ಪ್ರಾಚೀನ ಕಾಲ :

ಈ ಹಿಂದೆ ಹೇಳಿದಂತೆ ಬನವಾಸಿಯ ಕದಂಬ ಮಯೂರ ವರ್ಮನ ಮೊಮ್ಮಗ, ಕವಿಸಿಂಹನೆನ್ನಲಾದವನು ಕುಂಬಳೆಯ ಮೂಲ ದೊರೆ. ಇವನ ವಿಚಾರವನ್ನು ಈ ಹಿಂದೆ ನಾವು ನೋಡಿದ್ದೇವೆ. ಮುಂದೆ ಸಿಗುವ ಹೆಸರು ಜಯಸಿಂಹ. ಇವನ ಕಾಲವನ್ನು ೧೦ನೆಯ ಶತಮಾನವೆಂದು ಇವನ ಕಾಲದ ತಳಂಗೆರೆಯ ಶಾಸನದ ಮೂಲಕ ನಿರ್ಧರಿಸಬಹುದು. ಈ ಹತ್ತನೆಯ ಶತಮಾನದ, ಕಾಸರಗೋಡು ಪೇಟೆಯ ಚಂದ್ರಗಿರಿ ನದಿಯ ದಡದಲ್ಲಿರುವ ತಳಂಗೆರೆ ಎಂಬಲ್ಲಿರುವ ಈ ಶಾಸನವು ಜಯಸಿಂಹನ ಪೂರ್ವಜರಾದ ಗೌತಮ, ಶರದ್ವತ್‌, ಕೃಪ, ಶಂತನು ಮೊದಲಾದವರನ್ನು ಹೇಳಿ ಜಯಸಿಂಹನನ್ನು “ಕ್ಷತ್ರ್‌ ಐಕ ಚೂಡಾಮಣಿಃ” ಎಂದು ಹೊಗಳುತ್ತದೆ. ಮೋಚಬ್ಬರಸಿಗೆ ಮೊಗ್ರಾಲು ಪುತ್ತೂರಿನ ಕಲ್ಕಾಡ ಬೆಟ್ಟೆದಂತಿರುವ ಜಾಗವನ್ನು ಕನ್ಯಾದಾನವಾಗಿ ನೀಡಿದ್ದು ಅದರ ಉತ್ತರಾಧಿಕಾರ ಹೆಂಗಡರಿಗೇ ಸಲ್ಲುತ್ತದೆ ಎಂದು ವಿಧಿಸುತ್ತದೆ, ಸ್ತ್ರೀ ಪ್ರಧಾನ ಕುಟುಂಬ ವ್ಯವಸ್ಥೆಯ ಅಳಿಯ ಸಂತಾನ ಕಟ್ಟಿನ ಮೊದಲ ದಾಖಲೆ ಇದೇ ಎನ್ನಬಹುದು. ವಿದ್ಯೆ ಸಂಪತ್ತು ಸಾಮರ್ಥ್ಯಗಳಿಂದ ಕೂಡಿ ಕ್ಷತ್ರಿಯ ಚೂಡಾಮಣಿ ಜಯಸಿಂಹ ಎಂದು ಶಾಸನ ಹೊಗಳುವಷ್ಟೇ ನಮಗೆ ತಿಳಿಯುವ ವಿಷಯ. ಇದಕ್ಕಿಂತ ಹೆಚ್ಚು ವಿವರವೇನೂ ತಿಳಿಯುವುದಿಲ್ಲ. ಇಲ್ಲಿ ಬೇರೆ ರಾಜರಿಲ್ಲದಿರುವುದರಿಂದ ಇವನು ಕುಂಬಳೆಯ ಅರಸನೇ ಎನ್ನಬೇಕು.

