ತುಳು, ತುಳುನಾಡು, ತುಳುದೇಶ, ತುಳು ವಿಷಯವೆಂದು ಕರೆಯಲ್ಪಡುವ ಈ ಪ್ರದೇಶವು ಕರ್ನಾಟಕ ರಾಜ್ಯದ ದಕ್ಷಿಣ ಜಿಲ್ಲೆಯೆಂದು ಸ್ಥೂಲವಾಗಿ ಹೇಳಬಹುದು. ಇತಿಹಾಸದ ಆರಂಭ ಕಾಲದಿಂದ ಮೊದಲ್ಗೊಂಡು, ಮೈಸೂರು ಅರಸರ ಕಾಲದ ವರೆಗೆ ಇದು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳನ್ನೂ, ಘಟ್ಟದ ಮೇಲಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಪ್ರದೇಶಗಳನ್ನೂ ಒಳಗೊಂಡಿತ್ತು. ಸಾಂಪ್ರದಾಯಿಕ ಐತಿಹ್ಯಗಳ ಪ್ರಕಾರ, ಸಹ್ಯಾದ್ರಿ ಮತ್ತು ಪಶ್ಚಿಮ ಘಟ್ಟಗಳ ನಡುವೆ, ದಕ್ಷಿಣದಲ್ಲಿ ಚಂದ್ರಗಿರಿ ಹೊಳೆಯಿಂದ (ಈಗ ಕೇರಳದಲ್ಲಿದೆ) ಉತ್ತರದಲ್ಲಿ ಕಲ್ಯಾಣಪುರದ ವರೆಗೆ ಇರುವ ಪ್ರದೇಶವು ತುಳುನಾಡೆಂದು ಕರೆಯಲಾಗುತ್ತಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಅರಸು ಮನೆತನಗಳು ಇಂದಿಗೂ ಅಸ್ತಿತ್ವದಲ್ಲಿವೆ. ಅವು ತಮ್ಮ ಹಿಂದಿನ ಅಧಿಕಾರ, ವೈಭವಗಳನ್ನು ಪೂರ್ತಿಯಾಗಿ ಕಳೆದುಕೊಂಡಿದ್ದರೂ ಅವರ ಕೆಲವು ಸಾಂಪ್ರದಾಯಿಕ ಆಚರಣೆಗಳು ಇಂದಿಗೂ ಜೀವಂತವಾಗಿವೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ, ಈ ತುಳು ಅರಸು ಮನೆತನಗಳು ನಿರ್ವಹಿಸಿದ ಪಾತ್ರ ಹಿರಿದಾದುದು. ಏಕೆಂದರೆ ತುಳು ಭಾಷೆ, ಆಚರಣೆ, ಸಂಸ್ಕೃತಿಯ ಜೊತೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಅಗ್ರ ತಾಂಬೂಲವನ್ನಿತ್ತು, ಅನನ್ಯವಾಗಿ ಸ್ವೀಕರಿಸುವ ಮೂಲಕ, ತಮ್ಮ ಹೃದಯ ವೈಶಾಲ್ಯವನ್ನು ತೋರಿಸಿಕೊಟ್ಟಿದ್ದಾರೆ. ತುಳುವರ ಈ ಆದರ್ಶ ಅನುಕರಣೀಯ! ಅದನ್ನೆಂದಿಗೂ ಮರೆಯುವಂತಿಲ್ಲ. ವಿಜಯನಗರ ಅರಸರಿಗೆ ಬೆಂಗಾವಲಾಗಿ ನಿಂತು, ವಿದೇಶಿ ಮೂಲದ ಶತ್ರುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ, ಅವರ ಪ್ರಾಬಲ್ಯವನ್ನು ತಗ್ಗಿಸಿ, ಕನ್ನಡ ಸಂಸ್ಕೃತಿಯನ್ನು ಸಂರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಚೌಟರಾಣಿ ಅಬ್ಬಕ್ಕದೇವಿ, ಕಾರ್ನಾಡದ ರಾಣಿ, ಸಾಳುವ ಚೆನ್ನಭೈರಾದೇವಿಯರಂತಹ ವೀರಮಹಿಳೆಯರು ದಿಟ್ಟತನದಿಂದ ಈ ಶತ್ರುಗಳೊಡನೆ ಹೋರಾಡಿ ಗೆದ್ದ ಶೌರ್ಯ – ಸಾಹಸಗಳ ಗಾಥೆಯನ್ನು ಪೋರ್ತುಗೀಜ್ ದಾಖಲೆಗಳು ವಿವರಿಸುತ್ತವೆ. (Valle Pietro Della: op cit, I, 191, IIpp. 202 – 89)

ತುಳು ಶಬ್ದದ ವ್ಯುತ್ಪತ್ತಿಯ ಬಗೆಗೂ ಸಾಕಷ್ಟು ಚರ್ಚೆಗಳಿವೆ. ಆ ಚರ್ಚೆ ಇಲ್ಲಿ ಅಪ್ರಸ್ತುತ. ತುಳು ಪಂಚದ್ರಾವಿಡ ಭಾಷೆಗಳಲ್ಲಿ ಒಂದು. ತುಳು ಭಾಷೆಯನ್ನಾಡುವ ಜನರು ವಾಸವಾಗಿರುವುದರಿಂದ, ತುಳುನಾಡೆಂಬ ಹೆಸರು ಬಂದಿರಬೇಕು. ಏಕೆಂದರೆ ತಮಿಳು, ಮಲೆಯಾಳ, ಕೊಡವ ಭಾಷೆಗಳನ್ನಾಡುವ ಪ್ರದೇಶಗಳಿಗೆ, ತಮಿಳುನಾಡು, ಮಲೆಯಾಳ ದೇಶ, ಕೊಡಗು ದೇಶವೆಂಬ ಹೆಸರು ಬಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಸಾಮಾನ್ಯವಾಗಿ ಭಾಷೆಯನ್ನು ಆಧರಿಸಿ ಪ್ರದೇಶಗಳನ್ನು ಗುರುತಿಸುವ ಸಂಪ್ರದಾಯವು ಜಗತ್ತಿನಾದ್ಯಂತ ರೂಢೀಯಲ್ಲಿದೆ. ಈ ದೃಷ್ಟಿಯಿಂದ ತುಳುಯೆನ್ನುವುದು ಭಾಷಾವಾಚಕ, ಪ್ರದೇಶವಾಚಕವೆನ್ನಬಹುದು. ಇಲ್ಲಿಯ ಶಾಸನಗಳನ್ನು ಆಧರಿಸಿ ಹೇಳುವುದಾದರೆ, ಕುಲವಾಚಕವೂ ಹೌದು. ಕೆಲವು ಶಾಸನಗಳಲ್ಲಿ ತುಳುವ ಸೇನಭೋವ (A.R.No. 549 for 1929 – 30), ತುಳುವಿ ಸೆಟ್ಟಿ (A.R.No. 247 for 1931 – 32), ತುಳುವಕ್ಕ ಹೆಗ್ಗಡತಿ (S.I.I. IX Part – II No. 424), ತುಳಾಯಿ ಅಮ್ಮ (A.R.No. 110 for 1949 – 50), ತುಳುವಪ್ಪರಸ (S.I.I. VII No. 384), ತುಳುಚಂಡಿಗ (E.C. VII No. 152) ಮುಂತಾದಹೆಸರುಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಕುಲದವರು ಬಸರೂರಿನಲ್ಲಿ ಒಂದು ದೇವಾಲಯವನ್ನು ನಿರ್ಮಿಸಿದ ಉಲ್ಲೇಕವೂ ಇದೆ. ಇದಕ್ಕೆ ತುಳುವೇಶ್ವರವೆಂದೂ ಕರೆಯುತ್ತಾರೆ.

