ಆರಾಧನೆ, ಧರ್ಮ :

ಮೂಲ ಕದಂಬರಸರು ಭಾರತೀಯ ಸನಾತನ ಧರ್ಮದ ಅನುಯಾಯಿಗಳು, ಮೇಲಾಗಿ ಶಿವಭಕ್ತರು, ಬನವಾಸಿಯ ಮಧುಕೇಶ್ವರ ಅವರ ಆರಾಧ್ಯ ದೇವತೆ. ವೇಲಾಪುರ ಮಹಾತ್ಮ್ಯದ ಪ್ರಕಾರ ಕವಿಸಿಂಹನು ಸುಬ್ರಹ್ಮಣ್ಯನನ್ನು ತಪಸ್ಸಿನಿಂದ ಒಲಿಸಿ ಕುಮಾರಮಂಗಲವೆಂಬಲ್ಲಿ ಕುಮಾರನ ದೇವಸ್ಥಾನವನ್ನು ಸ್ಥಾಪಿಸಿದನು. ಮದವೂರಿನ ಶಿವನನ್ನು ಆರಾಧಿಸಿದ, ವೇಲಾಪುರದಲ್ಲಿ (ರಾಷ್ಟ್ರೀಯ ಹೆದ್ದಾರಿ ೧೭ರ ಉಪ್ಪಳದ ಪಶ್ಚಿಮದಲ್ಲಿರುವ ಐಲ) ದುರ್ಗಾಪರಮೇಶ್ವರೀ ದೇವಸ್ಥಾನವೂ ಅವನ ಮುಂದಾಳ್ತನದಲ್ಲೇ ಆಯಿತು. ವೈದಿಕ ಬ್ರಾಹ್ಮಣರನ್ನು ಕುಂಬಳೆ ಸೀಮೆಗೆ ಕರೆತಂದು ಅವರಿಗೆ ಸ್ಥಾನಮಾನಗಳನ್ನು ಕೊಟ್ಟನು. ಹದಿಮೂರನೆ ಶತಮಾನದ ಜಯಸಿಂಹನು ಶರದ್ವತ್‌ಕೃಪಾದಿಗಳ ವಂಶಜನೆಂದುದಲ್ಲದೆ ಮಧ್ವಾಚಾರ್ಯ ತ್ರಿವಿಕ್ರಮ ಪಂಡಿತರ ವಾದದಲ್ಲಿ ಮಧ್ವಸ್ಥನಾಗಿದ್ದ ವಿದ್ವಾಂಸನಾಗಿದ್ದನೆಂದರೆ ಅವನೂ ಬಹುಶಃ ವೈದಿಕ ಮತಾನುಯಾಯಿಯೇ ಆಗಿರಬೇಕು. ಹದಿನೈದನೇ ಶತಮಾನದ ಅನಂತಪುರ ಶಾಸನೋಕ್ತ ಜಯಸಿಂಹನೂ ವೈಕಿಂದೇವರಿಗೆ ಮಾಡಿದ ಹರಕೆಯಂತೆ ತಡ್ಯ ಪರಿಹಾರವನ್ನು ಕಾದು ಕೊಟ್ಟನೆನ್ನುವುದರಿಂದ ಅವನೂ ವೈದಿಕ ಪಂಥದ ಅನುಯಾಯಿ ಎನ್ನಬಹುದು. ಇಕ್ಕೇರಿ ಅರಸರ ಕಾಲದಲ್ಲಿ ವೀರಶೈವ ಮತವೂ ಇಲ್ಲಿಗೆ ಕಾಲಿಟ್ಟ ಕುರುಹಿದೆ. ಕಾಸರಗೋಡು ಪೇಟೆಯ ಒಳಭಾಗದಲ್ಲಿ ‘ಕರಂಡೆಕಾಡಿ’ನ ಹತ್ತಿರ ವೀರಶೈವ ಮಠವಿದ್ದುದಾಗಿ ಹೇಳುತ್ತಾರೆ. ಈ ರಸ್ತೆಗೆ ಮಠದಕಣಿ ರಸ್ತೆ ಎಂಬ ಹೆಸರು ಇತ್ತೀಚಿನವರೆಗೂ ಇತ್ತು.

18_264_TKAM-KUH

ಹೊಯ್ಸಳರ ಕಾಲದಿಂದ ಕವಿಸಿಂಹ ವರ್ಗದವರು ಜೈನ ಮತಾನುಯಾಯಿಗಳಾಗಿ ಬಲ್ಲಾಳ ಕುಲನಾಮವನ್ನು ಇರಿಸಿಕೊಂಡಿರಬೇಕು. ಕೊಡ್ಯಮ್ಮೆಯ, ಹೊಯ್ಸಳರ ಕಾಲದ (ಕ್ರಿ.ಶ.೧೨೭೯) ಶಾಸನದ ಹೆಚ್ಚಿನ ವಿವರ ತಿಳಿಯದಿದ್ದರೂ ಚಂದ್ರನಾಥ ತೀರ್ಥಂಕರರಿಗೆ ನಂದಾದೀಪ್ತಿಗೆ, ಅದೇ ಸ್ಲಾಬ್‌ನ ೨ನೇ ಮೈಯಲ್ಲಿ ಐಲ ದುರ್ಗಾ ಪರಮೇಶ್ವರಿಗೆ ದಾನ ನೀಡಿದ ಪ್ರಸ್ತಾಪವಿರುವುದರಿಂದ ಜೈನ ಧರ್ಮ ಸ್ವೀಕಾರವನ್ನೂಹಿಸಬಹುದು. ಮಂಜೇಶ್ವರದಲ್ಲಿ ಜೈನ ಬಸದಿಗಳೂ ಇವೆ. ಬೇರೆಲ್ಲೂ ಜೈನ ಬಸದಿಗಳು ಈಗ ಕಂಡು ಬರುವುದಿಲ್ಲ.

ನಾಲ್ಕು ದೇವಾಲಯಗಳು :

ಕುಂಬಳೆಯ ಪಾಳೆಯಪಟ್ಟದ ಪ್ರಮುಖ ನಾಲ್ಕು ದೇವಸ್ಥಾನಗಳಲ್ಲಿ ಪ್ರಧಾನವೂ ಪ್ರಾಚೀನವೂ ಆದ ಎರಡು – ಅಡೂರು

[1], ಮದವೂರು[2] ದೇವಸ್ಥಾನಗಳು ಶಿವಾಲಯಗಳು, ಕಾವು, ಕಣಿಪುರಗಳು ಗೋಪಾಲಕೃಷ್ಣ ಅಂದರೆ ವೈಷ್ಣವ ದೇವಸ್ಥಾನಗಳು. ಈ ದೇವಾಲಯಗಳಲ್ಲಿ ಪ್ರಧಾನಸ್ಥಾನ ಅರಸನಿಗೇ ಸಲ್ಲುತ್ತಿತ್ತು. ಕರ್ನಾಟಕದ ಇತರೆಡೆಗಳಂತೆ, ಅರಸರು ಜೈನರಾದರೂ ಅವರು ವೈದಿಕ ಆಚರಣೆಗಳನ್ನು ವಿರೋಧಿಸಿದವರಲ್ಲ, ಪ್ರೋತ್ಸಾಯಿಸಿದವರು. ಕೊಡ್ಯಮ್ಮೆಯ ಕವಿಸಿಂಹರಸರು ಮುಂಚೂಣಿಯಲ್ಲಿದ್ದು ಉತ್ಸವಗಳನ್ನು ನಡೆಸುತ್ತಿದ್ದರಂತೆ. ಪ್ರಸ್ತುತ ಲೇಖಕನ ಹಿರಿಯರಿಗೆ ಕುಂಬಳೆ ದೇವರ ಉತ್ಸವದಲ್ಲಿ ದೇವರಿಗೆ ಕೊಡೆ ಹಿಡಿಯುವ ಸೇವೆಯನ್ನು ಅರಸರು ಕೊಟ್ಟಿದ್ದುದರಿಂದ ಅವರ ಹೆಸರಿನ ಮೊದಲು ‘ಕೊಡೆ’ ಸೇರಿಸಲಾಗುತ್ತಿತ್ತು, ದಾಖಲೆಗಳಲ್ಲಿ ಹಾಗೆಯೇ ಇದೆ.

