ಈ ಪಾಡ್ದನದ ಭಾಷೆಯ ಗತ್ತನ್ನು ಕೆಲವು ಉದಾಹರಣೆಗಳಿಂದ ಗಮನಿಸಬಹುದು. ‘ಕೊಂಬಿನಲ್ಲಿ ಕೆದಕಿದಳು, ಬಾಲದಲ್ಲಿ ಬೀಸಿದಳು, ಕಾಲಿನಲ್ಲಿ ತುಳಿದಳು, ಸ್ವಾಮಿ ನಂದೆದಿ. ಹಾಲಿನ (ತಂಬಿಗೆಯನ್ನು) ಕವುಚಿ ಹಾಕಿದಳು. ನನಗೊಂದು ಕೋಪ ಕಂಡಿತು (ಬಂತು). ತಂಬಿಗೆಯಿಂದ ನಡುಬೆನ್ನಿಗೊಂದು ಪೆಟ್ಟುಕೊಟ್ಟೆ. ಕೋಪದಲ್ಲಿ ಚಿಂತೆಯಲ್ಲಿ ಇದ್ದಾಳೆ ಸ್ವಾಮಿ ನಂದೆದಿ’ (ಕೊಂಬುಡು ಕಿಲೆಕಿಯೊಲು, ಬೀಲೊಡು ಬೀಜಿಯೊಲು, ಕಾರ್‌ಡ್ ತೊರ್ತೊಲು ಸ್ವಾಮಿಲ್ಲ ನಂದೆದಿ. ಪೇರ್‌ನ್ (ಚೆಂಬು) ಕಬ್ಬೆ ಪಾಡ್ಯೊಲು. ಎಂಕೊಂಜಿ ಕೋಪ ತೋಜಿಂಡ್. ಚೊಂಬುಡು ಬೆರಿ ನಡುಕೊಂಜಿ ಪೆಟ್ಟ್ ಕೊರಿಯೆ. ಕೋಪೊಡು ಕೆರೆದೊಡು ಉಲ್ಲೊಲು ಸ್ವಾಮಿಲ್ಲ ನಂದೆದಿ) ‘ಮೆನ್ನೋಡಿ’ಯ ತಾಯಿ ಮರ್ದೆದಿ ಹೇಳುವ ಮಾತು.

ನಂದೆದಿಯು ತಾನೇ ಮನೆ ಬಿಟ್ಟು ಹೋದಾಗ – ಕೊಂಬಿನಲ್ಲಿ ಕೆದಕಿದಳು. ಬಾಲದಲ್ಲಿ ಬೀಸಿದಳು. ‘ಕುರೆಜಿ’ಯ ಗುಂಟವನ್ನು ತುಂಡು ಮಾಡಿದಳು. ಕಠಿಣ ಸಂಕೋಲೆಯನ್ನು ಕಡಿದಳು. ಬದಿಯ ಹಲಗೆ ಹಾರಿಸಿದಳು, ಕೀಲನ್ನು ತಪ್ಪಿಸಿದಳು (ಕೊಂಬುಡು ಕಿಲೆಕಿಯೊಲು, ಬೀಲೊಡು ಬೀಜಿಯೊಲು, ಕುರೆಜಿದ ಗುಂಟನ್ ಪೊಲಿತೊಲು, ಬೀರು ಸಂಕಲೆ ಕಡ್ತೊಲು. ಪಕ್ಕಿ ಪಲಯಿ ಪಾರಾಯೊಲು ಮುನೆಕುತ್ತಿ ತಪ್ಪಯೊಲು) ಕ್ರಿಯೆಯು ಕಣ್ಣಿಗೆ ಕಟ್ಟುವಂತೆ ಪದಗಳ ಬಳಕೆ. ಕ್ರಿಯೆಯಷ್ಟೇ ವೇಗದಲ್ಲಿ ಭಾಷೆಯ ತೀವ್ರಗತಿ.

ನಾರಾಯಣ ದೇವರ ಮಾತಿನ ಶೈಲಿ ಪಾಡ್ದನಗಳಿಗೇ ವಿಶಿಷ್ಟವಾದ ಗುಣವನ್ನು ತೋರ್ಪಡಿಸುತ್ತದೆ. ‘ನೋಡಿದ್ದು ನೋಡಿದ ಹಾಗಲ್ಲ. ಕೇಳಿದ್ದು ಕೇಳಿದ ಹಾಗಲ್ಲ. ಗಂಡಸು ಹೋಗುವ ಪ್ರಯಾಣಕ್ಕೆ ಹೆಣ್ಣು ಹೆಂಗಸು ಹೋಗಬಾರದೆಂದು ಎಂದೆ ನಾನು. ಹೇಳಿದುದನ್ನು ಒಪ್ಪಲಿಲ್ಲ. ನನಗೊಂದು ಪಾಪವನನ್ನು ಹೊರಿಸಿದೆ, ದೋಷವನ್ನು ತುಂಬಿಸಿದೆ’ (ತುಯಿನ ತುಯಿನಕ್ಕತ್ತ್‌, ಕೇನ್ಯ ಕೇನ್ಯಲ್ಕತ್ತ್‌ ಆಣ್‌ಂಜೋವು ಪೋಪಿನ ಪಯನೊಗು ಪೊಣ್ಣು ಪೊಡ್‌ಂಜೊವು ಬರ್ರೆ ಆವಂದ್ ಪಂಡೆ ಯಾನ್. ಪನ್ಯ ಒಪ್ಪೊಂಜ ಎಂಕೊಂಜಿ ಪಾಪೊನು ತುಂಬಯನಾ ದೋಸೊನು ಪೊರ್ದಯನಾ)

‘ಪನಿ ಪಜಿರ್ ಪರೊಂದು ಒಸರ್ ನೀರ್ ಮೇವೊಂದು’ ಪಾಪ ತುಂಬಯಾ ದೋಸ ಪೊರ್ದಯಾ ಎನ್ನುವ ಮಾತುಗಳು ಪಾಡ್ದನದಲ್ಲಿ ಉಚಿತವಾಗಿ ಪದೇ ಪದೆ ಬರುತ್ತದೆ. ಇಂತಹ ಸುಂದರ ವಾಕ್ಯಗಳನ್ನು ಜನಪದ ಕವಿಯು ಕತೆಯ ಮಧ್ಯೆ ತಂದು, ಶೈಲಿಯ ಮೆರುಗನ್ನು ಹಚ್ಚಿಸುತ್ತಾನೆ.

ಈ ಪಾಡ್ದನದ ಭಾಷೆಯು ಪ್ರಾದೇಶಿಕತೆಯನ್ನು ವ್ಯಕ್ತಗೊಳಿಸುವುದು. ಭೂತದ ಪಾಡ್ದನಗಳ ಭಾಷೆಯು ಶೈಲಿಯಲ್ಲಿಲ್ಲ. ತನ್ನದೇ ಆದ ಶೈಲಿಯನ್ನು ಪಡೆದಿದೆ ಎನ್ನಬಹುದು. ಕೆಲವು ಶಬ್ದಗಳ ವ್ಯತ್ಯಾಸವನ್ನು ಗಮನಿಸಬಹುದು –

ಬಯಿಜಿ (ಬೌಜಿ;ಬೈಜಿ); ತುಯ್ಯೊಲು (ತೂಯೊಲು)
ಜೂವ (ಜೀವ); ಪೊಲಿತೊಲು (ಪೊಲ್ತುಲು)
ಉರಿತೊಲು (ಉರ್ತೊಲು); ಆದರೆ – ಕುಡ್ತೊಲು (ಕಡ್ತೊಲು) ಎಂದೇ ಇದೆ.

***

ಇಷ್ಟರವರೆಗೆ ನೋಡಿದ ಪಾಡ್ಡನಗಳು ಲೌಕಿಕದಿಂದ ಅಲೌಕಿಕದೆಡೆಗೆ ಕೊಂಡೊಯ್ಯುವ ಮತ್ತು ಲೌಕಿಕದ ಕುರಿತಾಗಿಯೇ ಇರುವ ವಸ್ತುಗಳನ್ನೊಳಗೊಂಡಿದ್ದರೆ, ಅಲೌಕಿಕ ಪಾತ್ರಗಳೇ ಇದ್ದು ಅಲೌಕಿಕದಲ್ಲಿಯೇ ಪ್ರಾರಂಭಿಸಿ, ಅಲೌಕಿಕದಲ್ಲಿಯೇ ಪರ್ಯವಸಾನ ಹೊಂದುವ ವಸ್ತುಗಳು ಪಾಡ್ದನಗಳಲ್ಲಿವೆ. ಭೂತದ ಕುರಿತಾಗಿರುವ ಪಾಡ್ದನಗಳು ಲೌಕಿಕಾಂಶಗಳನ್ನು ಒಳಗೊಂಡಿದ್ದರೂ ಕಥಾವಸ್ತು ಅಲೌಕಿಕವಾದುದು ಎಂಬ ದೃಷ್ಟಿಯಿಂದ ಪ್ರತ್ಯೇಕವಾಗಿ ನೋಡಲಾಗಿದೆ. ಅಲ್ಲದೆ ಅಂತಹ ಭೂತಗಳು ಪ್ರಾಚೀನವಾದವು ಎಂಬ ಅಭಿಪ್ರಾಯವೂ ಇರುವುದರಿಂದ ಅವುಗಳ ಸ್ವರೂಪವನ್ನು ಒಂದೆಡೆ ಪರಿಶೀಲಿಸುವುದು ಯೋಗ್ಯವಾಗಿದೆ. ಕೆಲವು ಪಾಡ್ದನಗಳಲ್ಲಿ ಪುರಾಣಗಳ ಆಧಾರದಿಂದ ವಸ್ತು ನಿರೂಪಣೆಯಿದ್ದರೆ, ಇನ್ನು ಕೆಲವೆಡೆ ಪುರಾಣಗಳಲ್ಲಿಯೇ ಪಾತ್ರಗಳು ತಮ್ಮದೇ ಆದ ರೀತಿಯಲ್ಲಿ ರೂಪಿತವಾಗಿವೆ. ಆದರೆ ಒಂದು ವಿಷಯ – ಜನಪದ ಕವಿಯು ಪುರಾಣದ ಪಾತ್ರಗಳನ್ನು, ಸನ್ನಿವೇಶಗಳನ್ನು ತನ್ನ ಜೀವನಾನುಭವದ ಚೌಕಟ್ಟಿನಲ್ಲಿ ಚಿತ್ತಿಸುತ್ತಾನೆ. ತನ್ನ ಪರಂಪರೆಯಿಂದ ಹರಿದುಬಂದ ನಂಬಿಕೆ, ಸಂಪ್ರದಾಯಗಳ ಹಿನ್ನೆಲೆಯಿಂದಲೂ ಚಿತ್ರಿಸುತ್ತಾನೆ. ಸಾಮಾನ್ಯವಾಗಿ ಅನುಭವಗಮ್ಯವಲ್ಲದಿದ್ದರೂ ಕವಿಯ ಆ ಕಾಲದ ಜನತೆಯ ಅನುಭವ ಸತ್ಯವಾಗಿಯಾದರೂ ಇವೆ ಎಂಬುದು ಪಾಡ್ಡನಗಳಲ್ಲಿ ಕಾಣುತ್ತೇವೆ. ಇಂತಹ ಪಾಡ್ದನಗಳಲ್ಲಿಯೂ ತುಳುನಾಡಿನ ಜೀವನ ಮತ್ತು ಸಂಸ್ಕೃತಿಗಳನ್ನು ಸಾಕಷ್ಟು ಗುರುತಿಸಬಹುದೆಂಬುದು ಮಹತ್ವದ ಸಂಗತಿ.

‘ಜುಮಾದಿ’, ‘ಪಂಜುರ್ಲಿ’, ‘ಕೆಂಬೆರ್ಲು’, ‘ಮೈಸಂದಾಯೆ’, ‘ಗುಳಿಗ’ ಎಂದು ಮೊದಲಾದ ಭೂತಗಳ ಪಾಡ್ದನಗಳನ್ನು; ‘ಆಸುರೆತಿ ಬಂಗಾರ್’ ಎಂಬ ಪೌರಾಣಿಕ ಅಂಶವುಳ್ಳ ಪಾಡ್ಡನವನ್ನು ಮತ್ತು ‘ಬಲೀಂದ್ರೆ’, ‘ಸಿರಿ ಸೀತಾಮುದೆಯ್ಯಾರ್’, ‘ಬಾಲಕೃಷ್ಣೆ’, ‘ಕೃಷ್ಣ ದೇವೆರೆ ಆರ್ಯಗಿಳಿ’, ‘ಗಂಗಮ್ಮ, ಸತ್ಯಮ್ಮ’ ಎಂಬ ಪೌರಾಣಿಕ ವಸ್ತು ಪಾತ್ರಗಳಿರುವ ಪಾಡ್ದನಗಳನ್ನು ಇಲ್ಲಿ ಪರಿಶೀಲಿಸಲಾಗಿದೆ. ಮೇಲೆ ಹೇಳಿದ ವಿಚಾರದ ದೃಷ್ಟಿಯಿಂದ ಇವುಗಳನ್ನು ಪ್ರತ್ಯೇಕವಾಗಿ ವಿವರಿಸುವುದು ಉಚಿತವಾಗಿದೆ.

