ನಮ್ಮ ಸಂಸ್ಕೃತಿಯಲ್ಲಿ ಫಲವಂತಿಕೆಯ ಆಚಾರವಿಧಿ(Fertility cult) ಹಲವು ರೀತಿಗಳಲ್ಲಿ ವ್ಯಕ್ತಗೊಂಡಿದೆ. ಅನೇಕ ದೇವತೆಗಳು ಸಮೃದ್ದಿ ಹಾಗೂ ಸಂತಾನಕಾರಕ ಶಕ್ತಿಯಿಂದ ಕೂಡಿರುವುದನ್ನು ಅವುಗಳ ವಿಗ್ರಹ ವಿನ್ಯಾಸ, ಕೈಯಲ್ಲಿ ಧರಿಸಿದ ಮಾದಳ ಇತ್ಯಾದಿ ಫಲವಸ್ತುಗಳು, ಉಪಾಸನಾ ವಿಧಾನ, ಸ್ತೋತ್ರಕ್ರಮ ಇತ್ಯಾದಿಗಳಿಂದ ತಿಳಿದುಕೊಳ್ಳಬಹುದು. ಎಷ್ಟೋ ದೇವತೆಗಳನ್ನು ವಿಶಿಷ್ಟ ಋತುಗಳಲ್ಲಿ, ನಿರ್ದಿಷ್ಟ ನೈಸರ್ಗಿಕ ಹಿನ್ನೆಲೆಗಳಲ್ಲಿ ಪೂಜಿಸುವ ಪರಂಪರೆಯೂ ಬೆಳೆದುಬಂದಿದೆ. ಅನೇಕ ಹಬ್ಬಗಳು ಸೃಷ್ಟಿವೈಚಿತ್ರ್ಯಕ್ಕೆ ಮನುಷ್ಯ ತೋರುವ ಸಂಭ್ರಮಾತ್ಮಕವಾದ ಪ್ರತಿಕ್ರಿಯೆಗಳಾಗಿವೆ.

ಸಂತಾನಾಪೇಕ್ಷೆಯ ಅದಮ್ಯತೆಯನ್ನೂ, ವೈಭವೀಕರಣವನ್ನೂ ಇಂಥ ಸಂದರ್ಭಗಳಲ್ಲಿ ನಾವು ಇದಿರುಗೊಳ್ಳುತ್ತೇವೆ. ಪ್ರಾಚೀನ ಶಿಷ್ಟಕಾವ್ಯಗಳಲ್ಲಿ ಮಾತ್ರವಲ್ಲ. ಜನಪದ ಕಾವ್ಯಗಳಲ್ಲೂ ಈ ಬಯಕೆ ವಿಧವಿಧವಾಗಿ ಅಭಿವ್ಯಕ್ತಗೊಂಡುದನ್ನು ಕಾಣುತ್ತೇವೆ. ಮನುಷ್ಯ ಪೂಜಿಸುವ ದೇವತೆಗಳಿಗೆ ಮನುಷ್ಯನಂತೆಯೇ ಕಾಯವಿಕಾರಗಳನ್ನೂ ಭಾವವಿಕಾರಗಳನ್ನೂ, ಆಹಾರ, ನಿದ್ರಾ, ಭಯ, ಮೈಥುನ ಪ್ರವೃತ್ತಿಯನ್ನೂ ಅಂಟಿಸಿದ್ದನ್ನು ಪುರಾಣ, ಐತಿಹ್ಯಾದಿಗಳಲ್ಲೂ ಹಬ್ಬಹರಿದಿನಗಳಿಗೆ ಆಧಾರವಾದ ಜನಪದ ನಂಬಿಕೆಗಳಲ್ಲೂ ನಾವು ಧಾರಾಳವಾಗಿ ಕಾಣುತ್ತೇವೆ. ಕೆಲವೆಡೆ ಉತ್ಸವ ಸಂದರ್ಭಗಳಲ್ಲಿ ಸ್ತ್ರೀದೇವತೆ ಬಹಿಷ್ಠೆಯಾದುದರ ಸೂಚನೆಯಾಗಿ ಅರಸಿನ ಅಥವಾ ಕೆಂಪುಬಣ್ಣದ ಬಟ್ಟೆಯನ್ನು ಅಡ್ಡವಾಗಿ ಕಟ್ಟಲಾಗುತ್ತದೆ. ನೈಸರ್ಗಿಕ ಸ್ತ್ರೀದೇಹಧರ್ಮವಾದ ಋತುಸ್ರಾವದ ಕುರಿತು ದೇಶವಿದೇಶಗಳ ಜನಪದರಲ್ಲಿ, ಆದಿವಾಸಿಗಳಲ್ಲಿ ಚಿತ್ರವಿಚಿತ್ರಗಳಾದ ಕಲ್ಪನೆಗಳು, ವಿಧಿನಿಷೇಧಗಳು ಬೆಳೆದುಬಂದಿವೆ.

ಪುರಾಣಗಳ ಪ್ರಕಾರ ಹೆಣ್ಣು ರಸಜ್ವಲೆಯಾಗುವುದು ಇಂದ್ರನ ಬ್ರಹ್ಮಹತ್ಯಾ ದೋಷದಲ್ಲಿ ಒಂದು ಪಾಲನ್ನು ಆಕೆ ಪಡೆದುದರಿಂದ ಎನ್ನಲಾಗಿದೆ. ವಿಶ್ವರೂಪಾಚಾರ್ಯನ ವಧೆಯಿಂದ ಪ್ರಾಪ್ತವಾದ ಬ್ರಹ್ಮಹತ್ಯಾದೋಷವನ್ನು ನಾಲ್ಕು ಪಾಲು ಮಾಡಿ ಭೂಮಿ, ನದಿ, ವೃಕ್ಷ ಹಾಗೂ ಸ್ತ್ರೀ ಇವರಿಗೆ ಹಂಚಿಕೊಟ್ಟುದಾಗಿಯೂ ಇದೇ ಕಾರಣಕ್ಕಾಗಿ ಭೂಮಿದೇವಿ ವರ್ಷಕ್ಕೊಮ್ಮೆ ಬಹಿಷ್ಠೆಯಾಗುವುದಾಗಿಯೂ ಪೌರಾಣಿಕ ನಂಬಿಕೆ. ಆದರೆ ಭೂಮಿಯ ಈ ‘ದೋಷ’ ಲೋಕಕ್ಕೆ ಶುಭಕರವೆಂದು ಸಂಬಂಧಪಟ್ಟ ಆಚರಣೆಗಳಿಂದ ತಿಳಿಯುವಂತಿದೆ. ಸೃಷ್ಟಿಯ ವಿಕಾಸಕ್ಕೆ ಈ ದೋಷದ ಹಿನ್ನೆಲೆ ಅಗತ್ಯವಷ್ಟೆ!

