ಹೊಯ್ಸಳ, ವಿಜಯನಗರ ಹಾಗೂ ಕೆಳದಿ ಅರಸರ ಪ್ರಭುತ್ವವನ್ನು ಒಪ್ಪಿಕೊಂಡು, ಅವರ ಸಾಮಂತರಾಗಿ ಕರಾವಳಿ ಕರ್ನಾಟಕವನ್ನಾಳಿದ ರಾಜವಂಶಸ್ಥರಲ್ಲಿ ವೇಣೂರಿನ ಅಜಿಲರು ಸಾಕಷ್ಟು ಪ್ರಸಿದ್ಧಿಯನ್ನು ಪಡೆದವರು. ಸುದೀರ್ಘ ಆಡಳಿತ, ಇತಿಹಾಸ ನಿರ್ಮಿಸಿ ಪ್ರಖ್ಯಾತರಾದ ಅಜಿಲರು ತುಳುನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಯನ್ನಿತ್ತವರು. ಈ ಅರಸು ಮನೆತನದವರ ಪ್ರಮುಖ ರಾಜಧಾನಿ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣುರು.

ಇವರಿಗೆ ವೇಣೂರು ಅರಮನೆಯಲ್ಲದೆ ಅಳದಂಗಡಿಯಲ್ಲಿ, ಕೇಳ ಗ್ರಾಮದಲ್ಲಿ, ಬರಾಯದಲ್ಲಿ ಹೀಗೆ ನಾಲ್ಕು ಅರಮನೆಗಳಿದ್ದವು. ವೇಣೂರಿನ ಅರಮನೆಯು ಪೂರ್ಣ ನಾಶವಾಗಿದ್ದು, ಕೇಳದ ಅರಮನೆಯ ಪಂಚಾಂಗದ ಕುರುಹುಗಳನ್ನು ಈಗಲೂ ಕಾಣಬಹುದು. ಬರಾಯದ ಅರಮನೆ ಶಿಥಿಲಗೊಂಡಿದೆಯಾದರೂ ಕೇವಲ ಚಾವಡಿಯ ಭಾಗ ಮಾತ್ರ ಉಳಿದುಕೊಂಡಿದ್ದು, ಇದರ ಕಂಬಗಳ ಕಾಷ್ಠ ಕೌಶಲ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ. ಅಳದಂಗಡಿಯ ಅರಮನೆ ಇಂದಿಗೂ ಅರಸು ಮನೆತನದ ಗತವೈಭವದ ಕುರುಹುಗಳನ್ನು, ವರ್ತಮಾನದ ಕೊಂಡಿಯಲ್ಲಿ ಬೆಸೆದು, ಮನೆತನದ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದೆ.

ಸ್ಥಳನಾಮ :

ವೇಣೂರು ಎಂದು ಕರೆಯಲ್ಪಡುವ ಈ ಊರು ಹಿಂದೆ “ಏನೂರು” ಅಥವಾ “ಯೇನೂರು” ಎಂಬುದಾಗಿ ಕರೆಯಲ್ಪಡುತ್ತಿತ್ತು ಎಂಬ ವಿಚಾರ ಶಾಸನಗಳಿಂದ ತಿಳಿದು ಬರುತ್ತದೆ. ಶ್ರೀ ಮಂಜೇಶ್ವರ ಗೋವಿಂದ ಪೈಗಳ ಅಭಿಪ್ರಾಯದಂತೆ ಕನ್ನಡ ಭಾಷೆಯ ಶಬ್ದಗಳನ್ನು ಜನ ಉಚ್ಚರಿಸುವಲ್ಲಿ ‘ಎ’ ಮತ್ತು ‘ವೆ’ ಎಂಬವು ಪರಸ್ಪರ ಪರಿವರ್ತನೆಯನ್ನು ಹೊಂದುತ್ತವೆಂಬುದಕ್ಕೆ ಬೇಕಾದಷ್ಟು ದೃಷ್ಟಾಂತಗಳಿವೆಯೆಂದೂ, ಉದಾಹರಣೆಗಾಗಿ ಎಗ್ಗಳ – ವೆಗ್ಗಳ, ಎಂಗಿ – ವೆಂಗಿ, ಎಂಕಟ – ವೆಂಕಟನೆಂದೂ, ಹಾಗೆಯೇ ಏನು – ಯೇನು, ಏಕೆ – ಯೇಕೆಯೆಂದೂ, ಪರಸ್ಪರ ಪರಿವರ್ತಿಸುವುದುಂಟೆಂದೂ, ಆದುದರಿಂದ ವೇಣೂರಿನ ಪೂರ್ವನಾಮವು ‘ಏನೂರು’ ಅಥವಾ ‘ಏಣೂರು’ ಎಂದಿದ್ದು ಅದು ಲೋಕರೂಢಿಯಲ್ಲಿ ‘ಯೇನೂರು’ ಅಥವಾ ‘ಯೇಣೂರು’ ಎಂದಾಯಿತೆಂದೂ, ಆ ಬಳಿಕ ಅದರಿಂದ ವೇಣುರು ಎಂದಾಗಿರಬೇಕೆಂದು ಊಹಿಸಿರುವರು.

ಏಣೂರು ಶಬ್ದದ ವ್ಯುತ್ಪತ್ತಿಯ ವಿಚಾರದಲ್ಲಿ ಕಾರ್ಕಳ ಸೀಮೆಯ ಹೋಬಳಿಗಳಲ್ಲಿ ಸಂಖ್ಯಾವಾಚಿಯು ಪೂರ್ವಪದವಾಗಿರುವ ಎರಡೂರು, ನಾಲ್ಕೂರು, ಐದೂರು, ಇರ್ವತ್ತೂರು ಎಂಬಂತೆ ಎಣ್‌+ಊರು=ಎಣ್ಣೂರು (ಎಣ್‌=ಎಂಟು) ಎಂಬುವುದೊಂದು ಮೂಲಶಬ್ದದಿಂದ ‘ಣ್ಣ’ ಎಂಬ ದಡ್ಡಕ್ಕರದಲ್ಲಿಯ ಒತ್ತು ಉಚ್ಚಾರದಿಂದ ಕ್ರಮೇಣ ಲೋಪವಾಗಿ ಅದಕ್ಕೆ ಬದಲಾಗಿ ಮೊದಲನೆಯ ಅಕ್ಷರವಾದ ‘ಎ’ ಎಂಬುದು ದೀರ್ಘವಾಗಿ ‘ಏಣೂರು’ ಎಂದಾಗಿರಬಹುದೆಂದೂ, ‘ಣ’ ಕಾರವು ‘ನ’ ಕಾರದೇಶವನ್ನು ಹೊಂದಿ ಪರಸ್ಪರ ವಿನಿಮಯವಾಗಿರಬೇಕೆಂದೂ ಅಭಿಪ್ರಾಯ ಪಡುತ್ತಾರೆ. ಆದ್ದರಿಂದ ಪೂರ್ವದ ‘ಏಣೂರು’ ಎಂಬುದು ಈಗ ‘ವೇಣೂರು’ ಎಂಬುದಾಗಿ ಕರೆಯಲ್ಪಟ್ಟಿರಬಹುದು.

[1] ಆದರೆ ಆ ಎಂಟು ಊರು ಯಾವುದು? ಹಾಗೂ ಈ ಶಬ್ದ ಯಾವ ಅರ್ಥದಲ್ಲಿ ಪ್ರಯೋಗಿಸಲ್ಪಟ್ಟಿದೆ ಎಂಬುದು ಜಿಜ್ಞಾಸೆಯ ವಿಷಯ. ವೇಣೂರಿಗೆ ಎಂಟು ಬಸದಿ ಆಡು ಮಾತುಂಟು. ಈ ವೇಣೂರಿನಲ್ಲಿ ಹಿಂದೆ ೮ ಬಸದಿಗಳಿದ್ದು, ಈ ಕಾರಣದಿಂದ ಈ ಊರಿಗೆ ಆ ಹೆಸರು ಬಂದಿರಬಹುದೆ? ಏಣ್ ಎಂಬ ಶಬ್ದಕ್ಕೆ ಎತ್ತರ ಪ್ರದೇಶ; ಅಂಚು; ಮೂಲೆ ಎಂಬ ಅರ್ಥವಿದೆ. ಹೆಚ್ಚು ಕಡಿಮೆ ಪಶ್ಚಿಮ ಘಟ್ಟದ ತಳಭಾಗದ ವೇಣೂರು, ಕರಾವಳಿಯ ಅಂಚಿನಲ್ಲಿರುವುದರಿಂದ ಈ ಹೆಸರು ಬಂದಿರಬಹುದೇ?

ಅಜಿಲರ ಮೂಲ:

ಅಜಿಲ ವಂಶ ಮತ್ತು ಬಂಗ ವಂಶದ ಮೂಲ ಪುರುಷರು ಪರಸ್ಪರ ಅಣ್ಣ – ತಮ್ಮಂದಿರೆಂದೂ, ಒಂದೇ ಹೆಸರಿನಲ್ಲಿ ಎರಡು ಕಡೆ ರಾಜ್ಯಭಾರ ಮಾಡುವುದು ಸರಿಯಲ್ಲವೆಂದೂ, ಬೇರೆ ಬೇರೆ ಹೆಸರುಗಳಿಂದ ರಾಜ್ಯವಾಳಿದರೆಂದೂ ಹೇಳುವ ಮೆಕೆನ್ಜಿಯ ಕೈಫಿಯತ್ತ್‌ನ ವಿವರಣೆ ನಿಜಕ್ಕೂ ಕುತೂಹಲಕಾರಿಯಾಗಿದೆ. “ತಿಮ್ಮಣ್ಣ ಅಜಿಲರು ವಂಗದೇಶದ ಗಂಗನಾಡು ಎಂಬ ಪಟ್ಟಣದಲ್ಲಿ ಆಳ್ವಿಕೆ ಮಾಡುತ್ತಿದ್ದು ಪರರಾಷ್ಟ್ರದ ಅರಸು ದಂಡೆತ್ತಿ ಬಂದಾಗ ತಮ್ಮ ಲಕ್ಷ್ಮಣಪ್ಪನೊಂದಿಗೆ ಘಟ್ಟದ ಕೆಳಗೆ ಬಂದು ಪರಶುರಾಮ ಕ್ಷೇತ್ರದಲ್ಲಿ ಮನೆ ಮಾಡಿ ವಂಗ್ವಾಡಿ ಎಂದು ಹೆಸರಿಟ್ಟು ವೇಣೂರು ಮತ್ತು ಬೆಳ್ತಂಗಡಿಯಲ್ಲಿ ಅರಮನೆ ಕಟ್ಟಿದರು. ಇಬ್ಬರೂ ಪ್ರತ್ಯೇಕವಾಗಿದ್ದುಕೊಂಡು ಒಂದೇ ಹೆಸರಿರುವುದು ಸರಿಯಲ್ಲವೆಂದೂ ತನ್ನನ್ನು ಪೂರ್ವದ ಹೆಸರಾದ ಅಜಿಲರು ಎಂದೂ, ತಮ್ಮ ಲಕ್ಷ್ಮಣಪ್ಪನಿಗೆ ತಮ್ಮ ಪೂರ್ವದ ಊರಿನ ಹೆಸರು ವಂಗದೇಶವೆಂದಿದ್ದುದರಿಂದ ವಂಗರು ಎಂದು ಹೆಸರಿಟ್ಟರು. ಮುಂದೆ ಲೋಕರೂಢಿಯಲ್ಲಿ ಅದು ಬಂಗರು ಎಂದಾಯಿತು” [2] ಎಂದು ವಿವರಿಸಲಾಗಿದೆ. ಈ ಎರಡೂ ರಾಜವಂಶದವರೂ ಜೈನ ಮತಸ್ಥರು, ಸಮಕಾಲೀನರೂ ಆಗಿರುವುದಲ್ಲದೆ ಅಕ್ಕಪಕ್ಕದಲ್ಲಿ ರಾಜ್ಯಸ್ಥಾಪನೆ ಮಾಡಿರುವುದು ಸರಿಯೇ ಆದರೂ ಇದಕ್ಕೆ ಐತಿಹಾಸಿಕ ಆಧಾರವಿಲ್ಲದೆ ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ.

