ಪೀಠಿಕೆ :

ಕರ್ನಾಟಕದ ಒಂದು ಭಾಗವಾಗಿರುವ ಇಂದಿನ ತುಳುನಾಡು ಅನೇಕ ರಾಜಮನೆ ತನಗಳಿಗೆ ಆಸರೆ ನೀಡಿತ್ತು. ಆ ಆಳರಸರ ಆಳ್ವಿಕೆಯ ಪ್ರತಿಶ್ರುತವಾಗಿ ಇಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಮೃದ್ಧಿ ಹೊಂದಿ ಉತ್ತುಂಗಕ್ಕೇರಿದ್ದು ಉಂಟು. ಪ್ರಭಾವಿ ಅರಸರಾದ ಆಳುಪರು, ಹೊಯ್ಸಳರು ಮತ್ತು ವಿಜಯ ನಗರ ರಾಜರು[1] ತುಳುನಾಡಿನ ಉದ್ದಗಲಕ್ಕೂ ಆಳ್ವಿಕೆಯನ್ನು ವಿಸ್ತರಿಸಿದ್ದನ್ನು ತಿಳಿಯಲು ಮತ್ತು ಅವರ ಇತಿಹಾಸದ ರಚನೆಗೆ ಇಂದು ಸಾಧನ – ಸಾಮಗ್ರಿಗಳ ಕೊರತೆ ಇಲ್ಲವಾದರೂ ಅದಕ್ಕಿರುವ ಅಡ್ಡಿ ಆತಂಕಗಳು ಮಾತ್ರ ಹೇರಳವಾಗಿವೆ. ಆಡಳಿತದ ಅನುಕೂಲಕ್ಕಾಗಿ ಅನೇಕ ದೊಡ್ಡ – ಚಿಕ್ಕ ವಿಭಾಗ, ಉಪವಿಭಾಗಗಳನ್ನಾಗಿ ವಿಂಗಡಿಸಿದ್ದರು. ಅವುಗಳ ಆಡಳಿತವನ್ನು ನೋಡಿಕೊಳ್ಳುವುದಕ್ಕಾಗಿ ತಮ್ಮ ನಿಷ್ಠಾವಂತ ಸಾಮಂತರನ್ನು ವಿವಿಧ ಪ್ರಾಂತಗಳಿಗೆ ಒಡೆಯರನ್ನಾಗಿ ನೇಮಿಸುತ್ತಿದ್ದರು. ಇವರ ಚಕ್ರವರ್ತಿಗಳಿಗೆ ನಿಷ್ಠರಾಗಿದ್ದರಲ್ಲದೆ ಯುದ್ಧಕಾಲದಲ್ಲಿ ಅವರಿಗೆ ಸೈನಿಕ ಸಹಾಯವನ್ನೂ ನೀಡುತ್ತಿದ್ದರು. ಸಾಮಂತ ಅರಸರು ಚಕ್ರವರ್ತಿಗಳಿಗೆ ಅಧೀನರಾಗಿದ್ದರೂ ಆಡಳಿತದ ದೃಷ್ಟಿಯಿಂದ ಸ್ವತಂತ್ರರಾಗಿದ್ದರು. ತಮ್ಮ ಪರಿಮಿತಿಯಲ್ಲಿ ಎಲ್ಲ ಸಾಧನಗಳನ್ನು ಬಳಸಿಕೊಂಡೂ ಸ್ವತಂತ್ರ ಆಡಳಿತವನ್ನು ನಡೆಸುತ್ತ ಚಕ್ರವರ್ತಿಗೆ ಅಧೀನರಾಗಿದ್ದರು. ಕೆಲವೊಮ್ಮೆ ಸಾಮಂತ ಮನೆತನಗಳು ರಾಜಕೀಯ ಔನ್ನತ್ಯವನ್ನು ಸಾಧಿಸಿದ್ದವಲ್ಲದೆ ಚಕ್ರವರ್ತಿಗಳೊಂದಿಗೆ ಕೌಟುಂಬಿಕ ಸಂಬಂಧಗಳನ್ನು ಬೆಳೆಸಿದ್ದವು. ಇಂಥ ಸಾಮಂತರ ಆಡಳಿತದ ವರ್ಗ ಮತ್ತು ಅಲ್ಲಿರುವ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಜೀವನ ಇವೆಲ್ಲವನ್ನು ಒಂದೇ ಚೌಕಟ್ಟಿನಲ್ಲಿ ಅಳವಡಿಸುವುದು ಕಷ್ಟದ ಕೆಲಸ. ಆ ಕಾರಣಕ್ಕಾಗಿಯೇ ಒಂದು ನಾಡಿನ ಇತಿಹಾಸವನ್ನು ಅಧ್ಯಯನದ ದೃಷ್ಟಿಯಿಂದ ಕಾಲ, ರಾಜಮನೆತನ, ಸಂಸ್ಕೃತಿ, ಪ್ರದೇಶಕ್ಕನುಗುಣವಾದ ಘಟ್ಟಗಳಲ್ಲಿ ವಿಭಜಿಸಲಾಗುತ್ತದೆ.

ಇತ್ತೀಚಿಗಿನ ದಿನಗಳಲ್ಲಿ ಇತಿಹಾಸದ ಅರ್ಥವ್ಯಾಪ್ತಿಯು ರಾಜ ಮಹಾರಾಜರ ‘ರಾಜಕೀಯ ಅಧ್ಯಯನ’ ದಿಂದ ‘ಜನಸಾಮಾನ್ಯರ ಬದುಕಿನ ಅಧ್ಯಯನ’ ವಾಗಿ ವಿಸ್ತೃತಗೊಳ್ಳತೊಡಗಿದೆ. ಇದರಿಂದಾಗಿ ಆಳರಸರ ಚರಿತ್ರೆಯು ಗೌಣವಾಗಿ ಶ್ರೀ ಸಾಮಾನ್ಯರ ಬದುಕಿಗೆ ಮಹತ್ವ ಪ್ರಾಪ್ತವಾಗಿದೆ. ಈ ಬದಲಾವಣೆಗಳಿಂದಾಗಿ ಪ್ರಭಾವಿ ಆದರೆ ಬದಿಗೆ ಸರಿಸಲ್ಪಟ್ಟ, ಕೆಳಸ್ತರದವರ ಅಥವಾ ನಿರ್ಲಕ್ಷ್ಯಕ್ಕೆ ಒಳಗಾದ ವರ್ಗದವರ ಇತಿಹಾಸ ರಚನೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ. ಅವರ ಸ್ವರದ ಪ್ರತಿಬಿಂಬವಾಗಿ, ಈ ಕೆಳಸ್ತರದವರ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಕೊಡುಗೆಗಳನ್ನು ಸಾಧನೆಗಳನ್ನು ಹೊಸ ಕಪೋಲ ಕಲ್ಪಿತ ಸಿದ್ಧಾಂತವನ್ನಳವಡಿಸಿ ಕೆಳಸ್ತರದವರು ಅಥವಾ ಬಹು ಜನರು ಮಾತನಾಡಬಲ್ಲರೆ ಎಂಬ ಪ್ರಶ್ನೆಯ ಸುತ್ತ ಚರ್ಚೆ ಆರಂಭವಾಗಿದೆ. ಇದರಲ್ಲಿ ಮುಖ್ಯವಾಗಿ, ಒಂದು ಪ್ರದೇಶದ ಇತಿಹಾಸ ರಚನೆಯಲ್ಲಿ ಕೇವಲ ಗಣ್ಯ ಅರಸರ ಕೊಡುಗೆಗಳನ್ನು ಪರಿಗಣಿಸದೆ, ಕೆಳವರ್ಗ ಅಥವಾ ಸ್ಥಳೀಯ ಅರಸರ ಚಟುವಟಿಕೆಗಳು ಗಣ್ಯ ಅರಸರ ಚಟುವಟಿಕೆಗಳೊಂದಿಗೆ ತುಲನೆ ಮಾಡಿ ಅಥವಾ ಪೋಣಿಸಿ ಒಟ್ಟು ಸಂಸ್ಕೃತಿಯ ಬೆಳೆಯಲು ಕಾರಣಗಳನ್ನು ಹುಡುಕುತ್ತಾ ಹೊಸ ಇತಿಹಾಸ ರಚನಾ ವಿಧಾನವನ್ನು ಕಂಡುಕೊಳ್ಳಲಾಯಿತು. ಆ ದೃಷ್ಟಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯವು ಮಾಡುವ ಪ್ರಯತ್ನವನ್ನು ಪ್ರಸ್ತುತವು ಹೌದು. ಈ ರೀತಿಯ ಸಂಸ್ಕೃತಿ ಚಿಂತನೆಯಲ್ಲಿ ಪ್ರಾದೇಶಿಕ ಅರಸರ ಕೊಡುಗೆಗಳನ್ನು ಗಂಭೀರವಾಗಿ ಗಮನಿಸಿದಾಗ ಇಡೀ ಪ್ರದೇಶದ ಒಟ್ಟು ಇತಿಹಾಸದ ಪರಿಕಲ್ಪನೆಗೆ ನಮಗೆ ಅರಿವಾಗುತ್ತದೆ.

ತುಳುನಾಡಿನಲ್ಲಿ ಆಳಿದ ಸ್ಥಳೀಯ ಅಥವಾ ಸಾಮಂತ ಅರಸು ಮನೆತನಗಳ ಬಗ್ಗೆ ಮೊದಲು ಅಧ್ಯಯನ ನಡೆಸಿದವರು ಗಣಪತಿರಾವ್ ಐಗಳ್‌ರು.[2] ಅವರು ತಮ್ಮ “ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ” ಎಂಬ ಗ್ರಂಥದಲ್ಲಿ ಹಲವು ಪ್ರಮುಖ ಸಾಮಂತರನ್ನು ಹಾಗೂ ಅವರ ಮನೆತನಗಳ ವಿವರಗಳನ್ನು ನೀಡಿದ್ದಾರೆ. ಇಲ್ಲಿ ಅವರ ಅಧ್ಯಯನವು ಮುಖ್ಯವಾಗಿ ರಾಜಕೀಯ ಚರಿತ್ರೆಯೊಂದಿಗೆ ಆಯಾ ಅರಸು ಮನೆತನಗಳ ಸದಸ್ಯರ ಅಸಮರ್ಪಕ ವಂಶಾವಳಿ ಮತ್ತು ಘಟನಾವಳಿಗಳನ್ನು ಕೊಡುವಲ್ಲಿಗೆ ಮಾತ್ರ ಸಾರ್ಥಕವಾಗಿದೆ. ನಂತರ ಬಿ.ಎ. ಸಾಲೆತ್ತೋರ್, ಪಿ. ಗುರುರಾಜ್ ಭಟ್ಟ, ಕೆ.ವಿ. ರಮೇಶರವರು ಈ ಪ್ರದೇಶದ ಅಧ್ಯಯನ ನಡೆಸಿದ್ದರು.

ಹೀಗೆ ಮಧ್ಯಕಾಲೀನ ತುಳುನಾಡಿನಲ್ಲಿ ಆಳಿ ಹೋದ ಚಕ್ರವರ್ತಿಗಳ, ಸಾಮಂತ ಅರಸರ ಹಾಗೂ ಪ್ರಮುಖ ಆಡಳಿತ ವಿಭಾಗಗಳ ಇತಿಹಾಸವನ್ನು ಚಿತ್ರಿಸುವ ಕೃತಿಗಳು ಹೊರ ಬಂದಿದ್ದರೂ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸ ನಡೆಯಬೇಕಾಗಿದೆ. ಇತಿಹಾಸದ ಒಂದು ಭಾಗವಾಗಿರುವ ಸಾಮಂತರು ಮತ್ತು ಅವರ ಆಡಳಿತ ವಿಭಾಗಗಳು ತಮ್ಮದೇ ಆದ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪಡೆದಿವೆ. ಅವುಗಳ ಸಮಗ್ರವಾದ ಅಧ್ಯಯನ ನಡೆದಾಗ ತುಳುನಾಡಿನ ಸಂಸ್ಕೃತಿಯ ಪೂರ್ಣಚಿತ್ರ ದೊರೆಯುತ್ತದೆ. ಈ ಲೇಖನದಲ್ಲಿ ಅಂತಹ ಸಾಮಂತ ಅರಸು ಮನೆತನಗಳಲ್ಲೊಂದಾದ ಹೊಸಂಗಡಿಯ ಹೊನ್ನೆಯ ಕಂಬಳಿಯರಸರ ಆಳವಾದ ಅಧ್ಯಯನವನ್ನು ಮಾಡಲಾಗಿದ್ದು ಈ ವಂಶದ ಪೂರ್ವೇತಿಹಾಸದ ಮೇಲೆ ಬೆಳಕು ಚೆಲ್ಲುವುದು ಮುಖ್ಯ ಉದ್ದೇಶವಾಗಿದೆ.