ತುಳುನಾಡಿನ ವಿಶಿಷ್ಟ ಪರ್ವದಿನಗಳಲ್ಲಿ ಒಂದಾದ ‘ಕೆಡ್ದಸ’ ಎಂಬುದು ಭೂಮಿದೇವಿ ರಸಜ್ವಲೆಯಾಗುವ ಕಾಲವೆಂದು ಜನಪದ ಗ್ರಹಿಕೆ. ಈ ಶಬ್ದ ವ್ಯುತ್ಪತ್ತಿಯ ಕುರಿತಾಗಿ ಸರಿಯಾದ ನಿರ್ವಚನ ಲಭ್ಯವಿದ್ದಂತಿಲ್ಲ. ಖೇಟ, ಖೆಡ್ಡ, ಕೆಡ್ಡ ಎಂಬುದಕ್ಕೆ ಬೇಟೆ ಎಂಬರ್ಥವಿದ್ದು, ಕೆಡ್ಡಸಕ್ಕೆ ಸಂಬಂಧಪಟ್ಟ ಹಾಗೆ ಬೇಟೆಯೂ ಒಂದಂಗವಾಗಿರುವುದರಿಂದ ಈ ಹೆಸರು ಬಂದಿರಲೂಬಹುದು. ಭೂಮಿತಾಯಿ ಋತುವಾಗಿ ಬೀಜೋತ್ಪತ್ತಿಯ ನಿರೀಕ್ಷೆಯಲ್ಲಿರುವ ಸಂಧಿಕಾಲದ ಈ ಹಬ್ಬ ಋತುಮಾನಕ್ಕೆ ಸಂಬಂಧಪಟ್ಟುದಾಗಿದ್ದು ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ದಿವಸ ಇದರ ಆಚರಣೆ ಇರುತ್ತದೆ. ಮಕರ ಮಾಸದ (ತುಳು ‘ಪೊನ್ನಿ’ ತಿಂಗಳು) ಇಪ್ಪತ್ತೇಳನೇ ದಿನ ಸಂಜೆಯಿಂದ ಕುಂಭ ಸಂಕ್ರಮಣ ದವರೆಗೆ ನಡೆಯುವ ಈ ಹಬ್ಬದ ಹಿನ್ನೆಲೆಯಲ್ಲಿ ಹುದುಗಿರುವ ಪ್ರಾಚೀನ ಸಾಂಸ್ಕೃತಿಕ ಆಶಯ ಫಲೀಕರಣಾಕಾಂಕ್ಷೆಯೆಂಬುದು ಸುವ್ಯಕ್ತ. ಆಚರಣಾ ವಿಧಾನದಲ್ಲಿ ಅಲ್ಲಿ ಇಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ.

ಭೂಮಿತಾಯಿ ವರ್ಷಕ್ಕೊಮ್ಮೆ ಮುಟ್ಟಾದಾಗ ಆ ದಿನಗಳಲ್ಲಿ ಭೂಮಿಯನ್ನು ಅಗೆಯುವುದು. ಉಳುವುದು ಇತ್ಯಾದಿ ಭೂಹಿಂಸೆಗಳನ್ನು ಮಾಡಬಾರದೆಂದು ಪ್ರತೀತಿ. ಹಿಂದೊಮ್ಮೆ ಒಬ್ಬಾತ ನೆಲವನ್ನು ಉತ್ತಾಗ ನೆತ್ತರು ಒತ್ತರಿಸಿ ಬಂದಿತ್ತಂತೆ! ಮುಟ್ಟಿನ ವೇಳೆ ಭೂಮಿಗೆ ನೋವಾದರೆ ಅಕೆ ಬಂಜೆಯಾಗುತ್ತಾಳೆ. ಎಂದರೆ ಆ ವರ್ಷ ಸಾಕಷ್ಟು ಬೆಳೆ ಬಾರದೆಂದು ಭಾವಿಸಲಾಗುತ್ತದೆ. ರಜೋದರ್ಶನ ವೇಳೆ ಪುರುಷ ಸಂಪರ್ಕ ಸಲ್ಲದೆಂಬ ಧಾರ್ಮಿಕ ನಿಷೇಧದ ನೆರಳನ್ನು ಇಲ್ಲಿ ಕಾಣಬಹುದು. ನೊಗ ನೇಗಿಲು, ಹಾರೆ ಗುದ್ದಲಿಗಳ ಕೆಲಸಕ್ಕೆ ಆ ದಿನಗಳಲ್ಲಿ ವಿರಾಮ. ಗಾಡಿ ಎಳೆಯವ ಎತ್ತುಗಳೂ ವಿಶ್ರಾಂತಿಯನ್ನು ಹೊಂದುತ್ತವೆ. ಮರಗಿಡ, ಬೀಳಲು ಇತ್ಯಾದಿಗಳನ್ನು ಆ ದಿನಗಳಲ್ಲಿ ಕಡಿಯುವುದಿಲ್ಲ.

ಸ್ತ್ರೀಯರ ಕಲಾಪಗಳೇ ಈ ಹಬ್ಬದಲ್ಲಿ ಪ್ರಧಾನವಾಗಿವೆ. ಭೂಮಿದೇವಿಯನ್ನು ಪೂಜಿಸುವುದರಲ್ಲಿ ಅವರದೇ ಸಡಗರ. ಅಂಗಳದ ಒಂದೆಡೆ, ಸ್ವಲ್ಪ ನೆರಳಿನ ಜಾಗದಲ್ಲಿ ಗೋಮಯದಿಂದ ಸ್ಥಳಶುದ್ದಿ ಮಾಡಿ, ಮೊಳದಷ್ಟು ಅಗಲಕ್ಕೆ ವೃತ್ತವೊಂದನ್ನು ವಿಭೂತಿಯಿಂದ ಬಿಡಿಸಿ ಅದರಲ್ಲಿ ಬಿಳಿಯ ಮಡಿಬಟ್ಟೆ ಗೆಜ್ಜೆಕತ್ತಿ (ಕಿರುಗತ್ತಿ), ತೆಂಗಿನ ಸೋಗೆಯ ಹಸಿಕಡ್ಡಿಯನ್ನು ಇಟ್ಟು ಭೂಮಿತಾಯಿಯ ಸಾನ್ನಿಧ್ಯವನ್ನು ಸಂಕೇತಿಸುತ್ತಾರೆ.

ಕೆಡ್ಡಸದ ಪ್ರಾರಂಭದ ದಿನ ಬೆಳಿಗ್ಗೆ ಅಡುಗೆಮನೆಯನ್ನು ಶುಚೀಕರಿಸಿ ನವಧಾನ್ಯಗಳನ್ನು (ಇವುಗಳಲ್ಲಿ ಹುರುಳಿ ಮುಖ್ಯವಾದದ್ದು) ಅಥವಾ ಇದ್ದಷ್ಟು ಬಗೆಯ ಧಾನ್ಯಗಳನ್ನು ಹುರಿದು ಪುಡಿಮಾಡಿ, ಬೆಲ್ಲ, ಅರಳು, ತೆಂಗಿನಕಾಯಿಯ ಚೂರುಗಳನ್ನು ಬೆರಸಿ ಅಗ್ರದ ಬಾಳೆಯೆಲೆಯಲ್ಲಿ ಹಾಕಿ ‘ಭೂಮಿ’ ಬರೆದುದರ ಬದಿಯಲ್ಲಿಟ್ಟು ನಮಿಸುತ್ತಾರೆ. (ಇವೆಲ್ಲ ಫಲವಂತಿಕೆಯ ಬಯಕೆಯ ಸಂಕೇತಗಳು) ಆ ಬಳಿಕ ಎಲ್ಲರಿಗೂ ಹಂಚಿ ತಿನ್ನುತ್ತಾರೆ. ಇದಕ್ಕೆ ‘ಕೆಡ್ಡಸದ ಕುಡು ಅರಿ’ ಅಥವಾ ‘ನನ್ನೆರಿ’ ಎನ್ನುತ್ತಾರೆ. ಜೊತೆಗೆ ಬಾಳೆಹಣ್ಣನ್ನೂ ಸೇರಿಸಿಕೊಳ್ಳುವ ಸಂಪ್ರದಾಯವೂ ಇದೆ. ಚೊಚ್ಚಲ ಮಕ್ಕಳಂತೂ ಈ ಹುರಿಗಾಳನ್ನು ತಿನ್ನಲೇಬೇಕಂತೆ. ಅವರು ಪರವೂರಿನಲ್ಲಿದ್ದರೆ ಅವರ ಪಾಲಿನದ್ದನ್ನು ಕಟ್ಟಿಟ್ಟು ಅವರು ಬಂದಾಗ ಕೊಡಬೇಕಂತೆ.

