“ತುಳುನಾಡು” ಅಥವಾ ಹಿಂದಿನ ಅವಿಭಜಿತ ಕೆನರಾ ಜಿಲ್ಲೆಯು ತನ್ನ ವೈವಿಧ್ಯಮಯ ಸಾಹಸ, ಕೃಷಿ, ಕೈಗಾರಿಕೆ, ವ್ಯಾಪಾರ ಮುಂತಾದ ಕಾರ್ಯ ಚಟುವಟಿಕೆಗಳಿಂದಾಗಿ ಬಹಳ ಪ್ರಾಚೀನ ಕಾಲದಲ್ಲೇ ಪ್ರಪಂಚದ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿರುವ ಒಂದು ಪ್ರದೇಶ. ತನ್ನ ಗಡಿಯ ಎಲ್ಲೆಯನ್ನು ಮೀರಿ ಹೊರಗಿನ ಪ್ರದೇಶವನ್ನು ತನ್ನ ಮಡಿಲೊಳಗೆ ಸೇರಿಸುವ ಸಾಮರ್ಥ್ಯ ಮತ್ತು ಇಚ್ಛೆಯಿರುವ ಯಾವುದೇ ಬಲಿಷ್ಠ ರಾಜಮನೆತನಗಳು ಇಲ್ಲಿ ಹುಟ್ಟಿ ಬಾರದಿದ್ದರೂ ಬಹಳಷ್ಟು ಸಾಮಂತರು, ಪಾಳೇಯಗಾರರು ಮತ್ತು ಚಿಕ್ಕ ಅರಸರು ಸೀಮಿತ ಪರಿಧಿಯೊಳಗೆ ತಮ್ಮ ಸಾಮರ್ಥ್ಯದ ಪೂರ್ಣ ಅರಿವನ್ನು ಮಾಡಿಕೊಡಲು ಪ್ರಯತ್ನಿಸಿದ್ದಾರೆ. ೧೪ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಅಡಿಗಲ್ಲನ್ನು ಹಾಕುವ ಹಿಂದೇ ಸ್ವತಂತ್ರವಾಗಿದ್ದ ಈ ಅರಸು ಮನೆತನಗಳು ನಂತರ ಈ ಜಿಲ್ಲೆಗೆ ಇಂಗ್ಲೀಷ್ ಮತ್ತು ಇತರ ವಿದೇಶೀಯರ ಆಗಮನದ ತನಕ ಹೆಚ್ಚುಕಡಿಮೆ ಸ್ವತಂತ್ರವಾಗಿದ್ದವು. ಅಂದರೆ ತಮ್ಮ ಅಧಿರಾಜರಿಗೆ ಕಪ್ಪವನ್ನು ಪಾವತಿಸುತ್ತಿದ್ದ ಈ ಅರಸರು ತಮ್ಮ ರಾಜ್ಯದ ಆಂತರಿಕ ಆಡಳಿತದಲ್ಲಿ ಸ್ವತಂತ್ರರಾಗಿದ್ದರು. ವಿಜಯನಗರದ ಕೈವಶವಾದಾಗಲೂ ತುಳುನಾಡನ್ನು ಅದರ ನೇರ ಆಡಳಿತದ ಕೈಕೆಳಗೆ ತರುವ ಯಾವುದೇ ಪ್ರಯತ್ನಕ್ಕೆ ಅಲ್ಲಿಯ ಅರಸರು ಮುಂದಾಗಲಿಲ್ಲ. ಬದಲಿಗೆ ಈ ಪ್ರಾಂತ್ಯವನ್ನು ಬಾರಕೂರು ಮತ್ತು ಮಂಗಳೂರು ಕೇಂದ್ರವಾಗಿರುವ ಎರಡು ಉಪ – ವಿಭಾಗಗಳನ್ನಾಗಿ ಮಾಡಿ ಎರಡು ಪ್ರತ್ಯೇಕ ಗವರ್ನರ್‌ಗಳ ಮೂಲಕ ಈ ಪ್ರದೇಶದ ಮೇಲೆ ತನ್ನ ಹತೋಟಿಯನ್ನು ಸ್ಥಾಪಿಸಿತ್ತು. ಇಲ್ಲಿ ತನ್ನ ಬುದ್ಧಿಚಾತುರ‍್ಯವನ್ನು ಪ್ರದರ್ಶಿಸಿದ ವಿಜಯನಗರವು ಇಲ್ಲಿಯ ಅರಸರ ರಾಜಕೀಯ ಅಧಿಕಾರವನ್ನು ಪೂರ್ಣವಾಗಿ ಕಿತ್ತುಕೊಳ್ಳುವ ಗೋಜಿಗೆ ಹೋಗದೆ ಅವರನ್ನು ತನ್ನ ಮಿತ್ರರನ್ನಾಗಿ ಇಟ್ಟುಕೊಂಡಿತು. ತುಳುನಾಡಿನಲ್ಲಿ ಹುಟ್ಟಿ ಬೆಳೆದು ಚರಿತ್ರಾರ್ಹ ಸಾಧನೆಗೈದ ಇಂತಹ ಹಲವು ಅರಸು ವಂಶಗಳಲ್ಲಿ “ಪುತ್ತಿಗೆಯ ಚೌಟ” ಮನೆತನವು ಕೂಡ ಒಂದು. ಒಂದೊಮ್ಮೆ ಈ ನಾಡನ್ನು ಆಕ್ರಮಿಸಿದ ವಿದೇಶೀಯರನ್ನು ಹೊರದಬ್ಬುವ ಅಪರೂಪದ ಸಾಹಸಕ್ಕೆ ಕೈಹಚ್ಚಿದ ಈ ಅರಸು ಮನೆತನದ ದೇಶಪ್ರೇಮಿ ಕಾರ್ಯವನ್ನು ನೆನೆದು ಸ್ಮರಿಸುವುದು ಈ ನಾಡಿನ ಜನರ ಕರ್ತವ್ಯವೂ ಹೌದು.

ಚೌಟ ವಂಶದ ಮೂಲ:

ತುಳುನಾಡಿನಲ್ಲಿ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸುವ ಹಿಂದೆ ಚೌಟ ವಂಶದವರು ಮೈಸೂರು ಪ್ರಾಂತ್ಯದಿಂದ ಕೆನರಾ ಜಿಲ್ಲೆಗೆ ವಲಸೆ ಬಂದಿರಬೇಕೆಂದು ತಿಳಿಯಲಾಗಿದೆ. ಆದರೆ ಮೂಲತಃ ಅವರು ಯಾವ ಸ್ಥಳದವರು ? ಆ ವಂಶ ಹೇಗೆ ಜನ್ಮತಳೆಯಿತು? ಅವರ ಮೂಲಸ್ಥಾನದಿಂದ ಕೆನರಾ ಜಿಲ್ಲೆಗೆ ವಲಸೆ ಬರಲು ಕಾರಣವಾದ ಅಂಶಗಳಾವುವು? ಎಂಬ ಬಗ್ಗೆ ಸರಿಯಾದ ದಾಖಲೆ ಆಧಾರಗಳಿಲ್ಲವೆಂದು ಡಾ| ಗುರುರಾಜ ಭಟ್ಟರು ಹೇಳಿದ್ದಾರೆ.[1]

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ದೊರೆತ ಕ್ರಿ.ಶ.೧೩೯೮ ಕ್ಯಾಕಿಣಿ ಶಾಸನದಲ್ಲಿ ಹೆಸರಿಸಲ್ಪಟ್ಟ ‘ಚೌಟರು’ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಗೆಯ ಚೌಟರೆಂದು ‘ಕರ್ನಾಟಕ ಶಾಸನಗಳು’ (ಸಂಪುಟ ೧, ನಂಬ್ರ ೩೫ ಮತ್ತು ೩೬) ಸಂಪುಟದಲ್ಲಿ ತಪ್ಪಾಗಿ ಪ್ರಕಟವಾಗಿದೆಯೆಂದು ಡಾ| ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ.[2]

