ಸಾಹಿತ್ಯ ಕೃತಿಗಳು:

ಮೂಲಿಕೆ ಸಾವಂತರಸರ ಕುರಿತಾದ ಕೆಲವು ಮಾಹಿತಿಗಳು ಸಮಕಾಲೀನ ಕನ್ನಡ ಸಾಹಿತ್ಯ ಕೃತಿಗಳಿಂದ ತಿಳಿದುಬರುತ್ತವೆ. ಇವುಗಳು ಹದಿನೆಂಟನೆ ಶತಮಾನದಲ್ಲಿ ಬರೆದವುಗಳು. ಇಂತಹವುಗಳಲ್ಲಿ ನಾವು ಗಮನಿಸುವ ಸಾಹಿತ್ಯ ಕೃತಿಗಳು ಯಾವುದೆಂದರೆ ಪದ್ಮನಾಭ ಕವಿ ವಿರಚಿತ ಪದ್ಮಾವತಿ ಮಹಾತ್ಮ್ಯ ಅಥವಾ ಜಿನದತ್ತರಾಯ ಚರಿತ್ರೆ (೧೬೯೦ – ೧೭೦೦) ಇನ್ನೊಬ್ಬ ಕವಿ ಪದ್ಮನಾಭ ಪೂರ್ಣಗೊಳಿಸಿದ

[1] ರಾಮಚಂದ್ರ ಚರಿತ್ರೆ(೧೭೫೧) ಮತ್ತು ಲಿಂಗಣ್ಣ ಕವಿ ರಚಿಸಿದ ಕೆಳದಿ ನೃಪವಿಜಯಂ(೧೮೦೦). ಮೊದಲನೆ ಕಾವ್ಯವನ್ನು ಬರೆದವ ಮೂಲಿಕೆ ತಿರುಮಲ ಸಾವಂತನ ಆಸ್ಥಾನದಲ್ಲಿ ಕೋಶಾಧಿಕಾರಿಯಾಗಿದ್ದವ. ಪದ್ಮನಾಭನು ಈ ಕಾವ್ಯ ಬರೆದು ಮುಗಿಸುವ ಕಾಲದಲ್ಲಿ ಇವನು ಅಧಿಕಾರದಿಂದ ನಿವೃತ್ತನಾಗಿದ್ದನು. ಈ ಕಾವ್ಯವು ಕಾರಸ್ಯಪುರ (ಕಾರ್ನಾಡು)ದ ಬಸದಿಯಲ್ಲಿ ಬರೆಯಲ್ಪಟ್ಟಿತು. ಈ ಕಾವ್ಯದಲ್ಲಿ ಚೆನ್ನಾಂಬಿಕೆ (ಇಮ್ಮಡಿ) ಆಳಿಕೊಂಡಿರುವುದನ್ನು ತಿಳಿಸಲಾಗಿದೆ. [2] ಈ ಕಾವ್ಯವು ಜಿನದತ್ತರಾಯನ ಚರಿತ್ರೆಯನ್ನು ತಿಳಿಸುವುದಾದರೂ ಅಲ್ಲಲ್ಲಿ ಮೂಲಿಕೆಯ ಭೌಗೋಳಿಕ ಸ್ವರೂಪ ಇಲ್ಲಿ ಆಳಿಕೊಂಡಿದ್ದ ಸಾವಂತರಸರ ವಂಶಾವಳಿ, ಜೈನಧರ್ಮದ ಪ್ರಗತಿ, ಸಾಮಾಜಿಕ ರೂಢೀ ನಿಯಮಗಳ ವಿವರಗಳೂ ಇತ್ಯಾದಿ ಮಾಹಿತಿ ಈ ಕಾವ್ಯದ ಅಧ್ಯಯನದಿಂದ ತಿಳಿದು ಬರುತ್ತದೆ. ಇಲ್ಲಿ ತಿಳಿಸಿದ ಹೆಚ್ಚಿನ ಸಂಗತಿಗಳು ಸಮಕಾಲೀನ ದಾಖಲೆಗಳು ಪುಷ್ಟೀಕರಿಸುತ್ತವೆ. [3] ಈ ಕಾವ್ಯವು ಜಿನಧರ್ಮದ ದೃಷ್ಟಿಯಲ್ಲಿ ಸಾವಂತರಸರ ಸೀಮೆಯ ಇತಿಹಾಸಕ್ಕೆ ಬೇಕಾದ ಮಾಹಿತಿಗಳನ್ನು ನೀಡಿವೆ.

ಕ್ರಿ.ಶ. ೧೭೫೧ರಲ್ಲಿ ಮೂಡಬಿದ್ರೆಯ ನಿವಾಸಿಯಾಗಿದ್ದ ಪದ್ಮನಾಭನು ರಾಮಚಂದ್ರ ಚರಿತ್ರೆಯನ್ನು ಈಗಿನ ಪಡುಪಡಂಬೂರು ಅನಂತನಾಥ ಬಸದಿಯಲ್ಲಿ ಬರೆದನು. ಇದು ಅಪ್ರಕಟಿತ ಕಾವ್ಯ. [4] ಇದರ ಹಸ್ತಪ್ರತಿ ಮೂಡಬಿದ್ರೆ ಗುರುಗಳ ಬಸದಿಯಲ್ಲಿದೆ. ಈ ಕಾವ್ಯದ ೩೭ಸಂಧಿಯಲ್ಲಿ ಮೂಲಿಕೆಯ ಪರಿಸರ, ಇಲ್ಲಿ ಆಳಿಕೊಂಡಿದ್ದ ಸಿದ್ಧಂಮಾಜಿಯ ಪುತ್ರ ಚೆನ್ನರಾಯ ಸಾವಂತ ಅವನ ಆಸ್ಥಾನ ವೈಭವ, ಮಂತ್ರಿ ಸಭೆ ಜೈನ ಧರ್ಮದ ಪ್ರಗತಿ ಇತ್ಯಾದಿ ಮಾಹಿತಿಗಳು ಈ ಕಾವ್ಯದಲ್ಲಿದೆ.

ಲಿಂಗಣ್ಣ ಕವಿಯಿಂದ ರಚಿತವಾದ ಕೆಳದಿ ನೃಪವಿಜಯಂ ಮೂಲಿಕೆ ಸಾವಂತ ಮತ್ತು ಕೆಳದಿ ನಾಯಕರ ರಾಜಕೀಯ ಸಂಬಂಧದ ವಿಚಾರ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ. ಇಷ್ಟಲ್ಲದೆ ಇಲ್ಲಿನ (ಕೋಟೆಕೇರಿ) ಕೋಟೆಯ ಪ್ರಾಚೀನತೆ ಮತ್ತು ಇಲ್ಲಿ ವೀರಶೈವ ಮಠ ಸ್ಥಾಪನೆಯ ಕಾಲಗಳ ಮಾಹಿತಿಗಲು ಇದೇ ಕಾವ್ಯದ ಅಧ್ಯಯನದಿಂದ ವ್ಯಕ್ತವಾಗುತ್ತದೆ. ಈ ಕಾವ್ಯವು ಹದಿನೆಂಟನೆ ಶತಮಾನದ ಕೊನೆಯ ದಶಕಗಳಲ್ಲಿ ಪೂರ್ತಿಯಾಗಿರಬೇಕು.

ಮೂಲಿಕೆ ಸೀಮೆಯ ಸಾವಂತರಸರು ಯಾವ ರೀತಿಯಲ್ಲಿ ಸ್ಥಳೀಯ ಜನರ ರೂಢಿ ನಿಯಮಗಳಿಗೆ ಸ್ಪಂದಿಸುತ್ತಿದ್ದರೆಂಬ ಸಂಗತಿ ತುಲು ಪಾಡ್ದನಗಳಾದ ಕಾಂತಬಾರೇ – ಬೂದಬಾರೆ ಮತ್ತು ಅಗೋಳಿ ಮಂಜಣ್ಣಗಳಿಂದ ತಿಳಿದುಬರುತ್ತದೆ. ಈ ವಿಚಾರದ ಅಧ್ಯಯನವು ಇತ್ತೀಚೆಗೆ ನಡೆಯುತ್ತಾ ಇದೆ.

