ಇತಿಹಾಸ ಕಾಲದಲ್ಲಿ ಕರಾವಳಿ ಕರ್ನಾಟಕ ಅನೇಕ ಪ್ರಭಾವಿ ರಾಜವಂಶಗಳ ಆಡಳಿತಕ್ಕೆ ಒಳಪಟ್ಟಿತ್ತು. ಕ್ರಿಸ್ತಶಕದ ಆರಂಭದಿಂದ ೧೪ನೇ ಶತಮಾನದ ಮಧ್ಯಭಾಗದವರೆಗೆ ಆಳುಪರು ಅಧಿಕಾರ ನಡೆಸುತ್ತಿದ್ದರು. ಆಮೇಲೆ ಹೊಯ್ಸಳರು ವಿಜಯನಗರದ ಅರಸರು ಹಾಗೂ ಕೆಳದಿ ನಾಯಕರು ತಮ್ಮ ಆಡಳಿತದ ವ್ಯಾಪ್ತಿಯನ್ನು ಈ ಪ್ರದೇಶಕ್ಕೆ ವಿಸ್ತರಿಸಿದ್ದರು. ಅಲ್ಲದೆ ಈ ಪ್ರದೇಶದಲ್ಲಿ ಅನೇಕ ಸಾಮಂತ ಅರಸು ಮನೆತನಗಳೂ ಆಳಿದವು. ಅವುಗಳಲ್ಲಿ ಪ್ರಮುಖವಾದ ಒಂದು ಮನೆತನವೆಂದರೆ ಉಡುಪಿ ತಾಲೂಕು ಹಾಗೂ ಜಿಲ್ಲೆಯ ಸೂರಾಲು ಎಂಬಲ್ಲಿಂದ ಆಳಿದ ತೊಳಹರು (ತೊಳಹಾರರು).

ತೊಳಹರ ಮೂಲದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ಅವರು ಬೆಳಗಾಮ ಪ್ರದೇಶದಿಂದ ಇಲ್ಲಿಗೆ ಬಂದವರು ಎಂಬ ಅಭಿಪ್ರಾಯವೊಂದಿದೆ.

[1]ಅವರನ್ನು ಉಲ್ಲೇಖಿಸುವ ಅತ್ಯಂತ ಪ್ರಾಚೀನ ದಾಖಲೆಯೆಂದರೆ ಕ್ರಿ.ಶ. ೧೦೪೨ರ ಸಾಗರದ ಶಾಸನ.[2] ಅದರಲ್ಲಿ ತೊಱಹ ಎಂದು ಹೆಸರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಇತರ ಶಾಸನಗಳಲ್ಲಿಯೂ ಇವರ ಬಗ್ಗೆ ತಿಳಿಸಲಾಗಿದೆ. ಶಿವಮೊಗ್ಗದ ಶಾಸನದಲ್ಲಿ ತೊಱಹರ ಕಾಳಯ್ಯ ದನಗಳನ್ನು ಕೊಂಡುಹೋಗುವ ಉಲ್ಲೇಖವಿದೆ.[3] ಕ್ರಿ.ಶ. ೧೦೪೨ ರಲ್ಲಿ

ಬಿಜ್ಜರಸ ಎನ್ನುವವ ‘ತೊಱಹರ ಮರಿ’ ಎನ್ನುವ ಬಿರುದನ್ನು ಹೊಂದಿರುವ ವಿಷಯವನ್ನು ಸಾಗರದ ಶಾಸನ ತಿಳಿಸುತ್ತದೆ.[4] ಇವರ ಬಗ್ಗೆ ಹೇಳುವ ಇನ್ನೊಂದು ದಾಖಲೆಯೆಂದರೆ ನಗರದ ಶಾಸನ.[5] ಅದರಲ್ಲಿ ಕುಲತಿಲಕ ತೊಳಹರ ಬಳಿ ಎಂದು ಹೇಳಲಾಗಿದೆ.

ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಅವರು ಮೂಲತಃ ಕಿಗ್ಗದ (ಚಿಕ್ಕಮಗಳೂರು ಜಿಲ್ಲೆ) ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡ ಸಾಂತಳಿಗೆ ೧೦೦೦ ಪ್ರದೇಶದಿಂದ ಇಲ್ಲಿಗೆ ಸುಮಾರು ೧೦ – ೧೧ನೇ ಶತಮಾನದಲ್ಲಿ ಬಂದು ನೆಲೆಸಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕ್ರಿ.ಶ. ೧೩೯೭ರ ಎರಡನೇ ಹರಿಹರನ ಶಾಸನ ಅದಕ್ಕೆ ಒಪ್ಪಿಗೆ ನೀಡಿರುವ ವ್ಯಕ್ತಿಗಳನ್ನು ಹೆಸರಿಸುವಾಗ ಹತ್ತುಕೇರಿಯ ಹಲವರು ಹಾಗೂ ಹಂಜಮಾನರೊಂದಿಗೆ ಸಾಂತಳಿಗೆಯ ತೊಳಹರನ್ನೂ ಉಲ್ಲೇಖಿಸುತ್ತದೆ.[6] ಅಲ್ಲದೆ ಬಾರಕೂರಿನ ಕ್ರಿ.ಶ. ೧೩೯೯ರ ಇನ್ನೊಂದು ಶಾಸನ ತುಳು ರಾಜ್ಯದ ಮೇರೆ – ಕಟ್ಟಳೆಯನ್ನು ವಿವರಿಸುವಾಗ, ಆಸ್ಥಾನದಲ್ಲಿ ನೆರೆದಿದ್ದ ವ್ಯಕ್ತಿಗಳನ್ನು ಹೆಸರಿಸುತ್ತಾ ‘ಸಾಗುವಳಿಗೆಯ ಕೊಳಹರ’ ಬಗ್ಗೆ ತಿಳಿಸುತ್ತದೆ.[7] ದಿ| ಡಾ| ಪಿ. ಗುರುರಾಜ ಭಟ್ಟರು ತೊಳಹರ ಬಗ್ಗೆ ಬರೆಯುತ್ತಾ ಈ ಶಾಸನದಲ್ಲಿ ಸಾಂತಳಿಗೆಯ ತೊಳಹರನ್ನು ಸಾಗುವಳಿಗೆಯ ಕೊಳಹರು ಎಂಬುದಾಗಿ ತಪ್ಪಾಗಿ ಓದಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.[8]

