ಸಾವಿರಾರು ವರ್ಷ ಆಳಿದರು. ನೂರಾರು ವರ್ಷ ಬಾಳಿದರು ಎಂದು ಹೇಳುವುದು ವಾಡಿಕೆ. ನಿಖರವಾಗಿ ಉದಾಹರಣೆ ಕೊಡಬೇಕಾದಲ್ಲಿ ಮಾತ್ರ ಎಡಹುವುದು ಸಹಜ. ಆದರೆ ಕರಾವಳಿ ಕರ್ನಾಟಕದ ಮಟ್ಟಿಗೆ ಒಂದಾದರೂ ಉದಾಹರಣೆಯನ್ನು ಕೊಡುವ ಪ್ರಯತ್ನ ಮಾಡಬಹುದು.

ಸಾವಿರ ವರ್ಷಗಳ ವಂಶ ಎಂದರೆ ಅದೊಂದು ಬೃಹದ್ ಆಲದ ಮರ ಇದ್ದ ಹಾಗೆ. ಅಸಂಖ್ಯ ಬಿಳಲುಗಳನ್ನು ಹೊಂದಿದ್ದು ಮೂಲವನ್ನು ಪ್ರಯಾಸದಿಂದ ಶೋಧಿಸುವಂತಹ ಸಂದರ್ಭ ಇಲ್ಲಿ. ಸುಖ ದುಃಖಗಳನ್ನು ಬಿಂಬಿಸುವ ಚಿಗುರು ಮತ್ತು ಕೊರಡುಗಳ ವೈವಿಧ್ಯಮಯ ನರ್ತನ. ಈ ಎಲ್ಲವನ್ನೂ ಆಳುವ ವಂಶದ ಇತಿಹಾಸದಲ್ಲಿ ಕಾಣಬಹುದು.

ಮಹಾನ್ ರಾಜರಲ್ಲದಿದ್ದರೂ ಕರ್ನಾಟಕದ ಎಲ್ಲ ಸಮಕಾಲೀನ ಸಾಮ್ರಾಟರ ಬಲಗೈ ಬಂಟರಾಗಿ ಮೆರೆದವರು ಆಳುಪರು. ಸಾಮ್ರಾಟ ವಂಶಗಳೇ ನೇರವಾಗಿ ಇವರೊಂದಿಗೆ ವೈವಾಹಿಕ ಸಂಬಂಧಕ್ಕಾಗಿ ಕೈ ಚಾಚುವಂತಹ ಪ್ರತಿಭೆ ಇದ್ದವರು. ಈ ಪ್ರತಿಭೆಯ ಫಲವಾಗಿ ಕರಾವಳಿಯ ಸೀಮಿತ ಪ್ರದೇಶವನ್ನು ಅಷ್ಟೇ ಅಲ್ಲದೆ ಘಟ್ಟದ ಮೇಲಣ ವಿಶಾಲ ಪ್ರದೇಶದಲ್ಲಿ ತಮ್ಮ ಅಧಿಪತ್ಯವನ್ನು ಹೊಂದಿದವರು. ಇವರು ಶೂರರು, ಸಾಹಸಿಗರು ಹಾಗೂ ಪರಂಪರೆಯ ನಿರ್ಮಾಪಕರು.

ಆಳುಪರ ಮೂಲವನ್ನು ಹುಡುಕಿ ಹೊರಟರೆ ನಮಗೆ ಸ್ಪಷ್ಟ ಚಿತ್ರಣವೇನೂ ದೊರೆಯುವುದಿಲ್ಲ. ತುಳುನಾಡಿನ ಅರಸರು ಇವರು. ಆದರೆ ಇವರ ಬಗೆಗಿನ ಅತ್ಯಂತ ಪ್ರಾಚೀನ ದಾಖಲೆ ಮತ್ತು ಇತಿಹಾಸ ದೊರೆಯುವುದು ನೆರೆಕೆರೆಯ ಜಿಲ್ಲೆಗಳಲ್ಲಿ. ಹಾಸನ ಜಿಲ್ಲೆಯ ಬೇಲೂರು ಬಳಿಯ ಹಲ್ಮಿಡಿ ಗ್ರಾಮದಲ್ಲಿರುವ ಕನ್ನಡದ ಅತ್ಯಂತ ಪ್ರಾಚೀನ ಶಾಸನದಲ್ಲಿ[1] ಇವರ ಉಲ್ಲೇಖವಿದೆ. ಈ ಶಾಸನದ ಕಾಲವನ್ನು ಇತ್ತೀಚಿನವರೆಗೆ ಕ್ರಿ.ಶ. ೪೫೦ ಎಂದು ತಿಳಿಯಲಾಗಿತ್ತು. ಆದರೆ ನನ್ನ ಸಂಶೋಧನೆಯಿಂದ ಶಾಸನದ ಕಾಲ ಕ್ರಿ.ಶ. ೪೨೫[2]ಎಂಬ ಅಂಶ ಪ್ರಕಟವಾಗಿದೆ. ಆಳ್ವಗಣ ಪಶುಪತಿ ಇಲ್ಲಿ ಉಲ್ಲೇಖಿತನಾಗಿದ್ದಾನೆ. ಲಭ್ಯವಿರುವ ಅಲ್ಪ ಪುರಾವೆಗಳ ಆಧಾರದಲ್ಲಿ ಪಶುಪತಿಯನ್ನು ಆಳುಪರ ಪ್ರಥಮ ದೊರೆ ಎಂದು ವಿದ್ವಾಂಸರು ಗುರುತಿಸಿದ್ದಾರೆ.[3] ತಾಳಗುಂದದ ಎರಡು ಶಾಸನಗಳಲ್ಲಿ ಆಳುಪ ಪಶುಪತಿಯ ಉಲ್ಲೇಖ ಇದೆ. ಕ್ರಿ.ಶ. ಆರನೆಯ ಶತಮಾನಕ್ಕೆ ಸೇರುವ ಗುಡ್ನಾಪುರ[4] ಶಾಸನದಲ್ಲಿ ಆಳುಪರ ಉಲ್ಲೇಖ ಇದೆ. ಈ ಎಲ್ಲಾ ಶಾಸನಗಳು ಕದಂಬ ವಂಶಕ್ಕೆ ಸೇರಿದವು. ಆಳುಪರು ಈ ವಂಶದ ಸಾಮಂತರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.

