ತುಳುನಾಡಿನ ವೈವಿಧ್ಯ ಪೂರ್ಣ ವರ್ಣರಂಜಿತ ದೈವಾರಾಧನೆಗೆ ಸಂವಾದಿಯಾಗಿ ಕೇರಳದಲ್ಲಿ ‘ತೆಯ್ಯಂ’ ಆರಾಧನೆ ಜನಪದದಲ್ಲಿ ರೂಢಿವಡೆದಿದೆ. ತೆಯ್ಯಂ ಆರಾಧನೆಯ ಒಂದು ವಿಶಿಷ್ಟ ಪ್ರಕಾರವೇ ಭಗವತೀ ಆರಾಧನೆ. ಈ ಆರಾಧನಾ ವಿಧಾನವು ಮುಖ್ಯವಾಗಿ ಉತ್ತರ ಕೇರಳ ಕೊಡಗು ದಕ್ಷಿಣ ತುಳು ನಾಡಿನಲ್ಲಿ ಪ್ರಚಲಿತವಾಗಿದೆ. ಭಗವತೀ ಆರಾಧನೆಯು ಜನಪದ ಅನುಷ್ಠಾನ ವಿಧಿಯೆಂದು ತೋರುವುದಿದ್ದರೂ ಈ ಅನುಷ್ಠಾನ ವಲಯದಲ್ಲಿ ಕೆಲವು ಪುರಾಣ ದೇವ ದೇವತೆಗಳೂ ಭಿನ್ನ ಭಿನ್ನ ಸ್ವರೂಪಗಳಲ್ಲಿ ಗೋಚರಿಸುತ್ತಾರೆ. ಪೂಜಾ ವಿಧಿಗಳೂ ಸಂಕೀರ್ಣವಾಗಿದೆ. ಸಮ್ಮಿಶ್ರ ಸಂಸ್ಕೃತಿಯ ವಿವಿಧ ವಿನ್ಯಾಸಗಳನ್ನು ಈ ಆರಾಧನಾ ಪರಂಪರೆಯಲ್ಲಿ ಗುರುತಿಸಬಹುದು.

‘ಭಗವತೀ’ ಆರಾಧನೆ ದೇವೀ ಉಪಾಸನೆಯ ಒಂದು ರೂಪವೆನ್ನಬಹುದು. ದುರ್ಗಾ ದೇವಿಯ ಒಂದು ನಾಮಾಂತರವೇ ಭಗವತೀ ಎಂಬುದು. ದುರ್ಗೆಯಲ್ಲಿ ಶೌರ್ಯ ಗುಣವನ್ನು ಅನ್ವಯಿಸಿರುವುದರಿಂದ ಆ ದೇವಿಯಲ್ಲಿ ತುಸು ರಾಜಸ ಗುಣವನ್ನು ಕಾಣಲಾಗುತ್ತದೆ. ಅಂತೆಯೇ ಶೌರ್ಯಪ್ರಧಾನ ಗುಣದ ಭಗವತಿಯಲ್ಲಿ ರಾಜಸ ಪ್ರಕೃತಿ ಹೆಚ್ಚು ಪ್ರಕಟವಾಗುತ್ತದೆ. ಪಂಪ ಮಹಾಕವಿಯ ‘ಭಗವತಿಯೇರುವೇಳ್ವ ತೆರನಾಯ್ತು ಇವರೇರು’ ಎಂಬ ಉಲ್ಲೇಖದಲ್ಲಿ ಭಗವತಿ ಮೈತುಂಬಿ ಬಂದಾಗ ಉಗ್ಗಡಿಸುವ ಶೌರ್ಯಕಥನದ ಸೂಚನೆಯಿದೆ. ಭಗವತೀ ಸಂಬಂಧವಾದ ಅನೇಕ ಐತಿಹ್ಯಗಳಲ್ಲಿ ಆ ದೇವಿಯು ಸಮರ ದೇವತೆಯಾಗಿ ಕಾಣಿಸಿಕೊಳ್ಳುತ್ತಾಳೆ. ಭಗವತಿಯು ಪಾತ್ರಿಗಳ ಮೇಲೆ ಆವೇಶ ತೋರಿದ ವೇಳೆ ಕೆಲವೊಮ್ಮೆ ತಾನೇ ಕೊಲ್ಲೂರ ಮೂಕಾಂಬೆ ಎಂದೂ, ಕಟೀಲಿನ ದುರ್ಗೆ ಎಂದೂ ಹೇಳಿಕೊಂಡು ತನ್ನನ್ನು ಆ ಶಕ್ತಿಗಳೊಂದಿಗೆ ಸಮೀಕರಣ ಮಾಡುವುದುಂಟು.

ಭಗವತೀ ಆರಾಧನೆಯನ್ನು ಬರಿಯ ದೇವೀ ಪೂಜೆ ಎಂದಷ್ಟೇ ಸರಳವಾಗಿ ಭಾವಿಸುವಂತಿಲ್ಲ. ಈ ಸಂಕೀರ್ಣ ಆರಾಧನಾ ವಿಧಾನದಲ್ಲಿ ಶಕ್ತಿ ಪೂಜೆ, ವೀರಪೂಜೆ, ಸಸ್ಯಪೂಜೆ, ರೋಗ ದೇವತಾ ಪೂಜೆ, ಮಾತೃ ದೇವತಾ ಪೂಜೆ, ಕನ್ನಿಕಾ ಪೂಜೆ -ಇತ್ಯಾದಿ ಅನೇಕ ಉಪಾಸನಾಂಶಗಳು ಸೇರ್ಪಡೆಗೊಳ್ಳುತ್ತವೆ. ಇದಲ್ಲದೆ ಶ್ರೇಣೀಕರಣ ಸಮಾಜ ವ್ಯವಸ್ಥೆಯ ಗುಣಾವಗುಣಗಳೂ ಇದರ ಕಲಾಪಗಳಲ್ಲಿ ಪ್ರತಿಫಲಿತವಾಗುತ್ತವೆ. ದೈವ ಕಥನಗಳನ್ನು ಪರಾಂಬರಿಸಿದರೆ, ಧರ್ಮದ ಮುಸುಕಿನೊಳಗೆ ನಡೆವ ವಿವಿಧ ಶೋಷಣೆಗಳೂ ಅವುಗಳ ಪರಿಣಾಮವಾದ ದುರಂತ ಘಟನೆಗಳೂ ವಿಸ್ಮಯ ಹುಟ್ಟಿಸುತ್ತವೆ. ಇತಿಹಾಸ, ಪುರಾಣ, ಜನಪದ ಕಲ್ಪನೆಗಳು ವಿಚಿತ್ರವಾಗಿ ಬೆಸೆದುಕೊಂಡು ಜನ ಮನೋರಂಗದಲ್ಲಿ ದೈವೀ ಶಕ್ತಿಗಳು ವಿವಿಧ ಮೂರ್ತಿಗಳಾಗಿ ಮೂಡಿ ಬಂದಿರುವುದನ್ನು ನೋಡುತ್ತೇವೆ. ಜನರ ಸಂಸ್ಕೃತಿಯೊಡನೆ ಈ ಆರಾಧನೆಯೂ ಮಿಳಿತವಾಗಿ ಬೆಳೆದು ಬಂದಿದೆ. ತುಳುನಾಡಿನ ಉಳ್ಳಾಲ್ತಿ ದೈವ ಪರಿಕಲ್ಪನೆಗೂ ಭಗವತೀ ಪರಿಕಲ್ಪನೆಗೂ ಸಾದೃಶ್ಯಗಳಿವೆ. ಇವೆರಡೂ ವರ್ಗದ ದೈವಗಳು ಮಾತೃದೈವ ಪರಂಪರೆಗೆ ಸೇರಿದವುಗಳಾಗಿವೆ.

ಭಗವತೀ ಶಬ್ದ ಘಟಕವಾದ ‘ಭಗ’ ಎಂಬುದು ತುಂಬ ಅರ್ಥವ್ಯಾಪ್ತಿಯನ್ನು ಹೊಂದಿದುದಾಗಿದೆ. ಭಾಗ್ಯ, ಕೀರ್ತಿ, ಐಶ್ವರ್ಯ, ಘನತೆ, ಶಕ್ತಿ, ಮಹಿಮೆ, ತೇಜಸ್ಸು, ಒಲುಮೆ, ಪವಿತ್ರತೆ, ಜ್ಞಾನ, ದರ್ಮ, ಮುಕ್ತಿ, ಮೂಲಸ್ಥಾನ, ಸ್ತ್ರೀ ಜನನೇಂದ್ರಿಯ ಇತ್ಯಾದಿ ಅರ್ಥಗಳು ಈ ಶಬ್ದಕ್ಕಿವೆ.

