ಕನ್ನಡನಾಡು ಏಕೀಕರಣಗೊಂಡು ಐವತ್ತುವರ್ಷ ತುಂಬಿದ ಚಿನ್ನದ ಹಬ್ಬದ ಹರ್ಷದ ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಕನ್ನಡವನ್ನು ಕಟ್ಟಿದ ಹಿರಿಯರ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಕನಸಿನ ಹೊನ್ನಾರು ಮಾಲೆ ಇಲ್ಲಿ ರೂಪು ತಾಳಿದೆ. ಕೃಷಿಸಂಸ್ಕೃತಿಯನ್ನು ನೆಲದಸಂಸ್ಕೃತಿಯನ್ನಾಗಿ ಭಾವಿಸಿ ಪರಿಭಾವಿಸಿ ಕಟ್ಟಿ ಬೆಳೆಸಿದ ಕನ್ನಡನಾಡಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಬೀಜವನ್ನು ಬಿತ್ತಿ ಚಿನ್ನದ ಬೆಳೆಗಳನ್ನು ಬೆಳೆದು ಹಿರಿಯ ಬೇಸಾಯಗಾರರ ಒಂದೊಂದು ಹೊಸ ಬೆಳೆಯನ್ನು ನಾಡಿಗೆ ಒಪ್ಪಿಸುವ ಧನ್ಯತಾ ಭಾವ ನಮ್ಮದು. ಹೀಗೆ ಹೊನ್ನಾರು ಚಿನ್ನದ ಬೆಳೆಯೂ ಹೌದು, ಕನ್ನಡದ ಚಿಣ್ಣರಿಗೆ ಹೊಸಬೆಳೆ ಬೆಳೆಯಲು ಪ್ರೇರಣೆಯೂ ಹೌದು.

ಕಳೆದ ಐವತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಮಣ್ಣಿನಲ್ಲಿ ತಮ್ಮ ಅನುಭವ ಮತ್ತು ಅಧ್ಯಯನದ ಮೂಲಕ ಉತ್ಸಾಹ ಪ್ರೀತಿ ಮತ್ತು ಪರಿಶ್ರಮಗಳಿಂದ ನಿರಂತರವಾಗಿ ಕನ್ನಡದ ಬಹುಬೆಳೆಗಳನ್ನು ಬೆಳೆಸಿಕೊಂಡುಬಂದ ಹಿರಿಯ ಹೊಸಬೆಳೆಯ ಹೊನ್ನಾರು ಮಾಲೆಯಲ್ಲಿ ಅನನ್ಯ ಫಲಗಳನ್ನು ಪಡೆಯಲಾಗಿದೆ. ಸಾಹಿತ್ಯ, ಬದುಕು, ಸಂಸ್ಕೃತಿ ಇವುಗಳ ಬಗ್ಗೆ ಐವತ್ತು ವರ್ಷಗಳ ಹಿಂದೆ ಇದ್ದ ಪರಿಕಲ್ಪನೆಗಳು ಇಂದು ಬದಲಾವಣೆ ಗೊಂಡಿವೆ. ಯಾವುದು ಸಾಹಿತ್ಯ, ಯಾವುದು ಸಾಹಿತ್ಯ ಅಲ್ಲ ಎನ್ನುವ ಚರ್ಚೆ ಕಾಲಕಾಲಕ್ಕೆ ನಡೆದು ಬೇರೆ ಬೇರೆ ಅರ್ಥಗಳನ್ನು ಶೋಧಿಸುತ್ತ ಈ ಹಂತವನ್ನು ತಲುಪಿದೆ. ಸಾಹಿತ್ಯ ಮತ್ತು ಸಂಸ್ಕೃತಿ, ಸಾಹಿತ್ಯ ಮತ್ತು ಬದುಕು ಎನ್ನುವ ಭಿನ್ನತೆಗಳು ಕಣ್ಮರೆಯಾಗಿ ಸಂಕಿರ್ಣ ಹಾಗೂ ವೈವಿಧ್ಯದ ವಿನ್ಯಾಸಗಳು ಕಾಣಿಸಿಕೊಂಡಿವೆ. ಸೃಜನಶೀಲ ಮತ್ತು ಸೃಜನೇತರ ಎನ್ನುವ ಪ್ರಭೇದಗಳು ಸಾಹಿತ್ಯಚರ್ಚೆಗಳಲ್ಲಿ ಹಿಂದಕ್ಕೆ ಸರಿದಿವೆ. ಸಾಹಿತ್ಯದ ಪಠ್ಯ ಮತ್ತು ಪರಿಸರ ಎನ್ನುವ ವರ್ಗೀಕರಣ ಅಪ್ರಸ್ತುತವಾಗಿದೆ. ಸಾಹಿತ್ಯಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಎನ್ನುವ ಪರಿಭಾಷೆಗಳು ಈಗ ಪ್ರತ್ಯೇಕ ಅಸ್ತಿತ್ವಗಳನ್ನು ಕಳೆದುಕೊಂಡು ಒಂದು ಇನ್ನೊಂದರೊಡನೆ ಮಿಳಿತವಾಗಿ ‘ಸಾಹಿತ್ಯ’ ಎನ್ನುವುದು ಸರ್ವ ವ್ಯಾಪಿಯಾಗಿದೆ ಮತ್ತು ಸರ್ವರಿಗೂ ಸಲ್ಲುವಂತದ್ದಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನೈದು ವರ್ಷಗಳಿಂದ ‘ಸಾಹಿತ್ಯ’ದ ಪ್ರಕ್ರಿಯೆಯನ್ನು ಕುರಿತ ಚರ್ಚೆ ಹಾಗೂ ‘ಸಾಹಿತ್ಯ’ ಪರಿಕಲ್ಪನೆಯ ನಿರಂತರ ಕಟ್ಟುವಿಕೆಯಲ್ಲಿ ತನ್ನನ್ನು ತೊಡಗಿಸಿ ಕೊಂಡಿದೆ. ಕನ್ನಡ ಭಾಷೆ, ಸಾಹಿತ್ಯ, ಭಾಷಾಂತರ, ಹಸ್ತಪ್ರತಿ, ದ್ರಾವಿಡ ಸಂಸ್ಕೃತಿ, ಮಹಿಳಾ ಅಧ್ಯಯನ, ಚರಿತ್ರೆ, ಪುರಾತತ್ವ, ಶಾಸನಶಾಸ್ತ್ರ, ಜಾನಪದ, ಬುಡಕಟ್ಟು, ಅಭಿವೃದ್ದಿ, ಸಂಗೀತ, ಚಿತ್ರ,ಶಿಲ್ಪ: ಹೀಗೆ ಬಹುಬಗೆಗಳಲ್ಲಿ ಬಹುಅಧ್ಯಯನ ಶಿಸ್ತುಗಳಲ್ಲಿ ಕನ್ನಡ ವಿಶ್ವ ವಿದ್ಯಾಲಯವು ಕನ್ನಡ ಸಂಸ್ಕೃತಿ ಮತ್ತು ಕನ್ನಡನಾಡನ್ನು ಹೊಸತಾಗಿ ಶೋಧಿಸುತ್ತಾ ವಿವರಿಸುತ್ತಾ ರೂಪಿಸುತ್ತಾ ಬಂದಿದೆ. ೫೦ ವರ್ಷಗಳ ಏಕೀಕೃತ ಕನ್ನಡನಾಡಿನ ಶರೀರದಲ್ಲಿ ೧೫ ವರ್ಷಗಳ ಕನ್ನಡ ವಿಶ್ವವಿದ್ಯಾಲಯದ ಭಾವಬುದ್ದಿಗಳು ಜೀವಧಾತುಗಳಾಗಿವೆ.