ಇವನ ಅನಂತರ ಕಂಡು ಬರುವ ಹೆಸರು ಹದಿಮೂರನೆಯ ಶತಮಾನದ ಮಧ್ವಾಚಾರ್ಯರ ಸಮಕಾಲೀನನಾದ ಕವಿಸಿಂಹ (ಕಬೆಸಿಂಹ – ಸ್ತಂಭ ವಿಶಿಷ್ಟ ಸಿಂಹ – ಜಯಸಿಂಹ)ನದು. ಇವನೂ ಉತ್ತಮ ವಿದ್ವಾಂಸನೆನ್ನಬಹುದು. ಕುಂಬಳೆ ಹತ್ತಿರದ ಕಾವು ಮಠದ, ಪೆಜತ್ತಾಯ ಕುಟುಂಬದ ತ್ರಿವಿಕ್ರಮ ಪಂಡಿತನಿಗೂ ಮಧ್ವಾಚಾರ್ಯರಿಗೂ ತತ್ತ್ವಜ್ಞಾನದಲ್ಲಿ ಬಹುದಿನಗಳ ವಾದ ಇವನ ಸಮ್ಮುಖದಲ್ಲಿ ಏರ್ಪಟ್ಟಿತು. ತೀರ್ಮಾನದ ಹಿರಿಯ ಸ್ಥಾನದ ವ್ಯಕ್ತಿಯಾಗಬೇಕಾದರೆ ಇವನು ವಿದ್ವಾಂಸನಾಗಿರಲೇಬೇಕು. ಈ ಕುಟುಂಬವಿಡೀ ಮಧ್ವರ ಶಿಷ್ಯತ್ವವನ್ನು ಸ್ವೀಕರಿಸಿತು. ತ್ರಿವಿಕ್ರಮನ ತಮ್ಮ ಶಂಕರ ಪಂಟಿತನಲ್ಲಿ ಅಪೂರ್ವ ಗ್ರಂಥ ಭಂಡಾರವಿತ್ತು. ವಾದದಲ್ಲಿ ಸೋತ ಚೋಳಜ ಪದ್ಮ ತೀರ್ಥನು ಆ ಗ್ರಂಥ ಭಂಡಾರದ ಗ್ರಂಥಗಳನ್ನು ಅಪಹರಿಸಿದಾಗ ದೊರೆ ಕವಿಸಿಂಹನೇ ಅದನ್ನು ಮತ್ತೆ ತರಿಸಿಕೊಟ್ಟನಂತೆ. ಈ ಕಾವು, ಪಕ್ಕದ ವಿಷ್ಣುಮಂಗಲ ಮಧ್ವಾಚಾರ್ಯರ ರ್ಯಕಾರ್ಯಕ್ಷೇತ್ರಗಳಾದುದರಿಂದ ಉಡುಪಿ ಅಷ್ಪಮಠದ ಯತಿಗಳು ಪರ್‍ಯಾಯಪೀಠವೇರುವ ಮೊದಲು ವಿಷ್ಣುಮಂಗಲಕ್ಕೆ ಭೇಟಿ ನೀಡುತ್ತಾರೆ. ತ್ರಿವಿಕ್ರಮ ಪಂಡಿತ, ಅವನ ಮಗ ನಾರಾಯಣ ಪಂಡಿತ ಮೊದಲಾದವರು ಹಲವಾರು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾರೆ. ನಾರಾಯಣ ಪಂಡಿತನು ಮಧ್ವಾಚಾರ್ಯರ ಚರಿತ್ರೆಯನ್ನು ಮಧ್ವವಿಜಯ ಕಾವ್ಯವಾಗಿ ಬರೆದಿದ್ದಾನೆ. ಇದೇ ಈ ಜಯಸಿಂಹನ ಅಸ್ತಿತ್ವವನ್ನು ತಿಳಿಸುವ ಗ್ರಂಥ. ಈ ಕುಟುಂಬದ ಸಾಹಿತ್ಯ ಸೇವೆಯ ಕುರಿತು ‘ಗಡಿನಾಡು’ ಪುಸ್ತಕದಲ್ಲಿ ಸ್ವಲ್ಪ ವಿವರವಾಗಿ ಕೊಡಲಾಗಿದೆ. ಈ ಮೂವರು ಅರಸರ ಮಧ್ಯದಲ್ಲಿ ಈ ಪ್ರಾಚೀನ ಕಾಲದ ಅವಧಿಯಲ್ಲಿ, ಬಹಳ ಮಂದಿ ಅರಸರು ಆಗಿ ಹೋಗಿರಬೇಕು. ಶ್ರೀ ಉದಯವರ್ಮರಾಜರು ಹಂಗಳದ ಕದಂಬ ದೊರೆ ನಾಲ್ಕನೆಯ ಮಯೂರ ವರ್ಮನ ಮೊಮ್ಮಗ ಜಯಸಿಂಹ (೧೧೮೯ – ೧೨೦೩ ಕ್ರಿ.ಶ.) ನೇ ಕುಂಬಳೆ ಅರಸು ಮನೆತನದ ಸ್ಥಾಪಕನೆಂದಿರುವುದರಿಂದ ಇವನೇ ಮಧ್ವವಿಜಯದಲ್ಲಿ ಉಕ್ತನಾದವನೆಂದು ಅವರ ಅಭಿಪ್ರಾಯ. ಆದರೆ ಮಧ್ವಾಚಾರ್ಯರ ಕಾಲವು ೧೨೩೮ – ೧೩೧೭ ಎಂದು ಅನ್ಯತ್ರಸಿದ್ಧವಾಗುವುದರಿಂದ ಈ ದಿನಾಂಕ ಸರಿಹೊಂದುವುದಿಲ್ಲವೆನಿಸುತ್ತದೆ. ಮಧ್ವವಿಜಯದಲ್ಲಿ ಉಕ್ತನಾದ ಜಯಸಿಂಹನು ಮಧ್ವಾಚಾರ್ಯರ ಸಮಕಾಲೀನನೆನ್ನುವುದರಲ್ಲಿ ಸಂದೇಹವಿಲ್ಲವಾದುದರಿಂದ ಮಧ್ವರ ಕಾಲವೇ ಅವನ ಕಾಲವಾಗಬೇಕಷ್ಟೆ? ೧೦ನೇ ಶತಮಾನದ ತಳಂಗೆರೆ ಶಾಸನದಲ್ಲಿ ಉಕ್ತನಾದ ಜಯಸಿಂಹನು ಅನಂತರ ಸ್ಥಾಪಿಸಲ್ಪಟ್ಟ ವಂಶದಲ್ಲಿ ಸೇರುವುದು ಸಾಧ್ಯವಾಗುತ್ತದೆಯೆ?

ಕರ್ನಾಟಕದ ದೊಡ್ಡ ಅರಸರ ಆಡಳಿತಕ್ಕೆ ಕುಂಬಳೆ ರಾಜ್ಯ ಹೇಗೆ ಒಳಪಟ್ಟಿತೆಂಬುದನ್ನು ನೋಡಬಹುದು. ಕ್ರಿ.ಶ. ಆರನೆಯ ಶತಮಾನದಲ್ಲಿ ಚಾಲುಕ್ಯ ವಂಶದ ಅರಸ ಕೀರ್ತಿವರ್ಮನು (ಕ್ರಿ.ಶ. ೫೬೬ – ೫೯೮) ಕದಂಬರನ್ನು ಸೋಲಿಸಿದಾಗ ತುಳುನಾಡು ಅವರ ವಶವಾಯಿತು. ರಾಷ್ಟ್ರಕೂಟ ಮೂರನೇ ಗೋವಿಂದನು (ಕ್ರಿ.ಶ.೭೫೦ – ೮೦೦) ಚಾಲುಕ್ಯರನ್ನು ಸುತ್ತಮುತ್ತಲಿನ ರಾಜರನ್ನು ಸೋಲಿಸಿ ಚಕ್ರಾಧಿಪತಿಯಾದಾಗ ತುಳುನಾಡು ರಾಷ್ಟ್ರಕೂಟರ ಸಾಮ್ರಾಜ್ಯಕ್ಕೆ ಸೇರಿತು. ಹನ್ನೊಂದನೆಯ ಶತಮಾನದಲ್ಲಿ ಹೊಯ್ಸಳರು ಪ್ರಬಲರಾಗಿ ಕರ್ನಾಟಕದ ಚಕ್ರವರ್ತಿಗಳಾದಾಗ ತುಳುನಾಡು ಅವರ ಕೈಸೇರಿತು. ಕುಂಬಳೆ ಕೋಟೆಯಲ್ಲಿ ಹೊಯ್ಸಳ ವೀರನರಸಿಂಹ ಬಲ್ಲಾಳನ ಚಿನ್ನದ ನಾಣ್ಯ ಸಿಕ್ಕಿದೆ. ಈ ಚಿನ್ನದ ನಾಣ್ಯದ ವಿವರವನ್ನು ಶ್ರೀ.ಎಂ.ಮುಕುಂದ ಪ್ರಭುಗಳು ನೀಡಿದ್ದಾರೆ.

[1] ಈ ನಾಣ್ಯದಲ್ಲಿ ‘ಜಗದೇಕ ಮಲ್ಲ’ ಎಂದು ಕೊರೆದಿದೆ. ಹೊಯ್ಸಳ ವೀರನರಸಿಂಹನಿಗೆ ಈ ಬಿರುದಿತ್ತು. ೧೪ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ ಈ ರಾಜ್ಯದ ಒಡೆಯರು ಅವರಾದರು. ಮುಳಿಂಜ ಮಹಾಲಿಂಗೇಶ್ವರ ದೇವಾಲಯದಲ್ಲಿ ಕ್ರಿ.ಶ. ೧೪೫೮ರ ವಿಜಯನಗರದ ಮಲ್ಲಿಕಾರ್ಜುನನ ಶಾಸನ ಸಿಕ್ಕಿದೆ. ಮೂವರು ಬ್ರಾಹ್ಮಣರ ಭೋಗಕ್ಕೆ ದಾನ ನೀಡಿದ ವಿವರವಿದೆ, ಪೂರ್ಣ ಓದಲಾಗುವುದಿಲ್ಲ.

