‘ತಾಯಿ ಇರವೆದಿ. ತಂದೆ ಸಮ್ಮುನಾರಾಯಣ ಅಚ್ಚವ’ ಇದೇ ಶೈಲಿಯಲ್ಲಿ ಪ್ರಾರಂಭವಾಗುತ್ತದೆ. ಇವರಿಗೆ ಐದು ಮಂದಿ ಮಕ್ಕಳು ಹುಟ್ಟುತ್ತಾರೆ. ಮಕ್ಕಳು ಬೆಳೆಯುವುದನ್ನು ಹಂತ ಹಂತವಾಗಿ ಚಿತ್ರಿಸುವುದು ಸಹಜ ಸುಂದರವಾಗಿದೆ. ಹುಟ್ಟಿದ ಮಗುವಿನ ಸೂತಕವನ್ನು ತೆಗೆದ ಬಳಿಕ ‘ಮೋರೆ ನೋಡುವ ಮಕ್ಕಳಾದರು. ತೊಟ್ಟಿಲಿಗೆ ಹಾಕಿದರು, ತೊಟ್ಟಿಲು ತೂಗಿದರು – ತೊಟ್ಟಿಲಲ್ಲಿ ಮಕ್ಕಳಿಗೆ ಅನ್ನವನ್ನು ಉಣಿಸಿದರು. ಹೊಸ್ತಿಲಲ್ಲಿ ಹೊಟ್ಟೆ ಎಳೆಯುವ ಮಕ್ಕಳಾಗಿ ಹೋದ ಬಳಿಕ ಸೊಂಟದಲ್ಲಿ ಎತ್ತಿಕೊಳ್ಳುವ ಮಕ್ಕಳಾಗಿ ಹೋದ ಬಳಿಕ ನಡೆದುಕೊಂಡು ನಾಲ್ಕು ಬದಿಗೆ ಸುತ್ತುವ ಮಕ್ಕಳಾದರು. ನಡೆದುಕೊಂಡು ನಾಲ್ಕು ಬದಿಯನ್ನು ಸುತ್ತುತ್ತಾ ಬಂದಾಗ, ಮಟ ಮಟ ನಡೆದುಕೊಂಡು ಬಂದಾಗ, ನಮ್ಮ ಮಕ್ಕಳಿಗೆ ಪ್ರೀತಿಯ ಆಭರಣ ಮಾಡಿಸಬೇಕೆಂದರು – ಕಾಲಿಗೆ ಕಡವು, ಕಿವಿಗೆ ಕುಂಡಲ ಹಾಕಿಸಿದರು, ಕೈಗೆ ಬಳೆ ಹಾಕಿಸಿದರು, ಸಣ್ಣವರು ಹೋಗಿ ದೊಡ್ಡವರಾದಾಗ ಬರಹ ಕಲಿಸಿದರು. ನೂಲು ಹಾಕಿ ನೂಲಮದುವೆ ಮಾಡಿಸಿದರು’(ಮೋಣೆ ತೂಪಿನ ಬಾಲೆಲು ಆಯೆರ್. ತೊಟ್ಟಿಲ್ ಪಾಡ್ಯೆರ್ ತೊಟ್ಟಿಲ್ ಮಾನಯೆರ್. ತೊಟ್ಟಿಲ್ ಬಾಲೆಲೆಗ್ ನುಪ್ಪು ಉಣ್ಪಾಯೆರ್. ತಡ್ಯಗ್ ಬಂಜಿ ಕೊರ್ದು ಒಯ್ಪುನ ಬಾಲೆಲು ಆಯೆರ್. ತಡ್ಯಗ್ ಬಂಜಿ ಕೊರ್ದು ಒಯ್ಪುನ ಬಾಲೆಲು ಪೋಯೆರ್. ತರ್ಕಿಲ್ ತಟ್ಟುವ ಬಾಲೆಲು ಆಯೆರ್, ತರ್ಕಿಲ್ ತಟ್ಟುವ ಬಾಲೆಲು ಪೋಯೆರ್ ನಡತ್ ನಾಲ್ ಸುತ್ತ ಬರ್ಪಿ ಬಾಲೆಲು ಆಯೆರ್. ನಡತ್ ನಾಲ್ ಸುತ್ತ ಬರ್ಪಿನ ಬಾಲೆಲು ಆದ್ ಬನ್ನಗ ಮಟ ಮಟ ನಡತೊಂದು ಬನ್ನಗ ಎಂಕಲೆ ಬಾಲೆಲೆಗ್ ಮೋಕೆದ ಬಂಗಾರ್ ಮಲ್ಪಾವೊಡುಂದೆರ್ – ಕಾರ್‌ಗ್ ಕಡವು, ಕೆಬಿಕ್ ಕುಂಡಲ ಪಾಡಾಯೆರ್, ಕೈಕ್ ಪಾಟ್ಲಿ ಪಾಡಾಯೆರ್. ಎಲ್ಲಿ ಪೋದು ಮಲ್ಲೇನಗ ಬರವು ಕಲ್ಪಾಯೆರ್. ನೂಲು ಪಾಡ್ದ್ ನೂಲ ಮದ್ಮೆ ಮಲ್ಪಾಯೆರ್). ಮಕ್ಕಳ ಬೆಳವಣಿಗಯನ್ನು ಕ್ರಿಯೆಯ ಮೂಲಕ ತಿಳಿಸುವ ಶೈಲಿಯು ತುಂಬಾ ಆಕರ್ಷಕವಾಗಿದೆ. ಮಕ್ಕಳ ಬಾಲ್ಯದ ಚಿತ್ರಣದಲ್ಲಿ ಸೌಂದರ್ಯ ಪ್ರಜ್ಞೆ ವ್ಯಕ್ತವಾಗುವುದು. ವಾಚಕರಲ್ಲಿ ಅಪೂರ್ವ ಆನಂದವುಂಟಾಗುವುದು.

‘ಬೀಲ್ – ಬಿಲ್ಕುಲ್ಲ’ (ಬೇಲೂರು ಹಳೆಬೀಡು?) ರಾಜ್ಯಕ್ಕೆ ಶಿಲ್ಪಿಯಾಗಿ ಹೋದ ತಂದೆ ಸಮ್ಮುನಾರಾಯಣ ಅಚ್ಚವನ ಪರಿಚಯವಿಲ್ಲದಿದ್ದರೂ, ಬಿಳಿ ಕುದುರೆಯನ್ನು ಹತ್ತಿಕೊಂಡು ಮಗ ಬೀರು ಅಚ್ಚವ ಹುಡುಕುತ್ತಾ ಹೋಗುತ್ತಾನೆ. ದಾರಿಯಲ್ಲಿ ಸಿಕ್ಕಿದ ತಂದೆಯ ಜೊತೆಯಲ್ಲಿ, ತಂದೆಯ ಶಿಲ್ಪವನ್ನು ನೋಡಲು ಹಿಂದಿರುಗುತ್ತಾನೆ. ಮಗನು ತಂದೆಯ ಶಿಲ್ಪದಲ್ಲಿ ಊನವನ್ನು ತೋರಿಸುತ್ತಾನೆ – ‘ಗಂಡು ಸಿಂಹ ಮೃಗದಲ್ಲಿ ಎಡಹೊಟ್ಟೆ, ಬಲಹೊಟ್ಟೆ ಸರಿಯಾಗಲಿಲ್ಲ. ಕಣ್ಣ ದೃಷ್ಟಿ ಹುಟ್ಟಿಸಲಿಲ್ಲ’ (ಮಾಣಿಸಿಂಗ ಮರ್ಗೊಡು ಎಡತಲ್ಲೆ ಬಲತಲ್ಲೆ ಆರ್ದ್ ಬೌಜಿ. ಕಣ್ಣ ದೃಷ್ಟಿ ಪುಟ್ಟಾವುಜರ್) ಎನ್ನುತ್ತಾನೆ. ಆಗ ತಂದೆ ಹೇಳುವ ಮಾತು ಸತ್ವಯುತವಾಗಿದೆ – ‘ಅಯ್ಯೋ ಮಗನೇ, ನಿನ್ನೆ ಹುಟ್ಟಿದವ ಇವತ್ತು ಬೆಳೆದವ. ಅರಸು ಮೆಚ್ಚುವ ಕೆಲಸ ಮಾಡಿದೆ. ಅರಸು ಮೆಚ್ಚಿದರು. ನನಗೆ ಕೊಡುವ ಬಹುಮಾನ ಕೊಟ್ಟರು. ನನ್ನ ಇಂದ್ರಿಯಕ್ಕೆ ಹುಟ್ಟಿದೆ ಮಗನೆ, ನನ್ನ ಕೆಲಸಕ್ಕೆ ಊನ ಹೇಳಿದೆ’ (ಅಯ್ಯ ಮಗ ಕೋಡೆ ಪುಟ್ಟಿಯ ಈ ಇನಿ ಬಲತ. ಅರಸುಗು ಮೆಚ್ಚಾವುನ ಬೇಲೆ ಬೆಂದೆ. ಅರಸುಗು ಕುಷಿಯಾಂಡ್. ಎಂಕ್ ಕೊರ್ಪುನ ಸೇಜ ಕೊರ್ಯೆರ್. ಎನ ಇಂದ್ರೊಗು ಪುಟಿಯ ಮಗ, ಎನ ಬೇಲೆಗ್ ಈ ಓಣೆ ಪಂಡ) ಎಂದು ಹೇಳಿ ಉಳಿಯಿಂದ ಪ್ರಾಣಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿಯ ಸಂಭಾಷಣೆಯ ಧಾಟಿ ತುಂಬ ಸತ್ವಯುತವಾದದ್ದು. ಸಣ್ಣ ಸಣ್ಣ ವಾಕ್ಯಗಳಲ್ಲಿ ಭಾಷೆಯ ಬಿಗುವನ್ನುಳಿಸಿಕೊಂಡಿದೆ. ಮಗನೂ ಶೂರನೆ! ತಂದೆಯ ಉಳಿಯನ್ನು ತೆಗೆದುಕೊಂಡು ‘ನೀವು ಸತ್ತರೆ ಸತ್ತುಹೋಗಿ. ನಾನು ನಿಮ್ಮ ಇಂದ್ರಿಯಕ್ಕೆ ಹುಟ್ಟಿದ ಮಾಗನಾದರೆ ನಾವು ಮಾಡಿದ ಕೆಲಸ ನಾನು ಮಾಡಿಯೇನು’ (ಈರ್ ಸಯ್ತರ್‌ಡ ಸಯ್ಲೆ ಅಮ್ಮೆರೆ. ಯಾನ್ ಇರೆ ಇಂದ್ರೊಗು ಪುಟಿನ ಮಗೆಯಂದ್‌ಡ ಈರ್ ಬೆಂದಿ ಬೇಲೆ ಯಾನ್ ಬೆನುವೆ). ಬಲ್ಲಮಂಜದಲ್ಲಿ ಸಂಗ್ರಹಿಸಿದ ಇದೇ ಪಾಡ್ದನದ ಇನ್ನೊಂದು ಪಾಠದಲ್ಲಿ ಇಂತಹ ಸತ್ವಯುತ ಸಂಭಾಷಣೆಯಿಲ್ಲ. ಆ ಪಾಠದಲ್ಲಿ ಮಗನನ್ನು ತಂದೆ ಉಳಿಯಿಂದ ಇರಿದು, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮೊದಲನೆಯ ಪಾಠವೇ ಉತ್ತಮವಾದುದೆಂದು ಹೇಳಬಹುದು. ಮಗನಿಂದ ಅವಮಾನಿತನಾದ ತಂದೆ ಆ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದು ವಿಶಿಷ್ಟ ಮನೋಧರ್ಮವನ್ನು ವ್ಯಕ್ತಪಡಿಸುತ್ತದೆ. ಮನಸ್ಸು ತುಂಡಾಗುವ ಕ್ರಿಯೆಯಲ್ಲಿ ಕವಿ ಚಿತ್ರಿಸಿದ್ದಾನೆ.

