ಜನವಾಣಿ ಹಾಗೂ ಕವಿವಾಣಿ

‘ಜನವಾಣಿ ಬೇರು, ಕವಿವಾಣಿ ಹೂ’ ಎಂದು ಆಧುನಿಕ ಕನ್ನಡದ ಹರಿಕಾರರಾದ ಬಿ.ಎಂ. ಶ್ರೀಕಂಠಯ್ಯನವರು ಹೇಳಿದಂತೆ ಇಂದಿನ ಶಿಷ್ಟ ಸಂಪ್ರದಾಯದ ಕಾವ್ಯ ಪ್ರಕಾರದ ಬೇರು ಜನಪದ ಸಾಹಿತ್ಯದಲ್ಲಿದೆ. ಜನಪದರ ಭಾವನಾತ್ಮಕ ಅಭಿವೃಕ್ತಿ ಆಧುನಿಕ ಶಿಷ್ಟ ಸಾಹಿತ್ಯಕ್ಕೆ ಪ್ರೇರಣೆಯನ್ನೂ ವಸ್ತುವನ್ನೂ ನೀಡಿದೆ. ಜನಪದರ ಅಭಿವ್ಯಕ್ತಿ ಮೂಡಿಬಂದುದು, ಬೆಳೆದು ಬಂದುದು ಧಾರ್ಮಿಕ ಪರಿಸರದಲ್ಲಿ, ಆರಾಧನಾ ಸಂದರ್ಭದಲ್ಲಿ, ನಂಬಿದ ದೈವಗಳ ಆರಾಧನೆಯ ಸಂದರ್ಭದಲ್ಲಿ, ಕುಣಿದು ಪೂಜಿಸುವ ಸಂದರ್ಭದಲ್ಲಿ ಆತನ ಸೃಜನಶೀಲತೆಯೂ ಚಿಗುರಿತು. ದೈವಗಳ ಹುಟ್ಟು, ಪ್ರತಾಪ, ಪ್ರಸರಣ, ಸಾಹಸ, ಪವಾಡಗಳಿಗೆ ಸಂಬಂಧಿಸಿದ ಕತೆಗಳೂ, ಸ್ತೋತ್ರಗಳೂ ಮೂಡಿಬಂದುವು. ಸಂಗೀತ ಸಾಹಿತ್ಯ ಇವುಗಳೆರಡೂ ಬೆಳೆದುವು. ಜನಪದ ಸಾಹಿತ್ಯದಿಂದ ಶಿಷ್ಟ ಸಾಹಿತ್ಯ ಬೆಳೆದುಬಂದಂತೆ, ಜನಪದ ಸಂಗೀತದಿಂದ ಶಿಷ್ಟ ಸಂಗೀತ ಬೆಳೆದು ಬಂತು ಎಂದು ಹೇಳಬಹುದು.

ಜನಪದ ಕವಿಗೆ ಛಂದಸ್ಸು ಪ್ರಾಸಗಳ, ತಾಳ ಯತಿಗಳ ಬಂಧನವಿಲ್ಲ. ಅವು ಹುಟ್ಟಿಕೊಳ್ಳುವ ಮೊದಲೇ ಆತನ ಹಾಡುಗಬ್ಬಗಳು ಬೆಳೆದು ನಿಂತಿವೆ. ಶಿಷ್ಟ ಸಾಹಿತ್ಯದ ಕಟ್ಟುಪಾಡುಗಳಿಗೆ ಬದ್ಧನಾಗದಿದ್ದರೂ ಅವನ ಕಾವ್ಯವು ಒಂದು ನಿಶ್ಚಿತ ಲಯಗತಿಗಳಿಂದ ಮುಂದುವರಿಯಿತು. ಲಾವಣಿ ತ್ರಿಪದಿ ರೂಪದಲ್ಲಿಯಾಗಲಿ, ರಗಳೆಗಳ ರೂಪದಲ್ಲಿಯಾಗಲಿ, ಮುಕ್ತ ಛಂದಸ್ಸಿನ ಆದರೂ ನಿಶ್ಚಿತ ಲಯದ ಗದ್ಯ ಕಾವ್ಯದ ಮೂಲಕವಾಗಲಿ ಬಳಕೆಗೆ ಬಂತು. ಕಟ್ಟುಪಾಡುಗಳ ಬಂಧನ ಅಷ್ಟಾಗಿ ಇಲ್ಲದಿದ್ದುದರಿಂದ ಆತನ ಸೃಜನಶೀಲತೆ ಮುಕ್ತ ವಾತಾವರಣದಲ್ಲಿ ಬೆಳೆಯಿತು. ಜೀವನದಲ್ಲಿ ತಾನು ಕಂಡ ಸತ್ಯವನ್ನು, ನಿರ್ಭೀತಿಯಿಂದ ಅರುಹಿ ಉಚ್ಚಮಟ್ಟದ ಸಾಹಿತ್ಯ ಕೃತಿಗಳನ್ನು ಮುಂದಿನ ಪೀಳಿಗೆಗೆ ಆತ ಬಿಟ್ಟುಹೋದ. ಹೀಗಾಗಿ ಆರಾಧನಾ ಸಂದರ್ಭದಲ್ಲಿ ನಾವು ಕೇಳುವ ಕಾವ್ಯಗಳು ಧಾರ್ಮಿಕ ಪುರಾಣಗಳೂ ಹೌದು, ಕಾವ್ಯಕೃತಿಗಳೂ ಹೌದು.

ತುಳುನಾಡಿನ ಹಾಗೂ ಕನ್ನಡ ನಾಡಿನ ಜನಪದ ಕವಿಗಳು ದೈವ ಭೂತಗಳ ಆರಾಧನಾ ಸಂದರ್ಭದಲ್ಲಿ ಹಲವಾರು ಉತ್ತಮ ಕಾವ್ಯಗಳನ್ನು ಸೃಷ್ಟಿಸಿದ್ದಾರೆ. ಅವರು ಆನಂದವರ್ಧನನ ಧ್ವನ್ಯಾಲೋಕವನ್ನಾಗಲಿ ಮಮ್ಮಟನ ಕಾವ್ಯಪ್ರಕಾಶವನ್ನಾಗಲಿ ತಿಳಿದಿರಲಿಲ್ಲ. ಪಿಂಗಳನ ಛಂದಸ್ಸನ್ನು ತಿಳಿದವರಲ್ಲದಿದ್ದರೂ ಈ ಮಹಾನ್ ಲಾಕ್ಷಣಿಕರು ಹೇಳಿದ ಹಲವಾರು ಲಕ್ಷಣಗಳನ್ನೊಳಗೊಂಡ ರಸಘಟ್ಟಿಗಳನ್ನು ಸೃಜಿಸಿದ್ದಾರೆ. ಯಾವುದೇ ಕೃತ್ರಿಮತೆಯ ಸೋಂಕು ಇಲ್ಲದೆ ಸರಳ ಸಹಜವಾದ ಭಾಷೆಯಲ್ಲಿ ನೇರವಾಗಿ ನಮ್ಮ ಮನಸ್ಸನ್ನು ತಟ್ಟುವಂತೆ ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಜನಪದ ನರ್ತಕರಲ್ಲಿ ತಾಳ, ಲಯ, ಶ್ರುತಿ, ನರ್ತನ, ಹಾಡುಗಾರಿಗೆ ಇವುಗಳು ರಕ್ತಗತವಾಗಿ ಬೆಳೆದುಬಂದಿದೆ.

 

ಜನಪದ ಪುರಾಣ ಕಾವ್ಯಗಳ ಲಕ್ಷಣಗಳು

ತುಳು ಪಾಡ್ದನಗಳನ್ನು ಜನಪದ ಪುರಾಣ ಕಾವ್ಯಗಳೆನ್ನಬಹುದೇ ಅಥವಾ ಅವು ದೈವಗಳ, ವೀರಪುರುಷರುಗಳ ಶೌರ್ಯ ಸಾಹಸಗಳ ಘಟನೆಗಳನ್ನು ಹಾಡಿ ತೋರಿಸುವ ಲಾವಣಿ ರೂಪದ ಖಂಡಕಾವ್ಯಗಳೇ ಎಂಬ ಸಂಶಯವನ್ನು ಕೆಲವು ವಿದ್ವಾಂಸರುಗಳು ವ್ಯಕ್ತಪಡಿಸಿದ್ದಾರೆ. ಕೋಟಿ ಚೆನ್ನಯ, ಸಿರಿ ಮುಂತಾದ ಕಥೆಗಳು ಸಾಕಷ್ಟು ವಿಸ್ತಾರವಾಗಿದ್ದು ಕರ್ನಾಟಕದ ಮಾದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಕರಿಭಂಟನ ಕಾಳಗ, ಪಿರಿಯಾಪಟ್ಟಣದ ಕಾಳಗ ಮುಂತಾದ ಜನಪದ ಮಹಾಕಾವ್ಯಗಳ ಲಕ್ಷಣಗಳನ್ನು ಹೀಗೆ ಕ್ರೋಡೀಕರಿಸಬಹುದು.

೧. ಅವು ಲಾವಣಿರೂಪದ ವೀರಗಾಥೆಗಳಿಂದ ಸಾಕಷ್ಟು ವಿಸ್ತಾರವಾಗಿದ್ದು ಎರಡು ಮೂರು ತಲೆಮಾರಿನ ಕತೆಯನ್ನೂ ಅನೇಕ ಬಗೆಯ ಘಟನೆಗಳನ್ನೂ, ವಿವಿಧ ಪಾತ್ರಗಳನ್ನೂ ಒಳಗೊಂಡಿದ್ದು ವಿವಿಧ ಗತಿ ಲಯಗಳಿಂದ ಹಾಡಲು ಯೋಗ್ಯವಾಗಿದ್ದು ಪದ್ಯ, ಗದ್ಯ ಅಥವಾ ಪದ್ಯ ಗದ್ಯ ಮಿಶ್ರ ರೂಪದಲ್ಲಿರುತ್ತವೆ.

೨. ಅವು ಲಾವಣಿಗಳಂತೆ ಯಾವುದಾದರೂ ಒಂದು ಸಂದರ್ಭದ ಘಟನೆಗಳ ಅಥವಾ ಚಟುವಟಿಕೆಗಳ ಚಿತ್ರಣ            ಮಾತ್ರ ನೀಡುವವುಗಳಲ್ಲ. ಪಾತ್ರ ಚಿತ್ರಣ, ಕಥಾವಸ್ತುವಿನ ಬೆಳವಣಿಗೆ ಮುಂತಾದವುಗಳಿಗೂ ಪ್ರಾಧಾನ್ಯ ನೀಡುತ್ತವೆ.

೩. ಪ್ರಳಯ, ಜಗತ್ತಿನ ಉತ್ಪತ್ತಿ, ಸರ್ವಶಕ್ತ ಪರಮಾತ್ಮನ ಲೀಲೆ ಇತ್ಯಾದಿ ವಿಚಾರಗಳೂ ಅವುಗಳಲ್ಲಿ ಸೇರಿಕೊಂಡಿರುತ್ತವೆ.

೪. ಅವುಗಳು ಅಲೌಕಿಕ ಶೌರ್ಯ ಸಾಹಸಗಳು, ಅದ್ಭುತ ಘಟನೆಗಳು, ಮಂತ್ರ – ಮಾಟ, ಅಸಾಧಾರಣ ಜನನ, ಅಮಾನುಷ ಶಕ್ತಿ, ದೈವ ಮಾನವರ ಒಡನಾಟ ಇತ್ಯಾದಿ ಘಟನೆಗಳಿಂದ ತುಂಬಿರುತ್ತವೆ.

೫. ಅವು ಆಯಾ ಸಮಾಜ ಬೆಳೆಸಿಕೊಂಡು ಬಂದ ಮೌಲ್ಯ, ನಂಬಿಕೆಗಳನ್ನು ಪ್ರತಿಪಾದಿಸುತ್ತವೆ. ಹೀಗಾಗಿ ನೀತಿ ಸಂಹಿತೆಗಳಾಗಿಯೂ ಇರುತ್ತವೆ [ಆಂಗ್ಲ ಸಾಹಿತ್ಯದ ಡೈಡಾಕ್ಟಿಕ್ ಕಾವ್ಯಗಳಂತೆ)

೬. ಸಮಾಜ ಯಾರನ್ನು ಆದರ್ಶ ಪುರುಷರೆಂದು ತಿಳಿಯುತ್ತದೆಯೋ ಅಂತಹ ನಾಯಕರ ಪಾತ್ರದ ವೈಭವೀಕರಣ ಅದರಲ್ಲಿದ್ದು ಅವರನ್ನು ದೈವತ್ವಕ್ಕೇರಿಸುವ ಅಂಶಗಳಿಂದ ಅವು ತುಂಬಿರುತ್ತದೆ.