ಆ ದಿನ ಮಧ್ಯಾಹ್ನದ ಊಟಕ್ಕೆ ನುಗ್ಗೆಯ ಪಲ್ಯ ಅಗತ್ಯವೆನ್ನಲಾಗಿದೆ. ನುಗ್ಗೆ ಬದನೆ ಮಿಶ್ರಮಾಡಿದ ಪದಾರ್ಥಗಳಲ್ಲದೆ ಅವರೆ, ಹಲಸಿನ ಮಿಡಿಗಳ ಪಲ್ಯವನ್ನು ಮಾಡುವುದು ರೂಢಿ, ರಾತ್ರಿ ಉದ್ದಿನದೋಸೆ, ಹುಳಿಹಿಟ್ಟು, ಸಿಹಿತಿಂಡಿ ಇತ್ಯಾದಿ ಮಾಡುತ್ತಾರೆ. ಗಂಡಸರು ರುಬ್ಬುವ ಕಲ್ಲಿನ ಬಳಿ ಕುಳಿತು ಅಕ್ಕಿ ಕಡೆದು ದೋಸೆ ಮಾಡುವ ಪದ್ಧತಿ ಕೆಲವು ಕಡೆ ಇದೆ. ದೈನಂದಿನ ಬದುಕಿನ ಒಂದು ‘ವ್ಯತ್ಯಾಸಸುಖ’ (Change) ತತ್ತ್ವ ಇದರಲ್ಲಿದೆ ಎನ್ನಬಹುದು. ಗಂಡಸರು ಈ ಬಿಡುವಿನ ದಿನಗಳಲ್ಲಿ ಬೇಟೆ, ಕೋಳಿ ಅಂಕ ಇತ್ಯಾದಿಗಳಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಹೆಂಗಸರು ಭೂಮಿ ಅದುರುಂತೆ ಓಡಾಡುವುದಕ್ಕೆ ವಿನಾಯತಿ ಇದೆ.

ಕೆಡ್ಡಸದ ದಿನಗಳಲ್ಲಿ ಕಾಡಿನ ಮೃಗಪಕ್ಷಿಗಳು ಜ್ವರ, ‘ಕಾರಗುಂಟ’ (ಕಾಲು ಒಡೆಯುವ ಪೀಡೆ)ಗಳಿಂದ ಬಳಲುವವೆಂದೂ ಆಗ ಅವು ಸುಲಭವಾಗಿ ಬೇಟೆಗಾರರಿಗೆ ಸಿಗುವವೆಂದೂ ನಂಬಿಕೆ. ಋತುಮಾನದ ಸಂಧಿಕಾಲದಲ್ಲಿ ಹವಾಮಾನ ವ್ಯತ್ಯಾಸ ಕಾರಣದಿಂದ ಇಂಥದೊಂದು ಜಾಡ್ಯ ಒದಗಬಹುದಾದುದು ಸಂಭವನೀಯ. ತಮ್ಮ ಹೊಲ ತೋಟಗಳಿಗೆ ನುಗ್ಗಿ ಬೆಳೆಯನ್ನು ನಾಶಪಡಿಸುವ ವಿವಿಧ ಪ್ರಾಣಿಗಳನ್ನು ಸಾಮೂಹಿಕವಾಗಿ ಹಬ್ಬದ ನೆವದಲ್ಲಿ ಬೇಟೆಯಾಡುವ ಒಂದು ಸಂದರ್ಭವು ಋತುಮಾನಕ್ಕನುಗುಣವಾಗಿ ಕಲ್ಪಿತವಾಗಿರಬಹುದು. ಕೆಡ್ಡಸದ ವೇಳೆ ಮಿಶ್ರಾಹಾರಿಗಳು ಮಾಂಸದೂಟ ಮಾಡದಿದ್ದರೆ ಅವರ ಎಲುಬು. ನುಗ್ಗುನುರಿಯಾಗುತ್ತದೆ ಎಂಬ ಪಡೆಮಾತು ಇದೆ. ಮನುಷ್ಯನ ಆದಿಮ ಜೀವನಘಟ್ಟದ ಪ್ರಧಾನಾಂಗವಾಗಿದ್ದ ಬೇಟೆ ಎಂಬುದು ಕೆಡ್ಡಸದ ಕ್ರಿಯಾಚರಣೆಯೊಂದಿಗೆ ಸೇರ್ಪಡೆಯಾಗು ವುದು ಗಮನೀಯವಾಗಿದೆ.

ಬೇಟೆಗೆ ಹೊರಡಬೇಕೆನ್ನುವ ಡಂಗುರವನ್ನು ಊರ ಅಜಲಾಯ (ನಲಿಕೆಯವ)ನು ಡೋಲು ಹೆಗಲಿಗೆ ಹಾಕಿ ಬಾರಿಸುತ್ತಾ ಮನೆ ಮನೆಗೆ ಬಂದು ಸಾರುವುದು ರೂಢಿ. ಅದರ ಒಂದು ಮಾದರಿ ಇಂತಿದೆ.

‘‘ಸೋಮಾರ ಕೆಡ್ಡಸ ಮೊಟ್ಟುನೆ. ಅಂಗಾರೆ ನಡುಕೆಡ್ಡಸ. ಬುದಾರ ಬಿರಿಪ್ಪುನೆ. ಪಜಿ ಕಡ್ಪೆರೆ ಬಲ್ಲಿ, ಉಣುಂಗೆಲ್ ಪೊಲಿಪ್ಪೆರೆ ಬಲ್ಲಿ. ಅರಸುಲೆ ಬೋಂಟೆಗ್ ಸರ್ವೆರ್ ಉಳ್ಳಾಯನಾಕ್ಲು ಪೋವೊಡುಗೆ, ವಲಸಾರಿ ಮಜಲ್ಡ್ ಕೂಡ್ದು ವಲಸಾರಿ ದೇರ್‌ದ್ ಪಾಲೆಚ್ಚಾರ್ ಗ್ ಜಪ್ಪುನಾಗ ಉಳ್ಳಾಲ್ದಿನಾಕ್ಲು ಕಡೆಪಿ ಕಲ್ಲ ಕಂಜಿನ್ ನೀರ್ಡ್ ಪಾಡೊಡು. ಓಡುಡು ಕಡೆಯೊಡು. ಕಲ್ಲ್‌ಡ್ ಪತ್ತಾವೊಡು. ಮಲ್ಲ ಮಲ್ಲ ಮುರ್ಗೊಲು ಜತ್ತೊಂದು ಬರ್ಪೊ. ಬಣ್ಣಲ್ಲ ಬರಿಂಕ, ಉಬ್ಬಲ್ಲ ಪಂಜಿ, ನಾಲಕಾರ ಕಡಮ್ಮ, ಪುಲ್ಲಿಲ್ಲ ಉರೆ ಜತ್ತೊಂದು ಬರ್ಪ, ಕಟ್ಟ ಇಜ್ಜಂದಿ ಬೆಡಿ, ಕದಿ ಕಟ್ಟಂದಿನ ಪಗರಿ, ಕೈಲ ಕಡೆಲ ಪತ್ತ್ ದ್, ಉಜ್ಜೆರ್‌ಗೊಂಜಿ ಏರ್ಪು ಏರ್ಪಾದ್ ಇಲ್ಲ ಮುಡೆಂಕಿಲ್‌ಡ್ ಉಂತೊಡು. ಮುರ್ಗೊಳೆಗ್ ತಾಂಟಾವೊಡು…. ಮಲ್ಲ ಮಲ್ಲ ಮುರ್ಗೊಳೆನ್ ಜೈಪೊಡು. ಎಂಕ್ ಅಯಿತ ಕೆಬಿ ಕಾರ್ ಕೈ, ಉಪ್ಪು ಮುಣ್ಚಿ ಪುಳಿ ಕೊರೊಡು’…. (ಸೋಮವಾರ ಕೆಡ್ಡಸ ತೋಡಗುವುದು, ಮಂಗಳವಾರ ನಡುಕೆಡ್ಡಸ, ಬುಧವಾರ ಮುಗಿತಾಯ, ಹಸಿ ಕಡಿಯಬಾರದು; ಒಣಗಲು ತುಂಡು ಮಾಡಬಾರದು. ಅರಸುಗಳ ಬೇಟೆಗೆ ಎಲ್ಲ ‘ಒಡೆಯ’ರೂ ಹೋಗಬೇಕಂತೆ. ವಲಸಾರಿ ಮಜಲಿನಲ್ಲಿ ಕೂಡಿ ವಲಸಾರಿ ಓಡಿಸಿ ಪಾಲೆಚ್ಚರಿಗೆ ಇಳಿಯುವಾಗ, ‘ಒಡತಿ’ಯರು ಕಡೆಯುವ ಕಲ್ಲಿನ ಕಂದನ್ನು ನೀರಲ್ಲಿ ಹಾಕಬೇಕು. ಓಡಿನಲ್ಲಿ ಕಡೆಯಬೇಕು. ಕಲ್ಲಲ್ಲಿ ರೊಟ್ಟಿ ಹಚ್ಚಬೇಕು. ದೊಡ್ಡ ದೊಡ್ಡ ಮೃಗಗಳು ಇಳಿದುಕೊಂಡು ಬರುತ್ತಾವೆ. ಬಣ್ಣದ ಬರ್ಕ, ಬಿರು ರೋಮದ ಹಂದಿ, ನಾಗಾಲಿನ ಕಡವೆ, ಚುಕ್ಕೆಯ ಜಿಂಕೆ, ಇಳಿದುಕೊಂಡು ಬರುತ್ತಾವೆ. ಕಟ್ಟು ಇಲ್ಲದ ಕೋವಿ, ಗರಿ ಇಲ್ಲದ ಬಾಣ, ಸೌಟಿನ ಕೈ, ಒನಕೆಗೊಂದು ಗರಿ ಕಟ್ಟಿ ಮನೆಯ ಹಿಮ್ಮಾಡಿನ ಬಳಿ ನಿಂತುಕೊಳ್ಳಬೇಕು. ಮೃಗಗಳಿಗೆ ತಾಗಿಸಬೇಕು….. ದೊಡ್ಡ ದೊಡ್ಡ ಮೃಗಗಳನ್ನು ಗೆಲ್ಲಬೇಕು. ನನಗೆ ಅದರ ಕೈಕಾಲು ಕಿವಿ, ಉಪ್ಪು, ಮೆಣಸು ಹುಳಿ ಕೊಡಬೇಕು.’’ ಈ ಸಾರುವಿಕೆಯಲ್ಲಿರವು ಹಾಸ್ಯ ಪ್ರಜ್ಞೆ, ಗ್ರಾಮೀಣ ಜೀವನೋಲ್ಲಾಸ ಗಮನೀಯ. ಹೀಗೆ ಸಾರುತ್ತ ಬಂದವರಿಗೆ ಅಕ್ಕಿ, ಕಾಯಿ, ಎಣ್ಣೆ, ತಿಂಡಿ ತಿನಿಸು ಇತ್ಯಾದಿಗಳನ್ನು ಕೊಟ್ಟು ಕಳುಹಿಸುವುದು ಸಂಪ್ರದಾಯ.

