ಇತಿಹಾಸ ಕಾಲದಲ್ಲಿ ಬಂಗಾಡಿಯ ವೈಭವ:

ಬಂಗಾಡಿಯು, ಸುಮಾರು ೬೫೦ ವರ್ಷಗಳ ಕಾಲ ಬಂಗರ ರಾಜಧಾನಿಯಾಗಿ ಮೆರೆದ ಸ್ಥಳ, ವಿಭಿನ್ನ ಕಾಲಗಳಲ್ಲಿ ಬಂಗರಸರು ಮಂಗಳೂರು, ನಂದಾವರ, ಬೆಳ್ತಂಗಡಿ, ಪುತ್ತೂರುಗಳಲ್ಲಿ ತಮ್ಮ ಅರಮನೆಗಳನ್ನು ಕಟ್ಟಿಕೊಂಡು ಆಳುತ್ತಿದ್ದರೂ, ಬಂಗಾಡಿಯೇ ಅವರ ಪಾರಂಪರ್ಯದ ನಿರಂತರವಾದ ರಾಜಧಾನಿಯಾಗಿತ್ತು. ಸಾಮಾನ್ಯವಾಗಿ ಹಿರಿಯ ಅಣ್ಣನಾಗಲೀ ಸಹೋದರಿಯಾಗಲೀ ಪೂರ್ವಜರ ಬಂಗಾಡಿಯ ಅರಮನೆಯಿಂದಲೇ ರಾಜ್ಯವಾಳುತ್ತಿದ್ದು, ಇತರ ಕಿರಿಯರು ಮೇಲೆ ಹೇಳಿದ ಉಪ ಅರಮನೆಗಳಲ್ಲಿದ್ದು, ಅವರ ಪ್ರತಿನಿಧಿಗಳಾಗಿ ಆಳುತ್ತಿದ್ದರು. ೧೫ನೇ ಶತಮಾನದ ಪೂರ್ವಾರ್ಧದಲ್ಲಿ ಕಾಮರಾಯ ಬಂಗನು ಬಂಗಾಡಿಯಿಂದ ರಾಜ್ಯವಾಳುತ್ತಿದ್ದು, ನಮಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಾಂಗಣದಲ್ಲಿರುವ ಶಿಲಾಶಾಸನದಿಂದ ತಿಳಿದು ಬರುತ್ತದೆ. ಆದುದರಿಂದ ವಂಶಪಾರಂಪರ್ಯದಿಂದ ಬಂಗರ ರಾಜಧಾನಿಯಾಗಿ ಮೆರೆದಿದ್ದ ಬಂಗಾಡಿಯು ವೈಭವದಿಂದ ಕೂಡಿತ್ತು. ಅಲ್ಲಿ ಅರಮನೆ ಇತ್ತು, ಜಿನಾಲಯಗಳಿದ್ದವು, ಸೈನ್ಯವಿತ್ತು, ಅಧಿಕಾರಿಗಳ ಮತ್ತು ನೌಕರರ ಮನೆಗಳಿದ್ದವು. ವ್ಯಾಪಾರ ವಹಿವಾಟುಗಳು ನಿರಂತರವಾಗಿ ನಡೆಯುತ್ತಿದ್ದ ನಗರವಿತ್ತು.

ಪೂರ್ವದಲ್ಲಿ ಎತ್ತರವಾಗಿ ನಿಂತಿದ್ದ ಪಶ್ಚಿಮ ಘಟ್ಟಗಳು, ಈಶಾನ್ಯಕ್ಕೆ ದೂರದಲ್ಲಿ ಕಾಣುವ ಬಲ್ಲಾಳರಾಯನ ದುರ್ಗ, ಉತ್ತರಕ್ಕೆ ಎಳನೀರು, ಘೂಟಿ, ವಾಯುವ್ಯಕ್ಕೆ ರುದ್ರರಮಣೀಯವಾಗಿ ಕಂಗೊಳಿಸುವ ಕುದುರೆಮುಖ ಬೆಟ್ಟ ಸಾಲುಗಳು, ಸುತ್ತಲೂ ವನರಾಜಿ, ಕೃಷಿ ಭೂಮಿ ಇವುಗಳಿಂದ ಆವೃತವಾದ ಬಂಗಾಡಿಯು ಬಹಳ ಸುಂದರ ಪ್ರದೇಶವಾಗಿತ್ತು. ಅದರಂತೆ ಅರಮನೆಯಲ್ಲಿದ್ದ ಕವಿಗಳು ಬಂಗಾಡಿಯ ವೈಭವವನ್ನು ಹಾಡಿ ಹೊಗಳಿರುವರು. ಅವರಲ್ಲಿ ಮುಖ್ಯನಾದವನು ನಾಲ್ಮಡಿ ಲಕ್ಷ್ಮಪ್ಪರಸ ಬಂಗನ ಆಸ್ಥಾನದಲ್ಲಿದ್ದು, ಕ್ರಿ.ಶ. ಸುಮಾರು ೧೭೦೦ರಲ್ಲಿ ಶ್ರೀ ರಾಮಚಂದ್ರ ಚರಿತ ಎಂಬ ಸಾಂಗತ್ಯ ಕಾವ್ಯವನ್ನು ಬರೆದ ಚಂದ್ರಶೇಖರ ಕವಿ, ಈತನು ತನ್ನ ಈ ಗ್ರಂಥದ ಪೀಠಿಕಾ ಸಂಧಿಯ ೨೪ನೇ ಪದ್ಯದಿಂದ ಮುಂದಿನ ಪದ್ಯಗಳಲ್ಲಿ ಕೊಟ್ಟಿರುವ ವಿವರಣೆಗಳನ್ನು ಈ ಕೆಳಗೆ ಸಂಗ್ರಹಿಸಿ ಕೊಡಲಾಗಿದೆ.

ಇಡೀ ನಾಡಿಗೆ ಐಶ್ವರ್ಯ ಭರಿತವೆಂದು ಪ್ರಸಿದ್ಧವಾಗಿರುವ ತುಳುನಾಡೆಂಬ ಹೆಣ್ಣಿನ ಸುಂದರ ಮುಖದಂತೆ ಈ ಬಂಗಾಡಿಯು ಮನೋಹರವಾಗಿರುವುದು. ಮನ್ಮಥನು ರತಿದೇವಿಗೆ ಹಾಕಿರುವ ಹೂಮಾಲೆಯೋ, ದೇವರು ಪ್ರಕೃತಿಗೆ ಹಾಕಿರುವ ಮಂಗಳಸೂತ್ರವೋ ಎನ್ನುವಂತೆ ಇಲ್ಲಿ ನೇತ್ರಾವತಿ ನದಿ ಇರುವುದು. ಮನ್ಮಥನು ತನ್ನ ವಿಹಾರಕ್ಕಾಗಿ ಮಾಡಿಕೊಂಡ ಉದ್ಯಾನವನಗಳಂತೆ ಇಲ್ಲಿ ಪುಷ್ಪೋಧ್ಯಾನಗಳಿವೆ. ಪ್ರಕೃತಿ ಸೌಂದರ್ಯದಿಂದ ಮೆರೆಯುವ ಬಂಗಾಡಿಯಲ್ಲಿ ಶಾಲಿಕಮಲ, ರಾಜಾನ್ನ, ಕುಂಕುಮ, ಗಂಧಶಾಲಿ ಮುಂತಾದ ಭತ್ತವನ್ನು ಬೆಳೆಸುವ ಗದ್ದೆಗಳೇ ಇವೆ. ಇಲ್ಲಿರುವ ಶ್ರೀ ಶಾಂತಿನಾಥ ಸ್ವಾಮಿಯ ಬಸದಿಯನ್ನು ಕವಿಯು ಮುಂದೆ ಕೊಟ್ಟಂತೆ ವರ್ಣಿಸಿರುವನು:

ಪುರವನಿತೆಯ ಮಣಿಮುಕುಟವೋ ಸಕಲಭ
ವ್ಯರ ಪುಣ್ಯ ಪುಂಜವೋಯೆನಲು
ಪುರದ ಮಧ್ಯದೊಳಮರೇಂದ್ರವಂದಿತ ಶಾಂತೀ
ಶ್ವರ ಚೈತ್ಯಾವಾಸವೊಪಿಪದುದು (೧ – ೩೨)

ಈ ಬಸದಿಯ ಇನ್ನೊಂದು ಮಗ್ಗುಲಲ್ಲೆ ರತ್ನತ್ರಯ ಬಸದಿಯಿದೆ. ಅದರ ಬಳಿಯಲ್ಲೇ ಜನಗಳಿಗೆ ವೈರಾಗ್ಯವನ್ನು ಬೋಧಿಸುವ ಲಲಿತಕೀರ್ತಿ ಮುನಿಗಳ ಮಠವಿದೆ. ಬಂಗಾಡಿ ಪೇಟೆಯಲ್ಲಿರುವ ಅರಮನೆ ಮತ್ತು ಶಾಂತಿನಾಥ ಬಸದಿಗಳ ಕುರಿತು ಕವಿಯು ಈ ರೀತಿ ಹೇಳಿದ್ದಾನೆ.