೭. ವಿವಿಧ ರೀತಿಯ ವರ್ಣನೆ, ಹುಟ್ಟಿನಿಂದ ಸಾಯುವವರೆಗಿನ ಮಾನವನ ಎಲ್ಲ ವಿಧದ ಚಟುವಟಿಕೆಗಳಿಗೆ ಅವುಗಳಲ್ಲಿ ಪ್ರಾಧಾನ್ಯವಿರುತ್ತದೆ.

೮. ಆಯಾ ಸಂದರ್ಭಕ್ಕೆ, ಆಯಾ ಭಾವಗಳಿಗೆ ತಕ್ಕ ಶೈಲಿ ವಿನ್ಯಾಸವಿರುವುದರಿಂದ ಅವುಗಳಲ್ಲಿ ಸಾಕಷ್ಟು ವೈವಿಧ್ಯವಿರುತ್ತದೆ.

ಈ ಮಾನದಂಡದಿಂದ ಅಳೆದರೆ ತುಳುನಾಡಿನ ಹಾಗೂ ಕರ್ನಾಟಕದ ಜನಪದ ಕಾವ್ಯಗಳು ಜನಪದ ಪುರಾಣ ಲಕ್ಷಣಗಳಿಂದ ಕೂಡಿ ಶೋಭಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಕರ್ನಾಟಕದ ಮಲೆ ಮಾದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಮೈಲಾರಲಿಂಗ ಕಾವ್ಯ, ಎಲ್ಲಮ್ಮನ ಕಾವ್ಯ, ಜುಂಜಪ್ಪನ ಕಾವ್ಯ ಮುಂತಾದವುಗಳಂತೆ ತುಳುವಿನ ಸಿರಿ ಪಾಡ್ದನ, ಕೋಟಿ ಚೆನ್ನಯ ಪಾಡ್ಡನ, ಪಂಜುರ್ಲಿ ಪಾಡ್ಡನ, ಜುಮಾದಿ ಪಾಡ್ಡನ ಮುಂತಾದ ಕಾವ್ಯಗಳೂ ತುಳುನಾಡಿನಲ್ಲಿ ಬಾಯ್ದೆರೆಯ ಮೂಲಕ ಹರಿದುಬಂದಿದೆ. ಕರ್ನಾಟಕದಲ್ಲಿ ಆಯಾ ಪಂಥದ ದೀಕ್ಷಾಬದ್ಧರಾದ ವೃತ್ತಿಗಾಯಕರು ಈ ಸಂಪ್ರದಾಯ ಮುಂದುವರಿಯಲಿಕ್ಕೆ ಕಾರಣವಾದಂತೆ ತುಳುನಾಡಿನ ಭೂತ ನರ್ತಕರಾದ ಪರವ, ಪಂಬದ, ನಲ್ಕೆಯವರು ಈ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಕೆಲವು ಪಾಡ್ಡನಗಳನ್ನು ಹೆಂಗಸರು ಗದ್ದೆಯಲ್ಲಿ ಬತ್ತದ ನೇಜಿ ನೆಡುವಾಗ ಹಾಡುತ್ತಾರೆ. ಭೂತಾರಾಧನೆಯ ಸಂದರ್ಭದಲ್ಲಿ ಬಣ್ಣ ಹಾಕಿ ವೇಷಭೂಷಣಗಳನ್ನು ಧರಿಸಿಕೊಳ್ಳುವ ಸಂದರ್ಭದಲ್ಲಿ ಹೆಂಗಸರೂ ಗಂಡಸರೂ ಹಾಡುತ್ತಾರೆ. ಒಬ್ಬರಾದ ಮೇಲೊಬ್ಬರಂತೆ ಒಂದೊಂದು ಸಾಲು ಹಾಡಿ ಮುಂದುವರಿಸುವುದು ಸಾಮಾನ್ಯವಾಗಿ ಕಾಣುವ ಪದ್ಧತಿ.

ಸುದೀರ್ಘ ಕಥಾನಕ

ದೈವಗಳಿಗೆ ಸಂಬಂಧಪಟ್ಟ ಪುರಾಣ ಕಥನಗಳೂ ದೀರ್ಘವಾದ ಕಾವ್ಯದ ರೂಪದಲ್ಲಿಯೂ ಗದ್ಯಪದ್ಯ ಮಿಶ್ರಿತವಾದ ರೂಪದಲ್ಲಿಯೂ ಇರುತ್ತವೆ. ಹೆಚ್ಚಿನ ಕಾವ್ಯಗಳೂ ಗದ್ಯರೂಪದಲ್ಲಿದ್ದರೂ ತೆಂಬರೆ ಎನ್ನುವ ಚರ್ಮವಾದ್ಯದ ಬಡಿತಕ್ಕನು ಸಾರವಾಗಿ ಲಯಬದ್ಧವಾದ ಗತಿಯಲ್ಲಿ ಪದ್ಯಗಂಧಿಯಾದ ಗದ್ಯದಂತೆ, ವಚನ ಸಾಹಿತ್ಯದಂತೆ ಮುಂದುವರಿಯುತ್ತವೆ. ಎರಡು, ಮೂರು ಅಥವಾ ನಾಲ್ಕು ತಲೆಮಾರುಗಳಿಗೆ ಸಂಬಂಧಿಸಿದ ಕತೆಯಾದರೆ ಇವುಗಳನ್ನು ಹಲವು ಭಾಗಗಳಾಗಿ ವಿಂಗಡಿಸಬಹುದು. ತುಳುವಿನಲ್ಲಿ ಇವುಗಳನ್ನು ಸಂಧಿಗಳೆಂಧು ಕರೆಯುತ್ತಾರೆ. ಇನ್ನು ಕೆಲವು ಕಥನಗಳು ದೈವದ ಜೀವನದ ಒಂದು ಘಟನೆ, ಪರಾಕ್ರಮ ಅಥವಾ ಸಂಚಾರದ ಕತೆಯನ್ನೊಳಗೊಂಡ ಖಂಡಕಾವ್ಯದ ರೂಪದಲ್ಲಿರುತ್ತವೆ. ಇನ್ನು ಕೆಲವು ಚಿಕ್ಕ ಪುಟ್ಟ ಕತೆಗಳ ರೂಪದಲ್ಲಿಯೂ ಇರುವುದುಂಟು. ಇವುಗಳ ಒಂದೆರಡು ಉದಾಹರಣೆಗಳನ್ನು ನೋಡೋಣ.

ಗದ್ಯಗಂಧಿ ಪಾಡ್ದನದ ಮಾದರಿ

ದೇವಲೋಕೊಟು ಪುಟ್ಯಲ್ ಬಲತಲ್ ಈಶ್ವರ ಸಾಪತ ಕೊರತಿ. ತುಳು ರಾಜ್ಯೊಗು ಪೋಲ, ನಿಕ್ಕ್ ದಾಯಿನ ಜೋಡಣೆ ಬೋಡು ಕೇನ್ನಾಗ ಜಾಕಿನ ಸೀರೆ, ಪಟ್ಟೆನ ರಾಕಿ, ಪೆರ್ನಮರತ ತೊಟ್ಟೆ, ಬಂಗಾರಿನ ಗೆಜ್ಜೆತ್ತಿ, ಎಡಂಗ್ ಸಪ್ಪು, ಬಲಂಗ್ ಮಯ್ಪು, ಬೋಡೂಂದು ಪಂಡೊಲು. ಕಾಡ್‌ತ ಬೋಂಟೆಗ್, ಜೋಡುತ ಮೀನ್‌ಗ್, ಬಂಜಿನ ಪೊಂಜೋವುಗು ತೊಟ್ಟಿಲ್ದ ಬಾಲೆಲೆಗ್ ಆದಾರ ಉಂತುವೆ ಪಂಡೊಲು  -ಕೊರತಿ ಪಾಡ್ಡನ

ದೇವಲೋಕದಲ್ಲಿ ಬೆಳೆದಳು, ಈಶ್ವರನ ವರಪ್ರಸಾದದಿಂದ ಹುಟ್ಟಿದ ಕೊರತಿ. ನೀನು ತುಳು ರಾಜ್ಯಕ್ಕೆ     ಹೋಗು, ನಿನಗೆ ಅಲ್ಲಿ ಹೋಗಲಿಕ್ಕೆ ಏನೆಲ್ಲಾ ಸಲಕರಣೆಗಳು ಬೇಕು ಎಂದಾಗ ಜಾಕಿನ ಸೀರೆ, ರೇಶ್ಮೆ ಕುಪ್ಪಸ, ಹಾಲುಬರುವ ಮರದ ಎಲೆಗಳಿಂದ ಮಾಡಿದ ಬುಟ್ಟಿ, ಬಂಗಾರದ ಗೆಜ್ಜೆ ಕತ್ತಿ, ಎಡಬದಿಯಲ್ಲಿ ಹಿ      ಡಿದುಕೊಳ್ಳಲಿಕ್ಕೆ ಸೊಪ್ಪು, ಬಲಕೈಯಲ್ಲಿ ಹಿಡಿಯಲಿಕ್ಕೆ ಪೊರಕೆ ಬೇಕೆಂದಳು ಕೊರತಿ. ಕಾಡಿನ ಬೇಟೆ ಪ್ರಾಣಿಗಳು, ಹೊಳೆಯ ಜೋಡಿ ಮೀನುಗಳ, ಬಸುರಿ ಹೆಂಗಸಿನ, ತೊಟ್ಟಿಲ ಮಗುವಿನ ರಕ್ಷಣೆಗಾಗಿ ಅವುಗಳ             ಅಧಿದೇವತೆಯಾಗಿ ನಿಲ್ಲುವೆನು ಎಂದಳು.

ಪದ್ಯರೂಪಿ ಪಾಡ್ಡನದ ಮಾದರಿ

ಮೂಡಲ ಪಣ್ಪಿ ರಾಜ್ಯೋಗು ಬೂತ ಪಯಣ ಪತ್ಯೆ
ನಟ್ಟಿನ ಕಂಡ ನಡುಮುಗೆರ್ ಗೋಳಿಟ್ ಇಡಿಮುಡಿ ಸೊರಿತ್ತೆ – ಕಾನ ಧೂಮಾವತಿ ಪಾಡ್ಡನ

ಕೇನ್ ಕಿರೆಂಗ್ ನಡ್ಪಾಯೆರ್ ಪೆರ್ನಸಂಕಲೆ ಪಾಡಾಯೆರ್‌ಯೆ
ಪಟ್ಟಿನ ಪಾಂದಾವು ನೆಯ್ಪಾಯೆರ್ ಗೋಲಿನ ಮುದೆಲ್‌ಟ್‌ ಕಟ್ಟಾಯೆರ್‌ಯೇ – ಪಂಜುರ್ಲಿ ಪಾಡ್ದನ

