ಪ್ರಾಚೀನರ ಪ್ರಕಾರ ಕೊಂಕಣದಿಂದ ಕನ್ಯಾಕುಮಾರಿ[1] ವರೆಗೆ ಪರಶುರಾಮ ಸೃಷ್ಟಿ. ಇದರೊಳಗೆ ವ್ಯಾಪಿಸಿರುವ ತುಳುನಾಡಿನ ವ್ಯಾಪ್ತಿ ಆಗಿಂದಾಗ ಹೆಚ್ಚು ಕಡಿಮೆಯಾದಂತೆ ತೋರುತ್ತದೆ. ಒಂದು ಹೇಳಿಕೆಯ ಪ್ರಕಾರ, ಗೋಕರ್ಣದಿಂದ ಪಯಸ್ವಿನಿ ನದಿವರೆಗೆ[2] ಇನ್ನೊಂದರ ಪ್ರಕಾರ ಕಲ್ಯಾಣಪುರ ಹೊಳೆಯಿಂದ ತ್ರಿಕರಿಪುರ ಹೊಳೆವರೆಗೆ[3] ತುಳುನಾಡು. ಕ್ರಿ.ಶ. ೬೦೨ರ, ಚಾಲುಕ್ಯ ಮಂಗಳೇಶನ ಮಹಾಕೂಟದ ಸ್ತಂಭ ಶಾಸನದಲ್ಲಿ ಹೇಳಿದ ‘ಆಲುವ’ ತುಳುನಾಡು[4]. ಇದೇ ಆಲುವ ಖೇಡ ಅಥವಾ ಆಳ್ವ ಖೇಡ. ಈ ಕರಾವಳಿ ಪ್ರದೇಶ ಪಶ್ಚಿಮ ಘಟ್ಟದ ಸಾಲುಗಳಿಂದ ದಟ್ಟ ಅರಣ್ಯದಿಂದ ಬೇರ್ಪಟ್ಟು ದುರ್ಗಮವಾಗಿತ್ತು. ಬಹುಕಾಲ ಇದು ಮೇಲಿನ ಜನರಿಗೆ ಅಜ್ಞಾತವಾಗಿತ್ತು. ಇಲ್ಲೂ ಪಶ್ಚಿಮ ಘಟ್ಟದಿಂದ ಇಳಿದು ಬರುವ ಹಲವಾರು ಸಣ್ಣ ದೊಡ್ಡ ನದಿಗಳು, ಹೊಳೆಗಳು ಈ ಭೂಭಾಗವನ್ನು ಬೇರ್ಪಡಿಸಿವೆ. ಮಾರ್ಗ, ಸಂಚಾರ ಸೌಕರ್ಯಗಳು ಇರಲೇ ಇಲ್ಲ. ಪರಂಪರಾಗತ ಕಥೆಯ ಪ್ರಕಾರ ಪರಶುರಾಮನು ಬೆಟ್ಟದ ತುದಿಯಿಂದ ತಾನು ಎಸೆದ ಕೊಡಲಿಯು ಬಿದ್ದಲ್ಲಿವರೆಗೆ ಭೂಭಾಗವನ್ನು ಬಿಟ್ಟುಕೊಡಬೇಕೆಂದು ಸಮುದ್ರರಾಜನಿಂದ ಕೇಳಿ ಪಡೆದ ಭೂಪ್ರದೇಶವಿದು. ಅಂದರೆ ಘಟ್ಟದ ಪಾದದವರೆಗೂ ಸಮುದ್ರ ವ್ಯಾಪಿಸಿತ್ತು. ಈ ದಂತ ಕಥೆಯಲ್ಲಿ ಎರಡು ಸತ್ಯಗಳು ಅಡಗಿರುವಂತೆ ತೋರುತ್ತದೆ. ಸಮುದ್ರವು ಭೂಭಾಗವನ್ನು ಕೊರೆದು ಆಕ್ರಮಿಸುವುದು, ಬಿಟ್ಟು ಕೊಡುವುದು ಭೌಗೋಲಿಕವಾಗಿ ನಡೆಯುವ ಪ್ರಕ್ರಿಯೆ. ಇತ್ತೀಚೆಗಿನ ಭೂ ಸಂಶೋಧನೆಯಿಂದಲೂ ಈ ಮಾತಿಗೆ ಬೆಲೆ ಬಂದಿದೆ. ಆರ್ಯ ಅಥವಾ ಬ್ರಾಹ್ಮಣ ಧರ್ಮವನ್ನು ತಂದ ಮೊದಲಿಗ ಪರಶುರಾಮನಿರಬಹುದು. ಇದರ ಪ್ರಕಾರ ಸಮುದ್ರದಿಂದ ಮುಕ್ತವಾದ ಈ ಪ್ರದೇಶ ಬಹಳ ಕಾಲದ ನಂತರ, ಪರಶುರಾಮನಂತಹ ಸಮರ್ಥರ ಆಗಮನದದ ನಂತರ ಕೃಷಿ, ಸಂಸ್ಕೃತಿ, ನಾಗರಕತೆಗಳ ಬೀಡಾಯಿತು. ಪರಶುರಾಮನ ಕಾಲವನ್ನು ಸಾಧಾರಣವಾಗಿ ಕ್ರಿ.ಪೂ. ೨೪೦೦ ವರ್ಷಗಳೆಂದು[5] ಊಹಿಸಿದರೆ ಇಲ್ಲಿನ ಸಂಸ್ಕೃತಿಯ ಗಡುವು ಅದೇ ಆಗಬಹುದು. ಅವನು ಅಥವಾ ಅವನಂತಹ ಮುಂದುವರಿದ ಜನಾಂಗ ಈ ದುರ್ಗಮ ಪ್ರದೇಶಕ್ಕೆ ಬರುವ ಮೊದಲು ಇದು ಕಾಡಿನಿಂದ ತುಂಬಿ ಗುಡ್ಡಕಾಡು ಜನರ ನೆಲೆಬೀಡಾಗಿತ್ತು. ಪರಶುರಾಮನ ಪರಶು – ಕೊಡಲಿಯು ಕಾಡನ್ನು ಕಡಿದು ಕೃಷಿ ವ್ಯವಸಾಯ ಮಾಡಿದ್ದನ್ನು ಸಂಕೇತಿಸಬಹುದು. ಹೆಚ್ಚು ಬುದ್ಧಿವಂತ ಜನರು ಬಂದು ಇಲ್ಲಿನ ಮೂಲನಿವಾಸಿಗಳನ್ನು ಗೆದ್ದು ಅವರನ್ನು ತಮ್ಮ ಅಂಕಿತಕ್ಕೊಳಪರಿಸಿದರು. ನೆರೆಯ ಗೋವಾ, ಕರ್ನಾಟಕ ಮತ್ತಿತರ ಭಾಗಗಳಿಂದ ಬೇರೆ ಬೇರೆ ವರ್ಗಗಳ, ಭಾಷೆಗಳ ಜನ ಬೇರೆ ಬೇರೆ ಕಾಲದಲ್ಲಿ ಬಂದು ಸುರಕ್ಷಿತವಾದ ಫಲವತ್ತಾದ ಪ್ರಕೃತಿ ರಮ್ಯವಾದ ಈ ಪ್ರದೇಶದಲ್ಲಿ ನೆಲೆಸಿದ್ದರಿಂದ ಮೂಲನಿವಾಸಿಗಳಿಗಿಂತ ಆಗಂತುಕರೇ ಇಲ್ಲಿ ಹೆಚ್ಚಾಗಿದ್ದಾರೆನ್ನಬಹುದು. ಆಗಂತುಕರೇ ಇಲ್ಲಿ ಹೆಚ್ಚಾಗಿದ್ದಾರೆನ್ನಬಹುದು. ಆದ್ದರಿಂದಲೇ ಇಲ್ಲಿ ಜನ, ಭಾಷೆ, ಸಂಸ್ಕೃತಿ ವೈವಿಧ್ಯವಿದೆ. ಪ್ರಾಚೀನ ಕರ್ನಾಟಕದ ದಕ್ಷಿಣ ತುದಿಯ ಗಡಿ ಚಂದ್ರಗಿರಿ ಅಥವಾ ಪಯಸ್ವಿನಿ ಹೊಳೆ, ಇಕ್ಕೇರಿ ಅರಸರ ಕಾಲದಲ್ಲಿ ನೀಲೇಶ್ವರ, ತ್ರಿಕರಿಪುರದವರೆಗೂ ವ್ಯಾಪಿಸಿತ್‌ಉತ. ತುಳುನಾಡು ಕಲ್ಯಾಣಪುರ ಹೊಳೆಯಿಂದ ದಕ್ಷಿಣ ತುದಿಯವರೆಗೆ ಹಬ್ಬಿತ್ತು.

