ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ೨೬ ಕಿ.ಮೀ. ದೂರದಲ್ಲಿರುವ ಗೇರುಸೊಪ್ಪೆ ಮತ್ತು ಭಟ್ಕಳದಿಂದ ೧೯ ಕಿ.ಮೀ. ದೂರದಲ್ಲಿರುವ ಹಾಡುವಳ್ಳಿಯು ಕ್ರಿ.ಶ. ೧೪ – ೧೫ನೇ ಶತಮಾನದಲ್ಲಿ ಸಾಳುವರ ರಾಜಧಾನಿಯಾಗಿ ಮೆರೆದಿತ್ತು. ಗೇರುಸೊಪ್ಪೆಗೆ ಭಲ್ಲಾತಕೀಪುರ, ಕ್ಷೇಮಪುರ, ನಗಿರೆ ಮುಂತಾದ ಹೆಸರುಗಳಿರುವಂತೆ,[1] ಆಡುವಳ್ಳಿಗೆ ಸಂಗೀತಪುರವೆಂದೂ ಕರೆಯಲಾಗುತ್ತಿತ್ತು.[2] ಕರಾವಳಿ ಜಿಲ್ಲೆಗಳ ಬಹುಭಾಗವನ್ನೊಳಗೊಂಡ ಇವರ ರಾಜ್ಯವು, ಘಟ್ಟದ ಮೇಲಿನ ಶಿವಮೊಗ್ಗ ಜಿಲ್ಲೆಯ ಕೆಲವು ಪ್ರದೇಶಗಳನ್ನೂ ಒಳಗೊಂಡಿದ್ದಿತು. ವಿಜಯನಗರ ಅರಸರ ಕೈಕೆಳಗೆ ಮಹಾ ಮಂಡಲೇಶ್ವರರಾಗಿದ್ದು ತುಳು, ಹೈವೆ, ಕೊಂಕಣ ಮೊದಲಾದ ರಜ್ಯಗಳನ್ನು ಇವರು ಪ್ರತಿಪಾಲಿಸುತ್ತಿದ್ದಂತೆ ಇಲ್ಲಿಯ ಶಾಸನಗಳು ಸ್ಪಷ್ಟಪಡಿಸುತ್ತವೆ. [3] ಮೂಡಬಿದಿರೆಯ ಶಾಸನವೊಂದು ಗೇರುಸೊಪ್ಪೆಯ ನಗರವನ್ನು ವರ್ಣಿಸುತ್ತ;

ತುಳು ದೇಶವೆಂಬ ಕಾಂತೆಯ
ವಿಲಸನ್ಮುಖ ಕಮಲಕೆಸೆವ ತಿಲಕವೆನಿಪ್ಪಾ
ಚೆಲುವಂ ತಳೆದುದು ನೋಡ
ಲ್ಕಿಳೆಯೊಳಗೀ ನಗಿರರಾಜ್ಯಮತನು ನಿವಾಸಂ !

ಎಂದು ಗೇರುಸೊಪ್ಪೆಯು ತುಳುದೇಶದ ರಾಜಧಾನಿಯಾಗಿ ವೈಭವದಿಂದ ಮೆರೆಯುತ್ತಿತ್ತೆಂದು ವಿವರಿಸುತ್ತದೆ. [4] ಗೇರುಸೊಪ್ಪೆ ಮತ್ತೆ ವಿಜಯನಗರಗಳ ನಡುವಣ ರಾಜಕೀಯ ಸಂಬಂಧಗಳು ಮತ್ತು ಈ ಭಾಗದ ಕೆಲವು ಶಾಸನಗಳ ಆಧಾರವನ್ನು ಗಮನಿಸಿ ಕೆಲವು ವಿದ್ವಾಂಸರು, ವಿಜಯನಗರದಲ್ಲಾಳಿದ ಸಾಳುವ ವಂಶಜರು ಗೇರುಸೊಪ್ಪೆಯ ಮೂಲದವರಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. [5] ಮಹಾಭಾರತ ಗ್ರಂಥದಲ್ಲೂ ಸಾಳುವರ ಉಲ್ಲೇಖ ಬಂದಿರುವುದು ಕುತುಹಲದ ಅಂಶವಾಗಿದೆ. [6] ಜೈನಮತಾವಲಂಬಿಗಳಾದ ಇವರು ತಮ್ಮನ್ನು ಸೋಮವಂಶದ ಕಾಶ್ಯಪಗೋತ್ರದವರೆಂದು ಕರೆದುಕೊಂಡಿದ್ದಾರೆ. [7] ಗೇರುಸೊಪ್ಪೆ ಮತ್ತು ಹಾಡುವಳ್ಳಿಗೆ ಸೇರಿದ ಈ ಅರಸರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರೂ, ಗೇರುಸೊಪ್ಪೆಯ ಸಾಳುವರು ಅಳಿಯ ಕಟ್ಟನ್ನೂ, ಹಾಡುವಳ್ಳಿಯವರು ಮಕ್ಕಳ ಕಟ್ಟನ್ನೂ ಪಾಲಿಸುತ್ತಿದ್ದರು. ಆದರೆ ಇವರ ಆಳ್ವಿಕೆಯ ಕೊನೆಯ ಭಾಗದಲ್ಲಿ ಹಾಡುವಳ್ಳಿಯವರೂ ಕೂಡ ಅಳಿಯ ಕಟ್ಟನ್ನೇ ಸ್ವೀಕರಿಸತೊಡಗಿದರು. ಮುಂದೆ ಈ ಮನೆತನಕ್ಕೆ ಸೇರಿದ ಕೊನೆಯ ರಾಣಿ ಚೆನ್ನಭೈರಾದೇವಿಯ ಕಾಲದಲ್ಲಿ ಎರಡೂ ರಾಜ್ಯಗಳು ಒಂದಾದವು ಮಾತ್ರವಲ್ಲ. ಸಾಳುವರ ಆಳ್ವಿಕೆಯೂ ಕೊನೆಗೊಂಡಿತು.