ಹರಿಹರ II ವಿಜಯನಗರವನ್ನು ಆಳುತ್ತಿದ್ದಾಗ ಈ ಎರಡು ಶಾಸನಗಳನ್ನು ಹೊರಡಿಸಲಾಯಿತು. ಈ ಎರಡು ಶಾಸನಗಳು ವೀರಸ್ತಂಭ ಮಾದರಿಯದ್ದು. ಯುದ್ಧದಲಿ ಮಡಿದ ಜಕ್ಕಣ್ಣ ನಾಯಕ ಮತ್ತು ತಮ್ಮ ನಾಯಕ ಮತ್ತು ನಗಿರೆಯ ರಾಜಗುರು ಬೊಮ್ಮಣ್ಣ ನಾಯಕನ ಮಗ ಜಕ್ಕಣ್ಣ ನಾಯಕನ ವೀರಮರಣದ ಸ್ಮರಣಾರ್ಥ ಶಾಸನವಿರುವ ಈ ವೀರಸ್ತಂಭಗಳನ್ನು ಸ್ಥಾಪಿಸಲಾಗಿದೆ. ಕ್ರಿ.ಶ. ೧೩೯೮ರ ಡಿಸೆಂಬರ್ ೧೦ರಂದು ವಿಜಯನಗರದ ಮಹಾಪ್ರಧಾನಿ ಮಂಗಪ್ಪ ದಂಡನಾಯಕನು ತುಳು ರಾಜ್ಯದ ಮೇಲೆ ದಾಳಿ ಮಾಡಿ ‘ಬಿದರೆ’ಯಲ್ಲಿ ಬೀಡು ಬಿಟ್ಟ ಸಮಯದಲ್ಲಿ ‘ಚವಟ’ ಅಥವಾ ಚೌಟ ಸೈನ್ಯವನ್ನು ಸೋಲಿಸಿದ. ಚೌಟರನ್ನು ಸೋಲಿಸಿದ ನಂತರ ನಗಿರೆಯ ಮಹಾಮಾಂಡಲೇಶ್ವರ ಹಯೀವರಸನಿಗೆ ತನ್ನ ಸೈನಿಕರ ಮೂಲಕ ರಕ್ಷಣೆ ನೀಡಿ ಹಿಂದೆ ಕಳುಹಿಸಿದ. ಆ ಸಂದರ್ಭದಲ್ಲಿ ಚೌಟರು ಆಕ್ರಮಣಕೋರರ ವಿರುದ್ಧ ದಾಳಿ ಮಾಡಿದಾಗ ಈ ಮೇಲೆ ಹೆಸರಿಸಿದ ವೀರಯೋಧರು ಸಾವನ್ನಪ್ಪಿದರು ಎಂದು ಈ ಎರಡು ಶಾಸನದಲ್ಲಿ ಹೇಳಲಾಗಿದೆ.[3]

ಆದುದರಿಂದ ಮಂಗಪ್ಪ ದಂಡನಾಯಕನ ನಾಯಕತ್ವದಲ್ಲಿ ತುಳುನಾಡಿನ ಮೇಲೆ ದಾಳಿ ಮಾಡಿದ ಸೈನ್ಯಕ್ಕೆ ನಗಿರೆಯ ಅರಸನಾದ ಹಯೀವರಸನು ಸಹಾಯ ನೀಡಿದ್ದ. ಈ ಎರಡು ಸೈನ್ಯಗಳು ಒಂದಾಗಿ ಚೌಟರ ಮೇಲೆ ದಾಳಿ ಮಾಡಿದ್ದವು. ಆದರೆ ಹೀಗೆ ಸೋಲಿಸಲ್ಪಟ್ಟ ಚೌಟ ಅರಸನು ಯಾರು ಎಂಬ ಬಗ್ಗೆ ಈ ಶಾಸನದಲ್ಲಿ ಉಲ್ಲೇಖವಿಲ್ಲ. ಅದು ಕ್ರಿ.ಶ.೧೩೯೦ರ ಮೂಡಬಿದರೆಯ ಶಾಸನದಲ್ಲಿ ತಿಳಿಸಲಾಗಿರುವ ವಿಕ್ರ ಚೌಟನಿರಬೇಕೆಂದು ಡಾ| ಕೆ.ವಿ.ರಮೇಶ್‌ರವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಕರ್ನಾಟಕ ಶಾಸನಗಳ ಸಂಪಾದಕರು, ಕ್ಯಾಕಿಣಿ ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟ ಬಿದಿರೆಯು, ಮೂಡಬಿದರೆಯೆಂದು, ಸೋತ ಚೌಟರು, ಪುತ್ತಿಗೆಯ ಚೌಟರೆಂದು ತಪ್ಪಾಗಿ ಅಭಿಪ್ರಾಯಪಟ್ಟಿದ್ದಾರೆಂದು ಡಾ| ಗುರುರಾಜ ಭಟ್ಟರು ಹೇಳಿದ್ದಾರೆ. ಏಕೆಂದರೆ ಗುರುರಾಜ ಭಟ್ಟರ ಪ್ರಕಾರ ಈ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ತುಳು ದೇಶವು ಭಟ್ಕಳ, ಹಾಡುವಳ್ಳಿ, ಗೇರುಸೊಪ್ಪೆ ಮುಂತಾದ ಸ್ಥಳಗಳನ್ನು ಒಳಗೊಂಡ ಒಂದು ಪ್ರದೇಶ. ಅಲ್ಲದೇ ಇಲ್ಲಿ ಉಲ್ಲೇಖಿಸಲ್ಪಟ್ಟಿರುವ ಬಿದಿರೆ ಎಂಬುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಬಿದಿರೂರು (ಬಿದಿರುನಾಡು ಅಥವಾ ವೇಣುಪುರ) ಎಂಬ ಪ್ರದೇಶ. ಆದುದರಿಂದ ಈ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ಚೌಟರು ಈ ಬಿದುರೆ ಎಂಬ ಸ್ಥಳದವರೇ ಹೊರತು; ದಕ್ಷಿಣ ಕನ್ನಡದ ಮೂಡಬಿದರೆಗೆ ಸೇರಿದವರಲ್ಲ. ಆದರೆ ಇದರ ಆಧಾರದಲ್ಲಿ ಕೆಲವೊಂದು ಹೊಸ ವಿಚಾರಗಳ ಬಗ್ಗೆ ಊಹಿಸುವ ಅವಕಾಶ ದೊರೆತಿದೆ. ಅಂದರೆ ಚೌಟರು ಮೂಲತಃ ಸಾಗರ ತಾಲೂಕಿನ ಬಿದುರೆಗೆ ಸೇರಿದವರು. ನಂತರ ೧೨ ಅಥವಾ ೧೩ನೇ ಶತಮಾನದಲ್ಲಿ ವಿಸ್ತಾರವಾದ ಹೊಸ ರಾಜ್ಯ ಸ್ಥಾಪಿಸುವ ಉದ್ದೇಶದಿಂದ ಅಥವಾ ತಮ್ಮ ಮೂಲರಾಜ್ಯವನ್ನು ಕಳಕೊಂಡು ಪುತ್ತಿಗೆ – ಮೂಡಬಿದರೆಗೆ ವಲಸೆ ಬಂದಿರಬಹುದೆಂದು ಡಾ| ಗುರುರಾಜ ಭಟ್ಟರು ಈ ಶಾಸನದ ಆಧಾರದಲ್ಲಿ ತರ್ಕಿಸಿದ್ದಾರೆ.[4] ಏಕೆಂದರೆ ಚೌಟರು ಶಿವಮೊಗ್ಗ ಜಿಲ್ಲೆಯ ಹೊಸನಗರದಿಂದ ಬಂದಿರುವ ಬಗ್ಗೆ ಐತಿಹ್ಯ (ಅಭಿಪ್ರಾಯ)ವೊಂದು ಮೂಡಬಿದರೆಯಲ್ಲಿ ಪ್ರಚಲಿತದಲ್ಲಿದೆ ಎಂದವರು ಹೇಳಿದ್ದಾರೆ.

ಚೌಟ ಶಬ್ದದ ಉತ್ಪತ್ತಿ:

“ಚೌಟ” ಎಂಬ ಶಬ್ದ ಯಾವ ಮೂಲದಿಂದ ಮತ್ತು ಹೇಗೆ ಉತ್ಪತ್ತಿ ಯಾಯಿತೆಂಬುದರ ಬಗ್ಗೆ ಹಲವು ವಿವರಣೆಗಳನ್ನು ಕೊಡಲಾಗಿದೆ. ಈ ಶಬ್ದಕ್ಕೆ “ಚುಟು” (Chutu=ಚೋಟು, ಜುಟ್ಟೆ, ಜುತ್ತೆ = ಪ್ರದೇಶವೆಂಬ ಅರ್ಥವಿದೆ) ಎಂಬ ಶಬ್ದದೊಡನೆ ಸಂಬಂಧವಿದೆಯಂದು ಮಂಜೇಶ್ವರ ಗೋವಿಂದ ಪೈಯವರು ತಮ್ಮ “ಪಂಚಕಜ್ಜಾಯ” (ವಿಜಯನಗರದ ತುಳುವ ಅಥವಾ ತುಳುವರ್ ವಂಶ, ೧೯೨೭)ದಲ್ಲಿ ಬರೆದಿದ್ದಾರೆಂದು ಡಾ| ಗುರುರಾಜ ಭಟ್ಟರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.[5] ಚುಟು ಎಂಬ ಪದಕ್ಕೆ ಚೋಟು ಅಥವಾ ಚಿಕ್ಕ ಅಥವಾ ಪ್ರದೇಶವೆಂಬ ಅರ್ಥವಿದೆಯೆಂದು ಡಾ| ಕಿಟ್ಟಲ್ ತಮ್ಮ ಕನ್ನಡ – ಇಂಗ್ಲಿಷ್ ಡಿಕ್ಷ್‌ನರಿಯಲ್ಲಿ ಅರ್ಥವಿವರಣೆಯನ್ನು ನೀಡಿದ್ದಾರೆ.[6] ಅಂದರೆ ಒಂದು ಚಿಕ್ಕ ಪ್ರದೇಶದ ಅಧಿಪತಿ ಅಥವಾ ಮುಖ್ಯಸ್ಥನನ್ನು ಚೌಟ ಎಂದು ಕರೆಯಲಾಗುತ್ತಿತ್ತು ಎಂದು ಊಹಿಸಬಹುದು. ಭಾರತದ ಶಾಸನಗಳ ವಾರ್ಷಿಕ ವರದಿ (ನಂಬ್ರ ೫೦೫, ೧೯೧೫)ಯಲ್ಲಿ ಚೌಟ ಶಬ್ದವು “ಚೌಡರ್” ಎಂಬ ಶಬ್ದದಿಂದ ಉತ್ಪತ್ತಿಯಾಗಿರಬಹುದೆಂದು ತಿಳಿಸಲಾಗಿದೆ.[7] ಏಕೆಂದರೆ ಪ್ರಾಚೀನ ಕಾಲದ ಸ್ಥಳೀಯ ಆಡಳಿತದ ಓರ್ವ ಅಧಿಕಾರಿಯನ್ನು “ಚೌಡರ್” ಎಂದು ಕರೆಯಲಾಗುತ್ತಿತ್ತು. ಸ್ಥಳೀಯ ಆಡಳಿತದ ಅಧಿಕಾರಿಯಾಗಿದ್ದ ಓರ್ವ ಚೌಡರ್ ಮುಂದೆ ಆ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡು “ಚೌಟ” ಎಂಬ ವಂಶದ ಆಳ್ವಿಕೆಗೆ ನಾಂದಿ ಶಬ್ದವು ಚತುತೋ ಅಥವಾ “ಚತುರ್ಥ” ಎಂಬ ಪ್ರಾಕೃತ್ ಭಾಷೆಯ ಶಬ್ದದಿಂದ ಬಂದಿರಬೇಕೆಂದು ಹೇಮಚಂದ್ರನ, ಪ್ರಾಕೃತವ್ಯಾಕರಣ ಪುಸ್ತಕದ ಆಧಾರದಲ್ಲಿ ಡಾ| ಗುರುರಾಜ ಭಟ್ಟರು ಅಭಿಪ್ರಾಯಪಟ್ಟಿದ್ದಾರೆ.[8] ಸಾಮಾನ್ಯವಾಗಿ ಶಾಸನಗಳಲ್ಲಿ ಆಗಾಗ್ಗೆ ಸಿಗುವ “ಚೌಡ” ಎಂಬ ಶಬ್ದವು “ಚೌಟ” ಎಂಬ ಶಬ್ದದ ರೂಪಾಂತರವಿರುಬಹುದೆಂದು ಡಾ| ಗುರುರಾಜ ಭಟ್ಟರು ತಮ್ಮ ಮತ್ತೊಂದು ಊಹೆಯನ್ನು ನಮ್ಮ ಮುಂದಿಟ್ಟಿದ್ದಾರೆ.

ಚೌಟ ಅರಸರ ರಾಜಕೀಯ ಇತಿಹಾಸ:

ಚೌಟರ ಕೈಫಿಯತ್ತು ಮತ್ತು ಇತರ ಕೆಲವು ಆಧಾರಗಳ ಪ್ರಕಾರ ಕ್ರಿ.ಶ.೧೨ನೇ ಶತಮಾನದ ಉತ್ತರಾರ್ಧದಲ್ಲೇ ತುಳುನಾಡಿನ ಉಳ್ಳಾಲ – ಸೋಮೇಶ್ವರ ಪ್ರಾಂತ್ಯದಲ್ಲಿ ಪ್ರಬಲರಾಗಿದ್ದ ಇವರು ಮುಂದೆ ಪುತ್ತಿಗೆಗೆ ತಮ್ಮ ನೆಲೆಯನ್ನು ಬದಲಾಯಿಸಿಕೊಂಡರು. ಆದರೆ ಈ ಚೌಟರು ಶಾಸನಗಳಲ್ಲಿ ಮೊಟ್ಟಮೊದಲಿಗೆ ಕಾಣಿಸಿಕೊಳ್ಳುವುದು ಕ್ರಿ.ಶ.೧೩೯೦ರಲ್ಲಿ ಮಾತ್ರ. ಪುತ್ತಿಗೆಯಿಂದ ಬಹಳ ಕಾಲದ ತನಕ ಆಳಿದ ಚೌಟರು, ಜೈನ ಅರಸರು. ವಿಜಯನಗರದ ಕಾಲಾಂತರ ಇವರ ಆಡಳಿತ ಕೇಂದ್ರ ಮೂಡಬಿದರೆಗೆ ಸ್ಥಳಾಂತರಗೊಂಡಿತು.

ಚೌಟ ವಂಶದ ಮೂಲ ಮತ್ತು ಅವರ ಶಾಸನಗಳಿಂದ ದೊರೆಯುವ ನಿಜವಾದ ಇತಿಹಾಸಕ್ಕೂ, ಕೈಫಿಯತ್ತಿನಲ್ಲಿ ಕೊಟ್ಟಿರುವ ವಿವರಗಳು ಮತ್ತು ಇತಿಹಾಸಕ್ಕೂ ಬಹಳ ವ್ಯತ್ಯಾಸವಿದೆ. ಈ ಬಗ್ಗೆ ಹಲವು ಭಿನ್ನಾಭಿಪ್ರಾಯಗಳಿವೆ. ಶ್ರೀ ಲೋಕನಾಥ ಶಾಸ್ತ್ರಿಯವರು ತಮ್ಮ “ಮೂಡಬಿದರೆಯ ಚರಿತ್ರೆ” (ವೀರವಾನಿ ವಿಲಾಸ, ಜೈನ ಸಿದ್ಧಾಂತ ಭವನ, ೧೯೩೭) ಎಂಬ ಗ್ರಂಥದಲ್ಲಿ ನೀಡಿರುವ ಚೌಟ ಅರಸರ ಅನುಕ್ರಮಣಿಕೆ ಪಟ್ಟಿಯಲ್ಲಿ ಕ್ರಿ.ಶ.೧೧೬೦ ರಿಂದ ೧೧೭೯ರ ತನಕ ಆಳಿದ ೧ನೇ ತಿರುಮಲರಾಯ ಚೌಟನು ಪ್ರಥಮ ಅರಸನೆಂದು ಬರೆದಿದ್ದಾರೆಂದು, ಡಾ| ಗುರುರಾಜ ಭಟ್ಟರು ತಮ್ಮ ‘ತುಳುವ’ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.[9] ಗಣಪತಿ ರಾವ್ ಐಗಳ್‌ರವರು ಕೂಡ ತಮ್ಮ ‘ಇತಿಹಾಸ’ ಪುಸ್ತಕದಲ್ಲಿ ಇದೇ ರೀತಿ ಬರೆದಿದ್ದಾರೆ. ಆದರೆ ಚೌಟ ಅರಸರ ಆಳ್ವಿಕೆ ಬಗ್ಗೆ ಶಾಸನಾಧಾರಗಳು ಬಹಳ ನಂತರದ ಅವಧಿಗೆ ಮಾತ್ರ ದೊರೆತಿವೆ. ಚೌಟರ ಬಗ್ಗೆ ಶಾಸನಗಳಲ್ಲಿ ಪ್ರಸ್ತುತ ಕಾಣಸಿಕ್ಕಿರುವ ಉಲ್ಲೇಖವು ಮಡಿಕೇರಿಯ ವೆಂಗೂಳು ಗ್ರಾಮದಲ್ಲಿ ಸಿಕ್ಕಿದ ಕ್ರಿ.ಶ. ೧೨೬೪ರ ಮಡಿಕೇರಿ ಶಾಸನದಲ್ಲಿ. ಸತ್ಯರಾಯ ಎಂಬಾತನ ಬೆಂಬಲಿಗನಾದ ವೀರಮುನಿವರಾಧಿತ್ಯ ಗೋಕುಲ ದೇವರಸ ಎಂಬ ಮಹಾಮಾಂಡಳೇಶ್ವರನು “ಚೌಟು” (ಚೌಟುವಿಭದ) ಎಂಬಾತನನ್ನು ಸೋಲಿಸಿದ ಎಂದು ಈ ಶಾಸನ ತಿಳಿಸುತ್ತದೆ ಎಂದು ಡಾ| ಗುರುರಾಜ ಭಟ್ಟರು ತಮ್ಮ ಗ್ರಂಥದಲ್ಲಿ ಬರೆದಿದ್ದಾರೆ.[10](ಕೊಡಗಿನ ಶಾಸನ ೭೫) ಆದರೆ ಈ ಶಾಸನದಲ್ಲಿ ಚೌಟು ಎಂಬ ಶಬ್ದದ ಹೊರತಾಗಿ ಚೌಟವಂಶದ ಚರಿತ್ರೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ತಮ್ಮ “ಇತಿಹಾಸ” ಎಂಬ ಗ್ರಂಥದಲ್ಲಿ ಚೌಟ ಅರಸರ ರಾಜಕೀಯ ಇತಿಹಾಸದ ಬಗ್ಗೆ ಬಹಳ ದೀರ್ಘ ಮತ್ತು ಸಮಗ್ರ ವಿವರಗಳನ್ನು ನೀಡಿರುವ ಶ್ರೀ ಗಣಪತಿರಾವ್ ಐಗಳ್‌ರವರು, ಉಳ್ಳಾಲ – ಸೋಮೇಶ್ವರ, ಪುತ್ತಿಗೆ ಮತ್ತು ಮೂಡಬಿದರೆಯಿಂದ ಆಳಿದ ಚೌಟ ಅರಸರ ಈ ಕೆಳಗಿನ ಅನುಕ್ರಮಣಿಕೆ ಪಟ್ಟಿಯೊಂದಿಗೆ ವಿವರಣೆ ನೀಡಿದ್ದಾರೆ.[11]

