ಕರ್ನಾಟಕಾಂತರ್ಗತವಾದ ತುಳುನಾಡಿಗೆ ಪ್ರಾಚೀನ, ಚರಿತ್ರೆ, ಸಂಸ್ಕೃತಿ ಧರ್ಮಗಳ ಸುದೀರ್ಘ ಪರಂಪರೆಯಿದೆ. ಸಂಸ್ಕೃತಿ ಜೀವಾಳವಾದ ಭಾಗವೇ ಧರ್ಮ. ಇದು ವಿಶಾಲ ವ್ಯಾಪ್ತಿಯ ಪರಿಕಲ್ಪನೆ. ಸಹಜಗುಣ, ಕರ್ತವ್ಯ, ನೀತಿ, ನ್ಯಾಯ, ದಾನ, ಪರೋಪಕಾರ, ಕರುಣೆ, ತಾಳ್ಮೆ, ಸಾಮರಸ್ಯ ಇತ್ಯಾದಿ ಅನೇಕ ಅರ್ಥಗಳು ‘ಧರ್ಮ’ ಎಂಬುದಕ್ಕೆ ಸಾಂದರ್ಭಿಕವಾಗಿ ಅನ್ವಯಿಸುತ್ತವೆ. ಒಟ್ಟಿನಲ್ಲಿ ಮನುಷ್ಯನ ಒಳ್ಳೆಯತನಕ್ಕೆ ಆಧಾರವಾಗಿರುವ ಗುಣವೇ ಧರ್ಮವೆನ್ನಬಹುದು. ಮನುಷ್ಯಕುಲ ಬೆಳೆದುಬಂದಲ್ಲೆಲ್ಲ ಸಂಸ್ಕೃತಿಯೂ ಅದರ ಸಾರವಾದ ಧರ್ಮವೂ ಬೆಳೆದುಕೊಂಡು ಬಂದಿದೆ. ಕರಾವಳಿ ಕರ್ನಾಟಕದ ಗ್ರಾಮೀಣ ಸಂಸ್ಕೃತಿಯ ಜೊತೆಗೆ ಜನಪದ ಧರ್ಮವೂ ಒಡವೆರೆದು ಬಾಳುತ್ತ ಬಂದುದನ್ನು ಕಾಣಬಹುದು.

ಆರಾಧನಾ ರಂಗವು ಧಾರ್ಮಿಕಾಚರಣೆಯ ಭಾಗವಷ್ಟೆ? ತುಳುನಾಡಿನಲ್ಲಿ ದೇವಾರಾಧನೆ ಮತ್ತು ದೈವಾರಾಧನೆ ಎಂಬ ಎರಡೂ ರೀತಿಗಳು ಪುರಾತನ ಕಾಲದಿಂದಲೇ ಪ್ರಚಲಿತವಾಗಿವೆ. ದೇವಾಲಯ ಸಂಸ್ಕೃತಿ ಹಾಗೂ ದೈವಾಲಯ ಸಂಸ್ಕೃತಿ ಇಲ್ಲಿ ವಿಮುಖವಾಗಿರದೆ, ಕೆಲವು ವಿಚಾರಗಳಲ್ಲಿ ಪರಸ್ಪರ ಪೂರಕವಾಗಿವೆ. ದೇವಸ್ಥಾನಗಳ ಎಷ್ಟೋ ಕಾರ್ಯಕಲಾಪಗಳೂ, ಹರಕೆ ಸೇವೆಗಳೂ ಜನಪದ ಮನಸ್ಸುಗಳಲ್ಲಿ ಮೂಡಿ ಬಂಧು ರೂಡಿಯಾದ ವಿಷಯಗಳೇ ಆಗಿವೆ. ದೇವರುಗಳಿಗೆ ಗುಡಿಕಟ್ಟಿ ವಿಧವಿಧವಾಗಿ ಪೂಜೆ ಮಾಡುವುದೂ ದೇವಾವೇಶಪೂರ್ವಕ ದೇವರ ಬಿಂಬವನ್ನು ಹೊತ್ತು ಪ್ರದಕ್ಷಿಣೆ ಬರುವುದೇ ಮೊದಲಾದ ಕಲಾಪಗಳೂ ವೇದೋಕ್ತ ವಿಚಾರಗಳೇನಲ್ಲ. ತುಳುನಾಡಿನ ಹಲವು ದೇವಸ್ಥಾನಗಳ ಮೂಲಬಿಂಬ ಅಥವಾ ಶಿವಲಿಂಗಗಳು ಮೊದಲಿಗೆ ಕಾಣಸಿಕ್ಕದ್ದು ದಲಿತವರ್ಗದ ಬೇರೆ ಬೇರೆ ಪಂಗಡಗಳ ಸ್ತ್ರೀ ಪುರುಷರಿಗೆಂದು ಪ್ರತೀತಿ. ದಲಿತವರ್ಗದವರಿಗೆ ಕೆಲವೊಂದು ವಿಶಿಷ್ಟ ಸೇವೆಗಳ ಕರ್ತವ್ಯವೂ ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ. ಅಂತೆಯೇ ದೇವಸ್ಥಾನಗಳಿಗೂ ಆಸುಪಾಸಿನ ದೇವಾಲಯಗಳಿಗೂ ನಿರ್ದಿಷ್ಟ ಬಗೆಯ ಸಾಂಸ್ಕೃತಿಕ ಸಂಬಂಧ ಏರ್ಪಟ್ಟಿರು ವುದುಂಟು.

ದೇವಾಲಯ ಸಂಸ್ಕೃತಿಯೂ ದೈವಾಲಯ ಸಂಸ್ಕೃತಿಯೂ ಮೂಲತಃ ಜನಪದ ಪ್ರಕೃತಿಯದ್ದಾದರೂ ಇವುಗಳ ನಡುವೆ ಕೆಲವೊಂದು ವ್ಯತ್ಯಾಸಗಳೂ ಇವೆ. ದೇವಸ್ಥಾನಗಳಲ್ಲಿ ವೈದಿಕ ವರ್ಗದ ಅರ್ಚಕರ ಮೂಲಕ, ನಿರ್ದಿಷ್ಟ ಆಗಮೋಕ್ತ ಪೂಜಾ ಕಲಾಪಗಳು ನಡೆಯುತ್ತವೆ. ಸಾತ್ವಿಕಾಹಾರವನ್ನು ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ದೇವರ ಅಲಂಕೃತ ಬಿಂಬವನ್ನು ಹೊತ್ತು ಕುಣಿಯುವ ‘ದರ್ಶನ ಪ್ರದಕ್ಷಿಣೆ ಇದ್ದರೂ, ದೇವರಿಗೆ ಪ್ರತ್ಯೇಕ ಪಾತ್ರಿತ್ವ, ಮೌಖಿಕ ಸಂವಾದವ್ಯವಸ್ಥೆ ಇರುವುದಿಲ್ಲ.

ದೈವಸ್ಥಾನಗಳಲ್ಲಿ ಮಂತ್ರಪೂರಿತ ಪೂಜೆಯ ವಾಡಿಕೆಯಿಲ್ಲ. ತಾಂತ್ರಿಕವೆನ್ನಬಹುದಾದ ಕೆಲವು ಪದ್ಧತಿಗಳ ಬಳಕೆ ಇರುವುದುಂಟು. ಪೂಜೆ ಹಾಗೂ ಇತರ ಕೈಂಕರ್ಯಗಳಿಗೆ ವೈದಿಕೇತರ ವರ್ಗದ ಭಿನ್ನ ಭಿನ್ನ ಪಂಗಡಗಳಿಗೆ ಸೇರಿದ ವ್ಯಕ್ತಿಗಳು ಆನುವಂಶಿಕ ಇಲ್ಲವೇ ಇತರ ನೆಲೆಗಳಿಂದ ನೇಮಕವಾಗಿರುತ್ತಾರೆ. ಕ್ವಚಿತ್ತಾಗಿ ಕೆಲವೆಡೆ ಬ್ರಾಹ್ಮಣ ಅರ್ಚಕರೂ ಇರುವುದುಂಟು. ಹೆಚ್ಚಿನ ದೈವಾಲಯಗಳಲ್ಲಿ ನಿತ್ಯಾರ್ಚನೆಯ ಕ್ರಮವಿಲ್ಲ. ಉತ್ಸವಾದಿ ಸಂದರ್ಭಗಳಲ್ಲಿ ಆಯಾ ಸ್ಥಳದ ಪದ್ಧತಿಯಂತೆ ನೈವೇದ್ಯಕ್ಕೆ ವಿವಿಧ ಭಕ್ಷ್ಯಗಳು, ಅಕ್ಕಿ, ಅವಲಕ್ಕಿ, ಅರಳು, ಬೆಲ್ಲ ಬಾಳೆಹಣ್ಣು ಸೀಯಾಳ ಇತ್ಯಾದಿಗಳನ್ನು ಬಳಸುತ್ತಾರೆ. ಕೆಲವೆಡೆ ಮಾಂಸಾಹಾರದ ಎಡೆಯೂ ಇರುತ್ತದೆ. ಸ್ಥಳದ ದೈವದ ಪ್ರಕೃತಿಯನ್ನು ಹೊಂದಿಕೊಂಡು ಕೋಳಿಬಲಿ, ಪ್ರಾಣಿಬಲಿ, ಇರುವುದುಂಟು. ದೈವೋತ್ಸವಗಳು ಹೆಚ್ಚು ವೈವಿಧ್ಯಪೂರ್ನ ಹಾಗೂ ವರ್ಣರಂಜಿತವಾಗಿರುತ್ತವೆ.

ಸಾಂಪ್ರದಾಯಕವಾದ ಇಂಥ ಸಾಂಸ್ಕೃತಿಕ ಕಲಾಪಗಳಲ್ಲಿ ಸಹಜವಾಗಿ ನಮ್ಮ ನಾಡಿನ ಊಳಿಗಮಾನ್ಯ ಪದ್ಧತಿಯ ಅಂಶಗಳು, ಜಾತೀಯ ಶ್ರೇಣಿಬದ್ಧ ವ್ಯವಸ್ಥೆ, ಮಡಿ ಮೈಲಿಗೆ ಇತ್ಯಾದಿಗಳು ಇದ್ದರೂ ಸಮಾಜ ಸ್ವಾಸ್ಥ್ಯಕ್ಕೆ ಸಂಬಂಧಪಡಬಹುದಾದ ಅಂಶಗಳನ್ನು ನಿರ್ಲಕ್ಷಿಸುವಂತಿಲ್ಲ. ಸಮಾಜ ಜೀವಿಯಾದ ಮನುಷ್ಯ ತಾನು ಹುಟ್ಟಿ ಬೆಳೆದ ಜಾತಿ ಪರಿಸರದೊಡನೆ ಸಾಮರಸ್ಯದಿಂದ ಬದುಕಿದರೆ ಸಾಲದು. ವಿವಿಧ ವರ್ಗಗಳನ್ನೊಳಗೊಂಡ ವಿಶಾಲ ಸಮಾಜದೊಂದಿಗೆ ಸಾಂಸ್ಕೃತಿಕ ಸಂಬಂಧವಿಟ್ಟುಕೊಂಡು ಬಾಳುವುದು ಅಪೇಕ್ಷಣೀಯ. ಆಚರಣಾತ್ಮಕವಾಗಿ ಒಟ್ಟುಗೂಡುವಿಕೆಯಲ್ಲಿ ಒಂದು ಬಗೆಯ ಭಾವೈಕ್ಯ ಮೂಡಬಹುದಾದುದನ್ನು ನಿರಾಕರಿಸುವಂತಿಲ್ಲ. ತುಳುನಾಡಿನ ಆರಾಧನಾರಂಗದಲ್ಲಿ ಈ ವಿಚಾರಕ್ಕೆ ವಿಪುಲ ಅವಕಾಶಗಳಿವೆ.