ಈ ಕಾವ್ಯಗಳ ಪ್ರಾರಂಭದ ಭಾಗದಲ್ಲಿ ಆರಾಧ್ಯ ದೈವದ ಹುಟ್ಟು ಅಥವಾ ಭೂಲೋಕದಲ್ಲಿ ಅದು ಅವತಾರವಾದ ಬಗೆ, ಆ ದೈವದ ಶೌರ್ಯ ಪರಾಕ್ರಮ ಮುಂತಾದ ವರ್ಣನೆಗಳಿರುತ್ತವೆ. ಮುಂದಿನ ಭಾಗಗಳಲ್ಲಿ ಆ ದೈವದ ಪ್ರಸರಣ, ಅದು ಬೇರೆ ಬೇರೆ ಪ್ರದೇಶಗಳಲ್ಲಿ ತನ್ನ ಪವಾಡಗಳನ್ನು ತೋರಿಸಿ ಭಕ್ತಪರಿಪಾಲನೆ ಮಾಡಿ ದುಷ್ಟರನ್ನು ಶಿಕ್ಷಿಸಿ ತನ್ನ ಅಧಿಪತ್ಯವನ್ನು ಆ ಜನಾಂಗದ ಮೇಲೆ ಸ್ಥಾಪಿಸಿದ ವರ್ಣನೆಗಳಿರುತ್ತವೆ. ಒಂದೇ ದೈವದ ಉತ್ಪತ್ತಿ ಬಗ್ಗೆ ಹಲವಾರು ಕಥೆಗಳಿರುವುದೂ ಉಂಟು. ಪಂಜುರ್ಲಿ, ಜುಮಾದಿ ಮುಂತಾದ ಭೂತಗಳ ಹಾಗೂ ಎಲ್ಲಮ್ಮ, ವೀರಭದ್ರ ಮುಂತಾದವರುಗಳ ಉತ್ಪತ್ತಿಯ ಬಗ್ಗೆಯೂ ಒಂದಕ್ಕಿಂತ ಹೆಚ್ಚುಕತೆಗಳು ಪ್ರಚಾರದಲ್ಲಿವೆ. ಅಣ್ಣ ತಂಗಿಯರಾದ ಹಂದಿ ಮರಿಗಳು ಪರಸ್ವರ ಕಾಮಿಸಿ ಮದುವೆಯಾಗಿ ಅವುಗಳಿಗೆ ಹುಟ್ಟಿದ ಮರಿ ಹಂದಿ ಈಶ್ವರನ ತೋಟವನ್ನು ನಾಶಮಾಡತೊಡಗಿದಾಗ ಈಶ್ವರ ಶಾಪ ಕೊಟ್ಟು ಆ ಹಂದಿಯನ್ನು ದೈವವನ್ನಾಗಿ ಮಾಡಿದ್ದು ಒಂದು ಪಾಡ್ದನದಲ್ಲಿ ಕಂಡುಬಂದರೆ ಇನ್ನೊಂದರಲ್ಲಿ ಅದು ಪಾರ್ವತಿ ಸೃಷ್ಟಿಸಿದ ಹಂದಿ. ಶಿವನ ತೋಟವನ್ನು ನಾಶಮಾಡಿದಾಗ ಶಾಪ ಪಡೆದು ಭೂಲೋಕದಲ್ಲಿ ಧರ್ಮ ಪರಿಪಾಲನೆಗಾಗಿ ನಿಯುಕ್ತವಾಯಿತು. ಇನ್ನೊಂದು ಕತೆಯ ಪ್ರಕಾರ ನಾರಾಯಣ ದೇವರು ತನ್ನ ಬೆವರಿನಿಂದ ಭೂತವೊಂದನ್ನು ಸೃಷ್ಟಿಸಿ ಅದನ್ನು ಭೂಲೋಕಕ್ಕೆ ಕಳುಹಿಸಿದ.

ತುಳುವಿನ ಕೆಲವು ಜಾನಪದ ಕಾವ್ಯಗಳಲ್ಲಿ ಒಬ್ಬ ವೀರ ಪುರುಷನಿಗೆ ಅಥವಾ ಅವತಾರ ಪುರುಷನಿಗೆ ಸಂಬಂಧಿಸಿದ ಎಲ್ಲ ಘಟನೆಗಳೂ ಹೆಚ್ಚಾಗಿ ಒಂದೇ ಪಾಡ್ಡನದಲ್ಲಿ ಸಿಗುತ್ತವೆ. ಆದರೆ ಕೆಲವೆಡೆ ಪವಾಡದ ಕಥೆಗಳು ಬೇರೆ ಬೇರೆ ಪಾಡ್ಡನಗಳಲ್ಲಿ ಹಂಚಿಹೋಗಿವೆ.

ಕೋಟಿ ಚೆನ್ನಯ ಪಾಡ್ದನ

(ಅ) ಕೇಂಜವ ಹಕ್ಕಿಗಳಿಂದ ಕೋಟಿಚೆನ್ನಯರ ತಾಯಿ ದೇಯಿ ಬೈದ್ಯೆದಿಯ ಜನನ ಮತ್ತು ತಂದೆ ತಾಯಿಗಳಿಂದ ಉಪೇಕ್ಷಿತಳಾದ ಆಕೆ ಕಾಡಿನಲ್ಲಿ ಕಷ್ಟಪಟ್ಟ ಕತೆ

(ಆ) ಬಿಲ್ಲವನೊಬ್ಬನ ಆಸರೆ ಪಡೆದು, ಮತ್ತೊಬ್ಬ ಬಿಲ್ಲವನನ್ನು ಮದುವೆ ಮಾಡಿಕೊಂಡು ಬಲ್ಲಾಳರಾಜನ ವೈದ್ಯೆಯಾಗಿ ಕೋಟಿ ಚೆನ್ನಯರಿಗೆ ಜನ್ಮವಿತ್ತ ಕಥೆ.

(ಇ) ಕೋಟಿಚೆನ್ನಯರ ಬಾಲ್ಯದ ಶೌರ್ಯ ಪ್ರತಾಪಗಳು, ತಮ್ಮನ್ನು ಹೀಯಾಳಿಸಿದ ಮಂತ್ರಿ ಬುದ್ಯಂತನನ್ನು ಕೊಲೆ ಮಾಡಿದ ಕಥೆ.

(ಈ) ಬಲ್ಲಾಳರಿಂದ ತರಸ್ಕೃತರಾಗಿ ಊರು ಬಿಟ್ಟು ಹೋಗಿ ಎಣ್ಮೂರ ಸೀಮೆಯಲ್ಲಿ ಆಶ್ರಯ ಪಡೆದ ಕಥೆ.

(ಉ) ಪಂಜದ ಬಲ್ಲಾಳರೊಡನೆ ಯುದ್ಧ ಮಾಡಿ ಮಡಿದ ಕಥೆ. ಎರಡು ತಲೆಮಾರಿನ ಕಥೆ ಈ ಪಾಡ್ದನದಲ್ಲಿ ದೊರೆಯುತ್ತದೆ.

ಸಿರಿ ಪಾಡ್ದನ

(ಅ) ಸಿರಿಯ ಸಾಕು ತಂದೆ ಮಕ್ಕಳಿಲ್ಲದೆ ಕೊರಗಿ ತನ್ನ ಕುಲದೈವ ಬೆರ್ಮ ದೈವದ ಗುಡಿಯ ಜೀರ್ಣೋದ್ಧಾರ ಮಾಡುವುದು,

(ಆ) ಪ್ರಸಾದ ರೂಪದಲ್ಲಿ ಸಿಕ್ಕಿದ ಹಿಂಗಾರ ಗಂಧದಲ್ಲಿ ಹೆಣ್ಣು ಮಗು ಕಾಣಿಸಿಕೊಳ್ಳುವುದು.

(ಇ) ಸಿರಿಯ ಮದುವೆ, ಸ್ವೇಚ್ಛಾಚಾರಿ ಹಾಗೂ ಸ್ತ್ರೀಲೋಲನಾದ ಗಂಡನಿಂದ ಆಕೆ ಕಷ್ಟಪಡುವುದು, ತಿರಸ್ಕೃತಳಾಗುವುದು.

(ಈ) ಗಂಡುಮಗುವಿನ ಜನನ, ಸಾಕುತಂದೆಯ ಮೃತ್ಯು.

(ಉ) ದಾಯಾದಿಗಳ ವಂಚನೆಯಿಂದಾಗಿ ನ್ಯಾಯವಾಗಿ ಸಿಕ್ಕಬೇಕಾದ ಅಸ್ತಿ ಸಿಕ್ಕದೆ ಸಿರಿಗೆ             ಅನ್ಯಾಯವಾಗುವುದು.

(ಊ) ದಾಯಾದಿ ಶಂಕರಾಳ್ವನ ಒಳಸಂಚು.

(ಎ) ಮನೆ ಸುಟ್ಟು ಬೂದಿಯಾಗಬೇಕೆಂದು ಶಾಪಕೊಟ್ಟು ಮಗುವಿನೊಂದಿಗೆ ಮನೆಬಿಟ್ಟು ಹೊರಟುಹೋಗುವ      ಕತೆ.

(ಏ) ದುರಾಚಾರಿಯಾದ ಪತಿಯಿಂದ ವಿವಾಹ ವಿಚ್ಛೇದನ ಪಡೆದು ಮರುಮದುವೆ ಮಾಡಿಕೊಳ್ಳುವ ಕತೆ.

(ಐ) ಮಗು ಕುಮಾರನ ಪರಿತ್ಯಾಗ

(ಒ) ಎರಡನೆಯ ಗಂಡನಿಂದ ಸೊನ್ನೆ ಎಂಬ ಹೆಣ್ಣು ಮಗುವನ್ನು ಪಡೆಯುವುದು, ಹಾಗೂ ಕೊನೆಗೆ ಆಕೆಯ ಮರಣ.

(ಓ) ಬ್ರಹ್ಮ ದೇವರಿಗೆ ಹರಕೆ ಹೇಳಿ ಸಿರಿಯ ಮಗಳು ಸೊನ್ನೆಗೆ ಅಬ್ಬಗೆದಾರಗೆ ಎಂಬ ಅವಳಿ ಮಕ್ಕಳು ಹುಟ್ಟುವ     ಕತೆ.

(ಔ) ಮದುವೆಯ ಸಮಯ ಬಂದಾಗಲೂ ಹರಕೆ ತೀರಿಸಲಿಕ್ಕೆ ಸಿದ್ಧರಾಗದ ಅವರನ್ನು ಬ್ರಹ್ಮ ಶಪಿಸುವುದು. ಅದರ ಪರಿಣಾಮವಾಗಿ, ಅಬ್ಬಗೆ ದಾರಗೆಯವರು ಚೆನ್ನೆಮಣೆಯ ಆಟವಾಡುತ್ತಾ ಜಗಳ ಮಾಡಿಕೊಂಡು ಹೊಡೆದಾಡಿಕೊಂಡು ಸಾಯುವುದು.

ಹೀಗೆ ನಾಲ್ಕು ತಲೆಮಾರಿನ ಕತೆ ಈ ಪಾಡ್ದನದಲ್ಲಿ ಕಂಡುಬರುತ್ತದೆ.

ಹೀಗೆ ಕೆಲವು ಪಾಡ್ದನಗಳಲ್ಲಿ ಕಥಾನಾಯಕರ ಪ್ರತಾಪ ಪ್ರಸರಣಗಳೂ ಎರಡು ಮೂರು ನಾಲ್ಕು ತಲೆಮಾರುಗಳ ಕಥೆಗಳೂ ಒಟ್ಟಾಗಿ ಸಿಗುತ್ತವೆ. ಆದರೆ ಕೆಲವು ದೈವಗಳ ಕಥೆಗಳು ಬೇರೆ ಬೇರೆ ಪಾಡ್ದನಗಳಲ್ಲಿ ಹಂಚಿಹೋಗಿವೆ. ದೈವದ ಹುಟ್ಟು ಒಂದು ಪಾಡ್ದನದಲ್ಲಿದ್ದರೆ ಆ ದೈವ ಇನ್ನೊಂದು ಕಡೆ ಹೋಗಿ ಯಾವ ಪವಾಡಗಳನ್ನು ತೋರಿಸಿದೆ ಎಂಬ ಕತೆ ಮತ್ತೊಂದು ಕಡೆ ಪಾಡ್ದನದಲ್ಲಿ ಬರುತ್ತದೆ. ಆ ಸಂದರ್ಭದಲ್ಲಿ ಆ ದೈವದ ಹೆಸರೂ ಸ್ವಲ್ಪ ಬೇರೆಯಾಗಬಹುದು. ಉದಾ: ಜುಮಾದಿ, ಮಲೆಜುಮಾದಿ, ಮರ್ಲ್‌ ಜುಮಾದಿ, ಸಾರಾಲ್‌ ಜುಮಾದಿ, ಕಾನ ಜುಮಾದಿ ಹಾಗೂ ಷಿಲಡ್ಕ ಜುಮಾದಿ. ಹಾಗೆಯೇ ಒಂದೇ ದೈವ ಬೇರೆ ಬೇರೆ ಕಡೆಗಳಿಗೆ ಹೋದಾಗ ಹೇಗೆ ಬೇರೆ ಬೇರೆ ಹೆಸರುಗಳನ್ನು ಪಡೆಯಿತು. ಯಾವ ರೀತಿಯಲ್ಲಿ ಶಿಷ್ಟ ಪರಿಪಾಲನೆ ದುಷ್ಟ ಸಂಹಾರ ಮಾಡಿತು. ಕೊನೆಗೆ ಹೇಗೆ ಸ್ಥಳಕ್ಕೆ ಬಂದು ನೆಲೆಸಿತು ಎಂಬ ವರ್ಣನೆಗಳು ಬೇರೆ ಬೇರೆ ಪಾಡ್ದನಗಳಲ್ಲಿರುತ್ತವೆ. ಹೀಗೆಯೇ ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಬಗ್ಗು ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಒರ್ತೆ ಪಂಜುರ್ಲಿ, ವರ್ನರ ಪಂಜುರ್ಲಿ, ಮಲಾರ ಪಂಜುರ್ಲಿ ಮುಂತಾದ ಬೇರೆ ಬೇರೆ ಪಾಡ್ದನಗಳಲ್ಲಿ ಪಂಜುರ್ಲಿಯ ವಿವಿಧ ಅವತಾರಗಳ ಕಥೆಗಳನ್ನು ಕಾಣಬಹುದು. ಅವುಗಳನ್ನೆಲ್ಲಾ ವ್ಯವಸ್ಥಿತವಾಗಿ ಕ್ರೋಡೀಕರಿಸಿ ಜೋಡಿಸಿದರೆ ದೊಡ್ಡ ದೊಡ್ಡ ಕಾವ್ಯಗಳಾಗುತ್ತವೆ. ಅಂತಹ ಕೆಲಸ ನಡೆಯಬೇಕಾಗಿದೆ.

ಸೃಷ್ಟಿ ಹಾಗೂ ಪ್ರಳಯ.

ಪುರಾಣ ಕಾವ್ಯಗಳ ಒಂದು ಮುಖ್ಯ ಲಕ್ಷಣವೆಂದರೆ ಜಗತ್ತಿನ ಸೃಷ್ಟಿಯ ಹಾಗೂ ಪ್ರಳಯದ ಬಗ್ಗೆ ಆ ಕಾಲದ ಜನರ ಕಲ್ಪನೆಗೆ ರೂಪುಕೊಡುವುದು, ತುಳು ಭಾಷೆಯ ಹಲವಾರು ಪಾಡ್ದನಗಳಲ್ಲಿ ಮೊದಲ ಮಾನವನ ಸೃಷ್ಟಿಯ ಹಾಗೂ ಪ್ರಳಯದ ವರ್ಣನೆಗಳಿವೆ. ‘ಕೇಂಜವ ಹಕ್ಕಿಗಳು’ ಅಂತಹ ಪಾಡ್ದನಗಳಲ್ಲೊಂದು ದೇವಲೋಕದಲ್ಲಿ ಸೂರ್ಯ ನಾರಾಯಣ ದೇವರು ಕೇಂಜವ ಎಂಬ ಅಲೌಕಿಕ ಹಕ್ಕಿಗಳನ್ನು ಸೃಷ್ಟಿಸುತ್ತಾರೆ. ಅವುಗಳು ದೇವರ ಆಣತಿಯಂತೆ ಭೂಲೋಕಕ್ಕೆ ಬರುತ್ತೆವೆ. ಈ ‘ಆದಂ’ ಮತ್ತು ‘ಈವ್’ಗಳಿಂದ ಮನುಕುಲದ ಆರಂಭವಾಗುತ್ತದೆ ಎಂಬುದೇ ಕೇಂಜವ ಹಕ್ಕಿ ಎಂಬ ಪಾಡ್ದನದ ಕಥಾವಸ್ತು.

ಈ ಹಕ್ಕಿಗಳನ್ನು ದೇವರು ಸೃಷ್ಟಿಸಿ ಅವುಗಳ ವಿಹಾರಕ್ಕೆ ಉದ್ಯಾನ, ಜಲಕ್ರೀಡೆಗೆ ನೀರಿನ ಕೊಳ, ವಾಸಕ್ಕೆ ಮರ, ಊಟಕ್ಕೆ ಬೆಳ್ತಿಗೆ ಸಾಮೆ ಅಕ್ಕಿ ಇತ್ಯಾದಿಗಳನ್ನು ಭೂಲೋಕದಲ್ಲಿ ಸೃಷ್ಟಿಸಿ ನೀವು ಅಣ್ಣ ತಂಗಿಯರಾಗಿ ವಿಹರಿಸಿ ಎಂದರು. ಆದರೆ ಕೆಲವು ದಿವಸಗಳ ವಿಹಾರದನಂತರ ಹೆಣ್ಣು ಹಕ್ಕಿಗೆ ಈ ತರದ ಜೀವನದಲ್ಲಿ ಬೇಸರವುಂಟಾಗಿ ತಾನೂ ತಿಂಗಳಿಗೊಮ್ಮೆ ಮುಟ್ಟಾಗಿ ವರ್ಷಕ್ಕೊಮ್ಮೆ ಹಡೆಯಬೇಕೆಂಬ ಬಯಕೆ ಹುಟ್ಟಿತು. ದೇವರಲ್ಲಿ ತನ್ನ ಹೊಸ ಬಯಕೆಯನ್ನು ಹೇಳಿದಾಗ ದೇವರು ಈ ಹಕ್ಕಿಗಳನ್ನು ಎದುರೆದುರು ನಿಲ್ಲಿಸಿ ಅವುಗಳ ಗೋತ್ರವನ್ನು ಕಡಿದು ಇಂದಿನಿಂದ ನೀವು ಅಣ್ಣತಂಗಿಯರಲ್ಲ, ಗಂಡ ಹೆಂಡಿರಾಗಿರಿ ಎಂದು ಅಪ್ಪಣೆ ಕೊಟ್ಟರು.

‘ತಗೆತಂಗಡಿ [ಅಣ್ಣತಂಗಿ]ಯರಾದ ಹಕ್ಕಿಗಳು ಅಂದಿನಿಂದ ಗಂಡ ಹೆಂಡಿರಾಗಿ ಬಾಳಿದರು. ಕೇಂಜವೆದಿ ಗರ್ಭವತಿಯಾದಳು. ಗರ್ಭಿಣಿಯರ ಬಯಕೆಯೂ ವಿಚಿತ್ರವಲ್ಲವೇ? ಏಳು ಸಮುದ್ರದ ಆಚೆ ಇರುವ ಕೊಳದಲ್ಲಿನ ನೇರಳೆ ಮರದ ಹೂವಿನ ಮಧುವನ್ನು ಹೀರಬೇಕೆಂಬುದೇ ಆಕೆಯ ಬಯಕೆ. ಕೇಂಜವ ಏಳು ಸಮುದ್ರದ ಆಚೆ ಹಾರಿ ಹೋದ. ಕುಸುಮದ ಹನಿಯನ್ನು ಹೀರಲು ಕೊಕ್ಕನ್ನು ಹಾಕಿದಾಗ ಸೂರ್ಯ ಮುಳುಗಿದ, ಹೂ ಮುಚ್ಚಿ ಕೊಂಡಿತು. ಕೊಕ್ಕು ಹೂವಿನೊಳಗೆ ಸಿಕ್ಕಿಹಾಕಿಕೊಂಡಿತು.

ಇಲ್ಲಿ ಗಂಡ ಸಮಯಕ್ಕೆ ಬಾರದ ಕಾರಣ ಕೇಂಜವದಿ ಭಯ ವಿಹ್ವಲಳಾದಳು. ಗಂಡ ಬೇಗ ಬಂದರೆ ತಾನು ಇಡುವ ಮೊದಲ ಮೊಟ್ಟೆ ದೇವರಿಗೆ ಅರ್ಪಿಸುವನು ಎಂದು ಹರಕೆ ಹೊತ್ತಳು. ಹರಕೆ ಪ್ರಭಾವದಿಂದ ಹೂ ಅರಳಿತು. ಕೇಂಜವ ಕೊಕ್ಕನ್ನು ಬಿಡಿಸಿಕೊಂಡು ಮಧು ಹೀರಿಕೊಂಡು ಹಾರಿಬಂದ. ಗರ್ಭವತಿ ಕೇಂಜವೆದಿ ಸಂತೋಷದಿಂದ ಮಧುಪಾನ ಮಾಡಿದಳು. ಎರಡು ಮೊಟ್ಟೆ ಇಟ್ಟಳು. ರೆಕ್ಕೆ ರೆಕ್ಕೆಗಳನ್ನು ಪೋಣಿಸಿ ಒಂದು ಮೊಟ್ಟೆಯನ್ನು ಅದರ ಮಧ್ಯೆ ಇಟ್ಟು ಹಕ್ಕಿಗಳು ಅಂಬರ ಮಾರ್ಗದಲ್ಲಿ ದೇವಲೋಕಕ್ಕೆ ಹಾರಿದರು. ಮೊಟ್ಟೆಯನ್ನು ಹರಕೆ ಹಾಕಿದರು. ದೇವರು ಮೊಟ್ಟೆಯನ್ನು ತಲೆದಿಂಬು ಮಾಡಿ ಮಲಗಿದಾಗ ಮೊಟ್ಟೆ ಒಡೆದ ಅದರ ಬಿಳಿಯ ಲೋಳೆ ಬಿಳಿಶಿಲೆಯ ಕಲ್ಲಾಗಿ ಭೂಮಿಯಲ್ಲಿ ಬಿದ್ದು ಬೆರ್ಮೆರ ಕಲ್ಲಾಗಿ ತುಳುನಾಡಿನ ಕೆಮ್ಮಲೆಯಲ್ಲಿ ನೆಲೆಯಾಯಿತು. ‘ಬೆರ್ಮೆರ್‌’ ಎಂಬ ಹೆಸರಿನಿಂದ ಆತ ಆರಾಧಿಸಲ್ಪಟ್ಟು ಸೃಷ್ಟಿಕಾರ್ಯವನ್ನು ಮುಂದುವರಿಸಿದ. ಮೊಟ್ಟೆಯ ಅರಶಿನ ಲೋಳೆ ಅರಶಿನ ಹೂವಾಗಿ ದೇವರ ಪೂಜೆಯ ವಸ್ತುವಾಗಿ ಮಾರ್ಪಟ್ಟಿತು.

ಇನ್ನೊಂದು ಪಾಠಾಂತರದಂತೆ ನಾರಾಯಣ ದೇವರು ಮೊಟ್ಟೆಯನ್ನು ತನ್ನ ಬಂಗಾರದ ಪೆಟ್ಟಿಗೆ ‘ಕಲೆಂಬಿ’ಯಲ್ಲಿ ಜೋಪಾನದಿಂದ ಮುಚ್ಚಿ ಇಡುತ್ತಾರೆ. ಅದು ಒಡೆದು ಭೂಮಿಯ ಹಾಗೂ ಬ್ರಹ್ಮದೇವರ ಸೃಷ್ಟಿಯಾಯಿತು ಇಲ್ಲಿ ಸೃಷ್ಟಿಕರ್ತನಾದ ಬ್ರಹ್ಮ ಬಡಗಿಯಾಗಿ ಕೈಯಲ್ಲಿ ಆಯದಮಟ್ಟ, ಅಳತೆಕೋಲು, ‘ಮಾಂಕಾಳಿ ಮಡು’ ಎನ್ನುವ ಕೊಡಲಿ ಹಾಗೂ ‘ಬೀಮ ಕೊದಂಟಿ ಎಂಬ ಸುತ್ತಿಗೆ ಹಿಡಿದುಕೊಂಡು ಸೃಷ್ಟಿ ರಚನೆಗೆ ತೊಡಗುತ್ತಾನೆ.

ಮತ್ತೊಂದು ಪಾಠಾಂತರದಂತೆ ನಾರಾಯಣ ದೇವರಿಗೆ ಅರ್ಪಿಸುವ ಮೊಟ್ಟೆ ಅವರ ಕೈಯಿಂದ ಕೆಳಗೆ ಸಮುದ್ರಕ್ಕೆ ಬಿತ್ತು. ತೆರೆಗಳಲ್ಲಿ ತೇಲಿಕೊಂಡು ಬಂದ ಆ ಮೊಟ್ಟೆ ಲಿಂಬೆಹಣ್ಣಾಗಿ ಸಮುದ್ರ ದಡದಲ್ಲಿ ಜಪಮಾಡುತ್ತಿದ್ದ ಒಬ್ಬ ಬ್ರಾಹ್ಮಣನಿಗೆ ಸಿಕ್ಕಿತು. ಮಕ್ಕಳಿಲ್ಲದೆ ಆ ಬ್ರಾಹ್ಮಣ ಲಿಂಬೆ ಹಣ್ಣನ್ನು ಮನೆಗೆ ತಂದಿಟ್ಟಾಗ ಅದು ಮಗುವಾಗಿ ಮಾರ್ಪಟ್ಟಿತು. ಅದಕ್ಕೆ ಕೇದಗೆ ಎಂಬ ಹೆಸರಿಟ್ಟು ಸಾಕಿದರು. ಮೈನೆರೆಯುವರೆಗೂ ಮದುವೆ ಆಗದಿದ್ದ ಕಾರಣ ಆಗಿನ ಸಮಾಜದ ಕಟ್ಟಳೆಯಂತೆ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಾರೆ. ಆಕೆಯನ್ನು ಒಬ್ಬ ಬಿಲ್ಲವ ತಂದು ಸಾಕಿ ಸಲಹಿದ. ಅವಳೇ ಕೋಟಿಚೆನ್ನಯ ಎಂಬ ವೀರಪುರುಷರಿಗೆ ಜನ್ಮ ಕೊಟ್ಟ ದೇಯಿಬೈದೈದಿ.

