ಸಂಸ್ಕೃತಿ, ಧರ್ಮಗಳು ಸರಿಯಾಗಿ ಕಣ್ಣುಬಿಡುವ ಮೊದಲೇ ಇತಿಹಾಸ ಪೂರ್ವದ ಶಿಲಾಯುಗದ ಮಾನವನು ಪ್ರಕೃತಿಯ ವಿವಿಧ ವಿದ್ಯಮಾನಗಳಿಗೆ ಸ್ಪಂದಿಸಿ ಕೆಲವೊಂದು ಪ್ರಾಕೃತಿಕ ಶಕ್ತಿಗಳನ್ನು ಭಿನ್ನ ಭಿನ್ನ ರೂಪಗಳಲ್ಲಿ ಪೂಜಿಸಿದ್ದನೆಂದು ಊಹಿಸಬಹುದು. ಮನುಷ್ಯನ ಭಯ, ಬಯಕೆ, ಕನಸು, ಕಲ್ಪನೆಗಳು ಎಷ್ಟೆಲ್ಲಾ ರೂಪಗಳನ್ನು ತಳೆದುಕೊಂಡು ಯಾವೆಲ್ಲ ನೆಲೆಗಳಲ್ಲಿ ಕ್ರಿಯಾಶೀಲವಾಗುತ್ತ ಬಂದಿದೆ ಎಂಬುದನ್ನು ಪರಿಭಾವಿಸುವಾಗ ಬೆರಗಾಗುತ್ತದೆ.

ಭಾರತದ ವಿಶಿಷ್ಟ ಆರಾಧನಾ ಪ್ರಸ್ಥಾನಗಳಲ್ಲಿ ತುಳುನಾಡಿನ ದೈವಾರಾಧನಾ ಪ್ರಸ್ಥಾನವೂ ಒಂದಾಗಿದೆ. ಇದೊಂದು ಪ್ರಾಚೀನ ಜನಪದ ಆರಾಧನಾ ವಿಧಾನ. ಜನಪದ ಆರಾಧನಾ ಸಂಪ್ರದಾಯವೆಂಬುದು, ಕೆಲವರು ತಪ್ಪಾಗಿ ತಿಳಿದಂತೆ ಅಸಂಸ್ಕೃತ ರೀತಿಯ ಅಥವಾ ಕೆಳಮಟ್ಟದ ದುಷ್ಟಶಕ್ತಿಗಳ ಆರಾಧನೆಯೇನಲ್ಲ. ಪ್ರತಿಯೊಂದು ಸಂಸ್ಕೃತಿಗೂ ಅದರದ್ದೇ ಆದ ಅನನ್ಯತೆ ಇರುವುದನ್ನು ಗುರುತಿಸಬಹುದು. ಜನಪದ ಸಮೂಹಗಳು ತಮ್ಮ ಅನುಭವ ಕಕ್ಷೆಯೊಳಗೆ ಬಂದ ಹಲವಾರು ಅಂಶಗಳನ್ನು ಸ್ವೀಕರಿಸಿ ತಮ್ಮದೇ ಆದ ವಿವಿಧ ಜನಪದ ಆರಾಧನಾ ಪದ್ಧತಿಗಳನ್ನು ಪ್ರಾದೇಶಿಕವಾಗಿ ಬೆಳೆಸಿಕೊಂಡು ಬಂದಿವೆ.

ನೂರಾರು ವರ್ಷಗಳಿಂದ ತುಳುನಾಡಿನ ಜನರ ಸಾಂಸ್ಕೃತಿಕ ಬದುಕನ್ನು ನಿರ್ದೇಶಿಸುತ್ತ ಬಂದಿರುವ ಭೂತಾರಾಧನಾ ಸಂಪ್ರದಾಯವು ಹಲವಾರು ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿರುವ ವಿಲಕ್ಷಣ ಬೆಸುಗೆಯಾಗಿದೆ. ಇದೊಂದು ಧಾರ್ಮಿಕ ರಂಗಭೂಮಿಯೂ ಆಗಿದ್ದು, ಇದರಲ್ಲಿ ಆರಾಧನಾಂಶ, ಕಲಾತ್ಮಕಾಂಶ, ಮನೋರಂಜಕಾಂಶ, ನ್ಯಾಯವಿತರಣಾಂಶ ಇತ್ಯಾದಿಗಳು ಸೇರ್ಪಡೆಗೊಂಡು ಇದೊಂದು ಸಂಕೀರ್ಣ ವ್ಯವಸ್ಥೆಯೇ ಆಗಿದೆ. ಇದೊಂದು ವರ್ಣಮಯ ಲೋಕ; ರಮ್ಯಾದ್ಭುತ ಪ್ರಪಂಚ, ಬಣ್ಣ, ನೃತ್ಯ, ಸಂಗೀತ, ಶಿಲ್ಪ, ಸಾಹಿತ್ಯಾದಿಗಳು ವಿಚಿತ್ರವಾಗಿ ಮಿಳಿತವಾಗಿರುವ ವಿಶಿಷ್ಟ ವೇದಿಕೆ. ಇದರಲ್ಲಿ ಕ್ರಿಯಾಶೀಲವಾಗುವ ಪ್ರತಿಯೊಂದು ಘಟಕದ ಆಳವಾದ ಅಧ್ಯಯನ ಕೈಕೊಳ್ಳಲು ಸಾಧ್ಯವಿದೆ. ದೈವಾರಾಧನೆಯನ್ನು ಇತಿಹಾಸಶಾಸ್ತ್ರ, ಸಮಾಜಶಾಸ್ತ್ರ, ಸಾಂಸ್ಕೃತಿಕ ಮನಃಶಾಸ್ತ್ರ, ನ್ಯಾಯಶಾಸ್ತ್ರ, ತತ್ವಶಾಸ್ತ್ರ, ಕಲಾಮೀಮಾಂಸೆ ಇತ್ಯಾದಿ ಅನೇಕ ಅಧ್ಯಯನ ಶಿಸ್ತುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದು. ಒಟ್ಟಿನಲ್ಲಿ ಈ ಆರಾಧನಾ ಪದ್ಧತಿ ತುಳು ನಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದು ಈಗಲೂ ಊರ್ಜಿತವಾಗಿಯೇ ಇರುವ ಸಂಪ್ರದಾಯವಾಗಿದೆ.