ಭಗವತೀ ಆರಾಧನಾ ಪ್ರಸ್ಥಾನದಲ್ಲಿ ನೂರಾರು ಭಗವತಿಯರು ಪೂಜೆಗೊಳ್ಳುತ್ತಾರೆ. ಐತಿಹಾಸಿಕವಾಗಿ ಇವರೆಲ್ಲರ ಆವಿರ್ಭಾವ ಒಂದೇ ಕಾಲಕ್ಕೆ ಆದುದಲ್ಲ. ಭಗವತಿಗೂ ಶೌರ್ಯ ಪ್ರವೃತ್ತಿಗೂ ಇರುವ ಸಂಬಂಧ ಗಮನೀಯ. ಯುದ್ಧ ಪ್ರಸಕ್ತಿ ತೀವ್ರವಾಗಿದ್ದ ಚಾರಿತ್ರಿಕ ಕಾಲಘಟ್ಟದಲ್ಲಿ ಶತ್ರುನಾಶ ಹಾಗು ಜಯ ಲಾಭಕ್ಕಾಗಿ ವಿವಿಧ ಸಮರ ದೇವತೆಗಳನ್ನು ಬಲಿ ಪೂಜಾದಿಗಳಿಂದ ಆರಾಧಿಸುತ್ತಿದ್ದುದು ಸಾಮಾನ್ಯ. ಕಾಲ ಕ್ರಮೇಣ ಈ ದೇವತೆಗಳ ಸಂಖ್ಯೆಯೂ, ಆರಾಧನಾ ಸ್ಥಾನಗಳೂ, ಪೂಜಾಕ್ರಿಯೆಗಳೂ ಸ್ಪರ್ಧಾತ್ಮಕವಾಗಿ ಹೆಚ್ಚುತ್ತಾ ಹೋದವು. ವೀರಾರಾಧನೆ, ಮಾಸತಿ ಪೂಜೆಗಳಿಂದಾಗಿ ಪೌರಾಣಿಕ ದೇವತೆಗಳ ಜೊತೆಗೆ ಸ್ಥಳೀಯ ವೀರರೂ, ಸಾಧ್ವಿಯರೂ, ಅಕಾಲ ಮರಣದಿಂದ ಸಮಾಜ ಹೃದಯವನ್ನು ಕಲಕಿದವರೂ ದೈವೀಕರಣಗೊಂಡು ದೈವ ವೇದಿಕೆಯೇರಿದರು. ನೂರಾರು ಭಗವತಿಯರು ಚಾರಿತ್ರಿಕ ಕಾಲಘಟ್ಟದಲ್ಲಿ ಸೃಷ್ಟಿಯಾಗಿ ವಿವಿಧ ಹೆಸರುಗಳಲ್ಲಿ ಕರೆಯಿಸಿ ಕೊಂಡರು. ಪೌರಾಣಿಕ ದೇವಿಯರ ಜತೆಗೆ ಜನಪದ ಮೂಲದ ದೇವಿಯರೂ ಸೇರುತ್ತಾ ಹೋದರು. ಈ ಬಗೆಯ ದೈವಾರಾಧನೆಗೆ ಆಯಾ ಸೀಮೆಯ ಒಡೆಯರು ವಿಶೇಷ ಪ್ರೋಪ್ರಭುತ್ವದ ಪ್ರಭಾವವನ್ನು ಉಳಿಸುವುದಕ್ಕೂ, ಹೆಚ್ಚಿಸುವುದಕ್ಕೂ ಈ ಆರಾಧನೆಯನ್ನು ಸಮರ್ಥ ಮಾಧ್ಯಮವಾಗಿ ಬಳಸಿದ್ದನ್ನು ‘ಮಡಕ್ಕೋಲೆ’ ಎಂದು ಕರೆಯಲ್ಪಡುವ ದೈವ ಚರಿತ್ರೆಗಳನ್ನು ಬರೆದಿಟ್ಟ ಓಲೆಗ್ರಂಥಗಳಿಂದ ತಿಳಿಯಬಹುದಾಗಿದೆ. ಅನೇಕ ಭಗವತಿಯರ ಮಾನವ ಮೂಲ ಕುತುಹಲಕರವಾಗಿದೆ.

ಕೆಲವು ಭಗವತಿಯರ ಹೆಸರುಗಳು ಹೀಗಿವೆ:

ಅಂಕ ಕುಳಂಗರ ಭಗವತಿ ಕೊಡಂಗಲ್ಲೂರು ಭಗವತಿ ಪುಲ್ಲೂರಾಳಿ ಭಗವತಿ
ಅಗ್ರಶಾಲಾ ,, ಕರಿಂಗಾಳಿ ,, ಪೂಮಾಲ ,,
ಅಂಬಲ ಕಡವಿಲ್ ,, ಕಳರಿಲ್ ,, ಪೊನ್ನಕಾಲ್ ,,
ಅರಯಿಲ್ ,, ಕಾಪಾಡ್ ,, ಬಿಲ್ಲಾಪುರ ,,
ಆರ್ಯಾಕರ ,, ಕಾಳರಾತ್ರಿ ,,
ಉಚ್ಚೂಳಿ ಕಡವು ,, ಚೀರಿಮ್ಮ ,, ಮಾಡಯಿಲ್ ,,
ಎಲತ್ತ ಪುರಂ ,, ಚೆಕ್ಕಿಪಾರ ,, ಮುಚ್ಚಿಲೋಟು ,,
ಎಳಯ ,, ತುಳುವಡತ್ತ್ ,,
ಏಕಲ (ಯಕ್ಷೀ) ,, ದಯರ ಮಂಗಲ ,, ವಸುರಿಮಾಲಾ ,,
ಒತ್ತಮುಲಚ್ಚಿ ,, ಪಡಕತ್ತಿ ,, ವೀರಕಾಳಿ ,,
ಕಂಬಲ್ಲೂರ್ ,, ಪಯ್ಯಕಾಲ್ ,,
ಕಣ್ಣಂಗಾಟ್ ,, ಪಾಟಾರ ಕುಳಂಗರ ,,
ಕಣ್ಣಮಂಗಲ ,, ಪುದಿಯ ,, -ಇತ್ಯಾದಿ

ಭಗವತೀ ವರ್ಗಕ್ಕೆ ಸಮೀಪವಾದ ಚಾಮುಂಡಿಯರೆಂಬ ಉಗ್ರದೇವತಾ ಸಮೂಹವೂ ಇದೆ. ಉದಾ:

ಅಗ್ನಿ ಚಾಮುಂಡಿ ಪಡಿಞ್ಞಾರ ಚಾಮುಂಡಿ
ಆಲಿ ,, ಮಲಯಾಳ ,,
ಕಲ್ಲಂಗರ ,, ಮೂವಾಳಂ ಕುಳಿಯಿಲ್ ,,
ಕಾಪಾಳತ್ತಿ ,, ಮೇಚೇರಿ ,,
ಕುಂಟಾರ ,, ರಕ್ತ ,,
ಕೋಮರ ,, ರುದ್ರ ,,
ತೀ (ಅಗ್ನಿ) ,,
ನಾಗ ,,

ಈ ಹೆಸರುಗಳನ್ನು ಗಮನಿಸಿದರೆ ಕೆಲವು ಶಕ್ತಿಗಳು ನಿರ್ದಿಷ್ಟ ಸ್ಥಳಗಳಿಗೆ ಸಂಬಂಧಿಸಿದುದಾಗಿ ತಿಳಿಯಬಹುದು. ಉದಾ : ಅಂಬಲ ಕಡವಿಲ್, ಉಚ್ಚೂಳಿ ಕಡವು, ಬಿಲ್ಲಾಪುರಂ, ಕೊಡಂಗಲ್ಲೂರು, ಚೋಟಾನಿಕ್ಕರ, ಚೆಕ್ಕಿಪಾರ, ಮುಚ್ಚಿಲೋಟು ಇತ್ಯಾದಿ. ಅನೇಕ ಭಗವತಿಯರ ನಿಜವಾದ ಅಂಕಿತ ನಾಮ ತಿಳಿಯುವುದಿಲ್ಲ. ಕೆಲವು ಸ್ಥಳಗಳ ಹೆಸರಿದ್ದ ಮಾತ್ರಕ್ಕೆ ಅವೇ ಸ್ಥಳದಲ್ಲಿ ಅವರ ಉದ್ಭವವೆಂದೇನೂ ಹೇಳುವಂತಿಲ್ಲ. ಆ ಸ್ಥಳಗಳಲ್ಲಿ ಆಯಾ ಶಕ್ತಿಗಳ ಪ್ರಭಾವ ಪ್ರಕಟಣೆ ಅಥವಾ ಪ್ರಸಿದ್ದಿ ಆಯಿತೆಂಬುದು ತಾತ್ಪರ್ಯ. ಎಳೆಯ ಭಗವತಿ, ಪುದಿಯ(ಹೊಸ) ಭಗವತಿ, ಒತ್ತಮುಲಚ್ಚಿ (ಒಂದೇ ಸ್ತನದವಳು) ಎಂಬ ಹೆಸರುಗಳು ಗುಣ ವಿಶೇಷ ಪ್ರಧಾನವಾಗಿವೆ. ಕೆಲವು ಹೆಸರುಗಳು ಪೌರಾಣಿಕ ಹಿನ್ನೆಲೆಯನ್ನು ನೆನಪಿಸುತ್ತವೆ. ಭಗವತಿಯರ ಐತಿಹ್ಯ ಕಥನಗಳಾದ ‘ತೋಟ್ಟಂ ಪಾಟುಗಳು’ ಈ ಶಕ್ತಿಗಳ ಆವಿರ್ಭಾವ, ದೈವೀಕರಣ, ಪ್ರಭಾವ, ಪ್ರಸಾರ, ನೆಲಸು ಇತ್ಯಾದಿಗಳನ್ನು ವಿಶಿಷ್ಟ ರೀತಿಯಲ್ಲಿ ವಿವರಿಸುತ್ತದೆ. ಜನಪದ ಪುರಾಣಗಳಾದ ಈ ಕಥನಗಳಲ್ಲಿ ಚಾರಿತ್ರಿಕ ಎಳೆಗಳು ಹಾಸು ಹೊಕ್ಕಾಗಿರುವುದೂ ಉಂಟು. ಅನೇಕ ಐತಿಹ್ಯಗಳು ಅಸ್ಪಷ್ಟವಾಗಿಯೂ ಅತಿಶಯೋಕ್ತಿ ಭೂಯಿಷ್ಠವಾಗಿಯೂ ಇವೆ. ಭಾವುಕ ಪ್ರಪಂಚದ ಉತ್ಪನ್ನವಾದ ಇವುಗಳಲ್ಲಿ ರೋಚಕವಾದ ಕಾವ್ಯಾಂಶಗಳೂ ಸಾಕಷ್ಟಿವೆ. ಸಾಹಿತ್ಯ ದೃಷ್ಟಿಯಿಂದ ಮಾತ್ರವಲ್ಲ ಇತಿಹಾಸ, ಮಾನವ ಶಾಸ್ತ್ರ, ಮನಃಶಾಸ್ತ್ರ ಮೊದಲಾದ ಮಗ್ಗುಲುಗಳಿಂದಲೂ ಈ ಜನಪದ ಕಥನಗಳನ್ನು ಅಧ್ಯಯನ ಮಾಡಬಹುದು. ಮನುಷ್ಯನ ಮೂಲಭೂತ ಪ್ರವೃತ್ತಿಗಳ ವಿಜೃಂಭಣ, ಬಲಚಲ ದೌರ್ಜನ್ಯಗಳು, ಆಶೋತ್ತರಗಳು, ನೈತಿಕ ಪ್ರಜ್ಞೆ, ಶೋಷಣೆ, ವಿಧಿವಾದ, ದುರಂತ, ಕ್ರೌರ್ಯ, ಕುಬ್ಜತೆ, ಕುರೂಪ -ಇತ್ಯಾದಿ ಗುಣಾವಗುಣಗಳನ್ನು ಇವುಗಳಲ್ಲಿ ಸಮೀಕ್ಷಿಸಬಹುದಾಗಿದೆ. ಹಾಗೆಯೇ ಭಗವತಿಯರ ‘ಮದಿಪು’ ನುಡಿಗಟ್ಟುಗಳೂ ಅಮೂಲ್ಯ ಸಾಹಿತ್ಯ ಭಾಗಗಳಾಗಿವೆ.

