ಈತನ ನಂತರ ಪಟ್ಟಕ್ಕೆ ಬಂದ ವೀರನರಸಿಂಹ ಬಂಗ ಕ್ರಿ.ಶ. ೧೪೬೧ರಲ್ಲಿ ತನ್ನ ಪೂರ್ವಜನಿಗೂ ಕಾರ್ಕಳದ ಅರಸನಿಗೂ ಆದ ಒಪ್ಪಂದದಿಂದಾಗಿ ಚೌಟರೊಡನೆ ಉದ್ಭವಿಸಿದ್ದ ವಿರೋಧಕ್ಕಾಗಿ ಅವರೊಡನೆ ಅನೇಕ ಕಾದಾಟಗಳನ್ನು ಮಾಡಬೇಕಾಯಿತು. ಈ ಕಾದಾಟವನ್ನು ನಿಲ್ಲಿಸಲಿಕ್ಕಾಗಿ ಆ ಎರಡು ಮನೆತನಗಳೊಡನೆ ಕ್ರಿ.ಶ. ೧೫೨೮ರಲ್ಲಿ ಒಂದು ಒಪ್ಪಂದವನ್ನು ಮಾಡಲಾಯಿತು. ಇದನ್ನು ತಿಳಿಸುವ ಸುಜೇರು ಶಾಸನ[1]ವು ಈ ಒಪ್ಪಂದ ಕೃಷ್ಣಾನಂದ ಒಡೆಯ ಮತ್ತು ಅವನ ಶಿಷ್ಯನಾದ ವೇದಾಂತ ಒಡೆಯನ ಮಧ್ಯಸ್ಥಿಕೆಯಿಂದ ೧೫೨೮ನೇ ಮೇ ತಿಂಗಳ ೭ನೇ ತಾರೀಕಿನಂದು ನಡೆದಿತ್ತು. ಇದರಲ್ಲಿ ಒಂದು ಕಡೆಯಿಂದ ವೀರನರಸಿಂಹ ಬಂಗ ಮತ್ತು ಆತನ ಸೇನೆಯ ಮುಖ್ಯಸ್ಥನೂ, ಇನ್ನೊಂದು ಕಡೆಯಿಂದ ಪುತ್ತಿಗೆಯ ತುಳುವರಸ ಚೌಟ ಮತ್ತು ಆತನ ಸೇನೆಯ ಮುಖ್ಯಸ್ಥನೂ ಇದ್ದರು. ಕಾರ್ಕಳದ ಅರಸನೂ ಈ ಸಂದರ್ಭದಲ್ಲಿ ಉಪಸ್ಥಿತನಿದ್ದು, ಈಗ ಆದ ಒಪ್ಪಂದ ಕೆಸದಂತೆ ತಾನು ಸಹಕರಿಸುವುದಾಗಿ ಹೇಳಿಕೊಂಡಿದ್ದಾನೆ. ಆದರೂ ಈ ನೂತನ ಸ್ನೇಹ ಸಂಬಂಧ ಬಹಳ ದಿನಗಳ ವರೆಗೆ ಮುಂದುವರಿಸಿಕೊಂಡು ಹೋದಂತೆ ಕಾಣುವುದಿಲ್ಲ.

ಈತನ ತರುವಾಯ ಕ್ರಿ.ಶ. ೧೫೪೫ರಿಂದ ಆಳಿದ ಇಮ್ಮಡಿ ಲಕ್ಷ್ಮಪ್ಪರಸ ಬಂಗರಾಯನು ಮೂಡಬಿದರೆಯ ಚೌಟ ರಾಜಕುಮಾರಿ ಅಬ್ಬಕ್ಕ ದೇವಿಯನ್ನು ಮದುವೆ ಮಾಡಿಕೊಂಡನು. ಈತನ ಆಳ್ವಿಕೆಯ ಕಾಲದಲ್ಲಿ ನಡೆದ ಒಂದು ವಿಶೇಷ ಘಟನೆಯು ಬಹಳ ಜನಜನಿತವಾಗಿದೆ. ಅದೇನೆಂದರೆ, ಯಾವುದೋ ಕಾರಣಕ್ಕಾಗಿ ವೇಣೂರಿನ ತಿಮ್ಮಣ್ಣಾಜಿಲನಿಗೂ, ಲಕ್ಷ್ಮಪ್ಪರಸ ಬಂಗನಿಗೂ ವಿವಾದ ಉಂಟಾಗಿ ಯುದ್ದ ಸನ್ನಿಹಿತವಾಯಿತು. ಈ ಯುದ್ಧದಲ್ಲಿ ತಿಮ್ಮಣ್ಣಾಜಿಲನ ಸೇನಾಪತಿಯಾದ, ಪೆರಿಂಜೆಗುತ್ತು ದೇವಪೂಂಜನು ಬಂಗ ಸೈನ್ಯಾಧಿಪತಿಯಾದ ಮಣಿಗುತ್ತಿನ ದುಗ್ಗಣ್ಣ ಕೊಂಡೆಯನ್ನು ಕೊಂದನು. ಆದರೆ, ಸ್ವಲ್ಪವೇ ಸಮಯದ ನಂತರ ದೇವಪೂಂಜನು ಬಂಗರಾಜನ ಸೇನಾಧಿಪತಿಯಾಗಿ ಸೇರಿಕೊಂಡನು.

ಇದೇ ಲಕ್ಷ್ಮಪ್ಪರಸ ಬಂಗನಿಗೆ, ಬೈಲಂಗಡಿಯ ಮೂಲರ ವಂಶದ ಸೋಮಲಾದೇವಿ ಎಂಬವಳೊಡನೆ ವಿವಾಹವಾಗಿತ್ತು. ಮೊದಲಿನಿಂದಲೂ ಬಂಗರಿಗೂ ಬೈಲಂಗಡಿಯ ಮೂಲರಿಗೂ ವೈಷಮ್ಯವಿದ್ದಂತೆ ಕಾಣುತ್ತದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಐತಿಹ್ಯವಿದೆ. ಒಂದು ದಿನ ಬಂಗಾಡಿಯ ಬಸದಿಯಲ್ಲಿ ಅನಂತನೋಂಪಿಯ ಕಾರ್ಯಕ್ರಮ ಆಚರಿಸುತ್ತಿದ್ದಾಗ, ಸೋಮಲಾದೇವಿಯು ತನಗೆ ಅರಸನಂತೆಯೇ ಬಲಬದಿಗೆ ಕುಳಿತುಕೊಳ್ಳಲು ಅವಕಾಶ ಕೊಡಬೇಕೆಂದು ಹಟಹಿಡಿದಳು. ಆದರೆ ಲಕ್ಷ್ಮಪ್ಪರಸನು ಇದಕ್ಕೆ ಒಪ್ಪಲಿಲ್ಲ. ಇದರಿಂದ ಕುಪಿತಳಾದ ಸೋಮಲಾದೇವಿಯು, ತನ್ನ ಊರಾದ ಬೈಲಂಗಡಿಗೆ ಹೋಗಿ ಇಂಥದೇ ಬಸದಿಯೊಂದನ್ನು ಕಟ್ಟಿಸಿ, ಅದರಲ್ಲಿ ತನ್ನ ನೋಂಪಿಯನ್ನು ಪೂರೈಸಿಕೊಂಡಳು. ಒಮ್ಮೆ ಲಕ್ಷ್ಮಪ್ಪರಸ ಬಂಗನು ತನ್ನ ಪರಿವಾರ ದೊಡನೆ ಬೈಲಂಗಡಿಗೆ ಹೋದಾಗ ಸೋಮಲಾದೇವಿಯು, ಯಾರೋ ತನ್ನ ಅರಮನೆಯನ್ನು ಮುತ್ತಿಗೆ ಹಾಕಲು ಬರುತ್ತಿರುವರೆಂದು ಭಾವಿಸಿಕೊಂಡು ಯಾರನ್ನೂ ಅರಮನೆಯ ಮೆಟ್ಟಲನ್ನೇರಿ ಬರಲು ಬಿಡಬಾರದೆಂದೂ, ಒಂದು ವೇಳೆ ಬಲಾತ್ಕಾರದಿಂದ ಬಂದರೆ ಅವರನ್ನು ಮುಗಿಸಿಬಿಡಬೇಕೆಂದೂ ಆಜ್ಞೆಯನ್ನಿತ್ತು, ಕಾವಲುಗಾರನನ್ನು ಮೆಟ್ಟಲಲ್ಲೇ ನಿಲ್ಲಿಸಿದಳು. ತನ್ನ ರಾಣಿಯ ಮನೆಯೆಂದು ಭಾವಿಸಿ, ಲಕ್ಷ್ಮಪ್ಪರಸನು ಒಬ್ಬನೇ ಮೆಟ್ಟಲೇರಿ ಬಂದಾಗ ಆತನ ಶಿರಚ್ಛೇದನ ಮಾಡಲಾಯಿತು. ಇದನ್ನು ತಿಳಿದ ಸೋಮಲಾದೇವಿಯು ದುಃಖದಿಂದ ತಾನೂ ಪ್ರಾಣತ್ಯಾಗ ಮಾಡಿಕೊಂಡಳು. ಇವರಿಬ್ಬರ ನಿಷಿಧಿಗಳನ್ನು ಈಗಲೂ ಬೈಲಂಗಡಿಯಲ್ಲಿ ಕಾಣಬಹುದು.