ಚಾಮುಂಡರಾಯ ಕುಲತಿಲಕರೆಂದು ತಮ್ಮ ಬಿರುದಾವಳಿಯಲ್ಲಿ ಹೇಳಿಕೊಳ್ಳುವಂತೆ ತಿಮ್ಮಣ್ಣ ಅಜಿಲನ ಕ್ರಿ.ಶ. ೧೬೦೪ರ ಶಾಸನದಲ್ಲಿ “ಚಾಮುಂಡಾನ್ವಯ”ದವರೆಂದಿರುವುದರಿಂದ ಇವರ ಮೂಲ ಪುರುಷನೊಬ್ಬನು ಚಾಮುಂಡರಾಯನೆಂಬವನಿರಬೇಕು[3]. ಆ ಮೂಲ ಪುರುಷನಾದ ಚಾಮುಂಡನೆಂಬವನು ಶ್ರವಣ ಬೆಳ್ಗೊಳದಲ್ಲಿಯ ಗೋಮಟೇಶ್ವರ ಮಹಾಮೂರ್ತಿಯನ್ನು ಪ್ರತಿಷ್ಠಾಪಿಸಿದ ಆ ಪ್ರಖ್ಯಾತ ನಾಮದ ಚಾಮುಂಡರಾಯನಿರಬೇಕೆಂದು ಡಾ| ಇ. ಹುಲ್ಚ ಮತ್ತು ಶ್ರೀ ಗಣಪತಿ ರಾವ್ ಐಗಳರು ಅಭಿಪ್ರಾಯಪಟ್ಟಿರುವರು. ಆದರೆ ಈ ಅಭಿಪ್ರಾಯ ಸರಿಯಲ್ಲ. ಯಾಕೆಂದರೆ ಅಜಿಲರು ಚಂದ್ರವಂಶದವರಾದುದರಿಂದ ಅವರ ಮೂಲಪುರುಷನು ಸೂರ್ಯವಂಶದಿಂದ ಹುಟ್ಟಿದ ಗಂಗವಂಶದವನಾಗುವುದು ಹೇಗೆ ಸಾಧ್ಯವಿಲ್ಲವೊ ಹಾಗೆಯೇ ಬ್ರಹ್ಮಕ್ಷತ್ರಿಯ ಕುಲದವನಾದ ಚಾಮುಂಡರಾಯನು ಎಂದಿಗೂ ಇವರ ಮೂಲಪುರುಷನಾಗಲು ಸಾಧ್ಯವಿಲ್ಲ. ಇವರ ಮೂಲ ಪುರುಷನೊಬ್ಬನು ಚಾಮುಂಡರಾಯನೆಂಬನೊಬ್ಬನಿದ್ದರೂ, ತಿಮ್ಮಣ್ಣ ಅಜಿಲರು ಶ್ರವಣಬೆಳ್ಗೊಳದ ಮೂರ್ತಿಯನ್ನು ಕೆತ್ತಿಸಿದ ಚಾಮುಂಡನನ್ನೇ ದೃಷ್ಟಿಯಲ್ಲಿಟ್ಟುಕೊಂಡು “ಚಾಮುಂಡಾನ್ವಯ” ದವನೆಂದು ಹೇಳಿಕೊಂಡಿರಬಹುದು ಅಥವಾ ಪಾರಂಪರಿಕ ಇತಿಹಾಸದಲ್ಲಿ ಹೇಳುವಂತೆ ತಿಮ್ಮಣ್ಣ ಅಜಿಲನು ತಮ್ಮ ಸೊಸೆಯಂದಿರಾದ ಚೆನ್ನಮ್ಮ ಮತ್ತು ಮಧುರಕ್ಕ ದೇವಿಯರನ್ನು ಘಟ್ಟದ ಮೇಲಿನ ಗಂಗವಂಶೀಯರಾದ ಗೋವಿಂದರಾಯಪ್ಪ ಮತ್ತು ಚಾಮುಂಡರಾಯ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದನ್ನು ಇಲ್ಲಿ ಜ್ಞಾಪಿಸಬಹುದು. ಆದರೆ ಈ ಚಾಮುಂಡರಾಯನಿಗೆ ಯಾವ ರೀತಿಯ ಪ್ರಾಧಾನ್ಯತೆಯನ್ನು ಕೊಡಲು ಸಾಧ್ಯವಾಗುವುದಿಲ್ಲ.

ಇನ್ನು ಈ ಅಜಿಲ ಎಂಬ ಪದದ ಬಗ್ಗೆ ಹೇಳುವುದಾದರೆ ತುಳುನಾಡಿನ ಜೈನ ಮತಸ್ಥರ ಬಳಿಗಳಲ್ಲಿ ‘ಅಜಿರ’ ಎಂಬುದು ಒಂದು. ಆ ಬಳಿಯವರ ಕಡೆಯಿಂದ ಅದು ಅಜಿಲ ಎಂದು ಕರೆಯಲ್ಪಟ್ಟಿರಬಹುದು[4]ಎಂಬುದು ಡಾ| ಪಿ. ಗುರುರಾಜ ಭಟ್ಟರ ಅಭಿಪ್ರಾಯ. ಅಜಲ್ ಎಂದರೆ ಹಕ್ಕಿನ ಪ್ರದೇಶ ಅಥವಾ ವಂಶ ಪಾರಂಪರ‍್ಯದಿಂದ ಬಂದ ಅಧಿಖಾರವಲಯ ಎಂಬ ಅರ್ಥವಿದೆ. ಆದ್ದರಿಂದ “ಅಜಿಲ” ಎಂಬ ಪದವು ಅಜಲ್ ಎಂಬ ಶಬ್ದದಿಂದ ಬಂದಿರುವ ಸಾಧ್ಯತೆಯೂ ಇದೆ.

ಪಾರಂಪರಿಕ ಇತಿಹಾಸ:

ಅಜಿಲರ ಪಾರಂಪರಿಕ ಇತಿಹಾಸವು ೧೨ನೆಯ ಶತಮಾನದ ಮಧ್ಯಭಾಗದಿಂದ ಪ್ರಾರಂಭವಾಗಿರುವುದು ಕಂಡುಬರುತ್ತದೆ. ಹೊಯ್ಸಳ ದೊರೆ ವಿಷ್ಣುವರ್ಧನನು ತುಳು ಜೈನ ಅರಸರನ್ನು ಸೆರೆ ಹಿಡಿದು ಹೋದ ಮೇಲೆ ಈ ಅಜಿಲರು ವಂಶವು ಹೀನ ಸ್ಥಿತಿಯಲ್ಲಿದ್ದು, ವಿಷ್ಣುವರ್ಧನನ ಮಗ ೧ನೇ ನರಸಿಂಹನ ಕಾಲದಲ್ಲಿ ಈ ವಂಶವು ಮತ್ತೆ ತಲೆಯೆತ್ತಿತು. ಒಂದನೇ ತಿಮ್ಮಣ್ಣ ಅಜಿಲನು (ಕ್ರಿ.ಶ. ೧೧೫೪ – ೧೧೮೦) ತಪ್ಪಿಹೋದ ರಾಜ್ಯವನ್ನು ಮರಳಿ ಪಡೆದುಕೊಂಡನು ಎಂದು ಐಗಳರು ತಮ್ಮ ದ.ಕ. ಜಿಲ್ಲೆಯ ಪ್ರಾಚೀನ ಇತಿಹಾಸದಲ್ಲಿ ತಿಳಿಸುತ್ತಾರೆ. [5] ಮುಂದೆ ಇವರ ಸೊಸೆಯಂದಿರಾದ ಚೆನ್ನಮ್ಮ ಮತ್ತು ಮಧುರಕ್ಕ ದೇವಿಯರಿಗೆ ಮಕ್ಕಳಿಲ್ಲದ ಕಾರಣ ಅವರನ್ನು ಕಡೆಗಣಿಸಿ, ಪಿಲತಬೆಟ್ಟು ಗ್ರಾಮದ ಬಲಿಷ್ಠವಾದ ಪೂಂಜ ಕುಟುಂಬದ ಬಂಟನೊಬ್ಬನಿಗೆ ಪಟ್ಟ ಕಟ್ಟಿದ್ದು ಇವನು ೬ ವರ್ಷಗಳ ಕಾಲ (೧೧೮೦ – ೧೧೮೬) ಆಡಳಿತ ನಡೆಸಿದನೆಂಬ ವಿವರವಿದೆ. ಈ ಅಕ್ಕ – ತಂಗಿಯರು ಬನವಾಸಿಯ ಕದಂಬದ ಅರಸರಲ್ಲಿ ದೂರಿಡಲು ಕಾಮದೇವನು ಹಿಂದಿನ ೪ ಮಾಗಣೆಗಳಲ್ಲದೆ ಇನ್ನೂ ೯ ಮಾಗಣೆಗಳಾದವು. ಮುಂದೆ ವೇಣೂರಿನ ಪಟ್ಟಕ್ಕೆ, ಈ ಪೂಂಜ ಎಂಬ ಹೆಸರುಳ್ಳ ಈತನಾಳಿದ ಕಾರಣದಿಂದಲೇ ಅಂದಿನಿಂದ ಆ ಪಟ್ಟಕ್ಕೆ ಪೂಂಜಳಿಕೆಯ ಪಟ್ಟವೆಂದೂ, ಆ ಸೀಮೆಗೆ ಪೂಂಜಳಿಕೆಯ ರಾಜ್ಯವೆಂದು ಹೆಸರಾಯಿತೆನ್ನಲಾಗಿದೆ[6].

