೯) ಕ್ರಿ.ಶ. ೧೬೪೦ರ ಒಂದು ಶಾಸನ ಪ್ರಕಾರ ಚೌಟ ಮನೆತನಕ್ಕೆ ಸೇರಿದ್ದ ಚಿಕ್ಕರಾಜ ಒಡೆಯ ಎಂಬ ಅರಸನು ಪುತ್ತಿಗೆಯಿಂದ ಆಳುತ್ತಿದ್ದ. ಇವನು ಚಿಕ್ಕದೇವರಸನ ಸೋದರಳಿಯನಾಗಿರಬೇಕು. ಕ್ರಿ.ಶ. ೧೬೦೦ – ೧೬೪೦ರ ಮಧ್ಯೆ ಯಾರು ಆಳಿಕೊಂಡಿದ್ದರೆಂಬುದು ತಿಳಿದಿಲ್ಲ. ಆದರೆ ಇವನು ಕ್ರಿ.ಶ. ೧೬೮೭ರಿಂದ ಕ್ರಿ.ಶ. ೧೭೧೫ರ ತನಕ ಆಳುತ್ತಿದ್ದನೆಂದು, ಐಗಳ್‌ರವರು ತಿಳಿಸಿರುವುದು ಸರಿಯಲ್ಲವೆಂಬುದು ಡಾ| ಗುರುರಾಜ ಭಟ್ಟರ ಅಭಿಪ್ರಾಯ. ಅಲ್ಲದೇ ಚೌಟ ಮನೆತನದ ನಂತರದ ಚರಿತ್ರೆ ಬರೆಯಲು ಮೂಲಧಾರಗಳ ತೀವ್ರ ಕೊತೆಯಿರುವುದರಿಂದ ಆ ವಂಶದ ಕುರಿತು ನಿಖರವಾದ ಸ್ಪಷ್ಟ ಮಾಹಿತಿ ನೀಡುವುದು ಕಷ್ಟಕರವಾಗಿದೆಯೆಂದು ಡಾ| ಗುರುರಾಜ ಭಟ್ಟರು ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಚೌಟ ವಂಶವು ಪುತ್ತಿಗೆಯಲ್ಲಿ ಯಾವಾಗ ಅಧಿಕಾರಕ್ಕೆ ಬಂತು? ಅಲ್ಲದೇ ಈ ಮನೆತನವು ಉಳ್ಳಾಲವನ್ನು ತನ್ನ ಪ್ರಥಮ ರಾಜಕೀಯ ಕೇಂದ್ರವನ್ನಾಗಿಸಿತು ಎಂದು ಸಾಂಪ್ರದಾಯಿಕ ಮೂಲಗಳು ಹೇಳಿರುವುದನ್ನು ಸ್ಥಿರೀಕರಿಸಲು ಸರಿಯಾದ ಯಾವುದೇ ದಾಖಳೆಯಾಧಾರಗಳು ಅಲಭ್ಯವೆಂದು ಡಾ| ಗುರುರಾಜ ಭಟ್ಟರು ಹೇಳಿದ್ದಾರೆ. ಕ್ರಿ.ಶ. ೧೪೨೯ರ ಮೂಡಬಿದರೆಯ ಒಂದು ಶಾಸನವು ಅಲ್ಲಿ ಕಟ್ಟಲಾಗಿರುವ ತ್ರಿಭುವನ ಚೂಡಾಮನಿ ಎಂಬ ಜಿನಚೈತ್ಯಾಲಯದ ಬಗ್ಗೆ ತಿಳಿಸುತ್ತದೆ. ಇದನ್ನು ಕಟ್ಟಲಾಗಿರುವ ಕ್ಷೇತ್ರ(ಸ್ಥಳ)ವನ್ನು ಅಭಿನವ ಚಾರುಕೀರ್ತಿ ಪಂಡಿತದೇವರಿಗೆ ಸಲಿಕೆನಾಡಿನ ಚೌಟರು ಮತ್ತು ಇತರ ೬ ಬಳ್ಳಾಲರು ದಾನ ನೀಡಿದರು ಎಂದು ಈ ಶಾಸನದಿಂದ ತಿಳಿಯುತ್ತದೆ. ಸಲಿಕೆನಾಡು ಅಂದರೆ ಚೌಟರು ಆಳುತ್ತಿದ್ದ ಪುತ್ತಿಗೆ ಸೀಮೆ. ಅದೇ ಮೂಡಬಿದರೆಯಲ್ಲಿ ಸಿಕ್ಕಿದ ಹೊಯ್ಸಳ ರಾಜ ವೀರ ಬಳ್ಳಾಲ IIIನ ಅಳ್ವಿಕೆ ಕಾಲಕ್ಕೆ ಸೇರಿದ ಕ್ರಿ.ಶ. ೧೩೪೧ರ ಇನ್ನೊಂದು ಶಾಸನವು ವೀರ ಬಳ್ಳಾಲದೇವ (ವೀರನರಸಿಂಹನ ಮಗ) ನ ಸಮ್ಮುಖದಲ್ಲಿ ಹೊರಡಿಸಿದ ಒಂದು ಆಜ್ಞೆಯ ಬಗ್ಗೆ ತಿಳಿಸುತ್ತದೆ. ಇದು ವೀರ ಬಳ್ಳಾಲದೇವನು ಒಬ್ಬ ಸ್ವತಂತ್ರರಾಜ ಮತ್ತು ಅವನ ದಂಡನಾಯಕ, ಅತಿಕಾರಿ ದೇವಟಿ ಆಳುವ, ಸಲಿಕೆಯ ೬ ಬಳ್ಳಾಲರು, ಮೂಡಬಿದರೆಯ ೮ ಸೆಟ್ಟಿಗಾರರ ಬಗ್ಗೆ ತಿಳಿಸುತ್ತದೆ. ಆದರೆ ಇದು ಚೌಟ ಅರಸರ ಬಗ್ಗೆ ಏನೂ ತಿಳಿಸುವುದಿಲ್ಲ. ಅಂದರೆ ಕ್ರಿ.ಶ. ೧೩೪೧ರಲ್ಲಿ ಈ ಶಾಸನವನ್ನು ಹೊರಡಿಸಿದಾಗ ಚೌಟರು ಇನ್ನು ಕೂಡ ಪುತ್ತಿಗೆಯಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲವೆಂದು ಇದರ ಆಧಾರದಲ್ಲಿ ಊಹಿಸಬಹುದೆಂದು ಡಾ| ಗುರುರಾಜ ಭಟ್ಟರು ಹೇಳಿದ್ದಾರೆ. ಚೌಟರು ಕ್ರಿ.ಶ. ೧೩೦೦ರ ನಂತರವಷ್ಟೇ ಪುತ್ತಿಗೆಯಲ್ಲಿ ಅಧಿಕಾರ ಹಿಡಿದರು. ೧೪ನೇ ಶತಮಾನದ ಕೊನೆಭಾಗದಲ್ಲಿ ಆಳಿದ ಈ ವಂಶದ ಪ್ರಥಮ ಅರಸನೆಂದು ಶಾಸನಾಧಾರಗಳಿಂದ ನಿರೂಪಿಸಲ್ಪಟ್ಟ ವಿಕ್ರು ಚೌಟನ ಹಿಂದೇ, ಆ ಮನೆತನಕ್ಕೆ ಸೇರಿದವರು ನಿಧಾನವಾಗಿ ಅಧಿಕಾರ ಹಿಡಿಯಲು ಪ್ರಯತ್ನಿಸಿದರು. ಆದರೆ ಪುತ್ತಿಗೆಯ ಚೌಟರಲ್ಲಿ ವಿಕ್ರು ಚೌಟನೇ ಸಿಂಹಾಸನವನ್ನೇರಿದ ಪ್ರಥಮ ಅರಸ. ಈ ಹಿನ್ನೆಲೆಯಲ್ಲಿ ಪುತ್ತಿಗೆ – ಮೂಡಬಿದರೆಯ ಚೌಟ ಅರಸರ ವಂಶಾವಳಿಯನ್ನು ಈ ಕೆಳಗಿನಂತೆ ಮರುಪರಿಷ್ಕರಿಸಬೇಕಾದ ಅಗತ್ಯವಿದೆ ಎಂದು ಡಾ| ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ.