ಇಮ್ಮಡಿ ಲಕ್ಷ್ಮಪ್ಪರಸ ಬಂಗನ ತರುವಾಯ, ಆತನ ಅಳಿಯನಾದ ಮುಮ್ಮಡಿ ಕಾಮರಾಯನು ಪಟ್ಟಕ್ಕೆ ಬಂದ. ಈತನು ಪೋರ್ತುಗೀಜರೊಡನೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದ. ಕಾಮರಾಯನ ತಂಗಿಯಾದ ಕಾಮಲಾದೇವಿಯನ್ನು ಕಾರ್ಕಳದ ಇಮ್ಮಡಿ ಭೈರವರಾಯನಿಗೆ ಮದುವೆಮಾಡಿಕೊಡುವುದೆಂದು ನಿಶ್ಚಯವಾಗಿತ್ತು. ಆದರೆ ಅಷ್ಟರೊಳಗೆ ಒಂದು ಯುದ್ಧದಲ್ಲಿ ಚೌಟರ ರಾಣಿ ತಿರುಮಲಾದೇವಿಯು ಭೈರವರಾಯನಿಂದ ಕೊಲ್ಲಲ್ಪಟ್ಟಳು. ಕಾಮರಾಯ ಬಂಗನೂ ಸೋತುಹೋದನು. ಅಧಿಕಾರವನ್ನು ಕಳೆದುಕೊಂಡು ಕಾಮರಾಯನು ತನ್ನ ಮಾವನಾದ ಲಕ್ಷ್ಮಪ್ಪರಸ ಬಂಗನ ಪತ್ನಿ ಉಳ್ಳಾಲದ ರಾಣಿ ಅಬ್ಬಕ್ಕದೇವಿಯ ವಿರುದ್ಧವಾಗಿ ಪೋರ್ತುಗೀಜರನ್ನು ಎತ್ತಿಕಟ್ಟಿ, ಅವರೊಳಗೆ ಯುದ್ದವಾಗುವಂತೆಯೂ ಮಾಡಿದನು. ಆಗ ಅಬ್ಬಕ್ಕರಾಣಿಯು ವೀರಾವೇಶದಿಂದ ಕಾದಾಡಿ, ಪೋರ್ತುಗೀಜರನ್ನು ಸೋಲಿಸಿ ತನ್ನನ್ನೂ ತನ್ನ ಜರನ್ನೂ ರಕ್ಷಿಸಿಕೊಂಡಳು.

ಕಾಮರಾಯರಸನು ಕ್ರಿ.ಶ. ೧೬೧೨ರಲ್ಲಿ ತೀರಿಕೊಂಡ ಮೇಲೆ ಪಟ್ಟಕ್ಕೆ ಬಂದ ಆತನ ಅಳಿಯನಾದ ಮುಮ್ಮಡಿ ಲಕ್ಷ್ಮಪ್ಪರಸ ಬಂಗರಾಯನು ಪೋರ್ತುಗೀಜರೊಡನೆ ಹೆಚ್ಚು ಸ್ನೇಹವನ್ನು ಬೆಳೆಸಿಕೊಂಡು ಇಕ್ಕೇರಿಯ ನಾಯಕರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಇದರಿಂದಾಗಿ ಕೆಳದಿಯ ಒಂದನೇ ವೆಂಕಟಪ್ಪ ನಾಯಕನು ಬಂಗರ ರಾಜ್ಯದ ಮೇಲೆ ಧಾಳಿಯನ್ನು ನಡೆಸಿ, ಬಂಗರನ್ನು ಸೋಲಿಸಿದನು. ಅದರಂತೆ, ಬಂಗರಸನು ೩೫೦೦ ವರಹಗಳ ಕಪ್ಪವನ್ನು ಕೊಡಬೇಕೆಂದೂ ವಿಧಿಸಿದನು. ಇದರಿಂದಾಗಿ ಬಂಗರ ಬಲವು ಕುಂದತೊಡಗಿತು.

ಈ ಲಕ್ಷಪ್ಪರಸ ಬಂಗನ ತರುವಾಯ, ಆತನ ಅಳಿಯನಾದ ನಾಲ್ಮಡಿ ಹಾವಳಿ ಬಂಗರಾಜ ಒಡೆಯನು ಕ್ರಿ.ಶ. ೧೬೨೮ರಲ್ಲಿ ಪಟ್ಟಕ್ಕೆ ಬಂದನು. ಇಕ್ಕೇರಿಯ ಅರಸನು ವಿಧಿಸಿದ ಕಪ್ಪವನ್ನು ಕೊಡದಿದ್ದುದರಿಂದ ಇಕ್ಕೇರಿಯ ಅರಸ ಶಿವಪ್ಪ ನಾಯಕನು ಬಂಗರಾಜ ಒಡೆಯನನ್ನು ಸೆರೆ ಹಿಡಿದು ಇಕ್ಕೇರಿಗೆ ಕೊಂಡೊಯ್ದನು. ಬಂಗರ ಕೈಯಿಂದ ಮಂಗಳೂರು ತಪ್ಪಿಹೋಗಿ, ಅದು ಇಕ್ಕೇರಿಯ ಅರಸರ ನೇರ ಆಡಳಿತಕ್ಕೆ ಒಳಗಾಯಿತು. ಅದರಂತೆ ಬಂಗರಸರು, ಬಂಗಾಡಿಯಲ್ಲದೆ ಇತರ ಕಡೆಗಳಲ್ಲಿ ಅರಮನೆಗಳನ್ನೂ ಕೋಟೆಗಳನ್ನೂ ಹೊಂದಿರಬಾರದೆಂದು ಬಲಾತ್ಕಾರಿಸಲಾಯಿತು. ಆದರೆ ನಂದಾವರದಲ್ಲಿದ್ದ ಕೋಟೆಯು ಬಂಗರ ಕೈತಪ್ಪಿ ಹೋಗಲಿಲ್ಲ.

ಇದರ ನಂತರ ನಾಲ್ಮಡಿ ಲಕ್ಷ್ಮಪ್ಪರಸ ಬಂಗರಾಜನು ರಾಜ್ಯವಾಳಿದನು. ಈ ನಾಲ್ಮಡಿ ಲಕ್ಷ್ಮಪ್ಪರಸನ ಕಾಲದಲ್ಲಿ (ಕ್ರಿ.ಶ. ೧೬೯೯ – ೧೭೬೭) ಹೈದರಾಲಿಯು ಇಕ್ಕೇರಿ ಅರಸರ ರಾಜಧಾನಿಯಾಗಿದ್ದ ಬಿದನೂರನ್ನು ೧೭೬೩ರಲ್ಲಿ ಗೆದ್ದುಕೊಂಡು, ಬಂಗರ ರಾಜ್ಯವಾದ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗಕ್ಕೆ ಬಂದನು. ಆಗ ಬಂಗರಾಜನು ಅವನನ್ನು ರಾಜೋಚಿತ ಗೌರವಗಳೊಂದಿಗೆ ಬರಮಾಡಿಕೊಂಡು ಸತ್ಕರಿಸಿದ. ಆದರೆ ಹೈದರನು ನೇಮಿಸಿದ್ದ ಮಂಗಳೂರಿನ ಶೇಕಾಲಿಯೆಂಬ ಅಧಿಕಾರಿಯು, ಬಂಗಸನಿಗೆ ಬಹು ರೀತಿಯಲ್ಲಿ ಉಪಟಳವನ್ನು ಕೊಡುತ್ತಿದ್ದನು. ಇದರಿಂದ ಉಂಟಾದ ದುಃಖದಿಂದಲೇ ನಾಲ್ಮಡಿ ಲಕ್ಷ್ಮಪ್ಪರಸ ಬಂಗರಾಜನು ಕ್ರಿ.ಶ. ೧೭೬೭ರಲ್ಲಿ ತೀರಿಕೊಂಡ.