ಗೇರುಸೊಪ್ಪೆಯ ಸಾಳುವರು :

ಗೇರುಸೊಪ್ಪೆಯ ರಾಜ್ಯವು ಯಾವಾಗ ಅಸ್ತಿತ್ವಕ್ಕೆ ಬಂದಿತೆಂದು ಹೇಳಲು ಸ್ಪಷ್ಟ ಆಧಾರಗಳಿಲ್ಲ. ಆದರೆ ಸುಮಾರು ೧೨ – ೧೩ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿರಬೇಕೆಂದು ಮೂಡಬಿದರೆಯ ಹೊಸಬಸದಿಯಲ್ಲಿ ದೊರೆತ ಒಂದು ಶಾಸನದ ಆಧಾರದ ಮೇಲಿಂದ ಹೇಳಬಹುದಾಗಿದೆ. [8] ಆ ಶಾಸನವು (ಕ್ರಿ.ಶ. ೧೪೩೦) ಗೇರುಸೊಪ್ಪೆಯ ವಂಶಾವಳಿಯನ್ನು ಪ್ರಸ್ತಾಪಿಸುತ್ತ; ನಾರಣಾಂಕ, ನಾಗಣಾಂಕ ಮೊದಲಾದ ಅರಸರು ಆಳುತ್ತಿದ್ದರೆಂದೂ, ಆ ಬಳಿಕ ಕಾಮ, ಮಂಗರಸ, ಹೈವರಾಜ, ಇಮ್ಮಡಿ ಮಂಗರಾಜ, ಕೇಶವ, ಭೈರವೇಂದ್ರ ಇಮ್ಮಡಿ ಭೈರವೇಂದ್ರ ರಾಜರು ಆಳ್ವಿಕೆ ನಡೆಸಿದರೆಂದೂ ವಿವರಿಸುತ್ತದೆ. ಇವರಲ್ಲಿ ನಮಗೆ ನಾರಣಾಂಕ, ನಾಗಣಾಂಕರ ವಿಚಾರ ಏನೇನೂ ತಿಳಿಯುವುದಿಲ್ಲ. ಅನಂತರ ಇನ್ನೂ ಅನೇಕ ರಾಜರು ಆಳ್ವಿಕೆ ನಡೆಸಿದ ಬಳಿಕ ಹೊನ್ನನೃಪನು ಅರಸನಾದನೆಂದು ಆ ಶಾಸನವು (ಕ್ರಿ.ಶ. ೧೪೩೦) ಪ್ರಸ್ತಾಪಿಸುತ್ತ; “….ಮಲೆವರಗಂಡರುಂ ಕಲಿಮುಖಾಂಬುಜಹಸ್ತರನೇಕ ಭೂಪರುಂ ಸಲೆ ನಗಿರಾಳ್ದುಪೋದರವರಿಂ ಬಳಿಯಂ ಕಲಿಹೊನ್ನಭೂಪ ಅರಸನಾದಂ…” ಎಂದು ಸ್ತುತಿಸುತ್ತದೆ. ಹೊನ್ನನು ಕ್ರಿ.ಶ. ೧೩೩೦ ರಿಂದ ೧೩೪೫ ರ ವರೆಗೆ ಆಳಿರಬಹುದೆಂದು ಊಹಿಸಲಾಗಿದೆ. ಆ ಬಳಿಕ ಹೊನ್ನನೃಪನ ಮಗಳಾದ ಮಲ್ಲಿಕಬ್ಬೆಯ ಗಂಡ ಕಾಮನು ಸ್ವಲ್ಪ ಸಮಯ ಆಳ್ವಿಕೆ ನಡೆಸಿದನು. ನಂತರ ಮೊದಲನೆಯ ಮಂಗರಸನು ಪಟ್ಟವೇರಿದನು. ಇವನು ಎಷ್ಟು ಕಾಲ ಆಳ್ವಿಕೆ ನಡೆಸಿದನೆನ್ನುವುದು ಸ್ಪಷ್ಟವಿಲ್ಲ. ಮುಂದೆ ಇವನ ಅಳಿಯ ಹೈವರಾಜನು ಅಧಿಕಾರಕ್ಕೆ ಬಂದನು. ಇವನನ್ನು ಹೈವ, ಹಯಿವರಸ, ಹೈನನೃಪ ಮುಂತಾದ ಹೆಸರುಗಳಿಂದ ಆ ಕಾಲದ ಶಾಸನಗಳು ಸ್ತುತಿಸುತ್ತವೆ. ಇವನು ಮಹಾಪರಾಕ್ರಮಿಯೂ, ಸಮರ್ಥ ಆಡಳಿತಗಾರನೂ ಆಗಿದ್ದು, ನಗಿರೆ ರಜ್ಯದ ಜೊತೆಗೆ ಹಾಡುವಳ್ಳಿಯ ರಜ್ಯಕ್ಕೂ ದೊರೆಯಾಗಿದ್ದನು. ಕ್ರಿ.ಶ. ೧೩೭೮ರ ಗೇರುಸೊಪ್ಪೆಯ ಶಾಸನವು ಈ ಹೈವರಸನನ್ನು ಉಲ್ಲೇಖಿಸುತ್ತದೆ. [9] ನಮಗೆ ದೊರೆತಿರುವ ಈ ವಂಶದ ಪ್ರಾಚೀನ ಶಾಸನಗಳಲ್ಲಿ ತೇದಿ ಇರುವ ಶಾಸನ ಇದೇ ಆಗಿದೆ. ಇವನ ಕಾಲದಲ್ಲಿ ಹೊನ್ನಾವರ, ಚಂದಾವರ, ಗೋಕರ್ಣ, ಬನವಾಸಿ ಮುಂತಾದ ಪ್ರದೇಶಗಳು ನಗಿರೆರಾಜ್ಯದ ಕಕ್ಷೆಗೆ ಒಳಪಟ್ಟಿದ್ದವು. ಇವನು ವೀರನಾಗಿದ್ದಂತೆ, ಧರ್ಮಬೀರುವೂ ಆಗಿದ್ದನು. ತನ್ನ ಅನ್ವಯಾಗತವಾಗಿ ಬಂದ ಕೀರ್ತಿಗೆ ಜಯಸ್ತಂಭದಂತೆ ಇದ್ದನಂತೆ. ಮಲೆವರರಾಯರ ಗಂಡ ಶಿವ ಸಿಂಹಾಸನ ಚಕ್ರವರ್ತಿ, ಸಮ್ಯಕ್ತ್ವ ಚೂಡಾಮಣಿಯಾಗಿ ಮೆರೆದ ಈ ರಾಜನ ಪ್ರತಾಪಕ್ಕೆ ಸೋತು, ಅನ್ಯಮಂಡಳ ಭೂಪರು ರಕ್ಷಿಸು, ರಕ್ಷಿಸು ಹೈವರಾಜಯೆಂದು ಮೊರೆಯಿಡುತ್ತಿದ್ದರಂತೆ. ಇವನ ಮಡದಿ ಹೊನ್ನಬ್ಬೆ. ಕ್ರಿ.ಶ. ೧೩೯೮ರಲ್ಲಿ ವಿಜಯನಗರದ ವಿರುದ್ಧ ಚೌಟರಸರು ದಂಗೆಯೆದ್ದಾಗ, ಮಹಾಪ್ರಧಾನ ಮಂಗಪ್ಪ ದಂಡನಾಯಕನ ಜೊತೆಗೆ ಈ ಹೈವರಸನೂ ತನ್ನ ಸೈನ್ಯದೊಡನೆ ಅವನಿಗೆ ನೆರವಾಗಿದ್ದನು. [10]

