. ೧ನೇ ಅಬ್ಬಕ್ಕದೇವಿ (ಕ್ರಿ.ಶ. ೧೨೮೩ – ೧೩೧೬):

ತಿರುಮಲರಾಯನು ಕಾಲವಾದ ನಂತರ ಅವನ ಸೊಸೆ ಅಬ್ಬಕ್ಕದೇವಿಯು ಶಾ.ಶ. ೧೨೦೫ನೇ ಸ್ವಭಾನು ಸಂ|ದ ಮಾಘ ಬ| ೧ರಲ್ಲಿ ಪಟ್ಟಕ್ಕೆ ಬಂದಳು. ಶಾ.ಶ. ೧೨೩೯ರ ವರೆಗೆ ಆಳಿದಳು.

. ೧ನೇ ಭೋಜರಾಯ (ಕ್ರಿ.ಶ. ೧೩೧೬ – ೧೩೩೫):

ಅಬ್ಬಕ್ಕದೇವಿಯ ಕಾಲಾನಂತರ ಅವಳ ಮಗ ಭೋಜರಾಯನು ಶಾ.ಶ. ೧೨೩೮ನೇ ನಳ ಸಂ|ದ ಕಾರ್ತಿಕ ಶು| ೧೫ರಲ್ಲಿ ಪಟ್ಟಕ್ಕೆ ಬಂದು ೩೯ ವರ್ಷ ಆಳಿದನು. ಈ ಭೋಜರಾಯನು ಮೂಲಿಕೆ ಸಾವಂತನ ಮಗಳನ್ನು ಮದುವೆಯಾಗಿದ್ದನು. ಅನಂತರ ಇವರೊಳಗೆ ಜಗಳ ಹುಟ್ಟಿ ಎರಡು ಮನೆತನದವರಿಗೂ ಪರಸ್ಪರ ದ್ವೇಷವುಂಟಾಯಿತು.

. ೧ನೇ ಪದುಮಲಾದೇವಿ (ಕ್ರಿ.ಶ. ೧೩೩೫ – ೧೩೮೨):

ಭೋಜರಾಯನ ತರುವಾಯ ಅವನ ಸೊಸೆ ಪದುಮಲಾದೇವಿಯು ಶಾ.ಶ. ೧೨೭೭ನೇ ಮನ್ಮಥ ಸಂ|ದ ಚೈತ್ರ ಶುದ್ಧ ೫ನೇ ದಿವಸ ಪಟ್ಟಕ್ಕೆ ಬಂದಳು.

. ೧ನೇ ಚನ್ನಮ್ಮದೇವಿ (ಕ್ರಿ.ಶ. ೧೩೮೨ – ೧೪೦೩):

ಪದುಮಲಾದೇವಿಯ ನಂತರ ಅವಳ ಮಗಳು ಚನ್ನಮ್ಮದೇವಿಯು ಶಾ.ಶ. ೧೩೦೪ನೇ ದುಂದುಭಿ ಸಂ|ದ ಆಷಾಢ ಬ| ೯ರಲ್ಲಿ ಪಟ್ಟಕ್ಕೆ ಬಂದು ಶಾ.ಶ. ೧೩೨೫ರ ತನಕ ಆಳಿದಳು.

. ೨ನೇ ಚನ್ನರಾಯ (ಕ್ರಿ.ಶ. ೧೪೦೩ – ೧೪೭೦):

ಚನ್ನಮ್ಮದೇವಿಯ ಮರಣಾನಂತರ ಅವಳ ತಮ್ಮ ಚನ್ನರಾಯನು ಶಾ.ಶ. ೧೩೨೫ನೇ ಸ್ವಭಾನು ಸಂ|ದ ಶ್ರಾವಣ ಬ| ೫ನೇ ದಿವಸ ಪಟ್ಟಕ್ಕೆ ಬಂದನು. ಈ ಅರಸನ ಹೆಸರು ಅಲ್ಲಪ್ಪಶೇಖ. ಪಟ್ಟದ ಹೆಸರು ಚನ್ನರಾಯ. ಈ ಅರಸನ ಕಾಲದಲ್ಲಿ ನಂದಾವರದ ಬಂಗರಾಜನಿಗೂ, ನೀಲೇಶ್ವರದ ಮೂತರರಸನಿಗೂ ಯುದ್ಧ ನಡೆದು ಬಂಗರಾಜನು ಸೋತುಹೋಗುವ ಸಂದರ್ಭ ಬಂದಾಗ ಚನ್ನರಾಯನ ಸಹಾಯವನ್ನು ಅಪೇಕ್ಷಿಸಿದ. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಚನ್ನರಾಯನು ಕೂಡಲೇ ಪುತ್ತಿಗೆಯಿಂದ ತನ್ನ ಸೈನ್ಯವನ್ನು ಕಳುಹಿಸಿದಾಗ ಬಂಗರಾಜನಿಗೆ ಜಯವಾಯಿತು. ಹೀಗೇ ಸಹಾಯ ಮಾಡಿದ್ದಕ್ಕಾಗಿ ಬಂಗರಾಜನು ತನ್ನ ರಾಜ್ಯದಲ್ಲಿ ಮಣೇಲ, ಪೇಜಾವರ ಮತ್ತು ಮುಡುಕೂರು (ಮುಂಡ್ಕೂರು) ಸೀಮೆಗಳನ್ನು ಚನ್ನರಾಯನಿಗೆ ಬಿಟ್ಟುಕೊಟ್ಟ. ಈ ಚನ್ನರಾಯರಸನಿಗೆ ದೇವರಶೇಖ, ಬಿರ್ಮಣಶೇಕ ಮತ್ತು ಹಮ್ಮಣಶೇಖ ಎಂಬ ೩ ಮಂದಿ ತಮ್ಮಂದಿರಿದ್ದರು. ಮಣೇಲ ಸಾವಿರ ಸೀಮೆಯ ಪೊರಲದೇವಿಯ (ಪೊಳಲಿ ರಾಜರಾಜೇಶ್ವರಿ) ದೇವಸ್ಥಾನದ ಆಯವ್ಯಯವನ್ನು ಚೌಟರೇ ನೋಡಿಕೊಂಡು ಬರಬೇಕೆಂದು, ಚೌಟ ಅರಸನು ಪೊಳಲಿಗೆ ಬರುವಾಗ ಅರ್ಕುಳ ೪೦೦ ಸೈನ್ಯದ ಸೇನಾಧಿಪತಿಯೂ, ಅಮ್ಮುಣಜೆ ಗುತ್ತಿನ ೬೦೦ ಸೈನ್ಯದ ಸೇನಾಧಿಪತಿಯೂ, ಮಿಜಾರು ಗಡಿಗೆ ಬಂದು ನಿಂತಿರಬೇಕೆಂದು, ಚೌಟರಾಜನ ಅಪ್ಪಣೆ ವಿನಹ ಪೊಳಲಿ ದೇವಸ್ಥಾನದಲ್ಲಿ ಧ್ವಜಾರೋಹಣವಾಗಲಿ, ಚಂಡಾಗಲೀ ಆಗಕೂಡದೆಂದೂ, ಪುತ್ತಿಗೆ ಸೋಮನಾಥ ಬೆಟ್ಟದ ಕಾಳಪ್ಪ ಶೆಟ್ಟಿಯ ಸಂತತಿಯವರು, ಪೊಳಲಿ ಅಮುಣ್ಜೆ ಬಂಗಮ ಜನ ಸಂತತಿಯವರು, ಮುಡುಕೂರು ಚಿನ್ನದ (ಇನ್ನದ) ಗುತ್ತಿನ ಪಾರಕಾಂತು ಶೆಟ್ಟಿಯ ಸಂತತಿಯವರು, ಪೇಜಾವರ ಸೀಮೆಯ ತೋಕೂರು ಗುತ್ತಿನ ಮಾರಲಶೇಖನ ಸಂತತಿಯವರು, ಬಂಗರಾಜನಿಂದ ಚೌಟರಾಜನ ಸೀಮೆಗೆ ಕೂಡಿಸಿದ ಈ ಮಣೇಲ, ಪೇಜಾವರ ಮತ್ತು ಮುಡುಕೂರು ಸೀಮೆಗಳಲ್ಲಿ ಯಾವ ತರದ ದಂಗೆ ಮುಂತಾದ್ದು ಏಳದ ಹಾಗೆ ಜವಾಬ್ದಾರರಾಗಿರಬೇಕೆಂದು ಶಾ.ಶ. ೧೩೩೨ನೇ ವಿಕೃತಿ ಸಂ|ದಲ್ಲಿ ಆದ ಕರಾರು ಮಂಗಳೂರು ತಾಲೂಕಿನ ಕರಿಯಂಗಳ ಗ್ರಾಮದಲ್ಲಿ ಪಲ್ಲಿಪಾಡಿ ಎಂಬಲ್ಲಿ ಒಂದು ಆಲದ ಮರದ ಹತ್ತಿರವಿರುವ ೨ ಶಾಸನಗಳಲ್ಲಿದೆ.

