ಅಭಿನವ ಚಾವುಂಡರಾಯ ವೀರಪಾಂಡ್ಯನ ಅನಂತರ ಅಭಿನವ ಪಾಂಡ್ಯದೇವ ಒಡೆಯನು ಪಟ್ಟಕ್ಕೆ ಬಂದನು. ಇವನು ಕುಂದಕುಂದಾನ್ವಯ ದೇಶಿಗಣ ಪನಸೋಕಾವಲೀಶ್ವರ ಶ್ರೀಮತ್ ಅಮಲಧಾರಿ ಲಲಿತಕೀರ್ತಿ ಭಟ್ಟಾರಕರ ಶಿಷ್ಯನೆಂದೂ ಅರಿರಾಯರ ಗಂಡ ದಾವಣಿ, ಪಟ್ಟಿಪಂಬುಚ್ಚ ಪುರವರಾಧೀಶ್ವರ, ಪದ್ಮಾವತೀ ದೇವಿ ಲಬ್ಧವರಪ್ರಸಾದ ಜಿನದತ್ತಾನ್ವಯ ವಾರ್ದಿವರ್ಧಕನೆಂದೂ ಇವನ ಕ್ರಿ.ಶ. ೧೪೫೭ಕ್ಕೆ ಸಲ್ಲುವ ಶಾಸನವು ಉಲ್ಲೇಖಿಸುತ್ತದೆ. ಈ ಅಭಿನವ ಪಾಂಡ್ಯದೇವನು ವೀರಭೈರವನ ಮಗಳೂ ವೀರ ಪಾಂಡ್ಯನ ಸೋದರಿಯೂ ಆದ ಬಲಮಾದೇವಿಯ ಮಗ.

[1] ಈತನ ಮುಖ್ಯ ಕಾರ್ಯ ಹಿರಿಯಂಗಡಿಯ ನೇಮಿನಾಥ ಬಸದಿಗೆ ದಾನಗಳನ್ನು ಮಾಡಿದ್ದು (ಕ್ರಿ.ಶ. ೧೪೫೭ರ ಶಾಸನ) ಮತ್ತು ನೇಮಿನಾಥ ಬಸ್ತಿಯ ಮುಂದೆ ‘ಆಕಾಶೋನ್ನತವಾದ’ ಮಾನಸ್ತಂಭವನ್ನು ನಿಲ್ಲಿಸಿದುದು (ಕ್ರಿ.ಶ. ೧೫೨೩ರ ವರಾಂಗ ಶಾಸನ). “ಗೊಮ್ಮಟನ ಸ್ಥಾಪನೆಯಷ್ಟೇ ಪ್ರಮುಖವಾದ ಕಷ್ಟಕರವಾದ ಕೆಲಸ ಮಾನಸ್ತಂಭವನ್ನು ನಿಲ್ಲಿಸುವುದು. ಈತ ಅದರಲ್ಲಿ ಜಯಶಾಲಿಯಾದ. ಅಭೀನವ ಪಾಂಡ್ಯನೆಂಬ ಬಿರುದನ್ನು ಪಡೆದ”. [2] ಹಿರಿಯಂಗಡಿಯ ಮಾನಸ್ತಂಭವು ದಕ್ಷಿಣ ಕನ್ನಡದ ಶಿಲ್ಪವೈಶಿಷ್ಟ್ಯಗಳಲ್ಲಿ ಒಂದೆಂದು ಇಂದಿಗೂ ಪರಿಗಣಿಸಲ್ಪಟ್ಟಂತಹದಾಗಿದೆ.

ಕ್ರಿ.ಶ. ೧೪೬೧ಕ್ಕೆ ಸಲುವ ಅಭಿನವ ಪಾಂಡ್ಯನಿಗೆ ಸಂಬಂಧಿಸಿದ ಶಾಸನವು ಒಂದು ಅಮೂಲ್ಯವಾದ ದಾಖಲೆಯಾಗಿದೆ. [3] ಬಂಗರಾಜನಾದ ಕಾಮಿರಾಯ ಅರಸನಿಗೂ ಕೆರವಸೆಯ ಪಾಂಡ್ಯದೇವರಸ ಅಥವಾ ಪಾಂಡ್ಯಪ್ಪರಸನಿಗೂ ಆದ ಒಂದು ರಾಜಕೀಯ ಒಡಂಬಡಿಕೆ ಈ ಶಾಸನದಲ್ಲಿ ಇರುವುದು ಐತಿಹಾಸಿಕ ಮಹತ್ವ್ತದ ವಿಷಯವಾಗಿದೆ. (ಈ ಪಾಂಡ್ಯದೇವರಸನು ಅಭಿನವ ಪಾಂಡ್ಯನೇ.) ಈ ಒಪ್ಪಂದದಲ್ಲಿ ಇವರು ತಮ್ಮೊಳಗಿರುವ ಕಲಹವನ್ನು ಕೂಡಲೇ ನಿಲ್ಲಿಸತಕ್ಕದ್ದೆಂದೂ ಇವರೊಳಗೆ ಯಾವನೊಬ್ಬನ ಸೀಮೆಯೊಳಗೆ ಅನ್ಯಾಕ್ರಮಣವಾದರೂ ಇನ್ನೊಬ್ಬನು ಸಹಾಯಕ್ಕಾಗಿ ಬರಬೇಕೆಂದೂ ಇವರೊಳಗೆಯಾವನೊಬ್ಬನೂ ಒಬ್ಬನೇ ಆಗಿ ಚೌಟರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದೆಂದೂ ಹೇಳಲಾಗಿದೆ. ರಕ್ಷಣೆಯ ಒಪ್ಪಂದದ ದೃಷ್ಟಿಯಿಂದಲೂ ಪ್ರಾಚೀನ ತುಳುನಾಡಿನ ಮೂರು ಮನೆತನಗಳ ಉಲ್ಲೇಖವಿರುವ ದೃಷ್ಟಿಯಿಂದಲೂ ಪ್ರಾಚೀನ ಮನೆತನಗಳ ಒಳಗಣ ಸಂಬಂಧದ ದೃಷ್ಟಿಯಿಂದಲೂ ಈ ಶಾಸನವು ಬಹಳ ಮುಖ್ಯವಾಗಿದೆ.

“ಬಂಗರು, ಚೌಟರು ಮತ್ತು ಭೈರರಸರ ನಡುವೆ ಮನಸ್ತಾಪಗಳು ಹುಟ್ಟಿ ಯುದ್ಧಗಳು ಘಟಿಸಿದ್ದವು ಎಂಬ ವಿಚಾರ ಬೇರೆಲ್ಲೂ ಪ್ರಕಟಗೊಂಡಿಲ್ಲ. ಪರೋಕ್ಷವಾದರೂ ಪ್ರಥಮವಾಗಿ ಗೊತ್ತಾಗುವುದು ಈ ಶಾಸನದಲ್ಲೇ… ಬಂಗರಾಜ ತನ್ನ ರಾಜ್ಯ ರಕ್ಷಣಾರ್ಥವಾಗಿ ಪ್ರಬಲನಾದ ಕಾರ್ಕಳದ ಅರಸು ಪಾಂಡ್ಯದೇವನೊಂದಿಗೆ ಈ ರೀತಿಯ ರಕ್ಷಣಾ ಒಪ್ಪಂದ ಮಾಡಿಕೊಂಡಿರಬೇಕು. ಕಾರ್ಕಳದ ದೃಷ್ಟಿಯಲ್ಲಿ ಇದೊಂದು ಪ್ರತಿಷ್ಠಿತ ಗೆಲವು.” [4] ದಕ್ಷಿಣ ಕನ್ನಡದ ಅರಸು ಮನೆತನಗಳೊಳಗೆ ಇಂತಹ ಲಿಖಿತ ಒಪ್ಪಂದಗಳೂ ಅಲಿಖಿತವಾದ, ಪರಂಪರೆಯಿಂದ ಬಂದ ಹಲವು ಒಪ್ಪಂದಗಳೂ ಇದ್ದಿರುವ ಸಾಧ್ಯತೆಗಳಿವೆ. ಹಲವು ಮನೆತನಗಳಿದ್ದು ಅವುಗಳೊಂದಿಗೆ ವಿವಿಧ ರೀತಿಯ ಸಂಬಂಧಗಳಿದ್ದಾಗ ಪ್ರಸ್ತುತ ನಮಗೆ ತಿಳಿದಿರದಿದ್ದರೂ ಇಂತಹ ಹಲವು ಒಪ್ಪಂದಗಳಿದ್ದಿರಲೇಬೇಕೆಂದು ಊಹಿಸಬಹುದು.

