ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ ವಿವಿಧ ಸ್ಥಳಿಕ ಅರಸು ಮನೆತನಗಳ ಪೈಕಿ ವಿಟ್ಲದ ‘ಡೊಂಬ ಹೆಗ್ಗಡೆ’ ಅರಸು ಮನೆತನವೂ ಒಂದು. ಖಚಿತ ಆಧಾರಗಳಂತೆ ಕ್ರಿ.ಶ. ೧೩ನೇಯ ಶತಮಾನದಲ್ಲೇ ಅಸ್ತಿತ್ವದಲ್ಲಿದ್ದ ಈ ಅರಸು ಮನೆತನದವರು ನಂತರ ಬಂಟ್ವಾಳ ತಾಲೂಕಿನ ವಿಟ್ಲವನ್ನು ತಮ್ಮ ರಾಜಕೀಯ ಕೇಂದ್ರವನ್ನಾಗಿಸಿಕೊಂಡು ಸುತ್ತಮುತ್ತಲಿನ ಹತ್ತೊಂಬತ್ತು ಗ್ರಾಮಗಳನ್ನೊಳಗೊಂಡ[1] ವಿಟ್ಲ ೨೦೦೦ ಸೀಮೆಯನ್ನು ತಮ್ಮ ಆಳ್ವಿಕೆಗೊಳಪಡಿಸಿಕೊಂಡಿದ್ದರು. ಕ್ರಿ.ಶ. ೧೩ನೇ ಶತಮಾನದಿಂದ ಕ್ರಿ.ಶ. ೧೯ನೇ ಶತಮಾನದ ಪ್ರಾರಂಭದ ತನಕ ಈ ಪ್ರದೇಶವನ್ನಾಳಿದ ಡೊಂಬ ಹೆಗ್ಗಡೆ ಅರಸರು ಇಲ್ಲಿನ ತಿಹಾಸ ಮತ್ತು ಸಂಸ್ಕೃತಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

ಹಿನ್ನೆಲೆ:

“ಡೊಂಬ ಹೆಗ್ಗಡೆ” ಎಂಬ ವಿಶಿಷ್ಟವಾದ ಹೆಸರಿನಿಂದ ಗುರುತಿಸಲ್ಪಡುವ ಈ ಅರಸುಮನೆತನದ ಮೂಲದ ಕುರಿತು ಖಚಿತವಾದ ಮಾಹಿತಿಗಳು ಲಭ್ಯವಿಲ್ಲ. ಭೂತಾಳ ಪಾಂಡ್ಯನು ತನ್ನ ಹನ್ನೆರಡು ಮಂದಿ ರಾಣಿಯರ ಮಕ್ಕಳಿಗೆ ರಾಜ್ಯಗಳನ್ನು ವಿಂಗಡಿಸಿಕೊಟ್ಟ ಸಂದರ್ಭ ಎಂಟನೇ ರಾಣಿಯರ ಮಕ್ಕಳಿಗೆ ವಿಟ್ಲದ ಅರಸುತನವನ್ನು ನೀಡಿದ ಎಂಬುದೊಂದು ಪ್ರತೀತಿ.[2] ವಿಟ್ಲದ ಬಳಿಯ ಕರೋಪಾಡಿ ಗ್ರಾಮದ ವಗೆನಾಡು ಸುಬ್ರಾಯ ದೇವಸ್ಥಾನದಲ್ಲಿ ದೊರಕಿದ ಕ್ರಿ.ಶ. ೧೨೫೭ರ ಆಳುಪ ಶಾಸನದಲ್ಲಿ[3] “ಡೊಂಬ ಹೆಗ್ಗಡೆ”ಯ ಉಲ್ಲೇಖವಿದ್ದು ಇದುವೇ ಈ ಅರಸು ಮನೆತನದ ಕುರಿತು ಲಭ್ಯವಿರುವ ಪ್ರಾಚೀನತಮ ದಾಖಲೆಯಾಗಿದೆ. ಶಾಸನಗಳಲ್ಲಿ ಮತ್ತು ಇತರ ದಾಖಲೆಗಳಲ್ಲಿ ಈ ಮನೆತನವನ್ನು ‘ದೊಂಬ’, ‘ಡೊಂಬ’ ಹಾಗೂ ‘ದೊಂಬಿ’ ಎಂಬ ಹೆಸರುಗಳಿಂದ ಗುರುತಿಸಿರುವುದನ್ನು ಕಾಣಬಹುದು. ಈ ಮನೆತನದ ಮೂಲ ಪುರುಷನು ಬಂಗರಾಜನೋರ್ವನಿಗೆ ಡೊಂಬರಾಟ ವೃತ್ತಿಯ ಸ್ತ್ರೀಯೋರ್ವಳಲ್ಲಿ ಜನಿಸಿದವನಾದ್ದರಿಂದ ಅದಕ್ಕೆ ‘ಡೊಂಬ ಹೆಗ್ಗಡೆ’ ಎಂಬ ಹೆಸರಾಯಿತು ಎಂಬ ಐತಿಹ್ಯವಿದೆಯಾದರೂ[4] ಇದನ್ನು ಪುಷ್ಟೀಕರಿಸಲು ಯಾವುದೇ ಆಧಾರಗಳಿಲ್ಲ. ಡೊಂಬ ಎಂಬುದು ‘ಕದಂಬ’ ಎಂಬ ಪದದ ಸಂಕ್ಷಿಪ್ತ ರೂಪವಿರಬಹುದೆಂಬ ಕೇವಲ ಶಬ್ದ ಸಾಮ್ಯದ ಊಹೆಯ ಆಧಾರದಲ್ಲಿ ಡೊಂಬ ಹೆಗ್ಗಡೆ ಮನೆತನದ ಮೂಲವನ್ನು ಕದಂಬ ಕುಲಕ್ಕನ್ವಯಿಸುವ ಗುರುರಾಜ ಭಟ್ಟರ ವಾದವೂ[5] ಆಧಾರರಹಿತವಾಗಿದ್ದು ಊಹೆಯ ಹಂತದಲ್ಲೇ ಉಳಿಯುವುದರಿಂದ ಸ್ವೀಕಾರಾರ್ಹವೆನಿಸುವುದಿಲ್ಲ. ಈ ಮನೆತನದವರು ಕಾಶ್ಮೀರ ಮೂಲದವರು ಎಂಬ ಒಂದು ವಿಚಿತ್ರ ಹೇಳಿಕೆಯೂ ಪ್ರಕಟಿತ ಗ್ರಂಥವೊಂದರ ಪುಟಗಳಲ್ಲಿ ದಾಖಲಾಗಿದೆ.[6]

ಈ ಅರಸು ಮನೆತನದ ಮೂಲವನ್ನು ತಿಳಿಯಲು ಯಾವುದೇ ಸ್ಪಷ್ಟ ಆಧಾರಗಳಿಲ್ಲವೆಂಬುದು ನಿಜವಾದರೂ “ಡೊಂಬ” ಎಂಬುದು ಈ ಮನೆತನದ ಮೂಲ ಪುರುಷನ ವ್ಯಕ್ತಿನಾಮವಾಗಿರುವ ಸಾಧ್ಯತೆಯನ್ನು ಅಲ್ಲಗಳೆವಂತಿಲ್ಲ. ತುಳುನಾಡಿನ ಹಲವೆಡೆಗಳಲ್ಲಿ ಇಂದಿಗೂ ಡೊಂಬ ಎಂಬುದು ಪುರುಷ ಅಂಕಿತ ನಾಮವಾಗಿ ಬಳಕೆಯಲ್ಲಿದೆ.[7] ವಗೆನಾಡಿನ ಶಾಸನದಲ್ಲೂ ದೊಂಬ ಹೆಗ್ಗಡೆ ಎಂಬುದು ಓರ್ವ ವ್ಯಕ್ತಿಯ ಅಂಕಿತನಾಮವಾಗಿ ಬಳಸಲ್ಪಟ್ಟಿರುವಂತೆ ತೋರುತ್ತದೆ. ಈ ಹಿನ್ನೆಲೆಯಲ್ಲಿ, ಡೊಂಬ ಎಂಬ ಹೆಸರಿನ ವ್ಯಕ್ತಿಯಿಂದಾಗಿ ಈ ಮನೆತನಕ್ಕೆ ಡೊಂಬ ಹೆಗ್ಗಡೆ ಎಂಬ ಹೆಸರು ಬಂದಿರಬೇಕು ಎಂಬ ಅಭಿಪ್ರಾಯ ತರ್ಕದ ಪರಿಧಿಯನ್ನು ಮೀರುವುದಿಲ್ಲ ಎನ್ನಬಹುದು.

ವಿಟ್ಲ ಪ್ರದೇಶದಲ್ಲಿ ಡೊಂಬ ಹೆಗ್ಗಡೆ ಅರಸರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ ಹಿನ್ನೆಲೆಯನ್ನು ಕುರಿತಂತೆ ಒಂದು ಐತಿಹ್ಯವಿದೆ. ಇದರ ಪ್ರಕಾರ ಈ ಅರಸು ಮನೆತನದವರು ಸ್ಥಳೀಯರಲ್ಲ, ಬೇರೆ ಯಾವುದೋ ಪ್ರದೇಶದಿಂದ ಇಲ್ಲಿಗೆ ವಲಸೆ ಬಂದವರು. ಪೂರ್ವದಲ್ಲಿ ವಿಟ್ಲ ಪ್ರದೇಶವನ್ನು ‘ಮಾಯಿಲ’ ಎಂಬ ಮೂಲ ನಿವಾಸಿಗಳು ಆಳುತ್ತಿದ್ದರಂತೆ. ಕಾಲಾಂತರದಲ್ಲಿ ಇಲ್ಲಿಗೆ ವಲಸೆ ಬಂದ ಡೊಂಬ ಹೆಗ್ಗಡೆ ಮನೆತನದವರು ಈ ಪ್ರದೇಶದಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ ಮಾಯಿಲ ಅರಸ ಮತ್ತು ಆತನ ಬಲದವರನ್ನು ನಿರ್ನಾಮಗೊಳಿಸುವ ಯೋಜನೆಯೊಂದನ್ನು ರೂಪಿಸಿದರಂತೆ. ಅದರಂತೆ ಮಾಯಿಲ ಅರಸ ಮತ್ತು ಆತನ ಬಲದವರನ್ನು ವಿಟ್ಲದಲ್ಲಿ ಸಮಾರಂಭವೊಂದಕ್ಕೆಂದು ಆಹ್ವಾನಿಸಲಾಯಿತು. ಪೂರ್ವ ಯೋಜನೆಯಂತೆ ನೆಲದ ಮೇಲೆಲ್ಲ ನೆಲ್ಲಿಕಾಯಿಯನ್ನು ಹರಡಿ ಅದರ ಮೇಲೆ ಚಾಪೆಗಳನ್ನು ಹಾಡಿಡಲಾಗಿತ್ತು. ಮಾಯಿಲ ಅರಸನು ತನ್ನ ಬಲದೊಂದಿಗೆ ಸಮಾರಂಭಕ್ಕೆಂದು ಆಗಮಿಸಿದಾಗ ಅವರನ್ನು ಚಾಪೆಯ ಮೇಲೆ ಕುಳಿತುಕೊಳ್ಳುವಂತೆ ವಿನಂತಿಸಲಾಯಿತು. ಮೋಸದ ಅರಿವಿಲ್ಲದ ಅವರು ಚಾಪೆಯ ಮೇಲೆ ಕುಳಿತುಕೊಂಡಾಗ ಸಮತೋಲನವನ್ನು ಕಳೆದುಕೊಂಡು ಬಿದ್ದು ಉರುಳಾಡತೊಡಗಿದರು. ಈ ಸಂದರ್ಭವನ್ನುಪಯೋಗಿಸಿಕೊಂಡು ಮಾಯಿಲ ಅರಸ ಮತ್ತು ಆತನ ಬಲದವರನ್ನು ಸಂಪೂರ್ಣವಾಗಿ ಸದೆಬಡಿಯಲಾಯಿತು. ಈ ರೀತಿಯಲ್ಲಿ ಡೊಂಬ ಹೆಗ್ಗಡೆ ಅರಸರು ವಿಟ್ಲ ಪ್ರದೇಶದಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿಕೊಂಡರಂತೆ. ಈ ಘಟನೆಯು ಕೇವಲ ಐತಿಹ್ಯದ ರೂಪದಲ್ಲಿದ್ದ ಇದರ ಸತ್ಯಾಸತ್ಯತೆಗಳನ್ನು ನಿರೂಪಿಸಲು ಯಾವುದೇ ಆಧಾರಗಳಿಲ್ಲ.