ಮೊದಲು ಭೂತಗಳಿಗೆ ಸಂಬಂಧಿಸದ ಪಾಡ್ಡನಗಳನ್ನು ಪರಿಶೀಲಿಸುವ. ‘ಜುಮಾದಿ’ ಪಾಡ್ದನವು ದೇವರಿಂದ ಅವತಾರವೆತ್ತಿದ ಹೆಣ್ಣು ಭೂತದ ಕತೆಯನ್ನೊಳಗೊಂಡಿದೆ. ಈ ಪಾಡ್ದನದ ಮುಖ್ಯ ವೈಶಿಷ್ಟ್ಯವೆಂದರೆ ಕತೆಯನ್ನು ‘ಜುಮಾದಿ’ಯೇ ಹೇಳಿಕೊಂಡು ಹೋಗುವುದು. (ಕೋಲದ ಸಮಯದಲ್ಲಿ ಭೂತವೇ ಪಾಡ್ದನವನ್ನು ಹಾಡುವುದರಿಂದ ಈ ರೀತಿಯ ನಿರೂಪಣೆಯಿದೆ.) ಮಾತಾಯಿ ದುಷ್ಟರನ್ನು ನಾಶಗೊಳಿಸಲು ‘ಜುಮಾದಿ’ಯನ್ನು ಸೃಷ್ಟಿ ಮಾಡುತ್ತಾಳೆ. ನಾರಾಯಣ ದೇವರಲ್ಲಿ ಹೋಗಲು ಮಾತಾಯಿ ಹೇಳುತ್ತಾಳೆ. ‘ಹಸಿವೆಯಿಂದ ಬಚ್ಚಿದ್ದಾಳೆ. ಅಂಗ ನೀರಿನಿಂದ ಆರಿ ಹೋಗಿದ್ದಾಳೆ. ಆನೆ, ಕುರಿ, ಆಡುಗಳೆಷ್ಟನ್ನು ನಾರಾಯಣ ದೇವರು ಬಲಿ ಕೊಟ್ಟರೂ, ‘ಜುಮಾದಿ’ಯ ಹಸಿವೆ ಬಾಯಾರಿಕೆ ಆರದಿರಲು, ಕೊನೆಗೆ ತನ್ನ ಕಿರಿಬೆರಳನ್ನು ಕಡಿದು ನರಹಾರ ಕೊಡುತ್ತಾರೆ. ಪಾಡ್ದನದಲ್ಲಿ ಅತಿಮಾನುಷ ಚಿತ್ರವಿದ್ದರೂ, ಹಾರ ಕೊಡುವಾಗ ನರಹಾರವೆಂದೇ ಕವಿ ಹೇಳುತ್ತಾನೆ. ‘ಜುಮಾದಿ‘ ಹೋಗುವಾಗ ನಾರಾಯಣ ದೇವರು ಸನ್ಯಾಸ ದೀಕ್ಷೆಯಲ್ಲಿದ್ದರೆನ್ನುವುದು ಜನಪದರ ಕಲ್ಪನೆ. ‘ಜುಮಾದಿ’ಗೆ ಹಾರ ಕೊಟ್ಟಷ್ಟು ತೃಪ್ತಿಯಾಗದಿರಲಿ ಆನೆ ಕಟ್ಟಿ ಆಳಬಹುದು, ಹೆಣ್ಣು ಕಟ್ಟಿ ಆಳಲು ಸಾಧ್ಯವಿಲ್ಲ’ (ಆನೆ ಕಟ್‌ದ್‌ಆಲ್ಯೊಲಿ, ಪೊಣ್ಣ ಕಟ್‌ದ್ ಆಲ್ಯೆರೆ ಬಲ್ಲಿ) ಎಂಬ ತೀರ್ಮಾನಕ್ಕೆ ಬರುತ್ತಾರೆ ನಾರಾಯಣ ದೇವರು. ಇಂಥ ಕಡೆಗಳಲ್ಲಿ ತೀರ ಲೌಕಿಕಕ್ಕೆ ಇಳಿಸಿಬಿಡುತ್ತಾನೆ. ಜುಮಾದಿಯನ್ನು ಕಂಚಿನ ಏಣಿ ಮತ್ತು ನೂಲಿನ ಹಿಡಿಯಿಂದ ಮೇಲಿನ ಲೋಕದಿಂದ ಭೂಲೋಕಕ್ಕೆ ಇಳಿಸುತ್ತಾರೆ. ಆದಿ ನಾರಾಯಣ ದೇವರು ಎನ್ನುವ ಮಾತೂ ಜನಪದ ಕವಿಯ ನಂಬಿಕೆಯನ್ನು ತೋರ್ಪಡಿಸುತ್ತದೆ.

ಒಂದು ಭೂತದ ಹುಟ್ಟನ್ನು ಹೇಳುತ್ತದೆ ಈ ಪಾಡ್ಡನ. ಕೋಲದಲ್ಲಿ ಭೂತವೇ ತನ್ನ ಚರಿತ್ರೆಯನ್ನು ಈ ರೀತಿಯಲ್ಲಿ ಹೇಳುತ್ತದೆ. ‘ಜುಮಾದಿ’ ಭೂತವು ಬೇರೆ ಬೇರೆ ಹೆಸರುಗಳಿಂದ ತುಳುನಾಡಿನ ಹಲವೆಡೆ ನೆಲೆಸಿರುವುದೂ ಪಾಡ್ದನದಲ್ಲಿ ಉಕ್ತವಾಗಿದೆ. ಕೆಳಗಿನ ಭೂಲೋಕಕ್ಕೆ ಇಳಿದು ಬಂದು ಪಂಚಕಲ್ಲು ಒಡೆದು ಪಂಚ ಜುಮಾದಿ ಎನಿಸಿತು. ‘ಸಾರಾಲ್’ ಕೊಡುವಾಗ ಸಾರಾಲ್ ಜುಮಾದಿ ಎನಿಸಿತು. ಮಲೆಯ ಮಂಜದಲ್ಲಿ ಬೋಗ ಕೊಡುವಾಗ ಮಲೆ ಜುಮಾದಿ ಎನಿಸಿತು. ಇಲ್ಲಿ ಒಂದೊಂದು ಹೆಸರಿಗೂ ಒಂದೊಂದು ಕತೆಯಿದ್ದಿರಬಹುದು. ಆದರೆ ಅವು ಲಭ್ಯವಾಗಿಲ್ಲ.

ಭೂತದ ಹುಟ್ಟು ಬಳಕೆ (ಪುಟ್ಟ ಬಳಕೆ)ಯ ಪಾಡ್ಡನಗಳಲ್ಲದೆ. ಆ ಭೂತಕ್ಕೆ ಸಂಬಂಧಿಸಿದ ಇತರ ಪಾಡ್ಡನಗಳೂ ಇವೆ ಎಂಬುದನ್ನು ಹಿಂದೆ ನೋಡಿದ್ದೇವೆ. ಸಾಮಾನ್ಯವಾಗಿ ಇಂತಹ ಪಾಡ್ಡನಗಳು ಭೂತದ ಮಹಿಮೆಯನ್ನು ಅಥವಾ ಭೂತವು ಒಂದು ಸ್ಥಳದಿಂದ ಮತ್ತೊಂಧು ಸ್ಥಳಕ್ಕೆ ಹೋಗಿ ನೆಲೆಯೂರಿದ ಕತೆಯನ್ನು ವಿವರಿಸುತ್ತದೆ. ಭೂತದ ಇಂತಹ ಪಾಡ್ದನಗಳೂ ಕೆಲವು ದೃಷ್ಟಿಗಳಿಂದ ಗಮನಾರ್ಹವಾದುವು. ಹಾಗೆಯೇ ‘ಜುಮಾದಿ’ ಭೂತಕ್ಕೆ ಸಂಬಂಧಿಸಿ ಎರಡು ಪಾಡ್ದನಗಳು ಲಭ್ಯವಾಗಿವೆ. ಒಂದು, ‘ಜುಮಾದಿ’ಯ ಮಹಿಮೆಯನ್ನು ತಿಳಿಸುವ ಪಾಡ್ದನ – ‘ಕರ್ನಗೆ’ ಅಥವಾ ‘ಕರ್ನಕೆ’. ಇದನ್ನು ಹಿಂದೆ ಪರಿಶೀಲಿಸಿದ್ದೇವೆ. ಇನ್ನೊಂದು ಬಳ್ಳಮಂಜದಲ್ಲಿ ಸಂಗ್ರಹಿಸಿದ ಪಾಡ್ಡನ. ಜುಮಾದಿಯ ಹುಟ್ಟು ಬೆಳವಣಿಗೆಯನ್ನು ವಿವರಿಸುವುದಿಲ್ಲ. ಭೂತವು ಬಂದು ನೆಲೆಯೂರಿದುದನ್ನು ಸುಂದರವಾಗಿ ಕತೆಯ ರೂಪದಲ್ಲಿ ಹೆಣೆದುದು. ಈ ಸ್ವರೂಪವು ಪಾಡ್ದನದ ಮಹತ್ವಕ್ಕೆ ಕಾರಣವಾಗಿದೆ.

‘ಕಲ್ಯಗೊಬೂಡಿ’ನ ‘ಕಲ್ಯಕೊಂಡಾರಿಗ’ರು ‘ಕಾಪೆಕೊಂಡು ಪೆರ್ಗಡೆ’ಯವರು ಭೂತವನ್ನು ತರುತ್ತಾರೆ. ಊರಿನಲ್ಲಿ ಕಳವು ಅನ್ಯಾಯ ಹೆಚ್ಚಾಗಿರುವುದರಿಂದ ಅವುಗಳನ್ನು ತಡೆಹಿಡಿಯಲು ಭೂತವನ್ನು ತರುತ್ತಾರೆ. ಒಬ್ಬ ‘ನೆಕರೆ’ (ಮಂತ್ರವಾದಿಯಿರಬೇಕು)ಯಿದ್ದಲ್ಲಿ ಬಂದು ‘ಮರ್ಲ ಜುಮಾದಿ’ ಬೇಕೆಂದು ಹಿಡಿದುಕೊಂಡು ಬರುತ್ತಾರೆ. ಭೂತವನ್ನು ಕಳುಹಿಸುವುದು ಮಂತ್ರಬಲದಿಂದ. ‘ಒಂದು ವೀಳ್ಯದೆಲೆ ತೆಗೆದರು, ಹಾಳೆಯಲ್ಲಿದ್ದ ‘ಪಂಚೋಲೆ’ ತೆಗೆದರು. ಮಾವಿನೆಲೆಯಲ್ಲಿಟ್ಟು ಮುಂಡಾಲೆ (?)ಯನ್ನು ತೆಗೆದರು. ಒಂದು ಅಡಿಕೆಯನ್ನು ತೆಗೆದರು, ಐದು ಹೋಳು ಮಾಡಿದರು. ಮಂತ್ರ ಮಾಡಿದರು. ಒಂದು ವೀಳ್ಯದೆಲೆ ತೆಗೆದರು. ಭೂತದ ಬರಿಹೂಪು ಬರೆದರು, ಗಂಡು ಹೆಣ್ಣು ರೂಪ ಬರೆದರು. ಒಂದು ಎಳೆಹಿಂಗಾರ ತೆಗೆದರು. ಅದನ್ನು ಕೊಟ್ಟರು’ (ಒಂಜಿ ಬಚ್ಚಿರೆ ದೆತ್ತೆರ್, ಪಾಲೆಡಿತ್ತಿನ ಪಂಚೋಲೆ ದೆತ್ತೆರ್, ಕುಕ್ಕುಡು ದೀತಿನ ಮುಂಡಾಲೆ ದೆತ್ತೆರ್. ಒಂಜಿ ಬಜ್ಜೆಯಿ ದೆತ್ತೆರ್, ಐನ್ ಪೂಲು ಮಲ್ತೆರ್. ಅಜ್ಜಣಿತೆರ್ ಬಜ್ಜಣಿತೆರ್, ಒಂಜಿ ಬಚ್ಚಿರೆ ದೆತ್ತರ್ ಬೂತನ ಬಹಿರೂಪುನು ಬರೆಯೆರ್. ಆನರೂಪು ಪೊನ್ನರೂಪು ಬರೆಯೆರ್. ಒಂಜೆಲೆ ಪಿಂಗಾರ ದೆತ್ತೆರ್ ಅವ್ವೆನಿ ಕೊರ್ಯೆರ್) ಭೂತವನ್ನು ನಂಬುವ ಸ್ಥಳವನ್ನು ಶುದ್ಧ ಮಾಡಿ ನಂಬಿದರು. ಆರು ತಿಂಗಳಿಗೊಮ್ಮೆ ಬಲಿ ಕೊಟ್ಟರೂ ಭೂತ ಕೇಳಲಿಲ್ಲ. ಹಲವು ಹೆಣವನ್ನು ಕೊಡಬೇಕಾಯಿತು. ಭೂತದ ಮಹಿಮೆ ವಿಪರೀತವಾದಾಗ ಅದನ್ನು ಒಂದು ತಾಮ್ರದ ತಂಬಿಗೆಯೊಳಗೆ ಮಂತ್ರಿಸಿ ಗದ್ದೆಯಲ್ಲಿ ಹುಗಿದರು. ಆದರೆ ಹನ್ನೆರಡು ವರ್ಷ ಕಳೆದಾಗ ಆ ಸ್ಥಳವನ್ನು ಅಗೆದಾಗ ಭೂತ ಹೊರಗೆ ಬಂತು. ಪುನಾ ನಂಬಿದರು. ಇವತ್ತಿಗೂ ‘ಜುಮಾದಿ’ ಭೂತಕ್ಕೆ ತಾಮ್ರದ ಪಾತ್ರೆಗಳನ್ನು ಕಂಡರೆ ಆಗುವುದಿಲ್ಲ ಎಂಬ ನಂಬಿಕೆಯ ಹಿನ್ನೆಲೆಯಾಗಿ ಈ ಪಾಡ್ದನವಿದೆಯೆಂದು ಹೇಳಬಹುದು. ‘ಜುಮಾದಿ’ಯು ಭಯಂಕರ ಭೂತವೆಂಬ ಚಿತ್ರಣ ಈ ಪಾಡ್ದನದಲ್ಲಿಯೂ ಇದೆ.