ಈ ಮೇಲಿನ ೩ ಸೀಮೆಗಳು ತನ್ನ ಅಧೀನಕ್ಕೆ ಬಂದ ಕೂಡಲೇ, ಚನ್ನರಾಯನು ಪೇಜಾವರಕ್ಕೆ ಹೋಗಿ ಪ್ರಜೆಗಳನ್ನೆಲ್ಲಾ ಕರೆಯಿಸಿ ಅವರಿಗೆ ಉಡಿಗೆ ಉಚಿತಗಳನ್ನು ಕೊಡಿಸಿ ಅಲ್ಲಿಯ ದೇವಸ್ಥಾನಗಳಿಗೆ ಉಂಬಳಿ ಉತ್ತಾರ ಬಿಟ್ಟು ಅಲ್ಲಿಂದ ಪುತ್ತಿಗೆಗೆ ಹೊರಟನು. ಬರುವಾಗ ದಾರಿಯಲ್ಲಿ ನೆಲ್ಲಿತೀರ್ಥ ಎಂಬಲ್ಲಿ ಚೌಬಾಲಿ ಋಷಿಯ ಆಶ್ರಮವಿದ್ದ ಸ್ಥಳದಲ್ಲಿರುವ ಗುಹ್ಯತೀರ್ಥದಲ್ಲಿ ಸ್ನಾನಮಾಡಿ ಆ ಋಷಿಯು ಪ್ರತಿಷ್ಠೆಮಾಡಿದ್ದ ಸೋಮನಾಥೇಶ್ವರ ದೇವರ ದರ್ಶನ ಮಾಡಿಕೊಂಡು ನೆಲ್ಲಿತೀರ್ಥ ಮತ್ತು ಕರಂಬಾರು ಎಂಬ ೨ ಗ್ರಾಮಗಳನ್ನು ಆ ದೇವಸ್ಥನಕ್ಕೆ ಉತ್ತಾರ ಬಿಟ್ಟು ಮಿಜಾರಿಗೆ ಬಂದನು. ಅಲ್ಲಿ ಮಿಜಾರು ಮಾಗಣೆ ಇರುವೈಲಿಗೆ ಬಂದು ಅಲ್ಲಿ ಜಲದುರ್ಗಿ ದೇವರ ದರ್ಶನ ಮಾಡಿ ದೇವತಾ ಸೇವೆ ನಡೆಯುವ ಬಗ್ಗೆ ಉತ್ತಾರವನ್ನು ಬಿಟ್ಟು, ಅಲ್ಲಿಂದ ಪೊಳಲಿಗೆ ಹೋಗಿ ಅಲ್ಲಿ ಪುಳಿನೀ (ಪುಲಾನೀ ಗುರುಪುರ) ನದಿತೀರದಲ್ಲಿ ಹಿಂದೆ ಕೇರಳ ದೇಶದ ಸುರಥರಾಯನು ಪ್ರತಿಷ್ಠಿಸಿದ ರಾಜರಾಜೇಶ್ವರಿ ಅಮ್ಮನವರ ದರ್ಶನ ಮಾಡಿಕೊಂಡು, ಆ ದೇವಸ್ಥಾನದ ದೇವತಾಸೇವೆ ನಡೆಯುವ ಹಾಗೆ ಉಂಬಳಿ ಉತ್ತಾರವನ್ನು ಬಿಟ್ಟು ಮಳಲಿ ಸೀಮೆಯ ಪ್ರಜೆಗಳನ್ನು ಕರೆಯಿಸಿ ಅರು ಭಂಡಾರಕ್ಕೆ ತೆರಬೇಕಾದ ಕಪ್ಪವನ್ನೂ ನಿಶ್ಚಯಿಸಿದನು. ಅಲ್ಲಿಂದ ಅಮ್ಮುಣ್ಜೆ ವರದೇಶ್ವರ ವಿನಾಯಕ ದೇವರ ದರ್ಶನ ಮಾಡಿ ನೇತ್ರಾವತಿಯನ್ನು ದಾಟಿ ಅಮ್ಮೆಂಬಳಕ್ಕೆ ಹೋಗಿ ಅಲ್ಲಿ ಹಿಂದೆ ಕುಂಡಲೀ ಮುನೀಶ್ವರನು ಕುಂಡಲೀ ಪರ್ವತದಲ್ಲಿ ಪ್ರತಿಷ್ಠಿಸಿದ ಸೋಮನಾಥ ದೇವರ ಜೀರ್ಣವಾದ ದೇವಸ್ಥಾನವನ್ನು ಪುನಃ ಕಟ್ಟಿಸಲು ಅಪ್ಪಣೆ ನೀಡಿ, ಆ ದೇವಸ್ಥಾನಕ್ಕೂ ಉಂಬಳಿ ಬಿಟ್ಟು ಮೂಲಸ್ಥಾನವಾದ ಉಳ್ಳಾಲ – ಸೋಮೇಶ್ವರಕ್ಕೆ ಹೋಗಿ ಆ ಸೀಮೆಯವರು ಕೊಡತಕ್ಕ ಕಂದಾಯವನ್ನು ನಿರ್ಣಯಿಸಿ ಪುತ್ತಿಗೆಗೆ ಬಂದನು. ಈ ಅರಸನ ಕಾಲದಿಂದ ಚೌಟರ ಸೀಮೆಯು ಅಭಿವೃದ್ಧಿ ಹೊಂದಿತು. ಚನ್ನರಾಯನು ತನ್ನ ರಾಜ್ಯದ ಗಡಿಯಾದ ಅರ್ಕುಳದಲ್ಲಿ ನಾಗೂರಾಳದ ಬೀಡಿನ ಹತ್ತಿರ ಒಂದು ಕೋಟೆಯನ್ನು ಕಟ್ಟಿಸಿ ಅರ್ಕುಳ ಗ್ರಾಮವನ್ನು ಆ ಗ್ರಾಮದ ದೈವಕ್ಕೆ ಉಂಬಳಿಯಾಗಿ ಬಿಟ್ಟು ಅದರ ಆಡಳಿತವನ್ನು ಸಂತಾನ ಪಾರಂಪರ್ಯವಾಗಿ ಅವರು ನೋಡಿಕೊಂಡು ಬರಬೇಕೆಂದು ಶಾಸನ ಬರೆಯಿಸಿದ. ಆ ಕೋಟೆಯ ಕುರುಹುಗಳು ಈಗಲೂ ಇವೆ.

ಚನ್ನರಾಯನು ಪುತ್ತಿಗೆಯಿಂದ ಆಳುತ್ತಿದ್ದಾಗ, ಮೂಡಬಿದರೆಯಲ್ಲಿ ಶಾ.ಶ. ೧೩೫೧ನೇ ಸೌಮ್ಯ ಸಂ|ದಲ್ಲಿ (ಕ್ರಿ.ಶ. ೧೪೨೯) ತ್ರಿಭುವನ ತಿಲಕ ಚೈತ್ಯಾಲಯವೆಂಬ ಸಾವಿರ ಕಂಬದ ಹೊಸಬಸದಿಯನ್ನು ಮೂಡಬಿದರೆಯ ಜೈನ ಸೆಟ್ರು ಕಟ್ಟಿಸಿದರು. ಶಾ.ಶ. ೧೩೭೩ನೇ ಪ್ರಜೋತ್ಪತ್ತಿ ಸಂ|ದಲ್ಲಿ (ಕ್ರಿ.ಶ. ೧೪೫೧) ಈ ಹೊಸ ಬಸದಿಯ ಮುಂದುಗಡೆ ಇರುವ ಭೈರಾದೇವಿ ಮಂಟಪವನ್ನು ಕಾರ್ಕಳ ಭೈರವರಾಯನ ಮಗಳಾದ ಭಟ್ಕಳದ ರಾಣಿ ಭೈರಾದೇವಿಯು ಕಟ್ಟಿಸಿದಳು. ಶಾ.ಶ. ೧೩೮೪ನೇ ವಿಷು ಸಂ|ದಲ್ಲಿ ಅದೇ ಹೊಸ ಬಸದಿಯ ೨ನೇ ಮತ್ತು ೩ನೇ ಅಂತಸ್ತುಗಳನ್ನು ಮೂಡಬಿದರೆಯ ಶ್ರೀಮಂತರು ಕಟ್ಟಿಸಿದರು ಎಂದು ಬಸದಿಯ ಗದ್ದಿಗೆ ಮಂಟಪದ ದ್ವಾರದ ಎಡಬಲ ಗೋಡೆಗಳಲ್ಲಿರುವ ಶಾಸನಗಳಿಂದ ತಿಳಿಯುತ್ತದೆ.