ಈಗಾಗಲೇ ಪ್ರಸ್ತಾಪಿಸಲಾದಂತೆ ‘ಡೊಂಬ ಹೆಗ್ಗಡೆ’ ಯ ಪ್ರಥಮ ಉಲ್ಲೇಖ ಕಂಡು ಬರುವುದು ಕ್ರಿ.ಶ. ೧೨೫೭ರ ವಗೆನಾಡು ಶಾಸನದಲ್ಲಿ. ಅಳುಪರಸ ಒಂದನೇ ವೀರ ಪಾಂಡ್ಯನ ಈ ಶಾಸನದಲ್ಲಿ ಅರಸನ ಜೊತೆಗೆ ಒಡ್ಡಲೋಗದಲ್ಲಿ ಪ್ರಧಾನರು ಹಾಗೂ ಅತಿಕಾರಿ ಸಿಂಮದೇವನೊಂದಿಗೆ “ಹೊರಹಿನ ದೊಂಬ ಹೆಗ್ಗಡೆ”ಯೂ ಉಪಸ್ಥಿತನಿದ್ದ ಎಂದು ಹೇಳಲಾಗಿದೆ. ಹೊರಹಿನ ಎಂಬ ಪದದ ಕುರಿತ ಒಂದು ಸಂಕ್ಷಿಪ್ತ ಜಿಜ್ಞಾಸೆ ಇಲ್ಲಿ ಪ್ರಸ್ತುತ. ತುಳುನಾಡಿನ ಹಲವಾರು ಶಾಸನಗಳಲ್ಲಿ ‘ಹೊರಹಿನವರ ಉಲ್ಲೇಖ ಕಂಡು ಬರುತ್ತದೆ.[8] ಈ ಪೈಕಿ ವಗೆನಾಡಿನ ಶಾಸನವೇ ಹೊರಹಿನವರ ಉಲ್ಲೇಖವಿರುವ ಪ್ರಾಚೀನತಮ ದಾಖಲೆ. ತುಳುನಾಡಿನ ಇತಿಹಾಸಕಾರರು ತಮ್ಮ ಗ್ರಂಥಗಳಲ್ಲಿ ಹೊರಹಿನವರು ಎಂಬ ಪದವನ್ನು ‘ಹೊರಗಿನವರು’ ಎಂಬಂತೆ ವ್ಯಾಖ್ಯಾನಿಸಿರುವುದನ್ನು ಕಾಣಬಹುದು.[9] ತುಳುನಾಡಿನ ಶಾಸನಗಳಲ್ಲಿ ಅಧಿಕಾರಿ, ಸೇನಬೋವ, ಅಪ್ಪಣೆಕಾರ ಮುಂತಾದ ಆಡಳಿತ ವರ್ಗದವರ ಜೊತೆಗೆ ಹೊರಹಿನವರು ಉಪಸ್ಥಿತರಿರುವ ಉಲ್ಲೇಖವನ್ನು ಕಾಣುತ್ತೇವೆ.[10] ಒಂದು ಪ್ರದೇಶದಲ್ಲಿ ಹೊಸತಾದ ಕಟ್ಟಳೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲೂ ಹೊರಹಿನವರು ಉಪಸ್ಥಿತರಿರುವುದಕ್ಕೆ ಶಾಸನಗಳಲ್ಲಿ ನಿದರ್ಶನಗಳಿವೆ.[11] ಹೊರಹು ಎಂಬ ಪದಕ್ಕೆ ‘ರಕ್ಷಣೆ’, ‘ಪೋಷಣೆ’, ‘ಕಾಪಾಡು’ ಮುಂತಾದ ಅರ್ಥಗಳಿವೆ.[12] ಈ ಹಿನ್ನೆಲೆಯಲ್ಲಿ ಹೊರಹಿನವರು ಎಂದರೆ ರಕ್ಷಣೆ ಅಥವಾ ಆಡಳಿತೆಗೆ ಸಂಬಂಧಿಸಿದ ಯಾವುದೋ ಅಧಿಕಾರಿ ವರ್ಗದವರಿರಬೇಕು ಎಂದು ತೀರ್ಮಾನಿಸುವುದು ಹೆಚ್ಚು ಸಮಂಜಸ. ಇದರಂತೆ, ಒಂದನೆಯ ವೀರ ಪಾಂಡ್ಯನ ಶಾಸನದಲ್ಲಿ ಹೆಸರಿಸಲಾದ ‘ಹೊರಹಿನ ಡೊಂಬ ಹೆಗ್ಗಡೆ’ಯು ಅಳುಪರ ಆಳ್ವಿಕೆಯಲ್ಲಿದ್ದ ಆ ಪ್ರದೇಶದ ರಕ್ಷಣೆಗೆ ಅಥವಾ ಆಡಳಿತೆಗೆ ನಿಯುಕ್ತರಾಗಿದ್ದ ಅಧಿಕಾರಿ ವರ್ಗಕ್ಕೆ ಸೇರಿದವನಿದ್ದಿರಬೇಕು ಎಂದು ತಿಳಿಯುವುದು ಸೂಕ್ತವೆನಿಸುತ್ತದೆ. ಕ್ರಿ.ಶ. ೧೪ನೇ ಶತಮಾನದ ಹೊತ್ತಿಗೆ ಆಳುಪರಸರ ಪ್ರಾಬಲ್ಯವು ಕುಂಠಿತವಾದಾಗ ಡೊಂಬ ಹೆಗ್ಗಡೆ ಮನೆತನದವರು ಈ ಪ್ರದೇಶದಲ್ಲಿ ಸ್ವತಂತ್ರರಾಗಿ ಆಳ್ವಿಕೆಯನ್ನು ಪ್ರಾರಂಭಿಸಿರಬೇಕು.

ವಿಟ್ಲದರಸರ ಇತಿಹಾಸದ ಕುರಿತು ಹೆಚ್ಚಿನ ಅಧ್ಯಯನ ನಡೆದಿಲ್ಲ.[13] ಈ ಮನೆತನದ ಇತಿಹಾಸವನ್ನು ಸಮಗ್ರವಾಗಿ ಪುನಾರಚಿಸುವಲ್ಲಿ ದಾಖಲೆಗಳ ಕೊರತೆಯಿರುವುದೂ ಇದಕ್ಕೊಂದು ಕಾರಣ. ವಿಟ್ಲ ಹಾಗೂ ಸರಹದ್ದಿನಲ್ಲಿ ಮತ್ತು ವಿಟ್ಲ ಸೀಮೆಯ ಹೊರಗೆ ಗುರುತಿಸಲಾದ ಸುಮಾರು ೨೦ರಷ್ಟು ಶಾಸನಗಳಲ್ಲಿ ಡೊಂಬ ಹೆಗ್ಗಡೆ ಅರಸರ ಉಲ್ಲೇಖ ಹಾಗೂ ಅಲ್ಪ ಸ್ವಲ್ಪ ವಿವರಗಳು ದಾಖಲಾಗಿದ್ದರೂ ಇವು ಈ ಮನೆತನದ ಇತಿಹಾಸದ ಮೇಲೆ ಸಂಪೂರ್ಣವಾದ ಬೆಳಕು ಚೆಲ್ಲುವಲ್ಲಿ ಸಹಕಾರಿ ಯಾಗುವುದಿಲ್ಲ. ಸುಮಾರು ಐದು ಶತಮಾನಗಳ ಕಾಲ ಆಳ್ವಿಕೆ ನಡೆಸಿದ ಈ ಅರಸು ಮನೆತನದ ಎಲ್ಲ ಅರಸರ ಹೆಸರುಗಳು ಲಭ್ಯವಿಲ್ಲ ಮತ್ತು ಅವರ ಸಾಧನೆಗಳ ವಿವರಗಳೂ ಈ ಶಾಸನಗಳಲ್ಲಿ ದಾಖಲಾಗಿಲ್ಲ. ಕ್ರಿ.ಶ. ೧೭ನೇ ಶತಮಾನಾನಂತರವಷ್ಟೆ ಈ ಅರಸು ಮನೆತನದವರ ಚಟುವಟಿಕೆಗಳನ್ನು ಕುರಿತು ಪೂರ್ತುಗೀಸ್ ಹಾಗೂ ಇಂಗ್ಲೀಷ್ ದಾಖಲೆಗಳಲ್ಲಿ ಸ್ವಲ್ಪ ಮಟ್ಟಿನ ವಿವರಗಳು ದೊರಕುತ್ತವೆ.

ರಾಜಕೀಯ ಇತಿಹಾಸ:

ವಗೆನಾಡಿನ ಶಾಸನದ ನಂತರ ಸುಮಾರು ಒಂದೂವರೆ ಶತಮಾನಕ್ಕೂ ಹೆಚ್ಚು ಅವಧಿಯ ಈ ಅರಸು ಮನೆತನದ ಇತಿಹಾಸವು ಆಕರಗಳ ಕೊರತೆಯಿಂದಾಗಿ ಕತ್ತಲಲ್ಲೇ ಉಳಿದುಕೊಂಡಿದೆ. ಕ್ರಿ.ಶ. ೧೪೩೫ರ ನಂತರವಷ್ಟೆ ಇವರ ಇತಿಹಾಸವು ಖಚಿತವಾದ ರೂಪವನ್ನು ಪಡೆದುಕೊಳ್ಳುವುದು. ಕ್ರಿ.ಶ. ೧೪೩೫ರ ಕಿರುಶಾಸನವೊಂದರಲ್ಲಿ[14] ಇಷ್ಟಕಾಪುರದ ಶ್ರೀಪಂಚಲಿಂಗ ದೇವರಿಗೆ ಡೊಂಬ ಹೆಗಡೆ ಕುಂಞ ಶೇಖನ ಕಾಲದಲ್ಲಿ ಸುವರ್ಣಕಲಶವನ್ನು ಸಮರ್ಪಿಸಲಾಯಿತೆಂಬ ವಿವರಣೆಯಿದೆ. ಇಲ್ಲಿ ಹೇಳಲಾದ ಇಷ್ಟಕಾಪುರವು ಈ ಸ್ಥಳದ ಮೂಲ ಸ್ಥಳನಾಮವಾದ ‘ಇಟ್ಟಲ’ವನ್ನು ಸಂಸ್ಕೃತೀಕರಣಗೊಳಿಸುವ ಪ್ರಯತ್ನದಿಂದ ಹುಟ್ಟಿಕೊಂಡ ಹೆಸರು ಎಂಬುದರಲ್ಲಿ ಸಂಶಯವಿಲ್ಲ. ಗುರುರಾಜ ಭಟ್ಟರು ವಾದಿಸಿದಂತೆ[15] ಇಷ್ಟಕಾಪುರವೇ ಇಲ್ಲಿನ ಮೂಲ ಸ್ಥಳನಾಮವೆಂದೂ ಅದುವೇ ನಂತರ ‘ವಿಟ್ಲ’ ಎಂದು ರೂಪಾಂತರ ಹೊಂದಿತೆಂದೂ ತೀರ್ಮಾನಿಸುವುದು ಸಮರ್ಥನೀಯವಲ್ಲ. ಕ್ರಿ.ಶ. ೧೪೦೫ರ ಶಾಸನವೊಂದರಲ್ಲಿ[16] ಈ ಸ್ಥಳವನ್ನು ‘ಇಟ್ಟಲ’ ಎಂಬ ಹೆಸರಿನಿಂದ ಗುರುತಿಸಲಾಗಿರುವುದು ಇಷ್ಟಕಾಪುರದಿಂದ ವಿಟ್ಲ ಎಂಬ ಹೆಸರು ಹುಟ್ಟಿಕೊಂಡಿತು ಎಂಬ ವಾದವನ್ನು ಅಲ್ಲಗಳೆಯುತ್ತದೆ. ಇಟ್ಟಲ, ಇಟ್ಟೆಲ್ ಎಂಬ ಸ್ಥಳನಾಮವು ಶಿಷ್ಟ ಭಾಷೆಯಲ್ಲಿ ವಿಠಲ, ವಿಟ್ಲ ಎಂಬುದಾಗಿ ಪರಿವರ್ತನೆಗೊಂಡಿರಬೇಕು. ವಿಟ್ಲದರಸರನ್ನು ಕುರಿತಂತೆ ದೊರಕುವ ನಂತರದ ಶಾಸನವು ಕ್ರಿ.ಶ. ೧೫೭೧ಕ್ಕನ್ವಯಿಸುತ್ತಿದ್ದು[17] ಅದರಲ್ಲಿ ವಿಠಲದ ಕುಂಞ ದೇವರಸರಾದ ಡೊಂಬ ಹೆಗ್ಗಡೆಯ ಹೆಸರಿನ ಉಲ್ಲೇಖವಷ್ಟೆ ಕಂಡು ಬರುತ್ತದೆ.

