ಟಿಪ್ಪುಸುಲ್ತಾನ್‌ಮತ್ತು ಕುಂಬಳೆ :

ಕ್ರಿ.ಶ. ೧೭೮೨, ದಶಂಬರ ೭ರಂದು ಹೈದರಾಲಿಯು ಚಿತ್ತೂರಿನ ಸಮೀಪದ ತನ್ನ ಶಿಬಿರದಲ್ಲಿ ಮಡಿದಾಗ ಅವನ ಮಗ ಟಿಪ್ಪು ಸುಲ್ತಾನನು ಅಧಿಕಾರಿಯಾದನು. ತನ್ನ ಅಧಿಕಾರವನ್ನು ಸ್ಥಾಪಿಸಲು ಎಲ್ಲಾ ತುಂಡರಸರನ್ನೂ ಅಣಗಿಸಿದನು. ವಿಟ್ಲ, ಕುಂಬಳೆ, ನೀಲೇಶ್ವರದ ಅರಸರು ಅವನಿಗೆ ಮಣಿದರೂ ಅವನು ಹಿಂತಿರುಗಿದಾಗ ಬ್ರಿಟಿಷರ ಸಹಾಯದಿಂದ ಮತ್ತೆ ದಂಗೆಯೆದ್ದರು. ಟಿಪ್ಪುವು ಕುಂಬಳೆ ಅರಸನಿಗೆ ಬ್ರಿಟಿಷರ ಜತೆ ಸೇರಬಾರದೆಂದು ಕೋರಿ ಬರೆದ ಒಕ್ಕಣೆಯನ್ನು ಮಾಯಿಪ್ಪಾಡಿ ಅರಮನೆಯಲ್ಲಿ ಕಾರ್ಯಕರ್ತರಾಗಿದ್ದ ಎಡನಾಡು ಮಹಾಲಿಂಗ ಭಟ್ಟರು ತಮ್ಮ ನೆನಪಿನಿಂದ ಹೀಗೆ ತಿಳಿಸಿದ್ದಾರೆ (ಸಂದರ್ಶನ ಪೂರ್ವೋಕ್ತ). ಕಲ್ಲಚ್ಚಿನಲ್ಲಿ ಖಡ್ಗ ಮುದ್ರೆಯಲ್ಲಿ, ಕುಂಬಳೆ ಅರಸನಿಗೆ ಟಿಪ್ಪು ಕಳಿಸಿದ ಪತ್ರ –

ಟಿಪ್ಪುವಿನ ಪತ್ರ :

“ಮೆಹರ್ಬಾನ್‌ದೋಸ್ತ್‌ಸಾಹೇಬ್‌ರಾಜಾ ಕುಂಬ್ಲಾ ಸಲಾಂ. ನಾವು ನಮ್ಮೊಳಗೆ ಲಡಾಯಿ ಮಾಡಿಕೊಂಡರೂ ನಾಳೆ ರಾಜಿ ಮಾಡಿಕೊಳ್ಳಬಹುದು. ಪಿರಂಗಿಯವರ ಸಹವಾಸ ನಮಗೆ ಬೇಡ. ಪರ್ದೇಶಿ ಪಿರಂಗಿಯವರಿಗೆ ಸಹಾಯ ಮಾಡಿದರೆ ಮುಂದೆ ಅವರು ನಮ್ಮ ರಾಜ್ಯವನ್ನು ಸುಲಿಗೆ ಮಾಡಿ ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಾರೆ. ನಮ್ಮ ಸಂಪತ್ತನ್ನು ಸುಲಿಗೆ ಮಾಡಿಕೊಂಡು ಹೋಗಲು ಪಿರಂಗಿಯವರಿಗೆ ಎಡೆಮಾಡಿ ಕೊಡಬಾರದು. ನಾವು ಒಂದಾಗಿ ಅವರನ್ನು ಓಡಿಸಬೇಕು”.

ಇಲ್ಲಿ ಟಿಪ್ಪುವಿನ ಸ್ವದೇಶ ಪ್ರೇಮ, ಒಗ್ಗಟ್ಟಿನ ಮನೋಭಾವನೆಯನ್ನು ಕಾಣಬಹುದು. ಟಿಪ್ಪುವಿನ ಮಾತನ್ನು ಕೇಳದೆ ಅವನಿಗೆ ಅದೇ ಅವಸ್ಥೆಯಾಯಿತು ! ರಾಜ್ಯವನ್ನು ಕಳೆದುಕೊಂಡು ಬ್ರಿಟಿಷರ ಗುಲಾಮನಾದ. ಟಿಪ್ಪುವಿನ ಮಾತನ್ನು ಕೇಳದೆ ಬ್ರಿಟಿಷರಿಗೆ ಸಹಾಯ ಮಾಡಿದ್ದರಿಂದ ೧೭೮೪ರಲ್ಲಿ ಯುದ್ಧದಲ್ಲಿ ಸೆರೆ ಸಿಕ್ಕಿದ ಹಿರಿಯನನ್ನು ಗಲ್ಲಿಗೇರಿಸಿದನು. ಕಿರಿಯನು ಯುದ್ಧದಲ್ಲಿ ಮಡಿದನು. ತಲಚೇರಿಗೆ ಓಡಿಹೋದವನು, ೧೭೯೯ರಲ್ಲಿ ಶ್ರೀರಂಗ ಪಟ್ಟಣದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಟಿಪ್ಪು ಸತ್ತಾಗ ಹಿಂತಿರುಗಿ ಬಂದು ತನ್ನ ರಾಜ್ಯವನ್ನು ಸ್ವಾಧೀನಪಡಿಸಲು ಅಪೇಕ್ಷಿಸಿದನು. ೧೮೦೪ರಲ್ಲಿ ಅವನ ಸ್ವಾದೀನದಲ್ಲಿರುವ ಭೂಮಿಯನ್ನು ಬಿಟ್ಟು ಉಳಿದುವನ್ನೆಲ್ಲಾ ಬ್ರಿಟಿಷರು ವಶಪಡಿಸಿದರು. ಕುಂಬಳೆ ಅರಸನ ಭೂಸ್ವಾಮ್ಯ ಮತ್ತು ಸಹಕಾರಕ್ಕಾಗಿ ಅವನಿಗೆ ನಿವೃತ್ತಿ ವೇತನವಾಗಿ (Territorial and Meritorial Pension, ಮಾಲಿಖಾನೆ) ರೂಪಾಯಿ ೧೧೭೮೮ – ೮ – ೪ (ರೂಪಾಯಿ ಹನ್ನೊಂದು ಸಾವಿರದ ಏಳುನೂರ ಎಂಬತ್ತೆಂಟು ಆಣೆ ಎಂಟು, ಪೈ ನಾಲ್ಕು) (Law Tenures in Madras – Rural Problem in MADRAS – Monograph, 1947, P.72 Sl.No.6.) ನಿಗದಿಪಡಿಸಿದರು. (ದಕ್ಷಿಣ ಕನ್ನಡದ ಇತಿಹಾಸ – ಕೆ.ಕೆ.ಕುಡ್ವ) ಟಿಪ್ಪುವು ಅಡೂರು ಮದವೂರು ದೇವಸ್ಥಾನಗಳಿಗೂ ಆಕ್ರಮಣ ಮಾಡಿದ್ದನೆನ್ನಲಾಗಿದೆ. ಮದವೂರು ದೇವಸ್ಥಾನದಲ್ಲಿ ರಾಜನು ಅಡಗಿದ್ದಾನೆಂದೋ ಅಲ್ಲಿನ ಸಂಪತ್ತಿಗಾಗಿಯೋ ಮದವೂರಿಗೆ ದಾಳಿ ಮಾಡಿದವನು ಆ ದೇವಸ್ಥಾನದ ಬಾವಿಯ ನೀರನ್ನು ಕುಡಿದು ಮನಸ್ಸು ಪರಿವರ್ತನೆಗೊಂಡನಂತೆ. ಅಲ್ಲಿನ ತಾಮ್ರದ ಮಾಡಿನ ಹಾಳೆಗಳ ಒಡಕುಗಳನ್ನು ತೋರಿಸಿ ಅದು ಟಿಪ್ಪುವಿನ ಖಡ್ಗದ ಪೆಟ್ಟಿನಿಂದಾದುದೆಂದು ತೋರಿಸುತ್ತಿದ್ದರು.

