ವೀರ ಚೆನ್ನರಸ ಒಡೆಯನ ಅನಂತರ ವೀರ ಭೈರವನೂ ಅವನ ಮಗ ಪಾಂಡ್ಯ ಭೂಪಾಲನೂ ರಾಜ್ಯವಾಳಿದರೆಂದು ಕಾರ್ಕಳ ತಾಲೂಕಿನ ಮರ್ಣೆಯ ಕ್ರಿ.ಶ. ೧೪೦೮ರ ಶಾಸನ ತಿಳಿಸುತ್ತದೆ. ಈ ಶಾಸನವು ಇವರಿಬ್ಬರನ್ನೂ ಹೆಸರಿಸುತ್ತಿದ್ದು ರಾಜಧಾನಿಯಾದ ಕೆರವಸೆಯನ್ನು ಉಲ್ಲೇಖಿಸುತ್ತದೆ. ಬಾರಕನ್ಯಾಪುರದ ಚೋಳಿಯಕೇರಿಯ ಪಾರ್ಶ್ವನಾಥನಿಗೂ ಋಷಿಗಳಿಗೂ ದಾನಕೊಟ್ಟ ವಿಷಯವನ್ನು ತಿಳಿಸುವ ಈ ದಾನಶಾಸನವು ಬಲಾತ್ಕಾರಗಣದ ವಸಂತಕೀರ್ತಿರಾವುಳನ ಸಮಕ್ಷಮದಲ್ಲಿ ಈ ಕಾರ್ಯ ನಡೆಯಿತೆಂದು ತಿಳಿಸುತ್ತದೆ. ಈ ಇಬ್ಬರು ಒಟ್ಟಿಗೆ ಆಳುತ್ತಿದ್ದರೆಂಬ ಅಭಿಪ್ರಾಯವನ್ನು ಡಾ| ಕೆ.ವಿ. ರಮೇಶ್ ವ್ಯಕ್ತಪಡಿಸಿದ್ದಾರೆ. [1] ವಿಜಯನಗರದ ಎರಡನೆಯ ದೇವರಾಯನ ಸಾಮಂತನಾಗಿದ್ದ ಭೈರರಸ ಒಡೆಯ ಎಂಬುವನು ಈ ವೀರಭೈರವನೇ ಎಂದು ಡಾ| ಗುರುರಾಜ ಭಟ್ಟರು ಹೇಳುತ್ತಾರೆ (STHC, ಪು.೮೫). ಈ ವೀರಭೈರವನು ಚೆನ್ನರಸನ ಮಗ ಅಥವಾ ಅಳಿಯನಾಗಿರಬಹುದು ಎಂದು ಡಾ| ಪಿ.ಎನ್. ನರಸಿಂಹ ಮೂರ್ತಿಗಳು ಹೇಳಿದ್ದಾರೆ. [2]

ವರಾಂಗದ ಕ್ರಿ.ಶ. ೧೫೨೩ರ ಶಾಸನವು ನನ್ನಿಶಾಂತ, ಸಹಕಾರ ಜಿನದತ್ತರ ಅನಂತರ ಹಲವಾರು ರಾಜರು ಆಳಿದ ಮೇಲೆ ಭೈರವನನ್ನು ಹೆಸರಿಸಿ ಅವನ ಅನಂತರದ ಕೆಲವು ತಲೆಮಾರುಗಳ ವಂಶಾವಳಿಯನ್ನು ಕೊಡುತ್ತದೆ. [3] ಈ ಭೈರವನು ಮರ್ಣೆ ಶಾಸನದ ವೀರಭೈರವನೇ ಆಗಿದ್ದಾನೆ. ವರಾಂಗ ಶಾಸನವು ಈ ಭೈರವನಿಂದ[4] ತೊಡಗುವುದರಿಂದ ಪ್ರಾಯಶಃ ಈತನ ಕಾಲದಿಂದ ಈ ವಂಶವು ಕಾರ್ಕಳ ಕೆರವಸೆಗಳನ್ನು ರಾಜಧಾನಿಯಾಗಿ ಮಾಡಿಕೊಂಡು ಗಟ್ಟಿಗೊಂಡಿರಬೇಕೆಂದು ತಿಳಿಯಬಹುದು.

ಈ ವೀರಭೈರರಸ ಒಡೆಯನು ಕ್ರಿ.ಶ. ೧೩೯೦ರಿಂದ ೧೪೨೦ರ ವರೆಗೆ ರಾಜ್ಯವಾಳಿದ್ದು ಈತನ ರಾಜ್ಯವು ಶಾಂತಿ ಸಮೃದ್ಧಿಗಳಿಂದ ಕೂಡಿತ್ತೆಂದೂ ಕಳಸದ ಕಳಸೇಶ್ವರ, ಕೆರವಸೆಯ ಮಹಾದೇವ, ಹೆರ್ಮುಂಡೆಯ ವಿಷ್ಣುಮೂರ್ತಿ ಇತ್ಯಾದಿ ದೇವಾಲಯಗಳಿಗೂ ಬಾರಕೂರು, ಹಿರಿಯಂಗಡಿ, ಕೆರವಸೆ, ಕಳಸದ ಬಸದಿಗಳಿಗೂ ಭೂಮಿ, ಧನ – ಧಾನ್ಯಗಳನ್ನು ದಾನಮಾಡಿದನೆಂದೂ ಹಿರಿಯಂಗಡಿಯ ನೇಮೀಶ್ವರ ಮತ್ತು ಬಾರಕೂರಿನ ಪಾರ್ಶ್ವನಾಥ ಬಸದಿಗಳನ್ನು ನಿರ್ಮಿಸಿದನೆಂದೂ, ಕೆರವಸೆಯನ್ನು ತನ್ನ ಮಹಾ ರಾಜಧಾನಿಯನ್ನಾಗಿ ಮಾಡಿಕೊಂಡನೆಂದೂ ಡಾ| ಪಿ.ಎನ್. ನರಸಿಂಹ ಮೂರ್ತಿಗಳು ಉಲ್ಲೇಖಿಸಿದ್ದಾರೆ. [5]