‘ಭೂತರಾಜ್ಯ’ದಲ್ಲಿ ವಿಲಕ್ಷಣವಾದ ಕೋಮುಸಾಮರಸ್ಯ ಇರುವುದನ್ನು ನಾವು ಅಚ್ಚರಿಯಿಂದ ಇದಿರುಗೊಳ್ಳಬಹುದು. ಜಾತೀಯತೆ, ಮತೀಯತೆಗಳನ್ನು ಮೀರಿದ ಒಂದು ಜನಪದ ಧರ್ಮವನ್ನು ನಾವು ಕೆಲವೊಮ್ಮೆ ಜಾನಪದಲೋಕದಲ್ಲಿ ಮಾತ್ರ ಗುರುತಿಸಬಹುದು. ಮತನಿಷ್ಠ ಕರ್ಮಠರೂ, ಧಾರ್ಮಿಕ ಸಿದ್ಧಾಂತಪಟುಗಳೂ ಸಾಮಾನ್ಯವಾಗಿ ಇಂಥ ವಿಚಾರಗಳನ್ನು ಕಾಣಲಾರರು ಹಾಗೂ ಇಷ್ಟಪಡಲಾರರು.

ತುಳುನಾಡಿನಲ್ಲಿ ಆರಾಧಿಸಲ್ಪಡುವ ನೂರಾರು ದೈವಗಳ ಚರಿತ್ರಾತ್ಮಕವಾದ ಪಾಡ್ದನಗಳೆಂಬ ಜನಪದ ಕಾವ್ಯಗಳಿಂದ ತಿಳಿದುಬರುವಂತೆ ಭಿನ್ನ ಭಿನ್ನ ರೀತಿಗಳಿಂದ ಮೂಡಿ ಬಂದ ಹಲವು ಭೂತಗಳನ್ನು ಗುರುತಿಸಬಹುದು. ಮಾನವ ವರ್ಗದಿಂದಲೇ ನಾನಾ ಕಾರಣಗಳಿಂದ ಅಕಾಲಮರಣಹೊಂದಿ ಭೂತತ್ವಕ್ಕೇರಿದವರು ಅನೇಕ. ಅಂಥ ಮನುಷ್ಯ ವರ್ಗದಲ್ಲಿ ವಿವಿಧ ಜಾತಿ ಧರ್ಮದವರು ಸೇರ್ಪಡೆಗೊಳ್ಳುತ್ತಾರೆ. ಶ್ರೇಣೀಬದ್ಧ ಸಮಾಜ ವ್ಯವಸ್ಥೆಯಲ್ಲಿ ಅತಿ ನಿಮ್ನರೆನಿಸುವ ವರ್ಗದಿಂದ ತೊಡಗಿ ಉಚ್ಚ ವರ್ಣೀಯರೆನಿಸುವವರೂ ಭೂತಗಳ ಪಟ್ಟಿಯಲ್ಲಿ ಬರುತ್ತಾರೆ. ಮುಸ್ಲಿಂ ಮೂಲದ ಭೂತಗಳೂ ಜನಪ್ರಿಯವಾಗಿವೆಯೆಂದರೆ ಕೆಲವರಿಗೆ ಆಶ್ಚರ್ಯವಾಗಬಹುದು.

ಕೊರಗ ತನಿಯ, ಕೋಡದಬ್ಬು, ತನ್ನಿಮಾನಿಗ, ಮುಗ್ಗೆರ್ಲು ಮೊದಲಾದವರು ಸಮಾಜದ ಅತ್ಯಂತ ಕೆಳಸ್ತರದಿಂದ ಬಂದವರು. ಕೋಟಿ ಚೆನ್ನಯ, ಕಾಂತಾಬಾರೆ-ಬುದಾಬಾರೆ ಮೊದಲಾದವರು. ಬಿಲ್ಲವ ಸಮಾಜಕ್ಕೆ ಸೇರಿದವರು. ಕಲ್ಕುಡ – ಕಲ್ಲುರ್ಟಿ ಇವರು ಶಿಲ್ಪಿಗಳ ಸಮಾಜಕ್ಕೆ ಸೇರಿದವರು. ನಾಡು ದೈವ, ಬೀರಣಾಳ್ವ, ಸಿರಿಗಳೇ ಮೊದಲಾದವರು ಬಂಟ ಸಮಾಜದವರು, ಮದ್ಮಾಳ್ ಭೂತ ಎಂಬುದು ಬ್ರಾಹ್ಮಣ ವರ್ಗಕ್ಕೆ ಸೇರುತ್ತದೆ. ಉಳ್ಳಾಕುಳು, ಉಳ್ಳಾಲ್ತಿ ಮೊದಲಾದ ದೈವಗಳು ಅರಸು ಮನೆತನದವರಿಗೋ, ಜೈನರಿಗೋ, ಬ್ರಾಹ್ಮಣರಿಗೋ ಸಂಬಂಧಪಟ್ಟವುಗಳೆಂದು ತರ್ಕಿಸಬಹುದು. ಬೊಬ್ಬರ್ಯ ಹಾಗೂ ಆಲಿ ದೈವಗಳು ಮುಸ್ಲಿಂ ಮೂಲದವುಗಳಾಗಿವೆ. ಕೋಟಿ ಚೆನ್ನಯರ ಕೆಲವು ಗರಡಿಗಳಲ್ಲಿ ‘ಮುಸ್ಲಿಂ ಮಕ್ಕಳು’ ಎಂದು ಕರೆಯಲ್ಪಡುವ ವ್ಯಕ್ತಿಗಳ ಮರದ ವಿಗ್ರಹಗಳಿವೆ. ಹೀಗೆ ತುಳುನಾಡಿನ ಅನೇಕ ಸಮಾಜಗಳಿಂದ ಮೂಡಿಬಂದ ದೈವಗಳು ಆರಾಧನೆಯನ್ನು ಹೊಂದುತ್ತಿವೆ. ಭೂತೋತ್ಸವ ಸಂದರ್ಭಗಳಲ್ಲಿ ಊರಿನ ಭಿನ್ನ ಭಿನ್ನ ಸಮಾಜಗಳಿಗೆ ಸೇರಿದ ಪ್ರತಿನಿಧಿಗಳು ಮಾಡಬೇಕಾದ ಕರ್ತವ್ಯಗಳು ಪರಂಪರೆಯಿಂದ ನಿಗದಿಗೊಳಿಸಲ್ಪಟ್ಟಿವೆ. ಕೆಲವು ಭೂತೋತ್ಸವಗಳಿಗೆ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ನಿರ್ದಿಷ್ಟ ಮನೆತನದ ಪ್ರತಿನಿಧಿಗಳು ಹಾಜರಾಗುವಂಥ ರೂಢಿಯಿದೆ. ಮಂಜೇಶ್ವರದ ಸಮೀಪದ ಉದ್ಯಾವರದ ಅರಸು ದೈವಗಳ ಉತ್ಸವಕ್ಕೆ ಮುಂಚಿತವಾಗಿ ಒಂದು ಶುಕ್ರವಾರ ಹತ್ತಿರದ ಮಸೀದಿಯೊಂದಕ್ಕೆ ‘ಸೇಕಮಾರರ’ ಭೇಟಿಗೋಸ್ಕರ ದೈವಗಳು ಮೆರವಣಿಗೆಯೊಂದಿಗೆ ತೆರಳುವ ಪದ್ಧತಿ ಇದೆ. ಉತ್ಸವದ ‘ಕೋಳಿಗೂಟ’ ಎಂಬ ವಿಧಿಯ ಸಂದರ್ಭದಲ್ಲಿ ಮುಸ್ಲಿಂ ಮನೆತನದವರು ಸಾಂಕೇತಿಕವಾಗಿ ಅಂಗಡಿ ವ್ಯಾಪಾರ ಮಾಡುವ ಕ್ರಮವಿದೆ. ಉತ್ಸವದ ವೇಳೆ ಮುಸ್ಲಿಮರಿಗೆ ಮೀಸಲಾದ ಕಟ್ಟೆಯೊಂದರಲ್ಲಿ ಆ ಸಮಾಜದ ಪ್ರತಿನಿಧಿಗಳು ಕುಳಿತು ಕೊಳ್ಳುವ ವಾಡಿಕೆಯಿದೆ.

ಭೂತವನ್ನು ಆವಾಹಿಸಿಕೊಳ್ಳುವ ಪಾತ್ರಿಗಳು, ಬಿಲ್ಲವ, ಬಂಟ, ಗೌಡ, ಗಟ್ಟಿ, ಮೂಲ್ಯ ಮೊದಲಾದ ಸಮಾಜಕ್ಕೆ ಸೇರಿರುತ್ತಾರೆ. ಅಪೂರ್ವಕ್ಕೆ ಬ್ರಾಹ್ಮಣ, ಜೈನ ಪಾತ್ರಿಗಳೂ ಇರುವುದುಂಟು. ಭೂತಕ್ಕೆ ಅಲಂಕಾರಪೂರ್ಣವಾಗಿ ‘ಕಟ್ಟು’ವವರು- ಪಂಬದ, ಪರವ, ನಲಿಕೆ ಮೊದಲಾದ ಸಮಾಜದವರು. ಇವರು ಸಾಮಾಜಿಕವಾಗಿ ಕೆಳವರ್ಗದವರಾದರೂ ಭೂತಾವೇಶಗೊಂಡಾಗ ಉತ್ಸವದ ಕೇಂದ್ರ ಬಿಂದುಗಳಾಗಿ ಇಡೀ ಸನ್ನಿವೇಶವನ್ನು ಆಳುವಂಥವರಾಗುತ್ತಾರೆ. ಅನೇಕ ಕ್ಲಿಷ್ಟವಾದ ನ್ಯಾಯಗಳನ್ನು ಈ ‘ಬಾಯಿ ಬರುವ ಭೂತಗಳು’ ಬಿಡುಸುತ್ತವೆ. ಭೂತಗಳ ಮೇಲಿನ ಭಯ ಭಕ್ತಿಗಳ ದೆಸೆಯಿಂದಾಗಿ ಹಲವು ಸಮಸ್ಯೆಗಳು ಈ ಜನಪರ ನ್ಯಾಯಪದ್ಧತಿಯಲ್ಲಿ ಬಿಡಿಸಲ್ಪಡುವುದು ಗಮನೀಯ.

