ತನ್ನ ನಲ್ಲೆಗೆ ಯಾವ ನಲ್ಗತೆಯನ್ನು ಹೇಳಲಿ ಎಂದು ಕವಿ ಮುದ್ದಣ ತಲೆ ತುರಿಸಿಕೊಳ್ಳುವಾಗ, ‘‘ನಾಡೊಳೆನಿತೊ ರಾಮಾಯಣಂಗಳೊಳವು, ನೀಂ ಕೇಳ್ದುದ ರೊಳೊಂದಂ ನಲ್ಮೆದೋರೆ ಕಂಡು ಪೇಳ್‌ವುದು’’ ಎನ್ನುತ್ತಾಳೆ ಮನೋರಮೆ. ‘ಶತಕೋಟಿ ರಾಮಾಯಣಗಳಿವೆ’ ಎಂಬ ಪ್ರತೀತಿಯು ಪುರಾಣಸಹಜವಾಗಿ ಅತಿಶಯೋಕ್ತಿ ಯಾದರೂ, ನೂರಾರು ಬಗೆಯ ರಾಮಾಯಣಗಳಂತೂ ಇವೆಯೆನ್ನುವುದು ಸುಳ್ಳಲ್ಲ. ಕಾಲ, ದೇಶ, ಮತ, ಭಾಷೆಗಳಿಗೆ ಸಂಬಂಧಿಸಿ ಅನೇಕ ರಾಮಾಯಣಗಳು ರೂಪುಗೊಂಡಿವೆ. ಬಲು ಪ್ರಾಚೀನದಿಂದಲೇ ಕೆಲವೊಂದು ರಾಮಾಯಣ ಸಂಪ್ರದಾಯಗಳು ಏರ್ಪಟ್ಟುದಾಗಿ ತಿಳಿದುಬರುತ್ತದೆ. ಈ ದೃಷ್ಟಿಯಿಂದ ವಿಚಾರಿಸಿದಾಗ, ರಾಮಾಯಣದಂತೆಯೇ ಇತಿಹಾಸ ಕಾವ್ಯವಾದ ಮಹಾಭಾರತವು ರಾಮಾಯಣದಷ್ಟು ಬಗೆಯ ವೈವಿಧ್ಯವನ್ನು ಹೊಂದಿರುವುದು ಕಂಡುಬರುವುದಿಲ್ಲ. ‘‘ತಿಣಿಕಿದನು” ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂದು ಕವಿ ಕುಮಾರವ್ಯಾಸನು ವಿನೋದದಿಂದ ಉದ್ಗರಿಸುವಷ್ಟರ ಮಟ್ಟಿಗೆ ರಾಮಾಯಣಗಳು ದೇಶ ವಿದೇಶಗಳಲ್ಲಿ ಹುಲುಸಾಗಿ ಬೆಳೆದು ಬೇರುಬಿಟ್ಟಿರುವುದನ್ನು ಕಾಣುತ್ತೇವೆ.

ವಿವಿಧ ಭಾಷೆಗಳಲ್ಲಿ ‘ಶಿಷ್ಟಕಾವ್ಯ’ಗಳ ಜತೆಜತೆಯಲ್ಲಿಯೆ ಜನಪದ ಕಾವ್ಯಗಳೂ ಹುಟ್ಟಿ ಬೆಳೆದು ಬಂದುದೇನೂ ಹೊಸ ವಿಚಾರವಲ್ಲ. ಪ್ರಾದೇಶಿಕ ವೈವಿಷ್ಟ್ಯಗಳನ್ನೊಳ ಗೊಂಡಿರುವ ಅನೇಕ ಜನಪದ ರಾಮಾಯಣಗಳು ಇಂದಿಗೂ ಉಸಿರಾಡುತ್ತಿವೆ. ಸಮೃದ್ಧವಾದ ಜನಪದಸಾಹಿತ್ಯ ಸಂಪತ್ತಿರುವ ತುಳುಭಾಷೆಯಲ್ಲೂ ರಾಮಾಯಣಕ್ಕೆ ಸಂಬಂಧಪಟ್ಟ ಕಥೆಗಳು ಸೇರಿಕೊಂಡಿವೆ. ಪ್ರಕೃತ ಸೀತೆಯು ಜನಕನಿಗೆ ದೊರಕಿದ ವಿಚಾರ ಹಾಗೂ ಆಕೆಯ ವಿವಾಹಕ್ಕೆ ಸಂಬಂಧಿಸಿದ ಚಿಕ್ಕದೊಂದು ಕಥಾನಕವನ್ನು ಇಲ್ಲಿ ಸಮೀಕ್ಷೆಗೆ ಎತ್ತಿಕೊಳ್ಳಲಾಗಿದೆ. ಕಥೆಯನ್ನು ಶ್ರೀ ರಾಮಕುಂಜತ್ತೂರು ಇವರು ಒದಗಿಸಿದ್ದಾರೆ.