ತುಳುನಾಡಿನ ದೈವಗಳನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಹೇಳುವಂತಿಲ್ಲ. ಸುಮಾರು ನಾಲ್ಕು ನೂರರಷ್ಟು ಇರಬಹುದು. ಕೆಲವು ದೈವಗಳಿಗೆ ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರುಗಳಿರುವುದುಂಟು. ಈ ದೈವಗಳ ಮೂಲ, ಅಂತಸ್ತು, ವ್ಯಾಪ್ತಿ, ಸ್ವರೂಪ ಇತ್ಯಾದಿಗಳ ದೃಷ್ಟಿಯಿಂದ ಹಲವು ಬಗೆಯಲ್ಲಿ ವಗೀಕರಿಸಬಹುದು. ಪಂಜುರ್ಳಿ, ಮೈಸಂದಾಯ, ಪಿಲಿಚಾಮುಂಡಿ ಭೂತಗಳು ಪ್ರಾಣಿಮೂಲದವುಗಳಾಗಿವೆ. ಶತಮಾನಗಳ ಹಿಂದೆ ವಿಪುಲವಾಗಿ ಕಾಡುಗಳಿದ್ದ ಕಾಲದಲ್ಲಿ, ಕಾಡುಪ್ರಾಣಿಗಳ ಹಾವಳಿಯ ಹಿನ್ನೆಲೆಯಲ್ಲಿ ಕಾಡುಹಂದಿ, ಕಾಡುಕೋಣ, ಹುಲಿಗಳ ಅಂತರ್ಯಾಮೀ ಶಕ್ತಿಗಳನ್ನು ಒಲಿಸಿ ಓಲೈಸುವ ಅಂಗವಾಗಿ ಅವುಗಳ ದೈವೀಕರಣವಾಗಿರುವುದು ಸಹಜ. ಭೂತಸ್ಥಾನಗಳ ಬಂಡಿಗಳಲ್ಲಿ ಭೂತವಾಹನಗಳಾಗಿ ಹಂದಿ, ಹುಲಿ, ಕುದುರೆ, ಆನೆ ಮೊದಲಾದವುಗಳ ವಿಗ್ರಹಗಳಿರುವುದುಂಟು. ತುಳುನಾಡಿನ ನಾಗಾರಾಧನೆಯಂತೂ ಪ್ರಸಿದ್ಧವಾದುದು. ನಾಗನ ಬನವಿಲ್ಲದ ಗ್ರಾಮವೊಂದು ಈ ನಾಡಿನಲ್ಲಿರಲಾರದು. ದೈವಗಳಿಗೂ ನಾಗನಿಗೂ ನಿಕಟ ಸಂಬಂಧವಿರುವುದನ್ನು ಕಾಣಬಹುದು.

ಪುರಾಣಗಳಿಂದ ಇಳಿದು ಬಂದು ಆರಾಧನಾರಂಗದಲ್ಲಿ ಕಾಣಿಸಿಕೊಂಡ ಕೆಲವು ದೈವಗಳು ತುಳುನಾಡಿನಲ್ಲಿವೆ. ರಕ್ತೇಶ್ವರಿ, ಚಾಮುಂಡಿ, ವಿಷ್ಣುಮೂರ್ತಿ, ಭೈರವ, ಗುಳಿಗ ಮೊದಲಾದವು ಈ ವರ್ಗಕ್ಕೆ ಸೇರಿವೆ.

ಒಂದು ಕಾಲದಲ್ಲಿ ಮಾನವಜೀವಿಗಳಾಗಿದ್ದು ಯಾವುದೋ ಕಾರಣಕ್ಕೆ ಅಕಾಲ ಮರಣವನ್ನು ಹೊಂದಿದ ಹಲವು ವಿಶಿಷ್ಟ ವ್ಯಕ್ತಿಗಳು ಮರಣಾನಂತರ ದೈವರೂಪಿಗಳಾಗಿ ಪೂಜೆಗೊಳ್ಳುತ್ತ ಬಂದಿದ್ದಾರೆ. ಕೊರಗತನಿಯ, ಕೋಟೆದ ಬಬ್ಬು, ಬಬ್ಬರ್ಯ, ಕೋಟಿ-ಚೆನ್ನಯ, ದಂಡನಾಯಕ, ಕಾಂತಾಬಾರೆ ಬುದಾಬಾರೆ, ಬಿಲ್ಲರಾಯ- ಬಿಲ್ಲಾರ್ತಿ, ಬಸ್ತಿನಾಯಕ, ಕಲ್ಕುಡ, ಕಲ್ಲುರ್ಟಿ, ನಾಯರ್ ಭೂತ, ಬಿಕ್ರು ಮೇಲಾಂಟ, ಬೀರ್ಣಾಳ್ವ, ಮದ್ಮಾಳ್ ಭೂತ, ಮಾಯಂದಾಳ್, ತನ್ನಿಮಾನಿಗ, ಆಲಿಭೂತ -ಮೊದಲಾದವು ಮಾನವ ಮೂಲ ದೈವಗಳು. ಇವರಲ್ಲಿ ವೀರರಿದ್ದಾರೆ, ಜನೋಪಕಾರಿಗಳಿದ್ದಾರೆ. ಶಿಲ್ಪಿ ಮೊದಲಾದ ವಿವಿಧ ವರ್ಗದವರಿದ್ದಾರೆ, ಸಾಧ್ವಿಯರಿದ್ದಾರೆ, ದರ್ಪದ ಬಾಳ್ವಿಕೆ ಮಾಡಿದವರಿದ್ದಾರೆ. ಭೂತಗಳ ಬಾಧೆಯಿಂದ ಅಸುನೀಗಿದವರೆನ್ನಲಾದವರೂ ಇದ್ದಾರೆ. ಹಾಗಾಗಿ ಭೂತಾರಾಧನೆಯಲ್ಲಿ ವೀರಾರಾಧನೆ, ಪಿತೃ ಆರಾಧನೆ, ಸಾಧ್ವಿಯರ ಪೂಜೆ, ಶಕ್ತಿ ಉಪಾಸನೆ, ಪ್ರಕೃತಿ ಪೂಜೆ ಇತ್ಯಾದಿ ಹಲವು ವಿಚಾರಗಳು ಸೇರ್ಪಡೆಗೊಂಡಿವೆ.