ಕ್ರಿ.ಶ. ೧೭ನೇ ಶತಮಾನದ ಪ್ರಾರಂಭದ ಸುಮಾರಿಗೆ ವಿಟ್ಲದರಸರು ಕೆಳದಿರಾಜರ ಸಾಮಾಂತರಾಗಿ ಆಳ್ವಿಕೆ ನಡೆಸುತ್ತಿದ್ದರೆಂಬುದು ಸ್ಪಷ್ಟ. ಕ್ರಿ.ಶ. ೧೬೦೮ರಲ್ಲಿ ವಿಟ್ಲದ ಹೆಗ್ಗಡೆಯು ಇಕ್ಕೇರಿಯ ವೆಂಕಟಪ್ಪನಾಯಕನ ಜೊತೆ ವಾರ್ಷಿಕ ಕಪ್ಪ ಸಲುವಳಿಯ ಕುರಿತಂತೆ ಮಾಡಿಕೊಂಡ ಒಪ್ಪಂದದ ದಾಖಲೆಯನ್ನು ಇದನ್ನು ದೃಢೀಕರಿಸುತ್ತದೆ.[18] ವೆಂಕಟಪ್ಪನಾಯಕನ ನಂತರ ಆತನ ಮೊಮ್ಮಗನಾದ ವೀರಭದ್ರ ನಾಯಕನು ಪಟ್ಟವನ್ನೇರಿದ ಸಂದರ್ಭ ಕೆಳದಿಯ ಸಾಮಾಂತರೆಲ್ಲ ದಂಗೆಯೆದ್ದು ರಾಜ್ಯದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾನವಾಯಿತು. ಪೋರ್ತುಗೀಜ್ ದಾಖಲೆಗಳಲ್ಲಿ ಈ ಕುರಿತು ವಿವರಗಳು ಲಭ್ಯವಿದ್ದು ದಂಗೆಯೆದ್ದ ರಾಜರುಗಳ ಪಟ್ಟಿಯಲ್ಲಿ ವಿಟ್ಲದ ಹೆಗ್ಗಡೆಯ ಹೆಸರೂ ಸೇರಿಕೊಂಡಿದೆ.[19] ಈ ರೀತಿ ದಂಗೆಯೇಳುವ ಮೂಲಕ ವಿಟ್ಲದರಸನು ಸ್ವತಂತ್ರನಾದರೂ ಈ ಸ್ವಾತಂತ್ರ್ಯವನ್ನು ಹೆಚ್ಚುಕಾಲ ಅನುಭವಿಸಲು ಆತನಿಗೆ ಸಾಧ್ಯವಾಗಲಿಲ್ಲ. ಪುನಃ ಆತನು ಕೆಳದಿ ಅರಸರ ಅಧಿಪತ್ಯವನ್ನು ಒಪ್ಪಿಕೊಂಡು, ತನ್ನೆಲ್ಲ ಅಧಿಕಾರವನ್ನು ಕಳೆದುಕೊಂಡು ನಾಮಮಾತ್ರ ಅರಸನಾಗಿ ಉಳಿದುಕೊಳ್ಳಬೇಕಾಯಿತು.[20]

ಈ ದೃಷ್ಟಿಯಿಂದ ಕ್ರಿ.ಶ. ೧೭೧೯ರ ತಾಮ್ರ ಶಾಸನವೊಂದು ನೀಡುವ ವಿವರಗಳು ಕುತೂಹಲಕರವಾಗಿವೆ.[21] ಇದರ ಪ್ರಕಾರ ವಿಟ್ಲದ ಹೆಗ್ಗಡೆಯು ಕೆಳದಿ ಸಂಸ್ಥಾನಕ್ಕೆ ನೀಡಬೇಕಾಗಿದ್ದ ವಾರ್ಷಿಕ ಸಲುವಳಿಯು ದೀರ್ಘಕಾಲ ಸಂದಾಯವಾಗದೆ ಉಳಿದಾಗ ಆತನನ್ನು ಬಂಧಿಸಿ ಕೆಳದಿ ಆಸ್ಥಾನಕ್ಕೊಯ್ಯಲಾಯಿತು. ಆ ಸಂದರ್ಭ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ನಿರ್ವಾಣ ಶೆಟ್ಟಿಯು ವಿಟ್ಲದ ಹೆಗ್ಗಡೆಗೆ ಜಾಮೀನು ನೀಡಿ ಆತನನ್ನು ಬಿಡುಗಡೆಗೊಳಿಸಿದ. ಈ ಉಪಕಾರಕ್ಕೆ ಉತ್ತರವಾಗಿ ನಿರ್ವಾಣ ಶೆಟ್ಟಿಗೆ ವಿಟ್ಲದ ಹೆಗ್ಗಡೆಯು ತನ್ನ ರಾಜ್ಯದ ಚಂದಪ್ಪಾಡಿ, ಕಾಡುಮಠ ಮತ್ತು ನರ್ಕಳ ಗ್ರಾಮಗಳಲ್ಲಿ ಭೂಮಿಯನ್ನು ನೀಡಿದ ಎಂದು ಈ ಶಾನದಲ್ಲಿ ವಿವರಿಸಲಾಗಿದೆ. ಈ ಘಟನೆಯು ಕೆಳದಿ ರಾಜ್ಯವನ್ನು ಇಮ್ಮಡಿ ಸೋಮಶೇಖರ ನಾಯಕನು (ಕ್ರಿ.ಶ. ೧೭೧೪ – ೧೭೩೯) ಆಳುತ್ತಿದ್ದ ಸಂದರ್ಭ ನಡೆದಿರಬೇಕು.

ಕ್ರಿ.ಶ. ೧೭ನೇ ಶತಮಾನದ ಉತ್ತರಾರ್ಧದಲ್ಲಿ ಕೆಳದಿ ರಾಜ್ಯವು ಹೈದರಾಲಿಯ ವಶವಾದಾಗ ಕೆಳದಿಯ ಸಾಮಾಂತರಾಗಿದ್ದ ವಿಟ್ಲದರಸರೂ ಹೈದರಾಲಿಯ ಪ್ರಾಬಲ್ಯವನ್ನು ಒಪ್ಪಿಕೊಳ್ಳಬೇಕಾಯಿತು. ಕ್ರಿ.ಶ. ೧೭೬೫ರಲ್ಲಿ ಹೈದರಾಲಿಯು ವಿಟ್ಲದರಸನಿಂದ ಬರಬೇಕಾಗಿದ್ದ ವಾರ್ಷಿಕ ಸಲುವಳಿಯನ್ನು ಶೇಕಡಾ ೫೦ರಷ್ಟು ಹೆಚ್ಚಿಸಿದ ಮಾತ್ರವಲ್ಲದೆ ಆತನನ್ನು ಕೇವಲ ಒಬ್ಬ ಸುಂಕ ಸಂಗ್ರಹಿಸುವ ಅಧಿಕಾರಿ ಮಟ್ಟಕ್ಕಿಳಿಸಿದ.[22] ಪ್ರಾಯಶಃ ಇದರಿಂದಾದ ತೀವ್ರ ಅಸಮಾಧಾನವೇ ವಿಟ್ಲದ ಹೆಗ್ಗಡೆಯು ಒಂದನೇ ಮೈಸೂರು ಯುದ್ಧದಲ್ಲಿ ಹೈದರಾಲಿಯ ವಿರುದ್ಧ ಬ್ರಿಟಿಷರನ್ನು ಬೆಂಬಲಿಸಲು ಕಾರಣವಾಗಿರಬೇಕು. ಬ್ರಿಟಿಷರನ್ನು ಬೆಂಬಲಿಸಿದ್ದಕ್ಕಾಗಿ ಕ್ರಿ.ಶ. ೧೭೬೮ರಲ್ಲಿ ಹೈದರಾಲಿಯು ವಿಟ್ಲದ ಅಚ್ಯುತ ಹೆಗ್ಗಡೆಯನ್ನು ಪದಚ್ಯುತಿಗೊಳಿಸಲು ಆತನಿಗೆ ಬ್ರಿಟಿಷರು ಕೇರಳದ ತಲಚೇರಿಯಲ್ಲಿ ಆಶ್ರಯವನ್ನು ನೀಡಿ ತಿಂಗಳಿಗೆ ನೂರು ರೂಪಾಯಿಗಳ ರಾಜಧಾನವನ್ನು ನೀಡುವ ವ್ಯವಸ್ಥೆಯನ್ನೂ ಮಾಡಿದರು.[23]

ಅಚ್ಯುತ ಹೆಗ್ಗಡೆಯು ಬ್ರಿಟಿಷರ ಆಶ್ರಯದಲ್ಲಿ ದೂರದ ತಲಚೇರಿಯಲ್ಲಿದ್ದರೂ ಆಗಾಗ ವಿಟ್ಲಕ್ಕೆ ಬಂದು ಅಧಿಕಾರ ಸ್ಥಾಪನೆಯ ಪ್ರಯತ್ನವನ್ನು ಮಾಡುತ್ತಿದ್ದ. ಇಂತಹ ಸಂದರ್ಭವೊಂದರಲ್ಲಿ ಕ್ರಿ.ಶ. ೧೭೮೪ರಲ್ಲಿ ಟೀಪುಸುಲ್ತಾನನು ಅಚ್ಯುತ ಹೆಗ್ಗಡೆಯನ್ನು ಸೆರೆಹಿಡಿದು ಮರಣದಂಡನೆಗೆ ಗುರಿಪಡಿಸಿದ ಮಾತ್ರವಲ್ಲದೆ ಆತನ ವಿಟ್ಲದ ಅರಮನೆಯನ್ನು ಸುಟ್ಟು ಹಾಕಿದ.[24] ಸುಟ್ಟು ನಾಶ ಹೊಂದಿದ ವಿಟ್ಲದ ಅರಮನೆಯ ಅವವೇಷಗಳನ್ನು ಇಂದಿಗೂ ಕಾಣಬಹುದು. ಅಚ್ಯುತ ಹೆಗಡೆಯ ಉತ್ತರಾಧಿಕಾರಿಯಾಗಿ ಪಟ್ಟಕ್ಕೆ ಬಂದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ತಲಚೇರಿಯಲ್ಲಿ ಬ್ರಿಟಿಷ್ ಆಶ್ರಯದಲ್ಲೇ ದಿನ ಕಳೆಯಬೇಕಾಯಿತು. ರವಿವರ್ಮ ನರಸಿಂಹ ಡೊಂಬ ಹೆಗ್ಗಡೆಯು ತಲಚೇರಿ ಸಮೀಪದ ತ್ರಿಕ್ಕೈ ಎಂಬಲ್ಲಿನ ಶಿವದೇವಾಲಯದಲ್ಲಿದ್ದ ಕೈಗೊಂಡ ಸೇವೆಯ ವಿವರಗಳನ್ನು ಅದೇ ದೇವಾಲಯದ ಬಲಿಪೀಠದ ಮೇಲಿರುವ ಶಾಸನವು ತಿಳಿಸುತ್ತದೆ.[25] ಬ್ರಿಟಿಷರಿಗೆ ವಿಟ್ಲದರಸರು ನೀಡುತ್ತಿದ್ದ ಸಹಕಾರವನ್ನು ಪರಿಗಣಿಸಿ ಕ್ರಿ.ಶ. ೧೭೯೨ರಲ್ಲಿ ಅವರ ರಾಜಧನವನ್ನು ತಿಂಗಳಿಗೆ ಇನ್ನೂರು ರೂಪಾಯಿಗಳಿಗೆ ಹೆಚ್ಚಿಸಲಾಯಿತು.