ಈ ವೀರಭೈರರಸ ಮತ್ತು ಅವನ ಮಗ ಪಾಂಡ್ಯಭೂಪಾಲನ ಅನಂತರ ಈ ಎರಡು ಹೆಸರುಗಳು ಸಾಮಾನ್ಯವಾಗಿ ಪರ್ಯಾಯವಾಗಿ ಈ ವಂಶದ ರಾಜರ ಪಟ್ಟದ ಹೆಸರುಗಳಾಗಿ ಕಂಡುಬರುತ್ತವೆ. ಈ ವಿಷಯದಲ್ಲಿ ಡಾ| ಪಿ.ಎನ್. ನರಸಿಂಹ ಮೂರ್ತಿಗಳು ಹೀಗೆ ಹೇಳಿದ್ದಾರೆ – “ಇನ್ನು ಮುಂದೆ ಕಾರ್ಕಳವನ್ನಾಳಿದ ಅರಸರಲ್ಲಿ ಸರ್ವೇ ಸಾಮಾನ್ಯ ಎರಡು ಹೆಸರುಗಳನ್ನು ನಾವು ಕಾಣುತ್ತೇವೆ, ಅದುವೆ ಭೈರವ ಅಥವಾ ಭೈರರಸ ಮತ್ತು ಪಾಂಡ್ಯ ಅಥವಾ ಪಾಂಡ್ಯಪ್ಪೊಡೆಯ. ಈ ಹೆಸರುಗಳು ಹುಟ್ಟಿನದ್ದಾಗಿರದೆ ಪಟ್ಟದ ಕಾಲದಲ್ಲಿ ಪಡೆದವು. ಈ ಪದ್ಧತಿ ಹೇಗೆ ಬೆಳೆದು ಬಂತು ಹೇಳುವುದು ಕಷ್ಟ. ಪಾಂಡ್ಯನ ಉತ್ತರಾಧಿಕಾರಿ ಭೈರವ; ಅವನ ಉತ್ತರಾಧಿಕಾರಿ ಪಾಂಡ್ಯ. ಹೀಗೇ ಬಂದಿರುವುದನ್ನು ಗಮನಿಸಿದರೆ ಇದು ಅಳಿಯಸಂತಾನದ ಪ್ರಭಾವವಿದ್ದಿರಬಹುದೆಂದು ಅನುಮಾನ ಬರುತ್ತದೆ. ಜೈನ ಅರಸರಲ್ಲಿ (ದಕ್ಷಿಣ ಕನ್ನಡ ಜಿಲ್ಲೆಯಲ್ಲಿ) ಅಳಿಯಕಟ್ಟು ಇದ್ದರೂ ಕಾರ್ಕಳದಂತೆ ಹೆಸರಿಸುವ ಪದ್ಧತಿ ಬೇರಾವ ವಂಶದಲ್ಲೂ ಇರಲಿಲ್ಲ. ಇದೂ ಒಂದು ಕಾರ್ಕಳದ ವೈಶಿಷ್ಟ್ಯ”. [6] ಪಟ್ಟಕ್ಕೆ ಬಂದ ಅರಸನಿಗೆ ಪಟ್ಟದ ಹೆಸರನ್ನು ಕೊಡುವ ಪದ್ಧತಿ ಇತರ ರಾಜವಂಶಗಳಲ್ಲೂ ಇತ್ತು. ಕೆಲವು ವಂಶಗಳಲ್ಲಿ ಒಂದೇ ಪಟ್ಟದ ಹೆಸರು. ಉದಾಹರಣೆಗೆ ವಿಟ್ಲದ ಡೊಂಬ ಹೆಗಡೆಯವರಲ್ಲಿ ಪಟ್ಟದ ಅರಸು ಯಾವಾಗಲೂ ನರಸಿಂಹರಸ ಎಂಬ ಹೆಸರನ್ನು ಪಡೆಯುತ್ತಿದ್ದುದಕ್ಕೆ ಆಧಾರವಿದೆ. ಕೆಲವು ವಂಶಗಳಲ್ಲಿ ಎರಡು ಹೆಸರುಗಳು ಪರ್ಯಾಯವಾಗಿ ಬರುತ್ತಿದ್ದುವು. ವೇಣೂರಿನ ಅಜಿಲರಲ್ಲಿ ತಿಮ್ಮಣ್ಣಾಜಿಲ ಪಾಂಡ್ಯಪ್ಪಾಜಿಲ ಎಂಬ ಹೆಸರುಗಳು ಕಂಡುಬರುತ್ತವೆ. ಮೂಲಿಕೆಯ ಸಾವಂತರಲ್ಲಿ ದುಗ್ಗಣ್ಣ ಸಾವಂತ, ಚನ್ನರಾಯ ಸಾವಂತ ಎಂಬೆರಡು ಪಟ್ಟದ ಹೆಸರುಗಳೆಂದು ಐಗಳ್ ಅವರು ಉಲ್ಲೇಖಿಸಿದ್ದಾರೆ. [7]

ಮೊದಲನೆಯ ಭೈರವರ (ವೀರ ಭೈರವ) ಮಕ್ಕಳಾದ ಪಾಂಡ್ಯ ಮತ್ತು ರಾಮನಾಥ ಎಂಬವರಲ್ಲಿ ರಾಮನಾಥನು ಪಟ್ಟಕ್ಕೆ ಬರಲಿಲ್ಲ. ಇಂದು ರಾಮ ಸಮುದ್ರವೆಂದು ಪ್ರಸಿದ್ಧವಾಗಿರುವ ಕೆರೆಯನ್ನು ಈತನೇ ಕಟ್ಟಿಸಿದನೆಂದು ಹೇಳಿಕೆಯಿದೆ. ಅವನ ಹೆಸರಿನಿಂದಾಗಿಯೇ ಇದಕ್ಕೆ ರಾಮಸಮುದ್ರವೆಂಬ ಹೆಸರು ಬಂದಿರಬೇಕು. ಈ ಕೆರೆಯನ್ನು ರೆಂಜಾಳ ಗ್ರಾಮದಲ್ಲಿ ಮಾಡಿಸಬೇಕೆಂಬ ಯೋಚನೆಯಿತ್ತು. ಆದರೆ ಅಲ್ಲಿ ಯೋಗ್ಯ ಸ್ಥಳ ಸಿಕ್ಕದುದರಿಂದ ಕಾರ್ಕಳದಲ್ಲಿ ಮಾಡಿಸಲಾಯಿತೆಂದು ಐಗಳ್ ಅವರು ಹೇಳುತ್ತಾರೆ. [8] ರಾಮನಾಥ ಅರಸನು ಪ್ರಾಯಶಃ ತನ್ನ ತಂದೆಯ ಕಾಲದಲ್ಲೇ ಮರಣಹೊಂದಿರಬೇಕೆಂದು ಡಾ| ಪಿ.ಎನ್. ನರಸಿಂಹ ಮೂರ್ತಿಗಳ ಅಭಿಪ್ರಾಯ. [9]

ವೀರಭೈರವನ ಅನಂತರ ಆತನ ಮಗನಾದ ವೀರಪಾಂಡ್ಯದೇವನು ಪಟ್ಟಕ್ಕೆ ಬಂದನು. ಕ್ರಿ.ಶ. ೧೪೩೨ರಲ್ಲಿ ಇವನು ಕಾರ್ಕಳದ ಗೊಮ್ಮಟನ ಪ್ರತಿಷ್ಠೆ ಮಾಡಿಸಿದನೆಂದು ಅವನ ಶಾಸನ ತಿಳಿಸುತ್ತದೆ. [10] ಕಾರ್ಕಳದ ಗೊಮ್ಮಟೇಶ್ವರನ ಬಲಬದಿಯಲ್ಲಿರುವ ಶಿಲಾಲೇಖ ಹೀಗಿದೆ:

ಶ್ರೀ ಮದ್ದೇಶಿಗಣೇ ಖ್ಯಾತೇ ಪನಸೋಗೇ ವಲೀಶ್ವರಃ|
ಯೋಭೂಲ್ಲಲಿತಕೀರ್ತ್ಯಾಖ್ಯಸ್ತನ್ಮುನೀಂದ್ರೋಪದೇಶತಃ ||
ಸ್ವಸ್ತಿಶ್ರೀ ಶಕಭೂಪತೇಸ್ತ್ರಶರವಹ್ನೀಂದೋರ್ವಿರೋಧ್ಯಾದಿಕೃ|
ದ್ವರ್ಷೆ ಫಾಲ್ಗುಣ ಸೌಮ್ಯವಾರ ಧವಲ ಶ್ರೀ ಧ್ವಾದಶೀಸತ್ತಿಥೌ ||
ಶ್ರೀ ಸೋಮಾನ್ವಯ ಭೈರವೇಂದ್ರ ತನುಜ ಶ್ರೀ ವೀರಪಾಂಡ್ಯೇಶಿನಾ|
ನಿರ್ಮಾಪ್ಯ ಪ್ರತಿಮಾತ್ರ ಬಾಹುಬಲಿನೋ ಜೀಯಾತ್ಪ್ರತಿಷ್ಠಾಪಿತಾ ||
ಶಕವರ್ಷ ೧೩೫೩ || ಶ್ರೀ ಪಾಂಡ್ಯರಾಯ ||

