ಯಾವುದೇ ನಿರ್ದಿಷ್ಟ ಪ್ರದೇಶದ ಜನಾಂಗದ ಸಾಂಸ್ಕೃತಿಕ ಅಧ್ಯಯನ ಮಾಡುವಾಗ ಅದಕ್ಕೆ ಸಂಬಂಧಪಟ್ಟ ಕೆಲವೊಂದು ಅನನ್ಯತೆಗಳನ್ನು ನಿರೂಪಿಸುವುದೊಂದು ಪದ್ಧತಿ. ಅನೇಕ ವೇಳೆ ಇಂಥ ಅನನ್ಯತೆಗಳ ಸಮೀಕ್ಷೆ ಸ್ಥೂಲಮಾತ್ರವಾಗಿರುತ್ತದೆ. ಏಕೆಂದರೆ, ಮೇಲ್ನೋಟಕ್ಕೆ ಅನನ್ಯವೆಂದು ಕಾಣಿಸಿದ ಹಲವು ಅಂಶಗಳು, ಸೂಕ್ಷ್ಮಾವಲೋಕನದಿಂದ ಬೇರೆ ಕಡೆ ತದ್ವತ್ತಾಗಿಯೋ, ತುಸು ಭಿನ್ನರೂಪದಲ್ಲೋ ಕಂಡು ಬರುವುದು ವಿರಳವೇನಲ್ಲ. ಆಚಾರವಿಚಾರಗಳು, ಕಲಾಭಿವ್ಯಕ್ತಿ ವಿವಿಧ ಉದ್ದೇಶಗಳಿಗೆ ಉಪಯೋಗಿಸತಕ್ಕ ಪರಿಕರಗಳು, ಇತ್ಯಾದಿಗಳಲ್ಲಿ ಸಾದೃಶ್ಯಗಳು ಸಹಜವಾಗಿಯೇ ಕಂಡು ಬರುವುದುಂಟು ಆದರೂ ಸ್ಥೂಲನೋಟಕ್ಕೆ ಎದ್ದು ಕಾಣುವ ಕೆಲವೊಂದು ವಿವರಗಳನ್ನು ನಾವು ಅನನ್ಯತೆ ಎಂದು ಗುರುತಿಸಲು ಯತ್ನಿಸುತ್ತೇವೆ. ಈ ದೃಷ್ಟಿಯಿಂದ ಅವಿಭಜಿತ ದಕ್ಷಿಣ ಕನ್ನಡ (ಕಾಸರಗೋಡು ಸೇರಿದೆ), ಅಥವಾ ಬಹುಕಾಲದಿಂದ ತುಳುನಾಡೆಂದೇ ಪ್ರಖ್ಯಾತವಾದ ಕರ್ನಾಟಕ ಕರಾವಳಿಯ ಈ ಭೂಭಾಗದ ಕೆಲವೊಂದು ವೈಶಿಷ್ಟ್ಯಗಳನ್ನು ಗಮನಿಸಬಹುದಾಗಿದೆ.

ಭೌಗೋಳಿಕವಾಗಿ ಈ ಪ್ರದೇಶ ವೈವಿಧ್ಯಭೂಯಿಷ್ಠವಾದದ್ದು. ಬಟ್ಟಬಯಲಿನ ಏಕತಾನತೆ ಇಲ್ಲಿಯದಲ್ಲ. ಅಥವಾ ಬರೇ ಗುಡ್ಡ ಕಾಡು ಪ್ರದೇಶವೂ ಇದಲ್ಲ. ಈ ಪ್ರದೇಶಕ್ಕೆ ನೀಳವಾದ ಗಿರಿಶ್ರೇಣಿಗಳ ಸಂಬಂಧವೂ ಇದೆ; ವಿಶಾಲವಾದ ಸಮುದ್ರದ ಸಾಹಚರ್ಯವೂ ಇದೆ. ಗುಡ್ಡ, ಬೆಟ್ಟ, ಕಾಡು, ಕಣಿವೆ, ಬಯಲು ಇತ್ಯಾದಿಗಳಿಂದ ಕೂಡಿದ ಈ ಪ್ರದೇಶವನ್ನು ತಮ್ಮ ಸಲಿಲಧಾರೆಯಿಂದ ಸೀಳುತ್ತಾ ಸಾಗುವ ಅನೇಕ ಚಿಕ್ಕದೊಡ್ಡ ನದಿಗಳು ಈ ಭಾಗದ ಸಸ್ಯಶ್ಯಾಮಲತೆಗೆ ಪೋಷಣೆಯಿತ್ತಿವೆ. ಹಾಗೆಯೇ ಜನಜೀವನದ ಜೀವಾಳವೂ ಆಗಿವೆ.

ಒಂದು ಪ್ರದೇಶದ ಭೌಗೋಳಿಕ ಸ್ಥಿತಿ, ಹವಾಮಾನಗಳಿಗೂ ಅಲ್ಲಿನ ಸಾಂಸ್ಕೃತಿಕ ಅಭಿವ್ಯಕ್ತಿಗಳಿಗೂ ಸಂಬಂಧವಿದೆಯೆಂದು ಹೇಳಬೇಕಾಗುತ್ತದೆ. ತುಳುನಾಡಿನ ಹವಾಮಾನದಲ್ಲಿ ಅನಾಹುತಕಾರಿಯಾದ ವೈಪರೀತ್ಯವಿಲ್ಲದಿದ್ದರೂ, ಸಿಡಿಲು ಮಿಂಚುಗಳಿಂದ ಕೂಡಿದ ಮಳೆಗಾಲದ ಆರ್ಭಟವನ್ನು ಅವಗಣಿಸುವಂತಿಲ್ಲ. ಭೌಗೋಳಿಕ ನಿಮ್ನೋನ್ನತಿ, ಕಡಲ ಮೊರೆತ ಹಾಗೂ ವರ್ಷವೈಭವ ಇವುಗಳ ಪ್ರಭಾವ ಇಲ್ಲಿನ ಭೂತಾರಾಧನೆ ಹಾಗೂ ಯಕ್ಷಗಾನದಂಥ ರಂಗಭೂಮಿಗಳ ರಮ್ಯಾದ್ಭುತ ಪರಿಣಾಮವನ್ನು ಹೆಚ್ಚಿಸಿವೆ ಎನ್ನಬಹುದು.

