ಕಾರ್ಕಳದ ಭೈರರಸ ಒಡೆಯರ ಇತಿಹಾಸವನ್ನು ತಿಳಿಯಲು ನಮಗೆ ದೊರಕುವ ಮುಖ್ಯ ಆಧಾರ ಸಾಮಗ್ರಿಗಳು – ಶಾಸನಗಳು, ಕೈಫಿಯತ್ತು ಮತ್ತು ಪಾಡ್ದನಗಳು. ಶಾಸನಗಳು ಮತ್ತು ಕೈಫಿಯತ್ತು ಲಿಖಿತ ಆಧಾರಗಳಾದರೆ ಪಾಡ್ದನಗಳು ಅಲಿಖಿತ ಆಧಾರಗಳು. ಇವುಗಳಲ್ಲಿ ಶಾಸನಗಳನ್ನು ಮುಖ್ಯ ಆಧಾರಗಳೆಂದು ಪರಿಗಣಿಸಬೇಕಾಗುತ್ತದೆ. ಕೈಫಿಯತ್ತುಗಳಲ್ಲಿ ‘ಕಾರ್ಕಳದ ಅರಸರ ಕೈಫಿಯತ್ತು’ ಎಂಬುದು ಭೈರರಸರಿಗೆ ಸಂಬಂಧಿಸಿದ್ದು. ಇದು ಹತ್ತೊಂಬತ್ತನೆಯ ಶತಮಾನದ ಆದಿಕಾಲದ ರಚನೆಯಾಗಿದೆ. ಪಾಡ್ದನಗಳಲ್ಲಿ ಇತಿಹಾಸದ ಕೆಲವಂಶಗಳು ಮಾತ್ರ ಉಕ್ತವಾಗಿದ್ದು ಹೆಚ್ಚಿನ ವಿವರಗಳು ದೊರಕುವುದಿಲ್ಲ; ಕೆಲವು ಐತಿಹ್ಯಗಳು ದೊರಕುತ್ತವೆ.

ಇತಿಹಾಸಕಾರರು ಶಾಸನಗಳನ್ನು ಮುಖ್ಯ ಆಧಾರವಾಗಿಸಿ ಕೈಫಿಯತ್ತುಗಳನ್ನೂ ಉಪಯೋಗಿಸಿ ಇತಿಹಾಸ ನಿರೂಪಣೆ ಮಾಡಿದ್ದು ಅವರ ಬರವಣಿಗೆಗಳಲ್ಲಿ ಭೈರರಸರಿಗೆ ಸಂಬಂಧಿಸಿದಂತೆ ಈ ಕೆಳಗಿನವು ಬಹಳ ಮುಖ್ಯವಾಗಿವೆ:

೧. ಗಣಪತಿರಾವ್ ಐಗಳ್ ಅವರ “ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ” (೧೯೨೩) ಎಂಬ ಗ್ರಂಥದ ‘ಕಾರ್ಕಳ ಭೈರರಸ ಒಡೆಯರು’ ಎಂಬ ಭಾಗ.

೨. ಡಾ| ಕೆ.ವಿ. ರಮೇಶ್ ಅವರ “A History of South Kanara” (1970) ಗ್ರಂಥದಲ್ಲಿ ಕೆಲವು ಭಾಗಗಳು.

೩. ಡಾ| ಪಿ. ಗುರುರಾಜ ಭಟ್ಟರ “Studies in Tuluva History and Culture” (1975) ಎಂಬ ಗ್ರಂಥದ “Feudatory States of Tulunadu” ಎಂಬ ಪ್ರಕರಣದ “Bhairarasa Odeyas of Karkala” ಎಂಬ ಭಾಗ.

೪. ಡಾ| ಸೂರ್ಯನಾಥ ಕಾಮತ್ ಅವರ ಅಪ್ರಕಟಿತ ಪಿಎಚ್.ಡಿ. ನಿಬಂಧ “Tuluva in Vijayanagara Times” (1965) ಎಂಬ ಗ್ರಂಥದಲ್ಲಿ ಭೈರರಸರಿಗೆ ಸಂಬಂಧಿಸಿದ ಭಾಗ.

೫. “ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ” (೧೯೮೫) ಎಂಬ ಗ್ರಂಥದಲ್ಲಿ ಡಾ| ಪಿ. ಎನ್. ನರಸಿಂಹಮೂರ್ತಿಗಳ ‘ಇತಿಹಾಸ ಕಲೆ ಮತ್ತು ಸಂಸ್ಕೃತಿ’ ಎಂಬ ಬರಹ.

ಭೈರರಸರ ಚರಿತ್ರೆಯನ್ನು ಇಂದು ನಿರೂಪಿಸಲು ಈ ಬರಹಗಳೇ ಮುಖ್ಯ ಆಧಾರಗಳಾಗಿವೆ. ಪ್ರಸ್ತುತ ಬರಹದಲ್ಲಿ ಡಾ| ಸೂರ್ಯನಾಥ ಕಾಮತ್ ಅವರ ಕೃತಿಯನ್ನು ಹೊರತು ಉಳಿದವುಗಳನ್ನು ಪರಾಮರ್ಶಿಸಲಾಗಿದೆ. ಈ ಬರಹಗಳಲ್ಲಿ ನೀಡಲಾದ ವಂಶವಿವರಗಳು, ಕಾಲವಿವರಗಳು ಮೊದಲಾದವುಗಳಲ್ಲಿ ಅಷ್ಟಿಷ್ಟು ವ್ಯತ್ಯಾಸಗಳಿವೆ. ಆದರೂ ಶಾಸನಾಧಾರಗಳಿಂದ ನಿರೂಪಿಸಿದ ಮುಖ್ಯ ವಿಷಯಗಳಲ್ಲಿ ಏಕಾಭಿಪ್ರಾಯವನ್ನು ಕಾಣಬಹುದು. ಈ ಎಲ್ಲ ಬರವಣಿಗೆಗಳನ್ನು ಸಾಧ್ಯವಾದಷ್ಟು ಸಮನ್ವಯಗೊಳಿಸಿ ಪ್ರಸ್ತುತ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ. ಶಾಸನಪಾಠಗಳ ಮೂಲಗಳನ್ನು ಪರಿಶೀಲಿಸಲಾಗಿಲ್ಲ. ಕಾರ್ಕಳಕ್ಕೆ ಸಂಬಂಧಿಸಿದ ಇನ್ನೂ ಹಲವು ಶಾಸನಗಳನ್ನು ಓದಲಾಗಿದ್ದರೂ ಅವು ಅಪ್ರಕಟಿತವಾಗಿಯೇ ಇವೆ.

ಭೈರರಸ ಒಡೆಯರ ಆಳ್ವಿಕೆಯ ಪ್ರದೇಶವನ್ನು ‘ಕಳಸ – ಕಾರ್ಕಳ ರಾಜ್ಯ’ವೆಂದು ಉಲ್ಲೇಖಿಸಲಾಗಿದೆ. ಘಟ್ಟದ ಮೇಲಿನ ಕಳಸ ಸೀಮೆ ಮತ್ತು ಘಟ್ಟದ ಕೆಳಗಿನ ಕಾರ್ಕಳ ಸೀಮೆ ಈ ವಂಶದವರ ಆಡಳಿತಕ್ಕೊಳಪಟ್ಟ ಪ್ರದೇಶವಾಗಿತ್ತು.