ಕರಾವಳಿಯಲ್ಲಿದ್ದ ಮೂಲಿಕೆ ಸಾವಂತರಸ ರಾಜ್ಯವು ವಿದೇಶಿಯರಾದ ಯುರೋಪಿನವರ ಸಂಪರ್ಕಕ್ಕೆ ಬಂತು. ಇವರ ರೇವು ಕಾರ್ನಾಟ[5] ನಂತರ ಮೂಲಿಕ[6]ಗಳಲ್ಲಿ ವಿದೇಶಿಯ ವ್ಯಾಪಾರಸ್ಥರು ನೆಲಸಿದ್ದರು. ಇವರುಗಳು ಸ್ಥಳೀಯ ರಾಜಕೀಯ ವ್ಯವಹಾರಗಳಲ್ಲಿ ಆಸಕ್ತಿಯನ್ನು ತೋರಿದ್ದರು. ಇಂತಹವರಲ್ಲಿ ಪೋರ್ತುಗೀಜರು ಮೊದಲಿಗರು. ಇವರು ಇಲ್ಲಿ ನಡೆಸಿದ ರಾಜಕೀಯ ಮತ್ತು ವಾಣಿಜ್ಯ ಚಟುವಟಿಕೆಗಳ ವಿವರಗಳು ಪೋರ್ತುಗೀಜ ದಾಖಲೆಗಳಲ್ಲಿವೆ. ಇಂತಹ ಬರಹಗಳಲ್ಲಿ ಮುಖ್ಯವಾದುದು ಅಂತೋನಿಯೊ ಬೊಕೆರಾ ಬರೆದ ದಿಕೆಡಾ ೧೩ ದಾ ಹಿಸ್ಟೋರಿಯಾ ದಾ ಇಂಡಿಯ (Decade 13 Da Historia Da India) ಇದನ್ನು ಬರೆದವ ಬೋಕೆರಾ. ಕ್ರಿ.ಶಕ ೧೬೧೫ ರಿಂದ ೧೬೩೯ರ ವರೆಗೆ ಭಾರತದಲ್ಲಿದ್ದು ಪೋರ್ತುಗೀಜ ಸರಕಾರದ ಗೋವೆಯ ಪತ್ರಾಗಾರನಾಗಿ ಸೇವೆ ಸಲ್ಲಿಸಿದ್ದ. ಇವನ ಗ್ರಂಥದಲ್ಲಿ ಕಾರ್ನಾಡಿನ ರಾಣಿ, ಬಂಗರಸ ಪೋರ್ತುಗೀಜ ಮತ್ತು ಕೆಳದಿ ವೆಂಕಟಪ್ಪ ನಾಯಕ ರಾಜಕೀಯ ಸಂಬಂಧ ಮತ್ತು ಘರ್ಷಣೆಗಳ ವಿವರಗಳು ಇವೆ. ಇದು ಕ್ರಿ.ಶ. ೧೬೧೮ರಲ್ಲಿ ನಡೆಯಿತು. ಇವುಗಳ ವಿವರ ದಿ| ಬಿ.ಎಸ್. ಶಾಸ್ತ್ರೀಯವರು ತಮ್ಮ ಗ್ರಂಥಗಳಲ್ಲಿ ತಿಳಿಸಿದ್ದಾರೆ[7] ಮೂಲಿಕೆ ಸಾವಂತರಸರ ಸೀಮೆಯನ್ನು ವಿದೇಶಿಯರು ಸಂದರ್ಶಿಸಿ ಇಲ್ಲಿನ ಕುರಿತಾದ ಕೆಲವು ಮಾಹಿತಿಗಳನ್ನು ತಮ್ಮ ಪ್ರವಾಸಿ ವರದಿಗಳಲ್ಲಿ ತಿಳಿಸಿದ್ದಾರೆ. ಈ ಪ್ರವಾಸಿಗರಲ್ಲಿ ಪ್ರಮುಖರಾದವರೆಂದರೆ ಆಫ್ರಿಕಾದಿಂದ ಬಂದ ಇಬ್ಬನ್ ಬತೂರಾ (೧೩೩೩ – ೧೪೪೩) ಪೋರ್ತುಗೀಜದಿಂದ ಬಂದ ಬಾರ್ಬೊಸಾ (೧೫೧೬) ಇಟೇಲಿಯಾದ ಪಿಯತ್ರೊ ದೆಲ್ಲಾವೆಲ್ಲಿ (೧೬೨೩) ಪೋರ್ತುಗೀಜಿನ ಸಾಂತಕೇಥರಿನಾ (೧೬೫೬) ಬ್ರಿಟನಿನ ಹೆಮಿಲ್ಟನ್ (೧೭೨೦) ಪೊರಬಸ್ ಮತ್ತು ಬುಕಾನನ್‌ನ ಇವರ ಪ್ರವಾಸಿ ವರದಿಗಳಲ್ಲಿ ರಾಜಕೀಯ ಚಟುವಟಿಕೆಗಳಲ್ಲದೇ ವಾಣಿಜ್ಯ ಮತ್ತು ಆಗಿನ ಕಾಲದ ಸಾಮಾಜಿಕ ಸ್ಥಿತಿಗತಿಗಳ ಮಾಹಿತಿಗಳು ಸಿಗುತ್ತವೆ.

ಮೂಲಿಕೆ ಸಾವಂತರಸ ರಾಜಕೀಯ ಚಟುವಟಿಕೆಗಳ ವಿಶ್ಲೇಷಣೆ:

ಸಾವಂತರಸರ ರಾಜಕೀಯ ಚಟುವಟಿಕೆ ಆರಂಭವಾಗುವುದು ೧೪ನೆ ಶತಮಾನದ ಉತ್ತರಾರ್ಧದಲ್ಲಿ. ಈ ಮೊದಲು ಮೂಲಿಕೆ ಸೀಮೆಯ ಕೆಲವು ಪ್ರದೇಶಗಳನ್ನು ಬಂಗರಸರು ಆಳಿಕೊಂಡಿದ್ದರು. ಇದನ್ನು ಬಪ್ಪನಾಡು, ಪಾವಂಜೆ, ಪಡುಪಡಂಬೂರು ಶಾಸನಗಳು ಪುಷ್ಟೀಕರಿಸುತ್ತವೆ. [8] ಮೂಲಿಕೆಯ ಸಮೀಪವಿರುವ (ಒಳಪ್ರದೇಶ, ಏಳಿಂಜೆ, ಈ ಅರಸು ಮನೆತನದ ಕೇಂದ್ರವಾಗಿದ್ದಿರಬೇಕು. ಇವರು ಜೈನಮತಕ್ಕೆ ಪ್ರೋತ್ಸಾಹ ನೀಡಿದ್ದರೆಂದು ಇಲ್ಲಿ ಸಿಕ್ಕಿದ ಕ್ರಿ.ಶ. ೧೩೮೯ರ ಶಾಸನದಿಂದ ತಿಳಿದು ಬರುತ್ತದೆ. [9] ಈ ಅರಸರು ಇಲ್ಲಿ ಪರಮುಖ ಜಮೀನುದಾರದಾಗಿದ್ದರೆಂದು ಇದೇ ಶಾಸನದ ಅಧ್ಯಯನವು ಸೂಚಿಸುತ್ತದೆ. ಸೀಮಂತೂರಿನ ಜನಾರ್ದನ ಮತ್ತು ಬಪ್ಪನಾಡಿನ ದುರ್ಗಾಪರಮೇಶ್ವರಿ ದೇವಾಲಯಗಳ ಶಿಲಾಶಾಸನ (ತೇದಿ ೧೩೩೩ ಕ್ರಿ.ಶ. ೧೪೧೧) [10]ಗಳಲ್ಲಿ ಕಿಂನಿಕ ಸಾವಂತ ಮತ್ತು ಕಿಂನಿಕ ಹೆಗಡೆ ಕಾಣಿಸಿಕೊಳ್ಳುತ್ತಾರೆ. ಈ ಎರಡು ಹೆಸರುಗಳು ಒಂದೇ ವ್ಯಕ್ತಿಗೆ ಸಂಬಂಧಿಸಿದ್ದು ಈ ವರ್ಷದಿಂದ ಹದಿನೆಂಟನೆ ಶತಮಾನದ ವರೆಗೆ ಕಿಂನಕ್ಕ ಸಾವಂತ ಮತ್ತು ದುಗಣ್ನ ಸಾವಂತರಸರು ರಾಜರಾಗಿ ಕಾಣಿಸಿಕೊಳ್ಳುತ್ತಾರೆ. ಹದಿನೆಂಟನೆ ಶತಮಾನದ ನಂತರ ದುಗಣ್ನ ಮತ್ತು ಚೆನ್ನರಾಯ ಸಾವಂತರೆಂಬ ಹೆಸರುಗಳು ಬರುತ್ತವೆ. ಇವೇ ಕ್ರಮೇಣ ಸಾವಂತರಸರುಗಳ ಪಟ್ಟದ ಹೆಸರುಗಳು. ಇಷ್ಟಲ್ಲದೇ ಕೆಲವು ಸ್ತ್ರೀಯರು ಇಲ್ಲಿ ಆಳಿಕೊಂಡಿದ್ದರೆಂಬ ಸಂಗತಿಗಳು ಐತಿಹಾಸಿಕ ದಾಖಲೆಗಳಿಂದ ತಿಳಿದು ಬರುತ್ತವೆ. ಆದರೆ ಈ ಸ್ತ್ರೀಯರ ಹೆಸರುಗಳೊಂದಿಗೆ ಮುಂದೆ ಪಟ್ಟಕ್ಕೆ ಬರುವ ಸಾವಂತರಸ ಹೆಸರುಗಳು ಇವೆ. ರಾಣಿಯರ ಪ್ರತ್ಯಕ್ಷ ಆಡಳಿತ ಇವರ ರಾಜ್ಯದಲ್ಲಿದ್ದರೂ, ಈ ರಾಣಿಗಳು ಮುಂದೆ ಪಟ್ಟಕ್ಕೆ ಬರುವ ಅರಸುಗಳ ರಕ್ಷಕರಾಗಿದ್ದರೆಂಬುದನ್ನು ಈ ದಾಖಲೆಗಳು ತಿಳಿಸುತ್ತವೆ. [11] ಈ ರಕ್ಷಕರಾಗಿದ್ದ ರಾಣಿಯರಿಗೆ ಪಟ್ಟಾಭಿಷೇಕ ನಡೆದದ್ದು ಇಲ್ಲ.

ಏಳಿಂಜೆಯಲ್ಲಿ ಸಿಕ್ಕ ವೀರಗಲ್ಲಿನ ಚಿತ್ರ - ಹದಿನಾರನೇ ಶತಮಾನದ ಅಂತ್ಯ.