ಹೊನ್ನೆಯ ಕಂಬಳಿಯರಸರ ಮೂಲ:

ಮಧ್ಯಕಾಲೀನ ತುಳುನಾಡಿನ ವಿವಿಧ ಸಾಮಂತ ಅರಸು ಮನೆತನಗಳಲ್ಲಿ ಹೊನ್ನೆಯ ಕಂಬಳಿ ವಂಶವೂ ಒಂದು. ಕ್ರಿ.ಶ. ಹದಿನಾಲ್ಕನೇ ಶತಮಾನದಿಂದ ತುಳುನಾಡಿನ ರಾಜಕೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವ ಇವರು ಹದಿನೆಂಟನೆ ಶತಮಾನದ ವರೆಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದರು. ಹೊನ್ನೆ ಕಂಬಳಿಯರಸರ ಮೂಲವನ್ನು ಹುಡುಕಲು ಗಣಪತಿರಾವ್ ಐಗಳ್ ಮೊದಲಾಗಿ ಡಾ| ಬಿ. ವಸಂತ ಶೆಟ್ಟಿ[3] ರವರೆಗೆ ಅನೇಕ ವಿದ್ವಾಂಸರು ಪ್ರಯತ್ನಿಸಿದ್ದಾರೆ. ಆದರೆ ಈ ಅರಸರ ಮೂಲ ಸ್ಥಳದ ಕುರಿತು ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಅವರ ಬರವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡು ಅಭಿಪ್ರಾಯಗಳನ್ನು ತಿಳಿಯಬಹುದು.

ಅಭಿಪ್ರಾಯ ಒಂದು:

ತುಳುನಾಡಿನ ಇತಿಹಾಸ ರಚನಕಾರರಲ್ಲೊಬ್ಬರಾದ ಪಿ.ಗುರುರಾಜ ಭಟ್ಟರು ಈಗಿನ ಕುಂದಾಪುರ ತಾಲೂಕಿನ ‘ಹೊನ್ನೆಯಹಳ್ಳಿ’ ಹೊನ್ನ ಕಂಬಳಿಯರಸರ ಮೂಲ ಸ್ಥಾನವಾಗಿತ್ತು ಎಂದು ಅಭಿಪ್ರಾಯಪಡುತ್ತಾರೆ.[4] ಮತ್ತು ‘ಕಂಬಳಿ’ ಎಂಬುದು ತಮ್ಮ ಮನೆತನಕ್ಕೆ ಅವರು ಇರಿಸಿಕೊಂಡ ಉಪನಾಮ (Surname) ಎಂದೂ ಹೇಳುತ್ತಾರೆ. ಕುಂದಾಪುರ ತಾಲೂಕಿನ ಸುತ್ತಮುತ್ತ ಪ್ರದೇಶಗಳಲ್ಲಿ ವಾಸಿಸುವ ಪ್ರಸಕ್ತ ಬಂಟ ಅಥವಾ ನಾಡವ ಮತ್ತು ಜೈನ ಸಮುದಾಯಗಳಲ್ಲಿ ‘ಕಂಬಳಿ’ ಎನ್ನುವ ಉಪನಾಮ ಪ್ರಚಲಿತದಲ್ಲಿರುವುದರಿಂದ ಇದೇ ಸಮುದಾಯಗಳಿಗೆ ಹೊನ್ನೆಕಂಬಳಿ ಅರಸರು ಸೇರಿರಬಹುದೆಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಗುರುರಾಜ ಭಟ್ಟರ ಅಭಿಪ್ರಾಯದ ಸತ್ಯಾಸತ್ಯತೆಯನ್ನು ಪರಾಂಬರಿಸುವ ಸಂಬಂಧವಾಗಿ ಕುಂದಾಪುರ ಮತ್ತು ಹೊಸಂಗಡಿಯ ಆಸುಪಾಸಿನಲ್ಲಿ ನಾನು ಕ್ಷೇತ್ರ ಕಾರ್ಯವನ್ನು ಕೈಗೊಂಡಾಗ ಹಲವು ಬಂಟ ಕುಟುಂಬದ ಸದಸ್ಯರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ಅವರಲ್ಲಿ ಈ ‘ಕಂಬಳಿ’ ಎಂಬ ಉಪನಾಮದ ಬಗ್ಗೆ ಚರ್ಚಿಸಿದ್ದೇನೆ. ವಿಶೇಷವೇನೆಂದರೆ, ಈ ಸಮಯದಲ್ಲಿ ನಾನು ಭೇಟಿಯಾದ ಎಲ್ಲಾ ಬಂಟ ಕುಟುಂಬದ ಹಿರಿಯ ಸದಸ್ಯರು ತಮಗೆ ‘ಕಂಬಳಿ’ ಎಂಬ ಉಪನಾಮ ಹೊಸತು ಎಂದು ಹೇಳಿಕೊಳ್ಳುತ್ತಾರೆ. ಒಂದು ವೇಳೆ ಈ ಅರಸರು ಕಂಬಳಿ ಎಂಬ ಉಪನಾಮವನ್ನಿರಿಸಿಕೊಂಡಿದ್ದರೆ, ಅಂತಹ ಪದ್ಧತಿಯು ತನ್ನ ಇರುವಿಕೆಯನ್ನು ಉಳಿಸಿಕೊಳ್ಳಬೇಕಿತ್ತು. ಏಕೆಂದರೆ ಆ ಕಾಲಕ್ಕೆ ಸಂಬಂಧಿಸಿದ ಅನೇಕ ಪುರಾಣ ಕತೆಗಳು, ಸಂಪ್ರದಾಯಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶಾಸನಗಳಿಂದ, ತಾಳೆಯೋಲೆ ಬರಹಗಳಿಂದ ಅಥವಾ ಮೌಖಿಕ ಅಕರಗಳಿಂದ ಇಂದಿಗೂ ಪ್ರಚಲಿತದಲ್ಲಿರುವುದು ಗಮನಾರ್ಹ. ಉದಾ: ಅಳಿಯ ಸಂತಾನಕಟ್ಟು ಈ ಭಾಗದ ಜನರ ಸಂಸ್ಕೃತಿಯೊಂದಿಗೆ ಬೆಸೆದುಹೋಗಿದ್ದು ಇಂದಿಗೂ ಚಾಲ್ತಿಯಲ್ಲಿದೆ.

ಭಟ್ಟರು ಈ ವಂಶದ ಉಗಮವು ‘ಹೊನ್ನೆಯ ಹಳ್ಳಿ’ ಯಿಂದ ಪ್ರಾರಂಭವಾಗಿರಬೇಕೆಂದು ಅಭಿಪ್ರಾಯಪಡುತ್ತಾರೆ. ಈ ವಿಚಾರದಲ್ಲೂ ನನಗೆ ಅನುಮಾನವಿದೆ. ಏಕೆಂದರೆ ಈ ವಂಶಕ್ಕೆ ಸಂಬಂಧಪಟ್ಟ ಯಾವುದೇ ಶಾಸನಗಳಲ್ಲಿ ‘ಹೊನ್ನೆಯ ಹಳ್ಳಿ’ ಯ ಉಲ್ಲೇಖವಾಗುವುದಿಲ್ಲ. ಜೊತೆಗೆ ಹೆಸರಿರುವ ಊರು ಕುಂದಾಪುರ ತಾಲೂಕಿನೆಲ್ಲೆಡೆ ಹುಡುಕಿದರೂ ನನಗೆ ಇಂದಿಗೂ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ.

ಎರಡನೇ ಅಭಿಪ್ರಾಯ:

ಕ್ರಿ.ಶ.೧೨ನೇ ಶತಮಾನದಲ್ಲಿ ಮೈಸೂರು ಪ್ರಾಂತದಿಂದ ಶಾಂತರ ಜನಾಂಗಕ್ಕೆ ಸೇರಿದ ಜೈನ ಕುಟುಂಬವೊಂದು ತುಳುನಾಡಿನ ಆಳರಸರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿ, ಕಾಲಕ್ರಮೇಣ ಅವರು ಪ್ರಭಾವಿ ಜೈನ ಬಂಟರಾಗಿ, ಬಲ್ಲಾಳರಾಗಿ ೧೮ನೇ ಶತಮಾನದ ವರೆಗೆ ತುಳುನಾಡಿನ ಒಂದು ಭಾಗವನ್ನು ಆಳಿದರು ಎಂದು ಹೇಳಲಾಗಿದೆ. ಈ ಅಭಿಪ್ರಾಯವನ್ನು ಅವಲಂಬಿಸಿ ಅವರ ಇತಿಹಾಸ ರಚಿಸಲು ಕೈಗೆತ್ತಿಕೊಂಡರೆ ಅತ್ಯಂತ ಸುಲಭವಾಗಿ ಹೊನ್ನೆಯ ಕಂಬಳಿಯರಸರು ತುಳುನಾಡಿಗೆ ಹೊರಗಿನವರು ಎಂಬುದು ಖಚಿತವಾಗುತ್ತದೆ. ಇದಕ್ಕೆ ಪೂರಕವಾಗಿ ತುಳುನಾಡು ಹೊರಗಿನವರ ನೆಲೆಸುವಿಕೆಗೆ ಪ್ರೋತ್ಸಾಹ ನೀಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೆ ಹೊನ್ನೆ ಕಂಬಳಿಯ ವಂಶದವರು ಶೈವ ಸಂಪ್ರದಾಯದ ಅನುಯಾಯಿಗಳೇ ಹೊರತು ಜೈನರಾಗಲೀ, ಶಾಂತರ ಕುಲದ ಜೈನ ಬಂಟರಾಗಲಿ, ಈಗಿನ ನಾಡವರಾಗಲಿ ಅಥವಾ ಬಲ್ಲಾಳರು ಆಗಲಿ ಅಲ್ಲ ಎಂಬುದನ್ನು ಕೆಲವು ನಿದರ್ಶನಗಳಿಂದ ಸ್ಪಷ್ಟೀಕರಿಸಬಹುದು. ಒಂದನೆಯದಾಗಿ, ಅಂದಿನ ತುಳುನಾಡ ಅರಸು ಮನೆತನಗಳಲ್ಲಿ ಹೆಚ್ಚಿನವರು ಜೈನ ಸಂಪ್ರದಾಯಕ್ಕೆ ಸೇರಿದವರಾಗಿರುವುದರಿಂದಲೂ, ಸ್ನೇಹಪರರಾದ ಅವರು ಸ್ಥಳೀಯರೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಳ್ಳಲು ಇಷ್ಟಪಡುವವರಾಗಿದ್ದುದರಿಂದಲೂ ಅವರೊಂದಿಗೆ ಸ್ನೇಹ ಸೌಹಾರ್ದತೆಯಿಂದ ಬಾಳುವ ಅನಿವಾರ್ಯತೆಯಿಂದಲೂ ಅಂದಿನ ತುಳುನಾಡವರ ಒಟ್ಟು ರೂಢಿಗತವಾಗಿ ಬೆಳೆದು ಬಂದ ಅಳಿಯಕಟ್ಟಿನ ಸಂತಾನದ ಪದ್ಧತಿಯನ್ನು ಹೊನ್ನ ಕಂಬಳಿಯರಸರೂ ಅನುಸರಿಸಿರುವುದಲ್ಲಿ ಆಶ್ಚರ್ಯವೇನೂ ಇಲ್ಲ. ಹೊಯ್ಸಳರು, ವಿಜಯ ನಗರದರಸರು ಇದಕ್ಕೆ ಮುಖ್ಯವಾದ ಉದಾಹರಣೆಗಳು. ಅವರು ರಾಜಕೀಯ ದಾಹದೊಂದಿಗೆ ತುಳುನಾಡಿಗೆ ಬಂದು, ನೆಲೆಸಿ ಸ್ಥಳೀಯರ ಸಹಕಾರ ಪಡೆದು ಸ್ಥಳೀಯರ ಅನುಮತಿ ಪಡೆದು ತಮ್ಮ ಅರಸೊತ್ತಿಗೆಗೆ ಮಾನ್ಯತೆ ಪಡೆಯಲೋಸ್ಕರ ಹೀಗೆ ಮಾಡಿರಬಹುದೆಂಬುದನ್ನು ತಳ್ಳಿಹಾಕುವಂತಿಲ್ಲ. ಎರಡನೇಯದಾಗಿ ಈ ಪ್ರದೇಶದಲ್ಲಿ ಜೈನ ಬಸದಿಗಳ ಸುಳಿವಿಲ್ಲ. ಆದರೆ ಜಂಗಮಮಠ, ಮಾತಿನ ಮಠ ಅಥವಾ ಮಹತ್ತಿನ ಮಠ, ಹಲವಾರಿ ಮಠಗಳ ಸ್ಥಾಪನೆಯಾಗಿರುವುದರ ಬಗ್ಗೆ ದಾಖಲೆಗಳಿವೆ. ಶಾಂತೇಶ್ವರ, ನೀಲಕಂಠೇಶ್ವರ, ವಿರೂಪಾಕ್ಷ, ವೀರಭದ್ರ, ಈಶ್ವರ, ಶಂಭುಲಿಂಗ, ರಾಮಲಿಂಗೇಶ್ವರ, ಲೋಕನಾಥೇಶ್ವರ ಹೀಗೆ ಅನೇಕ ಶೈವ ಸಂಪ್ರದಾಯದ ದೇವಸ್ಥಾನಗಳನ್ನು ಹೊನ್ನೆಯ ಕಂಬಳಿಯರಸರು ಕಟ್ಟಿರುವುದಕ್ಕೆ ಶಾಸನಗಳು ಆಧಾರಗಳಾಗಿವೆ. ಶಂಭುಲಿಂಗ ದೇವರು, ಲೋಕನಾಥೇಶ್ವರ ದೇವರಿಗೆ ಹಾಗೂ ಬ್ರಾಹ್ಮಣರ ಛತ್ರಕ್ಕಾಗಿ ಉಂಬಳಿ ಬಿಟ್ಟ ಹೊಲಗಳಲ್ಲಿಯ ಬದುಕಲ್ಲುಗಳಲ್ಲಿ ಲಿಂಗಮುದ್ರೆಕಲ್ಲುಗಳು ಹಾಗೂ ವಾಮನ ಮುದ್ರೆಯುಳ್ಳ ಕಲ್ಲುಗಳನ್ನು ನೆಟ್ಟದ್ದು ಶಾಸನಗಳ ಮೂಲಕ ಶ್ರುತಪಡಿಸಿದ್ದರಿಂದ ದ್ವಿಜರನ್ನು ಓಲೈಸಲಾಗುತ್ತಿತ್ತು ಎಂದು ತಿಳಿಯಬಹುದು. ಕೊನೆಯದಾಗಿ, ಇವರು ಶೈವರು ಎನ್ನಲು ಇವರು ಇರಿಸಿಕೊಂಡ ಹೆಸರುಗಳನ್ನು ಗಮನಿಸಬಹುದು. ಉದಾಹರಣೆಗೆ ಬಸವಾಪುರ, ಬಸಪ್ಪನ ಕೆರೆ, ಭದ್ರಾಪೂರ ಮರದಬಾಗಿಲು ಇತ್ಯಾದಿ. ಇಂತಹ ಹೆಸರುಗಳು ಶೈವ ಸಂಪ್ರದಾಯಕ್ಕೆ ಸೇರಿದ ಸಮುದಾಯಗಳಲ್ಲಿ ಪ್ರಚಲಿತವಾಗಿರುತ್ತವೆ. ಈ ಕುರಿತಂತೆ ಇನ್ನೂ ಶೋಧ ಮುಂದುವರಿದಿದೆ. ಉದಾಹರಣೆಗೆ: ಹೊನ್ನೆಯ ಕಂಬಳಿ ವಂಶದ ಪೂರ್ವಜರು ಚಿನ್ನದಲ್ಲಿ ಕಂಬಳಿಯನ್ನು ಕೆತ್ತಿಸಿದ, ಅಥವಾ ನೇಯ್ದ ಶ್ರೀಮಂತ ಕುಟುಂಬದವರಾಗಿರಬಾರದೇಕೆ? ಇದನ್ನು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿರುವಂತೆ: ಮೆಣಸಿನಕಾಯಿ ಮಾರುವವರು – ಮೆಣಸಿನಕಾಯಿಯವರು, ಉಳ್ಳೇಗಡ್ಡೆ ಬೆಳೆಯುವವರು – ಉಳ್ಳಾಗಡ್ಡೆಯವರು, ಕುಡಿದ ಆಮಲಿನಲ್ಲಿ ಕುರಿಯೆಂದು ತಿಳಿದು ಕತ್ತೆಯನ್ನೇ ಕೊಂದು ತಿಂದವರು – ಕತ್ತೆಯವರು, ಕುದುರೆ ಕಟ್ಟಿದವರು – ಕುದುರೆಯವರು, ಬೆಲ್ಲ ಮಾಡುವವರು – ಬೆಲ್ಲದವರು ಆದಂತೆ ಬಂಗಾರ ಅಥವಾ ಹೊನ್ನಿನಿಂದ ಕಂಬಳಿಯನ್ನು ಮಾಡಿಸಿದವರು ‘ಹೊನ್ನ – ಕಂಬಳಿ’ ಯವರೆಂದು ಪರಿವರ್ತನೆಗೊಂಡಿರಬಹುದೆ? ಏಕೆಂದರೆ ಕಂಬಳಿ ಎನ್ನುವ ಶಬ್ದ ಕೇವಲ ಜಾತಿ ಸಂಕೇತವೇ ಆಗಿರಬೇಕೆಂದೇನೂ ಇಲ್ಲ. ಅದು ವಸ್ತು ರೂಪವೂ ಆಗಿರಬಹುದು.