ಧರೆಯೆಂಬ ಗಣಿಕೆಯ ಬಟ್ಟಮೊಲೆಗಳೆನೆ
ಅರಮನೆ ಬಸದಿಗಳಿರಲೂ
ಪರವೇಷ್ಠಿಸಿದ ಹಾರಲತೆಯ ನೆಲೆಗಳೆಸೆವುವು
ಪರದರ ಕೇರಿಗಳಲ್ಲಿ (೧ – ೩೬)

ಈ ರೀತಿಯಾಗಿ ಬಂಗಾಡಿ ಪೇಟೆಯಲ್ಲಿ ಹಲವಾರು ಶ್ರೀಮಂತರ ನಿವಾಸಗಳಿರುವ ಬೀದಿಗಳಿವೆ. ಅವರು ಸೂರ್ಯನ ಕುದುರೆಗಳಿಗೆ, ಇಂದ್ರನ ಹಾಗೂ ಚಂದ್ರನ ರಾಣಿಯರ ಕೊರಳಲ್ಲಿ ಶೋಭಿಸುವ ಪದಕಗಳಿಗೆ, ಭೂಮಿಯನ್ನು ಆಧರಿಸಿ ಹಿಡಿದಿರುವ ಆದಿಶೇಷನ ಹೆಡೆಯ ಮೇಲಿರುವ ರತ್ನಮಣಿಗೆ ಬೆಲೆ ಕಟ್ಟುವಷ್ಟು ಶ್ರೀಮಂತರಾಗಿದ್ದರು ಎಂದು ಚಂದ್ರಶೇಖರ ಕವಿಯು ಹೇಳಿದ್ದಾನೆ.

ಐಶ್ವರ್ಯದಿಂದಲೂ, ಐಶ್ವರ್ಯವಂತರಿಂದಲೂ ತುಂಬಿದ್ದ ಬಂಗಾಡಿಯಲ್ಲಿ ಜಿನಮತವೆಂಬ ಆಕಾಶದಲ್ಲಿ ಸಮ್ಯುಕ್ತ್ವವೆಂಬ ರಥವನ್ನೇರಿ ಚಂದ್ರನಂತಿರುವ ಲಕ್ಷ್ಮಪ್ಪರಸ ಬಂಗರಾಯನು ಆಳುತ್ತಿದ್ದನು. ಆ ರಾಜನು ಒಮ್ಮೆ ಸಿಟ್ಟಿನಿಂದ ಬಿಲ್ಲನ್ನು ತೆಗೆದುಕೊಂಡು ಝೇಂಕರಿಸಿದರೆ ಆತನ ಶತ್ರುಗಳು ಹೆದರಿ, ಅವರ ರಾಜ್ಯವನ್ನು ಬಿಟ್ಟು ಕಾಡನ್ನು ಸೇರುತ್ತಿದ್ದರು. ಇಲ್ಲದಿದ್ದರೆ, ಈ ಕಾಡು ಮನುಷ್ಯರೆಂಬವರು ಎಲ್ಲಿಂದ ಉಂಟಾಗುತ್ತಾರೆ, ಎಂದು ಕವಿಯು ಕೇಳುತ್ತಾನೆ. ಇಂತಹ ಪರಾಕ್ರಮಶಾಲಿಯಾದ ರಾಜನಿಗೆ, ಭರತ ಚಕ್ರವರ್ತಿಗೆ ಬುದ್ದಿಸಾಗರನು ಮಂತ್ರಿಯಾಗಿದ್ದಂತೆ, ಗುರುವು ದೇವೇಂದ್ರನಿಗೆ ಮಂತ್ರಿಯಾಗಿದ್ದಂತೆ, ಪದ್ಮಶ್ರೇಷ್ಠಿಯೆಂಬವನು ಪ್ರಧಾನಮಂತ್ರಿಯಾಗಿದ್ದನು. ಮಲಯಮಾರುತದಿಂದ ಅರಳಿದ ಪುಷ್ಪಗಳಿಂದ ಮಧುವೂ, ಸುಗಂಧವೂ ಹರಡುತ್ತದೆ. ಅಂತಹ ಆಕರ್ಷಕ ಪುಷ್ಪಗಳಿಂದ ತನ್ನ ಬಾಣಗಳನ್ನು ಮಾಡಿಕೊಳ್ಳುವ ಮನ್ಮಥನಂತೆ ಈ ರಾಜನು ಶೋಭಿಸುತ್ತಿದ್ದನು. ಈ ರಾಜನ ಸಭೆಯು ಬಹಳ ವೈಭವಯುತವಾದುದು, ಅಲ್ಲಿ ಅರವತ್ತನಾಲ್ಕು ಕಲೆಗಳಲ್ಲಿಯೂ ನಿಷ್ಣಾತರಾದ ವಿದ್ವಾಂಸರಿದ್ದರು. ಅವರಲ್ಲಿ ಪದ್ಮನಾಭನೆಂಬ ಹಿರಿಯ ಕವಿಯೊಬ್ಬನಿದ್ದನು. ಎಲ್ಲಾ ಕವಿಗಳ ಮತ್ತು ವಿದ್ವಾಂಸರ ಪೈಕಿ ತಾನು ಅಲ್ಪಮತಿಯೆಂದು ಚಂದ್ರಶೇಖರ ಕವಿಯು ಹೇಳಿಕೊಂಡಿದ್ದಾನೆ.

ಇತಿಹಾಸದ ಕಾಲದಲ್ಲಿ ಬಂಗಾಡಿಯು ಬಹು ವೈಭವದಿಂದ ಮೆರೆದಿತ್ತೆಂಬುದಕ್ಕೆ ನಮಗೆ ಇತರ ದಾಖಲೆಗಳು ಸಾಕಷ್ಟು ಸಾಕ್ಷಿ ನೀಡುತ್ತವೆ. ಕೃಷಿ, ವ್ಯಾಪಾರ, ಉದ್ಯಮ ಮತ್ತು ಅರಮನೆ ಸೇವೆಯಲ್ಲಿ ದುಡಿಯುತ್ತದ್ದ ಜನರು ಹೇರಳ ಸಂಪತ್ತನ್ನು ಗಳಲಿಸಿಕೊಳ್ಳುತ್ತಿದ್ದರು. ಅವರು ಬಂಗಾಡಿಯಲ್ಲಿ ತಮ್ಮ ಸುಂದರ ಸೌಧಗಳನ್ನು ಹೊಂದಿದ್ದರು. ಇಲ್ಲಿ ಶ್ರೀಮಂತರ ಮನೆಗಳೇ ವಿಶೇಷವಾಗಿದ್ದವು. ಇತರ ಅರಸು ಮನೆತನಗಳವರು ಹಾಗೂ ಪೋರ್ತುಗೀಜ್ ಅಧಿಕಾರಿಗಳು ಇಲ್ಲಿಗೆ ಬಂದಾಗ ಅವರ ವಾಸ್ತವ್ಯಕ್ಕೆಂದು ನಿರ್ಮಿಸಿದ್ದ ವಿಶೇಷ ಬಂಗಲೆಗಳಿದ್ದವು. ಕವಿಗಳಿಗಾಗಿ ಹಾಗೂ ವಿದ್ವಾಂಸರುಗಳಿಗಾಗಿ ಅವರವರ ಸ್ವಾನಮಾನಗಳಿಗೆ ತಕ್ಕಂತೆ ಅರಮನೆಗಳನ್ನೇ ಹೋಲುವಂತೆ ಕಟ್ಟಿದ್ದ ಮನೆಗಳಿದ್ದವು. ಅರಮನೆಯ ಸುತ್ತಲೂ ಹರಡಿದ್ದ ಈ ಪೇಟೆಯನ್ನು ಚದುರಂಗ ಪೇಟೆ ಎಂದು ಕರೆಯಲಾಗುತ್ತಿತ್ತು.

ಜನ ಮತವನ್ನು ತಮ್ಮ ಬಾಳಿನ ಉಸಿರನ್ನಾಗಿ ಮಾಡಿಕೊಂಡು, ಅದಕ್ಕಾಗಿ ಬದುಕುತ್ತಿರುವ ಅಸಂಖ್ಯಾತ ಭವ್ಯ ಜನರು ಬಂಗಾಡಿಗೆ ಪದೇ ಪದೇ ಬರುತ್ತಿದ್ದರು. ಅಂದಿಗೆ ಬಂಗಾಡಿಯು ಅತಿಶಯ ಪುಣ್ಯಕ್ಷೇತ್ರವಾಗಿದ್ದುದರಿಂದ ಶ್ರವಣಕುಂಡಕ್ಕೆ, ಬ್ರಹ್ಮಸ್ಥಾನಕ್ಕೆ ಮತ್ತು ಶ್ರೀ ಶಾಂತಿನಾಥಸ್ವಾಮಿ ಬಸದಿಗೆ ಜನರು ಸಾಲು ಸಾಲಾಗಿ ಬರುತ್ತಿದ್ದರು. ಇನ್ನೊಂದು ಕಡೆಯಿಂದ ಅಧಿಕಾರಿಗಳು, ಸೈನಿಕರು, ಶ್ರಾವಕರು, ಸಂದರ್ಶಕರು, ವಿದ್ವಾಂಸರು ಮತ್ತು ಪ್ರವಾಸಿಗರು ಹಿಂಡುಗಟ್ಟಿ ಹೋಗುತ್ತಿದ್ದರು. ಅರುಣೋದಯದ ನಸುಕಿನಿಂದ ಜಾಗೃತಗೊಂಡು ಹೊತ್ತೇರಿದಂತೆ ಹೆಚ್ಚು ಚಟುವಟಿಕೆಯಿಂದ ಕೂಡಿ, ಸುಂದರ ಪ್ರಕೃತಿಯಿಂದಾವೃತವಾದ ಈ ಬಂಗಾಡಿ ನಗರವು ಮಯ ನಿರ್ಮಿತ ಮಾಯಾಲೋಕದಂತೆ ಕಂಗೊಳಿಸುತ್ತಿತ್ತು.

