ಮನುಷ್ಯ ಪ್ರಾಣಿ ಪ್ರಪಂಚದಲ್ಲಿ ವಿಶಿಷ್ಟನಾಗಿದ್ದರೂ, ಅವನೂ ಪ್ರಕೃತಿಯ ಒಂದು ಭಾಗವೇ ಆಗಿದ್ದಾನೆ. ಪ್ರಕೃತಿಯ ಸೂತ್ರಗಳಿಂದಲೇ ಕಟ್ಟುವಡೆದಿದ್ದಾನೆ. ಪ್ರಕೃತಿಯ ಮಡಿಲಲ್ಲೆ ಲಕ್ಷಾಂತರ ವರ್ಷ ಬೆಳೆದು ಬಂದು ಬದುಕಿನ ಅವಶ್ಯಕತೆಗಳಿಗಾಗಿ ಪ್ರಕೃತಿಯೊಡನೆ ಹೋರಾಟ ಹಾಗೂ ಹೊಂದಾಣಿಕೆ ಮಾಡುತ್ತ ಕ್ರಮೇಣ ತನ್ನ ಮನೋಪ್ರಕೃತಿಯ ವಿಕಸನದಿಂದಾಗಿ ನಿಧಾನವಾಗಿ ಪ್ರಕೃತಿಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲೋ ಅದರ ರಹಸ್ಯಗಳನ್ನು ತಿಳಿಯಲೋ ಪ್ರಯತ್ನ ಮಾಡುತ್ತಾ ಬಂದಿದ್ದಾನೆ.

ಪ್ರಕೃತಿಯ ಆಶ್ರಯದಲ್ಲೆ ಮುಖ್ಯವಾಗಿ ಕಾಡುಮೇಡುಗಳಲ್ಲಿ ವಾಸಿಸುತ್ತಿದ್ದ ಆದಿ ಮಾನವ ಅಡಿಗಡಿಗೂ ಆತಂಕಗಳನ್ನು ಇದಿರಿಸಬೇಕಾಗಿತ್ತು. ಕತ್ತಲು, ಗುಡುಗು ಮಿಂಚು, ಬಿರುಗಾಳಿ, ಬಿರುಮಳೆ, ಬಿರುಬಿಸಿಲು, ನೆರೆ, ಜೀವವನ್ನು ಹಿಂಡುವ ಕುಳಿರು ಇತ್ಯಾದಿ ನೈಸರ್ಗಿಕ ವಿದ್ಯಮಾನ ವೈಪರೀತ್ಯಗಳು ಅವನನ್ನು ಚಕಿತಗೊಳಿಸುತ್ತಿದ್ದವು. ಎತ್ತರದ ಪರ್ವತ, ಆಳವಾದ ಪ್ರಪಾತ, ಜಲಪಾತ, ಭೋರ್ಗರೆವ ಸಮುದ್ರ, ನಿಬಿಡಾರಣ್ಯ, ವಿವಿಧ ಕ್ರೂರ ಪ್ರಕೃತಿಯ ವನ್ಯಪ್ರಾಣಿಗಳು, ಅವುಗಳ ಪರಸ್ಪರ ಹೋರಾಟ ಇವು ಅವನಲ್ಲಿ ಭಯವನ್ನೂ ಬೆರಗನ್ನೂ ಬಿತ್ತುತ್ತಿದ್ದವು. ಪ್ರಾಕೃತಿಕ ಪ್ರಕೋಪ ಅಥವಾ ಪ್ರಾಣಿಗಳಿಂದ ಅಪಾಯ ಸನ್ನಿಹಿತವಾದಾಗ ಪ್ರಕೃತಿಯಲ್ಲಿ ತನ್ನ ಕೈಮೀರಿದ ಭಯಂಕರ ಶಕ್ತಿಗಳು ಇವೆ ಎಂದು ಆತ ಭಾವಿಸಿದ. ಅವುಗಳನ್ನು ಒಲಿಸಿದಲ್ಲದೆ ತನ್ನ ಕ್ಷೇಮವಿಲ್ಲವೆಂಬ ನಿರ್ಧಾರಕ್ಕೆ ಬಂದ. ಹೀಗೆ ಒಲಿಸಿಕೊಳ್ಳಲು ತನ್ನ ಇತಿಮಿತಿಯೊಳಗೆ ವಿವಿಧ ರೀತಿಗಳಿಂದ ಪ್ರಯತ್ನಪಟ್ಟ. ತಾನುಣ್ಣುವ ಆಹಾರವಸ್ತುಗಳನ್ನು ಅರ್ಪಿಸಿ ದೃಶ್ಯವಸ್ತುಗಳ ಮರೆಯಲ್ಲಿರುವ ಅದೃಶ್ಯ ಶಕ್ತಿಗಳನ್ನು ಹೊಗಳಿ ಹಾಡಿ ಗುಂಪಾಗಿ ಕುಣಿದ. ಪ್ರಪಂಚದ ಎಲ್ಲ ಆದಿಮ ಜನಾಂಗಗಳಲ್ಲೂ ಈ ಪ್ರವೃತ್ತಿ ಇದ್ದೇ ಇತ್ತು.

ಅಭಯ, ಅನುಗ್ರಹ ಯಾಚನೆಯ ಕ್ರಿಯೆಗಳು ಕ್ರಮೇಣ ಸಂಕೀರ್ಣವಾಗುತ್ತಾ ವಿವಿಧ ರೀತಿಯ ಉಪಾಸನಾ ಪದ್ಧತಿಗಳು ಬೆಳೆದುಬಂದವು. ಅವುಗಳೊಂದಿಗೆ ಹಾಡು. ಕುಣಿತ, ಚಿತ್ರ, ಶಿಲ್ಪ ಇತ್ಯಾದಿ ಕಲೆಗಳೂ ಸಾಹಿತ್ಯವೂ ಸಮೂಹ ರೂಢಿಗಳೂ ಬೆಳೆದು ಬಂದವು. ಮನುಷ್ಯ ಬೆಳೆಯಿಸಿಕೊಂಡು ಬಂದ ಬಯಕೆಗಳನ್ನು ಪೂರೈಸಿ ನೆಮ್ಮದಿಯ ನೆಲೆಯನ್ನು ಕಂಡುಕೊಳ್ಳಲು ಮೇಲಿನ ವಿಷಯಗಳು ನೆರವಾದವು.

ಪ್ರಾಚೀನತಮವಾದ ವೇದ ಸಾಹಿತ್ಯವು ಅಂದಿನ ಮಾನವನು ತನ್ನ ಅಭೀಪ್ಸೆಗಳನ್ನು ಪೂರೈಸುವುದಕ್ಕಾಗಿ ವಿವಿಧ ದೇವತೆಗಳನ್ನು ಸ್ತುತಿ ಮಾಡಿದ ಎಷ್ಟೋ ವಿವರಗಳನ್ನೂ ನೀಡುತ್ತದೆ. ವೈದಿಕ ಋಷಿಗಳಿಂದ ಸ್ತುತಿಸಲ್ಪಟ್ಟ ಹೆಚ್ಚಿನ ದೇವತೆಗಳೆಲ್ಲ ಪ್ರಕೃತಿಯ ವಿವಿಧ ಅಂಶಗಳ ಹಾಗೂ ಪರಿಕಲ್ಪನೆಗಳ ಪ್ರತೀಕಗಳೇ ಆಗಿದ್ದಾರೆ. ಉದಾ : ಸೂರ್ಯ, ಅಗ್ನಿ, ಉಷಾ, ವಾಯು, ವರುಣ, ಇಂದ್ರ, ಮರುತ್ತುಗಳು ಇತ್ಯಾದಿ. ಬರೇ ಸ್ತುತಿ ಮಾತ್ರವಲ್ಲದೆ, ಯಜ್ಞಯಾಗಾದಿ ಉಪಾಸನಾ ಮಾರ್ಗಗಳಿಂದ ಆ ದೇವತೆಗಳನ್ನು ಪ್ರಸನ್ನೀಕರಿಸಲು ವೈದಿಕರು ಪ್ರಯತ್ನಿಸಿದರು. ಪ್ರಾಚೀನ ಸೈಂಧವ ಸಂಸ್ಕೃತಿಯ ಸಂಬಂಧವಾಗಿ ಲಭ್ಯವಾದ ಪಶುಪತಿ, ಮಾತೃದೇವತೆ, ನಾಗ ಮುಂತಾದ ವಿಗ್ರಹಗಳು ಪ್ರಕೃತಿಯ ಅಂತರ್ಯಾಮೀ ಶಕ್ತಿಗಳ ಪ್ರತೀಕವೇ ಆಗಿವೆಯೆನ್ನಬೇಕು.

ಭಾರತದಲ್ಲಿ ಬೆಳೆದು ಬಂದ ಆರಾಧನಾ ಪದ್ಧತಿಗಳನ್ನು ಸ್ಥೂಲವಾಗಿ ವೈದಿಕ ಹಾಗೂ ವೈದಿಕೇತರ ಎಂದು ಇಬ್ಬಗೆಯಾಗಿ ವಿಂಗಡಿಸಬಹುದು. ಆದರೆ ಬಹುಕಾಲದ ಸಂಪರ್ಕ ಸಂಬಂಧಗಳಿಂದ ಒಂದು ಸಂಸ್ಕೃತಿ ಮತ್ತೊಂದರೊಡನೆ ಬೆರೆತು ಹೋಗಿರುವುದರಿಂದ ಖಚಿತವಾಗಿ ‘ಇದು ಇಂಥದ್ದೇ’ ಎಂದು ಸಾರಲು ಕಷ್ಟವಾಗಿದೆ. ‘ಭೂತಾರಾಧನೆ’ ಎಂಬುದನ್ನು ಸಾಮಾನ್ಯವಾಗಿ ಅವೈದಿಕ ಆರಾಧನೆ ಎಂದು ಪರಿಭಾವಿಸುವುದಿದ್ದರೂ ಇದರಲ್ಲೂ ಕ್ರಮೇಣ ವೈದಿಕ ಪ್ರಭಾವ ಸೇರಿಹೋಗಿದೆ. ಹಾಗೆಯೇ ಸ್ಥಳೀಯ ಸಂಸ್ಕೃತಿಯಿಂದ ಸಾಕಷ್ಟು ಅಂಶಗಳನ್ನು ವೈದಿಕ ಸಂಸ್ಕೃತಿಯು ಸ್ವೀಕರಿಸಿಕೊಂಡಿದೆ. ಭೂತ ಅಥವಾ ದೈವ ಎಂಬ ಶಬ್ದ ಸಂಸ್ಕೃತ ಭಾಷೆಯದು. ಇವುಗಳಿಗೆ ಸಂವಾದಿಗಳಾದ ಪರ್ಯಾಯ ಶಬ್ದಗಳು ಸಂಸ್ಕೃತೇತರ ಮುಖ್ಯವಾಗಿ ದ್ರಾವಿಡ-ಭಾಷೆಗಳಲ್ಲಿ ಇದ್ದುವೋ ತಿಳಿದುಬರುವುದಿಲ್ಲ. ಒಂದು ಕಾಲದಲ್ಲಿ ಅವು ಇದ್ದು ಬಳಿಕ ಮರೆಯಾಗಿರಬಹುದು.

ವಿವಿಧ ಪ್ರಕೃತಿ ಶಕ್ತಿಗಳ ಆರಾಧನೆ, ಪಿತೃ ಆರಾಧನೆ, ವೀರಾರಾಧನೆ, ಮಾತೃದೇವತಾ ಆರಾಧನೆ -ಇತ್ಯಾದಿಗಳನ್ನು ಒಳಗೊಂಡ ಭೂತಾರಾಧನೆ ಎಂಬ ಆರಾಧನಾ ಪ್ರಸ್ಥಾನವು ಭಾರತದ ವಿವಿಧ ಕಡೆಗಳಲ್ಲಿ ಭಿನ್ನ ಭಿನ್ನ ರೂಪಗಳಲ್ಲಿ ರೂಢಿಯಲ್ಲಿದೆ. ಆದರೆ ಅದರ ವರ್ಣರಂಜಿತ ಹಾಗೂ ವೈಭವೀಕೃತ ರೂಪಗಳನ್ನು ಕರಾವಳಿ ಕರ್ನಾಟಕದ ತುಳುನಾಡು ಹಾಗೂ ಅದರ ಒತ್ತಿನ ಉತ್ತರ ಕೇರಳದಲ್ಲಿ ವಿಶೇಷವಾಗಿ ನೋಡಬಹುದು. ಇದೇಕೆ ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಮುಖ್ಯವಾಗಿ ನಿಸರ್ಗ ವೈವಿಧ್ಯ ವೈಭವವೇ ಕಾರಣವೆಂದು ಭಾವಿಸಬಹುದು.

‘ಭೂತ’ ಎಂಬ ಶಬ್ದಕ್ಕಿರುವ ಅನೇಕಾರ್ಥಗಳಲ್ಲಿ, ಪಂಚಭೂತಗಳು, ಶಿವಗಣ, ದೆವ್ವ, ಪಿಶಾಚಿ, ಕ್ಷುದ್ರಶಕ್ತಿ, ದೇವಯೋನಿಗಳಲ್ಲಿ ಒಂದು ವರ್ಗ, ಗ್ರಹ, ಪ್ರಾಣಿಕೋಟಿ, ದೊಡ್ಡದು, ಸಂಭವಿಸಿರುವ, ಕಳೆದು ಹೋದ ಇತ್ಯಾದಿ ಅರ್ಥಗಳು ಗಮನಾರ್ಹವಾದವುಗಳು. ಪ್ರಪಂಚದ ಸರ್ವಜೀವ ಸಂಕುಲ ಹಾಗೂ ವಸ್ತುರಾಶಿಗಳು ಪಂಚಭೂತಾತ್ಮಕವೇ ಎಂಬುದು ಸರ್ವವಿಧಿತ. ಹಾಗಾಗಿ ಭೂತ ಸಂಬಂಧವಾಗಿ, ಪಂಚಮಹಾಭೂತಗಳು ಎಂಬುದಕ್ಕಿಂತ, ಬೃಹತ್, ಭಯಪ್ರದ ಶಕ್ತಿಗಳು ಎಂಬ ಪರಿಕಲ್ಪನೆಯನ್ನೆ ಜನ ಇಟ್ಟುಕೊಂಡಿದ್ದಾರೆನ್ನಬಹುದು.

ತುಳುನಾಡಿನ ಭೂತಾರಾಧನೆ ತುಂಬ ಪ್ರಾಚೀನವಾದುದು ಎಂಬುದು ಸಂಶೋಧಕರ ಅಭಿಪ್ರಾಯ. ಸಾಕಷ್ಟು ಹಿಂದಿನಿಂದಲೇ ಇಲ್ಲಿನ ಸಾಂಸ್ಕೃತಿಕ ಬದುಕನ್ನು ಭೂತಾರಾಧನೆ (ಅಥವಾ ದೈವಾರಾಧನೆ) ನಿರ್ದೇಶಿಸುತ್ತ ಬಂದಿದೆ. ಇಂದಿಗೂ ತುಳುನಾಡಿನಲ್ಲಿ ನೂರಾರು ಭೂತಗಳನ್ನು ಮನೆದೈವಗಳೆಂದೋ, ಕುಟುಂಬ ದೈವಗಳೆಂದೋ, ಸಮಾಜದ ದೈವಗಳೆಂದೋ, ಜಾಗದ ದೈವಗಳೆಂದೋ, ಗ್ರಾಮದ ದೈವಗಳೆಂದೋ ಸೀಮೆಯ ದೈವಗಳೆಂದೋ ವಿಧ ವಿಧವಾಗಿ ಆರಾಧಿಸುತ್ತಿದ್ದಾರೆ. ಮರದ ಬುಡದ ಒಂದು ಸಾಮಾನ್ಯ ಕಲ್ಪಿನ ತುಂಡಿನಲ್ಲಿ ದೈವವನ್ನು ಕಲ್ಪಿಸಿ ಪೂಜಿಸುವ ಅತ್ಯಂತ ಪ್ರಾಚೀನ ಸ್ವರೂಪದ ಆರಾಧನೆಯ ಪ್ರಕಾರದಿಂದ ತೊಡಗಿ, ಕಲಾದೃಷ್ಟಿಯಿಂದ ತುಂಬ ವಿಕಾಸಗೊಂಡ ವರ್ಣರಂಜಿತ ವೈಭವೋಪೇತ ಸ್ವರೂಪದವರೆಗೂ ಇದರ ವೈವಿಧ್ಯವನ್ನು ಕಾಣಬಹುದಾಗಿದೆ. ಇದಕ್ಕೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ಮನಃಶಾಸ್ತ್ರೀಯ ಇತ್ಯಾದಿ ಮುಖಗಳಿವೆ. ರಂಗಭೂಮಿ, ನ್ಯಾಯರಂಗವಾಗಿಯೂ ಭೂತಾರಾಧನೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ. ಅದೆಷ್ಟೇ ಸಂಕೀರ್ಣವಾಗಿ ಬೆಳೆದಿದ್ದರೂ ಪ್ರಕೃತಿಯೊಂದಿಗಿನ ಮೂಲಸಂಬಂಧವನ್ನು ಕಳಚಿಕೊಂಡಿಲ್ಲ ಎಂಬುದು ಗಮನಾರ್ಹ.