 

ಕುಂಬಳೆ ಕೋಟೆಯಲ್ಲಿ ಸಿಕ್ಕಿದ ಹೊಯ್ಸಳ ವೀರ ಬಲ್ಲಾಳನ ಚಿನ್ನ ನಾಣ್ಯ

ಕುಂಬಳೆ ಕೋಟೆಯಲ್ಲಿ ಸಿಕ್ಕಿದ ಹೊಯ್ಸಳ ವೀರ ಬಲ್ಲಾಳನ ಚಿನ್ನ ನಾಣ್ಯ

ಕ್ರಿ.ಶ. ೧೫೫೪ರಲ್ಲಿ ರಾಮರಾಯನು ಕೆಳದಿಯ ಸದಾಶಿವ ನಾಯಕನನ್ನು ಮಂಗಳೂರು ರಾಜ್ಯದ ರಾಜ್ಯಪಾಲನನ್ನಾಗಿ ನೇಮಿಸಿದನು. [2] ೧೫೫೫ರಲ್ಲಿ ವಿಜಯನಗರ ಚಕ್ರವರ್ತಿಗಳು ಸೋತಾಗ ಮೊದಲು ಅವರ ಅಂಕಿತದಲ್ಲಿದ್ದ ಇಕ್ಕೇರಿನಾಯಕಿರು ಸ್ವತಂತ್ರರಾದರು. ಕಾಸರಗೋಡಿನ ಪಯಸ್ವಿನಿ ನದಿಯಿಂದಾಚೆ ನೀಲೇಶ್ವರದ ಕವಾಯಿ ಹೊಳೆವರೆಗಿನ ಪ್ರದೇಶ ಅವರ ವಶಕ್ಕೆ ಬಂತು. ೧೭೬೩ರಲ್ಲಿ ಹೈದರಾಲಿಯು ಬಿದನೂರಿನ (ಇಕ್ಕೇರಿ) ರಾಣಿ ವೀರಮ್ಮಾಜಿಯನ್ನು ಗೆದ್ದಾಗ ತುಳುನಾಡು ಸಹಿತ ಸಮಸ್ತ ರಾಜ್ಯ ಅವನ ಅಧೀನಕ್ಕೆ ಬಂತು. ಕ್ರಿ.ಶ. ೧೭೮೨ರ ದಶಂಬರದಲ್ಲಿ ಹೈದರಾಲಿ ಸತ್ತಾಗ ಅವನ ಅಧೀನದಲ್ಲಿದ್ದ ತುಂಡರಸರೆಲ್ಲಾ ಸ್ವತಂತ್ರರಾಗಲು ಹವಣಿಸಿದರು. ೧೭೮೩ರಲ್ಲಿ ಅವನ ಮಗ ಟಿಪ್ಪು ಅಧಿಕಾರಕ್ಕೆ ಬಂದಾಗ ಅವರನ್ನೆಲ್ಲಾ ಹತೋಟಿಯಲ್ಲಿಟ್ಟುಕೊಳ್ಳಲು ಯುದ್ಧ ಮಾಡಬೇಕಾಯಿತು. ಕುಂಬಳೆಯ ಅರಸನು ಟಿಪ್ಪುವಿನ ವಿರುದ್ಧ ಹೋರಾಡಿ ಸೆರೆ ಸಿಕ್ಕಿದಾಗ ಅವನನ್ನು ಗಲ್ಲಿಗೇರಿಸಲಾಯಿತು. ಅವನ ತಮ್ಮನು ಯುದ್ಧದಲ್ಲಿ ಮಡಿದನು. ಉತ್ತರಾಧಿಕಾರಿಯಾಗುವವನು ತಲಚೇರಿಗೆ ಓಡಿಹೋಗಿ ಬ್ರಿಟಿಷರ ರಕ್ಷಣೆ ಪಡೆದನು. ಅಲ್ಲಿನ ನಾಯರ್‌ವರ್ಗದವರು ಕುಂಬಳೆ ಅರಸನಿಗೆ ಮಾವಿಲಾಯಿ ಎಂಬಲ್ಲಿ ೧೦.೯೮ ಎಕ್ರೆ ಭೂಮಿಯನ್ನಿತ್ತರು. ಕ್ರಿ.ಶ. ೧೭೯೯ ರಲ್ಲಿ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಟಿಪ್ಪು ಸತ್ತಾಗ ಅವನ ರಾಜ್ಯವೆಲ್ಲಾ ಅವರ ವಶವಾಯಿತು. ಕುಂಬಳೆ ಅರಸರು ಸ್ವರಾಜ್ಯಕ್ಕೆ ಬಂದು ನೆಲಸಿದರು. ಬ್ರಿಟಿಷರ ಆಶ್ರಯದಲ್ಲಿದ್ದುದರಿಂದ ಸ್ವಲ್ಪ ಮಾತ್ರ ಭೂಮಿಯನ್ನು ಉಳಿಸಿಕೊಂಡು ಮಾಲಿಖಾನೆಯನ್ನು ಪಡೆದು ಉಳಿದುದನ್ನು ಅವರಿಗೆ ಬಿಟ್ಟರು. ಇಲ್ಲಿಗೆ ಅವರ ಅರಸುತನ ಕೊನೆಗೊಂಡಂತೆಯೇ. ಬ್ರಿಟಿಷರ ಆಡಳಿತದಲ್ಲಿ, ಮದರಾಸು ಪ್ರಾಂತದ ಅಧೀನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿನಲ್ಲಿ ಕುಂಬಳೆ ಸೇರಿ ಹೋಯಿತು. ೧೯೫೬ ನವೆಂಬರ್‌೧ ರಂದು ಪ್ರಾಂತ ಪುನಾರಚನೆಯಾದಾಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಡಿದು ಅದನ್ನು ಕೇರಳ ಪ್ರಾಂತದ ಕಣ್ಣನೂರು ಜಿಲ್ಲೆಗೆ ಸೇರಿಸಲಾಯಿತು.

ಮಧ್ಯಕಾಲ :

ಕುಂಬಳೆ ಅರಸರ ಕಾಲಾನುಗತ, ಕ್ರಮಾಗತ ವಂಶಪಟ್ಟಿ ಸರಿಯಾಗಿ ಲಭ್ಯವಿಲ್ಲ. ದೊರೆತ ಕೆಲವು ಹೆಸರುಗಳನ್ನು ಉಲ್ಲೇಖಿಸಬಹುದು.