ಈ ನಾಡಿನ ಒಂದೆಡೆ ವಿಶಾಲವಾದ ಸಮುದ್ರ, ಮತ್ತೊಂದೆಡೆ ಎತ್ತರದ ಪರ್ವತ ಪ್ರದೇಶಗಳು ಸುತ್ತವರಿದಿರುವುದರಿಂದಾಗಿ, ಕರ್ನಾಟಕದ ಇತರ ಪ್ರದೇಶಗಳಿಂದ ಬಹುಕಾಲದ ವರೆಗೆ ಪ್ರತ್ಯೇಕ ಭಾಗವಾಗಿಯೇ ಉಳಿದಿತ್ತು. ಇದರಿಂದಾಗಿ ತನ್ನದೇ ಪ್ರತ್ಯೇಕ ಭಾಷೆಯ ಜೊತೆಗೆ, ತನ್ನದೇ ವೈಶಿಷ್ಟ್ಯಪೂರ್ಣವಾದ ಸಂಸ್ಕೃತಿಯೊಂದನ್ನು ಬೆಳೆಸಿಕೊಂಡು ಬಂದಿತು. ಈ ವೈಶಿಷ್ಟ್ಯ ಇಂದಿಗೂ ಈ ಸಂಸ್ಕೃತಿಯಲ್ಲಿ ಉಳಿದುಬಂದಿದೆ. ಭೂತಾರಾಧನೆ, ಅಳಿಯ ಸಂತಾನ, ಯಕ್ಷಗಾನ, ಸಾಹಿತ್ಯ, ತಾಳಮದ್ದಲೆ, ಕೋಲ, ನೇಮ, ಕಂಬಳಕ್ರೀಡೆ ಮುಂತಾದವುಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಕ್ರಿ.ಶ. ೩ – ೪ನೆಯ ಶತಮಾನದ ತಮಿಳಿನ ಸಂಘಂ ಸಾಹಿತ್ಯದಲ್ಲಿ ತುಳುನಾಡಿನ ಉಲ್ಲೇಕವಿರುವುದನ್ನು ಡಾ. ಕೆ.ವಿ. ರಮೇಶರು ತೋರಿಸಿಕೊಟ್ಟಿದ್ದಾರೆ. ಪಲ್ಲವ ಅರಸನಾದ ಎರಡನೆಯ ನಂದಿವರ್ಮನ ಕಾಲದ (೭೩೧ – ೭೯೫) ತಾಮ್ರ ಶಾಸನದಲ್ಲೂ, ಕ್ರಿ.ಶ. ೧೦೧೨ರ ಕೊಂಗಾಳ್ವನ ತುಳುನಾಡಿನ ಪ್ರಥಮ ಉಲ್ಲೇಖ ಗೋಚರಿಸುವುದು ೧೧ನೇ ಶತಮಾನದ ಬಂಕಿಯಾಳುಪೇಂದ್ರನ ಕಾಲದ ಬಾರಕೂರು ಶಾಸನದಲ್ಲಿ. ಆ ಬಳಿಕ ಹೊಯ್ಸಳ, ವಿಜಯನಗರ ಕಾಲಗಳ ಶಾಸನಗಳಲ್ಲಿ ತುಳುನಾಡು, ತುಳುದೇಶ, ತುಳುವಿಷಯಗಳ ಉಲ್ಲೇಕಗಳು ಕಂಡುಬರುತ್ತವೆ. ವಿಜಯನಗರ ಚಕ್ರವರ್ತಿಗಳ ಕಾಲದಲ್ಲಿ ಆಡಳಿತದ ದೃಷ್ಟಿಯಿಂದ ತುಳುನಾಡನ್ನು ಬಾರಕೂರು ರಾಜ್ಯ, ಮಂಗಳೂರು ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು, ಚಕ್ರವರ್ತಿಗಳಿಂದ ನಿಯುಕ್ತಗೊಂಡ ರಾಜ್ಯಪಾಲರು ಇರುತ್ತಿದ್ದರು. ಇವರ ಮೇಲೆ ಇಡೀ ಕರಾವಳಿ ಕರ್ನಾಟಕದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ವಿಶೇಷ ಅಧಿಕಾರ ಪಡೆದ ದಂಡನಾಯಕರು ಆಡಳಿತವನ್ನು ನಡೆಸುವ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದರು. ತಮ್ಮ ಮೇಲಿನ ಅಧಿಕಾರಿಗಳಿಗೆ ಕಾಲ – ಕಾಲಕ್ಕೆ ಕಪ್ಪ – ಕಾಣಿಕೆಗಳನ್ನು ನೀಡಿದರಾಯಿತು. ಮಿಕ್ಕಂತೆ ಇವರು ಸರ್ವಸ್ವತಂತ್ರರು. ಆದರೆ ಚಕ್ರವರ್ತಿಗಳ ಅಪ್ಪಣೆಯಿಲ್ಲದೆ, ಕಂದಾಯವನ್ನೂ ಸೈನ್ಯವನ್ನೂ ಹೆಚ್ಚಿಸುವ ಅಧಿಕಾರ ಇವರಿಗಿರಲಿಲ್ಲ.

ಆಳುಪ, ಹೊಯ್ಸಳ, ವಿಜಯನಗರ ಅರಸರ ಉದಾರನೀತಿಗಳು ಮತ್ತು ಆಡಳಿತದ ದೃಷ್ಟಿಯಿಂದ ಕೈಗೊಂಡ ರಾಜಕೀಯ ಧ್ರುವೀಕರಣದ ಪ್ರಯೋಗಗಳು ತುಳುನಾಡಿನಲ್ಲಿ ಸ್ವತಂತ್ರ ಅರಸರು ತಲೆಯೆತ್ತಲು ಕಾರಣವಾದವು. ಈ ಅರಸರುಗಳಲ್ಲಿ ಬಹುಮುಖ್ಯರಾದವರೆಂದರೆ,

೧. ನಗಿರೆ – ಹಾಡುವಳ್ಳಿಯ ಮಹಾಮಂಡಲೇಶ್ವರರಾದ ಸಾಳುವರು.
೨. ಕಳಸ – ಕಾರ್ಕಳದ ಭೈರರಸರು.
೩. ಸೂರಾಲಿನ ತೋಳಹ ಅರಸರು.
೪. ಪುತ್ತಿಗೆ – ಮೂಡಬಿದರೆಯ ಚೌಟ ಅರಸರು.
೫. ಬಂಗವಾಡಿಯ ಬಂಗ ಅರಸರು.
೬. ಮುಲ್ಕಿಯ ಸಾವಂತ ಅರಸರು.
೭. ವೇಣೂರಿನ ಅಜಿಲ ಅರಸರು.
೮. ಬೈಲಂಗಡಿಯ ಮೂಲ ಅರಸರು.
೯. ಹೊಸಂಗಡಿಯ ಹೊನ್ನೆಯ ಕಂಬಳಿಯವರು.
೧೦. ಕುಂಬಳೆ ಅರಸರು.
೧೧. ವಿಟ್ಲದ ಅರಸರು….