ಕಾಡಿಗೆ ಹೋಗಿ ಬೇಟೆಯಾಡುವುದಲ್ಲದೆ ಕೊಳಕೆರೆಗಳಿಗೆ ಹೋಗಿ ಮೀನು, ಏಡಿ ಮುಂತಾದವನ್ನು ಹಿಡಿಯುತ್ತಾರೆ. ಕೆಲವರು ಆಮೆಗಳನ್ನೂ ಹುಡುಕುತ್ತಾರೆ. ಹಬ್ಬಕ್ಕೋಸ್ಕರ ಸಾಕಿದ ಹಂದಿಗಳನ್ನು ಕೊಲ್ಲುವುದೂ ಇದೆ. ಅದಲ್ಲದಿದ್ದರೆ ಕುಕ್ಕುಟ ಸಂಹಾರ. ಕೋಳಿ ಅಂಕವಂತೂ ಹಳ್ಳಿಯ ಆಕರ್ಷಕ ರಕ್ತರಂಜಿತ ಕ್ರೀಡೆ. ಇದಲ್ಲದೆ ವಿನೋದಕ್ಕೋಸ್ಕರ ಕುಟ್ಟಿದೊಣ್ಣೆ, ಚೆಡುಗುಡು (ಕಬಡಿ) ಚೆಂಡು, ಪಲ್ಲಿಪತ್ತ್ ಮೊದಲಾದ ಆಟಗಳಲ್ಲಿ ಕಾಲ ಕಳೆಯುವುದಿದೆ.

ನಡುಕೆಡ್ಡಸದ ದಿವಸ ‘ದೊಡ್ಡಬೇಟೆ’ಯ ಸಂಪ್ರದಾಯ. ಬೇಟೆನಾಯಿಗಳ ನೆರವಿನಿಂದ ಕೋವಿ, ಕತ್ತಿ, ದೊಣ್ಣೆಗಳಿಂದ ಕಾಡನ್ನು ಎಬ್ಬುವ ಸಾಮೂಹಿಕ ಸಂಭ್ರಮದ ಸಂದರ್ಭವಿದು. ಹೊರಡುವ ಮೊದಲು ಪುರುಷ ಭೂತ ಹಾಗೂ ಮುಗ್ಗೆರ್ಲು ದೈವಗಳನ್ನು (ಈ ದೈವಗಳು ಬೇಟೆಗೆ ಸಹಕಾರಿಗಳೆಂದು ಪ್ರತೀತಿ.) ಪ್ರಾರ್ಥಿಸಿ ಕಾಡನ್ನು ಪ್ರವೇಶಿಸುವುದು ರೂಢಿ. ನಲಿಕೆಯವನು ಡೋಲು ಹೊಡೆಯುತ್ತ ಬೇಟೆಗಾರರನ್ನು ಪುಸಲಾಯಿಸಿ ಹೊಗಳಿ ಕಾಕು ಹಾಕುತ್ತ ಒಂದಿಷ್ಟು ದೂರ ಹೋಗಿ ಒಂದು ಮುಷ್ಟಿ ಮರಳನ್ನು ಮುಂದೆ ಬಿಸಾಡಿ ಹಿಂದಿರುಗುತ್ತಾನೆ. (ಇದೊಂದು ಮೃಗಾಕರ್ಷಣೆಯ ತಾಂತ್ರಿಕ ವಿಧಿಯ ಪಳಿಯುಳಿಕೆ ಇರಬಹುದು.) ಬೇಟೆಗಾರರು ಉತ್ಸಾಹದಿಂದ ಮುನ್ನುಗ್ಗುತ್ತಾರೆ.