ಇಂತಹ ರಾಜಕೀಯ ಗೊಂದಲದ ಸನ್ನಿವೇಶದಲ್ಲಿ ತಲಚೇರಿಯಲ್ಲಿ ಬ್ರಿಟಿಷರ ಆಶ್ರಯದಲ್ಲಿದ್ದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ಮಂಜೇಶ್ವರಕ್ಕೆ ಧಾಳಿಯಿಟ್ಟು ಅಲ್ಲಿನ ಅನಂತೇಶ್ವರ ದೇವಾಲಯದ ಅಪಾರ ಸಂಪತ್ತನ್ನು ಲೂಟಿಗೈದ ಘಟನೆಯು ನಡೆಯಿತು.[26] ಬ್ರಿಟಿಷ್ ದಾಖಲೆಗಳಲ್ಲಿ ಇದನ್ನು ಕೇವಲ ಸಂಪತ್ತಿನ ಆಸೆಗಾಗಿ ನಡೆಸಿದ ದಾಳಿ ಎಂದು ವಿವರಿಸಲಾಗಿದ್ದರೂ ಈ ದಾಳಿಗೆ ಖಚಿತವಾದ ಕಾರಣಗಳಿದ್ದಂತೆ ತೋರುತ್ತದೆ. ಯಾಕೆಂದರೆ ಇದೇ ದೇವಾಲಯದ ಬಗ್ಗೆ ವಿಟ್ಲದರಸರಿಗೆ ಭಕ್ತಿ ಗೌರವಗಳಿದ್ದುವೆಂಬ ವಿಚಾರ ಈ ದೇವಾಲಯಕ್ಕೆ ಹಿಂದೆ ವಿಟ್ಲದ ಅರಸರು ನೀಡಿದ ದಾನಗಳಿಗೆ ಸಂಬಂಧಿಸಿದ ದಾಖಲೆಗಳಿಂದ ಸ್ಪಷ್ಟವಾಗುತ್ತದೆ.[27] ವಿಟ್ಲದರಸನ ಮಂಜೇಶ್ವರ ದೇವಾಲಯ ದಾಳಿಗೆ ಕಾರಣವಾದ ಅಂಶಗಳನ್ನು ಲಭ್ಯವಿರುವ ಆಧಾರಗಳು ಪರೋಕ್ಷವಾಗಿ ನಿರೂಪಿಸುತ್ತವೆ.[28] ವಿಟ್ಲದರಸರು ಹಿಂದೆ ಕೆಲವು ವ್ಯಕ್ತಿಗಳಿಗೆ ಕರೋಪಾಡಿ ಗ್ರಾಮದಲ್ಲಿ ಭೂಮಿಗಳನ್ನು ಬಾಳಿಕೆಯಾಗಿ ಕೊಟ್ಟಿದ್ದರು. ಕರಾರಿನಂತೆ ಈ ವ್ಯಕ್ತಿಗಳು ವಿಟ್ಲದರಮನೆಗೆ ನಿರ್ದಿಷ್ಟ ಮೊತ್ತವನ್ನು ವಾರ್ಷಿಕ ಸಲುವಳಿಯಾಗಿ ನೀಡಬೇಕಾಗಿತ್ತು. ವಿಟ್ಲದರಸರಿಂದ ಭೂಮಿಯನ್ನು ಪಡೆದ ಈ ವ್ಯಕ್ತಿಗಳು ಕಾಲಾಂತರದಲ್ಲಿ ಈ ಭೂಮಿಗಳನ್ನು ಮಂಜೇಶ್ವರದ ದೇವಾಲಯಕ್ಕೆ ಅಡವು ಮಾಡಿಕೊಟ್ಟರು ಹಾಗೂ ಕೊನೆಗೆ ಅವುಗಳನ್ನು ದೇವಾಲಯಕ್ಕೆ ಮಾರಾಟ ಮಾಡಿದರು. ಈ ಹಿನ್ನೆಲೆಯಲ್ಲಿ ಭೂಮಿಗಳನ್ನು ಪಡೆದುಕೊಂಡ ಮಂಜೇಶ್ವರ ದೇವಾಲಯದವರು ಸಹಜವಾಗಿಯೇ ವಿಟ್ಲದ ಅರಸರಿಗೆ ವಾರ್ಷಿಕ ಸಲುವಳಿಯನ್ನು ನೀಡಬೇಕಾಗಿ ಬಂತು. ಆದರೆ ಹೈದರಾಲಿ – ಟೀಪುಸುಲ್ತಾನರ ಆಳ್ವಿಕೆಯ ಸಂದರ್ಭ ವಿಟ್ಲದಲ್ಲುಂಟಾದ ರಾಜಕೀಯ ಗೊಂದಲವನ್ನು ಗಮನಿಸಿ ಮಂಜೇಶ್ವರ ದೇವಾಲಯದವರು ವಿಟ್ಲದ ಅರಮನೆಗೆ ಕಾಲ ಕಾಲಕ್ಕೆ ಸಂದಾಯವಾಗಬೇಕಾಗಿದ್ದ ಸಲುವಳಿಯನ್ನು ನಿಲ್ಲಿಸಿದರು ಮಾತ್ರವಲ್ಲದೆ ಅದನ್ನು ನಿರಾಕರಿಸುವ ಪ್ರಯತ್ನವನ್ನೂ ಮಾಡಿರಬೇಕು. ಇದರಿಂದ ಕುಪಿತನಾದ ವಿಟ್ಲದ ಹೆಗ್ಗಡೆಯು ತನ್ನ ಹಕ್ಕನ್ನು ಪುನಸ್ಥಾಪಿಸುವ ಯತ್ನವಾಗಿ ಮಂಜೇಶ್ವರ ದೇವಾಲಯಕ್ಕೆ ಧಾಳಿಯಿಟ್ಟು ಅಲ್ಲಿನ ಸಂಪತ್ತನ್ನು ಸೂರೆ ಮಾಡಿದ ಎಂದು ತಿಳಿಯಬಹದು.

ನಾಲ್ಕನೇ ಮೈಸೂರು ಯುದ್ಧದ ಸಂದರ್ಭ ಕ್ರಿ.ಶ. ೧೭೯೯ರಲ್ಲಿ ಟೀಪುಸುಲ್ತಾನನು ಹತನಾದಾಗ ಆತನ ರಾಜ್ಯದ ಭಾಗವಾಗಿದ್ದ ಕರಾವಳಿ ಕರ್ನಾಟಕವು ಬ್ರಿಟಿಷರ ಆಡಳಿತಕ್ಕೆ ಸೇರಿಹೋಯಿತು. ಇದು ವಿಟ್ಲದ ಇತಿಹಾಸದಲ್ಲಿ ಹೋರಾಟದ ಒಂದು ಹೊಸ ಅಧ್ಯಾಯಕ್ಕೆ ನಾಂದಿಯಾಯಿತು.[29] ತನ್ನ ರಾಜ್ಯವು ವಿದೇಶಿಯರಾದ ಬ್ರಿಟಿಷರ ಪಾಲಾಗುವುದನ್ನು ಎಷ್ಟು ಮಾತ್ರಕ್ಕೂ ಸಹಿಸದ ವಿಟ್ಲದರಸ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ಬ್ರಿಟಿಷರ ವಿರುದ್ಧ ಪ್ರಥಮ ಕ್ರಾಂತಿಯ ಕಹಳೆಯನ್ನೂದಿದ. ಹಿಂದೆ ಬ್ರಿಟಿಷ್ ಕಂಪೆನಿಯವರು ಆತನಿಗೆ ನೀಡಿದ್ದ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಬೇಕೆಂಬ ಮಲಬಾರ್ ಕಮೀಷನರ್‌ರ ಆದೇಶವನ್ನು ಧಿಕ್ಕರಿಸಿ ಸುಮಾರು ೧೫೦ ಮಂದಿ ಶಸ್ತ್ರ ಸನ್ನದ್ಧರಾದ ಬೆಂಬಲಿಗರನ್ನು ಜೊತೆಗೂಡಿಸಿಕೊಂಡು ೧೭೯೯ರ ಡಿಸೆಂಬರ್ ೧೫ರಂದು ತಲಚೇರಿಯಿಂದ ವಿಟ್ಲಕ್ಕೆ ಬಂದು ಅಲ್ಲಿದ್ದ ತನ್ನ ಅಳಿಯನ ಜೊತೆ ಸೇರಿಕೊಂಡ. ಆ ಪ್ರದೇಶದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದ.

ಕ್ರಿ.ಶ. ೧೮೦೦ರ ಹೊತ್ತಿಗೆ ಬ್ರಿಟಿಷರ ವಿರುದ್ಧ ವಿಟ್ಲ ಹೆಗ್ಗಡೆಯ ಪ್ರತಿಭಟನೆ ಖಚಿತವಾದ ರೂಪವನ್ನು ಪಡೆದುಕೊಂಡಿತು. ತನ್ನಂತೆ ಬ್ರಿಟಿಷರ ವಿರುದ್ಧ ಹೋರಾಡಲು ಸಿದ್ಧರಾಗಿದ್ದ ಬೇಕಲದ ತಿಮ್ಮನಾಯಕ ಯಾನೆ ಕೃಷ್ಣನಾಯಕ[30] ಹಾಗೂ ಈ ಹಿಂದೆ ಕೊಯಂಬತ್ತೂರಿನ ಶಿರಸ್ತೇದಾರನಾಗಿದ್ದ ಸುಬ್ಬರಾವ್ ಎಂಬಾತನನ್ನು ತನ್ನ ಜೊತೆ ಸೇರಿಸಿಕೊಳ್ಳವಲ್ಲಿ ವಿಟ್ಲದರಸನು ಸಫಲನಾದ. ಸುಬ್ಬರಾವ್ ಕೂಡಾ ವಿಟ್ಲ ಪ್ರದೇಶಕ್ಕೆ ಸೇರಿದವನೇ ಆಗಿದ್ದಿರಬೇಕು. ಜಮಲಾಬಾದ್ ಕೈಫಿಯತ್‌ನಲ್ಲಿ ಸುಬ್ಬರಾವ್‌ನನ್ನು ಪತ್ತು ಮುಡಿ ಸುಬ್ಬರಾಯ ಎಂದು ಗುರುತಿಸಲಾಗಿದೆ.[31] ಪತ್ತುಮುಡಿ ಎಂಬುದು ವಿಟ್ಲ ಸಮೀಪದ ಮಂಚಿ ಗ್ರಾಮಕ್ಕೆ ಸೇರಿದ ಒಂದು ಸ್ಥಳ ಎಂಬುದನ್ನಿಲ್ಲಿ ಗಮನಿಸಬೇಕು. ಈ ಮೂರು ಮಂದಿಯ ಒಕ್ಕೂಟಕ್ಕೆ ಕೃಷ್ಣನಾಯಕ ಯಾನೆ ತಿಮ್ಮನಾಯಕನ ೨೦೪ ಮಂದಿ ಬೆಂಬಲಿಗರ ಪಡೆಯೂ ಸೇರಿಕೊಂಡಿತು. ಜನ ಬೆಂಬಲವನ್ನು ಗಳಿಸುವ ಉದ್ದೇಶದಿಂದ ಮತ್ತು ಹೋರಾಟಕ್ಕೆ ಅದಿಕೃತತೆಯನ್ನು ತರುವ ಉದ್ದೇಶದಿಂದ ಟೀಪುಸುಲ್ತಾನನ ಉತ್ತರಾಧಿಕಾರಿಯಾದ ಫತೇಹೈದರ್ ಎಂದು ಓರ್ವ ತೋರಿಕೆಯ ಹಕ್ಕುದಾರನನ್ನು ಸೃಷ್ಟಿಸಿ ಮುಂದಿರಿಸಿಕೊಂಡು ವಿಟ್ಲದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯ ನಾಯಕತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಯಿತು. ಪ್ರಥಮ ಹಂತದಲ್ಲಿ, ಟೀಪುಸುಲ್ತಾನನ ಮರಣಾನಂತರ ಬ್ರಿಟಿಷರ ವಶವಾಗಿದ್ದ ಬೆಳ್ತಂಗಡಿಯ ಜಮಲಾಬಾದು ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಕ್ರಾಂತಿಕಾರಿಗಳು ಯಶಸ್ವಿಯಾದರು.

