ಹಾಡುವಳ್ಳಿಯ ಸಾಳುವರು:

ಹಾಡುವಳ್ಳಿಯ ಸಾಳುವ ಮನೆತನಕ್ಕೆ ಸಂಬಂಧಿಸಿದ ಮೊದಲ ದೊರೆಯೆಂದರೆ, ೧೪ನೇ ಶತಮಾನದ ಕೊನೆಯಲ್ಲಿ ನಗಿರೆಯಲ್ಲಿ ಆಳುತ್ತಿದ್ದ ಹೈವರಸ ಅಥವಾ ಹೈವಭೂಪ. ಇವನ ರಾಣಿ ಭೈರಾದೇವಿ. ಇವನಿಗೆ ಮಲ್ಲಿರಾಯ, ಸಂಗಿರಾಯ ಹೆಸರಿನ ಇಬ್ಬರು ಮಕ್ಕಳು. ಮಲ್ಲಿರಾಯನು ಅಕಾಲ ಮರಣಕ್ಕೆ ತುತ್ತಾಗಲು, ಆತನ ಸಹೋದರ ಸಂಗಿರಾಯನು ಹಾಡುವಳ್ಳಿಯ ದೊರೆಯಾದನು. ಕ್ರಿ.ಶ. ೧೪೦೮ರ ಒಂದು ಶಾಸನವು ನಗಿರೆಯ ಹೈವಭೂಪ ಮತ್ತು ಸಂಕಮ್ಮರ ಮಗ ಸಂಗಿರಾಯನೆಂದು ಪರಿಚಯಸಿದರೆ, [1] ಮತ್ತೊಂದು ಶಾಸನವು, ಹೈವಭೂಪನ ಸುಕುಮಾರನೂ, ಭೈರಾದೇವಿಯ ಗರ್ಭರತ್ನ ಸಂಜಾತ ಸಂಗಿರಾಯನೆಂದು ಪರಿಚಯಿಸುತ್ತದೆ. [2] ಈ ದೃಷ್ಟಿಯಿಂದ ಭೈರಾದೇವಿಗೆ ಸಂಕಮ್ಮಯೆಂಬ ಹೆಸರೂ ಇದ್ದಂತೆ ಭಾವಿಸಬೇಕಾಗುತ್ತದೆ. ಇಲ್ಲವೇ ಹೈವರಾಜನಿಗೆ ಇಬ್ಬರು ರಾಣಿಯರಿದ್ದು ಸಂಗಿರಾಯ ಹೆಸರಿನ ಇಬ್ಬರು ಮಕ್ಕಳಿದ್ದರೆಂದು ಹೇಳಬೇಕಾಗುತ್ತದೆ. ಕ್ರಿ.ಶ. ೧೪೦೮ ರಿಂದ ೧೪೪೯ರ ವರೆಗೆ ಅಂದರೆ ಸುಮಾರು ೪೦ ವರ್ಷಗಳ ವರೆಗೆ ಇವನು ರಾಜ್ಯವಾಳಿದನು. ಇದಕ್ಕೆ ಕಾರಣ ಇವನ ದಕ್ಷ ಆಡಳಿತ. ಒಂದು ಶಾಸನವು “…ಕಲಿಗಳ ಮುಖದ ಕೈಕಟಕ ಸೂರೆಕಾರ, ಹುಸಿವರ ಸೂಲ, ಕಡಿತಲೆಯ ಮಲ್ಲ, ಅವನಿಯಂಕಕಾರ ವೈರಿಮಂಡಳಿಕರ ಗಂಡ ಏಕಾಂಗ ವೀರನೆಂದು” ಇವನನ್ನು ಸ್ತುತಿಸುತ್ತದೆ. [3] ವಿಜಯನಗರ ಅರಸರ ವಿರುದ್ಧ ತಾನು ಸ್ವತಂತ್ರನೆಂದು ದಂಗೆಯೆದ್ದಾಗ, ಚಕ್ರವರ್ತಿ ದೇವರಾಯನ ನಿರೂಪದಂತೆ ಬಾರಕೂರು ರಾಜ್ಯವನ್ನು ಆಳುತ್ತಿದ್ದ ಮಹಾಪ್ರಧಾನ ಶಂಕರದೇವವೊಡೆಯನು ದೊಡ್ಡ ಸೈನ್ಯ ಸಮೇತನಾಗಿ ಬಂದು ಈ ದಂಗೆಯನ್ನು ಅಡಗಿಸಬೇಕಾಯಿತು. ಆಗ ಭಟ್ಕಳದಲ್ಲಿ ಯುದ್ಧ ನಡೆದಾಗ ಸಂಗಿರಾಯನ ಭಟನಾದ ಮಾಬುನಾಯಕನು ವೀರಸ್ವರ್ಗವನ್ನು ಪಡೆಯುತ್ತಾನೆ. [4] ಇದೇ ಸಂದರ್ಭದಲ್ಲಿ ನಗಿರೆಯಲ್ಲಿಯೂ ಸಂಗಿರಾಯ ಹೆಸರಿನ ದೊರೆಯಿದ್ದು ಆತನು ಹಾಡುವಳ್ಳಿಯ ಮೇಲೆ ಯುದ್ಧ ಮಾಡಿದ ವಿಚಾರವನ್ನು ಈ ಹಿಂದೆ ಪ್ರಸ್ತಾಪಿಸಲಾಗಿದೆ.