ಬೇಟೆಯಲ್ಲಿ ಮೊದಲು ಮೃಗಕ್ಕೆ ಹೊಡೆದು ರಕ್ತ ಚಿಮ್ಮಿಸಿದವನಿಗೆ ಮೊದಲ ದಾಯ(ಪಾಲು) ಲಭ್ಯವಾಗುತ್ತದೆ. ಹಂದಿ ಹೊಡೆದವನಿಗೆ ಮೂರು ದಾಯಗಳು. ತಲೆ, ಕೈ, ‘ನಡುಗುಂಟ’(ಬೆನ್ನಲುಬು ಭಾಗ) ಉಳಿದುದು ಎಲ್ಲರಿಗೂ ಪಾಲು. ಮೊದಲು ಕಾಡಿನ ಭೂತಗಳಿಗೆಂದು ಅದರ ‘ಕರ್ಯಟ’ (ಪಿತ್ತಜನಕಾಂಗ)ವನ್ನು ಬೆಂಕಿಯಲ್ಲಿ ಸುಟ್ಟು ಅರ್ಪಿಸಿ, ಅದನ್ನು ಅಲ್ಲೇ ಪ್ರಸಾದರೂಪವಾಗಿ ಹಂಚುತ್ತಾರೆ. ಹಾಗೆ ಪುರುಷಭೂತಕ್ಕೂ ಮುಗ್ಗೆರ್ಲು ದೈವಗಳಿಗೂ ಒಂದೊಂದು ಮೀಸಲು ಪಾಲು ಸಲ್ಲುತ್ತದೆ. ಆ ಮಾಂಸಭಾಗವನ್ನು ಸಂಬಂಧಪಟ್ಟವರು ಮನೆಗೊಯ್ದು, ಪಾಕಮಾಡಿ ಆಯಾ ದೈವಗಳಿಗೆ ಮರಗಳ ಬುಡಗಳಲ್ಲಿ ಎಡೆ ಅರ್ಪಿಸುತ್ತಾರೆ. ಕೂಡಿದ ಜನರಿಗೆಲ್ಲ ದಾಯವನ್ನು ಕ್ರಮದಂತೆ ಹಂಚಲಾಗುತ್ತದೆ. ಬೇಟೆಯಲ್ಲಿ ಪಾಲುಗೊಂಡವರಿಗೆ ಮಾತ್ರವಲ್ಲದೆ ಊರ ಪಟೇಲನಿಗೂ ಇತರ ಗಣ್ಯವ್ಯಕ್ತಿಗಳಿಗೂ ಪಾಲು ಸಲ್ಲುತ್ತವೆ. ಬೇಟೆ ಡಂಗುರದ ಅಜಲಾಯನಿಗೂ ಪಾಲು ಸಲ್ಲುತ್ತದೆ. ಬೇಟೆ ನಾಯಿಗಳೂ ಪಾಲು ಪಡೆಯುತ್ತವೆ, ಮಾಂಸ ಹಂಚಿಕೊಂಡಾದ ಬಳಿಕ ‘‘ನನ ದುಂಬುಗುಲಾ ಇಂಚನೇ ನಡಪ್ಪೊಡು’’ (ಇನ್ನು ಮುಂದಕ್ಕೂ ಹೀಗೇ ನಡೆಯಬೇಕು) ಎಂದು ಹೊರಡುವಾಗ ಒಂದು ಸನ್ನೆಗುಂಡು ಹೊಡೆದು ಶಬ್ದವೆಬ್ಬಿಸುವ ಕ್ರಮವಿದೆ.

ಮೂರನೆಯ ಮುಂಜಾನೆ ಮುತ್ತೈದೆಯರು ‘ಭೂಮಿ’ ಬರೆದಲ್ಲಿ (ತುಳಸಿಕಟ್ಟೆಯ ಬಳಿಯೂ ಆಗಬಹುದು) ಏಳು ಸರೊಳಿ ಸೊಪ್ಪುಗಳನ್ನು (ಲೋಳೆರಸವುಳ್ಳದ್ದು) ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿರಿಸಿ ದೀಪವಿರಿಸಿ, ಮಣೆ ಮಡಗುತ್ತಾರೆ. ಅರಸಿನ ಕುಂಕುಮ, ಮಸಿ, ಎಣ್ಣೆ, ಸೀಗೆ ಬಾಗೆಗಳ ಕೋಡು ತೊಗಟೆಗಳು, (ಅಥವಾ ಅವುಗಳನ್ನು ಪುಡಿ ಮಾಡಿ ಉಂಡೆ ಮಾಡಿಟ್ಟದ್ದನ್ನು), ಪಚ್ಚೆಹೆಸರು ಪುಡಿ, ವೀಳ್ಯ ಊದುಬತ್ತಿ ಇತ್ಯಾದಿಗಳನ್ನು ಇರಿಸುತ್ತಾರೆ. ಭೂಮಿಯ ಅಲಂಕಾರಕ್ಕಾಗಿ ಕನ್ನಡಿ ಬಾಚಣಿಗೆ, ಕರಿಮಣಿಗಳನ್ನು ಇರಿಸುವುದೂ ಉಂಟು. ಹೊಸ್ತಿಲನ್ನು ರಂಗವಲ್ಲಿಯಿಂದ ಸಿಂಗರಿಸುವುದಿದೆ ಮಿಂದು ಶುದ್ಧಳಾದ ಭೂಮಿ ತಾಯಿಯನ್ನು-ಫಲವತಿಯಾಗಲಿರುವ ಮಾತೃದೇವತೆಯನ್ನು ಮನೆಯೊಳಕ್ಕೆ ಸ್ವಾಗತಿಸುವ ಸನ್ನಾಹವಿದು.

ಹಿಂದೆ ಬಹಿಷ್ಠೆಯಾದ ಮಹಿಳೆ ಮಿಂದು ಮಡಿಯಾಗಿ ಬರಬೇಕಾದರೆ ಈ ಎಲ್ಲ ಪರಿಕರಗಳ ಅಗತ್ಯವಿತ್ತು. ಮಡಿವಾಳಗಿತ್ತಿಯ ಉಪಸ್ಥಿತಿಯಂತೂ ಅನಿವಾರ್ಯವಾಗಿತ್ತು. ಹೆಣ್ಣು ಮುಟ್ಟುನೀರು ಮೀಯುವ ಹಾಗೂ ಸಂತಾನಾಕಾಂಕ್ಷೆಯಿಂದ ಹೊಳೆಯ ಮೀನುಗಳಿಗೆ ಹಿಡಿ ಅಕ್ಕಿಯನ್ನು ಅರ್ಪಿಸುವ ವಿಚಾರ ಅನೇಕ ಪಾಡ್ದನಗಳಲ್ಲಿ ಬಣ್ಣಿಸಲ್ಪಟ್ಟಿದೆ. ಪ್ರಥಮತಃ ಋತುಮತಿಯಾಗುವ ಸಂದರ್ಭವಂತೂ ಹೆಣ್ಣಿನ ಜೀವನ ಚಕ್ರದಲ್ಲಿ ಒಂದು ಸಡಗರದ ಆಚಾರವಿಧಿಯೇ ಆಗಿತ್ತು.

ಅಡುಗೆ ಮನೆಯನ್ನು ಶುದ್ಧಗೊಳಿಸಿ ವಿವಿಧ ಪಲ್ಯ ಪರಿಕರಗಳಿಂದ ಕೂಡಿದ ಎಡೆಯನ್ನು (ಮಾಂಸವೂ ಇರಬಹುದು) ಅಗ್ರದ ಬಾಳೆಯೆಲೆಯಲ್ಲಿ ಹಾಕಿ ಒಂದು ತಂಬಿಗೆ ನೀರಿನೊಡನೆ ಭೂಮಿಯ ಸನ್ನಿಧಿಗೆ ಭಕ್ತಿಯಿಂದ ಅರ್ಪಿಸುತ್ತಾರೆ. ರಾತ್ರಿ ಸಿಹಿಕಡುಬು ಇತ್ಯಾದಿ ಮಾಡಿ ತಿನ್ನುತ್ತಾರೆ. ಹಿರಿಯ ಮಗನನ್ನು ಅಡವಿಟ್ಟಾದರೂ ಆ ದಿನ ಚೆನ್ನಾಗಿ ಉಣ್ಣಬೇಕೆಂಬ ಮಾತಿದೆ. (ಅಡವಿಟ್ಟರೆ ಮುಂದೆ ಶಿವರಾತ್ರಿಗೆ ಬಿಡಿಸಬಹುದಂತೆ!) ಮರುದಿನ ಮುಂಜಾನೆ ಮುತ್ತೈದೆಯರು ಮಿಂದು ಮಡಿಯಾಗಿ ಭೂಮಿಗೆ ಎಣ್ಣೆ ಹೊಯ್ಯುತ್ತಾರೆ. ಈ ಎಣ್ಣೆ ಹೊಯ್ಯುವ ಕ್ರಿಯೆ ಅರ್ಥಪೂರ್ಣವಾದದ್ದು. ಸ್ನಾನಕ್ಕೆ ಉಪಯೋಗಿಸುವ ಸೀಗೆ, ಬಾಗೆ, ಪಚ್ಚೆ ಹೆಸರು ಹುಡಿ, ಸರೊಳಿ ರಸ ಇತ್ಯಾದಿ ಚೆಲ್ಲುತ್ತಾರೆ. ಓಕುಳಿಯ ನೀರಿನ ಜಾಗವನ್ನು ಶುದ್ದೀಕರಿಸಿ ಹೂ, ಗಂಧ, ವೀಳ್ಯ ದೀಪಾದಿಗಳಿಂದ ಪೂಜಿಸಿ, ಸಂತಾನ ಮತ್ತು ಸಂಪತ್ತುಗಳನ್ನು ಬೇಡುತ್ತಾರೆ. ಆ ದಿನ ಕುಂಭ ಸಂಕ್ರಮಣ ‘ಕೆಡ್ಡಸದ ಮುಗಿತಾಯ’.

