೨೦. ೩ನೇ ಅಬ್ಬಕ್ಕದೇವಿ (ಕ್ರಿ.ಶ. ೧೭೨೬ – ೧೭೪೯):

ಪದುಮಲಾದೇವಿಯ ತಂಗಿ ಅಬ್ಬಕ್ಕದೇವಿಯು ಶಾ.ಶ. ೧೬೪೮ನೇ ಪರಾಭವ ಸಂ| ದ ಕಾರ್ತಿಕ ಶು| ೫ ರಲ್ಲಿ ಪಟ್ಟಕ್ಕೆ ಬಂದಳು. ಕ್ರಿ.ಶ. ೧೭೨೯ರಲ್ಲಿ ಇಕ್ಕೇರಿಯ ಅರಸ ಸೋಮಶೇಖರ ನಾಯಕನು ಕೆನರಾ ಜಿಲ್ಲೆಗೆ ಬಂದು ಮೂಡುಬಿದರೆಯ ಪೊನ್ನಚಾರು ಮಠದಲ್ಲಿರುವಾಗ ಅಬ್ಬಕ್ಕದೇವಿಯು ಹೋಗಿ ಭೇಟಿ ಮಾಡಿದಳು. ಸೋಮಶೇಖರನು ಪದ್ಧತಿ ಪ್ರಕಾರ ಮರ್ಯಾದೆ ಕೊಟ್ಟು ಉಡಿಗೆ ಉಚಿತಗಳನ್ನು ಕೊಟ್ಟ ಮೇಲೆ, ಅವರಿಗೆ ಪರಸ್ಪರ ಸಂಭಾಷಣೆಯಲ್ಲಿ ಮನಃಕ್ಲೇಶ ಬಂದುದರಿಂದಲೂ ಅಬ್ಬಕ್ಕನನ್ನು ಬಿದನೂರಿಗೆ ತೆಗೆದುಕೊಂಡು ಹೋಗಬೇಕೆಂದು ಸೋಮಶೇಖರ ನಿರ್ಧರಿಸಿದರಿಂದಲೂ ಅಬ್ಬಕ್ಕ ಬೇಸರಗೊಂಡಳು. ಪರಿಣಾಮವಾಗಿ, ತನ್ನ ಮಗಳಾದ ಚನ್ನಮ್ಮದೇವಿ, ಮೊಮ್ಮಗ ಚಿಕ್ಕರಾಯನನ್ನು ಮತ್ತು ಸ್ವಲ್ಪ ಸೈನಿಕರನ್ನು ಸಂಗಡ ಕರಕೊಂಡು ಪಡುಬಿದ್ರೆಯ ಬಂದರದಿಂದ ಹಡಗಿನ ಮೂಲಕ ಮಲಬಾರು ಜಿಲ್ಲೆಯ ಚರಕಲ್ಲಿಗೆ ಹೋಗಿ ನಿಂತಳು. ರಾಜ್ಯಭಾರವನ್ನು ಮಂತ್ರಿ, ಸೇನಾಧಿಪತಿಗಳೇ ಮಾಡುತ್ತಿದ್ದರು. ೪೦೫೦ ವರಹ ೪ ೧/೨ ಹಣವನ್ನು ಮಂಗಳೂರಿನಲ್ಲಿರುವ ಇಕ್ಕೇರಿ ಅಧಿಕಾರಿಗೆ ಕೊಡುತ್ತಿದ್ದರು. ಕ್ರಿ.ಶ. ೧೭೪೫ರ ವರೆಗೆ ಈ ರೀತಿ ನಡೆಯುತ್ತಾ ಬಂತು. ೧೭೪೬ರಲ್ಲಿ ಇಕ್ಕೇರಿ ಅರಸನು ಈ ಸೀಮೆಯನ್ನು ವಶಪಡಿಸಿ, ಮುದ್ರಾಡಿ ಅನಂತಯ್ಯನನ್ನು ಚೌಟರ ಸೀಮೆಗೆ ಅಧಿಪತಿಯನ್ನಾಗಿಸಿಕೊಂಡು ಆಳುತ್ತಿದ್ದಾನೆ ಎಂಬ ವರ್ತಮಾನವನ್ನು ಕೇಳಿದ ಅಬ್ಬಕ್ಕ, ಕೋಲತ್ತಿರಿ ಅರಸನ ಸೈನ್ಯವನ್ನು ತನ್ನ ಸಹಾಯಕ್ಕೆ ಕರಕೊಂಡು ಕೆನರಾ ಜಿಲ್ಲೆಯ ದಕ್ಷಿಣ ಭಾಗವನ್ನು ಸುಲಿಗೆ ಮಾಡಿ ಸಿಕ್ಕಿದ ಹಣದಲ್ಲಿ ಕಾಲಕ್ಷೇಪ ಮಾಡಿಕೊಂಡಿದ್ದಳು. ಕ್ರಿ.ಶ. ೧೭೪೦ರಲ್ಲಿ ಸೋಮಶೇಖರ ನಾಯಕನು ಸತ್ತು ಬೂದಿ ಬಸವಪ್ಪ ನಾಯಕನು ಪಟ್ಟಕ್ಕೆ ಬಂದನು. ೧೭೪೯ ರಲ್ಲಿ ಅಬ್ಬಕ್ಕದೇವಿಯು ಯೋಗ್ಯರಾದ ಸಮಾಜದ ಹಿರಿಯರನ್ನು ಬಸವಪ್ಪನಲ್ಲಿಗೆ ಕಳುಹಿಸಿ ತನ್ನ ಸೀಮೆಯನ್ನು ತಿರುಗಿ ಸ್ವಾಧೀನಪಡಿಸಿಕೊಂಡಳು. ಆದರೆ ಚರಕಲ್ಲಿನಿಂದ ಮತ್ತೆ ತನ್ನ ರಾಜ್ಯದತ್ತ ಬರುವಾಗ ಮಾರ್ಗ ಮಧ್ಯದಲ್ಲಿ ಅಬ್ಬಕ್ಕ ಕಾಲವಾದಳು. ಆಕೆಯ ಮಗಳು ಚೆನ್ನಮ್ಮದೇವಿಯು, ಮೊಮ್ಮಗ ಚಿಕ್ಕರಾಯನು ಪರಿವಾರ ಸಹಿತರಾಗಿ ಮೂಡಬಿದರೆಗೆ ಬಂದರು. ಕ್ರಿ.ಶ. ೧೯೪೯ರಲ್ಲಿ ಅರಮನೆಯನ್ನು ಜೀರ್ಣೋದ್ಧಾರ ಮಾಡಿಸಿ ಚಂದ್ರಶೇಖರ ಚಿಕ್ಕರಾಯನಿಗೆ ಪಟ್ಟವಾಯಿತು.

೨೧. ೩ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೭೪೯ – ೧೭೬೯):

ಚಂದ್ರಶೇಖರ ಚಿಕ್ಕರಾಯನು ಶಾ.ಶ. ೧೬೭೧ನೇ ಶುಕ್ಲಂ ಸಂ|ರದ ಚೈತ್ರ ಶು| ೨ ದಲ್ಲಿ ಪಟ್ಟಕ್ಕೆ ಬಂದನು. ಇವನ ಪಟ್ಟಾಭಿಷೇಕಕ್ಕೆ ಬಸವಪ್ಪ ನಾಯಕನು ಮೂಡಬಿದರಿಗೆ ಬಂದಾಗ ಅವನಿಗೆ ಒಂದು ಆನೆಯನ್ನು ಕಾಣಿಕೆಯನ್ನಾಗಿ ನೀಡಲಾಯಿತು. ಬಸವಪ್ಪ ನಾಯಕನು ೧೦ ದಿನ ಮೂಡಬಿದರೆಯಲ್ಲಿ ನಿಂತು ಸೀಮೆಯ ಲೆಕ್ಕ ತನಿಖೆ ಮಾಡಿ ೧೩,೭೯೨ ವರಹ ೧ ೧/೨ ಹಣ ಕಪ್ಪ ಕೊಡಬೇಕೆಂದು ನಿಶ್ಚಯಿಸಿ ಅದರಲ್ಲಿ ದೇವತಾ ಉತ್ತಾರ, ದೈವ ಉತ್ತಾರ, ಅಜಿಲ ಉತ್ತಾರ, ಪುರವರ್ಗ ಉತ್ತಾರ ಮುಂತಾದ್ದನ್ನು ಕಳೆದು ೭,೭೭೯ ವರಹ ೨೧/೨ ಹಣ ೧೧/೨ ಹಾಗವನ್ನು ಕಪ್ಪವಾಗಿ ಕೊಟ್ಟು ಸೀಮೆಯನ್ನು ಆಳಿಕೊಂಡು ಬರಬಹುದೆಂದು ಚಿಕ್ಕರಾಯನಿಗೆ ಅಪ್ಪಣೆ ಕೊಟ್ಟನು.