ಬೇರೆ ಬೇರೆ ಭಗವತಿಯರು. ದುರ್ಗೆ, ಕಾಳಿ, ಮಹಿಷ ಮರ್ದಿನಿ, ಚಾಮುಂಡಿ ಇತ್ಯಾದಿ ಪುರಾಣ ದೇವತೆಗಳ ಅವತಾರಗಳೆಂಬ ಪ್ರತೀತಿಯಿದ್ದರೂ (ಹೀಗೆ ಗುರುತಿಸುವುದು ಜನಪದರ ಸಾಮಾನ್ಯ ಪ್ರವೃತ್ತಿ) ಭಗವತೀ ಆರಾಧನಾ ಪ್ರಸ್ಥಾನದಲ್ಲಿ ಇವರೆಲ್ಲ ಜನಪದ ದೇವತೆಗಳ ಸ್ವರೂಪದಲ್ಲೆ ಗೋಚರಿಸುತ್ತಾರೆ. ಸಾಮಾನ್ಯವಾಗಿ ಭಗವತಿಯರ ಕ್ಷೇತ್ರಗಳನ್ನು ದೈವಸ್ಥಾನಗಳೆಂದೇ ಕರೆಯುತ್ತಾರೆ. ದೇವಸ್ಥಾನ – ದೇವಸ್ಥಾನಗಳ ವಾಸ್ತುಶೈಲಿ ಮತ್ತು ಆರಾಧನಾ ವಿಧಾನಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ದೈವಸ್ಥಾನಗಳಲ್ಲಿ ಮಂತ್ರಪೂರಿತವಾದ ಪೂಜೆಯ ಕ್ರಮವಿಲ್ಲ. ನಿತ್ಯಪೂಜೆಯೂ ಇರಬೇಕೆಂದೇನೂ ಇಲ್ಲ. ನೈವೇದ್ಯಗಳಲ್ಲೂ ವ್ಯತ್ಯಾಸವಿದೆ. ಉತ್ಸವ ಕಲಾಪಗಳಲ್ಲೂ ಭಿನ್ನತೆ ಇದೆ. ಶಿಷ್ಟ ದೇವತೆಗಳ ಬಿಂಬವನ್ನು ಧರಿಸಿ ಪ್ರದಕ್ಷಿಣೆ ಇತ್ಯಾದಿ ಇರುತ್ತದೆಯೇ ಹೊರತು (ಇವೂ ಜಾನಪದೀಯ ಅಂಶಗಳೇ!) ದೇವತೆಯ ವರ್ಣರಂಜಿತ ವೇಷಧರಿಸಿ ನೃತ್ತ ಕೋಲ ಏರ್ಪಡಿಸುವ ಕ್ರಮವಿಲ್ಲ. ಈ ದೇವರುಗಳು ಭಕ್ತರಲ್ಲಿ ಮುಖಾಮುಖಿಯಾಗಿ ಸಂಭಾಷಣೆ ನಡೆಸುವುದಿಲ್ಲ. ಆದರೆ ಜನಪದ ದೇವತೆಗಳು ವಿಶಿಷ್ಟ ವ್ಯಕ್ತಿ ಮಾಧ್ಯಮ ಮೂಲಕ ‘ದರ್ಶನ’ ತೋರಿ ಭಕ್ತರಲ್ಲಿ ಸಂಭಾಷಿಸಿ ಅವರ ಸುಖ ಕಷ್ಟಗಳನ್ನು ವಿಚಾರಿಸಿ ಹರಸುತ್ತಾರೆ. ನ್ಯಾಯ ತೀರ್ಮಾನ ಇತ್ಯಾದಿ ನಿರ್ವಹಿಸಿ ಸಮಾಜಕ್ಕೆ ಹೆಚ್ಚು ಆಪ್ತರಾಗುತ್ತಾರೆ.

ಭಗವತೀ ಆರಾಧನೆಯು ಮುಖ್ಯವಾಗಿ ಮಾತೃದೇವತಾ ಆರಾಧನೆಯ ಒಂದು ರೂಪವಾಗಿದೆ. ಮಾತೃತ್ವದ ಕಲ್ಪನೆ ಮತ್ತು ಉಪಾಸನೆ ಜಗತ್ತಿನ ಬೇರೆ ಬೇರೆ ಕಡೆ ಇದೆ. ಇದೊಂದು ಉದಾತ್ತವಾದ ಪರಿಕಲ್ಪನೆ. ಮಾತೃ ವಾತ್ಸಲ್ಯಕ್ಕಿಂತ ಮಿಗಿಲಾದುದು ಈ ಪ್ರಪಂಚದಲ್ಲಿ ಮತ್ತೊಂದಿಲ್ಲ. ತಾಯಿಯು ತನ್ನ ಮಕ್ಕಳ ಯೋಗ ಕ್ಷೇಮ ನೋಡುವಂತೆ ದೇವಿ ಭಗವತಿಯು ತನ್ನ ಭಕ್ತರನ್ನು ಅಕ್ಕರೆಯಿಂದ ಸಲಹುತ್ತಾಳೆಂಬ ನಂಬಿಕೆ ಜನಪದರಿಗಿದೆ. ಆದರೆ ಆಕೆ ಸದಾ ವಾತ್ಸಲ್ಯಮಯಿಯೇ ಆಗಿರುತ್ತಾಳೆಂದು ಹೇಳುವಂತಿಲ್ಲ. ತಾನು ಮುನಿದರೆ ಮಹಾಕಾಳಿ ಎಂದು ಕೆಲವೊಮ್ಮೆ ತನ್ನ ನುಡಿಗಟ್ಟಿನಲ್ಲಿ ಭಗವತಿ ಹೇಳುವುದಿದೆ.

ದೇವಿಯನ್ನು ಶಕ್ತಿರೂಪಿಣಿ ಎಂದು ಕಲ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಮಾನವ ಚೇತನಕ್ಕೆ ಬಲ, ತೇಜಸ್ಸು, ಧೈರ್ಯ, ಉತ್ಸಾಹ ತುಂಬಿ ಬರುವುದೆಂಬ ನಂಬಿಕೆ ಇದೆ. ಸಮಾಜವು ಶಕ್ತಿ ಸಂಪನ್ನವಾಗಬೇಕಾದರೆ ಗಹನವಾದ ಶಕ್ತಿ ಮೂಲವೊಂದರ ಉಪಾಸನೆ ಅಪೇಕ್ಷಣೀಯ ಎಂಬ ವಿಶ್ವಾಸವೂ ಇದೆ.

ವೀರಪೂಜೆಯೆಂಬುದೂ ಭಗವತೀ ಆರಾಧನೆಯಲ್ಲಿ ಸಮಾವಿಷ್ಟವಾಗಿದೆ. ವೀರ ಪೂಜೆಯು ಉನ್ನತ ಮೌಲ್ಯಕ್ಕಾಗಿ ಶೌರ್ಯ ಪ್ರದರ್ಶನ ಮಾಡಿದ ಅಥವಾ ಬಲಿದಾನವಾದ ವೀರ ಚೇತನಗಳ ಸ್ಮರಣೆ ಹಾಗೂ ಉಪಾಸನೆಯಾಗಿದೆ. ಇದು ಶಕ್ತಿ ಪೂಜೆಗೆ ಸಂಬಂಧವುಳ್ಳದ್ದಾಗಿದೆ. ಶೌರ್ಯ ಸಂಕಥನವು ಸಮಾಜದ ಜಡತೆಯನ್ನು ಹತ್ತಿಕ್ಕಿ ಉತ್ಸಾಹ ಮೂಡಿಸಲು ಸಹಕಾರಿ ಎಂಬ ಭಾವನೆ ಯುದ್ಧ-ಪ್ರಸಕ್ತಿಯ ಕಾಲದ ಸಮಾಜದ್ದಾಗಿತ್ತು.