ಅಲ್ಲಿಂದ ಬಂದು ಕಾರ್ಕಳದ ಬೈರರಸುವಿನ (ಬೈರಸೂಡವ = ಬೈರ+ಅರಸು+ಒಡೆಯ) ಆಶ್ರಯದಲ್ಲಿ ಗೊಮ್ಮಟನನ್ನು ನಿರ್ಮಿಸುತ್ತಾನೆ. ಆದರೆ ಅವನ ಜೀವನ ದುರಂತವಾಗುತ್ತದೆ. ಊರಿನಲ್ಲೆಲ್ಲ ತಂದೆಯನ್ನು ಕೊಂದ ಮಗನೆಂದು ‘ಪುಕಾರು’ ಬಂದಿರುತ್ತದೆ. ಇಂತಹ ಗೊಮ್ಮಟನನ್ನು ಬೇರೆಯಲ್ಲಿಯೂ ನಿರ್ಮಿಸಬಾರದೆಂದು ಮತ್ತು ತಂದೆಯನ್ನು ಕೊಂದ ಮಗ ಏನೂ ಮಾಡಿಯಾನು ಎಂದು, ಅವನ ಒಂದು ಕೈ ಮತ್ತು ಒಂದು ಕಾಲನ್ನು ತುಂಡು ಮಾಡಿಸುತ್ತಾನೆ. ‘ಕೋಟಿ ಚೆನ್ನಯ’ ಪಾಡ್ದನದಲ್ಲಿ ಒಂದು ಕ್ರಿಯೆಯು ಅಥವಾ ಘಟನೆಯು ಭಯಂಕರದಿಂದ ವ್ಯಂಗ್ಯದೆಡೆ ತಿರುಗಿದರೆ, ಈ ಪಾಡ್ದನದಲ್ಲಿ ಬೀರು ಅಚ್ಚವನ ದುರಂತವು ವ್ಯಂಗ್ಯದಿಂದ ಭಯಂಕರೆದೆಡೆಗೆ ತಿರುಗುವುದು. ಬೀರು ಅಚ್ಚವನಿಗೆ ಬಹುಮಾನ ಕೊಡುವೆನೆಂದು ಊರು ಕೂಡಿದಾಗ ನಡುವೆ ಕರೆದು, ಅಲ್ಲಿ ಅವನ ಕೈ ಕಾಲು ತೆಗೆಯುವುದು ಪಾಡ್ದನದ ಬೆಳವಣಿಗೆ ಮತ್ತು ನಿರೂಪಣೆಯ ವೈಶಿಷ್ಟ್ಯವನ್ನು ತೋರ್ಪಡಿಸುವುದು. ಕೈಕಾಲು ಕತ್ತರಿಸುವುದನ್ನು ವಿವರಿಸುವ ರೀತಿಯೂ ವ್ಯಂಗ್ಯವಾಗಿದೆ – ‘ಬಂಗಾರದ ಬಳೆ ನಿನಗೆ ಬಹುಮಾನ ಎಂದರು ಬಲದ ಕೈ ತೆಗೆದರು. ಕಾಲಿಗೆ ಕಡವು ನಿನಗೆ ಬಹುಮಾನ ಎಂದರು ಎಡದ ಕಾಲು ತೆಗೆದರು’. (ಬಂಗಾರ್ದ ಬಲೆ ನಿಕ್ಕ್ ಸೇಜ್ಯಾಂದ್ ಪಂಡೆರ್ ಬಲತ ಕೈ ಕಲೆಯೆರ್. ಕಾರ ಕಡವು ನಿಕ್ಕ್ ಸೇಜ್ಯಾಂದ್ ಪಂಡೆರ್ ದತ್ತ ಕಾರ್ ಕಲೆಯೆರ್) ಅಲ್ಲಿಂದ ಅವನು ವೇಣೂರಿಗೆ ಹೋಗುತ್ತಾನೆ. ತನ್ನ ಮಾನವನ್ನು ಹೀನ ಮಾಡಿದ ಊರಿನಲ್ಲಿ ಕಾಲು ಊರುವುದಿಲ್ಲ. ನೀರು ಕುಡಿಯುವುದಿಲ್ಲ ಎಂದು ವೇಣೂರಿಗೆ ಬಂದು, ಅಲ್ಲಿ ಒಂದು ಕಾಲು ಒಂದು ಕೈಯಿಂದ ಗೊಮ್ಮಟವನ್ನು ತಾನೇ ನಿರ್ಮಿಸಿತ್ತಾನೆ. ಗೊಮ್ಮಟನನ್ನು ನೆಟ್ಟಗೆ ಮಾಡಿ ತಲೆಯಲ್ಲಿ ಕುಳಿತು ಸತ್ತಿಗೆಯಲ್ಲಿ ಬಡಿಯುವ ಶಬ್ದ ವೇಣೂರಿನಿಂದ ಕಾರ್ಕಳಕ್ಕೆ ಕೇಳುತ್ತಿತ್ತಂತೆ. ಆ ಸ್ವರವನ್ನು ಕೇಳಿ ಬೀರು ಅಚ್ಚವನ ತಲೆ ಕಡಿಯಲು ಅಪ್ಪಣೆ ಕೊಡುತ್ತಾನೆ ಭೈರರಸ. ಇಂತಹ ಸಾಹಸದ ಕೆಲಸ ಮಾಡಿದ ಬೀರು ಅಚ್ಚವ ವೇಣೂರು ಮಹಾದೇವರ ದೇವಸ್ಥಾನದ ಅಂಗಣದಲ್ಲಿ ಬಿದ್ದಿರುತ್ತಾನೆ.

ಇಲ್ಲಿಂದ ‘ಕಲ್ಲುರ್ಟಿ’ ಪಾಡ್ದನವು ಪ್ರಾರಂಭವಾಗುತ್ತದೆ. ಕಲ್ಕುಡ ಮತ್ತು ಕಲ್ಲುರ್ಟಿ (ಒರ್ತೆ) ಭೂತಗಳು ನಿಜಜೀವನದಲ್ಲಿ ಬೀರು ಅಚ್ಚವ ಮತ್ತು ಸತ್ಯಮ್ಮ. ಸತ್ಯಮ್ಮ ಬೀರು ಅಚ್ಚವನ ತಂಗಿ. ಇವರಿಬ್ಬರಿಗೂ ಒಂದೇ ದಿವಸ ಕೋಲ ನಡೆಯುವುದು. ‘ಕಲ್ಲುರ್ಟಿ’ ಎನ್ನುವ ಶಬ್ದದ ಬದಲು ಬಡಗು ಪ್ರದೇಶಗಳಲ್ಲಿ ‘ಒರ್ತೆ’ ಎನ್ನುವ ಹೆಸರಿನಿಂದ ಕರೆಯುತ್ತಾರೆ. ದಕ್ಷಿಣ ತುಳುನಾಡಿನಲ್ಲಿ ‘ಕಲ್ಲುರ್ಟಿ’ ಎನ್ನುತ್ತಾರೆ. ಕಲ್ಲುರ್ಟಿ ಪಾಡ್ದನದಲ್ಲಿ ಕಲ್ಕುಡನ ಕತೆಯು ಪುನರುಕ್ತವಾಗಿದೆ.

ಅಗಲಿದ ಅಣ್ಣನನ್ನು ನೋಡಲು ತಂಗಿ ಹೊರಡುತ್ತಾಳೆ. ತಾಯಿ ಬೇಡವೆಂದರೂ ಕೇಳದೆ ಕೊಲ್ಲೂರಿಗೆ ಬರುತ್ತಾಳೆ. ಅಲ್ಲಿ ಅಣ್ಣನು ಕಾಣದೆ ಇರಲು ಉಡುಪಿಗೆ ಬರುತ್ತಾಳೆ. ಉಡುಪಿಯಲ್ಲಿ ಸತ್ಯಮ್ಮ ಹುಡುಕುತ್ತಿರುವುದನ್ನು ಕಂಡು ಕಪಟ ನಾಟಕದ ಕೃಷ್ಣದೇವರು ಬೀರುಅಚ್ಚವನ ರೂಪದಲ್ಲಿ ಕಾಣುತ್ತಾರೆ. ಸತ್ಯಮ್ಮನನ್ನು ಕಂಡಕೂಡಲೇ ಅಪ್ಪಿ ಹಿಡಿದು ಮುದ್ದುಕೊಡಲು ಹೋಗುತ್ತಾರೆ. ಆದರೆ ಈ ಕಪಟವನ್ನು ತಿಳಿದ ಸತ್ಯದ ಮಹಿಳೆ ಸತ್ಯಮ್ಮ ಕೃಷ್ಣನ ಕುತಂತ್ರಕ್ಕೆ ಒಳಗಾಗದೆ ಅಲ್ಲಿಂದ ಕಾರ್ಕಳಕ್ಕಾಗಿ ವೇಣೂರಿಗೆ ಬರುತ್ತಾರೆ. ಬಳ್ಳಮಂಜದಲ್ಲಿ ಸಂಗ್ರಹಿಸಿದ ಪಾಠದಲ್ಲಿ ಈ ಘಟನೆಯಿಲ್ಲ. ಪ್ರಾಯಶಃ ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ವಿವರಣೆ ಇದ್ದಿರಬಹುದು. ಪ್ರಾದೇಶಿಕ ವ್ಯತ್ಯಾಸಗಳು ಹೇಗೆ ಆಗುತ್ತವೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ವೇಣೂರಿನ ಮಹಾದೇವರ ದೇವಸ್ಥಾನದಲ್ಲಿ ಬಿದ್ದಿರುವ ಅಣ್ಣನ ಸ್ಥಿತಿಯನ್ನು ನೋಡಿ, ಕೊಂಡುಹೋದ ಅವಲಕ್ಕಿ, ಚಕ್ಕುಲಿಗಳನ್ನು ಅಂಗಣದಲ್ಲಿ ಎಸೆಯುವ ಕ್ರಿಯೆ ಮನೋಧರ್ಮದ ಪ್ರತಿಕ್ರಿಯೆಯ ಸಹಜಚಿತ್ರಣವಾಗಿದೆ. ಬಳಿಕ ಅಣ್ಣನ ಮಡಿಲಿಗೆ ದುಃಖದಿಂದ ಬೀಳುತ್ತಾಳೆ. ನಡೆದ ಕತೆಯನ್ನೆಲ್ಲ ಕೇಳುತ್ತಾಳೆ. ಬೀರು ಅಚ್ಚವನು ತನ್ನ ಕತೆಯನ್ನು ಹೇಳುವಾಗ ‘ಕಲ್ಕುಡ’ ಪಾಡ್ದನದ ಬಹುಭಾಗ ಪುನರುಕ್ತವಾಗಿದೆ. ಅವರಿಬ್ಬರೂ ಮಾಯದ ರೂಪವನ್ನು ಪಡೆಯುತ್ತಾರೆ. (ಜೋಗ ಪೋದು ಮಾಯ ಆಯೆರ್). ಕಾರ್ಕಳದಲ್ಲಿ ಪ್ರತೀಕಾರವನ್ನು ಪೂರೈಸುತ್ತಾರೆ. ಕಲ್ಲು ಎಸೆದು ಮತ್ತು ಬೆಂಕಿಯಿಟ್ಟು ನಾಶ ಮಾಡುತ್ತಾರೆ. ಕಾರ್ಕಳ ಪೇಟೆಯನ್ನು, ಬೈರರಸುವಿನ ಹೆಂಡತಿಯನ್ನು ನಡುರಾತ್ರಿಯಲ್ಲಿ ಮಾಯದಲ್ಲಿ ಅಂತಃಪುರದಿಂದ ಅಪಹರಿಸಿ ಹೊರಗಿನ ಗದ್ದೆಯಲ್ಲಿಡುತ್ತಾರೆ. ಅರಸನ ಹಾಸಿಗೆಗೆ ಬೆಕ್ಕು ನಾಯಿಗಳ ಹೆಣವನ್ನು ತಂದುಹಾಕುತ್ತಾರೆ. ಇವತ್ತಿಗೂ ಈ ಭೂತಗಳ ಉಪದ್ರವವು ಇದೇ ದೃಷ್ಟಾಂತಗಳಿಂದ ತಿಳಿಯುವುದೆಂದು ನಂಬಿಕೆಯಿದೆ. ಕಾರ್ಕಳದರಸು ಉಬರ ವೈಲಾರೆಂಬ ಮಂತ್ರಗಾರರನ್ನು ಬರಕೊಳ್ಳಬೇಕೆಂದಿದ್ದಾಗ ಅದೂ ಅಸಾಧ್ಯವಾಗುವಂತೆ ಮಾಡುತ್ತಾರೆ. ತಮ್ಮ ವಿಚಾರದಲ್ಲಿ ಪ್ರವೇಶಿಸಿದ ಉಬರ ವೈಲಾಯರ ಹೆಂಡತಿಯನ್ನೂ ಹುಚ್ಚು ಹಿಡಿಸುತ್ತಾರೆ. ಆ ಬಳಿಕ ವೈಲಾಯರು ನಂಬಿ ವರ್ಷ ವರ್ಷ ಕೋಲ ಕೊಡಲು ಪ್ರಾರಂಭಿಸುತ್ತಾರೆ.

ಈ ಪಾಡ್ದನವು ಚಿತ್ರಣದ ದೃಷ್ಟಿಯಿಂದಲೂ ಸುಂದರವಾಗಿದೆ. ಕೆಲವು ಸಂದರ್ಭಗಳ ವರ್ಣನೆ ಉಚಿತವಾಗಿದೆ. ತಂದೆಯನ್ನು ನೋಡದ ಮಗ, ಮಗನನ್ನು ನೋಡದ ತಂದೆ ಆಕಸ್ಮಿಕವಾಗಿ ಭೇಟಿಯಾಗುವ ಸಂದರ್ಭ. ಬೀರು ಅಚ್ಚವನು ತನ್ನ ಮಗನೆಂದು ತಿಳಿದಾಗ ಸಮ್ಮನಾರಾಯಣ ಅಚ್ಚವನು ಕುದುರೆಯಿಂದ ಹಾರಿ ಮಗನನ್ನು ಅಪ್ಪಿ ಹಿಡಿದು ಮುದ್ದು ಕೊಡುತ್ತಾನೆ. ಸತ್ಯಮ್ಮ, ಅಣ್ಣ ಬಿದ್ದಿರುವುದನ್ನು ನೋಡಿ ಪರಿಚಯವಾದಾಗ ಪ್ರೀತಿಯಿಂದ ಕೊಂಡು ಹೋದ ಬುತ್ತಿಯನ್ನು ಎಸೆಯುತ್ತಾಳೆ. ಓಡಿಹೋಗಿ ಅಣ್ಣನ ಮಡಿಲಿಗೆ ಬೀಳುತ್ತಾಳೆ. ಅಯ್ಯೋ ಅಣ್ಣ, ನಿನ್ನ ಕೈ ಕಾಲು ಏನಾಯಿತು? ಯಾರು ತೆಗೆದದ್ದು? ನೀನೇನಾದರೂ ಕದಿಯಲು ಹೋದೆಯಾ? ನೀನೇ ತೆಗೆದುಕೊಂಡದ್ದೊ? (ಅಣ್ಣಗ್ ಕೊಣಪೋತಿನ ಪೊದ್ಕೆ ಅಂಗಣೊಡು ದಕ್ಯಲ್, ಪಾರ್ ಪೋದು ಅಣ್ಣ ಜಕ್ಯೆಲ್ ಬುರ್ಯೊಲು, ಅಯ್ಯ ಅಣ್ಣ ನಿನ್ನ ಕೈಕಾರ್ ದಾನಿ ಆಯಿನಿ? ಏರ್ ಗೆತ್ತಿನಿ? ಈ ಕಣ್ಡೊಂಡನೆ?ಕರತೊಂಡನ?) ಗಾಬರಿಯಾದ ತಂಗಿಯ ಮಾತಿನ ಶೈಲಿ ನೋಡಿ, ಎಷ್ಟು ಸಹಜ ಹಾಗೂ ಸತ್ವಯುತವಾಗಿದೆ. ಕ್ರಿಯೆಯ ವೇಗವನ್ನು, ಮಾನಸಿಕ ಪ್ರತಿಕ್ರಿತಿಯನ್ನು ಸ್ಪಷ್ಟವಾಗಿ ಸೂಚಿಸುವ ಭಾಷೆ.