ಈ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿ ಸಹಜವಾಗಿಯೇ ೧೭೯೯ರಲ್ಲಿ ಕೆನರಾ ಜಿಲ್ಲೆಯ ಕಲೆಕ್ಟರ್ ಆಗಿ ಅಧಿಕಾರಿವಹಿಸಿಕೊಂಡಿದ್ದ ಸರ್ ಥಾಮಸ್ ಮನ್ರೋನ ಪಾಲಿಗೆ ಬಂತು. ಸನ್ನಿವೇಶದ ತೀವ್ರತೆಯನ್ನು ಮನಗಂಡ ಆತ ವಿಟ್ಲದ ಹೆಗ್ಗಡೆಯನ್ನು ಸದೆಬಡಿಯುವಂತೆ ಸೈನ್ಯಾಧಿಕಾರಿಯಾದ ಕರ್ನಲ್ ಹಾರ್ಟ್‌‌ನಿಗೆ. ಆದೇಶವನ್ನು ನೀಡಿದ. ಈ ನಡುವೆ ೧೮೦೦ರ ಮೇ ತಿಂಗಳ ೭ನೇ ತಾರೀಕಿನಂದು ವಿಟ್ಲದಹೆಗ್ಗಡೆ ಮತ್ತು ಸುಬ್ಬರಾವ್ ಉಪ್ಪಿನಂಗಡಿಯ ಮೇಲೆ ಧಾಳಿ ಮಾಡಿದಾಗ ಅಲ್ಲಿ ವಸತಿ ಹೂಡಿದ್ದ ಕಡಬದ ತಹಶೀಲ್ದಾರ್ ಮತ್ತು ಆತನೊಂದಿಗಿದ್ದ ಓಡಿ ಹೋಗಬೇಕಾಯಿತು. ಅಲ್ಲಿಂದ ಬಂಟ್ವಾಳಕ್ಕೆ ಧಾಳಿ ಮಾಡಿದ ಸುಬ್ಬರಾವ್ ಬಂಟ್ವಾಳ ಪೇಟೆಯನ್ನು ಸೂರೆಗೈದು ನಂತರ ಪುತ್ತೂರಿಗೆ ತೆರಳಿ ಅಲ್ಲಿ ಅಧಿಕಾರವನ್ನು ಸ್ಥಾಪಿಸಿ ಸುಂಕ ವಸೂಲಿ ಮಾಡಲಾರಂಭಿಸಿದ.

ಥಾಮಸ್ ಮನ್ರೋನಿಂದ ನಿಯೋಜಿಸಲ್ಪಟ್ಟ ಪಡೆಯು ಕರ್ನಲ್ ಕ್ಯುಮಿನ್‌ನ ನೇತೃತ್ವದಲ್ಲಿ ಜಮಲಾಬಾದಿಗೆ ತೆರಳಿ ಕ್ರಾಂತಿಕಾರರ ಹಿಡಿತದಿಂದ ಕೋಟೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು. ತಿಮ್ಮನಾಯಕ ಯಾನೆ ಕೃಷ್ಣ ನಾಯಕನು ಕೋಟೆಯನ್ನು ರಕ್ಷಿಸಲು ತೀವ್ರ ಹೋರಾಟವನ್ನು ನಡೆಸಿದರೂ ಆತನನ್ನು ಮೋಸದಿಂದ ಸೆರೆಹಿಡಿದು ಕೊಲ್ಲಲಾಯಿತು. ತಿಮ್ಮನಾಯಕನನ್ನು ಮೋಸದಿಂದ ಸೆರೆಹಿಡಿಯುವಲ್ಲಿ ಬೇಕಲದ ರಾಮನ್‌ನಾಯರ್ ಎಂಬಾತ ಬ್ರಿಟಿಷರಿಗೆ ಸಹಾಯ ಮಾಡಿದ ಎಂಬುದನ್ನು ದಾಖಲೆಗಳು ತಿಳಿಸುತ್ತವೆ. ಮನ್ರೋನಿಂದ ಕಳುಹಿಸಲ್ಪಟ್ಟ ೨೦೦ ಜನರ ಇನ್ನೊಂದು ಪಡೆಯು ಧರ್ಮಸ್ಥಳದ ಕುಮಾರ ಹೆಗ್ಗಡೆಯ ನಾಯಕತ್ವದಲ್ಲಿ ಸುಬ್ಬರಾವ್‌ನನ್ನು ಸೋಲಿಸಲು ಸಫಲವಾದರೂ ಆತನನ್ನು ಸೆರೆಹಿಡಿಯಲಾಗಲಿಲ್ಲ. ೧೮೦೦ರ ಮೇ ೧೬ರಂದು ಬ್ರಿಟಿಷರು ಸುಬ್ಬರಾವ್‌ನನ್ನು ಸದೆಬಡಿದು ಪುತ್ತೂರು ಹಾಗೂ ಬಂಟ್ವಾಳಗಳನ್ನು ವಶಪಡಿಸಿಕೊಂಡರು. ಜುಲೈ ೧೫ರಂದು ಸುಬ್ಬರಾವ್‌ನನ್ನು ಗಲ್ಲಿಗೇರಿಸಲಾಯಿತು.

ಈ ಹಂತದಲ್ಲಿ ವಿಟ್ಲದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆ ಏಕಾಂಗಿ ಯಾದ. ಆದರೂ ಧೃತಿಗೆಡದೆ ದಿಟ್ಟತನದಿಂದ ತನ್ನ ಹೋರಾಟವನ್ನು ಮುಂದುವರಿಸಿದ. ಸೋಲು ಖಚಿತವಾಗಿದ್ದರೂ ಆತ ಬ್ರಿಟಿಷರಿಗೆ ಶರಣಾಗುವ ಯಾವ ಸೂಚನೆಯನ್ನೂ ನೀಡಲಿಲ್ಲ ಎಂಬುದಿಲ್ಲಿ ಗಮನಾರ್ಹ. ಬ್ರಿಟಿಷರ ಭೀಮಬಲದೆದುರು ಆತನ ಪ್ರತಿಭಟನೆ ಬಹಳ ಕಾಲ ಮುಂದುವರಿಯಲು ಸಾಧ್ಯವಾಗಲಿಲ್ಲ. ೧೮೦೦ ಜುಲೈ ೯ರಂದು ಮನ್ರೋ ಕಳುಹಿಸಿದ ೮೫೦ ಮಂದಿ ಸಿಪಾಯಿಗಳು ವಿಟ್ಲದ ಮೇಲೆ ಧಾಳಿ ನಡೆಸಿ ಹೆಗ್ಗಡೆಯ ಕುಟುಂಬದವರನ್ನು ವಶಕ್ಕೆ ತೆಗೆದುಕೊಂಡರು. ಜುಲೈ ೧೮ರಂದು ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯನ್ನು ಸೆರೆಹಿಡಿಯಲಾಯಿತು. ವಿಟ್ಲದ ಹೆಗ್ಗಡೆ, ಆತನ ಈರ್ವರು ಅಳಿಯಂದಿರು, ಒಬ್ಬ ಭಾವ, ಹರಿಕಾರ, ಶಾನುಭೋಗ ಹಾಗೂ ಓರ್ವ ಜಮಾದಾರ ಇಷ್ಟು ಮಂದಿಗೆ ೧೮೦೦ರ ಆಗಸ್ಟ್ ೨೨ರಂದು ಮರಣದಂಡನೆ ನೀಡಲಾಯಿತು. ಈ ಕಾರ್ಯವನ್ನು ಲೆಫ್ಟಿನೆಂಟ್ ಕರ್ನಲ್ ಮಿಗ್ನನ್ ನೆರವೇರಿಸಿದ. ವಿಟ್ಲದ ಹೆಗ್ಗಡೆಯ ಐದು ಮಂದಿ ಕಟ್ಟಾ ಬೆಂಬಲಿಗರನ್ನು ಆಗಸ್ಟ್ ೨೫ರಂದು ಮಂಗಳೂರಿನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.

ಸ್ಥಳೀಯ ಜನರ ಸಹಕಾರದಿಂದ ವಿಟ್ಲದ ಹೆಗ್ಗಡೆಯ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರಿಗೆ ಸಾಧ್ಯವಾಯಿತು ಎಂದು ಥಾಮಸ್ ಮನ್ರೋ ಹೇಳಿಕೊಂಡಿದ್ರೂ ಈ ಹೇಳಿಕೆ ಸಂಪೂರ್ಣ ನಿಜವಿರುವಂತೆ ತೋರುವುದಿಲ್ಲ. ಪ್ರಾಯಶಃ ಸುಬ್ಬರಾವ್‌ನನ್ನು ಸೆರೆಹಿಡಿಯಲು ಸಹಕರಿಸಿದ ಧರ್ಮಸ್ಥಳದ ಕುಮಾರ ಹೆಗ್ಗಡೆ, ತಿಮ್ಮನಾಯಕನ ಸೆರೆಗೆ ಸಹಕರಿಸಿದ ಬೇಕಲದ ರಾಮನ್ ನಾಯರ್ ಹಾಗೂ ಬ್ರಿಟಿಷರ ಪಕ್ಷದಲ್ಲಿದ್ದ ಕಡಬದ ತಹಶೀಲ್ದಾರ ಇವರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಮನ್ರೋ ಈ ಹೇಳಿಕೆಯನ್ನು ನೀಡಿರಬೇಕು. ವಿಟ್ಲದ ಹೆಗ್ಗಡೆಯು ಸಂಘಟಿಸಿದ ಬ್ರಿಟಿಷ್ ವಿರೋಧಿ ಆಂದೋಲನವು ಯಶಸ್ವಿಯಾಗಲಿಲ್ಲವೆಂಬುದು ನಿಜವಾದರೂ ಅದು ಬ್ರಿಟಿಷರಿಗೆ ಸಾಕಷ್ಟು ತಲೆನೋವನ್ನು ತಂದಿತ್ತು ಮಾತ್ರವಲ್ಲದೆ ಈ ಜಿಲ್ಲೆಯ ಜನರಲ್ಲಿ ಬ್ರಿಟಿಷರ ವಿರುದ್ಧ ಅಸಮಾಧಾನದ ಬೀಜವನ್ನು ಬಿತ್ತುವಲ್ಲಿ ಸಫಲವಾಯಿತು ಎಂಬುದರಲ್ಲಿ ಸಂಶಯವಿಲ್ಲ.

ವಿಟ್ಲದ ಹೆಗ್ಗಡೆಯ ಖಾಸಗಿ ಆಸ್ತಿಯನ್ನು ಹೊರತುಪಡಿಸಿ ಆತನ ಒಡೆತನದಲ್ಲಿದ್ದ ಇತರ ಎಲ್ಲಾ ಆಸ್ತಿಪಾಸ್ತಿಗಳು ಬ್ರಿಟಿಷರ ವಶವಾದುವು. ಇದಕ್ಕೆ ಪ್ರತಿಯಾಗಿ ವಿಟ್ಲದರಸರಿಗೆ ವಾರ್ಷಿಕ ೬೦೧೯ರೂಪಾಯಿ ೧ ಆಣೆ ರಾಜಧನವನ್ನು ಮಂಜೂರು ಮಾಡಲಾಯಿತು. ವಿಟ್ಲದ ಡೊಂಬ ಹೆಗ್ಗಡೆ ಅರಸು ಮನೆತನದವರು ತಮ್ಮ ಪರಂಪರಾಗತ ಸಂಪ್ರದಾಯಗಳನ್ನು ಅನುರಿಸುತ್ತ ಇಂದಿಗೂ ವಿಟ್ಲದಲ್ಲಿ ವಾಸಿಸುತ್ತಿದ್ದಾರೆ.

