ಪ್ರಸ್ತಾವನೆ:

ಕರಾವಳಿ ಕರ್ನಾಟಕವನ್ನಾಳಿದ ಪ್ರಸಿದ್ದ ಅರಸು ಮನೆತನಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಗವಾಡಿಯಿಂದ ಆಳಿದ ಬಂಗ ಅರಸು ಮನೆತನವೂ ಒಂದು. ಈ ಜಿಲ್ಲೆಯ ಇತಿಹಾಸವನ್ನು ಅಧ್ಯಯನ ಮಾಡುತ್ತಾ ಹೋದಂತೆ ಬಂಗರ ಇತಿಹಾಸದ ಭವ್ಯತೆಯು ನಮಗೆ ಮನದಟ್ಟಾಗುತ್ತದೆ. ವೈಯಕ್ತಿಕವಾಗಿ ಇವರು ಜೈನ ಮತಕ್ಕೆ ಸೇರಿದವರಾಗಿದ್ದರೂ ಪರಮತ ಸಹಿಷ್ಣುಗಳಾಗಿ ಇತರ ಎಲ್ಲಾ ಧರ್ಮಗಳನ್ನು ಸಮಾನ ಗೌರವದಿಂದ ಕಾಣುತ್ತಿದ್ದರು. ಇದರಿಂದಾಗಿ ಇವರ ಆಡಳಿತಕ್ಕೆ ಒಳಪಟ್ಟಿದ್ದ ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ಹಾಗೂ ಶಾಂತಿ ಸೌಹಾರ್ದಗಳು ನೆಲೆಸಿದ್ದವು. ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಪ್ರಬಲರಾಗಿ ಬೆಳೆದ ಈ ಅರಸು ಮನೆತನವು ಇಕ್ಕೇರಿಯ ಆಡಳಿತದಲ್ಲಿ ಸ್ವಲ್ಪ ಮುಗ್ಗುರಿಸಿತು. ಟಿಪ್ಪುವಿನ ಹಾಗೂ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬಹಳ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಇವರ ಪೈಕಿ ಒಬ್ಬ ಅರಸ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಬ್ರಿಟಿಷರಿಂದ ಗಲ್ಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. ಇಂದಿಗೂ ಬಂಗರ ಅರಮನೆ ಎಂಬ ದೊಡ್ಡದೊಂದು ಮನೆ ಬಂಗಾಡಿಯಲ್ಲಿದೆ. ಇದು ೧೯೦೪ರಲ್ಲಿ ನಿರ್ಮಿಸಲ್ಪಟ್ಟಿತ್ತು. ಬಂಗ ವಂಶದ ಕೊನೆಯ ಸದಸ್ಯರೆಂದು ಹೇಳಿಕೊಳ್ಳುವ ಶ್ರೀ ರವಿರಾಜ ಬಲ್ಲಾಳ ಎಂಬವರು ಇಲ್ಲಿ ವಾಸವಾಗಿದ್ದಾರೆ.

ಬಂಗ ಅರಸು ಮನೆತನವು ಪ್ರಾಬಲ್ಯವನ್ನು ಹೊಂದಿದ್ದ ಕಾಲದಲ್ಲಿ ಸಮರ್ಥ ಆಳ್ವಿಕೆಯನ್ನು ನಡೆಸಿದುದು ಮಾತ್ರವಲ್ಲದೆ ಹಲವಾರು ಆರ್ಥಿಕ ಸುಧಾರಣೆಗಳನ್ನೂ ಕೈಗೊಂಡಿದ್ದಿತು. ಇವರ ಬಂಗಾಡಿ ಗದ್ಯಾಣಗಳ ಉಲ್ಲೇಖ ಜಿಲ್ಲೆಯ ಕೆಲವು ಶಾಸನಗಳಲ್ಲಿ ಕಂಡು ಬರುತ್ತದೆ. ‘ಬಡತನ ಬಂದರೆ ಬಂಗಾಡಿಗೆ ಹೋಗು’ ಎಂಬ ಒಂದು ಮಾತು ಇಂದಿಗೂ ಉಳಿದುಕೊಂಡು ಬಂದಿದೆ. ಬಂಗಾಡಿಗೆ ಹೋದರೆ ಬಂಗಾರದ ಅನ್ನ ಎಂಬ ಇನ್ನೊಂದು ಮಾತು ನಮ್ಮ ಜಾನಪದ ಸಾಹಿತ್ಯದಲ್ಲಿ ಇಂದಿಗೂ ಕಂಡು ಬರುತ್ತದೆ. ನೆರೆಹೊರೆಯ ಅರಸು ಮನೆತನಗಳೊಡನೆ ಶಾಂತಿ ಒಪ್ಪಂದಗಳು ಅಥವಾ ವೈವಾಹಿಕ ಸಂಬಂಧವನ್ನು ಹೊಂದಿದ್ದುದರಿಂದ ಇವರ ರಾಜ್ಯಕ್ಕೆ ಆಗಾಗ ಆಕ್ರಮಣ, ಯುದ್ಧಗಳ ಭೀತಿ ಇರಲಿಲ್ಲ. ಇಂತಹ ಅನುಕೂಲ ಸನ್ನಿವೇಶವನ್ನು ಒದಗಿಸಿಕೊಂಡಿದ್ದ ಬಂಗ ಅರಸರು ಶಾಸ್ತ್ರ, ಸಾಹಿತ್ಯ, ಕಲೆಗಳಿಗೆ ಉದಾರ ಆಶ್ರಯವನ್ನು ಕೊಟ್ಟು ನಾಡಿಗೆ ಅಮೂಲ್ಯ ಕಾಣಿಕೆಯನ್ನು ಕೊಟ್ಟಿದ್ದಾರೆ.

ಬಂಗರ ಮೂಲ:

ಬಂಗ ಅರಸರ ಮೂಲದ ಕುರಿತು ಏನನ್ನೂ ನಿರ್ಧಾರಾತ್ಮಕವಾಗಿ ಹೇಳಲು ಸಾಧ್ಯವಿಲ್ಲ. ಇವರು ಮೊದಲಿನಿಂದಲೂ ಈ ಬಂಗಾಡಿಯಲ್ಲೇ ವಾಸಿಸುತ್ತಿದ್ದ ಮೂಲ ನಿವಾಸಿಗಳೇ, ಅಥವಾ ಬೇರೆ ಕಡೆಯಿಂದ ಇಲ್ಲಿಗಾಗಮಿಸಿ, ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದವರೇ – ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ನಿಜವಾಗಿಯೂ, ಇವರ ಮೂಲದ ಕುರಿತು ಸರಿಯಾದ ಮಾಹಿತಿಯನ್ನು ಒದಗಿಸುವ ಸಮಕಾಲೀನ ದಾಖಲೆಗಳಾವುವೂ ಸಿಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ೧೫ನೇ ದಾಖಲೆಗಳಾವುವೂ ಸಿಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ೧೫ನೇ ಶತಮಾನದ ಪ್ರಾರಂಭದಿಂದ ಬರೆಯಲ್ಪಟ್ಟ ಶಾಸನಗಳಲ್ಲಿ ಮಾತ್ರ ಇವರ ಉಲ್ಲೇಖವಿದೆ.