ಇವನ ತರುವಾಯ ಎರಡನೆಯ ಮಂಗರಸನು ನಗರದ ದೊರೆಯಾಗಿ ಸ್ವಲ್ಪಕಾಲ ಆಳ್ವಿಕೆ ನಡೆಸಿದಂತೆ ಶಾಸನವೊಂದರಿಂದ ತಿಳಿದುಬರುತ್ತದೆ. [11] ಆ ಬಳಿಕ ಕೇಶವದೇವ ಒಡೆಯನು ನಗಿರೆಯ ದೊರೆಯಾದನು. ಹೈವನ ಅಳಿಯ ಸಂಗಮ, ಸಂಗಮನ ಅಳಿಯ ಕೇಶವನಿರಬೇಕೆಂದು ಅನ್ಯ ಆಧಾರಗಳಿಂದ ಹೇಳಲಾಗುತ್ತಿದೆ. [12] ಕಾಯ್ಕಿಣಿ ಶಾಸನವೊಂದರಲ್ಲಿ ಉಕ್ತವಾಗಿರುವಂತೆ ಇವನು ಕ್ರಿ.ಶ. ೧೪೨೫ರ ವರೆಗೂ ನಗಿರೆಯ ದೊರೆಯಾಗಿ ಕಾಣಿಸಿಕೊಳ್ಳುತ್ತಾನೆ. [13] ತನ್ನ ಹೆಚ್ಚಿನ ಸಮಯವನ್ನು ಯುದ್ಧದಲ್ಲಿ ಕಳೆದ ಇವನು ವಿಜಯನಗರ ಸಾಮ್ರಾಟರ ಆಧಿಪತ್ಯದಿಂದ ಮುಕ್ತನಾಗಲು ಬಯಸಿದಂತೆ ತೋರುತ್ತದೆ. ಇದರಿಂದ ವಿಜಯನಗರದ ಅಧಿಕಾರಿಗಳಾಗಿದ್ದ ಹಡಪದ ನಾಗಣ್ಣ ವೊಡೆಯ ಮತ್ತು ಭಾಸಪ್ಪವೊಡೆಯರು ಇವನ ಮೇಲೆ ಯುದ್ಧ ಮಾಡಿದರು. [14] ಇದೇ ರೀತಿ ಹಾಡುವಳ್ಳಿಯ ಸಂಗಿರಾಯನ ಮೇಲೂ ಇವನು ಯುದ್ಧ ನಡೆಸಿದ ವಿಚಾರವು ಕಾಯ್ಕಿಣಿಯ ವೀರಗಲ್ಲಿನಲ್ಲಿ ಉಕ್ತವಾಗಿದೆ. [15] ಕೇಶವನ ತರುವಾಯ ಅವನ ಸೋದರಳಿಯನಾದ ಸಂಗಮ ಅಥವಾ ಸಂಗಿರಾಯನು ನಗಿರೆಯ ದೊರೆಯಾದಂತೆ ತಿಳಿದುಬರುತ್ತದೆ. ಆದರೆ ಕೆಲವು ವಿದ್ವಾಂಸರು, ಹಯವನ ಅಳಿಯ ಸಂಗಮ, ಸಂಗಮನ ಅಳಿಯ ಕೇಶವನೆಂದು ಹೇಳಿದರೆ, [16] ಇನ್ನು ಕೆಲವರು ಎರಡನೆಯ ಮಮಗರಾಜನು ತೀರಿಕೊಂಡಾಗ ಅವನ ಅಳಿಯನಾದ ಕೇಶವನು ಪ್ರಾಪ್ತವಯಸ್ಕನಾಗಿರಲಿಲ್ಲವೆಂದು ತಿಳಿಸಿ, ಹಯವರಸನ ಮಗನೆಂಬ ರೀತಿಯಲ್ಲಿ ನಗಿರೆಯ ಮನೆತನದ ಸಂಬಂಧಿ ಸಂಗಿರಾಯನೇ ನಗಿರೆ ರಾಜ್ಯದ ಆಡಳಿತ ಸೂತ್ರವನ್ನು ವಹಿಸಿಕೊಂಡನೆಂದು ಹೇಳುತ್ತಾರೆ. [17] ಈ ದೃಷ್ಟಿಯಿಂದ ಕೇಶವನ ಸೋದರಳಿಯನಾದ ಸಂಗಮನು, ಎರಡನೆಯ ಸಂಗಿರಾಯನೆಂದು ನಾವು ಭಾವಿಸಬೇಕಾಗುತ್ತದೆ. ಆದರೆ ಇದಕ್ಕೆ ಇನ್ನಷ್ಟು ಸಮರ್ಥನೆ ಬೇಕು. ಆದರೂ ಸಂಗಿರಾಯನ ಆಳ್ವಿಕೆಗೆ ಸೇರಿದ ಕ್ರಿ.ಶ.೧೪೨೭ರ ಕಾಯ್ಕಿಣಿಯ ಶಾಸನವು ಅಂದಿನ ರಾಜಕೀಯ ದೃಷ್ಟಿಯಿಂದ ಗಮನಾರ್ಹವಾದುದು. [18]

