ಸಮಾಜ ಜೀವಿಯಾದ ಮಾನವನ ಬದುಕಿನಲ್ಲಿ ಹಲವಾರು ಸಂಪ್ರದಾಯ, ಆಚರಣೆ, ನಂಬಿಕೆ, ಸಂಸ್ಕಾರಗಳು ಶತಮಾನಗಳಿಂದ ಸೇರಿಕೊಂಡು ಬಂದಿವೆ. ತಾನು ಆರಾಧಿಸತಕ್ಕ ಅತಿಮಾನುಷ ದೈವೀಶಕ್ತಿ, ನಿಸರ್ಗಶಕ್ತಿ, ಅಥವಾ ಪೂರ್ವಜರ ಆತ್ಮಗಳ ಪ್ರೀತ್ಯರ್ಥವಾಗಿ ಅಂತೆಯೇ ತನ್ನ ಅಭೀಷ್ಟ ಸಿದ್ದಿಗಾಗಿ ಹಲವು ಬಗೆಯ ಹರಕೆ, ಸೇವೆ, ಕಾಣಿಕೆಗಳನ್ನು ಅರ್ಪಿಸುವುದಾಗಿ ಸಂಕಲ್ಪ ಮಾಡುವುದೂ, ಅದರಂತೆ ಅರ್ಪಿಸುವುದೂ ಅನಾದಿಯಿಂದಲೇ ಬಂದ ನಡವಳಿಕೆಯಾಗಿದೆ. ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ಅಸಂಖ್ಯರೀತಿಯ ಹರಕೆಗಳು ಪ್ರಪಂಚದಾದ್ಯಂತ ನಡೆದುಕೊಂಡು ಬಂದಿವೆ. ವರ್ತಮಾನ ಕಾಲದಲ್ಲೂ ಎಲ್ಲ ದೇಶಗಳಲ್ಲೂ, ಎಲ್ಲ ಸಮಾಜಗಳಲ್ಲೂ ಭಿನ್ನ ಭಿನ್ನ ರೀತಿಗಳಿಂದ ಹರಕೆಗಳು ನಡೆಯುತ್ತವೆ.

ಹರಕೆ, ಸೇವೆಗಳ ಅಸ್ತಿವಾರ ನಂಬಿಕೆಯದು. ಮಾನವ ಜೀವನದಲ್ಲಿ ನಂಬಿಕೆಯ ಪ್ರಾಬಲ್ಯ ಅನನ್ಯವಾದದ್ದು. ನಂಬಿಕೆ, ಸಂಪ್ರದಾಯ, ಆಚರಣೆಗಳು ಪರಸ್ಪರ ಸಂಬಂಧವುಳ್ಳವು. ‘ಸಂಸ್ಕೃತಿ’ಯೆಂಬುದರ ವಿಶಾಲ ತೆಕ್ಕೆಯೊಳಗೆ ಇವೆಲ್ಲ ಅಡಕವಾಗುತ್ತವೆ. ನಂಬಿಕೆಯ ಪ್ರಪಂಚ ಅತ್ಯಂತ ವಿಸ್ತಾರವಾದದ್ದು. ನಂಬಿಕೆಗಳ ವೈವಿಧ್ಯವೂ ಅಪಾರ. ನಂಬಿಕೆಗಳು ಬದುಕಿನ ಅವಿಭಾಜ್ಯ ಅಂಗವಾದರೂ, ಅದೆಷ್ಟೋ ನಂಬಿಕೆಗಳಿಗೆ ವೈಜ್ಞಾನಿಕ ವೈಚಾರಿಕ ತಳಹದಿ ಇರುವುದಿಲ್ಲ. ಬದುಕಿಗೆ ನೆಚ್ಚು, ಕೆಚ್ಚುಗಳನ್ನು ಪೂರೈಸುವ ನಂಬಿಕೆಗಳಂತೆಯೆ ಮಾನವ ಮನೋವೃತ್ತಿಯ ಕುಬ್ಜತೆ, ಕುರೂಪತೆ, ವಿಲಕ್ಷಣತೆಗಳನ್ನು ಬಿಂಬಿಸುವ ಮೂಢನಂಬಿಕೆಗಳೂ ಸಾಕಷ್ಟಿವೆ. ನಂಬಿಕೆಯ ನೆಲೆಯಲ್ಲೆ ಕ್ರಿಯಾಶೀಲವಾಗುವ ಹರಕೆಗಳ ಸಂಹಿತೆಗೂ ಈ ಮಾತು ಅನ್ವಯಿಸುತ್ತದೆ.

ಹರಕೆ, ಕಾಣಿಕೆ, ಸೇವೆಗಳು ಶಿಷ್ಟದೇವತೆಗಳಿಗೆ ಸಂಬಂಧಿಸಿರಲಿ ಅಥವಾ ಜನಪದ ದೈವಗಳಿಗೆ ಸಂಬಂಧಿಸಿರಲಿ, ಅವುಗಳ ಹಿಂದಿರುವ ಆಶಯ, ಮನೋಧರ್ಮಗಳಲ್ಲಿ ಸಾದೃಶ್ಯವಿದೆ. ಸಂಕಲ್ಪಸಿದ್ದಿ, ಕೃತಜ್ಞತೆ, ತ್ಯಾಗ, ಸ್ವಜನ ಹಿತ, ಸ್ವಕ್ಷೇಮ, ಸಮಾಜಹಿತ, ವಿಜಯಾಕಾಂಕ್ಷೆ, ಸ್ವಾರ್ಥ, ಪರಪೀಡಾಕಾಂಕ್ಷೆ, ಭಯನಿವಾರಣೆ, ಆತ್ಮವಿಶ್ವಾಸವೃದ್ದಿ ಇತ್ಯಾದಿ ವಿಧವಿಧದ ಆಶಯಗಳು ಹರಕೆಯ ಒಡಲಲ್ಲಿರಬಹುದು. ಇವುಗಳಲ್ಲಿ ಭಯವೆಂಬುದು ಮನುಷ್ಯನ ಮೂಲಭೂತ ಪ್ರವೃತ್ತಿಗಳಲ್ಲಿ ಒಂದಷ್ಟೆ? ಮನುಷ್ಯನ ಅನೇಕ ಚರ್ಯೆಗಳು ಭಯದ ವಿಕಾರಗಳು, ಉತ್ಪನ್ನಗಳು. ಅನೇಕ ದೈವದೇವತೆಗಳೂ ಭಯಮೂಲವಾಗಿ ಮಾನವನ ಮಾನಸಗರ್ಭದಿಂದ ಮೈವಡೆದು ಬಂದವುಗಳೆನ್ನಬಹುದು. ಬಹುವ್ಯಾಪಿಯಾದ ಭಯದ ಕಾರಣ ಹಾಗೂ ನಿವಾರಣ ಪ್ರಯತ್ನಪರಂಪರೆಯಿಂದಾಗಿಯೇ ಭೌತಿಕ ನಾಗರಿಕತೆಯ ಬಹುಭಾಗವೂ, ಧರ್ಮ, ಆಧ್ಯಾತ್ಮಿಕತೆ ಇತ್ಯಾದಿಗಳೂ ಬೆಳವಣಿಗೆ ಹೊಂದಿದುವೆಂದು ಹೇಳಲಡ್ಡಿಯಿಲ್ಲ.

ಭಯ ಮತ್ತು ಇತರ ಪ್ರವೃತ್ತಿಗಳಿಂದ ಸೃಷ್ಟಿಯಾದ ಹರಕೆಯ ಪ್ರಪಂಚವನ್ನು ಮಾನವಶಾಸ್ತ್ರ, ಮನಃಶಾಸ್ತ್ರ, ಅರ್ಥಶಾಸ್ತ್ರ, ಪರಮಾರ್ಥಶಾಸ್ತ್ರ, ಸಾಂಸ್ಕೃತಿಕ ಇತಿಹಾಸ ಇತ್ಯಾದಿ ಶಿಸ್ತುಗಳ ಬೆಳಕಿನಲ್ಲಿ ಬಗೆಬಗೆಯಾಗಿ ವಿಶ್ಲೇಷಿಸಲು ಸಾಧ್ಯವಿದೆ.

ಆದಿಮ ಮಾನವ ನಿಸರ್ಗದ ಹಲವಾರು ಚೋದ್ಯಗಳನ್ನು ಗಮನಿಸಿ, ಬೆರಗಾಗಿ, ಬೆದರಿ ನಿಸರ್ಗ ವಿದ್ಯಮಾನಗಳ ಹಿಂದೆ ಅಗೋಚರ ಶಕ್ತಿಗಳ ಕೈವಾಡವಿರಲೇಬೇಕೆಂದು ನಂಬಿ, ಅಂಥ ಶಕ್ತಿಗಳನ್ನು ಒಲಿಸಿಕೊಳ್ಳಲು ವಿಧವಿಧದ ಪ್ರಯತ್ನ ಮಾಡಿರುವುದು ಸಹಜ. ಅವುಗಳಲ್ಲಿ ಹಾಡು, ಕುಣಿತ, ವೇಷಾಭಿನಯ, ಬಲಿಕಾಣಿಕೆ, ಸಮರ್ಪಣೆಗಳು ಮುಖ್ಯವಾಗಿವೆ. ಬೇಟೆಗಾರಿಕೆಯ ಹಂತವನ್ನು ದಾಟಿ, ಪಶುಪಾಲನೆ, ಕೃಷಿ, ಊರು ನಿರ್ಮಾಣಗಳ ಮಜಲುಗಳಲ್ಲಿ ಹೊಸ ಹೊಸ ಸಮಸ್ಯೆಗಳ ಹಿನ್ನೆಲೆಯಲ್ಲಿ ಬಗೆಬಗೆಯ ದೈವೋಪಾಸನಾ ವಿಧಿಗಳೂ ಬೆಳೆದುಬಂದವು.

ನಾನಾ ರೀತಿಯ ಆಸೆಗಳು ಮನುಷ್ಯನಿಗೆ ಸಹಜ. ಬಯಕೆ ಬದುಕಿನ ಪ್ರಚೋದಕ ಶಕ್ತಿಯೂ ನಿಜ. ತನ್ನ ವಿಶಿಷ್ಟ ಬಯಕೆಗಳನ್ನು ಈಡೇರಿಸಿಕೊಳ್ಳಲು ಕೇವಲ ತನ್ನಿಂದಾಗಲೀ, ತನ್ನ ಸಂಪರ್ಕದ ವ್ಯಕ್ತಿಗಳಿಂದಾಗಲೀ ಸಾಧ್ಯವಿಲ್ಲ ಎಂಬ ಅಸಹಾಯಕ ಸ್ಥಿತಿಯ ಅರಿವಿನಲ್ಲಿ ವ್ಯಕ್ತಿ ತನ್ನನ್ನು ಮೀರಿದ ಶಕ್ತಿಗಳಿಗೆ ಮೊರೆಯಿಡಲೆಳಸುತ್ತಾನೆ. ಇದೇ ರೀತಿ ಒಂದು ಸಮುದಾಯವೇ ಶರಣಾಗಬಹುದು. ಹರಕೆಯು ಆಸೆ, ಭಯ, ಸಂಶಯಗಳಿಂದ ಕೂಡಿದ ಕೇಳಿಕೆಯಾಗಬಹುದು. ಅಥವಾ ಹಾರೈಕೆ, ನಿವೇದನೆ, ಓಲೈಕೆ, ಒತ್ತಾಯ, ಶಾಪ ಇತ್ಯಾದಿ ರೂಪಗಳನ್ನೂ ತಾಳಬಹುದು.

ಎಲ್ಲ ಧರ್ಮಗಳ ಪುರಾಣಗ್ರಂಥಗಳಲ್ಲೂ ದೇವತೆಗಳನ್ನು ಒಲಿಸಿಕೊಳ್ಳಲು ಅನೇಕ ಬಗೆಯ ಹರಕೆಗಳನ್ನು ಹೇಳಿಕೊಂಡ ಉಲ್ಲೇಖಗಳಿವೆ. ನರಬಲಿಗಳಂಥ ಭೀಕರ ಹರಕೆಗಳ ಪ್ರಸ್ತಾಪಗಳೂ ಬಂದದ್ದಿದೆ. ಇತಿಹಾಸವೂ ಅನೇಕ ಬಗೆಯ ಹರಕೆಗಳನ್ನು ದಾಖಲುಮಾಡಿದೆ. ಜನಪದ ಕಥನಗಳಿಗೂ ಹರಕೆಗಳಿಗೂ ಇರತಕ್ಕ ಸಾವಯವ ಸಂಬಂಧವನ್ನು ಕಡೆಗಣಿಸುವಂತಿಲ್ಲ.

ತುಳು ಪಾಡ್ದನಗಳ ಕುರಿತೇ ಹೇಳುವುದಾದರೆ, ‘ಕೋಟಿ-ಚೆನ್ನಯ’ ಪಾಡ್ದನದಲ್ಲಿ ಕೋಟೆಚೆನ್ನಯರು ಕೆಮ್ಮಲಜೆ ಬ್ರಹ್ಮದೇವರ ಗುಡಿಗೆ ಹರಕೆಯೊಪ್ಪಿಸಲು ಹೋಗುವ ವೃತ್ತಾಂತವಿದೆ. ಸಿರಿಯ ‘ಸಂಧಿ’ಯಲ್ಲಿ ಬೆರ್ಮಣಾಳ್ವ ಹೊತ್ತ ಹರಕೆಯಂತೆ ಲಂಕೆಲೋಕನಾಡ ಬ್ರಹ್ಮದೇವರ ಗುಡಿಯನ್ನು ಜೀರ್ಣೋದ್ಧಾರಗೊಳಿಸಿದ ಪರಿಣಾಮವಾಗಿ, ಬಿರ್ಮಣಾಳ್ವನಿಗೆ ಸಿರಿಯು ಸಂತಾನದ ಕುಡಿಯಾಗಿ ದೊರಕುವುದು, ಹರಕೆ ಒಪ್ಪಿಸಲು ಮರೆತುದರಿಂದ ಸೊನ್ನೆ-ಗುರುಮಾರ್ಲರು ತಮ್ಮ ಅವಳಿ ಮಗಳಂದಿರಾದ ಅಬ್ಬಗೆ ದಾರಗೆಯರನ್ನು ದುರಂತರೂಪದಲ್ಲಿ ಕಳಕೊಳ್ಳುವುದು -ಮೊದಲಾದ ವಿವರಗಳಿವೆ. ದೇವು ಪೂಂಜನು ಕಾಳಗದಲ್ಲಿ ಗೆಲ್ಲುವ ಸಲುವಾಗಿ ಹೇಳಿಕೊಂಡ ಹರಕೆಯನ್ನು ಉಪೇಕ್ಷಿಸಿದುದರಿಂದ ಜುಮಾದಿದೈವದ ಕ್ರೋಧಕ್ಕೆ ಈಡಾದ ವಿಚಾರ, ಪರ್ಮಾಲೆ ಬಲ್ಲಾಳ ತನ್ನ ಮಡದಿಯ ಮೆಯ್ ಮುಟ್ಟುವುದಕ್ಕೆ ಮೊದಲು ದೈವಕ್ಕೆ ನೇಮಕೊಡುವೆನೆಂದು ಹೇಳಿದ್ದ ಹರಕೆಯನ್ನು ಮರೆತು ಆಪತ್ತನ್ನು ತಂದುಕೊಂಡ ವಿಚಾರ. ‘ತನ್ನ ತಂಗಿ, ಪದ್ಮಗೆಯ ಮೇಲೆ ಗಂಡನ ಕಣ್ಣು ಬಿದ್ದುದನ್ನರಿತು, ಆಕೆಯನ್ನೇ ಮುಗಿಸಿ ಬಿಡಲು ದೈವಕ್ಕೆ ಹರಕೆ ಹೇಳಿಕೊಂಡು ಕೊನೆಗೆ ತಾನೂ ಸಾಯಬೇಕಾಗಿ ಬಂದ ಜಾಕಮೆಯ ಅವಿಚಾರ, ತನ್ನ ತಾಯಿ ಹೇಳಿಕೊಂಡ ವಿಚಿತ್ರ ಹರಕೆಯ ಕಾರಣವಾಗಿ ಅಣೆಕಟ್ಟಿನ ಹೊಂಡಕ್ಕೆ ಬಿದ್ದು ಸಮಾಧಿಯಾಗಬೇಕಾಗಿ ಬಂದ ಬಸುರಿ ಬಾಲೆ ಮಾಡದಿಯ ಅಕಾಲ ಮರಣ ಇತ್ಯಾದಿ ಹಲವು ಸನ್ನಿವೇಶಗಳು ಪಾಡ್ದನ ಸಾಹಿತ್ಯದಲ್ಲಿ ಉಕ್ತವಾಗಿವೆ. ದೈವ ಮಹಿಮಾ ಕಥನಕ್ಕೆ ಇಂಥ ಘಟನೆಗಳು ಪೂರಕವಾಗುತ್ತವೆ.