ಎನ್ನಬಹುದು. ಇವರ ಜೊತೆಗೆ, ಮಾಗಣೆ, ಬೀಡು ಮಟ್ಟದ ಅಧಿಕಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೂಳೂರು ಬೀಡಿನ ಕರ್ಣಂತಾಯರು, ಪಡುಬಿದಿರೆ ಬೀಡಿನ ಬಲ್ಲಾಳರು, ಎಮ್ಮಾಳಿನ ಅರಸರು, ಕಾಪು ಬೀಡಿನ ಹೆಗ್ಗಡೆ, ಹೊಸಂಗಡಿಯ ಬಲ್ಲಾಳರು, ಎರ್ಮ್ಮಾಳಿನ ಅರಸರು, ಕಾಪು ಬೀಡಿನ ಹೆಗ್ಗಡೆ, ಹೊಸಂಗಡಿಯ ಬಿನ್ನಾಣಿಯರು, ಪಣಪೀಲಿನ ಕೊನ್ನರು, ಹೀಗೆ ಇನ್ನೂ ಅನೇಕ ಅರಸರುಗಳನ್ನು ಉಲ್ಲೇಖಿಸಬಹುದು. ಇವರಲ್ಲಿ ಹೊನ್ನೆಯ ಕಂಬಳಿ, ಕುಂಬಳೆ ಅರಸರು, ವಿಟ್ಲದ ಅರಸರನ್ನು ಬಿಟ್ಟರೆ, ಉಳಿದವರೆಲ್ಲರೂ ಜೈನಮತೀಯರು.

ಆಡಳಿತದ ಕ್ರಮಬದ್ಧ ಶ್ರೇಣಿಯಲ್ಲಿ ರಾಜ್ಯ, ಸೀಮೆ, ಮಾಗಣೆ, ಗ್ರಾಮ ಅಥವಾ ಊರು, ಗುತ್ತು ಇವು ತುಳುನಾಡಿನ ಒಳ ಆಡಳಿತದ ಪ್ರಮುಖ ಘಟಕಗಳು. ರಾಜಕೀಯ ಅಧಿಕಾರದ ದೃಷ್ಟಿಯಿಂದ ಗುತ್ತಿಗಿಂತ ಗ್ರಾಮ, ಗ್ರಾಮಕ್ಕಿಂತ ಮಾಗಣೆ, ಮಾಗಣೆಗಿಂತ ಸೀಮೆ, ಸೀಮೆಗಿಂತ ರಾಜ್ಯ, ರಾಜ್ಯಕ್ಕಿಂತ ಮಂಡಳ ಹಿರಿದಾಗುತ್ತ ಹೋಗುತ್ತದೆ. ಇದಕ್ಕನುಗುಣವಾಗಿ ಆಯಾ ಅಧಿಕಾರಿಯ ಅಧಿಕಾರವೂ ಹಿರಿದಾಗುವುದು. ಈ ಅಧಿಕಾರಿಗಳು ವಂಶಪಾರಂಪರ್ಯವಾಗಿ ಆಡಳಿತ ನಡೆಸುತ್ತ, ಸಾಮಾಜಿಕ ಕಟ್ಟುಕಟ್ಟಳೆ, ಐಕ್ಯ, ಧರ್ಮ – ರಕ್ಷಣೆ, ನ್ಯಾಯಪರಿಪಾಲನೆ ಇವುಗಳ ಕಡೆಗೆ ವಿಶೇಷ ಗಮನ ನೀಡುತ್ತಿದ್ದರು.

ಅರಸರು ತಮ್ಮ ಅರಮನೆಯ ಮೊಗಸಾಲೆಯಲ್ಲಿ ಅಥವಾ ಪಟ್ಟದ ಚಾವಡಿಯಲ್ಲಿ ಕುಳಿತು ಕಾರ್ಯಕಲಾಪಗಳನ್ನು ನಡೆಸುತ್ತಿದ್ದರು. ವಂಶಪಾರಂಪರ್ಯವಾಗಿ ಬಂದ ಸಿಂಹಾಸನ ಅಥವಾ ಪಟ್ಟದ ಮಂಚ ಇರುವುದು ಈ ಚಾವಡಿಯಲ್ಲಿ. ಇದಕ್ಕೆ ಹೊಂದಿಕೊಂಡಂತೆ ಆಯಾ ಪಟ್ಟದ ಮತ್ತು ಸೀಮೆಯ ಭೂತಗಳ ಭಂಡಾರದ ಕೊಠಡಿಯೂ ಇರುವುದು. ಈ ಭಂಡಾರದಲ್ಲಿ ಭೂತಗಳ ಒಡವೆ ವಸ್ತುಗಳು, ಖಡ್ಗ, ಕಡಸಲೆ, ಗುರಾಣಿ, ಮುಖವಾಡ, ಪಾಪೆ, ಗಗ್ಗರ ಇತ್ಯಾದಿ ವಸ್ತುಗಳಿರುತ್ತವೆ. ಒಂದು ಅರಮನೆಗೆ ಎಷ್ಟು ಗ್ರಾಮಗಳು ಇರುತ್ತವೆಯೋ ಅಷ್ಟು ಗುತ್ತಿನ ಮನೆಗಳಿರುತ್ತವೆ. ಗ್ರಾಮದೊಡ್ಡದಾಗಿದ್ದರೆ, ಒಂದಕ್ಕಿಂತ ಹೆಚ್ಚು ಗುತ್ತಿನ ಮನೆಗಳೂ ಇರಬಹುದು. ಉದಾಹರಣೆಗೆ ಪಡುಬಿದಿರೆ ಬೀಡಿನ ಚಂದಪ್ಪರಸು ಕಿನ್ಯಕ ಬಲ್ಲಾಳರಿಗೆ ನಡಸಾಲ, ಬೆಂಗ್ರೆ, ಅವರಾರು, ಪಾದಬೆಟ್ಟು ಗ್ರಾಮಗಳ ಅಧಿಕಾರವಿತ್ತು. ಈ ನಾಲ್ಕೂ ಗ್ರಾಮಗಳಲ್ಲಿ ಬಲ್ಲಾಳರ ಕೈಕೆಳಗೆ ನಾಲ್ಕು ಗುತ್ತಿನ ಮನೆಗಳಿದ್ದವು. ಕಾಪು ಬೀಡಿನ ಮದ್ದ ಹೆಗ್ಗಡೆಗೆ ಎಂಟು ಗ್ರಾಂಗಳ ಅಧಿಕಾರ. ಈ ಬೀಡಿಗೆ ಎಂಟು ಗುತ್ತಿನ ಮನೆಗಳಿದ್ದವು. ವೇಣೂರು ಅಜಿಲ ಅರಸರಿಗೆ ಹದಿಮೂರು ಮಾಗಣೆಗಳ ಅಧಿಖಾರ, ಹದಿಮೂರು ಗುತ್ತಿನ ಮನೆಗಳು. ಒಂದು ಮಂಡಲದ ರಾಜನಿಗೆ ಎಂತಹ ಅಧಿಕಾರೀ ವರ್ಗಗಳಿದ್ದವೋ, ಅಂತಹದೇ ಅದಿಕಾರೀ ವರ್ಗ ಬೀಡು, ಗುತ್ತಿನ ಮಟ್ಟದ ಅಧಿಕಾರಿಗೂ ಇತ್ತು. ಈ ಅಧಿಕಾರಿ ವರ್ಗಗಳಲ್ಲಿ ಪ್ರಧಾನಿ, ಸೇನಾಪತಿ, ರಾಜಪುರೋಹಿತ, ಕೊಠಾರಿ, ಸೇನ ಭೋವ ಮುಂತಾದವರೂ ಇರುತ್ತಿದ್ದರು. ಇದಕ್ಕೆ ಇಲ್ಲಿಯ ಶಾಸನಗಳಲ್ಲಿ ಸಮರ್ಥನೆಯೂ ದೊರೆಯುತ್ತದೆ. ಅಜಿಲರ ಪಾಂಡ್ಯದೇವರಸನ ಪ್ರಧಾನಿಯಾಗಿ ಬಿನ್ನಾಣಿ ಬಳಿಯ ಆದಿದೇವರಸನು ಇದ್ದನೆಂದು ಒಂದು ಶಾಸನ ತಿಳಿಸಿದರೆ (S.I.I. VII – 256) ಮುದ್ರಾಡಿಯ ಅಂಣಸಾಮಂತ ಹೆಗ್ಗಡೆಯ ಸೇನಭೋವ ದೇವರಸನೆಂದು ಮೂಡಬಿದಿರೆಯ ಶಾಸನ (ಅದೇ) ವಿವರಿಸುತ್ತದೆ.