ಏಳಿಂಜೆಯಲ್ಲಿ ಸಿಕ್ಕ ವೀರಗಲ್ಲಿನ ಚಿತ್ರ – ಹದಿನಾರನೇ ಶತಮಾನದ ಅಂತ್ಯ.

ಈ ಅರಸು ಮನೆತನದವರು ತಮ್ಮ ರಾಜಧಾನಿಯನ್ನು ಆಗಿಂದಾಗ್ಗೆ ಬದಲಾಯಿಸುತ್ತಿದ್ದದ್ದು ಗಮನಾರ್ಹ. ಇವರ ಆಳ್ವಿಕೆ ಅವಧಿಗಳಲ್ಲಿ ಏಳಂಜೆ ಸೀಮಂತೂರು ಮೂಲಿಕೆಯ ಕೋಟೆಕೇರಿ ಮತ್ತು ಈಗಿನ ಪಡುಪಡಂಬೂರು ನೆರೆಯ ಚೌಟರಸರ ಉಪಟಳದಿಂದಾಗಿ ಇವರು ರಾಜಧಾನಿಯನ್ನು ಬದಲಾಯಿಸುತ್ತಿದ್ದರೆಂಬ ಹೇಳಿಕೆಗಳು ಇದ್ದರೂ ನೈಸರ್ಗಿಕ ಅನಾಹುತ ಮತ್ತು ಪೋರ್ತುಗೀಜರ ಉಪಟಳಗಳು ಇವರ ರಾಜಧಾನಿ ಬದಲಾಯಿಸುವುದಕ್ಕೆ ಕಾರಣಗಳಾಗಿವೆ.

ಈ ಸಾವಂತರಸರು ಆಳ್ವಿಕೆಯಲ್ಲಿ ಅಳಿಯ ಸಂತಾನ[12]ವನ್ನು ಹೆಚ್ಚಾಗಿ ಅನುಸರಿಸಿಕೊಂಡು ಬಂದಿದ್ದರು. ಇತ್ತೀಚೆಗೆ ಇವರು ಮಕ್ಕಳ ಸಂತಾನ ಕಟ್ಟುಗಳನ್ನು ಪಾಲಿಸಿಕೊಂಡಿರುವರು. ಒಂಬತ್ತು ಮಾಗಣೆಯನ್ನೊಳಗೊಂಡ ಸಾವಂತರಸರ ರಾಜ್ಯವು ತುಳುನಾಡಿನ ಆಯಕಟ್ಟಿನಲ್ಲರುವುದರಿಂದ ಇಲ್ಲಿ ಅಳಿದ ಅರಸುಗಳು ಅಕ್ಕಪಕ್ಕದ ಮುಖ್ಯವಾಗಿ ಚೌಟ, ಬಂಗ ಮತ್ತು ಪಡುಬಿದ್ರೆ ಬಲ್ಲಾಳರೊಂದಿಗೆ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದರು. ಇವರು ಈ ಅರಸು ಮನೆತನಗಳೊಂದಿಗೆ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದರು. ಇವರು ಈ ಅರಸು ಮನೆತನಗಳೊಂದಿಗೆ ನಡೆಸಿದ ರಾಜಕೀಯ ವ್ಯವಹಾರಗಳು ಸಮರ – ಸಂಧಾನ ನೀತಿಯಾಗಿತ್ತು. ಇದನ್ನು ಈ ಸೀಮೆಯಲ್ಲಿ ಸಿಕ್ಕಿದ ಶಾಸನಗಳು ದೃಢೀಕರಿಸುತ್ತವೆ. [13] ವಿಜಯನಗರ ಅರಸರೊಂದಿಗೆ ಇವರ ರಾಜಕೀಯ ಸಂಪರ್ಕದಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ ಈ ಸಾವಂತರಸರು ಈ ವಿಜಯನಗರದ ಸಾರ್ವಭೌಮತೆಯನ್ನು ಒಪ್ಪಿಕೊಂಡಿದ್ದರೂ ತಮ್ಮ ಒಳ ಆಡಳಿತದಲ್ಲಿ ಸ್ವತಂತ್ರರಾಗಿದ್ದರು.

ವಿಜಯನಗರ ಅರಸರ ಪ್ರಾಬಲ್ಯ ತಗ್ಗಿದಾಗ ಇವರು ಸ್ವತಂತ್ರರಂತೆ ವರ್ತಿಸಿದರೂ ಕ್ರಿ.ಶ. ೧೬೦೬ರಲ್ಲಿ ಕೆಳದಿ ವೆಂಕಟಪ್ಪ ನಾಯಕನಿಂದ ಸೋತು ಈ ನಾಯಕನ ಅಧಿಕಾರವನ್ನು ಒಪ್ಪಿಕೊಳ್ಳಬೇಕಾಗಿ ಬಂತು. ಇದನ್ನು ವಿರೋಧಿಸಲು ಈ ವಂಶದ ಕಾರ್ನಾಡಿನ ರಾಣಿ ಪೋರ್ತುಗೀಜ ಮತ್ತು ಬಂಗರಸದೊಂದಿಗೆ ಕೂಡಿಕೊಂಡು ಕೆಳದಿ ವೆಂಕಟಪ್ಪ ನಾಯಕನನ್ನು ಎದುರಿಸಿ ಅಯಶಸ್ವಿಯಾದಳೆಂಬ ಸಂಗತಿಯು ಸಮಕಾಲೀನ ದಾಖಲೆಗಳಿಂದ ತಿಳಿದುಬರುತ್ತದೆ. ಕೆಳದಿ ನಾಯಕರ ಪ್ರಭುತ್ವಕ್ಕೆ ಗಂಡಾಂತರ ಒದಗಿದಲ್ಲಿ ಈ ಸಾವಂತರಸರು ಇನ್ನಿತರ ತುಳುರಾಜರುಗಳೊಂದಿಗೆ ಬಂಡೆದ್ದು ವಿಫಲರಾದರೆಂದು ಕೆಳದಿ ನೃಪವಿಜಯಂ ಕಾವ್ಯ ಮತ್ತು ಕ್ರಿ.ಶ. ೧೬೩೦ ಪೋರ್ತುಗೀಜ ದಾಖಲೆಗಳ ಅಧ್ಯಯನವು ಸೂಚಿಸುತ್ತದೆ. [14] ಒಟ್ಟಿನಲ್ಲಿ ಹೇಳುವುದಾದರೆ ಕೆಳದಿ ನಾಯಕರ ಆಳ್ವಿಕೆಯ ಅವಧಿಗಳಲ್ಲಿ (೧೬೦೭ – ೧೭೬೩) ಸಾವಂತರಸರ ರಾಜಕೀಯ ಪ್ರಭಾವವು ಇಳಿಮುಖವಾಗುತ್ತಾ ಇತ್ತು.

ಸಾವಂತರಸರು ವಿದೇಶೀಯರಾದ ಅರಬರು, ಪೋರ್ತುಗೀಜರು ಮತ್ತು ಡಚ್ಚರ ಸಂಪರ್ಕ ಹೊಂದಿದ್ದರು. ಅರಬರೊಂದಿಗಿರುವ ಸಾವಂತರಸರ ಸಂಪರ್ಕ ವಾಣಿಜ್ಯವಾಗಿತ್ತು. ಆದರೂ ಅರಬರ ಶಾಂತಿಯುತ ಧಾರ್ಮಿಕ ಚಟುವಟಿಕೆಗಳಿಗೆ ಸಾವಂತರಸರು ಅಡ್ಡಿ ಮಾಡಲಿಲ್ಲ. ಅರಬರು ಕಾರ್ನಾಡಿನ ಬಂದರಿನಿಂದ ಅಕ್ಕಿ, ಮೆಣಸು ಮತ್ತು ಕಬ್ಬುಗಳನ್ನು ತೆಗೆದುಕೊಂಡು ಎಡನ್, ಒರ್ಮಜ್, ಬಸ್ರಾಗಳಲ್ಲಿ ಮಾರುತ್ತಿದ್ದರು. ಅರಬರ ಚಟುವಟಿಕೆಗಳಿಂದಾಗಿಯೇ ಸಾವಂತರಸರ ಸೀಮೆಯಲ್ಲಿ ಕೆಲವು ದರ್ಗಾಗಳು ಸ್ಥಾಪಿತವಾದವು.

ಪೋರ್ತುಗೀಜ ಮತ್ತು ಸಾವಂತರಸ ಸಂಬಂಧ ವಾಣಿಜ್ಯದೊಂದಿಗೆ ರಾಜಕೀಯವೂ ಸೇರಿತ್ತು. ಹದಿನಾರನೆ ಶತಮಾನದ ಆರಂಭ ದಶಕಗಳಲ್ಲಿ ಪೋರ್ತುಗೀಜರು ದುಂಡಾವೃತ್ತಿ(Predatory) ವ್ಯಾಪಾರವನ್ನು ಮಾಡುತ್ತಿದ್ದು ಇಲ್ಲಿನ ವ್ಯಾಪಾರ ವ್ಯವಸ್ಥೆಗಳಿಗೆ ತೊಂದರೆಯನ್ನು ಕೊಡುತ್ತಿದ್ದರೆಂದು ಇವರ ಇತಿಹಾಸಕಾರರು ತಮ್ಮ ಗ್ರಂಥಗಳಲ್ಲಿ ತಿಳಿಸಿದ್ದಾರೆ. ಇಷ್ಟಲ್ಲದೇ ಪೋರ್ತುಗೀಜರು ಕಾರ್ನಾಡಿನ ರೇವಿನಲ್ಲಿ ಸಾವಂತರಸರಿಂದ ವಾರ್ಷಿಕವಾಗಿ ೮೦೦ ಮುಡಿ ಅಕ್ಕಿಯನ್ನು ಕಪ್ಪಕೊಡುವಂತೆ ಮಾಡಿದರು. [15] ಆದರೆ ಇದನ್ನು ಸ್ಥಳೀಯ ದಾಖಲೆಗಳು ಏನೂ ಪ್ರಸ್ತಾಪಿಸುವುದಿಲ್ಲ.