ಈ ದಿನಗಳಲ್ಲೂ ಪ್ರತಿಯೊಂದು ಸಮುದಾಯದ ಸಂಸ್ಕೃತಿಯಲ್ಲೂ ಹರಕೆಗಳಿಗೆ ಗಣನೀಯ ಸ್ಥಾನವಿದೆ. ಗ್ರಾಮೀಣ ಜೀವನದ ವಿಚಾರವಿರಲಿ, ಆಧುನಿಕ ಸಂಕೀರ್ಣಮಯವಾದ ನಾಗರಿಕ ಜೀವನದಲ್ಲೂ ಹರಕೆ, ಕಾಣಿಕೆ, ಸೇವೆಗಳ ಪ್ರಮಾಣ, ಪ್ರಾಧಾನ್ಯವೇನೂ ತಗ್ಗಿದಂತಿಲ್ಲ. ಹಲವು ದೈವಕ್ಷೇತ್ರಗಳ ಉತ್ಸವಾದಿಗಳಲ್ಲಿ ನಾವಿದನ್ನು ಗಮನಿಸಬಹುದು. ತೀರ್ಥಯಾತ್ರೆ, ಹರಕೆ, ಗುಡಿಗೋಪುರಗಳ ಜೀರ್ಣೋದ್ಧಾರ ಇವುಗಳು ಈ ಆಧುನಿಕ ಕಾಲದಲ್ಲೂ ಹೆಚ್ಚಾಗಲು ಕೇವಲ ಭಕ್ತಿಯೊಂದೇ ಕಾರಣವಾಗಿರದೆ, ಇಂದಿನ ಬದುಕಿನ ಸಂಕೀರ್ಣತೆ, ಅಭದ್ರತೆ, ವಿವಿಧ ಭಯಗಳು, ಶಿಥಿಲ ಕೌಟುಂಬಿಕ ಸ್ಥಿತಿ, ನಾನಾ ರೀತಿಯ ಮಾನಸಿಕ ಒತ್ತಡಗಳು ಭೌತಿಕ ಮಹತ್ವಾಕಾಂಕ್ಷೆ, ಆಸ್ತಿಕತೆಯ ಪ್ರದರ್ಶನ ಇತ್ಯಾದಿಗಳೂ ಕಾರಣವೆನ್ನಬೇಕಾಗುತ್ತದೆ.

ದೈವಗಳಿಗೆ ಹರಕೆ ಹೇಳುವುದರಲ್ಲಿ ಸ್ಥೂಲವಾಗಿ ಎರಡು ಉದ್ದೇಶಗಳಿವೆಯೆನ್ನಬಹುದು. ೧. ತನಗೂ, ತನ್ನವರಿಗೂ ಒಳಿತಾಗಲಿ, ಲಾಭವಾಗಲಿ, ಅನಿಷ್ಟ ತೊಲಗಲಿ ಎಂಬ ಆಕಾಂಕ್ಷೆ. ೨. ತನ್ನ ವಿರೋಧಿಗಳಿಗೆ ಅಹಿತವಾಗಲಿ ಎಂಬ ಬಯಕೆ. ಎರಡನೆಯ ಆಶಯವು ಬಹುಪ್ರಾಚೀನದಿಂದಲೇ ಮಂತ್ರ, ಮಾಟ, ಮಾರಣಗಳೊಂದಿಗೆ ತಳಕು ಹಾಕಿಕೊಂಡಿದೆ. ತನ್ನ ವಿರೋಧಿಯನ್ನು ಮುಗಿಸಿಬಿಡುವ ಅಥವಾ ಅತಂತ್ರಗೊಳಿಸುವ ಧೋರಣೆ ಮನುಷ್ಯ ಸಮಾಜಕ್ಕೆ ಅಪರಿಚಿತವೇನಲ್ಲ.

ಹರಕೆಗಳ ಮಾರಕವಲ್ಲದ ಉದ್ದೇಶಗಳನ್ನು ಹೀಗೆ ಪಟ್ಟಿಮಾಡಬಹುದು:

೧. ದೈಹಿಕ ಹಾಗೂ ಮಾನಸಿಕ ಆರೋಗ್ಯವೃದ್ದಿ, ರೋಗ ಪರಿಹಾರ

೨. ಸಂತಾನ ಪ್ರಾಪ್ತಿ

೩. ಒಳ್ಳೆಯ ಧನಕನಕ ವಸ್ತುವಾಹನ ಪ್ರಾಪ್ತಿ

೪. ಒಳ್ಳೆಯ ವಿವಾಹ ಸಂಬಂಧ ಕೂಡಿಬರುವುದಕ್ಕಾಗಿ

೫. ಉದ್ಯೋಗಪ್ರಾಪ್ತಿ, ಉದ್ಯಮ ಅಭಿವೃದ್ದಿ, ನಷ್ಟಪರಿಹಾರ

೬. ನ್ಯಾಯಾಲಯ, ಜೂಜು, ಲಾಟರಿ, ಪರೀಕ್ಷೆ ಇತ್ಯಾದಿಗಳಲ್ಲಿ ಗೆಲ್ಲಲು.

೭. ಹಿಡಿದ ಕೆಲಸ ಪೂರೈಸುವುದಕ್ಕಾಗಿ

೮. ಪ್ರಯಾಣ, ಪರದೇಶವಾಸ ಸುಗಮವಾಗಲು.

೯. ಉತ್ತಮ ವಿದ್ಯಾಪ್ರಾಪ್ತಿಗಾಗಿ

೧೦. ಪೀಡಾ ಪರಿಹಾರ, ಆಪತ್ತಿನಿಂದ ರಕ್ಷಣೆಗಾಗಿ, ಸೋಂಕು, ರೋಗ, ಕ್ಷಾಮ ಡಾಮರ ನಿವಾರಣೆ

೧೧. ಜೀವನಾವರ್ತನ ವಿಧಿಗಳಲ್ಲಿ ಶುಭಾಕಾಂಕ್ಷೆ, ಪ್ರಾರ್ಥನೆ

೧೨. ಉತ್ತಮ ಫಲೋತ್ಪತ್ತಿಗಾಗಿ, ಮಳೆ ಬೆಳೆಗಾಗಿ.

೧೩. ತನ್ನೊಂದಿಗೆ ಜೀವಿಸುವ ಪ್ರಾಣಿಪಕ್ಷಿಗಳ ಕ್ಷೇಮಾಕಾಂಕ್ಷೆ

೧೪. ಕಳೆದು ಹೋದ ವಸ್ತುಗಳೂ, ವ್ಯಕ್ತಿಗಳೂ ಒದಗಿ ಬರುವುದಕ್ಕಾಗಿ

೧೫. ಚೋರರು, ವಂಚಕರಿಂದ ರಕ್ಷಣೆಗಾಗಿ

೧೬. ಗ್ರಹಚಾರ ಶಾಂತಿ, ಅನ್ಯರಿಂದಾಗಿರಬಹುದಾದ ಮಾಟ, ಮಾರಣ ನಿವಾರಣೆ.

೧೭. ಊರಿನ ಕ್ಷೇಮ

೧೬. ಭಕ್ತಿಯ ಅಥವಾ ಆಸ್ತಿಕತೆಯ ಬಹಿರಂಗ ಪ್ರದರ್ಶನ

ಹರಕೆಗಳ ಸ್ವರೂಪದಲ್ಲೂ ಸಾಕಷ್ಟು ವೈವಿಧ್ಯವಿದೆ

೧. ಚರವಸ್ತುಗಳ ಹರಕೆ-ಕಾಣಿಕೆ – ಲೋಹ, ಮರ, ಮಣ್ಣು, ಗಾಜು, ಪಿಂಗಾಣಿ, ಬೀಳಲು, ಚಿಪ್ಪು, ತೆಂಗಿನಗರಿ, ತಾಳೆಗರಿ, ಬಟ್ಟೆ, ಪ್ರಾಣಿಗಳ ತೊಗಲು, ಕೇಶ ಇತ್ಯಾದಿಗಳಿಂದ ಸಿದ್ಧವಾದ ವಸ್ತುಗಳು, ಅಲಂಕಾರ ವಸ್ತುಗಳು, ಭೂಷಣಗಳು, ಆಸನ, ವಾಹನ, ಪೆಟ್ಟಿಗೆ, ಪಾತ್ರೆ ಪರಡಿಗಳೂ ನಿತ್ಯೋಪಯೋಗಿ ವಸ್ತುಗಳು ವಾದನ ಸಾಮಗ್ರಿಗಳು.

೨. ಭೂಮಿ, ಕಟ್ಟಡ, ಕಟ್ಟೆ, ಬಾವಿ ಇತ್ಯಾದಿ ಸ್ಥಿರ ವಸ್ತುಗಳು.

೩. ಪೂಜೆ, ಸೇವೆ, ಉತ್ಸವ, ಸಮಾರಾಧನೆ – ತಂಬಿಲ, ಅಗೆಲು, ದೀಪಸೇವೆ, ಕೋಲ, ನೇಮ, ಮೆಚ್ಚಿ, ಒತ್ತೆಕೋಲ, ಗೋಂದೊಳು, ಪೂಜೆ, ಎಳನೀರು ಸೇವೆ, ಬಲಿವಾಡು ಇತ್ಯಾದಿ

೪. ಪ್ರತೀಕಗಳು – ದೇಹಪ್ರತೀಕ, ಕಣ್ಣು, ಕೈಕಾಲು, ನಾಲಗೆ, ನರ ಮೊದಲಾದ ಅಂಗಾಂಗಗಳ ಪ್ರತೀಕ. ಪ್ರಾಣಿ, ಪಕ್ಷಿ, ಕೀಟ, ಮತ್ಸ್ಯ, ನಾಗ, ನಾಗನಹೆಡೆ, ನಾಗನ ಮೊಟ್ಟೆ ಇತ್ಯಾದಿ ಆಕೃತಿಗಳು, ಗೃಹ, ಗೃಹೋಪಯೋಗೀ ವಸ್ತುಗಳ, ವಾಹನಾದಿಗಳ ಪ್ರತೀಕಗಳು.

೫. ದೈಹಿಕ ಸೇವೆ – ಉರುಳು ಸೇವೆ, ಉಪವಾಸ, ಜಾಗರಣೆ, ಪ್ರದಕ್ಷಿಣೆ, ಕಸಗುಡಿಸುವ, ಸೆಗಣಿ ಸಾರಿಸುವ ಸೇವೆ, ಮುಡಿಸೇವೆ, ಕಂಚಿಲು, ಕಜಂಬು, ತುಲಾಭಾರ

೬. ಸಸ್ಯೋತ್ಪತ್ನ ಕಾಣಿಕೆಗಳು – ಹಸಿರುವಾಣಿ ಹೊರೆ, ಬಾಳೆಯೆಲೆ, ಬಾಳೆಹಣ್ಣು, ತೆಂಗಿನಕಾಯಿ, ಸೀಯಾಳ, ತೆಂಗಿನ ಗರಿ, ಆಹಾರ ವಸ್ತುಗಳು, ಅಕ್ಕಿ, ಬತ್ತ, ಧಾನ್ಯಗಳು, ತರಕಾರಿಗಳು, ಬೆಲ್ಲ, ಅರಳು, ಅವಲಕ್ಕಿ, ಎಣ್ಣೆ, ಫಲವಸ್ತುಗಳು, ಹೂವು, ಹಿಂಗಾರ, ಅಡಿಕೆ, ಅರಸಿನ, ಕಾಳುಮೆಣಸು ಇತ್ಯಾದಿ.

೭. ಪ್ರಾಣಿಪಕ್ಷಿಗಳ ಅರ್ಪಣೆ – ಭೂತ ಪೂಜೆಯಲ್ಲಿ ಕೋಳಿಕೊಯ್ಯುವುದು, ಗೋಂದೊಳು ಪೂಜೆಯಲ್ಲಿ ಹಂದಿಬಲಿ, ಮಾರಿಪೂಜೆಯಲ್ಲಿ ಪ್ರಾಣಿಬಲಿ, ಕೋಳಿ ಬಲಿ ಪ್ರಾಣಿಜನ್ಯ ಉತ್ಪನ್ನಗಳ ಹರಕೆ – ಹಾಲು, ತುಪ್ಪ, ಜೇನು, ಮೀನಿನ ಪಲ್ಯ, ಮಾಂಸದ ಎಡೆ, ಇತ್ಯಾದಿ. ದೈವಾಲಯದಲ್ಲಿ ಬಳಸುವ ಚಾಮರವು ಚಮರೀಮೃಗದ ಬಾಲದ ಗುಚ್ಛವಾಗಿದೆ. ದೈವಾಲಯಗಳಿಗೆ ಹರಕೆಯಾಗಿ ಕಾಲ್ನಡೆಗಳನ್ನು ಅರ್ಪಿಸುವ ವಾಡಿಕೆ ಇದೆ. ಸಾಕುವ ಉದ್ದೇಶದಿಂದ ಈ ಸೇವೆ.

೮. ಹಣದ ರೂಪದ ಹರಕೆ – ನಗದು ಕಾಣಿಕೆ, ಕಾಣಿಕೆ ಡಬ್ಬಿ, ಕೈಗಾಣಿಕೆ (ಪುಂಡಿಪಣವು – ಹಿಡಿಹಣ), ತಲೆಕಾಣಿಕೆ, ವಂತಿಗೆ, ಮುಡಿಪು, ಮನಿಯಾರ್ಡರ್ , ಚೆಕ್ ಇತ್ಯಾದಿ

೯. ಕಲಾಸೇವೆಗಳು – ಹರಕೆಯ ಬಯಲಾಟ, ಹುಲಿವೇಷ ಹಾಗೂ ಇತರ ವೇಷಗಳು, ವಿವಿಧ ವಾದ್ಯಸೇವೆ

೧೦. ಚಪ್ಪರ, ತೋರಣ, ಸಾರಣೆ ಕಾರಣೆ, ವಾಹನ ವ್ಯವಸ್ಥೆ, ಸಿಡಿಮದ್ದು, ವಿದ್ಯುದಲಂಕಾರ.