ದೈವಗಳಲ್ಲಿ ಪುರುಷರೂಪದವುಗಳು ಇರುವಂತೆ, ಸ್ತ್ರೀರೂಪದ ದೈವಗಳೂ ಸಾಕಷ್ಟಿವೆ. ಉಭಯ ಲಿಂಗಗಳ ಅಂಶಗಳನ್ನು ಕೆಲವೊಮ್ಮೆ ಸಾಂಕೇತಿಕವಾಗಿ ತಳೆದ ಅರ್ಧನಾರೀ ಸ್ವರೂಪದ ದೈವಗಳೂ ಇವೆ. (ಜುಮಾದಿ, ಕೊಡಮಣಿತ್ತಾಯ ಮೊದಲಾದ ದೈವಗಳ ಸ್ವರೂಪವರ್ಣನೆಯಲ್ಲಿ ಈ ಅಂಶ ವ್ಯಕ್ತವಾಗುತ್ತದೆ.) ಸಮಾಜ ವ್ಯವಸ್ಥೆಯಲ್ಲಿ ತೋರಿಬರುವ ಶ್ರೇಣೀಬದ್ಧ ಪದ್ಧತಿ ಮತ್ತು ಊಳಿಗಮಾನ್ಯ ಪದ್ಧತಿಯ ಪ್ರಭಾವವು ಸಹಜವಾಗಿ ದೈವಾರಾಧನಾ ವ್ಯವಸ್ಥೆಯಲ್ಲೂ ವ್ಯಕ್ತವಾಗಿದೆ.

ದೈವಗಳ ಆರಾಧನಾ ಸ್ಥಳಗಳೂ ವೈವಿಧ್ಯಪೂರ್ಣವಾಗಿವೆ. ಬ್ರಹ್ಮಸ್ಥಾನ ಅಥವಾ ಆಲಡೆ, ಭೂತಗಳ ಕೊಟ್ಟಿಗೆ, ಭೂತಸ್ಥಾನ, ಚಾವಡಿ, ಮಾಡ, ಗರಡಿ, ಬನ ಇತ್ಯಾದಿ ಗಳಲ್ಲಿ, ದೈವಗಳು ಒಂಟಿಯಾಗಿಯೋ ಸಮೂಹವಾಗಿಯೋ ನೆಲಸಿರುತ್ತವೆ. ದೈವಗಳಿಗೆ ಸಂಕೇತವಾಗಿ ‘ಮೊಗ’ (ಮುಖವಾಡ), ಕಡ್ತಲೆ (ಖಡ್ಗ), ಶೂಲ, ಘಂಟಾಮಣಿ ಇತ್ಯಾದಿ ದೈವದ ‘ಭಂಡಾರ’ ವಸ್ತುಗಳು ನಿರ್ದಿಷ್ಟ ಸ್ಥಾನಗಳಲ್ಲಿ ಪವಿತ್ರ ಪರಿಸರದಲ್ಲಿ ಇರಿಸಲ್ಪಟ್ಟು ಕಾಲಕಾಲಕ್ಕೆ ಪೂಜಿಸಲ್ಪಡುತ್ತವೆ. ದೈವಗಳ ಆರಾಧನಾ ಮಂದಿರಗಳಿಗೆ ನಿರ್ದಿಷ್ಟವಾದ ವಾಸ್ತುಶಿಲ್ಪದ ಶಾಸ್ತ್ರೀಯ ಶೈಲಿ ಇರುತ್ತದೆ. ಉಪಯೋಗಿಸುವ ಎಲ್ಲಾ ಪರಿಕರಗಳಿಗೂ ನಿಶ್ಚಿತ ಸ್ವರೂಪಗಳಿರುತ್ತವೆ.

ದೈವಗಳಿಗೆ ಕಾಲಕಾಲಕ್ಕೆ ತಂಬಿಲ, ಅಗೆಲು, ಕೋಲ, ನೇಮ, ದೊಂಪದ ಬಲಿ, ಮೆಚ್ಚಿ, ಮೈಮೆ, ಗೆಂಡ, ಧರ್ಮನೇಮ -ಮೊದಲಾದ ವಿವಿಧ ರೀತಿಯ ಸೇವೆಗಳು ಸಲ್ಲುತ್ತವೆ. ನಿಶ್ಚಿತ ಸೇವೆಗಳಲ್ಲದೆ ಪೈಚಿಲ್ ನೇಮ, ಧರ್ಮನೇಮ, ಧರ್ಮಮೆಚ್ಚಿ ಮೊದಲಾದ ವಿಶೇಷ ಸೇವೆಗಳು ಹರಕೆಯಾಗಿಯೂ ಜರಗಿಸಲ್ಪಡುತ್ತವೆ. ಪ್ರತಿಯೊಂದು ಕಲಾಪಕ್ಕೂ ನಿರ್ದಿಷ್ಟ ರೀತಿನೀತಿಗಳಿರುತ್ತವೆ. ಗ್ರಾಮಕ್ಕೆ ಸಂಬಂಧಪಟ್ಟ ದೇವಸ್ಥಾನವಾಗಿದ್ದರೆ ಗ್ರಾಮವಾಸಿಗಳಾದ ಭಿನ್ನ ಭಿನ್ನ ಜನವರ್ಗಗಳ ಪ್ರತಿನಿಧಿಗಳು ವಿಧಿವತ್ತಾಗಿ ಮಾಡಬೇಕಾದ ಕೆಲವೊಂದು ಕರ್ತವ್ಯಗಳು ಪರಂಪರೆಯಿಂದ ನಿರ್ದೇಶಿಸಲ್ಪಟ್ಟಿರುತ್ತವೆ. ಗ್ರಾಮಸ್ಥರೆಲ್ಲರೂ ವಂತಿಗೆ ವರಾಡುಗಳನ್ನಂತೂ ಸಹಜವಾಗಿಯೇ ತೆರಬೇಕಾಗುತ್ತದೆ. ಗ್ರಾಮಸ್ಥರೆಲ್ಲರೂ ಒಂದೆಡೆ ಕಲೆತು ನಡೆದುಕೊಳ್ಳುವ ಈ ವ್ಯವಸ್ಥೆಯ ಹಿಂದೆ ಸಹಕಾರ ಪ್ರವೃತ್ತಿ, ತ್ಯಾಗ, ಸಮಾಜಪ್ರೇಮ ಮುಂತಾದ ಗುಣಗಳ ಎಳೆಗಳು ಗೊಣಸುಗೊಂಡಿವೆ.