ಕ್ರಿ.ಶ. ಹದಿನೇಳನೆ ಶತಮಾನದ ಪೂರ್ವಾರ್ಧ ದಶಕಗಳಲ್ಲಿ ಪೋರ್ತುಗೀಜರಿಗೂ ಮತ್ತು ಸಾವಂತರಸರಿಗೂ ಉತ್ತಮ ರಾಜಕೀಯ ಸಂಬಂಧವಿದ್ದಿತ್ತು. ಈ ರಾಜಕೀಯ ಸಂಬಂಧವನ್ನು ಕೆಳದಿನಾಯಕರ ರಾಜ್ಯ ವಿಸ್ತಾರ ವಿರುದ್ಧ ಸಾವಂತರಸರು ಉಪಯೋಗಿಸಿಕೊಂಡರು. ಆದರೆ ಇದು ಯಶಸ್ವಿಯಾಗಲಿಲ್ಲ. [16]

ಕ್ರಿ.ಶ. ೧೭೦೫ರಲ್ಲಿ ಪೋರ್ತುಗೀಜರು ಸಾವಂತರ ರೇವು ಮೂಲಿಕೆಯಿಂದ ಬರುವ ಆಮದು ರಫ್ತುಗಳನ್ನು ಕೆಳದಿನಾಯಕನಿಂದ ಪಡೆದರು. [17] ಇದು ಇಲ್ಲಿ ವ್ಯಾಪಾರವೃದ್ಧಿಗೆ ಸಹಕಾರವಾಯಿತು. ಆದರೂ ಇವರು ಇಲ್ಲಿ ಆಗಿಂದಾಗ್ಗೆ ಲೂಟಿ ನಡೆಸುತ್ತಿದ್ದರು. ಉದಾ: ಕ್ರಿ.ಶ. ೧೭೧೩ ಪೋರ್ತುಗೀಜ ನೌಕಾಪಡೆಯ ಅಧಿಖಾರಿ ಜೋಸೇಫ್ ಬ್ರಿತು ಮೂಲ್ಕಿ ರೇವಿಗೆ ಬಂದು ಇಲ್ಲಿ ಕೋಟೆಯನ್ನು ಹಿಡಿದು ಅಕ್ಕಪಕ್ಕದಲ್ಲಿದ್ದ ವಾಸಸ್ಥಳಗಳನ್ನು ಸುಟ್ಟು ಕೆಡವಿದನು. [18] ಮುಂದೆ ಡಚ್ಚರು ಮತ್ತು ಇಂಗ್ಲಿಷರ ವ್ಯಾಪಾರ ಚಟುವಟಿಕೆಗಳು ಬಲಿಷ್ಠವಾಗುತ್ತಿದ್ದುರಿಂದ ಪೋರ್ತುಗೀಜರ ಪ್ರಭಾವವು ಕ್ರಮೇಣ ಇಲ್ಲಿ ಇಳಿಮುಖವಾಯಿತು.

ಕ್ರಿ.ಶ. ೧೭೪೩ರಲ್ಲಿ ಡಚ್ಚರು ಮೂಲಿಕೆ ರೇವಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. [19] ಇವರು ಕಾರ್ನಾಡಿನಲ್ಲಿ ಕ್ರೈಸ್ತ ವಿದ್ಯಾಸಂಸ್ಥೆಯನ್ನು ನಡೆಸಿಕೊಂಡಿದ್ದರು.

ಸಾವಂತರಸರು ‘ಕದಂಬ ಕುಲದೀಪ’ರೆಂದು ಕವಿ ಪದ್ಮನಾಭ ತನ್ನ ಕಾವ್ಯ[20]ದಲ್ಲಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಈ ಅರಸು ಮನೆತನದವರಿಗೂ ಮತ್ತು ಕದಂಬರಿಗೂ ಏನೋ ಯಾವ ರೀತಿಯ ಸಂಬಂಧವಿರಬೇಕೆಂಬುದು ಸೂಚಿತವಾಗುತ್ತದೆ. ಆದರೆ ಇದು ಯಾವ ರೀತಿಯ ಸಂಬಂಧವೆಂದು ತಿಳಿದುಕೊಳ್ಳಲು ಈ ವರೆಗೆ ಯಾವ ಖಚಿತ ಆಧಾರ ಇನ್ನೂ ಸಿಕ್ಕಿಲ್ಲ.

ಹೈದರನ ಆಡಳಿತ ಕರಾವಳಿ ಕರ್ನಾಟಕದಲ್ಲಿ ಆರಂಭವಾದ ದಿನದಿಂದ ಸಾವಂತರಸರು ತಮ್ಮ ರಾಜಕೀಯ ವರ‍್ಚಸ್ಸನ್ನು ಕಳೆದುಕೊಂಡರು. ಇವರ ಪ್ರಭಾವ ಸಾಮಾಜಿಕ ಮತ್ತು ಸಾಂಸ್ಕೃತಿ ಚಟುವಟಿಕೆಗಳಿಗೆ ಸೀಮಿತವಾಯಿತು.

ಮೂಲಿಕೆ ಸಾವಂತರಸರು ತಮ್ಮ ಸೀಮೆಯಲ್ಲಿ ಸಂಪ್ರದಾಯ ಪದ್ಧತಿಯನ್ನು ರಕ್ಷಿಸುವ ಉದ್ದೇಶದಿಂದ ತಮ್ಮದೇಯಾದ ರೀತಿಯಲ್ಲಿ ಆಡಳಿತ ಸ್ಥಾಪಿಸಿದರು. ತಮ್ಮ ಆಡಳಿತ ಕ್ಷೇತ್ರವನ್ನು ಒಂಬತ್ತು ಮಾಗಣೆ ಮತ್ತು ೪೦ ಗುತ್ತುಗಳನ್ನಾಗಿ ವಿಂಗಡಿಸಿದರು. ಪ್ರತಿಯೊಂದು ಘಟಕದಲ್ಲಿ ವಂಶಪರಂಪರೆಯಿಂದ ನಡೆಯುವ ಭಾವ, ಗುತ್ತಿನವ, ಪರಾರಿ ಅಧಿಕಾರಿಗಳನ್ನು ಸ್ಥಾಪಿಸಿ ಅವರ ಹಕ್ಕು ಮತ್ತು ಕರ್ತವ್ಯಗಳನ್ನು ನಿರೂಪಿಸಿದರು. ಸಾವಂತರಸರು ನಡೆಸಿದ ಗಮನಾರ್ಹ ರಾಜಕೀಯ ಚಟುವಟಿಕೆ ಯಾವುದೆಂದರೆ ಆಡಳಿತದಲ್ಲಿ ಎಲ್ಲಾ ಜಾತಿಯ ಜನರನ್ನು ಸಹಭಾಗಿಗಳನ್ನಾಗಿ ಮಾಡಿಕೊಂಡದ್ದು. ಇದು ಈ ಅರಸರ ಪಟ್ಟಾಭಿಷೇಕ ಸಮಾರಂಭದಲ್ಲಿ ಎದ್ದು ತೋರಿಬರುತ್ತದೆ. ಹಿಂದಿನ ಅರಸರ ಸತ್ತೊಡನೆ ಅವನ ಉತ್ತರಾಧಿಕಾರಿಯನ್ನು ವಂಶದಿಂದ ಬೇರ್ಪಡಿಸುತ್ತಾರೆ. ಸೂತಕ ಇವನಿಗೆ ತಗಲುವುದಿಲ್ಲ. ಇದು ಗುತ್ತಿನವರಿಗೂ ಭಾವದವರಿಗೂ ಅನ್ವಯಿಸುತ್ತದೆ. ರಾಜನ ಪಟ್ಟಾಭಿಷೇಕ ನಡೆಯುವುದು ಸೀಮಂತೂರು ಜನಾರ್ದನ ದೇವಾಲಯದಲ್ಲಿ ಮತ್ತು ಗುತ್ತು ಭಾವರ ಸಮ್ಮುಖದಲ್ಲಿ. ಅರಸನಿಗೆ ಪಟ್ಟಕಟ್ಟುವವರು ಬ್ರಾಹ್ಮಣ ಮನೆತನದ ಗುರು ರಾಜಭಟ್ಟರ ಮನೆಯವರು, ಪಟ್ಟದ ಉಂಗುರ ತೊಡಿಸುವವರು ಕರಾಡಬ್ರಾಹ್ಮಣ ದಾಸಪ್ಪಯ್ಯ ಮನೆಯವರು, ಖಡ್ಗ ಕೊಡುವವರು ಪುತ್ತೂರು ಭಾವದವರು, ಸೀಮಂತೂರು ಮತ್ತು ಬಪ್ಪನಾಡ ಭಾವರೆಂಬ ಬಂಟರ ಜಾತಿಯವರು ರಾಜನ ಪಟ್ಟಾಭಿಷೇಕ ಸಮಾರಂಭದಲ್ಲಿ ಹಾಜರಿರಬೇಕು. ಇವರೊಂದಿಗೆ ಬಿಲ್ಲವರಾದ ಬಂಕಿನಾಯಕ ಮತ್ತು ಗುಡ್ಡೆ ನಾಯಕರೆಂಬ ಸೇನಾಧಿಪತಿಗಳು ಈ ಸಮಾರಂಭದಲ್ಲಿರುತ್ತಾರೆ. ಪಟ್ಟಾಭಿಷೇಕವಾದೊಡನೆ ರಾಜನು ಜನರ ಪ್ರತಿನಿಧಿಯಾಗಿ ಕಾಣಿಸಿ ಕೊಳ್ಳುತ್ತಾನೆ. ಇದು ತುಳುನಾಡಿನ ಅರಸರ ರಾಜಕೀಯ ವೈಶಿಷ್ಟ್ಯ. [21]