ಕ್ರಿ.ಶ. ೧೭೬೩ರಲ್ಲಿ ಹೈದಾರಾಲಿ ಬಿದನೂರಿಗೆ ಬಂದು ಇಕ್ಕೇರಿ ಸಂಸ್ಥಾನವನ್ನು ತನ್ನ ಸ್ವಾಧೀನಪಡಿಸಿಕೊಂಡು, ಆ ಸಂಸ್ಥಾನದ ಎಲ್ಲಾ ಒಳ ಅರಸುಗಳಿಗೆ ಕೌಲು ಪತ್ರಗಳನ್ನು ಬರೆಸಿದನು. ಚಿಕ್ಕರಾಯನಿಗೆ ಬಜಪೆ ಕೃಷ್ಣಯ್ಯನ ಹತ್ತಿರ ಕಾಗದವನ್ನು ಹೈದರ್ ಕೊಟ್ಟು ಕಳುಹಿಸಿದ. ನಂತರ ಹೈದರ್ ಕಾರ್ಕಳಕ್ಕೆ ಬಂದಾಗ ಚಿಕ್ಕರಾಯನು ಅಲ್ಲಿಗೆ ಹೋಗಿ ಅವನನ್ನು ಎದುರುಗೊಂಡನು. ತರುವಾಯ ಇಬ್ಬರು ಮೂಡಬಿದರೆಗೆ ಬಂದ ಮೇಲೆ, ಹೈದರ್‌ ಪೊನ್ನಚಾರು ಮಠದಲ್ಲಿ ಇಳುಕೊಂಡ. ಚಿಕ್ಕರಾಯನು ಅಲ್ಲಿ ಅವನನ್ನು ಭೇಟಿ ಮಾಡಿದಾಗ, ಹೈದರ್ ಅವನನ್ನು ಆತ್ಮೀಯವಾಗಿ ಸ್ವಾಗತಿಸಿ, ಉಡಿಗೆ ಉಚಿತಗಳನ್ನು ನೀಡಿ, ಸೀಮೆಯ ಎಲ್ಲಾ ವಿಚಾರವನ್ನು ಕೇಳಿದ ನಂತರ ೧೪,೦೦೦ ವರಹ ಕೊಡಬೇಕೆಂದು ನಿಶ್ಚಯಿಸಿದನು.

ಅನಂತರ ಕ್ರಿ.ಶ. ೧೭೬೪ರಲ್ಲಿ ೧೮,೦೦೦ ವರಹ ಕೊಡಬೇಕೆಂದು ಹೈದರನು ಮತ್ತೆ ಹೊಸ ಆಜ್ಞೆ ಮಾಡಿದ. ಕ್ರಿ.ಶ. ೧೭೬೫ರಲ್ಲಿ ಅದನ್ನು ಮತ್ತೆ ೧೯,೦೦೦ ವರಹಗಳಿಗೆ ಹೆಚ್ಚಿಸಲಾಯಿತು. ಅದೇ ವರ್ಷ ಮಂಗಳೂರು ಜಿಲ್ಲೆಯ ಅಧಿಕಾರವನ್ನು ಹೈದರಾಲಿಯು, ಶೇಕಲ್ಲಿಗೆ ಕೊಟ್ಟು ಎಲ್ಲಾ ಒಳ ಅರಸುಗಳ ರಾಜ್ಯವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ. ಆಗ ಹೈದರನು ಚೌಟರ ಸೀಮೆಗೆ ಒಬ್ಬ ಅಧಿಕಾರಿಯನ್ನು ನೇಮಿಸಿ ೨೧,೨೧೫ ವರಹ ೪ ಹಣ ಕಂದಾಯವನ್ನು ಸೀಮೆಯಿಂದ ವಸೂಲು ಮಾಡಿದನು.

ಕ್ರಿ.ಶ. ೧೭೬೬ರಲ್ಲಿ (ಸರ್ವಜಿತು) ಇಂಗ್ಲಿಷರು ಮಂಗಳೂರು ಕೋಟೆಯನ್ನು ವಶಪಡಿಸಿಕೊಂಡಾಗ, ಅದನ್ನು ಮತ್ತೇ ಮರುವಶಪಡಿಸಲು ಹೈದರನು ‘ನಗರ’ದಿಂದ ಮಂಗಳೂರಿಗೆ ಹೋಗುವ ಮಾರ್ಗಮಧ್ಯದಲ್ಲಿ ಮೂಡಬಿದರೆಯ ಪೊನ್ನಚಾರು ಮಠದಲ್ಲಿ ಇಳುಕೊಂಡನು. ಚಿಕ್ಕರಾಯನು ಅಲ್ಲಿಗೆ ಹೋಗಿ ಹೈದರನನ್ನು ಭೇಟಿ ಮಾಡಿ ತನ್ನ ಸ್ಥಿತಿಯನ್ನು ಹೇಳಲು, ೧೮,೦೦೦ ವರಹವನ್ನು ಕೊಟ್ಟು ಸೀಮೆಯನ್ನು ಆಳಿಕೊಂಡು ಇರಬಹುದೆಂದು ಹೈದರನು ಹೇಳಿದನು. ಆದರೆ ಶೇಕಾಲಿಯು ಬಹಳ ಕ್ರೂರ ಸ್ವಭಾವದವನಾದುದ್ದರಿಂದ ಅವನ ಕೈಕೆಳಗೆ ರಾಜ್ಯವಾಳಲು ಅಸಾಧ್ಯವೆಂದು ಚಿಕ್ಕರಾಯನು ಹೇಳಲು, ಹೈದರನು ಚೌಟ ರಾಜ್ಯವನ್ನು ಪೂರ್ತಿಯಾಗಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಆದರೆ ಚೌಟರ ಕುಟುಂಬಕ್ಕೆ ವರ್ಷಕ್ಕೆ ೪೫೫ ವರಹ ೧೧/೨ ಹಣವನ್ನು ಇನಾಮಾಗಿ ಬಿಟ್ಟನು. ಚೌಟ ಮನೆತನದ ರಾಜ್ಯಭಾರವು ಇಲ್ಲಿಗೆ ಕೊನೆಗೊಂಡಿತು.