“ಈ ಗೋಮಟೇಶ್ವರ ವಿಗ್ರಹ ಪ್ರತಿಷ್ಠೆಯಾದುದು ಶಾ.ಶ. (ಅತೀತ) ೧೩೫೩ನೆಯ ವಿರೋಧಿಕೃತ್ ಸಂವತ್ಸರದ ಫಾಲ್ಗುಣ ಶು| ೧೨ಯು ಬುಧವಾರದಂದು ಎಂದು ಈ ಲೇಖನದಿಂದ ತಿಳಿದು ಬರುತ್ತದೆ. ಈ ತಿಥಿಯನ್ನು ಈಗ ನಡವಳಿಯಲ್ಲಿರುವ ಕ್ರಿಸ್ತಶಕದ ಕಾಲಮಾನದಲ್ಲಿಪರಿವರ್ತಿಸಿದರೆ, ಈ ಪ್ರತಿಷ್ಠೆಯು ಕ್ರಿ.ಶ.೧೪೩೨ನೆಯ ಇಸವಿ ಫೆಬ್ರವರಿ ೧೩ನೆಯ ತಾರೀಕಿನಂದು ಆಯಿತೆಂದು ಸಿದ್ಧವಾಗುತ್ತದೆ” ಎಂದು ಗೋವಿಂದ ಪೈಗಳು ಕಾಲನಿರ್ಣಯ ಮಾಡಿರುತ್ತಾರೆ. [11] ಈ ಗೋಮಟೇಶ್ವರ ಪ್ರತಿಷ್ಠೆಯಿಂದಾಗಿ ಈ ವೀರಪಾಂಡ್ಯನಿಗೆ ‘ಅಭಿನವ ಚಾಮುಂಡರಾಯ’ನೆಂಬ ಹೆಸರು ಬಂತು. ಇವನು ಕ್ರಿ.ಶ. ೧೪೩೬ರಲ್ಲಿ ಗೋಮಟೇಶ್ವರನ ಇದಿರಿನ ಬ್ರಹ್ಮಸ್ತಂಭವನ್ನು ನಿಲ್ಲಿಸಿದನು. ಈ ಕಾರ್ಯಗಳಿಂದ ಕಾರ್ಕಳಕ್ಕೆ ಚರಿತ್ರೆಯಲ್ಲಿ ಒಂದು ವಿಶಿಷ್ಟ ಸ್ಥಾನ ದೊರಕುವಂತಾಯಿತು; ಜೈನ ಯಾತ್ರಾಸ್ಥಳಗಳಲ್ಲಿ ಕಾರ್ಕಳಕ್ಕೆ ಒಂದು ಹೆಸರು ಬಂತು.

ಕ್ರಿ.ಶ. ೧೪೩೨ರ ಶಾಸನವಾಗಲಿ, ಕ್ರಿ.ಶ. ೧೪೩೬ರ ಶಾಸನವಾಗಲಿ ವಿಜಯನಗರದ ಆಳ್ವಿಕೆಯನ್ನು ಉಲ್ಲೇಖಿಸಿಲ್ಲ. ಕ್ರಿ.ಶ. ೧೪೪೯ರ ಕೆರವಸೆ ಶಾಸನದಲ್ಲಿ ವೀರಪಾಂಡ್ಯರಸ ಒಡೆಯನಿಗೆ ಪಟ್ಟಿಪೊಂಬುಚ್ಚಪುರವರೇಶ್ವರಾಧೀಶ್ವರ, ಪದ್ಮಾವತೀಲಬ್ಧವರಪ್ರಸಾದ, ಭಾಷೆಗೆ ತಪ್ಪುವ ರಾಯರ ಗಂಡ, ಅರಿರಾಯ ಗಂಡರ ದಾವಣಿ ಮೊದಲಾದ ಬಿರುದುಗಳನ್ನು ಹೇಳಲಾಗಿದ್ದು ವಿಜಯನಗರದ ಆಧಿಪತ್ಯವನ್ನು ಉಲ್ಲೇಖಿಸುವುದಿಲ್ಲ. ಆದರೂ ಕ್ರಿ.ಶ. ೧೪೪೦ಕ್ಕೆ ಸಲ್ಲುವ ಈತನ ಕಳಸದ ಶಾಸನದಲ್ಲಿ ವಿಜಯನಗರದ ಸಾಮಂತನಾಗಿ ಈತ ಕಳಸರಾಜ್ಯವನ್ನು ಆಳುತ್ತಿದ್ದುದು ಉಲ್ಲೇಖಗೊಂಡಿದೆ. [12]

ಈ ವೀರಪಾಂಡ್ಯನ ವಿಷಯದಲ್ಲಿ ಡಾ| ಪಿ.ಎನ್. ನರಸಿಂಹ ಮೂರ್ತಿಗಳು ಹೇಳಿದುದು ಹೀಗಿದೆ – “ವೀರಭೈರವನ ಉದಾತ್ತಗುಣಗಳು ಮಗನಲ್ಲೂ ಕಂಡು ಬರುತ್ತವೆ. ಸ್ವತಃ ವಿದ್ವಾಂಸನಾಗಿದ್ದ ಈತ ತನ್ನ ಆಸ್ಥಾನದಲ್ಲಿ ಕವಿ, ಗಮಕಿ, ವಿದ್ವಾಂಸರಿಗೆ ಆರ್ಶರಯ ನೀಡಿದ್ದ (ಸಂಸ್ಕೃತದಲ್ಲಿ ‘ಭವ್ಯಾನಂದಕಾರಕ’ ಎಂಬೊಂದು ಕಾವ್ಯವನ್ನು ಈತ ರಚಿಸಿದ್ದಾನೆ). ಈತನ ಸಮಕಾಲೀನ ಸಂತ, ಕವಿ, ವಿದ್ವಾಂಸ ಕಲ್ಯಾಣಕೀರ್ತಿ, ನೆಲ್ಲಿಕಾರು ಬಸದಿಯಲ್ಲಿ ಚೈತ್ಯವಾಸಿಯಾಗಿದ್ದ ಈ ಕವಿಮುನಿ ಸಂಸ್ಕೃತ ಹಾಗೂ ಕನ್ನಡಗಳಲ್ಲಿ ಗ್ರಂಥಗಳನ್ನು ರಚಿಸಿದ್ದಾನೆ.