ಭೂಪ್ರದೇಶ ಲಕ್ಷಣಗಳಿಂದಾಗಿ ಹಲವಾರು ಸ್ಥಳನಾಮಗಳು ರೂಪುಗೊಳ್ಳುತ್ತವೆ. ತುಳುನಾಡಿನಲ್ಲಿ ಇಂಥ ವಿಶಿಷ್ಟ ಸ್ಥಳನಾಮಗಳು ವಿಪುಲವಾಗಿವೆ. ಕೆಲವು ಸ್ಥಳನಾಮ ಘಟಕಗಳನ್ನು ನೋಡಬಹುದು. ಅಡ್ಕ (ಹಿರಿಯಡ್ಕ, ಬದಿಯಡ್ಕ, ಕಾರಡ್ಕ), ಕುಂಜ (ತೆಕ್ಕುಂಜ, ರಾಮಕುಂಜ, ಪಕಳಕುಂಜ), ಕಜೆ(ಎಣ್ಮಕಜೆ, ನಾರ್ಣಕಜೆ, ಅರ್ತಿಕಜೆ), ಪದವು (ಬೆಂಞಣಪದವು, ಕಕ್ಕೆಪದವು, ವಾಮದ ಪದವು) ತಿಮಾರು (ಪಾಂಡಿತಿಮಾರ್, ಬೆದ್ರ್ ತಿಮಾರ್, ಚಂಬಲ್ತಿಮಾರ್), ಪಳ್ಳ (ಕಾಟಿಪಳ್ಳ, ಮಣಿಪಳ್ಳ, ಮಾರಿಪಳ್ಳ), ಮೊಗರು (ತಲೆಮೊಗರು, ಜಪ್ಪಿನಮೊಗರು, ಅಂಗಡಿಮೊಗರು), ಆಲ(ಉಳ್ಳಾಲ, ಕೊಡೆಯಾಲ, ಪನಿಯಾಲ), ಆರ್ (ಕಯ್ಯಾರ್, ಬಾಯಾರ್, ಅಡ್ಯಾರ್), ಪಾಡಿ(ಪೆರ್ಲಂಪಾಡಿ, ಬೇಲಂಪಾಡಿ, ಇಚ್ಲಂಪಾಡಿ), ಗುಡ್ಡೆ(ಚೆಂಬುಗಡ್ಡೆ, ಆನೆಗುಡ್ಡೆ, ಬಾಬುಗುಡ್ಡೆ), ಬೆಟ್ಟು (ಓಂತಿಬೆಟ್ಟು, ಮಾರಿಬೆಟ್ಟು, ಹೊಸಬೆಟ್ಟು) ಇತ್ಯಾದಿ. ಭೌಗೋಳಿಕ ಕಾರಣಗಳಿಂದ ಉಂಟಾದ ಈ ತೆರನಾದ ಸ್ಥಳನಾಮ ಘಟಕಗಳು ಇಷ್ಟು ಪ್ರಮಾಣದಲ್ಲಿ ಕರ್ನಾಟಕದ ಇತರ ಕಡೆಗಳಲ್ಲಿ ಇದ್ದಂತೆ ಕಂಡುಬರುವುದಿಲ್ಲ. ಇದ್ದರೂ ತೀರಾ ವಿರಳ.

ಸಂಸ್ಕೃತಿಯ ಸಂಬಂಧವಾಗಿ ಮುಖ್ಯಪಾತ್ರ ವಹಿಸುವವು ಧಾರ್ಮಿಕ ವಿಚಾರಗಳು, ತುಳುನಾಡು ಗುಡಿಗಳ ನಾಡು ಎಂದರೂ ತಪ್ಪಿಲ್ಲ. ಕರ್ನಾಟಕದ ಅಥವಾ ದೇಶದ ಇತರೆಡೆಗಳಲ್ಲಿ ಇಷ್ಟೊಂದು ಸಂಖ್ಯೆಯ ವೈದಿಕ ಮತ್ತು ಅವೈದಿಕ ಪರಂಪರೆಯ ಆರಾಧನಾಲಯಗಳ ನಿಬಿಡತೆ ಇಲ್ಲವೆಂದೇ ಹೇಳಬೇಕು. ಚಾಲುಕ್ಯ, ಕದಂಬ, ಹೊಯ್ಸಳ ಇತ್ಯಾದಿ ಶೈಲಿಯ ಅದ್ಭುತ ರಚನೆಗಳು ಇಲ್ಲಿ ಇಲ್ಲವಾದರೂ ಸಾಕಷ್ಟು ಪ್ರಾಚೀನವಾದ (ಎಂಟು – ಹತ್ತು ಶತಮಾನಗಳಷ್ಟು ಹಿಂದಿನ) ಸಾವಿರಾರು ದೇವಸ್ಥಾನಗಳು ಇಲ್ಲಿವೆ. ಪ್ರತಿಮಾಶಾಸ್ತ್ರ ದೃಷ್ಟಿಯಿಂದ ವಿಶಿಷ್ಟವೆನಿಸುವ ಅನೇಕಾನೇಕ ಶಿಲಾವಿಗ್ರಹಗಳೂ, ಲೋಹವಿಗ್ರಹಗಳೂ, ದಾರುವಿಗ್ರಹಗಳೂ ಈ ದೇಗುಲಗಳಲ್ಲಿವೆ. ಮನೆದೇವರಾಗಿ ಪೂಜೆಗೊಳ್ಳುವ ಚಿಕ್ಕ ಆಕೃತಿಯ ಅಪೂರ್ವ ವಿಗ್ರಹಗಳಿಗೂ ಕೊರತೆಯಿಲ್ಲ. ಗಣಪತಿ, ಜನಾರ್ದನ, ವಿಷ್ಣುಮೂರ್ತಿ, ಗೋಪಾಲಕೃಷ್ಣ, ಮಹಾಲಿಂಗೇಶ್ವರ, ಅನಂತೇಶ್ವರ, ಪಂಚಲಿಂಗೇಶ್ವರ, ಬ್ರಹ್ಮಲಿಂಗೇಶ್ವರ, ದುರ್ಗಾ, ಸುಬ್ರಹ್ಮಣ್ಯ ಮೊದಲಾದ ಹೆಸರಿನ ದೇವರುಗಳ ದೇಗುಲಗಳು ಇಲ್ಲಿರುವಷ್ಟು ಸಂಖ್ಯೆಯಲ್ಲಿ ಇತರ ಕಡೆಗಳಲ್ಲಿಲ್ಲ ಎನ್ನಬಹುದು. ನಾಗಬ್ರಹ್ಮನೇ ಮುಖ್ಯ ದೇವತೆಯಾಗಿರುವ ‘ಆಲಡೆ’ಗಳೂ, ಕೋಟಿ ಚೆನ್ನಯರಂಥ ಸಾಂಸ್ಕೃತಿಕ ವೀರರ ನೆನಪಿನ ‘ಗರಡಿ’ಗಳೂ, ನೂರಾರು ದೈವಗಳ ದೈವಸ್ಥಾನಗಳೂ ತುಳುನಾಡಿನಲ್ಲಿವೆ.