ಗ್ರಾಮಕ್ಕೆ ಸಂಬಂಧಪಟ್ಟ ‘ನೇಮ’ವಾದರೆ ಆ ಗ್ರಾಮದ ಪ್ರತಿಯೊಂದು ವರ್ಗದ ವ್ಯಕ್ತಿಗಳು ಒಂದಲ್ಲ ಒಂದು ವಿಧದಿಂದ ಆ ಉತ್ಸವಕ್ಕೆ ಸಂಬಂಧಪಡುವಂತೆ ಸಮಾರಂಭವು ರೂಪುಗೊಂಡಿರುತ್ತದೆ. ಧೂಪ, ದೀಪ, ಹೋಮದ ಸೇವೆ, ಭೂತದ ಪಾತ್ರಿಗಳಾಗಿ ಆವೇಶಗೊಳ್ಳುವುದು. ಭೂತದ ‘ಮೊಗ’(ಮುಖವಾಡ) ಹಿಡಿದುಕೊಳ್ಳುವುದು, ‘ಬದಿಕರ’ ಹಿಡಿದುಕೊಳ್ಳುವುದು, ದೀವಟಿಗೆ ಹಿಡಿಯುವುದು. ‘ಕೊಡಿ’ ಹಾಕುವುದು, ಪಲ್ಲಕ್ಕಿ ಹೊರುವುದು, ಕೊಡೆ ಹಿಡಿಯುವುದು. ‘ಮಾರಿ ಸೂಟೆ’ ಕಟ್ಟುವುದು, ನೈವೇದ್ಯ ಸಿದ್ಧಗೊಳಿಸುವುದು ಇತ್ಯಾದಿ. ಗ್ರಾಮಸ್ಥರೆಲ್ಲರ ಮನೆಗಳಿಂದ ಸೀಯಾಳ, ತೆಂಗಿನ ಸಿರಿ, ಅಕ್ಕಿಯ ರೂಪದಲ್ಲೋ, ನಗದಿನ ರೂಪದಲ್ಲೋ ವಂತಿಗೆ ಸಂಗ್ರಹಿಸಲ್ಪಡುತ್ತದೆ. ಗ್ರಾಮದ ಎಲ್ಲ ವರ್ಗಗಳ ಪ್ರತಿನಿಧಿಗಳೂ ಒಂದೆಡೆ ಕಲೆತು ನಡೆದುಕೊಳ್ಳುವ ಈ ವ್ಯವಸ್ಥೆಯ ಹಿಂದೆ ಸಹಕಾರ ಪ್ರವೃತ್ತಿ, ತ್ಯಾಗ, ಸಮಾಜಪ್ರೇಮ, ಸಾಮೂಹಿಕ ಕ್ಷೇಮ ಚಿಂತನ ಮುಂತಾದ ಮೌಲ್ಯಗಳ ಎಳೆಗಳು ಗೊಣಸುಗೊಂಡಿವೆ. ದಾನ, ಧರ್ಮ, ಪುಣ್ಯ, ಸೇವೆ ಎಂಬ ಭವ್ಯ ಕಲ್ಪನೆಗಳೂ ಸೇರಿ ಇಂಥ ಸಮಾರಂಭಗಳಿಗೆ ಪ್ರತ್ಯೇಕ ಘನತೆಯನ್ನು ಹೊಳಪನ್ನೂ ನೀಡುತ್ತವೆ.

ಹತ್ತು ಮಂದಿಯ ಸಮ್ಮುಖದಲ್ಲಿ ಆಗುವ ನ್ಯಾಯ ತೀರ್ಮಾನ, ಭೂತದ ಅಭಯ ವಾಕ್ಯ ಇವುಗಳಿಂದ ಮನಸ್ಸಿಗೊಂದು ಖಚಿತತೆ, ಧೈರ್ಯ, ಆಶಾವಾದ ಮೂಡಿ ಜೀವನದ ಸಮಸ್ಯೆಗಳನ್ನು ಇದಿರಿಸಲು ತಕ್ಕಮಟ್ಟಿಗೆ ಆತ್ಮಸ್ಥೈರ್ಯ ಒದಗಬಹುದಾದುದನ್ನು ಅಲ್ಲಗಳೆಯುವಂತಿಲ್ಲ.

ಕುಟುಂಬದ ಭೂತಗಳಿಗೆ ಸಲ್ಲಿಸುವ ಅಗೆಲು, ಕೋಲ -ಇತ್ಯಾದಿ ಸಂದರ್ಭಗಳಲ್ಲಿ ಸಂಬಂಧ ಪಟ್ಟವರು ಒಂದೆಡೆ ಕಲೆತು ಊಟ, ಉಪಚಾರಗಳನ್ನು ಹೊಂದುವ, ಮಾತುಕತೆಯಾಡುವ, ನಗುವ, ಕಲೆಯುವ, ಪ್ರೀತಿ, ವಿಶ್ವಾಸಗಳನ್ನು ಪ್ರಕಟಿಸುವ ಅಪೂರ್ವ ಸನ್ನಿವೇಶದಿಂದ ಲಭಿಸುವ ಕೌಟುಂಬಿಕ ಪ್ರಯೋಜನ ಅತ್ಯಂತ ವಿಶೇಷವಾದುದು. ಪರಸ್ಪರ ಮನಸ್ತಾಪವಿದ್ದಲ್ಲಿ ಅಂಥ ದಿನಗಳಲ್ಲಿ ಅದು ಸಾಮಾನ್ಯವಾಗಿ ದೂರವಾಗುತ್ತದೆ. ಎಲ್ಲರೂ ಒಮ್ಮನಸ್ಸಿನಿಂದ ಮಾಡಿದ ಕಾರ್ಯದಿಂದ ಮಾತ್ರವೇ ದೈವ ದೇವರುಗಳಿಗೆ ತೃಪ್ತಿಯೆಂಬ ನಂಬಿಕೆಯಿಂದಾಗಿ ತಾತ್ಕಾಲಿಕವಾದ ಸಿಟ್ಟು ಸೆಡವುಗಳನ್ನು ಜನ ಮರೆತು ನಡೆಯುತ್ತಾರೆ. ಕೋಪ ತಾಪಗಳಿದ್ದರೆ ದೈವಕ್ಕೆ ಈಡು ಪಾಡು ಇಟ್ಟು ಜಗಳವನ್ನು ಮುಗಿಸುತ್ತಾರೆ. ಮುರಿದ ಬಂಧುತ್ವವನ್ನು ಪುನಃ ಬೆಸೆಯುವ ಈ ವ್ಯವಸ್ಥೆ ತುಂಬ ಶ್ಲಾಘನೀಯವೆನ್ನಬೇಕು.

ತುಳುನಾಡಿನಲ್ಲಿ ಭೂತಗಳನ್ನು ‘ಸತ್ಯೊಳು’ ಎಂದು ಕರೆಯಲಾಗುತ್ತದೆ ಎಂಬುದು ಗಮನೀಯ. ‘ಸತ್ಯ’ ಎಂಬುದು ಎಷ್ಟು ಉನ್ನತವಾದ ಕಲ್ಪನೆ ಎಂದು ಭಾವಿಸುವಾಗ, ಭೂತಾರಾಧನೆಯನ್ನು ಐರೋಪ್ಯ ಲೇಖಕರು ‘Devil worship’ ಎಂದು ತಪ್ಪಾಗಿ ನಿರೂಪಿಸಿದ್ದಾರೆ ಎಂದು ಹೇಳಬೇಕೆನಿಸುತ್ತದೆ. ‘ಸತ್ಯದ ಚಿತ್ತ’, ‘ಸತ್ಯವು ನೋಡಿದ ಹಾಗೆ ಇರಲಿ!’ ‘ಸತ್ಯಕ್ಕೆ ಯಾವಾಗಲೂ ಹದಿನಾರೇ ವಯಸ್ಸು!’ ಇತ್ಯಾದಿ ಉದ್ಗಾರಗಳು ಭೂತಗಳ ವಿಚಾರದಲ್ಲಿ ತುಳುನಾಡಿನಲ್ಲಿ ಸಾಮಾನ್ಯ.

ದೈವಕ್ಕೆ ಪ್ರಾರ್ಥನೆ ಸಲ್ಲಿಸುವಾಗ ಜನಪದ ಮನಸ್ಸು ಮಿಡಿಯುವ ಬಗೆ

‘‘ಪತ್ತ್ ಕೂಡ್ದಿನ ತಳೊಟು ಮುತ್ತುಂಡುಗೇಂದ್ ಹಿರಿಯೆರ್ ಮಲ್ತಿ ಕಟ್ಟ್. ಎಂಕುಳು ತೆರಿಯಂದಿ ನರಮಾನಿಲು. ನಿಕುಳು ಮಾಮಲ್ಲ ಸತ್ಯೊಲು. ಎಡ್ಡೆ ಮಲ್ತಿನಾಯಗ್ ಅಮುರ್ತೊದ ಮಿರೆನ್ ಕೊರ್ದು, ಹಾಳ್ ಮಲ್ತಿನಾಯಗ್ ವಿಷತ್ತ ಮಿರೆನ್ ಕೊರ್ತಿನ ದೈವೊಲು ನಿಕುಲು. ಇತ್ತೆ ನಮ ಮಲ್ತಿ ಹೋಮೊಡು ಕಟ್ಟಿ ತಿರಿಟ್, ಗೋತಿ ಗಗ್ಗಗೊಡು, ಬಳಸಿ ಪಸಾರ್ನೆಡ್, ಕೊಡತಿ ಬೊಂಡೊಡು ಶುಭನಾ, ಅಶುಭನಾ, ಉರಿಯಾ ಸಿರಿಯಾ, ಲಾಭನಾ ನಷ್ಟನಾ ಅಂದ್‌ದ್ ನಂಕ್ ಪಣ್ಯೆರ ಬಲ್ಲಿ. ನೇಮದ ಎಚ್ಚಿಗ್ ಉಂತುದಿನ. ಪತಿಮಾನಿ ಮಿತ್ತ್ ಮುಕ್ಕಾಲ್ ಮೂಜಿಗಳಿಗೆ ವಸಯ ಆದ್, ಪೊರ್ಲುದ ನಾಲ್ ಅಭಯೊನು ಕೊರ್ದು, ಜಾಗೆದ ಕಲೆ ತಗ್ಗಂದಿ ಲೆಕ್ಕೊ, ಮಣ್ಣ್‌ಗ್ ಕೊರತೆ ಬರಂದಿಲೆಕ್ಕೊ, ನಾಲ್ ಕೋಡಿದ ಮುಗಲ್ ಒಂಜಿ ಕೋಡಿಗ್ ಸೆಲಿಪಾದ್, ಈರೆನ್ ನಂಬಿ ಕರ್ತವಗ್ ಎರುಕು ಇಣೆ, ಬಿತ್ತ್‌ಗ್ ಮುದೆಲ್, ಸಂತಾನೊಗು ಸಾಯಿರ ಮಲ್ತ್‌ದ್, ಮೇಲ್ ಕಾಲೊಗು ಉಂದೆಡ್ದ್ ಹೆಚ್ಚಿಗೆ ಮಲ್ಪಾವೊಡು. ಜನೊಕುಲು ದೈವೊನು ಬುಡಿಜೆರಿಗೆ, ದೈವೊ ಜನಕುಲೆನ್ ಬುಡುಜಿಗೆ ಪನ್ಪಿನ ಕೀರ್ತಿ ಕಣಪಾವೊಡು.’’