ಕೆಡ್ಡಸದ ಸಂದರ್ಭದಲ್ಲಿ ಹೆಂಗಸು ಬಹಿಷ್ಠೆಯಾದರೆ ಆ ದಿನಗಳಲ್ಲಿ ಆಕೆ ಉಪವಾಸವನ್ನಾಗಲೀ, ಮಿತಾಹಾರವನ್ನಾಗಲೀ ಮಾಡಬೇಕೆಂಬ ವಿಧಿಯಿದೆ. ಆಕೆಯ ಎಂಜಲು ನೆಲಕ್ಕೆ ಬೀಳಬಾರದಂತೆ, ಆಕೆ ಹಸಿಸೋಗೆ ಹೆಣೆದು ಅದರ ಮೇಲೆ ಮಲಗಬೇಕಂತೆ. ಉಂಡ ಎಂಜಲು ಎಲೆಯನ್ನು ನೆಲಕ್ಕೆ ಬಿಸಾಡದೆ ಮರದ ಗೆಲ್ಲಿನಲ್ಲಾಗಲೀ ಬೇರೆಡೆಯಲ್ಲಾಗಲೀ ಇಡಬೇಕು.

ತಾನು ಮುಟ್ಟಾದಂದೇ ಇತರ ಹೆಣ್ಣುಗಳು ಹಾಗಾಗುವುದನ್ನು ಭೂಮಿದೇವಿ ಸಹಿಸಲಾರಳೆಂಬ ಕಲ್ಪನೆ ಈ ನಿಷೇಧದ ಹಿಂದೆ ಇರಬಹುದು. ಯಾವುದೇ ದೈವ ದೇವರುಗಳಿಗೆ ಮೀಸಲಾಗಿ ಇದ್ದ ಹಬ್ಬ ಹರಿದಿನ ಉತ್ಸವಗಳಂದು ಸಾಮಾನ್ಯವಾಗಿ ಯಾರೂ ಮದುವೆ, ಸೀಮಂತ ಇತ್ಯಾದಿ ವೈಯಕ್ತಿಕ ಉತ್ಸವಗಳನ್ನು ಇಟ್ಟುಕೊಳ್ಳದಿರುವುದಕ್ಕೂ ಇದೇ ಮನೋವೃತ್ತಿ ಕಾರಣವಿರಬಹುದು.

ಕೆಡ್ಡಸದ ಸಂದರ್ಭದಲ್ಲಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ತಲೆದೋರುತ್ತದೆ. ಕೆಲವು ದಿನಗಳ ಮೊದಲೇ ಸುಖಶೀತವಾದ ಗಾಳಿ ಚೇತೋಹಾರಿಯಾಗಿ ಬೀಸತೊಡಗುತ್ತದೆ. ಇದಕ್ಕೆ ‘ಕೆಡ್ಡಸದ ಗಾಳಿ’ ಎಂದೇ ಹೆಸರು. ಮರಗಿಡಬಳ್ಳಿಗಳಿಗೆ ‘ಹೊಟ್ಟೆ ಬರಿಸುವ’ ‘ತೆನೆ’ (ಫಲೀಕರಣ) ಗಾಳಿಯಿದು ಎಂದು ಕೊಂಡಾಡಲಾಗುತ್ತದೆ. ಋತುಸ್ನಾತೆಯಾಗಿ ಕಳಕಳಿಸುತ್ತಾ ಫಲದಾತೆಯಾಗಲೆಳಸುವ ನೆಲದವ್ವೆ ಈ ಗಾಳಿಯ ಸುಖಸ್ಪರ್ಶದಿಂದ ಪುಳಕಿತಳಾಗುತ್ತಾಳೆಂಬ ಕನಸನ್ನು ಜನಪದ ಮನಸ್ಸು ಹೆಣೆಯುತ್ತದೆ.

ತುಳುನಾಡಿನ ಕೆಲವು ದೇವಸ್ಥಾನಗಳಲ್ಲಿ (ಉದಾ : ಕೊಡ್ಲಮೊಗರು ಮಲರಾಯ ದೈವಸ್ಥಾನ, ಬೋಳಂಗಳ ಉಳ್ಳಾಕುಳು ದೈವಸ್ಥಾನ) ‘ಕೆಡ್ಡಸದ ಅಯನ’ ಇದೇ ವೇಳೆ ಜರಗುತ್ತದೆ. ಆ ಸಂದರ್ಭದ ದೈವಗಳ ನುಡಿಗಟ್ಟುಗಳಲ್ಲಿ ಬೇಟೆಗೆ ಹೊರಡುವ ಪ್ರಸ್ತಾಪ ಬರುವುದು ಉಲ್ಲೇಖನೀಯ ವಿಚಾರ.

ಭೂಮಿಯ ಆರಾಧನೆಯ ಆಚರಣೆಯುಳ್ಳ ‘ಭೂಮಿ ಹುಣ್ಣಿಮೆ’ ಎಂಬ ಉತ್ಸವವನ್ನು ಕರ್ನಾಟಕದ ಇತರ ಹಲವು ಕಡೆಗಳಲ್ಲಿ ಆಚರಿಸುತ್ತಾರೆ. ಇದರ ಸಂದರ್ಭ ಬೇರೆ. ಆದರೆ ಈ ಹಬ್ಬವೂ ಕೆಡ್ಡಸದ ಆಶಯಕ್ಕೆ ಪೂರಕವಾದದ್ದು. ಗರ್ಭೀಣಿಯಾದ ಭೂಮಿತಾಯಿಗೆ ಬಯಕೆ ತೀರಿಸುವ ದೋಹದ ಕ್ರಿಯೆಯ ಈ ಹಬ್ಬ ದೀಪಾವಳಿಗೆ ಹದಿನೈದು ದಿನಗಳ ಹಿಂದೆ ಬರುತ್ತದೆ. ಫಸಲು ಕೈಸೇರಿದ ಸಮೃದ್ದಿಯ ಸಂತೋಷದಲ್ಲಿ ಕೃಷಿಕಮಂದಿ ಹೊಲದಲ್ಲಿ ಕಳಮಶ್ರೀಯನ್ನು ಹೂ, ಹಣ್ಣು, ಗಂಧ, ಕರ್ಪೂರಾದಿಗಳಿಂದ ಜಾಗಟೆಯ ಸದ್ದಿನೊಂದಿಗೆ ಪೂಜಿಸುತ್ತಾರೆ.

ಉತ್ತರ ಕನ್ನಡದಲ್ಲಿ ಭೂಮಿ ಹುಣ್ಣಿಮೆಯ ದಿವಸ ವಿಶೇಷ ಅಡುಗೆ ಮಾಡಿ ತಮ್ಮ ತಮ್ಮ ಹೊಲ, ತೋಟಗಳಿಗೆ ಒಯ್ದು, ಅಡಿಕೆ ಗೊನೆ, ತೆಂಗಿನ ಕಾಯಿ ಕೊಯ್ದು ಇರಿಸಿ, ಪೂಜೆ ಮಾಡಿ, ಬಳಿಕ ತಂದ ಭಕ್ಷ್ಯಗಳನ್ನು ಅಲ್ಲೇ ಹೊಂಡ ತೆಗೆದು ಹುಗಿದು, ಬರುವ ಪದ್ಧತಿ ಇದೆ. ಭೂಮಿಗೆ ಸಂಬಂಧಿಸಿ ಅಂದು ಬೇರೇನೂ ಕೆಲಸ ನಡೆಯುವುದಿಲ್ಲ.