೧೧. ಕ್ರೀಡೆಗಳ ಸೇವೆ – ತಾಲೀಮು, ಅಂಗಸಾಧನೆ, ಕಂಬಳ, ತಪ್ಪಂಗಾಯಿ, ಚೆಂಡು, ಸೂಟೆದಾರೆ ಇತ್ಯಾದಿ.

ಹೀಗೆ ಹರಕೆ ಕಾಣಿಕೆಗಳ ಯಾದಿಯನ್ನು ಬೆಳೆಸಬಹುದು. ಪ್ರಕೃತ ಲೇಖನದ ವಿಚಾರವನ್ನು ಮುಖ್ಯವಾಗಿ ತುಳುನಾಡಿನ ಸಾಂಸ್ಕೃತಿಕ ವಲಯಕ್ಕೆ ಸೀಮಿತಗೊಳಿಸಲಾಗಿದೆ. ಈ ವಲಯವು ಅವಿಭಜಿತ ದಕ್ಷಿಣಕನ್ನಡದ ಎಲ್ಲ ಪ್ರದೇಶಗಳನ್ನು ಒಳಗೊಳ್ಳುತ್ತದೆ. ಇಲ್ಲಿ ಭಿನ್ನ ಭಿನ್ನ ಮೂಲದಿಂದ ಬಂದ, ಭಿನ್ನ ಭಿನ್ನ ನುಡಿಗಳನ್ನಾಡುವ ದೈವದೇವರುಗಳು ನೆಲಸಿರುವುದುಂಟು. ಹರಕೆಯೊಪ್ಪಿಸುವ ಭಾವುಕ ಭಕ್ತವೃಂದಕ್ಕೆ ಭಾಷೆ, ಪ್ರಾದೇಶಿಕತೆಗಳ ಭೇದಭಾವ ಸಾಮಾನ್ಯವಾಗಿ ಇರುವುದಿಲ್ಲ.

ತುಳುನಾಡಿನ ಆರಾಧನಾ, ಸ್ಥಾನಗಳಾದ ದೈವಸ್ಥಾನ, ಆಲಡೆ, ಭೂತದ ಕೊಟ್ಟಿಗೆ, ಗರಡಿ, ಚಾವಡಿ ಮಾಡ, ನಾಗಬನ, ಹಾಗೂ ದೈವದ ಮಂಚ, ಉಯ್ಯಾಲೆ, ಹಲಗೆಗಳು ಸ್ಥಾಪಿತವಾದ ಕೆಲವು ವಿಶಿಷ್ಟ ಮನೆಗಳಲ್ಲಿ ಹರಕೆಗಳ ನಿವೇದನೆ, ಅರ್ಪಣೆ ನಡೆಯುತ್ತದೆ. ಈ ದೈವಸನ್ನಿಧಿಗಳಲ್ಲಿ ವಾರ್ಷಿಕಾಚರಣೆಯಾಗಿ ನಿರ್ದಿಷ್ಟ ಕ್ರಿಯಾವಿಧಿಗಳು ನಡೆಯುವುದು ವಾಡಿಕೆ. ಇವಲ್ಲದೆ ಹೆಚ್ಚುವರಿ ಸೇವೆಯಾಗಿ ವೈಯಕ್ತಿಕ, ಕೌಟುಂಬಿಕ, ಅಥವಾ ಊರವರ ಹರಕೆಯ ರೂಪವಾಗಿ ಪ್ರತ್ಯೇಕವಾಗಿ ತಂಬಿಲ, ಅಗೆಲು, ಕೋಲ, ಧರ್ಮನೇಮ, ‘ಪೈಚಿಲ್ ನೇಮ’, ಧರ್ಮಮೆಚ್ಚಿ, ತುಡರ್ ಬಲಿ (ದೀಪಸೇವೆ) ಬಲಿವಾಡು ಇತ್ಯಾದಿ ಸೇವೆಗಳು ವಿಧಿವತ್ತಾಗಿ ಜರಗುತ್ತವೆ. (ಇಂಥ ಕೆಲವು ದೈವಸೇವೆಗಳ ವಿವರಗಳನ್ನು ಇದೇ ಸಂಕಲನದಲ್ಲಿನ ದೈವಾರಾಧನೆಯ ಕುರಿತಾದ ಇತರ ಲೇಖನಗಳಲ್ಲಿ ಕಾಣಬಹುದು.) ಕೆಲವೊಂದು ಹರಕೆಗಳ ಕುರಿತು ಸ್ಥೂಲವಾಗಿ ವಿಚಾರಿಸಬಹುದು

ಬಲಿವಾಡು : ಸಾಮಾನ್ಯವಾಗಿ ಇದೊಂದು ಸಾಮೂಹಿಕ ಹರಕೆ. ಹೆಚ್ಚಾಗಿ ತುಳುನಾಡಿನ ದಕ್ಷಿಣ ಭಾಗದಲ್ಲಿ ಪ್ರಚಲಿತವಾಗಿದೆ. ಕ್ಷಾಮಡಾಮರ ನಿವಾರಣೆಗಾಗಿಯೂ ಊರಿನ ಶ್ರೇಯಸ್ಸಿಗಾಗಿಯೂ ಇದನ್ನು ಆಚರಿಸುತ್ತಾರೆ. ಇದರಲ್ಲಿ ‘ದೇವಕ್ರಿಯೆ’ ಮತ್ತು ‘ಅಸುರಕ್ರಿಯೆ’ ಎಂದು ಎರಡು ವಿಧ. ಅಸುರಕ್ರಿಯೆಯಲ್ಲಿ ರಕ್ತಾಹುತಿ ಇದೆ. ಆದರೆ ಈಚೆಗೆ  ದೇವಕ್ರಿಯೆಯ ಬಲಿವಾಡುಗಳು ನಡೆಯುವುದೇ ಹೆಚ್ಚು. ನಿತ್ಯೋಪಯೋಗದ ಆಹಾರವಸ್ತುಗಳನ್ನೇ ಸಾಮೂಹಿಕವಾಗಿ ದೈವಕ್ಕೆ ಅರ್ಪಿಸಿ ದೈವಸ್ಥಾನದ ಆವರಣದಲ್ಲಿಯೆ ಅಡುಗೆ ಮಾಡಿ ಪ್ರಸಾದರೂಪವಾಗಿ ಅಲ್ಲಿಯೇ ಉಣ್ಣುವುದು ಈ ಆಚರಣೆಯ ವೈಶಿಷ್ಟ್ಯ. ಮರಗಳ ಪ್ರಥಮ ಫಲಗಳನ್ನು ಇದೇ ವೇಳೆ ದೈವಸ್ಥಾನಕ್ಕೆ ಅರ್ಪಿಸುವುದುಂಟು. ಕೆಲವು ದೈವಸ್ಥಳಗಳ್ಲಲಿ ಅಕ್ಕಿಪಾಯಸವನ್ನು ಪ್ರಸಾದವಾಗಿ ಭುಂಜಿಸುವುದುಂಟು.

ಮಾರಿಪೂಜೆ : ಸಿಡುಬು, ಸೀತಾಳೆ, ಪ್ಲೇಗು, ವಾಂತಿಭೇದಿ ಇತ್ಯಾದಿ ರೋಗಗಳು ಹಿಂದೆ ಬಹುಮಂದಿಯನ್ನು ಬಲಿತೆಗೆದುಕೊಳ್ಳುತ್ತಿದ್ದವು. ಇಂಥ ರೋಗಗಳಿಗೆ ದೈವಿಕ ಪ್ರಕೋಪವೇ ಕಾರಣ ಎಂಬುದು ಹಿಂದಿನವರ ನಂಬಿಕೆಯಾಗಿತ್ತು. ರೋಗನಿವಾರಣೆಯ ಪ್ರಯತ್ನವನ್ನು ಎರಡು ವಿಧವಾಗಿ ಹಿಂದಿನವರು ಮಾಡುತ್ತಿದ್ದರು. ಒಂದು, ರೋಗಾಭಿಮಾನೀ ದೇವತೆಯೆಂದು ಮಾರಿಯಮ್ಮನನ್ನು ಪೂಜಿಸುವುದು. ಇನ್ನೊಂದು, ಮಾರಿಯನ್ನು ಪೂಜಿಸಿ ಬಳಿಕ ವಿಧಿಯುಕ್ತವಾಗಿ ಊರಿನ ಗಡಿದಾಟಿಸಿ ಓಡಿಸುವುದು.

ಮಾರಿಯಮ್ಮನನ್ನು ಮಹಾಕಾಳಿಯ ಪ್ರತಿರೂಪವೆಂದು ನಂಬುತ್ತಾರೆ. ಈಕೆ, ಸಾಕಷ್ಟು ಪ್ರಾಚೀನ ದೇವತೆ. ಜನ್ನನ ‘ಯಶೋಧರ ಚರಿತ್ರೆ’ಯಲ್ಲಿ ಮಾರಿಪೂಜೆಯ ಚಿತ್ರಣ, ಗಮನ ಸೆಳೆಯುತ್ತದೆ. ಬಸವಣ್ಣ ಮೊದಲಾದವರು ‘ಮಾರಿಮಸಣಿ’ ಇತ್ಯಾದಿ ಉಗ್ರದೇವತೆಗಳ ಉಲ್ಲೇಖ ಮಾಡಿದ್ದಾರೆ.

ಮಾರಿಯಮ್ಮನಿಗೆ ಕೋಳಿ, ಕುರಿ, ಆಡು, ಹಂದಿ, ಕೋಣಗಳನ್ನು ಹರಕೆಯೊಪ್ಪಿಸುವುದು ಹಿಂದೆ ರೂಢಿಯಾಗಿತ್ತು. ಈಚೆಗೆ ಸರಕಾರ ಈ ರೀತಿಯ ಪ್ರಾಣಿಬಲಿಗಳನ್ನು ನಿಷೇಧಿಸಿದೆ. ಆದರೂ ರಹಸ್ಯವಾಗಿ ಜೀವಬಲಿ ಸಮರ್ಪಣೆ ನಡೆಯುವುದಿದೆ.

ಮರದಲ್ಲಿ ಮಾರಿಯ ವಿಗ್ರಹಮಾಡಿ ಪೂಜಿಸಿ, ಪ್ರಾಣಿಗಳನ್ನು ಬಲಿಕೊಟ್ಟು, ವಿಗ್ರಹವನ್ನು ಮೆರವಣಿಗೆಯಲ್ಲಿ ಒಯ್ದು, ಗ್ರಾಮದ ಗಡಿ ದಾಟಿಸಿ ಒಂದು ಮರದ ಬುಡದಲ್ಲಿ ಮಡಗುವುದು ವಾಡಿಕೆ. ಹೀಗೆ ಗ್ರಾಮದ ಗಡಿಗೆ ಬಂದ ‘ಗಡಿಮಾರಿ’ಯನ್ನು ಮುಂದಿನ ಗ್ರಾಮದ ಜನ ಅದೇ ಪ್ರಕಾರ ಪೂಜಿಸಿ ಮುಂದಿನ ಗ್ರಾಮದ ಗಡಿಗೆ ತಲುಪಿಸುತ್ತಾರೆ. ಕೊನೆಗೆ ಈ ಮಾರಿಬೊಂಬೆಯನ್ನು ಸಮುದ್ರದಲ್ಲಿ ವಿಸರ್ಜಿಸುತ್ತಾರೆ. ರೋಗರುಜಿನಗಳೆಲ್ಲ ಊರ ಗಡಿ ದಾಟಿ ಕಡಲಿನ ಪಾಲಾಗಿ ಹೋಗಲಿ ಎಂಬುದು ಇದರ ಆಶಯ.

ಗೋಂದೊಳು ಪೂಜೆ : ಇದೂ ಒಂದು ರೀತಿಯಲ್ಲಿ ಮಾರಿಪೂಜೆಯಂಥ ಆಚರಣೆಯೇ ಆಗಿದೆ. ಮಹಾರಾಷ್ಟ್ರ ಮೂಲದ ‘ಮರಾಟಿ ನಾಯಕ’ ಜನಾಂಗದವರು ಹೆಚ್ಚಾಗಿ ಈ ಆಚರಣೆಯನ್ನು ನಿರ್ವಹಿಸುತ್ತಾರೆ. ಜಾನುವಾರುಗಳಿಗೋ ಮನುಷ್ಯರಿಗೋ ಕಷ್ಟ ಕಾಣಿಸಿದಾಗ ಈ ಹರಕೆಯನ್ನು ಹೇಳಿಕೊಳ್ಳುವುದುಂಟು. ಈ ಪೂಜೆಯ ಅಧಿದೈವ ಮಹಮ್ಮಾಯಿ ಎಂದೂ ಪರಿವಾರ ದೈವ ಕಾಳಭೈರವ ಎಂದೂ ಹೇಳಬಹುದು. ಮಹಾಮ್ಮಾಯಿಯನ್ನು ದೇವ ಕ್ರಿಯೆಯಿಂದಲೂ, ಕಾಳ ಭೈರವನನ್ನು ಅಸುರ ಕ್ರಿಯೆಯಿಂದಲೂ ಆರಾಧಿಸುವುದು ಸಂಪ್ರದಾಯ. ಪ್ರಾಣಿಬಲಿಗೆ ಬದಲಾಗಿ ಕೆಲವೆಡೆ ಕುಂಬಳಕಾಯಿ ಕಡಿಯುವುದಿದೆ.

ಪೂಜೆಯ ಅಂಗವಾಗಿ ಕೈಯಲ್ಲಿ ದೀವಟಿಗೆ ಹಿಡಿದ ಏಳು ಅಥವಾ ಒಂಬತ್ತು ಮಂದಿ ಮಂಡಲಾಕಾರವಾಗಿ ಕುಣಿಯುತ್ತಾ, ದೇವಿಯ ಸ್ತುತಿಗಳನ್ನು ಹಾಡುತ್ತಾರೆ. ಈ ತಂಡದ ನಾಯಕನನ್ನು ‘ಪರಶುರಾಮ’ ಎಂದು ಕರೆಯುತ್ತಾರೆ. ಪರಶುರಾಮನ ದೊಂದಿಯ ‘ಕರಿ’ ಮತ್ತು ಹಿಂಗಾರದ ಎಳೆಗಳನ್ನು ಪ್ರಸಾದವಾಗಿ ಹಂಚಲಾಗುತ್ತದೆ.