ಇವನ ಅನಂತರ ವರಾಂಗದ ಶಾಸನೋಲ್ಲೇಖದಂತೆ ಎರಡನೆಯ ಭೈರವನು ರಾಜನಾದನು. ಇವನ ಕಾಲದ ಯಾವ ಶಾಸನವೂ ಉಪಲಬ್ಧವಿಲ್ಲ. ಈತ ಸಂಗೀತ ಸಾಹಿತ್ಯದಲ್ಲಿ ನಿಪುಣನಿದ್ದಂತೆ ವರಾಂಗ ಶಾಸನ ತಿಳಿಸುತ್ತದೆ. ಅನಂತರ ಆಳಿದ ಪಾಂಡ್ಯರಾಯನನ್ನು ಮೂರನೆಯ ಪಾಂಡ್ಯನೆಂದು ಡಾ| ಕೆ.ವಿ. ರಮೇಶರೂ ಐದನೆಯ ಪಾಂಡ್ಯನೆಂದು ಡಾ| ಪಿ.ಎನ್. ನರಸಿಂಹಮೂರ್ತಿಗಳೂ ಗುರುತಿಸಿದ್ದಾರೆ. ಕ್ರಿ.ಶ. ೧೪೮೩ – ೮೪ಕ್ಕೆ ಸಲುವ ಉಡುಪಿ ತಾಲೂಕಿನ ಬಂಟಕಲ್ಲು ಶಾಸನವು ಯೆಲ್ಲೂರು ಮತ್ತು ಸಿಮಂತೂರಿನ ಕುಂದ ಹೆಗ್ಗಡೆ ಮತ್ತು ಕಿನ್ನಿಕ ಹೆಗ್ಗಡೆಯವರು ಪಾಂಡ್ಯಪ್ಪೊಡೆಯನೊಂದಿಗೆ ರಾಜಕೀಯ ಒಪ್ಪಂದವೊಂದನ್ನು ಮಾಡಿಕೊಂಡ ವಿಷಯವನ್ನು ತಿಳಿಸುತ್ತದೆ.

ಕ್ರಿ.ಶ. ೧೪೯೩ರ ಕಳಸದ ಶಾಸನವು ವೀರಭೈರರಸವೊಡೆಯನು ವಿಜಯನಗರದ ಸಾಳುವ ಇಮ್ಮಡಿ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಕಳಸ ಕಾರ್ಕಳ ರಾಜ್ಯವನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ಈ ಭಯರವನನ್ನು ಡಾ| ಕೆ.ವಿ. ರಮೇಶರು ನಾಲ್ಕನೆಯ ಭೈರವನೆಂದು ಗುರುತಿಸಿದ್ದಾರೆ. ಕ್ರಿ.ಶ. ೧೪೯೩ರಿಂದ ೧೫೦೧ರವರೆಗೆ ಈತ ರಾಜ್ಯಭಾರ ಮಾಡಿರಬೇಕು. ಕ್ರಿ.ಶ. ೧೫೦೧ರ ಶಾಸನವು ಬಲಮಾದೇವಿಯು ಈತನ ತಂಗಿಯೆಂದು ಉಲ್ಲೇಖಿಸುತ್ತದೆ. ಇಮ್ಮಡಿ ಭಯರರಸವೊಡೆಯನು ನಾಲ್ಕನೆಯ ಭೈರವನ ಅಕ್ಕ ಬೊಮ್ಮಲ ದೇವಿಯ ಮಗ. ಈತನನ್ನು ಹಿರಿಯ ಭೈರರಸವೊಡೆಯನ ಅಳಿಯನೆನ್ನಲಾಗಿದೆ. ಕ್ರಿ.ಶ. ೧೫೧೬ಕ್ಕೆ ಸೇರಿದ ಕಳಸದ ಶಾಸನವೂ ಬಹಳ ಮಹತ್ತ್ವದ್ದಾಗಿದೆ. ಈ ಶಾಸನ ತಿಳಿಸುವಂತೆ ವಿಜಯನಗರದ ಚಕ್ರವರ್ತಿಯು ಸೈನ್ಯದೊಡನೆ ತುಳುರಾಜ್ಯಕ್ಕೆ ಬಂದು ಮಂಗಳೂರಿನ ಭುವನ ಶಾಲೆಯಲ್ಲಿ ಬೀಡು ಬಿಟ್ಟನು. ಇದರಿಂದಾಗಿ ಇಮ್ಮಡಿ ಭೈರವನ ಸ್ಥಾನಕ್ಕೆ ಚ್ಯುತಿ ಬಂದಿತು. ಅರ್ಥಾತ್ ಕಳಸ ಕಾರ್ಕಳದ ರಾಜರ ಅವಿಧೇಯತೆಯನ್ನು ಮಟ್ಟಹಾಕಲು ಚಕ್ರವರ್ತಿ ಕೃಷ್ಣದೇವರಾಯನು ಸೈನ್ಯ ಸಮೇತನಾಗಿ ಬಂದಿರಬೇಕು. ಇಮ್ಮಡಿ ಭೈರರಸನು ಕಳಸಕ್ಕೆ ಹೋಗಿ ಕುಳಿತ. ಸೈನ್ಯ ಹಿಂದೆ ಹೋಗಿ ತಾನು ಸುರಕ್ಷಿತನಾದರೆ ಕಳಸನಾಥನ ದೇವಾಲಯವನ್ನು ಜೀರ್ಣೋದ್ಧಾರಗೊಳಿಸುವುದಾಗಿ ಹರಕೆ ಹೊತ್ತ. ಮತ್ತು ವಿಜಯನಗರದವರು ಹಿಂದೆ ಹೋದ ಮೇಲೆ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ. ಇಮ್ಮಡಿ ಭೈರವನ ಬುದ್ಧಿವಂತ ಸೂರಪ್ಪ ಸೇನಬೋವನೂ ಶಿರಪ್ರಧಾನನೂ ಈ ಕಾರ್ಯವನ್ನು ಮಾಡಿದರು. [5]

ಕ್ರಿ.ಶ. ೧೫೩೦ರ ಕೊಪ್ಪದ ಬಗ್ಗುಂಜಿ ಶಾಸನವು ಇಮ್ಮಡಿ ಭೈರವನ ತಂಗಿ ಕಾಳಲದೇವಿಯು ಬಗ್ಗುಂಜಿ ಪ್ರದೇಶವನ್ನು ಸ್ವತಂತ್ರವಾಗಿ ಆಳುತ್ತಿದ್ದಾಗ ಬಗ್ಗುಂಜಿಯ ಕಲ್ಲ ಬಸ್ತಿಯ ಪಾರ್ಶರ್ವತೀರ್ಥಂಕರನಿಗೆ ದಾನಮಾಡಿದುದನ್ನು ಉಲ್ಲೇಖಿಸುತ್ತದೆ. ೧೫೨೯ರಲ್ಲಿ ಚಕ್ರವರ್ತಿ ಕೃಷ್ಣದೇವರಾಯನು ಮರಣಹೊಂದಿದ್ದು ಈ ಶಾಸನವು ಕೃಷ್ಣದೇವರಾಯನನ್ನಾಗಲಿ, ಅವನ ಅನಂತರದ ಅಚ್ಯುತರಾಯನನ್ನಾಗಲಿ ಉಲ್ಲೇಖಿಸದಿರುವುದರತ್ತ ಡಾ| ಕೆ.ವಿ.ರಮೇಶರು ಗಮನಸೆಳೆಯುತ್ತಾರೆ. [6] ಕ್ರಿ.ಶ. ೧೫೨೨ರ ಕಾಲದ ವರಾಂಗದ ಶಾಸನವೊಂದು ಈ ಇಮ್ಮಡಿ ಭೈರವನು ಗ್ರಾಮವೊಂದನ್ನು ಭೈರವಪುರವೆಂದು ಹೆಸರಿಸಿ ವರಾಂಗದ ನೇಮಿತೀರ್ಥೇಶ್ವರ ಚೈತ್ಯಾಲಯದ ಆದಿನಾಥಸ್ವಾಮಿಗೆ ಪೂಜಾದಿಗಳಿಗಾಗಿ ದಾನವಿತ್ತುದನ್ನು ತಿಳಿಸುತ್ತದೆ. ಇಮ್ಮಡಿ ಭೈರವನನ್ನು ಉಲ್ಲೇಖಿಸುವ ಶಾಸನಗಳಲ್ಲಿ ಹಿರಿಯಂಗಡಿಯ ಕ್ರಿ.ಶ. ೧೫೩೮ರ ದಾಖಲೆಯೇ ಕೊನೆಯದಾಗಿರಬೇಕೆಂದು ಡಾ| ಗುರುರಾಜ ಭಟ್ಟರು ಹೇಳಿದರೂ ಕ್ರಿ.ಶ. ೧೫೩೭ರಲ್ಲಿ ಅವನ ಉತ್ತರಾಧಿಕಾರಿಯಾಗಿ ಪಾಂಡ್ಯಪ್ಪೊಡೆಯನು ಬಂದುದನ್ನು ವೇಣೂರಿನ ಶಾಸನವೊಂದು ತಿಳಿಸುತ್ತದೆ. ಕಾರ್ಕಳದ ಹಿರಿಯಂಗಡಿಯ ಕ್ರಿ.ಶ. ೧೫೪೪ರ ಶಾಸನವು ಅವನನ್ನು ಪಾಂಡ್ಯ ಪೃಥ್ವೀಪತಿ ಎಂದು ಉಲ್ಲೇಖಿಸಿದೆ. ಇವನು ಕಾರ್ಕಳದ ಆನೆಕೆರೆಯಲ್ಲಿ ಚತುರ್ಮುಕ ಬಸದಿಯೊಂದನ್ನು ಕಟ್ಟಿಸಿದನು.

