ಕನ್ನಡ ವಿಶ್ವವಿದ್ಯಾಲಯದ ವಿವಿಧ ಭಾಗಗಳ ನಡುವೆ ಗೋಡೆಗಳಿಲ್ಲ. ಗೋಡೆಗಳಿರಬಾರದು ಎನ್ನುವ ಮಾತಿದೆ. ಅಂದರೆ ಯಾವುದೇ ಒಂದು ಅಧ್ಯಯನ ಅಥವಾ ಅಧ್ಯಯನ ಯೋಜನೆ ಒಂದು ವಿಭಾಗದ ಸದಸ್ಯರಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ. ಹಲವು ಶಿಸ್ತಿನ ‘ತಲೆ’ಗಳು ಒಂದಾಗಿ ಸೇರಿ ಅಧ್ಯಯನ ಯೋಜನೆಗಳನ್ನು ಕೈಗೊಳ್ಳಬಹುದು. ಹಾಗೇ ಕೈಗೊಂಡ ನಿದರ್ಶನಗಳೂ ಇವೆ. ಇದೊಂದು ವಿಶ್ವವಿದ್ಯಾಲಯದ ಅಲಿಖಿತ ಶಾಸನ. ಈ ಆಲೋಚನ ಕ್ರಮದ ಹಿನ್ನೆಲೆಯಲ್ಲಿ ಮಾರ್ತಗೊಂಡುದು ‘ತುಳು ಸಾಹಿತ್ಯ ಚರಿತ್ರೆ’ ಸಂಪುಟ. ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಎ.ವಿ. ನಾವಡ ಹಾಗೂ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಎ. ಸುಬ್ಬಣ್ಣ ರೈ, ಡಾ. ಮಾಧವ ಪೆರಾಜೆ ಒಂದೆಡೆ ಸೇರಿ ಈ ಯೋಜನೆಗೆ ರೂಪು ಬರೆದರು ಆ ಹೊತ್ತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ. ವಾಮನ ನಂದಾವರರ ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಕುಲಪತಿಗಳಾಗಿದ್ದ ಡಾ. ಎಚ್.ಜೆ. ಲಕ್ಕಪ್ಪಗೌಡರ ಜತೆ ಸಮಾಲೋಚನೆ ನಡೆಸಿ ಅಧಿಕೃತ ಒಪ್ಪಿಗೆಯನ್ನು ಪಡೆಯಲಾಯಿತು. ಆ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರೂ, ಹಿರಿಯ ತುಳು ವಿದ್ವಾಂಸರೂ ಆಗಿದ್ದ ಡಾ. ಬಿ.ಎ. ವಿವೇಕ ರೈಯವರ ನೇತೃತ್ವದಲ್ಲಿ ಮಂಗಳೂರಿನ ತುಳು ಪಂಡಿತರ ಜತೆ ಸಮಾಲೋಚನೆ ನಡೆಸಲಾಯಿತು. ಮುಂದೆ ಈ ಯೋಜನೆ ಸ್ವಯಂಪೂರ್ಣಗೊಂಡು ಅಚ್ಚಿಗೆ ಅಣಿಯಾಗುವಷ್ಟರಲ್ಲಿ ಡಾ. ವಿವೇಕ ರೈಯವರು ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಬಂದರು. ಅವರು ಬಂದ ಬಳಿಕ ಆ ಯೋಜನೆಯ ಪುನರ್‌ವಿಮರ್ಶೆ ನಡೆಸಿ ಸಲಹಾ ಸಮಿತಿಯನ್ನು ರೂಪಿಸಿದರು. ಡಾ. ಅಮೃತ ಸೋಮೇಶ್ವರ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹಾಗೂ ಡಾ. ಕೆ. ಚಿನ್ನಪ್ಪ ಗೌಡ ಅವರನ್ನು ಒಳಗೊಂಡಿರುವ ಸಮಿತಿಯು ನೀಡಿದ ಸಲಹೆ – ಸೂಚನೆಗಳಂತೆ ಈ ಯೋಜನೆ ಅಂತಿಮ ಸ್ವರೂಪವನ್ನು ಪಡೆದುಕೊಂಡು ಅಚ್ಚಿಗೆ ಹೋಯಿತು. ಹೀಗೆ ಈ ತುಳು ಸಾಹಿತ್ಯ ಚರಿತ್ರೆ ಸಂಪಾದಕರ ಹಾಗೂ ತುಳು ವಿದ್ವಾಂಸರ ಸಹಯೋಗದಿಂದ ರೂಪುಗೊಂಡಿರುವುದನ್ನು ಗಮನಿಸಬೇಕು. ಹೀಗೆ ಈ ತುಳುಸಾಹಿತ್ಯ ಚರಿತ್ರೆಯ ಹಿಂದೆ ಬೆನ್ನು ಸಹಾಯಕ್ಕೆ ನಿಂತ ಇ‌ಬ್ಬರು ಕುಲಪತಿಗಳನ್ನು ಗೌರವದಿಂದ ನೆನೆಯುತ್ತಿದ್ದೇನೆ.