ಸತೀ ಪೂಜೆಯೂ ಭಗವತೀ ಆರಾಧನೆಯ ಒಂದು ಅಂಶವಾಗಿದೆ. ಭಾರತದ ಅನೇಕ ಉಪಾಸ್ಯ ದೇವಿಯರು ಮೂಲತಃ ಸಾಧ್ವೀ ಸ್ತ್ರೀಯರಾಗಿದ್ದುದು ಗಮನೀಯ. ಕೆಲವೊಂದು ಸಾಮಾಜಿಕ ಮೌಲ್ಯ ಹಾಗೂ ಚಾರಿತ್ರಿಕ ಕಾರಣಗಳಿಂದ ಹಲವಾರು ಸ್ತ್ರೀಯರು ಆರಾಧನಾ ಪ್ರಸ್ಥಾನ ವಲಯದೊಳಕ್ಕೆ ಬಂದಿದ್ದಾರೆ. ಈ ಪ್ರಕ್ರಿಯೆಯು ಮಹಿಳಾ ವರ್ಗಕ್ಕೆ ಸಲ್ಲುವ ಗೌರವ ನಿವೇದನೆಯಾಗಿಯೂ ತೋರಬಹುದು. ಕೆಲವೊಮ್ಮೆ ಸಾಮಾನ್ಯ ಯೋಗ್ಯತೆಯ ಹೆಣ್ಣು ದೈವೀಕರಣಗೊಂಡು ದೈವವಾದುದಿದೆ.

ಪೂರ್ವಿಕರ ಪೂಜೆಯೂ ಭಗವತೀ ಆರಾಧನೆಯಲ್ಲಿ ಮಿಳಿತವಾಗಿದೆ ಎನ್ನುವುದು ಸ್ಪಷ್ಟ. ಪೂರ್ವಜರ ಸ್ಮರಣೆಯೆಂಬುದು ಸಭ್ಯ ಸಮಾಜದ ಒಂದು ಸಲ್ಲಕ್ಷಣವಾಗಿದೆ. ಪೂರ್ವಜರ ಚೇತನಗಳಿಗೆ ವಿವಿಧ ಸ್ವರೂಪ, ಸ್ವಭಾವ ಕಲ್ಪನೆ ಮಾಡಿ ಅನುಷ್ಠಾನ ಪರವಾದ ಕಲಾತ್ಮಕ ರೀತಿಗಳಿಂದ ಪೂಜಿಸುವುದು ವಿಶಿಷ್ಟವಾದೊಂದು ಜನಪದ ಕ್ರಮವಾಗಿದೆ. ಕೆಲವೆಡೆ ಭಗವತೀ ಶಕ್ತಿಗಳ ಜೊತೆಗೆ ಪೂರ್ವಿಕರ ಆತ್ಮಗಳನ್ನು ಸೇರಿಸಿ ನಿರ್ದಿಷ್ಟ ರೀತಿಯಲ್ಲಿ ಪೂಜಿಸುವ ಸಂಪ್ರದಾಯವಿದೆ. ಇದು ಪೂರ್ವಿಕರಿಗೆ ಸಲ್ಲಿಸುವ ಶ್ರದ್ಧಾಂಜಲಿ ಹಾಗೂ ಕೃತಜ್ಞತೆಯ ಒಂದು ವಿಧಾನವಾಗಿದೆ. ಪೂರ್ವಿಕರ ಆತ್ಮಗಳ ಆಶೀರ್ವಾದ, ಬಲ, ವರ್ಚಸ್ಸು, ತಮ್ಮ ಬೆಂಬಲಕ್ಕಿರಲಿ ಎಂಬ ಆಶಯವೂ ಇದರ ಹಿಂದಿದೆ.

ಭಗವತೀ ಆರಾಧನೆಯಲ್ಲಿ ಸಸ್ಯಾಳಿಗಳಿಗೂ ಪ್ರಾಶಸ್ತ್ಯವಿದೆ. ಅನೇಕ ಭಗವತಿಗಳು ವಿವಿಧ ಕಾವು (ಕಾಡು, ಬನ)ಗಳೊಂದಿಗೆ ಸಂಬಂಧವಿರಿಸಿಕೊಂಡದ್ದನ್ನು ಕಾಣುತ್ತೆವೆ. ಅನೇಕ ಭಗವತೀ ಸ್ಥಾನಗಳ ಬಳಿ ಚಿಕ್ಕ ಕಾಡುಗಳು ಇಂದಿಗೂ ಇವೆ. ಸಸ್ಯ ನಿಬಿಡವಾದ ನಾಗಬನಗಳೂ ಕೆಲವೆಡೆ ಇವೆ. ಕೆಲವು ಸ್ಥಾನಗಳ ಅಂಗಳದಲ್ಲೆ ಪಾಲೆ, ಹಲಸು ಮೊದಲಾದ ಮರಗಳು ಇರುವುದುಂಟು. ಕೆಲವು ಅಂಥ ಮರಗಳಿಗೆ ವಿಶೇಷ ಸಾನ್ನಿಧ್ಯ ಕಲ್ಪಿಸಿರುವುದುಂಟು. ದೈವಸ್ಥಾನಕ್ಕೆ ಸಂಬಂಧಿಸಿ ಕೆಲವು ನಿರ್ದಿಷ್ಟ ಕಟ್ಟೆಗಳಿರುವುದುಂಟು. ಇವುಗಳಲ್ಲಿ ಅರಳಿ, ಆಲ, ಸಿರಿಗೋಳಿ, ಹಲಸು, ಮಾವು -ಇಂಥ ಮರಗಳಿರಬಹುದು. ಅಂಗಣದಲ್ಲಿ ತುಲಸಿ ಕಟ್ಟೆ ಕಟ್ಟಿಸುವ ವಾಡಿಕೆಯೂ ಕೆಲವೆಡೆ ಇದೆ.

ಕೆಲವು ದೈವಸ್ಥಾನಗಳ ಉತ್ಸವಗಳಿಗೆ ಪೂರ್ವಭಾವಿಯಾಗಿ ಕೆಂಡಸೇವೆಗೆ ಮರಮುಹೂರ್ತ ಎಂಬ ಹೆಸರಲ್ಲಿ ವಿಧಿವತ್ತಾಗಿ ಪ್ರಸಾದ ಹಾಕಿ ಹಲಸಿನ ಮರವನ್ನು ಪೂಜಿಸಿ, ಬಳಿಕ ಅದನ್ನು ಕಡಿಯುವ ಪದ್ಧತಿಯಿದೆ.

‘ಸ್ಥಾನ ತುಂಬಿಸುವುದು’ ಎಂಬ ವಿಧಿಗಾಗಿ ಬೆಳಗಿನ ಜಾವದಲ್ಲಿ ಹೊಲದಿಂದ ಬತ್ತದ ತೆನೆಗಳನ್ನು ತಂದು ಪೂಜಿಸಿ ಅವುಗಳನ್ನು ಇತರ ಕೆಲವು ಸಸ್ಯಗಳ ಎಲೆಗಳೊಂದಿಗೆ ಗುಚ್ಛಗೈದು ಪ್ರತಿಯೊಂದು ಸ್ಥಾನಕ್ಕೂ ಪೀಠಾದಿಗಳಿಗೂ ಕಟ್ಟುತ್ತಾರೆ. ತೆನೆಗಳನ್ನು ಪ್ರಸಾದರೂಪವಾಗಿ ಇತರರಿಗೆ ನೀಡುವುದೂ ಇದೆ. ಅದರಿಂದ ಅವರು ಮನೆತುಂಬಿಸುತ್ತಾರೆ.

ಎಲ್ಲ ಜನಪದ ದೈವಗಳ ಐತಿಹ್ಯಗಳಂತೆಯೇ ಬೇರೆ ಬೇರೆ ಮೂಲಗಳಿಗೆ ವರ್ಗಗಳಿಗೆ, ಪ್ರದೇಶಗಳಿಗೆ ಸೇರಿದ ಭಗವತೀದೈವಗಳ ಐತಿಹ್ಯಗಳೂ ವೈವಿಧ್ಯಪೂರ್ಣವೂ, ಕುತೂಹಲಕರವೂ ಆಗಿದೆ. ‘ಭಗವತೀ ಪುರಾಣ ಸಂಹಿತೆ’ಯಲ್ಲಿ ದಾರುಕಾಸುರ ವಧೆ ಮಾಡಿದ ಭಗವತಿಯ ಕಥೆ ಪ್ರತ್ಯೇಕವಾಗಿ ನಿಲ್ಲುತ್ತದೆ. ದಾರುಮತಿ ಎಂಬ ದಾನವಿಯ ಮಗ ದಾರುಕಾಸುರ ಬ್ರಹ್ಮನ ವರಬಲದಿಂದ ಕೊಬ್ಬಿ ಲೋಕಕಂಟಕನಾದಾಗ, ದೇವತೆಗಳೂ, ಮುನಿಗಳೂ ಶಿವನಲ್ಲಿ ದೂರಿಡಲು, ನೊಂದ ಶಿವನ ಬಿಸಿಯಾದ ಕಣ್ಣೀರಿನ ಬಿಂದುವಿನ ಮೂಲಕ ಉದ್ಭವಿಸುವ ಭಗವತಿ (ಇವಳನ್ನು ಭದ್ರಕಾಳಿ, ಮಹಾಕಾಳಿ, ಭೈರವಿ ಎಂದೂ ಕರೆಯಲಾಗಿದೆ. ಹಾಗೆಯೇ ಏಳು ಮಂದಿ ದೈವಕನ್ನಿಕೆಯರು ಉದ್ಭವಿಸಿದರೆಂಬ ಕಥಾಂತರವೂ ಇದೆ.) ದಾರುಕಾಸುರನ ವರಬಲವನ್ನೆಲ್ಲ ನಿರಸನ ಮಾಡಿ ಅವನನ್ನು ಸಮರಭೂಮಿಯಲ್ಲಿ ಸಂಹರಿಸಿದ ಕಥೆ ‘ದಾರುಕವಧಂ’, ‘ಕಾಳೀನಾಟಕಂ’, ‘ಮರಕಲ ತೋಟ್ಟಂ’ ಮೊದಲಾದ ಮಲೆಯಾಳ ಜನಪದ ಪುರಾಣ ಕೃತಿಗಳಲ್ಲಿ ವರ್ಣಿತವಾಗಿದೆ.