‘ಪಂಜುರ್ಲಿ’ ಭೂತದ ಪಾಡ್ದನಗಳು ಒಟ್ಟಿಗೆ ಏಳು ಲಭ್ಯವಾಗಿವೆ. ನಾನು ಸಂಗ್ರಹಿಸಿದ ಪಾಡ್ಡನಗಳು ಎರಡು (ಕ. ಮತ್ತು ಬ. ಪಾಠಗಳೆಂದಿಟ್ಟು ಕೊಳ್ಳುವ) ಅಮೃತ ಸೋಮೇಶ್ವರರು ಸಂಗ್ರಹಿಸಿದ ‘ಪಂಜುರ್ಲಿ’ಯ ‘ಪುಟ್ಟ ಬಳಕೆ’ಯ ಪಾಡ್ದನ (ಅ. ಪಾಠ). ಹಾಗೆಯೇ ‘ಕುಪ್ಪೆ ಪಂಜುರ್ಲಿ’ ಪಾಡ್ದನದ ಎರಡು ಸಂಧಿಗಳು, ‘ಮಲಾರ ಪಂಜುರ್ಲಿ’ ಮತ್ತು ರಾಮಕೃಷ್ಣ ಶೆಟ್ಟಿ ಟಿ. ಇನ್ನ ಇವರು ಸಂಗ್ರಹಿಸಿದ ಪಾಡ್ದನ – ಒಡ್ತೆ ಪಂಜರ್ಲಿ(ಇ ಪಾಠ) ವೈವಿಧ್ಯತೆಯಿಂದ ಕೂಡಿರುವ ಏಳು ಪಾಡ್ದನಗಳಲ್ಲಿ ಮೂರು ಪಾಡ್ದನಗಳು ಪಂಜುರ್ಲಿ ಭೂತದ ಹುಟ್ಟು, ಬೆಳವಣಿಗೆಯನ್ನು ವಿವರಿಸುತ್ತವೆ. (ಕ. ಅ. ಮತ್ತು ಇ ಪಾಠಗಳು) ಮೊದಲು ಪಂಜುರ್ಲಿಯ ಹುಟ್ಟು ಬೆಳವಣಿಗೆಯನ್ನು ಪರಿಶೀಲಿಸಿ ಬಳಿಕ ಅದಕ್ಕೆ ಸಂಬಂಧಿಸಿದ ಇತರ ಪಾಡ್ದನಗಳನ್ನು ವಿವೇಚಿಸಲಾಗಿದೆ.

ಮೂರು ಪಾಠಗಳಲ್ಲಿಯೂ ‘ಪಂಜುರ್ಲಿ’ಯ ಹುಟ್ಟು ಬೆಳವಣಿಗೆಯು, ತುಳುನಾಡಿನಲ್ಲಿ ‘ಪಂಜುರ್ಲಿ’ ಭೂತವು ನೆಲೆಸಿದ ಕಥೆಯು ಹೆಚ್ಚು ಕಡಿಮೆ ಸಮಾನವಾಗಿ ನಿರೂಪಿತವಾಗಿದೆ. ಒಂದೆರಡು ಘಟನೆಗಳಲ್ಲಿ ಚಿತ್ರಣಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಈಶ್ವರ ಹಂದಿಯನ್ನು ಸಾಕುವುದು, ಅದು ಬೆಳೆದಾಗ ಮಾಡಿದ ಅನ್ಯಾಯಕ್ಕಾಗಿ ಕೊಲ್ಲುವುದು, ತುಳುನಾಡಿನಲ್ಲಿ ದೈವವಾಗಿರು ಎಂದು ಶಾಪ ಕೊಟ್ಟ ಬಳಿಕ ‘ಪಂಜುರ್ಲಿ’ಯು ತುಳುನಾಡಿಗೆ ಬರುವುದು – ಮುಖ್ಯ ಕಥವಾಸ್ತು. ‘ಪಂಜುರ್ಲಿ’ಯ ಅವತಾರದ ಹಿನ್ನೆಲೆಯಲ್ಲಿ ಸುದೀರ್ಘವಾಗಿರುವ ಕತೆಯಲ್ಲಿ ಲೌಕಿಕ ಮತ್ತು ಅಲೌಕಿಕವನ್ನು ಸಂದರ್ಭಕ್ಕೆ ಸರಿಯಾಗಿ ಹೊಂದಿಸಿಕೊಂಡಿದ್ದಾನೆ. ಪ್ರಾಣಿಗಳ ಪಾತ್ರವಿದ್ದರೂ ಮಾನವೀಯ ಪರಿಗಣನೆಯಿದೆ. ಅಲೌಕಿಕ ಪಾತ್ರಗಳನ್ನು ಮಾನವೀಯ ಗುಣಗಳಿಗೆ ಇಳಿಸಿದೆ. ಅಮಾನುಷವಾದರೂ ಅನುಭವಕ್ಕೆ ಬರುವ ಸಹಜ ಚಿತ್ರಣವಿದೆ. ಅಲೌಕಿಕ ಶಕ್ತಿಯು ನಮ್ಮ ಜೀವನದಲ್ಲೇ ಅಡಗಿದೆ ಎಂಬುದನ್ನು ಸಾಕಷ್ಟು ತಿಳಿದ ಜನಪದ ಕವಿ, ಆದು ಜೀವನದ ಒಂದು ಅವಿಭಾಜ್ಯ ಅಂಗವೆಂಧು ನಂಬಿರುವುದರಿಂದ ಇಂತಹ ಪಾತ್ರಗಳನ್ನು, ಕತೆಗಳನ್ನು ನೇರವಾಗಿ ಚಿತ್ರಿಸುತ್ತಾನೆ.

ಅಯನಾಡು ರಾಯರ ಸೀಮೆಯ ಅರಮನೆಯಲ್ಲಿ ರಾಯರ ಮಗಳು ಬೊಂಬೆ ಬೇಸರ ಕಳೆಯಲು ಎರಡು ಹಂದಿ ಮತ್ತು ಎರಡು ಹಕ್ಕಿಗಳನ್ನು ಮಣ್ಣಿನಿಂದ ಮಾಡುತ್ತಾಳೆ. ಒಮ್ಮೆ ಈಶ್ವರನು ಮನೆಗೆ ಬಂದಾಗ ಅವುಗಳಿಗೆ ಜೀವ ಕೊಡಿಸುತ್ತಾಳೆ. ಹಂದಿಗಳನ್ನು ಗಟ್ಟದ ಮೇಲೆ, ಹಕ್ಕಿಗಳನ್ನು ‘ಮತ್ತಿನಂದ ಮಲೆ’ ಕಳುಹಿಸುತ್ತಾಳೆ. ಎರಡು ಹಂದಿಗಳು (ಹಂದಿ ಕಾಳಿ ಮತ್ತು ಹಂದಿ ಗುಜಾರ್) ಕುಕ್ಕೆ ಸುಬ್ರಾಯ ದೇವರಲ್ಲಿಗೆ ಬಂದು, ಅವರಿಂದ ವರಗಳನ್ನು ಪಡೆದು ಮರಿಗಳನ್ನು ಪಡೆಯುತ್ತವೆ. (‘ಅ’) – (ಇ) ಪಾಠದಲ್ಲಿ ಹೀಗಿಲ್ಲ. ಎರಡು ಹಂದಿಗಳು ಹೆಸರಿನಲ್ಲಿ ವ್ಯತ್ಯಾಸವಿಲ್ಲ ಗಟ್ಟದ ಮೇಲಿಂದ ಇಳಿದು ‘ಲಯ್ಯಂಗೀಶ್ವರ’ನ ಮನೆಯ ಹತ್ತಿರ ಇರುತ್ತವೆ. ‘ಓಂತಿ, ಆರಣೇ ಹಕ್ಕಿ ಮೊದಲದವು, ಮರಿಯಿಟ್ಟು ಮರಿಗಳ ಸೌಂದರ್ಯ ನೋಡಿಕೊಂಡು ಆಟ ಆಡಿಸುವ ಚಂದವನ್ನು ನೋಡಿಕೊಂಡು ಅವುಗಳು ಚಂದ ನೋಡುವುದನ್ನು ದೂರದಲ್ಲಿ ನೋಡಿದಳು ಹಂದಿ ಕಾಳಿ. (ಓಂತಿ, ಅರಣೆ ಪಕ್ಕಿ ಪಾರನೆ ಕಿನ್ನಿ ದೀದ್ ಕಿನ್ನೆಲೆ ಪೊರುಲು ತೂಪೊಂದು ಗೊಬ್ಬು ನಲ್ಪಾವುನ ಪೊರ್ಲು ತೂವೊಂದು ಅಯಿಕುಲು ಪೊರ್ಲು ತೂಪಿನ ದೂರೊಡು ತೂಯೊಲು ಪಂಜಿ ಕಾಲಿ) ತನಗೂ ಸಂತಾನವಾಗಬೇಕೆಂದು ಆಸೆ ಹುಟ್ಟುವ ಸಂದರ್ಭ ಮಹಾಕವಿಯ ಚಿತ್ರಣ ಸಾಮರ್ಥ್ಯವನ್ನು ಪಡೆದಿಲ್ಲವೇ? ಪ್ರಾಣಿಗಳಾದರೂ ಮಾನವೀಯ ಪರಿಗಣನೆ ಜನಪದರಲ್ಲಿ ಸಾಮಾನ್ಯ ಸೂಕ್ಷ್ಮ ಮಾನಸಿಕ ಪ್ರತಿಕ್ರಿಯೆಯನ್ನು ಸಹಜವಾಗಿ ಚಿತ್ರಿಸಿದ್ದಾನೆ. ಇದೇ ಪಾಠದಲ್ಲಿ (ಇ) ಎರಡು ಹಂದಿಗಳು ಅಣ್ಣ ತಂಗಿಯಾಗಿರುತ್ತವೆ. ಅಣ್ಣ ತಂಗಿಯ ಕೊಳಿಕೆಯನ್ನು ತೆಗೆದು ಗಂಡ ಹೆಂಡತಿಯ ಮೋಹ ನಿರ್ಮಿಸಲು ಈಶ್ವರನಲ್ಲಿ ವರ ಬೇಡುತ್ತವೆ. (ಅ) ಪಾಠಕ್ಕಿಂತ ಈ ಸಂದರ್ಭದಲ್ಲಿ (ಇ) ಪಾಠವು ಉತ್ತಮವಾಗಿದೆ. (ಅ) ಪಾಠದಲ್ಲಿ ಬರುವ ಸುಬ್ರಾಯ ದೇವರಲ್ಲಿ ವರ ಬೇಡುವ ವಿಚಾರವು ಬಹುಶಃ ಉಚಿತವಾದುದಲ್ಲ. ಕಾರಣ (ಕ) ಪಾಠದಲ್ಲಿ ಪಂಜುರ್ಲಿಯು ಮೊದಲು ಸುಬ್ರಹ್ಮಣ್ಯದಲ್ಲಿ ನೆಲೆಯಾದ ವಿವರಣೆಯಿದೆ. ಪಾಡ್ದನ ಹಾಡುವವನು ಆ ಕಾರಣದಿಂದ ಹೇಳಿರಲೂಬಹುದು. ಕಾಡಿನಲ್ಲಿ ಹಂದಿ ನರಳುವ ಸ್ವರ ಕೇಳಿ ಈಶ್ವರ ಬೇಟೆಗೆ ಹೋಗುತ್ತಾನೆ. ಒಂದು ಮರಿಯನ್ನು ತಂದು ಸಾಕುತ್ತಾನೆ. ಈಶ್ವರ ಮತ್ತು ಪಾರ್ವತಿಯಲ್ಲಿ ಮಾನವೀಯ ಸ್ವಭಾವನ್ನೇ ಕಾಣುತ್ತೇವೆ. ಪಾರ್ವತಿ ಬಹಳ ಆಸಕ್ತಿ ವಹಿಸಿ ಸಾಕುತ್ತಾಳೆ. ಕಬ್ಬಿಣದ ಬೇಲಿ, ‘ಪಟ್ಟತ್ತ ಪಾಂದಾಲ್’ (ಒಂದು ಜಾತಿಯ ಹಗ್ಗ) ನಲ್ಲಿ ಕಟ್ಟಿ ಮರಿಗೆಯಲ್ಲಿ ಮಡ್ಡಿ, ಗೆರಸೆಯಲ್ಲಿ ಕಲ್ಲು ಬತ್ತ ಇಟ್ಟು ಸಾಕುತ್ತಾಳೆ. (ಕ) (ಕೋವಿಯಿಂದ- ಅ; ಇ) ಹಂದಿ ಸತ್ತದ್ದು ನೋಡಿ ಪಾರ್ವತಿ ಮರುಗುತ್ತಾಳೆ. (ಕ) ಈಶ್ವರನೂ ನೊಂದು, ಕಡೆಕಣ್ಣಿನಲ್ಲಿ ಕೊಡಿದುಕ್ಕ ಬಿಟ್ಟನು. ಒಂಬತ್ತು ದಂಡು ಸಿರಿಯನ್ನು ಮತ್ತು ತೆಂಗಿನ ಕಾಯಿಯ ಒಂದು ಭಾಗದಲ್ಲಿ ದೀಪವಿಟ್ಟು ವರ ಕೊಡುತ್ತಾನೆ. ಇರುವ ಹಾಗೆ ವರ. ಸಾಯುವ ಹಾಗೆ ಶಾಪವನ್ನು ಕೊಡುತ್ತಾನೆ(ಸಯ್ತ್‌ಲಕ್ಕತ್ತಿ ಶಾಪ)ಈಶ್ವರ ಕೊಡುವ ವರ ಅರ್ಥಪೂರ್ಣವಾಗಿದೆ ‘ದೇವರಿಗೆ ಸಣ್ಣವ ದೈವಗಳಿಗೆ ದೊಡ್ಡವ’(ದೇವೆರೆಗ್ ಕಿನ್ನಿ, ದೈವೊಗು ಮಲ್ಲೆ) ಎಂಬ ವರವನ್ನು ಕೊಡುತ್ತಾನೆ. (ಕ)