ವಿಟ್ಲದ ಡೊಂಬ ಹೆಗ್ಗಡೆ ಅರಸು ಕುಂಬಳೆ ಅರಸು ಇಬ್ಬರೂ ತಲಚೇರಿಯಲ್ಲಿ ಬ್ರಿಟಿಷರ ಆಶ್ರಯದಲ್ಲಿದ್ದು ಟಿಪ್ಪು ಗತಿಸಿದ ಒಡನೆಯೇ ಊರಿಗೆ ಹಿಂತಿರುಗುತ್ತಾರೆ. ವಿಟ್ಲದ ಅರಸು ತನಗೆ ಮಂಜೇಶ್ವರ ದೇವಸ್ಥಾನದ ಆಸ್ತಿಯಿಂದ ಸಲ್ಲಬೇಕಾದ ಗೇಣಿ ಸಂದಿಲ್ಲವೆಂಬ ಕಾರಣಕ್ಕಾಗಿ ಅಲ್ಲಿಗೆ ಧಾಳಿ ಮಾಡಿ ಸಾಕಷ್ಟು ಸೊತ್ತನ್ನು ಸಾಗಿಸಿದನು.

[1]

ಟಿಪ್ಪುವಿನ ಕಾಲದಲ್ಲೇ ಕುಂಬಳೆ ನಾಯಕರು (ವ್ಯಾಪಾರಿ ಗೌಡ ಸಾರಸ್ವತ) ಕುಂಬಳೆ ಕೋಟೆಯ ದಳಪತಿಯಾದ ಮಹಮ್ಮದ್‌ಸೂಫಿಯ ದರ್ಪಕ್ಕೆ ತಕ್ಕ ಶಾಸ್ತಿ ಮಾಡಿದರು.[2] ಕರಾವಳಿಯ ಹದಿನೆಂಟು ಕೋಟೆಗಳ ಅಧಿಕಾರಿಯಾಗಿದ್ದ ಬೇಕಲದ ನರಸಯ್ಯ ಶ್ಯಾನುಭಾಗನು ಅತ್ಯಂತ ಜೀರ್ಣಸ್ಥಿತಿಯಲ್ಲಿದ್ದ ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಮಾಡಿದನು. ಈ ದೇವಸ್ಥಾನಕ್ಕೆ ಟಿಪ್ಪುವು ಪಕ್ಕದ ಕೊರಕ್ಕೋಡು ಮೊದಲಾದೆಡೆಗಳಲ್ಲಿ ಕೃಷಿ ಭೂಮಿಯನ್ನು ದತ್ತಿಬಿಟ್ಟನು.

ಟಿಪ್ಪುವಿನ ಮರಣಾನಂತರ (೧೭೯೯, ಮೇ ೪) ಅವನ ಸಮಸ್ತರಾಜ್ಯ ತುಳುನಾಡು ಕುಂಬಳೆ ರಾಜ್ಯ ಸಮೇತ ಈಸ್ಟ್‌ಇಂಡಿಯಾ ಕಂಪೆನಿಯ ವಶವಾಯಿತು. ೧೭೯೯ ಜುಲೈಯಲ್ಲಿ ಥೋಮಸ್‌ಮನ್ರೊ ಎಂಬವನು ಕನ್ನಡ ಜಿಲ್ಲೆಗಳ ಕಲೆಕ್ಟರ್‌ನಾದನು. ಕುಂಬಳೆ ರಾಜ್ಯದ ಎಂಟು ಮಾಗಣೆಗಳಲ್ಲಿ ಎಪ್ಪತ್ತೆರಡು ಗ್ರಾಮಗಳಿದ್ದುವೆನ್ನಲಾಗಿದೆ.[3] ಅಡೂರು (೭ ಗ್ರಾ) ಪೆರಡಾಲ ೨, ಅಂಗಡಿ ಮೊಗರು ೧೦ ಗ್ರಾ. ವರ್ಕಾಡಿ ೨, ಕಾಸರಗೋಡು ೨, ಮಂಜೇಶ್ವರ ೩೨, ಕುಂಬಳೆ ೯, ಮೆಗ್ರಾಲು ೮.

ಕುಂಬಳೆ ಅರಸು ಮಲಬಾರಿನಲ್ಲಿ[4]:

೧೯೮೪ರಲ್ಲಿ ಟಿಪ್ಪುವಿನೊಡನೆ ನಡೆದ ಯುದ್ಧದಲ್ಲಿ ಸೋತು ಗಲ್ಲಿಗೇರಿದ ಕುಂಬಳೆ ಅರಸನ ಉತ್ತರಾಧಿಕಾರಿ ತಲಚೇರಿಯಲ್ಲಿ ಬ್ರಿಟಿಷರ ಆಶ್ರಯ ಪಡೆದನು. ಬ್ರಿಟಿಷರು ಚಿರಕ್ಕಲ್ ರಾಜನ ನೆರವಿನಿಂದ ೧೭೦೮ರಲ್ಲಿ ತಲಚೇರಿಯಲ್ಲಿ ಫ್ಯಾಕ್ಟರಿಯನ್ನು ಸ್ಥಾಪಿಸಿದ್ದರು. (ಕಣ್ಣಾನೂರು ಡಿಸ್ಟ್ರಿಕ್‌ಗಜೆಟಿಯ್‌, ಪುಟ ೧೧೩.) ಸ್ಥಾನಭ್ರಷ್ಟನಾದ ಕುಂಬಳೆ ಅರಸನಿಗೆ ಮಲಬಾರಿನ ಇರುವಳಿ ನಾಡು, ಕುರುಙೋಟ್ಟುತ್ತಡಂ, ಕಣ್ಣೋತ್ತ್ ತರವಾಡುಗಳ ನಾಯಿಮಾರರು ನೆರವು ನೀಡಿದರು. ಕುಂಬಳೆ ಅರಸರು ಈ ಮನೆತನಗಳ ಸ್ತ್ರೀಯರನ್ನು ಮಾತ್ರ ವರಿಸುತ್ತಿದ್ದರು. ಈಗ ಈ ವಿವಾಹಕ್ರಮವಿಲ್ಲ. ರಂಡತ್ತರನಾಡಿನ ಮಾವಿಲಾಯಿಯಲ್ಲಿ, ತಲಚೇರಿಯ ಹತ್ತಿರ, ೧೦ ಎಕ್ರೆ ೯೮ ಸೆಂಟ್ಸ್‌ಜಾಗ “ಕುಂಬಳೆ ರಾಜ” ನ ಹೆಸರಿನಲ್ಲಿದೆ, ವ್ಯಕ್ತಿನಾಮದ ಉಲ್ಲೇಖವಿಲ್ಲ. ಇದಕ್ಕೆ ಸಲ್ಲುತ್ತಿದ್ದ ತೀರ್ವೆ ರೂ.೪೪ – ಆಣೆ ೧ – ೦ ಪೈ[5]. ಈ ಸ್ಥಳದಲ್ಲಿ ಕುಂಬಳೆ ಅರಸನಿಗೆ ವಸತಿ ಮತ್ತು ಪೂಜಾಸ್ಥಳವಿತ್ತು. ತಾ.೨೫ – ೯ – ೧೯೯೩ ರಂದು ಅಲ್ಲಿಗೆ ಭೇಟಿ ನೀಡಿದಾಗ ಆ ಮನೆಯನ್ನೂ ಪೂಜಾಸ್ಥಳದ ಹಾಳು ಬಿದ್ದ ಕೆರೆಯನ್ನೂ ತೋರಿಸಿದರು. ಈ ಆಸ್ತಿಯನ್ನು ಮಾರಾರ್‍ಕುಟುಂಬಕ್ಕೆ ಗೇಣಿಗೆ ಕೊಡಲಾಗಿತ್ತು. ಅವರು ಗೇಣಿಯಾಗಿ ನೂರು ರೂಪಾಯಿ ಕಳುಹಿಸುತ್ತಿದ್ದರಂತೆ. ಈ ಆಸ್ತಿ ಮತ್ತೆ ಬೇರೆ ಬೇರೆ ವ್ಯಕ್ತಿಗಳ ಕೈಯಿಂದ ಕೈಗೆ ಸಾಗಿ ಭೂಮಸೂದೆಯಿಂದ ಅವರವರಿಗೇ ಆಯಿತು. ಅರಸರು. ತುಳುನಾಡಿನಿಂದ ವಲಸೆ ಹೋದ ಬ್ರಾಹ್ಮಣ ನಂಬೂದಿರಿ ಮನೆ ಇಡವಲತ್ತ್‌ನಲ್ಲಿ ಉಳಿದುಕೊಳ್ಳುವುದಿತ್ತು.

