ಸಾಮೂಹಿಕ ದೈವಾವೇಶದ ವಿಶೇಷತೆಯುಳ್ಳ ಸಿರಿಜಾತ್ರೆಯು ಕವತ್ತಾರು, ನಂದಳಿಕೆ, ಹಿರಿಯಡ್ಕ, ಉರ್ಕಿತೋಟ, ಉರುಂಬಿದೊಟ್ಟು, ನಿಡಿಗಲ್ಲು, ಕುತ್ತೊಟ್ಟು, ಅತ್ರಿಜಾಲ್ ಮೊದಲಾದ ದೈವಸಂಕೀರ್ಣಗಳಲ್ಲಿ ‘ಪುಯಿಂತೆಲ್, ಮಾಯಿ, ಸುಗ್ಗಿ, ಪಗ್ಗು’ (ಫೆಬ್ರವರಿ, ಮಾರ್ಚ್, ಏಪ್ರಿಲ್) ತಿಂಗಳುಗಳ ಹುಣ್ಣಿಮೆಯಂದು ಜರಗುತ್ತದೆ. ಕವತ್ತಾರಿನ ದೇವ- ದೈವ ಸಂಕೀರ್ಣದಲ್ಲಿ ‘ಪಗ್ಗು ಹುಣ್ಣಿಮೆ’ಗೆ (ಏಪ್ರಿಲ್, ಮೇ ತಿಂಗಳಲ್ಲಿ) ಜರಗುವ ವರ್ಷಾವಧಿ ಉತ್ಸವ, ಅದರ ಅಂಗವಾಗಿ ನಡೆಯುವ ಸಾಮೂಹಿಕ ‘ಸಿರಿದರ್ಶನ’ ತುಂಬ ರೋಚಕವಾದ, ಕುತೂಹಲಕಾರಕ ವಿಲಕ್ಷಣ ಸಮಾರಂಭ. ಭಾವುಕ ಭಕ್ತರು, ದೈವಪೀಡಿತರು, ಕೌಟುಂಬಿಕ ಸಂತ್ರಸ್ತರು, ಸಂತಾನಾದಿ ಭಾಗ್ಯಪ್ರಾಪ್ತಿಯ ಅಪೇಕ್ಷೆಯುಳ್ಳವರು, ಕಾಯಿಲೆ ಕಸಾಲೆ ಉಳ್ಳವರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಈಚೆಗೆ ಜಾನಪದ ಆಸಕ್ತರು, ಸಮಾಜ ವಿಜ್ಞಾನಿಗಳು, ಮನೋವಿಜ್ಞಾನಿಗಳು ಮೊದಲಾದವರಿಗೆ ಇದೊಂದು ಅಧ್ಯಯನದ ಆಕರ್ಷಕ ಕೇಂದ್ರವಾಗಿದೆ. ಮಹಿಳೆಯರ ‘ಸಿರಿದರ್ಶನ ಲೀಲೆ’ಯನ್ನು ಕಂಡು ಅನಂದಿಸಲೆಳಸುವ ರಸಿಕರಿಗೂ ಅಲ್ಲಿ ಕೊರತೆಯಿಲ್ಲ.

ಸಿರಿಯ ದರ್ಶನಕ್ಕೆ ನಿಲ್ಲಲೂ, ಇತರ ರೀತಿಗಳಲ್ಲಿ ತಮ್ಮ ಭಕ್ತಿಯನ್ನು ನಿವೇದಿಸಲೂ ದೂರದ ಊರುಗಳಿಂದ (ಘಟ್ಟದ ಮೇಲಿನ ಕೊಡಗಿನಿಂದಲೂ ಸಹ) ನೂರಾರು ಸಂಖ್ಯೆಯಲ್ಲಿ ಸಿರಿ ಭಕ್ತರು ತಕ್ಕ ಸಿದ್ಧತೆಗಳೊಂದಿಗೆ ಬರುತ್ತಾರೆ. ಕವತ್ತಾರಿನ ಊರವರಲ್ಲಿ ಸಿರಿ. ಆವೇಶಕ್ಕೆ ಒಳಪಡುವವರು ಯಾರೂ ಇಲ್ಲ ಎಂಬುದು ಗಮನೀಯ ವಿಚಾರ. ಬ್ರಾಹ್ಮಣ ವರ್ಗಕ್ಕೆ ಸಿರಿ ಆವೇಶವಾಗುವುದಿಲ್ಲವಂತೆ. (ಆದರೆ ಅಬ್ಬಗ ದಾರಗೆಯರ ‘ಆದಿ ಆಲಡೆ’ ಎಂದು ಕರೆಯಲಾಗುವ ನಂದಳಿಕೆಯ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪೂಜೆಯ ಬ್ರಾಹ್ಮಣನ ಹೆಂಡತಿಯ ಮೈಮೇಲೆ ಅಬ್ಬಗದಾರಗೆಯರು ಮೊದಲಾಗಿ ಆವೇಶಗೊಂಡರೆಂದು ಪ್ರತೀತಿ!) ಅಪೂರ್ವಕ್ಕೆ ಕ್ರೈಸ್ತರಿಗೂ ಮುಸ್ಲಿಮರಿಗೂ ಸಿರಿಯ ‘ಸೂಕೆ’ ಉಂಟೆಂದು ಹೇಳಲಾಗಿದೆ.

ಈ ಜಾತ್ರೆ ಹುಣ್ಣಿಮೆಗೆ ಜರಗುತ್ತಿರುವುದು ಗಮನಾರ್ಹ. ಮನಸ್ಸಿನ ಸ್ಥಿತ್ಯಂತರಗಳಿಗೂ ಹುಣ್ಣಿಮೆ, ಅಮಾವಾಸ್ಯೆಗಳಂಥ ನಿಸರ್ಗದ ಸಂಧಿಸ್ಥಿತಿಗಳಿಗೂ ಸಂಬಂಧವಿದೆಯೆಂಬುದು ದೃಢಪಟ್ಟಿದೆ. ಸಿರಿಯ ಆರಾಧನೆಗೆ ಬಂದು ನೆರೆದ ನೂರಾರು ಮಂದಿ, ಮುಖ್ಯವಾಗಿ ಮಹಿಳೆಯರನೇಕರು ಮಾನಸಿಕವಾಗಿ ಆ ‘ದರ್ಶನ’ ರೂಪವಾದ ಆರಾಧನೆಗೆ ಸಿದ್ಧರಾಗುತ್ತಿದ್ದುದು, ಅವರಲ್ಲಿ ಹೆಚ್ಚಿನವರ ಗಂಭೀರ ಹಾಗೂ ಚಿಂತಾಗ್ರಸ್ತವಾದಂತಿದ್ದ ಮುಖಭಾವಗಳಿಂದ ಸ್ಪಷ್ಟವಾಗುತ್ತಿತ್ತು. ಆವೇಶಗೊಳ್ಳಬೇಕಾದ ವ್ಯಕ್ತಿಗಳು ಮಾತುಕತೆ ಇತ್ಯಾದಿಗಳಲ್ಲಿ ಪಾಲುಗೊಳ್ಳುತ್ತಿದ್ದುದು ವಿರಳ. ವರ್ಷಪ್ರತಿ ಹರಕೆ ಸಲ್ಲಿಸಲು ಬರುವವರು, ಅವರವರು ‘ದರ್ಶನಸೇವೆ’ ಮಾಡುವ ಜಾಗದಲ್ಲೆ ಸ್ಥಳ ಹಿಡಿದಿರುತ್ತಾರೆ. (ಜಾತಿವಾರಾಗಿ ಇಲ್ಲಿ ಪ್ರತ್ಯಪ್ರತ್ಯೇಕ ಸ್ಥಳಗಳಲ್ಲಿ ಚಿಕ್ಕ ಚಿಕ್ಕ ಗುಂಪುಗಳಾಗಿ ಸಿರಿಭಕ್ತರು ಸೇರಿಕೊಂಡಿದ್ದನ್ನು ಗಮನಿಸಬಹುದಾಗಿತ್ತು. ದಲಿತ ವರ್ಗದವರು ಅಂಗಣದ ಹೊರಗೆ ತುಸು ದೂರದಲ್ಲಿ ಇದ್ದರು)