ಬನವಾಸಿ ಕದಂಬರ ನಂತರ ಬಂದ ಬಾದಾಮಿ ಚಾಳುಕ್ಯ ಚಕ್ರೇಶರ ಕಾಲದಲ್ಲಿ ಆಳುಪರ ರಾಜಕೀಯ ದ್ರಭಾವ ಪರಾಕಾಷ್ಠೆಗೇರಿತ್ತು. ಜಿಲ್ಲೆಯ ಅತ್ಯಂತ ಪ್ರಾಚೀನ ತಮವಾದ ವಡ್ಡರ್ಸೆ[5] ಶಾಸನವು ಒಂದನೆಯ ಆಳುಪರಸನನ್ನು ಹೆಸರಿಸುತ್ತದೆ. ಶೃಂಗೇರಿಯ ಬಳಿಯ ಕಿಗ್ಗದ ಶಾಸನವು[6] ಈತನಿಗೆ ಗುಣಸಾಗರನೆಂಬ ಹೆಸರಿದ್ದುದನ್ನು ತಿಳಿಸುತ್ತದೆ. ಸೊರಬದ ಶಾಸನವು[7] ಈತನನ್ನು ಗುಣಸಾಗರ ಆಳುಪೇಂದ್ರ ಎಂದು ಹೆಸರಿಸಿದೆ. ಈತ ಬಾದಾಮಿ ಚಾಲುಕ್ಯ ವಂಶಕ್ಕೆ ಕಂಚಿಯ ಪಲ್ಲವರಿಂದ ಹಿಡಿದಿದ್ದ ಗ್ರಹಣ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದರ ಫಲವಾಗಿ ಪ್ರದೇಶದ ಮಾರಟೂರಿನಲ್ಲಿ ದೊರೆತಿರುವ ಚಾಳುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ ತಾಮ್ರ ಶಾಸನದಲ್ಲಿ[8] ಆಳುಪರಸನ ಗುಣಗಾನವಿದೆ. ಆಳುಪರಸನ ಅಂತ್ಯವು ಗುಂಟೂರು ಜಿಲ್ಲೆಯ ಕಲ್ಲೂರಿನಲ್ಲಾಯಿತು.[9]

ಒಂದನೇ ಆಳುಪರಸನ ಮಗ ೧ನೆಯ ಚಿತ್ರವಾಹನ ತಂದೆಯಷ್ಟೆ ದೂರದರ್ಶಿತ್ವ ಉಳ್ವ ರಾಜಕಾರಣಿಯಾಗಿದ್ದ. ಈತನನ್ನು ನೋಡುವ ಸಲುವಾಗಿ ಚಕ್ರವರ್ತಿ ವಿಜಯಾದಿತ್ಯ ಬನವಾಸಿಗೆ ಬಂದ.[10] ಚಕ್ರವರ್ತಿಯ ಸೋದರಿ ಕುಂಕುಮ ದೇವಿಯನ್ನು ಆಳುಪ ರಾಜ ಚಿತ್ರವಾಹನ ಮದುವೆಯಾಗಿದ್ದ.[11] ಈಕೆ ಪರಮ ಜಿನಭಕ್ತಿ ಪುರಿಗೆರೆಯಲ್ಲಿ ಆನೆಸೆಜೆಯ ಬಸದಿಯನ್ನು ಕಟ್ಟಿಸಿದಳು. ಚಿತ್ರವಾಹನನ ಬೇಡಿಕೆಯ ಮೇರೆಗೆ ಚಕ್ರವರ್ತಿ ವಿಜಯಾದಿತ್ಯನು ಈ ಬಸದಿಗೆ ದಾನಧರ್ಮಗಳನ್ನು ಮಾಡಿದ.[12]

ಆಳುಪರ ಮತ್ತು ರಾಷ್ಟ್ರಕೂಟ ಚಕ್ರವರ್ತಿಗಳ ನಡುವಿನ ಸಂಬಂಧ ಮಧುರವಾಗಿರಲಿಲ್ಲ. ಹಾಗಾಗಿ ಘಟ್ಟದ ಮೇಲಣ ಭಾಗಗಳ ಆಳ್ವಿಕೆಯಿಂದ ಆಳುಪರು ವಂಚಿತರಾದರು. ಇದು ತುಳುನಾಡಿನಲ್ಲಿ ಸೋದರ ಸಂಬಂಧ ಯುದ್ಧಗಳಿಗೆ ಕಾರಣವಾಯಿತು. ಉದಿಯಾವರದಲ್ಲಿ ದೊರೆಯುವ ಅಸಂಖ್ಯ ಶಾಸನಗಳು ವೀರಗಲ್ಲುಗಳಾಗಿದ್ದು ಯಾದವೀ ಕಲಹದ ಹೆಗ್ಗುರುತಾಗಿವೆ.[13]

ಆಳುಪರು ಸ್ವಲ್ಪ ಕಾಲ ಕಂಚಿಯ ಪಲ್ಲವರ ಸಾಮಂತರಾಗಿದ್ದರೆಂದು ಕಂಡುಬರುತ್ತದೆ. ಆಂಧ್ರ ಪ್ರದೇಶದ ಗೂಡೂರು ತಾಲ್ಲೂಕಿನಲ್ಲಿರುವ ಮಲ್ಲಂನಲ್ಲಿ ದೊರೆತಿರುವ ಪಲ್ಲವ ನಂದಿವರ್ಮನ ಶಾಸನ[14] ಇದಕ್ಕೆ ಪುಷ್ಟಿ ಕೊಡುತ್ತದೆ. ಆದರೆ ಇದು ಹೆಚ್ಚು ಕಾಲ ಇದ್ದಂತೆ ಕಾಣುವುದಿಲ್ಲ. ಈ ಕಾಲದ ಆಳುಪ ರಾಜ ಎರಡನೆಯ ಆಳುಪರಸನಿಗೆ ಸಂಬಂಧಿಸಿದ ಪ್ರಮುಖ ದಾಖಲೆ ಎಂದರೆ ಬೆಳ್ಮಣ್ಣು ತಾಮ್ರಶಾಸನ.[15] ಇದು ಈವರೆಗೆ ದೊರೆತಿರುವ ಕನ್ನಡ ತಾಮ್ರಶಾಸನದಲ್ಲಿ ಪ್ರಥಮದ್ದು. ಶಿವಳ್ಳಿಯ ಮರಿಯಾದೆಯನ್ನು ಬೆಳ್ಮಣ್ಣಿಗೂ ವಿಸ್ತರಿಸಿದ ವಿಚಾರವನ್ನು ಇದು ತಿಳಿಸುತ್ತದೆ.