೧೦. ೨ನೇ ಭೋಜರಾಯ(ಕ್ರಿ.ಶ. ೧೪೭೦ – ೧೫೧೦):

ಚನ್ನರಾಯನ ತರುವಾಯ ಅವನ ಅಕ್ಕ ಚನ್ನಮ್ಮದೇವಿಯ ಮಗನಾದ ಭೋಜರಾಯನು ಶಾ.ಶ. ೧೩೯೨ನೇ ವಿಕೃತಿ ಸಂ|ರದ ಚೈತ್ರ ಶು. ೧೧ರಲ್ಲಿ ಪಟ್ಟಕ್ಕೆ ಬಂದನು. ಇವನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ಬಿದ್ದುಹೋಗುವ ಸ್ಥಿತಿಯಲ್ಲಿದ್ದು, ಕೆನರಾ ಜಿಲ್ಲೆ ಮತ್ತು ಇತರ ಕೆಲ ಪ್ರದೇಶ ಮಾತ್ರ ಅದರ ಕೈಕೆಳಗಿತ್ತು. ಕ್ರಿ.ಶ. ೧೫೦೯ರಲ್ಲಿ ಕೃಷ್ಣದೇವರಾಯನು ಪಟ್ಟಕ್ಕೆ ಬಂದ ನಂತರ ತನ್ನ ಕೈಕೆಳಗಿನ ಎಲ್ಲಾ ಒಳಅರಸರನ್ನು ಸ್ನೇಹಭಾವ ಮತ್ತು ಉಪಾಯದಿಂದ ವಿಜಯನಗರಕ್ಕೆ ಕರೆಯಿಸಿ ಅವರಿಂದ ವಿಜಯನಗರಕ್ಕೆ ಬರಬೇಕಾದ ಕಪ್ಪವನ್ನು ಕೊಡುವ ಹಾಗೆ ಮಾಡುವಲ್ಲಿ ಸಫಲನಾದನು.

ಭೋಜರಾಯನು ಬಹಳ ಬಲಿಷ್ಠನಾಗಿದ್ದು, ದೊಡ್ಡ ಸೈನ್ಯವನ್ನು ಕೂಡಿಸಿ ತುಳು ರಾಜ್ಯದಲ್ಲಿರುವ ಎಲ್ಲಾ ಜೈನ ಅರಸರಿಗಿಂತಲೂ ಉನ್ನತ ಸ್ಥಿತಿಯಲ್ಲಿದ್ದನು. ಕೃಷ್ಣದೇವರಾಯನು ಭೋಜರಾಯನನ್ನು ಕರೆ ಕಳುಹಿಸಲು, ರಾಜ್ಯಭಾರದ ಕೆಲಸವನ್ನು ತನ್ನ ತಮ್ಮನಾದ ಲಕ್ಷ್ಮಯ್ಯ ಅರಸನಿಗೆ ಕೊಟ್ಟು, ಪ್ರಧಾನಿ ನಾರ್ಣಪ್ಪಯ್ಯನನ್ನು, ಕವುಳಿಗೆ ಶ್ಯಾನಭಾಗ ನಾರ್ಣಪ್ಪಯ್ಯನನ್ನು, ರಾಯಸದ ಗಣತಿಯನ್ನು, ಅವಸರದ ಸುಬ್ರಾಯನನ್ನು, ಸೇನಾಧಿಪತಿಗಳಾದ ಪದುಮನಾಯಕ, ಕೋಟೆನಾಯಕ ಇವರಿಬ್ಬರನ್ನೂ ಇತರ ೫೦ ಜನರನ್ನೂ ಕರೆದುಕೊಂಡು ಪುತ್ತಿಗೆಯಿಂದ ವಿಜಯನಗರಕ್ಕೆ ಹೋದನು. ಅಲ್ಲಿ ಕೃಷ್ಣದೇವರಾಯನ ಭೇಟಿ ಮಾಡಲು ಅರಸನು ಭೋಜರಾಯನನ್ನು ಆದರಪೂರ್ವಕವಾಗಿ ಸತ್ಕರಿಸಿದನು. ಆನಂತರ ಕೆಲವು ವರ್ಷಗಳಿಂದ ವಿಜಯನಗರಕ್ಕೆ ಕಪ್ಪಕೊಡದೆ ಇದ್ದುದಕ್ಕಾಗಿ ಬಹಳ ಬೇಸರಪಟ್ಟು ಕೊಡದೆ ಇದ್ದ ಕಪ್ಪವನ್ನು ಮಾಫಿ ಬಿಟ್ಟು, ಇನ್ನು ಮುಂದೆ ಕರಮಪ್ರಕಾರ ಕಪ್ಪ ಕೊಡಬೇಕೆಂದು ಹೇಳಲು, ಭೋಜರಾಯನು ಅದಕ್ಕೆ ಒಪ್ಪಿದನು. ಅನಂರ ಕೃಷ್ಣದೇವರಾಯನು, ಭೋಜರಾಯನಿಗೆ ಈ ಕೆಳಗಿನ ಬಿರುದು ಬಾವಲಿಗಳನ್ನು ಕೊಟ್ಟು ಪುತತಿಗೆಗೆ ಹಿಂದೆ ಕಳುಹಿಸಿದ. ೧ ಮುಂಡಾಸು, ೧ ಹಚ್ಚಡ, ೧ ಅಂಗಿ, ೧ ಶಾಲು, ೧ ನಡುಕಟ್ಟು, ೧ ಮುತ್ತಿನ ತುರಾಯಿ, ೧ ಪಲ್ಲಕ್ಕಿ, ೧ ಕೂತುಕೊಳ್ಳುವ ಸದ್ರು, ೧ ಬಸವನ ಟಕ್ಕೆ ನಿಶಾನಿ, ೨ ಹಸರುಪಕ್ಕೆ, ೨ ಜಾಲಿಸತ್ತಿಗೆ, ೨ ಹಸುರು ಹಾರಿಸುವ ರುಮಾಲು, ೨ ಹಸುರು ಬೀಸಣಿಗೆ, ೨ ಹಸುರು ಚವರಿ, ೨ ಗಗ್ಗರದ ಈಟಿ, ೨ ಝಾಡಿ ಹಲಿಗೆ, ೨ ಬೆಳ್ಳಿಕಟ್ಟಿನ ಬೆತ್ತಗಳು, ೨ ನೆಗಳಬಾಯಿ, ೧ ಚಿನ್ನದ ಗಿಂಡಿ, ಇಬ್ಬರು ಪಾಠಕರು, ೪ ಕತ್ತಿಗಳು, ರುಮಾಲು ಹಾರಿಸುವವರ ಸೊಂಟಕ್ಕೆ ಕಟ್ಟುವ ಒರೆಯಲ್ಲಿರುವ ೨ ಕತ್ತಿಗಳು, ೨ ಪಟ್ಟೆಯಕತ್ತಿ (ಪಟಾವು) ಗಳು, ೨ ರಣಕಹಳೆಗಳು, ೨ ಒಂಟೆ ಮೇಲಿನ ನಗಾರಿಗಳು, ೧ ಪಟ್ಟದ ಆನೆ, ೨ ಪಟ್ಟದ ಕುದುರೆಗಳು, ೨ ಪಂಚದೀವಟಿಗೆಗಳು, ೧ ವಾದ್ಯದ ಮೇಳ, ೧ ಕೊಂಬು ಮತ್ತು ೧ ನರ್ತಕಿಯರ ಮೇಳವನ್ನು ಭೋಜರಾಯನಿಗೆ ನೀಡಲಾಯಿತು.