ಭಾಷಿಕ ರಚನೆಯ ನಿಖರತೆ, ಪದಕೋಶದ ಸಮೃದ್ಧಿ, ಪ್ರಾಚೀನತೆಯ ನೆಲೆಯಲ್ಲಿ ತುಳುಭಾಷೆ ಕನ್ನಡ, ತೆಲುಗು, ಮಲೆಯಾಳಂಗಳಿಗೆ ಎರಡನೆಯದಲ್ಲ. ಆದರೆ ಕೆಲವೊಂದು ಚಾರಿತ್ರಿಕ ಕಾರಣಗಳಿಂದಾಗಿ – ತನ್ನದೇ ಆದ ಲಿಪಿ ಇದ್ದಾಗಲೂ ಬಳಕೆಯ ಕೊರತೆಯಿಂದಾಗಿ ದೊಡ್ಡ ಪ್ರಮಾಣದ ಲಿಖಿತ ಸಾಹಿತ್ಯ ರಚನೆಯಾಗದೆ ಹೋಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಂತೆ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಳ್ಳುವುದರಲ್ಲಿ ವಿಫಲವಾಯಿತು. ತುಳುನಾಡಿನ ಭೈರ, ಚೌಟ, ಬಂಗ, ಅಜಿಲರಂತಹ ಅರಸರು ತುಳುವರಾದರೂ ತಮ್ಮ ಸಾರ್ವಭೌಮರನ್ನು ಮೆಚ್ಚಿಸುವ ಸಲುವಾಗಿ ಶಾಸನಗಳನ್ನು ಕನ್ನಡದಲ್ಲೇ ಬರೆಯಿಸಿದರು. ತಮ್ಮ ಆಸ್ಥಾನದಲ್ಲಿ ಕನ್ನಡ ಕವಿಗಳನ್ನೇ ಬೆಂಬಲಿಸಿ ಕಾವ್ಯ ಬರೆಸಿದರು. ಹೀಗಾಗಿ ತುಳು ಪಂಚದ್ರಾವಿಡ ಭಾಷೆಗಳಲ್ಲಿ ಅಂಚಿಗೆ ತಳ್ಳಲ್ಪಟ್ಟಿತು. ತುಳು ಭಾಷಾಲೋಕದ ಈ ನೇತ್ಯಾತ್ಮಕ ಬೆಳವಣಿಗೆ ಇನ್ನೊಂದು ರೀತಿಯಲ್ಲಿ ತುಳುವಿನ ಮೌಖಿಕ ಸಾಹಿತ್ಯದ ಸಮೃದ್ಧತೆಗೆ ಕಾರಣವಾಯಿತು. ಅಕ್ಷರ ಸಾಹಿತ್ಯದ ಕೊರತೆಯ ಫಲವಾಗಿ ತುಳುವರು ತಮ್ಮ ಸೃಜನಶೀಲ ಪ್ರತಿಭೆಯನ್ನು ಮೌಖಿಕ ರೂಪದಲ್ಲೇ ಬೆಳೆಸಿಕೊಂಡು ಬಂದರು. ಹೀಗಾಗಿ ತುಳುವಿನ ಮೌಖಿಕ ಪರಂಪರೆ ಜಗತ್ತಿನ ಯಾವುದೇ ಸಮೃದ್ಧ ಭಾಷೆಗೆ ಎರಡನೆಯದಲ್ಲ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿರುವುದು ಗಮನಿಸತಕ್ಕ ಅಂಶ. ಇತ್ತೀಚಿನ ದಿನಗಳಲ್ಲಿ ವಿಷ್ಣುತುಂಗನ ತುಳು ಭಾಗವತೊ, ಅರುಣಾಬ್ಜ ಕವಿಯ ಮಹಾಭಾರತ, ಕಾವೇರಿ ಮುಂತಾದ ಲಿಖಿತ ಕಾವ್ಯಗಳು ದೊರೆತುದರ ಫಲವಾಗಿ ತುಳುಸಾಹಿತ್ಯಕ್ಕೆ ಚರಿತ್ರೆಯನ್ನು ರೂಪಿಸುವ, ಭಾಷಿಕ ರಚನೆಯ ಚಾರಿತ್ರಿಕ ಬೆಳವಣಿಗೆಯನ್ನು ಗುರುತಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಹತ್ತೊಂಬತ್ತನೆಯ ಶತಮಾನದ ಮೊದಲ ಅರ್ಧದ ಮುಂಚಿತವಾಗಿಯೇ (೧೯೩೪) ಭಾರತಕ್ಕೆ ಬಂದ ಜರ್ಮನ್ ಮಿಷನರಿಗಳು ನಡೆಸಿದ ಪ್ರಾದೇಶಿಕ ಭಾಷೆ – ಸಂಸ್ಕೃತಿಯ ಅಧ್ಯಯನವು ಪತಿತರಿಗೆ ‘ಧರ್ಮಬೋಧನೆ’ ಹಾಗೂ ‘ಬೀದಿಯ ಧರ್ಮಬೋಧನೆ’ – ಒಂದು ಉದ್ದೇಶವಾದರೆ ಕ್ರೈಸ್ತ ಗ್ರಂಥಗಳ ಪ್ರಾದೇಶಿಕ ಭಾಷಾನುವಾದದ ತಯಾರಿ ಇನ್ನೊಂದು ಉದ್ದೇಶವಾಗಿತ್ತು. ಈ ಎರಡು ಉದ್ದೇಶಗಳನ್ನು ಇರಿಸಿಕೊಂಡು ಮಿಷನರಿಗಳು ಪ್ರಾದೇಶಿಕ ಭಾಷೆ – ಸಂಸ್ಕೃತಿಗಳ ಅಧ್ಯಯನಕ್ಕೆ ತೊಡಗಿದರು. ಈ ಹಿನ್ನೆಲೆಯಲ್ಲಿ ಅವರ ಭಾಷಾಕಲಿಕೆ ವ್ಯಾಕರಣ, ನಿಘಂಟು, ಪಠ್ಯಪುಸ್ತಕ ರಚನೆಗಳಿಗೆ ಇಂಬಿತ್ತಿತು. ಅಂದಿನ ತುಳುನಾಡಿನ ಇಗರ್ಜಿಯ ಅಧಿಕಾರ ಪ್ರಾಂತದೊಳಗಣ ಜನರಲ್ಲಿ ಹೆಚ್ಚಿನವರಿಗೆ ಕನ್ನಡ ಬರುತ್ತಿರಲಿಲ್ಲ. ಅಂದರೆ ಅವರು ಏಕಭಾಷಿಕ ತುಳುವರು. ಇವರಲ್ಲಿನ ಓದಿದ ಮಂದಿ ಕನಿಷ್ಠ ತುಳು ಭಾಷೆಯನ್ನು ಬಲ್ಲವರಾಗಿದ್ದರು. ತುಳು ಇಗರ್ಜಿಯ ಭಾಷೆಯಾಗಬೇಕು ಎನ್ನುವುದಕ್ಕೆ ಇದೂ ಒಂದು ವಾದವಾಗಿತ್ತು. ಕನ್ನಡ ತಿಳಿಯದ ತುಳು ಭಾಷಿಕರಲ್ಲಿ ಗ್ರಾಮೀಣ ಪ್ರದೇಶದ ಬಿಲ್ಲವರು ಮತ್ತು ಕೃಷಿನಿರತ, ಆರ್ಥಿಕವಾಗಿ ಹಿಂದುಳಿದ ಬಂಟರು ಮುಖ್ಯರಾಗಿದ್ದರು. ಇವರೊಂದಿಗಿನ ಸಂವಹನಕ್ಕಾಗಿ ತುಳು ಭಾಷೆಯ ಕ್ರೈಸ್ತಗೀತೆಗಳ ರಚನೆಗೂ ತುಳುಭಾಷೆಯ ಹಿಡಿತ ಅವರಿಗೆ ಬೇಕಾಗಿತ್ತು. ಈ ನೆಲೆಯಿಂದ ತುಳು ಅಧ್ಯಯನ ಆರಂಭದ ದಿನಗಳಲ್ಲಿ ನಡೆಯಿತು. ಮುಂದೆ ತುಳು ಸೃಜನ ಹಾಗೂ ಸೃಜನೇತರ ನೆಲೆಗಳಲ್ಲಿ ವಿಸ್ತರಿಸಿಕೊಂಡ ಹೆಜ್ಜೆದಾರಿಯನ್ನು ಈ ಸಂಪುಟ ವಿವರವಾಗಿ ಚರ್ಚಿಸಿದೆ. ಡಾ. ವೆಂಕಟರಾಜ ಪುಣಿಂಚತ್ತಾಯರಂತಹ ವಿದ್ವಾಂಸರು ತುಳುವನ್ನು ‘ಅಜ್ಞಾತಪರ್ವ’ದಿಂದ ಬಿಡುಗಡೆಗೊಳಿಸಿ ತುಳು ಸಾಹಿತ್ಯದ ಚಾರಿತ್ರಿಕ ಅಧ್ಯಯನಕ್ಕೆ ಅನುವು ಮಾಡಿಕೊಟ್ಟರು. ಭಾರತೀಯ ಭಾಷೆಗಳಿಗೇ ಮಾದರಿ ಎನಿಸಿದ ತುಳು ನಿಘಂಟು (೧೯೭೯ – ೧೯೯೬) ಡಾ. ಉಪಾಧ್ಯಾಯ ಹಾಗೂ ಶ್ರೀಮತಿ ಉಪಾಧ್ಯಾಯರ ಅವಿರತ ಶ್ರಮದ ಫಲವಾಗಿ ರೂಪುಗೊಂಡಿತು. ಭಾರತೀಯ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ತುಳು ಭಾಷೆಯನ್ನು ಕುರಿತ ಅನೇಕ ಪಿಎಚ್.ಡಿ ಪ್ರಬಂಧಗಳು ರಚಿತವಾದುದು ಹೆಮ್ಮೆಯ ಸಂಗತಿ. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಬಾಗ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಆಶ್ರಯದಲ್ಲಿ ರೂಪುಗೊಂಡ ಅನೇಕ ಪಿಎಚ್.ಡಿ ಮಹಾಪ್ರಬಂಧಗಳು, ವಿದ್ವತ್ ಬರಹಗಳು ತುಳು ಅಧ್ಯಯನದ ಎಲ್ಲೆಯನ್ನು ವಿಸ್ತರಿಸಿತು. ಡಾ. ಪೀಟರ್ ಜೆ. ಕ್ಲಾಸ್, ಡಾ ಲೌರಿ ಹಾಂಕೊ, ಡಾ. ಹೈಡ್ರೂನ್ ಬ್ರೂಕ್ನರ್ ಮುಂತಾದ ವಿದೇಶಿ ವಿದ್ವಾಂಸರು ತುಳುವನ್ನು ಅಂತಾರಾಷ್ಟ್ರೀಯ ವಿದ್ವತ್ ಲೋಕಕ್ಕೆ ಪರಿಚಯಿಸಿದರು. ಇಷ್ಟಾಗಿಯೂ ತುಳುವಿಗೆ ಕೇಂದ್ರ ಸರಕಾರ ತನ್ನ ಎಂಟನೆಯ ಪರಿಚ್ಛೇದದಲ್ಲಿ ಸ್ಥಾನ ನೀಡದೆ ಹೋದುದು ದುರದೃಷ್ಟ.