ಹೊಯ್ಸಳ ವಿಷ್ಣುವರ್ಧನನು ಕ್ರಿ.ಶ. ೧೧೧೬ ರಿಂದ ೧೧೫೨ರ ವರೆಗೆ ರಾಜ್ಯವಾಳಿದ್ದು ತಿಮ್ಮಣ್ಣ ಅಜಿಲನು ಹೆಚ್ಚು ಕಡಿಮೆ ಅದೇ ಅವಧಿಯಲ್ಲಿ (ಕ್ರಿ.ಶ. ೧೧೫೪ – ೧೧೮೦) ಅಧಿಕಾರಕ್ಕೆ ಬಂದಿದ್ದು, ವಿಷ್ಣುವರ್ಧನನು ಕಸಿದುಕೊಂಡ ಅಜಿಲ ಪ್ರಾಂತ್ಯವನ್ನು ಅವನ ಮಗನ ಕೈಯಿಂದ ಮರಳಿ ಸ್ವಾಧೀನ ಪಡಿಸಿಕೊಂಡನೆಂಬ ಉಲ್ಲೇಖ ಇತಿಹಾಸಕ್ಕೆ ಸಮೀಪವೆನಿಸುತ್ತದೆ. ಹಾಗೆಯೇ ಕಾಮದೇವನು ಮಧುರಕ್ಕ ದೇವಿಗೆ ವಹಿಸಿಕೊಟ್ಟ ಮಾಗಣೆಗಳ ಸಂಖ್ಯೆಯೂ ಅಜಿಲರ ಆಡಳಿತಾಂತ್ಯದ ವರೆಗೂ ಹೆಚ್ಚು ಬದಲಾವಣೆಯಾಗದೇ ಇರುವುದು ಗಮನಿಸಬೇಕಾದ ಅಂಶ.

ಐಗಳರು ಒಂದನೇ ತಿಮ್ಮಣ್ಣ ಅಜಿಲ (ಕ್ರಿ.ಶ. ೧೧೫೪ – ೧೧೮೦)ನಿಂದ ಮೊದಲ್ಗೊಂಡು ಪಾಂಡ್ಯಪ್ಪ ಅಜಿಲ (ಕ್ರಿ.ಶ. ೧೭೬೫ – ೧೭೮೯)ರ ವರೆಗೆ, ಪೂಂಜನ ಆಳ್ವಿಕೆಯನ್ನು ಸೇರಿಸಿ ೧೭ ಅರಸರ ಪಟ್ಟಿಯನ್ನು ನೀಡುತ್ತಾರೆ. ಇಂದಿಗೂ ಈ ಅರಸು ಮನೆತನ ಪಾರಂಪರಿಕವಾಗಿ ಮುಂದುವರಿಯುತ್ತಿದ್ದು, ಪ್ರಸಕ್ತ ಪಟ್ಟದಲ್ಲಿರುವ ಅರಸರು ವಂಶಾವಳಿಯಲ್ಲಿ ೨೪ನೆಯವರೆಂದು ತಿಳಿಯಲಾಗಿದೆ. ಅಜಿಲ ಅರಸರಿಗೆ ಇರುವ ಪಟ್ಟದ ಎರಡು ಅನುಕ್ರಮ ಪರ್ಯಾಯ ಹೆಸರುಗಳೆಂದರೆ ಪಾಂಡ್ಯಪ್ಪ ಅರಸ ಅಜಿಲ ಹಾಗೂ ತಿಮ್ಮಣ್ಣ ಅರಸ ಅಜಿಲ.

ಶಾಸನ ಆಧಾರಿತ ರಾಜಕೀಯ ಇತಿಹಾಸ:

ಅಜಿಲರಿಗೆ ಸಂಬಂಧಪಟ್ಟಂತೆ ಈ ವರೆಗೆ ಸಂಶೋಧಿಸಲ್ಪಟ್ಟ ಶಾಸನಗಳಲ್ಲಿ ಕ್ರಿ.ಶ. ೧೩೪೦ ರ ತೆಂಕಕಾರಂದೂರಿನ ಶಾಸನವು ಇವರ ಇತಿಹಾಸವನ್ನು ಹೆಚ್ಚು ಕಡಿಮೆ ಅರ್ಧ ಶತಮಾನದಷ್ಟು ಹಿಂದಕ್ಕೊಯ್ಯುತ್ತದೆ[7]. ಡಾ| ಪಿ.ಎನ್. ನರಸಿಂಹ ಮೂರ್ತಿಯವರಿಂದ ಸಂಶೋಧಿಸಲ್ಪಟ್ಟ ಈ ಶಾಸನದಲ್ಲಿ “ಅಜಿಲರು ಬಂಗರು ಕೋಟೆ ಕೆಡಿಸಿದ್ದಕ್ಕೆ ಪರಿಹಾರ…” ವೆಂದು ಉಲ್ಲೇಖವಿರುವ ಈ ಶಾಸನ ಹೊಯ್ಸಳ ವೀರ ಬಲ್ಲಾಳನ ಕಾಲದ್ದಾಗಿರುತ್ತದೆ. ಇದರ ಉಲ್ಲೇಖದಂತೆ ಇಡೀ ಪೂಂಜಳಿಕೆ ರಾಜ್ಯವು ಹೊಯ್ಸಳರ ಆಧೀನದಲ್ಲಿತ್ತು. ಇದು ಅವರ ಪ್ರಾಂತ್ಯಾಧಿಕಾರಿಗಳಿಂದ ಆಳಲ್ಪಡುತ್ತಿದ್ದುದಾಗಿ ಉಲ್ಲೇಖಿಸಲಾಗಿದೆ. ಬಂಗರು ಹಾಗೂ ಅಜಿಲರು ಪರಿಹಾರ ನೀಡುವಂತೆ ಆದೇಶಿಸಲಾಗಿತ್ತು. ಈ ಶಾಸನವು ಜೈನ ಮನೆತನದ ಅಜಿಲ ಹಾಗೂ ಬಂಗರ ಮೊದಲ ಶಾಸನವಾಗಿದೆ. ದುರದೃಷ್ಟವಶಾತ್ ಇದು ಆ ಎರಡೂ ಅರಸರುಗಳ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಮಹತ್ವಪೂರ್ಣ ಮಾಹಿತಿಗಳನ್ನು ನೀಡಿ ಕ್ರಿ.ಶ. ೧೩೪೦ಕ್ಕಿಂತ ಮೊದಲೇ ಇವರು ತುಳುನಾಡಿನಲ್ಲಿ ರಾಜ್ಯಭಾರ ನಡೆಸಿದುದನ್ನು ಸಮರ್ಥಿಸಲು ಸಹಕಾರಿಯಾಗಿದೆ.

ಪೂರ್ಣವಾಗಿ ಶಿಥಿಲಗೊಂಡ ವೇಣೂರು ಅರಮನೆಯ ಗತವೈಭವವನ್ನು ಸಾರುತ್ತಿರುವ, ಅರಮನೆಯ ಮುಂಭಾಗದಲ್ಲಿ ಕಗ್ಗಲ್ಲಿನಲ್ಲಿ ಮಾಡಲ್ಪಟ್ಟ ೩ ಅಡಿ ಎತ್ತರದ ಎರಡು ಆನೆಗಳು.

ಪೂರ್ಣವಾಗಿ ಶಿಥಿಲಗೊಂಡ ವೇಣೂರು ಅರಮನೆಯ ಗತವೈಭವವನ್ನು ಸಾರುತ್ತಿರುವ, ಅರಮನೆಯ ಮುಂಭಾಗದಲ್ಲಿ ಕಗ್ಗಲ್ಲಿನಲ್ಲಿ ಮಾಡಲ್ಪಟ್ಟ ೩ ಅಡಿ ಎತ್ತರದ ಎರಡು ಆನೆಗಳು.

ಕದ್ರಿ ಮಂಜುನಾಥೇಶ್ವರ ದೇವಾಲಯದ ಬಳಿ ದೊರೆತ ಕ್ರಿ.ಶ. ೧೩೮೮ರ ಶಾಸನದಲ್ಲಿ ಅಜಿಲರಿಗೆ ಸಂಬಂಧಪಟ್ಟಂತೆ ಅಜಿಲಂಕೆರೆ ಎಂಬ ಉಲ್ಲೇಖವಿದೆ. [8] ಅನಂತರ ಕ್ರಿ.ಶ. ೧೪೧೫ರ ಬೇಲೂರು ಶಾಸನದಲ್ಲಿ ಸೋಮನಾಥ ಬಿರುಮಣ್ಣರಸನೆಂಬವನು ೧೦೦ ಮುಡಿ ಅಕ್ಕಿಯನ್ನು ಚೆನ್ನಕೇಶವ ದೇವಸ್ಥಾನಕ್ಕೆ ಕೊಡಮಾಡಿದ ಉಲ್ಲೇಖವಿದೆ. ಆದರೆ ಅಜಿಲರಿಗೆ ಕುರಿತಂತೆ ಸರಿಯಾದ ಉಲ್ಲೇಖ ದೊರೆಯುವುದು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿ ದೊರೆತ ಕ್ರಿ.ಶ. ೧೪೧೯ರ ಶಾಸನದಲ್ಲಿ. ಈ ಶಾಸನವು ಅಜಿಲರು ವಿಜಯನಗರದ ಅರಸ ಮೊದಲನೆಯ ದೇವರಾಯನ ಪ್ರಭುತ್ವವನ್ನು ಒಪ್ಪಿಕೊಂಡು ಬಂಗರು ಮತ್ತು ಚೌಟರು ಸೇರಿದಂತೆ, ಮಂಗಳೂರಿನ ಆಡಳಿತದಲ್ಲಿ ವಿಜಯನಗರದ ಪ್ರಾಂತ್ಯಾಧಿಕಾರಿಯೊಂದಿಗೆ ಸಹಕರಿಸಿರುವುದಾಗಿ ಮಾಹಿತಿ ಲಭ್ಯವಿದ್ದರೂ, ಅಜಿಲರಸನ ಹೆಸರು ಇಲ್ಲಿ ಉಲ್ಲೇಖಿತವಾಗಿಲ್ಲ.