19_264_TKAM-KUH ಚೌಟರ ರಾಜಕೀಯ ವಿಚಾರಗಳಿಗೆ ಸಂಬಂಧಪಟ್ಟು ಸಂಪ್ರದಾಯ, ಪರಂಪರೆ ಮತ್ತು ಅವರ ಕೈಫಿಯತ್ತುನಲ್ಲಿ ಸಿಗುವ ಮಾಹಿತಿಗೂ, ಶಾಸನಗಳಿಂದ ಸಿಗುವ ಮಾಹಿತಿಗೂ ತಾಳೆಯಾಗದೆ ಇರುವ ಸಂದರ್ಭವಿದೆ. ಆದರೆ ಇವೆರಡು ಮೂಲಗಳಿಂದ ಸಿಗುವ ಹಲವೊಂದು ವಿಚಾರಗಳಲ್ಲಿ ಸಾಮ್ಯ ಕೂಡ ಇದೆ. ಈ ಹಿನ್ನೆಲೆಯಲ್ಲಿ ಕೈಫಿಯತ್ತುನಲ್ಲಿ ಕಂಡುಬರುವ ವಿಚಾರಗಳನ್ನು ಸಂಪೂರ್ಣವಾಗಿ ತಳ್ಳೀ ಹಾಕುವುದು ತಪ್ಪು. ಉಳ್ಳಾಲ – ಸೋಮೇಶ್ವರದಲ್ಲಿ ಈಗಲೂ ಸೋಮನಾಥೇಶ್ವರ ದೇವಸ್ಥಾನದವಿದೆ. ಉಳ್ಳಾಲ ಸಮೀಪದ ತೊಕ್ಕೊಟ್ಟಿನಲ್ಲಿ ಚೌಟರ ಅರಮನೆಯ ಅವಶೇಷವನ್ನು ತಾನು ಸ್ವತಹ ಕಂಡಿದ್ದೇನೆಂದು ಶ್ರೀ ಐಗಳ್‌ರವರು ಹೇಳಿದ್ದಾರೆ. ಅಂದರೆ ಒಂದು ಕಾಲದಲ್ಲಿ ಉಳ್ಳಾಲವು ಚೌಟ ವಂಶದ ರಾಜಧಾನಿಯಾಗಿತ್ತು ಎಂಬುದು ಮಾತ್ರ ಸತ್ಯ. ಆದರೆ ಪುತ್ತಿಗೆಯಲ್ಲಿ ಪ್ರಾರಂಭವಾದ ಈ ವಂಶದ ಆಳ್ವಿಕೆ ನಂತರ ಉಳ್ಳಾಲಕ್ಕೆ ವಿಸ್ತರಿಸಿತೋ? ಅಥವಾ ಉಳ್ಳಾಲದಿಂದ ನಂತರ ಪುತ್ತಿಗೆಗೆ ಹೋದರೋ? ಎಂಬುದನ್ನು ಮಾತ್ರ ತಿಳಿಯಬೇಕಾಗಿದೆ. ಆದರೆ ಪುತ್ತಿಗೆಯಿಂದ ತಮ್ಮ ಅಧಿಕಾರ ಕೇಂದ್ರವನ್ನು ಅವರು ನಂತರ ಮೂಡಬಿದರೆಗೆ ಸ್ಥಳಾಂತರಿಸಿರುವುದು ಈಗಾಗಲೇ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಆರಂಭದಲ್ಲಿ ಚೌಟ ವಂಶದ ಸ್ಥಾಪನೆಯಾದಾಗ ಅವರು ಉಳ್ಳಾಲ – ಸೋಮೇಶ್ವರದಿಂದಲೇ ಆಳುತ್ತಿದ್ದಿರಬೇಕು. ಆದರೆ ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ನೆರೆಹೊರೆಯ ಅರಸರೊಂದಿಗೆ ಸಂಬಂಧ:

