ನಾಗಾರಾಧನೆ ವಿಶ್ವದ ಅನೇಕ ದೇಶಗಳಲ್ಲಿ ರೂಢವಾಗಿದ್ದು, ಆಯಾ ಪ್ರದೇಶದ ಸಂಸ್ಕೃತಿಯಲ್ಲಿ ವಿಶೇಷವಾದ ಸಂಬಂಧವನ್ನು ಪಡೆದ ವಿಚಾರವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ, ಸುಮೇರಿಯಾ, ಬೆಬಿಲೋನಿಯಾ, ಏಸ್ಸೀರಿಯಾ, ಉರಿಸ್ತಾನ್, ಇರಾನ್, ಚೀನಾ, ಆಫ್ರಿಕಾ ಮುಂತಾದ ದೇಶಗಳಲ್ಲಿ ಉರಗಾರಾಧನೆ ಬೇರೆ ಬೇರೆ ರೂಪಗಳಲ್ಲಿ ಪ್ರಚಲಿತವಾಗಿತ್ತು. ಈಜಿಪ್ಟಿನ ಸೆಬ್ ದೇವತೆ ನಾಗಗಳ ರಾಜ. ಕ್ರೀಟ್ ದೇವತೆಯ ಕೈಯಲ್ಲಿ ಉತ್ಪನ್ನಶಕ್ತಿಯ ಸಂಕೇತವಾದ ನಾಗಗಳಿದ್ದುವು. ಗ್ರೀಸ್ ದೇಶದಲ್ಲಿ ಜೀವಂತ ನಾಗಗಳನ್ನು ಭೂಮಿಪುತ್ರರೆಂಬ ನಂಬಿಕೆಯಿಂದ ಕೆಲವೊಂದು ಪರ್ವದಿನಗಳಲ್ಲಿ ಉಣಿಸುತ್ತಿದ್ದರು. ಈ ಆರಾಧನೆಯ ಮೂಲವೆಲ್ಲಿ ಎಂಬುದು ಖಚಿತವಾಗಿ ತಿಳಿಯ ದಿದ್ದರೂ ಈ ದೇಶಗಳೊಂದಿಗೆ ಒಂದಲ್ಲ ಒಂದು ಕಾಲದಲ್ಲಿ ಭಾರತಕ್ಕೆ ಸಂಪರ್ಕವಿದ್ದುದನ್ನು ಅಲ್ಲಗಳೆಯುವಂತಿಲ್ಲ. ಬಹುಪ್ರಾಚೀನ ಕಾಲದಿಂದಲೂ ಈ ಎಲ್ಲ ದೇಶಗಳಲ್ಲಿ ನಾಗನನ್ನು ಫಲಸಮೃದ್ದಿಯ ಸಂಕೇತವೆಂದು ನಂಬಿಕೊಂಡು ಬಂದಿದ್ದಾರೆ ಎಂತಲೇ ನಾಗ ಮನಸ್ಸಿನ ಕಾಮನೆಯ ಪ್ರತೀಕವೂ ಹೌದು.

ಭಾರತದ ಉದ್ದಗಲಕ್ಕೂ ಸರ್ಪಾರಾಧನೆಯ ವಿವಿಧ ಪ್ರಕಾರಗಳು ಇಂದಿಗೂ ಕಾಣಸಿಗುತ್ತವೆ. ಈ ದೇಶದಲ್ಲಿ ನಾಗಾರಾಧನೆಗೆ ಇರುವಷ್ಟು ಪ್ರಾಶಸ್ತ್ಯ ಪ್ರಾಯಃ ಇನ್ನಾವ ದೇಶದಲ್ಲೂ ಇರಲಾರದು. ನಮ್ಮ ಹೆಚ್ಚಿನ ಎಲ್ಲ ದೇವತೆಗಳು ಒಂದಲ್ಲ ಒಂದು ರೀತಿಯಲ್ಲಿ ಸರ್ಪಸಂಬಂಧವನ್ನು ಹೊಂದಿದ್ದಾರೆ. ಶಿವೊನಾಗಭೂಷಣ, ವಿಷ್ಣು ನಾಗಶಯನ, ಲಂಬೋದರನ ಉದರವು ಸರ್ಪರಜ್ಜು ಬಂಧಿತ, ಸುಬ್ರಹ್ಮಣ್ಯನಂತೂ ನಾಗರೂಪಿ. ದೇವಿ ಶಾಂತಾದುರ್ಗೆ ನಾಗಸ್ವರೂಪಿಣಿ. ಬಂಗಾಲದ ಮಾನಸಾದೇವಿ ನಾಗದೇವಿಯೆನಿಸಿದ್ದಾಳೆ. ಸರ್ಪಮುಕುಟ, ಸರ್ಪಕಂಕಣ, ಸರ್ಪಕುಂಡಲ, ಸರ್ಪಮುದ್ರಿಕೆ, ಸರ್ಪಾಯುಧಗಳಿಂದ ಅಲಂಕೃತರಾದ ದೇವತೆಗಳು ಅನೇಕ. ಯೋಗಶಾಸ್ತ್ರದಲ್ಲಿ ಕುಂಡಲಿನಿ (ಸುಷುಮ್ನಾನಾಡಿ)ಯು ನಾಗಾಕೃತಿಯದೆನ್ನಲಾಗಿದೆ.

ಫಲಜೋತಿಷ್ಯದಲ್ಲಿ, ಛಾಯಾಗ್ರಹವೆನಿಸಿದ ರಾಹುವು ಸರ್ಪರೂಪಿಯೆಂದು ಕಲ್ಪಿಸಲಾಗಿದೆ. ಅನಿಷ್ಟ ಕಾಲವೆನಿಸಿದ ‘ರಾಹುಕಾಲ’ವನ್ನು ನಾಗದೇವರಿಗೆ ಸಂಬಂಧಿಸಿದ ಕಾಲವೆಂದು ನಂಬುತ್ತಾರೆ. ನಾಗನಿಗೆ ಸಂಬಂಧಪಟ್ಟ ಸೇವೆಗಳನ್ನು ಮಾತ್ರ ರಾಹುಕಾಲದಲ್ಲಿ ಮಾಡುತ್ತಾರೆ. ‘ಕಾಲಸರ್ಪ ದೋಷ’ ಮೊದಲಾದ ದೋಷವಿದ್ದವರು ರಾಹುವಿನ ಮಂತ್ರ ಜಪಿಸಬಹುದೆಂದೂ, ಗೋಮೇಧಿಕ ಕೂರಿಸಿ ಬೆಳ್ಳಿಯ ಉಂಗುರವನ್ನು ಧರಿಸಬಹುದೆಂದೂ ಹೇಳಲಾಗಿದೆ.

ಬುದ್ಧ ಜಾತಕಗಳಲ್ಲಿ ನಾಗನ ಕಥೆಗಳಿವೆ. ಚೈನತೀರ್ಥಂಕರರ ವಿಗ್ರಹಗಳಲ್ಲಿ ನಾಗನ ಹೆಡೆಯ ಚಿತ್ರಗಳಿರುವುದುಂಟು. ಮೊಹೆಂಜೋದಾರೋದಲ್ಲಿ ನಾಗವಿಗ್ರಹಾರಾಧನೆ ಇತ್ತೆಂದು ತಿಳಿದುಬರುತ್ತದೆ. ನಾಗಕುಲ, ನಾಗರಖಂಡ, ನಾಗಲಾಂಛನಗಳ ಪ್ರಸ್ತಾಪಗಳನ್ನು ನಮ್ಮ ನಾಡಿನ ಸಾಂಸ್ಕೃತಿಕ ಅಧ್ಯಯನದಲ್ಲಿ ಆಗಾಗ ಇದಿರಾಗುತ್ತೇವೆ. ಜನಪದ ಸಾಹಿತ್ಯ ಕಲೆಗಳಲ್ಲಿ ನಾಗನ ಸುಳಿದಾಟ ಧಾರಾಳ. ನಾಗರಪಂಚಮಿ ನಮ್ಮ ದೇಶದ ಒಂದು ಮುಖ್ಯ ಹಬ್ಬ. ಅಂದು ದೇಶದ ಹಲವೆಡೆ ಜೀವಂತ ನಾಗಗಳಿಗೆ ಹಾಲೂಡುತ್ತಾರೆ. ನಾಗಪ್ರತಿಮೆಗಳಿಗಂತೂ ಪುಷ್ಕಳ ಹಾಲಿನ ಅಭಿಷೇಕ, ಸ್ಕಂದಷಷ್ಟಿಯೂ ಇಂತಹದೇ ಹಬ್ಬ…

ಇಂದಿಗೂ ವೈವಿಧ್ಯಪೂರ್ಣವಾದ ನಾಗಾರಾಧನಾ ಸಂಪ್ರದಾಯಗಳು ಬಹುವಾಗಿ ಜೀವಂತವಿರುವ ಮುಖ್ಯಪ್ರದೇಶವೆಂದರೆ ತುಳುನಾಡು ಅಥವಾ ಅವಿಭಜಿತ ದಕ್ಷಿಣಕನ್ನಡ ಮತ್ತು ಅದರ ದಕ್ಷಿಣಕ್ಕಿರುವ ಕೇರಳ. ತುಳುನಾಡು ನಾಗಲೋಕವಾಗಿತ್ತೆಂದೂ, ಇಲ್ಲಿಗೆ ನಾಗಬ್ರಹ್ಮನೆಂಬ ದೈವತವೇ ಸೃಷ್ಟಿಕರ್ತಸ್ಥಾನದಲ್ಲಿರುವುದಾಗಿಯೂ ಜನಪದ ಪ್ರತೀತಿ ಇದೆ. ಬ್ರಹ್ಮ, ನಾಗಬ್ರಹ್ಮ, ನಾಗಲಿಂಗ, ಬ್ರಹ್ಮಲಿಂಗ, ನಾಗಬ್ರಹ್ಮಲಿಂಗೇಶ್ವರ, ನಾಗಯಕ್ಷ(ಕ್ಷಿ), ಬೆರ್ಮೆರ್, ಶೇಷನಾಗ, ಅನಂತಪದ್ಮನಾಭ, ಸುಬ್ರಹ್ಮಣ್ಯ ಮೊದಲಾದ ಬೇರೆ ಬೇರೆ ನಾಮರೂಪಗಳಿಂದ ಆತನನ್ನು ತುಳುನಾಡಿನಲ್ಲಿ ಆರಾಧಿಸುತ್ತಾರೆ. ತುಳುನಾಡಿಗೆ ‘ಆಲುಕ’ ಎಂಬುದು ಪ್ರಾಚೀನ ಹೆಸರುಗಳಲ್ಲೊಂದೆಂದೂ ‘ಆಲುಕ’ ಎಂದರೆ ಸರ್ಪರಾಜನೆಂದು ಹೇಳಿಕೆ ಇದೆ. ಶಂಖಕುಲದ ನಾಗವಂಶೀಯರು ತುಳುನಾಡಲ್ಲಿದ್ದರೆಂದು ಗೋವಿಂದಪೈಗಳು ಅಭಿಪ್ರಾಯ ಪಡುತ್ತಾರೆ.

ಸೌಂದರ್ಯವೂ ಅಪಾಯವೂ ಒಂದುಗೂಡಿರುವ, ತಲೆಯನ್ನು ಹೆಡೆಯಾಗಿ ವಿಚಿತ್ರವಾಗಿ ಅರಳಿಸಬಲ್ಲ ಹಾವು ನಿಸರ್ಗದ ಒಂದು ಕುತೂಹಲಪ್ರದ ಜೀವಿ. ಪ್ರಾಚೀನ ಕಾಲದಿಂದಲೇ ನಂಬಿಕೆಯ ನಿಗೂಢತೆಯ ಹುತ್ತದೊಳಗೆ ಹುದುಗಿ ಭಯ ಭಕ್ತಿ ಗೌರವಗಳನ್ನು ಗಳಿಸುತ್ತ ಬಂದಿದೆ. ಜೀವಶಕ್ತಿಯ ಸಂಕೇತವಾಗಿ ಫಲವಂತಿಕೆಯ ಪ್ರತೀಕವಾಗಿ ನಾಗದೇವತೆ ಜನಪದ ಜೀವನದಲ್ಲಿ ಭದ್ರವಾದ ನೆಲೆಯನ್ನು ಕಲ್ಪಿಸಿಕೊಂಡಿದೆ.

ತುಳುನಾಡು ಸಮೃದ್ಧವಾಗಿ ಮಳೆಯಾಗುವ ಭೂಭಾಗವಾಗಿದ್ದು, ಇಲ್ಲಿ ಅರಣ್ಯಗಳು ವಿಪುಲವಾಗಿದ್ದವು. ಈ ವನಗಳಲ್ಲಿ ಉರಗಗಳ ಸಂತಾನವೂ ಸಮೃದ್ಧವಾಗಿದ್ದುದು ಸಹಜವೇ. ಆತಂಕಕಾರೀ ಹಾಗೂ ಅಪಾಯಕಾರೀ ನಿಸರ್ಗಶಕ್ತಿಗಳನ್ನು ವಿವಿಧ ಆರಾಧನೆಗಳಿಂದ ಒಲಿಸಿಕೊಳ್ಳುವ ಪ್ರಯತ್ನ ಎಲ್ಲ ಜನಾಂಗಗಳಂತೆ ತುಳುವರಲ್ಲೂ ಬೆಳೆದು ಬಂದಿದೆ. ಹೀಗೆ ಭಯ, ಬಯಕೆ, ಕನಸುಗಳಿಂದ ಮೈವಡೆದು ಮೂಡಿದ ದೇವತೆ ನಾಗ.