ಬೀಡಿನ ಅಥವಾ ಅರಮನೆಯ ಅರಸನು ಮೃತನಾಗಿ ಇನ್ನೊಬ್ಬನು ಅಧಿಕಾರ ಗ್ರಹಣ ಮಾಡುವ ಸಂದರ್ಭ ಬಂದಾಗ, ಆ ಬೀಡು ಅಥವಾ ಅರಮನೆಗೆ ಸಂಬಂಧಪಟ್ಟ ಎಲ್ಲಾ ಗುತ್ತುಗಳ ಮುಖ್ಯಸ್ಥರೂ, ಆ ಗ್ರಾಮಗಳ ಸಮಸ್ತ ಜಾತಿಯ ಮುಖಂಡರೂ ಚಾವಡಿಯಲ್ಲಿ ಸೇರಿ ಹೊಸ ಅರಸನ ಆಯ್ಕೆಯಲ್ಲಿ ಭಾಗವಹಿಸುತ್ತಿದ್ದರು. ಮೃತ ಅರಸನ ಶವಸಂಸ್ಕಾರ ನಡೆಯುವ ಮುನ್ನ, ನೂತನ ಅರಸನ ಆಯ್ಕೆ ನಡೆದು ಮುಂದಿನ ವಿಧಿಗಳು ನಡೆಯುತ್ತಿದ್ದವು. ನೂತನ ಅರಸನ ಆಯ್ಕೆಯಾದ ಬಳಿಕ, ಮೃತ ವ್ಯಕ್ತಿಯ ಪಟ್ಟದ ಉಂಗುರವುಳ್ಳ ಬೆರಳಿಗೂ, ಉತ್ತರಾಧಿಕಾರಿಯಾಗಿ ಆಯ್ಕೆಗೊಂಡವನ ಬೆರಳಿಗೂ ದಾರವೊಮದನ್ನು ಕಟ್ಟಿ, ಪಟ್ಟದ ಉಂಗುರವನ್ನು ಜಾರಿಸುತ್ತ, ಅದನ್ನು ನೂಲಿನಲ್ಲಿ ಹಾಯಿಸುತ್ತ ಉತ್ತರಾಧಿಕಾರಿಯ ಬೆರಳಿಗೆ ತೊಡಿಸಿದ ಬಳಿಕ ಮುಂದಿನ ವಿಧಿಗಳು ಜರುಗುತ್ತಿದ್ದವು. ಅರಸ ಮರಣ ಹೊಂದಿದಾಗ ಸೂತಕಗಳೆಲ್ಲ ಅಧಿಖಾರ ಹೊಂದಿದ ಗುತ್ತಿನ ಮನೆತನದವರಿಗೆ. ಅರಸ ಮತ್ತು ಅಧಿಖಾರಿಗಳ ಮಧ್ಯದ ಸಂಬಂಧದ ಸೂಕ್ಷ್ಮಗಳನ್ನೂ, ಐಕ್ಯತೆಯನ್ನೂ ಇಲ್ಲಿ ಗುರುತಿಸಬಹುದು. ಅರಸರ ಜಾತಿ, ಅಧಿಕಾರಿಗಳ ಜಾತಿ ಬೇರೆ ಬೇರೆಯಾದರೂ, ರಾಜ್ಯದ ಹಿತ ದೃಷ್ಟಿಯಿಂದ ಈ ಸಂಬಂಧಗಳ ಮೂಲಕ, ಅರಸನು ತಮಗೆ ಸೇರಿದವನೆಂಬ ಮನೋಭಾವನೆ ಇಲ್ಲಿ ವ್ಯಕ್ತವಾಗುತ್ತದೆ. ಅರಸನ ರಕ್ಷಣೆ, ಆತನ ಅಧಿಕಾರದ ರಕ್ಷಣೆಯ ಸಂಪೂರ್ಣ ಹೊಣೆಗಾರಿಕೆ ತಮಗೆ ಸೇರಿದ್ದೆಂಬ, ಈ ಐಕ್ಯದ ಮನೋಭಾವನೆಯು ಆ ರಾಜ್ಯದ ಭದ್ರತೆಯ ದೃಷ್ಟಿಯಿಂದಲೂ ಅಮೂಲ್ಯವಾದುದು. ಇದು ಉನ್ನತ ಸಂಸ್ಕೃತಿಯೊಂದರ ಲಕ್ಷಣ.