ಸ್ಥಳೀಯ ಸುತ್ತಮುತ್ತಲ ಪ್ರಾಂತ್ಯಗಳನ್ನು ಆಳುತ್ತಿದ್ದ ಅರಸರೊಂದಿಗೆ ಚೌಟ ಅರಸರ ಸಂಬಂಧದ ಮೇಲೆ ಬೆಳಕು ಚೆಲ್ಲುವ ಕೆಲವು ಶಾಸನಾಧಾರಗಳು ಇವೆಯೆಂದು ಡಾ| ಗುರುರಾಜ ಭಟ್ಟರು ಹೇಳಿದ್ದಾರೆ. ಕ್ರಿ.ಶ. ೧೫೧೨ – ೧೫೧೩ರ ಒಂದು ಶಿಲಾಶಾಸನದ ಪ್ರಕಾರ, ಚೌಟ ಅರಸರು, ಕಾರ್ಕಳದ ಭೈರರಸರವನ್ನು ತಮ್ಮ ವೈರಿಗಳೆಂದು ಪರಿಗಣಿಸಿದ್ದರು. ಕಾರ್ಕಳದ ಭೈರರಸರು ತಮ್ಮ ಮೇಲೆ ದಾಳಿ ಮಾಡಿದರೆ ತಾವೆಲ್ಲ ಒಟ್ಟಾಗಿ ಪ್ರತೀಕಾರ ತೆಗೆದುಕೊಳ್ಳಬೇಕೆಂದು ಪುತ್ತಿಗೆ, ಎಲ್ಲೂರು ಮತ್ತು ಐಕಳದ ಅರಸರು ಒಂದು ಒಪ್ಪಂದವನ್ನು ಮಾಡಿಕೊಂಡಿದ್ದರೆಂದು ಈ ಶಾಸನ ತಿಳಿಸುತ್ತದೆ. ಈ ಪರಸ್ಪರ ಶಾಂತಿ ಒಪ್ಪಂದ ಪ್ರಕಾರ ತಮ್ಮಮಧ್ಯೆ ಯಾವುದೇ ಆಂತರಿಕ ಕಲಹ ಉದ್ಭವಿಸದಂತೆ ನೋಡಿಕೊಳ್ಳಬೇಕು ಅಲ್ಲದೇ ಹೊರಗಿನ ವೈರಿ, ಮೂವರಲ್ಲಿ ಯಾರೊಬ್ಬನ ಮೇಲಾದರೂ ದಾಳಿ ಮಾಡಿದರೆ ಪ್ರತಿಯೊಬ್ಬನು ಸ್ವಂತವಾಗಿ ಆಯುಧ ಸಂಗ್ರಹಿಸಿ ವೈರಿಯ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕೆಂದು ಒಪ್ಪಂದವಾಗಿತ್ತೆಂದು ಈ ಶಾಸನ (ಎಸ್‌.ಐ.ಐ. ಸಂಪುಟ VII ನಂಬ್ರ ೨೨೮) ತಿಳೀಸುತ್ತದೆ.

[1]

ಕ್ರಿ.ಶ. ೧೫೨೮ನೆ ಇಸವಿಯಲ್ಲಿ ಹೊರಡಿಸಿದ ಮಂಗಳೂರು ತಾಲೂಕಿನ ಸುಜೇರು ಶಾಸನವು ಚೌಟರು ಮತ್ತು ಬಂಗವಾಡಿಯ ಅರಸರ ಮಧ್ಯೆ ಆದ ಒ‌ಪ್ಪಂದದ ಬಗ್ಗೆ ತಿಳಿಸುತ್ತದೆ. ಕೃಷ್ಣಾನಂದ ಒಡೆಯ ಮತ್ತು ತಿರುಮಲರಸ ಅಲಿಯಾಸ್ ಕಿನ್ನಿಕಾ ಹೆಗ್ಗಡೆಯ ಶಿಷ್ಯನಾದ ವೇದಾನಂದ ಒಡೆಯನ ಮಧ್ಯಸ್ಥಿಕೆಯಲ್ಲಿ, ತುಳುವರಸ ಅಲಿಯಾಸ್ ಪುತ್ತಿಗೆಯ ಚೌಟ ಮತ್ತು ಅವನ ಹಿಂಬಾಲಕರಾದ ಅಲಿಸವೀರ ಮತ್ತು ಬಲಿಶವೀರನಿಗೂ, ಬಂಗಾಡಿಯ ವೀರ ನರಸಿಂಹ ಮತ್ತವನ ೫೦೦೦ ಹಿಂಬಾಲಕರಿಗೂ ಅವರವರ ಹಕ್ಕು ಮತ್ತು ಅಧಿಕಾರ ವ್ಯಾಪ್ತಿಯನ್ನು ರ್ನಿಣಯಿಸಿ ಒಂದು ಒಪಪಂದವಾಯಿತೆಂದು ಈ ಶಾಸನ ತಿಳಿಸುತ್ತದೆ.[2] ಆದರೆ ಬಂಗರು ಮತ್ತು ಚೌಟರ ಮಧ್ಯೆ ಕೆಲಕಾಲ ವೈರತ್ವವಿದ್ದು, ನಂತರ ರಾಜಕೀಯ ಒಪ್ಪಂದವೊಂದರ ಮೂಲಕ ಅದನ್ನು ನಿವಾರಿಸಿಕೊಂಡರೆಂಬುದು ಈ ಮೂಲಕ ತಿಳಿದು ಬರುತ್ತದೆ.

ತುಳುವರಸ ಚೌಟನು ಈ ಒಪ್ಪಂದಕ್ಕೆ ಸಹಿಹಾಕಿದ ಕೇವಲ ಒಂದು ವಾರದಲ್ಲಿ (ಮೇ ೧೪, ೧೫೨೮) ಕಿನ್ನಿಕ ಹೆಗ್ಗಡೆಯೊಂದಿಗೆ ಪರಸ್ಪ ಮಿಲಿಟರಿ ರಕ್ಷಣಾ ಒಪ್ಪಂದದ ಬಗ್ಗೆ ಇನ್ನೊಂದು ತಾಮ್ರಶಾಸನ ತಿಳಿಸುತ್ತದೆ.[3] ಅಂದರೆ ಪುತ್ತಿಗೆಯ ಚೌಟರು ಮತ್ತು ಮುಲ್ಕಿಯ ಸಾವಂತ ಅರಸರ ಮಧ್ಯೆ ಸ್ನೇಹಯುತ ಸಂಬಂಧ ಇತ್ತು ಎಂಬುದು ಇದರಿಂದ ತಿಳಿದು ಬರುತ್ತದೆ.