ನಾಲ್ಕು ದೈವಸ್ಥಾನಗಳು :

ಪೈಕ, ಬೆದ್ರಡ್ಕ, ಅಂಬಲಡ್ಕ, ಪುತ್ತಿಗೆ, ಈ ಸೀಮೆಯ ಪ್ರಮುಖ ದೈವಸ್ಥಾನಗಳು. ಇಲ್ಲಿನ ರಾಜದೈವಗಳ ವಾರ್ಷಿಕ ನೇಮ ಕುಂಬಳೆ ಅರಸರ ನೇತೃತ್ವದಲ್ಲೇ ಇದ್ದುವು. ಇಲ್ಲಿನ ತುಳುಭೂತಗಳು “ಆದಿ ಪೆರುಮಲೆ ಅಂತ್ಯ ಪುತ್ತಿಗೆ” ಎಂದು ಈ ಸ್ಥಾನಗಳಲ್ಲಿ ಭೂತಕೋಲದ ಅನುಕ್ರಮವನ್ನು ಹೇಳುತ್ತವೆ. ಪೆರುಮಲೆಯಿಂದ ಉತ್ಸವಾರಂಭವಾಗಿ ಪುತ್ತಿಗೆಯಲ್ಲಿ ಮುಕ್ತಾಯವಾಗುವುದು. ಈ ನಾಲ್ಕು ದೇವ ದೈವಸ್ಥಾನಗಳಲ್ಲದೇ ಇನ್ನೆಷ್ಟೋ ದೇವಸ್ಥಾನ ಭೂತಸ್ಥಾನಗಳಿವೆ. ಈಗ ಇವೆಲ್ಲ ಸ್ಥಳೀಯ ಕೂಟು ಕಟ್ಟಿನಿಂದ ನಡೆಯುತ್ತವೆ.

ಮಾಯಿಪ್ಪಾಡಿ ಶಾಖೆಯಲ್ಲಿ ರಾಜರಾಜೇಶ್ವರಿ ಆರಾಧ್ಯ ದೇವರಾಗಿ ಬೀರ್ಣಾಳ್ವ ಪ್ರಧಾನ ಭೂತವಾಗಿ ಆರಾಧಿಸಲ್ಪಡುವುದು ಮುಂದಿನ ಬೆಳವಣಿಗೆ. ಕ್ರೈಸ್ತ ಇಗರ್ಜಿಗಳು ಕುಂಬಳೆ, ಬೇಳ, ನಾರಂಪಾಡಿ ಮೊದಲಾದೆಡೆ. ಕಾಸರಗೋಡಿನಲ್ಲಿ ಕ್ರಿ.ಶ. ೮ನೇ ಶತಮಾನದ ಕೇರಳದ ಚೇರ್‌ಮನ್‌ ಪೆರುಮಾಳನಿಂದ ಸ್ಥಾಪಿತವಾದ ದೊಡ್ಡ ಮಸೀದಿ ಮತ್ತಿತರ ಹಳ್ಳಿಗಳ ಮಸೀದಿಗಳು ಬೆಳೆದು ಬಂದಿದೆ. ಈ ಎಲ್ಲಾ ಮತಧರ್ಮಗಳೂ ಸಹ ಅಸ್ತಿತ್ವದಿಂದ ಸಾಮರಸ್ಯದಿಂದ ಕೂಡಿವೆ. ಇಲ್ಲಿ ಒಮ್ಮೆಯೂ ಮತೀಯ ಗಲಭೆಯಾಗಿಲ್ಲ. ಇತ್ತೀಚೆಗೆ ಡಾ| ಕೆ.ಜಿ. ವಸಂತ ಮಾಧವ ಒದಗಿಸಿದ ಅವರ ಲೇಖನದಲ್ಲಿ ತಳಂಗೆರೆಯಲ್ಲಿ (ಕಾಸರಗೋಡು) ಜಾಮಿ ಮಸೀದಿಯ ಮಧ್ಯದ್ವಾರದಲ್ಲಿ ಮರದ ಹಲಗೆಯಲ್ಲಿ “ನಷ್ಕ” ಶೈಲಿಯಲ್ಲಿ ಅರೇಬಿಕ್‌ ಭಾಷೆಯಲ್ಲಿ ಬರೆದಿರುವ ಶಾಸನ ಹೀಗಿದೆ :

“ಅರೇಬಿಯಾ ದೇಶದ ಮಾಲಿಕ ದಿನಾರ (ಸಂತ) ಇಸ್ಲಾಂ ಮತ ಪ್ರಚಾರ ಮತ್ತು ಪ್ರಾರ್ಥನಾ ಮಂದಿರಗಳನ್ನು ಕಟ್ಟಿಸುವ ಉದ್ಧೇಶದಿಂದ ಸಂಗಡಿಗರೊಂದಿಗೆ ‘ಅಲ್‌ಹಿಂದ್‌’ಗೆ ಬಂದನು. ಇವರ ಪಂಗಡದಲ್ಲಿ ಇವನ ಮಗ ಷರಾಫ (Sharaf), ಇವನ ಮಾವನ ಹೆಸರು ನಮೂದಿಸಿಲ್ಲ. ಇವನ ಸಹೋದರ ಅಳಿಯ ಹಬಿಬ್‌ (Habib) ಮಾಲಿಕನ ಮಗ ಇತ್ಯಾದಿಯವರು ಬಂದಿದ್ದರು. ಈ ಪಂಗಡವು ‘ಅಲ್‌ಹಿಂದ್‌’ ನಲ್ಲಿರುವ ‘ಕಾಂಚರಕೋಟ್‌’ (Kanchara Kot) ಗೆ ಬಂದು ತಲುಪಿತು. ಇಲ್ಲಿ ಮಾಲಿಕ್‌ ದಿನಾರ್‌ ಹಿಜರಿ ೨೨, ಇಸ್ಲಾಂ ಮಾಸದ ರಬಾಬದ ೧೩ ಸೋಮವಾರದಂದು ಜಾಮಿ ಮಸೀದಿಯನ್ನು ಕಟ್ಟಿಸಿದನು. ಇದು ಕ್ರಿ.ಶ. ೬೪೩ (?) ಜೂನು ೭ಕ್ಕೆ ಸರಿ ಆಗುತ್ತದೆ. ಇಷ್ಟಲ್ಲದೆ ಇವನು ತನ್ನ ಮೊಮ್ಮಗ ಮಾಲಿಕ (ಅಹ್ಮದನ ಮಗ) ನನ್ನು ‘ಗಾದಿ’ಯಾಗಿ ಈ ನಗರದಲ್ಲಿ ನೇಮಿಸಿದನು. ಅಲ್ಲಾ (ದಯಾಮಯ) ಇವರ ಆತ್ಮವನ್ನು ಪಾವನಗೊಳಿಸಲಿ, ಅಲ್ಲದೆ ಇವರ ಗೋರಿಗಳಿಗೆ ಭವ್ಯತೆಯನ್ನು ತರಲಿ”.

ಈ ಶಾಸನದಲ್ಲಿ ತಿಳಿಸಿದ ವರ್ಷ (ಹಿಜರಿ ೨೨) ಚರ್ಚಾಸ್ಪದ. ಮಾಲಿಕ ದಿನಾರ ಕ್ರಿ.ಶ. ೭೪೮ರವರೆಗೆ ಜೀವಿಸಿದ್ದು ಅದೇ ವರ್ಷ ನಿಧನನಾದ. ಈ ಹಿನ್ನೆಲೆಯಲ್ಲಿ ಮಸೀದಿ ಕಟ್ಟಿದುದು ೭೪೮ರ ಸ್ವಲ್ಪ ವರ್ಷ ಹಿಂದೆ ಆಗಿರಬೇಕು. ಈ ಶಾಸನವನ್ನು ಕ್ರಿ.ಶ. ೭೪೩ರಲ್ಲಿ ಬರೆದಿರಬೇಕು.