ಹೀಗೆ ಹಲವು ಪಾಡ್ದನಗಳಲ್ಲಿ ಕೇಂಜವ ಕೇಂಜವೆದಿಯ ಕಥೆಯ ಮೂಲಕ ಮಾನವ ಕುಲದ ಮೂಲ ಹೇಳಿ ಆ ವಂಶದಿಂದ ಪ್ರಸ್ತುತ ಕಥೆಯ ವೀರಪುರುಷ ಅಥವಾ ವೀರವನಿತೆ ಜನ್ಮತಾಳಿದರು ಎಂದು ಪ್ರಾರಂಭಿಸುವ ಪದ್ಧತಿಯಿದೆ.

ಇದೇ ರೀತಿ ಪ್ರಳಯದ ವರ್ಣನೆಯನ್ನು ಕೆಲವು ಪಾಡ್ದನಗಳಲ್ಲಿ ನೋಡಬಹುದು. ‘ಬೆರ್ಮೆರ ಬೀರ’ ಅಂತಹ ಪಾಡ್ಡನಗಳಲ್ಲೊಂದು. ತುಳುವರ ಬೆರ್ಮ ತ್ರಿಮೂರ್ತಿಗಳಲ್ಲೊಬ್ಬನಾದ ಪುರಾಣದ ಬ್ರಹ್ಮನಲ್ಲ. ಜೈನ ಸಂಪ್ರದಾಯದಿಂದಾಗಿ ತುಳು ಸಂಸ್ಕೃತಿಯಲ್ಲಿ ಸೇರಿಹೋದ ಯಕ್ಷಬ್ರಹ್ಮನೋ ಅಥವಾ ನಾಗಬ್ರಹ್ಮನೋ ಅಥವಾ ತುಳುವರದ್ದೇ ಆದ ಇನ್ನೊಬ್ಬ ಬ್ರಹ್ಮನೋ ಇರಬೇಕು. ಆತ ಎಲ್ಲ ಭೂತಗಳಿದ್ದೂ ಒಡೆಯ. ತುಳುನಾಡಿನ ಭೂತಗಳಿಗೆಲ್ಲಾ ಅವನು ಅಧ್ಯಕ್ಷನೆಂದು ತಿಳಿಯಬಹುದು. ಆತನ ಜನನದ ಬಗ್ಗೆ ಒಂದು ಪಾಡ್ಡನವಿದೆ. ಅದರಲ್ಲಿ ಪ್ರಳಯದ ವರ್ಣನೆ, ಪ್ರಳಯಾನಂತರ ಬ್ರಹ್ಮನ ಸೃಷ್ಟಿಯ ವರ್ಣನೆಯಿದೆ. ಅದರ ಒಂದು ತುಣುಕು ಹೀಗಿದೆ.

ದೇವ ಸಂಪಿಗೆಯ ಬುಡದಲ್ಲಿ ಏಳು ಕೋಟಿ ದೇವರುಗಳು ಉದಯವಾದರು. ಅಸುರ ಸಂಪಿಗೆ ಮರದ ಬುಡದಲ್ಲಿ ಎಪ್ಪತ್ತು ಕೋಟಿ ಅಸುರರು ಉದಯವಾದರು. ದೇವರುಗಳಿಗೂ ಅಸುರರುಗಳಿಗೂ ಸಂಗ್ರಾಮ ನಡೆಯಿತು. ರಣಾಗ್ರವಾಯಿತು. ಏಳು ರಾತ್ರಿ ಎಂಟು ಹಗಲು ಕರಂಡೆ ಗಿಡದ ಬುಡದಲ್ಲಿ ಕಾಳಗ ನಡೆಯಿತು. ತುಂಬೆ ಗಿಡದ ಕೆಳಗೆ ಸಭೆ ಸೇರಿತು. ಮಖಾ ನಕ್ಷತ್ರದಲ್ಲಿ ದೊಡ್ಡ ದೊಡ್ದ ಹನಿ ಮಳೆ ಬೀಳುವಂತೆ ರಕ್ತದ ಮಳೆ ಸುರಿಯಿತು. ಜಲಚರಗಳು ಉರುಳಿದವು. ಸಮುದ್ರ ಒಡೆಯಿತು. ಏಳು ಸಮುದ್ರ ಒಂದಾಯಿತು. ಹಾರುವ ಹಕ್ಕಿಗಳ ರೆಕ್ಕೆ ತುಂಡಾಯಿತು. ಹರಿದಾಡುವ ಇರುವೆಗಳ ಚಲನೆ ನಿಂತು ಹೋಯಿತು. ಆಕಾಶದಲ್ಲಿ ನಕ್ಷತ್ರಗಳು ಮುಳುಗಿ ಹೋದವು. ಭೂಮಿಯಲ್ಲಿ ಸಸ್ಯ ಜೀವಿಗಳು ನಾಶವಾದವು. ದೇವತೆಗಳು ಹೋಗಿ ದೇವಲೋಕದಲ್ಲಿ ಶರಣು ಹೊಕ್ಕರು. ಅಸುರರು ಹೋಗಿ ಅರಣ್ಯದಲ್ಲಿ ಆಶ್ರಯ ಪಡೆದರು. ನಾಗಕುಲಕ್ಕೆ ಸೇರಿದವರು ಶತಪಾತಾಳ ಹೊಕ್ಕರು.

ಆಮೇಲೆ ಸೃಷ್ಟಿಕಾರ್ಯ ಪ್ರಾರಂಭವಾಗುತ್ತದೆ. ‘ಬಲೀಂದ್ರ ಪಟ್ಟಾವು’ ಎಂಬ ಪಾಡ್ಡನದಲ್ಲಿ ಕೃಷ್ಣ ಕೊಳಲೂದುವಾಗ ಎರಡನೆಯ ಬಾರಿ ಸೃಷ್ಟಿಯ ಆರಂಭವಾಯಿತು ಎಂಬ ವರ್ಣನೆಯನ್ನು ಕಾಣಬಹುದು.

ಅತಿಮಾನುಷ ಶಕ್ತಿ ಸಾಹಸಗಳು ಹಾಗೂ ಪವಾಡಗಳು

ವೀರ ಪುರುಷರುಗಳು ಪವಾಡಾತ್ಮಕವಾದ ಅಥವಾ ಅಲೌಕಿಕ ಉತ್ಪತ್ತಿಯ ಬಗ್ಗೆಯೂ ಸಾಕಷ್ಟು ಪುರಾವೆಗಳು ಸಿಗುತ್ತವೆ. ಹೆಚ್ಚಿನ ವಿಭೂತಿ ಪುರುಷರುಗಳ ತಾಯಂದಿರು ಪುರುಷ ಸಂಪರ್ಕವಿಲ್ಲದೆ ಮಕ್ಕಳನ್ನು ಪಡೆದರು. ಮುಟ್ಟಾಗಿ ಐದನೆಯ ದಿನ ಸ್ನಾನಕ್ಕೆಂದು ಹೊಳೆಗೆ ಹೋಗಿ ಸ್ನಾನ ಮಾಡಿ ಮೀನುಗಳಿಗೆ ಅಕ್ಕಿ ಹಾಕಿದಾಗ ಗರ್ಭಧಾರಣೆಯಾಗುವುದು, ಹರಕೆ ಹೇಳಿದಾಗ ನಾಲಿಗೆ ಮುಖದೊಳಗೆ ಹೋಗುವ ಮೊದಲೇ ಗರ್ಭಧಾರಣೆಯಾಗುವುದು, ಧಾರ್ಮಿಕ ಕ್ರಿಯೆಗಳನ್ನು ಆಚರಿಸಿದ ಕೂಡಲೆ ಗರ್ಭವತಿಯಾಗುವುದು, ಸೂರ್ಯದೇವರನ್ನು ಆರಾಧಿಸಿದಾಗ ಆ ಕಿರಣವೇ ಗರ್ಭದೊಳಗೆ ಹೊಕ್ಕು ಗರ್ಭ ನಿಲ್ಲುವುದು, ಮುಟ್ಟಾಗಿ ಹೊಳೆಯಲ್ಲಿ ಮಿಂದು ಬರುವಾಗ ನಾಗದರ್ಶನದಿಂದ ಗರ್ಭನಿಲ್ಲುವುದು, ಮದುವೆಯಾಗಿ ಒಂದೂವರೆ ವರ್ಷ ಗಂಡ ತನ್ನ ಸ್ಪರ್ಶ ಮಾಡಬಾರದೆಂದು ಹೆಂಡತಿ ಹೇಳಿದ್ದರೂ, ಗಂಡ ದೇಶಾಂತರ ಹೋದಾಗ ದೇವರ ಅನುಗ್ರಹದಿಂದ ಹೆಂಡತಿ ಗರ್ಭಧಾರಣೆ ಮಾಡುವುದು, ನೆಲ ಒಡೆದು ತುಂಬೆ ಹೂ ಗರಿಗೆ ಅಥವಾ ಹುಲ್ಲಿನ ಜೊತೆ ಅವತಾರವಾಗುವುದು ಮುಂತಾದ ನೂರಾರು ಘಟನೆಗಳು ತುಳು ಜನಪದ ಸಾಹಿತ್ಯದಲ್ಲಿವೆ.

ಮಣ್ಣಿನ ಮೂರ್ತಿಯೊಂದನ್ನು ಮಾಡಿ ಅದಕ್ಕೆ ದೇವರು ಜೀವಕಳೆ ತುಂಬಿಸುವಂತೆ ಪ್ರಾರ್ಥಿಸುವುದು, ದೇವರ ಮೈಮೇಲಿನ ಬೆವರು ಕೆಳಗೆ ಬಿದ್ದಾಗ ಅದರಿಂದ ಪವಾಡ ಪುರುಷನೋರ್ವನ ಉದ್ಭವವಾಗುವುದು ಮುಂತಾದ ಕಥೆಗಳನ್ನೂ ನಾವು ಕಾಣುತ್ತೇವೆ.

ಗರ್ಭಧಾರಣೆಯಾದ ಮೇಲೆ ಜನನವಾಗುವುದು ಒಂದು ಸಾಮಾನ್ಯ ಲೌಕಿಕ ಕ್ರಿಯೆ. ದಿವ್ಯ ಚೇನಗಳು ಸಾಮಾನ್ಯ ಶಿಶುವಿನಂತೆ ತಾಯಿಯ ಯೋನಿಯಿಂದ ಹೊರಬರುವುದಿಲ್ಲ. ಜುಮಾದಿ, ಬೊಬ್ಬರ್ಯ ಮುಂತಾದವರು ತಾಯಿಯ ಬೆನ್ನು ಸೀಳಿ ಹೊರಬಂದವರು. ಗುಳಿಗ ತಾಯಿಯ ಬಲಮೊಲೆಯ ಬದಿಯಲ್ಲಿ ದಾರಿ ಮಾಡಿಕೊಂಡು ಹೊರಗೆ ಬಂದ. ಮಾದೇಶ್ವರ ಕಾವ್ಯದಲ್ಲಿ ಮಾದೇಶ್ವರ ಪತಿವ್ರತೆ ಉತ್ತರಾಜಮ್ಮನ ಗರ್ಭ ಸೇರಿಕೊಂಡು ಆಕೆಯ ಬೆನ್ನಲ್ಲಿ ಎಳ್ಳಷ್ಟು ಜಾಗ ಮಾಡಿಕೊಂಡು ಈ ಲೋಕದಲ್ಲಿ ಅವತರಿಸಿಕೊಂಡನು. ಚೆನ್ನಮ್ಮ ಬಸುರಿಯಾಗಿದ್ದಾಗಲೆ ಮಗು ಹೊಟ್ಟೆಯೊಳಗೆ ಮಾತಾಡಿದಂತೆ ತುಳು ಪಾಡ್ದನದ ಬೊಬ್ಬರ್ಯನೂ ತಾಯಿಯ ಹೊಟ್ಟೆಯೊಳಗಿಂದ ತಾನು ಯಾವ ದಾರಿಯಿಂದ ಹೊರ ಬರಲಿ ಎಂದು ಕೇಳಿದ್ದಾನೆ.