ರಾಷ್ಟ್ರಕೂಟ ಚಕ್ರವರ್ತಿಗಳನ್ನು ಎದುರಿಸಿದಂತೆ ಆಳುಪರು ಹೊಯ್ಸಳ ರಾಜರನ್ನೂ ಎದುರಿಸಿದರು. ಆದರೆ ಇದು ಹೆಚ್ಚು ಕಾಲ ನಿಲ್ಲಲಿಲ್ಲ. ಕೊನೆಗೆ ಆಳುವ ರಾಜಕುಮಾರಿ ಚಿಕ್ಕಾಯಿ ತಾಯಿಯನ್ನು ಹೊಯ್ಸಳ ಮೂರನೆಯ ಬಲ್ಲಾಳನಿಗೆ ಮದುವೆ ಮಾಡಿ ಕೊಟ್ಟು ಶಾಂತಿ ಕಾಪಾಡಿದರು. ಚಿಕ್ಕಾಯಿ ತಾಯಿ ತುಳು ನಾಡನ್ನು ಆಳಿದ ಕೊನೆಯ ಹೊಯ್ಸಳ ರಾಣಿ.[16]

ಆಳುಪರು ಆಳಿದ ರಾಜ್ಯವನ್ನು ಆಳ್ವ ಖೇಡ ೬೦೦೦ ಎಂದು ಹೆಸರಿಸಲಾಗಿದೆ. ಕೆಲವರ ಅಭಿಪ್ರಾಯದಂತೆ ಗ್ರೀಕ್ ಬರಹಗಾರ ಟಾಲೆಮಿಯು ಹೆಸರಿಸಿರುವ ‘ಒಲೊಖೊಯಿರ’ ಆಳ್ವ ಖೇಡವೆ. ಆದರೆ ಡಾ| ಗಣಪಯ್ಯ ಭಟ್ ಅವರ ಸಂಶೋಧನೆಯಲ್ಲಿ ಇದು ಸಮ್ಮತವಲ್ಲದ ವಾದ ಎಂದು ಗೊತ್ತಾಗಿದೆ.[17] ಆದರೆ ಡಾ| ಭಟ್ಟರ ವಾದದ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಮತ್ತು ಸಹಮತ ಏರ್ಪಡಬೇಕಾಗಿದೆ.

ಆಳುಪರು ಪ್ರಾರಂಭದಲ್ಲಿ ಮಂಗಳಾಪುರದಿಂದ ರಾಜ್ಯಭಾರ ಮಾಡಿದರು.[18] ಇದು ಈಗನ ಮಂಗಳೂರು ಅನಂತರದ ದಿನಗಳಲ್ಲಿ ಉದಿಯಾವರ ಇವರ ರಾಜಧಾನಿಯಾಯಿತು.[19] ಇದು ಒಂದು ರೀತಿಯಲ್ಲಿ ದಾಯಾದಿ ಕಲಹದ ಕೇಂದ್ರ ಸ್ಥಾನವಾಯಿತು. ಬನವಾಸಿ, ಹೊಂಬುಜ, ಪೆರ್ಗುಂಜೆಗಳೂ ಸಹ ಇವರ ರಾಜಧಾನಿಯಾಗಿದ್ದವು.[20] ಹೊಂಬುಚದೊಂದಿಗೆ ಪಟ್ಟಿಯನ್ನು ಸೇರಿಸಿ – ಪಟ್ಟಿ ಪೊಂಬುಚಪುರ – ಅದು ಈಗಿನ ಹುಮ್ಚ ಎಂದು ಹೇಳಲಾಗಿದೆ.[21] ಆದರೆ ಪಟ್ಟಿ ನಗರ ಕುಂದಾಪುರ ತಲ್ಲೂಕಿನಲ್ಲಿರುವ ವಾರಾಹಿ ದಂಡೆಯ ಮೇಲಿರುವ ಹಟ್ಟಿಯಂಗಡಿ ಇದು ಆಳುಪರ ರಾಜಧಾನಿಯಾಗಿತ್ತು.[22] ಇಲ್ಲಿಂದ ಆಳಿದ ಆಳುಪ ರಾಜರಿಗೆ ಪಟ್ಟಿಯೊಡೆಯ, ಪಾಂಡ್ಯಪಟ್ಟಿಯೊಡೆಯ ಎಂಬಿತ್ಯಾದಿ ಹೆಸರುಗಳಿದ್ದವು. ನನ್ನ ಸಂಶೋಧನೆಯಲ್ಲಿ, ಇದನ್ನು ಶ್ರುತಪಡಿಸಿರುತ್ತೇನೆ.[23] ರಾಜಕೀಯ ಇಳಿಗಾಲದಲ್ಲಿದ್ದಾಗ ಮೂಡಬಿದರೆ ಆಳುಪರ ರಾಜಧಾನಿಯಾಗಿತ್ತು.[24] ಮೂಡಬಿದರೆ ಜೈನ ಮುನಿಗಳನ್ನು ಗೌರವಿಸಿ ಅವರ ಕೃಪಾಶ್ರಯ ಪಡೆದರು. ಆದರೆ ಜೈನ ಧರ್ಮಾನುಯಾಯಿಗಳಾಗಲಿಲ್ಲ.