ವಿಜಯನಗರ ಅರಸರ ನಿರೂಪದಿಂದ ತಿಮ್ಮಣ್ಣವೊಡೆಯನು, ಹೊನ್ನಾವರದ ರಾಜಧಾನಿಯಲ್ಲಿದ್ದು ಹೈವೆ, ತುಳು, ಕೊಂಕಣದ ಮೇಲಾಳಿಕೆಯನ್ನು ನೋಡಿ ಕೊಳ್ಳುತಿರುವಾಗ, ಕಾಸರಗೋಡಿನಲ್ಲಿದ್ದ (ಹೊನ್ನಾವರದ ಹತ್ತಿರದ ಕಾಸರಕೋಡು) ಹಂಜಮಾನ ಸಂಘದ ಮುಖ್ಯಸ್ಥ ಉಮ್ಮರ ಮರಕಾಲನು ಇವನೊಡನೆ ವಿರೋಧ ಕಟ್ಟಿಕೊಳ್ಳುತ್ತಾನೆ. ಅಪಾಯವನ್ನು ಗ್ರಹಿಸಿದ ಉಮ್ಮರ ಮರಕಾಲನು ತನ್ನ ರಕ್ಷಣೆಗಾಗಿ ನಗಿರೆಯ ಸಂಗಿರಾಯನ ಸಹಾಯವ್ನು ಯಾಚಿಸಿದಾಗ, ಕೋಟೇಶ್ವರ ನಾಯಕನ ನೇತೃತ್ವದಲ್ಲಿ ಸಾವಿರ ಕಾಪಿನ ಭಟರನ್ನು ಸಂಗಿರಾಯನು ಕಾಸರಗೋಡಿಗೆ ಕಳುಹಿಸಿ ಕೊಡುತ್ತಾನೆ. ಆದರೆ ಅಷ್ಟರಲ್ಲಿಯೇ ತಿಮ್ಮಣ್ಣವೊಡೆಯನು ಸೇನಾಸಮೇತನಾಗಿ ಮುನ್ನಡೆದು ‘ಮೋಸದಿ ಕಾಸರಕೋಡನು ಮುತ್ತಿ’ ಉಮ್ಮರ ಮರಕಾಲ ಮೊದಲಾದ ಹಂಜಮಾನದವರ ಹೆಣ್ಣುಮಕ್ಕಳನ್ನು ತೊಂದರೆಗೀಡು ಮಾಡಿದಾಗ, ಸಿಟ್ಟಿಗೆದ್ದ ಕೋಟೇಶ್ವರ ನಾಯಕನು ಯುದ್ಧಮಾಡಿ ಹಂಜಮಾನದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ದೋಣಿಗಳ ಮೂಲಕ ಕಳುಹಿಸಿಕೊಡುತ್ತಾನೆ. ಈ ಭೀಕರ ಯುದ್ಧದಲ್ಲಿ, ಕೋಟೇಶ್ವರ ನಾಯಕನು ರಾಜಗುರು ರೇವಣ್ಣ ನಾಯಕರು ಕೆಡಹಿ, ಮುಂದೆ ನುಗ್ಗಿ ತನಗೆ ಇದಿರದ ‘ಮೂರು ಚಾವಡಿಯ ವೀರಭಟ’ರನ್ನು ಓಡಿಸಿ ಧರಣಿಗೆ ಬಿದ್ದು ವೀರಸ್ವರ್ಗವನ್ನು ಪಡೆದಂತೆ ಆ ಶಾಸನವು ವಿವರಿಸುತ್ತದೆ. [19] ಇವನು ಕೂಡ ವಿಜಯನಗರ ಸಾಮ್ರಾಟರಿಂದ ಮುಕ್ತನಾಗಲು ಬಯಸಿದಂತೆ ತೋರುತ್ತದೆ. ಆದರೆ ವಿಜಯನಗರದ ಅರಸರು ಅಂದಿನ ರಾಜಕೀಯದ ಸೂಕ್ಷ್ಮವನ್ನು ಅರಿತು, ಹೊನ್ನಾವರದ ರಾಜ್ಯಪಾಲನನ್ನು ಪದಚ್ಯುತಗೊಳಿಸಿ ಆ ಸ್ಥಾನಕ್ಕೆ ಲಕ್ಕಣ್ಣವೊಡೆಯರನ್ನು ನೇಮಿಸಿ ಸಂಗಿರಾಯನೊಡನೆ ಬಾಂಧವ್ಯವನ್ನು ಮುಂದುವರಿಸುತ್ತಾರೆ. ಈ ಸಂದರ್ಭದಲ್ಲಿ ಹಾಡುವಳ್ಳಿಯಲ್ಲೂ ಸಂಗಿರಾಯನೆಂಬ ಅರಸನಿದ್ದು, ನಗಿರೆಯ ಸಂಗಿರಾಯನೊಡನೆ ದ್ವೇಷ ಬೆಳೆಸಿದ್ದನು. ಈ ವಿರೋಧವು ಯುದ್ಧವಾಗಿ ಪರಿಣಮಿಸಿದ್ದನ್ನು ಕಾಯ್ಕಿಣಿಯ ಇನ್ನೊಂದು ವೀರಗಲ್ಲಿನಲ್ಲಿ ವಿವರಿಸಲಾಗಿದೆ. [20] ಇಲ್ಲಿಯವರೆಗೆ ನಗಿರೆಯ ಸಂಗಿರಾಯನನ್ನು ಬೆಂಬಲಿಸುತ್ತಿದ್ದ ಅಸಕಳಿಯ ಭೈರವದೇವನು ಹಾಡುವಳ್ಳಿಯ ಸಂಗಿರಾಯನಿಗೆ ತನ್ನ ಬೆಂಬಲವನ್ನು ನೀಡಿದ್ದರಿಂದ, ಸಿಟ್ಟಿಗೆದ್ದ ನಗಿರೆಯ ಸಂಗಿರಾಯನು ಹೊನ್ನಾವರದ ಲಕ್ಕಣ್ಣವೊಡೆಯರ ಸಹಾಯ ಪಡೆದು ಹಾಡುವಳ್ಳಿಯ ಮೇಲೆ ಯುದ್ಧ ನಡೆಸುತ್ತಾನೆ. ಈ ಯುದ್ಧವು ಕಾಯ್ಕಿಣಿಯ ಹತ್ತಿರದ ಕೋಟದ ಗಡಿಯಲ್ಲಿ ನಡೆದಾಗ ಜೋಗನಾಯಕನೆನ್ನುವವನೂ ಹಾಡುವಳ್ಳಿಯ ಹತ್ತಿರದ ಕೆರೆಯ ದಂಡೆಯ ಮೇಲೆ ಯುದ್ಧ ನಡೆದಾಗ ಯಿಸರಣ್ಣ ನಾಯಕನೆನ್ನುವವನೂ ಮಡಿಯುತ್ತಾರೆ. ಇದೇ ವರ್ಷದಲ್ಲಿ ನಗಿರೆಯ ಸಂಗಿರಾಯನು ತೀರಿಕೊಂಡ ನಂತರ, ಅವನ ಅಳಿಯ ಅಂದರೆ ಲಕ್ಷ್ಮೀದೇವಿಯ ಮಗನಾದ ಭೈರವನು ಪಟ್ಟಕ್ಕೆ ಬಂದನು. ಈ ಲಕ್ಷ್ಮೀದೇವಿಯನ್ನು ತಿಳುವಳ್ಳಿಪುರದ ಭೈರವ ಭೂಪನ ತಮ್ಮನಾದ ಕಾಯಪ್ಪನಿಗೆ ಮದುವೆ ಮಾಡಿಕೊಟ್ಟಿದ್ದರು. ಈ ದಂಪತಿಗಳಿಗೆ ಭೈರವ, ಚಿಕ್ಕಭೈರವ, ತಿಪ್ಪರಸ, ಅಂಬಿರಾಯ, ಕೇಶವದೇವಿ, ಸಿರಿಯಮರಸಿ ಹೆಸರಿನ ಮಕ್ಕಳು. [21] ಇವರಲ್ಲಿ ತಿಪ್ಪರಸ (ಮಲ್ಲಿರಾಯ) ಎನ್ನುವವನು ಸಂಗಿರಾಯನ ಮತ್ತೊಬ್ಬ ಸಹೋದರಿಯಾದ ಶಂಕರಾಂಬಿಕೆಯ ಮಗನೆಂದು ಭಾವಿಸಲಾಗುತ್ತಿದೆ. [22]