ಅಜಿಲರ ಪಾರಂಪರಿಕ ಇತಿಹಾಸವು ೧೨ನೆಯ ಶತಮಾನದ ಮಧ್ಯಭಾಗದಿಂದ ಪ್ರಾರಂಭವಾಗುವುದಾದರೂ, ಶಾಸನದಲ್ಲಿ ಮೊದಲಿಗೆ ಕಾಣಿಸಿಕೊಂಡ ಅಜಿಲ ಅರಸನೆಂದರೆ ಕ್ರಿ.ಶ. ೧೪೭೯ರ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ರಮಾದೇವಿಯ ಮಗನಾದ ಮಾಂಡಲಿಕ ಸೋಮನಾಥ. ನಾರಾವಿಯ ಸೂರ್ಯನಾರಾಯಣ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದ ಉಲ್ಲೇಖವಿದ್ದು, ಇದೇ ಅರಸ ಮುಂದೆ ೧೪೯೦ರ ತನಕ ತನ್ನ ಆಡಳಿತವನ್ನು ಮುಂದುವರಿಸಿದ್ದಿರಬೇಕು. ಇದೇ ರಮಾದೇವಿಯ ಕ್ರಿ.ಶ. ೧೪೯೦ರ ಇನ್ನೊಂದು ಶಾಸನ ಅಳದಂಗಡಿಯ ಪಾರ್ಶ್ವನಾಥ ಬಸದಿಗೆ ನೀಡಿದ ಭೂದಾನದ ಕುರಿತಾಗಿ ತಿಳಿಸುತ್ತದೆ. ಈ ರಾಣಿಯು ೧೪೪೦ರ ಹೊತ್ತಿಗೆ ಆಡಳಿತದಲ್ಲಿ ಇದ್ದಿರಬಹುದೆಂದು ಅಭಿಪ್ರಾಯಪಡಬಹುದು.[9]

ಆ ನಂತರದ ಅಜಿಲ ಅರಸನೆಂದರೆ ಮೂಡಬಿದ್ರೆಯ ಕ್ರಿ.ಶ. ೧೫೧೫ರ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ಪಿಣ್ಣಾನ ಅಜಿಲ ಇದರಿಂದ ಪಿಣ್ಣಾನ ಅಜಿಲನ ಮಗನಾದ ಕಾಮಿರಾಯನು ಗುರುಗಳ ಬಸದಿಗೆ ದಾನ ನೀಡಿದವರಲ್ಲೊಬ್ಬನೆಂದು ಉಲ್ಲೇಖಿಸಲ್ಪಟ್ಟಿದೆ. ಹಾಗೆಯೇ ಕ್ರಿ.ಶ. ೧೫೩೭ರ ವೇಣೂರು ಶಾಸನವು ಸಾಲ್ವ ಪಾಂಡ್ಯ ದೇವರಸ ಅಜಿಲರು ಶಾಂತೀಶ್ವರ ಚೈತ್ಯಾಲಯದಲ್ಲಿ ೨೪ ತೀರ್ಥಂಕರರ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುವು ಮಾಡಿದ ವಿಚಾರವು ದಾಖಲಿಸಲ್ಪಟ್ಟಿದೆ. [10]

ವೇಣೂರಿನ ಗೋಮಟೇಶ್ವರ ಮೂರ್ತಿಯ ಎಡ ಹಾಗೂ ಬಲದಲ್ಲಿರುವ ಕ್ರಿ.ಶ. ೧೬೦೪ರ ಶಾಸನವು ರಾಯಕುವರನು ಪಾಂಡ್ಯಕ್ಕ ದೇವಿಯ ಸೋದರನೆಂದು ತಿಳಿಸುವುದಲ್ಲದೆ ತಿಮ್ಮಣ್ಣ ಅಜಿಲನು ಅವನ ಅಳಿಯನೆಂದು ಪಾಂಡ್ಯಕ್ಕೆ ದೇವಿಯ ಮಗನು ಪಾಂಡ್ಯ ಭೂಪಾಲನ ಸೋದರನೆಂದೂ ತಿಳಿಸುತ್ತದೆ. ಇಲ್ಲಿ ರಾಯಕುವರನು ಕ್ರಿ.ಶ. ೧೫೬೦ರಿಂದ ೧೫೮೫ರ ಮಧ್ಯೆ ಅಧಿಕಾರದಲ್ಲಿದ್ದನೆಂದು ಹೇಳಬಹುದು. ಈ ಶಾಸನ ಗಳ ಪ್ರಕಾರ ಪಾಂಡ್ಯ ಭೂಪಾಲನು ರಾಯಕುವರನ ನಂತರ ಕ್ರಿ.ಶ. ೧೫೮೫ – ೧೬೦೦ವರೆಗೆ ರಾಜ್ಯವಾಳಿರಬೇಕು. ಪಾಂಡ್ಯ ಭೂಪಾಲನ ನಂತರದ ತಿಮ್ಮಣ್ಣ ಅಜಿಲನು (ಕ್ರಿ.ಶ. ೧೬೦೦ – ೧೬೨೦) ಈ ರಾಜ ಮನೆತನದ ಅತಿ ಶ್ರೇಷ್ಠ ಅರಸನು. ಇವನೇ ವೇಣೂರಿನ ಗೋಮಟ ವಿಗ್ರಹವನ್ನು ಪ್ರತಿಷ್ಠಾಪಿಸಿದನು. ಈ ಅರಸನ ಕುರಿತಾಗಿ ಹಲವು ಐತಿಹ್ಯಗಳಿವೆ. ವೇಣೂರಿನಲ್ಲಿಯೂ ಕಾರ್ಕಳದ ಗೋಮಟೇಶ್ವರನ ಹಾಗೆಯೇ ಮೂರ್ತಿಯು ಪ್ರತಿಷ್ಠಾಪಿತವಾಗುತ್ತದೆ ಎಂಬ ಸುದ್ದಿ ತಿಳಿದು ಕಾರ್ಕಳದ ಭೈರವ ರಾಯನು ಹೀಗಾದರೆ ತನ್ನ ಹಿರಿಯನಾದ ವೀರ ಪಾಂಡ್ಯನು ಮಾಡಿದ ಕೆಲಸಕ್ಕೆ ಕೀರ್ತಿಯು ಕಡಿಮೆಯಾದೀತೆಂದು ಯೋಚಿಸಿ, ಮೂರ್ತಿಯನ್ನು ಪ್ರತಿಷ್ಠಾಪಿಸಬಾರದೆಂದು ಆಕ್ಷೇಪಿಸಿದ ಕಾರಣ, ತಿಮ್ಮಣ್ಣ ಅಜಿಲನಿಗೆ ಭೈರವ ರಾಯನಿಗೂ ಯುದ್ಧ ಉಂಟಾಗಿ ತನ್ನ ಸೇನಾನಿ ಕಾಂತು ಸಾಮಾನಿಯ ಪರಾಕ್ರಮದಿಂದ ಬೈರವರಾಯನು ಸೋತನೆಂದು ಐತಿಹ್ಯವಿದೆ. ಅಂತೆಯೇ ಬಂಗರೊಂದಿಗೂ ವೈಮನಸ್ಸಿದ್ದು ಯುದ್ಧ ಉಂಟಾಗಿ, ತಿಮ್ಮಣ್ಣ ಅಜಿಲನು ಗೆದ್ದಿರುವನೆಂದು ಹೇಳಲಾಗಿದೆ.

ಕ್ರಿ.ಶ. ೧೬೦೪ರಲ್ಲಿ ದೊರೆ ತಿಮ್ಮಣ್ಣಾಜಿಲನಿಂದ ಪ್ರತಿಷ್ಠಾಪಿಸಲ್ಪಟ್ಟ ೩೫ ಅಡಿ ಎತ್ತರದ ಗೋಮಟೇಶ್ವರ ಮೂರ್ತಿ.

ಕ್ರಿ.ಶ. ೧೬೦೪ರಲ್ಲಿ ದೊರೆ ತಿಮ್ಮಣ್ಣಾಜಿಲನಿಂದ ಪ್ರತಿಷ್ಠಾಪಿಸಲ್ಪಟ್ಟ ೩೫ ಅಡಿ ಎತ್ತರದ ಗೋಮಟೇಶ್ವರ ಮೂರ್ತಿ.

ಗೋಮಟೇಶ್ವರನ ಮೂರ್ತಿಯ ಬದಿಯಲ್ಲಿರುವ ಕ್ರಿ.ಶ. ೧೬೦೪ರ ಶಾಸನದಲ್ಲಿ ತಿಮ್ಮಣ್ಣ ಅಜಿಲನ ಇಬ್ಬರು ರಾಣಿಯರಾದ ಪಾಂಡ್ಯಕ್ಕ ಮತ್ತು ಬಿಣ್ಣಾನಿ ಎಂಬವರು ಗೋಮಟೇಶ್ವರನ ಮುಂಭಾಗದಲ್ಲಿ ಎರಡು ಬಸದಿಗಳನ್ನು ನಿರ್ಮಾನ ಮಾಡಿರುವರೆಂಬ ಉಲ್ಲೇಖವಿದೆ.

ತಿಮ್ಮಣ್ಣ ಅಜಿಲನು ಗೋಮಟೇಶ್ವರ ಮೂರ್ತಿಯನ್ನು ಶ್ರವಣಬೆಳಗೊಳದ ಗುರು ಪಟ್ಟಾಸೀನನಾಗಿದ್ದ ಚಾರುಕೀರ್ತಿ ಪಂಡಿತ ದೇವಾಚಾರ್ಯನ ದಿವ್ಯವಾಕ್ಯದಿಂಪ್ರತಿಷ್ಠಾಪಿಸಿದನೆಂಬ ಉಲ್ಲೇಖವಿದೆ. ತಿಮ್ಮಣ್ಣ ಅಜಿಲನು ಸಮೀಪದ ಕಾರ್ಕಳ ಅಥವಾ ಮೂಡಬಿದ್ರೆಯ ಚೌಟ ಅರಸರ ಗುರುವಾಗಿದ್ದ ಅಲ್ಲಿಯ ಮಠದ ಚಾರುಕೀರ್ತಿಯನ್ನು ಬಿಟ್ಟು, ಘಟ್ಟದ ಮೇಲಿನ ಚಾರುಕೀರ್ತಿಯನ್ನು ಆರ್ಶರಯಿಸಲು ಕಾರಣವೇನಿರಬಹುದೆಂಬುದು ಜಿಜ್ಞಾಸೆಯ ವಿಷಯವೇ ಸರಿ.

ಕ್ರಿ.ಶ. ೧೬೦೪ರ ಶಾಸನದಲ್ಲಿ ಚಾಮುಂಡಾನ್ವಯದವನೆಂದು, ಸೋಮವಂಶದವನೆಂದು ತಿಮ್ಮಣ್ಣ ಅಜಿಲನು ಬರೆಸಿದ್ದು, ಇವನ ಮೂಲ ಪುರುಷನೊಬ್ಬನು ಚಾಮುಂಡನೆಂಬವನಿರಬಹುದು. ಆದರೆ ಈ ಹಿಂದೆ ತಿಳಿಸಿರುವಂತೆ ಅವನು ಗೋಮಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಚಾಮುಂಡನಾಗಿರಲಾರನೆಂಬ ಗೋವಿಂದ ಪೈಗಳವರ ಅಭಿಪ್ರಾಯ ಸೂಕ್ತವೆನಿಸುತ್ತದೆ. ಚಾಮುಂಡರಾಯನು ಬ್ರಹ್ಮಕ್ಷತ್ರ ಕುಲದವನೆಂದು ಆಥನ ಶ್ರವಣಬೆಳಗೊಳದಲ್ಲಿಯ ನಂ. ೨೮೧ನೇಯ ಶಾಸನದಲ್ಲಿ ತಿಳಿಯುತ್ತದೆ. ಆತನು ಚಂದ್ರವಂಶದವನೆಂದು ಅದರಲ್ಲಾಗಲಿ, ತಾನೇ ಬರೆದ ಚಾಮುಂಡರಾಯ ಪುರಾಣದಲ್ಲಾಗಲೀ ಹೇಳಿಕೊಳ್ಳಲಿಲ್ಲ[11]