ಕದಂಬ ಕಾಮದೇವರಸ ೧೩೮೯ (ತಿರುವೈಲಿನ ಹರಿಹರ ೧೧ನೇ ಯವನ ಶಾಸನ). [3]
ಜಯಸಿಂಹ   ೧೫ನೆಯ ಶತಮಾನ (ಅನಂತಪುರ ಶಾಸನ)[4]
ಒಬ್ಬ ಅರಸ ೧೫೧೪ (ದು ಅರ್ತೆ ಬಾರ್ಬೋಸ)[5]
ರಾಮರಾವ್‌ ೧೬೨೩ (ದೆಲ್ಲಾವಲ್ಲೆ ಹೇಳಿಕೆ)
ಸೋಮನಾಥರಸ ಕವಿಸಿಂಹರಸ ೧೭೦೯ (ಶಾಸನ, ಮಂಜೇಶ್ವರ)[6]
ಕುಂಬಳೆ ನಂದಪ್ಪರಸರಾದ ಕವಿಸಿಂಹರೊಡೆಯರು ೧೭೫೪ (ಭೂಮಿ ಬಾಳಿಕೆ ಪಟ್ಟೆ)[7]
ಶಿವವರ್ಮ ಕವಿಸಿಂಹರಸರು ೧೭೮೪ (ಎಡನಾಡು ಮಹಾಲಿಂಗ) ಭಟ್ಟ[8] ಸಂದರ್ಶನ)
ರಾಮಂತರಸು ೧೮೦೮ (ಭವ ಸಂ.) (ಎಂ.ಕೇಶವ ರಾವ್‌) (ಎಡನೀರು ಮಠದ ತಹಾ)
ರಾಮಂತರಸು  ೧೮೧೪ (ವಿಕ್ರಮ, ಸಂ.”)
ಗುಣ್ಯಪ್ಪರಸ  ೧೮೮೦ (ಅಡೂರು ಶಾಸನ)[9]
ಕವಿಸಿಂಹ ವರ್ಮರಾಜ ೧೮೭೧ (ಕೊಡ್ಯಮ್ಮೆ ಕೃಷ್ಣಯ್ಯ) ಬಲ್ಲಾಳ್‌ಸಂದರ್ಶನ:೪-೫-೧೯೮೬)
ರಾಮರಾವ್ ೧೮೮೭ (ವೇಲಾಪುರ ಮಾಹಾತ್ಮ್ಯೆ ಹಸ್ತಪ್ರತಿ)[10]

ಶ್ರೀ ಉದಯವರ್ಮ ರಾಜರು ಅವರ ಪೂರ್ವೋಕ್ತ ಗ್ರಂಥದಲ್ಲಿ, ಕ್ಷೇತ್ರ ಮಹಾತ್ಮೆ, ಸಾಕ್ಷಿಪತ್ರ, ಶಾಸನ ಇತ್ಯಾದಿಗಳ ಹಿನ್ನೆಲೆಯೆಂದು ಕೆಲವು ಅರಸರ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ; ಕಾಲ ನಿರ್ದೇಶವನ್ನು ಮಾಡಿಲ್ಲ (ಪುಟ ೬೮).

೧. ಕಾಮದೇವ ಅಥವಾ ನಾಲ್ಕನೆಯ ಮಯೂರವರ್ಮ.
೨. ಚಂದ್ರಾಂಗದ.
೩. ಇಮ್ಮಡಿ ಜಯಸಿಂಹ.
೪. ರಾಮಂತರಸು.
೫. ಬೋಳದೇಸಿಂಗರಾಯ.
೬. ಪ್ರೌಢರಾಯ.
೭. ವೀರ ನರಸಿಂಹರಾಯ.
೮. ಪಾಳ್ಯದ ನರಸಿಂಗರಾಯ.
೯. ಅಚ್ಯುತರಾಯ.
೧೦. ಸದಾಶಿವರಾಯ.
೧೧. ರಾಮರಾಯ.
೧೨. ಕೃಷ್ಣರಾಯ.
೧೩. ಸೋಮನಾಥ ಕವಿಸಿಂಹರಸ.

ಅವರು ಹೇಳುವ ಪ್ರಕಾರ, ಇವರು ಕ್ರಿ.ಶ. ೧೧೮೧ ರಿಂದ ೧೬೫೪ರವರೆಗೆ ರಾಜ್ಯವಾಳಿದರು. ಕ್ರಿ.ಶ. ೧೮೭೦ರಿಂದ ಅನಂತರವೆಂದು ಇಸವಿ ಸಹಿತ ಅವರು ಪಟ್ಟಿ ಮಾಡಿದ ಹೆಸರುಗಳು. ಇವರು ಮಾಯಿಪ್ಪಾಡಿ ಶಾಖೆಯವರೆನಿಸುತ್ತದೆ.

೧. ರವಿವರ್ಮ ರಾಜ ಕ್ರಿ.ಶ. ೧೮೭೭೦೧೮೯೪
೨. ರಾಮವರ್ಮ ರಾಜ  “ ೧೮೯೪ – ೧೮೯೯
೩. ಶಂಕರವರ್ಮ ರಾಜ  “ ೧೮೯೯ – ೧೯೦೫
೪. ಕೃಷ್ಣವರ್ಮ ರಾಜ  “ ೧೯೦೫ – ೧೯೧೭
೫. ವೀರವರ್ಮ ರಾಜ  “ ೧೯೧೭ – ೧೯೨೧
೬. ವೆಂಕಟೇಶವರ್ಮ ರಾಜ ಯಾನೆ ಭುವನೇಂದ್ರ  
 ರಾಮವರ್ಮ ರಾಜ  “ ೧೯೨೧ – ೧೯೨೪
೭. ವೆಂಕಟೇಶವರ್ಮ ರಾಜ ಯಾನೆ ರಾಮಂತರಸುಗಳು  “ ೧೯೪೧ – ೧೯೯೫
೮. ಡಾ| ರಾಮವರ್ಮ ರಾಜ ಯಾನೆ ರಾಮಂತರಸುಗಳು  “ ೧೯೯೫ –

ಇವರು ಬ್ರಿಟಿಷರ ಕಾಲದವರಾದುದರಿಂದ ಇವರಿಗೆ ರಾಜತ್ವವಿರಲಿಲ್ಲ.