ಈ ಪಾಡ್ದನವೂ ‘ಕೋಟಿ-ಚೆನ್ನಯ’ ಪಾಡ್ದನದಂತೆ ಲೌಕಿಕದಿಂದ ಅಲೌಕಿಕದೆಡೆ ಹರಿಯುವ ಕತೆಯನ್ನೊಳಗೊಂಡಿದೆ. ಆದುದರಿಂದ ಅಮಾನುಷ ಕ್ರಿಯೆಯು ಬರುವುದರಲ್ಲಿ ವಿಶೇಷವಿಲ್ಲ. ಮಾಯದ ಅಣ್ಣ ತಂಗಿಯರು ಕಾರ್ಕಳ ಪೇಟೆಯನ್ನು ಸುಡುವುದು, ಅರಸನ ಹೆಂಡತಿಯನ್ನು ನಡುರಾತ್ರೆ ಎತ್ತಿಕೊಂಡು ಹೋಗುವುದು, ನದಿಯಲ್ಲಿ ಬರುತ್ತಿದ್ದ ವೈಲಾಯರಿಗೆ ಸಾಮಾನ್ಯ ಮನುಷ್ಯ ರೂಪದಲ್ಲಿ ಕಾಣಿಸುವುದು, ಬಳಿಕ ಕಲ್ಲೆಸೆಯುವುದು ಮೊದಲಾದ ಘಟನೆಗಳು ಈ ಭೂತಗಳ ಮಹಿಮೆಯನ್ನು ವಿವರಿಸುವ ಅನುಮಾಷ ಚಿತ್ರಣಗಳು.

‘ಕಲ್ಕುಡ’ ಮತ್ತು ‘ಕಲ್ಲುರ್ಟಿ’ ಕೋಲದ ದಿವಸ ‘ತೂಕತ್ತೆರಿ‘ ಎಂಬ ಭೂತವನ್ನೂ ಆರಾಧಿಸುತ್ತಾರೆ. ಅದಕ್ಕೂ ಒಂದು ಪಾಡ್ದನವಿದೆ. ಇದು ಕಲ್ಕುಡನ ಮಹಿಮೆಯನ್ನು ತಿಳಿಸುವ ಪಾಡ್ದನವೆನ್ನಬಹುದು. ‘ಕಲ್ಲುಡ’ನನ್ನು ನಂಬಿದ ಸೇರಿಗಾರನು ತಾನು ಯುದ್ಧಕ್ಕೆ ಹೋದ ಸಂದರ್ಭದಲ್ಲಿ ಹೆಂಡತಿಯು ಮಾಡಿದ ಅನಾಚಾರಕ್ಕಾಗಿ ಅವಳನ್ನು ಮೂರು ದಾರಿ ಕೂಡುವಲ್ಲಿ ಕೊಲ್ಲುವ ಕತೆ. ‘ಕಲ್ಲುಡ’ನ ಹೆಸರೆತ್ತಿ ಕೊಲ್ಲುತ್ತಾನೆ. ಆದುದರಿಂದ ಅವಳು ‘ಕಲ್ಕುಡ’ನನ್ನು ಸೇರಿದಳು. (ಭೂತದ ಹೆಸರೆತ್ತಿ ಯಾವುದಾದರೂ ತಪ್ಪನ್ನು ಎತ್ತಿಹಿಡಿದರೆ, ತಪ್ಪು ಮಾಡಿದವನನ್ನು ಭೂತವು ಹಿಂಬಾಲಿಸುತ್ತದೆ ಅಥವಾ ಅದನ್ನು ಕೊಲ್ಲುತ್ತದೆ. ‘ಇಂತಹ ಭೂತ ಇದ್ದರೆ ನೋಡೀತು’ ಎಂಬ ಮಾತನ್ನು ಹೇಳುವ ಸಂಪ್ರದಾಯ ತುಳುನಾಡಿನಲ್ಲಿ ಇದೆ.)

‘ತೂಕತ್ತೆರಿ’ ಪಾಡ್ದನನ ಕತೆಯು ‘ಓನ್ನಮ್ಮ ಜೇವು’ ಪಾಡ್ದನದ ಕತೆಯಂತೆಯೇ ಇದೆ. ಘಟನೆಗಳೆಲ್ಲ ಒಂದೇ ರೀತಿಯಾಗಿವೆ. ‘ಓನಮ್ಮ ಜೇವು’ ಪಾಡ್ಡನದಲ್ಲಿ ಯುದ್ಧಕ್ಕೆ ಹೋದ ಗಂಡನು ಕಾಜಿಗಾರ (ಬಳೆಗಾರ)ನಾಗಿ ಹೆಂಡತಿಯನ್ನು ಹಿಡಿದರೆ ಇಲ್ಲಿ ನರ್ಸಣ್ಣನಾಗಿ ಹಿಡಯುತ್ತಾನೆ. ಒಂದರಲ್ಲಿ ಭೂತದ ವಿಚಾರ ಬರದೆ ಇದ್ದರೆ, ಇನ್ನೊಂದರಲ್ಲಿ ಇದೆ. ಭೂತಗಳ ಮಹಿಮೆಯಿಂದ ನಡೆದ ಘಟನೆಗಳನ್ನು ಪಾಡ್ಡನವಾಗಿ ರಚಿಸುವುದನ್ನು ಇನ್ನೂ ಕೆಲವೆಡೆ ಕಾಣುತ್ತೇವೆ.

‘ಕೊರಗ ತನಿಯ’ ಪಾಡ್ದನವು ಮಾನವೀಯ ಮೌಲ್ಯವನ್ನು ಸಹಜಚಿತ್ರಣದಿಂದ ಸೂಚಿಸುತ್ತದೆ. ಕೊರಗ ತನಿಯನೆಂಬ ಪರವನು ತಂದೆ ತಾಯಿಗಳನ್ನು ಕಳೆದುಕೊಂಡ ಅನಾಥ ಬಾಲಕ. ಊರು ಬಿಟ್ಟು ಹೋಗುತ್ತಾನೆ. ಎಲ್ಲಿಗೆಂದರೆ ಅವನ ಉತ್ತರ – ‘ಊಟ ಮಾಡುವಷ್ಟು ಅನ್ನವಿರುವ ರಾಜ್ಯಕ್ಕೆ, ದುಡಿಯುವಷ್ಟು ಕೆಲಸವಿರುವ ರಾಜ್ಯಕ್ಕೆ’ (ಉಣಲಾತ್ ಉಣ್ಪಿತ್ತಿ ರಾಜ್ಯೊಗು ಬೆನಲಾತ್ ಬೇಲೆ ಇತ್ತಿ ರಾಜ್ಯೊಗು ಪೋಪೇಂದ್ ಪಂಡೆ) ಮೈರಕ್ಕೆ ಬೈರಕ್ಕೆ ಬೈದ್ಯೆತಿ ಎನ್ನುವವಳು ದಾರಿಯಲ್ಲಿ ಸಿಕ್ಕಿದ ಕೊರಗ ತನಿಯನ ಸ್ಥಿತಿಯನ್ನು ತಿಳಿದು, ಮಗ ಚೆನ್ನಯನ ಕಳಿಯ ಮಡಕೆಯನ್ನು ಇಳಿಸಿ ಉಡಲಿಕ್ಕೆ ಬಟ್ಟೆ ಕೊಟ್ಟು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಇಬ್ಬರು ಮಕ್ಕಳ ಹಾಗೆ ಕೊರಗ ತನಿಯ ಮೂರನೆಯವನು ಎನ್ನುವ ಅವಳ ಮಾತೃಹೃದಯ ಉತ್ಕೃಷ್ಟವಾದುದು, ಕೊರಗ ತನಿಯ ದೊಡ್ಡದಾದ ಬಳಿಕ ತನ್ನ ಜಾತಿ ಕಸುಬಿನತ್ತ ತಿರುಗುತ್ತಾನೆ. ತನ್ನ ತಾಯಿ ಹೇಳಿದ ಹರಕೆಯನ್ನು (ಕದ್ರ ದೇವರಿಗೆ ಸಾವಿರ ಹೆಡಿಗೆ ಒಪ್ಪಿಸುವುದು) ತೀರಿಸಿ ಬರುತ್ತಾನೆ. ಅವನು ಅಸಾಮಾನ್ಯ ಪುರುಷ. ಮೈರಕ್ಕೆ ಬೈದ್ಯೆತಿಯು ಹೇಳಿದ ಏಳು ಹೊರೆ ಹರಕೆಯನ್ನು ಒಬ್ಬನೇ ಹೊತ್ತುಕೊಂಡು ಹೋಗುತ್ತಾನೆ. ಹೊರಗಿನಿಂದ ಒಳಕ್ಕೆ ಎಸೆಯುತ್ತಾನೆ. ‘ಮಾಫಲ’ ಹಣ್ಣನ್ನು ನೋಡಿ, ತಾಯಿಗೆ ಅದು ಪ್ರಿಯವಾದ ಹಣ್ಣೆಂದು ಕೈಕೊಡುವಾಗ ಮಾಯವಾಗುತ್ತಾನೆ. ಅಲ್ಲಿ ಮಾಯದ ಕಲ್ಲಾಗಿ ಇದ್ದಾನಂತೆ. ಈ ಪಾಡ್ದನದ ವಸ್ತುನಿರೂಪಣೆ ಗಮನಾರ್ಹವಾದುದು. ಅಸಾಮಾನ್ಯ ಪುರುಷನು ಸಾಮಾನ್ಯನಂತಿದ್ದು, ಅಸಾಮಾನ್ಯನೆಂಬುದನ್ನು ಎರಡು ಕ್ರಿಯೆಗಳಲ್ಲಿ ವ್ಯಕ್ತಪಡಿಸುತ್ತಾನೆ. ಕ್ರಿಯೆ ಸಂಭಾವ್ಯ ಅಸಾಧ್ಯವಾದುದು (likely imporibility) ಕೊರಗ ತನಿಯನು ಅಸಾಮಾನ್ಯನೂ ಹೌದು. ಅಲೌಕಿಕನೂ ಹೌದು. ಆದರೆ ಅವನಲ್ಲಿ ಅಲೌಕಿಕತೆ ಅವನಿಗೇ ತಿಳಿಯದಂತೆ ಹುದುಗಿಕೊಂಡಿದೆಯೆಂಬುದನ್ನು ವಾಚಕರು ತಿಳಿಯುವಂತೆ ವಸ್ತುನಿರೂಪಣೆಯಿದೆ. ಅಸಾಮಾನ್ಯವಾದ ಕಾರ್ಯಗಳನ್ನು ಲೋಕದಲ್ಲಿ ಮಾಡುವವರಿಗೆ ಅಲೌಕಿಕ ಶಕ್ತಿ ಇದೆ ಎಂಬುದು ಜನಪದರ ನಂಬಿಕೆ. ಇದು ಸಾರ್ವತ್ರಿಕ ಸತ್ಯವೂ ಹೌದು. ಇದೇ ರೀತಿಯ ವಸ್ತುಧ್ವನಿ ‘ಕಲ್ಕುಡ’, ‘ವಜ್ರಂದಕುಮಾರ’ ಪಾಡ್ದನಗಳಲ್ಲಿ ಇದೆ.