“ದಕ್ಷಿಣಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ”ವೆಂಬ ಗ್ರಂಥದಲ್ಲಿ ಶ್ರೀ ಗಣಪತಿ ರಾವ್ ಐಗಳವರು ಕ್ರಿ.ಶ. ೧೨ನೇ ಶತಮಾನದಿಂದಲೇ ಬಂಗರಸರು ಇಲ್ಲಿಂದ ರಾಜ್ಯವಾಳುತ್ತಿದ್ದರು ಎಂದು ತೋರಿಸಿ ಕೊಟ್ಟಿದ್ದಾರೆ. ಕ್ರಿ.ಶ. ೧೪೬೦ರ ಸುಮಾರಿಗೆ ಕಾಮಿರಾಜ ಬಂಗನ ಆಸ್ಥಾನದಲ್ಲಿದ್ದ ವಿಜಯವರ್ಣಿಯು ತನ್ನ “ಶೃಂಗಾರಾರ್ಣವ ಚಂದ್ರಿಕಾ” ಎಂಬ ಗ್ರಂಥದಲ್ಲಿ ತನ್ನ ಪ್ರಭುವಿಗಿಂತ ಮೊದಲು ಈ ಅರಮನೆಯಿಂದ ಆಳಿದ ಕೆಲವು ಅರಸರ ಕುರಿತು ಮಾಹಿತಿಗಳನ್ನು ಒದಗಿಸಿದ್ದಾನೆ. ಗಣಪತಿ ರಾವ್ ಐಗಳವರು ಹೇಳುವಂತೆ ಅವರ ಪೈಕಿ ಮೊದಲ ಅರಸನಾದ ವೀರನರಸಿಂಹ ಬಂಗನಿಗೆ ಶಾಲಿವಾಹನ ಶಕ ೧೦೭೯ (ಅಂದರೆ ೧೧೫೭ನೇ ಇಸವಿ)ನೇ ಬಹುಧಾನ್ಯ ಸಂವತ್ಸರದ ಫಾಲ್ಗುಣ ಬಹುಳ ದಶಮಿಯಂದು ಬಂಗಾಡಿಯಲ್ಲಿ ಪಟ್ಟಾಭಿಷೇಕವಾಗಿ ಆ ದಿನದಿಂದಲೇ ಅವರ ರಾಜ್ಯಭಾರವು ಪ್ರಾರಂಭವಾಯಿತು. ಮುಂದೆ ನಿರಂತರವಾಗಿ ಬಂಗರಸರು ಬಂಗಾಡಯಿಂದ ರಾಜ್ಯವಾಳುತ್ತಿದ್ದರು.

ಆದರೆ, ಬಂಗಾಡಿಯಿಂದ ಆಳಲು ಪ್ರಾರಂಭೀಸಿದ ಒಂದನೇ ವೀರ ನರಸಿಂಹ ಬಂಗನು ಯಾರು? ಅವನ ಮೂಲವು ಯಾವುದು? ಅವನು ಇಲ್ಲಿಯವನೇ? ಅಥವಾ ಬೇರೆ ಕಡೆಯಿಂದ ಇಲ್ಲಿಗೆ ಬಂದು ನೆಲೆಸಿದವನೇ? ಎಂಬ ವಿಷಯದಲ್ಲಿಯೂ ಅಷ್ಟೇ ಭಿನ್ನಾಭಿಪ್ರಾಯಗಳಿವೆ. ಈವರೆಗೆ ದೊರೆತ ದಾಖಲೆಗಳ ಪ್ರಕಾರ ಬಂಗರು ಇಲ್ಲಿಗೆ ಬೇರೆ ಕಡೆಯಿಂದ ಬಂದವರೇ ಆಗಿದ್ದಾರೆ. ಶ್ರೀ ಗಣಪತಿ ರಾವ್‌ಐಗಳ ಅವರ ಗ್ರಂಥ – ಬಂಗರು ಬೇರೆ ಕಡೆಯಿಂದ ಇಲ್ಲಿಗೆ ವಲಸೆ ಬಂದವರೆಂದು ಹೇಳುತ್ತದೆ. ಡಾ| ಗುರುರಾಜ ಭಟ್ಟರು ತಮ್ಮ “ತುಳುನಾಡಿನ ಇತಿಹಾಸ ಮತ್ತು ಸಾಂಸ್ಕೃತಿಕ ಅಧ್ಯಯನ’ ಎಂಬ ಗ್ರಂಥದಲ್ಲಿ ಇದೇ ಅಭಿಪ್ರಾಯವನ್ನು ಕೊಟ್ಟಿದ್ದಾರೆ(ಪುಟ ೬೧).

ಬಂಗರು ಇಲ್ಲಿಗೆ ಬೇರೆ ಕಡೆಯಿಂದ ಬಂದವರಾದರೆ, ಅವರ ಮೂಲ ಸ್ಥಾನ ಯಾವುದು? ಇಲ್ಲಿಗೆ ಬರುವುದಕ್ಕಿಂತ ಮೊದಲು ಅವರು ಎಲ್ಲಿದ್ದರು? ಎಂಬುದು ಇನ್ನೊಂದು ಪ್ರಶ್ನೆ. ಇದನ್ನು ನಿರ್ಧರಿಸುವುದು ಸ್ವಲ್ಪ ಕಷ್ಟದ ವಿಚಾರ. ಬೆಳ್ತಂಗಡಿ ತಾಲೂಕಿನಲ್ಲಿರುವ ಬಂಗಾಡಿ ಅಥವಾ ಬಂಗವಾಡಿಯಂತೆ ಕರ್ನಾಟಕದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನಲ್ಲಿ ಬಂಗವಾಡಿ ಎಂಬ ಒಂದು ಊರು ಇದ್ದುದು ಕಂಡು ಬರುತ್ತದೆ. ಕ್ರಿ.ಶ. ೧೦ನೇ ಶತಮಾನಕ್ಕಿಂತ ಮೊದಲಿನ ಕಾಲದ ಶಿಲಾ ಶಾಸನ ವೊಂದು

[1]ಆ ಬಂಗವಾಡಿಯಲ್ಲಿ ಇರಿವನೊಳಂಬನೆಂಬೊಬ್ಬನು ಒಂದು ಕರೆಯನ್ನು ಕಟ್ಟಿಸಿದ ವಿಚಾರವನ್ನು ತಿಳಿಸುತ್ತದೆ. ಅದೇ ಸ್ಥಳದಲ್ಲಿ ಸಿಕ್ಕಿರುವ ಇನ್ನೊಂದು ಶಾಸನವು[2]ಕ್ರಿ.ಶ. ೯೫೦ರದ್ದಾಗಿದ್ದು ಅದು ಶ್ರೀಮತ್ ವಿಕ್ರಮಾದಿತ್ಯ ತಿರುವಯ್ಯ ಎಂಬವನು ಆಳುತತಿದ್ದಾಗ ಬಂಗವಾಡಿಯ ಕೆರೆಗೆ ಧನಸಹಾಯ ಕೊಟ್ಟ ವಿಷಯವನ್ನು ಹೇಳುತ್ತದೆ. ಇದೇ ಜಿಲ್ಲೆಯ ತುರುವೆಕರೆ ತಾಲೂಕಿನ ಸೂಳೆಕೆರೆ ಎಂಬಲ್ಲಿ ಸಿಕ್ಕಿರುವ ಕ್ರಿ.ಶ. ೧೧೧೩ರ ಶಿಲಾ ಶಾಸನವು[3]ಬಂಗಾವಡಿಯನ್ನು ಉಲ್ಲೇಖಿಸುತ್ತದೆ. ಅದರಂತೆ ಇನ್ನೊಂದು ಶಾಸನವೂ[4] ಬಂಗವಾಡಿಯನ್ನು ಕುರಿತು ಪ್ರಸ್ತಾಪಿಸುತ್ತದೆ. ಈ ಎಲ್ಲಾ ಉಲ್ಲೇಖಗಳಿಂದ ಕ್ರಿ.ಶ. ೧೧೧೩ರವರೆಗೆ ಬಂಗವಾಡಿಯೆಂಬ ಊರೊಂದು ಕೋಲಾರ ಜಿಲ್ಲೆಯಲ್ಲಿ ಇತ್ತೆಂದಾಯಿತು. ಆದರೆ, ಅಲ್ಲೊಂದು ಬಂಗವಾಡಿ ಇತ್ತು. ಇಲ್ಲೊಂದು ಬಂಗವಾಡಿ ಇದೆ – ಎಂಬ ಮಾತ್ರದಿಂದಲೇ ಅದಕ್ಕೂ ಇದಕ್ಕೂ ಸಂಬಂಧ ಕಲ್ಪಿಸಿ ಹೇಳುವುದು ಸರಿಯಾಗಲಾರದು. ಒಂದೇ ಹೆಸರಿನ ಊರುಗಳು ಹಲವು ಕಡೆ ಇರುತ್ತವೆ. ಎರಡನೆಯದಾಗಿ, ಬಂಗವಾಡಿ ಎಂಬ ಊರು ಅಲ್ಲಿದ್ದರೂ, ಬಂಗರು ಎಂಬ ಅರಸರು ಅಲ್ಲಿ ಇದ್ದರು ಎಂಬುದನ್ನು ಮೇಲೆ ಹೇಳಿದ ಯಾವ ಶಾಸನವೂ ಸೂಚಿಸುವುದಿಲ್ಲ. ಆದುದರಿಂದ, ಈ ಬಂಗರಸರು ಮೂಲದಲ್ಲಿ ಅಲ್ಲಿದ್ದವರು ಮತ್ತು ಅಲ್ಲಿಂದ ಇಲ್ಲಿಗೆ ಬಂದವರು ಎಂದು ಹೇಳಲು ಸಾಧ್ಯವಿಲ್ಲ. ಮೂರನೆಯದಾಗಿ, ಒಂದು ವೇಳೆ ಬಂಗರು ಅಲ್ಲಿ ಇದ್ದಿದ್ದರೆ ಅವರು ಇಷ್ಟು ದೂರಕ್ಕೆ ವಲಸೆ ಬರುವ ಕಾರಣವೇನಿರಬಹುದು? ಅಂತಹ ವಲಸೆಯ ಸಂದರ್ಭವಾದರೂ ಯಾಕೆ ಬಂದಿರಬಹುದು? ಅವರು ಅಲ್ಲಿಂದ ವಲಸೆ ಬಂದ ವಿವರಣೆಯನ್ನು ಯಾವ ದಾಖಲೆಗಳೂ ನಮಗೆ ಒದಗಿಸುವುದಿಲ್ಲ. ಆದುದರಿಂದ ಈ ಬಂಗರಸರು ಕೋಲಾರ ಜಿಲ್ಲೆಯ ಬಂಗವಾಡಿಯಿಂದ ಇಲ್ಲಿಗೆ ಬಂದವರು ಎಂದು ಹೇಳುವುದು ಕಷ್ಟಕರ.