ಎಷ್ಟೋ ವೇಳೆ ಕೋರ್ಟುಕಚೇರಿಗಳಲ್ಲಿ ನಡೆಯುವುದಕ್ಕಿಂತ ಚೊಕ್ಕದಾದ ನ್ಯಾಯತೀರ್ಮಾನವು ದೈವಗಳ ಸಮಕ್ಷಮದಲ್ಲಿ ನಡೆಯುತ್ತದೆ. ಸರಕಾರದ ಅಧಿಕಾರಿಗಳಿಗೆ ಅಂಜದ ಎಷ್ಟೋ ವ್ಯಕ್ತಿಗಳು ಭೂತಗಳ ಪ್ರತಾಪಕ್ಕೆ ತಲೆತಗ್ಗಿಸುತ್ತಾರೆ. ಹತ್ತು ಮಂದಿಯ ಸಮ್ಮುಖದಲ್ಲಿ ಆಗುವ ನ್ಯಾಯತೀರ್ಮಾನ, ದೈವದ ಅಭಯವಾಕ್ಯ ಇವುಗಳಿಂದ ಮನಸ್ಸಿಗೊಂದು ಖಚಿತತೆ, ಧೈರ್ಯ, ಆಶಾವಾದ ಮೂಡಿ ಜೀವನದ ಸಮಸ್ಯೆಗಳನ್ನು ಎದಿರಿಸಲು ತಕ್ಕಮಟ್ಟಿಗೆ ಸಾಮರ್ಥ್ಯ ಒದಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಕುಂಟುಂಬದ ದೈವಗಳಿಗೆ ಸಲ್ಲಿಸುವ ಅಗೆಲು, ಕೋಲ ಇತ್ಯಾದಿ ಸಂದರ್ಭಗಳಲ್ಲಿ ಸಂಬಂಧಪಟ್ಟವರು ಒಂದೆಡೆ ಕಲೆತು ಊಟ, ಉಪಚಾರಗಳನ್ನು ಹೊಂದುವ, ಮಾತುಕತೆಯಾಡುವ, ಪ್ರೀತಿವಿಶ್ವಾಸಗಳನ್ನು ಪ್ರಕಟಿಸುವ ಅಪೂರ್ವ ಸನ್ನಿವೇಶದಿಂದ ಲಭಿಸುವ ಕೌಟುಂಬಿಕ ಪ್ರಯೋಜನ ಅತ್ಯಂತ ವಿಶೇಷವಾದದ್ದು. ಪರಸ್ಪರ ಮನಸ್ತಾಪವಿದ್ದಲ್ಲಿ ಅಂಥ ದಿನಗಳಲ್ಲಿ ಅದು ಸಾಮಾನ್ಯವಾಗಿ ದೂರವಾಗುತ್ತದೆ.

ಭೂತೋತ್ಸವಗಳ ಕಲಾಪಗಳಿಂದ ಹಾಗೂ ಭೂತಗಳ ಪಾಡ್ದನಗಳಿಂದ ದೊರಕುವ ವಿವರಗಳಿಂದ ಭೂತಾರಾಧನೆಯಲ್ಲಿ ವೀರಪೂಜೆ(Hero worship) ಎಂಬ ವಿಶಿಷ್ಟಾಂಶವು ಬಹಳಷ್ಟು ವ್ಯಕ್ತವಾಗುವುದು ಕಂಡುಬರುತ್ತದೆ. ಪ್ರಪಂಚದ ಎಲ್ಲ ಪ್ರಾಚೀನ ಜನಾಂಗಗಳ ಸಂಸ್ಕೃತಿಯ ಒಂದಂಶವಿದು. ಜನತೆಯಲ್ಲಿ ಪೌರುಷ, ಧೀರವೃತ್ತಿಗಳ ವೃದ್ದಿಗೆ ಇಂಥ ಸ್ಮರಣೆ, ಆಚರಣೆ ಪೋಷಕವೆನಿಸುತ್ತದೆ.