ತುಳುನಾಡಿನ ದೈವಾರಾಧನೆ ಒಂದೇ ಮೂಲದಿಂದ ಏಕಮುಖವಾಗಿ ರೂಪುಗೊಂಡ ಆರಾಧನಾ ಪ್ರಸ್ಥಾನವಲ್ಲ. ಅದು ಬಹುಮೂಲಗಳಿಂದ ಸಮಾಕೀರ್ಣವಾಗಿ ಬೆಳೆದುಬಂದುದಾಗಿದೆ. ಪಂಚಭೂತಗಳಲ್ಲಿ ಭೂಮಿ, ನೀರು, ಅಗ್ನಿಗಳನ್ನು ವೈದಿಕೇತರವಾದ ವಿಶಿಷ್ಟ ರೀತಿಯಲ್ಲಿ ಆರಾಧಿಸುತ್ತಾರೆನ್ನಬಹುದು. ‘ಕೆಡ್ಡಸ’ದ ವೇಳೆ ಭೂಮಿ ಋತುಮತಿಯಾಗುತ್ತಾಳೆಂಬ ಕಲ್ಪನೆಯಿಂದ, ಫಲೋತ್ಪತ್ತಿ ತತ್ತ್ವದ ಹಿನ್ನೆಲೆಯಲ್ಲೇ ಭೂಮಿಯನ್ನು ಪೂಜಿಸಲಾಗುತ್ತದೆ. ದೇವ, ದೈವ, ನಾಗಾದಿ ಸಾನ್ನಿಧ್ಯವಿರುವ ಸ್ಥಳಗಳನ್ನು ‘ಪುಣ್ಯದ ಮಣ್ಣು’ ಎಂಬ ಶ್ರದ್ಧೆಯಿಂದ ನೋಡಲಾಗುತ್ತದೆ. ದೈವಿಕ ವ್ಯಕ್ತಿಗಳು ಉದ್ಭವಿಸಿದ, ನಡೆದಾಡಿದ, ಮುಡುಪಿದ ಸ್ಥಳಗಳನ್ನು ಪವಿತ್ರವೆಂದು ಭಾವಿಸುತ್ತಾರೆ. ಭೂಮಿಯ ಪ್ರತೀಕವಾದ ಹುತ್ತವೂ ಅದರಲ್ಲಿ ವಾಸಿಸುವ ಭೂಮಿ ಪುತ್ರನೆನಿಸುವ ನಾಗನೂ ಪವಿತ್ರವೆನಿಸುತ್ತವೆ. ತುಳುನಾಡಿನ ಸೃಷ್ಟಿಕರ್ತಸ್ಥಾನದಲ್ಲಿರುವ ನಾಗಬ್ರಹ್ಮನೂ ಇನ್ನೂ ಕೆಲವು ನಾಗರಾಜರೂ, ಕೆಲವು ಭೂತಗಳೂ ವಿಶಿಷ್ಟ ‘ಪುಂಚ’ (ಹುತ್ತ)ಗಳಲ್ಲಿ ಆವಿರ್ಭವಿಸಿದುದಾಗಿ ವರ್ಣಿಸುವ ಪಾಡ್ದನಗಳವೆ. ಸಹಿಸಲಾಗದ ವೇದನೆ, ಕೋಪ, ಅಪಮಾನ, ಅನ್ಯಾಯಗಳಾದಾಗ ‘ಮಣ್ಣು’ಮುಟ್ಟಿ ಶಪಿಸುವ ಹಲವು ಪ್ರಸಂಗಗಳು ಪಾಡ್ದನಗಳಲ್ಲಿವೆ. ಕೆಲವೊಂದು ಕಾರಣಗಳಿಂದಾಗಿ ನ್ಯಾಯಾಕಾಂಕ್ಷೆಯಿಂದ ಒಂದು ಸ್ಥಳದಲ್ಲಿ ‘ಪ್ರಮಾಣ’ ಮಾಡುವಾಗಲೂ ‘ಮಣ್ಣು’ ಮುಖ್ಯವಾಗುತ್ತದೆ. ದೈವಶಕ್ತಿಯನ್ನೂ ಮಣ್ಣನ್ನೂ ಸಮೀಕರಿಸುವುದು ಸಾಮಾನ್ಯ. ‘ಮಣ್ಣು ಮುನಿಯಿತು’ ಎಂದರೆ ಆ ಸ್ಥಳದ ದೈವ ಮುನಿಯಿತೆಂದರ್ಥ. ಕೇರಳದ ಪಾಟಾರ ಕುಳಂಗರ ಭಗವತಿಯು ಭೂಮಿ ದೇವಿಯ ಅಂಶ ಎನ್ನಲಾಗಿದೆ.

ಬೇರೆ ಬೇರೆ ಧಾರ್ಮಿಕಾಚರಣೆಗಳಲ್ಲಿ ಭೂಮಿ ಅಥವಾ ಮಣ್ಣು ವಿಶಿಷ್ಟವಾದ ಪಾತ್ರವಹಿಸುತ್ತದೆ. ಉತ್ಸವದ ವೇಳೆ ದೈವಸ್ಥಳದ ಆವರಣವನ್ನು ಜೇಡಿಮಣ್ಣಿನ ಚಿತ್ರ, ಕಾರಣೆಗಳಿಂದ ವಿಶಿಷ್ಟಗೊಳಿಸುವ ಪದ್ಧತಿ ಇದೆ.

ಜೀವಿಯ ಜೀವನಾಧಾರವಾದ ನೀರನ್ನುಳಿದು ಯಾವುದೇ ಜೀವನಕರ್ಮ ಸಾಧ್ಯವಿಲ್ಲ. ಆರಾಧನೆಯಲ್ಲಿ ನೀರಿನ ಪಾತ್ರ ಬಲು ಮುಖ್ಯವಾದದ್ದು. ದೈವ ಸಂಬಂಧವುಳ್ಳ ಮಣ್ಣು ಹೇಗೆ ಪವಿತ್ರವೆಂದು ತಿಳಿಯಲ್ಪಡುತ್ತದೋ ಅಂತೆಯೇ ದೈವ ಸಂಬಂಧವುಳ್ಳ ನೀರು, ಹೊಳೆ, ಕೆರೆ, ಗುಂಡಿ, ಬಾವಿ, ನೀರು ಚಿಲುಮೆ -ಇತ್ಯಾದಿ ಕೂಡಾ ಪವಿತ್ರವೆನಿಸುತ್ತದೆ. ಹಲವು ಪಾಡ್ದನಗಳಲ್ಲಿ ದೈವಗಳ ಜಲಸಂಬಂಧವನ್ನು ಸೂಚಿಸಲಾಗಿದೆ. ಅಣ್ಣತಮ್ಮ ದೈವಗಳೆನಿಸಿದ ಅರಸು ಮಂಜಿಷ್ಣಾರ್, ಪುಳ್ಚೊಟ್ನಾರ್ ಎಂಬ ದೈವಗಳು ಪಶ್ಚಿಮ ಸಮುದ್ರದಲ್ಲಿ ನೌಕಾಯಾನ ಮಾಡುತ್ತ ಮಂಜೇಶ್ವರ ಅಳಿವೆ ಮೂಲಕ ಉದ್ಯಾವರಕ್ಕೆ ಬಂದು ನೆಲಸಿದುದೆಂದು ಹೇಳಲಾಗಿದೆ. ಮುಸ್ಲಿಂ ಮೂಲದ ಬಬ್ಬರ್ಯ ಎಂಬ ಹಡಗಿನ ಕಲಾಸಿ ಸಮುದ್ರ ಕಾಳಗದ ವೇಳೆ ನೀರಿಗೆ ಬಿದ್ದು ದಡಸೇರಿ ‘ಮಾಯಕ’ ಹೊಂದಿ ದೈವವಾದನೆಂಬ ಕಥನವಿದೆ. ಧರ್ಮಅರಸು ಎಂಬ ಖ್ಯಾತಿಯುಳ್ಳ ‘ತೋಡಕುಕ್ಕಿನಾರ್’ ಎಂಬ ದೈವ ತೋಡಿನ ಬಳಿಯ ಮಾವಿನ ಮರದ ಪರಿಸರದಲ್ಲಿ ತನ್ನ ಸಾನ್ನಿಧ್ಯವನ್ನು ಪ್ರಕಟಿಸಿದುದಾಗಿ ಪ್ರತೀತಿ. ಈ ದೈವವು ತನ್ನ ತಂಗಿಯೆನಿಸಿದ ಉಳ್ಳಾಲ್ತಿ ಎಂಬ ದೈವದೊಂದಿಗೆ ಸಮುದ್ರಸ್ನಾನವನ್ನು ಬಯಸಿ ಬಂದು ಸಮುದ್ರಕಿನಾರೆಯ ಉಳ್ಳಾಲದ ಬಳಿಯ ಉಳಿಯ ಎಂಬಲ್ಲಿ ನೆಲಸಿದುದಾಗಿ ಪಾಡ್ದನದ ಹೇಳಿಕೆ. ‘‘ಗಂಗಾದೇವಿ ಕೈಯಿಡ್ದ್ ಅಂಗೈದಾತ್ ಜಾಗೆ ದೆತೊಂದು, ಅಯಿಟ್ ಮುಂಗೈದಾತ್ ಪುಣಿಪಾಡ್ದ್ ….. ಇನಿ ಮುಟ್ಟ ಮೆರೆಯೊಂಡ’’(ಗಂಗಾದೇವಿಯ ಕೈಯಿಂದ ಅಂಗೈಯಷ್ಟು ಜಾಗವನ್ನು ಪಡೆದುಕೊಂಡು ಅದಕ್ಕೆ ಮುಂಗೈಯಷ್ಟು ಹುಣಿ(ತೆವರಿ) ಹಾಕಿ… ಇದುವರೆಗೆ ಮೆರೆದೆವು) ಎಂಬುದು ದೈವದ ನುಡಿಗಟ್ಟು.

ಮುಂದೆ ದೈವಿಕ ವ್ಯಕ್ತಿಗಳೆನಿಸಿದ ಕಾಂತಾಬಾರೆ ಬೂದಾಬಾರೆ ಎಂಬ ಕಾರಣಿಕ ಪುರುಷರ ತಾಯಿ ಆಚಿ ಎಂಬಾಕೆ ಒಂದು ವಿಶಿಷ್ಟ ರಸಬಾವಿಯ ನೀರನ್ನು ಕುಡಿದ ಪರಿಣಾಮವಾಗಿ ಗರ್ಭವತಿಯಾದಳೆಂಬ ಐತಿಹ್ಯವಿದೆ. ಆರಾಧ್ಯ ಪುರುಷರಿಗೆ ಅಲೌಕಿಕ ಜನನವನ್ನು ಆರೋಪಿಸುವುದು ಜನಪದರ ಸ್ವಭಾವ. ತೀರ್ಥದ ಮಹಿಮೆಗಳನ್ನು ಸಾರುವ ಕಥನಗಳು ಹೇರಳವಾಗಿವೆ.

ಕೆಲವೊಮ್ಮೆ ದೈವಗಳು ಮೀನುಗಳ ರೂಪವನ್ನು ತಳೆದು ನೀರಿನ ಗುಂಡಿಯಲ್ಲಿ ವಿಹರಿಸುವುದುಂಟೆಂದು ಕೆಲವು ಪಾಡ್ದನಗಳು ಒಕ್ಕಣಿಸುತ್ತವೆ. ಇಂಥ ಮೀನುಗಳ ಬೇಟೆ ಹಾಗೂ ಅವುಗಳ ಅಡುವಿಕೆ ಅಪಾಯಕಾರಿಯೆಂಬುದನ್ನು ಸೂಚಿಸುವ ಪಾಡ್ದನಗಳಿವೆ.

ಅಣ್ಣತಂಗಿಯರೆನಿಸಿದ ಕೋಡದಬ್ಬು ಮತ್ತು ತನ್ನಿಮಾನಿಗ ಎಂಬ ದೈವಿಕ ವ್ಯಕ್ತಿಗಳು ‘ತಾರಿನಗುಂಡಿ’ ಎಂಬ ಮಡುವಿನಲ್ಲಿ ‘ಮಾಯಾ ಸ್ವರೂಪ’ ಹೊಂದಿದರಂತೆ. ಮಲಾರು ಬೀಡಿನ ಮುಗುದೆ ಹೆಣ್ಣು ಕರ್ನಗೆ ‘ಮಲಾರ ಕಯ’ ಎಂಬ ಮಡುವಿನಲ್ಲಿ ಕೊನೆಯನ್ನು ಕಾಣುತ್ತಾಳೆ. ‘ಮುಗೇರರು’ (ಮುಗ್ಗೆರ್ಲು) ಎಂದು ಕರೆಯಲ್ಪಡುವ ಎಣ್ಮೂರದೆಯ್ಯು ಮತ್ತು ಕೆಲತ್ತ ಪೆರ್ನೆ ಎಂಬ ಸೋದರರು ‘ಬೆರ್ಮೆರ್ ಗುಂಡಿ’ ಎಂಬ ಮಡುವಿಗೆ ಕಡು (ವಿಷ) ಹಾಕಿ ಮೀನು ಹಿಡಿಯಲು ಹೋದವರು ಅಲೇ ಮೃತಿ ಹೊಂದುತ್ತಾರೆ. ಮುಂದೆ ದೈವಸ್ವರೂಪ ಪಡೆಯುತ್ತಾರೆ. ಕಾನದೆ ಕಾಟದೆ ಎಂಬವರು ಹೊಳೆಯಲ್ಲಿ ಮಾಯಕಗೊಂಡರೆಂದು ಹೇಳಲಾಗಿದೆ.

ಅಕ್ಕೆಸಿರಿಯ ಮೊಮ್ಮಕ್ಕಳಾದ ಅಬ್ಗಗ-ದಾರಗ ಎಂಬ ಯಮಳ ಬಾಲಿಕೆಯರ ಶವಗಳು ಬಾವಿಯಲ್ಲಿ ಪತ್ತೆಯಾಗುತ್ತವೆ. ಮುಂದೆ ಅವರು ದೈವೀಕರಣಗೊಳ್ಳುತ್ತಾರೆ. ಕಡಂಬಾರ ಮಯ್ಯನಿಂದ ಅತ್ಯಾಚಾರಕ್ಕೊಳಗಾದ ಅಮಾಯಕ ಹೆಣ್ಣು ‘ಕೊಲ್ಲೂರ ಮುಕಾಂಬಿ ಜೇವು’ ಕಡಂಬಾರ, ಕಟ್ಟ ಎಂಬ ತೋಡಿನ ಮಡುವಿನಲ್ಲಿ ಪ್ರಾಣ ಕಳೆದುಕೊಳ್ಳುತ್ತಾಳೆ. ಗುಳಿಗ ದೈವದ ಸೇರಿಗೆಗೆ ಸೇರುತ್ತಾಳೆ.

ಕೇರಳದ ಭಗವತೀ ದೈವಗಳ ಕಥನಗಳಲ್ಲಿಯೂ ಜಲಸಂಬಂಧ ವ್ಯಕ್ತವಾಗಿದೆ. ಬೇರೆ ಬೇರೆ ಭಗವತಿಯರು ತಮ್ಮ ಪರಿವಾರದೊಂದಿಗೆ ಹಡಗಿನಲ್ಲಿ ಸಮುದ್ರಯಾನ ಮಾಡಿದ ವೃತ್ತಾಂತಗಳಿವೆ. ಅಂಥದೊಂದು ಹಡಗಿನ ತುಂಬಾ ‘ಮಾರಿ ಬೀರಿ’ ಎಂಬ ರೋಗಬೀಜಗಳಿದ್ದ ಉಲ್ಲೇಖವಿದೆ. ಮಾನವರ ಹಿತದೃಷ್ಟಿಯಿಂದ ಭಗವತಿಯು ಆ ಹಡಗಿನಲ್ಲಿ ಸಮುದ್ರದಲ್ಲಿ ಮುಳುಗಿಸಿ ಬಿಟ್ಟಳಂತೆ! ಭಗವತಿಯರ ನೌಕಾಯಾನಕ್ಕೆ ಒದಗಿದ ವಿಪತ್ತನ್ನು ವಿಷ್ಣುಮೂರ್ತಿ ದೈವ ತನ್ನ ಆಯುಧದಿಂದ ಪರಿಹಾರ ಮಾಡಿದನೆಂಬ ಕಥೆಯಿದೆ.

ವಿಷ್ಣುಮೂರ್ತಿಯ ಆರಾಧಕನಾಗಿದ್ದ ಪಾಲಂದಾಯಿ ಕಣ್ಣನೆಂಬವನು ‘ಕದಳಿಕೊಳ’ ಎಂಬ ಕೆರೆಯಲ್ಲಿ ಮೀಯುತ್ತಿದ್ದಾಗ ಅವನ ವೈರಿಗಳು ಅಲ್ಲೇ ಅವನನ್ನು ಘಾತಿಸಿ ಕೊಲ್ಲುತ್ತಾರೆ. ಕೊಳವು ಕೆನ್ನೀರಾಗುತ್ತದೆ. ಕಣ್ಣನು ವಿಷ್ಣುಮೂರ್ತಿಯ ಸೇರಿಗೆಯ ಒಂದು ದೈವವಾಗುತ್ತಾನೆ.

ಪಾಟಾರ್‌ಕುಳಂಗರ ಭಗವತಿಯು ‘ಪಾಟಾರ್ ಕುಳಂ’ ಎಂಬ ಕೊಳದಲ್ಲಿ ಪದ್ಮವೊಂದ ರಲ್ಲಿ ಆವಿರ್ಭವಿಸಿದಳೆಂಬ ಕಥನವಿದೆ ಆದೂರು ಎಂಬಲ್ಲಿ ನೆಲಸಲು ಭಗವತಿ ಪರಿವಾರವು ಅಪೇಕ್ಷೆಪಟ್ಟಾಗ ವಿಶಾಲವಾದ ಜಲಭರಿತ ಪ್ರದೇಶವನ್ನು ತೋರಿಸಿದರಂತೆ. ಅಳತೆಯ ನೂಲು ಮುಟ್ಟಲಾಗದಷ್ಟು ಆಳವಾಗಿ ನೀರಿನ ಹರಹು ಇತ್ತಂತೆ ರಾತಾರಾತ್ರಿ ಆ ನೀರನ್ನು ಬತ್ತಿಸಿ, ಮಣ್ಣು ತುಂಬಿಸಿ ತಮ್ಮ ಸ್ಥಾನಕ್ಕೆ ಬೇಕಾದ ಜಾಗವನ್ನು ಭಗವತಿಯರು ನೇರ್ಪುಗೊಳಿಸಿದಂರಂತೆ.

ಆಲಿಯೆಂಬ ಮುಸ್ಲಿಮ್ ಮಂತ್ರವಾದಿಯು ದೈವವಾದ ಕಥೆಯಲ್ಲಿ, ಆತನನ್ನು ಕೆರೆಯೊಂದರಲ್ಲಿ ಸುಂದರಸ್ತ್ರೀ ರೂಪದಲ್ಲಿ ಸ್ನಾನ ಮಾಡುತ್ತಿದ್ದ ಚಾಮುಂಡಿದೇವಿಯು ಮರುಳಾಗಿಸಿ ಮಾಯ ಮಾಡಿದ ವೃತ್ತಾಂತವಿದೆ.