ತುಳುನಾಡಿನಲ್ಲಿ ಹೆಜ್ಜೆ ಹೆಜ್ಜೆಗೂ ನಾಗನ ಬನ, ನಾಗನ ಕಟ್ಟೆ, ನಾಗನ ಕಲ್ಲು, ನಾಗನ ಹುತ್ತ, ನಾಗದೇವಸ್ಥಾನ, ಆಲಡೆಗಳನ್ನು ಇಂದಿಗೂ ಕಾಣಬಹುದು. ಪ್ರತಿಯೊಂದು ಮನೆತನದ ಪೂರ್ವಾರ್ಜಿತ ಸ್ಥಳದಲ್ಲಿ ನಾಗನ ಬನವಾಗಲೀ ನಾಗಾಲಯವಾಗಲೀ ಇಲ್ಲದಿರುವುದಿಲ್ಲ. ಸಂತಾನಪ್ರದವೆನಿಸಿ ಆರೋಗ್ಯಭಾಗ್ಯದಾತನಾದ ಈ ದೈವತದ ಅನುಗ್ರಹವನ್ನು ಅಂದಿನವರು ಬಯಸಿದ್ದರು. ಇಂದೂ ಆ ನಂಬಿಕೆ ಸಾಕಷ್ಟು ಊರ್ಜಿತವಾಗಿಯೇ ಇದೆ.

ಪ್ರತಿಯೊಂದು ದೇವಸ್ಥಾನ, ಭೂತಸ್ಥಾನಕ್ಕೂ ಸಂಬಂಧಪಟ್ಟಂತೆ ಪ್ರತ್ಯೇಕ ನಾಗಬನ ಅಥವಾ ನಾಗಪ್ರತಿಷ್ಠೆಗಳು ಇದ್ದೇ ಇರುತ್ತವೆ. ಯಾವುದೇ ಆರಾಧನೆಯ ಸಂಕೀರ್ಣವಾದರೂ ನಾಗನಿಗೆ ಅನಿವಾರ್ಯವಾದೊಂದು ಸ್ಥಾನ ಮೀಸಲಿರುತ್ತದೆ. ಭೂಮಿಯ ಪುತ್ರನೆನಿಸಿದ ನಾಗನಿಗೆ ನೆಲದ ಒಡೆತನವನ್ನು ಆರೋಪಿಸಲಾಗುತ್ತದೆ. ಹಾಗಾಗಿ ನಾಗ ‘ಸ್ಥಳ ಕರ್ತು’ ವಾಗಿ (ಕ್ಷೇತ್ರಪಾಲನಾಗಿ) ಮನ್ನಣೆ ಪಡೆಯುತ್ತಾನೆ. ಆಲಡೆಯೆಂಬ ದೈವಸಂಕೀರ್ಣದಲ್ಲಿ ನಾಗಬ್ರಹ್ಮ ಒಂದು ಪ್ರಧಾನ ದೈವತ.

ನಾಗಸಂಬಂಧಿಯಾದ ನಂಬಿಕೆ ನಡವಳಿಕೆಗಳು ಇಲ್ಲಿನ ಜನಜೀವನದಲ್ಲಿ ಅತ್ಯಂತ ಸಹಜವಾಗಿ ಮಿಳಿತವಾಗಿವೆ. ನಾಗರಹಾವಿಗೆ ಒಂದು ಸಾವಿರವರ್ಷ ಆಯುಸಿದೆಯೆಂದೂ, ಅದಕ್ಕೆ ಅತೀಂದ್ರಿಯ ಜ್ಞಾನ ಇರುವುದೆಂದೂ ಪ್ರತೀತಿ. ಏಳೂ ಕನ್ನಡಿ ಹಾವುಗಳನ್ನು, ಕಬಳಿಸಿ, ಹಾರುತ್ತ ಬಾಲ ಕರಗಿ ಕ್ರಮೇಣ ರೆಕ್ಕೆ, ಹುಟ್ಟಿ, ‘ಕುತ್ತೊಡಿ’ ಎನಿಸಿ ಹಾರುತ್ತದೆಂದೂ ಅದರ ನೆರಳು ಸೋಂಕಿದವರಿಗೆ ಪಕ್ಷವಾತವೂ, ಅದರ ಬಾಯಿಂದ ಜಗುಳಿದ ಜೊಲ್ಲು ನೊರೆಯನ್ನು ಮೆಟ್ಟಿದವರಿಗೆ ‘ಕಾಲೊತ್ತು’ ಎಂಬ ಪೀಡೆಯೂ ಉಂಟಾಗುತ್ತದೆನ್ನುವುದು ಜನಪದರ ನಂಬಿಕೆ. ನಾಗರಹಾವನ್ನೋ ಅದರ ಮೊಟ್ಟೆ, ವಾಸಸ್ಥಳ, ಬೀದಿ ಇತ್ಯಾದಿಗಳನ್ನು ಫೂತಿಸಿದವರಿಗೆ ದೃಷ್ಟಿದೋಷ, ಕುಷ್ಟರೋಗ, ಸಂತಾನಕ್ಷಯಾದಿ ದೋಷ ತಟ್ಟುವುದೆಂಬ ನಂಬಿಕೆಯಿದೆ. ‘ಸರ್ಪಮತ್ಸರ’ ಎಂಬುದು ಪ್ರಸಿದ್ಧವೇ ಆಗಿದೆ. ಸಾಮಾನ್ಯವಾಗಿ ತಿಳಿದು ತಿಳಿದೂ ಯಾರೂ ನಾಗರ ಹಾವನ್ನು ಹಿಂಸಿಸುವುದಿಲ್ಲ. ಅದರ ಸಾನ್ನಿಧ್ಯ ಇರುವ ಸ್ಥಳದಲ್ಲಿ ಅಶುದ್ದಿ ಮಾಡಲು ಅಂಜುತ್ತಾರೆ. ಅಶುದ್ದಿಯಾದರೆ ಸರ್ಪ ಕಾಣಿಸಿಕೊಳ್ಳುವುದೆನ್ನುತ್ತಾರೆ. ನಾಗ ಪಾವಿತ್ರ್ಯದ ಸಂಕೇತವೆನಿಸಿದೆ.

ಸರ್ಪವೊಂದು ಸತ್ತುದನ್ನು ಕಂಡರೆ, ಅದನ್ನು ಸಂಸ್ಕಾರ ಮಾಡದೆ ಹೋಗಬಾರದೆಂದು ನಂಬಿಕೆ. ಸತ್ತ ಹಾವಿನ ಬಾಯಲ್ಲಿ ನಾಣ್ಯವನ್ನು ಇಟ್ಟು ಬಿಳಿಬಟ್ಟೆ ಹೊದೆಯಿಸಿ ದಹನ ಸಂಸ್ಕಾರ ನಡೆಯಿಸುತ್ತಾರೆ. ಆ ಬಳಿಕ ವ್ರತಸ್ಥರಾಗಿ ಉತ್ತರಕ್ರಿಯೆ ಜರಗಿಸಿ ಬ್ರಾಹ್ಮಣ ಸಂತರ್ಪನೆ ನಡೆಯಿಸುವ ರೂಢಿಯಿದೆ.

ನಾಗನಿಗೆ ಅಪಚಾರವಾಗಿದೆಯೆಂದೂ, ಆ ಬಗ್ಗೆ ಸೂಕ್ತವಾಗಿ ನಡೆದುಕೊಳ್ಳತಕ್ಕದ್ದೆಂದೂ ಸೂಚನೆಯಾಗಿ (ಸುಪ್ತಮನಸ್ಸು- ಕನಸು-ಕಾಮ-ನಾಗ ಇವುಗಳಿಗೆ ಪರಸ್ಪರ ಸಂಬಂಧವಿದೆ ಯೆಂಬುದು ಮನಃಶಾಸ್ತ್ರಜ್ಞರ ಮತ) ಅಥವಾ ವಾಸ್ತವಿಕವಾಗಿ ನಾಗದರ್ಶನ, ಬಾವಿಯ ನೀರು ಹಳದಿಯಾಗುವುದು, ಮೈಮೇಲೆ ಬಿಳಿಯ ಕಲೆ ಬೀಳುವಿಕೆ, ಮರ, ಗಿಡ, ತರಕಾರಿಗಳಲ್ಲಿ ನಾಗನ ಆಕೃತಿ ಕಾಣಿಸಿಕೊಳ್ಳುವುದು ಇತ್ಯಾದಿ ಸಂಭವಿಸುವುದುಂಟೆಂದು ನಂಬಲಾಗಿದೆ. ಪರಿಹಾರವಾಗಿ ನಾಗಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವುದು ಸಾಮಾನ್ಯ. ನಾಗರಪ್ರತಿಷ್ಠೆ, ಆಶ್ಲೇಷಬಲಿ, ನಾಗದರ್ಶನ, ದಕ್ಕೆಬಲಿ, ನಾಗಮಂಡಲ, ತಂಬಿಲ ಇತ್ಯಾದಿಗಳಿಂದ ನಾಗನನ್ನು ಪ್ರಸನ್ನೀಕರಿಸುತ್ತಾರೆ.

ದಕ್ಷಿಣ ಕನ್ನಡದಲ್ಲಿ ಸುಬ್ರಹ್ಮಣ್ಯ (ಕುಕ್ಕೆ), ಕಾಳಾವರ, ಕುಡುಪು, ಮಂಜೇಶ್ವರ, ಬಳ್ಳಮಂಜ, ಪಡುಬಿದ್ರಿ, ಕುಮಾರ ಮಂಗಲ, ಮುಗು, ಕಾಟುಕುಕ್ಕೆ, ಕುಕ್ಕಂಗೋಡ್ಲು, ಕೊಕ್ಕರಾಡಿ, ಕಜಕ್ಕಾರು, ಪಾವಂಜಿ, ಕೋಟೆಕಾರು ಮೊದಲಾದೆಡೆಗಳಲ್ಲಿ ಪ್ರಸಿದ್ಧ ನಾಗಾರಾಧನಾ ಕ್ಷೇತ್ರಗಳಿವೆ. ತುಳುನಾಡಿನಲ್ಲಿ ನಾಗನನ್ನು ಸುಬ್ರಾಯ ಅಥವಾ ಸುಬ್ರಹ್ಮಣ್ಯನನ್ನು ಕರೆಯುವುದು ವಾಡಿಕೆ. ನಾಗ ಮತ್ತು ಸ್ಕಂದರು ಯಾವ ಕಾಲಘಟ್ಟದಲ್ಲಿ ಅಭಿನ್ನರಾಗಿಹೋದರೆಂದು ಖಚಿತವಾಗಿ ತಿಳಿಯುವುದಿಲ್ಲ. ತಮಿಳುನಾಡಿನಲ್ಲಿ ಸುಬ್ರಹ್ಮಣ್ಯ ನನ್ನು ಮುರುಗನ್ ಹಾಗೂ ಶೇಯೋನ್ ಎಂಬ ಹೆಸರಲ್ಲಿ ಆರಾಧಿಸುತ್ತ ಬಂದಿದ್ದಾರೆ. ಆ ದೇವತೆ ಪ್ರಣಯ ಹಾಗೂ ಸಂತಾನಕ್ಕೆ ಅನುಕೂಲವಾಗಿರುವುದು ಗಮನೀಯ ವಿಚಾರ. ಒಂದೇ ಉದ್ದೇಶಕ್ಕಾಗಿ ಉಪಾಸನೆ ಮಾಡುವ ಎರಡು ಶಕ್ತಿಗಳನ್ನು ಒಂದಾಗಿ ಎರಕಹೊಯ್ಯುವುದು ಜನಪದರ ಜಾಯಮಾನ. ನಾಗ-ಸ್ಕಂದರು ಮಾತ್ರವಲ್ಲ, ನಾಗ(ಅನಂತ) ಪದ್ಮನಾಭರ ಸಹಯೋಗವೂ ಇಲ್ಲಿನ ಉಪಾಸನಾರಂಗದಲ್ಲಿ ನಡೆದು ಹೋಗಿದೆ.

ತುಳುಭಾಷೆಯ ಪ್ರಾಚೀನ ಪಾಡ್ದನ ಸಾಹಿತ್ಯದಲ್ಲಿ ನಾಗಬ್ರಹ್ಮನ ಆವಿರ್ಭಾವ, ಕಲೆ ಕಾರಣಿಕಗಳ ಬಗೆಗೆ ವಿವರಗಳು ಸಿಕ್ಕುತ್ತವೆ. ನಾಗರಾಜ ಮತ್ತು ದುಗಣರಾಜ ಎಂಬ ನಾಗರಾಜರು ಚಿನ್ನದ ಹಾಗೂ ಬೆಳ್ಳಿಯ ಹುತ್ತಗಳಿಂದ ಪ್ರಕಟರಾಗಿ, ಮನುಷ್ಯರೂಪವನ್ನು ಧರಿಸಿ ನಾನಾ ಮಹಿಮೆಗಳನ್ನು ಮೆರೆದರೆಂದು ನಾಗಸಿರಿ ಪಾಡ್ದನವು ಬಣ್ಣಿಸುತ್ತದೆ. ಕೆಮ್ಮಲಜೆ ನಾಗಬ್ರಹ್ಮನ ಜನನ ವಿಚಾರವು ‘ಗಿಂಡೆಗಿಳಿರಾಮು’ ಎಂಬ ‘ಸಂಧಿ’ಯಲ್ಲಿದೆ. ‘ಕೋಟಿ-ಚೆನ್ನಯ’, ‘ಸತ್ಯನಾಪುರ ಸಿರಿ’ಗಳ ಸಂಧಿಗಳಲ್ಲಿ ಉಲ್ಲೇಖಿತನಾದ ‘ಬೆರ್ಮೆರ್’ ಎಂದರೆ ನಾಗಬ್ರಹ್ಮನೇ. ಇತರ ಅನೇಕ ಪಾಡ್ದನಗಳಲ್ಲೂ ನಾಗಬ್ರಹ್ಮನ ಪ್ರಭಾವಗಳ ಉಲ್ಲೇಖಗಳಿವೆ.