ಗೋಮಟೇಶ್ವರನ ಮೂರು ಬೃಹನ್ಮೂರ್ತಿಗಳು(ಕಾರ್ಕಳ, ಬೇಲೂರು, ಧರ್ಮಸ್ಥಳ) ತುಳುನಾಡಿನಲ್ಲಿರುವುದು ವಿಶೇಷವಾಗಿದೆ. ಮೂಡಬಿದಿರೆಯ ಸಾವಿರ ಕಂಬದ ಬಸದಿಯೂ ಶಿಲ್ಪಕಲೆಗೆ ಗರಿಮೂಡಿಸಿದ ವಿಚಾರವಾಗಿದೆ. ಪೊಳಲಿಯ ರಾಜರಾಜೇಶ್ವರೀ ದೇವಿಯ ಪುರಾತನವಾದ ಬೃಹತ್ ಮೃತ್ತಿಕಾವಿಗ್ರಹವು ದೇಶದಲ್ಲೇ ಅದ್ವಿತೀಯವೆನ್ನಬಹುದು. ಮೆಕ್ಕೆ ಕಟ್ಟೆಗಳಂಥ ಆರಾಧನಾ ಸಂಕೀರ್ಣಗಳಲ್ಲಿರುವ ವಿವಿಧ ದೈವಗಳ ವೈಶಿಷ್ಟ್ಯಪೂರ್ಣವಾದ, ವಿವಿಧಾಕೃತಿಗಳ ಮರದ ವರ್ಣರಂಜಿತ ವಿಗ್ರಹಗಳು ಅಪೂರ್ವ ಕಲಾಕೃತಿಗಳಾಗಿವೆ.

ಮಂಗಳೂರಿನ ಪುರಾತನ ಜುಮ್ಮಾ ಮಸೀದಿಯ ಕಂಬದ ಕೆತ್ತನೆಗಳೂ, ಸಂತ ಅಲೋಶಿಯಸ್ ಕಾಲೇಜಿನ ಇಗರ್ಜಿಯ ಒಳಗಡೆಯ ಚಿತ್ರಕಲಾಕೃತಿಗಳೂ ಉಲ್ಲೇಖನೀಯವಾಗಿವೆ. ತುಳುನಾಡಿನ ಅನೇಕ ದೇವಸ್ಥಾನಗಳ ಸ್ಥಳಪುರಾಣಗಳಲ್ಲೂ ಜನಜನಿತವಾದ ಐತಿಹ್ಯಗಳಲ್ಲೂ ಒಂದು ಮುಖ್ಯ ವಿಚಾರ ಸ್ಪಷ್ಟವಾಗುತ್ತದೆ. ಅದೆಂದರೆ ಇಲ್ಲಿನ ಅನೇಕ ದೇವಸ್ಥಾನಗಳ ಮೂಲ ಮೂರ್ತಿಗಳು (ಶಿವಲಿಂಗ ಅಥವಾ ಶಿಲಾಮೂರ್ತಿ) ಈ ಪ್ರದೇಶದ ಆದಿವಾಸಿಗಳೆನ್ನಲಾದ ಪಂಗಡಗಳವರಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ದೊರಕಿದುದು ಎನ್ನಲಾಗಿದೆ. (ಉದಾ : ಮಧೂರು, ಎಲ್ಲೂರು, ಶಿಶಿಲ, ನೆಟ್ಟಣಿಗೆ, ಸಿರಿಯ ಇತ್ಯಾದಿ) ಆ ನಂಬಿಕೆಗೆ ಪೂರಕವಾದ ಕೆಲವು ಅನುಷ್ಠಾನಗಳು ಈಗಲೂ ಊರ್ಜಿತದಲ್ಲಿವೆ.

ದೇವಸ್ಥಾನ ಮತ್ತು ದೇವಸ್ಥಾನಗಳಿಗೆ ಪರಸ್ಪರ ಇರತಕ್ಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಬಂಧ ಗಮನೀಯವಾಗಿದೆ. ರಾಜಕೀಯ ಘಟಕಗಳನ್ನು ಹೋಲುವ ಶ್ರೇಣೀಕೃತ ವ್ಯವಸ್ಥೆಯು ಆರಾಧನಾ ವ್ಯವಸ್ಥೆಯಲ್ಲಿಯೂ ಇರುವುದರಿಂದ ‘ಸೀಮೆ’ಯ ದೇವಸ್ಥಾನವೆಂದು ಪರಿಗಣಿಸಲಾಗುವ ಮುಖ್ಯ ದೇವಸ್ಥಾನದ ದೇವರಿಗೆ ಯುಕ್ತ ಗೌರವ ಕೊಟ್ಟೇ ಆಸುಪಾಸಿನ ಗ್ರಾಮಗಳ ಎಲ್ಲಾ ದೈವಗಳು ನಡೆದುಕೊಳ್ಳುತ್ತವೆ. ಮುಖ್ಯ ದೇವಸ್ಥಾನದ ವಾರ್ಷಿಕ ಉತ್ಸವ ಸಂದರ್ಭದಲ್ಲಿ ಆಸುಪಾಸಿನ ದೈವಗಳು ಉತ್ಸವ ಮೆರವಣಿಗೆಯ ರೂಪದಲ್ಲಿ ದೇವಸ್ಥಾನಕ್ಕೆ ಒಂದು ದೇವರ ‘ಭೇಟಿ ನಡೆಸುವ ಉತ್ಸವ’ ನಡೆಸುವ ಪರಿಪಾಠ ಇಲ್ಲಿ ವೈವಿಷ್ಟ್ಯಪೂರ್ಣವಾಗಿ ಬೆಳೆದುಬಂದಿದೆ.

ದೇವರ ಉತ್ಸವ ಮೂರ್ತಿಗಳಿಗೆ ಪ್ರರಭಾವಳಿ ಕಟ್ಟಿ ಅಲಂಕರಿಸಿ ತಲೆ ಮೇಲೆ ಹೊತ್ತುಕೊಂಡು ನರ್ತನ ರೂಪದ ಪ್ರದಕ್ಷಿಣೆ ಮಾಡುವ ಪದ್ಧತಿಯೂ ವಿಶಿಷ್ಟವಾಗಿದೆ. ಹಲವು ದೇವಸ್ಥಾನಗಳಲ್ಲಿ ಉತ್ಸವದ ವೇಳೆ ನಗ್ನ ಮನುಷ್ಯಾಕೃತಿಯ ‘ಗರುಡ’ನನ್ನು ಧ್ವಜವಾಗಿ ಏರಿಸುವುದೂ ಇನ್ನೊಂದು ವೈಶಿಷ್ಟ್ಯವೆನ್ನಬಹುದು.