ತಮ್ಮ ಆಡಳಿತ ಸೀಮೆಯಲ್ಲಿ ಸಾವಂತರಸರು ಸಿದ್ಧಾಯ, ಪಗುದಿಬೀಡು, ವಸಗೆ, ಕಿಸ್ತು, ದಸ್ತು ದಾಸೋಹ ಮತ್ತು ಸುಂಕಗಳೆಂಬ ತೆರಿಗೆಗಳನ್ನು ವಸೂಲಿ ಮಾಡುತ್ತಿದ್ದರು. ಇಷ್ಟಲ್ಲದೇ ವಕ್ಕಲುಗಳಿಂದ ನಿರ್ದಿಷ್ಟ ಗೇಣಿಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದೆಂಬ ಕಾಯದೆಯನ್ನು ಈ ಅರಸು ಮನೆತನದವರು ಪಾಲಿಸಿಕೊಂಡು ಬರುವಲ್ಲಿ ಆಕಸ್ತರಾಗಿದ್ದಾರೆಂದು ಮಜಿಲಾರ ಬಾಳಿಕೆ (ತೇಧಿ ೧೬೧೦) ಯ ಶಿಲಾಶಾಸನದಿಂದ ತಿಳಿದುಬರುತ್ತದೆ. ರಕ್ಷಣೆಯಲ್ಲೂ ಈ ಸಾವಂತರಸರು ಗಮನವನ್ನಿತ್ತಿದ್ದರು. ಇವರ ರಾಜ್ಯದ ರಕ್ಷಣೆಗೆ ಕೋಟೆಗಳು ಇದ್ದು ಅಲ್ಲಿ ಮದ್ದುಗಂಡುಗಳನ್ನು ಇಟ್ಟಿದ್ದರು. ತಮ್ಮ ಸೀಮೆಯ ದಕ್ಷಿಣ ತುದಿಯಲ್ಲಿ (ಪಾವಂಜೆಯ ಮಹಾಲಿಂಗೇಶ್ವರ ದೇವಾಲಯದ ಗುಡ್ಡೆಗಳಲ್ಲಿ) ಶಸ್ತ್ರ ಶಾಲೆಗಳಿದ್ದವು. [22] ಆದರೆ ಈ ರಕ್ಷಣಾ ವ್ಯವಸ್ಥೆಯು ಪೋರ್ತುಗೀಜ ಮತ್ತು ಕೆಳದಿ ನಾಯಕರ ಧಾಳೀಗಳನ್ನು ಎದುರಿಸಲು ಸಮರ್ಥವಾಗಿಲ್ಲವೆಂದು ಸಮಕಾಲೀನ ದಾಖಲೆಗಳ ಅಧ್ಯಯನವು ಸೂಚಿಸುತ್ತದೆ.

ಸಾಂಸ್ಕೃತಿಕ ಚಟುವಟಿಕೆಗಳು:

ಸಾವಂತರಸರು ತಮ್ಮದೇಯಾದ ರೀತಿಯಲ್ಲಿ ತಮ್ಮ ಸೀಮೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದರು. ಸಾಮಾಜಿಕ ರೂಢಿ ನಿಯಮಗಳನ್ನು ಗೌರವಿಸಿ ಅವುಗಳನ್ನು ಕಾಪಾಡಿಕೊಂಡು ಬರಲು ಯತ್ನಿಸಿದರು. ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಗೆ ಇವರು ಹೆಚ್ಚಿನ ಗಮನ ಕೊಟ್ಟಿದ್ದರು. ಹಬ್ಬ, ಜಾತ್ರೆ ಮತ್ತು ಜನರ ವಿವಿಧ ವಿನೋದಾವಳಿಗಳಲ್ಲಿ ಇವರು ಪ್ರತ್ಯಕ್ಷ ಭಾಗವಹಿಸುತ್ತಿದ್ದರು. ಸೀಮೆಯಲ್ಲಿ ನಡೆಯುವ ಕಂಬಳವನ್ನು ವಿಜೃಂಭಣೆಯಿಂದ ಜರುಗಿಸಿ ಇದನ್ನು ಅರಸು ಕಂಬಳವಾಗುವಂತೆ ಮಾಡಿದರು ಸಾವಂತರಸರು. ಈ ಅರಸರ ಆಸ್ಥಾನದಲ್ಲಿ ಕವಿ, ಗಮಕಿ ವಾಗ್ಮಿಗಳಿದ್ದರೆಂಬುದು ಆ ಕಾಲದ ಸಾಹಿತ್ಯ ಕೃತಿಗಳ ಅಧ್ಯಯನದಿಂದ ತಿಳಿದುಬರುತ್ತದೆ. ಸಾವಂತರಸರು ಕನ್ನಡ ಕಾವ್ಯಗಳ ರಚನೆಗೆ ಪ್ರೋತ್ಸಾಹ ನೀಡಿದ್ದರು. ಪದ್ಮನಾಭರೆಂಬ ಇಬ್ಬರು ಕವಿಗಳು ಸಾವಂತರಸರ ಪ್ರೋತ್ಸಾಹದಿಂದ ಸಾಂಗತ್ಯರೂಪದಲ್ಲಿ ಕನ್ನಡ ಕಾವ್ಯಗಳಾದ ಪದ್ಮಾವತಿ ಮಹಾತ್ಮ್ಯೆ ಮತ್ತು ರಾಮಚಂದ್ರ ಚರಿತ್ರೆ ಬರೆದರು. ಕಲೆಗಳಿಗೆ ಸಾವಂತರಸರು ಪ್ರೋತ್ಸಾಹ ನೀಡಿದ್ದರು. ಹೊಯ್ಸಳ ಮತ್ತು ವಿಜಯನಗರ ಶೈಲಿಗಳನ್ನು ಅನುಸರಿಸಿ ತಮ್ಮದೇಯಾದ ಶೈಲಿಯನ್ನು ಒಳಗೊಂಡ ಶಿಲ್ಪಗಳು ಸಾವಂತರಸರ ಸೀಮೆಯಲ್ಲಿ ರಚಿತವಾಯಿತು. ಇವುಗಳಲ್ಲಿ ಗಮನಾರ್ಹವಾದುದು ಮೂಲಿಕೆ ಕೋಟೆ ಕೇರಿ ಬಸದಿಯ ಎದುರು ಇರುವ ಮಾನಸ್ತಂಭ ಮತ್ತು ಇದರ ಮೇಲೆ ಕೆತ್ತಿದ ಶಿಲ್ಪಗಳು, ಪಡುಪಡಂಬೂರು ಅನಂತನಾಥ ಬಸದಿ ಮತ್ತು ಇದರ ಎದುರಿಗಿರುವ ಮಾನಸ್ತಂಭ ಮತ್ತು ಮೂಂಡಕೂರಿನ ಬಸದಿಯ ಶಿಲಾಸ್ತಂಭದ ವಿಲ್ಪ (ಕೊನೆಯದು ಈಗ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದ ತೀರ್ಥಮಂಟಪದ ಶಿಲಾಸ್ತಂಭವಾಗಿದೆ) ಒಟ್ಟು ಇವರ ಸೀಮೆಯಲ್ಲಿ ೭ ಶಿಲಾತ್ಮಕ ಬಸದಿಗಳಿದ್ದು ಇವುಗಳು ಸ್ಥಳೀಯ ಶಿಲ್ಪ ವೈಶಿಷ್ಟ್ಯಗಳನ್ನು ಒಳಗೊಂಡಿವೆ. [23] ಜೈನಶಿಲ್ಪದೊಂದಿಗೆ ಶೈವ, ವೈಷ್ಣವ, ಮತ್ತು ಶಕ್ತಿ ದೇವಾಲಯಗಳಲ್ಲೂ ಶಿಲ್ಪಕಲೆಗಳ ಇರುವಿಕೆಗೆ ಸಾವಂತರಸರು ಕಾರಣೀಭೂತರಾಗಿದ್ದಾರೆ. ಇವುಗಳಲ್ಲಿ ಗಮನಾರ್ಹವಾದುದು ಸೀಮಂತೂರು ಜನಾರ್ದನ, ಬಪ್ಪನಾಡು ದುರ್ಗಾಪರಮೇಶ್ವರಿ ಮತ್ತು ಪಡುಪಡಂಬೂರು ಉಮಾಮಹೇಶ್ವರ ದೇವಾಲಯಗಳ ಗರ್ಭಗೃಹದ ಹೊರಗಿರುವ ಆನೆಕಲ್ಲುಗಳ ಶಿಲ್ಪ ಮತ್ತು ಪಾವಂಜೆಯ ದೇವಾಲಯದ ಸರೋವರದ ಗೋಡೆಗಳಲ್ಲಿರುವ ವಾಸ್ತುಶಿಲ್ಪಗಳು.

