ಪೀಠಿಕೆ :

ಸಾವಂತರಸರು ಮೂಲಿಕೆ ಸೀಮೆಯನ್ನು ೧೪ನೇ ಶತಮಾನದಿಂದ ೧೮ನೇ ಶತಮಾನದ ಅಂತ್ಯದವರೆಗೆ ಆಳಿದ್ದರು. ಇವರ ಸೀಮೆಯ ವಿಸ್ತಾರ ಶಾಂಭವಿ (ಮೂಲಿಕೆ)ಯಿಂದ ದಕ್ಷಿಣಕ್ಕೆ ನಂದಿನಿ (ಪಾವಂಜೆ) ಹೊಳೆಗಳ ಮಧ್ಯೆ ಇರುವ ಅಗಲ ಕಿರಿದಾದ ಕರಾವಳಿ ಪ್ರದೇಶದ. ಪೂರ್ವದಲ್ಲಿ ಮೂಂಡಕೂರಿನ ವರೆಗೆ ವಿಸ್ತರಿಸಿತ್ತು. ಇವರ ಸೀಮೆಯಲ್ಲಿ ಅಯಿಕಳ, ಅತ್ತೂರು, ಕುಬೆವೂರು, ಪಂಜ, ಒಳಲಂಕೆ, ಕಾರ್ನಾಡು, ಬಪ್ಪನಾಡು, ಕುಡೆತ್ತೂರು, ತಾಳಿಪಾಡಿಗಳೆಂಬ ಒಂಬತ್ತು ಮಾಗಣೆಗಳು ಒಳಗೊಂಡಿವೆ. ಇಷ್ಟಲ್ಲದೆ ೪೦ ಗುತ್ತುಗಳು ಇದ್ದವು. ಇದು ತುಳು ದೇಶದ ಮಧ್ಯದಲ್ಲಿದ್ದು “ಮೂಲಿಕೆಯೆಂಬ ಪೊಳಲತಿಸೊಬಗಿನಿಂದಿಹುದು” ಎಂದು ಇಲ್ಲಿಯೇ ನೆಲಸಿದ್ದ ಕವಿ ಪದ್ಮಾನಾಭನು ತನ್ನ ಕಾವ್ಯದಲ್ಲಿ ತಿಳಿಸಿದ್ದಾನೆ. ಇವನ ಕಾವ್ಯವು ಹದಿನೇಳನೇ ಶತಮಾನದ ಕೊನೆಯ ದಶಕ ಹದಿನೆಂಟನೆ ಶತಮಾನದ ಮೊದಲ ದಶಕಗಳಲ್ಲಿ ರಚಿತವಾಯಿತು.

[1]

ಸಾವಂತರಸರ ಇತಿಹಾಸ ಅಧ್ಯಯನ ಬೆಳವಣಿಗೆ:

ಮೂಲಿಕೆ ಸಾವಂತರಸ ಅಧ್ಯಯನದ ಪ್ರಯತ್ನವನ್ನು ಗಣಪತಿ ರಾವು, ಐಗಳು ಮತ್ತು ಬಾಬು ಎಂ. ೧೯೨೩ – ೨೪ರಲ್ಲಿ ನಡೆಸಿದ್ದರು. ಆಗ ಲಭ್ಯವಿದ್ದ ಆಕರಗಳನ್ನು ಸಂಗ್ರಹಿಸಿ ಮತ್ತು ವಿಶ್ಲೇಷಿಸಿ ಐಗಳವರು ತಮ್ಮ ಗ್ರಂಥವನ್ನು ಬರೆದರು. ಇವರ ಪ್ರಯತ್ನವನ್ನು ಸ್ವಲ್ಪಮಟ್ಟಿಗೆ ಬಾಬು ಎಂ. ಮುಂದುವರಿಸಿದರು. [2] ಈ ವರ್ಷಗಳ ನಂತರ ಸಾವಂತರಸರ ಕುರಿತಾಗಿ ವಿವಿಧ ತರಹಗಳ ದಾಖಲೆಗಳು ಸಿಗುತ್ತಾ ಇವೆ. ಇವುಗಳಲ್ಲಿ ಶಾಸನಗಳು, ದೇಶಿಯ ದಾಖಲೆ ಪತ್ರಗಳು, ಕನ್ನಡ ಭಾಷೆಯ ಕಾವ್ಯಗಳು, ತುಳು ಪಾಡ್ದನಗಳು ಮತ್ತು ವಿದೇಶಿಯ ಆಕರಗಳು, ಕನ್ನಡ ಭಾಷೆಯ ಕಾವ್ಯಗಳು, ತುಳು ಪಾಡ್ದನಗಳು ಮತ್ತು ವಿದೇಶಿಯ ಆಕರಗಳು, ಇವುಗಳನ್ನೆಲ್ಲಾ ಉಪಯೋಗಿಸಿಕೊಂಡು ಸಾವಂತರಸರ ಇತಿಹಾಸ ಪುನಾರಚಿಸುವ ಕಾರ್ಯ ನಡೆಯುತ್ತಾ ಇದೆ. ಶ್ರೀ ಐಗಳರ ನಂತರ ಈ ಕೆಲಸವನ್ನು ಪ್ರಥಮವಾಗಿ ನಡೆಸಿದವರು ದಿ| ಭಾಸ್ಕರ ಆನಂದ ಸಾಲೆತ್ತೂರರು. ೧೯೨೯ರ Bombay Branch of Historicla Society ಸಂಚಿಕೆಯಲ್ಲಿ ‘ಕಾರ್ನಾಡಿನ ರಾಣಿ’ ಎಂಬ ಸಂಶೋಧನಾತ್ಮಕ ಲೇಖನವನ್ನು ಬರೆದರು. [3] ಈ ಲೇಖನದಲ್ಲಿ ಕಾರ್ನಾಡಿನ ರಾಣಿ ಪೋರ್ತುಗೀಜರನ್ನು ಕೂಡಿಕೊಂಡು ಕೆಳದಿ ವೆಂಕಟಪ್ಪ ನಾಯಕನನ್ನು ಎದುರಿಸಿ ವಿಫಲವಾದುದನ್ನು ಸಾಲೆತ್ತೂರರು ತಿಳಿಸಿದ್ದಾರೆ. ಇದಕ್ಕೆ ಇವರು ಉಪಯೋಗಿಸಿಕೊಂಡ ಮುಖ್ಯ ಆಧಾರ ಪೋರ್ತುಗೀಜ ದಾಖಲೆಗಳು ಮತ್ತು ಪಿಯತ್ರೊ ದೆಲ್ಲಾವೆಲ್ಲಿಯ ವರದಿ. ಇಷ್ಟೆಲ್ಲ ಇದೇ ವಿದ್ವಾಂಸರು ಸಾವಂತರಸರ ಕುರಿತಾಗಿ ೧೯೩೮ರಲ್ಲಿ[4] ಪರಿಷ್ಕೃತಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಗಝೇಟಿಯರ್‌ನಲ್ಲೂ ಸೂಕ್ಷ್ಮ ವಿವರಗಳನ್ನು ನೀಡಿದ್ದಾರೆ. ಮೂಲ್ಕಿ ಸಾವಂತರಸರ ಇತಿಹಾಸ ಅಧ್ಯಯನಕ್ಕೆ ಒಂದು ಹೊಸ ತಿರುವು ೧೯೫೦ರಲ್ಲಾಯಿತು. ಇದಕ್ಕೆ ಮುಖ್ಯ ಕಾರಣ ಇದೇ ವರ್ಷ ಪುಟ್ಟಸ್ವಾಮಿಯವರು ಪದ್ಮನಾಭ ಕವಿ ಬರೆದ ಪದ್ಮಾವತಿ ಮಹಾತ್ಮ್ಯ ಅಥವಾ ಜಿನದತ್ತರಾಯ ಚರಿತ್ರೆ ಎಂಬ ಕಾವ್ಯವನ್ನು ಸಂಪಾದಿಸಿ “ಮಂಗಳೂರಿನ ವಿವೇಕಾಭ್ಯುದಯ”ದಲ್ಲಿ ಪ್ರಕಟಿಸಿದರು. ಇದರ ಹಿನ್ನೆಲೆಯಲ್ಲಿ ದೊ. ಲ. ನರಸಿಂಹಾಚಾರ‍್ಯರು ಮೂಲಿಕೆ ಸಾವಂತರ ಕುರಿತಾಗಿ ಕೆಲವು ಉಪಯುಕ್ತ ಮಾಹಿತಿಗಳನ್ನು ತನ್ನ ಲೇಖನದಲ್ಲಿ ತಿಳಿಸಿದರು. ಇವುಗಳಲ್ಲಿ ಮುಖ್ಯವಾದುದು ಸಾವಂತರಸ ವಂಶಾವಳಿ. ಈ ಲೇಖನ ೧೯೫೪ರಲ್ಲಿ ಪ್ರಕಟವಾಯಿತು. [5] ೧೯೫೯ರಲ್ಲಿ ಎಂ. ಗೋವಿಂದ ಪೈಗಳ ಲೇಖನವು ಮೂಲಿಕೆಯಲ್ಲಿ ದುಗ್ಗಣ್ಣ ಸಾವಂತನು ಕ್ರಿ.ಶ. ೧೩೭೮ರಲ್ಲಿ ಆಳಿಕೊಂಡಿದ್ದನೆಂಬ ಒಂದು ಹೊಸ ಸಂಗತಿಯನ್ನು ತಿಳಿಸಿದರು. ಇದಕ್ಕೆ ಮುಖ್ಯ ಆಧಾರ ಮೂಲಿಕೆ ಕೋಟೆಕೇರಿ ಬಸದಿಯ ಹಿಂದಿರುವ ಶಿಲಾಶಾಸನ. [6] ಆದರೆ ಈ ಶಾಸನ ಈಗ ಓದಲಾರದಷ್ಟು ಹಾಳಾಗಿದೆ.