ಕಥೆಯ ಸಾರಾಂಶ ಹೀಗಿದೆ : ಪಡುವಣದ ಸಮುದ್ರದಲ್ಲಿ ಅಂಬಿಗರ ಹುಡುಗನೊಬ್ಬನಿಗೆ ದೇವದಾರುಮರದ ಪೆಟ್ಟಿಗೆಯೊಂದು ಸಿಗುತ್ತದೆ. ಅದನ್ನು ತಂದು ಆತ ‘ಜನಕರಾಯ ‘ಮುನಿಸ್ವಾಮಿ’ಗೆ ಒಪ್ಪಿಸುತ್ತಾನೆ. ಅರಸ ಕೌತುಕದಿಂದ ಪೆಟ್ಟಿಗೆಯನ್ನು ಒಡೆದು ನೋಡಿದಾಗ, ಪುಟ್ಟ ಹೆಣ್ಣು ಮಗು ಗೋಚರಿಸುತ್ತದೆ. ಆತನ ಆನಂದಕ್ಕೆ ಮಿತಿಯೇ ಇರುವುದಿಲ್ಲ. ಒಂದು ‘ಕಳಸಿಗೆ’ ಚಿನ್ನದ ವರಹಗಳನ್ನು ಅಳೆದು ಅಂಬಿಗರ ಹುಡುಗನಿಗೆ ಬಹುಮಾನ ಕೊಡುತ್ತಾನೆ. ಮಗುವಿಗೆ ‘ಸಿರಿ ಸೀತಾಮುದೆಯ್ಯಾರು’ ಎಂದು ಹೆಸರಿಡುತ್ತಾನೆ.

ಸಿರಿ ಸೀತಾಮು ಬಳೆಯುತ್ತಾ ಬರುತ್ತಾಳೆ. ಇಷ್ಟರಲ್ಲಿ ಜನಕರಾಯ ಮುನಿಸ್ವಾಮಿಗೆ ನಿತ್ಯವೂ ಎಂಬಂತೆ ಕಿರುಕುಳವೊಂದು ಒದಗಲು ಪ್ರಾರಂಭವಾಗುತ್ತದೆ. ಬೆಳಗ್ಗಿನ ಹಾಗೂ ಸಂಜೆಯ ಪೂಜೆಯನ್ನು ಹಾಳು ಮಾಡುತ್ತದೆ, ಒಂದು ವಿಚಿತ್ರ ಗರುಡಪಕ್ಷಿ. ಇದೇನು ಸೋಜಿಗವೆಂದು ಎಲ್ಲರೂ ಬೆರಗಾಗುತ್ತಾರೆ. ಅದರ ಆಟವನ್ನು ಅಡಗಿಸುವುದಕ್ಕೆ ಅಲ್ಲಿ ಯಾರಿಂದಲೂ ಸಾಧ್ಯವಾಗುವುದಿಲ್ಲ. ಜನಕರಾಯ ವಿಚಾರ ಮಾಡಿ ಕೊನೆಗೆ ಈ ಗರುಡ ಪಕ್ಷಿಯ ರೆಕ್ಕೆಯನ್ನು ತುಂಡರಿಸಿದವರಿಗೆ ತನ್ನ ಮಗಳು ಸಿರಿಸೀತಾಮು ದೆಯ್ಯಾರನ್ನು ಧರ್ಮಧಾರೆ ಎರೆದು ಕೊಡುವೆನೆಂದು ಸಾರುತ್ತಾನೆ.