ಪೋರ್ತುಗೀಜರ, ಬ್ರಿಟಿಷರ ಆಗಮನದ ನಂತರ ಕರಾವಳಿ ಕರ್ನಾಟಕಕ್ಕೆ ಕೆನರಾ (CANARA) ಎಂಬ ಹೆಸರಾಗಿ ಇದರಲ್ಲಿ ಉತ್ತರ, ದಕ್ಷಿಣ (North, South) ಎಂಬ ವಿಭಾಗಗಳೂ ಆದವು. ಪೋರ್ತುಗೀಜರು ತಮ್ಮ ಭಾಷೆಯ ಜಾಯಮಾನದ ಪ್ರಕಾರ ‘ಕನ್ನಡ’ ಎಂಬುದನ್ನೇ ‘ಕೆನರಾ’ ಎಂದು ಕರೆದರು[6] ಎಂಬ ಮಾತನ್ನು ಇನ್ನಷ್ಟು ಚಿಂತಿಸಬೇಕು. ಶ್ರೀ ಗೌರೀಶ ಕಾಯ್ಕಿಣಿ ವರು ದಿ| ಎಸ್.ಸಿಲ್ವಾ ಮತ್ತು ದಿ| ಹನುಮಂತರಾವ್‌ ಅವರ ಮಾತನ್ನು ಉದ್ಧರಿಸಿದ್ದಾರೆ – ”ಈ ಕ್ಯಾನರಾ” “ಕನ್ನಡ”ದ ಅಪ್ರಭ್ರಂಶವೇ ಅಲ್ಲ. ಟಿಪ್ಪುವಿನ ರಾಜ್ಯದಲ್ಲಿ ಈ ಕರಾವಳಿಯ ಸೀಮೆಯನ್ನು “ಸೂಬಾ ಕಿನಾರಾ” ಎಂದು ಕರೆಯುತ್ತಿದ್ದರು. ಈ ‘ಕಿನಾರಾ’ ಶಬ್ದವೇ ಪೋರ್ತುಗೀಜರ, ಬ್ರಿಟಿಷರ ಬಾಯಲ್ಲಿ ‘ಕ್ಯಾನರಾ’ (CANARA) ಆಗಿರಬೇಕು[7]. ‘ಕಿನಾರಾ’, ಸಮುದ್ರ ಕಿನಾರೆ, ದಡ ಎಂಬ ಅರ್ಥ ಇಲ್ಲಿ ಸ್ಪಷ್ಟ. ‘ಕನ್ನಡ’ ಎಂದು ಹೇಳುವಲ್ಲೆಲ್ಲಾ ‘ಕ್ಯಾನರಾ’ ಎನ್ನುವುದಿಲ್ಲ. ಈ ಕರಾವಳಿಯ ಪ್ರದೇಶಕ್ಕೆ ಮಾತ್ರ ಆ ಹೆಸರಾದ್ದರಿಂದ ಅದು ‘ಕಿನಾರಾ’ ಎಂಬುದರಿಂದಲೇ ಹುಟ್ಟಿಕೊಂಡಿರಬೇಕು.

ತುಳು ನಾಡು :

ತುಳು ಭಾಷೆಯನ್ನಾಡುವ ಪ್ರದೇಶವನ್ನು ಮಾತ್ರ ಹೇಳುವುದಿದ್ದರೆ ಉಡುಪಿ ಹತ್ತಿರದ, ಕಲ್ಯಾಣಪುರ ಹೊಳೆಯಿಂದ ಕಾಸರಗೋಡಿನ ಹತ್ತಿರದ ಚಂದ್ರಗಿರಿ ಅಥವಾ ಪಯಸ್ವಿನಿ ಹೊಳೆಯವರೆಗೆ ಈ ಪ್ರದೇಶ ವ್ಯಾಪಿಸಿದೆ. ಪೂರ್ವದಲ್ಲಿ ಪಶ್ಚಿಮ ಘಟ್ಟ, ಪಶ್ಚಿಮದಲ್ಲಿ ಅರಬೀ ಸಮುದ್ರ ಇದರ ಮೇರೆಗಳು, ‘ತುಳು ನಾಡು’ ಅಥವಾ ‘ತುಳುವ’ ಹೆಸರು ಹತ್ತನೆಯ ಶತಮಾನದ ಆನಂತರ ಬಂದಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಪಡಿಸಿದ್ದಾರೆ ದಿ|ಗೋವಿಂದ ಪೈಗಳು. [8] ‘ತುಳು’ ಶಬ್ದದ ಬಗೆಗೆ ರೆವರೆಂಡ್ ಬ್ರಿಗೆಲ್‌ (ತುಳುಗ್ರಾಮರ್‌), ಎ.ಮ್ಯಾನರ್‌ (ತುಳು ನಿಘಂಟು), ಗೋವಿಂದ ಪೈ, ಸೇರಿಯಾಪು ಕೃಷ್ಣ ಭಟ್ಟ ಮೊದಲಾದವರ ಅಭಿಪ್ರಾಯಗಳನ್ನು ಚರ್ಚಿಸಿ ಡಾ| ಗುಂಡ್ಮಿ ಚಂದ್ರಶೇಖರ ಐತಾಳರು ‘ತುಳು’ವಿಗೆ ಮೃದುವಾದ ಭಾಷೆ ಎಂಬ ಅರ್ಥ ಮಾಡಿದ್ದಾರೆ. ‘ತುಳು’ ಮೂಲ ದ್ರಾವಿಡ ಶಬ್ದವಾಗಿದ್ದು ಮೂಲ ದ್ರಾವಿಡ ವರ್ಗದವರು ಆಡುವ ಭಾಷೆಯಾಗಿತ್ತು. ಇವರಂತೆಯೇ ತುಡ, ತೊಡ, ತೋಡವೂ ಒಂದು ಪ್ರಾಚೀನ ದ್ರಾವಿಡ ಜನಾಂಗ. ‘ತುಳ್‌’ ಅಂದರೆ ಕುಣಿ ಎಂಬ ಅರ್ಥ ಮಲಯಾಳ ಮೊದಲಾದ ಇತರ ದ್ರಾವಿಡ ಭಾಷೆಗಳಲ್ಲೂ ಇದೆ. (ತುಳ್ಳಲ್‌-ಓಟ್ಟಂ ತುಳ್ಳಲ್‌- ಮಲಯಾಳ). ತುಳು ಆದಿವಾಸಿಗಳಿಗೆ ಸಂತೋಷ ಸಮಾರಂಭಗಳಲ್ಲಿ, ವಿನೋದಕ್ಕಾಗಿ ಕುಣಿಯುವ ಸಂಪ್ರದಾಯವಿದೆ. ತುಳು ಮೂಲ ನಿವಾಸಿಗಳಾದ ಹರಿಜನರು ಅವರ ಮದುವೆಗೆ ತುಳ್ಳೆಲ್‌-ಚುಳ್ಯೆಲ್‌ ಎನ್ನುತ್ತಾರೆ. ಆ ಸಂದರ್ಭದಲ್ಲಿ ದುಡಿ ಬಾರಿಸುತ್ತಾ ಅವರು ಕುಣಿಯುತ್ತಾರೆ. ಅವರ ಕುಣಿತವನ್ನು ನೋಡಿದ ಇತರರು ಅವರನ್ನು ತುಳ್ಳುವರ್‌ತುಳುವರ್‌ ಎಂದು ಕರೆದಿರಬಹುದು. ಮುಂದೆ ಆ ಭಾಷೆಯ ಅಥವಾ ಅದರ ರೂಪಾಂತರಗಳನ್ನಾಡುವ ಇತರರಿಗೂ ಅದೇ ಹೆಸರು ಬಂದಿರಬಹುದು. ನನ್ನ ಗುರುಗಳಾದ ಪ್ರೊ| ಎಂ. ಮರಿಯಪ್ಪ ಭಟ್ಟರೊಂದಿಗೆ ಈ ವಿಚಾರ ಚರ್ಚಿಸಿದಾಗ ಅವರೂ ಇದನ್ನು ಒಪ್ಪಿಕೊಂಡಿದ್ದರು.