ಆ ಬಳಿಕ ನಾಲ್ಮಡಿ ಕಾಮಪ್ಪರಸ ಬಂಗರಾಯನು ಬಹು ಶ್ರದ್ಧೆಯಿಂದ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದಾಗ, ಹೈದರಾಲಿಯು ನೇಮಿಸಿದ್ದ ಮಂಗಳೂರಿನ ಅಧಿಕಾರಿಯೂ ಆತನಿಗೆ ಉಪಟಳ ಕೊಡುತ್ತಿದ್ದುಲ್ಲದೆ, ನಂದಾವರದ ಅರಮನೆಯನ್ನು ಸುಲಿಗೆ ಮಾಡಿದನು. ಅನಂತರ ಕಾಮಪ್ಪರಸನನ್ನು ಬೆಳ್ತಂಗಡಿಯ ಜಮಲಾಬಾದ್ ಕೋಟೆಯಲ್ಲಿ ಗಲ್ಲಿಗೇರಿಸಿದರು. ಇದೇ ಸಮಯದಲ್ಲಿ ಕೊಡಗಿನ ಅರಸನ ಕಡೆಯವನಾದ ಗೋಪ ಗೌಡನು ನಂದಾವರದ ಅರಮನೆಯನ್ನು ಲೂಟಿ ಮಾಡಿ ಕೊನೆಗೆ ಅದನ್ನು ಸುಟ್ಟುಹಾಕಿದನು.

ಕ್ರಿ.ಶ. ೧೭೯೯ರ ಮೇ ತಿಂಗಳಲ್ಲಿ ಟಿಪ್ಪು ಸುಲ್ತಾನನು ಬ್ರಿಟಿಷರ ಕೈಯಿಂದ ನಾಲ್ಕನೇ ಮೈಸೂರು ಯುದ್ಧದಲ್ಲಿ ಮಡಿದುದರಿಂದ, ದಕ್ಷಿಣ ಕನ್ನಡ ಜಿಲ್ಲೆಯು ಬ್ರಿಟಿಷರ ವಶವಾಯಿತು. ಇಲ್ಲಿಯ ಜನರನ್ನು ಒಲಿಸಿಕೊಳ್ಳುವುದಕ್ಕಾಗಿ ೧೮೦೦ನೇ ಇಸವಿಯಲ್ಲಿ ನಂದಾವರದ ಹೊಸ ಅರಮನೆಯಲ್ಲಿ ೫ನೇ ಲಕ್ಷ್ಮಪ್ಪರಸ ಬಂಗನಿಗೆ ಬಹಳ ವೈಭವದಿಂದ ಬ್ರಿಟಿಷರು ಪಟ್ಟ ಕಟ್ಟಿದರು. ಮುಂದೆ ಕೆಲವು ವರ್ಷಗಳ ವರೆಗೆ ಈ ಬಂಗರಾಜನು ಬಹು ಶಾಂತಿಯಿಂದ ರಾಜ್ಯವಾಳಿದನು. ಆದರೆ ಈ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದು ಲಕ್ಷ್ಮಪ್ಪರಸ ಬಂಗನು ಅದಕ್ಕೆ ಬೆಂಬಲವನ್ನು ಕೊಡಬೇಕಾಯಿತು. ಕ್ರಿ.ಶ. ೧೮೩೭ರಲ್ಲಿ ಕೊಡಗಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಇಳಿದು ಬಂದ ಕಲ್ಯಾಣಪ್ಪನ ದಂತೆ(ಕಾಟಕಾಯಿ)ಯು,ನಂದಾವರಕ್ಕೆ ಬಂದಾಗ ಈ ಬಂಗರಾಯನು ಅದನ್ನು ಸೇರಿಕೊಂಡನು. ಈ ದಂಗೆಯು ತೀವ್ರ ರೂಪವನ್ನು ತಾಳಿದಾಗ, ಬ್ರಿಟಿಷರು ಕಲ್ಯಾಣಪ್ಪನನ್ನೂ, ಲಕ್ಷ್ಮಪ್ಪರಸ ಬಂಗರಾಯನನ್ನೂ ಸೆರೆಹಿಡಿದು ಮಂಗಳೂರಿನ ಬಿಕ್ರನಕಟ್ಟೆಯಲ್ಲಿ ಕ್ರಿ.ಶ. ೧೮೩೭ರಲ್ಲಿ ಶಿರಚ್ಛೇದನ ಮಾಡಿದರು. ಆಗ ಬ್ರಿಟಿಷರು ಇಡೀ ದಕ್ಷಿಣಕನ್ನಡ ಜಿಲ್ಲೆಯ ಮೇಲೆ ಅಧಿಕಾರವನ್ನು ಹೊಂದಿದ್ದರಿಂದ ಬಂಗರು ಮತ್ತೆ ಅರಸು ಮನೆತನದವರಾಗಿ ಮೊದಲಿನಂತೆ ಮುಂದುವರಿಯಲಿಲ್ಲ.

ಈ ಲಕ್ಷ್ಮಪ್ಪರಸ ಬಂಗರಾಯನ ತರುವಾಯ, ಐದನೇ ಕಾಮರಾಯ ಬಂಗ ಮತ್ತು ಲಕ್ಷ್ಮಪ್ಪರಸ ಪದ್ಮರಾಜ ಬಂಗರೆಂಬವರು ನಂದಾವರದ ಅರಮನೆಯಿಂದ ರಾಜ್ಯವಾಳಿದರು. ಲಕ್ಷ್ಮಪ್ಪರಸ ಪದ್ಮರಾಜ ಬಂಗನು ಬಂಗಾಡಿಯ ಶ್ರೀ ಶಾಂತೀಶ್ವರ ಸ್ವಾಮಿ ಯ ಬಸದಿಯನ್ನು ಪೂರ್ಣವಾಗಿ ಜೀರ್ಣೋದ್ಧಾರ ಮಾಡಿ ಈಗಿನ ಬಂಗಾಡಿ ಅರಮನೆಯನ್ನು ೧೯೦೧ನೇ ಇಸವಿಯಲ್ಲಿ ಕಟ್ಟಿಸಿದನು. ಇವನ ಅನಂತರ ಈ ವಂಶದಲ್ಲಿ ಹುಟ್ಟಿದವರೇ, ಐದನೇ ಕಾಮರಾಯ ಬಂಗನ ತಮ್ಮ, ಪಟ್ಟಾಭಿಷಿಕ್ತನಾಗದಿದ್ದ ಶಾಂತಿರಾಜ ಬಲ್ಲಾಳ (ಪಟ್ಟಾಭಿಷೇಕವಾಗದಿರುವ ಬಂಗ ಅರಸರನ್ನು ಬಲ್ಲಾಳ ಎಂದು ಕರೆಯುವುದು ರೂಢಿ) ಮತ್ತು ಅವನ ಮಗ ದೇವರಾಜ ಬಲ್ಲಾಳ ಮತ್ತು ಅವರ ಮಗ ಈಗಿನ ಬಂಗಾಡಿ ಅರಮನೆಯಲ್ಲಿರುವ ಶ್ರೀಯುತ ರವಿರಾಜ ಬಲ್ಲಾಳರು.

ಇತರ ಅರಮನೆಗಳೊಡನೆ ಬಂಗರಸರು ಇಟ್ಟುಕೊಂಡಿದ್ದ ಸಂಬಂಧ:

ಈಗಿನ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು ತಾಲೂಕುಗಳು ಮತ್ತು ಕಾರ್ಕಳ ತಾಲೂಕಿನ ಕೆಲವು ಭಾಗಗಳ ಮೇಲೆ ತಮ್ಮ ರಾಜಕೀಯ ಅಧಿಕಾರವನ್ನು ಹೊಂದಿದ್ದ ಬಂಗರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಶಾಲಿ ಅರಸು ಮನೆತನದವರಾಗಿ ಈ ಜಿಲ್ಲೆಯ ಹಲವು ರಾಜ ಮನೆತನಗಳೊಡನೆ ವೈವಾಹಿಕ ಸಂಬಂಧವನ್ನು ಹೊಂದಿದ್ದರು. ವಿಜಯನಗರದ ಚಕ್ರವರ್ತಿಗಳು ಹಾಗೂ ಅವರು ನೇಮಿಸಿದ್ದ ಮಂಗಳೂರಿನ ರಾಜ್ಯಪಾಲರುಗಳೊಡನೆ ಇವರು ಸೌಹಾರ್ದಯುತ ಸಂಬಂಧವನ್ನು ಇರಿಸಿಕೊಂಡಿದ್ದರಿಂದ ತಮ್ಮ ಸ್ಥಾನ ಗೌರವವನ್ನು ಹೆಚ್ಚಿಸಿಕೊಂಡಿದ್ದರು.