ತುಳುನಾಡಿನ ‘ಆಲಡೆ’ ಅಥವಾ ‘ಬ್ರಹ್ಮಸ್ಥಾನ’ ಎಂದು ಕರೆಯಲ್ಪಡುವ ವಿಶಿಷ್ಟ ಆರಾಧನಾ ಸ್ಥಳಗಳಲ್ಲಿ ಮುಖ್ಯವಾಗಿ ನಾಗ, ಬ್ರಹ್ಮ, ನಂದಿ(ನಂದಿಗೋಣ) ರಕ್ತೇಶ್ವರಿ. ಹಾಗೂ ಕ್ಷೇತ್ರಪಾಲ ಎಂಬ ಶಕ್ತಿಗಳನ್ನು ಸಮಷ್ಟಿಯಾಗಿ ಪೂಜಿಸುವ ಸಂಪ್ರದಾಯವಿದೆ. (ನಂದಿಗೋಣನನ್ನು ಮೈಸಂದಾಯನೆಂದೂ, ರಕ್ತೇಶ್ವರಿಯನ್ನು ಲೆಕ್ಕೇಸಿರಿ ಎಂದೂ, ಕ್ಷೇತ್ರ ಪಾಲನನ್ನು ಗುಳಿಗನೆಂದೂ ಹೇಳುವುದುಂಟು.) ಇವಲ್ಲದೆ ಬೇರೆಯೂ ಕೆಲವು ದೈವಗಳು ಆಲಡೆಯ ಸಂಕೀರ್ಣದಲ್ಲಿರಬಹುದು. ಆದರೆ ನಾಗನ ಉಪಸ್ಥಿತಿಯಂತೂ ಅನಿವಾರ್ಯ. ಗುಳಿಗದೈವದ ಬನದಲ್ಲೂ ನಾಗನಿಗೆ ಎಡೆಯಿದೆ. ಗುಳಿಗನ ವಾಹನವೂ ನಾಗ ಎನ್ನಲಾಗಿದೆ. ಅಷ್ಟನಾಗರಾಜರಲ್ಲಿ ಒಬ್ಬನ ಹೆಸರು ‘ಕುಳಿಕ’ ಎಂದಾಗಿದೆ.

ಆಲಡೆ ಹಾಗೂ ನಾಗಾಲಯಗಳು ಹಿಂದೆ ವನಪ್ರದೇಶದಲ್ಲಿದ್ದ ಪೂಜಾಸ್ಥಾನಗಳೆನ್ನ ಬಹುದು. ನಾಗನಿಗಂತೂ ಸಸ್ಯಶ್ಯಾಮಲವಾದ ತಂಪಾದ ತಾಣವೇ ಇಷ್ಟಕರ. ತುಳುನಾಡಿನ ನಾಗಸಂಬಂಧೀ ದೇಗುಲಗಳು ಇರುವ ಭೂಸ್ಥಿತಿಯನ್ನು ಗಮನಿಸಿದರೆ, ಸುತ್ತಲಿನ ಸ್ಥಳಕ್ಕಿಂತ ತಗ್ಗಿನ ತಂಪು ತಾವಿನಲ್ಲೆ ಆ ದೇಗುಲಗಳು ರೂಪುಗೊಂಡುದು ತಿಳಿದುಬರುತ್ತದೆ. (ಉದಾ : ಸುಬ್ರಹ್ಮಣ್ಯ, ಕುಡುಪು, ಮಂಜೇಶ್ವರ) ಒಂದು ಕಾಲದಲ್ಲಿ ಈ ದೇವಳಗಳಿದ್ದ ಸ್ಥಾನದಲ್ಲಿ ಮರಗಿಡಬಳ್ಳಿಗಳಿಂದ ನಿಬಿಡವಾದ ನಾಗವನ ಅಥವಾ ಹಿರಿಯ ಹುತ್ತಗಳು ಇದ್ದಿರಬಹುದು. ಈಗಲೂ ಕೆಲವು ದೇವಸ್ಥಾನಗಳ ಗರ್ಭಗುಡಿಯೊಳಗೆ ಬರಿಯ ಹುತ್ತಮಾತ್ರವೇ ಇದ್ದು ಅದು ನಾಗದೇವತೆಯನ್ನು ಪ್ರತಿನಿಧೀಕರಿಸುವುದನ್ನು ಕಾಣಬಹುದು. ಸುಬ್ರಹ್ಮಣ್ಯದ ಮೂಲಸ್ಥಾನದಲ್ಲಿ ಹುತ್ತವೇ ಇದ್ದು ಅದರ ಮೃತ್ತಿಕೆಯನ್ನೆ ಪ್ರಸಾದವಾಗಿ ಕೊಡುವ ಸಂಪ್ರದಾಯವಿದೆ. ಬಳ್ಳಮಂಜ ಮೊದಲಾದೆಡೆಯಲ್ಲೂ ಇದೇ ರೀತಿಯ ಹುತ್ತವಿದೆ. ಬ್ರಹ್ಮಲಿಂಗೇಶ್ವರನನ್ನು ಹುತ್ತದ ರೂಪದಲ್ಲಿ ಆರಾಧಿಸುವುದುಂಟು. ಕುಂದಾಪುರ ಕಡೆಯ ಕೆಲವು ಮುಖ್ಯ ಮನೆತನದ ಮನೆಗಳ ಪಕ್ಕದಲ್ಲಿ ‘ಸ್ವಾಮಿಮನೆ’ ಎಂದು ಕರೆಯಲ್ಪಡುವ ಚಿಕ್ಕಗುಡಿಗಳಲ್ಲಿ ದೊಡ್ಡ ಹುತ್ತಗಳೇ ಬೆಳೆದುನಿಂತಿರುತ್ತವೆ. ಹುತ್ತದ ಆರಾಧನೆಯು ಭೂಮಿಯ ಅಥವಾ ಮಾತೃದೇವತೆಯ ಆರಾಧನೆಯ ಒಂದು ರೂಪವೂ ಆಗಬಲ್ಲುದು. ಹುತ್ತದ ಅಥವಾ ಭೂಮಿಯ ಮಗುವಾಗಿ ನಾಗನಿಗೆ ಪೂಜೆ.

ತುಳುನಾಡಿನ ಸ್ಕಂದಮೂರ್ತಿಗಳು ದ್ವಿಬಾಹು ವಿಗ್ರಹಗಳಾಗಿದ್ದು, ಬಲಗೈಯಲ್ಲಿ ಹೆಚ್ಚಾಗಿ ನಾಗನ ಮೊಟ್ಟೆ ಅಥವಾ ಹೆಡೆಯನ್ನು ಧರಿಸಿಕೊಂಡುದನ್ನು ಕಾಣಬಹುದು. ದಕ್ಷಿಣ ಕನ್ನಡದ ಕೆಲವು ಶಕ್ತಿ ಕ್ಷೇತ್ರಗಳಲ್ಲಿ ನಾಗ ಮತ್ತು ದುರ್ಗಾ ಅಭೇದ್ಯವಾಗಿ ಆರಾಧನೆ ಹೊಂದುವ ಕುತೂಹಲಕರ ವಿಚಾರವನ್ನು ಗಮನಿಸಬಹುದು. ಬಸರೂರಿನ ದುರ್ಗಾಲಯ, ನೀಲಾವರದ ದುರ್ಗಾಭಗವತೀ ದೇವಾಲಯ (ಇಲ್ಲಿ ದೊಡ್ಡ ಬನ ಇದೆ) ಕಣ್ಣೂರು ದುರ್ಗಾಲಯ, ಮಂದರ್ತಿ ಕ್ಷೇತ್ರ -ಇತ್ಯಾದಿ ಕಡೆಗಳಲ್ಲಿ ಈ ಸಾಮರಸ್ಯವನ್ನು ಕಾಣಬಹುದು. ಶಾಂತಾದುರ್ಗ ಎಂಬ ಹೆಸರಲ್ಲಿ (ಗೋವಾದಲ್ಲಿ ‘ಸಾಂತೇರಿ’ ಎನ್ನುತ್ತಾರೆ) ಹುತ್ತವನ್ನು ಪೂಜಿಸಲಾಗುತ್ತದೆ. ‘ನಾಗಬ್ರಹ್ಮಲಿಂಗೇಶ್ವರ’ ಎಂಬುದರಲ್ಲಿ ನಾಗ, ಬ್ರಹ್ಮ ಮತ್ತು ಶಿವ ಎಂಬ ಮೂರು ಶಕ್ತಿಗಳ ಬೆಸುಗೆಯನ್ನು ಕಾಣಬಹುದು. ಹೆಬ್ರಿಯ ಒಂದು ಬ್ರಹ್ಮಸ್ಥಾನದಲ್ಲಿ ಗಣೇಶನೂ ಇದ್ದಾನೆ. ಒಟ್ಟಿನಲ್ಲಿ ಎಲ್ಲ ದೇವತೆಗಳೊಂದಿಗೂ ಮತಪ್ರಸ್ಥಾನಗಳೊಂದಿಗೂ ನಾಗನಿಗೆ ಹಿತಸಂಬಂಧವಿದೆಯೆಂಬುದನ್ನು ಕಂಡುಕೊಳ್ಳಬಹುದು.

ಕಾಳಾವರ ಎಂಬ ಪ್ರಸಿದ್ಧ ನಾಗಕ್ಷೇತ್ರದಲ್ಲಿ ಷಷ್ಠಿ ಹಬ್ಬದ (ಸಾಮಾನ್ಯವಾಗಿ ಷಷ್ಠಿಯೆಂದು ಎಲ್ಲ ನಾಗಕ್ಷೇತ್ರಗಳಲ್ಲೂ ಉತ್ಸವ ಜರಗುತ್ತದೆ.) ಮರುದಿನ ಬೆಳಗ್ಗೆ ನಾಗಮಂಡಲ ನಡೆಯುವುದು ವಾಡಿಕೆ. ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಕಾಳಿಂಗಸರ್ಪದ ರೂಪದಲ್ಲಿ ಹಿಂದೆ ಮೈದೋರಿದ್ದನಂತೆ. ಆ ಸರ್ಪ ಹರಿದು ಬಂದಿತೆಂದು ಹೇಳಲಾಗುವ ಅಂಕುಡೊಂಕಾದ ದಾರಿಯಲ್ಲಿ ತೋಡಿದರೆ ನೀರು ಬಹಳ ಮೇಲೆಯೇ ಸಿಗುತ್ತದಂತೆ (ನಾಗನಿಗೂ ನೀರಿಗೂ ಬಲು ನಂಟು. ಭೂಮಿಯ ಅಡಿಯ ನೀರಿನ ನಾಗಸಂಚಾರದ ಹಾದಿಯಲ್ಲಿ ‘ನಾಗಬೀದಿ’ ಎನ್ನುತ್ತಾರೆ. ಹುತ್ತ ಇದ್ದಲ್ಲಿ ನೀರಿನ ಸಾನಿಧ್ಯ ಇದೆ ಎಂದು ಊಹಿಸುತ್ತಾರೆ.)

ಇದನ್ನು ‘ಕಾಳಿಂಗತೀರ್ಥ’ ಎನ್ನುತ್ತಾರೆ. ಈ ಕ್ಷೇತ್ರದ ಕೆರೆಯಲ್ಲಿ ಮಿಂದು ಉರುಳುತ್ತಾ ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುವ ‘ಉರುಳುಸೇವೆ’ಯನ್ನು ಕೆಲವರು ಕೈಕೊಳ್ಳುತ್ತಾರೆ. ಮಣ್ಣಿನ ಐದು ಹೆಡೆಗಳ ಆಕಾರಗಳಿರುವ ಕಲಶದಲ್ಲಿ ಅಕ್ಕಿ, ಕಾಯಿ, ಹೂ ಹಣ್ಣುಗಳ ಹರಕೆ ಹೊರುವ ಪರಿಪಾಠ ಈ ಕ್ಷೇತ್ರದಲ್ಲಿದೆ. ಸಂತಾನಪ್ರಾಪ್ತಿ ಹಾಗೂ ಕುಷ್ಟರೋಗಾದಿ ಚರ್ಮರೋಗಗಳ ನಿವಾರಣೆಯ ಉದ್ದೇಶದಿಂದ ಬ್ರಾಹ್ಮಣರು ಉಂಡ ಎಲೆಗಳ ಮೇಲೆ ಹೊರಳುವ ಸೇವೆಯೂ ಇಲ್ಲಿನ ವೈಶಿಷ್ಟ್ಯಗಳಲ್ಲಿ ಒಂದು. ಈ ಬಗೆಯ ಮಡೆಸ್ನಾನ (ತುಳುವಿನಲ್ಲಿ ಮಡೆ ಎಂದರೆ ಎಂಜಲು) ಸುಬ್ರಹ್ಮಣ್ಯದಲ್ಲೂ ರೂಢಿಯಲ್ಲಿದೆ.

‘ಪರಶುರಾಮ ಸೃಷ್ಟಿ’ಯ ಸಪ್ತಮಹಾ ಕ್ಷೇತ್ರಗಳಲ್ಲೊಂದಾದ ಸುಬ್ರಹ್ಮಣ್ಯ ಕ್ಷೇತ್ರವು ಸುಪ್ರಸಿದ್ಧ ನಾಗಕ್ಷೇತ್ರ. ಕಾಡುಪ್ರದೇಶವಾದ ಇಲ್ಲಿ ಹಾವುಗಳ ಓಡಾಟ ಬಹುಸಾಮಾನ್ಯ ಸಾವಿರಾರು ನಾಗಪ್ರತಿಮೆಗಳನ್ನು ಇಲ್ಲಿ ಕಾಣಬಹುದು. ಹರಕೆಯವರ ಅನುಕೂಲಕ್ಕಾಗಿ ಬೀದಿಯಲ್ಲಿ ಬೆಳ್ಳಿಯ ಹೆಡೆ, ಮೊಟ್ಟೆ, ದೃಷ್ಟಿ ಇತ್ಯಾದಿಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ. ನಾಗದೋಷಪರಿಹಾರಕ್ಕಾಗಿ ಈ ಕ್ಷೇತ್ರಕ್ಕೆ ಬರುವವರೇ ಅಧಿಕ. ಇಲ್ಲಿ ‘ಬೀದಿ ಮಡೆಸ್ನಾನ’ ಎಂಬ ವಿಧಿ (ಉರುಳುಸೇವೆ) ರೂಢಿಯಲ್ಲಿದೆ. ಆಶ್ಲೇಷ ಬಲಿ, ನಾಗರಪ್ರತಿಷ್ಠೆ ಮೊದಲಾದ ವಿಶಿಷ್ಟ ಸೇವೆಗಳು ಇಲ್ಲಿ ಜರಗುತ್ತವೆ.