ಕುಂಬಳೆ :

ತುಳುನಾಡಿನ ದಕ್ಷಿಣ ತುದಿ, ತುಳುವಿನ ತಿರುಳು, ಕುಂಬಳೆ ಸೀಮೆ ಅಥವಾ ಕಾಸರಗೋಡು ಪ್ರದೇಶ. ಪ್ರಾಚೀನ ಕಾಲದಲ್ಲಿ ‘ಕುಂಬಳೆ’ ಒಂದು ಸಣ್ಣ ರಾಜ್ಯವಾಗಿದ್ದು ಕಾಸರಗೋಡು ಅದರ ದಕ್ಷಿಣ ತುದಿಯಲ್ಲಿರುವ ಒಂದು ಚಿಕ್ಕ ಪ್ರದೇಶವಾಗಿತ್ತು. ಕುಂಬಳೆ ರಾಜ್ಯವು ಉತ್ತರದಲ್ಲಿ ನೇತ್ರಾವತಿಯಿಂದ ದಕ್ಷಿಣದಲ್ಲಿ ಚಂದ್ರಗಿರಿವರೆಗೆ ಪೂರ್ವದಲ್ಲಿ ಪಶ್ಚಿಮ ಘಟ್ಟ, ಪಶ್ಚಿಮದಲ್ಲಿ ಅರಬೀ ಸಮುದ್ರವೇ ಮೇರೆಯುಳ್ಳದ್ದಾಗಿದೆ. [9] ಮುಂದೆ ಈ ಉತ್ತರದ ಗಡಿ ಈಚೆಗೆ ಉಪ್ಪಳದ ಹೊಳೆವರೆಗೆ ಸೀಮಿತವಾದಂತೆ ತೋರುತ್ತದೆ. ಕುಂಬಳೆಯೇ ಕುಂಬಳೆ ರಾಜ್ಯದ ಕೇಂದ್ರವಾಗಿದ್ದು ಇದಕ್ಕೆ ಕಬೇನಾಡು ಎಂಬ ಹೆಸರೂ ಇತ್ತು. ಕುಂಬಳೆಯ ಹತ್ತಿರವೇ ಕುಂಬಳೆಯ ಹತ್ತಿರವೇ ‘ಕಬೆಕ್ಕೋಡು’ ಎಂಬ ಹಳ್ಳಿಯಿದೆ. ಬ್ರಿಟಿಷರ ಅನಂತರ ಆಡಳಿತ ಕೇಂದ್ರವು ಒಮ್ಮೆ ಬೇಕಲಕ್ಕೆ ಆಮೇಲೆ ಕಾಸರಗೋಡಿಗೆ ವರ್ಗಾವಣೆಗೊಂಡಿತು. ತುಳುನಾಡಾದ ಕುಂಬಳೆ ಅಚ್ಚ ತುಳು ಪ್ರದೇಶವಾದರೂ ಇಲ್ಲಿನ ಪಾಳೆಯಗಾರರು ಕರ್ನಾಟಕದ ಅರಸರ ಅಧೀನದಲ್ಲಿ ಆಡಳಿತ ನಡೆಸುತ್ತಿದ್ದುದರಿಂದ ಅತ್ಯಂತ ಪ್ರಾಚೀನಕಾಲದಿಂದಲೇ ಇಲ್ಲಿ ಆಡಳಿತದ, ವ್ಯವಹಾರದ ಸಾಹಿತ್ಯದ ಭಾಷೆ ಕನ್ನಡವಾಗಿಯೇ ಈಗಲೂ ನಡೆದು ಬರುತ್ತಿದೆ. ಪ್ರಾಚೀನ, ಅನಂತಪುರದ ತುಳು ಶಾಸನ, ಹದಿನಾರನೇ ಶತಮಾನದ ತುಳು ಗ್ರಂಥಗಳಾದ ಶ್ರೀ ಭಾಗವತೊ; ಕಾವೇರಿ, ಇತ್ತೀಚೆಗೆ ಪುಂಡೂರು ವೆಂಕಟರಾಜ ಪುಣಿಂಚತ್ತಾಯರು ಹುಡುಕಿ ಹಿಡಿದ, ಕೇವಲ ಐದೇ ಹಾಳೆ ಸಿಕ್ಕಿದ “ತುಳು ಕರ್ಣಪರ್ವ” [10] ಈ ಪ್ರದೇಶದ ಸುತ್ತುಮುತ್ತಲೇ ಸಿಕ್ಕಿವೆ. ಮಧ್ವಾಚಾರ್ಯರ ಕಾರ್ಯಕ್ಷೇತ್ರವಾದ ಕೂಡ್ಲು, ಕಾವು ಇಲ್ಲೇ ಇರುವವು. ಮಧ್ವಾಚಾರ್ಯರು ವಾದದಲ್ಲಿ ಗೆದ್ದು ಶಿಷ್ಯನಾಗಿ ಸ್ವೀಕರಿಸಿದ ತ್ರಿವಿಕ್ರಮ ಪಂಡಿತಾಚಾರ್ಯ ಮತ್ತವನ ಕುಟುಂಬದವರೆಲ್ಲಾ ಇಲ್ಲೇ ಹತ್ತಿರದ ಕಾವು ಎಂಬ ಕಾಸರಗೋಡಿನ ಹತ್ತಿರದ ಊರಿನವರು. ಮಧ್ವಾಚಾರ್ಯರು ಹಲವು ಶಿಷ್ಯರಿಗೆ ಸನ್ಯಾಸ ನೀಡಿದ “ಕಣ್ವತೀರ್ಥ”, ಗ್ರಂಥಗಳನ್ನು ಭೂಗತಗೊಳಿಸಿದ ಕಟ್ಟೆತ್ತಿಲ ಇಲ್ಲೇ ಇವೆ. ಯಕ್ಷಗಾನ ಪಿತಾಮಹ ಪಾರ್ತಿಸುಬ್ಬ, ಆಧುನಿಕ ಕವಿಗಳಾದ ಮಂಜೇಶ್ವರ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ, ಡಾ| ಕೆ.ವಿ. ತಿರುಮಲೇಶ ಮೊದಲಾದವರು ಇಲ್ಲಿನವರು.

ಪ್ರಾಂತ ಪುನಾರಚನೆಯ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೊಡ್ಡ ತಾಲೂಕಾಗಿದ್ದ ಈ ಭಾಗವು ಪ್ರಾಂತ ಪುನಾರಚನೆಯ ನೆಪದಲ್ಲಿ ಕೇರಳಕ್ಕೆ ತಳ್ಳಲ್ಪಟ್ಟಿತು. ಕೇರಳದ ಉತ್ತರ ತುದಿಯಾಗಿ, ಕರ್ನಾಟಕದ ದಕ್ಷಿಣದ ಕೊನೆಯ ಗಡಿನಾಡಾಗಿ ಎರಡೂ ರಾಜ್ಯಗಳಿಂದ ಅವಗಣಿಸಲ್ಪಟ್ಟ ಪ್ರದೇಶವಾಗಿದೆ. ಆಡಳಿತ ಕೇಂದ್ರವು ಕಾಸರಗೋಡು ಪಟ್ಟಣಕ್ಕೆ ವರ್ಗಾವಣೆಗೊಂಡು ೧೯೮೪, ಮೇ ೨೪ರಂದು ಜಿಲ್ಲಾ ಕೇಂದ್ರದ ಪಟ್ಟವನ್ನೇರಿದೆ.