ಈ ಬಿರುದು ಬಾವಲಿಗಳನ್ನು ತೆಗೆದುಕೊಂಡು ಹೊರಡುವಾಗ ಸುಬ್ರಾಯ ದೇವರ ಒಂದು ಪ್ರತಿಮೆಯನ್ನು ತೆಗೆದುಕೊಂಡು ಬರಲಾಯಿತು. ಆಗ ಪಲ್ಲಕಿ ಹೊರುವ ಬೋವಿಯವರು ತಮ್ಮ ಮಾರಿಯಮ್ಮ ದೇವರಿಗೆ ಗುಡಿ ಕಟ್ಟಿಸಿಕೊಟ್ಟು ಉಂಬಳಿ ಉತ್ತಾರ ಬಿಟ್ಟುಕೊಟ್ಟರೆ ಮಾತ್ರ ತಾವು ಪುತ್ತಿಗೆಗೆ ಬರುವುದು, ಇಲ್ಲದಿದ್ದರೆ ಬರಲು ಸಾಧ್ಯವಿಲ್ಲವೆಂದು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಭೋಜರಾಯನು ಅದಕ್ಕೆ ಒಪ್ಪಿ ಅವರನ್ನು ಕರೆತಂದನು. ಪುತ್ತಿಗೆಗೆ ಬಂದಮೇಲೆ ಮೂಡಬಿದರೆಯಲ್ಲಿ ಮಾರಿಯಮ್ಮನ ಗುಡಿ ಕಟ್ಟಿಸಿ ಉಂಬಳಿ ಬಿಟ್ಟನು. ಈ ಗುಡಿ ಈಗಲೂ ಇದೆ. ಬೋವಿಯರಿಗೆ ಈಗಲೂ ಇಲ್ಲಿ ಮರ್ಯಾದೆ ಸಲ್ಲುತ್ತದೆ. ಸುಬ್ರಾಯ ದೇವರಿಗೋಸ್ಕರ ಕಡಂದಲೆಯಲ್ಲಿ ದೇವಸ್ಥಾನವನ್ನು ಕಟ್ಟಿಸಿ ವಿಜಯನಗರದಿಂದ ತಂದ ಪ್ರತಿಮೆಯನ್ನು ಪ್ರತಿಷ್ಠಿಸಿ ಉಂಬಳಿಬಿಟ್ಟನು.

ಭೋಜರಾಯನು ಅತೀ ಸುಂದರ ಮೈಕಟ್ಟನ್ನು ಹೊಂದಿದ್ದ ಓರ್ವ ದೃಢಕಾಯ ಮತ್ತು ದೈವಭಕ್ತ. ಪ್ರಜೆಗಳನ್ನು ಒಳ್ಳೇ ರೀತಿಯಲ್ಲಿ ಪಾಲಿಸುತ್ತಿದ್ದ. ಇವನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಕೆನರಾ ಜಿಲ್ಲೆಗೆ ಪೋರ್ಚ್‌‌ಗೀಸರ ಹಾವಳಿ ಹೆಚ್ಚಾದುದರಿಂದ, ಚೌಟರ ಹಳೆಯ ರಾಜಧಾನಿ ಉಳ್ಳಾಲವು ತನ್ನ ಹಿಂದಿನ ವೈಭವವನ್ನು ಕಳಕೊಂಡಿತು.

೧೧. ೩ನೇ ತಿರುಮಲರಾಯ(ಕ್ರಿ.ಶ. ೧೫೧೦ – ೧೫೪೪)

ಭೋಜರಾಯನ ನಂತರ ಅವನ ಅಳಿಯ ತಿರುಮಲರಾಯನು ಶಾ.ಶ. ವರ್ಷ ೧೪೩೨ನೇ ಪ್ರಮೋದ ಸಂ|ರದ ಮಾಘ ಶು| ೧೨ರಲ್ಲೂ ಪಟ್ಟಕ್ಕೆ ಬಂದನು. ಕೃಷ್ಣದೇವರಾಯನು ತನ್ನ ರಾಜ್ಯದಲ್ಲಿರುವ ಅನೇಕ ದೇವಸ್ಥಾನಗಳಿಗೆ ಉಂಬಳಿ ಬಿಟ್ಟ ಹಾಗೆಯೇ ಪುತ್ತಿಗೆ ಸೋಮನಾಥ ದೇವಸ್ಥಾನಕ್ಕೂ ಶಾ.ಶ. ೧೪೩೪ನೇ ಅಂಗೀರಸ ಸಂ|ದಲ್ಲಿ ಉಂಬಳಿ ಬಿಟ್ಟದ್ದನೆಂದು ಆ ದೇವಸ್ಥಾನದ ಮುಂದುಗಡೆ ಇರುವ ಶಾಸನದಲ್ಲಿದೆ. ಶಾ.ಶ. ೧೪೬೦ರಲ್ಲಿ ಗುರುಗಳ ಬಸದಿಯ ಗದ್ದಿಗೆಯ ಮಂಟಪವನ್ನು ಕಟ್ಟಿಸಿದನು.

ನಂದಳಿಕೆ ದೇವಸ್ಥಾನದಲ್ಲಿರುವ ಒಂದು ತಾಮ್ರ ಶಾಸನ ಪ್ರಕಾರ ಶಾ.ಶ. ೧೪೫೦ನೇ ಸರ್ವಧಾರಿ ಸಂ|ರದ ವೃಷಭ ಮಾಸದಿಂದ ೧೪ನೇ ಸೋಮವಾರ ದಿವಸ ತಿರಮಲರಾಯನಿಗೂ, ತಿರುಮಲರಸ ನಂದಳಿಕೆ ಕಿನ್ಯಕ್ಕ ಹೆಗ್ಗಡೆಗೂ ಒಂದು ಕರಾರಾಗಿದೆಯೆಂದು, ಬಂಗರು, ಭೈರರಸರು ಮತ್ತು ಎಲ್ಲೂರು ಕುಂದ ಹೆಗ್ಗಡೆಯು ಯುದ್ಧಕ್ಕೆ ಬರುವಾಗ ಇಬ್ಬರು ಸೈನ್ಯಕೂಡಿಸಿ, ಈ ಮೂವರ ವಿರುದ್ಧ ಯುದ್ದಕ್ಕೆ ಹೊರಡಬೇಕೆಂದು, ಒಬ್ಬರ ಒಪ್ಪಿಗೆಯಿಲ್ಲದೆ ಇನ್ನೊಬ್ಬರು ಭೈರರಸರು, ಬಂಗರು ಮತ್ತು ಕುಂದ ಹೆಗ್ಗಡೆಯೊಡನೆ ರಾಜಿ ಮಾಡಕೂಡದೆಂದು ತಿಳಿದು ಬರುತ್ತದೆ. ಕಾರ್ಕಳ ಚಂದಲದೇವಿಯ ಕುಮಾರ ಪಾಂಡ್ಯಪ್ಪರಸನಿಗೂ, ತಿರುಮಲರಸ ಚೌಟನಿಗೂ, ಎರಮಾಳ (ಎರ್ಮಾಳ್) ಮಾರಂ ಹೆಗ್ಗಡೆಯನ್ನು ಮಧ್ಯಸ್ಥನಾಗಿ ಇಟ್ಟು ಶಾ.ಶ. ೧೪೬೫ನೇ ಶೋಭಕೃತು ಸಂ|ರದ ಚೈತ್ರ ಶು| ೪ ಶುಕ್ರವಾರ ಒಂದು ಒಪ್ಪಂದ ವಾಯಿತೆಂಬುದು, ಅದೇ ದೇವಸ್ಥಾನದಲ್ಲಿರುವ ಇನ್ನೊಂದು ಶಾಸನದಿಂದ ತಿಳಿದು ಬರುತ್ತದೆ. ಅದರಲ್ಲಿ ಇಬವಬರು ಒಗ್ಗಟ್ಟಾಗಿ ಹೊರಗಿನಿಂದ ಬೇರೆ ಅರಸರು ಬರುವಾಗ ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡಬೇಕೆಂದಿದೆ.

೧೨. ೨ನೇ ಅಬ್ಬಕ್ಕದೇವಿ (ಕ್ರಿ.ಶ. ೧೫೪೪ – ೧೫೮೨):