ಈ ತಿಮ್ಮಣ್ಣ ಅಜಿಲನ ಕಾಲದಲ್ಲಿಯೇ ಕೆಳದಿ ವೆಂಕಟಪ್ಪ ನಾಯಕನ ತುಳುನಾಡಿನ ಮೇಲೆ ದಾಳಿ ನಡೆಸಿದ್ದು, ನಾಯಕನು ಅಜಿಲರನ್ನು ಸೇರಿದಂತೆ ಎಲ್ಲಾ ಅರಸನ್ನು ಸೋಲಿಸಿರುವುದಾಗಿ ಕವಿ ಲಿಂಗಣ್ಣ ತನ್ನ “ಕೆಳದಿ ನೃಪವಿಜಯ”ದಲ್ಲಿ ತಿಳಿಸುತ್ತಾನೆ. ಪೋರ್ತುಗೀಜರ ನೇತೃತ್ವದಲ್ಲಿ ರಚಿತವಾದ ಮೈತ್ರಿಕೂಟದಲ್ಲಿ ಅಜಿಲರು ಸೇರಿರುವುದಾಗಿ ಕ್ರಿ.ಶ. ೧೬೧೩ರ ಪೋರ್ತುಗೀಜ್ ದಾಖಲೆ ತಿಳಿಸುತ್ತದೆ. ಆದರೆ ಈ ಕೂಟವನ್ನು ಕೆಳದಿ ವೆಂಕಟಪ್ಪ ನಾಯಕನು ಸಂಪೂರ್ಣವಾಗಿ ಸೋಲಿಸಿರುವುದಾಗಿ ತಿಳಿಯುತ್ತದೆ.[12]

ತಿಮ್ಮಣ್ಣ ಅಜಿಲನ ನಂತರ ಮಧುರಕ್ಕ ದೇವಿಯು ಆಳಿರುವುದಾಗಿ ಕ್ರಿ.ಶ. ೧೬೨೨ ಶಾಸನದಿಂದ ತಿಳಿಯುತ್ತದೆ. ಇದೇ ಶಾಸನವು ಶಾಂತೀಶ್ವರ ಬಸದಿಗೆ ಇವಳು ದೇಣಿಗೆ ನೀಡಿದ ವಿಚಾರವನ್ನು ತಿಳಿಸುತ್ತದೆ. ಇದು ಸಂಕರರಸನ ಮಗ ರಾಮನಾಥರಸನೇ ಮುಂತಾದವರ ಸಮ್ಮುಖದಲ್ಲೇ ನಡೆದಿರುವುದಾಗಿ ಉಲ್ಲೇಖವಿದೆ. ಈ ರಾಮನಾಥನು ಕಳಸ – ಕಾರ್ಕಳದ ಭೈರರಸ ಕುಟುಂಬದವನಾಗಿದ್ದು, ಅವನನ್ನು ಮಧುರಕ್ಕ ದೇವಿಯು ಮದುವೆಯಾಗಿರಬೇಕೆಂದು ತಿಳಿಯಲಾಗಿದೆಯಾದರೂ ಇದಕ್ಕೆ ಸರಿಯಾದ ಆಧಾರವಿಲ್ಲ. ಮುಂದೆ ಇದೇ ರಾಣಿಯು ಕ್ರಿ.ಶ. ೧೬೪೮ರ ವರೆಗೆ ಆಡಳಿತ ನಡೆಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಕ್ರಿ.ಶ. ೧೬೨೯ರ ಪೋರ್ತುಗೀಜ್ ದಾಖಲೆಯಂತೆ ಹೇಳುವುದಾದರೆ ಇವಳ ಆಡಳಿತವು ಕ್ರಿ.ಶ. ೧೬೨೯ಕ್ಕೆ ಮೊದಲೇ ಕೊನೆಗೊಂಡಿದ್ದು, ಆ ಅವಧಿಯಲ್ಲಿ ಅಜಿಲ ಅರಸನೊಬ್ಬ ಆಳ್ವಿಕೆಯಲ್ಲಿದ್ದಿದ್ದು ಅವನು ಕೆಳದಿ ವೀರಭದ್ರ ನಾಯಕನ ವಿರುದ್ಧ ವಿಫಲ ದಂಗೆಯೊಂದನ್ನು ನಡೆಸಿ ಮುಂದೆ ಅವನು ವೀರಭದ್ರನ ಸಾರ್ವಭೌಮತ್ವವನ್ನು ಒಪ್ಪಿಕೊಂಡಿರುವುದನ್ನು ಸಮರ್ಥಿಸಲು ಆಧಾರಗಳಿವೆ. ಇತ್ತಿಚೆಗೆ ಬೆಳಕಿಗೆ ಬಂದ ಕ್ರಿ.ಶ. ೧೬೮೫ರ ಅಳದಂಗಡಿ ಶಾಸನವು ಇದನ್ನು ಸಮರ್ಥಿಸಲು ಸಹಕಾರಿಯಾಗುತ್ತದೆ.

ಇತ್ತೀಚೆಗೆ ಅಳದಂಗಡಿಯ ಪಾರ್ಶ್ವನಾಥ ಬಸದಿಯಲ್ಲಿ ದೊರೆತ ಕ್ರಿ.ಶ. ೧೬೮೫ರ ಗಣಧರ ವಲಯ ಯಂತ್ರ ಶಾಸನ ಮತ್ತು ಸೂಳಬೆಟ್ಟು ಗೋಪಾಲಕೃಷ್ಣ ದೇವಾಲಯದಲ್ಲಿ ಬೆಳಕಿಗೆ ಬಂದ ಕ್ರಿ.ಶ. ೧೭೨೦ರ ಶಾಸನ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ ಇತರ ದೃಷ್ಟಿಯಿಂದಲೂ ಇದು ತುಂಬಾ ಮಹತ್ವಪೂರ್ಣವಾದುದಾಗಿದೆ.[13] ಕ್ರಿ.ಶ. ೧೬೮೫ರ ಯಂತ್ರ ಶಾಸನದಲ್ಲಿ ಸೋಮವಂಶದ ಪಾಂಡ್ಯಪ್ಪ ಅಜಿಲರ ಸೊಸೆಯರಾದ ಶಂಕರ ದೇವಿ ಅಜಿಲ ಎಂಬುವಳು ಕ್ರಿ.ಶ. ೧೬೮೫ರ ಹೊತ್ತಿಗೆ ಅಧಿಕಾರದಲ್ಲಿದ್ದಳೆಂಬುದನ್ನು ಸೂಚಿಸುತ್ತದೆ.

ಅಳದಂಗಡಿ ಅರಮನೆ ಸಮೀಪವಿರುವ ಸುಮಾರು ೪೦೦ ವರ್ಷ ಪುರಾತನ ಪಾರ್ಶ್ವನಾಥ ಸ್ವಾಮಿ ಬಸದಿ.

ಅಳದಂಗಡಿ ಅರಮನೆ ಸಮೀಪವಿರುವ ಸುಮಾರು ೪೦೦ ವರ್ಷ ಪುರಾತನ ಪಾರ್ಶ್ವನಾಥ ಸ್ವಾಮಿ ಬಸದಿ.

ಕ್ರಿ.ಶ. ೧೭೨೦ರ ಶಾಸನದಲ್ಲಿ ಸೋಮವಂಶದ ಯೇನೂರು ಶಂಕರ ದೇವಿಯರಾದ ಅಜಿಲರು ದೇವಾಲಯಕ್ಕೆ ಬಿಟ್ಟ ಉಂಬಳಿಯ ವಿವರಗಳಿವೆ. ಈ ಎರಡೂ ಶಾಸನಗಳಲ್ಲಿ ಶಂಕರ ದೇವಿ ಎಂಬವಳ ಪ್ರಸ್ತಾಪವಿರುವುದರಿಂದ ಈ ಮಧ್ಯೆ ಅವಳು ಆಡಳಿತ ನಡೆಸಿರಬೇಕೆಂದು ತಿಳಿಯಬೇಕಾಗುತ್ತದೆ. ಆದರೆ ಈ ಅವಧಿಯಲ್ಲಿ ಪದುಮಲದೇವಿ ಎಂಬುವಳು ವೇಣೂರಿನಲ್ಲಿ ಆಡಳಿತ ಮಾಡುತ್ತಿದ್ದ ಕ್ರಿ.ಶ. ೧೭೧೦ರಲ್ಲಿ ಆಕೆ ವೇಣೂರಿನಲ್ಲಿದ್ದ ವೀರಶೈವ ಮಠದ ಚೆನ್ನವೀರ ದೇವರಿಗೆ ಉಂಬಳಿಯನ್ನು ಬಿಟ್ಟದ್ದಕ್ಕೆ ಶಾಸನವು ಇದೆ. ಆದುದರಿಂದ ಶಂಕರ ದೇವಿಗೆ ಎಲ್ಲಿಯೂ ಬೆಳಕಿಗೆ ಬರಲು ಅವಕಾಶವೇ ಸಿಕ್ಕಿರಲಿಲ್ಲ. ಅಲ್ಲದೇ ಈಗ ಇಬ್ಬರು ಶಂಕರ ದೇವಿಯರಿದ್ದರೆಂದು ತರ್ಕಿಸಬೇಕಾಗಿದೆ.

ಕ್ರಿ.ಶ. ೧೭೨೦ರ ಶಾಸನವು ಮೇಲ್ನೋಟಕ್ಕೆ ದಾನ ಶಾಸನವೆಂದು ಕಂಡು ಬಂದರೂ, ಹಿಂದೆ ತುಳುನಾಡಿನಲ್ಲಿದ್ದ ವಿಶೇಷ ಪದ್ಧತಿಗಳನ್ನು ತಿಳಿಸುತ್ತದೆ. ಕ್ರಿ.ಶ. ೧೭೨೦ರಕ್ಕಿಂತ ಮೊದಲೇ ದ.ಕ. ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಿದ್ದರೆನ್ನುವುದಕ್ಕೆ ಈ ಶಾಸನವೊಂದು ಸಾಕ್ಷಿಯಾಗಿದೆ.[14] ಈ ಶಂಕರ ದೇವಿಯ ನಂತರ ೨ನೆಯ ತಿಮ್ಮಣ್ಣ ಅಜಿಲನು ಆಡಳಿತಕ್ಕೆ ಬಂದಿರಬೇಕು.

ಮೂಡಬಿದ್ರೆಯ ಜೈನ ಮಠದಲ್ಲಿ ದೊರೆತ ಕ್ರಿ.ಶ. ೧೭೫೦ರ ತಾಮ್ರ ಶಾಸನವು ಅರಸರಾದ ತಿಮ್ಮಣ್ಣ ಅಜಿಲರು ಮೂಡಬಿದ್ರೆಯ ಚಂದ್ರನಾಥ ಸ್ವಾಮಿಯ ಸನ್ನಿಧಿಯಲ್ಲಿ ನಡೆದ ದೇವತಾ ಸೇವೆಗೆ ಮಾಡಿದ ದಾನಗಳ ಕುರಿತು ವಿವರಿಸುತ್ತದೆ. ಇದು ಈ ವರೆಗೆ ದೊರೆತ ಅಜಿಲರ ಉಲ್ಲೇಖವಿರುವ ಕೊನೆಯ ಶಾಸನವಾಗಿರುತ್ತದೆ.