ಹೊಯ್‌ಸಳ ರಾಜನಾದ ವಿಷ್ಣುವರ್ಧನನು ತುಳು ರಾಜ್ಯವನ್ನು ಜಯಿಸಿ ಅಲ್ಲಿಯ ಅರಸರನ್ನು ಸೆರೆಹಿಡಿದುಕೊಂಡು ಹೋದನೆಂದು ಮೈಸೂರು ಸಂಸ್ಥಾನದ ಹಳೇಬೀಡಿ ನಲ್ಲಿರುವ ಕ್ರಿ.ಶ.೧೧೧೭ನೇ ಇಸವಿಯ ಶಾಸನದಿಂದ ತಿಳಿದುಬರುತ್ತದೆ. ವಿಷ್ಣುವರ್ಧನನ ನಂತರ ತುಳುನಾಡಿನಲ್ಲಿ ಜೈನ ಅರಸರು ತಲೆಎತ್ತಿದರು. ಹೀಗೇ ಉನ್ನತಿಗೆ ಬಂದ ಅರಸರಲ್ಲಿ ಚೌಟರಾಜನು ಒಬ್ಬನು. ಈ ವಂಶದವರು ಪುತ್ತಿಗೆ, ಮೂಡಬಿದರೆಗಳನ್ನು ರಾಜಧಾನಿಯನ್ನಾಗಿ ಮಾಡುವುದಕ್ಕಿಂತ ಮೊದಲು ಉಳ್ಳಾಲ ಅವರ ರಾಜಧಾನಿಯಾಗಿತ್ತು ಎಂದು ಐಗಳ್‌ರವರು ತಮ್ಮ ‘ಇತಿಹಾಸ’ ಎಂಬ ಗ್ರಂಥದಲ್ಲಿ ಹೇಳಿದ್ದಾರೆ. ಅವರ ಪ್ರಕಾರ ಕ್ರಿ.ಶ.೧೧೬೦ – ೧೧೭೯ರ ತನಕ ಆಳ್ವಿಕೆ ಮಾಡಿದ ೧ನೇ ತಿರುಮಲರಾಯನು ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಚೌಟ ವಂಶದ ಪ್ರಥಮ ಅರಸ. ಆದರೆ ಚೌಟರು ಅದಕ್ಕಿಂತಲೂ ಹಿಂದೆ ತುಳುನಾಡಿನಲ್ಲಿ ಆಳುತ್ತಿದ್ದರು. ಆದರೆ ವಿಷ್ಣುವರ್ಧನನು ತುಳುನಾಡಿನ ಮೇಲೆ ಮಾಡಿದ ದಾಳಿಯಿಂದಾಗಿ ಅವರು ತಮ್ಮ ರಾಜ್ಯವನ್ನು ಕಳಕೊಳ್ಳಬೇಕಾಯಿತು. ಆದರೆ ಹೀಗೇ ಕಳಕೊಂಡ ರಾಜ್ಯವನ್ನು ತಿರುಮಲರಾಯನು ಮತ್ತೆ ಸ್ಥಾಪನೆ ಮಾಡಿದನು ಎಂದವರು ಅಭಿಪ್ರಾಯಪಟ್ಟಿದ್ದಾರೆ.

೧. ೧ನೇ ತಿರುಮಲರಾಯ (ಕ್ರಿ.ಶ.೧೧೬೦ – ೧೧೭೯):

ತಿರುಮಲರಾಯ ಚೌಟನು ಅಳಿದುಹೋದ ತನ್ನ ರಾಜ್ಯವನ್ನು ಕ್ರಿ.ಶ. ೧೧೬೦ ರಲ್ಲಿ ಮತ್ತೆ ಸ್ಥಾಪನೆ ಮಾಡಲು ಪ್ರಯತ್ನಿಸಿದನು. ಈ ತಿರುಮಲ ಚೌಟನು ಆಗ ಉಳ್ಳಾಲದ ಹತ್ತಿರುವಿರುವ ಸೋಮೇಶ್ವರ ಎಂಬ ಗ್ರಾಮದಲ್ಲಿ ವಾಸವಾಗಿದ್ದನು. ಚೌಟ ವಂಶದ ಕುಲದೇವರು ಉಳ್ಳಾಲ – ಸೋಮೇಶ್ವರದ ಸೋಮನಾಥ. ಈ ದೇವರ ದೇವಸ್ಥಾನವು ಅದರ ಭದ್ರತೆಗಾಗಿ ಕಟ್ಟಿದ ಕೋಟೆಯು ಈಗಲೂ ಇದೆ. ತೀರ ಇತ್ತೀಚೆಗಿನ ತನಕ ಇದರ ಆಡಳಿತ ವ್ಯವಸ್ಥೆಯ ಸ್ಥಳೀಯ ಒಂದೇ ಜಾತಿಗೆ ಸೇರಿದ ಮೊಕ್ತೇಸರರ ಕೈಕೆಳಗಿತ್ತು. ಆದರೆ ಪ್ರಸ್ತುತ ಇದರ ನಿರ್ವಹಣಾ ಜವಾಬ್ದಾರಿ ಪುರಾತತ್ತ್ವ ಇಲಾಖೆಗೆ ಸೇರಿದೆ. ಚೌಟರ ಅರಮನೆಯ ಉಳ್ಳಾಲದ ಹತ್ತಿರ ತೊಕ್ಕೊಟ್ಟಿನಲ್ಲಿತ್ತೆಂದು ಅಲ್ಲಿರುವ ಕೋಟೆಯಿಂದಲೂ ಹಾಳುಬಿದ್ದ ಮನೆಯ ಅಡಿಸ್ಥಳಗಳಿಂದಲೂ ತಿಳಿದುಕೊಳ್ಳಬಹುದೆಂದು ಐಗಳ್‌ರವರು ಹೇಳಿದ್ದಾರೆ. ಈಗ ಅದರ ಎಲ್ಲಾ ಕುರುಹುಗಳು ನಾಶವಾಗಿ ಹೋಗಿವೆ. ಈ ತಿರುಮಲರಾಯನು ಅರಮನೆಯನ್ನು ಜೀರ್ಣೋದ್ಧಾರ ಮಾಡುವುದಕ್ಕಾಗಿ ಬಿದ್ದು ಹೋದ ತನ್ನ ಹಿರಿಯರ ಅರಮನೆಯನ್ನು ಸರಿಪಡಿಸುವಾಗ ಸ್ವಲ್ಪ ದ್ರವ್ಯವೂ ಸಿಕ್ಕಿತು. ನಂತರ ಅವನು ಅರಮನೆಯನ್ನು ತಿರುಗಿ ಯೋಗ್ಯ ರೀತಿಯಲ್ಲಿ ಕಟ್ಟಿಸಿದನು. ಆಮೇಲೆ ತನ್ನ ಹಿರಿಯರ ಪ್ರಜೆಗಳಾಗಿದ್ದ ಉಳ್ಳಾಲದ ಮಾಗಣೆಯವರನ್ನು, ಸೋಮೇಶ್ವರ ಗ್ರಾಮದವರನ್ನು, ತಲಪಾಡಿ ಅಮ್ಮೆಂಬಳ ಮಾಗಣೆಯವರನ್ನು, ಬಾಳೆಪುಣಿ, ಕೈರಂಗಳ ಗ್ರಾಮದವರನ್ನು ಕರೆಯಿಸಿ ಅವರ ಒಪ್ಪಿಗೆ ಪ್ರಕಾರ ತನ್ನ ರಾಜ್ಯವನ್ನು ಪುನಃ ಸ್ಥಾಪಿಸಿದನು.