‘ಪಂಜುರ್ಲಿ’ ಪಾಡ್ದನದಲ್ಲಿ ಹಂದಿಯ ಪಾತ್ರಚಿತ್ರಣವು ವಿಶಿಷ್ಟವಾಗಿದೆ. ಜನಪದ ಕವಿಯು ದೈವಾಂಶ ಸಂಭೂತವಾದ ಹಂದಿಗೆ ಪುರುಷತ್ವವನ್ನು ಆರೋಪಿಸಿ ಚಿತ್ರಿಸುತ್ತಾನೆ. ಬೆಳೆ ಬೆಳೆದು ಗಾಳಿ ಬೀಸಿದಾಗ ಅದರ ಪರಿಮಳ ಹಂದಿಯ ಮೂಗಿಗೆ ಹೊಡೆಯುತ್ತದೆ. ಬೆಳೆದ ಹಂದಿ ಸ್ವಶಕ್ತಿಯಿಂದ ಬಂಧನಮುಕ್ತವಾಗುತ್ತದೆ. ಅದರ ಶಕ್ತಿಯನ್ನು ಬಂಧನದಿಂದ ಪಾರಾದ ಸಂದರ್ಭವನ್ನು ಚಿತ್ರಿಸುತ್ತಾನೆ. ‘ಕಲ್ಲಿನ ಕಂಬ ಉರುಳಿಸಿದ, ಕಬ್ಬಿಣದ ಬೇಲಿ ಮುರಿದ ಹಗ್ಗವನ್ನು ಕಡಿದ’(ಕಲ್ಲಕಂಬ ಮರತೆ, ಕರ್ಬದಟ್ಟೆ ಮುಯ್ತೆ. ಪಟ್ಟತ್ತ ಪಾಂದಾಲ್ ಕಡ್ತೆ). ಈಶ್ವರನು ಬಿಲ್ಲು ಬಿಟ್ಟ ಬಳಿಕ ಹಂದಿಯನ್ನು ವರ್ಣಿಸುವ ರೀತಿಯು ತುಂಬ ಮಾನವೀಯವಾಗಿದೆ. ‘ಈಶ್ವರನನ್ನು ಹಂದಿ ನೋಡಿದ, ಕಡೆಕಣ್ಣಿನಲ್ಲಿ ಕೊಡಿದುಕ್ಕ ಬಿಟ್ಟ’. ಈಶ್ವರನೂ ಇಂತಹ ಹಂದಿಗೆ ಉಚಿತವಾದ ಗೌರವವನ್ನು ತೋರಿಸುತ್ತಾನೆ (ಕ).

ಹಂದಿಯ ಕೊನೆಯ ಚಿತ್ರಣವು (ಇ) ಪಾಠದಲ್ಲಿಯೂ ಸುಂದರವಾಗಿ ಬಂದಿದೆ. ತಾನು ಸಾಕಿದ ಹಂದಿಯಿಂದ ಅಪವಾದ ಬರುತ್ತದೆ. ಆದರೆ ತಾನು ಸಾಕಿ ತನ್ನ ಕೈಯಲ್ಲೇ ಹೇಗೆ ಕೊಲ್ಲುವುದೆಂದು ಚಿಂತಿಸುತ್ತಾರೆ. ಗುಂಡು ಹೊಡೆದು ನಾಲ್ಕು ಕಾಲು ಹಿಡಿದು ಎಸೆಯುತ್ತಾರೆ. ‘ಅರದರಿ’ ಗುಂಡಿಗೆ ಹೋಗಿ ಬೀಳುತ್ತದೆ. ‘ಪಂಜುರ್ಲಿ’ಗೆ ‘ಅರದ್ದೆರೆ ಭೂತ’ ಎಂಬ ಹೆಸರೂ ಇರುವುದು ಈ ಪಾಠದಿಂದ ತಿಳಿಯುತ್ತದೆ. ಇತರ ಎರಡು ಪಾಠಗಳಿಗಿಂತ ಕೊನೆಯು ಭಿನ್ನವಾಗಿದೆ ಈ ಪಾಠದಲ್ಲಿ.

(ಇ) ಮತ್ತು (ಅ) ಪಾಠದಲ್ಲಿ ಹಂದಿಯ ವರ್ಣನೆ ಸ್ಪಷ್ಟವಾಗಿದೆ. ಬೇಟೆಗೆ ಹೋದ ಈಶ್ವರ ಹಂದಿಯ ರೂಪವನ್ನು ನೋಡಿ ಕೋವಿ (ಸಿಕರಿ ಬೆಡಿ)ಯನ್ನು ಕೆಳಗಿಡುತ್ತಾರೆ. ‘ಬಿಳಿನಾಮ, ಬೀಲ ಕಪ್ಪು, ಹೊಟ್ಟೆಯಡಿ ಬಿಳಿ ಕಪ್ಪು ಬಣ್ಣ, ನಾಲ್ಕು ಕಾಲೂ ಸುಂದರವಾಗಿದೆ. ಹಂದಿಯ ಚೆಂದ ನೋಡಿದರು ಈಶ್ವರ ಕೊಈವಿಯನ್ನು ಕೆಳಗಿಟ್ಟರು’. (ಮುಂಡೊಡು ದಾಸೆ, ಬೀಲೊಡು ಕೊಡ್ಯೆ, ಬಂಜಿದಡಿ ಮಂಗಲೆ ನಾಲ್‌ಕಾರ್ ಸೊಲಿಮ್ (?) ಗುಜ್ಜಾರ ಪೊರುಲು ತೂಯೆರ್ – ಈಶ್ವರೆ ಸಿಕರಿ ಬೆಡಿ ತಿರ್ತ್‌ದೀಯೆರ್.) (ಇ) ಪಾಠದಲ್ಲಿ ಹೀಗಿದ್ದರೆ, (ಅ) ಪಾಠದಲ್ಲಿ ‘ಹಂದಿಯ ದೇಹದ ಮಾಟ ಉಪ್ಪಿನ ಕಾಯಿಯ ಹಂಡೆಯಂತಾಯಿತು. ಬಂಗಬಾಳೆಯ ಕಾಯಿಯಂತೆ ದಾಡೆ ಹೊರಗೆ ಕಾಣಿಸಿತು. ಈಚಲು ಮರದ ಕಣ್ಣಿಯಂತೆ ರೋಮಗಳು ನಿಮಿರಿ ನಿಂತವು. ಎಲೆಕಣಿಲೆಯ ಹಾಳೆಯಂತೆ ಕಿವಿಗಳು ನೆಗೆದು ನಿಂತವು. ಕೋಲು ಬತ್ತಿಯಂತೆ ಬಾಲ ಸಪೂರವಾಗಿ ಕಾಣಿಸಿತು’ ಎಂಬ ಸುಂದರ ವರ್ಣನೆಯಿದೆ. ಇಲ್ಲಿ ಹಂದಿಯ ಮೈಕಟ್ಟನ್ನು ಜೀವಂತ ಉಪಮೆಗಳಿಂದ ವರ್ಣಿಸಿದ್ದು ಜನಪದ ಕವಿಯ ಕವಿತ್ವಕ್ಕೆ ಸಾಕ್ಷಿಯಾಗಿದೆ. ಪಂಜುರ್ಲಿಯ ತಂದೆತಾಯಿಗಳ ವರ್ಣನೆ (ಅ. ಪಾಠದಲ್ಲಿ) ಮೇಲಿನ ಉದಾಹರಣೆಯಂತೆ ಹೋಲಿಸುವ ಕೌಶಲ್ಯವನ್ನು ವ್ಯಕ್ತಗೊಳಿಸುವುದು. ‘ಕರಂಡೆ ಕಾಯಿಯಂತೆ ಕಪ್ಪಿನವಳು ಹಂದಿ ಕಾಳಿ, ಮಜಲು ತುಂಬೆ ಹೂವಿನಂತೆ ಬೆಳ್ಳಗಿದ್ದವನು ಹಂದಿಗುಜ್ಜಾರ’. ಈ ಹಂದಿಗಳನ್ನೂ ಮಾನವೀಯ ದೃಷ್ಟಿಯಿಂದ ನೋಡುವ ಚಿತ್ರವಿದೆ – ಹಂದಿ ಕಾಳಿ ಬಸುರಿಯಾದಾಗ ಬಯಕೆಗೆ ಗೆಡ್ಡೆಗೆಣಸುಬಳನ್ನು ತಿಂದಳು. (ಅ. ಮತ್ತು ಇ) ಹಂತ ಹಂತದಲ್ಲಿ ಕಾವ್ಯ ಶೈಲಿಯಲ್ಲಿ ವರ್ಣಿಸುವುದು ಇಂತಹ ಪಾಡ್ದನಗಳಲ್ಲಿ ಕಾಣುತ್ತೇವೆ.

ಪಾತ್ರ ಚಿತ್ರಣದಲ್ಲಿ ಮೇಲೆ ವಿವರಿಸಿದ ಗಮನಾರ್ಹ ಅಂಶಗಳಿದ್ದರೆ, ಕೆಲವು ಸನ್ನಿವೇಶ ವರ್ಣನೆಯಲ್ಲಿಯೂ ಕವಿಯ ಸೂಕ್ಷ್ಮಗ್ರಹಣ ಶಕ್ತಿಯನ್ನು ಮತ್ತು ವರ್ಣನಾ ಸಾಮರ್ಥ್ಯವನ್ನು ಗುರುತಿಸಬಹುದು. ಕಾವ್ಯ ಮೌಲ್ಯದ ದೃಷ್ಟಿಯಿಂದಲೂ ಉಲ್ಲೇಖನೀಯವಾದವು. ಹಂದಿ ಯಾವಾಗ ಬೆಳೆಯನ್ನು ತಿನ್ನಲು ಹೋಯಿತೆನ್ನುವುದನ್ನು ಸಹಜವಾಗಿ ನಮ್ಮ ಮುಂದಿರಿಸುತ್ತಾನೆ – ‘ಕಡೆ ಬತ್ತ ಕಪ್ಪು, ಕೊಡಿ ಬತ್ತ ಕೆಂಪು ಸುಗ್ಗಿ ಬೆಳೆ ಬೆಳೆದುಕೊಂಡು ಬರುವಾಗ’ (ಕಡೆ ಬಾರ್ ಕಪ್ಪು, ಕೊಡಿ ಬಾರ್ ಕೆಂಪು ಸುಗ್ಗಿದ ಬುಲೆ ಬುಲೆವೊಂದು ಬನ್ನಗ) ಅದರ ಪರಿಮಳ ಹಂದಿಯ ಮೂಗಿಗೆ ಬಡಿಯಿತಂತೆ (ಕ. ಪಾಠ) ಜನಪದ ಕವಿಯು ಕಂಡಂತೆ ಚಿತ್ರಿಸುವುದರಲ್ಲಿ ಸಹಜ ಸೌಂದರ್ಯ ಅಡಗಿದೆ. ಹಂದಿಯು ಸೊಕ್ಕಿ ಬೆಳೆಯನ್ನು ತಿನ್ನುವ ಚಿತ್ರವೂ ಅಷ್ಟೇ ಸಹಜ ಸುಂದರ – ‘ಬೆಳೆಗೆ ಬಾಯಿ ಹಾಕಿ ಮುಂದೆ ಐದು ಬಳ್ಳದಷ್ಟು ಮುಕ್ಕುವಾಗ ಹಿಂದಿನಿಂದ ಹತ್ತು ಬಳ್ಳದಷ್ಟು ಬೆಳೆಯನ್ನು ಪುಡಿಗಟ್ಟಿತು (ಅ. ಪಾಠ) ‘ಪಂಜುರ್ಲಿಯು ಈಶ್ವರನ ಶಾಪಕ್ಕೆ ಒಳಗಾಗಿ ತುಳುನಾಡಿಗೆ ಇಳಿದು ಬಂದಾಗ ತುಳುನಾಡು ಬಹಳ ಚಂದವಾಗಿ ಕಂಡಿತಂತೆ. ‘ಸತ್ತಿಗೆಯಷ್ಟು ದೊಡ್ಡದು, ಹರಿವಾಣದಷ್ಟು ಉರುಟು. ನಾಣ್ಯದಷ್ಟು ಸುಂದರ’ (ತಿರ್ತ್‌ತುಳುವ ರಾಜ್ಯ ತೂನಗ ಬಾರೀ ಪೊರ್ಲು ತೋಜುಂಡು. ಸತ್ತಿಗೆ ದಾತ್ ಮಲ್ಲೆ, ಅರಿವಾಣದಾತ್ ಉರುಟು, ಪಣವುದಾತ್ ಪೊರ್ಲು) (ಕ. ಪಾಠ) ತುಳುನಾಡಿನ ಸೌಂದರ್ಯ, ಆಕಾರ, ಸ್ವರೂಪ, ಸಮೃದ್ಧಿಗಳನ್ನು ಈ ಉಪಮೆಗಳು ಧ್ವನಿಸುತ್ತವೆ. ಈ ಉಪಮೆಗಳ ಅರ್ಥವ್ಯಾಪ್ತಿ ಇಷ್ಟೇ ಅಲ್ಲ. ಅರ್ಥ ಪರಂಪರೆಯನ್ನೇ ಒಳಗೊಂಡಿವೆ. ಭಾವಿಸುವ ಮನಸ್ಸಿನಂತೆ ಅರ್ಥವು ಹೆಚ್ಚುತ್ತದೆ. ಬೇರೆ ಬೇರೆ ಪಾಠಗಳಲ್ಲಿರುವ ಕಾವ್ಯ ಗುಣವು ‘ಪಂಜುರ್ಲಿ’ಯ ಒಟ್ಟು ಪಾಡ್ದನದ ಮೌಲ್ಯವನ್ನು ಹೆಚ್ಚಿಸುವುದು.