ಮಲೆ ಜುಮಾದಿ ಪಾಡ್ದನದಲ್ಲಿ ಜುಮಾದಿಗೆ ಆಹಾರ ಪಾನೀಯಗಳು ಸಾಕಾಗದಿದ್ದಾಗ ವಜ್ರದ ದುಂಬಿಯ ರೂಪದಲ್ಲಿ ನಾರಾಯಣ ಲೋಕಕ್ಕೆ ಹೋಗಿ ತ್ರಿಶೂಲದಲ್ಲಿ ಕುಳಿತುಕೊಂಡು ನಾರಾಯಣ ದೇವರ ಗಮನ ತನ್ನ ಕಡೆ ಹರಿಯುವಂತೆ ಮಾಡುವುದು, ನಾರಾಯಣ ದೇವರು ಜುಮಾದಿಯ ಸಹಾಯದಿಂದ ತನ್ನ ಕೆಲಸವನ್ನು ಮಾಡಿಸಿಕೊಳ್ಳುವುದು ಮುಂತಾದ ವರ್ಣನೆಗಳಿವೆ. ನಾರಾಯಣ ದೇವನಿಂದ ಜಪಮಾಲೆ ಮತ್ತು ಆಯುಷ್ಯದ ಕಂಬಳಿಯನ್ನು ಬ್ರಹ್ಮದೇವ ತೆಗೆದುಕೊಂಡು ಹೋದವ ಮತ್ತೆ ಮರಳಿಸಲಿಲ್ಲ. ಹೇಗಾದರೂ ಮಾಡಿ ಅವುಗಳನ್ನು ಜುಮಾದಿಯ ಮೂಲಕ ಹಿಂದೆ ಪಡೆದುಕೊಳ್ಳಬೆಕು ಎಂದು ಯೋಚಿಸುತ್ತಾನೆ. ಜುಮಾದಿ ಬ್ರಹ್ಮನ ಬಳಿಗೆ ಹೋಗಿ ಉಪಾಯದಿಂದ ಈ ಸಾಧನಗಳನ್ನು ತರುತ್ತಾನೆ. ದೇವಲೋಕದ ರಾಜಕೀಯದಲ್ಲಿ ನರಲೋಕದ ವಿಲಕ್ಷಣ ಪುರುಷನೊಬ್ಬ ಪಾಲುಗೊಳ್ಳುವ ಇಂತಹ ರೋಚಕ ವರ್ಣನೆಗಳನ್ನು ಇಲ್ಲಿ ನಾವು ಕಾಣುತ್ತೇವೆ.

ನಾರಾಯಣ ದೇವರು ತೋರಿಸಿಕೊಟ್ಟ ಏಳು ಕೆರೆಗಳ ನೀರನ್ನು ತನ್ನ ನಾಲ್ಕೂವರೆ ಗಾವುದ ಉದ್ದದ ನಾಲಿಗೆಯಿಂದ ಕುಡಿದರೂ ಸಾಕಾಗದೆ, ನಾರಾಯಣ ಪಟ್ಟದ ಆನೆಯ ರಕ್ತ ಹೀರಿ ಕುಡಿದು ತೃಪ್ತಿಯಾಗದೆ, ಮತ್ತೆ ಮತ್ತೆ ನೀರು ಬೇಕೆಂದಾಗ ನಾರಾಯಣ ದೇವರು ತನ್ನ ಕಿರುಬೆರಳನ್ನು ಚೀಪಲಿಕ್ಕೆ ಹೇಳುತ್ತಾರೆ. ಜುಮಾದಿ ರಕ್ತ ಹೀರಲಿಕ್ಕೆ ತೊಡಗಿದಾಗ ನಾರಾಯಣ ದೇವರು ಮೂರ್ಛೆ ಹೋದರಂತೆ. ನಾರಾಯಣ ದೇವರು ಜುಮಾದಿಯ ಹತ್ತಿರ ಹೇಳುತ್ತಾರೆ – ‘ನೋಡಪ್ಪ ನಿನ್ನನ್ನು ತೃಪ್ತಿಪಡಿಸಲಿಕ್ಕೆ ನಮ್ಮಿಂದ ಸಾಧ್ಯವಿಲ್ಲ, ಭೂಲೋಕಕ್ಕೆ ಹೋಗಿ ಭಕ್ತರಿಂದ ಬಲಿಕಾಣೆಕೆಗಳನ್ನು ಸ್ವೀಕರಿಸು, ದುಷ್ಟರನ್ನು ಶಿಕ್ಷಿಸಿ ಬೆದರಿಸಿ ಅವರಿಂದಲೂ ಪನಿವಾರ ಸೀಯಾಳಗಳನ್ನು ಸ್ವೀಕರಿಸಿ ತೃಪ್ತಿಪಡೆ, ಎಂದು ಹೇಳಿ ಭೂಲೋಕಕ್ಕೆ ಕಳುಹಿಸಿಕೊಡುತ್ತಾರೆ. ಕರ್ನಾಟಕದ ಜನಪದ ಪುರಾಣಗಳಲ್ಲಿಯೂ ದೈವಮಾನವ ಸಂಪರ್ಕದ ಹಲವಾರು ಘಟನೆಗಳಿವೆ. ಜುಂಜಪ್ಪ ಇಂದ್ರನಿಗೆ ಬಾಣದ ಮೂಲಕ ಸಂದೇಶ ಕಳುಹಿಸುವ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ಕೋಡ್ದಬ್ಬು ದೈವ ಸಂಚಾರಕ್ಕೆ ಹೋದಾಗ ಬೊಬ್ಬರ್ಯ ಸಮುದ್ರಕ್ಕೊಂದು ಕಾಲು ಗಟ್ಟಕ್ಕೆ ಇನ್ನೊಂದು ಕಾಲು ಇಟ್ಟು ಕೋಡ್ದಬ್ಬುವನ್ನು ಅಡ್ದಗಟ್ಟುವುದು, ಆಗ ಕೋಡ್ದಬ್ಬು ಆತನ ಸೊಕ್ಕು ಮುರಿಯುವುದು ಮುಂತಾದ ಸಾಹಸ ಕೃತ್ಯಗಳ ವರ್ಣನೆಯಿದೆ. ಜುಂಜಪ್ಪನ ಸಾಹಸಗಳು ಕೋಡ್ದಬ್ಬುವಿನ ಸಾಹಸಗಳನ್ನು ಹೋಲುತ್ತವೆ. ಎಲ್ಲಮ್ಮನ ಕಾವ್ಯದಲ್ಲಿ ಪಾತುರಲಿಂಗ ಎಂಬ ಕಿರಿಯ ದೈವವು ದೇವಿಯಲ್ಲಿದ್ದ ಕೋಪವನ್ನು ತನ್ನಲ್ಲಿ ಸ್ವೀಕರಿಸಿ ಲೋಕವನ್ನು ಮೀರುವಷ್ಟು ಉಗ್ರ ಕೋಪದಿಂದ ಭೂಮಿಯಿಂದ ಆಕಾಶಕ್ಕೆ ಒಂದೇ ಸಮನಾಗಿ ಬೆಳೆದುನಿಂತು ಲಕ್ಷಗಟ್ಟಲೆ ರಾಕ್ಷಸರನ್ನು ಬಾಯಿಗೆ ಹಾಕಿ ಕಚ ಕಚ ಜಗಿದ ಕತೆ ಇದೆ. ಇಂತಹ ರೋಮಾಂಚಕಾರಿ ಘಟನೆಗಳೂ ವರ್ಣನೆಗಳೂ ತುಳು ಹಾಗೂ ಕನ್ನಡ ಜನಪದ ಪುರಾಣಗಳಲ್ಲಿ ಹೇರಳವಾಗಿ ಸಿಗುತ್ತವೆ.

ಜನಪದ ದೈವಗಳು ಅವತರಿಸಿದ್ದು ಧರ್ಮ ಸಂಸ್ಥಾಪನೆಗಾಗಿ, ನೀತಿ ಬೋಧನೆಗಾಗಿ, ಆ ಸಮಾಜದ ಜನರು ಬೆಳೆಸಿಕೊಂಡು ಬಂದ ನಂಬಿಕೆ ಮೌಲ್ಯಗಳ ಪ್ರಚಾರಕ್ಕಾಗಿ, ಹೀಗಾಗಿ ಈ ಪುರಾಣಗಳ ವೀರ ಪುರುಷರು ಕೆಲವೊಮ್ಮೆ ಹೆತ್ತ ತಾಯಿಯಂತೆ ಪ್ರೀತಿ ತೋರಿಸುವುದೂ ಕೆಲವೊಮ್ಮೆ ರೌದ್ರ ರೂಪ ಧರಿಸಿ ಶಿಕ್ಷಿಸುವುದೂ, ತಮ್ಮ ದೈವತ್ವದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ಸಾಹಸ ಕೃತ್ಯಗಳನ್ನು ಮಾಡಿ ತೋರಿಸುವುದೂ ಕಂಡುಬರುತ್ತದೆ.

ಮಲೆಯ ಮಾದೇಶ್ವರ ಕುಂತೂರು ಮಠದ ಸ್ವಾಮಿಗಳ ಬಳಿ ಹೂವಿನ ಊಳಿಗಕ್ಕೆ ನೇಮಕಗೊಂಡಾಗ ಗೊದ್ದು, ಗೋಸುಂಬೆ, ಹಾವು ಚೇಳುಗಳನ್ನು ಹೂ ಮಾಡಿ ತನ್ನ ಮಹಿಮೆಯನ್ನು ಮೆರೆಯುತ್ತಾನೆ. ಬಂಡಳ್ಳಿ ಬಸವನ ಪೂಜೆಗೆ ಹೋಗಿ ಯಾರೂ ಬಗ್ಗಿಸಲಾಗದ ಬಸವನ ಸೊಕ್ಕು ಮುರಿಯುತ್ತಾನೆ. ತುಳುನಾಡಿನ ಕೋಟಿಚೆನ್ನಯರೂ ಕಬ್ಬಿಣದ ಸರಳುಗಳನ್ನು ತುಂಡರಿಸುವುದು, ಒಂದು ಗೋಣಿ ಸಾಸಿವೆಯನ್ನು ತಿಕ್ಕಿ ಧೂಳು ಮಾಡುವುದು, ಮಂತ್ರಿ ಬುದ್ಯಂತನ ಸೊಕ್ಕು ಮುರಿಯುವುದು ಮುಂತಾದ ಪರಾಕ್ರಮಗಳನ್ನು ಮೆರೆಯುತ್ತಾರೆ. ಕೋಡ್ದಬ್ಬು ಎಂಬ ದಲಿತವರ್ಗದ ವೀರಪುರುಷನ ಪವಾಡಗಳನ್ನು ಸಹಿಸಲಾರದ ಉಚ್ಚ ವರ್ಗದವರು ಆತನನ್ನು ಅನೇಕ ವಿಷಪರೀಕ್ಷೆಗಳಿಗೆ ಗುರಿಪಡಿಸುತ್ತಾರೆ. ಆದರೆ ಆತ ಎಲ್ಲ ಸಂಕಷ್ಟಗಳಿಂದಲೂ ಪಾರಾಗಿ ಬರುತ್ತಾನೆ.