ಆದರೆ, ಈಗಿನ ಬಂಗಾಡಿ ಅರಮನೆಯ ಸದಸ್ಯರು ತಾವು ಗಂಗನಾಡು, ವಂಗದೇಶದಿಂದ ಬಂದವರೆಂದು ಹೇಳುತ್ತಾರೆ. ಈ ಗಂಗನಾಡು ಯಾವುದು? ಗಂಗನಾಡು ಎಂಬ ಒಂದು ಊರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿರೂರಿನಿಂದ ನೇರವಾಗಿ ಪೂರ್ವಕ್ಕೆ ಸುಮಾರು ೧೫ ಕಿ.ಮೀ. ದೂರದಲ್ಲಿದೆ. ಬಂಗವಂಶದವರು ಅಲ್ಲಿಂದ ಬಂದಿರಬಹುದೇ? ಎರಡನೆಯದಾಗಿ, ನಿಜವಾಗಿಯೂ ಅವರು ಹೇಳುವಂತಹ ವಂಗದೇಶವಾದರೂ ಯಾವುದು? ಬಹು ಪ್ರಾಚೀನ ಕಾಲದಿಂದಲೂ ವಂಗದೇಶವೆಂದು ಪ್ರಸಿದ್ಧವಾಗಿರುವುದು ಈಗಿನ ಬಂಗಾಳ. ಬಂಗರು ಬಂಗಾಳದಿಂದ ಬಂದಿರಬಹುದೆಂಬುದನ್ನು ಸಮರ್ಥಿಸಲು ಈಗ ಸಿಗುವ ಆಧಾರಗಳೇನೂ ಸಾಕಾಗಲಾರವು.

ಬಂಗವಾಡಿಯ ಬಂಗರು ಮತ್ತು ಮೈಸೂರು ಜಿಲ್ಲೆಯ (ತಲಕಾಡಿನ) ಗಂಗವಾಡಿಯ ಗಂಗರ ಉತ್ತರಾಧಿಕಾರಿಗಳು ಆಗಿರಬಹುದೇ ಎಂಬ ಒಂದು ಊಹೆಗೆ ಅವಕಾಶವಿದೆ. ಈ ಗಂಗರು ಕ್ರಿ.ಶ. ೧೦೦೪ರಲ್ಲಿ ಚೋಳರೊಡನೆ ಮಾಡಿದ ಯುದ್ಧದಲ್ಲಿ ಪೂರ್ಣವಾಗಿ ಸೋತು ಹೋಗಿ ತಮ್ಮ ಅರಸೊತ್ತಿಗೆಯನ್ನು ಕಳೆದುಕೊಂಡರು. ಆದುರಿಂದ ಪ್ರಾಧಾನ್ಯತೆಯಿಂದ ಆದ್ಯಶ್ಯರಾದ ಗಂಗರು ಮುಂದೆ ತಲೆ ಎತ್ತಲಿಕ್ಕಾಗಿ ಸ್ಥಳವನ್ನು ಹುಡುಕುತ್ತಾ ಸಮಯವನ್ನು ಕಾಯುತ್ತಿದ್ದರು. ಕೆಲವು ದಶಕಗಳ ಬಳಿಕ, ಘಟ್ಟದಿಂದ ಇಳಿದು ಬಂದ ಈ ಗಂಗರು ಪ್ರಾಯಶಃ ತಮ್ಮ ವಂಶದ ಹೆಸರನ್ನು ಬಂಗರು ಎಂದು ಬದಲಾಯಿಸಿಕೊಂಡು ತಮ್ಮ ರಾಜ್ಯದ ಹೆಸರನ್ನು ಗಂಗವಾಡಿಯ ಬದಲು ಬಂಗವಾಡಿ ಎಂದೂ ಬದಲಾಯಿಸಿಕೊಂಡರು – ಎಂದು ಹೇಳಲು ಸಾಧ್ಯವಿದೆ. ಶತ್ರುಗಳ ಧಾಳಿಯಿಂದ ಸುಕ್ಷಿತವಾಗಿರಲು ಅನುಕೂಲಕರವಾಗಿರುವಂತಹ, ಸುತ್ತಲಿರುವ ಪರ್ವತಗಳಿಂದ ರಕ್ಷಿಸಲ್ಪಟ್ಟಂತಹ ಹಾಗೂ ಭವ್ಯ ಸಂಪತ್ತಿನಿಂದ ತುಂಬಿದ್ದ ಈಗಿನ ಬಂಗಾಡಿಯಲ್ಲಿ ಅವರು ತಮಗೆ ಸರಿಯಾಗಿ ಸುರಕ್ಷಿತ ಸ್ಥಾನವನ್ನು ಪಡೆದಿರಬಹುದು.