ತುಳುನಾಡಿನ ದೈವಾರಾಧನಾ ಪ್ರಪಂಚವೂ ಒಂದು ವಿಸ್ಮಯ ಲೋಕವಾಗಿದೆ. ಕೇರಳದಲ್ಲಿ ಇಂಥ ಆರಾಧನಾ ಪ್ರಸ್ಥಾನ ಇದೆಯಾದರೂ ಇಷ್ಟು ಸಂಖ್ಯೆಯ ದೈವಗಳು ಅಲ್ಲಿಲ್ಲವೆನ್ನಬಹುದು. ತುಳುನಾಡಿನಿಂದ ಕೇರಳಕ್ಕೆ ಕೆಲವು ದೈವಗಳು ವಲಸೆ ಹೋಗಿರುವುದಲ್ಲದೆ (ಕೇರಳದಿಂದ ಇಲ್ಲಿಗೆ ಬಂದ ದೈವಗಳೂ ಇವೆ.) ಆರಾಧನಾ ಅನುಷ್ಠಾನದ ಕೆಲವು ಸ್ವರೂಪಗಳಿಗೆ ಕೇರಳವು ತುಳುನಾಡಿಗೆ ಋಣಿಯಾಗಿದೆ. ಹೆಚ್ಚಿನ ದೈವಗಳು ಮೂಲತಃ ಮನುಷ್ಯರಾಗಿದ್ದು ಕಾರಣಾಂತರಗಳಿಂದ ದೈವೀಕರಣಗೊಂಡು ಆರಾಧನೆಗೊಳ್ಳುವವೆಂದು ತಿಳಿಯಬಹುದು. ಹೀಗೆ ದೈವೀಕರಣಗೊಂಡವರಲ್ಲಿ ಬೇರೆ ಬೇರೆ ಸ್ತರದ ಜನಸಮುದಾಯಕ್ಕೆ ಸೇರಿದ ಸ್ತ್ರೀಪುರುಷರಿದ್ದಾರೆ. ಕೊರಗ ಸಮಾಜದಿಂದ ತೊಡಗಿ ಬ್ರಾಹ್ಮಣ ವರ್ಗದವರೆಗೂ ಈ ದೈವೀಕರಣದ ವ್ಯಾಪ್ತಿ ಇದೆ. ವೀರಾರಾಧನೆ, ಸತೀಪೂಜೆ, ಪಿತೃಪೂಜೆ ಇತ್ಯಾದಿ ವಿವಿಧ ಆರಾಧನಾ ಪ್ರಕ್ರಿಯೆಗಳು ಇಲ್ಲಿ ಪ್ರವೃತ್ತವಾಗಿವೆ. ಕೋಟಿ-ಚೆನ್ನಯ, ಕಾಂತಾಬಾರೆ-ಬೂದಬಾರೆ, ಮುಗ್ಗೆರ್ಲು, ಕಲ್ಕುಡ-ಕಲ್ಲುರ್ಟಿ, ಕಾನದ-ಕಾಟದ, ಕಿನ್ನಿಮಾಣಿ-ಪೂಮಾಣಿ ಮೊದಲಾದ ಅವಳಿ ದೈವಗಳ ಆರಾಧನೆಯೂ ತುಳುನಾಡಿನಲ್ಲಿದ್ದಂತೆ ಇತರೆಡೆಗಳಲ್ಲಿ ಇದ್ದಂತಿಲ್ಲ. ಮುಸಲ್ಮಾನ ಮೂಲದ ಬಬ್ಬರ್ಯ, ಆಲಿ ಮುಂತಾದ ದೈವಗಳಲ್ಲದೆ, ವಿದೇಶೀ ಮೂಲದ ಅರಬ್ಬೀ ಭೂತ ಚೀನೀ ಭೂತಗಳೂ ದೈವಾರಾಧನಾ ಪ್ರಸ್ಥಾನದ ಕಕ್ಷೆಯೊಳಗೆ ಬಂದಿವೆ!

ದೈವರಾಧನೆಯ ಅಂಗವಾಗಿ ತಂಬಿಲ, ಅಗೆಲು, ಕೋಲ, ನೇಮ, ಮೆಚ್ಚಿ, ಮೈಮೆ, ಬಂಡಿ, ಕಜಂಬು ಮೊದಲಾದ ಉತ್ಸವಗಳು ವೈವಿಧ್ಯಪೂರ್ಣವಾಗಿ ಜರುಗುತ್ತವೆ. ಇವುಗಳಿಗೆ ಸಂಬಂಧಿಸಿದ ಸಾಹಿತ್ಯ, ವೇಷಭೂಷಣ, ನರ್ತನಾದಿಗಳು ಪ್ರತ್ಯೇಕ ಅಧ್ಯಯನಕ್ಕೆ ಅರ್ಹವಾಗಿವೆ.

ಒಂದೇ ಸಂದರ್ಭದಲ್ಲಿ ಸಾವಿರಾರು ಮಂದಿಗೆ (ಅವರಲ್ಲಿ ಹೆಚ್ಚಿನವರು ಮಹಿಳೆಯರು) ದೈವಾವೇಶ ಪ್ರಾಪ್ತವಾಗುವ ಸಿರಿ ಬಳಗದ ಆರಾಧನಾ ಪದ್ಧತಿ ತುಳುನಾಡಿಗೆ ವಿಶಿಷ್ಟವಾದದ್ದು. ಕವತ್ತಾರು, ಹಿರಿಯಡ್ಕ, ನಂದಳಿಕೆ, ನಿಡಿಗಲ್ಲು ಮೊದಲಾದ ಕಡೆ ಈ ಸಾಮೂಹಿಕ ಸಿರಿದರ್ಶನವನ್ನು ನೋಡಬಹುದು.

ನಾಗಾರಾಧನೆ ದೇಶದ ಹಾಗೂ ಪ್ರಪಂಚದ ಹಲವೆಡೆ ಇದ್ದರೂ ತುಳುನಾಡಿನಷ್ಟು ವೈವಿಧ್ಯ ಬೇರೆಡೆ ಇಲ್ಲವೆನ್ನಬಹುದು. ದಕ್ಕೆಬಲಿ, ನಾಗದರ್ಶನ, ನಾಗಮಂಡಲ, ಬ್ರಹ್ಮಮಂಡಲ, ಕಾಡ್ಯನಾಟ ಮೊದಲಾದ ನೃತ್ಯಪ್ರಧಾನವಾದ ನಾಗಸೇವೆಗಳು ಅತ್ಯಂತ ವರ್ಣರಂಜಿತವೂ, ಕುತೂಹಲಕರವೂ ಆಗಿವೆ. ಪಡುಬಿದ್ರಿಯ ಒಂದು ವನಪ್ರದೇಶದಲ್ಲಿ ಬ್ರಹ್ಮಮಂಡಲವೆಂಬ ನಾಗಾರಾಧನೆಯ ವೇಳೆ ಇಡೀ ಕಾಡೇ ‘ನಾಗಬನ’ವಾಗಿ ಪರಿವರ್ತಿತವಾಗುತ್ತದೆ. ಫಲಪುಷ್ಪಗಳಿಂದ ಇಡೀ ವನವನ್ನೇ ಅಲಂಕರಿಸುವ ವೈಖರಿ ವಿಶಿಷ್ಟವಾದದ್ದು.