ಮುಚ್ಚಿಲೋಟು ಭಗವತಿಯು ಮೊದಲು ಪ್ರಕಟವಾದುದು ಒಂದು ಬಾವಿಯಲ್ಲಿ ಎನ್ನಲಾಗಿದೆ. ಕಳಿಯಾಟ ಉತ್ಸವದ ವೇಳೆ ಈ ದೇವಿ ದೈವಸ್ಥಾನದ ಅಂಗಳದಲ್ಲಿನ ಬಾವಿಯ ನೀರಿನಲ್ಲಿ ಬಗ್ಗಿ ನೋಡುವ ವಿಧಿಯೊಂದಿದೆ. ಆಗ ಬಾವಿಯ ನೀರು ತುಳುಕಿ ಮೇಲೆ ಬರುವುದಾಗಿ ಭಕ್ತರ ಭಾವನೆ.

ಕೆಲವು ಭಗವತೀ ಕ್ಷೇತ್ರಗಳಲ್ಲಿ ನಡೆಯುವ ‘ಪೂರಂ’ ಉತ್ಸವದ ಸಂದರ್ಭದಲ್ಲಿ ದೈವಗಳ ಮೆರವಣಿಗೆಯು ನಿರ್ದಿಷ್ಟ ಹೊಳೆ ಅಥವಾ ಜಲಾಶಯದ ಬಳಿಗೆ ಸಾಗಿ, ಅಲ್ಲಿ ದೈವನರ್ತಕರೂ ಇತರ ಭಕ್ತರೂ ಸಾಮೂಹಿಕವಾಗಿ ಮೀಯುವ ಸಂಪ್ರದಾಯವಿದೆ. ಇದಕ್ಕೆ ‘ಪೂರಕ್ಕುಳಿ’ ಎನ್ನುತ್ತಾರೆ.

ಕಂಡೇವು ಎಂಬಲ್ಲಿ ಉಳ್ಳಾಕುಲು ದೈವಗಳ ವಾರ್ಷಿಕ ಉತ್ಸವಕ್ಕೆ ಸಂಬಂಧಪಟ್ಟು ಸಮೀಪದ ಹೊಳೆಯಲ್ಲಿ, ವರ್ಷದಲ್ಲಿ ಒಂದೇ ದಿನದ ಮೀನುಬೇಟೆಯ ವಿಧಿ ಜರಗುತ್ತದೆ. ಅಂದಲ್ಲಿ ದೊರಕಿದ ಮೀನುಗಳನ್ನು ಪ್ರಸಾದರೂಪದಲ್ಲಿ ಅಟ್ಟು ಸ್ವೀಕರಿಸುತ್ತಾರೆ.

ಹೆಚ್ಚಾಗಿ ಪ್ರತಿಯೊಂದು ದೈವಸ್ಥಾನಕ್ಕೆ ಸಂಬಂಧಪಟ್ಟು ಒಂದು ತೀರ್ಥದ ಬಾವಿ ಅಥವಾ ಕೆರೆ ಇರುತ್ತದೆ. ಆರಾಧನಾ ವಿಧಿಗಳಲ್ಲಿ ಶುದ್ಧ ನೀರು ಅತ್ಯಗತ್ಯ. ದೈವಗಳ ಹೆಸರಲ್ಲಿ ದೈವಚಾವಡಿಯಲ್ಲಿ ಮಡಿಯಲ್ಲಿ ನೀರು ಇರಿಸುವ ಸಂಪ್ರದಾಯವಿದೆ. ಕೆಲವೆಡೆ ಇಂಥ ನೀರಿಗೆ ವಿಶೇಷ ಮಹಿಮೆಯುಂಟೇನ್ನುತ್ತಾರೆ.

ಅಗ್ನಿಯು ಬೇರೆ ಬೇರೆ ರೀತಿಯಲ್ಲಿ, ದೈವಾರಾಧನೆಯಲ್ಲಿ ಹಾಸುಹೊಕ್ಕಾಗಿದೆ. ಒಂದು ತುಳುದೈವದ ಹೆಸರೇ ‘ತೂ ಕತ್ತರಿ’ ಎಂದಾಗಿದೆ(ತೂ=ಬೆಂಕಿ). ಕಲ್ಲುರ್ಟಿ ದೈವದ ಚೇಷ್ಟೆಗಳಲ್ಲಿ ಬಟ್ಟೆಬರೆ ಇತ್ಯಾದಿಗಳನ್ನು ಸುಡುವುದೂ ಸೇರಿದೆ. ಗುಳಿಗದೈವದ ಚೇಷ್ಟೆ ಕೆಲವೊಮ್ಮೆ ಜ್ವಲಿಸುವ ಸೂಡಿಯ ರೂಪದಲ್ಲಿ ಕಾಣಿಸುತ್ತದೆಂದು ಹೇಳಲಾಗಿದೆ. ಅಗ್ನಿ ಚಾಮುಂಡಿ, ಅಗ್ನಿಭೈರವ ಮುಂತಾದ ದೈವಗಳಿವೆ. ಹೊಸ ಭಗವತಿ (ಪುದಿಯೋದಿ) ಶಿವನು ಕೈಗೊಂಡ ಹೋಮದ ಬೆಂಕಿಯಿಂದ ಉದ್ಭವಿಸಿದಳೆಂಬ ಕಥೆಯಿದೆ. ಕಾಲ ಚಾಮುಂಡಿ, ಭದ್ರಕಾಳಿಯರ ಬಗೆಗೂ ಇಂಥದೇ ಕಥನವನ್ನು ಹೇಳುತ್ತಾರೆ. ಕೆಲವು ಉಗ್ರ ಪ್ರಭಾವದ ದೈವಗಳಿಗೆ ಅಗ್ನಿವರ್ಷ ಕರೆಯುವ ಶಕ್ತಿಯಿದೆ ಎನ್ನಲಾಗಿದೆ. ದೈವಗಳ ಮಹಿಮೆಯನ್ನು ಉಮಿಯ (ಬತ್ತದ ಹೊಟ್ಟಿನ) ಒಳಗಿರುವ ಬೆಂಕಿಗೋ, ಜ್ವಾಲಾಮಯವಾಗಿ ಉರಿಯುವ ಬೆಂಕಿಗೋ ಹೋಲಿಸುವುದುಂಟು.

ಬ್ರಾಹ್ಮಣ ಕನ್ಯೆಯೊಬ್ಬಳು ಅಪವಾದಕ್ಕೆ ನೊಂದು ಬೆಂಕಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ‘ಮುಚ್ಚಿಲೋಟು ಭಗವತಿ’ ಎಂಬ ದೈವವಾದಳೆಂಬ ವೃತ್ತಾಂತವಿದೆ. ಆಲಾಡ ಭಗವತಿಯ ಒಂದು ಸ್ತುತಿಯಲ್ಲಿ ಆಕೆಯನ್ನು ಹರನ ಮೂರನೆಯ ಕಣ್ಣಿನಲ್ಲಿ (ಅಗ್ನಿಯಲ್ಲಿ) ಹುಟ್ಟಿದ ಭೈರವಿ ಎಂದು ಕೊಂಡಾಡಿದ್ದುಂಟು. ಕಳಿಯಾಟ ಉತ್ಸವದ ವೇಳೆ ಆಮುಟ್ಟಿ ಭಗವತಿಯ ‘ವಟ್ಟಮುಡಿ’ಗೆ ನೂರ ಒಂದು ಜ್ವಲಿಸುವ ದೊಂದಿಗಳನ್ನೂ, ಸೊಂಟದ ‘ಅರೆಯೊಡೆ’ಗೆ ಅರುವತ್ತು ದೊಂದಿಗಳನ್ನೂ ಕಳಿಬೇಕೆಂಬ ವಿಧಿ ಇತ್ತೆಂದು ಪ್ರತೀತಿ. (ಯಕ್ಷಗಾನ ದಕ್ಷಯಾಗದಲ್ಲಿ ಭೂತರೂಪಿಯಾದ ವೀರಭದ್ರನ ರೌದ್ರವನ್ನು ಸೂಚಿಸಲು ಅವನ ಕಿರೀಟಕ್ಕೆ ಜ್ವಲಿಸುವ ಚಿಕ್ಕದೊಂದಿಗಳನ್ನು ಕಟ್ಟುತ್ತಾರೆ. ಗುಳಿಗ, ಪಂಜುರ್ಳಿ, ಕಲ್ಲುರ್ಟಿ ಮೊದಲಾದ ದೈವಗಳು ಜ್ವಲಿಸುವ ಸೂಡಿಗಳನ್ನು ಕೈಯಲ್ಲಿ ಹಿಡಿದು ಬೀಸುತ್ತವೆ. ದೈವನೇಮದ ‘ಗಗ್ಗರದ ಎಚ್ಚಿ’ ಎಂಬ ಪೂರ್ವರಂಗದಲ್ಲಿ ದೈವನರ್ತಕನು ದೀವಟಿಗೆಯನ್ನು ಬೀಸುವುದೂ ಎದೆಯ ಮೇಲಿಟ್ಟುಕೊಳ್ಳುವುದೂ ಸಾಮಾನ್ಯ. ಕೆಲವೆಡೆ ಐದು ಕವಲಿನ ಪಂಚದೀವಟಿಗೆ ಇರುತ್ತದೆ.

ಹಲವು ದೈವೋತ್ಸವಗಳಲ್ಲಿ ‘ಕೆಂಡಸೇವೆ’ ಎಂಬ ಕೆಂಡದ ರಾಶಿಯ ಮೇಲೆ ನಡೆಯುವ (ಅಥವಾ ಕೊಂಡ ಹಾಯುವ) ಸಂಪ್ರದಾಯವಿದೆ. ವಿಷ್ಣುಮೂರ್ತಿ ದೈವಕ್ಕೆ ಸಂಬಂಧಪಟ್ಟ ಒತ್ತೆಕೋಲ ಎಂಬ ವಿಶೇಷ ಉತ್ಸವದಲ್ಲಿ ಈ ಕೆಂಡದ ರಾಶಿ ಆಳೆತ್ತರವನ್ನು ಮೀರಿ ಬೆಳೆಯಬಹುದು. ೧೦ ರಿಂದ ೧೫ ಅಡಿ ಎತ್ತರದ ಕಟ್ಟಿಗೆಯ ಬೃಹತ್ ರಾಶಿ ರೌದ್ರಾಕಾರವಾಗಿ ಉರಿಯುವ ದೃಶ್ಯ ರಾತ್ರಿಯ ವೇಳೆ ಕೌತುಕಕಾರಿಯಾಗಿ ಕಾಣಿಸುತ್ತದೆ. ಒತ್ತೆಕೋಲದ ಕೆಂಡದ ರಾಶಿಯ ಮೇಲೆ ವಿಷ್ಣುಮೂರ್ತಿ ದೈವದ ‘ವೆಳಿಚಪ್ಪಾಡರು’ ಉಗ್ರಾವೇಶದಿಂದ ಹಾಯುವ ಸನ್ನಿವೇಶವು ಇತಿಹಾಸ ಕಾಲದ ಆತ್ಮಹತ್ಯಾದಳದಂತೆ ಇದ್ದ ವೇಳೆವಾಳಿಗಳ ಅಥವಾ ಗರುಡರ ಅಗ್ನಿ ಪ್ರವೇಶವನ್ನು ಸಂಕೇತಿಸುತ್ತಿರಬಹುದು.

ಕೆಲವು ಕೋಲಗಳಲ್ಲಿ ಗುಳಿಗನಂಥ ದೈವ ಕೆಂಡವನ್ನೆ ಬೊಗಸೆಯಲ್ಲೆತ್ತಿ ಪ್ರಸಾದವಾಗಿ ಭಕ್ತರ ಕೈಗೆ ಇಕ್ಕುವುದುಂಟು.

ಕೆಲವು ದೈವಗಳ ಭಂಡಾರ ಮೆರವಣಿಗೆಯು ನೂರಾರು ಜ್ವಲಿಸುವ ಸೂಡಿಗಳ ಬೆಳಕಿನಲ್ಲಿ ಬರುವುದಿದೆ. ಕೆಲವು ಕೋಲಗಳಲ್ಲಿ ಇಡೀ ರಾತ್ರಿ ಉರಿಯುತ್ತಿರುವಂತೆ ಸಿದ್ಧಗೊಳಿಸಿದ ೫೦-೬೦ ಅಡಿ ಉದ್ದದ ಬೃಹದಾಕಾರದ ‘ಮಾರಿಸೂಟೆ’ ಎಂಬುದರ ವ್ಯವಸ್ಥೆ ಇದೆ. ಕೆಲವು ದೈವೋತ್ಸವಗಳ ಅಂಗವಾಗಿ ‘ಸೂಟೆದಾರೆ ಎಂಬ ಅಣಕು ಕಾಳಗ ನಡೆಯುತ್ತದೆ.

ದೈವಾರಾಧನೆಯಲ್ಲಿ ಧೂಪಸೇವೆ ಹಾಗೂ ಆರತಿ ಇದ್ದೇ ಇರುತ್ತದೆ. ದೈವದ ಹೆಸರಲ್ಲಿ ನಿತ್ಯದೀಪ ಬೆಳಗುವುದು ನೈಸರ್ಗಿಕ ಬೆಂಕಿಯನ್ನು ಸಂರಕ್ಷಕ ಶಕ್ತಿಯನ್ನಾಗಿ ಮನುಷ್ಯ ಪರಿವರ್ತಿಸಿಕೊಂಡ ಪ್ರತೀಕವೆನ್ನಬಹುದು. ಕೆಲವು ದೈವನೇಮ ಸಂದರ್ಭಗಳಲ್ಲಿ ದೈವದ ಪೂಜಾರಿ (ಮುಕ್ಕಾಲ್ದಿ) ಹಲಸಿನ ಕಟ್ಟಿಗೆಗಳನ್ನು ಉಪಯೋಗಿಸಿ ಶುದ್ದೀಕರಣದ ಹೋಮವನ್ನು ಮಾಡುವ ಪದ್ಧತಿ ಇದೆ. ಇದು ವೈದಿಕ ಹೋಮದಂತೆ ಮಂತ್ರತಂತ್ರ ಪೂರಿತವಾಗಿರದೆ ಸರಳವಾಗಿರುತ್ತದೆ.

ಸೂರ್ಯನನ್ನೋ ಚಂದ್ರನನ್ನೋ ಭೂತರೂಪದಲ್ಲಿ ಕಲ್ಪಿಸಿ ಪೂಜಿಸುವ ಪರಿಪಾಠ ಇಲ್ಲ. ಆದರೆ ಭೂತಾರಾಧನೆಯ ಕ್ಷೇತ್ರಕ್ಕೆ ಸಂಬಂಧಿಸಿ ಜ್ಯೋತಿಷ್ಯ ಪ್ರಶ್ನೆ ಇರಿಸುವ ಸಂದರ್ಭದಲ್ಲಿ ದೈವಗಳನ್ನು ನವಗ್ರಹಗಳ ಪೈಕಿ ಬೇರೆ ಬೇರೆ ಗ್ರಹಗಳಿಗೆ ಸಮೀಕರಿಸಿ ಫಲನಿರೂಪಣೆ ಮಾಡುವುದು ವಾಡಿಕೆ. ಉದಾ : ಅರಸು ದೈವಗಳನ್ನು ಹಾಗೂ ಬ್ರಾಹ್ಮಣ ಮೂಲ ದೈವವಾದ ವೀರಮ್ಮಾರ್ ಎಂಬ ದೈವವನ್ನು ಸೂರ್ಯ ಅಥವಾ ಗುರು ಎಂಬ ಸಂಕೇತದಲ್ಲೂ, ಉಳ್ಳಾಲ್ತಿ, ಭಗವತಿ, ಕೊರತಿ, ಕಲ್ಲುರ್ಟಿ ಮೊದಲಾದವರನ್ನು ಸಂದರ್ಭೋಚಿತವಾಗಿ ಮಂಗಳ, ಶುಕ್ರ, ಚಂದ್ರ ಎಂಬ ಸಂಕೇತದಲ್ಲೂ, ವಿಷ್ಣುಮೂರ್ತಿ ದೈವವನ್ನು ಬುಧ ಎಂಬ ಸಂಕೇತದಲ್ಲೂ, ಪಂಜುರ್ಳಿ, ಚಾಮುಂಡಿ ಮೊದಲಾದ ದೈವಗಳನ್ನು ಶನಿ ಎಂಬ ಸಂಕೇತದಲ್ಲೂ ಗುರುತಿಸುತ್ತಾರೆ. ಸಾಂದರ್ಭಿಕವಾಗಿ ಈ ಸಂಕೇತಗಳು ವ್ಯತ್ಯಾಸವಾಗುವುದುಂಟು. ನಾಗನನ್ನು ರಾಹುವಿನಲ್ಲೂ ಗುಳಿಗನನ್ನು ಮಾಂದಿ (ಶನಿಯ ಮಗ)ಯಲ್ಲೂ ಸಮೀಕರಿಸುತ್ತಾರೆ.

ಗಿರಾವು ಅಥವಾ ಗ್ರಹಭೂತವೆಂದು ಕರೆಯಲ್ಪಡುವ ದೈವವೊಂದಿದೆ. ಅಪಸ್ಮಾರಕ್ಕೆ ಅಭಿಮಾನ ದೇವತೆಯೆನ್ನಲಾದ ಈ ದೈವ ಯಾವ ನಿರ್ದಿಷ್ಟ ಗ್ರಹವನ್ನು ನಿರ್ದೇಶಿಸುತ್ತದೆಂದು ತಿಳಿಯುವುದಿಲ್ಲ. ಪ್ರಾಯಃ ಶನಿಯಿರಬೇಕು.

ಗುಳಿಗನೊಂದಿಗೆ ರಕ್ತಾಹುತಿಯ ಪೂಜೆಗೊಳ್ಳುವ ‘ರಾವು’ ಎಂಬ ಉಗ್ರಶಕ್ತಿ ‘ರಾಹು’ವಿನ ರೂಪಾಂತರವಾಗಿರಬಹುದು. ಇದು ಕೆಲವೊಮ್ಮೆ ತೀರಿ ಹೋದವರ ಪ್ರೇತಗಳನ್ನು ತನ್ನ ವಶವಿರಿಸಿಕೊಳ್ಳುವುದೆಂಬ ಪ್ರತೀತಿ ಇದೆ.