ಕ್ರಿ.ಶ. ೧೪೮೪ರಿಂದ ಬಂಗಾಡಿಯಿಂದ ಆಳುತ್ತಿದ್ದ ಒಂದನೇ ಲಕ್ಷ್ಮಪ್ಪರಸ ಬಂಗನು “ಭೈರಸರ” ಎಂಬ ಒಂದು ವಿಶಿಷ್ಟ ಬಿರುದನ್ನು ಹೊಂದಿದ್ದುದು ನಮಗೆ ಒಂದು ಶಾಸನದಿಂದ[2] ತಿಳಿದುಬರುತ್ತದೆ. ಇದು ಕಾರ್ಕಳದ ಭೈರಸರನನ್ನು ತಾನು ಸೋಲಿಸಿದ್ದರಿಂದ ಇಟ್ಟುಕೊಂಡಿರುವ ಬಿರುದಾಗಿರಬೇಕು. ಕಾರ್ಕಳದ ಅರಸನನ್ನು ಸೋಲಿಸಿದ ನಂತರ ಈ ಎರಡೂ ರಾಜ ಮನೆತನಗಳೊಳಗೆ ವೈವಾಹಿಕ ಸಂಬಂಧವೇರ್ಪಟ್ಟಿರಬೇಕೆಂದು ಡಾ| ಗುರುರಾಜ ಭಟ್ಟರು ಹೇಳಿದ್ದಾರೆ. [3]ಇದರಿಂದ ಬಂಗರ ಸೈನಿಕ ಶಕ್ತಿಯ ಅರಿವು ನಮಗಾಗುತ್ತದೆ.

ಇನ್ನೊಂದು ವಿಶಿಷ್ಟ ಸಂಗತಿಯೆಂದರೆ, ಕಾರ್ಕಳದ ಅರಸರಲ್ಲಿ ಅತ್ಯಂತ ಪ್ರಸಿದ್ಧನಾದ ಇಮ್ಮಡಿ ಭೈರವೇಂದ್ರನು ತನ್ನ ಕ್ರಿ.ಶ. ೧೫೮೬ರ ಕಾರ್ಕಳದ ಚತುರ್ಮುಖ ಬಸದಿಯಲ್ಲಿರುವ ಒಂದು ಶಾಸನ[4]ದಲ್ಲಿ ತಾನು ವೀರನರಸಿಂಹ ಮತ್ತು ಗುಮ್ಮಟಾಂಬಿಕೆಯರ ಮಗನೆಂದು ಹೇಳಿಕೊಂಡಿದ್ದಾನೆ. ಅಳಿಯ ಸಂತಾನ ಪದ್ಧತಿಯಂತೆ, ಬಂಗರ ಅರಮನೆಯ ರಾಜಕುಮಾರನಾದ ಇಮ್ಮಡಿ ಭೈರವೇಂದ್ರನ ತಂದೆಯಾದ ವೀರ ನರಸಿಂಹ ಬಂಗನು ಮೇಲೆ ಹೇಳಿದ ಒಂದನೇ ಲಕ್ಷ್ಮಪ್ಪರಸ ಬಂಗನ ಅಳಿಯನಾಗಿರಬೇಕು. ಬಂಗರಸರ ಮತ್ತು ಪುತ್ತಿಗೆಯ ಚೌಟರ ಸಂಬಂಧವು ಎಲ್ಲಾ ಕಾಲದಲ್ಲಿಯೂ ಸೌಹಾರ್ದಯುತವಾಗಿತ್ತೆಂದು ಹೇಳಬರುವುದಿಲ್ಲ. ಈ ಲೇಖಕನು ೬ – ೫ – ೧೯೮೪ರಂದು “ಉದಯವಾಣಿ” ಯಲ್ಲಿ ಪ್ರಕಾಶನಗೊಳಿಸಿದ ಅಲ್ಲಪ್ಪಶೇಖ ಚೌಟನ ಮೂಡುಬಿದ್ರೆಯ ತಾಮ್ರಶಾಸನದಲ್ಲಿ ಚೌಟ ಅರಸನಾಗಿದ್ದ ಅಲ್ಲಪ್ಪ ಶೇಖ ಚೌಟನು ಬಂಗರಸ ಕಾಮರಾಯನೊಡನೆ ಕ್ರಿ.ಶ. ೧೪೬೭ರಲ್ಲಿ ಒಂದು ಶಾಂತಿ ಒಪ್ಪಂದವನ್ನು ಮಾಡಿಕೊಂಡಿರುವುದು ತಿಳಿದು ಬರುತ್ತದೆ. ಹಿಂದೊಮ್ಮೆ ಅವರೊಳಗೆ ನಡೆದಿದ್ದ ಒಂದು ಅಹಿತಕರ ಘಟನೆಯ ಸಂದರ್ಭದಲ್ಲಿ ಅವರು ಪರಸ್ಪರ ವಿಚಾರ ವಿನಿಮಯವನ್ನು ನಡೆಸಿಕೊಂಡು ಈ ಮೂಲಕ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರು. ಇನ್ನು ಮುಂದೆ ತಾನು ಬಂಗರ ರಾಜ್ಯಕ್ಕೆ ಸೇರಿದ ದತ್ತಮಂಗಲ, ಅಮ್ಮೆಂಬಳ, ಹರಿಯಕಳ, ಉಳ್ಳಾಲ, ಮಂಜೇಶ್ವರ, ಉದ್ಯಾವರ, ಅರ್ಕುಳ ಇತ್ಯಾದಿ ಸ್ಥಳಗಳ ಮೇಲೆ ಅತಿಕ್ರಮಣ ಮಾಡಿಸುವುದಿಲ್ಲವೆಂದೂ, ಅಲ್ಲಿಯ ಜನರಿಗೆ ಯಾವುದೇ ಉಪದ್ರವವನ್ನು ಕೊಡುವುದಿಲ್ಲವೆಂದೂ ಮಾತುಕೊಟ್ಟು ಅಲ್ಲಪ್ಪಶೇಖ ಚೌಟನು ಈ ಒಪ್ಪಂದವನ್ನು ಮಾಡಿಕೊಂಡಿದ್ದನು. ಇದಕ್ಕೆ ಪುತ್ತಿಗೆಯ ಸೋಮನಾಥ, ಕುತ್ಯಾರಿನ ಸೋಮನಾಥ ಕಡೆಶಿವಾಲ್ಯದ ನಾರಸಿಂಹ ಮುಂತಾದ ದೇವರುಗಳ ಸಾಕ್ಷಿಯನ್ನಿಟ್ಟಿದ್ದನು. ಈ ಒಪ್ಪಂದದ ಒಕ್ಕಣೆಗಳನ್ನು ಓದಿದರೆ ಬಂಗರಸರು ಬಹಳ ಪ್ರಬಲರಾಗಿಯೂ, ಪ್ರಭಾವಶಾಲಿಗಳಾಗಿಯೂ ಇದ್ದರೆಂದು ಅರ್ಥವಾಗುತ್ತದೆ.