ನಾಗಶೀಲೆಗಳನ್ನಿಟ್ಟು ಪೂಜಿಸುವ ಸಾವಿರಾರು ನಾಗಬನಗಳೂ ಕಾಡ್ಯನ ಮನೆಗಳೂ ತುಳುನಾಡಿನಲ್ಲಿವೆ. ಹೆಚ್ಚಿನವರು ತಮ್ಮ ಕುಲದೈವಗಳೊಂದಿಗೆ ನಾಗನನ್ನೂ ಪೂಜಿಸುತ್ತಾರೆ. ನಾಗಬನಗಳ ಮರಗಿಡಬಳ್ಳಿಗಳನ್ನು ಕಡಿಯಲು ಹಿಂಜರಿಯುವುದರಿಂದ, ಅತ್ಯಂತ ಹಳೆಯ ಕೆಲವು ಅಪೂರ್ವ ಮರಗಳೂ ಬಳ್ಳಿಗಳೂ ಇಂಥ ಬನಗಳಲ್ಲಿದ್ದು, ನಾಗಾರಾಧನೆಯು ಪರೋಕ್ಷವಾಗಿ ಪರಿಸರ ನಾಶವನ್ನು ಸ್ವಲ್ಪಮಟ್ಟಿಗೆ ತಡೆದಿದೆ ಎನ್ನಬೇಕಾಗಿದೆ. (ಈಗಿನ ನಾಗಬನಗಳು ಕಾಂಕ್ರೀಟು ಬನಗಳಾಗುತ್ತಿರುವುದು ವಿಷಾದನೀಯ)

ಕೆಲವು ಕಡೆ ‘ದೇವರ ಕಾಡು’ಗಳು ಉಳಿದುಕೊಂಡಿವೆ. ವರ್ಷಕ್ಕೊಂದು ಬಾರಿ ಮಾತ್ರ ಇಂಥ ಕೆಲವು ಕಾಡುಗಳಿಂದ ಸೊಪ್ಪನ್ನು ಕೊಯ್ಯಬಹುದೆಂಬ ಪದ್ಧತಿ ಕೆಲವೆಡೆ ಇದೆ. ಕೆಲವು ನದೀಭಾಗಗಳಲ್ಲೂ ಕೆರೆಗಳಲ್ಲೂ ವರ್ಷಕ್ಕೊಂದು ಬಾರಿ ಮಾತ್ರ ಸಾರ್ವಜನಿಕ ಮೀನುಬೇಟೆ ಮಾಡುವ ಪದ್ಧತಿ ಈಗಲೂ ಇದೆ. (ಉದಾ : ಕಂಡಿಗೆ, ಬೆಳಪು ಇತ್ಯಾದಿ) ಕೆಲವು ದೇವಸ್ಥಾನಗಳ ಹೊಳೆಗಳಲ್ಲೂ ಕೆರೆಗಳಲ್ಲೂ ದೇವರ ಮೀನುಗಳು ಪೋಷಿಸಲ್ಪಡುತ್ತವೆ. (ಉದಾ : ಶಿಶಿಲ, ಸುಬ್ರಹ್ಮಣ್ಯ, ತೋಡಿಕಾನ ಇತ್ಯಾದಿ) ಈಚೆಗೆ ಇವುಗಳ ಮಾರಣ ಹೋಮವೂ ನಡೆಯುತ್ತಿರುವುದು ಖೇದಕರ!

ಮಾತೃಪ್ರಧಾನ ಸಮಾಜಪದ್ಧತಿ ಬೇರೆಡೆಯೂ ಇದೆಯಾದರೂ ತುಳುನಾಡಿನಷ್ಟು ಚಾರಿತ್ರಿಕ ಹಾಗೂ ಸಾಮಾಜಿಕ ವೈಶಿಷ್ಟ್ಯ ಬೇರೆಡೆಗಳಲ್ಲಿಲ್ಲ. ಅಳಿಯಕಟ್ಟಿಗೆ ಮೂಲವಾಗಿ ಹೇಳಲಾಗುವ ಭೂತಾಳಪಾಂಡ್ಯನ ಕತೆ ತುಳುನಾಡಿಗೆ ಸಂಬಂಧಪಟ್ಟದ್ದಾಗಿದೆ. ಈ ಪದ್ಧತಿ ಎಷ್ಟು ಬಲಿಷ್ಠವಾದುದೆಂದರೆ ಇಲ್ಲಿಗೆ ಬಂಧ ಹಾಗೂ ಮತಾಂತರಗೊಂಡ ಜೈನರಲ್ಲಿ ಹೆಚ್ಚಿನವರು ಅಳಿಯಕಟ್ಟನ್ನೇ ಅನುಷ್ಠಾನಕ್ಕೆ ತಂದರು. ಈಗ ಮಕ್ಕಳ ಕಟ್ಟನ್ನು ಅನುಸರಿಸುವ ಕೆಲವು ಪಂಗಡಗಳವರು ಕೆಲವೇ ತಲೆಮಾರುಗಳ ಹಿಂದೆ ಮಾತೃಮೂಲ ಕಟ್ಟನ್ನು ಅನುಸರಿಸುತ್ತಿದ್ದುದು ತಿಳಿಯುತ್ತದೆ. ಬ್ಯಾರಿ ಸಮುದಾಯದ ಕೆಲವು ಆಚಾರಗಳಲ್ಲಿ ಮಾತೃಮೂಲ ಪದ್ಧತಿಯ ಕುರುಹುಗಳಿವೆ.

ಜೈನ-ಬಂಟ ಸಮಾಜಗಳ ಪುರಾತನ ಸಂಬಂಧಗಳ ಪುರಾವೆಯಾಗಿ ಅವರ ಹಲವು ಕುಲನಾಮಗಳು ಒಂದೇ ಆಗಿವೆ. (ಉದಾ : ರೈ, ಅತಿಕಾರಿ, ಶೆಟ್ಟಿ, ಹೆಗ್ಗಡೆ, ಪೂವಣಿ ಇತ್ಯಾದಿ) ಬಂಟ ಸಮಾಜದ ಕೆಲವು ತರವಾಡು ಮನೆಗಳಲ್ಲಿ ನಡೆಯುವ ಪಿತೃಕಾರ್ಯದ ಅಂಗವಾಗಿ, ಹಿಂದೆ ತಮ್ಮ ಕುಲದಲ್ಲಿ ಜೈನರಾಗಿ ಸಂದುಹೋದವರಿಗಾಗಿ ‘ಜೈನೆಡೆ’(ಸಸ್ಯಾಹಾರೀ ನೈವೇದ್ಯ ಅರ್ಪಣೆ) ಸಲ್ಲುವುದೂ, ಕೆಲವು ಜೈನ ಕುಟುಂಬದ ಸದಸ್ಯರು ನಿಧನರಾದರೆ ಬಂಟಮನೆತನದ ನಿರ್ದಿಷ್ಟ ಮನೆಯವರು ಸೂತಕ ಆಚರಿಸುವುದೂ ರೂಢಿಯಾಗಿದೆ. ಕೆಲವು ಹಿರಿಯ ಮನೆಗಳಲ್ಲಿ ಪರಿಶಿಷ್ಟ ವರ್ಗದ ಕೆಲವರು ‘ಮೂಲ’ದವರಾಗಿ ಅನುವಂಶಿಕವಾಗಿ ದುಡಿಯುತ್ತಿದ್ದುದುಂಟು. ಅಂಥ ಮನೆಯವರ ಸೂತಕಪಾತಕ ಮೂಲದವರಿಗೂ ಅನ್ವಯಿಸುತ್ತಿತ್ತು.

ಮಕ್ಕಳು ಬಾಳದೇ ಹೋಗುವ ಸಂದರ್ಭದಲ್ಲಿ ಕೊರಗ ಪಂಗಡದ ಎಳಗೂಸಿನ ತಾಯಿಯ ಕೈಗೆ ಮಗುವನ್ನಿತ್ತು ಅವಳಿಂದ ಸ್ತನ್ಯಪಾನ ಮಾಡಿಸಿ, ಹೊಸ ನಾಮಕರಣ ಮಾಡಿಸಿ, ಮಗುವಿಗೆ ಒಂದು ವಿಧದ ಪುನರ್ಜನ್ಮ ರೀತಿಯ ಸಂಸ್ಕಾರ ಮಾಡಿಸುವ ಪದ್ಧತಿ ತುಳುನಾಡಿನ ಮೇಲುವರ್ಗದವರಲ್ಲಿ ಇತ್ತೀಚಿಗಿನವರೆಗೂ ಇತ್ತು.

ವೃತ್ತಿ, ಆಚಾರಗಳಿಗೆ ಸಂಬಂಧಿಸಿ ಒಂದು ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯೊಳಗೆ ಮಾತ್ರ ಕರ್ತವ್ಯ ನಿರ್ವಹಿಸತಕ್ಕ ‘ಅಜಲೆ’ ಎಂಬ ಪದ್ಧತಿ ತುಳುನಾಡಿನಲ್ಲಿ ಪ್ರಬಲವಾಗಿದ್ದು ಪ್ರಕೃತ ಶಿಥಿಲವಾಗಿದೆ. ತುಳುಪರಂಪರೆಯ ಹೆಚ್ಚಿನ ಅವೈದಿಕ ಸಮಾಜಗಳ ‘ಬಳಿ’ಗಳು (ಗೋತ್ರಗಳು) ಒಂದೇ ಆಗಿರುವುದು ವಿಶೇಷ ವಿಚಾರವಾಗಿದ್ದು ಇದು ತುಳು ಸಮಾಜದ ಮೂಲದ ಕಡೆಗೆ ಬೆಟ್ಟು ತೋರಿಸುವಂತಿದೆ. (ಉದಾ : ಚಾಲ್ಯನ್ನಾಯ, ಸಿರಿಯನ್ನಾಯ, ಬಂಗೆರನ್ನಾಯ, ಕರ್ಮರನ್ನಾಯ ಇತ್ಯಾದಿ) ಕರ್ನಾಟಕದ ಇತರೆಡೆ ಇಂಥ ಸಾದೃಶ್ಯಗಳಿಲ್ಲ.

ತುಳುನಾಡು ಎಂದೂ ಒಂದು ‘ದ್ವೀಪ’ವಾಗಿರಲಿಲ್ಲ. ಪುರಾತನ ಕಾಲದಲ್ಲಿ ಅನೇಕ ವಿದೇಶಗಳೊಂದಿಗೆ ತುಳುನಾಡಿಗೆ ವ್ಯಾಪಾರ ವ್ಯವಹಾರ ಸಂಬಂಧವಿದ್ದುದನ್ನು ಮರೆಯು ವಂತಿಲ್ಲ. ಅಂತೆಯೇ ದೇಶದ ಹಲವು ಆರಾಧನಾ ಕೇಂದ್ರಗಳಿಗೂ ತುಳುನಾಡಿಗೂ ಸಂಬಂಧವಿದ್ದುದನ್ನು ಮರೆಯುವಂತಿಲ್ಲ. ಅಂತೆಯೆ ದೇಶದ ಹಲವು ಆರಾಧನಾ ಕೇಂದ್ರಗಳಿಗೂ ತುಳುನಾಡಿಗೂ ಸಂಬಂಧವಿರುವುದನ್ನು ಗಮನಿಸಬಹುದಾಗಿದೆ. ದಕ್ಷಿಣ ಭಾರತದ ಹಾಗೂ ಉತ್ತರ ಭಾರತದ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಅರ್ಚಕವೃತ್ತಿಯನ್ನು ನಿರ್ವಹಿಸುವವರು ಹೆಚ್ಚಾಗಿ ತುಳುನಾಡಿನ ಬ್ರಾಹ್ಮಣರಾಗಿದ್ದಾರೆ.

ಕದ್ರಿಯ ದೇವಸ್ಥಾನವು ಪುರಾತನದಲ್ಲಿ ಬೌದ್ಧ ವಿಹಾರವಾಗಿತ್ತೆಂಬ ವಿಚಾರ ಅಲ್ಲಿನ ಶಾಸನಗಳಿಂದಲೂ, ಅಲ್ಲಿರುವ ಅವಲೋಕಿತೇಶ್ವರ, ಮಂಜುಶ್ರೀ ಇತ್ಯಾದಿ ವಿಗ್ರಹಗಳಿಂದಲೂ ಸುವೇದ್ಯವಾಗುತ್ತದೆ. ಬೌದ್ಧ ಧರ್ಮದ ವಜ್ರಯಾನ ಪಂಥದಿಂದ ಕವಲೊಡೆಯಿತೆನ್ನಲಾದ ನಾಥಪಂಥದ ಒಂದು ಕೇಂದ್ರವಾಗಿದ್ದ ಕದ್ರಿ ಕ್ಷೇತ್ರದಲ್ಲಿ ‘ಜೋಗಿ ಅರಸು’ ಎಂದು ಕರೆಯಲ್ಪಡುವ ನಾಥಪಂಥದ ಪೀಠಾಧಿಪತಿಗಳ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ. ವಿಶೇಷವೆಂದರೆ ಈ ಯೋಗಿಗಳು ಸ್ಥಳೀಯರಾಗಿರದೆ, ಉತ್ತರ ಹಿಂದೂಸ್ಥಾನದವರಾಗಿರುತ್ತಾರೆ. ನಾಸಿಕದ ತ್ರ್ಯಂಬಕೇಶ್ವರದಿಂದ ಯೋಗಿ ಪ್ರಮುಖರು ಕಾಲ್ನಡಿಗೆಯಿಂದ ಹೊರಟು ಕದ್ರಿಯಲ್ಲಿ ಸೇರುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ಹೊಸ ‘ಜೋಗಿ ಅರಸು’ಗಳ ಪಟ್ಟಾಭಿಷೇಕ ವಿಧಿವತ್ತಾಗಿ ಜರುಗುತ್ತದೆ. ಹಿಂದೆ ಕದ್ರಿಕ್ಷೇತ್ರದಲ್ಲಿ ಇವರ ಅಧಿಕಾರ ಪ್ರಭಾವ ವಿಶೇಷವಿತ್ತೆಂದು ಹೇಳಲಾಗಿದೆ. ಮೊಗವೀರ ಸಮಾಜದವರು ವರ್ಷಪ್ರತಿ ನಡೆಸುವ ಸಮುದ್ರಪೂಜೆಯಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈಗಲೂ ಜೋಗಿ ಮಠದ ಮುಖ್ಯರು ಪಾಲುಗೊಳ್ಳುತ್ತಾರೆ.

ಹನ್ನೆರಡು ವರ್ಷಗಳಿಗೊಮ್ಮೆ, ನೆಟ್ಟಣಿಗೆಯ ಬಳಿ ಇರುವ ‘ಜಾಂಬ್ರಿ’ ಎಂಬ ದೊಡ್ಡ ಗುಹೆಯೊಳಗೆ ಇಳಿದು ಮೃತ್ತಿಕಾಪ್ರಸಾದ ತರುವ ಉತ್ಸವವಿದೆ. ಬ್ರಾಹ್ಮಣರೂ ಪರಿಶಿಷ್ಟ ವರ್ಗದವರೂ ಒಟ್ಟಾಗಿಯೇ ಗುಹಾಪ್ರವೇಶ ಮಾಡುವುದು ವಾಡಿಕೆ.