ಭೌಗೋಳಿಕ ವ್ಯಾಪ್ತಿ :

ಹೊಸಂಗಡಿಯ ಹೊನ್ನ – ಕಂಬಳಿಯರಸರ ಆಳ್ವಿಕೆಯನ್ನು ಉಲ್ಲೇಖಿಸುವ ಕೆಲವೇ ಕೆಲವು ಶಾಸನಗಳ ಆಧಾರದಿಂದ ಇವರು ಕುಂದಾಪುರ ತಾಲೂಕಿನ ಕೊಲ್ಲೂರು, ಹೊಸಂಗಡಿ, ಬಗ್ಗವಾಡಿ, ಮುನಿನಾಡು, ಆರುನಾಡು, ಕದರಿ, ಕಬ್ಬುನಾಡು ಸೀಮೆ ಇವರ ಆಡಳಿತಕ್ಕೊಳಪಟ್ಟಿದ್ದವೆಂದು ಶ್ರುತಪಡಿಸಬಹುದು. ಹೊಸಂಗಡಿ ಈ ಅರಸರ ರಾಜಧಾನಿಯಾಗಿತ್ತು. ಈ ಸ್ಥಳಗಳಲ್ಲಿ ಕಾಣಸಿಗುವ ಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು, ಶಿಲಾಸ್ತಂಭಗಳು, ನಾಣ್ಯಗಳು, ಅಂದಿನರಮನೆಯ ಕುರುಹುಗಳು, ಮಠಗಳು, ದೇವಾಲಯಗಳು, ಕೋಟೆಗಳು, ಕೆರೆ ಮತ್ತು ಬಾವಿಗಳು, ಬದುಕಲ್ಲುಗಳು ಇತ್ಯಾದಿ, ಹೊಸಂಗಡಿ ಮತ್ತು ಆಸುಪಾಸಿನ ಪ್ರದೇಶಗಳ ಗತವೈಭವವನ್ನು ಮಾತ್ರವಲ್ಲ ಇದೊಂದು ರಾಜಧಾನಿಯಾಗಿ ಉನ್ನತ ಹಂತದಲ್ಲಿತ್ತು ಎಂಬುದನ್ನು ಗುರುತಿಸಲು ಮೂಕ ಸಾಕ್ಷಿಗಳಾಗಿದ್ದಾವೆ. ಕೆಳದಿ ನೃಪವಿಜಯದಲ್ಲಿ ಉಲ್ಲೇಖಿಸಿರುವಂತೆ ಈ ವಂಶದವರು ದಕ್ಷಿಣ ಕನ್ನಡದಿಂದ ಘಟ್ಟದ ಮೇಲಿನ ಶಿವಮೊಗ್ಗ ಜಿಲ್ಲೆಯ ಪಟ್ಟಗುಪ್ಪೆ ಮತ್ತು ಬಿದರೂರಿನ ವರೆಗೂ ತಮ್ಮ ಆಡಳಿತವನ್ನು ವಿಸ್ತರಿಸಿಕೊಂಡಿರುವುದರಿಂದ ಎರಡೂ ಕಡೆಯ ಪ್ರದೇಶಗಳ ಆಡಳಿತ ನಡೆಸಲು ಅನುಕೂಲವಾಗುವಂತೆ ಹೊಸಂಗಡಿಯನ್ನು ತಮ್ಮ ರಾಜಕೀಯ ಚಟುವಟಿಕೆಗಳಿಗೆ ರಕ್ಷಣಾತ್ಮಕ ಕೇಂದ್ರವನ್ನಾಗಿ ಪರಿವರ್ತಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದ್ದಿರಬೇಕು.

ಹೊನ್ನೆಯ – ಕಂಬಳಿ ವಂಶದ ಐತಿಹಾಸಿಕ ಚಿತ್ರಣವನ್ನು ಸೆರೆಹಿಡಿಯುವಲ್ಲಿ ಎಂ. ಗಣಪತಿರಾವ್ ಐಗಳ್‌ರವರನ್ನು ಹೊರತುಪಡಿಸಿದರೆ ಪಿ. ಗುರುರಾಜ ಭಟ್ಟರೊಬ್ಬರೆ ಈ ಮನೆತನದ ಅರಸರ ಬಗ್ಗೆ ಅಧ್ಯಯನ ಮಾಡಿರುವುದೆಂದು ಖಚಿತವಾಗಿ ಹೇಳಬಹುದು.[5] ಉಳಿದ ಇತಿಹಾಸ ರಚನಾಕಾರರು ಸಂದರ್ಭಕ್ಕನುಸಾರವಾಗಿ ಹೊಸಂಗಡಿ ಮತ್ತು ಅಲ್ಲಿ ಆಳಿದ ಮನೆತನದ ಉಲ್ಲೇಖವನ್ನು ಮಾಡಿದ್ದಾರೆಯೇ ವಿನಾ ಹೊಸಂಗಡಿಯು ಒಂದು ವಂಶದ ಆಡಳಿತ ಕೇಂದ್ರವಾಗಿದ್ದ ವೈಭವದ ದಿನಗಳ ಕುರಿತು ಆಳವಾದ ಅಧ್ಯಯನವನ್ನು ಯಾರೂ ಕೈಗೊಂಡಿಲ್ಲ.

ಹೊಸಂಗಡಿಯನ್ನೇ ತಮ್ಮ ಕಾರ್ಯ ಚಟುವಟಿಕೆಗಳಿಗೆ ಕೇಂದ್ರವನ್ನಾಗಿಟ್ಟುಕೊಂಡು ಸುತ್ತಮುತ್ತಲಿನ ಪ್ರದೇಶದ ಆಡಳಿತವನ್ನು ಹೊನ್ನೆಯ ಕಂಬಳಿಯರಸರು ನೋಡಿಕೊಂಡಿದ್ದರು ಎನ್ನುವುದಕ್ಕೆ ಆಧಾರವಾಗಿ ಅಂದು ಅವರು ಕಟ್ಟಿಸಿದ ಅರಮನೆಯ ಅಳಿದುಳಿದ ಅವಶೇಷಗಳು ಸಾಕ್ಷಿಗಳಾಗಿವೆ. ಬಹುಶಃ ಈಗಿನ ಹೊಸಂಗಡಿಯ ಪೇಟೆಯಿಂದ ಒಂದೂವರೆ ಕಿ.ಮೀ.ವರೆಗೂ ಅಂದರೆ ಕುಂದಾಪುರ ದೆಡೆಗೆ ಹೋಗುವ ರಾಜ್ಯರಸ್ತೆಯ ಇಕ್ಕೆಲಗಳಲ್ಲಿ ಒಂದು ನೋಟವನ್ನು ಹಾಯಿಸಿದರೆ ಈ ಮಾತಿನ ಸತ್ಯ ಮನವರಿಕೆಯಾಗುವುದು. ಈಗ ಅಲ್ಲಲ್ಲಿ ಮನೆಗಳು, ಅಂಗಡಿಗಳು ಮತ್ತು ಶಾಲೆಗಳ ಕಟ್ಟಡಗಳು ತಲೆ ಎತ್ತಿದ್ದು ಐತಿಹಾಸಿಕ ಅವಶೇಷಗಳನ್ನು ಮರೆ ಮಾಚುವ ಪ್ರಯತ್ನಗಳು ನಡೆಯುತ್ತಿದ್ದರೂ ಈ ಭಾಗದ ಗತವೈಭವವು ಒಂದು ಕಾಲದಲ್ಲಿ ಉತ್ತುಂಗಕ್ಕೇರಿತು ಎಂದು ಸಾರಿ ಹೇಳುತ್ತವೆ. ಇಂದಿಗೂ ಇಲ್ಲಿ ಕಂಡು ಬರುವ ಅನೇಕ ಬಾವಿಗಳು, ಕೆರೆಗಳು, ಆನೆ, ಕುದುರೆ ನಿಲ್ಲುವ ಸ್ಥಳಗಳು, ಅವುಗಳಿಗೆ ಕುಡಿಯಲೆಂದು ಇರಿಸಲಾದ ಸುಮಾರು ೫೦೦ ಕೊಡಪಾನ ನೀರು ಹಿಡಿಯಬಹುದಾದ ದೊಡ್ಡ ದೊಡ್ಡ ಕಲ್ಲಿನಿಂದಲೇ ಕೆತ್ತಿಸಿದ ಹಂಡೆಗಳು, ಅಪರೂಪದ ಕಲ್ಲುಬಂಡೆಗಳು, ಶಿಲಾಸ್ತಂಭಗಳೆಲ್ಲವೂ ಇಲ್ಲಿ ರಾಜ ಮನೆತದ ಅರಮನೆ ಇದ್ದುದರ ಬಗ್ಗೆ ಜ್ವಲಂತ ಸಾಕ್ಷಿಗಳಾಗಿವೆ. ಜೊತೆಗೆ ಇದೊಂದು ರಾಜಧಾನಿಯಾಗಿ ಪ್ರಸಿದ್ಧಿಪಡೆದಿತ್ತು.