ಭೂತಾರಾಧನೆಯಲ್ಲಿ ಪ್ರಾಣಿಗಳ ಪಾತ್ರ ಗಮನೀಯವಾಗಿದೆ. ಭೂತಾಲಯಗಳಲ್ಲಿ ಕೆಲವು ತರದ ಮೃಗಗಳ ವಿಗ್ರಹಗಳಿರುತ್ತವೆ. ಪಂಜುರ್ಳಿ, ಪಿಲಿಚಾಮುಂಡಿ, ನಂದಿಗೋಣ, ಮೈಸಂದಾಯ, ಮೊದಲಾದ ದೈವಗಳಿಗೆ ಹಂದಿ, ಹುಲಿ, ಎತ್ತು, ಕೋಣಗಳ ಮೊಗ (ಮುಖವಾಡ)ಗಳು ಇರುತ್ತವೆ. ಮೊಗವಲ್ಲದೆ ದೈವಪೀಠದಲ್ಲಿ ಚಿಕ್ಕಗಾತ್ರದ ವಿವಿಧ ಪ್ರಾಣಿಗಳ ವಿಗ್ರಹಗಳೂ ಇರುವುದಿದೆ. ಭೂತಸ್ಥಾನಗಳಲ್ಲಿರುವ ‘ಬಂಡಿ’ಗಳಲ್ಲಿಯೂ ಭೂತ ವಾಹನಗಳಾಗಿ ಹಂದಿ, ಹುಲಿ, ಕುದುರೆ, ಆನೆ ಮೊದಲಾದ ದೊಡ್ಡ ಮರದ ವಿಗ್ರಹಗಳಿರುತ್ತವೆ. ಕರಾವಳಿ ಭಾಗದ ನಾಗಾರಾಧನೆಯಂತೂ ಸುಪ್ರಸಿದ್ಧವಾದದ್ದು. ನಾಗನ ಬನವಿಲ್ಲದ ಗ್ರಾಮವೊಂದೂ ಈ ಪ್ರದೇಶದಲ್ಲಿರಲಾರದು.

ಬಲು ಹಿಂದಿನ ಕಾಲದಲ್ಲಿ ಕಾಡುಗಳು ನಿಬಿಡವಾಗಿದ್ದಾಗ ಮನುಷ್ಯ ತನ್ನ ಜೀವಿತವನ್ನು ಸುಗಮಗೊಳಿಸುವುದಕ್ಕಾಗಿ ಪ್ರಕೃತಿಯೊಡನೆ ಹೋರಾಡಬೇಕಿತ್ತು. ನಿಸರ್ಗದ ಅದಮ್ಯ ಶಕ್ತಿಗಳನ್ನು ಆರಾಧಿಸಿ ಓಲೈಸುವ ಅಥವಾ ಅವುಗಳ ಮೇಲೆ ಪ್ರಭುತ್ವ ಪಡೆಯುವ ಪ್ರಯತ್ನದ ಅಂಗವಾಗಿ ಪ್ರಾಣಿಮೂಲದ, ಪಂಜುರ್ಳಿ, ಪಿಲಿಜಾಮುಂಡಿ ಮೊದಲಾದವುಗಳ ಆರಾಧನೆ ರೂಢಿಗೆ ಬಂದುದೆನ್ನಬಹುದು. ಕಾಡುಹಂದಿ, ಹುಲಿಗಳನ್ನು ಸಂಹರಿಸಿದ ಧೀರರು ತಮ್ಮ ಪ್ರತಾಪದ ಸ್ಮಾರಕವಾಗಿ ಇಂಥ ಪ್ರಾಣಿಗಳ ವಿಗ್ರಹಗಳನ್ನು ಮಾಡಿಟ್ಟಿದ್ದು ಕ್ರಮೇಣ ಅವು ಪವಿತ್ರವೆಂದು ತಿಳಿಯಲ್ಪಟ್ಟು ಪೂಜಿಸಲ್ಪಟ್ಟಿರಬಹುದು. ಈ ಹಿನ್ನೆಲೆಯಲ್ಲಿ ಪ್ರಾಚೀನ ಜನಾಂಗದ ಬೇರೆ ಬೇರೆ ಪಂಗಡಗಳಿಗೆ ವರಾಹ, ವ್ಯಾಘ್ರ, ನಾಗ ಮುಂತಾದ ಕುಲಲಾಂಛನ ಏರ್ಪಟ್ಟಿರಬಹುದು. ಮುಖ್ಯವಾಗಿ ಬೇಟೆಯ ಬದುಕು ಹಾಗೂ ಕೃಷಿ ಸಂಸ್ಕೃತಿಯ ಹಿನ್ನೆಲೆಯಿಂದ ಈ ಪ್ರಾಣಿ ಮೂಲದೈವಗಳ ಆರಾಧನೆ ರೂಢಿಗೆ ಬಂದುದೆನ್ನಬಹುದು. ನಿಸರ್ಗದಿಂದ ಮೈವಡೆದಂತಹ ಇಂಥ ದೈವಗಳನ್ನು ಕ್ರಮೇಣ ಪುರಾಣ ಮೂಲದ ಕಥೆಗಳಿಗೆ ತಳಕು ಹಾಕಿದರೂ ಜನಪದ ಮೂಲದ ಕಥೆಗಳೂ ಊರ್ಜಿತವಿದ್ದು ಅವುಗಳ ಸಹಜ ಹಿನ್ನೆಲೆಯತ್ತ ಬೊಟ್ಟು ಮಾಡುತ್ತವೆ.

ಪಂಜುರ್ಳಿ ದೈವಕ್ಕೆ ಕುಪ್ಪೆ ಪಂಜುರ್ಳಿ, ವರ್ಣಾರ ಪಂಜುರ್ಳಿ, ಅಣ್ಣಪ್ಪ ಪಂಜುರ್ಳಿ ಮುಂತಾದ ಸ್ವರೂಪಗಳನ್ನು ಕಲ್ಪಿಸಿದ್ದರೂ ಆ ದೈವದ ವಿಕಾಸ ಪ್ರಕ್ರಿಯೆಯಲ್ಲಿ ಕಾಡುವ ಹಂದಿಯ ಪಾತ್ರವು ಮೂಲತಃ ಹಾಸುಹೊಕ್ಕಾಗಿರುವುದನ್ನು ಗಮನಿಸಬಹುದು. ಪಾಡ್ದನದಲ್ಲಿ ಸೂಚಿತವಾದ ನಿರ್ವಚನದಂತೆ ಪಂಜಿ+ಕುರ್ಳೆ (ಹಂದಿ ಪಿಳ್ಳೆ) ಪಂಜುರ್ಳಿಯಾಯಿತು ಎಂಬುದನ್ನು ಒಪ್ಪಿಕೊಂಡರೆ ಕಾಡುಹಂದಿಯ ಕಾಟವೇ ಈ ಆರಾಧನೆಗೆ ಮೂಲವೆನ್ನಬಹುದು. ಪಂಜುರ್ಳಿಯ ತಾಯಿ ತಂದೆ ವರಾಹದಂಪತಿಯೊಂದರ ಮರಿಗಳಾಗಿದ್ದು, ಸುಬ್ರಹ್ಮಣ್ಯ ದೇವರ ಅನುಮತಿ ಪಡೆದು ದಂಪತಿಗಳಾಗಿ ಬಾಳಿ ಪಂಜುರ್ಳಿಯೆನಿಸಿದ ಹಂದಿಪಿಳ್ಳೆಯನ್ನು ಪಡೆದುದೆನ್ನಲಾಗಿದೆ.

ಪಂಜಣತ್ತಾಯ, ಅಂಗಣತ್ತಾಯ, ಮಲರಾಯ(ಯಿ) ಮೊದಲಾದ ಹೆಸರಲ್ಲಿಯೂ ಇದೇ ದೈವ ಆರಾಧಿಸಲ್ಪಡುತ್ತದೆನ್ನಬಹುದು. ಬಂಟ ಎಂಬ ದೈವದ ಸಂಧಿಯು ಪಂಜುರ್ಳಿಯ ಸಂಧಿಯಂತೆಯೇ ಇರುವುದರಿಂದಲೂ, ಬಂಟನಿಗೂ ವರಾಹದ ಮುಖವಾಡವೇ ಪೂಜೆ ವಿಗ್ರಹವಾಗಿರುವುದರಿಂದಲೂ ಅದೂ ಪಂಜುರ್ಳಿಯ ರೂಪವೆಂದೇ ಹೇಳಬೇಕಾಗುತ್ತದೆ.

ವಿಷ್ಣುವಿನ ವರಾಹಾವತಾರದ ಸ್ತ್ರೀ ಶಕ್ತಿಯೆನಿಸಿದ ‘ವಾರಾಹಿ’ ಸಪ್ತಮಾತೃಕೆಯರಲ್ಲಿ ಒಬ್ಬಳು. ಆ ವಾರಾಹಿಯನ್ನು ತುಳುನಾಡಿನ ಪಂಜುರ್ಳಿಯಲ್ಲಿ ಸಮೀಕರಿಸಿದ್ದುಂಟು.

ಪಂಜುರ್ಳಿಯ ಉದ್ಭವಕ್ಕೆ ಸಂಬಂಧಿಸಿದ ಒಂದು ಪಾಡ್ದನದಲ್ಲಿ ವರ್ಣಿತವಾದ ಸೃಷ್ಟಿ ವೈಚಿತ್ರ್ಯ ಕುತೂಹಲಕರವಾಗಿದೆ. ‘‘ಅಪಗ ಪಂಡೆರ್ ಸ್ವಾಮಿ ಬಾಣೊ ಪತ್ತೊಡು ಭೂಮಿ ತಿರ್ಗಾವೊಡು, ಬಳಂಗಾಯಿ ತಟೈರ್ ಸ್ವಾಮಿ ಬಾಣೊ ತೆರಿತೆರ್ ಎಡಂಗಾಯಿ ತಟ್ಯೆರ್ ಸ್ವಾಮಿ ಬೂಮಿ ತೆರಿತೆರ್. ಬಾಣ ಮುತ್ತರೆ ಭೂಮಿ ಇತ್ತರೆ, ಬಾಣೊಗು ಮುತ್ತರೆ ಬೂಮಿ ತಿರ್‌ಗ್ಂಡ್, ಜಂಬಿದಾರಯಿ ಉದಿತಂಡ್, ಬಾಣೊಡು ಮೇಲ್ ಉದ್ಯಬೆಂದ್ಂಡ್ ತಾಳವೆ ತಂಬವೆ ಪನ್ದುನ ತೆಡಿಲ್. ಕುಂಕುಮ ಪನಿದಾರೆ ಬರ್ಸ ಬತ್ತ್ ಡ್. ಬೂಮಿಡ್ ಕೊಡ್ತಿದ್ ಉದ್ಯಬೆನ್ದುಂಡು ಕದಿಕೆ ಪುಲ್ಲು, ಕಡೀರ ದಯಿ ಬುಳೆಟ್ ಮೇಲ್ ಉದ್ಯಬೆನ್ಪುಂಡು ಆದಾಳೆ ಬೋದಾಳೆ ದಯಿಬಾರೆ. ನಟ್ಟಿ ನಡಿಗೆಡ್ ಮೇಲೆ ಉದ್ಯಬೆನ್ಪುಂಡು ರಾಜಗಿರಿ ಚೆಂಪದ್ಪೆ. ಗೋವುಡು ಮೇಲ್ ಉದ್ಯ ಬೆನ್ಪುಂಡು ಕಾಸಿಗ್ ಪೋಯಿನ ಕಬುಲಿತಿ ಗೋವು’’ (ಆಗ ಸ್ವಾಮಿಯೆಂದರು – ಬಾನು ಹಿಡಿಯಬೇಕು ಭೂಮಿ ತಿರುಗಿಸಬೇಕು, ಬಲಗೈ ತಟ್ಟಿದರು ಸ್ವಾಮಿ ಬಾನು ನೇರ್ಪುಗೊಳಿಸಿದರು. ಎಡಗೈ ತಟ್ಟಿದರು ಸ್ವಾಮಿ ಭೂಮಿಯನ್ನು ನೇರ್ಪುಗೊಳಿಸಿದರು. ಬಾನು ಮುಮ್ಮಡಿ ಭೂಮಿ ಇಮ್ಮಡಿ. ಬಾನಿಗೆ ಮೂರು ಬಾರಿ ಭೂಮಿ ಸುತ್ತಿತು. ಜಂಬಿ ತಾರಗೆ ಉದಿಸಿತು. ಬಾನಿನಲ್ಲಿ ಮೇಲಾಗಿ ಹುಟ್ಟಿಕೊಂಡಿತು, ತಾಳವ ತಂಬವ ಎಂಬ ಸಿಡಿಲು. ಕುಂಕುಮ ಹನಿಧಾರೆ ಮಳೆ ಸುರಿಯಿತು. ಭೂಮಿಯಲ್ಲಿ ಚೊಚ್ಚಲ ಗಿಡವಾಗಿ ಗರಿಕೆ ಹುಲ್ಲು ಹುಟ್ಟಿಕೊಂಡಿತು. ಬೆಳೆಯಲ್ಲಿ ಮೇಲಾಗಿ ಅತಿಕಾರೆ ಎಂಬ ಸತ್ಯದ ಬೆಳೆ ಹುಟ್ಟಿಕೊಂಡಿತು. ಬಾಳೆಯಲ್ಲಿ ಮೇಲಾಗಿ ಆದಾಳ ಬೋದಾಲ ಬಾಳೆ ಹುಟ್ಟಿಕೊಂಡಿತು. ನಟ್ಟಿಕಾಯಿಯಲ್ಲಿ ಮೇಲಾಗಿ ರಾಜಗಿರಿ ಕೆಂಪು ಹರಿವೆ ಹುಟ್ಟಿಕೊಂಡಿತು. ಗೋವಿನಲ್ಲಿ ಮೇಲಾಗಿ ಕಾಶಿಗೆ ಹೋದ ಕಪಿಲೆದನ. ಹುಟ್ಟಿಕೊಂಡಿತು)

ಹಂದಿಬೇಟೆಯ ಉಲ್ಲೇಖ ಕೆಲವು ದೈವಗಳ ಪಾಡ್ದನಗಳಲ್ಲಿವೆ. ಕೋಟಿ ಚೆನ್ನಯರ ಸಂಧಿಯಲ್ಲಿ ಹಂದಿಬೇಟೆಯ ಸಂದರ್ಭಗಳು ಕಥನಕ್ಕೆ ವಿಶಿಷ್ಟ ತಿರುವುಗಳನ್ನು ನೀಡಿದ್ದು ಕಂಡುಬರುತ್ತದೆ.

ಪಿಲಿ ಚಾಮುಂಡಿ ಪಿಲಿಚಂಡಿ ಪಿಲಿಭೂತಗಳೆಂಬ ಹೆಸರಿನಲ್ಲಿ ಪೂಜೆಗೊಳ್ಳುವ ದೈವ ಹುಲಿಯ ಅಂತರ್ಯಾಮಿ ಶಕ್ತಿಯಾಗಿದೆ. ಕ್ರೂರ ಪ್ರಾಣಿಗಳ ಅಂತರ್ಯಾಮಿ ಶಕ್ತಿಗಳನ್ನು ಪೂಜಿಸುವುದೂ ನಿರ್ದಿಷ್ಟ ಪ್ರಾಣಿಗಳ ಕೆಲವೊಂದು ಸ್ವರೂಪ, ಸ್ವಭಾವಗಳನ್ನು ತಮ್ಮ ವ್ಯಕ್ತಿತ್ವಕ್ಕೆ ಆರೋಪಿಸಿಕೊಳ್ಳುವುದೂ ಅಭಿನಯಿಸುವುದೂ ವಿವಿಧ ಪ್ರಾಚೀನ ಸಮಾಜಗಳಲ್ಲಿ ರೂಢವಾಗಿದ್ದ ವಿಚಾರ. ಹುಲಿಯಂಥ ಘೋರಮೃಗದ ಪ್ರತೀಕವು ವೀರಾರಾಧನೆಗೆ ಪೂರಕವೇ ಆಗಿದೆ.

ಈಶ್ವರನ ಕಪಿಲೆಯನ್ನು ಘಾತಿಸಿದ ಕಾರಣಕ್ಕಾಗಿ ಅವನಿಂದ ಹತನಾದ ‘ದೂರು ದುರ್ಬಲ ಕುಮಾರ’ ಎಂಬ ಹುಲಿಯೇ ಪಿಲಿಚಾಮುಂಡಿ ದೈವವಾಗಿ ಪರಿವರ್ತಿತನಾದನೆಂಬ ಕಥೆಯಿದೆ. ಈ ಹುಲಿಯು ಹುಟ್ಟಿದ್ದು ಕೇಂಜವ ಪಕ್ಷಿಯೊಂದು ಶಿವನ ವರಬಲದಿಂದ ಪಡೆದ ಮೊಟ್ಟೆಯಿಂದ ಎಂಬ ವಿಚಿತ್ರ ಕಥೆಯೂ ಇದೆ.

ಕೇರಳದ ‘ಪುಲ್ಲೂರಾಳಿ ಐವರು’ ಎಂಬ ದೈವಪಂಚಕ ಹುಲಿಯ ಸ್ವರೂಪದ್ದಾಗಿದೆ. ವನವೊಂದರಲ್ಲಿ ವ್ಯಾಘ್ರಮಿಥುನವನ್ನು ಕಂಡ ಶಿವ ಪಾರ್ವತಿಯರು ಹುಲಿಗಳ ರೂಪದಿಂದ ಕೂಡಿದಾಗ ಐದು ಹುಲಿಮರಿಗಳ ಜನನವಾಯಿತಂತೆ. ಇವುಗಳಿಗೆ ಪುಲ್ಲೂರಾಳಿ, ಪುಳ್ಳಿ ಕರಿಂಗಾಳಿ, ಪುಲಿಕಣ್ಣ್ , ಕಾಳಪುಲಿಯನ್ ಮತ್ತು ಪುಲ್ಲೂರ ಕಣ್ಣನ್ ಎಂದು ಹೆಸರು.

ಶಿಷ್ಟ ದೇವತೆಗಳಾದ ಶಿವ, ವಿಷ್ಣು ಮೊದಲಾದವರೊಂದಿಗೆ ವಿಚಿತ್ರ ಸಂಬಂಧವನ್ನು ಬೆಸೆಯುವುದು ಜನಪದ ಕಥನಗಳ ವೈಶಿಷ್ಟ್ಯ.