ಸಾಮೂಹಿಕ ದರ್ಶನಕ್ಕೆ ಹೊತ್ತು ಸಮೀಪಿಸುತ್ತಿದ್ದಂತೆ, ಎಂದರೆ ಸಂಜೆ ಕಳೆಯುತ್ತಿದ್ದಂತೆ ಸಿರಿಯನ್ನು ಬರಿಸಿಕೊಳ್ಳುವವರು ಹಾಗೂ ಕುಮಾರನಿಗೆ ತೂಳು ಬರುವವರು ವಿಶಿಷ್ಟ ಉಡುಗೆಗಳಿಂದ ಸಿದ್ಧರಾಗುವುದು ಕಂಡುಬರುತ್ತಿತ್ತು. ‘ದಳಿಯ’ದಲ್ಲಿ ನಿಲ್ಲುವ ಮಹಿಳೆಯರಲ್ಲಿ ಹೆಚ್ಚಿನವರು ಬಿಳಿ ಸೀರೆ-ರವಿಕೆ ಧರಿಸಿ ತಲೆ ತುಂಬಾ ಮಲ್ಲಿಗೆ, ಅಬ್ಬಲ್ಲಿಗೆ ಇತ್ಯಾದಿ ಹೂಗಳನ್ನು ಮುಡಿದುಕೊಂಡಿದ್ದರು. ಈಗ ಅವರಲ್ಲಿ ಕೆಲವರ ಮುಖದ ಮ್ಲಾನತೆ ಮಾಯವಾಗತೊಡಗಿತ್ತು. ಕೆಲವರಲ್ಲಿ ಉಲ್ಲಾಸವೇ ಉಕ್ಕುವಂತಿತ್ತು. ತುಂಬಾ ಸಂಭ್ರಮದಿಂದ ಗುಂಪಾಗಿ (ಕೆಲವಡೆ ವೃತ್ತಾಕಾರವಾಗಿ) ಕುಳಿತು, ದರ್ಶನ ಸಮಯವನ್ನೆ ಪ್ರತೀಕ್ಷೆ ಮಾಡುವಂತಿತ್ತು. ವಿಶೇಷ ನಾಚಿಕೆ, ಸಂಕೋಚಗಳು ಅವರಲ್ಲಿ ಅಷ್ಟಾಗಿ ಕಾಣಿಸುತ್ತಿರಲಿಲ್ಲ. ಅವರಲ್ಲೆ ಕೆಲವರು ಸ್ವಯಂಸೇವಕಿಯರಂತೆ ಉತ್ಸಾಹದಿಂದ ಕೆಲವು ಸೇವಾಭಾಗಗಳನ್ನು ನಿರ್ವಹಿಸತೊಡಗಿದ್ದರು. ಹೂವು ಇತ್ಯಾದಿಗಳನ್ನು ಹಂಚುತ್ತಿದ್ದರು. ಒಂದು ವಿಶಿಷ್ಟ ಉದ್ದೇಶಕ್ಕಾಗಿ ಹಲವರು ಸೇರಿದಾಗ, ಅದರಲ್ಲೂ ದೈವಿಕ ಕಾರ್ಯವೆಂಬ ಕಾರಣವಿದ್ದಾಗ, ಅಪರಿಚಿತರ ನಡುವೆಯಾದರೂ ಸಂಕೋಚ ವಿಶೇಷವಾಗಿ ಉಳಿಯುವುದಿಲ್ಲ. (ಉದಾ : ಗುಂಪಾಗಿ ತೀರ್ಥಸ್ನಾನ ಮಾಡುವಾಗ ಸಂಕೋಚ ಮರೆಯಾಗಿಬಿಡುತ್ತದೆ.) ಒಂದು ಬಗೆಯ ಸ್ವಾತಂತ್ರ್ಯದ ಅನುಭವಿಸುವಿಕೆಯೂ ಇದಾಗಿದೆ ಎನ್ನಬಹುದು.

ಸಿರಿದರ್ಶನದಲ್ಲಿ ದೈವಿಕ ಆವೇಶದ ವಿಚಾರ ಏನಿದ್ದರೂ, ಆವೇಶಗೊಳ್ಳುವ ಮಹಿಳೆಯರ ಸುಪ್ತಮನಸ್ಸಿನ ಕೆಲವೊಂದು ಅದುಮಿಟ್ಟ ವಿಚಾರಗಳಿಗೆ ಇಲ್ಲಿ ವ್ಯಕ್ತರೂಪ ದೊರಕಿ, ಒಂದು ಬಗೆಯ ಮಾನಸಿಕ ತಾಪಶಮನ ಆಗುತ್ತದೆ ಎಂಬ ಅಂಶ ಸುಸ್ಪಷ್ಟ. ಲಹರಿ ಬಂದಾಗ ಸ್ವಚ್ಛಂದವಾಗಿ ಹಾಡಿ ಕುಣಿಯುವುದು ಆದಿ ಮಾನವ ಯುಗದ ಮೂಲ ಮಾನವ ಪ್ರವೃತ್ತಿ. ಈ ಸಹಜಾಪೇಕ್ಷೆ ಇಲ್ಲಿ ದೈವಿಕ ಉಪಚಾರದ ರೂಪದಲ್ಲಿ ಕಾಣಿಸಿಕೊಳ್ಳುವಂತಿದೆ. ಸಾಮಾನ್ಯ ಪರಿಸರದಲ್ಲಿ ಕೌಟುಂಬಿಕ ಜೀವನದಲ್ಲಿ ಹೀಗೆ ಹಾಡುವಂತಿಲ್ಲ, ಕಿರಿಚುವಂತಿಲ್ಲ. ಕುಣಿಯುವಂತಿಲ್ಲ, ತನ್ನ ಮನಸ್ಸಿನ ಅಭಿಪ್ರಾಯಗಳನ್ನು ನಿಚ್ಚಳವಾಗಿ ಪ್ರಕಟಿಸುವಂತಿಲ್ಲ. ಅನ್ಯಾಯ, ಅಪಚಾರಗಳನ್ನು ಪ್ರತಿಭಟಿಸುವಂತಿಲ್ಲ, ಆದರೆ ದೈವಾವೇಶಗೊಂಡ ವ್ಯಕ್ತಿಗಳು ಸ್ವತಂತ್ರರೆನಿಸಿ ಬಿಡುತ್ತಾರೆ. ಹಲವಾರು ಮಂದಿ ಒಟ್ಟಿಗೇ ಆವೇಶಗೊಂಡಾಗ, ಮೂಲತಃ ದುರ್ಬಲರಾಗಿರಬಹುದಾದ ಕೆಲವು ಬಡಪಾಯಿಗಳಿಗೆ ಒಂದು ನೈತಿಕ ಧೈರ್ಯ ಬಂದಂತಾಗಬಹುದು. ಆವೇಶ, ವಿಚಿತ್ರ ವರ್ತನೆ, ಸಿರಿಸಂಧಿಯ ಕೆಲವಂಶಗಳನ್ನು ಆಕ್ರೋಶಯುಕ್ತವಾಗಿ ಹಾಡುವ ರೀತಿಗಳು ಪ್ರತಿಭಟನೆಯ ಪ್ರತೀಕಗಳಾಗಬಲ್ಲರು.