ಬೇರೆ ಸಾಮಂತ ರಾಜರಿಗೆ ಹೋಲಿಸಿದಲ್ಲಿ ಆಳುಪರ ಮಹಾನ್ ಸಾಮಂತರು. ಸಮಸ್ತ ಭುವನವಿಖ್ಯಾತ ಸೋಮ ಕುಳತಿಳಕ ಪಂಚ್ಯ ಮಹಾರಾಜಾಧಿರಾಜ ಪರಮೇಶ್ವರ ಭಟ್ಟಾರಕ ಶ್ರೀಮತ್ಪಾಂಡ್ಯ ಚಕ್ರವರ್ತಿ ಎಂಬಿತ್ಯಾದಿ ಬಿರುದಾಂಕಿತರು.[25] ಇವರ ಅಧೀನದಲ್ಲೂ ಅನೇಕ ಸಾಮಂತ ರಾಜ ಅಧಿಕಾರಿಗಳಿದ್ದರು. ಪ್ರಪ್ರಥಮವಾಗಿ ಬೆಳಕಿಗೆ ಬಂದಿರುವವರು ಕೆಲ್ಲಪುತ್ತಿಗೆಯ ಕೆಲ್ಲರು.[26] ಇವರು ಜೈನರು. ಇವರಂತೆ ಇದ್ದ ಇನ್ನೊಂದು ಜೈನ ವಂಶವೆಂದರೆ ಸುರಾಲಿನ ತೊಳಹರು.[27]

ಸಾಮಂತ ಅರಸರಾದರೂ ಚಿನ್ನದ ನಾಣ್ಯಗಳನ್ನು ಸ್ವತಂತ್ರವಾಗಿ ಛಾಪಿಸಿ ಚಲಾವಣೆಗೆ ತಂದ ಗೌರವ ಇವರಿಗೆ ಸಲ್ಲುತ್ತದೆ. ಸಾರ್ವಭೌಮರಲ್ಲದಿದ್ದರೂ ಸಾರ್ವಭೌಮ ಬಿರುದುಗಳನ್ನು ಹೊಂದಿದ್ದ ಇವರಿಗೆ ರಾಜಕೀಯ ವಲಯದಲ್ಲಿ ಹೆಚ್ಚಿನ ಮಾನ್ಯತೆ ಮತ್ತು ಗೌರವಗಳನ್ನು ಇವರ ಚಿನ್ನದ ನಾಣ್ಯಗಳು ಗಳಿಸಿಕೊಟ್ಟಿದ್ದವು.[28]

ಮಧ್ಯಯುಗೀನ ಕಾಲದಲ್ಲಿ ಆಳುಪರ ಪ್ರಮುಖ ಸಾಮಂತರಾಗಿದ್ದವರು ಹೊಂಬುಚದ ಶಾಂತರರು. ಉದಿಯಾವರದ ಅತ್ಯಂತ ಪ್ರಾಚೀನ ಶಾಸನವು ಶಾಂತರರನ್ನು ಹೆಸರಿಸುತ್ತದೆ.[29] ಕ್ರಿ.ಶ.೮ನೆಯ ಶತಕದ ಮಧ್ಯಭಾಗಕ್ಕೆ ಸೇರುವ ಈ ಶಾಸನವು ಶಾಂತರನ ಆಳು (ಸೈನಿಕ) ಮೆದುಮಾಣನ್ ಯುದ್ಧದಲ್ಲಿ ಹೋರಾಡಿ ಮಡಿದ ವಿಚಾರ ತಿಳಿಸುತ್ತದೆ. ಇಲ್ಲಿಂದ ಮುಂದೆ ೧೩ನೆಯ ಶತಮಾನದ ಕೊನೆಯವರೆಗೆ ಆಳುಪ – ಶಾಂತರ ಸಂಬಂಧ ಅವಿಚ್ಛಿನ್ನವಾಗಿತ್ತು.[30] ಐತಿಹಾಸಿಕವಾಗಿ ಬೆಳಕಿಗೆ ಬಂದಿರುವ ಈ ವಂಶದ ಪ್ರಥಮ ದೊರೆ ಜಿನದತ್ತರಾಯ.[31] ಈತ ಆಳುಪರನ್ನು ಸೋಲಿಸಿ ಆಳ್ವ ಖೇಡದ ಬಹುಭಾಗವನ್ನು ಆಕ್ರಮಿಸಿಕೊಂಡಿದ್ದ ಎಂದು ಬಿ.ಎಲ್. ರೈಸ್ ಹೇಳಿದ್ದಾರೆ.[32] ಅದನ್ನು ಡಾ| ಗುರುರಾಜ ಭಟ್ಟರು[33] ಆನಂತರ ಡಾ| ಹಂಪ ನಾಗರಾಜಯ್ಯ[34] ಪುನರುಚ್ಚರಿಸಿದ್ದಾರೆ. ಆದರೆ ಇದು ಸರಿಯಲ್ಲ. ಕಾರಣ ಈ ಎರಡೂ ವಂಶಗಳ ಒಳಗೆ ವಯವಾಹಿಕ ಸಂಬಂಧಗಳೊಂದಿಗೆ ಸನ್ಮಿತ್ರ ಸಂಬಂಧ ಬೆಳೆದಿದ್ದುದನ್ನು ಪ್ರಾರಂಭದಿಂದಲೂ ಕಾಣಬಹುದು[35]. ಆಳುಪ ಪಟ್ಟಿಯೊಡೆಯನ ಮಗಳು ಅಚಲದೇವಿ ವೀರ ಶಾಂತರನನ್ನು ಮದುವೆಯಾಗಿದ್ದಳು.[36] ಕ್ರಿ.ಶ. ೯೦೦ – ೯೩೦ ರವರೆಗೆ ಆಳಿದ ಆಳ್ವರಣಂಜಯ ತನ್ನ ಮಗಳಾದ ಎಂಜಲ ದೇವಿಯನ್ನು ಚಾಗಿ ಶಾಂತರನಿಗೆ ಮದುವೆ ಮಾಡಿಕೊಟ್ಟಿದ್ದ.[37] ಕ್ರಿ.ಶ. ೧೦೨೦ರಿಂದ ೧೦೫೦ರವರೆಗೆ ಆಳಿದ ೧ಎಯ ಬಂಕಿದೇವ ತನ್ನ ಮಗಳು ಮಂಕಬ್ಬರಸಿಯನ್ನು ಶಾಂತರ ತೈಲಪದೇವನಿಗೆ ಮದುವೆ ಮಾಡಿಕೊಟ್ಟಿದ್ದ.[38] ಶಾಂತರ ಅಮ್ಮಣನ ಮಗಳು ಬೀರಲು ದೇವಿಯನ್ನು ತಾನು ಮದುವೆಯಾಗಿದ್ದ.[39] ಪರಸ್ಪರ ವೈವಾಹಿಕ ಸಂಬಂಧ ಎರಡೂ ವಂಶಗಳ ರಕ್ಷಣೆಗೆ ಸದಾ ನೆರವಾಗಿತ್ತು. ಚೋಳರ ದಾಳಿಗೆ ಸಿಲುಕಿ ತನ್ನ ರಾಜ್ಯವನ್ನು ಕಳೆದುಕೊಂಡಿದ್ದ ಆಳುಪ ರಾಜ ೧ನೆಯ ಬಂಕಿ ದೇವನ ನೆರವಿಗೆ ಬಂದವ ಶಾಂತರ ರಾಜ ಅಮ್ಮಣ.[40] ಬಾರಕೂರಿನ ಶಾಸನವೊಂದು ಶಾಂತರ ಅಮ್ಮಣರ ವೀರಗಾಸೆಯನ್ನು ಈ ರೀತಿ ವರ್ಣಿಸಿದೆ. “ಮಾರಿ ಮೇಲೆ ವನ್ದ ಚೋಳನ ದಂಡಂ ಬೆಂಕೊಂಡರೆ ಯಟ್ಟಿ ಕೋಮರ ದಂಡ ಮುಖ್ಯರಾಗಿಳ್ದ ಮಂಡಳಿರ ಮಹಾಮಂಡಳಿರ್ನ್ನೂ ರಿರ್ಪದಿಂಬರಂ ಪೆಗಲಲ್ಲಿ ನಿಜಸ್ವಾಮಿ ಶ್ರೀ ಬಂಕೆಯಾಳು ಪೇನ್ದ್ರದೇವರ್ಗೊಪ್ಪಿಸಿ ನಿರಂತರ ಬೆಸೆ”.[41]