‘ವಜ್ರಂದ ಕುಮಾರ’ ಸತ್ಯದಿಂದ ಬಸುರಿಯಾದ ಕಾಂತುಳ್ಳ ಕಬೇದಿಯಾಳಲ್ಲಿ ಹುಟ್ಟಿದವನು. ಪ್ರಾರಂಭದಲ್ಲೇ ವಜ್ರಂದ ಕುಮಾರನ ವ್ಯಕ್ತಿತ್ವವನ್ನು ಸೂಚಿಸುವುದನ್ನು ಕಾಣುತ್ತೇವೆ. ಕಬೇದಿಯಾಳಿಗೆ ಸತ್ಯದ ಹೊಟ್ಟೆ ಬಂದಿದ್ದರೂ ಊರಿನಲ್ಲಿರುವುದು ಕಳಂಕವೆಂದು ಊರುಬಿಟ್ಟು ನಾಲ್ಕು ಮಂದಿ ಅಣ್ಣಂದಿರೊಂದಿಗೆ ಹೋಗುತ್ತಾಳೆ. ‘ಕಾಂತರಂದ ಪದವಿ’ ನಲ್ಲಿ ತಂಗುತ್ತಾರೆ. ತಂಗಿಯ ಬಾಯಾರಿಕೆಯನ್ನು ನೀಗಿಸಲು ನೀರು ತರಲು ಬಯಲಿಗೆ ಹೋದ ಅಣ್ಣಂದಿರನ್ನು ‘ಬಂಗಾಡಿ ಬೂಡಿ’ನ ಅರಸನು ಕಳ್ಳಾಟಿಕೆಯವರೆಂದು ಬಗೆದು, ಹಿಡಿದು, ‘ಗುಂಡು ಸಂಕಲೆ’ ಹಾಕಿ ಕಟ್ಟಿಸುತ್ತಾನೆ. ಇತ್ತ ಕಬೇದಿಯಾ ನೀರನ್ನು ಅರಸುತ್ತಾ ತೋಡಿನ ಬದಿಗೆ ಹೋಗುವಾಗ ಹೆರಿಗೆಯ ನೋವಾಗಿ, ಪೊದರಿನ ಮರೆಯಲ್ಲಿ ಗಂಡುಮಗುವನ್ನು ಹೆರುತ್ತಾಳೆ. ಆದರೆ ಮಗುವನ್ನು ಮಣ್ಣಿನಲ್ಲಿ ಕುತ್ತಿಗೆಯವರೆಗೆ ಮುಚ್ಚಿ, ವಜ್ರಂದ ಕುಮಾರನೆಂದು ಹೆಸರಿಟ್ಟು, ವಜ್ರದ ಆಯುಷ್ಯ ಮತ್ತು ವಜ್ರದ ಪಟ್ಟವನ್ನು ಪಡೆದು ಬಾಳು ಎಂದು ವರ ಕೊಟ್ಟು ಹೋಗುತ್ತಾಳೆ. ಕತೆಯಲ್ಲಿ ಕುತೂಹಲವನ್ನು ಕೆರಳಿಸುವ ಚಿತ್ರಣವಿದು. ವರವು ಹೇಗೆ ಫಲಿಸುತ್ತದೆ ಎಂಬ ಪ್ರಶ್ನೆಯು ಕುತೂಹಲವು ಕೊನೆಯವರೆಗೂ ಇರುವಂತೆ ಮಾಡುವುದು. ಮಗು ಒಬ್ಬ ಮೊಗವೀರ(ಮರಕಲ) ಗಂಡಸಿಗೆ ಕಾಣಸಿಗುತ್ತದೆ. ಮಣ್ಣಿನಿಂದ ತೆಗೆದು, ಮನೆಗೆ ಕರೆದುಕೊಂಡು ಹೋಗಿ ಅಜ್ಜಿಯ ಬಳಿಯಲ್ಲಿ ಸಾಕಿ ಸಲಹುತ್ತಾನೆ. ಚೌಟರ ಮನೆತನದಲ್ಲಿ ಅರಸನಾಗಲು ಬಾಲಕನೊಬ್ಬ ಬೇಕೆಂದು ಡಂಗುರ ಸಾರುತ್ತಾರೆ. ವೈಭವವನ್ನು ನೋಡಲು ಅಜ್ಜಿಯು ಮಗುವನ್ನು ಕರೆದುಕೊಂಡು ಹೋಗುತ್ತಾಳೆ. ಪಟ್ಟದರಸನನ್ನು ಆರಿಸಲು ಪಟ್ಟದಾನೆಯು ಹೂಮಾಲೆಯನ್ನು ಹಿಡಿದುಕೊಂಡು ಬರುತ್ತದೆ. ಆನೆಯು ಮೂರು ಸುತ್ತು ತಿರುಗಿ ನೋಡಿ ಅಜ್ಜಿಯ ಬಳಿಯಲ್ಲಿದ್ದ ಮಗುವಿನ ಕೊರಳಿಗೇ ಹಾಕುತ್ತದೆ. ಆ ಮಗುವೇ ‘ವಜ್ರಂದ ಕುಮಾರ’ ಮುಂದೆ ಚೌಟರ ಅರಸ. ಕತೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಚೌಡರ ಅರಸ ವಜ್ರಂದ ಕುಮಾರನು ಬೇಟೆಗೆ ಹೋದಾಗ ಕಾಡಿನಲ್ಲಿ ಮಲಗಿದ ತಾಯಿಯನ್ನು ನೋಡುತ್ತಾನೆ. ತಾಯಿ ಸಂತೋಷದಿಂದ ಅಳುತ್ತಾಳೆ. ತಾಯಿಯನ್ನು ಪಾಲಕಿಯಲ್ಲಿ ಹೊತ್ತುಕೊಂಡು ಅರಮನೆಗೆ ಹೋಗುತ್ತಾನೆ. ತಾಯಿಯ ಅಪೇಕ್ಷೆಯಂತೆ ‘ಬಂಗರ ಬೀಡಿ’ ನಲ್ಲಿ ಬಂಧಿತರಾದ ಮಾವಂದಿರನ್ನು ಬಿಡಿಸಿ ತನ್ನ ಸಂಸಾರದೊಂದಿಗೆ ರಾಜ್ಯವಾಳುತ್ತಾನೆ.

ಆನೆಯು ಹೂಮಾಲೆ ಹಾಕಿ ಪಟ್ಟದರಸನನ್ನು ಆರಿಸುವ ಘಟನೆಯು ‘ನಂಬಿಯಣ್ಣನ ರಗಳೆ’ಯನ್ನು ನೆನಪಿಗೆ ತರುತ್ತದೆ. ಕತೆಯಲ್ಲಿ ಹಲವಾರು ಘಟನೆಗಳಿದ್ದರೂ ಸಾವಯವ ಸಂಬಂಧವಿರುವುದು ಕಥನ ಕೌಶಲಕ್ಕೆ ಸಾಕ್ಷ್ಯ. ‘ಕೊರಗ ತನಿಯ’ ಮತ್ತು ‘ವಜ್ರಂದಕುಮಾರ’ ಪಾಡ್ದನಗಳು ಕತೆಯ ನಿರೂಪಣೆಯ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಇಲ್ಲಿಯ ಪಾತ್ರಚಿತ್ರಣವು ಸಹಜವಾಗಿ ಸೂಚ್ಯವಾಗಿ ಲೌಕಿಕದೆಡೆ ಮುಂದುವರಿಯುತ್ತದೆ. ‘ಕಾಂತುಳ್ಳ ಕಬೇದಿಯಾ’, ‘ವಜ್ರಂದಕುಮಾರ’ ಮತ್ತು ‘ಕೊರಗ ತನಿಯ’ – ಈ ಪಾತ್ರಗಳು ಸತ್ಯದ ಹಿನ್ನಲೆಯಿಂದ ಮೂಡಿಬಂದವು. ಆ ಸತ್ಯದಿಂದಲೇ ಕಷ್ಟಕರವಾದ ಜೀವನದ ಕೊನೆಗೆ ಸುಖವನ್ನು ಪಡೆದು ಅಲೌಕಿಕ ಶಕ್ತಿಯುಳ್ಳವರೆನಿಸಿಕೊಳ್ಳುತ್ತಾರೆ.

ಸೂಚ್ಯವಾಗಿ ಬಂದಿರುವ ವರ್ಣನೆಗಳು ಹೃದಯಸ್ಪರ್ಶಿಗಳಾಗಿವೆ. ಕಾಂತುಳ್ಳ ಕಬೇದಿಯಾ ಅಣ್ಣಂದಿರನ್ನು ಕಳೆದುಕೊಂಡು ಅನಾಥಳಾದರೂ ಅವಳ ಭಾವೀ ಜೀವನವು ಉತ್ಕೃಷ್ಟವಾಗುವುದೆಂಬುದನ್ನು ಕವಿ ಒಂದು ಮಾತಿನಲ್ಲಿ ಸೂಚಿಸುತ್ತಾನೆ – ‘ಹೊಟ್ಟೆಯಿಂದ ಬಂದ ಮಗು ಉದಯಿಸುವ ಸೂರ್ಯನ ಹಾಗೆ’ ಇತ್ತು ಎನ್ನುವಲ್ಲಿ ಸಮಾಜದ ನಿರ್ಬಂಧಕ್ಕೆ ಹೆದರಿ ಮಗುವನ್ನು ಹರಸಿ ತ್ಯಜಿಸುತ್ತಾಳೆ. ಆದರೆ ಸೂರ್ಯನ ಹಾಗೆ ಉದಯಿಸಿದ ವಜ್ರಂದ ಕುಮಾರ ಅರಸನಾಗಿ ತಾಯಿಯ ಮತ್ತು ಸೋದರ ಮಾವನವರ ಬಾಳಿನ ಕತ್ತಲೆಯನ್ನು ದೂರ ಮಾಡುತ್ತಾನೆ. ಈ ಒಂದು ಉಪಮೆಯು ವಜ್ರಂದಕುಮಾರನ ವ್ಯಕ್ತಿತ್ವವನ್ನು ವರ್ಣಿಸುವುದು ಮಾತ್ರವಲ್ಲದೆ ಭಾವೀ ಜೀವನವನ್ನು ವ್ಯಕ್ತಪಡಿಸುವುದು. ಮೇಲಿನ ವರ್ಣನೆ ಧ್ವನಿಯುಕ್ತವಾಗಿದೆಯೆಂಬುದು ವಾಚಕರ ಗಮನಕ್ಕೆ ಬಂದಾಗ ಅದರ ಅರ್ಥವ್ಯಾಪ್ತಿ ಮಹತ್ವದ್ದೆನಿಸುತ್ತದೆ. ಆದರೆ ಜನಪದ ಕವಿಯು ಇದೇ ಅರ್ಥದಲ್ಲಿ ಬಳಸಿದ್ದಾನೆಯೇ ಎನ್ನುವ ಪ್ರಶ್ನೆ ಪ್ರತ್ಯೇಕವಾದುದು. ಹಳ್ಳಿಗರು ತಯಾರಿಸಿದ ಲಾಡಿನ ಪಾಕಕ್ಕೂ, ನಾಗರಿಕರ ಲಾಡಿನ ಪಾಕಕ್ಕೂ ಯಾವ ವ್ಯತ್ಯಾಸವೂ ಇಲ್ಲದಿರುವಾಗ, ಹಳ್ಳಿಗರು ತಯಾರಿಸಿದುದನ್ನೂ, ಲಾಡು ಎಂದರೆ ಕರೆದರೆ ತಪ್ಪಾದೀತೆ? ಅದರ ರುಚಿಯನ್ನು ವರ್ಣಿಸಿದರೆ ಅತಿಯಾದೀತೆ?

ಸಹಜ ಸುಂದರ ವರ್ಣನೆಯು, ಚಿತ್ರಣವು ಒಂದೆರಡು ಮಾತುಗಳಲ್ಲೇ ಇರುವುದನ್ನು ಕಾಣಬಹುದು. ಅನಾಥ ಬಾಲಕ ಕೊರಗ ತನಿಯನು ಮೈರಕ್ಕೆ ಬೈದ್ಯೆತಿಯನ್ನು ಕಂಡಾಗ – ‘ಒಮ್ಮೆ ನೋಡುವಾಗ ನಗುತ್ತಾನೆ, ಒಮ್ಮೆ ನೋಡುವಾಗ ಅಳುತ್ತಾನೆ’ (ಒರ ತೂನಗ ತೆಲಿಪೆ, ಒರ ತೂನಗ ಬುಳುಪೆ). ಅನಾಥನಾದವನು ಆಶ್ರಯ ಪಡೆಯಬಹುದೆಂಬ ಸ್ಥಿತಿಯಲ್ಲಿರುವಾಗ ಯಾವ ಮನೋಧರ್ಮವುಳ್ಳವರಾಗಿರುತ್ತಾರೆ ಎಂಬುದನ್ನು ಚುಟುಕಾಗಿ ವಾಚಕರ ಮುಂದಿಟ್ಟ ರೀತಿ ಇದು. ಇನ್ನೊಂದೆಡೆ ‘ನನಗೆ ಅಂಡಕ್ಕೆ ಬಟ್ಟೆಯಿಲ್ಲ. ಅಂಡಕ್ಕೆ ಬಟ್ಟೆ ಕೊಡಿ ತಾಯೀ’ (ಎಂಕ್ ಅಂಡ್‌ಗ್ ಕುಂಟಿಜ್ಜಿ. ಅಂಡ್‌ಗ್ ಕುಂಟು ಕೊರ್ಲೆ ಅಪ್ಪೆರೇ) ಎಂದು ನೇರವಾಗಿ ಕೇಳುತ್ತಾನೆ. ಮುಗ್ಧ ಮನಸ್ಸಿನ ಶುಚಿರೂಪದ ಚಿತ್ರವಿದು. ವಜ್ರಂದ ಕುಮಾರ ಬೇಟೆಗೆ ಹೋಗುವಾಗ ಕಾಡಿನ ಚಿತ್ರವನ್ನು ಒಂದು ಮಾತಿನಲ್ಲಿ ಸೂಚ್ಯವಾಗಿ ವರ್ಣಿಸುತ್ತಾನೆ – ‘ಕತ್ತಲೆಯ ಕಾಡಂತೆ, ಬೆಳ್ಳಿಯಷ್ಟು ಬೆಳಕು’ ಎಂಬ ಮಾತನ್ನು ಗಮನಿಸಬೇಕು. ಸೂರ್ಯೋದಯಕ್ಕಿಂತ ಮೊದಲು ‘ಬೆಳ್ಳಿ’ ಎಂದು ಹಳ್ಳಿಗರು ಕರೆಯುವ ಗ್ರಹದ ಬೆಳಕಿನಿಂದ ಕತ್ತಲೆಯು ತಿಳಿಯಾಗಿರುತ್ತದೆ. ಕಾಡು ಎಷ್ಟು ದಟ್ಟವಾಗಿತ್ತು ಎನ್ನುವುದನ್ನು ಸೂಚ್ಯವಾಗಿ ಹೇಳಲು ಹೋಗುವುದಿಲ್ಲ. ‘ಕತ್ತಲೆಯ(ದ್ದೇ) ಕಾಡು ಎನ್ನುವುದೂ ಕಾಡಿನ ಭೀಕರತೆಯನ್ನು ನಮ್ಮ ಮುಂದಿಡುತ್ತದೆ. ಜನಪದ ಕವಿಗೆ ಆಡಂಬರದ ಶಬ್ದಗಳಿಂದ ಕಾಡಿನ ವಿಸ್ತಾರವಾದ ವರ್ಣನೆ ಅನಗತ್ಯ. ಎಂತಹ ಕಾಡಿಗೆ ಬಂದಿದ್ದಾನೆ, ಎಂತಹ ಕಾಡಿನಲ್ಲಿ ಕಾಂತುಳ್ಳ ಕುಬೇದಿಯಾ ಒಬ್ಬಳೇ ‘ದಡ್ಡಲ’ ಮರದ ಎಲೆಯನ್ನು ಹೊದೆದು ಮಲಗಿದ್ದಾಳೆ ಎನ್ನುವುದನ್ನು ಒಂದು ಮಾತಿನಲ್ಲಿಯೇ ಹೇಳಿಬಿಡುವುದು ಸಹಜ ಪ್ರತಿಭೆಯ ಮತ್ತು ಅನುಭವ ಪರಿಪಕ್ವತೆಯ ಫಲವಾಗಿದೆ. (ಕಾಡಿನ ಭೀಕರತೆ, ವೈಶಾಲ್ಯ, ಕಾಂತುಳ್ಳ ಕಬೇದಿಯಾಳ ಸ್ಥಿತಿ ಮೊದಲಾದ ಅಂಶಗಳನ್ನು ಈ ಒಂದು ವರ್ಣನೆಯ ಹಿಂದಿನಿಂದ ಎಷ್ಟು ಊಹಿಸಬಹುದು. ಊಹಿಸಲು ಅಸಾಧ್ಯವಾದುದಲ್ಲ ಕವಿ ಸಮಯಗಳಂತೆ).