ಬಂಗಾಡಿಯು ಒಂದು ತೀರ್ಥಕ್ಷೇತ್ರವಾಗಿ…….

ಬಂಗರಸರ ಅರಮನೆಯಿದ್ದು ಬಹು ಪ್ರಾಚೀನ ಕಾಲದಿಂದಲೂ, ಅವರ ರಾಜಧಾನಿಯಾಗಿ ಮೆರೆದ ಬಂಗಾಡಿಯು, ಒಂದು ಪುಣ್ಯಕ್ಷೇತ್ರವೂ ಹೌದು. ಮೂರೂ ಮುಕ್ಕಾಲು ಘಳಿಗೆಯ ಕಾಲ ನೀರಿನ ಮೇಲೆ ಇಲ್ಲಿ ಕಲ್ಲಿನ ಗುಂಡು ತೇಲುತ್ತಿದ್ದುದರಿಂದ, ಈ ಕ್ಷೇತ್ರಕ್ಕೆ ಅತಿಶಯವಾದ ಕಾರಣಿಕವಿದೆ ಎಂದು ನಂಬಲಾಗಿದೆ. ಈ ಗುಂಡು ದರ್ಶನವನ್ನು ಕಾಣಲು ಆಶ್ಚರ್ಯ ಕುತೂಹಲದಿಂದ ದೂರದೂರಗಳಿಂದ ಜನರು ಬರುತ್ತಿದ್ದರು.

ಈ ಗುಂಡು ದರ್ಶನ ಬಂಗಾಡಿಯ ಶ್ರವಣಕುಂಡವೆಂಬ ಆವರಣದೊಳಗೆ ನಡೆಯುತ್ತಿತ್ತು. ಇಲ್ಲಿ ಬ್ರಹ್ಮದೇವನ ಸ್ಥಾನವಿದೆ. ಅಸಾಮಾನ್ಯವಾದ ಶಕ್ತಿಶಾಲಿಯಾದ ದೇವನೀತ. ಈತನ ಮಹಿಮೆ, ಗರಿಮೆಗಳ ಕುರಿತಾಗಿ ಮಹೇಂದ್ರನೆಂಬ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಕವಿಯೊಬ್ಬನು ಒಂದು ಕೃತಿಯನ್ನೇ ರಚಿಸಿದ್ದಾನೆ. ಈ ಬ್ರಹ್ಮದೇವನನ್ನು ಸ್ತುತಿಸುತ್ತಾ, ಕವಿಯು:

ಛಲದಂಕ ಮಲ್ಲನೆನಿಸುವ
ಬಲಯು ತಾನಾಳುತಿರ್ಪ ಬಂಗನರೇಂದ್ರಂ |
ಕುಲಸ್ವಾಮಿಯೆಂದು ಮೆರೆಯುವೆ
ಭಲೆ ಭಲೆ ನಿನಗಾರು ಸರಿಯೇಗೆಜ್ಜೆಬ್ರಹ್ಮಾ ||

ಎಂದು ಹೇಳಿರುವನು. ಆದುದರಿಂದ ಈ ಬ್ರಹ್ಮದೇವನು ಬಂಗರಸರ ಕುಲದೇವತೆಯಾಗಿ ಇವರನ್ನು ರಕ್ಷಿಸಿಕೊಂಡು ಬರುತ್ತಿದ್ದನು. ಇಲ್ಲಿ ನೀರು ತುಂಬಿದ ಒಂದು ದೊಡ್ಡ ಹೊಂಡದಲ್ಲಿ ಗುಂಡು ಕಲ್ಲನ್ನು ಈ ಬ್ರಹ್ಮದೇವನು ತೇಲಿಸುತ್ತಿದ್ದನು. ಪ್ರಕೃತಿಯಲ್ಲೇ ವಿಚಿತ್ರವೆನಿಸುವ ಈ ಘಟನೆಯು ಕ್ರಿ.ಶ. ೧೯೧೧ನೇ ಇಸವಿಯ ವರೆಗೂ ಇಲ್ಲಿ ನಡೆಯುತ್ತಿದ್ದು ಒಮ್ಮಿಂದೊಮ್ಮೆಗೇ ನಿಂತುಹೋಯಿತು. ಗುಂಡು ಕಲ್ಲು ಇದ್ದಲ್ಲಿಂದ ಮಾಯವಾಯಿತು. ಜನರೆಲ್ಲಾ ದಿಗಿಲಾದರು. ಆದುದರಿಂದ ೧೯೧೪ನೇ ಇಸವಿ ಜುಲೈ ೧ರಂದು ಈ ಕ್ಷೇತ್ರದ ಆಡಳಿತ ಸಮಿತಿಯ ಎಲ್ಲ ಸದಸ್ಯರೂ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮಿಗಳವರೂ, ಅರಮನೆಯ ಲಕ್ಷ್ಮಪ್ಪರಸ ಪದ್ಮರಾಜ ಬಂಗರೂ, ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಶ್ರೀ ಚಂದಯ್ಯ ಹೆಗ್ಗಡೆಯವರೂ, ಪೇಟೆ, ಮಾಗಣೆ, ಸೀಮೆಯ ಎಲ್ಲ ಆಸ್ತಿಕರೂ, ಒಟ್ಟು ಸೇರಿ ಈ ಗುಂಡು ದರ್ಶನವನ್ನು ಪುನಃ ನಡೆಸಿ ಕೊಡಬೇಕೆಂದು ದೇವನಲ್ಲಿ ಪ್ರಾರ್ಥಿಸಿಕೊಂಡರು. ಈ ಪ್ರಾರ್ಥನೆಗೆ ಬ್ರಹ್ಮದೇವನು ಪಾತ್ರಿಯ ಮೇಲೆ ಆವೇಶಿತನಾಗಿ ಪುನಃ ಈ ಪ್ರಕೃತಿ ವಿಚಿತ್ರವಾದ ಗುಂಡುದರ್ಶನವನ್ನು ನಡೆಸಿಕೊಡುವುದಾಗಿ ಅಭಯವನ್ನಿತ್ತು ನೇರವಾಗಿ, ನೇತ್ರಾವತಿ ನದಿಗೆ ಹೋಗಿ ಅಲ್ಲಿಯ ನೀರೊಳಕ್ಕೆ ಮುಳುಗಿ, ಒಂದು ಗುಂಡು ಶಿಲೆಯನ್ನು ತೆಗೆದುಕೊಂಡು ಬಂದು, ದೈವಿಕ ಶಕ್ತಿಯುಳ್ಳ ಶ್ರವಣಕುಂಡದಲ್ಲಿ ಪುನಃ ಈ ಗುಂಡು ದರ್ಶನವನ್ನು ಮಾಡಿ ತೋರಿಸಿ, ಈ ಕ್ಷೇತ್ರದ ಅತಿಶಯ ಮಹಿಮೆಯನ್ನು ತೋರಿಸಿಕೊಟ್ಟನು. ಆ ದಿನದಿಂದ ಈ ಆಶ್ಚರ್ಯವು ನಡೆಯುತ್ತಿದ್ದು, ಕಾಲದ ಕುಟಿಲಗತಿಯಂತೆ ೧೯೫೪ರಿಂದ ಪುನಃ ನಿಂತುಹೋಗಿದೆ.

ಈ ಶ್ರವಣಕುಂಡದ ಬಳಿಯ ಕಲ್ಲೊಂದರ ಮೇಲೆ ಚಾರಣ ಮುನಿಗಳ ಪಾದಗಳೆರಡು ಮೂಡಿ ಬಂದಿವೆ. ಈ ಚಾರಣ ಮುನಿಗಳು ತಮಗೆ ಇಚ್ಛೆ ಬಂದ ಸ್ಥಳಕ್ಕೆ ಕ್ಷಣಾರ್ಧದಲ್ಲಿ ಆಕಾಶಮಾರ್ಗದ ಮೂಲಕ ಹೋಬಲ್ಲವರಾಗಿರುತ್ತಾರೆ. ಅವರು ದಿವ್ಯಜ್ಞಾನವುಳ್ಳವರು. ಒಂದು ಚಿಕ್ಕ ವನವಾಗಿರುವ ಈ ಶ್ರವಣಕುಂಡವು ಆ ಚಾರಣ ಮುನಿಗಳ ತಪೋಭೂಮಿಯಾಗಿತ್ತು. ಅವರ ತಪಶ್ಯಕತಿಯಿಂದಾಗಿ ಶ್ರವಣ ಕುಂಡದ ಈ ಅತಿಶಯ ಕ್ಷೇತ್ರಕ್ಕೂ, ಬಂಗಾಡಿಗೂ, ವಿಶೇಷ ಶಕ್ತಿ ಸಂಚಯನವಾಗಿತ್ತು. ಇಂದಿಗೂ ಇಲ್ಲಿ ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಎರಡು ನೀರಿನ ತೊಟ್ಟಿಗಳು, ಇನ್ನೊಂದು ಮಗ್ಗುಲಲ್ಲಿ ಗುಂಡು ತೇಲುತ್ತಿದ್ದ ನೀರು ತುಂಬಿರುವ ನೀರಿನ ಹೊಂಡ, ಬಳಿಯಲ್ಲಿರುವ ಬ್ರಹ್ಮದೇವರ ಶಿಲಾಮೂರ್ತಿ ಹತ್ತಿರದಲ್ಲಿ ಬೆಳೆದಿರುವ ಒಂದು ಬೃಹದಾಕಾರದ ಹುತ್ತ ಮತ್ತು ಚಾರಣ ಮುನಿಗಳ ಪಾದಗಳು ಕಂಡು ಬರುತ್ತಿದ್ದು ಅವು ಈ ಕ್ಷೇತ್ರವನ್ನು ಇಂದಿಗೂ ರಮ್ಯವನ್ನಾಗಿಸಿವೆ.