ಕಂಚಿಕಟ್ಟೆ (ಕೋಟೆಕ್ಕಾರು) ಯಲ್ಲಿ ನೆಲಸಿದ್ದ ಅರಸರ ಮೂಲ ಶಾಖೆಗೆ ‘ಕವಿಸಿಂಹ’ ಎಂಬ ಪ್ರಾಚೀನ ಕುಲನಾಮವಿದ್ದು ಅವರಿಗೇ ಅಡೂರು, ಮದವೂರು, ಕಾವು, ಕಣಿಪುರ ಮೊದಲಾದ ಪ್ರಧಾನ ಕ್ಷೇತ್ರಗಳ ಸ್ಥಾನಮಾನ ಸಲ್ಲುತ್ತಿತ್ತು. ಟಿಪ್ಪುವಿನ ಕಾಲದ ನಂತರ ಕೊಡ್ಯಮ್ಮೆ (ಕೋಟೆಕ್ಕಾರು) ಕವಿಸಿಂಹರ ಶಾಖೆ ಸ್ಥಾನ ಕಳಕೊಂಡು ಮಾಯಿಪ್ಪಾಡಿ ಶಾಖೆ ಸ್ಥಾನ ಪಡೆದಂತೆ ತೋರುತ್ತದೆ. ಅಳಿಯ ಕಟ್ಟಿನ ಅನುಸರಣೆ, ಹಿರಿಯ ರಾಜಕುಮಾರಿಯನ್ನು ಆರು ಮನೆತನಗಳ ಬ್ರಾಹ್ಮಣರಲ್ಲೊಬ್ಬನಿಗೆ ಮದುವೆ ಮಾಡಿ ಕೊಡುವುದು ಮೊದಲಾದ ಸಂಪ್ರದಾಯಗಳು ಮಾಯಿಪ್ಪಾಡಿ ಶಾಖೆಯಲ್ಲಿ ಇತ್ತೀಚಿನವರೆಗೆ ನಡೆದು ಬಂದಿವೆ. ಮಾಯಿಪ್ಪಾಡಿ ಅರಮನೆಯ ಪುರುಷರಿಗೆ ಕೇರಳದಿಂದ ನಾಯರ್‍ಸ್ತ್ರೀಯರನ್ನು ತರುವ ಕ್ರಮವು ಟಿಪ್ಪುವಿನ ಆಕ್ರಮಣದ ನಂತರ ಆರಂಭವಾದುದೆನ್ನಲಾಗಿದ್ದು ಇತ್ತೀಚೆಗೆ ಅದು ನಿಂತುಹೋಗಿದೆ.

ಮಾಯಿಪ್ಪಾಡಿ ಶಾಖೆಯ ಪ್ರಾಬಲ್ಯದ ನಂತರ ‘ರಾಮಂತರಸು’ ಎಂಬ ಕುಲನಾಮ ಕಂಡುಬರುತ್ತದೆ. ಆ ಹಿಂದಿನ ‘ಕವಿಸಿಂಹ’ ಹೆಸರು ಮಾಯವಾಗಿದೆ. ಮಾಯಿಪ್ಪಾಡಿ ಅರಸರ ಮುದ್ರೆಯಲ್ಲಿ “ಉರುಡೂರು ಮಹಾಲಿಂಗೇಶ್ವರ ಪ್ರಸನ್ನ” ಎಂದಿರುತ್ತದೆ. ಅವರ ನಿರೂಪಗಳಲ್ಲಿ ಹೀಗಿರುತ್ತದೆ – “ರವಿ ವಂಶೋದ್ಭೂತ ತೌಳವಾಧೀಶ ರಾಷ್ಟ್ರೋತ್ಪತ್ಯಂಶ ಗ್ರಹಣ ವಿರಾಜಿತ (ಪೆನ್ಯನ್‌) ಶ್ರೀಮುಖ ಗ್ರಾಮಾಧಿರೂಢ ಮಾಯಾಪುರೀ ಸೌಧ ಶೋಭಿತ ಕುಂಬಳೆ ಮಾಯಿಪ್ಪಾಡಿ ರಾಮಂತರಸುಗಳು ಕೊಟ್ಟ ನಿರೂಪ” (ಎಡನಾಡು ಮಹಾಲಿಂಗ ಭಟ್ಟ). ಇದು ಬ್ರಿಟಿಷರ ಕಾಲದಲ್ಲಿ ಅವರಿಂದ ಪೆನ್ಯನ್‌ಪಡೆಯಲು ಆರಂಭಿಸಿದ ನಂತರ ಮಾಡಿಕೊಂಡ ಬದಲಾವಣೆ ಎಂಬುದು ಸ್ಪಷ್ಟ.

ವಿಜಯನಗರದ ಅರಸರು, ಕುಂಬಳೆ :

ವಿಜಯನಗರ ಸಾಮ್ರಾಜ್ಯದ ತುತ್ತತುದಿಯಾದ ಈ ಪ್ರದೇಶದಲ್ಲಿ ಅವರ ಹೆಚ್ಚಿನ ಉಲ್ಲೇಖಗಳಿಲ್ಲ. ಕೆಲವು ದೇವಸ್ಥಾನಗಳಿಗೆ ದತ್ತಿ ಬಿಟ್ಟ ವಿಚಾರ ಶಾಸನಗಳಲ್ಲಿದೆ. ಮೈಸೂರು ಪ್ರಾಚ್ಯ ಸಂಶೋಧನ ಇಲಾಖೆಯ ಮುಖ್ಯ ಶಾಸನಜ್ಞ ಮಾಧವ ನಾ. ಕಟ್ಟಿ ಮತ್ತು ತಂಡದವರೊಂದಿಗೆ ನಡೆಸಿದ ಇಲ್ಲಿನ ಶಾಸನ ಸಮೀಕ್ಷೆಯಲ್ಲಿ (ಜನವರಿ ೧೬, ೧೭, ೧೯೮೪) ಇಲ್ಲಿನ ಹೆಚ್ಚಿನ ಶಾಸನಗಳು ವಿಜಯನಗರ ಕಾಲದವೆಂದು ತಿಳಿದಿದೆ. ಶಾಸನಗಳು ಬಹಳ ಅಸ್ಪಷ್ಟವಾಗಿರುವುದರಿಂದ ಓದಲಾಗುತ್ತಿಲ್ಲ. ಮುಳಿಂಜ ಮಹಾಲಿಂಗೇಶ್ವರ ದೇವಸ್ಥಾನದ ಶಾಸನದಲ್ಲಿ ವಿಜಯನಗರದ ಮಲ್ಲಿಕಾರ್ಜುನ (ಕ್ರಿ.ಶ. ೧೪೫೮)ನನ್ನು ಉಲ್ಲೇಖಿಸಿದೆ. ಕೊಡ್ಯಮ್ಮೆ ಶಾಸನ (ಸ್ಲಾಬ್‌೧) ದಲ್ಲಿ ಹೊಯ್ಸಳರ ಕಾಲದಲ್ಲಿ (ಕ್ರಿ.ಶ. ೧೨೭೯) ಚಂದ್ರನಾಥ ತೀರ್ಥಂಕರರಿಗೆ ನಂದಾದೀಪ್ತಿಗೆ ನೀಡಿದ ಕೊಡುಗೆಯ ವಿವರ, ಕೊಡ್ಯಮ್ಮೆ ಶಾಸನ (ಸ್ಲಾಬ್‌೨) ದಲ್ಲಿ ಐಲ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಂದಾದೀಪ್ತಿಗೆ ೧೨೦ ಮುಡಿ ಅಕ್ಕಿ ನೀಡಿದ ವಿವರವಿದೆ (ಈ ಹೆಚ್ಚಿನ ವಿವರ ಓದಿ ತಿಳಿಸಿದವರು ಡಾ| ಕೆ.ಜಿ.ವಸಂತಮಾಧವ). ಕ್ರಿ.ಶ. ೧೫೧೪ರಲ್ಲಿ ಕರಾವಳಿಯನ್ನು ಸಂದರ್ಶಿಸಿದ ಪೋರ್ತುಗೀಜ ಯಾತ್ರಿಕ ದುಅರ್ತೆ ಬಾರ್ಬೋಸನು ವಿಜಯನಗರ ಚಕ್ರವರ್ತಿ ನರಸಿಂಗನ ಅಧೀನದಲ್ಲಿ ಕುಂಬಳೆಯಲ್ಲಿ ಅರಸನೊಬ್ಬನು ಆಳುತ್ತಿದ್ದನೆಂದು ಹೇಳಿದ್ದಾನೆ. ವಿಜಯನಗರದ ನಂತರ ಕರಾವಳಿಯು ಇಕ್ಕೇರಿ ಅರಸರ ವಶವಾಯಿತು.