ರಾಜಕೀಯ ಇತಿಹಾಸ:

ಹೊಸಗಂಡಿಯ ಹೊನ್ನೆಯ ಕಂಬಳಿ ವಂಶಕ್ಕೆ ಸೇರಿದ ಅರಸರಲ್ಲಿ ಮುಖ್ಯವಾಗಿ ಕೇಳಿ ಬರುವ ಹೆಸರುಗಳೆಂದರೆ ತಿರುಮಲ ಕಂಬಳಿ, ಬಂಕಿಯರಸ ಅಥವಾ ಹೊನ್ನ ಕಂಬಳಿಯ ಮೊಮ್ಮಗ ವೆಂಕಟ ಸಾವಂತ (ಈತ ಬಂಕಿಯರಸ ವಂಶದ ಸಂಕಣ್ಣಿ ಸಾಮಂತನ ಅಳಿಯನೆಂಬ ಅಭಿಪ್ರಾಯವೂ ಇದೆ.) ಹೊನ್ನಕಂಬಳಿ ಪಂಡರಿದೇವ, ಹೊನ್ನ ಕಂಬಳಿ ಒಡೆಯ, ಶಂಕರ ದೇವಿ ಅಮ್ಮ, ಬಂಕಿಯರಸ, ಹೊನ್ನಕಂಬಳಿ ಒಡೆಯ ಅಮ್ಮಿ ದೇವಿ ಅಮ್ಮ, ಸಿರಿಯ ಹೊನ್ನೆಯ ಕಂಬಳಿ ಇತ್ಯಾದಿ ಶಾಸನಗಳಲ್ಲಿ ಲಭ್ಯವಿರುವ ವಿವರಣೆಯ ಆಧಾರದಲ್ಲಿ ಈ ಎಲ್ಲಾ ಅರಸರ ಹೆಸರನ್ನು ಗುರುತಿಸಲು ಸಾಧ್ಯವಾದರೂ ಲಭ್ಯವಿರುವ ಶಾಸನಗಳು ಈ ಮನೆತನದ ಸುಸಂಬದ್ಧ ರಾಜಕೀಯ ಇತಿಹಾಸವನ್ನು ನಿರೂಪಿಸಲು ಆಧಾರಗಳು ಸಾಲದು.

ಶ್ರೀ ಕೊಲ್ಲೂರು ಮೂಕಾಂಬಿಕೆ ದೇಗುಲದ ಸ್ಮರಣಿಕೆಯೊಂದರಲ್ಲಿ ಪ್ರಕಟಗೊಂಡ ೧೩ನೇ ಶತಮಾನದ ಶಾಸನವು ಹೊನ್ನೆಯ ಕಂಬಳಿ ವಂಶದ ಬಂಕಿಯರಸನ ಮೊಮ್ಮಗನಾದ ವೆಂಕಣ್ಣ ಸಾಮಂತನು (ಕ್ರಿ.ಶ.೧೨೧೮ರ ಸುಮಾರಿಗೆ) ಗ್ರಾನೈಟ್ ಕಲ್ಲುಗಳಿಂದ ಈಗಿರುವ ಕೊಲ್ಲೂರು ಮೂಕಾಂಬಿಕಾ ದೇಗುಲವನ್ನು ಕಟ್ಟಿಸಿ ಅದರ ಜೀಣೋದ್ಧಾರದ ಖರ್ಚನ್ನು ಭರಿಸಲು ದೇಗುಲದ ಪುರೋಹಿತರಾದ ಪರಮೇಶ್ವರ ಅಡಿಗರಿಗೆ ಭೂ ದಾನ ನೀಡಿದ ವಿಷಯವನ್ನು ಹೇಳುತ್ತದೆ.[6] ಈ ಶಾಸನದಲ್ಲಿರುವ ವಿಷಯಗಳ ಆಧಾರದಲ್ಲಿ ಹೊನ್ನೆಯ ಕಂಬಳಿ ವಂಶದ ರಾಜಕೀಯ ಇತಿಹಾಸ ರಚಿಸಲು ಪ್ರಯತ್ನಿಸಿದರೆ ಇವರು ಸುಮಾರು ೧೩ನೇ ಶತಮಾನದಿಂದಲೇ ಕೊಲ್ಲೂರಿನ ಆಸುಪಾಸಿನಲ್ಲಿ ಆಡಳಿತ ನಡೆಸಿದ್ದರು ಎಂಬುದು ಸ್ಪಷ್ಟವಾಗುತ್ತದೆ.[7] ಆದರೆ ತುಳುನಾಡಿನ ಇತಿಹಾಸಕಾರರಲ್ಲಿ ಒಬ್ಬರಾದ ಪಿ.ಗುರುರಾಜ ಭಟ್ಟರು ಈ ಶಾಸನದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಾರೆ.[8] ಏಕೆಂದರೆ ಅವರ ಪ್ರಕಾರ ಈ ಶಾಸನವು ಸುಮಾರು ಕ್ರಿ.ಶ. ೧೨೧೮ರಲ್ಲಿ ಬರೆಸಿದ್ದು ಅದರ ಲಿಪಿಗಳು ಸಹ ೧೩ನೇ ಶತಮಾನದ ಲಿಪಿಗಳಿಗೆ ಹೋಲುತ್ತವೆ. ಆದರೆ ಕೊಲ್ಲೂರು ಮೂಕಾಂಬಿಕಾ ದೇಗುಲದ ರಚನೆಯು ಸುಮಾರು ೧೫ ಅಥವಾ ೧೬ನೇ ಶತಮಾನದ ಶಿಲ್ಪಕಲೆಯ ಶೈಲಿಗೆ ಹೋಲುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಅಲ್ಲದೆ, ಈ ಶಾಸನದಲ್ಲಿರುವ ವಿವರಣೆಯನ್ನು ನಿಜವಾಗಿ ಒಂದು ತಾಳೆಯೋಲೆ ಬರಹದಿಂದ ತೆಗೆದುಕೊಳ್ಳಲಾಗಿತ್ತು ಎಂದು ಆಪಾದಿಸುತ್ತಾರೆ ಮತ್ತು ಈ ಶಾಸನದ ಕಾಲ ೧೩ನೇ ಶತಮಾನವಾಗಿದ್ದು, ಅದರಲ್ಲಿ ಉಲ್ಲೇಖವಾಗುವ ಬಂಕಿಯರಸ ಎಂಬ ಹೆಸರಿರುವ ಅರಸನು ೧೫ನೆಯ ಶತಮಾನದ ಮೊದಲೂ ಯವ ಶಾಸನದಲ್ಲಿಯೂ, ಕಂಡುಬರುವುದಿಲ್ಲ. ಆದಾಗ್ಯೂ ೧೪ನೇ ಶತಮಾನದ ಒಂದು ಶಾಸನದಲ್ಲಿ ಕಂಬಳಿ ಎಂಬ ಉಪನಾಮವಿರುವ ‘ತಿರುಮಲ ಕಂಬಳಿ’ ಎನ್ನುವ ಹೆಸರು ಕಂಡುಬರುತ್ತದೆ.[9] ಅದನ್ನು ಹೊರತುಪಡಿಸಿದರೆ ೧೫ನೇ ಶತಮಾನದ ಮೊದಲು ಬಂಕಿಯರಸ ಎಂಬ ವ್ಯಕ್ತಿಯ ವಿಷಯ ಕಂಡುಬರುವುದಿಲ್ಲ.

ಮೇಲೆ ಪ್ರಸ್ತಾಪಿಸಿದ ಗುರುರಾಜ ಭಟ್ಟರ ಅಭಿಪ್ರಾಯವನ್ನು ಒಪ್ಪಿಕೊಳ್ಳುವಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವರು ಹೇಳುವಂತೆ ಶಾಸನದ ಕಾಲವು ೧೩ನೇ ಶತಮಾನವಾಗಿದ್ದು ದೇಗುಲದ ರಚನೆ ೧೫ ಮತ್ತು ೧೬ನೇ ಶತಮಾನದ ಶೈಲಿಗೆ ಹೋಲುತ್ತದೆ ಎಂಬುದನ್ನು ಒಪ್ಪಿಕೊಳ್ಳಲಾಗದು. ಏಕೆಂದರೆ ೧೩ನೇ ಶತಮಾನದಲ್ಲಿ ಅಲ್ಲಿ ದೇವಾಲಯ ಕಟ್ಟಿದ್ದು ಅದಕ್ಕೆ ದಾನ ಕೊಟ್ಟಿರುವ ಬಗ್ಗೆ ದಾಳಲೆಗಳಿವೆ.[10] ಜೊತೆಗೆ ೧೫ ಮತ್ತು ೧೬ನೇ ಶತಮಾನಗಳ ನಡುವೆ ಇದೇ ವಂಶಕ್ಕೆ ಸೇರಿದ ಬೇರೆ ಅರಸರು ಅಲ್ಲಿರುವ ದೇಗುಲವನ್ನು ಕೆಡವಿ ಹೊಸ ಶೈಲಿಯಲ್ಲಿ ದೇಗುಲದ ಪುನರ್‌ನಿರ್ಮಾಣ ಮಾಡಿರಬಹುದೇ ? ಎಂಬುದನ್ನು ತಳ್ಳಿಹಾಕುವಂತಿಲ್ಲ. ಇತಿಹಾಸದಲ್ಲಿ ಇಂತಹ ಘಟನೆಗಳಿಗೆ ಬೇಕಾದಷ್ಟು ಉದಾಹರಣೆಗಳಿವೆ. ಬೇರೆ ಕಾಲದಲ್ಲಿ ಆಳಿದರೂ ಕೂಡ ಒಂದೇ ಮನೆತನಕ್ಕೆ ಸೇರಿದ ಅರಸರು ಹಳೆಯ ದೇಗುಲವನ್ನು ಪುನಃ ಕಟ್ಟಿಸಿ (ಆ ಕಾಲದ ಶೈಲಿಗೆ ಅನುಗುಣವಾಗಿ) ಜೀರ್ಣೋದ್ಧಾರ ಮಾಡಿರುವುದು ಉಂಟು. ಗುರುರಾಜ ಭಟ್ಟರ ಅಭಿಪ್ರಾಯದಲ್ಲಿ ಸುಮಾರು ಎರಡು ಶತಮಾನಗಳ ಅಂತರವಿದ್ದು, ೨೦೦ ವರ್ಷಗಳಲ್ಲಿ ಒಂದು ದೇಗುಲದ ರಚನೆ ಗಟ್ಟಿಯಾಗಿಯೇ ಇರಬೇಕೆಂದು ಏನೂ ಇಲ್ಲ. ಅಂತಹ ಸಂದರ್ಭದಲ್ಲಿ ೧೫ನೇ ಶತಮಾನದ ಹೊನ್ನೆಯ ಕಂಬಳಿ ಅರಸರು ಪುನಃ ಆ ಕಾಲದ ಶೈಲಿಯನ್ನು ಬಳಸಿ ಹೊಸ ದೇಗುಲವನ್ನು ನಿರ್ಮಾಣ ಮಾಡಿರಲು ಸಾಧ್ಯ. ಇದಲ್ಲದೆ ಬಂಕಿಯರಸ ಎಂಬ ಹೆಸರು ಮೇಲೆ ಪ್ರಸ್ತಾಪ ಮಾಡಿದ ಶಾಸನವನ್ನು ಹೊರತುಪಡಿಸಿ ೧೫ನೇ ಶತಮಾನದ ಮೊದಲು ಬೇರೆ ಯಾವ ಶಾಸನದಲ್ಲಿ ಉಲ್ಲೇಖವಾಗುವುದಿಲ್ಲ ಎಂಬ ಅಭಿಪ್ರಾಯವೂ ಸರಿಯಲ್ಲ. ಇತಿಹಾಸದ ಉದ್ದಗಲಕ್ಕೂ ಒಂದು ಅರಸನ ಉಲ್ಲೇಖ ಲಭಿಸುವ ಶಾಸನ ಒಂದೇ ಆಗಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಒಂದೊಮ್ಮೆ ಆತ ಪ್ರಬಲನಾಗಿದ್ದರೆ ಅವನ ಉಲ್ಲೇಖಗಳು ಒಂದಕ್ಕಿಂತ ಹೆಚ್ಚು ಶಾಸನಗಳಲ್ಲಿ ಕಂಡು ಬರುವುದು ಸಹಜ. ಈ ವಂಶದ ೧೩ನೇ ಶಾಸನ ತಿಳಿಸುವ ಕಾಲ ನಿಜವಾಗಿ ಅವರ ಉಗಮದ ಸಮಯವಾಗಿತ್ತೆ ವಿನಾ ಅವರು ಪ್ರಬಲರಾಗಿ ಬೆಳೆದಿರಲಿಲ್ಲ. ತಮ್ಮ ಅಧಿಕಾರ ವ್ಯಾಪ್ತಿಯು ಕೂಡ ವೃದ್ಧಿಯಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ತಾವು ಒಂದು ಪ್ರತ್ಯೇಕ ರಾಜಮನೆತನವನ್ನು ಕಟ್ಟಬೇಕೆಂಬ ಕನಸೊಂದನ್ನು ಇಟ್ಟುಕೊಂಡು ತಮ್ಮ ಇರುವಿಕೆಯನ್ನು ಸ್ಥಳೀಯರಿಗೆ ಗೊತ್ತುಪಡಿಸುವ ಯತ್ನದಲ್ಲಿ ದೇಗುಲವನ್ನು ನಿರ್ಮಿಸಿ, ದಾನವನ್ನು ಕೊಡುವ ಮೂಲಕ ಧಾರ್ಮಿಕ ಚಟುವಟಿಕೆಗಳ ಪೋಷಕರು ಎಂಬುದನ್ನು ಶ್ರುತಪಡಿಸಿರಬಹುದು. ನಂತರ ೧೪ನೇ ಶತಮಾನದಲ್ಲಿಯೂ ಇವರ ಶಾಸನಗಳು ಸಿಗುತ್ತಿವೆ ಮತ್ತು ೧೫ನೇ ಶತಮಾನದಲ್ಲಿ ಇವರು ಬರೆಸುವ ಶಾಸನಗಳ ಸಂಖ್ಯೆಯು ಹೆಚ್ಚಾಗಿವೆ. ಅಂದರೆ ಸುಮಾರು ೧೩ನೇ ಶತಮಾನದಲ್ಲಿಯೇ ತಮ್ಮನ್ನು ಒಂದು ವಂಶದ ಪ್ರತಿನಿಧಿಯೆಂದು ಗುರುತಿಸಿಕೊಂಡು ೧೫ನೇ ಶತಮಾನದ ಹೊತ್ತಿಗೆ ಅವರ ಅಧಿಕಾರ ವ್ಯಾಪ್ತಿಯನ್ನು ವೃದ್ಧಿಸಿರಬಹುದು. ಆದರೆ ತಮ್ಮ ಉಗಮ ಯಾವ ಸ್ಥಳದಿಂದ ಆರಂಭವಾಗಿತ್ತು ಎಂಬು ದನ್ನು ಸ್ಪಷ್ಟವಾಗಿ ಹೇಳಲು ಈ ೧೩ನೇ ಶತಮಾನದ ಶಾಸನ ಸಹಕಾರಿಯಾಗದು.