[1]

ಭೈರರಸ ಎಂಬುದು ಭೈರವ ಎಂಬುದರ ರೂಪಾಂತರವಾದ ಭೈರ ಎಂಬುದಕ್ಕೆ ಅರಸ ಎಂಬುದು ಸೇರಿ ಆದ ರೂಪವೆಂದು ಒಂದು ಸಾಮಾನ್ಯ ಅಭಿಪ್ರಾಯವಾದರೆ, ದಕ್ಷಿಣದ ಜನತೆಯಲ್ಲಿ ಅಂಕಿತನಾಮವಾಗಿ ಬರುವ ಬಯ್ಯ ಅಥವಾ ಬಯ್ಯು ಎಂಬುದಕ್ಕೆ ಅರಸ ಎಂಬುದು ಸೇರಿ ಆದ ರೂಪವೆಂದು ಡಾ|ಗುರುರಾಜ ಭಟ್ಟರ ಊಹೆ. [2] ಈ ವಿಷಯದಲ್ಲಿ ಹೆಚ್ಚು ಹೇಳಬಹುದಾದುದಿಲ್ಲ. [3] ಪಾಡ್ದನಗಳಲ್ಲಿ ಕಾರ್ಕಳದ ರಾಜರನ್ನು ಭೈರಸೂಡ, ಭೈರಸೂಡವ ಎನ್ನಲಾಗಿದ್ದು ಇದು ‘ಭೈರರಸವೊಡೆಯ’ ಎಂಬುದರ ರೂಪಾಂತರವಾಗಿರಬಹುದೆಂದು ಊಹಿಸಬಹುದಾಗಿದೆ. [4]

ಭೈರರಸರು ಹೊಂಬುಚ್ಚ (ಪೊಂಬುಚ್ಚ)ದ ‘ಶಾಂತರ’ ರಾಜವಂಶಕ್ಕೆ ಸೇರಿದವರು. ಶಾಂತರ ವಂಶದ ಸ್ಥಾಪಕನಾದ ಜಿನದತ್ತನು ಪೊಂಬುಚ್ಚದ ಒಡೆಯನಾಗಿ ಕಳಸವನ್ನು ಗೆದ್ದು ಅನಂತರ ಘಟ್ಟದ ಕೆಳಗಿನ ಕಾರ್ಕಳವನ್ನು ಗೆದ್ದಿರಬೇಕೆಂದು ಲೂಯಿರೈಸ್ ಅವರು ಅಭಿಪ್ರಾಯಪಡುತ್ತಾರೆ. ಇದು ಸಂಶಯಾಸ್ಪದವಾದ ವಿಷಯ ವಾದರೂ, ಹಟ್ಟಿಯಂಗಡಿಯ ಒಂದು ಶಾಸನವು ಅಲ್ಲಿಗೆ ಆದಿಯಲ್ಲಿ ಜಿದತ್ತರಾಯ ನಿಂದ ನೀಡಲಾದ ದಾನದ ಬಗೆಗೆ ಹೇಳುವುದರಿಂದ ಸಂಪೂರ್ಣವಾಗಿ ಅಲ್ಲಗಳೆಯು ವಂತೆಯೂ ಇಲ್ಲವೆಂದು ಡಾ| ಗುರುರಾಜ ಭಟ್ಟರು ಹೇಳುತ್ತಾರೆ. [5]

ಕ್ರಿ.ಶ. ೧೫೨೩ರ ವರಾಂಗ ಶಾಸನವು ಭೈರರಸರ ವಂಶಾವಳಿಗೆ ಸಂಬಂಧಿಸಿದ ವಿವರಗಳನ್ನು ನೀಡುತ್ತಿದ್ದು ಇವರು ಶಾಂತರ ವಂಶದವರೇ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಶಾಸನದ ಪ್ರಕಾರ ನನ್ನಿ ಶಾಂತ ಎಂಬವನು ಈ ವಂಶದ ಮೂಲಪುರುಷ. ಅನಂತರದವನು ಸಹಕಾರ; ಅನಂತರದವನು ಜಿನದತ್ತ. ಜಿನದತ್ತನ ಅನಂತರ ಹಲವು ರಾಜರು ಆಳಿದ್ದು ಅನಂತರ ಭೈರವನು ದೊರೆಯಾದನೆಂಬ ವಿವರವಿದೆ. [6]

ಗಣಪತಿರಾವ್ ಐಗಳ್ ಅವರು ತಮ್ಮ ಗ್ರಂಥದಲ್ಲಿ ಜಿನದತ್ತರಾಯನು ಪೊಂಬುಚ್ಚದಲ್ಲಿ ವಂಶಸ್ಥಾಪನೆ ಮಾಡಿದ ಬಗೆಗೆ ವಿವರವಾಗಿ ಒಂದು ಕಥೆಯನ್ನು ಹೇಳಿರುತ್ತಾರೆ. ಉತ್ತರ ಮಧುರೆಯ ಉಗ್ರವಂಶದ ಸಾಕಾರಮಹಾರಾಯನ ಪಟ್ಟದ ರಾಣಿಯ ಮಗನಾದ ಜಿನದತ್ತನಿಗೆ ತನ್ನ ತಂದೆಯ ಉಪಪತ್ನಿಯಿಂದ ಪ್ರಾಣಭಯವುಂಟಾಗಿ ಹೊಂಬುಚ್ಚಕ್ಕೆ ಓಡಿಬಂದು ಅಲ್ಲಿ ಅರಮನೆ ಕಟ್ಟಿಸಿ ಪದ್ಮಾವತೀದೇವಿಯ ಪ್ರತಿಷ್ಠೆ ಮಾಡಿಸಿ ಕಳಸದ ಸೀಮೆಯನ್ನು ಆಳಿದನು ಎಂಬ ವಿವರಣೆಯು ಐಗಳ ಕೃತಿಯಲ್ಲಿದೆ. [7] ಜಿನದತ್ತನ ಮಕ್ಕಳಾದ ನೇಮಿಚಂದ್ರ ಪಾರ್ಶ್ವಚಂದ್ರರಲ್ಲಿ ಪಾರ್ಶ್ವಚಂದ್ರನು ಆಳುವ ಕಾಲದಲ್ಲಿ, ತನ್ನ ತಂದೆಯನ್ನುಭೈರವಿಯಾದ ಪದ್ಮಾವತಿಯೇ ರಕ್ಷಿಸಿದ್ದರಿಂದ ತನ್ನ ಹೆಸರಿಗೆ ಭೈರವ ಎಂಬ ಹೆಸರನ್ನೂ ತನ್ನ ತಾಯಿಯು ಪಾಂಡ್ಯರಾಜನ ಕುಮಾರಿಯಾದುದರಿಂದ ಪಾಂಡ್ಯ ಎಂಬ ಬಿರುದನ್ನೂ ಧರಿಸಿದನೆಂಬುದಾಗಿಯೂ ಇವನ ಬಳಿಕ ಆಳಿದ ಅರಸರೆಲ್ಲಾ ‘ಪಾಂಡ್ಯಭೈರವ ಅರಸ’ ಎಂಬುದನ್ನು ತಮ್ಮ ಹೆಸರಿಗೆ ಕೂಡಿಸುತ್ತಾ ಬಂದರೆಂದೂ ಐಗಳ ಕೃತಿಯಲ್ಲಿ ಹೇಳಲಾಗಿದೆ. [8] ಈ ವಿವರಗಳಿಗೆ ಇತಿಹಾಸ ತಜ್ಞರು ಯಾವ ಮಹತ್ತ್ವವನ್ನೂ ಕೊಟ್ಟಿಲ್ಲ. ಇದು ಹೊಂಬುಚ್ಚದ ಸ್ಥಳಪುರಾಣದ ವಿವರವೆಂದು ತೋರುತ್ತದೆ. ಪ್ರಾಯಶಃ ಈ ವಿವರಗಳಲ್ಲಿ ಯಾವ ಐತಿಹಾಸಿಕತೆಯೂ ಇಲ್ಲ. ಜಿನದತ್ತವೆಂಬವನು ಐತಿಹಾಸಿಕ ವ್ಯಕ್ತಿಯಾಗಿದ್ದನೆಂದಷ್ಟು ಮಾತ್ರ ಹೇಳಬಹುದಾಗಿದೆ.