ವರ್ಣನೆಗಳು ಅತಿ ವಿರಳ, ಇರುವ ವರ್ಣನೆ ಉಚಿತ, ಅರ್ಥಪೂರ್ಣ ನೇರವಾಗಿ ಸಹಜ ಕತೆಯನ್ನು ಹೇಳುತ್ತಾ ಹೋಗುವುದೇ ಜನಪದ ಕವಿಯ ಉದ್ದೇಶವಾಗಿರುವುದರಿಂದ ಘಟನೆಗಳ ಹಿಂದೆ ಘಟನೆಗಳನ್ನು ಪೋಣಿಸಿ, ಪಾತ್ರ ಮತ್ತು ಜನಜೀವನಗಳನ್ನು ಚಿತ್ರಿಸುತ್ತಾ ಕುತೂಹಲಕಾರಿಯಾಗಿ ನಿರೂಪಿಸುತ್ತಾನೆ. ಈ ಮಾತು ‘ಕೊರಗ ತನಿಯ’, ‘ವಜ್ರಂದ ಕುಮಾರ’, ‘ಕೋಟಿ ಚೆನ್ನಯ’, ‘ಕರ್ನಗೆ’ ಮೊದಲಾದ ಪಾಡ್ದನಗಳಿಗೆ ಹೆಚ್ಚು ಅನ್ವಯಿಸುತ್ತದೆ. ಕವಿಯ ಔಚಿತ್ಯವನ್ನು ಎಂದೆಂದಿಗೂ, ಮೀರುವುದಿಲ್ಲವೆಂದು ಹೇಳಬಹುದು. ಪಾಡ್ದನಗಳನ್ನು ಕೆಲವೊಂದು ವಂಶದವರು, ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಹಾಡುವ ಸಂಪ್ರದಾಯವಿದ್ದುದರಿಂದ ಆ ರೀತಿಯ ಉತ್ತಮ ಗುಣಗಳಿಂದ ಉಳಿದುಬಂದಿದೆ.

ದೈವದ ನೆಂಟಸ್ತಿಕೆಯನ್ನು ಬೆಳೆಸಿದುದರಿಂದ ಹುಟ್ಟಿದ ಇಬ್ಬರು ಕುವರರುಗಳು ತುಳುನಾಡಿನಲ್ಲಿ ದೈವವಾದ ಕತೆಯನ್ನು ಹೇಳುತ್ತದೆ. ‘ವಿಟ್ಲ ಸೀಮೆತ ಒಕ್ಕೆತ್ತೂರುತ ದೈವೊಂಗುಳು’ ಪಾಡ್ದನ ಕುವರರು ಹುಟ್ಟಿ ಬೆಳೆದ ಕತೆಯ ಜೊತೆಯಲ್ಲಿ ಆಚರಿಸಿಕೊಂಡು ಬಂದ ಸಂಪ್ರದಾಯವನ್ನೇ ಹೆಚ್ಚಾಗಿ ವರ್ಣಿಸುತ್ತಾನೆ. ಸಂಸ್ಕೃತಿಯ ದೃಷ್ಟಿಯಿಂದ ತೀರ ಮಹತ್ವವುಳ್ಳ ಪಾಡ್ದನವಿದು. ಇಲ್ಲಿಯ ಕತೆ ಬಹಳ ಸಣ್ಣದು. ಆದರೂ ಕೇಂದ್ರ ಪಾತ್ರಗಳಿಗೆ ಸಂಬಂದಧಿಸಿದ ವಿವರಣೆಗಳನ್ನು ಕೊಟ್ಟಿರುವುದರಿಂದ ಕತೆಯು ದೀರ್ಘವಾಗಿ ಕಾಣುತ್ತದೆ. ಕುವರರು ಗಟ್ಟಿದ ಅರಸುಮಕ್ಕಳು. ವಿದ್ಯೆ ಕಲಿತು ಹದಿನಾರು ವರ್ಷಗಳಾದ ಬಳಿಕ ಚವಲ ನಡೆಯುತ್ತದೆ. ಅರಮನೆಯಲ್ಲಿ ಪಟ್ಟ ಸ್ವೀಕರಿಸಿ, ಆನೆ ಕುದುರೆ ಸಮೇತರಾಗಿ ತುಳುನಾಡಿಗೆ ಬರುತ್ತಾರೆ. ಬರುವಾಗ ನಾಗದೇವರ (ಕುಕ್ಕೇ ದೇವರ) ಉತ್ಸವ ಪ್ರಾರಂಭವಾಗಿತ್ತು. ಇವರು ಬಿಟ್ಟ ಬಾಣದಿಂದ ಕುಕ್ಕೇ ದೇವರ ದೇವಾಲಯದ ಮುಗುಳಿ ಮೂರು ತುಂಡಾಗಿ ಮೂರು ಪ್ರದೇಶಗಳಿಗೆ ಹೋಗಿ ಬೀಳುತ್ತದೆ. ಆದರೆ ಕೊನೆಗೆ ಇವರು ದೈವವಾಗುತ್ತಾರೆಂಬ ವಿವರಣೆಯಿಲ್ಲ. ದೈವಾಂಶ ಸಂಭೂತರೆಂದು ಪ್ರಾರಂಭದಲ್ಲಿ ಮಾತ್ರ ತಿಳಿಯುತ್ತದೆ.

ಈ ಪಾಡ್ದನದ ವರ್ಣನೆ, ಭಾಷೆ ಮೋಹಕವಾದುದು. ವರ್ಣನೆಯು ಕ್ರಿಯಾತ್ಮಕವಾಗಿ ಮುಂದುವರಿಯುತ್ತದೆ. ವಿದ್ಯೆ ಕಲಿಯುವ ವರ್ಣನೆ ಆಗಿನ ಕಾಲದ ವಿದ್ಯಾಭ್ಯಾಸದ ಕ್ರಮವನ್ನು ಮತ್ತು ಅವರ ಬೆಳವಣಿಗೆಯನ್ನು ಜೊತೆ ಜೊತೆಯಾಗಿಯೇ ಸೂಚಿಸುತ್ತದೆ. ‘ಅಡ್ಡಕ್ಕೆ ಕೋಲು, ನೀಟಕ್ಕೆ ಹದಿನಾಲ್ಕು ಕೋಲು ಓದುವ ಶಾಲೆ ಕಟ್ಟಿಸಿದರು. ಹೊಳೆಯ ಬಳಿ ದಡಕ್ಕೆ ಕಳುಹಿಸಿ ಸಣ್ಣ ಹೊಯ್ಗೆಯನ್ನು ತರಿಸಿದರು. ಒಳ್ಳೆಯ ದಿನ ನೋಡಿ ಓದುವ ಶಾಲೆಯಲ್ಲಿ ಓಲಗದವರು ಹದಿನಾಲ್ಕು ಬಳ್ಳಿ ಬರೆದರು. ಇಪ್ಪತ್ತನಾಲ್ಕು ಮಗ್ಗಿ ಗುಣಿಸಿದರು. ಬಾಯಿಯ ಅಕ್ಷರ ಹೊಯ್ಗೆಯಲ್ಲಿ ಆಯ್ತು. ಹೊಯ್ಗೆಯ ಅಕ್ಷರ ಬಾಯಿಯಿಂದ ಬಂತು. ಸಣ್ಣ ಹೊಯ್ಗೆಯ ಬರಹ ಬಿಟ್ಟರು. ಬಳಪದ ಅಕ್ಷರ ಬರೆದರು. ಬಳಪದ ಅಕ್ಷರ ಬಾಯಿಗೆ ಬಂತು. ಬಾಯಿಯ ಅಕ್ಷರ ಬಳಪದಲ್ಲಿ ಬಂತು. ಬಳಪ, ಬಾಯಿಯ ಅಕ್ಷರ ಬಿಟ್ಟರು, ಓಲೆಕಂಠ ಹಿಡಿದು ಬಂದ ಓಲೆಗೆ ಉತ್ತರ ಬರೆದರು’ (ಅಡ್ಡ ಏಳ್ ಕೋಲು, ನೀಟ ಪದ್ನಾಲ್ ಕೋಲು, ಓದಿತ ಕೊಟ್ಯ ಕಟ್ಟಾಯೆರ್. ಸುದೆ ಬೊಲ್ದು ರಂಗ್ ಕಡ್ಪುಡ್ತು ಸಣ್ಣ ಪೊಯಿ ಪೊಯ್ಯೆ ತರ್ಪುಡಿಯೆರ್. ಎಡ್ಡೆಂಚಿ ವಾರೊಡು ರಾಶಿ ಮುಹೂರ್ತೊಟು, ಓದಿತ ಕೊಟ್ಯ ಓಲೆಗಾಯೆರ್. ಪದ್‌ರಾಡ್ ಬಳ್ಳಿ ಬರೆಯೆರ್. ಇರ್ವತ್ತನಾಲ್ ಮಗ್ಗಿ ಗುಣಿತೆರ್. ಬಾಯಿತಕ್ಷರೊ ಪೊಯ್ಯೆತ್ತಾಂಡ್. ಪೊಯ್ಯೆತಕ್ಷರೊ ಬಾಯಿತ್ ಬತ್ತ್ಂಡ್. ಸಣ್ಣವುಳ್ಳ ಪೊಡಿ ಯೊಯ್ಯೆತ ಬರವು ಬುಡ್ಯೆರ್‌. ಬಳಪ ಒಳವುತ ಅಕ್ಷರ ಪತ್ಯೆರ್. ಬಳವುತಕ್ಷರೊ ಬಾಯಿತಾಂಡ್‌, ಬಾಯಿತಕ್ಷರೊ ಬಳವುಡು ಬತ್ತ್ಂಡ್. ಬಳವು ಬಾಯಿತಕ್ಷರೊ ಬುಡ್ಯೆರ್. ಓಲೆ ಕಂಟಕೊ ಪತ್ಯೆರ್. ಬತ್ತಿ ಓಲೆಗ್ ಉತ್ತರ ಬರೆಯರ್.) ‘ಕಲ್ಕುಡ’ ಪಾಡ್ದನದಲ್ಲಿ ಸಣ್ಣ ಮಕ್ಕಳು ಬೆಳೆದುದನ್ನು ಹಂತ ಹಂತವಾಗಿ ಚಿತ್ರಿಸಿದಂತೆ, ಇಲ್ಲಿಯೂ ವಿದ್ಯಾಭ್ಯಾಸದ ಹಂತ ಹಂತದ ಚಿತ್ರಣವಿದೆ.

ಕ್ರಿಯೆಯ ಗತಿಯು ವೇಗವಾಗಿರುವುದನ್ನು, ಅಲ್ಪಕಾದಲ್ಲಿಯೇ ನಡೆಯಿತೆಂಬುದನ್ನು ಸಣ್ಣ ಸಣ್ಣ ವಾಕ್ಯಗಳಲ್ಲಿ ಹೇಳಿ ವಾಚಕರಿಗೆ ಭಾಷೆಯಲ್ಲಿಯ ಭಾವಾಭಿನಯವನ್ನು ಸೂಚಿಸಿದಂತಿದೆ. ಓಲೆಯನ್ನು ಕಳುಹಿಸಿದ ವರ್ಣನೆಯೂ ಇದೇ ರೀತಿ ಸುಂದರವಾಗಿದೆ. ಉತ್ತಮ ಕಾವ್ಯಗುಣವನ್ನು ಪಡೆದಿದೆ -‘ಓಲೆ ಬರೆದಾಯ್ತು. ಚಂದ್ರಿಕೆ ಮಡಿಸಿದರು. ಸೆರಗಿನಲ್ಲಿ ಪಡಿಯಕ್ಕಿ, ಮುಚ್ಚಿದ ಓಲೆ ಕಟ್ಟಿತ್ತು. ಗಟ್ಟದ ಮೇಲೆ ಓಲೆ ಹೋಯ್ತು. ಅಡ್ಡ ಬಂತು ಮಣ್ಣಿನ ಬೇಲಿ. ಎದುರು ಬಂತು ‘ಗುಜ್ಜಿ ತಡಮೆ’ ಹೋದ ಮಾಣಿ ಒಂದು ಕಾಲು ಮೆಟ್ಟಿ ಓರೆಯಾಗಿ ನಿಂತು ಕರೆದ. ಒಂದಕ್ಕೆ ಓ ಕೊಟ್ಟ, ಎರಡಕ್ಕೆ ಯಾರಪ್ಪಾ ಮನುಷ್ಯ ಕರೆಯುವುದು ಎಂದ. ಕುವರರ ಅರಮನೆಯಿಂದ ಬಂದ ಓಲೆ ಬಿಚ್ಚಿಕೊಟ್ಟ, ಸೆರಗಿನಿಂದ ಪಡಿಯಕ್ಕಿ ಬಿಚ್ಚಿಕೊಟ್ಟ. ಕೆಳಗೆ ಬಿಡಿಸಿಬಿಟ್ಟ. ಉದ್ದಕ್ಕೆ ಓದಿದ. ಓಲೆಯ ಓದುವಿಕೆಯನ್ನು ಮಾಡಿದ. ತನ್ನ ‘ಬಾಳು ಬಕನ’ ಹಿಡಿದುಕೊಂಡು ತುಳುರಾಜ್ಯಕ್ಕೆ ಬಂದ’. (ಓಲೆ ಮದಿತ್ತ್ಂಡ್. ಚಂದ್ರಿಕೆ ಮಲ್ತೆರ್. ಸೆರಗ್‌ತ್ ಪಡಿಯರಿ ಮುಚ್ಚಿತ್ ಓಲೆ ಕಟ್ಟ್‌ಂಡ್‌. ಗಟ್ಟದ ಮಿತ್ತ್ ಓಲೆ ಪೋಂಡು. ಅಡ್ಡ ಬತ್ತ್ಂಡ್ ಮಣ್ಣ ಬೇಲಿ, ಬರೂ ಬತ್ತ್ಂಡ್ ಗುಜ್ಜಿ ಸಡಮೆ. ಪೋಯಿ ಮಾಣಿ ಒರಿಕಾರ್ ಮುಟ್ಟ್‌ತ್ ಓರೆ ಸರೀರೊಟು ಲೆತ್ತೆ. ಒಂಜೈಕ್ ಓಕೊರ್ಯೆ, ರಡ್ದೈಕ್ ಏರಲಪ್ಪಾ ಮಾನಿಯೆ ಲೆಪ್ಪುನೆ ಕೇಂಡೆ. ಕುವರೆರೆ ಅರಮನೆಡ್ತ್ ಬತ್ತಿ ಓಲೆ. ಗಿಚ್ಚಿತ್ ಕೊರ್ಯೆ. ಸೆರಗೆಡ್ತ್ ಪಡಿಯರಿ ಗಿಚ್ಚಿತ್ ಕೊರ್ಯೆ ದಂಗುಲ ಬುಡ್ಯೆ, ಮಾರ್ಪುಲ್ಲ ಒಯ್ತೆ. ಓಲೆತ ಓದುಗೊ ಮಾನ್ತೆ.