ಆಳುಪರಾಜ ಕುಲಶೇಖರ ತನ್ನ ನಿಕಟ ಸಂಬಂಧಿಯಾದ ಶಾಂತರ ಜಗದೇವರಸನ ರಕ್ಷಣೆಗೆ ಹೋಗಿ ಕಲಚೂರಿ ಧಾಳಿಯನ್ನು ಹಿಮ್ಮೆಟ್ಟಿಸಿದನು.[42]

ಕುಲಶೇಖರನ ತರುವಾಯ ಸ್ವಲ್ಪ ಕಾಲ ಆಳುಪ ರಾಜ್ಯಕ್ಕೆ ವಾರಿಸುದಾರ ರಿಲ್ಲದಿದ್ದಾಗ ಶಾಂತರ ಕುಂದಣನು ಸ್ವಲ್ಪ ಕಾಲ ರಾಜ್ಯವಾಳಿದನು.[43]

ಈತನ ಆಳ್ವಿಕೆಯ ಪ್ರಮುಖ ದಾಖಲೆಯು ಸು. ಕ್ರಿ.ಶ. ೧೨೨೦ಲ್ಲೆ ಸೇರಿವ ವರಂಗ ಜೈನ ಶಾಸನ.[44] ಇದು ಆಳುಪ ಇತಿಹಾಸಕ್ಕೆ ಮತ್ತು ತುಳುನಾಡಿನಲ್ಲಿ ಜೈನಧರ್ಮಕ್ಕೆ ಸಂಬಂಧಪಟ್ಟಂತೆ ಒಂದು ಪ್ರಮುಕ ಶಾಸನ.[45] ಕುಂದಣನ ನಂತರ ಇಳಿಮುಖವಾಗಿದ್ದ ಆಳುಪರಾಜ್ಯವನ್ನು ಆಳಿದವರು ವಲ್ಲಭದೇವ ದತ್ತಾಳುಪ, ವೀರ ಪಾಂಡ್ಯದೇವ ಈತನ ಪಟ್ಟದರಸಿ ಬಲ್ಲ ಮಹಾದೇವಿ ವಾಗದೇವರಸ, ಅಳಿಯ ಬಂಕಿದೇವ, ಸೋಯಿದೇವ ಮತ್ತು ೨ನೆಯ ಕುಲಶೇಖರ.[46] ಬಲ್ಲ ಮಹಾದೇವಿಯು ಅಳಿಯ ಬಂಕಿದೇವರಸನ ವಿರೋಧ ಎದುರಿಸಬೇಕಾಯಿತು. ರಕ್ತಪಾತಕ್ಕೆ ಅವಕಾಶ ಮಾಡಿಕೊಡದೆ ರಾಜ್ಯವನ್ನು ಎರಡು ಭಾಗ ಮಾಡಿ ಒಂದನ್ನು ತನ್ನ ಮಗ ನಾಗ ದೇವರಸನಿಗೂ ಮತ್ತೊಂದನ್ನು ಅಳಿಯ ಬಂಕಿದೇವನಿಗೂ ನೀಡಿದಳು.[47] ಕಟ್ಟ ಕಡೆಯಲ್ಲಿ ಇದ್ದ ಈ ಅರಸು ಮನೆತನದವರೆಂದರೆ – ೩ನೆಯ ಬಂಕಿದೇವ, ೩ನೆಯ ಕುಲಶೇಖರ ಮತ್ತು ೨ನೆಯ ವೀರ ಪಾಂಡ್ಯದೇವ.

ಆಳುಪರು ಪ್ರಾಚೀನ ಕಾಲದಿಂದಲೂ ಮಕ್ಕಳಕಟ್ಟು ಅನುಸರಿಸಿದವರು. ಹೀಗಾಗಿ ತಂದೆಯಿಂದ ಮಗನಿಗೆ ಪಟ್ಟವಾಗುತ್ತಿತ್ತು. ಆದರೆ ಬಂಕಿದೇವನ ಸಂಗತಿ ಬೇರೆ.[48] ಈತ ಅಳಿಯಕಟ್ಟನ್ನು ಅನುಸರಿಸಿ ಹಕ್ಕನ್ನು ಪ್ರತಿಸಾಧಿಸಿದ. ತತ್ಫಲವಾಗಿ ಆಳುಪರು ಅಳಿಯಕಟ್ಟನ್ನು ಇದೊಂದೆ ಸಂದರ್ಭದಲ್ಲಿ ಅನುಸರಿಸುವಂತಾಯಿತು.