ಸಿರಿದರ್ಶನ, ‘ಸಂಧಿ’ಯ ಆವರ್ತನ ಸ್ಥೂಲವಾಗಿ ಏಕರೂಪವಾಗಿ ಕಾಣಿಸಿದರೂ, ವ್ಯಕ್ತಿಯಿಂದ ವ್ಯಕ್ತಿಗೆ ಸಂಧಿಯ ಕೆಲವೊಂದು ವಿವರಗಳಲ್ಲೂ, ಹೇಳುವ ಧಾಟಿಯಲ್ಲೂ, ಭಾವದಲ್ಲೂ ವ್ಯತ್ಯಾಸಗಳನ್ನು ಪರಿಶೀಲಿಸಿದಾಗ, ಇಲ್ಲಿ ವ್ಯಕ್ತವಾಗುವ ಚರ್ಯೆಗಳಿಗೆ ವ್ಯಕ್ತಿವಿಶಿಷ್ಟ ಮಾನಸಿಕ ಸ್ವಭಾವವೇ ಕಾರಣವೆಂದು ನಿಚ್ಚಳವಾಗಿ ತಿಳಿಯುವಂತಿದೆ. ಭಿನ್ನ ಭಿನ್ನ ‘ಸಿರಿ’ಗಳಲ್ಲಿ ಮಾತ್ರವಲ್ಲ, ಈ ಮತಾಚಾರದಲ್ಲಿ ಅಲ್ಲಲ್ಲಿನ ಸಿರಿಗುಂಪಿನ ನೇತೃತ್ವವಹಿಸುವ ಕುಮಾರರ ಪಾತ್ರನಿರ್ವಹಣೆಯಲ್ಲೂ ಈ ತಾರತಮ್ಯವನ್ನು ಗುರುತಿಸಬಹುದು. ಕೆಲವರು ತುಂಬಾ ಚತುರರೂ, ಇಂಗಿತಜ್ಞರೂ, ಸೂಕ್ಷ್ಮಗ್ರಾಹಿಗಳೂ, ನಟನಾ ಪ್ರವೀಣರು ಆಗಿ ಕಾಣಿಸುತ್ತಾರೆ. ಮಹಿಳೆಯರಲ್ಲಿ ತೋರುವ ಉಗ್ರಾವೇಶ, ಭಾವೋದ್ರೇಕ ಕುಮಾರರಲ್ಲಿ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಈ ವೇಳೆ ಕುಮಾರರು ಶಮನಕಾರಕ ಶಕ್ತಿಗಳಾಗಿ ವರ್ತಿಸುವುದರಿಂದ ಅಂಥ ಬಿರುಸಿನ ಆವೇಶ ಬೇಕಿಲ್ಲ ಎನ್ನಬಹುದು. ಸಿರಿಸಂಧಿಯ ಹಾಡುವಿಕೆ ಇಡೀ ರಾತಿ ಅಲ್ಲಲ್ಲಿ ನಡೆಯುತ್ತಲೇ ಇರುವ ಒಂದು ಮುಖ್ಯ ಕಲಾಪ. ಸಿರಿಬಳಗದ ಆವೇಶಕ್ಕೊಳಗಾದವರಲ್ಲಿ ಎಲ್ಲರೂ ಸಂಧಿ ಹಾಡುವುದಿಲ್ಲ. ಕೆಲವರು ಉಚ್ಚಕಂಠದಿಂದ ಹಾಡಿದರೆ, ಕೆಲವರು ಕೇವಲ ಲಯಬದ್ಧವಾಗಿ -ಕೆಲವೊಮ್ಮೆ ನಿಧಾನವಾಗಿ, ಕೆಲವೊಮ್ಮೆ ತೀವ್ರವಾಗಿ ನಡುಗುತ್ತಿರುತ್ತಾರೆ. ಅಷ್ಟೆ. ಕೆಲವರು ಬರೇ ‘ನಾರಾಯಣ ನಾರಾಯಣ’ ಎಂದಷ್ಟೇ ಆವರ್ತಿಸುತ್ತಿರುತ್ತಾರೆ. ವರ್ಷೇ ವರ್ಷೇ ಅನುಭವ ಹೆಚ್ಚಾದಂತೆ ಸಂಧಿ ಸರಾಗವಾಗಿ ಹೋಮ್ಮುತ್ತದೆಂದು ತಿಳಿಯಲಾಗುತ್ತದೆ ಯಾದರೂ, ಕೆಲವರಿಗೆ ಕೊನೆಯವರೆಗೆ ಸಂಧಿ ಒಲಿಯುವುದೇ ಇಲ್ಲ! (ಇತರ ದೈವಗಳ ಆವೇಶ ಸಂದರ್ಭದಲ್ಲೂ ಈ ಮಾತು ನಿಜ. ‘ದೈವಸ್ಪರ್ಶವಾದೊಡನೆ ಯಾರೂ ಸರಾಗವಾಗಿ ‘ದೈವ ವಾಕ್ಯಗಳನ್ನು ಹೇಳಲಾಗುವುದಿಲ್ಲ. ‘ದೈವವಾಣಿ’ಯು ಸಹಜವೆಂಬಂತೆ ಪ್ರಕಟವಾಗಬೇಕಾದರೆ ಸ್ವಲ್ಪ ಕಾಲ ಹಿಡಿಯುತ್ತದೆ. ದೇವದ ನುಡಿಯ ಸೊಬಗು, ಪ್ರಭಾವ, ನಿರರ್ಗಳತೆಗಳು ರೂಢಿಯಾಗಲು ಪಾತ್ರಿಯ ಪ್ರತಿಭೆ, ಪ್ರಯತ್ನ, ಆಸಕ್ತಿಗಳೇ ಕಾರಣವೆನ್ನಬೇಕಾಗುತ್ತದೆ. ಆ ಕಲಾಪ್ರಜ್ಞೆ ಇಲ್ಲದವರ ನಿರ್ವಹಣೆ ನೀರಸ, ನಿರುಪಯುಕ್ತ ವೆನಿಸುತ್ತದೆ.)

ಅನುಭವೀ ಸಿರಿಗ್ರಸ್ತೆಯರು ಹಾಗೂ ಪಳಗಿದ ಕುಮಾರರು ಸಂವಾದ ರೂಪದಲ್ಲಿ ಹಾಡುವ ಸಂಧಿಗಳು ಕೆಲವೊಮ್ಮೆ ತುಂಬ ರಸವತ್ತಾಗಿಯೂ, ಮಾರ್ಮಿಕವಾಗಿಯೂ ಇರುತ್ತವೆ. ಇಂಥ ನಾಟಕೀಯ ಆಶುಸಂವಾದಕ್ಕೆ ಆಳವಾದ ಸಂಧಿಯ ಜ್ಞಾನವೂ, ಪ್ರತ್ಯುತ್ಪನ್ನಮತಿಯೂ ಬೇಕಾಗುತ್ತದೆ.