“ಶ್ರೀಮತ್ಸೋಮಕುಲಾಂಬರಸ್ಯ ತರಣಿಃ ಶ್ರೀಜೈನದತ್ತಾನ್ವಯಃ
ಶ್ರೀಮದ್ಭೈರವರಾಜಪಟ್ಟಭಗಿನೀ ಶ್ರೀ ಚಂದಲಾಂಬಾಸುತಃ
ಶ್ರೀ ಮದ್ಭೋಜನರೇಂದ್ರಸಂನಿಭಯಶಾಃ ಶ್ರೀಪಾಂಡ್ಯಪೃಥ್ವೀಪತಿಃ
ಶ್ರೀಮಜ್ಜೈನನಿಕೇತನಂ ರಚಿತವಾನ್ನಾಮ್ನಾ ಚತುರ್ಭದ್ರಕಂ ||

ಸ್ವಸ್ತಿಶ್ರೀ ಶಕರಾಜ ಕಾಲ ವಿಗತೇ ಶೈಲರ್ತುವೇದೇಂದುಭಿಃ
ಕ್ರೋಧ್ಯಬ್ದೇ ಶುಭಲಗ್ನಯೋಗಕರಣೇ ಮಾಗೇಸಿತೇ ತುರ್ಯಕೇ
ವಾರೇ ಭಾನುಸಮಾಭಿಧಾನಕರಭೇ ಶ್ರೀಪಾಂಡ್ಯಭೂಸ್ವಾಮಿನಾ
ಶ್ರೀಮದ್ಭದ್ರನಿವಾಸಮದ್ಯ ಜಿನಸೌಖ್ಯಾಯ ಪ್ರತಿಷ್ಠಾಪಿತಾ ||

೧೪೬೭ ಶಕವರುಷ ಸಂದಂದು ಕ್ರೋಧಿ ಸಂವತ್ಸರದ ಮಾಘ ಶುದ್ಧ ೪ ರವಿವಾರದಲು ಶ್ರೀ ಚಂದಲದೇವಿಯರ ಕುಮಾರ ಅರಿರಾಯ ಗಂಡರ ಧಾವಣಿ ಶ್ರೀ ವೀರ ಪಾಂಡ್ಯಪ್ಪೊಡೆಯರು ಕಾರಕಳದ ಪಾಂಡ್ಯನಗರಿಯಲು ಚತುರ್ಮುಖ ಬಸ್ತಿಯನ್ನು ಕಟ್ಟಿಸಿ….”

ಈ ಶಾಸನವು ಚತುರ್ಮುಖ ಬಸದಿ ನಿರ್ಮಾಣದ ವಿಷಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಬಸದಿಯನ್ನು ಕಟ್ಟಿಸಿ ಜಿನಪ್ರತಿಷ್ಠೆ ಮಾಡಿದ ದಿನಾಂಕವು ೧೫೪೪ರ ಜನವರಿ ೧೪ ಎಂದು ಡಾ| ಕೆ.ವಿ. ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಮಂಜೇರ್ಶವರ ಗೋವಿಂದ ಪೈಗಳ ‘ವಿಷಮವಾದೊಂದು ತೇದಿ’ ಎಂಬ ಲೇಖನದಲ್ಲಿ ಈ ದಿನವು ೧೫೪೫ರ ಜನವರಿ ೩೧ ಎಂದು ನಿಶ್ಚಯ ಮಾಡಿರುತ್ತಾರೆ. [7]

ಪಾಂಡ್ಯಪ್ಪೊಡೆಯನು ಮೂರು ಹಂತಗಳ ಈ ಬಸದಿಯಲ್ಲಿ ಪಾಶ್ವನಾಥ ಜಿನನ ಪ್ರತಿಷ್ಠೆ ಮಾಡಿ ಇದರ ಪೂಜಾದಿಗಳಿಗಾಗಿ ದಾನಗಳನ್ನು ನೀಡಿದ. ಈತ ಕೆರವಸೆಯ ಮಹಾದೇವ, ಪೆರ್ವಾಜೆಯ ಮಹಾದೇವ ಮತ್ತು ಮಾಳದ ವಿಷ್ಣುಮೂರ್ತಿ ದೇವಾಲಯಗಳಿಗೂ ವಿಪುಲ ದಾನವಿತ್ತ. [8] ಕ್ರಿ.ಶ. ೧೫೪೩ರ ಮಾರ್ಚ್‌ತಿಂಗಳಲ್ಲಿ ಪಾಂಡ್ಯಪ್ಪೊಡೆಯ ಮತ್ತು ತಿರುಮಲರಸ ಔಟರೊಳಗೆ ಒಂದು ಒಪ್ಪಂದ ನಡೆದುದನ್ನು ಒಂದು ತಿಳಿಸುತ್ತದೆ. ಪರಸ್ಪರ ಸಹಕರಿಸಬೇಕೆಂದೂ, ಶತ್ರುಗಳಾದ ರಾಜರಾಗಲಿ, ದಂಡನಾಯಕರಾಗಲಿ ಆಕ್ರಮಿಸಿದಲ್ಲಿ ಭೈರರಸನು ತನ್ನ ಕುದುರೆ ಮತ್ತು ಸೈನಿಕರಿಂದಲೂ ಚೌಟರು ತಮ್ಮ ಸೈನಿಕರಿಂದಲೂ ಸಹಕರಿಸಬೇಕೆಂದೂ ಏಕಪಕ್ಷೀಯವಾಗಿ ಇತರ ರಾಜರೊಡನೆ ಒಪ್ಪಂದ ಮಾಡಿಕೊಳ್ಳಬಾರದೆಂದೂ ಮಾಡಿಕೊಂಡ ಒಪ್ಪಂದವು ಎರ್ಮಾಳಿನ ಮಾರಮ್ಮ ಹೆಗ್ಗಡೆಯ ಸಮಕ್ಷದಲ್ಲಿ ಆಗಿತ್ತೆಂದು ಶಾಸನವು ತಿಳಿಸುತ್ತದೆ. ಕ್ರಿ.ಶ. ೧೫೫೫ರ ಕಳಸದ ಶಾಸನವು ಕೆರವಸೆಯ ಪಟ್ಟದಲ್ಲಿ ಇಮ್ಮಡಿ ಪಾಂಯಪ್ಪೊಡೆಯನಿದ್ದನೆನ್ನುತ್ತದೆ. ಬೊಮ್ಮರಾಜರಸರ ಮಗ ಭೈರರಸ ಅಣ್ಣ ಎಂಬುವನು ೧೫೬೫ರಲ್ಲಿ ಕಳಸ ಸೀಮೆಯನ್ನು ಆಳುತ್ತಿದ್ದಂತೆ ತಿಳಿಯುತ್ತದೆ. ಕ್ರಿ.ಶ. ೧೫೭೯ರ ಶಾಸನವೊಂದರಲ್ಲಿ (ಹಿರಿಯಂಗಡಿಯ ಶಾಸನ) ಭೈರವರಸ ಒಡೆಯನು ಆಳುತ್ತಿದ್ದಂತೆ ತಿಳಿಯುತ್ತದೆ. ಇವನು ಇಮ್ಮಡಿ ಪಾಂಡ್ಯಪ್ಪೊಡೆಯನ ಉತ್ತರಾಧಿಕಾರಿಯಿದ್ದಿರಬೇಕು. [9] ಕ್ರಿ.ಶ. ೧೫೯೩ರ ಕೊಪ್ಪ ಶಾಸನ ಮತ್ತು ಕ್ರಿ.ಶ. ೧೫೯೮ರ ಹಿರಿಯಂಗಡಿ ಶಾಸನಗಳು ಭೈರರಸನ ಅಳಿಯ ಪಾಂಡ್ಯಪ್ಪೊಡೆಯನನ್ನು ಉಲ್ಲೇಖಿಸುತ್ತವೆ. [10]