ದೈವ ಚರಿತ್ರೆಗೆ ಸಂಬಂಧಪಟ್ಟ ಪಾಡ್ದನ ಅಥವಾ ಸಂಧಿಗಳಂತೂ ಜನಪದ ಸಾಹಿತ್ಯದ ಅಪೂರ್ವ ಖನಿಗಳಾಗಿದ್ದು, ತುಳುನಾಡಿನ ಪುರಾಣಸಂಹಿತೆಗಳೆನ್ನಬಹುದು. ಅನೇಕ ಪಾಡ್ದನಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಇತಿಹಾಸವು ಹಾಸುಹೊಕ್ಕಾಗಿರುವುದನ್ನು ಗಮನಿಸಬಹುದು. ಕೋಟಿಚೆನ್ನಯ ಸಂಧಿ, ಸಿರಿಸಂಧಿ ಮೊದಲಾದವು ಜನಪದ ಮಹಾಕಾವ್ಯಗಳೆಂಬ ಮನ್ನಣೆಗೆ ಪಾತ್ರವಾಗಿವೆ. ಭಿನ್ನ ಭಿನ್ನ ವ್ಯಕ್ತಿತ್ವವುಳ್ಳ ಅನೇಕ ಮಂದಿ ತಮ್ಮ ನಂಬಿಕೆ, ಸಾಹಸ, ಸಿಟ್ಟು, ಸೆಡವು, ಉಕ್ಕು, ಸೊಕ್ಕು, ಪಂಥ, ಪೌರುಷ, ಕುಹಕ, ಕರುಣೆ ಇತ್ಯಾದಿ ಶಕ್ತಿ ದೌರ್ಬಲ್ಯಗಳಿಂದ ಜೀವಂತವೆನಿಸಿ ಇಂಥ ಜನಪದ ಕಾವ್ಯದುದ್ದಕ್ಕೂ ಹಾದುಹೋಗುತ್ತಾರೆ. ಈ ಕಥನಗಳಲ್ಲಿ ಅತಿಶಯೋಕ್ತಿಗಳು ಇರಬಹುದಾದರೂ, ಇವು ಕೇವಲ ಕಲ್ಪನಾವಿಲಾಸಗಳಲ್ಲ. ಆ ಕಥನಗಳಿಗೂ, ಆರಾಧನಾ ಸ್ಥಳಗಳಿಗೂ ಅಲ್ಲಿ ನಡೆಯತಕ್ಕ ಆಚರಣ ವಿಧಿಗಳಿಗೂ ಸಂಬಂಧ ಇದ್ದೇ ಇರುತ್ತದೆ. ದೈವಕಥನವನ್ನು ವಿಧಿವತ್ತಾಗಿ ಸಂದರ್ಭೋಚಿತವಾಗಿ ಹಾಡುವುದೂ ದೈವಾರಾಧನೆಯ ಒಂದು ಅಂಗವಾಗಿದೆ.

ದೈವಾವೇಶಗೊಂಡ ಪಾತ್ರಿ ಅಥವಾ ದೈವಕ್ಕೆ ‘ಕಟ್ಟಿದ’ ದೈವವೇಷ ತೊಟ್ಟ ವ್ಯಕ್ತಿ ನುಡಿಯುವ ನುಡಿಗಟ್ಟು ಅಥವಾ ಅಭಯವಾಕ್ಯ ಅತ್ಯಂತ ಪ್ರೌಢವಾದ ಸಾಹಿತ್ಯವೆನ್ನಬಹುದು. ಉಳಿದೆಲ್ಲ ಕಲಾಪಗಳಿಗೂ ಶೈಲೀಕೃತವಾಗಿರುವಂತೆ, ದೈವಮಾಧ್ಯಮದ ಭಾಷೆ ಕೂಡಾ ಶೈಲೀಕೃತವಾಗಿದೆ. ಅದಕ್ಕೆ ಪೂರಕವಾಗಿ ದೈವಸನ್ನಿಧಿಯಲ್ಲಿ ಭಕ್ತರ ಪರವಾಗಿ ‘ಮದು’ ಅಥವಾ ಮದಿಪು ಹೇಳುವವರು ಬಳಸುವ ಭಾಷೆಯೂ ವಿಶಿಷ್ಟ ರೀತಿಯದ್ದಾಗಿದೆ.

ಹೆಚ್ಚಿನ ಜನಪದ ದೈವಗಳು ಭಕ್ತರಿಗೆ ಮುಖಾಮುಖಿಯಾಗಿ ಅವರ ಸುಖ ದುಃಖಗಳನ್ನು ನೇರವಾಗಿ ವಿಚಾರಿಸುವ ಜಾಯಮಾನದವುಗಳಾದುದರಿಂದ ಶಿಷ್ಟದೇವರುಗಳಿಗಿಂತ ಈ ದೈವಗಳು ಜನಪದರಿಗೆ ಹೆಚ್ಚು ಆಪ್ತವೆನಿಸುತ್ತವೆ.

ದೈವಾರಾಧನೆಯು ಹಲವು ಕಲೆಗಳ ಸಮುಚ್ಚಯವಾಗಿದೆ. ದೈವವೇಷಗಳ ವೈವಿಧ್ಯ ಹಾಗೂ ವರ್ಣವೈಭವ ಬೆರಗು ಹುಟ್ಟಿಸುತ್ತದೆ. ಯಕ್ಷಗಾನವೇಷಗಳಂತೆಯೇ ಭೂತವೇಷಗಳೂ ಸಾಂಕೇತಿಕವೂ ಅತಿಮಾನುಷ ಸ್ವಭಾವವುಳ್ಳವುಗಳೂ ಆಗಿವೆ. ಅವುಗಳೊಳಗೆ ಒಂದಿಷ್ಟು ಹೋಲಿಕೆಯಿದ್ದರೂ ಅವೆರಡೂ ವೇಷವಿಧಾನಗಳು ಭಿನ್ನಶೈಲಿಗಳಲ್ಲಿ ಬೆಳೆದು ಬಂದಿವೆ. ಕೇರಳದ ದೈವಗಳ (ತೆಯ್ಯಂಗಳ) ವೇಷವಿಧಾನ ಇನ್ನೊಂದೇ ಆದ ಶೈಲಿಯದ್ದಾಗಿದೆ. ಭೂತವೇಷ ನಿರ್ಮಿತಿಯಲ್ಲಿ ತೆಂಗಿನ ಎಳೆಯ ಗರಿ, ಅಡಿಕೆಮರದ ಹಾಳೆ, ವಿವಿಧ ಬಗೆಯ ಹೂಗಳು ಇತ್ಯಾದಿ ನಿಸರ್ಗಸಹಜ ವಸ್ತುಗಳ ಪಾತ್ರ ವಿಶೇಷವಾದದ್ದು. ಅಣಿ, ಮುಡಿ, ತಿರುಗುಬ್ಯೆ ಮೊದಲಾದ ವಿವಿಧ ಭೂಷಣಗಳು ದೈವಗಳ ಸ್ವರೂಪಗಳಿಗನುಗುಣವಾಗಿ ರಚಿಸಲ್ಪಡುತ್ತವೆ. ಒಂದು ಸಾವಿರ ಕವುಂಗಿನ ಹಾಳೆಯ ತುಂಡುಗಳಿಂದ ನಿರ್ಮಿಸುವ ಬೃಹತ್ ಅಣಿಗಳೂ ಇವೆ! ಕಾಲಿನ ಗಗ್ಗರದಿಂದ ತೊಡಗಿ ನೆತ್ತಿಪಟ್ಟದ ವರೆಗಿನ ವಿವಿಧ ಲೋಹಾಭರಣಗಳ ಭವ್ಯತೆ ಗಮನೀಯವಾಗಿದೆ.