(ಹತ್ತು ಸಮಸ್ತರು ಕೂಡಿದ ಸ್ಥಳದಲ್ಲಿ ಮುತ್ತು(ಉತ್ತಮಿಕೆ) ಇದೆಯೆಂದು ಹಿರಿಯರು ಮಾಡಿದ ಕಟ್ಟಳೆ. ನಾವು ತಿಳಿಯದ ಮನುಷ್ಯರು. ನೀವು ಬಲು ದೊಡ್ಡ ಸತ್ಯವಾಗಿದ್ದೀರಿ. ಒಳ್ಳೆಯದನ್ನು ಮಾಡಿದವನಿಗೆ ಅಮೃತದ ಮೊಲೆಯನ್ನು ಕೊಟ್ಟು, ಹಾಳು ಮಾಡಿದವನಿಗೆ ವಿಷದ ಮೊಲೆಯನ್ನು ಕೊಟ್ಟ ದೈವಗಳು ನೀವು. ಈಗ, ನಾವು ಮಾಡಿದ ಹೋಮದಲ್ಲಿ, ಕಟ್ಟಿದ ಎಳೆ ತೆಂಗಿನ ಗರಿಯಲ್ಲಿ, ಧರಿಸಿದ ಗಗ್ಗರದಲ್ಲಿ, ಬಡಿಸಿದ ಎಡೆಯಲ್ಲಿ ಕೆತ್ತಿಟ್ಟ ಸೀಯಾಳದಲ್ಲಿ ಶುಭವೋ ಅಶುಭವೋ ಉರಿಯೋ ಸಿರಿಯೋ, ಲಾಭವೋ ನಷ್ಟವೋ ಎಂದು ನಮಗೆ ಹೇಳಲು ಸಾಧ್ಯವಿಲ್ಲ. ನೇಮದ ಪಾತ್ರಿಯ ಮೇಲೆ ಮುಕ್ಕಾಲು ಮೂರುಗಳಿಗೆ ಆವೇಶ ಹೊಂದಿ, ಸೊಗಸಾದ ನಾಲ್ಕು ಅಭಯ ವಾಕ್ಯ ಹೇಳಿ, ಸ್ಥಳದ ಮಹಿಮೆ ತಗ್ಗದ ಹಾಗೆ, ಮಣ್ಣಿಗೆ (ಕ್ಷೇತ್ರಕ್ಕೆ) ಕೊರತೆ ಬಾರದಂತೆ, ನಾಲ್ಕು ಕಡೆಯ ಮೋಡಗಳನ್ನು ಒಂದು ಕಡೆಗೆ ನೀಗಿಸಿಕೊಟ್ಟು, ನಿಮ್ಮನ್ನು ನಂಬಿದ ಯಜಮಾನನಿಗೆ ಕೋಣಕ್ಕೆ ಜೊತೆ, ಬಿತ್ತನೆಗೆ ನೆಲ(ಒದಗಿಸಿ) ಸಂತಾನವನ್ನು ಸಾವಿರ ಮಾಡಿ ಮುಂದಿನ ವರ್ಷಕ್ಕೆ ಇದಕ್ಕಿಂಥ ಹೆಚ್ಚಾಗಿ ಮಾಡಿಸಿ ಕೊಳ್ಳಬೇಕು. ಜನರು ದೈವವನ್ನು ಬಿಡಲಿಲ್ಲವಂತೆ, ದೈವ ಜನರನ್ನು ಬಿಡಲಿಲ್ಲವಂತೆ ಎಂಬ ಕೀರ್ತಿ ತರಬೇಕು.)

ಭೂತದ ಅಭಯ ವಾಕ್ಯಗಳಲ್ಲೂ ಒಕ್ಕಟ್ಟು, ಒಮ್ಮತಗಳ ವಿಚಾರ ಅನೇಕ ವೇಳೆ ಕಾಣಿಸಿಕೊಳ್ಳುತ್ತದೆ. ಹತ್ತು ತಾಯಂದಿರ ಮಕ್ಕಳನ್ನು ಒಕ್ಕಟ್ಟಿನಲ್ಲಿ ನಿಲ್ಲಿಸಿ, ಗೊನೆಯಿಂದ ಹಣ್ಣು, ಕಟ್ಟಣದಿಂದ ಕಲ್ಲು ಕದಲದಮತೆ ನಾನು ನೋಡಿಕೊಳ್ಳುತ್ತೇನೆಂಬುದು ದೈವ ನೀಡುವ ಭರವಸೆ. ಇಡೀ ರಾಜ್ಯಕ್ಕೆ ನಾನು ಕ್ಷೇಮವನ್ನು ಕಲ್ಪಿಸುವುದಾಗಿಯೂ, ಅನಿಷ್ಟವನ್ನು ಹೋಗಲಾಡಿಸುವುದಾಗಿಯೂ ದೈವವು ಆಡುವ ನುಡಿ ಸರ್ವರ ಶುಭವನ್ನು ಕೋರುತ್ತದೆ.

ಯಾವುದೇ ಉತ್ಸವವು ಭಾವೈಕ್ಯಕ್ಕೆ ಉತ್ತಮ ಮಾಧ್ಯಮವಾಗುತ್ತದೆ. ಭೂತೋತ್ಸವಗಳೂ ಇದಕ್ಕೆ ಹೊರತಲ್ಲ. ಯಾವುದೇ ಒಂದು ವಿಶಿಷ್ಟ ಕಾರಣ ಮೂಲವಾಗಿ ಭಿನ್ನ ಭಿನ್ನ ಸ್ತರದ ಜನ ಒಂದೆಡೆ ಸ್ವಲ್ಪ ಹೊತ್ತು ಸೇರುವುದೇ ಸ್ವಲ್ಪ ಮಟ್ಟಿನ ಭಾವ ಸಾಮರಸ್ಯಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಭೂತಾರಾಧನಾ ಸಂದರ್ಭದಲ್ಲಿ ಭಯಭಕ್ತಿ ಕಾರಣವಾಗಿ ಒಂದು ವಿಶಿಷ್ಟ ಪರಿಸರ ನಿರ್ಮಾಣವಾಗುತ್ತದೆ. ಇದಲ್ಲದೆ, ಮನಸ್ಸಿಗೆ ರಂಜನೆ ನೀಡುವ ಅಂಶಗಳೂ ದೈವೋತ್ಸವ ಸಂದರ್ಭದಲ್ಲಿ ಜರಗುತ್ತವೆ. ಸತ್ತಿಕಲ್ಲು ಎತ್ತುವುದು, ತಪ್ಪಂಗಾಯಿ, ಸೂಟೆದಾರೆ, ಚೆಂಡು ಮೊದಲಾದ ಕ್ರೀಡೆಗಳು ಉತ್ಸವದ ಅಂಗಗಳಾಗಿ ಕೆಲವು ಕಡೆ ನಡೆಯುತ್ತವೆ. ಇಂಥವು ಸಾಮಾಜಿಕ ಸಾಮರಸ್ಯದಲ್ಲಿ ಮುಖ್ಯಪಾತ್ರವಹಿಸುತ್ತವೆ. ಕ್ರೀಡಾ ಮನೋಭಾವಕ್ಕೂ ಪೋಷಕವಾಗಿವೆ.

ಕೆಲವು ಬಾರಿ ಪ್ರಾಕೃತಿಕ ಅನಿಷ್ಟಗಳು ಸಂಭವಿಸಿದಾಗ, ಮಳೆ ಸರಿಯಾಗಿ ಬಾರದೆ ಇದ್ದಾಗ ಊರವರೆಲ್ಲರೂ ಒಂದಾಗಿ ಪ್ರಾರ್ಥಿಸಿ ವಿಶೇಷ ಹರಕೆಯ ಉತ್ಸವಗಳನ್ನು ಜರಗಿಸುವುದುಂಟು. ಅಂಥ ಸಂದರ್ಭದಲ್ಲಿ ಎಲ್ಲರೂ ವಂತಿಗೆ ತೆತ್ತು ನಿರ್ದಿಷ್ಟ ಕಲಾಪಗಳನ್ನು ನಡೆಸುತ್ತಾರೆ. ಅನಿರೀಕ್ಷಿತ ಸಂಭವಗಳಿಗೆ ಹೀಗೆ ಒಟ್ಟಾಗಿ ಸ್ಪಂದಿಸುತ್ತಾರೆ.

ಕೆಲವು ದೈವಸ್ಥಾನಗಳ ಉತ್ಸವಕಾಲದಲ್ಲಿ ಇಸ್ಲಾಂ ಧರ್ಮದ ಹಾಗೂ ಕ್ರೈಸ್ತಧರ್ಮದ ಕೆಲವು ಮನೆತನದವರು ಕಾಣಿಕೆ ಅರ್ಪಿಸಿ, ಭಾಗವಹಿಸಿ ಪ್ರಸಾದ ಸ್ವೀಕರಿಸುವ ಕ್ರಮವಿದೆ. ವಾದ್ಯವೃತ್ತಿ, ಸಿಡಿಮದ್ದು, ಸಿಡಿಸುವಿಕೆ, ‘ಮದು’ (ದೈವಬಿನ್ನಹ) ಹೇಳುವುದು, ತೇರುಕಟ್ಟುವುದು, ಆಭರಣ ತಯಾರಿ ಮೊದಲಾದ ಸೇವೆಗಳನ್ನು ಕೆಲವು ಕಡೆ ಮುಸ್ಲಿಂ ವ್ಯಕ್ತಿಗಳು ನಿರ್ವಹಿಸುವುದುಂಟು.

ಒಬ್ಬರ್ಯ, ಆಲಿದೈವ ಮೊದಲಾದ ಮುಸ್ಲಿಂ ಮೂಲದ ದೈವಗಳು ತುಳುನಾಡಿನ ಆರಾಧನಾರಂಗದಲ್ಲಿರುವುದು ಕೋಮುಸಾಮರಸ್ಯದ ದೃಷ್ಟಾಂತವಾಗಿದೆ. ಕೋಟಿಚೆನ್ನಯರ ಕೆಲವು ಗರಡಿಗಳಲ್ಲಿ ‘ಮುಸ್ಲಿಂ ಮಕ್ಕಳು’ ಎಂದು ಕರೆಯಲ್ಪಡುವ ವ್ಯಕ್ತಿಗಳ ವಿಗ್ರಹಗಳಿವೆ. ಕುಂಬಳೆಯ ಆರಿಕ್ಕಾಡಿ ಭಗವತೀ ಕ್ಷೇತ್ರದಲ್ಲಿ ‘ಆಲಿಚಾಮುಂಡಿ’ ಎಂಬ ವಿಶಿಷ್ಟ ದೈವಕ್ಕೂ ಆರಾಧನೆ ಸಲ್ಲುತ್ತದೆ. ಈ ಸಂದರ್ಭದಲ್ಲಿ ಮುಸ್ಲಿಂ ಸ್ತ್ರೀಪುರುಷರೂ ಬಂದು ಭಾಗವಹಿಸಿ ಆಲಿದೈವದಿಂದ ಸಾಂತ್ವನವನ್ನೂ, ಪ್ರಸಾದವನ್ನೂ, ಪಡೆಯುವುದಿದೆ. ಕೆಲವೊಮ್ಮೆ ಮುಸ್ಲಿಮರೂ ಕ್ರೈಸ್ತರೂ, ಕೋಲ, ತಂಬಿಲ ಇತ್ಯಾದಿ ಸೇವೆಗಳನ್ನು ಮಾಡಿಸುವುದುಂಟು. ಪ್ರಾದೇಶಿಕ ಜನಪದ ಸಂಸ್ಕೃತಿಗೆ ಸ್ಪಂದಿಸುವ ಮನಸ್ಸೇ ಇದಕ್ಕೆ ಕಾರಣ.