ತುಳುನಾಡನ್ನಾಳುತ್ತಿದ್ದ ಆಳುಪ ವಂಶಕ್ಕೂ ಹೊಂಬುಚ್ಚದ ಶಾಂತರರಿಗೂ ವೈವಾಹಿಕ ಸಂಬಂಧವಿತ್ತೆಂದು ಶಾಸನಾಧಾರಗಳಿಂದ ತಿಳಿಯುತ್ತದೆ. ಕ್ರಿ.ಶ. ೧೦೭೭ರ ಹುಂಚ ಶಾಸನದಿಂದ ಶಾಂತಾರ ರಾಜ ಅಮ್ಮಣದೇವನ ಮಗಳನ್ನು (ಬೀರಲದೇವಿ) ಆಳುಪರಾಜ ಬಂಕಿಯಾಳ್ವನು (ಸು. ೧೦೨೦ – ೧೦೫೦) ಮದುವೆಯಾಗಿದ್ದನೆಂದೂ ಬಂಕಿಯಾಳ್ವನ ತಂಗಿ ಮಂಕಬ್ಬರಸಿಯನ್ನು ಶಾಂತಾರ ಅಮ್ಮಣನ ಮಗ ತೈಲಪದೇವನು ಮದುವೆಯಾಗಿದ್ದನೆಂದು ತಿಳಿಯುತ್ತದೆ. [9] ಸುಮಾರು ಕ್ರಿ.ಶ. ೧೨೨೦ಕ್ಕೆ ಸರಿಹೊಂದುವ ಕಾಲವಿವರವಿಲ್ಲದ ವರಾಂಗ ಶಾಸನವು[10] ತ್ರಿಭುವನಮಲ್ಲ ಶಾಂತರನ ತಮ್ಮನಾದ ಕುಂಡಣನು ಆಳುಪ ಕುಲಶೇಖರನ (ಮೊದಲನೆಯ ಕುಲಶೇಖರ ಸು. ೧೧೬೦ – ೧೨೨೦) ಅನಂತರ ಆಳುಪ ರಾಜ್ಯವನ್ನಾಳಿದನೆಂದು ತಿಳಿಸುತ್ತದೆ. ಕುಲಶೇಖರನು ತೀರಿಕೊಂಡಾಗ ಸಿಂಹಾಸನಕ್ಕೆ ಯೋಗ್ಯರಾದವರು ಇಲ್ಲದುದರಿಂದ, ಆಳುಪ ರಾಜಕುಮಾರಿಯನ್ನು ಮದುವೆಯಾಗಿದ್ದಿರಬಹುದಾದ ಕುಂಡಣನು ಆಳಿದನೆಂದು (ಸು. ೧೨೨೦ – ೧೨೩೦) ಊಹಿಸಲಾಗಿದೆ. [11] ಒಟ್ಟಿನಲ್ಲಿ ಘಟ್ಟದ ಮೇಲಿನ ಶಾಂತಾರ ಅರಸರಿಗೂ ಘಟ್ಟ ಕೆಳಗಿನ ತುಳುನಾಡಿಗೂ ಹತ್ತಿರದ ಸಂಬಂಧವಿತ್ತು.

ಕಳಸದಲ್ಲಿ ಆಳುತ್ತಿದ್ದ ಶಾಂತಾರವಂಶದ ಶಾಖೆಯವರನ್ನು ಕ್ರಿ.ಶ. ೧೨೦೯ರ ಮೂಡಿಗೆರೆ ಶಾಸನದಿಂದ ಗುರುತಿಸಬಹುದಾಗಿದೆ. “ಶ್ರೀ ಕಳಸೇಶ್ವರ ದೇವರ ದಿವ್ಯ ಶ್ರೀಪಾದ ಪದ್ಮಾರಾಧಕ ಪರಬಲಸಾಧಕರುಮಪ್ಪ ಮಾಂಡಳಿಕ ಗಂಡರ ದಾವಣಿ ವೀರ ಬಲ್ಲದೇವ”, ಮಲ್ಲುದೇವ ಮತ್ತು ಮಾರುದೇವರನ್ನು ಈ ಶಾಸನದಲ್ಲಿ ಹೆಸರಿಸಲಾಗಿದೆ. ಈ ವಂಶವನ್ನು ಶಾಂತಾರ ವಂಶದಿಂದ ಒಡೆದು ಬೇರೆಯಾದ ಶಾಖೆಯೆಂದು ಗುರುತಿಸಲಾಗಿದೆ. [12] ಕಳಸನಾಥ ಅಥವಾ ಕಳಸೇಶ್ವರ ದೇವರು ಇವರ ಆರಾಧ್ಯದೈವವೆಂದೂ ಶಾಸನದಿಂದ ತಿಳಿದುಬರುತ್ತದೆ. ಈ ಕಳಸೇಶ್ವರ ಅಥವಾ ಕಳಸನಾಥ ದೇವರ ಉಲ್ಲೇಖ ಇನ್ನೂ ಹಲವು ಶಾಸನಗಳಲ್ಲಿ ಬರುತ್ತದೆ.