ಸತ್ವಯುತವಾದ ಭಾಷೆಯಲ್ಲಿ, ಕಣ್ಣಿಗೆ ಕಟ್ಟುವ ರೀತಿಯಲ್ಲಿ ಚಿತ್ರಣಗೊಂಡ ಪಾಡ್ಡನದ ಕಾವ್ಯ – ಮೌಲ್ಯವನ್ನು ಹೆಚ್ಚಿಸಿದೆ. ಒಬ್ಬ ಕಲಾಗಾರನಿಗೆ ಚಿತ್ರ ಬಿಡಿಸುವ ಮಾದರಿಯನ್ನು ಭಾಷೆಯಲ್ಲಿ ವಿವರಿಸಿದ ಹಾಗೆ. ‘ಕನ್ನಡ ಕ್ಷೌರಿಕ ಬಂದ, ಬಲಬದಿಯಲ್ಲಿ ನೀರುಬಟ್ಟಲು ಇಟ್ಟ. ಬಲದ ಕೆನ್ನೆಗೆ ನೀರು ಬಾಳು ಇಟ್ಟ. ಕೆನ್ನೆಯಿಂದ ಬಂತು ನಾಜೂಕಿನ ಕೆಲಸ. ಕಡೆಯ ಮೀಸೆ ಕತ್ತರಿಸಿದ. ಕುಡಿಮೀಸೆ ಜಿಂದಾಗಿಸಿದ. ಎದೆಯ ರೋಮವನ್ನು ಸಂಪೂರ್ಣ ತೆಗೆದ. ಕೈಯ ಉಗುರು, ಕಾಲಿನ ಉಗುರು,ಕೆಲಸ ಮುಗಿಸಿದ’.

(ಕನ್ನಡ ಕೆಲೆಸಿ ಬತ್ತೆ. ಬಲತ್ತಾಗ್ ನೀರ ಬಟ್ಟಲ್ ದೀಡಿಯೆ. ಬಲತ್ತ ಕೆನ್ನೆಗೆ ನೀರಬಾಳ್‌ದೀಡಿಯೆ. ಕೆನ್ನಿತ್ ಬತ್ತ್ಂಡ್‌ ಪನ್ನೆತ ಬೇಲೆ. ಕಡೆಮೀಸೆ ಕತ್ತೆರಿತೆ, ಕೊಡಿಮೀಸೆ ಮುತ್ತೆರಿತೆ. ತಿಗಲೆದ ಜಮರಿ ಒತ್ತರಿ ಒತ್ತರೆ ಕಲೆಯೆ. ಕೈತ ಉಗುರ ಕಾರ್ತ ಉಗುರು, ಕೆಲಸ ಮುಗಿತೆ). ಒಂದು ಕ್ಷೌರ ಮಾಡುವ ಚಿತ್ರಣವನ್ನು ಸವಿವರವಾಗಿ ಜನಪದ ಕವಿಯು ಕೊಡುವುದರಲ್ಲಿಯೂ ಸೌಂದರ್ಯವಿದೆ. ಓಲೆಯವನು ಓಲೆ ಕೊಂಡುಹೋದ ವಿಚಾರವು ಸಣ್ಣವಾದರೂ ಅದರ ಚಿತ್ರಣ ಸುಂದರವಾಗಿದೆ. ‘ಒಂದು ಕಾಲು ಮೆಟ್ಟಿ ಓರೆ ನಿಂತು ಕರೆದ’ ಎನ್ನುವ ವಾಕ್ಯವನ್ನು ಓದಿದಾಗ ತುಂಬ ಸಂತೋಷವಾಗುತ್ತದೆ. ತೀರ ಸಹಜವಾಗಿ ಚಿತ್ರಿಸುವುದು ಪಾಡ್ದನಗಳ ವೈಶಿಷ್ಟ್ಯ. ಈ ಪಾಡ್ದನದ ಭಾಷೆಯ ಗತ್ತೇ ಬೇರೆ.

ಕುವರರು ಬಳಸಿದ ಪಟ್ಟೆಯ ಗುಣವನ್ನು ಅತಿಶಯೋಕ್ತಿಯಲ್ಲಿ ವರ್ಣಿಸುವ ರೀತಿಯು ವಿಶಿಷ್ಟವಾಗಿದೆ – ‘ಮೂಗಿನ ಗಾಳಿಗೆ ಮುನ್ನೂರು ಗಾವುದ ಹಾರುವ ಪಟ್ಟೆ. ಕಣ್ಣೀರಿಗೆ ಒದ್ದೆಯಾಗುವ ಬಟ್ಟೆ. ಸಣ್ಣ ಬೆರಳಿನಿಂದ ಅಡಗುವ ಪಟ್ಟೆ’ (ಮೂಂಕುತ ಗಾಳಿಗ್ ಮುನ್ನೂದು ಗಾವುದ ಪಾರುನ ಪಟ್ಟೆ, ಕಣ್ಣೀನೀರ್‌ಗ್ ಚಂಡಿ ಆಪುನ ಪಟ್ಟೆ, ಕಿಂಕಿಣಿ ಬಿರೆಳ್‌ತ್ ಅಡುಗುನ ಪಟ್ಟೆ.)

ಈ ಪಾಡ್ಡನದ ಕೆಲವು ಶಬ್ದ ಪ್ರಯೋಗಗಳು ಅರ್ಥ ಮಾಡಲು ಕಷ್ಟಕರವಾಗಿವೆ. ‘ಉಂಗಿಲೊ ಜಂತಮುರಿ ಗಟ್ಟ ಜತ್ತೆರ್’ ‘ ಬೊಳ್ಳಿತ ಪೊರ್ಣೆ ಮೊದಳಿ ತೊರ್ತೆರ್’ ಇತ್ಯಾದಿ. ಸಂಗ್ರಹಕಾರನಿಂದ ಹೀಗಾಯಿತೋ ಅಥವಾ ಇಂತಹ ಶಬ್ದಗಳೇ ಇವೆಯೋ ಎನ್ನುವುದನ್ನು ಹೇಳುವಂತಿಲ್ಲ.

ಮೇಲಿನ ವರ್ಣನೆಗಳಲ್ಲಿ ಭಾಷೆಯ ನೈಜ ಸತ್ವವನ್ನು ಸುಲಭವಾಗಿ ಕಾವ್ಯರೂಪದಲ್ಲಿ ಇಳಿಸಿದ್ದಾನೆ ಕವಿ. ಇಲ್ಲಿಯ ವರ್ಣನೆಗಳನ್ನು ನೋಡುವಾಗ ಪಾತ್ರಗಳು ಗೌಣ ಎಂಬಂತಿವೆ.

***

ಸ್ತ್ರೀಯರೇ ಪ್ರಮುಖ ಪಾತ್ರವಾಗಿರುವ ಪಾಡ್ದನಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಉಚಿತವಾಗಿದೆ. ಜನತೆಯ ಮೇಲೆ ಪರಿಣಾಮಕಾರಿಯಾಗುವಂತೆ ಪ್ರಭಾವ ಬೀರಿದ ಸ್ತ್ರೀಯರ ಜೀವನವು ಕೆಲವು ಪಾಡ್ದನಗಳಲ್ಲಿ ನಿರೂಪಿತವಾಗಿದೆ ‘ನಾಗಸಿರಿ ಕನ್ನೆಗೆ’, ‘ಕರ್ನಗೆ’ (‘ಕರ್ನಕ’), ‘ಅಸುರೆತಿ ಬಂಗಾರ್’,‘ಕೊಲ್ಲೂರ ಮೂಕಾಂಬಿ ಜೇವು’, ‘ಸುಬ್ಬಿಯಮ್ಮ’, ‘ಬೊಳ್ಯೊಲ್ಲ ಕಿನ್ಯಾಗೆ’, ‘ಬಾಲೆತಂಗಡಿ‘ ಅಥವಾ ‘ಪುತ್ತಕ್ಕ’, ‘ಬಾಲೆ ಕಿನ್ಯಾಮು’, ‘ಸಿರಿ ಅಕ್ಕೆರಸು ಪೂಂಜೆದಿ’, ‘ಓನಮ್ಮ ಜೇವು’, ‘ಮಾನಿಗ’, ‘ಪರತಿ ಮಂಗಣೆ’ ಮೊದಲಾದವು. ಇವುಗಳಲ್ಲಿ ‘ನಾಗಸಿರಿ ಕನ್ಯಗೆ’ ಮತ್ತು ‘ಸಿರಿ ಅಕ್ಕೆರಸು ಪೂಂಜೆದಿ’ ಎಂಬ ಪಾಡ್ದನಗಳ ಮೂಲ ಪಾಠವು ಸಿಗಲಿಲ್ಲ. ಕನ್ನಡ ಅನುವಾದದಲ್ಲಿ ಕತೆಯ ಸಾರವು ಲಭ್ಯವಾಗಿದೆ. ಮೇಲಿನ ಪಾಡ್ದನಗಳಲ್ಲಿ ವೈವಿಧ್ಯವಿದೆ. ಲೌಕಿಕ, ಅಲೌಕಿಕ ಅಂಶಗಳು ಇವೆ. ಅವುಗಳಲ್ಲಿ ‘ಕರ್ನಗೆ‘, ‘ಕೊಲ್ಲೂರ ಮೂಕಾಂಬಿ ಜೇವು’, ‘ಬೊಳ್ಯೊಲ್ಲ ಕಿನ್ಯಗೆ’, ‘ಓನಮ್ಮ ಜೇವು’, ‘ಮಾನಿಗ’, ‘ಪರತಿ ಮಂಗಣೆ’, ‘ಸುಬ್ಬಿಯಮ್ಮ’ – ಈ ಪಾಡ್ದನಗಳು ದುರಂತ ಕತೆಯನ್ನು ಒಳಗೊಂಡವು. ಭೂತಗಳಿಗೆ ಸಂಬಂಧಿಸಿ ಬರುವ ಪಾಡ್ದನಗಳನ್ನು ಈ ಭಾಗದಲ್ಲಿಯೇ ವಿವರಿಸಲಾಗಿದೆ. ಸಾಂಸಾರಿಕ ಸಮಸ್ಯೆಗಳಿಂದ ದುರಂತ ಚಿತ್ರಣವನ್ನೊಳಗೊಂಡ ಪಾಡ್ದನಗಳನ್ನು ಪರಿಶೀಲಿಸುವ.

‘ಕೊಲ್ಲೂರ ಮೂಕಾಂಬಿ ಜೇವು’ ಪಾಡ್ದನವು ದಾಂಪತ್ಯ ಜೀವನದ ಸಮಸ್ಯೆಯನ್ನೊಳಗೊಂಡ ದುರಂತ ಕತೆಯನ್ನು ನಿರೂಪಿಸುತ್ತದೆ. ಮಾವನಂತಿರುವವನು ಸೊಸೆಯ ವೇಲೆ ಕೈ ಮಾಡುವುದು, ಮಾವನು ತಾನು ಮಾಡಿದ ತಪ್ಪನ್ನು ತಿಳಿದು,‘ಮೂಕಾಂಬಿ ಜೇವು’ ಸಾಯುವಂತೆ ಹರಕೆ ಹೇಳುವುದು. ‘ಮೂಕಾಂಬಿ ಜೇವು’ ಗುಳಿಗನ ಉಪದ್ರವದಿಂದ ಸಾಯುವುದು, ಬಳಿಕ ಇವಳ ಕಾಷ್ಠಕ್ಕೆ ತಂದೆ, ತಾಯಿ, ಗಂಡ – ಇವರೆಲ್ಲ ಹಾರಿ ಪ್ರಾಣತ್ಯಾಗ ಮಾಡುವುದು – ಈ ಪಾಡ್ದನದಲ್ಲಿ ಬರುವ ದುರಂತ ಘಟನೆಗಳು. ‘ಮೂಕಾಂಬಿ ಜೇವ’ನ್ನು ದೇವಸ್ಥಾನದ ಪೂಜಾರಿಯಾಗಿದ್ದ ಪಟ್ಟಣ ತಂತ್ರಿಗೆ ಮದುವೆ ಮಾಡಿಕೊಡುತ್ತಾರೆ. ಬಡತನದ ಕಾರಣದಿಂದ ಪಟ್ಟಣ ತಂತ್ರಿ ದುಡಿಯಲು ದಕ್ಷಿಣ ರಾಜ್ಯಕ್ಕೆ ಕೇರಳಕ್ಕೆ? ಹೋಗುತ್ತಾನೆ. ಹೆಂಡತಿ ತಾನು ಬರುವೆನೆಂದು ಹಟ ಹಿಡಿದರೂ, ಕೇಳದೆ ‘ಕಡಂಬಾರ ಮಯ್ಯರ ಬೂಡಿ’ನಲ್ಲಿ ಬಿಟ್ಟು ಹೋಗುತ್ತಾನೆ. ‘ಕಡಂಬಾರ ಮಯ್ಯರು’ ಇವಳಿಗೆ ಪ್ರತ್ಯೇಕವಾದ ಮನೆಯನ್ನು ಕೊಡುತ್ತಾರೆ. ಒಂದು ದಿವಸ ಬಲಾತ್ಕಾರದಿಂದ ಅವಳ ಸಂಗವನ್ನನುಭವಿಸುತ್ತಾರೆ ವಿರೋಧಿಸದ ‘ಮೂಕಾಂಬಿ ಜೇವು’ ಗುಳಿಗನ ಉಪದ್ರವದಿಂದ ಸತ್ತ ಮೇಲೆ ಮಯ್ಯರು ನಿಮ್ಮ ಹುಡುಗಿಯನ್ನು ಕರೆದುಕೊಂಡು ಹೋಗಿ ಎಂದು ಅವಳ ತಂದೆ ತಾಯಿಗಳಿಗೆ ತಿಳಿಸುತ್ತಾರೆ. ತಂದೆ ತಾಯಿಗಳು ಬರುವಾಗ ಕಾಷ್ಠಕ್ಕೆ ಹೊರುವ ಕಟ್ಟಿಗೆ ಎದುರು ಸಿಗುತ್ತದೆ. ಬಳಿಕ ಮಗಳ ಚಿತೆಯಲ್ಲಿಯೇ ಬೀಳುತ್ತಾರೆ. ದಕ್ಷಿಣ ರಾಜ್ಯಕ್ಕೆ ಹೋದ ಪಟ್ಟತಂತ್ರಿಗೆ, ಕೆಟ್ಟ ಕನಸು ಬೀಳುತ್ತದೆ. ಹೆಂಡತಿಯನ್ನು ನೋಡಲು ಬಂದ ಪಟ್ಟತಂತ್ರಿ, ಹೆಂಡತಿಯ ಬೆಂಕಿಯನ್ನು ನೋಡುತ್ತಾನೆ. ಬೆಂಕಿಗೆ ಹಾರಿ ಪ್ರೇಮವನ್ನು ತೋರ್ಪಡಿಸಿ, ಹೆಂಡತಿಯೊಡನೆ ಇಹಲೋಕವನ್ನು ತ್ಯಜಿಸುತ್ತಾನೆ.