೨. ೧ನೇ ಚನ್ನರಾಯ (ಕ್ರಿ.ಶ.೧೧೭೯ – ೧೨೧೯):

ತಿರುಮಲರಾಯ ಕಾಲವಾದ ನಂತರ ಅವರ ಅಳಿಯನಾದ ಚನ್ನರಾಯನು ಶಾ.ಶ. ೧೧೦೧ನೇ ವಿಕಾರಿ ಸಂರದ ಜ್ಯೇಷ್ಠ ಶು. ೫ನೇ ದಿವಸ ಪಟ್ಟಕ್ಕೆ ಬಂದನು. ಈ ಅರಸನ ಅಳಿಯನಾದ ವರದಯ್ಯನು ತನ್ನ ಸಂಬಂಧಿಕರಾದ ಸುರಾಲ ತೋಳಾರರಲ್ಲಿ ಹೋಗಿ ಹಿಂತಿರುಗಿ ಬರುವಾಗ ಮಾರ್ಗ ಮಧ್ಯೆ ಪುತ್ತಿಗೆ ಮಾಗಣೆ ಪರಾರಿಯ ಕಬರಗುಡ್ಡೆ ಬಳಿಯಲ್ಲಿ ಒಂದು ಕಾಸರಕನ ಮರದ ಬುಡದಲ್ಲಿ ಕೂತು ಸುತ್ತಲೂ ನೋಡುವಾಗ ಆ ಸ್ಥಳವೂ ಅರಮನೆ ಕಟ್ಟಲು ಯೋಗ್ಯವಾದುದೆಂದು ಆಲೋಚಿಸಿದನು. ಈ ಬಗ್ಗೆ ಒಂದು ಐತಿಹ್ಯವಿದೆ. ವರದಯ್ಯನ ಆ ಕಾಸರಕನ ಮರದ ಬುಡದಲ್ಲಿ ಕೂತಿರುವಾಗ, ಆಗತಾನೆ ನೆಲಕ್ಕೆ ಬಿದ್ದ ಆ ಮರದ ಹಣ್ಣೊಂದನ್ನು ನಾಲಗೆಯ ಮೇಲಿಟ್ಟನು. ಸಹಜವಾಗಿ ಕಹಿಯಾದ ಆ ಹಣ್ಣು ಅವನಿಗೆ ಅತ್ಯಂತ ರುಚಿಯಾಗಿ ಕಂಡಿತು. ಅಂತಹ ವೃಕ್ಷವಿರುವ ತಾಣ ಮಹಿಮಾಸ್ಪದವಾದುದೆಂದು ಯೋಚಿಸಿದ ಅವನು ಅಲ್ಲೊಂದು ಅರಮನೆಯನ್ನು ಕಟ್ಟಲು ನಿಶ್ಚಯಿಸಿದನು.[12] ಅನಂತರ ತನ್ನ ಮಾವನ ಹತ್ತಿರ ಆಲೋಚಿಸಿ ಅಲ್ಲಿಯೇ ಅರಮನೆಯನ್ನು ಕಟ್ಟಿಸಿದನು. ಕಾಸರಕನ ಮರದ ಬುಡದಲ್ಲಿ ಕೂತಾಗ ಅರಮನೆ ಕಟ್ಟಲು ಆಲೋಚನೆಯು ಬಂದುದರಿಂದ ಆ ಅರಮನೆಗೆ “ಕಾಯರ ಮಂಜದ” ಅಥವಾ “ಕಾಯೆರಮಂಜಿ” ಅರಮನೆಯೆಂದು ಹೆಸರಿಟ್ಟನು. ಈಗಲೂ ಆ ಅರಮನೆಯು ಹಾಳುಬಿದ್ದು ಅಡಿಸ್ಥಳ ಮಾತ್ರವೇ ಇದ್ದು ಅದರಲ್ಲಿ ಕಾಡು ಬೆಳೆದು ಇದ್ದರೂ ಆ ಸ್ಥಳಕ್ಕೆ ಕಾಯರಮಂಜ ಅರಮನೆ ಸ್ಥಳವೆಂದು ಹೇಳುತ್ತಾರೆ. ಆಮೇಲೆ ಗ್ರಾಮದವರ ಮನಸ್ಸನ್ನು ಸಂತೋಷಪಡಿಸುವುದಕ್ಕಾಗಿ ಅರಮನೆಯ ಆಗ್ನೇಯಕ್ಕೆ ಆ ಗ್ರಾಮಸ್ಥರು ನಂಬಿಕೊಂಡು ಬರುವ “ದೈವಂತಿ” ಎಂಬ ದೈವಕ್ಕೆ ಒಂದು ಗುಡಿಯನ್ನು ಕಟ್ಟಿಸಿಕೊಟ್ಟನು. ಚೌಟ ಅರಸರು ಕಟ್ಟಿಸಿದ ಕಾಯೆರ ಮಂಜಿ ಅರಮನೆ ಪ್ರಸ್ತುತ ಸಂಪೂರ್ಣವಾಗಿ ನಾಶವಾಗಿ ಅದರ ಅವಶೇಷಗಳು ಉಳಿಯದೆ ಹೋದ ಬಗ್ಗೆ ಐತಿಹ್ಯ ಒಂದಿದೆ. ಕಾಯೆರಮಂಜಿ ಅರಮನೆಯ ನಿರ್ಮಾಣಕ್ಕೆ ದೈವಂತಿ ದೈವವು ದ್ರವ್ಯವನ್ನು ದೊರಕಿಸಿಕೊಟ್ಟಿತು. ಅರಮನೆಗೂ, ದೇವಾಲಯಕ್ಕೂ ಒಂದೇ ಮುಹೂರ್ತದಲ್ಲಿ ಕೆಸರುಗಲ್ಲು ಹಾಕಬೇಕೆಂದು ನಿರ್ಧರಿಸಿದರು. ಅರಮನೆ ಪರಾರಿಯಲ್ಲಿ, ದೇವಾಲಯ ಚಿಲಿಂಬಿಕಟ್ಟೆಯಲ್ಲಿ. ಈ ಎರಡು ಸ್ಥಳಗಳಿಗೆ ಒಂದರಿಂದೊಂದಕ್ಕೆ ತಕ್ಕಷ್ಟು ದೂರವುಂಟು ನೋಡಿ, ಅದಕ್ಕಾಗಿ ಕೆಸರುಗಲ್ಲಿಡುವ ಮುಹೂರ್ತ ಸಂಧಿಸಿದೊಡನೆ ಚಿಲಿಂಬಿಕಟ್ಟೆಯಲ್ಲಿ ಗರ್ನಾಲು ಹಾರಿಸಿ ದೇವಾಲಯದ ಕೆಸರುಗಲ್ಲಿಡುವುದು; ಅದೇ ಗರ್ನಾಲಿನ ಸದ್ದನ್ನು ಅನುಸರಿಸಿ ಅತ್ತಕಡೆ ಪರಾರಿಯ ಅರಮನೆಗೂ ಕೆಸರುಗಲ್ಲಿಡುವುದು ಎಂದು ನಿಶ್ಚಯಿಸಿದನು. ಅದರಂತೆ ಎಲ್ಲ ಏರ್ಪಾಡುಗಳಾದವು. ಆದರೆ ಮುಹೂರ್ತ ಹತ್ತಿರವಿದೆಯೆನ್ನುವಾಗ ಪರಾರಿಗೆ ಸಮೀಪದ ಗುಡ್ಡದಲ್ಲಿ ಯಾರೋ ಬೇಟೆಗಾರ ಕಾಡುಹಂದಿಗೆ ಗರ್ನಾಲು ಹೊಡೆದಾಗ, ಅದೇ ಮುಹೂರ್ತದ ಗರ್ನಾಲೆಂದು ತಿಳಿದು ಪರಾರಿಯಲ್ಲಿ ಅರಮನೆಯ ಕೆಸರುಗಲ್ಲನ್ನು ಮುಹೂರ್ತಕ್ಕೆ ಮುನ್ನವೇ ಇಟ್ಟುಬಿಟ್ಟರು. ಈ ಕಾರಣದಿಂದಾಗಿ ಆ ಅರಮನೆಯು ಸಂಪೂರ್ಣವಾಗಿ ನಶಿಸಿಹೋಗಿದೆ, ಎಂಬ ಒಂದು ತಿಳುವಳಿಕೆ ಸ್ಥಳೀಯ ಜನರಲ್ಲಿದೆ.[13] ಆದರೆ ನಿಜವಾಗಿ ಈ ವಂಶದ ರಾಜಧಾನಿಯು ಪುತ್ತಿಗೆಯಿಂದ, ಮೂಡಬಿದರೆಗೆ ಸ್ಥಳಾಂತರಗೊಂಡ ನಂತರದ ದಿನಗಳಲ್ಲಿ ಮಳೆ, ಗಾಳಿ, ಬಿಸಿಲಿನ ಹೊಡೆತಕ್ಕೆ ಸಿಲುಕಿದ ಕಾಯೆರಮಂಜಿ ಅರಮನೆಯ ಸಂರಕ್ಷಣಾ ಕಾರ್ಯದತ್ತ ನಂತರದ ಅರಸರು ಯಾವುದೇ ಗಮನ ನೀಡದೆ ಹೋದದ್ದರಿಂದ ಈ ಅರಮನೆಯು ನಾಶವಾಗಿ ಹೋಗಿದೆ.