ಇದರಂತೆ, ವೀರನರಸಿಂಹ ಬಂಗನೂ, ಪುತ್ತಿಗೆಯ ಅರಸ ತಿರುಮಲರಸ ಚೌಟನೂ ಕ್ರಿ.ಶ. ೧೫೨೮ರಲ್ಲಿ ಇನ್ನೊಂದು ಒಪ್ಪಂದವನ್ನು ಮಾಡಿಕೊಂಡದ್ದು ನಮಗೆ ಇನ್ನೊಂದು ಶಾಸನದಿಂದ[5]ತಿಳಿದು ಬರುತ್ತದೆ. ಈ ಶಾಸನದಲ್ಲಿ ಹೇಳಿರುವಂತೆ ಚೌಟರಿಗೂ ಬಂಗರಿಗೂ ಉಂಟಾಗಿದ್ದ ಒಂದು ವಿವಾದವನ್ನು ವಿಜಯನಗರದ ಅಧಿಕಾರಿಯಾಗಿದ್ದ ಕೃಷ್ಣಾನಂದ ಒಡೆಯನೆಂಬವನ ಶಿಷ್ಯನಾಗಿದ್ದ ವೇದಾಂತ ಒಡೆಯನ ಮಧ್ಯಸ್ಥಿಕೆಯಲ್ಲಿ ಪರಿಹರಿಸಿಕೊಂಡು, ಈ ಒಪ್ಪಂದವನ್ನು ಮಾಡಲಾಗಿತ್ತು. ಇದರಲ್ಲಿ ಈ ಎರಡು ಅರಸು ಮನೆತನಗಳಿಗೆ ಸಂಬಂಧಪಟ್ಟ ಸೀಮೆಗಳನ್ನು ಸರಿಯಾಗಿ ತಿಳಿಸಿ, ಮುಂದೆ ಅವರೊಳಗೆ ಈ ಕುರಿತಾದ ವಿವಾದಗಳು ಉಂಟಾಗದಂತೆ ಮಾಡಲಾಗಿತ್ತು. ಆದರೆ, ಚೌಟರ ಸೀಮೆಯೂ ಬಂಗರ ಭೂಮಿಯೂ, ನೆರೆಹೊರೆಯಲ್ಲಿ ಇದ್ದುದರಿಂದ ಈ ರೀತಿಯ ವೈಮನಸ್ಸುಗಳೂ, ತಿಕ್ಕಾಟಗಳೂ, ಸರ್ವೇಸಾಮಾನ್ಯವಾಗಿದ್ದವೆಂದು ತಿಳಿಯುತ್ತದೆ.

ಬಂಗರಸರು ತಮ್ಮ ರಾಜ್ಯದ ಆಗ್ನೇಯ ಭಾಗದಲ್ಲಿ ಪಶ್ಚಿಮ ಘಟ್ಟದ ವರೆಗಿನ ಪ್ರದೇಶವನ್ನು ಆಳುತ್ತಿದ್ದ, ಬೈಲಂಗಡಿಯ ಮೂಲರೊಡನೆ ವೈವಾಹಿಕ ಸಂಬಂಧವನ್ನು ಹೊಂದಿದ್ದರು. ಆದರೂ ಈ ಸಂಬಂಧವನ್ನು ಯುದ್ಧ ಹಾಗೂ ವಿರೋಧವನ್ನು ಕಡಿಮೆ ಮಾಡಿಕೊಂಡು, ಶಾಂತಿಯಿಂದ ಇರುವುದಕ್ಕಾಗಿ ಮಾಡಿಕೊಂಡದ್ದೆಂದು ಕಾಣುತ್ತದೆ. ಎರಡನೇ ಲಕ್ಷ್ಮಪ್ಪರಸ ಬಂಗನು ಬೈಲಂಗಡಿಯ ಮೂಲ ವಂಶಕ್ಕೆ ಸೇರಿದ ರಾಜಕುಮಾರಿ ಸೋಮಲಾದೇವಿಯನ್ನು ಮದುವೆಯಾಗಿದ್ದನು. ಆದರೆ ಇವರ ದಾಂಪತ್ಯವು ಸುಖಕರವಾಗಿರಲಿಲ್ಲ. ಪತ್ನಿಯಾದ ಸೋಮಲಾದೇವಿಯು ಪತಿಯನ್ನು ಧಿಕ್ಕರಿಸಿ ತನ್ನ ಊರಿಗೆ ಬಂದು, ತಾನು ಸ್ವತಂತ್ರವಾಗಿ ಬಸದಿಯೊಂದನ್ನು ಕಟ್ಟಿಸಿ, ಕೊನೆಗೆ ಕ್ರಿ.ಶ. ೧೫೫೬ರಲ್ಲಿ ಆತನ ಹತ್ಯೆಗೆ ಕಾರಣಳಾದಳು. ಆದರೆ ಪಶ್ಚಾತ್ತಾಪಪಟ್ಟು ಮುಂದೆ ತಾನೇ ಪ್ರಾಣತ್ಯಾಗ ಮಾಡಿಕೊಂಡಿದ್ದಳಷ್ಟೆ? ಈ ರೀತಿಯಾಗಿ ಪ್ರಾರಂಭದಲ್ಲಿ, ಈ ಎರಡು ಮನೆತನಗಳೊಡನೆ ವೈಷಮ್ಯವಿದ್ದುದಾಗಿ ತಿಳಿದು ಬರುತ್ತದೆ.

ಬೈಲಂಗಡಿಯಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಭದ್ರಮಂಟಪದ ಕಂಬದ ಮೇಲಿರುವ ಶಾಸನವು ಬಂಗರಿಗೂ ಮೂಲರಿಗೂ ಇದ್ದ ಒಳ್ಳೆಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಈ ಶಾಸನದಲ್ಲಿ ಹೇಳಿರುವಂತೆ ಕ್ರಿ.ಶ. ೧೬೧೧ರಲ್ಲಿ ವೀರನರಸಿಂಹ ಲಕ್ಷ್ಮಪ್ಪರಸ ಬಂಗನೂ, ಆತನ ಪತ್ನಿಯೂ ಬಂಗಾಡಿಯಲ್ಲಿ ಸುಖಶಾಂತಿಗಳಿಂದ ರಾಜ್ಯವಾಳುತ್ತಿದ್ದರು. ಆಗ ಹಿಂದಿನ ಪ್ರಧಾನಿಯಾಗಿದ್ದ ಕೃಷ್ನ ಸೇನಭೋವನ ಮಗನಾದ ಈಶ್ವರ ಸೇನಬೋವನು, ಈ ರಾಜದಂಪತಿಗಳಿಗೆ ಶಾಶ್ವತವಾದ ಕೀರ್ತಿ ಪುಣ್ಯಗಳು ಸಂಪಾದನೆಯಾಗಬೇಕೆಂದು, ಬೈಲಂಗಡಿ ಬಸದಿಯಲ್ಲಿ ದೋಷನಿವಾರಣೆ ಮಾಡಿಕೊಂಡು ಆ ಬಸದಿಯ ಜೀರ್ಣೋದ್ಧಾರ ಮಾಡಿದನು. ಒಬ್ಬ ಶ್ಯಾನುಭಾಗನು ರಾಜ ದಂಪತಿಗಳ ಮೇಲೆ ಈ ರೀತಿಯಾದ ಗೌರವದಿಂದ ಒಂದು ಕಾರ್ಯಕ್ರಮ ಕೈಗೊಂಡನೆಂದರೆ ಆ ಕಾಲದಲ್ಲಿ ಶಾಂತಿ ನೆಲೆಸಿತ್ತೆಂದೂ ಆಗ ಅರಮನೆಯ ಸ್ಥಿತಿಯು ಚೆನ್ನಾಗಿತ್ತೆಂದೂ ತಿಳಿಯಬಹುದಾಗಿದೆ.