ಮಂಜ : ಪರಿಶಿಷ್ಟ ವರ್ಗದವರು, ಮುಖ್ಯವಾಗಿ, ಮೇರರು ಮಾಡುವ ಪೂಜಾವಿಧಾನ. ಮೇರರು ತಮ್ಮ ಕುಲದೈವಗಳಾದ ‘ಮುಗ್ಗೆರ್ಲು’ ಎಂಬ ಸಾಂಸ್ಕೃತಿಕ ವೀರರನ್ನು ಹಾಗೂ ಇತರ ದೈವಗಳನ್ನು ಈ ಬಗೆಯಾಗಿ ಆರಾಧಿಸುತ್ತಾರೆ. ಮಂಜದ ಆಚರಣೆಯಲ್ಲಿ ಕಳ್ಳಿನ ಪಾತ್ರ ಮುಖ್ಯವಾದದ್ದು. ದೈವದ ಗುಡಿಯ ಮುಂದೆ ಕಳ್ಳನ್ನು ಗಡಿಗೆಯಲ್ಲಿರಿಸಿ ನಿವೇದಿಸುತ್ತಾರೆ. ಇದಕ್ಕೆ ‘ಕಲಯ ದೀಡುನೆ’ (ಕಲಶ ಇಡುವುದು) ಎನ್ನುತ್ತಾರೆ.

ಅನೇಕ ಕಾರಣಗಳಿಗಾಗಿ ‘ಹರಕೆ ಹೊತ್ತು ಮಂಜ ನಡೆಸುತ್ತಾರೆ. ಮಂಜದ ವೇಳೆ ದೈವಾವೇಶವಾಗುವುದೂ ಇದೆ.

ಸವರ್ಣೀಯರ ಮನೆಯಲ್ಲಿ ದನಕರುಗಳಿಗೆ ‘ಉಣ್ಣಿ’ಯ ಕಾಟ ಇತ್ಯಾದಿ ಇದ್ದರೆ ‘ಕಾಪಡ’ನೆಂಬ ಮೇದರ ಮುಖ್ಯಸ್ಥನನ್ನು ಕರೆದು ಹರಕೆ ಹೇಳುವುದುಂಟು. ಆತನು ಹಟ್ಟಿಗೆ ‘ಕುರ್ದಿ’ (ಅರಸಿನ ಮಿಶ್ರಿತ) ನೀರು ಸಿಂಪಡಿಸುತ್ತಾನೆ. ಹಟ್ಟಿಯ ಪಕ್ಕದಲ್ಲೆ ಅಡುಗೆ ಮಾಡಿ ಅಗೆಲು ಬಡಿಸುತ್ತಾನೆ. ಇಲ್ಲಿ ಪಾತ್ರಿ ದರ್ಶನವಿಲ್ಲ. ಹುರಿದ ಅಕ್ಕಿ, ಅನ್ನ, ಮೀನು ಅಥವಾ ಕೋಳಿಯ ಸಾರು, ಕುರ್ದಿನೀರು ಮತ್ತು ಕಳ್ಳು ಇವುಗಳನ್ನು ಎಡೆಯಾಗಿ ಅರ್ಪಿಸಲಾಗುತ್ತದೆ. ಈ ಆಚರಣೆಗೆ ‘ಹಟ್ಟಿಮಂಜ’ ಎನ್ನುವುದಿದೆ.

‘ಮನ್ಸ’ ಮೊದಲಾದ ಇತರ ಪರಿಶಿಷ್ಟ ವರ್ಗದವರೂ ಮಂಜ ಆಚರಣೆ ಮಾಡುವುದಿದೆ. ಬಡಗಿನ ಕೆಲವು ದೈವಾಲಯಗಳಲ್ಲೂ ಮಂಜದ ವಾಡಿಕೆ ಇದೆ.

ಕೊರಗಜ್ಜನಿಗೆ ಮೀಸಲು : ಕೊರಗತನಿಯ ದಲಿತವರ್ಗದಿಂದ ಮೂಡಿ ಬಂದ ದೈವ. ಹಟ್ಟಿ ಕೊಟ್ಟಿಗೆಗಳ ಕ್ಷೇಮಕ್ಕಾಗಿ ಈ ದೈವವನ್ನು ಪ್ರಾರ್ಥಿಸುತ್ತಾರೆ. ವಸ್ತುಗಳಾಗಲೀ, ಜಾನುವಾರುಗಳಾಗಲೀ ಕಾಣೆಯಾದರೆ ‘ಕೊರಗಜ್ಜನಿಗೆ ಮೀಸಲು’ ಇಡುವುದಾಗಿ ಹರಕೆ ಹೇಳುವುದುಂಟು. ಮನೆಯ ಅಂಗಳದಲ್ಲಾಗಲೀ ಹಟ್ಟಿಯ ಸಮೀಪವಾಗಲೀ ಕೊರಗತನಿಯನಿಗೆ ಕಳ್ಳನ್ನು ಹರಕೆಯಾಗಿ ಇಡುತ್ತಾರೆ. ಕೆಲವೊಮ್ಮೆ ಚಾ ಮತ್ತು ತಿಂಡಿ ಇರಿಸುವುದೂ ಇದೆ.

ಕೊರಗತನಿಯನಿಗೆ ಮೀಸಲೆಡೆ ಇಟ್ಟು ಕೋಲ ಕೊಡುವುದೂ ಉಂಟು. ಇಂಥ ವೇಳೆ ‘ಕೋಲುಬತ್ತಿ’ಯಲ್ಲದೆ ಬೇರೆ ದೀಪ ಬಳಸುವುದಿಲ್ಲ.

ಇತರ ಕೆಲವು ಹರಕೆಗಳು ; ‘ಕೊರತಿ’ ಎಂಬ ಹೆಣ್ಣು ದೈವಕ್ಕೂ (ಪಾರ್ವತಿ ದೇವಿ ದಲಿತ ಸ್ತ್ರೀಯಾಗಿ ಅವತಾರ ಹೊಂದಿದಳೆಂದು ಹೇಳಲಾಗಿದೆ.) ಕಳ್ಳನ್ನು ನೈವೇದ್ಯವಾಗಿ ಇರಿಸುವ ಪದ್ಧತಿ ಇದೆ. ಕಳ್ಳಿನ ಬದಲಿಗೆ ಸರಾಯಿಯೂ ನಡೆಯುತ್ತದೆ. ಕೊರತಿಗಾಗಿ ಇರಿಸಿದ ಹಲಗೆಯಲ್ಲಿ ಈ ಮೀಸಲನ್ನು ಇರಿಸುತ್ತಾರೆ.

ಕಾಡುಗುಡ್ಡಗಳಲ್ಲಿ ವಾಸವಿರುತ್ತವೆಂದು ಹೇಳಲಾದ ಭೂತಗಳ ತೃಪ್ತಿಗಾಗಿ ಕಾಡಿನಲ್ಲೋ ಗುಡ್ಡದಲ್ಲೋ ಅನ್ನ, ರೊಟ್ಟಿ, ಮೀನು, ಕೋಳಿಗಳ ಪಲ್ಯ ಇತ್ಯಾದಿ ಎಡೆ ಬಡಿಸುವುದಕ್ಕೆ ‘ಗುಡ್ಡೆಡ್ ಬಲಸುನಿ’ (ಗುಡ್ಡದಲ್ಲಿ ಬಡಿಸುವುದು) ಎನ್ನುತ್ತಾರೆ. ಕೆಲವು ಭೂತಗಳಿಗೆ ಕಾಸರ್ಕನ ಮರದ ಬುಡದಲ್ಲಿ ಬಡಿಸಬೇಕೆಂಬ ವಾಡಿಕೆ ಇದೆ.

ಗುಳಿಗ ಎಂಬ ಉಗ್ರದೈವಕ್ಕೆ (ರಾವುಗುಳಿಗ, ಮೂಕ ಗುಳಿಗ, ಸಂಚಾರಿಗುಳಿಗ, ಅಗ್ನಿಗುಳಿಗ, ಅಂಬರಗುಳಿಗ, ಮಂತ್ರಗುಳಿಗ, ಮಾರಣಗುಳಿಗ, ಮೊದಲಾದ ನೂರೆಂಟು ಗುಳಿಗರು ಇದ್ದಾರೆಂದು ಪ್ರತೀತಿ) ಹರಕೆಯಾಗಿ ತೆಂಗಿನ ಗರಿಯ ‘ಬಲಿ’ ಕಟ್ಟಿ, ಕೋಳಿಯನ್ನು ಕೊಯ್ದು ಆರಾಧನೆ ಮಾಡುವುದಿದೆ. ‘ಆಟಿ’ (ಆಷಾಢ) \ಂಗಳಲ್ಲಿ ಊರ ರಕ್ಷಣೆಗಾಗಿ ಸಾಮೂಹಿಕವಾಗಿ ಕೋಳಿ ಕೊಯ್ದು ಗುಳಿಗನಿಗೆ ಎಡೆಯೊಪ್ಪಿಸುವುದಿದೆ. ಕುಚ್ಚಲಕ್ಕಿಯ ಅನ್ನ, ಸೌತೆಕಾಯಿ ಮತ್ತು ಹಲಸಿನ ಬೀಜ ಸೇರಿಸಿದ ಮೇಲೋಗರ, ಅರಳು, ಸೀಯಾಳ, ಓಕುಳಿ ನೀರು, ಕೋಳಿ, ಕಳ್ಳು -ಇವುಗಳ ಮೂಲಕ ಗುಳಿಗನಿಗೆ ಬಡಿಸುವ ವಿಧಿ ನಡೆಯುತ್ತದೆ. ಗುಳಿಗನಿಗೆ ಕೋಲಸೇವೆಯನ್ನೂ ಹರಕೆಯಾಗಿ ಸಲ್ಲಿಸುತ್ತಾರೆ. ಜಾನುವಾರುಗಳನ್ನು ಹುಡುಕಿ ಕೊಡುವ ಕೆಲಸವನ್ನೂ ಗುಳಿಗನಿಗೆ ಒಪ್ಪಿಸುವುದುಂಟು.

ಬಬ್ಬರ್ಯ ಕರಾವಳಿಯ ಜನಪ್ರಿಯ ದೈವಗಳಲ್ಲಿ ಒಬ್ಬ. ಮುಸ್ಲಿಂ ಮೂಲದ ದೈವವೀತ. ಮೀನುಗಾರಿಕೆಗೆ ವಿಶೇಷ ಅನುಗ್ರಹ ತೋರುವವನೆಂದು ಪ್ರತೀತಿ. ಕಡಲ ಕಿನಾರೆಯಲ್ಲಿ ಅನೇಕ ಕಡೆ ಬಬ್ಬರ್ಯನ ಗುಡಿಗಳಿವೆ. ಪುಷ್ಕಳವಾಗಿ ಮೀನಿನ ಸುಗ್ಗಿಯಾಗಲೆಂದು ಮೀನುಗಾರರು ಬಬ್ಬರ್ಯನಿಗೆ ಹರಕೆ ಹೇಳುವುದು ಸಾಮಾನ್ಯ. ಬಬ್ಬರ್ಯನ ಪೂಜೆಗೆ ಅರಳು, ಹಣ್ಣು ಕಾಯಿ ಇತ್ಯಾದಿಗಳ ಜೊತೆಗೆ ಬೆಳ್ತಿಗೆ ಅಕ್ಕಿಯ ‘ಅಡೆ’ ಎಂಬ ಕಡುಬನ್ನು ಕೆಂಡದಲ್ಲಿ ಸುಟ್ಟು ಅರ್ಪಿಸುತ್ತಾರೆ. ಇದಕ್ಕೆ ಉಪ್ಪು ಸೋಂಕಿಸ ಬರೆದೆಂಬ ನಿಯಮವಿದೆ.

ಮೀನುಗಾರಿಕೆಯ ಪ್ರಾರಂಭದಲ್ಲಿ ಸಮುದ್ರದಲ್ಲಿ ತಿಮಿಂಗಿಲದ ಅಪಾಯ ಕಾಣಿಸಿದಾಗ, ಸುಂಟರಗಾಳಿಯ ಉಪಟಳ ಕಾಣಿಸಿದಾಗ ಮೀನುಗಾರರು ಬಬ್ಬರ್ಯನಿಗೆ ಹರಕೆ ಹೇಳುತ್ತಾರೆ. ಬಲೆಗೆ ‘ಹಂದಿಮೀನು’ ಬಿದ್ದಾಗ ಅದರ ಮಾಂಸವನ್ನು ಇತರರಿಗೆ ಹಂಚುವುದೂ, ಆ ಮೀನಿನ ಪಲ್ಯದೊಂದಿಗೆ ಬಬ್ಬರ್ಯನಿಗೆ ವಿಶೇಷ ಎಡೆಯರ್ಪಿಸಿ ಹಬ್ಬ ಮಾಡುವುದೂ ಹಿಂದೆ ವಾಡಿಕೆಯಾಗಿತ್ತು.

ಮೀನುಗಾರಿಕೆಯ ಋತುವಿನಲ್ಲಿ ಸಮುದ್ರದ ದಟ್ಟವಾದ ಕೆಸರ ರಾಶಿ ಬಂದು ತಮ್ಮ ಊರಿನ ಕಡಲ ಕರೆಯಲ್ಲಿ ತಂಗಲೆಂದು ವಿಧವಿಧದ ಪ್ರಾರ್ಥನೆ, ಸೇವೆಗಳನ್ನು ಕರಾವಳಿಯ ಮೀನುಗಾರ ಮಂದಿ ನಡೆಸುತ್ತಾರೆ. ಹವಾಮಾನಕ್ಕನುಗುಣವಾಗಿ ಚಲಿಸುವ ಕೆಸರಿನ ಈ ಬಲುದೊಡ್ಡ ಪದರು ಮೀನುಗಾರರ ಬದುಕಿಗೆ ತುಂಬ ಆಧಾರವಾದದ್ದು. ಇಂಥ ಕೆಸರಿನ ಪದರು ನೆಲಸಿದ ಕಡೆ ಕಡಲು ಶಾಂತವಾಗಿ ಮೀನುಗಾರಿಕೆಗೆ ಅನುಕೂಲವಾದ ಸನ್ನಿವೇಶ ಏರ್ಪಡುತ್ತದೆ. ಕೆಸರಿನಲ್ಲಿ ಮೀನುಗಳಿಗೆ ಬೇಕಾದಷ್ಟು ಆಹಾರಾಂಶಗಳಿರುವುದರಿಂದ ವಿಧವಿಧದ ಮೀನುಗಳು ಹಿಂಡು ಹಿಂಡಾಗಿ ಕೆಸರಿನಲ್ಲಿ ಆಶ್ರಯಿಸಿಕೊಂಡಿರುತ್ತವೆ. (ಈ ಕೆಸರಲ್ಲಿ ನಿಧಿ ಇರುತ್ತದೆಂದೂ ಇದು ಕಾರಣಿಕವುಳ್ಳದ್ದೆಂದೂ ಈ ಕುರಿತು ವಿಚಿತ್ರವಾದ ನಂಬಿಕೆಗಳಿವೆ.)