ಸಂಗಿರಾಯನ ತರುವಾಯ ಇವನ ಮಗನಾದ ಇಂದಗರಸ ಅಥವಾ ಇಂದ್ರರಸನು ಹಾಡುವಳ್ಳಿಯ ದೊರೆಯಾದನು. ಕ್ರಿ.ಶ.೧೪೪೯ರ ಹೊಗೆಕೆರೆ (ಸಾಗರ ತಾಲೂಕು) ಶಾನದಲ್ಲಿ ಇವನು ಅಲ್ಲಿಯ ಪಾರ್ಶ್ವನಾಥನ ಬಸದಿಗೆ ದಾನನೀಡಿದ ಉಲ್ಲೇಖವಿದೆ. [5] ಇವನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಇತ್ತೀಚೆಗೆ ಬೈಂದೂರಿನಲ್ಲಿ ಶಾಸನವೊಂದು ಪತ್ತೆಯಾಗಿದ್ದು ಸಂಗಿರಾಯನ ಕುಮಾರ ಇಂದ್ರರಸಯೆಂದು ಅದು ಸ್ಪಷ್ಟಪಡಿಸುತ್ತದೆ. ಇದರ ಕಾಲ ಶಕ ೧೩೭೧ (ಕ್ರಿ.ಶ. ೧೪೪೯). ಅಲ್ಲಿಯ ಬಸದಿಗೆ ದಾನ ನೀಡಿದ ವಿಷಯ ಶಾಸನದಲ್ಲಿದೆ. ಸಾಗರದಲ್ಲಿ ದೊರೆತ ಇನ್ನೆರಡು ಶಾಸನಗಳ ಆಧಾರದಿಂದ ಹಾಡುವಳ್ಳಿಯ ಮುಂದಿನ ಅರಸರನ್ನು ಗುರುತಿಸಬಹುದಾಗಿದೆ. [6] ಇಂದ್ರರಸನ ತರುವಾಯ ಎರಡನೆಯ ಸಂಗಿರಾಯನು ಪಟ್ಟಕ್ಕೆ ಬಂದನು. ಇವನ ಆಳಿಕೆ ಎಷ್ಟು ವರ್ಷಯೆಂಬುದು ಸ್ಪಷ್ಟವಿಲ್ಲ. ಕೆಲವರು ಊಹೆಯಂತೆ ಇವನು ಕ್ರಿ.ಶ. ೧೪೭೧ರವರೆಗೆ ಆಳಿಕೆ ನಡೆಸಿರಬೇಕು. [7] ಆ ಬಳಿಕ ಎರಡನೆಯ ಇಂದ್ರನು ಪಟ್ಟಕ್ಕೆ ಬಂದನು. ಇವನೇ ಹಾಡುವಳ್ಳಿಯ ಚಿರಪರಿಚಿತನಾದ ಇಂದಗರಸ. ನಗಿರೆಯ ಭೈರರಸನಿಗೂ, ಹೊನ್ನಾವರದ ಮಲ್ಲಿರಾಯನಿಗೂ ನಗಿರೆಯ ಸಿಂಹಾಸನಕ್ಕಾಗಿ ಯುದ್ಧ ನಡೆದಾಗ, ಮಲ್ಲಿರಾಯನ ಪಕ್ಷವಹಿಸಿ ಅವನ ಗೆಲುವಿಗೆ ಕಾರಣನಾದವನು. ಇವನು ಕ್ರಿ.ಶ. ೧೪೭೧ ರಿಂದ ೧೫೦೭ರ ವರೆಗೆ ಆಳಿಕೆ ನಡೆಸಿದಂತೆ ಹೇಳಲಾಗುತ್ತಿದೆ. ಆದರೆ ಕ್ರಿ.ಶ. ೧೪೮೮ರ ಸಾಗರದ ಶಾಸನವು ಸಾಳುವೇಂದ್ರನು ಸಂಗೀತಪುರದ ರಾಜನೆಂದು ಹೆಸರಿಸುತ್ತದೆ. [8] ಅಲ್ಲಿಯ ಇನ್ನೊಂದು ಶಾಸನವು ಸಂಗಿರಾಯನ ಮಗ ಇಂದ್ರರಸನು ಸಂಗೀತಪುರದ ದೊರೆಯೆಂದು ಹೇಳುತ್ತದೆ. [9] ಇದರ ಕಾಲ ಕ್ರಿ.ಶ. ೧೪೮೯. ಕ್ರಿ.ಶ. ೧೪೯೧ರ ಶಾಸನವು ಸಾಳುವೇಂದ್ರನು ಸಂಗಿರಾಯನ ಮಗನೆಂದೂ, ಈ ಸಂಗಿರಾಯನು ಇಂದಗರಸನ ಮಗನೆಂದೂ ಸ್ಪಷ್ಟಪಡಿಸುತ್ತದೆ. [10] ಈ ಎಲ್ಲ ಗೊಂದಲಗಳನ್ನು ಪರಿಹರಿಸಲು ಡಾ| ಗುರುರಾಜ ಭಟ್ಟರು ಪ್ರಯತ್ನಿಸಿ, ಎರಡನೆಯ ಇಂದಗರಸನ ಮತ್ತೊಂದು ಹೆಸರು ಸಾಳುವೇಂದ್ರ ಅಥವಾ ಇಂದ್ರರಸ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಭಟ್ಕಳದ ಹತ್ತಿರ ಶಿರೂರಿನಲ್ಲಿ ಹೊಸದಾಗಿ ತಾಮ್ರ ಶಾಸನವೊಂದು ಗಮನಕ್ಕೆ ಬಂದಿದೆ. ಇದರ ಕಾಲ ಕ್ರಿ.ಶ. ೧೪೭೪. ಅದರಲ್ಲಿ ಇಂದಗರಸರಾಯವೊಡೆಯರು ಹೈವೆ, ದ್ರಾವಿಡ, ಕೊಂಕಣ, ತುಳು, ಕೇರಳ ಮುಂತಾದ ರಾಜ್ಯಗಳನ್ನು ಪ್ರತಿಪಾಸುತ್ತಿದ್ದರೆಂದು ಹೇಳಲಾಗಿದೆ. ತಮ್ಮ ಅರಸರ ಪರಂಪರೆಯನ್ನು ಹೇಳುತ್ತ “…… ಮಯೂರವರ್ಮರಾಯರು ಸಂಗಿರಾಯರು ತಮ್ಮ ಹಚಾಜಿ ಮಲ್ಲಿರಾಯವೊಡೆಯರು” ಎಂದು ಉಲ್ಲೇಖಿಸುವುದು ಕುತೂಹಲದ ಅಂಶವಾಗಿದೆ. [11] ಈ ಶಾಸನದಲ್ಲಿ ಉಲ್ಲೇಖಿಸಿದ ಸಂಗಿರಾಯರು ಇಂದಗರಸನ ತಂದೆಯೆಂದೂ, ಮಲ್ಲಿರಾಯರು ಹೊನ್ನಾವರದಲ್ಲಿ ಆಳುತ್ತಿದ್ದ ನಗಿರೆಯ ದೊರೆಯೆಂದೂ ನಾವು ಭಾವಿಸಬಹುದು. ಈ ಶಾಸನದಲ್ಲಿ ಇಂದ್ರರಸನು ರಾಜಾಧಿರಾಜ, ರಾಜ ಪರಮೇಶ್ವರ ಮುಂತಾದ ಬಿರುದುಗಳನ್ನು ಹೊಂದಿರುವುದನ್ನು ಗಮನಿಸಿದರೆ, ವಿಜಯನಗರದ ವಿರುದ್ಧ ತಾನು ಸ್ವತಂತ್ರನೆಂದು ಭಾವಿಸಿದಂತಿದೆ.

ಇವನ ತರುವಾಯ ದೇವರಸವೊಡೆಯನು ಹಾಡುವಳ್ಳಿಯ ಸಿಂಹಾಸನವನ್ನೇರಿದನು. ಇವನ ಆಳ್ವಿಕೆಯನ್ನು ಸಮರ್ಥಿಸುವ ಬೈಂದೂರು ಶಾಸನದ ಕಾಲ ಕ್ರಿ.ಶ. ೧೫೨೩. [12] ಭಟ್ಕಳದ ಕ್ರಿ.ಶ. ೧೫೪೫ರ ಶಾಸನದಲ್ಲಿ ದೇವರಸವೊಡೆಯರ ಮೊಮ್ಮಗ ದೇವರಸರ ಹೆಸರಿನಲ್ಲಿ ಕೆಲವು ಸೆಟ್ಟಿಗಾರರು ಅಲ್ಲಿಯ ಹಿರೇಬಸದಿ ಪಾರ್ಶ್ವನಾಥನಿಗೆ ದಾನಬಿಟ್ಟಂತೆ ಹೇಳಲಾಗಿದೆ. [13] ಇತ್ತೀಚೆಗೆ ಹಾಡುವಳ್ಳಿಯ ಅಕಲಂಕ ಬ್ರಹ್ಮನ ಚಂದ್ರಸುಧಾಸೋನೆಯೆಂಬ ಕೃತಿಯೊಂದು ಹೊಸದಾಗಿ ಬೆಳಕಿಗೆ ಬಂದಿದ್ದು, ಅದರಲ್ಲಿ ದೇವರಸನ ಬಗ್ಗೆ ಕೆಲವು ಮಾಹಿತಿಗಳು ಸಿಗುತ್ತವೆ. (ಎಸ್.ಡಿ. ಶೆಟ್ಟಿ: ತುಳು ನಾಡಿನ ಜೈನಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ. ೧೯೯೮ ರಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ ಗ್ರಂಥ. ಅಪ್ರಕಟಿತ ಪುಟ : ೬೦೬.)

ಸಂಗಮೇಶನ ಸುತ ದೇವನೃಪನ ಸತಿ | ಮಂಗಲೆ ಮದಾಂಬಿಕಾತ್ಮಜಾ |
ನಂಗರೂಪ ಬ್ರಹ್ಮನು ಪೇಳ್ವನು ಕೇಳಿ | ಪಿಂಗದ ಸುಖವ ಪಡೆವುದೆಲ್ಲಾ (V – 244)
ದೇವರಾಜಸುತ ಶ್ರುತಮುನಿಗಳ ಶಿಷ್ಯ | ಭಾವೆ ಮಾದರಸಿಯಾತ್ಮಜ ಬ್ರಹ್ಮಾ |
ಜೀವ ಹಿತದ ಜಿನಕೃತಿಯ ಪೇಳ್ದನು ಕೇಳಿ | ಭಾವಿಸಿ ಭಾವಕರೊಲವಿಂದಾ ||(V – ೩೫೯)