ಬಂಗರ ರಾಜ್ಯದ ಸ್ಥಿತಿ:

ಕ್ರಿ.ಶ. ೧೨ನೇ ಶತಮಾನದಲ್ಲಿ ಬಂಗಾಡಿಯಲ್ಲಿ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದ ಈ ಬಂಗರಸರು, ಕವಿ ವಿಜಯವರ್ಣಿಯು ಹೇಳುವಂತೆ, ಪೂರ್ವ ದಿಶೆಯಲ್ಲಿ ಉನ್ನತವಾಗಿರುವ ಸಹ್ಯಾದ್ರಿ ಬೆಟ್ಟಗಳಿಂದ ಪಶ್ಚಿಮದ ಅರಬೀ ಸಮುದ್ರದವರೆಗೂ ರಾಜ್ಯವಾಳುತ್ತಿದ್ದರು. ನೇತ್ರಾವತಿ ನದಿಯ ಇಕ್ಕೆಲಗಳಲ್ಲಿದ್ದ ಭೂ ಪ್ರದೇಶವನ್ನು ಆಳುತ್ತಾ ಸಂಪದ್ಭರಿತವಾದ ಭೂ ಭಾಗವನ್ನು ಹೊಂದಿದ್ದರು. ಕೃಷಿಯಿಂದಾಗಿ ಸಾಕಷ್ಟು ಧವಸಧಾನ್ಯಗಳು ಇವರ ರಾಜ್ಯದಲ್ಲಿ ಬೆಳೆಯುತ್ತಿದದವು. ಇವರ ರಾಜ್ಯದ ಪೂರ್ವ ಭಾಗವು ಹೆಚ್ಚು ಕಾಡಿನಿಂದ ಕೂಡಿದ್ದುದರಿಂದ ವನ್ಯ ಸಂಪತ್ತು ಈ ಪ್ರದೇಶದಲ್ಲಿ ಹೇರಳವಾಗಿತ್ತು. ತಮ್ಮ ಆಳ್ವಿಕೆಯ ಕಾಲದಲ್ಲಿ ವಿದೇಶಿಯರಾದ ಪೋರ್ತುಗೀಜರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದುರಿಂದ ಇಲ್ಲಿಯ ಜನರು ಮಂಗಳೂರು ಬಂದರಿನ ಮುಖಾಂತರ ವಿದೇಶಿ ವ್ಯಾಪಾರವನ್ನು ಮಾಡುತ್ತಿದ್ದರು. ಸಂಚಾರ ಸಾಗಾಟಕ್ಕೆ ಈಗಿನಷ್ಟು ಅನುಕೂಲತೆ ಇಲ್ಲದ ಅಂದಿನ ಕಾಲದಲ್ಲಿ ನೇತ್ರಾವತಿ ನದಿಯು ದೋಣಿಯ ಮುಖಾಂತರ ಸಾಮಾನು ಸರಂಜಾಮುಗಳನ್ನು ಸಾಗಿಸಲು ಬಹಳ ಅನುಕೂಲತೆಯನ್ನು ಒದಗಿಸುತ್ತಿತ್ತು. ಉಪ್ಪನಂಗಡಿಯಿಂದ ಪಾಣೆಮಂಗಳೂರಿನ ವರೆಗೂ, ಅಲ್ಲಿಂದ ಮಂಗಳೂರಿನವರೆಗೂ ಸರಾಗವಾದ ದೋಣಿ ಸಂಚಾರವಿತ್ತು. ಇದರಿಂದಾಗ ಬಂಗರ ರಾಜ್ಯದ ಜನರಿಗೆ ಪೇಟೆ – ಪಟ್ಟಣಗಳಿಂದ ಸಿಗುವ ವಸ್ತುಗಳು ಬಹು ಸುಲಭವಾಗಿ, ಕಡಿಮೆ ಬೆಲೆಗೆ ಸಕಾಲಕ್ಕೆ ದೊರಕುತ್ತಿದ್ದಿತ್ತೆನ್ನಬಹುದು.

ಬಂಗರಸರು ನೆರೆಕರೆಯ ಅರಸು ಮನೆತನಗಳಾದ ವೇಣೂರಿನ ಅಜಿಲರು, ಬೈಲಂಗಡಿಯ ಮೂಲರು, ಮೂಲ್ಕಿಯ ಸಾಮಂತರು, ಹಾಗೂ ಕಾರ್ಕಳದ ಭೈರರಸರೊಡನೆ ಸಾಮಾನ್ಯ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದುದರಿಂದ, ಇವರ ರಾಜ್ಯಕ್ಕೆ ಸೇರಿದ ಜನರು ಶಾಂತಿಯಿಂದ ಯುದ್ಧಭೀತಿ ಇಲ್ಲದೆ, ಜೀವನ ನಡೆಸಲು ಸಾಧ್ಯವಾಗುತ್ತಿತ್ತು.

ಬಂಗರಸರು ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದರೆಂಬ ವಿಷಯ ನಮಗೆ ಇತಿಹಾಸದಿಂದಲೂ, ಶಾಸನಗಳಿಂದಲೂ ತಿಳಿದುಬರುತ್ತದೆ. ಇವರು ಬಂಗಾಡಿ ಗದ್ಯಾಣಗಳೆಂಬ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಕೆಲವು ವರ್ಷಗಳ ಹಿಂದೆ ಬಂಗಾಡಿಯಲ್ಲಿ ತೋಟಕ್ಕಾಗಿ ನೆಲವನ್ನು ಅಗೆಯುತ್ತಿದ್ದಾಗ ಬಂಗಾಡಿಯ ಈ ಚಿನ್ನದ ಗದ್ಯಾಣಗಳು ಸಿಕ್ಕಿದ್ದ ವಿಷಯವನ್ನು ನಾವು ವಾರ್ತಾಪತ್ರಿಕೆಯಲ್ಲಿಯೂ ಓದಿರುವೆವು. ಇವುಗಳಲ್ಲಿ ಎರಡು ವರ್ಗಕ್ಕೆ ಸೇರಿದ ನಾಣ್ಯಗಳಿದ್ದು, ಅವುಗಳಲ್ಲಿ ವಿಭಿನ್ನಬರಹಗಳೂ, ಆಕೃತಿಗಳೂ ಕಂಡುಬರುತ್ತವೆ. ಸುಮಾರು ೮ ಮಿ.ಮೀ ವ್ಯಾಸ ಹಾಗೂ ೧.೫ ಮೀ.ಮೀ. ದಪ್ಪದ ನಾಣ್ಯಗಳ ಮೇಲೆ ಸಂಸ್ಕೃತ ಅಕ್ಷರಗಳೂ ಇನ್ನೊಂದು ಬದಿಗೆ ಉಮಾಮಹೇಶ್ವರ ಅಥವಾ ಸೋಮನಾಥನ ಆಕೃತಿಗಳೂ ಕಂಡುಬರುತ್ತವೆ. ಅದರಂತೆ ಇನ್ನೊಂದು ವರ್ಗದ ನಾಣ್ಯಗಳು ಸುಮಾರು ೫ ಮಿ.ಮೀ. ವ್ಯಾಸ ಹಾಗೂ ೧ ಮಿ.ಮೀ. ದಪ್ಪವಿದ್ದು, ಅವುಗಳ ಒಂದು ಬದಿಗೆ ಮೀನು ಮತ್ತು ಶಂಖದ ಆಕೃತಿಯೂ, ಇನ್ನೊಂದು ಬದಿಗೆ ಬಹು ಸೂಕ್ಷ್ಮವಾದ ಸಂಸ್ಕೃತ ಅಕ್ಷರಗಳೂ ಕಂಡು ಬರುತ್ತವೆ. ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟ ಬಂಗಾಡಿಯ ಗದ್ಯಾಣಗಳು ಇವೇ ಆಗಿರಬೇಕು. ಆದುದರಿಂದ ನಾಣ್ಣುಡಿಯಂತೆ ಬಂಗಾಡಿಗೆ ಹೋದರೆ ಬಂಗಾರದ ಅನ್ನ ಎಂಬುದು ಇವರ ಶ್ರೀಮಂತಿಕೆಯಿಂದ ಅನ್ವರ್ಥಕವಾಗಿ ಕಾಣುತ್ತದೆ.

ಬಂಗರಸರು ಇತಿಹಾಸದಲ್ಲಿ ಶಾಂತಿಪ್ರಿಯರಾಗಿ ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದರೆಂದೂ ಕಂಡುಬರುತ್ತದೆ. ಆದುದರಿಂದ ಅವರ ರಾಜ್ಯದಲ್ಲಿ ಸಾಮಾಜಿಕ ಶಾಂತಿ, ಸೌಹಾರ್ದ, ಸಹಕಾರ ಮನೋಭಾವಗಳು ಬೆಳೆದಿದ್ದವು. ಅವರ ಪರಮತ ಸಹಿಷ್ಣುತೆಯಿಂದಾಗಿ ಧರ್ಮದ ಹೆಸರಿನಲ್ಲಿ ತಪ್ಪುಗ್ರಹಿಕೆಗಳೂ, ವಿವಾದಗಳೂ ಒಳಜಗಳಗಳೂ ಇಲ್ಲದೆ ಸಮಾಜದಲ್ಲಿ ಶಾಂತಿಯು ನೆಲೆಸಿತ್ತು. ಅವರ ರಾಜ್ಯದಲ್ಲಿ ಜೈನರು, ಹಿಂದುಗಳು, ಕ್ರೈಸ್ತರು, ಮಹಮ್ಮದೀಯರು ಹಾಗೂ ಕೆಲವು ಲಿಂಗಾಯತರು ನೆಲೆಸಿದ್ದರು. ಮಂಗಳೂರು ಬಹಳ ಕಾಲದ ವರೆಗೂ ಇವರ ರಾಜ್ಯದ ಒಂದು ಭಾಗವಾಗಿದ್ದು, ಅಲ್ಲಿ ವಿಭಿನ್ನ ಜಾತಿಯ ಜನರು ನೆಲೆಸಿದ್ದು, ಸೌಹಾರ್ದದಿಂದ ಜೀವನ ಮಾಡುತ್ತಿದ್ದಂತೆ ಕಾಣುತ್ತದೆ. ವಿಭಿನ್ನ ಮತದ ಜನರಿಗೆ ಬೇಕಾದ ದೇವಾಲಯಗಳು, ಪ್ರಾರ್ಥನಾಲಯಗಳು ಮತ್ತು ಪೂಜಾಗೃಹಗಳನ್ನು ಬಂಗರಸರು ಕಟ್ಟಿಸಿ ಕೊಟ್ಟಿದ್ದ ಉದಾಹರಣೆಗಳು ನಮಗೆ ಸಿಗುತ್ತವೆ.