ಬಂಗಾಡಿಯಲ್ಲಿ ಕಂಡು ಬರುವ ಇನ್ನೊಂದು ಪವಿತ್ರ ಸ್ಥಳವೆಂದರೆ ಇಲ್ಲಿಯ ಇತಿಹಾಸ ಪ್ರಸಿದ್ಧವಾದ ಶ್ರೀ ಶಾಂತಿನಾಥ ಸ್ವಾಮಿಯ ಬಸದಿ. ಬಂಗ ವಂಶದ ಮೊದಲ ಅರಸನಾದ ವೀರನರಸಿಂಹ ಬಂಗನು ಶಾಂತಿನಾಥ ಬಸದಿಯನ್ನು ಕಟ್ಟಿಸಿದ್ದನೆಂದು ಹೇಳಳಾಗಿದ್ದರೂ, ಅದು ಈಗ ಕೋಟೆಯೆಂದು ಕರೆಯಲ್ಪಡುವ ಸ್ಥಳದಲ್ಲಿ ಕಟ್ಟಿಸಿದ್ದದ್ದಾಗಿರಬೇಕು. ಅವರ ಅವಶೇಷಗಳು ಈಗ ಅಲ್ಲಿ ಕಾಣುತ್ತವೆ. ಈಗ ಇರುವ ಶ್ರೀ ಶಾಂತಿನಾಥ ಬಸದಿಯು ಕ್ರಿ.ಶ. ೧೭೦೦ಕ್ಕಿಂತ ಮೊದಲು ಕಟ್ಟಲ್ಪಟ್ಟಿತ್ತು. ಯಾಕೆಂದರೆ, ಇದರ ಕುರಿತು ೧೭೦೦ರಲ್ಲಿ ಶ್ರೀ ರಾಮಚಂದ್ರ ಚರಿತ್ರವನ್ನು ಬರೆದಿರುವ ಕವಿ ಚಂದ್ರಶೇಖರನು ಉಲ್ಲೇಖಿಸಿದ್ದಾನೆ. ಕಾಲಸ್ಥಿತಿಯಿಂದಾಗಿ ಈಗ ಬಸದಿಯು ಜೀರ್ಣಗೊಂಡಿದ್ದರೂ ಕಳೆದ ಶತಮಾನದ ಉತ್ತರಾರ್ಧದಲ್ಲಿ ಶ್ರೀಮಂತರಾದ ಬೆಳ್ಳೂರುಗುತ್ತಿನವರು ಈ ಬಸದಿಯ ಮಾಡಿಗೆ ತಾಮ್ರದ ತಗಡನ್ನು ಹೊದಿಸಿ ಶ್ರೀ ಸ್ವಾಮಿಗೆ ಪಂಚ ಕಲ್ಯಾಣ ವಿಧಿಯನ್ನು ನೆರವೇರಿಸಿದರು. ಅದರಂತೆ ೧೮೯೮ – ೯೯ರಲ್ಲಿ ಅರಮನೆಯ ಲಕ್ಷ್ಮಪ್ಪರಸ ಬಂಗರಾಜನು ಈ ಜಿನಾಲಯದ ಪೂರ್ಣ ಜೀರ್ಣೋದ್ಧಾರಕಾರ್ಯವನ್ನು ಕೈಗೊಂಡನು.

ಫೋಟೋ ಬಂಗಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿ.

ಫೋಟೋ ಬಂಗಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿ.

ಈ ಶಾಂತಿನಾಥ ಬಸದಿಯಲ್ಲಿ ಕೋಟೆಯ ಹಳೆ ಬಸದಿಯಲ್ಲಿದ್ದದ್ದೆಂದು ಹೇಳಲಾಗುವ ಸುಮಾರು ಮೂರು ಅಡಿ ಎತ್ತರದ ಆದಿ ಶಾಂತಿನಾಥ ಸ್ವಾಮಿಯ ಬಿಂಬವನ್ನು ಇಡಲಾಗಿದೆ. ಈ ಬಸದಿಯ ಗರ್ಭಗೃಹದಲ್ಲಿ ಸುಮಾರು ೪.೫ ಅಡಿ ಎತ್ತರದ, ಮಕರ ತೋರಣಗಳಿಂದಲಂಕೃತವಾದ ಪ್ರಭಾವಲಯವಿರುವ ಖಡ್ಗಾಸನದ ಶ್ರೀ ಶಾಂತೀಶ್ವರ ಸ್ವಾಮಿಯ ಮನೋಹರ ಬಿಂಬವಿದೆ. ಈ ಬಸದಿಯ ಪ್ರಾರ್ಥನಾ ಮಂಟಪದಲ್ಲಿ ಒಂದು ಚಿಕ್ಕ ಶಿಲಾ ಖಂಡದ ಮೇಲೆ ಮುನಿಗಳ ಎರಡು ಪಾದಗಳ ಆಕೃತಿಯನ್ನು ಮಾಡಿಡಲಾಗಿದೆ. ಈ ಬಸದಿಯ ಮೇಗಿನ ನೆಲೆ (ಮಾಳಿಗೆ)ಯಲ್ಲಿ ವಿಶಿಷ್ಟವಾದ ಕಂಚಿನ ಖಡ್ಗಾಸನದ ಸುಮಾರು ೨.೫ ಅಡಿ ಎತ್ತರದ ಶ್ರೀ ಆದೀಶ್ವರ ಸ್ವಾಮಿಯ ಬಿಂಬವಿದೆ. ಈ ಬಿಂಬದಲ್ಲಿ ಸ್ವಾಮಿಯ ಕೇಶವು ಭುಜಗಳ ಮೇಲೆ ಹರಡಿರುವುದನ್ನೂ, ಪ್ರಭಾವಲಯದಲ್ಲಿ ಚೌಕುಳಿಯಾಕಾರದ ಚಿತ್ರಿಕೆಗಳಿರುವುದನ್ನೂ, ಗಮನಿಸಿಕೊಂಡರೆ, ಈ ಜಿನಬಿಂಬವು ಬಹು ಪ್ರಾಚೀನವಾದುದೆಂದು ಹೇಳಬೇಕಾಗುತ್ತದೆ. ಪ್ರಾಯಶಃ ಬಂಗಾಡಿಯಲ್ಲಿರುವ ಜಿನಬಿಂಬಗಳ ಪೈಕಿ ಇದು ಅತ್ಯಂತ ಪ್ರಾಚೀನ ಬಿಂಬವಾಗಿದೆ.

ಶ್ರೀ ವೀರಭದ್ರ ದೇವಾಲಯವು ಬಂಗಾಡಿಯಲ್ಲಿದೆ. ಪೂರ್ಣವಾಗಿ ಶಿಲಾಮಯವಾಗಿರುವ ಈ ದೇವಾಲಯವು ಬಹಳ ಪ್ರಾಚೀನವಾಗಿರುವಂತೆ, ಬಂಗರಸರ ಪರಮತ ಸಹಿಷ್ಣುತೆಗೆ ಸಾಕ್ಷಿಯಾಗಿದೆ. ಶೈವ ಸಂಪ್ರದಾಯಕ್ಕೆ ಸೇರಿದ ಈ ದೇವತೆಯು ಸಂತಾನ ಪ್ರಾಪ್ತಿಗಾಗಿ ಬಂಗಾಡಿಯಲ್ಲಿ ಭಜಿಸಲ್ಪಡುತ್ತಿದ್ದುದು ಇದೇ ದೇವಾಲಯದ ಗರ್ಭಗೃಹದ ಮುಂದಿನ ಮಂಪಟದಲ್ಲಿರುವ ಕ್ರಿ.ಶ. ೧೪೭೩ನೇ ಇಸವಿಯ ಕಾಮಿರಾಯ ಬಂಗನ ಶಾಸನದಿಂದ ತಿಳಿದು ಬರುತ್ತದೆ.

ಜೈನ ಬಂಗರಸರ ರಾಜಧಾನಿ ಬಂಗಾಡಿಯಲ್ಲಿ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮಿಗಳ ಶಾಖಾ ಮಠವೊಂದಿರುವುದು, ಒಂದು ವಿಶೇಷವಾಗಿದೆ. ಇದು ಕ್ರಿ.ಶ. ೧೭೦೦ಕ್ಕಿಂತ ಮೊದಲೇ ಇಲ್ಲಿ ಅಸ್ತಿತ್ವದಲ್ಲಿತ್ತೆಂಬುದು ಕವಿ ಚಂದ್ರಶೇಖರನ ಶ್ರೀ ರಾಮಚಂದ್ರ ಚರಿತ್ರೆಯಿಂದ ತಿಳಿದು ಬರುತ್ತದೆ. ಕವಿಯು ಹೇಳುವಂತೆ, ಬಂಗಾಡಿಯು ಜೈನ ಶ್ರಾವಕರಿಗೆ ಶ್ರೀ ಲಲಿತಕೀರ್ತಿ ಸ್ವಾಮಿಗಳು ಈ ಮಠದಲ್ಲಿದ್ದು ವೈರಾಗ್ಯವನ್ನು ಬೋಧೀಸುತ್ತಿದ್ದರು.