ಈ ಪದ್ಯಗಳ ಹೇಳಿಕೆಯಿಂದ ದೇವರಸನು ಸಂಗಮೇಶನ ಸುತನೆಂದೂ, ದೇವರಸ ಮತ್ತು ಮಾದರಸಿಯರ ಮಗ ಈ ಕಾವ್ಯದ ಕರ್ತೃವಾದ ಬ್ರಹ್ಮನೆಂದೂ ಸ್ಪಷ್ಟವಾಗುತ್ತದೆ. ಕವಿಯ ಕಾಲ ಕ್ರಿ.ಶ. ೧೫೧೦. ದೇವರಸನ ನಂತರ ಆತನ ಸಹೋದರ ಗುರುರಾಯವೊಡೆಯನು ಪಟ್ಟಕ್ಕೆ ಬಂದನು. ಕ್ರಿ.ಶ. ೧೫೩೨ರ ಶಾಸನವು ಇವನನ್ನು ಸಂಗಿರಾಯವೊಡೆಯರ ಕುಮಾರನೆಂದು ಸ್ಪಷ್ಟಪಡಿಸುತ್ತದೆ. [14] ಧರ್ಮಸ್ಥಳದ ಮಂಜೂಷಾ ವಸ್ತುಸಂಗ್ರಹಾಲಯದ ತಾಮ್ರಶಾಸನವೊಂದರಲ್ಲಿ ಸಂಗಿರಾಯನಿಗೆ ದೇವರಾಯ ಮತ್ತು ಗುರುರಾಯರೆಂಬ ಇಬ್ಬರು ಮಕ್ಕಳಿರುವ ವಿಚಾರ ಸ್ಪಷ್ಟವಾಗಿದೆ. ಗುರುರಾಯವೊಡೆಯನು ಕ್ರಿ.ಶ. ೧೫೨೭ ರಲ್ಲಿ ಪಟ್ಟಕ್ಕೆ ಬಂದು, ಕ್ರಿ.ಶ. ೧೫೩೩ರ ವರೆಗೂ ಆಳ್ವಿಕೆಯನ್ನು ನಡೆಸಿದರು. [15] ಕ್ರಿ.ಶ.೧೪೩೦ರಲ್ಲಿ ಇವನು ನಗಿರೆಯ ಮೇಲೆ ದಂಡೆತ್ತಿ ಹೋದಾಗ ಇವನಿಗೆ ಭಾರೀ ಸೋಲುಂಟಾಯಿತು. ಆ ಯುದ್ಧದಲ್ಲಿ ಯೀಸರದೇವನಾಯಕನು ತನ್ನ ಸ್ವಾಮಿಕಾರ್ಯದಲ್ಲಿ ತನುವೋಕುಳಿಯಾಡಿ ಪ್ರಾಣತೆರಬೇಕಾಯಿತು. [16]

ಭಟ್ಕಳದ ಶಾಸನದಲ್ಲಿ ಗುರುರಾಯವೊಡೆಯ ಮತ್ತು ವೀರಾದೇವಿ ಅಮ್ಮನ ಮಗ ಚೆನ್ನರಾಜ ಭೂಪಾಲನು ಸಲ್ಲೇಖನ ಸ್ವೀಕರಿಸಿದಂತೆ ಹೇಳಲಾಗಿದೆ. [17] ಇವರ ಇನ್ನೊಬ್ಬ ಮಗ ದೇವರಾಜನೂ, ಚೆನ್ನರಾಜನಿಗಿಂತಲೂ ಮೊದಲು ತೀರಿಕೊಂಡ ಸೂಚನೆಯಿದೆ. ಹೀಗಾಗಿ ಗುರುರಾಜನ ನಂತರ ಅವನ ಮಗ ಎರಡನೆಯ ದೇವರಾಯನು ಕ್ರಿ.ಶ. ೧೫೩೩ ರಿಂದ ೧೫೪೨ರ ವರೆಗೆ ಹಾಡುವಳ್ಳಿಯ ದೊರೆಯಾಗಿದ್ದ ನೆಂಬ ವಿಚಾರವು ನಮ್ಮನ್ನು ಸಂದೇಹಕ್ಕೆ ಕೆಡುವುತ್ತದೆ. [18] ಕ್ರಿ.ಶ. ೧೫೪೫ರ ಶಾಸನದಲ್ಲಿ “ಶ್ರೀಮನ್ಮಹಾಮಂಡಲೇಶ್ವರ ದೇವರಸವೊಡೆಯರ ಸೊಸೆ ಶ್ರೀಮನ್ಮಹಾಮಂಡ ಲೇಶ್ವರರು ಚೆಂನಾದೇವಿ ಅಮ್ಮನವರು ಸಂಗೀತಪುರವರಾಧಿಷ್ಟಿತರಾಗಿ ಬಟಕಳ ಮುಂತಾದ ಸಮಸ್ತ ರಾಜ್ಯವನ್ನು ಪಾಲಿಸುತ್ತಿದ್ದ” ಸ್ಪಷ್ಟ ಉಲ್ಲೇಖವಿದೆ. [19] ಇದೇ ಕಾಲಕ್ಕೆ ಸೇರಿದ ಮತ್ತೊಂದು ಶಾಸನವು “ದೇವರಸರ ಮೊಮ್ಮಗ ದೇವರಸ”ನೆಂದು ತಿಳಿಸುತ್ತದೆ. [20] ಈ ದೃಷ್ಟಿಯಿಂದ ದೇವರಸವೊಡೆಯನು ಗುರುರಾಯವೊಡೆಯರ ಮಗನಾಗಿರದೆ ಚೆಂನಾದೇವಿಯ ಮಾವನಾಗಿರಬೇಕೆಂದು ತೋರುತ್ತದೆ. ಇವನು ಎಷ್ಟು ಕಾಲ ಆಳಿಕೆ ನಡೆಸಿದನೆನ್ನುವುದು ಸ್ಪಷ್ಟವಿಲ್ಲ. ಇವನಿಗೆ ಸಂಬಂಧಿಸಿದ ಒಂದೇವೊಂದು ಸ್ವತಂತ್ರ ಶಾಸನವೂ ಉಪಲಬ್ಧವಿಲ್ಲ.

ಸಾಳುವರ ಕೊನೆಯ ಆಳ್ವಿಕೆ:

ಗೇರುಸೊಪ್ಪೆ ಮತ್ತು ಹಾಡುವಳ್ಳಿಯ ಸಾಳುವ ಮನೆತನಕ್ಕೆ ಸಂಬಂಧಿಸಿದಂತೆ, ಇವರ ಆಳಿಕೆಯ ಕೊನೆಯ ಭಾಗದಲ್ಲಿ ರಾಣಿಚೆನ್ನಾದೇವಿ, ಭೈರಾದೇವಿ ಮತ್ತು ಚೆನ್ನಭೈರಾದೇವಿ ಹೀಗೆ ಮೂರು ಹೆಸರುಗಳು ಕಂಡು ಬರುತ್ತವೆ. ಇವರಲ್ಲಿ ಚೆನ್ನಾದೇವಿ, ಚೆನ್ನಭೈರಾದೇವಿಯರು ಹಾಡುವಳ್ಳಿಯಿಂದಲೂ, ಭೈರಾದೇವಿ ಗೇರುಸೊಪ್ಪೆಯಿಂದಲೂ ಆಳ್ವಿಕೆ ನಡೆಸಿದಳು. ಕೆಲವರು ಚೆನ್ನಾದೇವಿ, ಚೆನ್ನಭೈರಾದೇವಿ ಒಬ್ಬರೆಂದು ಭಾವಿಸಿದ್ದಾರೆ. [21] ಇದು ಸರಿಯಲ್ಲ.

ಕ್ರಿ.ಶ. ೧೫೪೫ರಲ್ಲಿ ಚೆನ್ನಾದೇವಿಯು ಆಡಳಿತ ವಹಿಸಿಕೊಂಡಾಗ ಗೋವೆಯ ಪೋರ್ತುಗೀಜರು ಭಟ್ಕಳದ ಮೇಲೆ ಯುದ್ಧ ಸಾರಿದರು. ಇದಕ್ಕೆ ಕಾರಣ ಅವರಿಗೆ ಕೊಡುತ್ತಿದ್ದ ಕಪ್ಪವನ್ನು ನಿಲ್ಲಿಸಿದ್ದು. ಗೋವೆಯ ರಾಜ್ಯಪಾಲ ಅಲ್ಫಾನ್ಸೋ ಡಿ’ಸೋಜಾ ಎನ್ನುವವನು ೧೨೦೦ ಸೈನಿಕನ್ನು ಕರೆತಂದು ಭಟ್ಕಳದಲ್ಲಿದ್ದ ರಾಣಿಯ ಅರಮನೆಯನ್ನೂ ನಗರವನ್ನೂ ಸುಟ್ಟು ಬೂದಿ ಮಾಡಿದನು. ಆಗ ಭಟ್ಕಳದಲ್ಲಿ ರಕ್ತದ ಪ್ರವಾಹವೇ ಹರಿಯಿತು. ಮಿಕ್ಲರ್‌ಯೆಂಬ ಪೋರ್ತುಗೀಜ್ ಕವಿ, ಲುಸಿಯಾದ್‌ಯೆಂಬ ಕಾವ್ಯದಲ್ಲಿ ಈ ಸಾಹಸವನ್ನು ಬಣ್ಣಿಸಿದ್ದಾನೆ (Daners – I, 460 – 61).