ಕುನ್‌+ಪೊಳೆ – ಕುಂಬೊಳೆ – ಕುಂಬಳೆ – ಅಂದರೆ ಹೊಳೆಯಿಂದ ಆವೃತವಾದ ‘ಕುನ್‌’ – ಗುಡ್ಡ ಪ್ರದೇಶ. ಪ್ರಾಚೀನ ಅರಮನೆ ಇದ್ದ ಜಾಗ ಕೋಟೆಕ್ಕಾರು (ಕಂಚಿಕಟ್ಟೆ) ಈ ಲಕ್ಷಣವನ್ನು ಹೊಂದಿದೆ. ಕುಂಬಳೆ ಪೇಟೆಯಿಂದ ಒಂದು ಮೈಲು ಉತ್ತರಕ್ಕೆ ಇಕ್ಕೇರಿ ನಾಯಕರು ಕಟ್ಟಿದ ಕೋಟೆಯಿರುವ ಜಾಗವೂ ಉಪ್ಪಳ ಹೊಳೆ ಸೀರೆ ಹೊಳೆಗಳಿಂದಾವೃತವಾಗಿ ಸಹಜ ಕೋಟೆಯಾಗಿದೆ. ಇಲ್ಲಿಗೂ ಕುಂಬಳೆ ಎಂಬ ಹೆಸರು ಸಾರ್ಥಕ. ದಿ| ವಾಸುದೇವ ಚರಡಪ್ಪ ನಾಯಕರು ಕೂಂಬ+ಹೊಳೆ ಎಂದು ವಿಂಗಡಿಸಿ ಹೋಳೆಯಿಂದ ಆವೃತ ಪ್ರದೇಶವೆಂದು ಅರ್ಥಯಿಸಿದ್ದಾರೆ. [11] ಮುದ್ದಣನ ರಾಮೇಶ್ವಮೇಧದ ಟಿಪ್ಪಣಿಯಲ್ಲಿ (ಪುಟ ೫೨), ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು “ಯಾಗ ಶಾಲೆಯಂ ನೇರ್ಪಡಿಸಿ ಕುಂಬೆಯಂ ಬಲಿದು” ಎಂಬಲ್ಲಿ ‘ಕುಂಬೆ’ ಶಬ್ದಕ್ಕೆ ಆವರಣ ಎಂಬರ್ಥ ಕೊಟ್ಟಿದ್ದಾರೆ. ಈ ಲಕ್ಷಣವಿರುವ, ಈ ಹೆಸರಿರುವ ಪ್ರದೇಶಗಳು ಹಲವಿವೆ – ಉಡುಪಿ ತಾಲೂಕಿನ ಫಲಿಮಾರಿನ ಹತ್ತಿರ ಕುಂಪ್ಳಿ, ಶಿರ್ವದ ಹತ್ತಿರ ಕುಂಬ್ಳೆ, ಕುಕ್ಕೆಹಳ್ಳಿಯ ಪಕ್ಕದಲ್ಲಿ ಕುಂಬ್ಳೆ ಇತ್ಯಾದಿ. [12] ಕುಂಭ+ಹೊಳೆ – ಕುಂಭದಿಂದ ಹರಿದ ನೀರು ಹೊಳೆಯಾಯಿತು ಇತ್ಯಾದಿ ಕಾಲ್ಪನಿಕ ವಿವರಣೆಗಳು ಹೊಂದಿಕೆಯಾಗವು. ಕುಂಬಳೆಗೆ ಇನ್ನೊಂದು ಹೆಸರು ಕಣಿಪುರ, ಕಣ್ಯಾರ. ಇದು ಇಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದಿಂದ, ‘ಕೃಷ್ಣ’ ಶಬ್ದದಿಂದ ಬಂದುದು. ‘ಕೃಷ್ಣ’ವು ಕಣ್ಣ, ಕಣಿ ಆಗಿ ಕಣಿಪುರ – ಕಣ್ಯಾರ ಆಗಿದೆ. ಇದನ್ನೇ ಕಣ್ವಪುರವೆಂದು ಮಹರ್ಷಿಯ ಹೆಸರಿಗೆ ಜೋಡಿಸಿ ವೈಭವೀಕರಿಸಲಾಗಿದೆ. ಮಲಯಾಳದಲ್ಲಿ ಕಣ್ಣಸಾಮಾನ್ಯ ಹೆಸರು, ಹಿಂದಿಯಲ್ಲಿ ಕನ್ನೆಯ್ಯಾ ಬಳಕೆ ಇದೆ. ರಾಷ್ಟ್ರಕೂಟ ‘ಕನ್ನರ’ ಎಂಬ ಹೆಸರೂ ಕೃಷ್ಣ ಮೂಲದಿಂದಲೇ ಬಂದಿರಬಹುದು.

ಕುಂಬಳೆ ಅರಸರ ಮೂಲ ವಾಸಸ್ಥಾನ ಕಣ್ಯಾರ ದೇವಸ್ಥಾನದಿಂದ ಸುಮಾರು ಒಂದೂವರೆ ಮೈಲು ಪೂರ್ವದಲ್ಲಿ ಕೋಟೆಕ್ಕಾರು ಎಂಬಲ್ಲಿ ಹೊಳೆಯ ಪಕ್ಕದಲ್ಲಿದೆ. ಅಂದಿನ ಅವಶೇಷಗಳನ್ನು ಇಲ್ಲಿ ಗುರುತಿಸಬಹುದು. ಇವರ ಶಾಖೆಯೇ ಕೊಡ್ಯಮ್ಮೆ ಎಂಬಲ್ಲಿ ಈಗ ನೆಲಸಿದೆ. ಇನ್ನೊಂದು ಶಾಖೆ ಮಾಯಿಪ್ಪಾಡಿಯಲ್ಲಿ ನೆಲೆಸಿದೆ. ಪ್ರಾಚೀನ ಸ್ಥಾನಮಾನಗಳೆಲ್ಲಾ ಕೊಡ್ಯಮ್ಮೆಯಲ್ಲಿರುವವರಿಗೇ ಸಲ್ಲುತ್ತಿತ್ತು. ಮಾಯಿಪ್ಪಾಡಿ ಶಾಖೆ ಪ್ರಬಲವಾದಾಗ ಇವರು ನಿಸ್ತೇಜರಾದರು. ಇವರು ಬಲ್ಲಾಳ ಉಪನಾಮದ ಜೈನರಾದರೂ ಆರಾಧ್ಯ ಪಟ್ಟದ ದೇವರು ಗೋಪಾಲಕೃಷ್ಣನೇ.

ಕುಂಬಳೆಯ ಅರಸು ಮನೆತನ ಪಾಳೆಯಗಾರ ಅಥವಾ ಸಾಮಂತ ಮನೆತನ, ಇದು ಸ್ವತಂತ್ರವಾಗಿ ಕೋಟೆಕಟ್ಟಿ ಸೈನ್ಯವಿಟ್ಟು ನಾಣ್ಯ ಚಲಾವಣೆ ನಡೆಸಿ ಆಳಿದುದಲ್ಲ. ಕರ್ನಾಟಕದ ಚಕ್ರವರ್ತಿಗಳ ಕೈಕೆಳಗೆ, ಅವರಿಗೆ ಕಂದಾಯ ವಸೂಲಿ ಮಾಡಿಕೊಡುವ, ಪರಕೀಯ ಆಕ್ರಮಣವಾಗದಂತೆ ತಡೆಯುವ, ಸೈನ್ಯಕ್ಕೆ ಗಂಡುಗಲಿಗಳನ್ನೊದಗಿಸಿ ಕೊಡುವ ಹಿರಿಯ ಶ್ರೀಮಂತ ಜಮೀನ್ದಾರಿ ಮನೆತನ. ಚಕ್ರವರ್ತಿಯ ಅಧಿಕಾರ ಸೂತ್ರ ಇವರ ಕೈಯಲ್ಲಿ ಹಾದು ಹೋಗುವುದರಿಂದ, ಶ್ರೀಮಂತ ಸ್ಥಾನಮಾನ ಗಳಿಸಿದ್ದರಿಂದ ಇವರೂ ಅರಸರು, ರಾಜರು ಎನಿಸಿಕೊಂಡರು. ಕೆಲವೊಮ್ಮೆ ಚಕ್ರವರ್ತಿಯ ಬಿರುದುಗಳನ್ನು ತಮಗೂ ಅನ್ವಯಿಸಿಕೊಂಡರು.