ಇನ್ನೆರಡು ತಾಮ್ರ ಶಾಸನಗಳು ಪುತ್ತಿಗೆಯ ಚೌಟರು ಮತ್ತು ಕಾರ್ಕಳದ ಭೈರರಸರ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲಿದೆ. ತಿರುಮಲರಸ ಚೌಟ ಮತ್ತು (ಕೆರವಾಸೆ) ಕಾರ್ಕಳದ ರಾಜ ಪಾಂಡ್ಯಪ್ಪರಸ ಒಡೆಯ, ಪರಸ್ಪರ ಸ್ನೇಹ, ಶಾಂತಿ ಮತ್ತು ರಕ್ಷಣಾ ಒಪ್ಪಂದವೊಂದಕ್ಕೆ (ಕ್ರಿ.ಶ. ೧೫೪೩) ಒಪ್ಪಿಕೊಂಡಿರುವ ಬಗ್ಗೆ ಒಂದು ಶಾಸನ ತಿಳಿಸುತ್ತದೆ. ಎರ್ಮಾಳ್‌ನ ನಡುಬಲಿ ಮಾರಮ್ಮ ಹೆಗ್ಗಡೆಯ ಸಮ್ಮುಖದಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಚಂದಲದೇವಿಯ ಮಗನಾದ ಪಾಂಡ್ಯಪ್ಪರಸ ಮತ್ತು ತಿರುಮಲರಸ ಚೌಟನಿಗೆ ಇದೇ ರೀತಿ ಮತ್ತೊಂದು ಒಪ್ಪಂದವಾಗಿದೆ ಎಂದು ಇನ್ನೊಂದು ಶಾಸನದಿಂದ ತಿಳಿದು ಬರುತ್ತದೆ.[4] ಅಂದರೆ ಬಹಳ ಕಾಲದ ವೈರತ್ವದ ನಂತರ ಪರಸ್ಪರ ಲಾಭಕ್ಕೋಸ್ಕರ ಪುತ್ತಿಗೆಯ ಚೌಟರು ಮತ್ತು ಕಾರ್ಕಳದ ಭೈರವರಸರು ಶಾಂತಿ, ಸ್ನೇಹ ಒಪ್ಪಂದವೊಂದಕ್ಕೆ ಬಂದಿರಬೇಕೆಂದು ಇದರಿಂದ ತಿಳಿದು ಬರುತ್ತದೆ.

ಕ್ರಿ.ಶ. ೧೪೧೦ರಲ್ಲಿ ನಂದಾವರದ ಬಂಗರಾಜನಿಗೂ, ನೀಲೇಶ್ವರದ ಮೂತರರಸನಿಗೂ ನಡೆದ ಯುದ್ಧದಲ್ಲಿ ಬಂಗರಾಜನು ಸೋತು ಹೋಗುವ ಪರಿಸ್ಥಿತಿ ಎದುರಾದಾಗ ೨ನೇ ಚನ್ನರಾಯ ಚೌಟನು, ಬಂಗರಾಜನಿಗೆ ಸಹಾಯ ನೀಡಿದುದ್ದರಿಂದ ಮೂತರರಸನು ಯುದ್ಧದಲ್ಲಿ ಸೋತು ಹೋದನು. ಈ ಸಹಾಯಕ್ಕಾಗಿ ಬಂಗರಾಜನು ತನ್ನರಾಜ್ಯದ ಮಣೇಲ, ಪೇಜಾವರ ಮತ್ತು ಮುಡುಕೂರು ಸೀಮೆಗಳನ್ನು ಚೌಟ ಅರಸನಿಗೆ ಬಿಟ್ಟು ಕೊಟ್ಟ ಎಂದು ಮಂಗಳೂರು ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಎಂಬಲ್ಲಿರುವ ೨ ಶಾಸನ (ಶಾ.ಶ. ೧೩೩೨) ಗಳಿಂದ ತಿಳಿದು ಬರುತ್ತದೆ.[5]

ನಂದಳಿಕೆ ದೇವಸ್ಥಾನದಲ್ಲಿರುವ ಒಂದು ತಾಮ್ರಶಾಸನ ಪ್ರಕಾರ (ಶಾ.ಶ.೧೪೫೦) ತಿರುಮಲರಾಯ ಚೌಟನಿಗೂ, ತಿರುಮಲರಸ ನಂದಳಿಕೆ ಕಿನ್ನಕ್ಕ ಹೆಗ್ಗಡೆಗೂ ಒಂದು ಕರಾರಾಗಿದ್ದು, ಬಂಗರು, ಭೈರರಸರು ಮತ್ತು ಎಲ್ಲೂರು ಕುಂದ ಹೆಗ್ಗಡೆಯ ವಿರುದ್ಧ ಸಂಯುಕ್ತವಾಗಿ ಹೋರಾಡಲು ಅವರಿಬ್ಬರು ಒಪ್ಪಂದ ಮಾಡಿಕೊಂಡಿದ್ದರೆಂಬುದು ಇದರಿಂದ ತಿಳಿದು ಬರುತ್ತದೆ ೨೨. ಕ್ರಿ.ಶ. ೧೬೦೮ರಲ್ಲಿ ೧ನೇ ಚಂದ್ರಶೇಖರ ಚಿಕ್ಕರಾಯ ಚೌಟನು, ಸುರಾಲ, ತೋಳಾರ ಮತ್ತು ಹೊಸಂಗಡಿಯ ಹೊನ್ನೆಯ ಕಂಬಳಿ ಅರಸರೊಂದಿಗೆ ಒಂದು ಒಪ್ಪಂದ ಮಾಡಿಕೊಂಡು, ಇಕ್ಕೇರಿಯ ವೆಂಕಟಪ್ಪ ನಾಯಕನ ಸಹಾಯದಿಂದ ಕಾರ್ಕಳದ ಧಾವಣಿ ಇಮ್ಮಡಿ ಭೈರವರಾಯನ ಮೇಲೆ ಯುದ್ಧಸಾರಿ ಅವನನ್ನು ಸೋಲಿಸಿದರು ಎಂದು ಕಂಡು ಬರುತ್ತದೆ. ಅಂದರೆ, ಅಂದಿನ ಸಮಕಾಲೀನ ತುಳುನಾಡಿನಲ್ಲಿ ಚೌಟ ಅರಸರು ಒಂದು ಗೌರವಯುತ ಸ್ಥಾನವನ್ನು ಹೊಂದಿದ್ದು ಅಂದಿನ ವಿವಿಧ ರಾಜಕೀಯ ಹೊಂದಾಣಿಕೆಗಳಲ್ಲಿ ಅಥವಾ ಒಪ್ಪಂದಗಳಲ್ಲಿ ಅವರ ಭಾಗಿಯಾಗಿದ್ದರು ಮತ್ತು ಸ್ಥಳೀಯ ಇತರ ತುಳುವರಸರು, ಚೌಟ ಅರಸರ ಸಹಾಯವನ್ನು ಅಪೇಕ್ಷಿಸುತ್ತಿದ್ದರು ಎಂಬುದು ಇದರಿಂದ ತಿಳಿಯುತ್ತದೆ.