ದೈವವೇಷಗಳ ಮುಖವರ್ಣಿಕೆಯೂ ವೈವಿಧ್ಯದಿಂದ ಕೂಡಿದ್ದು, ಕಲಾತ್ಮಕವೂ ಸಾಂಕೇತಿಕವೂ ಆಗಿದೆ. ನಾಮ, ಮುದ್ರೆ, ಮುತ್ತೆರಿ, ರೇಖೆಗಳನ್ನು ವಿವಿಧ ಬಣ್ಣಗಳಲ್ಲಿ ಮುಖಫಲಕದ ಮೇಲೆ ನಿರ್ಮಿಸುತ್ತಾರೆ. ಯಕ್ಷಗಾನ ಮುಖವರ್ಣಿಕೆಯ ಹಾಗೆಯೇ ಭೂತ ಮುಖವರ್ಣಿಕೆಯೂ ಅಧ್ಯಯನಯೋಗ್ಯವಾಗಿದೆ.

ದೈವಸೇವೆಯಲ್ಲಿ ನರ್ತನ, ಅಭಿನಯಗಳ ಅಂಶವೂ ಸಾಕಷ್ಟಿದೆ. ಆವೇಶದರ್ಶನ ಹಾಗೂ ವಾದ್ಯಗತಿಗನುಗುಣವಾಗಿ ನರ್ತಿಸುವ ವಿಧಾನ ಬಹುಮಟ್ಟಿಗೆ ತೀವ್ರಗತಿಯಲ್ಲಿರುತ್ತದೆ.

ರಂಗಭೂಮಿಗೆ ಸಂಬಂಧಪಟ್ಟ ಬಹುತೇಕ ಎಲ್ಲ ಮೂಲಾಂಶಗಳೂ ದೈವಾರಾಧನಾ ರಂಗದಲ್ಲಿ ಕ್ರಿಯಾಶೀಲವಾಗುವುದರಿಂದ ಇದೊಂದು ಜನಪದ ಆರಾಧನಾ ರಂಗಭೂಮಿ ಅಥವಾ ಧಾರ್ಮಿಕ ರಂಗಭೂಮಿ ಎಂದು ಹೇಳುವುದಕ್ಕೇನೂ ಅಡ್ಡಿಯಿಲ್ಲ. ಪ್ರಾಚೀನ ನಾಟಕ ಸಂಪ್ರದಾಯದಂತೆ ಕೋಲ, ನೇಮಗಳ ಸಂದರ್ಭಗಳಲ್ಲಿ ‘ಪೂರ್ವರಂಗ’ ರೀತಿಯ ವಿಧಿ ಇರುತ್ತದೆ ಎಂಬುದೂ ಗಮನೀಯ.

ದೈವಾರಾಧನೆಗೆ ಸಂಬಂಧಪಟ್ಟು ವಾಸ್ತುಶಿಲ್ಪ, ವಿವಿಧ ಲೋಹಗಳ ಆಯುಧ, ಆಭರಣಾದಿಗಳ ನಿರ್ಮಾಣ, ಅಲಂಕಾರ ವೈಖರಿ, ವಾದ್ಯವಾದನಗಳು ಮೊದಲಾದ ಕಲೆಗಳು ಬೆಳೆದುಬಂದಿವೆ. ತುಳುನಾಡಿನ ಹಾಗೂ ಕೇರಳದ ದೈವಾರಾಧನೆಯು ಯಕ್ಷಗಾನ, ಕಥಕ್ಕಳಿ ಮುಂತಾದ ಅಭಿಜಾತ ಕಲೆಗಳಿಗೆ ಅನೇಕ ಅಮೂಲ್ಯ ಮೂಲಾಂಶಗಳನ್ನು ದಾನಮಾಡಿದೆ.

‘ದೈವಮಾಧ್ಯಮ’ದ ವಿಚಾರ ಹೇಳುವುದಾದರೆ ದೈವಪಾತ್ರಿಗಳು ಆಯಾ ಸ್ಥಳಗಳಿಗೆ ಸಂಬಂಧಪಟ್ಟಂತೆ ಬೇರೆ ಬೇರೆ ವರ್ಗಗಳಿಗೆ ಸಂಬಂಧಪಟ್ಟಿದ್ದರೂ (ವಿರಳವಾಗಿ ಬ್ರಾಹ್ಮಣ, ಜೈನ ಪಾತ್ರಿಗಳೂ ಇರುವುದಿದೆ.) ‘ದೈವಕ್ಕೆ ಕಟ್ಟು’ವವರು ಮಾತ್ರ ಪಂಬದ, ಪರವ, ನಲಿಕೆ ಮೊದಲಾದ ನಿರ್ದಿಷ್ಟ ವರ್ಗದವರು. ಇವರು ಶ್ರೇಣೀಕೃತ ಸಮಾಜವ್ಯವಸ್ಥೆಯಲ್ಲಿ ಹಿಂದೆ ಕೆಳಸ್ತರದವರೆಂದು ಪರಿಗಣಿಸಲ್ಪಟ್ಟಿದ್ದರೂ ಭೂತವೃತ್ತಿ ಕಲಾವಿದರಾಗಿ ಇವರು ವಹಿಸುವ ಪಾತ್ರ ಗಣನೀಯವಾದದ್ದು. ಭೂತಾವೇಶ ಹೊಂದಿದ ಸಾಮಾನ್ಯ ವರ್ಗದ ವ್ಯಕ್ತಿ ದೈವಪ್ರತೀಕವೆನಿಸಿ ಇಡೀ ಸನ್ನಿವೇಶವನ್ನು ನಿಯಂತ್ರಿಸುವ ಚಿತ್ರ ವಿಸ್ಮಯಕರವಾದುದೇ ಸರಿ. ದೈವಾವೇಶ ಸ್ಥಿತಿಯಲ್ಲಿ ಆತ ಅಭಯವರದ ಶಕ್ತಿಯೆನಿಸುತ್ತಾನೆ ಮಾತ್ರವಲ್ಲ, ನ್ಯಾಯಾಧಿಪತಿಯೂ ಆಗುತ್ತಾನೆ.