ಸೋಮ ವಂಶಜರು, ಮೀನ ಲಾಂಛನೋಪೇತರು ಪಾಂಡ್ಯ ಚಕ್ರವರ್ತಿಗಳೂ ಆದ – ಆಳುಪರು ಶೈವ ಮತಾವಲಂಬಿಗಳು. ತುಳುನಾಡಿನಲ್ಲಿ ಶೈವ ಮತ ಭದ್ರವಾಗಿ ನೆಲೆಯೂರಲು ಇದು ಸಹಾಯಕವಾಯಿತು.[49] ಪ್ರಾಚೀನ ಕಾಲದಲ್ಲಿ ಶೈವ ಧರ್ಮದ ಅನೇಕ ಶಾಖೆಗಳು ಇಲ್ಲಿದ್ದುವು.[50] ಪಾಶುಪತರೊಂದಿಗೆ ಆಳುಪರು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಶಾಸನಗಳಲ್ಲಿ ಇವರನ್ನು ಪಾಶುಪತರ ದೊರೆ ಎಂದು ಕರೆಯಲಾಗಿದೆ.[51] ಪಾಶುಪತರ ಗುರುಗಳ ಪ್ರಭಾವದಿಂದ ತುಳುನಾಡಿನ ಬಹುತೇಕ ಕಡೆಗಳಲ್ಲಿ, ಶಿವಾಲಯಗಳು ರಚನೆಗೊಂಡವು. ಆದಿನಾಥೇಶ್ವರ, ಲೋಕೇಶ್ವರ, ನಖರೇಶ್ವರ, ಕುಂದೇಶ್ವರ, ಕೋಟೇಶ್ವರ, ಮಹಾಲಿಂಗೇಶ್ವರ, ಕಾಂತೇಶ್ವರ, ಬಂಕೇಶ್ವರ ಎಂಬಿತ್ಯಾದಿಯಾಗಿ ಕರೆಯಲ್ಪಡುವ ಎಲ್ಲ ಪ್ರಾಚೀನ ದೇವಾಲಯಗಳೂ ಇವರ ಕೊಡುಗೆಗಳು. ಶಿವಳ್ಳಿ ಕ್ಷೇತ್ರದ ಬೆಳವಣಿಗೆಗೆ ಇವರ ಕೊಡುಗೆ ಅಪಾರ. ಉತ್ತರದ ಕಾಶಿ ನಗರದಷ್ಟೇ ಪವಿತ್ರವಾಗಿ ಈ ಕ್ಷೇತ್ರ ಬೆಳೆದಿತ್ತು ಎನ್ನುವುದು ಶಾಸನಗಳಿಂದ ತಿಳಿದು ಬರುತ್ತದೆ.[52] ಶಿವಳ್ಳಿಯಷ್ಟೆ ಪ್ರಮುಖವಾಗಿ ಬೆಳೆದ ಇನ್ನೊಂದು ಕ್ಷೇತ್ರ ಬೆಳ್ಮಣ್ಣು.[53]

ಶಿವನೊಂದಿಗೆ ಶಕ್ತಿ ಪೂಜೆಯನ್ನು ಇವರು ಮಾಡಿದ್ದರು. ತುಳುನಾಡಿನ ಎರಡನೆಯ ಅತ್ಯಂತ ಪ್ರಾಚೀನ ಶಾಸನವಾದ ಪೊಳಲಿ ದುರ್ಗಾಪರಮೇಶ್ವರಿ ದೇವಾಲಯದ ಶಾಸನವು[54] – “ಸ್ವಸ್ತಿ ಶ್ರೀಮತಾಂ ವಿಪುಲವಂಶವಶೀಕೃತಮಹೀ ಭುಜಾಮ್ ಪಾಣ್ಡ್ಯಾನಾಮಾಳುಪೇನ್ದ್ರಾಣಾಂ ಅವ್ಯಾಸುಸ್ಸಪ್ತ ಮಾತರಃ” – ಎಂದು ಹೇಳುತ್ತದೆ. ಅಂದರೆ ತನ್ನ ವಂಶದ ಹಿರಿತನದ ಪ್ರಭಾವ ಬೀರಿ ಚಕ್ರವರ್ತಿಗಳನ್ನೂ ವಶೀಕರಿಸುವಂತಹ ಪಾಂಡ್ಯವಂಶದ ಆಳುಪೇಂದ್ರರನ್ನು ಸಪ್ತ ಮಾತೃಕೆಯರು ರಕ್ಷಿಸುವರು ಎಂದರ್ಥ.[55] ಮಾತೃ ಪ್ರಧಾನವಾದ ದುರ್ಗಾಪರಮೇಶ್ವರಿ ಆರಾಧನೆ ಇಲ್ಲಿ ವ್ಯಾಪಕವಾಗಿ ಹರಡಲು ಇದು ಸಹಾಯವಾಯಿತು. ಅದೇ ರೀತಿಯಲ್ಲಿ ವಿನಾಯಕ ಮತ್ತು ಸುಬ್ರಹ್ಮಣ್ಯ ದೇವರ ಆರಾಧನೆಗಳು ಒಟ್ಟೊಟ್ಟಿಗೆ ಬೆಳೆಯಿತು. ಆಳುಪರು ಎಲ್ಲ ದೇವಾಲಯಗಳಿಗೂ ದಾನಧರ್ಮಗಳನ್ನು ಮಾಡಿದ ವಿಚಾರ ಶಾಸನಗಳಿಂದ ತಿಳಿದು ಬರುತ್ತದೆ.[56]

ಪಾಶುಪತಶೈವ ಮತಾವಲಂಬಿಗಳಾದರೂ ಆಳುಪರು ಪರಮತ ಸಹಿಷ್ಣುಗಳು. ಇವರ ರಾಜಕೀಯ ಇತಿಹಾಸದ ಪ್ರಾರಂಭ ಕಾಲಕ್ಕೆ ಜೈನ ಅಧಿಕಾರಿಗಳು ಇವರ ಪ್ರಮುಖ ಸೇವಕರಾಗಿದ್ದರು.[57] ಕೆಲ್ಲಪುತ್ತಿಗೆಯ ಜೈನ ಕೆಲ್ಲವಂಶವು ಕನ್ನಡ ನಾಡಿನ ಅತ್ಯಂತ ಪ್ರಾಚೀನ ಜೈನ ರಾಜವಂಶವಾಗಿ ಬೆಳೆಯಲು ಆಳಪರು ಕಾರಣರು.[58]