(Annual report on Indian Epigraphy 1990 – 1991 APP C No. 68Journal of Epigraphical Society of India XXV 53 – 57)

ಕುಂಬಳೆ ಅರಸರಿಗೆ ಮಾತೃಭಾಷೆ ತುಳುವಾಗಿದ್ದು ಅಳಿಯ ಸಂತಾನದ ಕಟ್ಟನ್ನು ಅನುಸರಿಸುತ್ತಾರೆ. ಕವಿಸಿಂಹ ವರ್ಗದಲ್ಲಿ ಬಂಟರೊಡನೆ ವಿವಾಹ ಸಂಬಂಧವಾಗುತ್ತಿತ್ತು. ಮಾಯಿಪ್ಪಾಡಿ ಶಾಖೆಯಲ್ಲಿ, ಬಹುಶಃ ಟಿಪ್ಪುವಿನ ಕಾಲದಿಂದೀಚೆಗೆ ತಲಚೇರಿಯಲ್ಲಿ ಮಾವಿಲಾಯಿಯಲ್ಲಿ ಅರಸನ ಉಪಸ್ಥಿತಿಯಾದ ನಂತರ ನಾಯಿಮಾರ ಸ್ತ್ರೀಯರನ್ನು ಮದುವೆಯಾಗುವ ಕ್ರಮ ಆರಂಭವಾಗಿರಬೇಕು. ಆದರೆ ಇತ್ತೀಚೆಗೆ ಸ್ಥಳೀಯರೊಂದಿಗೇ ವಿವಾಹ ನಡೆಯುತ್ತದೆ.

ಮಾಯಿಪ್ಪಾಡಿ ಅರಮನೆಗೆ ಮೊದಲು ಆರು ತುಳು ಬ್ರಾಹ್ಮಣ ಮನೆತನಗಳ, ಮತ್ತೆ ಎರಡು ಹೆಚ್ಚಿನದಾಗಿ ಎಂಟು ಬ್ರಾಹ್ಮಣ ಮನೆತನಗಳ ನಿಕಟ ಸಂಪರ್ಕವಿದ್ದು, ಅರಸಿಯರು ಇವರಲ್ಲೊಬ್ಬನನ್ನು ವರಿಸುವ ಪದ್ಧತಿ ಹಿಂದಿನ ಕಾಲದ್ದು. ೧೮೫೦ನೇ ಇಸವಿ ಜನವರಿ ೨೫ರಂದು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮಿಗಳು ಆಗಿನ ರಾಮಂತರಸು ಮತ್ತು ಬ್ರಾಹ್ಮಣರ ಸಮ್ಮುಖದಲ್ಲಿ ಮಾಡಿದ ತಹದಲ್ಲಿ ಕೆಲವು ಬ್ರಾಹ್ಮಣರನ್ನು ಜಾತಿಯಿಂದ ಬಹಿಷ್ಕರಿಸಿದ ಪ್ರಸ್ತಾಪವಿರುವುದರಿಂದ ಜಾತಿಯ ಕಟ್ಟುನಿಟ್ಟಿನ ಅರಿವಾಗುತ್ತದೆ. ಈಗ ಈ ಜಾತಿ ಕಟ್ಟುಪಾಡುಗಳು ಬಹಳ ಸಡಿಲವಾಗಿ ಸಮಾನತೆಯ ಮನೋಭಾವ, ಅಂತಹ ಆಚರಣೆಗಳು ಕಂಡು ಬರುತ್ತಿವೆ.

ಕುಂಬಳೆ ಸೀಮೆಯ ಪ್ರಮುಖ ಮನೆತನಗಳು :

ಕೋಡಿಂಗಾರು :

ಅರಸರ ಕಾಲದಲ್ಲಿ ಬಂಟವರ್ಗದ ದೊಡ್ಡ ಜಮೀನ್ದಾರಿ ಮನೆತನಗಳಿದ್ದುವು. ಇಚ್ಲಂಪಾಡಿ, ಕೋಡಿಂಗಾರು ಗುತ್ತು ಮನೆತನಗಳು ತಮ್ಮ ಅಣ್ಣನ ಸಂಬಂಧವಾಗಿದ್ದುವು. ಕೋಡಿಂಗಾರು ಗುತ್ತು ಮೊದಲು ಬೇಳದಲ್ಲಿದ್ದು ಮತ್ತೆ ಕೆಳಗೆ ಬಯಲಿಗೆ ವರ್ಗಾವಣೆಗೊಂಡಿತು. ಇವರನ್ನು ಮೇಲಂಟ (ಮೇಲ್‌+ಬಂಟ) ರೆಂದು ಗೌರವದಿಂದ ಭೂತಪಾತ್ರಿ ಬಹುವಚನದಲ್ಲೇ ಸಂಬೋಧಿಸುತ್ತಾನೆ. ಬ್ರಾಹ್ಮಣರನ್ನು ಬಿಟ್ಟು ಉಳಿದ ಯಾರನ್ನೂ ಅವನು ಅವನು ಬಹುವಚನದಲ್ಲಿ ಸಂಬೋಧಿಸುವುದಿಲ್ಲ. ಕೋಡಿಂಗಾರಿನ ಶಂಕರ ಮೇಲಂಟರು ಕಲ್ಯಾಣಪ್ಪನ ಕಾಟಕಾಯಿಯಲ್ಲಿ ಅವನ ಕಡೆಯಲ್ಲಿ ಬ್ರಿಟಿಷರ ವಿರುದ್ಧವಿದ್ದರು. ಅವರಿಗೂ ಅವನಂತೆ ಗಲ್ಲು ಶಿಕ್ಷೆಯಾಗುವುದನ್ನು ಹೇಗೋ ಉಪಾಯಾಂತರದಿಂದ ತಪ್ಪಿಸಿಕೊಂಡರೆನ್ನಲಾಗಿದೆ.

ಇಚ್ಲಂಪಾಡಿ :

ಇದು ಅತ್ಯಂತ ಪ್ರಮುಖ ಮನೆತನವಾಗಿದ್ದು ಕುಂಬಳೆ ಅರಸರ ಪಟ್ಟಾಭಿಷೇಕ ಇಲ್ಲಿನ ಚಾವಡಿಯಲ್ಲಾಗಿ ಮತ್ತೆ ಅರಸನು ಕಣಿಪುರ, ಮದವೂರು, ಅಡೂರು ದೇವಸ್ಥಾನಗಳ ದರ್ಶನ ಮಾಡಬೇಕಿತ್ತು. ಇಲ್ಲಿ ನ್ಯಾಯ ತೀರ್ಮಾನ ನಡೆಯುತ್ತಿತ್ತು. ಸ್ತ್ರೀಯರ ಸವಾರಿಯ ಡೋಲಿ, ಕುದುರೆ ಸಾರಾಟು ಇದ್ದುವು. ಅರಸನ ಗಂಡಭೇರುಂಡ ಆಸನವೂ ಇಲ್ಲಿತ್ತು. ಕುಂಬಳೆ ಮೂರುಸಾವಿರ ಆಳ ಪಟ್ಟ. ಬೇಳದಿಂದ ಮೂಡು ಎರಡುಸಾವಿರ, ಪಡು ಒಂದು ಸಾವಿರ ಹೀಗೆ ಮೂರು ಸಾವಿರ ಆಳ ಮುಂಚೂಣಿಯಲ್ಲಿದ್ದವರೆಂದು ಇಚ್ಲಂಪಾಡಿಯವರನ್ನು “ಮೂಸ್ರಾಳು ಮುಂಗಣ್ಣಿ” ಎನ್ನಲಾಗುತ್ತಿತ್ತು “ಬೋಳಾಡ್‌ಮೂಡಾಯಿ ರಡ್ಡು ಸಾವಿರ, ಪಡ್ಡೈ ಒಂಜಿ ಸಾವಿರ” ಎಂದು ಇಲ್ಲಿನ ತುಳು ಭೂತಗಳ ನುಡಿಗಟ್ಟು. ವಿಷ್ಣುಮೂರ್ತಿ ಮಲಯಾಳಿ ಭೂತವು ತುಳು ಮೂವತ್ತೆರಡು, ಮಲಯಾಳ ಮೂವತ್ತೆರಡು (ದಕ್ಷಿಣಕ್ಕೆ) ಗ್ರಾಮಗಳನ್ನು ಎತ್ತಿ ಹೇಳುತ್ತದೆ. ಈ ಮನೆತನದ ಪ್ರಸಿದ್ಧ ವ್ಯಕ್ತಿ ಕೋಟ್ಯಣ್ಣಾಳ್ವರು ಇಚ್ಲಂಪಾಡಿ ಮೇಳವನ್ನು ಸ್ಥಾಪಿಸಿದರು. ಇದು ಬಹಳ ಹೆಸರುವಾಸಿಯಾಗಿತ್ತು. ಐದನೇ ಚಾರ್ಜನ ಪಟ್ಟಾಭಿಷೇಕವನ್ನು ಇಚ್ಲಂಪಾಡಿಯ ದರ್ಬಾರು ಕಟ್ಟೆಯಲ್ಲಿ ಆಚರಿಸಿದರಂತೆ.