ಕ್ರಿ.ಶ. ೧೦೦೪ರಲ್ಲಿ ಗಂಗವಾಡಿಯಲ್ಲಿ ಸೋತು ಹೋದ ಗಂಗರು, ಅಲ್ಲಿ ಮತ್ತೆ ತಲೆ ಎತ್ತಿರುವುದು ನಮಗೆ ಕಂಡು ಬರುವುದಿಲ್ಲ. ಪ್ರಾರಂಭದಿಂದಲೇ ಸಮರ್ಥವಾದ ಆಳ್ವಿಕೆಯನ್ನು ಹೊಂದಿದ್ದ ಬಂಗರು ಕ್ರಿ.ಶ. ೧೦೦೪ಕ್ಕಿಂತ ಮೊದಲು ನಮಗೆ ಇತಿಹಾಸದಲ್ಲಿ ಕಂಡು ಬರುವುದಿಲ್ಲ. ಆದುದರಿಂದ, ಅಲ್ಲಿ ಅರಸೊತ್ತಿಗೆ ಕಳೆದುಕೊಂಡ ಗಂಗರು ಇಲ್ಲಿ ಬಂಗರಾಗಿ ಮತ್ತೆ ತಲೆ ಎತ್ತಿರಬಹುದು. ಗಂಗರು ಜೈನಮತೀಯರು, ಅದರಂತೆ ಬಂಗರೂ ಮೊದಲಿನಿಂದಲೇ ಜೈನಮತೀಯರಾಗಿರುವರು. ಸರ್ವ ಧರ್ಮ ಪ್ರೋತ್ಸಾಹಕರಾದ ಗಂಗರು ಸೋಮನಾಥ, ಮಹಾಲಿಂಗೇಶ್ವರ, ಗಣಪತಿ ಮುಂತಾದ ಹಿಂದೂ ದೇವತೆಗಳ ಭಜಕರಾಗಿದ್ದು, ಆ ದೇವತೆಗಳಿಗೆ ತಮ್ಮ ರಾಜ್ಯಗಳಲ್ಲಿ ದೇವಸ್ಥಾನಗಳನ್ನು ಕಟ್ಟಿಸಿಕೊಟ್ಟಿದ್ದರು. ಅದರಂತೆ ಬಂಗಾಡಿಯ ಬಂಗರೂ, ಇದೇ ದೇವತೆಗಳಿಗೆ ದೇವಾಲಯಗಳನ್ನು ಕಟ್ಟಿಸಿಕೊಟ್ಟಿದ್ದರು. ಗಂಗರು ಭಾರವಿ, ದಂಡಿಯಂತಹ ಸಂಸ್ಕೃತ ಕವಿಗಳಿಗೆ ಆಶ್ರಯವನ್ನು ಕೊಟ್ಟಿದ್ದರೆ, ಬಂಗರೂ, ವಿಜಯವರ್ಣಿಯಂತಹ ಶ್ರೇಷ್ಠ ಕವಿಗಳಿಗೆ ತಮ್ಮ ಆಳ್ವಿಕೆಯ ಪ್ರಾರಂಭದಲ್ಲೇ ರಾಜಾಶ್ರಯವನ್ನು ಕೊಟ್ಟರು. ಹಾಗೆ ತಮ್ಮ ಪರಂಪರೆಯನ್ನು ಉಳಿಸಿಕೊಂಡು ಹೋದರು.

ಕೊನೆಯದಾಗಿ, ಬಂಗರಸರ ಮೂಲದ ಕುರಿತು ಇರುವ ಜನಜನಿತವಾದ ಹೇಳಿಕೆಯನ್ನು ಈಗ ವಿಮರ್ಶಿಸಬಹುದು. ಇದು ಶ್ರೀ ಗಣಪತಿ ರಾವ್ ಐಗಳ್ ಅವರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸದಲ್ಲಿ[5]ಹೇಳಲ್ಪಟ್ಟಿದೆ. ಅದರಂತೆ ಬಂಗರು ಮೈಸೂರು ಜಿಲ್ಲೆಯಲ್ಲಿದ್ದ ಗಂಗವಾಡಿಗೆ ಸೇರಿದ್ದ ಚಿಕ್ಕದೊಂದು ರಾಜ್ಯದಿಂದ ಬಂದವರು. ಬಂಗರ ಪೂರ್ವಜರಾಗಿದ್ದ ಚಂದ್ರಶೇಖರನೆಂಬವನೊಬ್ಬನು ಗಂಗವಾಡಿಗೆ ಸೇರಿದ್ದ ಸಣ್ಣ ರಾಜ್ಯವನ್ನು ಆಳಿಕೊಂಡಿರುವಾಗ ಹೊಯ್ಸಳ ರಾಜನಾದ ವಿಷ್ಣುವರ್ಧನನು (ಕ್ರಿ.ಶ. ೧೧೦೮ – ೫೨) ಇವನೊಡನೆ ಯುದ್ಧ ಸಾರಿದನು. ಆ ಯುದ್ಧದಲ್ಲಿ ಚಂದ್ರಶೇಖರ ರಾಜ ಮಡಿದನು. ರಾಜ್ಯವು ಹೊಯ್ಸಳರ ವಶವಾಯಿತು. ಎಲ್ಲವನ್ನೂ ಕಳಕೊಂಡ ಚಂದ್ರಶೇಖರನ ಪರಿವಾರದವರು ಆ ಅರಸನ ಕುಮಾರ ನೊಂದಿಗೆ ಮಲೆನಾಡಿನಲ್ಲಿ ಅಡಗಿಕೊಂಡಿದ್ದರು. ಮುಂದೆ ವಾಸ್ತವ್ಯಕ್ಕಾಗಿ ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ಪಶ್ಚಿಮ ಘಟ್ಟಗಳನ್ನು ದಾಟಿ ಈ ಕಡೆಗೆ ಬಂದರು. ಸುತ್ತಲೂ ಎತ್ತರವಾದ ಘಟ್ಟಗಳಿಂದ ರಕ್ಷಿಸಲ್ಪಟ್ಟು ಮಧ್ಯದಲ್ಲಿ ವಿಶಾಲವಾಗಿ ಹರಡಿದ್ದ ಈಗಿನ ಬಂಗಾಡಿಯ ಬಯಲು ಪ್ರದೇಶಕ್ಕೆ ಬಂದು ನೆಲೆಸಿದರು. ತಮ್ಮ ಕುಲದೇವರಾದ ಸೋಮನಾಥನನ್ನೂ ಶಾಂತೀಶ್ವರನನ್ನೂ ಪೂಜಿಸುತ್ತಾ, ಮಂಜುಳನಾದದೊಂದಿಗೆ ಹರಿಯುತ್ತಿದ್ದ ನೇತ್ರಾವತಿ ನದಿಯ ಸನಿಹದಲ್ಲೇ ಸಂತೋಷದಿಂದ ಜೀವನವನ್ನು ನಡೆಸುತ್ತಿದ್ದರು.