‘ಮೂಕಾಂಬಿ ಜೇವು’ ಪತಿವ್ರತೆ. ಪತಿಯ ಸುಖಕಷ್ಟಗಳು ತನ್ನದೇ ಎಂದು ಭಾವಿಸುವವಳು. ಬಡತನವನ್ನು ನೀಗಿಸಲು ಗಂಡಸು ದಕ್ಷಿಣ ರಾಜ್ಯಕ್ಕೆ ಹೋಗುವೆನೆಂದು ಹೇಳಿದಾಗ ತಾನೂ ಬರುವೆನೆಂದು ಹಟ ಹಿಡಿಯುತ್ತಾಳೆ. ತಾಯಿಮನೆಯಲ್ಲಿ ಬಿಟ್ಟು ಬರುವೆನೆಂದು ಸಮಾಧಾನಿಸಿದಾಗ, ‘ಮದುವೆಯಾಗುವ ಮೊದಲು ತಾಯಿ ತಂದೆಯ ಮನೆಯಲ್ಲಿ ಹಾಲನ್ನ ಆಗಬಹುದು. ಮದುವೆಯಾದ ಬಳಿಕ ಗಂಡನ ಮನೆಯ ಕಣ್ಣನೀರಿನ ಅನ್ನವಾದರೂ ಆಗಬಹುದು’ (ಮದ್ಮೆ ಆಪುನೆಕ್ ದುಂಬು ಅಪ್ಪೆ ಅಮ್ಮ ಇಲ್ಲದ ಪೇರ ನುಪ್ಪು ಆವುಯೆ, ಮದ್ಮೆ ಆಯಿಬೊಕ್ಕ ಕಂಡನಿ ಇಲ್ಲದ ಕಣ್ಣನೀರ್ ನುಪ್ಪು ಆವುಯೆ) ಎಂದು ಹೇಳುತ್ತಾಳೆ. ಮದವೆಯಾದ ಹೆಣ್ಣುಮಕ್ಕಳ ಮನೋಧರ್ಮ ಮತ್ತು ಅನುಭವಗಳನ್ನು ಈ ಮಾತು ಪ್ರನಿಧಿಸುತ್ತದೆ. ‘ಕಡಂಬಾರ ಮಯ್ಯ’ರು ಬಂದು ಏಕಾಂಕಿಯಾಗಿರುವ ‘ಮೂಕಾಂಬಿ ಜೇವ’ನ್ನು ಕರೆದಾಗ ತನ್ನ ಗಂಡನ ಸ್ವರವಲ್ಲವೆಂದು ನಿರಾಕರಿಸುತ್ತಾಳೆ. ಆಗ ‘ಕಡಂಬಾರ ಮಯ್ಯ’ರ ಪ್ರತಿಕ್ರಿಯೆಯನ್ನು ಸತ್ವಯುತವಾದ ಶೈಲಿಯಲ್ಲಿ ವರ್ಣಿಸುತ್ತಾನೆ – ‘ಏಳು ಗಿಂಡ್ಯ ಕೋಪ ತೆಗೆದರು ಮಯ್ಯರು, ಬಾಗಿಲಿಗೆ ಮೂರು ಪೆಟ್ಟು ಒದ್ದರು. ಬಾಗಿಲು ಹದಿನಾರು ಸೀಳಾಯಿತು’ (ಏಳ್ ಗಿಂಡ್ಯ ಕೋಪದೆತ್ತೆರ್ ಮಯ್ಯೆರ್, ಬಾಕಿಲ್‌ಗ್ ಮೂಜಿ ಪೆಟ್ಟ್ ತೊರ್ತೆರ್, ಬಾಕಿಲ್ ಪದ್ನಾಜಿ ಸೀಳಾಂಡ್) ಇಲ್ಲಿ ‘ಕೋಪ ತೆಗೆದರು’ ಕೋಪ ದೆತ್ತೆರ್ ಎಂಬ ಶಬ್ದ ಪ್ರಯೋಗ ತುಳು ಭಾಷೆಯ ಪಾಡ್ದನಗಳಿಗೆ ಮೀಸಲಾಗಿರುವಂತಹದು. ಭಾಷೆಯ ಆಡುನುಡಿಯ ಸ್ವರೂಪಕ್ಕೆ ಉತ್ತಮ ಸಾಕ್ಷ್ಯವಾಗಿದೆ. ಮಯ್ಯರು ‘ಗುಳಿಗ’ನ ಶಾಪ ಹಾಕುತ್ತಾರೆ. ‘ಗುಳಿಗ’ನಿಂದ ಸಾಯುವಾಗ ವರ್ಣಿಸುವ ಒಂದು ಮಾತು ಅತ್ಯುತ್ತಮವಾಗಿದೆ. ‘ಬತ್ತದ ಕೊರಳು (ತೆನೆ) ತುಂಡಾದ ಹಾಗೆ ‘ಮೂಕಾಂಬಿ ಜೇವು’ನ ಜೀವ ಹೋಯಿತು’( ಕಳಮೆದ ಕುರಸ್ ತುಂಡಾಯಿಲೆಕ್ಕ ಮೂಕಾಂಬಿನ ಜೀವ ಪೋತುಂಡು) ರೈತರಿಗೆ ಬತ್ತದ ತೆನೆಯಿದ್ದ ಹಾಗೆ ಅಥವಾ ಬತ್ತದ ಸಸಿಗೆ ತೆನೆಯಿದ್ದ ಹಾಗೆ ಪಟ್ಟತಂತ್ರಿಗೆ ಮೂಕಾಂಬಿ ಜೇವು ಅವನ ಸಂಪತ್ತು. ಅಲ್ಪಕಾಲದ ಒಂದೇ ಬಾಳಿನಲ್ಲಿ ಪಡೆಯುವ ಫಲವೇ ಅವಳು ‘ಬತ್ತದ ತೆನೆ’ಯನ್ನು ಉಪಮಾನವಾಗಿ ಬಳಸಿದುದು ಹಲವಾರು ಅರ್ಥಗಳನ್ನು ಧ್ವನಿಸುತ್ತದೆ. ಜನಪದ ಕವಿಯು ಚಿತ್ರಿಸುವ ಮಾಧ್ಯಮ ಎಷ್ಟು ಸಹಜ ಹಾಗೂ ಸತ್ವಭರಿತವಾಗಿದೆಯೆಂಬುದನ್ನು ತಿಳಿಯಬಹುದು.

ಪಾತ್ರದ ಬಾಯಿಯಿಂದಲೂ ಸೂಚ್ಯವಾದ ಮಾತನ್ನು ಆಡಿಸುತ್ತಾನೆ. ಜನರ ಮನೋಧರ್ಮವನ್ನು ಗ್ರಹಿಸುವ ಶಕ್ತಿ ಎಂತಹದ್ದೆಂದು ಇಲ್ಲಿ ವ್ಯಕ್ತವಾಗುತ್ತದೆ. ‘ಮೂಕಾಂಬಿ ಜೇವು’ ಗಂಡನಿಗೆ ಅನ್ನ ಬಡಿಸುತ್ತಿರುವಾಗ ಅವನು ಹೇಳುತ್ತಾನೆ – ‘ಹೌದ, ಮೂಕಾಂಬಿ ಜೇವೆ’ ಇವತ್ತು ಬಡಿಸುವ ಅನ್ನ ಇನ್ನು ಯಾವಾಗ ಬಡಿಸುವುದು?’ (ಅಂದ ಮೂಕಾಂಬಿ ಜೇವೆ, ಇನಿ ಬಲಸ್‌ದಿ ನುಪ್ಪು ನನ ಏಪಗ್ ಬಲಸುನಿ) ಎಂದು ಕಣ್ಣಿನಲ್ಲಿ ಕಣದುಕ್ಕ ಬಿಡುತ್ತಾನೆ. ತಾನು ದಕ್ಷಿಣ ರಾಜ್ಯಕ್ಕೆ ಹೋಗುವಾಗ ಪ್ರೀತಿಯಿಂದ, ಚಿಂತೆಯಿಂದ ಮಿಡಿಯುವ ಮನಸ್ಸಿನಿಂದ ಹೊಮ್ಮುವ ಮಾತುಗಳು ದುರಂತ ಛಾಯೆಯನ್ನು ಮೇಲಿನ ಮಾತಿನಲ್ಲಿಯೆ ಸೂಚ್ಯವಾಗಿ ಅಡಗಿಸಿದ್ದಾನೆ. ‘ಪರತಿ ಮಂಗಣೆ’ ಪಾಡ್ದನದಲ್ಲಿಯೂ ಇದೇ ರೀತಿಯ ಸೂಚ್ಯ ಚಿತ್ರಣವಿದೆ. ಪಾಡ್ದನಗಳಲ್ಲಿ ಸೂಚ್ಯ ಚಿತ್ರಣವಿದೆಯೆಂದರೆ ಅದು ಆರೋಪಿಸಿಕೊಂಡದ್ದು ಎಂದು ಕೆಲವರು ಭಾವಿಸುತ್ತಾರೆ. ಆದರೆ ಸೂಚ್ಯ ಸಿತ್ರಣದ ಸ್ವರೂಪವೇನು? ಸೂಚ್ಯವಾಗಿ ಹೇಳುವುದು, ಯಾವುದಾದರೂ ಕ್ರಿಯೆಯ ಮೂಲಕ ಸೂಚಿಸುವುದು. ಪಾಡ್ದನದ ಕರ್ತೃಗಳಿಗೆ ಮತ್ತು ಅದನ್ನು ಅರ್ಥ ಮಾಡಿಕೊಂಡು ಹೇಳಿಕೊಂಡು ಬಂದ ತುಳು ಜನಪದರಿಗೆ ಸಾಮಾನ್ಯವಾದುದು. ಉದ್ದೇಶ ರಹಿತವಾಗಿ ಸಹಜವಾಗಿ ಮೂಡಿಬಂದ ಕಥನ ಕೌಶಲ. ಮಾನವನ ನಿತ್ಯ ನಡವಳಿಕೆಗಳಲ್ಲಿ, ಮಾತುಕತೆಗಳಲ್ಲಿ ಸೂಚ್ಯ ಅಥವಾ ವ್ಯಂಗ್ಯ ನಿರೂಪಣೆ ಸಹಜವಾಗಿ ಇದೆ. ಅದನ್ನೇ ತಮ್ಮ ಪಾಡ್ದನಗಳಲ್ಲಿ ಬಳಸಿದ್ದಾರೆ. ಇನ್ನು ಸಂದರ್ಭಾನುಸಾರವಾಗಿ, ಕತೆಗೆ ಮೆರುಗು ಬರುವಂತೆ ಬಳಸುವುದು ಆಯಾ ಕವಿಯ ಪ್ರತಿಭೆಯಾಗಿದೆ. ಈ ರೀತಿಯ ಮೂಡಿಬಂದ ಚಿತ್ರಣಗಳಲ್ಲಿ ಧ್ವನಿಯಿರುವುದು ಕೂಡಲೇ ಯಾರಿಗೂ ತಿಳಿಯುವುದು. ಚಿತ್ರಣದ ಆಧಾರದಿಂದ ಧ್ವನಿಯನ್ನು ಅರಸುತ್ತಾ, ಅರ್ಥವನ್ನು ಕೆದಕುತ್ತಾ ಹೋಗಬೇಕಾಗಿಲ್ಲ. ಜನಪದ ಕವಿಯು ಇದರಲ್ಲಿ ಧ್ವನಿಯಿದೆ ಎಂದು ಹೇಳುವುದಿಲ್ಲ.‘It is felt before understood’ ಎಂಬ ಮಾತಿನಂತಿರುತ್ತದೆ.