ಈ ಮೂರು ಪಾಠಗಳಲ್ಲಿ ಕೆಲವು ವ್ಯತ್ಯಾಸಗಳಿವೆ. ಹಿಂದೆ ಒಂದೆರಡನ್ನು ಗಮನಿಸಿದ್ದೇವೆ. (ಅ) ಪಾಠದಲ್ಲಿ ಈಶ್ವರನು ಬೆಳೆಸಿದ ಬೆಳೆಯನ್ನೇ ಹಂದಿ ಹಾಳು ಮಾಡಿದ ವರ್ಣನೆಯಿದ್ದರೆ (ಕ) ಪಾಠದಲ್ಲಿ ‘ಬೀರು ಬಿರ್ಮನೆ’ ಬಲ್ಲಾಳನ ಸುಗ್ಗಿ ಬೆಳೆಯನ್ನು ತಿಂದು ‘ಸರ್ವಚಾಂಡಾಲ’ ಮಾಡುತ್ತದೆ. ‘ಬೀರು ಬಿರ್ಮನೆ’ ಬಲ್ಲಾಳನು ಈಶ್ವರನಲ್ಲಿ ದೂರು ತರುತ್ತಾನೆ – ‘ನಿಮ್ಮ ಹಂದಿಯ ದೆಸೆಯಿಂದ ನನ್ನ ಸುಗ್ಗಿ ಬೆಳೆ ಹೋಯಿತು. ಸರಕಾರದ ಗಂಟು ಹೋಯಿತು. ಕುಟುಂಬದ ಅನ್ನ ಹೋಯಿತು.(ಈ ನಷ್ಟವನ್ನೆಲ್ಲ) ನಿಮ್ಮ ಹಂದಿಯ ತಲೆಯ ಮೇಲಿಟ್ಟಿದ್ದೇನೆ’ ಎಂದು ಇನ್ನೊಬ್ಬರು ನಿಂದಿಸಿದಾಗ ಕೋಪ ಬರುವುದು ಹೆಚ್ಚು. (ಇ) ಪಾಠದಲ್ಲೂ ದೂರು ನಿಂದೆ ಬರಲು ಪ್ರಾರಂಭಿಸಿದ ಬಳಿಕ ಹಂದಿಯನ್ನು ಕೊಲ್ಲುತ್ತಾನೆ ಈಶ್ವರ.

ಈಶ್ವರನು ಕೋವಿಯಿಂದ ಹೊಡೆದು ಕೊಲ್ಲುತ್ತಾನೆ ಎನ್ನುವ (ಅ) ಮತ್ತು (ಇ) ಪಾಠಗಳಿಗಿಂತ ಬಿಲ್ಲು ಹಿಡಿದು ಕೊಲ್ಲುತ್ತಾನೆ ಎನ್ನುವ (ಕ) ಪಾಠವು ಹೆಚ್ಚು ಸಹಜವಾಗಿದೆ. ಈಶ್ವರನು ಬೇಟೆಯಾಡುವ ವರ್ಣನೆ ‘ಹಂದಿ ಕಾಳಿ’ ಮತ್ತು ‘ಹಂದಿ ಗುಜ್ಜಾರ’ರ ವಿವರಣೆ, ಹಂದಿಯ ದೇಹದ ಸೌಂದರ್ಯದ ವರ್ಣನೆ- ಇವುಗಳು (ಕ) ಪಾಠದಲ್ಲಿಲ್ಲ. (ಕ)ಪಾಠವೂ ಸಮಗ್ರವಾಗಿಲ್ಲವೆಂದು ಹೇಳಬಹುದು.

(ಇ) ಪಾಠವು (‘ಒಡ್ತೆ ಪಂಜುರ್ಲಿ’) ಕೆಲವು (ಹಿಂದೆ ನೋಡಿದ) ಅಂಶಗಳಲ್ಲಿ ಗಮನಾರ್ಹವಾದುದಾದರೂ, ಒಟ್ಟಿನಲ್ಲಿ ಪಾಠವು ಸಾವಯವ ಸಂಬಂಧವನ್ನು ಕಳೆದುಕೊಂಡಿದೆ. ‘ಒಡ್ತೆ ಪಂಜುರ್ಲಿ’ ಎಂಬ ಶಿರೋನಾಮೆಯ ಅರ್ಥರಹಿತವಾಗಿದೆ. ‘ಒಡ್ತೆ ಪಂಜುರ್ಲಿ’ ಎಂದಾಗಬೇಕಿತ್ತು ಅಂದರೆ ಕಲ್ಲುರ್ಟಿ ಮತ್ತು ಪಂಜುರ್ಲಿ ಎಂದರ್ಥ . ಅವೆರಡರ ಕೋಲವೂ ಒಂದೇ ದಿವಸ ನಡೆಯಬೇಕಾದ ಕಡೆಗಳಲ್ಲಿ ‘ಒರ್ತೆ ಪಂಜುರ್ಲಿ’ ಎನ್ನುತ್ತಾರೆ. (ಇದಕ್ಕೆ ಹಿನ್ನೆಲೆ ಕತೆಯೊಂದಿದೆ. ಪಂಜುರ್ಲಿಯನ್ನು ನಂಬಿದ ಒಬ್ಬರು (ಪಾರಂಗಿ ನೀರಂಗಿ ಬಲ್ಲಾಳ್‌) ಕಲ್ಲುರ್ಟಿ ಭೂತದ ಹಲಸಿನ ಮರದ ಹಣ್ಣನ್ನು ತಿಂದುದರಿಂದ ಎರಡೂ ಭೂತಗಳನ್ನು ಒಂದೇ ಕಡೆಯಲ್ಲಿ ನಂಬಿದರು.) ಈ ಪಾಠದಲ್ಲಿ ಬೈರರಸುಗಳ ಮತ್ತು ಕುಪ್ಪೆ ಕೋಟಿಗಳ ಕತೆಯನ್ನು ಮುಂದುವರಿಸಿಕೊಂಡು ಹೋಗುವಾಗ ಅವುಗಳ ಸಂಬಂಧವನ್ನು ಕಡೆಗಣಿಸಿದುದು ಸಂಗ್ರಹಕಾರನ ದೋಷವಾಗುವುದು.

‘ಪಂಜುರ್ಲಿ’ಯಲ್ಲಿ ‘ಕುಪ್ಪೆ ಪಂಜುರ್ಲಿ’, ‘ಒಡ್ತೆ ಪಂಜುರ್ಲಿ’, ‘ಮಲಾರ ಪಂಜುರ್ಲಿ’ ಎಂದು ಹಲವಾರು ವಿಧಗಳಿವೆ. ಈ ಹೆಸರುಗಳಿಗೆ ಒಂದೊಂದು ಪಾಡ್ದನಗಳಲ್ಲಿವೆ. ಪಂಜುರ್ಲಿಯ ಪ್ರತಾಪ ಅಥವಾ ಮಹಿಮೆ ಅಥವಾ ನೆಲೆಯಾದ ರೀತಿಗಳನ್ನು ವಿವರಿಸುವ ಕತೆಗಳಿವೆ.

‘ಕುಪ್ಪೆ ಪಂಜುರ್ಲಿ’ ಪಾಡ್ದನದಲ್ಲಿ ಪಂಜುರ್ಲಿಯು ಮೀನಿನ ರೂಪವನ್ನು ಪಡೆದುಬರುವ ಕತೆಯಿದೆ. ‘ಕುಪ್ಪೆ’ ಎನ್ನುವ ಮನೆತನದವರು (ಕುಪ್ಪೆ ಕೋಟಿ ಬೈದ್ಯ ಮೊದಲಾದವರು) ಮೀನಿನಾಕಾರದ ‘ಪಂಜುರ್ಲಿ’ಯನ್ನು ‘ಬೊಲ್ಲ್ಯಲ್ಲ ಗುಂಡಿ’ಯಲ್ಲಿ ಹುಗಿಯುತ್ತಾರೆ. ಮುಂದೆ ಬೈರರಸುವಿನ ಬಂಟನಾದ ‘ಕುಪ್ಟೆಕೋಟಿ ಬೈದ್ಯ’ನು ಮೀನನ್ನು ಹಿಡಿದು ತೆಗೆದಾಗ ಒಂದು ಬದಿ ಮೀನಿನ ರೂಪ ಇನ್ನೊಂದು ಬದಿ ಹಂದಿಯ ರೂಪವು ಕಾಣುತ್ತದೆ.

ಅಮೃತ ಸೋಮೇಶ್ವರರು ಸಂಗ್ರಹಿಸಿದ ‘ಕುಪ್ಪೆ ಪಂಜುರ್ಲಿ’ (ಎರಡು-ಸಂಧಿಗಳು) ಮತ್ತು ‘ಮಲಾರ ಪಂಜುರ್ಲಿ’ ಪಾಡ್ಡನಗಳು ಮೂಲ ಕತೆಗೆ ಪೋಷಕವಾಗಿಲ್ಲ. ಇದನ್ನು ಪ್ರಾದೇಶಿಕ ಭೇದವೆಂದೂ ಹೇಳಬಹುದು. ಈ ಪಾಡ್ದನಗಳಲ್ಲಿ ದೇವಲೋಕದ ಕುಮಾರ ದೈವವು ಭೂಮಿಗಿಳಿದು ನೆಲೆಯಾಗುವ ಕತೆಯಿದೆ. ‘ಕುಮಾರ ದೈವ’ವನ್ನು ಹಿಡಿದ ‘ಭೂತದ ಬಾಲೊಳಿ’ ಕಾಡಿನಲ್ಲಿ ಹಂದಿಯಾಗಿರು, ನೀರಿನಲ್ಲಿ ಮೀನಾಗಿರು ಎಂದು ವರ ಕೊಡುತ್ತಾರೆ. ಹಿಡಿದ ಮೀನಿನ ಆಕಾರದಲ್ಲಿ ಒಂದು ಬದಿ ಭೂತದ ಆಕಾರವಿತ್ತು ಎಂದಷ್ಟೇ ಇದೆ. ಭೂತದ ಆಕಾರ, ಹೇಗೆ ಅಥವಾ ಭೂತ ಯಾವುದು ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಇಲ್ಲಿ ‘ಪಂಜುರ್ಲಿ’ ಭೂತ ಎಂದು ತಿಳಿಯುವುದು ‘ಪೂರ್ವಂದ ಅರದ್ದೆರೆ ಬೂತತ್ತೊ’ ಎನ್ನುವಲ್ಲಿ ಮಾತ್ರ ಅದೂ ಹಿಂದೆ ನೋಡಿದ (ಇ) ಪಾಠದ ಆಧಾರದಿಂದ. ಈಶ್ವರನು ಹಂದಿಯನ್ನು ‘ಅರದರಿ’ ಗುಂಡಿಗೆ ಎಸೆಯುತ್ತಾನೆ ಎನ್ನುವುದು ಈ ದೃಷ್ಟಿಯಿಂದ ಗಮನಾರ್ಹವಾದುದು. ‘ಮಲಾರ ಪಂಜುರ್ಲಿ’ ಪಾಡ್ದನದಲ್ಲಿ ಕುಮಾರ ದೈವವು ನಾರಾಯಣ ದೇವರಿಂದ ‘ಹಾರ’ ತೆಗೆದುಕೊಂಡು ಭೂಮಿಗಿಳಿಯುವ ವಿವರಣೆಯೂ ‘ಜುಮಾದಿ’ ಮತ್ತು ‘ಗುಳಿಗ’ ಪಾಡ್ದನಗಳಿಗೆ ಸಮಾನವಾಗಿದೆ. ‘ಮಾಲಾರ ಪಂಜುರ್ಲಿ’ ಪಾಡ್ದನವು ಮೇಲಿನೆರಡು ಪಾಡ್ದನಗಳಿಂದ ಪ್ರಭಾವಿತವಾಗಿರಬಹುದೊ ಎಂಬ ಸಂಶಯ ಏಳುತ್ತದೆ. ಅಮೃತ ಸೋಮೇಶ್ವರರು ಸಂಗ್ರಹಿಸಿದ ಮೇಲಿನ ಮೂರು ಪಾಡ್ದನಗಳು ಸಂಸ್ಕೃತಿ, ಭಾಷೆ ಮತ್ತು ಶೈಲಿಯ ದೃಷ್ಟಿಯಿಂದ ಉತ್ತಮವಾಗಿವೆ. ಸಾಂಸ್ಕೃತಿಕ ಮಹತ್ವವನ್ನು ಮುಂದೆ ವಿವರಿಸಲಾಗಿದೆ.