ಕಾಯೆರಮಂಜಿ ಅರಮನೆಯನ್ನು ಕಟ್ಟಿಸಿದ ವರದಯ್ಯನು ನಂತರ ಸ್ವಲ್ಪ ಸೈನ್ಯವನ್ನು ಕೂಡಿಸಿ ಸುತ್ತಮುತ್ತಲಿನ ಸೀಮೆಯನ್ನು ಗೆಲ್ಲಲು ನಿಶ್ಚಯಿಸಿದನು. ಅದೇ ಸಮಯದಲ್ಲಿ ತುಳುನಾಡಿನ ಹೊರಗಿನ ಘಟ್ಟದ ಮೇಲಿನಿಂದ ಬಂದ ರಾಜತಂತ್ರ ಪ್ರವೀಣರಾದ ಕರ್ನಾಟಕದ ಬ್ರಾಹ್ಮಣರಾದ ತಿಮ್ಮಪ್ಪಯ್ಯ, ವೆಂಕಟನಾರ್ಣಪ್ಪಯ್ಯ, ನಾಗಭಟ್ಟ ಎಂಬವರು ವರದಯ್ಯನ ಕೈಕೆಳಗೆ ಸೇವೆ ಸಲ್ಲಿಸಲು ಒಪ್ಪಿಕೊಂಡರು. ಆಗ ಪುತ್ತಿಗೆ ಸೀಮೆಯನ್ನು ಆಳುತ್ತಿದ್ದ ಸರಳೀಮಂಚದ ತಿಮ್ಮಪ್ಪಯ್ಯ ಬಲ್ಲಾಳನು, ವರದಯ್ಯನ ವಿರುದ್ಧ ಯುದ್ದ ಸಾರಿದನು. ಆದರೆ ಈ ಯುದ್ಧದಲ್ಲಿ ವರದಯ್ಯನು ಜಯಗಳಿಸಿದ. ಪರಿಣಾಮವಾಗಿ ಬಲ್ಲಾಳನ ಕೈಕೆಳಗಿದ್ದ ಪುತ್ತಿಗೆಯು ವರದಯ್ಯನ ವಶವಾಯಿತು. ಅನಂತರ ವರದಯ್ಯನು ಬೊಣ್ಯದ ಬೆಟ್ಟಿನ ತಿಮ್ಮಯ್ಯ ಬಂಗನನ್ನು, ಯಾದರ ಬಲ್ಲಾಳನನ್ನು ಸೋಲಿಸಿ ಅವರ ಗ್ರಾಮಗಳನ್ನು ತನ್ನ ಸ್ವಾಧೀನ ಮಾಡಿಕೊಂಡು ಅರಮನೆಯನ್ನು ಮೊದಲಿಗಿಂತಲೂ ಹೆಚ್ಚು ದೊಡ್ಡದಾಗಿ ಕಟ್ಟಿಸಿದ. ಆಗ ಮಿಜಾರು ಸೀಮೆಯನ್ನು ಆಳುತ್ತಿದ್ದ ಚನ್ನಪ್ಪರಸ ಎಂಬುವನು ವರದಯ್ಯನ ಮೇಲೆ ಕಣ್ಣಿಟ್ಟು ಯುದ್ದಕ್ಕೆ ಬರಲು ಸೋಮೇಶ್ವರದಿಂದ ಚನ್ನರಾಯ ಚೌಟನು, ಪುತ್ತಿಗೆಯಿಂದ ವರದಯ್ಯನು ತಮ್ಮ ಸೈನ್ಯದೊಂದಿಗೆ ಚನ್ನಪ್ಪರಸನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದರು. ಈ ಜಯದ ನಂತರ ವರದಯ್ಯನು ಮಿಜಾರು ಮಾಗಣೆಯನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಅಂದರೆ ವರದಯ್ಯನು ಪರಾರಿಯಲ್ಲಿ ಕಾಯೆರಮಂಜಿ ಅರಮನೆಯನ್ನು ಪ್ರಥಮ ಬಾರಿಗೆ ಕಟ್ಟಿಸಿದಾಗ ಅದು ಚೌಟರ ಅಧೀನಕ್ಕೆ ಒಳಪಟ್ಟ ಸ್ಥಳವಾಗಿರಲಿಲ್ಲ. ಸರಳೀಮಂಚದ ತಿಮ್ಮಪ್ಪಯ್ಯ ಬಲ್ಲಾಳನಿಗೆ ಸೇರಿದ ಸ್ಥಳದಲ್ಲಿ ಅರಮನೆಯನ್ನು ಕಟ್ಟಿದ ವರದಯ್ಯನು ನಂತರ ಅವನ ವಿರುದ್ಧವೇ ಯುದ್ದ ಸಾರಿ ಅವನನ್ನು ಸೋಲಿಸಿ ಪುತ್ತಿಗೆಯನ್ನು ವಶಪಡಿಸಿ, ನಂತರ ಚೌಟ ವಂಶದ ರಾಜಧಾನಿಯನ್ನು ಉಳ್ಳಾಲ – ಸೋಮೇಶ್ವರದಿಂದ ಪುತ್ತಿಗೆ ಸ್ಥಳಾಂತರಿಸಿದ.

ಆದರೆ ಪುತ್ತಿಗೆಯನ್ನು ಚೌಟ ಅರಸರು ವಶಪಡಿಸಿ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸುವುದಕ್ಕಿಂತ ಹಿಂದೆ ಅದನ್ನು ಆಳುತ್ತಿದ್ದ ಅರಸರ ಅಂತ್ಯ ಹೇಗಾಯಿತು ? ಮತ್ತು ಅದು ಚೌಟ ಅರಸರ ಕೈಗೆ ಹೇಗೆ ಬಂತೆಂಬುದರ ಬಗ್ಗೆ ಅಲ್ಲಿ ಪ್ರಚಲಿತದಲ್ಲಿರುವ ಐತಿಹ್ಯಗಳು ಬೇರೆಯೇ ಕಥೆಯನ್ನು ಹೇಳುತ್ತವೆ. ಚೌಟರಸರು ಪುತ್ತಿಗೆಯಲ್ಲಿ ರಾಜ್ಯಸ್ಥಾಪನೆ ಮಾಡುವುದಕ್ಕೆ ಮೊದಲು. ಜೋಗಿಯರಸನೊಬ್ಬ ಇಲ್ಲಿ ಆಳುತ್ತಿದ್ದು, ಅವನು ಪ್ರಜಾಪೀಡಕನಾಗಿದ್ದುದರಿಂದ ಪ್ರಜೆಗಳು ಅವನನ್ನು ದ್ವೇಷಿಸುತ್ತಿದ್ದರು. ಇದೇ ಗ್ರಾಮದ ಪರಾರಿ ಎಂಬಲ್ಲಿ ಒಂದು ರಸಬಾವಿಯಿತ್ತು. ಅದರಲ್ಲಿ ಕಬ್ಬಿಣವನ್ನು ಮುಳುಗಿಸಿದರೆ ಚಿನ್ನವಾಗುತ್ತದೆಂಬ ಪ್ರತೀತಿ ಜನರಲ್ಲಿತ್ತು. ಆ ದುಷ್ಟ ಅರಸನಿಗೆ ಹೇಗಾದರೂ ಒಂದು ಕೊನೆತರಲು ನಿರ್ಧರಿಸಿದ ಅಲ್ಲಿಯ ಜನರು ರಸಬಾವಿಯ ನೆಪಮಾಡಿಕೊಂಡು “ಇದರ ಸತ್ಯಾಸತ್ಯತೆಯನ್ನು ಅರಸರೇ ಈ ಜಗತ್ತಿಗೆ ಜಾಹೀರು ಮಾಡಿಕೊಡಬೇಕೆಂದು” ಉಪಾಯದಿಂದ ಕೇಳಿಕೊಂಡರು. ಮೋಸಹೋದ ಅರಸನು ಕಬ್ಬಿಣವನ್ನು ಕೈಯಲ್ಲಿ ಹಿಡಿದು ಬಾವಿಗಿಳಿದಾಗ ಜನರು ಮೇಲಿನಿಂದ ಬಾವಿಯನ್ನು ಕಲ್ಲಿನಿಂದ ಮುಚ್ಚಿಬಿಟ್ಟರು. ನನ್ನನ್ನು ಮೋಸಗೊಳಿಸಿದಿರಲ್ಲ, ನನಗೆ ನ್ಯಾಯ ಬೇಡವೇ ? ಎಂದು ಜೋಗಿಯರಸನು ಬಾವಿಯೊಳಗಿಂದಲೆ ಬೊಬ್ಬೆಯಿಟ್ಟಾಗ, ಜನರು, ಸ್ವಲ್ಪ ತಾಳು, ನಾಲ್ಕು ಜನ ಸೇರಿ ಚರ್ಚಿಸಿ ತೀರ್ಮಾನ ಮಾಡಿ ಹೇಳುತ್ತೇವೆ ಎಂದರು. ಬಹಳ ಸಂಕಟದಿಂದದ್ದ ಅವನು, ಇನ್ನು ಮುಂದೆ ನಾಲ್ಕು ಜನ ಸೇರಿ ನಿರ್ಣಯಿಸುತ್ತೇವೆಂದು ಪ್ರಾರಂಭಿಸುವ ಯಾವ ಕೆಲಸವು ಈ ಊರಲ್ಲಿ ಆಗದಿರಲಿ ಎಂದು ಶಾಪಕೊಟ್ಟು ಪ್ರಾಣ ಬಿಟ್ಟನು. ಅವನ ತರುವಾಯ ಇಲ್ಲಿ ಚೌಟ ಅರಸರ ಆಳ್ವಿಕೆ ಪ್ರಾರಂಭವಾಯಿತೆಂದು ಈ ಐತಿಹ್ಯ ಹೇಳುತ್ತದೆ. ಪುತ್ತಿಗೆಯ ಹಿಂದಿನ ಅರಸ ಪ್ರಜಾಪೀಡಕನಾಗಿರಬಹುದು. ಆದರೆ ಇಲ್ಲಿರುವ ಇತರ ವಿಚಾರಗಳು ಬರೇ ಕಥೆ ಮಾತ್ರ. ಚಾರಿತ್ರಿಕ ವಿಷಯಗಳಲ್ಲ.