ಉಳ್ಳಾಲ, ಕಾಜೂರು ಮುಂತಾದ ದರ್ಗಾಗಳಲ್ಲಿ ‘ಉರೂಸು’ ಉತ್ಸವ ನಡೆಯುವಾಗ ಹಿಂದೂ ಸಮಾಜದ ಅನೇಕ ಮಂದಿ ಅಲ್ಲಿಗೆ ತೆರಳಿ ಕಾಣಿಕೆಯಿಕ್ಕಿ, ಪ್ರಸಾದ ಪಡೆಯುವುದುಂಟು. ಕೆಲವರು ಉತ್ಸವದ ಊಟಕ್ಕಾಗಿ ಆಡುಗಳ ಹರಕೆಯೊಪ್ಪಿಸುವುದೂ ಉಂಟು. ದರ್ಗಾ ಸಂಸ್ಕೃತಿಯಾಗಲೀ, ಉರೂಸು ಉತ್ಸವವಾಗಲೀ ಜನಪದ ಧರ್ಮಕ್ಕೆ ಸೇರಿದ್ದು. ಇದನ್ನು ಒಪ್ಪದ ಮುಸ್ಲಿಂ ಪಂಗಡಗಳೂ ಇವೆ. ಆದರೆ ಜನಪದರು ಉತ್ಸವಪ್ರಿಯರಾದುದರಿಂದ ಇಂಥ ಜನಪದ ಪೂಜೆ, ಜಾತ್ರೆಗಳು ವಾಡಿಕೆಗೆ ಬಂದಿವೆ. ಕೆಲವು ವರ್ಷಗಳ ಹಿಂದೆ ಮೊಹರಂ ಉತ್ಸವ ಸಂದರ್ಭದಲ್ಲಿ ಹಿಂದುಗಳು ಹುಲಿವೇಷ ಹಾಕಿ ಕುಣಿಯುತ್ತಿದ್ದುದುಂಟು ಒಂದು ಹರಕೆಯಂತೆಯೂ ಈ ಸೇವೆಯನ್ನು ನಿರ್ವಹಿಸುತ್ತಿದ್ದುದೂ ಇದೆ. ಮೊಹರಂ ಹಬ್ಬದ ವೇಳೆ ಕೆಲವು ಮುಸ್ಲಿಂ ಶ್ರದ್ಧಾಳುಗಳು ಪವಿತ್ರ ಖಡ್ಗದಿಂದ ದೇಹಕ್ಕೆ ಫೂತ ಮಾಡಿಕೊಂಡೂ, ಕೆಂಡದ ರಾಶಿಯ ಮೇಲೆ ನಡೆದೂ ದೇಹದಂಡನೆ ಮಾಡಿಕೊಳ್ಳುವ ಪದ್ಧತಿ ಇತ್ತು. ಇದೂ ಪ್ರಾದೇಶಿಕ ಜನಪದ ಧಾರ್ಮಿಕ ಕಲಾಪಗಳ ಪ್ರಭಾವದಿಂದ ರೂಢಿಗೊಂಡ ವಿಚಾರವೆನ್ನಬಹುದು.

ಕ್ರೈಸ್ತರು ಆಚರಿಸುವ ‘ತೆನೆಹಬ್ಬ’(ಕುರಲ್ ಪರ್ಬ-ತುಳು) ಇಲ್ಲಿನ ಪ್ರಾದೇಶಿಕ ‘ತೆನೆಹಬ್ಬ’, ‘ಮನೆತುಂಬಿಸುವುದು’ ಮೊದಲಾದ ಆಚರಣೆಗಳಿಂದ ಪ್ರಭಾವಿತವಾಗಿದೆ ಯೆನ್ನಲಡ್ಡಿಯಿಲ್ಲ.

ಗ್ರಾಮೀಣ ಸಂಸ್ಕೃತಿಯಲ್ಲಿ ಪ್ರತಿಯೊಂದು ಕಾರ್ಯವನ್ನು ಮೊದಲಿಗೆ ದೇವರ ಅಥವಾ ದೈವದ ಹೆಸರಲ್ಲಿ ಸ್ವಸ್ತಿಕ (‘ಸುತ್ತಿಗೆ’) ಇಟ್ಟು ಪ್ರಾರ್ಥನೆ ಸಲ್ಲಿಸುವ ಕ್ರಮವಿದೆ. ಇದನ್ನು ‘ದೇವರು ಇಡುವುದು’ ಎಂದೂ ಹೇಳುತ್ತಾರೆ. ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ ಹಾಗೂ ಸ್ವಲ್ಪ ಹಣವನ್ನು ಕಾಣಿಕೆಯಾಗಿಟ್ಟು ಊದಿನ ಬತ್ತಿ ಹಚ್ಚುತ್ತಾರೆ. ಪ್ರಾರ್ಥನೆಯ ಉದ್ದೇಶವನ್ನು ಹೇಳಿ ಯಾವುದೇ ವಿಘ್ನ ವಿಡ್ಡೂರ ಬಾರದಿರಲಿ ಎಂದು ಕುಟುಂಬದ ಹಾಗೂ ಊರಿನ ದೈವದೇವರುಗಳಲ್ಲಿ ಹಿರಿಯರ ಮೂಲಕ ಪ್ರಾರ್ಥಿಸುತ್ತಾರೆ. ಮಾತ್ರವಲ್ಲದೆ ಕೆಲವೊಂದು ಹರಕೆಗಳನ್ನು ಹೊರುತ್ತಾರೆ. ದೇವಸ್ಥಾನ, ದೈವಸ್ಥಾನಗಳಲ್ಲದೆ, ಪರಿಸರದ ಮಸೀದಿ, ಇಗರ್ಜಿಗಳಿಗೂ ಎಣ್ಣೆ, ಮೊಂಬತ್ತಿ ಮೊದಲಾದ ಹರಕೆಗಳನ್ನು ಹೇಳುತ್ತಾರೆ.

ಕಷ್ಟಕಾಲದಲ್ಲಿ ಹಾಗೂ ವೃತ್ತಿ ವ್ಯವಸಾಯಗಳನ್ನು ತೊಡಗುವಾಗ ಕೆಲವೊಂದು ಹರಕೆಗಳನ್ನು ಹೊರುವುದುಂಟು. ‘ಈಡ್‌ದ ಕಾಣಿಕೆ’ (ಕಾಯಿಲೆ ಕಸಾಲೆ ಬಂದಾಗ ದೈವಕ್ಕೆ ಮೀಸಲಿರಿಸಿದ ಕಾಣಿಕೆ) ‘ಕೇರ್ಪು’ದ ಪಣವು, ‘ಮೂತೆದ ಪಣವು’ (ಕಳ್ಳು ಇಳಿನಲು ತಾಳೆಮರಕ್ಕೆ ಹತ್ತುವ ಮೊದಲಿಗೆ ಹೇಳುವ ಹರಕೆ), ‘ನುಗತ್ತ ಪಣವು (ಮೊದಲ ಬಾರಿಗೆ ಹೋರಿ ಅಥವಾ ಕೋಣಗಳಿಗೆ ನೊಗ ಇಡುವಾಗ ಹೇಳಿಕೊಳ್ಳುವ ಹರಕೆ) ಇವು ಇಂತಹ ಹರಕೆಗಳು ಕೆಲವು.

ಉತ್ಸವಗಳೆಂದರೆ ಸಂಭ್ರಮಿಸುವ ತುಳುನಾಡಿನವರು ಸ್ಥಳೀಯ ದೇವಸ್ಥಾನ, ದೈವಸ್ಥಾನಗಳ ಉತ್ಸವಗಳಲ್ಲಿ ಪಾಲುಗೊಳ್ಳುವುದಲ್ಲದೆ, ಗಣೇಶನ ಚೌತಿ, ಕೃಷ್ಣಾಷ್ಟಮಿ, ದಸರಾ, ದೀಪಾವಳಿ, ನಾಗರಪಂಚಮಿ ಇತ್ಯಾದಿ ಹಬ್ಬಗಳನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ. ಇದಲ್ಲದೆ, ಸಂಕ್ರಮಣ, ಕದಿರುಹಬ್ಬ, ಕೆಡ್ಡಸ ಮೊದಲಾದ ಹಬ್ಬಗಳನ್ನೂ ವಿಶಿಷ್ಟವಾಗಿ ಆಚರಿಸುತ್ತಾರೆ. ಹೊಸ ವರ್ಷದ ಆರಂಭ ದಿನವಾದ ವಿಷು ವಿನಂದು ಮನೆಗಳಲ್ಲೂ ದೈವಾಲಯಗಳಲ್ಲೂ ವಿವಿಧ ಹಣ್ಣುಹಂಪಲುಗಳನ್ನು ದೇವರಿಗೆ ‘ಕಣಿ’ ಇಡುವ ಕ್ರಮವಿದೆ. ಕಿರಿಯರು ಹಿರಿಯರೆಲ್ಲರ ಕಾಲುಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡುವ ವಾಡಿಕೆ ಉಲ್ಲೇಖನೀಯ. ಕದಿರು ಹಬ್ಬ ಹೊಲದಲ್ಲಿ ಪೈರು ಹಣ್ಣಾಗುವ ಕಾಲದಲ್ಲಿ ನಡೆಯುವ ಆಚರಣೆ. ತೆನೆಯಲ್ಲಿ ವಿಧಿವತ್ತಾಗಿ ಕೊಯ್ದು ತಂದು ಮನೆತುಂಬಿಸುವ’ ಈ ಆಚರಣೆಯನ್ನು‘ಧಾನ್ಯಲಕ್ಷ್ಮಿ’ಯ ಪೂಜೆಯೆಂದರೂ ಸಲ್ಲುವುದು. ದೇವಸ್ಥಾನ, ನಾಗಬನಗಳಲ್ಲೂ ಕದಿರುಕಟ್ಟುವ ವಿಧಿ ನಡೆಯುತ್ತದೆ.

ಕೆಡ್ಡಸವು ಭೂಮಿದೇವಿಯು ರಜಸ್ವಲೆಯಾಗುವುದನ್ನು ಸಂಕೇತಿಸುವ, ಫಲವಂತಿಕೆಯ ಆಶಯವುಳ್ಳ ಪ್ರಕೃತಿ ಪೂಜೆಯ ಒಂದು ಜನಪದ ವಿಧಾನ. ಸೋಣ ತಿಂಗಳು ಪುಣ್ಯದ ತಿಂಗಳೆಂದು ಪರಿಗಣಿತವಾಗಿದೆ. ಸೋಣ ಸಂಕ್ರಾಂತಿಯಂದು ದೈವಗಳು ‘ದರ್ಶನ’ದಲ್ಲಿ ‘ಹರಿಯುವ ಇರುವೆಯಿಂದ ತೊಡಗಿ ಹಾರುವ ಹಕ್ಕಿಗಳವರೆಗೆ’ ಆಹಾರವನ್ನು ನೀಡ ಬೇಕೆಂದೂ, ಜನರಿಗೆ ಅನ್ನದಾನ ಕೊಡಬೇಕೆಂದೂ ನುಡಿಕೊಡುವುದಿದೆ. ಸರ್ವಜೀವಿಗಳಿಗೂ ಹಂಚಿ ಉಣ್ಣಬೇಕೆಂಬ ಧಾರ್ಮಿಕ ಹೊಳಹು ಇಲ್ಲಿದೆ.