ಸುಮಾರು ೪೦೦ ವರ್ಷಗಳಿಗೂ ಹೆಚ್ಚು ಕಾಲ ಸೂರಾಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ರಾಜಕೀಯ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ ತೊಳಹರ ವಂಶಾವಳಿಯ ಬಗ್ಗೆ ಖಚಿತವಾಗಿ ಹೇಳಲು ಸಾಕಷ್ಟು ಸಾಕ್ಷ್ಯಾಧಾರಗಳು ನಮಗೆ ಸಿಗುವುದಿಲ್ಲ. ಕರಾವಳಿ ಕರ್ನಾಟಕದ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಿರತಕ್ಕ ಹಲವಾರು ವಿದ್ವಾಂಸರುಗಳುಸಹ ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿಲ್ಲ. ಡಾ| ಕೆ.ವಿ. ರಮೇಶ್‌ರವರು ಕಳಸ ಕಾರ್ಕಳದ ಬೈರರಸರು, ನಗಿರೆ ಮತ್ತು ಹಾಡುವಳ್ಳಿಯ ಸಾಳ್ವರು, ಚೌಟರು ಮತ್ತು ಬಂಗರ ವಂಶವೃಕ್ಷಗಳನ್ನು ನೀಡುತ್ತಾ ‘ತುಳುನಾಡಿನ ಇನ್ನುಳಿದ ಅರಸು ಮನೆತನಗಳ ಪ್ರಸ್ತಾಪವಿರುವ ಶಾಸನಗಳು ಸಾಕಷ್ಟು ಸಂಖ್ಯೆಯಲ್ಲಿ ದೊರೆಯದೇ ಹೋಗಿರುವ ಕಾರಣ ಆ ಮನೆತನಗಳ ವಂಶವೃಕ್ಷಗಳನ್ನು ಕೊಡುವುದು ಸಾಧ್ಯವಿಲ್ಲದ ಮಾತು’ ಎಂದಿದ್ದಾರೆ.[9] ಆದರೆ ಡಾ| ಪಿ.ಎನ್. ನರಸಿಂಹ ಮೂರ್ತಿಯವರು ತಮ್ಮ ಪಿಎಚ್.ಡಿ. ಮಹಾಪ್ರಬಂಧದಲ್ಲಿ ಈ

ಅರಮನೆ – ಸೂರಾಲು [ಚಿತ್ರ: ನಾಗರಾಜ ವಾರಂಬಳ್ಳಿ]

ಅರಮನೆ – ಸೂರಾಲು [ಚಿತ್ರ: ನಾಗರಾಜ ವಾರಂಬಳ್ಳಿ]

ಜೈನ ಬಸದಿ - ಕೊಕ್ಕರ್ಣೆ ಸೂರಾಲು ಹೊರನೋಟ [ಚಿತ್ರ: ನಾಗರಾಜ ವಾರಂಬಳ್ಳಿ]

ಜೈನ ಬಸದಿ – ಕೊಕ್ಕರ್ಣೆ ಸೂರಾಲು ಹೊರನೋಟ [ಚಿತ್ರ: ನಾಗರಾಜ ವಾರಂಬಳ್ಳಿ]

ಕೆಳಗಿನಂತೆ ವಂಶಾವಳಿಯ ಪಟ್ಟಿಯನ್ನೂ ನೀಡಿದ್ದಾರೆ.[10]

– ತೊಳಹ ಕ್ರಿ.ಶ. ೧೧೩೯
– ಮಾದಾಡಿ ತೊಳಹ (ಸು.ಕ್ರಿ.ಶ. ೧೩೭೫ – ೧೪೦೫)
– ಬೆಮ್ಮಣಾಡಿ ತೊಳಹ (ಸು.ಕ್ರಿ.ಶ. ೧೪೦೫ – ೧೪೧೨)
– ಬೆಮ್ಮಣಂಚ (I) (ಸು.ಕ್ರಿ.ಶ. ೧೪೧೨ – ೧೪೨೦)
– ಬೆಮ್ಮಣಕೋರಿ ತೊಳಹ
– ಹೊಸಬು ಕೋರಿ (?) (ಸು. ಕ್ರಿ.ಶ. ೧೪೨೦ – ೧೪೩೪)
– ಸಂಕರ ನಾಯಕ ತೊಳಹ (ಸು. ಕ್ರಿ.ಶ. ೧೪೩೪ – ೧೪೩೮)
– ನಾಗಂಚ ತೊಳಹ (ಸು. ಕ್ರಿ.ಶ. ೧೪೩೮ – ೧೪೫೨)
– ಬೆಮ್ಮಣಂಚ ತೊಳಹ (II) (ಸು. ಕ್ರಿ.ಶ. ೧೪೫೧ – ೧೫೧೦)
– ಕೋಟಿ ಸಾವಂತ ತೊಳಹ (ಸು. ಕ್ರಿ.ಶ. ೧೫೧೦ – ೧೫೫೫)
– ಚೆನ್ನಯರಸ ತೊಳಹ (ಸು. ಕ್ರಿ.ಶ. ೧೫೫೫ – ೧೫೮೦)
– ಚೆನ್ನಯರಸ ತೊಳಹ (II) (ಸು. ಕ್ರಿ.ಶ. ೧೫೮೦ – ೧೬೪೫)
– ಮಹಾಲಿಂಗರಸ ತೊಳಹ (ಸು. ಕ್ರಿ.ಶ.೧೬೪೫ – ೧೬೭೬)
– ಮದನದೇವಿ ತೊಳಹ (ಸು. ಕ್ರಿ.ಶ. ೧೬೭೬ – ೧೬೯೦)

ಸೂರಾಲಿನ ತೊಳಹರ ಬಗ್ಗೆ ಈಗ ಲಭ್ಯವಿರುವ ಆಧಾರಗಳನ್ನು ಅವಲೋಕಿಸಿದರೆ ಡಾ| ಪಿ.ಎನ್. ನರಸಿಂಹಮೂರ್ತಿಯವರು ನೀಡಿರುವ ವಂಶಾವಳಿ ಅತ್ಯಂತ ಸೂಕ್ತ ಎಂದು ಕಂಡು ಬರುತ್ತದೆ. ತುಳುನಾಡಿನ ಶಾಸನಗಳಲ್ಲಿ ತೊಳಹರ ಬಗ್ಗೆ ಅತ್ಯಂತ ಪ್ರಾಚೀನ ಪ್ರಸ್ತಾಪ ಕಂಡು ಬರುವುದು ಕ್ರಿ.ಶ. ೧೧೩೯ರ ಬಾರಕೂರಿನ ಪಂಚಲಿಂಗೇಶ್ವರ ದೇವಸ್ಥಾನದ ಒಂದು ಶಾಸನದಲ್ಲಿ. ಅದರ ಪ್ರಕಾರ ಆಳುಪ ದೊರೆ ಕವಿ ಆಳುಪೇಂದ್ರನು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನಿರ್ಮಿಸಿದ ಶಿವಾನಂದಯೋಗಿ ನಿವೇದ್ಯ ಶಾಲೆಯ ನಿರ್ವಹಣೆಗಾಗಿ ೩೦ ಹೊನ್ನಿನ ಪಾಂಡ್ಯ ಗದ್ಯಾಣಗಳನ್ನು ಸೂರಾಲಿನ ತೊಳಹನ ವಶದಲ್ಲಿಡಲಾಯಿತು.[11] ಆದರೆ ಯಾವುದೇ ರಾಜನ ಪ್ರಸ್ತಾಪ ಇಲ್ಲಿ ಕಂಡು ಬರುವುದಿಲ್ಲ. ಆದರೆ ಈ ಶಾಸನ ಕ್ರಿ.ಶ. ೧೨ನೇ ಶತಮಾನದಲ್ಲಿ ತೊಳಹರು ತಮ್ಮ ಪ್ರಾಬಲ್ಯ ಸ್ಥಾಪಿಸಿದ್ದಕ್ಕೆ ಉತ್ತಮ ಉದಾಹರಣೆ.