ಶ್ರೀ ಶಾಂತಿನಾಥ ಬಸದಿಯ ಆವರಣದ ಎಡಮಗ್ಗುಲಿಗೆ ಕ್ರಿ.ಶ. ೧೭೦೦ರಿಂದಲೇ ರತ್ನತ್ರಯ ಬಸದಿಯಿದ್ದುದು ನಮಗೆ ತಿಳಿದು ಬರುತ್ತದೆ. ಆದರೆ, ಒಂದು ಬಸದಿಗೆ ಇರಬೇಕಾದ ಎಲ್ಲಾ ಮಂಟಪಗಳು ಇಲ್ಲದ ಈ ರತ್ನತ್ರಯ ಬಸದಿಯಲ್ಲಿ ಕೇವಲ ಶ್ರೀ ಪದ್ಮಪ್ರಭ ತೀರ್ಥಂಕರರ ಸುಮಾರು ಮೂರು ಅಡಿ ಎತ್ತರದ ಕಂಚಿನ ಬಿಂಬ ಮಾತ್ರವಿದೆ. ಇದೇ ಶಾಂತಿನಾಥ ಬಸದಿಯ ಬಲ ಬದಿಗೆ ಚತುರ್ವಿಂಶತಿ ತೀರ್ಥಂಕರರ ಬಸದಿಯಿದೆ. ಇಲ್ಲಿರುವ ಸುಮಾರು ಒಂದೂವರೆ ಅಡಿ ಎತ್ತರದ ಕಂಚಿನ ೨೪ ತೀರ್ಥಂಕರರ ಬಿಂಬಗಳೂ, ಶ್ರೀ ಪದ್ಮಾವತಿ ಹಾಗೂ ಶ್ರೀ ಜ್ವಾಲಾಮಾಲಿನಿಯ ಶಿಲಾಬಿಂಬಗಳೂ ಮನೋಹರವಾಗಿದೆ.

ಲಲಿತಕೀರ್ತಿ ಮುನಿಗಳಿಂದ ಸ್ಥಾಪಿಸಲ್ಪಟ್ಟುದೆಂದು ಹೇಳಲಾಗುವ ಶ್ರೀ ಚಂದ್ರಪ್ರಭ ಸ್ವಾಮಿಯ ಮಠದ ಬಸ್ತಿಯು ಬಂಗಾಡಿಯಲ್ಲಿ ಕಂಡುಬರುತ್ತದೆ. ಬಹುಪ್ರಾಚೀನ ಕಾಲದಲ್ಲಿ ಕಟ್ಟಲ್ಪಟ್ಟಿದ್ದ ಈ ಬಸದಿಯು ಕೆಲವು ವರ್ಷಗಳ ಹಿಂದೆ ಪೂರ್ಣ ಜೀರ್ಣವಾಗಿದ್ದು ಅಲ್ಲಿಯ ಶ್ರೀ ಚಂದ್ರಪ್ರಭ ಸ್ವಾಮಿಯ ಬಿಂಬವನ್ನು ಶಾಂತಿನಾಥ ಬಸದಿಯಲ್ಲಿಟ್ಟಿದ್ದರು. ಈಗ ಬಿಂಬವನ್ನು ಈ ಬಸದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಗಂಭೀರ ಮುಖಮುದ್ರೆಯೊಂದಿಗೆ ಪರ್ಯಂಕಾಸನದಲ್ಲಿರುವ ಬಿಳಿಶಿಲೆಯ ಈ ಬಿಂಬವು ಬಹು ಪ್ರಾಚೀನವಾಗಿರುವಂತೆ ಬಂಗರಿಗೂ ತಲಕಾಡಿನ ಗಂಗರಿಗೂ ಸಂಬಂಧವನ್ನು ಕಲ್ಪಿಸುವಲ್ಲಿ ಪ್ರಧಾನ ಕೊಂಡಿಯಾಗಬಹುದು.

ಇಂದಿನ ಅರಮನೆ ಬಸದಿಯೊಳಗಿರುವ ಶ್ರೀ ಆದೀಶ್ವರ ಸ್ವಾಮಿಯು ಅರಮನೆಯ ಜೀವದಂತಿದ್ದು ಪ್ರಾಚೀನ ಕಾಲದಿಂದಲೂ ಅರಸು ಮನೆತನದ ಪ್ರಧಾನ ಆರಾಧ್ಯ ದೈವ.

ಸಾಹಿತ್ಯಕಲೆಗಳಿಗೆ ಬಂಗರಸರ ಕೊಡುಗೆ:

ತಮ್ಮ ಪ್ರಜಾ ಹಿತಕಾರಿ ಉತ್ತಮ ಆಡಳಿತದ ಮುಖಾಂತರ ಆರ್ಥಿಕ ಉನ್ನತಿ, ಹಾಗೂ ಸಾಮಾಜಿಕ ಸಾಮರಸ್ಯಗಳನ್ನು ಸಾಧಿಸಿಕೊಂಡ ಬಂಗರಸರು ಸಾಹಿತ್ಯ ಕಲೆಗಳಿಗೆ ವಿಶೇಷ ಪ್ರೋತ್ಸಾಹವನ್ನೂ ಕೊಟ್ಟಿದ್ದರು. ಇವರ ಅರಮನೆಯು ಕವಿಗಳ, ಕಲಾವಿದರ, ವೈದ್ಯರ, ಜ್ಯೋತಿಷ್ಯರ ಮತ್ತು ವಿದ್ವಾಂಸರ ನೆಲೆವೀಡಾಗಿತ್ತು. ಅವರನ್ನು, ತಮ್ಮ ಅರಮನೆಗೆ ಕರೆದು ಅವರಿಗೆ ಆಶ್ರಯವನ್ನೂ ಪ್ರೋತ್ಸಾಹವನ್ನೂ ಇವರು ನಿರಂತರವಾಗಿ ಕೊಡುತ್ತಾ ಬಂದಿದ್ದರು. ಕ್ರಿ.ಶ. ೧೪೬೦ರ ಸುಮಾರಿಗೆ ಕಾಮಿರಾಯ ಬಂಗನ ಆಸ್ಥಾನ ಕವಿಯಾಗಿದ್ದ ವಿಜಯವರ್ಣಿಯು ತನ್ನ ಅಲಂಕಾರ ಶಾಸ್ತ್ರದ ಗ್ರಂಥವಾದ ಶೃಂಗರಾರ್ಣವ ಚಂದ್ರಿಕಾ ಎಂಬ ಗ್ರಂಥದ ಒಂದನೆಯ ಪರಿಚ್ಛೇದದ ೧೮ – ೧೯ನೇ ಶ್ಲೋಕಗಳಲ್ಲಿ “ಶ್ರೀ ಕಾಮಿರಾಯ ಬಂಗೇಂದ್ರ ಪಾಲಯತ್ಯಮಲಶ್ರಿಯಂ || ಸ ರಾಜಾ ಕಾವ್ಯಗೋಷ್ಠೀಷು ಸಭಾಜನ ವಿಭೂಷಿತ ||” ಎಂದಿರುವುದರಿಂದ ಆಗಲೇ ಆ ಮನೆಯಲ್ಲಿ ಕಾವ್ಯಗೋಷ್ಠಿಗಳು ನಡೆಯುತ್ತಿದ್ದುವೆಂದು ಹೇಳಬಹುದು. ಅದರಂತೆ, ರಾಜನೇ ಸ್ವತಃ ಕವಿಯಾಗಿದ್ದನೆಂಬುದಾಗಿ, ವಿಜಯವರ್ಣಿಯು ಹೇಳಿರುವವನು. ವಿಜಯವರ್ಣಿ ಜಿನದೀಕ್ಷೆಯನ್ನು ತೆಗೆದುಕೊಂಡಿದ್ದ ಬ್ರಹ್ಮಚಾರಿ. ಇವನ ಗ್ರಂಥವನ್ನು ಅಲಂಕಾರ ಸಂಗ್ರಹವೆಂದು ಕರೆಯಲಾಗಿದೆ. ಇದು ದಂಡಿಯ ಕಾವ್ಯಾದರ್ಶದ ಮಟ್ಟಕ್ಕೆ ಸಮಾನವಾದ್ದೆಂದು ೧೯೬೯ನೇ ಇಸವಿಯಲ್ಲಿ ಭಾರತೀಯ ಜ್ಞಾನಪೀಠದವರಿಂದ ಪ್ರಕಟವಾಗಿದೆ. ಇದರಲ್ಲಿ ಅಲಂಕಾರ ಶಾಸ್ತ್ರದ ನಿಯಮಗಳನ್ನು ವಿವರಿಸುವುದರೊಂದಿಗೆ ಕವಿಯು ಹಲವಾರು ಐತಿಹಾಸಿಕ ಘಟನೆಗಳನ್ನೂ ಉಲ್ಲೇಖಿಸಿದ್ದಾನೆ. ಶಾಸ್ತ್ರ ನಿಯಮಗಳನ್ನು ವಿವರಿಸುವಾಗ, ಕೊಡುವ ಉದಾಹರಣೆಗಳು, ಕಾಮಿರಾಯ ಬಂಗರಸನ ಜೀವನದಲ್ಲಿ ಬಂದಿದ್ದ ಘಟನೆಗಳೇ ಆಗಿವೆ ಎಂಬುದನ್ನು ಈ ಗ್ರಂಥದ ಅಧ್ಯಯನದಿಂದ ತಿಳಿದುಕೊಳ್ಳಬಹುದು. ಕಾಮಿರಾಯನ ವರೆಗಿನ ಬಂಗರಾಜರ ವಂಶ ಚರಿತ್ರೆಯನ್ನು ಈ ಗ್ರಂಥದ ಪ್ರಾರಂಭದಲ್ಲಿ ವಿವರಿಸಲಾಗಿದೆ. ಅಲಂಕಾರ ಶಾಸ್ತ್ರದ ವಿಭಿನ್ನ ಅಂಶಗಳಾದ ವರ್ಣ ಗಣಫಲ ನಿರ್ಣಯ, ಕಾವ್ಯಗತ ಶಬ್ದಾರ್ಥ ನಿಶ್ಚಯ, ರಸಭಾವ ನಿಶ್ಚಯ, ನಾಯಕಭೇದ ನಿಶ್ಚಯ, ದಶಗುಣ ನಿಶ್ಚಯ, ರೀತಿ ನಿಶ್ಚಯ, ವೃತ್ತಿ ನಿಶ್ಚಯ, ಶೈಯ್ಯಾಪಾಕ ನಿಶ್ಚಯ, ಅಲಂಕಾರ ನಿರ್ಣಯ ಮತ್ತು ದೋಷಗುಣ ನಿರ್ಣಯ ಎಂಬ ಹತ್ತು ಪರಿಚ್ಛೇದಗಳಲ್ಲಿ ಇದನ್ನು ವಿವರಿಸಿರುವನು.