ಸುಮಾರು ಐದು ಶತಮಾನಗಳಿಗೂ ಹೆಚ್ಚು ಕಾಲ ವಿಟ್ಲದ ಡೊಂಬ ಹೆಗ್ಗಡೆ ಅರಸು ಮನೆತನದವರು ಈ ಪ್ರದೇಶವನ್ನಾಳಿದ್ದರೂ ಆಲ್ವಿಕೆ ನಡೆಸಿದ ಎಲ್ಲ ಅರಸರ ಹೆಸರುಗಳಾಗಲಿ ಅವರು ಆಳ್ವಿಕೆ ನಡೆಸಿದ ಕಾಲದ ವಿವರಗಳಾಗಲಿ ತಿಳೀದು ಬರುವುದಿಲ್ಲ. ಕೆಲವಾರು ಹೆಸರುಗಳು ಲಭ್ಯವಿದ್ದರೂ ಅವಳ ಆಳ್ವಿಕೆ ನಡೆಸಿದ ಕಾಲದ ವಿವರಗಳಾಗಲಿ ತಿಳಿದು ಬರುವುದಿಲ್ಲ. ಕೆಲವಾರು ಹೆಸರುಗಳು ಲಭ್ಯವಿದ್ದರೂ ಅವರ ಆಳ್ವಿಕೆಯ ಅವಧಿಯನ್ನು ನಿರೂಪಿಸಲು ಯಾವುದೇ ಆಧಾರಗಳು ದೊರಕುವುದಿಲ್ಲ. ಆಳ್ವಿಕೆ ನಡೆಸಿದ ಎಲ್ಲ ಅರಸರ ಹೆಸರಿನೊಂದಿಗೂ ಡೊಂಬ ಹೆಗ್ಗಡೆ ಎಂಬ ಅಭಿಧಾನವು ಜೊತೆಗೂಡಿಕೊಂಡಿರುವುದನ್ನು ಕಾಣಬಹುದು. ವಿವಿಧ ಆಕರಗಳಿಂದ ಲಭ್ಯವಾಗುವ ವಿಟ್ಲದರಸರ ಹೆಸರುಗಳನ್ನು ಮುಂದೆ ನೀಡಲಾಗಿದೆ.

ದೊಂಡ ಹೆಗ್ಗಡೆ (ಕ್ರಿ.ಶ. ೧೨೫೭)
ಕುಂಞಶೇಖ (ಕ್ರಿ.ಶ. ೧೪೩೫)
ಕುಂಞದೇವರಸ (ಕ್ರಿ.ಶ. ೧೫೭೧)
ನರಸಿಂಹರಸ I (ಕ್ರಿ.ಶ. ೧೬೧೯ – ೧೬೩೭)
ದೇವರಸ (ಕ್ರಿ.ಶ. ೧೬೪೦)
ನರಸಿಂಹರಸ II (ಕ್ರಿ.ಶ. ೧೬೫೩)
ನರಸಿಂಹರಸ III (ಕ್ರಿ.ಶ. ೧೭೧೪)
ಪಾಂಡ್ಯಪ್ಪರಸ (ಕ್ರಿ.ಶ. ೧೭೨೨)
ನರಸಿಂಹರಸ IV (ಕ್ರಿ.ಶ. ೧೭೨೭)
ನರಸಿಂಹ ಕೃಷ್ಣಪ್ಪರಸ (ಕ್ರಿ.ಶ. ೧೭೩೧)
ನರಸಿಂಹರಸ V (ಕ್ರಿ.ಶ. ೧೭೬೩)
ಅಚ್ಯುತ ಹೆಗ್ಗಡೆ (ಕ್ರಿ.ಶ. ೧೭೬೫ – ೧೭೮೪)
ರವಿವರ್ಮ ನರಸಿಂಹರಸ (ಕ್ರಿ.ಶ. ೧೭೮೪ – ೧೮೦೦)
ರಾಮವರ್ಮ ಅರಸ (ಕ್ರಿ.ಶ. ೧೮೦೦ – ೧೮೩೩)

ರಾಜಕೀಯ ಸಂಬಂಧಗಳು:

ಸಾಕಷ್ಟು ದೀರ್ಘಕಾಲ ಡೊಂಬ ಹೆಗ್ಗಡೆ ಅರಸರು ವಿಟ್ಲ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದರೂ ಅವರಿಗೆ ತುಳುನಾಡಿನಲ್ಲಿದ್ದ ಇತರ ಸಮಕಾಲೀನ ಅರಸು ಮನೆತನಗಳ ಜೊತೆ ವಿಶೇಷವಾದ ಸಂಬಂಧಗಳಿದ್ದಂತೆ ತೋರುವುದಿಲ್ಲ. ಆದರೆ ಕ್ರಿ.ಶ. ೧೮ನೇ ಶತಮಾನದ ಕೆಲವು ಶಾಸನಗಳಲ್ಲಿ ವಿಟ್ಲದರಸರು ತಮ್ಮನ್ನು “ಚೌಟರ ಪಕ್ಷ” ದವರು ಎಂದು ಹೆಮ್ಮೆಯಿಂದ ಗುರುತಿಸಿಕೊಂಡಿರುವುದ ಗಮನಾರ್ಹ.[32] ಚೌಟರ ಪಕ್ಷ ಎಂಬುದರ ಹಿನ್ನಲೆಯನ್ನು ತಿಳಿಯುವ ಪ್ರಯತ್ನ ಮಾಡಿದಾಗ ಪುತ್ತಿಗೆಯ ಚೌಟ ಅರಸರಿಗೂ ಡೊಂಬ ಹೆಗ್ಗಡೆಯರಿಗೂ ಇದ್ದ ಸ್ನೇಹ ಸಂಬಂಧವನ್ನು ನಿರೂಪಿಸುವ ಕೆಲವು ಆಧಾರಗಳು ಗಮನಕ್ಕೆ ಬಂದುವು.

ಕ್ರಿ.ಶ. ೧೪೬೫ರ ಪೊಳಲಿ ಅಮುಂಜೆ ಶಾಸನದಲ್ಲಿ ಚೌಟ ಅರಸರು ಪೊಲಲಿಯ ದೇವಾಲಯಕ್ಕೆ ನೀಡಿದ ಭೂದಾನಕ್ಕೆ ಸಾಕ್ಷಿಯಾಗಿದ್ದವರ ಹೆಸರುಗಳಲ್ಲಿ ಡೊಂಬ ಹೆಗ್ಗಡೆಯ ಹೆಸರೂ ಕಾಣಿಸಿಕೊಳ್ಳುತ್ತದೆ[33]. ಮೂಡುಬಿದಿರೆಯ ಜೈನಮಠದಲ್ಲಿರುವ ಕ್ರಿ.ಶ. ೧೫೮೨ ಮತ್ತು ೧೬೪೦ರ ಎರಡು ತಾಮ್ರ ಶಾಸನಗಳಲ್ಲಿ ಪುತ್ತಿಗೆಯ ಚಿಕ್ಕರಾಯ ವೊಡೆಯನು ಮೂಡುಬಿದಿರೆಯ ಅಭಿನವ ಚಾರುಕೀರ್ತಿ ಪಂಡಿತ ದೇವರಿಗೆ ಮತ್ತು ಮೂಡುಬಿದಿರೆಯ ನಗರದವರಿಗೆ ಬರೆದುಕೊಟ್ಟ ಒಡಂಬಡಿಕೆಯ ವಿವರಗಳಿದ್ದು ಅದಕ್ಕೆ ತೊಳಹರು, ಕುಂದ ಹೆಗಡೆಯರು, ಕೊಣ್ನರು, ಬಿನ್ನಾಣಿಗಳು ಮುಂತಾದವರ ಜೊತೆಗೆ ಡೊಂಬ ಹೆಗಡೆಯರೂ ಮಧ್ಯಸ್ಥರಾಗಿದ್ದರೆಂದು ತಿಳಿಸಲಾಗಿದೆ[34]. ಕ್ರಿ.ಶ. ೧೬೦೮ರಲ್ಲಿ ಕೆಳದಿಯ ವೆಂಕಟಪ್ಪ ನಾಯಕನೊಂದಿಗೆ ವಿಟ್ಲದ ಹೆಗ್ಗಡೆಯು ತಾನು ಕೊಡಬೇಕಾದ ಕಪ್ಪದ ಕುರಿತು ಮಾಡಿಕೊಂಡ ಒಪ್ಪಂದವು ಚೌಟ ಅರಸನಾದ ಚಂದ್ರಶೇಖರ ಚಿಕ್ಕರಾಯ ಚೌಟನ ಮಧ್ಯಸ್ಥಿಕೆಯಲ್ಲಿ ನಡೆಯಿತು ಎನ್ನಲಾಗಿದೆ. [35] ಕಂಡುಬಂದಿದ್ದು ಇದರಲ್ಲಿ ವಿಟ್ಲದರಸನಾದ ನರಸಿಂಹರಸ ಡೊಂಬ ಹೆಗ್ಗಡೆಯು ಮೂಡುಬಿದಿರೆಯ ಬೈಕಣತಿಕಾರಿ ಬಸದಿಯ ಅನಂತನಾಥ ದೇವರಿಗೆ ವಿಟ್ಲದ ಗ್ರಾಮದಲ್ಲಿ ಭೂಮಿಯನ್ನು ಉತ್ತಾರವಾಗಿ ನೀಡಿದ ಬಗ್ಗೆ ವಿವರಗಳಿವೆ. [36] ಇದಲ್ಲದೆ, ಚೌಟ ರಾಣಿ ಅಬ್ಬಕ್ಕದೇವಿಯು ಪೋರ್ತುಗೀಜರ ವಿರುದ್ಧ ನಡೆಸಿದ ಹೋರಾಟದ ಸಂದರ್ಭ ಆಕೆಯ ಪಕ್ಷದಲ್ಲಿ ವಿಟ್ಲದರಸನ ಸೈವ್ಯವೂ ಪಾಲ್ಗೊಂಡಿತ್ತು ಎಂಬ ಹೇಳಿಕೆಯಿದೆ. ಈ ಎಲ್ಲ ಆಧಾರಗಳಂತೆ, ಕ್ರಿ.ಶ. ೧೫ನೇ ಶತಮಾನದಿಂದ ಕ್ರಿ.ಶ. ೧೮ನೇ ಶತಮಾನದ ವರೆಗೂ ವಿಟ್ಲದರಸರಿಗೂ ಚೌಟ ಅರಸರಿಗೂ ಇದ್ದ ಸ್ನೇಹ ಸಂಬಂಧವು ಅಬಾಧಿತವಾಗಿ ಮುಂದುವರಿದಿತ್ತು ಎಂದು ತಿಳಿಯಬಹುದು. ಚೌಟರಾಜ್ಯದ ನರೆಯವರಾದ ಕೊಣ್ನ ಅರಸು ಮನೆತನದವರಿಗೂ ವಿಟ್ಲದ ಡೊಂಬ ಹೆಗ್ಗಡೆಯರಿಗೂ ಆತ್ಮೀಯ ಸಂಬಂಧವಿತ್ತೆಂಬುದು ಕ್ರಿ.ಶ. ೧೪೦೫ರಲ್ಲಿ ಕಾಂತಣ ಮಾರಾಳುವ ಕೊಣ್ನನು ವಿಟ್ಲದ ದೇವಾಲಯಕ್ಕೆ ನೀಡಿದ ಭೂದಾನದಿಂದ ಸ್ಪಷ್ಟವಾಗುತ್ತದೆ. [37] ಈ ಆಧಾರಗಳಂತೆ ಕ್ರಿ.ಶ. ೧೫ನೇ ಶತಮಾನದ ಪ್ರಾರಂಭದಿಂದಲೇ ಮೂಡುಬಿದಿರೆ ಪ್ರದೇಶದ ಅರಸರ ಜೊತೆ ಡೊಂಬ ಹೆಗ್ಗಡೆ ಅರಸರಿಗೆ ಸ್ನೇಹ ಸಂಬಂಧವಿತ್ತೆಂಬುದು ಖಚಿತವಾಗುತ್ತದೆ.