ಸುದ್ದಿ ಕೇಳಿ ದಿಕ್ಕುದಿಕ್ಕಿನ ಅರಸು ಮಕ್ಕಳು ಎದ್ದುಬಿದ್ದು ಓಡಿ ಬರುತ್ತಾರೆ. ಯಾರಿಂದಲೂ ಆ ಧೂರ್ತಪಕ್ಷಿಯ ರೆಕ್ಕೆಯನ್ನು ತುಂಡರಿಸಲು ಸಾಧ್ಯವಾಗುವುದಿಲ್ಲ. ಸುದ್ದಿ ತಿಳಿದ ‘ತೋಳಬಲವುಳ್ಳ ರಾವಣ’ ಲಂಕೆಯಿಂದ ಬರುತ್ತಾನೆ. ಪಕ್ಷಿಯನ್ನು ಕೊಲ್ಲಲು ಮುಂದಾಗುತ್ತಾನೆ. ಅವನ ರಟ್ಟೆಗಳನ್ನು ಆ ಗರುಡ ಪಕ್ಷಿ ಕುಕ್ಕಿ ನೋಯಿಸುತ್ತದೆ. ಕೈಸಾಗದೆ ಹಿಂಜರಿದು ಹಿಂದಿರುಗುತ್ತಾನೆ ರಾವಣ.

ಆ ವೇಳೆಯಲ್ಲಿ ಅಯೋಧ್ಯಾಪುರದಿಂದ ಲಕ್ಷ್ಮಣದೇವ ಬರುತ್ತಾನೆ. ಏಳು ಮಾಳಿಗೆಯ ಮೇಲೆ ಕುಳಿತಿದ್ದ ಸಿರಿ ಸೀತಾಮುದೆಯ್ಯಾರು ಆತ ಬರುವುದನ್ನು ಕಂಡು ಮುಗುಳ್ನಗುತ್ತಾಳೆ. ಲಕ್ಷ್ಮಣ ಬಂದವನೆ ಬಿಲ್ಲಿಗೆ ಬಾಣ ಹೂಡುತ್ತಾನೆ. ಗರುಡಪಕ್ಷಿಯ ಬಲರೆಕ್ಕೆ ಕತ್ತರಿಸಲ್ಪಟ್ಟು ಬೀಳುತ್ತದೆ.

ಜನಕರಾಯ ಮುನಿಗೆ ಬಹುಹರ್ಷವಾಗುತ್ತದೆ. ‘‘ಮಗೂ ಲಕ್ಷ್ಮಣ, ಸೀರಿ ಸೀತಾಮು ದೆಯ್ಯಾರನ್ನು ನಿನಗೆ ಧರ್ಮಧಾರೆ ಎರೆದು ಕೊಡುತ್ತೇನೆ’’ ಎನ್ನುತ್ತಾನೆ. ಲಕ್ಷ್ಮಣ ಅದಕ್ಕೆ ಸಿದ್ದನಾಗದೆ, ‘‘ಸ್ವಾಮಿ, ಜನಕರಾಯ ಮುನಿಗಳೇ, ನನ್ನ ಅಣ್ಣ ಸಿರಿರಾಮ ದೇವರಿದ್ದಾರೆ. ಅವರನ್ನು ಕಳುಹಿಸುತ್ತೇನೆ ಎಂದು ಅಯೋಧ್ಯೆಗೆ ಹಿಂದಿರುಗುತ್ತಾನೆ. ಅಣ್ಣನಲ್ಲಿ ವಿಷಯವನ್ನು ತಿಳಿಸಿ ಅವನನ್ನು ಕರೆದುಕೊಂಡು ಬರುತ್ತಾನೆ.

ಇವರು ಬಂದ ಮುಕ್ಕಾಲು ಮೂರು ಗಳಿಗೆಯಲ್ಲಿ ಸಿರಿಸೀತಾಮು ದೆಯ್ಯಾರನ್ನು ಅಲಂಕಾರ ಮಾಡಿ ‘ಬಾಳೆಯ ಮಂಟಪ’ಕ್ಕೆ ಕರೆ ತರುತ್ತಾರೆ. ಬಹಳ ಸಂಭ್ರಮದಿಂದ ಸಿರಿರಾಮ ದೇವರಿಗೆ ಸಿರಿಸೀತಾಮುವನ್ನು ಧಾರೆಯೆರೆದು ಕೊಡುತ್ತಾನೆ, ಜನಕರಾಯಮುನಿ ಸ್ವಾಮಿ. ದಿಬ್ಬಣ ಸಡಗರದಿಂದ ಅಯೋಧ್ಯೆಗೆ ನಡೆಯುತ್ತದೆ.