ಸಮುದ್ರದ ಕೆಸರನ್ನು ಕಟ್ಟಿ ನಿಲ್ಲಿಸುವಂತೆ ಬಬ್ಬರ್ಯ, ಮುತ್ತಪ್ಪ, ಮಾರಮ್ಮ, ಭಗವತಿ, ಜುಮಾದಿ, ಚಾಮುಂಡಿ, ಗುಳಿಗ ಮೊದಲಾದ ಜನಪದ ದೈವಗಳನ್ನು ಮಾತ್ರವಲ್ಲ, ಶಿಷ್ಟ ದೇವರುಗಳಿಗೆ ಸಹ ಹರಕೆ ಹೊರುತ್ತಾರೆ. ದೀಪಸೇವೆ, ಸೀಯಾಳ, ಅಭಿಷೇಕ, ಅಕ್ಕಿಮುಡಿ ಇತ್ಯಾದಿಗಳಲ್ಲದೆ ಬಂಗಾರದ ಮೀನುಗಳ ಮಾಲೆಗಳನ್ನು ಹರಕೆಯಾಗಿ ಒಪ್ಪಿಸುವುದುಂಟು.

ಕಳ್ಳು ಇಳಿಸುವ ಕಸುಬಿನವರು ಆ ‘ಮೂರ್ತೆ’ಯ ಕೆಲಸ ಸುಗಮವಾಗಿ ಸಾಗುವ ಬಗ್ಗೆ ತಾವು ನಂಬಿದ ದೈವಗಳಿಗೆ ‘ಮೂರ್ತೆದ ಪಣವು’ (ಮೂರ್ತೆಯ ಹಣ) ಎಂಬುದಾಗಿ ಹಣವನ್ನು ಮೀಸಲಿಡುತ್ತಾರೆ. ಕಳ್ಳನ್ನು ಅರ್ಪಿಸುತ್ತಾರೆ.

ಮೊದಲ ಬಾರಿ ಎತ್ತು ಕೋಣಗಳನ್ನು ನೊಗಕ್ಕೆ ಕಟ್ಟಿ ಹೂಡುವಾಗ ದೈವಕ್ಕೆ ಈಡುಕಟ್ಟಿ ಮೀಸಲಿಡುವ ಹಣಕ್ಕೆ ‘ನುಗತ್ತ ಪಣವು’ (ನೊಗದ ಹಣ) ಎನ್ನುತ್ತಾರೆ.

ಮಾರಿ ಮನ್ಸಿರೆಂಬ ವರ್ಗದವರು ಹಿಂದೆ ಸತ್ತ ಪ್ರಾಣಿಗಳನ್ನು ಎಳೆದೊಯ್ಯುವ ಕೆಲಸ ಮಾಡುತ್ತಿದ್ದರು. ಇದಕ್ಕೆ ‘ಒಯಿಪು’ ಎಂಬ ಹೆಸರು. ಈ ಒಯಿಪಿನ ಲೆಕ್ಕದಲ್ಲಿ ಅವರು ನಂಬಿದ ದೈವಕ್ಕೆ ಕೋಳಿಯನ್ನು ಅರ್ಪಿಸಬೇಕಾಗಿತ್ತು.

ಸುಖಪ್ರಸವವಾಗುವಂತೆ ದೈವವನ್ನು ಪ್ರಾರ್ಥಿಸಿ ಒಪ್ಪಿಸುವ ಕಾಣಿಕೆಗೆ ‘ನೇಲೆದ ಪಣವು’ ಎನ್ನುತ್ತಾರೆ. ‘ನೇಲೆ’ ಎಂದರೆ ಹೆರುವಾಕೆ ಆಧರಿಸಿ ಹಿಡಿಯಲೆಂದು ಅಟ್ಟದ ‘ತೊಲೆಗೆ ನೇತು ಹಾಕಿದ ಬಟ್ಟೆ ಅಥವಾ ಹಗ್ಗ.

ಮದುವೆ, ಸೀಮಂತ, ಮಗುವಿಗೆ ತೊಟ್ಟಿಲು ಹಾಕುವುದು, ಮನೆಕಟ್ಟಲು ತೊಡಗುವುದು, ಗೃಹಪ್ರವೇಶ, ದೂರ ಪ್ರಯಾಣ ಇತ್ಯಾದಿ ಸಂದರ್ಭಗಳಲ್ಲಿ ಕುಟುಂಬ ದೈವಗಳು, ಸಮಾಜ ದೈವಗಳು, ಗ್ರಾಮದೈವ ದೇವತೆಗಳಿಗೆ ವಿವಿಧ ಹರಕೆಗಳನ್ನು ಹೇಳಿಕೊಳ್ಳುವ ಸಂಪ್ರದಾಯವಿದೆ. ಇದರೊಂದಿಗೆ ಊರಿನ ಮಸೀದಿ, ಇಗರ್ಜಿಗಳಿಗೆ ಎಣ್ಣೆ, ಕ್ಯಾಂಡಲ್ ಇತ್ಯಾದಿಗಳನ್ನು ಒಪ್ಪಿಸುವುದಾಗಿ ಪ್ರಾರ್ಥಿಸುವುದಿದೆ.

ಕುಂಬಳೆಯ ಪಾದೆಸ್ಥಾನದಲ್ಲಿರುವ ದೈವಗಳಲ್ಲಿ ಆಲಿದೈವ ಒಂದು (ಚಾಮುಂಡಿ ದೈವದೊಂದಿಗೆ ಒಂದಾದ ಆಲಿ ಎಂಬ ಮುಸ್ಲಿಂ ಮಂತ್ರವಾದಿಯ ಆತ್ಮ) ವಿಶಿಷ್ಟ ದೈವ. ಈ ಸ್ಥಳಕ್ಕೆ ಅನೇಕ ಬಗೆಯ ಹರಕೆಗಳು ಬರುವುದುಂಟು. ಮನುಷ್ಯಾವಸ್ಥೆಯಲ್ಲಿ ಆಲಿ ತುಂಬುರಸಿಕನಾಗಿದ್ದುದರಿಂದಲೋ ಏನೋ ವೇಶ್ಯಾವೃತ್ತಿ ನಡೆಸುವ ಹಲವಾರು ಹೆಂಗಸರು ಮಲ್ಲಿಗೆಯ ಮಾಲೆಯೊಂದಿಗೆ ಇತರ ಹರಕೆಗಳನ್ನೂ ಒಪ್ಪಿಸುವುದು ಕಂಡುಬರುತ್ತದೆ. ಆಲಿಯು ಈ ಭಕ್ತೆಯರೊಂದಿಗೆ ಕುಶಲಪ್ರಶ್ನೆಯಿಕ್ಕುತ್ತ ‘ಈ ವರ್ಷದ ಬೆಳೆ ಹೇಗೆ?’ ಎಂದು ಕೇಳುವುದುಂಟು!

ಇಲ್ಲಿಗೆ ಹರಕೆಯೊಪ್ಪಿಸಲು ಮುಸ್ಲಿಂ ಸ್ತ್ರೀಪುರುಷರೂ ಬರುವುದುಂಟು.

ಪೈಕ ಎಂಬಲ್ಲಿ ಮುಸ್ಲಿಂ ಮಹಿಳೆಯೊಬ್ಬಳ ಹೆಸರಲ್ಲಿ ಒಂದು ದರ್ಗಾ ಇದೆ. ಇಲ್ಲಿಗೆ ಎಲೆಯಡಿಕೆಯನ್ನು ಹರಕೆಯಾಗಿ ನೀಡುತ್ತಾರೆ. ಇತರ ದರ್ಗಾಗಳಿಗೆ ಊದುಬತ್ತಿ, ಲೋಭಾನ, ಎಣ್ಣೆ ಇತ್ಯಾದಿಗಳನ್ನು ಮುಸ್ಲಿಮೇತರರು ನೀಡುವುದಿದೆ. ಮಂಗಳೂರಿನ ಪೋಲೀಸ್ ವಸತಿ ವಠಾರದ ಬಳಿಯ ಇಂಥದೇ ಒಂದು ದರ್ಗಾಕ್ಕೆ ಮುಸ್ಲಿಮೇತರರೂ ಭಕ್ತಿಯಿಂದ ನಡಕೊಳ್ಳುತ್ತಾರೆ.

ಉಳ್ಳಾಲದ ಸಯ್ಯದ್ ಮದನಿ ದರ್ಗಾದ ‘ಉದುಸ್ ’ ಎಂಬ ವಿಶೇಷ ಉತ್ಸವಕ್ಕೆ ಬಲಿಪಶುಗಳಾಗಿ ಆಡುಗಳನ್ನು ಹರಕೆಯಾಗಿ ಕೊಡುವುದುಂಟು. ಕೆಲವು ಕಡೆ ಮಸೀದಿಗಳಿಗೆ ‘ಪತ್ತಲ್’ ಎಂಬ ಅಕ್ಕಿಯ ರೊಟ್ಟಿಯನ್ನು ಸಮರ್ಪಿಸುವ ಹರಕೆ ಹೇಳುತ್ತಾರೆ.

ಮೈಂದಳೆ (ಮಾಯಂದಾಳ್) ಎಂಬ ಸ್ತ್ರೀ ದೈವವನ್ನು ಬಾಣಂತಿಯರ ಹಾಗೂ ಶಿಶುಗಳ ಕ್ಷೇಮಕ್ಕಾಗಿ ವಿಶೇಷವಾಗಿ ಪೂಜಿಸುತ್ತಾರೆ. (ಈಕೆ ಬಾಣಂತಿಯಾಗಿದ್ದಾಗಲೆ ದುರಂತಮರಣವನ್ನು ಅಪ್ಪಿದಾಕೆ) ಅನೇಕ ಗರಡಿಗಳಲ್ಲಿ ಹಾಗೂ ಇತರ ದೈವ ಸ್ಥಾನಗಳಲ್ಲಿ ಈ ದೈವವಿದೆ. ಸುಖ ಪ್ರಸವಕ್ಕೆ ಈಕೆ ಅನುಗ್ರಹಿಸುತ್ತಾಳೆಂದು ಪ್ರತೀತಿ. ಈ ದೈವಕ್ಕೆ ‘ಅಮೆಕಾಜಿ’, (ಬಾಣಂತಿ ಬಳೆ) ಸೀರೆ, ಕುಪ್ಪಸಕಣ ಇತ್ಯಾದಿಗಳನ್ನೂ ಸಾಸಿವೆಯನ್ನೂ  ಹರಕೆಯಾಗಿ ಒಪ್ಪಿಸುತ್ತಾರೆ. ಸಂತಾನಭಾಗ್ಯಕ್ಕಾಗಿ ಬೆಳ್ಳಿ ತೊಟ್ಟಿಲು ಚಿನ್ನದ ಮಗುವಿನ ಪ್ರತೀಕಗಳನ್ನು ಅರ್ಪಿಸುವುದುಂಟು. ಈ ರೀತಿಯ ಹರಕೆಯನ್ನು ಕಲ್ಲುರ್ಟಿ, ತನ್ನಿಮಾನಿಗ ಮೊದಲಾದ ದೈವಗಳಿಗೂ ಒಪ್ಪಿಸುವುದಿದೆ.

ಮಾತೃದೇವತೆಯಾದ ಉಳ್ಳಾಲ್ತಿಗೆ ಹಲವು ಹರಕೆಗಳು ಸಲ್ಲುತ್ತವೆ. ಬಂಟವಾಳ ತಾಲೂಕಿನ ‘ಕೇಪು’ ಎಂಬ ಉಳ್ಳಾಲ್ತಿಸ್ಥಾನದಲ್ಲಿ ‘ಕಜಂಬು’ ಎಂಬ ಎಳೆಯ ಮಕ್ಕಳಿಗೆ ಸಂಬಂಧಪಟ್ಟ ಹರಕೆ ಜರಗುತ್ತದೆ. ‘ಕಜಂಬು’ ಎಂದರೆ ತಲೆಗೂದಲು ಕಳೆಯುವುದು ಎಂದರ್ಥ. ಇಲ್ಲಿ ಅದನ್ನು ಸಾಂಕೇತಿಕವಾಗಿ ಆಚರಿಸಲಾಗುವುದು. ಮಗುವಿನ ತಲೆ ಕಾಯಬೇಕೆಂಬುದೇ ಇಲ್ಲಿನ ಆಚರಣೆಯ ಆಶಯ.

ಧನು ಸಂಕ್ರಮಣದ ಮರುರಾತ್ರಿ ಈ ಹರಕೆ ಸಲ್ಲುತ್ತದೆ. ಹರಕೆಯ ಮಕ್ಕಳು ಉಪವಾಸವಿದ್ದು, ದೈವಸ್ಥಾನದ ಪಕ್ಕದ ಜಲಾಶಯದಲ್ಲಿ ಮಿಂದು ಶುಚಿರ್ಭೂತರಾಗಿ ಬೆತ್ತಲೆಯಾಗಿಯೇ ಉಳ್ಳಾಲ್ತಿಯರನ್ನು (ಇಲ್ಲಿ ಇಬ್ಬರು ಉಳ್ಳಾಲ್ತಿಯರಿದ್ದಾರೆ. ಇವರದೂ ದುರಂತ ಕಥೆಯೇ!) ಕಾಣಬೇಕೆಂಬುದು ಪದ್ಧತಿ. ನೂಕುನುಗ್ಗಲು ಹೆಚ್ಚಾದಾಗ, ಚಿಕ್ಕಮಕ್ಕಳನ್ನು ಎತ್ತಿ ಹಿಡಿದು ದೇವಿಯರಿಗೆ ತೋರಿಸುತ್ತಾರೆ. ದೇವಿಯರು ಮಕ್ಕಳ ಅಳುವನ್ನು ಕೇಳಬೇಕು ಎಂಬುದು ನಂಬಿಕೆ. ಮಕ್ಕಳ ಕ್ಷೇಮದ ಬಗ್ಗೆ ಮಾತೃದೇವತೆಗಳಿಗೆ ಹರಕೆ ಹೊರುವುದು ವಿಶ್ವದ ಅನೇಕ ಕಡೆ ರೂಢಿಯಿದ್ದ ವಿಚಾರ.

‘ಕೆಲಿಂಜ’ ಎಂಬಲ್ಲಿನ ಉಳ್ಳಾಲ್ತಿ ದೈವ ಉತ್ಸವದ ದಿನ ದೈವಸ್ಥಾನದ ಅಂಗಣದಲ್ಲಿ ಹಾಸಿಗೆಯಲ್ಲಿ ಒರಗಿಕೊಂಡೇ ಹರಕೆಗಳನ್ನು ಸ್ವೀಕರಿಸುತ್ತದೆ.

ಕೊಂಡಾಣ ಎಂಬಲ್ಲಿನ ಪಿಲಿಚಾಮುಂಡಿ ದೈವಸ್ಥಾನದ ಉತ್ಸವದ ವೇಳೆ ಸಾವಿರಾರು ಕೋಳಿಗಳೂ, ಹಲವು ಕಾಲ್ನಡೆಗಳೂ ಹರಕೆಯಾಗಿ ಬರುತ್ತವೆ. ಇವುಗಳನ್ನು ಏಲಂ ಕರೆದು ಮಾರಲಾಗುತ್ತದೆ. ಈ ಸ್ಥಳದ ಬಂಟ ದೈವಕ್ಕೆ ಆಸುಪಾಸಿನ ಜನಪದರು ತುಂಬಾ ಹೆದರುತ್ತಾರೆ.