ಇಕ್ಕೇರಿ ಅರಸರು, ಕುಂಬಳೆ :

ಇಕ್ಕೇರಿಯ ಚೌಡಪ್ಪ ಗೌಡನು (೧೫೦೦ – ೧೫೪೦ ಕ್ರಿ.ಶ.) ವಿಜಯನಗರದ ಚಕ್ರವರ್ತಿಗಳಿಂದ ನಾಯಕನೆಂಬ ಬಿರುದು ಪಡೆದು ಈ ಪ್ರದೇಶದ ಒಡೆಯನೆನಿಸಿದನು. ಅವನ ಉತ್ತರಾಧಿಕಾರಿಯಾದ ಸದಾಶಿವ ನಾಯಕನು (ಕ್ರಿ.ಶ. ೧೫೪೪ – ೬೫) ಕಾಸರಗೋಡುವರೆಗೆ ದಂಡೆಯಾತ್ರೆ ನಡೆಸಿ ಅಲ್ಲಿ ತೊಲಗದ ಕಂಬವನ್ನು ಸ್ಥಾಪಿಸಿ ಕೋಟೆಯನ್ನು ಕಟ್ಟಿಸಿದನು. ಇಕ್ಕೇರಿ ಅರಸರು ಕಂದಾಯ ವಸೂಲಿ ಮತ್ತು ಆಡಳಿತ ಸೌಕರ್ಯಕ್ಕಾಗಿ ಒಳಭಾಗಗಳಲ್ಲಿ ಕೆಲವು ನೆಲೆ (ಬೀಡು)ಗಳನ್ನು ನಿರ್ಮಿಸಿದಂತೆ ತೋರುತ್ತದೆ. ಪೆರಡಾಲ ಗ್ರಾಮದ ಕರಿಂಬಿಲದ ಹತ್ತಿರದಲ್ಲಿ ಇಂತಹ ಒಂದು ಕೇಂದ್ರವಿದ್ದ ಜಾಗಕ್ಕೆ ಇಕ್ಕೇರಿ ಎಂಬ ಹೆಸರು ಈಗಲೂ ಇದೆ. ಬೀಡಿನ ಅವಶೇಷಗಳಲ್ಲದೆ ಆ ಕಾಲದಲ್ಲಿ ಸ್ಥಾಪಿತವಾದ ಒಂದು ಶಿವ ದೇವಾಲಯವೂ ಇದೆ.

ಇಕ್ಕೇರಿ ವೆಂಕಟಪ್ಪ ನಾಯಕನು ಪೋರ್ತುಗೀಜರಿಗೆ ಸಹಾಯಕನಾಗಿದ್ದ ಬಂಗರಸನನ್ನು ಸೋಲಿಸಿ ಓಡಿಸಿದಾಗ ಅವನು ಕುಂಬಳೆಯ ಅಪ್ರಾಪ್ತ ವಯಸ್ಕ ಸ್ವತಂತ್ರ ಅರಸನ ಆಶ್ರಯವನ್ನು ಪಡೆದನು. ವೆಂಕಟಪ್ಪನಿಗೆ ಕುಂಬಳೆ ರಾಮರಾವ್‌ಅರಸನು ಅವನ ಒಟ್ಟು ಎರಡು ಸಾವಿರ ಇಕ್ಕೇರಿ ಪಗೋಡ ಆದಾಯದಲ್ಲಿ ೮೦೦ ಪಗೋಡ ಕಪ್ಪ ಕೊಡಬೇಕಿತ್ತು. ಇವನ ಕಾಲದಲ್ಲಿ ಕುಂಬಳೆ ಅಕ್ಕಿ ಮತ್ತು ಕರಿಮೆಣಸು ರಫ್ತು ಮಾಡುವ ಕೇಂದ್ರವಾಗಿತ್ತು. ಪೋರ್ತುಗೀಜರು ಇವನ್ನು ಪಡೆಯುತ್ತಿದ್ದರು. ಕುಂಬಳೆ ದೇವಸ್ಥಾನದ ಹಿಂದೆ ನದಿಯ ಪಕ್ಕದಲ್ಲಿ ಭಂಡಸಾಲೆ ಇತ್ತು. ಇಲ್ಲಿಂದ ಮಂಜಿಯ ಮೂಲಕ ಸರಕು ಸಾಗಾಟವಾಗುತ್ತಿತ್ತು. ಕುಂಬಳೆ ನಾಯಕ ಮನೆತನದವರು ಪ್ರಮುಖ ವ್ಯಾಪಾರಿಗಳಾಗಿದ್ದರು. ಕುಂಬಳೆ ಅರಸನ ಈ ವ್ಯಾಪಾರವನ್ನು ಕೆಳದಿ ಶಿವಪ್ಪ ನಾಯಕನು ವಿರೋಧಿಸಿ ಸೈನಿಕ ಕ್ರಮ ತೆಗೆದುಕೊಂಡು ಗೆದ್ದನು. (ಬಿ.ಎನ್.ಶಾಸ್ತ್ರಿ – ಕೆಳದಿ ಅರಸರು ಹಾಗೂ ಪೋರ್ತುಗೀಜರು, ಧಾರವಾಡ, ೧೯೭೨, ಪುಟ ೬೭, ೧೦೦, ೧೦೧.)