‘ಪಂಜುರ್ಲಿ’ ಪಾಡ್ದನವು ದೈವೀ ಶಕ್ತಿಗೆ ಸಂಬಂಧಿಸಿದ ಕತೆಯಾದರೂ ಅದಕ್ಕೆ ಸಂಬಂಧಿಸಿದ ಪಾಡ್ದನಗಳೂ ಮಹತ್ವದ ಸ್ಥಾನವನ್ನು ಪಡೆಯುತ್ತವೆ. ಅವುಗಳಲ್ಲಿ ಐತಿಹಾಸಿಕ ಮತ್ತು ಸಾಹಿತ್ಯಕ ಮಹತ್ವವುಳ್ಳದ್ದು ಬೈರರಸುವಿನ ಕತೆಯನ್ನೊಳಗೊಂಡ ಪಾಡ್ದನ – ‘ಕುಪ್ಪೆ ಪಂಜುರ್ಲಿ’ ಪಾಡ್ದನದಲ್ಲಿ ಈ ಕತೆಯು ಬರುತ್ತದೆ. ‘ಕುಪ್ಪೆ ಪಂಜುರ್ಲಿ’ಯನ್ನು ನಂಬಿದ ಕುಪ್ಪೆಕೋಟಿ ಬೈದನು ಬೈರರಸುವಿನ ಬಂಟನಾದುದರಿಂದ, ಬೈರರಸುವಿನ ಕತೆಯೂ ಬಂದಿದೆಯೆಂದು ಪಾಡ್ದನಕಾರನೊಬ್ಬನ ಅಭಿಪ್ರಾಯ. ಕಾರ್ಕಳದ ಬೈರರಸುವಿಗೆ ಕನ್ನಡದ ಅರಸು (ಕೃಷ್ಣದೇವರಾಯ?) ಓಲೆ ಕಳುಹಿಸಿ ರಾಜ್ಯವನ್ನು ಬಿಟ್ಟುಕೊಡಬೇಕೆಂದಾಗ ಬಂದ ಊಳಿಗದವನ ಗಂಡು ವೇಷವನ್ನು ತೆಗೆಸಿ ಹೆಣ್ಣುವೇಷ ಹಾಕಿಸಿ ಕಳುಹಿಸುತ್ತಾನೆ. ಬಳಿಕ ಕನ್ನಡದ ಅರಸು ದಂಡೆತ್ತಿ ಬಂದಾಗ ಬೈರರಸು ಕಾರ್ಕಳವನ್ನು ಬಿಟ್ಟು ಧರ್ಮಸ್ಥಳಕ್ಕೆ ಹೋಗಿ ನೆಲೆಸುತ್ತಾನೆ. ಆಗ ಅವನ ಜೊತೆಯಲ್ಲಿ ಕಪ್ಪೆಕೋಟಿ ಬೈದ್ಯನೂ ಧರ್ಮಸ್ಥಳಕ್ಕೆ ಹೋಗುತ್ತಾನೆ. ಅಲ್ಲಿ ‘ಪಂಜುರ್ಲಿ’ಯನ್ನು ಹಿಂದೆ ವಿವರಿಸಿದ ಘಟನೆಯಿಂದ ನಂಬುತ್ತಾನೆ. ಇನ್ನೊಂದು ವಿಚಾರವೆಂದರೆ ಪಂಜುರ್ಲಿಯು ತುಳುನಾಡಿನಲ್ಲಿ ನೆಲೆಯಾದ ಎರಡನೆಯ ಸ್ಥಳ ಧರ್ಮಸ್ಥಳವಾದುದರಿಂದ ಬೈರರಸನು ‘ಪಂಜುರ್ಲಿ’ಯ ಪ್ರತಾಪಕ್ಕೆ ಒಳಗಾದನೋ ಎಂಬ ಸಂಶಯ. ನಾನು ಸಂಗ್ರಹಿಸಿದ ಪಾಡ್ದನವು ಒಂದೇ ಪಾಠವಾಗಿರುವುದರಿಂದ ಈ ವಿಚಾರವಿಲ್ಲ. ಆದರೆ ಹಲವು ಪಾಠಗಳ ಸಂಗ್ರಹದಿಂದ ಸರಿಯಾದ ಕಾರಣವು ದೊರೆಯುವುದು ಸಾಧ್ಯ. ಮೊದಲು ಹೇಳಿದ ಪಾಡ್ದನಕಾರನ ಅಭಿಪ್ರಾಯವು ಇತರ ಪಾಠಗಳಲ್ಲಿಯೂ ಇರಬೇಕಾಗಿಲ್ಲ. ‘ಒಡ್ತೆ ಪಂಜುರ್ಲಿ’ ಪಾಡ್ದನದಲ್ಲಿ ಬೈರರಸನ ಕತೆ ಬಂದಿದ್ದರೂ ಯಾವ ಸ್ವಷ್ಟವಾದ ಸಂಬಂಧವನ್ನೂ ಆ ಪಾಠವು (ಹಿಂದೆ ಪರಿಶೀಲಿಸದ ‘ಇ’ಪಾಠ) ತಿಳಿಸುವುದಿಲ್ಲ. ಭಾಷೆಯ ಶೈಲಿ, ಕತೆಯ ನಿರೂಪಣೆ ಹಾಗೂ ಪಾಡ್ದನದ ಗತ್ತು ನನ್ನೀ ಸಂಗ್ರಹದಲ್ಲಿರುವುದರಿಂದ ವಿವರವಾಗಿ ಪರಿಶೀಲಿಸಲಾಗಿದೆ.

ಈ ಪಾಡ್ದನದ ಕತೆ ಸರಳವಾದರೂ ತುಳು ಭಾಷೆಯ ಮಾತಿನ ಮೋಡಿ, ಸಂಭಾಷಣೆಗಳು ಸ್ವಾರಸ್ಯವಾಗಿವೆ. ಓಲೆಯ ರಚನೆಯ ವಿವರಣೆ ಸ್ವಷ್ಟವಾಗಿದೆ. ರಾಮಕೃಷ್ಣ (ತೆನ್ನಾಲಿ ರಾಮಕೃಷ್ಣ?) ಶ್ಯಾನಭೋಗನನ್ನು ಕರೆಸಿ ಓಲೆ ಬರೆಯಲು ಹೇಳುತ್ತಾನೆ. ‘ನನಗೆ ಕೊಡುವ ಕಪ್ಪಕಾಣಿಗೆ ಉಳಿದುಬಿಟ್ಟಿದೆ. ಆನೆಯ ಅಕ್ಕಿ, ಕುದುರೆಯ ಹುರುಳಿ, ಸತ್ತಿಗೆಯ ಉಂಬೊಳಿ, ದಂಡಿಗೆಯ ಬಾಡಿಗೆ, ಹಣದ ಬಡ್ಡಿ, ಆದಿಯ ಕಳಸೆ, ಪೂರ್ವದ ಬಳ್ಳ ಉಳಿದುಬಿಟ್ಟಿದೆ. ಅದನ್ನು ಕೊಡುವುದಾದರೆ ಕೊಡು. ಇಲ್ಲದಿದ್ದರೆ ಕಾದಿಕಟ್ಟು, ಇಲ್ಲದಿದ್ದರೆ ನಿನ್ನ ರಾಜ್ಯ ಬಿಟ್ಟುಕೊಡಬೇಕು’ (ಎಂಕ್ ಕೊರ್ಪಿನ ಕಪ್ಪಕಾಣಿಕೆ ಒರಿದ್ ಬೌದುಂಡು. ಆನೆದ ಕರಿ, ಕುದುರೆದ ಕುಡು, ಸತ್ತಿಗೆದ ಉಂಬೊಳಿ, ದಂಡಿಗೆದ ಬಾಡಾಯಿ, ಪಣವುದ ಬಡ್ಡಿ, ಆದಿದ ಕಳಸೆ, ಪೂರ್ವದ ಬಲ್ಲ ಒರಿದ್ ಬೌದುಂಡು. ಅವ್ವೆನಿ ಕೊರ್ಪಡ ಕೊರೊಡು. ಕಾದ್ ಕಟ್ಟುವಡ ಕಾದ್ದ್ ಕಟ್ಟೊಡು. ಇಜ್ಜಡ ನಿನ್ನ ರಾಜಮಾಡ ಬುಡುಕೊರೊಡು) ಈ ಓಲೆಯಲ್ಲಿ ಬರೆಸಿದುದು ಪಾಡ್ದನದಲ್ಲಿ ಎರಡು ಸಲ ಪುನರುಕ್ತವಾಗಿದೆ. ಪಾಡ್ದನದ ವಸ್ತುವು ಇದಾಗಿರುವುದರಿಂದ ಮತ್ತು ಜನಪದ ಕಾವ್ಯಗಳ ಲಕ್ಷಣವಾಗಿರುವುದರಿಂದ ಅನುಚಿತವೆಂದು ಕಾಣುವುದಿಲ್ಲ.

ಕಾರ್ಕಳದ ಅರಸನಲ್ಲಿಗೆ ಓಲೆಯ ಊಳಿಗದ ಎಂಕಣ್ಣ ಬಂದ ಕೂಡಲೇ ನೋಡಿ ‘ದಿಡ್ಕ’ ಎದ್ದು ಅರಸನು ಉಪಚಾರ ಮಾಡುತ್ತಾನೆ. ಓಲೆಯವನು ಪರನಾಡಿನವನಾದರೂ, ವೈರಿಯಾದರೂ ಉಪಚಾರ ಮಾಡುವ ಸಂಪ್ರದಾಯವನ್ನು ಜನಪದ ಕವಿಯು ಮರೆಯುವುದಿಲ್ಲ. ಊಳಿಗ ವೆಂಕಣ್ಣ ‘ವೀಳ್ಯದೆಲೆ ತಿಂದು, ಓಲೆಯನ್ನು ಅರಸನ ಮಡಿಲಿಗೆ ಎಸೆಯುತ್ತಾನೆ’. (ಕಾಯಿತಿಂದೆ ಕಪ್ಪುರಾಯೆ ಸುಣ್ಣ ತಿಂದೆ ಉಗುಪಾಯೆ, ಕೊಣದಿನ ಓಲೆ ಬುಡಿಯೆ, ಅರಸನ ಜಕ್ಕೆಲ್‌ಗ್ ದಕ್ಕ್‌ಯೆ.) ಓಲೆಯನ್ನು ಓದಿದಾಗ ಅರಸನ ಪ್ರತಿಕ್ರಿಯೆಯನ್ನು ಮತ್ತು ಎಂಕಣ್ಣನ ಮಾತಿನ ಶೈಲಿಯನ್ನು ಸತ್ವಯುತವಾಗಿ ಚಿತ್ರಿಸಿದ್ದಾನೆ. ‘ಓಲೆಯನ್ನು ನೋಡಿದರು, ಕಿಸ್ಕ ನಕ್ಕರು, ಊಳಿಗದೆಂಕಣ್ಣ ಕೇಳುತ್ತಾನೆ, ಸಂತೋಷದ ನಗೆಯೋ ಅರಸನೇ, ದುಃಖದ ನಗೆಯೊ? ಸಂತೋಷಕ್ಕೆ ಸಂತೋಷವಲ್ಲ, ದುಃಖಕ್ಕೆ ದುಃಖವೂ ಅಲ್ಲ. ‘ದಿಡ್ಕ’ ಎದ್ದರು ಅರಸ. ಕುತ್ತಿಗೆಗೆ ಕೈಹಾಕಿ ದೂಡಿದರು. ಮಾನಕ್ಕೆ ಹೀನ ಮಾಡಿದರು. ಗಂಡು ವೇಷ ತೆಗೆಸಿದರು. ಹೆಣ್ಣು ವೇಷ ತೊಡಿಸಿದರು’ (ಓಲೆ ತೂಯೆರ್, ಕಿಸ್ಕ ತೆಲ್ತೆರ್, ಊಲಿಗದೆಂಕಣ್ಣೆ ಕೇಣ್ವೆ, ಅರ್ತಿದ ತೆಲ್ಕೆನ ಆರಸೊದುಕ್ದ ತೆಲ್ಕೆನ. ಅರ್ತಿಗ್ ಅರ್ತಿಯತ್ತ್, ದುಕ್ಕೊಗು ದುಕ್ಕತ್ತ್. ದಿಡ್ಕ ಲಕಿಯೆರ್ ಅರಸು. ಕಂಟೆಲ್ ಕೈಪಾಡ್ದ್ ನೂಕಿಯೆರ್. ಮಾನೊಗು ಹೀನ ಮಲ್ತೆರ್. ಆನ ಯೇಸ ಗೆಪ್ಪಾಯೆರ್, ಪೊನ್ನ ಯೇಸ ಮಲ್ಪಾಯೆರ್.) ಇಲ್ಲಿ ಚಿತ್ರಿಸಿದ ಕ್ರಿಯೆಯು ಸ್ವಾರಸ್ಯವಾಗಿ ಮನಮೋಹಕವಾಗಿದೆ. ಸಣ್ಣ ಸಣ್ಣ ವಾಕ್ಯಗಳಿಂದ ಕ್ರಿಯೆಯ ವೇಗವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವುದು ವೈಶಿಷ್ಟ್ಯವಾಗಿದೆ. ಭಾಷೆಯಲ್ಲಿ ಕ್ರಿಯಾಭಿನಯವೆಂದು ಹೇಳಿದರೆ ತಪ್ಪಾದೀತೆ? ‘ದಿಡ್ಕ’ ಎಂಬ ಅನುಕರಣ ಶಬ್ದವು ಸತ್ವಯುತವಾಗಿದೆ. ಓಲೆಯಲ್ಲಿ ಏನು ಬರೆದಿದೆ ಎಂಬುದನ್ನು ಪುನರುಕ್ತಗೊಳಿಸದೆ, ಓಲೆಗೆ ಅರಸನ ಪ್ರತಿಕ್ರಿಯೆಯನ್ನು ಮಾತ್ರ ಚಿತ್ರಿಸುವುದು ತಂತ್ರನೈಪುಣ್ಯವೇ ಸರಿ.