ಕಥೆ ಸರಳವಾಗಿದ್ದರೂ ಇದರಲ್ಲಿನ ಕೆಲವೊಂದು ವಿಚಾರಗಳು ಬಹುರೋಚಕವಾಗಿವೆ; ವಾಲ್ಮೀಕಿ ರಾಮಾಯಣ ಅಥವಾ. ಇತರ ಪ್ರಸಿದ್ಧ ‘ಶಿಷ್ಟ’ ರಾಮಾಯಣಗಳಿಗಿಂತ ಭಿನ್ನವಾಗಿವೆ.

ಸೀತೆಯು ಜನಕರಾಯನ ಔರಸಪುತ್ರಿಯಲ್ಲವೆಂಬ ವಿಚಾರವನ್ನು ಸರ್ವಸಾಮಾನ್ಯವಾಗಿ ಎಲ್ಲ ರಾಮಾಯಣಗಳೂ ಒಪ್ಪಿವೆ. ಆಕೆಯ ಜನ್ಮದ ಬಗೆಗೆ ಅನೇಕ ವಿಲಕ್ಷಣವಾದ ಕಥಾನಕಗಳು ಅಲ್ಲಲ್ಲಿ ಕಂಡುಬರುತ್ತವೆ. ಈ ತುಳುಸಂಧಿಯಲ್ಲಿ, ಜನಪದ ಆಶಯಕ್ಕನುಸರಿಸಿ, ಇತರ ಕೆಲವು ಅಜ್ಜಿಕತೆಗಳಲ್ಲಿ ಬರುವ ಸಂದರ್ಭಗಳಂತೆ, ಸೀತೆ ಕಡಲಲ್ಲಿ ಪೆಟ್ಟಿಗೆಯಲ್ಲಿ ದೊರೆತಳೆಂಬ ಕೌತುಕದ ಸನ್ನಿವೇಶ ಇದರಲ್ಲಿದೆ. ದೇವದಾರು ಮರ ಹಗುರವಾದುದರಿಂದ ಪೆಟ್ಟಿಗೆ ತೇಲುವುದಕ್ಕೆ ಅನುಕೂಲವೆಂಬ ಅಭಿಪ್ರಾಯ ಸಮಂಜಸವಾಗಿದೆ. ಪೆಟ್ಟಿಗೆಯೊಳಗೆ ಆ ಶಿಶುವನ್ನು ಇರಿಸಿದ್ದು ಯಾರು, ಎಂದರೆ ಶಿಶುವಿನ ನಿಜವಾದ ಜನನೀ ಜನಕರು ಯಾರು ಎಂಬುದರ ಕುರಿತು ಮಾತ್ರ ಈ ಕತೆ ಮೌನ ವಹಿಸಿದೆ. ಸೀತೆಯನ್ನು ತಂದಿದ್ದವನಿಗೆ ಚಿನ್ನದ ನಾಣ್ಯಗಳನ್ನು ಕಳಸಿಗೆಯಲ್ಲಿ ಅಳೆದುಕೊಟ್ಟ ಮಾತಿನಲ್ಲಿ ಜನಪದ ಧಾಟಿ ಮಿಡಿಯುತ್ತದೆ. ಮಾತು ಮಾತಿಗೂ ವಿಶೇಷಣಗಳನ್ನೊಡ್ಡುವ ತುಳು ಜನಪದಸಾಹಿತ್ಯದ ಜಾಯಮಾನದಂತೆ ಸೀತೆಯನ್ನು ಸಿರಿಸೀತಾಮು ದೆಯ್ಯಾರು(ದೆಯ್ಯಾರ್ =ದೇವಿಯರು) ಎಂದೂ ರಾಜರ್ಷಿಯೆನಿಸಿದ್ದ ಜನಕನನ್ನು ಜನಕರಾಯ ಮುನಿಸ್ವಾಮಿ ಎಂದೂ, ಹತ್ತು ತಲೆಯ ಇಪ್ಪತ್ತು ತೋಳುಗಳ ಪ್ರತಾಪಿಯಾದ ರಾವಣನನ್ನು ‘ತೋಳಬಲವುಳ್ಳ ರಾವಣ’ನೆಂದೂ ಜನಪದ ಕವಿ ಕರೆದಿದ್ದಾನೆ.