೧೯೬೦ – ೧೯೮೦ರ ದಶಕಗಳಲ್ಲಿ ಕೆಲವು ವಿದ್ವಾಂಸರು ಶಾಸನಗಳು ಮತ್ತು ಇನ್ನಿತರ ಸಮಕಾಲೀನ ಐತಿಹಾಸಿಕ ದಾಖಲೆಗಳನ್ನು ಅಧ್ಯಯನಿಸಿ ಮೂಲಿಕೆ ಸಾವಂತರಸರ ಕುರಿತಾಗಿ ಕೆಲವು ಹೊಸ ಮಾಹಿತಿಗಳನ್ನು ನೀಡಿದರು. ಇಂತಹ ವಿದ್ವಾಂಸರುಗಳಲ್ಲಿ ಸೂರ್ಯನಾಥ ಕಾಮತ್‌[7], ಕೆ.ವಿ. ರಮೇಶ್‌[8], ಪಿ. ಗುರುರಾಜ ಭಟ್ಟ[9] ಪ್ರಮುಖರು. ಮೂಲಿಕೆ ಸಾವಂತರಸರ ಇತಿಹಾಸ ಅಧ್ಯಯನಿಸುವಲ್ಲಿ ಗುರುರಾಜ ಭಟ್ಟರ ಬರಹಗಳು ಗಮನಿಸುವಂತಾದ್ದೆ. ಏಕೆಂದರೆ ಈ ಬರಹಗಳು ಸಾವಂತರಸರ ಸಮಗ್ರ ಚಟುವಟಿಕೆಗಳನ್ನು ಕೊಡಲು ಪ್ರಯತ್ನಿಸಿವೆ. ಇಷ್ಟಲ್ಲದೆ ಇವುಗಳಲ್ಲಿ ಆಗ ಲಭ್ಯವಿದ್ದ ಎಲ್ಲಾ ಆಕರಗಳ ಮಾಹಿತಿಗಳು ಇವೆ. ದಿ I ಬಿ. ಎಸ್. ಶಾಸ್ತ್ರಿಯವರ ಗ್ರಂಥವು[10] ಮೂಲಿಕೆ ಸಾವಂತರಸರ ಅಧ್ಯಯನಕ್ಕೆ ಇನ್ನೊಂದು ಹೊಸ ಆಕರಗಳನ್ನು ನೀಡಿವೆ. ಅದು ಯಾವುದೆಂದರೆ ಇವರೆಗೆ ತಿಳಿಯದಿದ್ದ ಪೋರ್ತುಗೀಜ ದಾಖಲೆಗಳು. ಈ ದಾಖಲೆಗಳ ಆಧಾರದಿಂದ ಶಾಸ್ತ್ರೀಯವರು ಕಾರ್ನಾಡಿನ ರಾಣಿಯ ವಿಚಾರ ಕುತೂಹಲಕರ ಮಾಹಿತಿಗಳನ್ನು ನೀಡಿದ್ದಾರೆ. ಈ ರಾಣಿಯು ಪೋರ್ತುಗೀಜ ಮತ್ತು ಬಂಗರಸನೊಂದಿಗೆ ಕೂಡಿಕೊಂಡು ಕೆಳದಿ ವೆಂಕಟಪ್ಪ ಮತ್ತು ಉಳ್ಳಾಲ ಅಬ್ಬಕ್ಕದೇವಿ (II) ಯರೊಂದಿಗೆ ಹೋರಾಡಿದ ವಿಷಯವನ್ನು ಈ ವಿದ್ವಾಂಸರು ತಿಳಿಸಿದ್ದಾರೆ.