ಸಾವಂತರಸರು ತಮ್ಮ ಸೀಮೆಯಲ್ಲಿ ಎಲ್ಲಾ ಧರ್ಮ ಮತ್ತು ಪಂಥೀಯರಿಗೆ ಧಾರ್ಮಿಕ ಕಟ್ಟುಕಟ್ಟಳೆಗಳನ್ನು ಆಚರಿಸಿಕೊಂಡು ಬರುವ ಮುಕ್ತ ಅವಕಾಶಗಳನ್ನು ನೀಡಿದ್ದರು. ಈ ಅರಸರುಗಳು ‘ಜಿನಜನ ಚಿಂತಾಮಣಿ’ ಗಳಾಗಿದ್ದರೂ, ಶೈವ, ವೈಷ್ಣವ ಮತ್ತು ಶಾಕ್ತ ಪಂಥಗಳಿಗೆ ಪ್ರೋತ್ಸಾಹ ನೀಡಿದ್ದರು. ಪೋರ್ತುಗೀಜರು ಗೋವೆಯಲ್ಲಿ ನಡೆಸಿದ ಮತಾಂತರ ಹಾವಳಿಗೆ ತುತ್ತಾಗಿದ್ದ ಅಲ್ಲಿನ ಗೌಡಸಾರಸ್ವತರಿಗೆ ಮೂಲಿಕೆ ಸೀಮೆಯಲ್ಲಿ ನೆಲಸುವುದಕ್ಕೆ ಸಾವಂತರಸರು ಸಹಕರಿಸಿದ್ದರು. ಇವರ ಸಹಕಾರದಿಂದ ಮೂಲಕೆಯಲ್ಲಿ ಉಗ್ರ ನರಸಿಂಹ ದೇವರ ಸ್ಥಾಪನೆ ಕ್ರಿ.ಶ. ೧೫೬೯ರಲ್ಲಿ ಆಯಿತು.

ಅರಬರ ವ್ಯಾಪಾರ ಸಂಪರ್ಕದಿಂದ ಮೂಲಿಕೆ ಸೀಮೆಯಲ್ಲಿ ಇಸ್ಲಾಂಮತ ಸೌಹಾರ್ದಯುತವಾಗಿ ಪ್ರಚಾರವಾಯಿತು. ಇದರಿಂದಾಗಿಯೇ ಮೂಲಿಕೆ ಸೀಮೆಯಲ್ಲಿ ಮುಸ್ಲಿಂ ಸಂತರ ದರ್ಗಾಗಳು ಸ್ಥಾಪಿತವಾದವು. ಇವುಗಳಲ್ಲಿ ಮುಖ್ಯವಾದುದು ಕಾರ್ನಾಡಿನ ಜಿಂದ ಶಹಾವಲಿ ದರ್ಗಾ ಮುಸ್ಲಿಂ ವರ್ತಕರ ಸಂಘ, ಹಂಜಮಾನರು ಸಾವಂತರಸರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಇಷ್ಟಲ್ಲದೆ ಮೂಲಿಕೆ ಒಂಬತ್ತು ಮಾಗಣೆಯ ದೇವಾಲಯವಾದ ಬಪ್ಪನಾಡು ದುರ್ಗಾಪರಮೇಶ್ವರಿ[24] ಮತ್ತು ಹದಿನೆಂಟನೆ ಶತಮಾನದ ಮಧ್ಯಾವಧಿಯಲ್ಲಿದ್ದ ಬಪ್ಪ ಬ್ಯಾರಿಗೂ ಒಂದು ರೀತಿಯ ಸಂಪರ್ಕವಿದೆಯೆಂಬ ಜನಜನಿತ ಹೇಳಿಕೆ ಇದೆ.

ಸಾವಂತರಸರು ಕ್ರೈಸ್ತರಿಗೆ ತಾಳಿಪಾಡಿಯಲ್ಲಿ ಇಗರ್ಜಿ ಕಟ್ಟಲು ಆರ್ಥಿಕ ಸಹಾಯವನ್ನು ಮಾಡಿದ್ದರು. ಇದನ್ನು ಕ್ರಿ.ಶ. ೧೭೩೦ರ ಈ ಇಗರ್ಜಿಯಲ್ಲಿದ್ದ ತಾಳೆ ಓಲೆಯ ಬರಹ ಸಮರ್ಥಿಸುತ್ತದೆ. ಪ್ರೊಟಸ್ಟಂಟ್ ಪಂಥವು ಇಲ್ಲಿ ಅಭಿವೃದ್ಧಿ ಹೊಂದಿ ಬೆಳೆಯಿತು.

ಆರ್ಥಿಕ ಚಟುವಟಿಕೆ:

ಮೂಲಿಕೆ ಸಾವಂತರಸರು ಕೃಷಿ ಅಭಿವೃದ್ಧಿಗೆ ಸಹಕರಿಸಿದ್ದರೆಂದು ಕೆಲವು ಐತಿಹಾಸಿಕ ದಾಖಲೆಗಳಲ್ಲಿ ವೃಕ್ತವಾಗಿವೆ. ಬೇಸಾಯಕ್ಕೆ ಒಗ್ಗದ ಭೂಮಿಗಳನ್ನು ಕೃಷಿ ಚಟುವಟಿಕೆಗೆ ಹೊಂದುವಂತೆ ಮಾಡಲು ಈ ಅರಸು ಮನೆತನದವರು ಸಹಕರಿಸಿದ್ದರು. ಗುಡ್ಡೆಬೆಟ್ಟು ಗಜನಿ(ಸಮುದ್ರ ಅಥವಾ ಹೊಳೆ ಹಿಂಜರುವಿಕೆಯಿಂದ ಆದ ಸ್ಥಳ) ತಿಟ್ಟುಗಳಲ್ಲಿ ಬೇಸಾಯ ಭೂಮಿಯಾಗಿ ಮಾಡಲು ಈ ಅರಸರುಗಳ ಕೊಡುಗೆ ಇವೆ. ಮುಖ್ಯವಾಗಿ ಕೃಷಿ ವಿಸ್ತಾರಕ್ಕೆ ಸಾವಂತರವರು ಪ್ರೋತ್ಸಾಹ ನೀಡಿದ್ದರು. ಇಲ್ಲಿನ ಮುಖ್ಯ ಬೆಳೆಗಳು ಅಕ್ಕಿ, ಮೆಣಸು, ತೆಂಗು,ಕಬ್ಬು ಮತ್ತು ದವಸಧಾನ್ಯಗಳು. “ಬಲಿದ ಕಬ್ಬುಗಳಿಂದ ಸುರಿದು ಹರಿದ ರಸ ಹೊಲನೆಲ್ಲವ ಪಸರಿಸಿತು” ಎಂದು ಪದ್ಮನಾಭ ಕವಿ ತನ್ನ ಕಾವ್ಯ ಪದ್ಮಾವತಿ ಮಹಾತ್ಮ್ಯಾ ದಲ್ಲಿ ಹೇಳಿದ್ದು ಗಮನಿಸುವಂತಾದ್ದೆ. ಇಲ್ಲಿನ ಕೃಷಿಕರು ಶೂದ್ರ ಜನಾಂಗದವರಾಗಿದ್ದು, ಇವರು ಕೃಷಿ ಭೂಮಿಯ ವಿಸ್ತರಣೆಗೆ ಬಹಳ ಶ್ರಮಿಸಿದ್ದರು. ಆದರೆ ಇಲ್ಲಿನ ಭೂ ಒಡೆತನ ಹೆಚ್ಚಾಗಿ ಮೇಲ್‌ಜಾತಿಯವರದಾಗಿತ್ತು. ಹದಿನೇಳನೇ ಶತಮಾನದ ನಂತರ ಜೈನ ಭೂಮಾಲಿಕರ ಪ್ರಾಬಲ್ಯ ಕಡಿಮೆಯಾಗಿ, ಬಂಟರು, ಬಿಲ್ಲವರು, ಗೋವೆಯಿಂದ ಬಂದ ಕೆಥೋಲಿಕ್ ಮತ್ತು ಗೌಡ ಸಾರಸ್ವತರು ಇಲ್ಲಿ ಭೂಮಾಲಿಕರಾಗಿ ಕಾಣಿಸಿಕೊಳ್ಳುತ್ತಾರೆ. ಕೃಷಿ ವ್ಯವಸ್ಥೆಯು ಸುಗಮವಾಗಿ ನಡೆಯಲು ಬೆಳೆಗಳ ಅಳತೆಮಾನ. ಗೇಣಿ ಪದ್ಧತಿ ‘ಆರುವಾರ’ ಬಿಡುವಾರ(ಅಡವಿನಭೂಮಿ) ಗುತ್ತಿಗೆ ಬ್ರಹ್ಮಾದಾಯ ದೇವಸ್ವಂ ಮುಂತಾದ ಭೂ ಹಿಡುವಳಿ ಪದ್ಧತಿಗಳನ್ನು ಸಾವಂತರಸರು ಜಾರಿಗೆ ತಂದು ಅವುಗಳನ್ನು ಪಾಲಿಸಿಕೊಂಡು ಬಂದರು. ಒಕ್ಕಲುಗಳಿಂದ ಗೇಣಿ ಬಾಕಿ ಇದ್ದರೆ ಅವರ ಕೃಷಿ ಭೂಮಿಗಳನ್ನು ತಪ್ಪಿಸುವ ಕ್ರಮ ಆಗ ರೂಢಿಯಲ್ಲಿರಲಿಲ್ಲ. ಒಂದು ವೇಳೆ ಗೇಣಿ ಬಾಕಿ ಇದ್ದರೆ ಸಾವಂತರಸರು ಇದನ್ನು ವಿಚಾರಿಸಿ ಅದಕ್ಕೆ ಯುಕ್ತವಾದ ತೀರ್ಮಾನ ನೀಡುತ್ತಿದ್ದರೆಂದು ಸೀಮಂತೂರು ಮತ್ತು ಕೊಡೆತ್ತೂರು ಶಾಸನಗಳ ಅಧ್ಯಯನದಿಂದ ವ್ಯಕ್ತವಾಗುತ್ತದೆ.