ತುಳು ಭಾಷೆ – ಸಂಸ್ಕೃತಿಯ ಸತ್ವ ಹಾಗೂ ಅನನ್ಯತೆಯನ್ನು ತುಳುವೇತರರಿಗೆ ಪರಿಚಯಿಸುವಲ್ಲಿ ಈ ಸಂಪುಟ ನೆರವಾಗುವುದು ಖಂಡಿತ. ಜೊತೆಗೆ ತುಳುವರ ಸ್ವಾಭಿಮಾನದ ವಿಸ್ತರಣೆಯಲ್ಲೂ ಈ ಸಂಪುಟ ಕ್ರಿಯಾಶೀಲವಾಗುವುದು ನಿಶ್ಚಿತ. ಆಡಳಿತ ಹಾಗೂ ಶ್ರೇಣೀಕೃತ ವಲಯಗಳಲ್ಲಿ ನೆಲೆಯಿಲ್ಲದ ತುಳು ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ ತುಳುವಿನಲ್ಲಿ ಸೃಜನಶೀಲ ಸಾಹಿತ್ಯಾಭಿವ್ಯಕ್ತಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ತುಳುವಿನ ಸಮೃದ್ಧವೂ ವೈವಿಧ್ಯಮಯವೂ ಆದ ಮೌಖಿಕ ಪರಂಪರೆಯ ಅಭಿವ್ಯಕ್ತಿಗಳು ಅನ್ಯಭಾಷೆಗಳಲ್ಲಿ ವಿಶೇಷವಾಗಿ ಕನ್ನಡದಲ್ಲಿ ಬರೆಬೇಕು. ದಕ್ಷಿಣ ಭಾರತದ ಸಂಸ್ಕೃತಿಯ ಅಧ್ಯಯನದಲ್ಲಿ ತುಳು ಭಾಷೆ – ಸಾಹಿತ್ಯದ ಪಾತ್ರ ಗಣನೀಯವಾದುದು. ಭೂತಾರಾಧನೆ, ನಾಗಾರಾಧನೆ, ಮಾತೃಮೂಲೀಯ ಕುಟುಂಬ ವ್ಯವಸ್ಥೆ, ಕಡಲು ಮತ್ತು ಮಡಲುಗಳಿಂದ ನಂಬಿ ಬದುಕುವ ಸಮುದಾಯಗಳು ಹುಟ್ಟು ಹಾಕಿದ ಸಂಸ್ಕೃತಿ – ಇವು ಕರ್ನಾಟಕ ಸಂಸ್ಕೃತಿಯ ಅಧ್ಯಯನಕ್ಕೆ ಸಮೃದ್ಧ ಆಕರವಾಗಿ ನಿಲ್ಲಬಲ್ಲುದು. ಇದೇ ಬಗೆಯಲ್ಲಿ ಕರ್ನಾಟಕದೊಳಗಿನ ಕೊಂಕಣಿ, ಕೊಡವ ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನ ನಡೆಯಬೇಕಾಗಿದೆ. ಈ ದಿಸೆಯಲ್ಲಿ ‘ತುಳು ಸಾಹಿತ್ಯ ಚರಿತ್ರೆ’ಯ ಪ್ರಕಟಣೆಯ ಮೂಲಕ ಕನ್ನಡ ವಿಶ್ವವಿದ್ಯಾಲಯ ತನ್ನ ಸಂಸ್ಕೃತಿ ಶೋಧನೆ ಉಪಕ್ರಮದಲ್ಲಿ ಒಂದು ಮಹತ್ವದ ಹೆಜ್ಜೆಯಿರಿಸಿದೆ ಎನ್ನಬಹುದು.