ರಾಜ್ಯವನ್ನು ಕಳಕೊಂಡ ಮೇಲೆಯೂ ಈ ವಂಶದವರು ಮೂಡಬಿದರೆಯ ಅರಮನೆಯಲ್ಲಿ ವಾಸವಾಗಿದ್ದರು. ಪಟ್ಟಾಭಿಷೇಕ ಕ್ರಮವಾಗಿ ನಂತರದ ದಿನಗಳಲ್ಲಿಯೂ ನಡೆಯುತ್ತಿತ್ತು. ಮೂಡಬಿದರೆಯಲ್ಲಿದ್ದ ಅರಮನೆಯಷ್ಟು ದೊಡ್ಡ ಅರಮನೆ ಕೆನರಾ ಜಿಲ್ಲೆಯಲ್ಲಿ ಮತ್ತೊಂದಿರಲಿಲ್ಲ. ಸುಮಾರು ೮ ಎಕ್ರೆ ವಿಸ್ತೀರ್ಣದ ಸ್ಥಳದ ಮಧ್ಯದಲ್ಲಿ ಅರಮನೆಯು, ಸುತ್ತಲೂ ಕೋಟೆಯೂ ಇತ್ತು. ಕೋಟೆಯ ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಕರೆಗಳಲ್ಲಿ ಕಂದಕವಿತ್ತು. ಅರಮನೆ ಮುಂದುಗಡೆ ಎತ್ತರಕ್ಕಿರುವ ರಾಜಾಂಗಣವು ೨ ಎಕ್ರೆ ವಿಸ್ತೀರ್ಣವಾಗಿತ್ತು. ರಾಜಾಂಗಣವನ್ನು ದಾಟುತ್ತಲೇ ಈಗ ಹಾಳುಬಿದ್ದ ಹುಲಿಮುಖದ ಚಾವಡಿ ಇದೆ. ಇದನ್ನು ದಾಟುತ್ತಲೇ ಸಣ್ಣ ರಾಜಾಂಗಣವು ಸುಮಾರು ೧/೨ ಎಕ್ರೆ ವಿಸ್ತೀರ್ಣವಾಗಿತ್ತು. ಅದನ್ನು ದಾಟುತ್ತಲೇ ಹೊರಗೆ ಅಗಲವಾದ ಚಾವಡಿಗಳು, ಒಳಗೆ ಚತುಷ್ಕೋಣಾಕೃತಿಯಲ್ಲಿರುವ ಒಡ್ಡೋಲಗದ ಚಾವಡಿಯೂ ಇತ್ತು. ಒಡ್ಡೋಲಗದ ಚಾವಡಿಗೆ ತಾಗಿ ಮೃತರಾಜನ ಶವವನ್ನು ಲವಣದಲ್ಲಿ ಹಾಕಿಡುವ ದೊಡ್ಡ ಮರದ ಮರಿಗೆ ಇರುವ ಕೋಣೆ ಇತ್ತು. ಇದರ ಹಿಂದುಗಡೆ ಪಶ್ಚಿಮಕ್ಕೆ ಸೋಮನಾಥ ದೇವಸ್ಥಾನವಿದೆ. ಪಟ್ಟದ ಚಾವಡಿಯ ಪೂರ್ವಕ್ಕೆ ತೋಪುಖಾನೆಯ ಚಾವಡಿ ಇದೆ. ಇದು ಪಟ್ಟದ ಚಾವಡಿಯಷ್ಟೇ ದೊಡ್ಡದಾಗಿತ್ತು. ಈಗ ಇದು ಪೂರ್ಣವಾಗಿ ಹಾಳುಬಿದ್ದಿದೆ. ಇದರ ಪೂರ್ವಕ್ಕೆ ಅಂತಃಪುರದ ಚಾವಡಿ, ಅದರ ಪೂರ್ವಕ್ಕೆ ಅಂತಃಪುರ, ಇದರ ಉತ್ತರಕ್ಕೆ ನೀರು ತುಂಬಿಸಿ ಸ್ನಾಮಾಡಲು ಕಟ್ಟಿಸಿದ ಚಂದವಾದ ಶಿಲೆಯಿಂದ ಮಾಡಿದ ಸಣ್ಣ ಕೊಳ ಇದೆ. ಅರಮನೆಯ ಪೂರ್ವಕ್ಕೂ, ದಕ್ಷಿಣಕ್ಕೂ ಕಾಡು, ನೈರುತ್ಯಕ್ಕೆ ಮಾರಿಗುಡಿ ಮತ್ತು ದಕ್ಷಿಣಕ್ಕೆ ಜಾನಕಿ ಕೋಟೆಯೂ ಇವೆ. ಪಟ್ಟದ ಚಾವಡಿಯನ್ನು “ಹಿಸ್ಟೋರಿಕಲ್ ಮೊನ್ಯುಮೆಂಟ್ ಆಕ್ಟ್”ನ ಪ್ರಕಾರ ದುರಸ್ತಿಮಾಡುವ ಬಗ್ಗೆ ಸರಕಾರ ಕ್ರಿ.ಶ. ೧೯೨೧ರಲ್ಲಿ ವಹಿಸಿಕೊಂಡಿದೆ.

೨೨. ೩ನೇ ಚನ್ನರಾಯ (ಕ್ರಿ.ಶ.೧೭೬೯ – ೧೭೮೧):

ಚಂದ್ರ ಶೇಖರನ ಮಗ ಚನ್ನರಾಯನಿಗೆ ಶಾ.ಶ. ೧೬೯೧ನೇ ವಿರೋಧಿ ಸಂ|ದ ಶ್ರಾವಣ ಬ| ೯ರಲ್ಲಿ ಪಟ್ಟವಾಯಿತು.

೨೩. ೪ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೭೮೧ – ೧೭೮೩)

ಚನ್ನರಾಯನ ತಮ್ಮ ಚಿಕ್ಕರಾಯನಿಗೆ ಶಾ.ಶ. ೧೭೦೩ನೇ ಪ್ಲವ ಸಂ|ರದ ಮಾರ್ಗಶಿರ ಶು| ೧೦ರಲ್ಲಿ ಪಟ್ಟವಾಯಿತು.

೨೪. ೫ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೭೮೩ – ೧೮೨೨):

ಚಿಕ್ಕರಾಯನ ತಮ್ಮ ಚಂದ್ರಶೇಖರ ಚಿಕ್ಕರಾಯನು ಶಾ.ಶ. ೧೭೦೫ನ ಶೋಭಕೃತು ಸಂ| ರದ ಜ್ಯೇಷ್ಠ ಶು| ೩ರಲ್ಲಿ ಪಟ್ಟಕ್ಕೆ ಬಂದನು. ಕ್ರಿ.ಶ. ೧೭೯೩ರಲ್ಲಿ ಟಿಪ್ಪುವಿನ ಕಾಲದಲ್ಲಿ ಮಂಗಳೂರು ಜಿಲ್ಲೆಯನ್ನು ಆಳುತ್ತಿದ್ದ ಅಸೋಫನಾದ ಸುಲುಖಾನನು ಈ ಕುಟುಂಬಕ್ಕೆ ಸಲ್ಲುತ್ತಿದ್ದ ೪೫೫ ವರಹದಲ್ಲಿ, ಈ ಅರಸನು ಇಂಗ್ಲಿಷರಿಗೆ ಸಹಾಯ ಮಾಡಿದನೆಂದು ೩೦೦ ವರಹವನ್ನು ಭಂಡಾರಕ್ಕೆ ವಜಾಮಾಡಿ ೧೫೫ ವರಹ ೧ ೧/೨ ಹಣಮಾತ್ರವೇ ಕೊಡುತ್ತಾ ಬಂದನು. ಅನಂತರ ೨೦೫ ವರಹ ೩ ೧/೨ ಹಣದ ಪ್ರಕಾರ ಕನ್ನಡ ಜಿಲ್ಲೆಯು ಇಂಗ್ಲೀಷರ ಸ್ವಾಧೀನಕ್ಕೆ ಬರುವ ವರೆಗೆ ಸಿಕ್ಕಿತು. ಇಂಗ್ಲೀಷ್ ಸರಕಾರವು ೧೯೮ ವರಹ ೪ ಹಣವನ್ನು (ರೂ. ೭೯೩ – ೧೨ – ೦) ಪಿಂಚಣಿಯಾಗಿ ಚೌಟ ಅರಸನಿಗೆ ನೀಡಲು ನಿರ್ಧರಿಸಿ, ಅದರಂತೆ ಕೊಡುತ್ತಾ ಬಂದಿದೆ.

೨೫. ಚಂದ್ರಶೇಖರ ಚನ್ನರಾಯ (ಕ್ರಿ.ಶ. ೧೮೨೨ – ೧೮೩೩):

ಚಂದ್ರಶೇಖರ ಚಿಕ್ಕರಾಯನ ಮೊಮ್ಮಗ ಚಂದ್ರಶೇಖರ ಚನ್ನರಾಯನು ಶಾ.ಶ. ೧೭೪೪ರಲ್ಲಿ ಚಿತ್ರಭಾನು ಸಂ|ರದ ಜ್ಯೇಷ್ಠ ಬ| ೧೪ರಲ್ಲಿ ಪಟ್ಟಕ್ಕೆ ಬಂದನು.