ಇವರ ಅನಂತರ ಜಾಕಲ ಮಹಾದೇವಿ (ಕ್ರಿ.ಶ. ೧೨೪೬ – ೧೨೭೦) ಮತ್ತು ಕಾಳಲಮಹಾದೇವಿ (ಕ್ರಿ.ಶ. ೧೨೭೦ – ೧೨೮೧) ಎಂಬಿಬ್ಬರು ರಾಣಿಯರು ಆಳಿದ ಬಗೆಗೆ ಮೂಡಿಗೆರೆಯ ಹಲವು ಶಾಸನಗಳು ತಿಳಿಸುತ್ತವೆ. ತಾವು ಜೈನರಾದರೂ ತಮ್ಮ ವಂಶದ ಕುಲದೇವರಾದ ಕಳಸನಾಥನಿಗೆ ಇವರು ಹಲವು ದಾನಗಳನ್ನು ನೀಡಿದರು. [13] ಮೂಡಿಗೆರೆಯ ತಾಮ್ರಶಾಸನವು ಬಲದೇವ ಮತ್ತು ರಾಯ ಬಲ್ಲಹದೇವ ಎಂಬ ರಾಜರು ಕ್ರಮವಾಗಿ ಕ್ರಿ.ಶ. ೧೨೮೪ ಮತ್ತು ಕ್ರಿ.ಶ. ೧೨೮೫ರಲ್ಲಿ ಆಳುತ್ತಿದ್ದರೆಂದು ತಿಳಿಸುತ್ತದೆ. [14] ಈ ರಾಯಬಲ್ಲಹದೇವನ ಕಾಲದಲ್ಲಿ ಕಳಸ ರಾಜ್ಯವು ಘಟ್ಟದ ಕೆಳಗಿನ ಕಾರ್ಕಳಕ್ಕೆ ವಿಸ್ತರಿಸಿರಬೇಕೆಂದು ಡಾ| ಗುರುರಾಜ ಭಟ್ಟರು ಊಹಿಸುತ್ತಾರೆ. ಈ ಊಹೆಗೆ ಉಡುಪಿ ತಾಲೂಕಿನ ಆತ್ರಾಡಿಯ ಶಾಸನವೊಂದು ಆಧಾರವಾಗಿದೆ. ಕ್ರಿ.ಶ. ಹದಿಮೂರನೆಯ ಶತಮಾನಕ್ಕೆ ಸೇರುವುದೆಂದು ಊಹೆಯಿಂದ ಕಾಲನಿರ್ಣಯಮಾಡಲಾದ, ತೇದಿಯಿಲ್ಲದ ಈ ಶಾಸನದಿಂದ ಮಹಾಮಂಡಳೇಶ್ವರ ಬಲ್ಲಮದೇವರಸ, ನಾರನಾಳ್ವ, ಅಧಿಕಾರಿ, ಮೂಡಿಳರು, ಹಾಕಳಗ್ರಾಮದ ಮುನ್ನೂರ್ವರು ಮತ್ತು ಹರಿಕದ ಹನ್ನೆರಡು ಮಹಾಜನರೊಳಗೆ ಬೆಡುಂಗಳ ಮತ್ತು ಕೆಲವು ಆದಾಯಗಳನ್ನು ಅನುಭವಿಸುವ ವಿಷಯದಲ್ಲಿ ಒಂದು ಒಪಪಂದವಾದಂತೆ ತಿಳಿಯುತ್ತದೆ. ಕ್ರಿ.ಶ. ೧೨೮೪ – ೧೨೮೫ರಲ್ಲಿ ಆಳುತ್ತಿದ್ದ ರಾಯಬಲ್ಲಹದೇವನನ್ನೇ ಇದು ಉಲ್ಲೇಖಿಸುತ್ತಿರಬೇಕೆಂದು ಡಾ| ಗುರುರಾಜ ಭಟ್ಟರ ಅಭಿಪ್ರಾಯ. ಈ ‘ಮಹಾಮಂಡಳೇಶ್ವರ ಬಲ್ಲಮದೇವರಸ’ ಯಾವನೇ ಆಳುಪ ರಾಜನಿಗೆ ಅನ್ವಯಿಸುವುದಿಲ್ಲವೆಂದು ಕಳಸದ ರಾಯಬಲ್ಲಹದೇವನನ್ನೇ ನಿರ್ದೇಶಿಸುವಂತೆ ಕಂಡು ಬರುವುದರಿಂದ ಅವನು ಆ ಕಾಲದಲ್ಲಿ ಆಳ್ವಖೇಡವನ್ನು ಆಳುತ್ತಿದ್ದ ಆಳುಪರಾಣಿ ಬಲ್ಲಮಹಾದೇವಿಗೆ ಅಧೀನನಾಗಿ ಆಳ್ವಿಕೆ ಮಾಡುತ್ತಿದ್ದಿರಬೇಕೆಂದೂ ಅವರು ಊಹಿಸಿದ್ದಾರೆ. ಈ ಹಾಕಳವೆಂಬುದು ಈಗಿನ ಪರ್ಕಳವೆಂದೂ ಹರಿಕವೆಂಬುದು ಈಗಿನ ಹೆರ್ಗವೆಂದೂ ಡಾ| ಗುರುರಾಜ ಭಟ್ಟರು ಹೇಳಿರುತ್ತಾರೆ. (ಆದರೆ ಇವುಗಳಲ್ಲಿ ‘ಹರಿಕ’ ಎಂಬುದು ಇಂದಿನ ‘ಪರೀಕ’ ವಾಗಿರುವ ಸಾಧ್ಯತೆಯಿದೆ. ಪರೀಕವು ಆತ್ರಾಡಿಗ್ರಾಮದಲ್ಲೇ ಇದೆ). ಈ ಅಭಿಪ್ರಾಯವನ್ನು ಇತರ ಇತಿಹಾಸಕಾರರು ಮಾನ್ಯಮಾಡಿದಂತಿಲ್ಲ. [15]

ಈ ವಂಶದಲ್ಲಿ ಮುಂದೆ ಕಾಣಿಸುವವನು ಕಾಳಲದೇವಿಯ ಪುತ್ರನಾದ ವೀರ ಪಾಂಡ್ಯದೇವ. ಈತನ ಕಾಲದಲ್ಲಿ ಸಮುದ್ರ ಪಾಂಡ್ಯನ ಕಡೆಯ ಮರಕಾಲನು ಕಂಡ್ಯ ಅಗ್ರಹಾರಕ್ಕಾಗಿ ಆಗ್ರಹಿಸಿ, ದಾಳಿಮಾಡಿದನೆಂದೂ ವೀರಪಾಂಡ್ಯನು ಮರಕಾಲನ ಮೇಲೆ ಬಿದ್ದು ಅವನನ್ನು ತುಂಡರಿಸಿ ಅವನ ಸೊತ್ತುಗಳೆಲ್ಲವನ್ನೂ ವಶಪಡಿಸಿಕೊಂಡನೆಂದೂ ಒಂದು ಶಾಸನ ತಿಳಿಸುತ್ತದೆ. ಈತ ಕಾಳಲದೇವಿಯ ಮಗನೆಂದು ಇನ್ನೊಂದು ಶಾಸನವೂ ತಿಳಿಸುತ್ತದೆ. ವೀರಪಾಂಡ್ಯನ ಈ ವಿಜಯದ ಬಗೆಗೆ ಡಾ| ಪಿ.ಎನ್. ನರಸಿಂಹ ಮೂರ್ತಿಗಳು ಬರೆಯುತ್ತಾ “ಹೀಗೆ ಹೊಯ್ಸಳ ಸಾಮ್ರಾಜ್ಯವನ್ನು ಪಾಂಡ್ಯರ ದಾಳಿಯಿಂದ ರಕ್ಷಿಸಿ ಮಹತ್ತರ ವಿಜಯ ಸಾಧೀಸಿದನು. ಇದರಿಂದಾಗಿ ಅವನ ರಾಜ್ಯವೂ ಉಳಿಯಿತು” ಎಂದು ಅಭಿಪ್ರಾಯಪಟ್ಟಿದ್ದಾರೆ. [16] ಈ ಅಭಿಪ್ರಾಯದಂತೆ ಈ ವೀರಪಾಂಡ್ಯನು ಹೊಯ್ಸಳರ ಸಾಮಂತನೆಂದು ತಿಳಿಯಬೇಕಾಗುತ್ತದೆ. ಆದರೆ ಕ್ರಿ.ಶ. ೧೨೯೭ರ ತಾಮ್ರ ಶಾಸನವೊಂದರ ಅಧ್ಯಯನದಿಂದ ಈತನ ಸ್ವತಂತ್ರನಾಗಿ ಆಳುತ್ತಿದ್ದನೆಂದು ತಿಳಿಯಬೇಕಾಗುವುದೆಂದು ಡಾ| ಗುರುರಾಜ ಭಟ್ಟರು ಅಭಿಪ್ರಾಯ ಪಡುತ್ತಾರೆ. [17]

ಕಾರ್ಕಳದ ಗೊಮ್ಮಟ

ಕಾರ್ಕಳದ ಗೊಮ್ಮಟ

ಹಿರಿಯಂಗಡಿ ಮಾನಸ್ತಂಭ

ಹಿರಿಯಂಗಡಿ ಮಾನಸ್ತಂಭ

 

ಚತುರ್ಮುಖ ಬಸದಿ

ಚತುರ್ಮುಖ ಬಸದಿ

ಈ ವಂಶದವರಿಗೆ ಸಂಬಂಧಿಸಿದ ಕಾರ್ಕಳದಲ್ಲಿ ದೊರಕಿರುವ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದುದು ಲೋಕಾನಾಥರಸನಿಗೆ ಸಂಬಂಧಿಸಿದ ಕ್ರಿ.ಶ. ೧೩೩೪ – ೩೫ರ ಹಿರಿಯಂಗಡಿ ಶಾಸನ, ಲೋಕನಾಥರಸನು ‘ಮಹಾಮಂಡಳೇಶ್ವರ, ಸಮಧಿಗತ ಪಂಚಮಹಾಶಬ್ದ’ ಎಂದು ಕರೆಯಲ್ಪಟ್ಟಿದ್ದರೂ ‘ಸಮಸ್ತ ಭುವನಾಶ್ರಯ ಪೃಥ್ವೀವಲ್ಲಭ, ಮಹಾರಾಜಾಧಿರಾಜ ರಾಜಪರಮೇಶ್ವರ, ಪರಮಭಟ್ಟಾರಕ’ ಎಂಬ ಬಿರುದುಗಳಿಂದಲೂ ಅಲಂಕೃತನಾಗಿದ್ದಾನೆ. ಅಲ್ಲದೆ ಉತ್ತರಮಧುರಾಧೀಶ್ವರ, ಮಹೋಗ್ರ ವಂಶಲಲಾಮ, ಪಟ್ಟಿಪೊಂಬುಚ್ಚಪುರದ ಒಡೆಯ ಮತ್ತು ಚಾರುಕೀರ್ತಿ ಪಂಡಿತ ದೇವನ ಶಿಷ್ಯ – ಎಂದೂ ಕರೆಯಿಸಿಕೊಂಡಿದ್ದಾನೆ. ಇದರಿಂದಾಗಿ ಇವನು ಶಾಂತರ ವಂಶಜ ನೆಂಬುದು ಸ್ಪಷ್ಟ. ಈ ದಾಖಲೆಯಿಂದಾಗಿ, ಜಿನದತ್ತರಾಯನ ವಂಶಸ್ಥರು ತಮ್ಮ ಆಡಳಿತದ ಕೇಂದ್ರವನ್ನು ಕಳಸದಿಂದ ಶಿಶಿಲಕ್ಕೂ ಅಲ್ಲಿಂದ ಕಾರ್ಕಳಕ್ಕೂ ಬದಲಾಯಿಸಿ ಕೊಂಡರೆಂಬುದು ಸ್ಥಿರವಾಗುತ್ತದೆಂದು ಡಾ| ಗುರುರಾಜ ಭಟ್ಟರು ಹೇಳುತ್ತಾರೆ. [18]