ಕುಂಬಳೆ ಅರಸರು ತಾವು ಮಾವಿಲಾಯಿಯ ಭೂಮಿಯ ಕೃಷಿ ಕೆಲಸಾದಿಗಳಿಗೆ ತಮ್ಮ ಊರಿನ ಮುಗೇರ ಹರಿಜನ ವರ್ಗದವರನ್ನು ಕರೆದೊಯ್ದಿದ್ದರು. ಈಗಲೂ ಅಲ್ಲಿರುವ ಮುಗೇರರು ವಿದ್ಯೆ ಬುದ್ಧಿಗಳನ್ನು ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಅಂಜರಕ್ಕಂಡಿ ಹೊಳೆಯ ಪಕ್ಕದಲ್ಲಿ ಇವರ ಕೆಲವು ಮನೆಗಳಿವೆ. ಮೊಗೇರಕಾವು ಎಂಬಲ್ಲಿ ಇವರ ಆರಾಧನ ಸ್ಥಳವಿದೆ. ಕುಂಬಳೆ ಅರಸರ ಊಳಿಗದವರಾಗಿದ್ದರು ತಮ್ಮ ಹಿರಿಯರೆಂದು ೨೫ – ೯ – ೯೩ ರಂದು ಅಲ್ಲಿಗೆ ಭೇಟಿ ನೀಡಿದಾಗ ಬಹಳ ಅಭಿಮಾನದಿಂದ ಹೇಳಿದರು. ಗುಳಿಗ ಮತ್ತಿತರ ಅವರ ಭೂತಗಳ ಆರಾಧನೆಯನ್ನು ಅವರು ನಡೆಸುತ್ತಾರೆ. ಅವರು ಮದುವೆ (ಚುಳ್ಯೆಲ್‌) ಸಮಯದಲ್ಲಿ ಕುಣಿಯುತ್ತಾ ಹಾಡುವ ಹಾಡಿನಲ್ಲಿ ಕುಂಬಳೆ ಅರಸನ (ಕುಂಬೋಲರಸನುಂ ವಾಳ್ಗ ವಾಳ್ಗ) ಉಲ್ಲೇಖವಿದೆ.

ಕುಂಬಳೆ ಅರಸನೂ ಕೋಟ್ಟಯಂ ಅರಸನೂ :

ಕುಂಬಳೆ ಅರಸನಿದ್ದ ಮಾವಿಲಾಯಿ ಕೋಟ್ಟಯಂನ ಹತ್ತಿರವಿದೆ. ಕೋಟ್ಟಯಂ ಅರಸನಿಗೂ ಕುಂಬಳೆ ಅರಸನಿಗೂ ಆತ್ಮೀಯತೆ ಇತ್ತು. ಕುಂಬಳೆ ಅರಸನಿಗೆ ಬೇಡರಾಜನೊಬ್ಬನಿಂದುಂಟಾದ ತೊಂದರೆಯನ್ನು ಅವನು ಪರಿಹರಿಸಿದ್ದನು[6]ಎಂದು ತಿಳಿದು ಬರುತ್ತದೆ.

ಈ ಕೆಳಗಿನ ಪಾಶ್ಚಾತ್ಯರು ಕುಂಬಳೆಯನ್ನು ಸಂದರ್ಶಿಸಿ ಅಲ್ಲಿನ ಬಗೆಗೆ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ.

ಪೋರ್ತುಗೀಜ್ ಯಾತ್ರಿಕ ದುಅರ್ತೆ ಬಾರ್ಬೊಸಾ ೧೫೧೪
ಲಿಂಕೋಸ್ಟನ್ ಡಚ್ ಪ್ರವಾಸಿ ೧೫೮೫
ಫ್ರಾಂಕೋಯಿಸ್ ಫೊಜರಾಂಡ್ ಫ್ರೆಂಚ್‌ಪ್ರವಾಸಿ ೧೬೦೦
ದೆಲ್ಲಾವೆಲ್ಲೆ (ಇಟೆಲಿ ಯಾತ್ರಿ) ೧೬೨೩
ಬುಖಾನನ್‌ ೧೮೦೧
ವಿಲಿಯಂ ಲೋಗನ್ ಎಂ.ಸಿ.ಎಸ್‌. ೧೮೮೭
ಜೆ.ಸ್ವರ್‍ರಕ್‌ ೧೮೯೪
ಹೆರೋಲ್ಡ್‌ ಎ. ಸ್ಟುವರ್ಟ್‌ ೧೮೯೫

ಆಧುನಿಕ ಕಾಲ :

೧೮೦೦ ರಲ್ಲಿ ಬ್ರಿಟಿಷರ ಈಸ್ಟ್‌ಇಂಡಿಯಾ ಕಂಪೆನಿ ಆಡಳಿತದಲ್ಲಿ ಸಮಗ್ರ ಪ್ರದೇಶ ಒಂದಾಯಿತು. ಎಲ್ಲಾ ರಾಜ್ಯಗಳ ಒಡೆಯರೂ ಅವರೇ ಆದರು. ೧೮೦೪ರಲ್ಲಿ ಕುಂಬಳೆ ಸೀಮೆಯ ಅಡೂರನ್ನು ಬ್ರಿಟಿಷರು ಕೊಡಗಿನ ವೀರರಾಜೇಂದ್ರನಿಗೆ ಕೊಟ್ಟರು.[7] ಬ್ರಿಟಿಷರು ಆಡಳಿತದಲ್ಲಿ ಕೆಲವಾರು ಬದಲಾವಣೆಗಳನ್ನು ತಂದರು. ಭೂಮಿಯ ಅಳತೆ ಮಾಡಿ ಕಂದಾಯವನ್ನು ವಸ್ತು ರೂಪದಲ್ಲಿ ಕೊಡದೆ ಹಣದ ರೂಪದಲ್ಲಿ ಕೊಡುವಂತೆ ಒತ್ತಾಯಿಸಿದರು. ಕೃಷಿ ಉತ್ಪನ್ನವೂ, ಬೆಲೆಯೂ ಕಡಿಮೆಯಾದ್ದರಿಂದ ರೈತರು ಕಷ್ಟಕ್ಕೀಡಾದರು, ಕರ ನಿರಾಕರಣೆಯ ಹಂತಕ್ಕಿಳಿದರು. ಕೊಡಗಿನ ಚಿಕ್ಕವೀರ ರಾಜೇಂದ್ರನನ್ನು ೧೮೩೪ರಲ್ಲಿ ಸೋಲಿಸಿ ಕೊಡಗನ್ನು ವಶಪಡಿಸಿದರು. ಅಲ್ಲೂ ಅತೃಪ್ತಿ ಇದ್ದುದರಿಂದ ಕೊಡಗು ಮತ್ತು ತುಳುನಾಡಿನ ಕೆಲವರು ಸೇರಿ ದಂಗೆಯೆದ್ದರು. ಕೊಡಗಿನ ಉತ್ತರಾಧಿಕಾರಿ ತಾನೆಂದು ಕಲ್ಯಾಣಪ್ಪನೆಂಬವನು ದಂಗೆಯ ಸಿದ್ಧತೆ ಮಾಡಿದನು.