ಕೊಡಮಣ್ತಾಯ(ಯಿ) ದೈವದ ವಾಹನ ಹುಲಿ ಎನ್ನಲಾಗಿದೆ. ದೈವಸ್ಥಳ ಪರಿಸರದಲ್ಲಿ ಕೆಲವೊಮ್ಮೆ ಹುಲಿಗಳು ಕಾಣಿಸಿಕೊಳ್ಳುವುದು ದೈವಗಳ ಕಾರಣಿಕ ಎಂಬ ನಂಬಿಕೆ ಇದೆ. ಹುಲಿ ಮತ್ತು ಹಸುಗಳು ಒಂದೇ ಕಡೆ ಸ್ನೇಹಭಾವದಿಂದ ಇದ್ದುದನ್ನು ಗಮನಿಸಿ ದೈವಸ್ಥಳ ನಿರ್ಮಾಣವಾಯಿತೆಂಬ ಕಥೆಗಳು ಕೆಲವು ಕಡೆ ಪ್ರಚಲಿತವಾಗಿವೆ.

ನಂದಿಗೋಣ ಮತ್ತು ಮೈಸಂದಾಯ ದೈವಗಳು ಎತ್ತು ಮತ್ತು ಕೋಣಗಳ ಅಂತರ್ಯಾಮೀ ಶಕ್ತಿಗಳ ಪ್ರತೀಕಗಳಾಗಿವೆ. ವೈದ್ಯನಾಥ ಎಂದೂ ಹೆಸರುಳ್ಳ ಅರಸು ತೋಡಕುಕ್ಕಿನಾರ್ ದೈವಕ್ಕೆ ವೃಷಭವು ವಾಹನವಾಗಿದೆ. ‘ಚೆನ್ನ ಮಂಗಳ ಚೆಲುವರಾಯ’ ಎಂಬ ಎತ್ತನ್ನು ವಾಹನವಾಗಿ ಮಾಡಿಕೊಂಡು ಈ ದೈವವು ತುಳುನಾಡಿಗೆ ಬಂತೆಂದು ಪಾಡ್ದನದಲ್ಲಿ ವರ್ಣಿತವಾಗಿದೆ.

ಹಲವು ದೈವಸ್ಥಾನಗಳಲ್ಲಿ ದೈವಗಳಿಗೆ ಮೀಸಲು ಬಿಟ್ಟ ಬಸವಗಳಿರುತ್ತವೆ. ಉತ್ಸವ ಸಂದರ್ಭದಲ್ಲಿ ಇವುಗಳನ್ನು ಅಲಂಕರಿಸಿ ಪ್ರದಕ್ಷಿಣೆ ಬರಿಸುತ್ತಾರೆ. ಕಾಲ್ನಡೆಗಳನ್ನು ದೈವಸ್ಥಾನಕ್ಕೆ ಹರಕೆ ಒಪ್ಪಿಸುವ ಸಂಪ್ರದಾಯ ಕೆಲವು ಕಡೆ ಇದೆ.

ಕರುವಿರುವ ಹಸುವಿನ ಸೆಗಣಿ ದೈವಸ್ಥಳಗಳ ಶುದ್ಧಕಾರ್ಯಗಳಿಗೆ ಮುಖ್ಯವಾಗಿದೆ.

ಕುದುರೆಯು ಕೆಲವು ದೈವಗಳ ವಾಹನವಾಗಿ ಕಲ್ಪಿಸಲ್ಪಟ್ಟಿದೆ. ಮರದ ಕುದುರೆಯ ರೂಪದ ಬಂಡಿಗಳು ಕೆಲವು ದೈವಸ್ಥಾನಗಳಲ್ಲಿರುತ್ತವೆ. ತುಳುನಾಡಿನ ಆದಿಮೂಲದೈವತ ಎನಿಸಿದ ‘ಬೆರ್ಮೆರ್’ ದೈವಕ್ಕೆ ಹಲವು ಕಡೆ ಕುದುರೆಯೇ ವಾಹನವಾಗಿದೆ. ಜಾರಂದಾಯನೂ ಅಶ್ವವಾಹನನೇ. ಯೋಧ ಪ್ರಕೃತಿಯ ಬಲಾಂಡಿ ಅಥವಾ ನಾಡುದೈವಕ್ಕೆ ಕುದುರೆ ವಾಹನವಾಗಿರುವುದು ಸಹಜವಾಗಿದೆ. ಉಳ್ಳಾಕ್ಲು, ಜುಮಾದಿ ದೈವಗಳಿಗೂ ಕೆಲವೆಡೆ ಕುದುರೆ ವಾಹನವಾಗಿರುವುದುಂಟು. ಮೆಕ್ಕಿಕಟ್ಟೆ ಮೊದಲಾದ ದೈವಸಂಕೀರ್ಣಗಳಲ್ಲಿ ಕುದುರೆ ಹಾಗೂ ರಾಹುತರ ಪ್ರತಿಮೆಗಳಿವೆ.

ಆನೆಯನ್ನು ಭೂತವಾಗಿ ಪೂಜಿಸುವುದು ಕಂಡುಬರುವುದಿಲ್ಲ. ಆದರೆ ಆನೆಯನ್ನು ಅಪೂರ್ವಕ್ಕೆ ದೈವವಾಹನವಾಗಿ ಕಲ್ಪಿಸಿದುದಿದೆ. ಆನೆಯ ಮೇಲೆ ಆರೂಢೆಯಾದ ಧೂಮಾವತಿಯ ಮರದ ವಿಗ್ರಹವು ಪಡ್ರೆ ದೈವಸ್ಥಾನದ ಭೂತಬಂಡಿಯಲ್ಲಿದೆ.

ದೈವಸ್ಥಾನಗಳ ಶಿಲ್ಪದಲ್ಲಿ ಹುಲಿಮೊಗ, ಸಿಂಹಲಲಾಟ, ನೆಗಳೆಯ ಬಾಯಿ ಇತ್ಯಾದಿಗಳನ್ನು ಬಳಸುತ್ತಾರೆ. ಪಲ್ಲಕ್ಕಿಯ ಕೊಂಬು ಇತ್ಯಾದಿಗಳಲ್ಲೂ ನೆಗಳೆಯ ಬಾಯಿಯ ಆಕಾರದ ಅಲಂಕಾರವನ್ನು ಬಳಸುತ್ತಾರೆ.

ತುಳುನಾಡಿನ ದೈವಾರಾಧನೆಯಲ್ಲಿ ನಾಯಿಯ ಸಂಬಂಧವು ವಿಶೇಷವಾಗಿ ಕಂಡುಬರುವುದಿಲ್ಲ. ಜಾಲಾಟವೆಂಬ ವಿಶಿಷ್ಟ ದೈವೋತ್ಸವದಲ್ಲಿ ನಾಯಿಗಳ ವರ್ತನೆಯನ್ನು ಹೋಲುವಂತೆ ಅಭಿನಯಿಸುವ ‘ಕಾರಿ ಕಬಿಲ’ ಎಂಬ ಜೊತೆ ಭೂತಗಳು ಬೇಟೆನಾಯಿಗಳು ದೈವೀಕರಣಗೊಂಡುದಾಗಿರಬಹುದೇ ಎಂಬ ಸಂಶಯವನ್ನು ಡಾ.ಚೆನ್ನಪ್ಪ ಗೌಡರು ಸೂಚಿಸಿದ್ದಾರೆ. (ಜಾಲಾಟ ಪು.೭) ಉತ್ತರ ಕೇರಳದ ಪ್ರಸಿದ್ಧ ಕ್ಷೇತ್ರ ಪ್ರಶ್ನ ಕಡವಿನ ಅಧಿದೈವವಾದ ಮುತ್ತಪ್ಪನಿಗೆ ನಾಯಿ ಪ್ರೀತಿಯ ಪ್ರಾಣಿ ಆ ದೈವಸ್ಥಳದಲ್ಲಿ ನಾಯಿಯ ಪ್ರತಿಮೆಗಳಿವೆ. ಅಂಗಳದಲ್ಲಿ ನಾಯಿಗಳು ನಿರಾತಂಕವಾಗಿ ಯಾವ ನಿಷೇಧವೂ ಇಲ್ಲದೆ ಅಡ್ಡಾಡಬಹುದಾಗಿದೆ.

ತಮಿಳುನಾಡಿನ ಅಯ್ಯನಾರ್ ದೈವದ ಗುಡಿಯಲ್ಲಿ ನಾಯಿಯ ಪ್ರತಿಮೆ ಇರುವುದಿದೆ.

ಸರ್ಪಾರಾಧನೆ ಬೇರೆ ಬೇರೆ ರೂಪದಲ್ಲಿ ವಿಶ್ವದಾದ್ಯಂತ ರೂಢಿಯಲ್ಲಿರುವ ವಿಚಾರ. ಭಾರತದಲ್ಲಿ ಬಹುಪ್ರಾಚೀನಕಾಲದಿಂದಲೂ ನಾಗಾರಾಧನೆ ವೈವಿಧ್ಯಪೂರ್ಣವಾಗಿ ನಡೆದುಕೊಂಡು ಬಂದಿದೆ. ಕರೆನಾಡಿನ ದೈವಾರಾಧನೆಯೊಂದಿಗೆ ನಾಗಾರಾಧನೆಗೆ ನಿಕಟಸಂಬಂಧವಿದೆ. ನಾಗಾರಾಧನೆಯೆಂಬುದು ಪ್ರತ್ಯೇಕ ಆರಾಧನಾ ಪ್ರಸ್ಥಾನವಾದರೂ, ವಿಶಿಷ್ಟ ‘‘ದರ್ಶನಮಾಧ್ಯಮ’’ ವ್ಯಕ್ತಿಗಳನ್ನು ಬಳಸಿಕೊಂಡು ದೈವತದೊಂದಿಗೆ ಸಂವಾದ ಬೆಳೆಸುವಿಕೆ, ಒಲಿಸುವ ನೃತ್ಯಸೇವೆ ಇತ್ಯಾದಿ ಅಂಶಗಳು ದೈವಾರಾಧನೆಯಂತೆಯೇ ಇವೆಯೆಂಬುದು ಗಮನೀಯ.

ಹೆಚ್ಚಿನ ದೈವಸ್ಥಾನಕ್ಕೆ ಸಂಬಂಧಪಟ್ಟು ನಾಗನ ಬನಗಳಿರುತ್ತವೆ. ಮರಗಿಡಗಳಿಂದ ನಿಬಿಡವಾಗಿರುವ ಇಂಥ ಬನಗಳಲ್ಲಿ ವಿವಿಧ ರೀತಿಯ ಶಿಲೆಯ ನಾಗಪ್ರತೀಕಗಳಿರುತ್ತವೆ. (ಈಚೆಗೆ ಅನೇಕ ಬನಗಳು ಸಸ್ಯ ಸಂಪತ್ತನ್ನು ಕಳೆದುಕೊಂಡು ಕಾಂಕ್ರೀಟು ಕಟ್ಟಡಗಳಾಗಿ ಮಾರ್ಪಟ್ಟಿವೆ.)

ಆದಿಮೂಲ ದೈವಗಳು ನೆಲಸಿದ ತಾಣಗಳೆಂದು ಹೇಳಲಾದ ಆಲಡೆ ಎಂಬ ನೈಸರ್ಗಿಕ ಹಿನ್ನೆಲೆಯ ಆರಾಧನಾ ಸ್ಥಾನಗಳಲ್ಲಿ ಪೂಜೆಗೊಳ್ಳುವ ದೈವಗಳಲ್ಲಿ ನಾಗದೇವತೆಯೂ ಒಂದಾಗಿದೆ. (ಬೆರ್ಮೆರ್, ನಾಗ, ರಕ್ತೇಶ್ವರಿ, ಗುಳಿಗ, ಮೈಸಂದಾಯ -ಇವು ಆಲಡೆಯ ದೈವಗಳೆನ್ನುತ್ತಾರೆ. ಪಂಜುರ್ಳಿ, ಜಟ್ಟಿಗರಂಥ ಇತರ ದೈವಗಳೂ ಈ ಗುಂಪಿನಲ್ಲಿ ಇರುವುದುಂಟು)

ಕೆಲವು ದೈವಗಳಿಗೆ ನಾಗಸ್ವರೂಪವೂ ಉಂಟೆಂಬ ಹೇಳೀಕೆ ಇದೆ. ಕೇರಳದಲ್ಲಿ ನಾಗಭಗವತಿ ಎಂಬ ಸ್ತ್ರೀದೈವವಿದೆ. ಕೆಲವು ದೈವಸ್ಥಳಗಳಲ್ಲಿರುವ ‘ಕ್ಷೇತ್ರಪಾಲ’ ಎಂಬ ದೈವಕ್ಕೆ ನಾಗಸ್ವರೂಪವನ್ನು ಆರೋಪಿಸುವುದುಂಟು. ಕೆಲವು ದೈವಗಳಿಗೆ ನಾಗ ವಾಹನವೆನಿಸುವುದೂ ಇದೆ.

ಕೆಲವು ದೈವಸ್ಥಾನಗಳ ನಿರ್ಮಾಣಕ್ಕೆ ಸಂಬಂಧಿಸಿ ಹಾವು ಮತ್ತು ಮುಂಗುಸಿಗಳು ನಿರ್ವೈರದಿಂದ ಒಟ್ಟಿಗೆ ಇದ್ದ ಜಾಗವನ್ನು ಆಯ್ಕೆ ಮಾಡಲಾಯಿತು ಎಂಬ ಕಥೆಗಳಿವೆ. ದೈವಸಾನ್ನಿಧ್ಯವಿರುವ ಸ್ಥಳಗಳಲ್ಲಿ ನಾಗರಹಾವಿನ ದರ್ಶನವಾದಾಗ, ಅದಕ್ಕೆ ವಿಶಿಷ್ಟ ಅರ್ಥ ವನ್ನೋ, ಶಕುನಗಳನ್ನೋ ಹಚ್ಚುವುದಿದೆ. ಯಾವುದೋ ದೋಷವನ್ನೋ ಅನ್ಯಾಯವನ್ನೋ, ಅಶುದ್ದಿಯನ್ನೋ ಸೂಚಿಸಲು ನಾಗರಹಾವು ಬಂದಿದೆ ಎಂದು ಭಾವಿಸುವವರುಂಟು. ಕೆಲವೊಮ್ಮೆ ನಾಗದೇವರ ಪ್ರಸನ್ನತೆಯನ್ನು ಸರ್ಪದ ಆಗಮನಕ್ಕೆ ಆರೋಪಿಸುವುದುಂಟು.

ನಾಗನ ಅದರಲ್ಲೂ ಅದರ ಹೆಡೆಯ ಆಕಾರದ ಶಿಲ್ಪ, ಆಭರಣ ಇತ್ಯಾದಿಗಳು ದೈವಸಂಬಂಧ ವಸ್ತುಗಳಲ್ಲಿ ಸಾಮಾನ್ಯ. ದೈವಸ್ಥಳಗಳ ಉತ್ಸವಗಳ ಅಂಗವಾಗಿ ಸ್ಥಳದ ನಾಗನಿಗೂ ತಂಬಿಲ ಅಥವಾ ತನಿಯೆರೆಯುವ ಉಪಚಾರ ಕೈಗೊಳ್ಳುತ್ತಾರೆ.

ಭೂತ ರೂಪಿಯಂತೆ ತೋರುವ ನಾಗಬ್ರಹ್ಮನ ಆವಿರ್ಭಾವದ ವಿಶಿಷ್ಟ ಕಥನಗಳಿವೆ. ನಾಗಬ್ರಹ್ಮನಿಗೆ ಸಂಬಂಧಪಟ್ಟ ಕೋಲವೂ ಕೆಲವೊಂದು ಸನ್ನಿವೇಶಗಳಲ್ಲಿ ನಡೆಯುತ್ತದೆ. ನಾಗದೇವತೆಗೆ ಸಂಬಂಧಿಸಿದ ಇತರ ಆರಾಧನಾ ಪ್ರಕಾರಗಳಾದ ದಕ್ಕೆಬಲಿ, ನಾಗದರ್ಶನ, ನಾಗ ಮಂಡಲ, ಬ್ರಹ್ಮಮಂಡಲ, ಕಾಡ್ಯನಾಟ ಇತ್ಯಾದಿಗಳ ಕುರಿತು ಇಲ್ಲಿ ವಿವರಿಸಬೇಕಿಲ್ಲ.

ಸಸ್ಯ ಮತ್ತು ಮನುಷ್ಯನ ಸಂಬಂಧ ಅನಾದಿಯಾದದ್ದು. ‘ಜಂಗಮ ಪ್ರಕೃತಿಯ ಪ್ರಾಣಿಗಳೊಂದಿಗಿನ ಮನುಷ್ಯನ ಸಂಬಂಧಕ್ಕೂ ಸ್ಥಾವರ ಪ್ರಕೃತಿಯ ಸಸ್ಯಗಳ ಸಂಬಂಧಕ್ಕೂ ವ್ಯತ್ಯಾಸವಿದೆ. ಕೆಲವು ಹಿಂಸ್ರಮೃಗಗಳಿಂದ ಮನುಷ್ಯ ಅಪಾಯವನ್ನು ನಿರೀಕ್ಷೆ ಮಾಡಿದಂತೆ ಮರಗಿಡಗಳಿಂದ ಅಂಥ ಅಪಾಯಗಳನ್ನು ನಿರೀಕ್ಷಿಸಲಾರ. ಆದರೆ ಮರಗಿಡ ಬಳ್ಳಿಗಳಿಂದ ನಿಬಿಡವಾದ ಕಾಡನ್ನು ಕುರಿತು, ಭೀಕರ ಪ್ರಾಣಿಗಳ ಕುರಿತು, ಕಾಳ್ಗಿಚ್ಚಿನಂಥ ಭಯಾನಕ ವಿದ್ಯಮಾನಗಳನ್ನು ಕುರಿತು ಭಯವನ್ನು ಬೆಳೆಸಿಕೊಂಡಿದ್ದಾನೆ. ಕೆಲವು ನಿರ್ದಿಷ್ಟ ಮರಗಿಡಗಳಲ್ಲಿ ಅದೃಶ್ಯ ಶಕ್ತಿಗಳ ಭಯಪ್ರದ ಸಾನ್ನಿಧ್ಯವನ್ನು ಕಲ್ಪಿಸಿ ಅವುಗಳಲ್ಲಿ ಕಾರಣಿಕವನ್ನು ಕಂಡಿದ್ದಾನೆ. ವಿಧವಿಧದ ಸಸ್ಯಸಂಬಂಧಿ ಕ್ರಿಯಾಚರಣೆಗಳನ್ನು ರೂಢಿಸಿಕೊಂಡಿದ್ದಾನೆ. ಜೊತೆಗೆ ಫಲವಂತಿಕೆ ಹಾಗೂ ಔಷಧೀಯ ಕಾರಣಗಳಿಂದ ಕೆಲವು ಸಸ್ಯಗಳು ಆರಾಧನಾವಲಯಕ್ಕೆ ಸೇರ್ಪಡೆಗೊಂಡಿವೆ.