ಬೇರೆ ಬೇರೆ ಜನಪದ ದೈವಕಥನಗಳಲ್ಲಿ ಹಾಗೂ ಭಗವತೀ ಕ್ಷೇತ್ರಗಳ ಸ್ಥಳಪುರಾಣಗಳಲ್ಲಿ ಭಗವತಿಯ ಆವಿರ್ಭಾವ, ಪ್ರಸರಣಗಳ ವಿಚಾರ ಭಿನ್ನ ಭಿನ್ನ ರೀತಿಗಳಲ್ಲಿ ನಿರೂಪಿತವಾಗಿವೆ. ಹಲವು ದೃಷ್ಟಿಗಳಿಂದ ಗಮನೀಯ ಸ್ಥಳವಾದ ಕೊಡಂಗಲ್ಲೂರು ಭಗವತೀ ಕ್ಷೇತ್ರದ ಪ್ರಧಾನ ದೇವತೆ ಶ್ರೀ ಕುರುಂಬಾ (ಚೀರುಂಬಾ, ಶ್ರೀ ಕುರು ಅಂಬಾ) ಭಗವತಿ. ಇವಳೇ ದಾರುಕಾಸುರ ಮರ್ದಿನಿ ಎಂದು ಪ್ರತೀತಿ. ಚೇರರಾಜರ ರಾಜಧಾನಿಯೆನಿಸಿದ್ದ ಕೊಡಂಗಲ್ಲೂರಿನಲ್ಲಿ ಚೇರನ್ ಚೆಂಗುಟ್ಟುವನ್ ಎಂಬ ರಾಜ ಭಗವತಿಯ ದೇಗುಲವನ್ನು ನಿರ್ಮಿಸಿದನೆಂದು ಹೇಳಲಾಗಿದೆ. ಈ ವಿಶಿಷ್ಟ ದೇಗುಲವು ಪ್ರಸಿದ್ಧ ಪ್ರಾಚೀನ ತಮಿಳು ಕಾವ್ಯ ‘ಶಿಲಪ್ಪದಿಕಾರಂ’ ಇದರ ಕಥಾನಾಯಕಿ ಕಣ್ಣಗಿಯೊಂದಿಗೆ ಸಂಬಂಧ ಪಡೆದಿರುವುದಾಗಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.(ಡಾ.ಕೆ.ಕೆ.ಎನ್ .ಕುರುಪ್ ೧೯೭೭) ಆ ಕಣ್ಣಗಿಯೇ ತನ್ನ ದಾರುಣ ದೇಹಾಂತ್ಯದ ಬಳಿಕ ದೈವೀಕರಣಗೊಂಡು ಭಗವತಿಯಾಗಿ ಪೂಜೆ ಕೈಕೊಳ್ಳುತ್ತಿರುವಳೆನ್ನಲಾಗಿದೆ. ಇಲ್ಲಿನ ಕಾಳೀ ಸ್ವರೂಪಿಣಿ ಶ್ರೀ ಕುರುಂಬಾದೇವಿಯ ವಿಗ್ರಹದ ಒಂದು ಕೈಯಲ್ಲಿ ಕಡಗವಿದ್ದು, ಇದು ಕಣ್ಣಗಿಯ ಕಥೆಯಲ್ಲಿನ ಕಡಗದ ಸಂಕೇತವೆನ್ನಬೇಕು. ಕಾಳಿಯ ಗರ್ಭಗುಡಿಗೆ ಹೊಂದಿಕೊಂಡು ಪೂರ್ವಭಾಗದಲ್ಲಿ ಬಾಗಿಲು ಕಿಟಕಿಗಳಿಲ್ಲದ ಒಂದು ರಹಸ್ಯ ಕೊಠಡಿ ಇದ್ದು, ಅದನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ‘ಶಿಲಪ್ಪದಿಕಾರಂ’ ಕಾವ್ಯನಾಯಕಿಯಾಗಿದ್ದ ಸಾಧ್ವಿ ಕಣ್ಣಗಿಯ ಭೌತಿಕ ಅವಶೇಷಗಳನ್ನು ಇಲ್ಲಿ ಸಮಾಧಿಗೊಳಿಸಿರಬೇಕೆಂಬ ಊಹೆಯನ್ನು ಇಂದು ಚೂಡನ್ ಅವರು ತಮ್ಮ ‘Secret Chamber’ ಎಂಬ ಸಂಶೋಧನ ಗ್ರಂಥದಲ್ಲಿ ಸತಾರ್ಕಿಕವಾಗಿ ಮಂಡಿಸಿದ್ದಾರೆ. (ವಿ.ಟಿ. ಇಂದು ಚೂಡನ್ ೧೯೬೯) ದೈವೀಕರಣಗೊಂಡ ಕಣ್ಣಗಿಯನ್ನೆ ‘ಒತ್ತ ಮುಲಚ್ಚಿ’ (ಒಂದೇ ಸ್ತನದವಳು) ಎಂದು ಹೆಸರಿಸಲಾಗಿದೆ. (ಕಣ್ಣಗಿಯು ಮಧುರೆಗೆ ಶಾಪವೀಯುವಾಗ ಕೋಪದಿಂದ ತನ್ನ ಒಂದು ಸ್ತನವನ್ನೆ ಕಿತ್ತೆಸೆದಳಂತೆ!)

ಕಣ್ಣಗಿಯನ್ನು ‘ಪತ್ತಿನಿ ದೈವ’ (ಸತೀ ದೇವತೆ) ಎಂದು ಶ್ಲಾಘಿಸಲಾಗಿದೆ. ಶಕ್ತಿ ಆರಾಧನೆಯ ಅಲೆಯಿಂದಾಗಿ ಕಣ್ಣಗಿಯನ್ನು ಪುರಾಣೀಕರಿಸಿ ಕಾಳಿಯಾಗಿ ಮಾರ್ಪಡಿಸಲಾಯಿತೆಂದೂ, ಮಾನುಷರೂಪದ ಅವಳ ವಿಗ್ರಹಕ್ಕೆ ಬದಲಾಗಿ ದಾರುಕಫೂತಿನಿಯಾದ ಅಷ್ಟಭುಜೆ ಕಾಳಿಯ ವಿಗ್ರಹವನ್ನು ಕಾಲಕ್ರಮೇಣ ಪ್ರತಿಷ್ಠಾಪಿಸ ಲಾಯಿತೆಂದೂ ಅಭಿಪ್ರಾಯಪಡಲಾಗಿದೆ. (ಸಮಾಧಿಗಳಿಗೂ ದೇಗುಲಗಳಿಗೂ ಇರತಕ್ಕ ಸಂಬಂಧ ಪ್ರತ್ಯೇಕ ಅಧ್ಯಯನಕ್ಕೆ ಅರ್ಹವಾಗಿದೆ.)

ಹಲವು ಕ್ಷೇತ್ರಗಳಲ್ಲಿ ಚೀರುಂಬಾ (ಶ್ರೀ ಕುರುಂಬಾ) ಭಗವತಿಯನ್ನು ಆರಾಧಿಸುತ್ತಾರೆ. ತೀಯನ್, ಮುಕ್ಕುವನ್, ಶಾಲಿಯಾರ್ ಮೊದಲಾದ ಜನಾಂಗಗಳಿಗೆ ಇವಳೇ ಪ್ರಧಾನ ದೇವಿ. ಉತ್ಸವ ಕಾಲದಲ್ಲಿ ಈ ದೇವಿಯ ಪಾತ್ರಿ ತೊಡುವ ಕೆಂಪು ಉಡುಗೆ, ಕೆಂಪು (ಕೇಪುಳ) ಹೂವಿನ ಹಾರ ಇತ್ಯಾದಿಗಳು ಈಕೆ ಉಗ್ರದೇವತೆ ಎಂಬುದನ್ನು ಸಂಕೇತಿಸುತ್ತವೆ. ಚೀರುಂಬಾ ಭಗವತಿಗೆ ‘ದೈವಕಟ್ಟು’ ಎಂಬ ವಿಧಿ ಇಲ್ಲ.