ಸೀತಾಕಲ್ಯಾಣಕ್ಕಾಗಿ ಜನಕನು ಒಡ್ಡುವ ಪಣವಂತೂ ವಿಲಕ್ಷಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ದಲಿತವರ್ಗವೊಂದರಲ್ಲಿ ಪ್ರಚಲಿತವಾಗಿರುವ ‘ತಂಬೂರಿಯ ಸಂಪ್ರದಾಯ’ದ ಜನಪದ ರಾಮಾಯಣವೊಂದರಲ್ಲಿ ಜಳಕ ಮಾಡಿ ಬರುತ್ತಿದ್ದ ಜನಕರಾಯನ ಮಡಿ ಕೆಡಿಸುತ್ತಿದ್ದ ‘ಕಬ್ಬಿಣದ ಕಾಗೆ’ಯನ್ನು ಕೊಂದವರಿಗೆ ಸೀತೆಯನ್ನು ವಿವಾಹ ಮಾಡಿಕೊಡುವುದಾಗಿ ಆತ ‘ಹತ್ತಿರದವರಿಗೆ ಬಾಯ್ಮಾತು, ದೂರದವರಿಗೆ, ಓಲೆ’ಯ ಮೂಲಕ ಸಾರುತ್ತಾನೆ. ಇಲ್ಲಿ ಜನಕರಾಯನನ್ನು ‘ಜಲಕವತಿ ಪಟ್ಟಣದ ಜಲಕವತಿ ರಾಯ’ ಎಂದು ಕರೆಯಲಾಗಿದೆ. (ಜನಪದ ರಾಮಾಯಣ ೧೯೭೩, ಪು.೧೬೮, ೨೦೦)

ಈ ಕಬ್ಬಿಣದ ಕಾಗೆ ದಶರಥನ ಅರಮನೆಯಿಂದ ಬಂದುದೆಂಬ ಒಂದು ವಿಲಕ್ಷಣ ಕಲ್ಪನೆಯೂ ಇಲ್ಲಿದೆ. ರಾಮನಿತ್ತ ಬೆಂಕಿಯ ಬಾಣದಿಂದ ಹಕ್ಕಿಯ ರೆಕ್ಕೆ ಕತ್ತರಿಸಲ್ಪಡುತ್ತದೆ.

ಈ ತುಳು ಕತೆಯಲ್ಲಿ ಕಾಗೆಯ ಬದಲು ಗರುಡ ಪಕ್ಷಿ ಬರುತ್ತದೆ. ಗಟ್ಟದ ಮೇಲಿನ ಹಾಗೂ ಕೆಳಗಿನ ಈ ಕತೆಗಳಲ್ಲಿ ಸಂದರ್ಭಗಳ ಸಾದೃಶ್ಯವೂ, ಪಕ್ಷಿಯ ವಿಚಾರವೂ ಕುತೂಹಲಕರವಾಗಿದೆ.