ಷಷ್ಠಿ ಉತ್ಸವದ ಇಲ್ಲಿನ ರಥೋತ್ಸವ ಪ್ರಸಿದ್ಧವಾದದ್ದು. ಇಲ್ಲಿನ ಬ್ರಹ್ಮರಥವೂ ಬೃಹತ್ ಗಾತ್ರದ್ದಾಗಿ ಕಲಾಪೂರ್ಣವಾಗಿದೆ. ರಥೋತ್ಸವದ ವೇಳೆ ಗರುಡಪಕ್ಷಿಗಳು ಆಕಾಶದಲ್ಲಿ ಹಾರುತ್ತಾ ರಥಕ್ಕೆ ಪ್ರದಕ್ಷಿಣೆ ಬರುತ್ತವೆಂದು ಪ್ರತೀತಿ ಇದೆ. ಇಲ್ಲಿನ ಬ್ರಹ್ಮರಥವನ್ನು ಎಳೆಯುವುದಕ್ಕೆ ಬಳಸಿದ ಬೆತ್ತದ ತುಂಡುಗಳು ವಿಷಹಾರಕ ಗುಣವಿರುವವು ಎಂದು ನಂಬಿಕೆ. ಇದನ್ನು ಪ್ರಸಾದವಾಗಿ ನೀಡುತ್ತಾರೆ.

ಸಮೀಪದಲ್ಲೆ ಉನ್ನತವಾದ ಕುಮಾರಪರ್ವತವಿದ್ದು, ತಾರಕಾಸುರನನ್ನು ಕುಮಾರನು ಸಂಹರಿಸಿದ ಪೌರಾಣಿಕ ಕಥೆಗೆ ಕೋಡುಮೂಡಿಸಿದಂತಿದೆ. (ಇಲ್ಲಿ ಆರು ಕೋನಗಳಿರುವ ಚಿಕ್ಕ ‘ಕುಮಾರಲಿಂಗ’ಗಳು ಅದೃಷ್ಟವಂತರಿಗೆ ದೊರಕುವುದೆನ್ನುತ್ತಾರೆ.)

ಮಂಜೇಶ್ವರ, ಕುಡುಪು, ಬಳ್ಳಮಂಜ, ಪಾವಂಜೆ, ಮೊದಲಾದ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲೂ ಷಷ್ಠಿ ಉತ್ಸವಕ್ಕೆ ವಿಶೇಷ ಪ್ರಾಶಸ್ತ್ಯವಿದೆ.

ನಾಗಾರಾಧನೆಗೂ ಯಕ್ಷಾರಾಧನೆಗೂ ನಿಕಟಸಂಬಂಧವಿದ್ದಂತಿದೆ. ಇವೆರಡೂ ಬಹು ಪ್ರಾಚೀನವಾದವುಗಳು. ಮೂಲತಃ ನಾಗ ಮತ್ತು ಯಕ್ಷ ಎಂಬುದು ಭಿನ್ನ ಭಿನ್ನ ಜನಾಂಗಗಳ ಹೆಸರುಗಳಾಗಿದ್ದು, ಇವರು ನಾಗ ಮತ್ತು ಯಕ್ಷ ಲಾಂಛನವನ್ನು ಹೊಂದಿದವರಾಗಿರಬಹುದು. ಕ್ರಮೇಣ ಲಾಂಛನಗಳಿಗೆ ಹೆಚ್ಚು ಪ್ರಾಶಸ್ತ್ಯ ಪಡೆದು ಪೂಜ್ಯವಸ್ತುಗಳಾಗಿ ಪರಿಣಮಿಸಿರಬಹುದು. ಎರಡು ಜನಾಂಗಗಳು ಬೆರೆತಂತೆ, ಲಾಂಛನಗಳ ಸಮೀಕರಣವೂ ನಡೆದಿರಬೇಖು. ನಾಗನನ್ನೂ ಯಕ್ಷ-ಯಕ್ಷಿಯನ್ನೂ ಸಮೀಕರಿಸಿ ‘ನಾಗಯಕ್ಷ’(ಕ್ಷಿ) ಸ್ವರೂಪದಲ್ಲಿ ಪೂಜಿಸುವ ಸಂಪ್ರದಾಯ ಜನಪ್ರಿಯವೆನಿಸಿತು. ನಾಗನ ಬನಗಳಲ್ಲಿ ಅಥವಾ ಇತರ ಆರಾಧನಾಲಯಗಳಲ್ಲಿ ಇರುವ ಅನೇಕ ನಾಗಶಿಲೆಗಳಲ್ಲಿ ನಾಗಯಕ್ಷ ಅಥವಾ ನಾಗಯಕ್ಷಯರ ಸಂಯುಕ್ತ ರೂಪದ ಶಿಲ್ಪಗಳನ್ನು ನೋಡಬಹುದು. ಇಂಥ ವಿಗ್ರಹಗಳಲ್ಲಿ ಸಾಮಾನ್ಯವಾಗಿ ದೇಹದ ಮೇಲುಭಾಗ ಯಕ್ಷ(ಅಥವಾ ಮಾನುಷ) ರೂಪದಲ್ಲೂ, ಕೆಳಭಾಗ ನಾಗರೂಪದಲ್ಲೂ ಇರುತ್ತದೆ. ನಾಗೋಪಾಸನೆಯ ಮಂತ್ರವೂ ಸಾಮಾನ್ಯವಾಗಿ ನಾಗಯಕ್ಷಿಯ ಮಂತ್ರವೇ ಆಗಿರುತ್ತದೆ ಎಂಬುದು ಗಮನೀಯ.

ಆಲಡೆಯ ದೈವಸಂಕೀರ್ಣದ ಮುಖ್ಯ ದೈವತ ಬ್ರಹ್ಮ(ಬೆರ್ಮೆರ್) ಅಥವಾ ನಾಗಬ್ರಹ್ಮನೆಂಬ ಪ್ರತೀತಿಯಷ್ಟೆ? ನಾಗಬ್ರಹ್ಮನು ನಾಗಯಕ್ಷನೇ ಎಂದು ಊಹಿಸಬಹುದು. ಹಾಗೆಯೇ ಆಲಡೆಯಲ್ಲಿನ ಪ್ರಾಚೀನ ದೇವತೆ ರಕ್ತೇಶ್ವರಿ ದೇವೀಪುರಾಣದ ರಕ್ತಬೀಜಮರ್ದಿನಿ ಎಂದು ತಿಳಿಯುವುದಕ್ಕಿಂತ ಯಕ್ಷಕನ್ನಿಕೆ ಅಥವಾ ಯಕ್ಷೇಶ್ವರಿ ಎಂದು ತಿಳಿಯುವುದೇ ಯುಕ್ತವೆನಿಸುತ್ತದೆ.

ನಾಗದೇವತೆಗೆ ಸಂಬಂಧಿಸಿ, ತಂಬಿಲ(ತನುಹಾಕುವುದು), ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ನಾಗದರ್ಶನ, ಆಶ್ಲೇಷ ಬಲಿ, ದಕ್ಕೆ ಬಲಿ, ನಾಗಮಂಡಲ, ಬ್ರಹ್ಮಮಂಡಲ, ಕಾಡ್ಯನಾಟ ಮೊದಲಾದ ಸೇವೆಗಳು ಸಲ್ಲುತ್ತವೆ. ನಾಗಬ್ರಹ್ಮನನ್ನು ಭೂತರೂಪದಲ್ಲಿ ಕೋಲಕಟ್ಟಿ ಪೂಜಿಸುವುದೂ ಇದೆ.

ತಂಬಿಲ : (ತನು ಹಾಕುವುದು) ಇದು ಹೂ, ಹಣ್ಣು, ಹಾಲು, ತಾಂಬೂಲ, ಎಳನೀರು ಗಳನ್ನು ನಾಗನಿಗೆ ಅರ್ಪಿಸಿ, ನಡೆಸುವ ಸರಳ ಸಾತ್ವಿಕ ಪೂಜೆ, ಇದನ್ನು ಸಾಮಾನ್ಯವಾಗಿ ಬ್ರಾಹ್ಮಣರೇ ನಿರ್ವಹಿಸುತ್ತಾರೆ. ನಾಗರ ಪಂಚಮಿಯಂದು ಸಾಮಾನ್ಯವಾಗಿ ಈ ವಿಧಿ ನಡೆಯುತ್ತದೆ.

ನಾಗಪ್ರತಿಷ್ಠೆ : ವಿಷಮ ಸಂಖ್ಯೆಯ ಹೆಡೆಗಳಿರುವ ನಾಗನ ಅಥವಾ ನಾಗಯಕ್ಷಯಕ್ಷಿಯರ ಬಿಂಬಗಳನ್ನು ಶಿಲೆಯಲ್ಲಿ ರೂಪಿಸಿ ಅವುಗಳನ್ನು ನಾಗನಬನದಲ್ಲಿ ಅಥವಾ ನಾಗಾಲಯದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಬಹಳ ಹಿಂದೆ ನಿರ್ದಿಷ್ಟ ಮರಗಳ ಬುಡದಲ್ಲಿ ನಾಗನಕಲ್ಲುಗಳನ್ನಿರಿಸಿ ಪೂಜಿಸುತ್ತಿದ್ದರು. ಸುತ್ತಲೂ ಮರಗಿಡಗಳು ದಟ್ಟವಾಗಿ ಬೆಳೆದಿರುತ್ತಿ ದ್ದವು. ಈ ಬನದ ಸ್ವರೂಪಗಳು ಇತ್ತೀಚಿಗಿನ ವರ್ಷಗಳಲ್ಲಿ ವ್ಯತ್ಯಸ್ತವಾಗುತ್ತಾ ‘ಚಿತ್ರ ಕೂಟ’ ರಚನೆಯೊಂದಿಗೆ ಕಾಂಕ್ರೀಟಿನ ನಾಗಾಲಯಗಳು ಹೆಚ್ಚು ಹೆಚ್ಚಾಗಿ ಮೇಲೇಳತೊಡಗಿವೆ.

ಸರ್ಪ ಸಂಸ್ಕಾರ : ಆಕಸ್ಮಿಕವಾಗಿಯೋ, ಅನಿವಾರ್ಯವಾಗಿಯೋ ವ್ಯಕ್ತಿಯೊಬ್ಬ ಅಥವಾ ಆತನ ಪೂರ್ವಸಂಬಂಧಿಗಳು ನಾಗನನ್ನೋ ನಾಗನ ಮೊಟ್ಟೆಗಳನ್ನು ನಾಶಮಾಡಿದರೆ ನಾಗದೋಷ ಹಿಂಬಾಲಿಸುತ್ತದೆಂದು ನಂಬಿಕೆ. ಆ ದೋಷ ನಿವಾರಣೆಗೆ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಇತ್ಯಾದಿಗಳನ್ನು ನೆರವೇರಿಸುತ್ತಾರೆ. ಹಾಗೆಯೆ, ಸರ್ಪದ ಶವವನ್ನು ಕಂಡರೆ ಅದಕ್ಕೆ ಅಂತ್ಯಸಂಸ್ಕಾರ ಮಾಡದಿರಬಾರದು ಎಂಬ ನಂಬಿಕೆಯಿದೆ. ಅಂತ್ಯಸಂಸ್ಕಾರ ಮಾತ್ರವಲ್ಲ, ವಿಪ್ರಮುಖೇನ ವಿಧಿಯುಕ್ತ ಉತ್ತರಕ್ರಿಯೆಯನ್ನೂ ಮಾಡ ಬೇಕೆಂಬ ನಿಯಮವಿದೆ.

ಆಶ್ಲೇಷಬಲಿ : ಆಶ್ಲೇಷಾ ನಕ್ಷತ್ರವು ನಾಗನಿಗೆ ಸಂಬಂಧಿಸಿದುದೆಂದು ಹೇಳಲಾಗಿದೆ. ಆ ನಕ್ಷತ್ರದಂದು ಸರ್ಪದೋಷ ನಿವಾರಣೆ ಹಾಗೂ ನಾಗಪ್ರೀತೃರ್ಥವಾಗಿ ನಿರ್ದಿಷ್ಟ ಸ್ಥಳಗಳಲ್ಲಿ, ಮುಖ್ಯವಾಗಿ ಸುಬ್ರಹ್ಮಣ್ಯದಂಥ ಕ್ಷೇತ್ರಗಳಲ್ಲಿ ಈ ಕಲಾಪ ನಡೆಯುತ್ತದೆ.

ನಾಗದರ್ಶನ : ನಿರ್ದಿಷ್ಟ ಸ್ಥಳಗಳಲ್ಲಿ ಬ್ರಾಹ್ಮಣಪಾತ್ರಿ ನಾಗದೇವತೆಯನ್ನು ಆವಾಹಿಸಿಕೊಂಡು, ಹಾವಿನಂತೆ ಬುಸುಗುಡುತ್ತಾ ಉರಗಚಲನೆಯನ್ನು ಅನುಕರಿಸುತ್ತಾ, ವಿಶಿಷ್ಟವಾಗಿ ಕಂಪಿಸುತ್ತಾನೆ. ತನ್ನ ಕೈಯಲ್ಲಿರುವ ಹಿಂಗಾರ (ಕವುಂಗಿನ ಹೂವು)ವನ್ನು ಆಗಾಗ ಮುಖಕ್ಕೆ ಉಜ್ಜಿಕೊಳ್ಳುತ್ತಾನೆ. ನಾಗಭಕ್ತರು ತಮ್ಮ ಸಮಸ್ಯೆಗಳನ್ನು ಅರಿಕೆ ಮಾಡಿಕೊಂಡು, ನಾಗಪಾತ್ರಿಯ ಮುಖದಿಂದ ಪರಿಹಾರ ವಚನವನ್ನೂ, ಆತನ ಕೈಯಿಂದ ಹಿಂಗಾರ ಮತ್ತು ಅರಸಿನದ ಹುಡಿಯ ಪ್ರಸಾದವನ್ನು ಪಡೆಯುತ್ತಾರೆ.