ಕರ್ನಾಟಕ ಸರಕಾರವು ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹೊನ್ನಾರು ಮಾಲೆಯ ಪ್ರಕಟಣೆಯ ಯೋಜನೆಯನ್ನು ಸಂತೋಷದಿಂದ ಒಪ್ಪಿಕೊಂಡು ಕನ್ನಡ ಸಂಸ್ಕೃತಿಯ ಮಹತ್ವದ ಸಾಧನೆಯೊದನ್ನು ಮಾಡಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಪ್ರಧಾನಕಾರ್ಯದರ್ಶಿಗಳೂ ಸಾಹಿತ್ಯ ಸಂಸ್ಕೃತಿ ಪ್ರಿಯರೂ ಆಗಿರುವ ಶ್ರೀ ಐ.ಎಂ.ವಿಠಲಮೂರ್ತಿ ಅವರು ಹೊನ್ನಾರು ಮಾಲೆಯ ಯೋಜನೆಯನ್ನು ಮೆಚ್ಚಿಕೊಂಡು ಸರಕಾರದ ಅಂಗೀಕಾರವನ್ನು ದೊರಕಿಸಿಕೊಟ್ಟು ಚಿನ್ನದ ಕನಸನ್ನು ನನಸನ್ನಾಗಿಸಿದ್ದಾರೆ. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಈ ವಿಶಿಷ್ಟ ಯೋಜನೆಯನ್ನು ಅಂಗೀಕರಿಸಿ ತಮ್ಮ ಕನ್ನಡಸಾಹಿತ್ಯ ಸಂಸ್ಕೃತಿಯ ಕಾಳಜಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರಕಾರದ, ಕನ್ನಡ ಸಂಸ್ಕೃತಿ ಇಲಾಖೆಯ ಈ ಸಾಂಸ್ಕೃತಿಕ ಪ್ರೀತಿಯನ್ನು ಕನ್ನಡ ವಿಶ್ವವಿದ್ಯಾಲಯ ಅಕ್ಕರೆಯಿಂದ ಸ್ಮರಿಸುತ್ತದೆ.