ಸಿರಿಯ ಹಲವು ಭಕ್ತರನ್ನು ಸಂಧಿಸಿದಾಗ ತಿಳಿದ ಒಂದು ಅಭಿಪ್ರಾಯವೆಂದರೆ, ‘ಬೇರೆ ಯಾವುದೇ ದೈವದ ಪೀಡೆಯ ಚಿಹ್ನೆಗಳು ಜ್ಯೋತಿಷ್ಯ ಪ್ರಶ್ನೆಯಲ್ಲಿ ಆರಂಭದಲ್ಲೆ ತಿಳಿದುಬಿಡುತ್ತವೆ. ಆದರೆ ಸಿರಿಗಳ ವಿಚಾರ ಮಾತ್ರ ತಿಳಿಯುವುದಿಲ್ಲ ಎಂಬುದು. ಇಂಥ ನಂಬಿಕೆಗಳು ಬೇರೆ ದೈವಗಳ ಬಗೆಗೂ ಇರುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ನಂಬುವ, ಆರಾಧಿಸುವ ದೈವದ ಅಥವಾ ದೇವರ ಭಕ್ತಿ, ಮಹಿಮೆ ಇತರ ದೈವತಗಳಿಗಿಂತ ಅಧಿಕ ಎಂದು ಸಾರುವುದು ವಾಡಿಕೆ ಇಂಥ ಸಂದರ್ಭದಲ್ಲಿ ಬೇರೆ ಕೆಲವು ಗೊಂದಲಗಳೂ ಇದಿರಾಗುವುದುಂಟು. ಕೆಲವರ ಮೈಮೇಲೆ ಬರುವ ಆವೇಶ ಸಿರಿಬಳಗಕ್ಕೆ ಸಂಬಂಧಪಟ್ಟದ್ದೋ ಅಥವಾ ಬೇರೆ ಕ್ಷುದ್ರ ಪೀಡೆಯದೋ ಎಂದು ಕೆಲವೊಮ್ಮೆ ನಿರ್ಧಾರಕ್ಕೆ ಬರಲಾಗುವುದಿಲ್ಲ. ಭಾವೋದ್ರಿಕ್ತ ಕಂಪನಚೇಷ್ಟೆ ಮಾತ್ರ ಮುಂದುವರಿದಿರುತ್ತದೆ. ಅಂಥ ವೇಳೆ ನಿರ್ದಿಷ್ಟ ದೈವವರ್ಗಕ್ಕೆ ಸೇರಿಸಲಾಗದಿರುವ ಯಾವುದೋ ‘ಪೀಡೆ’ಯನ್ನು ಸಿರಿಯವರ್ಗಕ್ಕೆ ಸೇರಿಸುವ ಪ್ರಯತ್ನವೂ ನಡೆಯುವುದುಂಟು. ಇಂಥ ಕೆಲವು ದೀಕ್ಷಾ ನಿದರ್ಶನಗಳನ್ನು ಇದೇ ಜಾತ್ರೆಯ ವೇಳೆ ಕಾಣುವಂತಾಯಿತು. ವಿಚಿತ್ರ ರೀತಿಯಲ್ಲಿ ವರ್ತಿಸುವ ಕೆಲವರನ್ನು (ಅವರಲ್ಲಿ ಒಬ್ಬಿಬ್ಬರು ತೀರಾ ಚಿಕ್ಕವರು) ‘ಬಾಯಿ ಬಿಡಿಸುವ’ ಪ್ರಯತ್ನ ಕುಮಾರರಿಂದ ನಡೆಯಿತು. ಆದರೆ ಶತಪ್ರಯತ್ನಪಟ್ಟರೂ ಕೆಲವು ‘ಕೇಸು’ಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಕೊನೆಯವರೆಗೂ ಸ್ಪಷ್ಟವಾಗಿ ಅವರ ಬಾಯಿಬಿಡಿಸುವುದು ಸಾಧ್ಯವಾಗಲಿಲ್ಲ.

ಆದರೆ ಸಿರಿ ಬಳಗವನ್ನು ನಿಯಂತ್ರಿಸುವ ಕುಮಾರ ಬಡಪೆಟ್ಟಿಗೆ ಸೋಲಲಾರ! ನಡುಕ ಬಂದವಳ ಬಾಯಿಯಿಂದ ಒಂದೆರಡು ಮಾತು ಹೊರಬಿದ್ದರೆ ಅಥವಾ ಕುಮಾರನ ಸಂಕೇತ ಅಥವಾ ಆಜ್ಞೆಗೆ ತಲೆಬಾಗಿದಂತೆ ಆಕೆ ವರ್ತಿಸಿದಂತೆ ಕಂಡರೆ, ಒಡನೆಯೆ ಅವಳನ್ನು ಸಿರಿಬಳಗಕ್ಕೆ (ಎಂದರೆ, ಸಿರಿ, ಸೊನ್ನೆ, ಗಿಂಡೆ, ಅಬ್ಬಗ, ದಾರಗ ಈ ಹೆಸರಗುಳ ವರ್ಗಕ್ಕೆ) ಸೇರ್ಪಡೆಗೊಳಿಸುವ ಪ್ರಯತ್ನ ಮಾಡಲಾಗುತ್ತದೆ. (ಬೇರೆ ಕೆಲವು ದೈವಗಳ ವಿಚಾರದಲ್ಲಿ, ಈ ನಿರ್ದಿಷ್ಟಪಡಿಸುವ ಕೆಲಸವನ್ನು ಜ್ಯೋತಿಷ್ಯಪ್ರಶ್ನೆಯ ಮೂಲಕ ಮಾಡಲಾಗುವುದುಂಟು. ಎಂದರೆ ಊಹಾಪೋಹಕ್ಕೆ ಅವಕಾಶವುಂಟೆಂದು ತಾತ್ಪರ್ಯ.)

ಕೆಲವು ಹಟಮಾರಿ ‘ಪೀಡೆ’ಗಳ ಕುರಿತು ಕುಮಾರ ನಿಷ್ಠುರವಾಗಿ ವರ್ತಿಸುತ್ತಾನೆ. ಹೊಡೆಯುವ ಸಂದರ್ಭವೂ ಇದೆ. ವಿಧವಿಧವಾಗಿ ಪ್ರಶ್ನಿಸಿ, ಸಾಂತ್ವನ ಹೇಳಿ, ವ್ಯಂಗ್ಯವಾಡಿ, ಕೆಲವೊಮ್ಮೆ ಜಂಕಿಸಿ ಆವೇಶಗೊಂಡಾಕೆ ಮಾತನಾಡುವಂತೆ ಯತ್ನಿಸುತ್ತಾನೆ. ಕೆಲವು ಬಾರಿ ಯಾವ ನಯಭಯ ಉಪಾಯಗಳಿಗೂ ಜಗ್ಗದೆ ತನಗೆ ತಾನೇ ದೇಹದಂಡನೆ ವಿಧಿಸುವಂತೆ ಮೈಯನ್ನು ವಿಚಿತ್ರವಾಗಿ ತೊನೆದಾಡಿಸುತ್ತಾ, ಕಣ್ಣು ಕೆದರಿ, ಮುಖ ವಿಕಾರಮಾಡಿ, ತಲೆಗೂದಲು ಕೆದರಿ ಕಿರಿಚುವಂಥವರ ‘ಅವಸ್ಥೆ’ಯನ್ನು ಕಂಡಾಗ ಕುಮಾರನಿಗೇ ಎಂದೇನು, ಸುತ್ತ ನೆರೆದ ಮಂದಿಗೂ ಸಿಟ್ಟು, ಜುಗುಪ್ಸೆ ಉಂಟಾದರೆ ಆಶ್ಚರ್ಯವಿಲ್ಲ. ಇಂಥ ಸನ್ನಿವೇಶದಲ್ಲಿ, ಕುಮಾರನೂ ಸ್ವಲ್ಪ ಹೊತ್ತು ಅಪ್ರತಿಭನಾಗಿ ಬಿಡುವುದಿದೆ. ಒಡನಿರುವ ಸಹಾಯಕರು ನಿಸ್ಸಹಾಯಕರಾಗಿ ನಿಲ್ಲುತ್ತಾರೆ.