ಈ ಭೈರರಸನು ಪಟ್ಟಕ್ಕೆ ಬಂದ ಬಳಿಕ, ಹೊನ್ನಾವರದ ರಾಜ್ಯಪಾಲ ಅಂತಪ್ಪ ವೊಡೆಯನೊಡನೆ ಯುದ್ದ ನಡೆಸಿದನು. ಕ್ರಿ.ಶ. ೧೪೫೪ರಲ್ಲಿ ಹಳದೀಪುರದಲ್ಲಿ ಯುದ್ಧ ನಡೆದಾಗ ಬಸವನ ಬಳಿ ಯೋಧರು ಕೊಲ್ಲಲ್ಪಟ್ಟರೆಂದು ಅಲ್ಲಿಯ ಶಾಸನ ವಿವರಿಸುತ್ತದೆ. [23] ಧನ್ಯಕುಮಾರ ಚರಿತೆಯನ್ನು ಬರೆದ ಆದಿಯಪ್ಪ ಕವಿಯು ಈ ಅರಸನ ಆಸ್ಥಾನದಲ್ಲಿದ್ದನು. ಜಿನಭಕ್ತನಾದ ಇವನು ಗೇರುಸೊಪ್ಪೆ, ಮೂಡಬಿದರೆ, ಬೆಳಗುಳ, ಚಂದ್ರಗುತ್ತಿ, ಹೊನ್ನಾವರ ಮೊದಲಾದ ಸ್ಥಳಗಳಲ್ಲಿರುವ ಜಿನಮಂದಿರಗಳಿಗೆ ಅಪಾರ ದಾನಮಾಡಿದಂತೆ ಮೂಡಬಿದರೆಯ ಶಾಸನವು ವರ್ಣಿಸುತ್ತದೆ. [24] ನಗಿರೆಯ ಸಾಳ್ವ ಕವಿಯೂ ಕೂಡ ಈ ಭೈರವನನ್ನು ಮುಕ್ತಕಂಠದಿಂದ ಸ್ತುತಿಸಿದ್ದಾನೆ. [25] ನೋಂಪಿಯ ಕಥೆಯೊಂದರಲ್ಲೂ ಇವನ ಹೊಗಳಿಕೆ ಕಂಡುಬರುತ್ತದೆ. [26] ಸುಮಾರು ಮೂವತ್ತು ವರ್ಷಗಳಷ್ಟು ದೀರ್ಘಕಾಲ ರಾಜ್ಯವಾಳಿದ ಮೇಲೆ ಅಸ್ವಸ್ಥನಾದನು. ವ್ಯಾಧಿಯು ಬಲವತ್ತರವಾದಾಗ ಪರಮಗತಿ ಸಾಧನೆಗಾಗಿ ಮೂಡಬಿದರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಗೆ ಒಂದು ಸಾವಿರ ಮುಡಿ ಆದಾಯ ಬರುವ ಭೂಮಿಯನ್ನು ದಾನಮಾಡಿದ ವಿಷಯವು ಅಲ್ಲಿಯ ಶಾಸನವೊಂದರಲ್ಲಿ ಉಕ್ತವಾಗಿದೆ. [27]

ಭೈರವ ಒಡೆಯನ ನಂತರ ನಗಿರೆಯ ಸಿಂಹಾಸನವು ಇಮ್ಮಡಿ ಭೈರವನ (ಅಂಬಿರಾಯ) ಪಾಲಿಗಾಯಿತು. ಇದರಿಂದ ಸಂಗಿರಾಯನ ಇನ್ನೊಬ್ಬ ಸಹೋದರಿ ಶಂಕರದೇವಿಯ ಮಗನಾದ ತಿಪ್ಪರಸ (ಮಲ್ಲಿರಾಯ)ನಿಗೆ ಅಸಮಾಧಾನವಾಯಿತು. ಇವನಿಗೆ ಸಾಳ್ವಮಲ್ಲ, ಸಾಳುವಮಲ್ಲ, ಸಾಳ್ವಮಲ್ಲಿರಾಯ, ಮಲ್ಲೇಶ, ಜಿನದಾಸ, ಸಾಳ್ವಮಲ್ಲ, ಕಠಾರಿಸಾಳ್ವ ಮೊದಲಾದ ಹೆಸರುಗಳು ಇದ್ದವೆಂಬುದು ಸಾಳ್ವಭಾರತದಿಂದ ತಿಳಿದುಬರುತ್ತದೆ. ಇವನು ಹೊನ್ನಾವರದ ರಾಜಧಾನಿಯಿಂದ ಆಳ್ವಿಕೆ ನಡೆಸುತ್ತಿದ್ದುದನ್ನು ಒಂದು ಶಾಸನವು ವಿವರಿಸುತ್ತದೆ. [28] ಇವನು ಅಂಬಿರಾಯನಿಗಿಂತ ಪರಾಕ್ರಮಶಾಲಿ ಹಾಗೂ ಮಹತ್ವಾಕಾಂಕ್ಷಿ. ನಗಿರೆಯ ಸಿಂಹಾಸನಕ್ಕಾಗಿ ಇಬ್ಬರೂ ಶತ್ರುಗಳಾದರು. ಈ ಹಗೆತನವು ಯುದ್ಧವಾಗಿ, ಕ್ರಿ.ಶ. ೧೪೭೧ರಲ್ಲಿ ಸಾಳುವ ಮಲ್ಲಿರಾಯನು ಜಯಗಳಿಸಿದನು. [29] ಈ ಯುದ್ಧದಲ್ಲಿ ಅಂಬಿರಾಯನು ಮಡಿದಿರಬೇಕು. ಏಕೆಂದರೆ ಅನಂತರ ಬಂದ ಯಾವ ಶಾಸನವೂ ಇವನನ್ನು ಸ್ಮರಿಸುವುದಿಲ್ಲ. ಸಾಳ್ವಮಲ್ಲನ ಶೌರ್ಯ, ಸಾಹಸನಗಳ ವರ್ಣನೆಗಳನ್ನು ಆಸ್ಥಾನ ಕವಿಯಾದ ಸಾಳ್ವನು ತನ್ನ ಕಾವ್ಯದಲ್ಲಿ ಸೊಗಸಾಗಿ ಮಾಡಿದ್ದಾನೆ. ಮೂಡಬಿದರೆಯ ಶಾಸನದಲ್ಲೂ ಇವನ ಯಶೋಗಾಥೆಯ ಚಿತ್ರ ಕಂಡುಬರುತ್ತದೆ :