ಕ್ರಿ.ಶ. ೧೫೪೬ರ ಎರಡು ಶಾಸನಗಳು ಈ ರಾಣಿಯ ಕೊನೆಯ ದಾಖಲೆಗಳೆಂದು ಭಾವಿಸಲಾಗಿತ್ತು. [22] ಆ ಬಳಿಕ ಭೈರಾದೇವಿಯು ಸ್ವಲ್ಪಕಾಲ ಆಳ್ವಿಕೆ ನಡೆಸಿದ ನಂತರ, ಚೆನ್ನಭೈರಾದೇವಿಯು ಪಟ್ಟಕ್ಕೆ ಬಂದಳೆಂದು ತಿಳಿಯಲಾಗಿತ್ತು. ಆದರೆ ಇತ್ತೀಚೆಗೆ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಈ ಮನೆತನಕ್ಕೆ ಸಂಬಂಧಪಟ್ಟ ಎರಡು ತಾಮ್ರಶಾಸನಗಳು ಬೆಳಕಿಗೆ ಬಮದು, ಕೆಲವು ಹೊಸ ವಿಚಾರಗಳು ಉಲ್ಲೇಖಿಸಲ್ಪಟ್ಟಿವೆ. [23]

ಇವುಗಳಲ್ಲಿ ಒಂದು ಶಾಸನವು, ಚೆನ್ನಾದೇವಿಯು ಕ್ರಿ.ಶ. ೧೫೪೮ರ ವರೆಗೆ ಆಳಿಕೆ ನಡೆಸಿದಂತೆ ಸ್ಪಷ್ಟಪಡಿಸುತ್ತದೆ. ಇವರ ಮಂತ್ರಿಯಾದ ದೇವಸೆಟ್ಟಿಯ ಮಗ ತಿಮ್ಮಿ ಸೆಟ್ಟಿಯು ಹೊನ್ನಾವರದಲ್ಲಿ ಶಾಂತೀಶ್ವರ ಬಸದಿಯೊಂದನ್ನು ಕಟ್ಟಿಸಿದಂತೆ ಅದರಲ್ಲಿ ಹೇಳಿದೆ. ಈ ರಾಜರ ಪರಂಪರೆಯನ್ನು ಹೇಳುತ್ತ ಇವರು ಕದಂಬಾನ್ವಯದವರೆಮದೂ ಸಾಳ್ವೇಂದ್ರನ ಮಗ ಸಂಗಿರಾಯ, ಈ ಸಂಗಿರಾಯನ ಪತ್ನಿ ಶಂಕರಾಂಬೆ, ಇವರ ಮಕ್ಕಳು ಮಲ್ಲಿಯಾರ, ಸಾಳ್ವೇಂದ್ರ ದೇವ ಮತ್ತು ಶ್ರೀ ಗುರುರಾಯವೊಡೆಯರೆಂದು ಆ ಶಾಸನ ಸ್ಪಷ್ಟಪಡಿಸುತ್ತದೆ. ಈ ಗುರುರಾಯನ ಹೆಂಡತಿ ಮೇಲೆ ಉಲ್ಲೇಖಿಸಲ್ಪಟ್ಟ ಚೆನ್ನಮಾಂಬೆ. ಎರಡನೆಯ ಶಾಸನವು ಕ್ರಿ.ಶ. ೧೪೬೨ಕ್ಕೆ ಸಂಬಂಧಿಸದ್ದ “ಮಹಾಮಂಡಲೇಶ್ವರ ಭೈರಾದೇವಿ ಅಂಮನವರ ವರಕುಮಾರಿಯರು ಚೆನ್ನಭೈರಾದೇವಿಯೆಂದು” ತಿಳಿಸುತ್ತದೆ.

ಚೆನ್ನಭೈರಾದೇವಿಗೆ ಸಂಬಂಧಿಸಿದ ಒಟ್ಟೂ ೧೦ ಶಾಸನಗಳು ಇದವರೆಗೆ ಬೆಳಕಿಗೆ ಬಂದಿವೆ.

೧. ಕ್ರಿ.ಶ. ೧೫೬೨ರ ಧರ್ಮಸ್ಥಳ ಮಂಜೂಷಾದಲ್ಲಿರುವ ತಾಮ್ರಶಾಸನ. [24]

೨. ಕ್ರಿ.ಶ. ೧೫೬೨ರ ಉಪ್ಪುಂದ ದುರ್ಗಾಪರಮೇಶ್ವರೀ ದೇವಾಲಯದ ತಾಮ್ರಶಾಸನ. [25]

೩. ಕ್ರಿ.ಶ. ೧೫೫೬ರ ಭಟ್ಕಳ ಭಂಡಬಸ್ತಿಯ ಶಿಲಾಫಲಕ. [26]

೪. ಕ್ರಿ.ಶ. ೧೫೭೩ರ ಹಳದೀಪುರ ವೀರಗಲ್ಲು[27].

೫. ಕ್ರಿ.ಶ. ೧೫೭೩ರ ಪಡುಬಿದಿರೆ ತಾಮ್ರಶಾಸನ. [28]

೬. ಕ್ರಿ.ಶ. ೧೫೯೮ರ ಗೇರುಸೊಪ್ಪೆ ನಗರಕೇರಿ ತಿರುಮಲೆ ದೇವರ ದೇವಾಲಯದ ಶಿಲಾಫಲಕ. [29]

೭. ಕ್ರಿ.ಶ. ೧೫೯೮ರ ಗೇರುಸೊಪ್ಪೆ ನಗರಕೇರಿ ಬಸ್ತಿಯಿಂದ ಗೋವರ್ಧನಗಿರಿಗೆ ಹೋಗುವ ದಾರಿಯ ಎಡಭಾಗದ ಶಿಲಾಫಲಕ. [30]

೮. ಕ್ರಿ.ಶ. ೧೫೬೨ರ ಮೆಕಂಜಿ ಸಂಗ್ರಹದಲ್ಲಿರುವ ಶಾಸನ. ತಮಿಳುನಾಡು, ಹಸ್ತಪ್ರತಿ ಭಂಡಾರ ಶಾಸನಸ ಸಂಖ್ಯೆ : ೩೦ ೧. ಪುಟ : ೪೮೪ ೮೫.[31]

೯. ಕ್ರಿ.ಶ. ೧೫೭೯ – ಅದೇ ಶಾಸನ ಸಂಖ್ಯೆ : ೩೦೦. ಪುಟ : ೪೮೩ – ೪೮೪. [32]

೧೦. ಕ್ರಿ.ಶ. ೧೫೮೭ – ಅದೇ ಶಾಸನ ಸಂಖ್ಯೆ : ೨೯೮. ಪುಟ : ೪೮೦ – ೪೮೨. [33]

ಇವುಗಳ ಜೊತೆಗೆ ಪೋರ್ತುಗೀಜ್ ದಾಖಲೆಗಳು ಕೂಡ ಇವಳು ನಡೆಸಿದ ಹಲವಾರು ಯುದ್ಧ, ವ್ಯಾಪಾರ, ಆಡಳಿತ ವಿಷಯಗಳಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ನೀಡುತ್ತವೆ.

ಇವುಗಳಲ್ಲಿ ಮೆಕೆಂಜಿ ಸಂಗ್ರಹದಲ್ಲಿರುವ ಎರಡು ಶಾಸನಗಳು ಚೆನ್ನಭೈರಾದೇವಿಯ ಕುರಿತು ಇನ್ನಷ್ಟು ಸ್ವಾರಸ್ಯಕರವಾದ ವಿವರಗಳನ್ನು ನೀಡುತ್ತವೆ. ಕ್ರಿ.ಶ. ೧೫೭೯ರ ಶಾಸನವು “….ನರಸಣ್ಣವಡೆಯರ | ವೀರಮ್ಮನವರ ಕುಮಾರತಿ ಯರಾದ ವೀರವೊಡೆಯರ ಸುಜಾತೆಯಾದ | ಶ್ರೀಮನ್ವಮಹಾಮಂಡಲೇಶ್ವರ ಸಾಳುವ ಕೃಷ್ಣದೇವರಸವರ ಹೆಂಡ| ತಿಯಾದ ಪಟ್ಟಮಹಾದೇವಿಯರೆನಿಸಿದ ಶ್ರೀಮಹ್ಮಹಾ ಮಂಡಲೇ|ಶ್ವರರು ಚೆನ್ನಭೈರಾದೇವಿಯಮ್ಮ….” ಯೆಂದು ಉಲ್ಲೇಖಿಸುತ್ತದೆ. ಹಾಗೆಯೇ ಮುಂದುವರಿದು ಇವಳಿಗೆ ಘಂಟೆಯಪ್ಪ ಹೆಸರಿನ ಮೈದುನ ಇರುವುದಾಗಿಯೂ ತಿಳಿಸುತ್ತದೆ. ಹೀಗಾಗಿ ಇವಳು ನರಸಣ್ಣವೊಡೆಯ ವೀರಮ್ಮನವರ ಮಗಳೆಂದೂ, ಸಾಳುವ ಕೃಷ್ಣದೇವರಸವೊಡೆಯರ ಪಟ್ಟಮಹಾದೇವಿ ಎಂದು ನಾವು ಭಾವಿಸಬೇಕಾಗುತ್ತದೆ. ಇನ್ನೊಂದು, ಕ್ರಿ.ಶ. ೧೫೮೭ರ ಶಾಸನದಲ್ಲಿ “ಶ್ರೀಮನ್ಮಹಾ ಮಂಡಲೇಶ್ವರರು ಸಾಳುವಯಿಮ್ಮಡಿ ಚೆನ್ನಭೈರಾದೇವಿಯಮ್ಮನವರಿಗೆ ಸಕಲ ಸಾಮ್ರಾಜ್ಯಾಭ್ಯುದಯಕೆ” ಕಾರಣವಾಗಿ ಸಿರಿಯ ಮಲ್ಲಣ್ಣವೊಡೆಯರು ಬೆಳಗುಳದ ಗುಮ್ಮಟನಾಥ ಸ್ವಾಮಿಗೆ ಮಹಾಮಸ್ತಕಾಭಿಷೇಕವನ್ನು ಮಾಡಿಸಿದರೆಂದು ಹೇಳಿದೆ. ಇಲ್ಲಿ ಚೆನ್ನಭೈರಾದೇವಿಯನ್ನು ಇಮ್ಮಡಿ ಚೆನ್ನಭೈರಾದೇವಿಯೆಂದು ಕರೆಯಲಾಗಿದೆ. ಈ ಅಂಶವನ್ನು ವಿಶೇಷವಾಗಿ ಗಮನಿಸಬೇಕು. ಇದುವರೆಗಿನ ಯಾವ ದಾಖಲೆಯೂ ಇಮ್ಮಡಿ ಚೆನ್ನಭೈರಾದೇವಿಯನ್ನು ಉಲ್ಲೇಖಿಸಿಲ್ಲ.