ದಕ್ಕೆಬಲಿ : ಇಲ್ಲಿ ಮುಖ್ಯ ಪಾತ್ರ ವಹಿಸುವವರು ಇಬ್ಬರು. ನಾಗನನ್ನು ಬ್ರಾಹ್ಮಣಪಾತ್ರಿ ಪ್ರತಿನಿಧೀಕರಿಸಿದರೆ, ‘ವೈದೃ’ ಜನಾಂಗದ ವ್ಯಕ್ತಿಯೊಬ್ಬ ‘ಅರ್ಧನಾರೀ’ ವೇಷತೊಟ್ಟು ‘ಡಕ್ಕೆ’ ವಾದೃವನ್ನು ಬಾರಿಸುತ್ತಾ, ಸ್ತುತಿಪರವಾದ ಹಾಡುಗಳನ್ನು ಹಾಡುತ್ತಾ ವಿಧವಿಧದ ಹಜ್ಜೆಗಳ ಕುಣಿತ, ಬಾಗು ಬಳುಕುಗಳಿಂದ ನಾಗನನ್ನು ಪ್ರಸನ್ನೀಕರಿಸುವ ಪಾತ್ರವನ್ನು ವಹಿಸುತ್ತಾನೆ. ಇದು ನಾಗಕನ್ಯೆಯ ವೇಷ ಎನ್ನುತ್ತಾರೆ. ಪಾತ್ರಿಯು ಬುಸುಗುಡುತ್ತಾ ಹಿಂಗಾರದ ಗುಚ್ಚಗಳನ್ನು ಮುಖಕ್ಕೆ ತಿಕ್ಕಿ ತಿಕ್ಕಿ ಬಿಸಾಡುತ್ತಾನೆ. ಕೊನೆಯಲ್ಲಿ ಪ್ರಸನ್ನನಾಗಿ ಪ್ರಸಾದವನ್ನು ಅನುಗ್ರಹಿಸುತ್ತಾನೆ.

ತುಳುನಾಡಿನ ಉತ್ತರಭಾಗದಲ್ಲಿ ಹಾಯ್ಗುಳಿ, ಚಿಕ್ಕು, ಹಳೆಯಮ್ಮ, ಬೊಬ್ಬರ್ಯ, ಮಾಂಕಾಳಿ, ಉಮ್ಮಳ್ತಿ ಮುಂತಾದ ದೈವಗಳ ಸನ್ನಿಧಿಯಲ್ಲಿ ದಕ್ಕೆಬಲಿ ನಡೆಯುತ್ತದೆ. ಮಂದರ್ತಿ ಮೊದಲಾದ ದೇಗುಲಗಳ ಉತ್ಸವಾಂಗವಾಗಿಯೂ ದಕ್ಕೆಬಲಿ ನಡೆಯುವುದುಂಟು. ಡಕ್ಕೆಬಲಿ, ಜಕ್ಕೆಬಲಿ ಎಂದೂ ಇದನ್ನು ಕರೆಯುವುದಿದೆ. ಇದರ ಪ್ರಧಾನ ವಾದ್ಯ ವೈದೃನರ್ತಕನ. ಕೈಯಲ್ಲಿನ ಡಕ್ಕೆ(ಡಕ್ಕಾ) ಆದುದರಿಂದ ಈ ಹೆಸರು ಬಂದಿದೆ. ಈ ‘ಡಕ್ಕ’ ಎಂಬುದು ‘ಯಕ್ಷ’ ಎಂಬುದರಿಂದ ಬಂದಿರಲೂಬಹುದು.(ಯಕ್ಷ-ಜಕ್ಕ-ದಕ್ಕ-ಡಕ್ಕ) ಯಕ್ಷಾರಾಧನೆಗೆ ಹಿಂದೆ ಈ ವಾದ್ಯವನ್ನು ಬಳಸುತ್ತಿರಬಹುದು. ಈಗಲೂ ಯಕ್ಷನ ಗುಡಿಯ ಮುಂದೆ ದಕ್ಕೆಬಲಿ ಜರಗುವುದಿದೆ. ನಾಗನೂ ಒಂದು ಬಗೆಯ ಯಕ್ಷನೇ ತಾನೆ?

ನಾಗಮಂಡಲದಲ್ಲಿ ಹೆಡೆಬಿಚ್ಚಿದ ನಾಗನ ರೂಪವನ್ನು ಚಿತ್ರಿಸಿದರೆ, ದಕ್ಕೆಬಲಿಯಲ್ಲಿ ಬ್ರಹ್ಮ(ಮನುಷ್ಯಮುಖ) \ಶೂಲ, ಯಕ್ಷಿ, ನಾಗ ಇವುಗಳ ಚಿತ್ರವನ್ನು ಪಂಚವರ್ಣದಲ್ಲಿ ವೈದ್ಯರು ಬಿಡಿಸುತ್ತಾರೆ.

ನಾಗಮಂಡಲ : ಇದು ದಕ್ಕೆ ಬಲಿಯ ವಿಸ್ತೃತ ಹಾಗೂ ವೈಭವೀಕೃತ ರೂಪವೆನ್ನಬಹುದು. ಈ ಕಲಾಪಕ್ಕಾಗಿ ಪಂಚುವರ್ಣದ ಹುಡಿಗಳಿಂದ ಕಲಾತ್ಮಕ ಮಂಡಲವನ್ನು ಬರೆದು ಅದರಲ್ಲಿ ಸುರುಳಿ ಹಾಕಿ ಹೆಡೆಬಿಚ್ಚಿದ, ನಾಗನ ಚಿತ್ರವನ್ನು ವೈದ್ಯರು ಬಿಡಿಸುತ್ತಾರೆ. ಮಂಡಲದ ಸುತ್ತ ಡಮರು ಹಿಡಿದ ಅರ್ಧನಾರೀ ಪಾತ್ರಧಾರಿ ಹಾಗೂ ನಾಗಪಾತ್ರಧಾರಿ ಆವೇಶಗೊಂಡು ಲಯಬದ್ಧವಾಗಿ ನರ್ತಿಸುತ್ತಾರೆ. ಸಂತಾನಪ್ರಾಪ್ತಿ, ದೃಷ್ಟಿರೋಗ, ಚರ್ಮರೋಗಗಳ ನಿವಾರಣೆ, ನಾಗದೋಷನಿವಾರಣೆ ಹಾಗೂ ಇತರ ಇಷ್ಟಾರ್ಥಸಿದ್ದಿಗಾಗಿ ನಾಗಮಂಡಲದ ಹರಕೆ ಹೊರುತ್ತಾರೆ. ಬರುವ ಸಾವಿರ ಗಟ್ಟಲೆ ಜನರಿಗೆ ಅನ್ನಸಂತರ್ಪಣೆ ನಡೆಯಬೇಕಾದುದು ಈ ಹರಕೆಯ ಅನಿವಾರ್ಯ ಅಂಗ.

ನಾಗಮಂಡಲದಲ್ಲಿ ಪೂರ್ಣಮಂಡಲ, ಅರ್ಧಮಂಡಲ, ಕಾಲುಮಂಡಲ ಎಂಬ ಪ್ರಭೇದಗಳಿವೆ. ಪೂರ್ಣಮಂಡಲದಲ್ಲಿ ಹದಿನಾರು ‘ಪವಿತ್ರ’ (ಸಮಗಂಟು)ಗಳಿಂದ ಕೂಡಿದ ಸರ್ಪಾಕೃತಿಯನ್ನು ಬಣ್ಣದ ಹುಡಿಗಳಿಂದ ಚಿತ್ರಿಸುತ್ತಾರೆ. (ಬಿಳಿ, ಕಪ್ಪು, ಕೆಂಪು, ಹಳದಿ, ಹಸುರು ಬಣ್ಣದ ಹುಡಿ) ಹೀಗೆ ಶಾಸ್ತ್ರೀಯವಾಗಿ ಬರೆದ ಮಂಡಲದ ಸುತ್ತಲೂ ಪುಷ್ಪಾಲಂಕೃತ ಕಲಶಗಳನ್ನು ಹಾಗೂ ಕವುಂಗಿನ ‘ಹಿಂಗಾರದ ರಾಶಿಯನ್ನು ಇರಿಸುತ್ತಾರೆ. ಹಿಂಗಾರ ಹೂ, ಹಣ್ಣು ಹಂಪಲು, ಸೀಯಾಳ, ಅಡಿಕೆಯ ಮಾಲೆ, ವೀಳ್ಯದೆಲೆ ಇತ್ಯಾದಿಗಳಿಂದ ಚಪ್ಪರವನ್ನು ಸಿಂಗರಿಸುತ್ತಾರೆ.

ನಾಗವಾತ್ರಿ ಮತ್ತು ನಾಗಕನ್ನಿಕೆ (ಅರ್ಧನಾರಿ) ಪಾತ್ರಧಾರಿಗಳ ನರ್ತನ ಧಕ್ಕೆಬಲಿಯ ರೀತಿಯಲ್ಲೇ ಇರುತ್ತದೆ. ದಕ್ಕೆ ಬಲಿಯನ್ನು ನಿರ್ವಹಿಸುವ ವರ್ಗದವರೇ ನಾಗಮಂಡಲ ಕಲಾಪವನ್ನು ನಿರ್ವಹಿಸುತ್ತಾರೆ. ‘ವೈದ್ಯ’ರ ತಂಡದವರೇ ಡಮರು ಮೇಳವನ್ನು ನಿರ್ವಹಿಸುತ್ತಾರೆ. ‘ವೈದ್ಯ’ರ ತಂಡವನ್ನು ಡಮರು ಮೇಳವೆಂದೂ ಕರೆಯುತ್ತಾರೆ. ನಾಗಪಾತ್ರಿ ಪುರುಷಚೇತನವನ್ನೂ ಅರ್ಧನಾರಿ ವೇಷಧಾರಿ ಯಕ್ಷಿಯನ್ನೂ ಪ್ರತಿನಿಧಿಸುತ್ತಾರೆನ್ನಲಾಗಿದೆ.

ನಾಗನೃತ್ಯದ ವಿವಿಧ ಭಂಗಿ ಭಣಿತಗಳನ್ನು ಪ್ರದರ್ಶಿಸಿದ ಬಳಿಕ. ನಾಗಪಾತ್ರಿಯ ಅಭಯವಾಕ್ಯ, ಭಕ್ತರ ನಿವೇದನೆಗಳಿಗೆ ಸಮಾಧಾನ, ಪರಿಹಾರ ಇತ್ಯಾದಿ ನಡೆಯುತ್ತದೆ.

ಕೊನೆಗೆ ನರ್ತಕರಿಬ್ಬರೂ ತೋಳುಗಳನ್ನು ಹೆಣೆದುಕೊಂಡು ‘ಪವಿತ್ರ ಗಂಟಿ’ನ ಆಕಾರದಲ್ಲಿ ಚಲಿಸುವ ನರ್ತನವಿದೆ. ಇದನ್ನು ಮಿಥುನಬಂಧದ ಪ್ರತೀಕವೆಂದು ತಿಳಿಯಬಹದು. ಆ ಮೇಲೆ ಗಂಟು ಬಿಡಿಸುವ ಚಲನೆ. ಈ ನಡುವೆ ನಡೆಯುವ ಹೂವಿನ ಸೇವೆ, ಕಟ್ಟುವಾಲಗ ಸೇವೆಗಳಲ್ಲಿ ನಾಗಪಾತ್ರಿ ಹಿಂಗಾರವನ್ನು ಮೈಗೂ ಮುಖಕ್ಕು ತೀಡಿಕೊಂಡು ಉಗ್ರವಾಗಿ ಕಂಪಿಸುತ್ತಾನೆ. ನೆಲದಲ್ಲಿ ಹೊರಳಾಡುವುದೂ ಇದೆ.

ಅಂತೂ ಇದೊಂದು ಫಲಸಮೃದ್ದಿಯ, ಸಂತಾನಕ್ಷೇಮದ ಆಶಯವುಳ್ಳ ತಾಂತ್ರಿಕ ಆಚರಣೆಯೆನ್ನಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಬೇರೆ ಬೇರೆ ಕಾರಣಗಳಿಂದ ನಾಗಮಂಡಲದ ಹರಕೆಯ ಸಂಖ್ಯೆ ಹೆಚ್ಚಾಗುತ್ತಿದೆ. ತುಳುನಾಡಿನ ದಕ್ಷಿಣ ಭಾಗಗಳಲ್ಲಿ ಈ ಸೇವೆ ಜರಗಲಾರಂಭಿಸಿದೆ.

ಸುಮಾರು ಮುನ್ನೂರು ವರ್ಷಗಳಷ್ಟು ಹಿಂದೆ ಹೇಳಿಕೊಂಡಿದ್ದೆನ್ನಲಾದ ನಾಗಮಂಡಲದ ಹರಕೆಯೊಂದು ಈಚೆಗೆ ಕುಂದಾಪುರದ ಕೊಡ್ಲಾಡಿ ಎಂಬಲ್ಲಿ ಜರಗಿದ ವಿವರವನ್ನು ಪ್ರೊ.ಲೀಲಾಭಟ್ ಅವರು ‘ಭೂತನಾಗರ ನಡುವೆ’ ಎಂಬ ಗ್ರಂಥದಲ್ಲಿ (ಪುಟ-೩೭) ನೀಡಿದ್ದಾರೆ.

ಬ್ರಹ್ಮಮಂಡಲ : ಇದು ನಾಗಮಂಡಲವನ್ನು ಹೋಲುವ ಆದರೆ ಅದಕ್ಕಿಂತ ಪ್ರಮಾಣದಲ್ಲಿ ತುಸು ಕಿರಿದಾಗಿರುವ ನಾಗಾರಾಧನೆ. ಪಡುಬಿದ್ರಿಯ ಹಿರಿಯ ಬನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಮಂಡಲ ಪ್ರಸಿದ್ಧವಾದದ್ದು. ಹದಿನೈದು ದಿನಗಳವರೆಗೆ ಇಲ್ಲಿ ಉತ್ಸವ ನಡೆಯುತ್ತದೆ. ಇಡಿಯ ಬನವೇ ಬ್ರಹ್ಮಸ್ಥಾನವೆನಿಸುವ ಈ ನಾಗಾಲಯದಲ್ಲಿ ಆಲಡೆಯ ದೈವಗಳಲ್ಲದೆ ಖಡ್ಗೇಶ್ವರಿ ಎಂಬ ದೇವತೆಯ ಸಾನ್ನಿಧ್ಯವಿದೆ. ಇವಳು ಯಕ್ಷಿಯಾಗಿರಬಹುದು.