ಈ ನಿಟ್ಟಿನಲ್ಲಿ ಡಾ| ಬಿ. ವಸಂತ ಶೆಟ್ಟಿಯವರು ಹೊಸತಾಗಿ ಕಂಡುಹಿಡಿದ ಶಾಸನವು ಹೊನ್ನೆಯ ಕಂಬಳಿ ಅರಸರ ಉಗಮದ ಇತಿಹಾಸದ ವಿಚಾರವಾಗಿ ಸಾಕಷ್ಟು ಬೆಳಕು ಚೆಲ್ಲುತ್ತದೆ.[11] ಈ ಶಾಸನವು ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ಒಳಪಡುವ ಸಿದ್ಧಾಪೂರ (ಒಂದು ಹಳ್ಳಿ)ದ ಜನಸಾಲೆಯಲ್ಲಿ ಗುರುತಿಸಲಾಗಿದೆ. ಶಾಸನವು ವಿಜಯನಗರ ಕಾಲದ ಸಂಗಮ ವಂಶದ ಅರಸನಾದ ಮಲ್ಲಿಕಾರ್ಜುನನ ಆಳ್ವಿಕೆಯನ್ನು ಪ್ರಸ್ತಾಪಿಸಿ ಕ್ರಿ.ಶ.೧೪೫೭ರಲ್ಲಿ ಬರೆಸಿರುವುದನ್ನು ಹೇಳುತ್ತದೆ. ಅರಸನಾದ ಮಲ್ಲಿಕಾರ್ಜುನನ ಆಜ್ಞೆಯ ಮೇರೆಗೆ ನರಸಿಂಹ ದಂಡನಾಯಕನು ಅಲ್ಲಿನ ಆಡಳಿತವನ್ನು ನೋಡಿಕೊಳ್ಳುತ್ತಿದ್ದನೆಂದು ಉಲ್ಲೇಖಿಸುತ್ತದೆ. ಇಲ್ಲಿ ಪ್ರಸ್ತಾಪಿಸುವ ದಂಡನಾಯಕನು ವಿಜಯನಗರ ವಂಶದ ಸಾಳುವ ನರಸಿಂಹನೇ ಅಥವಾ ಬೇರೆಯವನೇ ಎಂದು ಖಚಿತವಾಗಿ ಹೇಳಲು ಅಸಾಧ್ಯ. ಆದರೆ ಶಾಸನ ದೊರೆತ ಸ್ಥಳವು ಆ ಕಾಲದಲ್ಲಿ ಬಾರಕೂರು ವಂತೆಗೆ ಸೇರಿದ್ದು, ಬಾರಕೂರು ರಾಜ್ಯದಲ್ಲಿ ಬಾನಪ್ಪ ಒಡೆಯನು ರಾಜ್ಯಪಾಲನಾಗಿ ಅಧಿಕಾರದಲ್ಲಿದ್ದನು. ಆಶ್ಚರ್ಯವೇನೆಂದರೆ ಶಾಸನದಲ್ಲಿ ತಿರುಮಲ ಸಾವಂತ ಬಂಕಿಯರಸ ಹೊನ್ನೆಯ ಕಂಬಳಿ ಒಡೆಯನ ಉಲ್ಲೇಖವಿದ್ದು ಅವನು ಕದಲಿಯ ಅಧಿಪತಿ ಎಂದು ಹೇಳುತ್ತದೆ.

ವಸಂತ ಶೆಟ್ಟಿಯವರು ಈ ಶಾಸನದಿಂದ ಎರಡು ವಿಚಾರಗಳನ್ನು ಗಮನಿಸುತ್ತಾರೆ. ೧) ತಿರುಮಲ ಸಾವಂತ ಎಂಬ ಹೊಸ ಅರಸನ ಪರಿಚಯ ಮತ್ತು ಇವನು ಹೊನ್ನೆಯ ಕಂಬಳಿ ವಂಶದ ಪ್ರಪ್ರಥಮ ಅರಸನೆಂದು ಊಹಿಸಲಾಗಿದೆ. ೨) ತಿರುಮಲ ಸಾವಂತನು ಕದಲಿಯ ಒಡೆಯನೆಂದು ಉಲ್ಲೇಖಿಸಿದ್ದು, ಕದಲಿಯು ಈ ಪ್ರದೇಶದಲ್ಲಿರುವ ಆಧುನಿಕ ಕದರಿ ಎಂದು ತೀರ್ಮಾನಿಸಲಾಗಿದೆ. ಕದರಿಯು ಸಿದ್ಧಾಪುರ ಗ್ರಾಮದ ಒಂದು ಆಡಳಿತ ವಿಭಾಗವಾಗಿದ್ದು ಶಾಸನವನ್ನು ಗುರುತಿಸಿದ ಸ್ಥಳಕ್ಕೆ ಸ್ವಲ್ಪವೇ ದೂರದಲ್ಲಿದೆ. ವಸಂತ ಶೆಟ್ಟಿಯವರು ಶಾಸನ ಓದುವಾಗ ೪೨ನೇ ಸಾಲಿನಲ್ಲಿ ಕದರಿ ಎಂದೇ ಬರೆಯಲಾಗಿದೆ ಎಂದು ಸಹ ಹೇಳುತ್ತಾರೆ. ಜೊತೆಗೆ ಶಾಸನದಲ್ಲಿ ತಿರುಮಲ ಸಾವಂತನು ಕದರಿಯ ಒಡೆಯನೆಂದು ಕಾಣಿಸಿಕೊಂಡಿರುವುದರಿಂದ ಹೊನ್ನೆಯ ಕಂಬಳಿ ವಂಶದವರು ಮೂಲತಃ ಇದೇ ಸ್ಥಳದಿಂದ ಉಗಮವಾಗಿರಬೇಕು ಮತ್ತು ಕದರಿಯು ಅವರ ಮೊದಲ ರಾಜಕೀಯ ಕೇಂದ್ರ ಅಥವಾ ರಾಜಧಾನಿಯಾಗಿರಬಹುದೆಂದು ಸೂಚಿಸಲಾಗಿದೆ. ಈ ಆಧಾರದ ಅನ್ವಯ ಹೊಸಂಗಡಿಯು ಈ ವಂಶದ ನಂತರದ ರಾಜಧಾನಿಯಾಗಿರಲು ಸಾಧ್ಯ. ಬಹುಶಃಘಟ್ಟದ ಮೇಲಿನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಹೊಸಂಗಡಿ ಘಟ್ಟದ ಮೇಲೆ ಮತ್ತು ಕೆಳಗಿನ ಪ್ರದೇಶಗಳಿಗೆ ಮಧ್ಯ ಭಾಗದಲ್ಲಿದ್ದು ಆಡಳಿತದ ದೃಷ್ಟಿಯಿಂದ ಕದರಿಯಿಂದ ಹೊಸಂಗಡಿಗೆ ತಮ್ಮ ರಾಜಕೀಯ ಚಟುವಟಿಕೆಗಳನ್ನು ಬದಲಾಯಿಸಿಕೊಂಡಿರಬಹುದು.

ಹೊನ್ನೆಯ ಕಂಬಳಿಯರಸರು ಬಂಕಿಯರಸ ಹೊನ್ನೆಯ ಕಂಬಳಿ ಒಡೆಯ ಎಂಬ ಬಿರುದನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿರುವುದು ಸಾಮಾನ್ಯ ಲಕ್ಷಣವಾಗಿದ್ದು ತಿರುಮಲ ಸಾವಂತನು ಅಂತಹ ಬಿರುದನ್ನು ಬಳಸಿಕೊಂಡಿದ್ದನು. ವಸಂತ ಶೆಟ್ಟಿಯವರು ಸೂಚಿಸುವಂತೆ ‘ಬಂಕಿಯರಸ ಹೊನ್ನೆಯ ಕಂಬಳಿ’ ಎಂಬುವನು ಆ ವಂಶದ ಸ್ಥಾಪಕನಾಗಿರಬಹುದು ಮತ್ತು ನಂತರದ ಅರಸರು ಅವನನ್ನು ಗೌರವಿಸುವ ಚಿಹ್ನೆಯಾಗಿ ಅಂತಹ ಬಿರುದುಗಳನ್ನು ಇಟ್ಟುಕೊಂಡಿರಲು ಸಾಧ್ಯತೆಗಳಿವೆ. ಈ ದೃಷ್ಟಿಯಿಂದ ತಿರುಮಲ ಸಾವಂತನ ಜನ್‌‌ಸಾಲೆಯ ಶಾಸನವು ಕಂಬಳಿ ವಂಶದವರ ಆರಂಭ ಮತ್ತು ಉಗಮದ ವಿಚಾರವಾಗಿ ಮುಖ್ಯವಾದ ಆಕರವಾಗಿದೆ.