ಇಮ್ಮಡಿ ಭೈರವನೆಂಬವನು ಕಾರ್ಕಳದ ಗೊಮ್ಮಟಬೆಟ್ಟಕ್ಕೆದುರಾದ ಚತುರ್ಮುಖ ಬಸದಿಯ ನಿರ್ಮಾಪಕ. ಕ್ರಿ.ಶ. ೧೫೮೬ರಲ್ಲಿ ಈ ಬಸದಿ ನಿರ್ಮಿತವಾಯಿತು. ಅಲ್ಲಿರುವ ಶಾಸನದಲ್ಲಿ “ಶ್ರಿ ಮಧ್ಭೈರವರಾಜ ತುಂಗಭಗಿನೀ ಶ್ರೀ ಗುಮ್ಮಟಾಂಬಾಸುತಃ” ಎಂದು ಅವನನ್ನು ಉಲ್ಲೇಖಿಸಲಾಗಿದೆ. ಇವನ ತಂದೆ ಬಂಗರಾಜನಾದ ವೀರನರಸಿಂಹಬಂಗ. ಅರ ಮಲ್ಲಿ ಮುನಿಸುವ್ರತರ ಈ ಬಸದಿಯನ್ನು ಶ್ರೀ ರತ್ನತ್ರಯ ಭದ್ರಧಾಮವೆಂದೂ ಸರ್ವತೋಭದ್ರ ಚತುರ್ಮುಖ ರತ್ನತ್ರಯ ರೂಪ ತ್ರಿಭುವನ ತಿಲಕ ಜಿನ ಚೈತ್ಯಾಲಯವೆಂದೂ ಶಾಸನದಲ್ಲಿ ಹೇಳಿದೆ. ಈ ಬಸದಿಯ ನಿತ್ಯಪೂಜೆ ಮಹೋತ್ಸವಗಳಿಗಾಗಿ ವಾರ್ಷಿಕ ೭೦೦ ಮುಡಿ ಅಕ್ಕಿ ಬರುವ ಭೂಮಿಯನ್ನು ಮತ್ತು ರಂಜಾಳ ನಲ್ಲೂರುಗಳ ಸಿದ್ಧಾಯದಲ್ಲಿ ೨೩೮ ಗದ್ಯಾಣಗಳನ್ನೂ ನೀಡಿದ. ಅದೇ ಸಮಯದಲ್ಲಿ ಅರಮನೆ ಬಸದಿಯ ಚಂದ್ರನಾಥ ಸ್ವಾಮಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ಗೋವರ್ಧನಗಿರಿ ಬಸದಿಯ ಪಾರ್ಶ್ವನಾಥ ಸ್ವಾಮಿಗೆ ತಲಾ ೩೦ ಮುಡಿ ಅಕ್ಕಿ ವಾರ್ಷಿಕ ವರಮಾನದ ಭೂಮಿದಾನಕಟ್ಟ. [11]

ಈ “ಇಮ್ಮಡಿ ಭೈರವನ ಕಾಲದಲ್ಲಿ ನಡೆದ ಇನ್ನೊಂದು ಪ್ರಮುಖ ಘಟನೆಯೆಂದರೆ ಕ್ರಿ.ಶ. ೧೫೭೯ರಲ್ಲಿ ಕಾರ್ಕಳದಲ್ಲಿ ಜೈನ ಸಮಾಜಕ್ಕೆ ಸೇರಿದ ೫೦೦೦ ಹಲರು ಶಾಸ್ತ್ರದಾನಕ್ಕಾಗಿ ೫೦೦ ಗದ್ಯಾಣಗಳನ್ನು ಲಲಿತಕೀರ್ತಿಭಟ್ಟಾರಕರ ಶಿಷ್ಯರಾದ ಶಾಂತಿ ಕೀರ್ತಿ ಮುನಿಗಳ ವಶಕ್ಕೆ ಕೊಟ್ಟದ್ದು. ಈ ಹಣದಿಂದ ಬರುವ ಬಡ್ಡಿಯಲ್ಲಿ ಒಂದು ಶಾಲೆಯನ್ನು ನಡೆಸಬೇಕೆಂದು ವಿನಂತಿಸಲಾಯಿತು. ಊರಮಂದಿ ಪ್ರಮುಖರೆಲ್ಲರೂ ಈ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ವಿನಂತಿಸಲಾಯಿತು. ಅಷ್ಟೇ ಅಲ್ಲ ರಾಜ ತನ್ನ ಮಕ್ಕಳು, ಅಳಿಯಂದಿರನ್ನು ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಬೇಕೆಂದು ಮುನಿಜನರೊಡಗೂಡಿ ತೀರ್ಮಾನಿಸಿ ವನಿನಂತಿಸಲಾಯಿತು. ಶಾಲೆ ಹಿರಿಯಂಗಡಿಯಲ್ಲಿ ಪ್ರಾರಂಭವಾಯಿತು. ಶಾಲೆಯನ್ನು ಶಾಶ್ವತವಾಗಿ ಕಾಯ್ದುಕೊಂಡು ಬರುವ ಜವಾಬ್ದಾರಿಯನ್ನು ಮುನಿ ಲಲಿತಕೀರ್ತಿಭಟ್ಟಾರಕ ಮತ್ತು ರಾಜ ಭೈರರಸವೊಡೆಯರ ಮೇಲೆ ಹೇರಲಾಯಿತು”. [12]

“ಕಾರ್ಕಳ ಗೋಮಟೇಶ್ವರ ಚರಿತೆ”ಯ ಕರ್ತೃ ಚದುರಚಂದ್ರಮ(೧೬೪೬) ಕವಿಯು ಇಮ್ಮಡಿ ಭೈರರಸನ ಪತ್ನಿ ಮಲ್ಲಿದೇವಿಯೆಂದೂ ಪಾಂಡ್ಯ ಚಂದ್ರಶೇಖರ ಇಮ್ಮಡಿ ಭೈರವರು ಮಕ್ಕಳೆಂದೂ ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ಇವರಲ್ಲಿ ಚಂದ್ರಶೇಖರನು ಅಕಾಲಮೃತ್ಯವಶನಾದುದರಿಂದ ಅವನ ಸ್ಮರಣಾರ್ಥ ಸೋದರರಿಬ್ಬರು ಪಾಂಡ್ಯನಗರಿಯ ಆನೆಕೆರೆಯ ಬಳಿ ಬಸದಿ ಕಟ್ಟಿಸಿ ಚಂದ್ರನಾಥ ಸ್ವಾಮಿಯನ್ನು ಪ್ರತಿಷ್ಠಿಸಿದರು. ಇದಕ್ಕೆ ಈಗ ಶ್ರವಣ ಬಸದಿಯೆಂಬ ಹೆಸರಿದೆ. ಈ ಬಸದಿಯ ಪೂಜಾಕಾರ್ಯಕ್ಕಾಗಿ ದಾನಗಳನ್ನು ಮಾಡಲಾಯಿತು. ವಾದಿವಿದ್ಯಾನಂದನುದಾನ ಸ್ವೀಕರಿಸಿದವನೆಂದು ಚಂದ್ರನಾಥಸ್ವಾಮಿಯ ಪೀಠದಲ್ಲಿರುವ ಶಾಸನದಿಂದ ತಿಳಿಯುತ್ತದೆ. ಈ ಸೋದರರಲ್ಲಿ ಮೊದಲಿಗೆ ಪಾಂಡ್ಯನು ಆಳಿದನು. ಅನಂತರ ತಮ್ಮ ಅಭಿನವ ಭೈರರಸನು ಆಳಿದನು.