‘‘ನಿನಗೇನು ಬೇಕಾಗಿದೆ?’’ ಎಂದು ಆವೇಶಿತ ವ್ಯಕ್ತಿಯೊಡನೆ ಕುಮಾರ ಅಧಿಕಾರವಾಣಿಯಿಂದ ಕೇಳುವುದು ಸಾಮಾನ್ಯ. ಅನೇಕ ವೇಳೆ ಆವೇಶಗೊಂಡವಳು ನಿರ್ಲಕ್ಷ್ಯದಿಂದಿರುತ್ತಾಳೆ. ಕೆಲವೊಮ್ಮೆ ಗಹಗಹಿಸಿ ವಿಕಾರವಾಗಿ ನಗುವುದೂ ಕೈಮೈಯನ್ನು ಸೆಟೆಯಿಸುವುದೂ ಉಂಟು. ‘‘ನನಗೆ ಇಂಥದ್ದೇ ಆಗಬೇಕು!’’ ಎಂದು ನೇರವಾಗಿ ಹೇಳುವವರೂ ಇಲ್ಲದಿಲ್ಲ. ಒಗಟಿನಂತೆ ಆಡುವವರೂ ಇದ್ದಾರೆ. ಕೆಲವು ಸಂದರ್ಭಗಳಲ್ಲಿ ಕುಮಾರ ಸಾಕಷ್ಟು ಪ್ರಶ್ನಿಸಿ, ಸಮಸ್ಯೆಯನ್ನು ತಿಳಿದುಕೊಂಡು, ಅಥವಾ ತಿಳಿದಂತೆ ಅಭಿನಯಿಸಿ ಪರಿಹಾರ ಸೂಚಿಸುವುದೂ ಇದೆ. ಮನೋಚಿಕಿತ್ಸೆಯ ಕೆಲಸವೂ ಇಲ್ಲಿ ಸಾಕಷ್ಟು ನಡೆಯುತ್ತದೆ.

ಇಲ್ಲಿ ಪ್ರಕಟವಾಗುವ ಅನೇಕ ಮಾನಸಿಕ ಸಮಸ್ಯೆಗಳ ಮೂಲವನ್ನು ಸಿರಿ ಆರಾಧನೆಯ ವೇಳೆ ಹಾಡುವ ಸಿರಿಪಾಡ್ದನದಲ್ಲಿ ಗುರುತಿಸಬಹುದಾಗಿದೆ. ಮಕ್ಕಳ ಹಂಬಲ, ಸವತಿ ಮತ್ಸರ, ಅನೈತಿಕ ಸಂಬಂಧ, ಗಂಡನಿಂದ ತಿರಸ್ಕಾರ, ಅತ್ತೆಸೊಸೆಯರ ಸಂಘರ್ಷ, ಅಕ್ಕತಂಗಿಯರ ಮೇಲಾಟ, ಹರಕೆ ತೀರಿಸದ ಕರ್ತವ್ಯವಿಮುಖತೆ, ಆಸ್ತಿ ಸೊತ್ತು ಸ್ವಾಮ್ಯಗಳ ಸಮಸ್ಯೆ, ದಬ್ಬಾಳಿಕೆ ಇತ್ಯಾದಿ ವಿಚಾರಗಳು ಬೇರೆ ಬೇರೆ ರೀತಿಗಳಲ್ಲಿ ವಿವಿಧ ಮುಖಗಳನ್ನು ಪಡೆದುಕೊಂಡು, ದೈವಿಕ ಮುಖವಾಡ ಧರಿಸುವ ಸಾಧ್ಯತೆ ಸಾಕಷ್ಟಿದೆ. ‘ಆವೇಶ ಪ್ರಸ್ಥಾನ’ವನ್ನು (Possession) ಮನೋವೈಜ್ಞಾನಿಕ ಪೃಥಕ್ಕರಣಕ್ಕೆ ಒಳಪಡಿಸಿದಲ್ಲಿ ಅನೇಕ ರಹಸ್ಯಗಳು ಪ್ರಕಟವಾದಾವು. ಮಾನವ ಮನಸ್ಸಿನ ವಿಲಕ್ಷಣ ವಿದ್ಯುನ್ಮಾನ ಯಂತ್ರದಲ್ಲಿ ದಾಖಲೆಗೊಂಡ ಅದೆಷ್ಟೋ ವಿಷಯಗಳು ಆಶ್ಚರ್ಯಕರವಾಗಿ ಅನ್ಯರೂಪಗಳನ್ನು ಹೊಂದಿ ಸಾಂದರ್ಭಿಕವಾಗಿ ಪ್ರಕಟವಾಗಬಲ್ಲವು! ಸಿರಿ ಪಾಡ್ದನವನ್ನು ಮಾತ್ರವೇ ಹಾಡಬೇಕಾಗಿರುವ, ಹಾಗೂ ಸಿರಿ ಆರಾಧನೆಯ ಕುರಿತಾಗಿ ಮಾತ್ರವೇ, ನುಡಿಯಬೇಕಾಗಿರುವ ಆವೇಶಿತ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ, ‘ನನ್ನ ಅನ್ನಕ್ಕೆ ವಿಷ ಇಟ್ಟರು!’ ಎಂದು ಆಕ್ರೋಶದಿಂದ ಹೇಳುತ್ತಿದ್ದಂತೆ, ಅವಳ ಸಂಬಂಧಿನಿಯಂತೆ ತೋರುವ ಇನ್ನೊಬ್ಬಳು ಆವಿಷ್ಟ ಹೆಣ್ಣು ಅದಕ್ಕೆ ದನಿಗೂಡಿಸಿದ್ದನ್ನು ಗಮನಿಸಿದಾಗ ಯಾರ ಮೇಲೋ ಅವರಿಗೆ ಗುಮಾನಿ ಮತ್ತು ಕೋಪ ಇದ್ದುದು ವ್ಯಕ್ತವಾಗುವಂತಿತ್ತು. ಅಸ್ವಸ್ಥ ಮನಸ್ಸಿನ ಇನ್ನೂ ಕೆಲವು ವಿಕಲ್ಪಗಳನ್ನು ಕಾಣುವಂತಾಯಿತು.