ಶಾಸನಗಳಲ್ಲಿ ನಮಗೆ ಮೊದಲ ರಾಜನಾಗಿ ಕಂಡು ಬರುವುದು ಮಾದಾಡಿ ತೊಳಹ.[12] ಅವನ ನಂತರ ಅಧಿಕಾರಕ್ಕೆ ಬಂದವನು ಬೆಮ್ಮಣಾಡಿ ತೊಳಹ ಕ್ರಿ.ಶ.೧೪೦೮ರ ಕೆಂಜೂರು ಶಾಸನದಲ್ಲಿ ಅವನು ಬ್ರಾಹ್ಮಣರಿಗೆ ಅನ್ನದಾನಕ್ಕಾಗಿ ಚೆಪ್ಪಳ್ಳಿಯ ಉತ್ಪತ್ತಿಯನ್ನು ನೀಡಿದುದು ತಿಳಿಯುತ್ತದೆ.[13] ಆಮೇಲೆ ಬೆಮ್ಮಣಂಚ ತೊಳಹ ಅಧಿಕಾರ ಗ್ರಹಣ ಮಾಡಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ.[14] ಇಲ್ಲಿ ಹೊಸಬು ಕೋರಿಯ ಕುಮಾರವೃತ್ತಿಯ ಬಗ್ಗೆಯೂ ಉಲ್ಲೇಖವಿದೆ. ಅಲ್ಲದೆ ಕ್ರಿ.ಶ. ೧೪೧೫ರ ಕಳಸ ಶಾಸನದಲ್ಲಿ[15] ಹಾಗೂ ಪಣಂಬೂರು ಶಾಸನದಲ್ಲಿಯೂ[16] ತೊಳಹರ ಪ್ರಸ್ತಾಪವಿದೆ. ಆದರೆ ತೊಳಹರ ರಾಜ ಆಗ ಯಾರಿದ್ದ ಎಂಬುದು ತಿಳಿದು ಬರುವುದಿಲ್ಲ. ಬೆಮ್ಮಣಂಚ ತೊಳಹನ ನಂತರ ಹೊಸಬು ಕೋರಿ ಅಧಿಕಾರ ನಿರ್ವಹಿಸಿರುವ ಸಾಧ್ಯತೆ ಇದೆ. ಶಂಕರ ನಾಯಕ ತೊಳಹ ಅನಂತರ ಪ್ರಮುಖ ರಾಜನಾಗಿರುವುದು ಕಂಡುಬರುತ್ತದೆ.[17] ಅವನ ಕಾಲದಲ್ಲಿ ವಿಜಯನಗರದ ಅರಸರಿಗೂ ತೊಳಹರಿಗೂ ಉತ್ತಮ ಬಾಂಧವ್ಯವಿತ್ತು. ಹಾಗಾಗಿ ವಿಜಯನಗರದ ದೊರೆ ಇಮ್ಮಡಿ ದೇವರಾಯನ ಕಾಲದಲ್ಲಿ ಬಾರಕೂರು ರಾಜ್ಯದಲ್ಲಿ ಮುಂಗಿ ನಾಡಿನೊಳಗೆ ಅಂಪಾರ ಹರವರಿಯ ಮೆಲಿನ ತೆರಿಗೆ ವಸೂಲಿಯೇ ಮುಂತಾದ ಅಧಿಕಾರಗಳನ್ನು ತೊಳಹರಿಗೆ ಕ್ರಿ.ಶ. ೧೪೩೫ರಲ್ಲಿ ನೀಡಲಾಯಿತು. ಇನ್ನೊಂದು ಶಾಸನವೂ ಸಹ ತೊಳಹರನ್ನು ಪ್ರಸ್ತಾಪಿಸುತ್ತದೆ.[18] ಸೂರಾಲಿನ ತೊಳಹರ ಇನ್ನೊಬ್ಬ ದೊರೆ ನಾಗಂಚ ತೊಳಹ. ಇವನ ಬಗ್ಗೆ ಸಿಗುವ ಪ್ರಾಚೀನತಮ ಉಲ್ಲೇಖವೆಂದರೆ ಸೂರಾಲಿನ ಮಹಾಲಿಂಗೇಶ್ವರ ದೇವಾಲಯದಲ್ಲಿನ ಶಾಸನ.[19] ಮಹಾದೇವರಿಗೆ ನೀಡಿದ ದಾನವನ್ನು ಈ ಶಾಸನ ತಿಳಿಸುತ್ತದೆ. ಯೆಳ್ಳಾರೆ ಶಾಸನದ ಪ್ರಕಾರ ನಾಗಂಚ ತೊಳಹನ ಕಾಲದಲ್ಲಿ ಬೆಮ್ಮು ಸಾವಂತ ಯಾನೆ ಬಸವಂತ ಅವಿನೂರು ಹಾಳಿಯ ೧೦೦೦ ಹಾಗೂ ಇರ್ವತ್ತೂರು ಗ್ರಾಮದ ಜನರ ಒಪ್ಪಿಗೆಯಿಂದ ಜನಾರ್ಧನ ದೇವಾಲಯವನ್ನು ಕಟ್ಟಿಸಿದನು.[20] ಸೂರಾಲಿನ ನಾಲ್ಕು ಶಾಸನಗಳು ನಾಗಂಚ ತೊಳಹನ ಆಡಳಿತ ಹಾಗೂ ಬೆಮ್ಮಣಂಚ ತೊಳಹನ ಕುಮಾರವೃತ್ತಿಯ ಬಗ್ಗೆ ತಿಳಿಸುತ್ತವೆ.[21]

ಮುಂದಿನ ರಾಜನಾಗಿ ಕೋಟಿ ಸಾವಂತ ತೊಳಹ ಕ್ರಿ.ಶ. ೧೬ನೇ ಶತಮಾನದ ಆರಂಭದಲ್ಲಿ ಅಧಿಕಾರ ನಿರ್ವಹಿಸಿದ ಬಗ್ಗೆ ಶಾಸನಿಕ ಆಧಾರವಿದೆ. ಕುದಿಯ ಶಾಸನದಲ್ಲಿ ಕೋಟಿ ಸಾವಂತ ತೊಳಹ ಭೂದಾನ ಮಾಡಿದ ವಿವರವಿದೆ.[22] ತೊಳಹ ವಂಶದ ಇನ್ನೊಬ್ಬ ರಾಜ ಚೆನ್ನೆಯರಸ ತೊಳಹ ಇವನು ಸೂರಾಲು[23]ಹಾಗೂ ಹಟ್ಟಿಯಂಗಡಿಯ[24]ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದಾನೆ. ಹಟ್ಟಿಯಂಗಡಿಯ ಶಾಸನ ತುಂಬಾ ಮಹತ್ವದ ದಾಖಲೆ. ಅದರ ಪ್ರಕಾರ ಬಂಕಿಯರಸ ಹೊನ್ನೆಯ ಕಂಬಳಿ ಒಡೆಯ, ಚೆನ್ನೆಯರಸ ತೊಳಹ, ಹಾಗೂ ಇಕ್ಕೇರಿ ಯದೊರೆ ಹಾರುನಾಡು ಸೀಮೆಯನ್ನು ಕಣಚಿಯಾಗಿ ಆಳುತ್ತಿದ್ದರು. ಇಲ್ಲಿ ಎರಡು ಸ್ಥಳೀಯ ರಾಜವಂಶಗಳಾದ ಹೊನ್ನೆಯ ಕಂಬಳಿ ಹಾಗೂ ತೊಳಹರು ಒಟ್ಟಾಗಿ ಉಲ್ಲೇಖಿಸಲ್ಪಟ್ಟಿದ್ದಾರೆ. ದಿ| ಡಾ| ಪಿ. ಗುರುರಾಜ ಭಟ್ಟರು ೧೬ನೇ ಶತಮಾನದ ಕೊನೆಯಲ್ಲಿ ಸೂರಾಲಿನ ತೊಳಹರ ಇಳಿಗಾಲವೆನ್ನಬಹುದು ಎಂದಿದ್ದಾರೆ.[25]ಆದರೆ ಅನಂತರವೂ ತೊಳಹರ ಪ್ರಭುತ್ವ ಮುಂದುವರಿದುದು ಶಾಸನಗಳಿಂದ ತಿಳಿದು ಬರುತ್ತದೆ.