ವಿಷ್ಣುವರ್ಧನನ ನಂತರ ಪಟ್ಟಕ್ಕೆ ಬಂದ ಅವನ ಮಗನಾದ ವೀರನರಸಿಂಹ (ಕ್ರಿ.ಶ. ೧೧೫೨ – ೭೩) ನು ತನ್ನ ರಾಜ್ಯದ ವಿವಿಧ ಭಾಗಗಳ ಜನ ಜೀವನವನ್ನು ವೀಕ್ಷಿಸುತ್ತಾ ಬಂಗಾಡಿಗೆ ಬಂದನು. ಆಗ ಚಂದ್ರಶೇಖರನ ರಾಜಪರಿವಾರದವರು ಹಸುಳೆಯಾಗಿದ್ದ ರಾಜಕುಮಾರನೊಂದಿಗೆ ಸಾರ್ವಭೌಮನ ಬಳಿಗೆ ಹೋದರು. ಸರ್ವ ರಾಜ ಲಕ್ಷಣಗಳಿಂದ ಸಂಪನ್ನನಾಗಿದ್ದ ಈ ಮಗುವನ್ನು ಆತನು ಆತನು ಆತ್ಮೀಯತೆಯಿಂದ ಬರಮಾಡಿಕೊಂಡು, ಆತನಿಗೆ ತನ್ನ ಹೆಸರನ್ನೇ ಇಟ್ಟು ವೀರನರಸಿಂಹ ಬಂಗರಾಜನೆಂದು ಕರೆದನು. ತನ್ನ ಸಾಮ್ರಾಜ್ಯದ ಈ ಭೂಭಾಗಕ್ಕೆ ಆತನನ್ನೇ ಒಡೆಯನನ್ನಾಗಿ ನೇಮಿಸಿದನು. ನೇತ್ರಾವತಿ ನದಿಯು ಸಮುದ್ರ ಸೇರುವ ವರೆಗಿನ ಪ್ರದೇಶದಲ್ಲಿದ್ದ ೧೫ ಮಾಗಣೆಗಳನ್ನು ಆತನ ರಾಜ್ಯವನ್ನಾಗಿ ನಿರ್ಣಯಿಸಿದನು. ಅಂದು ಅವನ ರಾಜ್ಯಕ್ಕೆ ಸೇರಿದ್ದ ೧೫ ಮಾಗಣೆಗಳು – ಮೇಲ್ಬಂಗಾಡಿ, ಕೆಳಬಂಗಾಡಿ, ಬೆಳತಂಗಡಿ, ಮಾಯಾಬಯಲು, ಉಪ್ಪಿನಂಗಡಿ, ಪುತ್ತೂರು, ಮೊಗರ್ನಾಡು, ಮಣಿನಾಲ್ಕೂರು, ಬಾಯರ‍್ಕಜೆಕಾರು, ಬಂಟವಾಳ, ಕೊಡಿಯಾಳ, ಸಜಿಪ, ಹರೇಕಳ, ವರ್ಕಾಡಿ ಮತ್ತು ಮಂಜೇಶ್ವರ. ಹೊಯ್ಸಳ ವೀರನರಸಿಂಹನು ಕೊಟ್ಟಿದ್ದ ವೀರನರಸಿಂಹ ಎಂಬ ಹೆಸರನ್ನು ಮುಂದಿನ ಎಲ್ಲಾ ಬಂಗ ಅರಸರೂ ತಮ್ಮ ಹೆಸರಿನೊಂದಿಗೆ ಸೇರಿಸಿಕೊಳ್ಳುತ್ತಿದ್ದರು. ಈ ರೀತಿಯಿಂದ ಅರಸು ಕುಮಾರನ್ನು ಬಂಗರಾಜ್ಯದ ಅಧಿಪತಿಯನ್ನಾಗಿ ನೇಮಿಸುವಾಗ ಒಬ್ಬ ಅರಸನಿಗಿರಬೇಕಾದ ಎಲ್ಲಾ ವಸ್ತುಗಳನ್ನು ಹೊಯ್ಸಳ ಸಾರ್ವಭೌಮನು ಒದಗಿಸಿಕೊಟ್ಟನು. ಬಿಳಿಯ ಪಟ್ಟದ ಕುದುರೆ, ರಣಕಹಳೆ, ಚಾಮರಗಳು, ಮುದ್ರೆಯುಂಗುರ, ಪಟ್ಟದ ಕತ್ತಿ, ಪಟ್ಟದ ಆನೆ – ಮುಂತಾದ ಸಕಲ ಸಾಹಿತ್ಯಗಳೊಂದಿಗೆ ಈ ಅರಸು ಕುಮಾರನು ಕೆಳ ಬಂಗಾಡಿಗೆ ಬಂದು ಶಾಲಿವಾಹನ ಶಕ ೧೦೭೯(ಕ್ರಿ.ಶ. ೧೧೫೭) ರಲ್ಲಿ ವಿಧ್ಯುಕ್ತವಾಗಿ ಪಟ್ಟಾಭಿಷಿಕ್ತನಾಗಿ ರಾಜ್ಯವಾಳತೊಡಗಿದನು.

ಬಂಗಾಡಿ ಅರಮನೆ

ಬಂಗಾಡಿ ಅರಮನೆ

 

ಬಂಗರ ಸಂಕ್ಷಿಪ್ತ ಇತಿಹಾಸ:

ಶಾಸನೇತರ ಆಧಾರಗಳ ಪ್ರಕಾರ ಬಂಗಾಡಿಯಿಂದ ಆಳಿದ ಅರಸರ ಪೈಕಿ ವೀರನರಸಿಂಹ ಬಂಗನೇ ಮೊತ್ತ ಮೊದಲಿನ ಅರಸ. ಹೊಯ್ಸಳ ಸಾರ್ವಭೌಮನಾದ ವಿಜಯನರಸಿಂಹನಿಂದ ರಾಜನೆಂದು ಗಣಿಸಲ್ಪಟ್ಟ ಬಳಿಕ ವೀರನರಸಿಂಹ ಬಂಗನು ಕೆಳ ಬಂಗಾಡಿಯಲ್ಲಿ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿ, ಆ ಕಾಲದಲ್ಲಿ ಹಲವಾರು ಲೋಕೋಪಯೋಗಿ ಕೆಲಸಗಳನ್ನು ಕೈಗೊಂಡು. ತನ್ನ ರಾಜ್ಯವನ್ನು ವಿಭಾಗಿಸಿ, ನಾಲ್ಕು ಜನ ಗುತ್ತಿನವರಿಗೆ ಅದರ ಆಡಳಿತೆಯನ್ನು ವಹಿಸಿಕೊಟ್ಟು ತನ್ನ ರಾಜ್ಯದಲ್ಲಿ ಆಡಳಿತವು ಸುಸೂತ್ರವಾಗಿ ನಡೆಯುವಂತೆ ಮಾಡಿದ.

ತಾನು ಕಟ್ಟಿಸಿದ ತನ್ನ ನೂತನ ಅರಮನೆಯ ಬಳಿಯಲ್ಲೇ, ತನ್ನ ಕುಲದೇವತೆ ಯಾದ ಶ್ರೀ ಸೋಮನಾಥನಿಗೂ ಒಂದು ದೇವಾಲಯವನ್ನು ಕಟ್ಟಿಸಿದ. ಅದರಂತೆ, ಮುಂದೆ ಬಂಗಾಡಿಯಲ್ಲಿ, ಮಹಾ ಗಣಪತಿ ದೇವಾಲಯವನ್ನೂ ವೀರಭದ್ರ ದೇವಾಲಯವನ್ನು ಕಟ್ಟಿಸಿದ. ಬಂಗಾಡಿಯಲ್ಲಿ ಅತ್ಯಂತ ಪ್ರಾಚೀನವೂ ವಿಶೇಷ ದೈವಿಕ ಶಕ್ತಿಯುಳ್ಳದ್ದೂ ಆಗಿರುವ ಶ್ರವಣಕುಂಡ ಮತ್ತು ಕ್ಷೇತ್ರಪಾಲನ ಸ್ಥಾನಗಳನ್ನೂ ಈತನೇ ನಿರ್ಮಿಸಿದನೆಂದು ಹೇಳಳಾಗಿದೆ.

ಬಂಗಾಡಿ ಅರಮನೆ ಬಸದಿ ದೇವರು

ಬಂಗಾಡಿ ಅರಮನೆ ಬಸದಿ ದೇವರು

ಆಡಳಿತದಲ್ಲಿ ಸಮರ್ಥತೆಯು ಹೆಚ್ಚುವಂತೆ ಮಾಡುವುದಕ್ಕಾಗಿ ಸರ್ವಧರ್ಮಗಳನ್ನು ಸಮಾನವಾಗಿ ಪ್ರೋತ್ಸಾಹಿಸುವ ಉದಾತ್ತ ನೀತಿಯನ್ನು ಪ್ರಾರಂಭಿಸಿ ತನ್ನ ವಂಶದ ಮುಂದಿನವರಿಗೆ ಒಂದು ಆದರ್ಶವನ್ನು ಹಾಕಿಕೊಟ್ಟನು. ಈ ರೀತಿ ಅರಮನೆ. ಅರಮನೆಯವರ ಪರಿವಾರದವರ ಮನೆಗಳು ಮತ್ತು ದೇವಾಲಯಗಳು ನಿರ್ಮಾಣಗೊಂಡದ್ದರಿಂದ ಬಂಗಾಡಿಯು ಆಗಲೇ ಒಂದು ಚಿಕ್ಕ ಪಟ್ಟಣವಾಗಿ ಬೆಳೆಯಿತು. ಈ ಪಟ್ಟಣಕ್ಕೆ ರಕ್ಷಣೆಯ ದೃಷ್ಟಿಯಿಂದ ಅಗತ್ಯವೆನಿಸಿದ್ದ ಒಂದು ಕೋಟೆಯನ್ನು ಈ ಪಟ್ಟಣದ ಸುತ್ತಲೂ ಕಟ್ಟಿಸಿದನು. ಅಂದಿನ ಬಂಗಾಡಿಯ ಪಟ್ಟಣವು, ಈಗಿನ ಅರಮನೆಯ ವಾಯುವ್ಯ ದಿಕ್ಕಿನಲ್ಲಿ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದ್ದು ಇಂದಿಗೂ ಆ ಪ್ರದೇಶವನ್ನು ಕೋಟೆ ಎಂದೇ ಕರೆಯುತ್ತಾರೆ.