ಕಲ್ಯಾಣಪ್ಪನ ಕಾಟಕಾಯಿ :

ಕೊಡಗಿನ ಕಲ್ಯಾಣಪ್ಪನು ಬ್ರಿಟಿಷರ ವಿರುದ್ಧ ನಡೆಸಿದ ದಂಗೆಯೇ ಕಲ್ಯಾಣಪ್ಪನ “ಕಾಟಕಾಯಿ” ಎಂದು ಪ್ರಸಿದ್ಧವಾಗಿದೆ. ಈ ದಂಗೆಗೆ ಕುಂಬಳೆ ಅರಸರು ಸಂಬಂಧಿಸಿದವರಲ್ಲ., ಬ್ರಿಟಿಷರ ಪರವಾಗಿ ಅವರಿದ್ದರು. ದಂಗೆಯಲ್ಲಿ ಕುಂಬಳೆಯ ಇಬ್ಬರು ಧೀರರಿದ್ದರು. ಕುಂಬಳೆಯ ಬೀರಣ್ಣ ಬಂಟ ಮತ್ತು ಕುಂಬಳೆ ಕೋಟೆಯ ಪಾರುಪತ್ಯಗಾರನಾದ ಸುಬ್ರಾಯ ಹೆಗ್ಗಡೆ ದಂಗೆಯಲ್ಲಿ ಭಾಗವಹಿಸಿದವರು. ಕಲ್ಯಾಣಪ್ಪನ ನೇತೃತ್ವದಲ್ಲಿ ಕೊಡಗಿನವರ ದಂಡು ಬೆಳ್ಳಾರೆ, ಉಪ್ಪಿನಂಗಡಿ, ಪುತ್ತೂರು, ಪಾಣೆಮಂಗಳೂರು ದಾರಿಯಾಗಿ ಮಂಗಳೂರಿಗೆ ಸಾಗುವುದು. ನಂದಾವರದ ಲಕ್ಷ್ಮಪ್ಪ ಬಂಗರಸನೂ ಅವನ ಬೆಂಬಲಕ್ಕಿದ್ದನು. ಕಾಸರಗೋಡು ಕಡೆಯಿಂದ ಬೀರಣ್ಣ ಬಂಟನ ಗುಂಪು ಕುಂಬಳೆಯ ಸುಬ್ರಾಯ ಹೆಗ್ಗಡೆಯ ಗುಂಪಿನೊಂದಿಗೆ ಮಂಗಳೂರಿನಲ್ಲಿ ಕೊಡಗಿನ ಗುಂಪಿನೊಂದಿಗೆ ಸೇರಿಕೊಳ್ಳುವುದು. ೧೮೩೭ನೇ ಮಾರ್ಚ್‌ ೫ ರಂದು ಕೊಡಗಿನಲ್ಲಿ, ೬ ರಂದು ಅಮರಸುಳ್ಯದಲ್ಲಿ ದಂಗೆಯಾಗುವುದೆಂದು ನಿಶ್ಚಯಿಸಿದ್ದರೂ ಅದಕ್ಕಿಂತ ೮ ದಿನ ಮೊದಲೇ ದಂಗೆ ತೊಡಗಿತು.

ಬೀರಣ್ಣ ಬಂಟನ ದಂಡು ಕಾಸರಗೋಡಿನಿಂದ ಉಳಯತ್ತಡ್ಕಕ್ಕೆ ಬರುವಷ್ಟರಲ್ಲಿ ಪಾಡಿಸುಬ್ಬಯ್ಯ ಶ್ಯಾನುಭಾಗನು (ಆಗಿನ ದೊಡ್ಡ ಜಮೀನ್ದಾರ, ಕೂಡ್ಲು ಮನೆತನದ ಹಿರಿಯ) ದಂಗೆ ಗುಂಪನ್ನು ಸೆರೆಹಿಡಿಯಲು ತನ್ನ ತಂಡವನ್ನು ಸಿದ್ಧಪಡಿಸಿದನು. ಕುಂಬಳೆ ರಾಜನು ತನ್ನ ರಾಜ್ಯದಲ್ಲಿ ದಂಗೆಯೆಂದು ತಲಚೇರಿಯಲ್ಲಿರುವ ಬ್ರಿಟಿಷರಿಗೆ ಸುದ್ದಿ ಮುಟ್ಟಿಸಿದನು. ಪಾಡಿಸುಬ್ಬಯ್ಯನು ದಂಗೆಯವರು ಬರುವಲ್ಲಿ, ಕುರುಚಲು ಕಾಡಿನಲ್ಲಿ ಅಲ್ಲಲ್ಲಿ ತನ್ನವರನ್ನು ಅಡಗಿ ಕೂರಿಸಿ, ಮುಳಿಹುಲ್ಲು ರಾಶಿಗೆ ಬೆಂಕಿ ಕೊಟ್ಟು ಸಿಡಿಮದ್ದು ಸಿಡಿಸಿ ದಂಗೆಯವರನ್ನು ಬೆದರಿಸಿದನು. ಅವರು ಸಿಕ್ಕಾಬಟ್ಟೆ ಓಡತೊಡಗಿದಾಗ ಮುಖಂಡ ಬೀರಣ್ಣ ಬಂಟನನ್ನು ಹಿಡಿದು ಬ್ರಿಟಿಷರಿಗೆ ಒಪ್ಪಿಸಿದನು. ಆಗಿನ ಕುಂಪಣಿ ಸರಕಾರ ಸುಬ್ಬಯ್ಯನ ಸಾಹಸಕ್ಕೆ ಮೆಚ್ಚಿ ಇನ್ನೂರು ರೂಪಾಯಿ ಬೆಲೆಯ ಒಂದು ಸೇರು ತೂಕದ ೨ ಚಿನ್ನದ ಬಳೆಗಳನ್ನು ಒಂದು ಅರ್ಹತಾ ಪತ್ರವನ್ನು ಕೊಟ್ಟು ಅವನನ್ನು ಗೌರವಿಸಿತು. ಆ ಚಿನ್ನದ ಬಳೆ ಈಗಲೂ ಕೂಡ್ಲು ಮನೆತನದಲ್ಲಿದೆ.

ತಪಶೀಲು ಈಸ್ಟ್‌ ಇಂಡಿಯ ಕಂಪೆನಿ ಹ.ಶಿ. ನಂಬ್ರ ೧೦೯[8]:

ಜಿಲ್ಲಾ ಜೋಯಿಂಟ್‌ ಮ್ಯಾಜಿಸ್ಟ್ರೇಟ್‌, ಇನ್‌ಚಾರ್ಜ್‌ ಮಾಲ್ಟ್‌ ಬಿ. ಸಾಹೇಬರವರು ಈ ಜತಾ ಅನುಸಾರ ಪಾಡಿಸುಬ್ಬಯ್ಯ, ಕಳೆದ ಇಸವಿಯಲ್ಲಿ, ಸರಕಾರದ ಮೇಲೆ ಕಾಟಕಾಯಿ ನಡೆಸುವರೆ ಆರಂಭಿಸಿದಂಥ ಕಲ್ಯಾಣಪ್ಪನ ಕಡೆ ಮೊಕ್ತೇಸರನಾಗಿ ಕಾಸರಗೋಡಿಗೆ ಬಹಳ ಜನರ ನಿಶಿಂ ಬರುತ್ತಿದ್ದಂಥ ಬೀರಣ್ಣ ಬಂಟ ಮತ್ತು ಆ ಸಮಯದಲ್ಲಿ ಕಾಸ್ರಗೋಡಿನಲ್ಲು ಇದ್ದ ಕಾಟಕಾಯಿ ಮೊಕ್ತೇಸರ ವಗೈರ ಜನಕ್ಕೆ ಸಹಾ ಹಿಡಿಯುವಲ್ಲಿ ಕಂಪೆನಿ ಸರಕಾರಕ್ಕೆ ನೀವು ಆಶ್ರಿತರಾಗಿ ಹಿಡಿದುಕೊಟ್ಟದ್ದು ಮತ್ತು ಆ ಜನರ ಅತಿಕ್ರಮ ಕಾಸರಗೋಡು ವಗೈರೆಯಲ್ಲಿ ನಡೆಯದ ಹಾಗೆ ಮಾಡಿದ ಸಹಾಯದಿಂದ ಸಹಾ ಗವರ್ಮೆಂಟಿನವರು ನಿಮ್ಮ ಮೆಹನತ್ತು ಖಾತರಿಗೆ ತಂದು ೨೦೦ ರೂಪಾಯಿ ಕ್ರಯದ ಬಾಬ್ತು ಎರಡು ಬಂಗಾರದ ಬಳೆಗಳು ಇನಾಮ್‌ ಸರ್ವರಾಜಿ ಮಾಡುವುದಕ್ಕೆ ತಲ್ಪಿದ ಹುಕುಂ ಮೇರೆಗೆ ನಿಮಗೆ ಬಳೆಗಳು ಇನಾಮ್‌ ಕೊಡುವಣವಾಗಿದೆ.

ಪಾಡಿಸುಬ್ಬಯ್ಯನಿಗೆ ಕುಂಪಣಿ ಸರಕಾರವು ಇನಾಮು ನೀಡಿದ ಚಿನ್ನದ ಜೋಡು ಬಳೆ. “ಪಾಡಿಸುಬ್ಬಯ್ಯಗೆ ಕುಂಪಣಿ ಸರಕಾರದಿಂದ ಇನಾಮು ಬಳೆ

ಪಾಡಿಸುಬ್ಬಯ್ಯನಿಗೆ ಕುಂಪಣಿ ಸರಕಾರವು ಇನಾಮು ನೀಡಿದ ಚಿನ್ನದ ಜೋಡು ಬಳೆ. “ಪಾಡಿಸುಬ್ಬಯ್ಯಗೆ ಕುಂಪಣಿ ಸರಕಾರದಿಂದ ಇನಾಮು ಬಳೆ

ತಾರೀಕು ೧೨, ಮೇ ೧೮೩೮ನೇ ಇಸವಿ
ಮೊಕ್ಕಾಂ – ಕಾಸರಗೋಡು Malt B

ಆ ಬಳೆಯಲ್ಲಿ ಬರಹ ಹೀಗಿದೆ: ಪಾಡಿಸುಬ್ಬಯ್ಯಗೆ ಕುಂಪಣಿ ಸರಕಾರದಿಂದಾ ಇನಾಮು ಬಳೆ ೧.

ಇಂಗ್ಲೀಷರಾದರೂ ಕನ್ನಡ ಭಾಷೆ, ಲಿಪಿ, ಅಂಕೆಗಳನ್ನು ಬಳಸಿರುವುದು ವಿಶೇಷವೇ. ದಂಗೆಯವರು ಮಂಗಳೂರನ್ನು ಸ್ವಾಧೀನಪಡಿಸಿದರೂ ತಲಚೇರಿಯಿಂದ ಬಂದ ಸೈನ್ಯ ದಂಗೆಯನ್ನಡಗಿಸಿತು. ಸುಬ್ರಾಯ ಹೆಗ್ಗಡೆ ಕುಂಬಳೆಯಿಂದ ನೇತ್ರಾವತಿಗೆ ತಲುಪಿದಾಗ ಕುಂಪಣಿ ಸರಕಾರದ ಗುಂಡಿಗೆ ಬಲಿಯಾದ. ಮಂಗಳೂರಿನ ಬಿಕ್ರನ ಕಟ್ಟೆ (ಬಿಕರ್ನಕಟ್ಟೆ) ಯಲ್ಲಿ ಕಲ್ಯಾಣಸ್ವಾಮಿ, ಲಕ್ಷ್ಮಪ್ಪ ಬಂಗರಸ, ಬೀರಣ್ಣ ಬಂಟರನ್ನು ಗಲ್ಲಿಗೇರಿಸಲಾಯಿತು. ಸ್ವಾತಂತ್ರ್ಯದ ಪ್ರಜ್ಞೆ ಅಷ್ಟಾಗಿಲ್ಲದಿದ್ದರೂ ದೇಶಪ್ರೇಮಿಗಳಾದ ನಮ್ಮವರನ್ನು ಹಿಡಿಯುವಲ್ಲಿ ನಮ್ಮವರೇ ಬ್ರಿಟಿಷರಿಗೆ ಸಹಾಯ ಮಾಡಿದ್ದರಿಂದ ದಂಗೆ ವಿಫಲವಾಯಿತು. ಪಾರತಂತ್ರ್ಯದ ಕೋಳ ಬಲಿಯಿತು. ಈಗಲಾಗುತ್ತಿದ್ದರೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಗೌರವವಿರುತ್ತಿತ್ತು. ಆಗ ಅದು ರಾಜ ದ್ರೋಹವೆನಿಸಿತ್ತು. ೧೮೫೭ರ ಸಿಪಾಯಿ ದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಸಮರವೆಂದು ಕೊಂಡಾಡಲಾಗುತ್ತದೆ. ಅದಕ್ಕಿಂತಲೂ ಇಪ್ಪತ್ತು ವರ್ಷ ಹಿಂದೆ ಅಂತಹದೇ ಸಮರ ನಮ್ಮ ಕರಾವಳಿಯಲ್ಲಿ ನಡೆದುದು ದೊಡ್ಡ ಜನರ ಗಮನ ಸೆಳೆಯಲಿಲ್ಲ. ಈ ೧೮೩೭ರ ಬ್ರಿಟಿಷರ ವಿರುದ್ಧದ ಹೋರಾಟ ಗಮನಕ್ಕೆ ಬರುತ್ತಿದ್ದರೆ ಇದೇ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟವಾಗುತ್ತಿತ್ತೇನೋ.

೧೮೫೮ರಿಂದ ಭಾರತದ ಆಡಳಿತವು ಈಸ್ಟ್ ಇಂಡಿಯಾ ಕಂಪೆನಿಯಿಂದ ಇಂಗ್ಲೆಂಡಿನ ರಾಣಿಯ ನೇರ ಅಧೀನಕ್ಕೆ ಬಂತು. ೧೮೬೨ರಲ್ಲಿ ಕನ್ನಡ ಜಿಲ್ಲೆಯು ಉತ್ತರ ಮತ್ತು ದಕ್ಷಿಣವೆಂದು ವಿಭಾಗವಾಗಿ, ಉತ್ತರ ಕನ್ನಡವು ಬೊಂಬಾಯಿ ಸಂಸ್ಥಾನಕ್ಕೂ ದಕ್ಷಿಣ ಕನ್ನಡವು ಮದ್ರಾಸು ಸಂಸ್ಥಾನಕ್ಕೂ ಸೇರಿದವು. ೧೮೬೫ರಲ್ಲಿ ದಕ್ಷಿಣ ಕನ್ನಡದಲ್ಲಿ ತಂತಿ ಟಪ್ಪಾಲು, ೧೯೦೬ರಲ್ಲಿ ರೈಲ್ವೆ ಆಗಿ ಕಾಸರಗೋಡು ಕುಂಬಳೆಗಳಲ್ಲಿ ರೈಲ್ವೆ ಸ್ಟೇಷನ್ ಆಯಿತು. ೧೯೧೨ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ತಾಲೂಕುಗಳಲ್ಲಿ ೭೭೯ ಗ್ರಾಮಗಳಿದ್ದುವು. ಇದರಲ್ಲಿ ದೊಡ್ಡದಾದ ಕಾಸರಗೋಡು ತಾಲೂಕಿನ ಒಂದು ಭಾಗವಾಗಿ ಕುಂಬಳೆ ಸೀಮೆ ಸೇರಿ ಹೋಯಿತು.