ಕ್ರಿ.ಶ. ೧೮೩೩ರಲ್ಲಿ ಚನ್ನರಾಯನು ಮಕ್ಕಳಿಲ್ಲದೆ ಕಾಲವಾಗಲು ಅವನ ರಾಣಿಯು ಗುಮ್ಮಣ್ಣ ಎಂಬ ಮಗುವನ್ನು ದತ್ತಕ್ಕೆ ತೆಗೆದುಕೊಂಡು ಅವನಿಗೆ ಚಿಕ್ಕರಾಯ ಚೌಟನೆಂಬ ಹೆಸರಿನಿಂದ ಪಟ್ಟವಾಯಿತು. ಇವನು ಕ್ರಿ.ಶ. ೧೮೬೭ರಲ್ಲಿ ಕಾಲವಾಗಲು ವ್ಯಾಜ್ಯವಾಗಿ ಕ್ರಿ.ಶ. ೧೮೮೦ರಲ್ಲಿ? (ಅಥವಾ ೧೮೮೮?) ಚೌಟ ಮನೆತನದ ಇಡೀ ಆಸ್ತಿಯು ಕುಂಞಮ್ಮು ಶೆಟ್ಟಿಯವರ ವಶಕ್ಕೆ ಬಂತು. ಆದರೆ ಅವರಿಗೆ ಪಟ್ಟವಾಗಲಿಲ್ಲ. ಅವರ ನಂತರ ಆಸ್ತಿಯು ಧರ್ಮಸಾಮ್ರಾಜ್ಯರ ಸ್ವಾಧೀನಕ್ಕೆ ಬಂತು. ಅನಂತರ ಚೌಟ ವಂಶದ ಅರಸರ ಪಟ್ಟವಾಗಲಿಲ್ಲ ಎಂದು ಚೌಟ ವಂಶದ ರಾಜಕೀಯ ಚರಿತ್ರೆಯನ್ನು ಐಗಳ್‌ರವರು ತಮ್ಮ “ಇತಿಹಾಸ” ಗ್ರಂಥದಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ.

ಉಳ್ಳಾಲ – ಪುತ್ತಿಗೆ – ಮೂಡಬಿದರೆಯಿಂದ ಆಳಿದ ಚೌಟ ಅರಸರ ವಂಶಾವಳಿಯನ್ನು ಶ್ರೀ ಗಣಪತಿ ರಾವ್ ಐಗಳ್‌ರವರು ತಮ್ಮ “ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ” ಎಂಬ ಗ್ರಂಥದಲ್ಲಿ ನೀಡಿದ್ದು, ಅದು ಇಂತಿದೆ:

೧ನೇ ತಿರುಮಲರಾಯ (ಕ್ರಿ.ಶ. ೧೧೬೦ – ೧೧೭೯)
|
೧ನೇ ಚನ್ನರಾಯ (ಕ್ರಿ.ಶ. ೧೧೭೯ – ೧೨೧೯)
|
ದೇವುರಾಯ (ಕ್ರಿ.ಶ. ೧೨೧೯ – ೧೨೪೫)
|
೨ನೇ ತಿರುಮಲರಾಯ (ಕ್ರಿ.ಶ. ೧೨೪೫ – ೧೨೮೩)
|
೧ನೇ ಅಬ್ಬಕ್ಕದೇವಿ(ಕ್ರಿ.ಶ. ೧೨೮೩ – ೧೩೧೬)
|
೧ನೇ ಭೋಜರಾಯ (ಕ್ರಿ.ಶ. ೧೩೧೬ – ೧೩೩೫)
|
೧ನೇ ಪದುಮಲಾದೇವಿ (ಕ್ರಿ.ಶ. ೧೩೩೫ – ೧೩೮೨)
|
೧ನೇ ಚನ್ನಮ್ಮದೇವಿ (ಕ್ರಿ.ಶ. ೧೩೮೨ – ೧೪೦೩)
|
೨ನೇ ಚನ್ನರಾಯ (ಕ್ರಿ.ಶ. ೧೪೦೩ – ೧೪೭೦)
|
೨ನೇ ಭೋಜರಾಯ (ಕ್ರಿ.ಶ. ೧೪೭೦ – ೧೫೧೦)
|
೩ನೇ ತಿರುಮಲರಾಯ (ಕ್ರಿ.ಶ. ೧೫೧೦ – ೧೫೪೪)
|
೨ನೇ ಅಬ್ಬಕ್ಕದೇವಿ (ಕ್ರಿ.ಶ. ೧೫೪೪ – ೧೫೮೨)
|
ತಿರುಮಲದೇವಿ (ಕ್ರಿ.ಶ. ೧೫೮೨ – ೧೬೦೬)
|
೧ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೬೦೬ – ೧೬೨೮)
|
೨ನೇ ಚನ್ನಮ್ಮದೇವಿ (ಕ್ರಿ.ಶ. ೧೬೨೮ – ೧೬೩೦)
|
೩ನೇ ಭೋಜರಾಯ (ಕ್ರಿ.ಶ. ೧೬೩೦ – ೧೬೪೪)
|
೩ನೇ ಚನ್ನಮ್ಮದೇವಿ (ಕ್ರಿ.ಶ. ೧೬೪೪ – ೧೬೮೭)
|
೨ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೬೮೭ – ೧೭೧೫)
|
೨ನೇ ಪದುಮಲಾದೇವಿ (ಕ್ರಿ.ಶ. ೧೭೧೫ – ೧೭೨೬)
|
೩ನೇ ಅಬ್ಬಕ್ಕದೇವಿ (ಕ್ರಿ.ಶ. ೧೭೨೬ – ೧೭೪೯)
|
೩ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೭೪೯ – ೧೭೬೯)
|
೩ನೇ ಚನ್ನರಾಯ (ಕ್ರಿ.ಶ. ೧೭೬೯ – ೧೭೮೧)
|
೪ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೭೮೧ – ೧೭೮೩)
|
೫ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೭೮೩ – ೧೮೨೨)
|
ಚಂದ್ರಶೇಖರ ಚನ್ನರಾಯ (ಕ್ರಿ.ಶ. ೧೮೨೨ – ೧೮೩೩)
|
ಚಿಕ್ಕರಾಯ ಚೌಟ (ಕ್ರಿ.ಶ. ೧೮೩೩ – ೧೮೬೭)

ಪರಂಪರೆ ಅಥವಾ ಐತಿಹ್ಯಗಳಿಂದ ಶ್ರೀ ಐಗಳ್‌ರವರು ಹೆಚ್ಚಿನಮಾಹಿತಿ ಸಂಗ್ರಹಿಸಿರಬಹುದು. ಅವರು ತಿಳಿಸಿದಂತೆ ಕ್ರಿ.ಶ. ೧೮೬೭ರಲ್ಲಿ ಚಿಕ್ಕರಾಯ ಚೌಟ ಕಾಲವಾದ ಕೂಡಲೇ ಚೌಟ ಮನೆತನದ ಆಸ್ತಿಹಕ್ಕಿನ ಬಗ್ಗೆ ವ್ಯಾಜ್ಯವಾಗಿದೆ. ಈ ಬಗ್ಗೆ ಮಂಗಳೂರಿನಲ್ಲಿರುವ ಸಹಾಯಕ ನ್ಯಾಯಾಧೀಶರ ಕೋರ್ಟಿನಲ್ಲಿ ಕ್ರಿ.ಶ. ೧೮೬೭ನೇ ಇಸವಿಯಲ್ಲಿ ದಾವೆ ಹಾಕಲಾಗಿದ್ದು, ಇದು ಅಂತಿಮವಾಗಿ (ಓ.ಎಸ್.ನಂಬ್ರ ೩೯) ಕ್ರಿ.ಶ. ೧೮೮೭ರಲ್ಲಿ ವಿಚಾರಣೆಗೆ ಬಂದು ಮಾರ್ಚ್‌, ೧೮೮೮ರಲ್ಲಿ ಕೋರ್ಟು ತನ್ನ ತೀರ್ಪು ನೀಡಿದೆ. ಕ್ರಿ.ಶ. ೧೮೬೭ರಲ್ಲಿ ಈ ದಾವೆಯನ್ನು ಹಾಕಿದಾಗ ವಾದಿಯ ಕಡೆಯ ವಕೀಲರಾದ ಶ್ರೀ ಭವಾನಿಶಂಕರಯ್ಯನವರು ವಾದಿಯು ನೀಡಿದ ಮಾಹಿತಿ ಮೇರೆಗೆ ಚೌಟ ಅರಸು ಮನೆತನದ ವಂಶಾವಳಿಯನ್ನು ತಯಾರಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಶ್ರೀ ಐಗಳ್‌ರವರು ನೀಡಿದ ವಂಶಾವಳಿ ಪಟ್ಟಿಯು ಈ ದಾವೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ವಂಶಾವಳಿಯ ಆಧಾರದಲ್ಲಿ ತಯಾರಿಸಿದಂತೆ ಕಂಡು ಬರುತ್ತದೆ. ಏಕೆಂದರೆ ಎರಡು ಪಟ್ಟಿಗಳು ಒಂದಕ್ಕೊಂದು ಹೋಲಿಕೆಯಾಗುತ್ತವೆ.