ಪೌರಾಣಿಕ ಕಥೆಗಳಲ್ಲಿ ಯಕ್ಷ, ಗಂಧರ್ವ, ಕಿನ್ನರಾದಿಗಳು ವನಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ವಿಚಾರಗಳಿವೆ. ವನದುರ್ಗಾ, ಶಾಸ್ತಾರ, ಕಾಳಿ ಮೊದಲಾದ ದೇವತೆಗಳು ವನಗಳಲ್ಲಿ ನೆಲಸಿದ್ದ ಉಲ್ಲೇಖಗಳಿವೆ. ತುಳುನಾಡಿನ ದೈವಗಳಲ್ಲಿ ಬೆರ್ಮೆರ್ , ಮಲೆ ಜುಮಾದಿ, ಮಲೆ ಚಾಮುಂಡಿ, ಮಲೆಭೂತ, ಮಲೆಕೊರತಿ, ಕಾಡ್ಯತ್ತಿ, ಕಾನದ ಗುಳಿಗ, ಕಾನದ ಪಂಜುರ್ಳ, ಕಾನದ ಜುಮಾದಿ ಮೊದಲಾದವುಗಳಿಗೆ ಕಾಡಿನೊಂದಿಗಿರುವ ಸಂಬಂಧ ಸ್ಪಷ್ಟವಾಗಿದೆ. ಆದಿಮೂಲ ದೈವವೆನಿಸಿದ ಬೆರ್ಮೆರ್ ಕಾಡಿನ ಆಧಿಪತ್ಯವುಳ್ಳವನೆನ್ನಲಾಗಿದೆ.

ಕೇರಳದ ಅನೇಕ ದೈವಗಳು ಹಲವು, ಕಾವು(ವನ)ಗಳಿಗೆ ಸಂಬಂಧಿಸಿವೆ. ‘ವಯನಾಡು ಕುಲದೈವಂ’ ಮೊದಲಾದ ದೈವಗಳ ಉತ್ಸವಭಾಗವಾಗಿ ಕಾಡಿನ ಬೇಟೆಯನ್ನು ವಿಧಿಯಾಗಿ ಇಟ್ಟುಕೊಂಡು ಇಂದಿಗೂ ಕಾಡಿನ ಸಂಬಂಧವನ್ನು ಉಳಿಸಿಕೊಂಡಿವೆ. ತುಳುನಾಡಿನ ಹಲವು ದೈವಸ್ಥಾನಗಳ ಪರಿಸರದಲ್ಲಿ ಕಾಡುಗಳಿವೆ. ಗುಳಿಗ ಇತ್ಯಾದಿ ದೈವಗಳಿಗೆ ಹಾಗೂ ನಾಗನಿಗೆ ಸಂಬಂಧಿಸಿದ ಬನಗಳು ಹೇರಳವಾಗಿವೆ. ಕುಂದಾಪುರ, ಉಡುಪಿ ತಾಲೂಕುಗಳ ಕೆಲವೆಡೆ ‘ಕಾಡ್ಯ’ (ಕಾಳಿಂಗ ನಾಗ)ನೆಂಬ ಹೆಸರಲ್ಲಿ ಪರಿಶಿಷ್ಟ ವರ್ಗದವರಿಂದ ಆರಾಧಿಸಲ್ಪಡುವ ‘ಕಾಡ್ಯನ ಮನೆ’ಗಳೆಂಬ ಹುತ್ತವಿರುವ ತಾಣಗಳು ಹೆಚ್ಚಾಗಿ ಕಾಡುಗಳ ಒಡಲಲ್ಲೆ ಇರುತ್ತವೆ. ನಾಗನೊಮದಿಗೆ ಕಾಡ್ಯನ ಮನೆಯ ಪರಿಸರದಲ್ಲಿ ಬ್ರಹ್ಮ, ಯಕ್ಷಿ, ಉಮ್ಮಳ್ತಿ, ಬೊಬ್ಬರ್ಯ, ಗಾಮ, ಜಟ್ಟಿಗ, ಮಂತ್ರಿಗಣ, ಕಾನ ಪಂಜುರ್ಳಿ, ಕಲ್ಕುಡ, ಹಾಯ್ಗುಳಿ ಮುಂತಾದ ದೈವಗಳೂ ನೆಲಸಿರುತ್ತವೆ. ರೂಪವಿಲ್ಲದ ಶಿಲೆಯ ಚೂರುಗಳೇ ಈ ದೈವಗಳ ಸಂಕೇತ (ಕಾಡ್ಯನಾಟ ಪ್ರೊ.ಎ.ವಿ.ನಾವಡ, ಡಾ.ಗಾಯತ್ರೀ ನಾವಡ)

ಹಿಂದೆ ಕಾಡಿಗೆ ಬೇಟೆಗೆ ಹೋಗುತ್ತಿದ್ದ ಸಂದರ್ಭಗಳಲ್ಲಿ ಕಾಡಿನ ದೈವಗಳನ್ನು ಪ್ರಾರ್ಥಿಸುತ್ತಿದ್ದುದೂ ಅವುಗಳಿಗೆ ಮೃಗಮಾಂಸವನ್ನು ಎಡೆಬಡಿಸಿ ಕೃತಜ್ಞತೆ ಅರ್ಪಿಸುವುದೂ ವಾಡಿಕೆಯಾಗಿತ್ತು. ದೈವಗಳ ಪಾಡ್ದನಗಳಲ್ಲಿ ಕಾಡಿನ ಕುರಿತಾದ ಉಲ್ಲೇಖಗಳು ಹೇರಳವಾಗಿವೆ.

ದೈವಗಳಿಗೆ ಸಂಬಂಧಿಸಿದ ಕಥನಗಳಲ್ಲಿ ದೈವಗಳಿಗೂ ಕೆಲವೊಂದು ಮರಗಳಿಗೂ ಇರುವ ನಂಟನ್ನು ವಿವರಿಸಲಾಗಿದೆ. ತೋಡಕುಕ್ಕಿನಾರ್ ದೈವವು ಮೊದಲಿಗೆ ತೋಡೊಂದರ ಬಳಿಯ ಮಾವಿನ ಮರದ (ಕುಕ್ಕು-ತುಳು) ಬಳಿ ಪ್ರಕಟವಾಯಿತೆನ್ನಲಾಗಿದೆ. ಧೂಮಾವತಿಯ ಪಾಡ್ದನವೊಂದರಲ್ಲಿ ಚೌಟರ ಅರಮನೆಯ ಎದುರಿನ ಹಲಸಿನ ಮರದ ಹೆಗ್ಗೊಂಬೆ ಮುರಿದು ಬೀಳುವ ಮೂಲಕ ಆ ದೈವದ ಆಗಮನ ಪ್ರಕಟವಾಯಿತು ಎಂದಿದೆ. ಕೊರಗ ತನಿಯನು ದೇವಸ್ಥಾನದ ಮಾಡಿಗೆ ಮಾಲಿದ್ದ ಮಾದಳದ ಮರಕ್ಕೆ ಹತ್ತಿ ಮಾದಳ ಹಣ್ಣನ್ನು ಕೀಳುವಾಗ ದೈವಗಳ ಆಗ್ರಹಕ್ಕೆ ಬಲಿಯಾಗಿ ಮರದಿಂದ ಬಿದ್ದು, ತೀರಿಕೊಂಡು ಮುಂದೆ ದೈವವಾಗುತ್ತಾನೆ. ಕೇರಳದ ‘ಚಕ್ಕಪೋದಿ’ ಎಂಬ ಭಗವತಿಯ ಕಥೆಯಲ್ಲಿ ಹೆಣ್ಣೊಬ್ಬಳು ಹಲಸಿನ (ಚಕ್ಕ-ಮಲಯಾಳಂ) ಮರದಿಂದ ಬಿದ್ದು ತೀರಿಕೊಂಡು ‘ಪೋದಿ’(ಭಗವತಿ) ಆದ ವೃತ್ತಾಂತವಿದೆ. ‘ಪೆರಿಯಾಕುಳು’ ಎಂಬ ಯಮಳ ವೀರರು ಬೈಲಬೀಡು ಬಳಿಯ ಪಾಲೆಮರದ ಬುಡದಲ್ಲಿ ಮಾಯ ಹೊಂದಿದರೆಂದು ಐತಿಹ್ಯ. ಕಾಂತಾಬಾರೆ ಬೂದಾಬಾರೆ ಎಂಬ ಅವಳಿ ವೀರರನ್ನು ಎಳವೆಯಲ್ಲಿ ತಾಕೊಟೆ ಮರವೊಂದರ ರೆಂಬೆಗೆ ತೊಟ್ಟಿಲು ಕಟ್ಟಿ ತೂಗಿದ್ದರಂತೆ. ಪಾಂಡಿ (ವ್ಯಾಪರೀನೌಕೆ)ಗಾಗಿ ಕಾಡಿನ ‘ಬೊಳ್ಯತೇಕಟೆ’ ಜಾತಿಯ ಹೆಮ್ಮರವನ್ನು ಕಡಿದಾಗ ಪ್ರಕಟವಾದ ದೈವಶಕ್ತಿಗಳ ವಿಚಾರ ಬೊಬ್ಬರ್ಯ ಪಾಡ್ದನವೊಂದರಲ್ಲಿದೆ. ಕುಂಬಳೆ ಸಮೀಪದ ಪೆರ್ನೆ ಭಗವತೀ ಕ್ಷೇತ್ರದ ಅಂಗಳದ ಮೂಲೆಯ ದೈವಸಾನ್ನಿಧ್ಯವು ಮೊದಲು ಪ್ರಕಟವಾದ ಪ್ರಾಚೀನ ಪಾಲೆಮರಗಳಿವೆ. ಒಂಟಿ ತಾಳೆಮರ ಇದ್ದಲ್ಲಿ ಗುಳಿಗನ ಸಂಚಾರವಿರುವುದೆನ್ನುತ್ತಾರೆ.

ದೈವಸ್ಥಳಗಳಿಗೆ ಸಂಬಂಧಿಸಿ ಕೆಲವು ವಿಶಿಷ್ಟ ಮರಗಳ ಕಟ್ಟೆಗಳು ಇರುವುದುಂಟು. ಅರಳಿ, ಆಲ, ಸಿರಿಗೋಳಿ, ಹಲಸು, ಮಾವು, ಬೇವು, ಧೂಪ, ಪಾಲೆ, ಗೋಸಂಪಗೆ ಇತ್ಯಾದಿ. ಉತ್ಸವದ ವೇಳೆ ಇಂಥ ಕೆಲವು ಕಟ್ಟೆಗಳನ್ನು ತೋರಣ, ಸಾಲುದೀಪ ಇತ್ಯಾದಿಗಳಿಂದ ಅಲಂಕರಿಸುತ್ತಾರೆ. ದೈವಗಳು ಕಟ್ಟೆಯನ್ನೇರಿ ನರ್ತಿಸುವುದೂ ಉಂಟು. ಕೆಲವು ಕಟ್ಟೆಗಳು ನಿರ್ದಿಷ್ಟ ಅತಿಥಿಗಳು ಉತ್ಸವದ ವೇಳೆ ಕುಳೀತುಕೊಳ್ಳಲು ಮೀಸಲಾಗಿರುತ್ತವೆ. ದೈವಸ್ಥಳದ ಪರಿಸರದ ಮರಗಳ ಕಟ್ಟೆಗಳನ್ನು ಪವಿತ್ರಭಾವದಿಂದ ನೋಡಲಾಗುತ್ತದೆ. ದೈವಸ್ಥಾನಕ್ಕೆ ಸಂಬಂಧಿಸಿ ತುಳಸಿ ಕಟ್ಟೆಯಂತೂ ಸಾಮಾನ್ಯವಾಗಿ ಇದ್ದೇ ಇರುತ್ತದೆ.

ದೈವಾರಾಧನೆಯಲ್ಲಿ ಆವರಣ ನಿರ್ಮಾಣಕ್ಕೂ, ಅಲಂಕಾರಕ್ಕೂ ಪೂಜಾವಿಧಿಗಳಿಗೂ ಅನೇಕ ಬಗೆಯ ಸಸ್ಯಗಳನ್ನೂ ಸಸ್ಯಭಾಗಗಳನ್ನೂ ಬಳಸುತ್ತಾರೆ. ಉತ್ಸವದ ವೇಳೆ ಮಾವಿನ ಎಲೆಯ ತೋರಣ, ಬಾಳೆಗಿಡ, ತೆಂಗು, ಬೈನೆ, ಕವುಂಗು ಮರಗಳ ಸೋಗೆ, ಅಶ್ವತ್ಥದ ಎಲೆ, ವೀಳ್ಯದೆಲೆ ಅಡಕೆಯ ಮರದ ಹಿಂಗಾರ ಹಾಗೂ ವಿವಿಧ ಹೂಗಳನ್ನೂ ಫಲ ವಸ್ತುಗಳನ್ನೂ ಆವರಣ ನಿರ್ಮಾಣಕ್ಕೂ ಅಲಂಕಾರನ್ನು ಬಳಸುತ್ತಾರೆ. ಪಡುಬಿದ್ರೆಯಲ್ಲಿ ಖಡ್ಗೇಶ್ವರಿ ದೈವ ಹಾಗೂ ನಾಗದೇವತೆಗಳ ಸಾನ್ನಿಧ್ಯವುಳ್ಳ ಒಂದು ದೊಡ್ಡ ಕಾಡನ್ನೇ ಬ್ರಹ್ಮಮಂಡಲ ಉತ್ಸವದ ವೇಳೆ ಹೂ ಹಣ್ಣು ಹಿಂಗಾರ, ಎಳೆಯ ತೆಂಗಿನಗರಿಗಳಿಂದ ವಿಶಿಷ್ಟವಾಗಿ ಅಲಂಕರಿಸುತ್ತಾರೆ.

ಮುಗೇರ ಜನಾಂಗದವರು ನಿರ್ವಹಿಸುವ ‘ಮುಗೆರ್ಲೆ ಕೋಲ’ ಎಂಬ ದೈವೋತ್ಸವದಲ್ಲಿ ಬೆರ್ಮೆರ್ ದೈವದ ತಾತ್ಕಾಲಿಕ ಗರ್ಭಗುಡಿ (ಬಿರ್ಮೆರೆ ಗುಂಡ)ಯನ್ನು ಬಾಳೆಯ ಹಂಬೆಯ ಪದರುಗಳಿಂದ ಕಲಾತ್ಮಕವಾಗಿ ನಿರ್ಮಿಸುತ್ತಾರೆ. ಅಯ್ಯಪ್ಪನ್ ದೈವದ ‘ವಿಳಕ್ಕ್’ (ದೀಪೋತ್ಸವ) ಉತ್ಸವದಲ್ಲೂ ಇಂಥದೇ ಆಕರ್ಷಕ ರಚನೆಯನ್ನು ಮಾಡಿ ತೆಂಗಿನ ಎಳೆಯ ಗರಿಗಳ ಸೊಗಸಾದ ಅಲಂಕಾರ ಮಾಡುತ್ತಾರೆ. ದೈವಗಳಿಗೆ (ಮುಖ್ಯವಾಗಿ ಅಸುರಕ್ರಿಯೆ-ರಕ್ತಾಹುತಿ ಸಹಿತ) ಎಡೆ ಅರ್ಪಿಸುವ ಸಲುವಾಗಿ ಬಾಳೆಯ ದಪ್ಪನಾದ ಹಂಬೆ ಹಾಗೂ ಎಳೆಯ ತೆಂಗಿನ ಗರಿಗಳಿಂದ ‘ಬಲಿ’ ಎಂಬ ಕಲಾತ್ಮಕ ರಚನೆಯನ್ನು ಮಾಡುತ್ತಾರೆ. ಕೆಲವೊಮ್ಮೆ ಈ ಬಲಿ ಸಮೂಹ ಆರೆಂಟು ಜನ ಹೇರುವಷ್ಟು ದೊಡ್ಡ ಪ್ರಮಾಣದ್ದಾಗಿರುತ್ತದೆ.

ತೆಂಗಿನ ಎಳೆಯ ಗರಿಯನ್ನು ದೈವರಾಧನೆಯಲ್ಲಿ ವಿವಿಧ ಪರಿಕರಗಳಾಗಿ ಬಳಸುತ್ತಾರೆ. ಸೀಯಾಳವನ್ನು ಕೆತ್ತಿ ಅರ್ಪಿಸಲು ಎಳೆಯ ತೆಂಗಿನ ಗರಿಯ ವೃತ್ತಾಕೃತಿಯ ‘ಚಂದ್ರಿಕೆ’ಗಳನ್ನೂ ಉಪಯೋಗಿಸುತ್ತಾರೆ. ತೆಂಗಿನ ಎಳೆಯ ಗರಿಗಳ ಸೀಳುಗಳಿಂದ ದೈವದ ಕಿರುಗಣೆಯಂಥ ಉಡುಗೆ, ವಿಧವಿಧದ ವಿನ್ಯಾಸದ ‘ಅಣಿ’, ಜಕ್ಕೆಲಣಿಗಳಲ್ಲದೆ, ಪುಂಡಾಯಿ, ತಿಗಲೆಸವರಿ, ನೇರ್ತಡ್ಡ, ನೇರ್ತಟ್ಟ್ ಮೊದಲಾದ ತೊಡುಗೆಗಳನ್ನು ರಚಿಸುವುದಿದೆ. ಹಸಿ ತೆಂಗಿನ ಗರಿಯ ಕಡ್ಡಿಗಳನ್ನು ಬಣ್ಣಬರೆಯಲು ಉಪಯೋಗಿಸುತ್ತಾರೆ.

ತಾಳೆಮರದ (ಅಥವಾ ಹನೆಮರದ) ಸೋಗೆಯಿಂದ ಓಲೆಕೊಡೆಯನ್ನು ಸಿದ್ಧಗೊಳಿಸು ತ್ತಾರೆ. ಇದನ್ನು ಗೌರವದ ಕೊಡೆಯೆಂದು ಭಾವಿಸುತ್ತಾರೆ.