ಬ್ರಹ್ಮಮಂಡಲದ ವೇಳೆ ಇಡೀ ವನಾಂತರ ಪ್ರದೇಶವನ್ನು ಹೂ ಹಣ್ಣು ಅಡಿಕೆ, ಹೊಂಬಾಳೆ, ಮಾವಿನ ಸೊಪ್ಪು ಇತ್ಯಾದಿಗಳ ತೋರಣಗಳಿಂದ ಅಪೂರ್ವವಾಗಿ ಅಲಂಕರಿಸುತ್ತಾರೆ. ಮರ, ಗಿಡ, ಬಳ್ಳಿ ಎಲ್ಲೆಂದರಲ್ಲಿ ನಾಗನಿಗೆ ಪ್ರಿಯವೆನ್ನಲಾದ ಹಿಂಗಾರದ ಗುಚ್ಛದ ಜಾಲರಿ ತೂಗುತ್ತಿರುತ್ತದೆ. ಇಲ್ಲಿ ವಿದ್ಯುದ್ದೀಪ ವ್ಯವಸ್ಥೆ, ಆಸನ ವ್ಯವಸ್ಥೆ, ಕಾಣಿಕೆ ಡಬ್ಬಿ, ಇತ್ಯಾದಿಗಳಿಲ್ಲ. ನಿರ್ದಿಷ್ಟ ಕಟ್ಟಡಗಳೂ ಇಲ್ಲ. ಪ್ರಾಕೃತಿಕ ಬಂಡೆಗಳು ಬನದ ಗಾಂಭೀರ್ಯಕ್ಕೆ ಸಬಲತೆಯನ್ನು ನೀಡುವಂತಿದೆ. ಹಣತೆ, ದೀವಟಿಗೆಗಳ ಮಂದಬೆಳಕಿನಲ್ಲಿ ಎಲ್ಲ ಕಲಾಪಗಳೂ ಜರುಗುತ್ತವೆ.

ಬ್ರಹ್ಮಮಂಡಲ ಸೇವೆ ತೊಡಗುವ ಮೊದಲು ದೈವಗಳ ಪೂಜೆ ಹಾಗೂ ತಂಬಿಲ ನಡೆಯುತ್ತದೆ. ಈ ಸಂದರ್ಭದಲ್ಲಿ ದೈವಪಾತ್ರಿಗಳ ಆವೇಶ ಜರಗುತ್ತದೆ. ಬಳಿಕ ವೈದ್ಯವರ್ಗದವರು ಪಂಚವರ್ಣದ ಮಂಡಲ ಬಿಡಿಸಿ, ಬ್ರಹ್ಮಮುಖ, ನಾಗಚಿತ್ರ ರೇಖಿಸಿ, ಶಾಸ್ತ್ರೋಕ್ತ ಅಲಂಕಾರ ಮಾಡುತ್ತಾರೆ. ಪಾತ್ರಿಗಳೆಲ್ಲ ಮತ್ತೆ ನಾಗಬನದ ಸಮೀಪ ಆವೇಶಗೊಂದು ಮಂಡಲದ ಬಳಿಗೆ ಬರುತ್ತಾರೆ. ವಿಧವಿಧದ ಹಾಡುಗಳೂ ನರ್ತನಗಳೂ ನಡೆಯುತ್ತವೆ. ಪಾತ್ರಿಗಳು ಎಣ್ಣೆಯಲ್ಲಿ ಅದ್ದಿದ ಚಿಕ್ಕ ದೊಂದಿಗಳನ್ನು ಕೈಯಲ್ಲಿ ಹಿಡಿದು ಕುಣಿಯುತ್ತಾರೆ. ನಡುನಡುವೆ ಆವೇಶ ಮೀರಿ ನೆಲದ ಮೇಳೆ ಹೊರಳುವುದಿದೆ. ಆಗ ಉಳಿದವರು ಅವರನ್ನು ಎತ್ತಿ ನಿಲ್ಲಿಸುತ್ತಾರೆ.

ಡಕ್ಕೆಯವರ ಕುಣಿತ ನಾಗಮಂಡಲದಂತೆಯೆ ಇರುತ್ತದೆ. ಇದೆಲ್ಲ ಜರಗಿದ ಬಳಿಕ ಭಕ್ತಾದಿಗಳ ಕಷ್ಟಕಾರ್ಪಣ್ಯ ನಿವೇದನೆ, ಅವರಿಗೆ ಅನುಗ್ರಹವಾಗಿ, ಪ್ರಸಾದ ವಿತರಣೆ ಇತ್ಯಾದಿ ನಡೆಯುತ್ತದೆ.

ಕಾಡ್ಯನಾಟ : ಉಡುಪಿ ಜಿಲ್ಲೆಯ ಉತ್ತರಭಾಗದಲ್ಲಿರುವ ಕನ್ನಡ ಮಾತನಾಡುವ ‘ಮೇರ’ ಎಂಬ ದಲಿತ ವರ್ಗದವರು ಎಂದಾದರೊಮ್ಮೆ ಜರಗಿಸುವ; ನಾಗಮಂಡಲವನ್ನು ಹೋಲುವ ನಾಗಾರಾಧನೆ ಇದು. ಇಲ್ಲಿ ಆರಾಧಿಸಲ್ಪಡುವ ನಾಗ, ಕರಿನಾಗ (ಕಾಳಿಂಗ) ಎನ್ನಲಾಗಿದೆ. ಕಾಳಿಂಗನನ್ನು ‘ಕಾಡ್ಯ’ನೆಂದೂ, ಕಾಳಿಂಗಾರಾಧನೆಯ ತಾಣವನ್ನು ‘ಕಾಡ್ಯನ ಮನೆ’ ಎಂದೂ ಕರೆಯುತ್ತಾರೆ. ಇದು ಹೆಚ್ಚಾಗಿ ಕಾಡಿನೊಳಗೆ ಇರುತ್ತದೆ. ಕಾಡ್ಯನ ಮನೆಯಲ್ಲಿ ಸಾಮಾನ್ಯವಾಗಿ ಹುತ್ತ ಬೆಳೆದಿರುತ್ತದೆ. ಸ್ವಾಮಿ, ಬ್ರಹ್ಮ, ಯಕ್ಷಿ, ಉಮ್ಮಳ್ತಿ, ಬೊಬ್ಬರ್ಯ, ಗಾಮ, ಜಟ್ಟಿಗ, ಪಂಜುರ್ಳಿ, ಕಲ್ಕುಡ, ಹಾಯ್ಗುಳಿ ಮೊದಲಾದ ದೈವಗಳನ್ನು ಪ್ರತಿನಿಧಿಸುವ ಕಲ್ಲುಗಳು ಇರುತ್ತವೆ. ಕಾಡ್ಯನನ್ನು ‘ಅಮ್ಮ’ ‘ಕಾಳಿಕಾಂಬ’ ಎಂದೂ ತಿಳಿಯುವುದುಂಟು. (ಕೆಲವು ಜನಪದ ದೈವಗಳಿಗೆ ಉಭಯಲಿಂಗಗಳನ್ನು ಆರೋಪಿಸುವುದುಂಟಷ್ಟೇ?)

ಕಾಡ್ಯನಾಟ ಸುಮಾರು ನಾಲ್ಕು ದಿನಗಳಷ್ಟು ದೀರ್ಘಕಾಲ ನಡೆಯುವ ವಿಧಿ ಸಮುಚ್ಛಯ. ಇಲ್ಲಿ ಎಲ್ಲ ಕಲಾಪಗಳನ್ನು ಮೇರ ಸಮಾಜದವರೇ ನಡೆಸುತ್ತಾರೆ. ಪಾತ್ರಿ, ವೈದ್ಯ(ಬೈದ್ಯ) ವಾದ್ಯಗಾರ ಮೊದಲಾದ ಎಲ್ಲ ಪಾತ್ರಗಳು ಅವರದ್ದೇ, ಕಾರ್ಯಕ್ರಮದ ಉದ್ದಕ್ಕೂ ಡೋಲು ಬಡಿದು ‘ಬೈದ್ಯ’ರು ಬೇರೆ ಬೇರೆ ಹಾಡುಗಳನ್ನು (ಕಾಡ್ಯನ ಹುಟ್ಟು, ಕಳಸದ ಹಾಡು, ಹೆಣ್ಣು ಮಕ್ಕಳ ಹುಟ್ಟು, ಯುಗ ಮಗುಚುವ ಹಾಡು, ಮಂಡಲ ಬರೆಯುವ ಹಾಡು ಇತ್ಯಾದಿ) ಹಾಡುತ್ತಿರುತ್ತಾರೆ. ನಾಗನ ಚಿಹ್ನೆ ಇರುವ ಕಲಶ(ಗಡಿಗೆ)ಗಳು ಇಲ್ಲಿ ಮುಖ್ಯವಾಗಿವೆ. ಇಲ್ಲಿ ಮಂಡಲದಲ್ಲಿ ಮೀನು, ಕಾಗೆ, ಗುಬ್ಬಿ, ಸರ್ಪ, ಬಸವ, ಗೆರಸೆ, ಒನಕೆ ಇತ್ಯಾದಿ ಚಿತ್ರಗಳನ್ನು ಬರೆಯುವುದುಂಟು. ಕಾಡ್ಯನಾಟದ ಅಂಗವಾಗಿ ‘ಬ್ರಾಹ್ಮಣ ಕೋಲ’, ‘ಕೊರಗರ ಕೋಲ’ ಹುಲಿಹಂದಿಕೋಲ, ದಾಸರಕೋಲ, ಕೆಮ್ಮನಕೋಲ, ಜ್ವರಕೋಲ, ತಗಣಿಕೋಲ, ಕುದುರೆಕೋಲ ಇತ್ಯಾದಿ, ಆಶು ಪ್ರಹಸನದಂಥ ಕಲಾಪ, ನಡೆಯುವುದುಂಟು, ‘ಹಿಡ್ಗಾಯಿ’ ಹಾಕುವುದು, ‘ಅಂಬೊಡಿ’ ಆಡುವುದು ಕೂಡಾ ನಡೆಯುತ್ತದೆ. ಕಾಡ್ಯನ ಪೂಜೆ, ನಾಗನರ್ತನ ಇತ್ಯಾದಿ ವಿಧಿವತ್ತಾಗಿ ಜರಗುತ್ತದೆ. ಸಮೂಹ ಭೋಜನವಂತೂ ಇಲ್ಲಿಯೂ ಇರುತ್ತದೆ. ಇತರ ಹಲವು ಧಾರ್ಮಿಕ ವಿಧಿಗಳಲ್ಲಿರುವಂತೆ ಇಲ್ಲಿಯೂ ಹಾಲುಳ್ಳ ಮರದ ಕೊಂಬೆಯನ್ನು ಪವಿತ್ರ ಕಂಬವಾಗಿ ನೆಡುವ ಕ್ರಮವಿದೆ. ಒಟ್ಟಿನಲ್ಲಿ ಅಧ್ಯಯನಯೋಗ್ಯ ಆರಾಧನೆ – ಕಾಡ್ಯನಾಟ. (ಹೆಚ್ಚಿನ ವಿವರಗಳನ್ನು ಡಾ.ಎ.ವಿ.ನಾವಡ ಮತ್ತು ಗಾಯತ್ರಿನಾವಡ ಇವರ ‘ಕಾಡ್ಯನಾಟ’ ಗ್ರಂಥ ಒದಗಿಸುತ್ತದೆ.)

ವೈದಿಕೇತರ ನಾಗಪೂಜೆ

ಆದಿಮ ಕಾಲಘಟ್ಟದಲ್ಲಿ ಸರಳವಾಗಿದ್ದ ನಾಗಾರಾಧನೆಯು ಕಾಲ-ಕ್ರಮೇಣ ವ್ಯತ್ಯಾಸಗೊಳ್ಳುತ್ತಾ ಸಾಕಷ್ಟು ಬ್ರಾಹ್ಮಣೀಕರಣಗೊಂಡದ್ದನ್ನು ಗಮನಿಸಬಹುದು. ಉರಗಜಾತಿಗಳಲ್ಲಿ ನಾಗನು ಬ್ರಾಹ್ಮಣ ಸದೃಶನೆಂಬ ಭಾವನೆ ಜನಪದರಲ್ಲಿ ಬೆಳೆದಿದೆ. ಹಾಗಾಗಿ ಅಳತೆ ಮೀರಿದ ಶುದ್ಧಾಚಾರಕಲ್ಪನೆ ಸಮಾಜದಲ್ಲಿ ಉಂಟಾಗಿದೆ. ತುಳುನಾಡಿಗೆ ವೈದಿಕರ ಆಗಮನಕ್ಕೆ ಮೊದಲೇ ಆದಿಮ ಜನಾಂಗಗಳು ಬೇರೆ ಬೇರೆ ರೀತಿಯ ವಿಧಾನಗಳಿಂದ ನಾಗನನ್ನು ಪೂಜಿಸುತ್ತಿದ್ದರು. ಈಗಲೂ ಕೆಲವು ದಲಿತ ಜನಾಂಗಗಳು ನಾಗಾರಾಧನೆಯನ್ನು ತಾವೇ ನಿರ್ವಹಿಸುತ್ತಾರೆಂಬುದು ಗಮನೀಯವಾಗಿದೆ.