‘ಧರ್ಮಕಾರ್ಯಗಳಲ್ಲಿ ಹಿಂದೆ ಬಿದ್ದವನಲ್ಲ. ಬಸದಿ ದೇವಾಲಯಗಳಿಗೆ ಯಥೇಚ್ಛ ದಾನ ಧರ್ಮಮಾಡಿದ್ದಾನೆ. ಅಂತಹ ಒಂದು ಕಾರ್ಯವನ್ನು ಇಲ್ಲಿ ಅವಶ್ಯ ಹೇಳಬೇಕು. ಪಂಚಗ್ರಹಯೋಗ ಸಮಯದಲ್ಲಿ ಈತ ಕಾರ್ಕಳ ವಿನಾಯಕ ಬೆಟ್ಟಿನ ವಿನಾಯಕ ದೇವಸ್ಥಾನದಲ್ಲಿ ನಂದಾದೀಪ ಉರಿಸುವ ಸಲುವಾಗಿ ಹೊನ್ನಿನ ದಾನ ಮಾಡಿದ್ದಾನೆ. ಕ್ರಿ.ಶ. ೧೪೩೯ರ ಕಳಸದ ಶಾಸನವೊಂದು ಕಳಸೇಶ್ವರ ದೇವರ ಸನ್ನಿಧಿಯಲ್ಲಿ ಮಾಡಿದ ಧರ್ಮಕಾರ್ಯವನ್ನು ತಿಳಿಸುತ್ತದೆ. ಅದಕ್ಕೆ ಸಾಕ್ಷಿಯಾಗಿ ಸ್ವತಃ ದೇವರು, ಅಧಿಕಾರಿಗಳು, ನಾಡಪ್ರಭುಗಳು ಮುಂತಾದವರೊಂದಿಗೆ ಶೃಂಗೇರಿ ಮಠದ ಪ್ರತಿನಿಧಿಗಳೂ ಇದ್ದರೆಂದು ತಿಳಿಸುತ್ತದೆ. ಇದು ಜೈನರಾಜನಾದ ಪಾಂಡ್ಯನಿಗೆ ಶಂಕರಾಚಾರ್ಯ ಗುರುಪರಂಪರೆಯ ಶೃಂಗೇರಿ ಮಠದೊಂದಿಗಿದ್ದ ಗೌರವಾದರಗಳನ್ನು ಸೂಚಿಸುತ್ತದೆ”. [13] ವೀರಪಾಂಡ್ಯನು ೧೪೨೦ ರಿಂದ ೧೪೫೦ರ ವರೆಗೆ ಆಳಿರಬಹುದೆಂದು ಡಾ| ಗುರುರಾಜ ಭಟ್ಟರೂ ೧೪೫೪ರವರೆಗೆ ಆಳಿರಬಹುದೆಂದು ಡಾ| ಪಿ.ಎನ್. ನರಸಿಂಹ ಮೂರ್ತಿಗಳೂ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಕಳದ ಗೊಮ್ಮಟನ ಸ್ಥಾಪನೆಯೆಂಬುದು ಕನ್ನಡ ನಾಡಿನ ಇತಿಹಾಸದಲ್ಲಿ ಒಂದು ಮುಖ್ಯ ಘಟನೆ. ಕನ್ನಡ ನಾಡಿನ ಶಿಲ್ಪವೈಭವದ ಇತಿಹಾಸದಲ್ಲಿಯೂ ಇದು ಪ್ರಮುಖ ಘಟನೆ. ಈ ಘಟನೆಯ ಬಗೆಗೆ ಕ್ರಿ.ಶ. ೧೬೪೦ರ ಸುಮಾರಿಗೆ ರಚಿತವಾದ ಚದುರ ಚಂದ್ರಮ ಕವಿ ‘ಕಾರ್ಕಳದ ಗೋಮಟೇಶ್ವರ ಚರಿತೆ’ ಎಂಬ ಸಾಂಗತ್ಯ ಗ್ರಂಥ ವಿವರಗಳನ್ನು ನೀಡುತ್ತದೆ. ಅಭಿನವ ಭಯರವರಸನ ಕಾಲದಲ್ಲಿ ಜೀವಿಸಿದ್ದ ಚದುರ ಚಂದ್ರನು ಕವಿ ಆ ಕಾಲದಲ್ಲಿ ನಡೆದ ಗೊಮ್ಮಟನ ಮಹಾಮಸ್ತಕಾಭಿಷೇಕವನ್ನು ಉಲ್ಲೇಖಿಸುವುದರೊಂದಿಗೆ (೧೬ – ೧೭ನೆಯ ಸಂಧಿಗಳು) ಕಾರ್ಕಳದ ಗೊಮ್ಮಟನ ಪ್ರತಿಷ್ಠೆಯ ವಿವರಗಳನ್ನು ನೀಡಿರುತ್ತಾನೆ. (ಮೂರನೆಯ ಸಂಧಿ) ಗೊಮ್ಮಟ ಪ್ರತಿಮೆಯ ನಿರ್ಮಾಪಕನು ಪಾಂಡ್ಯರಾಯನೆಂದೂ ಪ್ರತಿಮೆಯ ಸ್ಥಾಪನೆ ಶಾ.ಶಕ ೧೩೫೩ರ ವಿರೋಧಿಕೃತ್ ಸಂವತ್ಸರದಲ್ಲೆಂದೂ ಹೇಳಿದ್ದಾನೆ. ಇದು ವೀರ ಪಾಂಡ್ಯನ ಶಾಸನದ ಉಲ್ಲೇಖಕ್ಕೆ ಅನುಗುಣವಾಗಿಯೇ ಇದೆ. [14] ಗೊಮ್ಮಟನ ಪ್ರತಿಮೆಯನ್ನು ಇಪ್ಪತ್ತು ಚಕ್ರಗಳ ಬಂಡಿಯ ಮೇಲಿಟ್ಟು ಒಂದು ತಿಂಗಳ ಕಾಲ ಬಹಳ ಶ್ರಮದಿಂದ ಬೆಟ್ಟದ ಮೇಲಕ್ಕೆ ಎಳೆಯಿಸಿ ಬೆಟ್ಟದ ಮೇಲೆ ಪ್ರತಿಷ್ಠಿಸಲಾಯಿತೆಂದೂ ಚದುರ ಚಂದ್ರಮನ ಕೃತಿಯಲ್ಲಿ ವರ್ಣನೆಯಿದೆ. “ಪ್ರತಿಮೆಯನ್ನು ಗೊಮ್ಮಟೇಶ್ವರನ ಬೆಟ್ಟದ ದಕ್ಷಿಣಭಾಗದಲ್ಲಿರುವ ಶಿಲೆಯಿಂದ ಕಡಿದು ತೆಗೆದರು. ಆ ಸ್ಥಳವನ್ನು ಅಲ್ಲಿ ಈಗಲೂ ನೋಡಬಹುದು. ಕೆತ್ತನೆಯ ಕೆಲಸಕ್ಕೆ ಬಹುಕಾಲ ಹಿಡಿದಿರಬೇಕು. ಈ ಪ್ರತಿಮೆಯು ಸುಮಾರು ೪೦೦ ಖಂಡಿಭಾರ ಇರಬೇಕೆಂದು ಅಂದಾಜು ಮಾಡಿದ್ದಾರೆ. ಈ ಪ್ರತಿಮೆಯನ್ನು ಕಡಿದು ತೆಗೆದ ಸ್ಥಳದಿಂದ ಗೋಮಟೇಶ್ವರನ ಬಸದಿಯ ದಕ್ಷಿಣಕ್ಕೆ ಕ್ರಮದಲ್ಲಿ ಇಳಿಜಾರು ಸ್ಥಳವಾದ್ದರಿಂದ ಆ ಪ್ರತಿಮೆಯನ್ನು ಅಲ್ಲಿ ಕೆತ್ತಿದರೆ ಮೇಲಕ್ಕೆಳೆಯುವುದು ಸುಲಭವೆಂದು ಆಲೋಚಿಸಿ ಅಲ್ಲಿಯೇ ತಯಾರಿಸಿರಬೇಕೆಂದು ಊಹಿಸಬಹುದು” ಎಂದು ಐಗಳ್ ಅವರು ಉಲ್ಲೇಖಿಸಿದ್ದಾರೆ. [15]

ಈ ಗೊಮ್ಮಟ ಪ್ರತಿಮೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ತುಳು ಜನಪದ ಸಾಹಿತ್ಯದಲ್ಲಿರುವ ಉಲ್ಲೇಖಗಳನ್ನು ಗಮನಿಸಬೇಕು; ಮತ್ತು ಚದುರ ಚಂದರಮನ ಉಲ್ಲೇಖಗಳನ್ನು ಅದರೊಂದಿಗೆ ಹೋಲಿಸಬೇಕು. ಪಾಂಡ್ಯರಾಜ ಭಯರರಸನು ಶಿಲ್ಪವನ್ನು ತೊಡಗುವ ಕಾಲದಲ್ಲಿ ಬೇಕಾದಷ್ಟು ದಾನ ಮಾಡಿದನೆಂದು ಮೂರ್ತಿಯನ್ನು ಕೆತ್ತಿದ ಶಿಲ್ಪಿಗಳನ್ನು ಸಂತೋಷದಿಂದ ಸಮ್ಮಾನಿಸಿದನೆಂದೂ ಚದುರ ಚಂದ್ರಮನು ಬರೆದಿದ್ದಾನೆ.

ಶಿಲ್ಪಿಗಳನು ಕರೆಯಿಸಿದ ಪ್ರಾರಂಭ ಸಂ
ಕಲ್ಪವ ಮಾಡಿಸಿ ಶಿಲೆಯ
ಕಲ್ಪವೃಕ್ಷವೆ ಬಿಟ್ಟಂತೆ ಕೊಟ್ಟನು
ಕಲ್ಪಿತ ಭೂರಿ ದಾನಗಳ
…………………………….  ||೩ – ೩೭ ||

ಇಂತೆಂದು ವರ್ಣಿಸಿ ಯಾ ರಾಜ ಚಂದ್ರಮ
ಸಂತೋಷದಿಂದ ಶಿಲ್ಪಿಗಳ
ಸಂತೈಸಿ ಕೊಟ್ಟನುಂಬಳಿವುಚಿತಗಳನಿ
ನ್ನೆಂತೆಂದು ಬಣ್ಣಿಪೆ ನಾನು  ||೩ – ೭೬ ||

ಕಡಗ ಪದಕ ಕಂಠಮಾಲೆ ಚೌಕುಳಿ ಹೊ
ನ್ನುಡಿದಾರ ಕಾಲಸರಗಳ
ಹಿಡಿಹೊನ್ನು ಗ್ರಾಮಗಳನು ಧಾರೆಯೆರೆದನಾ
ಪೊಡವಿಪಾಲಕ ಕೊಟ್ಟನವರ್ಗೆ          ||೩ – ೭೭ ||
[16]