೧೯೪೭ರವರೆಗೆ ನಡೆದ ಬ್ರಿಟಿಷರ ನಿರಂಕುಶಾಡಳಿತದಲ್ಲಿ ಇತರ ರಾಜ್ಯಗಳಂತೆ ಕುಂಬಳೆ ರಾಜ್ಯವು ಸೇರಿದೆ. ಬ್ರಿಟಿಷ್‌ದೊರೆಯನ್ನೇ ‘ರಾಜಾ ಪ್ರತ್ಯಕ್ಷ ದೇವತಾ’ ಎಂದು ನಮ್ಮವರು ತಿಳಿಯುತ್ತಿದ್ದರು. ಶಾಲೆಗಳಲ್ಲಿ ಆರಂಭದಲ್ಲಿ ರಾಜನ ಪ್ರಾರ್ಥನೆ – ಲೋಂಗ್‌ಲಿವ್ ಅವರ್‌ನೋಬ್ಲ್‌ಕಿಂಗ್‌ (Long live our noble king…), ದೇವರ ಪ್ರಾರ್ಥನೆಗಳಿದ್ದುವು. ೧೯೧೦ರಲ್ಲಿ ಐದನೇ ಜಾರ್ಜನು ಪಟ್ಟಕ್ಕೆ ಬಂದಾಗ ಅದನ್ನೊಂದು ಉತ್ಸವವಾಗಿ ಭಾರತದ ಕೆಲವೆಡೆ ಆಚರಿಸಲಾಗಿತ್ತು. ಕುಂಬಳೆ ಅರಸರ ಆತ್ಮೀಯ ದೊಡ್ಡಗುತ್ತು ಇಚ್ಲಂಪಾಡಿ. ಈ ಗುತ್ತಿನ ಯಜಮಾನ ಕೋಟ್ಯಣ್ಣಾಳ್ವರ ಹಿರಿತನದಲ್ಲಿ ೧೯೧೧ರಲ್ಲಿ. ಅವರ ಮನೆಯ ಮೇಲಿನ ಮೈದಾನದಲ್ಲಿ ಈ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತಂತೆ. ಅಲ್ಲಿ ಅದಕ್ಕೆ ಎತ್ತರದೊಂದು ಕಟ್ಟೆಯನ್ನು ಕಟ್ಟಿದ್ದರು. ಅದನ್ನು ಈವರೆಗೂ ದರ್ಬಾರು ಕಟ್ಟೆ ಎಂದೇ ಕರೆಯುತ್ತಿದ್ದರು. ಅಲ್ಲಿ ಉತ್ಸವಕ್ಕಾಗಿ ರಾಜದರ್ಬಾರು ವೈಭವದಿಂದ ನಡೆದಿರಬೇಕು.

ದ್ವಿತೀಯ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ (೧೯೩೯ – ೪೫) ಕುಂಬಳೆಯಿಂದ ಒಂದು ಮೈಲು ಪೂರ್ವದ ಶಾಂತಿಪಳ್ಳದ ಮೈದಾನದಲ್ಲಿ ‘ಮಿಲಿಟರಿ ಬ್ಲೋಕ್‌’ನ್ನು ನೆಲೆಗೊಳಿಸಲಾಗಿತ್ತು. ಅವರ ಅಭ್ಯಾಸಗಳು, ಗುಂಡು ಹಾರಾಟ ಇತ್ಯಾದಿ ನಡೆಯುತ್ತಿದ್ದುದರಿಂದ ಸುತ್ತುಮುತ್ತಲಿನ ಜನ ಪರಿಹಾರ ತೆಕ್ಕೊಂಡು ಆಸ್ತಿಪಾಸ್ತಿ ಕಳಕೊಂಡು ವಲಸೆ ಹೋಗಿದ್ದರು. ತುಂಬಾ ತೋಟ ಕೃಷಿ ಸ್ಥಳಗಳು ನಾಶವಾಗಿವೆ ಯೆಂದು ಹಿರಿಯರು ಹೇಳುತ್ತಿದ್ದುದು ನೆನಪಾಗುತ್ತದೆ.

೧೯೪೭ರಲ್ಲಿ ಸ್ವತಂತ್ರ ಭಾರತವಾದಾಗ ಐನ್ನೂರಕ್ಕೂ ಮಿಕ್ಕದ್ದ ಚಿಕ್ಕಪುಟ್ಟ ರಾಜ್ಯಗಳು ಅದರಲ್ಲಿ, ವಲ್ಲಭಬಾಯಿ ಪಠೇಲರ ನೇತೃತ್ವದಲ್ಲಿ ವಿಲೀನಗೊಳ್ಳುವಂತಾಯಿತು. ಗವರ್ನರ್‌ಜನರಲ್‌ಆಗಿದ್ದ ರಾಜಗೋಪಾಲಾಚಾರ್ಯರು ಮಾಯಿಪ್ಪಾಡಿಗೆ ಬಂದು ಮಾಲಿಖಾನೆಯನ್ನು ಮುಂದುವರಿಸುವುದಾಗಿಯೂ ಭಾರತದಲ್ಲಿ ವಿಲೀನಗೊಳ್ಳಬೇಕೆಂದೂ ಕೇಳಿಕೊಂಡಂತೆ ಆಗಿನ ಅರಸರು ಒಪ್ಪಿದ್ದಾಗಿ ಉದಯವರ್ಮರು ತಿಳಿಸುತ್ತಾರೆ (ಪೂರ್ವೋಕ್ತ, ಪುಟ ೧೩೩). ಈ ಮಾಲಿಖಾನೆಯಲ್ಲಿ ಸುಮಾರು ೩೪೫೬ ರೂಪಾಯಿ ಆದಾಯ ತೆರಿಗೆ ರೂಪದಲ್ಲಿ ಸರಕಾರಕ್ಕೆ ಸಲ್ಲುತ್ತಿತ್ತು ಎನ್ನುತ್ತಾರೆ ಅವರು. ಇಂದಿರಾ ಗಾಂಧಿಯ ಕಾಲದಲ್ಲಿ ಮಾಲಿಖಾನೆಯೂ ರದ್ದಾಯಿತು.

ಭಾಷಾವಾರು ಪ್ರಾಂತ್ಯ – ಕುಂಬಳೆ :

ಭಾರತವು ಬಹುಭಾಷಾ ದೇಶವಾದ್ದರಿಂದ ಆಡಳಿತ ರ್ಯಸೌಕರ್ಯಕ್ಕಾಗಿ ಭಾಷೆಗಳ ನೆಲೆಯಲ್ಲಿ ಪ್ರಾಂತ್ಯಗಳನ್ನು ವಿಂಗಡಿಸುವುದಕ್ಕಾಗಿ ಕೆಲವು ಆಯೋಗಗಳನ್ನು ಬ್ರಿಟಿಷರೇ ರೂಪಿಸಿದ್ದರು.[9] ಕೊನೆಗೆ ೧೯೫೩ರಲ್ಲಿ ಶ್ರೀಗಳಾದ ಫಜಲಿ ಆಲಿ, ಸರದಾರ್‌ ಪಣಿಕ್ಕರ್‌ ಮತ್ತು ಕುಂಜ್ರು. ಈ ಮೂವರನ್ನೊಳಗೊಂಡ ಉಚ್ಚಮಟ್ಟದ ಆಯೋಗ (High Power Commission) ರಚಿಸಿ ಅದಕ್ಕೆ ಪೂರ್ಣ ಜವಾಬ್ದಾರಿ ಒಪ್ಪಿಸಲಾಯಿತು. ಅಕ್ಟೋಬರ್‌ ೩೦, ೧೯೫೫ರಂದು ಇದು ತನ್ನ ವರದಿಯನ್ನು ಒಪ್ಪಿಸಿತು. ಇದುವರೆಗೆ ದಕ್ಷಿಣ ಕನ್ನಡದ, ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದ ಕಾಸರಗೋಡು ತಾಲೂಕನ್ನು ಕೇರಳಕ್ಕೆ ವರ್ಗಾಯಿಸಲಾಯಿತು. ೧೯೫೬ರ ನವೆಂಬರ್‌ ೧ ರಂದು ಕುಂಬಳೆ ಸೀಮೆ ಸಹಿತ ಕಾಸರಗೋಡು ತಾಲೂಕು ಕೇರಳಕ್ಕೆ ಸೇರಿ ಅದರ ಉತ್ತರದ ಕೊನೆಯ ತಾಲೂಕಾಯಿತು.