ಈ ವಿಭೂತಿ ಪುರಷರು ತಮ್ಮ ಮಹಿಮೆಯನ್ನು ಒಪ್ಪಿ ಶರಣಾಗತರಾದವರನ್ನು ಎಲ್ಲ ಬಗೆಯ ಆಪತ್ತುಗಳಿಂದಲೂ ರಕ್ಷಿಸುವ ಹೊಣೆಯನ್ನು ಹೊರುತ್ತಾರೆ. ಸೋಲಿಗರ ಹೆಣ್ಣು ಸಂಕಮ್ಮ ಗಂಡನ ಕ್ರೂರ ನಡತೆಯಿಂದ ಶೋಕ ಸಂತಪ್ತಳಾದಾಗ ಮಾದೇಶ್ವರ ಆಕೆಯ ಉದ್ಧಾರಕ್ಕಾಗಿ ಏಳು ಬೆಟ್ಟಗಳನ್ನು ಇಳಿದು ಬಂದು ನೀಲಯ್ಯನನ್ನು ಶಿಕ್ಷಿಸುತ್ತಾನೆ. ತುಳುನಾಡಿನ ಈಡಿಗ (ಬಿಲ್ಲವ) ವರ್ಗದ ನಂದು ಪೂಜಾರಿಯ ಹೆಂಡತಿಯ ಶೀಲ ಕೆಡಿಸಲಿಕ್ಕೆಂದು ಜಮೀನ್ದಾರ ಬಂದಾಗ ಆಕೆ ನಂಬಿದ ಕಲ್ಲುರ್ಟಿ ದೈವ ಜಮೀನ್ದಾರನನ್ನು ಕೊಂದು ಅವನ ಹೆಂಡತಿಯ ಕತ್ತಿನಿಂದ ಕರಿಮಣಿ ಕಸಿದುಕೊಳ್ಳುತ್ತದೆ.

ಭೂಮಾಲಕನು ಪತಿವ್ರತೆ ತೆಲೆದಿಯ ಶೀಲ ಭಂಗ ಮಾಡಲಿಕ್ಕೆ ಪ್ರಯತ್ನಿಸಿದಾಗ ಅವಳು ತಾನು ನಂಬಿದ ಕಲ್ಲುರ್ಟಿಯನ್ನು ನೆನಪಿಸಿಕೊಳ್ಳುತ್ತಾಳೆ. ದೈವ ಅವಳ ಗಂಡನಿಗೆ ಅಪಾಯದ ಸೂಚನೆ ಕೊಟ್ಟು ಮಾಲಕನ ರುಂಡವನ್ನು ಹಾರಿಸುವ ಹಾಗೆ ಮಾಡುತ್ತದೆ. ಇಷ್ಟಲ್ಲದೆ ಮಾಲಕನ ಹೆಂಡತಿಯ ಸೌಭಾಗ್ಯದ ಒಡೆವೆಗಳನ್ನು ಕಿತ್ತು ಅವಳ ಅಮಂಗಳ ರೂಪವನ್ನು ನೋಡಿ ಆನಂದಿಸುತ್ತದೆ. ಇಲ್ಲಿ ಭೂತ ಮಾನವರ ಆಗುಹೋಗುಗಳಲ್ಲಿ ಎಷ್ಟು ಶ್ರದ್ಧೆ ವಹಿಸುತ್ತದೆ ಎಂದು ನೋಡಬಹುದು.

ಈ ವಿಭೂತಿ ಪುರುಷರ ನಿಗ್ರಹ ಶಕ್ತಿಗೂ ಹಲವಾರು ಉದಾಹರಣೆಗಳನ್ನು ಕೊಡಬಹುದು. ಮಾದೇಶ್ವರ ಕಾವ್ಯದ ಜುಂಜೇಗೌಡ ಮತ್ತು ಅವನ ಹೆಂಡತಿ ಮಾದೇಶ್ವರನಿಗೆ ದಾನ ನೀಡಲು ನಿರಾಕರಿಸಿದಾಗ ಅವನ ಸಮಸ್ತ ಸಂಪತ್ತೂ ನಾಶವಾಯಿತು. ತುಳುನಾಡಿನ ಮೈಂದಾಳ ಪಾಡ್ದನದಲ್ಲಿ ಬೆಟ್ಟದ ನಾಗಯ್ಯ ಕೋಲಕ್ಕೆ ಕಾಣಿಕೆ ರೂಪದಲ್ಲಿ ಎಳನೀರು, ತೆಂಗಿನ ಸಿರಿ ಕೊಡಲು ನಿರಾಕರಿಸಿದಾಗ ಕೋಪಗೊಂಡ ಜುಮಾದಿ ಆತನ ಬಾಣಂತಿ ಸೊಸೆಯನ್ನೂ ಮಗುವನ್ನು ಮಾಯಕ ಮಾಡಿ ತನ್ನ ವಶಕ್ಕೆ ತೆಗೆದುಕೊಂಡು ಬುದ್ಧಿ ಕಲಿಸಿದ ದಾರುಣ ವರ್ಣನೆ ಇದೆ. ಕುಟುಂಬದಲ್ಲಿ ಒಬ್ಬ ಮಾಡಿದ ಪಾಪ ಎಲ್ಲರಿಗೂ ತಗಲುತ್ತದೆ ಎಂಬುದನ್ನು ಈ ಪಾಡ್ದನ ಪ್ರತಿಪಾದಿಸುತ್ತಾರೆ. ಕುಟುಂಬದ ರಕ್ಷಣೆಗೆ ಕಂಕಣಬದ್ಧರಾಗಿರುವ ದೈವಗಳು ತಪ್ಪಿತಸ್ಥರಿಗೆ ಶಿಕ್ಷೆ ಕೊಡುವಲ್ಲಿ ಹಿಂಜರಿಯುವುದಿಲ್ಲ.

ಸಂಕಷ್ಟಗಳು ಎದುರಾಗಾಗ ಅಥವಾ ಮಕ್ಕಳು ಇಲ್ಲದಾಗ ಹರಕೆ ಹೇಳಿಕೊಂಡು ಆಮೇಲೆ ಸಂಕಷ್ಟ ಪರಿಹಾರವಾದಾಗ ಅಥವಾ ಮಕ್ಕಳು ಹುಟ್ಟಿದಾಗ ಹರಕೆ ತೀರಿಸಲಿಕ್ಕೆ ಮರೆಯುವುದು ಅಥವಾ ಅಸಡ್ಡೆ ತೋರಿಸುವುದು ಸಾಮಾನ್ಯವಾಗಿ ಕಂಡುಬರುವ ವಿಷಯ. ಆದರೆ ಹೇಳಿದ ಹರಕೆ ತೀರಿಸದಿದ್ದರೆ ಭೂತಗಳು

ಅನಿಷ್ಟಗಳನ್ನು ತಂದುಕೊಡುತ್ತವೆ. ಇದಕ್ಕೆ ಸಿರಿಯ ಮೊಮ್ಮಕ್ಕಳಾದ ಅಬ್ಬಗೆ ದಾರಗೆಯರ ದುರ್ಮರಣವೇ ಸಾಕ್ಷಿ. ಸಿರಿ ಗಂಡನಿಂದ, ಸಮಾಜದಿಂದ ಪೀಡಿಸಲ್ಪಡುತ್ತಾಳೆ. ಸಿರಿಯ ಮಗಳು ಸೊನ್ನೆ ಮಕ್ಕಳಿಲ್ಲದೆ ತಿರಸ್ಕೃತಳಾಗುತ್ತಾಳೆ. ಕೊನೆಗೆ ಬೆರ್ಮರಿಗೆ ಹರಕೆ ಹೇಳಿ ಆದರೆ ಅವರಿಬ್ಬರೂ ಚೆನ್ನಮಣೆ ಆಟವಾಡುತ್ತಾ ಜಗಳ ಮಾಡಿಕೊಂಡು ಸಾಯುತ್ತಾರೆ. ಈ ಆತ್ಮಹತ್ಯೆಗೆ, ಚೆನ್ನೆಮಣೆ ಆಟಕ್ಕೆ ಪ್ರೇರಣೆ ಬೆರ್ಮದೇವನದೇ. ಹರಕೆ ಸಂದಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಬ್ರಹ್ಮ ಚೆನ್ನೆಮಣೆ ಆಟಕ್ಕೆ ಪ್ರೇರಣೆ ನೀಡುತ್ತಾನೆ. ಈ ಆಟ ಅಕ್ಕತಂಗಿಯರ ದುರ್ಮರಣಕ್ಕೆ ಕಾರಣವಾಗುತ್ತದೆ.

ಅಂತೆಯೇ ಭೂತಗಳಿಂದ ಪ್ರಯೋಜನ ಪಡೆದವರು ಅವುಗಳನ್ನು ಮರೆತರೆ, ತಮ್ಮ ಪಾಲಿನ ಕರ್ತವ್ಯವನ್ನು ಮಾಡದಿದ್ದರೆ ಕೊಡುವ ಶಿಕ್ಷೆಯೂ ಅತ್ಯಂತ ಘೋರವಾಗಿರುತ್ತದೆ. ತುಳುನಾಡಿನ ದೇವಪೂಂಜ ಎಂಬ ಸಾಮಂತ ರಾಜ ಶತ್ರುವಿನೊಡನೆ ಕಾದಾಡುವಾಗ ಜುಮಾದಿಯ ಆಶೀರ್ವಾದ ಬೇಡಿ ಹರಕೆ ಹೇಳಿ ಜಯಶಾಲಿಯಾಗುತ್ತಾನೆ. ಆದರೆ ಜಯಶಾಲಿಯಾದ ಮೇಲೆ ಹರಕೆ ತೀರಿಸಲ್ಲಿಕ್ಕಾಗಿ ಕೋಲ ನಡೆಯುತ್ತಿದ್ದಾಗ ಸೂಳೆ ಸಿದ್ಧುವಿನ ಪ್ರೇಮಪಾಶಕ್ಕೆ ಸಿಕ್ಕಿ ದೈವವನ್ನು ಮರೆಯುತ್ತಾನೆ. ಅದರ ಪರಿಣಾಮವಾಗಿ ಜುಮಾದಿ ಅವನ ತಲೆಯನ್ನೇ ಬಲಿ ತೆಗೆದುಕೊಳ್ಳುತ್ತದೆ.

ಸಾಂಸ್ಕೃತಿಕ ವೀರ ಪುರುಷರ ಚಿತ್ರಣ

ಈ ವಿಭೂತಿ ಪುರುಷರುಗಳು ಆಯಾ ವರ್ಗದ ಜನರ ಪ್ರತಿನಿಧಿಗಳೂ ಸಾಂಸ್ಕೃತಿ ವೀರ ಪುರುಷರುಗಳೂ ಆಗಿದ್ದುದರಿಂದ ತಮ್ಮ ಸಮಾಜಕ್ಕೆ ಆಗುತ್ತಿದ್ದ ಅನ್ಯಾಯ ದಬ್ಬಾಳಿಕೆಗಳನ್ನು ಪ್ರತಿಭಟಿಸಿದ ಕ್ರಾಂತಿಕಾರರೂ ಶೋಷಣೆಯ ವಿರುದ್ಧ ಹೋರಾಟ ಮಾಡಿದವರೂ ಆಗಿ ಶೋಭಿಸುತ್ತಾರೆ. ತುಳುನಾಡಿನ ವೀರಪುರುಷರುಗಳಲ್ಲಿ ಅತ್ಯಂತ ಪ್ರಸಿದ್ಧರಾದ ಕೋಟಿಚೆನ್ನಯರ ಅಂತ್ಯವೂ ಅತ್ಯಂತ ಕರುಣಾಜನಕ. ನಿಮ್ನ ವರ್ಗಕ್ಕೆ ಸೇರಿದ ಆ ವೀರ ಪುರುಷರನ್ನು ಸಾಕಿ ಸಲಹಿದ ಬಲ್ಲಾಳನು ತಿರಸ್ಕರಿಸಿದಾಗ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಿ, ರಾಜ್ಯವನ್ನು ತ್ಯಜಿಸಿ, ಆಶ್ರಯ ಕೊಟ್ಟ ಇನ್ನೊಬ್ಬ ರಾಜನ ಪರವಾಗಿ ರಣರಂಗದಲ್ಲ್ಲಿ ಹೋರಾಡಿ, ಶತ್ರುಗಳ ಮೋಸಕ್ಕೆ ಬಲಿಯಾಗಿ ಮೃತರಾದ ಆ ವೀರರನ್ನು ಆ ವರ್ಗದವರು ಮಾತ್ರವಲ್ಲದೆ ಇತರ ವರ್ಗದವರೂ ಗೌರವದಿಂದ ಸ್ಮರಿಸುತ್ತಾರೆ. ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಹೋರಾಡಿದ ಸಾಂಸ್ಕೃತಿಕ ವೀರಪುರುಷರೆಂದು ಅವರು ಪ್ರಸಿದ್ಧರಾಗಿದ್ದಾರೆ.