ಶಿವಪ್ಪ ನಾಯಕನು (೧೬೪೫ – ೧೬೬೦) ಕಾಸರಗೋಡಿನ ಕರಾವಳಿಯುದ್ದಕ್ಕೂ ಅಲ್ಲಲ್ಲಿ ಕೋಟೆಗಳನ್ನು ಕಟ್ಟಿಸಿದ್ದಲ್ಲದೆ ನೀಲೇಶ್ವರದವರೆಗೆ ದಂಡಯಾತ್ರೆ ನಡೆಸಿ ಅಲ್ಲಿವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದನು, ಪೋರ್ತುಗೀಜರನ್ನು ಗೆದ್ದನು. ಚಂದ್ರಗಿರಿ, ಬೇಕಲಗಳಲ್ಲೂ ಪ್ರಬಲವಾದ ಕೋಟೆಗಳನ್ನು ಕಟ್ಟಿಸಿದನು. ಬೇಕಲ ಕೋಟೆಯ ಸುಂದರವಾದ ಪ್ರದೇಶವನ್ನು ವಿಹಾರಧಾಮವನ್ನಾಗಿ (Beach Resort) ಮಾಡಲು ಸರಕಾರವು ಬಹು ದೊಡ್ಡ ಯೋಜನೆಯನ್ನು ಹಾಕಿಕೊಂಡಿದೆ. ಕುಂಬಳೆ, ಎಡನೀರು ಪಕ್ಕದ ಪೊಳಲಿಗಳಲ್ಲೂ ಕೋಟೆಗಳ ಅವಶೇಷಗಳಿವೆ. ಕ್ರಿ,ಶ. ೭೫೦ ರಲ್ಲಿದ್ದ ಲಿಂಗಣ್ಣ ಕವಿಯ “ಕೆಳದಿ ನೃಪವಿಜಯ” ಇತಿಹಾಸ ಕಾವ್ಯದಲ್ಲಿ ಈ ವಿಚಾರಗಳಿವೆ. ಶಿವಪ್ಪ ನಾಯಕನು ಚಿನ್ನದ ನಾಣ್ಯವನ್ನು ಚಲಾವಣೆಗೆ ತಂದನು. ಕ್ರಿ.ಶ. ೧೬೫೪ರಲ್ಲಿ ಕುಂಬಳೆ ಅರಸನನ್ನು ಸೋಲಿಸಿದ ಶಿವಪ್ಪ ನಾಯಕನು ಅವನಿಗೆ ಅಡೂರು, ಮಧೂರು, ಕಾವು, ಕಣಿಪುರಗಳನ್ನೊಂಡ ಪ್ರದೇಶಗಳನ್ನು ಮಾತ್ರ ವಹಿಸಿಕೊಟ್ಟನು. ಇದಾದ ನಂತರ ಕುಂಬಳೆ ಅರಸರ ಮಾಯಿಪ್ಪಾಡಿ ಶಾಖೆ ನೆಲಗೊಂಡಿತು ಎಂದು ಕೇಶವಕೃಷ್ಣ ಕುಡ್ವರು ತಮ್ಮ “ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ” ದಲ್ಲಿ ಹೇಳಿದ್ದಾರೆ.

ಇಕ್ಕೇರಿ ಸೋಮಶೇಖರ ನಾಯಕನ ಕಾಲದಲ್ಲಿ (೧೭೩೭) ಮಂಗಳೂರಿನಲ್ಲಿದ್ದ ಅವನ ರಾಜ ಪ್ರತಿನಿಧಿ ಸೂರಪ್ಪಯ್ಯ ಮತ್ತು ತಲಚೇರಿಯಲ್ಲಿ ಠಾಣೆಯನ್ನು ಹೊಂದಿದ್ದ ಬ್ರಿಟಿಷರ ಸಮ್ಮುಖದಲ್ಲಿ ನೀಲೇಶ್ವರದ ಕೋಲತ್ತಿರಿ ಅರಸನೊಂದಿಗೆ ಒಪ್ಪಂದವಾಯಿತು. ಇದರ ಪ್ರಕಾರ ‘ವಳರ್‍ಪಟ್ಟಣ ಹೊಳೆ’ಇಂದ ಮುಂದೆ ದಕ್ಷಿಣಕ್ಕೆ ಇಕ್ಕೇರಿ ಅರಸರು ಮುಂದುವರಿಯಬಾರದು, ಅಲ್ಲಿವರೆಗೆ ರಾಜ್ಯ ಇಕ್ಕೇರಿಗೆ ಸೇರಿದ್ದು ಎಂದು ತೀರ್ಮಾನಿಸಲಾಗಿತ್ತು.

ಎರಡನೇ ಸೋಮಶೇಖರ ನಾಯಕನು ಕುಂಬಳೆ ಅರಸನನ್ನು ಬಂಧಿಸಿದ್ದಾಗಿ ಕೆಳದಿ ನೃಪವಿಜಯ (ಪ್ರ.ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೭೩, ದಶಮಾಶ್ವಾಸ, ಪದ್ಯ ೪೩, ಪುಟ ೧೬೩) ದಲ್ಲಿ ಹೇಳಿದೆ –

ದುರುಳರ ನಾಯಿಮಾರರ
ಮರುಕೂಡಿಸಿ ಕುಹಕ ಗೈಯುತಿಹ ಕುಂಬಳೆಯಾ
ವರ ಸಾಮಂತರ ನುರೆ ಪಿಡಿ
ತರಿಸುತೆ ದುರ್ಗದೊಳಗಂಕೆಯಂ ಮಾಡಿಸಿದಂ.

ಇಕ್ಕೇರಿ ರಾಣಿ ವೀರಮ್ಮಾಜಿಯ ಕಾಲದಲ್ಲಿ (೧೭೫೭ – ೧೭೬೩) ಕಣ್ಣಾನೂರಿನ ಆಲಿರಾಜ ಮತ್ತು ಮರಾಠರ ಅಂಗ್ರಿಯೂ ಸೇರಿ ಕರ್ನಾಟಕದ ಕರಾವಳಿಗೆ ಧಾಳಿ ಮಾಡಿದರು. ಆಗ ಅತ್ಯಂತ ಶ್ರೀಮಂತವೆನಿಸಿದ್ದ ಮಂಜೇಶ್ವರದ ಶ್ರೀಮದನಂತೇಶ್ವರ ದೇವಾಲಯ ಮತ್ತು ಕೊಲ್ಲೂರಿನ ಮೂಕಾಂಬಿಕ ದೇವಾಲಯಗಳನ್ನು ದೋಚಿ ಅಪಾರ ಧನ ಕನಕಗಳನ್ನು ಅಪಹರಿಸಿದ್ದರು. ಕ್ರಿ.ಶ. ೧೭೬೩ರಲ್ಲಿ ಮೈಸೂರಿನ ಹೈದರಾಲಿಯು ವೀರಮ್ಮಾಜಿಯನ್ನು ಸೋಲಿಸಿ ಅವಳ ಅಧೀನದಲ್ಲಿದ್ದ ಕರಾವಳಿ ಭೂಭಾಗವನ್ನು ವಶಪಡಿಸಿಕೊಂಡನು.