ಕ್ರಿ.ಶ. ೧೮೬೭ರ ಮಾರ್ಚ್‌ ೮ರಂದು ಮಂಗಳೂರಿನ ನ್ಯಾಯಾಲಯಕ್ಕೆ ವಾದಿ ಕಡೆಯ ವಕೀಲರು ಸಲ್ಲಿಸಿದ “ಪುತ್ತಿಗೆಯ ಚೌಟ” ಅರಸರ ವಂಶಾವಳಿ ಹೀಗಿದೆ: (ನ್ಯಾಯಾಲಯದಿಂದ ಪಡೆದ ದಾಖಲೆಯ ಪ್ರತಿಯನ್ವಯ). ವಿವರಗಳಿಗೆ ಪುಟಸಂಖ್ಯೆ ೧೮೨ – ೧೮೬ ನೋಡಿ)

ಎಚ್. ಸ್ಯಾನ್ಸ್‌ಫೋರ್ಡ್‌ ಸ್ಮಿತ್ ಎಂಬವರು “ಮಿಥಿಕ್ ಸೊಸೈಟಿ” ಪ್ರಕಟಿಸುತ್ತಿದ್ದ ತ್ರೈಮಾಸಿಕದಲ್ಲಿ (ಸಂಪುಟ XLVI, ಜುಲೈ ೧೯೫೫, ನಂಬ್ರ – ೧, ಪುಟಗಳು ೬೯ – ೭೧) ಬರೆದ “ನೋಟ್ಸ್ ಆನ್‌ದ ಚೌಟರ್ ಡೈನೆಸ್ಟಿ” ಎಂಬ ತಲೆಬರಹದಲ್ಲಿ ಪ್ರಕಟಗೊಂ ತಮ್ಮ ಲೇಖನವೊಂದರಲ್ಲಿ ಚೌಟ ಮನೆತನದ ರಾಜಕೀಯ ಇತಿಹಾಸವನ್ನು ನೀಡಿದ್ದಾರೆ. ಆದರೆ ಅವರು ತಾವು ತಿಳಿಸುವ ವಿಷಯವನ್ನು ಸರ್ವಸಾಧಾರಣೀಕರಿಸಲು ಕಾರಣವಾದ ಮಾಹಿತಿಯ ಮೂಲದ ಬಗ್ಗೆ ಏನು ತಿಳಿಸಿಲ್ಲ. ಅವರು ಕೂಡ ಚೌಟರ ಬಗ್ಗೆ ಐಗಳ್‌ರವರು ತಿಳಿಸಿದ ಎಲ್ಲಾ ವಿಚಾರಗಳಲ್ಲಿ ಸಹಮತವಿದ್ದಂತೆ ಕಾಣುತ್ತದೆ, ಎಂದು ಡಾ| ಗುರುರಾಜ ಭಟ್ಟರು ಹೇಳಿದ್ದಾರೆ.[1] ಆದರೆ ಐಗಳ್‌ರವರ ‘ಇತಿಹಾಸ’ ಗ್ರಂಥದಲ್ಲಿ ಬರೆಯಲ್ಪಟ್ಟು ಹೆಚ್ಚಿನ ಎಲ್ಲಾ ಇತಿಹಾಸಕಾರರಿಂದ ಸ್ವೀಕರಿಸಲ್ಪಟ್ಟ ‘ಪುತ್ತಿಗೆಯ ಚೌಟ’ ಅರಸರ ಕಾಲಾನುಕ್ರಮಣಿಕೆ ಮತ್ತು ವಂಶಾವಳಿ ಪಟ್ಟಿಯು ಹಲವು ರೀತಿಯಲ್ಲಿ ತಪ್ಪಾಗಿದೆ ಎಂದು ಅಭಿಪ್ರಾಯಪಟ್ಟಿರುವ ಡಾ|ಗುರುರಾಜ ಭಟ್ಟರು ಈ ಕೆಳಗಿನ ತಮ್ಮ ವಾದವನ್ನು ನಮ್ಮ ಮುಂದಿಟ್ಟಿದ್ದಾರೆ.[2]

೧) ಹೆಚ್. ಸ್ಯಾನ್ಸ್‌ಫೋರ್ಡ್‌ಸ್ಮಿತ್ ಹೇಳುವಂತೆ ಕ್ರಿ.ಶ. ೧೧೧೭ರಲ್ಲಿ ಹೊಯ್ಸಳ ಬಿಟ್ಟಿದೇವ ವಿಷ್ಣುವರ್ಧನನು ಉಳ್ಳಾಲದ ಅರಸನನ್ನು ಬಂಧಿಸಿಟ್ಟಿದ್ದ ಎಂಬುದಕ್ಕೆ ಯಾವುದೇ ಶಾಸನಾಧಾರಗಳು ಇಲ್ಲ.

೨) ಕ್ರಿ.ಶ. ೧೩೮೨ರಿಂದ ೧೪೦೩ರ ಮಧ್ಯದಲ್ಲಿ ಚೆನ್ನಮ್ಮದೇವಿ I ಳು ಪಟ್ಟದಲ್ಲಿದ್ದಳು ಎಂದು ಐಗಳ್ ತಮ್ಮ ‘ಇತಿಹಾಸ’ದಲ್ಲಿ ತಿಳಿಸಿದ್ದಾರೆ. ಆದರೆ ಮೂಡಬಿದರೆಯಲ್ಲಿ ಸಿಕ್ಕಿದ ಒಂದು ಶಾಸನದ ಪ್ರಕಾರ ಕ್ರಿ.ಶ. ೧೩೯೦ರಲ್ಲಿ ವಿಕ್ರು ಚೌಟ ಅಲಿಯಾಸ್‌ಚೌಟ ಎಂಬಾತನು ಅರಸನಾಗಿದ್ದ. ಗುರುಗಾಲ ಬಸದಿಯ ಶ್ರೀ ಚಂದೋಗ್ರಪಾರ್ಶ್ವ ದೇವರಿಗೆ ವಿಕ್ರು ಚೌಟನ ಕಾಲದಲ್ಲಿ ಸ್ವಲ್ಪ ಭೂಮಿಯನ್ನು ದೇವಸ್ವವಾಗಿ ಬಿಡಲಾಯಿತೆಂದು ಈ ಶಾಸನ ತಿಳಿಸುತ್ತದೆ. ಆದುದರಿಂದ ಶಾಸನಗಳ ಪ್ರಕಾರ ವಿಕ್ರು ಚೌಟನೇ ಈ ವಂಶದ ಪ್ರಥಮ ಅರಸನೆಂದು ಹೇಳಬಹುದು.