೧೯೮೦ – ೯೦ರ ದಶಕದಲ್ಲಿ ಕೆ.ಜಿ. ವಸಂತಮಾಧವ, ಪಿ.ಎನ್. ನರಸಿಂಹ ಮೂರ್ತಿ, ಪಿ.ಶ್ರೀನಿವಾಸ ಭಟ್ಟ ಮತ್ತು ಎಸ್.ಡಿ. ಶೆಟ್ಟರು ಮೂಲಿಕೆ ಸಾವಂತರಸರ ಕುರಿತಾಗಿರುವ ಕೆಲವು ದಾಖಲೆಗಳನ್ನು ಪತ್ತೆಹಚ್ಚಿ ಈ ಅರಸು ಮನೆತನದ ಇತಿಹಾಸ ಅಧ್ಯಯನಕ್ಕೆ ಒಂದು ಹೊಸ ತಿರುವು ಬರುವ ಅವಕಾಶವನ್ನು ನೀಡಿದ್ದಾರೆ. ಈ ಎಲ್ಲಾ ವಿದ್ವಾಂಸರುಗಳು ಸಾವಂತರಸರ ರಾಜಕೀಯ ಚಟುವಟಿಕೆಗಳಿಗೆ ಹೆಚ್ಚಿನ ಮಾಹಿತಿಗಳನ್ನು ನೀಡಿದ್ದಾರೆ. ಇವರೆಲ್ಲರ ಪ್ರಯತ್ನದಿಂದ ಹೊಸ ರಾಜರಾಣಿಯರುಗಳ ಹೆಸರುಗಳು ಬೆಳಕಿಗೆ ಬಂದಿವೆ.

ಸಾವಂತರಸರ ಇತಿಹಾಸ ಅಧ್ಯಯನ ಆಕರಗಳ ಪರಿಚಯ:

ಸಾವಂತರಸರ ಇತಿಹಾಸವನ್ನು ತಿಳಿಯಲು ನಮಗೆ ಹಲವಾರು ಆಕರಗಳಿವೆ. ಇವು ಗಳಲ್ಲಿ ಶಾಸನಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಈ ಶಾಸನಗಳು ಈ ಅರಸುಗಳ ಹೆಸರುಗಳನ್ನು ನಮೂದಿಸಿ, ಇವರ ರಾಜಕೀಯ ಚಟುವಟಿಕೆಗಳನ್ನು ತಿಳಿಸುತ್ತವೆ. ಇಷ್ಟಲ್ಲದೆ ಹೆಚ್ಚಿನ ಶಾಸನಗಳು ಈ ಅರಸು ಮನೆತನದವರ ಧಾರ್ಮಿಕ ಪ್ರವೃತ್ತಿ, ಇವರ ಸೀಮೆಯಲ್ಲಿನ ಆರ್ಥಿಕ ಮತ್ತು ಭೌಗೋಳಿಕ ಪರಿಸ್ಥಿತಿಗಳನ್ನು ಪರಿಚಯಿಸುತ್ತವೆ.

ಇಲ್ಲಿನ ಶಿಲ್ಪಕಲೆಯ ವೈಶಿಷ್ಟ್ಯಗಳ ಪರಿಚಯವು ಇವರ ಸೀಮೆಯಲ್ಲಿರುವ ಕೆಲವು ಶಾಸನಗಳಿಂದ ತಿಳಿದು ಬರುತ್ತದೆ. ಈ ಅರಸು ಮನೆತನದ ಕೆಲವು ಶಾಸನಗಳು ಮೂಡಬಿದ್ರೆ, ಎಲ್ಲೂರು ಮತ್ತು ಘಟ್ಟದ ಮೇಲಿನ ನಗರ, ಸೊರಬ ಮತ್ತು ಸಾಗರ ತಾಲೂಕುಗಳಲ್ಲಿವೆ. ಇವುಗಳಲ್ಲಿ ನಮ್ಮ ಗಮನ ಹರಿಯುವ ಶಾಸನ ಮೂಡಬಿದ್ರೆಯ ತಾಮ್ರ ಶಾಸನ, ಇದು ಇಲ್ಲಿನ ತ್ರಿಭುವನ ಚೂಡಾಮಣಿ ಬಸದಿಯಲ್ಲಿದೆ. ಇದರ ತೇದಿ ೧೩೮೯. [11] ಈ ಶಾಸನವು ಕಿಂನಿಕ ಹೆಗಡೆ ಮತ್ತು ಇವನ ತಮ್ಮ ಕೋಟೆ ಒಂದಾಗಿ ತಮ್ಮ ಸ್ಥಳ ಏಳಿಂಜೆಯ ಮರೆಪಾಡಿಯ ಬಾಗಿಲುಗದ್ದೆ ಮತ್ತು ಬೆಟ್ಟುಗದ್ದೆಗಳ ಉತ್ಪತ್ತಿಯನ್ನು ಮೂಡಬಿದ್ರೆಯ ಬಸದಿಯ ಧಾರ್ಮಿಕ ಕಾರ್ಯಗಳನ್ನು ನಡೆಸಲು ಬಿಟ್ಟದ್ದನ್ನು ತಿಳಿಸುತ್ತದೆ. ಇಲ್ಲಿ ತಿಳಿಸಿದ ಕಿಂನಿಕ[12] ಸಾವಂತರಸರ ವಂಶದವನಾಗಿದ್ದಾನೆ. ಈ ಶಾಸನದಿಂದ ತಿಳಿದು ಬರುವ ಮುಖ್ಯ ಸಂಗತಿಯೇನೆಂದರೆ ಈ ವಂಶಸ್ಥರು ಪ್ರಥಮವಾಗಿ ಏಳಿಂಜೆಯಲ್ಲಿದ್ದರು.

ಜೈನ ಮತಕ್ಕೆ ಪ್ರೋತ್ಸಾಹ ನೀಡುವಲ್ಲಿ ಈ ಅರಸು ಮನೆತನದವರು ಆಸಕ್ತರಾಗಿದ್ದರು. ಈ ಕಿಂನಿಕ ಹೆಗಡೆಯ ಉಲ್ಲೇಖ ಬಪ್ಪನಾಡು ದುರ್ಗಾಪರಮೇರ್ಶವರಿ ದೇವಸ್ಥಾನದ ಒಳಾಂಗಣದಲ್ಲಿರುವ ಒಂದು ಶಾಸನವು ಉಲ್ಲೇಖಿಸುತ್ತದೆ. ಇದು ಶ.ಕ. ವರುಷ ೧೩೩೩ ವಿಕೃತಿ ಸಂವತ್ಸರ ಮಿಥುನ ಮಾಸ(೧೪೧೦).