ದೀಪಾವಳಿಯ ವೇಳೆ, ಬಲಿಪಾಡ್ಯದಂದು ಬಲೀಂದ್ರ ಪೂಜೆಯ ಸನ್ನಾಹಗೈದು ಆತನ ಆಗಮನವನ್ನು ನಿರೀಕ್ಷಿಸುವಲ್ಲಿ, ಹಿಂದೆಂದೋ ಈ ನಾಡನ್ನು ಆಳಿ ಜನಪ್ರಿಯನಾಗಿದ್ದಿರ ಬಹುದಾದ ಅರಸನೊಬ್ಬನನ್ನು ಕೃತಜ್ಞತೆಯಿಂದ ಸಾಮೂಹಿಕವಾಗಿ ಸ್ಮರಿಸಿ ಗೌರವಿಸುವ ಸಂಕೇತವಿದೆಯೆನ್ನಬಹುದು. ಬಲೀಂದ್ರನ ‘ಸಂಧಿ’ಯಲ್ಲಿಯೂ ‘ಮೂರುಹೆಜ್ಜೆ’ ಭೂಮಿ ದಾನದ ವಿಚಾರ ಬರುತ್ತದೆ. ಆದರೆ ಇಲ್ಲಿ ಬಲೀಂದ್ರ ಭೂಮಿಯಾಚನೆಗೈದ ‘ಮಾಯದ ಮಾಣಿ’ (ವಟು ವಾಮನ)ಯೊಡನೆ, ‘ಈ ಮೂರು ಹೆಜ್ಜೆ ನೆಲದಲ್ಲಿ ಏನು ಮಾಡಬಲ್ಲಿರಿ?’ ಎಂದು ಕೇಳಿದಾಗ ಮಾಯದ ಮಾಣಿ ಹೇಳುವ ಮಾತು ಕೃಷಿ ಸಂಸ್ಕೃತಿ ಸಮೇತವಾದ ಧರ್ಮವನ್ನು ಬಿಂಬಿಸುತ್ತದೆ. ‘‘ಮೂಜಿ ಮುಟ್ಟು ಜಾಗೆಡ್ ಇಲ್ಲ್ ಕಿದೆ ಕಟ್ಟಾವ, ಕೆದುಗುವೆಲ್ ತೋಡಾವ, ತಾರೆ ಬಾರೆ ಕೇನೆ ಕಿರೆಂಗ್ ನಡ್ಪಾವ, ಕೋರಿ ಕಂಬುಳ ಮಲ್ದಾದ್ ಪೂಕರೆ ಪಾಡಾವ… ದೇವರೆಗ್ ದೇವಲ್ಯೊ, ದೈವೊಳೆಗ್ ಬದಿಮಾಡ, ಬೆರ್ಮರೆಗ್ ಸಾನ, ನಾಗೆರೆಗ್ ಬನ, ಜೈನೆರೆಗ್ ಬಸ್ತಿ, ಕುಡುಂಬೆರೆಗ್ ಇಂಗ್ರೇಜಿ, ಬ್ಯಾರಿಳೆಗ್ ಪಳ್ಳಿ ‘ಕಟ್ಟಾವ’’(ಮೂರು ಮೆಟ್ಟು ನೆಲದಲ್ಲಿ ಮನೆ, ಹಟ್ಟಿ ಕಟ್ಟಿಸುತ್ತೇವೆ. ಕೆರೆ ಬಾವಿ ತೋರಿಸುತ್ತೇವೆ. ತೆಂಗು, ಬಾಳೆ, ಕೇನೆ, ಗೆಣಸು, ನೆಡಿಸುತ್ತೇವೆ.’ ಗದ್ದೆ ಗೋರಿ ಕಂಬಳ ನಡೆಯಿಸಿ, ಪೂಕರೆ (ಕೆಲವು ಅಂಕಣದ ಅಲಂಕೃತ ಕಂಭ) ಹಾಕಿಸುತ್ತೇವೆ…. ದೇವರಿಗೆ ದೇವಾಲಯ, ದೈವಗಳಿಗೆ ಗುಡಿಮಾಡ, ಬ್ರಹ್ಮರಿಗೆ ಸ್ಥಾನ, ನಾಗನಿಗೆ ಬನ, ಜೈನರಿಗೆ ಬಸದಿ, ಕ್ರೈಸ್ತರಿಗೆ ಇಗರ್ಜಿ, ಮುಸ್ಲಿಮರಿಗೆ ಮಸೀದಿ ಕಟ್ಟಿಸುತ್ತೇವೆ.’’) ಇಲ್ಲಿ ತೋರುವ ಸರ್ವಧರ್ಮ ಪ್ರಾಶಸ್ತ್ಯ ಪ್ರಶಂಸನೀಯವಾದದ್ದು.

ತುಳುನಾಡಿನಲ್ಲಿ ನಡೆಯುವ ಬೇರೆ ಬೇರೆ ಉತ್ಸವ ಸಮಾರಂಭಗಳಲ್ಲಿ ಅನ್ನದಾನ ಮಹತ್ವವನ್ನು ಪಡೆದಿದೆ. ಕೆಲವೊಮ್ಮೆ ದೈವಗಳಿಗೆ ಹರಕೆಯಾಗಿ ಸಲ್ಲುವ ‘ಧರ್ಮನೇಮ’ ಎಂಬ ವಿಶೇಷ ಉತ್ಸವದಲ್ಲಿ ಸಾರ್ವಜನಿಕ ಸಮಾರಾಧನೆ ಮುಖ್ಯವಾದದ್ದು. ನೇಮದ ಹರಕೆಯನ್ನು ಕೈಕೊಂಡ ದೈವ ನೇಮವನ್ನು ಕಟ್ಟಿದ ದೈವ ಕಲಾವಿದನ ಮೂಲಕ, ಹರಕೆ ಸಲ್ಲಿಸಿದವರೊಡನೆ, ‘‘ಧರ್ಮ ಪೊರ್ಲಾಡೋ?’’ (ಅನ್ನದಾನದ ಧರ್ಮ ಚೆನ್ನಾಗಿ ನಡೆಯಿತೇ?) ಎಂದು ಕೇಳುವುದು ರೂಢಿ. ನಾಗಮಂಡಲದಂಥ ಹರಕೆಯಲ್ಲೂ ಅನ್ನದಾನ ಪ್ರಧಾನವಾದದ್ದು.

ಸಹಕಾರಧರ್ಮ ಜನಪದ ಜೀವನದಲ್ಲಿ ಎತ್ತಿ ಹೇಳಬೇಕಾದುದು. ಕೃಷಿಗೆ ಬೇಕಾಗುವ ನೀರನ್ನು ಶೇಖರಿಸುವ ಸಲುವಾಗಿ ಊರಿನ ತೋಡಿಗೆ ತಾತ್ಕಾಲಿಕ ಅಣೆಕಟ್ಟು ಕಟ್ಟುವುದೇ ಮೊದಲಾದ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಲ್ಲಿ ಊರಿನ ಎಲ್ಲವರೂ ಕೈಜೋಡಿಸುತ್ತಿದ್ದುದು ವಾಡಿಕೆ. ಮದುವೆ, ಉತ್ತರಕ್ರಿಯೆ, ಮೊದಲಾದ ಸಂದರ್ಭಗಳಲ್ಲಿ ಆಯಾ ಸಮಾಜದ ಸದಸ್ಯರು ಹಣ ಮತ್ತು ವಸ್ತುರೂಪಗಳಲ್ಲಿ ಹಾಗೂ ಚಪ್ಪರ ಹಾಕುವುದು, ಅಡುಗೆಯ ವ್ಯವಸ್ಥೆ ಇತ್ಯಾದಿಗಳಲ್ಲಿ ನೆರವಾಗುವ ವಾಡಿಕೆ ಇತ್ತೀಚೆಗಿನ ವರೆಗೂ ಊರ್ಜಿತವಿತ್ತು. ಆರ್ಥಿಕಬಲವಿಲ್ಲದ ಸಾಮಾನ್ಯರಿಗೆ ಇದರಿಂದ ಪ್ರಯೋಜನವಾಗುತ್ತಿತ್ತು.

ವಾಹನ ಸೌಕರ್ಯ ಇಲ್ಲದ ಹಳೆಗಾಲದಲ್ಲಿ ಹಾದಿಹೋಕರ ನೀರಡಿಕೆ ಕಳೆಯಲು ಅಲ್ಲಲ್ಲಿ ‘ಧರ್ಮದ ಕಟ್ಟೆ’ಯಲ್ಲಿ ಗಡಿಗೆಯಲ್ಲಿ ಕುಡಿಯುವ ನೀರು ಇರಿಸುತ್ತಿದ್ದರು. ಕೆಲವೆಡೆ ಮಜ್ಜಿಗೆ ನೀರು ಕೊಡುವ ವ್ಯವಸ್ಥೆ ಇತ್ತು. ಕೆಲವು ಮನೆಗಳಲ್ಲಿ ಊಟವನ್ನೂ ಇಕ್ಕಿ ಕಳುಹಿಸುತ್ತಿದ್ದರು. ಹಾದಿಗುಂಟ ಹೋಗುವ ದನಕರುಗಳ ಬಾಯಾರಿಕೆ ಇಂಗಿಸಲು ಕೆಲವು ಕಡೆ ದೊಡ್ಡ ಕಲ್ಲುಮರಿಗೆಗಳಲ್ಲಿ ನೀರು ತುಂಬಿಸಿಡುವ ದಯಾಳುಗಳೂ ಇದ್ದರು. ತಲೆಹೊರೆಯಲ್ಲಿ ವಸ್ತುಗಳನ್ನು ಸಾಗಿಸುವವರು ದಾರಿಯ ನಡುವೆ ಆಯಾಸವಾದಾಗ ಹೊರೆಯನ್ನೂ ಇಳಿಸಿ, ಮತ್ತೆ ತಾವೇ ತಲೆಯ ಮೇಲಿರಿಸಿಕೊಳ್ಳಲು ಅನುಕೂಲವಾಗುವಂತೆ ನಿರ್ಜನವೆನಿಸುವ ದಾರಿಯ ಪಕ್ಕದಲ್ಲಿ ‘ಹೊರೆಕಲ್ಲು’ಗಳನ್ನು ನಾಟುವುದಿತ್ತು.

ತುಳುನಾಡಿನ ಜನಪದ ಧರ್ಮದ ಹಾಗೂ ಜೀವನ ಮೌಲ್ಯಗಳ ವಿಚಾರಗಳನ್ನು ತುಳು ಜನಪದ ದೈವಗಳ ಕಥಾನಕಗಳಾದ ಅನೇಕ ಪಾಡ್ದನಗಳು ಹಾಗೂ ಕಬಿತ, ಕತೆ, ಗಾದೆ ಮುಂತಾದುವು ಸಾಕಷ್ಟು ಬಿಂಬಿಸುತ್ತವೆ. ಸತ್ಯದ ಪರಿಕಲ್ಪನೆ, ಕರ್ತವ್ಯ ದೃಷ್ಟಿ, ವಚನಪಾಲನೆ, ನ್ಯಾಯಶೀಲತೆ, ತ್ಯಾಗ, ಪರೋಪಕಾರ, ಸ್ವಾಮಿಭಕ್ತಿ, ಹಿರಿಯರ ಮೇಲಿನ ಗೌರವ, ದೈವಭಕ್ತಿ, ನಿರ್ಮಲ ನಡತೆ, ನಂಬಿಕೆಯ ನೆಲೆ ಇತ್ಯಾದಿಗಳನ್ನು ಈ ಜನಪದ ಸಾಹಿತ್ಯ ಪ್ರಕಾರಗಳು ಗರ್ಭೀಕರಿಸಿಕೊಂಡಿವೆ. ಕೆಲವು ಸಂದರ್ಭಗಳನ್ನು ಉದಾಹರಿಸಬಹುದು.