ವಾಣಿಯ (ಮಲೆಯಾಳ ಗಾಣಿಗ) ಸಮಾಜದ ಕುಲದೇವಿ ಮುಚ್ಚಿಲೋಟು ಭಗವತಿ ಮಾನವ ಮೂಲದ ದೇವಿಯೆಂದೂ, ಮೂಲತಃ ಬ್ರಾಹ್ಮಣ ಕನ್ಯೆಯೆಂದೂ ಐತಿಹ್ಯಗಳಿಂದ ತಿಳಿದುಬರುತ್ತದೆ. ತಾಳಿಪರಂಬ ಜಿಲ್ಲೆಯ ಪೆರಿಂಚೆಲ್ಲೂರು ಗ್ರಾಮದ ವಿದುಷಿಯೂ ಶಿವಭಕ್ತೆಯೂ ಆದ ಈ ಕನ್ಯೆ ವಿಷಯಾಸಕ್ತಿಯ ಅಪವಾದ ಹೊತ್ತು ಸಮಾಜ ಬಹಿಷ್ಕೃತೆಯಾಗುತ್ತಾಳೆ. ಅವಳು ತನ್ನ ಪಾಠಶಾಲೆಯ ಗೆಳತಿಯರೊಂದಿಗೆ ಕಾಮಸಂಬಂಧ ವಿಚಾರಗಳನ್ನು ಮಾತಾಡಿದಳೆಂದೂ, ವಾಗ್ವಾದವೊಂದರಲ್ಲಿ ಅತಿ ದೊಡ್ಡ ವೇದನೆ ಯಾವುದು ಎಂಬುದಕ್ಕೆ ಪ್ರಸವ ವೇದನೆ ಎಂದೂ, ಜೀವನದ ಅತ್ಯಂತ ಸುಖವೆಂಬುದು ಕಾಮಾನುಭವವೆಂದೂ ಉತ್ತರಿಸಿದಳೆಂದೂ ಹೇಳಲಾಗಿದೆ. ಕನ್ಯೆಯಾದ ಈಕೆಗೆ ಕಾಮ ಸುಖದ ಅಥವಾ ಪ್ರಸವವೇದನೆಯ ಕಲ್ಪನೆ ಹೇಗೆ ಬಂತೆಂಬ ಸಂದೇಹ ಇತರರಿಗೆ ಮೂಡುತ್ತದೆ. ಅಪವಾದದ ಉರಿ ಪ್ರಬಲಿಸಿದಾಗ, ಅವಳ ಹೆತ್ತವರೇ ಪಿಂಡವಿಕ್ಕಿ, ಅವಳ ಕೈಗಳನ್ನು ಕಟ್ಟಿ ಮನೆಯಿಂದ ಹೊರಗಟ್ಟುತ್ತಾರೆ. ಆ ಕನ್ಯೆ ಕರಿವೆಳ್ಳೂರಿನ ಶಿವದೇವರಲ್ಲೂ, ದಯರಮಂಗಲದ ಭಗವತಿಯಲ್ಲೂ ತನ್ನ ನಿಷ್ಕಳಂಕತೆಯನ್ನು ನಿವೇದಿಸಿ, ಅಗ್ನಿ ಕುಂಡವನ್ನು ಹೂಡಿ ಪ್ರಾಣತ್ಯಾಗಕ್ಕೆ ಸಿದ್ಧಳಾಗುತ್ತಾಳೆ. ದೇವಳಕ್ಕೆ ಎಣ್ಣೆ ಒಯ್ಯುವ ಮುಚ್ಚಿ ಲೋಡಿನ ವಾಣಿಯನಲ್ಲಿ ಅಗ್ನಿಕುಂಡಕ್ಕೆ ಒಂದಿಷ್ಟು ಎಣ್ಣೆ ಹೊಯ್ಯಬೇಕೆಂದು ಕೇಳಿಕೊಂಡಾಗ ಆಕೆ ಮಹಿಮಾವಂತಳೆಂದು ಮನಗಂಡು ಹಾಗೇ ಮಾಡುತ್ತಾನೆ. ಧಗಧಗಿಸುವ ಅಗ್ನಿಕುಂಡಕ್ಕೆ ಆಕೆ ಹಾರಿಬಿಡುತ್ತಾಳೆ.

ದಯರಮಂಗಲದ ಭಗವತಿ ಮತ್ತು ಕರಿವೆಳ್ಳೂರಪ್ಪನ್ ದೇವರು ಆ ಕನ್ನಿಕೆಗೆ ‘ಭಗವತಿ’ ಎಂಬ ಉಪಾಧಿಯನ್ನು ನೀಡುತ್ತಾರೆ. ಕರಿವೆಳ್ಳೂರಿನ ಮುಚ್ಚಿಲೊಡನ್ ಪಡನಾಯರ್ ಎಂಬಾತನಿಗೆ ದೇವಿ ಮೊದಲಾಗಿ ದರ್ಶನವಿತ್ತುದರಿಂದ ಆಕೆಗೆ ಮುಚ್ಚಿಲೋಟ್ ಭಗವತಿ ಎಂಬ ಹೆಸರಾಯಿತೆಂದು ಐತಿಹ್ಯ.

ಎಣ್ಣೆಯನ್ನು ಅಗ್ನಿಕುಂಡಕ್ಕೆ ಹೊಯ್ದ ವಾಣಿಯನು ನೀರೆತ್ತಲು ಬಾವಿಕಟ್ಟೆಗೆ ತೆರಳಿದಾಗ ಆ ಕನ್ನಿಕೆ ಅವನಿಗೆ ದೇವಿಯ ರೂಪದಲ್ಲಿ ಕಾಣಿಸುತ್ತಾಳೆ. ಅವಳ ಮಹಿಮೆ ಪ್ರಸಾರವಾಗುತ್ತದೆ. ಕೋಲತ್ತ ನಾಡಿನ ಎಲ್ಲಾ ವಾಣಿಯ ಸಮಾಜದವರ ಕುಲದೇವತೆಯಾಗಿ ಈ ಭಗವತಿ ಆರಾಧಿಸಲ್ಪಡುತ್ತಾಳೆ.

ಮುಚ್ಚಿಲೋಟು ಭಗವತಿಯ ಕುರಿತಾಗಿ ಇನ್ನೊಂದು ಹೇಳಿಕೆಯೂ ಇದೆ. ಅದೆಂದರೆ ಬ್ರಾಹ್ಮಣ ಕನ್ಯೆ ರಹಸ್ಯವಾಗಿ ಶಿಶುವೊಂದನ್ನು ಪಡೆದಿದ್ದಳು ಎಂಬುದು. ಕಳಿಯಾಟ ಉತ್ಸವದ ವೇಳೆ ಬಾವಿ ನೀರನ್ನು ಭಗವತಿಯು ಬಗ್ಗಿ ನೋಡುವ ವಿಧಿಯೊಂದಿದೆ. ಆಗ ಬಾವಿಯ ನೀರು ತುಳುಕಿ ಮೇಲೆ ಬರುವುದಾಗಿ ಭಕ್ತರ ಭಾವನೆ. ಇದು ದುರಂತವೊಂದರ ಪುನರಭಿನಯವೆಂದೂ, ಶಿಶುವನ್ನು ಮೀಯಿಸುವ ಅಭಿನಯವನ್ನು ಇಲ್ಲಿ ಕಾಣಬಹುದೆಂದೂ ಊಹಿಸಬಹುದು. ಚಿರಕನ್ನಿಕೆಯಾಗಿ ಭಾವಿಸಲ್ಪಟ್ಟ ದೇವಿಯ ಮಾತೃತ್ವ ದರ್ಶನವಿದೆಂದೂ ತಿಳಿಯಬಹುದು. ಜನಪದ ಕಥನಗಳಲ್ಲಿನ ಅನೇಕ ಮಾನವೀಯ ರಹಸ್ಯಗಳು ಮುಚ್ಚಿ ಹೋಗಿ ಬೇರಾವುದೋ ರೂಪದಲ್ಲಿ ಕಾಣಿಸುವ ಚೋದ್ಯವನ್ನು ನಾವು ಆಗಿಂದಾಗ ಸಂಧಿಸುತ್ತೇವೆ. ಮೂಲ ವಿಚಾರಗಳು ನಿಗೂಢವಾಗಿಯೆ ಉಳಿದುಬಿಡುತ್ತವೆ.

ಮುಚ್ಚಿಲೋಟು ಭಗವತಿಯಂತೆಯೇ ಮಾನವ ಮೂಲದ ದೇವಿ ಮಾಕಂ ಭಗವತಿ. ಈಕೆಯ ಐತಿಹ್ಯವೂ ದುರಂತ ಭೂಯಿಷ್ಠವಾಗಿದೆ. ಕೋಲತ್ತನಾಡನ್ನು ತಂಬೂರಾನ್ ಗಳು ಆಳುತ್ತಿದ್ದ ಕಾಲದಲ್ಲಿ ಕುಞ್ಞಮಂಗಲದ ಕಾಡಂಗೋಟು ಎಂಬಲ್ಲಿನ ನಾಯರ್ ಮನೆತನದ ಬೀಡಿನ ಹನ್ನೆರಡು ಮಂದಿ ಸೋದರರಿಗೆ ಒಬ್ಬಳೇ ತಂಗಿ ಮಾಕರಿ. ಚಿಕ್ಕವಯಸ್ಸಿನಲ್ಲೆ ಮುಕ್ಕನ್ ಕುಟ್ಟಿ ಬೀಡಿನ ಕುಞ್ಞಾ ಕೋರನ್ ಎಂಬವನೊಂದಿಗೆ ಮದುವೆಯಾಗಿ ಚೀರು ಮತ್ತು ಚಾತ್ತು ಎಂಬ ಮಕ್ಕಳನ್ನು ಪಡೆದಿದ್ದ ಆಕೆ ಅಂದಿನ ಮಾತೃ ಮೂಲೀಯ ಕೂಡುಕುಟುಂಬ ಪದ್ಧತಿಯಂತೆ ಸೋದರರೊಂದಿಗೆ ವಾಸಿಸುತ್ತಾಳೆ. ಆಕೆಯ ಅತ್ತಿಗೆಯಂದಿರಿಗೆ ಮಕ್ಕಳಿರುವುದಿಲ್ಲ. ಅವರು ಮಾಕಂಳನ್ನು ನಿಷ್ಕಾರಣವಾಗಿ ಮತ್ಸರಿಸುತ್ತಾರೆ. ದ್ವೇಷಿಸುತ್ತಾರೆ. ಒಮ್ಮೆ ವಾಣಿಯನೊಬ್ಬನು ಎಣ್ಣೆಯ ಪಾತ್ರವನ್ನು ಒಳಗಿಡಲು ಬಂದನೆಂದು ಮಾಕಂಳ ಮೇಲೆ ಅಲ್ಲಸಲ್ಲದ ಅಪವಾದವನ್ನು ಸೃಷ್ಟಿಸಿ ತಮ್ಮ ಗಂಡಂದಿರ ಕಿವಿಗೆ ವಿಷ ಸುರಿಯುತ್ತಾರೆ. ಕೋಲತ್ತಿರಿ ಅರಸನ ಸೈನಿಕರಾಗಿದ್ದ ಅವರು ವಂಶದ ಗೌರವ ಮಣ್ಣು ಪಾಲಾಯಿತೆಂದು ಕ್ರೋಧ ಸಂತಪ್ತರಾಗುತ್ತಾರೆ. ವ್ಯಭಿಚಾರದ ಅಪವಾದ ಹೊತ್ತ ತಂಗಿಯನ್ನು ಉಳಿಸಬಾರದೆಂದು ಯೋಚಿಸುತ್ತಾರೆ. ಉಪಾಯವಾಗಿ ಅವಳನ್ನೂ ಅವಳ ಮಕ್ಕಳನ್ನೂ ದೂರಕ್ಕೆ ಕರೆದೊಯ್ದು ಅವಳ ಕಂಠಚ್ಛೇದ ಮಾಡಿ ರುಂಡಮುಂಡಗಳನ್ನು ಬಾವಿಗೆಸೆಯುತ್ತಾರೆ. ಮಕ್ಕಳನ್ನೂ ತರಿದೆಸೆಯುತ್ತಾರೆ.