ಭಕ್ತರಾದವರ ಹಾಲೆ ಹವಾಲೆಯಂತೂ ನೂರಾರು, ಸಿರಿ ಬಳಗಕ್ಕಿಂತಲೂ ಹೆಚ್ಚಾಗಿ ‘ಕುಮಾರ’ರು ಇಂಥ ಸನ್ನಿವೇಶಗಳನ್ನು ಆಳುತ್ತಾರೆ. ದೈವವಾಣಿಯ ಮಾಧ್ಯಮವಾಗಿ (Oracle) ವರ್ತಿಸುವ ಅವರು ಸಾಂದರ್ಭಿಕವಾಗಿ ಜೋಯಿಸರಂತೆಯೂ, ವೈದ್ಯರಂತೆಯೂ, ಕೌಟುಂಬಿಕ ಯಜಮಾನರಂತೆಯೂ ವರ್ತಿಸುತ್ತಾರೆ. ಮಂತ್ರ, ಮಾಟ, ಮಾರಣ ಇತ್ಯಾದಿ ವಿಚಾರಗಳೂ ‘ದರ್ಶನ’ದಲ್ಲಿ ಪ್ರಸ್ತಾಪಿಸಲ್ಪಟ್ಟಿದ್ದವು. ಕೆಲವರಿಗೆ ಹಿಂಗಾರದ ಎಸಳಿನ ಪ್ರಸಾದವನ್ನು ನೀಡಿ, ಕೆಲವು ದಿನ ಅದನ್ನು ಹಾಲಿನಲ್ಲಿ ಅರೆದು, ಸೇವಿಸುವಂತೆ ಆದೇಶಿಸಲಾಯಿತು. (ಹಿಂಗಾರಕ್ಕೆ ಔಷಧೀಯ ಗುಣಗಳೂ ಉಂಟೆನ್ನಲಾಗಿದೆ. ಸಿರಿ ದರ್ಶನದಲ್ಲಿ ಹಿಂಗಾರದ ಬಳಕೆ ಅಧಿಕ)

ಸುವ್ಯಕ್ತವಲ್ಲದಿದ್ದರೂ ಲೈಂಗಿಕ ಸಮಸ್ಯೆ ಸಿರಿದರ್ಶನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆನ್ನಬಹುದು. ಅನೇಕ ಮಾನಸಿಕ ಸಮಸ್ಯೆಗಳಿಗೆ ಲೈಂಗಿಕ ಅತೃಪ್ತಿ, ಅಸಂಗತತೆ, ಅಸಹಜ ರೀತಿಯ ಮುಚ್ಚಿಡುವಿಕೆಗಳೇ ಕಾರಣಗಳೆಂದು ಮನಃಶಾಸ್ತ್ರವು ಹೇಳುತ್ತದೆ. ಹೆಣ್ಣು ಆವೇಶಗೊಂಡಾಗ ಅನಿವಾರ್ಯ ಎಂಬಂತೆ ಇತರ ಗಂಡುಗಳಿಂದ ಮುಟ್ಟಿಸಿ ಕೊಳ್ಳುತ್ತಾಳೆ; ಪಾವಿತ್ರ್ಯದ ಪರಿಭಾವನೆಯಲ್ಲಿ ಉಪಚಾರ ಹೊಂದುತ್ತಾಳೆ. ಪುರುಷ ದೇಹದ ಒಂದು ಸಣ್ಣ ಸ್ಪರ್ಶಕ್ಕಾಗಿ ಹೆಣ್ಣು ಕಾತರಗೊಂಡಿರಬಹುದಾದುದು ಆಶ್ಚರ್ಯಕರವಲ್ಲ. ಆದರೆ ಸಾಮಾನ್ಯ ಬದುಕಿನಲ್ಲಿ ಆ ಇಂಗಿತವನ್ನು ವ್ಯಕ್ತಗೊಳಿಸುವುದು ಕಷ್ಟಸಾಧ್ಯ. ಆದರೆ ಇಂಥ ವಿಶಿಷ್ಟ ಸಮಾರಂಭಗಳಲ್ಲಿ ಅಂಥ ಮುಟ್ಟಾಟಗಳಿಗೆ ಧಾರ್ಮಿಕ ಪರವಾನಗಿ ದೊರಕುತ್ತದೆ. ಕುಮಾರನೊಬ್ಬನ ಮೈಮೇಲೆಯೇ ಬಿದ್ದುಕೊಂಡು ಆತ್ಮೀಯತೆಯನ್ನು ಪ್ರಕಟಿಸಿದ ಸಿರಿಯೊಬ್ಬಳನ್ನು ಕಂಡಾಗ ದೇಹಕರ್ಷಣೆಗೂ ಇಲ್ಲಿ ಸ್ಥಾನವಿದೆ ಎಂದು ಹೇಳುವಂತಾಗಿದೆ. ಸಿರಿಗಳ ಗುಂಪಿನಲ್ಲಿ ಕೆಲವು ವಿಶಿಷ್ಟ ಸಿರಿಗಳ ಮೇಲೆ ಕುಮಾರನು ತುಸು ಹೆಚ್ಚು ಪ್ರಸನ್ನವಾಗಿರುವಂತೆ ತೋರುವುದೂ ಇದೆ!

ಎಷ್ಟೋ ಕುಮಾರರು ನಿಜಜೀವನದಲ್ಲಿ ತುಂಬ ರಸಿಕರಾದ ವ್ಯಕ್ತಿಗಳೆಂಬುದು ತಿಳಿದುಬರುತ್ತದೆ.

ಹಿಂದೆ ಸಿರಿಜಾತ್ರೆ ಜರಗುವ ಕೆಲವು ಕ್ಷೇತ್ರಗಳಿಗೆ ಅಸುಪಾಸಿನ ಊರುಗಳ ಕೆಲವರು ವೇಶ್ಯೆಯರೂ, ಸಿರಿವಂತ, ರಸಿಕರೂ ಸಾಕಷ್ಟು ಬರುತ್ತಿದ್ದರೆಂದು ತಿಳಿಯುತ್ತದೆ. ಅವರು ಕೇವಲ ಜಾತ್ರೆ ನೋಡಲು ಬರುತ್ತಿದ್ದುದಲ್ಲ ಎಂಬುದು ಸ್ಪಷ್ಟ!

ಒಟ್ಟಿನಲ್ಲಿ, ಇಡೀ ರಾತ್ರಿಯಲ್ಲಿ ಜರಗಿದ ಜಾತ್ರೆಯ ವೇಳೆ ಹಲವಾರು ಸಿರಿಗುಂಪುಗಳ ದರ್ಶನ ಕಲಾಪಗಳಲ್ಲಿ ಕುತೂಹಲಕರ, ಸ್ವಾರಸ್ಯಕರ, ಗಮನೀಯ ಅಂಶಗಳುದ್ದಂತೆ ಕೆಲವೊಂದು ಅನಪೇಕ್ಷಿತ, ಅರೋಚಕ ಅಂಶಗಳೂ ಇದ್ದುವೆಂಬುದನ್ನು ಒಪ್ಪಬೇಕು! ದೈವಾವೇಶದ ಹಿಂದಿರಬಹುದಾದ ‘ಅಗೋಚರ ದೈವಿಕ ಶಕ್ತಿ’ಯ ಬಗೆಗೆ ಪ್ರಕೃತ ವಿಶ್ಲೇಷಿಸುವುದಿಲ್ಲ. (‘ದೈವಿಕ ಆವೇಶ’ಕ್ಕೆ ಸಂಬಂಧಪಟ್ಟು ಮನೋವೈಜ್ಞಾನಿಕ ಅಧ್ಯಯನಗಳು ನಡೆದಿವೆ) ‘ಸಿರಿಯ ದರ್ಶನ’ದ ಹಿನ್ನೆಲೆಯಲ್ಲಿ ಮುಖ್ಯವಾಗಿ ಹೆಚ್ಚಿನ ಕಾವು ನೋವುಗಳ ನೂರು ಮುಖಗಳು ಅವಿತುಕೊಂಡಿವೆಯೆಂದು ಧಾರಾಳವಾಗಿ ಹೇಳಬಹುದು.