ಒಂದನೆಯ ವೀರ ನರಸಿಂಹ ಬಂಗನ ಮರಣಾನಂತರ ಅವನ ಮಗನಾದ ಚಂದ್ರಶೇಖರನು ಕ್ರಿ.ಶ. ೧೨೦೮ರಲ್ಲಿ ಪಟ್ಟವೇರಿದ. ಈತನ ಕಾಲದಲ್ಲಿ ಬಂಗರ ರಾಜ್ಯವು ಇನ್ನಷ್ಟು ವಿಸ್ತಾರವಾಗಿ ಮಂಗಳೂರಿನ ವರೆಗೂ ಹರಡಿತು. ಆದುದರಿಂದ ಮಂಗಳೂರಿನಲ್ಲಿರುವ ಶರವು ಶ್ರೀ ಮಹಾಗಣಪತಿ ದೇವಾಲಯದ ಬಳಿಯಲ್ಲಿ ತನ್ನ ಅರಮನೆಯನ್ನು ಕಟ್ಟಿಸಿದ. ಅದೇ ಸಮಯಕ್ಕೆ ಚೀನಾ ದೇಶದಿಂದ ಹಡಗುಗಳು ಮಂಗಳೂರಿನ ಬಂದರಕ್ಕೆ ವ್ಯಾಪಾರಕ್ಕಾಗಿ ಬರುತ್ತಿದ್ದುವು. ಈ ಅಂತರ್‌ರಾಷ್ಟ್ರೀಯ ವ್ಯಾಪಾರದಿಂದಾಗಿ ಹೇರಳ ಆದಾಯವನ್ನೂ ಗಳಿಸಿದ ಬಂಗರನ್ನು “ಹಣವಿನ ಬಂಗ” ರೆಂದು ಕರೆಯುವುದು ರೂಢಿಯಾಯಿತು.

ಮುಂದಿನ ಪದುಮಾಲಾದೇವಿಯ ಬಳಿಕ ಆಕೆಯ ಮಗನಾದ ಒಂದನೇ ಹಾವಳಿ ಬಂಗರಾಯನು ಕ್ರಿ.ಶ. ೧೨೮೭ರಲ್ಲಿ ಪಟ್ಟವೇರಿದ. ಈತನು ತನ್ನ ಆಳ್ವಿಕೆಯ ಪ್ರಾರಮಭದಲ್ಲಿ ಬೆಳ್ತಂಗಡಿಯ ಕುತ್ಯಾರಿನಲ್ಲಿರುವ ಶ್ರೀ ಸೋಮನಾಥ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ, ಅದಕ್ಕೆ ಉಂಬಳಿಯನ್ನು ಕೊಟ್ಟ. ಅದರಂತೆ ಅಲ್ಲಿ ಒಂದು ಕೋಟೆಯನ್ನೂ ಕಟ್ಟಿಸಿದ. ಅಲ್ಲಿದ್ದ ಜೈನ ಶ್ರಾವಕರಿಗಾಗಿ ಹೊಸದಾಗಿ ಬೆಳ್ತಂಗಡಿ ಬಸದಿಯನ್ನು ಕಟ್ಟಿಸಿ ಅದಕ್ಕೆ ಉಂಬಳಿಯನ್ನೂ ಹಾವಳಿ ಬಂಗರಾಯನು ಕೊಟ್ಟ. ಈ ಬಸದಿ ಇಂದಿಗೂ ಇದೆ. ಕೋಟೆ ಎಂದು ಕರೆಯಲ್ಪಡುವ ಸ್ಥಳ ಈಗ ಇರುವುದಾದರೂ, ಇಲ್ಲಿ ಈಗ ಹಲವಾರು ಹೊಸ ಕಟ್ಟಡಗಳು ತಲೆ ಎತ್ತಿರುವುದರಿಂದ ಅಂದಿನ ಮಣ್ಣಿನ ಕೋಟೆಯನ್ನು ಇಂದು ಕಾಣಲು ಸಾಧ್ಯವಿಲ್ಲ.

ಅವನ ನಂತರ ಆಳ್ವಿಕೆಗೆ ಬಂದ ಆತನ ತಂಗಿ ಶಂಕರದೇವಿಯ ಕಾಲದಲ್ಲಿ ಆಲೂಪ ಅರಸನು ತನ್ನ ಅಧೀನದಲ್ಲಿದ್ದ ಪೇಜಾವರ, ಮುಂಡುಕೂರು, ವಾಮಂಜೂರು, ನೀರುಮಾರ್ಗ ಮುಂತಾದ ೭ ಸೀಮೆಗಳನ್ನು ಶಂಕರದೇವಿಗೆ ಕೊಟ್ಟು ಆಕೆಯನ್ನು ‘ಒಡೆಯ’ ಎಂಬ ಬಿರುದಿನಿಂದ ಗೌರವಿಸಿಕೊಂಡನು. ಇದೇ ಸಮಯಕ್ಕೆ ಹೊಯ್ಸಳರು ಅಧಿಕಾರದಲ್ಲಿ ಬಹು ಕ್ಷೀಣಗೊಂಡದ್ದರಿಂದ ಈಕೆಯ ಸ್ವತಂತ್ರಳಾಗಿ ಆಳತೊಡಗಿದಳು.

ಈಕೆಯ ಅನಂತರ ಕ್ರಿ.ಶ. ೧೪೦೦ ರಲ್ಲಿ ಪಟ್ಟಕ್ಕೆ ಬಂದ ಒಂದನೇ ಲಕ್ಷ್ಮಪ್ಪರಸ ಬಂಗರಾಯನ ಕಾಲದಲ್ಲಿ ಹಲವಾರು ಪ್ರಮುಖ ಘಟನೆಗಳು ನಡೆದುವು. ಈತನ ರಾಜ್ಯದ ಮೇಲೆ, ಮುಖ್ಯವಾಗಿ ಮಂಗಳೂರಿನ ಮೇಲೆ, ನೀಲೇಶ್ವರದ ರಾಜನು ಆಗಾಗ ಧಾಳಿಯನ್ನು ನಡೆಸುತ್ತಿದ್ದನು. ಇದರಿಂದಾಗ ಲಕ್ಷ್ಮಪ್ಪರಸ ಬಂಗರಾಯನು ಮೂಡುಬಿದ್ರೆಯ ಚೌಟ ಅರಸ, ಅಲ್ಲಪ್ಪಶೇಖ ಚೌಟನೊಡನೆ ಸ್ನೇಹವನ್ನು ಬೆಳೆಸಿ ತಮ್ಮಿಬ್ಬರ ಸೈನ್ಯದ ಸಹಾಯದಿಂದ ಆ ನೀಲೇಶ್ವರದ ಅರಸನನ್ನು ಸೋಲಿಸಿದನು. ಈ ಸಹಾಯಕ್ಕಾಗಿ ಅಲ್ಲಪ್ಪಶೇಖ ಚೌಟರಾಯನಿಗೆ ಈತನು ಮಣೇಲ, ಪೇಜಾವರ, ಮುಂಡುಕೂರು ಎಂಬ ಮೂರು ಸೀಮೆಗಳನ್ನು ಬಿಟ್ಟುಕೊಟ್ಟನು.