ಕಾರ್ಕಳ ಮತ್ತು ಬೆಳ್ತಂಗಡಿ ತಾಲೂಕಿನ ಕೆಲವು ಪ್ರಾಂತ್ಯವನ್ನೊಳಗೊಂಡ ಅಜಿಲರ ರಾಜ್ಯವು ೧೩ ಮಾಗಣೆ ಮತ್ತು ೮೦ ಗ್ರಾಮಗಳನ್ನೊಳಗೊಂಡಿದ್ದು, ಅಜಿಲರ ರಾಜ್ಯವನ್ನು ವಶಪಡಿಸಿಕೊಂಡ ನಂತರ ಅಜಿಲರ ಆಡಳಿತವು ಕೊನೆಗೊಂಡಿರಬೇಕೆಂಬ ಕೆಲವು ಇತಿಹಾಸಕಾರರ ಅಭಿಪ್ರಾಯವು ನಿರಾಧಾರವಾಗುತ್ತದೆ. ಶಂಕರ ದೇವಿಗೆ ಸಂಬಂಧಪಟ್ಟ ಕ್ರಿ.ಶ. ೧೭೨೦ರ ಶಾಸನ ಹಾಗೂ ಕ್ರಿ.ಶ. ೧೭೫೦ರ ಮೂಡಬಿದ್ರೆಯ ಶಾಸನ ಅವರ ಆಡಳಿತವು ಅಬಾಧಿತವಾಗಿ ಮುಂದುವರೆದಿರುವುದಕ್ಕೆ ಸಾಕ್ಷಿಯಾಗಿದೆ.

ಹೈದರಾಲಿಯು ಕ್ರಿ.ಶ. ೧೭೬೩ರಲ್ಲಿ ಅಜಿಲರ ಪ್ರಾಂತ್ಯವನ್ನು ತನ್ನ ಸಾಮ್ರಾಜ್ಯಕ್ಕೆ ಸೇರ್ಪಡೆ ಮಾಡಿಕೊಳ್ಳುವುದರೊಂದಿಗೆ ಅವರ ಆಡಳಿತವು ಕೊನೆಗೊಂಡಿರುತ್ತಾದರೂ, ಮುಂದೆ ಸಾಂಪ್ರದಾಯಿಕವಾದ ಕಟ್ಟುಕಟ್ಟಳೆಯೊಂದಿಗೆ ಈ ರಾಜಮನೆತನವು ಇಂದಿಗೂ ಅಳದಂಗಡಿಯಲ್ಲಿ ಮುಂದುವರಿಯುತ್ತಿದೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ:

ದ.ಕ. ಜಿಲ್ಲೆಯು ಅನೇಕ ವೈಶಿಷ್ಟ್ಯಗಳ ತವರೂರು. ಸಾಂಸ್ಕೃತಿಕವಾಗಿ ಸಂಕೀರ್ಣತೆ ಸಾಧಿಸಿದ ಬೀಡು. ಈ ನಾಡನ್ನಾಳಿದ ಅರಸು ಮನೆತನಗಳಲ್ಲಿ ಜೈನರದ್ದೇ ಮೇಲುಗೈ. ವಿಶೇಷವಾಗಿ ಇವರ ಆಡಳಿತಕ್ಕೊಳಪಟ್ಟ ಕಾರ್ಕಳ, ಮೂಡಬಿದ್ರೆ ಮತ್ತು ವೇಣೂರು ಇಂದಿಗೂ ಕಲೆಗಳ ಬೀಡಾಗಿ ನೆಲೆ ನಿಂತಿವೆ. ಅಜಿಲರ ಆಡಳಿತಾವಧಿ ತುಳುನಾಡಿನಲ್ಲಿ ವಾಸ್ತುಶಿಲ್ಪ ಪರಾಕಷ್ಠೆಗೆ ತಲುಪಿದ ಕಾಲ. ಅದೆಷ್ಟೋ ಬಸದಿಗಳು, ದೇವಸ್ಥಾನಗಳು, ಚೈತ್ಯಾಲಗಳು ನಿರ್ಮಾಣಗೊಂಡುದುದಲ್ಲದೆ; ಗೋಮಟೇಶ್ವರನ ಮಹಾ ಮೂರ್ತಿಯನ್ನು ಪ್ರತಿಷ್ಠಾಪಿಸುವುದರೊಂದಿಗೆ ಈ ಅರಸು ಮನೆತನದ ಖ್ಯಾತಿ ಶಾಶ್ವತವಾಗಿ ನೆಲೆಗೊಂಡಿದೆ. ಕರ್ನಾಟಕದಲ್ಲಿರುವ ೪ ಗೋಮಟೇಶ್ವರನ ಮೂರ್ತಿಗಳಲ್ಲಿ ಇದು ಉನ್ನತಿಯಲ್ಲಿ ಕಿರಿಯದು. ೩೫ ಅಡಿ ಎತ್ತರದ ಈ ಮೂರ್ತಿಯನ್ನು ಶಾಲಿವಾಹನ ಶಕ ೧೫೨೬ ಅಂದರೆ ಕ್ರಿ.ಶ. ೧೬೦೪ರಲ್ಲಿ ವೇಣುರಿನ ಅಜಿಲ ಮನೆತನದ ಖ್ಯಾತ ದೊರೆ ತಿಮ್ಮಣ್ಣ ಅಜಿಲನು ಪ್ರತಿಷ್ಠಾಪಿಸಿದ್ದುದಾಗಿ ಮೂರ್ತಿಯ ಪಕ್ಕದಲ್ಲಿರುವ ಶಾಸನದಿಂದ ತಿಳಿಯುತ್ತದೆ. ಹೆಚ್ಚು ಕಡಿಮೆ ಕಾರ್ಕಳದ ಮೂರ್ತಿಯನ್ನು ಹೋಲುವ ಇದು, ಇತರ ಮೂರ್ತಿಗಳಂತೆ ಬೆಟ್ಟದ ಮೇಲಿರದೆ ಸಮತಟ್ಟಾದ ದಿಣ್ಣೆಯಲ್ಲಿರುವುದು ಇದರ ಭದ್ರತೆಗೊಂದು ಕೊರತೆ.

ಪಾಡ್ಡನಗಳಲ್ಲಿ ಅಥವಾ ಕೈಫಿಯತ್ತ್‌ನಲ್ಲಿ ಹೇಳುವಂತೆ ಬೀರು ಕಲ್ಕುಡನ ಮಗ ಶಂಭು ಕಲ್ಕುಡನೇ ಕಾರ್ಕಳ ಮತ್ತು ವೆನುರಿನಲ್ಲಿಯೂ ಮೂರ್ತಿಗಳನ್ನು ಕೆತ್ತಿರುವನೆಂಬ ವಿಚಾರ ಸತ್ಯಕ್ಕೆ ದೂರವಾದುದು. ಶ್ರವಣಬೆಳಗೊಳದ ಗೋಮಟನ ಸ್ಥಾಪನೆ ಕ್ರಿ.ಶ. ೯೮೧ರಲ್ಲಿ – ಕಾರ್ಕಳದ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ೧೪೩೨ರಲ್ಲಿ ಮತ್ತು ವೇಣೂರಿನಲ್ಲಿ ೧೬೦೪ರಲ್ಲಿ ಎಂದಿರುವಾಗ ಕಾಲಗಳ ಮಧ್ಯೆ ಬಹಳಷ್ಟು ಅಂತರ ಕಂಡು ಬರುತ್ತದೆ. ಇದರಿಂದಾಗಿ ಶಂಭು ಕಲ್ಕುಡ ಬೆಳಗೊಳದ ಗೊಮ್ಮಟನನ್ನು ಕೆತ್ತಿದ ೪೫೧ ವರ್ಷಗಳ ಬಳಿಕ ಆತನ ಮಗ ಬೀರು ಕಲ್ಕುಡ ಕಾರ್ಕಳದ ವಿಗ್ರಹವನ್ನು ಕೆತ್ತಿ ದಾತನೆ, ೧೭೨ ವರ್ಷಗಳ ಬಳಿಕ ವೇಣುರಿನಲ್ಲಿ ಕೆತ್ತಿದ ವಿಚಾರ ನಂಬಲರ್ಹವಲ್ಲ. ತಿಮ್ಮಣ್ಣ ಅಜಿಲನು ಕಾರ್ಕಳದ ಗೋಮಟೇಶ್ವರನ ಮೂರ್ತಿಯನ್ನು ಮಾಡಿದ ಶಿಲ್ಪಿ ಮಾರ್ನಾಡಿನ ಶಂಭು ಕಲ್ಕುಡನ ಕುಟುಂಬದವನೊಬ್ಬನನ್ನು ಕರೆಯಿಸಿ, ವೇಣೂರಿ ನಲ್ಲಿಯೂ ಮೂರ್ತಿಯೊಂದನ್ನು ತಯಾರಿಸುವಂತೆ ಹೇಳಿ ಪ್ರತಿಷ್ಠೆಗೆ ಸಿದ್ಧಪಡಿಸಿದ… ಎಂದು ಐಗಳು ತಮ್ಮ ದ.ಕ. ಪ್ರಾಚೀನ ಇತಿಹಾಸದಲ್ಲಿ ತಿಳಿಸುತ್ತಾರೆ. ಇಲ್ಲಿ ಶಂಭು ಕಲ್ಕುಡನ ಕುಟುಂಬದವನೊಬ್ಬನಿಂದ ಎಂದಿರುವುದು ಸೂಕ್ತವೆನಿಸುತ್ತದೆ.

ಆ ಹೊತ್ತಿಗೆ ತುಳುನಾಡು ಶಿಲ್ಪಕಲೆಗೆ ಪ್ರಸಿದ್ಧಿಯನ್ನು ಪಡೆದು ಅದಕ್ಕೆ ಪ್ರೋತ್ಸಾಹವಿದ್ದು, ಶಿಲ್ಪಿಗಳಿಗೆ ಮಾನ – ಸಮ್ಮಾನ ಸಲ್ಲುತ್ತಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಬೀರು ಕಲ್ಕುಡನ ಪಾಡ್ಡನದ ಸಾಲುಳನ್ನು ಆಧಾರವಾಗಿ ನೀಡಬಹುದು.[15] “ನಾನು ಹೋಗುತ್ತೇನೆ ನಾನಿದ್ದ ರಾಜ್ಯಕ್ಕೆ, ನನಗಾಗುವ ಉಡುಗೊರೆ ಕೊಡಿ ಎಂದರು, ಮೈ ತುಂಬ ವಸ್ತ್ರ, ಕೈಗೆ ಬಳೆ, ಮುಂಗೈಗೆ ಸರಪಳಿ, ಸಾವಿರ ವರಹ ಕೊಟ್ಟರು, ಕುಳಿತುಕೊಳ್ಳಲು ಬಿಳಿಯ ಕುದುರೆ ಕೊಟ್ಟರು, ಹಿಡಿಯಲು ಪಂಚದೀವಟಿಗೆ ಕೊಟ್ಟರು… ನಾನು ಹೋಗುತ್ತೀನೆ ಅರಸ…” ಬೀರು ಕಲ್ಕುಡನ ತಂದೆ ಬೆಳ್ಗೊಳದ ಗೊಮ್ಮಟನನ್ನು ಕೆತ್ತಿದ್ದಕ್ಕಾಗಿ ಅರಸ ಈ ರೀತಿ ಸನ್ಮಾನಿಸಿದುದನ್ನು ಪಾಡ್ಡನಗಳಲ್ಲಿ ಹೇಳಲಾಗುತ್ತದೆ. ಇಲ್ಲಿ ಉತ್ಪ್ರೇಕ್ಷೆ ಇರಬಹುದಾದರೂ ಆ ಕಾಲದಲ್ಲಿ ಶಿಲ್ಪ ವೃತ್ತಿಯನ್ನಾರಿಸಿದ ವಿಶ್ವಕರ್ಮ ಸಮಾಜದ ಉನ್ನತ ಜೀವನ ಮಟ್ಟದ ಚಿತ್ರಣವನ್ನು ಪಾಡ್ಡನಗಳಲ್ಲಿ ಕಾಣಬಹುದು.