ಸೂತಕ ಕಳೆದ ಬಳಿಕ ನಡೆಯುವ ಅರಸರ ಪಟ್ಟಬಂಧ ಮಹೋತ್ಸವವೂ ಅಷ್ಟೇ ಮಹತ್ವದ್ದು. ಆಯಾ ರಾಜ್ಯದ ಅಥವಾ ಸೀಮೆಯ ದೇವಾಲಯದಲ್ಲಿ ಆರಂಭಗೊಂಡು, ಅರಮನೆಗೆ ತೆರಳಿ, ಅಲ್ಲಿಯ ತಮ್ಮ ಕುಲದೈವವಿರುವ ಬಸದಿಯಲ್ಲಿ ಪೂಜೆ, ಅಭಿಷೇಕಗಳು ನಡೆದು ಮುಂದಿನ ಸಾಂಪ್ರದಾಯಿಕ ಕಲಾಪಗಳು ಜರಗುತ್ತವೆ. ಪಟ್ಟಾಭೀಷೇಕದ ಕಾಲದಲ್ಲಿ ಪೂರ್ವದಿಂದಲೂ ಅಧಿಕಾರ ಹೊಂದಿದ್ದ ನಾಲ್ಕು ಗುತ್ತುಗಳ ಮುಖಂಡರು ಇದನ್ನು ನಡೆಸುತ್ತಿದ್ದರು. ಇವರಲ್ಲಿ ಒಂದು ಗುತ್ತಿನ ಅಧಿಕಾರಿಯು, ರಾಜನ ಕೈಹಿಡಿದು ಆತನನ್ನು ಪಟ್ಟದ ಮಂಚದ ಮೇಲೆ ಕುಳ್ಳಿರಿಸುವ ಅಧಿಕಾರವನ್ನೂ, ಇನ್ನೊಬ್ಬನು ಪಟ್ಟದ ಉಂಗುರವನ್ನು ರಾಜನ ಬೆರಳಿಗೆ ತೊಡಿಸುವ ಅಧಿಕಾರವನ್ನೂ, ಮತ್ತೊಬ್ಬನು ರಾಜನ ಕೈಗೆ ಪಟ್ಟದ ಖಡ್ಗವನ್ನು ಕೊಡುವ ಅಧಿಕಾರವನ್ನೂ ಪಡೆದಿದ್ದರೆ, ನಾಲ್ಕನೆಯವನು ಅರಸರಿಗೆ ಅಧಿಕಾರ ಪ್ರಾಪ್ತವಾಯಿತೆಂದು ಮೂರು ಬಾರಿ ಘೋಷಿಸುವ ಅಧಿಕಾರವನ್ನು ಪಡೆದಿರುತ್ತಿದ್ದನು. ಆ ಬಳಿಕ ಅನುಕ್ರಮವಾಗಿ ನೆರೆದ ಜನರು ಪಾದಕಾಣಿಕೆಗಳನ್ನು ನೀಡಿ ಅರಸನನ್ನು ಗೌರವಿಸುತ್ತಿದ್ದರು. ಉದಾಹರಣೆಗೆ ಪಡುಬಿದಿರೆ ಬೀಡಿನ ಈಗಿನ ಬಲ್ಲಾಳರಿಗೆ ಅಧಿಕಾರ ಪ್ರದಾನವಾದದ್ದು ಹೀಗೆ; ಅರಸರ ಕೈಹಿಡಿದು ಪಟ್ಟದ ಮಂಚದ ಮೇಲೆ ಕುಳ್ಳಿರಿಸುವ ಅಧಿಕಾರ ಹೊಂದಿದವರು, ಕೊರ್ನಾಯರು. ಅರಸರ ಬೆರಳಿಗೆ ಉಂಗುರ ತೊಡಿಸಿದವರು ಅಂಬಳಿತ್ತಾಯರು. ಪಟ್ಟದ ಖಡ್ಗವನ್ನು ನೀಡಿದವರು ನಡಸಾಲಗುತ್ತಿನವರು. ಅರಸನಿಗೆ ಪಟ್ಟವಾಯಿತೆಂದು ಘೋಷಣೆ ಮಾಡಿದವರು ಪಟ್ಟಣ ಶೆಟ್ಟರು. ಕೆಲವೊಮ್ಮೆ ಒಂದು ಅರಮನೆಗೆ ನಾಲ್ಕು ಗುತ್ತುಗಳಿಗಿಂತ, ಹೆಚ್ಚು ಗುತ್ತಿನ ಮನೆಗಳಿದ್ದಾಗ, ಈ ಕಾರ್ಯವನ್ನು ಪೂರ್ವದಿಂದಲೂ ಅಧಿಕಾರ ಹೊಂದಿದ ನಾಲ್ಕು ಗುತ್ತಿನ ಮನೆತನದವರೇ ನೆರವೇರಿಸುವುದು ವಾಡಿಕೆ. ಇದೇ ರೀತಿ ರಾಜನ ಕೈಕೆಳಗಿನ ಗುತ್ತಿನ ಒಬ್ಬ ಅಧಿಕಾರಿ ಮೃತನಾದಾಗಲೂ ಅವನ ಹುದ್ದೆಯನ್ನು ವಹಿಸಿಕೊಳ್ಳಲ್ಲಿರುವ ಆ ಮನೆತನದ ಸದಸ್ಯನು ಅರಸರ ಮುಖಾಂತರ ಇದೇ ರೀತಿಯ ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದನು. ಅರಮನೆಯ ಚಾವಡಿಯಲ್ಲಿ ಸಮಾರಂಭವು ನಡೆಯುತ್ತಿತ್ತು.

ಈ ಅರಸರಿಗೆ ಆದಾಯವು ಭೂಮಿಯಲ್ಲಿ ಬೆಳೆದ ಧಾನ್ಯಗಳ ರೂಪದಲ್ಲಿ ಬರುತ್ತಿತ್ತು. ಜನರಿಂದ ಬಂದ ಕಪ್ಪ – ಕಾಣಿಕೆಗಳೂ ಅರಸನ ಬೊಕ್ಕಸಕ್ಕೆ ಸೇರುತ್ತಿದ್ದವು. ರಾಜನೇ ಸ್ವತಃ ಭೂಮಿಯನ್ನು ಹೊಂದಿರುವ ಉದಾಹರಣೆಗಳೂ ಇವೆ. ಇದಕ್ಕೆ ಭಂಡಾರದ ಸ್ಥಳವೆಂದು ಕರೆಯುತ್ತಿದ್ದರು. ತಮ್ಮ ಆಡಳಿತಕ್ಷೇತ್ರದೊಳಗಿರುವ ದೇವಾಲಯ, ಬಸದಿ, ದೈವಭೂತಗಳ ವ್ಯವಸ್ಥೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಈ ಅರಸರ ಮೇಲಿತ್ತು. ಊರಿನ ವ್ಯಾಜ್ಯ, ಜಗಳ, ಮನಸ್ತಾಪಗಳನ್ನು ಬಗೆಹರಿಸಬೇಕಿತ್ತು. ತಪ್ಪಿತಸ್ಥರನ್ನು ಗುರುತಿಸಿ ದಂಡವನ್ನೂ ವಿಧಿಸುತ್ತಿದ್ದರು. ವಿವಿಧ ಜಾತಿ, ಪಂಗಡ, ಮತ, ಧರ್ಮದವರೆಲ್ಲರೂ ಅವರವರ ಸಂಪ್ರದಾಯಗಳಿಗೆ ತಕ್ಕಂತೆ ಸ್ವತಂತ್ರವಾಗಿ ಜೀವಿಸುವ ಅವಕಾಶಗಳಿದ್ದವು. ಇದು ತುಳುನಾಡಿನ ಅರಸರು ಪಾಲಿಸಿಕೊಂಡು ಬಂದ ಆದರ್ಶವಾಗಿತ್ತು. ವಿಜಯನಗರ ಪತನಗೊಂಡ ಬಳಿಕ ಮುಂದೆ ಕೆಳದಿರಾಜ್ಯಕ್ಕೆ ಸೇರ್ಪಡೆಗೊಂಡಾಗ, ಸ್ಥಳೀಯ ತುಳು ಅರಸು ಮನೆತನದವರು ತಮ್ಮ ಹಕ್ಕು – ಬಾಧ್ಯತೆಗಳನ್ನು ಕಳೆದುಕೊಂಡರು. ಆ ಬಳಿಕ ಮೈಸೂರು ಹೈದರಾಲಿಯ ಅಧಿನಕ್ಕೆ ಒಳಪಟ್ಟು. ೧೯ನೇ ಶತಮಾನದಲ್ಲಿ ಬ್ರಿಟಿಷರ ಕೈಸೇರಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಾಗಿ ವಿಭಾಜಿತಗೊಂಡು, ದಕ್ಷಿಣ ಕನ್ನಡ ಮದರಾಸು ಪ್ರಾಂತ್ಯಕ್ಕೂ, ಉತ್ತರ ಕನ್ನಡ ಮುಂಬೈ ಪ್ರಾಂತ್ಯಕ್ಕೂ ಸೇರ್ಪಡೆಗೊಂಡವು. ಭಾರತವು ಸ್ವತಂತ್ರಗೊಂಡು, ಭಾಷಾವಾರು ರಾಜ್ಯ ರಚನೆಯಾದಾಗ, ಕಾಸರಗೋಡು ಬಿಟ್ಟು, ಉಳಿದ ತುಳುನಾಡು, ಕರ್ನಾಟಕ ರಾಜ್ಯಕ್ಕೆ ಸೇರಿತು.