ದೈವಾರಾಧನೆಯೊಂದಿಗೆ ಚೆಂಡು, ತಪ್ಪಂಗಾಯಿ, ಅಂಬೊಡಿ, ಸತ್ತಿಕಲ್ಲು(ಶಕ್ತಿಕಲ್ಲು) ಎತ್ತುವುದು, ಸೂಟೆದಾರೆ ಮೊದಲಾದ ಕ್ರೀಡೆಗಳೂ ಆಚರಣೆಯ ಭಾಗವಾಗಿ ಬೆಳೆದುಬಂದಿವೆ. ಕಂಬಳ, ಕೋಳಿ ಅಂಕಗಳಂಥ ಕ್ರೀಡೆಗಳಿಗೂ ಭೂತೋತ್ಸವಗಳಿಗೂ ಸಂಬಂಧವಿರುವುದುಂಟು.

ದೈವಾರಾಧನೆಯಲ್ಲಿ ಧನಾತ್ಮಕ ಅಂಶಗಳು ಅನೇಕವಿದ್ದರೂ ಕಾಲಕಾಲಕ್ಕೆ ಅವುಗಳೊಂದಿಗೆ ಬೆರೆದುಬಂದ ಕೆಲವು ಅನಪೇಕ್ಷಿತ ಅಂಶಗಳಿರುವುದನ್ನು ಮರೆಯುವಂತಿಲ್ಲ.

ಹಿಂದೆ ಸಮಾಜದಲ್ಲಿ ಊಳಿಗಮಾನ್ಯ ಪದ್ಧತಿಯೂ ಶ್ರೇಣೀಕೃತ ಜಾತಿ ಪದ್ಧತಿಯೂ ರೂಢಿಯಲ್ಲಿದ್ದುದರಿಂದ ಅವುಗಳ ಪಡಿನೆಳಲು ದೈವಾರಾಧನೆಯಲ್ಲಿ ಕಾಣುವುದು ಸಹಜ. ಜಾತೀಯ ಉಚ್ಚನೀಚತೆ, ಕೆಲವೊಮ್ಮೆ ಅನಪೇಕ್ಷಿತವೆನಿಸುವಷ್ಟು ಮಡಿಮೈಲಿಗೆ ಪ್ರವೃತ್ತಿ, ಎಂದೋ ಆಚರಣೆಗೆ ಬಂದು, ಇಂದು ಅನಗತ್ಯವೆಂದು ತೋರುವ ಕೆಲವು ಕಂದಾಚಾರಗಳು ಈಗಲೂ ದೈವಾರಾಧನೆಯ ಕಕ್ಷೆಯೊಳಗೆ ಕಂಡುಬರುವುದುಂಟು. ಕೆಲವೊಮ್ಮೆ ದಬ್ಬಾಳಿಕೆ, ಶೋಷಣೆಗಳ ಸಾಧನವಾಗಿ ಕೆಲವರು ಭೂತಗಳನ್ನು ಬಳಸಿದ್ದೂ ಉಂಟು. ಭೂತಕ್ಕೆ ನಿಲ್ಲುವವರ ಮೇಲೆ ಪ್ರಭಾವ ಬೀರಿ ತಮಗೆ ಬೇಕಾದಂತೆ ‘ನ್ಯಾಯ’ ಹೇಳಿಸುವ ಕುಹಕತನವೂ ನಡೆದದ್ದುಂಟು. ‘‘ಪರತ್ ನಿಗಿಪೈರೆಲಾ ಬಲ್ಲಿ, ಪೊಸತ್ ತೋಡ್ಯರೆಲಾ ಬಲ್ಲಿ!’’ (ಹಳೆಯದನ್ನು -ಎಂದರೆ ಹಳೆಯ ಬಾವಿಯನ್ನು -ಮುಚ್ಚಲೂ ಬಾರದು, ಹೊಸತು ತೋಡಲೂ ಬಾರದು) ಎಂಬುದೇ ಹೆಚ್ಚಿನ ಭೂತಗಳ ಧ್ಯೇಯವಾಕ್ಯವಾಗಿರುವಾಗ ಪರಂಪರೆಯನ್ನು ಮಾತ್ರ ಮನ್ನಿಸುವ ಭೂತಗಳು ಸಾಮಾನ್ಯವಾಗಿ ಬದಲಾವಣೆಗಳಿಗೆ ಸಿದ್ಧವಾಗುವುದಿಲ್ಲ.