ಕಲ್ಕುಡ ಕಲ್ಲುರ್ಟಿ ಪಾಡ್ದನ ಅಂದಿನ ಕಾಲದ ರಾಜರುಗಳು ಕಲೆಗಾರರ, ಶಿಲ್ಪಿಗಳ ಮೇಲೆ ನಡೆಸಿದ ದಬ್ಬಾಳಕೆ ಹಾಗೂ ಅದರ ವಿರುದ್ಧ ಮಾಡಿದ ಪ್ರತಿಭಟನೆಯ ಚಿತ್ರಣ ನೀಡುತ್ತದೆ. ಕೋಡ್ದಬ್ಬು, ಕೊರಗತನಿಯ ಪಾಡ್ದನಗಳು ಉಚ್ಚವರ್ಗದವರು ದಲಿತರ ಮೇಲೆ ನಡೆಸಿದ ದಬ್ಬಾಳಿಕೆಯನ್ನು ಪ್ರತಿಬಿಂಬಿಸುತ್ತವೆ.

ಸಿರಿ ಪಾಡ್ದನವಂತೂ ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣೊಬ್ಬಳು ಹೇಗೆ ದಬ್ಬಾಳಿಕೆಗೆ ಒಳಗಾಗುತ್ತಾಳೆ. ಅದನ್ನು ಆಕೆ ಹೇಗೆ ಪ್ರತಿಭಟಿಸುತ್ತಾಳೆ ಎಂಬ ದಾರುಣ ಘಟನೆಗಳಿಂದ ತುಂಬಿದೆ.

ಈ ದೃಷ್ಟಿಯಿಂದ ನೋಡಿದರೆ ಅನೇಕ ಭೂತ ಪಾಡ್ದನಗಳು ಆಗಿನ ಕಾಲದ ಶೋಷಿತ ವರ್ಗದ ಜನರ ಕ್ರಾಂತಿಕಾರಿ ಮನೋಭಾವಗಳನ್ನು ತೋರಿಸುತ್ತವೆ. ಕನ್ನಡದ ಜನಪದ ಕಾವ್ಯಗಳಲ್ಲಿಯೂ ಇಂತಹ ಘಟನೆಗಳು ಹಲವಾರು ಕಂಡುಬರುತ್ತವೆ. ಜುಂಜಪ್ಪ ಪುರಾಣ, ಕೇತೇ ದೇವರ ಪುರಾಣ ಮುಂತಾದವುಗಳಲ್ಲೆಲ್ಲ ಆಯಾ ಸಮಾಜದ ಸಾಂಸ್ಕೃತಿಕ ವೀರಪುರುಷರ ಹೋರಾಟದ ಬದುಕಿನ ವಿಸ್ಮಯಕಾರಕ ವರ್ಣನೆಗಳು ದೊರಕುತ್ತವೆ.

ದುರಂತ ಚಿತ್ರಣ

ಮೇಲೆ ಹೇಳಿದ ಕಾರಣಗಳಿಂದಾಗಿ ತುಳುವಿನ ಮತ್ತು ಕನ್ನಡದ ಜನಪದ ಸಾಹಿತ್ಯ ದಾರುಣ ಘಟನೆಗಳಿಂದ ತುಂಬಿ ಹೋಗಿವೆ. ಆದರೆ ತುಳು ಪಾಡ್ದನಗಳ ವೈಶಿಷ್ಟ್ಯವೆಂದರೆ ದುಃಖಾಂತ ಕತೆಗಳ ಬಾಹುಲ್ಯ. ಕನ್ನಡ ಜನಪದ ಕಾವ್ಯಗಳಲ್ಲಿ ದಾರುಣವಾದ ಘಟನೆಗಳಿದ್ದರೂ ಕತೆ ದುಃಖಾಂತವಾಗಿರುವುದು ಕಡಿಮೆ. ಆದರೆ ತುಳು ಪಾಡ್ದನಗಳಲ್ಲಿ ಸಾಂಸ್ಕೃತಿಕ ವೀರ ಪುರುಷರ ದಾರುಣವಾದ ಮರಣದೊಂದಿಗೆ ಕೊನೆಗೊಳ್ಳುವ ಕಥಾನಕಗಳು ಹೇರಳವಾಗಿವೆ. ಕೊನೆಗೆ ಸತ್ತ ಅನಂತರ ದೈವತ್ವವನ್ನು ಪಡೆದರೂ ಮರಣವು ದಾರುಣವಾಗಿರುತ್ತದೆ. ದುರಂತಕ್ಕೆ ಕಾರಣಗಳು ಹಲವಾರು, ಸಾಮಾಜಿಕ ಕಟ್ಟಳೆಗಳನ್ನು ಮುರಿಯುವುದು, ನೀತಿ ಮಾರ್ಗದಿಂದ ತಪ್ಪಿ ನೆಡಯುವುದು, ದೈವಕ್ಕೆ ಕೊಡಬೇಕಾದ ಸೇವೆ ಕಾಣಿಕೆಗಳನ್ನು ಅಥವಾ ಹರಕೆಯನ್ನು ಸಲ್ಲಿಸದಿರುವುದು, ಅಸಹಾಯಕ ಸ್ಥಿತಿಯಲ್ಲಿ ದೈವದ ಅಣೆ ಹಾಕಿ ಸುಳ್ಳು ಹೇಳುವುದು, ದೈವಕ್ಕೆ ಮುಡಿಪಾಗಿಟ್ಟ ಸಾಧನಗಳನ್ನು ಕದಿಯುವುದು, ಉಚ್ಚವರ್ಗದವರ ದಬ್ಬಾಳಿಕೆಗೆ ಗುರಿಯಾಗುವುದು, ಸಮಾಜದಿಂದ ತಿರಸ್ಕೃತರಾಗುವುದು, ಅನೈತಿಕ ಕಾಮ ಸಂಬಂಧಗಳಿಂದ ದೂಷಿತರಾಗುವುದು, ಅನ್ಯಾಯ ಅತ್ಯಾಚಾರಗಳ ಬೇಗೆಯಿಂದ ಬೆಂದು ಆತ್ಮಹತ್ಯೆ ಮಾಡಿಕೊಳ್ಳುವುದು, ಹೀಗೆ ಹಲವಾರು ಕಾರಣಗಳಿಂದ ದುರಂತ ನಡೆಯುತ್ತದೆ. ಭಾರತೀಯ ಶಿಷ್ಟ ಸಾಹಿತ್ಯದಲ್ಲಿ ದುಃಖಾಂತ ಕತೆಗಳನ್ನು ನಿಷೇಧಿಸಿದರೂ ತುಳು ಜನಪದ ಸಾಹಿತ್ಯದಲ್ಲಿ ಅವು ಅತ್ಯಂತ ಮಾರ್ಮಿಕವಾಗಿ ಪ್ರಭಾವಶಾಲಿಯಾಗಿ ಬಂದಿವೆ.

ಹೊಲೆಯರ ಹುಡುಗನೊಬ್ಬ ದೇವಳದ ಅಂಗಣದಿಂದ ಮರದಿಂದ ಮಾದಳದ ಹಣ್ಣನ್ನು ಕಿತ್ತು ಮೈಲಿಗೆ ಮಾಡಿದ್ದರಿಂದ ದೈವದ ಕೋಪಕ್ಕೆ ಪಾತ್ರನಾಗಿ ದುರಂತಕ್ಕೀಡಾಗಿ ಮರಣಾನಂತರ ಕೊರಗ ತನಿಯನೆಂಬ ಭೂತವಾಗುತ್ತಾನೆ.

ಕೋಡ್ದಬ್ಬು ಎಂಬ ದಲಿತ ವರ್ಗದ ಹುಡುಗ ಮಹಾ ಬುದ್ಧಿಶಾಲಿಯೂ ಪವಾಡ ಪುರುಷನೂ ಆದಾಗ ಉಚ್ಚವರ್ಗದ ಜನ ಅದನ್ನು ಸಹಿಸಲಾರದೆ ಅನೇಕ ವಿಧವಾದ ತೊಂದರೆಗಳನ್ನು ಕೊಡುತ್ತಾರೆ. ಕೊನೆಗೆ ಆತನನ್ನು ಬಾವಿಗೆ ಹಾಕಿ ದೊಡ್ಡ ಕಲ್ಲನ್ನಿಟ್ಟು ಮುಚ್ಚಿ ರಣಗೋಳಿ ಮರ ನೆಡುತ್ತಾರೆ. ಆದರೂ ಆತ ತನ್ನಿಮಾನಿಗ ಎಂಬ ಹೆಣ್ಣಿನ ಸಹಾಯದಿಂದ ಮೇಲೆ ಬಂದು ಆಕೆಯನ್ನು ತಂಗಿಯಾಗಿ ಸ್ವೀಕರಿಸಿ ಇಬ್ಬರೂ ಮಾಯವಾಗಿ ದೈವತ್ವವನ್ನು ಪಡೆಯುತ್ತಾರೆ. ಮುಸಲ್ಮಾನ ವ್ಯಾಪಾರಿಯೊಬ್ಬ ಹಡಗಿನಲ್ಲಿ ಹೋಗುತ್ತಿದ್ದಾಗ ಸಮುದ್ರ ಮಧ್ಯದಲ್ಲಿ ಆದ ಯುದ್ಧದಲ್ಲಿ ಮಡಿದು ದೈವತ್ವವನ್ನು ಹೊಂದಿದ ಕತೆ ಬೊಬ್ಬರ್ಯ ಪಾಡ್ದನದಲ್ಲಿದೆ.

ಸಮಾಜ ಬೆಳೆಸಿಕೊಂಡು ಬಂದ ಮೌಲ್ಯಗಳಿಗೆ ಅಪಚಾರ ಹಾಗೂ ಉಳ್ಳವರು ದಲಿತರ ಮೇಲೆ ನಡೆಸುವ ಅತ್ಯಾಚಾರ ಇವು ಎರಡು ದುರಂತದ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ.

ಉಪಸಂಹಾರ

ಭೌಗೋಳಿಕವಾಗಿಯೂ, ನೈಸರ್ಗಿಕವಾಗಿಯೂ ಸಾಂಸ್ಕೃತಿಕವಾಗಿಯೂ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡು ತುಳುನಾಡು ಈ ಕಾವ್ಯ ಪರಂಪರೆಯಲ್ಲಿಯೂ ತನ್ನದೆ ಆದ ವೈಶಿಷ್ಟ್ಯಗಳನ್ನು ಮೆರೆಸಿಕೊಂಡು ಬಂದಿದೆ. ಕಥಾವಸ್ತುವಿನಲ್ಲಿಯೂ, ನಿರೂಪಣೆಯಲ್ಲಿಯೂ, ದುರಂತ ಕಥೆಗಳ ನಿರ್ಮಾಣದಲ್ಲಿಯೂ, ವಿಶಿಷ್ಟ ಛಂದಸ್ಸು, ಲಯ, ವರ್ಣನೆ ಮುಂತಾದವುಗಳಲ್ಲಿಯೂ ಹಾಡುವ ಕ್ರಮ ಮತ್ತು ರಾಗಗಳಲ್ಲಿಯೂ ತನ್ನದೇ ಆದ ಶೈಲಿಯನ್ನು ಬೆಳೆಸಿಕೊಂಡು ಕನ್ನಡದ ಸಂಪ್ರದಾಯಕ್ಕಿಂತ ಭಿನ್ನವಾಗಿ ಆದರೂ ಕೆಲವೊಂದು ಅಂಶಗಳಲ್ಲಿ ಅದನ್ನು ಹೋಲುತ್ತಾ ಬೆಳೆದು ಬಂದು ಜಾನಪದ ವಿದ್ವಾಂಸರ ಗಮನ ಸೆಳೆಯುತ್ತದೆ. ಅಧ್ಯಯನ ಯೋಗ್ಯವಾಗಿದೆ. ತುಲನಾತ್ಮಕ ವಿಶ್ಲೇಷಣೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸಿ ಕೊಡುತ್ತದೆ. ಜಗತ್ತಿನ ಉತ್ತಮವಾದ ಜನಪದ ಪುರಾಣ ಕಾವ್ಯಗಳ ಸಾಲಿನಲ್ಲಿ ನಿಲ್ಲ ತಕ್ಕ ಕೃತಿಗಳು ತುಳುವಿನಲ್ಲಿಯೂ ಕನ್ನಡದಲ್ಲಿಯೂ ಇವೆ ಎಂಬುದರಲ್ಲಿ ಸಂದೇಹವಿಲ್ಲ.