ಮಹಾಲಿಂಗರಸ ತೊಳಹ[26] ಮತ್ತು ಮದನದೇವಿ ತೊಳಹ ನಂತರದ ಅರಸರಾಗಿ ಶಾಸನಗಳಲ್ಲಿ ಕಂಡು ಬರುತ್ತಾರೆ. ಮದನದೇವಿ ತೊಳಹಾರತಿ ಕ್ರಿ.ಸ.೧೬೯೧ರ ಹೊತ್ತಿಗೆ ಅಧಿಕಾರದಲ್ಲಿದ್ದುದಾಗಿ ಸೂರಾಲು ತಾಮ್ರ ಶಾಸನವು ತಿಳಿಸುತ್ತದೆ.[27] ಅನಂತರ ಈ ಪ್ರದೇಶ ಕೆಳದಿ ನಾಯಕರ ಹಿಡಿತದಲ್ಲಿದ್ದುದನ್ನು ಕೆಳದಿನೃಪ ವಿಜಯಂ ತಿಳಿಸುತ್ತದೆ.[28] ಕರಾವಳಿ ಕರ್ನಾಟಕದಲ್ಲಿ ಕೆಳದಿಯ ನಾಯಕರ ಅಧಿಕಾರ ಸ್ಥಾಪನೆಯೊಂದಿಗೆ ತೊಳಹರ ಪ್ರಭಾವ ಕುಗ್ಗಿತು.

ತೊಳಹರು ಮತ್ತು ಇತರ ರಾಜಮನೆತನಗಳ ಸಂಬಂಧ:

ಸ್ಥಳೀಯ ರಾಜಮನೆತನಗಳಲ್ಲೊಂದಾದ ತೊಳಹ ರಾಜವಂಶ ಕರಾವಳಿ ಕರ್ನಾಟಕದ ಇತರ ಪ್ರಮುಖ ರಾಜವಂಶಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಬೆಳೆಸಿಕೊಂಡಿತ್ತು. ಆಗಿನ ರಾಜಕೀಯ ಪರಿಸ್ಥಿತಿಯಲ್ಲಿ ಅದು ಅವಶ್ಯವೂ ಆಗಿತ್ತು. ಅಲ್ಲದೆ ಆ ರೀತಿಯ ಸಂಬಂಧ ತೊಳಹರ ಪ್ರಭಾವದ ವಿಸ್ತರಣೆಯಲ್ಲಿ ಸಹಕಾರಿಯೂ ಆಯಿತು. ಮೊದಲನೆಯದಾಗಿ ಆಳುಪರು ಮತ್ತು ತೊಳಹರು ಸ್ನೇಹಯುತವಾದ ಸಂಬಂಧವನ್ನು ಹೊಂದಿದ್ದರು. ಬಾರಕೂರಿನ ಪಂಚಲಿಂಗೇಶ್ವರ ದೇವಾಲಯದಲ್ಲಿ ದೊರೆತಿರುವ ಕ್ರಿ.ಶ. ೧೧೩೯ರ ಆಳುಪ ದೊರೆ ಕವಿ ಆಳುಪೇಂದ್ರನ ಶಾಸನದಲ್ಲಿ, ಇಲ್ಲಿ ನಿರ್ಮಿಸಿದ ಶಿವಾನಂದಯೋಗಿ ನಿವೇದ್ಯ ಶಾಲೆಯ ನಿರ್ವಹಣೆಗಾಗಿ ೩೦ ಚಿನ್ನದ ನಾಣ್ಯಗಳನ್ನು (ಪಾಂಡ್ಯ ಗದ್ಯಾಣ) ಸೂರಾಲಿನ ತೊಳಹರ ವಶವಿರಿಸಲಾಯಿತು ಎಂದು ಹೇಳಿರುವುದು ಅವರ ಉತ್ತಮ ಸಂಬಂಧಕ್ಕೆ ಪುಷ್ಟಿ ನೀಡುತ್ತದೆ.[29]

ಕರ್ನಾಟಕದ ಕರಾವಳಿ ಪ್ರದೇಶ ವಿಜಯನಗರ ಸಾಮ್ರಾಜ್ಯದ ಭಾಗವಾದಾಗ ತುಳುನಾಡಿನ ರಾಜಧಾನಿ ಬಾರಕೂರು ಪಟ್ಟಣದ ಆಂತರಿಕ ಆಡಳಿತದಲ್ಲಿ ತೊಳಹರು ಪ್ರಭಾವಶಾಲಿಗಳಾಗಿದ್ದರು. ಕ್ರಿ.ಶ. ೧೩೯೭ರ ಎರಡನೇ ಹರಿಹರನ ಶಿರಿಯಾರ ಶಾಸನ, ಬಾರಕೂರಿನ ಹತ್ತು ಕೇರಿಯ ಹಲರು, ಹಂಜಮಾನರು, ಸಾಂತಳಿಗೆಯ ತೊಳಹರ ಆಶಯ ಹಾಗೂ ಒಪ್ಪಿಗೆಯೊಂದಿಗೆ ಶಾಸನವನ್ನು ಬರೆಸಿದ ವಿಷಯವನ್ನು ತಿಳಿಸುತ್ತದೆ.[30] ಬಾರಕೂರಿನ ಕ್ರಿ.ಶ. ೧೩೯೯ರ ಶಿಲಾಲೇಖ ತುಳುರಾಜ್ಯದ ಮೇಲೆ ಕಟ್ಟಳೆಯವರ ಬಗ್ಗೆ ಹೇಳುತ್ತಾ ತೊಳಹರನ್ನು ಹೆಸರಿಸಿರುವುದು ವಿಜಯನಗರ ಹಾಗೂ ತೊಳಹರ ಸಂಬಂಧವನ್ನು ತಿಳಿಯಲು ಹೆಚ್ಚು ಸಹಕಾರಿಯಾಗಿದೆ.[31] ಅವರ ಸಂಬಂಧದ ಬಗ್ಗೆ ತಿಳಿಯಲು ಇರುವ ಇನ್ನೂ ಒಂದು ಉತ್ತಮ ಉದಾಹರಣೆಯೆಂದರೆ ಕ್ರಿ.ಶ. ೧೪೩೫ರ ಇಮ್ಮಡಿ ದೇವರಾಯನ ಶಾಸನ. ಬಾರಕೂರನ್ನು ಅಣ್ಣಪ್ಪ ಒಡೆಯ ಆಳುತ್ತಿದ್ದಾಗ ಯಳರೆಯನ್ನು ತೊಳಹ ಸಂಕರ ನಾಯಕ ಆಳುತ್ತಿದ್ದುದಾಗಿ ತಿಳಿಸುತ್ತದೆ. ಈ ಶಾಸನದ ಮುಖ್ಯ ಉದ್ದೇಶ ಬಾರಕೂರು ರಾಜ್ಯದ ಮುಂಗಿನಾಡಿನೊಳಗೆ ಅಂಪಾರ ಹರವರಿಯನ್ನು ಪಡುವ ಸಾಲುಗಳ ಸುಂಕಗಳನ್ನು ವಸೂಲಿ ಮಾಡುವ ಅಧಿಕಾರವನ್ನು ತೊಳಹ ಸಂಕರನಾಯಕನಿಗೆ ನೀಡಿದ್ದನ್ನು ದಾಖಲಿಸುವುದು.[32] ತೊಳಹರಿಗೆ ನೀಡಿದ ಪ್ರದೇಶದ ಗಡಿಯನ್ನೂ ಈ ಶಾಸನ ತಿಳಿಸುತ್ತದೆ. ಇದರಿಂದ ಯೆಳರೆಗೆ ಸೀಮಿತವಾಗಿದ್ದ ತೊಳಹರ ಅಧಿಕಾರ ವ್ಯಾಪ್ತಿ ವ್ಯಾಪಾರಿ ಕೇಂದ್ರಗಳಾಗಿದ್ದ ಬಸ್ರೂರು, ಕಂಡ್ಲೂರು ಇಲ್ಲಿಗೂ ವಿಸ್ತರಿಸಿತು. ಅವರ ರಾಜಕೀಯ ಹಾಗೂ ಆರ್ಥಿಕ ಸಾಮರ್ಥ್ಯವೂ ಹೆಚ್ಚಿತು. ಇದಕ್ಕೆ ಪ್ರತಿಯಾಗಿ ತೊಳಹರು ಬಾರಕೂರಿನ ಹತ್ತು ಕೇರಿಯ ಪ್ರಮುಖ ದೇವರಾದ ನಾರಾಯಣ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಮಠವನ್ನು ಕಟ್ಟಿಸಿ ಪ್ರತಿದಿನ ಆರು ಜನ ಬ್ರಾಹ್ಮಣರಿಗೆ ಅನ್ನದಾನದ ವ್ಯವಸ್ಥೆ ಮಾಡಬೇಕೆಂದು ತಿಳಿಸುತ್ತದೆ. ಯೆಳರೆ ಈಗಿನ ಸೂರಾಲು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಒಳಗೊಂಡಿರಬೇಕು. ಸೂರಾಲು ಪ್ರಮುಖವಾದಂತೆ ಯೆಳರೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿರಬೇಕು.