ಗೋಮಟ ಮೂರ್ತಿಯ ಎಡಭಾಗದ ಅಕ್ಕಪಕ್ಕದಲ್ಲಿ ಅಕ್ಕಂಗಳ ಬಸದಿ ಮತ್ತು ಬಿನ್ನಾಣಿ ಬಸದಿ ಇದೆ. ಪಾಂಡ್ಯಕ್ಕದೇವಿ ಮತ್ತು ಮಲ್ಲಿದೆವಿ ಎಂಬ ತಿಮ್ಮಣ್ಣ ಅಜಿಲನ ಹಿರಿಯ ರಾಣಿಯರು, ಎಡಭಾಗದಲ್ಲಿ ಚಂದ್ರನಾಥಸ್ವಾಮಿ ಬಸದಿಯನ್ನು, ಬಲಬದಿಯಲ್ಲಿ ಕಿರಿಯರಾಣಿ ಭಿನ್ನಾಣಿ ಎಂಬುವಳು ಶಾಂತಿನಾಥ ಬಸದಿಯನ್ನು ಕಟ್ಟಿಸಿದಳು. ಈ ಎರಡೂ ಬಸದಿಗಳು ಕ್ರಿ.ಶ. ೧೬೦೪ರಲ್ಲಿ ನಿರ್ಮಾಣಗೊಂಡವುಗಳೆಂದು ಅಲ್ಲಿಯ ಶಾಸನದಿಂದ ತಿಳಿಯುತ್ತದೆ.

ಮನಮೋಹಕ ಕೆತ್ತನೆಯನ್ನೊಳಗೊಂಡ ಆಕರ್ಷಣೀಯವಾದ ಮಾನಸ್ತಂಭ ಒಂದು ಪಾರ್ಶ್ವನೋಟ.

ಮನಮೋಹಕ ಕೆತ್ತನೆಯನ್ನೊಳಗೊಂಡ ಆಕರ್ಷಣೀಯವಾದ ಮಾನಸ್ತಂಭ ಒಂದು ಪಾರ್ಶ್ವನೋಟ.

ಶಾಂತೀಶ್ವರ ಬಸದಿ ಮತ್ತು ಕಲ್ಲ ಬಸದಿ ಎಂದು ಕರೆಯಲ್ಪಡುವ ಈ ಬಸದಿ ಎಲ್ಲಾ ಬಸದಿಗಳಿಗಿಂತ ದೊಡ್ಡದು. ಇದನ್ನು ಪೂರ್ತಿ ಕಗ್ಗಲ್ಲಿನಿಂದ ಕಟ್ಟಿದುದರಿಂದ, ಇದಕ್ಕೆ ಈ ಹೆಸರು ಬಂದಿರಬೇಕು. ಇಲ್ಲಿ ೧೬ನೆಯ ತೀರ್ಥಂಕರ ಶಾಂತಿನಾಥ ಸ್ವಾಮಿಯ ಮೂಲವಿಗ್ರಹವಿರುವುದರಿಂದ ಇದಕ್ಕೆ ಶಾಂತೀಶ್ವರ ಬಸದಿ ಎಂದು ಹೇಳುತ್ತಾರೆ. ಮಧುರಕ್ಕ ದೇವಿಯ ಶಾಸನದಲ್ಲಿ ಹೇಳಿರುವ ಶಾಂತೀಶ್ವರ ಸ್ವಾಮಿ ಚೈತ್ಯಾಲಯವೆಂದರೆ ಇದೇ. ಇಲ್ಲಿರುವ ಮಾನಸ್ತಂಭವು ಬಹಳ ಸುಂದರವಾದುದಾಗಿದೆ. ಇಲ್ಲಿಯ ಕ್ರಿ.ಶ. ೧೪೮೯ರ ಶಾಸನದಿಂದ ಇದರ ನಿರ್ಮಾನದ ಕಾಲ ಮತ್ತು ಈ ವೇಣೂರು ಸೀಮೆಗೆ ಪೂಂಜಳಿಕೆಯ ರಾಜ್ಯ ಎಂಬ ಹೆಸರಿರುವುದೆಂದು ಉಲ್ಲೇಖವಿದೆ.

ವೇಣೂರಿಗೆ ಎಂಟು ಬಸದಿ ಎಂಬ ಮಾತುಂಟು. ಆದರೆ[16] ಇಲ್ಲಿ ಅಕ್ಕಂಗಳ ಬಸದಿ, ಬಿನ್ನಾಣಿ ಬಸದಿ, ಎಂಬ ೬ ಬಸದಿ, ಆದಿನಾಥ ಬಸದಿ, ತೀರ್ಥಂಕರರ ಬಸದಿ, ಪಾಶ್ವನಾಥ ಬಸದಿ ಎಂಬ ೬ ಬಸದಿಗಳು ಮಾತ್ರವೇ ಇವೆ. ಬಹುಶಃ ಶಾಂತಿನಾಥ ಬಸದಿಯ ೨ನೇ ಅಂತಸ್ತಿನಲ್ಲಿ ವರ್ಧಮಾನ ಸ್ವಾಮಿಯ ಪಂಚಲೋಹದ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. “ಮೇಗಿನ ನೆಲೆ ವರ್ಧಮಾನ ಬಸದಿ ಎಂದು ಅದಕ್ಕೆ ಸ್ಥಾನ ಕೊಟ್ಟು, ಗೊಮ್ಮಟ ಮೂರ್ತಿಯನ್ನು ಬಯಲು ಬಸದಿ ಎಂದು ಲೆಕ್ಕ ಹಾಕಿ, ಎಂಟು ಬಸದಿಗಳೆಂದಿರಬೇಕು.”

ಧರ್ಮ ಸಹಿಷ್ಣುಗಳಾದ ಅಜಿಲರ ಇಂದಿನ ಆಕರ್ಷಣೆಯ ಕೇಂದ್ರಗಳಲ್ಲಿ ಅವರ ಕುಲದೇವತೆಯಾದ ಮಹಾಲಿಂಗೇಶ್ವರ ದೇವಸ್ಥಾನವೂ ಒಂದು, ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವವೆನಿಸದಿದ್ದರೂ ಅದು ತುಂಬಾ ಪ್ರಾಚೀನವಾದುದಾಗಿದೆ. ಗರ್ಭಗುಡಿಯ ಒಂದು ಕಲ್ಲಲ್ಲಿ ಕನ್ನಡ ಭಾಷೆಯ ಶಾಸನವೊಂದಿದ್ದು, ಯಾರದೆಂದು ತಿಳಿಯುವುದಿಲ್ಲ. ಶಾಲಿವಾಹನ ಶಕ ೮೯೦ನೆಯ ಪ್ರಭಾವ ಸಂವತ್ಸರದ ಎಂಬುದಷ್ಟು ತೋರುವುದಂತೆ.

ಅಜಿಲರು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದರೆಂಬುದಕ್ಕೆ ಪದುಮಲ ದೇವಿಯು ಕ್ರಿ.ಶ. ೧೭೧೦ರಲ್ಲಿ ವೇಣೂರಿನಲ್ಲಿದ್ದ ವೀರಶೈವ ಮಠದ ಚೆನ್ನವೀರ ದೇವರಿಗೆ ಉಂಬಳಿಯನ್ನು ಬಿಟ್ಟ ಶಾಸನವು ಆಧಾರವಾಗುತ್ತದೆ.

ಅಳದಂಗಡಿ:

ಇಂದಿನ ಅರಮನೆಗೆ ಅನತಿ ದೂರದಲ್ಲಿರುವ ಪಾಶ್ವನಾಥ ಬಸದಿ ಅಳದಂಗಡಿಯ ಒಂದು ಮಹತ್ವದ ಸ್ಮಾರಕ. ಬಸದಿಯ ಪ್ರಾಂಗಣದಲ್ಲಿರುವ ಶಿಲಾಶಾಸನವು ಈ ರಚನೆಯ ಪ್ರಾಚೀನತೆಯನ್ನು ಅರಿಯಲು ಸಹಕಾರಿಯಾಗಿದೆ. ಇದರ ಆಧಾರದಂತೆ ಇದು ಸುಮಾರು ಕ್ರಿ.ಶ. ೧೫ನೆಯ ಶತಮಾನದ ಕೊನೆಯಲ್ಲಿ ನಿರ್ಮಾಣಗೊಂಡಿರಬಹುದೆಂದು ಡಾ| ಪುಂಡಿಕಾ ಗಣಪಯ್ಯ ಭಟ್ಟರು ಅಭಿಪ್ರಾಯಪಡುತ್ತಾರೆ. ಗರ್ಭಗೃಹ, ನವರಂಗ, ಮುಖ ಮಂಟಪಗಳನ್ನು ಹೊಂದಿರುವ ಈ ಸರಳ ವಾಸ್ತು ರಚನೆಯು ವಿಜಯನಗರ ಶೈಲಿಯಲ್ಲಿದ್ದು, ಗರ್ಭಗೃಹದಲ್ಲಿರುವ ಸುಮಾರು ೪ ಅಡಿ ಎತ್ತರದ ಪಾರ್ಶ್ವನಾಥ ಸ್ವಾಮಿ ವಿಗ್ರಹ, ಕರಿಕಲ್ಲಿನ ಶಿಲ್ಪ ಅಲ್ಲದೆ, ಈ ಬಸದಿಯಲ್ಲಿರುವ ತೀರ್ಥಂಕರರ ಪಂಚಲೋಓಹದ ವಿಗ್ರಹಗಳು ಅಧ್ಯಯನ ಯೋಗ್ಯವಾದುವುಗಳು.

ಬರಾಯದ ಅರಮನೆಯ ಕಂಬಗಳಲ್ಲಿ ಕಾಣುವ ಕಾಷ್ಠಶಿಲ್ಪದ ಒಂದು ಅತ್ಯಾಕರ್ಷಕ ನೋಟ.