ಕುಂಬಳೆ ಅರಸು ಮನೆತನದ ಇತಿಹಾಸ :

ಇದು ಚಿಕ್ಕ ಪಾಳೆಯ ಪಟ್ಟವಾದುದರಿಂದ ದೊಡ್ಡ ಇತಿಹಾಸಕಾರರು ಈ ಮನೆತನದ ಕಡೆಗೆ ಲಕ್ಷ್ಯವನ್ನೇ ಹರಿಸಿಲ್ಲ. ಅಖಿಲ ಕರ್ನಾಟಕದ ನೆಲೆಯಲ್ಲಿ ಇದೊಂದು ಚುಕ್ಕಿ ಮಾತ್ರ. ಆಧುನಿಕರೂ ಈ ಕಡೆಗೆ ದೃಷ್ಟಿ ಹಾಯಿಸಿಲ್ಲ. ಇದರ ಬಗೆಗೆ ಹೆಚ್ಚು ಲಿಖಿತ ದಾಖಲೆಗಳೂ ಲಭ್ಯವಾಗುವುದಿಲ್ಲ. ದಕ್ಷಿಣ ಕನ್ನಡದ ಇತಿಹಾಸ ಬರೆದ ಗಣಪತಿ ರಾವ್ ಐಗಳ್‌, ಕೇಶವಕೃಷ್ಣ ಕುಡ್ವ, ಡಾ|ಗುರುರಾಜ ಭಟ್ಟ ಮೊದಲಾದವರು ಅಲ್ಪ ಸ್ವಲ್ಪ ಪ್ರಸ್ತಾವಿಸಿ ಬಿಟ್ಟಿದ್ದಾರೆ. ತುಳು ನಾಡಿನ ಇತಿಹಾಸವೆಂದರೆ ಹೆಚ್ಚಾಗಿ ಆಲುಪರನ್ನೇ ಗಣಿಸುತ್ತಾರೆ. ಇದು ಕರ್ನಾಟಕದಿಂದ ಹೊರಗೆ ಕೇರಳಕ್ಕೆ ಕಡಿದು ಹೋಗಿರುವುದೂ ಒಂದು ಕಾರಣವಿರಬಹುದು. ಇದೇ ಅರಸು ಮನೆತನದ ಶ್ರೀ ಉದಯವರ್ಮ ರಾಜರು “ತುಳುನಾಡಿನ ಗತ ವೈಭವ” ಎಂಬ ಹೆಸರಿನಲ್ಲಿ ೧೯೭೦ರ ದಶಕದಲ್ಲಿ (೪ – ೫ – ೧೯೭೦ ರಿಂದ ೨೮ – ೧೨ – ೧೯೭೦ರವರೆಗೆ) ಉದಯವಾಣಿಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ್ದು, ಅದೇ ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಘಟಕದಿಂದ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಅವರು ಮುಖ್ಯವಾಗಿ ಈ ಪ್ರದೇಶದ ಕ್ಷೇತ್ರ ಮಾಹಾತ್ಮ್ಯ, ಕೆಲವು ಶಾಸನ, ದಾಖಲೆಗಳನ್ನಾಧರಿಸಿ ಇದರ ಇತಿಹಾಸವನ್ನು ರೂಪಿಸಲು ಪ್ರಯತ್ನಿಸಿದ್ದಾರೆ. ಪ್ರಸ್ತುತ ಲೇಖಕನಿಂದ ಕ್ಷೇತ್ರ ಕಾರ್ಯ, ವ್ಯಕ್ತಿಗಳ ಸಂದರ್ಶನ ಮತ್ತು ಕೆಲವು ದಾಖಲೆಗಳ ಆಧಾರದಿಂದ ೧೯೯೪ರಲ್ಲಿ ಪ್ರಕಟವಾದ “ಗಡಿನಾಡು – ಕಾಸರಗೋಡು” ಎಂಬ ಪುಸ್ತಕದಲ್ಲಿ ಕುಂಬಳೆ ಅರಸು ಮನೆತನದ ಇತಿಹಾಸವನ್ನು ಸಂಕ್ಷೇಪವಾಗಿ ಕೊಡಲಾಗಿದೆ. ಲಿಖಿತ ಆಧಾರಗಳು ಇಲ್ಲದಿರುವುದರಿಂದ ಅರಸರ ವಂಶಾವಳಿಯನ್ನಾಗಲೀ, ಅವರ ಕಾರ್ಯಭಾರದ ವಿವರಗಳನ್ನಾಗಲೀ ಕಾಲಾನುಗುಣವಾಗಿ ಕ್ರಮಬದ್ಧವಾಗಿ ಕೊಡುವುದು ಅಸಾಧ್ಯ. ಪ್ರಸ್ತುತ ಲೇಖಕನು ಮೈಸೂರು ಶಾಸನ ಶಾಸ್ತ್ರ ಇಲಾಖೆಯ ಡಾ|ಕೆ.ವಿ.ರಮೇಶರ ಒಪ್ಪಿಗೆಯಿಂದ ಶ್ರೀ ಮಾಧವ ಕಟ್ಟಿಯವರೊಡನೆ ಈ ಪ್ರದೇಶದ ಶಾಸನಗಳ ಪ್ರತಿ ತೆಗೆದರೂ ಅವು ಅಸ್ಪಷ್ಟವಾಗಿರುವುದರಿಂದ ಹೆಚ್ಚು ಪ್ರಯೋಜನವಾಗಲಿಲ್ಲ.