ಸಾವಂತರಸರು ವ್ಯಾಪಾರಸ್ಥರಿಗೆ ತಮ್ಮ ಸೀಮೆಯಲ್ಲಿ ಆಶ್ರಯ ನೀಡಿದ್ದರು. ಇದರಿಂದಾಗಿಯೇ ಸಾವಂತರಸರು ಸೀಮೆಯ ಕೆಲವು ಸ್ಥಳಗಳು ಮುಖ್ಯವಾಗಿ ಕಾರ್ನಾಡು, ಹೊಸಂಗಡಿ (ಈಗ ಇದು ಹಳೆಯಂಗಡಿ) ಮೂಲಿಕೆ ಎಂತ ಪಟ್ಟಣಗಳು ಉದಯವಾದವು. ನಖರ, ಉಳಮೆ ಹಲರು, ಸಮಸ್ತ ಹಲರೆಂಬ ವ್ಯಾಪಾರಸ್ಥ ಸಂಸ್ಥೆಯವರು ಒಳವ್ಯಾಪಾರದಲ್ಲಿ ನಿರತರಾಗಿದ್ದರೆ ಹಂಜಮಾನರೆಂಬ ಮುಸ್ಲಿಂ ವ್ಯಾಪಾರ ಸಂಸ್ಥೆಯು ಸಾಗರೋತ್ತರ ವ್ಯಾಪಾರದಲ್ಲಿ ನಿರತವಾಗಿದ್ದಿತು. ಹದಿನೇಳನೆ ಶತಮಾನದ ನಂತರ ಗೋವೆಯಿಂದ ಬಂದ ಗೌಡ ಸಾರಸ್ವತರು ಇಲ್ಲಿನ ವ್ಯಾಪರವನ್ನು ವೃದ್ಧಿಗೊಳಿಸಿದರು. ಇಂತಹ ಕೆಲವು ವ್ಯಾಪಾರಸ್ಥರಲ್ಲಿ ದೊಡ್ಡ ದೊಡ್ಡ ‘ಮಂಜಿ’ಗಳು ಇದ್ದಿದ್ದವು. ಆದರೆ ಇವುಗಳನ್ನು ನಡೆಸುವವರು ಸ್ಥಳೀಯ ಖಾರ್ವಿ ಮತ್ತು ಮೊಖರಿ ಜನಾಂಗದವರು. ಸಾವಂತರಸರ ಸೀಮೆಯ ಬಂದರುಗಳು ಅರೇಬಿಯಾ, ಮಸ್ಕತ್, ಒರ್ಮಜ ದ್ವೀಪಗಳೊಂದಿಗೆ ಸಾಗರೋತ್ತರ ವ್ಯಾಪಾರ ನಡೆಸಿದರೂ, ಇದರ ಮೇಲೆ ಸಾವಂತರಸರಿಗೆ ಹಿಡಿತವಿದ್ದಿಲ್ಲದವೆಂದು ಕೆಲವು ಸಮಕಾಲೀನ ದಾಖಲೆಗಳ ಅಧ್ಯಯನದಿಂದ ವ್ಯಕ್ತವಾಗುತ್ತದೆ. ಒಟ್ಟಿನಲ್ಲಿ ಈ ಅರಸರು ಮನೆತನದವರ ಕೊಡುಗೆ ವ್ಯಾಪಾರ ವ್ಯವಹಾರದಲ್ಲಿ ಕೃಷಿಗಿಂತ ಕಡಿಮೆಯಾಗಿತ್ತು.

ಉಪಸಂಹಾರ:

ಸಾವಂತರಸರು ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಒಂದು ರೀತಿಯ ಸುವ್ಯವಸ್ಥೆಯಾಗುವಂತೆ ಪ್ರಯತ್ನಿಸಿದರು. ಆದರ್ಶ ಮತ್ತು ವ್ಯಾವಹಾರಿಕಗಳೊಂದಿಗೆ ಹೊಂದಿಸಿಕೊಂಡು ಬರಲು ಅಯಶಸ್ವಿಯಾದ ಕಾರಣ ಇವರು ರಾಜಕೀಯದಲ್ಲಿ ಮುಗ್ಗರಿಸಿದರೆಂದು ಐತಿಹಾಸಿಕ ದಾಖಲೆಗಳ ಅಧ್ಯಯನವು ಸೂಚಿಸುತ್ತದೆ. ಆದರೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಈ ಅರಸು ಮನೆತನದವರು ಅಪಾರ ಕೊಡುಗೆ ನೀಡಿದ್ದಾರೆ. ಸಾವಂತರಸರ ಸಾಂಸ್ಕೃತಿಕ ಚಟುವಟಿಕೆಯ ವಿಚಾರ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ತಮ್ಮ ರಾಜ್ಯದ ಸಂಪತ್ತನ್ನು ಸಾವಂತರಸರು ಹೀಗೆ ಉಪಯೋಗಿಸಿಕೊಂಡರು ಮತ್ತು ಇದಕ್ಕೆ ಪ್ರಜೆಗಳ ಪ್ರತಿಕ್ರಿಯೆ ಏನು? ಇದು ಕೂಡ ಸಂಶೋಧಿಸುವ ವಿಷಯವು ಆಗಿದೆ.

– ಡಾ| ಕೆ.ಜಿ. ವಸಂತಮಾಧವ*

 

[1] ಈ ಕಾವ್ಯವನ್ನು ಆರಂಭಿಸಿ ೧೬ ಸಂಧಿಯ ರೆಗೆ ಬರೆದವ ಚಂದ್ರಶೇಖರ, ಇವನು ಹದಿನೆಂಟನೆ ಶತಮಾನದ ಆರಂಭದಲ್ಲಿ ಬಂಗಾಡಿಯ ಬಂಗರಸ ಲಕ್ಷ್ಮಪ್ಪ (IV) ನ ಆಸ್ಥಾನದಲ್ಲಿ ಕವಿಯಾಗಿದ್ದನು.

ವೈ. ಉಮನಾಥ ಶೆಣೈ ಬಂಗರ ಇತಿಹಾಸ (ಬಂಗಾಡಿ ೧೯೮೫) ಪು. ೩೬

[2] ಪದ್ಮಾವತಿ ಮಹಾತ್ಮ್ಯ ಮೊದಲನೆ ಸಂಧಿ ಪದ್ಯ ಸಂಖ್ಯೆ ೯೪ – ೧೦೬ – ೧೦೭ ಪು.ಪು. ೮೯.

[3] ದೊ. ಲ. ನರಸಿಂಹಾಚಾರ‍್ಯ – ‘ಜಿನದತ್ತರಾಯಚರಿತ್ರೆ’ ಬಾಗೀನ ಪು.ಪು. ೨೭೬ – ೯೬.

[4] ಈ ಕಾವ್ಯವನ್ನು ಅಧ್ಯಯನಿಸಲು ಮೂಡಬಿದ್ರೆ ದೇವ ಕುಮಾರ ಜೈನರು ಒದಗಿಸಿಕೊಟ್ಟರು.

[5] ಕ್ರಿ.ಶ ೧೫೦೦ರ ಮೊದಲ ದಶಕಗಳಲ್ಲಿ ಕಾರ್ನಾಡ ಕರಾವಳಿ ಕರ್ನಾಟಕದ ರೇವುಗಳಲ್ಲಿ ಒಂದಾಗಿತ್ತು. ಇದನ್ನು ಪೋರ್ತುಗೀಜ ಅಧಿಕಾರಿ ಬ್ಯಾರೋಸ (Barros) ತನ್ನ ವರದಿಯಲ್ಲಿ ತಿಳಿಸಿದ್ದಾನೆ. ಇಷ್ಟಲ್ಲದೇ ಪೋರ್ತು ನಕಾಶಕರು ಕಾರ್ನಾಡ ರೇವುವನ್ನು ತಮ್ಮ ನಕಾಶೆಯಲ್ಲಿ ಗುರುತಿಸಿದ್ದಾರೆ. ೧೭೦೦ರ ವರೆಗೂ ಕಾರ್ನಾಡ ಉತ್ತಮ ರೇವು ಆಗಿತ್ತು.