ಕಾರ್ಕಳ ಅರಸರ ಕೈಪಿಯತ್ತು ಮತ್ತು ಪಾಡ್ದನಗಳು ಕೊಡುವ ವಿವರಗಳು ಸಂಪೂರ್ಣ ಭಿನ್ನವಾಗಿವೆ. ಕೈಫಿಯತ್ತಿನಲ್ಲಿ ಬರುವ ವಿವರ ಹೀಗಿದೆ – “ಯಿವರ ವಚನ ಪ್ರಕಾರ ಯೀ ಭೈರರಸನ ಅರಮನೆ ಪೂರ್ವ ದಿಕ್ಕಿನಲ್ಲು ಕರಿಬೆಟ್ಟದ ಮೇಲೆ ಶಿಲಾಮಯದ ಗುಮ್ಮಟನ ಬಿಂಬವನ್ನು ಚಿಕ್ಕಣಾಚಾರಿ ಕೈ ಮಾಡಿಸಿ ಪ್ರತಿಮೆಯನ್ನು ಸಿಲಾ ಸ್ಥಾಪನೆ ಮಾಡಿಸಿದರು. ಯೀ ಪ್ರತಿಮೆ ನಿಲಿಸಿದ ಮೇಲೆ ಯೀ ಚಿಕ್ಕಣಾಚಾರಿಗೆ ತರಶಿ ತನ್ನ ಸ್ಥಳದಲ್ಲಿ ಪ್ರತಿಮೆ ಮಾಡಿಸಿದ ಮೇಲೆ ಬೇರೆ ಯಿನ್ನುವೊಂದು ಸ್ಥಳದಲ್ಲಿ ಯಿದೇ ರೀತಿ ಗುಮ್ಮಟನ ಪ್ರತಿಮೆ ಮಾಡಬಾರದು ಯಂತ ಹೇಳಿ ಆ ಚಿಕ್ಕಣಾಚಾರಿಗೆ ಬಲ ಭಾಗದವೊಂದು ಕೈಯ ಹಸ್ತ ತೆಗಶಿ ಬಿಟ್ಟು ಕಳುಹಿಸಿಕೊಟ್ಟುಯಿದ್ದಲ್ಲಿ….” [17] ಕೈಪಿಯತ್ತಿನಲ್ಲೂ ಪಾಡ್ದನಗಳಲ್ಲೂ ಬರುವ ವಿವರಗಳಲ್ಲಿ ಭಿನ್ನತೆಯಿದ್ದರೂ ಅಭಿಪ್ರಾಯ ಒಂದೇ ಇದೆ. ೧೮೮೬ರಲ್ಲಿ ಮ್ಯಾನರ್ ಪ್ರಕಟಿಸಿದ ಕಲ್ಕುಡ ಪಾಡ್ದನದಲ್ಲಿ ಸಂಬಂಧಿಸಿದ ಭಾಗ ಹೀಗಿದೆ – “ಬೊಟ್ಟುದ ಪಾದೆಗ್ ಪೋಲ, ಗುಮ್ಮಡ ಸಾಮಿ ಬೇಲೆ ಬೆನ್ಲಾಂದೆರ್ ಅರಸು. ಗುಮ್ಮಡಸಾಮಿ ಬೇಲೆ ಬೆಂದೆ, ಬಂಟಕಮ್ಮೊ ಮಾರ್ನೆಮಿಕಮ್ಮೊ ಮಳ್ತ್‌ನಾಯೆ ಅಂಗಣೊದ ಬೇಲೆ ಬೆಂದೆ, ಹಂಚಿಗೊಂಜಿ ಅಯ್ಯಕಾಯಿ ಪತ್ತ್‌ಲೆ, ಕಾಂಟ್ಯರ(ಪೂವ್ವೊ) ಕುಪ್ಪೂ ಮಿಜಟ್ ಕಾಯಿರೆ ಕೊಂಡಲೆ, ಕಾರ್ಲ ಐಸಾರಾಳ್ ಕೂಡಲೆ, ಗುಮ್ಮಡ ಸಾಮಿನ್ ಪಿಲೆಮಳ್ಪುಲೆಂದೆ, ಕಾರ್ಳ ಐಸಾರಾಳ್‌ಕೂಡ್ಂಡಲಾ ಗುಮ್ಮಡನ್ ಸರ್ತ ಮಳ್ಪರೆ ಕೂಡಿಜಿ. ಸರ್ತಮಳ್ಪರೆ ಕೂಡುಜಿ ಕಲ್ಕುಡಾ ಬೇಲೆಬೆಂದಿ ಸೇಜಿ ಸಂಬಳ ನಿಕ್ಕ್‌ಕೊರ್ಪುಂಡು, ಸರ್ತಮಳ್ತ್ ನಿರ್ಮಿತಡ ಐಕ್ ಬೇತೆ ಸೇಜಿ ಕೊರ್ಪೆಂದೆರ್. ಆವುಜ್ಯ ಕರ್ತುಳೆಂದೆ ದತ್ತಕೈ ಪಾಡೈ, ಪಿರವು ಹಾಸ್‌ಕಲ್ಲ್‌ಕೊರಿಯೆ, ಗುಮ್ಮಡನ್ ನಿರ್ಮ್ಯೆ, ಯೆನ ಸೇಜಿಪಾಲನೆ ಪಾಲ್ಲೆ, ಇನಿಗ್ ಯಾನ್ ಇಲ್ಲ್‌ಬುಡುದು ಬತ್ತ್‌ದ್ ಪದ್‌ರಾಡ್ ವರ್‌ಸೊ ಆಂಡ್ ಕರ್ತೂಂದೆ. ಇನಿ ಅಲ್ಯಡೆ ಪೊರ್ತಾಂಡ್, ಪೋಸೊದ ಯೇಳ್ಯಾಂಡ್, ಮರುದಿನ ಉದಿವುಳ್ಳ ಪೊರ್ತುಗು ಬಲ್ಲ, ನಿಕ್ಕಾಪಿ ಸೇಜಿ ಪಾಲನೆ ಕೊರ್ಪೆ ಅಂದೆರ್ ಅರಸುಳು. ಮನದಾನಿ ಪೋಯೆ. ಯೆನ ರಾಜ್ಯೊಡು ಬೇಲೆ ಬೆಂದಿ ಕಲ್ಕುಡನ್ ಬೇತೆ ರಾಜ್ಯೊಡು ಬೇಲೆ ಬೆನ್ಯರೆ ಬುಡಯೆ ಅಂದೆರ್, ಎಡತಕೈ ಬಲತ ಕಾರ್ ಕಳೆಯೆರ್” ಇದರ ಕನ್ನಡ ರೂಪ ಹೀಗೆ – “ಅರಸ ಎತ್ತರದ ಬೆಟ್ಟಕ್ಕೆ ಹೋಗಿ ಅಲ್ಲಿ ಗುಮ್ಮಟ ಸ್ವಾಮಿಯ ಕೆಲಸ ಮಾಡು ಎಂದು ಆದೇಶ ನೀಡಿದ. ವೀರ ಕಲ್ಕುಡ ಗುಮ್ಮಟ ಸ್ವಾಮಿಯ ಕೆಲಸ ಮಾಡಿದ, ಬಂಟಕಂಬ ಮಹಾನವಮಿ ಕಂಬ ಮಾಡಿದ, ಅಂಗಣದ ಕೆಲಸ ಮಾಡಿದ, ಹೆಜ್ಜೆಗೊಂದೈವತ್ತು ಕೈ ಹಿಡಿಸಿ ಕಾರ್ಕಳದ ಐದು ಸಾವಿರ ಆಳುಗಳನ್ನು ಕರೆಸಿ ಎಂದ. ಗುಮ್ಮಟ ಸ್ವಾಮಿಯನ್ನು ನೆಲೆಗೊಳಿಸಿ ಎಂದ. ಕಾರ್ಕಳದ ಐದು ಸಾವಿರ ಆಳುಗಳು ಕೂಡಿದರೂ ಗೋಮಟನನ್ನು ನೆಟ್ಟಗೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ಅರಸ ಬೀರು ಕಲ್ಕುಡನನ್ನು ಕರೆದು “ಗೋಮಟನನ್ನು ಕೆತ್ತಿದಕ್ಕೆ ನಿನಗೆ ಸಂಬಳ ಕೊಡುತ್ತೇನೆ. ನೆಟ್ಟಗೆ ನಿಲ್ಲಿಸಿದರೆ ಬೇರೆ ಸಂಬಳ ಕೊಡುತ್ತೇನೆ” ಎಂದ. ಶಿಲ್ಪಿ “ಆಗಬಹುದು ಒಡೆಯರೆ” ಎಂದು ಎಡದ ಕೈ ಹಾಕಿದ. ಹಿಂದಿನಿಂದ ಹಾಸುಗಲ್ಲು ಕೊಟ್ಟ. ಗುಮ್ಮಟನನ್ನು ಎತ್ತಿ ತಂದ, ನೆಟ್ಟಗೆ ನಿಲ್ಲಿಸಿದ. ಗುಮ್ಮಟನನ್ನು ನಿಲ್ಲಿಸಿ ಕೆಲಸ ಮುಗಿದ ಬಳಿಕ ಒಡೆಯರೆ” ನಾನು ಬಂದು ಹನ್ನೆರಡು ವರ್ಷವಾಯಿತು. ನನ್ನ ಸಂಬಳವನ್ನು ನೀಡಿ, ನಾನು ಹೊರಟುಹೋಗುತ್ತೇನೆ’ ಎಂದು ಶಿಲ್ಪಿ ಹೊಡುವ ಸಿದ್ಧತೆ ನಡೆಸಿದ. “ಕತ್ತಲಾಗುತ್ತಾ ಬಂತು. ಊಟದ ಹೊತ್ತಾಯಿತು. ಮುಂದಿನ ಉದಯ ಕಾಲಕ್ಕೆ ಬಾ. ನಿನಗೆ ಬೇಕಾದ ಬಹುಮಾನ ನೀಡುತ್ತೇನೆ” ಎಂದ ರಾಜ. ಶಿಲ್ಪಿ ಮರುದಿನ ಮುಂಜಾನೆ ಅರಸನನ್ನು ಕಾಣಲು ಹೋದ. ಆತನನ್ನು ಕಂಡ ರಾಜ “ಕಲ್ಕುಡಾ, ನನ್ನ ರಾಜ್ಯದಲ್ಲಿ ನೀನು ಮಾಡಿದ ಕೆಲಸವನ್ನು ಇನ್ನೊಂದು ರಾಜ್ಯದಲ್ಲಿ ಮಾಡಲು ಬಿಡಲಾರೆ” ಎಂದ. ಕಟುಕರನ್ನು ಕರೆದು ಆತನ ಎಡದ ಕೈ ಬಲದ ಕಾಲು ಕಡಿಸಿದ. [18]