ಇದೇ ಕಾಮಿರಾಯ ಬಂಗನ ಆಸ್ಥಾನದಲ್ಲಿದ್ದ ಇನ್ನೊಬ್ಬ ಲಾಕ್ಷಣಿಕ ಅಜಿತಸೇನ ಯತೀಶ್ವರನೆಂದು ಕರೆಯಲ್ಪಡುತ್ತಿದ್ದ ಅಜಿತಸೇನಾಚಾರ್ಯ. ಅರಸನ ಪ್ರಾರ್ಥನೆಯಂತೆ ಈತ ರಚಿಸಿದ ಸಂಸ್ಕೃತ ಗ್ರಂಥ ಶೃಂಗಾರ ಮಂಜರಿ. ಮೂರು ಅಧ್ಯಾಯಗಳ ಒಟ್ಟು ೧೨೮ ಶ್ಲೋಕಗಳಲ್ಲಿ ರಚಿತವಾದ ಈ ಗ್ರಂಥದ ಒಂದನೇ ಅಧ್ಯಾಯದಲ್ಲಿ ಕಾವ್ಯದಲ್ಲಿ ಬರಬಾರದ ಎಂಟು ರೀತಿಯ ಪದದೋಷಗಳನ್ನೂ, ಎರಡನೇ ಅಧ್ಯಾಯದಲ್ಲಿ ಕಾವ್ಯದಲ್ಲಿ ಅಪೇಕ್ಷಣೀಯವಾದ ದಶಗುಣಗಳನ್ನೂ, ಮೂರನೇ ಅಧ್ಯಾಯದಲ್ಲಿ ಬಹು ಉಪಯುಕ್ತವಾದ ಹತ್ತು ಅಲಂಕಾರಗಳನ್ನೂ ವಿವರಿಸಲಾಗಿದೆ.

ಈ ಎರಡೂ ಗ್ರಂಥಗಳಿಗಿಂತ ಗಾತ್ರದಲ್ಲಿಯೂ ಗುಣದಲ್ಲಿಯೂ ಹಿರಿದಾದುದು ಇದೇ ಅಜಿತ ಸೇನಾಚಾರ್ಯನಿಂದ ರಚಿತವಾದ ಅಲಂಕಾರ ಚಿಂತಾಮಣಿ ಎಂಬ ಸಂಸ್ಕೃತ ಲಕ್ಷಣ ಗ್ರಂಥ. ಇದು ಬಂಗಾಡಿಯ ಶಾಂತಿನಾಥ ಬಸದಿಯಲ್ಲಿ ಬರೆಯಲ್ಪಟ್ಟಿತು. ಐದು ಪರಿಚ್ಛೇದಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಶ್ಲೋಕಗಳೂ ಅವನ್ನು ಬಂಧಿಸಿರುವ ಪ್ರೌಢಗದ್ಯವೂ ಈ ಗ್ರಂಥದಲ್ಲಿ ಕಾವ್ಯದ ಲಕ್ಷಣವನ್ನು ಪಾಂಡಿತ್ಯ ಪೂರ್ಣವಾದ ರೀತಿಯಲ್ಲಿ ವಿವರಿಸುತ್ತದೆ. ಒಂದು ಮಹಾಕಾವ್ಯದ ಲಕ್ಷಣಗಳನ್ನೂ ಶಾಸ್ತ್ರ ಸುಸಂಬದ್ಧತೆಯನ್ನೂ ವಿಶ್ಲೇಷಣೆಗಳೊಂದಿಗೆ ಈ ಬೃಹತ್ ಗ್ರಂಥದಲ್ಲಿ ವಿವರಿಸಲಾಗಿದೆ. ಇದರಲ್ಲಿ ೪೩ ಚಿತ್ರಾಲಂಕಾರಗಳನ್ನೂ, ಯಮಕಾಲಂಕಾರದ ೧೧ ಭೇದಗಳನ್ನೂ, ೭೩ ಪ್ರಕಾರದ ಅರ್ಥಾಲಂಕಾರಗಳನ್ನೂ ೨೪ ವಾಕ್ಯದೋಷ, ೧೮ ಅರ್ಥದೋಷಗಳನ್ನೂ ವಿಮರ್ಶಿಸಲಾಗಿದೆ. ಭಾರತೀಯ ಕಾವ್ಯ – ಶಾಸ್ತ್ರ ಪರಂಪರೆಯ ಹಿನ್ನೋಟವನ್ನು ಕೊಡುವುದರೊಂದಿಗೆ, ಅಜಿತಸೇನಾಚಾರ್ಯನು ಈ ಗ್ರಂಥದಲ್ಲಿ ಅವುಗಳ ಬದಲಾವಣೆ, ಸುಧಾರಣೆ, ಸಂಸ್ಕರಣ ಹಾಗೂ ಪರಿಷ್ಕರಣದ ದೆಸೆಯಲ್ಲಿ ಸರ್ವಗ್ರಾಹ್ಯವಾಗಬಹುದಾದ ತನ್ನ ಕ್ರಾಂತಿಕಾರಿ ಅಭಿಪ್ರಾಯಗಳನ್ನು ಕೊಟ್ಟಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ, ಕಾವ್ಯಕನ್ನಿಕೆಯನ್ನು ಅಲಂಕಾರಗೊಳಿಸುವ ಶಾಸ್ತ್ರದ ಕುರಿತು ಇನ್ನಷ್ಟು ಚಿಂತನೆಗೆ ಅವಕಾಶವನ್ನು ನೀಡುವ ಉದ್ದೇಶದಿಂದಲೇ ರಚಿತವಾದ ಈ ಗ್ರಂಥಕ್ಕೆ ಅಲಂಕಾರ ಚಿಂತಾಮಣಿ ಎಂಬ ಹೆಸರು ಅನ್ವರ್ಥಕವೇ ಆಗಿದೆ.

ಕೇಶವ ಮಿಶ್ರನೆಂಬವನು ಬಂಗರ ನಂದಾವರದ ಅರಮನೆಯವರ ಆಶ್ರಯದಲ್ಲಿದ್ದು, ‘ತರ್ಕ ಪರಿಭಾಷಾ’ ಎಂಬ ಸಂಸ್ಕೃತ ಗ್ರಂಥವನ್ನು ಬರೆದಿರುವಂತೆ ಮೂಡಬಿದರೆಯ ಶ್ರೀಮತಿ ರಮಾರಾಣಿ ಜೈನ ಸಂಶೋಧನಾ ಕೇಂದ್ರದಲ್ಲಿರುವ ಗ್ರಂಥದಿಂದ ತಿಳಿದುಬರುತ್ತದೆ. ಈ ಗ್ರಂಥವನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ತರ್ಕಶಾಸ್ತ್ರಕ್ಕೆ ಸಂಬಂಧಪಟ್ಟ ಈ ಗ್ರಂಥದಲ್ಲಿ ಪ್ರಮಾಣ, ಪ್ರಮೇಯ, ಸಂಶಯ, ಪ್ರಯೋಜನ, ದೃಷ್ಟಾಂತ, ಸಿದ್ಧಾಂತ ಇತ್ಯಾದಿ ವಿಷಯಗಳನ್ನು ಬಾಲಕರಿಗೆ ತಿಳಿಯ ಹೇಳುವ ರೀತಿಯಲ್ಲಿ ತಾನು ಹೇಳಿರುವುದಾಗಿ ಗ್ರಂಥಕರ್ತನು ಹೇಳಿಕೊಂಡಿದ್ದಾನೆ. ತಾನು ಈ ಗ್ರಂಥವನ್ನು ನಂದಾವರದ ಜೈನ ಬಸದಿಯೊಂದರಲ್ಲಿ ದುಂದುಭಿನಾಮ ಸಂವತ್ಸರದ ವೈಶಾಖ ಕೃಷ್ಣಪಕ್ಷ ಸಪ್ತಮಿ ರವಿವಾರದಂದು ಬರೆದು ಮುಗಿಸಿರುವುದಾಗಿ ಹೇಳಿದ್ದಾನೆ. ಗ್ರಂಥಾರಂಭದಲ್ಲಿ ಆದಿ ಜಿನನನ್ನೂ, ಗುರು ದೇವವರ್ಣಿಗೆಯನ್ನೂ ಸ್ಮರಿಸಿಕೊಂಡಿರುವುದರಿಂದ ಕವಿಯು ಜೈನನೆಂದು ಕಾಣುತ್ತದೆ.