ಅಭಿನವ ಭೈರರಸನ ಕಾಲದಲ್ಲಿ ೧೬೪೬ರಲ್ಲಿ ಕಾರ್ಕಲದ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕವಾದುದನ್ನು ಚದುರಚಂದ್ರಮನು ವಿಸ್ತಾರವಾಗಿ ಕಾವ್ಯಮಯವಾಗಿ ವರ್ಣಿಸಿದ್ದಾನೆ. ಇದಕ್ಕೆ ಬಂಗರು, ಅಜಿಲರು, ಕೆಳದಿ ಅರಸರು, ಚೌಟರು, ಮುನಿಜನರು, ಶ್ರಾವಕರು, ಶತ್ರುಮಿತ್ರರೆಲ್ಲರೂ ಬಂದಿದ್ದರೆಂದು ಚಂದ್ರಮ ಉಲ್ಲೇಖಿಸಿದ್ದಾನೆ. (೧೬ – ೧೭ಮೆಯ ಸಂಧಿಗಳು) ಈ ಅಭಿನವ ಭೈರರಸವೊಡೆಯನು ಕ್ರಿ.ಶ. ಸ. ೧೬೬೦ರ ವರೆಗೆ ಆಳಿರಬಹುದೆಂದು ಊಹಿಸಲಾಗಿದೆ.

ವಿಜಯನಗರದ ಪತನಾನಂತರ ಕೆಳದಿಯವರು ಈ ಪ್ರದೇಶಗಳನ್ನು ಆಕ್ರಮಿಸಿಕೊಂಡರು. ಕಾರ್ಕಲದ ಭೈರರಸರಿಗೂ ಕೆಳದಿ ಅರಸರಿಗೂ ಯುದ್ಧಗಳಾದವು. ವೆಂಕಟಪ್ಪನಾಯಕನು (೧೫೮೬ – ೧೬೨೯) ಭೈರರಸುವಿನಿಂದ ಕಪ್ಪ, ಬೆಳ್ಳರೆ ಭಾಗಗಳನ್ನು ವಶಪಡಿಸಿದ್ದ. ವೆಂಕಟಪ್ಪನಾಯಕನು (೧೬೨೯ – ೧೬೪೫) ಭೈರರಸನಿಂದ ಕಪ್ಪ ಪಡೆದ. ಬಹುಶಃ ೧೬೩೯ – ೪೦ರಲ್ಲಿ ಇವರೊಳಗೆ ಯುದ್ಧ ನಡೆದಿರಬೇಕು. [13]

ಈ ರಾಜವಂಶದ ಕೊನೆಯನ್ನು ಹೇಳಲು ಆಧಾರಗಳು ಅಸ್ಪಷ್ಟವಾಗಿವೆ. ಪಾಡ್ದನವೊಂದರಲ್ಲಿ ಇಲ್ಲಿಯ ಕೊನೆಯ ರಾಜ ಪಾಂಡ್ಯರಾಜನೆಂದು ಉಲ್ಲೇಖವಿದೆಯೆನ್ನೆಲಾಗಿದೆ. ಹೈದರಾಲಿಯ ಕಾಲದಲ್ಲಿ ಈ ವಂಶವು ಕೊನೆಗೊಂಡಿರಬೇಕೆಂದು ಊಹಿಸಲಾಗಿದೆ. ಈ ಪಾಂಡ್ಯರಾಯನನ್ನು ಮೈಸೂರಿನ ತುರುಕ ಪಡೆ ಸೋಲಿಸಿ ಕೊಂದಿತು ಎನ್ನಲಾಗಿದೆ.” [14]

ಹಲವು ಶತಮಾನಗಳ ಕಾಲ (ಕ್ರಿ.ಶ. ೧೨ರಿಂದ ೧೭ರವರೆಗೆ) ತುಳುನಾಡಿನ ಒಂದು ಮುಖ್ಯ ಭಾಗವನ್ನು ಘಟ್ಟದ ಮೇಲಿನ ಒಂದಿಷ್ಟು ಭಾಗವನ್ನು ಒಟ್ಟಾಗಿ ಆಳಿದ ಮುಖ್ಯರಾಜಮನೆತನ ಭೈರವರಸರದು.

ಭೈರರಸರು ಇಲ್ಲಿಗೆ ಬಂದ ಮೇಲೆ ತುಳುವರೇ ಆಗಿರಬೇಕು. ಇವರು ಅಳಿಯಕಟ್ಟಿನವರೆಂದು ಸ್ಪಷ್ಟವಿದೆ. ಜೈನ ಧರ್ಮವನ್ನು ಅನುಸರಿಸಿದ್ದು ಮಾತ್ರವಲ್ಲ ಅದನ್ನು ಚೆನ್ನಾಗಿ ಪೋಷಿಸಿದರು. ಗೊಮ್ಮಟ ಸ್ಥಾಪನೆ, ಹಿರಿಯಂಗಡಿಯ ಮಾನಸ್ತಂಭ, ಚತುರ್ಮುಖ ಬಸದಿ ಇವು ಮುಖ್ಯ ಸಾಧನೆಗಳು. ಇತರ ಹಲವು ಬಸದಿಗಳು ಸ್ಥಾಪನೆ ಗಮನಾರ್ಹ, ಜೈನ ಧರ್ಮದೊಡನೆ ಶೈವ, ವೈಷ್ಣವ, ವೈದಿಕ, ಧರ್ಮಗಳನ್ನು ಚೆನ್ನಾಗಿ ಪೋಷಿಸಿದರು. ಕಳಸದಿಂದ ಈ ಕಡೆಗೆ ಬಂದ ಮೇಲೆ ಕೆರವಸೆ ಮತ್ತು ಕಾರ್ಕಳ ಇವರ ರಾಜಧಾನಿಗಳು. ಕೆರವಸೆ ಈಗ ಪುಟ್ಟ ಹಳ್ಳಿ. ಅಲ್ಲಿ ಹಲವು ಹಳೆಯ ಕುರುಹುಗಳಿವೆ; ಬಸದಿ ದೇವಾಲಯಗಳಿವೆ. ಕಾರ್ಕಳದಲ್ಲೂ ಅರಮನೆಯ ಕುರುಹುಗಳೆಲ್ಲ ನಾಶವಾಗಿವೆ. ಹಿರಿಯಂಗಡಿಯ ಸಮೀಪ ಇವರ ಅರಮನೆಯಿತ್ತೆಂದು ಹೇಳಳಾಗಿದೆ. [15]

ಕಲ್ಯಾಣಕೀರ್ತಿ, ರತ್ನಾಕರವರ್ಣಿ, ಚದುರ ಚಂದ್ರಮ – ಕಾರ್ಕಳದ ಅರಸರ ಕಾಲದ ಮುಖ್ಯ ಕವಿಗಳು. [16] ಚಂದ್ರಮನ ಕೃತಿ ಐತಿಹಾಸಿಕ ವಿಷಯಗಳನ್ನೂ ಒಳಗೊಂಡಿದೆ.

ದಕ್ಷಿಣ ಕನ್ನಡದಲ್ಲಿ ಜೈನ ಧರ್ಮದ ಮುಖ್ಯ ಕೇಂದ್ರವು ಯಾವಾಗಲೂ ಮೂಡಬಿದರೆಯೇ ಆಗಿತ್ತು. ಮೂಡಬಿದರೆಯು ಕಾರ್ಕಳಕ್ಕೆ ಸಮೀಪವೇ ಆದರೂ ಇದು ಭೈರರಸರ ಕೈಕೆಳಗಿನ ಪ್ರದೇಶವಾಗಿರದೆ ಚೌಟರಸರ ಮತ್ತು ವಿಜಯನಗರದ ಪ್ರತಿನಿಧಿಗಳಿಂದ ಆಳಲ್ಪಡುತ್ತಿತ್ತು. ಇಂದಿನ ಕಾರ್ಕಳ ತಾಲೂಕಿನ ಉತ್ತರ ಭಾಗವಾದ ಹೆಬ್ರಿ, ಶಿವಪುರ, ಚಾರಗಳು ಬಾರ್ಕೂರು ಸೀಮೆಗೆ ಸೇರಿ ವಿಜಯನಗರದ ಪ್ರತನಿಧಿಗಳಿಂದ ಆಳಲ್ಪಡುತ್ತಿತ್ತು. ಕಾರ್ಕಳ ತಾಲೂಕಿನ ಒಂದು ಭಾಗ ಮತ್ತು ಘಟ್ಟದ ಮೇಲಿನ ಸ್ವಲ್ಪ ಭಾಗ ಇವರ ಸೀಮೆಯಾಗಿತ್ತು. ಭೈರರಸರಲ್ಲಿ ಅಶ್ವ ಮತ್ತು ಪದಾತಿ ಸೈನ್ಯವಿದ್ದ ಬಗೆಗೆ ಉಲ್ಲೇಖವಿದೆ. ಸಮೀಪದ ರಾಜರೊಡನೆ ಸಾಮಾನ್ಯವಾಗಿ ಸಖ್ಯವಿತ್ತು.