(ದಿನಾಂಕ ೪.೫.೮೫ರಂದು ಕವತ್ತಾರು ಆಲಡೆಯಲ್ಲಿ ಜರಗಿದ ಸಿರಿಜಾತ್ರೆಯನ್ನು ಗಮನಿಸಿ ಮಾಡಿಕೊಂಡ ಟಿಪ್ಪಣಿ, ಜಾತ್ರೆಯ ಸಮಗ್ರ ವಿವರ ಇಲ್ಲಿಲ್ಲ)

ಬಳಿಕ ಬರೆದುದು

ಸಾಮಾನ್ಯವಾಗಿ ಯಾವುದೇ ಆರಾಧನಾ ಪ್ರಕಾರದ ಕುರಿತು-ಅದು ವೈದಿಕವಿರಲಿ, ಜನಪದವಿರಲಿ-ಹೇಳುವಾಗ ಅಥವಾ ಬರೆಯುವಾಗ ಹೆಚ್ಚಾಗಿ ಅದರ ಉದಾತ್ತ ಮುಖವನ್ನು ಮಾತ್ರ ಗಮನಿಸುತ್ತಾರೆ. ಸಾಂಸ್ಕೃತಿಕ ವೈಶಿಷ್ಟ್ಯ ಎಂಬಂತೆ ವಿವರಿಸುತ್ತಾರೆ. ಕೆಲವೊಮ್ಮೆ ವಿಷಯ ವೈಭವೀಕರಣ ನಡೆಯುತ್ತದೆ. ಕೆಲವೊಂದು ಕಲಾಪಗಳನ್ನು ವೈಚಾರಿಕತೆಗೆ ಒಗ್ಗಿಸುವ ಪ್ರಯತ್ನವೂ ನಡೆಯುವುದುಂಟು. ಮನುಷ್ಯಕೃತವಾದ ಪ್ರತಿಯೊಂದು ಕ್ರಿಯೆಯಲ್ಲೂ, ವ್ಯವಸ್ಥೆಯಲ್ಲೂ ಇಷ್ಟಕರವಾದ ಅಂಶಗಳು ಇರುವಂತೆ, ಇಷ್ಟಕರವಲ್ಲದ ಅಂಶಗಳೂ ಸಹಜವಾಗಿಯೇ ಮಿಳಿತವಾಗಿರುವುದುಂಟು. ಎಷ್ಟೋ ಆಚರಣೆಗಳಲ್ಲಿ ಕಾಲಬಾಧಿತವಾದ ಪ್ರತಿಗಾಮೀ ವಿಚಾರಗಳು ಇರುವುದಿದೆ. ಇವನ್ನೆಲ್ಲ ಜನಪದ ಸಂಸ್ಕೃತಿಯ ಭಾಗಗಳೆಂದು ಅಂಗೀಕರಿಸಬೇಕಾಗಿಲ್ಲ. ವಸ್ತುನಿಷ್ಠವಾದ ಅಧ್ಯಯನದಿಂದ ಮಾತ್ರ ನೈಜ ಮೌಲ್ಯಾನುಸಂಧಾನ ಹಾಗೂ ಔಚಿತ್ಯ ಸಾಂಗತ್ಯಗಳ ಪ್ರಜ್ಞೆ ಒದಗಬಲ್ಲುದು. ನಮ್ಮ ಅನೇಕ ಆಚರಣೆಗಳೊಳಗಿನ ಅನುದಾತ್ತ ಮುಖಗಳೂ ಅಧ್ಯಯನಕ್ಕೆ ಅರ್ಹವಾಗಿವೆ. ಜಾತ್ರೆಯಂಥ ಸಂಭ್ರಮಾತ್ಮಕ, ಕಲಾತ್ಮಕ ಹಾಗೂ ಭಾವನಾತ್ಮಕ ಸನ್ನಿವೇಶಗಳಲ್ಲಿ, ಮೇಲ್ನೋಟಕ್ಕೆ ತೋರುವಂಥ ಭಯಭಕ್ತಿ, ಗಾಂಭೀರ್ಯ, ಶರಣಾಗತಿಭಾವ ಇತ್ಯಾದಿಗಳಿಂದಾಗಲೀ, ಜಾತ್ರೆಯ ಅದ್ಧೂರಿತನ, ಗೌಜುಗದ್ದಲಗಳಿಂದಾಗಲೀ, ಉತ್ಸವ ಕಲಾಪಗಳಲ್ಲಿ ಮಗ್ನರಾದಂತಿರುವ ದೈವಸೇವಕರ ಹಾಗೂ ಇತರರ ಚರ್ಯೆ, ಮಡಿಮೈಲಿಗೆಗಳ ತೋರಿಕೆಯಿಂದಾಗಲೀ ಉತ್ಸವದ ಎಲ್ಲ ಆಯಾಮಗಳ ಸಂಪೂರ್ಣಚಿತ್ರ ಒದಗಿಬರಲು ಸಾಧ್ಯವಿಲ್ಲ. ನಂಬಿಕೆ, ಪರಂಪರೆಗಳು ಕೆಲಸ ಮಾಡುವ ಬಗೆಯನ್ನೇನೋ ಉತ್ಸವಾಂಗಗಳಲ್ಲಿ ಕಾಣಬಹುದು; ಆದರೆ ಆಚರಣೆಗಳ ಒಳಮಗ್ಗಲುಗಳನ್ನು ಗುರುತಿಸಲು ಬರುವುದಿಲ್ಲ.

ಸಿರಿದರ್ಶನದಂಥ ಆಚರಣೆಗಳಲ್ಲಿ ವ್ಯಕ್ತವಾಗುವ ಸಮಸ್ಯೆಗಳ ಮೂಲವನ್ನು ಕೇವಲ ಸಿರಿದರ್ಶನದ ಕಳದಲ್ಲಿ ಶೋಧಿಸಿದರೆ ಸಾಲದು, ಬದಲಾಗಿ ಸಮಾಜದ ನಡುವೆ ಒಂದಿಷ್ಟು ವಸ್ತುನಿಷ್ಠ ಕ್ಷೇತ್ರಕಾರ್ಯ ಮಾಡಬೇಕಾಗುತ್ತದೆ.

ಸಿರಿಬಳಗದಿಂದ ಆವೇಶಕ್ಕೊಳಗಾಗುವ ಹೆಚ್ಚಿನವರು ಹಿಂದುಳಿದ ಸಮಾಜಗಳಿಗೂ, ದಲಿತವರ್ಗಗಳಿಗೂ ಸೇರಿದವರು. ನೆಮ್ಮದಿವಂತ ಮೇಲುವರ್ಗಗಳ ವ್ಯಕ್ತಿಗಳು ಬಹುಮಟ್ಟಿಗೆ ಆವೇಶಕ್ರಿಯೆಗೆ ಒಳಗಾಗುವುದಿಲ್ಲ. ಇದಕ್ಕೆ ಕಾರಣ ಸ್ಪಷ್ಟವಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಲ್ಲಿ ರೋಗ ರುಜಿನ, ಅಜ್ಞಾನ, ಭೀತಿ, ಶೋಷಣೆಯ ಬವಣೆ ಹೆಚ್ಚಾಗಿರುತ್ತದೆ. ದುರ್ಬಲವಾದ ಮನಸ್ಸು ‘ದರ್ಶನಶಕ್ತಿ’ಗಳ ಆಡುಂಬೊಲವಷ್ಟೆ? ಆನುವಂಶಿಕ ಗುಣಸ್ವಭಾವಗಳ ಪರಿಣಾಮವಾಗಿಯೂ ಮೈಮೇಲೆ ಆವೇಶ ಬರುವ ‘ಸಂಸ್ಕಾರ’ ಮೈಗೂಡಬಹುದು.