ಮಂಗಳೂರಿನಲ್ಲಿ ಇದ್ದು ಬಂಗಾಡಿಗೂ ಮಂಗಳೂರಿಗೂ ಮಧ್ಯೆ ಇನ್ನೊಂದು ಅರಮನೆಯನ್ನು ಕಟ್ಟಬೇಕೆಂದು ಭಾವಿಸಿ, ನದಿಯ ಸಮೀಪವಿದ್ದು, ವ್ಯಾಪಾರಕ್ಕೆ ಅನುಕೂಲವಾಗಿದ್ದ ಪಾಣೆಮಂಗಳೂರಿನ ಹತ್ತಿರ ಕ್ರಿ.ಶ. ೧೪೧೭ನೇ ಇಸವಿಯಲ್ಲಿ ನಂದಾವರದ ಅಮರನೆಯನ್ನು ಕಟ್ಟಿಸಿದನು. ಮುಂದೆ ಕೆಲವು ಶತಮಾನಗಳ ವರೆಗೆ ನಂದಾವರವು ಬಂಗರ ಉಪರಾಜಧಾನಿಯಾಗಿ ಮೆರೆಯಿತು. ನಂದಾವರದ ಈ ಅರಮನೆಯ ಸುತ್ತಲೂ ಮಣ್ಣಿನ ಒಂದು ಕೋಟೆಯನ್ನು ಕಟ್ಟಿಸಿ, ಕೋಟೆಯ ಒಳಗಡೆಯೇ ಶಿಲಾಮಯವಾದ ವೀರಭದ್ರ ದೇವಾಲಯವನ್ನು ಕಟ್ಟಿಸಿದನು. ಇದನ್ನು ಇತ್ತೀಚೆಗಿನ ವರೆಗೂ ಕಾಣಬಹುದಾಗಿತ್ತು. ಅದರಂತೆ ಆಧೀಶ್ವರ ಸ್ವಾಮಿಗೆ ಒಂದು ಬಸದಿಯನ್ನೂ, ಮುಖ್ಯಪ್ರಾಣ ದೇವರಿಗೆ ಒಂದು ಗುಡಿಯನ್ನೂ ನಿರ್ಮಿಸಿದ್ದನು. ಈತನ ಕಾಲಕ್ಕಾಗುವಾಗ ಬಂಗ ಅರಸರಿಗೆ, ಬಂಗಾಡಿ, ಬೆಳ್ತಂಗಡಿ, ಮಂಗಳೂರು ಮತ್ತು ನಂದಾವರ ಎಂಬ ನಾಲ್ಕು ಕಡೆಗಳಲ್ಲಿ ಅರಮನೆಗಳಿದ್ದವು.

ಹೇಗಿದ್ದರೂ ನಮಗೆ ಬಂಗ ಅರಸರ ಶಾಸನೋಕ್ತ ಉಲ್ಲೇಖಗಳು ಸಿಗುವುದು ಕ್ರಿ.ಶ. ೧೪೧೦ರಷ್ಟು ತಡವಾಗಿ. ಈಗಿನ ಮಂಗಳೂರು ತಾಲೂಕು ಮೂಲ್ಕಿಯ ಬಳಿಯ ಬಪ್ಪನಾಡು ದುರ್ಗಾದೇವಸ್ಥಾನದ ಶಾಸನ[6] ದಲ್ಲಿ ಪಾಂಡ್ಯಪ್ಪ ಅರಸ ಬಂಗನ ಉಲ್ಲೇಕ ಬರುತ್ತದೆ. ಆದರೆ ಈ ಶಾಸನವು ಆ ಅರಸನ ಬಗ್ಗೆ ಹೆಚ್ಚಿನ ಮಾಹಿತಿಯೆನ್ನೇನೂ ಕೊಡುವುದಿಲ್ಲ. ಆದರೆ ಕ್ರಿ.ಶ. ೧೪೧೭ರ ಪಾವಂಜೆ ಶಾಸನ[7]ವಿಠಲದೇವಿಯೆಂಬವಳು ಬಂಗವಂಶದ ರಾಣಿಯಾಗಿದ್ದಳು ಎಂದು ತಿಳಿಸುತ್ತದೆ. ಆದುದರಿಂದ ಬಂಗ ವಂಶದಲ್ಲಿ ಸ್ತ್ರೀಯರೂ ರಾಜ್ಯಭಾರ ಮಾಡಿದ್ದಾರೆ ಎಂಬುದಕ್ಕೆ ಇದೊಂದು ನಿಖರ ದಾಖಲೆಯಾಗುತ್ತದೆ. ಈಕೆ ಹಿಂದೆ ಆಳಿದ್ದ ಪಾಂಡ್ಯಪ್ಪರಸ ಬಂಗನ ಸಹೋದರಿ. ಇದರಿಂದಾಗಿ ಜೈನರಲ್ಲಿ ಆಗ ಆಚರಣೆಯಲ್ಲಿದ್ದ ಅಳಿಯ ಸಂತಾನ ಪದ್ಧತಿಯನ್ನು ಬಂಗ ಅರಸು ಮನೆತನವೂ ಆಗಲೇ ಸ್ವೀಕರಿಸಿತ್ತು ಎಂದು ತಿಳಿಯುತ್ತದೆ. ಈ ಶಾಸನದ ಅನುಸಾರ ಆಕೆ ವೈದಿಕನೊಬ್ಬನಿಗೆ ಭೂದಾನವನ್ನು ಕೊಟ್ಟಿದ್ದಳು.

ವಿಠಲ ದೇವಿಯ ಬಳಿಕ ಆಳಿದ ಪ್ರಾಯಶಃ ಆಕೆಯ ಮಗ ಎರಡನೇ ಪಾಂಡ್ಯಪ್ಪರಸ ಬಂಗನೆಂದು ಕರೆಯಬಹುದೆಂದನಿಸುತ್ತದೆ. ಈತನೊಬ್ಬ ಪ್ರಸಿದ್ದ ಅರಸ. ಈತ ಪುತ್ತೂರಿನಲ್ಲೊಂದು ಅರಮನೆಯನ್ನು ಕಟ್ಟಿಸಿಕೊಂಡು ಆಳುತ್ತಿದ್ದನೆಂದು ಊಹಿಸಬಹುದಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಿರ್ಮಾಣ ಕಥನದಲ್ಲಿ ಬರುವ “ಸ್ಥಳೀಯ ಬಂಗರಾಜ” ಈತನೇ ಆಗಿರಬೇಕು. ಈತನೇ ಅಲ್ಲಿಯ ಶಾಂತಿನಾಥ ಬಸದಿಯನ್ನೂ ನಿರ್ಮಿಸಿರಬೇಕು. ಈತ ಈ ದೇವಾಲಯದ ಕ್ರಿ.ಶ. ೧೪೩೧ರ ಶಾಸನ[8] ದಲ್ಲೂ ಪಣಂಬೂರಿನ ಒಂದು ಶಾಸನ[9] ದಲ್ಲೂ ಉಲ್ಲೇಖಿತನಾಗಿದ್ದಾನೆ. ಈ ಪೈಕಿ ಎರಡನೇ ಶಾಸನದಲ್ಲಿ ಈತನನ್ನು ಶ್ರೀ ವಿಠಲದೇವಿಯರಾದ “ಬಂಗರ ಕುಮಾರ” ಎಂದು ಉಲ್ಲೇಖಿಸಲಾಗಿದೆ. ಈತನ ಕಾಲದಲ್ಲೇ ಪುತ್ತೂರಿನ ಈ “ಮಹಾದೇವ” ದೇವಲಾಯಕ್ಕೆ ಇಮ್ಮಡಿ ದೇವರಾಯ ಒಡೆಯನ ಗುರುಗಳಾಗಿದ್ದ ಕ್ರಿಯಾಶಕ್ತಿ ದೇವ ಒಡೆಯರು ಆಗಮಿಸಿ, ಆ ದೇವಾಲಯದ ಸುವ್ಯವಸ್ಥಿತ ಆಡಳಿತಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದರು. ಜೈನರಾಗಿದ್ದ ಬಂಗರು ಶಿವಾಲಯಕ್ಕೆ ಕೊಟ್ಟ ಉದಾರಾಶ್ರಯವನ್ನು ಇದರಿಂದ ತಿಳಿದುಕೊಳ್ಳಬಹುದು.