ವೇಣೂರಿನಲ್ಲಿ ಗೊಮ್ಮಟ ಸ್ಥಾಪನೆಯನ್ನು ಸಹಿಸದ ಭೈರರಸರು ತಿಮ್ಮಣ್ಣಾಜಿಲನ ಮೇಲೆ ಯುದ್ಧ ಮಾಡಿ ನಾರಾವಿ ಸೀಮೆಯನ್ನು ವಶಪಡಿಸಿದರೆಂದು ತಿಳಿಯುತ್ತದೆ. ಶಾಸನಾಧಾರವಿಲ್ಲವಾದರೂ ಈ ವಿಷಯದಲ್ಲಿ ಐತಿಹಾಸಿಕತೆ ಇದ್ದಂತೆ ತೋರುತ್ತದೆ. ಕೈಫಿಯತ್ತು ಇದನ್ನು ಉಲ್ಲೇಖಿಸುತ್ತದೆ. ಬಂಗರು, ಅಜಿಲರು, ಚೌಟರು ಒಟ್ಟುಕೂಡಿ ಕೆಲಸ ಮಾಡಬೇಕೆಂದು ಒಂದು ಒಪ್ಪಂದವಾಗಿ ಈ ಒಪ್ಪಂದವನ್ನು ಮೀರಿ ನಡೆದ ಚೌಟತಿಯನ್ನು ಭೈರರಸನೊಬ್ಬನು ಕೊಂದ ಬಗೆಗೂ ಕೈಫಿಯತ್ತು ಹೇಳುತ್ತದೆ. [17]

ತುಳುನಾಡಿನ ಇತರ ಭಾಗಗಳಲ್ಲಿದ್ದಂತೆಯೇ ಕಾರ್ಕಳ ಪ್ರದೇಶವು ಕೃಷಿ ಪ್ರಧಾನವಾಗಿತ್ತು. ವ್ಯಾಪಾರ ವ್ಯವಹಾರಗಳು ನಡೆದಿದ್ದುವು. ಬಾರಕೂರು ಮಂಗಳೂರುಗಳ ಟಂಕಸಾಲೆಗಳ ನಾಣ್ಯಗಳೇ ಇಲ್ಲಿಯೂ ನಡೆಯುತ್ತಿದ್ದುವು. ಇವರು ಸ್ವಂತ ನಾಣ್ಯವನ್ನು ಟಂಕಿಸಲಿಲ್ಲ. ಗದ್ಯಾಣ, ಸಣ್ಣ ಗದ್ಯಾಣ, ಸಣ್ಣ ಪ್ರತಾಪ ಗದ್ಯಾಣ, ಹೊನ್ನು, ವರಹ, ಘಟ್ಟಿವರಹ, ದೊಡ್ಡವರಹ ಗದ್ಯಾಣ, ಹಣ – ಮೊದಲನಾದ ನಾಣ್ಯಗಳಿದ್ದುವು – ಎಂಬುದನ್ನು ಭೈರರಸರ ಶಾಸನಗಳಿಂದ ತಿಳಿಯಬಹುದಾಗಿದೆ.

ಭೈರರಸರ ಇತಿಹಾಸದಲ್ಲಿ ಸ್ವಲ್ಪಮಟ್ಟಿನ ಗೊಂದಲವಿದೆ. ಅವರ ಹೆಸರು ಗೊಂದಲಕ್ಕೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ. ಇದರಿಂದಾಗಿ ವಂಶನಕ್ಷೆ ತಯಾರಿಕೆಗೆ ಕಷ್ಟವಾಗಿದೆ. ಅವರ ಬಗೆಗಿನ ಐತಿಹ್ಯಗಳಲ್ಲಿ ಚಾರಿತ್ರಿಕತೆಯ ಅಂಶವೆಷ್ಟಂಬುದನ್ನು ಇನ್ನಿತರ ಆಧಾರಗಳಿಂದ ಶೋಧಿಸಬೇಕಾಗಿದೆ. ಉದಾಹರಣೆಗೆ ಕಾರ್ಕಳದಲ್ಲಿ ಲಲಿತಕೀರ್ತಿ ಪಟ್ಟವಾದ ಬಗೆಗಿನ ಐತಿಹ್ಯ. ಭೈರವರಾಜನಿಗೆ ಸೌಭಾಗ್ಯ ನೋಂಪಿಯನ್ನು ಆಚರಿಸಲು ಹೊಂಬುಚ್ಚದಿಂದ ಗುರುಗಳನ್ನು ಕರೆತರಲು ಅವಕಾಶ ಸಾಲದ್ದರಿಂದ ಮೂಡಬಿದರೆಯ ಚಾರುಕೀರ್ತಿ ಭಟ್ಟಾರಕರಿಗೆ ಬಿನ್ನವತ್ತಳೆ ಕಳುಹಿಸಲು ಮೂಡಬಿದರೆಯ ಚೌಟರಸರಿಗೂ ಅದೇ ಆಚರಣೆಯಿದ್ದುದರಿಂದ ಚಾರುಕೀರ್ತಿ ಗುರುವು ಕಾರ್ಕಳಕ್ಕೆ ಹೋಗಲಾಗದೆ ತನ್ನಕಡೆಯಿಂದ ನಿರ್ವಾಣದವರನ್ನು ಕಳುಹಲು ಭೈರವರಸನು ವಿಷಾದಪಟ್ಟು ಆ ನಿರ್ವಾಣದವರಿಗೆ ಕಾರ್ಕಳದಲ್ಲಿ ಗುರು ಪಟ್ಟಕಟ್ಟಿ ಲಲಿತಕೀರ್ತಿಯೆಂಬ ಹೆಸರಿರಿಸಿ ಸೌಭಾಗ್ಯ ನೋಂಪಿಯನ್ನು ಆಚರಿಸಿದ ಎಂಬ ಈ ಐತಿಹ್ಯವನ್ನು ‘ಕಾರ್ಕಳದ ಗುಮ್ಮಟಬೆಟ್ಟದಲ್ಲಿರುವ ಮೂರು ಶಿಲಾಲೇಖಗಳು’ ಎಂಬ ಲೇಖನದಲ್ಲಿ ವಿಮರ್ಶಿಸಿದ್ದಾರೆ. [18] ಅವರ ಊಹೆ ಹೀಗಿದೆ – “ಮೂಡಬಿದರೆಯ ಚೌಟರಸರಿಗೂ ಕಾರ್ಕಳದ ಭೈರರಸರಿಗೂ ದೀರ್ಘದ್ವೇಷವಿದ್ದಂತೆ ಕಾಣುತ್ತದೆ; ಮತ್ತದೇ ಕಾರಣದಿಂದಲೇನೋ ಕಾರ್ಕಳದ ಭೈರರಸರು ಕಾರ್ಕಳದಿಂದ ಇಷ್ಟು ಹತ್ತರವಿರುವ ಮೂಡಬಿದರೆಯ ಚಾರುಕೀರ್ತಿ ಮಠದ ಗುರುವನ್ನು ತಮ್ಮ ಗುರುವೆಂದು ಮನ್ನಿಸುತ್ತಿದ್ದಿಲ್ಲವೆಂದೂ ಕಾಣುತ್ತದೆ. ಗೋಮಟೇಶ್ವರ ಬೆಟ್ಟದಲ್ಲಿಯ ಶಾಸನಗಳಲ್ಲಾಗಲಿ, ಚತುರ್ಮುಖ ಬಸದಿಯ ಶಾಸನದಲ್ಲಾಗಲಿ ಚಾರುಕೀರ್ತಿಯನ್ನು ಕುರಿತು ಉಲ್ಲೇಖವೇನೂ ಇಲ್ಲ”.[19]