‘‘ಪ್ರಾಚೀನ ತುಳುನಾಡಿನ ಒಂದು ಸೆರಗು ಕಾಸರಗೋಡು, ಇಲ್ಲಿ ಬಾಕುಡರೆಂಬ ಮೂಲನಿವಾಸಿಗಳಿದ್ದಾರೆ. ಇವರ ಕುಲದೈವ ಸರ್ಪ. ಇವರ ವಸತಿಗಳ ಬಳಿ ಪುರಾತನ ನಾಗಬನಗಳಿವೆ. ಅಲ್ಲಿ ಇವರು ಸರ್ಪಭೂತಾರಾಧನೆ, ನಡೆಸುತ್ತಾರೆ…. ಹೆಂಗಸರು ನಾಗಬೆರ್ಮರಿಗೆ ‘ಬೆರ್ಮೆರೆ ಸೇವೆ’ ಎಂಬ ಹರಕೆ ಸಲ್ಲಿಸುತ್ತಾರೆ. (ಒಂದು ಕುಡ್ತೆ ಎಣ್ಣೆ, ಅರ್ಧಸೇರು ಅಕ್ಕಿ, ಮತ್ತು ಎಲೆ ಅಡಿಕೆ) ….ಭೂತಗಳನ್ನು ನೇಮ ಕೋಲಗಳ ಮೂಲಕ ಆರಾಧಿಸುವಂತೆ ಬಾಕುಡರು ವಿವಿಧ ಸರ್ಪಗಳನ್ನು ಆರಾಧಿಸುತ್ತಾರೆ. ಇಂತಹ ಸರ್ಪಭೂತಗಳನ್ನು ಕಟ್ಟುವವರು ನಲಿಕೆಯವರು ಅಥವಾ ಕೋಪಾಳ ಜನಾಂಗದವರು. ನೇಲ್ಯ ಉಲ್ಲಾಳ್ತಿ (ನಾಗಯಕ್ಷಿ), ಎಲ್ಯ ಉಳ್ಳಾಲ್ತಿ, ಸಂಕಪಾಲೆ, ಕೃಷ್ಣಸಪೆ – ಇವು ಬಾಕುಡರು ಪ್ರಧಾನವಾಗಿ ಆರಾಧಿಸುವ ಸರ್ಪಗಳು… ಸಂಕಪಾಲನಿಗೆ ಏಳುನೂರ ಎಪ್ಪತ್ತೇಳು ಹೆಡೆಗಳೆಂದು ಲೆಕ್ಕ. ಈ ಭೂತದ ಮುಡಿ(ಅಣಿ) ಸಹ ತುಂಬಾ ದೊಡ್ಡದು. ಇದು ಶಂಕು ಆಕಾರದ ಮುಡಿ. ಹಾಳೆಗಳನ್ನು ಹೆಡೆಯ ಆಕಾರದಲ್ಲಿ ಕತ್ತರಿಸಿ ಅದರ ಮೇಲೆ ಮಸಿಯಿಂದ ರೇಖೆಗಳನ್ನು ಬರೆದು ಹೆಡೆಗಳನ್ನು ತಯಾರಿಸುತ್ತಾರೆ. ಇದು ಅತ್ಯಂತ ಭಾರವೂ ಎತ್ತರವೂ ಆಗಿದೆ. ಸರ್ಪಾರಾಧನೆ ಇಡೀ ರಾತ್ರಿ ಜರಗುವ ಕಾರ್ಯಕ್ರಮ. ಈ ನಡುವೆ ‘ಕುಂಡಂಗೆರ್’ ಎಂಬ (ಯಕ್ಷಗಾನದ ಕೋಡಂಗಿಯಂತಹ) ಎರಡು ಹಾಸ್ಯ ಪಾತ್ರಗಳ ಸಂಭಾಷಣೆ ನಡೆಯುತ್ತದೆ. ನಲಿಕೆಯ ಹೆಂಗುಸೊಬ್ಬಳು ಈ ಕಾರ್ಯಕ್ರಮವನ್ನು ನಿರ್ದೇಶಿಸುತ್ತಾಳೆ.

‘ಬೆರ್ಮೆರೆ ನಲಿಕೆ’ ಎಂಬ ಕೋಲಕ್ಕೆ ನಾಲ್ಕು ಮಂದಿ ಮುಖ್ಯಸ್ಥರು (ನಾಲಜ್ಜಿ ಕಾರ್ನೆರ್) ಬೇಕು.

ನಲಿಕೆಯ ಕೊನೆಯ ಹಂತ ಕೃಷ್ಣಸರ್ಪನ ಕೋಲ. ಕೃಷ್ಣ ಸರ್ಪನಿಗೆ ಹೋಗಲು ಪ್ರತ್ಯೇಕ ದಾರಿಯನ್ನು ಮಾಡಲಾಗುತ್ತದೆ. ಗದ್ದೆಯ ನಡುವೆ ಹಸಿ ಮಾವಿನ ಗೆಲ್ಲುಗಳನ್ನು ಹುಗಿದು ಕೃತಕ ಮರವೊಂದನ್ನು ನಿರ್ಮಿಸುತ್ತಾರೆ. ಇದಕ್ಕೆ ‘ಕುಕ್ಕಂಬಿಲ’ ಎಂದು ಹೆಸರು. ಕೃಷ್ಣಸರ್ಪ ಪಾತ್ರಿಯು ಹೊಲದಲ್ಲಿ ಹಾವಿನಂತೆ ಹೊಟ್ಟೆಯೆಳೆದುಕೊಂಡು ಕುಕ್ಕಂಬಿಲದ ಬಳಿ ಬರುತ್ತಾನೆ. ಬ್ರಾಹ್ಮಣ ಮಂತ್ರವಾದಿ (ಇನ್ನೊಬ್ಬ ಪಾತ್ರಿ) ‘ಕೃಷ್ಣಸರ್ಪ’ದ ಮೇಲೆ ಮಾವಿನ ಎಲೆ ಎಸೆದಾಗ ಅದು ಕೋಪದಿಂದ ಬುಸುಗುಟ್ಟುತ್ತದೆ. ಮಂತ್ರವಾದಿಯೊಬ್ಬ ಸರ್ಪವನ್ನು ಸ್ವಾಧೀನಪಡಿಸಿ ನಿರ್ದಿಷ್ಟ ಸ್ಥಾನಕ್ಕೆ ಒಯ್ಯುವ ಈ ಕಲ್ಪನೆ ಅದ್ಭುತವೂ, ರಮ್ಯವೂ, ರೋಮಾಂಚಕಾರಿಯೂ ಆಗಿದೆ. ಕೃಷ್ಣ ಸರ್ಪನಿಗೆ ಹಾಳೆಯಿಂದ ತಯಾರಿಸಿದ ಮೂರು ಹೆಡೆಗಳನ್ನು ತಲೆಗೆ ಕಟ್ಟಿರುತ್ತಾರೆ.’’(ವೆಂಕಟರಾಜ ಪುಣಿಂಚತ್ತಾಯ – ತುಳು ನಡೆನುಡಿ ೧೯೯೮, ಪು.೬೨-೬೩)

ಕುಂದಾಪುರ ಕಡೆಯ ಕೆಲವು ಸಾಂಪ್ರದಾಯದ ಮನೆಗಳಲ್ಲಿ ‘ಸ್ವಾಮಿ’ ರೂಪದ ನಾಗನ ಸನ್ನಿಧಿಯಲ್ಲಿ ಪಾಣಾರರೆಂಬ ದಲಿತವರ್ಗದವರ ಮೂಲಕ ‘ಪಾಣಾರಾಟ’ ನಡೆಯುವುದುಂಟು. ಅದರ ಅಂಗವಾಗಿ ದಕ್ಕೆಬಲಿ ನಡೆಯುತ್ತದೆ. ಸ್ವಾಮಿಯ ‘ಹೊಗಳಿಕೆ’ಯನ್ನು ಯಕ್ಷಗಾನದಂಥ ವೇಷತೊಟ್ಟ ಪಾಣಾರರು ಮಾಡುತ್ತಾರೆ ‘‘ನಾಗಮಂಡಲ ಇಂದು ಒಂದು ಆರ್ಯವಿಧಿಯಾಗಿ ಬ್ರಾಹ್ಮಣರಾದ ವೈದ್ಯರಿಂದ ನಡೆದು ಬರುತ್ತಿದ್ದರೂ, ಅದರ ಮೂಲಸ್ವರೂಪವನ್ನು ಪಾಣರು ‘ಸ್ವಾಮಿ’ಗೆ ನಡೆಸುವ ದಕ್ಕೆ ಬಲಿಯಲ್ಲಿ ಗುರುತಿಸಬಹುದಾಗಿದೆ. ಗ್ರಾಮ ದೇವತೆಗಳ ಗುಡಿ ಅಥವಾ ಊರ ದೈವಗಳ ಗುಡಿಗಳಲ್ಲಿ ವೈದ್ಯರು ನಡೆಸುವ ದಕ್ಕೆಬಲಿಯ ಸ್ವರೂಪ, ಆಶಯಗಳಲ್ಲಿ ಪಾಣರ ಆಚರಣೆಗಳಿಗಿಂತ ಹೆಚ್ಚಿನ ಭಿನ್ನತೆ ಇಲ್ಲ… ಈ ಮಣ್ಣಿನ ಆದಿವಾಸಿ ಜನಾಂಗ ನಾಗ (ಸ್ವಾಮಿ)ನೇ ಮೊದಲಾದ ದೈವಗಳಿಗೆ ನಡೆಸುತ್ತಿದ್ದ ದ್ರಾವಿಡ ಮೂಲ ಆಚರಣೆಗಳು ಮುಂದೆ ಇಲ್ಲಿಗೆ ಆಗಮಿಸಿದ ಬ್ರಾಹ್ಮಣರಿಂದಾಗಿ ಆರ್ಯೀಕರಣಕ್ಕೊಳಗಾಗಿರಬೇಕು… ಪಾಣರು ತೊಡುವ ಅರ್ಧನಾರಿ ವೇಷದ ಸ್ವರೂಪ ನಾಗಮಂಡಲದ ಅರ್ಧನಾರಿ ವೇಷವನ್ನು ಹೋಲುತ್ತದೆ. ಕೈಯಲ್ಲಿ ಮರದ ಡಕ್ಕೆ ಹಾಗೂ ಮತ್ತೊಬ್ಬ ತಾಳ ಹಿಡಿದು ಹಾಡು ಹೇಳುವವರದು ನಾಗರಿಕ ವೇಷ… ಅರ್ಧನಾರಿ ವೇಷದ ಪಾಣ ದಕ್ಕೆ ಬಡಿಯುತ್ತಾ ಬಾಯಲ್ಲಿ ಅದೇ ಹಾಡನ್ನು ಪುನರಾವರ್ತಿಸುತ್ತಾ ತನ್ನೆದುರಿನ ಪಾತ್ರಿಯನ್ನು ಕುಣಿಸುತ್ತಾನೆ…’’ (ಎ.ವಿ.ನಾವಡ – ಜಿಲ್ಲೆಯ ಭೂತಾರಾಧನೆಯ ಬಡಗು, ಸಂಪ್ರದಾಯ – ಪಾಣಾರಾಟ (ಲೇಖನ), ಮಂಗಳ ತಿಮರು, ಪು.೬೯)

ಕುಂದಾಪುರ ಕಡೆಯ ಮೇರರು ‘ಕಾಡ್ಯ’ (ಕಾಳಿಂಗಸರ್ಪ)ನನ್ನು ತಮ್ಮ ಕುಲದೈವವೆಂದು ನಂಬುತ್ತಾರೆ. ಆ ನೆಲೆಯನ್ನು ತಮ್ಮ ಮೂಲಸ್ಥಾನವೆಂದು ಭಾವಿಸುತ್ತಾರೆ. ಯಾವುದೇ ಕಾರಣಕ್ಕಾಗಿ ಪರವೂರಿಗೆ ಹೋದರೂ ತಮ್ಮ ತಮ್ಮ ಕಾಡ್ಯನಮನೆಗಳಿಗೆ ಹರಕೆ ಒಪ್ಪಿಸುವುದು ಇವರ ರೂಢಿ. ‘ಮನೆತುಂಬಿಸುವ’ ಆಚರಣೆಯಲ್ಲಿ ಮೊದಲು ತೆನೆಗಳನ್ನು ನಾಗಬನಕ್ಕೆ ತಂದಿರಿಸಿ ಪೂಜಿಸಿ ಮತ್ತೆ ಎಲ್ಲರಿಗೂ ಹಂಚುವುದು ಪದ್ಧತಿ. ಉಪ್ಪಾರರೂ ಇದೇ ಬಗೆಯಲ್ಲಿ ತಮ್ಮದೇ ಆದ ನಾಗಬನಗಳಲ್ಲಿ ‘ಹುಟ್ಟು’ ಎಂಬ ಹೆಸರಲ್ಲಿ ನಾಗಪೂಜೆ ಕೈಗೊಳ್ಳುತ್ತಾರೆ.

ಕೊರಗರಲ್ಲಿ ನಾಗಪೂಜೆ ಅಷ್ಟಾಗಿ ಪ್ರಕಟವಾಗುವುದಿಲ್ಲವಾದರೂ, ಪಡುಬಿದ್ರಿಯಲ್ಲಿ ‘ಕೊರಗಬನ’ ಎಂಬುದಿದೆ ಎಂಬುದು ಗಮನೀಯ. ಆಸೋಡು, ಉಳ್ಳೂರುಗಳಲ್ಲೂ ಇದೆ. ಇದೊಂದು ಆಲಡೆಯಂಥ ದೈವಸಂಕೀರ್ಣ. ಇಲ್ಲಿ ನಾಗಪ್ರತೀಕವಾಗಿ ಮುರಕಲ್ಲಿನ ತುಂಡುಗಳಷ್ಟೇ ಇವೆ. (ಮಾಹಿತಿ ಶ್ರೀ.ಕೆ.ಎಲ್.ಕುಂಡಂತಾಯ) ಮುಂಡಾಲರಲ್ಲೂ ಅವರದ್ದೇ ಆದ ನಾಗಪೂಜೆ ಇದೆ.