ಕಾಸರಗೋಡಿನ ಜನತೆಗೆ ಸಿಡಿಲೆರಗಿದಂತಾಯಿತು. ಜಾತಿ, ಮತ, ಭಾಷೆ ವ್ಯತ್ಯಾಸವಿಲ್ಲದೆ ಒಗ್ಗಟ್ಟಾಗಿ ಜನ ಹೋರಾಡಿದರು. ಎಷ್ಟೋ ಮಂದಿ ಕಾಯಿದೆ ಭಂಗ ಚಳವಳಿ ನಡೆಸಿ ಜೈಲು ಸೇರಿದರು. ಲಾಥಿಚಾರ್ಜು ಗೋಲಿಬಾರ್‌ ಆಯಿತು. ಮಲ್ಲಿಕಾರ್ಜುನ ದೇವಾಲಯದ ಎದುರು ನಡೆದ ಗೋಲಿಬಾರ್‌ನಲ್ಲಿ ಶಾಂತರಾಮ, ಸುಧಾಕರ ಎಂಬ ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾದರು. ಪ್ರಕೃತ ಲೇಖಕನೂ ವಿದ್ಯಾರ್ಥಿ ಮುಖಂಡನಾಗಿ ಅಗಲ್ಪಾಡಿ ಶಾಲೆಯಲ್ಲಿ ಚಳವಳಿ ನಡೆಸಿದ ನೆನಪಿದೆ. ಚಂದ್ರಗಿರಿ ನದಿಯ ಉತ್ತರ ಭಾಗದ ಮುನ್ನೂರು ಚದರ ಮೈಲು ವಿಸ್ತಾರದ ಪ್ರದೇಶವನ್ನಾದರೂ ಆಗಿನ ಮೈಸೂರು ಸಂಸ್ಥಾನ (ಈಗಿನ ಕರ್ನಾಟಕ)ಕ್ಕೆ ಸೇರಿಸಬೇಕೆಂದು ಪ್ರಬಲ ಹೋರಾಟ ನಡೆಯಿತು. ಕೇರಳದ ಇ.ಎಂ.ಎಸ್‌. ನಂಬೂದಿರಿಪ್ಪಾಡ್‌, ಜೋಸೆಫ್‌ ಮುಂಡಸ್ಸೇರಿ ಮೊದಲಾದವರೇ ಇದನ್ನು ಒಪ್ಪಿದ್ದರು. ಈ ಹೋರಾಟಕ್ಕಾಗಿ ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಸಮಿತಿ ೭-೯-೧೯೫೫ರಲ್ಲೇ ಆರಂಭವಾಗಿ ಅವಿರತವಾಗಿ ಶ್ರಮಿಸಿತು. ಒತ್ತಡಕ್ಕೆ ಸರಕಾರ ಮಣಿಯಲೇ ಬೇಕಾಯಿತು. ಮಹಾರಾಷ್ಟ್ರೀಯರೂ ಬೆಳಗಾಂನ್ನು ಅವರಿಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸುತ್ತಿದ್ದರು. ಮಹಾರಾಷ್ಟ್ರ, ಕರ್ನಾಟಕ, ಕೇರಳಗಳ ಗಡಿನಿರ್ಣಯಕ್ಕೆ, ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ನಿವೃತ್ತ ನ್ಯಾಯಾಧೀಶರಾಗಿದ್ದ ಮೆಹರ್‌ಚಂದ ಮಹಾಜನ್‌ ಎಂಬವರ ಏಕಸದಸ್ಯ ಆಯೋಗವನ್ನು ೨೫-೧೦-೧೯೬೬ ರಂದು ನೇಮಿಸಲಾಯಿತು. (ಕೆ.ಮಹಾಬಲ ಭಂಡಾರಿ – ಕಾಸರಗೋಡು ಚಳವಳ – ’ಪಯಸ್ವಿನಿ’ ಸ್ಮರಣ ಸಂಚಿಕೆ, ಕಾಸರಗೋಡು ಕನ್ನಡಿಗರ ಸಮ್ಮೇಳನ, ೧೯೭೨, ಪುಟ ೭೫) ಮಹಾಜನ ಆಯೋಗವೆಂದು ಪ್ರಸಿದ್ಧವಾದ ಈ ಆಯೋಗವು ೨೮-೮-೧೯೬೭ ರಂದು ಸಲ್ಲಿಸಿದ ವರದಿಯಲ್ಲಿ ಚಂದ್ರಗಿರಿ ಪಯಸ್ವಿನೀ ನದಿಗಳ ಉತ್ತರದ ಕಾಸರಗೋಡಿನ ಭಾಗವನ್ನು ಮೈಸೂರು ಪ್ರಾಂತ (ಈಗ ಕರ್ನಾಟಕ)ಕ್ಕೆ ವರ್ಗಾಯಿಸಬೇಕೆಂದೂ ಬೆಳಗಾಂನ್ನು ಇದ್ದಂತೆಯೇ ಕರ್ನಾಟಕದಲ್ಲೇ ಉಳಿಸಬೇಕೆಂದೂ ಶಿಫಾರಸು ಮಾಡಿದೆ. ಬೆಳಗಾಂನ್ನು ಮಹಾರಾಷ್ಟ್ರಕ್ಕೆ ಸೇರಿಸಲೇಬೇಕೆಂಬ ಮರಾಠಿಗರ ಉಗ್ರ ಪ್ರತಿಭಟನೆಯಿಂದಾಗಿ ಆಯೋಗದ ವರದಿ ಜ್ಯಾರಿಯಾಗದೆ ಉಳಿದಿದೆ. ಕರ್ನಾಟಕದ ಉತ್ತರದ ಬೆಳಗಾಂ ಮತ್ತು ದಕ್ಷಿಣದ ಕಾಸರಗೋಡಲ್ಲಿ ಕನ್ನಡಿಗರಿಗೆ ಕಿರುಕುಳ ನಡೆಯುತ್ತಲೇ ಇದೆ. ಕಾಸರಗೋಡಿನ ಕನ್ನಡಿಗರು ಹಲವಾರು ಬಾರಿ ನಿಯೋಗ ಮೂಲಕ ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ನೀಡಿ ಪ್ರಯತ್ನಿಸುತ್ತಲೇ ಇದ್ದಾರೆ. ಕಾಸರಗೋಡು ಕರ್ನಾಟಕ ಸಮಿತಿಯ ಮುಂದಾಳುಗಳಾದ ಮಹಾಬಲ ಭಂಡಾರಿ (ಈಗ ದಿವಂಗತ), ಯು.ಪಿ. ಕುಣಿಕುಳ್ಳಾಯ, ಕಯ್ಯಾರ ಕಿಞ್ಞಣ್ಣ ರೈ ಮೊದಲಾದವರು ಇನ್ನೂ ಶ್ರಮಿಸುತ್ತಲೇ ಇದ್ದಾರೆ. ಕುಂಬಳೆಯ ಭಾಗವಾಗಿದ್ದ ಕಾಸರಗೋಡನ್ನು ಮೇ ೨೪, ೧೯೮೪ರಿಂದ ಜಿಲ್ಲಾ ಕೇಂದ್ರವನ್ನಾಗಿ ಕೇರಳ ಸರಕಾರವು ಮಾಡಿದೆ.