ಮಾಕಂಳ ಪ್ರೀತಾತ್ಮವು ಕೊಟ್ಟಿಯೂರು ಶಿವನ ಸನ್ನಿಧಿಗೆ ಬರುತ್ತದೆ. ಶಿವನು ಮಾಕಂಗೆ ಭಗವತೀ ಉಪಾಧಿಯನ್ನು ಅನುಗ್ರಹಿಸುತ್ತಾನೆ. ಇವಳನ್ನು ಆರಾಧಿಸುವುದರಿಂದ ಮಕ್ಕಳಿಲ್ಲದವರು ಪುತ್ರವತಿಯರಾಗಲೆಂದು ವರವನ್ನು ನೀಡುತ್ತಾನೆ.

ಇತ್ತ ಮಾಕಂ ಸೋದರರು ಒಂದು ಕ್ಷುಲ್ಲಕ ವಾದವೇ ಕಾರಣವಾಗಿ ಪರಸ್ಪರ ಜಗಳಾಡಿ, ಪರಸ್ಪರ ಕಡಿದಾಡಿ ಮಡಿದು ಬೀಳುತ್ತಾರೆ.

ಕುಲಪ್ರತಿಷ್ಠೆಯ ಹೆಸರಲ್ಲಿ ಅಮಾಯಕ ಹೆಣ್ಣುಗಳು ದುರಂತಕ್ಕೆ ಗುರಿಯಾಗುವುದು, ಅಂಥವರ ನೈತಿಕತೆಯನ್ನು ಜನಪದರು ಎತ್ತಿ ಹಿಡಿದು ಆರಾಧಿಸುವುದು ಇಂಥ ಕಥೆಗಳ ಹುರುಳುಗಳಾಗಿವೆ. ಮಾಕಂ ಭಗವತಿಯನ್ನು ರೌದ್ರಭಾವದಲ್ಲೂ ಮುಚ್ಚಿಲೋಟು ಭಗವತಿಯನ್ನು ಸಾತ್ತ್ವಿಕಭಾವದಲ್ಲೂ ಆರಾಧಿಸುತ್ತಾರೆ. ಮುಚ್ಚಿಲೋಟು ಭಾಗವತಿಯ ಆರಾಧನೆಯಲ್ಲಿ ಕೋಳಿಬಲಿ, ಅಮೃತಕಲಶ(ಕಳ್ಳು) ಇರುವುದಿಲ್ಲ.

ಮಾಕಂ ಭಗವತಿಯ ಜೊತೆಗೆ ಅವಳ ಮಕ್ಕಳನ್ನು ದೈವರೂಪದಲ್ಲಿ ಆರಾಧಿಸುತ್ತಾರೆ. ಬಯಲಲ್ಲೂ, ಮನೆಗಳಿಲ್ಲದ ತೋಟಗಳಲ್ಲೂ ಮಾಕಂ ಭಗವತಿಯ ಉತ್ಸವ ನಡೆಯುತ್ತದೆ. ಮನೆಯಲ್ಲಿ ತೆಯ್ಯಂ ಜರಗಿಸಿದರೆ ಮನೆ ನಾಶವಾದೀತೆಂಬ ನಂಬಿಕೆ ಜನಪದರಲ್ಲಿದೆ.

ಉತ್ತರ ಕೇರಳದಲ್ಲಿ ಆರಾಧಿಸಲ್ಪಡುವ ‘ನೀಲಿಯಮ್ಮ ಭಗವತಿ’ ಮೂಲದಲ್ಲಿ ವ್ಯಭಿಚಾರದ ಅಪವಾದಕ್ಕೆ ತುತ್ತಾದ, ಸಾಧ್ವಿಯಾದ ಒಬ್ಬಾಕೆ ‘ಪುಲಯ’ (ಅಸ್ಪೃಶ್ಯ) ಕನ್ನಿಕೆ. ಆಕೆ ತನ್ನ ಸತ್ಯಸ್ಥಿತಿಯನ್ನು ಜನರಿಗೆ ಸಾರಿ ವಿಧಿಯಿಲ್ಲದೆ ಸಾಯುತ್ತಾಳೆ. ಮತ್ತೆ ದೈವೀಕರಣಗೊಂಡು ದೇವತೆಯಾಗುತ್ತಾಳೆ. ಆಕೆಯ ಆರಾಧನಾ ಸ್ಥಳಕ್ಕೆ ‘ನೀಲಿಯಾರ್ ಕೋಟ್ಟಂ’ ಅಥವಾ ‘ನೀಲಿಯಾರ್ ವಟ್ಟಂ’ ಎನ್ನುತ್ತಾರೆ. ಇವಳೂ ಮಕ್ಕಳ ರಕ್ಷಕಿ ಎನ್ನಲಾಗಿದೆ. ಮಕ್ಕಳಿಗಾಗಿ, ಮಕ್ಕಳ ಆರೋಗ್ಯಕ್ಕಾಗಿ ಈ ಭಗವತಿಯನ್ನು ಪ್ರಾರ್ಥಿಸುತ್ತಾರೆ. ಆವೆಮಣ್ಣಿನಿಂದ ರಚಿಸಿ ಬಣ್ಣ ಹಾಕಿದ ಮಗುವಿನ ಗೊಂಬೆ (ಇದನ್ನು ‘ಪಟಕ’ ಎನ್ನುತ್ತಾರೆ)ಗಳ ಹರಕೆ ಈಕೆಗೆ ಇಷ್ಟವೆನ್ನಲಾಗಿದೆ.

ಕಾಪಾಡ್ (ಕಾಪಾಳತ್ತಿ) ಭಗವತಿಯೂ ಮನುಷ್ಯ ಮೂಲದ ದೇವತೆ ಅನ್ಯ ಜಾತಿಯವನಲ್ಲಿ ಅನುರಕ್ತೆಯಾಗಿ ಗರ್ಭವತಿಯಾದ ಕುಂಬ ಕಾಪಾಳತ್ತಿ ಎಂಬ ಹೆಣ್ಣನ್ನು ಆಕೆಯ ಅಣ್ಣಂದಿರು ಚಿತ್ರಹಿಂಸೆ ನೀಡಿ ಸಾಯಿಸುತ್ತಾರೆ. ಆಕೆ ಮುಂದೆ ದೈವೀಕರಣಗೊಂಡು ಕಾಪಾಡ್ (ಕಾಪಾಳತ್ತಿ) ಭಗವತಿ ಆಗುತ್ತಾಳೆ.

‘ತೋಟುಂಕರ ಭಗವತಿ’ ನಾಡನ್ನಾಳುವವರ ಕ್ರೂರತೆಗೆ ಬಲಿಯಾಗಿ ನಿಧನಗೊಂಡ ಒಬ್ಬ ತೀಯತ್ತಿ (ಬಿಲ್ಲವ ಸ್ತ್ರೀ)ಯ ಸ್ಮರಣೆಯಲ್ಲಿ ರೂಪುಗೊಂಡ ದೈವ. ಈಕೆಯನ್ನು ‘ಕರಿಕ್ಕಂಡನ್‌ಚಾಲಿಲ್ ಭಗವತಿ’ ಎಂದೂ ಕರೆಯುತ್ತಾರೆ. ಆದರೆ ಈಕೆಗೆ ‘ರುಧಿರ ಮೋಹಿನಿ ಅಮ್ಮ’ ಎಂಬ ವಿಚಿತ್ರ ಹೆಸರೇಕೆ ಬಂತೋ ತಿಳಿಯದು!

\ಕರಪುರದ ಬಳಿಯ ಕೊಯಂಗರ ಕ್ಷೇತ್ರದ ಅಧಿದೇವಿಯಾದ ‘ಪಯ್ಯಕಾಲ್ ಭಗವತಿ’ಯ ಕುರಿತಾಗಿ ಐತಿಹ್ಯದ ಕೆಲವೊಂದು ಅಸ್ಪಷ್ಟ ಎಳೆಗಳು ದೊರಕುತ್ತವೆ. ಈಕೆಯ ಕಥೆಯೂ ಅವಳ ಮಾನವ ಮೂಲದ ಕಡೆಗೆ ಬೊಟ್ಟು ಮಾಡುತ್ತದೆ.

ಕಾರಣಾಂತರದಿಂದ ಕೆಲಕಾಲ ತನ್ನ ರಾಜ್ಯದಿಂದ ದೂರವಿದ್ದ ಚಿರಕ್ಕಲ್ ರಾಜನೊಬ್ಬ ತಿರುವನಂತಪುರದಲ್ಲಿ ನೆಲಸಿದ್ದು, ಅಲ್ಲಿನ ‘ತಂಬೂರಾಟ್ಟಿ’ (ರಾಜಕುಲದ ಸ್ತ್ರೀ) ಯೊಬ್ಬಳಲ್ಲಿ ಅನುರಕ್ತನಾಗುತ್ತಾನೆ. ಆಕೆ ಗರ್ಭವತಿಯಾಗುತ್ತಾಳೆ. ಈ ವೇಳೆ ರಾಜ ತನ್ನ ರಾಜ್ಯಕ್ಕೆ ಹಿಂದಿರುತ್ತಾನೆ. ಅಪವಾದ, ಅಪಮಾನಗಳಿಂದ ಕುಗ್ಗಿ ಹೋದ ಆ ಸ್ತ್ರೀಯನ್ನು ಕ್ಷೇತ್ರಪಾಲ ಚಿರಕ್ಕಲ್ ಗೆ ಕರೆದುತರುತ್ತಾನೆ. ಅರಮನೆಯ ಸಮೀಪವೇ ಆಕೆ ನೆಲಸುತ್ತಾಳೆ. ಅಲ್ಲೇ ಮಗುವನ್ನು ಪಡೆಯುತ್ತಾಳೆ. ತಾಯಿ ಮಕ್ಕಳಿಗೆ ಒಂದು ವಿಧದ ಬಹಿಷ್ಕಾರವೇ ಇರುತ್ತದೆ. ಸ್ವಲ್ಪ ಕಾಲಾನಂತರ ಅವಳನ್ನು ನೀಲೇಶ್ವರ ಅರಸು ಮನೆತನಕ್ಕೆ ಲಗ್ನ ಮಾಡಿ ಕೊಡಲಾಗುತ್ತದೆ.