ಬಾಳೆಯೆಲೆ – ಅದರಲ್ಲೂ ಅಗ್ರದ ಬಾಳೆಯೆಲೆ – ಎಲ್ಲ ಬಗೆಯ ಧಾರ್ಮಿಕ ಕಲಾಪಗಳಿಗೂ ಅನಿವಾರ್ಯವಾಗಿದೆ. ಎಲ್ಲ ರೀತಿಯ ಶಾಕಾಹಾರದ, ಮಾಂಸಾಹಾರದ ನೈವೇದ್ಯಗಳ ಅರ್ಪಣೆ, ಪ್ರಸಾದವಿತರಣೆ, ಭೋಜನ, ಬಲಿಕರ್ಮ ಮೊದಲಾದ ಅನೇಕ ಕಾರ್ಯಗಳಲ್ಲಿ ಬಾಳೆ ಎಲೆ ಅಗತ್ಯ. ಬಾಳೆನಾರಿನ ಉಪಯೋಗವೂ ಕೆಲವೊಮ್ಮೆ ಇದೆ.

ವೀಳ್ಯದೆಲೆಯಂತೂ ಎಲ್ಲ ದೈವಕಾರ್ಯಗಳಿಗೂ ಬೇಕಾದ ವಸ್ತು. (ಇದರೊಂದಿಗೆ ಅಡಕೆಯೂ ಇದ್ದೇ ಇರುತ್ತದೆ) ಎಡೆ ಅರ್ಪಿಸುವಾಗ ತಾಂಬೂಲವನ್ನೂ ಅರ್ಪಿಸಬೇಕಾದುದು ಸಂಪ್ರದಾಯ ಉತ್ಸವದ ವೇಳೆ ದೈವಸೇವಕರಿಗೆ ತಾಂಬೂಲಮರ್ಯಾದೆ ಸಲ್ಲಿಸುವುದು ಒಂದು ವಿಧಿಯಾಗಿದೆ. ದೈವಕಾರ್ಯಗಳಿಗೆ ಬಳಸುವ ವೀಳ್ಯದೆಲೆ ‘ಪಂಚವಳ್ಳಿ’ ಜಾತಿಯದ್ದಾಗಿರಬೇಕೆಂಬ ನಿಯಮ ಹಿಂದೆ ಇತ್ತು.

ದೈವ ನೇಮದ ‘ಕೊಡಿಯಡಿ’ಯ ಅಲಂಕಾರಕ್ಕಾಗಿಯೂ ವೀಳ್ಯದೆಲೆಗಳನ್ನು ಬಳಸುವುದಿದೆ. ಹಿಂದೆ, ಅತಿಶುದ್ಧಾಚಾರದ ದೈವಗಳ ಉತ್ಸವಕ್ಕೆ ಪಂಚವಳ್ಳಿ ವೀಳ್ಯದ ಚಪ್ಪರ ಆಗಬೇಕಿತ್ತೆಂದು ಪ್ರತೀತಿ. ದೈವವು ವೀಳ್ಯದೆಲೆಯನ್ನು ಚಿಮ್ಮಿಸಿ ಶಕುನವನ್ನು ನಿರ್ದೇಶಿಸುವ ವಾಡಿಕೆ ಇದೆ.

ಶುದ್ಧದ ನೀರನ್ನು ಸಿಂಪಡಿಸಲು ಮಾವು ಮತ್ತು ಹಲಸಿನ ಎಲೆಗಳ ಗುಚ್ಛವನ್ನು ಉಪಯೋಗಿಸುತ್ತಾರೆ. ದೈವಪ್ರಸಾದ (ಅರಸಿನದ ಹುಡಿ, ಗಂಧ)ವನ್ನು ವಿತರಿಸಲು ಬಾಳೆಯೆಲೆಯ ತುಂಡು ಮಾತ್ರವಲ್ಲದೆ ಅರಳಿ, ಹಲಸು, ಸಿರಿಗೋಳಿ ಮೊದಲಾದ ಮರಗಳ ಎಲೆಗಳು ಬಳಸಲ್ಪಡುತ್ತವೆ.

ಯಾವುದೇ ಪೂಜೆಗೆ ಹೂಗಳು ಅನಿವಾರ್ಯ. ದೈವಗಳ ಅರ್ಚನೆಗೆ, ಹೂ ಹಾಕಿ ವಂದಿಸಲು, ದೈವವೇಷದ ಹೂದಂಡೆ ಮೊದಲಾದವುಗಳಿಗೆ ಕೆಂಬಣ್ಣದ ಕಿಸಗಾರ ಹೂವನ್ನು ಬಳಸುತ್ತಾರೆ. ಇದು ಎಲ್ಲ ಋತುಗಳಲ್ಲೂ ಸಿಗುವ ಹೂವು. ಅಲಂಕಾರಗಳಿಗೆ ಮಲ್ಲಿಗೆ, ಅಬ್ಬಲ್ಲಿಗೆ (ಕನಕಾಂಬರ) ಕೇದಗೆ, ಸೇವಂತಿಗೆ, ಗೊಂಡೆ ಹೂ, ಹಿಂಗಾರ ಮೊದಲಾದ ವಿವಿಧ ಹೂವುಗಳ ಬಳಕೆ ಇದ್ದರೂ ಅವುಗಳಲ್ಲಿ ಮಲ್ಲಿಗೆಗೇ ಪ್ರಾಶಸ್ತ್ಯ ಹೆಚ್ಚು. ಅದರ ಪರಿಮಳವೇ ವಾತಾವರಣವನ್ನು ವಿಶಿಷ್ಟಗೊಳಿಸುತ್ತದೆ. ಕೆಲವು ಕಡೆ (ಉದಾ : ಬಲ್ನಾಡು, ಕೂಟತ್ತಜೆ) ಉಳ್ಳಾಲ್ತಿ ದೈವದ ವೇಷವು ಅಲಂಕೃತ ಮದುಮಗಳಂತಿರುತ್ತದೆ. ಆ ಮಲ್ಲಿಗೆಯ ಅಲಂಕಾರ ಅತ್ಯಂತ ಆಕರ್ಷಕ. ಉಳ್ಳಾಲ-ಉಳಿಯಕ್ಕೆ ಆಗಮಿಸಲು ಕಾರಣವನ್ನು ಹೇಳುತ್ತಾ ಉಳ್ಳಾಲ್ತಿ ದೈವವು ಕೊಡುವ ಒಂದು ನುಡಿ ಗಮನೀಯ! ‘‘ಮಂಗಳೂರು ಮಲ್ಲಿಗೆಗ್ ಮರ್ಲಾದ್ ಬತ್ತಿ ಮಾಯೊಲು ಎಂಕುಲು’’ (ಮಂಗಳೂರು ಮಲ್ಲಿಗೆಗೆ ಮರುಳಾಗಿ ಬಂದ ಮಾಯಗಾರರು ನಾವು) ದೈವದ ಈ ರಸಿಕತೆ ಮೆಚ್ಚಬೇಕಾದುದೇ ಆಗಿದೆ. ಮಲ್ಲಿಗೆಯ ಪ್ರಸಾದವನ್ನು ‘ಪರಿಮಳ’ ಎಂದೇ ಹೆಸರಿಸುವುದು ವಾಡಿಕೆ.

ಯಾವುದಾದರೂ ಸಮಸ್ಯೆ ಬಂದಾಗ ‘ಹೂ ಕಟ್ಟಿ ಹಾಕುವುದು’ ಎಂಬ ಸರಳ ವಿಧಾನದಿಂದ ಇತ್ಯರ್ಥ ಮಾಡುವ ಕ್ರಮವಿದೆ.

ಪ್ರಸಾದವಾಗಿ ಹಿಂಗಾರ ಹಾಗೂ ಮಲ್ಲಿಗೆ ಮೊದಲಾದ ಹೂಗಳನ್ನು ನೀಡುವುದಿದೆ. ಹಾಗೆಯೆ ಹರಕೆಯಾಗಿಯೂ ಮಲ್ಲಿಗೆ ಚೆಂಡನ್ನು ಅರ್ಪಿಸುವ ಹೂವಿನ ಪೂಜೆಯನ್ನು ಸಲ್ಲಿಸುವ ವಾಡಿಕೆ ಇದೆ. ದೈವಪ್ರಸಾದವಾಗಿ ನೀಡಿದ ಹಿಂಗಾರದ ಎಳೆಗಳನ್ನು ಎಣಿಸಿ ದೈವದ ಪ್ರಸನ್ನತೆ, ಅಪ್ರಸನ್ನತೆಗಳನ್ನು ನಿರ್ಧರಿಸಲಾಗುತ್ತದೆ. ಹಿಂಗಾರದಿಂದ ‘ಬಾಡಲೆ’ ಮೊದಲಾದ ತೊಡವುಗಳಲ್ಲಿ ಮಾಡುತ್ತಾರೆ. ಉತ್ಸವದ ವೇಳೆ ದೈವಗಳ ಅಲಂಕಾರಕ್ಕಾಗಿ ಹಲವು ಸಸ್ಯೋತ್ಪನ್ನ ವಸ್ತುಗಳನ್ನು ಬಳಸುತ್ತಾರೆ. ಆದಿಮ ಕಾಲದ ದೈವವೇಷಗಳು ತೀರಾ ಸರಳವಾಗಿದ್ದವು. ಕ್ರಮೇಣ ದೈವಗಳ ವೇಷ ಭೂಷಣಗಳಲ್ಲಿ ವೈಭವೀಕರಣ ಉಂಟಾಗಿದೆ. ಮರ, ಲೋಹ, ವಸ್ತ್ರ ಇತ್ಯಾದಿಗಳನ್ನು ಬಳಸಿಕೊಂಡು ಸಿದ್ಧಗೊಳಿಸಿದ ವೇಷಭೂಷಣಗಳು ಬಳಕೆಗೆ ಬಂದವು. ಆದರೂ ತೀರಾ ನೈಸರ್ಗಿಕ ವಸ್ತುಗಳಲ್ಲೇ ಸಿದ್ಧಗೊಂಡ ದೈವವೇಷಗಳನ್ನು ಈಗಲೂ ಕಾಣಬಹುದು. ತೆಂಗಿನ ಎಳೆಯ ಗರಿಗಳಿಂದ ಹಾಗೂ ಅವುಗಳ ಸೀಳುಗಳಿಂದ ಹಿಂದೆ ಹೇಳಿದ ಕೆಲವು ತೊಡುಗೆಗಳನ್ನು ರಚಿಸುತ್ತಾರೆ. ಕವುಂಗಿನ ಹಾಳೆಗಳಿಂದ ವಿವಿಧ ರೀತಿಯ ಅಣಿ, ಬುಜಪಾಳೆ, ಬುಜೊಪತ್ತ್, ಕಾರಪಾಳೆ, ಪಾದಪಾಳೆ, ಎದೆತಾಳೆ ಇತ್ಯಾದಿಗಳನ್ನು ರಚಿಸುತ್ತಾರೆ. ಹಿಂದೆ ಕೆಬಿನ, ಚಪ್ಪರಕೊಂಬು ಇತ್ಯಾದಿಗಳನ್ನು ಹಾಳೆಯಿಂದಲೇ ರಚಿಸುವುದಿತ್ತು. ಪಂಜುರ್ಳಿ, ಗುಳಿಗ, ಪೊಟ್ಟಂತೆಯ್ಯಂ, ಪೀಯಾಯಿ ಮೊದಲಾದ ದೈವಗಳ ಮುಖವಾಡಗಳನ್ನು ಹಾಳೆಯಿಂದಲೇ ನಿರ್ಮಿಸುವುದಿದೆ. ಚಿತ್ರವತ್ತಾದ ಅಲಂಕಾರ ಕ್ರಿಯೆಗೆ ಹಾಳೆ ಚೆನ್ನಾಗಿ ಒಗ್ಗುತ್ತದೆ. ನಾಲ್ಕೈತಾಯ, ಮಾಕಾಳ್ದಿ ಅಬ್ಬೆ, ಕೇರಳದ ಪಡೆಯಣಿಯ ಚಾಮುಂಡಿ ದೈವಗಳ ಅಣಿಗಳಿಗೆ ಒಂದು ಸಾವಿರ ಹಾಳೆಗಳ ತುಂಡುಗಳನ್ನು ಉಪಯೋಗಿಸುತ್ತಾರೆಂದು ಹೇಳಲಾಗಿದೆ. ಉಪ್ಪಿನಂಗಡಿಯ ‘ಮಾಕಾಳ್ದಿ ಅಬ್ಬೆ’ಯ ದೈವವೇಷದ ೩೦-೪೦ ಅಡಿ ಉದ್ದದ ‘ರಕ್ತರಂಜಿತ’ ನಾಲಗೆಯು ನೂರಾರು ಹಾಳೆಗಳ ಜೋಡಿಕೆಯ ಅದ್ಭುತರಚನೆಯಾಗಿದೆ.

ಭೂತಕ್ಕೆ ಬಾರಣೆ (ಪಾರಣೆ) ಅರ್ಪಿಸಲೂ ಹಾಳೆಯನ್ನು ಉಪಯೋಗಿಸುತ್ತಾರೆ.

ಭೂತಾಳೆ (ದಡ್ಪಾಲೆ) ಗಿಡದ ನಾರಿನಿಂದ ಗಡ್ಡಮೀಸೆ, ಜೊಂಕುದುರಿ ಮೊದಲಾದವುಗಳನ್ನು ರಚಿಸುತ್ತಾರೆ. ತೆಂಗಿನ ಸೋಗೆಯ ದಿಂಡಿನಿಂದ ತಾತ್ಕಾಲಿಕ ಬಿಲ್ಲುಬಾಣಗಳನ್ನು ರಚಿಸುತ್ತಾರೆ. ಬಿದಿರು, ಬೆತ್ತಗಳನ್ನು ಅಣಿ ಇತ್ಯಾದಿಗಳ ಅಟ್ಟೆಯ ರಚನೆಗೆ ಉಪಯೋಗಿಸುತ್ತಾರೆ. ಬಿದಿರನ್ನು ಮಾಕಾಳಿ ಅಬ್ಬೆಯಂಥ ದೈವಗಳ ನೀಳವಾದ ‘ಮುಡಿ’ಗಳನ್ನು ಆಧರಿಸಲು, ಚಪ್ಪರ ಇತ್ಯಾದಿಗಳಿಗೆ ಬಳಸುತ್ತಾರೆ. ಹಲಸಿನ ಮರದ ಕಟ್ಟಿಗೆಯು ಧೂಪಕಾರ್ಯ ಹಾಗೂ ಹೋಮ ಕೆಂಡಸೇವೆಗಳಿಗೆ ಅಗತ್ಯ.

ನಿಸರ್ಗದತ್ತವಾಗಿ ಎಲ್ಲ ಋತುಗಳಲ್ಲೂ ದೊರಕುವ ತೆಂಗಿನ ಕಾಯಿ (ಅಥವಾ ಸೀಯಾಳ) ಮತ್ತು ಬಾಳೆಹಣ್ಣು. (ಪ್ರಧಾನವಾಗಿ ಕದಳಿಹಣ್ಣು) ಎಲ್ಲ ಪರ್ವಕಾಲಗಳಲ್ಲಿ ವಿನಿಯೋಗಕ್ಕೆ ಒದಗುತ್ತವೆ. ಜೊತೆಗೆ ನಿಸರ್ಗದ ವಸ್ತುಗಳನ್ನು ಸಂಸ್ಕರಿಸಿ ಸಿದ್ಧಗೊಳಿಸಿದ ಅವಲಕ್ಕಿ, ಹುರಿಯಕ್ಕಿ, ಅರಳು, ಕಡುಬು, ರೊಟ್ಟಿ, ದೋಸೆ, ಅನ್ನ, ವಿವಿಧ ಪಲ್ಯಗಳು, ಬೆಲ್ಲ, ಕಜ್ಜಾಯ ಇತ್ಯಾದಿಗಳನ್ನು ಬೇರೆ ಬೇರೆ ದೈವಕಾರ್ಯಗಳಲ್ಲಿ ನೈವೇದ್ಯವಾಗಿ ಅರ್ಪಿಸುವುದಿದೆ. ‘ಅಸುರಕ್ರಿಯೆ’ಯ ಆರಾಧನೆಯಾದರೆ ಕಳ್ಳೂ, ಕೆಲವೊಮ್ಮೆ ಸಾರಾಯಿಯೂ ನಿವೇದಿಸಲ್ಪಡುತ್ತದೆ. ಓಕುಳಿಯ ನೀರೂ ಅಗತ್ಯ. ಈ ವಸ್ತುಗಳು ಬಳಿಕ ಪ್ರಸಾದವಾಗಿ ವಿತರಿಸಲ್ಪಡುತ್ತವೆ.

ಅಕ್ಕಿ ಮತ್ತು ಬತ್ತವನ್ನು ದೈವಪೂಜೆಯ ಹಲವು ಸಂದರ್ಭಗಳಲ್ಲಿ ಬಳಸುತ್ತಾರೆ. ಕೆಲವೊಮ್ಮೆ ನೈವೇದ್ಯವಾಗಿಯೂ ಕೆಲವೊಮ್ಮೆ ಪ್ರತೀಕಗಳಾಗಿಯೂ ಇವು ಉಪಯೋಗಿಸಲ್ಪಡುತ್ತವೆ. ಗರಡಿಗಳಲ್ಲಿ ಬತ್ತದಿಂದ ಮನುಷ್ಯಾಕೃತಿ ಬಿಡಿಸಿ ಮಾವು, ನೇರಳೆ, ಅಶ್ವತ್ಥ ಎಲೆ, ಬಾಳೆ ಸಿಪ್ಪೆ ಇತ್ಯಾದಿಗಳಿಂದ ಮುಚ್ಚಿ ಕೋಟಿಚೆನ್ನಯರ ಪ್ರತಿಕೃತಿ ನಿರ್ಮಿಸುವ ವಾಡಿಕೆ ಇದೆ. ಇದನ್ನು ‘ಗರಿಯ’ ಅಥವಾ ‘ಸಮಮುಂಡೈ’ ಎನ್ನುತ್ತಾರೆ.