೩) ಪುತ್ತೂರು ತಾಲೂಕಿನ ಪುತ್ತೂರಿನಲ್ಲಿ ದೊರೆತ ಕ್ರಿ.ಶ. ೧೪೩೧ರ ಒಂದು ಶಾಸನವು ಚೌಟ ಸಾಂತೇಯ ಎಂಬ ಅರಸನು ಬಂಗಾರದ ನಾಣ್ಯಗಳನ್ನು ಕಾಣಿಕೆಯಾಗಿ ನೀಡಿದ ಎಂದು ಹೇಳಲಾಗಿದೆ. ಸಾಂತೇಯನು ಆಗ ಆಳ್ವಿಕೆ ಮಾಡುತ್ತಿದ್ದ ಚೌಟ ವಂಶಕ್ಕೆ ಸೇರಿದವ. ಇದು ಸತ್ಯವಾಗಿದ್ದರೆ, ಸಾಂತೇಯನು ಚೌಟ ವಂಶದ ೨ನೇ ಅರಸನಾಗಿದ್ದ ಎಂದು ಊಹಿಸಲಾಗಿದೆ. ಆದರೆ ಇವನ ಬಗ್ಗೆ ‘ಇತಿಹಾಸ’ದಲ್ಲಿ ಯಾವ ಉಲ್ಲೇಖವನ್ನೂ ಮಾಡಿಲ್ಲ. ಚೌಟರ ಮುಖ್ಯಸ್ಥರಲ್ಲೋರ್ವನಾದ ಜೋಗಿ ಒಡೆಯನೆಂಬಾತನು, ಜುಗಾದಿ ಕುಂಡಾಲನೆಂಬವನಿಗೆ ಭೂಮಿಯನ್ನು ದಾನವಾಗಿ ನೀಡಿದ್ದನೆಂದು ಕ್ರಿ.ಶ. ೧೪೩೪ರ, ಮಂಗಳೂರು ತಾಲೂಕಿನ ಅಡ್ಡೂರ್ ಶಾಸನದಿಂದ ತಿಳಿದು ಬರುತ್ತದೆ. ಈ ಜೋಗಿ ಒಡೆಯನ್ನು, ಚೌಟ ಅರಸರಲ್ಲಿ ೩ನೇಯವನು ಎಂದು ತಿಳಿಯಲಾಗಿದೆ. ವಿಕ್ರು ಚೌಟನು ಕ್ರಿ.ಶ. ೧೪೧೦ರ ತನಕ ಆಳ್ವಿಕೆ ಮಾಡಿದ್ದರೆ, ಜೋಗಿ ಒಡೆಯನಿಗೆ ನಂತರ ೨೫ ವರ್ಷಗಳನ್ನು (ಕ್ರಿ.ಶ ೧೪೧೦ – ೧೪೩೫) ನೀಡಿದ್ದರೆ, ಸಾಂತೇಯ ಚೌಟನು ನಂತರ ಕ್ರಿ.ಶ. ೧೪೩೫ರಿಂದ ೧೪೫೫ರ ತನಕ ಆಡಳಿತ ನಡೆಸಿದ್ದ ಎಂದು ಹೇಳಬಹುದು. ಆದರೆ ಐಗಳ್‌ರವರು ಈ ಬಗ್ಗೆ ಮೌನವಾಗಿದ್ದಾರೆ.

೪) ಕ್ರಿ.ಶ. ೧೪೬೫ರ ಒಂದು ಶಾಸನದ ಪ್ರಕಾರ ಪುತ್ತಿಗೆಯಿಂದ ಆಳುತ್ತಿದ್ದ ಆಲ್ಲಪ್ಪಶೇಖ ಚೌಟನು; ದೇವರುಶೇಖ, ಬಿಮ್ಮಣ್ಣಶೇಖ ಮತ್ತು ಬೊಮ್ಮಣ್ಣರೆಂಬ ತನ್ನ ೩ ಸಹೋದರರೊಂದಿಗೆ ಪೊಳಲಿ ದೇವಸ್ಥಾನಕ್ಕೆ ಭೂಮಿಯನ್ನು ದಾನವಾಗಿ ನೀಡಿದ್ದ. ಹೀಗೇ ಪೊಳಲಿ ದೇವಿಗೆ ಕೊಟ್ಟ ಭೂಮಿಯ ಆಡಳಿತವನ್ನು ಮಂಜಣ್ಣಶೇಖ ಮತ್ತು ಅವನ ಸಹೋದರಿಯರಿಗೆ ವಹಿಸಿಕೊಡಲಾಗಿತ್ತು. ಆಲ್ಲಪ್ಪಶೇಖನು ಕಡಿಮೆಪಕ್ಷ ೨೦ ವರ್ಷಕಾಲ ಆಳಿದ್ದರೂ ಅವನು ಕ್ರಿ.ಶ. ೧೪೫೫ರಿಂದ ೧೪೭೫ರ ತನಕ ಆಳ್ವಿಕೆ ಮಾಡಿದ್ದ ಎಂದು ಊಹಿಸಬಹುದು. ಆದರೆ ಐಗಳ್‌ರವರ ‘ಇತಿಹಾಸ’ ಪುಸ್ತಕದಲ್ಲಿ ಇವನ ಬಗ್ಗೆ ಉಲ್ಲೇಖವಿಲ್ಲ.

೫) ಆಲ್ಲಪ್ಪಶೇಖನ ನಂತರ ಅವನ ತಮ್ಮ ದೇವರುಶೇಖ (ದೇವರಾಯ) ನು ಮುಂದಿನ ೨೫ ವರ್ಷಕಾಲ ಅಂದರೆ ಕ್ರಿ.ಶ. ೧೫೦೦ರ ತನಕ ಆಳ್ವಿಕೆ ಮಾಡಿದ್ದ ಎಂದು ಊಹಿಸುವುದು ತಪ್ಪಾಗಲಾರದು.

೬) ತಿರುಮಲರಾಯ ಚೌಟ IIIನು ಕ್ರಿ.ಶ. ೧೫೧೦ರಲ್ಲಿ ಸಿಂಹಾಸನವೇರಿದನು ಎಂದು ಐಗಳ್‌ರವರು ಹೇಳಿದ್ದಾರೆ. ಆದರೆ ಒಂದು ಶಾಸನದ ಪ್ರಕಾರ ಈ ಅರಸನು ಕ್ರಿ.ಶ. ೧೫೦೭ರಲ್ಲಿ ಪೊಳಲಿ ದೇವಸ್ಥಾನಕ್ಕೆ ದಾನ ನೀಡಿದ್ದ. ಅಂದರೆ ಕಡಿಮೆಪಕ್ಷ ಕ್ರಿ.ಶ. ೧೫೦೭ರಲ್ಲಿ ತಿರುಮಲರಾಯ ಪಟ್ಟಕ್ಕೆ ಬಂದಿದ್ದನೆಂದು ಇದರಿಂದ ತಿಳಿಯಬಹುದು. ಅವನು ಕ್ರಿ.ಶ. ೧೫೦೦ರಲ್ಲಿ ಪಟ್ಟವೇರಿದ್ದನೆಂದು ಹೇಳಬಹುದು. ಅವನು ರಾಜಕೀಯವಾಗಿ ಬಹು ಬಲಿಷ್ಠನಾಗಿದ್ದನೆಂದು ತಿಳಿಯಬಹುದು. ಏಕೆಂದರೆ ಅವನ ಬಗ್ಗೆ ಮಾಹಿತಿ ನೀಡುವ ಹಲವು ಶಾಸನಗಳಿದ್ದು, ಪರಸ್ಪರರ ರಕ್ಷಣೆಗೋಸ್ಕರ ಇವನು ನೆರೆಹೊರೆಯ ಇತರ ಅರಸರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಎಂಬುದನ್ನು ಇವು ದೃಢಪಡಿಸಿವೆ. ವಿಜಯನಗರದ ಅರಸನಾದ ಕೃಷ್ಣದೇವರಾಯನ ಆಸ್ಥಾನಕ್ಕೆ ಭೇಟಿ ನೀಡಿ ಅವನಿಂದ ಸನ್ಮಾನ ಪಡೆದ ಅರಸ ಇವನೇ ಆಗಿರಬೇಕು. ಐಗಳ್‌ರವರು ಹೇಳಿದಂತೆ ಭೋಜರಾಯ II ಅಲ್ಲ. ಏಕೆಂದರೆ ಕೃಷ್ಣದೇವರಾಯನು ಸಿಂಹಾಸನ ವೇರುವ (ಕ್ರಿ.ಶ. ೧೫೦೯) ಎರಡು ವರ್ಷ ಮೊದಲು (ಕ್ರಿ.ಶ. ೧೫೦೭) ತಿರುಮಲ ಚೌಟನು ಪಟ್ಟಕ್ಕೆ ಬಂದಿದ್ದ. ಅಲ್ಲದೇ ತಿರುಮಲರಾಯನು ಕ್ರಿ.ಶ. ೧೫೨೫ರ ತನಕ ಆಳಿದ್ದ. ಮತ್ತು ಅವನ ನಂತರ ತುಳುವರಸ ಚೌಟನು ಸಿಂಹಾಸನವೇರಿದ್ದ. ತಿರುಮಲರಸ, ಕಿನ್ನಿಕ ಹೆಗ್ಗಡೆ ಮತ್ತು ಸ್ಥಳೀಯ ಇನ್ನಿಬ್ಬರು ನಾಯಕರೊಂದಿಗೆ, ತುಳುವರಸ ಚೌಟನು ಮಾಡಿಕೊಂಡಿದ್ದ ಒಂದು ಒಪ್ಪಂದದ ಬಗ್ಗೆ ಉಲ್ಲೇಖವಿರುವ ಶಾಸನಗಳಿವೆ. ಅವನ ನಂತರ ತಿರುಮಲರಸ ಚೌಟನು ಅಧಿಕಾರಕ್ಕೆ ಬಂದಿದ್ದ ಎಂದು ಕಾರ್ಕಳದಲ್ಲಿ ಸಿಕ್ಕಿರುವ ಕ್ರಿ.ಶ. ೧೫೪೩ರ ಒಂದು ತಾಮ್ರಶಾಸನದಿಂದ ತಿಳಿದು ಬರುತ್ತದೆ. ಆಗ ಕಳಸ – ಕಾರ್ಕಳ ರಾಜ್ಯದಲ್ಲಿ ಅವನ ಸಮಕಾಲೀನ ಅರಸನಾದ ಪಾಂಡ್ಯಪ್ಪ ಒಡೆಯನೊಂದಿಗಿನ ಇವನ ಸಂಬಂಧದ ಬಗ್ಗೆಯೂ ಇದು ಬೆಳಕು ಚೆಲ್ಲಿದೆ.