ಭೂಮಿ ಹುಣ್ಣಿಮೆಯ ಮೊದಲ ದಿನ ಬೇಟೆಯಾಡುವ ಪದ್ಧತಿ ಇದೆ. ಹೆಚ್ಚಿನ ಫಲವಂತಿಕೆಯ ಶಬ್ದಗಳೊಂದಿಗೆ ಬೇಟೆಯೆಂಬ ಕ್ರೀಡೆ ಸಂಬಂಧಗೊಂಡಿರುವುದು ಕುತೂಹಲಕರವಾಗಿದೆ. ಶೌರ್ಯ ಮತ್ತು ಫಲವಂತಿಕೆಯ ಸಂಬಂಧವನ್ನು ಇದು ಸೂಚಿಸುತ್ತದೆ.

ಭೂಮಿ ದೇವಿಯ ಹಾಗೂ ಇತರ ದೇವಿಯರ ಋತುಸ್ನಾನ ಸಂಬಂಧವಾದ ವಿಶಿಷ್ಟ ಆಚರಣೆಗಳು ದೇಶದ ಬೇರೆ ಬೇರೆ ಕಡೆ ಇವೆ. ಮಹಾರಾಷ್ಟ್ರದ ಪ್ರಸಿದ್ಧ ಸಂಶೋಧಕ ಡಾ.ರಾಮಚಂದ್ರ ಚಿಂತಾಮಣಿ ಢೇರೆಯವರ ‘ಲಜ್ಜಾಗೌರಿ’ ಎಂಬ ಗ್ರಂಥದಲ್ಲಿ ಈ ಸಂಬಂಧವಾದ ವಿವರಗಳಿರುವುದನ್ನು ಡಾ.ಸುನೀತಾಶೆಟ್ಟಿ ಅವರು ಉಲ್ಲೇಖಿಸುತ್ತಾರೆ. (ಮಾತೃದೇವತಾ ಉಪಾಸನೆಯೊಳಗೆ ಕೆಡ್ಡಸ.(ಲೇಖನ) ಅಕ್ಷಯ, ಜೂನ್ ೨೦೦೬) ಅಸ್ಸಾಮ್ ಮತ್ತು ಬಂಗಾಲದಲ್ಲಿ ಭೂಮಿ ರಜಸ್ವಲೆಯಾಗುವ ಹಬ್ಬ ಜ್ಯೇಷ್ಠ ಮಾಸದ ಕೊನೆ ಹಾಗೂ ಆಷಾಢ ಮಾಸದ ಆದಿಯ ಮೂರು ದಿನಗಳಲ್ಲಿ ಕೃಷಿಕಾರ್ಯ ಸಂಬಂಧವಾಗಿ ನಡೆಯುತ್ತದೆ. ಅಸ್ಸಾಮಿನ ಪ್ರಸಿದ್ದ ಮಾತೃದೇವತಾ ಆರಾಧನೆಯ ಪ್ರತೀಕವಾದ ಯೋನಿರೂಪದ ಕಾಮಾಖ್ಯಾದೇವಿಗೆ ಈ ಮೂರು ದಿನ ಪೂಜೆ ಇರುವುದಿಲ್ಲ. ನಾಲ್ಕನೇ ದಿನ ಶುದ್ದೀಕರಣವಾದ ಬಳಿಕ ಭಕ್ತಾದಿಗಳಿಗೆ ಕೆಂಪು ವಸ್ತ್ರದ ತುಂಡುಗಳನ್ನು ಋತುವಸ್ತ್ರ ಪ್ರಸಾದರೂಪವಾಗಿ ನೀಡಲಾಗುತ್ತದೆ. ಇದು ಫಲಪ್ರದವಾದ ಪ್ರಸಾದವೆಂಬ ನಂಬಿಕೆ ಇದೆ.

ಕೇರಳದ ಕೆಲವು ಭಗವತಿ ಕ್ಷೇತ್ರಗಳಲ್ಲೂ ಇದೇ ರೀತಿಯ ಆಚರಣೆ ನಡೆಯುತ್ತದೆ. ಇದು ಮಕರ ಮಾಸದಲ್ಲಿ ನಡೆಯುತ್ತದೆ. ಈ ವೇಳೆ ಕೃಷಿಕಾರ್ಯಕ್ಕೆ ಸಂಬಂಧಿಸಿ ಯಾವುದೇ ಕೆಲಸ ಮಾಡಬಾರದೆಂಬ ನಿರ್ಬಧವಿದೆ. ನಾಲ್ಕನೆಯ ದಿನ ಶುದ್ದೀಕರಣವಾದ ಬಳಿಕ ಒಂದು ಬುಟ್ಟಿಯಲ್ಲಿ ಎಲೆ ಹಾಗೂ ಗೊಬ್ಬರ ಬೆರಸಿ ಹೊಲಕ್ಕೆ ಚೆಲ್ಲುತ್ತಾರೆ. ಫಲವಂತಿಕಗೆ ಪೂರಕವಾದ ವಿಧಿಯಿದು. ವಾರ್ಷಿಕ ರಜೋದರ್ಶನ ಮಾತ್ರವಲ್ಲದೆ, ಮಾಸಿಕ ಧರ್ಮದ ಆಚರಣೆಯುಳ್ಳ ದೇವೀಕ್ಷೇತ್ರಗಳೂ ಇವೆ. ಉದಾ : ದಕ್ಷಿಣ ಕೇರಳದ ಚೆಂಗನ್ನೂರು ಮಹಾದೇವಕ್ಷೇತ್ರದ ಒಳ ಆವರಣದ ಪಶ್ಚಿಮ ಭಾಗದಲ್ಲಿ ಪ್ರತಿಷ್ಠಿತವಾದ ಭಗವತಿ ಮೂರ್ತಿ ಮಾಸಿಕ ಧರ್ಮದ ಲಕ್ಷಣಗಳನ್ನು ಪ್ರಕಟಿಸುತ್ತದೆಂದು ನಂಬಲಾಗಿದೆ. ಈ ವಿಗ್ರಹದ ಕಟಿಪ್ರದೇಶಕ್ಕೆ ಸುತ್ತಿದ ಬಟ್ಟೆ ನಿರ್ದಿಷ್ಟ ದಿನಗಳಲ್ಲಿ ಕೆಂಪು ಹಳದಿ ಬಣ್ಣಕ್ಕೆ ತಿರುಗುತ್ತದೆನ್ನುತ್ತಾರೆ. ಮೂರು ದಿನಗಳ ಬಳಿಕ ವಿಗ್ರಹವನ್ನು ಸಮೀಪದ ನದಿಗೆ ಒಯ್ದು ಎಣ್ಣೆನೀರಿನ ಅಭಿಷೇಖ ಮಾಡಿ, ಹೊಸಬಟ್ಟೆಯನ್ನು ತೊಡಿಸಲಾಗುತ್ತದೆ. ಮಾಸಿಕ ಸ್ರಾವದಿಂದ ಮಲಿನವಾದ ಬಟ್ಟೆಯನ್ನು ತೊಳೆದು ಸ್ವಚ್ಛಗೊಳಿಸಿ ಪ್ರಸಾದರೂಪವಾಗಿ ಹಂಚಲಾಗುತ್ತದೆ. ಪವಿತ್ರವೆನಿಸುವ ಈ ಬಟ್ಟೆ ತುಂಡನ್ನು ನಿರ್ದಿಷ್ಟ ಮೊತ್ತವಿತ್ತು ಕೊಂಡುಕೊಳ್ಳುವವರಿದ್ದಾರೆ.