ಆರ್ಥಿಕ ವಿವರಗಳು:

ಸೂರಾಲಿನ ತೊಳಹರ ಬಗ್ಗೆ ವಿವರಿಸುವ ಅನೇಕ ಶಾಸನಗಳು ಆಗಿನ ಕಾಲದ ಹಲವಾರು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ವಿವರವನ್ನು ನೀಡುತ್ತವೆ. ಬೆಮ್ಮಣ್ಣಾಡಿ ತೊಳಹನ ಕಾಲದ ಆರ್ಥಿಕ ವಿವರಗಳು ಕೊಂಜೂರು ಶಾಸನದಿಂದ ತಿಳಿದು ಬರುತ್ತವೆ.[33] ಆಗಿನ ಕಾಲದ ಸ್ಥಳೀಯ ಆಡಳಿತದಲ್ಲಿ ಪ್ರಭಾವಿ ವ್ಯಕ್ತಿಗಳಾಗಿದ್ದ ಸೇನಬೋವರ ಬಗ್ಗೆ ವಿವರಗಳು ಲಭ್ಯವಿವೆ. ಅಲ್ಲದೆ ಆಗ ಪ್ರಚಲಿತವಿದ್ದ ತೆರಿಗೆಗಳಲ್ಲಿ ಕಟ್ಟುಂದೆಱು ಒಂದಾಗಿತ್ತು. ಅದು ಭೂಮಿಯನ್ನು ಸಾಗುವಳಿಗಾಗಿ ಪಡಕೊಂಡವ ಕೊಡಬೇಕಾದ ಒಂದು ತೆರಿಗೆ.[34] ಆಗ ಹೊಣು ಹಾಗೂ ಹಣ ಪ್ರಮುಖ ನಾಣ್ಯಗಳಾಗಿದ್ದವು.

ಕ್ರಿ.ಶ.೧೬೯೧ರ ಸೂರಾಲು ಶಾಸನ[35] ಈ ಪ್ರದೇಶದ ಆರ್ಥಿಕ ಇತಿಹಾಸ ಬಗ್ಗೆ ಹೆಚ್ಚಿನ ವಿವರ ನೀಡುತ್ತದೆ. ಸೂರಾಲಿನ ಮಹಾಲಿಂಗರಸ ತೊಳಹರು ರೇವಣಸಿದ್ದ ದೇವರಿಗೆ ಭೂಮಿ ಬಿಟ್ಟಿದ್ದ ವಿಚಾರವನ್ನು ತಿಳಿಸುವ ಈ ಶಾಸನ ಭೂಮಿಯ ವಿವರ ನೀಡುವಾಗ ಸೂರಾಲು ಜಡ್ಡಿನ ಕಂಬಳಗದ್ದೆ, ಮಲ್ಲಗದ್ದೆ ಬೆಟ್ಟು, ವೀರಭದ್ರ ದೇವಸ್ಥಾನದ ಪೂರ್ವದ ತಗ್ಗು ಹಾಳಿ ಹಾಗೂ ಮೆಕ್ಕೆ ಭೂಮಿ ಬಗ್ಗೆ ತಿಳಿಸುತ್ತದೆ. ಈ ವಿವರಗಳು ಭೂಮಿಯಲ್ಲಿನ ವಿವಿಧ ವಿಭಾಗಗಳ ಬಗ್ಗೆ ತಿಳಿಯಲು ಸಹಾಯಕವಾಗಿವೆ. ತೊಳಹರ ಕಾಲದಲ್ಲಿ ಭೂಮಿಯ ಅಳತೆ ‘ಕೋಲಿನ’ ಲೆಕ್ಕದಲ್ಲಿತ್ತು. ಕರಾವಳಿಯ ಇತರ ರಾಜವಂಶಗಳ ಕಾಲದಲ್ಲಿದ್ದಂತೆ ತೊಳಹರ ಕಾಲದಲ್ಲಿಯೂ ಹೊಳೆ, ಹರಿವ ಹಳ್ಳ ಮುಂತಾದವುಗಳು ನೀರಾವರಿ ಮೂಲಗಳಾಗಿದ್ದವು. ಅಲ್ಲದೆ ಆ ಕಾಲದಲ್ಲಿ ಮುರಕಲ್ಲನ್ನು ಕಡಿಯುವ ಕೆಲಸವೂ ಆ ಪ್ರದೇಶದಲ್ಲಿ ನಡೆಯುತ್ತಿತ್ತು. ಸೂರಾಲಿನ ಶಾಸನದಲ್ಲಿ ಕಂಬೇರ ಅಣೆಯ ಪ್ರಸ್ತಾಪ ಬರುತ್ತದೆ.[36] ಸ್ಥಳೀಯವಾಗಿ ಕೆಂಪು (ಮುರ) ಕಲ್ಲು ಕಡಿಯುವ ಸ್ಥಳ ಅಣೆಯೆಂದು ಕರೆಯಲ್ಪಡುತ್ತದೆ.