ಈ ಶಾಸನವು “ಹೊರಹಿನ ಕಿಂನಿಕ ಹೆಗಡೆ” [13] ಎಂದು ತಿಳಿಸಿದ್ದು ಗಮನಿಸುವ ಸಂಗತಿ. ಈ ಹಿನ್ನೆಲೆಯಲ್ಲಿ ಇಲ್ಲಿ ತಿಳಿಸಿದ ಕಿಂನಿಕ ಹೆಗಡೆ ಹೊರಗಿನವರಾಗಿರಬೇಕೆಂದು ಊಹಿಸುವ ಅವಕಾಶವಿದೆ. ಇದನ್ನು ಘಟ್ಟದ ಮೇಲಿರುವ ನಗರ, ಸೊರಬ ಮತ್ತು ಸಾಗರ[14] ಪ್ರದೇಶಗಳಲ್ಲಿ ಸಿಕ್ಕಿದ ಶಾಸನಗಳಿಂದ ಸಮರ್ಥಿಸಿಕೊಳ್ಳಬಹುದು. (ಈ ಶಾಸನಗಳ ಕಾಲ ೧೨೫೪, ೧೨೮೪, ೧೨೯೨) ಶಕ ೧೩೯೭(ಕ್ರಿ.ಶಕ ೧೪೭೫) [15]ರ ಉಡುಪಿಯಲ್ಲಿದ್ದ ಶಾಸನವು ದುಗಣ ಸೇಬಿತ (ಸಾವಂತ) ಕಿಂನಿಕ ಸೇಮಿತ ಮತ್ತು ಸೀಮಂತೂರು ದೇವರನ್ನು ಉಲ್ಲೇಖಿಸುತ್ತದೆ. ಇದು ಸಾವಂತರಸರ ಮೂಲದ ಹೆಸರು ಮತ್ತು ಸೀಮೆ ದೇವಸ್ಥಾನ ಸೀಮಂತೂರಿಗೆ ಇರುವ ನಿಕಟ ಸಂಪರ್ಕವನ್ನು ಸೂಚಿಸುತ್ತದೆ.

ಸೀಮಂತೂರು ಜನಾರ್ದನ ದೇವಸ್ಥಾನದಲ್ಲಿರುವ ಶ.ಕ. ೧೪೩೫ = ಶಿಲಾಶಾಸನ, ಇದು ರಾಜಕೀಯ ಒಪ್ಪಂದವನ್ನು ತಿಳಿಸುವುದರೊಂದಿಗೆ ಆಗಿನ ಕಾಲದ ರಾಜಕೀಯ ಸ್ಥಿತಿಗತಿಗಳ ವಿಚಾರ ಮಾಹಿತಿಗಳನ್ನು ಒದಗಿಸುತ್ತದೆ.ARSIE 1930 - 31, No. 340. [ಪಡಿಯಚ್ಚುಕೃಪೆ: ಆರ್‌.ಕೆ.ಸ್ಟುಡಿಯೊ, ಹಳೆಯಂಗಡಿ].

ಸೀಮಂತೂರು ಜನಾರ್ದನ ದೇವಸ್ಥಾನದಲ್ಲಿರುವ ಶ.ಕ. ೧೪೩೫ = ಶಿಲಾಶಾಸನ, ಇದು ರಾಜಕೀಯ ಒಪ್ಪಂದವನ್ನು ತಿಳಿಸುವುದರೊಂದಿಗೆ ಆಗಿನ ಕಾಲದ ರಾಜಕೀಯ ಸ್ಥಿತಿಗತಿಗಳ ವಿಚಾರ ಮಾಹಿತಿಗಳನ್ನು ಒದಗಿಸುತ್ತದೆ.ARSIE 1930 – 31, No. 340. [ಪಡಿಯಚ್ಚುಕೃಪೆ: ಆರ್‌.ಕೆ.ಸ್ಟುಡಿಯೊ, ಹಳೆಯಂಗಡಿ].

ಸೀಮಂತೂರು ದೇವಸ್ಥಾನದ ಒಳಾಂಗಣದಲ್ಲಿರುವ ಒಂದು ಶಾಸನವು ಸಾವಂತರಸರ ರಾಜಕೀಯ ಪ್ರಭಾವವನ್ನು ತಿಳಿಸುತ್ತದೆ. ಈ ಶಾಸನದ ಕಾಲ ಕ್ರಿ.ಶ. ೧೫೧೨ ಆಗಿದ್ದು ಇದು ಒಂದು ರಾಜಕೀಯ ಒಪ್ಪಂದವಾಗಿರುತ್ತದೆ. ಕಿಂನಿಕ ಸಾವಂತನು ಚೌಟರಸ ತಿರುಮಲ ಮತ್ತು ಏಲ್ಲೂರು ಕುಂದ ಹೆಗಡೆಯರೊಂದಿಗೆ ಮಾಡಿಕೊಂಡ ರಕ್ಷಣಾ ಒಪ್ಪಂದವನ್ನು ತಿಳಿಸುವುದು ಈ ಶಾಸನದ ಉದ್ದೇಶ. [16] ಈ ಒಪ್ಪಂದವು ಕಳಸ – ಕಾರಕಳ ಭೈರರಸ ಒಡೆಯರ ವಿರುದ್ಧವಾಗಿತ್ತು. ಈ ಒಪ್ಪಂದದಲ್ಲಿ ಸೇರಿದ ತುಂಡರಸುಗಳು ವಿಜಯನಗರದ ಅರಸ ಕೃಷ್ಣದೇವರಾಯನ ಸಾರ್ವಭೌಮತೆಯನ್ನು ಒಪ್ಪಿಕೊಂಡದ್ದು ಮತ್ತು ಸೀಮೆ ದೇವಸ್ಥಾನಗಳನ್ನು ರಾಜಕೀಯ ವರ‍್ಚಸ್ಸಿಗೆ ಸೇರಿಸಿಕೊಂಡದ್ದು ಈ ಶಾಸನದಲ್ಲಿ ಗಮನಿಸಬೇಕಾದ ಸಂಗತಿಗಳು.