ಈ ಸಂಪುಟ ಸಂಪನ್ನಗೊಳ್ಳುವುದರಲ್ಲಿ ಲೇಖನಗಳನ್ನು ಬರೆದುಕೊಟ್ಟು ಸಹಕರಿಸಿದ ಎಲ್ಲ ವಿದ್ವಾಂಸರನ್ನು ಇಲ್ಲಿ ನೆನೆಯಬೇಕಾಗಿದೆ. ತುಳು ಸಾಹಿತ್ಯ – ಸಂಸ್ಕೃತಿ ಲೋಕವನ್ನು ಸಿಂಗರಿಸಿದ ಸಂದುಹೋದ ಅನೇಕ ಹಿರಿಯರ ಲೇಖನಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಅನುಮತಿ ನೀಡಿ ಸಹಕರಿಸಿದ ಅವರ ವಾರೀಸುದಾರರಿಗೆ ಕೃತಜ್ಞತೆಗಳು. ಸಂಪಾದಕ ಸಲಹಾ ಸಮಿತಿಯ ಸದಸ್ಯರಾದ ಡಾ. ಅಮೃತ ಸೋಮೇಶ್ವರ, ಡಾ. ಚಿನ್ನಪ್ಪಗೌಡ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರಿಗೆ ವಂದನೆಗಳು. ‘ತುಳು ಸಾಹಿತ್ಯ ಚರಿತ್ರೆ’ ಸಂಪುಟ ಮೈದುಂಬುವಲ್ಲಿ ಇವರ ಕೊಡುಗೆ ಸ್ಮರಣೀಯವಾದುದು. ಸಂಪುಟ ಆಕೃತಿಗೊಳ್ಳುವುದರಲ್ಲಿ ಸಹಕರಿಸಿದ ಪ್ರಸಾರಾಂಗದ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಸಹಾಯಕ ನಿರ್ದೇಶಕರ ಶ್ರೀ ಸುಜ್ಞಾನಮೂರ್ತಿ ಅವರಿಗೆ ನಮ್ಮ ವಂದನೆಗಳು, ಅಕ್ಷರ ಜೋಡಣೆ ಹಾಗೂ ಮುದ್ರಣ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟ ಮಂಗಳೂರಿನ ಆಕೃತಿ ಕಂಪ್ಯೂಟರ್ಸ್‌ನ ಶ್ರೀ ಕಲ್ಲೂರು ನಾಗೇಶ್ ಹಾಗೂ ಕು. ಭಾರತಿ ಅವರನ್ನು ನೆನೆಯುತ್ತಿದ್ದೇವೆ.

ಕಳೆದ ಹಲವಾರು ವರ್ಷಗಳಿಂದ ಸಂಪಾದನ ಕೆಲಸದಲ್ಲಿ ನನ್ನೊಂದಿಗೆ ಸಹಕರಿಸುತ್ತಾ ಬಂದ ಗೆಳೆಯರಾದ ಡಾ. ವಾಮನ ನಂದಾವರ, ಡಾ. ಎ.ಸುಬ್ಬಣ್ಣ ರೈ ಹಾಗೂ ಡಾ. ಮಾಧವ ಪೆರಾಜೆಯವರಿಗೆ ವಂದನೆಗಳು.

– ಎ.ವಿ. ನಾವಡ
ಸಂಪಾದಕರ ಪರವಾಗಿ