ಕೋಟಿ ಚೆನ್ನಯರ ಗರಡಿ ಉತ್ಸವದ ವೇಳೆ ಅಕ್ಕಿಯ ಅಥವಾ ಬತ್ತದ (ಮುಡಿಗಿಂತ ಚಿಕ್ಕದಾದ), ಮೂಡೆಗಳ, ರಾಶಿ ಹರಕೆಯಾಗಿ ಬರುತ್ತದೆ. ಇದನ್ನು ‘ಕುರುಂಟು’ ಎನ್ನುತ್ತಾರೆ. ಇತರ ಬೆಳೆಕಾಣಿಕೆಗಳೂ, ವಸ್ತು ಪರಿಕರಗಳೂ ಕಾಣಿಕೆಯಾಗಿ ಬರುತ್ತವೆ.

ಉಡುಪಿಯ ಸಮೀಪದ ದೊಡ್ಡಣಗುಡ್ಡೆಯ ದೈವಗಳಿಗೆ ಸಾವಿರಾರು ಕೋಳಿಗಳ ಹರಕೆ ಬರುವ ವಾಡಿಕೆಯಿತ್ತು. ಉತ್ಸವದಂದು ತಡವಾಗಿ ಬಂದವುಗಳನ್ನು ಅಲ್ಲಿನ ಕಾಡಿನಲ್ಲಿ ಬಿಡಲಾಗುತ್ತಿತ್ತಂತೆ ಅವನ್ನು ಮರಳಿ ಮನೆಗೊಯ್ದರೆ ಮುಂದಿನ ವರ್ಷ ಅದರ ಎಲ್ಲಾ ಸಂತತಿಗಳೊಂದಿಗೆ ತಂದೊಪ್ಪಿಸಬೇಕೆಂಬ ಕಟ್ಟಳೆ ಇತ್ತು.

ಕುರ್ನಾಡು ಎಂಬಲ್ಲಿನ ‘ಗಿರಾವು’ (ಗ್ರಹಭೂತ) ಬಾಲಗ್ರಹ, ಅಪನ್ಮಾರಗಳೊಂದಿಗೆ ಸಂಬಂಧವುಳ್ಳದ್ದು, ಈ ದೈವಕ್ಕೆ ಹರಕೆಯಾಗಿ ಕೋಳಿಯನ್ನು ಕೊಟ್ಟರೆ ಗ್ರಹಬಾಧೆ (ಮುಖ್ಯವಾಗಿ ಅಪಸ್ಮಾರ) ನಿವಾರಣೆ ಆಗುತ್ತದೆಂಬ ನಂಬಿಕೆ.

ಸುಳ್ಳ ತಾಲೂಕಿನ ಗೂನಡ್ಕದ ಶಿರಾಡಿ ಭೂತಕ್ಕೆ ಹರಕೆಯಾಗಿ ೫೦-೬೦ ಹಂದಿಗಳು ಬಲಿಯಾಗುತ್ತವೆ. ಅಂಗಣದಲ್ಲಿ ಚದರಿ ಬಿದ್ದಿರುವ ಈ ಪ್ರಾಣಿಗಳ ಶವಗಳು ಒಂದು ಭೀಕರ ಯುದ್ಧಾಂಗಣದ ನೆನಪನ್ನು ತರುವ ಹಾಗಿರುತ್ತದೆ. ಉಳ್ಳಾಲಕ್ಕೆ ಸಮೀಪದ ಒಂದು ಗುಳಿಗಬನಕ್ಕೆ ಆ ದಾರಿಯ ಮೂಲಕ ಮೀನಿನ ಬುಟ್ಟಿ ಹೊತ್ತುಕೊಂಡು ಹೋಗುವವರು ಒಂದೆರಡು ಚಿಕ್ಕಪುಟ್ಟ ಮೀನುಗಳನ್ನು ಬಿಸಾಡುವುದು ವಾಡಿಕೆ. ಇಲ್ಲವಾದರೆ ಬನದ ಗುಳಿಗ ರೇಗುವನೆಂದು ಭಾವಿಸಲಾಗುತ್ತದೆ. ನೊಣ ಹಾಗು ಇತರ ಕ್ರಿಮಿಕೀಟಗಳ ಬಾಧೆಯ ನಿವಾರಣೆಗಾಗಿ ಕೆಲವೆಡೆ (ಉದಾ : ದೇಂಗೊಡಿ, ಸುಳ್ಳ ತಾಲೂಕು) ಪೊರಕೆಗಳನ್ನು ಹರಕೆಯಾಗಿ ಒಪ್ಪಿಸುತ್ತಾರೆ. ಬೀಳಲಿನ ಕುಕ್ಕೆ ಎಸರು ತಟ್ಟಿ ಇತ್ಯಾದಿ ಮನೆವಾರ್ತೆಯ ವಸ್ತುಗಳನ್ನು ಕೆಲವೆಡೆ ಒಪ್ಪಿಸುತ್ತಾರೆ.

ಇಲಿ, ಹೆಗ್ಗಣಗಳ ಬಾಧೆಯ ನಿವಾರಣೆಗೋಸ್ಕರ ಪಂಜುರ್ಳಿ ದೈವಕ್ಕೆ ಹರಕೆ ಹೇಳುವುದಿದೆ. ಇಲಿ ಹೆಗ್ಗಣಗಳ ಮೂತಿ ಹಂದಿಯ ಮೂತಿಯಂತಿರುವುದೇ ಇದಕ್ಕೆ ಕಾರಣವಿರಬೇಕು. ವರಾಹದ ಮೊಗ (ಅಥವಾ ವಾಹನ) ಇರುವ ಪಂಜುರ್ಳಿ ದೈವ ಈ ಪೀಡೆಯನ್ನು ಕಳೆಯಬಲ್ಲುದು ಎಂಬುದು ಜನಪದರ ಭರವಸೆ.

ಕುಕ್ಕನ್ನೂರು ಎಂಬಲ್ಲಿಯ ಪುರುಷಭೂತಕ್ಕೆ ‘ಕುರುಂಟು’, ಹಿಡಿಸೂಡಿ, ಇತ್ಯಾದಿ ಸಲ್ಲಿಸುತ್ತಾರೆ. ಅಡಿಕೆ ತೋಟಕ್ಕೆ ರೋಗಬಂದರೆ ಅಡಿಕೆಗೊನೆ ಅರ್ಪಿಸುತ್ತಾರೆ. ಇಲ್ಲಿನ ದೈವಗಳಿಗೆ ಚಿನ್ನ ಬೆಳ್ಳಿಯ ಒಡವೆ ವಸ್ತ್ರಗಳಲ್ಲದೆ ಆವೆಮಣ್ಣಿನ ಪ್ರತೀಕಗಳನ್ನೂ ಅರ್ಪಿಸುತ್ತಾರೆ. ಮಣ್ಣಿನ ವಿವಿಧ ವಸ್ತುಗಳನ್ನು ಹರಕೆಯಾಗಿ ಸಲ್ಲಿಸುವ ವಾಡಿಕೆಯು ಮಂದರ್ತಿ, ಸುರಾಯ ಮೊದಲಾದ ದೇಗುಲಗಳಲ್ಲೂ ಇದೆ.

ಸುಳ್ಯದ ಕಾಯರ್ತೋಡಿ ದೈವಗಳನ್ನು ನಂಬುವ ಜನ ತಮ್ಮ ಎಲ್ಲಾ ಕಷ್ಟಗಳಿಗೆ ಹರಕೆ ಹೇಳಿಕೊಂಡು, ‘ಜಾಲಾಟ’ವೆಂಬ ವಿಶಿಷ್ಟ ದೈವೋತ್ಸವ ಸಂದರ್ಭದಲ್ಲಿ ತಂದೊಪ್ಪಿಸುತ್ತಾರೆ. ‘ಜಂಗುಬಂಟ’ನಿಗೆ ಬೆತ್ತ, ಬತ್ತದ ಬೆಳೆಗೆ ಹಾನಿ ತರುವ ಇಲಿ, ಹೆಗ್ಗಣ, ಹಂದಿಗಳ ಬಾಧೆಯನ್ನು ನೀಗಿಸಲು ‘ಕೂಜು’ಗಳಿಗೆ ‘ಕುರುಂಟು’, ‘ಸುಬ್ಬಣ ಹೆಟ್ಯಾಳ್’ ಹಾಗೂ ‘ಸಬ್ಬೆಡ್ತೇರ್’ ಎಂಬ ಕುಲೆ (ಪ್ರೇತಾತ್ಮ) ದೈವಗಳಿಗೆ ಕತ್ತಿ, ಹಿಡಿಸೂಡಿ, ಎಲೆ ಅಡಿಕೆ,  ಪಶುಗಳಿಗೆ ಬರುವ ‘ಕಾರಗುಂಟ’ ರೋಗ ನಿವಾರಣೆಗಾಗಿ ‘ಬೇಡ’ನಿಗೆ ‘ಪೊದಿಕೆ’ (ರೊಟ್ಟಿ ಮತ್ತು ಕೋಳಿ ಪಲ್ಯ ಕಟ್ಟಿದ ಬುತ್ತಿ) ಅರ್ಪಿಸಲ್ಪಡುತ್ತದೆ. ಈ ವಸ್ತುಗಳಲ್ಲಿ ಬಹುಪಾಲು ಆ ಮೇಲೆ ಭೂತ ನರ್ತಕರಿಗೆ ಸಲ್ಲುತ್ತವೆ.

ಕುಂದಾಪುರದ ‘ದಮ್ಮದ ಗೋಳಿ’ಯ ದೈವವಾದ ಹಳೆಯಮ್ಮನಿಗೆ ಮಹಿಳಾ ಪಾತ್ರಿ ಇದ್ದಾರೆ. ಪ್ರತಿ ಸಂಕ್ರಮಣದಂದು ಜನ ಹರಕೆಗಳೊಂದಿಗೆ ಬಂದು ಹಳೆಯಮ್ಮನ ‘ದರ್ಶನ’ದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳುತ್ತಾರೆ. ತ್ರಿಪದಿಗಳಂಥ ‘ಬೆಡಗಿನ ವಚನ’ಗಳಲ್ಲಿ ಹಳೆಯಮ್ಮ ನುಡಿ ನೀಡುತ್ತಾಳೆ. ಧರ್ಮದರ್ಶಿಯೊಬ್ಬರು ಅದನ್ನು ವಿಶದೀಕರಿಸುತ್ತಾರೆ. ಇಲ್ಲಿಗೆ ಮುಸ್ಲಿಮರೂ ಕೆಲವೊಮ್ಮೆ ಬರುವುದುಂಟು.

ಕೋಟದ ಅಮೃತೇಶ್ವರೀ ದೇಗುಲಕ್ಕೆಂದು ಆ ಪರಿಸರದ ಮೀನುಗಾರರು ಮಾರಿ ಬಲೆಯ ಆದಾಯದ ಒಂದು ಪಾಲನ್ನು ಪ್ರತ್ಯೇಕಿಸಿ ಇಡುತ್ತಿದ್ದುದುಂಟು. ಅಲ್ಲಿನ ದೈವಗಳಿಗೆ, ಕಳ್ಳು, ಕೋಳಿಗಳನ್ನು ಹರಕೆಯಾಗಿ ನೀಡುತ್ತಾರೆ. ಸ್ಥಳೀಯ ಮುಸ್ಲಿಮರೂ ಹರಕೆಯಾಗಿ ಕೋಳಿಗಳನ್ನು ಕೊಡುವುದುಂಟು. ಕರಾವಳಿಯ ಇತರೆಡೆಗಳಲ್ಲೂ ಬಲೆಗಾರರು ತಮ್ಮ ಮೀನುಗಾರಿಕೆಯ ಆದಾಯದ ಒಂದು ದಾಯವನ್ನು ಸ್ಥಳೀಯ ದೈವಗಳ ಸೇವೆಗೆ ಮೀಸಲು ಇರಿಸುವ ವಾಡಿಕೆ ಇದೆ.

ಮಂದರ್ತಿಯ ಚಾಮುಂಡೇಶ್ವರೀ ಗುಡಿಯಲ್ಲಿ ಮಾರಿಪೂಜೆಯಂಥ ಸೇವೆ ನಡೆಯುವು ದುಂಟು. ಬಲಿಕೊಟ್ಟ ಪ್ರಾಣಿ ಪಕ್ಷಿಗಳ ತಲೆ ಪೂಜಾರಿಗೆ ಸೇರುತ್ತದೆ. ಮಾಂಸದ ಪಲ್ಯ ಮಾಡಿ ಅಕ್ಕಿಯ ಕಡುಬಿನೊಂದಿಗೆ ಎಡೆಯರ್ಪಿಸಿ ಭಕ್ತಾದಿಗಳು ಹಂಚಿ ಉಣ್ಣುತ್ತಾರೆ. ತಲೆಯ ಮಾಂಸವನ್ನು ಪೂಜಾರಿ ಪ್ರತ್ಯೇಕ ‘ಪದಾರ್ಥ’ ಮಾಡಿ ದೈವಕ್ಕೆ ಅರ್ಪಿಸಿ ಸ್ವೀಕರಿಸುತ್ತಾನೆ.

ಬಸರೂರಿನಲ್ಲಿರುವ ಪಂಜುರ್ಲಿ ದೈವ ಸಂಕೀರ್ಣದಲ್ಲಿ ಹತ್ತಾರು ದೈವಗಳಿವೆ. ಇಲ್ಲಿ ಚೀನೀಭೂತಗಳಿರುವುದು ಕುತೂಹಲಕರವಾಗಿದೆ. (ಚೀನೀ ವ್ಯಾಪಾರಿಗಳು ಅಕಾಲ ಮರಣ ಹೊಂದಿ ಭೂತಗಳಾಗಿರಬೇಕು.) ಇಲ್ಲಿನ ಮಾಂಕಾಳಿ, ಹಾಯ್ಗುಳಿ ಮುಂತಾದ ದೈವಗಳಿಗೆ ರಕ್ತಬಲಿ ಇದೆ. ಹರಕೆಯ ಪ್ರಾಣಿಗಳ ಮಾಂಸವನ್ನು ಪಲ್ಯ ಮಾಡಿ ಅನ್ನದೊಂದಿಗೆ ಅರ್ಪಿಸುತ್ತಾರೆ. ಇದನ್ನು ಮಂಜ ಎನ್ನುತ್ತಾರೆ. ಆದರೆ ಇಲ್ಲಿ ಕಳ್ಳಿನ ಅರ್ಪಣೆ ಇಲ್ಲ.