ಕೃಷ್ಣದೇವರಸನು ಕಾಯ್ಕಿಣಿಯ ಅರಮನೆಯಲ್ಲಿದ್ದನೆಂದು ಕ್ರಿ.ಶ.೧೫೪೨ರ ಶಾಸನದಲ್ಲಿ ಹೇಳಲಾಗಿದೆ. [34] ಕ್ರಿ.ಶ. ೧೫೪೯ರ ಶಾಸನವು ಇವನು ಹಾಡುವಳ್ಳಿಯ ದೊರೆಯೆಂದು ತಿಳಿಸುತ್ತದೆ. [35] ಹೀಗಾಗಿ ಇವನು ಚೆನ್ನಭೈರಾದೇವಿಯ ಸೋದರಮಾವ ನಾಗಿರದೆ, ಆಕೆಯ ಪತಿಯೆಂದು ತಿಳಿಯುವುದು ಹೆಚ್ಚು ಸಮಂಜಸವಾಗಿದೆ.

ಈಕೆ ರಾಜ್ಯಭಾರವನ್ನು ಕೈಗೆ ತೆಗೆದುಕೊಂಡ ಬಳಿಕ ತನ್ನ ರಾಜ್ಯದ ಗಡಿ ಪ್ರದೇಶಗಳನ್ನು ರಕ್ಷಿಸಿಕೊಳ್ಳುವತ್ತ ಹೆಚ್ಚು ಗಮನವಹಿಸಿದಳು. ಯುದ್ಧದಲ್ಲಿ ಪರಿಣತಿಯುಳ್ಳ ನಾಯಕರ ಪಡೆ ಇವಳಿಗೆ ಬೆಂಗಾವಲಾಗಿ ನಿಂತಿತ್ತು. ಇವಳ ಪ್ರಧಾನಿ ಜೆಟ್ಟಿನಾಯಕ, ಸೇನಾಪತಿ ವೀರಣನಾಯಕ. ಪೋರ್ತುಗೀಜರು ನಡೆಸಿದ ವಿನಾಶದಿಂದ ಬರಿದಾದ ಭಟ್ಕಳವು ಇವಳ ಕಾಲದಲ್ಲಿ ಮತ್ತೆ ಚೇತರಿಸಿತು. ವಿಜಯನಗರ ಅರಸರ ಮಹಾಸೈನ್ಯಕ್ಕೆ ಹೇರಳವಾಗಿ ಅರೇಬಿಯಾ, ಪರ್ಷಿಯಾ ದೇಶದ ಕುದುರೆಗಳು ಆಮದಾಗುತ್ತಿದ್ದುದು ಈ ರಾಣಿಗೆ ಸೇರಿದ್ದ ಹೊನ್ನಾವರ, ಭಟ್ಕಳ, ಮಿರ್ಜಾನ್‌ಬಂದರಗಳಿಂದ. ಹೀಗಾಗಿ ಸದಾಶಿವರಾಯನೂ ಇವಳೊಡನೆ ಸ್ನೇಹದಿಂದಲೇ ಇದ್ದನು. ವಿಜಯನಗರ ಪತನವಾಗುವ ವರೆಗೆ ಇವಳಿಗೆ ಶತ್ರುಗಳನ್ನು ಎದುರಿಸುವ ಸಮಸ್ಯೆ ಹೆಚ್ಚಾಗಿ ಕಾಡಲಿಲ್ಲ. ಆ ಬಳಿಕ ಅನೇಕ ಯುದ್ಧಗಳಲ್ಲಿ ತೊಡಗಬೇಕಾಯಿತು.

ಕ್ರಿ.ಶ. ೧೫೬೨ರಲ್ಲಿ ಪೋರ್ತುಗೀಜರು ಬಸ್ರೂರಿಗೆ ಮುತ್ತಿಗೆ ಹಾಕಿದಾಗ ಈ ರಾಣಿಯು ತನ್ನ ಮೂರುಸಾವಿರ ಸೈನಿಕರನ್ನು ಅಲ್ಲಿಯ ತೋಳಹ ಅರಸರ ಸಹಾಯಕ್ಕೆ ಕಳುಹಿಸಿ ಅವರನ್ನು ಸೋಲಿಸಿದಳು. [36] ಅನಂತರ ಕ್ರಿ.ಶ. ೧೫೬೯ ಮತ್ತು ೧೫೭೦ರಲ್ಲಿ ಪೋರ್ತುಗೀಜರೊಡನೆ ಹೊನ್ನಾವರದಲ್ಲಿ ಯುದ್ಧ ಮಾಡಬೇಕಾಗಿ ಬಂದಾಗ ಸ್ವತಃ ರಾಣಿಯೇ ಸೈನ್ಯದೊಡನೆ ತೆರಳಿ ಭೀಕರವಾಗಿ ಯುದ್ಧ ನಡೆಸಿ ಅವರನ್ನು ಹಿಮ್ಮೆಟ್ಟಿಸಿದಳು. [37] ಈ ವಿಚಾರವನ್ನು ಪೋರ್ತುಗೀಜ್ ಇತಿಹಾಸಕಾರ ಅಂತೋನಿಯೋ ಪಿಮಟೋ ತನ್ನ ಬರಹದಲ್ಲಿ ತಿಳಿಸಿದ್ದಾನೆ. ಈಕೆ ಕಲ್ಲಿಕೋಟೆಯ ಜಾಮೋರಿನ್ ಜೊತೆಗೆ ಕ್ರಿ.ಶ. ೧೫೭೨ರಲ್ಲೂ, ವಿಜಾಪುರದ ಆದಿಲ್‌ಶಹನೊಡನೆ ಕ್ರಿ.ಶ. ೧೫೬೯ರಲ್ಲೂ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದ್ದಳು. [38] ಆದರೆ ಘಟ್ಟದ ಮೇಲಿನ ಬೀಳಗಿ ಮತ್ತು ಕೆಳದಿ ಅರಸರ ಜೊತೆಗಿನ ಇವಳ ಸಂಬಂಧವು ಉತ್ತಮವಾಗಿರಲಿಲ್ಲ. ಕ್ರಿ.ಶ. ೧೫೫೦ ರಲ್ಲಿ ವಿಜಯನಗರ ಚಕ್ರವರ್ತಿ ಸದಾಶಿವರಾಯನು ಕೆಳದಿ ಸದಾಶಿವನಾಯಕನಿಗೆ ಇಡಿಯ ತುಳುರಾಜ್ಯವನ್ನು ಅಮರಮಾಗಣೆಯಾಗಿ ಬಿಟ್ಟುಕೊಟ್ಟ ಬಳಿಕ ಗೇರುಸೊಪ್ಪೆ ರಾಜ್ಯವು ತೊಂದರೆಯನ್ನು ಎದುರಿಸಬೇಕಾಗಿ ಬಂತು. ಕೆಳದಿ ಅರಸರ ಪ್ರಭಾವದಿಂದ ಬೀಳಗಿ ಅರಸರುತಮ್ಮ ಮತ ಶ್ರದ್ಧೆಯನ್ನು ಬದಲಾಯಿಸಿಕೊಂಡಿದ್ದರಿಂದ, ಈ ರಾಣಿಯನ್ನು ಸಹಜವಾಗಿಯೇ ದ್ವೇಷಿಸುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಗೇರುಸೊಪ್ಪೆಯ ಗಡಿಯೊಳಗೆ ನುಗ್ಗಿ ಬರುತ್ತಿದ್ದರು. ಕ್ರಿ.ಶ. ೧೫೭೩ರಲ್ಲಿ ಬೀಳಗಿಯ ರಂಗರಾಜವೊಡೆಯನು ಹಳದೀಪುರದವರೆಗೆ ನುಗ್ಗಿ ಬಂದಾಗ, ರಾಣಿಯು ತನ್ನ ಸೈನ್ಯವನ್ನು ಹಳದೀಪುರಕ್ಕೆ ಕಳುಹಿಸಿಕೊಟ್ಟಳು. ಆಗ ನಡೆದ ಯುದ್ಧದಲ್ಲಿ ರಂಗರಾಜನು ಸೋತು ಹಿಮ್ಮೆಟ್ಟಬೇಕಾಯಿತು. ರಾಣಿಯ ನಿಷ್ಠಾವಂತ ಯೋಧ ದೇವರಾಯ ನಾಯಕನು ಬೀಳಗಿಯ ಸೈನ್ಯದ ಮೇಲೆ ಬಿದ್ದು ಕುದುರೆಗಳನ್ನೂ, ಕಲಾಳುಗಳನ್ನೂ ಕೊಂದು ತಾನು ವೀರ ಮರಣವನ್ನು ಪಡೆದನು. [39] ಕೆಳದಿಯ ದೊಡ್ಡ ಸಂಕಣ್ಣ, ಚಿಕ್ಕಣ್ಣ, ಒಂದನೆಯ ವೆಂಕಟಪ್ಪ ನಾಯಕರೊಡನೆ ಇವಳು ಆಗಾಗ ಯುದ್ಧ ನಡೆಸಬೇಕಾಯಿತು. ಕೆಳದಿ ನೃಪವಿಜಯದ ಹೇಳಿಕೆಯಂತೆ, ಒಂದನೆಯ ವೆಂಕಟಪ್ಪ ನಾಯಕನು (ಕ್ರಿ.ಶ. ೧೬೦೭) ತನ್ನ ಸೇನಾನಿ ದಳವಾಯಿ ಲಿಂಗಣ್ಣನನ್ನು ಕಳುಹಿಸಿ ಗೇರುಸೊಪ್ಪೆ ಹಾಡುವಳ್ಳಿಯ ರಾಜ್ಯವನ್ನು ನಾಶಮಾಡಿ, ರಾಣಿಯನ್ನು ಸೆರೆಹಿಡಿದು ಕೆಳದಿಗೆ ಕರೆದೊಯ್ದನು. ತನ್ನ ಕೊನೆಗಾಲವನ್ನು ಸೆರೆಮನೆಯಲ್ಲಿಯೇ ಕಳೆದ ಚೆನ್ನಭೈರಾದೇವಿಯು ಅಲ್ಲಿಯೇ ಅಸುನೀಗಿದಳು. ಹೀಗೆ ಸಾಳುವರ ರಾಜ್ಯ ಅಧಃಪತನಗೊಂಡು, ಕೆಳದಿ ರಾಜ್ಯಕ್ಕೆ ಸೇರಿಹೋಯಿತು.