ಕಾರ್ಕಳಕ್ಕೆ ಭೈರರಸರು ಬರಲು ಕಾರಣವೇನೆಂಬುದನ್ನು ತಿಳಿಸುವ ಕಥೆಯೊಂದು ಕೈಫಿಯತ್ತಿನಲ್ಲಿದ್ದು ಐಗಳ್ ಅವರು ಅದನ್ನು ಉದ್ಧರಿಸಿರುತ್ತಾರೆ. ಎರಡೂ ಮೂಲಗಳಲ್ಲಿ ಅಷ್ಟಿಷ್ಟು ವ್ಯತ್ಯಾಸವಿದ್ದರೂ ಮುಖ್ಯ ಅಭಿಪ್ರಾಯ ಒಂದೇ ಆಗಿದೆ. ಕಾರ್ಕಳದಲ್ಲಿ ಏಳುನಾಡುಗಳ ಅಧಿಕಾರವುಳ್ಳ ಕಾಬೆಟ್ಟು ಹೆಗ್ಗಡೆ ಎಂಬಾತ ಒಡೆಯನಾಗಿದ್ದನಂತೆ. [19] ಆತ ಪ್ರಜೆಗಳನ್ನು ಪೀಡಿಸುತ್ತಿದ್ದ. ಪ್ರಜೆಗಳು ಕಪ್ಪ ನೀಡಲು ಹೋದ ಸಮಯದಲ್ಲಿ ತಾನು ಮಂಚದ ಮೇಲೆ ಮಲಗಿ ಕಪ್ಪವನ್ನು ಸ್ವೀಕರಿಸುತ್ತೇನೆಂದು ಹೆಗ್ಗಡೆಯು ಹೇಳಿದಾಗ ಪ್ರಜೆಗಳು ಒಪ್ಪದಿರಲು, ಹೆಗ್ಗಡೆಯೇ “ನಾನು ಮಲಗಿ ಕಪ್ಪ ತೆಗೆದುಕೊಳ್ಳುವಾಗ ನೀವು ಕಪ್ಪ ಕೊಡಿರಿ” ಎಂಬುದನ್ನು ಒಪ್ಪಿದರು. ಮರುದಿನ ಕಪ್ಪ ನೀಡಲು ಬಂದಾಗ ಹೆಗ್ಗಡೆಯು ಪ್ರಜೆಗಳನ್ನು ಅಪಮಾನ ಮಾಡಲಿಕ್ಕಾಗಿಯೇ ಒಂದು ಕೆಸರಿನ ಸ್ಥಳದಲ್ಲಿ ಮಂಚ ಹಾಕಿ ಮಲಗಿದ್ದನು. ಅಲ್ಲಿ ಕುಳಿತುಕೊಳ್ಳಲಾರದ ಪ್ರಜೆಗಳು ತಮಗೆ ರಾಜನೇ ಬೇಡವೆಂದು ಹೊರಟುಹೋದರು. ಅವರು ಹೊಂಬುಚ್ಚದ ಜಿನದತ್ತ ರಾಯನ ವಂಶದ ಭೈರರಸನಿಗೆ ದೂರುಕೊಡಲು, ಮಂದಿ ಮಾರ್ಬಲ ತೆಗೆದುಕೊಂಡು ಭೈರರಸನು ಕಳಸಕ್ಕೆ ಬಂದು ಅದನ್ನು ಸ್ವಾಧೀನಪಡಿಸಿ ಘಟ್ಟದ ಕೆಳಗಿಳಿದು ಕೆರವಸೆಗೆ ಬಂದು ಅಲ್ಲಿ ವಾಸವಾಗಿದ್ದು ಅಲ್ಲಿಂದ ಸೈನ್ಯ ತೆಗೆದುಕೊಂಡು ಕಾಬೆಟ್ಟಿಗೆ ಬರುವಾಗ ಕಾಬೆಟ್ಟು ಹೆಗ್ಗಡೆಯು ಓಡಿಹೋದನು. ಅನಂತರ ಭೈರರಸರು ಕಾರ್ಕಳದಲ್ಲಿ ಅರಮನೆ ಕಟ್ಟಿ ನೆಲೆಯಾದರು. ಏಳುನಾಡು ಹೆಗ್ಗಡೆಯ ನಾಡುಗಳನ್ನೂ ಇವರೇ ಆಳಿದರು. [20] ಈ ಕಥೆಯ ಘಟನೆಗಳು ಭೈರರಸು ಹೊಯ್ಸಳರ ಕೈಕೆಳಗಿನವರಾಗಿದ್ದಾಗ ನಡೆಯಿತೆಂದು ಐಗಳ್ ಅವರು ಹೇಳುತ್ತಾರೆ. [21] ಡಾ| ಪಿ.ಎನ್. ನರಸಿಂಹ ಮೂರ್ತಿಗಳು “ಐತಿಹಾಸಿಕ ಸತ್ಯಸಂಗತಿಗಳೇನೇ ಇದ್ದರೂ ಸಾಮಾನ್ಯವಾಗಿ ಅರಸೊತ್ತಿಗೆಗಳ ಬಗ್ಗೆ ಸ್ವಾರಸ್ಯವಾದ ಕಥೆಗಳು ಹುಟ್ಟುವುದು ಸಹಜ. ಕಾರ್ಕಳದ ಅರಸೊತ್ತಿಗೆ ಅಂತಹ ಒಂದು ಕಥೆಯಿಂದ ಹೊರತಾಗಿಲ್ಲ” ಎಂಬ ಮುನ್ನಡಿಯೊಡನೆ ಈ ಕಥೆಯನ್ನು ಉದ್ಧರಿಸಿದ್ದಾರೆ. [22] ಇತರ ಇತಿಹಾಸ ಸಂಶೋಧಕರು ಈ ಕಥೆಯ ವಿಷಯದಲ್ಲಿ ಮೌನವಾಗಿದ್ದಾರೆ. ಈ ಕಥೆ ಜಾನಪದ ಮೂಲದಿಂದ ಬಂದುದಾಗಿರಬೇಕು ಮತ್ತು ಅನಂತರ ಕೈಫಿಯತ್ತಿನಲ್ಲಿ ದಾಖಲಾಗಿರಬೇಕು. ಭೈರರಸರ ಕಾರ್ಕಳ ಪ್ರವೇಶಕ್ಕೆ ಈ ಕಥೆ ಸಂಬಂಧಿಸಿದಂತೆ ಹೆಣೆಯಲಾಗಿದ್ದರೂ ಅದರ ಐತಿಹಾಸಿಕತೆಯನ್ನು ತಿಳಿಯಲು ಇತರ ಆಧಾರಗಳಿಲ್ಲ. ಒಂದು ವೇಳೆ ಇದುಭೈರರಸರ ಆಗಮನಕ್ಕೆ ಸಂಬಂಧಿಸಿದೇ ಇದ್ದರೂ ಪ್ರಜಾಪೀಡಕನಾದ ಹೆಗ್ಗಡೆಯೊಬ್ಬನನ್ನು ಸಮರ್ಥನಾದ ರಾಜನೊಬ್ಬ ನಿಯಂತ್ರಿಸಿದ ಯಾವೊಂದು ಘಟನೆಯನ್ನು ಆಧರಿಸಿದುದಿರಬಹುದು. ಆಮೇಲೆ ಅದು ಭೈರರಸರಿಗೆ ಹೊಂದಿಸಲ್ಪಟ್ಟಿರಬಹುದು.