ಸ್ಥಳ ಪುರಾಣಗಳು ಕುಂಬಳೆ ಅರಸರ ಬಗೆಗೆ ಬೆಳಕು ಚೆಲ್ಲುತ್ತವೆ. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದ “ವೇಲಾಪುರ ಮಾಹಾತ್ಮ್ಯ” ವೆಂಬುದು ಉಪ್ಪಳ ಸಮೀಪದ ಐಲ ದುರ್ಗಾಪರಮೇಶ್ವರೀ ದೇವಸ್ಥಾನದ ಕತೆಯನ್ನು ಹೇಳುವಲ್ಲಿ ಕುಂಬಳಿ ಅರಸನ ವಿಚಾರ ಬರುತ್ತದೆ. ಕದಂಬ ದೊರೆ ಮಯೂರಶರ್ಮನ ಮಗ ಚಂದ್ರಾಂಗದ, ಮಗಳು ಸುಶೀಲೆ. ಇವರು ತೀರ್ಥಯಾತ್ರೆಗೆ ಕನ್ಯಾಕುಮಾರಿವರೆಗೆ ಹೋಗಿ ಹಿಂತಿರುಗುವಾಗ ಕುಂಬಳೆಯ ಹೊಳೆಯ ಪಕ್ಕದಲ್ಲಿ ಸುಶೀಲೆಯು ಗಂಧರ್ವಪೀಡಿತಳಾದಳು. ಅವಳ ಕಾಯಿಲೆಯನ್ನು ಯಾರಿಗೂ ಗುಣಪಡಿಸಲಾಗದೆ ಬ್ರಾಹ್ಮಣನೊಬ್ಬನು ಗುಣಪಡಿಸುತ್ತಾನೆ. ಅವನಿಗೇ ಅವಳನ್ನು ಮದುವೆ ಮಾಡಿ ತುಳು ರಾಜ್ಯದ ಒಡೆತನವನ್ನು, ಮೂವತ್ತೆರಡು ಗ್ರಾಮಗಳನ್ನು ಕೊಡುತ್ತಾನೆ. ಇಲ್ಲಿಂದ ಮುಂದೆ ಈ ವಂಶದ ಸ್ತ್ರೀಯರು ಬ್ರಾಹ್ಮಣರನ್ನು ಮದುವೆಯಾಗುವ ಕ್ರಮವು ರೂಢವಾಯಿತು. (ತದಾ ಪ್ರಭೃತಿ ತದ್ವಂಶ್ಯಾಃಸ್ತ್ರಿಯೋ ವವ್ರುಃ ದ್ವಿಜಾನ್‌ ಪತೀನ್‌ ವೇ.ಮಾ. ಅಧ್ಯಾಯ ೨, ಶ್ಲೋಕ ೩೩). ಆ ಸುಶೀಲೆಯ ಮಗನೇ ಕವಿಸಿಂಹ. ಅವನು ಒಂದು ಸಲ ಬೇಟೆಗೆ ಹೋದಾಗ ಅರಿಯದೆ ಋಷಿಯನ್ನು ಕೊಂದ ಪಾಪ ಪರಿಹಾರಕ್ಕಾಗಿ ತಪಸ್ಸು ಮಾಡುತ್ತಾನೆ. ಸುಬ್ರಹ್ಮಣ್ಯನನ್ನು ತಪಸ್ಸಿನಿಂದ ಒಲಿಸಿ ಕುಮಾರ ಮಂಗಲದಲ್ಲಿ ದೇವಾಲಯ ಪ್ರತಿಷ್ಠೆ ಮಾಡುತ್ತಾನೆ. ಮದವೂರ ದೇವಸ್ಥಾನದ ಶಿವನನ್ನು ಪೂಜಿಸುತ್ತಾನೆ. ಐಲದಲ್ಲಿ ಶಂಕರನೆಂಬ ಬ್ರಾಹ್ಮಣನ ನೇತೃತ್ವದಲ್ಲಿ ದುರ್ಗಾಪರಮೇಶ್ವರೀ ದೇವಸ್ಥಾನ ಸ್ಥಾಪಿಸುತ್ತಾನೆ. ಮುಗರನೆಂಬ ಚಂಡಾಲ ಮುಖ್ಯನನ್ನು ಮಾಟ ಮಂತ್ರಾದಿಗಳಿಂದ ಗೆಲ್ಲುತ್ತಾನೆ. (ಚಂಡಾಲಾ ಮುಗರಾಖ್ಯ ಬಲೇಧಿಕಾಃ ರಾಜ್ಯಂ ಚಕ್ರುರ್ನಿರಾತಂಕಂ ದ್ವಾತ್ರಿಂಶತ್‌ಗ್ರಾಮಸಂಮಿತಮ್‌ವೇ. ಮಾ. ಅಧ್ಯಾಯ ೫, ಶ್ಲೋಕ ೧೦, ಅಧ್ಯಾಯ ೮, ಶ್ಲೋಕ ೭.) ಇಲ್ಲಿ ಮೂಲ ನಿವಾಸಿಗಳನ್ನು ಗೆದ್ದು ರಾಜ್ಯಸ್ಥಾಪನೆ ಮಾಡಿದುದು ಐತಿಹಾಸಿಕ ವಸ್ತುವಾಗಿ ತೋರುತ್ತದೆ. ಅಹಿಚ್ಛತ್ರದಿಂದ (ಹೈಗ ನಾಡಿನಿಂದ) ಮೂವತ್ತೆರಡು ಬ್ರಾಹ್ಮಣ ಕುಟುಂಬಗಳನ್ನು ತಂದು ನೆಲೆಗೊಳಿಸಿದನು. ಅವರಿಗೆ ತಂತ್ರಾಧಿಕಾರಾದಿಗಳನ್ನು ನಿಯಮಿಸಿದನು. ಕವಿಸಿಂಹನು ಪಯಸ್ವಿನೀ ನದಿಯ ತಟದಲ್ಲಿ ಪಾಂಡ್ಯನೊಡನೆ ನಡೆದ ಘೋರ ಯುದ್ಧದಲ್ಲಿ ಅವನನ್ನು ಸೋಲಿಸಿ ಸೆರೆ ಹಿಡಿದು ತಾಯ ಪಾದಕ್ಕೊಪ್ಪಿಸಿದ ವರ್ಣನೆ ಇದೆ. ಈ ಕವಿಸಿಂಹನನ್ನೊಳಗೊಂಡ ‘ವೇಲಾಪುರ ಮಾಹಾತ್ಮ್ಯ’ ಕಥೆ ಯಕ್ಷಗಾನವಾಗಿಯೂ ಮೆರೆದಿದೆ. ಈ ಕಥೆಯನ್ನು ನೋಡಿದರೆ ಐತಿಹಾಸಿಕ ವಸ್ತು ಪುರಾಣ ಲೇಪವನ್ನು ಪಡೆದಂತೆ ತೋರುತ್ತದೆ. ಹೊರಗಿನಿಂದ ಬಂದ ಈ ನಾಗರೀಕ ಜನ ಇಲ್ಲಿನ ಮೂಲ ನಿವಾಸಿಗಳನ್ನು ಗೆದ್ದು ತಮ್ಮ ರಾಜ್ಯ ಸ್ಥಾಪನೆ ಮಾಡಿದರೆಂಬುದು ಐತಿಹಾಸಿಕ ಸತ್ಯವಾಗಿ ತೋರುತ್ತದೆ. ಆಗ ಇಲ್ಲಿ ಬ್ರಾಹ್ಮಣರೇ ಇಲ್ಲದುದರಿಂದ ಹೊರಗಿನಿಂದ ಅವರನ್ನು ತರಬೇಕಾಯಿತು. ಮೂಲ ನಿವಾಸಿಗಳು ತಮ್ಮದೇ ಕೋಟೆ ಕಟ್ಟಿ ತಮ್ಮಲ್ಲೊಬ್ಬ ರಾಜನಾಗಿ ಆಳಿದ ಕುರುಹಾಗಿ ಇಲ್ಲಿ ಕೆಲವು ಮಣ್ಣಿನ ಕೋಟೆಗಳು, ಬಲವಾದ ಮದಿಲುಗಳು ಕಂಡುಬರುತ್ತವೆ. ಉದಾ – ಮದಪೂರ ಹತ್ತಿರ, ಕಾಟುಕುಕ್ಕೆ ಹತ್ತಿರ ಇಂತಹ ಮಾಯಲಂಕೋಟೆಗಳಿವೆ. ಮಾಯಿಲ ಎಂಬುದು ಅವರಲ್ಲೊಬ್ಬನ ಹೆಸರಾಗಿರಬಹುದು. ಮದವೂರ ದೇವಸ್ಥಾನವು ಈ ಕವಿಸಿಂಹನಿಗಿಂತ ಹಿಂದಿನದೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

“ಕವಿಸಿಂಹ” ಹೆಸರು – ಕುಂಬಳೆ ಅರಸು ಮನೆತನದ ಮೂಲ ಪುರುಷ ಕದಂಬ ಮಯೂರ ಶರ್ಮನ ಮೊಮ್ಮಗ ‘ಕವಿಸಿಂಹ’ನೆಂದು ಅವನ ವೃತ್ತಾಂತವನ್ನು “ವೇಲಾಒಉರ ಮಾಹಾತ್ಮ್ಯ” ಎಂಬ ಐಲ ದುರ್ಗಾಪರಮೇಶ್ವರಿಯ ಮಾಹಾಥ್ಮ್ಯವನ್ನು ಸಾರುವ ಸ್ಥಳ ಪುರಾಣ ಹೇಳುತ್ತದೆ. ನಾರಾಯಣ ಪಂಡಿತನ ಮಧ್ವವಿಜಯ ಸಂಸ್ಕೃತ ಕಾವ್ಯವದಲ್ಲಿ ಕವಿಸಿಂಹ (ಕಬೆಸಿಂಹ – ಸ್ತಂಭ ವಿಶಿಷ್ಟಸಿಂಹ) ನ ಉಲ್ಲೇಖವಿದೆ. ಈ ಕಾವ್ಯ ಸುಮಾರು ಹದಿಮೂರನೆಯ ಶಥಮಾನದ್ದಾಗಿದ್ದು ಈ ಮಧ್ಯದಲ್ಲಿ ಕವಿಸಿಂಹ ಹೆಸರು ದೊರೆಯುವುದಿಲ್ಲ. ಕ್ರಿ.ಶ. ಹತ್ತನೆಯ ಶತಮಾನದ ತಳಂಗೆರೆಯ ಶಾಸನದಲ್ಲಿ, ಹದಿನೈದನೆಯ ಶತಮಾನದ ಅನಂತಪುರದ ತುಳು ಶಾಸನದಲ್ಲಿ ಜಯಸಿಂಹನೆಂದು ದೊರೆಯ ಹೆಸರನ್ನು ಹೇಳಿದೆ. ಈ ಪ್ರದೇಶದಲ್ಲಿ ಅರಸು ಮನೆತನ ಇದೊಂದೇ ಆದುದರಿಂದ ಯೋಚಿಸಬೇಕಾಗುತ್ತದೆ. ಈ ಮನೆತನದ ಅರಸರ ವ್ಯಕ್ತಿನಾಮ ಬೇರೆ ಇದ್ದು ‘ಕವಿಸಿಂಹ’ ವಂಶನಾಮವಾಗಿ ತೋರುತ್ತದೆ. ಕೊಡ್ಯಮ್ಮೆಯಲ್ಲಿರುವ ಇದೇ ವಂಶಸ್ಥರು ಇತ್ತೀಚೆಗಿನವರೆಗೆ ‘ಕವಿಸಿಂಹ’ ಎಂಬ ಬಿರುದನ್ನಿಟ್ಟುಕೊಂಡಿದ್ದರು. ಮೂಲ ಕೋಟೆಕಾರು (ಕಂಚಿಕಟ್ಟೆ) ಯಿಂದ ಬಂದು ಕೊಡ್ಯಮ್ಮೆಯಲ್ಲಿ ನೆಲೆಸಿದ – ಇವರು ಹಿಂದಿನ ಎಲ್ಲಾ ಬಿರುದು ಸ್ಥಾನ ಮಾನಗಳನ್ನು ಪಡೆದಿದ್ದರು. ಈಗಿನ ಕೃಷ್ಣಯ್ಯ ಬಲ್ಲಾಳರನ್ನು ೪-೫-೧೯೮೬ರಂದು ಭೇಟಿಯಾದಾಗ ಅವರು ಈ ವಿಚಾರ ತಿಳಿಸಿದ್ದರು. ಅಳಿಯ ಸಂತಾನದ ಕಟ್ಟಿನಂತೆ ಅಧಿಕಾರ ಪಡೆಯುವ ಇವರು ‘ಬಲ್ಲಾಳ’ ಕುಲನಾಮವನ್ನೂ ಇಟ್ಟುಕೊಂಡಿದ್ದು, ಇವರು ಜೈನ ಮತಾವಲಂಬಿಗಳೂ ಆಗಿರುವುದು ಈಚೆಗೆ ಎನ್ನಬಹುದು. ಕೃಷ್ಣಯ್ಯ ಬಲ್ಲಾಳರು ಹೇಳಿದ ಪ್ರಕಾರ ಕವಿಸಿಂಹ ವರ್ಮ ರಾಜರು ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ತಮ್ಮ ತೊಂಬತ್ತರ ವಯಸ್ಸಿನಲ್ಲಿ ನಿಧನರಾದರು. ಕುಂಬಳ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೀಮೆ ಹಿರಿಸ್ಥಾನ ಇವರಿಗೆ ಸಲ್ಲುತ್ತಿತ್ತು.