ಮಣಿಕಲ್ಲು ಎಂಬ ದೈವ ಸಂಕೀರ್ಣದಲ್ಲಿ ‘ದರ್ಶನ’, ದಕ್ಕೆಬಲಿ, ಕೆಂಡಸೇವೆ ಇತ್ಯಾದಿ ಕಲಾಪಗಳು ಜರುಗುತ್ತವೆ. ಇಲ್ಲಿಯೂ ‘ಮಂಜ’ ಇದೆ. ಇಲ್ಲಿನ ‘ಮೈದಾಳ್ತಿ’ ದೈವಕ್ಕೆ ಸಂತಾನಾರ್ಥವಾಗಿ ಸೀರೆ, ರವಕೆ, ಚಿನ್ನದ ಮಗು, ಬೆಳ್ಳಿ ತೊಟ್ಟಿಲು ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಧೂಮಾವತಿ ದೈವದ ತೀರ್ಥ ತಗಣಿಗಳನ್ನು ನಿರ್ಮೂಲಿಸುತ್ತದೆ ಎಂದು ನಂಬುತ್ತಾರೆ. ಜಾನುವಾರುಗಳನ್ನು ಹುಲಿ ಹಿಡಿಯದಂತೆ ಅವಲಕ್ಕಿ ಕೊಬ್ಬರಿಯನ್ನು ಹುಲಿದೈವಕ್ಕೆ ಅರ್ಪಿಸುತ್ತಾರೆ. ನಿದ್ರಾನಾಶದ ಪರಿಹಾರಕ್ಕೆ ‘ಜೋಗಿಪುರುಷ’ನಿಗೆ ಭಂಗಿ, ಹೊಗೆಸೊಪ್ಪು, ಸಿಗರೇಟು ಇತ್ಯಾದಿಗಳನ್ನು ಅರ್ಪಿಸುತ್ತಾರೆ. (ಬೈರಾಗಿಗಳಲ್ಲಿ ಹಲವರು ಭಂಗಿ ಮುಕ್ಕರಷ್ಟೆ? ‘ಜೋಗಿಪುರುಷ’ ಪೂರ್ವದಲ್ಲಿ ಅಂಥ ಬೈರಾಗಿಯಾಗಿರಬಹುದು.)

ಬೆಳೆಯ ಅಭಿವೃದ್ದಿಗಾಗಿ ಬಾಗಿಲ ಬೊಬ್ಬರ್ಯನಿಗೆ ಕಡುಬನ್ನು ಬಡಿಸುತ್ತಾರೆ.

ಬಾರಕೂರಿನ ಕುಂಡೋದರ ದೈವಸ್ಥಾನದ ಉತ್ಸವಕ್ಕೆ ‘ಸೆಡಿಸೇವೆ’ ಎನ್ನುತ್ತಾರೆ. ಇಲ್ಲಿ ಸೆಡಿ(ಸಿಡಿ) ತೂಗುವ ಭೀಕರ ಹರಕೆ ಹಿಂದೆ ಇತ್ತು. ಈಗ ಈ ಸಿಡಿಯಾಟದ ಬದಲಿಗೆ ‘ಸೆಡಿತೊಟ್ಟಿಲ’ಲ್ಲಿ ಕುಳ್ಳಿರಿಸಿ ಮೂರು ಸಲ ತೂಗುತ್ತಾರೆ. ಆಗ ನಾಣ್ಯ ಹಾಗೂ ಹಣ್ಣುಗಳನ್ನು ಬಿಸಾಡುತ್ತಾರೆ.

ಮಾಸಿಕ ತೊಂದರೆಯಿಂದ ಬಳಲುವ ಹೆಂಗಸರು ಹರಕೆ ಹೊತ್ತು ಇಲ್ಲಿ ಅಂಗಳ ಗುಡಿಸುತ್ತಾರೆ.

ಕಂಬಳದ ಕೋಣಗಳನ್ನು ದೈವಮಹಿಮೆ ಇರುವುದೆನ್ನಲಾದ ನಿರ್ದಿಷ್ಟ ಸ್ಥಳಗಳಲ್ಲಿ ನಡೆಯುವ ಕಂಬಳದ ಗದ್ದೆಗೆ ಇಳಿಸುವುದಾಗಿ ಹರಕೆ ಹೊರುವುದಿದೆ. ವಂಡಾರ ಕಂಬಳ ಇಂಥದೊಂದು ವಿಶಿಷ್ಟ ಕಂಬಳವಾಗಿದೆ. ಈ ಕಂಬಳದ ಗದ್ದೆಯ ಸುತ್ತ ಸುತ್ತಕ್ಕಿ ಚೆಲ್ಲುವುದರಿಂದ ಚರ್ಮರೋಗಗಳು ವಾಸಿಯಾಗುತ್ತವೆಂದು ನಂಬಿಕೆ.

ಕೊಕ್ಕಡದ ‘ಕೋರಿ ಕಂಬಳ’ದ ಗದ್ದೆಗೆ ಜಾನುವಾರುಗಳನ್ನು ಇಳಿಸಿ ಗದ್ದೆಯ ನೀರನ್ನು ಪುಣ್ಯತೀರ್ಥವಾಗಿ ಮೈ ಮೇಲೆ ಸಿಂಪಡಿಸಿ ಹಣೆಗೆ ಹಚ್ಚಿದರೆ ಯಾವುದೇ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ. ಗದ್ದೆಗೆ ಸೊಪ್ಪು ಹೊರೆ ಹೊತ್ತು ಹಾಕಿದರೆ ಮನುಷ್ಯರ ಕಾಯಿಲೆ ವಾಸಿಯಾಗುತ್ತದೆ ಎಂದೂ ನಂಬುತ್ತಾರೆ.

ದನಕರುಗಳಿಗೆ ಕಾಯಿಲೆ ಬಂದಾಗ ಅಥವಾ ಅವು ಕಾಣೆಯಾದಾಗ ಬೋಂಕ (ಮೊಂಟೆ) ಎಂಬ ಶಬ್ದಿಸುವ ಒಂದು ಬಿದಿರ ಸಾಧನವನ್ನು (ಇದನ್ನು ಜಾನುವಾರಿನ ಕೊರಳಿಗೆ ಕಟ್ಟುತ್ತಾರೆ) ಶಿಬಾಜೆ ದೇಗುಲಕ್ಕೆ ಅರ್ಪಿಸುವ ಕ್ರಮವಿದೆ.

ಆಚೆ ಉಚ್ಚಿಲ ಎಂಬಲ್ಲಿನ ಆರೇಕಲ ಭಗವತಿ ವಿಷ್ಣುಮೂರ್ತಿ ದೈವಸ್ಥಾನದಲ್ಲಿನ ಉಪದೇವತೆಯಾದ ‘ಯೇಕಲಪೋದಿ’ (ಯಕ್ಷೀ ಭಗವತಿ)ಗೆ ಹರಕೆ ಸಲ್ಲಿಸಿದರೆ ‘ಯೇಕ್ಕ’ (ಉಬ್ಬಸ) ರೋಗ ನಿವಾರಣೆ ಆಗುತ್ತದೆಂದು ನಂಬಿಕೆ. ಅದೇ ದೈವಸ್ಥಾನಕ್ಕೆ ಕಾಣಿಕೆ ಹಾಕಿ ಅಲ್ಲಿನ ಪ್ರಸಾದವಾದ ಅರಸಿನದ ಹುಡಿಯನ್ನು ತಾಯಿತದಲ್ಲಿ ತುಂಬಿಸಿ ಧರಿಸಿದರೆ ಕಾಯಿಲೆಗಳು ದೂರವಾಗುತ್ತವೆಂದೂ ನಂಬುತ್ತಾರೆ.

ಅಡ್ಕ ಭಗವತೀ ದೈವಸ್ಥಾನದ ಉತ್ಸವದ ಭಾಗವಾಗಿ ಕೆಂಡಸೇವೆ ಜರಗುತ್ತದೆ. ಇದಕ್ಕೆ ಬೇಕಾಗುವ ಹಲಸಿನ ಮರಗಳನ್ನು ಹರಕೆಯ ರೂಪದಲ್ಲಿ ನೀಡುವುದಿದೆ. ಪಾತ್ರಿಗಳು ಉಡುವ ಪಟ್ಟೆವಸ್ತ್ರ, ತಲೆಗೆ ಕಟ್ಟುವ ಪಟ್ಟೆಯ ಶಿರೋವಸ್ತ್ರ ಇತ್ಯಾದಿಗಳೂ ಚಿನ್ನ ಬೆಳ್ಳಿಯ ಒಡವೆ, ವಸ್ತ್ರಗಳೂ, ಸಮಾರಾಧನೆಗೆ ಬೇಕಾದ ಅಕ್ಕಿ, ತೆಂಗಿನಕಾಯಿ ಇತ್ಯಾದಿಗಳೂ ಹರಕೆಯಾಗಿ ಬರುತ್ತವೆ. ಮಲ್ಲಿಗೆಯ ಹರಕೆಯಂತೂ ರಾಶಿಯಾಗಿ ಬಂದು ಬೀಳುತ್ತದೆ. ‘ಮಡತನ’ ಎಂಬ ಉರುಳುಸೇವೆಯೂ ಇಲ್ಲಿ ನಡೆಯುವುದುಂಟು. ದೀಪಸೇವೆ, ಸುತ್ತುಬೆಳಕು, ಎಳನೀರು ಕೂಟ, ಗಂಧವೀಳ್ಯದ ಕೂಟ ಇತ್ಯಾದಿಗಳೂ ಹರಕೆಯಾಗಿ ಇಲ್ಲಿ ಜರಗುವುದಿದೆ.

ವಿಷ್ಣುಮೂರ್ತಿ ದೈವಕ್ಕೆ ‘ಸುರಿಗೆ’ ಎಂಬ ಆಯುಧಗಳನ್ನು ಹರಕೆಯಾಗಿ ಒಪ್ಪಿಸುವುದಿದೆ. ಬೇರೆ ದೈವಗಳಿಗೆ ಆಯುಧಗಳ ಸಂಖ್ಯೆಗೆ ನಿರ್ದಿಷ್ಟತೆ ಇದೆ. ಆದರೆ ವಿಷ್ಣುಮೂರ್ತಿಗೆ ಆಯುಧ ಸಂಖ್ಯೆಗೆ ಪರಿಮಿತಿಯಿಲ್ಲ. ನೂರೊಂದು ಮಂದಿಯ ಮೇಲೂ ಏಕಕಾಲದಲ್ಲಿ ವಿಷ್ಣುಮೂರ್ತಿ ಆವೇಶಗೊಳ್ಳಬಹುದೆಂದು ಪ್ರತೀತಿ. ಆವೇಶಗೊಂಡ ಪ್ರತಿಯೊಬ್ಬನ ಕೈಗೂ ಆಯುಧ ನೀಡುವುದು ವಾಡಿಕೆ.

ನಾಗಸಂಬಂಧಿ ಹರಕೆಗಳು : ನಾಗಸಂಬಂಧವಾದ ನಂಬಿಕೆ ಹಲವು ರೀತಿಯಲ್ಲಿ ಸಮಾಜ ಜೀವನದಲ್ಲಿ ಹೆಣೆದುಕೊಂಡಿದೆ. ಶಿಷ್ಟ ದೇವತಾರಾಧನೆಯೊಡನೆ ಮಾತ್ರವಲ್ಲ, ಜನಪದ ದೈವಾರಾಧನೆಯೊಡನೆಯೂ ನಾಗಪೂಜೆ ಬೆಸೆದುಕೊಂಡಿದೆ. ನಾಗನನ್ನು ಸುಬ್ರಹ್ಮಣ್ಯನಲ್ಲಿ ಸಮೀಕರಿಸುವುದೂ, ಹುತ್ತವನ್ನು ಪೂಜಿಸುವುದೂ ಸಾಮಾನ್ಯ. ನಾಗದೇವತೆ ಸಂತಾನಕಾರಕನೆಂಬ ನಂಬಿಕೆ ಪ್ರಸಿದ್ಧ. ನಾಗನ ಅವಕೃಪೆಯಿಂದ ಸಂತಾನಕ್ಷಯ ಮಾತ್ರವಲ್ಲದೆ ಕಣ್ಣು ಹಾಗೂ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಬರಬಹುದೆಂದು ನಂಬುತ್ತಾರೆ. ಹಾಗಾಗಿ ನಾಗನ ಅನುಗ್ರಹ ಪಡೆಯಲು ವಿಧವಿಧದ ಹರಕೆಗಳನ್ನು ಹೊರುತ್ತಾರೆ. ತಂಬಿಲ (ತನು ಹಾಕುವುದು) ನಾಗದರ್ಶನ, ದಕ್ಕೆ ಬಲಿ, ನಾಗಮಂಡಲ, ಬ್ರಹ್ಮಮಂಡಲ, ಆಶ್ಲೇಷ ಬಲಿ, ಕಾಡ್ಯನಾಟ ಮೊದಲಾದ ಸೇವೆಗಳು ನಾಗನಿಗೆ ಸಲ್ಲುತ್ತವೆ. ನಾಗಬ್ರಹ್ಮನನ್ನು ಭೂತರೂಪದಲ್ಲಿ ಕೋಲಕಟ್ಟಿ ಪೂಜಿಸುವುದೂ ಇದೆ. ನಾಗನ ಹೆಡೆಯ ಅಥವಾ ನಾಗಯಕ್ಷಯಕ್ಷಿಯರ ಬಿಂಬ ಇರುವ ನಾಗನಕಲ್ಲುಗಳನ್ನು ಹರಕೆಯಾಗಿ ನಾಗನ ಬನಕ್ಕೆ ಅಥವಾ ನಾಗಾಲಯಕ್ಕೆ ಒಪ್ಪಿಸುವುದಿದೆ. ಹಾಗೆಯೆ ಚಿನ್ನ ಬೆಳ್ಳಿಯ ನಾಗನ ಹೆಡೆ, ಮೊಟ್ಟೆಗಳನ್ನೂ ಅರ್ಪಿಸುತ್ತಾರೆ. ನಾಗಚಿಹ್ನೆ ಇರುವ ‘ಮುರ್ಲೆ’ ಎಂಬ ಮಣ್ಣಿನ ಗಡಿಗೆಗಳನ್ನು ಬನಕ್ಕೆ ಒಪ್ಪಿಸುವ ವಾಡಿಕೆಯೂ ಕೆಲವೆಡೆ ಇದೆ.

ಅಹಿತರಿಗೆ ಕೇಡಾಗಲೆಂಬುದಕ್ಕೆ ಹರಕೆ : ಹರಕೆಗಳನ್ನು ತಮ್ಮ ಅನಿಷ್ಟ ನಿವಾರಣೆ, ಇಷ್ಟಾರ್ಥಸಿದ್ದಿಗೆ ಮಾತ್ರವಲ್ಲದೆ ತಮ್ಮ ಅಹಿತರಿಗೆ ಕೇಡಾಗಲಿ ಎಂಬ ಆಶಯದಿಂದಲೂ ಸಲ್ಲಿಸುವುದುಂಟು. ತಮಗೆ ನಿಜವಾಗಿಯು ನಿರ್ದಿಷ್ಟ ವಿಷಯದಲ್ಲಿ ಅನ್ಯಾಯವಾಗಿದ್ದು ಎಲ್ಲಿಯೂ ನ್ಯಾಯ ದೊರಕದೆ ಹೋದಾಗ ವಿಧಿಯಿಲ್ಲದೆ ದೈವಗಳ ಹೆಸರೆತ್ತಿ ಶಪಿಸುವುದುಂಟು. (ಇಂಥಾ ದೈವ ನೋಡಿಕೊಳ್ಳಲಿ ಎಂದು) ಅಥವಾ ದೈವಸನ್ನಿಧಿಗೆ ಬಂದು ಪ್ರಾರ್ಥನೆ ಇಲ್ಲವೆ ದೂರು(ಹುಯಿಲು) ಸಲ್ಲಿಸುವುದುಂಟು. ಪ್ರಮಾಣ ಮಾಡುವುದರಲ್ಲೂ ಇದೇ ಆಶಯವಿದೆ. ಮನಸ್ಸಿನಲ್ಲೆ ಎಣಿಸಿದರೂ ಫಲಿಸುತ್ತದೆನ್ನುತ್ತಾರೆ. ಕೆಲವರು ತಮಗೆ ಅಂಥ ಅನ್ಯಾಯವಾಗಿರದಿದ್ದರೂ ತಮ್ಮ ಹಿತವಂದಿಗರಲ್ಲದವರಿಗೆ ಕೇಡಾಗಲಿ ಎಂಬ ಉದ್ದೇಶದಿಂದ ಬೇರೆ ಬೇರೆ ದೈವಗಳಿಗೆ ಹರಕೆ ಹೊರುತ್ತಾರೆ. ಇದು ಒಂದು ಬಗೆಯ ‘ಲಂಚ’ವೆಂದರೂ ಸರಿಯೆ!