ಬಂಗ ಅರಸು ಮನೆತನದಲ್ಲಿ ತೀರಾ ವಿಶೇಷವಾಗಿ ಕಂಡುಬರುವ ಹೆಸರು ಬಸವಣ್ಣರಸ ಬಂಗ. ಈತ ಉಡುಪಿ ತಾಲೂಕಿನ ಪೆರಡೂರು ಶಾಸನ[10] ದಲ್ಲಿ ಉಲ್ಲೇಖಿಸಲ್ಪಟ್ಟಿದ್ದಾನೆ. ಈತ ೧೪೫೭ರಲ್ಲಿ ಬಂಗಾಡಿಯಲ್ಲಿ ಆಳುತ್ತಿದ್ದನೆಂಬುದನ್ನು ಬಿಟ್ಟರೆ ಈತನ ಬಗ್ಗೆ ಬೇರೆ ಏನೂ ತಿಳಿದು ಬರುವುದಿಲ್ಲ.

ಈತನ ಅನಂತರ ಪಟ್ಟವೇರಿದ್ದ ಕಾಮರಾಯ ಬಂಗ ಎಂಬವನು ೧೪೬೧, [11] ೧೪೬೯, [12] ಮತ್ತು ೧೪೭೩, [13]ರ ಈ ಮೂರು ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದಾನೆ. ಈತನ ಬಗ್ಗೆ ಈ ಶಾಸನಗಳು ಕೆಲವು ಕುತೂಹಲಕಾರಿ ವಿವರಗಳನ್ನೀಯುತ್ತವೆ. ಇವುಗಳ ಪೈಕಿ ಮೊದಲನೆಯದಾದ ಕ್ರಿ.ಶ. ೧೪೬೧ರ ಕೆರೆವಾಸೆಯ ಶಾಸನವು ಕಳಸ ಕಾರ್ಕಳ ರಾಜ್ಯದ ೨ನೇ ಪಾಂಡ್ಯಪ್ಪ ಭೈರರಸವೊಡೆಯನು ಈ ಕಾಮಿರಾಯ ಬಂಗನೊಡನೆ ಮಾಡಿಕೊಂಡ ಒಪ್ಪಂದವನ್ನು ತಿಳಿಸುತ್ತದೆ. ಅದರ ಅನುಸಾರ ಬೇರೆ ಯಾವುದೇ ಶತ್ರುಗಳು ಬಂಗರಾಜ್ಯದ ಮೇಲೆ ಧಾಳಿ ಇಟ್ಟರೆ, ಕಾರ್ಕಳದ ಅರಸನು ಈತನ ಸಹಾಯಕ್ಕೆ ಬರಬೇಕಿತ್ತು. ಹಾಗೂ ಸೈನ್ಯವನ್ನು ಕಳಹಿಸಬೇಕಿತ್ತು. ಕಾರ್ಕಳ ರಾಜ್ಯದ ಮೇಲೆ ಧಾಲಿಯಾದರೆ ತಾನು ಸಹಾಯಕ್ಕೆ ಬರುವುದಾಗಿ ಕಾಮಿರಾಯನೂ ಒಪ್ಪಿದ್ದ. ಕ್ರಿ.ಶ. ೧೪೬೮ – ೬೯ರಲ್ಲಿ ಮಂಗಳೂರು ರಾಜ್ಯದ ರಾಜ್ಯಪಾಲ ವಿಠಲರಸನಿಗೂ, ಈ ಅರಸನಿಗೂ ಪರಸ್ಪರ ವೈಷಮ್ಯ ಉಂಟಾಯಿತು. ಪರಿಣಾಮವಾಗಿ ರಾಜ್ಯಪಾಲನು ಬಂಗನ ರಾಜ್ಯಕ್ಕೆ ಸೇರಿದ್ದ ಕೊಡಿಯಾಲ ಮತ್ತು ನೀರುಮಾರ್ಗ ಗ್ರಾಮಗಳಲ್ಲಿ ಕೆಲವರ ಮನೆಗಳನ್ನು ಸುಟ್ಟು ಹಾಕಿ ದಾಂಧಲೆ ಎಬ್ಬಿಸಿದ. ಈ ವಿಚಾರವನ್ನು ಬಂಗರಸೂ ಆತನ ಅಧಿಕಾರಿ ದೇವಣ್ಣ ಕೊಠಾರಿ ಎಂಬವನೂ ವಿಜಯನಗರದ ಚಕ್ರವರ್ತಿಗೆ ದೂರು ಸಲ್ಲಿಸಿದರು. ಚಕ್ರವರ್ತಿಯ ಆಜ್ಞೆಯ ಅನುಸಾರ ಈಗಿನ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮವನ್ನು ಬಂಗ ಅರಸನಿಗೆ ಬಿಟ್ಟುಕೊಡಲಾಯಿತು. ಆದುದರಿಂದ ಈ ಗ್ರಾಮದವರು ಎಲ್ಲಾ ತೆರಿಗೆಗಳನ್ನು ತನಗೆ ಕೊಡಬೇಕೆಂದು ಕಾಮಿರಾಯ ಬಂಗನು ಆಜ್ಞೆ ಹೊರಡಿಸಿ ಈ ಉಜಿರೆ ಶಾಸನ (ಸ್ಥಳೀಯ ಶ್ರೀ ಜನಾರ್ಧನ ದೇವಾಲಯದಲ್ಲಿರುವ ಕ್ರಿ.ಶ. ೧೪೬೯ರ ಶಾಸನ) ವನ್ನು ಬರೆಸಿದ.

 

[1] ಎಪಿಗ್ರಾಫಿಯ ಕರ್ನಾಟಿಕ ಸಂ. ೧೦, ಕೋಲಾರ, ನಂಬ್ರ ೧೯೮.

[2] ಎಪಿಗ್ರಾಫಿಯ ಕರ್ನಾಟಿಕ ಸಂ. ೧೦, ಕೋಲಾರ, ನಂಬ್ರ ೨೦೭.

[3] ಇಂಡಿಯನ್ ಎಪಿಗ್ರಾಫಿಯ ವಾರ್ಷಿಕ ವರದಿ, ೧೯೧೬, ಪುಟ ೧೭.

[4] ಶಾಸನ ಇಲಾಖೆಯ ವಾರ್ಷಿಕ ವರದಿ, ೧೯೧೬, ಪುಟ ೪೭.

[5] “ದಕ್ಷಿಣಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ” ಎಮ್. ಗಣಪತಿ ರಾವ್ ಐಗಳ್, ೧೯೨೩, ಪುಟ ೨೬೪.

[6] ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಶನ್ಸ್ ಸಂಪುಟ ೭, ಸಂಖ್ಯೆ ೨೫೯.

[7] “ಅದೇ” ಸಂಖ್ಯೆ ೨೬೦.

[8] ಶಾಸನ ಇಲಾಖೆಯ ವಾರ್ಷಿಕ ವರದಿ ೧೯೩೦ – ೩೧, ಸಂಖ್ಯೆ ೩೪೪.

[9] ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಶನ್ಸ್‌ಸಂಪುಟ ೭, ಸಂಖ್ಯೆ ೨೬೫.

[10] ಶಾಸನ ಇಲಾಖೆಯ ವಾರ್ಷಿಕ ವರದಿ ೧೯೨೮ – ೨೯, ಸಂಖ್ಯೆ ೫೦೨.

[11] ಶಾಸನ ಇಲಾಖೆಯ ವಾರ್ಷಿಕ ವರದಿ ೧೯೬೧ – ೬೨, ಸಂಖ್ಯೆ ಬಿ – ೬೨೭.

[12] ಶಾಸನ ಇಲಾಖೆಯ ವಾರ್ಷಿಕ ವರದಿ ೧೯೨೮ – ೨೯, ಸಂಖ್ಯೆ ೪೮೨.

[13] ಶಾಸನ ಇಲಾಖೆಯ ವಾರ್ಷಿಕ ವರದಿ ೧೯೨೮ – ೨೯, ಸಂಖ್ಯೆ ೪೭೮.