ಕವಿಸಿಂಹ ಕುಲ ನಾಮವಲ್ಲದೆ ವ್ಯಕ್ತಿನಾಮವಲ್ಲವೆಂಬುದು ಈ ಅರಸರ ಬಿರುದಾವಳಿಯನ್ನೊಳಗೊಂಡ ಒಂದು ಶಾಸನದಿಂದಲೂ ತಿಳಿದು ಬರುತ್ತದೆ. “ಬನವಸೆಪುರವರಾಧೀಶ್ವರ ಸೂರ್ಯಕುಲತಿಲಕ ಸಾಹಸದ ಸಂಜಯ ಸತ್ಯರತ್ನಾಕರ ಸರಸ್ವತೀಕರ್ಣ ಕುಂಡಲಾಭರಣ ಶ್ರೀ ಮದನೇಶ್ವರಪಾದ ಪದ್ಮಾರಾಧಕರುಮಪ್ಪ ಶ್ರೀ ವೀರ ಪ್ರತಾಪರಾದ ಕುಂಬಳೆ ಧರ್ಮ ಸಿಂಹಾಸನದ ಸೋಮನಾಥರ್‍ಸರಾದ ಕವಿಸಿಂಹರ್‍ಸರು”. [13] ಇಲ್ಲಿ ಸೋಮನಾಥರಸ ಎಂಬ ವ್ಯಕ್ತಿನಾಮದ ಕೊನೆಯಲ್ಲಿ ‘ಕವಿಸಿಂಹ’ ಎಂದಿರುವುದರಿಂದ ಇದು ಬಿರುದಿನಂತೆ ತೋರುತ್ತದೆ. ಶ್ರೀ ಉದಯ ವರ್ಮ ರಾಜರು ಅವರ ಪೂರ್ವೋಕ್ತ ಗ್ರಂಥದಲ್ಲಿ (ಪುಟ ೭೪) “ಜಯಸಿಂಹನು ಸಂಸ್ಕೃತ ಪಂಡಿತನಾಗಿ ಕಾವ್ಯಗಳನ್ನು ಬರೆದುದರಿಂದ ಅವನಿಗೆ ಕವಿಜಯಸಿಂಹನೆಂಬ ಹೆಸರು ಬಂತು. ಇವನ ವಂಶಜರು ಮುಂದೆ ಕವಿಸಿಂಹನೆಂಬ ಹೆಸರನ್ನಿಟ್ಟುಕೊಂಡರು” ಎಂದಿದ್ದಾರೆ. ವೇಲಾಪುರ ಮಾಹಾತ್ಮ್ಯದಲ್ಲಿ ‘ಕವಿಸಿಂಹ’ ಎಂದೇ ಹೆಸರು ಹೇಳಿ ಅವನ ಸಂಸ್ಕೃತ ಪಾಂಡಿತ್ಯವನ್ನೂ ಹೇಳಿದೆ. ಇದೇ ಗ್ರಂಥದ ಪುಟ ಎಪ್ಪತ್ತೈದರಲ್ಲಿ ಇಕ್ಕೇರಿ ಶಿವಪ್ಪ ನಾಯಕನು ೧೬೫೪ರಲ್ಲಿ ಕುಂಬಳೆ ಕೃಷ್ಣರಾಯನನ್ನು ಯುದ್ಧದಲ್ಲಿ ಸೋಲಿಸಿದ ಮೇಲೆ ಮಾಯಿಪ್ಪಾಡಿ ಶಾಖೆ ಆರಂಭವಾಯಿತೆನ್ನುತ್ತಾರೆ. ‘ಜಯಸಿಂಹ’ ಹೆಸರಿನೊಂದಿಗೆ ‘ಕವಿಸಿಂಹ’ ಎಂಬ ಕುಲನಾಮವನ್ನು ಸೇರಿಸದೆ ಬಿಟ್ಟಿರಬೇಕು. ಮಧ್ವವಿಜಯದಲ್ಲಿ ಕವಿಸಿಂಹನನ್ನು ಜಯಸಿಂಹ ಎಂದೂ ಹೇಳಿದೆ.

ಬನವಾಸಿ ಮಯೂರವರ್ಮನ ಕಾಲವನ್ನು ಕ್ರಿ.ಶ. ೩೫೦ – ೩೬೫ ಎಂದು ನಿರ್ಧರಿಸಲಾಗಿತ್ತು. (ಬಾ.ರಾ.ಗೋಪಾಲ – ಕರ್ನಾಟಕದ ಇತಿಹಾಸ, ಮೈಸೂರು ೧೯೮೬, ಪುಟ ೯೬). ಇದನ್ನು ಒಪ್ಪಿದರೆ ಅವನ ಮೊಮ್ಮಗನ ಕಾಲ ನಾಲ್ಕನೆಯ ಶತಮಾನದ ಕೊನೆ, ಐದನೆಯ ಶತಮಾನದ ಆದಿಯೆನ್ನಬಹುದು. ಅಡೂರು ಮದವೂರು ದೇವಸ್ಥಾನಗಳು ಇದಕ್ಕೂ ಹಿಂದಿನವೆನ್ನಬೇಕಾಗುತ್ತದೆ.