 

17_264_TKAM-KUH

೧೯೫೬ರಲ್ಲಿ ಕುಂಬಳೆಯ ಮಾಯಿಪ್ಪಾಡಿ ರಾಜರ ಸಿರಿಬಾಗಿಲು, ಕಣ್ಣೂರು, ಕೂಡ್ಲು, ಮೊಗ್ರಾಲು, ಪಟ್ಲ, ಮದವೂರು, ಮುಳಿಯಾರು, ಪಾಡಿ, ಅಡೂರು, ನೆಕ್ರಾಜೆ, ಪೆರ್ಡಾಲ, ಮೈರೆ, ಬೇಳ, ಮಾವಿಲಾಯಿ ಹಳ್ಳಿಗಳಲ್ಲಿದ್ದ ಆಸ್ತಿಯನ್ನು ಭಂಡಾರದ ಅಥವಾ ದೇವರ ಆಸ್ತಿ, ಖಾಸಗಿ ಅಥವಾ ವಿಭಕ್ತ ಸಂತತಿಗಳ ಆಸ್ತಿ ಎಂದು ಬರಡಾಗಿ ವಿಭಾಗಿಸಿ ಪಾಲುಪಟ್ಟಿ ಮಾಡಲಾಯಿತು. (ತುಳುನಾಡಿನ ಗತವೈಭವ, ಪೂರ್ವೋಕ್ತ) ದೇವರ ಭಂಡಾರ ಅಥವಾ ಆಸ್ತಿ ನೋಡುವ ಯಜಮಾನನಿಗೆ ತಿಂಗಳಿಗೆ ರೂ. ೨೫೦/ – ರ ಸಂಭಾವನೆ ನಿಗದಿಪಡಿಸಲಾಯಿತು. ಇದಕ್ಕೆ ಟ್ರಸ್ಟಿಯ ನಿರ್ಮಾಣವಾಗಿಲ್ಲ. ಮಾಯಿಪ್ಪಾಡಿಯಲ್ಲಿರುವ ಬೀರ್ಣಾಳ್ವ, ಪಟ್ಟದಭೂತ, ರಾಜರಾಜೇಶ್ವರಿ ಮನೆಯ ಆರಾಧ್ಯ ದೇವತೆ. ಅವರವರ ಪಾಲಿಗೆ ಬಂದ ಹಳ್ಳಿಗಳಲ್ಲಿರುವ ದೈವ ದೇವುಗಳ ವಿನಿಯೋಗವನ್ನು ಸಂಬಂಧಪಟ್ಟ ಪಾಲಿನವರು ನೋಡಿಕೊಳ್ಳುತ್ತಾರೆ.

 

[1] Charles Coelho – The History of Vittal (Typed copy, Page 12)

[2] ಡಾ| ಉಪ್ಪಂಗಳ ರಾಮಭಟ್ಟ – ಗಡಿನಾಡು ಕಾಸರಗೋಡು – ಪುಟ ೩೪.

[3] ಉದಯವರ್ಮರಾಜ – ತುಳುನಾಡಿನ ಗತವೈಭವ (ಪೂರ್ವೋಕ್ತ)ಪು.೬೨.

[4] ಡಾ| ಉಪ್ಪಂಗಳ ರಾಮಭಟ್ಟ – ಗಡಿನಾಡು, ಪುಟ ೧೪೫.

[5] Revenue Settlement Register of Mavilayi Village, Kannur District, 1937.

[6] ಕಣ್ಣಾನೂರು ಡಿಸ್ಟ್ರಿಕ್‌ ಗಜೆಟಿಯರ್‌ ಮಲಬಾರ್‌ ವೋಲ್ಯುಮ್‌ II, ಪಿ.ಪಿ.ಸಿ.ಸಿ.ಸಿ. XIII – ಸಿ.ಸಿ.ಸಿ. XXIV.

[7] ಡಿ.ಎನ್. ಕೃಷ್ಣಯ್ಯ – ಕೊಡಗಿನ ಇತಿಹಾಸ – ೧೯೭೪, ಪುಟ ೩೩೮.

[8] ಬೇಕಲ ರಾಮನಾಯಕ್‌ತೆಂಕನಾಡ ಐತಿಹ್ಯಗಳು – ಗೀತಾಪ್ರಕಾಶನ, ಕಾಸರಗೋಡು, ಪುಟ, ೧೫೨.

[9] Montagu Chelmsford Report 1918, Indian Statutory Commission 1930, O’Donnel Committee 1931, Dhar Commission 1947, ಎಸ್‌. ಕೃಷ್ಣಭಟ್‌ ಕಾಸರಗೋಡು ಸಮಸ್ಯೆ ೧೯೫೫ – ೫೬. ಕೆ.ಎಸ್.ಎನ್. ಭಟ್‌ಭಾರತವೂ ಭಾಷಾವಾರು ಪ್ರಾಂತವೂ. ಪುಟ ೨೩.

i. ಕ್ರಿ.ಶ. ೧೮೮೮ ರ ಏಪ್ರಿಲ್‌ನಲ್ಲಿ ಅಡೂರು ದೇವಾಲಯಕ್ಕೆ ಸಿಡಿಲು ಬಡಿದು ಹೆಚ್ಚಿನಂಶ ಸುಟ್ಟು ಹೋಯಿತೆಂದೂ ೧೯೮೦ರಲ್ಲಿ ಪುನರ್ನಿರ್ಮಾಣವಾಯಿತೆಂದೂ ತಿಳಿದುಬರುತ್ತದೆ.

ii. ೧೭೯೫ರಲ್ಲಿ ಕುಂಬಳೆ ಅರಸರು (ಮಾಯಿಪ್ಪಾಡಿ) ಮದವೂರು ದೇವಸ್ಥಾನದಲ್ಲಿ ಮೂಡಪ್ಪಸೇವೆ ನಡೆಸಿದ್ದರೆ ೧೪ – ೫ – ೧೭೯೭ರಂದು ಕೂಡ್ಲು ದೊಡ್ಡ ಸುಬ್ಬಯ್ಯ ಶಾನುಭಾಗರು ಮೂಡಪ್ಪಸೇವೆ ನಡೆಸಿದ್ದರು. (ಮೂಡಪ್ಪ ಎಂದರೆ ಗಣಪತಿ ವಿಗ್ರಹಕ್ಕೆ ಸುತ್ತ ಕಬ್ಬಿನ ಬೇಲಿ ಕಟ್ಟಿ ಅಪ್ಪವನ್ನು ತುಂಬಿಸುವ ವಿಶಿಷ್ಟ ಸೇವೆ).

೧೯೬೨ರಲ್ಲಿ ಜೀರ್ಣೋದ್ಧಾರದ ನಂತರ ಮೂಡಪ್ಪಸೇವೆ ನಡೆಯಿತು.

೧೯೬೫ರಲ್ಲಿ ಶೃಂಗೇರಿ ಶ್ರೀಪಾದಂಗಳ ನೇತೃತ್ವದಲ್ಲಿ ಕೋಟಿ ನಾಮಾರ್ಚನೆ ನಡೆಯಿತು. ಸಕಾಲದಲ್ಲಿ ಮಳೆ ಬಾರದಿದ್ದಾಗ ಶಿವಲಿಂಗಕ್ಕೆ ಶತರುದ್ರಾಭಿಷೇಕ ನಡೆಯುವುದು.