ಬಂಗರ ಮನೆತನದಲ್ಲಿ ಶಂಕರದೇವಿ, ವಿಠಲದೇವಿಯಂಥವರು ತಾವೇ ಸ್ವತಂತ್ರ ರಾಣಿಯರಾಗಿ ರಾಜ್ಯವಾಳಿದುದು ನಮಗೆ ತಿಳಿದಿದೆ. ಇಷ್ಟು ಸ್ತ್ರೀ ಸ್ವಾತಂತ್ರ್ಯವು ಅರಮನೆಯಲ್ಲಿಯೇ ಇರುತ್ತಿದ್ದಾಗ ಸಮಾಜದಲ್ಲಿಯೂ ಅದು ನೆಲೆಸಿತ್ತು ಎಂದು ನಾವು ತಿಳಿದುಕೊಳ್ಳಬಹುದು. ಬಂಗರಸರು ವಿದ್ಯಾಭ್ಯಾಸಕ್ಕೆ ವಿಶೇಷ ಗಮನಕೊಡುತ್ತಿದ್ದರೆಂಬುದನ್ನು ಕವಿಗಳಿಗೆ, ಸಾಹಿತಿಗಳಿಗೆ, ಜ್ಯೋತಿಷ್ಯರಿಗೆ, ವೈದ್ಯರಿಗೆ, ಯೋಗ ಶಾಸ್ತ್ರಜ್ಞರಿಗೆ ತಮ್ಮ ಅರಮನೆಯಲ್ಲಿಯೇ ಕೊಟ್ಟ ಪ್ರೋತ್ಸಾಹದಿಂದ ತಿಳಿದುಕೊಳ್ಳಬಹುದು.

ಬಂಗರಸರು ಜೈನ ಮತಕ್ಕೆ ಸೇರಿದವರು. ಶ್ರೀ ಲಲಿತಕೀರ್ತಿ ಭಟ್ಟಾರಕ ಪೀಠಕ್ಕೆ ಸಂಬಂಧಿಸಿದವರು. ಬಂಗಾಡಿಯಲ್ಲಿ ಶ್ರೀ ಲಲಿತಕೀರ್ತಿಗಳ ಶಾಖಾ ಮಠವಿತ್ತೆಂಬುದನ್ನು ಕ್ರಿ.ಶ. ೧೭೦೦ರಲ್ಲಿ ಬಂಗಾಡಿಯ ಅರಮನೆಯಲ್ಲಿದ್ದ ಕವಿ ಚಂದ್ರಶೇಖರನು ಹೇಳಿದ್ದಾನೆ. ಇವರ ರಾಜ್ಯ ದೇವತೆ ಶ್ರೀ ಆದೀಶ್ವರ ಸ್ವಾಮಿ. ಇವರು ಬಂಗಾಡಿಯಲ್ಲಿ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದಾಗಲೇ ಶ್ರೀ ಶಾಂತಿನಾಥ ಸ್ವಾಮಿಯ ಬಸದಿಯೊಂದನ್ನು, ಇಂದು ಕೋಟೆ ಎಂದು ಕರೆಯಲ್ಪಡುವ ಸ್ಥಳದಲ್ಲೇ ಕಟ್ಟಿದ್ದರು. ಅನಂತರ, ಈಗ ಬಂಗಾಡಿ ಪೇಟೆಯಲ್ಲಿರುವ ಹೊಸ ಶ್ರೀ ಶಾಂತಿನಾಥ ಸ್ವಾಮಿಯ ಬಸದಿಯನ್ನು ಕಟ್ಟಿಸಿದರು. ಅದರಂತೆ ಕ್ರಿ.ಶ. ೧೪೮೪ರಲ್ಲಿ ಬಂಗರಸನೊಬ್ಬನು ಬೆಳ್ತಂಗಡಿಯಲ್ಲಿರುವ ‘ಬಂಗರ ಬಸದಿ’ಯಲ್ಲಿ ಧಾರ್ಮಿಕ ಕಾರ್ಯಗಳನ್ನು ಸಾಂಗವಾಗಿ ನೆರವೇರಿಸುವುದಕ್ಕಾಗಿ ಸಮೀಪದ ಭೂಮಿಯೊಂದನ್ನು ಉಂಬಳಿ ಬಿಟ್ಟಿರುವುದಾಗಿ ಇದೇ ಬಸದಿಯ ಆವರಣದಲ್ಲಿರುವ ಒಂದು ಶಿಲಾಸನದಿಂದ ತಿಳಿದು ಬರುತ್ತದೆ. ಬೆಳ್ತಂಗಡಿಯ ಹಲರ (ಜೈನ ವ್ಯಾಪಾರಿಗಳ) ಸಮ್ಮತದಿಂದ ಬಂಗರಸನು ಕ್ರಿ.ಶ. ೧೫೦೯ರಲ್ಲಿ ಈ ಬಸದಿಯ ಧಾರ್ಮಿಕ ಉತ್ಸವಗಳು ನಡೆದುಕೊಂಡು ಬರಲು ಉಂಬಳಿ ಬಿಟ್ಟಿದ್ದನೆಂದು ಇಲ್ಲಿರುವ ಇನ್ನೊಂದು ಶಾಸನದಿಂದ ತಿಳಿದು ಬರುತ್ತದೆ. ಶಂಕರ ದೇವಿಯೆಂಬ ಬಂಗರಾಣಿಯು ಕ್ರಿ.ಶ. ೧೬೧೧ರಲ್ಲಿ ಇಲ್ಲಿರುವ ಶಾಂತಿನಾಥ ಬಸದಿಯ ಪೂಜಾ ವಿನಿಯೋಗಕ್ಕೆ ಹಿಂದೆ ಬಿಟ್ಟಿದ್ದ ಉಂಬಳಿಯನ್ನು ಊರ್ಜಿತಗೊಳಿಸಿ, ಶ್ರೀ ಸ್ವಾಮಿಗೆ ಪಂಚಕಲ್ಯಾಣೋತ್ಸವವನ್ನು ಮಾಡಿ ಕೆಲವು ನೋಂಪಿಗಳನ್ನು ನಡೆಸಿದಳು.