ಕ್ಷೇತ್ರಪಾಲನನ್ನು ಅನುಸರಿಸಿ (ಬಯಿಯೇ) ಬಂದುದರಿಂದ ‘ಬಯ್ಯಕಾಲ್ ’ ಎಂದಾಗಿ ಬಳಿಕ ‘ಪಯ್ಯಕಾಲ್ ಭಗವತಿ’ ಎಂಬ ಹೆಸರಾಯಿತೆಂದು ಹೇಳುತ್ತಾರೆ. ‘ಬಯಿಯೇ ಕಾವಿಲ್ ’ ಎಂಬುದರಿಂದ ಈ ಹೆಸರು ಬಂತೆಂದೂ ಹೇಳಲೆಡೆಯಿದೆ. ಆದರೆ ಈ ‘ತಂಬೂರಾಟ್ಟಿ’ ದೈವೀಕರಣಗೊಂಡ ಬಗೆಗೆ ಕಥೆ ಮೌನ ವಹಿಸಿದೆ. ಯಾವುದೋ ದುರಂತ ಘಟಿಸಿರಬೇಕೆಂದು ಊಹಿಸಬೇಕಷ್ಟೆ.

-ಹೀಗೆ ಭಿನ್ನ ಭಿನ್ನ ಜಾತಿ ವರ್ಗಗಳ ಮೂಲದಿಂದ ಬೇರೆ ಬೇರೆ ಕಾರಣಗಳಿಂದ ಸ್ತ್ರೀಯರು ದೈವೀಕರಣಗೊಂಡು ಭಗವತಿಗಳಾಗಿ ವಿಶಾಲ ಸಮಾಜದ ಆರಾಧ್ಯ ದೈವಗಳಾಗಿದ್ದಾರೆ. ಇಂಥ ಹಲವು ಐತಿಹ್ಯಗಳಲ್ಲಿ ಮಾನವ ಸಹಜ ದೌರ್ಬಲ್ಯಗಳೂ, ಅವನ್ನು ಸಹಿಸಲಾರದ ಸಮಾಜದ ನಿಷ್ಠುರ ಪ್ರವೃತ್ತಿಯೂ ವ್ಯಕ್ತವಾಗುತ್ತದೆ. ಆದರೆ ಈ ದೇವಿಯರಿಗೆ ಹರಕೆ ಹೊತ್ತು ಆರಾಧಿಸುವ ಹೆಚ್ಚಿನ ಜನಪದರಿಗೆ ಈ ದುರಂತ ವೃತ್ತಾಂತಗಳೇನೂ ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ.

ದೈವಾರಾಧನೆಯಲ್ಲಿ ಪ್ರಾಣಿಪ್ರತೀಕವುಳ್ಳ ದೈವಗಳೂ ಇವೆ. ಕುಲಲಾಂಛನ ಪೂಜೆ ಅತ್ಯಂತ ಪ್ರಾಚೀನವಾದ ಒಂದು ಪದ್ಧತಿ. ಕ್ರೂರ ಪ್ರಾಣಿಗಳ ಅಂತರ್ಯಾಮೀ ಶಕ್ತಿಗಳನ್ನು ಪೂಜಿಸುವುದೂ, ನಿರ್ದಿಷ್ಟ ಪ್ರಾಣಿಗಳ ಕೆಲವೊಂದು ಸ್ವರೂಪ, ಸ್ವಭಾವಗಳನ್ನು ತಮ್ಮ ವ್ಯಕ್ತಿತ್ವಕ್ಕೆ ಆರೋಪಿಸಿಕೊಂಡು ಅಭಿನಯಿಸುವುದೂ ವಿವಿಧ ಸಮಾಜಗಳಲ್ಲಿ ರೂಢವಾಗಿದ್ದ ವಿಚಾರ. ಹುಲಿಯಂಥ ಘೋರಮೃಗದ ಪ್ರತೀಕವು ವೀರಾರಾಧನೆಗೆ ಪೂರಕವೆನ್ನಬಹುದು. ವ್ಯಾಘ್ರ ಸಂಕೇತವಿರುವ ಭಗವತೀ ದೈವ ಪಂಚಕವನ್ನು ‘ಪುಲ್ಲೂರಾಳಿ ಐವರು’ ಎಂದು ಗುರುತಿಸುತ್ತಾರೆ. ಹುಲಿಯ ರೂಪವನ್ನು ಹೊಂದಿದ್ದ ಶಿವಪಾರ್ವತಿಯರಿಂದಲೇ ಇವರ ಜನನವಾಯಿತೆಂದು ಕಥೆ. ಜನಪದ ಕಲ್ಪನೆಯ ಪುರಾಣೀಕರಣವನ್ನು ಇದು ಸೂಚಿಸುತ್ತದೆ.

ತುಳುನಾಡಿನ ಪಿಲಿಭೂತ, ಪಿಲಿ ಚಾಮುಂಡಿ, ದೈವಗಳನ್ನು ಪುಲ್ಲುರಾಳಿ ದೈವಬಳಗಕ್ಕೆ ಹೋಲಿಸಬಹುದು. ಪುಲ್ಲೂರಾಳಿ, ಪುಲಿಕಣ್ಣನ್ , ಕಾಳ ಪುಲಿಯನ್ , ಮತ್ತು ಪುಲ್ಲೂರು ಕಣ್ಣನ್ ಇವು ಈ ಬಳಗದ ದೈವಗಳ ಹೆಸರುಗಳು.

ಸಾಮಾನ್ಯವಾಗಿ ಭಗವತಿಯಂಥ ಜನಪದ ದೈವಗಳು ಒಂಟಿಯಾಗಿರುವುದಿಲ್ಲ. (ಒಂಟಿತನ ಎಂಬುದು ಜನಪದೀಯ ಸ್ವಭಾವವೇ ಅಲ್ಲ) ಮುಖ್ಯ ಭಗವತಿಯೊಂದಿಗೆ ಇತರ ಕೆಲವು ಸ್ತ್ರೀಪುರುಷ ದೈವಗಳು ನೆಲಸಿರುತ್ತವೆ. ಅದರಲ್ಲಿ ಬೇರೆ ಹೆಸರಿನ ಭಗವತಿಗಳೂ, ಕಲ್ಲಂಗರ ಚಾಮುಂಡಿ, ಮೇಚೇರಿ ಚಾಮುಂಡಿ, ಕಾಲ ಚಾಮುಂಡಿ, ವಾಯ್ಕಾನತ್ತ ಚಾಮುಂಡಿ, ತೀಚಾಮುಂಡಿ, ಅಙ್ಙಾಡಿ ಚಾಮುಂಡಿ, ಕೋಟಪುರಂ ಚಾಮುಂಡಿ, ವೀರ ಚಾಮುಂಡಿ, ಕೋಮರ ಚಾಮುಂಡಿ, ರಕ್ತ ಚಾಮುಂಡಿ, ಪುಲಚಾಮುಂಡಿ ಮೊದಲಾದ ಚಾಮುಂಡಿ ಸ್ವರೂಪದ ದೈವಗಳೂ, ವಿಷ್ಣುಮೂರ್ತಿ, ವೀರಪುತ್ರ(ಭದ್ರ), ಕ್ಷೇತ್ರಪಾಲ, ವಡಕ್ಕಂಕೋಡಿವೀರನ್, ವೇಟೈಕುರುಮಗನ್, ದಂಡರಾಜಾವು, ಕಂಡಾಕರ್ಣ(ಘಂಟಾಕರ್ಣ), ಪಡವೀರನ್, ಅಸುರಾಳನ್, ಪೂಮಾರುತನ್, ಕದಿನೂರು ವೀರನ್, ಗುಳಿಗ ಇತ್ಯಾದಿ ಪುರುಷ ದೈವಗಳೂ ಬೇರೆ ಬೇರೆ ಸ್ಥಾನಮಾನಗಳನ್ನು ಹೊಂದಿ ನೆಲಸಿರುತ್ತವೆ. ಶ್ರೇಣೀಕೃತ ವ್ಯವಸ್ಥೆ ಎಲ್ಲ ಆರಾಧನಾ ಪ್ರಸ್ಥಾನಗಳಲ್ಲೂ ಹಾಸುಹೊಕ್ಕಾಗಿರುತ್ತದೆ.

ನೂರಾರು ಭಗವತೀ ಕ್ಷೇತ್ರಗಳಲ್ಲಿ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಪ್ರಸಿದ್ಧವಾಗಿವೆ, ಹಲವು ವೈಶಿಷ್ಟ್ಯಗಳಿಂದ ಕೂಡಿವೆ. ಅಂಥ ಕೆಲವು ಕ್ಷೇತ್ರಗಳ ಕುರಿತು ಸ್ಥೂಲವಾಗಿ ಒಂದಿಷ್ಟು ವಿಚಾರಿಸಬಹುದು.