ಆಮೇಲೆ ಚನ್ನರಾಯನು ಸಹ ಉಳ್ಳಾಲದ ಸೋಮೇಶ್ವರದ ಅರಮನೆಯನ್ನು ಬಿಟ್ಟು ಪುತ್ತಿಗೆ ಅರಮನೆಯಲ್ಲಿಯೇ ನೆಲೆ ನಿಂತನು. ಆದರೆ ಸೋಮನಾಥ ದೇವರ ಪೂಜೆಯ ಪ್ರಸಾದವು ದಿನನಿತ್ಯವು ಪುತ್ತಿಗೆ ಅರಮನೆಗೆ ಬರುತ್ತಿತ್ತು. ನಂತರದ ದಿನಗಳಲ್ಲಿ ಚನ್ನರಾಯನು ತನ್ನ ರಾಜ್ಯಭಾರವನ್ನು ಕ್ರಮಪಡಿಸುವ ಕಾರ್ಯಕ್ಕೆ ಹೆಚ್ಚಿನ ಗಮನ ನೀಡಲಾರಂಭಿಸಿದ. ನರ್ಸಪ್ಪಯ್ಯ ಎಂಬವನನ್ನು ಪ್ರಧಾನಿಯಾಗಿ ನಿಯಮಿಸಿ ಪುತ್ತಿಗೆಯಲ್ಲಿ ಅವನಿಗೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟು ಮನೆ ಸಹ ಕಟ್ಟಿಸಿಕೊಟ್ಟನು. ಸೀಮೆಯ ಶಾನಭವಿಕೆಯನ್ನು ವೆಂಕಟನಾರ್ಣಪ್ಪಯ್ಯನಿಗೂ, ಕವಳಿಗೆ ಶಾನಭವಿಕೆಯನ್ನು (ಖಜಾಂಚಿ, ಕೋಶಾಧಿಕಾರಿ) ನಾರ್ಣಪ್ಪಯ್ಯನಿಗೂ ಕೊಟ್ಟು ಅವರನ್ನು ಮೂಡಬಿದರೆಯಲ್ಲಿಯೆ ನಿಲ್ಲಿಸಿದನು. ಪೌರೋಹಿತ್ಯದ ಕೆಲಸವನ್ನು ನಾಗಪ್ಪಯ್ಯನಿಗೆ ನೀಡಿದ. ಅವಸರದವನಾಗಿ ಅಥವಾ ಆಪ್ತ ಕಾರ್ಯದರ್ಶಿ (Personal Assistant) ದ್ರಾವಿಡ ಬ್ರಾಹ್ಮಣ ರಾಮಭದ್ರಯ್ಯ ಎಂಬವನಿಗೆ ನೇಮಕ ನೀಡಿ ಬೆಳುವಾಯಿ ಗ್ರಾಮದ ಅಂಬಾಡಿಬೈಲಿನಲ್ಲಿ ಸ್ಥಳ ಉಂಬಳಿ ಬಿಟ್ಟನು. ಪುಟ್ಟಯ್ಯ, ಲಕ್ಷ್ಮೀನಾರಾಯಣ ಇವರಿಬ್ಬರಿಗೆ ರಾಯಸದ ಕೆಲಸಕ್ಕೆ ನೇಮಕ ಮಾಡಿದನು. ಸೈನ್ಯದ ಶಾನಭವಿಕೆಯನ್ನು ಸ್ಥಾನಿಕ ಬ್ರಾಹ್ಮಣ ನಾರ್ಣಪ್ಪಯ್ಯನಿಗೂ ಕೊಟ್ಟನು. ಪದುಮನಾಯಕ. ತಮ್ಮಯ್ಯ ನಾಯಕ. ಕೊಲ್ಲೂರು ನಾಯಕ ಮತ್ತು ತಿಮ್ಮಪ್ಪ ನಾಯಕ ಎಂಬ ೪ ಮಂದಿಯನ್ನು ತನ್ನ ಸೇನಾಧಿಪತಿಗಳನ್ನಾಗಿ ನೇಮಿಸಿದ. ಅಲ್ಲದೇ ಅನಂತರ ಯುದ್ಧದ ಸಮಯದಲ್ಲಿ ತನ್ನ ಪ್ರಜೆಗಳಲ್ಲಿ ಮನೆಗೆ ಒಬ್ಬ ಗಂಡಸಿನ ಪ್ರಕಾರ ಸೈನಿಕನಾಗಿ ಹೊರಡಬೇಕೆಂದು ಅಪ್ಪಣೆ ಹೊರಡಿಸಿದ.

. ದೇವುರಾಯ (ಕ್ರಿ.ಶ.೧೨೧೯ – ೧೨೪೫):

ಚನ್ನರಾಯನ ತರುವಾಯ ಅವನ ಅಳಿಯ ವರದಯ್ಯನು, ದೇವುರಾಯ ಚೌಟ ಎಂಬ ಹೆಸರಿನಿಂದ ಕ್ರಿ.ಶ.೧೨೧೯ಕ್ಕೆ ಸರಿಯಾದ ಶಾ.ಶ.೧೧೪೧ನೇ ಪ್ರಮಾದಿ ಸಂವತ್ಸರದ ಶ್ರಾವಣ ಶು| ೧೭ರಲ್ಲಿ ಪಟ್ಟಕ್ಕೆ ಬಂದನು. ಮಾವನ ಕಾಲದಲ್ಲಿಯೇ ಇವನು ರಾಜ್ಯದ ಸ್ಥಿತಿಯನ್ನು ಸರಿಪಡಿಸಿಕೊಂಡುದರಿಂದ ಇವನ ಆಳ್ವಿಕೆ ಕಾಲದಲ್ಲಿ ಯಾವ ವಿಶೇಷ ಘಟನೆಗಳು ನಡೆಯಲಿಲ್ಲ.

೪. ೨ನೇ ತಿರುಮಲರಾಯ (ಕ್ರಿ.ಶ.೧೨೪೫ – ೧೨೮೩):

ದೇವುರಾಯನ ನಂತರ ಅವನ ಅಳಿಯ ತಿರುಮಲರಾಯನು ಶಾ.ಶ. ೧೧೬೭ರ ವಿಶ್ವಾವಸು ಸಂ|ರದ ಆಶ್ವೀಜ ಶು| ೧೩ರಲ್ಲಿ ಪಟ್ಟಕ್ಕೆ ಬಂದನು. ಇವನು ಶಿವಭಕ್ತ. ತನ್ನ ಆಳ್ವಿಕೆ ಕಾಲದಲ್ಲಿ “ವೃಷಭ ಧ್ವಜ” ವನ್ನು ತನ್ನ ರಾಜ್ಯದ ಧ್ವಜವನ್ನಾಗಿ ಮಾಡಿಕೊಂಡ ಇವನು ವಿದ್ಯಾವಂತರಿಗೆ ಬಹಳಷ್ಟು ಮನ್ನಣೆ ನೀಡುತ್ತಿದ್ದ. ಪುತ್ತಿಗೆ ಅರಮನೆಗೆ ಬಂದು ನಿಂತ ಮೇಲೆ ಪ್ರತಿದಿನವೂ ಸೋಮೇಶ್ವರದಿಂದ ಪ್ರಸಾದ ಬರಲಿಕ್ಕೆ ಅನಾನುಕೂಲವಾದ್ದರಿಂದ ಪುತ್ತಿಗೆ ಅರಮನೆಯ ಹತ್ತಿರ ಸೋಮನಾಥ ದೇವರಿಗೆ ಒಂದು ದೇವಸ್ಥಾನವನ್ನು ಕಟ್ಟಿಸಿ ಶಾ.ಶ. ೧೧೭೭ನೇ ರಾಕ್ಷಸ ಸಂ| ರದ ವೈಶಾಖ ಶು| ೭ರಲ್ಲಿ ದೇವತಾ ಪ್ರತಿಷ್ಠೆಯನ್ನು ಮಾಡಿಸಿದನು. ದೇವಸ್ಥಾನದ ಸಮೀಪ ಪಂಚಧೂಮಾವತಿ ದೈವಕ್ಕೆ ಒಂದು ಗುಡಿಯನ್ನು ಕಟ್ಟಿಸಿದನು.