ಸಾಮಾಜಿಕ – ಸಾಂಸ್ಕೃತಿಕ ವಿಚಾರ:

ವಿಟ್ಲದರಸರು ಎಲ್ಲಾ ದಾಖಲೆಗಳಲ್ಲೂ ಡೊಂಬ ಹೆಗ್ಗಡೆ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದರೂ ಈ ಅಭಿಧಾನವು ಪಟ್ಟದರಸನಿಗೆ ಮಾತ್ರ ಸೀಮಿತವಾಗಿತ್ತು ಎಂಬುದು ಸ್ಪಷ್ಟ. ಈ ಮನೆತನದ ಸದಸ್ಯರು ‘ಬಲ್ಲಾಳ್’ ಎಂಬ ಉಪನಾಮವನ್ನೂ ಹೊಂದಿದ್ದರು. ಬ್ರಿಟಿಷ್ ಬರಹಗಾರರು ಹಿಂದೂ ಧರ್ಮೀಯರಾದ ವಿಟ್ಲದರಸರನ್ನು ಜೈನ ಮತಾವಲಂಬಿಗಳು ಎಂದು ತಪ್ಪಾಗಿ ಗುರುತಿಸಲು ಇದುವೇ ಕಾರಣವಾಗಿರಬೇಕು. [38] ಇವರ ಪಟ್ಟಕ್ಕೆ “ಪಾರ್ಥಂಪಾಡಿ ಸಿಂಹಾಸನ” ಎಂಬ ಹೆಸರಿದ್ದು ಹಲವಾರು ಶಾಸನಗಳಲ್ಲಿ ಇಲ್ಲಿನ ಅರಸರನ್ನು “ಪಾರ್ಥಂಪಾಡಿ ಸಿಂಹಾಸನಸ್ಥರು” ಎಂಬ ವಿಶೇಷಣದೊಂದಿಗೆ ಉಲ್ಲೇಖಿಸಲಾಗಿದೆ. ವಿಟ್ಲವನ್ನು ಕೇಂದ್ರವನ್ನಾಗಿರಿಸಿಕೊಂಡು ವಿಟ್ಲದ ಅರಮನೆಯಿಂದ ಆಳ್ವಿಕೆ ನಡೆಸುತ್ತಿದ್ದ ಇವರಿಗೆ ಇದಲ್ಲದೆ ಎರುಂಬು, ಕನ್ಯಾನ ಮತ್ತು ಚಿಪ್ಪಾರು ಎಂಬಲ್ಲಿಯೂ ಅರಮನೆಗಳಿದ್ದುವೆಂದು ಹೇಳಲಾಗುತ್ತಿದ್ದರೂ ಆ ಅರಮನೆಗಳ ಯಾವುದೇ ಕುರುಹುಗಳು ಕಂಡುಬರುವುದಿಲ್ಲ. ಅಳಿಯ ಸಂತಾನ ಸಂಪ್ರದಾಯವನ್ನನುಸರಿಸುತ್ತಿದ್ದ ವಿಟ್ಲದರಸರು “ಸಾಲೆಬಳಿ”ಗೆ ಸೇರಿದವರೆಂದು ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಒಂದು ಶಾಸನದಲ್ಲಿ ರವಿವರ್ಮನರಸಿಂಹರಸ ಡೊಂಬ ಹೆಗ್ಗಡೆಯನ್ನು ವಿಶ್ವಾಮಿತ್ರ ಗೋತ್ರದವ ಎಂದು ಕರೆಯಲಾಗಿರುವುದು ಕುತೂಹಲಕರ. [39] ಒಂದು ಸೀಮಿತವಾದ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದರೂ ವಿಟ್ಲದರಸರು ತಮ್ಮನ್ನು “ಪಾರ್ಥಂಪಾಡಿ ಸಿಂಹಾಸನಸ್ಥ, ವೀರ ಶೌರ‍್ಯಪ್ರತಾಪ, ಚೌಟರ ಪಕ್ಷದೋರ್ದಂಡ, ಹನುಮಧ್ವಜಾಂಕಿತ” ಎಂದು ಮುಂತಾದ ಅಲಂಕಾರಿಕ ಬಿರುದುಗಳಿಂದ ಗುರುತಿಸಿಕೊಳ್ಳಲು ಪ್ರಯತ್ನಿಸಿರುವುದನ್ನು ಕಾಣಬಹುದು.

ವಿಟ್ಲದ ಅರಸರು ಶೈವಮತಾವಲಂಬಿಗಳು. ವಿಟ್ಲದ ಪಂಚಲಿಂಗೇಶ್ವರ ಇವರ ಕುಲದೇವರು. ಕ್ರಿ.ಶ. ೧೪೫೩ರ ಶಾಸನದಲ್ಲೇ ಈ ಕುರಿತ ಉಲ್ಲೇಖವಿದೆ. ಗಜಪೃಷ್ಠಾಕೃತಿಯಲ್ಲಿ ನಿರ್ಮಿತವಾದ ಈ ದೇವಾಲಯ ತುಳುನಾಡಿನ ಪ್ರಾಚೀನ ಹಾಗೂ ಬೃಹತ್ ದೇವಾಲಯಗಳಲ್ಲೊಂದು. ಕ್ರಿ.ಶ. ೧೪೫೩ರಲ್ಲಿ ಈ ದೇವಾಲಯದ ಜೀರ್ಣೋದ್ಧರ ಕಾರ್ಯವನ್ನು ನೆರವೇರಿಸಲಾಯಿತೆಂಬ ವಿಚಾರವನ್ನು ಮೇಲೆ ಉಲ್ಲೇಖಿಸಲಾದ ಶಾಸನವು ಸೂಚಿಸುತ್ತದೆ. ೧೮೯೪ರಲ್ಲಿ ಈ ದೇವಾಲಯದ ಸಂಪೂರ್ಣ ಜೀರ್ಣೋದ್ಧಾರವನ್ನು ಕೈಗೊಳ್ಳಲಾಯಿತೆಂದು ದೇವಾಲಯದ ಎದುರಿನ ಧ್ವಜಸ್ತಂಭದ ಮೇಲಿರುವ ಶಾಸನವು ತಿಳಿಸುತ್ತದೆ. ವಿಟ್ಲದರಸರ ಆಡಳಿತದಡಿಯಲ್ಲಿ ೧೮ ದೇವಾಲಯಗಳು ಮತ್ತು ೧೮ ದೈವಸ್ಥಾನಗಳಿದ್ದವೆಂದು ಹೇಳಲಾಗುತ್ತದೆ. ಈ ಪೈಕಿ ಬಾಯಾರಿನ ಪಂಚಲಿಂಗೇಶ್ವರ, ಕೇಪು ಸುಬ್ರಾಯ ಮತ್ತು ದುರ್ಗಾಪರಮೇಶ್ವರಿ, ಪುಣಚದ ಮಹಿಷಮರ್ದಿನಿ, ಮಾಣಿಲದ ವಿಷ್ಣುಮೂರ್ತಿ, ಎರುಂಬು ಶಂಕರ ನಾರಾಯಣ ಮತ್ತು ವಿಷ್ಣುಮೂರ್ತಿ, ಎರುಂಬು ಶಂಕರ ನಾರಾಯಣ ಮತ್ತು ವಿಷ್ಣುಮೂರ್ತಿ ಹಾಗೂ ದೇಲಂತಬೆಟ್ಟಿನ ವಿಷ್ಣುಮೂರ್ತಿ ದೇವಾಲಯಗಳು ಮುಖ್ಯವಾದುವು. ಶೈವ ಮತಾವಲಂಬಿಗಳಾದ ಈ ಅರಸುಮನೆತನದ ಹಲವು ಸದಸ್ಯರು ಕ್ರಿ.ಶ. ೧೭೪೩ರಲ್ಲಿ ಕಾಶೀಯಾತ್ರೆಯನ್ನು ಮಾಡಿದ ಬಗ್ಗೆ ಶಾಸನದಲ್ಲಿ ವಿವರಣೆಯಿದೆ. ಈ ಯಾತ್ರೆಯ ನೆನಪಿಗಾಗಿ ವಿಟ್ಲದ ಸಮೀಪ ಕಾಶಿಮಠ ಎಂಬ ಹೆಸರಿನ ಮಠವೊಂದನ್ನು ನಿರ್ಮಿಸಲಾಯಿತು. [40] ಬಾಯಾರು ಪಂಚಲಿಂಗೇಶ್ವರ, ಕೇಪು ದುರ್ಗಾಪರಮೇಶ್ವರಿ, ದೇಲಂತಬೆಟ್ಟು ವಿಷ್ಣುಮೂರ್ತಿ ಹಾಗೂ ಕೇರಳದ ತ್ರಿಕ್ಕೈ ಎಂಬಲ್ಲಿನ ಶಿವದೇವಾಲಯಗಳಲ್ಲಿ ವಿಟ್ಲದ ಅರಸರು ಕೈಗೊಂಡ ಸೇವೆಯ ವಿರಗಳು ಶಾಸನಗಳಲ್ಲಿ ದಾಖಲಾಗಿವೆ.

ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ವೀರಶೈವ ಧರ್ಮವು ವಿಟ್ಲ ಪ್ರದೇಶಕ್ಕೆ ಅಡಿಯಿಟ್ಟಿತು. ಕೆಳದಿಯ ನಿರ್ವಾಣ ಶೆಟ್ಟಿಗೆ ವಿಟ್ಲದರಸರು ತಮ್ಮ ರಾಜ್ಯದಲ್ಲಿ ಭೂಮಿಯನ್ನು ಉಂಬಳಿ ನೀಡಿದ ಬಗ್ಗೆ ಈಗಾಗಲೇ ಪ್ರಸ್ತಾಪಿಸಲಾಗಿದೆ. ವಿಟ್ಲದ ಪಂಚಲಿಂಗೇಶ್ವರ ದೇವಾಲಯಕ್ಕೆ ಅನತಿ ದೂರದಲ್ಲಿ ವೀರಶೈವ ಮಠವೊಂದನ್ನು ನಿರ್ಮಿಸಲಾಗಿದ್ದು ಚರಂತಿಮಠ ಎಂದು ಗುರುತಿಸಲಾಗುವ ಆ ಕಟ್ಟಡದ ಅವಶೇಷಗಳನ್ನು ಇಂದಿಗೂ ಕಾಣಬಹುದು. ಇದರ ಪಕ್ಕದಲ್ಲೆ ಒಂದು ಬೃಹತ್ತಾದ ವಿಟ್ಲದ ಗ್ರಾಮದಲ್ಲಿ ಮೂಡುಬಿದಿರೆಯ ಜೈನ ಬಸದಿಯೊಂದಕ್ಕೆ ವಿಟ್ಲದರಸನು ಭೂದಾನವನ್ನು ನೀಡಿದ ಕುರಿತು ಶಾಸನಾಧಾರವಿರುವುದನ್ನು ಮೇಲೆ ಉಲ್ಲೇಖಿಸಲಾಗಿದೆ. ವಿಟ್ಲದಲ್ಲಿ ಜೈನ ಬಸದಿಯೊಂದಿದ್ದು ಇದು ವಿಟ್ಲದರಸನು ಜೈನಧರ್ಮಕ್ಕೆ ನೀಡಿದ ಪ್ರೋತ್ಸಾಹವನ್ನು ಪುಷ್ಟೀಕರಿಸುತ್ತದೆ. ವಿಟ್ಲದಲ್ಲಿ ನಾಥ ಪಂಥದವರಿಗೆ ಸೇರಿದ ಒಂದು ಮಠವೂ ಇರುವುದು ವಿಶೇಷ. ಡೊಂಬ ಹೆಗ್ಗಡೆ ಅರಸರು ನಾಥ ಪಂಥದ ಯೋಗಿಗಳಿಗೆ ನೀಡಿದ ಭೂಮಿಯಲ್ಲಿ ಈ ಮಠವನ್ನು ನಿರ್ಮಿಸಲಾಯಿತೆಂದು ಹೇಳಲಾಗಿದೆ. ಇಂದಿಗೂ ಇದನ್ನು ನಾಥ ಪಂಥದವರ ಒಂದು ಪ್ರಮುಖ ಮಠ ಎಂದು ಪರಿಗಣಿಸಲಾಗುತ್ತಿದ್ದರೂ ಈ ಮಠದ ಇತಿಹಾಸವನ್ನರಿಯಲು ಆಕರಗಳ ಕೊರತೆಯಿದೆ.