ಭೂತದ ಹೆಸರಲ್ಲಿ ಪ್ರಮಾಣ ಮಾಡುವುದೂ, ಫಲವಸ್ತು ತರಕಾರಿ ಇತ್ಯಾದಿಗಳ ರಕ್ಷಣೆಗೆ ಭೂತದ ಹೆಸರಲ್ಲಿ ‘ಕೊಡಿ’ (ಪ್ರಾರ್ಥಿಸಿ ಕಟ್ಟಿದ ಸಾಂಕೇತಿಕ ಸಸ್ಯಭಾಗ) ಕಟ್ಟುವುದೂ ಹರಕೆಯ ಕಕ್ಷೆಗೇ ಸೇರುತ್ತದೆ.

ಧರ್ಮಸ್ಥಳದ ಅಣ್ಣಪ್ಪ ಪಂಜುರ್ಲಿ, ಕಾನತ್ತೂರಿನ ವಿಷ್ಣುಮೂರ್ತಿ ಮೊದಲಾದ ಉಗ್ರದೈವಗಳ ಬಗೆಗೆ ಜನಪದರಿಗೆ ಎಷ್ಟು ಭೀತಿಯಿದೆ ಎಂದರೆ, ಆ ಸ್ಥಳಗಳ ಹೆಸರನ್ನು ನೇರವಾಗಿ ಎತ್ತುವುದಿಲ್ಲ. ಹರಕೆಯ ಪರಿಣಾಮವಾಗಿ ಕೆಲವೊಮ್ಮೆ ಜೀವಹಾನಿಯಾಗಿ, ಸತ್ತವರ ಪ್ರೇತಗಳು ಅಂಥ ಕ್ಷೇತ್ರಗಳಲ್ಲಿ ದೈವಬಂಧನದಲ್ಲಿ ಇರುತ್ತವೆ ಎಂದು ನಂಬಲಾಗುತ್ತದೆ. ಜ್ಯೋತಿಷ್ಯ ಪ್ರಶ್ನೆಯ ಮುಖಾಂತರ ಪ್ರೇತಗಳ ಸಂಖ್ಯೆ, ಪರಿಹಾರದ ವಿಧಾನಗಳನ್ನು ನಿರ್ಧರಿಸುತ್ತಾರೆ. ಪ್ರೇತಮೋಕ್ಷವಾಗಲು ಹರಕೆಗೆ ಸಂಬಂಧಪಟ್ಟ ಇತ್ತಂಡದವರೂ ಇದ್ದು ಹರಕೆಗಳನ್ನೆಲ್ಲಾ ಯುಕ್ತರೀತಿಯಲ್ಲಿ ತೀರಿಸುವುದು ವಾಡಿಗೆ ಕಾನತ್ತೂರು, ಕುಂಬಳೆಯ ಪಾದೆಸ್ಥಾನ (ಇಲ್ಲಿನ ಆಲಿದೈವ ಎಂಬ ಮುಸ್ಲಿಂ ಮೂಲದ ದೈವ ಬಹಳ ಕಾರಣಿಕವುಳ್ಳದ್ದು ಎಂದು ನಂಬಿಕೆ) ಮುಂತಾದೆಡೆ ಪ್ರೇತಗಳ ಸಂಖ್ಯೆಗನುಗುಣವಾಗಿ ‘ಪ್ರೇತಕಾಣಿಕೆ’ ಕಟ್ಟಿ, ದೈವಪಾತ್ರಿಗಳ ಮೂಲಕ ವಿಧಿವತ್ತಾಗಿ ಪ್ರೇತಗಳ ಬಿಡುಗಡೆ ಮಾಡುತ್ತಾರೆ. ಇಂದಿನ ದಿನಗಳಲ್ಲೂ ಈ ಪ್ರಕ್ರಿಯೆ ಊರ್ಜಿತವಾಗಿಯೆ ಇದೆ.

ಇನ್ನೊಬ್ಬರಿಗೆ ಕೇಡಾಗಲಿ ಎಂದು ಹರಕೆ ಹೇಳಿದಾಗ, ಆ ವಿಚಾರವನ್ನು ಸಂಬಂಧಪಟ್ಟವರಿಗೆ ಸಾರುವ ಪದ್ಧತಿಯುಂಟು. ಹರಕೆಯ ‘ನ್ಯಾಯ’ಕ್ಕೆ ಒಳಪಟ್ಟವರು ಪರಸ್ಪರ ಅನ್ನಕನ್ಯಾ ವ್ಯವಹಾರ ಇತ್ಯಾದಿ ಮಾಡಬಾರದೆಂದು ನಿಷೇಧವಿದೆ. ಒಂದು ಬಾವಿಯ ನೀರನ್ನು ಕುಡಿಯುವುದಕ್ಕ ಅಂಜುವುದುಂಟು. ಊಟ ಕೂಟಗಳಲ್ಲಿ ಬೆರೆತು ನಡೆದರೆ ಹರಕೆ ಹೇಳಿಕೊಂಡವರಿಗೆ ದೈವಬಾಧೆ ಹೊಡೆ ಮರಳಿ ಹೊಡೆಯಬಹುದೆಂಬ ನಂಬಿಕೆ ಇದೆ.

ಹರಕೆಗೆ ಸಂಬಂಧಪಟ್ಟ ಉಭಯ ಪಕ್ಷದವರನ್ನು ದೇಗುಲದ ಕಡೆಯವರಾಗಲೀ ಮೂರನೆಯವರಾಗಲೀ ಕರೆದು ಇತ್ಯಾರ್ಥ ಮಾಡಿಸುವುದುಂಟು. ಹರಕೆಯ ಪರಿಣಾಮ ಕೆಲವೊಮ್ಮೆ ಶೀಘ್ರವಾಗಿಯೂ ಕೆಲವೊಮ್ಮೆ ನಿಧಾನವಾಗಿ ಗೋಚರಿಸುವುದೆನ್ನುತ್ತಾರೆ. ಹರಕೆಯ ಬಾಧೆಯ ಸಂಶಯ ಬಂದವರು ಜ್ಯೋತಿಷ್ಯ ಪ್ರಶ್ನೆಯ ಮೂಲಕ ಅಥವಾ ದೈವದರ್ಶನದ ಮೂಲಕ ಅದನ್ನು ಸ್ಥಿರೀಕರಿಸಿಕೊಂಡು ಮುಂದಿನ ವಿಚಾರಗಳಿಗೆ ತೊಡಗುತ್ತಾರೆ. ಪ್ರಾರ್ಥನೆ ಮಾಡಿ ಚಿನ್ನದ ಒಡವೆಯನ್ನು ‘ಈಡು’ ಇಟ್ಟು ಮುಂದೆ ಹರಕೆಯ ಸಮಸ್ಯೆ ಹರಿಹಾರ ಮಾಡುವುದಿದೆ.

ಕೆಲವು ದೈವಗಳು ಇಂಥ ಹರಕೆಗಳನ್ನು ಸಲ್ಲಿಸುವ ವೇಳೆ ಹಣ ಹಾಗೂ ವಸ್ತುಗಳ ವಿಚಾರದಲ್ಲಿ ಚೌಕಾಶಿ ಮಾಡುವುದೂ ಉಂಟು.

ಸಮಾಜದ ಬಹುತೇಕ ವರ್ಗಗಳ ಆರ್ಥಿಕ ಪರಿಸ್ಥಿತಿ ಇಂದಿನ ದಿನಗಳಲ್ಲಿ ಸುಧಾರಿಸಿರುವುದರಿಂದ ಸಾಮಾನ್ಯ ಎಲ್ಲ ದೇವಳಗಳ ಆರ್ಥಿಕ ಸಂಪಾದನೆ ಗಣನೀಯವಾಗಿ ಹೆಚ್ಚಿದೆ. ಹರಕೆಗಳ ವೈವಿಧ್ಯವೂ ಪ್ರಮಾಣವೂ ಹೆಚ್ಚಿದೆ. ಇದರೊಂದಿಗೆ ಹರಕೆ ಒಪ್ಪಿಸುವುದರಲ್ಲಿ ಆಡಂಬರ ಪ್ರದರ್ಶನ, ಸ್ಪರ್ಧಾತ್ಮಕ ಮನೋಭಾವವೂ ಹೆಚ್ಚಾಗಿದೆ.

ಹರಕೆಯ ಪ್ರಕ್ರಿಯೆಯ ಕುರಿತು ಬೇರೆ ಬೇರೆ ನಿಟ್ಟಿನಲ್ಲಿ ಅಧ್ಯಯನ ಮಾಡುವುದು ಸಾಧ್ಯ. ವೈದ್ಯಕೀಯ ಉಪಚಾರಗಳಿಗೆ ಬಗ್ಗದ ವ್ಯಾಧಿಗಳು ಹರಕೆಯ ಬಲದಿಂದ ನಿವಾರಣೆಯಾಗುವುದು ನಿಜವಾದರೆ ಅದರ ಹಿನ್ನೆಲೆಯಲ್ಲಿರುವ ಮನಃಶಾಸ್ತ್ರೀಯ ಮುಖವನ್ನು ಪರಿಶೀಲಿಸಬೇಕಾಗುತ್ತದೆ. ವ್ಯಕ್ತಿಯ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಬೇಕಾಗುತ್ತವೆ. ಸಮಾಜದ ಆರೋಗ್ಯಕ್ಕೆ ಮಾರಕವಾಗದೆ, ಪೂರಕವಾಗುವಂತಿದ್ದರೆ ಹರಕೆಗಳೆಂಬ ಚಿಕಿತ್ಸಾವಿಧಾನವನ್ನು ತಿರಸ್ಕರಿಸುವಂತಿಲ್ಲ.

ಕರೆನಾಡಿನ ಆರಾಧನಾಲಯಗಳ ಹರಕೆಗಳಿಗೆ ಸಂಬಂಧಿಸಿದ ವಾರ್ಷಿಕ ಆರ್ಥಿಕ ವ್ಯವಹಾರ ಹಲವಾರು ಕೋಟಿ ರೂಪಾಯಿಗಳಾಗಬಲ್ಲುದು. ಹರಕೆಗಳಿಗೆ ಉಪಯೋಗಿಸುವ ವಸ್ತುಪರಿಕರಗಳನ್ನು ನಿರ್ಮಿಸುವ ಹಾಗೂ ಸರಬರಾಜು ಮಾಡುವ ವೃತ್ತಿಯವರಿಗೆ ಹರಕೆಯ ವ್ಯವಹಾರವೇ ಮುಖ್ಯವಾದೊಂದು ಆದಾಯ ಮೂಲವಾಗಿದೆ. ಅಂತೆಯೆ ಜೋತಿಷ್ಕರು, ಪುರೋಹಿತರು, ಹರಕೆ ಸಂದಾಯದ ಪ್ರಕ್ರಿಯೆಗೆ ಸಂಬಂಧಿಸಿದ ಇತರ ವ್ಯಕ್ತಿಗಳೂ ತಕ್ಕಷ್ಟು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಕೆಲವು ಹರಕೆ ಸಲ್ಲಿಸುವಾಗ ನಡೆಯುವ ಆಡಂಬರದ ಅಲಂಕಾರ, ಘೋಷ, ಭೋಜನಾದಿ ವ್ಯವಸ್ಥೆಗಳ ಕಾರಣಕ್ಕಾಗಿ ಹಲವರಿಗೆ ವೃತ್ತಿಯೊದಗುತ್ತದೆ. ಹರಕೆ ಹೊರುವ ಮತ್ತು ತೆರುವ ಪ್ರವೃತ್ತಿ ಸದ್ಯಕ್ಕಂತೂ ಕ್ಷೀಣಿಸುವ ಲಕ್ಷಣಗಳಿಲ್ಲವಾದುದರಿಂದ ಹರಕೆಗಳಿಗೆ ಸಂಬಂಧಿಸಿದ ವಿವಿಧ ವೃತ್ತಿಯವರಿಗೆ ನಿಕಟ ಭವಿಷ್ಯದಲ್ಲಿ ಯಾವುದೇ ಕೊರತೆ ಬಾಧಿಸದು ಎಂದು ಹೇಳಬಹುದು.

ಈ ಎಲ್ಲಾ ವ್ಯವಹಾರ ಮುಖಗಳು ಹೇಗಿದ್ದರೂ ಹಲವು ಹರಕೆಗಳ ಹಿಂದಿರುವ ಮುಗ್ದಮೌಢ್ಯ, ಪ್ರತಿಷ್ಠೆ, ಮನಕ್ಲೇಶ, ದೂಷಿತ ಉದ್ದೇಶ, ಬಾಲಿಶತೆ ಇತ್ಯಾದಿಗಳು ಸಂಸ್ಕೃತಿ ವೀಕ್ಷಕರ ಗಮನಕ್ಕೆ ಬಾರದಿರುವುದಿಲ್ಲ.

ಪರಾಮರ್ಶನ ಸಾಹಿತ್ಯ

೧.ಡಾ.ಚಿನ್ನಪ್ಪಗೌಡ, ಭೂತಾರಾಧನೆ, ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ, ದ.ಕ. ೧೯೯೦

೨. ಬನ್ನಂಜೆ ಬಾಬು ಅಮಿನ್, ಮೋಹನ್ ಕೋಟ್ಯಾನ್, ತುಳುನಾಡ ಗರೊಡಿಗಳ ಸಾಂಸ್ಕೃತಿಕ ಅಧ್ಯಯನ, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ, ೧೯೯೦

೩. ಡಾ.ಸುಶೀಲಾ ಉಪಾಧ್ಯಾಯ, ಜನಪದ ಆರಾಧನೆ ಮತ್ತು ರಂಗಕಲೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ, ೧೯೮೭

೪. ಡಾ. ಚಂದ್ರಶೇಖರ ದಾಮ್ಲೆ, ಜಾತ್ರೆಗಳ ಒಂದು ಜಾನಪದೀಯ ಅಧ್ಯಯನ,   ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ, ೧೯೯೫

೫. ಪ್ರೊ.ಬಿ.ಲೀಲಾ ಭಟ್, ಭೂತನಾಗರ ನಡುವೆ, ಪ್ರಕೃತಿ ಪ್ರಕಾಶನ, ಕೋಟೆಕಾರ್, ದ.ಕ., ೧೯೮೧

೬. ಪು.ಶೀನಿವಾಸ ಭಟ್, ಜನಪದ ಶಕಪಥ, ಯುಗಪುರುಷ ಪ್ರಕಟನಾಲಯ, ಕಿನ್ನಿಗೋಳ, ೨೦೦೫