ಹಿರಿಯಂಗಡಿಯ ಶಾಸನದಲ್ಲಿ ಹೇಳಲಾದ ಲೋಕನಾಥ ದೇವರಸನು ಶ್ರೀಮತು ಬೊಮ್ಮಿ ದೇವರಸ ಮತ್ತು ಸಿದ್ದಲದೇವಿಯರ ಮಗನೆಂದು ಆ ಶಾಸನದಿಂದಲೇ ತಿಳಿಯುತ್ತದೆ. ವೀರ ಪಾಂಡ್ಯದೇವನ ಅನಂತರ ಸಿದ್ದಲದೇವಿಯ ಪರವಾಗಿ ಬೊಮ್ಮಿ ದೇವರಸನು ಆಳಿರಬೇಕೆಂದೂ ಅನಂತರ ಲೋಕನಾಥ ದೇವರಸನು ಆಳಿರಬೇಕೆಂದೂ ಇಲ್ಲಿ ಅಧಿಕಾರವು ಅಳಿಯ ಸಂತಾನ ನಿಯಮಗಳಂತೆ ಹಸ್ತಾಂತರಗೊಂಡಿದೆಯೆಂದೂ ಸಿದ್ದಲದೇವಿಯು ವೀರ ಪಾಂಡ್ಯನ ತಂಗಿಯೆಂದೂ ವೀರಪಾಂಡ್ಯನು ರಾಯಬಲ್ಲಹ ದೇವನ ತಮ್ಮನಾಗಿದ್ದಿರಬೇಕೆಂದೂ ಡಾ| ಗುರುರಾಜ ಭಟ್ಟರು ಅಭಿಪ್ರಾಯಪಟ್ಟಿದ್ದಾರೆ. ಡಾ| ಸೂರ್ಯನಾಥ ಕಾಮತರು ಸೂಚಿಸುವ ಬೊಮ್ಮಿ ದೇವರಸನು ವೀರ ಪಾಂಡ್ಯ ದೇವನ ಮಗನೆಂದು ಅಭಿಪ್ರಾಯವನ್ನು ಅವರು ಅಲ್ಲಗಳೆದಿದ್ದಾರೆ. [23]

ಈ ಲೋಕನಾಥ ದೇವರಸನ ವಿಷಯದಲ್ಲಿ ಡಾ| ಕೆ.ವಿ.ರಮೇಶ್ ಅವರ ಅಭಿಪ್ರಾಯ ಸ್ವಲ್ಪ ಬೇರೆಯಾಗಿದೆ. ಹಿರಿಯಂಗಡಿಯ ಶಾಸನದಲ್ಲಿ ಲೋಕನಾಥ ದೇವರಸನ ಗುರುಪರಂಪರೆಯ ಚಾರುಕೀರ್ತಿ ಪಂಡಿತ ದೇವನನ್ನು ‘ಬಲ್ಲಾಳರಾಯ ಚಿತ್ತ ಚಮತ್ಕಾರ’ ಎಂದು ಕರೆಯಲಾಗಿದ್ದು, ಲೋಕನಾಥ ದೇವರಸನು ಸಾಂತಳಿಗೆ – ೧೦೦೦ವನ್ನು ಆಗ ಆಳಿಕೊಂಡಿದ್ದ ಶಾಂತರ ವಂಶದವನೆಂದೂ ಹೊಯ್ಸಳ ಮೂರನೆಯ ಬಲ್ಲಾಳನ (ಕ್ರಿ.ಶ. ೧೨೯೧ – ೧೩೪೨) ಸಾಮಂತನಾಗಿದ್ದನೆಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. [24] ಮಾತ್ರವಲ್ಲ ಬಲ್ಲಾಳನ ನಿಷ್ಠಾವಂತ ಸಾಮಂತನಾದುದರಿಂದ ಕಾರ್ಕಳವನ್ನು ಸಾಂತಳಿಗೆ – ೧೦೦೦ ದೊಳಗೆ ಸೇರಿಸಿಕೊಳ್ಳಲು ಆತನಿಗೆ ಒಪ್ಪಿಗೆ ದೊರೆತಿರಬೇಕೆಂದೂ, ಮುಂದೆ ವಿಜಯನಗರ ಕಾಲದಲ್ಲಿ ಕಳಸದ ಶಾಂತರು ಈ ಪ್ರದೇಶದ ಮೇಲೆ ಅಧಿಕಾರ ಸ್ಥಾಪಿಸಲು ಇದು ಅವಕಾಶ ಮಾಡಿಕೊಟ್ಟಿತೆಂದೂ ಅವರು ಅಭಿಪ್ರಾಯಪಡುತ್ತಾರೆ. [25] ಆಳುಪ ರಾಜನ ಮಗಳೊಬ್ಬಳನ್ನು ಶಾಂತರ ರಾಜನಿಗೆ ವಿವಾಹ ಮಾಡಿಕೊಡಲಾಗಿದ್ದು ಈ ಸಂಬಂಧದ ಮಕ್ಕಳಲ್ಲೊಬ್ಬಾತ ಈ ಲೋಕನಾಥ ದೇವರಸನಾಗಿರಬೇಕೆಂದೂ ಅವರ ಅಭಿಪ್ರಾಯವಿದೆ. [26]

ಅರಿರಾಯರ ಗಂಡರ ದಾವಣಿ, ಹುಸಿವರ ಶೂಲ, ಶರಣಾಗತ ವಜ್ರಪಂಜರ, ಮರೆಹೊಕ್ಕವರ ಕಾವ – ಎಂಬ ಬಿರುದುಗಳನ್ನು ಧರಿಸಿದ ವೀರ ಚೆನ್ನರಸ ಒಡೆಯನನ್ನು ಉಲ್ಲೇಖಿಸುವ, ಕಾರ್ಕಳ ತಾಲೂಕಿನ ಮೀಯಾರಿನ ಶಾಸನವು ಕ್ರಿ.ಶ. ೧೩೮೫ರದು. ಈ ಶಾಸನವು ಶ್ರೀ ಕಳಸನಾಥ ದೇವರನ್ನು ಉಲ್ಲೇಖಿಸುತ್ತದೆ. ಆದುದರಿಂದ ಕಳಸ – ಕಾರ್ಕಳ ರಾಜರಲ್ಲಿ ವೀರ ಚೆನ್ನರಸನನ್ನು ಗಣಿಸಲು ಯಾವ ಸಂಶಯವೂ ಇಲ್ಲ. ಕಾರ್ಕಳದಲ್ಲಿ ಈ ವಂಶದವರು ಭದ್ರವಾಗಿದ್ದುದನ್ನು ಈ ಶಾಸನ ಆಧಾರದಿಂದ ತಿಳಿಯಬಹುದೆಂದು ಡಾ| ಗುರುರಾಜ ಭಟ್ಟರ ಅಭಿಪ್ರಾಯ. ವೀರ ಚೆನ್ನರಸನಿಗೂ ಲೋಕನಾಥ ದೇವರಸನಿಗೂ ಏನು ಸಂಬಂಧವೆಂಬುದನ್ನು ಹೇಳುವುದು ಕಷ್ಟವಾದರೂ ವೀರ ಚೆನ್ನರಸನು ಲೋಕನಾಥ ದೇವರಸನ ಅಳಿಯನೆಂದು ಊಹಿಸಬಹುದೆಂದು ಅವರು ಹೇಳುತ್ತಾರೆ. [27]