ಹನ್ನೆರಡು ವರ್ಷಗಳಿಗೊಮ್ಮೆ ಪೊಳಲಿಯ ರಾಜರಾಜೇಶ್ವರಿ ವಿಗ್ರಹಕ್ಕೆ ವಿಶಿಷ್ಟ ಲೇಪನ ವಿಧಿ ನಡೆಯುವುದು ಪದ್ಧತಿ, ಹಲವು ದೇವಸ್ಥಾನಗಳಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಅಷ್ಟಬಂಧ ಬ್ರಹ್ಮಕಲಶ ನಡೆಸುವುದೂ ದೊಡ್ಡ ನಡಾವಳಿ ಉತ್ಸವ ನಡೆಸುವುದು ಉಂಟು. ‘ಹನ್ನೆರಡು ವರ್ಷಕ್ಕೆ ಬಾರಕೂರು ಜಾತ್ರೆ ಆಯಿತು’ ಎಂಬ ಗಾದೆಯೇ ಇದೆ.

ತುಳುನಾಡಿನಲ್ಲಿ ಜನಪದ ಕುಣಿತಗಳೂ, ಹಾಡುಗಳೂ, ಆಟಕೂಟಗಳೂ, ಕಲೆಗಳೂ ಹೇರಳವಾಗಿವೆ. ಕಂಬಳ, ಕೋಳಿ ಅಂಕಗಳಂತ ಕ್ರೀಡೆಗಳನ್ನು ಮನರಂಜನೆಗೆ ಮಾತ್ರವಲ್ಲದೆ ಕೆಲವೊಂದು ಆರಾಧನಾಲಯಗಳ ಉತ್ಸವಭಾಗದ ಆಚರಣಾವಿಧಿಯಾಗಿಯೂ ಹಮ್ಮಿಕೊಳ್ಳುವುದಿದೆ. ಚೆನ್ನೆಮಣೆಯಂಥ ಆಟವು ಕೂಡಾ ಸಿರಿ ಆರಾಧನೆಯ ಅಂಗವಾಗಿ ಬಳಸಲ್ಪಡುತ್ತದೆ.

ಆಹಾರ ವಿಚಾರದಲ್ಲಿ ಇಲ್ಲಿ ಎತ್ತಿ ಹೇಳಬೇಕಾದ ಮುಖ್ಯ ವೈಶಿಷ್ಟ್ಯವೆಂದರೆ ಇಲ್ಲಿನ ಹೆಚ್ಚಿನ ಮಂದಿ ಕುಚ್ಚಲಕ್ಕಿಯ ಅನ್ನವನ್ನೇ ಉಣ್ಣುವರು. ಕುಚ್ಚಲು ಅಕ್ಕಿಯಿಂದ ಬಗೆಬಗೆಯ ಭಕ್ಷ್ಯಗಳನ್ನು ಮಾಡುತ್ತಾರೆ. ಅಕ್ಕಿಯ ವಿವಿಧ ಅವತಾರಗಳಾದ ಅವಲಕ್ಕಿ, ಹುರಿಯಕ್ಕಿ, ಅರಳುಗಳು, ಇಲ್ಲಿ ಜನಪ್ರಿಯ ತಿನಿಸುಗಳಾಗಿವೆ. ವೈದಿಕ ವಿಧಿಗಳಲ್ಲೂ ವೈದಿಕ ಪರಂಪರೆಯವರ ಮನೆಗಳಲ್ಲೂ ಬೆಳ್ತಿಗೆ ಅಕ್ಕಿಯನ್ನು ಉಪಯೋಗಿಸುತ್ತಾರೆ. (ಎರಡೆರಡು ಸಲ ಬೇಯಿಸಲ್ಪಡುವುದರಿಂದ ಕುಚ್ಚಲಕ್ಕಿ ಅವರ ದೃಷ್ಟಿಯಲ್ಲಿ ‘ಮುಸುರೆ’ ಎನಿಸುತ್ತದೆ.)

ಅಕ್ಕಿಯನ್ನು ಇತರ ಧಾನ್ಯಗಳನ್ನು ದೀರ್ಘಕಾಲ ದಾಸ್ತಾನು ಇಡಲು ಬೈಹುಲ್ಲಿನ ಗೋಲಾಕಾರದ ಕವಚವನ್ನು ಮಾಡುವ ಸರಳ, ಕಲಾತ್ಮಕ ವ್ಯವಸ್ಥೆ ಗಮನೀಯವಾದದ್ದು. ಅದೇ ರೀತಿ, ಓಲೆಬೆಲ್ಲವನ್ನು ಸುರಕ್ಷಿತವಾಗಿಡಲು ತಾಳೆಮರದ ಅಥವಾ ತೆಂಗಿನಮರದ ಗರಿಗಳ ರಕ್ಷಾಕವಚವನ್ನು ಮಾಡುತ್ತಾರೆ.

ರುಚಿಕಟ್ಟಾದ ಆಡುಗೆ ಹಾಗು ವಿಧವಿಧದ ಭಕ್ಷ್ಯಗಳನ್ನು ಮಾಡುವುದರಲ್ಲಿ ದಕ್ಷಿಣ ಕನ್ನಡದವರು ಅದರಲ್ಲೂ ಉಡುಪಿಯವರು ಸಿದ್ಧಹಸ್ತರೆಂದು ದೇಶಾದ್ಯಂತ ಹಾಗೂ ವಿದೇಶಗಳ ಕೆಲವೆಡೆಗಳಲ್ಲೂ ಸುಪ್ರಸಿದ್ಧರು. ದೊಡ್ಡ ದೊಡ್ಡ ನಗರಗಳಲ್ಲಿ ದಕ್ಷಿಣ ಕನ್ನಡ ಮೂಲದವರ ಉಪಾಹಾರ, ಮಂದಿರಗಳು, ಜನಪ್ರಿಯವಾಗಿದೆ. ತುಳುನಾಡಿನ ಊಟದ ಸಂಭ್ರಮವನ್ನು ದೂರದ ಊರಿನ ಜನಪದ ಹಾಡೊಂದು ಹೀಗೆ ಬಣ್ಣಿಸಿದೆ.