ತಿರುಮಲರಾಯನ ನಂತರ ಅವನ ಸೊಸೆ ಅಬ್ಬಕ್ಕದೇವಿಗೆ ಶಾ.ಶ. ೧೪೬೬ ಕ್ರೋಧಿ ಸಂ|ರದ ಫಾಲ್ಗುಣ ಶು. ೧೧ರಲ್ಲಿ ಪಟ್ಟವಾಯಿತು. ಈ ರಾಣಿಯನ್ನು ಲಕ್ಷ್ಮಪ್ಪರಸ ಬಂಗರಾಜನು ಮದುವೆಯಾಗಿದ್ದನು. ಅಬ್ಬಕ್ಕದೇವಿಯು ಈ ಸಮಯದಲ್ಲಿ ಉಳ್ಳಾಲದ ಅರಮನೆಯಲ್ಲಿಯೇ ಇದ್ದಳು. ಕ್ರಿ.ಶ. ೧೫೫೬ರಲ್ಲಿ ಲಕ್ಷ್ಮಪ್ಪರಸ ಬಂಗರಾಜನು ಸತ್ತನಂತರ ಅವನ ಅಳಿಯನಾದ ಕಾಮರಾಯನು ಪಟ್ಟಕ್ಕೆ ಬಂದನು. ಅತ್ತೆಯಾದ ಅಬ್ಬಕ್ಕದೇವಿಗೂ ಅಳಿಯ ಕಾಮರಾಯನಿಗೂ ಆಗಾಗ್ಗೆ ಜಗಳಗಳು ಹುಟ್ಟುತ್ತಲೇ ಇದ್ದವು. ಕಾಮರಾಯನು ಅತ್ತೆಯ ಮೇಲಿನ ದ್ವೇಷದಿಂದ ಪೋರ್ತುಗೀಜರೊಡನೆ ಸ್ನೇಹವನ್ನು ಬೆಳೆಸಿದನು. ಈ ಸಮದಯಲ್ಲಿ ಉಳ್ಳಾಲ ಮತ್ತು ಮಂಗಳೂರಿನಲ್ಲಿಯೂ ಪೋರ್ತುಗೀಜರ ಸೈನ್ಯವಿತ್ತು. ಅವರು ಪ್ರತಿಯೊಂದು ಬಂದರದಿಂದಲೂ ಸುಂಕ ವಸೂಲು ಮಾಡುತ್ತಿದ್ದರು. ಪೋರ್ತುಗೀಜರು ಅಬ್ಬಕ್ಕದೇವಿಗೆ, ಅಭಯದೇವಿ ಅಥವಾ ಬುಕ್ಕಾದೇವಿ ಎಂದು ಕರೆಯಹತ್ತಿದ್ದರು. ಆಕೆ ಪೋರ್ತುಗೀಜರಿಗೆ ಸರಿಯಾದ ಕಪ್ಪ ಕೊಡುತ್ತಿರಲಿಲ್ಲ. ಅದನ್ನು ವಸೂಲು ಮಾಡುವುದಕ್ಕಾಗಿ ಕ್ರಿ.ಶ. ೧೫೬೭ನೇ ಜನವರಿ ೪ರಲ್ಲಿ ಪೋರ್ತುಗೀಜ ವೈಸರಾಯಿಯಾಗಿದ್ದ ಡೊನ್ ಫ್ರಾನ್ಸಿಸ್ಕ ಮಸ್ಕರೆಂಞನು ೭ ಬಗಲೆಗಳಲ್ಲಿಯೂ, ೫ ಮಂಜಿಗಳಲ್ಲಿಯೂ ೩೦೦೦ ಸೈನಿಕರನ್ನು ತೆಗೆದುಕೊಂಡು ಉಳ್ಳಾಲದ ಹತ್ತಿರದ ಹೊಳೆಯಲ್ಲಿ ಲಂಗರು ಹಾಕಿದ. ಅದೇ ಸಂದರ್ಭ ರಾತ್ರಿವೇಳೆ ಅಬ್ಬಕ್ಕ ೫೦೦ ಮಂದಿ ಸೈನಿಕರೊಂದಿಗೆ ಪೋರ್ತುಗೀಜರ ಹಡಗುಗಳ ಮೇಲೆ ದಾಳಿ ಮಾಡಿದಳು. ನಂತರ ಅವರ ಹಿಂದಿನಿಂದ ಬಂದ ೧೫೦೦ ಸೈನಿಕರು ಮುತ್ತಿಗೆ ಹಾಕಲು ಪೋರ್ತುಗೀಜರು ಸೋತು ಓಡಿದರು. ಆದರೆ ನಂತರ, ಇಫಿಫೆನಿಯ ದಿವಸ ಎಂದರೆ ಜನವರಿ ೬ರ ಸಾಯಂಕಾಲ ಡೊನ್ ಲೂಯಿಜ್ ಆಲ್ಮೆಡರು ಮತ್ತಷ್ಟು ಸೈನ್ಯ ಸೇರಿಸಿ ಅಬ್ಬಕ್ಕದೇವಿ ಮತ್ತು ಅವಳ ಸೈನಿಕರನ್ನು ಯುದ್ಧದಲ್ಲಿ ಸೋಲಿಸಿದರು. ಪೋರ್ತುಗೀಜರು ಉಳ್ಳಾಲವನ್ನು ವಶಪಡಿಸಿ ಸುಟ್ಟುಹಾಕಿದರು. ಈ ಯುದ್ಧದಲ್ಲಿ ಅಬ್ಬಕ್ಕನ ೫೦೦ ಸೈನಿಕರು ಮತ್ತು ಪೋರ್ತುಗೀಜರ ೪೦ ಮಂದಿ ಸೈನಿಕರು ಮಡಿದರು. ಅಬ್ಬಕ್ಕ ಉಚ್ಚಿಲ ತಲಪಾಡಿಯಲ್ಲಿ ಗುಡ್ಡದ ಮೇಲಿನ ತನ್ನ ಕೋಟೆಗೆ ಓಡಿಹೋದಳು. ನಂತರ ಕ್ರಿ.ಶ. ೧೫೬೯ರಲ್ಲಿ ಪೋರ್ತುಗೀಜರಿಗೂ, ಅಬ್ಬಕ್ಕನಿಗೂ ಒಂದು ಒಪ್ಪಂದವಾಯಿತು. ಆದರೆ ಈ ಒಪ್ಪಂದದಿಂದ ಸಮಾಧಾನಗೊಳ್ಳದ ರಾಣಿಯು ಪೋರ್ತುಗೀಜರನ್ನು ಸೋಲಿಸಲು ತಕ್ಕ ಸಂದರ್ಭಕ್ಕಾಗಿ ಕಾಯುತ್ತಿದ್ದಳು. ಕ್ರಿ.ಶ. ೧೫೭೦ರಲ್ಲಿ ಪೋರ್ತುಗೀಜರ ವಿರುದ್ಧ ದಾಳಿ ಮಾಡುವಲ್ಲಿ ತನಗೆ ಸಹಾಯ ನೀಡಲು ಉಳ್ಳಾಲ ಸಮೀಪ ಸಮುದ್ರದಲ್ಲಿ ಸಂಚರಿಸುತ್ತಿದ್ದ ಕಲ್ಲಿಕೋಟಿಯ ಜಾಮೋರಿನ ನೌಕಾ ಸೇನಾಧಿತಿಯಾಗಿದ್ದ ಕುಟ್ಟಿಪೋಕ್ರೆಗೆ ಹೇಳಿಕಳುಹಿಸಿದಳು. ಅವನು ತನ್ನ ಸೈನ್ಯದೊಡನೆ ಉಳ್ಳಾಲಕ್ಕೆ ಬಂದು ಪೋರ್ತುಗೀಜರೊಡನೆ ಯುದ್ಧ ಮಾಡಿದರೂ ಅದರಲ್ಲವನು ಸೋತು ಹೋದ. ಹೀಗೇ ಉಳ್ಳಾಲ ಮತ್ತೊಮ್ಮೆ ಅವರ ಕೈವಶವಾಯಿತು. ಹಿಂದಿನ ಒಪ್ಪಂದನ್ವಯ ಅಬ್ಬಕ್ಕ ತಾನು ಪಾವತಿಸಬೇಕಿದ್ದ ಕಪ್ಪವನ್ನು ಕೊಡದೆ ಇದ್ದುದರಿಂದ ಕ್ರಿ.ಶ. ೧೫೮೧ರಲ್ಲಿ ಪೋರ್ತುಗೀಜರು ಉಳ್ಳಾಲಲವನ್ನು ಮತ್ತೊಮ್ಮೆ ಸುಟ್ಟುಹಾಕಿ, ಅದರ ಸುತ್ತಲೆಲ್ಲಾ ಇರುವ ಕಾಡನ್ನು ಕಡಿದು ಹಾಕಿದರು. ಕಪ್ಪಕೊಡುವುದನ್ನು ಆಕೆ ಮತ್ತೆ ನಿಲ್ಲಿಸಿದಳು. ಪೋರ್ತುಗೀಜರೊಡನೆ ದೀಘಕಾಲ ಸೆಣಸಾಟಕ್ಕೆ ನಿಂತ ತುಳುನಾಡಿನ ಧೀರ ಮಹಿಳೆ ಅಬ್ಬಕ್ಕ ಕ್ರಿ.ಶ. ೧೫೮೨ರಲ್ಲಿ ಕಾಲವಾದಳು.