[6] ಈಗಿನ ಮೂಲಿಕೆಯ ಹೆಚ್ಚಿನ ಪ್ರದೇಶ ಹಿಂದೆ ಇಲ್ಲಿ ಹರಿಯುವ ನದಿ ಅಥವಾ ಸಮುದ್ರದೊಳಗೆ ಇದ್ದಿತು. ಇವುಗಳ ಚಲನೆ ಮತ್ತು ಹಿಂದೆ ಸರಿಯುವಿಕೆಯಿಂದಾಗಿ ಈ ಮೂಲಿಕೆ ಎಂಬ ಊರು ಉದಯವಾಯಿತು. ಮೂಲತಃ ಈ ಪ್ರದೇಶ ಸುಂಕ ವಸೂಲಿ ಮಾಡುವ ಕಟ್ಟೆಯಾಗಿತ್ತು. ಇಲ್ಲಿಂದ ಒಳನಾಡಿನ ಸೀಮಂತೂರಿಗೆ ದೋಣಿಗಳಲ್ಲಿ ಸರಕುಗಳನ್ನು ಸಾಗಿಸುತ್ತಿದ್ದರು. ಮೂಲಿಕೆ ಪ್ರಥಮ ಉಲ್ಲೇಖ ೧೭೦೫ರ ಪೋರ್ತುಗೀಜರ ದಾಖಲೆಯಲ್ಲಿ ಇದರಂತೆ ಮುಲ್ಕಿ ಬಂದರುಳಲ್ಲಿ ಹೇರುವ ಆಮದು ಮತ್ತು ರಫ್ತುಗಳ ತೆರಿಗೆಯನ್ನು ಪೋರ್ತುಗೀಜರು ಕೆಳದಿ ಬಸವಪ್ಪ ನಾಯಕನಿಂದ ಪಡೆದರು. ನೋಡಿ ಬಿ.ಎಸ್.ಶಾಸ್ತ್ರೀ ಕೆಳದಿ ಅರಸರೂ ಹಾಗೂ ಪೋರ್ತುಗೀಜರು ಪು.೧೪೪.

[7] The Poruguese in Kanara (ಅಪ್ರಕಟಿತ ಪಿಎಚ್‌.ಡಿ. ಪ್ರಬಂಧ ಬೊಂಬಾಯಿ ವಿಶ್ವವಿದ್ಯಾಲಯ ೧೯೬೯) ಕೆಳದಿ ಅರಸರು ಹಾಗೂ ಪೋರ್ತುಗೀಜರು Studies in Indo Portuguese History (Bangalore 1981).

[8] SII VII ೨೫೯, ೨೬೧, ೨೬೫.

[9] ಎಂ. ಗೋವಿಂದ ಪೈಗಳು ೧೯೫೯ರಲ್ಲಿ ಮೂಲಿಕೆಯನ್ನು ದುಗಣ ಸಾವಂತ ಆಳಿಕೊಂಡಿದ್ದನೆಂದು ಕೋಟಿಕೇರಿ ಬಸದಿಯ ಹಿಂದಿರುವ ಶಿಲಾಶಾಸನದ ಆಧಾರದಿಂದ ಹೇಳಿದ್ದಾರೆ. ಈ ಹಿಂದೆ ತಿಳಿಸಿದಂತೆ ಈ ಶಾಸನವು ಓದಲಾರದಷ್ಟು ಹಾಳಾಗಿದ್ದುದ್ದರಿಂದ ಇದನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. ವಿವರ ನೋಡಿ ಅಡಿಟಿಪ್ಪಣಿ ನಂಬ್ರ ೬.

[10] ARSIE 1930 – 31, ನಂಬ್ರ ೩೪೧, SII VII, No. 259.

[11] ಚಿನ್ನಾಂಬಿಕೆ ಕ್ರಿ.ಶ. ೧೯೬೦ರಲ್ಲಿ ರಾಜ್ಯಾವಾಳುತ್ತಿದ್ದುದ್ದನ್ನು ಪದ್ಮನಾಭ ಕವಿ ತನ್ನ ಕಾವ್ಯದಲ್ಲಿ ತಿಳಿಸಿದ್ದಾನೆ. ಪದ್ಮನಾಭ ಕವಿ ಅದೇಕಾವ್ಯ ಪು.ಪು. ೮,೯.

[12] SII VII 262 – 264 ಪದ್ಮಾವತಿ ಮಹಾತ್ಮ್ಯಾ ಪದ್ಯ ಸಂಖ್ಯೆ ೬೨, ಪು.೬. ರಾಮಚಂದ್ರ ಚರಿತ್ರೆ, ಸಂಧಿ ೩೭, ಪದ್ಮಸಂಖ್ಯೆ ೪೫.

[13] ನೋಡಿ ಅಡಿಟಿಪ್ಪಣಿ ನಂಬ್ರ ೧೫, ೧೬.

[14] ಲಿಂಗಣ್ಣ ಕೆಳದಿ ನೃಪವಿಜಯ ಪು. ೭೧, 117. Heras The Expansion of wars of Ventkatappa Nayaka of Ikkeri Proceedings of Indian Historical Record Commission VI (1928) ಪು. ೧೦೮ – ೧೧೦ ದೆಲ್ಲಾವೆಲ್ಲಿ The Travels of Pietro Della Valle in India (ಮೊದಲ ಮುದ್ರಣ ೧೮೯೭, ಎರಡನೆ ಮುದ್ರಣ ೧೯೯೨ AES ಮದ್ರಾಸು) II 351 – 353.

[15] ಸಿಲ್ವ ಎಸ್. History of Christianity in Canara Karwar (1959) ಈ ಪು. ೩೭.

[16] ಶಾಸ್ತರೀ ಬಿ.ಎಸ್. ಕೆಳದಿಯ ಅರಸರು ಹಾಗೂ ಪೋರ್ತುಗೀಜರು ಪು. ೧೩ – ೧೪ ನೋಡಿ. ದೆಲ್ಲಾವೆಲ್ಲಿ ಅದೇ ಗ್ರಂಥ Vol II, 352 – 353.

[17] ಶಾಸ್ತ್ರೀ – ಅದೇ ಗ್ರಂಥ ಪು. ೧೪೪.

[18] ಶಾಸ್ತ್ರೀ ಅದೇ ಗ್ರಂಥ ಪು. ೧೪೬.

[19] ಜಿ.ಎಂ. ಮೊರೆಯಿಸ್ Mangalore – A Historical Sketch ಮೊದಲ ಮುದ್ರಣ: ೧೯೨೭, ಎರಡನೇ ಮುದ್ರಣ ೧೯೯೧, ಪು. ೩೮.

[20] ಪದ್ಮಾವತಿ ಮಹಾತ್ಮ್ಯಾ, ಪದ್ಯ ಸಂಖ್ಯೆ ೮೫. ಪು.೭.

[21] ಈ ಮಾಹಿತಿಯನ್ನು ಡಾ| ಎಸ್.ಡಿ.ಶೆಟ್ಟರು, ಕನ್ನಡ ಪ್ರಾಧ್ಯಪಕ, ಶ್ರೀ ಎಸ್.ಡಿ. ಎಮ್. ಕಾಳೇಜು ಉಜಿರೆ ತಿಳಿಸಿದ್ದಾರೆ.

[22] ಪದ್ಮನಾಭ ಕವಿ ಪದ್ಮಾವತಿ ಮಹಾತ್ಮ್ಯ ಪದ್ಯ ಸಂಖ್ಯೆ ೩೫ – ೩೮. ಪು. ೪ ಇನ್ನೊಬ್ಬ ಪದ್ಮನಾಭ ರಾಮಚಂದ್ರ ಚರಿತ್ರೆ ೩೭ನೇ ಸಂಧಿ ಪದ್ಯ ಸಂಖ್ಯೆ ೩೪.

[23] ಕೆ.ಜಿ. ವಸಂತಮಾಧವ ಮೂಲಿಕೆ – ಸೀಮೆಯ ಮಾನಸ್ತಂಭಗಳು ಮತ್ತು ಅವುಗಳ ಸಾಂಸ್ಕೃತಿಕ ವಿಶ್ಲೇಷಣೆ ವಿಜಯ ಕಾಲೇಜು ವಾರ್ಷಿಕ ಸಂಚಿಕೆ. (೧೯೬೯.)

[24] ಬಪ್ಪನಾಡಿನ ದುರ್ಗಾಪರಮೇಶ್ವರಿ ದೇವಾಲಯದ ಕ್ರಿ.ಶ. ೧೩೪೩ರ ಶಿಲಾಶಾಸನವು ಬಪ್ಪನಾಡು ಮತ್ತು ದುರ್ಗಾಪರಮೇಶ್ವರಿ ದೇವಾಲಯದ ಉಲ್ಲೇಖ ಮಾಡುತ್ತದೆ. ಈ ಶಾಸನದಲ್ಲಿ ಬಪ್ಪ ಬ್ಯಾರಿಯ ಉಲ್ಲೇಖವಿಲ್ಲ. ಬಪ್ಪ ಬ್ಯಾರಿಯ ಉಲ್ಲೇಖ ಬರುವುದು ಕ್ರಿ.ಶ. ೧೭೬೩ರ ಜೂನ್ ೨೬ರ ದಾಖಲೆಯಲ್ಲಿ. ಈತನ್ಮಧ್ಯೆ ಹಾಳಾಗಿದ್ದ ಈ ದುರ್ಗಾಪರಮೇಶ್ವರಿ ದೇವಾಲಯವನ್ನು ಈ ದಾಖಲೆಯಲ್ಲಿ ತಿಳಿಸಿದ ಬಪ್ಪನು ತಿರುಗಿಕಟ್ಟಲು ಸಹಾಯ ಮಾಡಿರಬೇಕೆಂಬ ಹೇಳಿಕೆ ಸಮರ್ಥನೀಯವಾಗಿ ತೋರುತ್ತದೆ.

* ಹಿರಿಯ ಇತಿಹಾಸ ಸಂಶೋಧಕ (ಭಾರತೀ ಇತಿಹಾಸ ಸಂಶೋಧನೆ ಸಂಸ್ಥೆ) ಆರಾಧನ, ಪಾವಂಜೆ, ಹಳೆಯಂಗಡಿ.