ಸ್ವಲ್ಪ ಮಟ್ಟಿಗೆ ಗೊಂದಲದಲ್ಲೇ ಇರುವ ಈ ವಂಶದ ವಂಶನಕ್ಷೆಯ ರಚನೆಗೆ ಡಾ| ಕೆ.ವಿ.ರಮೇಶ್ ಅವರು, ಡಾ| ಗುರುರಾಜ ಭಟ್ಟರು, ಡಾ| ಪಿ.ಎನ್. ನರಸಿಂಹ ಮೂರ್ತಿಗಳು ಯತ್ನಿಸಿದ್ದಾರೆ. ಅದನ್ನು ಸಂಗ್ರಹಿಸಿ ಮುಂದೆ ನಿರೂಪಿಸಲಾಗಿದೆ. ಶಾಸನಾಧಾರಗಳಿಂದ ಡಾ| ಕೆ.ವಿ. ರಮೇಶ್‌ರು ಮಾಡಿದ ವಂಶನಕ್ಷೆಯನ್ನು ಮುಂದೆ ಕೊಡಲಾಗಿದೆ:

07_264_TKAM-KUH ಈ ಚಿಕ್ಕ ಭೈರವನಿಗೆ ಇಮ್ಮಡಿ ಭೈರವನೆಂಬ ಹೆಸರಿದ್ದು ಅವನ ಕಾಲದ ವರಂಗ ಶಾಸನದ ಆಧಾರದಿಂದ ಈ ವಂಶನಕ್ಷೆಯನ್ನು ನೀಡಲಾಗಿದೆ. (ಡಾ| ಕೆ.ವಿ. ರಮೇಶ್ HSK, ಪು. ೧೮೭ – ೧೮೮) ಶಾಸನಾಧಾರದಿಂದ ಮುಂದಿನ ನಕ್ಷೆಯನ್ನು ಹೀಗೆ ನೀಡಿದ್ದಾರೆ (ಅದೇ ಪು.೨೩೬)

08_264_TKAM-KUH

ಡಾ| ಕೆ.ವಿ.ರಮೇಶ್ ಅವರ ವಂಶನಕ್ಷೆಗೆ ಸ್ವಲ್ಪ ಭಿನ್ನವಾಗಿ ಡಾ| ಗುರುರಾಜ ಭಟ್ಟರು ನಿರೂಪಿಸಿದುದು ಹೀಗಿದೆ (STHC, ಪು. ೯೦ – ೯೧).

09_264_TKAM-KUH

ಈ ವಂಶನಕ್ಷೆಯು ಪ್ರಾಯಶಃ ಅಳಿಯಸಂತಾನ ರೂಪದಲ್ಲಿ ಮುಂದುವರಿದಿದೆಯೆಂದು ಡಾ| ಗುರುರಾಜ ಭಟ್ಟರು ಉಲ್ಲೇಖಿಸಿದ್ದಾರೆ.

ಶಾಸನಾಧಾರಗಳಿಂದ ಕಳಸದ ಶಾಖೆಯ ವಂಶಾವಳಿಯನ್ನು ಡಾ| ಪಿ.ಎನ್. ನರಸಿಂಹ ಮೂರ್ತಿಗಳು ರಚಿಸಿದ್ದು ಅವರು ಸ್ವಲ್ಪ ಭಿನ್ನವಾಗಿ ಕಾಲಗಳನ್ನು ಹೇಳಿದ್ದಾರೆ. ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ, ಪು. ೧೨ – ೧೩. ಅವರು ಕೊಡುವ ವಂಶನಕ್ಷೆ ಈ ಮುಂದಿದೆ:

10_264_TKAM-KUH

ಮುಂದಿನ ವಂಶನಕ್ಷೆಯನ್ನು ಡಾ| ನರಸಿಂಹ ಮೂರ್ತಿಗಳು ಪ್ರತ್ಯೇಕವಾಗಿ ಚಿತ್ರಿಸಿ ಕೊಡದಿದ್ದರೂ ಅವರ ವಿವರಣೆಯಂತೆ ಅದು ಹೀಗಿದೆ:

11_264_TKAM-KUH

ಈ ಮೇಲಿನ ವಂಶನಕ್ಷೆಗಳಿಂದ ಸರಿಸುಮಾರಾಗಿ ಇವರ ಆಳ್ವಿಕೆಯ ವರ್ಷಗಳನ್ನು ಗುರುತಿಸಬಹುದು. ದಕ್ಷಿಣ ಕನ್ನಡದ ಐತಿಹಾಸದ ವಿವಿಧ ಮುಖಗಳ ಬಗೆಗೆ ಇತ್ತೀಚಿನ ದಿನಗಳಲ್ಲಿ ಅನೇಕ ಮಹನೀಯರಿಂದ ಸಂಶೋಧನೆಗಳು ನಡೆದಿದ್ದು ಅವೆಲ್ಲವುಗಳ ಸಮಗ್ರ ಅಧ್ಯಯನ ನಡೆದಾಗ ಭೈರರಸರ ಕಾಲದ ಇತಿಹಾಸದ ಚಿತ್ರಣ ಇನ್ನಷ್ಟು ಸ್ಪಷ್ಟವಾಗಬಹುದು. ಪ್ರಸ್ತುತ ಪ್ರಬಂಧ ಅಂತಹ ಸಣ್ಣ ಪ್ರಯತ್ನವಾಗಿದೆ.

– ಡಾ| ಪಾದೇಕಲ್ಲು ವಿಷ್ಣುಭಟ್ಟ*

ಆಧಾರಗ್ರಂಥಗಳು:

೧. ಗಣಪತಿ ರಾವ್ ಐಗಳ್ – ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ – ೧೯೨೩ (ಐಗಳ್ ಇತಿಹಾಸ).

೨. ಡಾ| ಕೆ.ವಿ.ರಮೇಶ್ A History of South Kanara – 1970(HSK).

೩. ಡಾ| ಪಿ.ಗುರುರಾಜ ಭಟ್ಟ – Studies in Tuluva History and Culture 1975 (STHC).

೪. ಡಾ| ಪಿ.ಎನ್. ನರಸಿಂಹ ಮೂರ್ತಿ ಮತ್ತಿತರರು – ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ ೧೯೮೫.

೫. ಡಾ| ಬಿ.ಎ. ವಿವೇಕ ರೈ – ಆನ್ವಯಿಕ ಜಾನಪದ – ೯೮೫.

೬. ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ – ಕಲ್ಕುಡ ಕಲ್ಲುರ್ಟಿ ಸಂಸ್ಕೃತಿ ಶೋಧ ೧೯೯೮.

೭. ಡಾ| ಕೆ. ಕುಶಾಲಪ್ಪಗೌಡ ಮತ್ತು ಕೆ. ಚಿನ್ನಪ್ಪಗೌಡ(ಸಂ) – ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು ೧೯೮೩.

೮. ಹೆರಂಜೆ ಕೃಷ್ಣ ಭಟ್ಟ, ಮುರಳೀಧರ ಉಪಾಧ್ಯ, ಹಿರಿಯಡಕ (ಸಂ.) – ಗೋವಿಂದ ಪೈ ಸಂಶೋಧನ ಸಂಪುಟ ೧೯೯೫.

 

[1] ಇವನನ್ನು ಎರಡನೆಯ ಪಾಂಡ್ಯನೆಂದು ಡಾ| ಕೆ.ವಿ.ರಮೇಶ್ ಅವರೂ ನಾಲ್ಕನೆಯ ಪಾಂಡ್ಯನೆಂದು ಡಾ| ಪಿ. ಎನ್. ನರಸಿಂಹ ಮೂರ್ತಿಗಳೂ ಗುರುತಿಸಿದ್ದಾರೆ. ಡಾ| ಗುರುರಾಜ ಭಟ್ಟರು ಇವನಿಗೆ ಪ್ರತ್ಯೇಕ ಸಂಖ್ಯೆ ಕೊಟ್ಟು ಗುರುತಿಸಿಲ್ಲ.

[2] ಡಾ. ಪಿ.ಎನ್. ನರಸಿಂಹಮೂರ್ತಿ, ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ, ಪು. ೧೫.