ಸುಮಾರು ಐನೂರು ವರ್ಷಗಳಿಗೂ ದೀರ್ಘಕಾಲ ವಿಟ್ಲ ಪ್ರದೇಶವನ್ನಾಳಿದ ಡೊಂಬ ಹೆಗ್ಗಡೆ ಅರಸರು ಈ ಪ್ರದೇಶದ ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಹತ್ತ್ವದ ಪಾತ್ರವನ್ನು ವಹಿಸಿದ್ದಾರೆ. ಅತಿಯಾದ ಸ್ವಾತಂತ್ರ್ಯ ಪ್ರೇಮ ಈ ಅರಸರ ವೈಶಿಷ್ಟ್ಯ ಕೆಳದಿ ಅರಸರು, ಹೈದರಾಲಿ, ಟೀಪುಸುಲ್ತಾನ್ ಹಾಗೂ ಬ್ರಿಟಿಷರ ವಿರುದ್ಧ ಇವರು ನಡೆಸಿದ ಹೋರಾಟಗಳೇ ಇದಕ್ಕೆ ನಿದರ್ಶನ. ‘ದೊಂಬಿ’ ಎಂಬ ಪದಕ್ಕೆ ದಂಗೆ, ಕದನ, ಕಾಳಗ ಎಂಬ ಅರ್ಥವಿದೆ. ಈ ಹಿನ್ನೆಲೆಯಲ್ಲಿ, ಸದಾಕಾಲ ಹೋರಾಟನಿರತರಾಗಿದ್ದ ಡೊಂಬ ಹೆಗ್ಗಡೆ ಅರಸರನ್ನು “ದೊಂಬಿ ಹೆಗ್ಗಡೆಯರು” ಎಂಬ ಅನ್ವರ್ಥ ನಾಮದಿಂದ ಗುರುತಿಸುತ್ತಿದ್ದುದೂ ಉಂಟು. ರಾಜಕೀಯವಾಗಿ ತಮ್ಮ ಸಮಕಾಲೀನ ಅರಸು ಮನೆತನಗಳಾದ ಬಂಗ, ಅಜಿಲ, ಭೈರರಸ ಹಾಗೂ ಚೌಟರು ಏರಿದ ಎತ್ತರಕ್ಕೆ ಏರಲು ಡೊಂಬ ಹೆಗ್ಗಡೆ ಅರಸರಿಗೆ ಅಸಾಧ್ಯಾವಾಯಿತು ಎನ್ನುವುದು ನಿಜವಾದರೂ, ಈ ಅರಸರು ತುಳುನಾಡಿನ ಇತಿಹಾಸದಲ್ಲಿ ತಮ್ಮದೇ ಆದ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಡಾ. ಪುಂಡಿಕ್ಯಾ ಗಣಪಯ್ಯ ಭಟ್*

 

[1] ೧೯ ಗ್ರಾಮಗಳು – ವಿಟ್ಲಕಸಬಾ, ಪಡ್ನೂರು, ಮುಡ್ನೂರು, ಬಾಯಾರು, ಚಿಪ್ಪಾರು, ಪೆರುವಾಯಿ, ಅಳಿಕೆ, ಎರುಂಬು, ಮಾಣಿಲ, ಪುಣಚ, ಕೇಪು, ಕನ್ಯಾನ ಕರೋಪಾಡಿ, ಕುಡಲಾಮೇರ್ಕಳ, ಸಾಲೆತ್ತೂರು, ಕುಳ, ವಕ್ಕೆತ್ತೂರು, ಪೈವಳಿಕೆ, ಕೊಳ್ನಾಡು.

[2] ಶೀನಪ್ಪ ಹೆಗ್ಡೆ – ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು, (ಉಡುಪಿ, ೧೯೮೧ ದ್ವಿತೀಯ ಮುದ್ರಣ) ಪು. ೧೦೩.

[3] ಪುಂಡಿಕ್ಕೈ ಗಣಪಯ್ಯ ಭಟ್ – “ವಗೆನಾಡಿನಲ್ಲಿ ಬೆಳಕುಕಂಡ ಆಳುಪ ಶಾಸನ, ನಾಣ್ಯಗಳು”, ತೌಳವ ೯ಮೂಡುಬಿದಿರೆ ೧೯೯೭) ಪು.೫೬ – ೬೨.

[4] ಪಂಜೆಯವರ ಕೃತಿಗಳು, ಸಂಪುಟ ೧, ಪದ್ಯಗಳು(ಓರಿಯಂಟಲ್ ಲಾಂಗ್‌ಮೆನ್ ೧೯೭೩) “ಡೊಂಬರ ಚೆನ್ನೆ” ಪು. ೧೬ – ೨೩.

[5] Gururaja Bhatt, P. Studies in Tuluva History and Culture, (Udupi 1975), P. 129.

[6] Mangalore Magazine – The Organ and Record of St. Aloysius College, 1900, Vol. I, No. P.330.

[7] ತುಳುನೀಘಂಟು, ಸಂಪುಟ – ೩(ಉಡುಪಿ ೧೯೯೫), ಪು. ೧೩೬೭)

[8] South Indian Inscriptions(SII) Vol. VII, Nos. 211, 213, 229, 232.

[9] ರಮೇಶ್‌ಕೆ.ವಿ., ತುಳುನಾಡಿನ ಇತಿಹಾಸ (ಉಡುಪಿ ೧೯೬೮), ಪು. ೭೧ – ೭೨, Pi. Gururaja Bhatt, Studies in Tuluva History and Culture (Udupi 1975), P. 166 – 67.

[10] SII. Vol. VII, No. 211.

[11] SII. Vol. VII, No. 213.

[12] ಕನ್ನಡ ನಿಘಂಟು, ಸಂಪುಟ೬ (ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೯೦) ಪು. ೫೯೪೦, ೫೯೪೩.

[13] ಗಣಪತಿ ರಾವ್ ಐಗಳ್(ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ), ಚಾರ್ಲ್ಸ್‌ಕೊಹೆಲ್ಲೊ (ಹಿಸ್ಟರಿ ಆಫ್ ವಿಟ್ಲ – ಅಪ್ರಕಟಿತ ಬೆರಳಚ್ಚು ಪ್ರತಿ ಲೇಖನ, ವಿಟ್ಲ ಅರಮನೆಯಲ್ಲಿದೆ), ಗುರುರಾಜ ಭಟ್ (ಸ್ಟಡೀಸ್‌ಇನ್ ತುಳುವ ಹಿಸ್ಟರಿ ಎಂಡ ಕಲ್ಚರ್), ಮತ್ತು ಪಾದೇಕಲ್ಲು ವಿಷ್ಣುಭಟ್(ವಿಟ್ಲದ ಸಾಂಸ್ಕೃತಿಕ, ಚಾರಿತ್ರಿಕ ಅಧ್ಯಯನ – ಅಪ್ರಟಿತ) ಇವರು ವಿಟ್ಲದ ಅರಸರ ಕುರಿತು ಅಧ್ಯಯನ ನಡೆಸಿದ್ದಾರೆ. ಗುರುರಾಜ ಭಟ್ಟರ ಗ್ರಂಥದಲ್ಲಿ ವಿಟ್ಲದ ಅರಸರ ಇತಿಹಾಸದ ಕುರಿತು ನೀಡಲಾದ ಹೆಚ್ಚಿನವಿವರಗಳನ್ನು ಚಾರ್ಲ್ಸ ಕೊಹೆಲೋರ ಅಪ್ರಕಟಿತ ಲೇಖನದಿಂದ ನೇರವಾಗಿ ಎತ್ತಿಕೊಳ್ಳಲಾಗಿದೆ.

[14] ಈ ಶಾಸನ ವಿಟ್ಲದರಮೆನಯಲ್ಲಿದ್ದು, ಪರಿಶೀಲನೆಗೆ ಲಭ್ಯವಿದೆ.

[15] Gururaj Bhatt, Op cit. P. 129.

[16] ARSIE 1928 – 29, No. 519.

[17] ARSIE 1930 – 31, No. 353.

[18] ಗಣಪತಿ ರಾವ್ ಐಗಳ್, ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ(ಮಂಗಳೂರು ೧೯೨೩), ಪು. ೩೦೩.

[19] Chitnis K.N., Keladi Polity, (Dharwar 1974), P.50.

[20] GrururAjf Bhatt, op.cit. P. 131.

[21] ಗಣಪತಿರಾವ್ ಐಗಳ್, ಅದೇ ಪು. ೩೬೨.

[22] Gururaj Bhatt, Op.cit. P. 134.

[23] Gururajf Bhatt, ibid P. 134.

[24] ಗುರುರಾಜ ಭಟ್. ಅದೇ ಪು. ೧೩೪.

[25] ಈ ಶಾನಸದ ವಿವರಗಳನ್ನು ವಿಟ್ಲದ ಅರಮನೆಯಿಂದ ಪಡೆದುಕೊಳ್ಳಲಾಯಿತು.

[26] ಗಣಪತಿರಾವ್ ಐಗಳ್, ಮಂಜೇಶ್ವರ (ಮಂಗಳೂರು ೧೯೨೪), ಪು. ೨೭ – ೨೮

[27] ಅದೇ, ಪು. ೨೨.

[28] ಅದೇ, ಪು.೨೭ – ೩೨ ವಿಟ್ಲದರಸನು ಮಂಜೇಶ್ವರರಿಂದ ಸೂರೆಗೈದು ಕೊಂಡುಹೋದ ಆಭರಣಗಳ ಪಟ್ಟಿಯನ್ನು ಇದೇ ಗ್ರಂಥದ ಪು. XI – XII ರಲ್ಲಿ ನೀಡಲಾಗಿದೆ.

[29] ಬ್ರಿಟಿಷರ ವಿರುದ್ಧ ವಿಟ್ಲದರಸನು ನಡೆಸಿದ ಹೋರಾಟದ ವಿವರಗಳನ್ನು ಈ ಮುಂದಿನ ಆಕರಗಲಿಂದ ಸಂಗ್ರಹಿಸಲಾಗಿದೆ – T.H. Beaglehole, Thomas Munro and the development of administrative policy in Madras 1792 – 1818 (London 1966); Sturrock, John – Madras District Manuals, South Kanara Vol. I (1894); Shyam Bhat N. “Local Resistance against the British” in quarterly Journal of Mythic Society, Vol. 78, Nos. 1 – 2, 1987, PP. 1 – 13

[30] ತಿಮ್ಮನಾಯಕನ ಬಗ್ಗೆ ವಿವರಗಳಿಗೆ ನೋಡಿ, ವೆಂಕಟರಾಜ ಪುಣಿಂಚತ್ತಾಯ – ”ವೀರರು ತುಳಿದ ನೆಲ” ಸುದರ್ಶನ(ಮೂಲ್ಕಿ ೧೯೭೭), ಪು. ೧೨೧ – ೧೨೨.

[31] ಕುಶಾಲಪ್ಪ ಗೌಡ ಮತ್ತು ಚಿನ್ನಪ್ಪಗೌಡ – ದಕ್ಷಿಣಕನ್ನಡ ಜಿಲ್ಲೆಯ ಕೈಫಿಯತ್ತುಗಳು, (ಉಜಿರೆ ೧೯೮೩), ಪು. ೧೫೧ – ೫೨.

[32] Gururaja Bhat, Op.cit PP. 132 – 33.

[33] SII. Vol. IX. Pt. II, No. 460.

[34] ಈ ಎರಡೂ ಶಾಸನಗಳು ಮೂಡುಬಿದಿರೆಯ ಜೈನ ಮಠದಲ್ಲಿವೆ.

[35] ಗಣಪತಿ ರಾವ್ ಐಗಳ್, ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಪು. ೩೦೩.

[36] ಈ ತಾಮ್ರ ಶಾಸನವು ಮೂಡುಬಿದಿರೆಯ ಜೈನ ಮಠದಲ್ಲಿದೆ.

[37] ARSIE 1928 – 29, No. 519.

[38] Buchanan Francis – A Journey throughe the provinces of Mysore, Malbar, Coimbatore and Canara, Vol. II, (1970) P. 216; Sturrock John – Madras District Manuals, South Kanara, P. 73.

[39] Gururaja Bhatt, Op.cit. P. 134.

[40] Ibid. P. 133 ಗುರುರಾಜ ಭಟ್ಟರು ಈ ಶಾಸನದ ಕಾಲವನ್ನು ಕ್ರಿ.ಶ. ೧೭೪೪ ಎಂದು ಉಲ್ಲೇಖಿಸಿದ್ದಾರೆ ಅದು ಕ್ರಿ.ಶ. ೧೭೪೩ ಆಗಬೇಕು.

* Dept. of Ancient History and Archaeology, Sri Dhavala College, Moodbidir – 574 227.