ಪಡುಪಡಂಬೂರು ಬಸದಿಯ ಆವರಣದಲ್ಲಿ ಸಿಕ್ಕಿದ ಒಂದು ಶಿಲಾಶಾಸನವು ಕಿಂನಿಕ ಸಾವಂತರಳಿಯ ದುಗ್ಗಣ್ನ ಸಾವಂತನ ಆಳ್ವಿಕೆಯನ್ನು ತಿಳಿಸುತ್ತದೆ. ಅಳಿಯ ಸಂತಾನದಂತೆ ಪಟ್ಟಕ್ಕೆ ಬರುವ ಪದ್ಧತಿ ಸಾವಂತರಸುಗಳಲ್ಲಿದೆಯೆಂದು ಈ ಶಾಸನವು ಸೂಚಿಸುವುದು. ಇಲ್ಲಿನ ಬಸದಿಯ ರಚನಾಕ್ರಮ, ಸಾವಂತರಸರನ ಅಕ್ಕ ಚೆನಂಮದೇವಿ, ಇಲ್ಲಿನ ಸಾಮಾಜಿಕ ಸ್ಥಿತಿ ಮತ್ತು ಆರ್ಥಿಕ ವ್ಯವಸ್ಥೆಗಳ ಮಾಹಿತಿಗಳು ಈ ಶಾಸನದಿಂದ ತಿಳಿದುಬರುತ್ತವೆ. ಈ ಶಾಸನದ ಕಾಲ ಕ್ರಿ.ಶ. ೧೫೪೨. [17]

ಕೋಟೆಕೇರಿ ಬಸದಿಯ ತಾಮ್ರ ಶಾಸನ ಶಕ ೧೫೨೯

ಕೋಟೆಕೇರಿ ಬಸದಿಯ ತಾಮ್ರ ಶಾಸನ ಶಕ ೧೫೨೯

ಇದೇ ಬಸದಿಯ ಪೂರ್ವ ದಿಕ್ಕಿನಲ್ಲಿರುವ ಶಿಲಾಶಾಸನ ಕ್ರಿ.ಶ. ೧೫೫೯[18] ಆಗಿದ್ದು ಇದೇ ದುಗಣ ಸಾಮನ್ತ(ಸಾವಂತ) ಶಾಸ್ತ್ರ ಅಧ್ಯಯನಕ್ಕೆ ದಾನ ಮಾಡಿದ್ದನ್ನು ತಿಳಿಸಿದೆ. ಇದರಿಂದಾಗಿ ನಾವು ತಿಳಿಯುವ ಸಂಗತಿಯೇನೆಂದರೆ ಪಡುಪಡಂಬೂರು ಜೈನಶಾಸ್ತ್ರ ಅಧ್ಯಯನ ಕೇಂದ್ರವಾಗಿತ್ತು. ಇದನ್ನು ಸಮಕಾಲೀನ ಸಾಹಿತ್ಯ ಕೃತಿಗಳ[19] ಅಧ್ಯಯನವು ಸಮರ್ಥಿಸುತ್ತದೆ.

 ಕೋಟೆಕೇರಿ ಬಸದಿಯ ತಾಮ್ರ ಶಾಸನ ಹಿಂಭಾಗ

ಕೋಟೆಕೇರಿ ಬಸದಿಯ ತಾಮ್ರ ಶಾಸನ ಹಿಂಭಾಗ

ಕೋಟೇಕೇರಿ ಬಸದಿಯ ವಾಸ್ತುಶಿಲ್ಪ. ಇದರಲ್ಲಿರುವ ಶಾಸನದಲ್ಲಿ ಕಿನ್ನಿಂಗೇಶನ ಹೆಸರಿದೆ. ಇದು ಕಿಂನಿಕ್ಕ ಸಾವಂತನಾಗಿರಬೇಕು.

ಕೋಟೇಕೇರಿ ಬಸದಿಯ ವಾಸ್ತುಶಿಲ್ಪ. ಇದರಲ್ಲಿರುವ ಶಾಸನದಲ್ಲಿ ಕಿನ್ನಿಂಗೇಶನ ಹೆಸರಿದೆ. ಇದು ಕಿಂನಿಕ್ಕ ಸಾವಂತನಾಗಿರಬೇಕು.

 

ಕ್ರಿ.ಶಕ ೧೬೦೬ರ ತೇದಿಯ ಮೂಲಿಕ ಕೋಟೆಕೇರಿ ಬಸದಿಯ ತಾಮ್ರ ಶಾಸನವು[20] ಕಿಂನಿಕ ಸಾವಂತನ ಆಳ್ವಿಕೆಯ ಕಾಲದಲ್ಲಿ ‘ಬಗೆಂಪಿ ಬಳಿ’ ರಾಜ ಶಂಕರಸರು ಇಲ್ಲಿರುವ ಬಸದಿಗೆ ಬಿಟ್ಟ ದಾನ ಶಾಸನವಾಗಿದೆ. ಇದರಲ್ಲಿ ಹೊಸಂಗಡಿ (ಈಗಿನ ಹಳೆಯಂಗಡಿ)ಯ ಹಲರು ಮತ್ತು ಸಮಸ್ತ ಹಲರು ಈ ದಾನದಲ್ಲಿ ಸಹಭಾಗಿಗಳಾಗಿದ್ದರೆಂದು ತಿಳಿಸಿದೆ. ಒಟ್ಟಿನಲ್ಲಿ ಮೂಲಿಕೆ ಸೀಮೆಯು ನಗರೀಕರಣಕ್ಕೆ ಒಲವು ತೋರಿಸುತ್ತಾ ಇದೆಯೆಂಬ ಸಂಗತಿ ಈ ಶಾಸನದ ಅಧ್ಯಯನದಿಂದ ತಿಳಿದುಬರುತ್ತದೆ. ಇಲ್ಲಿ ಹರಿಯುವ ನದಿಯ ದಾರಿ ಆ ಕಾಲದಲ್ಲಿ ಬೇರೆಯಾಗಿತ್ತೆಂಬ ಕುತೂಹಲಕಾರಿ ಸಂಗತಿ ಇದೇ ಶಾಸನದ ಅಧ್ಯಯನದಿಂದ ವ್ಯಕ್ತವಾಗುತ್ತದೆ. ಬಸದಿಗಳಿಗೆ ಮೇಲುಪ್ಪರಿಗೆಗಳಿದ್ದವು. ಹೊಂನಿಗೆ ಬಡ್ಡಿ ನೀಡುವ ಪದ್ಧತಿ, ಮಾವನ ಆಸ್ತಿಯಲ್ಲಿ ಅಳಿಯಂದಿರು ಹೆಚ್ಚಿ ಆಸಕ್ತಿ ಇಟ್ಟಿದ್ದರೆಂಬ ಇತ್ಯಾದಿ ವಿಷಯಗಳು ಈ ಶಾಸನದಲ್ಲಿ ಹೇಳಲಾಗಿದೆ. ಇಷ್ಟಲ್ಲದೆ ಈ ಶಾಸನವು ವಿವಿಧ ಜಾತಿಯವರು ನಡೆಸುವ ಬೇಸಾಯ, ಬೇಸಾಯ ಮಾಡುವ ಗದ್ದೆಗಳ ಸ್ವರೂಪ, ಭೌಗೋಳಿಕ ಪರಿಸ್ಥಿತಿ ಮತ್ತು ಬಸದಿಗಳಲ್ಲಿ ನಡೆಯುವ ಪೂಜೆಗಳು ಇತ್ಯಾದಿ ವಿವರಗಳು ಇದೇ ಶಾಸನದಲ್ಲಿವೆ.