ತುಳುಜಾನಪದ ಮತ್ತು ಸಂಸ್ಕೃತಿಯ ಹಿರಿಯ ಸಂಶೋಧಕರಾದ ಡಾ.ಅಮೃತ ಸೋಮೇಶ್ವರ ಅವರು ಜಾನಪದ, ಯಕ್ಷಗಾನ ಮತ್ತು ಸಾಹಿತ್ಯದ ಕ್ಷೇತ್ರಗಳಲ್ಲಿ ವಿಶಿಷ್ಯವಾದ ಕೊಡುಗೆಗಳನ್ನು ಕೊಟ್ಟವರು. ತುಳುಜಾನಪದ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಳೆದ ಐವತ್ತು ವರ್ಷಗಳಿಂದ ಅಧ್ಯಯನ ನಡೆಸುತ್ತ ಬಂದಿರುವ ಅಮೃತರು ಬತ್ತಲಾರದ ಗಂಗೆ. ಅವರ ಅಧ್ಯಯನ ಮತ್ತು ಚಿಂತನೆಗಳ ಫಲವಾದ ಇಪ್ಪತ್ತೈದು ಸಂಪ್ರಬಂಧಗಳು ಇಲ್ಲಿ ಒಟ್ಟು ಸೇರಿವೆ. ದೈವರಾಧನೆ, ಪಾಡ್ದನಗಳು, ಯಕ್ಷಗಾನ ಕ್ಷೇತ್ರಗಳಲ್ಲಿ ಚಿಂತನೆ ಮತ್ತು ಅನ್ವಯಿಕ ದೃಷ್ಟಿಯುಳ್ಳ ಡಾ.ಅಮೃತ ಸೋಮೇಶ್ವರ ಅವರು ಪರಂಪರೆ ಮತ್ತು ಆಧುನಿಕತೆಗಳನ್ನು ಸಮಪ್ರಮಾಣದಲ್ಲಿ ಪ್ರಗತಿಪರ ದೃಷ್ಟಿಕೋನದಿಂದ ಅಳವಡಿಸುತ್ತ ಬಂದ ಫಲವಾಗಿ ಈ ಸಂಸ್ಕೃತಿ ಚಿಂತನೆಯ ಲೇಖನಗಳು ರೂಪುತಾಳಿವೆ. ತುಳುಸಂಸ್ಕೃತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಲೇ ಅದರ ಒಳಿತು ಕೊಡಕುಗಳನ್ನು ನಿರ್ಭಿಡೆಯಿಂದ ವಿಮರ್ಶಿಸುವ ಶಕ್ತಿ ಇಲ್ಲಿ ಕಾಣುಸುತ್ತದೆ. ಮೌಖಿಕ ಸಾಹಿತ್ಯ, ಜನಪದರಂಗಭೂಮಿ, ಪ್ರದರ್ಶನಾತ್ಮಕ ಕೆಲಗಳು ಮತ್ತು ಸಾಮಾಜಿಕ ಪ್ರಸ್ತುತತೆಗಳನ್ನು ಅಮೃತರು ಇಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಕರ್ನಾಟಕ ಅಂತರ್ಗತವಾದ ತುಳುನಾಡಿನ ಸಾಂಸ್ಕೃತಿಕ ಚಹರೆಯ ಭಿನ್ನ ರೂಪಗಳನ್ನು ಮತ್ತು ಬದಲಾವಣೆಗಳನ್ನು ವಿಮರ್ಶಕರಾಗಿ ಮತ್ತು ದಾರ್ಶನಿಕರಾಗಿ ಅಮೃತರು ವಿವೇಚಿಸಿದ್ದಾರೆ. ಸಂಸ್ಕೃತಿ ಚಿಂತಕ ಹಾಗೂ ಜಾನಪದ ವಿದ್ವಾಂಸರಾದ ಡಾ.ಅಮೃತ ಸೋಮೇಶ್ವರ ಅವರಿಗೆ ಪ್ರೀತಿ ಗೌರವದ ನಮನಗಳು.

ಹೊನ್ನಾರುಮಾಲೆಯ ಪ್ರಕಟಣೆಗಳ ಕನಸಿನ ಬೀಜದಿಂದ ತೊಡಗಿ ನನಸಿನ ಫಲದವರೆಗೆ ನನ್ನೊಡನೆ ಸಹಕರಿಸಿದ ನಮ್ಮ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರ ನೆರವಿಗಾಗಿ ವಂದನೆಗಳು.

ಬಿ.. ವಿವೇಕ ರೈ
ಕುಲಪತಿ