ಕೇರಳದಲ್ಲಿ ಕೆಲವು ದೈವಗಳ ಪ್ರೀತ್ಯರ್ಥವಾಗಿ ಜರಗಿಸುವ ವಿಧಿಗಳಲ್ಲಿ ‘ಕಳಂ’ ಎಂಬುದೊಂದಿದೆ. ಬಣ್ಣದ ಹುಡಿಗಳಿಂದ ಮಂಡಲ ಹಾಗೂ ದೈವಚಿತ್ರ (ಭದ್ರಕಾಳಿ, ವೇಟಕ್ಕೊರುಮಗನ್, ಯಕ್ಷಿ ಇತ್ಯಾದಿ) ಬರೆದು ಧಾನ್ಯ, ಹೂ, ಹಣ್ಣುಗಳಿಂದ ಅಲಂಕರಿಸುತ್ತಾರೆ. ಸ್ತ್ರೀ ದೇವತೆಯ ಚಿತ್ರದ ಸ್ತನಭಾಗದಲ್ಲಿ ಧಾನ್ಯದ ಚಿಕ್ಕ ರಾಶಿಗಳನ್ನು ಇರಿಸುತ್ತಾರೆ.

ಚೀರುಂಬ ಭಗವತಿಯ ‘ಭರಣಿ’ ಉತ್ಸವದ ವೇಳೆ ಪಂಚವರ್ಣಗಳಿಂದ ಕೂಡಿದ ‘ಸರ್ಪಕಳ’ ಎಂಬುದನ್ನು ದೈವಸ್ಥಾನದ ಇದಿರ ಅಂಗಳದಲ್ಲಿ ಬಿಡಿಸುತ್ತಾರೆ. ಇದನ್ನು ಭಗವತಿಯ ಪಾತ್ರಿಗಳು ಉಗ್ರಾವೇಶದಿಂದ ತುಳಿಯುವ ವಿಧಿಯೊಂದಿದೆ.

ವಿವಿಧ ನಾಗಾರಾಧನೆಗಳಲ್ಲೂ ಇತರ ಆಚರಣೆಗಳಲ್ಲೂ ಪಂಚವರ್ಣಧ ಮಂಡಲಗಳನ್ನೂ ಚಿತ್ರಗಳನ್ನೂ ಬಿಡಿಸುವುದು ರೂಢಿಯಾಗಿದೆ. ಈ ಬಣ್ಣದ ಹುಡಿಗಳು ಸಾಮಾನ್ಯವಾಗಿ ನೈಸರ್ಗಿಕವಾಗಿರುತ್ತವೆ. ಅಕ್ಕಿಯಿಂದ ಬಿಳಿಹುಡಿ, ಅರಸಿನದ ಕೊಂಬಿನಿಂದ ಹಳದಿ ಹುಡಿ, ಬತ್ತದ ಹೊಟ್ಟನ್ನು ಸುಟ್ಟು ಕಪ್ಪು ಹುಡಿ, ಅರಸಿನದ ಹುಡಿಗೆ ಸುಣ್ಣ ಬೆರಸಿ ಕೆಂಪು ಹುಡಿ, ನೆಲ್ಲಿ, ಬಾಗೆ ಮೊದಲಾದ ಎಲೆಗಳಿಂದ ಹಸುರು ಹುಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.

ಪಂಚವರ್ಣಗಳು ಪಂಚಭೂತಗಳನ್ನು ಸಂಕೇತಿಸುತ್ತವೆ ಎಂಬುದು ಶಾಸ್ತ್ರೀಯ ವಿವರಣೆ.

ಕೆಲವು ಕಡೆ ಸತ್ಯದೇವತೆಯ ಕೋಲದ ವೇಳೆ ಸೀಯಾಳದ ಸಿಪ್ಪೆ ಕಳೆದು. ಅದರಲ್ಲಿ ಹೆಣ್ಣು ದೇವತೆಯ ಮುಖದ ಚಿತ್ರ ಬಿಡಿಸಿ ಅದನ್ನು ಬಟ್ಟೆಯಲ್ಲಿ ಸುತ್ತಿ, ಈ ಪ್ರತಿ ಕೃತಿಗೆ ಆಭರಣವಿಟ್ಟು ಅಲಂಕರಿಸುವುದಿದೆ. ಪ್ರತಿ ಕೃತಿ ರಚನೆಗಾಗಿ ಜನಪದ ಕಲಾವಿದರು ಎಂಥ ಸರಳ ಸಾಮಾನ್ಯ ವಸ್ತುಗಳನ್ನು ಬಳಸುತ್ತಾರೆಂಬುದು ಕುತೂಹಲದ ವಿಚಾರವಾಗಿದೆ.

ದೈವ ಸನ್ನಿಧಿಗೆ ವಿವಿಧ ಫಲವಸ್ತುಗಳನ್ನು (ಮುಖ್ಯವಾಗಿ ಪ್ರಥಮ ಫಲಗಳು) ಕಾಣಿಕೆಯಾಗಿ ಅರ್ಪಿಸುವುದು ಸಾಮಾನ್ಯವಾಡಿಕೆ. ಕಾಯಿಪಲ್ಯ, ಬಾಳೆಗೊನೆ, ಬಾಳೆಯೆಲೆ, ಸೀಯಾಳ, ಹಿಂಗಾರ, ಅಡಿಕೆ, ಅಕ್ಕಿಮುಡಿಗಳನ್ನು ಹೊರೆಯ ರೂಪದಲ್ಲಿ ಅರ್ಪಿಸುವುದಿದೆ. ದೈವಸ್ಥಾನದಲ್ಲಿ ಕೊಡಿಯೇರುವ (ಧ್ವಜಾರೋಹಣ) ಸಂಪ್ರದಾದಯವಿದ್ದರೆ ಫಲವಸ್ತುಗಳನ್ನು ಹರಕೆಯಾಗಿ ಕೊಡಿ ಮರದ ಬುಡಕ್ಕೆ ಕಟ್ಟುತ್ತಾರೆ. ದೈವ ಸ್ಥಾನಗಳಿಗೆ ಸಂಬಂಧಿಸಿದವರು ತೆಂಗಿನಕಾಯಿ, ಸೀಯಾಳ, ತೆಂಗಿನ ಮಡಲುಗಳನ್ನು ವಂತಿಗೆಯಾಗಿ ನೀಡುವ ಸಂಪ್ರದಾಯವಿದೆ.

ಫಲಸಮೃದ್ದಿಯ ಸಂಕೇತವಾದ ತೆನೆಹಬ್ಬ ಅಥವಾ ಕದಿರುಕಟ್ಟುವ ಕ್ರಿಯಾಚರಣೆ ಅನೇಕ ಕಡೆ ರೂಢಿಯಲ್ಲಿದೆ. ಮುಂಜಾನೆ ಮಡಿಯಲ್ಲಿ ಬತ್ತದ ಗದ್ದೆಯಿಂದ ಒಂದಿಷ್ಟು ತೆನೆಗಳನ್ನು ಕಿತ್ತು ಬುಟ್ಟಿಯಲ್ಲಿಟ್ಟು ತಲೆಯ ಮೇಲೆ ಹೊತ್ತು ತಂದು ಅವುಗಳನ್ನು ಅತ್ತಿ, ಇತ್ತಿ, ಆಲ, ಅರಳಿ, ಮಾವು, ಬಿದಿರು, ಇಟ್ಟೇವು ಇತ್ಯಾದಿ. ಎಲೆಗಳಲ್ಲಿ ಕೆಲವನ್ನು ಹಾಗೂ ಉತ್ತರ ಬಳ್ಳಿ (ಪೊಲಿಬಳ್ಳಿ), ಪಚ್ಚೆತೆನೆ ಇವುಗಳೊಂದಿಗಿಟ್ಟು ಉಪ್ಪಳಿಗೆ ಅಥವಾ ಇಟ್ಟೇವು ಎಲೆಯಲ್ಲಿ ಸುರಳಿಸುತ್ತಿ, ದಡ್ಡಾಲ ಮರದ ನಾರಿನಲ್ಲಿ ದೈವಸ್ಥಾನದ ವಿಶಿಷ್ಟ ಭಾಗಗಳಿಗೆ ಕಟ್ಟುತ್ತಾರೆ. ಉಳಿದುದನ್ನು ಜನ ಹಂಚಿಕೊಂಡು ತಮ್ಮ ಮನೆಗಳಿಗೆ ಒಯ್ಯುತ್ತಾರೆ. ಇದೊಂದು ರಕ್ಷೆಯಂಥ ಸಾಧನವೂ ಅಹುದು; ಧಾನ್ಯಲಕ್ಷ್ಮಿಯ ಉಪಾಸನೆಯೂ ಅಹುದು. ಇದು ದಸರೆಯ ಸುಮಾರಿಗೆ ನಡೆಯುವ ಕ್ರಿಯಾವಿಧಿ.

‘ಕಾಡ್ಯನ ಮನೆ’ಗಳಲ್ಲಿಯೂ ನಿರ್ದಿಷ್ಟ ದಿನಗಳಲ್ಲಿ ತೆನೆಯ ಹಬ್ಬ ವಿಧಿವತ್ತಾಗಿ ನಡೆಯುತ್ತದೆ.

ಕೊಯ್ಲಿನ ಹಿನ್ನೆಲೆಯಲ್ಲಿ ಬೆಳೆಗೆ ಸಂಬಂಧಿಸಿ ಜನಪದರ ಸಂಭ್ರಮ ಪ್ರಪಂಚದಾದ್ಯಂತ ವಿವಿಧ ರೀತಿಯಲ್ಲಿ ಪ್ರಕಟವಾಗಿದೆ. ಹಾಡು, ಕುಣಿತಗಳಲ್ಲದೆ ಆರಾಧನಾ ವಿಧಿಗಳೂ ಅವುಗಳಲ್ಲಿ ಸೇರಿವೆ. ದೀಪಾವಳಿಯ ವೇಳೆ ಹೊಸ ಬತ್ತದಿಂದ ಮಡಿಯಲ್ಲಿ ತಯಾರಿಸಿದ ಅವಲಕ್ಕಿಯನ್ನು ನೈವೇದ್ಯವಾಗಿ ಅರ್ಪಿಸುವುದಿದೆ. ತನ್ನದಾಗಿದ್ದ ನಾಡಿನ ಬೆಳೆ ಭಾಗ್ಯಗಳನ್ನು ನೋಡಲು ಬರುವನೆನ್ನಲಾದ ಬಲೀಂದ್ರನಿಗೂ ಹೊಸ ಅವಲಕ್ಕಿಯ ಔತಣವನ್ನು ನೀಡುತ್ತಾರೆ.

ಕೇರಳದಲ್ಲಿ ಮಕರ ಮಾಸದಲ್ಲಿ ಬೆಳೆ ಕಟಾವಿನ ಅನಂತರ ‘ಊರಾಳಿ ಪಡೆಯಣಿ’ ಎಂಬ ವಿಶೇಷ ದೈವೋತ್ಸವ ನಡೆಯುವುದಿದೆ ಇಲ್ಲಿ. ನಿಸರ್ಗ ಶಕ್ತಿಪ್ರತೀಕಗಳಾದ ಹಲವು ದೈವಗಳ ಕೋಲ ನಡೆಯುತ್ತದೆ. ಈ ಸಂದರ್ಭದ ಅಣಿಗಳು ಅದ್ಭುತ ವಿನ್ಯಾಸವುಳ್ಳವುಗಳು.

ಕುಂದಾಪುರ ಕಡೆಯ ಪಾಣಾರಾಟದಲ್ಲಿ ತಗಣಿ, ಇಲಿ, ಮಂಗ, ಕಾಡುಹಂದಿ ಇತ್ಯಾದಿಗಳ ಕಾಟವನ್ನು ಹೋಗಲಾಡಿಸುವ ಉದ್ದೇಶದಿಂದ ಭೂತೋತ್ಸವದ ನಡುವೆ ತಗಣೆಕೋಲ, ಇಲಿ ಕೋಲ ಇತ್ಯಾದಿಗಳನ್ನು ಹರಕೆಯಾಗಿ ಏರ್ಪಡಿಸುತ್ತಾರೆ. ನಿಸರ್ಗದ ಈ ಕ್ಷುದ್ರ ಶಕ್ತಿಗಳ ನಾಶಕ್ಕೆ ನಿಸರ್ಗದ ಹಿರಿಯ ಶಕ್ತಿಗಳ ಪ್ರತೀಕಗಳಾದ ಭೂತಗಳನ್ನು ವಿನಾಶಕ ಸ್ಥಾನದಲ್ಲಿ ನಿಲ್ಲಿಸುವ ಒಂದು ಬಗೆಯ ಮಾಂತ್ರಿಕ ನಡವಳಿಕೆ ಇದೆಂದರೂ ಸಲ್ಲುವುದು.

ಕೆಲವು ಪ್ರಾಣಿಗಳ ಮಣ್ಣಿನ ಅಥವಾ ಲೋಹಗಳ ಪ್ರತಿಕೃತಿಗಳನ್ನು ಹರಕೆಯಾಗಿ ಒಪ್ಪಿಸುವಲ್ಲಿಯೂ ಇದೇ ತತ್ತ್ವ ಹುದುಗಿದೆಯೆನ್ನಬಹುದು.

ಕೋಲನೇಮಗಳ ಕೊನೆಯಭಾಗದಲ್ಲಿ ‘ಇಂಡಿತರ್ಪಣ’ ಅಥವಾ ಇಂಡಿ ಪಾರಾವುನೆ ಎಂಬ ಕ್ರಿಯಾವಿಧಿಯೊಂದಿದೆ. ಇಂಡಿಯೆಂಬುದು ಹಲವಾರು ಬಗೆಯ (ಹದಿನಾರು ಎನ್ನುತ್ತಾರೆ) ಸೊಪ್ಪು, ಕೆತ್ತೆ, ಹೂವು, ಬಾಳೆಯ ಹಂಬೆಯ ತುಂಡುಗಳು ಇತ್ಯಾದಿಗಳ ಮಿಶ್ರಣವಾಗಿದೆ. ಐರೋಳು, ಮೈರೋಳು, ಬಿಲ್ವಪತ್ರೆ ಜೋಗಿ ಜಂಗಮೆ ಇತ್ಯಾದಿ ಸಸ್ಯಗಳ ಕೆತ್ತೆ ಇತ್ಯಾದಿಗಳು ಇಂಡಿಯಲ್ಲಿ ಸೇರಬೇಕೆಂದಿದೆ. ಇಂಡಿ ಬಿಸಾಡುವುದು ಸಾಮಾನ್ಯವಾಗಿ ಬಲಿಕರ್ಮಕ್ಕೆ ಸಂಬಂಧಪಟ್ಟ ಕ್ರಿಯೆ. ಆ ವೇಳೆ ಸಾಮಾನ್ಯವಾಗಿ ಓಕುಳಿ ನೀರನ್ನೂ ಉಪಯೋಗಿಸುತ್ತಾರೆ. ಹೀಗಾಗಿ ಇದೊಂದು ಮಾಂತ್ರಿಕ ವಿಧಿಯಂತೆಯೇ ತೋರುತ್ತದೆ. ಅನಿಷ್ಟ ನಿವಾರಣೆ ಇದರ ಉದ್ದೇಶವೆನ್ನಲಾಗಿದೆ.

ಅಶುಭವೃಕ್ಷವೆನಿಸಿದ ಕಾಸರ್ಕನ ಮರ ಹಾಗೂ ಅದರ ವಿವಿಧ ಭಾಗಗಳನ್ನು ಔಷಧ, ಭೂತಪ್ರೇತ ಸಂಬಂಧ, ಮಂತ್ರತಂತ್ರ, ಜೀವನಾವರ್ತನ ಆಚರಣೆಗಳಲ್ಲಿ ಬಳಸುವುದುಂಟು.

ಒಂದು ದೈವೋತ್ಸವಕ್ಕೆ ಸಂಬಂಧಿಸಿ ಮರಮುಹೂರ್ತ, (ಕೆಂಡಸೇವೆಗೆ ಮರದ ಆಯ್ಕೆ) ಬಾಳೆಗೊನೆ ಮುಹೂರ್ತ, ಉಗ್ರಾಣ ಮುಹೂರ್ತ ಮುಂತಾದ ಆಚರಣೆಗಳು ಉತ್ಸವಕ್ಕೆ ಸಂಬಂಧಿಸಿದ ರಕ್ಷಾಸೂತ್ರಗಳೂ ಅಹುದು; ಪ್ರಾಕೃತಿಕ ವಸ್ತುಗಳೊಂದಿಗೆ, ಮುಖ್ಯವಾಗಿ ಸಸ್ಯ ಜಗತ್ತಿನೊಂದಿಗೆ ಮಾಡಿಕೊಂಡ ಹೊಂದಾಣಿಕೆಯೂ ಅಹುದು.

ಒಟ್ಟಿನಲ್ಲಿ ಪ್ರಕೃತಿಗೂ ದೈವಾರಾಧನೆಗೂ ಅವಿನಾಭಾವ ಸಂಬಂಧವಿದೆಯೆಂಬುದು ನಿಸ್ಸಂದೇಹ ವಿಚಾರ. ಈ ಸಂಬಂಧವನ್ನು ಒಂದು ವೇಳೆ ಆರಾಧನಾ ರಂಗವು ಕಳಚಿಕೊಂಡರೆ ಅದೊಂದು ಶುಷ್ಕವೂ, ಕೃತಕವೂ ಆದ ಪ್ರದರ್ಶನ ವೇದಿಕೆಯಾಗಬಹುದು.

ಪರಾಮರ್ಶನ ಸಾಹಿತ್ಯ

೧. ಕ.ವೆಂ.ರಾಜಗೋಪಾಲ(ಸಂ), ತುಳುವರ ಆಚರಣೆಗಳಲ್ಲಿ ಕಲಾವಂತಿಕೆ,  ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು, ೧೯೮೯

೨. ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ., ೧೯೯೮

೩. ಪು.ಶ್ರೀನಿವಾಸ ಭಟ್ಟ, ಕಟೀಲು : ಜನಪದ ಶತಪಥ, ಯುಗಪುರುಷ, ಪ್ರಕಟಣಾಲಯ, ಕಿನ್ನಿಗೋಳಿ, ದ.ಕ., ೨೦೦೫

೪. ಅಮೃತ ಸೋಮೇಶ್ವರ(ಸಂಗ್ರಹ) ಬೇರೆ ಬೇರೆ ದೈವಗಳ ಪಾಡ್ದನಗಳು.