ಇತ್ತೀಚೆಗೆ ಪತ್ತೆಯಾದ ಕೊಡೆತ್ತೂರ ಮಜಿಲಾರ ಬಾಳಿಕೆಯ[21] ಶಿಲಾಶಾಸನವು ಸಾವಂತರಸರ ಅಧ್ಯಯನ ನಡೆಸುವಲ್ಲಿ ಗಮನಿಸತಕ್ಕದ್ದು. ಈ ಶಿಲಾಶಾಸನವ ಶಾ.ಶಕ ೧೫೩೨ ಆಗಿದ್ದು (ಕ್ರಿ.ಶಕ ೧೬೧೦) ಇದರಲ್ಲಿ ಚೆಂನಮದೇವಿ ಮತ್ತು ಕಿನಿಂಗ ಸಾವಂತರ ಆಳ್ವಿಕೆ ಈ ಸೀಮೆಯಲ್ಲಿದ್ದುದನ್ನು ಸೂಚಿಸುತ್ತದೆ. ಈ ರಾಣಿ ಕಿನಿಂಗ ಸಾವಂತ ನೋಡಕೂಡಿ ಕೊಡೆತ್ತೂರಿನಲ್ಲಿ ಕಾಂತೇಶ್ವರ ದೇವರ ಒಕ್ಕಲಿಗೆ ಈ ದೇವಾಲಯಕ್ಕೆ ಕೊಡುವ ಗೇಣಿಯನ್ನು (ಹಣದ ರೂಪದಲ್ಲಿ) ನಿರ್ಧರಿಸುತ್ತಾಳೆ. ಇಲ್ಲಿ ತಿಳಿಸಿದ ಚೆಂನಮ ಡೆಲ್ಲಾವೆಲ್ಲಿ ತಿಳಿಸಿದ ಕಾರ್ನಾಡಿನ ರಾಣಿಯೇ ಆಗಿರಬೇಕು[22]. ಇವಳನ್ನೆ ಕವಿ ಪದ್ಮನಾಭ ದೇವ ಪೂಜೆ[23] ಎಂದು ತನ್ನ ಕಾವ್ಯದಲ್ಲಿ ತಿಳಿಸಿದ್ದಾನೆ. ವೈಷ್ಣವ, ಜೈನ ಮತ್ತು ಶೈವ ಸಂಪ್ರದಾಯದ ಸಮನ್ವಯತೆಯು ಈ ಶಾಸನದಲ್ಲಿ ವ್ಯಕ್ತವಾಗಿರುವುದನ್ನು ಗಮನಿಸುವ ಅಗತ್ಯವಿದೆ.

ಇತ್ತೀಚೆಗೆ ಎಸ್.ಡಿ. ಶೆಟ್ಟಿಯರು ಸಂಶೋಧಿಸಿದ ಮೂಡಬಿದ್ರೆಯ ಕಲ್ಲು ಬಸದಿಯ ಶಾಸನಗಳು ಸಾವಂತರಸರ ಕುರಿತಾಗಿ ಈವರೆಗೆ ತಿಳಿಯದಿದ್ದ ಕೆಲವು ವಿಷಯಗಳನ್ನು ತಿಳಿಸುತ್ತವೆ. ಇವುಗಳ ತೇದಿ ೧೯೩೧ ವಿರೋಧಿ ಸಂವತ್ಸರ ಜೇಷ್ಠ ೧೫ (ಕ್ರಿ.ಶಕ ೧೭೦೯) ಸಿದ್ದಂಮದೇವಿ ಮತ್ತು ಕಿನಿಂಗ ಸಾವಂತರ ಜಂಟಿ ಆಳ್ವಿಕೆ ನಡೆಸುತ್ತಿದ್ದನೆಂಬ[24] ಹೊಸ ಸಂಗತಿಯನ್ನು ಈ ಶಾಸನವು ತಿಳಿಸುವುದು ಗಮನಾರ್ಹ. ಈ ಎರಡು ಶಾಸನಗಳು ಇಲ್ಲಿ ಬೆಳಗಾಳಾದ ಭತತ, ತೆಂಗು, ಹಲಸು, ಮಾವು, ಅಡಕೆ ರೂಢಿಯಲ್ಲಿದ್ದ ತೆರಿಗೆಗಳಾದ ವರಾಡ, ಪಗುದಿ ಮತ್ತು ಊರ ಪ್ರಮುಖರ ಸಾಕ್ಷಿಗಳ ವಿವರಗಳನ್ನು ತಿಳಿಸುತ್ತದೆ. ಒಟ್ಟಿನಲ್ಲಿ ಮೂಲಿಕೆ ಸೀಮೆಯ ಭೂವ್ಯವಹಾರಗಳ ಮಾಹಿತಿ ತಿಳಿಯಲು ಈಎರಡೂ ತಾಮ್ರ ಶಾಸನಗಳು ಉಪಯುಕ್ತವಾಗಿವೆ.

ಇತರ ದಾಖಲೆ ಪತ್ರಗಳು:

ಇದರಲ್ಲಿ ಕಡತ, ತಾಳೆಓಲೆ ಮತ್ತು ಕಾಗದ ಪತ್ರಗಳು ಬರುತ್ತವೆ. ಇವುಗಳ ಲಭ್ಯ ಬಹಳ ವಿರಳವಾಗಿದ್ದರೂ, ಸಿಕ್ಕಿದ ದಾಖಲೆಗಳು ಈ ವಂಶದ ಅರಸರ ಆಳ್ವಿಕೆಯ ಕುರಿತಾಗಿ ಕೆಲವು ಅಪರೂಪ ಸಂಗತಿಗಳನ್ನು ಬೆಳಕಿಗೆ ತಂದಿವೆ. ಕಪ್ಪು ಬಟ್ಟೆಯ ಮೇಲೆ ಸೀಸ ಅಥವಾ ಚೋಕಿನಿಂದ ಬರಹವೇ ಕಡತ ಅಥವಾ ಕಡಿತ. [25] ಇಂತಹ ದಾಖಲೆ ಪತ್ರಗಳು (ಮೂಲಿಕೆಗೆ ಸಂಬಂಧಿಸಿದ್ದು) ಮಂಜೇಶ್ವರ ಶ್ರೀಮದನಂತೇಶ್ವರ ದೇವಾಲಯದಲ್ಲೂ ಮತ್ತು ಕೆಲವು ಇಂತಹ ದಾಖಲೆಗಳು ಕಟೀಲಿನ ದುರ್ಗಾ ಪರಮೇಶ್ವರಿ ದೇವಾಲಯಗಳಲ್ಲೂ ಇವೆ. ಇಂತಹ ದಾಖಲೆಗಳು ಮೂಲಿಕೆ ಸೀಮೆಯ ಆರ್ಥಿಕ ಮತ್ತು ಧಾರ್ಮಿಕ ಸಂಗತಿಗಳ ಕುರಿತಾಗಿ ಕೆಲವು ಮಾಹಿತಿಗಳನ್ನು ಸೀಮೆಯ ಆರ್ಥಿಕ ಮತ್ತು ಧಾರ್ಮಿಕ ಸಂಗತಿಗಳ ಕುರಿತಾಗಿ ಕೆಲವು ಮಾಹಿತಿಗಳನ್ನು ತಿಳಿಸುತ್ತವೆ. ಉದಾ: ಮಂಜೇಶ್ವರದಲ್ಲಿ ಸಿಕ್ಕಿದ ಒಂದು ಕಡತ ಮೂಲಿಕೆ ರೇವಿನಲ್ಲಿ ನಡೆಯುವ ವ್ಯಾಪಾರ, ವ್ಯಾಪರಸ್ಥರು ಮತ್ತು ಇವರುಗಳು ಶ್ರೀಮದನಂತೇಶ್ವರ ದೇವಸ್ಥಾನದೊಂದಿಗೆ ಹೊಂದಿದ ಸಂಬಂಧಗಳ ಮಾಹಿತಿಯನ್ನು ತಿಳಿಸುತ್ತದೆ.

ತಾಳೆ ಓಲೆಯಲ್ಲಿ ಬರೆದ ದಾಖಲೆಗಳಲ್ಲಿ ತಾಳಿಪಾಡಿ ಇಗರ್ಜಿಯಲ್ಲಿ ಸಿಕ್ಕಿದ ದಾಖಲೆ ಇಲ್ಲಿ ಪರಿಶೀಲಿಸುವ ಅಗತ್ಯವಿದೆ. ಈ ದಾಖಲೆ ಪಿ. ಶ್ರೀನಿವಾಸ ಭಟ್ಟರ ಮುಖಾಂತರ ಪತ್ತೆಯಾಗಿದೆ. ಇದು ಸಾಧಾರಣ ಸಂವತ್ಸರದಲ್ಲಿ ಬರೆದುದ್ದಾಗಿದೆ. [26] (ಕ್ರಿ.ಶಕ ೧೭೩೦) ಈ ದಾಖಲೆಯು ಚೆನ್ನರಾಯ ಸಾವಂತನ ಆಳ್ವಿಕೆಯನ್ನು ತಿಳಿಸಿ ಇವನು ಹೇಳುತ್ತದೆ. ಈ ದಾಖಲೆಯಲ್ಲಿ ಉಲ್ಲೇಖಿಸಿರುವ ಕಂಬಳ ಇಲ್ಲಿನ ಜನಜೀವನ ಇತಿಹಾಸದಲ್ಲಿ ಗಮನಾರ್ಹ. ಇಷ್ಟಲ್ಲದೇ ಅಯಿಕಳ ತಾಳಿಪಾಡಿಗಳಲ್ಲಿರುವ ಗುಡ್ಡೆಗಳು ಹಾಳೆ(ಸಣ್ಣಗದ್ದೆ) ತೋಟಗಳಾಗಿ ಮಾರ್ಪಾಡು ಆದದ್ದು, ಇವುಗಳ ಬಿಜವರಿ ಉತ್ಪತ್ತಿ ಮತ್ತು ಈ ಸ್ಥಳದಲ್ಲಿರುವ ತೆರಿಗೆ ಸ್ವರೂಪ ಇತ್ಯಾದಿಗಳ ಮಾಹಿತಿ ಈ ದಾಖಲೆಯಿಂದ ತಿಳಿದುಬರುತ್ತದೆ.

 

[1] ಪದ್ಮಾವತಿ ಮಹಾತ್ಮ್ಯಾ ಅಥವಾ ಜಿನದತ್ತರಾಯ ಚರಿತ್ರೆ(ಸಂ. ಪುಟ್ಟುಸಾಮಿ, ಮಂಗಳೂರು, ೧೯೫೦) ಪದ್ಯ ೩೩. ಪು.೩.

[2] ಎಂ.ಗಣಪತಿ ರಾವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಪು. ೩೪೨ – ೩೪೬.

[3] JBHS II, No. 3, ಸಪ್ಟಂಬರ ೧೯೨೯, ಪು. ೨೨೩ – ೨೩೧ ಈ ಲೇಖನವನ್ನು ಡಾ| ಕೆ.ಜಿ. ವಸಂತ ಮಾಧವರು ಪರಿಷ್ಕರಿಸಿದ್ದಾರೆ ನೋಡಿ ಕೆ.ಜಿ. ವಸಂತಮಾಧವ ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸ ಮತ್ತು ಸಂಶೋಧನೆ (ಮಂಗಳೂರು ೧೯೯೮ ಪುಪು. ೧೭೩ – ೧೮೦).

[4] “History and Archaeology” Madras District Bazetteer Ed. J – 7 Hall, South Canara (Madras 1938), ಪು. ೧೮೧ – ೧೯೩.

[5] ಪದ್ಮನಾಭ ಜಿನದತ್ತರಾಯ ಚರಿತ್ರೆ ಬಾಗೀನ (ಸಂ. ಸುಬ್ಬಣ್ಣ ಮತ್ತು ಹಾ. ಮಾ. ನಾಯಕ ಮೈಸೂರು ೧೯೫೪), ಪುಪು. ೨೭೬ – ೨೯೬.

[6] ‘ಮೂಲಿಕೆಯನ್ನು ಕುರಿತು Mulki Government High School Silver Jubilee Mulki 1959 ಪು.೧೭.

[7] Tuluvas under Vijaynagara Times (ಅಪ್ರಕಟಿತ Ph.D. ಪ್ರಬಂಧ – ಬೊಂಬಾಯಿ ವಿಶ್ವವಿದ್ಯಾಲಯ ೧೯೬೫).

[8] ತುಳುನಾಡಿನ ಇತಿಹಾಸ (ಉಡುಪಿ ೧೯೬೯)

[9] A Histroy of Mulky Vijaya College Souvernir Mulki 1969, ಪುಪು. ೨೩ – ೩೫. Studies in Tuluva History and Culture (Manipal 1975) ಪು. ೯೩ – ೧೦೨.

[10] ಕೆಳದಿಯ ಅರಸರೂ ಹಾಗೂ ಪೋರ್ತುಗೀಜರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ೧೯೭೨ ಪುಪು. ೧೩, ೧೪ – ೫೦.