ಪುತ್ತಿಗೆ ಅರಸರು, ಪುತ್ತಿಗೆ ಸಮೀಪದ ಚಿಲಿಂಬಿಕಟ್ಟೆ ಎಂಬ ಸ್ಥಳದಲ್ಲಿ “ಮಹತೋಭಾರ ಸೋಮನಾಥೇಶ್ವರ” ವೆಂಬ ದೇವಸ್ಥಾನವನ್ನು ಕಟ್ಟಿಸುವ ಸಂದರ್ಭದಲ್ಲಿಯೂ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ಐತಿಹ್ಯಗಳಿವೆ. ದೇವಸ್ಥಾನ ಕಟ್ಟಲು ಸೂಕ್ತ ಸ್ಥಳ ಪರಿಶೀಲಿಸುತ್ತಾ ಪರಾರಿಯಿಂದ ದೂರ ಬಂದಾಗ, ಚಿಲಿಂಬಿಕಟ್ಟೆ ಎಂಬಲ್ಲಿ ಒಂದು ಹುಲಿಯು ಒಂದು ಕಬೆತಿ ದನದೊಂದಿಗೆ ಸ್ನೇಹಭಾವದಿಂದ ಕುಳಿತಿರುವ ದೃಶ್ಯವು ಪುತ್ತಿಗೆಯ ಚೌಟ ಅರಸರ ದೃಷ್ಟಿಗೆ ಬಿತ್ತು. ಹೀಗಾಗಿ ಅದು ಬಹಳ ಕಾರಣಿಕದ ಸ್ಥಳವೆಂದು ತಿಳಿದ ಅರಸರು ಅಲ್ಲಿಯೇ ದೇಗುಲವೊಂದನ್ನು ಕಟ್ಟಲು ನಿರ್ಧರಿಸಿದರು. ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡ ನಂತರ ಶಿವಲಿಂಗವನ್ನು ತರಲು ಕೆಲವು ಬ್ರಾಹ್ಮಣರನ್ನು ಕಾಶಿಗೆ ಕಳುಹಿಸಿದರು. ಅವರು ಲಿಂಗಸಹಿತವಾಗಿ ಬರುವಾಗ, ಮಾರ್ಗ ಮಧ್ಯದಲ್ಲಿ ಅದು ಕದ್ದುಹೋಯಿತು. ಆದುದರಿಂದ ಅವರು ಪುನಃ ಕಾಶಿಗೆ ಹಿಂತಿರುಗಬೇಕಾಯಿತು. ಆದರೆ ಇತ್ತಕಡೆ ದೇವಸ್ಥಾನದ ನಿರ್ಮಾಣಕಾರ್ಯ ಸಂಪೂರ್ಣವಾಗಿ ಮುಗಿದು ಅದರ ಪ್ರತಿಷ್ಠಾಪನೆಯ ಮುಹೂರ್ತ ಸಮೀಪಿಸಿದರೂ ಶಿವಲಿಂಗ ಮಾತ್ರ ಬರಲೇ ಇಲ್ಲ. ಆಗ ಅಲ್ಲಿಯೇ ದೇವರಗುಡ್ಡ ಎಂಬಲ್ಲಿ ಲಿಂಗಾಯಿತರು ಪೂಜಿಸುತ್ತಿದ್ದ ಲಿಂಗವನ್ನು ಗುಟ್ಟಾಗಿ ತಂದು ಪ್ರತಿಷ್ಠಿಸಲಾಯಿತು. ತಮ್ಮ ಪೂಜೆಗೆ ಈ ರೀತಿ ಭಂಗ ಬಂದಾಗ, ಲಿಂಗಾಯಿತರು ಚೌಟರಸರ ಬಳಿಗೆ ಬಂದು ನ್ಯಾಯ ಬೇಡಿದರು. ಆಗ ಅರಸರು. ಇನ್ನಾವ ಬಗೆಯಲ್ಲೂ ಇದರ ತೀರ್ಮಾನ ಸಾಧ್ಯವಿಲ್ಲ. ಲಿಂಗದ ತಲೆಗೆ ಕತ್ತಿಯಿಂದ ಒಂದೇಟು ಹೊಡೆಯೋಣ; ಅದರ ತಲೆಯಿಂದ ಭಸ್ಮ ಬಂದರೆ ನೀವೇ ಕೊಂಡುಹೋಗಿ; ಹಾಲು ಬಂದರೆ ಇಲ್ಲೇ ಇರಲಿ ಎಂದರು. ಅದರಂತೆ ಮಾಡಿದಾಗ ಲಿಂಗದ ತಲೆಯಿಂದ ಹಾಲು ಚಿಮ್ಮಿತು. ಲಿಂಗಾಯಿತರು ಲಿಂಗವನ್ನು ಬಿಟ್ಟುಹೋದರು. ಈಗಲೂ ಲಿಂಗದ ತಲೆಯ ಮೇಲೊಂದು ಹೊಂಡವಿದ್ದು ನಿತ್ಯವೂ ಅದನ್ನು ಗಂಧದಿಂದ ತುಂಬುತ್ತಾರೆ. ಬ್ರಾಹ್ಮಣರು ಕಾಶಿಯಿಂದ ತಡವಾಗಿ ತಂದ ಲಿಂಗವನ್ನು ದೇವಸ್ಥಾನದ ಸರೋವರ ಕಟ್ಟೆಯಲ್ಲಿ ಸ್ಥಾಪಿಸಲಾಯಿತು ಎಂಬ ಸ್ವಾರಸ್ಯಕರ ಐತಿಹ್ಯವಿದೆ.[14] ವಿಶಾಲ ಮತ್ತು ಅಚ್ಚು ಕಟ್ಟಾಗಿರುವ ಈ ದೇವಸ್ಥಾನವನ್ನು ಶಾ.ಶ. ೧೧೭೭ರಲ್ಲಿ ಅಂದರೆ ಕ್ರಿ.ಶ.೧೨೫೫ರಲ್ಲಿ ನಿರ್ಮಿಸಲಾಯಿತೆಂದು ತಿಳಿಯಲಾಗಿದೆ. ಈ ದೇವಸ್ಥಾನದ ಸಮೀಪದಲ್ಲೇ ನಿರ್ಮಲ ಜಲಭರಿತವಾದ ಚಿಲಿಂಬಿಕಟ್ಟೆಯಿದೆ.

ಹಿಂದೆ ಈ ದೇವಸ್ಥಾನದಲ್ಲಿ “ಭೂಮಂಡಲ ರಥ” ವೆಂಬ ಬಹುಸುಂದರವಾದ ತೇರೊಂದಿತ್ತು. ಆದರೆ ನಂತರ ಅದು ಪೂರ್ಣವಾಗಿ ಜೀರ್ಣವಾಗಿ ಹೋಗಿದ್ದು, ಪ್ರಸ್ತುತ ಅದರ ಕೆಲವು ಸುಂದರ ಚಿತ್ರಪಟ್ಟಿಕೆಗಳನ್ನು ಮಾತ್ರ ದೇವಸ್ಥಾನದಲ್ಲಿ ರಕ್ಷಿಸಿಟ್ಟಿದ್ದಾರೆ. ನಂತರ ಭೂಮಂಡಲ ರಥಕ್ಕೆ ಬದಲಾಗಿ “ಆಳುಪಲ್ಲಂಕಿ” ಎಂಬ ಬೃಹತ್ ರಥವೊಂದನ್ನೂ ನಿರ್ಮಿಸಲಾಗಿದೆ. ಮೇಷ ಸಂಕ್ರಮಣದಲ್ಲಿ ಇಲ್ಲಿ ವರ್ಷಾವಧಿ ಜಾತ್ರೆ ನಡೆಯುತ್ತಿದ್ದು ಆಗ ಉತ್ಸವ ಮೂರ್ತಿಗಳನ್ನು ಆ ರಥದಲ್ಲಿ ಆಲಂಕರಿಸಿಟ್ಟು ಎಳೆಯುತ್ತಾರೆ. ಪ್ರಸ್ತುತ ಕಲೆಂಬೆಟ್ಟು, ಪಳಕಳ, ಪಟ್ಲ, ಸಂಪಿಗೆ, ಮಿತ್ತಬೈಲು, ಗುಡ್ಡೆಯಂಗಡಿ, ಹಂಡೇಲು, ಕಡಲಕೆರೆ ಮುಂತಾದ ಸ್ಥಳಗಳು ಪುತ್ತಿಗೆ ಗ್ರಾಮಕ್ಕೆ ಸೇರಿವೆ, ‘ಹುತ್ತ’ಗಳು ಹೆಚ್ಚಾಗಿದ್ದುದರಿಂದ ಇಲ್ಲಿಗೆ ಪುತ್ತಿಗೆ ಎಂಬ ಹೆಸರು ಬಂತೆನ್ನಲಾಗುತ್ತದೆ. (ಅಷ್ಟಮಠಗಳ ಮೂಲಕ ಪ್ರಸಿದ್ಧವಾಗಿರುವ ಇನ್ನೊಂದು ಪುತ್ತಿಗೆ ಉಡುಪಿ ಜಿಲ್ಲೆಯ, ಉಡುಪಿ ತಾಲೂಕಿನಲ್ಲಿದೆ.)

 

[1] Prof. P. Gururaja Bhatt – Studies in TULUVA History and Culture, P. 68 (Prof. P. G. bhatt – Tuluva).

[2] Ibid, P. 68.

[3] Dr. K. V. Ramesh – A History of South Kanara; P. 160.

[4] Prof. P.G. Bhatt – ‘Tuluva’, P. 69.

[5] Ibid, P. 69.

[6] Rev. F. Kittel – Kannada – English dictionary, P. 616.

[7] Prof. P.G. Bhatt – ‘Tuluva’, P. 69.

[8] Ibid, P. 69.

[9] Ibid, P. 68.

[10] Ibid.

[11] ಶ್ರೀ ಗಣಪತಿ ರಾವ್ ಐಗಳ್-ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಪುಟಗಳು : ೩೮೬-೩೧೨ (ಐಗಳ್-ಇತಿಹಾಸ).

[12] ಕೆ. ಅನಂತರಾಮು – ದಕ್ಷಿಣದ ಸಿರಿನಾಡು; ಪುಟ: ೬೭.

[13] ಅದೇ, ಪುಟ ೬೮.

[14] ಅದೇ, ಪುಟಗಳು ೬೭-೬೮