ತುಳುನಾಡಿಗೆ ಸಾಳುವ ಕೊಡುಗೆ :

ತುಳುನಾಡಿನ ಧರ್ಮಸಮನ್ವಯದ ಪರಂಪರೆಯನ್ನು ಮುಂದುವರಿಸಿದವರಲ್ಲಿ ಸಾಳುವರು ಪ್ರಮುಖರು. ಧರ್ಮ, ಸಾಹಿತ್ಯ, ಕಲೆಗಳಿಗೆ ಇವರು ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲಾ ಧರ್ಮಗಳು ಇವರ ಕಾಲದಲ್ಲಿ ಉದಾರಾಶ್ರಯ ಪಡೆದವು. ಅನೇಕ ಬಸದಿ, ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರಗಳು ನಡೆದವು. ಗೇರುಸೊಪ್ಪೆಯ ವೆಂಕಟೇಶ್ವರ, ಗೋವರ್ಧನಗಿರಿಯ ಆಂಜನೇಯ, ಗುಂಡಬಾಳೆಯ ಹನುಮಂತ, ಭಟ್ಕಳದ ತಿರುವೆಂಗಳ ಕೇತಪ್ಪ ನಾರಾಯಣ, ಬೈಂದೂರಿನ ಶನೀಶ್ವರ, ಧಾರೇಶ್ವರದ ಮಹಾಬಲೇಶ್ವರ, ಹೀಗೆ ಅನೇಕ ದೇವಾಲಯಗಳಿಗೆ ಉಮಬಳಿಗಳನ್ನು ಬಿಟ್ಟರು. ಉಪ್ಪುಂದದ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಧರ್ಮಚ್ಯುತಿ ಯುಂಟಾದಾಗ ಚೆನ್ನಭೈರಾದೇವಿಯು ಸಂಬಂಧಪಟ್ಟವರನ್ನು ಕರೆಯಿಸಿ ವಿಚಾರಣೆ ನಡೆಸಿ, ಪೂಜಾ ವಿನಿಯೋಗಗಳು ಮೊದಲಿನಂತೆ ನಡೆಯುವ ವ್ಯವಸ್ಥೆ ಮಾಡಿದಂತೆ ಅಲ್ಲಿಯ ತಾಮ್ರಶಾಸನದಲ್ಲಿ ಹೇಳಲಾಗಿದೆ. [40] ಪಡುಬಿದಿರೆಯ ಮುನಿಸುವ್ರತ ಬಸದಿಯನ್ನು ಕಟ್ಟಲು ಇವಳೇ ಸಹಾಯ ಮಾಡಿದ್ದಳು.

ತುಳುನಾಡಿನ ಶಿಲ್ಪಕಲೆಯ ಔನ್ನತ್ಯವನ್ನು ಸಾರುವ, ಮೂಡಬಿದರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಯ ಎದುರಿನ ಚಿತ್ರಾದೇವಿ ಮಂಟಪ, ಭೈರಾದೇವಿಯ ಮಂಟಪದ ನಿರ್ಮಾಣ, ಗೇರುಸೊಪ್ಪೆಯ ಅರಸರ ಕೊಡುಗೆಗಳಾಗಿವೆ. ಈ ಬಸದಿಯ ಎದುರು ಹಿರೇಭೈರವನ ರಾಣಿಯಾದ ನಾಗಿಲೆಯು ಉನ್ನತ ಮಾನಸ್ತಂಭವನ್ನು ಮಾಡಿಸಿದ್ದಾಳೆ. ಗೇರುಸೊಪ್ಪೆಯ ಚತುರ್ಮುಖ ಬಸದಿ, ಹಾಡುವಳ್ಳಿಯ ಚಂದ್ರನಾಥನ ಬಸದಿ, ಹರಿಪೀಟ (೨೪ ತೀರ್ಥಂಕರರ ಬಸದಿ) ಭಟ್ಕಳದ ಜಟ್ಟಪ್ಪ ನಾಯಕನ ಬಸದಿ ಮೊದಲಾದವು ಶಿಲ್ಪಕಲೆಯ ಉನ್ನತ ಮಾದರಿಗಳು. ಜಟ್ಟಪ್ಪ ನಾಯಕನ ಬಸದಿಯ ಆವರಣದಲ್ಲಿ ಸುಂದರವಾದ ಮಾನಸ್ತಂಭ, ಪಂಚಸ್ತಂಭ ಬ್ರಹ್ಮನಗುಡಿಯೂ ಇದೆ. ಮೂಡಬಿದರೆಯ ಹೊಸಬಸದಿ, ಗುರುಬಸದಿಗಳಲ್ಲಿ ಇಲ್ಲಿಯ ಅರಸರು ನಿರ್ಮಿಸಿ ಕೊಟ್ಟಿರುವ ಹಲವಾರು ಕಂಚಿನ ಪ್ರತಿಮೆಗಳೂ ಇವೆ. ಗೇರುಸೊಪ್ಪೆಯಲ್ಲಿರುವ ಪಾರ್ಶ್ವನಾಥ, ನೇಮಿನಾಥ, ವರ್ಧಮಾನ, ಹಾಡುವಳ್ಳಿಯ ಚಂದ್ರನಾಥ, ಶಿರಾಲಿಯ ಪಾರ್ಶ್ವನಾಥ ಮುಂತಾದ ಪ್ರತಿಮೆಗಳು ಸಾಳುವರ ಮಹತ್ವದ ಕೊಡುಗೆಗಳಾಗಿವೆ.