‘ಮೂಕಾಂಬಿ ಜೇವು’ ಪಾಡ್ದನದಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ ಸ್ವಪ್ನ ತಂತ್ರ. ತಾವು ಹೊಸದಾಗಿ ಈ ತಂತ್ರವನ್ನು ಪ್ರಯೋಗಿಸಿದ್ದೇವೆ ಎನ್ನುವ ಕವಿಗಳ ಅಭಿಪ್ರಾಯ ಸುಳ್ಖು. ಕೆಲವೆಡೆ ಹೊಸ ತಂತ್ರವೆಂದು ಬಳಸಿ ಆಭಾಸ ಚಿತ್ರಣಗಳು ಕಾವ್ಯಗಳಲ್ಲಿ ಬರುವುದು ಹಿನ್ನೆಲೆಯಲ್ಲಿರುವ ಉದ್ದೇಶದಿಂದ ಇದು ಸಹಜವಾಗಿ ಬಂದರೆ ಮಾತ್ರ ಸುಂದರವಾಗಿರುತ್ತದೆ. ಕತೆಯು ಮೆರುಗನ್ನು, ಆಕರ್ಷಕ ಗುಣವನ್ನು ಪಡೆಯುತ್ತದೆ. ಪಟ್ಟಣತಂತ್ರಿ ದುಃಸ್ವಪ್ನವನ್ನು ಕಂಡು, ಏನೋ ಆಪತ್ತು ಸಂಭವಿಸಿದೆಯೆಂದು ದೂರ ದೇಶದಿಂದ ತಾನಾಗಿಯೇ ಧಾವಿಸಿ ಬರುತ್ತಾನೆ.

‘ಗುಳಿಗ’ ಭೂತಕ್ಕೆ ಸಂಬಂಧಿಸಿದ ಇನ್ನೊಂದು ಪಾಡ್ದನ ‘ಸುಬ್ಬಿಯಮ್ಮ’. ಇದೂ ಒಬ್ಬಳ ದುರಂತ ಜೀವನವನ್ನು ಚಿತ್ರಿಸುವ ಸಣ್ಣ ಕಥನ ಕವನ. ‘ಕುಲಜನ್ಮ’ದ ಕಸುಬನ್ನು(ಬಳೆ ಮಾರುವುದು) ಮಾಡಬೇಕೆಂದು ‘ರಾಮಗುಳಿಗಂದಾರ್’ ಮತ್ತು ‘ಸುಬ್ಬಿಯಮ್ಮ’ ಗಟ್ಟ ಇಳಿದು ಬರುತ್ತಾರೆ. ಮಂಜೇಶ್ವರಕ್ಕೆ ಬಂದು ‘ಆಸೊಡಿ ಪೋಸೊಡಿ’ ಗುತ್ತಿನ ಮನೆಯಲ್ಲಿರುತ್ತಾರೆ. ತಂದೆ ಬಳೆ ಮಾರಲು ಹೋದ ಬಳಿಕ ‘ಸುಬ್ಬಿಯಮ್ಮ’ ಅಡುಗೆಗೆ ನೀರು ತರಲು ಹೋದಲ್ಲಿ ‘ಗುಳಿಗ‘ ಭೂತವು ಬಾವಿಗೆ ಎಳೆದು ಹಾಕುತ್ತದೆ. ಸಾಯುತ್ತಾಳೆ. ತಂದೆ ಬಂದು ಅಂತ್ಯಕ್ರಿಯೆಯನ್ನು ಮಾಡುವಾಗ ಮೂರು ಸಲ ‘ಬೊಬ್ಬೆ’ ಹಾಕುತ್ತಾಳೆ. ‘ಗುಳಿಗ’ನಿಂದಾಗಿ ಹೋಗುತ್ತೇನೆ ಎನ್ನುತ್ತಾಳೆ. ಈ ಅಲೌಕಿಕ ಘಟನೆಯೊಂದಿಗೆ ಪಾಡ್ದನ ಕೊನೆಗೊಳ್ಳುತ್ತದೆ. ‘ಗುಳಿಗ‘ನಿಂದಾಗಿ ಒಂದು ಸುಂದರ ಹೆಣ್ಣಿನ ಜೀವನ ದುರಂತಕ್ಕೀಡಾಗುತ್ತದೆ.

ಈ ಪಾಡ್ಡನದಲ್ಲಿಯೂ ವರ್ಣನೆಯು ಉಚಿತವಾಗಿ ಬಂದಿದೆ. ಪ್ರಧಾನ ಪಾತ್ರವಾಗಿರುವ ಮತ್ತು ದುರಂತಕ್ಕೀಡಾಗಿ ವಾಚಕರ ಮರುಕಕ್ಕೆ ಪಾತ್ರವಾಗುವ ‘ಸುಬ್ಬಿಯಮ್ಮ’ ಸೌಂದರ್ಯವನ್ನು ವರ್ಣಿಸುತ್ತಾನೆ. ‘ಎಣ್ಣೆಯನ್ನು ತೆಗೆದುಕೊಂಡಳು. ತಲೆ ಬಾಚಿದಳು. ಬಾಲ್‌ಮುಡಿ ಹಾಕಿದಳು. ಎಡಬದಿಗೆ ಮುಡಿದಳು ಎಡಸಂಪಿಗೆಯನ್ನು, ಬಲಬದಿಗೆ ಮುಡಿದಳು ಎಳೆಹಿಂಗಾರವನ್ನು ಕುಂಕುಮವಿಟ್ಟಳು. ಸೀರೆಯುಟ್ಟಳು. (ಬರ್ಚಣೆ ಎಣ್ಣೆದರಿಯೆ ದೆತ್ತೊಂಡಲ್. ತರೆ ಬರ್ಚಿಯಲ್. ಬಾಲ್ ಮುಡಿಪಾಡ್ಯಾಲ್. ಎಡತ್ ಮುಡಿಯಳ್ ಎಡಸಂಪಿಗೆ, ಬಲತ್ ಮುಡಿಯಲ್ ಬಾಲೆ ಪಿಂಗಾರ ಕುಂಕುಮ ಪಾಡಿಯಲ್. ಸೀರೆ ತುತ್ಯಲ್.) ಈ ರೀತಿ ಸುಂದರವಾಗಿ ಅಲಂಕಾರ ಮಾಡಿಕೊಂಡು ಹೋದ ಎಳೆ ಯುವತಿ ಗುಳಿಗನ ದೃಷ್ಟಿಗೆ ಬಿದ್ದು ದುರಂತಕ್ಕೀಡಾಗುತ್ತಾಳೆ.

ಪಾಡ್ಡನದುದ್ದಕ್ಕೂ ಕ್ರಿಯೆಗತಿ ತೀವ್ರವಾಗಿದೆ. ತಿರುವು, ಹರವು ಇಲ್ಲದೆ ಕ್ರಿಯೆಗಳನ್ನು ಸಹಜವಾಗಿ ನೇರವಾಗಿ ಚಿತ್ರಿಸುತ್ತಾನೆ. ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ರೀತಿ ಹೃದಯಸ್ವರ್ಶಿಯಾಗಿದೆ. ಇದು ಪಾಡ್ದನಗಳಲ್ಲಿ ಸಾಮಾನ್ಯವಾಗಿ ಕಾಣುವ ಉತ್ತಮ ಕಾವ್ಯಗುಣ. ಇಲ್ಲಿಯ ಚಿತ್ರಣವು ವಾಚಕರ ಮೇಲೆ ವಿಶಿಷ್ಟ ಪರಿಣಾಮವನ್ನು ಬೀರುತ್ತದೆ. ‘ಸುಬ್ಬಿಯಮ್ಮ’ ಬಾವಿಗೆ ಬಿದ್ದಾಗ ಮತ್ತು ಸತ್ತ ಬಳಿಕ ಯಾವ ಸ್ಥಿತಿಯಲ್ಲಿ ಇದ್ದಳು ಎನ್ನುವುದನ್ನು ಈ ರೀತಿ ವರ್ಣಿಸುತ್ತಾನೆ: ‘ಅಡಿ ಮೇಲಾದಳು ಬಾಲೆ ಸುಬ್ಬಿ. ಸರಿ ಮುಳುಗಿತು (ದೇಹ – ಸತ್ತಳೆಂಬ ಸೂಚನೆ)ಪೊಂಬಾಳೆ ಮೇಲೆ ಬಂತು’ (ಕಂಕಣೆ ಮರಂಕಣೆ ಆಯಳ್ ಬಾಲೆಸುಬ್ಬಿ. ಸಮ ಕಂತ್ತ್ಂಡ್ ಪೊಂಬಾಳೆ ನೆಗತ್ತ್ ಂಡ್ ‘ಬಾಲೆ ಸುಬ್ಬಿ’) ಎನ್ನುವ ಪ್ರಯೋಗವು ವಾಚಕರ ಅನುಕಂಪವನ್ನು ಹೆಚ್ಚಿಸಿ, ಕರುಣಾರಸಭರಿತ ವಾಗುವಂತೆ ಮಾಡುತ್ತದೆ.

ಈ ಎರಡು ಪಾಡ್ದನಗಳಿಂದ ‘ಗುಳಿಗ’ ಭೂತವು ತಾಮಸ ಗುಣವುಳ್ಳದ್ದು ಎಂಬುದು ವಿದಿತವಾಗುವುದು. ಇವತ್ತಿಗೆ ಇದೇ ರೀತಿಯ ನಂಬಿಕೆಯಿದೆ.

‘ಬೊಳ್ಳುಲ್ಲಿ ಕಿನ್ಯಗೆ’ ಪಾಡ್ದನ ಹೆಣ್ಣಿನ ಮದುವೆಯಿಂದಾಗುವ ದುರಂತವನ್ನು ಸೂಚ್ಯವಾಗಿ ವಿವರಿಸುತ್ತದೆ. ‘ಮಾನ್ಯೊಲ್ಲಾದ್ದೇತಿ’ಗೆ ಹರಕೆಯಿಂದ ಹುಟ್ಟಿದ ಮಗಳು ‘ಬೊಳ್ಳುಲ್ಲಿ ಕಿನ್ಯಗೆ’ ಅವಳು ಅಸಾಮಾನ್ಯ ಹೆಂಗಸು ಎನ್ನುವುದನ್ನು ಸೂಚಿಸುವ ಒಂದು ಮಾದರಿ – ಹರಕೆ. ಬೇರೆ ಕೆಲವು ಪಾಡ್ದನಗಳಲ್ಲಿಯೂ ಈ ರೀತಿಯ ನಿರೂಪಾಣೆಯಿದೆ. ‘ಬೊಳ್ಳುಲ್ಲಿ ಕಿನ್ಯಗೆ’ ಮೈನೆರೆದಾಗ ‘ಕೋವಾರಿ’ಯ ಮನೆಗೆ (‘ಬೆರಿತಾಡಿ ಐತಗೆ’ಯ ಮನೆ-ಅವನು ಬೆಳೆದ ಮನೆ) ಒಸಗೆ ಕಳುಹಿಸುತ್ತಾರೆ. ಆದರೆ ‘ಐತಗೆ’ಯ ಕುತಂತ್ರದಿಂದ (ಬೊಳ್ಳುಲ್ಲಿ ಕಿನ್ಯಗೆಯ ಪಟದ ಬಲಕಣ್ಣಿಗೆ ಸುಣ್ಣದ ಬೊಟ್ಟಿಟ್ಟು ಒಂದು ಕಣ್ಣು ಬಿಳಿ ಆಗುವ ಹಾಗೆ ಮಾಡುವುದು) ‘ಕೋವಾರಿ’ ಮದುವೆಗೆ ನಿರಾಕರಿಸುತ್ತಾನೆ. ಬಳಿಕ ‘ಕಿನ್ಯಗೆ’ಯ ತಂದೆ ‘ಕಲ್ಲೆಂಬಿ ಪೆರ್ಗಡೆ’ ಮಗಳನ್ನು ‘ಮಜಲೋಡಿ ದೊರೆ’ಗೆ ಮದುವೆ ಮಾಡಿ ಕೊಡುತ್ತಾನೆ. ಮನಸ್ಸಿಲ್ಲದ ‘ಕಿನ್ಯಗೆ’ ‘ಮಜಲೋಡಿ ದೊರೆ’ಯೊಡನೆ ಹಾಲು ಕುಡಿದ ಬಳಿಕ ದೇಹ ಸ್ವರ್ಶ ಮಾಡಲು ಹನ್ನೆರಡು ದಿವಸದ ವೃತವನ್ನು ಮುಗಿಸಬೇಕೆಂದು ಹೇಳುತ್ತಾಳೆ. ಬಳಿಕ ದಂಡದಲ್ಲಿ ಕುಳಿತು ‘ಕೋವಾರಿ’ಯ ಮನೆ ಬಾಗಿಲಿಗೆ ಹೋಗುವಾಗ ಅವನು ಓಡೋಡಿ ಬಂದ ಅಡ್ಡ ನೀಟಕ್ಕೆ ಬಿದ್ದು ದುಃಖಿಸುತ್ತಾನೆ. ವಿಷಯ ತಿಳಿದ ‘ಕಿನ್ಯಗೆ’, ‘ಮಜಲೋಡಿ’ ಅರಮನೆಯ ಬಾಗಿಲಿನಲ್ಲಿ ಭಿಕ್ಷೆಗೆ ನಿಂತ ಬ್ರಾಹ್ಮಣ ಕಿನ್ಯಗೆ ಭಿಕ್ಷೆ ಹಾಗುವಾಗ ಪ್ರಾಣಬಿಡುತ್ತಾನೆ. ಗಂಧದ ಕಾಷ್ಠ ಊರಿ ಅವನ ಅಂತ್ಯಕ್ರಿಯೆಯನ್ನ ನಡೆಸುತ್ತಾರೆ. ಕಿನ್ಯಗೆಯ ಆದೇಶದ ಕಾಷ್ಠಕ್ಕೆ ಬೆಂಕಿ ಕೊಟ್ಟು ‘ಮಜಲೋಡಿ ದೊರೆ’ ಹಿಂತಿರುಗಿದಾಗ ಕಿನ್ಯಗೆ ಬೆಂಕಿಗೆ ಮೂರು ಸುತ್ತು ಬಂದು ಹಾರುತ್ತಾಳೆ.