೧೩. ತಿರುಮಲದೇವಿ(ಕ್ರಿ.ಶ.೧೫೮೨ – ೧೬೦೬):

ಅಬ್ಬಕ್ಕನ ತರುವಾಯ ಅವಳ ಮಗಳು ತಿರುಮಲದೇವಿಯು ಶಾ.ಶ. ವರ್ಷ ೧೫೦೪ನೇ ಚಿತ್ರಭಾನು ಸಂ|ರದ ವೈಶಾಖ ಶು| ೩ರಲ್ಲಿ ಪಟ್ಟಕ್ಕೆ ಬಂದಳು. ಆಗ ಕಾರ್ಕಳದ ಪಾಂಡ್ಯಪ್ಪ ಧಾವಣಿ ಇಮ್ಮಡಿ ಭೈರವರಾಯನಿಗೂ, ತಿರುಮಲದೇವಿಗೂ ಕಲಹ ಹುಟ್ಟಿ, ಎರಡು ಕಡೆಯವರು ಯುದ್ಧಕ್ಕೆ ಸಿದ್ಧರಾದರು. ಪ್ರಧಾನಿ ನಾರ್ಣಪ್ಪಯ್ಯ, ಸೇನಾಧಿಪತಿಗಳಾದ ತಿಮ್ಮಪ್ಪ ನಾಯಕ, ಪದುಮನಾಯಕ ಮತ್ತು ತಿರುಮಲದೇವಿ ಯುದ್ಧಕ್ಕೆ ಹೊರಟರು. ನಂತರ ನಡೆದ ಯುದ್ಧದಲ್ಲಿ ಎರಡು ಕಡೆ ಸಮಬಲವಿದ್ದರೂ ಅಂತಿಮವಾಗಿ ಚೌಟರು ಸೋತು ಹೋದರು. ಆಗ ತಿರುಮಲದೇವಿ, ಅವಳ ಪ್ರಧಾನಿ, ಸೇನಾಧಿಪತಿಗಳು ಸಹ ತಂಡತಂಡವಾಗಿ ಹೋಗಿ ಮತ್ತೆ ಭೈರರಸನ ಸೈನ್ಯದ ಮೇಲೆ ಧಾಳಿ ಮಾಡಿದರು. ಆದರೆ ನಂತರ ಸಾಣೂರು ಕಣಿವೆಯ ಬಳಿಯಲ್ಲಿ ನಡೆದ ಯುದ್ಧದಲ್ಲಿ ಭೈರರಸನು ತಿರುಮಲದೇವಿಯ ಸೈನ್ಯವನ್ನು ಸೋಲಿಸಿ ಅವರನ್ನು ಕೊಂದು ಹಾಕಿದ. ಅವನ ಸೇನಾಧಿಪತಿಯು ಅವಳ ತಲೆಯನ್ನು ಕಾರ್ಕಳಕ್ಕೆ ಕೊಂಡುಹೋಗಿ ಒಂದು ಹರಿವಾಣದಲ್ಲಿ ಭೈರರಸನ ಮುಂದಿಟ್ಟನು. ಆ ಮುಖವು ಓರೆಯಾಗಿ ಭೈರರಸನಿಗೆ ಅಭಿಮುಖವಾಗದೇ ತಿರುಗಿಕೊಂಡಿರುವುದನ್ನು ನೋಡಿ ಆಶ್ಚರ್ಯಪಟ್ಟು ಸತ್ತ ಮೇಲೆಯೂ ತನ್ನ ಮುಖವನ್ನು ನೋಡದೆ ಇರುವುದರಿಂದ ಅದನ್ನು ಶೂಲದ ಮೇಲೆ ಏರಿಸಿ ಬಿಡಿರೆಂದು ಅವನು ತನ್ನ ಸೈನಿಕರಿಗೆ ಅಪ್ಪಣೆ ನೀಡಿದ. ಅದರಂತೆ ಸೈನಿಕರು ಅದನ್ನು ಅರಮನೆಯಿಂದ ಸ್ವಲ್ಪ ದೂರವಿರುವ ಶೂಲದ ಮೇಲೆ ಏರಿಸಿದರು. ಆದರೆ ಚೌಟರ ಸೈನ್ಯದ ಮಂಗಿಲ ಎಂಬವನು ಆ ತಲೆಯನ್ನು ಯಾರಿಗೂ ತಿಳಿದಯ ಹಾಗೆ ಕಾಡುದಾರಿಯಲ್ಲಿ ತೆಗೆದುಕೊಂಡು ಪುತ್ತಿಗೆಗೆ ತಂದನು. ಸಾಣೂರಿನಲ್ಲಿ ತಿರುಮಲ ದೇವಿಯು ಮಡಿದು ಬಿದ್ದ ಸುದ್ದಿಯು ಆಕೆಯ ಮಗ ಚಿಕ್ಕರಾಯನಿಗೆ ತಿಳಿದ ಕೂಡಲೇ ಅವನು ಸಾಣೂರಿಗೆ ಬಂದು ತಾಯಿಯ ಶವವನ್ನು ಪುತ್ತಿಗೆಗೆ ಒಯ್ದನು. ಮಂಗಿಲನು ತಂದ ತಲೆಯನ್ನು ಸಹ ಶವದೊಟ್ಟಿಗೆ ಇಟ್ಟು ಪುತ್ತಿಗೆಯಲ್ಲಿ ಶವಸಂಸ್ಕಾರ ನಡೆಸಲಾಯಿತು. ಈ ರಾಣಿಯ ಆಳ್ವಿಕೆ ಕಾಲದಲ್ಲಿ ಕ್ರಿ.ಶ. ೧೬೦೫ರಲ್ಲಿ ಜೈನರ ಗುರುಗಳಲ್ಲಿ ಒಬ್ಬನಾದ ಚಂದ್ರಕೀರ್ತಿ ಎಂಬವನು ಕಾಲವಾಗಲು ಅವನ ಹೆಸರಿನಲ್ಲಿ ನಾಯಿ ಬಸದಿಯನ್ನು ಕಟ್ಟಿಸಿದರೆಂದು ಆ ಬಸದಿಯ ಹತ್ತಿರವಿರುವ ಶಾಸನದ ಮೇಲಿದೆ.

೧೪. ೧ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೬೦೬ – ೧೬೨೮):

ಚಿಕ್ಕರಾಯನು ಶಾ.ಶ. ೧೫೨೮ನೇ ಪರಾಭವ ಸಂ| ರದ ಮಾರ್ಗಶಿರ ಶು| ೫ರಲ್ಲಿ ಪಟ್ಟಕ್ಕೆ ಬಂದನು. ಪಟ್ಟಕ್ಕೆ ಬಂದೊಡನೆ ತನ್ನ ತಾಯಿಯನ್ನು ಕೊಂದ ಭೈರರಸ ಒಡೆಯನನ್ನು ಕೊಲ್ಲಲು ನಿರ್ಧರಿಸಿ, ತನ್ನ ಕುಟುಂಬದವರಾದ ಸುರಾಲ ತೋಳಾರರಲ್ಲಿಗೆ ಅವರ ಸಹಾಯವನ್ನು ಅಪೇಕ್ಷಿಸಿ ತನ್ನ ಪ್ರಧಾನಿಯ ಮೂಲಕ ಹೇಳಿ ಕಳುಹಿಸಿದ. ತೋಳಾರ ಅರಸನು ಇದಕ್ಕಾಗಿ ದುಃಖಪಟ್ಟು ಇಕ್ಕೇರಿ ಅರಸನ ಸಹಾಯದಿಂದ ಈ ಭೈರರಸನನ್ನು ಕೊಲ್ಲಲು ನಿರ್ಧರಿಸಿದ. ಇದಕ್ಕಾಗಿ ಚಿಕ್ಕರಾಯ ಮತ್ತು ತೋಳಾರನು ಒಟ್ಟಾಗಿ ಕಾಶಿ ಗಣಪತಿರಾಯನನ್ನು ತಮ್ಮ ರಾಯಭಾರಿಯನ್ನಾಗಿ ಇಕ್ಕೇರಿ ಅರಸನಾದ ವೆಂಕಟಪ್ಪ ನಾಯಕನ ಬಳಿಗೆ ಸಹಾಯ ಯಾಚಿಸಿ ಕಳುಹಿಸಿದರು. ವೆಂಕಟಪ್ಪ ನಾಯಕನು ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ, ತೋಳಾರ ಮತ್ತು ಹೊಸಂಗಡಿ ಹೊನ್ನೆಯ ಕಂಬಳಿ ಅರಸನು ಗಟ್ಟದ ಮಾರ್ಗವನ್ನು ಸರಿಪಡಿಸಿ ವೆಂಕಟಪ್ಪ ನಾಯಕನು ದೊಡ್ಡ ಸೈನ್ಯದೊಡನೆ ಇಳಿದುಬರಲು ಅಗತ್ಯವಿರುವ ಸಿದ್ಧತೆ ಮಾಡಿದರು. ಕ್ರಿ.ಶ. ೧೬೦೮ರಲ್ಲಿ ವೆಂಕಟಪ್ಪ ನಾಯಕನು ತನ್ನ ಸೈನ್ಯದೊಡನೆ ಪುತ್ತಿಗೆಯಿಂದ ಕಾರ್ಕಳಕ್ಕೆ ಹೊರಟನು. ಯುದ್ಧದಲ್ಲಿ ಧಾವಣಿ ಇಮ್ಮಡಿ ಭೈರವರಾಯನು ಮಡಿದುದ್ದರಿಂದ ಕಾರ್ಕಳ ಸೀಮೆಯು ವೆಂಕಟಪ್ಪ ನಾಯಕನ ಸ್ವಾಧೀನಕ್ಕೆ ಬಂತು. ವೆಂಕಟಪ್ಪ ನಾಯಕನು, ತಿರುಮಲ ದೇವಿಯನ್ನು ಕೊಂದ ಸ್ಥಳವನ್ನು (ಸಾಣೂರು ಗ್ರಾಮ) ಚಿಕ್ಕರಾಯನಿಗೆ ಉಂಬಳಿಯಾಗಿ ಬಿಟ್ಟನು.