ತುಳುನಾಡಿನ ಬಗ್ಗೆ ಅನೇಕ ವಿದ್ವಾಂಸರುಗಳು ಆಯಾ ಕಾಲಘಟ್ಟಗಳಲ್ಲಿ ತಮಗೆ ದೊರೆತಿರುವ ಆಧಾರ – ಸಾಮಗ್ರಿಗಳನ್ನು ಬಳಸಿಕೊಂಡು ಕೆಲವು ಮಹತ್ವದ ಕೃತಿಗಳನ್ನು ರಚಿಸಿಉಪಕರಿಸಿದ್ದಾರೆ. ಈ ವಿದ್ವಾಂಸರುಗಳ ಸಾಲಿನಲ್ಲಿ ಪ್ರಾತಃಸ್ಮರಣೀಯರಾಗಿರುವ ರಾಷ್ಟ್ರಕವಿ ಗೋವಿಂದ ಪೈಗಳ ಕೊಡುಗೆಯಂತೂ ಬಹುದೊಡ್ಡದು. ಅವರನ್ನು ಎಂದಿಗೂ ಮರೆಯುವಂತಿಲ್ಲ. ಈ ಪರಂಪರೆಯನ್ನು ಪ್ರಾಸಂಗಿಕವಾಗಿ ಮುನ್ನಡೆಸಿಕೊಂಡು ಬಂದವರಲ್ಲಿ ಬಿ.ಎ. ಸಾಲೆತ್ತೂರು, ಡಾ. ಎಸ್. ಆರ್. ಶರ್ಮ, ಡಾ. ಕೆ.ವಿ. ರಮೇಶ, ಡಾ. ಗುರುರಾಜ ಭಟ್ಟ, ಡಾ. ಸೂರ್ಯನಾಥ ಕಾಮತ್, ಡಾ. ವಸಂತ ಶೆಟ್ಟಿ ಇವರು ಪ್ರಮುಖರು. ತಾವು ಸಂಶೋಧನೆಗೆ ಎತ್ತಿಕೊಂಡ ವಿಷಯದ ಜೊತೆಗೆ ತುಳುನಾಡಿನ ಅರಸು ಮನೆತನಗಳ ಕುರಿತಾಗಿಯೂ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಈಗ ಡಾ. ವಸಂತ ಮಾಧವ, ಡಾ. ಪಿ. ಎನ್. ನರಸಿಂಹ ಮೂರ್ತಿ ಮೊದಲಾದವರು ಮುನ್ನೆಡೆಗೆ ಬಂದು ಸಂಶೋಧನೆಯ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಇಷ್ಟಾಗಿಯೂ ತುಳುನಾಡಿನ ಮೇಲೆ ಕೆಲಸ ಮಾಡುವ ಸಂಶೋಧಕನಿಗೆ ಎದುರಾಗುವ ದೊಡ್ಡ ಸಮಸ್ಯೆ ಮೂಲಸಾಮಗ್ರಿಗಳ ಕೊರತೆ. ಮೂಲಸಾಮಗ್ರಿಗಳೇ ಒಂದು ನಾಡಿನ ಚರಿತ್ರೆಯ ವ್ಯಾಸಂಗಕ್ಕೆ ಬೆನ್ನೆಲುಬು, ಜೀವನಾಡಿ. ಅದಿಲ್ಲದಿದ್ದರೆ ಕಟ್ಟುವ ಚರಿತ್ರೆ ಶಿಥಿಲವಾಗಿ ಬಿಡುತ್ತದೆ. ಕರ್ನಾಟಕದ ಇತರಭಾಗಗಳಲ್ಲಿ ನಡೆದಿರುವಂತೆ ಪುರಾತತ್ವ ಉತ್ಖನನಗಳು ತುಳುನಾಡಿನಲ್ಲಿ ಇನ್ನೂ ನಡೆಯದೇ ಇರುವುದು ಬಹುದೊಡ್ಡ ಕೊರತೆ. ಡಾ. ರಮೇಶರಂಥ ಎಷ್ಟೋ ವಿದ್ವಾಂಸರು ಇದರ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಡಾ. ಪಿ. ರಾಜೇಂದ್ರನ್, ಡಾ. ಅ. ಸುಂದರ, ಡಾ. ಗುರುರಾಜ ಭಟ್ಟ ಮತ್ತು ಡಾ. ನರಸಿಂಹ ಮೂರ್ತಿಯವರ ಪ್ರಯತ್ನದಿಂದಾಗಿ ಶಿಲಾಯುಗ ಸಂಸ್ಕೃತಿಯ ಕೆಲವು ನೆಲೆಗಳು ಬೆಳಕಿಗೆ ಬಂದಿದೆ. ಇಲ್ಲಿ ವೈಜ್ಞಾನಿಕ ಉತ್ಖನನ (Scientific Excavation) ನಡೆಸಿದರೆ, ಇತಿಹಾಸಪೂರ್ವದ (Pre – historical) ಮಾಹಿತಿಗಳು ಲಭ್ಯವಾಹಬಹುದು.