ತುಳುನಾಡಿನ ಇತಿಹಾಸದಲ್ಲಿ ಬಸರೂರು ಒಂದು ಪ್ರಮುಖ ರೇವು ಪಟ್ಟಣವಾಗಿತ್ತು. ಅದರ ಮೇಲೆ ತೊಳಹರು ಸಾಧಿಸಿದ ಹಿಡಿತ ಬಹಳ ಮುಖ್ಯವಾಗಿತ್ತು. ಕನ್ನಡ ಕರಾವಳಿಯ ವ್ಯಾಪಾರದ ಹಿಡಿತವನ್ನು ತಮ್ಮಲ್ಲಿ ಇರಿಸಿಕೊಳ್ಳಲು ಸಕಲ ಪ್ರಯತ್ನವನ್ನು ಮಾಡುತ್ತಿದ್ದ ಪೋರ್ತುಗೀಜರು ಬಸರೂರನ್ನು ವಶಪಡಿಸಿಕೊಳ್ಳಲು ನಡೆಸಿದ ಯುದ್ದ ಈ ಜಿಲ್ಲೆಯ ಇತಿಹಾಸದ ಪ್ರಮುಖ ಘಟನೆಗಳಲ್ಲೊಂದು. ಮೊದಲು ಪೋರ್ತುಗೀಜರು ಮೋಸದಿಂದ ಬಸರೂರು ಕೋಟೆಯನ್ನು ವಶಪಡಿಸಿಕೊಂಡರು. ಆಗ ತೊಳಹರು ಹೊಸಂಗಡಿಯಿಂದ ಆಳುತ್ತಿದ್ದ ಹೊನ್ನೆಯ ಕಂಬಳಿ ಅರಸರ ಸಹಾಯದಿಂದ ಪೋರ್ತುಗೀಜರೊಡನೆ ಹೋರಾಡಿದರು. ಪೋರ್ತುಗೀಜರು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಆದರೆ ಈ ವಿಜಯದ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ. ಪೋರ್ತುಗೀಜರು ಪುನಃ ಬಸರೂರನ್ನು ವಶಪಡಿಸಿಕೊಂಡರು. ಪುನಃ ತೊಳಹರು ಬಸರೂರನ್ನು ಕೈವಶ ಮಾಡಿಕೊಳ್ಳಲು ಯತ್ನಿಸಿದರೂ ಸಫಲರಾಗದೆ ಒಪ್ಪಂದ ಮಾಡಿಕೊಳ್ಳಬೇಕಾಯಿತು.[37]

ತೆರಿಗೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಕೆಲವು ವ್ಯಕ್ತಿಗಳಿಗೆ ವಹಿಸಿಕೊಡುವ ಕ್ರಮ ಆಗ ಪ್ರಚಲಿತವಿತ್ತು. ವಿಜಯನಗರದ ಕಾಲದಲ್ಲಿ ತೊಳಹರು ಅಂತಹ ಜವಾಬ್ದಾರಿಯನ್ನು ಹೊಂದಿದ್ದ ವಿಷಯ ಶಾಸನದಿಂದ ತಿಳಿದು ಬರುತ್ತದೆ.[38] ತೊಳಹರ ಕಾಲದಲ್ಲಿ ಸೂರಾಲಿಗೆ ಸಮೀಪದ ಕೊಕ್ಕರ್ಣೆ ಒಂದು ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು.

ಧಾರ್ಮಿಕ ಇತಿಹಾಸ:

ತೊಳಹ ರಾಜವಂಶದವರೆಲ್ಲರೂ ಜೈನಧರ್ಮಾವಲಂಬಿಗಳಾಗಿದ್ದರು. ದಿ| ಡಾ| ಪಿ. ಗುರುರಾಜ ಭಟ್ಟರು ದಕ್ಷಿಣ ಕನ್ನಡದಲ್ಲಿ ಬಾರಕೂರಿನ ಸುತ್ತಮುತ್ತ ಜೈನಧರ್ಮ ಪಸರಿಸುವಲ್ಲಿ ಸ್ವತಃ ಜೈನರಾಗಿದ್ದ ಸೂರಾಲಿನ ತೊಳಹರು ಪ್ರಮುಖ ಪಾತ್ರ ವಹಿಸಿದರು ಎಂದಿದ್ದಾರೆ.[39] ಆದರೆ ಡಾ| ಕೆ.ವಿ.ರಮೇಶ್‌ರವರು ಬಾರಕೂರಿನ ಶಾಸನದ ಆಧಾರದ ಮೇಲೆ ಆಳುಪರ ಕಾಲದ ತೊಳಹರು ಆಳುಪರಂತೆ ಶೈವರಿದ್ದರೆಂದು ಗ್ರಹಿಸಬಹುದಾಗಿದೆ ಎಂದಿದ್ದಾರೆ[40]. ಅವರು ಮುಂದುವರಿಯುತ್ತಾ ವಿಜಯನಗರ ಕಾಲದ ಇವರ ಸಂತತಿಯವರು ಜೈನಧರ್ಮಾವಲಂಬಿಗಳಾಗಿದ್ದರು. ಅಲ್ಲದೆ ತೊಳಹರು ಶೈವ ಧರ್ಮಾವಲಮಬನೆಯ ತಮ್ಮ ಪರಂಪರೆಯನ್ನು ಅತೀ ಶ್ರದ್ಧೆಯಿಂದ ಕಾಪಾಡಿಕೊಂಡು ಬಂದಿದ್ದರೆಂಬುದು ಅವರು ಸೂರಾಲದ ಮಹಾದೇವರ ಪೂಜಕರಿದ್ದರೆಂಬುದರಿಂದ ಸ್ಪಷ್ಟವಾಗುತ್ತದೆ ಎಂದಿದ್ದಾರೆ.[41] ಆದರೆ ಇಲ್ಲಿ ಡಾ| ಕೆ.ವಿ. ರಮೇಶ್‌ರವರ ವಾದವನ್ನು ಒಪ್ಪುವುದು ಅಷ್ಟು ಸುಲಭ ಸಾಧ್ಯವಲ್ಲ. ಅವರು ಪೂಜಿಸುತ್ತಿದ್ದ ಪದ್ಮಾವತಿ ದೇವಿ, ಕೊಕ್ಕರ್ಣೆಯ ಚಂದ್ರನಾಥ ಬಸದಿ ಹಾಗೂ ಇತರ ಆಧಾರಗಳು ಅವರ ಜೈನ ಧರ್ಮಾವಲಂಬನೆ ಆರಂಭದಿಂದ ಇತ್ತು ಎಂಬುದನ್ನು ಸಮರ್ಥಿಸುತ್ತವೆ. ಅಲ್ಲದೆ ಕರಾವಳಿ ಪ್ರದೇಶದ ಜೈನರಾಗಿದ್ದ ಹಲವಾರು ಸಾಮಂತ ಮನೆತನಗಳಿಗೆ ಹಿಂದೂ ದೇವರು ಕುಲದೇವರಾಗಿದ್ದರು. ಬಂಗ ಹಾಗೂ ಚೌಟರಿಗೆ ಸೋಮನಾಥ ಇದ್ದಂತೆ, ತೊಳಹರಿಗೆ ಮಹಾದೇವ ಕುಲದೇವರಾಗಿದ್ದರು. ಆದರೆ ಕರಾವಳಿ ಕರ್ನಾಟಕದ ಪ್ರಬಲ ರಾಜವಂಶಗಳಾದ ಆಳುಪರು ಹಾಗೂ ವಿಜಯನಗರದವರು ಪಾಲಿಸಿಕೊಂಡು ಬಂದಿದ್ದ ಪರಧರ್ಮ ಸಹಿಷ್ಣುತೆಯನ್ನು ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ತೊಳಹರೂ ಮುಂದುವರಿಸಿದರು.