ಆಮೇಲೆ ಚಿಕ್ಕರಾಯನು ವೆಂಕಪ್ಪ ನಾಯಕನೊಡನೆ ಮಂಗಳೂರಿಗೆ ಹೋದನು. ಅಲ್ಲಿ ಬಂಗರಾಜ, ವೇಣೂರಿನ ಅಜಿಲ, ವಿಟ್ಲದ ಡೊಂಬ ಹೆಗ್ಗಡೆ, ಕುಂಬಳೆ ದೇಶಿಂಗ ಅರಸ, ಬೈಲಂಗಡಿ ಮೂಲರಸನು, ಚಿಕ್ಕರಾಯ ಚೌಟನ ಮುಖಾಂತರ ವೆಂಕಟಪ್ಪ ನಾಯಕನೊಡನೆ ಒಪ್ಪಂದ ಮಾಡಿಕೊಂಡು ತಾವು ಕೊಡತಕ್ಕ ಕಪ್ಪದ ಹಣ ನಿಗದಿ ಮಾಡಿ ತಮ್ಮ ತಮ್ಮ ರಾಜಧಾನಿಗಳಿಗೆ ಹೊರಟು ಹೋದರು.

ಚಿಕ್ಕರಾಯ ಮತ್ತು ವೆಂಕಟಪ್ಪ ನಾಯಕನು ಮಂಗಳೂರಿನಿಂದ ಮೂಲ್ಕಿಗೆ ಹೋಗುವಾಗ ಮೂಲಿಕೆ ಸಾವಂತನ ಸೈನ್ಯವು ದಾರಿಯನ್ನು ಅಡ್ಡಕಟ್ಟಿತು. ಹೊಳೆದಡದಲ್ಲಿ ಒಂದು ದೋಣಿ ಸಿಗಲಿಲ್ಲ. ಆಗ ಚಿಕ್ಕರಾಯನು ಇಕ್ಕೇರಿಯ ಸೈನ್ಯವನ್ನು ಬೇರೆ ದಾರಿಯಿಂದ ಹೆಜಮಾಡಿಗೆ ತಂದು ಮುಟ್ಟಿಸಿದನು. ಅನಂತರ ತನ್ನ ಸೈನ್ಯವನ್ನು ತೆಗೆದುಕೊಂಡು ಪಟ್ಟಿ ಗ್ರಾಮಕ್ಕೆ ಹೋಗಿ ಸಾವಂತನ ಸೈನ್ಯವನ್ನು ಸೋಲಿಸಲು ಅವನು ವೆಂಕಟಪ್ಪ ನಾಯಕನೊಡನೆ ಒಪ್ಪಂದ ಮಾಡಿಕೊಂಡ.

ಮೂಲಿಕೆಯಿಂದ ಹೊರಟ ಇವರಿಬ್ಬರು ನಂತರ ಬಾರಕೂರಿಗೆ ಹೋಗಿ ಸುರಾಲ ತೋಳಾರರೊಡನೆ ಕೌಲು ಮಾಡಿ, ಕರವೂರು, ಮೆರಬಡಿ, ಸಾಳನಾಡು, ಭಟ್ಕಳ, ಗೇರುಸೊಪ್ಪೆ, ಚಂದಾವರ, ಗೋವರ್ಧನಗಿರಿ ಮತ್ತು ವಡ್ಡಿಮೇದಿನಿ ಸೀಮೆಗಳನ್ನು; ಭಟ್ಕಳವನ್ನು ರಾಜಧಾನಿಯನ್ನಾಗಿ ಮಾಡಿ ಆಳುತ್ತಿದ್ದ ಭೈರಾದೇವಿಯೊಡನೆ ಒಪ್ಪಂದ ಮಾಡಿಕೊಂಡು ನಂತರ ಕೊಲ್ಲೂರಿಗೆ ಹೋದನು. ಅನಂತರ ಇಕ್ಕೇರಿಗೆ ಹೋಗುವ ಮೊದಲು ವೆಂಕಟಪ್ಪ ನಾಯಕನು, ತನ್ನ ಸಹಾಯ ಮಾಡಿದ ಮಾಡಿದ ಚಿಕ್ಕರಾಯನಿಗೆ ಪಟ್ಟೆಗ್ರಾಮ ಮತ್ತು ಹೆಜಮಾಡಿ ಮಾಗಣೆಯನ್ನು ಉಂಬಳಿಯಾಗಿ ಕೊಟ್ಟನು. ಈ ಸಮಯದಲ್ಲಿ ಪೋರ್ತುಗೀಜರ ಹಾವಳಿ ಹೆಚ್ಚಾದುದರಿಂದ, ಮಂಗಳೂರು ರಾಜ್ಯದೊಳಗೆ ಕೊಡೆಯಾಲ, ಮೂಲಿಕೆ, ಮೂಡಬಿದರೆ, ಉಳ್ಳಾಲ (ಸೋಮೇಶ್ವರ), ಕುಂಬಳೆ, ಕಾಸರಗೋಡು, ಪುದುವೆಟ್ಟು, ಬೆಳ್ಳಾರೆ, ಕಾಂತಮಂಗಲ, ಬಂದ್ಯಡ್ಕ, ಕುಂಡೆಲಕುಳಿ, ಕೊಲ್ಲೂರುಬಾಚಿ, ಶಿಶಿಲ, ಚಂದ್ರಗಿರಿ, ಕಿದೂರು, ಮೂಡುಗೋಡೆ ಯಾಲ ಮತ್ತು ಫಣಿಯಾಲ ಇಷ್ಟು ಕೋಟೆಗಳನ್ನು ಕಟ್ಟಿಸಲು ಮಂಗಳೂರು ರಾಜ್ಯದ ಅಧಿಖಾರಿಗೆ ಅಪ್ಪಣೆ ನೀಡಿದ. ಹೊನ್ನೆಯ ಕಂಬಳಿಯ ರಾಜ್ಯದಲ್ಲಿ ಹೊಸಂಗಡಿ ಮತ್ತು ಬಗ್ಗವಾಡಿಯಲ್ಲಿ ಕೊಟೆ ಕಟ್ಟಿಸಲು ತನ್ನ ಸೇನಾಧಿಪತಿ ದಳವಾಯಿ ಲಿಂಗಣ್ಣನಿಗೆ ಅಪ್ಪಣೆಕೊಟ್ಟನು. ಚಿಕ್ಕರಾಯನ ಆಳ್ವಿಕೆ ಕಾಲದಲ್ಲಿ ಚೌಳರ ಸೀಮೆ ಬಹಳ ವಿಸ್ತಾರವಾಯಿತು. ಉಳ್ಳಾಲ, ತಲಪಾಡಿ, ಅಮ್ಮೆಂಬಳ, ಮಿಜಾರು, ಮಳಲಿ, ಪುತ್ತಿಗೆ, ಕಡಂದಲೆ, ಪೇಜಾವರ, ಹೆಜಮಾಡಿ, ಮುಂಡುಕೂರು ಮಾಗಣೆಗಳು; ಬಾಳೆಉಣೆ, ಕೈರಂಗಳ, ಬೊಳುಮ (ಬೊಳ್ಮ, ಕೊಣಾಜೆ), ಬಾಳ – ಕೆಳವಾರು, ಸಾಣೂರು, ಪಟ್ಟೆಗ್ರಾಮಗಳು; ಅಮ್ಮುಣಜೆ ಮತ್ತು ಹೊಸಕೇರಿ ಎಂಬ ೨ ಸುಂಕಗಳು ಚಿಕ್ಕರಾಯನ ಕೈಕೆಗಳಗೆ ಬಂದವು. ಕ್ರಿ.ಶ. ೧೬೨೩ರಲ್ಲಿ ಪಶ್ಚಿಮ ಕರಾವಳಿಯಲ್ಲಿ ಪ್ರಯಾಣ ಮಾಡಿದ ಡೆಲ್ಲಾವೆಲ್ಲಿಯು (ಇಟಲಿಯ ಪ್ರವಾಸಿಗ) ಭೂಲೋಕದ ಒಂದು ನಕಾಶೆಯನ್ನು ಚಿಕ್ಕರಾಯನಿಗೆ ಇನಾಮಾಗಿ ಕೊಟ್ಟನು.