ಕ್ರಿ.ಶ. ೧೪೮೨ರ ಒಂದು ಶಾಸನವು[12] ಮೂಕಾಂಬಿಕೆ ದೇವಿಯ ದೇಗುಲಕ್ಕೆ ಹೊನ್ನ ಕಂಬಳಿ ಸಾವಂತ ಬಂಕಿಯರಸನು ನೀಡಿದ ಭೂದಾನವನ್ನು ಉಲ್ಲೇಖಿಸುತ್ತದೆ. ಈ ಶಾಸನವನ್ನು ಗುರುರಾಜ ಭಟ್ಟರು ಈ ವಂಶಕ್ಕೆ ಸೇರಿದ ಮೊದಲ ಶಿಲಾಶಾಸನವೆಂದು ಅಭಿಪ್ರಾಯಪಡುತ್ತಾರೆ. ಆದರೆ ಮೇಲೆ ಪ್ರಸ್ತಾಪಿಸಿದ ಇತ್ತೀಚೆಗೆ ದೊರೆತ ಶಾಸನದ ಕಾಲವು ೧೪೫೭ ಆಗಿದ್ದು, ಅದೇ ಅವರ ಮೊದಲ ಶಾಸನವೆಂದು ಹೇಳಬಹುದು. ಕ್ರಿ.ಶ. ೧೫೨೨ರಲ್ಲಿ ಹೊನ್ನ ಕಂಬಳಿ ಪಂಡರಿದೇವ ಒಡೆಯನು ಗುಡ್ಡೆದೇವರಿಗೆ ೨೦೭ ಮುಡಿ ಅಕ್ಕಿ ಬೆಳೆಯುವ ಭೂಮಿಯನ್ನು ಉಂಬಳಿ ಬಿಟ್ಟಿರುವ ಬಗ್ಗೆ ವಿವರಣೆ ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿರುವ ಇನ್ನೊಂದು ಶಾಸನದಲ್ಲಿ ಲಭ್ಯವಾಗುತ್ತದೆ.[13] ವಿಜಯನಗರ ಅರಸನಾದ ಸದಾಶಿವರಾಯನ ಕಾಲದಲ್ಲಿ ಕೆಳದಿ ಸದಾಶಿವ ನಾಯಕನು ಅರಗದ ೧೮ ಕಂಪನಾಗಳಲ್ಲಿ ಆಡಳಿತ ನಡೆಸುತ್ತಿದ್ದು, ಅವನ ಒಪ್ಪಿಗೆ ಪಡೆದು ಬಂಕಿಯರಸ ಮತ್ತು ಹೊನ್ನೆಯ ಕಂಬಳಿಯೊಡೆಯ ಶಂಕರ ದೇವಿಯಮ್ಮ ಎಂಬುವರು ಮುಂಗಿನಾಡು, ಕಬ್ಬುನಾಡು ಮತ್ತು ಹೊಸನಾಡು ಪ್ರದೇಶಗಳನ್ನು “ಕನಚಿ” ಎಂದು ವಿಭಜಿಸಿ ಕ್ರಿ.ಶ.೧೫೫೨ರಲ್ಲಿ ಕ್ರಮವಾಗಿ ಆಳುತ್ತಿದ್ದರೆಂದು ಶಾಸನಗಳಲ್ಲಿ ಉಲ್ಲೇಖಗಳಿವೆ.[14] ಕ್ರಿ.ಶ.೧೫೬೦ರಲ್ಲಿ ಹೊನ್ನ ಕಂಬಳಿ ಬಂಕಿ ಒಡೆಯನು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ೪೦ ಮುಡಿ ಭತ್ತ ಬೆಳೆಯುವ ಗದ್ದೆಯನ್ನು ಉಂಬಳಿ ಬಿಟ್ಟಿದ್ದಾನೆಂದು ಅದೇ ದೇವಸ್ಥಾನದಲ್ಲಿರುವ ಶಾಸನದಿಂದ ತಿಳಿಯಬಹುದು.[15]ಕ್ರಿ.ಶ.೧೫೭೦ರ ಶಾಸನದಲ್ಲಿ ಹೊನ್ನೆಯ ಕಂಬಳಿ ಒಡೆಯನಾದ ಬಂಕಿಯರಸು ಹಲಸನಾಡು ಸೀಮೆಗೆ ಒಳಪಟ್ಟ ಬಸ್ರೂರಿನ ಶಂಕರನಾರಾಯಣ ಭಟ್ಟನಿಗೆ ಸರ್ವಮಾನ್ಯ ದತ್ತಿಯನ್ನು ನೀಡಿದ ಉಲ್ಲೇಖವಿದೆ.[16] ಹಟ್ಟಿಯಂಗಡಿಯಲ್ಲಿ ದೊರೆತ ಕ್ರಿ.ಶ. ೧೫೭೪ರ ಶಾಸನವು ಇದೇ ಅರಸನು ಹಾರುನಾಡು ಸೀಮೆಯ ಗುಲುವಾಡಿ ಮತ್ತು ಕುದುಕುರಾ ಎಂಬ ಎರಡೂ ಗ್ರಾಮಗಳಲ್ಲಿನ ದೇವಾಲಯಕ್ಕೆ ಒಳಪಡುವ ಭೂಮಿಯಿಂದ ವಸೂಲಿಯಾಗುವ ಕಂದಾಯವನ್ನು ಹಟ್ಟಿಯಂಗಡಿಯ ಲೋಕನಾಥ ದೇವರಿಗೆ ಉಂಬಳಿಯಾಗಿ ಬಿಟ್ಟಿರುವ ಬಗ್ಗೆ ಉಲ್ಲೇಖವಿದೆ.[17] ಹಾರುನಾಡು ಸೀಮೆಯ ಜನಪ್ರತಿನಿಧಿಗಳು ಬಂಕಿಯರಸನ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ಇನ್ನೊಂದು ಶಾಸನ ಹೇಳುತ್ತದೆ.[18] ಇದಕ್ಕೆ ಪೂರಕವಾಗಿ ಇದೇ ಸೀಮೆಯಲ್ಲಿ ದೊರೆತ ಕ್ರಿ.ಶ. ೧೫೭೬ರ ಶಾಸವದಲ್ಲಿ ದುಗ್ಗಣ್ಣ ಕೊಂಗ ಮತ್ತು ತಿಮ್ಮಪ್ಪ ಕೊಂಗ ಇಬ್ಬರೂ ಅಣ್ಣತಮ್ಮಂದಿರು ಲೋಕನಾಥ ದೇವರಿಗೆ ನೀಡಿದ ಭೂದಾನವನ್ನು ಹೊನ್ನೆಯ ಕಂಬಳಿಯೊಡೆಯ ಬಂಕಿಯರಸನು ಒಪ್ಪಿಕೊಂಡನೆಂದು ಉಲ್ಲೇಖಿಸುತ್ತದೆ.[19] ಈ ಅಣ್ಣತಮ್ಮಂದಿರು ಆ ಭೂಮಿಯನ್ನು ತಮ್ಮ ಪೂರ್ವಜರಾದ ಹೊನ್ನಮ್ಮ ಸೆಟ್ಟಿಯಿಂದ ಪಡೆದಿದ್ದು ಹೊನ್ನಮ್ಮ ಸೆಟ್ಟಿಗೆ ಆ ಭೂಮಿ ಅವಳ ಅಜ್ಜ ಹಿರಿಯ ಹೊನ್ನೆಯ ಕಂಬಳಿ ಒಡೆಯ ಅಲಿಯಾಸ್ ಪ್ರಥಮ ಬಂಕಿಯರಸನಿಂದ ಬಂದಿದ್ದು, ಅವನು ಅದನ್ನು ಈಶ್ವರ ಅಡಿಪನಿಂದ ಖರೀದಿಸಿ ಕನ್ಯಾದಾನವಾಗಿ ನೀಡಿದ್ದನೆಂದು ಶಾಸನ ಹೇಳುತ್ತದೆ. (ಇಲ್ಲಿ ಉಲ್ಲೇಖಿಸಿದ ಹಿರಿಯ ಹೊನ್ನೆಯ ಕಂಬಳಿ ಒಡೆಯ ಅಲಿಯಾಸ್ ಬಂಕಿಯರಸನು ಕ್ರಿ.ಶ. ೧೪೮೨ರ ಶಾಸನದಲ್ಲಿ ಉಲ್ಲೇಖವಾಗುವವನೆ ಆಗಿರಬೇಕು).[20] ಇದರಿಂದ ಈ ಮನೆತನದವರು ಅಳಿಯಸಂತಾನ ಕಟ್ಟನ್ನು ಪಾಲಿಸುತ್ತಿದ್ದರೆಂಬುದು ಖಚಿತವಾಗುತ್ತದೆ. ಇನ್ನೊಂದು ಶಾಸನವು ಕೂಡ, ಲೋಕನಾಥ ದೇವರಿಗೆ ಬಂಕಿಯರಸನು ಅರಮನೆಯ ಗದ್ದೆಯನ್ನು ದಾನವಾಗಿ ನೀಡಿದ ಉಲ್ಲೇಖವಿದೆ.[21] ಆದರೆ ವಿಜಯನಗರದ ಆಳ್ವಿಕೆ ಕೊನೆಗೊಂಡು ಕೆಳದಿ ಅರಸರು ಪ್ರಬಲರಾದಾಗ ತುಳುನಾಡು ಇವರ ಆಳ್ವಿಕೆಗೆ ಒಳಪಟ್ಟಿತು. ಆಗ ಹೊನ್ನೆಯ ಕಂಬಳಿ ಅರಸರಿಗೆ ಸೇರಿದ್ದ ಪ್ರದೇಶಗಳೆಲ್ಲ ಕೆಳದಿ ರಾಜ್ಯಕ್ಕೆ ಸೇರಿದವು.

ಈ ಅರಸರು ತಮ್ಮ ಆಳ್ವಿಕೆಯುದ್ದಕ್ಕೂ ವಿಜಯನಗರ ಮತ್ತು ಕೆಳದಿ ಅರಸರೊಂದಿಗೆ ಸ್ನೇಹ – ಸೌಹಾರ್ದತೆಯಿಂದಲೇ ಇದ್ದರು. ಅವರ ಪ್ರತಿ ಶಾಸನಗಳಲ್ಲೂ ವಿಜಯ ನಗರವನ್ನು ಅಂದು ಆಳುತ್ತಿದ್ದ ಅರಸರ ಸ್ಮರಣೆಯೊಂದಿಗೆ ಕೆಳದಿಯರಸರ ನೆನಕೆಯೂ ಇರುತ್ತಿದ್ದುದು ಗಮನಾರ್ಹ. ‘ಪಡುವಣ ಸಮುದ್ರಾಧೀಶ್ವರ’ನೆಂದೇ ಪ್ರಸಿದ್ಧನಾದ ಸದಾಶಿವ ನಾಯಕ (ಕ್ರಿ.ಶ.೧೫೩೦ – ೬೬)ನಿಂದ ಹಿಡಿದು ರಾಮರಾಜ ನಾಯಕನ (ಕ್ರಿ.ಶ. ೧೫೮೦ – ೮೬) ವರೆಗೆ ಯಾವ ತೊಡಕುಗಳು ಇವರ ಮಧ್ಯೆ ಸುಳಿದಿರಲಿಲ್ಲ. ಹೊನ್ನ ಕಂಬಳಿಯರಸರು ಆಳರಸರ ಮೇಲೆ ದಂಡೆತ್ತಿ ಹೋದ ಬಗ್ಗೆಯಾಗಲಿ, ಪರಪೀಡಕರಾಗಿ ಪ್ರಜೆಗಳಿಗೆ ತೊಂದರೆ ಕೊಟ್ಟ ಬಗ್ಗೆಯಾಗಲೀ ದಾಖಲೆ ಇಲ್ಲ. ಈ ಅರಸರು ಸ್ನೇಹಪರರು, ಧರ್ಮನಿಷ್ಠರು ಎಂಬುದಕ್ಕೆ ದಾಖಲೆಗಳಿವೆ. ಉದಾ: ಹೊನ್ನೆಯ ಕಂಬಳಿಯರಸರು ಸುರಾಲುವಿನ ತೋಳಹರ ಅರಸು ಬಸ್ರೂರಿನಲ್ಲಿ ಕಟ್ಟಿಸಿದ ಕೋಟೆಯ ಮೇಲೆ ದಾಳಿ ನಡೆಸಿದಾಗ ಆ ಅರಸರ ಆಹ್ವಾನದ ಮೇರೆಗೆ ಸೈನ್ಯದೊಂದಿಗೆ ಹೋಗಿ ಓಡಿಸಿದವರು ಇದೇ ಹೊನ್ನ ಕಂಬಳಿಯವರು.

ಆದರೆ ಹೊನ್ನ ಕಂಬಳಿಯರಸರನ್ನು ನಿರ್ಲಕ್ಷಿಸಿ ಬಿದನೂರು ಕೋಟೆಯನ್ನು ಹಿಡಿದುಕೊಂಡು ನಿರುಂಕುಶನಾಗಿದ್ದ ಶಂಕರನಾರಾಯಣ ಭಟ್ಟನೆಂಬ ಮಂತ್ರಿಯಿಂದಾಗಿ ಹಿರಿಯ ವೆಂಕಟಪ್ಪ ನಾಯಕ ಹಾಗೂ ಹೊನ್ನೆಯ ಕಂಬಳಿಯರಸರ ನಡುವೆ ವಿರಸ ತಲೆದೋರಿತು. ಹಿರಿಯ ವೆಂಕಟಪ್ಪ ನಾಯಕನು ಮೊದಲು ಬಿದನೂರು ಕೋಟೆಯನ್ನು ಬಹು ಪ್ರಯಾಸದಿಂದ ಸುಮಾರು ಆರು ತಿಂಗಳ ಪರ್ಯಂತ ಹೋರಾಟ ನಡೆಸಿ ಕೈವಶ ಮಾಡಿಕೊಂಡು ಧೂರ್ತ ಮಂತ್ರಿಯನ್ನು ಬಂಧಿಸಿ ನಂತರ ಹೊನ್ನೆಯ ಕಂಬಳಿಯರಸನನ್ನು ಸೋಲಿಸಿದನು. ಈ ಘಟನೆಯು ಬಹುಶಃ ಬಂಗರ ದೊರೆ ನಾಲ್ಕನೆಯ ವೀರ ನರಸಿಂಹ ಲಕ್ಷ್ಮಪ್ಪರಸ ಹಾಗೂ ಆತನ ಪತ್ನಿ ಉಳ್ಳಾಲದ ಹಿರಿಯ ಅಬ್ಬಕ್ಕಳ ಆಹ್ವಾನದ ಮೇರೆಗೆ ಅವಳಿಗೆ ಸಹಾಯ ಮಾಡಲೆಂದು ಸೈನ್ಯ ಸಮೇತನಾಗಿ ಕರಾವಳಿಯೆಡೆಗೆ ದಂಡೆತ್ತಿ ಬಂದಾಗ ನಡೆದಿರಬಹುದಾಗಿದೆ. ಈ ದಾಳಿಯ ನಂತರ ಹೊಸಂಗಡಿಯು ಹೊನ್ನೆಯ ಕಂಬಳಿಯರಸರ ಕೈತಪ್ಪಿ ಕೆಳದಿ ನಾಯಕರ ಹಿಡಿತದಲ್ಲಿ ಬಂದಿತು.