ಬರಾಯದ ಅರಮನೆಯ ಕಂಬಗಳಲ್ಲಿ ಕಾಣುವ ಕಾಷ್ಠಶಿಲ್ಪದ ಒಂದು ಅತ್ಯಾಕರ್ಷಕ ನೋಟ.

ಈಗ ಪಿತೃಕಾರ್ಯ, ದೈವಕಾರ್ಯಗಳಿಗೆ ಸೀಮಿತವಾಗಿರುವ ಸುಮಾರು ೬೦೦ ವರ್ಷಗಳಷ್ಟು ಹಳೆಯ ಬರಾಯದ ಅರಮನೆ.

ಈಗ ಪಿತೃಕಾರ್ಯ, ದೈವಕಾರ್ಯಗಳಿಗೆ ಸೀಮಿತವಾಗಿರುವ ಸುಮಾರು ೬೦೦ ವರ್ಷಗಳಷ್ಟು ಹಳೆಯ ಬರಾಯದ ಅರಮನೆ.

ಅಳದಂಗಡಿಯಿಂದ ಸುಮಾರು ೩ ಕಿ.ಮೀ. ದೂರದಲ್ಲಿರುವ ಬರಾಯ ಅರಮನೆ ಒಂದು ಅಧ್ಯಯನ ಯೋಗ್ಯ ಸ್ಮಾರಕ. ಇಲ್ಲಿ ಭಾರಿ ಗಾತ್ರದ ಮರದ ಕಂಬಗಳ ಮತ್ತು ಚಾವಡಿಯ ಮುಚ್ಚಿಗೆಯಲ್ಲಿರುವ ಕೆತ್ತನೆಯ ಕೆಲಸ ಪ್ರೇಕ್ಷಣೀಯವಾಗಿದೆ. ವಾದ್ಯಗಾರ್ತಿಯರ ಮೇಳ, ೪ ಆನೆಗಳನ್ನು ಹೊತ್ತು ಹಾರುತ್ತಿರುವ ಗಂಡಭೇರುಂಡ ಪಕ್ಷಿ, ಗಜಲಕ್ಷ್ಮಿ, ಆಂಜನೇಯ ಮುಂತಾದ ಚಿತ್ರಗಳ ಸುಂದರ ಕೆತ್ತನೆಗಳಿವೆ. ಶಿಥಿಲ ಗೊಂಡಿರುವ ಅರಮನೆಯನ್ನು ದುರಸ್ತಿಗೊಳಿಸಿ, ಸಂರಕ್ಷಿಸಿ ಉಳಿಸಿಕೊಳ್ಳುವುದರ ಅಗತ್ಯವಿದೆ.

ಇಂದಿನ ಅಳದಂಗಡಿ:

ಅಳದಂಗಡಿಯ ಈಗಿನ ಅರಮನೆಗೆ ೯೪ ವರ್ಷ. ಹಿಂದಿನ ಪಾರಂಪರಿಕ ವಿಧಿವಿಧಾನಗಳೊಂದಿಗೆ ಇಂದೂ ಅರಸು ಮನೆತನ ಮುಂದುವರಿಯುತ್ತಿದೆ. ಈಗಿನ ಡಾ| ಪದ್ಮ ಪ್ರಸಾದ ಅಜಿಲ ಅರಸು ಪರಂಪರೆಯಲ್ಲಿ ೨೪ನೆಯವರು ಎನ್ನಲಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ೧೯೯೫ರಲ್ಲಿ ತಂದೆ ಪಾಂಡ್ಯಪ್ಪ ಅರಸ ಕೃಷ್ಣರಾಜ ಅಜಿಲರ ನಿಧನದ ನಂತರ ಪಟ್ಟಕ್ಕೆ ಬಂದವರು. ಪ್ರಜಾಕೋಟಿಯ ಗೌರವಾದರಕ್ಕೆ ಪಾತ್ರರಾದ ಅಜಿಲ ಮನೆತನ ಪಾರಂಪರಿಕ ಕೊಂಡಿಯನ್ನು ಕಿತ್ತೊಗೆಯದೆ ಈಗಲೂ ಪಟ್ಟಾಭಿಷೇಕದಂತಹ ಆಚರಣೆಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಈ ರಾಜ ಮನೆತನದ ಸೋಜಿಗ.

ಭೂತಕಾಲದ ವೈಭವಕ್ಕೆ ಸಾಕ್ಷಿಯಾಗಿ ಗತಿಸಿದ ದಿನಗಳನ್ನು ಮೆಲುಕು ಹಾಕುತ್ತಾ, ರಾಜ್ಯಾಡಳಿತ ಕಾಲದ ಸಾಂಸ್ಕೃತಿಕ, ಸಾಂಪ್ರದಾಯಿಕ ವಿಧಿವಿಧಾನಗಳಿಗೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋಗುತ್ತಿರುವುದೇ ವರ್ತಮಾನದ ವಿಶೇಷ. ಅರಸು ಪಟ್ಟವೇರುವುದರೊಂದಿಗೆ, ಪಟ್ಟಿ ಪಡೆದ ಗುರಿಕಾರರ ಹೊಸಬಗೆಯ ಹುರುಪು, ಗತಿಸಿ ಅರಸನ ಅಂತ್ಯಕ್ರಿಯೆಯ ವಿಧಿವಿಧಾನಗಳು, ಅರಸು ಕಂಬಳದ ಮೋಜು, ‘ಕೋರಿಗುಂಟ’ದ ಸಂಭ್ರಮ, ನವರಾತ್ರಿ, ದೀಪಾವಳಿಗಳಂತಹ ಹಬ್ಬ ಹರಿದಿನಗಳು ವರ್ಗ, ವರ್ಣಭೇದವಿಲ್ಲದೆ ನಡೆದ ಆಚರಣೆಗಳು ಇಂದಿನ ಪೀಳಿಗೆಗೆ ಮೋಜು ಮುಜುಗರವನ್ನುಂಟುಮಾಡಿದರೆ ಒಂದು ಕಾಲದಲ್ಲಿ ಭಯ ಭಕ್ತಿಯಿಂದ ನಡೆಸಲ್ಪಟ್ಟವುಗಳು. ಬ್ರಿಟಿಷ್ ಆಳ್ವಿಕೆಯಲ್ಲಿ ರಾಜಧನ ರದ್ಧಾಗಿ, ಪ್ರಜಾ ರಕ್ಷಣೆಯಿಂದ ಸ್ವರಕ್ಷಣೆಯ ಚಿಂತೆ ಹೆಚ್ಚಾಗಿ, ಉಳಿವಿಗಾಗಿ ಜನಸಾಮಾನ್ಯರಂತೆ ಸ್ಪರ್ಧಾಕಣಕ್ಕಿಲಿದ ಇವರ ಸ್ಥಿತಿ ತುಳುನಾಡಿನ ಇತರ ರಾಜಮನೆತನದವರಿಗಿಂತ ಭಿನ್ನವಾಗಿಲ್ಲ. ಆದರೆ ಸಾಂಸ್ಕೃತಿಕ ಕಲಾ ವೈಭವದ ಪ್ರತೀಕವಾಗಿ ಉತ್ಕೃಷ್ಟ ಶಾಶ್ವತ ಕೊಡುಗೆಗಳನ್ನು ನೀಡಿದ ತುಳುನಾಡಿನ ಅರಸು ಮನೆತನಗಳಲ್ಲಿ ವೇಣೂರಿನ ಅಜಿಲರಿಗೆ ಅಗ್ರಸ್ಥಾನವಿದೆ.

ಅಜಿಲರ ವಂಶಕ್ಕೆ ಸಂಬಂಧಪಟ್ಟ ಲಭ್ಯವಿರುವ ವಿವಿಧ ಶಾಸನಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಪರಿಷ್ಕೃತ ವಂಶಾವಳಿ.

33_264_TKAM-KUH

 

ಪ್ರೊ| ತುಕಾರಾಂ ಪೂಜಾರಿ*

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಗೋವಿಂದ ಪೈ ಸಂಶೋಧನ ಸಂಪುಟ – (ಸಂ) ಹೆರಂಜೆ ಕೃಷ್ಣ ಭಟ್ಟ, ಮುರಳೀಧರ ಉಪಾಧ್ಯ, ಹಿರಿಯಡಕ.

(ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ – ೧೯೫೫, ಪು. ೬೮೬)

[2] ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು – (ಸಂ.) ಕೆ. ಕುಶಾಲಪ್ಪಗೌಡ, ಕೆ.ಚಿನ್ನಪ್ಪಗೌಡ.

(ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕಾಶನ ೧೯೮೩, ಪು. ೧೦)

[3] ಗೋವಿಂದ ಪೈ ಸಂಶೋಧನ ಸಂಪುಟ.

[4] Studies in Tuluva History and Culture – Gururaja Bhatt P. (Udupi, 1975, P.No. 93 – 94 – 95).

[5] ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ – ಗಣಪತಿ ರಾವ್ ಐಗಳ್ (೧೯೨೩ – ಪು. ೩೧೪ – ೩೧೫).

[6] ವೇಣೂರಿನ ಗತವೈಭವ – ಲೋಕನಾಥ ಶಾಸ್ತ್ರಿ (೧೯೫೬ – ಪು.೧೫).

[7] Jainism on the Kanara Coast – P.N. Narasimha Murthy.

[8] Studies in Tuluva History and Culture – P. Gururaja Bhatt.

[9] Indian History and Epigraphy – ALadangadi Inscription of Ramadevi Ed. KVR, SPT, MJS, 1990 – Y.Umanath Shenoy, ಪು. ೬೩.

[10] A History of South Karana – Ramesh K.V., Karnataka University 1970, ಪು.೨೧೦.

[11] ಗೋವಿಂದ ಪೈ ಸಂಶೋಧನ ಸಂಪುಟ.

[12] A Political History of Kanara – Vasantha Madhava – K.G., ಪು ೨೧೦.

[13] ತೌಳವ – ಪುಂಡಿಕೈ ಗಣಪಯ್ಯ ಭಟ್‌(೧೯೯೭), ಪು.೯೨ – ೯.

[14] Journal of Mythic society, Vol. LXXXVIII and Issue No.3, july – Sept. 1997 – Gopalkrishna Temple Copper Plate Inscription of Sankaradevi Ajila – Y.Umanath Shenoy, P.No. 43 – 44.

[15] ಕಲ್ಕುಡ – ಕಲ್ಲುರ್ಟಿ – ಪಾಲ್ತಾಡಿ ರಾಮಕೃಷ್ಣ ಆಚಾರ್ – ೧೯೯೮, ಪುಟ. ೩೪ – ೩೯.

[16] ದಕ್ಷಿಣದ ಸಿರಿನಾಡು – ಕೆ. ಅನಂತರಾಮು ೧೯೭೭, ಪು. ೬೮೪ – ೬೮೫.

* ಪ್ರವಾಚಕರು, ಇತಿಹಾಸ ವಿಭಾಗ, ಎಸ್.ವಿ.ಎಸ್. ಕಾಲೇಜು, ಬಂಟ್ವಾಳ – ೫೭೪೨೧೧ (ದ.ಕ.)