೧೫. ೨ನೇ ಚನ್ನಮ್ಮದೇವಿ (ಕ್ರಿ.ಶ. ೧೬೨೮ – ೧೬೩೦):

ಚಿಕ್ಕರಾಯನ ತರುವಾಯ ಅವನ ಸೊಸೆ ಚನ್ನಮ್ಮದೇವಿಯು ಶಾ.ಶ. ೧೫೫೦ನೇ ವಿಭವ ಸಂ|ರದ ಶ್ರಾವಣ ಶು| ೧೩ರಲ್ಲಿ ಪಟ್ಟಕ್ಕೆ ಬಂದಳು. ಆಗ ಇಕ್ಕೇರಿಯಲ್ಲಿ ಪ್ರಧಾನಿಯೂ, ಸೇನಾಧಿಪತಿಯೂ ಆಗಿದ್ದು, ಭದ್ರಪ್ಪ ನಾಯಕನ ಕಾಲದಲ್ಲಿ ರಾಜ್ಯವಾಳುತ್ತಿದ್ದ ಶಿವಪ್ಪ ನಾಯಕನು ತುಳುರಾಜ್ಯಕ್ಕೆ ಬಂದು ಎಲ್ಲಾ ತುಳು ಜೈನ ಅರಸರು ಕೊಡೆತಕ್ಕ ಕಪ್ಪವನ್ನು ನಿಶ್ಚಯಿಸಿದನು. ಚೌಟರರಸನು ೩೦೦೦ ಇಕ್ಕೇರಿ ವರಹ ಕೊಡಬೇಕೆಂದು ನಿಶ್ಚಯಿಸಿದನು.

೧೬. ೩ನೇ ಭೋಜರಾಯ (ಕ್ರಿ.ಶ. ೧೬೩೦ – ೧೬೪೪):

ಚನ್ನಮ್ಮದೇವಿಯ ತರುವಾಯ ಅವಳ ಮಗ ಭೋಜರಾಯನು ಶಾ.ಶ. ೧೫೫೨ನೇ ಪ್ರಮೋದ ಸಂ| ದ ಮಾಘ ಶು| ೧೧ರಲ್ಲಿ ಪಟ್ಟಕ್ಕೆ ಬಂದನು. ಇಕ್ಕೇರಿಗೆ ಕೊಡಬೇಕಾದ ಕಪ್ಪವನ್ನು ಸಲ್ಲಿಸದೆ ಇದ್ದುದರಿಂದ ವೀರಭದ್ರಪ್ಪ ನಾಯಕನು, ಭೋಜರಾಯನನ್ನು ಇಕ್ಕೇರಿಗೆ ಕರೆಯಿಸಿ ಸೆರೆಯಲ್ಲಿಟ್ಟನು. ಆಗ ಅಮ್ಮೆಂಬಳ ಮಾಗಣೆಯವರು ಕೊಡಬೇಕಾದ ಕಪ್ಪವನ್ನು ಕೊಟ್ಟು ಭೋಜರಾಯನನ್ನು ಬಿಡಿಸಿಕೊಂಡು ಬಂದರು. ಮುಂದಿನ ವರ್ಷಗಳಿಗೆ ವರ್ಷವೊಂದಕ್ಕೆ ೪,೦೫೦ ವರಹ ೪ ೧/೨ ಹಣವನ್ನು ಕಪ್ಪವಾಗಿ ನೀಡಬೇಕೆಂದು, ಸೈನ್ಯದ ಖರ್ಚು ಕಡಿಮೆಮಾಡಿ, ರಾಜ ಮರ್ಯಾದೆಗೆ ಬೇಕಾದ ೧೦ ಕುದುರೆಗಳನ್ನು, ೧೦೦ ಮಂದಿ ಊಳಿಗದವರನ್ನು, ಪಲ್ಲಕಿ, ದಂಡಿಗೆ, ಬಿರುದು ಬಾವಲಿ ಹಿಡುಕೊಳ್ಳುವ ಜನರನ್ನು, ಪಾಠಕರನ್ನು ಮಾತ್ರ ಇಟ್ಟುಕೊಳ್ಳಬೇಕೆಂದು ಶಿವಪ್ಪ ನಾಯಕನು ಅಪ್ಪಣೆಕೊಟ್ಟು, ಒಪ್ಪಂದ ಮಾಡಿ ನಂತರ ಭೋಜರಾಯನನ್ನು ಮತ್ತೆ ಪುತ್ತಿಗೆಗೆ ಹಿಂದೆ ಕಳುಹಿಸಿಕೊಟ್ಟ.

ಪುತ್ತಿಗೆ ಅರಮನೆ ಬಹಳಷ್ಟು ಹಳೆತ್ತಾದುದರಿಂದ ಭೋಜರಾಯನು ಅರಮನೆಯನ್ನು ಮೂಡಬಿದರೆಯಲ್ಲಿ ಕಟ್ಟಿಸಿದನು. ಈ ಅರಮನೆಯ ಪ್ರವೇಶವು ಶಾ.ಶ. ೧೫೬೫ನೇ ಸ್ವಭಾನು ಸಂ| ದಲ್ಲಿ (ಕ್ರಿ.ಶ. ೧೬೪೩) ಆಯಿತು.

ಇವನ ಕಾಲದಲ್ಲಿ ಸೋಮೇಶ್ವರ ಗ್ರಾಮವನ್ನು ಮಾತ್ರ ಚೌಟ ಅರಸನಿಗೆ ಬಿಟ್ಟು, ಉಳ್ಳಾಲ ಮಾಗಣೆಯನ್ನು, ಬೊಳುಮ (ಬೊಳ್ಮ) ಗ್ರಾಮವನ್ನು ಇಕ್ಕೇರಿಯವರು ತಮ್ಮ ಸ್ವಾಧೀನವಿಟ್ಟುಕೊಂಡರು. ಚಿಕ್ಕರಾಯ ಚೌಟನ ನಂತರ ಈ ವಂಶವು ಕ್ಷೀಣಿಸುತ್ತಾ ಬಂತು.

೧೭. ೩ನೇ ಚನ್ನಮ್ಮದೇವಿ (ಕ್ರಿ.ಶ. ೧೬೪೪ – ೧೬೮೭):

ಭೋಜರಾಯನ ನಂತರ ಅವನ ಸೊಸೆ ಚನ್ನಮ್ಮ ದೇವಿಯು ಶಾ.ಶ. ೧೫೬೬ನೇ ತಾರಣ ಸಂ| ದ ಜೇಷ್ಠ ಬ| ೫ ರಲ್ಲಿ ಪಟ್ಟಕ್ಕೆ ಬಂದು ೪೩ ವರ್ಷ ಆಳಿದಳು.

೧೮. ೨ನೇ ಚಂದ್ರಶೇಖರ ಚಿಕ್ಕರಾಯ (ಕ್ರಿ.ಶ. ೧೬೮೭ – ೧೭೧೫):

ಚನ್ನಮ್ಮದೇವಿಯ ಮಗನಾದ ಚಿಕ್ಕರಾಯನು ಶಾ.ಶ. ೧೬೦೯ನೇ ಪ್ರಭವ ಸಂ| ರದ ಪುಷ್ಯ ಬ| ೫ರಲ್ಲಿ ಪಟ್ಟಕ್ಕೆ ಬಂದು ೨೮ ವರ್ಷ ಆಳಿದನು.

೧೯. ೨ನೇ ಪದುಮಲಾದೇವಿ (ಕ್ರಿ.ಶ. ೧೭೧೫ – ೧೭೨೬):

ಚಿಕ್ಕರಾಯನ ಸಹೋದರಿ ಪದುಮಲಾದೇವಿಯು ಶಾ.ಶ. ೧೬೩೭ನೇ ಮನ್ಮಥ ಸಂ|ದ ಫಾಲ್ಗುಣ ಬ| ೩ರಲ್ಲಿ ಪಟ್ಟಕ್ಕೆ ಬಂದು ೧೧ ವರ್ಷ ಆಳಿದಳು.