ಚೌಟವಂಶದ ರಾಜಕೀಯೇತರ ಸಾಧನೆಗಳು:

ಚೌಟರ ಕಾಲದಲ್ಲಿ ಮೂಡಬಿದರೆಯು ಒಂದು ಪ್ರಮುಖ ಜೈನ ಕ್ಷೇತ್ರವಾಗಿ ಬೆಳೆದಿದೆ. ಇದು ಚೌಟರ ಸೀಮೆಯಲ್ಲಿದ್ದ ಪ್ರಮುಖ ನಗರ ಹಾಗೂ ಧಾರ್ಮಿಕ ಕೇಂದ್ರ. ಆದರೆ ಈ ನಗರದ ಮೇಲೆ ಚೌಟರಿಗೆ ಪೂರ್ಣ ಅಧಿಕಾರ ಇರಲಿಲ್ಲ. ಧಾರ್ಮಿಕ ಕಾರ್ಯಗಳಿಗಾಗಿ ಇಲ್ಲಿಗೆ ಬಂದು ಹೋಗಲು ಎಲ್ಲರಿಗೂ ಅನುಮತಿಯನ್ನು ವಿಜಯನಗರದ ಅರಸರು ನೀಡಿದ್ದರು. ಆದುದರಿಂದ ಇಲ್ಲಿ ಹಲವು ಹೊಸ ಬಸದಿಗಳ ನಿರ್ಮಾಣ ನಡೆಯಿತು. ಬಿಳಿಗಿ ಮತ್ತು ನಗಿರೆಯಂತಹ ರಾಜ್ಯಗಳಿಂದಲೂ ಅಲ್ಲಿನ ಅರಸರು ಬಂದು ಇಲ್ಲಿ ಧರ್ಮಕಾರ್ಯಗಳನ್ನು ಮಾಡಿದ ನಿದರ್ಶನಗಳಿವೆ. ತಮಗೆ ಸಿಕ್ಕಿದ ಮಿತ ಅವಕಾಶವನ್ನು ಉಪಯೋಗಿಸಿಕೊಂಡು ಚೌಟ ಅರಸರು ಇಲ್ಲಿ ಸಾಕಷ್ಟು ಧರ್ಮಕಾರ್ಯಗಳನ್ನು ಮಾಡಿದ್ದಾರೆ. ವಿಕ್ರು ಚೌಟನು ಮೂಡಬಿದರೆ ಗುರುಗಳ ಬಸದಿಯ ಚಂಡೋಗ್ರ ಪಾರ್ಶ್ವದೇವರ ಅರ್ಚನಾರ್ಥನಾಗಿ ಹಲವು ದಾನಗಳನ್ನು ಮಾಡಿರುತ್ತಾನೆ. ಅಲ್ಲದೇ ಈ ಬಸದಿಯ ಸೌಂದರ್ಯವನ್ನುಳಿಸಿಕೊಳ್ಳುವ ಸಲುವಾಗಿ ಈ ಬಸದಿಯ ಆವರಣದಲ್ಲಿ ಬೇರಾವುದೆ ಗುಡಿ ಕಟ್ಟಬಾರದೆಂಬ ಕಟ್ಟಳೆ ಮಾಡಿದ್ದಾನೆ (ಕ್ರಿ.ಶ. ೧೩೮೯). ಚೌಟರಾಜ ಶಾಂತೇಯನು ಮುನಿ ಕ್ರಿಯಾಶಕ್ತಿ ದೇನಿಗೆ ಹೊನ್ನಿನ ಕಾಣಿಕೆ ನೀಡಿದದಾನೆ. ಜೋಗಿ ಒಡೆಯ ಚೌಟನು (ಕ್ರಿ.ಶ. ೧೪೩೩) ಜುಗಾದಿ ಕುಂಡಲ ಎಂಬ ಜೋಗಿ ಪುರುಷನಿಗೆ ಭೂಮಿದಾನ ಮಾಡಿದ್ದಾನೆ. ಪೊಳಲ ದೇವಿ (ಪೊಳಲಿಯ ರಾಜರಾಜೇಶ್ವರಿ ದೇವಾಲಯ)ಯ ಪೂಜಾ ಕಾರ್ಯಗಳಿಗಾಗಿ ಮಂಜಣ್ಣಶೇಖನಿಗೆ, ಅಲ್ಲಪ್ಪಶೇಖ ಚೌಟನು ಕ್ರಿ.ಶ. ೧೪೬೫ರಲ್ಲಿ ಭೂಮಿದಾನ ನೀಡಿದ. ಸಹೋದರಿಯರಾದ ಲೋಕದೇವಿ ಮತ್ತು ಅಬ್ಬಕ್ಕದೇವಿಯರು ತಮ್ಮ ಸಹೋದರಿ ಪದುಮಲ ದೇವಿಯ ಸ್ಮರಣಾರ್ಥ ಮೂಡಬಿದರೆ ಹೊಸ ಬಸದಿಯಲ್ಲಿ ಆಹಾರ ದಾನಕ್ಕಾಗಿ ಭೂಮಿ ದಾನ ನೀಡಿದ್ದಾರೆ.