ತುಳುನಾಡಿನ ಮುಗೇರರು (ಮೇರರು) ನಡೆಸುವ ‘ಮುಗ್ಗೆರ್ಲೆಕೋಲ’ ಮತ್ತು ‘ಮಂಜ’ ಎಂಬ ಆಚರಣೆಯಲ್ಲಿ ‘ಬಿರ್ಮೆರೆ ನಾಟಾವುನಿ’ (ಬಿರ್ಮೆರ್ ದೈವವನ್ನು ನೆಲೆಗೊಳಿಸುವುದು) ಎಂಬ ವಿಧಿಯಿದೆ. ಇಲ್ಲಿನ ಬಿರ್ಮೆರ್ ನಾಗಬ್ರಹ್ಮನೇ ಎನ್ನಬಹುದು. ಈ ಸಂದರ್ಭದ ‘ಬಿರ್ಮೆರೆ ಸಂಧಿ’ಯಲ್ಲಿ ‘ನಾಗಪುಂಚೊದ ನಡುಟು ಕೊಂಡುದ್ಯ ಬೆಂದೆರ್ ಜಯವುಲ್ಲ ಬಿರ್ಮೆರ್ ’ (ನಾಗರ ಹುತ್ತದ ನಡುವೆ ಉದಿಸಿದರು ಜಯವುಳ್ಳ ಬ್ರಹ್ಮರು) ಎಂದಿದೆಯಲ್ಲದೆ ನಾಗಬ್ರಹ್ಮನ ವಿಚಿತ್ರವರ್ಣನೆ ಇದೆ. ಬಿರ್ಮೆರ್ ದೈವದ ನೆಲೆಯ ಸಂಕೀರ್ಣವಾಗಿ ‘ಕೊಡಿಯಡಿ’(ತಾತ್ಕಾಲಿಕ ಪವಿತ್ರ ಚಪ್ಪರ)ಯ ಮುಂದೆ ‘ಬಿರ್ಮೆರೆ ಗುಂಡ (ಗುಡಿ)ವನ್ನು ಬಾಳೆಯ ಹೊದಿಕೆಗಳಿಂದ ನಿರ್ಮಿಸುತ್ತಾರೆ. ‘ಬಿರ್ಮೆರ್ ಗುಂಡ’ದ ಬಾಗಿಲಲ್ಲಿ ‘ಹೋಮ’ವನ್ನು ಮಾಡಿ ಅದರ ಒಳಗಡೆ ಅಕ್ಕಿ, ಕಾಯಿ, ವೀಳ್ಯ, ಹಣ್ಣು ಇತ್ಯಾದಿಗಳನ್ನು ಇರಿಸಿ ಬಿರ್ಮೆರ್ ಸಾನ್ನಿಧ್ಯವನ್ನು ಕಲ್ಪಿಸುತ್ತಾರೆ. ಆಗಲೇ ಪ್ರದರ್ಶಕರಲ್ಲಿ ಒಬ್ಬ ‘ಬಿರ್ಮೆರೆ ಸಂಧಿಯನ್ನು ಹಾಡುತ್ತಾನೆ…’ ಈ ಬಿರ್ಮೆರ್ ತುಳುನಾಡಿನ ಎಲ್ಲ ದಲಿತ ಜಾತಿಗಳ ಭೂತಾರಾಧನೆಯ ಸಂದರ್ಭದಲ್ಲಿಯೂ ಮಹತ್ವವನ್ನು ಪಡೆದುಕೊಂಡಿರುತ್ತದೆ. (ಡಾ. ಅಭಯ ಕುಮಾರ್, ಮುಗ್ಗೇರರು ಜನಾಂಗ ಜಾನಪದ ಅಧ್ಯಯನ ೧೯೯೭, ಪು.೬೦)

ಆದಿಮ ರೀತಿಯ ನಾಗಪೂಜೆಗೆ ಉಡುಪಿ ಪೇರೂರಿನ ಬಳಿಯ ಕಡವಿನ ಬಾಗಿಲು ಎಂಬಲ್ಲಿರುವ ಪುರಾತನ ನಾಗರ ಬನ ನಿದರ್ಶನವಾಗಿದೆ. ಇಲ್ಲಿ ನಾಗರಪಂಚಮಿಯಂದು ಪೂಜೆ ಜರುಗುವುದಿಲ್ಲ. ಬದಲಾಗಿ ವಿಷು(ಯುಗಾದಿ)ವಿನಂದು ನಾಗಪೂಜೆ ಜರುಗುತ್ತದೆ. (ಮಳೆಗಾಲಕ್ಕಿಂತ ಬೇಸಿಗೆಯಲ್ಲೆ ತಂಪೆರೆಯುವುದು ಯೋಗ್ಯವಾದುದಷ್ಟೆ) ದಲಿತ ವರ್ಗದವರು ಪೂಜೆ ನಡೆಸಿ ಇತರರ ಪರವಾಗಿ ಕಾಯಿ ಒಡೆದು ಪ್ರಸಾದ ನೀಡುತ್ತಾರೆ. (ಪೇರೂರು ಜಾರು- ‘ಕರಾವಳಿ ಅಲೆ’ ೨-೮-೨೦೦೬)

ಶಿಲ್ಪಲೋಕದಲ್ಲಿ

ತುಳುನಾಡಿನ ನಾಗಬನಗಳಲ್ಲಿ ಅಸಂಖ್ಯ ಮಾದರಿಯ ವಿವಿಧ ಭಂಗಿಗಳಲ್ಲಿರುವ, ಒಂದರಿಂದ ಏಳರವರೆಗೂ ಹೆಡೆಗಳಿರುವ ನಾಗಶಿಲ್ಪಗಳಿವೆ. ಅರ್ಧನಾಗ – ಅರ್ಧ ಮಾನುಷ ಸ್ವರೂಪದ ನಾಗಯಕ್ಷ-ಯಕ್ಷೀ ವಿಗ್ರಹಗಳಿವೆ. ನಾಗಮಿಥುನ ವಿನ್ಯಾಸದ ಶಿಲ್ಪಗಳಿಗೂ ಕೊರತೆಯಿಲ್ಲ. ದೇವಸ್ಥಾನ, ದೈವಸ್ಥಾನಗಳ ಶಿಲ್ಪಗಳಲ್ಲೂ ನಾಗನಪ್ರತೀಕ ಇದ್ದೇ ಇರುತ್ತದೆ. ನಂದಳಿಕೆ ದೇವಸ್ಥಾನದ ನಾಗಶಿಲ್ಪ, ಕಾರ್ಕಳ ಕಾಪೆಟ್ಟು ಬ್ರಹ್ಮಸ್ಥಾನದಲ್ಲಿನ ನಾಗಮೂರ್ತಿ, ಕೆರವಶೆಯ ನಾಗಸರಸ್ವತಿ, ಕೆಲ್ಲಪುತ್ತಿಗೆಯ ನಾಗಬ್ರಹ್ಮ, ಧರ್ಮಸ್ಥಳ ಅಶ್ವತ್ಥಕಟ್ಟೆಯ ನಾಗಪ್ರತಿಮೆ, ಕೊಡವೂರು ಮಹಾದೇವರಂಗನ ಗುಡ್ಡದ ನಾಗದೇವತೆ, ಕಳಂಜ ಬಾಳಿಲದ ಸುಬ್ರಹ್ಮಣ್ಯ ದೇವಸ್ಥಾನದ ಮೂಲ ನಾಗಬಿಂಬ, ಪೊಸರಾಲು ಬ್ರಹ್ಮಸ್ಥಾನದ ಬ್ರಹ್ಮಾಣಿ ಸಹಿತ ಚತುರ್ಮುಖ ಬ್ರಹ್ಮ ಹಾಗೂ ಇತರ ನಾಗಪ್ರತಿಮೆಗಳು, ಕಲ್ಯಾಣಪುರದ ನಾಗಕನ್ನಿಕೆ, ನಂದಳಿಕೆಯ ನಾಗಮಂಡಲದ ನಿರ್ದೇಶವಿರುವ ಶಿಲ್ಪ, ನೈಲಾಡಿಯ ನಾಗಮಂಡಲದ ಶಿಲ್ಪ, ಕುಡುಪು, ಬಳ್ಳಮಂಜ, ಕಾಡುಕುಕ್ಕೆ, ಮಂಜೇಶ್ವರ, ಪಾವಂಜೆ, ಮುಂತಾದ ಕ್ಷೇತ್ರಗಳಲ್ಲಿನ ವಿವಿಧ ನಾಗಶಿಲ್ಪಗಳು, ಕೋಟೆಕಾರಿನ ನಾಗತಂತ್ರಿಗಳ ನಾಗಬನದ ನಾಗಶಿಲ್ಪಗಳು, ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ಅಸಂಖ್ಯ ನಾಗವಿಗ್ರಹಗಳು, ಇತ್ಯಾದಿಗಳಲ್ಲಿ ನಾಗ ಎಷ್ಟೊಂದು ಬಗೆಯ ರೂಪಧಾರಣೆ ಮಾಡಿ ಶಿಲ್ಪಲೋಕದಲ್ಲಿ ವಿಜೃಂಭಿಸಿದ್ದಾನೆ ಎಂದು ಅಚ್ಚರಿಗೊಳ್ಳಬಹುದಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯದಲ್ಲೂ ನೂರಾರು ಸುಂದರ ನಾಗಶಿಲ್ಪಗಳಿವೆ.

ಹೀಗೆ ಬಗೆಬಗೆಯ ನಂಬಿಕೆ, ಮತಾಚಾರ, ಕಲೆ, ಸಾಹಿತ್ಯಾದಿಗಳಿಗೆ ಕಾರಣನಾದ ನಾಗ, ಇಂದೂ ತುಳುನಾಡಿನ ಕಾರಣಿಕ ದೈವತಗಳಲ್ಲಿ ಮುಖ್ಯ ಉಪಾಸನಾ ಮೂರ್ತಿಯಾಗಿ ಉಳಿದಿದ್ದಾನೆ. ಅರಣ್ಯನಾಶದ ಈ ದಿನಗಳಲ್ಲಿ ಅನೇಕ ನೈಸರ್ಗಿಕ ನಾಗಬನಗಳು ನಾಶವಾಗಿದ್ದರೂ ಕೆಲವು ನಾಗಬನಗಳಲ್ಲಾದರೂ ಕಾಂಕ್ರೆಟೀಕರಣ ಕಾಲಿರಿಸದೆ, ಮಹಾಗಾತ್ರದ ಮರಗಳೂ ಗಿಡಬಳ್ಳಿಗಳೂ ಇನ್ನೂ ಸಮೃದ್ಧವಾಗಿ ಉಳಿದು ಬನವನ್ನು ತಂಪಿನ ತಾವನ್ನಾಗಿಸಿವೆ. ಸಸ್ಯ ಸಂಪತ್ತಿನ ಸಂರಕ್ಷಣೆಯ ದೃಷ್ಟಿಯಿಂದ ಇದೊಂದು ಗಮನೀಯ ಅಂಶ.

ಈಚೆಗೆ, ಜಾತಿಮತಾತೀತವಾಗಿ, ಬೇರೆ ದೈವ ದೇವರುಗಳಿಗಿಂತ ಮಿಗಿಲಾಗಿ, ಒಂದೇ ಸವನೆ ಹಬ್ಬುತ್ತಿರುವ ನಾಗಭಕ್ತಿಯ ಹೆಸರಿನ ನಾಗಭೀತಿ, ಶ್ರದ್ಧಾವಲಯವನ್ನು ದಾಟಿ ಅಂಧಶ್ರದ್ಧಾ ವಲಯವನ್ನು ಪ್ರವೇಶಿಸುವುದನ್ನು ಕಾಣಬಹುದಾಗಿದೆ. ವಿವಿಧ ನಾಗಸಂಬಂಧೀ ವ್ಯವಹಾರಗಳಿಗೆ ಈಚೆಗೆ ಪ್ರಾಪ್ತವಾದ ಆಗಾಧ ಪ್ರಮಾಣದ ಆರ್ಥಿಕ ಆಯಾಮ ಮತ್ತು ಅನೇಕ ವೇಳೆ ನಂಬಿಕೆಗಳ ದುರುಪಯೋಗದ ನಿದರ್ಶನಗಳನ್ನು ನಿರ್ಲಕ್ಷಿಸುವಂತಿಲ್ಲ.

ಪರಾಮರ್ಶನ ಸಾಹಿತ್ಯ

೧. ಪ್ರೊ.ಎಸ್.ಕೆ.ರಾಮಚಂದ್ರರಾವ್, ಮೂರ್ತಿಶಿಲ್ಪನೆಲೆ, ಹಿನ್ನೆಲೆ,  ಬೆಂಗಳೂರು ವಿಶ್ವವಿದ್ಯಾಲಯ, ೧೯೭೫

೨. ಪ್ರೊ.ಎ.ವಿ.ನಾವಡ, ಡಾ.ಗಾಯತ್ರಿ ನಾವಡ, ಕಾಡ್ಯನಾಟಪಠ್ಯ ಮತ್ತು ಪ್ರದರ್ಶನ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ.

೩. ಎನ್.ಎ.ಶೀನಪ್ಪ ಹೆಗ್ಗಡೆ, ಎನ್.ಎಸ್.ಕಿಲ್ಲೆ, ಪ್ರಾಚೀನ ತುಳುನಾಡು, ಪ್ರ. ಇಂದಿರಾ ಕಿಲ್ಲೆ, ಮಂಗಳೂರು, ೧೯೫೪

೪. ಏರ್ಯ ಲಕ್ಷ್ಮೀನಾರಾಯಣ ಆಳ್ವ(ಸಂ), ಮಂಗಳ ತಿಮರು, ಅಮಟಾಡಿ ಮಂಗಳ ತಿಮರು ಶ್ರೀ ಅಣ್ಣಪ್ಪಸ್ವಾಮಿ ದೈವಸ್ಥಾನ, ಬಂಡವಾಳ(ದ.ಕ.) ೧೯೮೭

೫. ವೆಂಕಟರಾಜ ಪುಣಿಂಚತ್ತಾಯ, ತುಳು ನಡೆನುಡಿ, ರಾ.ಗೋ.ಪೈ. ಸಂಶೋಧನ ಕೇಂದ್ರ, ಉಡುಪಿ, ೧೯೯೮

೬. ಡಾ. ಅಭಯ ಕುಮಾರ್.ಕೆ, ಮುಗೇರರುಜನಾಂಗ, ಜಾನಪದ ಅಧ್ಯಯನ,  ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ, ಮಂಗಳೂರು, ೧೯೯೭

೭. ಸ್ಕಂದವೈಭವ(ಸಂ), ಪಾದೇಕಲ್ಲು ವಿಷ್ಣುಭಟ್ಟ, ವಗೆನಾಡು ಸುಬ್ರಾಯದೇವಸ್ಥಾನ, ಕರೋಪಾಡಿ, ಬಂಟವಾಳ, ದ.ಕ., ೧೯೯೩