ಲೋಕನಾಥ ದೇವರಸ ಮತ್ತು ವೀರ ಚೆನ್ನರಸರ ಸಂಬಂಧದ ವಿಷಯವಾಗಿ ಡಾ| ಪಿ.ಎನ್. ನರಸಿಂಹ ಮೂರ್ತಿಗಳು ಹೇಳಿದುದು ಹೀಗಿದೆ: “ಲೋಕನಾಥ ತನ್ನ ದೀರ್ಘಕಾಲದ ಆಳ್ವಿಕೆಯಲ್ಲಿ ವಿಜಯನಗರ ಸಾಮ್ರಾಜ್ಯದ ಹುಟ್ಟನ್ನು ಕಂಡ. ಈತನ ಉತ್ತರಾಧಿಕಾರಿ ಯಾರೆಂಬುದನ್ನು ಅವನ ಶಾಸನಗಳು ತಿಳಿಸುವುದಿಲ್ಲ. ಬೊಮ್ಮಲದೇವಿ ಮತ್ತು ಸೋಮಲದೇವಿ ಎಂಬಿಬ್ಬರು ಹಿರಿಯ ಸೋದರಿಯರಿದ್ದರೆಂಬುದು ಮಾತ್ರ ಗೊತ್ತಾಗುತ್ತದೆ. ಪ್ರಾಯಶಃ ಮುಂದೆ ಆಳಿದ ಅರಿರಾಯರಗಂಡ ದಾವಣಿ ಶ್ರೀ ವೀರಕಾಳಲದೇವಿಯು ಈ ಸೋದರಿಯರಲ್ಲೊಬ್ಬಳ ಮಗಳಾಗಿರಬೇಕು. ಇವಳ ಇಬ್ಬರು ಪುತ್ರರಾದ ವೀರ ಚೆನ್ನರಸ ಮತ್ತು ಪಾಂಡ್ಯದೇವರಸರು ಒಟ್ಟಿಗೆ ರಾಜ್ಯಭಾರ ಮಾಡಿದರು. ಕೆರವಾಸೆಯ ವರ್ಧಮಾನ ಬಸದಿಯು ಇವರ ಕಾಲದಲ್ಲಿ (ಕ್ರಿ.ಶ.೧೩೭೮) ನಿರ್ಮಾಣವಾಯಿತು”. [28]

 

[1] ಈ ವಂಶಕ್ಕೆ ಕಳಸ ಕಾರ್ಕಳ ರಾಜವಂಶವೆಂದು ಹೆಸರು ಕೊಟ್ಟು ಗುರುತಿಸಿಕದವರು ಲೂಯಿ ರೈಸ್ ಅವರು ಎಂದು ತಿಳಿದು ಬರುತ್ತದೆ. ಡಾ|ಕೆ.ವಿ. ರಮೇಶ್, HSK ಪು. ೧೮೭.

[2] ಡಾ| ಗುರುರಾಜ ಭಟ್, STHC, ಪುಟ. ೮೧.

[3] ಈ ವಂಶದವರು ಜೈನರಾಗಿದ್ದು ಭೈರವ ಹೆಸರು ಹೇಗೆ ಬಂತೆಂಬುದು ಕುತೂಹಲಕರ ವಿಷಯ. ಜೈನರೇ ಆದ ಗೇರುಸೊಪ್ಪೆ ರಾಜವಂಶದವರಲ್ಲಿಯೂ ಭೈರವ ಎಂಬ ಅಂಕಿತನಾಮ ಕಂಡುಬರುವುದನ್ನು ಗಮನಿಸಬಹುದು.

[4] ಬಂಟಿ ಜನಾಂಗದಲ್ಲಿರುವ ‘ಸೂಡ್’ ಎಂಬ ಕುಲನಾಮಕ್ಕೂ ಇದಕ್ಕೂ ಪ್ರಾಯಶಃ ಸಂಬಂಧ ವಿಲ್ಲವೆಂದು ಊಹಿಸಬಹುದು.

[5] ಡಾ| ಗುರುರಾಜ ಭಟ್‌, STHC, ಪು. ೮೨.

[6] ಡಾ| ಕೆ.ವಿ. ರಮೇಶ್, HSK, ಪು.೧೮೭.

[7] ಐಗಳ್ ಇತಿಹಾಸ, ಪು. ೩೨೮.

[8] ಐಗಳ್ ಇತಿಹಾಸ, ಪು. ೩೨೮.

[9] ಡಾ| ಕೆ.ವಿ.ರಮೇಶ್‌, HSK, ಪು. ೧೦೪.

[10] ಈ ಶಾಸನವು ಮಧ್ಯಯುಗೀನ ಆಳುಪರ ವಂಶದ ಇತಿಹಾಸದ ದೃಷ್ಟಿಯಿಂದ ಬಹಳ ಮುಖ್ಯವಾದುದಾಗಿದೆ. HSK, ಪು. ೧೦೪ – ೧೦೫.

[11] ಡಾ| ಕೆ.ವಿ. ರಮೇಶ್, HSK, ಪು.೧೧೯.

[12] ಡಾ| ಗುರುರಾಜ ಭಟ್, STHC, ಪು.೮೨.

[13] ಡಾ| ಗುರುರಾಜ ಭಟ್, STHC, ಪು.೮೨.

[14] ಅದೇ, ಪು. ೮೨.

[15] ಅದೇ ಪು. ೮೩. ಆಳುಪ ವಂಶದ ಬಲ್ಲಮಹಾದೇವಿಯ ಕಾಲದ ಈ ಶಾಸನದಲ್ಲಿ ಮಹಾಮಂಡಳೇಶ್ವರ ಬಲ್ಲಮ ದೇವರಸ ಎಂಬ ಉಲ್ಲೇಕವಿದೆಯೆಂದು ಡಾ| ಗುರುರಾಜ ಭಟ್ಟರು ನಿರೂಪಿಸಿರುತ್ತಾರೆ. ಆದರೆ ಉಡುಪಿ ಸಮೀಪದ ಆತ್ರಾಡಿಯ ಈ ಶಾಸನವು ಬಲ್ಲಮಹಾದೇವಿಗೆ ಸಂಬಂಧಿಸಿದ್ದಿರಬಹುದೇ ಎಂಬುದಕ್ಕೆ ಶಾಸನದ ಪುನಃ ಪರಿಶೀಲನೆ ಅವಶ್ಯವಿದೆ. “ಬಲ್ಲಮಹಾದೇವಿ ಅರಸ” ರೆಂಬುದನ್ನೆ ‘ಬಲ್ಲಮದೇವರಸ’ ಎಂದು ಓದಲಾಗಿದೆಯೆ? ಕಳಸ ಕಾರ್ಕಳದ ಅರಸರು ಉಡುಪಿ ಸಮೀಪದವರೆಗೆ ಆಡಳಿತ ಮಾಡಿದ್ದಕ್ಕೆ ಬೇರಾವ ಆಧಾರಗಳೂ ಕಂಡು ಬರುವುದಿಲ್ಲ.

[16] ‘ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ’ ಕೃತಿಯಲ್ಲಿ ‘ಇತಿಹಾಸ – ಕಲೆ ಮತ್ತು ಸಂಸ್ಕೃತಿ – ಎಂಬ ಲೇಖನ ಪು.೧೩.