[11] ಈ ಶಾಸನವು ಅಪ್ರಕಟಿತ. ಇದರ ಪಾಠ ಮೂಡಬಿದ್ರೆಯ ಶ್ರೀ ದೇವಕುಮಾರ ಜೈನರಿಂದ ಸಿಕ್ಕಿದೆ.

[12] ಇವನ ವಂಶಸ್ಥರು ಸೀಮಂತೂರಿಗೆ ಬಂದು ನೆಲಸಿದ ನಂತರ ಸಾವಂತರೆಂಬುದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ತಮ್ಮ ಕೇಂದ್ರವಾಗಿದ್ದ ಈ ಊರು ಸಾವಂತೂರು ಅಥವಾ ಸೀಮಂತರೂ ಆಗಿತ್ತು. ನೋಡಿ ವಿವರ ಎಂ. ಬಾಬು ಬಾರಕೂರು ಮತ್ತು ಚರಿತ್ರೆ ಕಥೆಗಳು ಪು. ೪೭.

[13] South Indian Inscriptions VII ಇದನ್ನು SII ಎಂದು ಪರಿಷ್ಕರಿಸಿ ಮುಂದೆ ತಿಳಿಸಲಾಗಿದೆ. No.259 ಇಲ್ಲಿ ತಿಳಿಸಿದ ಕಿಂನಿಕ ಹೆಗಡೆಯನ್ನು ಇದೇ ಶಕದ ಸೀಮಂತೂರು ದೇವಸ್ಥಾನದಲ್ಲಿನ ಶಾಸನವು ಕಿಂನಿಕ ಸಾವಂತ ಯಾನೆ ಬಾಚ ಹೆಗಡೆ ಎಂದು ತಿಳಿಸಿದೆ. ಇದು ಗಮನಾರ್ಹ ನೋಡಿ – Annual Report of South Indian Epigraphy 1930 – 31 No. 341(ಇದನ್ನು ARSIE ಎಂದು ಪರಿಷ್ಕರಿಸಿ ತಿಳಿಸಲಾಗಿದೆ).

[14] Mysore Archaeology Report 1929. ಪು. ೧೪೬ – ೪೮ (MAR) Epigraphia Carnatica. (ಹಳೆ ಮುದ್ರಣ) ಇದು EC ಎಂದು ತಿಳಿಸಲಾಗುವುದು VII ಸೊರಬ ೩೧ sAgr ೯೭. ಹೆಚ್ಚಿನ ವಿವರ ನೋಡಿ – ಪಿ. ಗುರುರಾಜ ಭಟ್ಟ – Studies in Tuluva History and Culture (ಮಣಿಪಾಲ ೧೯೭೫) ಪು. ೯೮.

[15] SII VII No. 304 ಸೀಮಂತೂರು ಜನಾರ್ದನ ದೇವಾಲಯವು ಸಾವಂತರಸರ ಕುಲ ದೇವಸ್ಥಾನ. ಇಲ್ಲಿ ಸಾವಂತರಸರಿಗೆ ಪಟ್ಟ ಆಗುವುದು. ಈ ದೇವರ ಹೆಸರು ಇದೆ.

[16] ARSIE 1930 – 31 No. 340.

[17] SII Nos. 262.

[18] ಇದೆ No.s. 263.

[19] ಪದ್ಮನಾಭ ಪದ್ಮಾವತಿ ಮಹಾತ್ಮ್ಯಾ ಪ್ರಥಮಸಂಧಿ, ಪದ್ಯ ಸಂಖ್ಯೆ, ೫೦ – ೫೧ ಪು.೫.

[20] ಈ ಶಾಸನವು ಅಪ್ರಕಟಿತ. ಇದು ಕೋಟಿಕೇರಿ ಬಸದಿಯ ಇಂದ್ರರಿಂದ ಸಿಕ್ಕಿದೆ. ಇದು ೧೯೬೮ರಲ್ಲಿ ಪತ್ತೆಯಾಗಿದೆ. ಇದರ ಪಾಠ ನೋಡಿ ಕೆ.ಜಿ. ವಂಸತಮಾಧವ, ಮೂಲಿಕೆ ಇತಿಹಾಸ (ಮೂಲ್ಕಿ ೧೯೮೮) ಪು.ಪು. ೭೪ – ೭೫.

[21] ಈ ಶಾಸನದ ಪಾಠ ಪಿ. ಶ್ರೀನಿವಾಸ ಭಟ್ಟರಿಂದ ಸಿಕ್ಕಿದೆ. ಈ ಶಸನವನ್ನು ಪಿ.ಎಸ್. ನರಸಿಂಹ ಮೂರ್ತಿಯವರು ಪತ್ತೆ ಹಚ್ಚಿದರು. ಶಾಸನದ ಪಾಠ ಕೆ.ಜಿ. ವಸಂತಮಾಧವ ಅದೇ ಗ್ರಂಥ ಪು. ೭೬ – ೭೭.

[22] The Travels of Pietro Della Valla in India Vol. II E.T.H.G. Havers Ed & Notes Edward Grey. (AES Madras 1991) ಪುಪು. ೩೫೨ – ೫೩.

[23] ಅದೇ ಕಾವ್ಯ – ಪದ್ಯ ಸಂಖ್ಯೆ ೫೬ ಪು. ೫.

[24] ಮೂಲ್ಕಿ ಸಾವಂತರ ಕುರಿತು ಎರಡು ತಾಮ್ರ ಶಾಸನಗಳು ಗುರುದೇವ (ಜೈನಮಠ ಹೊಂಬುಚ ಪ್ರ. ೧೯೯೧)

[25] ಡಾ| ಎ.ಕೆ. ಶಾಸ್ತ್ರಿ – ಕನ್ನಡದಲ್ಲಿ ಕಡತಗಳು ಪು. ೨ – ೧೨.

[26] ಕೆ.ಜಿ. ವಸಂತಮಾಧವ – ಅದೇ ಗ್ರಂಥ ಪು. ೭೮ – ೭೯. ಈ ಶಾಸನವು ಅಪ್ರಕಟಿತ. ಇದು ಕೋಟೆಕೇರಿ ಬಸದಿಯ ಇಂದ್ರರಿಂದ ಸಿಕ್ಕಿದೆ. ಇದು ೧೯೬೮ರಲ್ಲಿ ಪತ್ತೆಯಾಗಿದೆ. ಇದರ ಪಾಠ ನೋಡಿ ಕೆ.ಜಿ. ವಸಂತಮಾಧವ ಮೂಲಿಕೆ ಇತಿಹಾಸ (ಮೂಲ್ಕಿ ೧೯೮೮) ಪು.ಪು. ೭೪ – ೭೫.