ಆಳುಪ ರಾಜ ಒಂದನೆಯ ಚಿತ್ರವಾಹನ ಚಾಳುಕ್ಯ ರಾಜಕುಮಾರಿ ಕುಂಕುಮ ದೇವಿಯನ್ನು ಮದುವೆಯಾಗಿದ್ದು ಈಕೆ ಪರಮ ಜಿನ ಭಕ್ತೆ. ಈಕೆ ಗುಡಿಗೇರಿಯಲ್ಲಿ ಕಟ್ಟಿಸಿದ ಬಸದಿಗೆ ರಾಜ ಧರ್ಮಗಳನ್ನು ಮಾಡಿದ.[59]

ಜೈನ ಧರ್ಮದಂತೆ ಬೌದ್ಧ ಧರ್ಮವೂ ಕರಾವಳಿ ಭಾಗದಲ್ಲಿ ಹರಡಿತು.[60] ತುಳುನಾಡಿನಲ್ಲಿ ಕ್ರಿ.ಶ. ೧೦ – ೧೧ ಶತಕಗಳಲ್ಲಿ ಬೆಳೆದ ನಾಥ ಪಂಥವು ಬೌದ್ಧ ಧರ್ಮದ ಪ್ರಭಾವದಿಂದಾದ್ದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.[61] ಕದಿರೆ ನಾಥ ಪಂಥದ ಪ್ರಮುಖ ಕೇಂದ್ರ. ಇಲ್ಲಿ ಲೋಕೇಶ್ವರನ ಕಂಚಿನ ಪ್ರತಿಮೆಯನ್ನು ಆಳುಪ ರಾಜ ಕುಂದವರ್ಮನು ಪ್ರತಿಷ್ಠಾಪಿಸಿದ. ಇದು ಶಿವನ ಪ್ರತಿಮೆಯ ಹೊರತು ಬೇರೆಯಲ್ಲ.[62]

ಆಳುಪ – ಶಾಂತರ ರಾಜಕೀಯ ಸಂಬಂಧವು ಜೈನ ಧರ್ಮದ ಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಿತು. ಆಳುಪ ರಾಣಿ ಜಾಕಳ ಮಹಾದೇವಿಯು ವರಂಗದ ನೇಮೀಶ್ವರ ಬಸದಿಯ ಜೀರ್ಣೋದ್ಧಾರ ಹಾಗೂ ಅಲ್ಲಿಯ ತಟಾಕ ನಿರ್ಮಾಣಕ್ಕೆ ಕಾರಣಳಾದಳು.[63] ಮೂಡಬಿದ್ರೆಯ ಚಾರುಕೀರ್ತಿ ಮುನಿಗಳ ಕೃಪಾಕಟಾಕ್ಷದಲ್ಲಿ ಆಳುಪರ ಕೊನೆಯ ದಿನಗಳು ಕಳೆಯಲ್ಪಟ್ಟವು. ಮೂಡಬಿದಿರೆಯ ಗುರು ಬಸದಿಯಲ್ಲಿ ಈ ರಾಜನ ಸಿಂಹಾಸನ ಓಲಗಶಾಲೆ ಇತ್ತು.[64]

೧೧ನೆಯ ಶತಮಾನದ ನಂತರ ಇಸ್ಲಾಂ ಧರ್ಮಕ್ಕೆ ಆಳುಪರು ಆಶ್ರಯ ನೀಡಿದರು. ವ್ಯಾಪಾರಕ್ಕಾಗಿ ಬಂದ ಅರಬ್ ವರ್ತಕರಿಂದ ಈ ಧರ್ಮ ಇಲ್ಲಿ ನೆಲೆಗೊಂಡಿತು.[65]

ಒಟ್ಟಿನಲ್ಲಿ ಸಾವಿರ ವರ್ಷಗಳ ಕಾಲ ಆಳಿದ ಆಳುಪರು ತುಳುನಾಡಿನಲ್ಲಿಯ ಭವ್ಯ ಸಂಸ್ಕೃತಿ ಮತ್ತು ವಿಶಿಷ್ಟ ರೀತಿಯ ಧರ್ಮ ಸಾಮರಸ್ಯಕ್ಕೆ ಭದ್ರಬುನಾದಿ ಹಾಕಿದರು. ಆಳುಪ ರಾಜವಂಶ ಈಗ ಇಲ್ಲ. ಆದರೆ ಅವರು ಕಟ್ಟಿ ಬೆಳೆಸಿದ ಸಂಸ್ಕೃತಿ ಪರಂಪರೆ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ರಾಜವಂಶವೊಂದು ಸಮಾಜಕ್ಕೆ ಕೊಡಬಹುದಾದ ಶಾಶ್ವತ ಕೊಡುಗೆ ಇದು.

– ಡಾ || ಪಿ.ಎನ್‌. ನರಸಿಂಹಮೂರ್ತಿ*

 

[1] ARMAD. 1936, PP 72 ff and plate.

[2] Rishabha Saurabh – (1994) Article by P.N. Narasimha Murthy – “Important Jaina Rulers and their Contributions” – P.13.

[3] Ramesh K.V. AHSK – PP 30 – 32.

[4] ARMAD, 1911, P 33 and plate. EP Ind. Vol. viii, PP 33. Srikarthika Ed. KVR cf al PP 61 – 72 and plate.

[5] EP Ind. Vol. xxxvii, PP 313 – 316.

[6] EP Carn. Vol. vi K. P.38.

[7] Ind. Art. Vol. xix, PP 146.

[8] A.P. Govt. Arch. Series No. 6, PP 11 – 39 and Plates

[9] Ibid : KVR; ASHK P 97.

[10] KVR AHSK, PP 55 – 56

[11] EP Ind. Vol. xxxii, PP 317 ff and plates. KVR op.cit P.60.

[12] P.N. Narasimha Murthya – ‘Jainism on the Kanara Coast’ (Ph.D. Thesis), PP 38 – 40. KVR – AHSK, PP 59 – 60

[13] Studies in Ind. Hist. & Cult. (P.B. Desai Felicitation volume), P 73. S.I.I. Vol. VII No. 293, 294, 291, S.I.I. IX pt. I. No.392. ಕೆ.ವಿ.ಆರ್. – ಎಂ.ಜೆ.ಎಸ್. ತುಳುನಾಡಿನ ಶಾಸನಗಳು (ತುನಾಶಾ) ಸಂ. 7,8,9,10,11,13,14,15,16,17,19.

[14] Nellore Dist. Ins. Vol. I, PP 429 – 30 and plate. KVR op.cit P. 62 – 64.