ಬಂಬ್ರಾಣ :

ಈ ಶ್ರೀಮಂತ ಮನೆತನದ ರಾಮಯ ಆಳ್ವರಿಗೆ ‘ರಾವ್‌ಸಾಹೇಬ್‌’ ಬಿರುದಿತ್ತು. ನಾರಾಯಣ ಪೂಂಜ ವಿಖ್ಯಾತ ಸ್ಪೋರ್ಟ್‌‌ಮನ್‌, ಬಾಡಿಬಿಲ್ಡರ್‌, ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕೆ ಹೋಗಿ ಅಲ್ಲಿನ ಮಹಿಳೆಯನ್ನೇ ಮದುವೆಯಾಗಿ ಬಹಳ ಕಾಲ ಅಲ್ಲಿದ್ದು ವಾಪಸಾದರು. ಪ್ರಖ್ಯಾತವಾದ ಆಲಿಭೂತವಿರುವ ಪಾರೆಸ್ಥಾನ, ಕೆದೂರು ದೇವಸ್ಥಾನ, ಅಂಬಲಡ್ಕ ದೇವಸ್ಥಾನಗಳು ಇವರ ಆಡಳಿತದಲ್ಲಿದ್ದುವು.

ಕೂಡ್ಲು ಮನೆತನ :

ಈ ಮನೆತನದ ಪರಿಚಯ ನೀಡುವ “ಕುತ್ಯಾಳ ಸಂಪದ” ೧೯೯೭ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಅವರಿಂದ ಸಂಪಾದಿತವಾಗಿ ಶ್ರೀ ಗೋಪಾಲಕೃಷ್ಣ ಪ್ರಕಾಶನ, ಕೂಡ್ಲು, ಅಂಚೆ : ರಾಮದಾಸ ನಗರ, ಕಾಸರಗೋಡು ಇವರಿಂದ ಪ್ರಕಟಿತವಾಗಿದೆ. ಮಧ್ವಾಚಾರ್ಯರ ಕಾರ್ಯಕ್ಷೇತ್ರವಾದ ‘ಕೂಡ್ಲು’ವಿನಲ್ಲಿ ವಿಷ್ಣುಮಂಗಲ ದೇವಸ್ಥಾನವಿದೆ. ಮಧ್ವಾಚಾರ್ಯ, ತ್ರಿವಿಕ್ರಮ ಪಂಡಿತ ವಾದಕ್ಕೆ ಕೂಡಿದ್ದರಿಂದ ಈ ಹೆಸರು ಬಂದುದಲ್ಲ ಅದಕ್ಕಿಂತ ಮೊದಲೇ ಇಲ್ಲಿಗೆ ಈ ಹೆಸರಿತ್ತು. ಹೊಳೆಯೊಂದು ಸಮುದ್ರವನ್ನು ಕೂಡುವ ಜಾಗವಾದ್ದರಿಂದ ಕೂಡ್ಲು ಎಂಬ ಪ್ರಾಚೀನ ಹೆಸರು ಸಾರ್ಥಕ. ಇಲ್ಲಿನ ಮೂಲಪುರುಷ ಪಾಡಿಸುಬ್ಬಯ್ಯ ಬೀರಣ್ಣ ಬಂಟನನ್ನು ಅವನ ಕಾಟಕಾಯಿಯಲ್ಲಿ ಹಿಡಿದು ಬ್ರಿಟಿಷರಿಗೆ ಕೊಟ್ಟು ಚಿನ್ನದ ಬಳೆಗಳ, ತಪಶೀಲಿನ ಉಡುಗೊರೆ ಪಡೆದವನು. ಇವರು ಶ್ಯಾನುಭೋಗಿಕೆಯ ವೃತ್ತಿಯಲ್ಲಿದ್ದು ದೊಡ್ಡ ಜಮೀನ್ದಾರರಾದರು. ಕೂಡ್ಲು (ಸುಬ್ಬಯ್ಯ) ಸುಬ್ರಾಯ ಶ್ಯಾನುಭಾಗರು ಸಂಗೀತ, ನಾಟಕ, ಯಕ್ಷಗಾನಾದಿ ಸಕಲ ಕಲೆಗಳನ್ನು ಬಲ್ಲವರು, ಪಿಟೀಲು ವೀಣೆ ನುಡಿಸುತ್ತಿದ್ದರು. ಸ್ವತಃ ನಟರು, ಯಕ್ಷಗಾನ ಭಾಗವತರು. ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮೇಳವನ್ನು ಸ್ಥಾಪಿಸಿದರು. ಇದು ಈ ಪ್ರದೇಶದ ಅತ್ಯಂತ ಪ್ರಸಿದ್ಧಮೇಳ. ಸುಬ್ರಾಯ ಶ್ಯಾನುಭಾಗರು ನಾಟಕಗಳನ್ನು, ಹಾಡುಗಳನ್ನೂ ರಚಿಸಿದ್ದಾರೆ, ತೈಲ ವರ್ಣಚಿತ್ರ, ಆವೆಮಣ್ಣಿನ ಪ್ರತಿಮೆ ರಚನೆಗಳಲ್ಲೂ ಪರಿಣತರು. ಇತ್ತೀಚೆಗೆ ನಿಧನರಾದ ಕೂಡ್ಲು ಗೋಪಾಲಕೃಷ್ಣ ಶ್ಯಾನುಭಾಗರು ಚಿತ್ರಕಲಾ ಆಧ್ಯಾಪಕರೂ ಆಗಿ ಗೆರಟೆಯಲ್ಲೂ ಚಿತ್ರಗಳನ್ನೂ ಮಾಡಿ ಪ್ರಸಿದ್ಧರು.