ಇವರು ಹಿಂದೂ ದೇವತೆಗಳನ್ನು ಸಮಾನ ಗೌರವದಿಂದ ಪೂಜಿಸುತ್ತಿದ್ದರು. ಶ್ರೀ ಸೋಮನಾಥನು ಇವರ ರಾಜ್ಯದ ಪ್ರಧಾನ ಹಿಂದೂ ದೇವತೆ. ಇವರು ಘಟ್ಟದ ಮೇಲಿಂದ ಇಳಿದು ಬರುವಾಗಲೇ ಈ ದೇವರ ಮೂರ್ತಿಯನ್ನು ಇಲ್ಲಿಗೆ ತಂದು ಪ್ರತಿಷ್ಠಾಪಿಸಿದರೆಂದು ನಾವು ತಿಳಿದುಕೊಂಡಿದ್ದೇವೆ. ಶೈವ ಸಂಪ್ರದಾಯದತ್ತ ಗೌರವವನ್ನು ಹೊಂದಿದ್ದ ಬಂಗರಸರು ತಮ್ಮ ರಾಜ್ಯಕ್ಕೆ ಸೇರಿದ್ದ ಗುರುವಾಯನಕೆರೆಯು ಒಂದು ವೀರಶೈವ ಕೇಂದ್ರವಾಗಿ ಬೆಳೆಯುವಲ್ಲಿ ಆತಂಕವನ್ನುಂಟುಮಾಡಲಿಲ್ಲ. ವೈಷ್ಣವ ಸಂಪ್ರದಾಯಕ್ಕೂ ಬಂಗರಸರು ಅಷ್ಟೇ ಗೌರವವನ್ನು ಹೊಂದಿದ್ದರೆಂಬುದನ್ನು ಅವರ ವೀರ ನರಸಿಂಹ, ಲಕ್ಷ್ಮಪ್ಪ, ವಿಠಲದೇವಿ ಎಂಬ ಹೆಸರುಗಳೇ ಶ್ರುತಪಡಿಸುತ್ತವೆ. ಅದರಂತೆ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನಕ್ಕೂ ಅವರು ಉಂಬಳಿ ಕೊಟ್ಟಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಅವರಿಂದ ಕೊಡಲ್ಪಟ್ಟ ೨೭೦ ಗದ್ಯಾಣಗಳ ಉಲ್ಲೇಖವು ಸುಬ್ರಹ್ಮಣ್ಯದಲ್ಲಿ ದೊರಕಿರುವ ಶಾಸನವೊಂದರಿಂದ ತಿಳಿದು ಬರುತ್ತದೆ. ಬಂಗಾಡಿಯ ಮೊದಲ ಬಂಗರಸನಾದ ವೀರ ನರಸಿಂಹ ಬಂಗನೇ ಇಲ್ಲಿ ಗಣಪತಿ ದೇವಾಲಯವನ್ನು ಕಟ್ಟಿಸಿದನು. ಮುಂದೆ ಬಂಗಾಡಿಯಲ್ಲಿ ವೀರಭದ್ರ ದೇವಾಲಯ, ಉಳ್ಳಾಲ್ತಿಯ ಗುಡಿ, ಶ್ರವಣಕುಂಡ, ಬ್ರಹ್ಮಸ್ಥಾನಗಳಂತಹ ಶಕ್ತಿಪ್ರಧಾನವಾದ ಕ್ಷೇತ್ರಗಳನ್ನು ಬಂಗರಸರು ಬೆಳೆಸಿಕೊಂಡು ಬಂದರು. ಅದರಂತೆ ತಮ್ಮ ರಾಜ್ಯಕ್ಕೆ ಸೇರಿದ, ಕುತ್ಯಾರು, ಪುತ್ತೂರು, ಮಂಗಳೂರು, ಶರವು, ನಂದಾವರ, ಸುಬ್ರಹ್ಮಣ್ಯ, ಗುರುವಾಯನಕೆರೆ ಮತ್ತು ಉಜಿರೆ ಮುಂತಾದ ಕಡೆಗಳಲ್ಲಿ ವಿಭಿನ್ನ ಹಿಂದೂ ದೇವತೆಗಳಿಗೆ ದೇವಾಲಯಗಳನ್ನು ಕಟ್ಟಿಸಿ, ಅಥವಾ ಜೀರ್ಣವಾದ ದೇವಾಲಯಗಳನ್ನು ಪುನರುದ್ಧರಿಸಿ, ಅದಕ್ಕೆ ಉಂಬಳಿ ಉತ್ತಾರಗಳನ್ನು ಕೊಟ್ಟರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತಮೊದಲು ಕ್ರೈಸ್ತರು ನೆಲೆ ನಿಂತದ್ದೇ ಬಂಗ ರಾಜ್ಯಕ್ಕೆ ಸೇರಿದ ಮಂಗಳೂರಿನಲ್ಲಿ, ಸುಮಾರು ಕ್ರಿ.ಶ. ೧೫೩೦ರಲ್ಲಿ. ಇಲ್ಲಿ ಶಾಶ್ವತವಾಗಿ ನೆಲೆಸಲು ಅವಕಾಶ ಮಾಡಿಕೊಟ್ಟದ್ದೇ ಅಲ್ಲದೆ, ಅವರು ಪ್ರಾರ್ಥನಾಲಯಗಳನ್ನು ಕಟ್ಟಿಕೊಳ್ಳಲು ಬಂಗರಸರು ಸಹಾಯಧನವನ್ನು ಕೊಟ್ಟರು. ಕ್ರೈಸ್ತರ ನೆಲೆವೀಡುಗಳಿಂದಾಗಿ, ವ್ಯಾಪಾರಕ್ಕಾಗಿ ಈ ಊರಿಗೆ ಬಂದಿದ್ದ ಪೋರ್ತುಗೀಜರು ಇಲ್ಲಿ ಅವರ ವ್ಯಾಪಾರ ವಹಿವಾಟುಗಳಿಗೆ ಸರಿಯಾದ ನೆಲೆಯನ್ನು ಕಂಡು ಕೆಲವು ವ್ಯಾಪಾರದ ಮಳಿಗೆಗಳನ್ನು ಸ್ಥಾಪಿಸಿಕೊಂಡರು. ಇದರಿಂದಾಗಿ, ಬಂಗರ ರಾಜ್ಯಕ್ಕೆ ಆರ್ಥಿಕವಾಗಿ ಲಾಭವಾಗುವುದರ ಜೊತೆಗೆ ಅವರ ಪೂರ್ಣ ಸಹಾಯ, ವಿಧೇಯತೆ, ಸಹಕಾರಗಳು ಬಂಗರಸರಿಗೆ ಸಿಕ್ಕಿದವು. ನಂದಾವರದಲ್ಲಿ ಅರಮನೆಯನ್ನು ಕಟ್ಟುವಾಗ ಬಂಗರಸನೊಬ್ಬನು ಮುಸ್ಲಿಮರಿಗೆ ಮಸೀದಿಯನ್ನು ಕಟ್ಟಿಸಿಕೊಟ್ಟಿರುವುದು ಕಂಡು ಬರುತ್ತದೆ. ಹೈದರಾಲಿಯು ಕ್ರಿ.ಶ. ೧೭೬೩ರಲ್ಲಿ ಬಿದನೂರನ್ನು ಗೆದ್ದುಕೊಂಡು ಮೂಡುಬಿದರೆಗಾಗಿ ಬಂಗರ ರಾಜ್ಯಕ್ಕೆ ಬಂದಾಗ ಅವನನ್ನು ಉಚಿತ ಗೌರವಗಳಿಂದ ನೋಡಿಕೊಳ್ಳಲಾಗಿತ್ತು. ಅದರಂತೆ ಮುಂದೆ ಮುಸ್ಲಿಂ ಅಧಿಕಾರಿಗಳಿಗೆ ಮತದ ಹಿನ್ನೆಲೆಯಿಂದ ಅವಗಣಿಸಲಾಗುತ್ತಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟವು ತೀವ್ರವಾದಾಗ, ಬಂಗರಸರಲ್ಲಿ ಒಬ್ಬನಾದ ಲಕ್ಷ್ಮಪ್ಪರಸ ಬಂಗನು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದು ದೇಶಕ್ಕಾಗಿ ಪ್ರಾಣವನ್ನರ್ಪಿಸಿದನು.

 

[1] ಶಾಸನ ಇಲಾಖೆಯ ವಾರ್ಷಿಕ ವರದಿ ೧೯೩೦ – ೩೧, ಸಂಖ್ಯೆ ೩೩೬.

[2] ಇಂಡಿಯನ್ ಎಪಿಗ್ರಾಫಿಯ ವಾರ್ಷಿಕ ವರದಿ ಸಂಖ್ಯೆ ೫, ೧೯೪೦ – ೪೧, ಅಪೆಂಡಿಕ್ಸ್‌ಎ.

[3] ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ಚರ್ (ಡಾ| ಗುರುರಾಜ ಭಟ್) ೧೯೭೫, ಪುಟ ೬೬.

[4] ಇಂಡಿಯನ್ ಎಪಿಗ್ರಾಫಿಯ ವಾರ್ಷಿಕ ವರದಿ, ಸಂಖ್ಯೆ ೬೨, ೧೯೦೧.

[5] ಇಂಡಿಯನ್ ಎಪಿಗ್ರಾಫಿಯ ವಾರ್ಷಿಕ ವರದಿ ಸಂಖ್ಯೆ ೩೩೬, ೧೯೩೦ – ೩೧.