ಬೈರರಸನು ಓಲೆಯನ್ನು ಊಳಿಗದ ಎಂಕಣ್ಣನ ಕುತ್ತಿಗೆಗೆ ಕಟ್ಟಿ ಹಿಂದಕ್ಕೆ ಕಳುಹಿಸುತ್ತಾನೆ. ಊಳಿಗದೆಂಕಣ್ಣನು ಕನ್ನಡ ಅರಸನ ಮನೆಗೆ ಬಂದ ಬಳಿಕ ನಡೆಯುವ ಸಂಭಾಷಣೆಯೂ ಅತ್ಯಂತ ಸತ್ವಯುತವಾಗಿದೆ. ಸ್ವಾರಸ್ಯವಾಗಿದೆ. ‘ಹೌದ ಊಳಿಗದೆಂಕಣ್ಣ ಗಂಡಾಗಿ ಬಂದೆಯೋ? ಹೆಣ್ಣಾಗಿ ಬಂದೆಯೋ? ಗಂಡಿಗೆ ಗಂಡಲ್ಲ, ಹೆಣ್ಣಿಗೆ ಹೆಣ್ಣಲ್ಲ. ಮಾನ ವುಂಟೆಂದು ಹೋದೆ ಮಾನಕ್ಕೆ ಹೀನವಾಯ್ತು. ಅದಕ್ಕೆ ಕೇಳಿದರು ಅರಸ. ಮಾನವುಂಟೆಂದು ಹೋದೆ, ಮಾನಕ್ಕೆ ಹೀನವಾಯ್ತೊ? ಮಾನ ನಿನ್ನದಲ್ಲ ನನ್ನದು ಹೋದದ್ದು (ಅಂದ ಊಳಿಗದೆಂಕಣ್ಣ ಆಣಾದ್ ಬತ್ತನ ಪೊಣ್ಣಾದ್ ಬತ್ತನ ಪೊಣ್ಣದ್ ಬತ್ತನ ಆಣಗ್ ಆಣತ್ತ್ ಅರಸೊ ಪೊಣ್ಣಗ್ ಪೊಣ್ಣತ್ತ್. ಮಾನವುಂಡುಂದು ಪೋಯೆ. ಮಾನೊಗು ಹೀನಾಂಡೆಂಕ್. ಅವ್ವೇನರಸು ಕೇಂಡೆರ್. ಮಾನ ಉಂಡುಂಡು ಪೋಯ ಮಾನೊಗು ಹೀನಾಂಡ. ಮಾನ ನಿನ್ನತ್ತ್ ಎನ್ನ ಪೋಯಿನಿ. ಪೆಟ್ಟ್ ನಿಕ್ಕಾಂಡ ಬೇನೆ ಎಂಕ್.) ‘ಪೆಟ್ಟು ನಿನಗಾದರೆ ನೋವು ನನಗೆ’ ಎನ್ನುವ ಮಾತು ಹೃದಯಸ್ವರ್ಶಿಯಾಗಿದೆ. ತುಳುಭಾಷೆಯ ತಿರುಳನ್ನೇ ಜನಪದ ಕವಿ ಇಲ್ಲಿ ನಮ್ಮ ಮುಂದಿರಿಸಿದ್ದಾನೆ. ‘ಗಂಡಾಗಿ ಬಂದೆಯೋ ಹೆಣ್ಣಾಗಿ ಬಂದೆಯೋ’ ಎಂಬ ಮಾತು ಕೂಡಾ ಸೂಚ್ಯವಾಗಿದೆ. ಗೆಲವು – ಸೋಲುಗಳನ್ನು ಪ್ರಶ್ನಿಸುವ ವಾಗ್ರೂಢಿಯಾಗಿದೆ.

ಯುದ್ಧದಲ್ಲಿ ಬೈರರಸು ಸೋಲುತ್ತಾನೆ. ಯುದ್ಧದ ವರ್ಣನೆಯಿಲ್ಲ. ಜನಪದ ಕವಿಗೆ ಅದು ಅನಗತ್ಯ. ಕನ್ನಡ ಅರಸನು ರಾಜ್ಯವನ್ನು ಬಿಡಿಸಿದ ಬಳಿಕ ತನ್ನ ಸಂಪತ್ತನ್ನೆಲ್ಲ ಒಂದು ಕೊಪ್ಪರಿಗೆಯಲ್ಲಿ ಹಾಕಿ ರಾಮಸಮುದ್ರಕ್ಕೆ ಹಾಕುತ್ತಾನೆ. ಅಲ್ಲಿಂದ ಧರ್ಮಸ್ಥಳಕ್ಕೆ ಬಂದು ನೆಲೆಸುತ್ತಾನೆ.

ಈ ಪಾಡ್ದನವು ಕ್ರಿಯಾತ್ಮಕ ಶೈಲಿಯಿಂದ ರಚಿತವಾಗಿದೆ. ಭಾಷೆ ಸರಳವಾದರೂ ಬಿಗುವಿನಿಂದ ಅವಿನಾಭಾವ ಸಂಬಂಧವನ್ನು ಪಡೆಯುತ್ತದೆ. ಇಷ್ಟು ಸತ್ವಯುತವಾದ ಭಾಷೆಯ ಬಳಕೆಯು ಬೇರಾವ ಪಾಡ್ದನದಲ್ಲಿಯೂ ಇಲ್ಲ.

ಓಲೆಯನ್ನು ನಿರ್ಮಿಸುವ ಚಿತ್ರಣವು ಸುಂದರವಾಗಿದೆ. ಹೇಳಲೇ ಬೇಕಾದುದು ಅಲ್ಲವಾದರೂ ಅದರ ಚಿತ್ರಣದ ಸೊಬಗಿನಿಂದ ಬೇಡವೆಂದು ಕಾಣುವುದಿಲ್ಲ. – ‘ಗುರ್ದಂದ’ ಬೆಟ್ಟದಿಂದ ಒಲಿಯನ್ನು ಕಡಿಸಿದರು. ಮೂಡುಬದಿಯ ಸೂರ್ಯನ ಬಿಸಿಲಿಗೆ ಬಾಡಿಸಿದರು. ಪಡುಬದಿಯ ಎಳೆಬಿಸಿಲಿಗೆ ಮಡಿಸಿದರು. ಅದರಲ್ಲಿ ಒಂದು ಒಲಿ ತೆಗೆದರು. ಕಡೆಯನ್ನು ಕತ್ತರಿಸಿದರು. ತುದಿಯನ್ನು ಸರಿಗೊಳಿಸಿದರು. ನಡು ಒಲಿಯನ್ನು ಬಾಗಿಸಿದರು. ಒಲಿಗೆ ಎಣ್ಣೆ ಅರಸಿನವನ್ನು ಹಚ್ಚಿದರು’. (ಗುರ್ದಂದ) ಬೊಟ್ಟು, ಭುಜ, ಸಾರಿ, ಒಲಿ, ಕಡ್ಪಾಯೆರ್. ಮೂಡಾಯಿ ಸೂರ್ಯ ದುಂಬುಗು ಬಾಡಾಯೆರ್. ಪಡ್ದಾಯಿ ಪಣಿಯುಳ್ಳ ದೊಂಬುಗು ಮಡ್ಪಾಯೆರ್. ಅಯ್ಟ್ ಒಂಜಿ ಒಲಿ ಗೆತ್ತೆರ್‌. ಕಡೆ ಒಲಿ ಕತ್ತೆರಿಯೆರ್. ಕೊಡಿ ಒಲಿ ಮುತ್ತ್ಯಾಯೆರ್. ನಡು ಬಲಿ ಬಾಮೊಗು ಬರ್ಪಾಯೆರ್. ಒಲಿಕ್ ಎಣ್ಣೆ ಮಂಜೊಲು ಪೂಜಾಯೆರ್). ವಾಕ್ಯಗಳ ರಚನೆಯಲ್ಲಿ ಲಯವಿರುವುದನ್ನು ಗುರುತಿಸಬಹುದು. ಒಟ್ಟಿನಲ್ಲಿ ಈ ಪಾಡ್ದನವನ್ನು ಓದಿದಷ್ಟು ಸಂತೋಷ ಹೆಚ್ಚುತ್ತದೆ. ಓದಿ ಮೆಚ್ಚುತ್ತೇವೆ. ಪುನಃ ಮೆಚ್ಚಿ ಓದುತ್ತೇವೆ. ಅಂತಹ ಮನಮೋಹಕ ಹಾಗೂ ಆನಂದದಾಯಕ ಗುಣವನ್ನು ಪಡೆದಿದೆ.

ವಿಶ್ವಕರ್ಮ ಬ್ರಾಹ್ಮಣರಿಬ್ಬರೂ ನಾರಾಯಣ ದೇವರ ಬೆವರಿನಲ್ಲಿ ಹುಟ್ಟಿ, ಸಾಹಸದ ಕಾರ್ಯಗಳನ್ನು ಸಾಧಿಸಿ, ದೈವಬಲದಿಂದ ಮಾಯವಾದ ಕತೆಯು ‘ಕಂಬೆರ್ಲು’ ಪಾಡ್ದನದಲ್ಲಿ ಬರುತ್ತದೆ. ಆಚಾರಿಗಳ ಹೆಸರು ಬಾಲೆಬಿರ್ಮ ಮತ್ತು ಇಸಕರ್ಮಿ. ಪೌರಾಣಿಕ ಪಾತ್ರಗಳು ಇಲ್ಲಿ ಬರುವುದಾದರೂ, ಇಲ್ಲಿಯ ಕತೆಯು ಪರಂಪರೆಯ ನಂಬಿಕೆ, ಕಲ್ಪನೆಗಳ ಆಧಾರದ ಮೇಲೆ ರಚಿತವಾಗಿರಬೇಕು. ಸಾಹಿತ್ಯ ದೃಷ್ಟಿಯಿಂದ ಅಂತಹ ಮಹತ್ವದ್ದೇನಲ್ಲ. ಅಲೌಕಿಕಾಂಶಗಳನ್ನೇ ಕವಿ ಹೆಚ್ಚಾಗಿ ತಂದರೂ ವಾಚಕರ ಮನತಟ್ಟುವ ವಸ್ತು ನಿರೂಪಣೆಯಿಲ್ಲ.