ಕುಂಬಳೆ ನಾಯಕ ಮನೆತನ :

ಗೌಡ ಸಾರಸ್ವತ ವರ್ಗದ ಇವರು ಸುಮಾರು ೧೭೫೦ರಲ್ಲಿ ಪಡುಮಲೆಯಿಂದ ಬಂದು ಕುಂಬಳೆ ಪೇಟೆಯಲ್ಲಿ ವ್ಯಾಪಾರಕ್ಕಾಗಿ ನೆಲೆಸಿದವರು. ಕುಂಬಳೆ ದೇವಸ್ಥಾನದ ಪಶ್ಚಿಮದಲ್ಲಿ ಹೊಳೆಯ ಪಕ್ಕದಲ್ಲಿ ಇವರ ಹಳೆ ಭಂಡಸಾಲೆಯಿಂದ ಮಂಜಿ ಮೂಲಕ ಬೊಂಬಾಯಿಗೆ, ವಿದೇಶಗಳಿಗಿ, ಏಲಕ್ಕಿ, ಕರಿಮೆಣಸು, ಅಕ್ಕಿ ಮೊದಲಾದ ವ್ಯಾಪಾರ ಮಾಡಿ ಶ್ರೀಮಂತರೆನಿಸಿದರು. ನರಸಯ್ಯ ನಾಯಕರು ಶ್ರೀಮಂತ ವ್ಯಾಪಾರಿ. ಟಿಪ್ಪುವಿನ ಅಂಕಿತದಲ್ಲಿ ಕುಂಬಳೆ ಕೋಟೆಯಲ್ಲಿ ಫೌಜುದಾರನಾಗಿದ್ದ ದುರಹಂಕಾರಿ ಮಹಮ್ಮದ್ ಸೂಫಿಯು ನರಸಯ್ಯರನ್ನು ಸಾಲ ಕೊಡದ್ದಕ್ಕೆ ಅಪಮಾನಿಸಿದ್ದಕ್ಕಾಗಿ ಅವರ ಮಗ ದೊಡ್ಡ ರಾಯಪ್ಪ ನಾಯಕ ಶ್ರೀರಂಗಪಟ್ಟಣ ವರೆಗೆ ಹೋಗಿ ಟಿಪ್ಪುವನ್ನು ಕಂಡು ಅವನನ್ನು ಹಿಂದಕ್ಕೆ ಕರೆಸುವಂತೆ ಮಾಡಿದ ಧೀರ. ಬೇಕಲ ಕೋಟೆಯವರೆಗೂ ತಲಚೇರಿನವರೆಗೂ ಇವರು ಸಾಮಾನು ಸರಬರಾಜು ಮಾಡುತ್ತಿದ್ದರು. ತಲಚೇರಿಯ ಬ್ರಿಟಿಷರ ಸ್ನೇಹವೂ ದೊಡ್ಡರಾಪ್ಪನಿಗಿತ್ತು. ಕರ ನಿರಾಕರಣೆಯ ಸಂದರ್ಭದಲ್ಲಿ ರೈತರನ್ನು ಸಮಾಧಾನಪಡಿಸಿ ದಂಗೆಯೇಳದಂತೆ ಮಾಡಿದ್ದನ್ನು ಆಗಿನ ಕಲೆಕ್ಟರ್‌ ಸರ್ ಥೋಮಸ್‌ ಮನ್ರೊ (ಕ್ರಿ.ಶ.೧೮೦೩) ಮೆಚ್ಚಿದ್ದನಂತೆ. ದೊಡ್ಡರಾಯಪ್ಪ ನಾಯಕ (೧೭೭೦ – ೧೮೦೯) ಕುಂಬಳೆ ಯಕ್ಷಗಾನ ಮೇಳದ ಸ್ಥಾಪಕ. ೧೮೬೭ರಲ್ಲಿ ನಾಯಕ ಕುಟುಂಬ ಪಾಲಾದಾಗ ಅವರ ಪಾಲು ಪಟ್ಟಿಯಲ್ಲಿ ಈ ಮೇಳ ಆ ವಂಶದ ಜನಾರ್ದನ ನಾಯಕರಿಗೆ ಹೋಯಿತು. ಅದನ್ನು ಮಾರ ಬಾರದೆಂದೂ ಅದರಲ್ಲಿ ಹೇಳಿದೆ. ರಿಜಿಸ್ತ್ರಿಯಾದ ಈ ದಾಖಲೆಯನ್ನು ಅವರ ವಂಶದ, “ಕುಂಬಳೆ ನಾಯಕರು” ಪುಸ್ತಕದ ಲೇಖಕರಾದ ಎಂಬತ್ತರ ವೃದ್ಧ ವಾಸುದೇವ ಚರಡಪ್ಪ ನಾಯಕರು ೧ – ೧೧ – ೧೯೮೩ ರಂದು ನನಗೆ ತೋರಿಸಿ ಅವರ ಚರಿತ್ರೆಯನ್ನು ವಿವರಿಸಿದರು. ಮೇಳವು ಮುಕ್ತಾಯಗೊಂಡು ಅದರ ಮರದ ಗಣಪನನ್ನು ಕುಂಬಳೆ ದೇವಸ್ಥಾನದ ಹಿಂದೆ ಒಂದು ಚಿಕ್ಕ ಗುಡಿಯಲ್ಲಿ ಸ್ಥಾಪಿಸಲಾಗಿದೆ. ದೊಡ್ಡರಾಯಪ್ಪ ನಾಯನು, ತಲಚೇರಿಯಲ್ಲಿ ಕೊಡಗಿನ ಚಿಕ್ಕವೀರ ರಾಜೇಂದ್ರನಲ್ಲಿ ಹಾಕಿದ ಪಂಥದ ಪ್ರಕಾರ ರಾಜನ ಸೀಟು ಕಲ್ಲಿನ ಬೆನ್ನುಕಲ್ಲನ್ನು ದಿಟ್ಟತನದಿಂದ ತರಿಸಿ ತನ್ನ ಭಂಡಸಾಲೆಯ ಮೆಟ್ಟುಕಲ್ಲನ್ನಾಗಿ ಮಾಡಿದ ಸಾಹಸವನ್ನು ಇಂದೂ ಅಲ್ಲಿರುವ ಆ ಕಲ್ಲು ನೆನಪಿಸುತ್ತದೆ. ಕುಂಬಳೆ ನಾಯಕರು ಸರಿಯಾದ ಅರ್ಥದಲ್ಲಿ ನಾಯಕರೆನಿಸಿದರು.

ವ್ಯಾಪಾರ, ವಹಿವಾಟು :

ಈ ಹಿಂದೆ ಹೇಳಿದಂತೆ, ಕುಂಬಳೆಯಲ್ಲಿದ್ದ ಗೌಡ ಸಾರಸ್ವತ ನಾಯಕ ಮನೆತನದವರು ತಲಚೇರಿಯಿಂದ ಮಂಗಳೂರು, ಮುಂಬಯಿ ಮಾತ್ರವಲ್ಲದೆ ಮಾಲ್ದಿವ್ಸ್‌ಗೆ ಕುಚ್ಚಿಲಕ್ಕಿ ಮೊದಲಾದವುಗಳನ್ನು ಸಾಗಿಸುತ್ತಿದ್ದರು. ಮಾಲ್ದಿವ್ಸ್‌ನಿಂದ ಹಡಗಕ್ಕೆ ಬೇಕಾದ ಹುರಿಹಗ್ಗ ಮೊದಲಾದವನ್ನು ತರಲಾಗುತ್ತಿತ್ತು. ನಾಯಕರ ಭಂಡಸಾಲೆಯ ಹತ್ತಿರವೇ ಮಂಜಿಗಳು ನಿಲ್ಲುತ್ತಿದ್ದುವು. ಕುಂಬಳೆ ಬಂದರವು ಪೋರ್ತುಗೀಜರಿಗೆ ೮೦೦ ಲೋಡು ಅಕ್ಕಿಯನ್ನು ಕಪ್ಪವಾಗಿ ಕೊಟ್ಟಿತ್ತು ಎಂದು ದುಅರ್ತೆ ಬಾರ್ಬೊಸಾ ತಿಳಿಸುತ್ತಾನೆ. ಕುಂಬಳೆ ರಾಮನಾಥರಾವ್‌ಅರಸನಿಗೆ ಎರಡು ಸಾವಿರ ಇಕ್ಕೇರಿ ಪಗೋಡಾ ನಾಣ್ಯದ ವಾರ್ಷಿಕ ಆದಾಯದಲ್ಲಿ ಎಂಟುನೂರು ಪಗೋಡಾವನ್ನು ಇಕ್ಕೇರಿ ವೆಂಕಟಪ್ಪ ನಾಯಕನಿಗೆ ಕಪ್ಪವಾಗಿ ಕೊಡಬೇಕಾಗಿತ್ತು. ಲಿಂಕೋಸ್ಟನ್ ಎಂಬ ಡಚ್‌ಪ್ರವಾಸಿಯು (೧೫೬೫) ಕುಂಬಳೆ ಕಾಸರಗೋಡಿನಲ್ಲಿ ಅಕ್ಕಿ, ಕರಿಮೆಣಸು ವ್ಯಾಪಾರ ಮಾಲ್ದಿವ್ಸ್‌ನೊಂದಿಗೆ ಆಗುತ್ತಿದ್ದುದನ್ನು ತಿಳಿಸಿದ್ದಾನೆ. ಫ್ರಾಂಕೋಯಿಸ್ ಪೈರಾಡ್‌(Francois Pyard 1600) ಎಂಬ ಫ್ರೆಂಚ್‌ಪ್ರವಾಸಿಯು ಕಾಸರಗೋಡು ಬಂದರದ ರಚನೆ ಮತ್ತು ಸ್ಥಳೀಯರು ಪೋರ್ತುಗೀಜರನ್ನು ಓಡಿಸಿದ್ದನ್ನು ತಿಳಿಸಿದ್ದಾನೆ. (ಎಚ್.ಎಲ್‌.ನಾಗೇಗೌಡ – ಪ್ರವಾಸಿ ಕಂಡ ಇಂಡಿಯಾ – ಭಾಗ – ೨; ಡಾ| ಕೆ.ಜಿ.ವಸಂತ ಮಾಧವ – ಮೈನರ್‍ಪೋರ್ಟ್ಸ್‌ಇನ್ ಕೆನರಾ – ಮೆರೈನ್‌ಆರ್ಕಿಯೋಲಜಿ ಜರ್ನಲ್‌, ಪಂಜಿಮ್, ಗೋವಾ, ೧೯೯೨)

