶನ ಸಾಹಿತ್ಯ

೧.ಡಾ.ಕೆ.ಚಿನ್ನಪ್ಪಗೌಡ, ಭೂತಾರಾಧನೆಜಾನಪದೀಯ ಅಧ್ಯಯನ, ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ, ೧೯೯೦

೨. ಪ್ರೋಡಾ. ಗಾಯತ್ರಿ ನಾವಡ, ಕಾಡ್ಯವಾಟಪಠ್ಯ ಮತ್ತು ಪ್ರದರ್ಶನ,  ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ, ೧೯೯೨

೩.ಡಾ.ಡಿ.ಕೆ.ರಾಜೇಂದ್ರ, ಯಕ್ಷಗಾನದ ವೇಷಭೂಷಣಗಳು(ಲೇಖನ), ಪು.೯೩, ಚುಂಚನಗಿರಿ, ೧೯೯೧

೪. ಡಾ.ವಿ.ರಾಘವನ್, ಯಕ್ಷಗಾನ(ಲೇಖನ), ತ್ರಿವೇಣಿ’, ಮದ್ರಾಸು, ೧೯೩೮

೫. ಡಾ.ಎಂ.ಪ್ರಭಾಕರ ಜೋಶಿ, ಯಕ್ಷಗಾನ ಪದಕೋಶ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ,೧೯೯೪

೬. ಅಮೃತ ಸೋಮೇಶ್ವರ, ಯಕ್ಷಾಂದೋಳ, ಕಲಾ ಗಂಗೋತ್ರಿ, ಸೋಮೇಶ್ವರ ಉಚ್ಚಿಲ, ದ.ಕ., ೧೯೯೫