ಮೈಸಂದಾಯ ಪಾಡ್ದನವು ಅಲೌಕಿಕ ಕತೆಯನ್ನೊಳಗೊಂಡಿದೆ. ಬಸವನ ರೂಪದಲ್ಲಿರುವ ಭೂತ. ತಾಯಿ ಲಕ್ಕೆರಸು ತಂದೆ ಗಾಲಿಕೃಷ್ಣ ದೇವರು. ಅವರಿಗೆ ‘ಅಯ್ಯಗೆ ಮಯ್ಯಗೆ’ ಎಂಬೆರಡು ಹೆಣ್ಣುಮಕ್ಕಳು. ಅದರಲ್ಲಿ ‘ಮಯ್ಯಗೆ’ ಎಂಬವಳಿಗೆ ಮಗು ಹುಟ್ಟುತ್ತದೆ. ಹುಟ್ಟುವಾಗಲೇ ಅದರ ತಲೆಯಲ್ಲಿ ಕೊಂಬು. ಬಳಿಕ ನಂದಳಿಕೆಯ ಸಿರಿಗಳು ಅಬ್ಬಗದಾರಗ ಎಂಬುವವರು ಮೊದಲು ನಂಬುತ್ತಾರೆ. (ಕ. ಪಾಠ) ಈ ಪಾಡ್ದನದ ಮೂರು ಪಾಠಗಳು ಲಭ್ಯವಾಗಿವೆ. ನಾನು ಸಂಗ್ರಹಿಸಿದ ಪಾಠಗಳು ಎರಡು (ಕ) ಮತ್ತು (ಬ)ಇನ್ನೊಂದು ಅಮೃತ ಸೋಮೇಶ್ವರರು ಸಂಗ್ರಹಿಸಿದ್ದು (ಅ)

(ಕ) ಪಾಠದಲ್ಲಿ ಮೈಸಂದಾಯ ದೈವವು ಹುಟ್ಟುವಾಗಲೇ ದೈವವಾಗಿ ಬಂತು, ಎಂಬ ವಿವರಣೆಯಿದ್ದರೆ, (ಅ) ಪಾಠದಲ್ಲಿ ತಾಯಿ ‘ದಾರಗ ಗಣಪಗಳ’ ವರದಿಂದ ಬಸವನ ರೂಪದ ಭೂತವಾಯಿತು ಎಂದಿದೆ. (ಬ) ಪಾಠದಲ್ಲಿ ನಂದಳಿಕೆ ಜಾತ್ರೆಗೆ ಹೋದ ಸಿರಿಗಳಿಗೆ ರೂಪದ ಭೂತ ದಾರಿಯಲ್ಲಿ ಸಿಗುವುದು. ಬಳಿಕ ಅದನ್ನು ನಂಬಿಕೊಂಡು ಬರುವುದು ವ್ಯಕ್ತವಾಗಿದೆ. (ಕ) ಮತ್ತು (ಬ) ಪಾಠಗಳೂ ಭೂತದ ಹುಟ್ಟನ್ನು ತಿಳಿಸಿದರೆ (ಬ) ಪಾಠವು ಭೂತವು ನೆಲೆಯಾದುದನ್ನು ವಿವರಿಸುತ್ತದೆ.

ಮೇಲೆ ವಿವರಿಸಿದ ಭೂತದ ಹುಟ್ಟಿನ ವಿಷಯಗಳು (ಕ) ಪಾಠದಲ್ಲಿರುವುವು. ಆದರೆ(ಅ) ಪಾಠವು ವಿಶಿಷ್ಟವಾದುದು. (ಅ) ಮತ್ತು (ಕ) ಪಾಠಗಳು ಭೂತದ ಹುಟ್ಟನ್ನು ವಿವರಿಸಿದರೂ ಒಂದಕ್ಕೊಂದು ಸಂಬಂಧವಿಲ್ಲವೆನ್ನುವಂತಿದೆ.

(ಅ) ಪಾಠವು ಸುಂದರವಾದ ಪಾಡ್ದನ. ‘ದಾರಗ ಗಣಪಗ’ ಮತ್ತು ‘ಬಾಲೆ ಬಂಗೆರೆ’ ಮದುವೆಯನ್ನು ವರ್ಣಿಸುತ್ತದೆ. ಹುಡುಗಿ ನೋಡಲು ಬರುವುದು, ಮದುವೆಯ ಸಂಭ್ರಮ, ಬಳಿಕ ಬಸುರಿಯಾಗುವ ವರ್ಣನೆ ಮನಮೋಹಕವಾಗಿದೆ. ಹೆಣ್ಣು ನೋಡಲು ಬಂದವರೊಡನೆ ಕೆಲಸ ಕೈಗೂಡಿತೋ ಎಂದು ಕೇಳುವ ವಾಗ್ರೂಢಿ ಹೀಗಿದೆ – ‘ಗಂಡಾಗಿ ಬಂದಿರೊ ಹೆಣ್ಣಾಗಿ ಬಂದಿರೊ’ (ಅಣಾದ್ ಬತ್ತರಾ, ಪೊಣ್ಣಾದ್ ಬತ್ತರಾ?) ಆಗ ಕೊಡುವ ಉತ್ತರವೂ ಸುಂದರವಾಗಿದೆ – ‘ಗಂಡಸಿನ ಹಾಗೆ ಹೋದವರು ಗಂಡೇ ಆಗಿ ಬಂದಿದ್ದೇವೆ’ (ಆಣಲೆಕೊ ಪೋಯಿನಗುಲು ಆಣ್ ಅದೇ ಬತ್ತ್‌ದ) ತುಳುನಾಡಿನ ಮದುವೆಯ ಸಂಪ್ರದಾಯನ್ನು ಹಾಗೂ ತುಳುನಾಡಿನಲ್ಲಿರುವ ‘ಬೂಡು’ಗಳ ಹಿರಿಮೆಯನ್ನು ವಿವರಿಸುತ್ತದೆ. ‘ಪಂಚೊಳಿ ವೀಳ್ಯದೆಲೆಯಲ್ಲಿ ಚಪ್ಪರ ಹಾಕಿದ್ದಾರೆ. ಅಚ್ಚಿ ಬೆಲ್ಲದಲ್ಲಿ ಒಲೆ ಹಾಕಿದ್ದಾರೆ. ತೋರಣ ಕಟ್ಟಿದ್ದಾರೆ ದಾರೆ ಮಂಟಪವನ್ನು ಅಂಗಳದ ಮಧ್ಯೆ ಕಟ್ಟಿದ್ದಾರೆ. ಮೂಹುರ್ತದ ಸಮಯವಾಯಿತು. ಕೂಡುವ ಸಭೆ ಕೂಡಿತು. ಶಬ್ದದ ಸುಡುಮದ್ದು, ಪ್ರಯಾಣದ ಕೊಂಬು ಕೇಳುತ್ತದೆ’(ಪಂಚೊಳಿ ಬಚ್ಚಿರೆಡ್ ದೊಂಪ ಕಟಿಯೆರ್, ದಾರೆದ ಮಂಟಮ ನಡು ಜಾಲ್‌ಡ್ ಕಟ್ಟೆಯೆರ್, ಮುರ್ತೊದ ಕಬೆ ಮೂರ್ತೊಗು ಪಾಡ್ಯೆರ್‌, ಕೂಡುವ ಸಭೆ ಕೂಡುಂಡು, ಸಬ್ದಂದ ಬೆಡಿ, ಪಯಣಂದ ಕೊಂಬು ಕೇಣುಂಡು) ಮದುವೆಯ ಮುಂದಿನ ವಿವರಣೆಗಳೂ ಇಷ್ಟೇ ಸ್ವಷ್ಟವಾಗಿ ಚಿತ್ರತವಾಗಿವೆ. ತುಳು ಸಂಸ್ಕೃತಿಯ ವಿಚಾರದಲ್ಲಿ ಪ್ರಸ್ತಾಪಿಸಿದ್ದೇವೆ.

‘ದಾರಗ ಗಣಪಗ’ ಬಸುರಿಯಾದುದನ್ನು ವರ್ಣಿಸುವುದು ಸೂಚ್ಯವಾಗಿದೆ. ‘ಮುಟ್ಟು ನಿಂತಿತು. ಅಗಲವಾದ ಹೊಟ್ಟೆ ದುಂಡನೆ ಬಾಗಿತು’ (ಮೀಯಿ ಮೀಚಿಲ್‌ಡ್, ಪುಂಡಿ ನುಪ್ಪುಡು, ತುತ್ತಿ ಕರಿಯಡ್ ದಾರಗ ಗಣಪಗ ಪೊಂಜವೆಗ್ ಸೆಲಿವುಳ್ಳ ಮೋಣೆಡ್ ಮೈಲೆ ತೋಜೊನು ಬೈದ್‌ಂಡ್ ಬಟ್ಟಲ್‌ಬಂಜಿ ಬಾಮಿಯೊಂದು ಬೈದ್‌ಂಡ್‌) ಏಳನೇ ತಿಂಗಳಿನಲ್ಲಿ ಸಂಪ್ರದಾಯ ಬದ್ಧವಾಗಿ ಸೀಮಂತವನ್ನು ಮಾಡುತ್ತಾರೆ. ಬಸುರಿಯ ಬಯಕೆಗಳನ್ನು ಪೂರೈಸುತ್ತಾರೆ.

ಹುಟ್ಟಿದ ಮಕ್ಕಳು ಮಲ್ಲಸುರೆ, ಮೆಯ್ಯಸುರೆ, ಅವರಿಗೆ ಒಂದೂವರೆ ವರ್ಷವಾದಾಗ ತಂದೆ ‘ಬಾಲೆ ಬಂಗರು’ ಉತ್ತರ ದಿಕ್ಕಿಗೆ ಯುದ್ಧಕ್ಕೆ ಹೋಗುತ್ತಾರೆ. ಈ ವಿವರಣೆಯು ಕತೆ ಮುಂದುವರಿಯುವ ದೃಷ್ಟಿಯಿಂದ ಮುಖ್ಯವಾದುದು.

ಮಕ್ಕಳು ದೊಡ್ದದಾಗುತ್ತಾ ಬಂದಾಗ ‘ಹಾಲು ಗಂಜಿ’ ಕೊಡಲು ಹೇಳುತ್ತಾರೆ. ಊರಿನ ಆಟದ ಕೂಟಕ್ಕೆ ಹೋಗಲು ತಾಯಿಯ ಮೊಲೆ ಹಾಲನ್ನು ಮತ್ತು ಹಾಲು ಗಂಜಿಯನ್ನು ತಿನ್ನುತ್ತಾರೆ. ಕೂಟದ ಕಳಕ್ಕೆ ಹೋಗುತ್ತೇವೆ ಎಂದಾಗ ತಾಯಿಯ ಮಕ್ಕಳನ್ನು ಸಣ್ಣವರು ಎಂದು ಹೇಳುವ ಮಾತು ಪಾಡ್ದನದ ಶೈಲಿಗೆ ಉತ್ತಮ ಉದಾಹರಣೆಯಾಗಿದೆ. ‘ಓ ಅಮ್ಮ ಮಕ್ಕಳೆ ನಿಮಗೆ ಅಂಗೈಯ ಹಳದಿ ಬಣ್ಣ ಮಾಸಲಿಲ್ಲ. ತಲೆಗೆ ಹಾಕಿದ ಎಣ್ಣೆ ಆರಲಿಲ್ಲ’ (ಓಯಮ್ಮ ಬಾಲೆಳೆ ನಿಕುಲೆನ ಅಂಗಯಿಂದ ಮಂಜಳ್ ಬರೆಮಾಜಿದ್‌ಜಿ. ನೆತ್ತಿದ ನೆಯ್ಯೆಣ್ಣೆ ಮಾಜಿದ್‌ಜಿ) ಇದೇ ಶೈಲಿಯು ‘ದಾರಗ ಗಣಪಗ’ನನ್ನು ನೋಡಲು ಬಂದಾಗ ಮಗಳು ಸಣ್ಣವಳೆಂದು ಮನೆಯವರು ಹೇಳುವ ಮಾತಿನಲ್ಲಿದೆ – ‘ಇರುವ ಒಂದು ಹೆಣ್ಣು ಮನೆಯಲ್ಲಿರಬೇಕಾದವಳು. ಬಿರಿದ ಕೂದಲು ಕಟ್ಟಲು ಗೊತ್ತಿಲ್ಲ ಸೊಂಟಕ್ಕೆ ಸೀರೆ ಉಡಲು ಗೊತ್ತಿಲ್ಲ. ನಾಲ್ಕು ಜನಕ್ಕೆ ಬಡಿಸಲು ಗೊತ್ತಿಲ್ಲ. ಬಾಯಿಯ ಹಲ್ಲು ಹೋಗದ ಮಗಳು ಎಂದಳು.’ (ಒಂಜಿತ್ತಿ ಪೊಣ್ಣು ಇಲ್ಲಗ್‌ಅಡಕವಾಯಿನ ಪೊಣ್ಣು, ಗಿರಿನ ತರೆಕಟ್ಯರೆ ತೆರಿಪುಜಿ. ಸೊಂಟದ ಕುಂಟು ತುತ್ಯರ ತೆರಿಪುಜಿ. ನಾಲ್ ಜನೊಕು ಬಲಸ್ಯೆರೆ ತೆರಿಪುಜಿ. ಬಾಯಿ ಕೂಳಿ ಪೋವಂದಿ ಮಗಲ್‌ಂದ್ ಪಂಡೆರ್) ಕೆಲವು ನಿದರ್ಶನಗಳಿಂದ ಅಥವಾ ಕ್ರಿಯೆಗಳಿಂದ ಒಂದು ಚಿತ್ರವನ್ನು ಸ್ವಷ್ಟವಾಗಿ ವಿವರಿಸುವಾಗ ಶೈಲಿ ಪಾಡ್ದನಗಳಿಗೇ ಮೀಸಲಾದುವೆಂದು ಹೇಳಬಹುದೇನೊ. ಇಲ್ಲಿ ಮದುವೆಯಾಗುವವಳು ತಿಳಿದಿರಬೇಕಾದ ಮುಖ್ಯ ವಿಷಯಗಳನ್ನು ತಿಳಿಸಿದ ಹಾಗೂ ಇದೆ. ಒಂದು ಚಿತ್ರಣದಲ್ಲಿ ಎರಡು ಅಂಶಗಳನ್ನು ಕವಿ ಸೂಚಿಸುವ ಶೈಲಿ ಹೀಗಿರುತ್ತದೆ.