ಈ ಪ್ರದೇಶಕ್ಕೆ ಸಂಬಂಧಿಸಿದ ಶಾಸನಗಳು ದಕ್ಷಿಣ ಭಾರತ ಶಾಸನ ಸಂಪುಟಗಳಲ್ಲಿ (ಸಂಪುಟ VII, IX – ಭಾಗ ೨) ಸಂಗ್ರಹೀತವಾಗಿದ್ದರೂ, ಇನ್ನು ಎಷ್ಟೋ ಶಾಸನಗಳು ಕತ್ತಲೆಯಲ್ಲೇ ಅಡಗಿಕೊಂಡಿವೆ. ಕಣ್ಣಿಟ್ಟು ಹುಡುಕಿದರೆ ಇನ್ನೂ ನೂರಾರು ಶಾಸನಗಳು ಬೆಳಕಿಗೆ ಬರಬಹುದು. ಮೂಡಬಿದರೆಯ ಜೈನಮಠವೊಂದರಲ್ಲಿಯೇ ಸುಮಾರು ೫೦ರಷ್ಟು ತಾಮ್ರ ಶಾಸನಗಳಿವೆ. ಶಾಸನ ಇಲಾಖೆಯು ಇವುಗಳ ವರದಿಯನ್ನು ಮಾಡಿದ್ದರೂ, ಮೂಲ ಪಠ್ಯ ಇನ್ನೂ ಅಭ್ಯಾಸಿಗಳ ಕೈಗೆ ಸಿಕ್ಕಿಲ್ಲ. ತುಳುನಾಡಿನಹೊರಗೆ ತುಳುನಾಡಿಗೆ ಸಂಬಂಧಿಸಿದ ಶಾಸನಗಳು ಸಾಕಷ್ಟಿವೆ. ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹಾಡೊಳ್ಳಿ, ಗೇರುಸೊಪ್ಪಾ, ಹೊನ್ನಾವರ, ಚಂದಾವರ ಮುಂತಾದ ಭಾಗಗಳಲ್ಲಿ ಶಾಸನಗಳು ಕಂಡುಬರುತ್ತಿದ್ದು ಅಲ್ಲಿ ಅವುಗಳ ಸಂಗ್ರಹ ಕಾರ್ಯವು ವ್ಯವಸ್ಥಿತವಾಗಿ ನಡೆದಿಲ್ಲ. ತುಳುನಾಡಿನಲ್ಲಿ ಮುಖ್ಯವಾಗಿ ದೇವಾಲಯ, ಜೈನಬಸದಿಗಳಲ್ಲಿರುವ ಶಾಸನಗಳನ್ನು ಶೋಧಿಸಬೇಕಾಗಿದೆ. ಏಕೆಂದರೆ ಜೈನ ವಿಗ್ರಹಗಳ ಪೀಠಭಾಗದಲ್ಲಿ ಅನೇಕ ಶಾಸನಗಳಿವೆ. ತುಳು ಅರಸರ ಆಸ್ಥಾನದಲ್ಲಿ ರಾಜಾಶ್ರಯವನ್ನು ಪಡೆದು ಕೃತಿ ರಚಿಸಿರುವ ಅನೇಕ ಕನ್ನಡ, ಸಂಸ್ಕೃತ, ಪ್ರಾಕೃತ ಕವಿಗಳಿದ್ದಾರೆ. ನಾವು ಕೈಗೊಂಡ ಅಧ್ಯಯನದ ಸಂದರ್ಭದಲ್ಲಿ, ಸುಮಾರು ೨೫ ಜೈನಕವಿಗಳು, ೬೯ ಕೃತಿಗಳನ್ನು ರಚಿಸಿದ ವಿಷಯವು ಬೆಳಕಿಗೆ ಬಂದವು (ತುಳುನಾಡಿನ ಜೈನಧರ್ಮ – ಒಂದು ಸಾಂಸ್ಕೃತಿಕ ಅಧ್ಯಯನ ಪುಟ: ೫೭೭). ಈ ಸಂಖ್ಯೆ ಖಂಡಿತವಾಗಿಯೂ ಇನ್ನಷ್ಟು ಹೆಚ್ಚುವ ಸಾಧ್ಯತೆ ಗಳಿವೆ. ಕೆಲವು ಕವಿಗಳ ಕೃತಿಗಳಲ್ಲಿ ಆಯಾ ಅರಸರಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳು ಕಂಡುಬರುತ್ತವೆ. ಉದಾಹರಣೆಗೆ – ಸಂಗಮನ ಆಸ್ಥಾನ ಕವಿ ಕೋಟೇಶ್ವರನ (ಕ್ರಿ.ಶ.೧೪೪೫) ಜೀವಂಧರ ಷಟ್ಪದಿ, ಹಾಡುವಳ್ಳಿಯ – ಎರಡನೇ ದೇವರಸನ ಆಸ್ಥಾನ ಕವಿ ಅಕಳಂಕ ಬ್ರಹ್ಮನ (ಕ್ರಿ.ಶ. ೧೫೧೦) ಚಂದ್ರಸುಧಾ ಸೋನೆ, ಬಂಗವಾಡಿಯ ಲಕ್ಷ್ಮನ ಬಂಗರಸನ ಆಸ್ಥಾನ ಕವಿ ಚಂದ್ರಶೇಖರನ (ಕ್ರಿ.ಶ.೧೭೦೦) ರಾಮಚಂದ್ರ ಚರಿತ, ಚೌಟ ಚಿಕ್ಕರಾಯನ ಆಸ್ಥಾನ ಕವಿಗಳಾದ ಪಟ್ಟಾಭಿರಾಮನ (ಕ್ರಿ.ಶ. ೧೭೨೫) ರತ್ನಶೇಖರ ಚರಿತೆ, ಸುರಾಲ ಕವಿಯ (ಕ್ರಿ.ಶ. ೧೭೬೧) ಪದ್ಮಾವತೀ ಚರಿತೆ ಮೊದಲಾದ ಕೃತಿಗಳು ಇನ್ನೂ ಹಸ್ತಪ್ರತಿಗಳ ರೂಪದಲ್ಲಿಯೇ ಇವೆ. ಇಂಥ ಗ್ರಂಥಗಳೆಲ್ಲವೂ ಬೆಳಕಿಗೆ ಬಂದಾಗ, ತುಳುನಾಡಿನ ಅರಸರುಗಳ ಸಮಗ್ರ ಚಿತ್ರವನ್ನು ರೂಪಿಸುವುದು ನಮಗೆ ಸಾಧ್ಯವಾಗಬಹುದು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಕಳೆದ ವರ್ಷ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇದರ ಸಹಯೋಗದೊಡನೆ ಕರ್ನಾಟಕ ತುಳು ಅರಸು ಮನೆತನಗಳು ಈ ವಿಷಯದ ಮೇಲೆ ಎಡರು ದಿನಗಳ ಕಾಲ ವಿಚಾರಗೋಷ್ಠಿಯೊಂದು ನಡದಿತ್ತು. ಇದಕ್ಕೆ ಹಂಪೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿಯವರು ಮುಖ್ಯಕಾರಣ. ಇದಕ್ಕಿಂತ ಹಿಂದಿನ ವರ್ಷ (೧೯೯೮ ದಶಂಬರ್) ಧರ್ಮಸ್ಥಳ ಕ್ಷೇತ್ರದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ ನೆರವಿನೊಡನೆ ಹಂಪೆ ವಿಶ್ವವಿದ್ಯಾನಿಲಯವು, ಗ್ರಂಥ ಸಂಪಾದನೆಯ ವಿಧಿ – ವಿಧಾನಗಳು ಈ ವಿಷಯದ ಮೇಲೆ ವಿಚಾರಗೋಷ್ಠಿಯೊಂದನ್ನು ನಡೆಸಿತ್ತು. ಆ ಸಂದರ್ಭದಲ್ಲಿ ಭಾಗವಹಿಸಿದ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಲಪತಿಗಳಾದ ಡಾ. ಎಂ.ಎಂ. ಕಲಬುರ್ಗಿಯವರು, ತುಳುನಾಡಿನ ಸಾಂಸ್ಕೃತಿಕ ಜೀವನದ ಬಹುಮುಖ ಆಯಾಮಗಳನ್ನು ವಿಶ್ಲೇಷಿಸುತ್ತ, ಇಲ್ಲಿಯ ತುಳು ಅರಸು ಮನೆತನಗಳ ವೈಶಿಷ್ಟ್ಯವನ್ನು, ಸಾಹಿತ್ಯ, ಶಿಲ್ಪ, ಕಲೆ, ಹಸ್ತಪ್ರತಿಗಳ ಮೂಲಕ ಜ್ಞಾನಭಂಡಾರವನ್ನು ಸಂರಕ್ಷಿಸಿಕೊಂಡು ಬಂದಿರುವ ಅವರ ಕೊಡುಗೆಗಳನ್ನೂ ಪ್ರಾಸಂಗಿಕವಾಗಿ ಎತ್ತಹೇಳಿ, ಇವರ ಬಗ್ಗೆ ಗಂಭಿರ ಅಧ್ಯಯನದ ಅಗತ್ಯವನ್ನು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿದೇರ್ಶಕರಾಗಿರುವ ಪ್ರೊ. ಎಚ್. ಕೃಷ್ಣಭಟ್ಟ ಅವರು ನಿವೃತ್ತ ನಿರ್ದೇಶಕರಾಗಿರುವ ಪ್ರೊ. ಕು.