[3] ಕೆವಸೆಯ ಈ ಶಾಸನವು ಲಿಪಿಶಾಸ್ತ್ರ ದೃಷ್ಟಿಯಿಂದ ಕ್ರಿ.ಶ. ೧೫ನೇ ಶತಮಾನಕ್ಕೆ ಸೇರುತ್ತಿದ್ದು ಇದರಲ್ಲಿ ಶಕವನ್ನು ೧೩೮೩ರ ಬದಲಾಗಿ ೧೦೮೩ ಎಂದು ಉಲ್ಲೇಖಿಸಲಾಗಿರುವುದನ್ನು ಡಾ| ಕೆ.ವಿ. ರಮೇಶ್ ಅವರು ಗುರುತಿಸಿದ್ದಾರೆ, HSK ಪು. ೧೯೦.

[4] ಡಾ| ಪಿ.ಎನ್. ನರಸಿಂಹಮೂರ್ತಿ, ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ, ಪು. ೧೬.

[5] STHC, ಪು. ೮೭ ಮತ್ತು HSK, ಪು. ೨೧೫ – ೨೧೬.

[6] HSK, ಪು. ೨೧೬.

[7] ಗೋವಿಂದ ಸಂಶೋಧನ ಸಂಪುಟ, ಪು. ೬೮೨.

[8] ಕಾರ್ಕಳ – ಒಂದು ಅಧ್ಯಯನ, ಪು. ೧೭.

[9] ಡಾ| ಕೆ.ವಿ.ರಮೇಶ್ HSK, ಪು. ೨೩೫.

[10] ಅದೇ HSK, ಪು. ೨೩೫.

[11] ಕಾರ್ಕಳ ಒಂದು ಅಧ್ಯಯನ, ಪು. ೧೭.

[12] ಕಾರ್ಕಳ ಒಂದು ಅಧ್ಯಯನ, ಪು. ೧೮.

[13] ಕಾರ್ಕಳ ಒಂದು ಅಧ್ಯಯನ ಪು. ೧೯. ವಿವರಗಳು ಕೆಳದಿ ನೃಪವಿಜಯದಲ್ಲಿವೆ, ಆದರೆ ಅಲ್ಲಿರುವ ವಿವರಗಳು ಕಾರ್ಕಳದ ಇತಿಹಾಸ ರಚನೆಗೆ ಹೆಚ್ಚು ಸಹಾಯ ನೀಡುವುದಿಲ್ಲ.

[14] ಅಭಿನವ ಭೈರರಸವೊಡೆಯನ (೧೬೬೦) ಅನಂತರ ಯಾರು ಆಳ್ವಿಕೆ ನಡೆಸಿದರು. ಎಂಬುದು ಗೊತ್ತಾಗುವುದಿಲ್ಲ ಎಂದು ಹೇಳಿ ಡಾ| ನರಸಿಂಹ ಮೂರ್ತಿಗಳು ಈ ಮೇಲಿನ ಅಭಿಪ್ರಾಯವನ್ನು ನೀಡಿದ್ದಾರೆ. ಭೈರರಸ ಕೊನೆಯ ರಾಜ ಪಾಂಡ್ಯರಾಯನೆಂದೂ ಅವನನ್ನು ತುರುಷ್ಕ ಪಡೆ ಸೋಲಿಸಿತೆಂದೂ ಉಲ್ಲೇಖಿಸುವ ಪಾಡ್ದನ ಯಾವುದೆಂಬುದನ್ನು ಅವರು ಉಲ್ಲೇಖಿಸಿಲ್ಲ ಕಾರ್ಕಳ – ಒಂದು ಪ್ರಾದೇಶಕ ಅಧ್ಯಯನ, ಪು. ೧೯.)

[15] ಐಗಳ್ ಅವರು ಈ ಅಂಶವನ್ನು ಹೇಳಿದ್ದಾರೆ. ಇದು ಆ ಕಾಲದ ಜನಗಳ ಹೇಳಿಕೆಯಿಂದ ನಿರೂಪಿಸಿದ ವಿಚಾರವಿರಬೇಕು. ಚದುರ ಚಂದ್ರಮನು ನಗರ ಮಧ್ಯದಲ್ಲಿ ಅರಮನೆಯಿತ್ತೆಂದಷ್ಟೇ ಹೇಳಿದ್ದಾನೆ.

[16] ರತ್ನಾಕರವರ್ಣಿಗೂ ಭೈರರಸನಿಗೂ ಸಂಬಂಧಿಸಿದಂತೆ ದೇವಚಂದ್ರನ ರಾಜಾವಳೀ ಕಥೆಯಲ್ಲಿರುವ ದಂತ ಕಥೆಯನ್ನು ಗೋವಿಂದ ಪೈಗಳು ವಿಮರ್ಶಿಸಿದ್ದಾರೆ. ಗೋವಿಂದ ಪೈ ಸಂಶೋಧನ ಸಂಪುಟ, ಪು. ೪೨೨ – ೪೩೯.

[17] ದಕ್ಷಿಣ ಕನ್ನಡದ ಕೈಫಿಯತ್ತುಗಳು, ಪು. ೧೧೨.

[18] ಗೋವಿಂದ ಪೈ ಸಂಶೋಧನ ಸಂಪುಟ, ಪು. ೬೭೬ – ೬೭೭.

[19] ಅದೇ ಪು. ೬೭೬ – ೬೭೭, ಗೋವಿಂದ ಪೈಗಳು ಈ ಲೇಖನದಲ್ಲಿ ಎತ್ತಿರುವ ಕೆಲವು ಪ್ರಶ್ನೆಗಳು ಇಂದೂ ಹಾಗೆ ಉಳಿದಿವೆ. ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಪ್ರಸ್ತುತ ಪ್ರಬಂಧವನ್ನು ಮಂಡಿಸಿದ ಗೋಷ್ಠಿಯಲ್ಲಿ ಪ್ರಬಂಧಕ್ಕೆ ಪ್ರತಿಕ್ರಿಯೆ ನೀಡಿದ ಡಾ| ಪಿ.ಎನ್. ನರಸಿಂಹ ಮೂರ್ತಿಗಳು ಕಾರ್ಕಳಕ್ಕೆ ಸಂಬಂಧಿಸಿದಂತೆ ತಾನು ಹಲವು ಶಾಸನಗಳ ಶೋಧನೆಯನ್ನು ಮಾಡಿರುವುದಾಗಿಯೂ ಲಲಿತಕೀರ್ತಿ ಗುರು ಪರಂಪರೆಯವರು ಭೈರರಸರು ಘಟ್ಟದ ಮೇಲಿದ್ದಾಗಲೇ ಅವರ ಗುರುಪರಂಪರೆಗೆ ಸೇರಿದವರೆಂದೂ, ಹನಸೋಗೆ ಬಳಿಯನ್ನೇ ಪನಸೋಕಾವಲೀಶ್ವರ ಎಂದು ಉಲ್ಲೇಖಿಸಿದ್ದೆಂದೂ ಈ ಹನಸೋಗೆ ಎಂಬ ಸ್ಥಳವು ಮೈಸೂರು ಪ್ರದೇಶದಲ್ಲಿದ್ದು ಇಂದು ಚಿಕ್ಕಹನಸೋಗೆ ಎಂದು ಕರೆಯಲ್ಪಡುತ್ತದೆಂದೂ ಹೇಳಿರುತ್ತಾರೆ. ಡಾ| ನರಸಿಂಹ ಮೂರ್ತಿಗಳು ಬರೆದ Jainism in Coastal Karnataka ಎಂಬ ಪಿಎಚ್‌.ಡಿ. ನಿಬಂಧವು ಅಪ್ರಕಟಿತವಾಗಿದ್ದು ಅದರಲ್ಲಿ ಕಾರ್ಕಳಕ್ಕೆ ಸಂಬಂಧಿಸಿದ ಹಲವು ಅಪ್ರಕಟಿತ ಶಾಸನಗಳ ಪರಿಶೀಲನೆ ಮಾಡಲಾಗಿದೆಯೆಂದೂ, ಆ ಆಧಾರದಿಂದ ಭೈರರಸರ ವಂಶ ವಿವರದ ಹಲವು ಗೊಂದಲಗಳನ್ನು ಪರಿಹರಿಸಲಾಗಿದೆಯೆಂದೂ ಅವರು ತಿಳಿಸಿರುತ್ತಾರೆ. ಆ ನಿಬಂಧವನ್ನು ಪ್ರಸ್ತುತ ಪ್ರಬಂಧದಲ್ಲಿ ಉಪಯೋಗಿಸಿಕೊಳ್ಳಲಾಗಿಲ್ಲ.

* ಧಾತ್ರಿ, ಆತ್ರಾಡಿ, ವಯಾ: ಪರ್ಕಳ – ೫೭೬ ೧೨೩.