ಋತುವಾಗುವುದಕ್ಕೂ ಸಂತಾನಪ್ರಾಪ್ತಿಗೂ ಸಂಬಂಧವಿರುವುದರಿಂದ ಮಾತೃದೇವತಾ ಉಪಾಸನೆಯಲ್ಲಿ ರಜೋದರ್ಶನ ಆಚರಣೆ ಸೇರ್ಪಡೆಯಾಗಿರಬೇಕು. ತಾಂತ್ರಿಕ ಪೂಜೆಯಲ್ಲಿ ಋತುರಕ್ತವನ್ನು ತೀರ್ಥಸದೃಶವಾಗಿ ಪರಿಗಣಿಸುವುದುಂಟು. ಹೆಣ್ಣಿನ ರಜಸ್ಸು ಸೃಷ್ಟಿ ಕ್ರಿಯೆಗೆ ಮೂಲವಾದುದರಿಂದ ಪವಿತ್ರವೆಂದು ಭಾವಿಸಲ್ಪಟ್ಟಿರಬೇಕು.(ಭಗವತೀ ಆರಾಧನೆ, ಪು.೮೫)

ಕಾಶ್ಮೀರದಲ್ಲಿ ‘ರಾಜ್ಞೀ ಸ್ನಾಪ್ಯ’ (ರಾಣಿಯ ಸ್ನಾನ) ಎಂಬ ವಿಧಿಯಲ್ಲಿ ಭೂಮಿದೇವಿಯ ಮೂರ್ತಿಯನ್ನು ಮಾಡಿ, ಸಿಂಗರಿಸಿ, ಅರ್ಪಿಸಿದ ನೈವೇದ್ಯವನ್ನು ಎಲ್ಲರಿಗೂ ಹಂಚಿ, ಹಾಡಿ, ಸಂತೋಷಪಡುತ್ತಾರೆ. ಇದರ ಅನಂತರವೇ ಕೃಷಿಕಾರ್ಯ ನಡೆಯುತ್ತದೆ. ಈ ಹಬ್ಬ ಚೈತ್ರ ಕೃಷ್ಣ ಪಂಚಮಿಯಿಂದ ತೊಡಗಿ ಅಷ್ಟಮಿಯವರೆಗೆ ನಡೆಯುತ್ತದೆ. ಅಷ್ಟಮಿಯಂದು ಮಂಗಳ ಋತುಸ್ನಾನ ಜರಗುತ್ತದೆ.

ಒರಿಸ್ಸಾದಲ್ಲಿ ಆಷಾಢಮಾಸದ ಆದಿಯಲ್ಲಿ ಭೂಮಿತಾಯಿ ಬಹಿಷ್ಠೆಯಾಗಿ ಶುದ್ದಗೊಳ್ಳುವ ಆಚರಣೆ ನಡೆಯುತ್ತದೆ. ಇದನ್ನು ‘ರಜ ಉತ್ಸವ’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಹಾಡು, ಕುಣಿತಗಳೂ ಇರುವುದುಂಟು. ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಉಡುಗೊರೆಗಳು ಬರುವುದೂ ಉಂಟು. (ಡಾ. ಸುನೀತಾ ಶೆಟ್ಟಿ ಅವರ ಮೇಲೆ ಹೇಳಿದ ಲೇಖನ)

ವರ್ಷಕ್ಕೊಮ್ಮೆ ದೇವಿ ರಜಸ್ವಲೆಯಾಗುವಳೆಂಬ ಕಲ್ಪನೆಯ ಹಿನ್ನೆಲೆಯಲ್ಲಿ ಕೆಲವು ದೇವಳಗಳಲ್ಲಿ ಉತ್ಸವ ಕಾಲಘಟ್ಟದಲ್ಲಿ ದೇವಸ್ಥಾನದ ಮುಂದೆ ಕೆಂಪು ಬಟ್ಟೆಯನ್ನು ಅಡ್ಡ ಹಿಡಿಯುವ ಪದ್ಧತಿ ಇದೆ. ಬಂಟವಾಳದ ಸಮೀಪದ ಕಾರಿಂಜ ಕ್ಷೇತ್ರದ ಶಿವರಾತ್ರಿಯ ಶಿವ-ಪಾರ್ವತಿ ಉತ್ಸವದಲ್ಲಿ ಇಂಥ ವಿಧಿ ಇದೆ.

ಹೀಗೆ ತುಳುನಾಡಿನ ಕೆಡ್ಡಸಕ್ಕೆ ಸಂವಾದಿಯಾಗಿ ಉತ್ಸವಾಚರಣೆಗಳು ಬೇರೆ ಬೇರೆ ಕಡೆಗಳಲ್ಲಿ ಪ್ರಚಲಿತವಿದೆ. ಪ್ರಕೃತಿಯ ಚೇತನೋದ್ದೀಪನದ, ಫಲೀಕರಣದ ಆಶಯವುಳ್ಳ ಈ ಕೆಡ್ಡಸ ಮುಖ್ಯವಾಗಿ ಮಣ್ಣಿನ ಮಕ್ಕಳ ಹಬ್ಬ, ರೈತಾಪಿ ವೃತ್ತಿಯ ಗ್ರಾಮೀಣ ಮುಸಲ್ಮಾನ, ಕ್ರೈಸ್ತ ಸಮಾಜದ ಮಂದಿ ಪೂಜಾವಿಧಿಗಳನ್ನು ಆಚರಿಸದಿದ್ದರೂ, ಕೃಷಿ ಸಂಬಂಧವಾದ ನೊಗನೇಗಿಲು ಹಾರೆ ಪಿಕ್ಕಾಸುಗಳ ಕೆಲಸವನ್ನು ಮಾತ್ರ ಸಂಪೂರ್ಣ ನಿಲ್ಲಿಸಿ ಹಬ್ಬದೊಂದಿಗೆ ಸಹಮತವನ್ನು ಪ್ರಕಟಿಸುತ್ತಾರೆ.

ಒಟ್ಟಿನಲ್ಲಿ ಕೆಡ್ಡಸ ಹಬ್ಬದ ಆಶಯ ಮತ್ತು ಕ್ರಿಯೆ, ಬಹುಪ್ರಾಚೀನವಾದ ಜನಪದ ಸಂಸ್ಕೃತಿಯ ಒಡಲಲ್ಲಿ ಬೇರಳಿಸಿದ್ದಾಗಿದೆ.

(ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ‘‘ಗಿರಿಜನ ಸಂಸ್ಕೃತಿ’’ (೨೦೦೦)ಯಲ್ಲಿ ಪ್ರಕಟಿತ ಲೇಖನ, ಸಂಪಾದಕರು : ಪ್ರೊ.ಕಾಳೇಗೌಡ ನಾಗವಾರ, ಎನ್.ಹುಚ್ಚಪ್ಪ ಮಾಸ್ತರ)

ಪರಾಮರ್ಶನ ಸಾಹಿತ್ಯ

೧. ಡಾ.ಚಂದ್ರಶೇಖರ ಕಂಬಾರ (ಸಂ), ಕನ್ನಡ ಜಾನಪದ ವಿಶ್ವಕೋಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು,೧೯೮೫

೨. ಬನ್ನಂಜೆ ಬಾಬು ಅಮೀಸ್, ತುಳು ಜಾನಪದ ಆಚರಣೆಗಳು, ಗುರುಭಾರತಿ ಅಧ್ಯಯನ ಕೇಂದ್ರ, ಬಣ್ಸಾಲ್ ಹಿತ್ಲು, ಉಡುಪಿ, ೧೯೯೪

೩. ಡಾ.ಸುನೀತಾ, ಎಂ.ಶೆಟ್ಟಿ, ಮಾತೃದೇವತಾ ಉಪಾಸನೆಯೊಳಗೆ ಕೆಡ್ಡಸ (ಲೇಖನ), ಅಕ್ಷಯ ಜೂನ್ ೨೦೦೬, ಮುಂಬಯಿ

೪. ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪ್ರಕೃತಿ ಪ್ರಕಾಶನ, ಕೋಟೆಕಾರ್, ದ.ಕ., ೧೯೯೮