ತೊಳಹರಿಗೆ ಸಂಬಂಧಿಸಿದ ಶಾಸನ ಈಶ್ವರ ಸ್ತುತಿಯೊಂದಿಗೆ ಆರಂಭವಾಗುವುದು, ಬಾರಕೂರಿನ ಹತ್ತುಕೇರಿಯ ನಾರಾಯಣ ದೇವರ ದೇವಸ್ಥಾನಕ್ಕೆ ಹೊಂದಿ ಕೊಂಡಂತೆ ಮಠವನ್ನು ಕಟ್ಟಿಸಿ ಬ್ರಾಹ್ಮಣರಿಗೆ ಅನ್ನದಾನದ ವ್ಯವಸ್ಥೆ ಮಾಡಿರುವುದು,[42] ಹಾಗೂ ಮದನಾದೇವಿ ತೊಳಹಾರತಿ ವೀರಭದ್ರದೇವರ ಅಮೃತಪಡಿಗೆ ಭೂಮಿಯನ್ನು ನೀಡಿರುವುದು ತೊಳಹರ ಧರ್ಮಸಮನ್ವಯ ನೀತಿಗೆ ಪೂರಕವಾಗಿರುವುದು. ಆಗ ಅದು ರಾಜಕೀಯವಾಗಿ ಅವಶ್ಯವೂ ಆಗಿತ್ತು. ಅದು ಸಮಾಜದ ಎಲ್ಲಾ ವರ್ಗದವರ ಬೆಂಬಲ ಅವರಿಗೆ ಸಿಗುವಲ್ಲಿ ಪ್ರಮುಖ ಕಾರಣವಾಯಿತು.

ಹೀಗೆ ಸ್ವತಃ ಜೈನರಾಗಿದ್ದರೂ ತೊಳಹರು ಇತರ ಧರ್ಮಗಳಿಗೆ ಪ್ರೋತ್ಸಾಹ ನೀಡಿದರು. ಅವರ ಕಾಲದಲ್ಲಿ ಇಲ್ಲಿ ವೀರಶೈವ ಧರ್ಮ ಪ್ರಮುಖ ಧರ್ಮವಾಗಿತ್ತೆಂಬುದು ನಿರ್ವಿವಾದ. ವೀರಶೈವರು ಇಲ್ಲಿ ಮಠವನ್ನು ಸ್ಥಾಪಿಸಿದ್ದರು. ಅದಕ್ಕೂ ಸೋಸಲೆಯ ವೀರಶೈವ ಮಠಕ್ಕೂ ನಿಕಟ ಸಂಬಂಧವಿತ್ತು.[43] ವೀರಶೈವ ವ್ಯಾಪಾರಸ್ಥರು ಸೂರಾಲು ಪ್ರದೇಶದಲ್ಲಿ ನೆಲಸಿ ಇಲ್ಲಿ ಮಠವನ್ನು ಹೊಂದಿದ್ದರು ಎಂಬುದಕ್ಕೆ ಇತರ ದಾಖಲೆಗಳೂ ಇವೆ. ಕೆಳದಿಯವರ ಪ್ರಭಾವ ಕರಾವಳಿ ಪ್ರದೇಶದಕ್ಕೆ ವಿಸ್ತರಿಸಿದಂತೆ ವೀರಶೈವ ಧರ್ಮ ತೊಳಹರ ಕೇಂದ್ರವಾಗಿದ್ದ ಸೂರಾಲಿನಲ್ಲಿ ಬಲವಾಗಿ ಬೇರೂರಿತು.[44]

ಸುತ್ತಮುತ್ತಲಿನ ಧಾರ್ಮಿಕ ಕೇಂದ್ರಗಳು:

ಸೂರಾಲಿನ ತೊಳಹರ ಪ್ರೋತ್ಸಾಹದಿಂದಾಗಿ ಸೂರಾಲು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಮಠಗಳು ಹಾಗೂ ದೇವಾಲಯಗಳು ಪ್ರಸಿದ್ಧಿಗೆ ಬಂದವು. ಅಂತಹ ಮಠಗಳಲ್ಲಿ ಒಂದು ಪಾದೆಮಠ. ಕೆಂಜೂರು ವೀರೇಶ್ವರ ದೇವಸ್ಥಾನದಲ್ಲಿ ದೊರೆತ ಒಂದನೆಯ ದೇವರಾಯನ ಶಾಸನ[45] ಬಾರಕೂರಿನಲ್ಲಿ ಮಹಾಪ್ರಧಾನ ಗೋವೆಯ ಬಾಚಣ್ಣನು ರಾಜ್ಯವಾಳುತ್ತಿದ್ದಾಗ ಸೂರಾಲ ಬೆಮ್ಮಣ್ಣಾಡಿ ತೊಳಹನ ಆಳ್ವಿಕೆಯ ಕಾಲದಲ್ಲಿ ನೀಡಿದ ದತ್ತಿಯ ವಿವರವನ್ನು ನೀಡುತ್ತದೆ. ಬೆಂಮು ಸೇನಬೋವ ಮತ್ತು ಪೆರುಣು ಸೇನಬೋವರು ಚೆಪ್ಪಳಿ (ಚಾಪಾಳಿ)ಯಲ್ಲಿ ಭೂಮಿಯನ್ನು ಕೆಲವು ಬ್ರಾಹ್ಮಣರಿಗೆ ದತ್ತಿ ನೀಡಿ ಆ ಭೂಮಿಯನ್ನೂ ಅನುಭವಿಸಿಕೊಂಡು ಬರುವ ಬಗ್ಗೆ ಮಠಕ್ಕೆ ಇಂತಿಷ್ಟು ಹನವನ್ನು ನೀಡುತ್ತಾ ಬರಬೇಕೆಂದೂ, ಮಠದಲ್ಲಿ ಈ ಬಗ್ಗೆ ಬ್ರಾಹ್ಮಣರಿಗೆ ಅನ್ನದಾನದ ವ್ಯವಸ್ಥೆ ಮಾಡತಕ್ಕದೆಂದೂ ಶಾಸನ ಬರೆಸಲಾಯಿತು. ಈ ಬಾಳಿನ ಬಗ್ಗೆ ತೊಳಹರಿಗೆ ತೆಂಗಿನಕಾಯಿಯನ್ನು ಕಾಣಿಕೆಯಾಗಿ ನೀಡುವುದನ್ನು ಬಿಟ್ಟರೆ ಬೇರಾವ ತೆರಿಗೆಯನ್ನೂ ತೆರಬೇಕಾಗಿದ್ದಿಲ್ಲ.

ಸೂರಾಲಿಗೆ ಸಮೀಪವಿರುವ ಇನ್ನೊಂದು ಪ್ರಸಿದ್ದ ಸ್ಥಳ ಸಾಸ್ತಾವು. ಇಲ್ಲಿ ಜಂಗಮ ಮಠವೊಂದು ಇತ್ತು ಎಂಬುದು ಸ್ಥಳೀಯರ ಅಂಬೋಣ. ಆದರೆ ಇಲ್ಲಿ ಯಾವ ಕುರುಹುಗಳೂ ಕಂಡು ಬರುವುದಿಲ್ಲ. ಆದರೆ ಈ ಪ್ರದೇಶದಲ್ಲಿ ವೀರಶೈವ ಮಠ ಇದ್ದಿರಬಹುದೆಂಬುದಕ್ಕೆ ಸೂರಾಲಿನ ಶಾಸನಗಳು ಪರೋಕ್ಷ ಆಧಾರವನ್ನೀಯುತ್ತವೆ. ಸೂರಾಲಿನ ಅರಮನೆ ಮತ್ತು ಸಾಸ್ತಾವಿನ ಮಧ್ಯೆ ಇದ್ದ ಸಂಬಂಧದ ಬಗ್ಗೆ ಐತಿಹ್ಯಗಳಿದ್ದರೂ ಅದನ್ನು ಪುಷ್ಟೀಕರಿಸುವ ಯಾವುದೇ ದಾಖಲೆ ನಮಗೆ ಸಿಗುತ್ತಿಲ್ಲ. ಆದರೆ ಮಡಿ ಮನೆತನದವರು ಸೂರಾಲಿನ ರಾಜರನ್ನು ಕರೆಸಿ ಕಟ್ಟೆಪೂಜೆ ಮಾಡುವ ಕ್ರಮ ತೊಳಹರ ಕಾಲದಲ್ಲಿ ಮಡಿ ಮನೆತನದವರಿಗೆ ಇದ್ದ ಗೌರವದ ಸಂಕೇತವಾಗಿದೆ.[46]