ಮೂಡಬಿದರೆಯ ಹೊರಗೆ ಮುಖ್ಯವಾಗಿ ಇವರು ಎರಡು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಅವರ ಮೂಲ ರಾಜಧಾನಿ ಸೋಮೇಶ್ವರ – ಉಳ್ಳಾಲದಲ್ಲಿ ಕಟ್ಟಿಸಿದ ದೇವಸ್ಥಾನವು ಈಗಲೂ ಸುಸ್ಥಿತಿಯಲ್ಲಿದ್ದ ಅಲ್ಲಿ ಪೂಜೆ ಪುರಸ್ಕಾರಗಳು ನಿರಂತರವಾಗಿ ನಡೆಯುತ್ತಿವೆ. ಇಲ್ಲಿ ಚೌಟ ಅರಸರು ಕಟ್ಟಿಸಿದ “ಸೋಮನಾಥೇಶ್ವರ ದೇವಸ್ಥಾನ” ದಿಂದಲೇ ಈ ಸ್ಥಳಕ್ಕೆ ಸೋಮೇಶ್ವರ ಎಂಬ ಹೆಸರು ಬಂದಿರಬೇಕು. ಅಲ್ಲದೇ ಇವರು ತಮ್ಮ ಹೊಸ ರಾಜಧಾನಿ ಪುತ್ತಿಗೆಯ ಸಮೀಪ ಮತ್ತೊಂದು ಸೋಮನಾಥೇಶ್ವರ ದೇವಾಲಯವನ್ನು ಕಟ್ಟಿದ್ದು, ಅದು ಕೂಡ ಇಂದಿನ ತನಕ ಸುಸ್ಥಿತಿಯಲ್ಲಿದ್ದು ಪೂಜೆ, ಆರಾಧನೆಗಳು ಯಥಾಪ್ರಕಾರ ನಡೆಯುತ್ತಿವೆ. ತಮ್ಮ ಮನೆತನದ ದೇವಾಲಯಗಳು ಮಾತ್ರವಲ್ಲದೇ ತಮ್ಮ ಸೀಮೆಯಲ್ಲಿರುವ ಇತರ ದೈವ, ದೇವಸ್ಥಾನಗಳಿಗೂ ಇವರುಉಂಗಳಿ ನೀಡಿರುವುದು ಕಂಡುಬರುತ್ತದೆ. ಪೇಜಾವರದಲ್ಲಿರುವ ದೇವಸ್ಥಾನ, ಅಮ್ಮೆಂಬಳದಲ್ಲಿರುವ ಸೋಮನಾಥೇಶ್ವರ ದೇವಸ್ಥಾನ, ಅರ್ಕುಳ ಗ್ರಾಮದ ದೈವಸ್ಥಾನ, ಪುತ್ತಿಗೆ ಸಮೀಪ ದೈವಂತಿ ದೈವದ ಗುಡಿ, ಮೂಡಬಿದರೆಯಲ್ಲಿರುವ ಮಾರಿಯಮ್ಮನ ಗುಡಿ, ಕಡಂದಲೆಯಲ್ಲಿರುವ ಸುಬ್ರಾಯ ದೇವರ ದೇವಸ್ಥಾನ ಮುಂತಾದವುಗಳಿಗೆ ಕೂಡ ಅವುಗಳನ್ನು ಕಟ್ಟಿಸಲು ಸಹಾಯ ನೀಡಿದಲ್ಲದೇ ಅವುಗಳ ಶಾಶ್ವತ ನಿರ್ವಹಣೆಗಾಗಿ ಭೂಮಿಯನ್ನು ಉಂಬಳಿ ಬಿಟ್ಟಿದ್ದಾರೆ ಎಂದು ತಿಳಿಯುತ್ತದೆ. ಇವರು ಬಹಳ ದೈವಭಕ್ತರಾಗಿದ್ದರೆಂಬುದು ಇದರಿಂದ ತಿಳಿಯಬಹುದು. ಅಲ್ಲದೇ ಇವರ ಕಾಲದಲ್ಲಿ ಯಾವುದೇ ಧಾರ್ಮಿಕ ಸಂಘರ್ಷ, ಕಿರುಕುಳ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ದಮನಿಸುವ ಕಾರ್ಯಗಳು ನಡೆದಿರುವ ಬಗ್ಗೆ ಯಾವುದೇ ಉಲ್ಲೇಖ ಕಂಡುಬರುವುದಿಲ್ಲ. ಅಂದರೆ ಚೌಟ ಅರಸರು ಧಾರ್ಮಿಕ ಸಹಿಷ್ಣುಗಳಾಗಿದ್ದರು ಎಂದು ತಿಳಿಯಬಹುದು.

ರಾಜ್ಯದೊಳಗೆ ಮಾತ್ರವಲ್ಲದೇ ನೆರೆಕರೆಯಲ್ಲಿ ಶಾಂತಿ ಸೌಹಾರ್ದ ಕಾಪಾಡುವಂಥ ಒಳ್ಳೇ ಕಾರ್ಯಗಳಲ್ಲಿಯೂ ಚೌಟ ಅರಸರು ತಮ್ಮ ಕೊಡುಗೆ ಸಲ್ಲಿಸಿದ್ದಾರೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದ ಒಂದು ಶಾಸನದಿಂದ ತಿಳಿಯುತ್ತದೆ೨೩. ತಮ್ಮ ಬಲ್ಲಾಳನ ದುರ್ವರ್ತನೆಯಿಂದ ಹಾನಿಗೊಳಗಾದ ೭ ನಾಡಿನ ಜನರು, ಬಂಗ ಮತ್ತು ಚೌಟ ಅರಸರ ಸಮ್ಮುಖದಲ್ಲಿ ಸಭೆ ಸೇರಿ ತಮ್ಮ ರಕ್ಷಣೆಗಾಗಿ ಕೆಲವು ತೀರ್ಮಾನಗಳನ್ನು ಕೈಗೊಂಡರು. ಇರ್ವತ್ತೂರು, ರಂಜಾಳ, ನಲ್ಲೂರು, ನೆಲ್ಲಿಕಾರು, ಕೆಲ್ಲಪುತ್ತಿಗೆ, ಸಾಣೂರು ಮತ್ತು ಕೇಮಾರ ಇವೆ ಆ ಏಳು ಗ್ರಾಮಗಳು. ಸಭೆಯ ಕಟ್ಟಳೆಗಳನ್ನು ಮೀರಿದವರಿಗೆ ಕೊಡಬಹುದಾದ ಶಿಕ್ಷೆಯನ್ನು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಏಳು ನಾಡು ಸಭೆಯ ತೀರ್ಮಾನಗಳನ್ನು ಮನವಿಯ ರೂಪದಲ್ಲಿ ಬರೆದು ಅದನ್ನು ಬಿರುಮಣ್ಣ ಚೌಟ ಮತ್ತು ಗಣಪಣ್ಣ ಅಧಿಕಾರಿ (ಮೂಡಬಿದರೆಯಲ್ಲಿದ್ದ ವಿಜಯನಗರದ ಅಧಿಕಾರಿ)ಗಳೊಡಗೂಡಿ ಮಂಗಳೂರು ರಾಜ್ಯಪಾಲ ಬಸವಣ್ಣ ಒಡೆಯನಿಗೆ ಅರ್ಪಿಸಿ, ಅವನಿಂದ ಏಳು ನಾಡನ್ನು ರಕ್ಷಿಸುವ ಭರವಸೆ ಪಡೆಯಲಾಯಿತು. ಈಕಾರ್ಯದಲ್ಲಿ ಬಿರುಮಣ್ಣ ಚೌಟ್ಟ ಅರಸನು ಮಹತ್ವದ ಪಾತ್ರ ವಹಿಸಿದನು ಎಂದು ತಿಳಿಯುತ್ತದೆ.

ಚೌಟ ಅರಸರು ಉಳ್ಳಾಲ – ಸೋಮೇಶ್ವರದಲ್ಲಿ ಕಟ್ಟಿಸಿದ ಅರಮನೆ, ಕೋಟೆ, ಸೋಮನಾಥೇಶ್ವರ ದೇವಸ್ಥಾನ; ಪುತ್ತಿಗೆಯಲ್ಲಿನ ಕಾಯೆರಮಂಜಿ ಅರಮನೆ, ಸೋಮನಾಥೇಶ್ವರ ದೇವಸ್ಥಾನ ಮತ್ತು ಮೂಡಬಿದರೆಯಲ್ಲಿರುವ ಅರಮನೆ, ಬಸದಿಗಳು ತುಳುನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮತ್ತು ಶಿಲ್ಪಕಲೆಯ ಬೆಳವಣಿಗೆಗೆ ಅವರು ಸಲ್ಲಿಸಿದ ಕೊಡುಗೆಗಳಲ್ಲಿ ಪ್ರಾಮುಖ್ಯವಾದದ್ದು.