ಶಿ. ಹರಿದಾಸ ಭಟ್ಟರ ಸಲಹೆಯಂತೆ ತುಳು ಅರಸು ಮನೆತನಗಳ ಬಗ್ಗೆ ಕಾರ್ಯಕ್ರಮವನ್ನು ತಮ್ಮ ಕೇಂದ್ರದ ಮೂಲಕ ನಡೆಸಲು ಮುಂದೆ ಬಂದರು. ಹಂಪೆ ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕ ಪ್ರೊ. ಎ.ವಿ. ನಾವಡ ಅವರೂ ಕೂಡ ಉತ್ಸಾಹದಿಂದ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನೆರವಾದರು. ಕುಲಪತಿಗಳ ಸೂಚನೆಯಂತೆ, ಸ್ಥಳೀಯ ವಿದ್ವಾಂಸರುಗಳಿಗೆ ಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶವನ್ನೂ ನೀಡಲಾಯಿತು. ಎರಡು ದಿನಗಳ ಕಾಲ ನಡೆದ ಈ ಗೋಷ್ಠಿಯಲ್ಲಿ ತುಳು ಅರಸು ಮನೆತನಗಳಿಗೆ ಸಂಬಂಧಿಸಿದ ೧೧ಪ್ರಬಂಬಂಧಗಳು ಮಂಡಿತವಾದುವು. ಅನೇಕ ಹೊಸ ಹೊಸ ವಿಷಯಗಳು, ಆಧಾರ ಸಾಮಗ್ರಿಗಳು ಗೋಷ್ಠಿಯಲ್ಲಿ ಚರ್ಚೆಗೆ ಬಂದವು. ಪ್ರತಿಯೊಬ್ಬ ಪ್ರಬಂಧಕಾರನೂ, ತಮಗೆ ಕೊಟ್ಟ ವಿಷಯದ ಮೇಲೆ ಸಾಕಷ್ಟು ಗಂಭೀರವಾಗಿ ಅಧ್ಯಯನ ನಡೆಸಿ, ಆಯಾ ಅರಸರುಗಳ ಮೂಲ ಸಾಮಗ್ರಿಗಳನ್ನು ಕಲೆಹಾಕುವತ್ತ ದಿಟ್ಟ ಪ್ರಯತ್ನವನ್ನು ನಡೆಸಿದ್ದರು. ಈ ಪ್ರಯತ್ನದ ಹೊರತಾಗಿಯೂ ಎಲ್ಲಾ ಅರಸರುಗಳ ಚರಿತ್ರೆಯ ಮೂಲ ಇನ್ನೂ ಒಗಟಾಗಿಯೇ ಇದೆ. ಚೌಟರಸರು, ಬಂಗರಸರು, ನಗಿರೆ – ಹಾಡುವಳ್ಳಿಯ ಸಾಳುವರು, ಅಜಿಲರು ಹೀಗೆಯಾವ ಅರಸರ ಬಗ್ಗೆ ನೋಡಿದರೂ, ನಮಗೆ ಅವರ ಮೂಲಚರಿತ್ರೆಯನ್ನಾಗಲೀ, ಕ್ರಮಬದ್ಧ ಆಲಿಕೆಯನ್ನಾಗಲೀ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಏನಿದ್ದರೂ ೧೨ – ೧೩ನೇ ಶತಮಾನಗಳ ಅನಂತರವೇ ಇವರ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುತ್ತವೆ. ಈ ದೃಷ್ಟಿಯಿಂದ ಸಂಶೋಧಕರು ಮುಂದಿನ ಹೆಜ್ಜೆಯನ್ನು ಇಡುವಲ್ಲಿ ಹೆಚ್ಚು ಕ್ರಿಯಾಶೀಲರಾಗಬೇಕಾಗಿದೆ. ಗೋಷ್ಠಿಯಲ್ಲಿ ಮಂಡಿಸಲ್ಪಟ್ಟ ಪ್ರಬಂಧಗಳು ಒಂದೆಡೆ ಪುಸ್ತಕರೂಪದಿಂದ ಜನರ ಕೈಗೆ ಸಿಗಬೇಕೆಂಬ ದೃಷ್ಟಿಯಿಂದ ಹಂಪೆಯ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾಗಿರುವ ಡಾ. ಎಂ. ಎಂ. ಕಲಬುರ್ಗಿಯವರು ಮತ್ತು ಪ್ರಸಾರಾಂಗ ನಿರ್ದೇಶಕರಾಗಿರುವ ಪ್ರೊ. ಎ.ವಿ. ನಾವಡ ಅವರು, ಇದರ ಪ್ರಕಟಣೆಯ ಜವಾಬ್ದಾರಿಯನ್ನು ನಮ್ಮ ಮೇಲೆ ಬಿಟ್ಟರು. ಆದರೆ ಅವರು ನಿರೀಕ್ಷಿಸಿದ ಸಮಯಕ್ಕೆ ಸರಿಯಾಗಿ ನಮ್ಮಿಂದ ಪುಸ್ತಕವನ್ನು ಹೊರತರಲು, ಅನಿವಾರ್ಯ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಅಂತೂ ಈಗ, ಈ ಕೆಲಸವನ್ನು ಮುಗಿಸಿ ನಮ್ಮ ಆತಂಕವನ್ನು ಕಳೆದುಕೊಂಡಿದ್ದೇವೆ. ಸಹೃದಯ ಕನ್ನಡಿಗರು ಆಸ್ಥೆಯಿಂದ ಈ ಕೃತಿಯನ್ನು ಬರಮಾಡಿಕೊಂಡರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ.

ಈ ತುಳು ಅರಸು ಮನೆತನಗಳ ಕುರಿತ ವಿಚಾರಗೋಷ್ಠಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಹಯೋಗದಿಂದ ಉಡುಪಿಯಲ್ಲಿ ನಡೆಸಿಕೊಟ್ಟ ಹಾಗೂ ಈ ಗ್ರಂಥ ಸಂಪಾದನೆಯನ್ನು ನಮಗೆ ವಹಿಸಿಕೊಟ್ಟ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ. ಎಂ. ಕಲಬುರ್ಗಿ ಅವರಿಗೂ, ಪ್ರೊ. ಎ.ವಿ. ನಾವಡ ಅವರಿಗೂ ನಾವು ಕೃತಜ್ಞರು. ವಿಚಾರಗೋಷ್ಠಿಯನ್ನು ಸಂಘಟಿಸುವಲ್ಲಿ, ವಿದ್ವಾಂಸರನ್ನು ಆರಿಸುವಲ್ಲಿ ನೆರವಿತ್ತ ಡಾ. ಜಗದೀಶ ಶೆಟ್ಟರಿಗೂ, ಹಸ್ತಪ್ರತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಡಾ. ಉಪ್ಪಂಗಳ ರಾಮಭಟ್ಟರಿಗೂ ನಮ್ಮ ಕೃತಜ್ಞತೆಗಳು. ಈ ಗ್ರಂಥದ ಮುದ್ರಣ ಕಾರ್ಯವನ್ನು ನಡೆಸಿಕೊಟ್ಟ ಮಣಿಪಾಲ ಪ್ರೆಸ್ಸಿನ ಬಂಧುಗಳಿಗೆ ನಮ್ಮ ಕೃತಜ್ಞತೆ.

ಹೆರಂಜೆ ಕೃಷ್ಣಭಟ್ಟ, ಉಡುಪಿ
ಡಾ. ಎಸ್. ಡಿ., ಶೆಟ್ಟಿ ಉಜಿರೆ