ಜೈನಬಸದಿ - ಕೊಕ್ಕರ್ಣಿ, ಸೂರಾಲು [ಚಿತ್ರ: ನಾಗರಾಜ ವಾರಂಬಳ್ಳಿ]

ಜೈನಬಸದಿ – ಕೊಕ್ಕರ್ಣಿ, ಸೂರಾಲು [ಚಿತ್ರ: ನಾಗರಾಜ ವಾರಂಬಳ್ಳಿ]

 

ಇದರೊಂದಿಗೆ ಮಧ್ಯಯುಗೀನ ಲಕ್ಷಣಗಳೊಂದಿಗೆ ಗಟ್ಟಿಕಲ್ಲಿನಿಂದ ನಿರ್ಮಿತವಾದ ಸೂರಾಲಿನ ಮಹಾದೇವ (ಮಹಾಲಿಂಗೇಶ್ವರ) ಶಿರಮುಡಿ ದೇವಸ್ಥಾನ, ಪಾದೇಮಠದ ವೀರೇಶ್ವರ ದೇವಸ್ಥಾನ, ಸಾಸ್ತಾವಿನ ಸಾಸ್ತಾವೇಶ್ವರ ದೇವಸ್ಥಾನ, ಕೊಕ್ಕರ್ಣೆಯ ಬಸದಿ ಹಾಗೂ ಅರಮನೆ ಇವುಗಳು ಆಗಿನ ಕಾಲದ ವಾಸ್ತುಶಿಲ್ಪದ ಕುರುಹುಗಳಾಗಿ ಉಳಿದುಕೊಂಡಿವೆ.

ಒಟ್ಟಿನಲ್ಲಿ ಸೂರಾಲಿನ ತೊಳಹರ ಇನ್ನೂ ಹೆಚ್ಚಿನ ಬೆಳಕನ್ನು ಚೆಲ್ಲತಕ್ಕ ದಾಖಲೆಗಳು ದೊರಕಿ ವಿವರವಾದ ಅಧ್ಯಯನ ಸಾಧ್ಯವಾದಾಗ ಮಾತ್ರ ಈ ರಾಜವಂಶದ ಪ್ರಾಮುಖ್ಯತೆಯ ಅರಿವು ನಮಗೆ ಆಗುವುದು ಸಾಧ್ಯ.

– ಡಾ| ಬಿ. ಜಗದೀಶ ಶೆಟ್ಟಿ*

 

[1] K.I. Vol. 1, Introduction, PP 8 – 9.

[2] Ep. car ಸಂಪುಟ VIII, Sagar No. 119.

[3] Ibid. No.37.

[4] Ibid. No’s 108, 109.

[5] Ibid,No. 12

[6] ARSIE, 1931 – 32, No. 303.

[7] S.I.I., Vol. VII, No. 350.

[8] P. Gururaja Bhat: Studies in Tuluva History and Culture (Kollianpur, 1975) P.80.

[9] ಕೆ.ವಿ. ರಮೇಶ್‌ – ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮಸಮನ್ವಯ (ಉಜಿರೆ ೧೯೮೫) P.93.

[10] P.N. Narasimha Murthy – Jainism on the Canara Coast (Unpublished Thesis 1983) P. 292 – 93.

[11] S.I.I. vol. VII, No. 381.

[12] S.I.I. Vo. Ix, Pt. II, No. 425, ARSIE, 1929 – 30, No. 550.

[13] ARSIE, 1931 – 32, No. 335.

[14] ARSIE, 1931 – 32, No. 319, Ibid Nos. 328, 330.

[15] MAR, 1946, No.9.

[16] ARSIE, 1968 – 69, No.102.

[17] ARSIE, 1931 – 32, No.3.

[18] ARSIE, 1931 – 32, No.320.

[19] Ibid, No. 327.

[20] P.N. Narasimha Murthy – op. cit P.287.

[21] ARSIE, 1931 – 32, No.s 324, 333, 332, 329.

[22] Ibid, No.322.

[23] Ibid, No.331.

[24] ARSIE, 19329 – 30. No. 562.

[25] P. Gururaja Bhat, op.cit. P.81.

[26] ARSIE, 1931 – 32, No.A – 4.

[27] ARSIE, 1931 – 32, No.A – 4.

[28] Keladi Nripa Vijayam V Canto, Verse No.31.

[29] S.I.I., Vol. No.381.

[30] ARSIE, 1931 – 32, No.303.

[31] S.I.I.Vol. VII, No. 350.

[32] ARSIE, 1931 – 32, No.A3.

[33] Ibid, No. 335.

[34] B. Jagadeesh Shetty – The Agro – Economic Relations and Social Structure in Dakshina Kannada (A.D. 1000 – 1600) (Unpublished Thesis 1992) P. 148.

[35] ARSIE, 1931 – 32, No.A – 4.

[36] ARSIE, 1931 – 32, No.A – 4.

[37] ಗಣಪತಿರಾವ್ ಐಗಳ್ – ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ (ಮಂಗಳೂರು, ೧೯೨೮) ಪು. ೩೫೦ – ೩೫೧.

[38] ARSIE, 1931 – 32, No.A3.

[39] P. Gururaja Bhatt – op.cit. P. 432.

[40] K.V. RAMESH – op.cit. P.94.

[41] Ibid.

[42] ARSIE, 1931 – 32, No.A3.

[43] ARSIE, 1931 – 32, A – 03, 04.

[44] K.G. Vasantha Madhava, Religions in Coastal Karnataka (Delhi 1983), P 38 – 39

[45] ARSIE, 1931 – 32, No.335. ಡಾ| ಬಿ.ವಸಂತ ಶೆಟ್ಟಿ ಲೇಖನ : ಕೆಂಜೂರು ಪಾದೆಮಠದ ಶಾಸನ.

[46] ಬಿ.ವಸಂತ ಶೆಟ್ಟಿ ಲೇಖನ : ಸಾಸ್ತಾವಿನ ಶಾಸನಗಳು ‘BARAKURU (A Metropolitan city of Antiquity), Its History and Culture” (Ph.D. Thesis) 1984. ( ಈ ಪ್ರಬಂಧದ ತಯಾರಿಯಲ್ಲಿ ಸಹಕರಿಸಿದ ಡಾ| ಪಿ.ಎನ್.ನರಸಿಂಹ ಮೂರ್ತಿ ಅವರಿಗೆ ಕೃತಜ್ಞತೆಗಳು)

* ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಪೂರ್ಣಪ್ರಜ್ಞ ಕಾಲೇಜು, ಉಡುಪಿ – ೫೭೬ ೧೦೧.