ಗೇರುಸೊಪ್ಪೆಯಲ್ಲಿ ಸಮಂತಭದ್ರ ಪರಂಪರೆಯ ಮಠವಿದ್ದಂತೆ, ಹಾಡುವಳ್ಳಿಯಲ್ಲಿ ಅಕಲಂಕ ಪರಂಪರೆಯ ಮಠವಿತ್ತು. ಈ ಮಠವು ಮುಂದೆ ಸ್ವಾದಿಗೆ ವರ್ಗಾವಣೆಗೊಂಡಿದೆ. ಪ್ರಸಿದ್ಧ ವ್ಯಾಕರಣಕಾರ ಭಟ್ಟಾ ಕಲಂಕನು ಈ ಮಠದ ಪರಂಪರೆಗೆ ಸೇರಿದವನು. ಕನ್ನಡ – ಸಂಸ್ಕೃತ ಭಾಷೆಯ ಕವಿ ವರ್ಧಮಾನ (ಕ್ರಿ.ಶ. ೧೫೪೧), ಕಾವ್ಯಸಾರದ ಕರ್ತೃ ಅಭಿನವವಾದಿ ವಿದ್ಯಾನಂದ (ಕ್ರಿ.ಶ. ಸು.೧೫೦೦), ಸಾಳ್ವ ಭಾರತದ ಸಾಳ್ವಕವಿ (ಕ್ರಿ.ಶ. ೧೪೮೧), ಧನ್ಯಕುಮಾರ ಚರಿತೆಯ ಆದಿಯಪ್ಪ (ಕ್ರಿ.ಶ. ೧೪೬೦), ಅಹಿಂಸಾ ಚರಿತೆಯ ಪಾಯಣ್ಣ (ಕ್ರಿ.ಶ. ೧೪೪೮), ಜೀವಂಧರ ಷಟ್ಪದಿಯ ಕೋಟೇಶ್ವರ (ಕ್ರಿ.ಶ. ೧೪೪೫) ಮೊದಲಾದವರು ಸಾಳುವ ಕಾಲದ ಪ್ರಸಿದ್ಧ ಕವಿಗಳು. ಇತ್ತೀಚೆಗೆ ಬೆಳಕಿಗೆ ಬಂದಿರುವ ಚಂದ್ರಸುಧಾ ಸೋನೆಯ ಕರ್ತೃ ಅಕಳಂಕ ಬ್ರಹ್ಮನು ಇಲ್ಲಿಯ ರಾಜಮನೆತನಕ್ಕೆ ಸೇರಿದವನು. ಇವನ ಕಾಲ ಕ್ರಿ.ಶ. ೧೫೧೦. ಇವನು ಹಾಡುವಳ್ಳಿಯ ಸಂಗಮೇಶನ ಸುತನಾದ ದೇವರಾಜ ಮತ್ತು ಮಾದರಸಿಯರ ಮಗನೆಂದು ಹೇಳಿಕೊಂಡಿದ್ದಾನೆ.

ಸಾಳುವರ ಕಾಲದಲ್ಲಿ ಹೊನ್ನಾವರ, ಮಂಕಿ, ಶಿರಾಲಿ, ಕೈಕಿಣಿ, ಬೈಂದೂರು ಪ್ರದೇಶಗಳು ಕೂಡ ಜೈನ ಧಾರ್ಮಿಕ ಕೇಂದ್ರಗಳಾಗಿ ಅಭಿವೃದ್ಧಿಗೆ ಬಂದಿದ್ದವು. ಗೇರುಸೊಪ್ಪೆ, ಹಾಡುವಳ್ಳಿ, ಭಟ್ಕಳ, ಶಿರಾಲಿಯಲ್ಲಿ ರಾಜರ ವಾಸದ ಅರಮನೆಗಳಿದ್ದವು. ಇಂದು ಅರಮನೆಯ ನಿವೇಶನಗಳನ್ನು ಗುರುತಿಸಲಾಗದಷ್ಟು ಹಾಳಾಗಿವೆ. ಹಾಡುವಳ್ಳಿಯಲ್ಲಿ ಇಂದ್ರಗಿರಿ, ಚಂದ್ರಗಿರಿ ಬೆಟ್ಟದ ಮಧ್ಯಭಾಗದಲ್ಲಿ ಅಂಕಣಕಟ್ಟೆಯೆಂದು ಕರೆಯಲ್ಪಡುವ ಸ್ಥಳದಲ್ಲಿ ಹಿಂದೆ ಅರಮನೆಯಿತ್ತು. ಅದಕ್ಕೆ ಹೊಂದಿಕೊಂಡಂತೆ ರಾಜಬೀದಿ, ಅದರ ಪಕ್ಕದಲ್ಲಿ ಸಾಳ್ವೇಂದ್ರನಿಂದ ನಿರ್ಮಿಸಲ್ಪಟ್ಟ ಚಂದ್ರನಾಥನ ಬಸದಿಯಿದೆ. ಆ ಬಸದಿಗೆ ಮಾಲಾಗಂಟೆಗಳನ್ನೂ, ಕಂಚಿನ ಮಾನಸ್ತಂಭವನ್ನೂ ಮಾಡಿಸಿ ದಾನ ನೀಡಿದ್ದನು. ಗೇರುಸೊಪ್ಪೆಯಲ್ಲಿ ಅರಮನೆಯ ಎರಡು ನಿವೇಶನಗಳಿವೆ. ಒಂದು ನಿವೇಶನವು ಜ್ವಾಲಾಮಾಲಿನಿ ಗುಡಿಯ ಮೇಲ್ಭಾಗದಲ್ಲಿ, ಚತುರ್ಮುಖ ಬಸದಿಗೆ ಹೊಂದಿಕೊಂಡಂತೆಯಿತ್ತು. ಇನ್ನೊಂದು ದೊಡ್ಡ ಅರಮನೆಯು ಶರಾವತಿ ನದಿಯ ಇನ್ನೊಂದು ದಂಡೆಯ ಮೇಲೆ ನಗರ ಬಸ್ತಿಕೇರಿಯೆಂಬ ಸ್ಥಳದಲ್ಲಿತ್ತು. ಕೂಷ್ಮಾಂಡಿನಿಯಕ್ಷಿ, ಪಾರ್ಶ್ವನಾಥ ಬಸದಿ, ನಿಸದಿಸ್ತೂಪಗಳ ಅವಶೇಷಗಳು ಆ ಸ್ಥಳದಲ್ಲಿವೆ. ಗೇರುಸೊಪ್ಪೆಯಿಂದ ಸ್ವಲ್ಪ ದೂರದ ಗೋವರ್ಧನ ಗಿರಿಯಲ್ಲಿ ಇನ್ನೊಂದು ಅರಮನೆಯ ನಿವೇಶನವಿದ್ದು ಅಲ್ಲಿಯೂ ಹಲವಾರು ಬಸದಿಗಳಿವೆ. ಈ ಪ್ರದೇಶಗಳಲ್ಲಿ ಅನ್ವೇಷಣೆ ನಡೆಸಿದರೆ ಸಾಳುವರ ಮನೆತನಕ್ಕೆ ಸಂಬಂಧಿಸಿದ ಇನ್ನಷ್ಟು ದಾಖಲೆಗಳು ಬೆಳಕಿಗೆ ಬರಬಹುದು.

ಆಡಳಿತದ ದೃಷ್ಟಿಯಿಂದ ಇವರ ರಾಜ್ಯದ ಒಳಗಡೆ ಗ್ರಾಮ, ನಗರ, ನಾಡುಮಟ್ಟದ ಅಧಿಕಾರಿಗಳಿದ್ದರು. ಈ ಅಧಿಕಾರ ಕೆಲವೊಮ್ಮೆ ವಂಶಪಾರಂಪರ‍್ಯವಾಗಿ ಬರುತ್ತಿದ್ದವು. ರಾಜನ ಕೈಕೆಳಗೆ ಮಂತ್ರಿಮಂಡಳವಿದ್ದು, ಮಂತ್ರಿ, ನೇನಾಪತಿ, ರಾಜ – ಪುರೋಹಿತರೆಂಬ ಅಧಿಕಾರಿಗಳಿರುತ್ತಿದ್ದರು. ವ್ಯಾಪಾರ, ವ್ಯವಸಾಯಗಳಿಗೆ ಹೆಚ್ಚಿನ ಪ್ರೋತ್ಸಾಹವಿತ್ತು. ಈ ರಾಜರ ಮುಖ್ಯ ಬಂದರುಗಳಾದ ಮಿರ್ಜಾನ್‌, ಹೊನ್ನಾವರ, ಭಟ್ಕಳ, ಬೈಂದೂರುಗಳು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಿದ್ದವು.