[17] ಡಾ| ಗುರುರಾಜ ಭಟ್, STHC, ಪು. ೮೩. ಮೇಳೆ ಹೇಳಲಾದ ಸಮುದ್ರ ಪಾಂಡ್ಯನು ಯಾರೆಂಬ ವಿಷಯದಲ್ಲಿ ಹೆಚ್ಚಿನ ವಿವರಗಳಿಲ್ಲ. ಇವನು ಇದೇ ವಂಶಕ್ಕೆ ಸಂಬಂಧಿಸಿದವನೆಂದು ಏಕೆ ತಿಳಿಯಬಾರದು ಎಂಬುದು ಈ ಸಂದರ್ಭದಲ್ಲಿ ಮೂಡಬಹುದಾದ ಸಂದೇಹ. ‘ಪಾಂಡ್ಯ’ ಎಂಬುದು ಈ ವಂಶದವರಲ್ಲಿ ಇರುವ ಹೆಸರೆಂಬುದು ಸ್ಪಷ್ಟವಷ್ಟೆ. ಬರಿಯ ಹೆಸರಿನ ಆಧಾರದಿಂದ ಈ ದಾಳಿಯನ್ನು ‘ಪಾಂಡ್ಯರ ದಾಳಿ’ ಎನ್ನಬಹುದೆ – ಎಂಬುದು ವಿಚಾರಣೀಯ ಅಂಶವಾಗಿದೆ.

[18] STHC ಪು. ೮೪. ಹೊಂಬುಚ್ಚದ ರಾಜರು ಕ್ರಿ.ಶ. ೧೧೨೩ರಿಂದ ಹೊಯ್ಸಳರ ಒಳ ಅರಸರಾಗಿ ಆಳಿದರೆಂದು ಗಣಪತಿರಾವ್ ಐಗಳ್ ಅವರು ಹೇಳುತ್ತಾರೆ. ಐಗಳ್ ಇತಿಹಾಸ, ಪು. ೩೨೯.

[19] ಐಗಳ್ ಇತಿಹಾಸದಲ್ಲಿ ಈ ಹೆಗ್ಗಡೆಯನ್ನು ‘ಕಾಪಿಟ್ಟು ಹೆಗ್ಗಡೆ’ ಎನ್ನಲಾಗಿದೆ. ಕೈಫಿಯತ್ತಿನಲ್ಲಿ ‘ಕಾಬೆಟಿನ ಹೆಗಡೆ’ ಎನ್ನಲಾಗಿದೆ. ಅವನ ಅಧಿಕಾರದೊಳಗಿನ ಏಳು ನಾಡುಗಳ ವಿವರ ಕೈಫಿಯತ್ತಿನಲ್ಲಿಲ್ಲ. ಆದರೆ ಐಗಳ್ ಅವರು ಈ ಹೆಗ್ಗಡೆಯು ಕಾರ್ಕಳ, ಐದೂರು, ಪಡಂಗಡಿ, ಕೆರ್ವಾಸೆ, ಆರೂರು, ನಾಲ್ಕೂರು, ಮೂರೂರು – ಎಂಬ ಏಳುನಾಡುಗಳನ್ನು ಆಳಿಕೊಂಡಿದ್ದನು ಎಂದು ಬರೆದಿದ್ದಾರೆ. ಇದಕ್ಕೆ ಆಧಾರವಾವುದೋ ತಿಳಿಯದು. ನೋಡಿರಿ ಐಗಳ್ ಇತಿಹಾಸ ಪು. ೩೨೯. ‘ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು’ ಕೃತಿಯಲ್ಲಿ ಕಾರ್ಕಳ ಅರಸರ ಕೈಫಿಯತ್ತು’ ಪು. ೧೦೯.

[20] ಈ ಕಥೆಯನ್ನು ‘ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ’ ಎಂಬುದರ ‘ಇತಿಹಾಸ’ ಲೇಖನದಲ್ಲಿ ಡಾ| ಪಿ.ಎನ್. ನರಸಿಂಹ ಮೂರ್ತಿಯವರು ಉದ್ಧರಿಸಿದ್ದಾರೆ. ಕೈಪಿಯತ್ತು ಈ ಕಥೆಯನ್ನು ಮುಂದುವರಿಸಿ, ಭೈರರಸನು ಕಾಬೆಟ್ಟು ಹೆಗ್ಗಡೆಯ ಮನೆಯ ಸಮೀಪ ಅರಮನೆ ಕಟ್ಟಿಸಹೊರಟಾಗ ಅಲ್ಲಿದ್ದ ಭೂತವು ತೊಂದರೆ ಕೊಟ್ಟಿತೆಂದೂ, ಹಿಂದೆ ಆಳುತ್ತಿದ್ದ ಹೆಗ್ಗಡೆಯ ಕೈಯಿಂದ ಒಂದು ತೆಂಗಿನಕಾಯಿ ಕೊಡಿಸಿದಲ್ಲಿ ಭೂತದ ತೊಂದರೆ ನಿವಾರಣೆಯಾಗುವುದೆಂದು ತಿಳಿದು ಬಂದು ಭೈರರಸನು ಆ ಹೆಗ್ಗಡೆಗೆ ಧೈರ್ಯ ಹೇಳಿ ಕರೆಸಿ ಭೂತಕ್ಕೆ ಆತನಿಂದ ತೆಂಗಿನಕಾಯಿ ಕೊಡಿಸಿ, ಆತನಿಗೆ ಮನೆ, ಉಂಬಳಿ ಕೊಟ್ಟು ಆತ ಮನೆತನ ನೋಡಿಕೊಂಡು ಹೋಗುವಂತೆ ಮಾಡಿದನೆಂದೂ ವಿವರಗಳು ನೀಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು ‘ಕಾರ್ಕಳ ಅರಸರ ಕೈಫಿಯತ್ತು’ ಪು. ೧೧೦. ಈ ಕಥೆಯಲ್ಲಿ ಕಾಬೆಟ್ಟು ಹೆಗ್ಗಡೆಯ ಪ್ರಜೆಗಳು ಭೈರರಸನು ಮೂಡಬಿದಿರೆಗೆ ಯಾತ್ರಾರ್ಥಿಯಾಗಿ ಬಂದಿದ್ದಾಗ ಅವನನ್ನು ಭೇಟಿ ಮಾಡಿದರೆಂದು ಐಗಳ್ ಇತಿಹಾಸದಲ್ಲಿ ಹೇಳಿದೆ.

[21] ಐಗಳ್ ಇತಿಹಾಸ, ಪು. ೩೩೯.

[22] ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ, ಪು. ೧೧ – ೧೨.

[23] ಡಾ| ಗುರುರಾಜ ಭಟ್, STHC, ಪು. ೮೪.

[24] ಡಾ| ಕೆ.ವಿ.ರಮೇಶ್, HSK ಪು. ೧೩೪.

[25] ಅದೇ ಪು. ೧೩೪.

[26] ಅದೇ ಪು. ೧೪೦.

[27] ಡಾ| ಗುರುರಾಜ ಭಟ್, STHC, ಪು.೮೫.

[28] ಕಾರ್ಕಳ ಒಂದು ಪ್ರಾದೇಶಿಕ ಅಧ್ಯಯನ, ಪು. ೧೨. ಈ ಕಾಳಲದೇವಿಯ ಪತಿ ನಾಗಪ್ಪವೊಡೆಯ ಎಂಬವನೆಂದೂ, ವಿಜಯನಗರದ ಆಳ್ವಿಕೆಯನ್ನು ಒಪ್ಪಿಕೊಂಡು ಈತನು ರಾಜ್ಯವಾಳಿದನೆಂದೂ ಕ್ರಿ.ಶ. ೧೩೬೫ರ ಶಾಸನವೊಂದರಲ್ಲಿ ಇವನ ಉಲ್ಲೇಖವಿದೆಯೆಂದೂ ಡಾ| ನರಸಿಂಹ ಮೂರ್ತಿ ಹೇಳಿದ್ದಾರೆ. ಅದೇ ಪು. ೧೪.