ಭೈರರಸರ ಇತಿಹಾಸವನ್ನು ಬರೆದ ಗಣಪತಿ ರಾವ್ ಐಗಳ್ ಅವರಾಗಲಿ, ಡಾ| ಗುರುರಾಜ ಭಟ್ಟರಾಗಲಿ, ಡಾ| ಪಿ.ಎನ್. ನರಸಿಂಹ ಮೂರ್ತಿಗಳಾಗಲಿ ಈ ಘಟನೆಯನ್ನು ಉಲ್ಲೇಖಿಸಲೇ ಇಲ್ಲ. ಹಾಗೆಂದು ಈ ವಿಷಯ ಅವರಾರಿಗೂ ತಿಳಿಯದಿದ್ದುದಲ್ಲ. ಇವರೆಲ್ಲರೂ ಕೈಫಿಯತ್ತನ್ನು ನೋಡಿದವರೇ ಮತ್ತು ಪಾಡ್ದನದ ವಿಷಯವನ್ನು ಬಲ್ಲವರೇ ಆಗಿದ್ದಾರೆ. ಐಗಳ್ ಅವರು ಮಾತ್ರ ಗೊಮ್ಮಟಮೂರ್ತಿಯನ್ನು ಕೆತ್ತಿದ ಬಗ್ಗೆ ಹೇಳುತ್ತಾ “ಶಿಲ್ಪಿಯ ನಿಜವಾದ ಹೆಸರು ತಿಳಿದು ಬರುವುದಿಲ್ಲ. ಆದರೆ ಈ ಸಮಯದಲ್ಲಿ ಬುದ್ಧಿವಂತರಾದ ಅನೇಕ ಶಿಲ್ಪಿಗಳು ತುಳು ರಾಜ್ಯದಲ್ಲಿ ಇದ್ದರು” ಎಂದಿದ್ದಾರೆ. [19] ‘ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು’ ಕೃತಿಯ ಸಂಪಾದಕರಾದ ಡಾ| ಕೆ.ಕುಶಾಲಪ್ಪಗೌಡ ಮತ್ತು ಡಾ| ಕೆ. ಚಿನ್ನಪ್ಪಗೌಡರು ಕೈಫಿಯತ್ತಿನಲ್ಲಿ ಹೇಳಲಾದ ಘಟನೆ ನಿಜವೆಂದು ಭಾವಿಸುವುದಿಲ್ಲ. ಅವರು ಈ ವಿಷಯದಲ್ಲಿ ಹೇಳುವ ಮಾತುಗಳು ಹೀಗೆವೆ – “ವಸ್ತುವಿನ ದುರಂತತೆಯನ್ನು ಹೆಚ್ಚಿಸಲು ಶಿಲ್ಪಿಯ ಕೈಗೆ ಚಿನ್ನದ ಕಡಗ ಹಾಕುವ ಬದಲು ಕೈಕತ್ತರಿಸುವ ಪ್ರಸಂಗ ಉಕ್ತವಾಗಿದೆ. ಇಂತಹ ಕಟ್ಟುಕಥೆಗಳ ಕಾರಣವಾಗಿ ಮುಂದಿನ ತಲೆಮಾರುಗಳಲ್ಲಿ ಈ ತರದ ಘೋರ ಸಂಭಾವನೆಗೊಳಗಾಗುವ ಭಯದಿಂದ ಶಿಲ್ಪಿಗಳಾಗಲೀ, ಕಲಾವಿದರಾಗಲೀ, ತಮ್ಮ ಕಲಾನೈಪುಣ್ಯವನ್ನು ತೋರಲು ಹಿಂದೆಗೆಯುವ ಭಯಾನಕ ನೆಲೆಯು ಉತ್ಪನ್ನವಾಗಿರಬಹುದು ಎನ್ನಲು ಸಂಶಯವಿಲ್ಲ. ಕಾರ್ಕಳದ ಮತ್ತು ಅಜಿಲರ ಕೈಫಿಯತ್ತುಗಳೆರಡರಲ್ಲಿಯೂ ಈ ಪ್ರಸಂಗ ಉಕ್ತವಾಗಿದೆಯಾದುದರಿಂದ ಈ ಕಥೆ ಜನಜನಿತವಾಗಿ ಸರ್ವಪ್ರಸಿದ್ಧಿಯನ್ನು ಪಡೆದಿತ್ತೆಂದು ಸಿದ್ಧವಾಗುತ್ತದೆ. ಜಕ್ಕಣಾಚಾರಿಯ ಬಗ್ಗೆಯೂ ತಂದೆ ಮಗನಿಗೆ ವಾಗ್ವಾದ ಬೆಳೆದು ಪಂದ್ಯದಲ್ಲಿ ಸೋತ ಜಕ್ಕಣಾಚಾರಿಯ ತನ್ನ ಕೈಯನ್ನು ಕತ್ತರಿಸಿಕೊಳ್ಳುವ ಸಂದರ್ಭವೊಂದು ಕತೆಯಾಗಿ ಪ್ರಚಲಿತವಿದೆ. ಬಹುಶಃ ಅದೂ ಇದಕ್ಕೆ ಪ್ರಚೋದಕವಾಗಿರಬಹುದು”. [20]