ಶಾಂತರಸನೆಂಬ ಕವಿಯು, “ಯೋಗ ರತ್ನಾಕರ” ಎಂಬ ಸಂಸ್ಕೃತ ಗ್ರಂಥವನ್ನು ಲಕ್ಷ್ಮಪ್ಪರಸ ಬಂಗನ ಆಸ್ಥಾನದಲ್ಲಿ ಬರೆದಿದ್ದನು. ಚಿಕ್ಕದಾಗಿರುವ ಈ ಗ್ರಂಥ ಹಸ್ತಪ್ರತಿಯು ಮೂಡಬಿದರೆಯ ಶ್ರೀಮತಿ ರಮಾರಾಣಿ ಜೈನ ಸಂಶೋಧನಾ ಕೇಂದ್ರದಲ್ಲಿ ಲಭ್ಯವಿದೆ. ಈತನ ಚಂದ್ರಶೇಖರ ಕವಿಯ ಮಾರ್ಗದರ್ಶನದಲ್ಲಿ ಶಾಲಿವಾಹನ ಶಕ ೧೬೪೧ (ಕ್ರಿ.ಶ. ೧೭೧೯) ನೇ ವಿಕಾರಿ ಸಂವತ್ಸರದ ಫಾಲ್ಗುಣ ಹುಣ್ಣಿಮೆಯಂದು ಬರೆದು ಮುಗಿಸಿದನು. ಯೋಗಶಾಸ್ತ್ರದ ಎಲ್ಲಾ ವಿಷಯಗಳನ್ನೂ ಕವಿಯು ಬಹು ಸಂಕ್ಷಿಪ್ತವಾಗಿ ವಿವರಿಸಿ, ಜೈನ ಮಂಗಲ ಶ್ಲೋಕದೊಂದಿಗೆ ಈ ಗ್ರಂಥವನ್ನು ಕೊನೆಗೊಳಿಸಿದ್ದಾನೆ. ಇದರಿಂದಾಗ, ಈತನೂ ಜೈನ ಮತದವನೆಂದು ನಾವು ತಿಳಿಯಬಹುದು.

ಲಕ್ಷ್ಮಪ್ಪರಸ ಬಂಗನ ಆಸ್ಥಾನದಲ್ಲಿದ್ದ ಕವಿ ಪದ್ಮನಾಭನೆಂಬವನು “ಯೋಗ ರತ್ನಾಕರ”ವೆಂಬ ಇನ್ನೊಂದು ಗ್ರಂಥವನ್ನು ಕನ್ನಡದಲ್ಲಿ ರಚಿಸಿರುವನು. ಶಾಂತರಸನು ಸಂಸ್ಕೃತದಲ್ಲಿ ವಿವರಿಸಿದ್ದ ಯೋಗಶಾಸ್ತ್ರವನ್ನು ಬಹಳ ಸರಳವಾದ ಕನ್ನಡದಲ್ಲಿ ತಾನು ವಿವರಿಸುತ್ತಿರುವುದಾಗಿ ಕವಿಯು ಹೇಳಿಕೊಂಡಿದ್ದಾನೆ. ಪ್ರಾಯಶಃ ಇದು, ಆ ಸಂಸ್ಕೃತ ಗ್ರಂಥದ ಅಪ್ಪಟ ಭಾಷಾಂತರ. ಈತನು ಬ್ರಾಹ್ಮಣವರ್ಗಕ್ಕೆ ಸೇರಿದ್ದ ಚಂದ್ರಶೇಖರನೆಂಬ ವೈದಿಕನ ಮಗನು. ಆದರೆ, ಈ ಗ್ರಂಥದ ಪ್ರಾರಂಭದಲ್ಲಿ ಜಿನಸ್ತುತಿಯಿದ್ದು ಮುಂದೆ ಅರಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಯರು ಮತ್ತು ಸರ್ವಸಾಧುಗಳು ಎಂಬ ಪಂಚ ಪರಮೇಷ್ಟಿಗಳನ್ನು ಸುತ್ತಿಸಲಾಗಿದೆ. ಅಲ್ಲಲ್ಲಿ ಜೈನರತ್ನತ್ರಗಳಾದ, ಸಮ್ಯಕ್ ದರ್ಶನ, ಸಮ್ಯಕ್ ಚಾರಿತ್ರ್ಯ ಮತ್ತು ಸಮ್ಯಕ್ ಜ್ಞಾನಗಳನ್ನು ಉಲ್ಲೇಖಿಸಲಾಗಿದೆ. ಇದರಿಂದಾಗಿ, ಈತನೂ ಜೈನ ಮತಾವಲಂಬಿಯಾಗಿರಬಹುದೆಂದು ಹೇಳಬಹುದು. ಯೋಗಶಾಸ್ತ್ರವನ್ನು ವಿವರಿಸುವ ಈ ಕೃತಿಯು ಗಾತ್ರದಲ್ಲಿ ಚಿಕ್ಕದಾಗಿದ್ದು, ಇದರಲ್ಲಿ ಒಟ್ಟು ೫೦೩ ಪದ್ಯಗಳಿರುವ ಎಂಟು ಅಂಗಗಳಿವೆ. ಅದಕ್ಕಿಂತಲೂ ಮೊದಲು ಸಂಸ್ಕೃತದಲ್ಲಿ ವಿವರಿಸಲ್ಪಟ್ಟ ಈ ಶಾಸ್ತ್ರವನ್ನು ಕನ್ನಡದಲ್ಲಿ ವಿವರಿಸುವಾಗ ಕವಿಯು ಸಂಸ್ಕೃತ ಭಾಷೆಯಿಂದ ವಿಶೇಷವಾಗಿ ಪ್ರಭಾವಿತನಾಗದೆ, ಸರಳಗನ್ನಡದಲ್ಲೇ ವಿಷಯವನ್ನು ವಿಸ್ತರಿಸಿರುವುದು ಕಂಡು ಬರುತ್ತದೆ.

ಚಂದ್ರಮನೆಂಬ ಒಬ್ಬ ಕವಿಯು ಬಂಗಾಡಿಯ ಶ್ರೀ ಶಾಂತಿನಾಥ ಬಸದಿಯಲ್ಲಿದ್ದುಕೊಂಡು “ಶ್ರೀ ಪದ್ಮಾವತಿ ಚರಿತ್ರೆ” ಯನ್ನು ಬರೆದಿರುವನೆಂದು ಇತರ ಗ್ರಂಥಗಳಿಂದ ನಮಗೆ ತಿಳಿದು ಬಂದರೂ, ಆ ಕವಿಯ ಜೀವನ ವೃತ್ತಾಂತವಾಗಲೀ, ಅವನ ಗ್ರಂಥದ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿಗಳಾಗಲೀ ಲಭ್ಯವಾಗುವುದಿಲ್ಲ.

ಕವಿ ಧರಣಿಗ ಅಥವಾ ಧರಣೀಂದ್ರನೆಂಬವನು ೧೮೩೫ರಲ್ಲಿ ನಂದಾವರದ ಅರಮನೆಯಲ್ಲಿ ಆಳುತ್ತಿದ್ದ ವಿಮಲ ಪುಣ್ಯೋದಯ ಲಕ್ಷಣ ಮಹಿವರನಾದ ಲಕ್ಷ್ಮಪ್ಪರಸ ಬಂಗನ ಆಸ್ಥಾನದಲ್ಲಿ ಒಂದು ಸ್ತುತಿ ಸಂಗ್ರಹವನ್ನು ಬರೆದಿರುವನು. ಕವಿಯು ತಾನು ನಂದಾವರದ ಪದುಮಣ್ಣನ ಮಗನೆಂದು ಹೇಳಿಕೊಂಡಿರುವನು. ಈ ಕೃತಿಯನ್ನು ನಂದಾವರದ ಅರಮನೆಯ ರಾಣಿ ಚಂದ್ರಮತಿ ಹೇಳಿಕೊಂಡ ಅನುಸಾರ ಬರೆದಿರುವುದಾಗಿ ಕವಿಯು ಹೇಳಿದ್ದಾನೆ. ಈ ಕೃತಿಯ ತಾಡಪತ್ರ ಗ್ರಂಥವು, ಈಗ ಬಂಗಾಡಿ ಅರಮನೆಯಲ್ಲಿರುವ ಶ್ರೀ ರವಿರಾಜರ ವಶದಲ್ಲಿದೆ. ಇದರಲ್ಲಿ ಕವಿ ಧರಣಿಗನು ಬರೆದಿರುವ “ಪದ್ಮಾವತಿ ಶೋಭಾನೆ” ಎಂಬ ೨೫ ಪದ್ಯಗಳೂ, “ಶ್ರೀ ಶಾಂತಿನಾಥ ಶೋಭಾನೆ” ಎಂಬ ೧೨೫ ಗೀತೆಗಳೂ, “ಸುವಾಲಿ ಪದಗಳು” ಎಂಬ ೩೩ ಹಾಡುಗಳೂ “ನೇಮಿಶ್ವರನ ತೊಟ್ಟಿಲ ಪದ” ಎಂಬ ೪೦ ಜೋಗುಳದ ಹಾಡುಗಳೂ ಇವೆ. ಪರಮಾತ್ಮನೊಂದಿಗೆ ತಾದಾತ್ಮ್ಯವನ್ನು ಭಾವಿಸಿಕೊಂಡು ಬರೆದ ಈ ಪದ್ಯಗಳು ತುಂಬ ಮಾರ್ಮಿಕವಾಗಿದ್ದು ಆನಂದದಾಯಕವಾಗಿವೆ.