ಜಡಿಯಲೊಡಂ ರಿಪುಕ್ಷಿತಿಪರೆಲ್ಲರ ಪಿಂದೊಡನೆಯ್ದೆ ಕಂಪಿಪರ್
ಪಡೆಯಲೊಡಂ ತದಂಗನೆಯರೋಲೆಯ ಸಾಲೊಡನಾಂತರುಚ್ಛಿದಂ
ಗೆಡವಿರ್ಪುದೆತ್ತೆ ತೋಳ್ಗೆ ಗೆಲೆವೆಣ್ಣೊಡನೊಂದಿ ವರ್ಪುದಾಜಿಯೊಳ್‌
ಸೆಡೆಯದೆ ತೋಳಬಾಳದಟನೇಳ್ಗೆಯೆ ಸಾಳುವ ಮಲ್ಲಿರಾಯನಾ ||

ಎಂದು ಆ ಶಾಸನ ಕವಿಯು ಸ್ತುತಿಸುತ್ತ, “…. ಶ್ರೀ ಸಾಳ್ವಮಲ್ಲೇಶನಂ ಪೊಗಳ್ವೀ ನಾಲಗೆಯ್ಯನರಂ ಪೊಗಳ್ವುದೇ ಪಾಲುಂಡು ಮೇಲುಂಬುದೇ” ಎಂದೂ, “ಪೊಗಳ್ದು ಬಾಜಿಸಿತು ಸಾಳುವಮಲ್ಲನ ಕೀರ್ತಿ ಡಿಂಡಿಮಂ’ ಎಂದು ಹೇಳುತ್ತಾನೆ. [30] ಇವನ ಪಟ್ಟಮಹಿಷಿ ಬೊಮ್ಮಲದೇವಿ. ಸಹೋದರಿ ಮಲ್ಲಿದೇವಿ. ಈಕೆಯ ಪತಿ ಶಾಂತ ದಂಡಾಧೀಶ. ಈ ಮಲ್ಲಿದೇವಿಯ ಮಗನ ಹೆಸರು ಸಾಳ್ವ ದೇವನೆಂದೇ. ಇವನ ಮತ್ತೊಂದು ಹೆಸರು ದೇವರಾಯ. ಆದರೆ ಸಾಳ್ವಭಾರತ ಮತ್ತು ಶಾಸನಗಳಲ್ಲಿ ಸಾಳ್ವದೇವನೆಂದೇ ಖ್ಯಾತನಾಗಿದ್ದಾನೆ. ಯುವರಾಜನಾಗಿ ನಿಯುಕ್ತಗೊಂಡ ಇವನು ಮುಂದೆ ನಗಿರೆಯ ಸಿಂಹಾಸನದ ಉತ್ತರಾಧಿಕಾರಿಯೂ ಆದನು. ಕ್ರಿ.ಶ. ೧೪೮೧ರಲ್ಲಿ ಇವನು ಆದಿಲಶಹ ಸುಲ್ತಾನನ ಸೇನಾಧಿಕಾರಿಯನ್ನು ಗೋವೆಯ ಯುದ್ಧದಲ್ಲಿ ಸೋಲಿಸಿದನು. ಇನ್ನೊಮ್ಮೆ ಗೋವೆಯ ನಿಜಾಮುದ್ದೀನ್‌ಮುಲಕನು ಹೈವೆರಾಜ್ಯದೊಳಗೆ ನುಗ್ಗಿಬಂದಾಗ ಮಿಡಿಜೆಯೆನ್ನುವ ಊರಲ್ಲಿ (ಈಗಿನ ಕುಮಟಾದ ಹತ್ತಿರವಿರುವ ಮಿರ್ಜಾನ್) ಎದುರಿಸಿದನು. [31] ಈ ಭೀಕರ ಕಾಳಗದಲ್ಲಿ ಸಾಳ್ವದೇವರಸನ ಬಂಟರಾದ ಕಲ್ಲಣ್ಣ ನಾಯಕ, ಭೈರು ನಾಯಕ, ತಮ್ಮಣ್ಣ ನಾಯಕರು ತೋರಿದ ರ್ಧೈಯ – ಸಾಹಸಗಳಿಂದ ಸುಲ್ತಾನನ ಸೇನೆ ಸೋತಿತು. ಯುದ್ಧದಲ್ಲಿ ವಿಜಯಿಗಳಾಗಿ ಹಿಂದಿರುಗಿದ ಈ ಮೂವರು, ತಮ್ಮ ಸ್ವಾಮಿಗಳಾದ ರಣಗಭಿನಾಯಕ, ದೇವು ನಾಯಕರು ವಿರೋಧಿಗಳಿಂದ ಬಂಧಿತರಾಗಿರುವ ವಿಚಾರ ತಿಳಿದು ಪುನಃ ಸುಲ್ತಾನನ ಮೇಲೆ ಬಿದ್ದು ಕಾದಾಡಿದರು. ಈ ಯುದ್ಧದಲ್ಲಿ ಮೂವರೂ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಯುದ್ಧದಲ್ಲಿ ವಿಜಯಿಯಾದ ಸಾಳ್ವದೇವನು ವಿಜಯನಗರದ ವಿರುದ್ಧ ಸ್ವತಂತ್ರನಾಗಲು ಬಯಸಿ, ರಾಜಾಧಿರಾಜ, ರಾಜಪರಮೇಶ್ವರ ಮುಂತಾದ ಚಕ್ರವರ್ತಿ ಬಿರುದುಗಳನ್ನು ಧರಿಸಿದನು. ಇದರಿಂದ ಸಿಟ್ಟಿಗೆದ್ದ ವಿಜಯನಗರ ಚಕ್ರವರ್ತಿ ವಿರೂಪಾಕ್ಷನು ಸೈನ್ಯಸಮೇತನಾಗಿ ಬಂದು ಇವನನ್ನು ನಿಯಂತ್ರಿಸಬೇಕಾಯಿತು. ಸಾಳ್ವ ಭಾರತದಲ್ಲಿ ಉಕ್ತವಾಗಿರುವಂತೆ ಇವನ ಆಡಳಿತವು ಕ್ರಿ.ಶ. ೧೪೯೯ರಲ್ಲಿ ಮುಗಿಯಿತು. ಇವನ ನಂತರ, ಇವನ ತಂಗಿಯ ಮಗನೂ, ಸೋದರಳಿಯನೂ ಆದ ಭೈರರಸನು ಕ್ರಿ.ಶ.೧೫೦೦ ರಲ್ಲಿ ನಗಿರೆಯ ದೊರೆಯಾದನು. ಇವನು ಪಟ್ಟಕ್ಕೆ ಬಂದ ಕೂಡಲೇ ತುಳುನಾಡಿನ ಕೆಲವು ತುಂಡರಸರು ಇವನ ವಿರುದ್ಧ ಒಪ್ಪಂದವೊಂದನ್ನು ಮಾಡಿಕೊಂಡರು. [32] ನಗಿರೆಯ ಭೈರರಸನೆಂದು ಪ್ರಖ್ಯಾತನಾದ ಇವನ ಆಳ್ವಿಕೆಯು ಕ್ರಿ.ಶ.೧೫೧೦ ರಲ್ಲಿ ಕೊನೆಗೊಂಡು, ನಂತರ ಇಮ್ಮಡಿ ದೇವರಾಯನು ಇವನ ಉತ್ತರಾಧಿಕಾರಿಯಾದನು. ಇವನಿಗೆ ಸಾಳುವ ಕೃಷ್ಣದೇವರಸನೆಂಬ ಹೆಸರೂ ಇದ್ದಂತೆ ಕೆಲವರು ಹೇಳುತ್ತಾರೆ. [33] ಇವನ ಕಾಲದಲ್ಲಿ ವಿಜಯನಗರ ಕೃಷ್ಣದೇವರಾಯನಿಗೂ, ಗೋವೆಯ ಪೋರ್ತುಗೀಜರಿಗೂ ವೈಮನಸ್ಸು ಉಂಟಾದಾಗ, ಚಕ್ರವರ್ತಿಯ ಆಜ್ಞೆಯಂತೆ ಗೋವೆಯ ಮೇಲೆ ದಂಡೆತ್ತಿ ಹೋದನು. ಮಡಗೋವೆಯಲ್ಲಿ ಯುದ್ಧ ನಡೆದಾಗ, ಇಮ್ಮಡಿ ದೇವರಾಯನ ನಚ್ಚಿನ ಬಂಟಿರಾದ ತಮ್ಮಿನಾಯಕ ಮತ್ತು ವೀರ ನಾಯಕರು ಪರಂಗ ಸೈನ್ಯದ ಅಶ್ವದಳವನ್ನು ಮುರಿದು ವೀರಸ್ವರ್ಗವನ್ನು ಪಡೆದರು. [34]