ಈ ಕಥೆಯನ್ನು ಚೆನ್ನಾಗಿ ವಿಮರ್ಶಿಸಿ ಡಾ| ಬಿ.ಎ. ವಿವೇಕ ರೈ ಅವರು ಅಭಿಪ್ರಾಯ ಪಡುವುದು ಹೀಗಿದೆ – “ ಕಾರ್ಕಳ ಅರಸರ ಕೈಫಿಯತ್ತುವಿಗೆ ಮತ್ತು ಕಲ್ಕುಡ ಕಲ್ಲುರ್ಟಿ ಪಾಡ್ದನಗಳಿಗೆ ಕಂಠಸ್ಥ ಪರಂಪರೆಯೇ ಮೂಲ ಆಧಾರವಾಗಿದ್ದು ಕಂಠಸ್ಥ ಪರಂಪರೆಯ ಎರಡು ಭಿನ್ನ ಪ್ರಕಾರಗಳಲ್ಲಿ ಸಮಾನ ಘಟನೆಯೊಂದು ಕಾಣಿಸಿಕೊಂಡಿರುವುದರಿಂದ ಇತಿಹಾಸದಲ್ಲಿ ಇಂತಹ ಘಟನೆಯೊಂದು ನಡೆದಿರುವುದು ಸಂಬವನೀಯವೆನಿಸುತ್ತದೆ. ಲಿಖಿತ ಆಧಾರಗಳಿಲ್ಲ ಎನ್ನುವ ಕಾರಣಕ್ಕಾಗಿ ಇಂತಹ ಘಟನೆಯ ಕಾಲ್ಪನಿಕವಾದುದು ಎಂದು ತೀರ್ಮಾನಿಸುವುದು ಸರಿಯಲ್ಲ. ಅರಸನೊಬ್ಬನು ಬರೆಸಿದ ಶಾಸನದಲ್ಲಾಗಲೀ, ಅರಸನ ಆಶ್ರಯದಲ್ಲಿದ್ದ ಕವಿಯೊಬ್ಬನು ಆತನ ಪೂರ್ವಿಕರ ವೈಭವನ್ನು ವರ್ಣಿಸಲು ಬರೆದ ಕಾವ್ಯದಲ್ಲಾಗಲೀ, ಅರಸನಿಂದ ಶ್ರಮಜೀವಿ ಶಿಲ್ಪಿಯೊಬ್ಬನ ಹಿಂಸೆಗೊಳಗಾದ ಘಟನೆಯ ಚಿತ್ರಣವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆಳುವವರ ಬಗ್ಗೆ ಜನಸಾಮಾನ್ಯನಿಗಿರುವ ಭಾವನೆಗಳು ಸಾಮಾನ್ಯವಾಗಿ ಲಿಖಿತ ಪರಂಪರೆಗೆ ಸೇರಲು ಅವಕಾಶವೇ ಇರುವುದಿಲ್ಲ. ಆದರೆ ಜನರ ಅಭಿಪ್ರಾಯಗಳು ರಾಜನ ಅರಿವಿಗೆ ಬಾರದೆಯೇ ಕಿವಿಯಿಂದ ಕಿವಿಗೆ ಹರಡುತ್ತಲೇ ಇರುತ್ತವೆ. ರಾಜನು ಸತ್ತು, ಮುಂದೆ ಅವನ ವಂಶದ ಆಳ್ವಿಕೆಯು ಮುಕ್ತಾಯಗೊಂಡಾಗ ಬಾಯ್ದೆರೆಯಾಗಿ ಪ್ರಚಲಿತವಾಗಿದ್ದ ಭಾವನೆಗಳು ಹೆಚ್ಚು ಗಟ್ಟಿಯಾಗಿ ಕಂಠಸ್ಥ ಪರಂಪರೆಗೆ ಸೇರ್ಪಡೆಯಾಗುತ್ತವೆ. ಶಿಲ್ಪಿಯನ್ನು ಹಿಂಸಿಸಿದ ಘಟನೆಯನ್ನು ಯಾವುದೇ ಐತಿಹಾಸಿಕ ಸತ್ಯವಿಲ್ಲದೆ ಕಂಠಸ್ಥ ಪರಂಪರೆಯೊಂದು ಸೃಷ್ಟಿಸಿ ಮುಂದುವರಿಸಿಕೊಂಡು ಬಂದಿರುವುದಕ್ಕೆ ಯಾವುದೇ ಕಾರಣವನ್ನು ಕೊಡಲು ಆಗುವುದಿಲ್ಲ. ಪಾಂಡ್ಯರಾಜ ಭೈರರಸನಂತಹ ಒಬ್ಬ ರಾಜನ ಬಗ್ಗೆ ಜನರು ವಿನಾಕಾರಣ ಇಂತಹ ಕಟ್ಟುಕತೆಯನ್ನು ಸೃಷ್ಟಿಸಿದರು ಎಂದು ಸರಳ ತೀರ್ಮಾನಕ್ಕೆ ಬರುವುದು ನೂರಾರು ವರ್ಷಗಳ ಕಾಲ ಉಳಿದುಕೊಂಡು ಬಂದಿರುವ ಜನಸಾಮಾನ್ಯರ ಸಾಮಗ್ರಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದಂತಾಗುತ್ತದೆ. ಬದಲಾಗಿ ಶಿಲ್ಪಿಯೊಬ್ಬನನ್ನು ಭೈರರಸನು ಈ ರೀತಿಯಾಗಿ ಹಿಂಸಿಸಲು ಪಾಂಡ್ದನ ಮತ್ತು ಕೈಫಿಯತ್ತುಗಳು ಕೊಡುವ ಕಾರಣ ಹೆಚ್ಚು ಮನವರಿಕೆ ಯಾಗುವಂತಹದು”. [21] ಇದರೊಂದಿಗೆ ತುಳುನಾಡಿನ ಎರಡು ಪ್ರಮುಖ ಭೂತಗಳ (ಕಲ್ಕುಡ ಮತ್ತು ಕಲ್ಲುರ್ಟಿ) ಉಗಮಕ್ಕೆ ಕಾರಣವಾದ ಈ ಘಟನೆಯಲ್ಲಿ ಐತಿಹಾಸಿಕತೆಯಿಲ್ಲದಿರುತ್ತಿದ್ದರೆ, ಆ ಕಾಲದಲ್ಲೇ ಆದರೂ, ಸಾಮಾನ್ಯ ಜನಗಳಿಂದಲೇ ಇದು ತಿರಸ್ಕೃತವಾಗುತ್ತಿತ್ತು – ಎಂಬುದರಲ್ಲಿ ಸಂದೇಹವಿಲ್ಲ. ಒಟ್ಟಿನಲ್ಲಿ ಈ ಘಟನೆಯಲ್ಲಿ ಐತಿಹಾಸಿಕತೆ ಇದೆಯೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆಂಬುದೇ ಪ್ರಸ್ತುತದ ನಿಲುವಾಗಿದೆ. ಅನ್ಯ ಆಧಾರಗಳು ದೊರೆತಾಗ ಇದರ ಸತ್ಯಾಸತ್ಯತೆಯನ್ನು ಪುನಃ ಪರಿಶೀಲಿಸಿಕೊಳ್ಳಬಹುದು. ಈ ಘಟನೆ ಭೈರರಸರ ಚರಿತ್ರೆಯಲ್ಲಿ ಒಂದು ಕಪ್ಪುಚುಕ್ಕೆಯೆಂದು ಹೇಳುವುದರಲ್ಲಿ ಸಂದೇಹವಿಲ್ಲ. ಆದರೂ ಗೊಮ್ಮಟನ ಸ್ಥಾಪನೆಯಂತಹ ಮಹಾಕಾರ್ಯದ ಕೀರ್ತಿಯ ಸ್ಥಾನ ವೀರಪಾಂಡ್ಯನಿಗೆ ಲುಪ್ತವಾಗುವುದಿಲ್ಲ. [22]

 

[1] HSK, ಪು. ೧೮೮.

[2] ಕಾರ್ಕಳ ಒಂದು ಪ್ರಾದೇಶಿಕ ಅಧ್ಯಯನ, ಪು.೧೩.

[3] ಡಾ. ಕೆ.ವಿ. ರಮೇಶ್, HSK, ಪು.೧೮೭ – ೧೮೮

[4] ಡಾ| ಕೆ.ವಿ. ರಮೇಶ್ ಮತ್ತು ಡಾ| ಗುರುರಾಜ ಭಟ್ಟರು ಇವನನ್ನು ಒಂದನೆಯ ಭೈರರಸ ಒಡೆಯನೆಂದು ಗುರುತಿಸಿದ್ದಾರೆ.

[5] ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ, ಪು. ೨೩ – ೨೫.

[6] ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ. ಪು.೧೩.

[7] ಐಗಳ್ ಇತಿಹಾಸ ಪು. ೩೪೪. ಮೂಲಿಕೆಯ ಸಾವಂತ ಮನೆತನದಲ್ಲಿ ಇತ್ತೀಚೆಗೆ ದಿವಂಗತರಾದ ದುಗ್ಗಣ್ಣ ಸಾವಂತರ ಸ್ಥಾನದಲ್ಲಿ ಚನ್ನರಾಯ ಸಾವಂತ ಎಂಬ ಹೆಸರಿನಿಂದ ಉತ್ತರಾಧಿಕಾರಿ ಪಟ್ಟವಾದುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಆ ಉತ್ತರಾಧಿಕಾರಿಯ ನಿಜನಾಮ ಬೇರೆಯಿದೆ. ಇದು ಈಗತಾನೆ ಕಳೆದ ಒಂದು ತಿಂಗಳೊಳಗಿನ ಸಂಗತಿಯಾದುದರಿಂದ (ಜೂನ್ ೧೯೯೯) ಈ ರೀತಿಯ ಪರಂಪರೆ ಇನ್ನೂ ಮುಂದುವರಿದಿದೆಯೆಂದು ಹೇಳಬಹುದಾಗಿದೆ.