ತುಪ್ಪಶನ ಉಂಬಲೆ ತುಳುನಾಡಿಂಗೋಯೆಕ್ಕು
ಅಕ್ಕಿಯ ಮೇಲೆ ಬರೆಯಿಲ್ಲೆ, ತುಳುನಾಡ
ಮಕ್ಕಳ ಮೇಲೆ ಕಲೆಯಿಲ್ಲೆ

ಮುಂಬಯಿ, ಬೆಂಗಳೂರುಗಳಂಥ, ‘ಕೋಸ್ಮೊಪೊಲಿಟನ್ ’ನಗರಗಳನ್ನು ಬಿಟ್ಟರೆ, ಇಷ್ಟೊಂದು ಸಂಖ್ಯೆಯ ಭಾಷೆ, ಉಪಭಾಷೆಗಳನ್ನು ಮಾತನಾಡುವ ಹಾಗೂ ಆಯಾ ಭಾಷೆಯಲ್ಲಿ ಅಪಾರವಾದ ಜನಪದ ಸಂಸ್ಕೃತಿಯನ್ನು ಹಿಡಿದಿಟ್ಟುಕೊಂಡಿರುವ ಜನವರ್ಗದವರು ಒಂದೇ ಪ್ರದೇಶದಲ್ಲಿ ಇರುವುದು ಭಾರತದಲ್ಲೇ ವಿರಳ. ಭಾಷೆ, ಉಪಭಾಷೆಗಳ ಹಾಗೂ ಜನಾಂಗಿಕ ಸಂಸ್ಕೃತಿಗಳ ಅಧ್ಯಯನಕ್ಕೆ ಇದರಷ್ಟು ಸಮೃದ್ಧವಾದ ಕ್ಷೇತ್ರ ಮತ್ತೊಂದಿಲ್ಲವೆನ್ನಬಹುದು.

ಈ ಪ್ರದೇಶವು ತುಳು, ಕೊಂಕಣಿ, ಹವೀಕ, ಕೋಟ, ಬ್ಯಾರಿ, ಮರಾಠಿ ಮೊದಲಾದ ಭಾಷೆಗಳ ಹಾಗೂ ಅವು ಬೆಳೆಯಿಸಿಕೊಂಡು ಬಂದ ಸಾಹಿತ್ಯ, ಕಲೆ, ಸಂಸ್ಕೃತಿಗಳ ಆಡುಂಬೊಲವಾಗಿದೆ. ಇವುಗಳೂ ಯಕ್ಷಗಾನದಂಥ ಜನಪ್ರಿಯ ಕಲೆಗಳೂ ಪ್ರತ್ಯೇಕ ಉಲ್ಲೇಖಕ್ಕೆ ಅರ್ಹವಾಗಿವೆ.

ನಯಸೇನನ ಧರ್ಮಾಮೃತದಲ್ಲಿ (ಕ್ರಿ.ಶ.೧೧೧೨) ತುಳುನಾಡಿನ ಒಂದು ವಿಶಿಷ್ಟ ರೂಢಿಯನ್ನು ಸಂಬಂಧಿಸಿ, ‘ತುಳುನಾಡ ಸತ್ತಮನೆಯವರಂತೆ ಪಳಯಿಸುವರ್’ ಎಂಬ ಮಾತಿದೆ. (೩ನೇ ಆಶ್ವಾಸ, ೭೮ನೇ ಗದ್ಯ). ಮರಣ ಸಂಭವಿಸಿದ ಮನೆಯಲ್ಲಿ ಅಳುವೆಂಬುದು ಸಾಮಾನ್ಯವೇ ಆದರೂ ತುಳುನಾಡಿನಲ್ಲಿ ಈ ರೋದನ ವಿಧಾನ ವಿಶೇಷವಾಗಿದ್ದು ಆ ವಿಚಾರ ಇತರೆಡೆಗಳಲ್ಲೂ ಪ್ರಚಾರದಲ್ಲಿದ್ದುದರಿಂದಲೆ ಹಳಗಾಲದ ಕವಿಯಾದ ನಯಸೇನನು ಹೀಗೊಂದು ಉಲ್ಲೇಖ ಮಾಡಿರಬೇಕು.

ಅಂತ್ಯಕ್ರಿಯೆ, ಉತ್ತರಕ್ರಿಯೆಗಳಿಗೆ ಸಂಬಂಧಪಟ್ಟು ಜನಪದರಲ್ಲಿ ಅನೇಕ ಅನುಷ್ಠಾನವಿಧಿಗಳಿರುತ್ತವೆ. ಹಿಂದೆ ತುಳುನಾಡಿನಲ್ಲೂ ಸಾಕಷ್ಟು ವಿಸ್ತಾರವಾದ ಕ್ರಿಯಾಭಾಗಗಳಿದ್ದವು. ಈಗಲೂ ತಕ್ಕಮಟ್ಟಿಗೆ ಇದೆ. ಸಂಬಂಧಿಕರು ಒಂದೆಡೆ ಕುಳೀತು ತಲೆಗೆ ಅರಿವೆ ಹಾಕಿ ಗಟ್ಟಿಯಾಗಿ ಪ್ರಳಾಪಿಸುವುದೂ ಒಂದು ವಿಧಿಯಾಗಿತ್ತು. ಎಂದರೆ ಸಹಜವಾದ ಒಂದು ಕ್ರಿಯೆ ಒಂದು ಶಾಸ್ತ್ರವಾಗಿ ರೂಪ ತಳೆದಿತ್ತು. ಇದನ್ನು ತುಳುವಿನಲ್ಲಿ ಮುರೈಡುನಿ, ಮುರಿಯೋ ದೀಪಿನಿ, ಮುರಿಯೋ ಲಕ್ಕಾವುನಿ, ಮುರಿಯೋ ಪತ್ತುನಿ- ಎಂದೆಲ್ಲ ಹೇಳುತ್ತಿದ್ದರು. ಇದು ವಿಪರೀತವೆನಿಸಿತ್ತು ಎಂಬುದು ನಯಸೇನನ ಭಾವ.

ವಿವಿಧ ಜಾತಿಮತ, ಬುಡಗಟ್ಟುಗಳಿಗೆ ಸೇರಿದ ಮಂದಿ ಬಹುಮಟ್ಟಿಗೆ ಸೌಹಾರ್ದದಿಂದ ಸಹಜೀವನ ಮಾಡುವ ಈ ತುಳುನಾಡಿಗೆ ಭಯಂಕರ ಚಂಡಮಾರುತ. ಭೂಕಂಪ ಇತ್ಯಾದಿ ಪ್ರಾಕೃತಿಕ ಪ್ರಕೋಪಗಳು ಸಾಮಾನ್ಯವಾಗಿ ತಟ್ಟದಿರುವಂತೆಯೆ (ಇದು ಪರಶುರಾಮ ಸೃಷ್ಟಿಯಾಗಿರುವುದೇ ಈ ಕ್ಷೇಮ ರಕ್ಷೆಗೆ ಕಾರಣ ಎಂಬುದು ಪುರಾಣಮತ!). ದೇಶದ ಇತರೆಡೆ ಆಗಾಗ ವ್ಯಾಪಿಸುವಂಥ ಮಹಾಗಂಡಾಂತರಕಾರೀ ಸಾಮಾಜಿಕ ಪಿಡುಗುಗಳೂ ಅಷ್ಟಾಗಿ ತಟ್ಟುವುದಿಲ್ಲ ಎಂಬುದು ಸಮಾಧಾನಕರ ಅಂಶ.

ಮುಕುಂದಪ್ರಭು ಎಂ.(ಸಂ), ೨೦೦೦, ಕೆನರಾ, ೨೦೦ ನೆನಪಿನ ಸಂಪುಟ ‘ಪೊಲಿ’ಯಲ್ಲಿ ಪ್ರಕಟಿತ