ಈ ಬಂದರುಗಳಿಂದ ಕರಿಮೆಣಸು, ಅಕ್ಕಿ, ಕೊಬ್ಬರಿಗಳು ರಫ್ತಾಗುತ್ತಿದ್ದವು. ೫೦೦ ಖಂಡಿ ಕರಿಮೆಣಸು, ೨೦ ಪರದಾನೆ ಅಕ್ಕಿಯನ್ನು ಪ್ರತಿವರ್ಷ ಗೇರುಸೊಪ್ಪೆಯ ಚೆನ್ನಭೈರಾದೇವಿಯು ಗೋವೆಯ ಪೋರ್ತುಗೀಜರಿಗೆ ಕಳುಹಿಸುತ್ತಿದ್ದಳು. ಇದರ ಬೆಲೆಯನ್ನು ಅವರು ೬ ತಿಂಗಳು ಮುಂಚೆಯೇ ಕೊಡುತ್ತಿದ್ದರೆಂದು ಗೋವೆಯ ವೈಸ್‌ರಾ‌ಯ್‌ಡಾಮ್‌ಮೇನೇಜಸ್ ತನ್ನ ವರದಿಯಲ್ಲಿ ತಿಳಿಸಿದ್ದಾನೆ. ಅದಕ್ಕಾಗಿ ಈ ರಾಣಿಯನ್ನು ಕರಿಮೆಣಸಿನ ರಾಣಿಯೆಂದು ಪೋರ್ತುಗೀಜರು ಕರೆದಿದ್ದಾರೆ. ಒಟ್ಟಿನಲ್ಲಿ ಸಾಳುವರು, ಆಡಳಿತದಲ್ಲಿ ತೋರಿದ ಆಸಕ್ತಿ, ಆರ್ಥಿಕ ವ್ಯವಸ್ಥೆ, ಕಲೆ, ಸಾಹಿತ್ಯ, ಶಿಲ್ಪಗಳಿಗೆ ನೀಡಿದ ಪ್ರೋತ್ಸಾಹಗಳಿಂದ ಇವರ ರಾಜ್ಯವು ಕರಾವಳಿಯಲ್ಲಿ ಸಂಪತ್‌ಭರಿತ ಸಾಂಸ್ಕೃತಿಕ ನೆಲೆವೀಡಾಗಿತ್ತೆಂದು ಹೇಳಬಹುದು.

– ಡಾ| ಎಸ್.ಡಿ. ಶೆಟ್ಟಿ*

 

[1] ಡಾ| ಗುರುರಾಜ ಪಟ್ಟ ಪಿ.: ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ಚರ್, ಪುಟ:೫೩.

[2] K.I.Vol. I, No.38.

[3] K.I.Vol. I, No.39.

[4] K.I.Vol. I, No.40.

[5] ಅದೇ.

[6] A.R.No. 537 for 1929 – 30.

[7] E.C. Vol. VIII, No. 163, 164.

[8] ಡಾ| ಗುರುರಾಜ ಭಟ್ಟಪಿ.: ಸ್ಟಡೀಸ್ ಇನ ತುಳುವ ಹಿಸ್ಟರಿ ಅಂಡ್ ಕಲ್ಚರ್, ಪುಟ:೧೨೨.

[9] E.C. Vol. VIII, ಪ್ರಸ್ತಾವನೆ.

[10] E.C. Vol. VIII, ಸಾಗರ. 163.

[11] ಅದೇ.

[12] ಸ್ವತಃ ಪರಿಶೀಲನೆ ನೋಡು: ಪ್ರೋ| ಎಸ್.ಡಿ.ಶೆಟ್ಟಿ, ‘ತುಳುನಾಡಿನ ಜೈನಧರ್ಮ – ಒಂದು ಸಾಂಸ್ಕೃತಿಕ ಅಧ್ಯಯನ’, ಅನುಬಂಧ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಾದರಪಡಿಸಿದ ಪ್ರಬಂಧ ೧೯೯೮.

[13] ARSIE No. 1929 – 30.

[14] K.I.Vol. III, Part – 1, No.77.

[15] K.I.Vol. III, Part – 1, No.78.

[16] ಅದೇ.

[17] K.I.Vol. III, Part – 1, No.71.

[18] ಡಾ| ಗುರುರಾಜ ಭಟ್ಟ ಪಿ.: ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ಚರ್, ಪುಟ: ೧೨೪ ಪೂರ್ವೋಕ್ತ.

[19] K.I.Vol. III, Part – 1, No.78.

[20] K.I.Vol. III, Part – 1, No.77.

[21] ಡಾ| ರಮೇಶ್‌ಕೆ.ವಿ. : ತುಳುನಾಡಿನ ಇತಿಹಾಸ. ಪುಟ: ೧೧೫, ಪೂರ್ವೋಕ್ತ.

[22] K.I.Vol. III, Part – 1, Nos.75, 76 of 1939 – 40 ನೋಡಿ: ಕರ್ನಾಟಕ ಪರಂಪರೆ: ಸಂಪುಟ – ೧. ಪುಟ: ೨೧೨, ಪೂರ್ವೋಕ್ತ.

[23] ಸ್ವತಃ ಪರಿಶೀಲನೆ. ನೋಡು: ಮಂಜುವಾಣಿ – ಮಾಸಪತ್ರಿಕೆ ಜೂನ್‌೧೯೮೯. ಗೇರುಸೊಪ್ಪೆಯ ತಾಮ್ರ ಶಾಸನ – ಎಸ್.ಡಿ.ಶೆಟ್ಟಿ.

[24] ಅದೇ.

[25] ಡಾ| ವಸಂತ ಮಾಧವ ಕೆ.ಜಿ.: ರಿಲಿಜನ್ಸ್ ಇನ್ ಕೋಸ್ಟಲ್ ಕರ್ನಾಟಕ. ಪುಟ:೧೬೦.

[26] K.I.Vol. III, Part – 1, No.L 80 of 1939 – 40.

[27] ಸ್ವತಃ ಪರಿಶೀಲನೆ. ಶಾಸನದ ಪಠ್ಯ ನನ್ನ ಸಂಗ್ರಹದಲ್ಲಿದೆ.

[28] ಡಾ| ಗುರುರಾಜ ಭಟ್ಟ ಪಿ: ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ಚರ್. ಪುಟ: ೪೫೨.

[29] MAR – 1928. No.112.

[30] MAR – 1928. No.70.

[31] ಭಟ್ಟ ಸೂರಿ ಕೆ.ಜಿ.: ಗೇರುಸೊಪ್ಪೆಯ ಜೈನ ವಾಸ್ತು ಮತ್ತು ಮೂರ್ತಿಶಿಲ್ಪ. ಪುಟ: ೫೯ – ೬೦. ಕರ್ನಾಟಕ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ೧೯೯೬.

[32] ಅದೇ

[33] ಅದೇ.

[34] K.I.Vol. III, Part – 1, No.14 of 1939 – 40.

[35] ಕರ್ನಾಟಕ ಪರಂಪರೆ – ಸಂಪುಟ:೨, ಪುಟ: ೨೧೨, ಪೂರ್ವೋಕ್ತ. ನೋಡಿ: I. H.R.C. XVIII – 52.

[36] ಉತ್ತರ ಕನ್ನಡ ದರ್ಶನ : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ೧೯೮೬. ಲೇಖನ ನೋಡಿ: ಗೇರುಸೊಪ್ಪೆಯ ಸಾಳುವರು. ಡಾ| ಕೆ.ಜಿ.ವಸಂತ ಮಾಧವ, ಪುಟ: ೪೬ – ೫೪.

[37] ಅದೇ.

[38] ಅದೇ.

[39] ಸ್ವತಃ ಪರಿಶೀಲನೆ. ಶಾಸನದ ಪಠ್ಯ ನನ್ನ ಸಂಗ್ರಹದಲ್ಲಿದೆ. ನೋಡಿ: ಕೆ.ಆರ್.ಐ. ಡಿಸ್ಕ್ರಿಪ್ಟಿವ್‌ಲೀಸ್ಟ್‌. ೬೭ – ೧೯೪೧ – ೪೨.

[40] ಡಾ| ವಸಂತ ಮಾಧವ.ಕೆ.ಜಿ: ಗೇರುಸೊಪ್ಪೆ ಸಾಳುವರು. ಉತ್ತರ ಕನ್ನಡ ದರ್ಶನ. ಪುಟ: ೫೨. ಪೂರ್ವೋಕ್ತ.

* ಪ್ರಾಧ್ಯಾಪಕ, ಶ್ರೀ ಧ.ಮ. ಕಾಲೇಜು, ಉಜಿರೆ – ೫೭೪ ೨೪೦, ದ.ಕ.