ಕುಂಬಳೆಯಲ್ಲಿ ಪ್ರಾಚೀನ ಕಾಲದಲ್ಲಿ ಮತ್ತು ಸ್ವಾತಂತ್ರ್ಯದವರೆಗೂ ವಸ್ತುರೂಪದ ವ್ಯವಹಾರ, ವಿನಿಯಮ ಹೆಚ್ಚಾಗಿತ್ತು. ಭತ್ತ, ತೆಂಗಿನಕಾಯಿಗಳನ್ನು ಸಂಬಳವಾಗಿ ಕೆಲಸದಾಳುಗಳಿಗೆ ಕೊಡುತ್ತಿದ್ದರು. ಹಣದ ವ್ಯವಹಾರ ಬಹಳ ಕಡಿಮೆಯಾಗಿತ್ತು. ಧಾನ್ಯಗಳನ್ನು ಕುಡ್ತೆ, ಸೇರು, ಬಳ್ಳ (ಹಾನೆ), ಕಳಸೆ (ಪರೆ) ಮುಡಿಗಳಲ್ಲಿ ಲೆಕ್ಕ ಹಾಕುತ್ತಿದ್ದರು. ಆಯಾ ಮೇಲುಅರಸರ ಆಡಳಿತ ಕಾಲದಲ್ಲಿ ಅವರವರ ನಾಣ್ಯಗಳು ಬಳಕೆಯಾಗುತ್ತಿದ್ದವು – ಪಗೋಡ, ಗದ್ಯಾಣ ಇತ್ಯಾದಿ. ಬ್ರಿಟಿಷರ ಕಾಲದಲ್ಲಿ ರೂಪಾಯಿ, ಆಣೆ, ಪೈಗಳು ವ್ಯವಹಾರದಲ್ಲಿದ್ದುವು. ದ್ರವ ವಸ್ತುಗಳನ್ನೂ ಕುಡ್ತೆ, ಸೇರು, ಬಳ್ಳ ಎಂಬ ಅಳತೆಯಿಂದಲೇ ಕರೆಯುತ್ತಿದ್ದರು. ಭಾರದ ಅಳತೆ ಬ್ರಿಟಿಷರ ಕಾಲದಲ್ಲಿ ರಾತಲು, ಮಣ, ಖಂಡಿ ಎಂಬ ಹೆಸರಿನಲ್ಲಿದ್ದುವು. ಕುಂಬಳೆ ಅರಸರು ಸ್ವಂತ ನಾಣ್ಯ ನಿರ್ಮಾಣ ಮಾಡಿಲ್ಲ. ಅವರ ಮೇಲು ರಾಜರ ವಿನಿಯಮ ಕ್ರಮವನ್ನೇ ಕಾಲದಿಂದ ಕಾಲಕ್ಕೆ ನಡೆಸಿಕೊಂಡು ಬಂದರು.

ಸಂಚಾರ ಹೆಚ್ಚಾಗಿ ಕಾಲ್ನಡಿಗೆ ಇಲ್ಲವೇ ಎತ್ತಿನಗಾಡಿ, ನೆಲದ ಸರಕು ಸಾಗಾಟಕ್ಕೆ ಎತ್ತಿನಗಾಡಿ ಅಥವಾ ತಲೆಹೊರೆ ಇರುತ್ತಿತ್ತು. ಹೊರುವವನಿಗೆ ಅಲ್ಲಲ್ಲಿ ಭಾರ ಇಳಿಸಲು ಹೊರೆಕಲ್ಲುಗಳಿದ್ದ ನಿದರ್ಶನವಿದೆ. ಅಲ್ಲಲ್ಲಿ ನದಿಗಳಿದ್ದುದರಿಂದ ದೋಣಿ ಮೂಲಕ ಮನುಷ್ಯರ, ಸರಕುಗಳ ಸಾಗಾಟವಾಗುತ್ತಿತ್ತು. ಶ್ರೀಮಂತರಿಗೆ ಹೆಚ್ಚಾಗಿ ಎತ್ತಿನಗಾಡಿ, ಕುದುರೆ ಸಾರೋಟು ಮನುಷ್ಯರು ಹೊರುವ ಡೋಲಿ, ಪಲ್ಲಕ್ಕಿಗಳೇ ವಾಹನ. ಸಾಮಾನ್ಯ ಜನ ಮಕ್ಕಳನ್ನು ಅಶಕ್ತರನ್ನು ಒಬ್ಬರು, ಇಬ್ಬರು ನಾಲ್ವರು ಹೊತ್ತೇ ಸಾಗಿಸುತ್ತಿದ್ದರು.

ಸಾಹಿತ್ಯ, ಕಲೆ :