ಧರ್ಮಿಷ್ಠನಾಗಿ, ಕರ್ಮಯೋಗಿಯಾಗಿ ಮಾಗಿದ ಚೇತನವೊಂದನ್ನು ‘ಸಿರಿಸಂಧಿ’ಯ ಸತ್ಯನಾಪುರ ಬಿರ್ಮು ಆಳ್ವನಲ್ಲಿ ಕಾಣುತ್ತೇವೆ. ಆದರೂ ಅವನಲ್ಲಿದ್ದ ಕರ್ತವ್ಯ ಲೋಪವೊಂದನ್ನು ಪಾಡ್ದನಕಾರ ಮರೆಯುವುದಿಲ್ಲ. ದಾನಧರ್ಮಾದಿಗಳನ್ನು ಬಿರ್ಮು ಆಳ್ವನು ಧರ್ಮದ ಕೇಂದ್ರಸ್ಥಾನವಾದ ದೇವಸ್ಥಾನವನ್ನು ಅದೂ ತನ್ನ ‘ಆದಿಮೂಲ’ದ ಲಂಕೆಲೋಕನಾಡ ಬ್ರಹ್ಮನ ‘ಆಲಡೆ’ಯನ್ನು ಆರಂಭದಲ್ಲಿ ಮರೆತುದರಿಂದ ಆತನಿಗೆ ನಿಸ್ಸಂತತಿಯಾಗಿತ್ತೆಂದೂ, (ಮುಂದೆ ಅದನ್ನು, ಜೀರ್ಣೋದ್ಧಾರ, ಮಾಡಿದ ಬಳಿಕ ಆ ದೇವರ ಪ್ರಸಾದದಲ್ಲಿ ‘ಬಾಲೆಸಿರಿ’  ಮುಂದೆ ಅಕ್ಕೆಸಿರಿ ಅಥವಾ ಅಕ್ಕೆರಸುಪೂಂಜೆದಿ ಎನಿಸಿದ ಮಹಿಮಾನ್ವಿತೆ) ಜನಿಸಿ ಸತ್ಯನಾಪುರದ ಅರಮನೆ ಎಳಗಿತೆಂದೂ ‘ಸಂಧಿ’ ಬಣ್ಣಿಸುತ್ತದೆ.

ಯಾವುದೇ ದೇವರಿಗೆ ಅಥವಾ ದೈವಕ್ಕೆ ನಿರ್ದಿಷ್ಟ ಕಾರಣಕ್ಕೆ ಹೇಳಿಕೊಂಡ ಹರಕೆಯನ್ನು ಮರೆಯದೆ ಸಲ್ಲಿಸಬೇಕೆಂಬ ಪ್ರಜ್ಞೆಯನ್ನು ಕೋಟಿಚೆನ್ನಯರು ಕೆಮ್ಮಲಜೆ ಬ್ರಹ್ಮನ ಆಲಡೆಗೆ ಹರಕೆ ಸಲ್ಲಿಸುವಲ್ಲಿ ಹಾಗೂ ಸತ್ಯನಾಪುರದ ಸಿರಿ ಲಂಕೆಲೋಕನಾಡ ಬ್ರಹ್ಮದೇವರಿಗೆ ‘ಪುಂಡಿ ಪಣವು’ (ಹಿಡಿ ತುಂಬ ಹಣ) ಸಲ್ಲಿಸುವಲ್ಲಿ ಮನಗಾಣಬಹುದು. ಸ್ವಾರ್ಥಕ್ಕಾಗಿ ಹರಕೆ ಹೇಳಿ, ಮತ್ತೆ ಮರೆತರೆ ಅನಾಹುತ ಸಿದ್ಧವೆಂಬುದು ಅಬ್ಬಗೆದಾರಗೆಯರ ಅಕಾಲಮರಣದಿಂದ ವೇದ್ಯವಾಗುವಂತಿದೆ. ಅವರು ಹರಕೆಯ ಫಲವಾಗಿ ಹುಟ್ಟಿದವರಾಗಿದ್ದರೂ, ಅವರ ಮದುವೆಯು ನಿಶ್ಚಯವಾಗುವವರೆಗೂ ಆ ಹರಕೆಯನ್ನು ಅವರ ಹೆತ್ತವರು (ಸೊನ್ನೆ-ಗುರುಮಾರ್ಲ) ಸಲ್ಲಿಸಿರುವುದಿಲ್ಲ. ನಾಗಬ್ರಹ್ಮದೇವರು ಬ್ರಾಹ್ಮಣ ವೇಷದಿಂದ ಬಂದು ಹರಕೆ ಸಲ್ಲಿಸಬೇಕೆಂದು ಸೂಚಿಸಿದರೂ ಆ ಸೂಚನೆಯನ್ನು ಧಿಕ್ಕರಿಸಿದುದರಿಂದ ಅವರು ತಮ್ಮ ಮಕ್ಕಳನ್ನು ಕಳಕೊಳ್ಳಬೇಕಾಗುತ್ತದೆ.

ಪೆರಿಂಜಗುತ್ತು ದೇವುಪೂಂಜನೆಂಬ ವೀರದಳವಾಯಿ ಹರಕೆಯ ಧರ್ಮನೇಮವನ್ನು ಜುಮಾದಿಗೆ ಸಲ್ಲಿಸುವಲ್ಲಿ ಅಸಡ್ಡೆ ತೋರಿ, ವೇಶ್ಯಾಂಗನೆಯ ಮೋಡಿಗೆ ಮರುಳಾಗಿ ಅವರ ಮನೆಯಲ್ಲಿ ಕಾಲಕಳೆದುದರಿಂದ ಅವಳೊಡನೆ ಪಗಡೆಯಾಡಿ ತನ್ನಲ್ಲಿದ್ದ ಎಲ್ಲ ಹಣ, ಹೊನ್ನು, ತೊಡವುಗಳನ್ನು ಕಳೆದುಕೊಳ್ಳಬೇಕಾಯಿತಲ್ಲದೆ, ಹಿಂದೆ ಸಹಾಯದ ವೀಳ್ಯದ ಪ್ರಸಾದವನ್ನು ಅನುಗ್ರಹಿಸಿದ್ದ ಜುಮಾದಿದೈವದ ಕೈಯಿಂದಲೇ ಆಗ್ರಹದ ಮರಣದ ಒಸಗೆಯ ವೀಳ್ಯವನ್ನು ಪಡೆಯಬೇಕಾಗುತ್ತದೆ.

ಚೆನ್ನೆಯಾಟದಲ್ಲಿ ಆಟ ಕೆಡಿಸಿದುದಕ್ಕಾಗಿ ಕೋಪಿಸಿ ತವರಿಗೆ ಹೋದ ಮಡದಿ ಮರಳಿ ಬಂದರೆ ಅವಳ ಮೆಯ್ ಮುಟ್ಟುವುದಕ್ಕೆ ಮೊದಲು ದೈವಕ್ಕೆ ನೇಮ ಕೊಡುವುದಾಗ ಹೇಳಿ, ಆಕೆ ದೈವಪ್ರೇರಣೆಯಿಂದ ಮರಳಿ ಬಂದ ಸಂಭ್ರಮದಲ್ಲಿ, ಹರಕೆಯನ್ನು ಮರೆತು, ಮೈಮರೆತು ಆಕೆಯನ್ನು ಬರಸೆಳೆದುದರಿಂದ ಹೆಂಡತಿಯನ್ನು ಕಳೆದುಕೊಂಡ ಅಚಾತುರ್ಯದ ಕತೆ ಬಳಜೇಯಿ ಮಾಣಿಗನ ಸಂಧಿಯಲ್ಲಿದೆ.

ನೈತಿಕತೆಗೆ, ಶೀಲರಕ್ಷಣೆಯ ವಿಚಾರಕ್ಕೆ ಪಾಡ್ದನಗಳಲ್ಲಿ ವಿಶೇಷ ಗಮನ ಸಂದಿದೆ. ಆಶ್ರಯ ನೀಡಿದ ವ್ಯಕ್ತಿಯೇ ಶೀಲಭಂಗ ಮಾಡಿದುದರಿಂದ ತಡೆದುಕೊಳ್ಳಲಾರದೆ ಕೊಳಕ್ಕೆ ಹಾರಿಕೊಂಡು ಪ್ರಾಣತ್ಯಾಗ ಮಾಡಿದ ಮುಗ್ಧೆಯೊಬ್ಬಳ ದಾರುಣಕಥೆ ‘ಮೂಕಾಂಬಿ ಜೇವು’(ಅಥವಾ ಮೂಕಾಂಬಿ ಗುಳಿಗ) ವಾಡ್ಡನದಲ್ಲಿದೆ. ಪಾಡ್ದನ ಅಷ್ಟಕ್ಕೆ ನಿಲ್ಲದೆ, ಅತ್ಯಾಚಾರಿ ಕಡಂಬಾರಮಯ್ಯನ ಮನೆಮಾರು ಮನೆತನ ನಾಶವಾದುದನ್ನೂ ಸಾರುತ್ತದೆ. ‘‘ಮುಕಾಂಬಿಯು ಗುಳಿಗದೈವದ ಸೇರಿಗೆಗೆ ಒಳಗಾಗುವುದು ಎನ್ನುವ ಪರಿಕಲ್ಪನೆಯಲ್ಲಿ ಹೆಣ್ಣೊಬ್ಬಳು ತನ್ನ ಮೇಲಿನ ಅತ್ಯಾಚಾರದ ಪ್ರತೀಕಾರವಾಗಿ ಉಗ್ರರೂಪವೊಂದನ್ನು ಮಾಯೆಯ ಜಗತ್ತಿನಲ್ಲಿ ತಾಳುವ ರೂಪಕವಿದೆ… ಕಲ್ಲುರ್ಟಿ ಪಾಡ್ಡನದಲ್ಲಿ ಹೆಣ್ಣೊಬ್ಬಳು ಪ್ರತೀಕಾರಕ್ಕಾಗಿ ತಾನೇ ದೈವವಾದರೆ, ಮುಕಾಂಬಿ ಪಾಡ್ದನದಲ್ಲಿ ಹೆಣ್ಣು ತನ್ನ ಪ್ರತೀಕಾರ ತೀರಿಸುವುದಕ್ಕಾಗಿ ಗುಳಿಗದಂತಹ ದೈವದ ಸೇರಿಗೆಯನ್ನು ಆಶ್ರಯಿಸುತ್ತಾಳೆ. ‘‘(ಪ್ರೊ.ಬಿ.ಎ.ವಿವೇಕ ರೈ, ೨೦೦೪, ಪುಟ್ಟುಬಳಕೆಯ ಪಾಡ್ದನಗಳು, ಪು.೨೭)

ಸತ್ಯನಾಪುರದ ಸಿರಿಯ ಗಂಡ ಕಾಂತುಪೂಂಜನಿಗೆ ಸೂಳೆಸಿದ್ದು ಎಂಬವಳೊಡನೆ ವಿವಾಹಬಾಹಿರ ಸಂಬಂಧವಿದ್ದುದರಿಂದ ಸಿಟ್ಟಿಗೆದ್ದ ಸಿರಿ ಗಂಡನಿಗೆ ವಿಚ್ಛೇದನೆ ಹೇಳುತ್ತಾಳೆ ಮಾತ್ರವಲ್ಲದೆ ಕಾಯಪೂಂಜ ಮುಂದೆ ತನ್ನ ದವಲತ್ತೆಲ್ಲವನ್ನೂ ಕಳೆದುಕೊಂಡು ದಯನೀಯ ಸ್ಥಿತಿಗೆ ಇಳಿಯಬೇಕಾಗುತ್ತದೆ.