೭) ಕ್ರಿ.ಶ. ೧೫೭೧ರ ಒಂದು ಶಾಸನ ಪ್ರಕಾರ ಆ ವರ್ಷ ಲೋಕದೇವಿ ಅಲಿಯಾಸ್ ಚೌಟ ಎಂಬಾಕೆಯು ಚೌಟ ವಂಶದ ಅರಸಳಾಗಿದ್ದಳು. ಆದರೆ ಕ್ರಿ.ಶ. ೧೫೪೪ರಿಂದ ೧೫೮೨ರ ಮಧ್ಯೆ ಅಬ್ಬಕ್ಕದೇವಿ II ಚೌಟರು ಆಳುತ್ತಿದ್ದಳು ಎಂದು ಐಗಳ್‌ರವರು ಹೇಳಿದ್ದಾರೆ. ಆದರೆ ಈ ಇಬ್ಬರು ಕೂಡ ಒಬ್ಬಾಕೆಯೇ ಎಂದು ತಿಳಿದಿಲ್ಲ. ಅವರು ಸಹೋದರಿಯರಾಗಿರಬಹುದು. ಅಲ್ಲದೇ ಲೋಕದೇವಿಯ ಸಹೋದರಿ ಪದುಮಲದೇವಿ ಎಂಬಾಕೆ ಮೃತಪಟ್ಟ ಬಗ್ಗೆ ಮತ್ತು ಅವಳ ಸ್ಮರಣಾರ್ಥ ಮೂಡಬಿದರೆಯ ಸಮೀಪವಿರುವ ಗುರುಗಳ ಬಸದಿಯ ಪಾರ್ಶ್ವನಾಥನ ಸನ್ನಿಧಿಯಲ್ಲಿ ನಡೆಯುವ ಧಾರ್ಮಿಕ ವಿಧಿಯನ್ನು ನಡೆಸಿಕೊಂಡು ಹೋಗುವ ಖರ್ಚಿಗಾಗಿ ಭೂಮಿಯನ್ನು ದಾನ ಮಾಡಲಾಯಿತೆಂಬುದನ್ನು ಈ ಶಾಸನ ತಿಳಿಸುತ್ತದೆ. ಈ ಮಧ್ಯೆ ಅಬ್ಬಕ್ಕದೇವಿಯ ಹೆಸರು ಕೂಡ ಒಂದು ತಾಮ್ರಶಾಸನದಲ್ಲಿ ಕಂಡು ಬಂದಿದೆ. ಅವಳ ಸಹೋದರಿ ಪದುಮಲದೇವಿಯ ಸ್ಮರಣಾರ್ಥ ಬಿದುರೆಯ ಬಸದಿಯಲ್ಲಿ ನಡೆಯುವ ಆರಾಧನೆಗಾಗಿ, ಕಾರ್ಕಳ ತಾಲೂಕಿನ ಮಿಜಾರು ಮಾಗಣೆಯಲ್ಲಿ ಮರಕಟ ಎಂಬಲ್ಲಿ ಒಂದು ಸ್ಥಳವನ್ನು ಕೊಟ್ಟಿರುವ ಬಗ್ಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಈ ಶಾಸನ ತಿಳಿಸುತ್ತದೆ. ಪದುಮಲದೇವಿಯು; ಅಬ್ಬಕ್ಕದೇವಿ ಮತ್ತು ಲೋಕದೇವಿಯರಿಬ್ಬರ ಸಹೋದರಿಯಾದುದರಿಂದ ಈ ಇಬ್ಬರು ಅರಸಿಯರು ಕೂಡ ಸಹೋದರಿಯರಾಗಿದ್ದು ಬೇರೆ ಬೇರೆ ಪ್ರಾಂತ್ಯದ ಮೇಲೆ ಅಧಿಕಾರ ಹೊಂದಿದ್ದರು ಎಂದು ತಿಳಿಯಬಹುದು. ಅಬ್ಬಕ್ಕದೇವಿ ಉಳ್ಳಾಲದಲ್ಲಿಯೂ, ಲೋಕದೇವಿಯು ಪುತ್ತಿಗೆಯಲ್ಲಿಯೂ ಆಳಿಕೊಂಡಿದ್ದರು ಎಂದು ಊಹಿಸಬಹುದು. ಇಬ್ಬರು ಕೂಡ ಕ್ರಿ.ಶ. ೧೫೪೪ರಲ್ಲಿ ಏಕಕಾಲದಲ್ಲಿ ಆಳುತ್ತಿದ್ದರು. ಲೋಕದೇವಿಗಿಂತ ಹಿಂದೇ ಪದುಮಲದೇವಿಯಿದ್ದಳು ಎಂಬುದಕ್ಕೆ ಯಾವುದೇ ದಾಖಲೆ ಆಧಾರಗಳಿಲ್ಲದಿರುವುದರಿಂದ ಪದುಮಲದೇವಿಯು, ಲೋಕದೇವಿಗಿಂತ ಹಿಂದೇ ಪಟ್ಟದಲ್ಲಿದ್ದಳು ಎಂದು ಡಾ| ಎಸ್.ಯು. ಕಾಮತ್‌ರವರು ಹೇಳಿರುವುದು ಸರಿಯಲ್ಲವೆಂದು ಡಾ| ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿಂದ ನಂತರ ಚೌಟರ ರಾಜ್ಯವು, ಉಳ್ಳಾಲ ಮತ್ತು ಪುತ್ತಿಗೆ ರಾಜಧಾನಿಯಾಗಿರುವ ಎರಡು ಪ್ರತ್ಯೇಕ ಸ್ವತಂತ್ರ ರಾಜ್ಯಗಳಾಗಿ ವಿಭಜನೆಯಾಯಿತು. ಪೋರ್ತುಗೀಜ್ ದಾಖಲೆಗಳು ಉಳ್ಳಾಲದ ಚೌಟರ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡುವ ಬಹಳ ಪ್ರಾಮುಖ್ಯ ಮೂಲ.