ಅಯೋಧ್ಯೆಯಿಂದ (ವಿಶ್ವಾಮಿತ್ರನ ಜೊತೆಯಲ್ಲಿ ಕಾಡಿನಿಂದಲ್ಲ) ಲಕ್ಷ್ಮಣನೊಬ್ಬನೇ ಬಂದು ಆ ಗರುಡನ ಗರ್ವಭಂಗ ಮಾಡಿದ ಕಥಾಂಶವಂತೂ ಹೊಸ ಕಲ್ಪನೆಯಾಗಿದೆ. ಲಕ್ಷ್ಮಣ ಬರುವಾಗ ಏಳನೆಯ ಮಾಳಿಗೆಯಲ್ಲಿ ಕುಳಿತಿದ್ದ ಸೀತೆ (ಜನಪದ ಅರಮನೆಗಳಲ್ಲಿ ಏಳು ಮಾಳಿಗೆಗಳು ಸಾಮಾನ್ಯ!) ಲಕ್ಷ್ಮಣನನ್ನು ಕಂಡು ಮುಗುಳ್ನಕ್ಕಳೆಂಬ ಮಾತು ತುಂಬ ಮಾರ್ಮಿಕವಾದುದು. ಅದು, ಆತನ ಭದ್ರಾಕಾರವನ್ನು ಕಂಡು ಮೆಚ್ಚುಗೆಯಿಂದ ಸೂಸಿದ ನಗುವೋ ಅಥವಾ ಈತ ನಿಜವಾಗಿ ನನ್ನ ಕೈ ಹಿಡಿಯುವ ವರನಲ್ಲ ಎಂಬ ಒಳ ಅರಿವಿನಿಂದ ಹೊಮ್ಮಿದ ನಗುವೋ ಹೇಳುವಂತಿಲ್ಲ!

ಗರುಡನನ್ನು ಘಾತಿಸಿದ ಲಕ್ಷ್ಮಣನಿಗೆ ಸೀತಾಮುವನ್ನು ಧಾರೆಯೆರೆಯಲು ಜನಕರಾಯ ಸಿದ್ಧನಾಗಿದ್ದರೂ ಲಕ್ಷ್ಮಣನು ತನ್ನ ಅಣ್ಣನಿಗಾಗಿ ತಾನು ಪಣದಲ್ಲಿ ಗೆದ್ದ ಸೀತೆಯನ್ನು ಬಿಟ್ಟುಕೊಡುವ ಈ ಅನನ್ಯ ತ್ಯಾಗಶೀಲತೆಯ ಕಲ್ಪನೆಯಂತೂ ತೀರಾ ಅಪೂರ್ವವಾಗಿದ್ದು ಲಕ್ಷ್ಮಣನ ಪಾತ್ರವನ್ನು ಮುಗಿಲಿಗೇರಿಸುತ್ತದೆ. (ಸ್ವಯಂವರ ಸಂದರ್ಭದಲ್ಲಿ ಕರ್ಣನು ಭಾನುಮತಿಯನ್ನು ಪಣದಲ್ಲಿ ಗೆದ್ದು ಆಕೆಯನ್ನು ತನ್ನ ಪ್ರಾಣಮಿತ್ರ ಕೌರವನಿಗೆ ಮದುವೆ ಮಾಡಿಸಿದ ವೃತ್ತಾಂತವನ್ನು ಇಲ್ಲಿ ಸ್ಮರಿಸಬಹುದು.) ಆದರೆ ಇದರಿಂದ ರಾಮನ ಪಾತ್ರ ಮಾತ್ರ ಸಹಜವಾಗಿಯೇ ತುಸು ಮಸುಕಾಗುತ್ತದೆ. ಏನಿದ್ದರೂ ಇಲ್ಲಿ ವಿನ್ಯಾಸಗೊಂಡ ನಾಟಕೀಯವಾದ ತಿರುವು ತುಂಬ ಹೃದ್ಯವಾಗಿದೆ.

‘ತೋಳಬಲವುಳ್ಳ ರಾವಣ’ ವಿವಾಹದ ಪಂದ್ಯಕ್ಕೆ ಬಂದಿದ್ದನೆಂಬ ವಿಚಾರ ಹೊಸತಲ್ಲವಾದರೂ, ಗರುಡಪಕ್ಷಿ ಅವನ ತೋಳನ್ನು ಕುಕ್ಕಿ ನೋಯಿಸಿ ಅಟ್ಟಿತೆಂಬ ಚಿತ್ರ ಸ್ವಾರಸ್ಯವಾಗಿದೆ. ಜಟಾಯು ಪ್ರಸಂಗದ ಸ್ಮರಣೆಯಿಂದ ಜನಪದ ಕವಿ ಇದನ್ನು ಇಲ್ಲಿ ಜೋಡಿಸಿಕೊಂಡಿರಬಹುದು.