ಸಿರಿಯನ್ನು ದಾರಿಯಲ್ಲಿ ಕಂಡು ಕಾಮದೃಷ್ಟಿಯಿಂದ ಪೀಡಿಸಲು ಮುಂದಾದ ‘ಮಯೇಸರ’ (ಅಥವಾ ಸೇಮುಲ್ಲ) ಕುಮಾರ ಎಂಬವನನ್ನು ಸಿರಿ ಶಪಿಸಿ ‘ಮಾಯಕ’ ಮಾಡಿಬಿಡುತ್ತಾಳೆ. ಆತ ಸೇಮುಕಲ್ಲ ಪಂಜುರ್ಳಿಯೆಂದು ಕರೆಯಲ್ಪಟ್ಟು ‘ಬಾಯಿಗೆ ಬೀಗವಿಕ್ಕಿಸಿಕೊಂಡ’ ‘ಪೊಟ್ಟ’ (ಮೂಕ) ದೈವವಾಗುತ್ತಾನೆ.

ಕೋಡದಬ್ಬು (ಕೋಟೆದ ಬಬ್ಬು) ದೈವದ ಪಾಡ್ಡನವು ಬಬ್ಬುವಿನ ತಾಯಿ ಕಚ್ಚೂರಮಾಲ್ದಿಯ ಶೀಲದ ಪ್ರಾಮಾಣಿಕತೆಯನ್ನು ಎತ್ತಿ ಹೇಳುತ್ತದೆ. ಆಕೆ ‘ಸತ್ಯಪ್ರಮಾಣ’ಗಳನ್ನು ಮಾಡುವ ಮೂಲಕ ತನ್ನ ಚಾರಿತ್ರ್ಯವನ್ನು ಸಾಬೀತುಮಾಡಬೇಕಾಗು ತ್ತದೆ. ಆಕೆ ಗೆದ್ದು ಸಾಧ್ವಿ ಎನಿಸುತ್ತಾಳೆ.

ಭೂತಕ್ಕೆ ಕಟ್ಟುವ ಪರವನ ಹೆಂಡತಿ ಮಂಗಣೆಯ ರೂಪಕ್ಕೆ ಮರುಳಾಗಿ, ಪರವನನ್ನು ಉಪಾಯವಾಗಿ ಕೊಂದು ಆಕೆಯನ್ನು ವಶಪಡಿಸಲೆಳಸಿ, ಸಫಲನಾಗದೆ, ತನ್ನ ಸರ್ವಸ್ವವನ್ನೂ ಪರವನ ಚಿತೆಗೆ ಸುರಿದು ಕೊನೆಗೆ ತಾನೂ ಹಾರಿಕೊಳ್ಳುವಂತಾದ ದುರ್ದೈವಿಯೊಬ್ಬನ ಅಕೃತ್ಯದ ವಿವರ ಬೊಟ್ಟುವಾಡಿ ಬಲ್ಲಾಳನ ಸಂಧಿಯಲ್ಲಿದೆ.

ಜಾತಿಪದ್ಧತಿಯ ಹಿಡಿತ ಹಿಂದೆ ಪ್ರಬಲವಾಗಿದ್ದರೂ, ಕೆಲವೊಂದು ಸಂದರ್ಭಗಳಲ್ಲಿ ಜಾತಿಯ ಸೀಮೆಯನ್ನು ಮೀರಿದ ಮಾನವತೆ ಮಿಂಚುತ್ತದೆ. ಅನಾಥವಾದ ಕೊರಗರ ಮಗುವನ್ನು ಮೈರಕ್ಕೆ ಬೈದೆದಿ ತನ್ನ ಮಗನಂತೆ ಸಾಕುತ್ತಾಳೆ. (ಅವನೇ ಕೊರಗತನಿಯ) ಕಣ್ಣು ಕಟ್ಟಿ ಕಾಡಿಗೆ ಬಿಡಲ್ಪಟ್ಟಿದ್ದ ಬ್ರಾಹ್ಮಣ ಕನ್ಯೆಯನ್ನು ಸಾಯಿನ ಬೈದ್ಯ ಕರುಣದೋರಿ ತಂದು ಸಾಕುತ್ತಾನೆ. (ದೇಯಿಬೈದೆದಿ) ಕೊಡಂಗೆ ಬನ್ನಾರ ತನ್ನ ಹೊಲದ ಬಳಿಯ ಗುಡಿಸಲಲ್ಲಿ ಹೆತ್ತು ಸತ್ತ ‘ಮುಂಡಾಲ’ ಹೆಂಗುಸಿನ ಕೂಸೊಂದನ್ನು ತಂದು ಪ್ರೀತಿಯಿಂದ ಸಾಕುತ್ತಾನೆ. (ಕೋಡದಬ್ಬು ಪಾಡ್ದನ) ದೇಯಿಗೆ ಹೆರಿಗೆಯ ನೋವು ವಿಪರೀತವಾದಾಗ ಪೆರ್ಮಾಲೆ ಬಲ್ಲಾಳ ತನ್ನ ಕೈಯ ವಜ್ರದ ಉಂಗುರವನ್ನು ಬ್ರಹ್ಮದೇವರಿಗೆ ‘ಈಡು’ ಇಟ್ಟು ಪ್ರಾರ್ಥಿಸುತ್ತಾನೆ. (ಕೋಟಿ ಚೆನ್ನಯ ಪಾಡ್ದನ)

ಮನೆಗೆ ಬಂದ ಅತಿಥಿಗಳನ್ನು ಪ್ರೀತಿ ಗೌರವಗಳಿಂದ ಉಪಚಾರ ಮಾಡುವ ಆತಿಥ್ಯ ಧರ್ಮ ತುಳುನಾಡಿನಲ್ಲಿ ಎಂದಿನಿಂದಲೂ ಇತ್ತು ಎಂಬುದು ಜನಪದ ಸಾಹಿತ್ಯದಿಂದ ತಿಳಿದುಬರುವ ಅಂಶ.

ಬಂದ ಅತಿಥಿಗಳಿಗೆ ಕಾಲುಮೋರೆ ತೊಳೆಯಲು ತಂಬಿಗೆಯಲ್ಲಿ ನೀರಿತ್ತು, ಹಸೆ ಹಾಕಿ, ತಾಂಬೂಲದ ತಟ್ಟೆಯನ್ನು ನೀಡುವುದರಿಂದ ತೊಡಗಿ, ವಿಧವಿಧದ ಉಣಿಸುತಿನಿಸುಗಳಿಂದ ಉಪಚರಿಸುವ ಸಂಭ್ರಮ ಆ ಸಾಹಿತ್ಯದಲ್ಲಿ ಚಿತ್ರಿತವಾಗಿದೆ. ನೀರಿನ ತಂಬಿಗೆಯ ಗೌರವ ಹಾಗೂ ತಾಂಬೂಲ ವಿತರಣೆಯ ಶಿಷ್ಟಾಚಾರ ಇಂದೂ ತುಳುವರ ಧಾರ್ಮಿಕ ಕಲಾಪಗಳಲ್ಲಿ ಉಳಿದಿದೆ.

ಹೀಗೆ ತುಳುನಾಡಿನ ಜನಪದ ಆರಾಧನೆ, ಜನಪದ ಸಾಹಿತ್ಯ, ಜನಪದ ಆಚರಣೆಗಳು, ಹಬ್ಬ ಹರಿದಿನಗಳು, ನಂಬಿಕೆ ನಡವಳಿಕೆಗಳು ವ್ಯವಹಾರಗಳು ಇತ್ಯಾದಿ ವಿಷಯಗಳಲ್ಲಿ ಜನಪದ ಧರ್ಮವೆಂಬುದರ ಅಂಶಗಳನ್ನು ಕಾಣಬಹುದಾಗಿದೆ. ‘‘ಸಮಾಜ ಜೀವನವನ್ನು ನಿಯಂತ್ರಿಸುವ ಮೌಲ್ಯಗಳ ಪ್ರತಿಪಾದನೆ, ಕಲೆ, ಸಾಹಿತ್ಯಗಳ ಸೃಜನೆ, ಇವೇ ಮುಂತಾದ ಪ್ರವೃತ್ತಿಗಳನ್ನು ಅನಾದಿಕಾಲದಿಂದಲೂ ಮಾನವ ಬೆಳೆಸಿಕೊಂಡು ಬಂದಿದ್ದಾನೆ. ಸಂಸ್ಕೃತಿ, ಕಲೆ, ಸಾಹಿತ್ಯಗಳ ಇತಿಹಾಸವೇ ಆಗಿದೆ… ಆದುದರಿಂದ ಯಾವ ಇತಿಹಾಸಕಾರನೂ, ಮಾನವ ಶಾಸ್ತ್ರಜ್ಞನೂ, ಕಲಾವಿಮರ್ಶಕನೂ ಇವುಗಳ ಬಗ್ಗೆ ಔದಾಸೀನ್ಯ ತೋರುವಂತಿಲ್ಲ’’ (ಡಾ.ಸುಶೀಲಾ ಉಪಾಧ್ಯಾಯ ೧೯೮೯. ಜನಪದ ಆರಾಧನೆ ಮತ್ತು ರಂಗಕಲೆ, ಪು.೧)

ಪರಾಮರ್ಶನ ಸಾಹಿತ್ಯ

೧. ಡಾ.ಸುಶೀಲಾ ಉಪಾಧ್ಯಾಯ, ಜನಪದ ಆರಾಧನೆ ಮತ್ತು ರಂಗಕಲೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ, ೧೯೮೯

೨. ಡಾ.ಕೆ.ಚಿನ್ನಪ್ಪಗೌಡ, ಸಂಸ್ಕೃತಿ ಸಿರಿ, ಮದಿಪು ಪ್ರಕಾಶನ, ಮಂಗಳಗಂಗೋತ್ರಿ, ೨೦೦೩

೩.ಪು.ಶ್ರೀನಿವಾಸ ಭಟ್ಟ, ಕಟೀಲು : ಜನಪದ ಶತಪಥ, ಯುಗಪುರುಷ ಪ್ರಕಟನಾಲಯ, ಕಿನ್ನಿಗೋಳಿ, ದ.ಕ., ೨೦೦೫

೪. ಪ್ರೊ.ಬಿ.ಎ.ವಿವೇಕ ರೈ, ಯದುಪತಿ ಗೌಡ, ರಾಜಶ್ರಿ, ; ಪುಟ್ಟು ಬಳಕೆಯ ಪಾಡ್ದನಗಳು,  ಪ್ರಸಾರಾಂಗ, ಮಂಗಳುರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ, ೨೦೦೪

೫. ಅಮೃತ ಸೋಮೇಶ್ವರ, ತುಳು ಬದುಕು, ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ. ೧೯೮೪