ಉಳ್ಳಾಲದ ರಾಣಿಯಿಂದ ಬರಬೇಕಿದ್ದ ಬಾಕಿಯಿದ್ದ ಕಪ್ಪವನ್ನು ವಸೂಲು ಮಾಡಲು ಡಾನ್ ಆಲ್ವಾರೋ ಡಿ ಸಿಲ್ವೇರಾ ಎಂಬ ಪೋರ್ತುಗೀಜ್ ಸೇನಾಧಿ ಪತಿಯನ್ನು ಕ್ರಿ.ಶ. ೧೫೫೬ರಲ್ಲಿ ಗೋವದಿಂದ ಉಳ್ಳಾಲಕ್ಕೆ ಸೈನ್ಯ ಸಹಿತ ಕಳುಹಿಸಲಾಯಿತೆಂದು ಫೆರಿಯ ವೈ. ಸೋಜಾ ಎಂಬಾತನು ಹೇಳಿದ್ದಾನೆ. ಈ ದಾಳಿಯ ಸಮಯದಲ್ಲಿ ಮಂಗಳೂರನ್ನು ದೋಚಲಾಯಿತು. ಅಲ್ಲದೇ ಶಾಂತಿ ಒಪ್ಪಂದ ಮಾಡಿಕೊಳ್ಳುವಂತೆ ರಾಣಿಯನ್ನು ಒತ್ತಾಯದಿಂದ ಮಣಿಸಲಾಯಿತೆಂದು ಇದರಲ್ಲಿ ಹೇಳಲಾಗಿದೆ. ಈ ರಾಣಿಯ ಹೆಸರು ಬುಕಾದೇವಿ ಚೌಟ ಎಂದಿದ್ದು, ಅಂದರೆ ಅಬ್ಬಕ್ಕದೇವಿ ಚೌಟ ಎಂದಿರಬೇಕು. ಅವಳು ಬಹಳ ಶಕ್ತಿಶಾಲಿ ರಾಣಿಯಾಗಿದ್ದಳು ಮತ್ತು ಪೋರ್ತುಗೀಜರ ವಿರುದ್ಧ ದ್ವೀಷದಿಂದ ಕಾದಾಡಿದ್ದಳು ಎಂಬುದು ನಿರ್ವಿವಾದ. ಪೋರ್ತುಗೀಜರ ಪಾವತಿಸುತ್ತಿದ್ದ ಕಪ್ಪವನ್ನು ಅವಳು ತಿರುಗಿ ನಿಲ್ಲಿಸಿದ್ದುದರಿಂದ ಕ್ರಿ.ಶ. ೧೫೬೭ರಲ್ಲಿ ಮತ್ತೊಮ್ಮೆ ಅವರಿಬ್ಬರ ಮಧ್ಯೆ ನಡೆದ ಯುದ್ಧದಲ್ಲಿ ಅಬ್ಬಕ್ಕದೇವಿಯು ಸೋತು ಪೋರ್ತುಗೀಜರೊಂದಿಗೆ ಅವರು ಮಾಡಿಕೊಂಡ ಒಂದು ಹೊಸ ಒಪ್ಪಂದದನ್ವಯ ಹೆಚಚಿನ ಕಪ್ಪ ಪಾವತಿ ಮಾಡಲು ಅವಳು ಒಪ್ಪಿಕೊಂಡಳು. ಅನಂತರದ ಆಕೆಯ ಸಾಹಸದ ಬಗ್ಗೆಯೂ ಪೋರ್ತುಗೀಜ್ ದಾಖಲೆಗಳಲ್ಲಿ ಉಲ್ಲೇಖವಿದೆ. ಪೋರ್ತುಗೀಜರ ಮೇಲೆ ರಾತ್ರಿವೇಳೆ ಆಶ್ಚರ್ಯಕರವಾಗಿ ಅಬ್ಬಕ್ಕನ ಸೈನಿಕರು ಪೋರ್ತುಗೀಜರ ಮೇಲೆ ರಾತ್ರಿವೇಳೆ ಆಶ್ಚರ್ಯಕರವಾಗಿ ದಾಳಿಮಾಡಿ ಹಲವರನ್ನು ಕೊಂದು ಹಾಕಿದರು. ಇದಕ್ಕೆ ಪ್ರತೀಕಾರವೆಂಬಂತೆ ಮರುದಿನ ಪೋರ್ತುಗೀಜರು ಮಂಗಳೂರು ನಗರವನ್ನು ಸುಟ್ಟು ಹಾಕಿ ಅದರ ಸುತ್ತ ರಕ್ಷಣೆಯನ್ನು ಹೆಚ್ಚಿಸಿದರು. ಅಬ್ಬಕ್ಕ ನಗರದಿಂದ ಪಲಾಯನ ಮಾಡಿದಳು. ಇದೇ ಪೋರ್ತುಗೀಜ ಮಾಹಿತಿ ಪ್ರಕಾರ ಕ್ರಿ.ಶ. ೧೫೯೪ರಲ್ಲಿ ಉಳ್ಳಾಲದ ರಾಣಿಯು ತನ್ನ ರಾಜಧಾನಿಯ ಸುತ್ತ ಕೋಟೆಕಟ್ಟಿ ಪೋರ್ತುಗೀಜ ದಾಳಿಯ ವಿರುದ್ಧ ಪಡೆಯನ್ನು ಅದರ ರಕ್ಷಣೆಗಾಗಿ ನಿಯೋಜಿಸಿದಳು. ಅಲ್ಲದೆ ಪೋರ್ತುಗೀಜರ ವಿರುದ್ಧ ಸಂಯುಕ್ತ ದಾಳಿ ಮಾಡಲು ಕಲ್ಲಿಕೋಟೆಯ ಝಾಮೋರಿನ್ ಅರಸರೊಂದಿಗೂ ಒಪ್ಪಂದ ಮಾಡಿಕೊಂಡಿದ್ಳು, ಮತ್ತು ಕ್ರಿ.ಶ. ೧೫೯೮ ಅವಳ ಆಳ್ವಿಕೆಯ ಕೊನೆಯ ವರ್ಷವೆಂದು, ಡ್ಯಾನ್ಸರ್ಸ್ ಎಂಬಾತನು ಬರೆದ “ಪೋರ್ತುಗೀಜ ಇನ್ ಇಂಡಿಯ” (ಸಂಪುಟ I ಮತ್ತು II ) ಮುಂತಾದ ಪೋರ್ತುಗೀಜ ದಾಖಲೆಗಳು ತಿಳಿಸುತ್ತವೆ, ಎಂದು ಡಾ| ಗುರುರಾಜ ಭಟ್ಟರು ಹೇಳಿದ್ದಾರೆ.

೮) ಕ್ರಿ.ಶ. ೧೫೭೮ರ ಎರಡು ಶಾಸನಗಳ ಪ್ರಕಾರ, ಲೋಕದೇವಿಯ ನಂತರ ಚಿಕ್ಕರಾಜರಸನು ಚೌಟವಂಶದ ಪುತ್ತಿಗೆ ಶಾಖೆಯ ಅರಸನಾಗಿ ಸಿಂಹಾಸನವೇರಿದ. ಅವನು ಕ್ರಿ.ಶ. ೧೬೦೬ಕ್ಕೆ ಅಧಿಕಾರಕ್ಕೆ ಬಂದು ಕ್ರಿ.ಶ. ೧೬೨೮ರ ತನಕ ಆಳಿದ್ದ ಎಂದು ಐಗಳ್‌ರವರು ಹೇಳಿರುವುದು ಚಾರಿತ್ರಿಕ ದೃಷ್ಟಿಯಲ್ಲಿ ಸತ್ಯವಲ್ಲ. ವನು ಕ್ರಿ.ಶ. ೧೬೦೦ರ ತನಕ ಮಾತ್ರ ಆಳ್ವಿಕೆ ಮಾಡಿದ್ದಾನೆಂಬುದು ಡಾ| ಗುರುರಾಜ ಭಟ್ಟರ ಅಭಿಪ್ರಾಯ.

 

[1] Prof. P.G. Bhatt – ‘Tuluva’ P. 71.

[2] Ibid, PP. 71.