ವೆಂಕಟರಾಜ ಪುಣಿಂಚತ್ತಾಯರು ಪಕ್ರಿಮೇರ ಎಂಬ ದಲಿತ ಸಂಪನ್ಮೂಲ ವ್ಯಕ್ತಿಯಿಂದ ಸಂಗ್ರಹಿಸಿದ ತುಳು ಜನಪದ ರಾಮಾಯಣದ ಕತೆಯಲ್ಲಿ ಜನಕರಾಯನ ಜಪತಪಗಳಿಗೆ ವಿಘ್ನ ಒಡ್ಡುವ ಪಕ್ಷಿ ಒಂದು ‘ಚಾಂಡಾಲ ಪಕ್ಷಿ’ಯಾಗಿದೆ. ಈ ಕತೆಯಲ್ಲೂ ಲಕ್ಷ್ಮಣನೇ ಶರ್ತದಂತೆ ಆ ಧೂರ್ತ ಹಕ್ಕಿಯ ಬಲರೆಕ್ಕೆ ಕತ್ತರಿಸುತ್ತಾನೆ. ಸೀತೆಯನ್ನು ವಧುವಾಗಿ ಒಪ್ಪಿಸಲು ಜನಕರಾಯ ಮುಂದೆ ಬಂದಾಗ ಆತ ಒಲ್ಲದೇ ತಾನು ತಂದಿದ್ದ ರಾಮನ ಬಿಲ್ಲು ಬಾಣಗಳ ಜೊತೆಗೆ ಮಾಡಿಸುತ್ತಾನೆ. ಮೂಡಿಗೆರೆಯ ತಂಬೂರಿ ಸಂಪ್ರದಾಯದ ಕತೆಯಲ್ಲಿ ಉಲ್ಲೇಖಿತವಾದ ಈ ವಿಚಾರ ಈ ತುಳುಕತೆಯಲ್ಲಿಯೂ ನಿರೂಪಿತವಾಗಿರುವುದು ಸ್ವಾರಸ್ಯವಾಗಿದೆ. ಯಾವುದೋ ಕಾಲದ ಸಾಂಸ್ಕೃತಿಕ ಸಂಪರ್ಕ ಕಾರಣದಿಂದ ಇದು ಏರ್ಪಟ್ಟಿರಬಹುದು. ಜನಪದ ಕಥಾನಕಗಳಲ್ಲಿ ಇದು ಸಾಮಾನ್ಯ.

ಈ ಚಿಕ್ಕ ಕಥಾಭಾಗದಲ್ಲಿಯೆ ಹೀಗೆ ಕೆಲವೊಂದು ಭಿನ್ನ ರೀತಿಯ ಸ್ವಾರಸ್ಯಪೂರ್ಣ ಘಟನೆಗಳಿರುವಾಗ, ಜನಪದ ಸಂಪ್ರದಾಯದ ಈ ತುಳುಸಂಧಿ ಪೂರ್ಣವಾಗಿ ಉಪಲಬ್ಧವಾದರೆ, ಆ ಕಥೆಯ ತಡಿಕೆಯಲ್ಲಿ ಇನ್ನಷ್ಟು ಕುತೂಹಲಕರ ವಿಚಾರಗಳು ಕಂಡುಬಾರದೆ ಇರಲಾರವು.

ಪರಾಮರ್ಶನ ಸಾಹಿತ್ಯ

೧. ರಾಗೌ, ಪಿ.ಕೆ.ರಾಜಶೇಖರ, ಎಸ್.ಬಸವಯ್ಯ, ಜನಪದ ರಾಮಾಯಣ, ೧೯೭೩, ಪ್ರ: ಲೇಖಕರು.

೨.ವಿದ್ವಾನ್ ವೆಂಕಟರಾಜ ಪುಣಿಚಿತ್ತಾಯರು ಸಂಗ್ರಹಿಸಿದ ತುಳು ‘ಪಕ್ರಿ ರಾಮಾಯಣ’ (ಅಪ್ರಕಟಿತ)

೩.ರಾಮ ಕುಂಜತ್ತೂರು, ಮಂಜೇಶ್ವರ ಇವರು ಹೇಳಿದ ‘ಸಿರಿಸೀತಾಮು ದೆಯ್ಯಾರ್’ ಸಂಧಿ.