ಕುಂಬಳೆ ಅರಸರ ಮೂಲ ಪುರುಷನೇ ಕವಿಸಿಂಹ ಹೆಸರಿನವನಾಗಿದ್ದು ಶಾಸ್ತ್ರಾದಿಗಳಲ್ಲಿ ಪರಿಣತನಾದ ಕವಿಯಾಗಿರಬೇಕು. ಹೆಸರು ಹೇಳದ ಸಂಸ್ಕೃತ ಕವಿಯೊಬ್ಬ “ವೇಲಾಪುರ ಮಹಾತ್ಮ” ವನ್ನು ರಚಿಸಿದ್ದಾನೆ. ಇದೊಂದು ಐತಿಹಾಸಿಕ ಕಾವ್ಯವಾಗಿದೆ. ಕನ್ನಡದಲ್ಲಿ ಯಕ್ಷಗಾನವಾಗಿದೆ. ಬಹುಶಃ ಇನ್ನೊಬ್ಬ ಜಯಸಿಂಹನು ಹತ್ತನೆ ಶತಮಾನದಲ್ಲಿ ಬರೆಸಿದ ತಳಂಗೆರೆ ಶಾಸನವೂ ಕಾವ್ಯಗುಣದಿಂದ ಕೂಡಿದೆ. ಆರಂಭದಲ್ಲಿ ಸಂಸ್ಕೃತ ಶ್ಲೋಕ, ವಚನ, ಉತ್ಸಾಹವೃತ್ತ ಕಂದಗಳನ್ನು ನೋಡಿದರೆ ಪ್ರೌಢ ಸುಂದರ ಸಾಹಿತ್ಯಭಾಷೆಯ ಅರಿವಾಗುತ್ತದೆ. ಇದನ್ನು ರಚಿಸಿದವನೊಬ್ಬ ಉತ್ತಮ ಕವಿಯೆನ್ನಲು ಅಡ್ಡಿಯಿಲ್ಲ. ಹದಿನೈದನೆ ಶತಮಾನದ ಅನಂತಪುರದ ತುಳು ಶಾಸನದಿಂದ ಆಗಿನ ತುಳು ಭಾಷೆಯ ಅರಿವಾಗುತ್ತದೆ. ಅದರಲ್ಲಿ ಉಕ್ತವಾದ ಜಯಸಿಂಹನೂ ಉತ್ತಮ ವಿದ್ಯಾವಂತ ಸುಸಂಸ್ಕೃತನಾಗಿರಬೇಕು. ತುಳು ಭಾಷೆಗೆ ಕೆಲವು ವಿಶೇಷ ಚಿಹ್ನೆಗಳನ್ನೂ ಬಳಸಿರುವುದು ಇದರ ವೈಶಿಷ್ಟ್ಯ. ೧೩ನೇ ಶತಮಾನದ ಜಯಸಿಂಹನ ಕಾಲದಲ್ಲೇ ಮಧ್ವಾಚಾರ್ಯರು ಕುಂಬಳೆಯ ಕಾವುಗೋಳಿಯ ತ್ರಿವಿಕ್ರಮ ಪಂಡಿತನಲ್ಲಿಗೆ ಬಂದು ವಾದದಲ್ಲಿ ಅವನನ್ನು ಗೆದ್ದರು. ಅವರ ಕುಟುಂಬದವರೆಲ್ಲಾ ಸಂಸ್ಕೃತ ವಿದ್ವಾಂಸರಾಗಿದ್ದು ಸಂಸ್ಕೃತದಲ್ಲಿ ಕೃತಿ ರಚನೆ ಮಾಡಿದ್ದಾರೆ.[3] ಅವರಿಬ್ಬರ ವಾದಲ್ಲಿ ಮಧ್ಯಸ್ಥನಾಗಿದ್ದ ಅರಸನು ವಿದ್ವಾಂಸನಾಗಿರಲೇಬೇಕು. ನಮ್ಮ ಜಿಲ್ಲೆಯಲ್ಲೇ ಕಾವು ಮನೆತನದವರೇ ಪ್ರಾಚೀನ ಸಂಸ್ಕೃತ ಕವಿಗಳೆನ್ನಲಾಗಿದೆ. ೧೯೧೫ರಲ್ಲೇ ಪೆರಡಾಲ ಮಹಾಜನ ಸಂಸ್ಕೃತ ಕಾಲೇಜು ಸ್ಥಾಪಿತವಾಗಿ ಅಲ್ಲಿ ಅನೇಕ ಸಂಸ್ಕೃತ, ಕನ್ನಡ ವಿದ್ವಾಂಸರು ಆಗಿ ಹೋಗಿದ್ದಾರೆ. ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಗಳು, ಕನ್ನಡ ಪಂಡಿತ ವಿದ್ವಾನ್ ಕೃಷ್ಣಯ್ಯನವರು ಖಂಡಿಗೆ ಪ್ರಿನ್ಸಿಪಾಲ್ ಶ್ಯಾಮಭಟ್ಟರು ಅಲ್ಲಿನ ಗುರುವೃಂದದವರು. ಕಯ್ಯಾರ ಕಿಞ್ಞಣ್ಣ ರೈ, ನೀರ್ಪಾಟಜೆ ಭೀಮಭಟ್ಟ, ವಿದ್ವಾನ್‌ ಕೆ.ಎಸ್. ಶರ್ಮಾ, ಕುಳಮರ್ವ ವೆಂಕಪ್ಪಭಟ್ಟ, ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ ಮೊದಲಾದವರು ಕವಿಗಳೂ ಲೇಖಕರೂ ಆಗಿ ಪ್ರಸಿದ್ಧರಾದವರು. ಕುಳಮರ್ವ ಮನೆತನಕ್ಕೆ ಕುಂಬಳೆ ಅರಸರು ಭೂಮಿ ನೀಡಿದ ದಾಖಲೆ ಇದೆ.

ರಾಷ್ಟ್ರಕವಿ ಗೋವಿಂದ ಪೈ, ಡಾ| ಕೆ.ವಿ. ತಿರುಮಲೇಶ, ಸಾರಾ ಅಬೂಬಕರ್‌ಮೊದಲಾದವರ ಸಾಹಿತ್ಯ ಸೇವೆ ಗಣನಾರ್ಹ.

ತುಳು ಸಾಹಿತ್ಯಕ್ಕೂ ಈ ಸೀಮೆಯೇ ಮೂಲ ನೆಲೆ. ಪುಂಡೂರು ವೆಂಕಟರಾಜ ಪುಣಿಂಚತ್ತಾಯರು ಸ್ವತಃ ಕವಿ, ಲೇಖಕ, ಸಂಶೋಧಕರಾಗಿದ್ದು ತುಳುವಿನ ಸುಮಾರು ಹದಿನಾರನೇ ಶತಮಾನದೆನ್ನಲಾದ ಶ್ರೀ ಭಾಗವತೋ, ಕಾವೇರಿ, ದೇವೀ ಮಹಾತ್ಮೆ ಕಾವ್ಯಗಳನ್ನು ಸಂಶೋಧಿಸಿ ಪ್ರಕಟಿಸಿದ್ದಾರೆ. ಇತ್ತೀಚೆಗೆ ಕೇವಲ ನಾಲ್ಕೈದು ತಾಳೆ ಗರಿಗಳುಳ್ಳ “ಕರ್ಣಪರ್ವ” ತುಳು ಕಾವ್ಯ ಭಾಗವೊಂದು ಅವರಿಗೆ ದೊರಕಿದೆ.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕುಂಬಳೆ ಸೀಮೆಯಲ್ಲಿ ಶಾಲಾ ಕಾಲೇಜುಗಳು ಸ್ಥಾಪಿತವಾದಂತೆ ವಿದ್ಯಾಪ್ರಚಾರ ಹೆಚ್ಚಾಗಿ ಕವಿಗಳೂ, ಲೇಖಕರು ಬಹುಸಂಖ್ಯೆಯಲ್ಲಿದ್ದಾರೆ. ಕಾಸರಗೋಡಿನಿಂದಲೇ ಕೆಲವು ಪತ್ರಿಕೆಗಳೂ ಹೊರಡುತ್ತಿವೆ.

ಕಲೆ :