ಉಪ – ಸಂಹಾರ:

ಸುಮಾರು ೩೦೦ ವರ್ಷಗಳಿಗೂ ಹೆಚ್ಚುಕಾಲ ಸ್ವತಂತ್ರವಾಗಿ ಆಳಿದ ಚೌಟ ಅರಸರು, ತುಳುನಾಡಿನ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯ ಸ್ಥಾನವನ್ನು ಪಡೆದಿದ್ದಾರೆ. ಒಂದು ಕಾಲದಲ್ಲಿ ತುಳುನಾಡಿನ ಬಹಳಷ್ಟು ಪ್ರದೇಶ ಇವರ ನೇರ ಆಳ್ವಿಕೆಗೆ ಒಳಪಟ್ಟಿತ್ತು. ಕ್ರಿ.ಶ.೧೬೨೩ರಲ್ಲಿ ಇಟೆಲಿಯ ಪ್ರವಾಸಿಗ ಪೆಟ್ರೋ ಡೆಲ್ಲಾವೆಲ್ಲಿಯು ಕೆಳದಿಗೆ ಭೇಟಿ ನೀಡಿದ ನಂತರ ಪುತ್ತಿಗೆಗೆ ಬಂದು ೧ನೇ ಚಂದ್ರಶೇಖರ ಚಿಕ್ಕರಾಯ ಚೌಟನನ್ನು ಭೇಟಿಯಾಗಿದ್ದಾನೆ ಎಂದು ತಿಳಿದುಬರುತ್ತದೆ. ಆ ಸಮಯದಲ್ಲಿ ಉಳ್ಳಾಲ,ತಲಪಾಡಿ, ಅಮ್ಮೆಂಬಳ, ಮಿಜಾರು, ಮಳಲಿ, ಪುತ್ತಿಗೆ, ಕಡಂದಲೆ, ಪೇಜಾರ, ಹೆಜಮಾಡಿ ಮತ್ತು ಮುಂಡುಕೂರು(ಮುಂಡ್ಕೂರು) ಮಾಗಣೆಗಳು; ಬಾಳೆಪುಣೆ, ಕೈರಂಗಳ, ಬೊಳುಮ (ಬೊಳ್ಮ), ಬಾಳ – ಕೆಳವಾರು, ಸಾಣೂರು ಮತ್ತು ಪಟ್ಟೆ ಗ್ರಾಮಗಳು ಸಲಿಕೆನಾಡು ಅಥವಾ ಪುತ್ತಿಗೆ ರಾಜ್ಯಕ್ಕೆ ಸೇರಿದ್ದವು ಎಂದು ತಿಳಿಯುತ್ತದೆ. ಅಂದರೆ ಪುತ್ತಿಗೆ ರಾಜ್ಯದ ಗಡಿವ್ಯಾಪ್ತಿ ಬಹಳ ವಿಶಾಲವಾಗಿತ್ತು.

ಪುತ್ತಿಗೆ ಚೌಟರಲ್ಲಿ, ಅಳಿಯ ಸಂತಾನ ಪದ್ಧತಿ(ಕಟ್ಟು) ಜಾರಿಯಲ್ಲಿದ್ದುದರಿಂದ ಸಿಂಹಾಸನವನ್ನೇರುವ ಅಥವಾ ಆಡಳಿತ ಅಧಿಕಾರವು ಹೆಣ್ಣಿನ ಮೂಲಕ ಅಳಿಯನಿಗೆ ಸಿಗುತ್ತಿತ್ತು. ಚೌಟ ಅರಸರು ಜೈನ ಧರ್ಮೀಯರಾಗಿದ್ದರು. ಇವರ ಕಾಲದಲ್ಲಿ ೧೮ಜೈನ ಬಸದಿಗಳು ಮೂಡಬಿದರೆಯಲ್ಲಿ ಸ್ಥಾಪಿಸಲ್ಪಟ್ಟಿವೆ. ಆದರೆ ಪುತ್ತಿಗೆಯ ಸೋಮ ನಾಥೇಶ್ವರ ದೇವಸ್ಥಾನವನ್ನು ಅವರು ಸೀಮೆಯ ದೇವಸ್ಥಾನವೆಂದು ಘೋಷಿಸಿರುವುದು ಅವರ ಧಾರ್ಮಿಕ ಸಹಿಷ್ಣುವಿಕೆಗೆ ಉತ್ತಮ ನಿದರ್ಶನವಾಗಿದೆ.