ಕೊಡಗಿನ ಅರಸರು ಮತ್ತು ಕುಂಬಳೆ :

ಇಕ್ಕೇರಿಯ ವೀರರಾಜನು ಕೊಡಗಿನ ಹಾವೇರಿಯಲ್ಲಿ ಮನೆತನ ಸ್ಥಾಪಿಸಿದನು. ಟಿಪ್ಪುವಿನ ಆಕ್ರಮಣ ಕಾಲದಲ್ಲಿ ದೊಡ್ಡವೀರ ರಾಜೇಂದ್ರನು ಕುಂಬಳೆ ಅರಸನೊಡನೆ ಸ್ನೇಹ ಬೆಳೆಸಿ ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡನು. ಕೊಡಗಿನ ಲಿಂಗರಾಜನು (೧೮೧೧) ಶಿವಭಕ್ತನಾಗಿದ್ದು ಅಡೂರು ದೇವಸ್ಥಾನಕ್ಕೆ ಆಭರಣಗಳನ್ನು, ಸಲಕರಣೆಗಳನ್ನು ಮಾತ್ರವಲ್ಲದೆ ಅಮೃತಪಡಿ ನಂದಾದೀಪಕ್ಕಾಗಿ ಹತ್ತೂವರೆ ಮುಡಿ ಗದ್ದೆಯನ್ನು ಉಂಬಳಿ ಬಿಟ್ಟನು. ಆಭರಣಗಳಲ್ಲಿ ಲಿ || ಎಂಬ ಅವನ ಮುದ್ರೆಯಿದೆ. ಕೊಡಗು ಕುಂಬಳೆಯ ಗಡಿರಾಜ್ಯವಾದುದರಿಂದ ಕೆಲವೊಮ್ಮೆ ಕೊಡಗರ ಆಕ್ರಮಣವಾಗುತ್ತಿದ್ದ ವದಂತಿಯೂ ಜನಪದರಿಂದ ಕೇಳಿ ಬರುತ್ತದೆ. ಇಚ್ಲಂಪಾಡಿಗೆ ಕೊಡಗರ ಆಕ್ರಮಣವಾದಾಗ ಗುತ್ತಿನ ಮಹಿಳೆ ದೇವರನ್ನು ಪ್ರಾರ್ಥಿಸಿ ದೇವಸ್ಥಾನವನ್ನು ಕಟ್ಟಿಸಿಕೊಟ್ಟಳಂತೆ. ಕೊಡಗರ ಆಕ್ರಮಣ ಈ ಸೀಮೆಯಲ್ಲಿ “ಕೊಡಗರ ಗುಲ್ಲು” ಎಂದು ಹೇಳಲಾಗುತ್ತದೆ. ಗಲಾಟೆ ನಡೆದಲ್ಲಿ ಇದೇನು “ಕೊಡಗರ ಗುಲ್ಲೋ” ಎಂದು ಹೇಳುವುದಿತ್ತು.

 

[1] ಎಂ.ಎಂ.ಪ್ರಭು, Alupa Coins – The Journal of the Numismatic Society of India, Vol.XXVII, Part I, 1965.

ನಾಣ್ಯದ ಒಂದು ಮೈಯಲ್ಲಿ ಕೇಸರವುಳ್ಳ ಬಲಗೈ ಮತ್ತು ಬಾಲವನ್ನು ಎತ್ತಿ ಹಿಡಿದ ಸಿಂಹದ ಚಿತ್ರ, ಬಲಬದಿಯಲ್ಲಿ ವೃತ್ತಾಕೃತಿಯ ಸೂರ್ಯನ ಚಿತ್ರವಿದೆ. ಇನ್ನೊಂದು ಮೈಯಲ್ಲಿ “ಜಗದೇಕ ಮಲ್ಲರಾಜ” ಎಂದು ಕೊರೆದಿದೆ. ಹೊಯ್ಸಳ ವೀರನರಸಿಂಹನಿಗೆ ಈ ಬಿರುದಿತ್ತು. ಈ ಚಿನ್ನದ ನಾಣ್ಯದ ಭಾರ ೬೦.೪ ಗ್ರೆಯಿನ್‌. ವ್ಯಾಸ ೧.೫ ಸೆಂಟಿಮೀಟರ್‍. ಇದರ ಆಂಶಿಕ ನಾಣ್ಯಗಳು ೧.೫ ರಿಂದ ೫ ಗ್ರೆಯಿನ್‌ವರೆಗೆ ತೂಗುತ್ತದೆ. ಇದರ ಭಾವಚಿತ್ರವನ್ನು ಶ್ರೀ ಪ್ರಭುಗಳು ಒದಗಿಸಿದ್ದಾರೆ.

[2] ಡಾ| ಕೆ.ಜಿ. ವಸಂತಮಾಧವ – ” ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಸಮೀಕ್ಷೆ” ಸುದರ್ಶನ – ಸಂ. ಅಡ್ಯನಡ್ಕ ಕೃಷ್ಣ ಭಟ್ಟ, ಪ್ರ.ವಿಜಯ ಕಾಲೇಜು ಟ್ರಸ್ಟ್‌, ೧೯೭೭.

[3] ಡಾ| ಪಿ. ಗುರುರಾಜ ಭಟ್‌ – ಸ್ಟಡೀಸ್‌ ಇನ್ ತುಳುವ ಹಿಸ್ಟರಿ ಎಂಡ್‌ ಕಲ್ಚರ್‌, ಪುಟ ೧೦೨.

[4] ಡಾ| ಕೆ.ವಿ. ರಮೇಶ – ಅನಂತಪುರ ಶಾಸನ ‘ತುಳುವ’ ಸಂಪುಟ ೧, ಸಂಚಿಕೆ ೪, ಜುಲಾಯಿ – ಸಪ್ಟಂಬರ ೧೯೮೦, ಪುಟ ೩೬, ಪ್ರ.ರಾ.ಗೋ.ಸಂ. ಕೇಂದ್ರ, ಉಡುಪಿ.

[5] ಜೆ.ಸ್ಟರಕ್‌ – I.C.S. Madras District Manuals, Page 68.

[6] ಗಣಪತಿ ರಾವ್ ಐಗಳ್‌ ಮಂಜೇಶ್ವರ – ಪೂರ್ವೋಕ್ತ.

[7] ಕುಳಮರ್ವ ಜ್ಯೋತಿಷಿ ವೆಂಕಪ್ಪ ಭಟ್ಟ – ಭೂಮಿ ಬಾಳಿಕೆ ಪಟ್ಟೆ. ಕಾಲ ೧೧೬೩ನೇ ಫಸಲಿ ಭಾವ ಸಂವತ್ಸರದ ಆಷಾಢ ಶು. ೧೦ ಕ್ರಿ.ಶ. ೧೭೫೪ ಜೂನ್ ೨೯, ಶನಿವಾರ, ಪರಿವರ್ತಿಸಿ ಹೇಳಿದವರು – ರ್ಶರೀಮತಿ ವಸಂತಲಕ್ಷ್ಮಿ, ಅಧ್ಯಾಪಿಕೆ, ಸರ್ವೋತ್ತಮ ಹೈಸ್ಕೂಲು, ಚಾಮರಾಜ ಪೇಟೆ, ಬೆಂಗಳೂರು.

[8] ಎಡನಾಡು ಮಹಾಲಿಂಗ ಭಟ್ಟ ಬಿ.ಎ. (ವ.೭೫) ಸಂದರ್ಶನ ೪ – ೫ – ೧೯೮೩.

[9] ಅಡೂರು ಶಾಸನ Annual Report on South Indian Epigraphy 1928 – 36. No. 110.

[10] ಹಸ್ತಪ್ರತಿ ಕೊಟ್ಟವರು ಎಡನಾಡು ಮಹಾಲಿಂಗ ಭಟ್ಟರು.