ಇಲ್ಲಿನ ಪ್ರಧಾನ ಕಲೆ ಯಕ್ಷಗಾನ. ಯಕ್ಷಗಾನ ವಾಲ್ಮೀಕಿ, ಮದವೂರು ವಿಘ್ನೇಶ, ಕುಂಬಳೆ ಗೋಪಾಲಕೃಷ್ಣ, ಕೀಡಿಕಾವು ಶಂಕರನಾರಾಯಣ – ಈ ದೇವರ ಭಕ್ತ ಪಾರ್ತಿಸುಬ್ಬ ಇಲ್ಲಿನ ಪ್ರಸಿದ್ಧ ಯಕ್ಷಗಾನ ಕವಿಯಾಗಿದ್ದು (೧೫೯೦ – ೧೬೨೦)[4] ರಾಮಾಯಣ ಕಥಾನಕದ ಎಂಟು ಪ್ರಸಂಗಗಳನ್ನು ಮಹಾಭಾರತ ಗಜಗೌರೀವ್ರತ (ಐರಾವತ) ಮತ್ತು ಸಭಾಲಕ್ಷಣವನ್ನೂ ಬರೆದಿದ್ದಾನೆ. ಇಷ್ಟು ಪ್ರೌಢ ಯಕ್ಷಗಾನ ಕೃತಿಗಳನ್ನವರು ಬರೆಯಬೇಕಾದರೆ ಅವನಿಗಿಂತಲೂ ಹಿಂದೆ ಸಾಕಷ್ಟು ಯಕ್ಷಗಾನ ಕೃತಿಗಳಿದ್ದಿರಬೇಕೆಂದು ಸರಿಯಾಗಿಯೇ ಊಹಿಸಬಹುದು. ಕುಂಬಳೆಯ ಸುತ್ತಮುತ್ತಲಿನ ನಾಲ್ಕಾರು ಮೈಲು ಅಂತರದ ಪ್ರದೇಶದಲ್ಲೇ ಮೂರು ಪ್ರಸಿದ್ಧ ಮೇಳಗಳು ಎದ್ದು ಬಂದಿವೆಯೆಂದರೆ ಇಲ್ಲಿನ ಜನರ ಯಕ್ಷಗಾನ ಪ್ರೇಮ, ಪರಿಣತಿ ವ್ಯಕ್ತವಾಗುತ್ತದೆ. ಮೊದಲೇ ಹೇಳಿದಂತೆ ಕುಂಬಳೆ ಗೋಪಾಲಕೃಷ್ಣ ಯಕ್ಷಗಾನ ಮೇಳ, ಕೂಡ್ಲು ಕುತ್ಯಾಳ ಗೋಪಾಲಕೃಷ್ಣ ಯಕ್ಷಗಾನ ಮೇಳ, ಇಚ್ಲಂಪಾಡಿ ಮೇಳಗಳು ಈ ಪ್ರದೇಶದ ಪ್ರಸಿದ್ಧ ಮೇಳಗಳು, ಕೂಡ್ಲು ಸುಬ್ರಾಯ ಶಾನುಭಾಗರು ಸರ್ವ ಕಲಾಪರಿಣತರು, ಅದೊಂದು ಕಲೆಯ ನೆಲೆ, ಅವರ ವರ್ಣಚಿತ್ರ ಕೂಡ್ಲಿನ ಸಂಪಿಗೆ ಚಾವಡಿಯಲ್ಲಿ ಇತ್ತೀಚೆಗಿನವರೆಗೂ ಇತ್ತು. ಈ ಮೇಳಗಳಲ್ಲಿ ಹೆಸರುವಾಸಿಗಳಾದ ಭಾಗವತರು ಮತ್ತು ವೇಷಧಾರಿಗಳನ್ನು ಹಳ್ಳಿಯ ಜನ ಕೊಂಡಾಡುತ್ತಾರೆ. ಸುಮಾರು ಮೂವತ್ತೈದು ಯಕ್ಷಗಾನಗಳ ಕವಿಗಳು ಹುಟ್ಟಿದರು, ನೂರಮೂವತ್ತೈದು ಕೃತಿಗಳಾದುವು.[5]

ಕುಂಬಳೆಸೀಮೆ ಚಿಕ್ಕಪಾಳೆಯ ಪಟ್ಟವಾಗಿದ್ದರೂ ವಿದ್ಯಾವಂತ, ಸುಸಂಸ್ಕೃತ ನಾಗರಿಕರಿಂದ ಕೂಡಿದ ಪ್ರದೇಶ. ನೂರಾರು ದೇವಸ್ಥಾನಗಳು, ದೈವಸ್ಥಾನಗಳು ನಾಗಬನಗಳು ತುಂಬಿರುವುದು, ಇದೊಂದು “ದೇವರುಗಳ ರಾಜ್ಯ” (Land of Gods – B.S. ಕಕ್ಕಿಲ್ಲಾಯ) ಎನ್ನಿಸಿರುವುದು ಇಲ್ಲಿನ ಜನರ ಭಕ್ತಿಶ್ರದ್ಧೆಗಳಿಗೆ ಸಾಕ್ಷಿ. ಮತೀಯ ಕಲಹವಿಲ್ಲದೆ ಶಾಂತಿಯಿಂದ, ಸಹಬಾಳ್ವೆ ನಡೆಸುವ ಇಲ್ಲಿನ ಜನ ಸತ್ವಶಾಲಿಗಳು ಹೌದು. ಕರ್ನಾಟಕ ಸಂಸ್ಕೃತಿಯ ಒಂದು ಅಡ್ಡಮುರಿ (Cross Section) ಇದಾಗಿದ್ದರೂ ಕೇರಳದ ಕಾಲಕಡಗವಾಗಿರುವುದು ಸೋಜಿಗ.

– ಡಾ| ಉಪ್ಪಂಗಳ ರಾಮಭಟ್ಟ*

 

[1] ಕ್ರಿ.ಶ. ೧೮೮೮ರ ಎಪ್ರಿಲ್‌ನಲ್ಲಿ ಅಡೂರು ದೇವಲಯಕ್ಕೆ ಸಿಡಿಲು ಬಡಿದು ಹಚ್ಚಿನಂಶ ಸುಟ್ಟು ಹೋಯಿತೆಂದೂ ೧೮೯೦ರಲ್ಲಿ ಪುನರ್ನಿರ್ಮಾಣವಾಯಿತೆಂದೂ ತಿಳಿದುಬರುತ್ತದೆ.

[2] ೧೯೭೫ರಲ್ಲಿ ಕುಂಬಳೆ ಅರಸರು (ಮಾಯಿಪ್ಪಾಡಿ) ಮದವೂರು ದೇವಸ್ಥಾನದಲ್ಲಿ ಮೂಡಪ್ಪಸೇವೆ ನಡೆಸಿದ್ದರೆ ೧೪-೫-೧೭೯೭ರಂದು ಕೂಡ್ಲು ದೊಡ್ಡ ಸುಬ್ಬಯ್ಯ ಶಾನುಬಾಗರು ಮೂಡಪ್ಪಸೇವೆ ನಡೆಸಿದ್ದರು. (ಮೂಡಪ್ಪ ಎಂದರೆ ಗಣಪತಿ ವಿಗ್ರಹಕ್ಕೆ ಸುತ್ತ ಕಬ್ಬಿನ ಬೇಲಿ ಕಟ್ಟಿ ಅಪ್ಪವನ್ನು ತುಂಬಿಸುವ ವಿಶಿಷ್ಟ ಸೇವೆ)

೧೯೬೨ರಲ್ಲಿ ಜೀರ್ಣೋದ್ಧಾರದ ನಂತರ ಮೂಡಪ್ಪಸೇವೆ ನಡೆಯಿತು.

೧೯೬೫ರಲ್ಲಿ ಶೃಂಗೇರಿ ಶ್ರೀಪಾದಂಗಳ ನೇತೃತ್ವದಲ್ಲಿ ಕೋಟಿ ನಾಮಾರ್ಚನೆ ನಡೆಯಿತು. ಸಕಾಲದಲ್ಲಿ ಮಳೆ ಬಾರದಿದ್ದಾಗ ಶಿವಲಿಂಗಕ್ಕೆ ಶತರುದ್ರಾಭಿಷೇಕ ನಡೆಯುವುದು.

[3] ಡಾ| ಉಪ್ಪಂಗಳ ರಾಮಭಟ್ಟ – ’ಗಡಿನಾಡು ಕಾಸರಗೋಡು’ ೧೯೯೪, ಪುಟ ೫೬.

[4] ಕುಕ್ಕಿಲ ಕೃಷ್ಣಭಟ್ಟ – ಪಾರ್ತಿಸುಬ್ಬನ ಯಕ್ಷಗಾನಗಳು.

[5] ವೆಂಕಟರಾಜ ಪುಣಂಚತ್ತಾಯ – ‘ಕಾಸರಗೋಡಿನ ಯಕ್ಷಗಾನ ಪರಂಪರೆ’, ‘ಪಯಸ್ವಿನಿ’, ಕಾಸರಗೋಡು ಕನ್ನಡಿಗರ ಸಮ್ಮೇಳನ, ಸ್ಮರಣಸಂಚಿಕೆ ೧೯೭೨, ಪುಟ ೬೧.

* ‘ಪರಾಶರ’ ೮ – ೧ – ೬೪ ಬಿ, ಸುಧೀಂದ್ರ ತೀರ್ಥ ಮಾರ್ಗ, ಕುಂಜಿಬೆಟ್ಟು, ಉಡುಪಿ – ೫೭೬ ೧೦೨.