ಸಾಮಾಜಿಕವಾಗಿ ಹೊನ್ನೆ ಕಂಬಳಿಯರಸರು ತಮ್ಮ ಸೀಮೆಯಲ್ಲಿರುವ ಮೂಲ ನಿವಾಸಿಗಳಾದ ಕುಡುಬಿ ಜನಾಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದು ಅವರು ಉಳಿದ ಜನಾಂಗಗಳಾದ ನಾಡವರು, ಬ್ರಾಹ್ಮಣರು, ದಾಸರು, ಗೊಲ್ಲರು, ಗಾಣಿಗರು, ಬೋವಿಗಳು, ಬಿಲ್ಲವರು, ಬಂಡಾರರು ಮತ್ತು ನಾಯಕರ ನಡುವೆ ಸಾಮರಸ್ಯ ನೆಲೆಗೊಳ್ಳುವಂತೆ ವ್ಯವಸ್ಥೆ ಮಾಡಿದ್ದರು. ಅವರವರ ಹಕ್ಕಿನ ಭೂಮಿಯನ್ನು ಯಾವ ವಿರೋಧವಿಲ್ಲದೆ ಅವರವರೇ ಸಾಗುವಳಿ ಮಾಡಿಕೊಂಡಿರಲು ಹಾಗೂ ಬೇರೆಯವರು ಅಡ್ಡಿ ಮಾಡದಂತೆ ಕಾನೂನು ಕ್ರಮವಿತ್ತು. ಒಂದು ವೇಳೆ ಭೂಮಿಯ ಅಥವಾ ಸ್ವತ್ತಿನ ಒಡೆಯನೊಬ್ಬ ಮಕ್ಕಳಿಲ್ಲದೆ ಸತ್ತು ಹೋದರೆ ಅದನ್ನು ಸರಕಾರಕ್ಕೆ ಸೇರಿಸಿಕೊಳ್ಳದೆ ಸದರಿಯವನಿಗೆ ಸಂಬಂಧಪಟ್ಟ ಆಸ್ತಿಯನ್ನು ಅದೇ ಗೋತ್ರದ ಉಳಿದವರಿಗೆ ಹಂಚಲಾಗುತ್ತಿತ್ತೆಂದು ಈ ಅರಸರ ಪ್ರಾಚೀನ ಶಾಸನವೊಂದು ಉಲ್ಲೇಖಿಸುತ್ತದೆ. ಸರ್ವಧರ್ಮ ಸಹಿಷ್ಣುಗಳಾದ ಇವರು, ಅನೇಕ ದೇವಸ್ಥಾನಗಳಿಗೆ ಧಾರಾಳ ಉಂಬಳಿಯನ್ನು ನೀಡಿದ್ದಲ್ಲದೆ ಪ್ರತಿ ವರ್ಷದ ಖರ್ಚಿಗೆ ಯಾವ ಅಡಚಣೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಜನರು ತಮಗೆ ನಿರ್ದಿಷ್ಟಪಡಿಸಲಾದ ಕೆಲಸವನ್ನು ಮಾಡಿಕೊಂಡಿದ್ದು ಸಮಾಜದಲ್ಲಿ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಸ್ನೇಹ ಜೀವನ ಸಾಗಿಸುತ್ತಿದ್ದರು. ಇವರಿಗೆ ತಕ್ಕಂತೆ ಅರಸರು ಹೊಂದಿಕೊಂಡಿದ್ದರು.

ಆರ್ಥಿಕ ಇತಿಹಾಸ:

ನೀರಾವರಿಗೆ ಅನುಕೂಲವಾಗಲೆಂದು ಹಲವಾರು ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟಿಸಲಾಗಿತ್ತು. ಇವುಗಳಲ್ಲಿ ಕೋಟೆಕೆರೆ ಸುಮಾರು ೧೫ ಎಕರೆ ವಿಸ್ತೀರ್ಣವುಳ್ಳ ಸಮೃದ್ಧ ನೀರಿರುವ ಕೆರೆ. ಕೋಟೆಕೆರೆ ತಮ್ಮನೆಂದೇ ಹೆಸರುವಾಸಿಯಾದ ಇನ್ನೊಂದು ಕೆರೆ ಸುಮಾರು ೧೦ ಎಕರೆ ವಿಸ್ತೀರ್ಣವುಳ್ಳದ್ದು, ಬಸಪ್ಪನ ಕೆರೆ ಸುಮಾರು ೬ ಎಕರೆ ವಿಸ್ತೀರ್ಣವುಳ್ಳದ್ದು. ಇದಲ್ಲದೆ ಅನೇಕ ಬಾವಿಗಳನ್ನು ತೋಡಿಸಿ ನೀರಾವರಿಗೆ ಅನುಕೂಲ ಕಲ್ಪಿಸಲಾಗಿತ್ತು ಇಂಥ ಕೆರೆ ಮತ್ತು ಬಾವಿಗಳ ಸಹಾಯದಿಂದ ಜಮೀನಿಗೆ ನೀರು ಹರಿದುಹೋಗುವ ವ್ಯವಸ್ಥೆಯನ್ನು ಆ ಕಾರಣಕ್ಕಾಗಿ ಅಂದಿನವರು ಮಾಡಿದ ಅಗೆತವನ್ನು ಇನ್ನೂ ಅಲ್ಲಲ್ಲಿ ಕಾಣಬಹುದಾಗಿದೆ. ಈ ವ್ಯವಸ್ಥೆಗಳು ಊರಿಗೆ ಮಾತ್ರ ಸೀಮಿತವಾಗಿರದೆ ಗಿರಿಕೋಟೆಗೂ ವಿಸ್ತರಿಸಿದ್ದವು ಎನ್ನುವುದು ಗಮನಾರ್ಹ.

ಹೊನ್ನೆ ಕಂಬಳಿಯರಸರ ರಾಜಧಾನಿ ಹೊಸಂಗಡಿಯಲ್ಲಿ ಅಂದಿನ ಅರಸರು ವ್ಯಾಪಾರ ವಹಿವಾಟಕ್ಕೆ ವಿಶೇಷ ಅವಕಾಶಗಳನ್ನು, ಸವಲತ್ತುಗಳನ್ನು ಒದಗಿಸುತ್ತಿದ್ದರೆಂಬುದಕ್ಕೆ ಅನೇಕ ಪುರಾವೆಗಳಿವೆ. ಮುಖ್ಯವಾಗಿ ಹೊಸಂಗಡಿಯು ಅಂದು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿಯ ಬೀಡಿಕೆಯೆಂಬ ಸ್ಥಳದಲ್ಲಿ ಹೇರು ಎತ್ತುಗಳು ನಿಲ್ಲುತ್ತಿದ್ದವು. ಇದು ಹೇರು ಎತ್ತಿನ ಹಾಗೂ ಎತ್ತಿನ ಗಾಡಿಗಳ ನಿಲುದಾಣವಾಗಿತ್ತು. ಹಂಚು, ಉಪ್ಪು, ಭತ್ತ ಇತ್ಯಾದಿ ವಸ್ತುಗಳನ್ನು ಗಂಗೊಳ್ಳಿ ಬಂದರಿನ ಮೂಲಕ ದೋಣಿಯ ಮೇಲೆ ಕಂಡ್ಲೂರಿಗೆ ಸಾಗಿಸಿ ಅಲ್ಲಿಂದ ಎತ್ತಿನ ಗಾಡಿಯಲ್ಲಿ ಹೊಸಂಗಡಿಗೆ ಬಂದು ಪುನಃ ಅಲ್ಲಿಂದ ಹೇರು ಎತ್ತಿನ ಮೇಲೆ ‘ಹೇರು ಎತ್ತಿನ ದಾರಿ’ಯನ್ನು ಬಳಸಿ ಘಟ್ಟದ ಮೇಲಕ್ಕೆ ಕಳುಹಿಸಲಾಗುತ್ತಿತ್ತು. ಈ ದಾರಿಯ ನಡುವೆ ಅಲ್ಲಲ್ಲಿ ಮಠಗಳಿದ್ದವು. ಹಸಿದು, ಬಾಯಾರಿ ಬಂದ ಪ್ರಯಾಣಿಕರಿಗೆ ಇವು ಆಶ್ರಯ ನೀಡುತ್ತಿದ್ದವು. ಇಂದಿಗೂ ಈ ಮಠಗಳಿದ್ದ ಸ್ಥಳಗಳನ್ನು ಕಾಣಬಹುದಾಗಿದೆ. ಅಂದಿನ ಅರಸರು ವ್ಯಾಪಾರ ವಹಿವಾಟಕ್ಕೆ ವಿಶೇಷ ಅವಕಾಶಗಳನ್ನು, ಸವಲತ್ತುಗಳನ್ನು ಒದಗಿಸುತ್ತಿದ್ದರೆಂಬುದಕ್ಕೆ ಇವು ಜ್ವಲಂತ ಸಾಕ್ಷಿಗಳು.

ಭದ್ರತಾ ನೆಲೆಗಳು ಮತ್ತು ನೆಲಕೋಟೆಗಳು:

ತಮ್ಮ ರಾಜಧಾನಿಯಾದ ಹೊಸಂಗಡಿಯನ್ನು ಹೊನ್ನೆ ಕಂಬಳಿಯರಸರು ಒಂದು ಸುಭದ್ರ ಸೇನಾ ನೆಲೆಯನ್ನಾಗಿ ಪರಿವರ್ತಿಸಿದ್ದರು ಎಂಬುದಕ್ಕೆ ಅಳಿದುಳಿದು ಆರು ಕೋಟೆಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಅವುಗಳಲ್ಲಿ ದೇವರಗುಡ್ಡೆ, ಕುಷ್ಟಪ್ಪನ ಬಾಗಿಲು, ಹುಲಿಕಲ್ ಬೆಟ್ಟ ಮತ್ತು ಮೆಟ್ಕಲ್‌ಗುಡ್ಡೆ ಮುಖ್ಯವಾಗಿ ಗಿರಿಕೋಟೆಗಳು.

ದೇವರಗುಡ್ಡೆ ಒಂದು ಶಿಖರವಾಗಿದ್ದು ಇದರ ತುದಿಯಲ್ಲಿ ಸುಮಾರು ಹತ್ತು ಎಕರೆಯಷ್ಟು ವಿಸ್ತಾರವಾದ ಫಲವತ್ತಾದ ಬಯಲು ಪ್ರದೇಶವಿದೆ. ಇದರ ಸುತ್ತಲೂ ಕೋಟೆಯನ್ನು ನಿರ್ಮಿಸಲಾಗಿತ್ತು. ಇದಕ್ಕೆ ನಿದರ್ಶನಗಳಿವೆ. ಅಲ್ಲಲ್ಲಿ ಬಾವಿಗಳು ಇರುವುದರಿಂದ ಫಲಭರಿತ ಭೂಮಿಯನ್ನು ಕೃಷಿಗೆ ಉಪಯೋಗಿಸಿರಬಹುದು ಎಂದು ಊಹಿಸಲಾಗಿದೆ. ಈ ಕೋಟೆ ಪಶ್ಚಿಮದಿಂದ ದಂಡೆತ್ತಿ ಬರಬಹುದಾದ ಶತ್ರುಗಳನ್ನು ತಡೆಗಟ್ಟಲು ಮೊದಲನೇ ರಕ್ಷಣಾ ವ್ಯೂಹವಾಗಿರಬೇಕೆಂದು ಊಹಿಸಬಹುದು?