ದೈವಾರಾಧನೆಯಲ್ಲಿ ಇತ್ತೀಚೆಗೆ ಸೇರಿಕೊಂಡ ಕೆಲವು ವಿಕೃತಿಗಳನ್ನು ಕಡೆಗಣಿಸುವಂತಿಲ್ಲ. ಸುಧಾರಣೆ ಮತ್ತು ವೈಭವೀಕರಣದ ಭ್ರಮೆಯಲ್ಲಿ ಕೆಲವು ಕಡೆಗಳಲ್ಲಿ ದೈವಾರಾಧನೆಯ ಸಹಜ ಗಾಂಭೀರ್ಯ ಹಾಗೂ ಕಲಾತ್ಮಕತೆಗೆ ಧಕ್ಕೆಯಾಗಿರುವುದು ಸುಳ್ಳಲ್ಲ. ದೈವಸ್ಥಾನಗಳ ಪುನರ್ನಿರ್ಮಾಣಕಾಲದಲ್ಲಿ ಕೆಲವು ಕಡೆ ಪರಂಪರೆಯ ವಾಸ್ತುಶೈಲಿಗೆ ಬದಲಾಗಿ ಭಿನ್ನಶೈಲಿಯ ಕಟ್ಟಡಗಳನ್ನು ಕಟ್ಟುವುದಿದೆ. ದೈವಗಳ ವೇಷಗಾರಿಕೆಯಲ್ಲಿ ಅನಪೇಕ್ಷಿತವಾದ ಬದಲಾವಣೆಯಾಗುವುದುಂಟು. ತೆಂಗಿನ ಎಳೆಯ ಗರಿ, ಕವುಂಗಿನ ಹಾಳೆಗಳ ಬದಲಾಗಿ ಅಡಂಬರಕ್ಕಾಗಿ ಬೆಳ್ಳಿಯಂಥ ಲೋಹಗಳ ಅಣಿಗಳನ್ನು ಸಿದ್ಧಗೊಳಿಸುವುದುಂಟು. ಪದ್ಧತಿಯ ಮುಖವರ್ಣಿಕೆಗೆ ಬದಲಾಗಿ ನಾಟಕೀಯ ರೀತಿಯ ಮುಖವರ್ಣಿಕೆಯನ್ನು ಮಾಡುವುದುಂಟು. ಕಲ್ಲುರ್ಟಿ, ಮಾಯಂದಾಳ್ ಮುಂತಾದ ಸ್ತ್ರೀದೈವಗಳ ವೇಷವನ್ನು ಆಧುನಿಕತೆಯ ಮೆರುಗಿನಿಂದ ನಿರ್ವಹಿಸುವುದುಂಟು. ಕೆಲವು ಭೂತವೇಷಗಳು ವೇಷಭೂಷಣ ಮತ್ತು ಅಭಿನಯಾದಿಗಳಲ್ಲಿ ಯಕ್ಷಗಾನದ ಅನುಕರಣೆ ಮಾಡುವುದುಂಟು. ಭೂತ ನರ್ತನಕ್ಕೆ ಪೂರಕವಾಗಿ ವಾದ್ಯಗಳು ಕೆಲವೊಮ್ಮೆ ಆಧುನಿಕ ಚಲನಚಿತ್ರ ಸಂಗೀತವನ್ನು ನುಡಿಸುವುದುಂಟು.

ಭೂತವೇಷಧಾರಿ ಜೀವಂತ ಕೋಳಿಯ ನೆತ್ತರನ್ನು ಹೀರುವಂಥ ಹಳೆಯ ಪದ್ಧತಿಯನ್ನು ನಿಷೇಧಿಸುವುದು ಸೂಕ್ತ. ಅತಿಯಾದ ದೇಹದಂಡನೆಯನ್ನೂ ಅಳತೆ ಮೀರಿದ ಆವೇಶದರ್ಶನವನ್ನೂ ನಿಯಂತ್ರಿಸುವುದು ಒಳ್ಳೆಯದು.

ದೈವಾರಾಧನೆಗೆ ನೇರವಾಗಿ ಸಂಬಂಧಪಟ್ಟ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ಕೆಲವೊಂದು ಮುಖ್ಯ ವಿಚಾರಗಳನ್ನು ಸಮಾಲೋಚನೆ ಮಾಡಿ, ದೈವಾರಾಧನೆಯಂಥ ಅದ್ಭುತ ಕಲೆಯನ್ನು ಇಂದಿನ ಸಮಾಜಕ್ಕೆ ಹೆಚ್ಚು ಉಪಯುಕ್ತ ಹಾಗೂ ಸಂಗತಗೊಳಿಸುವ ಅಗತ್ಯವಿದೆಯೆನ್ನಬಹುದು. ಇದಕ್ಕಾಗಿ ಪ್ರಸಿದ್ಧ ದೈವಕ್ಷೇತ್ರಗಳ ಕೆಲವರು ಮುಖಂಡರೂ, ಇತರ ಆಸಕ್ತರೂ ಮುಂದಾದರೆ ತುಂಬ ಪ್ರಯೋಜನವಾಗಬಹುದು; ತುಳುನಾಡಿನ ಈ ಭವ್ಯ ಆರಾಧನಾ ಪರಂಪರೆ ಇನ್ನಷ್ಟು ವ್ಯಾಪಕವಾದ ಅರ್ಥವನ್ನೂ ಸಾಮಾಜಿಕ ಪ್ರಯೋಜನವನ್ನೂ ನೀಡುವ ಸಾಮರ್ಥ್ಯವನ್ನು ಪಡೆಯಬಹುದು.

(ಕೌದೂರ ಕೋಟೆ ಪ್ರಕಾಶನದ ಸಾನಾದಿಗೆಯಲ್ಲಿ ಪ್ರಕಟ-೨೦೦೨, ಸಂ.ಡಾ.ಅಶೋಕ ಆಳ್ವ)

ಪರಾಮರ್ಶನ ಸಾಹಿತ್ಯ

೧. ಡಾ.ಬಿ.ಎ.ವಿವೇಕ ರೈ, ತುಳು ಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಪತ್ತು, ಬೆಂಗಳೂರು, ೧೯೮೫

೨. ಡಾ.ಕೆ.ಚಿನ್ನಪ್ಪಗೌಡ,  ಭೂತಾರಾಧನೆಜಾನಪದೀಯ ಅಧ್ಯಯನ,  ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ, ೧೯೯೦

೩. ಅಮೃತ ಸೋಮೇಶ್ವರ,  ಅವಿಲು ಕನ್ನಡ ಸಂಘ, ವಿವೇಕಾನಂದ ಕಾಲೇಜು ಪುತ್ತೂರು (ದ.ಕ) ೧೯೭೮

೪. ಅಮೃತ ಸೇಮೇಶ್ವರ, ತುಳು ಬದುಕು, ಪ್ರಕೃತಿ ಪ್ರಕಾಶನ, ಕೋಟೆಕಾರು (ದ.ಕ) ೧೯೮೪,

೫. Dr. U.P.Upadhyaya- Dr. Susheela Upadhyaya-Bhuta worship,  R.R.C. for tolk performing Art. M.R.M. college, 1994