ಆದರೆ ೩೦೦ ವರ್ಷಕಾಲ ಆಳಿದ ಚೌಟ ಅರಸರ ರಾಜಕೀಯೇತರ ಚಟುವಟಿಕೆ ಬಹಳಷ್ಟು ಸೀಮಿತವಾಗಿತ್ತು. ಅವರ ರಾಜಕೀಯ ಸಾಧನೆಗೆ ಹೋಲಿಸಿದರೆ ಇದು ನಗಣ್ಯ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಕೊಡಲಾಗಿದೆ. ಮೊದಲನೆಯದಾಗಿ ಆಗಿನ ಕಾಲದ ರಾಜಕೀಯ ಪರಿಸ್ಥಿತಿ. ಚೌಟರ ರಾಜಕೀಯ ಚಟುವಟಿಕೆಗಳು ಬಹಳ ಬಿರುಸಿನಿಂದಿದ್ದುದರಿಂದ ಆಗಿಂದಾಗ್ಗೆ ಅವರು ನೆರೆಹೊರೆಯವರೊಂದಿಗೆ ಕಾದಾಡುತ್ತಿದ್ದರು. ಇದರಲ್ಲಿ ಹೆಚ್ಚಿನ ಸಮಯ ವ್ಯಯವಾಯಿತು. ಇನ್ನು ಎರಡನೇ ಕಾರಣವೆಂದರೆ ಅವರ ಆರ್ಥಿಕ ಪರಿಸ್ಥಿತಿ. ಸದಾಕಾಲ ಯುದ್ಧ ಮೈದಾನದಲ್ಲೇ ಇರಬೇಕಾದ ಪರಿಸ್ಥಿತಿ ಖಜಾನೆಯನ್ನು ಬರಿದು ಮಾಡಿತು. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು, ಧಾರ್ಮಿಕ, ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಕಾರ್ಯಗಳು ಬಹಳಷ್ಟು ಕುಂಠಿತಗೊಂಡವು. ಕೆಲವು ಸಂದರ್ಭಗಳಲ್ಲಿ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿಯೇ ಹೋರಾಡಬೇಕಾದ ಕಠಿಣ ಪರಿಸ್ಥಿತಿ ಅವರಿಗೆ ಎದುರಾಗಿತ್ತು. ಇದರಿಂದಾಗಿ ಸ್ವತಂತ್ರರಾಗಿದ್ದರೂ, ಅವರು ಮಹತ್ವವಾದದ್ದನ್ನು ಸಾಧಿಸಲಾಗಿಲ್ಲ. ಆದರೆ ಕ್ರಿ.ಶ. ೧೪೨೯ರಲ್ಲಿ ಮೂಡಬಿದರೆಯಲ್ಲಿ ಅವರು ಕಟ್ಟಿಸಿದ “ತ್ರಿಭುವನ ಚೂಡಾಮಣಿ” ಎಂಬ ಚೈತ್ಯಾಲಯವು, ಶಿಲ್ಪಕಲೆಯ ಬೆಳವಣಿಗೆಯ ದೃಷ್ಟಿಯಿಂದ ಅವರ ಒಂದು ಮಹತ್ತರ ಕೊಡುಗೆ. ಇದೇನಿದ್ದರೂ, ಪುತ್ತಿಗೆ ಚೌಟರ ಸಾಧನೆ ಮತ್ತು ಮಹಿಮೆಯನ್ನು ಮೆಲಕು ಹಾಕುವುದಷ್ಟೇ ಇಂದು ನಮ್ಮ ಪಾಲಿಗೆ ಉಳಿದಿರುವ ಕೆಲಸ. ಆದರೆ ಈ ಬಗ್ಗೆ ಅಧಿಕೃತ ಕಷ್ಟಕರವಾಗಿದೆ. ಅದೊಂದು ಸಮೃದ್ಧ ಗಣಿ. ಮೊಗೆದು ತೆಗೆದಷ್ಟು ಮತ್ತು ಆ ವಂಶದ ಸಾಧನೆಯ ಬಗ್ಗೆ ಮಾಹಿತಿಗಳು ಕಣ್ಣಿಗೆ ಬೀಳದೆ ಉಳುಕೊಂಡು ಬಿಟ್ಟಿವೆ. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ.

ಗ್ರಂಥಸೂಚಿ:

೧. ಗಣಪತಿ ರಾವ್ ಐಗಳ್ – ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ (ಮಂಗಳೂರು, ೧೯೨೩)

೨. ಪ್ರೊ. ಪಿ.ಗುರುರಾಜ ಭಟ್ – ಸ್ಟಡೀಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್ (ಉಡುಪಿ, ೧೯೭೫)

೩. ಪ್ರೊ. ಬಿ.ಎ. ಸಾಲೆತ್ತೂರ್ – ಏನ್‌ಶಂಟ್ ಕರ್ನಾಟಕ, ಸಂಪುಟ I, ಹಿಸ್ಟರಿ ಆಫ್ ತುಳುವ (ಪೂನ, ೧೯೩೬)

೪. ಡಾ| ಕೆ.ವಿ. ರಮೇಶ್ – ಎ ಹಿಸ್ಟರಿ ಆಫ್ ಸೌತ್ ಕೆನರಾ (ಧಾರವಾಡ, ೧೯೭೦)

೫. ಪ್ರೊ. ಕೆ. ಅನಂತರಾಮು – ದಕ್ಷಿಣದ ಸಿರಿನಾಡು (ಮೈಸೂರು, ೧೯೯೭)

೬. ಶ್ರೀ ಭುವನೇಂದ್ರ ಕಾಲೇಜ್ ರಜತೋತ್ಸವ ಸ್ಮಾರಕ ಸಂಪುಟ ರಜತೋತ್ಸವ ಸಮಿತಿ – ಕಾರ್ಕಳ, ಒಂದು ಪ್ರಾದೇಶಿಕ ಅಧ್ಯಯನ (ಕಾರ್ಕಳ, ೧೯೮೫)

೭. ಎ. ಕೃಷ್ಣಭಟ್(ಸಂಪಾದಕ) – ಸುದರ್ಶನ (ಡಾ. ತೋನ್ಸೆ ಮಾಧವ ಅನಂತ ಪೈ ಅಭಿನಂದನ ಗ್ರಂಥ) (ಮುಲ್ಕಿ, ೧೯೭೭)

೮. ರೆವೆ/ ಎಫ್, ಕಿಟ್ಟೆಲ್ – ಕನ್ನಡ – ಇಂಗ್ಲೀಷ್ ಡಿಕ್‌ಶ್ನರಿ.

೯. ಜೆ.ಸ್ಟರಾಕ್ – ಸೌತ್ ಕೆನರಾ ಮೇನುವಲ್, ಸಂಪುಟ II(1894)

೧೦. ಫ್ರಾನ್ಸಿಸ್ ಬುಕಾನ್ನನ್ – ಎ ಜರ್ನಿ ಫ್ರಮ್ ಮದ್ರಾಸ್ ತ್ರೂ ದ ಕಂಟ್ರೀಸ್ ಆಫ್ ಮೈಸೂರು, ಕೆನರಾ ಆಂಡ್ ಮಲಬಾರ್(ಲಂಡನ್‌, ೧೮೦೭), ಮರುಮುದ್ರಣ ೧೯೮೮

೧೧. ಕೆ.ಕೆ. ಕುಡ್ವ – ದಕ್ಷಿಣ ಕನ್ನಡದ ಇತಿಹಾಸ (ಕಾರ್ಕಳ, ೧೯೪೮).

 20_264_TKAM-KUH

21_264_TKAM-KUH

– ಡಾ| ಪೀಟರ್ ವಿಲ್ಸನ್ ಪ್ರಭಾಕರ್*

 

[1] Ibid, P. 77.

[2] Ibid,

[3] Ibid, P. 78.

[4] Ibid, P. 77.

[5] ಐಗಳ್, ’ಇತಿಹಾಸ’, ಪುಟ: ೨೯೨.

* ಇತಿಹಾಸ ವಿಭಾಗ, ವಿವೇಕಾನಂದ ಕಾಲಜು, ಪುತ್ತೂರು – ೫೭೪ ೨೦೩, ದ.ಕ.