ಸಿರಿ ಬಳಗದಿಂದ ಆವೇಶಗೊಳ್ಳುವವರ ಕೌಟುಂಬಿಕ ಹಿನ್ನೆಲೆ, ಆರ್ಥಿಕ ಅನುಕೂಲತೆ, ಸಹಜ ಸ್ವಭಾವ, ದಾಂಪತ್ಯ ಜೀವನ, ಕುಟುಂಬಸದಸ್ಯರೊಳಗಿನ ಹೊಂದಾಣಿಕೆ, ನೆರೆಕರೆಯವರೊಂದಿಗಿನ ನಡವಳಿಕೆ, ಪ್ರೀತಿ ವಿಶ್ವಾಸಗಳ ಲಭ್ಯತೆ ಇತ್ಯಾದಿ. ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ‘ಸಿರಿ ಆವೇಶ’ದ ಮೂಲ ಆಯಾ ಕೌಟುಂಬಿಕ ಆವರಣದಲ್ಲೆ ಗೋಚರಿಸಬಹುದು. ಹೀಗೆ ಆವೇಶಗೊಳ್ಳುವವರಲ್ಲಿ ವಿಕ್ಷಿಪ್ತ ಮನೋಧರ್ಮದವರು, ಅವಿವಾಹಿತೆಯರು, ದೇಹಸುಖವಂಚಿತರು, ಮುಖಗಂಟಿಕ್ಕಿ ಸದಾ ಗುರುಗುಮ್ಮನೆ ಇರುವವರು, ಜಗಳಗಂಟಿಯರು, ದೇಹಾಲಸ್ಯದಿಂದ ಬಳಲುವವರು, ಚಂಚಲ ಪ್ರಕೃತಿಯವರು, ಮಾನಸಿಕ ತೊಂದರೆಗೀಡಾದವರು, ಹೊಂದಿಕೊಳ್ಳದ ಮನೋವೃತ್ತಿಯವರು ಮುಚ್ಚುಮರೆಯವರು. ಸ್ವಾರ್ಥಪರರು, ಬಗೆಬಗೆಯ ದರ್ಪ ದಬ್ಬಾಳಿಕೆಗೆ ಒಳಗಾದವರು. ಹೀಗೆ ಭಿನ್ನ ಭಿನ್ನ ಮನೋಧರ್ಮದವರು ಇರುವುದನ್ನು ಗುರುತಿಸಲಾಗಿದೆ. ಸಾತ್ತ್ವಿಕ, ಸುಸಂಸ್ಕೃತ, ಸುಖೀ ವಿದ್ಯಾವಂತ ಮಹಿಳೆಯರಿಗೆ ಸಿರಿ ಆವೇಶವಾಗುವುದು ದುಸ್ಸಾಧ್ಯವೆಂದೇ ಹೇಳಬೇಕು.

‘ಸಿರಿ ಮಂಡಳ’ದ ನಾಯಕರಾದ ಕುಮಾರರ ವಿಚಾರವೂ ಅಷ್ಟೇ ಇವರಲ್ಲಿ ಹೆಚ್ಚಿನವರಿಗೆ ದ್ವಿಮುಖ ವ್ಯಕ್ತಿತ್ವ (Duel Personality) ಇರುತ್ತದೆ. ಇವರು ಸಾಮಾನ್ಯವಾಗಿ ವಾಕ್ಚತುರರೂ ವ್ಯವಹಾರ ನಿಪುಣರೂ, ರಸಿಕರೂ ಆಗಿರುತ್ತಾರೆ. ನಾಯಕತ್ವದ ಗುಣವಿಲ್ಲದೆ ಸಿರಿಗಳ ತಂಡವನ್ನು ನಿಯಂತ್ರಿಸುವ ಸಂಕೀರ್ಣ ಕಾರ್ಯಭಾರ ಸಾಧ್ಯವಿಲ್ಲ. ಅವರಿಗೆ ಸ್ಮೃತಿ ಶಕ್ತಿ, ಪ್ರತ್ಯುತ್ಪನ್ನಮತಿ, ಇನ್ನೊಬ್ಬರ ಮನಸ್ಸನ್ನು ಓದುವ ಕಲೆ, ಒಡಂಬಡಿಸುವ ಹಾಗೂ ಒಪ್ಪಿಸುವ ಕುಶಲತೆ ವಿಶೇಷವಾಗಿರುವುದನ್ನು ಗಮನಿಸಬಹುದು. ದೈವಾರಾಧನಾ ಪ್ರಪಂಚದ ಇತರ ದೈವಪಾತ್ರಿವರ್ಗಕ್ಕು ಈ ಮಾತು ಅನ್ವಯಿಸುತ್ತದೆ. ಈ ಪಾತ್ರಿ, ಕುಮಾರ ಮೊದಲಾದ ದೈವಮಾಧ್ಯಮ ವ್ಯಕ್ತಿಗಳಲ್ಲಿ ಹೆಚ್ಚಿನವರಲ್ಲಿ ದ್ವಿಮುಖ ವ್ಯಕ್ತಿತ್ವದ ವಿಶಿಷ್ಟತೆ ಇರುವುದರಿಂದ ಅವರಿಂದ ಕೆಲವೊಮ್ಮೆ ಪೂರ್ತಿ ಪ್ರಾಮಾಣಿಕತೆ, ಪಾರದರ್ಶಕತೆಗಳನ್ನು ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ; ಕೆಲವೊಂದು ನಿಗೂಢತೆಗಳು ಅವರಲ್ಲಿರುತ್ತವೆ.

ಸಿರಿದರ್ಶನ ಆಚರಣೆಯೂ ಸೇರಿದಂತೆ, ಎಲ್ಲ ಆರಾಧನಾ ಪರಂಪರೆಗಳ ವ್ಯಕ್ತ ಕ್ರಿಯಾ ಕಲಾಪಗಳ ಅಧ್ಯಯನದ ಜೊತೆಗೆ ಅವುಗಳಲ್ಲಿ ವೃತ್ತಿಯಿಂದಲೋ, ಪ್ರವೃತ್ತಿಯಿಂದಲೋ ಕ್ರಿಯಾಶೀಲರಾಗುವ ವ್ಯಕ್ತಿಗಳ ವೈಯಕ್ತಿಕ ಗುಣಸ್ವಭಾವ, ಚರ್ಯೆ ಚೇಷ್ಟೆಗಳನ್ನು, ಪೂರ್ವಗ್ರಹವಿಲ್ಲದೆ ವಸ್ತುನಿಷ್ಠವಾಗಿ ಅರ್ಥವಿಸಲು, ಅಧ್ಯಯನ ಮಾಡಲು ಯತ್ನಿಸಿದರೆ ಮಾತ್ರವೇ ಆಯಾ ಆರಾಧನೆಯ ಕಳದಲ್ಲಿ ನಡೆಯುವ ವಿವಿಧ ವಿದ್ಯಮಾನಗಳ ಹಿನ್ನೆಲೆಯಲ್ಲಿರುವ ನಿಗೂಢ ಸತ್ಯಗಳ ತಕ್ಕಮಟ್ಟಿನ ದರ್ಶನವಾಗಬಹುದು. ಇಲ್ಲವಾದಲ್ಲಿ, ಉತ್ಸವಾದಿಗಳ ಬಾಹ್ಯ ಭವ್ಯಾಂಶ ಮಾತ್ರವೇ ವೇದ್ಯವಾದೀತು, ಅಷ್ಟೆ.