ಕದಂಬರು ಕ್ರಿ.ಶ. ೪ನೇ ಶತಮಾನದಿಂದ ಆರನೇ ಶತಮಾನದವರೆಗೆ ಸ್ವತಂತ್ರರಾಗಿಯೂ ಆಮೇಲೆ ಹಲವಾರು ಶಾಖೆಗಳಾಗಿ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಕರ್ನಾಟಕ ಚಕ್ರವರ್ತಿಗಳ ಸಾಮಂತರಾಗಿ ಹದಿನಾಲ್ಕನೆಯ ಶತಮಾನದವರೆಗೆ ಆಳಿದರು. ಬನವಾಸಿ, ಹಾನಗಲ್ಲು, ಗೋವಾ ಮತ್ತು ಚಂದಾವರದ ಕದಂಬ ಶಾಖೆಗಳು ಪ್ರಮುಖ. ಚಂದಾವರದ ಕದಂಬರಿಗೂ ತುಳುನಾಡಿನ ಆಳುಪ ಅರಸು ಮನೆತನಕ್ಕೂ ಸಂಬಂಧವಿತ್ತು. [14] ಕುಂಬಳೆ ಅರಸರು ಹಾನಗಲ್ಲು ಕದಂಬ ಶಾಖೆಯವರೆನ್ನಲಾಗಿದೆ. ಈಗಲೂ ತುಳುನಾಡಿನಲ್ಲಿ ಕದಂಬ (ಕಡಂಬ) ಎಂಬ ಕುಲನಾಮವಿರುವ ಜನವರ್ಗವಿದೆ. ‘ಕವಿಸಿಂಹ’ ಕುಲವು ಬಲ್ಲಾಳ ಕುಲನಾಮವುಳ್ಳದಾಗಿದ್ದು ಇವರು ಅಳಿಯ ಸಂತಾನ ಕಟ್ಟಿನವರು. ರಾಜನಾಗುವ ಮೊದಲು ಯಜ್ಞೋಪವೀತಧಾರಣೆ ಇತ್ತು ಎನ್ನಲಾಗಿದೆ. [15] ಕದಂಬ ವಂಶದ ಈ ಅರಸರು ಮುಂದೆ ಹೊಯ್ಸಳ ಬಲ್ಲಾಳರ ಅಧೀನಕ್ಕೆ ತುಳುನಾಡು ಒಳಪಟ್ಟಾಗ ಅವರ ಪ್ರಭಾವದಿಂದ ಜೈನಧರ್ಮವನ್ನೂ ‘ಬಲ್ಲಾಳ’ ಕುಲನಾಮವನ್ನೂ ಪಡೆದಿರುವ ಸಂಭಬವಿದೆ. ಕುಂಬಳೆ ಅರಸರ ಶಾಖೆಗಳು ಕೊಡ್ಯಮ್ಮೆ, ಮಾಯಿಪ್ಪಾಡಿ, ಕಾರಡ್ಕ ಚಿಪ್ಪಾರು, ಅಡ್ವಳ, ಮೊಗ್ರಾಲು, ತಳಂಗೆರೆ, ಚಂಗಳ, ಪಟ್ವಾಜೆ ಮೊದಲಾದೆಡೆಗಳಲ್ಲಿದ್ದುವು. ಆಡಳಿತಕ್ಕೆ, ಕಂದಾಯ ವಸೂಲಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಸ್ಥಾಪಿಸಿದ ಇವರ ಬೀಡುಗಳು ಬಲ್ಲಾಳರ ಬೀಡು (ಬೂಡು ತು.) ಎಂದೇ ಪ್ರಸಿದ್ಧವಾಗಿವೆ.

ಕುಂಬಳೆ ಇತಿಹಾಸ :

ಈ ಪ್ರದೇಶಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಲಿಖಿತ ದಾಖಲೆಗಳು ಅತ್ಯಲ್ಪ ಮಾತ್ರ ಸಿಗುವುದರಿಂದ ಹಿರಿಯರ ಸಂದರ್ಶನ, ಪ್ರವಾಸಿಗಳ ಕಥನ, ಜಾನಪದರ ಹೇಳಿಕೆ, ಸ್ಥಳ ಪುರಾಣ ಮೊದಲಾದವುಗಳಿಂದ ಇತಿಹಾಸವನ್ನು ರೂಪಿಸಬೇಕಾಗುತ್ತದೆ. ಇಲ್ಲಿನ ಇತಿಹಾಸವನ್ನು ಪ್ರಾಚೀನ ಕಾಲ, ಮಧ್ಯ ಕಾಲ, ಆಧುನಿಕ ಕಾಲ ಎಂದು ವಿಂಗಡಿಸಬಹುದು.

ಪ್ರಾಚೀನ ಕಾಲ – ೧೩ನೇ ಶತಮಾನದ ಕೊನೆಯವರೆಗೆ.

ಮಧ್ಯ ಕಾಲ – ೧೪ನೇ ಶತಮಾನದಿಂದ ೧೯ನೇ ಶತಮಾನದ ಕೊನೆಯವರೆಗೆ.

ಆಧುನಿಕ ಕಾಲ – ೨೦ನೇ ಶತಮಾನದಿಂದ.

ಇಲ್ಲಿನ ಅರಸು ಮನೆತನದ ಇತಿಹಾಸ ೧೯೪೭ರ ಸ್ವಾತಂತ್ರ್ಯದ ಕಾಲಕ್ಕೆ ಕೊನೆಗೊಳ್ಳುತ್ತದೆ.

 

[1] ಕೇಶವಕೃಷ್ಣ ಕುಡ್ವ – ದಕ್ಷಿಣ ಕನ್ನಡದ ಇತಿಹಾಸ ೧೯೪೮, ಪು.೭.

[2] ಉದಯವರ್ಮರಾಜ – ತುಳುನಾಡಿನ ಗತವೈಭವ, ೧೯೯೮, ಪು.೪.

[3] – ಅದೇ – ಪು ೭.

[4] – ಅದೇ – ಪು ೨.

[5] ರಾ.ಯ. ಧಾರವಾಡಕರ – ಕನ್ನಡಭಾಷಾ ಶಾಸ್ತ್ರ ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ, ೧೯೬೮, ಪು. ೭೫

[6] ಎಂ.ಗೋವಿಂದ ಪೈ – ತುಳುನಾಡು – ಪೂರ್ವಸ್ಮೃತಿ, ತೆಂಕನಾಡು, ಪುಟ ೨೦, ೧೯೪೭.

[7] ಗೌರೀಶ ಕಾಯ್ಕಿಣಿ – “ಕನ್ನಡಮೆನಿಪ್ಪ ಆ ನಾಡು” – ತರಂಗ ಮೇ ೧೯೮೯, ಪುಟ ೩೬.

[8] ಮಂಜೇಶ್ವರ ಗೋವಿಂದ ಪೈ ತುಳುನಾಡ ಪೂರ್ವಸ್ಮೃತಿ – ತೆಂಕನಾಡು ೧೯೪೭, ಪುಟ ೧೬.

[9] ಉದಯವರ್ಮ ರಾಜ – ತುಳುನಾಡಿನ ಗತವೈಭವ – ೧೯೯೮, ಪುಟ ೯.

[10] ವೆಂಕಟರಾಜ ಪುಣಿಂಚತ್ತಾಯ – “ ನಾನ್ನೂರು ವರ್ಷ ಹಿಂದಿನ ತುಳು ಕರ್ಣಪರ್ವ ಕಾವ್ಯ” ಉದಯವಾಣಿ, ತಾ.೭ – ೭ – ೧೯೯೯, ಪುಟ ೨.

[11] ವಾಸುದೇವ ಚರಡಪ್ಪ ನಾಯಕ, ಕುಂಬಳೆ, ಸಂದರ್ಶನ ದಿನಾಂಕ ೧ – ೧೧ – ೧೯೮೩.

[12] ಡಾ| ಕೆಮ್ತೂರು ರಘುಪತಿ ಭಟ್‌ ತುಳುನಾಡಿನ ಸ್ಥಳನಾಮಾಧ್ಯಯನ (ಅಪ್ರಕಟಿತ).

[13] ಗಣಪತಿ ರಾವ್ ಐಗಳ್‌ – ”ಮಂಜೇಶ್ವರ” ಕುಂಬಳೆ ಸೋಮನಾಥರಸರ ಶಾಸನ. ಶಾ.ಶ. ೧೬೩೦ (ಕ್ರಿ.ಶ.೧೭೦೮) ಸರ್ವಧಾರಿ ಸಂವತ್ಸರ ಕಾರ್ತಿಕ ಶು. ೨ ಯು ಚಂದ್ರವಾರ, ೧೯೨೪, ಪುಟ ೨೩.

[14] ಡಾ| ಕೆ.ಜಿ. ವಸಂತಮಾಧ – “ಕದಂಬ ರಾಜವಂಶ ಮತ್ತು ತುಳು ಪಾಳಯಗಾರರು”. ಯುಗಪುರಷ ಮೇ ೧೯೮೩, ಪುಟ ೧೨.

[15] ಸಂದರ್ಶನ – ರ್ಶರೀ.ಎ.ಬಿ.ಲಕ್ಷ್ಮಣ ಬಲ್ಲಾಳ್‌, ನಿವೃತ್ತ ಡೆಪ್ಯುಟಿ ಕಲೆಕ್ಟರ್‌, ಕಾಸರಗೋಡು, ಸಂದರ್ಶನ ದಿನಾಂಕ ೩೦ – ೪ – ೧೯೮೪.