[15] ಪಿ. ಗುರುರಾಜಭಟ್ – ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಾಲಯ (ಒಂದು ಪರಿಷಯ) ೧೯೭೩; ತುನಾಶಾ – No. 3 Jnl. of E.S.I. vol. IV Dr. G.S. Gai Article on the Belman Copper Plate.

[16] KVR op. cit. PP. 138 – 139. ARSIE 1928 – 29, No. 492: Ibid in 1931 – 32, No. 262.

[17] ಡಾ| ಪಿ. ಗಣಪಯ್ಯ ಭಟ್ – ತೌಳವ, P. 31 – 35.

[18] KVR. op.cit., PP 47 – 48.

[19] Ibid. P. 31, 68 etc. 18 – 197.

[20] ಕೆ.ವಿ.ರಮೇಶ್ ಮತ್ತು ಎಂ.ಜೆ.ಶರ್ಮ “ತುಳುನಾಡಿನ ಅರಸು ಮನೆತನಗಳು” (೧೯೮೫). (ಅರಸು ಮನೆತನಗಳು) ಪು. ೨, ೫ ಮತ್ತು ೭. KVR AHSK – PP 51, 61.

[21] Ibid. P.68, 105. E.Hultz, EP Ind. Vol. IX, PP 20 – 21 and plates.

[22] P.N. Narasimha Murthy, ‘ಹಟ್ಟಿಯಂಗಡಿ’ ಒಂದು ಐತಿಹಾಸಿಕ ಅವಲೋಕನ (೧೯೮೬) PP. 2 – 6 Rishaba, Saurabh P – 26.

[23] Ibid; ತುನಾಶಾ ಸಂ. 13, 30, KVR – AHSK, PP 104 – 111.

[24] KVR op.cit. PP 148 – 149.

[25] E. Hultzsch, EP Ind. Vol. IX 20 – 21, 4, 23 – 24, S.I.I. IX, PP I, No. 398, 399 etc. and plate.

[26] P.N. Narasimha Murthy : ‘Jainism on the Kanara Coast’, PP. 66 – 77.

[27] Ibid. PP. 281 – 293; S.I.I. VII, No. 381 – KVR op.cit. P. 112.

[28] P., Gururaja Bhatt – ‘Studies in Tuluva History and Culture’ (STHC), PP 206 – 208 and plate XVI.

[29] S.I.I. Vol. VII, No. 294.

[30] P.N. Narasimha Murthy – ‘Jainism on the Kanara Coast’ (Ph.D. Thesis) – PP 44 – 46. 77 – 88. EP Carn., Vol. VIII, No. 35, KVR. op. cit. 105 – 106.

[31] ‘ಅರಸು ಮನೆತನಗಳು’ – P II. B.L. Rice. Ep Carn., Vol. VI, Introdn. P. 10 ಹಂಪ ನಾಗರಾಯ್ಯ – ಸಾಂತರರು – PP 36 – 40.

[32] B.L. Rice – Mysore – P. 353.

[33] P. Gururaja Bhat – STHC – P.30.

[34] ಹಂಪನಾ – ಅದೇ – ಪು. ೩೭ – ೩೯.

[35] ಅರಸು ಮನೆತನಗಳು – P.11

[36] Ep. Carn., Vol, VIII No.35 ‘ಅರಸು ಮನೆತನಗಳು’, P.11.

[37] Ep. Carn., Vol. VIII, No. 35, Ibid. P.18.

[38] Ibid. P. 18 – 20.

[39] ತುನಾಶಾ ೨೮, ೨೯ ‘ಅರಸು ಮನೆತನಗಳು’, P.17.

[40] KVR AHSK, P 102 – 104.

[41] Text lines 7 – 10.

[42] MAR 1930, PP 233 – 26 – AHSK – P 115.

[43] AHSK – P 118 – 119 (ಕುಂದಣನು ತ್ರಿಭುವನಮಲ್ಲ ಶಾಂತರನ ತಮ್ಮ. ಈತ ಪ್ರಾಯಶಃ ಆಳುಪ ರಾಜ ಕುಲಶೇಖರನ ಮಗಳನ್ನು ಮದುವೆಯಾಗಿದ್ದ).

[44] Ep. Ind., vol. XXXVII, PP 269 – 276 and Plate.

[45] P.N.N. ‘Jainism on the Kanara Coast’ – P 79 – 88.

[46] AHSK – P 119 – 136.

[47] Ibid – PP 128 – 29.

[48] Ibid

[49] Ibid, PP 292 – 295.

[50] STHC – 268 – 270.

[51] ತುನಾಶಾ – ಸಂ. ೧೩.

[52] Ibid – ಸಂ. 12,21,23.

[53] Ibid – ಸಂ. 3.

[54] ARSIE 1927 – 28, No.375 – ತುನಾಶಾ – 2.

[55] Ibid – Text.

[56] ತುನಾಶಾ – 1, 4, 12, 20, 25, 32, 34, 36, 37, 38, 40, 41, 45, 46, 48, 49 ಇತ್ಯಾದಿ KVR – AHSK – Chap. Religion.

[57] P.N.N. Murthy – ‘Jainism on the Kanara Coast’ (Ph.D. Thesis) P. 66 – 77.

[58] Ibid.

[59] Ep. Ind. XXXII. PP 317 ff and plates. I.A. XVIII, PP 35 ff ‘ಅರಸು ಮನೆತನಗಳು’ PP 3 – 5.

[60] STHC – 370 – 373 – KVR AHSK – PP 293 – 95.

[61] Ibid – 290 – 299.

[62] Ibid, 297 – 98 – KVR AHSK, P. 294, ಅರಸು ಮನೆತನಗಳು, P 15 – 16.

[63] Ep. Ind. Vol. XXXVII, PP 269 – 276 and plate. P.N.N.M. ‘Jainism on the Kanara Coast’, PP 97.

[64] S.I.I. VII 225, 221.

[65] STHC – 218 – 221 – KVR – AHSK, PP 252 – 53.

* ನಿವೃತ್ತ ಪ್ರಾಂಶುಪಾಲರು, ಶೃಂಗಾರ, ಕಮಲಾಬ್ಯಾ ಪ್ರೌಢಶಾಲೆಯ ಬಳಿ, ಕುಂಬಿಬೆಟ್ಟು.