ಸುಮಾರು ಹತ್ತು ಎಕರೆಯಷ್ಟು ವಿಸ್ತೀರ್ಣವಾಗಿರುವ ಕುಷ್ಟಪ್ಪನ ಬಾಗಿಲು ಎಂಬ ಇನ್ನೊಂದು ಕೋಟೆ ಹೊಸಂಗಡಿಯ ಪೂರ್ವಕ್ಕಿರುವ ತುಂಬಿಕಾನು ಎಂಬ ದಟ್ಟ ಅರಣ್ಯದೊಂದಿಗೆ ಇಂದು ವಿಲೀನಗೊಂಡಿದೆ. ಈ ದುರ್ಗವು ಹೊಸಂಗಡಿಯಿಂದ ಸುಮಾರು ೫ ಕಿ.ಮೀ ದೂರದಲ್ಲಿದ್ದು ಘಟ್ಟದ ಮೇಲಿಂದ ಅಂದರೆ ಶಿವಮೊಗ್ಗ ಕಡೆಯಿಂದ ಬರುವ ವೈರಿಗಳ ದಾಳಿಯನ್ನು ಯಶಸ್ವಿಯಾಗಿ ಎದುರಿಸಲು ಕಟ್ಟಲಾಗಿರಬಹುದು. ಜೊತೆಗೆ ಹೊನ್ನ ಕಂಬಳಿ ಅರಸರಿಗೆ ಇದೊಂದು ಕೇವಲ ರಕ್ಷಣಾಕೋಟೆಯಾಗಿರದೆ ಪ್ರಧಾನ ಸುಂಕದ ಕಟ್ಟೆಯೂ ಆಗಿತ್ತು. ಘಟ್ಟದ ಮೇಲಿಂದ ಹೇರು ಎತ್ತಿನ ದಾರಿಯಿಂದಲೇ ಇಲ್ಲಿಗೆ ಸಾಮಾನು ಸರಂಜಾಮುಗಳು ಸಾಗಾಟವಾಗುತ್ತಿತ್ತು. ಇಂತಹ ವಸ್ತುಗಳ ಮೇಲೆ ಸುಂಕವನ್ನು ಹೇರುವ ಪದ್ಧತಿ ಇದ್ದಿರಬಹುದು. ಏಕೆಂದರೆ ಬ್ರಿಟಿಷರ ಕಾಲದಲ್ಲಿ ಕುಷ್ಟಪ್ಪನ ಬಾಗಿಲು ಸುಂಕದ ಕಟ್ಟೆಯಾಗಿತ್ತು ಎಂಬುದನ್ನು ಲಿಖಿತ ಬರಹಗಳಿಂದ ತಿಳಿಯಬಹುದು. ಕೋಟೆಗೆ ಹೆಬ್ಬಾಗಿಲೂ ಇತ್ತೆಂಬುದಕ್ಕೆ ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ಬಾಗಿಲಿನ ದಕ್ಷಿಣಕ್ಕೆ ಕೆಂಪು ಕಲ್ಲಿನಿಂದ ಕಟ್ಟಲಾದ ಉತ್ತರಾಭಿಮುಖವಾದ ದೇವಸ್ಥಾನವಿದೆ. ಇಲ್ಲಿ ಈಗ ದೇವಮೂರ್ತಿ ಇಲ್ಲದಿದ್ದರೂ ಜನರು ಇದು ವೀರಭದ್ರ ಅಥವಾ ಆಂಜನೇಯನ ದೇವಸ್ಥಾನವಾಗಿರಬಹುದೆಂದು ಹೇಳುತ್ತಾರೆ. ಹತ್ತಿರದಲ್ಲಿ ಪ್ರತ್ಯೇಕ ಬಾವಿ ಮತ್ತು ೧೫x೨೫ ಸ್ಕ್ವೇರ್ ಫೀಟ್ ವಿಸ್ತೀರ್ಣದ ಕೆರೆಯೂ ಇದೆ. ಈ ಎಲ್ಲಾ ಅವಶೇಷಗಳಿಂದ, ಹೊನ್ನೆ ಕಂಬಳಿ ಅರಸರ ಕಾಲದಲ್ಲಿ ಇದೊಂದು ಸುಸಜ್ಜಿತ ಆಯಕಟ್ಟಿನ ಸ್ಥಳವಾಗಿದ್ದು ಇಲ್ಲಿಯ ದೇವಾಲಯದಲ್ಲಿ ಪೂಜೆ – ಪುನಸ್ಕಾರಗಳು ವೈಭವದಿಂದ ನಡೆಯುತ್ತಿದ್ದಿರಬೇಕು.

ಮೆಟ್ಕಲ್ ಗುಡ್ಡೆಯಲ್ಲಿರುವ ಕೋಟೆಯು ಅಂದಿನ ಅರಸರ ವೀಕ್ಷಣಾಸ್ಥಳವೂ ಆಗಿರಬಹುದು. ಇಲ್ಲಿಂದ ಅನತಿ ದೂರದ ಕಡಲತೀರ, ಕುಂದಾಪುರ, ಗಂಗೊಳ್ಳಿ, ಕಂಡ್ಲೂರು, ಶಂಕರನಾರಾಯಣ, ಸಿದ್ಧಾಪುರ, ಹಟ್ಟಿಯಂಗಡಿ, ತೊಂಬಟ್ಟು ಇತ್ಯಾದಿಯಾಗಿ ತಾವು ಆಳುವ ಎಲ್ಲ ಪ್ರದೇಶಗಳನ್ನು ಸುಲಭದಲ್ಲಿ ನೋಡಬಹುದಾಗಿತ್ತು.

ನೆಲೆಕೋಟೆಗಳಲ್ಲಿ – ಕೋಟೆಕೆರೆ ಮತ್ತು ಮುತ್ತಿನಕಟ್ಟೆ ಮುಖ್ಯವಾದವುಗಳು. ಕೋಟೆಕೆರೆ ಎಂಬ ಕೋಟೆಯ ಬದಿಯಲ್ಲೇ ಸುಮಾರು ೧೫ ಎಕರೆಯಷ್ಟು ವಿಶಾಲವಾದ ಕೆರೆಯಿರುವುದರಿಂದ ಈ ಕೋಟೆಗೆ ಕೋಟೆಕೆರೆಯಂತಲೇ ಕರೆಯುತ್ತಾರೆ. ಇದೊಂದು ಹತ್ತು ಎಕರೆಯಷ್ಟು ವಿಸ್ತಾರವಾದ ನೆಲಕೋಟೆ. ಹೊನ್ನಕಂಬಳಿ ಅರಸರ ಖಾಸಾ ಭದ್ರಕೋಟೆ ಇದಾಗಿತ್ತು. ಇಲ್ಲಿಯೇ ರಾಜಧಾನಿಗೆ ಸಂಬಂಧಪಟ್ಟ ಟಂಕಸಾಲೆ, ದಾಖಲೆಪತ್ರ ಹಾಗೂ ಇನ್ನಿತರ ಪ್ರಮುಖ ವಿಷಯಗಳ ಕೇಂದ್ರವಿತ್ತು. ಇದು ಅರಮನೆ, ಕೆರೆ, ಬಾವಿ ಹಾಗೂ ಸುತ್ತಲೂ ಕಾವಲು ಬುರುಜುಳ್ಳ ಕೋಟೆಯಾಗಿದ್ದು ಆಳವಾದ ಕಂದಕವನ್ನು ಆವರಿಸಿದೆ. ಕೋಟೆಯ ಹೊರಗೆ ಇರುವ ಕೆರೆಯಿಂದಲೇ ಸುತ್ತಲಿನ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿತ್ತು. ಮುತ್ತಿನ ಕಟ್ಟೆಯು ಇನ್ನೊಂದು ನೆಲಕೋಟೆಯಗಿತ್ತು. ಇಲ್ಲಿ ಮೊದಲು ಮುತ್ತಿನ ಮಾರಾಟ ಮಾಡಲಾಗುತ್ತಿತ್ತಾದ್ದರಿಂದ ಇದು ಮುತ್ತಿನಕಟ್ಟೆ ಎಂಬುದು ಐತಿಹ್ಯ. ಮುತ್ತು ಮಾರುತ್ತಿದ್ದರೆಂದು ಹೇಳಲಾಗುವ ಏಳು ಕಟ್ಟೆಗಳನ್ನು ನೀವಿಲ್ಲಿ ಕಾಣಬಹುದು. ಈ ಸ್ಥಳ ಘಟ್ಟದ ಮೇಲಿಂದ ಬರುವ ವ್ಯಾಪಾರದ ಸರಕುಗಳನ್ನು ಕೂಡಿಡುವ ಗೋದಾಮಾಗಿಯೂ ಕೆಲಸ ನಿರ್ವಹಿಸುತ್ತಿತ್ತೆಂದು ಕಾಣುತ್ತದೆ.

ಒಟ್ಟಿನಲ್ಲಿ ಈ ಅರಸು ಮನೆತನದ ರಾಜರು ಕೆಲವು ಸೀಮಿತ ಪ್ರದೇಶಗಳಲ್ಲಿ ಆಡಳಿತ ನಡೆಸಿದ್ದರೂ ಕೂಡ, ತಮ್ಮ ವ್ಯಾಪ್ತಿಗೆ ಬರುವ ಭಾಗಗಳಲ್ಲಿ ಸಮರ್ಪಕವಾಗಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬಂದಿದ್ದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇವರ ಆಡಳಿತ ನೀತಿಯಲ್ಲಿ ಏನೂ ಬದಲಾವಣೆಗಳು ಕಂಡುಬಾರದೆ ಇದ್ದರೂ, ಗಿರಿಶಿಖರಗಳನ್ನೊಳಗೊಂಡು ತಮ್ಮ ರಾಜ್ಯದೊಳಗೆ ರಾಜಕೀಯ ಐಕ್ಯ, ಸಾಮಾಜಿಕ ಭದ್ರತೆ, ಆರ್ಥಿಕ ಬೆಳವಣಿಗೆ ಮತ್ತು ಧಾರ್ಮಿಕ ರೀತಿ ರಿವಾಜುಗಳನ್ನು ಯಾವುದೇ ಅಡಚಣೆಗಳಿಲ್ಲದೆ ನಡೆಸಿಕೊಂಡು ಬಂದಿದ್ದರು.

– ಡಾ| ಬಿ. ಉದಯ*

 

[1] ಈ ಅರಸರ ಬಗ್ಗೆ ಮಾಹಿತಿಗಾಗಿ, ನೋಡಿ : Aigal, Ganapati Rao, Dakshina Kannada Jilleya Prachina Itihasa, Mangalore (1927); Saletore, B.A., Ancient Karnataka – History of Tuluva, Poona (1936); Ramesh, K.V., A History of South Kanara; Dharwar (1970); Gururaja Bhatt P., Studies in Tuluva History and culture, ಮಣಿಪಾಲ (೧೯೭೫).

[2] Aigal, Ganpathi, Op.Cit.

[3] B. Vasantha Shetty, “Some new facts about the Early History of the Honneya Kambalis of Dakshina Kannada’, Quarterly Journal of Mythic Society, Vo. LXXVI, July=December, 1985, PP. 389 – 392.

[4] Gururaja Bhatt P., Op.Cit. P. 106.

[5] ವಸಂತ ಶೆಟ್ಟಿಯವರು ಈ ವಂಶಕ್ಕೆ ಸೇರಿದ ಒಂದು ಹೊಸ ಶಾಸನವನ್ನು ಗುರುತಿಸಿ ಅವರ ರಾಜಕೀಯ ಇತಿಹಾಸದ ಆರಂಭದ ಬಗ್ಗೆ ವಿವರಣೆ ನೀಡುತ್ತಾರೆ. B. Vasantha Shetty. Op.Cit.

[6] ಶ್ರೀ ಕ್ಷೇತ್ರ ಕೊಲ್ಲೂರು – Appendix, PP. 16 – 17.

[7] A.R.No. 403 for 1927 – ’28; SII, Vol. IX, Part II No. 470.

[8] Gururaja Bhatt. Op.Cit., Foot Note No. 5, P. 106.

[9] A.R. No. 286 for 1931 – ’32.

[10] Sri Kshetra Kolluru, Op.Cit.

[11] B. Vasantha Shetty, Op.Cit.

[12] A.R.No. 403 for 1927 – ’28; SII Vol. IX, Part II No.470.

[13] Topographical list of Inscriptions in Madras Presidency, Vol. 2, P.852, No.53.

[14] E.C., Vol. VIII Nagas.5.

[15] A.R.No. 403, 1927 – ’28

[16] A.R.No. 564, 1927 – ’28

[17] Ibid. No. 558, 1929 – ’30

[18] Ibid. No. 559, 1929 – ’30

[19] Ibid. No. 563, 1929 – ’30

[20] Ibid. No. 403, 1929 – ’30; SII, Vol. IX, Part 2, No.470.

[21] Ibid. No. 561 for 1929 – ’30

* ಹಿರಿಯ ಉಪನ್ಯಾಸಕರು, ಇತಿಹಾಸ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ – ೫೭೪ ೧೯೯. ದ.ಕ.