[8] ಐಗಳ್ ಇತಿಹಾಸವು, ಪು. ೩೩೨, ಜನರ ಹೇಳಿಕೆಯೇ ಇದಕ್ಕೆ ಆಧಾರವಾಗಿರಬಹುದು. ಐಗಳ್ ಅವರು ಈ ರಾಮನಾಥ ಅರಸರು ವೀರ ಭೈರರಸನಿಗಿಂತ ಹಿಂದೆ ಆಳುತ್ತಿದ್ದನೆಂದೂ ಉಲ್ಲೇಖಿಸಿದ್ದಾರೆ. ಐಗಳ್ ಐತಿಹಾಸ ಪು. ೩೩೧ – ೩೩೨. ಆದರೆ ಇತರ ಆಧಾರಗಳಿಂದ ಈ ಅಭಿಪ್ರಾಯ ಸರಿಯಲ್ಲವೆನ್ನಬೇಕಾಗುತ್ತದೆ.

[9] ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ, ಪು. ೧೪.

[10] ಈ ಪಾಂಡ್ಯ – ಭೈರವ ಮೊದಲಾದ ಹೆಸರುಗಳು ನಿಜವಾಗಿ ಗೊಂದಲವನ್ನು ಹುಟ್ಟಿಸುವಂತಹವಾಗಿ ಪರಿಣಮಿಸಿವೆ. ಈ ವೀರಪಾಂಡ್ಯನನ್ನು ಡಾ| ಕೆ.ಪಿ. ರಮೇಶ್‌ಅವರು ಮೊದಲನೆಯ ಪಾಮಡ್ಯನೆಂದು ಗುರುತಿಸಿದ್ದಾರೆ. ಡಾ| ಪಿ. ಗುರುರಾಜ ಭಟ್ಟರು ಎರಡನೆಯ ಪಾಂಡ್ಯನೆಂದು ಗುರುತಿಸಿದ್ದಾರೆ. ಡಾ| ಪಿ. ಎನ್. ನರಸಿಂಹ ಮೂರ್ತಿಗಳು ಇವನನ್ನು ಮೂರನೆಯ ಪಾಂಡ್ಯನೆಂದಿದ್ದಾರೆ.

[11] ಹೆರಂಜೆ ಕೃಷ್ಣ ಭಟ್ಟ, ಮುರಳೀಧರ ಉಪಾಧ್ಯ ಹಿರಿಯಡಕ (ಸಂ.) ಗೋವಿಂದ ಪೈ ಸಂಶೋಧನ ಸಂಪುಟ, ಪು.೬೭೪.

[12] ಡಾ| ಕೆ.ಪಿ. ರಮೇಶ್, HSK, ಪು. ೧೮೭ ಮತ್ತು ೧೯೦.

[13] ಡಾ| ಪಿ.ಎನ್. ನರಸಿಂಹ ಮೂರ್ತಿ, ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ, ಪು. ೧೫.

[14] ನರಸಿಂಹಚಾರ್ಯ, ಕರ್ಣಾಟಕ ಕವಿಚರಿತೆ, ದ್ವಿತೀಯ ಸಂಪುಟ – ಪು.೩೨೬.

[15] ಐಗಳ್ ಇತಿಹಾಸ, ಪು. ೩೩೩.

[16] ಟಿ. ಚಂದ್ರಶೇಖರನ್ (ಸಂ.) ಚಂದ್ರಮಕವಿರಚಿತ ಕಾರ್ಕಳದ ಗೋಮಟೇಶ್ವರ ಚರಿತೆ, ಮದ್ರಾಸು ೧೯೫೩.

[17] ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು, ‘ಕಾರ್ಕಳ ಅರಸರ ಕೈಫಿಯತ್ತು’, ಪು. ೧೧೧.

[18] ತುಳುಮೂಲ ಮತ್ತು ಅನುವಾದವನ್ನು ‘ಕಲ್ಕುಡ ಕಲ್ಲುರ್ಟಿ – ಸಂಸ್ಕೃತಿ ಶೋಧ’ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್, ಪು. ೧೨ – ಮತ್ತು ೨೧ – ಇದರಿಂದ ಆರಿಸಲಾಗಿದೆ.

[19] ಐಗಳ್ ಇತಿಹಾಸ, ಪು. ೩೩೨ – ೩೩೩.

[20] ದಕ್ಷಿಣ ಕನ್ನಡದ ಕೈಫಿಯತ್ತುಗಳು, ಪು. ೮೮.

[21] ಡಾ| ಬಿ.ಎ. ವಿವೇಕ ರೈ, ‘ಆನ್ವಯಿಕ ಜಾನಪದ’ ೧೯೮೫, ‘ಇತಿಹಾಸ ಮತ್ತು ಜಾನಪದ’ ಎಂಬ ಲೇಖನ ಪು.೭೮.

[22] ಪ್ರಸ್ತುತ ಪ್ರಬಂಧವನ್ನು ಮಂಡಿಸಿದ ಗೋಷ್ಠಿಗೆ (೨೫ – ೭ – ೧೯೯೯) ಪ್ರೊ| ಬಿ.ಎ. ವಿವೇಕ ರೈ ಅವರೇ ಅಧ್ಯಕ್ಷರಾಗಿದ್ದು ಈ ಬಗೆಗೆ ಅವರು ಇನ್ನೂ ಕೆಲವು ಅಭಿಪ್ರಾಯಗಳನ್ನು ನಿರೂಇಸಿದರು. ತಮ್ಮ ಲೇಖನವು ಹಲವು ವರ್ಷಗಳ ಹಿಂದೆ ಪ್ರಕಟವಾದುದಾಗಿದ್ದು ಪ್ರಸ್ತುತ ಹಿಂದಿನ ಅಭಿಪ್ರಾಯಗಳು ಒಂದಿಷ್ಟು ಪರಿವರ್ತಿತವಾಗಿರುವುದಾಗಿಯೂ ತಿಳಿಸಿದರು. ಪಾಡ್ದನದಲ್ಲಿ ಹೇಳಲಾದ ಘಟನೆ ಐತಿಹಾಸಿಕವೇ ಅಲ್ಲವೇ ಎಂಬುದಕ್ಕಿಂತಲೂ ಒಂದು ಕಾಲದ ಒಂದು ನಿರ್ದಿಷ್ಟ ಜನಸಮೂಹವು ರಾಜಪ್ರಭುತ್ವದ ಬಗೆಗೆ ಯಾವ ಧೋರಣೆಯನ್ನು ಹೊಂದಿತ್ತು ಮತ್ತು ಆ ಅಭಿಪ್ರಾಯವು ಅನಂತರ ಕಾಲದಲ್ಲೂ ಜನಸಮೂಹದಲ್ಲಿ ಯಾವ ರೀತಿಯಲ್ಲಿ ಮಾನ್ಯತೆಯನ್ನು ಪಡೆದಿತ್ತು ಎಂಬುದು ಈ ಪಾಡ್ದನದ ಅಧ್ಯಯನದಿಂದ ತಿಳಿದುಬರುವುದೆಂದೂ, ಘಟನೆ ಐತಿಹಾಸಿಕವೇ ಅಲ್ಲವೇ ಎಂಬದಕ್ಕಿಂತಲೂ ಅದು ಸಂಭಾವ್ಯವೇ, ಸಂಭಾವ್ಯವೆಂದು ಅಂಗೀಕೃತವಾಗಿದೆಯೇ ಎಂಬುದು ಜನಪದ ಮನೋಧರ್ಮದ ಅಧ್ಯಯನದ ಸಂದರ್ಭದಲ್ಲಿ ಮುಖ್ಯವಾಗುವುದೆಂದು ಅವರು ತಿಳಿಸಿದರು.