ಇವನಿಗೆ ಸೇರಿದ ಕ್ರಿ.ಶ. ೧೫೨೧ರ ತಾಮ್ರಶಾಸನವೊಂದು ಉತ್ತರ ಕನ್ನಡ ಜಿಲ್ಲೆಯ ಸ್ವಾದಿ ಜೈನಮಠದಲ್ಲಿ ದೊರೆತಿದೆ. [35] ಇವನಿಗೆ ಭೈರವಾಂಬಾ ಹೆಸರಿನ ಮಗಳೂ, ಸಾಳುವಮಲ್ಲ ಹೆಸರಿನ ಮಗಳೂ ಇದ್ದಂತೆ ಅದರಲ್ಲಿ ವಿವರಿಸಲಾಗಿದೆ. ಈ ಭೈರವಾಂಬೆಯನ್ನು ಕಾರ್ಕಳದ ಪಾಂಡ್ಯನೃಪಾಲನಿಗೆ ಮದುವೆ ಮಾಡಿ ಕೊಡಲಾಗಿತ್ತು. ಈ ದಂಪತಿಗಳಿಗೆ ದೇವರಾಯ ಹೆಸರಿನ ಮಗನು ಜನಿಸಿದನೆಂದೂ ಅದರಲ್ಲಿ ವಿವರಿಸಿದೆ. ನಗಿರೆಯ ಚರಿತ್ರೆಗೆ ಸಂಬಂಧಿಸಿದಂತೆ ಇದು ಹೊಸ ಅಂಶವಾಗಿದೆ.

ಇವನ ಅನಂತರ ಸೋದರಳಿಯ ಕೃಷ್ಣದೇವರಸನು ನಗಿರೆಯ ದೊರೆಯಾದನು. ಕೆಲವರು ಊಹಿಸಿರುವಂತೆ ಇಮ್ಮಡಿ ಸಾಳುವ ಕೃಷ್ಣದೇವರಸನೇ, ಇಮ್ಮಡಿ ದೇವರಾಯನೆಂದು ಭಾವಿಸುವುದು ಸರಿಯಲ್ಲ. ಏಕೆಂದರೆ ಕೃಷ್ಣದೇವರಸ ಮತ್ತು ಇಮ್ಮಡಿ ದೇವರಾಯನನ್ನು ಶಾಸನಗಳು ಪ್ರತ್ಯೇಕವಾಗಿಯೇ ಹೆಸರಿಸುತ್ತವೆ. ಕ್ರಿ.ಶ. ೧೫೩೦ರಲ್ಲಿ ಹಾಡುವಳ್ಳಿಯ ದೊರೆಯಾದ ಗುರುರಾಯವೊಡೆಯನು ನಗಿರೆಯ ಮೇಲೆ ದಂಡೆತ್ತಿ ಬಂದಾಗ ಆತನನ್ನು ಸೋಲಿಸಿದ ವಿಚಾರವು ಕಾಯ್ಕಿಣಿಯ ಶಾಸನದಲ್ಲಿ ಬಂದಿದೆ. [36] ಈ ಯುದ್ಧದಲ್ಲಿ ಗುರುರಾಯವೊಡೆಯನ ವೀರಭಟ ಯೀಸರ ದೇವನಾಯಕನು ತೋಳಹರ ಬಳಿಯ ಬಿರುದು, ಚಿನ್ನದ ಕಕ್ಕಡೆಯನ್ನು ಗೆದ್ದುಯಿರಿದು ಯಿರಿಸಿಕೊಂಡು ತನುವೋಕುಳಿಯಾಗಿ ಮಡಿದನೆಂದು ವರ್ಣಿಸಲಾಗಿದೆ. ಕ್ರಿ.ಶ. ೧೫೪೦ರ ಸುಮಾರಿಗೆ ನಗಿರೆಯ ಕೃಷ್ಣದೇವರಸನು ಮಡಿದದ್ದರಿಂದ ಹಾಗೂ ಹಾಡುವಳ್ಳಿಯ ಗುರುರಾಜ ವೊಡೆಯನು ಮಡಿದದ್ದರಿಂದ ಈ ಎರಡೂ ರಾಜ್ಯಗಳಿಗೆ ರಾಣಿ ಚಿನ್ನಾದೇವಿಯು ಅಧಿಕಾರಿಯಾಗಿ ಕಾಣಿಸುತ್ತಾಳೆ. ಇವಳಿಗೂ ಕೃಷ್ಣದೇವರಸನಿಗೂ ಇದ್ದ ಸಂಬಂಧ ಸ್ಪಷ್ಟವಿಲ್ಲ. ಕೆಲವರು ಕುರುರಾಜವೊಡೆಯನ ಪೂರ್ವಾಧಿಕಾರಿಯಾದದೇವರಸವೊಡೆಯನ ಖಾಸಾತಂಗಿ ಭೈರಾದೇವಿ ಅಮ್ಮನ ಮಗಳೆಂದು ಭಾವಿಸಿದರೆ, [37] ಇನ್ನು ಕೆಲವರು ಕೃಷ್ಣದೇವರಸನ ಸೊಸೆಯೆನ್ನುತ್ತಾರೆ. [38] ಈ ವಿಷಯವನ್ನು ಮುಂದೆ ಚರ್ಚಿಸಲಾಗಿದೆ.