ನಾಲ್ಮಡಿ ಲಕ್ಷ್ಮಪ್ಪರಸ ಬಂಗರಾಜನ ಆಸ್ಥಾನದಲ್ಲಿದ್ದ ಇನ್ನೊಬ್ಬ ಹಿರಿಯ ಕವಿಯೆಂದರೆ, ಶ್ರೀ ರಾಮಚಂದ್ರ ಚರಿತ್ರ ಎಂಬ ಬೃಹತ್ ಕಾವ್ಯವೊಂದರ ಪೂರ್ವಾರ್ಧವನ್ನು ಬರೆದ ಚಂದ್ರಶೇಖರ ಕವಿ. ೩೭ ಸಂಧಿಗಳೂ, ೫೨೬೯ ಸಾಂಗತ್ಯ ಪದ್ಯಗಳೂ ಇರುವ ಈ ಕಾವ್ಯದ ಮೊದಲಿನ ೧೬ ಸಂಧಿಗಳು ಹಾಗೂ ಮುಂದಿನ ಸಂಧಿಯ ೧೩ ಪದ್ಯಗಳನ್ನು ಬರೆದು ಕಾವ್ಯ ರಚನೆಯನ್ನು ಫಕ್ಕನೆ ನಿಲ್ಲಿಸಿರುವುದು ಕಂಡು ಬರುತ್ತದೆ. ಕವಿಯು ಅಷ್ಟರಲ್ಲಿ ಸ್ವರ್ಗಸ್ಥನಾಗಿರಬೇಕು. ಅರ್ಧದಲ್ಲಿ ಬರೆದು ನಿಲ್ಲಿಸಿದ್ದ ಈ ಕಾವ್ಯವನ್ನು ಬಂಗಾಡಿ ಅರಸರ ನೆಂಟರಿಷ್ಟರಾದ ಮೂಲ್ಕಿಯ ಸಾಮಂತರ ಅರಮನೆಯಲ್ಲಿದ್ದ ಪದ್ಮನಾಭನೆಂಬ ಕವಿಯು ಪೂರ್ಣಗೊಳಿಸಿದನು. ಈ ಗ್ರಂಥವು ಇನ್ನೂ ಪ್ರಕಟವಾಗಿಲ್ಲ.

ಚಂದ್ರಶೇಖರ ಕವಿಯ ಈ ರಾಮಚಂದ್ರ ಚರಿತ್ರವು ಬಂಗರ ಇತಿಹಾಸಕ್ಕೆ ಸಂಬಂಧಪಟ್ಟ ಹಲವಾರು ಅಮೂಲ್ಯ ಮಾಹಿತಿಗಳನ್ನು ಒದಗಿಸುವ ಒಂದು ಉಪಯುಕ್ತ ಗ್ರಂಥ. ಶ್ರೀ ರಾಮಚಂದ್ರನ ಚರಿತ್ರೆಯನ್ನು ವಿವರಿಸುವುದೇ ಇದರ ಉದ್ದೇಶ, ಶ್ರೀ ರಾಮನನ್ನು ಈ ಕಾವ್ಯದಲ್ಲಿ ಒಬ್ಬ ಜೈನ ಭಟ್ಟಾರಕನನ್ನಾಗಿ ಚಿತ್ರಿಸಲಾಗಿದೆ. ರಾಮ, ವಿಭೀಷಣ, ಹನುಮಂತರು ಕೊನೆಯಲ್ಲಿ ಕೇವಲಿಗಳಾಗುತ್ತಾರೆ. ಒಬ್ಬ ಹಿರಿಯ ಕವಿಯ ಎಲ್ಲಾಯೋಗ್ಯತೆಗಳೂ ಕವಿ ಚಂದ್ರಶೇಖರನಲ್ಲಿ ಇದ್ದುವು. ಆದುದರಿಂದ ಈ ರಾಮಚಂದ್ರ ಚರಿತ್ರವನ್ನು ಪೂರ್ಣಗೊಳಿಸಿದ ಕವಿ ಪದ್ಮನಾಭನು ಈತನನ್ನು – ತ್ರೈವಿದ್ಯ ಚಕ್ರೇಶ, ಅಮಲಸಾಹಿತ್ಯ ಕಲಾವರ, ಊರ್ಜಿತ ತೇಝ, ಕೋವಿದ ಚಂದ್ರಶೇಖರ ಕವಿ ಎಂಬ ಮಾತುಗಳಿಂದ ಸ್ತುತಿಸಿರುವನು. ಅಂತೂ ಕ್ರಿ.ಶ. ೧೭೦೦ರಲ್ಲಿ ರಚಿತವಾದ ಈ ಕಾವ್ಯವು ಬಂಗಾಡಿಯಲ್ಲಿ ರಚಿತವಾದ ಕಾವ್ಯಗಳ ಪೈಕಿ ಬಹಳ ಉನ್ನತ ಮಟ್ಟದ್ದಾಗಿದೆ.

ಬಂಗರಸರ ಆಸ್ಥಾನದಲ್ಲಿ ಬರೆಯಲ್ಪಟ್ಟ ಗ್ರಂಥಗಳ ಪೈಕಿ ಇವು ಕೆಲವು ಮಾತ್ರ. ಮೂರನೆಯ ಲಕ್ಷ್ಮಪ್ಪರಸ ಬಂಗರಾಯನ ಅರಮನೆಯಲ್ಲಿ ಚಂದ್ರಶೇಖರನಂತಹ ಶ್ರೇಷ್ಠ ಕವಿಗಳಿಂದ ವಿಪುಲವಾದ ಸಾಹಿತ್ಯ ಸೃಷ್ಟಿಯಾಗುವುದಕ್ಕಿಂತ ಮೊದಲು ನಮಗೆ ಸಿಗುವ ಕವಿ ವಿಜಯವರ್ಣಿಯೊಬ್ಬ ಮಾತ್ರಾ. ಕಾಮಿರಾಜನ ಆಸ್ಥಾನವು ಕವಿಗೋಷ್ಠಿಯಿಂದ ಭೂಷಿತವಾಗಿತ್ತೆಂದು ವಿಜಯವರ್ಣಿಯೇ ಹೇಳಿರುವನು. ಅವನಂತಹ ಒಬ್ಬ ಅಖಿಲ ಭಾರತ ಮಟ್ಟದ ಕವಿಗೆ ಆಶ್ರಯವನ್ನು ಕೊಟ್ಟಿದ್ದ ಬಂಗರ ಅರಮನೆಯು ಒಮ್ಮಿಂದೊಮ್ಮೆಗೇ ಈ ಭವ್ಯ ಪರಂಪರೆಯನ್ನು ಕೈಬಿಟ್ಟಿರಲಿಕ್ಕಿಲ್ಲ. ಆ ಹಿರಿಯ ಕವಿಯ ದಾರಿಯಲ್ಲಿ ಕೆಲವರಾದರೂ ಮುಂದುವರಿದಿರಬಹುದು. ಆದರೆ, ಆ ಕಾಲದ ಸಾಹಿತ್ಯ ಸೃಷ್ಟಿಯ ಕುರಿತು, ಏನೊಂದು ವಿಷಯವೂ ನಮಗೆ ತಿಳಿದು ಬರುವುದಿಲ್ಲ. ಆದರೆ, ಇಂದಿನ ಬಂಗರ ಅರಮನೆಯ ಶ್ರೀಯುತ ರವಿರಾಜರಲ್ಲಿ ಹತ್ತಾರು ತಾಡಪತ್ರ ಗ್ರಂಥಗಳಿವೆ. ಅವುಗಳನ್ನು ಅಧ್ಯಯನ ಮಾಡಿದರೆ, ಅಮೂಲ್ಯವಾದ ಸಾಹಿತ್ಯಿಕ ಹಾಗೂ ಐತಿಹಾಸಿಕ ವಿಷಯಗಳು ತಿಳಿದುಬರಬಹುದು.

ಸುಮಾರು ೭೦೦ ವರ್ಷಗಳಷ್ಟು ದೀರ್ಘಕಾಲ ರಾಜ್ಯವಾಳಿದ ಬಂಗರ ಭವ್ಯ ಇತಿಹಾಸದಲ್ಲಿ ಬರುವ ಮಹತ್ವಪೂರ್ಣವಾದ ಘಟನೆ ಹಾಗೂ ಸಾಧನೆಗಳನ್ನು ಸಂಗ್ರಹಿಸುವ ಒಂದು ಚಿಕಕ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆದರೆ, ಇವರ ಇತಿಹಾಸಕ್ಕೆ ಸಂಬಂಧಪಟ್ಟ ಇನ್ನೆಷ್ಟೋ ಉಪಯುಕ್ತ ಮಾಹಿತಿಗಳು ಇನ್ನಾವುದೋ ಮೂಲಗಳಲ್ಲಿ ಅಡಗಿರಬಹುದು. ಅವೆಲ್ಲವುಗಳ ಸಮಗ್ರ ಅಧ್ಯಯನದಿಂದ ಆ ಅರಸು ಮನೆತನಕ್ಕೆ ಸಂಬಂಧಿಸಿದ ಇನ್ನಷ್ಟು ಉಪಯುಕ್ತ ಇತಿಹಾಸವು ಬೆಳಕಿಗೆ ಬರುವ ಶುಭ ದಿನವನ್ನು ನಿರೀಕ್ಷಿಸುತ್ತೇನೆ.

– ವೈ. ಉಮಾನಾಥ ಶೆಣೈ*

 

* ಪ್ರಾಧ್ಯಾಪಕರು, ಶ್ರೀ ಧ. ಮ ಕಾಲೇಜು, ಉಜಿರೆ – ೫೭೪ ೨೪೦ ದ.ಕ.