 

[1] ಕರ್ನಾಟಕ ಪರಂಪರೆ, ಸಂಪುಟ : ೨, ಪುಟ : ೨೧೪, ಮೈಸೂರು ರಾಜ್ಯ ಸರಕಾರ ೧೯೭೦.

[2] K.I., Vol. III, Part – I No. 78.

[3] ಅದೇ.

[4] S.I.I., Vol. VII, No: 196, A.R.No. 28 of 1901.

[5] ಕರ್ನಾಟಕ ಪರಂಪರೆ, ಸಂಪುಟ: ೨, ಪುಟ : ೨೧೬, ಪೂರ್ವೋಕ್ತ.

[6] ಕರ್ನಾಟಕ ಪರಂಪರೆ, ಸಂಪುಟ: ೨, ಪುಟ : ೨೧೧, ಪೂರ್ವೋಕ್ತ.

[7] ARSIE, 37 of 1901. EC Vol. VIII, Sa. 163.

[8] S.I.I., Vol. VII, No. 202.

[9] MAR : 1928, Nos. 111, 112.

[10] K.I.Vol. ಕಾಯ್ಕಿಣಿ ನಂ. ೩೫ ಮತ್ತು ೩.

[11] MAR : 1928, Nos. 110.

[12] ಹಂಪನಾಗರಾಜಯ್ಯ (ಸಂ): ಸಾಳ್ವಕವಿಯ ಆಳವಭಾರತ, ಪ್ರಸ್ತಾವನೆ ಪ್ರಕಟಣ ಮತ್ತು ಪ್ರಚಾರೋಪನ್ಯಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ ೧೯೭೬.

[13] K.I.Vol. I, No.47.

[14] K.I.Vol. I, No.34, 47.

[15] K.I.Vol. I, No.42.

[16] ಹಂಪನಾಗರಾಜಯ್ಯ (ಸಂ): ಸಾಳ್ವಕವಿಯ ಸಾಳ್ವಭಾರತ ಪ್ರಸ್ತಾಪನೆ ಪೂರ್ವೋಕ್ತ.

[17] ಡಾ| ರಮೇಶ್‌ಕೆ.ವಿ. ತುಳುನಾಡಿನ ಇತಿಹಾಸ, ಪುಟ: ೯೪, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಂಶೋಧನ ಕೇಂದ್ರ, ಮಹಾತ್ಮಗಾಂಧಿ ಮೆಮೋರಿಯಲ್‌ಕಾಲೇಜು, ಉಡುಪಿ ೧೯೬೮.

[18] K.I.Vol. I, No.48.

[19] ಅದೇ.

[20] K.I.Vol. I, No.50.

[21] S.I.I. Vol. VII, No.202.

[22] ಕರ್ನಾಟಕ ಪರಂಪರೆ, ಸಂಪುಟ: ೨, ಪುಟ : ೨೧೫ ಪೂರ್ವೋಕ್ತ.

[23] ಡಿಸ್ಕ್ರಿಪ್ಟಿವ್ ಲಿಸ್ಟ್ ಆಫ್‌ ಸ್ಟೋನ್ ಅಂಡ್‌ ಪ್ಲೇಟ್‌ ಇನ್ಸ್‌‌ಕ್ರಿಪ್ಷನ್ಸ್‌ (ಡಿ.ಎಲ್.ಎಸ್.ಸಿ.ಐ.) ೧೯೪೧ – ೪೨, ಕನ್ನಡ ರೀಸರ್ಚ್‌ ಇನ್ಸ್‌ಟಿಟ್ಯೂಟ್‌ ಧಾರವಾಡ ೧೯೬೧, ಪು: ೨೩.

[24] S.I.I. Vol. VII, No.202.

[25] ಹಂಪನಾಗರಾಜಯ್ಯ (ಸಂ): ಸಾಳ್ವಕವಿಯ ಸಾಳ್ವಭಾರತ, ಪುಟ: ೫ – ೭ ಪೂರ್ವೋಕ್ತ.

[26] ಅದೇ   ”           ”           ”           ಪ್ರಸ್ತಾವನೆ

[27] ಡಿ: ಷೋಡಶ ಭಾವನೆಯ ನೋಂಪಿಯ ಕಥೆ – ಚಾಮರಾಜನಗರದ ಬ್ರಹ್ಮಸೂರಿ ಪಂಡಿತರ ಮಗ ಪದ್ಮನಾಭ ಪಂಡಿತರು (ಸಂ) ೧೯೧೫, ಪುಟ: ೫೬. ನೋಡಿ: ಷೋಡಶ ಭಾವನೆಯ ನೋಂಪಿಯ ಕಥೆ – ಚಾಮರಾಜನಗರದ ಬ್ರಹ್ಮಸೂರಿ ಪಂಡಿತರ ಮಗ ಪದ್ಮನಾಭ ಪಂಡಿತರು (ಸಂ) ೧೯೧೫, ಪುಟ: ೫೬.

[28] S.I.I. Vol. VII, No.203.

[29] K.I.Vol. I, No.62.

[30] ಅದೇ

[31] S.I.I. Vol. VII, No.207.

[32] K.I.Vol. I, No.62.

[33] S.I.I. VII, No.228, ARSIE, 1930 – 31, No. 340.

[34] ಡಾ| ರಮೇಶ್‌ಕೆ.ವಿ.: ತುಳುನಾಡಿನ ಇತಿಹಾಸ, ಪುಟ: ೧೦೭, ಪೂರ್ವೋಕ್ತ.

[35] K.I.Vol. I, No.68, 69.

[36] ಮಾನವಿಕ ಕರ್ನಾಟಕ, ಸಂಪುಟ – ೧, ಸಂಚಿಕೆ – ೨, ಪುಟ: ೧೭, ೧೯೭೧, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

[37] K.I.Vol. III, Part – I No.71.

[38] ಡಾ| ರಮೇಶ್‌ಕೆ.ವಿ.: ತುಳುನಾಡಿನ ಇತಿಹಾಸ, ಪುಟ: ೧೧೫, ಪೂರ್ವೋಕ್ತ.